ದಾದರ್ ಸೆ ಡೊಂಬಿವಿಲಿ ತಕ್…

ಖಯಾಮತ್ ಸೆ ಖಯಾಮತ್ ತಕ್ ಅಲ್ಲ ಎನ್ನಯ ಪಯಣ ,ದಾದರ್ ಸೆ ಡೊಂಬಿವಿಲಿ ತಕ್.

ಆದರೆ ಸಾಕನ್ನೇ,ದಿಗಂತಗಳನ್ನೇ ಮೀರಿ ನಿಂಬ ಶಗುತಿ ಇದ್ದಪ್ಪಾ ಆ ಬೊಂಬಾಯಿ ಜೀವನಕ್ಕೆ.ಬೊಂಬಾಯಿಲಿ ಬದುಕ್ಕಿದವ° ಬ್ರಹ್ಮಾಂಡದ ಏವ ಮೂಲೆಲಿಯೂ ಮೇಲೆ ಬಕ್ಕು ಹೇಳಿ ಹೆರಿಯೋರು ಹೇಳಿದ್ದು ಸತ್ಯ ಹೇಳಿ ಗೊಂತಾದ್ದದು ಅಲ್ಲಿ ಒಂದು ಡಜನ್ ವರುಷ ಬದುಕ್ಕಿ ಅಪ್ಪಗ.
ನಮ್ಮ ದೇಹಲ್ಲಿ ರಕ್ತನಾಳ೦ಗೊ,ನರನಾಡಿಗೊ ಇಪ್ಪ ಹಾಂಗೆ ಬೊಂಬಾಯಿಯ ಜೀವನಾಡಿ ಅಲ್ಯಾಣ ಲೋಕಲ್ ರೈಲು.ಇದೆ೦ತಪ್ಪಾ,ಈ ಭಾವ ಬರೇ ರೈಲು ಬರೇ ಗಿರಾಕಿ ಹೇಳಿ ಗ್ರೇಶಿಕ್ಕೆಡಿ.ಬೊಂಬಾಯಿ ವಿಷಯ ಶುರು ಮಾಡಿ ಅಲ್ಯಾಣ ರೈಲಿನ ಕಥೆ ಹೇಳದ್ದರೆ ರಾಮಾಯಣ ಹೇಳಿ ಸೀತಾ  ಆರು ಹೇಳಿ ಕೇಳಿ ಅಪ್ಪಗ ಬಲ್ನಾಡುಮಾಣಿ ಎನಗೆ ಗೊಂತಿಲ್ಲೆಪ್ಪಾ ಹೇಳಿದ ಹಾ೦ಗಕ್ಕು ಅಲ್ಲದೋ?

ಮೂರನೇ  ಕ್ಲಾಸಿಲಿಪ್ಪಗ  ಒಂದು  ದಿನ ಅಬ್ಬೆಯ ಗಿರ್ಗಾಣಿಸಿದ್ದು ಈಗಲೂ ಕಣ್ಣಿಂಗೆ ಕಟ್ಟುತ್ತು.”ಅಬ್ಬೇ,ಎನಗೆ ಒಂದರಿ ರೈಲಿಲಿ ಕೂರೆಕ್ಕು” ಹೇಳಿ. ಅಬ್ಬೆ ಒಲೆಲಿ ಸೌದಿಗೆ ಕಿಚ್ಚು ಹಿಡಿಯಲಿ ಹೇಳಿ ಓಟೆ ಹಿಡುದು ಊಪಿಗೊಂಡಿಪ್ಪಗಳೇ ಒಲೆಕ್ಕಟ್ಟೆಯ  ಒಂದು ಹೊಡೆಂದ ಎನ್ನ ರಾಗಮಾಲಿಕೆ.ಅಬ್ಬೆ ಅಡಿಗೆಕೆಲಸದ ಅಂಬ್ರೇಪಿನ ಎಡೆಲಿ ಅಪ್ಪನ ಹತ್ತರೆ ಹೋಗಿ ಇದಾ,ಇವಂಗೆ ಒಂದರಿ ರೈಲಿಲಿ ಹೊಯೆಕ್ಕಡ ಹೇಳಿ ವರದಿ ಮಾಡಿದವು.ಹಾಂಗೆ ಎನ್ನ ಗೆಂಟು ತಡೆಯದ್ದೆ ಅಪ್ಪ°  ಎನ್ನ ಮಂಗಳೂರಿಂದ ಕೊಟೆಕಾರಿ೦ಗೆ ರೈಲಿಲಿ ಕರಕ್ಕೊಂಡು ಹೋಗಿ ಅವು ಕಲ್ತ ಆನಂದಾಶ್ರಮ ಶಾಲೆಯನ್ನೂ ತೋರ್ಸಿಕ್ಕಿ ಬಂದವು.ಚುಕು ಬುಕು ಚುಕು ಬುಕು ಕೂ..ಹೇಳಿ ಶಬ್ದ ಮಾಡಿಗೊಂಡು ಕಪ್ಪು ಹೊಗೆ ಊರೆಲ್ಲ ಬಿಟ್ಟುಗೊಂಡು ಉಳ್ಳಾಲ ಸಂಕ ದಾಂಟೊಗ ಎನಗೆ USA(ಉಲ್ಲಾಳ ಸಂಕದ ಆಚೆ) ಹೋದಷ್ಟೇ ಕೊಶಿ ಆತು.ಅಪ್ಪಂಗೆ ತಾನು ಓದಿದ ಶಾಲೆಯ ನೋಡಿದ ಕೊಶಿಯೂ ಸೇರಿತ್ತದ.

