Oppanna.com

ತಪ್ಪು ಸರಿಗಳ ನಡುವೆ

ಬರದೋರು :   ಅನಿತಾ ನರೇಶ್, ಮಂಚಿ    on   03/02/2014    9 ಒಪ್ಪಂಗೊ

ಅನಿತಾ ನರೇಶ್, ಮಂಚಿ
Latest posts by ಅನಿತಾ ನರೇಶ್, ಮಂಚಿ (see all)

‘ಕೇಚಣ್ಣ ಇದ್ದೆಯಾ ಮನೆಲಿ …’
ಹೆರಂದ ಒಂದು ಸ್ವರ ಕೇಳಿತ್ತು. ಸ್ವರಲ್ಲೇ ಇದು ಶಂಕರಣ್ಣಂದಾದಿಕ್ಕು ಹೇಳುವ ಸಂಶಯ ಬಂತೆನಗೆ.. ಇವ° ಮತ್ತೆಂತಕೆ ಬಂದ° ಇಲ್ಲಿಗೆ?  ತೋಟಕ್ಕೆ ಹೋಗಿ ಸ್ಪಿಂಕ್ಲರ್ ಬದಲ್ಸಿ ಕೈಕಾಲು ತೊಳದು ತಿಂಡಿ ತಿಂಬಲೆ ಮಣೆ ಎಳಕ್ಕೊಂಡು ಕೂದ್ದಷ್ಟೆ ಆನು.   ಹಶುವಾಗಿ ಸತ್ತಿದು. ಆದರೂ ಏಳದ್ದೇ ಗೊಂತಿಲ್ಲೆನ್ನೆ, ಎದ್ದೆ. ಹೆಗಲಿಂಗೆ ಒಂದು ಬೈರಾಸು ಹಾಕಿಕೊಂಡು ಹೆರ ಬಂದೆ.  ಆಗಲೇ ಛಾವಡಿಗೆ ಏರಿ ಎಲೆ ತಟ್ಟೆಗೆ ಕೈ ಹಾಕಿ ಎಲೆಗೆ ಸುಣ್ಣ ಉದ್ದುತ್ತಾ ಇತ್ತಿದ್ದ°.
“ಹ್ಹೋ ಶಂಕರಣ್ಣ.. ಇಷ್ಟು ಉದ್ಯಪ್ಪಗಳೇ ಎತ್ಲಾಗಿಂದ ಬಂದದು? ಕೈಕಾಲು ತೊಳಕ್ಕೊಂಡು ಬಾ ಒಳ .. ಎನ್ನ ತಿಂಡಿ ಆಯೆಕ್ಕಷ್ಟೇ ಒಟ್ಟಿಂಗೆ ತಿಂಡಿ ತಿಂಬ°…”  ಹೇಳಿ ಹೇಳಿದೆ ಬಾರದ ನಗೆ ಬರ್ಸಿಕೊಂಡು.
ಅವ° ಕಣ್ಣೆತ್ತಿ ಒಂದರಿ ಎನ್ನ ನೋಡಿದ°, ಮತ್ತೆ ತಲೆ ತಗ್ಗಿಸಿ ” ನೀನು ತಿಂಡಿ ತಿಂದಿಕ್ಕಿ ಬಾ.  ಆನಿಲ್ಲಿಯೇ ಕಾಯ್ತೆ. ಎನ್ನದು ಉದ್ಯಪ್ಪಗ ಬೇಗ ತಿಂಡಿ ತಿಂದಾಗಿ ಇಲ್ಲಿಗೆ ಬಂದದು.  ಪುನಃ ಪುನಃ  ಹೊಟ್ಟೆಗೆ ಎಂತಾರು ತುರ್ಕಿರೆ ಕರಗುತ್ತಿಲ್ಲೆ ಈಗ. ಪ್ರಾಯ ಆತನ್ನೇ..” ಹೇಳಿ ಹೇಳಿದ°.
