ರಾಮ ಕಥಾ ವಿಸ್ಮಯ

ಕೃಷ್ಣಂಗೆ ರಾಮನ ಕಥೆಯ ಯಶೋದೆ ಹೇಳಿದರೆ ಹೇಂಗಿಕ್ಕು?
ರಾಮ ತುಂಬಾ ಬಲಶಾಲಿಯಾಗಿತ್ತಿದ, ಸತ್ಯವಂತ ಹೇಳಿ ಯಶೋದೆ ಪುಟ್ಟ ಕೃಷ್ಣಂಗೆ ಹೇಳಿದರೆ, “ಅಪ್ಪಾ!” ಹೇಳಿ ಕೃಷ್ಣ ಆಶ್ಚರ್ಯಂದ ಕೇಳ್ತ!
ಅವನದ್ದೇ ಅವತಾರದ ಬಗ್ಗೆ, ಕೃಷ್ಣ ವಿಷ್ಣುವಿನದ್ದೇ ಅವತಾರ ಹೇಳಿ ಗೊಂತಿಲ್ಲದ್ದ ಯಶೋದಮ್ಮ ಕೃಷ್ಣನ ವರಗಿಸುಲೆ ರಾಮನ ಕಥೆ ಹೇಳುವ ಉಪಾಯ ಮಾಡ್ತು.
ಆಳ್ವಾಸ್ ವಿರಾಸತ್ ನ ಮೊದಲಣ ದಿನ ನಿರುಪಮಾ – ರಾಜೇಂದ್ರ ಅವರ ಬಳಗದವ್ವು ಪ್ರಸ್ತುತಪಡಿಸಿದ ರಾಮ ಕಥಾ ವಿಸ್ಮಯದ ಕಲ್ಪನೆ ಹೀಂಗೆ ಸುರು ಆವ್ತು.
ಕಾರ್ಯಕ್ರಮದ ಮೊದಲಿಂಗೆ ನೃತ್ಯಗಾರರು ನವಿಲು ಗರಿ ಹಿಡ್ಕೊಂಡು ಬಪ್ಪಗ, ರಾಮನ ಕಥೆಲ್ಲಿ ನವಿಲು ಗರಿ ಎಂತಕಪ್ಪಾ ಹೇಳಿ ಗ್ರೇಶಿದೆ.
ಮತ್ತೆ, ಆರಂಭಲ್ಲಿ ಎಂತಾರು ಕಥಕ್ ನ ಕ್ರಮವ ಏನೋ ಹೇಳಿ ಆತು. ಮತ್ತೆ ಯಶೋದೆ – ಕೃಷ್ಣ ಬಂದು ನೃತ್ಯ ಮಾಡ್ಲೆ ಸುರು ಮಾಡಿಯಪ್ಪಗ, ಸುಮ್ಮನೆ ಅವರ ನೃತ್ಯ ನೋಡುದರ್ಲಿಯೇ ತಲ್ಲೀನನಾದೆ.
ಮತ್ತೆ, ಕೃಷ್ಣನ ವರಗ್ಸುಲೆ ಯಶೋದೆ ರಾಮ ಕಥೆ ಹೇಳ್ತೆ ಹೇಳಿ ಹೇಳಿಯಪ್ಪಗ ಪುನಃ ನೆನಪ್ಪಾತು. ಹೋ! ಇಂದ್ರಾಣ ಪ್ರಸಂಗ ರಾಮ ಕಥಾ ವಿಸ್ಮಯ ಹೇಳಿ.
ಕೃಷ್ಣ- ಯಶೋದೆಯ ಸಂಭಾಷಣೆಯ ಚೆಂದ ಮಾಡಿತ್ತವು.
ರಾಮನ ಕಥೆಯ ಅವ ಬಿಲ್ವಿದ್ಯೆ ಮಾಡಿಕೊಂಡಿತ್ತಿದ್ದ ಹೇಳಿ ಸುರು ಮಾಡಿ, ವಿಶ್ವಾಮಿತ್ರ ಬಪ್ಪದು, ಅವರ ಕರಕ್ಕೊಂಡು ಹೋಪದು, ಮತ್ತೆ ಮಾರೀಚ ಮತ್ತೆ ಸುಬಾಹುವಿನ ಅಟ್ಟುದು ಹೀಂಗೆ ಎಲ್ಲವೂ ದೃಶ್ಯ ರೂಪಕಲ್ಲೇ ಕಥೆ ಸಾಗಿತ್ತು.
ಎಡೆಡೆಲ್ಲಿ ಯಶೋದೆ – ಕೃಷ್ಣರನ್ನೂ ತೋರ್ಸಿಕೊಂಡು ಆಗಾಗ ರಾಮ ಕಥೆಯ ಕೇಳಿ ಕೃಷ್ಣಂಗೆ ವಿಸ್ಮಯ ಅಪ್ಪದರ ತೋರ್ಸಿಕೊಂಡಿತ್ತವು.
ಶಿವಧನುಸ್ಸಿನ ಭಾರವ ತೋರ್ಸುಲೆ ಒಂದಷ್ಟು ಜನ ಸೈನಿಕರು ನೂಕಿಕೊಂಡು ಹೋಪ ದೃಶ್ಯವ ತೋರ್ಸಿದವು. ಇದು ರಜ್ಜ ಬೋರ್ ಆತು. ಅನಗತ್ಯವಾಗಿ ಆ ಸೀನ್ ನ ತುಂಬಾ ಉದ್ದ ಕೊಂಡು ಹೋದವು.
ಸೀತಾ ವಿವಾಹವ ತುಂಬಾ ಬೇಗ ಮುಗಿಸಿಬಿಟ್ಟವು. ಅಲ್ಲಿ ಬೇರೆ ರಾಜರುಗೊಕ್ಕೆ ಎತ್ತುಲೆಡಿಯದ್ದದು, ರಾವಣಂಗೆ ಅವಮಾನ ಅಪ್ಪದು ಇದರೆಲ್ಲ ತೋರ್ಸದ್ದೆ, ಸೀದಾ ರಾಮನೇ ಬಂದು ಎತ್ತುವುದರ ತೋರ್ಸಿದವು.
ಬಾಲರಾಮ ಎರಡು ನಿಮಿಷದಲ್ಲಿಯೇ ಸೀತಾರಾಮ ಆಗಿ ಬಿಟ್ಟ. ಎಡೆಲಿ ಅಹಲ್ಯೋದ್ಧಾರ ಎಲ್ಲ ಬಿಟ್ಟುಬಿಟ್ಟವು. ಜಾನಕಿ ವಿವಾಹವಾದ ಮೇಲೆ ಮತ್ತಣ ದೃಶ್ಯಲ್ಲಿ ರಾಮ ವನವಾಸಕ್ಕೇ ಹೋಪದು.
ರಾಮ ದಂಡಕಾರಣ್ಯಕ್ಕೆ ಬತ್ತ ಹೇಳ್ವ ಸುದ್ದಿ ಕೇಳಿ, ಕಾಡಿನ ಪ್ರಾಣಿಗ, ಪಕ್ಷಿಗ, ಸಸ್ಯಂಗೋ ಎಲ್ಲವುಗೊಕ್ಕೂ ಖುಷಿ ಅಪ್ಪ ದೃಶ್ಯ ಎನಗೆ ಹೊಸತಾಗಿ ಕಂಡತ್ತು.
ರಾಮ, ಸೀತೆ ಮತ್ತೆ ಲಕ್ಷ್ಮಣರು ವನಪ್ರವೇಶ ಮಾಡಿಯಪ್ಪಗ, ನವಿಲು, ಗಿಳಿ ಎಲ್ಲ ಬಂದು ರಾಮನ ಸ್ವಾಗತಿಸುವ ದೃಶ್ಯ ಲಾಯ್ಕ ಇತ್ತು.
ಇದಾದ ಮೇಲೆ ಶೂರ್ಪನಖಿ ಬಂತು. ಅದು ಬಂದಪ್ಪಗ ಪ್ರಾಣಿಗೊಕ್ಕೆ ಅಪ್ಪ ಆತಂಕ, ಅವರ ಅದು ಹೆದರ್ಸುವ ದೃಶ್ಯ, ರೂಪಕಕ್ಕೆ ತಕ್ಕುದಾಗಿತ್ತು.
ಅದಾದ ಮೇಲೆ ಶೂರ್ಪನಖಿ ಪರ್ಣ ಕುಟೀರವ ಕಟ್ಟಿಕೊಂಡಿಪ್ಪ ರಾಮನ ನೋಡುದು, ಅವನ ಮೇಲೆ ಮನಸ್ಸಪ್ಪದು, ಅವನ ಓಲೈಸುಲೆ ನೋಡುದು ಇದೆಲ್ಲ ಚೆಂದಕ್ಕೆ ಮಾಡಿದವು.
ಶೂರ್ಪನಖಿಯ ಮಾನಭಂಗ ಆದ ಪ್ರಕರಣದ ಮೇಲೆ, ಜಿಂಕೆಗಳ ಗುಂಪಿಲ್ಲಿ ಒಂದು ಚಿನ್ನದ ಜಿಂಕೆ ಬಂದು ಸೇರಿಕೊಂಬದು, ಅದರ ಸೀತೆ ನೋಡುದು, ತನಗೆ ಚಿನ್ನದ ಜಿಂಕೆ ಬೇಕು ಹೇಳಿ ಅಪ್ಪದು, ರಾಮನತ್ರೆ ಅದರ ಹಿಡಿದು ಕೊಡ್ಲೆ ಹೇಳುದು, ರಾಮ ಅದು ಬೇಡ ಹೇಳಿ ಹೇಳುದು ಹೀಂಗೆ ಕಥೆ ಮಾಮೂಲಾಗಿಯೇ ಹೋವ್ತು.

ಮತ್ತೆ ಹೊಸತನ ಕಂಡದು, ರಾವಣ ಮಾರು ವೇಷ ಧರಿಸಿದ ದೃಶ್ಯ.
ಸೀತೆಯತ್ರೆ ಭಿಕ್ಷೆ ಬೇಡುಲೆ ಬಪ್ಪಗ, ಬ್ರಾಹ್ಮಣ ವೇಷದ ನೆರಳಿಲಿ ನಿಜವಾದ ರಾವಣನೂ ರಂಗಲ್ಲಿಯೇ ಇತ್ತದು, ಬ್ರಾಹ್ಮಣ ವೇಷಧಾರಿಯೂ, ರಾವಣ ವೇಷಧಾರಿಯೂ ಒಂದೇ ರೀತಿಲ್ಲಿ ಕುಣುದು ಎರಡೂ ಒಂದೇ ಹೇಳಿ ಕಾಂಬ ಹಾಂಗೆ ತೋರ್ಸಿದವು.
ಸೀತಾಪಹರಣವನ್ನೂ ತೋರ್ಸಿದವು.
ಇಷ್ಟಪ್ಪಗ, ಪಕ್ಕನೇ ವರಕ್ಕಿಲಿತ್ತ ಕೃಷ್ಣ ಏದ್ದು, ಕನಸಿಲಿ “ಲಕ್ಷ್ಮಣಾ, ಎಲ್ಲಿದ್ದೀಯ” ಹೇಳಿ ಮಾತಾಡ್ತ.
ಒಂದರಿಗೆ ಯಶೋದೆಗೆ ಗಾಬರಿ ಆವ್ತು. ಮತ್ತೆ ಮುಂದಾಣ ಕಥೆಯ ಎರಡು -ಮೂರು ವಾಕ್ಯಲ್ಲಿ ಬಾಯಿಲ್ಲಿಯೇ ಹೇಳಿ, ಕಡೇಗೆ, ರಾಮ ಅಯೋಧ್ಯೆಗೆ ಮರಳಿ ಬಂದ ಮೇಲೆ, ರಾಜ ಆದ ದೃಶ್ಯವನ್ನೇ ತೋರ್ಸಿದವು.
ಹೀಂಗೆ ರಾಮ ಕಥಾ ವಿಸ್ಮಯ ಹೇಳುವ ಪ್ರಸಂಗ ನೃತ್ರ ರೂಪಕಲ್ಲಿ ಮುಗಿತ್ತು.
ಒಂದು ಕಲಾಪ್ರಕಾರವ ಇನ್ನೊಂದರೊಟ್ಟಿಂಗೆ ಹೋಲ್ಸುಲಾಗ ಹೇಳಿ ತಿಳುದವು ಹೇಳ್ತವು.
ಆದರೂ ಎನಗೆ ಯಾವ ನೃತ್ಯಪ್ರಕಾರವ ನೋಡ್ವಾಗಳೂ ನಮ್ಮ ಯಕ್ಷಗಾನದೊಟ್ಟಿಂಗೆ ಹೋಲಿಸುವ ಅಭ್ಯಾಸ. ಹಾಂಗಾಗಿ ಎನಗೆ ಈ ನೃತ್ಯ ರೂಪಕವ ನೋಡಿಯಪ್ಪಗ, ಕಂಡದು, ಈ ರೀತಿಯದ್ದು, ಯಕ್ಷಗಾನೀಯ ಶೈಲಿಲ್ಲಿ ಮಾಡಿದ್ದರೆ ಎಷ್ಟು ಚೆಂದ ಆವ್ತಿತ್ತು ಹೇಳಿ.
ಎಂತಕೇಳಿದರೆ, ಇವರ ರೂಪಕಲ್ಲಿ ಇಪ್ಪ ವೀರ ರಸ, ರೌದ್ರ ರಸದ ಅಭಿವ್ಯಕ್ತಿ ನಿಜವಾಗಿ ವೀರತ್ವವ ಅಥವಾ ರೌದ್ರತ್ವ ನೋಡುಗನಲ್ಲಿ ಉಂಟು ಮಾಡ್ತಿಲ್ಲೆ.
ಎನ್ನ ಪ್ರಕಾರ ಕಲಾವಿದರಿಂಗೂ ಅಲ್ಲಿ ನಿಜವಾದ ವೀರತ್ವ ಮನಸ್ಸಿಲ್ಲಿ ಬತ್ತಿಲ್ಲೆ. ಸುಮ್ಮನೇ ಮೋರೆಲಿ ತೋರ್ಸುತ್ತವಷ್ಟೇ ಹೇಳಿ ಕಂಡತ್ತು.
ನಮ್ಮ ಯಕ್ಷಗಾನಲ್ಲಿಪ್ಪ ಬಣ್ಣಗಾರಿಕೆ, ರಸಾಭಿವ್ಯಕ್ತಿ ಬೇರೆ ನೃತ್ಯಪ್ರಕಾರಲ್ಲಿ ಇಲ್ಲೆ ಹೇಳಿ ಮತ್ತೊಂದರಿ ಸ್ಪಷ್ಟ ಆತಷ್ಟೆ.
ಆದರೂ ಯಕ್ಷಗಾನ ಕಲಿವಲೆ ಎಂತಕೆ ಈ ರೀತಿ ದೊಡ್ಡ ಸಂಖ್ಯೆಲ್ಲಿ ಮಕ್ಕ ಸೇರ್ತವಿಲ್ಲೆ?
ಯಕ್ಷಗಾನಲ್ಲಿ ಕಲಾವಿದಂಗೆ, ಕಲಾಭಿವ್ಯಕ್ತಿಗೆ ಬೇಕಾದಷ್ಟು ಅವಕಾಶ ಇದ್ದು. ಆದರೂ ಯಕ್ಷಗಾನಕ್ಕೆ ಸಣ್ಣ ಮಕ್ಕ ಸೇರುವ ಸಂಖ್ಯೆ ಬಹಳ ಕಡಮ್ಮೆ ಆಯ್ದು.
ಈಗಣ ದಿನಂಗಳಲ್ಲಿ ಯಕ್ಷಗಾನ ಕೇಂದ್ರಗಳೂ ವಿದ್ಯಾರ್ಥಿಗಳ ಕೊರತೆಯ ಎದುರಿಸುತ್ತಾ ಇದ್ದು. ಆದರೂ ಯಕ್ಷಗಾನ ಕಲಾವಿದರು ಇದಕ್ಕೆ ಪರಿಹಾರ ಕಂಡುಕೊಂಡಿದವಿಲ್ಲೆ ಹೇಳಿ ಎನಗೆ ಕಾಣ್ತು.

ಆನು ಹೀಂಗೆ ಹೇಳ್ತೆ ಹೇಳಿ ಯಾರೂ ಬೇಜಾರು ಮಾಡ್ಲಾಗ.
ಒಪ್ಪಣ್ಣನ ನೆರೆಕರೆಲ್ಲಿ ಬೇಕಾದಷ್ಟು ಜನ ಯಕ್ಷಗಾನಾಸಕ್ತರು ಇದ್ದವು ಹೇಳಿ ಎನಗೆ ಗೊಂತಿದ್ದು. ಆದರೆ, ಎನಗೆ ಎನ್ನ ಅಪ್ಪ ಯಕ್ಷಗಾನಂಗಳ ಸಂಯೋಜಿಸಿದ ಸಂದರ್ಭಗಳ ನೋಡಿ ಗೊಂತಿದ್ದು.
ಸಣ್ಣದಿಪ್ಪಗಂದಲೇ ಯಕ್ಷಗಾನ ಕಲಾವಿದರ ಹತ್ತಿರಂದ ನೋಡಿ ಗೊಂತಿದ್ದು. ಹಾಂಗಾಗಿ ನಿಂಗಳೆಲ್ಲರ ಎದುರು ಧೈರ್ಯವಾಗಿ ಹೇಳ್ತೆ.
ಈ ಕಥಕ್ ಕಲಾವಿದರಿಂಗೆ ಇಪ್ಪ ಶಿಸ್ತು ನಮ್ಮ ಹೆಚ್ಚಿನ ಪಾಲು ಯಕ್ಷಗಾನ ಕಲಾವಿದರಿಂಗೆ ಖಂಡಿತವಾಗಿಯೂ ಇಲ್ಲೆ.
ಆದಹಾಂಗೆ ಆಗಲಿ ಹೇಳುವ ಅಜಾಗ್ರತೆ ಇದ್ದು. ಹೊಸ ಪರಿಕಲ್ಪನೆಗಳೊಟ್ಟಿಂಗೆ, ಯಕ್ಷಗಾನದ ಚೌಕಟ್ಟಿನ ಮೀರದ್ದೆ ಮಾಡ್ಲೆ ಸಾಧ್ಯ ಇದ್ದರೂ, ಮಾಡುವ ಗೋಜಿಂಗೇ ಹೋವ್ತವಿಲ್ಲೆ.
ಸಮಯಕ್ಕೆ ಸರಿಯಾಗಿ ಪ್ರಸಂಗವ ಶುರು ಮಾಡುವ, ಸರಿಯಾಗಿ ನಿಲ್ಲಿಸುವ ಕ್ರಮಂಗ ಎಲ್ಲ ಇತ್ತೀಚೆಗೆ ಕೆಲವು ಕಲಾವಿದರಲ್ಲಿ ಕಾಣ್ತಾ ಇದ್ದು.
ಪರಂಪರೆಯ ಹೆಸರಿಲಿ, ಇನ್ನುದೇ ಎತ್ತರದ ಶ್ರುತಿಲ್ಲಿಯೇ ಭಾಗವತರು ಹಾಡ್ತವು. ನಿಜವಾಗಿಯಾದರೆ ಹಿಂದಾಣ ಕಾಲಲ್ಲಿ ಮೈಕ್ ಇಲ್ಲದ್ದ ಕಾಲಲ್ಲಿ ಎತ್ತರದ ಶ್ರುತಿಲ್ಲಿ ಹಾಡುವ ಪದ್ಧತಿ ಬೇಕಾಗಿತ್ತು.
ಆದರೆ ಈಗಾಣ ಕಾಲಲ್ಲಿ ಶ್ರುತಿ ತಗ್ಗಿಸುಲೇ ಏನೂ ತೊಂದರೆ ಇಲ್ಲೆ.
ತುಂಬಾ ಭಾಗವತರುಗ ಸಾಹಿತ್ಯವ ಸ್ಪಷ್ಟವಾಗಿ ಉಚ್ಚರಿಸುತ್ತವಿಲ್ಲೆ. ಹಾಂಗಾಗಿ ನಮ್ಮ ಕಲೆ ಹೆರಾಣವಕ್ಕೆ ಪರಿಚಯಿಸುಲೆ ನಮಗೆ ಕಷ್ಟ ಆವ್ತು.
ಇದೇ ಕಾರಣಕ್ಕೆ ನಮ್ಮ ಊರ್ಲಿಯೂ ಯಕ್ಷಗಾನಕ್ಕೆ ಜನ ಹೋಪದು ಕಡಮ್ಮೆ ಆಯ್ದು. ಹೊಸ ತಲೆಮಾರಿನವಕ್ಕೆ ಯಕ್ಷಗಾನದ ಬಗ್ಗೆ ಆಸಕ್ತಿ ಹೋಯ್ದು.

ಬಹುಷಃ ಯಕ್ಷಗಾನಕ್ಕೂ ರಜ್ಜ ಹೆಚ್ಚಿನ ವಿಸ್ತರಣೆ ಕೊಟ್ಟರೆ ಇದಕ್ಕೂ ಜನ ಸೇರುವ ಹಾಂಗೆ ಮಾಡ್ಲಕ್ಕು ಹೇಳಿ ಎನಗೆ ಕಾಣ್ತು.
ನಿಂಗೊಗೆಂತ ಕಾಣ್ತು?

ಅಕ್ಷರ°

   

You may also like...

30 Responses

 1. ಅಕ್ಷರ,ನೃತ್ಯ ರೂಪಕವ ಕಣ್ಣಿಂಗೆ ಕಟ್ಟುವ ಹಾಂಗೆ ವಿವರ್ಸಿದ್ದೆ.. 🙂 ಇದರ ಓದಿ ಅಪ್ಪಗ “ಛೆ! ಆನು ಅಲ್ಲಿ ಇರೆಕ್ಕಿತ್ತನ್ನೆ ನೋಡ್ಲೆ” ಹೇಳಿ ಕಂಡತ್ತು.. ಅಷ್ಟಪ್ಪಗ ಈ ಕೊಂಡಿ ಸಿಕ್ಕಿತ್ತು.. ಇದರಲ್ಲಿ ಈ ನೃತ್ಯ ರೂಪಕದ ಕೆಲವು ದೃಶ್ಯಂಗೊ ಇದ್ದು.. ನಮ್ಮ ಮಂಗಳೂರಿನ ನಮ್ಮಕುಡ್ಲದ ವೆಬ್ ಸೈಟ್ ಲಿ.. ನಿಂಗಳೂ ನೋಡಿಕ್ಕಿ… 🙂
  http://www.nammakudlanews.com/12-6/12-6.php

 2. sameera.damle says:

  ಅಕ್ಷು ಒಳ್ಳೆಯ ಲೇಖನ.. ಎನ್ನದೊಂದಿಷ್ಟು ಅಭಿಪ್ರಾಯ…

  ಒಂದು ಕಲೆಯ ಉನ್ನತಿ ಅವನತಿಗೆ ಕಲೆಯ ಆಳ-ವಿಸ್ತಾರ, ಕಲಾವಿದ, ಪ್ರೇಕ್ಷಕ, ಸಾಮಾಜಿಕ ಆರ್ಥಿಕ ಪರಿಸ್ಥಿತಿ, ಇವೆಲ್ಲವೂ ಕಾರಣವಾಗುತ್ತದೆ. ಒಂದು ಕಾಲದಲ್ಲಿ ಮನೆಯ ಹೆಣ್ಣುಮಕ್ಕಳು ಯಕ್ಷಗಾನ ನೋಡಬಾರದು ಅದರಲ್ಲೂ ಸ್ತ್ರೀ ವೇಷ ನೋಡಲೇಬಾರದು ಎಂಬ ನಿಯಮವಿತ್ತಂತೆ. ಇವತ್ತು ಹೆಮ್ಮಕ್ಕಳ ಯಕ್ಷಗಾನ ತಂಡಗಳನ್ನು ನಾವು ನೋಡುತ್ತೇವೆ. ಸಮಾಜದಲ್ಲಾದ ಬದಲಾವಣೆಗಳು ಇದಕ್ಕೆ ಕಾರಣ. ಇವತ್ತು ಸುಧಾರಣೆ ಹೊಂದಿದ ಸಮಾಜದಲ್ಲಿ ಹೆಚ್ಚಿನವರಿಗೆ ಇಡೀ ರಾತ್ರಿ ಯಕ್ಷಗಾನ ನೋಡಲು ಸಾಧ್ಯವಾಗುವುದಿಲ್ಲ ಎಂದು ತಿಳಿದಿದ್ದೂ ವೃತ್ತಿ ಮೇಳಗಳು ಇಡೀ ರಾತ್ರಿ ಪ್ರೇಕ್ಷಕರಿಲ್ಲದೆದ್ದರೂ ಪ್ರದರ್ಶನ ನೀಡುತ್ತಿರುವುದು ಯಕ್ಷಗಾನದ ದುರದೃಷ್ಟ.

  ಭರತನ ನಾಟ್ಯಶಾಸ್ತ್ರದಲ್ಲಿ ಹೇಳಿರುವ, ಒಂದು ಕಲೆಗಿರಬೇಕಾದ ಎಲ್ಲಾ qualities ಯಕ್ಷಗಾನಕ್ಕಿದೆ. ಹಾಗಾಗಿ ಯಕ್ಷಗಾನ ಒಂದು ಪರಿಪೂರ್ಣ ಕಲೆ. ಭಾಗವತ ಆಶುಕವಿ ಆಗಿರಬೇಕು, ಪಾತ್ರಧಾರಿ ಪ್ರತ್ಯುತ್ಪನ್ನಮತಿ ಹೊಂದಿದ ಆಶುಭಾಷಿಕನಾಗಿರಬೇಕು, ಹಿಮ್ಮೇಳ ವಾದಕರಲ್ಲಿ ಸೃಜನಶೀಲತೆ ಬೇಕು. ಮನೋರಂಜನಾ ಪ್ರಾಕಾರವಾದ ಕಲೆಗೆ ಒಂದು ಚೌಕಟ್ಟೂ ಬೇಕು. ಅದಕ್ಕೊಂದು ಪಠ್ಯ, ಕ್ರಮ, ನಡೆ ಇತ್ಯಾದಿಗಳು ಬೇಕಾಗುತ್ತದೆ. ಅಲ್ಲದೆ ಕಾಲಕ್ಕೆ ತಕ್ಕಂತೆ ಇದರ ಮಾರ್ಪಾಡೂ ಆಗಬೇಕು. ಪರಂಪರೆ ಎಂದು ಯಾವುದೋ ಕಾಲದಲ್ಲಿ ಮನೆಯಲ್ಲಿದ್ದ ಹಳೇ ಸೀರೆಗಳನ್ನು ವೇಷಕ್ಕೆ ಬಳಸುತ್ತಿದ್ದರೆಂದು ಇಂದೂ ಕೂಡಾ ಹಾಗೆಯೇ ಮಾಡಲು ಸಾಧ್ಯವೇ? ಯಕ್ಷಗಾನ ವೇಷಭೂಷಣ ಹಾಗೂ ನೃತ್ಯದ ಕುರಿತಾಗಿ ಡಾ| ಶಿವರಾಮ ಕಾರಂತ, ಕೆರೆಮನೆ ಮಹಾಬಲ ಹೆಗಡೆ, ಕುರಿಯ ವಿಠಲ ಶಾಸ್ರಿ, ಪಾತಾಳ, ಕೊಳ್ಯೂರು ಮುಂತಾದವರು ಕೆಲವು ದಶಕಗಳ ಹಿಂದೆ ತಂದ ಬದಲಾವಣೆಗಳು, ಅಳವಡಿಸಿದ ವಿಷಯಗಳು ಇಂದಿಗೆ ಪರಂಪರೆ ಎನಿಸಿದೆ. ಇದರಲ್ಲಿ ಇವತ್ತಿಗೆ ಅಪ್ರಸ್ತುತವಾದ ವಿಷಯಗಳನ್ನು ಹೊರಗಿಟ್ಟು ಹೊಸ ವಿಷಯಗಳನ್ನು ಅಶ್ಲೀಲವಾಗದ ರೀತಿಯಲ್ಲಿ ಅಳವಡಿಸಿ ಯಕ್ಷಗಾನವನ್ನು ಬೆಳೆಸಬೇಕು.
  ಇವತ್ತು ಕೆಲ ಮದ್ದಳೆಗಾರರು ಸಂಗೀತದ ಮೃದಂಗ ಅಭ್ಯಾಸ ಮಾಡಿ ಸುಂದರವಾಗಿ ಅದರ ಕೆಲ ನಡೆಗಳನ್ನು ಯಕ್ಷಗಾನಕ್ಕೆ ಅಳವದಿಸಿದ್ದಾರೆ. ಇದು ಸೃಜನಶೀಲ ಅಳವಡಿಕೆ. ಇದರ ಹೊರತಾಗಿ ತಿಳಿದಿದೆ ಎಂದು ಸಂಗೀತದ ಮೃದಂಗ ನುಡಿಸಿದರೆ ಅದು ಅಚ್ಚೆಪ್ತ್ ಆಗುವುದಿಲ್ಲ.
  ಇನ್ನು ಕೇವಲ ಕಲಾವಿದರನ್ನು ದೂರುವುದೂ ತಪ್ಪಾಗುತ್ತದೆ. ಒಂದು ಕಥಕ್ ಕಾರ್ಯಕ್ರಮಕ್ಕೆ ೨೫ಸಾವಿರ ಖರ್ಚು ಮಾಡಲು ಹಿಂದೆ ಮುಂದೆ ನೋಡದ ನಾವು ಯಕ್ಷಗಾನಕ್ಕೆ ೫ಸಾವಿರ ಬಿಚ್ಚಲೂ ತಯಾರಿರುವುದಿಲ್ಲ. ಇವತ್ತು ಯಕ್ಷಗಾನ ಕಲಾವಿದರಲ್ಲಿ ಆಯ್ಕೆಯಿಂದ ಕಲಾವಿದರಾಗಿರುವವರಿಗಿಂತ ಅನಿವಾರ್ಯತೆಯಿಂದ ಕಲಾವಿದರಾಗಿರುವವರೇ ಹೆಚ್ಚು. ಹಾಗಾದರೆ ಅನಿವಾರ್ಯತೆಯಿಂದ ಕೆಲಸ ಹಿದಿದವ ಚೆನ್ನಾಗಿ ಕೆಲಸ ಮಾಡುವುದೇ ಇಲ್ಲವೇ? ಮಾಡ್ತಾರೆ, ಆದ್ರೆ motivation ಬೇಕಲ್ಲಾ… ಪ್ರೇಕ್ಷಕರು demand ಮಾಡಬೇಕು ಮತ್ತು performanceಗೆ ಸರಿಯಾದ reward ಸಿಗಬೇಕು. ಹತ್ತು ರಾಗ ಗುರುತಿಸಲು ತಿಳಿಯದವನಿಗೂ “ಭಾರೀ ಲಾಯ್ಕ ಆಯ್ದು ಮರಾಯ ಪದ್ಯ, ದೂರಂದ ಕೇಳ್ವಾಗ ಗೆಣಪಣ್ಣನ ಪದ್ಯದಾಂಗೆ ಕೇಳ್ತು” ಅಂತ ಏರಿಸಿದರೆ ಅವ ಕಲಿಯುವುದು ಯಾವಾಗ? ಸೋಂದೆ ಕೃಷ್ಣ ಭಂಡಾರಿಯವರು (ಬಡಾಬಡಗು) ಯಕ್ಷಗಾನ ಪ್ರಸಂಗಗಳಲ್ಲಿ ಉಲ್ಲೇಖಿಸಲ್ಪಟ್ಟ ಅರುವತ್ತಕ್ಕೂ ಹೆಚ್ಚು ರಾಗಗಳನ್ನು ಸಂಶೋಧಿಸಿ ಅವುಗಳ ಸ್ವರಗಳನ್ನು ಗುರುತಿಸಿ ದಾಖಲಿಸುವ ಕೆಲಸವನ್ನು ಸುಮಾರು ನಲವತ್ತು ವರುಷಗಳ ಹಿಂದೆಯೇ ಮಾಡಿದ್ದಾರೆ. ಇಂದಿನ ಭಾಗವತರೆಂದು ಹೇಳಿಕೊಳ್ಳುವ ಎಷ್ಟು ಮಂದಿ ಇದನ್ನು ಅಧ್ಯಯನ ಮಾಡಿದ್ದಾರೆ? ಸ್ವರ ಗುರುತಿಸುವ ಸಾಮರ್ಥ್ಯ ಹೊಂದಿದ್ದಾರೆ? ಅಧ್ಯಯನ ಮಾಡುವ need create ಮಾಡುವುದೇ ಇಲ್ಲವಲ್ಲಾ ನಾವು ಕಲಾಭಿಮಾನಿಗಳು…
  ಇನ್ನು ಇವತ್ತು ಯಕ್ಷಗಾನಕ್ಕೆ ಪ್ರೇಕ್ಷಕರಿಲ್ಲದಿರುವುದಕ್ಕೆ ಇನ್ನೊಂದು ಕಾರಣ ತೊಂಭತ್ತರ ದಶಕದಲ್ಲಾದ ಆರ್ಥಿಕ ಸುಧಾರಣೆ ಹಾಗೂ ಇದರಿಂದಾದ ಸಾಮಾಜಿಕ ಬದಲಾವಣೆಗಳು. ಆ ಕಾಲದಲ್ಲಾದ ಜೀವನಕ್ರಮದ ಬದಲಾವಣೆಗಳು ಇದರಿಂದಾಗಿ ಆದ ಪ್ರೇಕ್ಷಕ ವರ್ಗದ drift ಹಾಗೂ ಅದನ್ನು ಕೆಲ ಮೇಳಗಳ ಯಜಮಾನರು ಉಪಯೋಗಿಸಿದ ರೀತಿ ಯಕ್ಷಗಾನಕ್ಕೆ ಧಕ್ಕೆಯುಂಟು ಮಾಡಿತು. ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಎಲ್ಲಾ ವರ್ಗಗಳ ಜನರ ಮುಖ್ಯ ಮನೋರಂಜನಾ ವಿಷಯವಾಗಿದ್ದ ಯಕ್ಷಗಾನ ಕೇವಲ ಒಂದು ವರ್ಗದ ಜನರ ಮನೋರಂಜನಾ ವಿಷಯವಾಯಿತು. (ಇಲ್ಲಿ ನಾನು ಹೇಳಿರುವ ’ವರ್ಗ’ ಆಸಕ್ತಿಯ ಆಧಾರದಿಂದ ಗುರುತಿಸಲ್ಪಡುತ್ತದೆಯೇ ಹೊರತು ಜಾತಿ ಅಥವಾ ಆರ್ಥಿಕ ಸ್ಥಿತಿಯ ಆಧಾರದಿಂದಲ್ಲ). ತೀರಾ commercial ದೃಷ್ಟಿಯಿಂದ ತೀರಾ ಕಳಪೆ ಮಟ್ಟದ ಪ್ರಸಂಗಗಳು ಚಾಲ್ತಿಗೆ ಬಂದವು. ಇದರಿಂದಾಗಿ ಪುರಾಣ ಜ್ನಾನಸಂಚಯದ ಹಾಗೂ ತಾರ್ಕಿಕ ಚಿಂತನೆಗಳ ಕೇಂದ್ರಗಳಾಗಿದ್ದ ರಂಗಸ್ಥಳಗಳು ಮೌಲ್ಯವನ್ನೂ ಪ್ರೇಕ್ಷಕರನ್ನೂ ಕಳಕೊಂಡವು. ಹಾಗಾಗಿ ಒಂದು generation ಯಕ್ಷಗಾನದಿಂದ ದೂರ ಹೋಯಿತು. ಈಗ ಮತ್ತೆ ಯುವ ಯಕ್ಷಗಾನಾಸಕ್ತರು ಹೆಚ್ಚುತ್ತಿರುವುದು ಯಕ್ಷಗಾನಕ್ಕೊಂದು ಆಶಾದೀಪ.
  ನನ್ನ ದೃಷ್ಟಿಯಲ್ಲಿ ಅಕ್ಷರ ಹೇಳಿದ ಸೃಜನಾತ್ಮಕ ಮಾರ್ಪಾಡುಗಳನ್ನು ತರುವುದಕ್ಕೆ ಸಾಧ್ಯ ಇದ್ದರೆ ಅದು ಮಕ್ಕಳ ಯಕ್ಷಗಾನದಲ್ಲಿ. ಈಗಾಗಲೇ ನಮ್ಮ ತಂದೆ ಚಂದ್ರಶೇಖರ ದಾಮ್ಲೆಯವರು ನಮ್ಮ ಸುಳ್ಯದ ಮಕ್ಕಳ ಮೇಳದಲ್ಲಿ ಇಂತಹ ಕೆಲವು ಪ್ರಯೋಗಗಳನ್ನು ಮಾಡಿದ್ದಾರೆ. ಕುಶ-ಲವರ ಕಾಳಗದಲ್ಲಿ, ವಾಲ್ಮೀಕಿಯಿಂದ ಕಲಿತ ರ‍ಾಮಪಟ್ಟಾಭಿಷೇಕದ ವರೆಗಿನ ರಾಮಾಯಣದ ಕಥೆಯನ್ನು “ಪೂರ್ವಂ ರಾಮ ತಪೋ ವನಾಭಿಗಮನಂ…” ಶ್ಲೋಕದ ರೂಪಕದ ಮೂಲಕ ಆಡಿ ತೋರಿಸುವುದು, ಪ್ರಹ್ಲಾದ ಚರಿತ್ರೆ ಪ್ರಸಂಗದಲ್ಲಿ ಜಯ-ವಿಜಯರ ಕಥೆಯನ್ನು ಪ್ರಸಂಗದ ಪೂರ್ವಭಾಗದಲ್ಲಿ ತೆಗೆದುಕೊಳ್ಳದೆ, ಪ್ರಹ್ಲಾದ ಪಾಠಶಾಲೆಯಲ್ಲಿ ಇತರ ಮುನಿವಟುಗಳಿಗೆ ಕಥೆ ಹೇಳಿ ನೃತ್ಯರೂಪಕವಾಗಿ ಆಡುವ ಮೂಲಕ ತೋರಿಸುವುದು, ಮೂರು ರಂಗಸ್ಥಳಗಳ ಯಕ್ಷಗಾನ ಪ್ರಯೋಗದಲ್ಲಿ, ವಿಶ್ವಾಮಿತ್ರರು ರಾಮ-ಲಕ್ಷ್ಮಣರಿಗೆ ಅಹಲ್ಯಾ ಶಾಪದ ಕಥೆ ಹೇಳುವುದನ್ನು flash back concept ತಂದು ಇನ್ನೊಂದು ರಂಗಸ್ಥಳದಲ್ಲಿ ಪ್ರದರ್ಶಿಸುವುದು, ಇಂತಹ ಪ್ರಯೋಗಗಳು ನಡೆದಿವೆ ಮತ್ತು ಪ್ರೇಕ್ಷಕರ ಮೆಚ್ಚುಗೆಯೂ ಪಡೆದಿವೆ. ಹಾಗಾಗಿ ಮಕ್ಕಳ ಯಕ್ಷಗಾನಗಳು ಪರಂಪರೆಯ ಹೆಸರಿನಲ್ಲಿ ವೃತ್ತಿಕಲಾವಿದರು ಮಾಡುವ ಪ್ರದರ್ಶನಗಳ copy ಆಗದೆ ಸೃಜನಶೀಲ ಪ್ರಯೋಗಗಳ ಮೂಲಕ ಯಕ್ಷಗಾನವನ್ನು ಉಳಿಸುವ-ಬೆಳೆಸುವ ಕೆಲಸಗಳಾಗಬೇಕು.

 3. mohananna says:

  ಅಕ್ಷರೋ ಬರದ್ದದು ಒಳ್ಳೆದಾಯಿದು.ಆನು ದಾಮ್ಲೆಯವು ಬರದ್ದದರ ಅಕ್ಷರ ಸಹಾ ಒಪ್ಪುತ್ತೆ.ಯಕ್ಶಗಾನದ ಹಿನ್ನಡಗೆ ತುಳು ಪ್ರಸ೦ಗ೦ಗೊ ಸಾಕಷ್ಟು ಕೊಡುಗೆ ನೀಡಿದ್ದು.ಒ೦ದು ವರ್ಗವ ಎಳವಲೆ ಬೇಕಾಗಿ ಅಥವಾ ಇನ್ಸ್ ಟೆ೦ಟ್ ಪೋಪ್ಯುಲಾರಿಟೀಗೆ ಬೇಕಾಗಿ ತೆಕ್ಕೊ೦ಡ ನಿರ್ಣಯ೦ಗೊ ಒ೦ದು ಕಲೆಯನ್ನೆ ಹೇ೦ಗೆ ಹಾಳು ಮಾಡುಗು ಹೇಳ್ತದಕ್ಕೆ ಯಕ್ಷಗಾನವೇ ಸಾಕ್ಷಿ.ಒಪ್ಪ೦ಗಳೊಟ್ಟಿ೦ಗೆ

 4. ರಾಮ ಕಥಾ ವಿಸ್ಮಯವ ನೋಡಿಯಪ್ಪಗ ಎನಗೂ ಕೂಡ ಅಕ್ಷರ ಬರದ ವಿಚಾರಂಗಳೇ ಮನಸ್ಸಿಂಗೆ ಬಂತು…..ಶಿವಧನುಸ್ಸಿನ ಸೈನಿಕರು ಹೊತ್ತುಗೊಂಡು ಬಪ್ಪ ದೃಶ್ಯಕ್ಕೆ ಕೊಟ್ಟ ಪ್ರಾಮುಖ್ಯತೆಯ ಮಂಥರೆ-ಕೈಕೇಯಿ-ದಶರಥ ರ ಸಂಭಾಷಣೆಗೆ , ಲಕ್ಷ್ಮಣ ರೇಖೆಗೆ, ಹನುಮಂತನ ಸ್ವಾಮಿಭಕ್ತಿ, ರಾವಣ ವಧೆಗೆ ಕೊಡೆಕ್ಕಾತು. ಶಬರಿಯ ಕಥೆಯನ್ನೂ ಸೇರ್ಸಿರೆ ಇನ್ನೂ ಲಾಯ್ಕ ಆವ್ತಿತು. ಎನಗೆ ಎಲ್ಲಕ್ಕಿಂತ ಇಷ್ಟ ಆದ್ದು ಕೃಷ್ಣ ಯಶೋದೆಯರ ಮಾತುಗೊ…. ಮತ್ತೆ ಶೂರ್ಪನಖಿಯ ಅಭಿನಯ [ನಿರುಪಮಾ ರಾಜೇಂದ್ರ ಈ ಪಾತ್ರವ ಮಾಡಿದ್ದು].
  ಏನೇ ಆದರೂ ಆ ಕಾರ್ಯಕ್ರಮ ಒಂದು ರೀತಿಲಿ ನಮ್ಮ ಸಮಾಜದ ಮೇಲೆ ಒಳ್ಳೆಯ ಪರಿಣಾಮ ಬೀರುದು ಮಾಂತ್ರ ಸತ್ಯ.

 5. ಅಕ್ಷರಾ..
  ಇಡೀ ಬೈಲನ್ನೇ ಒಂದು ಸರ್ತಿ ಆಳವಾದ ಚಿಂತನೆಗೆ ಹಚ್ಚಿದ ಶುದ್ದಿ ಇದು!
  ಕೊಶಿ ಆತು ಬರವಣಿಗೆಯ, ಮತ್ತೆ ಅದಕ್ಕೆ ಬಂದ ಒಪ್ಪಂಗಳ ಕಂಡು..

  ಯಕ್ಷ-ನೃತ್ಯ ತುಲನೆ ಮಾಡಿ, ಈಗಾಣ ಪರಿಸ್ಥಿತಿಗೆ ನಾವು ಒಗ್ಗಿಗೊಂಬಲೆ ಇಪ್ಪ ಹೊಸ ಆಯಾಮಂಗಳ ಬಗ್ಗೆ ಚಿಂತಿಸಿದ ಲೇಖನ.

  ಇನ್ನೂ ಬರಳಿ ಹೀಂಗಿರ್ತದು.
  ಹರೇರಾಮ

  • ಅಕ್ಷರ ದಾಮ್ಲೆ says:

   ತುಂಬಾ ಧನ್ಯವಾದಂಗೊ ಗುರಿಕ್ಕಾರ್ರೇ…. 🙂

 6. premalatha says:

  ಆಹಾ.. ಕೃಷ್ಣಂಗೆ ಹೇಳುವ ‘ರಾಮ ಕಥೆ’…ಚೆಂದ ಇದ್ದಿಕ್ಕು!
  ಶಿವಧನುಸ್ಸಿನ ಸೈನಿಕರು ತಪ್ಪ/ತೆಕ್ಕೊಂಡು ಹೋಪ ದೃಶ್ಯಲ್ಲಿ ಲಯವಿನ್ಯಾಸ( ಕಾಲಗಳ ಹೆಜ್ಜೆ ನುಡಿತದ ವೈವಿಧ್ಯತೆಗೊ) ಆಕರ್ಷಕವಾಗಿದ್ದಿಕ್ಕು?
  ಅದರ ಜನ ಗಮನಿಸಲಿ ಹೇಳಿ ಏನಾದರೂ ‘ಹೆಚ್ಚು’ ಮಾಡಿದವೋ?! ಇರಲಿ..
  ನೃತ್ಯ ಮತ್ತೆ ಯಕ್ಷಗಾನ ಎರಡುದೆ ಒಂದುರೀತಿಲಿ ಸಮೂಹ ಮಾಧ್ಯಮಗಳೇ. ತುಂಬಾ ಜನರ ಶ್ರಮ-ಏಕಾಗ್ರತೆಂದ ಮಾತ್ರ ಯಶಸ್ವಿ ಅಪ್ಪಂಥಾದ್ದು.
  ಮತ್ತೆ ಮುಖವರ್ಣಿಕೆ-ಪ್ರಸಾಧನಗಳ ಹೋಲಿಸಿದರೆ ಯಕ್ಷಗಾನ, ನೃತ್ಯಂದಲೂ ಹೆಚ್ಚು ಕ್ಲಿಷ್ಟ.

  ಏನೇ ಇದ್ದರೂ ನಿಂಗೊ ಎಲ್ಲ ಹೇಳಿದ ಹಾಂಗೆ – ‘ಯಕ್ಷಗಾನ’ಕ್ಕೆ ಹೆಚ್ಚು ಜನ ಸೇರಿಗೊಳ್ಳೆಕ್ಕು… ಬೆಳೆಯೆಕ್ಕು.. ಅದರ ಬೆಳೆಶೆಕ್ಕು.

  ಪ್ರೀತಿಂದ
  ಪ್ರೇಮಕ್ಕ.

 7. ಅಕ್ಷರ ದಾಮ್ಲೆ says:

  ತುಂಬಾ ಧನ್ಯವಾದಂಗೊ …. 🙂
  ಶಿವಧನುಸ್ಸಿನ ದೃಶ್ಯ ಉದ್ದ ಅಪ್ಪಲೆ ಕಾರಣ ಅಲ್ಲಿ, ನಿರುಪಮಾ ಅವಕ್ಕೆ ಡ್ರೆಸ್ ಬದಲ್ಸುಲೆ ಸಮಯ ಬೇಕಾವ್ತು. ಅದಕ್ಕೆ.. ಆದರೆ, ಆ ದೃಶ್ಯ ಅನಗತ್ಯ ಹೇಳಿ ಅನಿಸುತ್ತು. ಅಷ್ಟೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *