Oppanna.com

ಆನು ಶಿವನ ಸ್ವರ್ಗವ ಕಂಡೆ-2

ಬರದೋರು :   ಶರ್ಮಪ್ಪಚ್ಚಿ    on   17/02/2018    7 ಒಪ್ಪಂಗೊ

I visited Shiva’s Paradise ಐ ವಿಸಿಟೆಡ್ ಶಿವಾ’ಸ್ ಪ್ಯಾರಡೈಸ್

Readers Digest, 2009 August     ಬರದೊನು ಕಾಶ್ಯಪ ಶಿಂಕ್ರೆ

 

ಆನು ಶಿವನ ಸ್ವರ್ಗವ ಕಂಡೆ-2

ರೀಡರ್ಸ್ ಡೈಜೆಸ್ಟ್-2009 ರ ಅಗೋಸ್ತು ತಿಂಗಳಿಲಿ ಆನು ಓದಿದ ಈ ಅನುಭವದ ಆಧಾರಲ್ಲಿ ಹವಿಕ ಬಂಧುಗೋಸ್ಕರ ಬರೆತ್ತಾ ಇದ್ದ ಇದು ಭಾವಾನುವಾದ ಅಥವಾ ಭಾವಯಾನ. ಎನ್ನ ಸ್ವರವೂ ನಿಂಗಳ ಸಂಗೀತವೂ ಸೇರಿ ಹರಿಯಲಿ, ನಿಂಗಳೆಲ್ಲೋರ ಮಾನಸರೋವರಕ್ಕೆ.
ಧನ್ಯಳಾದೆ

***                                            ***                                                        ***

ಈ ಕಾಲಲ್ಲಿ ಆರೋಗ್ಯ ಯವ್ವನದ ಅಮಿತೋತ್ಸಾಹ ಜತೆಲಿ ಪೈಸ ಇಷ್ಟಿದ್ದರೆ ಕೂಸು ಮಾಣಿ ಭೇದ ಇಲ್ಲದ್ದೆ, ಪ್ರವಾಸೀ ತಾಣಂಗೊಕ್ಕೆ, ಪ್ರೇಕ್ಷಣೀಯ ಜಾಗಗೊಕ್ಕೆ ಹೋಪದು ಟ್ರೆಕ್ಕಿಂಗ್-ಪರ್ವತಾರೋಹಣ, ಇತ್ಯಾದಿಗಳಲ್ಲಿ ಆಸಕ್ತಿ ಬೆಳೆತ್ತಾ ಇದ್ದು Kaufen Sie Replik-Uhren ಒಳ್ಳೆದೇ. ಇದರಂದ ನಮ್ಮ ದೇಶ,ಕಾಲ-ಜ್ಞಾನ ಹೆಚ್ಚಾವುತ್ತು. ಸಾಹಸ, ಸೈರಣೆ ಎಲ್ಲ ವೃದ್ಧಿ ಆವುತ್ತು. ಶರೀರ ಸದೃಢ ಆವುತ್ತು. ಆತ್ಮವಿಶ್ವಾಸ, ಧೈರ್ಯ ಪಂಥಾಹ್ವಾನ ಎದುರ್ಸುವ (ಚಾಲೆಂಜ್) ಶಕ್ತಿ ಬೆಳೆತ್ತು. ಆದರೆ ಅದರಂದವೂ ಶ್ರೇಷ್ಠವಾದ್ದು ಮನುಷ್ಯನಾಗಿ ಹುಟ್ಟಿದ್ದಕ್ಕೆ ಸಾರ್ಥಕ್ಯಪಡುವಂಥ ಹಿಮಾಲಯದ ಕೈಲಾಸ ಪರ್ವತ ಮಾನಸ ಸರೋವರ ಯಾತ್ರೆ ಮಾಡಿದರೆ ಇನ್ನು ಅದರಿಂದ ಉನ್ನತವಾದ ಟ್ರೆಕ್ಕಿಂಗೇ ಇರ. ವಿಶ್ವದ ಸರ್ವಶ್ರೇಷ್ಠ ಯಾತ್ರೆಯ ಸೌಭಾಗ್ಯವ, ಕಾಲ ಕಳುದು ಹೋಗಿ ವೃದ್ಧಾಪ್ಯ ಪಾದಾರ್ಪಣೆ ಮಾಡುವ ಮದಲೇ ಪಡಕ್ಕೊಳ್ಳಿ- ಹೇ ಜವ್ವನಿಗರೇ! ಈ ಮಹಾ ಅದ್ಭುತ ಅಮೃತಘಳಿಗೆಗಳ ರೋಮಾಂಚಕಾರೀ ಅನುಭವಂಗಳ ನಿಂಗಳ ವಶಮಾಡಿಕೊಳ್ಳಿ. “ಇಂಥ ಕೈಲಾಸ ಮಾನಸಯಾತ್ರೆ ಸಿಕ್ಕಿತ್ತಿಲ್ಲೆನ್ನೇ” ಹೇಳಿ ಹಳಹಳಿಸುವೊರಲ್ಲಿ ಆನೂ ಒಬ್ಬ°. ಆದರೆ ಇದೀಗ ಅಂಥ ಯಾತ್ರೆ ಮಾಡಿದೊರ ಲೇಖನಿಯ ಸಾರಸರ್ವಸ್ವವ ಓದಿ ಅನುಭವಿಸಿ ನಿಂಗಳ ಜತೆ ಅದರ ಹಂಚಿಗೊಳ್ಳೆಕ್ಕು, ನಿಂಗೊಗೂ ಆ ರಸಾನುಭವವ ಎನ್ನ ಬೊಗಸೆಲಿ ಹಿಡಿವಷ್ಟಾದರೂ ಕುಡಿಶೆಕ್ಕು ಹೇಳಿ ಎನ್ನದಿದೊಂದು ಪ್ರಯತ್ನ. ಅವಗ ನಿಂಗಳೇ ಆ ಯಾತ್ರೆ ಮಾಡ್ತಾ ಇಪ್ಪ ಹಾಂಗೆ ಅನುಭವ ಆದರೆ ಅದುವೇ ಎನ್ನ ಸೌಭಾಗ್ಯ. ಕೈಲಾಸ ಯಾತ್ರೆಯ ಅನುಭವವೇ ಬೇರೆ. ಯಾವ್ಯಾವದೋ ಬೆಟ್ಟ ಹತ್ತುವ ಬದಲಾಗಿ ಕೈಲಾಸಯಾತ್ರೆ ಮಾಡಿ ಆತ್ಮಾನಂದ ಪಡೆವ ಪುಣ್ಯಕ್ಕೆ ಭಾಜನರಾಗಿ, ಹೊಸ ಮನುಷ್ಯರಾಗಿ. ಬನ್ನಿ! ಹೋಯ್ಕೊಂಡು ಬನ್ನಿ! ಶುಭವಾಗಲಿ! ಶುಭಾಸ್ತೇ ಪಂಥಾನಸ್ಸಂತು

***                                                        ****                                                      ****

ಅದು ಹಿಮಾಲಯ! ಮನೋಹರ! ಸಮ್ಮೋಹಕ! ಇಡೀ ವಿಶ್ವಲ್ಲೇ ತೀರ್ಥ ಯಾತ್ರಿಕರ ಅತಿ ಹೆಚ್ಚು ಆಕರ್ಷಿಸುವ ಪರಮ ಶ್ರೇಷ್ಠ ಪುಣ್ಯ ಕ್ಷೇತ್ರವೊಂದಿದ್ದು ಹೇಳಿ ಆದರೆ, ಅದುವೇ ಪರಮಪಾವನ ಕೈಲಾಸ ಮಾನಸ ಸರೋವರ!

***                                ****                                                                  ****

ಆ ದಿನ ಹೊತ್ತು ಮಧ್ಯಾಹ್ನ. ಆದರೂ ಚಳಿಗಾಳಿ, ಹಿಮಹನಿಗಳನ್ನೂ ಒಟ್ಟಿಂಗೆ ತೆಕ್ಕೊಂಡು ಬೀಸುತ್ತಾ ಇದ್ದು. ಉದಯಪ್ಪಗ ಹೆರಟು ಹಿಮಾಯಲ ಪರ್ವತ ಮಾರ್ಗಲ್ಲಿ ಇಪ್ಪತ್ತೆರಡು ಕಿಲೋಮೀಟರ್ ದೂರವ ಏರುತ್ತಾ ಹೋಯಿದೆ. ಆರು ಗಂಟೆ ಎಡೆಬಿಡದ್ದೆ ಹತ್ತಿದ್ದೆ. ಹೊಟ್ಟೆಯನ್ನೇ ಕೊರದು ಒಳಹೊಗುವ ಹಿಮಗಾಳಿಲಿ ಎಂಗೊ ಎಲ್ಲ ಚೆಂಡಿಪುಂಡಿ. ಬಚ್ಚೆಲು ಒಂದ್ಹೊಡೆಲಿ, ಉಸಿರು ಕಟ್ಟುದು ಇನ್ನೊಂದು ಹೊಡೆಲಿ. ಗಾಳಿ ಎಳಕ್ಕೊಂಡಷ್ಟೂ ಸಾಕಾವುತ್ತಿಲ್ಲೆ,ಸೇಂಕುಲೆ ಸುರು ಆಯಿದು.ಮುಂದಾಣ ದಾರಿ ತುಂಬಾ ಇಕ್ಕಟ್ಟಿಂದು. ಸಪೂರವೂದೇ ಜಾರಂಗೇಲುದೇ. ಅಲ್ಲಿ ಹಜ್ಜೆ (ಹೆಜ್ಜೆ) ಮಡುಗುದು ಎಲ್ಯಾರೂ ರಜ ತಪ್ಪಿತ್ತೋ ಅಲ್ಲಿಗೆ ಕಥೆ ಮುಗುದ ಹಾಂಗೆ. ಮುನ್ನೂರು ಮೀಟರ್ ಕೆಳ ಇಪ್ಪ ಇಳಿಜಾರಿನ ನದೀ ಪಾತ್ರಲ್ಲಿ ರಭಸಲ್ಲಿ ಹರುದೋಡುವ (ಹರ್ಕೊಂಡು ಹೋಪ) ಕಾಳೀನದಿಯೊಳ ಆನಿಪ್ಪೆ! ಹೊಳೆಕರೆಲಿ ಇಂಥ ದಾರಿಲಿ ಹೋವುತ್ತಾ ಸಾಗುತ್ತ ಇದ್ದರೆ ಮುಂದೆ ದಾರಿಗೆ ಅಡ್ಡಕ್ಕೆ ದೊಡ್ಡ ದೊಡ್ಡ ಮಣ್ಣು ಕಲ್ಲುಗಳ ಗುಡ್ಡಗೊ ಮನಿಕ್ಕೊಂಡಿದ್ದವು. “ಇವೆಲ್ಲಾಈ ಮೊದಲು ಇದ್ದೊವಲ್ಲ! ಪರ್ವತದ ಹೊಡೆಮೊಗಚ್ಚಿ ಈಗಷ್ಟೆ ಉರುಳಿಬಿದ್ದ ಕಲ್ಲು ಮಣ್ಣುಗೊ”. ಎನ್ನ ಸಾಮಾನುಗಳ ಹೊತ್ತುಗೊಂಡ ಪೋರ್ಟರ್ ದೌಲತ್ ಹೇಳಿದ- “ನಾವು ಈ ಕೂಡ್ಳೆ ಈ ಜಾಗೆಂದ ಬೇಗಬೇಗ ಸಾಗೆಕ್ಕು! ಇನ್ನಷ್ಟು ಮಣ್ಣ ದಿಡ್ಪೆಗೊ ಕಲ್ಲು ಬಂಡೆಗೊ ಹೊರಳಿ ಜಾರಿ ಬೀಳುಗು! ಬೇಗ ಬೇಗ ! ತ್ವರೆಮಾಡಿ!”

***                                                                    ****                                                      ****

ಯಾತ್ರೆಯ ವ್ಯವಸ್ಥಾಪಕಂಗೊ ’ದಾರ್ಶುಲಾ’ ಶಿಬಿರಂದ ಹೆರಡುವಾಗಲೇ ಎಂಗೊಗೆ ಈ ರೀತಿಯ ಅಪಾಯಂಗಳ ಎಚ್ಚರಿಕೆ ಕೊಟ್ಟಿತ್ತಿದ್ದವು. ’ದಾರ್ಶುಲಾ’ ಹೇಳಿದರೆ ಈ ಪ್ರವಾಸದ ಸುರುವಾಣ ಶಿಬಿರ. ನೇಪಾಳದ ಪಶ್ಚಿಮ ಗಡಿಲಿದ್ದು.

