Oppanna.com

ಜೀವನಲ್ಲಿ ಎತ್ತರಕ್ಕೆ ಏರಲೇಬೇಕು ಆದರೆ ಈ ಗುಂಡಿಗೂ ಒಂದರಿ ಇಳಿಯಕು !

ಬರದೋರು :   ಸುವರ್ಣಿನೀ ಕೊಣಲೆ    on   15/08/2011    21 ಒಪ್ಪಂಗೊ

ಸುವರ್ಣಿನೀ ಕೊಣಲೆ

ಇದು ಸಣ್ಣ ಪ್ರವಾ(ಯಾ)ಸದ ದೊಡ್ಡ ಕಥೆ, ಪುರ್ಸೊತ್ತಿಲ್ಲಿ ಓದಿ !

ಮಳೆಗಾಲಲ್ಲಿ ನಾಲಗೆ ನೀಲಿ ಮಾಡುವ ಕುಂಟಲ ಹಣ್ಣಿನ ರುಚಿ , ಮತ್ತೆ ಆ ಅನುಭವ ಸಾವಿರ ರೂಪಾಯಿ ಕೊಟ್ಟರೂ ಸಿಕ್ಕ ಅಲ್ಲದಾ? ಹೀಂಗಿದ್ದ ಹಲವು ನೆಂಪುಗಳ ಬಾಲ್ಯದ ದಿನಂಗಳ ನೆಂಪು ಮಾಡಿಗೊಂಬಗಳೇ ಒಂದು ರೀತಿಯ ಸಂತೋಷ ಅಲ್ಲದಾ? ಅದೂ ಮಳೆಗಾಲಲ್ಲಿ ಬೆಚ್ಚಂಗೆ ಕೂದುಗೊಂಡು ಹಳೆ ನೆನಪುಗಳ ಗಂಟು ಬಿಚ್ಚುವ ಖುಷಿಯೇ ಬೇರೆ 🙂ಇಂದು ನೆಂಪುಮಾಡುವ ಹಳೇ ಅನುಭವಂಗೊ ಮತ್ತಷ್ಟು ಹಳತ್ತಪ್ಪ ಕಾಲಕ್ಕೆ ನೆಂಪು ಮಾಡುಲೆ ಹೊಸ ಅನುಭವಂಗೊ ಬೇಡದಾ? ಬದಲಾವಣೆಗಳೊಟ್ಟಿಂಗೆ ಬದುಕ್ಕುವ ಅನಿವಾರ್ಯತೆ ಇಪ್ಪಗ ನಾವು ಹೊಸ ಬದುಕ್ಕಿಲ್ಲಿ ಹೊಸ ಅನುಭವಂಗಳೊಟ್ಟಿಂಗೆ ಮತ್ತದೇ ಸಂತೋಷವ ಹುಡುಕ್ಕುವ ಪ್ರಯತ್ನ ಮಾಡ್ತು. ಹೀಂಗಿದ್ದ ಒಂದು ಪ್ರಯತ್ನ ಮೊನ್ನೆ ಒಂದು ದಿನ ಮಾಡಿದೆ..ಕುಂಟಲ ಹಣ್ಣು ತಿಂಬಲೆ ಸಿಕ್ಕಿದ್ದಿಲ್ಲೆ, ಆದರೆ ಮನಸ್ಸಿಂಗೆ ಸಂತೋಷ ಅಂತೂ ಆತು…

ಹೊಸ ನೆಂಪು ಹುಟ್ಟುಹಾಕುವ ಆಲೋಚನೆ

ಜೋಗ ಜಲಪಾತದ ಬಗ್ಗೆ ಎಲ್ಲೋರಿಂಗೂ ಗೊಂತಿಕ್ಕು. ಓ ಮೊನ್ನೆ ಶರ್ಮಪ್ಪಚ್ಚಿ ಕುಟುಂಬದೋರೊಟ್ಟಿಂಗೆ ಹೋಗಿ ಬೈಂದವದಾ. ಆನು ಕಳುದವಾರ ಹೋಗಿತ್ತಿದ್ದೆ. ಅದರ ಅನುಭವ ನಿಂಗಳೊಟ್ಟಿಂಗೆ ಹಂಚಿಗೊಂಬ ಹೇಳಿ ಕಂಡತ್ತು 🙂 ಆನು ಜೋಗಕ್ಕೆ ಹೋದ್ದು ಇದು ಮೂರನೇ ಸರ್ತಿ. ಸುರೂವಣ ಸರ್ತಿ ಹೋದ್ದು ಮದುವೆ ಕಳುದು ಎನ್ನ ಅತ್ತೆಯ ಅಪ್ಪನ ಮನೆಗೆ ಸಮ್ಮಾನಕ್ಕೆ ಹೋದಿಪ್ಪಗ ! ಅಪ್ಪು, ಅತ್ತೆಯ ಅಪ್ಪನ ಮನೆ ಜೋಗಕ್ಕೆ ಹತ್ತರೆ, ತಲವಾಟ್ಟ ಹೇಳ್ತ ಊರು. ಅಂಬಗ ಸಮ್ಮಾನದ ಲೆಕ್ಕಲ್ಲಿ ವಿಶ್ವವಿಖ್ಯಾತ ಜೋಗಕ್ಕೆ ಕರಕ್ಕೊಂಡು ಹೋಗಿತ್ತಿದ್ದವು! ನಡುಬೇಸಗೆ, ಅಪ್ಪೋ ಅಲ್ಲದೋ ಹೇಳಿ ರಜ್ಜ ನೀರು ಇತ್ತಿದ್ದು ಜಲಪಾತಲ್ಲಿ ! ಅಂಬಗ ಜಲಪಾತದ ಮೇಲಾಣ ಹೊಡೇಂಗೆ ಹೋಗಿತ್ತಿದ್ದೆ. ಅಲ್ಲಿಂದ ಬಗ್ಗಿ ನೋಡಿಯಪ್ಪಗ ಭಾರೀ ಚೆಂದ ಕಂಡತ್ತು.. ತುಂಬಾ ನೀರಿಪ್ಪಗ ನೋಡೆಕ್ಕು ಹೇಳಿ ಅಂಬಗಳೇ ಮನಸ್ಸಿಲ್ಲಿ ಸಣ್ಣ ಮಟ್ಟಿನ ಸಂಕಲ್ಪ ಮಾಡಿತ್ತಿದ್ದೆ ! ಆದರೆ ಮಳೆಗಾಲಲ್ಲಿ ಹೋಪಲೆ ಕಷ್ಟ ಆ ಊರಿಂಗೆ. ಅಲ್ಲಿ ಮಳೆ ನಿಂಬ ಕ್ರಮವೇ ಇಲ್ಲೆ, ಒಂದಾ ಮಳೆ ಅಲ್ಲದ್ದರೆ ಜೋರು ಮಳೆ !!

ಅಂತೂ ಇಂತೂ ಮಳೆಗಾಲಲ್ಲಿ ಅಲ್ಲಿಗೆ ಹೋಪ ಅವಕಾಶ ಬಂದೊದಗಿತ್ತು! ಒಂದೆರಡು ದಿನದ ಮಟ್ಟಿಂಗೆ ಊರಿಂಗೆ ಹೆರಟಪ್ಪಗಳೇ ಮನಸ್ಸಿಲ್ಲಿ ಗ್ರೇಶಿದೆ, ಈ ಸರ್ತಿ ಜೋಗ ನೋಡೆಕ್ಕೇ ಹೇಳಿ. ಆದರೆ ಜೋರು ಮಳೆ ಬಪ್ಪಗ ಹೋಗಿಯೂ ಪ್ರಯೋಜನ ಇಲ್ಲೆನ್ನೆ. ಆದರೆ ಉದಿಯಪ್ಪಗ ಊರಿಂಗೆ ಎತ್ತಿ ಮಿಂದು ತಿಂಡಿ ತಿಂದಿಕ್ಕಿ ಒಂದೊರಕ್ಕು ಒರಗೆಕ್ಕು ಹೇಳಿ ಗ್ರೇಶುವಗ ಹೆರ ಒಳ್ಳೆ ಬೆಶಿಲು ! ಇದಕ್ಕಿಂತ ಸಂದರ್ಭ ಬೇಕಾ? ಕೂಡ್ಲೇ ಇವರ ಹತ್ತರೆ ಹೇಳಿದೆ ’ಇಂದು ಒಳ್ಳೆ ಬೆಶಿಲಿದ್ದು, ನಾವು ಇಂದೇ ಹೋಪ, ನಾಳಂಗೆ ಹೇಳಿ ಕೂದರೆ ಮತ್ತೆ ಮಳೆ ಬಂದರೆ ಹೊಪಲೆಡಿಯನ್ನೆ ’ ಹೇಳಿ. ಅಂಬಗ ಮನೆಗೆ ಎತ್ತಿದ್ದಷ್ಟೇ, ರಜ್ಜ ವಿಶ್ರಾಂತಿ ಮಾಡುವ ಮನಸ್ಸಿದ್ದ ಜನಕ್ಕೆ ಅಷ್ಟು ಉಮೇದಿತ್ತಿಲ್ಲೆ, ಅದಕ್ಕೆ ಇನ್ನೊಂದು ಕಾರಣ ಇದ್ದು..ಅವ್ವು ಸಣ್ಣಾದಿಪ್ಪಗಂದ ಹೊಗಿ ನೋಡಿದ್ದವನ್ನೆ, ಹಾಂಗಾಗಿ ಎನಗೆ ಇದ್ದ ಹೊಸ ಹುರುಪು ಇತ್ತಿಲ್ಲೆ ಬಹುಶಃ. ಆದರೂ ಆನು ಬಿಡೆಕ್ಕನ್ನೆ !! ಬೆಶಿಲಿದ್ದು, ಇಂತಹ ಅವಕಾಶ ಬಿಡ್ಲೆ ಮನಸ್ಸಿಲ್ಲೆ… ಇಂತೂ ಅಂತೂ ಹೆರಟಾತು !!