ಆವಗ ಭವಿಷ್ಯದ ಕಲ್ಪನೆಯೇ ಇತ್ತಿಲ್ಲೆ.ಎನಗೆಂತ ಗೊಂತು? ಮುಂದೆ ಒಂದು ದಿನ ಬೊಂಬಾಯಿಯ ಹಾಂಗಿರ್ತ ಮಹಾನಗರವ ಸೇರಿ ಪ್ರತಿದಿನ,ಬೊಡಿವಷ್ಟು ರೈಲಿಲಿ ತಿರುಗುಲಿದ್ದು ಹೇಳಿ.ಈ ಜೀವನ ಹಾಂಗೆ ಅಲ್ಲದೋ?ಹರುದು ಹೋಪ ಮಹಾಪ್ರವಾಹಲ್ಲಿ ತೇಲಿ ಮುಳುಗುವ ,ಮುಳುಗಿ ತೇಲುವ ಸಣ್ಣ ಗುಳ್ಳೆಗೊ ಅಲ್ಲದಾ ನಾವು?ಗುಳ್ಳೆ ಸೃಷ್ಟಿ ಆಗಿ ಹೊಟ್ಟುವ ಮಧ್ಯದ ಕಾಲಘಟ್ಟಲ್ಲಿ ಸಿಕ್ಕುವ ಇಳಿಜಾರುಗಳಲ್ಲಿ  ರಭಸಲ್ಲಿಯೂ,ತಿರುಗಾಸುಗಳಲ್ಲಿ ಗಾಂಭೀರ್ಯಲ್ಲಿಯೂ,ಪ್ರಪಾತಂಗಳಲ್ಲಿ  ಅಬ್ಬರಲ್ಲಿಯೂ ಹರಿವ ನೀರಿಲಿ ತೇಲಿಗೊಂಡು ಹೋಪೊದಿದ.ಹಾಂಗೆ ಹೋಪಗ ಸುತ್ತಲಿನ ಸೌಂದರ್ಯವ ಅನುಭವಿಸಿಗೊ೦ಬೊದೆ ಅದ್ಭುತ ಅನುಭವ  ಅಲ್ಲದೋ.