ಅಲ್ಲ ಈ ಪ್ರಾಯ ಆದವಂಗೆ ಎಂತಕೆ ನೋಡಾ ಮತ್ತೆ ಊರಿನ ಉಸಾಬರಿ ಕಾಂಬಲೆ ಹೀಂಗೆ  ಕುಂಯ್ಯನ  ಹಾಂಗಿದ್ದರೂ ಮಹಾ ಅದಿಕ ಪ್ರಸಂಗಿ ಇವ°.  ಎನಗೆ ಗೊಂತಿಲ್ಲೆಯಾ ಇವನ ಬುದ್ಧಿ. ಇಂದು ಎಂತಾರು ತಲೆ ಹಾಳು ಮಾಡುವ ವಿಷಯ ಹೊತ್ತುಕೊಂಡು ಬಂದಿಕ್ಕು . ಇಲ್ಲದ್ರೆ ಈಗ ಎರಡು ತಿಂಗಳ ಹಿಂದೆ ಇಲ್ಲಿಗೆ ಬಂದು ಅವಾಂತರ ಮಾಡ್ಲಿತ್ತಾ? ಈಗ ಯಾವ ಮೋರೆಲಿ ಮತ್ತೆ ಬಂದನೇನೋ. ಇವಂಗೆ ಮೋರೆ ಎಂತಕೆ . ಭಾಷೆ ಸಂತಾನ ಇದ್ದರನ್ನೆ ಮರ್ಯಾದಿ ಎಲ್ಲ ಇಪ್ಪದು. ತಿಂಡಿ ತಿನ್ನದ್ರೆ ಕೂರಲಿ.  ಎನಗೆ ಹಶು ಆವ್ತು. ಸೀದಾ ಒಳ ಬಂದು ಮತ್ತೆ ಮಣೆಯ ಎದುರು ಕೂದೆ.
ಕೂದವಂಗೆ ತಲೆಲಿ ಹಿಂದಾಣದ್ದೆಲ್ಲ ಚಕ್ರದ ಹಾಂಗೆ ತಿರುಗುಲೆ ಶುರು ಆತು. ಈ ಶಂಕರಣ್ಣ ಎಂತ ದೂರದವ ಅಲ್ಲ. ಎನ್ನ ಸಣ್ಣತ್ತೆಯ ಬಾವನೋರ ಮಗ°.   ಸಣ್ಣತ್ತೆಯ ಹೆಸರು ಲಕ್ಷ್ಮಿ. ಅದರ ಆನು ಸಣ್ಣ ಇಪ್ಪಗ ಲಂಕಿಣಿ ಹೇಳಿ ಹೇಳಿಕೊಂಡಿದ್ದದಡ. ಅದರ ಕೇಳಿ ಎನ್ನಮ್ಮ  ಆ ಸೂಟೆಗಿದು ಸರಿಯಾದ ಹೆಸರು ಹೇಳಿ, ಸೆರಗಲಿ ಮೋರೆ ಮುಚ್ಚಿ ನೆಗೆ ಮಾಡಿಕೊಂಡಿತ್ತು. ಆ ಅತ್ತೆಯ ಬಾಯಿ ಬಾರೀ ಜೋರು. ದಿನಕ್ಕೊಬ್ಬನತ್ತರೆ ಆದರೂ ಲಡಾಯಿ ಮಾಡದ್ದರೆ  ಉಂಡದು ಕರಗ ಅದಕ್ಕೆ. ಹಾಂಗೇಳಿ ರಾಕ್ಷಸನ ಹಾಂಗೆ ಕೆಲಸವೂ ಮಾಡುಗು.
ಅದಕ್ಕೆ ಮದುವೆ ಆತು. ಅದು ಮದುವೆಯಾಗಿ ಹೋತನ್ನೇ ಹೇಳಿ ಎಲ್ಲೋರು ಉಸುರು ಬಿಡುವಾಗ ಅದು ವಾಪಾಸ್ ಬಂದುದೇ ಆಗಿತ್ತು. ಅದರ ಗೆಂಡಂಗೆ ಹಾವು ಕಚ್ಚಿ ಸತ್ತದಡ. ಅಲ್ಲಿ ಅದಕ್ಕೆ ಹೇಳಿ ರಜ್ಜ ಆಸ್ತಿ ಅದರ ಗೆಂಡನ ಮನೆಯವು ಕೊಟ್ಟರುದೇ   ಅದು ಮೊದಲಾಣ ಹಾಂಗೇ ಇಲ್ಲಿಯಾಣ ಮನೆಯ ವಹಿವಾಟಿಂಗೆ ಬಾಯಿ ಹಾಕಿಕೊಂಡು ಎನ್ನಪ್ಪನ ಹತ್ತರೆ ಪರಂಚಾಣ ಕೇಳಿಕೊಂಡು, ಪ್ರತಿದಿನವೂ ಎಂತಾರು ಕಾರಣ ಹಿಡುದು ಲಡಾಯಿ  ಮಾಡಿಕೊಂಡು ಎಂಗಳೊಟ್ಟಿಂಗೆ ಇತ್ತು.
