Oppanna.com

ಸೂರ್ಯ ಮಂಡಲ

ಬರದೋರು :   ಪಟಿಕಲ್ಲಪ್ಪಚ್ಚಿ    on   05/12/2012    13 ಒಪ್ಪಂಗೊ

ಪಟಿಕಲ್ಲಪ್ಪಚ್ಚಿ

ಎಂತದೋ ಹೊಸತ್ತು ಹೇಳ್ತವು ಹೇಳುವ ಶುದ್ದಿ ಗೊಂತಾಗಿ ಎಲ್ಲೋರೂ ಜೆಗಲಿಲಿ ಬಂದು ಕೂಯಿದವು.
ಶರವಾತಿಯೊಟ್ಟಿಂಗೆ ಶನಿವಾರ-ಆದಿತ್ಯವಾರ ರಜೆ ಇಪ್ಪ ಕಾರಣ ಬಂದ ಪುಟ್ಟ ಪ್ರಣವ, ಅವನ ತಮ್ಮ ಪಿಟ್ಟೆ ಪ್ರಮಥ ಹೀಂಗೆ ಪೂರಾ ಸದಸ್ಯರು ಕಾಯ್ತಾ ಇದ್ದವು.
ಎನಗೋ ರಜಾ ಹೆದರಿಕೆ – ಇವಕ್ಕೆ ಎಲ್ಲೋರಿಂಗೂ ಆಸಕ್ತಿ ಅಪ್ಪ ಹಾಂಗೆ ಹೇಳುಲೆ ಎಡಿಗೋ ಹೇಳಿ. ಎನ್ನ ಪ್ರಯತ್ನ ಹೀಂಗಿತ್ತು –

ನಿಂಗೊಗೆ ಈ ಅನುಭವ ಎಷ್ಟೋ ಸರ್ತಿ ಆಗಿಕ್ಕು ಅಲ್ಲದಾ? – ಲೆವೆಲ್ ಕ್ರೋಸಿಲಿ ನಮ್ಮ ಬಸ್ಸು ರೈಲಿಂಗೆ ಕಾದು ನಿಂದಿಪ್ಪಗ ರೈಲು ಹತ್ತರೆ ಹತ್ತರೆ ಬಂದ ಹಾಂಗೇ, ಅದರ ಕೂ… ಕೂ… ಹೇಳುವ ವಿಶಿಲಿನ ಶ್ರುತಿ ಏರಿಗೊಂಡು ಹೋದ ಹಾಂಗೆ ಕೇಳ್ತು. ಆ ಮೇಲೆ ಲೆವೆಲ್ ಕ್ರೋಸಿನ ಕಳುದು ಅದು ದೂರ ದೂರ ಹೋದ ಹಾಂಗೇ ಅದರ ವಿಶಿಲಿನ ಶ್ರುತಿ ಇಳುದ ಹಾಂಗೆ ಕೇಳ್ತು. ಅದು ನಮ್ಮ ಅನುಭವ ಮಾತ್ರ. ನಿಜವಾಗಿ ಶ್ರುತಿ ಅದೇ ಇರ್ತು.

ಹಾಂಗೇ ನಮ್ಮ ಮುಡಿಪ್ಪಿನ ಪೇಟೆಲಿ ನಿಂದುಗೊಂಡಿಪ್ಪಗ ಆಟದ ಪ್ರಚಾರದ ಜೀಪು ಘೋಷಣೆ ಮಾಡಿಗೊಂಡು ಮಾರ್ಗಲ್ಲಿ ಹೋವ್ತಾ ಇದ್ದು ಹೇಳಿ ಮಡಿಕ್ಕೊಂಬ. ಅಲ್ಲಿಯೂ ಜೀಪ್ ಹತ್ತರೆ ಬಪ್ಪಗ ಮೈಕ್ಕದ ಸ್ವರದ ಪಿಚ್ ಏರಿಗೊಂಡು ಹೋದ ಹಾಂಗೂ, ದೂರ ಹೋಪಗ ಪಿಚ್ ಇಳುದ ಹಾಂಗೂ ಅನಿಸುತ್ತು.

ಈ ರೀತಿ ಶ್ರುತಿ (ಪಿಚ್) ಹೆಚ್ಚು-ಕಡಮ್ಮೆ ಅಪ್ಪ ಹಾಂಗೆ ನವಗೆ ಅಪ್ಪ ಅನುಭವಕ್ಕೆ ‘ಡಾಪ್ಲರ್ ಇಫೆಕ್ಟ್’ ಹೇಳಿ ಈ ಸಂಗತಿಯ ಶುರೂವಿಂಗೆ ಗುರುತಿಸಿ, ಇದಕ್ಕಿಪ್ಪ ಕಾರಣವ ವಿವರಿಸಿದವ ‘ಕ್ರಿಶ್ಚಿಯನ್ ಡಾಪ್ಲರ್’ ಹೇಳ್ತ ಹೆಸರಿನ ಆಸ್ಟ್ರಿಯನ್ ಫಿಸಿಕ್ಸ್ ವಿಜ್ಞಾನಿ . ನೂರ ಎಪ್ಪತ್ತು ವರ್ಷದ ಹಿಂದೆ – 1842 ನೇ ಇಸವಿಲಿ – ಅವ ಇದರ ಸುರುವಿಂಗೆ ನಕ್ಷತ್ರಂಗಳ ಬೆಳಕಿನ ಬಣ್ಣದ ಕುರಿತು ಬರದ ಪ್ರಬಂಧಲ್ಲಿ ಉಲ್ಲೇಖ ಮಾಡಿದ್ದು. ಅದಾದ ಮೂರು ವರ್ಷದ ನಂತರ ಇದರ ಶಬ್ದಕ್ಕೂ ಅನ್ವಯಿಸಿ ಅವನ ಲೆಕ್ಖಾಚಾರ ಸರಿ ಹೇಳಿ ನಿರ್ಧರಿಸಿದವು.

Doppler Effect
ಡಾಪ್ಲರ್ ಎಫೆಕ್ಟ್ (ಕೃಪೆ: ವಿಕಿಪೀಡಿಯ)

ಈ ರೀತಿ ಧ್ವನಿಯ ಮೂಲ ಇದ್ದಲ್ಲೇ ಸ್ಥಿರವಾಗಿ ಇರದ್ದೆ, ಚಲಿಸುತ್ತಾ ನಮ್ಮ ಹತ್ತರಂಗೆ ಅಥವಾ ನಮ್ಮಂದ ದೂರಕ್ಕೆ ಹೋಪಗ ಧ್ವನಿಯ ಪಿಚ್ ಬದಲಾದ ಪ್ರಮಾಣವ ಹೊಂದಿಗೊಂಡು ಆ ಮೂಲ ಯಾವ ವೇಗಲ್ಲಿ ಚಲಿಸುತ್ತಾ ಇದ್ದು ಹೇಳಿ ಅಂದಾಜಿ ಮಾಡುಲಾವ್ತು. ಇದು ಬೆಳಕಿನ ಮೂಲಂಗೊಕ್ಕೂ ಅನ್ವಯ ಆವ್ತು.
(ಇದರ ಇನ್ನೊಂದು ದೃಷ್ಟಾಂತ ಈ ಸಂಕೊಲೆಲಿ ನೋಡುಲಕ್ಕ: http://en.wikipedia.org/wiki/file:dopplerfrequenz.gif )

ಮಾತ್ರ ಅಲ್ಲ, ನಾವು ಈಗಾಗಳೇ ಮಾತಾಡಿದ ವಿದ್ಯುತ್ ಕಾಂತೀಯ ತರಂಗಕ್ಕೂ ಇದು ಅನ್ವಯ ಆವ್ತು. ಕಣ್ಣಿಂಗೆ ಕಾಂಬ, ಮತ್ತು ಕಾಣದ್ದ ಬೆಳಕಿನ ಎಲ್ಲಾ ತರಂಗಂಗಳ ಪಟ್ಟಿಗೆ ವಿದುತ್ ಕಾಂತೀಯ ವರ್ಣ ಪಟಲ (Electro Magnetic Spectrum) ಹೇಳಿ ಗುತುತಿಸುತ್ತವು. ಕಾಮನ ಬಿಲ್ಲಿಲಿ ಇಪ್ಪ ಏಳು ಬಣ್ಣಂಗಳ ಆಚೀಚೆಗೆ ಹೇಳಿದರೆ ಕೆಂಪಿಂದ ಆಚ ಹೊಡೆಯಂಗೂ, ನೀಲಿಂದ ಈಚ ಹೊಡೆಯಂಗೂ ಇಪ್ಪ ತರಂಗಂಗ ನವಗೆ ಕಣ್ಣಿಂಗೆ ಕಾಣದ್ದರೂ ಅವು ಇಪ್ಪದರ ಬೇರೆ ಬೇರೆ ಪ್ರಯೋಗ ಮೂಲಕ ಕಾಂಬಲಾವ್ತು. ರೇಡಿಯೋ, ಮೈಕ್ರೋ ವೇವ್, ಏಳು ಬಣ್ಣಂಗ, ಎಕ್ಸ್-ರೇ, ಅಣು-ವಿಕರಣದ ಎಲ್ಲಾ ತರಂಗ ಈ ಪಟ್ಟಿಲಿ ಬತ್ತು. ನಕ್ಷತ್ರಂಗಳ ಕಿರಣವೂ ಹೀಂಗಿಪ್ಪ ವಿದ್ಯುತ್ ಕಾಂತೀಯ ಅಲೆಗಳೇ.