ತುಮಕೂರಿಲಿ ಡಿಗ್ರಿ ಸರ್ಟಿಫಿಕೇಟು ತೆಕ್ಕೊಂಡವ ಪೆಟ್ಟಿಗೆ ಕಟ್ಟಿದ್ದು ಸೀದಾ ಬೊಂಬಾಯಿಗೆ.ಆನು ಹೋದ್ದು ಹೇಳೊದಕ್ಕಿಂತ ಎನ್ನ ಸೊಂಟಕ್ಕೆ ಬಳ್ಳಿ ಹಾಕಿ ಎಳದ್ದು ಹೇಳೋದೇ ಸರಿ.ಎಳದವ° ಎನ್ನ ಪ್ರೀತಿಯ ಶಂಕರಪ್ಪಚ್ಚಿ.  ಆವಗಾಣ ಕಾಲಲ್ಲಿ, ಹಾಂಗೆ ನೋಡುತ್ತರೆ ಸರಿಸುಮಾರು 1995 ರ ವರೆಗೆ, ಬೆಂಗಳೂರಿನ ಕಂಪುಟರು ಉದ್ಯೋಗಂಗೋ ರೈಸುವ ಮದಲು ನಮ್ಮ ಊರಿನವಕ್ಕೆ ಬೊಂಬಾಯಿಯೇ ರಜ ಹತ್ತರೆ ಇದ್ದದು. ಸ್ವರ್ಗದ (ಚೆನ್ನಬೆಟ್ಟಣ್ಣನ ಕೆಮಿ ಕುತ್ತ ಆತದ!)ಹಾಂಗಿದ್ದ ಬೆಂಗಳೂರಿಲಿ ಆವಗ ಉದ್ಯೋಗಾವಕಾಶ ಭಾರಿ ಕಮ್ಮಿ ಇತ್ತು. ಮತ್ತೆ ಬೊಂಬಾಯಿಯೋ..” ತೆರೆದಿದೆ ಮನೆ ಓ ಬಾ ಅತಿಥಿ” ಹೇಳಿ ಸರ್ವರನ್ನೂ ಸದಾ ಸ್ವಾಗತ ಮಾಡಿಗೊಂಡಿತ್ತು,ಉದ್ಯೋಗದ ಕೊರತೆಯೂ ಇತ್ತಿಲ್ಲೆ. ಬೆಂಗಳೂರಿನ ಚಳಿ,ಶೀತ ಹೇಳಿರೆ ನವಗೆ ಎಲರ್ಜಿ,ಬೊಂಬಾಯಿಯೋ- ನಮ್ಮ ಊರಿನ ಹಾಂಗೆ ವರುಷದ 365 ದಿನವೂ ಬೆಗರಿಗೊಂಡೆ ಇಪ್ಪೊದು,ಸೆಕೆ ಮಳೆ ,ಚಳಿ ಎಲ್ಲ ಒಂದೇ ಲೆಕ್ಕ.
ಆದರೆ ಎಂಗಳ ಕೆಲವು ಘಟ್ಟದ ಮೇಗಾಣ ದೊಸ್ತಿಗೋ ಬೊಂಬಾಯಿಗೆ ಉದ್ಯೋಗ ಹುಡುಕ್ಕುಲೆ ಬಂದು ಅಲ್ಯಾಣ ಸ್ಪೀಡಿಂಗೆ ಹೆದರಿ ಅವರ ಊರಿಂಗೆ ಓಡಿದ್ದದೂ ಇದ್ದು,ಬೊಂಬಾಯಿಯ ರೈಲಿನ ಸ್ಪೀಡಿಂದಲೂ ಹೆಚ್ಚು ಸ್ಪೀಡಿಲಿ.ಎಂಗೋ ಏವಗಳೂ ಕುಶಾಲು ಮಾಡೊದು,ಬೊಂಬಾಯಿಗೆ ಪೆಟ್ಟಿಗೆ ಹೊತ್ತುಗೊಂಡು ಬಂದವ° ಶುರುವಾಣ ಒಂದು ವಾರ ಬೊಂಬಾಯಿಯ ರೈಲಿಲಿ ಹೊಪಲೆ ಅಭ್ಯಾಸ ಮಾಡಿದನೋ ಬದುಕ್ಕಿದ°,ಅಲ್ಲದ್ದರೆ ಬಂದ ದಾರಿಗೆ ಸುಂಕ ಇಲ್ಲೇ ಹೇಳಿ ವಾಪಾಸು ಹೋಪಲಕ್ಕು.ಬೊಂಬಾಯಿ ಹೇಳಿರೆ ಅಯಸ್ಕಾಂತ ಇದ್ದ ಹಾಂಗೆ ಒಂದೋ ಸೆಳಕ್ಕೊಳ್ಳುತ್ತು ಇಲ್ಲದ್ದರೆ ದೂರ ನೂಕುತ್ತು,ಎರಡರಲ್ಲಿ ಒಂದು.

ಆನು ಎನ್ನ ಮಾವನ ಒಟ್ಟಿ೦ಗೆ ರೂಮು ಮಾಡಿದ್ದು ದೊ೦ಬಿವಿಲಿಲಿ.ಬೊಂಬಾಯಿಂದ ರಜ ಹೆರವೇ,ಆಫೀಸಿಂದ ಘಂಟೆಗಟ್ಲೆ ಪ್ರಯಾಣ.ಆಫೀಸಿನ ಹತ್ತರೆ ಇಪ್ಪ ದೊಸ್ತಿಗೋ ಕೇಳುಗು ಎಂತಗೆ ಮಾರಾಯ ಆ ‘ದೊಂಬಿ’ ಲಿ ರೂಮು ಮಾಡಿದೆ? ಹೇಳಿ.ಎನ್ನ ಉತ್ತರ ಒಂದೇ  ಊರಿಂಗೆ ಹತ್ತರೆ ಇದ್ದನ್ನೇ,ಹಾಂಗಾಗಿ ಹೇಳಿ.

ಎಂತದೇ ಹೇಳಿ,ಬೊಂಬಾಯಿಲಿ ರೈಲಿನ ಪ್ರಯಾಣವೇ ಒಂದು ಅದ್ಭುತ ಅನುಭವ. ಬೊಂಬಾಯಿ ಹೊಕ್ಕ ಕೂಡಲೇ ನ್ಯೂಟನನ ತತ್ವಂಗೋ ಎಲ್ಲ ಶುಭ್ರವಾಗಿ ಅರ್ಥ ಅಪ್ಪೊದು.ಅಲ್ಲ್ಯಾಣ ಶಾಲೆಗೆ ಹೋಪ ಮಕ್ಕೊಗೆ ದಾರ್ವಿಣನ ವಿಕಾಸವಾದವ ವಿವರಿಸೆಕ್ಕಾದ ಅವಶ್ಯಕತೆಯೇ ಬಾರ.
ಪ್ರತಿ ಮೂರು ನಿಮಿಷಕ್ಕೆ ಒಂದು ರೈಲು,ಹತ್ತು ಕಂಪಾರ್ಟುಮೆಂಟುಗೋ .ಪ್ರತಿ ಕಂಪಾರ್ಟುಮೆಂಟಿಲಿ ಎರಡು ಬಾಗಿಲುಗೊ.ಪ್ರತಿ ನಿಲ್ದಾಣಲ್ಲಿ ರೈಲು ನಿ೦ಬೊದು  30 ಸೆಕುಂಡು ಆಗಿಕ್ಕು.ಅದರ ಒಳ ಹತ್ತುವೋರು ಹತ್ತೆಕ್ಕು,ಇಳಿವೋರು ಇಳಿಯೆಕ್ಕು.ನ್ಯೂಟನನ ಮೂರೂ ತತ್ವಂಗಳೂ ಅರ್ಥ ಅಪ್ಪೊದು ಅಲ್ಲಿಯೇ,ಆ ತಳ್ಳುವಿಕೆಯ ಫ್ರೀ ಮಸ್ಸಾಜಿನಸುಖವ ಅನುಭವಿಸಿ ಅಪ್ಪಗ.  ಅದಕ್ಕೇ ಶತಮಾನ೦ಗಳ ಮದಲೇ ದಾಸವರೇಣ್ಯರು  ಹೇಳಿದ್ದು “ತಳ್ಳುವಿಕೆಗಿ೦ತನ್ಯ ತಪವು ಇಲ್ಲ” ಹೇಳಿ  ಕಾಣುತ್ತು. ರೈಲಿನ ಒಳ ರಶ್ಶಿಲಿ ಹಾರಿ ಹಾರಿ ಅಭ್ಯಾಸ ಆಗಿ ಎಲ್ಲಿಯಾದರೂ ರಜೆ ದಿನ ಅಭ್ಯಾಸಬಲಂದ ಅದೇ ಸ್ಪೀಡಿಲಿ ಹತ್ತಿದರೆ ಆಚ ಹೊಡೆ ಬಾಗಿಲಿಂದ ರೈಲಿನ ಹೆರ ಉದುರೊದು ಖಂಡಿತ.
ಇನ್ನು ರೈಲಿನ ಒಳ ನಿಂದು ಪ್ರಯಾಣ ಮಾಡೊಗ ಡಾರ್ವಿನನ ವಿಕಾಸ ವಾದದ ಮರ್ಮ ಸರೀ ತಲೆಗೆ ಹೋಪೊದು.

ರೈಲಿನ ಹೆರಾಣ ಯುದ್ಧಲ್ಲಿ  ಗೆದ್ದು ಒಳ ಹೊಕ್ಕನೋ,ಡಾರ್ವಿನನ ಸಿದ್ಧಾ೦ತಗಳ ಪಾಠ ಶುರು. ಉಳಿವಿಗಾಗಿ ಹೋರಾಟ ( Struggle for existance)  ಅರ್ಥೈಸಿಗೊಳ್ಳೆಕ್ಕೋ,ರೈಲಿನ ಒಳ ನಿಂಬ ವಿಧವಿಧದ ಭಂಗಿಗಳ ನೋಡೆಕ್ಕು.ಮೇಗಂದ ಒಂದು ಸಾಸಮೆ ಕಾಳು ಇಡ್ಕಿರೂ ಕೆಲ ಬೀಳದ್ದಷ್ಟು ಗಿಡ್ಪದ ರಶ್ಶಿಲಿ,ನಮ್ಮ ನಮ್ಮ ಕೈಕಾಲುಗಳನ್ನೂ ಹುಡುಕ್ಕೆಕ್ಕಷ್ಟೇ.ಹಾಂ,ಒಂದು ಲಾಭ ಇದ್ದು,ಬಸ್ಸಿಲಿ ಕಂಬ ಹಿಡುದಾಂಗೆ ಎಂತದೂ ಹಿಡಿಯೆಕ್ಕಾದ ಅಗತ್ಯವೇ ಇಲ್ಲೇ.ಸರ್ತವೋ,ಓರೆಯೋ ನಿಂದರೆ ಆತು ಗುರುತ್ವಾಕರ್ಷಣೆಯ ಮೀರಿ ನಿಂಬ ಅವಸ್ಥೆ ಈ ವಕ್ರತಾಡಾಸನ.ಕಿಸೆಯ ಒಳ ಇಪ್ಪೊದರ ಕಾಣದ್ದ ದೇವರೇ ಕಾಪಾಡೆಕ್ಕು,ಅಲ್ಲದ್ದರೆ ಕಾಣದ್ದ ಕೈಗೊ ಖಾಲಿ ಮಾಡೊದು ಮಾಮೂಲಿ.ಅವಕ್ಕೆ ಕಳ್ಳಕಿಸೆಯನ್ನೂ ಭೇದುಸುವ ಕೈಚಳಕ ಗೊಂತಿದ್ದು,ಅಭಿಮನ್ಯುವಿನ ಚಕ್ರವ್ಯೂಹ ಭೇದನೆ ನೆ೦ಪಪ್ಪ ಹಾಂಗೆ. ಕಿಸೆಗೆ ಇನ್ನೊಬ್ಬನ ಕೈ ಹೊಕ್ಕದು ಗೊಂತಾದರೂ ಅಸಹಾಯ ಪರಿಸ್ಥಿತಿ.ಆದರೆ ಕಿಸೆಗಳ್ಳ ಸಿಕ್ಕಿಬಿದ್ದನೋ,ತಾರಾಮಾರ,ಹೊಲ್ಸೇಲ್  ಧರ್ಮದೇಟು ನಿಶ್ಚಿತ.

ಬಲಿಷ್ಟವಾಗಿರುವುಗಳ  ಉಳಿಕೆ (Survival of fittest) ಹೇಳೊದು ಬೊಂಬಾಯಿಲಿ ಸಮರ್ಥವಾಗಿ ಬದುಕ್ಕುಲೆ ಅಭ್ಯಾಸ ಆದರೆ ಗೊಂತಪ್ಪೊದು.ಎಲ್ಲಾ ಅನುಭವಿಸಿಯೂ ಬೊಂಬಾಯಿಯ ಬದುಕ್ಕಿಂಗೆ ಒಂದರಿ ಒಗ್ಗಿಹೋದರೆ,ಮತ್ತೆ ಆ ಚಕ್ರವ್ಯೂಹಂದ ಹೇರ ಬಪ್ಪಲೆ ಮನಸ್ಸಪ್ಪದು ಕಷ್ಟವೇ.

ಬೊಂಬಾಯಿ ರೈಲಿಲಿ ದಿನದ ಕೆಲವು ಘಂಟೆಗೋ ರಶ್ ಹವರ್ಸ್ ಆದರೆ ಆಫೀಸಿ೦ಗೆ  ಹೋಪ ಮತ್ತೆ ಆಫೀಸು ಬಿಟ್ಟಪ್ಪಗ ಕ್ರಶ್ ಹವರ್ಸ್ ಆಗಿರ್ತು.ಮದಮದಲು,ದಶಮಾನಂಗಳ ಹಿಂದೆ ಜೆನಪ್ರವಾಹದ ಹರಿಯುವಿಕೆ ಪೇಟೆಯ ಹೇರವಲಯಂದ ಪೇಟೆಯ ಹೊಡೇ೦ಗಿದ್ದರೂ ಈಗ ಈ ಪ್ರವಾಹ ಪೇಟೆಯ ಎರಡೂ ಹೊಡೇ೦ಗೆ  ಶರವೇಗಲ್ಲಿ ಸಾಗುತ್ತಾ ಇಪ್ಪೊದು ವರ್ತಮಾನದ ಶುದ್ದಿ,ಶುದ್ದಿಕ್ಕಾರ ಹೇಳಿದ್ದು.

ಈ ರಶ್ಶಿನ ಎಡೇಲಿ ಭಜನೆಯ ,ಇಸ್ಪೀಟಿನ ಆಡುವವರ ಗೌಜಿ ಬೇರೆ. ರೈಲು ಅಡಿಮೇಲಾದರೂ ಇವು ಬೇರೆಯೇ ಲೋಕಲ್ಲಿರುತ್ತವೋ ಹೇಳ್ತ  ಸಂಶಯ ಬಪ್ಪಷ್ಟು ತಲ್ಲೀನತೆ ಅವರ ಕಾರ್ಯಲ್ಲಿ.ಆಯಾ ಗ್ರೂಪಿನವು ಪ್ರತಿದಿನ ನಿರ್ಧಾರಿತ ಬೋಗಿಯನ್ನೇ ಹತ್ತೊದು.ಎನಗೆ ಮರಾಟಿ ಭಜನೆ ಇಷ್ಟ ಅಪ್ಪಲೇ ಶುರು ಆಗಿ ಪ್ರತಿದಿನ ಆನೂ ಅದೇ ಬೋಗಿಯ ಹತ್ತೊದು ಅಭ್ಯಾಸ ಆತು. ಬೊಂಬಾಯಿಲಿ ವಾಚು ಇಲ್ಲದ್ದರೆ ಮುಳುಗಿದ°  ಹೇಳಿ ಲೆಕ್ಕ.ಪ್ರತಿ ರೈಲು ಹೆರಡುವ,ಪ್ರತಿ ನಿಲ್ದಾಣಕ್ಕೆ ತಲುಪುವ,ಅಲ್ಲಿ ನಿಲ್ಲುವ ಕೊಡಿ ಎತ್ತುವ ಸಲ್ಲಾ ಸಮಯ೦ಗೊ  ಪೂರ್ವ ನಿರ್ಧಾರಿತ,ನಮ್ಮ ಹಣೆಲಿ ಬ್ರಹ್ಮದೇವರು ಲಿಖಿತಲ್ಲಿ  ಎಲ್ಲಾ ನಿರ್ಧಾರ  ಮಾಡಿದ್ದಾ° ಇಲ್ಲೆಯೋ ಹಾ೦ಗೆಯೇ.ಮನೆಂದ ರೈಲಿನ ಸ್ಟೇಶನಿಂಗೆ ಬಸ್ಸೋ ಅಥವಾ ರಿಕ್ಷವೋ,ಇಳುದ ಮತ್ತೆ ಆಫೀಸಿ೦ಗೆ ಒಂದು ಬಸ್ಸು ಹೀಂಗೆ ಜೀವನ ಪೂರ್ಣ ಯಾಂತ್ರಿಕ.ಒಂದು ರೀತಿಯ ಪೂರ್ವನಿಯಂತ್ರಿತ ಯಂತ್ರಮಾನವ   (programmed robot ) ಪ್ರತಿಯೊಬ್ಬನೂ.ಗಡಿಯಾರದ ಸೆಕು೦ಡಿನ ಮುಳ್ಳಿನ ಹಾಂಗೆ ಓಡುತ್ತಾ ಇಪ್ಪೊದೆ ಬೊಂಬಾಯಿಯ ಜೀವನದ ವಿಶೇಷತೆ.ಬದುಕು ಜೇನು ಹುಳುಗಳ ಹಾಂಗೆ ಹೂಗಿಂದ ಗೂಡಿ೦ಗೆ,ಗೂಡಿಂದ ಹೂಗಿ೦ಗೆ.ಇರುಳು ಹನ್ನೆರಡು ಘಂಟೆಗೆ ಪ್ರೆಸ್ಸುಗಳಿಂದ ಪ್ರಿ೦ಟಿ೦ಗಿನವು ಮನೆಗೆ ಹೆರಟರೆ ಉದಿಯಪ್ಪಗ ನಾಕು ಘಂಟೆಗೆ ಪೇಪರು,ಹಾಲು ಮಾರುವವು ಮನೆಂದ ಪೇಟೆಗೆ ಹೆರಡೊದು.ಸೂರ್ಯಮುಳುಗದ್ದ ಸಾಮ್ರಾಜ್ಯ ಇದ್ದ ಹಾಂಗೆ,ದಿನ ಮುಗಿಯದ್ದ ರಾಜಧಾನಿ ಈ ಬೊಂಬಾಯಿ.

ಈ ಪ್ರವಾಹಲ್ಲಿ ಒಂದು ಸಣ್ಣ ಹನಿಆಗಿ ಕ್ಷಣಕಾಲ ತೇಲಿ, ಮುಳುಗಿ ಅನುಭವ ಪಡವ ಯೋಗ ಎನಗಿತ್ತು ಹೇಳೊದು ಸಂತೃಪ್ತಿಯ ವಿಷಯ.

ಮುಳಿಯ ಭಾವ

   

You may also like...

14 Responses

 1. ಕೆಪ್ಪಣ್ಣ says:

  ಮುಳಿಯ ಭಾವ…. ಒಳ್ಳೆಯ ಅನುಭವ ಕಥನ
  ನಿಂಗಳ ಲೇಖನ ಓದಿ ಎನಗೆ ಖುದ್ದು ರೈಲಿಲ್ಲಿ ಪ್ರಯಾಣ ಮಾಡಿದ ಹಾಂಗಾತು..
  ಒಳ್ಳೆ ಶುದ್ದಿ….

 2. ಸುರೇಶ ಕೃಷ್ಣ says:

  ಮುಂಬೈ ಯ ಲೋಕಲ್ ಟ್ರೈನ್ ನ ಜೀವನದ ಬಗ್ಗೆ ರಾಜು ಶ್ರೀವಾಸ್ತವ ಕೆಲವು ಶೋ “Great Indian Laughter Challenge, edition-೧”, star plus ಚಾನೆಲ್ ಲಿ ಕೊಟ್ಟಿತ್ತಿದ್ದ. ಭಾರಿ ತಮಾಷೆ ಇತ್ತದು.
  http://www.youtube.com/watch?v=rNqxQYZq6CU&p=D06E7AB5F4205517&playnext=1&index=22

  ಗಣೇಶ್ ಪೆರ್ವ ಹೇಳಿದ ಹಾಂಗೆ, ಮುಂಬೈ ಒಳ್ಳೆಯವು ರಾಜ ಹೆಚ್ಹಿಗೆ ಸಿಕ್ಕುಗು,. ಮಧ್ಯ ರಾತ್ರಿಲಿಯು ಆಟೋ/taxi ಯವು ಮೋಸ ಮಾಡ್ಥವಿಲ್ಲೇ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *