Oppanna.com

ಸ್ವಯಂವರ : ಕಾದಂಬರಿ : ಭಾಗ 08 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   15/07/2019    0 ಒಪ್ಪಂಗೊ

“ಬಿ ನೆಗೆಟಿವ್ ನೆತ್ತರು ಅರ್ಜೆಂಟಾಗಿ ಆಯೆಕು.ಎಲ್ಲಿಂದಾರು ತಂದು ಕೊಡಿ” ಆ ನರ್ಸಿನ ಸ್ವರಲ್ಲಿಪ್ಪ ಗಡಿಬಿಡಿ ಕಾಂಬಗ ಶೈಲಂಗೆ ಹೆದರಿಕೆ ಆತು.

“ಈ ನಡು ಇರುಳು ಎಂಥ ಮಾಡುದಪ್ಪಾ? ಬಿ.ನೆಗೆಟಿವ್ ನೆತ್ತರು ಅಷ್ಟು ಬೇಗ ಸಿಕ್ಕುಗಾ? ಆರತ್ರೆ ಹೇಳುದು. ಕಷ್ಟಂಗೊ ಬಪ್ಪಗ ಎಲ್ಲ ಒಟ್ಟಿಂಗೆ ಬಪ್ಪದು. ಈ ಕೂಸಿನ ಮುಟ್ಲೇ ಹೋಯೆಕಾತಿಲ್ಲೆ.ಒಟ್ಟಾರೆ ‘ಹುಲಿ ಹಿಡುದ ಗಾದೆ ಹಾಂಗಾತನ್ನೆ’

” ಆ ಕೂಸಿನ ಇಲ್ಲಿ ಮನುಶಿ ಅಕ್ಕಾ.ಎಂಗೊ ನೋಡ್ತೆಯಾ” ಲಿಲ್ಲಿ ನರ್ಸು ಹತ್ತರೆ ಬಂದು ಶೈಲನ ಕೈಂದ ಒಪ್ಪಕ್ಕನ ಕರಕ್ಕೊಂಡತ್ತು.ಒಂದರಿ “ಅಮ್ಮಾ……ಅಬ್ಬೇ…..” ಹೇಳಿ ಹೊಡಚ್ಚಿಕ್ಕಿ ಒಪ್ಪಕ್ಕ ಪುನಾ ಒರಗಿತ್ತು.

‘ಒಂದರಿ ಅಮ್ಮಾ ಹೇಳ್ತು,ಇನ್ನೊಂದರಿ ಅಬ್ಬೇ ಹೇಳ್ತು.ಇದು ಸರಿಯಾಗಿ ಸುಶೀಲನ ಮಗಳೇ. ಸಣ್ಣಾದಿಪ್ಪಗ ಅದೂದೆ ಹೀಂಗೇ ಮನೆಲಿದ್ದ ಮಕ್ಕೊ ಎಲ್ಲ ಅವರವರ ಅಬ್ಬೆಕ್ಕಳ ‘ಅಬ್ಬೇ’ ಹೇಳಿ ದಿನಿಗೇಳಿರೆ ಸುಶೀಲ ಮಾಂತ್ರ “ಅಮ್ಮಾ ” ಹೇಳ್ಲೆ ಸುರು ಮಾಡಿತ್ತು.

“ನಮ್ಮ ಅಬ್ಬೆಯ ಮಾಂತ್ರ ಅಬ್ಬೇ ಹೇಳುವ ಅವಕಾಶ ಇಪ್ಪದು, ಅಮ್ಮಾ ಹೇಳಿ ಆರ ಬೇಕಾರು ಹೇಳ್ಲಾವ್ತು.ನೀನು ಅಬ್ಬೇ ಹೇಳಿಯೇ ದಿನಿಗೇಳೆಕು ” ಹೇಳಿ ಅಜ್ಜಿ, ಅಪ್ಪ° ಜೋರು ಮಾಡಿರೂ ಅದರದ್ದೊಂದು ಕ್ರಮ ಬೇರೆ. ಮನೆಯ ಕೊಂಡಾಟದ ಕುಞಿ ಮಗಳಾದ ಕಾರಣ ಅಂಬಗ ಅದೆಲ್ಲ ಬರೀ ನೆಗೆ ಮಾಡ್ಲೆ, ಕುಶಾಲು ಮಾಡ್ಲೆ ಲಾಯ್ಕ ಆಗಿಂಡಿದ್ದತ್ತು.’