ಯೋಚನೆಗೊ ಎನ್ನ ಮುತ್ತುತ್ತಾ ಇದ್ದವು. ಎನ್ನ ಮನೆ, ಸಂಸಾರ,ಎಲ್ಲ ವ್ಯವಹಾರಂಗಳ ದೂರ ಬಿಟ್ಟಿಕ್ಕಿ ಎಂತಗೆ ಆನಿಲ್ಲಿಗೆ ಬಂದೆ? ಎನ್ನ ಬಗ್ಗೆ ಎನಗೇ ವಿಸ್ಮಯ ಆವ್ತಾ ಇದ್ದು. ಪ್ರಯಾಣದ ಸುರುವಾಣ ದಿನವೇ ಹೀಂಗಾದರೆ ಮುಂದೆ ಹೇಂಗೆ? ಗೋವೆಲಿ ಎನ್ನ ಸ್ವಂತ ಹೋಟ್ಳಿದ್ದು. ವ್ಯಾಪಾರ ವಹಿವಾಟುದೇ ದೊಡ್ಡ ಇದ್ದು. ಆದರೆ ಇಂದು ಆನೊಬ್ಬ° ಪಾದಚಾರಿ. ದೇಶದ ಎಲ್ಲಾ ಹೊಡೆಂದ ಬಂದ ನಲುವತ್ನಾಲ್ಕು ಯಾತ್ರಿಕರಲ್ಲಿ ಆನುದೇ ಒಬ್ಬ°!. ದಾರಿ ಅತ್ಯಂತ ದುರ್ಗಮ, ಅಪಾಯಕಾರಿ ಕೂಡ. ಹಾಂಗಿದ್ದರೂ ಇಡೀ ಜಗತ್ತಿಲೇ ಅತ್ಯಂತ ಮನಮೋಹಕ. ಹಿಂದುಗೊಕ್ಕಂತೂ ಜೀವನದ ಪರಮ ಲಕ್ಷ್ಯ. ಇದು ಎಲ್ಲೊರಿಂಗೂ ಗೊಂತಿಪ್ಪ ವಿಷಯವೇ. ಹಾಂಗಾಗಿಯೇ ಎಂಗೊ ಎಲ್ಲೊರು ಹೋವ್ತಾ ಇದ್ದೆಯೊ°, ಕೈಲಾಸ ಪರ್ವತಕ್ಕೆ, ಶಿವ ಸನ್ನಿಧಿಗೆ!. ಕೈಲಾಸ ಇಪ್ಪ ಪ್ರದೇಶ ತ್ರಿವಿಷ್ಟಪ ಅಥವಾ  ಟಿಬೆಟಿನ ಒಳ ಆರುಸಾವಿರದ ಏಳ್ನೂರ ಹದಿನಾಲ್ಕು ಮೀಟರ್ ಎತ್ತರದ ಈ ಉತ್ತುಂಗ ಪರ್ವತ. ಟಿಬೆಟ್ಟಿನೊರಿಂಗೂ ಅತ್ಯಂತ ಪವಿತ್ರವಾದ್ದು. ಅವು ಬೌದ್ಧರು. ಅವು ಈ ಕೈಲಾಸ ಪರ್ವತವ ಮೇರುಪರ್ವತ ಹೇಳ್ತವು. ಅಷ್ಟು ಮಾತ್ರ ಅಲ್ಲ, ಇಡೀ ಬ್ರಹ್ಮಾಂಡದ ಶಕ್ತಿಕೇಂದ್ರ ಹೇಳಿ ನಂಬುತ್ತವು. ಜೈನರಿಂಗೆ, ಅವರ ಒಂದನೇ ತೀರ್ಥಂಕರ ನಿರ್ವಾಣ ಹೊಂದಿದ ಪವಿತ್ರ ಭೂಮಿ, ಈ ಕೈಲಾಸದ ಪೃಷ್ಠ ಭೂಮಿ.

ಕೈಲಾಸಂದ ರಜ ದೂರಲ್ಲಿ ಎಂಬತ್ತೆಂಟು ಕಿಲೋಮೀಟರ್ ಸುತ್ತಳತೆ ಇಪ್ಪ ಮಾನಸ ಸರೋವರ ಇದ್ದು. ಬೃಹದಾಕಾರದ ಈ ಸರೋವರಕ್ಕೆ ಈ  ಹೆಸರು ಬಪ್ಪಲೆ ಕಾರಣ- ಬ್ರಹ್ಮನ ಮನಸ್ಸಿಲಿ ಮೂಡಿದ ಕಲ್ಪನೆ-ಮಾನಸ ಸೃಷ್ಟಿ-ಹಾಂಗಾಗಿ ಮಾನಸ ಸರೋವರ. ಹೀಂಗೆ ನಮ್ಮ ಸನಾತನ ಕಾಲದ ಋಷಿ ಮುನಿಗೊ ಮಡುಗಿದ ಹೆಸರು. ಇನ್ನು ಕೈಲಾಸ ಪರ್ವತವೋ! ಏಷ್ಯಾ ಖಂಡಲ್ಲೇ ಅತಿದೊಡ್ಡ ನದಿಗೊ ಹುಟ್ಟುವ ಶಿಖರವೇ ಕೈಲಾಸ ಪರ್ವತ!. ಆ ನದಿಗೊ ಯಾವದೆಲ್ಲ ಹೇಳಿದರೆ ಸಿಂಧೂ ಕರ್ನಾಲೀ ಸಟ್ಲೆಜ್ ಇದರ ಪೂರ್ವನಾಮ ಶ್ರುತದ್ರು; ಮತ್ತೊಂದು ನದಿ ಬ್ರಹ್ಮಪುತ್ರಾ. ಹಿಮಾಲಯಂದ ಹಾಂಗಿಪ್ಪ ಪರ್ವತಶ್ರೇಣಿ ಜಗತ್ತಿಲಿ ಎಲ್ಲಿಯೂ ಇಲ್ಲೆ ಹೇಳಿ ಪೌರಾಣಿಕ ಕಾಲಂದವೇ ಋಷಿಮುನಿಗೊ ಹೇಳಿದ್ದವು. ಅದರಲ್ಲಿಪ್ಪ ಪರ್ವತ ಶಿಖರಂಗೊ ಎಷ್ಟೆಷ್ಟೋ! ಶಿಖರಂಗಳಲ್ಲಿ ಸರ್ವಶ್ರೇಷ್ಠವಾದ್ದು ಈ ಕೈಲಾಸ. ಮತ್ತೆ ಮಾನಸ ಸರೋವರಕ್ಕೆ ಸರಿಸಮಾನವಾದ್ದು ಯಾವದೂ ಇಲ್ಲೆ.

ಶತಮಾನಂಗೊ ಕಳುದು ಹೋದವು. ಕಠಿಣತಮವಾದ ಈ ಯಾತ್ರೆಯ ಆಸ್ತಿಕರು ಮಾತ್ರ ಅಲ್ಲ, ನಾಸ್ತಿಕರೂ ಮಾಡಿಗೊಂಡೇ ಇದ್ದವು ಇಂದಿನವರೆಗೂ. ಆದರೆ ಒಂದು ವಿಷಯ. ಚೀನಾದೇಶ ಟಿಬೆಟ್ಟಿನ ಮೇಲೆ ಆಕ್ರಮಣ ಮಾಡಿ ತಮ್ಮ ಸ್ವಾಧೀನ ಮಾಡಿಗೊಂಡ ಮೇಲೆ ಭಾರತದೊರಿಂಗೆ ಕೈಲಾಸಕ್ಕೆ ಹೋಪಲೆ ಒಪ್ಪಿಗೆಯ ಪ್ರಮಾಣ ಪತ್ರವ 1954 ರ ಭಾರತ ಚೀನಾ ಒಪ್ಪಂದಲ್ಲಿ ಸೇರ್ಸಿ ಮಡುಗಿದ್ದರೂ 1962  ರಲ್ಲಿ ಭಾರತ ಚೀನಾ ಯುದ್ಧ ಆದ ಮೇಲೆ 20 ವರ್ಷ ಕೈಲಾಸಕ್ಕೆ ಹೋಪ ದಾರಿಯ ಚೀನಾ ಮುಚ್ಚಿ ಮಡುಗಿತ್ತು-ಹೇಳಿದರೆ 1982 ರ ವರೆಗೆ. ಅದಕ್ಕೆ ಮದಲು ಟಿಬೆಟ್ ಸ್ವತಂತ್ರ ರಾಷ್ಟ್ರವಾಗಿದ್ದ ಕಾಲಲ್ಲಿ ಭಾರತದೊರಿಂಗೆ ಕೈಲಾಸಯಾತ್ರೆ ಮಾಡ್ಳೆ ಯಾವ ಅಡ್ಡಿಯೂ ಇತ್ತಿಲ್ಲೆ.

***                    ***                                ***

ಭಾರತಂದ ಕೈಲಾಸ ಮಾನಸ ಸರೋವರಕ್ಕೆ ಹೋಪ ಹೆಬ್ಬಾಗಿಲು ಉತ್ತರಾಖಂಡದ ಉತ್ತರ ದಿಕ್ಕಿಂಗೆ ಏರು ದಾರಿಲಿ ಹೋವ್ತಾ ಇಪ್ಪಗ ಸಿಕ್ಕುತ್ತು. ಅಲ್ಲಿಂದ ಮುಂದೆ ಅದೇ ದಾರಿಲಿ (ಅಗೋಸ್ತು ತಿಂಗಳ ಹದಿನಾಲ್ಕನೆ ತಾರೀಕು ಮಧ್ಯಾಹ್ನ 1 ಗಂಟೆ ಸಮಯಲ್ಲಿ) ನಡೆತ್ತಾ ಹತ್ತುತ್ತಾ ಇಪ್ಪಾಗ ತುಂಬಾ ಎತ್ತರಂದ ದೊಡ್ಡ ದೊಡ್ಡ ಬಂಡೆಕಲ್ಲುಗೊ ಹೊರಳಿ ಎಂಗಳ ಮೇಲೆ ಬೀಳುದರಲ್ಲಿತ್ತು. ಎಂಗಳ ತಲೆ ಒಡದು ಹಾಕುಲೆ ಸಾಕಪ್ಪಷ್ಟು ದೊಡ್ಡ ಕಲ್ಲುಗೊ. ಆದರೆ ಎಂಗಳ ಅದೃಷ್ಟ ಒಳ್ಳೆದಿತ್ತು. ಕೆಲವು ಸೆಕುಂಡು ಮದಲೇ ಎಂಗೊ ಆ ಜಾಗೆಯ ದಾಂಟಿ ಮುಂದೆ ಸಾಗಿ ಆಗಿ ಹೋಯಿದು! ಅಕಸ್ಮಾತ್ ರಜ ತಡವಾಗಿದ್ದರೂ ಎಂಗಳಲ್ಲಿ ಒಬ್ಬನೂ ಜೀವಸಹಿತ ಒಳಿತ್ತಿದ್ದವಿಲ್ಲೆ. ಈ ಜಾಗೆಂದ ರಜಾ ಮುಂದೆ ’ಮಾಲ್ಪಾ’ ಎಂಬಲ್ಲಿ 1998 ರಲ್ಲಿ ಇದೇ ತರಲ್ಲಿ ಪರ್ವತದ ಹೊಡೆಮೊಗಚ್ಚಿ ಬಂಡೆಕಲ್ಲು ಮಣ್ಣು ಸಮೇತ ಜಾರಿ ಕೆಳಾಣ ದಾರಿಗೆ ಬಿದ್ದು ಇನ್ನೂರಂದವೂ ಹೆಚ್ಚು ಜೆನ ಯಾತ್ರಿಕರು, ಅವರ ಮಾರ್ಗದರ್ಶಕಂಗೊ ಕೂಡಾ ಜೀವಂತ ಸಮಾಧಿ ಹೊಂದಿದ್ದವು. ಅಲ್ಲಿ ಸತ್ತೊರ ಪೈಕಿಲಿ ಪ್ರಸಿದ್ಧ ನೃತ್ಯಗಾರ್ತಿ ಪ್ರೊತಿಮಾ ಬೇಡಿಯೂ ಇತ್ತು. ( ಈ ವಿಷಯವ ನಿಂಗೊ ಎಲ್ಲ ಸುದ್ದಿ ಪತ್ರಿಕೆಗಳಲ್ಲಿ ಓದಿಪ್ಪಿ) ದೌಲತ್ ಹೇಳಿದ “ಎನ್ನ ಅಪ್ಪನೂ ಇದೇ ದುರಂತಲ್ಲಿ ಸತ್ತದು! ಸತ್ತು ಮಣ್ಣಾಗಿ ಹೋದ!” ಆ ಕಲ್ಲು ಮಣ್ಣುಗಳ ರಾಶಿಯ ಕೈ ಊರಿಗೊಂಡು ಹರಕ್ಕೊಂಡು ದಾಂಟೆಕ್ಕಾತು ಎಂಗೊಗೆ.

***                                ***                                ***

ಆನೊಬ್ಬ ಸಂತನೂ ಅಲ್ಲ. ಪಾಪಿಷ್ಠನೂ ಅಲ್ಲ. ಅಥವಾ ದೊಡ್ಡ ಧಾರ್ಮಿಕನೂ ಅಲ್ಲ. ಹಾಂಗಾಗಿದ್ದರೂ ನಮ್ಮ ಪುರಾತನ ಗ್ರಂಥಂಗಳಲ್ಲಿ ಹೇಳಿದ ಮಾತು ನೆಂಪಾವುತ್ತು. ಕೈಲಾಸ ಪರ್ವತದ  ಎದುರು ನಿಂದು ಪ್ರಾರ್ಥನೆ ಮಾಡಿದೋರು, ಮಾನಸ ಸರೋವರಲ್ಲಿ ಮಿಂದೊರು ಪೂರ್ವಾರ್ಜಿತ ಸರ್ವ ಪಾಪಂಗಳ ಕರ್ಮ ಫಲಂಗಳಂದ ಮುಕ್ತಿ ಹೊಂದುತ್ತವು. ಅಷ್ಟು ಮಾಂತ್ರ ಅಲ್ಲ, ಜನನ ಮರಣಂಗಳ ಚಕ್ರವ್ಯೂಹಂದ ಬಿಡುಗಡೆ ಆವ್ತವು. ಮುಂದೆ ಅವಕ್ಕೆ ಪುನರ್ಜನ್ಮ ಇಲ್ಲದ್ದೆ ಶಾಶ್ವತವಾದ ಸಾಯುಜ್ಯವ ಪಡೆತ್ತವು.

ಎನ್ನ ಮನೆಯೊರ ಹತ್ತರೆ ಕೈಲಾಸಕ್ಕೆ ಯಾತ್ರೆ ಹೋಪ ಆಶೆಯ ವ್ಯಕ್ತ ಪಡಿಸಿಪ್ಪಾಗ, ಅವು ಆರೂ ಅಡ್ಡಿಮಾಡಿದ್ದವಿಲ್ಲೆ. ಎನ್ನ ಅರ್ಧಾಂಗಿ ಕೂಡಾ! ಆದರೆ ಯಾತ್ರೆ ಎಷ್ಟು ಕಠಿಣ! ಎಷ್ಟು ಭಯಾನಕ! ಇಂಥ ಕಲ್ಪನೆ ಕೂಡ ಅವಕ್ಕೆ ಗೊಂತಿತ್ತಾ? ಭಾರತದ ’ಬಾಹ್ಯವಿಷಯಂಗಳ ಕಛೇರಿಯ ಮಂತ್ರಾಲಯ’ದೊರು ಎನಗೆ ಅನುಮತಿ ಕೊಡೆಕ್ಕಾರೆ ಅವು ಒಡ್ಡುವ ಪರೀಕ್ಷೆಗಳಲ್ಲಿ ತೇರ್ಗಡೆ ಆಯೆಕ್ಕಾವುತ್ತು. ಎನ್ನ ಶರೀರ ಸ್ಥಿತಿಗತಿ ಆರೋಗ್ಯ ತಪಾಸಣೆಲಿ ಯಾವ ದೋಷವೂ ಕಾಂಬಲಾಗ! ಅದೆಲ್ಲ ಸರಿಯೇ! ಆದರೆ ಆನು ಜೀವಂತವಾಗಿ ವಾಪಾಸು ಬಪ್ಪೆ ಹೇಳಿ ಖಚಿತವಾದ ಭರವಸೆ ಕೊಡ್ಳೆಡಿಗೋ ಅವಕ್ಕೆ?. ಪ್ರತಿ ವರ್ಷ ಯಾತ್ರಾರ್ಥಿಗಳ ಹದಿನಾರು ತಂಡಂಗಳ ಕಳ್ಸಿಕೊಡ್ತು ಈ ಮಂತ್ರಾಲಯ. ಯಾತ್ರಿಗೊ ದಾರಿ ಮಧ್ಯದ ಮರಣವ ಭಗವತ್ಕೃಪೆ ಹೇಳಿಯೇ ಗ್ರೇಶುತ್ತವು. ತಮ್ಮ ಅಂತ್ಯವ ಸಂತೋಷಲ್ಲಿ ಸ್ವೀಕರಿಸುತ್ತವು. ಆದರೆ ವರ್ಷಂದ ವರ್ಷಕ್ಕೆ, ಸರ್ತಿಂದ ಸರ್ತಿಗೆ ಯಾತ್ರಿಕರ ಸ್ವಾಸ್ಥ್ಯ ನಿಯಮಂಗಳ ಬಿಗಿ ಮಾಡ್ತಾ ಇದ್ದವು. ಎನಗೆ ಎರಡು ತಿಂಗಳು ಅಂಗಸಾಧನೆ ಮಾಡ್ಸಿದ್ದವು. ಅವಗವಗ ಡಿಲ್ಲಿಲ್ಲಿಪ್ಪ ಒಬ್ಬ ಡಾಕ್ಟ್ರನಲ್ಲಿಗೆ ಕಳ್ಸಿ ಎನ್ನ ಶರೀರದ ತೂಕ ಕಡಮ್ಮೆ ಆದ್ದರ ಮಾಂತ್ರ ಅಲ್ಲ, ಆನು ಒಳ್ಳೆ ಉಲ್ಲಾಸಲ್ಲಿ ಇದ್ದನೋ? ಇದನ್ನೂ ಖಾತ್ರಿಮಾಡಿಗೊಂಡವು. ಅಷ್ಟಾದ ಮೇಲೆವುದೇ “ನಿನ್ನ ರಕ್ತದ ಒತ್ತಡ ಉಚ್ಚಮಟ್ಟಲ್ಲಿದ್ದು!, ನಿನಗೆ ಯಾತ್ರೆಗೆ ಪರವಾನಗಿ ಕೊಡ್ಳೆಡಿತ್ತಿಲ್ಲೆ” ಹೇಳಿಬಿಟ್ಟವು! “ಕೆಲವು ಸಮಯಕ್ಕೆ ಹಿಂದೆ ಕೈಲಾಸ ಯಾತ್ರೆಗೆ ನಡಕ್ಕೊಂದು ಹೋದೊರಲ್ಲಿ ನಾಲ್ಕು ಜೆನ ಅರ್ಧದಾರಿಲಿಯೇ ಸತ್ತವು. ಅವಕ್ಕೆ ’ಉಚ್ಚರಕ್ತ ಚಾಪ’ ಇದ್ದ ಕಾರಣ ಹೀಂಗೆ ದುರ್ಮರಣ ಹೊಂದುವ ಹಾಂಗಾತು. ನಿನಗೂ ಕೂಡ ಪರ್ವತ ಪ್ರಾಂತಲ್ಲಿ ಹೃದಯಾಘಾತ ಸಂಭವಿಸುವ ಸಾಧ್ಯತೆ  ಇದ್ದು” ಹೇಳಿದವು. ಆದರೆ ಕೈಲಾಸಯಾತ್ರೆಯ ಅಪೇಕ್ಷೆ ಎನ್ನ ಮನಸ್ಸಿಲಿ ಅದಮ್ಯವಾಗಿತ್ತು. ಅವಕ್ಕೆ ಆನು ಹೇಳಿದೆ- “ಅದು ದೊಡ್ದ ವಿಷಯ ಅಲ್ಲ, ಹೈ ಬ್ಲಡ್ ಪ್ರೆಶ್ಶರ್ ಎನ್ನ ವಂಶಲ್ಲಿ ಸ್ವಾಭಾವಿಕ. ಎನ್ನ ಅಮ್ಮಂಗೂ ಇದ್ದು”, ನಿಂಗಳ ಒಳುದೆಲ್ಲಾ ಪರೀಕ್ಷೆಗಳಲ್ಲಿ ಆನು ಗೆದ್ದು ಬಯಿಂದೆ. ದಯಮಾಡಿ ಎನ್ನ  ಬಿ.ಪಿ ಗೆ ಆಯೆಕ್ಕಾದ ಮಾತ್ರೆಗಳ ಕೊಡಿ” ಹೇಳಿ ವಿನೀತನಾಗಿ ಕೇಳಿಗೊಂಡೆ.

“ ಓ! ಹಾಂಗಿದ್ದರೆ ಸರಿ!” ಹೇಳಿ ಎನಗೆ ಬೇಕಪ್ಪ ಔಷಧ, ಮಾತ್ರೆಗಳ ಚೀಟಿ ಬರದುಕೊಟ್ಟು,ಆ ಮೇಲೆ ನೆಗೆಮಾಡಿಗೊಂಡು “ ಎನ್ನ ಕುಟುಂಬಲ್ಲಿಯೂ ರಕ್ತದ ಒತ್ತಡ ಉಚ್ಚ ಮಟ್ಟಲ್ಲಿ ಇದ್ದು” ಹೇಳಿಕ್ಕಿ ಎನ್ನ ಬೀಳ್ಕೊಟ್ಟವು. ಎನ್ನೊಟ್ಟಿಂಗೆ ಇದ್ದ ಹತ್ತು ಜೆನ ಯಾತ್ರಿಕರ ಉಚ್ಚರಕ್ತ ಚಾಪದ ಕಾರಣಕ್ಕಾಗಿ ಪ್ರಯಾಣವ ನಿರಾಕರಿಸಿದವು. ಅವು ಕೊಟ್ಟ ಎಲ್ಲ ಪರೀಕ್ಷೆಗಳಲ್ಲಿ ಗೆದ್ದು ಬಂದೊರು 30 ಜನ ಪುರುಷರು 14 ಸ್ತ್ರೀಯರು. ಹತ್ತು ಜನರ ಅನುತ್ತೀರ್ಣಗೊಳಿಸಿಪ್ಪಾಗ ಆನು ಹೇಂಗೆ ಪಾಸಾದೆ?  ಸ್ವೀಕೃತಿ ಕೊಟ್ಟವು? ಆಶ್ಚರ್ಯ!

“ಭಗವಂತನ ಇಚ್ಛೆ ಇಪ್ಪಾಗ ನಿನ್ನ ತಡದು ನಿಲ್ಸುಲೆ ಆರಿಂಗೆಡಿಗು?” ಹೀಂಗೆ ಹೇಳಿದೊನು ಎಂಗಳ ತಂಡಲ್ಲಿ ಎಲ್ಲೊರಂದ ಹೆರಿಯೊನು, ಅರುವತ್ತಾರು ವರ್ಷ ದಾಂಟಿದ ’ಉತ್ತಮ್ ಚಂದ್ ಖಾರ್ದಿಯಾ’ ಎಂಗೊ ಎಲ್ಲೊರು ಅವನ ಪ್ರೀತಿಲಿ ’ಕಾಕಾ’ ಹೇಳಿ ದಿನಿಗೇಳುದು. ಅವ° ಒಬ್ಬ ಕೈಗಾರಿಕೋದ್ಯಮಿ. ಹಲವು ವರ್ಷ ಕೆಲಸ ಮಾಡಿ ಆ ಮೇಲೆ ನಿವೃತ್ತಿ ಆದೊನು. ಈ ಕೈಲಾಸ ಯಾತ್ರೆ ಅವಂಗೆ ಮೂರನೇ ಸರ್ತಿದು. ಈ ಪ್ರಯಾಸಕರವಾದ ಪ್ರವಾಸವ ಇನ್ನೂ ಎರಡು ಸರ್ತಿ ಮಾಡೆಕ್ಕು ಹೇಳಿ ಅವನ ಇಚ್ಛೆ.

2007 ಅಗೋಸ್ತು ಹನ್ನೆರಡರಂದು ಎಂಗಳ ಪ್ರವಾಸ ಪ್ರಾರಂಭ. ದಿಲ್ಲಿಂದ ಪರ್ವತಾರೋಹಣ ಸುರುಮಾಡುವ ಜಾಗೆ ದಾರ್ಶುಲ ಶಿಬಿರಕ್ಕೆ ಬಸ್ಸಿಲಿ ಕರಕ್ಕೊಂಡು ಹೋಗಿ ಮುಟ್ಸಿದವು. ’ಮಂಗಟಿ’ ಹೆಸರಿನ ಸಣ್ಣ ಹಳ್ಳಿ ಅದು. ಇನ್ನು ಎಂಗಳ ಟ್ರೆಕ್ಕಿಂಗ್ ಅರ್ಥಾತ್ ಆರೋಹಣ ಅಗೋಸ್ತು 14 ಕ್ಕೆ ಆರಂಭ ಆತು. ಹೆಮ್ಮಕ್ಕಳೂ ಶಕ್ತಿ ಕಡಮ್ಮೆಯೊರೂ ’ಪೋನಿ’ ಲಿ ಸವಾರಿ ಮಾಡಿಗೊಂಡು ಪ್ರಯಾಣ ಮುಂದುವರಿಸಿದವು (ಪೋನಿ ಹೇಳಿದರೆ ಸಣ್ಣ ಜಾತಿಯ ಕುದುರೆ). ಉತ್ತಮ್ ಚಂದ್ ಕಾಕನೂ ಒಳುದ ಎಂಗೊ ಎಲ್ಲೊರು ಕಾಲ್ನಡಿಗೆಲಿಯೇ ಪ್ರಯಾಣ ಮಾಡೆಕ್ಕು ಹೇಳಿ ನಿಶ್ಚಯ ಮಾಡಿತ್ತಿದ್ದೆಯೊ°. ಮುಂದಾಣ ಶಿಬಿರಕ್ಕೆ ಮುಟ್ಟೆಕ್ಕಾರೆ 40 ಕಿಲೋಮೀಟರ್ ಚಡವಿನ ದಾರಿ ಹತ್ತಿಗೊಂಡು ಹೋಯೆಕ್ಕು. ಈ ಮಂಗಟಿ ಹಳ್ಳಿಲಿಯೇ ಎನಗೆ ’ದೌಲತ್’ ಸಿಕ್ಕಿದ್ದು, ಸಾಮಾನು ಹೊತ್ತುಗೊಂಬಲೆ ಆಳಾಗಿ.

ಮುಂದಾಣ ದಾರಿ ಅತ್ಯಂತ ಭಯಾನಕ. ಕಾಳೀ ನದಿಯ ಕರೆ ಹೇಳಿದರೆ ಕರೆಲಿಯೇ ಹೋಯೆಕ್ಕು. ಕೆಸರು ತುಂಬಿದ ಹಿಮನೀರಿಲಿ ನಡೇಕಾಯಿದು. ಎನ್ನ ಹೊಸ ಬೂಟ್ಸು ಕೈಯ ಊರುಗೋಲು, ಯಾವದೂ ಎನ್ನ ಆಧರಿಸಿಗೊಂಡು ನಡವಲೆ ಪ್ರಯೋಜನಕ್ಕೆ ಬತ್ತಿಲ್ಲೆ ಬೀಳದ್ದ ಹಾಂಗೆ! ಆನು ಹಿಂದೆ ತಿರುಗಿ ನೋಡ್ತೆ, ದೌಲತ್ ಅವನ ಹರ್ಕಟೆ ಬೂಟಿಲಿ, ಊರುಲೆ ಕೋಲೂ ಇಲ್ಲದ್ದೆ, ಎನ್ನ ಭಾರೀ ತೂಕದ ಸಾಮಾನುಗಳ ಬೆನ್ನ ಹಿಂದೆ ಹೊತ್ತುಗೊಂಡು ಏನೂ ಕಷ್ಟ ಇಲ್ಲದ್ದೊನ ಹಾಂಗೆ ಪರ್ವತೀಯ ಏಡಿನ (ಆಡು) ಹಾಂಗೆ ನೆಗದು, ಹಾರಿ, ಕೊಣ್ಕೊಂಡು ನಡೆದು ಬತ್ತಾ ಇದ್ದ°!.

ದೌಲತ್ ಹೇಳ್ತ “ಹೀಂಗಿಪ್ಪ ಕಾರಣವೇ ಎಂಗಳ ಊಟಕ್ಕೆ ದಾರಿ ಆವುತ್ತು. ವರ್ಷಲ್ಲಿ ಕಡಮ್ಮೆ ಹೇಳಿದರೆ ಐದು ಸರ್ತಿ ಈ ದಾರಿಲಿ ಹೋಪಲಿರ್ತು. ಮಧ್ಯಾಹ್ನ 1.30 ಕ್ಕೆ ಎಂಗೊ ಎಲ್ಲೊರು ಮಾಲ್ಪಾ (MALPA) ಕ್ಕೆ ಬಂದು ಮುಟ್ಟಿದೆಯೊ°. ಮಾಲ್ಪಾ! ಈ ಜಾಗೆಲಿಯೇ 1998 ರ ದುರಂತ ನಡದ್ದು

“ಆನು ಆವಗ ಸಣ್ಣ ಹುಡುಗ” ಆ ದುರ್ಘಟನೆಲಿಯೇ ಎನ್ನ ಅಪ್ಪ ಸಜೀವ ಸಮಾಧಿ ಹೊಂದಿದ್ದು! (ದುಃಖ ಉಕ್ಕಿ ಬಂತು ಅವಂಗೆ). ಆಮೇಲೆ ಎನ್ನ ಅಬ್ಬೆ ಎಂಗಳ ಅತಿ ಕಷ್ಟಲ್ಲಿ ಬೆಳೆಶಿ ದೊಡ್ಡ ಮಾಡಿದ”

ಈ ಪರ್ವತಂಗೊ ಚಲಿಸುತ್ತವು! ಹೊಸ ಪರ್ವತಂಗೊಕ್ಕೆ ಜನ್ಮ ಕೊಡುತ್ತವು (ಪರ್ವತ ಪ್ರಸವ!?). ಅವಕ್ಕೆ ಅವರದ್ದೇ ಒಂದು ಅಲೋಚನೆ, ಮನಸ್ಸು ಇದ್ದೋ ಹೇಳಿ ಕಾಣ್ತೆನಗೆ. ಎಷ್ಟು ವಿಚಿತ್ರ ಅಲ್ಲದಾ? ಭೂಮಿ ಒಡದು ಬಾಯಿಬಿಟ್ಟು ಬಿರುದು, ಜೆರುದು ಜರುಗಿಕೊಂಡು ಆದ ಪರಿಣಾಮ ಎನ್ನ ಕಣ್ಣ ಮುಂದೆಯೇ ಇದ್ದು. ಪರ್ವತಂಗಳ ರಮಣೀಯತೆಯ ಒಳಾಣ ರೌದ್ರ ರೂಪ ಈ ಸಣ್ಣ ಪರ್ವತ!. ಅದರ ಅಡಿಲಿ 200 ಕ್ಕೂ ಹೆಚ್ಚು ಯಾತ್ರಿಕರ ಸಮಾಧಿ! ಅವರ ಅಗೆದು ತೆಗೆವೊರು ಆರು? ಈ ದುರ್ಗಮ ಮಾರ್ಗಲ್ಲಿ ಅರ್ತ್ ಮೂವರ್ ತಪ್ಪೋರಾರು? ಆ ನತದೃಷ್ಟರು ಅಲ್ಲಿಯೇ ಪರಿಸಮಾಪ್ತಿ! ಅವರ ಜರ್ಜರಿತ ಶರೀರವ ಕಂಡೊರಿಲ್ಲೆ… ಅಗಲಿಹೋದ ಆ ಪವಿತ್ರಾತ್ಮಂಗೊಕ್ಕೆ ಮೌನ ಶ್ರದ್ಧಾಂಜಲಿ ಅರ್ಪಿಸಿ ಮುಂದೆ ಹೆಜ್ಜೆ ಮಡುಗುತ್ತೆ. ಪರ್ವತಂಗಳ ಸೌಂದರ್ಯದ ರಮಣೀಯತೆಯ ಗುಂಜನದ ಮಧುರಗಾನ ವಿಷಾದರಾಗಲ್ಲಿ ಪರ್ಯವಸಾನ ಹೊಂದಿದ್ದೀಗ. ಜೀವಿಗಳ ನಶ್ವರತೆಯ ಸಾಕ್ಷಾತ್ಕಾರಲ್ಲಿ ಜತೆಯೋರಾರೊಬ್ಬನೂ ಮಾತಾಡ್ತವಿಲ್ಲೆ. ಬರೀ ಮೌನ. ನಿಶ್ಶಬ್ದವಾಗಿ ನಿಂದುಗೊಂಡ ಪರ್ವತಮಾಲಗೊ ಎದೆಯ ಒಳಂಗೆ ಕಾದ ಸೀಸವ ಎರೆತ್ತಾ ಇದ್ದವು. ಗಂಟೆಗಳ ಕಾಲ ಏರುದಾರಿ ಹತ್ತುತ್ತಾ ಇದ್ದೆಯೊ°. ಇದೀಗ 2740 ಮೀಟರ್ ಎತ್ತರಲ್ಲಿ ಬುಧಿ ಶಿಬಿರಕ್ಕೆ ಬಂದು ಮುಟ್ಟಿದೆಯೊ°. ಇಲ್ಲಿಯಾಣ ತಾಪಮಾನ 6°C. ಒಂದಿಷ್ಟೂ ದಯೆ ಇಲ್ಲದ್ದೆ ಹಿಮಕಣಭರಿತ ಕ್ರೂರ ಬಿರುಗಾಳಿ ಡೇರೆಯ ಒಳಾಂಗೂ ನುಗ್ಗಿ ಚಕ್ರಾಕಾರಲ್ಲಿ ಸುರುಳಿ ಸುತ್ತುತ್ತಾ ಇದ್ದು. ಎನ್ನ ಶರೀರದ ಒಂದೊಂದು ಎಲುಬಿಂಗೂ ಸಾವಿರ ಸಾವಿರ ಆಣಿ ಬಡುದು ಜೆಡುದ ಹಾಂಗೆ ಸೆಳಿತ್ತಾ ಇದ್ದು! ನರಳ್ತಾ ಇದ್ದು. ನಾಳಂಗೆ ಎಂಥ ದುರ್ವಿಧಿ ಕಾದು ಕೂಯಿದೋ! ಯೋಚನೆ! ಯೋಚನೆ! ಯೋಚನೆ!. ಒರಕ್ಕು ಎನ್ನ ಹತ್ತರಂಗೆ ಕೂಡಾ ಸುಳಿತ್ತಿಲ್ಲೆ. ಮನಸ್ಸಿನ ಬೇನೆ, ಶರೀರದ ಬೇನೆ! ನಿರ್ಲಿಪ್ತನಾಗಿ ಒರಗುದು ಅಷ್ಟು ಸುಲಭದ್ದಲ್ಲ.

ಅಗೋಸ್ತು 15

5:30  ರ ಉಷಃಕಾಲ. ಎಂಗಳ ಪ್ರಯಾಣ ಮುಂದುವರಿತ್ತು. ಮುಂದಾಣದ್ದು 18 ಕಿಲೋ ಮೀಟರ್ 60° ಯ ಏರಾಟ. ಇಂಥ ದಾರಿಲಿ ಉಸಿರು ಬಿಗಿ ಹಿಡುದು ನಾಲ್ಕು ಗಂಟೆ ಹತ್ತಿದ್ದೆ! ರಜವೂ ನಿಲ್ಸದ್ದೆ! ಅಲ್ಲಿಂದ ಮುಂದೆ ವಿಶಾಲ ಸಮತಲ ಮೈದಾನು. ಅಬ್ಬಬ್ಬಾ ಹೇಳಿ ಎಲ್ಲೋರು ಸಲೀಸಾಗಿ ನಡವಲೆ ಸುರುಮಾಡಿದೆಯೊ°. ಮುಂದೆ ಸಿಕ್ಕುದು ಇಳಿಜಾರು (ಕುತ್ತಕಂಡೆ?). ಜಾಗ್ರತೆಲಿ ಇಳಿಯೆಕ್ಕು. ಕೆಳ ಇಳುದಪ್ಪಗ ಸಿಕ್ಕುವ ಕಣಿವೆ ಪ್ರದೇಶಕ್ಕೆ ’ಛಿಯಾಲೇಖ’ ಹೆಸರು. ಇದು ಈ ಪರ್ವತ ಪ್ರಾಂತಲ್ಲೇ ಅತಿ ಆಕರ್ಷಕ. ಸೃಷ್ಟಿಕರ್ತ ಬ್ರಹ್ಮನ ಸೌಂದರ್ಯಪ್ರಜ್ಞೆಯ ಲೀಲಾವಿನೋದವೋ ಅಥವಾ ಅವನ ಮನೋಲ್ಲಾಸವೋ? ಹೇಂಗೆ ವರ್ಣಿಸಲಿ? ಮನುಷ್ಯರಾಗಿ ಹುಟ್ಟಿದೊರೆಲ್ಲಾ ನೋಡ್ಳೇ ಬೇಕಾದ ರಮಣೀಯ ಪ್ರದೇಶ. ಈ ಇಡೀ ಯಾತ್ರೆಲಿ ಇದರ ಹಾಂಗಿಪ್ಪ ಸೌಂದರ್ಯರಾಶಿಯ ಕಂಡಿದಿಲ್ಲೆ. ಎಂಥ ದೃಶ್ಯಾವಳಿ! ಅದ್ಭುತ ರಮ್ಯ ತಾಣ! ಇದರ ಬಿಟ್ಟಿಕ್ಕಿ ಮುಂದೆ ಹೋಪಲೇ ಕಾಲು ಬಾರ ಆರಿಂಗುದೇ. ಎಲ್ಲಿ ನೋಡಿದರೂ ಘಮ ಘಮಿಸುವ ರಾಶಿ ರಾಶಿ ಹೂಗುಗಳ ಹೊತ್ತುಗೊಂಡ ಮರಂಗೊ, ಪುದೆಲುಗೊ, ಹುಲ್ಲು ಹಾಸುಗೊ, ಎಲ್ಲೆಲ್ಲೂ ಹೂಗೇ ಹೂಗು. ಯಾವ ಹೊಡೆಂಗೆ ನೋಡಿದರೂ ಹೂಗು. ದ್ರೌಪದಿಮಾಲೆಯ ಹಾಂಗಿಪ್ಪ ಹೂಗೊಂಚಲುಗೊ, ಹೂ ಮಾಲೆಗೊ, ಹೂ ಬಳ್ಳಿಗೊ ತೊನೆದಾಡಿಗೊಂಡಿದ್ದವು. ಎಷ್ಟು ಬಣ್ಣ? ಎಂಥ ಸುಗಂಧ! ಬೆಳಿ ನಾಗಸಂಪಗೆ, ಗುಲಾಬಿ ಬಣ್ಣದ ವಸಂತ ಪುಷ್ಪಂಗೊ, ಇಂದ್ರ ಧನುಸ್ಸಿನ ಹಾಂಗೆ ಹಲವಾರು ಬಣ್ಣದ ಐರಿಸ್ ಹೂಗುಗೊ! ಅಲ್ಲಲ್ಲಿ ದೊಡ್ಡ, ಸಣ್ಣ ಕೆರೆ, ಸರೋವರಂಗಳಲ್ಲಿ ಅರಳಿ ನಿಂದುಗೊಂಡಿಪ್ಪ ಮೃದು ಸುವಾಸನೆ ಬೀರುವ ಕಸ್ತೂರಿ ಕೆಂದಾವರೆಗೊ. ಇಡೀ ಭೂತಲವೆಲ್ಲ ಕೆಂಪು ನೀಲಿ ನೇರಳೆ ಅರಿಶಿನ ಗುಲಾಬಿ ಬೆಳಿ ಹೂಗುಗಳ ಶೃಂಗಾರಲ್ಲಿ ಮೆರೆವ ಸೌಂದರ್ಯ ಸಾಮ್ರಾಜ್ಯವೇ ಅಲ್ಲಿ ವಿರಾಜಿಸುತ್ತಾ ಇದ್ದು. ಪರಿಮಳ ಗಾಳಿಯ ಬೀಸುವ ದೇವದಾರು, ಸೂಚೀಪರ್ಣಿ ಮರಂಗೊ, ಅವುಗಳ ಬುಡಲ್ಲಿ ಫರ್, ಕರ್ಣಕುಂಡಲ ಗೆಡುಗೊ ಎಂಗೊ ನಡಕ್ಕೊಂಡು ಹೋಪ ದಾರಿಯ ಎರಡೂ ಹೊಡೆಲಿ ಸಮೃದ್ಧವಾಗಿ ಬೆಳಕೊಂಡಿದ್ದವು. ಪ್ರಕೃತಿದೇವಿ ಇಲ್ಲಿ ಆನಂದಲ್ಲಿ ನರ್ತನ ಮಾಡ್ತಾ ಇಪ್ಪ ಹಾಂಗೆ ಕಾಣ್ತು. ಇದುವೇ ಇಂದ್ರನ ನಂದನವನವೋ? ಈ ಭೂಸ್ವರ್ಗವ ಯಾತ್ರಿಕರೆಲ್ಲೊರು ಕಣ್ಣು ಬಾಯಿ ಬಿಟ್ಟುಗೊಂಡು ನೋಡ್ತಾ ಇದ್ದವು ಮಂತ್ರಮುಗ್ಧರಾಗಿ. ಇಷ್ಟರವರೆಗೆ ಎಲ್ಲಿಯೂ ನೋಡದ್ದ, ಕೆಮಿಲಿಯೂ ಕೇಳದ್ದ ಮಾಯಾಲೋಕವೊಂದು ಎಂಗಳ ಕಣ್ಮುಂದೆ ಪ್ರತ್ಯಕ್ಷ ಆಯಿದು!

ಎಂಗಳ ತಂಡಲ್ಲಿ ಎಲ್ಲೊರಿಂದ ಸಣ್ಣೊನು 23 ವರ್ಷದ ತರುಣ  ಜೈ ಪಠೇಲ್. ಈ ಎಲ್ಲಾ ಚೆಂದವ ತನ್ನ ಕೆಮರಾದೊಳ ಹಿಡುದು ಮಡುಗಿ ಮನೆಗೆ ತೆಕ್ಕೊಂಡು ಹೋಯೆಕ್ಕು ಹೇಳಿ ಕೆಮರವ ಕ್ಲಿಕ್ಕಿಸಿಗೊಂಡೇ ಇದ್ದ°. ಯಾತ್ರಿಕರಿಂಗೆ ಒಬ್ಬಂಗೂ ಅಲ್ಲಿಂದ ಹೆರಡುವ ಅಲೋಚನೆ ಇಲ್ಲೆ. “ ಇಂಥ ಲೋಕವ ಎಲ್ಲಿಯೂ ಕಂಡಿದಿಲ್ಲೆ ಆನು!” ಪಠೇಲ್ ಎದೆ ಉಬ್ಬಿಸಿ ಹೆಮ್ಮೆಲಿ ಹೇಳ್ತ.

ಸಂಜೆ ನಾಲ್ಕು ಗಂಟೆಗೆ ಗುಂಜೀ ಶಿಬಿರಕ್ಕೆ ಮುಟ್ಟಿದೆಯೊ°. ಇಲ್ಲಿಯಾಣ ಶೀತ ಹವೆ ಉಸಿರುಕಟ್ಟುಸುವ ವಿರಳ ಗಾಳಿಗೆ ನಮ್ಮ ನಾವು ಹೊಂದಿಸಿಗೊಳ್ಳೆಕ್ಕಷ್ಟೆ. ಎತ್ತರಕ್ಕೆ ಹೋದ ಹಾಂಗೆ ಗಾಳಿ ಆಮ್ಲಜನಕವೂ ಕಮ್ಮಿ ಆವುತ್ತು. ಇದೀಗ 3500 ಮೀಟರ್ ಎತ್ತರಲ್ಲಿದ್ದು. ನಮ್ಮ ಶ್ವಾಸಾಂಗ ಇಂಥ ಗಾಳಿಗೆ ಹೊಂದಿಗೊಳ್ಳೆಕ್ಕಾರೆ ರಜ ಸಮಯ ಬೇಕಾವುತ್ತು. ಹಾಂಗಾಗಿ ತಾರೀಕು 16 ರಂದ 21 ರ ವರೆಗೆ ಇಲ್ಲಿಯೇ ಎಂಗಳ ವಾಸ್ತವ್ಯ. ಇನ್ನೀಗ ಅಷ್ಟು ದಿನ  ಮಾಡ್ಲೆ ಕೆಲಸ ಎಂತದೂ ಇಲ್ಲೆ. ಹಾಂಗಾರೆ ಎಂಗಳ ತಂಡದೊರೆಲ್ಲರ ಪರಿಚಯ ಮಾಡಿಗೊಂಬಲಕ್ಕಲ್ಲದಾ? ಪರಸ್ಪರ ವಿಚಾರ ವಿನಿಮಯ ಸ್ನೇಹ ಸಲುಗೆ, ಯೋಗಕ್ಷೇಮ ಸುಖದುಃಖಂಗಳ ತಿಳ್ಕೊಂಬ ಸದವಕಾಶ! ಎಲ್ಲೊರುದೇ ಕಷ್ಟವ ಸಹಿಸಿಗೊಂಡು ಅತಿ ಪ್ರಯಾಸಪಟ್ಟುಗೊಂಡು ಬಂದೋರೇ. ಆದರೆ ಮುಂದಾಣ ಪ್ರಯಾಣಕ್ಕೆ ಸನ್ನದ್ಧರಾಗಿಯೇ ಇದ್ದವು. ಆರಿಂಗೂ ನಿರಾಶೆ, ಆಶಾಭಂಗ ಯಾವುದೇ ಬೇಸರ ಇಲ್ಲೆ. ಹೀಂಗೆ ಉತ್ಸಾಹಲ್ಲಿ ದೃಢ ಸಂಕಲ್ಪಲ್ಲಿ ಇಪ್ಪದರ ನೋಡಿ ಎನಗೆ ಆಶ್ಚರ್ಯ. ಅವರ ಶ್ರಧ್ಧೆಭಕ್ತಿಗಳ ಕಂಡು ಬೆರಗಾದೆ

ಗುಂಜೀ, ಭಾರತದ ಗಡಿಪ್ರದೇಶದ ಶಿಬಿರ. ಇಲ್ಲಿಯಾಣ ಕಾವಲು ಪೋಲೀಸರ ಕಡೆಂದ ಡಾಕ್ಟರ ಬಂದು ಎಂಗಳೆಲ್ಲೋರ ಆರೋಗ್ಯತಪಾಸಣೆಯೂ ನಡದತ್ತು. ಆವಗ ಗೊಂತಾದ್ದು-ಎಲ್ಲರ ರಕ್ತದೊತ್ತಡ ಏರುಮುಖವಾಗಿತ್ತು. ಎನಗೆ ಇನ್ನೂ ಹೆಚ್ಚಿನ ಶಕ್ತಿಯ ಮಾತ್ರೆಗಳ ಕೊಟ್ಟವು.

ಎಂಗಳ ಮಾರ್ಗನಿರ್ದೇಶಕ ಹೇಳಿದ, ಮುಂದಾಣ ಪ್ರಯಾಣಂಗಳಲ್ಲಿ ಇನ್ನೂ ಕೆಲವು ಪರ್ವತಂಗಳ ಹತ್ತಲಿದ್ದು. ತಾಕಲ್ ಕೋಟ್ ಶಿಬಿರಕ್ಕೆ ಮುಟ್ಟುಲೆ ಮೂರುದಿನ ಬೇಕಾವುತ್ತು. ಇರುಳು ವಿಶ್ರಾಂತಿ ಪಡವಲೆ ಮೂರು ಶಿಬಿರಂಗಳೂ ಇದ್ದು

ಅಂತೂ ತಾಕಲ್ ಕೋಟಿಂಗೆ ಬಂದು ಮುಟ್ಟಿದೆಯೊ°. ಇದೀಗ ಟಿಬೆಟಿನ ಒಳಂಗೆ ಬಂದ ಹಾಂಗೆ ಆತು. ಇನ್ನು ಸಾಗುವ ದಾರಿ ಪೌರಾಣಿಕ ಮತ್ತು ಐತಿಹಾಸಿಕ ಪ್ರತಿಧ್ವನಿಗಳ ಆಗರ. ಎಂಗಳ ಮಾರ್ಗದ ಎಡದ ಹೊಡೆಲಿ ಮುನ್ನೂರು ಮೀಟರ್ ಎತ್ತರಲ್ಲಿ ವ್ಯಾಸಗುಹೆ ಇದ್ದು. “ ಮಹಾಭಾರತದ ಕರ್ತೃ ವೇದವ್ಯಾಸ ಮಹರ್ಷಿ ತಪಸ್ಸು ಮಾಡಿಗೊಂಡಿದ್ದ ಗುಹೆ ಹೇಳಿ  ಆ ಊರ ಜನ ನಂಬುತ್ತವು” ಹೀಂಗೆ ಎಂಗಳ ಮಾರ್ಗ ನಿರ್ದೇಶಕ ಹೇಳಿದ. “ಯಾತ್ರಿಕರಿಂಗೆ ಹಾಂಗಾಗಿ ಇದು ಪವಿತ್ರ ತಾಣ. ತಾಕಲ್ ಕೋಟೆ ಸಮುದ್ರ ಮಟ್ಟಂದ 4000 ಮೀಟರ್ ಎತ್ತರಲ್ಲಿದ್ದು. ಇದು ಒಂದು ಸಣ್ಣ ವ್ಯಾಪಾರ ಕೇಂದ್ರ. ಆಮ್ಲಜನಕದ ವಿರಳತೆ, ಜತೆಲಿ ಅತಿ ಶೀತ ಹವೆ. ಎನ್ನ ಉಸಿರಾಟ ಎನಗೇ ಕೇಳುವ ಹಾಂಗೆ ಗುಂಯಿಗುಡುತ್ತಾ ಇದ್ದು.ಎದೆಯ ಶ್ವಾಸಾಂಗ ಗಾಳಿ ಸಾಲದ್ದೆ ತಿದಿಯೊತ್ತಿದ ಹಾಂಗೆ ಒತ್ತಿ ಒತ್ತಿ ತೀವ್ರವಾದ ಬೇನೆ ಆವ್ತಾ ಇದ್ದು. ಹಿಂದೆಂದೂ ಕಾಣದ್ದ ಬೇನೆ! ಎಲ್ಲೊರ ಸ್ಥಿತಿಯೂ ಹೀಂಗೇ. ಹಾಂಗಿದ್ದರೂ ಎಲ್ಲೊರ ಮನಸ್ಸಿಲಿ “ ಓಂ ಪರ್ವತವ ಯಾವಾಗ ನೋಡುವೆಯೊ°? ಯಾವಾಗ ಪರ್ವತದ ಬುಡಕ್ಕೆ ಹೋಗಿ ನಿಂಬೆಯೊ°? ಇದೇ ಹಂಬಲ ತೀವ್ರ ಆವ್ತಾ ಇದ್ದು. ಏವ್ರ ಉಕ್ಕಿ ಹರಿತ್ತಾ ಇದ್ದು. ಈ ಭಾವೋತ್ಕಟತೆ ಶರೀರದ ಎಲ್ಲ ಕಷ್ಟಂಗಳ ಮರೆಸುತ್ತಾ ಇದ್ದು.


ಓಂ
ಪರ್ವತ ಹೇಳಿದರೆ ನೆತ್ತಿಲಿ ಹಿಮಪಾತವೇ ನಿರ್ಮಾಣ ಮಾಡಿದ ಮಹಾ ಓಂ ಅಕ್ಷರ. ಪ್ರಕೃತಿಮಾತೆಯೇ ಬರದ ಓಂಕಾರ ಚಮತ್ಕಾರ! ಆ ಮಹಾ ಹಿಮಚಿತ್ರಕಾರನ ಮಹಿಮಾಚಾತುರ್ಯವ ನೋಡುವ ಪುಣ್ಯ ಎಂಗೊಗೆ ಸಿಕ್ಕದ್ದೆ ಹೋದ್ದು ತುಂಬಾ ನಿರಾಶೆ ಉಂಟುಮಾಡಿತ್ತು. ಪರ್ವತಾಗ್ರವ ಪೂರ್ತಿ ಕರಿಮುಗಿಲು ಮುಚ್ಚಿ ಮರೆ ಮಾಡಿದ್ದು!. ಹಾ! ಎಂಗಳ ಅದೃಷ್ಟವೇ! ಎಲ್ಲೊರ ನಿರಾಶೆ  ನೋಡಿ ಮಾರ್ಗದರ್ಶಕ “ ವಾಪಾಸು ಬಪ್ಪಗ ನೋಡುಲೆ ಸಿಕ್ಕುಗು” ಹೇಳಿ ಎಲ್ಲೊರಿಂಗು ಹೊಸ ಆಶೆ ಉಂಟುಮಾಡಿದ°

ಎಂಗಳ ಆರೋಹಣದ ಅತಿ ಎತ್ತರದ ಪ್ರದೇಶ ಲಿಪುಲೇಖ. ಭಾರತದ ಅಖೇರಿಯಾಣ ಪರಿಮಿತಿ. ಇಲ್ಲಿಂದ ಚೀನಾ ಆಕ್ರಮಿಸಿಗೊಂಡ ಟಿಬೆಟ್ ಪ್ರಾರಂಭ ಆವುತ್ತು. (ಭುವನ ಮೋಹಿನಿ, ಭಾರತ ಮಾತೆ ಹೀಂಗೆ ಛಿನ್ನಭಿನ್ನ ಆಗಿ ಹೋದ್ದರ ನೋಡುವಾಗ ಎದೆಯ ಒಳ ಕಿಚ್ಚೆದ್ದತ್ತು!)

ಗಡಿರೇಖೆ ದಾಂಟಿದರೆ ಮುಂದಾಣದ್ದು  ಟಿಬೆಟಿನ ವಿಶಾಲ ಪ್ರಸ್ಥ ಭೂಮಿ. ಒಂದೇ ಒಂದು ಮರವಾಗಲೀ ಸೆಸಿಯಾಗಲೀ ಕಡೇಪಕ್ಷ ಹುಲ್ಲಾಗಲೀ ಇದ್ದಾ? ಬರೀ ಬೆಳಿ ಬೆಳಿ ಹಿಮಹಾಸು. ಕಣ್ಣಿಂಗೆ ನಾಲ್ಕೂ ಹೊಡೆಂದ ದಿಗಂತದ ವರೆಗೂ ಕಾಂಬದು ಬೆಳಿ ಹಿಮ ಮಾಂತ್ರ. ನಡುಹಗಲಿಲಿ ಮೋಡಮುಚ್ಚಿದ ಆಕಾಶದೆಡೆಂದ ಇಣ್ಕುವ ’ಬಾವು’ಬೆಣ್ಚಿಲಿ ಚಂದ್ರನೇ ಇಲ್ಲಿಗೆ ಬಂದು ಮೆಯ್ ಒಡ್ಡಿ ಮನಿಕ್ಕೊಂಡ ಹಾಂಗೆ ಕಾಣ್ತು! ಹಾಂಗೆ ತಂಪಾಗಿ ಹೊಳೆತ್ತಾ ಇದ್ದು ಈ ತ್ರಿವಿಷ್ಟಪ ಪೃಷ್ಥ ಭೂಮಿ

 

ಅಗೋಸ್ತು 22

ಭಾರತದ ಗಡಿದಾಂಟಿ ದೇಶಾಂತರ ಹೇಳಿದರೆ ಟಿಬೆಟ್ಟಿಂಗೆ ಹೋಯೆಕ್ಕಾರೆ ಇಮಿಗ್ರೇಶನ್ ಸರ್ಟಿಫಿಕೇಟು-ರಹದಾರಿಯ ಪ್ರಮಾಣಪತ್ರ ಬೇಕಾವುತ್ತು. ಎಂಗಳೆಲ್ಲೊರ ಸರ್ಟಿಫಿಕೇಟ್ ಸಿಕ್ಕೆಕ್ಕಾರೆ ಎರಡು ದಿನ ಕಾಯೆಕ್ಕಾವುತ್ತು. ಹಾಂಗಾಗಿ ತಾಕಲ್ ಕೋಟ್ ಲಿ ಎರಡು ದಿನ ಕಾಲ ಕಳೆಯೆಕ್ಕು. ಪ್ರವೇಶ ಪತ್ರ ಸಿಕ್ಕಿದ ಮೇಲೆ ಮುಂದಾಣ ಪ್ರಯಾಣಲ್ಲಿ ದೌಲತ್ ಎಂಗಳೊಟ್ಟಿಂಗೆ ಬಪ್ಪಲಾವುತ್ತಿಲ್ಲೆ. ಟಿಬೇಟಿನೋರೇ ಆಯೆಕ್ಕಾವುತ್ತು. ಹೊಸ ಪೋರ್ಟರ್ ಕೂಲಿ ಹೆಸರು ಸೋನಂ. ಕೃಶಕಾಯದ ತರುಣ, ಆದರೆ ತುಂಬಾ ಸ್ನೇಹಪರ. ಮುಂದಾಣ ದಾರಿಲಿ ನಡಕ್ಕೊಂಡು ಹೋಯೆಕ್ಕಾಗಿಲ್ಲೆ. ಬಸ್ಸಿನ ವ್ಯವಸ್ಥೆ ಇದ್ದು. ಆದರೆ ಆ ಬಸ್ಸೋ! ಅಬ್ಬಬ್ಬಾ ಎಂಗಳ ಮೆಯ್ಯ ಎಲುಬುಗೊ ಎಲ್ಲಾ ಸಂದು ಕಡಿದು ಬೀಳುವ ಹಾಂಗಿಪ್ಪ ಲಟಲಟ ಲಟಾರಿ ಬಸ್ಸು. ಅದರಲ್ಲಿ 140 ಕಿಲೋಮೀಟರ್ ಕ್ರಮಿಸೆಕ್ಕು. ಈ ದಾರಿಲಿ ರಾಕ್ಷಸತಾಲ ಉಪ್ಪು ನೀರಿನ ಸರೋವರ ಸಿಕ್ಕುತ್ತು. ಇದರ ಕರೆಲಿ ಕೂದುಗೊಂಡು ರಾವಣ ಶಿವನ ಅನುಗ್ರಹ ಪಡವಲೆ ತಪಸ್ಸು ಮಾಡಿದ್ದ ಹೇಳ್ತವು. ಹಾಂಗಾಗಿ ಇದು ರಾಕ್ಷಸ ಸರೋವರ. ಈ ಇಪ್ಪತ್ತೊಂದನೆ ಶತಮಾನಲ್ಲಿವುದೇ ಸಾವಿರಾರು ಜನ ಎಷ್ಟೆಷ್ಟೋ ಕಷ್ಟಪಟ್ಟು ಇಲ್ಲಿಗೆ ಬತ್ತವು. ಶಿವನ ಅನುಗ್ರಹ ಪಡವಲೆಯೇ ಅಲ್ಲದಾ? ಉದ್ದೇಶ ಒಂದೇ

ಅಗೋಸ್ತು 23

ಅಲ್ಲಿಂದ ಮುಂದೆ ಪುನಃ ಕಾಲ್ನಡಿಗೆ. ಉದಯಂದ ಕಸ್ತಲೆವರೇಗೆ ಹತ್ತುತ್ತಾ ಹೋದೆಯೊ° ಮೋಡ ಮುಚ್ಚಿದ ನಸುಕು ಬೆಣ್ಚಿ. ಸೂರ್ಯ ಇಡೀ ಹಗಲು ಕಣ್ಣಿಂಗೆ ಕಂಡಿದನೇ ಇಲ್ಲೆ. ಚಳಿ ಇನ್ನೂ ಹೆಚ್ಚುತ್ತಾ ಇದ್ದು. ಎನ್ನ ಕಾಲು, ಕೈ ಮರಕಟ್ಟಿ ಸ್ಪರ್ಶಜ್ಞಾನವೇ ಇಲ್ಲೆ. ’ಡೇರಾಪುಕ್’ ಶಿಬಿರಕ್ಕೆ ಹೆಂಗೆ ಬಂದು ಸೇರಿದೆನೋ ಗೊಂತಿಲ್ಲೆ. ಹಿಮ ಹನಿಗಾಳಿಯ ಚಳಿಗೆ ಆ  ಹಳೆಯ ಶಿಬಿರದೊಳ ಸೇರಿಗೊಂಡೆ ವಿಶ್ರಾಂತಿಗೆ. ಅಷ್ಟಪ್ಪಗ ಡೇರೆಯ ಹೆರ ಜೆನರ ಗೌಜಿ ಗದ್ದಲ ಕೇಳಿ ಹೆರ ಬಂದು ನೋಡ್ತೆ! ಮುಳುಗುವ ಸೂರ್ಯನ ಚಿನ್ನದ ಬಣ್ಣದ ಪ್ರಕಾಶ! ಮೋಡ ಕರಗಿ ಹೋಯಿದು! ಯಾತ್ರಿಕರೆಲ್ಲಾ ಉತ್ಸಾಹಲ್ಲಿ ಆಹಾ ಆಹಾ ಹೇಳಿಗೊಂಡು ಕೇಕೆ ಹಾಕುತ್ತಾ ಇದ್ದವು. ಅಂತೂ ಎಂಗೊ ಗುರಿಮುಟ್ಟಿದೆಯೊ°. ಕೈಲಾಸ ಪರ್ವತ ಇಡೀ ಚಿನ್ನದ ಬಣ್ಣಲ್ಲಿ ಝಗ ಝಗಿಸುತ್ತ ಇದ್ದು ಕಣ್ಣ ಮುಂದೆ. ಆ ದಿವ್ಯದರ್ಶನಲ್ಲಿ ಎಲ್ಲೊರು ಮೆಯ್ ಮರದ್ದವು. ಎಂಥ ಅದ್ಭುತ ದೃಶ್ಯ! ಶಿವನ ಬೃಹದಾಕಾರದ ಮಹಾ ಮೂರ್ತಸ್ವರೂಪ ಕಣ್ಣು ಕೋರೈಸುತ್ತಾ ಇದ್ದು. ಶಬ್ದಂಗೊಕ್ಕೆ ಸಿಕ್ಕದ್ದ ವರ್ಣಿಸಲೆ ಸಾಧ್ಯ ಇಲ್ಲದ್ದ  ಮಹಾ ಪರಂಜ್ಯೋತಿಯೇ ಘನೀಭವಿಸಿ ನಿಂದಿದು!

ಎನ್ನ ಮನಸ್ಸಿನ ಅಂತರಂಗದ ಆಳಲ್ಲಿ ಏನೋ ಒಂದು ಜಾಗೃತಿ, ಒಂದು ಪರಿವರ್ತನೆ, ಶಿವ ಸನ್ನಿಧಿಯ ಎದುರು ಆತ್ಮ ಚೈತನ್ಯದ ಅರಿವು, ಒಂದು ಹಾರ್ದಿಕ ಸಂಬಂಧ ಏರ್ಪಟ್ಟ ಅನುಭವ. ವಿವರ್ಸಲೆ ಎಡಿಯದ್ದ ಆನಂದ ಉಂಟಾವ್ತಾ ಇದ್ದು!.

“ ಸರ್, ನಿಂಗೊ ತುಂಬಾ ಅದೃಷ್ಟಶಾಲಿಗೊ. ಇಷ್ಟು ಸ್ಪಷ್ಟವಾಗಿ ಕೈಲಾಸ ದರ್ಶನ ಸಿಕ್ಕುದು ಭಾರೀ ದುರ್ಲಭ. ಎಷ್ಟೋ ಜನ ಇಲ್ಲಿವರೆಗೆ ಕಷ್ಟಪಟ್ಟುಗೊಂಡು ಬಂದು ಕೈಲಾಸ ಪರ್ವತ ಕಾಂಬಲೆ ಸಿಕ್ಕದ್ದೆ ಬರೀ ಮೋಡಂಗಳ ನೋಡಿಕ್ಕಿ ನಿರಾಶರಾಗಿ ಮನೆಗೆ ಹಿಂದಿರುಗಿ ಹೋಯಿದವು. ಈ ಅಗೋಸ್ತು ತಿಂಗಳು ಸದಾ ಮೋಡ ಮುಚ್ಚಿಗೊಂಡಿರ್ತು. ನಿಂಗೊ ಮಹಾಭಾಗ್ಯಶಾಲಿಗೊ” ಸೋನಮ್ ಹೇಳಿದ

ಕೈಲಾಸ ಪರ್ವತಂದ ಎಂಗಳ ದೃಷ್ಟಿ ರಜ ಕೂಡಾ ಹಂದುತ್ತಿಲ್ಲೆ. ಎಂಗೊ ಎಲ್ಲೊರು ಬಿಟ್ಟ ಕಣ್ಣಿಲ್ಲಿ ನೆಟ್ಟ ನೋಟಲ್ಲಿ ನೋಡಿದೆಯೊ°,ನೋಡಿದೆಯೊ°, ನೋಡಿಗೊಂಡೇ ನಿಂದೆಯೊ°. ಪುನಃ ಮೋಡ ಆವರಿಸಿ ಮುಚ್ಚುವ ವರೆಗೆ- ಕೈಲಾಸ ಕಾಣದ್ದೆ ಹೋಪ ವರೆಗೆ. ಎಲ್ಲೊರ ಮೆಯಿಲಿ ವಿದ್ಯುತ್ ಸಂಚಾರ! ಎಲ್ಲೊರ ಬಾಯಿಂದ ಓಂ ನಮಃ ಶಿವಾಯ! ಓಂ ನಮಃ ಶಿವಾಯ! ಮಂತ್ರ ಘೋಷ ಹೆರ ಬೀಳ್ತಾ ಇದ್ದು! ಭಾರತದ ಅತಿ ಪುರಾತನವಾದ ಈ ಓಂ ನಮಃ ಶಿವಾಯ ವಾಯು ಮಂಡಲಲ್ಲಿ ಝೇಂಕಾರ ಓಂಕಾರ ಮಾಡ್ತಾ ಇದ್ದು, ಕೈಲಾಸ ಪರ್ವತಂದ ಪ್ರತಿಧ್ವನಿ ಕೇಳ್ತಾ ಇದ್ದು!. ಆ ದಿವ್ಯ ಮಂತ್ರಾಕ್ಷರಂಗಳ ಕೇಳ್ತಾ ಇದ್ದ ಹಾಂಗೆ ಅತ್ಯಾಶ್ಚರ್ಯಕರವಾಗಿ ಎನ್ನ ಮರಕಟ್ಟಿದ ಅಂಗೋಪಾಂಗಂಗಳ  ಸೆಳಿತ ಬೇನೆ ಯಾವದೂ ಇಲ್ಲೆ. ಎಲ್ಲವೂ ಮಾಯ. ಎನ್ನ ಅಂತರಂಗದ ನಾಸ್ತಿಕತೆಯ ತಡೆಗೋಡೆ ಜೆರುದುಬಿದ್ದತ್ತು. ಆಶ್ಚರ್ಯಕರವಾದ ಒಂದು ಬದಲಾವಣೆ ಒಂದು ಎಚ್ಚರಿಕೆ ಮಿಂಚು ಹೊಡದ ಹಾಂಗೆ ಒಂದು ಪ್ರಕಾಶ! ಒಂದು ಸಂತೋಷ. ಹೇಂಗೆ ವರ್ಣಿಸಲಿ? ಉಂಗುಷ್ಠಂದ ನೆತ್ತಿಯ ವರೆಗೂ ಎಂಥ ಪುಳಕ! ಎಂಥ ಉಲ್ಲಾಸ! ರೋಮಾಂಚನ!

ಆ ಇರುಳು ಆನು ಸಣ್ಣ ಶಿಶುವಿನ ಹಾಂಗೆ ಒರಗಿದೆ!

ಮರುದಿನ ಸೂರ್ಯ ಮೂಡಿಗೊಂಡು ಬಪ್ಪಾಗ ಎಂಗಳ  ಅಹೋಭಾಗ್ಯವೇ ಉದಯ ಆದ ಹಾಂಗಾತು. ಆಕಾಶ ಪೂರ್ತಿ ನಿರ್ಮಲವಾಗಿತ್ತು. ಬಾಲಸೂರ್ಯನ ಪ್ರಥಮ ಹೊಂಗಿರಣ ಕೈಲಾಸ ಪರ್ವತದ ಮೇಲೆ ಮತ್ತೊಂದರಿ ಸ್ವರ್ಣಕಾಂತಿಯ ಪಸರಿಸಿತ್ತು. ಈ ಸಂಘಟನೆ ಕೆಲವೇ ನಿಮಿಷ. ಮತ್ತೆ ಸೂರ್ಯ ಮೇಲೇರಿಗೊಂಡು ಬಂದ ಹಾಂಗೇ ಸ್ವರ್ಣ ಸಂಯೋಜನೆ ಬದಲಾತು. ಈಗ ಸ್ವಚ್ಛ ಶುಭ್ರ ಸ್ಫಟಿಕ ಕಾಂತಿ! ಕೈಲಾಸ ಪರ್ವತ! ಸಂಸ್ಕೃತಲ್ಲಿ ಕೆಲಾಸ ಶಬ್ದದ  ಅರ್ಥ ಸ್ಫಟಿಕ. ಈಗೆನಗೆ ಗೊಂತಾತು ಈ ಶಿವ ಸನ್ನಿಧಿಗೆ ಕೈಲಾಸ ಹೆಸರು ಏಕೆ ಬಂತು? ಹೇಳಿ

***                                ***                                            ***

ಈ ಯಾತ್ರೆಯ ಮುಂದಾಣ ಘಟ್ಟ ಕೈಲಾಸ ಪರ್ವತ ಪ್ರದಕ್ಷಿಣೆ. ಇದು ಅತಿ ಮುಖ್ಯವಾದ್ದು. ಯಾತ್ರೆಯ ಅಂತಿಮ ಉದ್ದೇಶ, ಹೇಳಿ ಯಾತ್ರಿಕರು ನಂಬುತ್ತವು. ಪರಿಭ್ರಮಣೆ ಸುರುಮಾಡುವ ಜಾಗೆಯ ಹೆಸರು  ಡ್ರೋಲ್ಮಾಲಾ. ಇದು 5550  ಮೀಟರ್ ಎತ್ತರಲ್ಲಿದ್ದು. ಆದರೆ ಆಶ್ಚರ್ಯದ ವಿಷಯ ಹೇಳಿದರೆ, ಈ ಕಷ್ಟದ ಏರಾಟ ಮೊದಲಾಣ ಹಾಂಗೆ ಕಷ್ಟವೇ ಆವುತ್ತಿಲ್ಲೆ. ಸುಲಭವಾಗಿ ಹತ್ತುತ್ತಾ ಇದ್ದೆ! ಕೈಲಾಸ ಪರ್ವತದ ದರ್ಶನ ಮಾತ್ರಂದವೇ ಎಲ್ಲವೂ ಬದಲಾಗಿ ಹೋಯಿದು! ಎನ್ನ ಮನಸ್ಸು ಶರೀರ ಎಲ್ಲವೂ ಹೂಗಿನ ಹಾಂಗೆ ಹಗುರ ಆಗಿಹೋಯಿದು. ಯಾವ ಬೇನೆಯೂ ಇಲ್ಲೆ

ಈ ಪ್ರದಕ್ಷಿಣಾ ಪಥಲ್ಲಿ ಕೆಲವು ಗಮನಿಸಲೇಬೇಕಾದ ನಮ್ಮ ಪೌರಾಣಿಕ ಕಥೆಗೊಕ್ಕೆ ಸಂಬಂಧಿಸಿದ ವಿಶೇಷ ಸ್ಥಾನಂಗೊ ಕಾಂಬಲೆ ಸಿಕ್ಕುತ್ತವು. ’ಶಿವ ಸ್ಥಳ’ ಇದೊಂದು ಸಮತಲ ಭೂಮಿ. ಮೈದಾನು ಹೇಳ್ಳಕ್ಕು. ಇಲ್ಲಿಗೆ ಬಂದ ಯಾತ್ರಿಕರೆಲ್ಲ ತಮ್ಮ ವಸ್ತ್ರಂಗಳಲ್ಲಿ ಉಡುಗೆ ತೊಡುಗೆಗಳಲ್ಲಿ ಕೆಲವನ್ನಾದರೂ ಇಲ್ಲಿ ಇಡ್ಕಿಕ್ಕಿ ಹೋವ್ತವು. ಅವರ ನಂಬಿಕೆ ಹೀಂಗಿದ್ದು. “ ಈ ಜಾಗೆಲಿ ಯಮಧರ್ಮರಾಯ° ಮನುಷ್ಯರ ಪಾಪ ಪುಣ್ಯಂಗಳ ಪರೀಕ್ಷೆ ಮಾಡ್ತ. ಅಲ್ಲಿ ವಸ್ತ್ರ ಬಿಟ್ಟಿಕ್ಕಿ ಹೋದರೆ ಅವರ ಮರಣವ ಕೆಲವು ಕಾಲಕ್ಕೆ ಮುಂದಂಗೆ ಹಾಕುತ್ತ°”. ತಮಾಷೆ ಎಂತ ಹೇಳಿದರೆ, ಕೈಲಾಸ ಯಾತ್ರೆಲಿ ಸತ್ತರೆ ಮುಕ್ತಿ, ಭಗವತ್ಕೃಪೆ, ಮೋಕ್ಷಪ್ರಾಪ್ತಿ ಹೀಂಗೆಲ್ಲ ಗ್ರೇಶುತ್ತವು ಒಂದು ಹೊಡೆಲಿ! ಇನ್ನೊಂದು ಹೊಡೆಲಿ ಯಮರಾಯನ ದೂರ ಅಟ್ಟುಲೆ ವಸ್ತ್ರ ಇಡ್ಕಿ, ಅವ° ಅಲ್ಲಿಯೆ ಪರಡಿಗೊಂಡಿರಲಿ, ನಾವು ಪಾರಾಗಿ ಹೋಪೊ°- ಹೀಂಗಿಪ್ಪ ಪಲಾಯನ ಸೂತ್ರವ ಎಂತಗೆ ಪಠಿಸೆಕ್ಕು? (ಪಾಠಕರೇ, ಸ್ವಗತ) ಹಲ್ಲಿ ತನ್ನ ಬೀಲ ಉದುರ್ಸಿಕ್ಕಿ ಶತ್ರುವಿನ-ಹೆಚ್ಚಾಗಿ ಪುಚ್ಚೆಯ ಕೈಂದ ಪಾರಾಗಿ ಹೋಪದರ ನಿಂಗೊ ನೋಡಿಪ್ಪಿ ಅಲ್ಲದಾ? ಅದೇ ಯುಕ್ತಿಯಾ? (ಸ್ವಗತ)

ಮನುಷ್ಯರ ಮನೋವೃತ್ತಿ ಎಷ್ಟು ವಿಚಿತ್ರ! ಆದರೆ ಸಾಯೆಕ್ಕು ಹೇಳಿ ಇಲ್ಲಿಗೆ ಬತ್ತವಾ ಆರಾದರೂ? ಇದೇ ಯೋಚನೆಲಿ ಮುನ್ನಡೆತ್ತಾ ಇಪ್ಪಾಗ ಸುಂದರವೂ ಅದ್ಭುತವೂ ಆದ ಗೌರೀಕುಂಡಕ್ಕೆ ಬಂದು ಮುಟ್ಟಿದೆಯೊ°. ಇದು ಪರಮೇಶ್ವರನ ಅರ್ಧಾಂಗಿನಿ ಗೌರೀದೇವಿ ಸ್ನಾನ ಮಾಡಿಗೊಂಡಿದ್ದ ಸರೋವರ ಅಥವಾ ಗುಂಡಿ. ಇದು ಪಚ್ಚೆ ರತ್ನದ ಹಾಂಗೆ ಹಸುರಾಗಿ ಹೊಳೆತ್ತಾ ಇದ್ದು. ಮೂರನೇ ದಿನ ಪ್ರಯಾಣ ಬಸ್ಸಿಲಿ. ಮಾನಸ ಸರೋವರಕ್ಕೆ ಪ್ರದಕ್ಷಿಣೆ ಮಾಡುದು. ಇದು 88 ಕಿಲೋಮೀಟರ್ ಆವುತ್ತು. ಅಲ್ಲಿಗೆ ಎಂಗಳ ಪರಿಕ್ರಮ ಯಾತ್ರೆ ಮುಗುದತ್ತು.

ಈಗ ಮಾನಸ ಸರೋವರಲ್ಲಿ ಎಲ್ಲೋರು ಮುಳುಗಿ ಮೀಯ್ತಾ ಇದ್ದವು. ಆ ಹಿಮಸದೃಶ ನೀರಿನ ಸ್ನಾನವ ಕಷ್ಟ ಹೇಳಿ ಆರೊಬ್ಬನೂ ಹೇಳ್ತವಿಲ್ಲೆ. ಕೃತಕೃತ್ಯತೆಯ ಅನಂದಭಾವಲ್ಲಿ ಮುಳುಗಿಪ್ಪಾಗ, ದೇಹಭಾವವೇ ಅಳುದು ಹೋದಿಪ್ಪಾಗ ಎಲ್ಲವೂ ಸುಖಮಯ! ಆನಂದಮಯ! ಸರೋವರ ನೋಡಿಯೇ ಆರಿಂಗೆ ಆದರೂ ಆಶ್ಚರ್ಯ ಅಕ್ಕು. ಎನಗಂತೂ ದಿಗ್ಭ್ರಮೆ! ಕ್ಷಣ ಕ್ಷಣಕ್ಕೂ ಬದಲಾವ್ತಾ ಹೋಪ ಇದರ ವರ್ಣವೈಭವದ ಚಮತ್ಕಾರ. ದೂರದ ವರೆಗೂ ಕಾಂಬ ಕೈಲಾಸ ಪರ್ವತದ ಸ್ಫಟಿಕ ಪ್ರಕಾಶ ನೀರಿನ ಮೇಲೆ ಬಿದ್ದು ಮಳೆಬಿಲ್ಲಿನ ಎಲ್ಲಾ ಬಣ್ಣಂಗಳೂ ಅಲ್ಲಿ ಪ್ರತಿಫಲಿಸುತ್ತಾ ಬೆಳ್ಳಿಯಾಗಿ ಮತ್ತೆ ಹಸುರಾಗಿ ಮರುಕ್ಷಣ ನೀಲಿಯಾಗಿ ಮತ್ತೆ ಪುನಃ ಹಸುರಾಗಿ ಅರುಣ ಕಾಂತಿಲಿ ಲಕಲಕಿಸಿ ಹೊಳೆವ ಲಕ್ಷಾಂತರ ಛಾಯೆಗೊ ಹುಟ್ಟಿ ಮಾಯ ಆಗಿ ಮತ್ತೆ ಹುಟ್ಟಿ ಪುನಃ ಪ್ರತ್ಯಕ್ಷ ಅಪ್ಪ ಬಣ್ಣಂಗಳ ಲೀಲೆಯೋ, ಬ್ರಹ್ಮನ ಮಾಯಜಾಲವೋ? ಅದು ಮಾನಸ ಸರೋವರ! ಜೀವಿಗಳ ಮನಸ್ಸಿನ ಚಾಂಚಲ್ಯದ ಪಡಿನೆಳಲೋ? ಸೃಷ್ಟಿಕರ್ತನ ಮನಸ್ಸಿನ ಕಲ್ಪನಾಲೋಕದ ಕೋಟಿಕೋಟಿ ರೂಪಂಗಳ ಪ್ರತಿಬಿಂಬಿಸುವ ’ಮೊನಿಟರ್’ ಇದಾಗಿರೆಕ್ಕಲ್ಲದಾ? ಕೈಲಾಸ ಪರ್ವತದ ಸ್ಫಟಿಕ ಕಿರಣಂಗಳ ಪ್ರತಿಫಲಿಸುವ ನೆರಳು ಬಿಂಬ! ಉದಯಾಸ್ತಮಾನದ ವರೆಗೂ ಸೂರ್ಯನ ಉಜ್ವಲ ಪ್ರಕಾಶ ಎಲ್ಲವೂ ಸೇರಿದ ಆ ವಿಶಾಲ ಜಲರಾಶಿ! ಈ ಚೆಂದವ ವರ್ಣಿಸುಲೆ ಬ್ರಹ್ಮನರಾಣಿ ವಾಣಿಗಾದರೂ ಎಡಿಗೋ? ಈ ಕಲಾ ವೈಭವವ ನೋಡ್ತಾ ನೋಡ್ತಾ ಎನ್ನ ಉಸಿರು ಸ್ತಬ್ಧ ಆವ್ತಾ ಇದ್ದು! (ಈ ಸರೋವರಲ್ಲಿ ಮೀವಲೆ ಸ್ವರ್ಗಂದ ದೇವತೆಕ್ಕೊ ಅಪ್ಸರೆಯರು ಕೂಡಾ ಬತ್ತವು ಹೇಳಿ ಪುರಾಣಂಗಳಲ್ಲಿ ನಿಂಗೊ ಓದಿಪ್ಪಿ)

ಈ ಸರೋವರ ತೀರಲ್ಲಿ ಎಂಗಳ ಮೂರುದಿನದ ವಾಸ್ತವ್ಯ. ಶಿಬಿರದ ಹೆಸರು ಕ್ವಿಹೂ (QIHO). ಇಲ್ಲಿಗೆ ಬಂದು ಸೇರಿದ ದಿನವೇ ಪೌರ್ಣಮಿ. ಪೂರ್ಣಚಂದ್ರನ ಬೆಳದಿಂಗಳಿಲಿ-ಬ್ರಹ್ಮನ ಮನೋಲ್ಲಾಸದ ವಿಶ್ವವ್ಯಾಪೀ ವಿರಾಡ್ರೂಪಕ್ಕೆ ಹಿಡುದ ಕನ್ನಡಿಯ ಹಾಂಗೆ ಈ ವಿಶಾಲ ಸರೋವರ ಹೊಳೆತ್ತಾ ಇದ್ದು-ಪೂರ್ತಿ ಬೆಳ್ಳಂಗೆ ಬೆಳ್ಳಿಯ ನೀರಿನ ಹಾಂಗೆ. ಸರೋವರದ ತಳದವರೇಗೂ ಬೆಣ್ಚಿ, ನೀಲ ಆಕಾಶಲ್ಲಿ ಹೊಳವ ಚಂದ್ರನ ಬಿಂಬ ಸರೋವರಂದ ನಿಧಾನಲ್ಲಿ ಏಳುವ ಸಣ್ಣ ಸಣ್ಣ ಅಲೆಗಳ ಮೆಲೆ ಪ್ರತಿಫಲಿಸಿ ಒಂದು ಬಿಂಬ ನೂರಾಗಿ, ನೂರು ಸಾವಿರವಾಗಿ ಚಂದ್ರ ಕಾಣ್ತಾ ಇದ್ದ°. ಸರೋವರದ ಕರೆಲಿ ಒಬ್ಬನೇ ಏಕಾಂತಲ್ಲಿ ಕೂದುಗೊಂಡಿದೆ. ಎಲ್ಲೆಲ್ಲೂ ನಿಶ್ಶಬ್ದ. ಪ್ರಶಾಂತ ಮೌನ, ಅಲೌಕಿಕ ಶಾಂತಿ! ಆ ಅದ್ಭುತ ಜಲಧಿಲಿ ಅಲೆಅಲೆಯಾಗಿ ಈ ಕೊಡಿಂದ ಆ ಕೊಡಿವರೆಗೆ ಏಳುವ ಸಣ್ಣ ತೆರೆಗಳ ಮೃದುಮಧುರ ಮಂದ್ರ ಸಂಗೀತಲ್ಲಿ ಎನ್ನನ್ನೇ ಆನು ಮರೆತ್ತಾ ಇದ್ದೆ. ಎನ್ನ ಸುತ್ತುವರಿತ್ತಾ ಇದ್ದ ಆ ದಿವ್ಯ ಶಾಂತಿಲಿ ಆನು ಕರಗಿ ಹೋವ್ತಾ ಇದ್ದೆ. ಹಗುರಾಗಿ ತೇಲ್ತಾ ಇದ್ದೆ. ಬಂಧನ ಯಾವದೂ ಇಲ್ಲೆ. ಶರೀರ ಹೂಗಿನ ಹಾಂಗೆ ಹಗುರ ಆಯಿದು. ಎನ್ನ ಒಳಾಣ ಅಂತರಂಗದ ಮುಚ್ಚಿಗೊಂಡಿದ್ದ ಬಾಗಿಲು ಝಗ್ಗನೆ ತೆಕ್ಕೊಂಡಿದೀಗ. ಒಳ ಪೂರಾ ಬೆಣ್ಚಿ, ಪ್ರಕಾಶವೇ ಪ್ರಕಾಶ! ಆನು ಬಂಧಮುಕ್ತ° ಆದ ಹಾಂಗೆ ಸಂಪೂರ್ಣ ಸ್ವತಂತ್ರ ಆದ ಹಾಂಗೆ, ಆಹಾ ಸುಂದರ! ಸ್ವಚ್ಛಂದ! ಕೇವಲಜ್ಞಾನ ನಾನು! ಆನು?…ಆನಾರು? ಎನ್ನ ಆನರಿತೆ! ಶಿವೋಹಂ ! ಶಿವೋಹಂ ! ಶಿವೋಹಂ ! ಶಿವೋಹಂ !

****                                                      *****                                         ***

ಶ್ರೀಮದ್ ಶಂಕರಾಚಾರ್ಯ ವಿರಚಿತ ನಿರ್ವಾಣ ಷಟ್ಕಂ ನೆನಪಾವುತ್ತು-ಓದಿ! ಅವನ ಭಾವನೆಯ ಅಮೃತಜಲಲ್ಲಿ ನಾವುದೇ ಮುಳುಗೇಳುವೊ°.

ನಿರ್ವಾಣ ಷಟ್ಕಂ:

ಮನೋಬುದ್ಧ್ಯಹಂಕಾರ ಚಿತ್ತಾನಿ ನಾಹಂ
ನ ಚ ಶ್ರೋತ್ರ ಜಿಹ್ವೇ ನ ಚ ಘ್ರಾಣನೇತ್ರೇ |
ನ ಚ ವ್ಯೋಮಭೂಮಿರ್ನ ತೇಜೋ ನ ವಾಯುಃ
ಚಿದಾನಂದ-ರೂಪಃ ಶಿವೋsಹಂ ಶಿವೋsಹಂ ||೧||

ನ ಚ ಪ್ರಾಣಸಂಜ್ಞೋ ನ ವೈ ಪಂಚವಾಯುಃ
ನ ವಾ ಸಪ್ತಧಾತುರ್ನ ವಾ ಪಂಚಕೋಶಃ |
ನ ವಾಕ್ಪಾಣಿ-ಪಾದೌ ನ ಚೋಪಸ್ಥಪಾಯೂ
ಚಿದಾನಂದ-ರೂಪಃ ಶಿವೋsಹಂ ಶಿವೋsಹಂ ||೨||

ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ
ಮದೋ ನೈವ ಮೇ ನೈವ ಮಾತ್ಸರ್ಯ ಭಾವಃ |
ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷಃ
ಚಿದಾನಂದ-ರೂಪಃ ಶಿವೋsಹಂ ಶಿವೋsಹಂ ||೩||

ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ
ನ ಮಂತ್ರೋ ನ ತೀರ್ಥೋ ನ ವೇದಾ ನ ಯಜ್ಞಾಃ |
ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ
ಚಿದಾನಂದ ರೂಪಃ ಶಿವೋsಹಂ ಶಿವೋsಹಂ ||೪||

ನ ಮೃತ್ಯುರ್ನಶಂಕಾ ನ ಮೇ ಜಾತಿಭೇದಃ
ಪಿತಾನೈವ ಮೇ ನೈವ ಮಾತಾ ನ ಜನ್ಮ |
ನ ಬಂಧುರ್ನಮಿತ್ರಂ ಗುರುರ್ನೈವ ಶಿಷ್ಯಃ
ಚಿದಾನಂದ ರೂಪಃ ಶಿವೋsಹಂ ಶಿವೋsಹಂ ||೫||

ಅಹಂ ನಿರ್ವಿಕಲ್ಪೋ ನಿರಾಕಾರ-ರೂಪೋ
ವಿಭುತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಂ |
ನ ಚಾsಸಂಗತಂ ನೈವ ಮುಕ್ತಿರ್ನ ಮೇಯಃ
ಚಿದಾನಂದ ರೂಪಃ ಶಿವೋsಹಂ ಶಿವೋsಹಂ ||೬||

 

ಈ ಕೈಲಾಸ ಯಾತ್ರೆಯ ಹೆಚ್ಚಿನ ಮಾಹಿತಿ ಬೇಕಾದರೆ 1982 ರಲ್ಲಿ ಪ್ರಕಟ ಆದ “ A Mountain in Tibet” ಈ ಪುಸ್ತಕವ ನೋಡ್ಲಕ್ಕು- ಇದರ ಬರದೊನು “Charles Allen”

ಇನ್ನೊಂದು “Here Be Yaks” ಇದರ ಲೇಖಕ- ಭೂಗೋಳ ಶಾಸ್ತ್ರಜ್ಞ Manosi Lahiri ಎಂಬೊನು. ಈ ಪುಸ್ತಕ ಯಾತ್ರಿಕರಿಂಗೆ ಮಾರ್ಗದರ್ಶಿಯ ಹಾಂಗೆ ತುಂಬಾ ಸಹಾಯ ಮಾಡುಗು.

ಕೈಲಾಸ ಯಾತ್ರೆ ಮಾಡೆಕ್ಕಾರೆ ಸಂಪರ್ಕಿಸೆಕ್ಕಾದ e-mail:-

kmyatra@mea.gov.in ಅಥವಾ ಈ ವಿಳಾಸಕ್ಕೆ ಬರೆಯಿರಿ:-

ಇವರಿಗೆ- ಡೆಪ್ಯುಟಿ ಸೆಕ್ರೆಟರಿ (ಪೂರ್ವ ಏಶ್ಯಾ) M.E.A

ಕೋಣೆ 255A, South Block, ನವದೆಹಲಿ 11001

ಇನ್ನೊಂದು ಮಾಹಿತಿ: ಖಾಸಗಿಯಾಗಿಯೂ ಈ ಯಾತ್ರೆಯ ಮಾಡುಲೆಡಿತ್ತು.

ಅದರಲ್ಲಿ ಸುರುವಿಲಿ ಲ್ಹಾಸಾ ಅಥವಾ ಖಾಟ್ಮಂಡುವಿಂಗೆ ವಿಮಾನ ಹಾರಾಟ ಮಾಡಿ, ಅಲ್ಲಿಂದ ಹೆಲಿಕಾಪ್ಟರಿಲಿ ಕೈಲಾಸ ಪರ್ವತಕ್ಕೆ ಹಾರಿ, ಅಲ್ಲಿ ಇಳಿವಲಾವುತ್ತು.

ಕೈಲಾಸ ಪರ್ವತ ಮಾನಸಸರೋವರ ಎಲ್ಲ ನೋಡಿಕ್ಕಿ ವಾಪಾಸು ಬಪ್ಪಲಕ್ಕು

~~***~~

ಈ ಲೇಖನದ ಮೊಲಾಣ ಭಾಗ ಇಲ್ಲಿದ್ದು

ಸರಸ್ವತಿ ಬಡೆಕ್ಕಿಲ
ಚಾಲುಕ್ಯ ಶಿಲ್ಪ,
ನಂ: 1566, 19th ಕ್ರಾಸ್
ರೂಪಾನಗರ
ಭೋಗಾದಿ ಪೋಸ್ಟ್
ಮೈಸೂರು 570026
9019274678

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

7 thoughts on “ಆನು ಶಿವನ ಸ್ವರ್ಗವ ಕಂಡೆ-2

  1. ಕಂಪ್ಯೂಟರ್ ಪರದೆಯ ಮೇಲೆ, ಅಕ್ಷರಗಳ ಮೂಲಕ ಕೈಲಾಸ, ಮಾನಸ ಸರೋವರಗಳ ತೋರಿಸಿದ್ದಿ..,,ಮೂಲ ಲೇಖಕರಿಂಗುದೆ , ಅನುವಾದ ಮಾಡಿದ ನಿಂಗೊಗುದೆ ಅನಂತ ಧನ್ಯವಾದಗಳು ಅತ್ತೆ. ಎನಗುದೆ ರಜ ಚಾರಣದ ಹವ್ಯಾಸ ಇಪ್ಪ ಕಾರಣ, ಚಾರ್ ಧಾಮ್ , ನೇಪಾಳದ ಪಶುಪತಿನಾಥ, ಮುಕ್ತಿನಾಥ ದೇವಸ್ಥಾನಂಗೊಕ್ಕೆ ಹೋಗಿ ಆಯಿದು.
    ಆ ಶಿವ ತನ್ನಲ್ಲಿಗೆ ಕರೆಸಿಗೊಂಡರೆ ಎಂದಾದರೂ ಕೈಲಾಸ ಪರ್ವತ ಮಾನಸ ಸರೋವರವನ್ನುದೆ ನೋಡುಲೆಡಿಗಕ್ಕು ಆಶೆಯಂತು ಇದ್ದು. ಹೋಪವರಿಂಗೆ ಮಾಹಿತಿಗಾಗಿ ಈ ಬರಹ ಬಹಳ ಉಪಯುಕ್ತ.

    ಹೇಮಮಾಲಾ. ಮೈಸೂರು

  2. ಚವುರ್ಕಾಡು ಶಿವರಾಮ ಜೋಯಿಷರು ಊರಿನ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ಹಿಂದಿರುಗಿರುವರೆಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

  3. ಚವುರುಕ್ಕಾಡು ಶಿವರಾಮ ಜೋಯಿಷ ರು ವ್ಹಾಟ್ಸ್ಅಪ್ ಲ್ಲಿದೇ ತುಂಬ ಏಕ್ಟಿವ್ ಆಗಿ ಇದ್ದವು. ಒಪ್ಪಣ್ಣ ನ ಬಯಿಲಿಲ್ಲಿ ದೇ ಏಕ್ಟಿವ್ ಆಗಿ ಇದ್ದವು. ಪುಳ್ಳಿ ಒಟ್ಟಿಂಗೂ ಏಕ್ಟಿವ್ ಆಗಿ ಇದ್ದವು. ಕೀಪ್ ಇಟ್ ಅಪ್ ಚವುರ್ಕಾಡು ಜೋಯಿಷ ರೆ.

    1. ಈ ವಾಟ್ಸ್ ಅಪ್ಪಿನ ಗೌಜಿಂದಾಗಿ kunhannange ಒಪ್ಪಣ್ಣನ ಬಯಲಿಂಗೆ ಬಪ್ಪಲೆ ಪುರುಸೊತ್ತೇ ಇಲ್ಲೇ ಹೇದು ತೋರುತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×