Oppanna.com

ಗ್ರಹ – ಉಪಗ್ರಹ – 7 : ರಾಡಾರ್

ಬರದೋರು :   ಪಟಿಕಲ್ಲಪ್ಪಚ್ಚಿ    on   28/11/2012    13 ಒಪ್ಪಂಗೊ

ಪಟಿಕಲ್ಲಪ್ಪಚ್ಚಿ

ದೂರ ಸಂವೇದನೆ ಹೇಳಿರೆ ಎಂತದು? ಅದರಂದ ಎಂತ ಉಪಯೋಗ ಜನ ಸಾಮಾನ್ಯರಿಂಗೆ? – ಸಮಾಜ ಸೇವೆ ಮಾಡೆಕ್ಕು ಹೇಳಿ ಉಮೇದು ಇಪ್ಪ ದೊಡ್ಡ ಮಗಳು ಶರಾವತಿಯ ಪ್ರಶ್ನೆ

ಓಹೋ, ‘ಆಂ ಆದ್ಮೀ’ ಗೊಕ್ಕೆ ಎಂತ ಉಪಯೋಗ ಹೇಳಿ ಈ ಪ್ರಶ್ನೆ ಅಲ್ಲದಾ?  ಬಹಳ ಉಪಯೋಗ ಇದ್ದು ಒಂದೊಂದಾಗಿ ನೋಡ್ತಾ ಹೋಪ ಈಗ –

ದೂರ ಸಂವೇದನೆ ಉಪಗ್ರಹಲ್ಲಿ (Remote Sensing Satellite) ಅಳವಡಿಸಿದ ಸಾಧನಕ್ಕೆ ಸೆನ್ಸರ್ ಹೇಳಿ ಹೆಸರು. ಇದು ಎರಡು ರೀತಿಯದ್ದಾಗಿರ್ತು. ಕೆಲವು ಕ್ರಿಯಾಶೀಲ (Active) ಆಗಿದ್ದರೆ ಕೆಲವು ಜಡವಾಗಿಪ್ಪವು (Passive or inactive).

ಈ ವಿಶ್ವಲ್ಲಿ ಯಾವದೇ ಒಂದು ವಸ್ತು ಒಂದೋ ಸ್ವಯಂ ಪ್ರಕಾಶಮಾನವಾಗಿರ್ತು (ಸೂರ್ಯ, ನಕ್ಷತ್ರ ಇತ್ಯಾದಿ) ಅಥವಾ ತನ್ನ ಮೇಲೆ ಬಿದ್ದ ಕಿರಣಂಗಳಲ್ಲಿ ಒಂದು ಭಾಗವ ಪ್ರತಿಫಲಿಸುತ್ತು (ಗ್ರಹ, ಉಪಗ್ರಹ ಇತ್ಯಾದಿಗ). ನಮ್ಮ ಕಣ್ಣಿಂಗೆ ಕಾಣುವ ಬೆಳಕಿನ ಭಾಗದೊಟ್ಟಿಂಗೇ ಕಾಣದ್ದ ಭಾಗವೂ ಸೇರಿ ಇಪ್ಪ ಒಟ್ಟೂ ವಿಕಿರಣಕ್ಕೆ ವಿದ್ಯುತ್ ಕಾಂತೀಯ ವಿಕರಣ (Electro Magnetic Radiation – EMR) ಹೇಳಿ ಹೆಸರು.  ಕ್ರಿಯಾಶೀಲ ಸೆನ್ಸರ್ ಗ ತಾವೇ ‘ಬೆಳಕು’ (EMR) ಚೆಲ್ಲಿ ಅದು ವಸ್ತುವಿಂದ ಎಷ್ಟು ಪ್ರತಿಫಲನ ಆದ್ದದರ ಅಳತೆ ಮಾಡೊದು. ಅದೇ ಜಡ ಸೆನ್ಸರ್ ಗ ವಸ್ತು ತನ್ನಿಂತಾನೇ ಪ್ರತಿಫಲಿಸಿದ ಕಿರಣವ ಸ್ವೀಕರಿಸುತ್ತವು.

ಯಾವ ಉದ್ದೇಶ ಮತ್ತು ಯಾವ ವಸ್ತುಗಳ ದೂರ ಸಂವೇದನೆ ಮಾಡೆಕ್ಕು ಹೇಳ್ತದರ ಹೊಂದಿಗೊಂಡು active ಅಥವಾ passive ಸೆನ್ಸರ್ ಅಳವಡಿಸುತ್ತವು. ಭೂಮಿ ತನ್ನ ಮೇಲೆ ಬಿದ್ದ EMR-ಲಿ ಒಂದಷ್ಟು ಭಾಗವ ಪ್ರತಿಫಲಿಸುವ ಕಾರಣ passive ಸೆನ್ಸರ್ ಉಪಯೋಗಿಸಿ ಭೂಮಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತವು. ಹೀಂಗೆ ಕಲೆ ಹಾಕಿದ ಮಾಹಿತಿಯ ಪುನ: ನಿಯಂತ್ರಣ ಕೇಂದ್ರಕ್ಕೆ ಕಳಿಸುತ್ತು ಉಪಗ್ರಹ.

ಭೂಮಿಯ ಒಳ ಇಪ್ಪ ಖನಿಜ ರಾಶಿ, ಇನ್ನು ಐತಿಹಾಸಿಕ ಪಳೆಯುಳಿಕೆ (ರಾಮ ಸೇತು, ಮಥುರಾ, ಗುಪ್ತ ಗಾಮಿನಿಯಾದ  ಸರಸ್ವತೀ ನದಿ) ಇವುಗಳ ಇರುವಿಕೆಯ ಬಗ್ಗೆ  ಪೂರಕ ಮಾಹಿತಿ, ನೆರೆ, ಬರಗಾಲದ ಹರವು ಮತ್ತು ತೀಕ್ಷ್ಣತೆ, ಅರಣ್ಯ ನಾಶ ಅಥವಾ ವೃದ್ಧಿಯ ನಿಖರ ಮಾಹಿತಿ, ಎಷ್ಟು ವಿಸ್ತೀರ್ಣಲ್ಲಿ ಯಾವ ಯಾವ ಬೆಳೆ ಬೆಳೆಸುತ್ತವು, ಇದು ನಮ್ಮ ನಿರೀಕ್ಷೆಗೆ ತಕ್ಕ ಹಾಂಗೆ ಇದ್ದಾ? ಹೀಂಗೆ ಒಂದೆರಡಲ್ಲ ದೂರ ಸಂವೇದನೆಯ ಉಪಯೋಗಂಗ. ಇದಕ್ಕೆ ಉಪಗ್ರಹವ ಉಪಯೋಗಿಸದ್ದೆಯೂ ಆವ್ತು. ಆದರೆ ಅದಕ್ಕೆ ಅಪ್ಪ ಖರ್ಚು, ಸಮಯ ಮತ್ತು ಅದಲ್ಲಿ ನುಸುಳುವ ತಪ್ಪುಗ ಹೆಚ್ಚು. ಉದಾಹರಣೆಗೆ ಅರಣ್ಯ ಪ್ರದೇಶದ ವಿಸ್ತೀರ್ಣವ ಮಾನವ ಸಂಪನ್ಮೂಲವ ಉಪಯೋಗಿಸಿ ಲೆಕ್ಖ ಹಾಕಿದರೆ ಅಳತೆ ಮಾಡುಲೆ ಅಗತ್ಯ ಇಪ್ಪ ಜನಂಗಳ ಸಂಖ್ಯೆ, ಅವು ತೆಕ್ಕೊಂಬ ಸಮಯ ಮತ್ತು ಅದಲ್ಲಿ ಅಪ್ಪ ಸಣ್ಣ-ದೊಡ್ಡ ತಪ್ಪುಗ ಎಷ್ಟು? ಅದೇ ದೂರ ಸಂವೇದೀ ಉಪಗ್ರಹದ ಮೂಲಕ ಮೂರು, ನಾಲ್ಕು ವಾರಂಗಳಲ್ಲಿ ಇಡೀ ಭಾರತವ cover ಮಾಡುಲಾವ್ತು. ಅದೇ ರೀತಿ ಬರ, ನೆರೆಯ ಹಾನಿಯ ಪ್ರಮಾಣದ ಅಂದಾಜಿ ಕೂಡಾ  ಸರಿಯಾಗಿ ಲೆಕ್ಖ ಹಾಕುಲಾವ್ತು.

ಈ ಉಪಗ್ರಹ, ರೋಕೆಟ್ ಗಳ ಚಲನವಲನದ ಮೇಲೆ ನಿಗಾ ವಹಿಸುವ ವ್ಯವಸ್ಥೆ (tracking) ಹೇಂಗೆ?

ರಾಡಾರ್ (radar – Radio Detection And Ranging) ಹೇಳ್ತ  ತಂತ್ರಜ್ಞಾನದ ಉಪಯೋಗ ಮಾಡ್ತವು ಇದಕ್ಕೆ. ಯಾವ ಗುರಿ (target)ಯ ರಾಡಾರ್ ಮೂಲಕ track ಮಾಡುತ್ತು ಅದು ಇಪ್ಪ ಜಾಗೆ, ಅದರ ಗಾತ್ರ ಮತ್ತು ಅದರ ಚಲನೆಯ ವೇಗ ಇವೆಲ್ಲವನ್ನೂ ಅಳತೆ ಮಾಡುಲಾವ್ತು.

ಈ ರಾಡಾರ್ ತಂತ್ರಜ್ಞಾನವನ್ನೂ ಇನ್ನು ಬೇರೆ ಬೇರೆ ಕ್ಷೇತ್ರಂಗಳಲ್ಲಿ ಉಪಯೋಗಿಸುತ್ತವು –

1. ವಿಮಾನ ನಿಲ್ದಾಣಂಗಳಲ್ಲಿ ಹೋಪ, ಬಪ್ಪ, ವಿಮಾನಂಗಳ ಹಾರಾಟದ ವೀಕ್ಷಣೆ ಮತ್ತು ನಿಯಂತ್ರಣಕ್ಕೆ ಒಂದು ರೀತಿಯ ರಾಡಾರ್ ಉಪಯೋಗ.

2. ಮಿಲಿಟರಿ ವಿಭಾಗಲ್ಲಿ ವೈರಿ ಪಡೆಯ ಸೈನ್ಯ, ವಿಮಾನ, ಹಡಗುಗಳ ಪತ್ತೆ ಹಚ್ಚಿ ದಾಳಿ ಮಾಡುದು, ಮುಂಜಾಗ್ರತಾ ಕ್ರಮಂಗಳ ತೆಕ್ಕೊಂಬದು.

3. ಗಡಿ ಭಾಗಲ್ಲಿ ಒಳ ನುಸುಳುವ ಅಕ್ರಮ ವಲಸಿಗರ, ಭಯೋತ್ಪಾದಕರ ಪತ್ತೆ – ನೂರು, ಇನ್ನೂರು ಕಿಲೋ ಮೀಟರ್ ಉದ್ದದ ಕರಾವಳಿಯ ಇಂಚು ಇಂಚನ್ನೂ ಬಿಡದ್ದೆ ಸದಾ ಕ್ರಿಯಾಶೀಲವಾಗಿಪ್ಪ ಒಂದೇ ಒಂದು ರಾಡರ್ ಮೂಲಕ ಜಾಗ್ರತೆಯಾಗಿ ನೋಡಿಗೊಂಬಲೆಡಿತ್ತು.

4. ಉಷ್ಣತೆ, ಒತ್ತಡ, ವೇಗವನ್ನೂ ರಾಡಾರ್ ಮೂಲಕ ತಿಳಿವಲಾವ್ತು. ಇದು ದೂರ ಸಂವೇದನೆಗೂ ಉಪಯೋಗಕಾರಿ.

5. ಹವಾಮಾನದ ಮಾಹಿತಿ ತಿಳಿಸುವ ರಾಡಾರ್ ಗ ಗಾಳಿಯ ವೇಗ, ಗಾಳಿಲಿಪ್ಪ ತೇವಾಂಶ ಮತ್ತು ಮೋಡಂಗಳ ಚಲನೆ, ಅದಲ್ಲಿಪ್ಪ ಐಸ್ ಕಣಂಗಳ ಸಾಂದ್ರತೆ – ಇವೆಲ್ಲದರ ಒಟ್ಟು ವಿಶ್ಲೇಷಣೆಂದ ಮುಂದೆ ಬಪ್ಪ ಚಂಡ ಮಾರುತ, ಮುಸಲ ಧಾರೆ ಮಳೆ, ಸಾಧಾರಣ ಮಳೆ ಬೀಳುವ ಸಾಧ್ಯತೆಗಳ ಬಗ್ಗೆ ಮುನ್ಸೂಚನೆ ಕೊಡುವ ಕಾರಣ ಇದು ರೈತರಿಂಗೆ, ಜನ ಸಾಮಾನ್ಯರಿಂಗೆ ಉಪಯುಕ್ತ ಮಾಹಿತಿ ಆಗಿರ್ತು.

ಇಲ್ಲಿ ಡಾಪ್ಲರ್ ಪರಿಣಾಮ (Doppler effect) ಹೇಳ್ತ ಒಂದು ವೈಜ್ಞಾನಿಕ ತತ್ವ ಉಪಯೋಗ ಆವ್ತು. ಅದೆಂತದು ಹೇಳಿ ಮುಂದೆ ನೋಡುವ.

 

13 thoughts on “ಗ್ರಹ – ಉಪಗ್ರಹ – 7 : ರಾಡಾರ್

  1. ಧನ್ಯವಾದ ಅಪ್ಪಚ್ಚಿ.
    ಪ್ರಶ್ನೆಗೊ.
    ೧.ಈ ಉಪಗ್ರಹ೦ಗಳಲ್ಲಿಪ್ಪ ಉಪಕರಣ೦ಗೊ ಕೆಲಸ ಮಾಡೆಕ್ಕಾರೆ ವಿದ್ಯುತ್ ಶಕ್ತಿ ಬೇಕನ್ನೆ? ಇದು ಎಲ್ಲಿ೦ದ ಸಿಕ್ಕುತ್ತು? ಉಪಗ್ರಹದ ಆಯುಸ್ಸು ಮುಗಿವದು ಹೇಳಿರೆ ಹೇ೦ಗೆ?
    ೨. ರಾಡಾರ್ ತ೦ತ್ರದ ಮೂಲಕ ಅಮೆರಿಕದ ಹಾ೦ಗಿಪ್ಪ ದೊಡ್ಡಣ್ಣ ದೇಶ೦ಗೊ ಇತರ ದೇಶ೦ಗಳಲ್ಲಿ ನೆಡೆತ್ತ ಬೆಳವಣಿಗೆಗಳ ಮಾಹಿತಿ ಒಟ್ಟು ಮಾಡುತ್ತವು ಅಲ್ಲದೋ?

  2. ಶರ್ಮಪ್ಪಚ್ಚಿ, ನಿಂಗಳ ಮೆಚ್ಚುಗೆಯ ಮಾತಿಂಗೆ ಧನ್ಯವಾದಂಗ.

  3. ರಾಡಾರ್ ಬಗ್ಗೆ ಲೇಖನ, ಅದರೊಟ್ಟಿಂಗೆ ವಿಚಾರಂಗಳ ಬಗ್ಗೆ ಮಾಹಿತಿ ಕೇಳಿ ಒಪ್ಪಂಗೊ, ಅದಕ್ಕೆ ಉತ್ತರ, ಎಲ್ಲವೂ ಲಾಯಿಕಕೆ ಬಂದು ಓದುತ್ತವಕ್ಕೆ ಒಳ್ಳೆ ಮಾಹಿತಿ ಕೊಡ್ತಾ ಇದ್ದು.
    ಧನ್ಯವಾದಂಗೊ

  4. ನಿಂಗಳ ಪ್ರೋತ್ಸಾಹಕ್ಕೆ ಧನ್ಯವಾದಂಗ ಗೋಪಾಲಣ್ಣ.

  5. ಪ್ರಶ್ನೆ ಉತ್ತರಂಗಳ ಜೆತೆ ಜೆತೆಗೆ ಹಲವು ಆಸಕ್ತಿ ಹುಟ್ಟುಸುವ ವಿಶೇಷ ಮಾಹಿತಿಗೊ ಸಿಕ್ಕುತ್ತಾ ಇಪ್ಪದು ತುಂಬಾ ಸಂತೋಷ. ಪಟಿಕಲ್ಲಪ್ಪಚ್ಚಿಯ ಗ್ರಹ-ಉಪಗ್ರಹ ಸರಣಿ ಹೀಂಗೆ ಮುಂದುವರಿಯಲಿ. ಧನ್ಯವಾದಂಗೊ.

  6. ಚೆನ್ನೈ ಭಾವ,
    ನಿಂಗಳ ಪ್ರಶ್ನೆಗೊ ತುಂಬಾ ಅರ್ಥಪೂರ್ಣ. ಪ್ರಶ್ನೆ ಕೇಳಿ, ಎನ್ನ ಶುದ್ದಿ ವಿಭಾಗವ ಅರ್ಥಪೂರ್ಣ ಅಪ್ಪ ಹಾಂಗೆ ಮಾಡಿದ ನಿಂಗೊಗೆ ಒಂದು ಒಪ್ಪ.
    ನಿಂಗಳ ಪ್ರಶ್ನೆಗೊಕ್ಕೆ ಉತ್ತರವ ಈ ಕೆಳ ಕೊಡುಲೆ ಪ್ರಯತ್ನ ಮಾಡಿದ್ದೆ –

    (1) ಬೇರೆ ಬೇರೆ ಉದ್ದೇಶಕ್ಕಾಗಿ ಈಗಾಗಲೇ ಬೇರೆ ಬೇರೆ ದೇಶಂಗ ಕಳ್ಸಿದ ಉಪಗ್ರಹಂಗ ನೂರಾರು ಇದ್ದು. ಮೈಲ್ ರೇಸ್ ಟ್ರಾಕ್ ಲಿ ತುಂಬ ಜೆನಂಗ ಏಕ ಕಾಲಕ್ಕೆ ಒಡುವ ಹಾಂಗೆ, ಕೆಲವು ಉಪಗ್ರಹಂಗ ಒಂದೇ ಟ್ರಾಕ್ (orbit)ಲಿ ಒಂದರ ಹಿಂದೆ ಒಂದು ಹೋವ್ತಾ ಇದ್ದರೆ ಇನ್ನು ಕೆಲವು ಬೇರೆ ಟ್ರಾಕ್ ಗಳಲ್ಲಿ ಇರ್ತವು. ಅಷ್ಟು ಮಾತ್ರ ಅಲ್ಲ, ಮಲ್ಟಿ-ಸ್ಟೋರೀಡ್ ಪಾರ್ಕಂಗ್ ನ ಹಾಂಗೆ ಬೇರೆ ಬೇರೆ ಎತ್ತರಲ್ಲಿ ಹೀಂಗಿಪ್ಪ ಅನೇಕ ಟ್ರಾಕ್ ಗೊ ಇದ್ದವು.
    ಹಾಂಗಿದ್ದರೂ, ಈಗಾಗಲೇ ವಿಜ್ಞಾನಿಗೊಕ್ಕೆ ಒಂದು ಚಿಂತೆ ಸುರು ಆಯಿದು – ಆಯುಷ್ಯ ಮುಗುದೋ, ಅಕಾಲ ಮರಣಂದಾಗಿಯೋ ಕೆಲಸ ನಿಲ್ಸಿದ ಉಪಗ್ರಹಂಗಳ ‘ಕಸ’ದ ರಾಶಿ ಹೆಚ್ಚುತ್ತಾ ಹೋಪದರ ಎಂತ ಮಾಡುದು ಹೇಳಿ. ‘ಕಸ ವಿಲೇವಾರಿ’ಯ ಸಮಸ್ಯೆ ಅಲ್ಲಿಯೂ ಭೀಕರ ಅಪ್ಪ ಛಾನ್ಸ್ ಇದ್ದು ಒಂದು ದಿನ. ಸದ್ಯಕ್ಕೆ ಇನ್ನೂ ಅದು ಸಮಸ್ಯೆಯ ಮಟ್ಟಿಂಗೆ ಬೆಳದ್ದಿಲ್ಲೆ.

    (2) ಉಪಗ್ರಹವ ಯಾವ ಉದ್ದೇಶಕ್ಕೆ ಬಳಕೆ ಆವ್ತು ಹೇಳ್ತದರ ಮೇಲೆ ಅದು ಯಾವ ಟ್ರಾಕ್ ಲಿ ಇರೆಕ್ಕು ಹೇಳಿ ನಿರ್ಧಾರ ಆವ್ತು. ಮತ್ತು ಅದರಲ್ಲಿಪ್ಪ ಉಪಕರಣ ( payload – ಹೇಳಿ ಹೇಳ್ತವು ಅದರ) ಯಾವದು ಹೇಳಿಯೂ ನಿಗಂಟು ಆವ್ತು. ಹಾಂಗಾಗಿ ಒಂದು ಉದ್ದೇಶಕ್ಕಾಗಿ ಇಪ್ಪ ಉಪಗ್ರಹವ ಇನ್ನೊಂದಕ್ಕಾಗಿ ಉಪಯೋಗ ಮಾಡುಲೆ ಆವ್ತಿಲ್ಲೆ. ಹಾರಿಸೊಗಳೇ ಮಲ್ಟಿ-ಪೇಲೋಡ್ ಉಪಗ್ರಹವ ಹಾರಿಸೊದು ಇದ್ದು ಕೆಲವು ಸರ್ತಿ – ಒಂದೇ ಟ್ರಾಕ್ ಲಿದ್ದುಗೊಂಡೇ ಆ ಎಲ್ಲಾ ಕಾರ್ಯ ನಿರ್ವಹಿಸುಲೆ ಆವ್ತರೆ.

  7. ಇದಾ ಅಪ್ಪಚ್ಚಿ.., ನವಗೂ ಓದಿ ಕೊಶಿ ಆತು. ಒಂದೊಂದು ಉದ್ದೇಶಕ್ಕೆ ಒಂದೊಂದು ರಾಡರ್. ಯಬ್ಬೋ!

    ಅಪ್ಪಚ್ಚಿ., ಅಂತೇ ಅರಡಿವಲೆ ಆನಿಲ್ಲಿ ಕೇಳುಸ್ಸು … ೧. ಈಗಾಗಲೇ ಮೇಗೆ ಎಷ್ಟು ಉಪಗ್ರಹಂಗೊ ಮೇಗೆ ಇಕ್ಕು. ೨. ಒಂದು ಉದ್ದೇಶಕ್ಕೆ ಕಳುಹಿದ ಉಪಗ್ರಹದ ಮೂಲಕ ಬೇರೊಂದು ವಿಷಯದ ಮಾಹಿತಿ ಪಡವಲೆ ಎಡಿಗಾವ್ತೋ?. ಎಂತಕೆ ಹೇಳಿರೆ ಎಲ್ಯೋ ಮೂಲೆಲಿ ವಿಮಾನ ಪತನ ಆದರೂ ಕೂಡ್ಳೆ ಅದರ ಮಾಹಿತಿ ಉಪಗ್ರಹ ಮೂಲಕ ಪಡದು ವಿಶ್ವದಾದ್ಯಂತ ಕೆಲವೇ ಕ್ಷಣಲ್ಲಿ ಪ್ರಸಾರ ಆವ್ತು. ಇನ್ನೂ ಹೀಂಗಿರ್ಸು ಅದೆಷ್ಟೋ!. ಅದೇಂಗೆ ಕೆಣಿ?

  8. ಕುಮಾರ ಮಾವ, ನಿಂಗಳ ಮೆಚ್ಚುಗೆಗೆ ಧನ್ಯವಾದಂಗ.
    ಡಾಪ್ಲರ್ ಇಫೆಕ್ಟಿನ ಬಗ್ಗೆ ಪ್ರಶ್ನೆ ಕೇಳುಲೆ ಆರು ಬತ್ತವು ಹೇಳಿ ಕಾಯ್ತಾ ಇದ್ದೆ.

  9. ಜಯಕ್ಕನ ಪ್ರಶ್ನೆಯೂ, ಅಪ್ಪಚ್ಚಿಯ ಉತ್ತರವೂ ಲಾಯಿಕ್ಕಾಯಿದು.
    ಈ ಸರ್ತಿ ದೊಡ್ಡ ಮಗಳು ಬಂದು ಪ್ರಶ್ನೊತ್ತರ ನಡಶಿಕೊಟ್ಟವು. ಇನ್ನಾಣ ಡಾಪ್ಲರ್ ಇಫೆಕ್ಟಿನ ಬಗ್ಗೆ ಪ್ರಶ್ನೆ ಕೇಳುಲೆ ಆರು ಬತ್ತವೋ . ?

  10. ಜಯಶ್ರೀ ಅಕ್ಕ, ನಿಂಗಳ ಕಳಕಳಿ ನಿಜಕ್ಕೂ ಮೆಚ್ಚೆಕ್ಕಾದ ವಿಷಯ. ನಿಂಗಳ ಸಂದೇಹಕ್ಕೆ ಎನ್ನ ಸೀಮಿತ ಅರಿವಿನ ಮಟ್ಟಂದ ಈ ಕೆಳಾಣ ಉತ್ತರ ಬರದ್ದೆ.

    ಒಂದು ರಾಡಾರ್ ಮತ್ತು ಅದರ ಸಾಫ್ಟ್ ವೇರ್ ಒಟ್ಟು ಅಪ್ಪ ಖರ್ಚಿ ನೋಡಿದರೆ ಸರಕಾರಂದ, ತುಂಬ ಶ್ರೀಮಂತರಿಂಗೆ ಮಾತ್ರ ಅದು ಕಾರ್ಯ ಸಾಧ್ಯ. ಎಲ್ಲ ಸೇರಿ ಅಪ್ಪಗ ಹತ್ತರೆ ಹತ್ತರೆ 6 ಕೋಟಿ ರೂ. ಆವ್ತು ಒಂದು ರಾಡಾರ್ ಸಿಸ್ಟಮ್-ಗೆ. ಅಷ್ಟು ಆದರೂ ನಮ್ಮ ಭೌಗೋಳಿಕ ಪ್ರದೇಶಕ್ಕೆ (ಗುಡ್ಡೆ, ಕಣಿವೆ ಹೆಚ್ಚು ಇಪ್ಪಲ್ಲಿ) ರಾಡಾರ್-ನ ಸ್ಕಾನ್ ಏರಿಯಾ ಸಂಪೂರ್ಣ ಕವರ್ ಮಾಡುಲೆ ಆವ್ತಿಲ್ಲೆ. ಮತ್ತು ಚಲಿಸುವ ವಸ್ತುಗೊ ದನಗೊ ಆಗಿಕ್ಕು, ಅವುಗಳ ಕಳ್ಳುಲೆ ಬಂದವಾಗಿಕ್ಕು, ಕೊಂಡೋಪ ಜೀಪ್, ಇತರ ವಾಹನಂಗೊ ಆಗಿಕ್ಕು ಅಥವಾ ನಿರಪರಾಧಿಗೊ ಪ್ರಯಾಣಿಕರಾಗಿಕ್ಕು. ಆಸ್ಟ್ರೇಲಿಯಾ ದೇಶಲ್ಲಿ ಹೆಲಿಕಾಪ್ಟರ್, ರಾಡಾರ್, R.F.ID (Radio Frequency Identifier), CCTV ಇತ್ಯಾದಿ ಬಳಸಿ ಹೀಂಗೆ ನಿಗಾ ಮಡುಗುತ್ತವು ಹೇಳಿ ಕೇಳಿದ ನೆಂಪು. ಸಾವಿರಗಟ್ಟಲೆ ದನಗೊ, ನೂರಾರು, ಸಾವಿರಾರು ಎಕರೆ ಸಮತಟ್ಟಾದ ಬಯಲು ಇಪ್ಪ ಅವಕ್ಕೆ ಅದು ಸಾಧ್ಯ ಆವ್ತು.

    ಅಮೆರಿಕಾಲ್ಲಿ ಕೆಲವು ಎತ್ತರದ ಜಾಗೆಲಿ high power CCTV ಕೆಮರಾ ಮಡುಗಿ ವಾಹನ ಚಲನದ ಮೇಲೆ, ಕಾನೂನು ಮೀರಿ ವಾಹನ (ಅಡ್ಡಾದಿಡ್ಡಿ, ಅತೀ ವೇಗಲ್ಲಿ, ಟೋಲ್ ಕೊಡದ್ದೆ ತಪ್ಪಿಸಿಗೊಂಡು ಇತ್ಯಾದಿ) ಓಡಿಸುವವರ ವಾಹನದ ನಂಬರ್ ಪ್ಲೇಟ್ ಕೂಡಾ ಗಮನಿಸುಲಾವ್ತಡ.

    ನಮ್ಮ ಮಟ್ಟಿಂಗೆ ಹೇಳ್ತರೆ ನಮ್ಮ ಏರಿಯಾಕ್ಕೆ ಸುತ್ತ ಕಾಂಪೌಂಡ್, CCTV ಕೆಮರಾ, RFID ಉಪಯೋಗ ಮಾಡಿ ದನಗಳ ಮೇಲೆ ಗಮನ ಮಡುಗೊದು ಸುಲಭದ ಏರ್ಪಾಡು ಹೇಳಿ ಎನ್ನ ಅಭಿಪ್ರಾಯ. ಇತ್ತೀಚೆಗೆ ಒಂದೆರಡು ರೈತರು CCTV, remore control, ಮೊಬೈಲ್, laptop ಗಳ ಉಪಯೋಗ ಮಾಡಿ ಅವರ ಇಡೀ ಕೃಷಿ ಭೂಮಿಯ ಉಸ್ತುವಾರಿಯ ಮನೆಲಿ ಇದ್ದುಗೊಂಡೇ ಮಾಡ್ತವು ಹೇಳುವ ವಾರ್ತೆ ಟೀವಿಲಿ ನೋಡಿದ್ದೆ.

    ಇನ್ನು ಹೆಚ್ಚಿನ ಮಾಹಿತಿ ಸಿಕ್ಕಿದರೆ ಖಂಡಿತಾ ಕಳಿಸಿ ಕೊಡ್ತೆ.

    1. ತುಂಬಾ ಧನ್ಯವಾದ ಅಪ್ಪಚ್ಚಿ…

      “ನಮ್ಮ ಮಟ್ಟಿಂಗೆ ಹೇಳ್ತರೆ ನಮ್ಮ ಏರಿಯಾಕ್ಕೆ ಸುತ್ತ ಕಾಂಪೌಂಡ್, CCTV ಕೆಮರಾ, RFID ಉಪಯೋಗ ಮಾಡಿ ದನಗಳ ಮೇಲೆ ಗಮನ ಮಡುಗೊದು ಸುಲಭದ ಏರ್ಪಾಡು ಹೇಳಿ ಎನ್ನ ಅಭಿಪ್ರಾಯ. ಇತ್ತೀಚೆಗೆ ಒಂದೆರಡು ರೈತರು CCTV, remore control, ಮೊಬೈಲ್, laptop ಗಳ ಉಪಯೋಗ ಮಾಡಿ ಅವರ ಇಡೀ ಕೃಷಿ ಭೂಮಿಯ ಉಸ್ತುವಾರಿಯ ಮನೆಲಿ ಇದ್ದುಗೊಂಡೇ ಮಾಡ್ತವು ಹೇಳುವ ವಾರ್ತೆ ಟೀವಿಲಿ ನೋಡಿದ್ದೆ.”

      ಈ ವಿಷಯಲ್ಲಿ ತುಂಬಾ ಆಸಕ್ತಿ ಇದ್ದು. ಈ ವಿಷಯಲ್ಲಿ ಇನ್ನೂ ಹೆಚ್ಚು ಮಾಹಿತಿ ಗೊಂತಿಪ್ಪವು ದಯವಿಟ್ಟು ತಿಳಿಸಿ.

  11. ಅಪ್ಪಚ್ಚಿ ಲೇಖನ ತುಂಬಾ ಖುಷಿ ಆತು.

    ಈ ‘ದೂರ ಸಂವೇದನೆ’ ಯ ಉಪಯೋಗಿಸಿ ನಮ್ಮ ಗೋವುಗೊಕ್ಕೆ ರಕ್ಷಣೆ ನೀಡುವ ಹಾಂಗೆ ಎಂತಾದರೂ ಸಾಫ್ಟ್ ವೇರ್ ತಯಾರಿಸಿ ಉಪಯೋಗಿಸುಲಕ್ಕೋ ಏನೋ? ಕಾಸರಗೋಡು ಪ್ರದೇಶಲ್ಲಿ ಗೋವುಗಳ ಅವಸ್ಥೆ ನೋಡಿ ಎನ್ನ ಮನಸ್ಸಿಲ್ಲಿ ಈ ವಿಚಾರ ಹಲವು ದಿನಂದ ಕೊರೆತ್ತಾ ಇದ್ದು. ಈ ವಿಷಯಲ್ಲಿ ಎಂತಾದರೂ ಮಾಹಿತಿ ಇದ್ದರೆ ಕೊಡುವಿರಾ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×