ಮುಂದೆ ಈ ಡಾಪ್ಲರ್ ಇಫೆಕ್ಟ್ ಹೇಳ್ತದರ ಆವಿಷ್ಕಾರ ಖಗೋಳ ವಿಜ್ಞಾನಕ್ಕೆ ಎಷ್ಟೋ ವಿಷಯಂಗಳ ಸರಿಯಾಗಿ ತಿಳ್ಕೊಂಬಲೆ ಕಾರಣ ಆತು. ಕ್ಷಣ ಕ್ಷಣಕ್ಕೆ ಬಣ್ಣ ಬದಲಪ್ಪ ಕೆಲವು ನಕ್ಷತ್ರಂಗ ಎಂತಕೆ ಹಾಂಗೆ ಹೇಳಿ ಅರ್ಥ ಅಪ್ಪಲೆ, ಒಂದು ನಕ್ಷತ್ರ ನಮ್ಮಂದ ದೂರ ಹೋವ್ತಾ ಇದ್ದಾ, ಅಲ್ಲ ಹತ್ತರೆ ಬತ್ತಾ ಇದ್ದಾ ಹೇಳಿ ಈ ತರಂಗ ಪಲ್ಲಟದ (ಬಣ್ಣ ಬದಲಪ್ಪ ವಿದ್ಯಮಾನ) ಅಭ್ಯಾಸ ಮಾಡಿ ತಿಳಿವಲೆ ಆವ್ತು.

ಖಗೋಳ ವಿಜ್ಞಾನದ ಬಗ್ಗೆ ಇನ್ನೂ ಹೆಚ್ಚು ಮಾತಾಡುವದಕ್ಕೆ ಮದಲು ಬೇರೆ ಎಲ್ಲೆಲ್ಲಾ ಡಾಪ್ಲರ್ ಇಫೆಕ್ಟ್ ಉಪಯೋಗ ಆವ್ತು ಹೇಳಿ –

ನಮ್ಮ ದೇಹಲ್ಲಿ ಆವ್ತಾ ಇಪ್ಪ ರಕ್ತ ಚಲನೆಯ ಬಗ್ಗೆ, ಹೃದಯದ, ಹೃದಯದ ಕವಾಟಂಗಳ ಕೆಲಸ ಮತ್ತು ಅಲ್ಲಿ ಏನಾದರೂ ಸಮಸ್ಯೆ ಇದ್ದಾ ಹೇಳಿ ತಿಳಿವಲೂ ಇದರ ಉಪಯೋಗ ಆವ್ತು.

ನೀರಿನ ಅಡಿಲಿ ಹೋಪ ಸಬ್ ಮೆರೀನ್ ಹಡಗುಗಳಲ್ಲಿ ಎದುರೆ ಇಪ್ಪ ತಡೆ, ಎಲ್ಲಾದರೂ ಇಪ್ಪ ವೈರಿಗಳ ಉಪಕರಣಂಗಳ, ವಾಹನಂಗಳ ಗುರುತಿಸುವಲ್ಲಿ, ಧ್ವನಿ ಮುದ್ರಿಕೆ ತಂತ್ರಗಾರಿಕೆಲಿ, ಉಪಗ್ರಹದ ಸಂಕೇತ ರವಾನೆಯ ಸಂದರ್ಭಂಗಳಲ್ಲಿಯೂ ಇದರ ಗಣನೆಗೆ ತೆಕ್ಕೊಳ್ಳೆಕ್ಕಾವ್ತು.

ಬೇರೆ ಬೇರೆ ರೀತಿಲಿ ಕಂಪಿಸುವ ವಸ್ತುಗಳ ಕಂಪನದ ಅಳತೆ ಮಾಡುಲೂ ಇದರ ಉಪಯೋಗ ಮಾಡುಲಾವ್ತು.

ಬೇರೆ ಬೇರೆ ಕ್ಷೇತ್ರಂಗಳಲ್ಲಿ ನೀರು ಅಥವಾ ಬೇರೆ ದ್ರವಂಗ ಹರಿದು ಹೋಪ ಪ್ರಮಾಣ, ವೇಗದ ಲೆಕ್ಖ ಹಾಕುಲೆ ಈ ತಂತ್ರ ಜ್ಞಾನದ ಉಪಯೋಗ ಆವ್ತು. ಹೀಂಗೆ ಲೆಕ್ಖ ಹಾಕುಲೆ ಆ ಪ್ರವಾಹವ ನಾವು ಸ್ಪರ್ಶ ಮಾಡೆಕ್ಕಾವ್ತಿಲ್ಲೆ. ಕೆಲವು ಸರ್ತಿ ಸ್ಪರ್ಶದ ಮೂಲಕ ಮಾಡುವ ಅಳತೆಗ ನಿಜವಾದ ವಿದ್ಯಮಾನದ ಮೇಲೆ ಪರಿಣಾಮ ಬೀರಿ ಅದರ ಬದಲಪ್ಪ ಹಾಂಗೆ ಮಾಡೊದಿದ್ದು. ಇದು ಒಂದು ಸೂಕ್ಷ್ಮ ವಿಷಯ. ಯಾವದನ್ನೇ ಆಗಲಿ ನಾವು ಪರಿಶೀಲನೆ ಮಾಡೆಕ್ಕಾದರೆ ಅದರ ಮೇಲೆ ಚೂರಾದರೂ ಪ್ರಭಾವ ಬೀರದ್ದೆ ಮಾಡುಲೆ ಆವ್ತಿಲ್ಲೆ. ಈಗ ನಾವು ಒಂದು ಕೋಲಿನ ಉದ್ದವ ಸ್ಕೇಲ್ ಹಿಡ್ಕೊಂದು ಅಳತೆ ಮಾಡ್ತು ಹೇಳಿ ಮಡಿಕ್ಕೊಂಬ. ನಾವು ಸ್ಕೇಲಿನ ಆ ಕೋಲಿಂಗೆ ಮುಟ್ಟುಸೊಗ ಅದರ ಮೇಲೆ ಒಂದು ಚೂರಾದರೂ ಒತ್ತಡ ಬೀಳ್ತು – ಅದರಂದಾಗಿ ಅದರ ಉದ್ದಲ್ಲಿ ಹೆಚ್ಚು-ಕಡಮ್ಮೆ ಅಪ್ಪ ಸಾಧ್ಯತೆ ಇದ್ದು ಅಲ್ಲದಾ? ಅದೇ ಬೆಳಕಿನ ಕಿರಣವ ಅದರ ಮೇಲೆ ಹಾಯಿಸಿ ಅಳತೆ ಮಾಡಿದರೆ ನಾವು ಅದರ ಮೇಲೆ ಬೀರುವ ಪ್ರಭಾವ ನಗಣ್ಯ ಹೇಳುಲಕ್ಕು. ಅತ್ಯಂತ ಸೂಕ್ಷ್ಮ ಅಳತೆಗಳಲ್ಲಿ (ಅಣು-ಪರಮಾಣುಗಳ ಮಟ್ಟಲ್ಲಿ) ನಾವು ಅಳತೆ ಮಾಡುಲೆ ಹಾಯಿಸುವ ಕಿರಣಂಗಳಿಂದಾಗಿ ಅಪ್ಪ ಪ್ರಭಾವದ ಬಗ್ಗೆಯೂ ಯೋಚಿಸೆಕ್ಕಾವ್ತು.

ಇನ್ನು ನಿಂಗ ಖಗೋಳ ವಿಜ್ಞಾನಕ್ಕೆ ಬನ್ನಿ

ವಾಪಾಸು ಖಗೋಳ ಶಾಸ್ತ್ರಕ್ಕೆ ಬಪ್ಪದಾದರೆ – ಅಂತರಿಕ್ಷಲ್ಲಿಪ್ಪ ಆಕಾಶ ಕಾಯಂಗಳ ಚಲನೆ ಮತ್ತು ಆ ಮೂಲಕವಾಗಿ ಈ ವಿಶ್ವದ ಹುಟ್ಟು, ಈಗಾಣ ಪರಿಸ್ಥಿತಿ ಮಂದೆ ಎಂತ ಅಕ್ಕು ಹೇಳಿ ತಿಳಿವಲ್ಲೂ ಡಾಪ್ಲರ್ ಇಫೆಕ್ಟ್ ಉಪಯೋಗ ಆವ್ತು.

ಅದರೆಲ್ಲ ವಿವರವಾಗಿ ತಿಳಿವ, ಅದರೊಟ್ಟಿಂಗೇ ಯಾವ ಯಾವ ರೀತಿಯ ‘ಆಕಾಶ ಕಾಯಂಗ’ ಇದ್ದವು ಈ ವಿಶ್ವಲ್ಲಿ ಹೇಳಿಯೂ ಈಗ ನೋಡುತ್ತಾ ಹೋಪ.

ಮೊದಲಾಗಿ ನಮ್ಮದೇ ಸೂರ್ಯ ಮಂಡಲದ ವಿವರ ನೋಡುವ – ಸೂರ್ಯನ ಕೇಂದ್ರವಾಗಿಟ್ಟುಗೊಂಡು ಎಲ್ಲಾ ಗ್ರಹಂಗ ದೀರ್ಘ ವೃತ್ತಾಕಾರದ ಪಥಲ್ಲಿ ಸುತ್ತು ಹಾಕುತ್ತವು. ದೀರ್ಘ ವೃತ್ತ ಹೇಳಿದರೆ ಕೋಳಿ ಮೊಟ್ಟೆಯ ಹಾಂಗಿಪ್ಪ ಆಕಾರ. ವೃತ್ತಕ್ಕೆ ಒಂದು ಕೇಂದ್ರ ಆದರೆ, ದೀರ್ಘ ವೃತ್ತಕ್ಕೆ ಎರದು ಕೇಂದ್ರಂಗ. ಸೂರ್ಯ ಒಂದು ಕೇಂದ್ರಲ್ಲಿರ್ತು ಈ ಗ್ರಹಂಗಳ ಪಥಲ್ಲಿ. ಅದಲ್ಲದ್ದೆ ಭೂಮಿಯ ಹಾಂಗೇ ಈ ಗ್ರಹಂಗಳು ತಮ್ಮ ಸುತ್ತು ಕೂಡ ಸುತ್ತು ಹೊಡೆತ್ತಾ ಇರ್ತವು.

ಸೂರ್ಯಂದ ಇಪ್ಪ ದೂರದ ಪ್ರಕಾರ ಅತೀ ಹತ್ತರೆ ಬುಧ ಗ್ರಹ, ಆ ಮೇಲೆ ಶುಕ್ರ, ಭೂಮಿ, ಮಂಗಳ ಈ ನಾಲ್ಕು ಗ್ರಹಂಗ ಒಳಾಣ ಸುತ್ತಿನವು. ಆ ಮೇಲೆ ಅದೇ ಒಳಾಣ ಸುತ್ತಿಲೇ ಕ್ಷುದ್ರ ಗ್ರಹಂಗಳ ದೊಡ್ಡ ಸಮೂಹವೇ ಇದ್ದು.

ಮತ್ತೆ ಹೆರಾಣ ಸುತ್ತಿಲಿ ಗುರು, ಶನಿ, ಯುರೇನಸ್, ನೆಪ್ಚೂನ್ ಗ್ರಹಂಗಳೂ, ಧೂಮಕೇತುಗಳೂ ಇದ್ದವು. ಭೂಮಿಂದ ಸೂರ್ಯಂಗಿಪ್ಪ ದೂರವ ಒಂದು ಅಂತರಿಕ್ಷ ಮಾನ (Astronomical Unit – AU) ಹೇಳಿ ತಿಳ್ಕೊಂಡರೆ, ಈ ಸುತ್ತು 5 AU ರಿಂದ 30 AU ವರೆಗೆ ವ್ಯಾಪಿಸಿ ಇದ್ದು.

ಮತ್ತೆ ಅದರಂದ ಅತ್ಲಾಗಿಯಾಣ ಕ್ಷೇತ್ರಲ್ಲಿ ಇತ್ತೀಚೆಗೆ ಗ್ರಹದ ಬದಲು ಕುಬ್ಜ ಗ್ರಹ (dwarf planet) ಹೇಳಿ ಪುನ: ನಾಮಕರಣಗೊಂದ ಪ್ಲೂಟೋ ಮತ್ತು ಹಾಂಗಿಪ್ಪ ಅನೇಕ (ಒಂದು ಅಂದಾಜಿ ಪ್ರಕಾರ ಸುಮಾರು 72 ಸಾವಿರಂದ ಒಂದು ಲಕ್ಷ ಸಂಖ್ಯೆಯ) ಕ್ಷುದ್ರ ಗ್ರಹಂಗ ಇದ್ದವು. ಈ ಕ್ಷೇತ್ರ 30 AU ರಿಂದ 90 AU ವರೆಗೆ ಹರಡಿದ್ದು. ಹೇಳಿದರೆ ಈ ಕ್ಷೇತ್ರದ ಅಕೇರಿಯಾಣ ಗಡಿ ಸೂರ್ಯಂದ ಇಪ್ಪ ದೂರ ಭೂಮಿ ಇಪ್ಪ ದೂರಕ್ಕಿಂತ ತೊಂಬತ್ತು ಪಟ್ಟು ಹೆಚ್ಚು.

ಎಲ್ಲಿ ವರೆಗೆ ಸೂರ್ಯ ಮಂಡಲದ ವ್ಯಾಪ್ತಿ ಇದ್ದು ಮತ್ತು ಎಲ್ಲಿಂದ ಬಾಹ್ಯಾಂತರಿಕ್ಷ (inter stellar space) ಸುರು ಆವ್ತು ಹೇಳುವ ಬಗ್ಗೆ ನಿಖರವಾದ ವ್ಯಾಖ್ಯೆ ಇಲ್ಲದ್ದರೂ, ಸೂರ್ಯನ ಗುರುತ್ವಾಕರ್ಷಣೆ ಮತ್ತು ಸೂರ್ಯನಿಂದ ಹೊಮ್ಮುವ ವಿದ್ಯುತ್ ಚಾರ್ಜ್ ಹೊಂದಿಪ್ಪ ಕಣಂಗಳ ಪ್ರಭಾವ ಎಷ್ಟು ದೂರದ ವರೆಗೆ ಗಮನೀಯವಾಗಿದ್ದೋ ಅದರನ್ನೇ ಸೂರ್ಯ ಮಂಡಲದ ಕೊನೆ ಹೇಳಿ ತಿಳ್ಕೊಳ್ತವು.

ಭೂಮಿಯ ಸುತ್ತಳತೆ ಸುಮಾರು ನಲುವತ್ತು ಸಾವಿರ ಕಿಲೋ ಮೀಟರ್.

ಬೆಳಕಿನ ವೇಗ ಸೆಕೆಂಡಿಂಗೆ ಮೂರು ಲಕ್ಷ ಕಿಲೋಮೀಟರ್ – ಆದ ಕಾರಣ ಬೆಳಕು ಒಂದು ಸೆಕೆಂಡಿಂಗೆ ಭೂಮಿಗೆ 8 ಸುತ್ತು ಬಪ್ಪಷ್ಟು ವೇಗವಾಗಿ ಸಾಗುತ್ತು.

ಹೀಂಗಿಪ್ಪ ಬೆಳಕಿಂಗೆ ಸೂರ್ಯಂದ ಭೂಮಿಯ ತಲುಪುಲೆ ಸುಮಾರು 8 ನಿಮಿಷ ಬೇಕಾವ್ತು. ಅಂದರೆ 1 AU ಹೇಳಿದರೆ 1496 ಲಕ್ಷ ಕಿಲೋಮೀಟರ್ = ಭೂಮಿಯ ಸುತ್ತಳತೆಯಯ 3740 ಪಾಲು.

ಹಾಂಗಿಪ್ಪ ನೂರು – ಇನ್ನೂರು AU ವಿನ ದೂರಲ್ಲಿ ಸೂರ್ಯಮಂಡಲ ಮುಗುದು ಬಾಹ್ಯಾಂತರಿಕ್ಷ ಸುರು ಆವ್ತು ಹೇಳಿ ಇಗಾಣ ಅಂದಾಜಿ. ಅಲ್ಲಿ ಹೇಂಗಿದ್ದು ವಿದ್ಯಮಾನ ಹೇಳುದರ ಬಪ್ಪ ವಾರ ನೋಡುವ.

~*~

ಸೂ:
ಡಾಪ್ಲರ್ ಎಫೆಕ್ಟ್ ನ ಬಗ್ಗೆ ಹೆಚ್ಚಿನ ಮಾಹಿತಿ ಈ ಸಂಕೊಲೆಲಿ ಸಿಕ್ಕುತ್ತು: http://en.wikipedia.org/wiki/Doppler_effect

 

13 thoughts on “ಸೂರ್ಯ ಮಂಡಲ

  1. ರಘು ಮುಳಿಯ, ನಿಂಗಳ ಪ್ರೋತ್ಸಾಹಕ್ಕೆ ಧನ್ಯವಾದಂಗ. ಇನ್ನಾಣ ಕಂತಿನ ಬರವಲೆ ಶುರು ಮಾಡಿದ್ದೆ. ನಾಳ್ತು ಬುಧವಾರ ಕಾಂಬ ಬೈಲಿಲಿ.

  2. ಭಾರೀ ಸರಳ ರೀತಿಲಿ ವಿಷಯ ಮನದಟ್ಟು ಆತು.ಧನ್ಯವಾದ ಅಪ್ಪಚ್ಚಿ.ಮು೦ದಾಣ ಕ೦ತಿ೦ಗೆ ಕಾವೊದು.

  3. ಗೋಪಾಲಣ್ಣ, ನಿಂಗೊ ಹೇಳಿದ್ದು ಸರಿ. ಸೌರ ವ್ಯೂಹ better ಶಬ್ದ. ಇನ್ನಾಣ ಸರ್ತಿ ಸರಿ ಮಾಡಿಗೊಳ್ತೆ.

  4. ಕೂಗಳತೆಯ ಹಾಂಗೆ ಆಕಾಶದ ಅಳತೆಯನ್ನೂ ವಿವರಿಸಿದ ಅಪ್ಪಚ್ಚಿಗೆ ಧನ್ಯವಾದ.ಸೂರ್ಯಮಂಡಲ ಹೇಳುವ ಶಬ್ದದ ಬದಲು ಸೌರವ್ಯೂಹ ಹೇಳುವ ಶಬ್ದವ ಸೋಲಾರ್ ಸಿಸ್ಟಮ್ ಹೇಳುವ ಶಬ್ದಕ್ಕೆ ಪರ್ಯಾಯವಾಗಿ ಉಪಯೋಗಿಸುತ್ತವು-ಹೇಳಿ ಸಣ್ಣ ಸೂಚನೆ.

  5. ಚೆನ್ನೈ ಭಾವ, ತೆಕ್ಕುಂಜ ಕುಮಾರ ಮಾವ, ಎಂ.ಎಸ್.ಕೆ, ಶರ್ಮಪ್ಪಚ್ಚಿ, ಗೋಪಾಲ ಬೊಳುಂಬು, ಮಾನೀರ್ ಮಾಣಿ – ನಿಂಗೊಗೆಲ್ಲೋರಿಂಗೂ ತುಂಬು ಹೃದಯದ ಧನ್ಯವಾದಂಗ. ನಿಂಗ ಮೆಚ್ಚಿ ಬರದ ಮಾತುಗೊ ಇನ್ನೂ ಹೆಚ್ಚು ಪ್ರಯತ್ನ ಮಾಡುಲೆ ಪ್ರೋತ್ಸಾಹ ಕೊಡುತ್ತು. ಮತ್ತೆ ಬಪ್ಪ ಬುಧವಾರ ಕಾಂಬ.

  6. ಆಹಾ!!! ಶಾಲೆ ಮಾಸ್ತರೆಲ್ಲಾ ನೆನಪಪ್ಪಾ೦ಗೆ ವಿವರಿಸಿದ ಪಟಿಕಲ್ಲಪ್ಪಚ್ಚಿಗೆ ಧನ್ಯವಾದ೦ಗೋ. 🙂

  7. ಸರಳ ಸುಂದರ ವಿವರಣೆ ಸುಲಾಬಲ್ಲಿ ಮನಸ್ಸಿಂಗೆ ಹೊಕ್ಕತ್ತು. ಅಪ್ಪಚ್ಚಿ ಬರೆತ್ತ ಶೈಲಿಯೇ ಹಾಂಗೆ, ಲಾಯಕಿದ್ದು. ಮುಂದುವರಿಯಲಿ.

  8. ಒಳ್ಳೆ ಮಾಹಿತಿ ಕೊಟ್ಟ ಲೇಖನ
    ಧನ್ಯವಾದಂಗೊ

  9. ಓದಿ ಒಪ್ಪ ಕೊಟ್ಟು ಹುರಿದುಂಬಿಸಿದ ಎಲ್ಲೋರಿಂಗೂ ಧನ್ಯವಾದಂಗ.
    ಇಂದು (05-12-12) ಪೇಪರಿಲಿ ಒಂದು ಸುದ್ದಿ ಬಂದಿತ್ತು. ಅಮೆರಿಕಾದೋವು 35 ವರ್ಷ ಮದಲು ಹಾರಿಸಿ ಬಿಟ್ಟ ಎರಡು voyager 1 ಮತ್ತು voyager 2 ಹೇಳುವ ಜೋಡು ಕುಟ್ಟಿ ಉಪಗ್ರಹಂಗಳಲ್ಲಿ, ಒಂದು ಸೂರ್ಯ ಮಂಡಲದ ಬೌಂಡರಿಗೆ ತಲುಪಿದ್ದಡ. ಅದರ ಹೆಚ್ಚಿನ ಮಾಹಿತಿ ಸಿಕ್ಕಿದರೆ ಇನ್ನಾಣ ಸರ್ತಿ ವಿಚಾರ ಮಾಡುವ.

  10. ನಾವಗೆ ತೋಟಕ್ಕೆ ಹೋದ ಆಳುಗಳ ಉ೦ಬಲೆ ಬಪ್ಪಲೆ ದೆನಿಗೊಳುಲೆ, ಕೂಕಿಲು ಹಾಕಿ ಮಾತ್ರ ಗೊ೦ತು.
    ಅದರ ಅ೦ದಾಜಿಲಿ ,ತೋಟದ ಯಾವ ಮೂಲೆಲಿ ,ಅಡಕ್ಕೆ ಮರದ ಬಿಡಿಸಿಕೊ೦ಡಿಕ್ಕು ಹೇಳೀ ಅ೦ದಾಜು ಮಾಡುದು.
    ಅದರೆ ಕೆಲವು ಸರ್ತಿ ಅದುದೆ ಬುದ್ದಿ೦ತಿಕೆ ಮಾಡಿ ,ಹತ್ತರಲ್ಲೆ ಇದ್ದರೂ ದೂರಲ್ಲಿ ಇಪ್ಪಾ೦ಗೆ ಇಫೆಕ್ಟು ಕೊಡುತ್ತು.
    ಸೂರ್ಯಮ೦ಡಲ೦ದ ಅತ್ತಾಗಿಯೂ,ವಹಿವಾಟು ಇದ್ದು ,ಹೇಳುತ್ತದು ಆಸಕ್ತಿಕರ. ಅಲ್ಲಿ ಆರದ್ದು ಸಮ್ಮಿಶ್ರ ಕಾರುಬಾರು ನಡೆತ್ತೋ?

  11. ಡಾಪ್ಲರ್ ಎಫೆಕ್ಟ್ ಮತ್ತೆ ಅಂತರಿಕ್ಷ ವಿಸ್ಮಯಂಗಳ ಸರಳ ಭಾಷೆಲಿ ವಿವರುಸುವ ಪಟಿಕ್ಕಲ್ಲ ಅಪ್ಪಚ್ಚಿಗೆ ನಮೋ ನಮಃ. ಬೈಲಿನ ಮೂಲಕ ಅನೇಕ ವಿಷಯಂಗೊ ಸರಳವಾಗಿ ಮನದಟ್ಟು ಮಾಡಿಗೊಂಬಲೆ ಸಾಧ್ಯ ಆವ್ತು.

    ಅಪ್ಪಚ್ಚಿಯ ಶುದ್ದಿಯ ಓದುವಾಗ ಶಾಲೆಬೆಂಚಿಲಿ ಕೂದು ಒಬ್ಬ ಒಳ್ಳೆ ಮಾಷ್ಟ್ರ ಪಾಠ ಕೇಳಿದಾಂಗೆ ಆವ್ತು. ಹರೇ ರಾಮ ಅಪ್ಪಚ್ಚಿ.

  12. ಡೋಪ್ಲರ್ ಅಫೆಕ್ಟ್ ಅಂತರಿಕ್ಷ ಮತ್ತೆ ವೈದ್ಯಕೀಯ ಕ್ಷೇತ್ರಲ್ಲಿಯೂ ಉಪಯೋಗ ಇದ್ದು ಹೇಳುದು ಇಂದು ಗೊಂತಾತು. ತುಂಬ ಸುಲಭಲ್ಲಿ ಅರ್ಥ ಅಪ್ಪ ಹಾಂಗೆ ಸರಳ ಶಬ್ಧಂಗಳಲ್ಲಿ ವಿವರಿಸಿದ್ದಿ.
    ಇನ್ನು ಬಪ್ಪ ವಾರಲ್ಲಿ ನಮ್ಮೆಲ್ಲೋರನ್ನುಅಂತರಿಕ್ಷಕ್ಕೆ ಕರಕ್ಕೊಂಡು ಹೋವುತ್ತಿ ಹೇದು ಗೊಂತಾಗಿ ಕೊಶೀ ಆತು, ನಾವು ತಯಾರಿಲಿದ್ದು ಅಪ್ಪಚ್ಚಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×