ಕಾಲ ಕಳುದತ್ತು..
ಶಾರದೆ ಆನೇ ಮೆಚ್ಚಿ ಮದುವೆಯಾದ ಕೂಸು.  ಈ ಮನೆಗೆ ಬಂತು. ಎಲ್ಲೊರೊಟ್ಟಿಂಗೂ ಚೆಂದಕ್ಕೆ ಇತ್ತು. ಆದರೆ ಅತ್ತೆ ಎಂತ ಹೊಸಾ ಕೂಸು ಹೇಳಿ ಬಿಟ್ಟಿದಿಲ್ಲೆ. ಇದರತ್ತರೂ ಕಿರಿಕಿರಿ ಮಾಡುಗು. ಆದರೆ ಎನ್ನ ಹೆಂಡತಿ ಹೇಳಿ ಹೊಗಳುದಲ್ಲ.  ಶಾರದೆಯ ಶಾಂತ ಗುಣ ಆರಿಂಗೂ ಬಾರ. ಅತ್ತೆ ಎಷ್ಟು ಪರಂಚಿರೂ ಇದು ನೆಗೆ ಮಾಡಿಕೊಂಡೇ ಇಕ್ಕು.
ರಜ್ಜ ಸಮಯ ಕಳಿವಾಗ ಅಮ್ಮ ಒಂದೆರಡು ದಿನ ಜ್ವರ ಹೇಳಿ ಮನುಗಿದ್ದಷ್ಟೇ ನೆವ. ಮತ್ತೆ ಎದ್ದಿದೇ ಇಲ್ಲೆ.  ಅಮ್ಮನ ಹಿಂದಂದಲೇ ನಾಲ್ಕೇ ತಿಂಗಳಿಲಿ ಅಪ್ಪನುದೇ ಹೋದ°. ಅತ್ತೆಗೀಗ ಶಾರದೆಯ ಸಣ್ಣ ಮಾಡ್ಲೆ ಇದೊಂದು ವಿಷಯ ಸಿಕ್ಕಿತ್ತು.  ಮನೆಗೆ ಆರೇ ಬರಲಿ ಇದರದ್ದು ಅವರೆದುರು ಒಂದೇ ರಾಗ.  ಸರೀ ಹಿರಿಯೋರು ಸರೀ  ನೋಡದ್ದೇ ಮದುವೆ ಆದರೆ ಹೀಂಗೆ ಇದ ಅಪ್ಪದು. ಶಾರದೆಯ ಕಾಲ್ಗುಣ ಸರಿ ಇಲ್ಲೆ. ಹಾಂಗಾಗಿ ಅಣ್ಣ ಅತ್ತಿಗೆ ಒಟ್ಟೊಟ್ಟಿಂಗೆ ಸತ್ತದು ಹೇಳಿ. ಶಾರದೆಗೆ ಬೇಜಾರಾದರೂ ತೋರ್ಸಿಕೊಂಡಿದಿಲ್ಲೆ.
ಒಂದರಿ ಎನ್ನೆದುರಂದ ಆರತ್ತರೋ ಹೀಂಗೆ ಹೇಳುಲೆ ಶುರು ಮಾಡಿತ್ತು. ಎನಗೆಲ್ಲಿತ್ತೋ ಕೋಪ.. ಆನು ಅತ್ತೆ ಹೇಳಿ ನೋಡದ್ದೆ ಸರೀ ಬಯ್ದೆ. ‘ಆರಾರಿಂಗೆ ಹೇಳ್ತೆನ್ನೆ ನಿನ್ನ ಕಾಲ್ಗುಣ ಹೇಂಗಿದ್ದು ಅಂಬಗ’ ಹೇಳಿ ಕೇಳಿದೆ.
‘ನಿನ್ನ ಅಶನಕ್ಕೆ ಬಿದ್ದಿದೆ ಹೇಳಿ ಅಲ್ಲದ ಮಾಣಿ ನೀನು  ಹೇಳುದು.. ಎನ್ನ ಗೆಂಡನ ಆಸ್ತಿ ಇದ್ದೆನ್ನತ್ತರೆ.. ಅಲ್ಲಿಗೆ ಹೋವ್ತೆ ಆನು’ ಹೇಳಿ ಪರಂಚಿಕೊಂಡು ಅತ್ತೆ ಉಣ್ಣದ್ದೆ ವರಗಿತ್ತು.
“ಅವಕ್ಕೆ ಪ್ರಾಯ ಆತಿಲ್ಲೆಯೋ.. ಅವರ ಕಾಲದ ನಂಬಿಕೆಗ ಅದು. ಹಾಂಗೆಲ್ಲ ಹೇಳುದು ಸಹಜ. ನಿಂಗ ಬೈವ್ವಲಾಗಿತ್ತು ಅತ್ತೆಗೆ. ಎನಗೆಂತ ಬೇಜಾರಿಲ್ಲೆ ಅತ್ತೆಯತ್ತರೆ. ಸುಮ್ಮನೆ ನಿಂಗ ನಿಷ್ಟೂರ ಮಾಡಿಕೊಂಬದೆಂತಕೆ” ಹೇಳಿ ಶಾರದೆ ಎನಗೆ ಸಮಾದಾನ ಮಾಡಿತ್ತು. ಎನಗೂ ಅಷ್ಟಪ್ಪಗ ಎನ್ನ ತಪ್ಪು ಗೊಂತಾಗಿತ್ತು. ಆದರೆ ಕ್ಷಮೆ ಕೇಳುವ ಮನಸ್ಸಿಲ್ಲದ್ದೆ ಆದಷ್ಟೂ ಅತ್ತೆಯ ಎದುರು ಬಾರದ್ದ ಹಾಂಗೆ ನೋಡಿಕೊಂಡು ದಿನ ಕಳೆದೆ.
ಇದೆಲ್ಲ ಆಗಿ ಎರಡು ದಿನ ಕಳುದಿತ್ತಷ್ಟೇ. ಅಷ್ಟಪ್ಪಗ ಮನೆ ಜಾಲಿನ ಕೊಡೀಲಿ ಇದೇ ಶಂಕರಣ್ಣನ ತಲೆ ಕಂಡತ್ತು. ಮೊದಲೆಲ್ಲ ಅವ°  ಬಂದರೆ ಹೆರ ಕೂಡಾ ಬಾರದ್ದ ಅತ್ತೆ  ಆ ದಿನ ಅವನ ಬಪ್ಪದರ ನೋಡಿ ಒಳಾಣ ಕೋಣೆಂದ ಸಣ್ಣ ಗೆಂಟು ಹಿಡ್ಕೊಂಡು ಹೆರ ಬಂತು.  ಆ ಗೆಂಟಿನ ಎನ್ನೆದುರು ಬಿಡ್ಸಿ ಮಡುಗಿತ್ತು. ” ಸರೀ ನೋಡು ಕೇಚ°, ಇದರಲ್ಲಿ ಎನ್ನದಲ್ಲದ್ದ ಎಂತಾರು ಇದ್ದೋ ಹೇಳಿ.  ಎನಗೆಂತದೂ ಅರ್ಥ ಆಗದ್ದೆ ವಸ್ತ್ರದ ಗಂಟಿನ ಕಡೆ ನೋಡಿತ್ತಿದ್ದೆ. ಅದರಲ್ಲಿ ಸಣ್ಣತ್ತೆಯ ಸೀರೆ ರವಕ್ಕೆ ಮತ್ತೊಂದೆರಡು ಸಣ್ಣ ಚಿನ್ನದ ಕರಡಿಗೆಗ. ಅದರಲ್ಲಿ ಅದರದ್ದೆ ಕೆಮಿದು ಕೊರಳಿಂದು. ಅದಲ್ಲದ್ದೆ ಬೇರೆಂತ ಇತ್ತಿಲ್ಲೆ. ಅಷ್ಟಪ್ಪಗಳೇ ಈ ಶಂಕರಣ್ಣ ಕೊಂಕು ತೆಗದ್ದು.  ಸರೀ ಕೈ ಹಾಕಿ ನೋಡು ಕೇಚಣ್ಣಾ.. ಅತ್ತೆ ಎಂಗಳಲ್ಲಿಗೆ ಬತ್ತಾ ಇದ್ದು. ಮತ್ತೆ ಈ ಮನೆಂದ ಎಂತಾರು ಹೊತ್ತುಕೊಂಡು ಹೋಯ್ದು ಹೇಳಿ ಹೇಳದ್ದರೆ ಆತು.” ಆಗಳೇ ಎನಗೂ ಶಾರದೆಗೂ ವಿಷಯ ಗೊಂತಾದ್ದು. ಊರಿಡೀ ಸಾಲ ಸೋಲ ಮಾಡಿದ ಶಂಕರಣ್ಣಂಗೆ ಅತ್ತೆಯ ಜಾಗೆಯ ಮೇಲೂ ಕಣ್ಣಿತ್ತು ಹೇಳಿ ಎನಗೆ ಗೊಂತಿತ್ತು. ಈಗ ಸಮಯ ನೋಡಿ ಜಾಣತನ ತೋರ್ಸಿದ°.
ಶಾರದೆ ಅಂತೂ ಅತ್ತೆಯ ಕಾಲು ಹಿಡುದು ಕೂಗಿತ್ತು. “ಎಂಗ ಸಣ್ಣವು ಎಂತಾರು ತಪ್ಪು ಮಾಡಿರೆ ತಿದ್ದುದು ಬಿಟ್ಟು ಎಂಗಳನ್ನೇ ಬಿಟ್ಟು  ನಿಂಗ ಬಿಟ್ಟು ಹೋಪದಾ. ನಿಂಗ ಸಾಂಕಿದ ಮಗನೇ ಅಲ್ಲದಾ ಇವು. ಈ ಮನೆ ನಿಂಗಳದ್ದೇ ಅಲ್ಲದಾ. ಆನು ಬಂದು ಎಲ್ಲೋರ ದೂರ ಮಾಡಿದೆ ಹೇಳುವ ಅಪವಾದ ಎನ್ನ ತಲೆಗೆ ಕಟ್ಟಿಕ್ಕಿ ಹೋವ್ತಿರಾ  ಅತ್ತೆ ಹೇಳಿ”
ಅತ್ತೆ ಕಲ್ಲಿನ ಹಾಂಗೆ ನಿಂದದಲ್ಲದೇ ಒಂದು ಮಾತು ಹೇಳಿದ್ದಿಲ್ಲೆ. ಎನಗೆ ಕೋಪ ನೆತ್ತಿಗೇರಿತ್ತು. ಶಾರದೆಯ ಬಯ್ದು ಏಳ್ಸಿದೆ. ” ನೀನು ಈಗಷ್ಟೇ ಈ ಮನೆಗೆ ಬಂದರೂ ನಿನಗೆ ಇಲ್ಲಿಪ್ಪವರ ಮೇಲೆ ಇಪ್ಪ ಪ್ರೀತಿ ಈ ಮನೇಲೇ ಇದ್ದ ಅತ್ತೆಗೆ ಇಲ್ಲೆ. ಏನೋ ಒಂದು ಮಾತು ಬಾಯಿ ತಪ್ಪಿ ಬಂದದರ ಇಷ್ಟು ದೊಡ್ಡ ಸಂಗತಿ ಮಾಡಿ ಮನೆಂದ ಹೋವ್ತು ಹೇಳಿ ಆದರೆ ಹೋಗಲಿ. ಎನಗೆಂತ ಬೇಜಾರಿಲ್ಲೆ” ಹೇಳಿ ಹೇಳಿದೆ.
ಅದಕ್ಕೆ ಶಂಕರ° ” ಹೂಂ. ಅದೂ ಅಪ್ಪು ಕೇಚಣ್ಣ. ದುಡಿಯುವ ಪ್ರಾಯದೇ ಕಳ್ತಿದ ಚಿಕ್ಕಮ್ಮಂಗೆ. ಇನ್ನು ಅಂತೇ ಅಶನ ಹಾಕುಲುದೇ ಮನಸ್ಸು ಬಾರನ್ನೆ” ಹೇಳಿ ಎನ್ನ ಕೋಪಕ್ಕೆ ಇನ್ನಷ್ಟು ತುಪ್ಪ ಸುರುದ°.
ಆನಿನ್ನೆಂತೋ ಹೇಳೆಕ್ಕು ಹೇಳಿ ಬಾಯ್ತೆಗವಾಗ ಶಾರದೆ ಬಂದು ನಡುವಿಲಿ  ನಿಂದು ಎನ್ನತ್ರೆ ” ನಿಂಗ ಇನ್ನೊಂದು ಮಾತಾಡಿರೆ ಮನೆ ದೇವರಾಣೆ” ಹೇಳಿ ಕೂಗುಲೆ ಶುರು ಮಾಡಿತ್ತು. ಆನೆದ್ದು ತೋಟಕ್ಕೆ ಹೋದೆ. ಬಪ್ಪಗ ಮನೆ ಖಾಲಿ ಖಾಲಿ.  ಮತ್ತೆ ಎನ್ನ ಮನೆ ಕಡೆ ಸುಳುದ್ದಾ ಇಲ್ಲೆ ಇವ°. ಆನುದೇ ಆರ ಶುದ್ದಿಗೂ ಹೋಲ್ಲೆ. ಅತ್ತೆಯ ಬಗ್ಗೆ ಆಗಾಗ ನೆಂಪಾಗಿಕೊಂಡಿತ್ತು. ಅದಿಪ್ಪಗ ಒಂದು ಗಳಿಗೆ ಸುಮ್ಮನೆ ಕೂರ.  ಮಹಾ ಚಿರಿಪಿರಿ ಆದರೆ ಅದು ಕೂಡಾ ಅದರ ಪ್ರೀತಿ ಮಾಡುವ ಕ್ರಮ ಆದಿಕ್ಕು ಹೇಳಿ ತೋರ್ತಾ ಇತ್ತು.  ಎಂತಾ ಕೆಟ್ಟ ಗಳಿಗೆಲಿ ಮಾತು ಹೆರ ಬಂತೋ ಎನೋ.. ಎಲ್ಲಾ ಕೊಚ್ಚಿಕೊಂಡೋತು..
“ಅಲ್ಲಾ ನಿಂಗ ಎಂತರ ಇದು ತಿಂಡಿ ತಟ್ಟೆ ಎದುರಿಲಿ ಜಪ ಮಾಡುದು. ಶಂಕರಣ್ಣ ಎಲೆ ತುಪ್ಪಿಕ್ಕಿ ಆನು ಕೊಟ್ಟ ಚಾಯ ಕುಡುದು ನಿಂಗಳ ಕಾಯ್ತಾ ಇದ್ದವು. ಬೇಗ ತಿಂದಿಕ್ಕಿ ಹೆರ ಹೋಗಿ..” ಹೇಳಿ ಶಾರದೆ ಹೇಳಿತ್ತು.
“ಹಶುವಿಲ್ಲೆ ಶಾರದೆ.. ಮತ್ತೆ ತಿಂತೆ.. ಈಗ ಎಂತ ಸಂಗತಿ ಹೇಳಿ ಕೇಳಿಕೊಂಬ ಮೊದಲು ..” ಹೇಳಿ ಹೆರ ಬಂದೆ.
ಅಷ್ಟಪ್ಪಗ ಶಂಕರಣ್ಣ ಗಂಟ್ಲು ಕೆರಸಿ ಸ್ವರ ಸರಿ ಮಾಡ್ಯೊಂಡು ಬಾಯಿ ತೆಗದ. ” ಅಪ್ಪೋ ಕೇಚಣ್ಣ.  ಅಂದು ಚಿಕ್ಕಮ್ಮ ಈ ಮನೆಂದ ಹೆರ ಹೋದ ಮೇಲೆ ಒಂದರಿ ಆದರೂ ಬಂದು ಅದು ಹೇಂಗಿದ್ದು ಹೇಳಿ ನೋಡಿದಿರಾ? ಎಲ್ಲಾ ಎನ ತಲೆಗೆ ಅದರ ಕಟ್ಟಿಕ್ಕಿ ಕಾಲು ನೇಏಡಿ ಕೂದ್ದೇ ಅಲ್ಲದಾ..”
ಎನಗೆ ತಲೆಗೆ ಬಡುದ ಹಾಂಗೆ ಆತು. ಪಿಸುರುದೇ ಏರಿತ್ತು ” ಆನು ಹೆರ ಹಾಕಿದ್ದಲ್ಲನ್ನೆ ಎನ್ನತ್ತೆಯ.. ನೀನೇ ಅಲ್ಲದ ನೋಡಿಕೊಳ್ತೆ ಹೇಳಿ ಕರಕ್ಕೊಂಡು ಹೋದವ.. ಚೆಂದಕ್ಕೆ ನೋಡಿಕೊಂಬದು ನಿನ್ನ ಕೆಲಸ. ಅದರೆಂತ ಆನು ಬಂದು ನೋಡುದು?” ಹೇಳಿದೆ.
ಅವ ಈಗ ರಜ್ಜ ಸಣ್ಣ ಸ್ವರಲ್ಲಿ “ಅದಪ್ಪು ಮಾರಾಯ.. ಅಂದು ಚಿಕ್ಕಮ್ಮ ಎನ್ನತ್ರೆ ಕೂಗಿತ್ತು ಹೇಳಿ ಎನ್ನ ಮನೆಗೆ ಕರಕ್ಕೊಂಡು ಹೋದ್ದಾನು.. ಆ ಮುದಿ ಕೊರಡಿಂಗೆ  ಎನ್ನಲ್ಲಿಯೂ ಸರಿ ಆಯಿದಿಲ್ಲೆ.ಮನೆಲಿ ದಿನಾಗಳೂ ಮಹಾಭಾರತ ಯುದ್ಧ.  ಅದಕ್ಕೆ ಆನದರ ವೃದ್ಧಾಶ್ರಮಲ್ಲಿ ಬಿಡುದು ಹೇಳಿ ಮಾಡಿದ್ದೆ. ಇದರ ನಿನಗೆ ಹೇಳುಲೆ  ಕಾರಣವೂ ಇದ್ದು. ಅಲ್ಲಿಗೆ ತಿಂಗಳು ತಿಂಗಳು ಇಂತಿಷ್ಟು ಹೇಳಿ ಪೈಸೆ ಕಟ್ಟೆಕ್ಕು. ಅದರ ಎನ್ನೊಬ್ಬಂದಲೇ ಕಟ್ಟುಲೆಡಿಯ. ನೀನುದೇ ರಜ್ಜ ಪೈಸೆ ಹಾಕೆಕ್ಕಾವ್ತು ..” ಎಂತ ಹೇಳ್ತೆ ನೀನಿದಕ್ಕೆ ಹೇಳಿ ಎನ್ನ ಉತ್ತರಕ್ಕೆ ಕಾದ.
“ಆನೆಂತರ ಹೇಳುದು.. ಎಲ್ಲಾ ನೀನೇ ನಿಘಂಟು ಮಾಡಿದ್ದೆನ್ನೆ.. ಎಷ್ಟು ಕೊಡೆಕ್ಕು ಹೇಳು.. ಕೊಡ್ತೆ..” ಹೇಳಿದೆ.
“ವೃದ್ಧಾಶ್ರಮ ನಿನಗೆ ಹತ್ತರೆ ಆವ್ತು. ಹಾಂಗಾಗಿ ಅದರ ರೆಕಾರ್ಡಿಲಿ ನಿನ್ನ ಹೆಸರೇ ಹಾಕುತ್ತೆ ಆಗದಾ..  ಮತ್ತೆ ಚಿಕ್ಕಮ್ಮನ ಲೆಕ್ಕದ ಆಸ್ತಿಯ ಪಾಲು ಎನ್ನ ಹೆಸರಿಂಗೆ ಅಂದೇ ಮಾಡಿದ್ದದು.  ಅಪ್ಪು ಮಾರಾಯ ಆನು ಆ ಆಸ್ತಿಯ ಎನ್ನ ಹೆಸರಿಂಗೆ ಮಾಡ್ಸಿಕೊಳ್ಳದ್ರೆ ಈ ಚಿಕ್ಕಮ್ಮ ಪಕ್ಕನೆ ಪಟಕ್ಕ ಹೋದರೆ ಆಸ್ತಿ ಎಲ್ಲ ಸಮಸ್ಟಿಗೆ ಹೋಗಿ ಎನಗೆ ಎರಡು ಅಡಕ್ಕೆ ಮರ ಸಿಕ್ಕುಗಷ್ಟೇ ಪಾಲಿಂಗೆ.. ಆನು ಇಷ್ಟು ಸಮಯ ನೋಡಿಕೊಂಡದಕ್ಕಾದರೂ ಬೆಲೆ ಬೇಡದಾ.. ಈಗ ಹೆರಡ್ತೆ ಆನು.. ವ್ಯವಹಾರ ಸರಿ ಇರೆಕ್ಕನ್ನೆ.. ಮತ್ತೆ ಆನು ಹೇಳಿದ್ದಿಲ್ಲೆ ಹೇಳಿ ಅಪ್ಪಲಾಗ ಇದಾ.. ನಾಳೆಯೇ ಅಲ್ಲಿಗೆ ಅದರ ಬಿಟ್ಟಿಕ್ಕಿ ಹೋವ್ತೆ ಆನು ..” ಹೇಳಿ ತಡಮ್ಮೆ ದಾಂಟಿ ಹೋದ. ಅವ ಹೋದ ಕಡೆಗೆ ಕ್ಯಾಕರ್ಸಿ ಉಗಿವ ಮನಸ್ಸಾತೆನಗೆ..
ಇದೆಲ್ಲ ಆಗಿ ತಿಂಗಳೆರಡಾತು ಈಗ.. ಎನ್ನ ಮನೆ ಈಗ ಮೊದಲಾಣ ಹಾಂಗೇ ಇದ್ದು.. ಅದೇ ಗೌಜಿ ಅದೇ ಹರಟೆ.. ಮತ್ತೆ ಅತ್ತೆ ಇದ್ದಲ್ಲಿ ಬೊಬ್ಬೆ ಕೇಳದ್ದೆ ಇಕ್ಕೋ.. ಅವ ಅಲ್ಲಿ ಬಿಟ್ಟು ಹೋದ ದಿನ ಹೊತ್ತೋಪ್ಪಗಳೇ ಹೋಗಿ ಅತ್ತೆಯ ಮನೆಗೆ ಕರಕ್ಕೊಂಡು ಬಂದೆ ಆನು.. ತಪ್ಪು ಆರಿಂದು ಹೇಳಿ ವಾದ ಮಾಡುವ ಬದಲು ಅದರ ಸರಿ ಮಾಡುದು ಹೇಂಗೆ ಹೇಳಿ ನೋಡುದೇ ಚೆಂದ ಹೇಳಿ ತೋರಿತ್ತೆನಗೆ..

 ~*~

9 thoughts on “ತಪ್ಪು ಸರಿಗಳ ನಡುವೆ

  1. ಶಂಕರನ ಸೀಂತ್ರಿ ಕಂಡು ಹೇಸಿಗೆ ಆತು. ಕೇಚಣ್ಣನ ಮನುಷ್ಯತ್ವವೇ ಎದ್ದು ಕಂಡತ್ತು. ಲೋಕ ಇನ್ನುದೆ ಹಾಳಾಯಿದಿಲ್ಲೆ ಹೇಳುವನೊ ? ಕತೆ ಲಾಯಕಾಯಿದು.

  2. ನಿರೂಪಣೆ,ಸಂಸೇಶ ಒೞೆದಿದ್ದು ಅನಿತಾ

  3. ಸಮಕಾಲೀನ ವಿಷಯವ ವಿರುದ್ಧ ಮನಸ್ಸಿನ ಎರಡು ವ್ಯಕ್ತಿತ್ವಲ್ಲಿ ಚಿತ್ರಿಸಿದ್ದದು ಲಾಯ್ಕಾಯಿದು.

  4. {ತಪ್ಪು ಆರಿಂದು ಹೇಳಿ ವಾದ ಮಾಡುವ ಬದಲು ಅದರ ಸರಿ ಮಾಡುದು ಹೇಂಗೆ ಹೇಳಿ ನೋಡುದೇ ಚೆಂದ ಹೇಳಿ ತೋರಿತ್ತೆನಗೆ..}
    ಹಾಂಗೆ ತೋರೆಕ್ಕಪ್ಪದೆ. ಅದೇ ಸರಿ.ವಾದ ಮಾಡಿರೆ ವಿವಾದ ದೊಡ್ಡ ಅಪ್ಪದಲ್ಲದ್ದೆ ಗುಣ ಸಿಕ್ಕ.ಲಾಯ್ಕ ಸಂದೇಶ ಇಪ್ಪ ಕತೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×