ಒಂದು ಪ್ಲಾಸ್ಟಿಕ್ ತೊಟ್ಟೆಯ ಸುತ್ತ

ಕಳ್ಳನ ಹಿಡಿವಲೆ ಗೋಪಾಲನ ಅವತಾರ !

ಹೊಸ ಮನೆ ಒಕ್ಕಲು ಮುಗುಶಿ ಅಮೋಘ ಆರು ವರುಶ ಕಳುದು ಮತ್ತೊಂದರಿ ಮನಗೆ ಸುಣ್ಣ ಬಣ್ಣ ಎಲ್ಲ ಹೊಡಶಿದ್ದಿದ್ದೆ.  ಒಳ್ಳೆ ಚೆಂದದ ಮದುಮ್ಮಾಳ ಮೋರೆ, ಸೌಂದರ್ಯವರ್ಧಕಂದ ಮತ್ತೂ ಚೆಂದ ಕಾಣುತ್ತ ಹಾಂಗೆ ಎಂಗಳ “ಮಿನಿ ಬಂಗಲೆ” ಕಾಂಬಲೆ ಸುರು ಆತು.

ಮನೆ ಎದುರು ಖಾಸಗಿ ಡಾಮರು ಮಾರ್ಗ, ಅಲ್ಲೇ ಕರೆಲಿ ರಜಾ ಸಮತಟ್ಟಾದ ಜಾಗೆಲಿ ಹೂಗಿಡಂಗಳ ಬೆಳೆಸಲೆ ಆವುತ್ತಿತಾದರೂ ಜಾಗ ಎಂಗಳದ್ದು ಅಲ್ಲದ್ದ ಕಾರಣ ಹಾಂಗೆ ಮಾಡ್ಳೆ ಹೋಯಿದಿಲ್ಲೆ.  ಎಂಗಳ ಜಾಗೆಲಿ ತಕ್ಕಮಟ್ಟಿಂಗೆ ಎಂಗೊಗೆ ಕೈಲಾದ ಹಾಂಗೆ ಹೂಗಿಡಂಗಳ ಬೆಳೆಸಿದ್ದಿಯೋಂ.  ಮತ್ತೆ ಅಡಕ್ಕೆ ಸೆಸಿ ಹಾಕಲೆ ಕೊಡೆಯಾಲ ಪೇಟೆಲಿದ್ದ ಎಂಗಳ ನಾಲ್ಕು ಸೆಂಟ್ಸಿಲ್ಲಿ ಎಲ್ಲಿದ್ದು ಜಾಗೆ ?!  ಊರಿಲ್ಲಿ ಆದರೆ ಒಕ್ಕಲುಗವಕ್ಕೂ ಎಂಗಳಿಂದ ಜಾಸ್ತಿ ಜಾಗೆ ಇಕ್ಕು ! ಊರಿಂದ ಎಂಗಳಲ್ಲಿಗೆ ಬಂದ “ಕೆಲಸದ ಚನಿಯ” ಹೇಳಿದ್ದು ಈಗಳೂ ನೆಂಪಿದ್ದು “ಓ ಈತೆನಾ (ಓ ಇಷ್ಟೇ ಜಾಗೆ ಇದ್ದದಾ ?).  ಹೇಳಿರೆ ಊರಿಲ್ಲಿ ಅದರ ದರ್ಕಾಸ್ತು ಅರ್ಧ ಎಕರೆ ಹತ್ರೆ ಇದ್ದು!

ಹಾಂಗೆ ಇಪ್ಪಗ,  ಒಂದು ದಿನ ಉದಿಯಪ್ಪಗ ಎದ್ದು ನೋಡ್ತೆ, ಎಂಗಳ ಮನೆ ಎದುರ ಒಂದು ದೊಡ್ಡ ಪ್ಲಾಸ್ಟಿಕ್ಕು ತೊಟ್ಟೆ.  ಕಾರ್ಪೊರೇಶನ್ನಿನವರ (ಕಾರ್ಪೊರೇಶನ್ ಬ್ಯಾಂಕಿನವರ ಅಲ್ಲ !) ಕಸದ ತೊಟ್ಟಿಗೆ ಇಡುಕ್ಕೆಕಾದ ತೊಟ್ಟೆಯ ಎಂಗಳ ಮನೆ ಎದುರು ಇಡುಕ್ಕಿಕ್ಕಿ ಆರೋ ಹೋಯಿದವು.  ಮದಲಾಣ ದಿನವೇ ಎನ್ನ ಹೆಂಡತ್ತಿ ಲಾಯಕಿಲ್ಲಿ  ಕಸ ಬಜಕ್ಕರೆಯ ಎಲ್ಲ ಉಡುಗಿ   (ಉದ್ದಿದ್ದಿಲ್ಲೆ !!)   ಮಡುಗಿದ ಎಂಗಳ ಗೇಟಿನ ಎದುರ ಒಳ್ಳೆ ದೃಷ್ಟಿಬೊಟ್ಟು ಮಡಗಿದ ಹಾಂಗೆ ದೊಡ್ಡ ಪ್ಲಾಸ್ಟಿಕ್ಕು ಕಟ್ಟ.   ಅದೇ ಹೇಳುತ್ತದು, ಜೆನಂಗೊ  ಉಪಕಾರ ಮಾಡ್ಳೆ ಎಡಿಯದ್ರೆ ಬೇಡ, ಬೇರೆಯವಕ್ಕೆ ಉಪದ್ರ ಕೊಡದ್ದೆ ಅವರವರಷ್ಟಕೆ ಇದ್ದರೆ ಸಾಕು ಹೇಳಿ.   ಆದರೆ ಕೆಲವು ಜೆನ ಹಾಂಗಲ್ಲ,  ಬೇರೆಯವಕ್ಕೆ ಉಪದ್ರ ಕೊಡದ್ರೆ ಅವಕ್ಕೆ ಇರುಳು ಒರಕ್ಕೇ ಬಾರ !    ಹೇಳಿದ ಹಾಂಗೆ,  ಹಳ್ಳಿಲಿ ಇಪ್ಪವಕ್ಕೆ ಪೇಟೆಯವರ ಕಷ್ಟಂಗೊ ಎಲ್ಲ, ಅರ್ಥ ಆವುತ್ತೋ ಇಲ್ಲಿಯೋ ಹೇಳಿ ಎನಗೆ ಅರಡಿಯ.

ಛೆ!  ಇದು ಆರ ಕೆಲಸ ? ಎಂಗಳ ಮನೆ ಹತ್ರೆ ಎಲ್ಲೂ ಮಹಾನಗರಪಾಲಿಕೆಯ ಕಸದ ತೊಟ್ಟಿ ಇಲ್ಲೆ. ಹಾಂಗಾದ ಕಾರಣ ಎಂಗಳ ಮನೆಯ ಕಸ ಎಂತ ಇದ್ದರೂ ದೂರದ ತೊಟ್ಟಿಲಿ ಆನೇ ಹಾಕಿಕ್ಕಿ ಬತ್ತೆ.   ಎರಡು ವಾರದ ಹಿಂದೆ ಹೀಂಗೇ ಆರೋ ಇಡುಕ್ಕಿಕ್ಕಿ ಹೋದ ಕಸವಿಂಗೆ ಆನೇ ದಹನ ಕಾರ್ಯವ ಮಾಡಿ ಅದಕ್ಕೆ ಬೇಕಾದ ಸದ್ಗತಿಯ ಕಾಣುಸಿದ್ದೆ!     ಇದೀಗೆ ಪುನ:, ಮೈ ಪರಚಿಕೊಳ್ಳುವೋಂ ಹೇಳಿ ಕಂಡತ್ತು.

ಅರ್ಧ ಗಂಟೆ ಕಳವಗ ಒಂದು ನಾಯಿ ಎಲ್ಲಿಂದಲೋ ಬಂದು ಆ ಕಟ್ಟವ ಬಗದತ್ತು. ಅದರೊಳಾಂದ ತುಂಬ ಮರಿ ತೊಟ್ಟೆಗೊ, ಗುಟ್ಕಾ ಪ್ಯಾಕೆಟ್ಟುಗೊ,  ಕೊಳದ ತರಕಾರಿ, ಹಳಸಿದ ಅನ್ನ, ಮೊಟ್ಟೆ ತುಂಡುಗೊ ಎಲ್ಲ ಹೆರ ಬಂತು.  ಇಡೀ ಚಾಂದ್ರಾಣ ಮಾಡಿ ಮಡಗಿತ್ತು ಆ ನಾಯಿ. ಆರ ಹತ್ರ ಹೇಳ್ಯೊಂಬಲೆ ಎಡಿಯದ್ದೆ ಆನೇ ಕೋಲೊಂದರಲ್ಲಿ ಅದರ ಎಲ್ಲ ಒಟ್ಟು ಸೇರುಸಿ ಪುನ: ಅದೇ ತೊಟ್ಟೆಲಿ ಹಾಕಿದೆ.  ಮರಿತೊಟ್ಟೆಂದ ಮೋಬಿಲು ಓಯಿಲಿನ ಹಾಂಗೆ ಮಾಂಸದ ಅಂಟ್ ಅಂಟು ಸಾಂಬಾರು ಹೆರ ಬಂದಪ್ಪಗ ನಾಯಿ ಪುನ: ಓಡಿ ಬಂತು. ಎನ್ನ ಅವಸ್ಥೆ ಆರಿಂಗೂ ಬೇಡ !

“ಪುಷ್ಪಕ ವಿಮಾನ” ಸಿನೆಮಾದ ಕಮಲಹಾಸನ್ನಿನ ಹಾಂಗೆ, ಆ ಕಟ್ಟವ ದೂರದ ತೊಟ್ಟಿಲಿ ಇಡುಕ್ಕಿಕ್ಕಿ ಬಂದೆ.  ಅದಾ,  ಮತ್ತಾಣ ಸೋಮವಾರ ಪುನ: ಮತ್ತೊಂದು ತೊಟ್ಟೆ.  ಅಷ್ಟೇ ದೊಡ್ಡದು.  ಆದರೆ ಬಣ್ಣ ಮಾಂತ್ರ ಕಪ್ಪು.          ಕಪ್ಪಾದರೆ ಎಂತ, ಬೆಳಿಯಾದರೆ ಎಂತ ಅದರ ಒಳಾಣದ್ದು ಎಲ್ಲಾ ಒಂದೇ ಅಲ್ಲದೊ !? ಕೋಪಂದ, ಹಟಂದ, ಎಲ್ಲೋರಿಂಗು ಕಾಣುತ್ತ ಹಾಂಗೆ ಆ ತೊಟ್ಟೆಯ ಮಾರ್ಗದ ಮಧ್ಯಕ್ಕೆ ದೂಡಿ ಮಡಗಿದೆ.  ಆ ತೊಟ್ಟೆಯ ಯಜಮಾನಂಗೆ, ಎನಗೆ ಆವುತ್ತ ತೊಂದರೆಯ ತೋರುಸಿಕೊಡುತ್ತ ವ್ಯರ್ಥ ಪ್ರಯತ್ನ ಎನ್ನದಾಗಿತ್ತು.  ಹತ್ರಾಣ ಮನೆಯವಕ್ಕೂ ಈ ಬಗ್ಗೆ ಗೊಂತಾಗಿತ್ತು. ಅವು ಹಾಂಗೆ ಮಾಡುತ್ತ ಜಾತಿಯವು ಅಲ್ಲ ಹೇಳಿ ಎನಗೆ ಗೊಂತಿದ್ದು.

ಭರ್ತಿ ಎರಡು ದಿನ,ಆ ತೊಟ್ಟೆ ಮಾರ್ಗದ ಮಧ್ಯಲ್ಲಿ ರಾರಾಜಿಸೆಂಡು ಇತ್ತು. ಒಂದೆರಡು ಜೆನ ಅದರ ಮಾರ್ಗದ ಕರೆಂಗೆ ದೂಡಿದರೂ, ಎನ್ನ ಕೈವಾಡಂದಲಾಗಿ ಅದು ಪುನ: ಮಾರ್ಗದ ಮಧ್ಯಕ್ಕೇ ಬಂದೊಂಡಿತ್ತು ! ಎನ್ನ ಆಟ  ಎಷ್ಟು ದಿನ ನೆಡಗು ?  ಆಟಲ್ಲಿ ಆನೇ ಕಡೆಂಗೆ ಸೋತು ಹೋಗಿ, ಕಟ್ಟ ಎನ್ನ ಸ್ಕೂಟರಿಲ್ಲಿ ದೂರದ ತೊಟ್ಟಿ ಒಳಂಗೆ ಸೇರಿತ್ತು.  ಎಂಗಳ ಮನೆಲಿ ಈ ಬಗ್ಗೇ ಮಾತುಗೊ. ಎಂತಾದರೂ ಮಾಡಿ, ಆ ಕಸ ಹಾಕುತ್ತ “ಮಜಡ“ನ ಹಿಡಿಯಲೇ ಬೇಕು ಹೇಳಿ ಗ್ರೇಶಿದೆಯೋಂ.

“ಅದು, ಅದೇ ಉದೀಯಪ್ಪಗ ಐದು ಗಂಟಗೇ ಬೈಕಿಲ್ಲಿ ಒಂದು ಜೆನ ಹೋವುತ್ತಿಲ್ಲೇಯೋ, ಅದೇ ಆಗಿರೆಕು”.

“ಇಲ್ಲಿಯವೂ ಆರೂ ಅಲ್ಲಪ್ಪ.  ಬೇರೆ ಬೀದಿಯವು ಆರೋ ಆಗಿರೆಕು.”  “ಬೈಲಿಂಗೆ ಬಂದ ಆ ಹೊಸ ಜೆನ ಇರೆಕು, ಅದೇ ಆ ದಪ್ಪ ಮೀಸೆ,  ಚಾಣೆತ್ತಲೆಯ ಜೆನ, ಅದೇ ಇರೆಕು”. ಎಂಗಳ ಗುಮಾನಿ, ಶಂಕೆಲೇ ದಿನ ಕಳದತ್ತು.

ಅಂದು ಆದಿತ್ಯ ವಾರ ಇರುಳು.  ಶನಿವಾರ ಬ್ಯಾಂಕಿನ ಕ್ಲಬ್ಬಿನವರ ವಾರ್ಷಿಕೋತ್ಸವಲ್ಲಿ ಎನ್ನ ನಿರ್ದೇಶನಲ್ಲಿ ಭರ್ಜರಿ ನಾಟಕ ಒಂದು ನಡದಿತ್ತು. ಅದರಲ್ಲಿ ಎನ್ನ ಅಜ್ಜಿ ವೇಷ ಭಾರೀ ರೈಸಿತ್ತು.   ಹಾಂಗಾಗಿ ಆನು ಒಳ್ಳೆ ಬಚ್ಚಲಿಲ್ಲಿ ಇದ್ದ ಕಾರಣ  ಅಂದು ಎಲ್ಲಿಗೂ ತಿರುಗಲೆ  ಹೋಯಿದಿಲ್ಲೆ. ಮನೆಲೇ ಇತ್ತೆ. ಮರದಿನ ಬೇರೊಂದು ಬಣ್ಣದ ತೊಟ್ಟೆ ಮನೆ ಎದುರ ಬೀಳೆಕಾದ ದಿನ !

ಎನ್ನ ಹೆಂಡತ್ತಿ ಬೇಗನೇ ಊಟ ಬಡುಸಿ, ಇರುಳು ಹತ್ತಕ್ಕೇ ಮಲಗಿ ವಿಶ್ರಾಂತಿ ಪಡೆವಲೆ ಹೇಳಿತ್ತು.   ಟಿವಿ, ಕ್ರೈಂ ಸ್ಟೋರಿ ಹೇಳಿ ಹೆಚ್ಚು ಇರುಳು ಮಾಡಿರೆ ಉದಿಯಪ್ಪಗ ಬೇಗ ಎಳಲಾವುತ್ತಿಲ್ಲೆ.  ನಾಳಂಗೆ ಬೇಗ ಹೇಳಿರೆ, ಐದು ಗಂಟಗೇ ಎದ್ದು ನಮ್ಮ ಪ್ರಸ್ತುತ ಕಥಾನಾಯಕ “ಕಸದ ಜೆನ”ಕ್ಕೆ ಕಾಯೆಕಾಗಿತ್ತು.  ಅದರ  “ಕೆಂಪು ಕೈಲಿ” (red handed) ಹಿಡಿಯೆಕಾಗಿತ್ತು.  “ಎಲ್ಲಿಯಾದರೂ ಅದು ಸಿಕ್ಕಿದರೆ ಅದರ ತೊಟ್ಟೆ ಒಟ್ಟಿಂಗೆ ನಮ್ಮ ಮನೆ ಕಸವನ್ನೂ ಅದರೊಟ್ಟಿಂಗೆ ಸೇರುಸಿ ಸಾಗುಸೆಕು” ಹೇಳಿ ಹೆಂಡತ್ತಿ ತಾಕೀತು ಮಾಡಿತ್ತು.    “ಅಲ್ಲ ಅಲ್ಲ ಸುರೂವಿಂಗೆ ಅದರ ಕಾಲರ್ ಹಿಡುದು ನಾಲ್ಕು ಬೈದು ಮತ್ತೆ ಕಸವಿನ ಅದರ ಹತ್ರೆ ಹೊರುಸುತ್ತದು” ಹೇಳಿ ಹೇಳಿದೆ.

“ಹಾಂ. ಹಾಂಗೆಲ್ಲ ಜಾಸ್ತಿ ಗಲಾಟೆ ಮಾಡ್ಳೆ ಹೋಗೆಡಿ.  ಅದು ಏವದೋ ಎಂತೊ. ಮತ್ತೆ ಎಂತಾರೂ ಹೆಚ್ಚು ಕಡಮೆ ಆದರೆ” ಹೇಳಿತ್ತು  ಹೆಂಡತ್ತಿ. “ಅದು ಸಿಕ್ಕಿ ಅಪ್ಪಗ, ಎನ್ನ ಏಳುಸಿ” ಹೇಳ್ತ ಅದರ ಮಾತಿಂಗೆ ಒರಕ್ಕು ಬಂತು.

ಮರದಿನ ಉದಿಯಪ್ಪಗ ಐದು ಗಂಟಗೆ ಗಡಿಯಾರದ “ಟಿರೀಂ” ಹೇಳಿ ಅಪ್ಪಗ ರಪಕ್ಕ ಎದ್ದೆ. ಎರಡು ತಿಂಗಳಿಂದ ಅನುಭವಿಸೆಂಡು ಇದ್ದಿದ್ದ ವೇದನೆಗೆ ಒಂದು ಕೊನೆ ಕಾಣುಸಲೇ ಬೇಕಾಗಿತ್ತು. ಏವತ್ತುದೆ ಎಂಟು ಗಂಟಗೆ ಎದ್ದು ಅಭ್ಯಾಸ ಎನಗೆ ಐದು ಗಂಟಗೆ ಏಳೆಕಾಗಿ ಬಂದದು ರಜಾ ಕಷ್ಟ ಆಗಿತ್ತು. ಹಲ್ಲು ತಿಕ್ಕಿ ಮೋರೆ ತೊಳದೆ. (ತಿಂಡಿ ತಿಂದು ಕಾಪಿ ಕುಡಿವಂ ಹೇಳಿರೆ ಎನ್ನ ಹೆಂಡತ್ತಿ ಏಳೆಕಾಗಿತ್ತು ! ಹಾಂಗಾಗಿ ಆ ಕೆಲಸ ಆಯಿದೆಲ್ಲೆ)  ಒಂದು ಉದ್ದ ಕೈಯ ದಪ್ಪದ ಅಂಗಿ ಹಾಕಿ ತಲಗೊಂದು ಮಂಕಿ ಕೇಪು ಹಾಕಿ ಕೈಲಿ “ಲೈಟು” ಒಂದರ ತೆಕ್ಕೊಂಡು ತಯಾರಾದೆ. ಡಿಸೆಂಬರು ತಿಂಗಳು ಚಳಿ ತಣ್ಣಂಗೆ ಕೊರೆತ್ತಾ ಇತ್ತು.  ಹೇಂಗೂ ಇರಳಿ ಹೇಳಿ ಒಂದು ಹೊದಕ್ಕೆಯನ್ನೂ ತೆಕ್ಕೊಂಡೆ.  ಒಂದು ದಂಟೂ ಸಿಕ್ಕಿತ್ತು. ಮನೆಯ ಮುಂದಾಣ ಬಾಗಿಲು ತೆಗದು ಹೆರ ಬಂದೆ.

ಮನೆ ಎದುರ ಏವತ್ತೂ ಹೊತ್ತೆಂಡು ಇದ್ದಿದ್ದ ನಗರಪಾಲಿಕೆಯ ದಾರಿ ದೀಪ ಕೆಟ್ಟುಹೋದ್ದರಿಂದ ಎಲ್ಲಿಯೂ ಬೆಣಂಚು ಇತ್ತಿಲ್ಲೆ.  ಎತ್ತಲೂ ಕತ್ತಲೆ ಮುತ್ತಿದ ಹಾಂಗಿದ್ದ ಆ ನೀರವತೆಲಿ ಆ ಅಜ್ಞಾತ ವ್ಯಕ್ತಿಯ ಆಗಮನಕ್ಕೆ ಎಂಗಳ ಮನೆಯ ಚಿಟ್ಟೆಲಿ ಕಾಯಲೆ ಸುರುಮಾಡಿದೆ.

ಪಕ್ಕನೆ ನೆಂಪು ಆತು. ಪ್ಲಾಸ್ಟಿಕ್ ತೊಟ್ಟೆ ಈಗಾಗಲೇ ಬಿದ್ದಿದ್ದರೆ ಆನು ಕಾದು ಕೂದು ಪ್ರಯೋಜನ ಎಂತ ?  ಹಾಂಗೆ ಮಾರ್ಗಕ್ಕೆ  ಟಾರ್ಚು ಬೆಣಂಚು ಹಾಕಿದೆ. ಸದ್ಯ ಕಟ್ಟ ಇನ್ನೂ ಬಯಿಂದಿಲ್ಲೆ !  ದೂರಲ್ಲಿ ನಾಯಿ ಒಂದು ವಿಕಾರವಾಗಿ ಕೂಗಿತ್ತು.  ಮೈನ್ ರೋಡಿಲ್ಲಿ ಕಾರೊಂದು ಹಾದು ಹೋತು. ಕೂದಲ್ಲಿಗೇ ಗೆಣಂಗು ತೂಗಲೆ ಸುರು ಆತು. ಎಂತಾರು ಶಬ್ದ ಕೇಳುವಗ ಪಕ್ಕನೆ ಎಚ್ಚರ ಆಗ್ಯೆಂಡಿತ್ತು.

ಅದಾ, ಅದಾ, ಬಂತು ಒಂದು ಜೆನ.    ಶುದ್ದಕೆ ಮಿಂದಿಕ್ಕಿ ಚೆಂಡಿ ವಸ್ತ್ರವ ಸುತ್ತಿಯೊಂಡು ಒಂದು ಜೆನ ಎಂಗಳ ಮನೆ ಎದುರು ಹಾದು ಹೋತು.  ಒಳ್ಳೆ ನುರಿತ ಪತ್ತೇದಾರನ ಹಾಂಗೆ (ಪತ್ತೇದಾರ ಪುರುಷೋತ್ತಮನ ಗೊಂತಿದ್ದಾನೆ ? ಇಲ್ಲಿ ಪತ್ತೇದಾರ ಗೋಪಾಲ) ಕಂಬದ ಮರೆಲಿ ಹುಗ್ಗಿ ನೋಡಿದರೆ, ಆ ಜೆನ ಪಕ್ಕದ ಮನೆಯ ಕಾಂಪೌಂಡಿಂದ ಪೂಜೆಗೆ ಹೂಗು ಕೊಯಿತ್ತಾ ಇದ್ದು.   ಕದ್ದೊಂಡು ಬಂದ ಹೂಗುಗೊ ದೇವರಿಂಗೆ ! ಇರಳಿ. ಎನ್ನ ಐಡಿಯ ಪುಸ್ಕ ಆಗಿ ಪುನ: ಎನ್ನ ಜಾಗಗೆ ಬಂದೆ.

ಎಲ್ಲೋ ದೂರ, ಏವದೋ ಯಕ್ಷಗಾನ ಮೇಳದ ಆಟ ನೆಡಕ್ಕೊಂಡಿತ್ತು. ಭಾಗವತರ ವೀರಾವೇಶದ ಹಾಡಿಂಗೆ ಮೇಳೈಸಿ ಚೆಂಡೆ ಪೆಟ್ಟು ರಠಾಯಿಸಿತ್ತು.  ಕಾಳಗಕ್ಕೆ ಸುರುಮಾಡೆಕಾಗಿದ್ದದು ನೆಂಪಾಗಿ ಮೈ ಕೊಡವಿ ಎದ್ದು ಕೂದೆ. ಮತ್ತೆ ಕಾಯ್ತದು ಅಸಹನೀಯ ಹೇಳಿ ಕಾಂಬಲೆ ಸುರು ಆತು.  ಎನ್ನ ಪರಿಸ್ಥಿತಿಯ ಕಂಡು ಎನಗೇ ನೆಗೆ ಬಪ್ಪಲೆ ಸುರು ಆತು.   ಈಗ ಪರಿಚಯದವು ಆರಾರು  ಬಂದು ಎನ್ನ ನೋಡಿದರೆ,  ಇರುಳು ತಡವಾಗಿ ಬಂದ ಎನಗೆ  ಹೆಂಡತ್ತಿ ಬಾಗಿಲು ತೆಗೆಯದ್ದೆ ಹೆರವೇ ಕೂರುಸಿದ್ದೋ ಹೇಳ್ತ ಅವಸ್ಥೆ ಎನ್ನದಾಗಿತ್ತು !     ಈ ಜಗತ್ತು ಅದೆಷ್ಟು ವಿಶಾಲ,  ಜೆನಂಗವಕ್ಕೆ ಅದೆಷ್ಟು ಸ್ವಾರ್ಥ, ಅದಕ್ಕೆ ಬೇಕಾಗಿ ಜಗಳಂಗೊ, ವೈರ.   ಓಹ್. ಇದರ ಎಡೆಲಿ ಕೆಲವೇ ಕೆಲವು ಒಳ್ಳೆಯವು.  ಅವರ ಸ್ನೇಹ…..  ಎಂತೆಂತದೋ ಆಲೋಚನೆಗೊ.

“ಗಿಲ್, ಗಿಲ್……..” ಕತ್ತಲಗೆ ಕೇಳಿ ಬಂದ ಕಾಲ್ಗೆಜ್ಜೆಯ ಸದ್ದು ಎನ್ನ ಇಹಲೋಕಕ್ಕೆ ಪುನ: ಕರಕ್ಕೊಂಡು ಬಂತು. ಎನ್ನ ಮಗ ಅಂಬಗಂಬಗ ಒದರುತ್ತಾ ಇಪ್ಪ “ಆಪ್ತಮಿತ್ರ” ಸಿನೆಮಾದ ಹಾಡು “ರಾ ರಾ” ನೆಂಪಾತು.  ಎನ್ನ ಬೆನ್ನ ಮೇಲೆ ಆರೋ ಕೈ ಮಡಗಿದ ಹಾಂಗಾತು.  ಯಪ್ಪ ..ಜುಂ… ಆತು.

ಬೆಚ್ಚಿ ಬಿದ್ದು ತಿರುಗಿ ನೋಡಿದರೆ ಎನ್ನ ಸಹಧರ್ಮಿಣಿ ಹತ್ರೆ ನಿಂದೊಡಿದ್ದು !  ಪ್ರತಿಯೊಬ್ಬ ಗಂಡಸಿನ ಉನ್ನತಿಯ ಹಿಂದೆಯು ಸ್ತ್ರೀ ಒಂದು ಇರುತ್ತಾಡ ಹೇಳಿ ಅಂಬಗಂಬಗ ಕೇಳಿ ಬರುತ್ತ ಮಾತು ಅದೆಷ್ಟು ಸತ್ಯ ಅಲ್ಲದೊ ? ಎನ್ನ ಅವತಾರವ ನೋಡಿ ಅದು ಕಿಲ ಕಿಲನೆ ನೆಗೆ ಮಾಡಿ ಅಪ್ಪಗ ಆನು ಒಬ್ಬಂಟಿ ಅಲ್ಲ ಹೇಳ್ತ ಭಾವನೆ ಬಂತು. ಅದರ ಒಳ ಕಳುಸಿ ಎನ್ನ ಕಾಯ್ತ ಕೆಲಸವ ಮುಂದುವರುಸಿದೆ.   ತೂಕಡಿಕೆ ಪುನ: ಸುರು ಆತು.

ಅದಾ.  ಬಂತೊಂದು ಕುಳ್ಳ ವ್ಯಕ್ತಿ.  ಕೈಲಿ ಒಂದು ದೊಡ್ಡ ಪ್ಲಾಸ್ಟಿಕ್ ತೊಟ್ಟೆ ಕಟ್ಟ.   ಆ ಕಡೆ, ಈ ಕಡೆ ಕಳ್ಳನ ಹಾಂಗೆ ನೋಡುತ್ತಾ ಒಂದೊಂದೇ ಕಾಲು ಮಡಗುತ್ತಾ ಎಂಗಳ ಮನೆ ಕಡೆಂಗೇ ಬತ್ತಾ ಇದ್ದು. ಅಪ್ಪು, ಅದಾ, ಕಟ್ಟವ ಇಡುಕ್ಕಿಯೇ ಬಿಟ್ಟತ್ತು.  ಮೈ ಮೇಲಿಪ್ಪ ಹೊದಕ್ಕೆಯ ದೂಡಿ, ಓಡಿ ಹತ್ರ ಹೋಗಿ ಅದರ ಹಿಡುದೇ ಬಿಟ್ಟೆ.   “ಯಾರಯ್ಯ ನೀನು. ಇದೇನು ನಿನ್ನಪ್ಪನ ರೋಡು ಅಂತ ತಿಳ್ಕೊಂಡಿದ್ದೀಯಾ ?” ಬೊಬ್ಬೆ ಹಾಕಿ ಎರಡು ಬಡಿಯೆಕು ಹೇಳಿ ಹೆರಟರೆ, ಬಾಯಿಯೇ ಕಟ್ಟಿದ ಹಾಂಗೆ ಅನಿಸಿತ್ತು.   ಆ ಜೆನ ತಿರುಗಿ ಬಿದ್ದು ಎನ್ನ ಗೆಬ್ಬಿಂಗೆ  ಒಂದು ಕೊಟ್ಟದರಲ್ಲಿ  ಸುಸ್ತಾಗಿ ಹೋದೆ.  ಸದ್ಯ ಎನ್ನ ಹೆಂಡತ್ತಿ ಒಳ ಇತ್ತು !

ರಪಕ್ಕ ಕಣ್ಣು ತೆಗೆದರೆ ಎನ್ನ ಜಾಗೆಲೇ ಹೊದಕ್ಕೆ ಹೊದ್ದು ಕೂದೊಂಡಿದ್ದೆ.  ಕನಸಿಂದ ಹೆರಾಣ ಲೋಕಕ್ಕೆ ಬಂದೆ !

ಕೊಂಕಣ ರೈಲು ಹೋತು.  ಹತ್ರಾಣ  ಪಳ್ಳಿಂದ ಅಲ್ಲಾಹೋ ಅಕ್ಬರ್ ಕೇಳಿತ್ತು.   ಕಾವು ಬೈಲು ದೇವಸ್ಥಾನಲ್ಲಿ ಸ್ತೋತ್ರಂಗೊ ಸುರು ಆತು.   ಅಂಬಗಳೇ ಇಗರ್ಜಿಯ ಗಂಟೆಯೂ ಡಣ್ ಡಣ್ ಹೇಳಿ ಬಡುದತ್ತು.  ಎಲ್ಲಾ ಧರ್ಮಂಗಳು ನೆಲೆಸಿದ ಹಾಂಗ್ರುತ್ತದು ಎಂಗಳ ಊರು.  ಇದರ ಒಟ್ಟಿಂಗೆ ಮರಗಿಡ, ಸಸ್ಯರಾಶಿ. ಪಕ್ಷಿ ಸಂಕುಲಂಗೊ.  ಅಪ್ಪು ಹೇಳ್ತ ಹಾಂಗೆ, ಕೋಗಿಲೆ “ಕುಹೂ ಕುಹೂ” ಹೇಳಿತ್ತು.  ಹಕ್ಕಿಗಳ ಇಂಚರದ ಒಟ್ಟಿಂಗೆ ರವಿಯ ಬೆಣಂಚೂ ಬಂತು.

ಬರೇ ಶಬ್ದ ಮಾಡಿದ್ದಷ್ಟೆ.  ಎನ್ನ  ಕೆಲಸ ಆಯಿದೇ ಇಲ್ಲೆ.  “ಟಪ್ ಟಪ್” ಕಾಲಿನ ಶಬ್ಧಕ್ಕೆ ಪುನಃ  ಎಚ್ಚರ ಆತು.  ಪೇಪರಿನ ಹುಡುಗ ಸೈಕಲ್ ನಿಲ್ಲುಸಿಕ್ಕಿ ಎಂಗಳ ಮನೆ ಕಡೆಂಗೆ ಬತ್ತಾ ಇತ್ತು. ಎನ್ನ ಈ ವೇಷ ಅದಕ್ಕೆ ಕಾಣುತ್ತು ಬೇಡ ಹೇಳಿ ಮೆಲ್ಲಂಗೆ ಬಾಗಿಲ ಹಿಂದೆ ನಿಂದೆ. ಟಪ್ಪನೆ ಪೇಪರು ಇಡುಕ್ಕಿಕ್ಕಿ ಏವ ಗೊಡವೆಯೂ ಇಲ್ಲದ್ದೆ ಹೆರಟು ಹೋತು ಅದು.  ಒಳ್ಳೆ ಉದಿ ಆತು. ಐದು ಗಂಟೆಂದ ಅಷ್ಟು ಹೊತ್ತು ಕಾದು ಕೂದ್ದು ಸುಮ್ಮನೆ ಆತು.  ಎಂತೂ ಆಗದ್ದ ಹಾಂಗೆ ಹೂಗಿಡಕ್ಕೆಲ್ಲ ನೀರು ಹಾಕಿ ಮನಸ್ಸಿಂಗೆ ನಿಯಂತ್ರಣ ತಂದೆ.

ಮರದಿನ ಉದಿಯಪ್ಪಗ ಇನ್ನೊಂದು ಸರ್ತಿ ಕಾದು ಕೂದರೂ ಏವ ಪ್ರಯೋಜನವೂ ಆಯಿದಿಲ್ಲೆ.   ಈಗ ಪುನ: ಇನ್ನಾಣ ಸೋಮವಾರಕ್ಕೆ ಕಾಯ್ತಾ ಇದ್ದೆ, ಕೈಲಿ ಕೊಳೆತ ತೊಟ್ಟೆ ಹಿಡುದು,  (ಶಬರಿ ಹಾಂಗೆ ಅಲ್ಲ!)  ಕಾಯ್ತಾ  ಇದ್ದೆ.  ಆ ಜೆನ  ಒಂದಲ್ಲ ಒಂದು ದಿನ ಸಿಕ್ಕಿಯೇ ಬಿಡುಗು ಹೇಳ್ತ ಭರವಸೆ ಎನ್ನದು.