“ಎಂತ ಇಲ್ಲಿ ಹೀಂಗೆ ನಿಂದದು.ಎಷ್ಟೊತ್ತಾದರು ಕಾಣ್ತಿಲ್ಲೇಕೇಳಿ ಹುಡ್ಕಿಂಡು ಬಂದದಾನು” ಗೆಂಡನ ಸ್ವರ ಕೇಳಿಯಪ್ಪಗ ಅದರ ಆಲೋಚನೆಯ ಸರಪ್ಪುಳಿ ತುಂಡಾತು.

“ಬಿ.ನೆಗೆಟಿವ್ ನೆತ್ತರು ಬೇಕಾಡ.ರಜ ಆಗ ಒಂದು ಆಕ್ಸಿಡೆಂಟ್ ಕೇಸು ಬಂದ ಕಾರಣ ಇಲ್ಲಿಪ್ಪ ನೆತ್ತರು ಬ್ಯಾಂಕಿಲ್ಲಿ ಮುಗುದ್ದಾಡ.ಬೇರೆ ತರ್ಸಿ ಆಯೆಕಷ್ಟೆ. ನಿಂಗಳೇ ಆರಾರು ಇದ್ದರೆ ಕೊಡಿ ಹೇಳಿತ್ತು ಆ ನರ್ಸು.”

“ಇಷ್ಟು ಫಕ್ಕನೆ ನಾವೆಲ್ಲಿಂದ ತಂದು ಕೊಡುದು? ಅವರತ್ರೆ ಇದ್ದರೆ ಕೊಡ್ತವು.ಇಲ್ಲದ್ರೆ ತರ್ಸುತ್ತವು.ಆ ಗ್ರೂಪು ನಮ್ಮದಿಬ್ರದ್ದೂ ಅಲ್ಲ”

“ನಮ್ಮದಲ್ಲ..ಆದರೇ…..” ಶೈಲ ಅಷ್ಟು ಹೇಳಿ ನಿಲ್ಸಿಯಪ್ಪಗ ಚಂದ್ರಶೇಖರ ಹೆಂಡತಿಯ ಮೋರೆ ನೋಡಿದ

“ಎಂತ ಆದರೇ…..ರೇ….'”

“ಎಂತದೂ ಇಲ್ಲೆ..ಎಂತೋ ಒಂದು ನೆಂಪಾತು. ಹಾಂಗೆ ಸುಮ್ಮನೇ ಎಂತೋ ಹೇಳಿದೆ”

“ನೀನು ಹೀಂಗೆ ಅರ್ಧಂಬರ್ಧ ಹೇಳಿರೆ ಎನಗರ್ಥಾಗ.ಸರಿಯಾಗಿ ಹೇಳು ಮಾರಾಯ್ತೀ..ಒಂದು ಹೊಡೆಲಿ ಅಪ್ಪ, ಒಂದು ಹೊಡೆಲಿ ಇದ್ದರೂ ಇಲ್ಲದ್ದ ಹಾಂಗಿದ್ದ ತಂಗೆ ಅಲ್ಲದಾ?ನಿನ್ನ ಸಂಕಟ ಎನಗರ್ಥಾವ್ತು.ಹೆದರೆಡ ,ಆದ ಹಾಂಗಾವ್ತು”

ಗೆಂಡ ಅಷ್ಟು ಹೇಳಿಯಪ್ಪಗ ಶೈಲಂಗೆ ರಜಾ ಧೈರ್ಯ ಬಂತು.ಅಂದರೂ ಹೇಳಿದ್ದು ಎಲ್ಲಿ ಹೆಚ್ಚು ಕಮ್ಮಿ ಅಕ್ಕೋ ಹೇಳಿ ಹೆದರಿಕೆ ಅದಕ್ಕೆ.
ಗೆಂಡ ಬೈಗು ಹೇಳಿ ಅಲ್ಲ.ಅದು ಮಾಡುವ ಕೆಲಸ ಸರಿಯೋ ತಪ್ಪೋ ಹೇಳಿ ರಜಾ ಹಿಂದೆ ಮುಂದೆ ನೋಡಿಂಡು ನಿಂದತ್ತು.

“ನೀನು ಹೀಂಗೆ ನಿಂದು ಎಂತ ಪ್ರಯೋಜನ? ಆಕಾಶ ಬೀಳ್ತು ಹೇಳಿ ಅಂಗೈ ಒಡ್ಡಿರೆ ಅಕ್ಕೋ? ಹೆಚ್ಚು ತಲೆಬೆಶಿ ಮಾಡೆಡ.ಬಾ..ನಾವು ಕೇಶವನತ್ರಂಗೆ ಹೋಪ°” ಅವ° ಕೇಶವನ ಹೆಸರು ಹೇಳಿಯಪ್ಪಗ ಶೈಲಂಗೂ ಮಾತಾಡ್ಲೆ ಎಳೆ ಸಿಕ್ಕಿದ ಹಾಂಗಾತು.

“ಕೇಶವನ ನೆತ್ತರಿನ ಗ್ರೂಪುದೆ ಬಿ.ನೆಗೆಟಿವ್. ಅವಂಗೆ ಮನಸ್ಸಿದ್ದರೆ ಕೊಡ್ಲಾವ್ತಿತು” ಅದರ ಮಾತಿನ ಪೂರ್ತಿ ಮಾಡ್ಲೆ ಬಿಟ್ಟಿದಾ°ಯಿಲ್ಲೆ ಚಂದ್ರಶೇಖರ.

“ಶ್ಶೋ ದೇವರೇ….ಇನ್ನು ಅದೊಂದು ಬಾಕಿ ಇದ್ದು.ನಿನಗಿದು ಹೇಳ್ಲೆ ಹೇಂಗೆ ಧೈರ್ಯ ಬಂತು ಹೇಳಿ ಗ್ರೇಶುದಾನು.ಸ್ವಯ ಇದ್ದ ನಿನಗೆ? ಅಬ್ಬೆ,ಅಪ್ಪ,ಅಣ್ಣ,ಅಕ್ಕನ ಎಲ್ಲ ಬಿಟ್ಟಿಕ್ಕಿ ಪ್ರೀತಿ ಪ್ರೀತಿ ಹೇಳಿ ಹೋಪಗ ಅದಕ್ಕೆ ರಜಾದರು ಮನುಷ್ಯತ್ವ ಇದ್ದತ್ತಾ? ಅದು ಹೀಂಗೆ ಮಾಡದ್ರೆ ಈಗ ಮಾವ° ಹೀಂಗಾವ್ತಿತವಾ? ಥಕ್!! ಅದರ ಹೆಸರು ಹೇಳ್ಲೇ ನಾಚಿಕೆಯಾಯೆಕು”

ಗೆಂಡ° ಹೇಳುವಷ್ಟು ಹೇಳಲಿ ಹೇಳಿ ಬಾಯಿಲಿ ಅಕ್ಕಿಕಾಳು ತುಂಬ್ಸಿದವರಾಂಗೆ ಮಾತಾಡದ್ದೆ ನಿಂದತ್ತು ಶೈಲ. ಅವ° ಹೇಳುದೆಲ್ಲ ಸತ್ಯ ಹೇಳಿ ಅದಕ್ಕೂ ಗೊಂತಿದ್ದು. ಆದರೂ ಹೀಂಗಿದ್ದ ಪರಿಸ್ಥಿತಿಲಿ ಅದರ ಎಲ್ಲ ಲೆಕ್ಕಕ್ಕೆ ತೆಕ್ಕೊಳದ್ದೆ ಸಕಾಯ ಮಾಡೆಕು ಹೇಳಿ ಅದರ ತತ್ವ.

“ನಿನ್ನ ಮನಸು ಎನಗೆ ಅರ್ಥಾವ್ತಿಲ್ಲೆ ಹೇಳಿ ಜಾನ್ಸೆಡ.ಅಂದರೂ ನಾವು ಹೆಚ್ಚು ಒಳ್ಳೆಯವರಾಗಿ ಎಂತ ಸಾದ್ಸುಲೂ ಇಲ್ಲೆ.ಆನೀಗ ಕೇಶವನತ್ರೆ ಕೇಳೆಕೂಳಿ ಅಲ್ದಾ ನಿನ್ನ ಮನಸಿಲ್ಲಿಪ್ಪದು.”

“ಹೂಂ…. ನಿಂಗೊ ಕೇಳಿರೂ ಅವ° ಒಪ್ಪ°.ಸುಮ್ಮನೇ ಎಂತಕೆ ಕೇಳುದು!! ಬೇಡ ಆನು ಹೀಂಗೇಳಿ ನಿಂಗೊಗೆ ಗೊಂತಿದ್ದನ್ನೇ ಅಷ್ಟು ಸಾಕು” ಸೆರಗಿಲ್ಲಿ ಕಣ್ಣುದ್ದಿತ್ತು ಶೈಲ.

“ನೀನು ಕೂಗೆಡ, ಆನವನ ನೋಡಿಕ್ಕಿ ಬತ್ತೆ” ಹೇಳಿ ಹೋದವ° ಕೇಶವನನ್ನು ಕರಕ್ಕೊಂಡೇ ಅಲ್ಲಿಗೆ ಬಂದಪ್ಪಗ ಶೈಲಂಗೆ ಅದರ ಕಣ್ಣುಗಳನ್ನೇ ನಂಬಲೆಡಿಯದ್ದೆ ಮತ್ತೆ ಮತ್ತೆ ಕಣ್ಣುದ್ದಿ ಅವನನ್ನೇ ನೋಡಿತ್ತು.

ಅವನ ಮೋರೆಲಿಪ್ಪದು ಯಾವ ಭಾವ ಹೇಳಿ ಅಂದಾಜು ಮಾಡ್ಲೆ ಅದಕ್ಕೆ ಎಡ್ತಿದಿಲ್ಲೆ.

“ಅಕ್ಕ° ಆನು ನೆತ್ತರು ಕೊಟ್ಟಿಕ್ಕಿ ಬತ್ತೆ.ಕೆಳ ಹೋಗಿ ಅಬ್ಬೆಯ ನೋಡಿಕ್ಕಿ ಬಾ.ಅಪ್ಪನ ನೋಡೆಕು ಹೇಳಿ ಹಠ ಮಾಡಿಂಡಿದ್ದು.ಈ ಹೊತ್ತಿಂಗೆ ಅವು ಐಸಿಯು ವಿಂಗೆ ಆರನ್ನೂ ಹೋಪಲೆ ಬಿಡವು”.

” ಆತು ಕೇಶೂ..ಅಬ್ಬೆ ರೂಮಿಲ್ಲಿದ್ದನ್ನೇ , ಆನಲ್ಲಿಗೆ ಹೋವ್ತೆ.ನೀನು ನಿನ್ನ ಕೆಲಸ ಆದ ಕೂಡ್ಲೆ ಬಾ” ಹೇಳಿಕ್ಕಿ ಅಲ್ಲಿಂದ ಕೆಳ ಇಳುದು ಅಬ್ಬೆ ಇಪ್ಪ ರೂಮು ಹುಡ್ಕಿಂಡು ಹೆರಟತ್ತು.

“ನೆತ್ತರು ಕೊಡ್ಲೆ ಆರಾರು ಇದ್ದವಾ?” ಹೇಳಿ ಮತ್ತೊಂದರಿ ಕೇಳ್ಲೆ ಬಂದ ನರ್ಸಿನೊಟ್ಟಿಂಗೆ ಒಳ ಹೋದ° ಕೇಶವ°.

‘ಈಗ ಸುಶೀ ಹೇಂಗಿಕ್ಕು? ಈಗಲೂ ಉದ್ದ ಜೆಡೆ ಇಕ್ಕಾ? ಸಂಪಗೆ ಹೂಗು ಹೇಳಿರೆ ಎಷ್ಟು ಪ್ರೀತಿ ಅದಕ್ಕೆ. ತೋಟದ ತಲೇಲಿಪ್ಪ ಮರಲ್ಲಿ ವರ್ಷಕ್ಕೆರಡು ಸರ್ತಿ ಹೂಗಾದರೆ “ಅಣ್ಣ….ಅಣ್ಣ…ಒಂದು ಹೂಗು ಕೊಯ್ದು ಕೊಡು ಹೇಳಿ ಹಠ ಮಾಡುಗದು.

ಬರೆಕರೆಲಿ ಅಜ್ಜ ನೆಟ್ಟ ಬೆಳಿ ಸಂಪಗೆ ಮರ ಸಪೂರಾಗಿ ಉದ್ದಕೆ ಬೆಳದು ಅದರ ಕೊಡೀಲಿ ನಾಕು ಬೆಳಿ ಸಂಪಗೆ ಹೂಗಾದಪ್ಪಗ ಸುಶೀ ಅವನತ್ರೆ ಹೂಗು ಕೊಯ್ವಲೆ ಹೇಳಿದ್ದತ್ತು.
ಕೊಂಗಾಟದ ತಂಗಗೆ ಬೆಳಿ ಸಂಪಗೆ ಕೊಯ್ದು ಕೊಡ್ಲೆ ಮರ ಹತ್ತಿಯಪ್ಪಗ ಗೆಲ್ಲು ಮುರುದು ಬಿದ್ದು ಕಾಲು ಮುರುದು ಎರಡು ತಿಂಗಳು ಕೂದಲ್ಲೇ ಆದ್ದದು ಮರವಲೆಡಿಗೋ!?

ಅಣ್ಣ ಬಿದ್ದಿದ ಹೇಳಿ ಅದಕ್ಕೆ ಹೆಚ್ಚು ಬೇಜಾರಾಗದ್ದದು ಕಂಡು ಅವಂಗೆ ಅಂದು ಆಶ್ಚರ್ಯ ಆಗಿದ್ದತ್ತು.
“ಸಣ್ಣ ಅಲ್ಲದಾ? ಅದಕ್ಕೆ ಹಾಂಗೆಲ್ಲ ಅರ್ಥ ಆಗ” ಹೇಳಿ ಶೈಲ ಸಮದಾನ ಮಾಡಿದ್ದಂದು.

ಅಜ್ಜಿ ಮನುಗಿದಲ್ಲೇ ಆಗಿ ಚಾಕರಿ ಮಾಡುವ ದಿನಂಗೊ ಅದು.ಅಬ್ಬಗೆ ದನ,ಆಳುಗೊ,ಮನೆಕೆಲಸ,ಅಜ್ಜಿ ಚಾಕರಿ ಎಲ್ಲ ಆಯೆಕು.ಅಂಬಗ ಕೇಶವನ ಚೆಂದಕೆ ನೋಡಿಕೊಂಡದು ಶೈಲ. ಅವಂಗೆ ಹೊತ್ತು ಹೊತ್ತಿಂಗೆ ಬೇಕಾದ್ದರ ತಂದು ಕೊಟ್ಟು,ಮನೆಯ ಆಳು ಚಂದ್ರನ ಹತ್ತರೆ ಅವನ ಮೀಶುಲೆ ಹೇಳಿ ಅವಂಗೆ ಯೇವ ಕೊರತೆಯೂ ಆಗದ್ದಾಂಗೆ ಪ್ರೀತಿಲಿ, ಕೊಂಗಾಟಲ್ಲಿ ನೋಡಿದ ಶೈಲನತ್ರೆ ಅವಂಗೆ ಹೆಚ್ಚು ಅಭಿಮಾನ.

ಶೈಲನೂ ಅವನೂ ಜೋಡು ಮಕ್ಕೊ ಆದ ಕಾರಣ ಅವಂಗೆ ಕಲಿವ ವಿಷಯಲ್ಲಿಯೂ ಅದರ ಸಹಕಾರ ತುಂಬ ಇದ್ದತ್ತು.ಅದರತ್ರೆ ಎಷ್ಟು ಅಭಿಮಾನ ಇದ್ದೋ,ಅಷ್ಟೇ ಕೋಪ ಸುಶೀಯ ಹತ್ತರೆಯೂ ಇದ್ದವಂಗೆ‌.ಇಂಜಿನಿಯರಿಂಗ್ ಕಲ್ತು ಕೆಲಸ ಸಿಕ್ಕಿ ಎರಡು ತಿಂಗಳಾಯೆಕಾರೆ ಮನೆಯ ಮರ್ಯಾದೆ ತೆಗವ ಹಾಂಗಿದ್ದ ಕೆಲಸ ಮಾಡಿ, ಅಪ್ಪನ ಮೂಲೆ ಪಾಲು ಮಾಡಿದ ಅದರ ಮೋರೆ ಕೂಡ ನೋಡ್ಲೆ ಮನಸ್ಸಿಲ್ಲದ್ರೂ ಶೈಲನ ಮೇಗಾಣ ಪ್ರೀತಿಲಿ ಅವ° ಇಂದು ನೆತ್ತರು ಕೊಡ್ಲೆ ಒಪ್ಪಿದ್ದು.

“ಬನ್ನೀ… ಇಲ್ಲಿ ಮನುಗಿ,ಎಂಗೊಗೆ ರಜ ಪರೀಕ್ಷೆ ಮಾಡ್ಲಿದ್ದು” ಒಂದು ನರ್ಸು ಬಂದು ಅವನ ಕೈಗೆ ವಯರು ಸಿಕ್ಸಿದ ಸೂಜಿ ಕುತ್ತಿತ್ತು.ಅಷ್ಟಪ್ಪಗ ಅತ್ಲಾಗಿ ಒಳಾಂದ ಒಂದು ಹೆಣ್ಣು ಶಬ್ದ ಕೂಗುದು ,ಬೊಬ್ಬೆ ಹಾಕುದು ಕೇಳಿತ್ತವಂಗೆ.

“ಎನ್ನ ಮಗಳೂ……ಎನ್ನ ಬಿಟ್ಟಿಕ್ಕಿ ಹೋದೆಯಾ? ಅಬ್ಬೇ…ಅಣ್ಣಾ….‌ಅಪ್ಪಾ……ನಿಂಗಳ ಮೋರಗೆ ಮಸಿ ಬಳುದ ಎನ್ನ ಕ್ಷಮಿಸಿ..‌‌‌‌‌‌…..ತಪ್ಪಾತೂ…..” ಅದರೊಟ್ಟಿಂಗೆ ಎಂತೋ ಎಳವದು,ಬೀಳುದು,ನರ್ಸುಗೊ ಎಲ್ಲ ಒಟ್ಟೊಟ್ಟಿಂಗೆ ಒಳಾಂಗೆ ಓಡುದು ಕಂಡು ಮನುಗಿಂಡಿದ್ದ ಕೇಶವ° ಫಕ್ಕನೆ ಎದ್ದು ಕೂದ°.

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಈವರೆಗೆ:

ಪ್ರಸನ್ನಾ ಚೆಕ್ಕೆಮನೆ
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×