ಜೋಗಕ್ಕೆ ಪಯಣ

ಅಗತ್ಯ ಇಪ್ಪ ವಸ್ತು ಫೋನು, ಅಲ್ಲಿಯಾಣ ಪಟ ತೆಗವಲೆ ಕ್ಯಾಮರಾ, ಮತ್ತೆ ಮಳೆಗಾಲಲ್ಲಿ ಮಳೆ ಬಂದರೆ ಚೆಂಡಿ ಅಪ್ಪಲಾಗ ಹೇಳಿ ಮಳೆಕೋಟು, ಇಷ್ಟು ತೆಕ್ಕೊಂಡು ಬೈಕಿಲ್ಲಿ ಜೋಗದ ದಿಗ್ವಿಜಯಕ್ಕೆ ಹೆರಟಾತು…ಎಲ್ಲಕ್ಕಿಂತ ಅಗತ್ಯ ಬೇಕಾದ ಒಂದು ಕುಪ್ಪಿ ನೀರು ತೆಕ್ಕೊಂಬಲೆ ಆ ಗೌಜಿಲಿ ಮರತ್ತೇ ಹೋತು [ಇದು ನೆಂಪಾದ್ದು ಜೋಗಕ್ಕೆ ಎತ್ತಿದಮೇಲೆ!!]. ಎಂಗಳಲ್ಲಿಂದ ಜೋಗಕ್ಕೆ 35ಕಿಲೋಮೀಟರ್ ಆವ್ತು. ಸಾಗರಕ್ಕೆ ಹೋಗಿ ಅಲ್ಲಿಂದ ಬೆಂಗಳೂರು ಹೊನ್ನಾವರ ಹೈವೇಲಿ (BH Road) ಹೋಯಕ್ಕು. ಮನೆಂದ ಹೆರಡುವಗ ಬೆಶಿಲಿತ್ತಿದ್ದು, ಅಲ್ಲಿಗೆ ಹೋಗಿ ಬಪ್ಪನ್ನಾರವೂ ಬೆಶಿಲು ಇರಲಿ ಹೇಳಿ ಮನಸ್ಸಿಲ್ಲಿಯೇ ಪ್ರಾರ್ಥನೆ ಮಾಡಿಗೊಂಡು ಹೋದೆಯ. ಎಂಗಳ ಹೊಟ್ಟೆಲಿ ದೋಸೆ ಇತ್ತಿದ್ದು, ಬೈಕಿನ ಹೊಟ್ಟೆಗೂ ಎಂತಾರು ಹಾಕೆಡದಾ? ಹಾಂಗೆ ಸಾಗರ ಪೇಟೆಲಿ ಪೆಟ್ರೋಲು ತುಂಬ್ಸಿಗೊಂಡು ಜೋಗದ ದಿಕ್ಕಿಲ್ಲೆ ಹೆರಟೆಯ. ಎನ್ನದೊಂದು ಅಭ್ಯಾಸ ಇದ್ದು, ಬೈಕಿಲ್ಲಿ ಹೋಪಗ ಬಾಯಿ ಸುಮ್ಮನಿರ್ತಿಲ್ಲೆ, ಎಂತಾರು ಮಾತಾಡಿಗೊಂಡು ಬೇಕು. ಮಾರ್ಗಲ್ಲಿ ಹೋಪಗ ಕಂಡದರ ಬಗ್ಗೆ ಎಲ್ಲಾ ಎಂತಾರು ಕಮೆಂಟು ಮಾಡಿಗೊಂಡು ಹೋಪದು ಎನ್ನ ದುರಭ್ಯಾಸ ! ಅಷ್ಟೇ ಅಲ್ಲ, ಮಾರ್ಗದ ಕರೇಲಿ ಇಪ್ಪ ಎಲ್ಲಾ ಬೋರ್ಡುಗಳನ್ನೂ ಓದುದು ಇನ್ನೊಂದು ಅಭ್ಯಾಸ, ಈ ಅಭ್ಯಾಸ ಒಂದು ಲೆಕ್ಕಲ್ಲಿ ಒಳ್ಳೆದೇ … ದಾರಿ ನೆಂಪುಮಡಿಕ್ಕೊಂಬಲೆ !

ಹ್ಞಾ…ಅಲ್ಲಿಂದ ಮುಂದೆ ಹೋಪಗ ಬಲತ್ತಿಂಗೆ ಹೊಸತಾಗಿ ಆದ ಸರ್ಕಾರೀ ಬಸ್ಸುಗಳ ನಿಲ್ದಾಣ ಇದ್ದು, ಶಿರಸಿ, ಹೊನ್ನಾವರ, ಕಾರವಾರ, ಬೆಂಗಳೂರಿಂಗೆಲ್ಲಾ ಹೋಪ ಬಸ್ಸುಗೊ ಇಲ್ಲಿ ನಿಲ್ಲುತ್ತು. ಹಾಂಗೆ ರಜ್ಜ ಮುಂದೆ ಹೋಪಗ ಎಡತ್ತಿಂಗೆ ವರದಳ್ಳಿಗೆ ಹೋಪ ಮಾರ್ಗ ಇದ್ದು. ವರದಳ್ಳಿಯ ಬಗ್ಗೆ ಮೊನ್ನೆ ಶರ್ಮಪ್ಪಚ್ಚಿ ಶುದ್ದಿ ಹೇಳಿದ್ದವ್ವು.  ಇನ್ನುದೇ ರಜ್ಜ ಮುಂದೆ ಹೋಪಗ ಎಡತ್ತಿಲ್ಲಿ ತುಂಬಾ ಹಳೇ ತುಂಬಾ ಪ್ರಸಿದ್ಧ ಕಾಲೇಜು ಸಿಕ್ಕುತ್ತು ಲಾಲ್ ಬಹದ್ದೂರ್ ಮತ್ತು ಎಸ್.ಬಿ.ಸೊಲಬಣ್ಣ ಶೆಟ್ಟಿ ಕಾಲೇಜು (L.B.College). ಸಾಗರದ ಹೆಮ್ಮೆ ಅದು. ನಮ್ಮ ಪುತ್ತೂರಿಲ್ಲಿ ರಾಮಜ್ಜನ ಕಾಲೇಜು ಇದ್ದ ಹಾಂಗೆ ! ಸಾಗರದ ಸುತ್ತಮುತ್ತಲಾಣ ಹೆಚ್ಚಿನವ್ವು ಇಲ್ಲಿಯೇ ಕಲ್ತದು. ಈಗಾಣವ್ವು ಹೆರ ಕಲಿವಲೆ ಹೋವ್ತವು. ಆದರೆ ಮೊದಲಿಂಗೆ ಈ ಕಾಲೇಜಿಲ್ಲಿ ಕಲಿವದೇ ಒಂದು ಗೌರವದ ವಿಷಯ. ಯಾವ ಮೋಹನ ಮುರಳಿ ಕರೆಯಿತು ಹೇಳಿ ನಮ್ಮ ನಾವು ಪ್ರಶ್ನಿಸಿಗೊಂಬ ಹಾಂಗೆ ಮಾಡಿದ ಗೋಪಾಲಕೃಷ್ಣ ಅಡಿಗರು ಇಲ್ಲಿ ಪ್ರಾಂಶುಪಾಲರಾಗಿ ಇತ್ತಿದ್ದವು. ಎಲ್ಲವನ್ನೂ ಗೆದ್ದು ಎದ್ದು ನಿಂದ ಹಾಂಗೆ ಕಾಣ್ತು ಕಾಲೇಜಿನ ಕಟ್ಟೋಣವ ನೋಡುವಗ.

ಮಲೆನಾಡಿನ ನೋಟ

ಅಲ್ಲಿಂದ ಮುಂದೆ ಹೋಪಗ ಕಾಂಬದು ಮಲೆನಾಡಿನ ಹಸಿರು ಹಳ್ಳಿಗೊ. ಎರಡೂ ಹೊಡೆಲಿ ಅಡಕ್ಕೆ ತೋಟಂಗೊ, ಕಾಡು, ಭತ್ತದ ಗೆದ್ದೆಗೊ ಕಾಂಬಲೆ ಸಿಕ್ಕುತ್ತು. ಇದೇ ಭತ್ತದ ಗೆದ್ದೆಗಳಲ್ಲಿ ಮುಂಗಾರುಮಳೆ ಸಿನೆಮಾದ ಶೂಟಿಂಗು ಆದ್ದು. ಬೇರೆ ಸುಮಾರು ಸಿನೆಮಾಗಳನ್ನೂ ಇಲ್ಲಿ ಶೂಟ್ ಮಾಡಿದ್ದವು. ಹಾಂಗೆ ಪ್ರಕೃತಿಯ ಸ್ನಿಗ್ಧ ಸೌಂದರ್ಯವ ನೋಡಿ ಅನುಭವಿಸಿಗೊಂಡು ಹೋಪಗ ನಮ್ಮ ರಾಜ್ಯದ ಹೊಂಡಮಯ ಮಾರ್ಗ ರಸಾಭಾಸ ಮಾಡಿಗೊಂಡಿತ್ತು 🙁 .. ಮುಂದೆ ಒಂದು ರೈಲಿನ ಹಳಿ ಕಾಂಬಲೆ ಸಿಕ್ಕುತ್ತು, ಅದರ ದಾಂಟಿಗೊಂಡು ಹೋದಪ್ಪಗ ಸಿಕ್ಕುದು ತಾಳಗುಪ್ಪ. ಈ ಊರಿನ ಬಗ್ಗೆ ನಿಂಗೊಗೆ ಗೊಂತಿಕ್ಕು, ಇಲ್ಲಿ ವರೇಗೆ ರೈಲು ಬತ್ತು ಶಿವಮೊಗ್ಗಂದ. ಇದು ವಿಟ್ಲಂದ ರಜ್ಜ ಸಣ್ಣ ಪೇಟೆ. ರಜ್ಜ ಮುಂದೆ ಒಂದು ದಿಕ್ಕೆಲಿ ಮಾರ್ಗದ ಕರೇಲಿ ಒಂದು ದೊಡ್ಡ ಕೆರೆ ಕಾಂಬಲೆ ಸಿಕ್ಕುತ್ತು, ಆ ಕೆರೆಯ ತುಂಬ ನೈದಿಲೆ ಮತ್ತೆ ತಾವರೆ ಹೂಗುಗೊ ಇಕ್ಕು. ಅದರ ಚೆಂದವ ಕಣ್ಣಿಲ್ಲಿಯೇ ತುಂಬಿಗೊಂಡು ಹೋವ್ತಾ ಇಪ್ಪಗ ಮಾರ್ಗದ ಎರಡೂ ಹೊಡೇಲಿ ಮಾರ್ಗದ ಎರಡೂ ಹೊಡೆಲಿ ಪ್ರತೀ ನೂರಿನ್ನೂರು ಮೀಟರ್ ದೂರಲ್ಲಿ ಒಂದೊಂದು ಅನಾನಾಸು ರಾಶಿ ಹಾಕಿ ಮಾರಿಗೊಂಡು ಇತ್ತಿದ್ದವು. ವಾಪಾಸು ಬಪ್ಪಗ ಎರಡು ಹಣ್ಣು ಮನೆಗೆ ತೆಕ್ಕೊಂಡು ಹೋಯಕ್ಕು ಹೇಳಿ ಗ್ರೇಶಿದೆ. ಇನ್ನು ಮುಂದೆ ಸಿಕ್ಕುವ ಯಾವ ಊರಿನ ಪರಿಚಯವೂ ಎನಗೆ ಇಲ್ಲೆ ! ಒಂದು ದಿಕ್ಕೆ ಗೆದ್ದೆಲಿ ಭತ್ತದ ಸೆಸಿ ನೆಟ್ಟುಗೊಂಡು ಇತ್ತಿದ್ದವ್ವು, ಒಳ್ಳೆ ದೃಶ್ಯ ಹೇಳಿ ಕ್ಯಾಮರಾ ಹೆರ ತೆಗದು ಪಟ ತೆಗವಲೆ ಹೆರಟಪ್ಪಗ ಅವ್ವೆಲ್ಲಾ ಕೆಲಸ ನಿಲ್ಲುಸಿ ಪೋಸು ಕೊಡ್ಲೆ ಶುರುಮಾಡಿದವು !

ಇಲ್ಲೂ ಇದ್ದು ಲಂಚ

ಇಷ್ಟೆಲ್ಲಾ ಅನುಭವಂಗಳೊಟ್ಟಿಂಗೆ ಕರ್ನಾಟಕದ ಹೆಮ್ಮೆ “ಜೋಗ ಜಲಪಾತ” ಇಪ್ಪಲ್ಲಿಗೆ ಎತ್ತಿದೆಯ. ಬೈಕು ತೆಕ್ಕೊಂಡು ಒಳ ಹೋಪಗ ಕಾವಲುಗಾರ ಅಡ್ಡಗಟ್ಟಿ ಐದು ರೂಪಾಯಿ ಕೊಡೆಕ್ಕು ಹೇಳಿ ಕೇಳಿರೂ ಎಂಗೊ ಅದೇ ಊರಿನವ್ವು ಹೇಳಿ ಪೈಸೆ ತೆಕ್ಕೊಳ್ಳದ್ದೆ ಒಳ ಹೋಪಲೆ ಬಿಟ್ಟತ್ತು.  ಒಳ ಹೋಗಿಯಪ್ಪಗ ಬಂತದ ಗ್ರಹಚಾರ, ಮೂರು ಜನ ಪೋಲೀಸುಗೊ ಕೈ ಅಡ್ಡ ಹಿಡುದವ್ವು. ಬೈಕು ನಿಲ್ಲುಸಿ ಎಂತ ಹೇಳಿ ಕೇಳಿಯಪ್ಪಗ ಬೈಕಿಂಗೆ ಸಂಬಂಧಿಸಿದ ರೆಕಾರ್ಡು ಪುಸ್ತಕ ಎಲ್ಲ ಕೇಳಿದವ್ವು, ಎಂಗಳ ಹತ್ತರೆ ಇದ್ದದು Xerox copy, ಅದು ಸಾಕಾವ್ತಿಲ್ಲೆ ಐನೂರು ರೂಪಾಯಿ ಕೊಡಿ ಹೇಳಿ ಕೂದವ್ವು ಆ ಪೋಲೀಸಪ್ಪಂಗೊ ! ಎಂಗಳ ಹತ್ತರೆ ಪೈಸೆ ಇಲ್ಲೆ ಹೇಳಿ ಇವ್ವು ಹೇಳಿಯಪ್ಪಗ ಹಾಂಗಾರೆ ಕೋರ್ಟಿಂಗೆ ಹೋಯಕ್ಕು, ಅದೂ ಇದೂ ಹೇಳಿ ಹೆದರ್ಸಿದವ್ವು !  ಎಂಗೊ ಪೈಸೆ ಕೊಡ್ತಿಲ್ಲೆ ಹೇಳಿ ಗೊಂತಾಗಿಯೋ ಅಥವಾ ಎಂಗೊ ಅದೇ ಊರಿನವ್ವು ಹೇಳಿಯೋ ಅಂತೂ ಅಕೇರಿಗೆ ಬಿಟ್ಟವು.

ಜೋಗ

ಅಲ್ಲಿ ತುಂಬಾ ಜನ ಇತ್ತಿದ್ದವು, ಆದರೆ ಶನಿವಾರ ಆದಿತ್ಯವಾರ ಇನ್ನೂ ಹೆಚ್ಚು ಜನ ಇರ್ತವು. ಎಂಗೊ ಜಲಪಾತದ ಎದುರಾಣ ಹೊಡೇಲಿ ನಿಂದುಗೊಂಡು ನೋಡಿದೆಯ. ದೂರಲ್ಲಿ ಒಂಭೈನೂರು ಅಡಿ ಮೇಲಂದ ಕೆಳ ಬೀಳುವ ಶರಾವತಿಯ ಕಂಡಪ್ಪಗ ಮನಸ್ಸಿನ ಒಳ ಎಂತದೋ ಅನುಭವ ! ಸುತ್ತಲಿದ್ದ ಜನರ ಗೌಜಿ ಯಾವುದೂ ಕೇಳದ್ದ ಹಾಂಗೆ ಜಲಪಾತದ ಶಬ್ದ ಕೇಳಿಗೊಂಡಿತ್ತು.ಹೊಳೆ ಇಲ್ಲಿ ನಾಲ್ಕು ಬೇರೆ ಬೇರೆ ಧಾರೆ ಆಗಿ ಹರಿದು ಬತ್ತು, ಸುರೂವಾಣದ್ದು ರಾಜ, ಎರಡನೇದು ರೋರರ್, ಮೂರನೇದು ರಾಕೆಟ್, ನಾಲ್ಕನೇದು ರಾಣಿ. ಇದು ಬ್ರಿಟಿಷರು ಮಡುಗಿದ ಹೆಸರಡ. ಅಲ್ಲಿಂದ ನೋಡುವಗ ಎಡತ್ತಿಂಗೆ ರಜ್ಜ ದೂರಲ್ಲಿ ಇನ್ನೊಂದು ಜಲಪಾತ ಕಾಣ್ತು, ಅದಕ್ಕೆ ಮಾವಿನಗುಂಡಿ ಜಲಪಾತ ಹೇಳ್ತವು. ಸುಮಾರು ಪಟ ತೆಗದಾತು, ಒಳ್ಳೆ ಬೆಶಿಲಿದ್ದ ಕಾರಣ ಲಾಯ್ಕಕ್ಕೆ ನೋಡುಲೆ ಎಡಿಗಾತು. ಇನ್ನು ರಜ್ಜ ಹೊತ್ತು ಅಲ್ಲಿ ಕಳದು ಮತ್ತೆ ಜಲಪಾತದ ಇನ್ನೊಂದು ಹೊಡೇಂಗೆ ಹೋಪದು ಹೇಳಿ ಗ್ರೇಶಿದ್ದು. ಆದರೆ ಎನಗೆ ಒಂದು ಆಶೆ.. ಜೋಗದ ಗುಂಡಿಗೆ ಇಳಿಯಕ್ಕು ಹೇಳಿ… ಇವರ ಹತ್ತರೆ ಹೇಳಿದೆ, ನೀನು? ಕೆಳ ಇಳಿವದಾ? ಇಳುದು ಮತ್ತೆ ಮೇಲೆ ಬಪ್ಪದಾ?” ಹೇಳಿ ನೆಗೆ ಮಾಡಿದವ್ವು 🙁 ಇಂತಹ ಅವಮಾನ ! ಛೇ….. “ಎನಗೆಂತ ಹೋಪಲೆಡಿಯದಾ? ಇಂದು ಜೋಗದ ಗುಂಡಿಗೆ ಇಳುದಿಕ್ಕಿಯೇ ಇಲ್ಲಿಂದ ಹೆರಡುದು, ಎನಗೂ ಎಡಿತ್ತು” ಹೇಳಿ ರಣಕಹಳೆ ಊದಿ ಆತು!!

ಗುಂಡಿಗೆ ಇಳಿವ ದಾರಿ!!

ಮೆಲ್ಲಂಗೆ ಒಂದೊಂದೇ ಮೆಟ್ಲು ಇಳಿವಲೆ ಶುರು ಮಾಡಿದೆಯ. ರಜ್ಜ ಇಳುದಪ್ಪಗ ಒಂದು ಸಣ್ಣ ಮಂಟಪದ ಹಾಂಗೆ ಇದ್ದು, ಅಲ್ಲಿ ಒಬ್ಬ ಪೋಲೀಸು ಮಾಮ ಇರ್ತ, ಕೆಳ ಇಳಿವ ಜನರ ಹೆಸರು ಊರು ಮತ್ತೆ ಫೋನು ನಂಬರ್ ಬರದು ಮಡಿಕ್ಕೊಂಬಲೆ, ಮತ್ತೆ ನಮ್ಮ ಕೈಲಿಪ್ಪ ಚೀಲಲ್ಲಿ ಎಂತೆಲ್ಲ ಇದ್ದು ಹೇಳಿ ಚೆಕ್ ಮಾಡ್ಲೆ. ಒಂದೆರಡು ಗೂಡಂಗಡಿ ಇದ್ದು ಅಲ್ಲಿ, ಚೆಕ್ಕರ್ಪೆ, ಅನಾನಾಸು ಹಣ್ಣು, ಕಾಪಿ, ಚಾಯ, ಚರುಂಬುರಿ, ಬಿಸ್ಕೂಟು ಇತ್ಯಾದಿ ಸಿಕ್ಕುತ್ತು, ಹಾಂಗಿದ್ದ ಒಂದು ಅಂಗಡಿಂದ ಒಂದು ಕುಪ್ಪಿ ಶರ್ಬತ್ತು ತೆಕ್ಕೊಂಡೆಯ,ಬೇರೆ ಎಂತದೂ ಸಿಕ್ಕುತ್ತಿಲ್ಲೆನ್ನೆ ಅಲ್ಲಿ, ನೀರು ತಾರದ್ದ ಮೂರ್ಖತನ ಅರ್ಥ ಆದ್ದು ಅಂಬಗಳೇ!! ಅದಾಗಿ ಮುಂದೆ ಅಲ್ಲಲ್ಲಿ ನಿಂದುಗೊಂಡು ಆ ಜಾಗೆಂದ ಜಲಪಾತ ಹೇಂಗೆ ಕಾಣ್ತು ಹೇಳಿ ಪಟ ತೆಗದು ಇಳುಕ್ಕೊಂಡು ಹೋದೆಯ. ಕೆಳಾಂಗೆ ಇಳಿವಲೆ ಇತ್ತೀಚೆಗೆ ಸರ್ಕಾರ ಲಾಯ್ಕಿನ ಕಲ್ಲಿನ ಮೆಟ್ಲು ಮಾಡಿದ್ದು ಹಾಂಗಾಗಿ ಸುಲಭ ಆವ್ತು. ದೊಡ್ಡ ಪ್ರಪಾತಕ್ಕೆ ಇಳಿವ ಹಾದಿಲಿ ಎರಡೂ ಹೊಡೆಲಿ ಬೇರೆ ಬೇರೆ ರೀತಿಯ ಗಿಡಂಗೊ, ಮರಂಗೊ, ಒಂದಷ್ಟು ಸಣ್ಣ ದೊಡ್ಡ ಬಂಡೆಗೊ, ಅಲ್ಲಲ್ಲಿ ಬೆಟ್ಟದೊರತ್ತೆಗೊ, ಸಣ್ಣ ಸಣ್ಣ ಜಲಪಾತಂಗೊ ! ಎಷ್ಟು ಚೆಂದ ನೋಡುಲೆ ದೃಶ್ಯ 🙂 ಅಲ್ಲಿ ಹೆಚ್ಚು ಕಾಂಬಲೆ ಸಿಕ್ಕಿದ್ದು ಉರ್ಸಣಿಗೆ ಸೆಸಿ. ಇದೆಲ್ಲದರೊಟ್ಟಿಂಗೆ ನಮ್ಮ ಅಪ್ರಜ್ಞಾವಂತ ಜನಂಗೊ ಇಡ್ಕಿದ ಪ್ಲಾಸ್ಟಿಕ್ಕು ತೊಟ್ಟೆಗೊ, ಕುಪ್ಪಿಗೊ, ಕಸವು ಎಲ್ಲಾ ಕಂಡು ಬೇಜಾರಾತು :(. ಒಂದು ದಿಕ್ಕೆ ಒಂದು ದೊಡ್ಡ ಬಂಡೆಯ ಅಡೇಲಿ ಒಂದೆರಡು ಸಣ್ಣ ತ್ರಿಶೂಲ, ನಿಂಬೆಹುಳಿ, ಕುಂಕುಮ ಇದ್ದ ಜಾಗೆ ಇದ್ದು. ಅಲ್ಲಿ ಚೌಡೇಶ್ವರಿ ದೇವಸ್ಥಾನ” ಹೇಳಿ ಒಂದು ಬೋರ್ಡ್ ಇದ್ದತ್ತು. ಎಂಗೊ ಇಳುಕ್ಕೊಂಡು ಹೋಪಗ ಸುಮಾರು ಜೆನಂಗೊ ಮೇಲೆ ಬಂದುಗೊಂಡು ಇತ್ತಿದ್ದವ್ವು, ಆ ಜನಂಗೊಕ್ಕೆಲ್ಲಾ ಬಚ್ಚಿ ಬಚ್ಚಿ ಏನೂ ಎಡಿಯ !! ವಾಪಾಸು ಬಪ್ಪಗ ಎನ್ನ ಪರಿಸ್ಥಿತಿಯೂ ಹಾಂಗೇ ಆದಿಕ್ಕು ಹೇಳಿ ಗೊಂತಿದ್ದರೂ ದೊಡ್ಡಕ್ಕೆ ಹೇಳುವ ಧೈರ್ಯ ಮಾಡಿದ್ದಿಲ್ಲೆ. ಹಾಂಗೆಂತಾರು ಆನು ಹೇಳಿರೆ ಅಲ್ಲಿಂದಲೇ ವಾಪಾಸು ಹೋಪ ಹೇಳಿ ಹೇಳಿರೆ !!

ಹೊಸ ಅನುಭವ

ರಾಜಕುಮಾರ್ ಹಾಡಿದ ಹಾಂಗೆ ಜೀವನದಲ್ಲಿ ಒಮ್ಮೆ ನೋಡೂ ಜೋಗದ ಗುಂಡಿ ! ಗುಂಡಿಗೆ ಇಳುದು ಎತ್ತಿಯಪ್ಪದ್ದೆ ತಲೆ ನೆಗ್ಗಿ ಮೇಲೆ ನೋಡುವಗ ಕಂಡದು…. ಅನಂತ ನೀಲಿ ಆಕಾಶ…ಬೆಣ್ಣೆ ಮುದ್ದೆಯ ಹಾಂಗಿದ್ದ ಮೋಡಂಗೊ…ಅಲ್ಲಿಂದ ಸೀದಾ ಇಳಿವ ಶರಾವತಿಯ ಧಾರೆ !! ಕ್ಷೀರ ಸಾಗರಂದ ಇಳಿವ ಕ್ಷೀರಪಾತವೋ ಹೇಳುವ ಹಾಂಗೆ ಕಂಡತ್ತು !! ಆಕಾಶಲ್ಲಿ ಅಲ್ಲಿಯೇ ಎಲ್ಲಿಯೋ ಅನಂತಶಯನನ ಕಂಡ ಅನುಭವ ಆತು ಪ್ರಕೃತಿಯ ಅದ್ಭುತ ಸೃಷ್ಟಿಲಿ ನಿಂದು, ನೋಡಿ ಅನುಭವಿಸುವಗ. ಅಲ್ಲಿ ತುಂಬಾ ಜನ ಇತ್ತಿದ್ದವು.. ಆದರೆ ಎನಗೆ ಎಂತದೂ ಕಂಡಿದಿಲ್ಲೆ… ನೀರು.. ನೀರು.. ನೀರು ಮಾಂತ್ರ ಮನಸ್ಸಿಂಗೆ ಕಂಡದು… ಒಂದು ಕ್ಷಣ ಕಣ್ಮುಚ್ಚಿ ಮೈಮೇಲೆ ಬಂದು ಬೀಳುವ ಹನಿಗಳ ಸ್ಪರ್ಶವ ಅನುಭವಿಸಿದೆ… ಆಹಾ…. ಎಂತದೋ ಹೊಸ ಭಾವ … ಜಲಪಾತ ಬೀಳುವಲ್ಲಿಗೆ ಹೋಪಲೆ ಎಡಿತ್ತಿಲ್ಲೆ ಆದರೆ ಎಷ್ಟು ಸಾಧ್ಯವೋ ಅಷ್ಟು ಮುಂದೆ ಮುಂದೆ ಹೋದೆಯ.. ನೀರು ಹರಕ್ಕೊಂಡು ಹೋವ್ತಾ ಇತ್ತು..ಕಾಲು ತಣ್ಣಂಗೆ ನೀರಿಲ್ಲಿ ಒಂದೊಂದೇ ಹೆಜ್ಜೆ ಮುಂದೆ ನಡಕ್ಕೊಂಡು ಹೋತು ! ಹೀಂಗೆ ಹೋಪ ದಾರಿಲಿ ಕೆಲವು ಬಂಡೆಗೊ ಜಾರುತ್ತು, ತುಂಬಾ ಸಣ್ಣ ದೊಡ್ಡ ಕಲ್ಲುಗಳ ಮಧ್ಯೆ ಸಣ್ಣ ಗಿಡಂಗೊ ಇದ್ದು. ಒಂದು ದೊಡ್ಡ ಬಂಡೆಯ ಮೇಲೆ ಹತ್ತಿ ನಿಂದು ಮೇಲಂದ ಬೀಳುವ ಶರಾವತಿಯ ನೋಡಿದೆ… ಆ ಕೆಲವು ಕ್ಷಣಂಗಳಲ್ಲಿ ಎನಗೆ ಎಂತ ಅನುಭವ ಆತು ಹೇಳುದರ ಹೇಳುಲೆ ಶಬ್ದಂಗೊ ಸಿಕ್ಕುತ್ತಿಲ್ಲೆ…..ಎಂತದೋ ಒಂದು ಹೊಸ ಭಾವದ ಅನುಭವ ಅದು... ಅದರ ಅನುಭವಿಸಿಯೇ ನೊಡೆಕ್ಕು…. ಕ್ಷಮಿಸಿ ಎನ್ನ, ಇಷ್ಟೂ ಹೊತ್ತು ವಿವರ್ಸಿದ ಹಾಂಗೆ ಈ ಅನುಭವವ ವಿವರ್ಸುಲೆ ಸಾಧ್ಯ ಆವ್ತಾ ಇಲ್ಲೆ……………..ಸಾಧ್ಯ ಆದವ್ವು ಒಂದರಿ ಹೋಗಿ ಅನುಭವಿಸಿ ಹೇಳಿ ಮಾಂತ್ರ ಹೇಳುಲೆ ಎಡಿಗಷ್ಟೇ…

ಮೇಲೆ ಹತ್ತಿದ ಸಾಹಸಗಾಥೆ !

ಇಷ್ಟೆಲ್ಲಾ ಅಪ್ಪಗ ಕಸ್ತಲೆಗಟ್ಟಿತ್ತು! ಕಪ್ಪು ಮೋಡ ಆಕಾಶದ ನೀಲಿಯ ನುಂಗಿ ಹಾಕಿತ್ತು ! ಮಳೆ ಹನಿಯ ಪಾತ ಆಕಾಶಂದ ಶುರುವಾತು….. ಜಲಪಾತಂದ ಹಾರುವ ನೀರ ಹನಿಂದಾಗಿ ಮೈಯೆಲ್ಲಾ ಮೊದಲೇ ಚೆಂಡಿ ಆಗಿತ್ತಿದ್ದು ಹಾಂಗಾಗಿ ಚೆಂಡಿ ಆವ್ತು ಹೇಳುವ ಹೆದರಿಕೆ ಇತ್ತಿಲ್ಲೆ !! ಆದರೆ ಎಲ್ಲಿಂದ ಇಳುದ್ದೋ ಆ ಎತ್ತರಕ್ಕೆ ಹೋಗಿ ಎತ್ತೆಡದಾ?? ಓಹ್..ಈಗ ಜ್ಞಾನೋದಯ ಆತು … ಸರಿ..ವಾಪಾಸು ಬಂದು ಮೆಟ್ಲು ಹತ್ತುಲೆ ಶುರು !! ಜೋರು ಮಳೆ, ಶಕ್ತಿ ಇಲ್ಲದ್ದ ಕಾಲು, ಎಲಿ ಅತ್ತಿತ್ತೆ ಓಡುವ ಹೊಟ್ಟೆ ! ಅಲ್ಲಿಯೇ ಕೂಬ ಹೇಳಿ ಕಂಡತ್ತು ಒಂದರಿ..ಹತ್ತುಲೆ ಸ್ಪೂರ್ತಿ ಸಿಕ್ಕುಲೆ ಎಂತಾರು ಒಂದು ಮಹತ್ಕಾರ್ಯ ಮಾಡುವ ಮನಸಾತು. ಎಷ್ಟು ಮೆಟ್ಲಿದ್ದು ಹೇಳಿ ಲೆಕ್ಕ ಹಾಕುದಕ್ಕಿಂತ ದೊಡ್ಡ ಮಹತ್ಕಾರ್ಯ ಇದ್ದಾ?? ಶುರುವಾತು ಒಂದೂ..ಎರಡೂ..ಮೂರೂ..ಮೇಲಂಗೆ ಎತ್ತುವಗ ಒಂದಾ ಆನು ಮೇಲಂಗೇ ಎತ್ತುವೆ ಅಥವಾ ಶಾಲೆಲಿ ಕಲ್ತ ಲೆಕ್ಕ ಮರತ್ತೇ ಹೋಕು ಹೇಳಿ ಕಂಡತ್ತು !! ಜೋರು ಮಳೆ, ಅಂಬಗ ನೆಂಪಾತು ಕೈಲಿ ರೈನ್ ಕೋಟು ಇದ್ದು ಹೇಳಿ !! ಸರಿ ಇನ್ನಾದರೂ ಹಾಕುವ ತಂದದಕ್ಕೆ ಹೇಳಿ ಅದರ ಹಾಕಿಗೊಂಡೆಯ !! ಹ್ಹಿಹ್ಹಿಹ್ಹಿ.. ಎಂಗಳ ನೋಡಿದವಕ್ಕೆ ಖಂಡಿತಾ ನೆಗೆ ಬಂದಿಕ್ಕು :). ಹಶು ಆಸರು ಜೋರಾತು, ಇಳಿವಗ ಗೂಡಂಗಡಿಲಿ ತೆಕ್ಕೊಂಡ ಶರ್ಬತ್ತು ಕುಡುದೆಯ.  ಆದರೆ ಹೊಟ್ಟೆ ಒಳ ಇದ್ದದು ದೊಡ್ಡ ದೊಡ್ಡ ಎಲಿಗೊ, ಸಾಕಾಯ್ದಿಲ್ಲೆ. ಹಶು ಹೆಚ್ಚಾಗಿ ಶರೀರಲ್ಲಿ ಗ್ಲೂಕೋಸು ಕಮ್ಮಿ ಆಗಿ ರಜ್ಜ ತಲೆ ತಿರುಗಿದ ಹಾಂಗಿದ್ದ ಅನುಭವ ಆತು 🙁 ಪ್ರತೀ ಐವತ್ತು ಮೆಟ್ಲಿಂಗೆ ಒಂದರಿ ಎರಡು ನಿಮಿಷಂಗಳ ಬ್ರೇಕು ತೆಕ್ಕೊಂಡು ಮೇಲೆ ಹತ್ತಿದೆಯ. ಸುಮಾರು ಒಂಭೈನೂರು ಮೆಟ್ಲು ಹತ್ತಿಯಪ್ಪಗ ಇಂದು ಇಲ್ಲಿಯೇ ಹಾಲ್ಟು ಮಾಡಿ ನಾಳಂಗೆ ಇನ್ನುಳುದ ಮೆಟ್ಲು ಹತ್ತುವ” ಹೇಳಿ ಹೇಳಿಕ್ಕಿ ಒಂದು ಮೆಟ್ಲಿಲ್ಲಿ ಉಸ್ಸಪ್ಪಾ ಹೇಳಿ ಕೂದೆ ಆನು !! ಎನ್ನ ಚಿಂತಾಜನಕ ಪರಿಸ್ಥಿತಿಗೆ ಎಂಗಳೇ ನೆಗೆ ಮಾಡಿಗೊಂಡೆಯ. ಅದರೊಟ್ಟಿಂಗೆ ಅಂಬಗ ಕೆಳ ಇಳಿತ್ತ ಜನಂಗಳ ಇನ್ನಾಣ ಅವಸ್ಥೆ ಗ್ರೇಶಿ ನೆಗೆ ಇನ್ನೂ ಹೆಚ್ಚಾತು. ನೆಗೆ ಮಾಡಿಯಪ್ಪಗ ಶರೀರಕ್ಕೆ ರಜ್ಜ ಚೈತನ್ಯ ಸಿಕ್ಕುತ್ತಿದ್ದಾ… ಹೇಂಗಾರೂ ಶರ್ಬತ್ತು ತೆಕ್ಕೊಂಡ ಗೂಡಂಗಡಿ ಇಪ್ಪಲ್ಲಿಗೆ ಎತ್ತಿ ಆತು. ಅಲ್ಲಿ ತಿಂಬಲೆ ಎಂತ ಇದ್ದು ಹೇಳಿ ನೋಡಿಯಪ್ಪಗ ಚೆಕ್ಕರ್ಪೆ ಕಂಡತ್ತು, ಉಳುದ್ದೆಲ್ಲಕ್ಕಿಂತ ಅದೇ ಸರಿ ಹೇಳಿ ಒಂದು ಚೆಕ್ಕರ್ಪೆ ತೆಕ್ಕೊಂಡು ತಿಂದುಗೊಂಡು ಮತ್ತೆ ಮೇಲೇರುವ ಪಯಣ ಶುರು ಆತು.. ಎನಗೆಂತಕ್ಕೋ ಒಂದು ಅನುಮಾನ ವಾಪಾಸು ಬಪ್ಪ ಮೆಟ್ಲುಗಳ ಸಂಖ್ಯೆ ಹೆಚ್ಚೋ ಅಥವಾ ತಪ್ಪಿ ಬೇರೆ ಯಾವುದಾರೂ ಗುಡ್ಡೆಗೆ ಹತ್ತಿತ್ತೋ” ಹೇಳಿ!! ಎನ್ನ ಲೆಕ್ಕ ಪ್ರಕಾರ ಒಟ್ಟು 1400 ಮೆಟ್ಲುಗೊ ಇದ್ದು ಅಲ್ಲಿ !!

ಹುಗ್ಗಾಟ ಆಡುವ ಶರಾವತಿಗೆ ವಿದಾಯ ಹೇಳಿ ಮತ್ತೆ ಮನೆಗೆ

ಅಂತೂ ಎಂಗೊ ಮೇಲೆ ಎತ್ತುವ ಹೊತ್ತಿಂಗೆ ಮೋಡ ಜಲಪಾತವೇ ಕಾಣದ್ದ ಹಾಂಗೆ ಮುಚ್ಚಿತ್ತಿದ್ದು !! ಆದರೂ ಜೆನಂಗೊ ಮೋಡದ ಮೂಲಕವೂ ನೋಡುವ x-ray ದೃಷ್ಟಿ ಇದ್ದವರ ಹಾಂಗೆ ಜಲಪಾತವ ನೋಡಿಗೊಂಡಿತ್ತಿದ್ದವು !! ಆರಿಂಗೂ ಕಾಣದ್ದ ಹಾಂಗೆ ಹುಗ್ಗಿ ಕೂದರೂ ಕೂಡ ಜಲಪಾತದ ಅಬ್ಬರದ ಸ್ವರ ಮನಸ್ಸಿಲ್ಲಿ ಹೆದರಿಕೆ ಹುಟ್ಟುಸುವ ಹಾಂಗೆ ಕೇಳಿಗೊಂಡಿತ್ತು. ಎಂಗೊ ಶರಾವತಿಗೆ ಅಲ್ಲಿಂದಲೇ ವಿದಾಯ ಹೇಳಿ ಎಂಗಳ ದ್ವಿಚಕ್ರ ರಥ ಹತ್ತಿ ಮನೆಗೆ ಹೆರಟೆಯ. ಜೋರು ಮಳೆಲಿ ಬೈಕಿಲ್ಲಿ ಚಳಿ ನಡುಗಿಗೊಂಡು ವಾಪಾಸು ಬಪ್ಪಗ ಮನಸ್ಸಿನ ತುಂಬಾ ಇದ್ದದು ಬರೀ ನೀರು… ಎಂತದೋ ಒಂದು ಹೊಸಾ ಸಾಧನೆ ಮಾಡಿದ ಹೆಮ್ಮೆ ಮನಸ್ಸಿಲ್ಲಿಯಾವ ಬಚ್ಚೆಲುದೇ ಲೆಕ್ಕಕ್ಕಿಲ್ಲೆ ಸಂತೋಷದ ಎದುರು….

ಚಳಿ ಅಪ್ಪಗ ಹಶುದೇ ಹೆಚ್ಚು ! ಎಲ್ಲಿಯಾರು ಒಂದು ಗೂಡಂಗಡಿ ಸಿಕ್ಕಿರೆ ಒಂದು ಗ್ಲಾಸು ಬೆಶಿ ಬೆಶಿ ಚಾಯ ಕುಡಿವಲಕ್ಕು ಹೇಳಿ ಗ್ರೇಶಿದ್ದು..ಆದರೆ ಮಳೆ ನಿಂಬ ಲಕ್ಷಣವೇ ಇತ್ತಿಲ್ಲೆ. ಕಾನಲೆ ಹೇಳ್ತ ಊರಿಂಗೆ ಎತ್ತುವಗ ಮಳೆ ರಜ್ಜ ಕಮ್ಮಿ ಆದರೂ ಚಳಿಗಾಳಿ ಇದ್ದತ್ತನ್ನೇ.. ಎಂಗೊ ಪೂರಾ ಚೆಂಡಿ, ಮರಗಟ್ಟಿದ ಅನುಭವ ! ಹೇಂಗಾರೂ ಸಾಗರಕ್ಕೆ ಬಂದು ಎತ್ತಿದೆಯ, ಅಷ್ಟೊತ್ತಿಂಗೆ ಮೂರು ಗಂಟೆ ಆಗಿತ್ತಿದ್ದು. ಸಾಗರಲ್ಲಿ ಮಧುರಾ ಹೋಟ್ಲು ಹೇಳಿ ತುಂಬಾ ಫ಼ೇಮಸ್ಸು ಹೋತ್ಲಿದ್ದು, ಅಲ್ಲಿಯಾಣ ದೋಸೆ ಭಾರೀ ಲಾಯ್ಕ ! ಅಲ್ಲಿಗೆ ಹೋಪ ನಿರ್ಧಾರ ಮಾಡಿ ಬೈಕು ನಿಲ್ಸಿ ಇಳುದಪ್ಪಗ ಎನಗೆ ಇಡೀ ಭೂಮಿ ತಿರುಗುತ್ತು ಹೇಳುದರ ಅನುಭವ ಆತು !! ಜೋರು ತಲೆ ತಿರುಗುತ್ತಾ ಇತ್ತಿದ್ದು. ಹೇಂಗಾರು ಒಳ ಹೋಗಿ ಕೂದು ಬೆಶಿ ಬೆಶಿ ಚಪಾತಿಯೂ ಅರ್ಧ ಗ್ಲಾಸು ಬೆಶಿ ಚಾಯವೂ ಕುಡುದಪ್ಪಗ ರಜ್ಜ ತ್ರಾಣ ಬಂತು. ಮನೆಗೆ ಎತ್ತುಲೆ ಏನೂ ತೊಂದರೆ ಆಯ್ದಿಲ್ಲೆ. ಮನೆಗೆ ಎತ್ತಿದ ಕೂಡ್ಲೇ ಹಂಡೆಲಿ ಇದ್ದ ಅಷ್ಟೂ ಬೆಶಿ ನೀರಿನ ಕವುಂಚಿ ಹೆಟ್ಟಿಕ್ಕಿ ಬಂದೆ !! ರಜ್ಜ ಚಳಿ ಕಮ್ಮಿ ಆತು. ಮತ್ತೆ ಸಮಾ ಹೊಟ್ಟೆ ತುಂಬಾ ಊಟ ಮಾಡಿ ಮನುಗಿ ಒರಗಿದೆ. ಎದ್ದಪ್ಪಗ ಜೋಗಕ್ಕೆ ಹೋದ್ದು ಒಂದು ಲಾಯ್ಕ ಕನಸು ಹೇಳುವ ಹಾಂಗೆ ಅನ್ಸಿತ್ತು..

ಇಲ್ಲಿಗೆ ಎನ್ನ ಒಂದು ಸಣ್ಣ ಪ್ರವಾಸದ ಕಥೆ ಮುಗುತ್ತು… ಇನ್ನು ಆನೆಲ್ಲಿಯಾರೂ ಒಂದು ವಾರದ ಪ್ರವಾಸ ಹೋದರೆ ಕಾದಂಬರಿಯೇ ಅಕ್ಕೋ ಹೇಳಿ ಸಂಶಯ. ಇರಲಿ, ಎನ್ನ ಅನುಭವ ಹಂಚುವ ಮನಸ್ಸಾತು.. 🙂 ನಿಂಗಳೂ ಜೋಗಕ್ಕೆ ಹೋಗಿ, ಗುಂಡಿಗೆ ಇಳೀರಿ…. ಮತ್ತೆ ನಿಂಗಳ ಅನುಭವ ಹೇಳಿ 🙂 ಆನಂತೂ ಇನ್ನೊಂದರಿ ಹೋಯಕ್ಕು ಹೇಳಿ ತೀರ್ಮಾನ ಮಾಡಿದ್ದೆ 🙂

[ಪಟಂಗಳ ಹಾಕುಲೆ ಎಡಿತ್ತಾ ಇಲ್ಲೆ, ಇಂಟರ್ನೆಟ್ ತುಂಬಾ ನಿಧಾನ ಇದ್ದು]

-ನಿಂಗಳ

ಸುವರ್ಣಿನೀ ಕೊಣಲೆ

21 thoughts on “ಜೀವನಲ್ಲಿ ಎತ್ತರಕ್ಕೆ ಏರಲೇಬೇಕು ಆದರೆ ಈ ಗುಂಡಿಗೂ ಒಂದರಿ ಇಳಿಯಕು !

  1. ಸುವರ್ಣಿನಿ ಅಕ್ಕೋ,
    ಇದುವರೆಗೆ ಬರದ್ದದರಿಂದ ಭಿನ್ನವಾಗಿ, ಪ್ರವಾಸದ ಎಳೆ ಎಳೆಯನ್ನೂ ವಿವರಿಸಿ, ಜೋಗಕ್ಕೆ ಹೋಗಿ ಬಂದ ವಿವರಣೆ ಓದಿ ತುಂಬಾ ಕೊಶಿ ಆತು. ಚೆಂದಲ್ಲಿ ಪ್ರತಿಯೊಂದನ್ನೂ ವಿವರ್ಸಿದ್ದಿ. ಅನುಭವಿಸಿದ್ದದು ಬರಹಲ್ಲಿ ಹಾಂಗೇ ಬಯಿಂದು.

    ಸೃಷ್ಟಿಕರ್ತನ ಸೃಷ್ಟಿಯ ಅದ್ಭುತ ಜಾಗೆಯ ಎಲ್ಲೋರೂ ನೋಡೆಕ್ಕಾದ್ದದೇ!! ನಿಂಗೋ ತಲೆಬರಹಲ್ಲಿ ಬರದ ಹಾಂಗೇ ಈ ಗುಂಡಿಗೆ ಎಲ್ಲೋರೂ ಇಳಿಯೆಕ್ಕು. ಜೀವನಲ್ಲಿ ಸುಮಾರು ಸರ್ತಿ ಗುಂಡಿಗೆ ಇಳುದರೂ(ಬಿದ್ದರೂ), ಜೋಗದ ಗುಂಡಿಗೆ ((ಜೋಗಕ್ಕೆ ಹೋದರೂ) ಇಳುದ್ದಿಲ್ಲೆ. ಒಂದರಿ ಹೋಯೆಕ್ಕು. ಒಳ್ಳೆ ರಸಮಯ ಅನುಭವ ಧಾರೆ ಹಂಚಿದ್ದಕ್ಕೆ ಧನ್ಯವಾದಂಗೋ.

  2. ಜೋಗದ ಸಿರಿ ಬೆಳಕಿನಲ್ಲಿ ಪದ್ಯ ನೆನಪಾತು. ಪ್ರವಾಸದ ಕಥೆ ಬರದ್ದದು ಚೆಂದ ಆಯಿದು. ಧನ್ಯವಾದಂಗೊ.

  3. ಪ್ರವಾಸ ಕಥನ ತುಂಬಾ ಲಾಯಿಕಯಿದು, ಲಾಯಿಕದ ವಿವರಣೆಯೊಟ್ಟಿಂಗೆ.
    ಆನು ೯ನೆ ಕ್ಲಾಸಿಲ್ಲಿಪ್ಪಗ ಅಪ್ಪನೊಟ್ಟಿಂಗೆ ಕಾಲೇಜಿನ ಬೇರೆ ಉಪನ್ಯಾಸಕರ ಸಂಸರದೊಟ್ಟಿಂಗೆ ಹೋದ ಪ್ರವಾಸ, ಮತ್ತೆ ಮೆಟ್ಟಿಲು ಇಲ್ಲದ್ದಿಪ್ಪಗ ಗುಡ್ಡೆ ದಾರಿಲಿ ಕೆಳ ಇಳುದ್ದೆಲ್ಲ ನೆಂಪಾತು. ಮದುವೆ ಆದ ಮೇಲೆ ಹೋಗಿ ಆಯಿದಿಲ್ಲೆ ಇನ್ನುದೆ.
    ಖುಶಿ ಆತು ಓದಿ,
    ಸುಮನ

    1. ಒಪ್ಪಕ್ಕೆ ಧನ್ಯವಾದ 🙂
      ಇನ್ನೊಂದರಿ ಹೋಗಿ ಬನ್ನಿ.. ಅಕ್ಟೋಬರ್ ತಿಂಗಳಿಲ್ಲಿ ಹೋದರೆ ಲಾಯ್ಕ..

  4. ಲೇಖನ ತುಂಬಾ ಲಾಯಿಕ ಬೈಂದು … ಆನು ಅದೇ ಊರಿಲಿ ಕಲ್ತದು … ಕಲ್ತುಗೊಂಡಿದ್ದ ಸಮಯಲ್ಲಿ ಸುಮಾರು ಸರ್ತಿ ಹೋಯಿದೆ … ಈಗ ನಿಂಗಳ ಲೇಖನ ಓದಿಯಪ್ಪಗ ಇನ್ನೊಂದರಿ ಜೋಗಕ್ಕೆ ಹೋಗಿ ಬಂದ ಹಾಂಗೆ ಆತು … ಎಂಗ ಹೋಗಿಪ್ಪಗ ಕೆಳ ಇಳಿವಲೆ ಮೆಟ್ಲು ಇತ್ತಿಲ್ಲೆ … ಬರೀ ಗುಡ್ಡೆಯ ದಾರಿಯ ಹಾಂಗೆ ಇತ್ತು … ತುಂಭಾ ಜಾರಿಗೊಂಡಿತ್ತು …

    1. ಧನ್ಯವಾದ 🙂
      ಮೆಟ್ಲು ಮಾಡಿದ್ದು ಈಗ ಒಂದು ವರ್ಷಂದ ಇತ್ಲಾಗಿ. ಮೊದಲು ಗುಡ್ಡೆ ಇಳುಕ್ಕೊಂಡೂ ಹೋಯಕ್ಕಾಗಿಗೊಂಡು ಇತ್ತಡ.. ಈಗ ಲಾಯ್ಕ ಮೆಟ್ಲು ಮಾಡಿದ್ದವು, ಆರಿಂಗೆ ಬೇಕಾರೂ ಸುಲಾಬಲ್ಲಿ ಹತ್ತಿ ಇಳಿವಲಕ್ಕು. ಆದರೆ ಸಾವಿರದನಾನ್ನೂರು ಮೆಟ್ಲು ಹತ್ತುವ ಶಕ್ತಿ ಬೇಕು ಅಷ್ಟೇ ! ತುಂಬಾ ಒಳ್ಳೆ ಅನುಭವ ಅದು, ಇನ್ನಾಣ ವರ್ಷ ಮತ್ತೆ ಹೋಯಕ್ಕು ಹೇಳಿ ಗ್ರೇಶಿದ್ದೆ…
      ನಿಂಗೊ ಅಲ್ಲಿ ಎಲ್ಲಿ ಕಲ್ತದು?

      1. ಸಾಗರ … ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ …

  5. ಎಂಗ ಕಳುದ ವರುಶ ಹೋಯಿದೆಯ ಆವಗ ನೀರು ಹೆಚ್ಚು ಇತ್ತಿಲ್ಲೆ ಮತ್ತೆ ಕೆಳ ಇಳಿವಲುದೆ ಬಿಟ್ಗೊಂಡಿತ್ಟಿದ್ದವಿಲ್ಲೆ. ಈಗ ಆಷೆ ಆವುತ್ತು.ಹೋಯೆಕ್ಕು ಹೇಳಿ.

    1. ಬಹುಶಃ ನಿಂಗೊ ಹೋಪ ಸಮಯಲ್ಲಿ ಮೆಟ್ಲು ಕಟ್ಟಿಗೊಂದು ಇತ್ತಿದ್ದವಾ ಹೇಳಿ, ಹಾಂಗಾಗಿ ಹೋಪಲೆ ಬಿಡದ್ದದಾದಿಕ್ಕು. ನೀರು ತುಂಬಾ ಇದ್ದರೂ, ಮಳೆ ತುಂಬಾ ಜೋರಿದ್ದರೂ ಕೆಳ ಹೋಪಲೆ ಬಿಡ್ತವಿಲ್ಲೆ. ಅಲ್ಲಿ ಸುಮಾರು ಜೆನರ ಜೀವ ಹೋವ್ತು ಪ್ರತೀ ವರ್ಷ..ತುಂಬಾ ಜಾಗೃತೆ ಇರೆಕ್ಕಾವ್ತು..
      ಅಕ್ಟೋಬರ್ ತಿಂಗಳಿಲ್ಲಿ ಹೋಗಿ 🙂 ಬೇಸಗೆಲಿ ಹೋದರೆ ನೀರಿರ್ತಿಲ್ಲೆ…

  6. ತೇನ್ಸಿಂಗ್ ಎವರೆಷ್ಟು ಆರೋಹಣ ಹೇಳಿ ಒಂದು ಪಾಠ ಓದಿದ್ದು ಶಾಲೆಲಿ ಕಲಿವಾಗ. ಅದರಿಂದ ಮತ್ತೆ ಹಾಂಗಿಪ್ಪ ಥ್ರಿಲ್ಲಿಂಗ್ ಓದಿದ್ದು ಹೇಳಿರೆ ಇದುವೇ – ‘ಸುವರ್ಣಿನಿ ಅಕ್ಕ ಜೋಗದ ಗುಂಡಿಗೆ ‘. ಕುಂಟಲ ಹಣ್ಣು ನೆಂಪು ಮಾಡಿಗೊಂಡು ಹೆರಟು ಅಕೇರಿಗೆ ಚಕ್ಕರ್ಪೆ ತಿಂದಲ್ಲಿವರೆಂಗೆ ಪ್ರವಾಸ ಕಥಾ ನಿರೂಪಣೆ ಸ್ವಾರಸ್ಯವಾಗಿ ಓದಿಸಿಗೊಂಡು ಹೋತು. ಜೋಗಕ್ಕೆ ಹೋಗಿ ಬಂದ ನೈಜ ಚಿತ್ರಣ ಪ್ರತಿ ಸಾಲು ಕೂಡ ಲಾಯಕ್ಕ ಇತ್ತು. ಈ ಶುದ್ದಿ ಓದಿಕ್ಕಿ ‘ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿ ……’ ಪದ್ಯ ಯೂ ಟ್ಯೂಬ್ ವೀಡಿಯೊ ಕೂಡ ನೋಡಿ ತೃಪ್ತಿ ಪಟ್ಟುಗೊಂಡೆ. ಎಂತಕೆ ಹೇಳಿರೆ ೧೪೦೦ ಮೆಟ್ಟಿಲು ತಲೆ ತಿರುಗಿಸಿತ್ತಿಲ್ಲಿ. ಏನೇ ಅಗಲಿ, ಈ ಶುದ್ಧಿ ಲಾಯಕ್ಕ ಆಯ್ದು ಓದಿದ ಪ್ರತಿಯೊಬ್ಬಂಗೂ ಜೋಗಕ್ಕೆ ಹೋಗಿ ನೋಡೆಕ್ಕು ಹೇಳಿ ಆಶೆ ಕೂಡ ಉಂಟುಮಾಡಿದ್ದು ಹೇಳುವಲ್ಲಿ ಎರಡು ಮಾತಿಲ್ಲೆ ಹೇಳಿಗೊಂಡು ನಮ್ಮ ಒಪ್ಪ.

    1. ಧನ್ಯವಾದಂಗೊ 🙂
      ಎನಗೆ ಎವರೆಸ್ಟ್ ಹತ್ತೆಕ್ಕು ಹೇಳುವ ಆಶೆ ಇಲ್ಲದ್ದರೂ ಜೀವನಲ್ಲಿ ನೋಡೆಕ್ಕಾದ ಜಾಗೆಗಳ ಲಿಸ್ಟಿಲ್ಲಿ ಮಾನಸ ಸರೋವರ, ವೈಷ್ಣೋದೇವಿ ಎಲ್ಲಾ ಇದ್ದು, ಹಾಂಗಾಗಿ ಎವರೆಸ್ಟ್ ಚಾರಣದ ಹಾಂಗಿದ್ದ ಒಂದು ಅನುಭವ ಮುಂದೊಂದು ದಿನ ಅಕ್ಕು ಹೇಳಿ ಕಾಯ್ತಾ ಇದ್ದೆ… ಅಂಬಗ ಆ ಅನುಭವವ ಒಂದು ಧಾರಾವಾಹಿ ಮಾಡಿ ಬರೆತ್ತೆ !!
      1400 ಮೆಟ್ಲಿಂಗೆ ಹೆದರೆಡಿ ಭಾವ..ಒಂದು ನಾಲ್ಕು ಚಕ್ಕರ್ಪೆ ತಿಂದರೆ ಶಕ್ತಿ ಬತ್ತು 😛

  7. ಒಳ್ಳೆ ಅನುಭವದ ಒಳ್ಳೆ ವಿವರಣೆ. ಇನ್ನೊಂದರಿ ಅಲ್ಲಿಗೆ ಹೋದ ಹಾಂಗೆ ಆತು. ದಾರಿ ಮದ್ಯಲ್ಲಿ ಸಿಕ್ಕುವ ಮಲೆ ನಾಡಿನ ಸೌಂದರ್ಯ ಕೊಶೀ ಆತು.
    ಲಾಯಿಕದ ಮೆಟ್ಲು, ಅದಕ್ಕೆ ಕೈ ತಾಂಗು ನೋಡುವಾಗ ಜೋಗಲ್ಲಿ ಕೆಳ ಇಳಿವದೋ ಹೇಳಿ ಎಂಗಳೂ ಆಲೋಚನೆ ಮಾಡಿದೆಯೊ. ಸಾವಿರಂದ ಹೆಚ್ಚು ಮೆಟ್ಲು ಇದ್ದು ಹೇಳುವಾಗ ಧೈರ್ಯ ಕ್ಕೈ ಕೊಟ್ಟತ್ತು. ಸಮಯದ ಅಭಾವವೂ ಇತ್ತಿದ್ದು.
    ಈ ಲೇಖನ ನೋಡಿದ ಮತ್ತೆ ಅಲ್ಲಿ ಇಳಿಯೆಕ್ಕಾತು ಹೇಳಿ ಅನಿಸುತ್ತು.

    1. ಇನ್ನೊಂದರಿ ಹೋದರಾತು ಅಪ್ಪಚ್ಚಿ, ಎಲ್ಲೋರೂ ಒಟ್ಟಿಂಗೆ ಹೋಪ… ಜೋಗಕ್ಕೆ ಮಾಂತ್ರ ಅಲ್ಲ, ಅಲ್ಲಿ ಹತ್ತರೆ ನೋಡುವ ಜಾಗೆಗೊ ಬೇರೆ ಸುಮಾರಿದ್ದು, ಅದೆಲ್ಲ ನೋಡಿಗೊಂಡು ಎಂಗಳ ಮನೆಗೆ ಹೋಗಿ ಬಪ್ಪಲಕ್ಕು 🙂

  8. ಪ್ರಯಾಸ ಆಗದ್ದರೆ ಪ್ರವಾಸ ನೆಂಪಿಲಿ ಉಳಿತ್ತಿಲ್ಲೆ. ಬರವಣಿಗೆ ಲಾಯಿಕ ಆಯಿದು..

    1. ಧನ್ಯವಾದ 🙂 ಜೋಗಕ್ಕೆ ಹೋಗಿ ಬನ್ನಿ 🙂
      ನಿಂಗೊ ಹೇಳಿದ್ದು ಸತ್ಯ, ಪ್ರಯಾಸ ಆಗದ್ದರೆ ನೆಂಪುಳಿವದ್ದು ಕಮ್ಮಿ !

  9. ಜೋಗಕ್ಕೆ ಹೋಗಿ ಬಂದವು ಸುಮಾರು ಜೆನ ಇಕ್ಕು, ಆದರೆ ಹೀಂಗೆ ಅನುಭವಿಸಿ ಬರದವು ಕಮ್ಮಿ. ಶೀರ್ಷಿಕೆಯ ನೋಡಿಯೇ ಲೇಖನ ಹೇಂಗಿಕ್ಕು ಹೇಳಿ ಅಂದಾಜು ಮಾಡಿದೆ, ನಿರಾಸೆ ಆಯಿದಿಲ್ಲೆ. ಚೆಂದದ ಬರವಣಿಗೆಯ ಶೈಲಿ. ಅನುಭವ ಕಥನ ಭಾರೀ ಲಾಯಿಕ್ಕಾಯಿದು ಹೇಳಿ ಒಂದು ಒಪ್ಪ.

    1. ಒಪ್ಪಕ್ಕೆ ಧನ್ಯವಾದ 🙂
      ಆನು ಸಣ್ಣಕ್ಕೆ ಬರೆಯಕ್ಕು ಹೇಳಿ ಗ್ರೇಶಿದ್ದು, ಆದರೆ ಒಂದೊಂದೇ ಬರಕ್ಕೊಂಡು ಹೋಪಗ ಅದು ಸುಮಾರು ದೊಡ್ಡ ಆತು !!! ಪ್ರವಾಸ ಕಥನದ ಬದಲಿಂಗೆ ಪ್ರಯಾಸ ಕಾದಂಬರಿ ಆತು !!

    1. ಅಪ್ಪು ಪುಟ್ಟಕ್ಕ.. ಮತ್ತೆ ಮತ್ತೆ ಹೋಯಕ್ಕು ಹೇಳಿ ಕಾಣ್ತು.. ಬೈಲಿನ ಎಲ್ಲೋರು ಒಂದರಿ ಒಟ್ಟಿಂಗೆ ಹೋಪ…ಎಂತ ಹೇಳ್ತೆ? ಆ ದಿನವೇ ಎಂಗೊ ಮಾತಾಡಿಗೊಂಡಿತ್ತೆಯ, ಬೈಲಿನೋರೆಲ್ಲಾ ಒಟ್ಟಿಂಗೆ ಹೋದರೆ ಆ ಗೌಜಿಯೇ ಬೇರೆ ಹೇಳಿ 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×