ನಿಂಗಗೂ ಹೀಂಗ್ರುತ್ತ ಅನುಭವಂಗೊ ಆಯಿಕ್ಕಲ್ಲದೊ.     ಅನುಭವಿಸುವ ಅನುಭವ ಅನುಭವಿಸುವವಂಗೇ ಗೊಂತು.

ಬೊಳುಂಬು ಮಾವ°

   

You may also like...

4 Responses

 1. ಶ್ರೀಕೃಷ್ಣ ಶರ್ಮ. ಹಳೆಮನೆ says:

  ಲೇಖನ natural ಆಗಿ ಲಾಯಿಕ್ ಆಯಿದು. ಎಂಗೊ ಕ್ವಾರ್ಟರ್ಸ್ ಲ್ಲಿ ಇಪ್ಪಗ, ಉದಿಯಪ್ಪಗ ಸುಮಾರು 4 ಘಂಟೆ ಹೊತ್ತಿಂಗೆ ಬಾಗಿಲು ಬಡಿವ ಶಬ್ಧ ಕೇಳಿಂಡು ಇತ್ತಿದ್ದು. ಎದ್ದು ಹೆರ ಹೋಪಲೆ ಧೈರ್ಯ ಸಾಲ. ಬಾಗಿಲ ಎಡೆಂದ ನೋಡುವ ವೆವಸ್ತೆ ಇತ್ತಿದ್ದಿಲ್ಲೆ. ಲೈಟ್ ಹಾಕಿಪ್ಪಗ ಶಬ್ಧ ಇಲ್ಲೆ. ಕಡೇಂಗೆ ಒಂದು ದಿನ ಕಬ್ಬಿಣದ ಪೈಪ್ ಹಿಡ್ಕೊಂಡು ಹೆರ ಬಂದರೆ, ಬಾಗಿಲು ತೆಗೆತ್ತ ಶಬ್ದ ಕೇಳಿ ನಾಯಿ ಓಡಿಂಡು ಇತ್ತಿದ್ದು. ಬಾಗಿಲ ಹತ್ರೆ ಮನುಗಿ, ಬೀಲ ಆಡುಸುವಾಗ ಬಾಗಿಲಿಂಗೆ ಹೆಟ್ಟಿಂಡು ಇತ್ತಿದ್ದ ಶಬ್ದ ಎಂಗೊಗೆ ಕೇಳಿಂಡು ಇತ್ತಿದ್ದದು ಹೇಳಿ ಮತ್ತೆ ಗೊಂತಾತು

 2. ಬರಹ ಲಾಯ್ಕಾಯಿದು. ಗೋಪಾಲ ಮಾವ°ನ ಪಟ ಅಂತೂ ಸೂಪರ್…! ಇದು ಬ್ಯಾಂಕಿನ ಕಾರ್ಯಕ್ರಮಲ್ಲಿ ಸ್ಕಿಟ್ ಮಾಡುವಗ ತೆಗದ್ದದೋ ಗ್ರೇಶಿದೆ ಆನು… ವೇಷಭೂಷಣ, ಬರಹ ಎಲ್ಲ ಲಾಯ್ಕಾಯಿದು.

 3. ಬೊಳುಂಬು ಮಾವ°,
  ಶುದ್ದಿ ಬಾರೀ ಕೊಶಿ ಆಯಿದು ಓದಲೆ.
  ಪಟ ಅಂತೂ ಅದ್ಭುತ! ನೆಗೆನೆಗೆಲಿ ಓದಿದೆ!

  ಹೇಳಿದಾಂಗೆ, ಈ ಪಟಲ್ಲಿ ನಿಂಗಳ ರಜ ದೊಡ್ಡದೊಡ್ಡ ಕಾಣ್ತನ್ನೆ!
  ಅಂದು ಕೊಡೆಯಾಲಲ್ಲಿ “ಅಪ್ಪುರಾಜ” ಡೇನ್ಸಿಂಗಪ್ಪಗ ನಾಕನೆ ಕ್ಳಾಸಿನವರಷ್ಟಕೆ ಇತ್ತಿದ್ದಿ! 😉

 4. ಬೊಳುಂಬು ಮಾವಾ..
  ತುಂಬ ಲಾಯ್ಕ ಬರದ್ದಿ..
  ಶುದ್ದಿಗೆ ಸರೀ ಹೊಂದುವ ಪಟ! ಪಟಕ್ಕೆ ಹೊಂದುವ ಅಡಿಬರಹ!
  ತುಂಬಾ ಚೆಂದಲ್ಲಿ ಓದುಸುತ್ತು..

  ಅದಪ್ಪು, ಆ ಜನ ಸಿಕ್ಕಿಯೇ ಸಿಕ್ಕುಗು…
  ಆದರೆ ಅಷ್ಟು ದಿನ ಕೈಲಿ ಕೊಳಕ್ಕಟೆ ತೊಟ್ಟೆ ಹಿಡ್ಕೊಂಡ್ರೆ ಬೈಲಿನವು ಮಾತಾಡುಸವು ಇದಾ..!
  ಹೆ ಹೆ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *