Oppanna.com

ಕಾಗದ ಬರವ ಹವ್ಯಾಸ

ಬರದೋರು :   ಗಣೇಶ ಮಾವ°    on   07/09/2010    24 ಒಪ್ಪಂಗೊ

ಗಣೇಶ ಮಾವ°
ನಮ್ಮ ಹತ್ತರಾಣವಕ್ಕೆ ಇ-ಮೇಲ್‌  ಕಳ್ಸುವಾಗ  ಎನಗೆ ಅಪ್ಪ  ಪ್ರಶ್ನೆ ಎಂತ ಹೇಳಿರೆ  ಎಲ್ಲಿ ಹೋತು ಆ ನಮ್ಮ  ಕಾಗದ  ಬರವ ಹವ್ಯಾಸ ?’. ಕಂಪ್ಯೂಟರ್‌ ನಮ್ಮ ಜೀವನದ ಅವಿಭಾಜ್ಯ ಅಂಗ ಆದ ಮೇಲೆ ಈ ‘ಹಾರ್ಡ್‌ ಕಾಪಿ’ ಪತ್ರ ವ ‘ ಸಾಫ್ಟ್‌ ಕಾಪಿ’ ಇ-ಮೇಲ್‌ ಗ ಆಕ್ರಮಣ ಮಾಡಿಗೊಂಡಿದು., ಎಷ್ಟೇ ನಮ್ಮ ತಂತ್ರಜ್ಞಾನ ಮುಂದುವರುದು ಇಡೀ ಪ್ರಪಂಚವೇ  ಒಂದು ಸಣ್ಣ  ಹಳ್ಳಿ ಹೇಳಿ ನವಗೆ ಅನಿಸಿದರೂ  ಆ ಕೈ ಬರಹದ ಒಂದೂವರೆ  ರೂಪಾಯಿ ಇನ್ಲಾಂಡ್  ಕಾಗದವೇ  ಮನ ಮುಟ್ಟುತ್ತು ಹೇಳಿ ಎನ್ನ ಅಭಿಪ್ರಾಯ . ಗೌರವಪೂರ್ವಕವಾಗಿ ಅಪ್ಪನ  ‘ತೀರ್ಥರೂಪ ತಂದೆಯವರಿಗೆ … ’ ಹೇಳಿ  ಬರವ ಕಾಗದ ಮಾಯ ಆಗಿ  ‘ಹಾಯ್  ಡ್ಯಾಡಿ’ ಹೇಳಿ ಹೇಳುವ ಇ-ಮೇಲ್‌ ನ ದಿನಂಗಳ ಇಂದು ನಾವು ಕಾಣ್ತಾ ಇದ್ದು . ಎಷ್ಟೊಂದು ಕೃತ್ರಿಮತೆ ಇದ್ದು ಹೇಳಿ  ಅನಿಸುತ್ತು  ಅಲ್ದಾ??  ಪ್ರೀತಿ – ಪ್ರಣಯಲ್ಲಿ ಮುಳುಗಿದವಕ್ಕಂತೂ ಕಾಗದ ಬರವದು  ಒಂದು ವರದಾನ. ಇಂದ್ರಾಣ  ಇ-ಗ್ರೀಟಿಂಗ್ಸ್ , ಚಾಟಿಂಗ್‌ ಇತ್ಯಾದಿ ಅಂತರ – ಜಾಲ ದ ಸಂಪರ್ಕ  ಪ್ರೀತಿಯ ಬುಗ್ಗೆ ಉಕ್ಕಿ ಹರುದರೂ  ಒಂದೇ ಒಂದು ಪುಟದ ಪ್ರೇಮ-ಪತ್ರದ ಮುಂದೆ ಇದೆಲ್ಲ ನಗಣ್ಯ. ಕಾಗದ ಬರವದರ್ಲಿ  ಸಿಕ್ಕುವ ಆ ಒಂದು ರೀತಿಯ ಆತ್ಮೀಯತೆ, ಗಾಢ ಅನುಬಂಧವ ಇಂದ್ರಾಣ ಇ-ಮಾತುಕತೆಗ ಕೊಡ್ಲೆ ಖಂಡಿತಾ ಸಾಧ್ಯ ಇಲ್ಲೆ.
ಅಕ್ಷರಂಗಳ ಹೆರ್ಕಿ ಹೆರ್ಕಿ  ಓದುವ ಸುಖ ಇಂದ್ರಾಣ  ಯಾವ ಫಾಂಟ್‌ಗಳೂ ಕೊಡ್ಲೆ  ಅಶಕ್ಯ. ಬಣ್ಣಬಣ್ಣದ ಸಂಗೀತಮಯ ಪ್ರಣಯಭರಿತ ಗ್ರೀಟಿಂಗ್‌ ಕಾರ್ಡ್‌ಗ ಇನ್‌-ಬಾಕ್ಸ್‌ ಲಿ  ತುಂಬಿ ಹರುದರೂ ,   ೨೫ ವರ್ಷ ಹಿಂದಾಣ ಘಟನೆಲಿ ,  ನೆಡು ಇರುಳು ವರಕ್ಕಿಂದ ಎದ್ದು  ಓದಲೆ ಎಂತದೋ ಮರತ್ತು ಹೋತು ಹೇಳಿ ನಾಕೈದು ಸರ್ತಿ   ಪ್ರೇಮ-ಪತ್ರ  ಓದುವುದರಲ್ಲೇ ಏನೋ ಸಂತೃಪ್ತಿ ಇದ್ದು ಹೇಳಿ ಇಂದ್ರಾಣ ಅಜ್ಜನ್ದ್ರು ಹೇಳುಗು. . ಹಳೆಯ ಶಾಯಿ ಪೆನ್ನಿಲಿ ಕಾಗದ  ಬರವಗ ಶಾಯಿಯೆಲ್ಲ ಚೆಲ್ಲಿ ಅಕ್ಷರಂಗ  ಒಂದಕ್ಕೊಂದು ಸೇರಿ ಅಪ್ಪ  ಅಸಂಬದ್ಧ ಶಬ್ದಂಗಳ  ಕಲ್ಪನೆಯೇ ಎಷ್ಟೊಂದು ಚೆಂದ ಅಲ್ದಾ?
ಪೋಷ್ಟಾಪೀಸಿಲಿ ಬಟವಾಡೆ ಅಪ್ಪಲಿಪ್ಪ ಕಾಗದ

ಕನ್ನಡ ಲಿಪಿಯ ಕಂಪ್ಯೂಟರ್‌ಲಿ ಇಂದು ನವಗೆ ಕಾಂಬಲೆ  ಎಡಿಗು ಹೇಳಿ ಆದರೂ  ಈ ಸುಂದರ ಪತ್ರಲ್ಲಿಪ್ಪ  ನವಿರಾದ ಸಂಬಂಧವ ಅವು ಕೊಡ್ಲೆ ಸಾಧ್ಯ ಇಲ್ಲೆ . ಕಾಗದದ  ಉಬ್ಬು ತಗ್ಗು ಅಕ್ಷರದ  ಮೇಲೆ ಕೈ  ಹಿಡುದು ಓದುವ  ಸುಖ ಕಂಪ್ಯೂಟರ್‌ ಮಾನಿಟರ್‌ಲಿ  ಇಲ್ಲೆ ಅಲ್ದಾ ? ಈ ಘಟನೆಗ ಇನ್ನು ಹೀಂಗೆ ಮುಂದುವರುದರೆ ಫಾದರ್ಸ್ ಡೇ,ಮದರ್ಸ್ ಡೇ,ಫ್ರೆಂಡ್ ಶಿಪ್ ಡೇ ಹೇಳಿ ಆಚರಣೆಗ  ಬಂದ ಹಾಂಗೆ  ವರ್ಷಕ್ಕೆ ಒಂದು ದಿನ ಕಾಗದ ಬರವ ದಿನ ಹೇಳಿ ಬಂದರೂ ಆಶ್ಚರ್ಯ ಅಲ್ಲ.ನಮ್ಮ ಆಚರಣೆಗ ಆದಷ್ಟು ಹಬ್ಬ ಹರಿದಿನಕ್ಕೆ ಮಡುಗುವ.  ಆದರೂ ನಾಲ್ಕು ವಾಕ್ಯದ ಕಾಗದ ಬರದ ದಿನವ ನಾವು ಒಂದರಿ ನೆಂಪು ಮಾಡಿಗೊಂಬ ಆಗದೋ?? ಇದರಿಂದಾಗಿ  ತುಂಬಾ ದಿನಂಗಳ ಮತ್ತೆ ಆತ್ಮೀಯರ ಕೈ ಬರಹ ನೋಡಿದ ನೆಂಪು ಆಗಿ ಆನಂದಭಾಷ್ಪ ಸುರುದರೂ ಆಶ್ಚರ್ಯ ಅಲ್ಲ.
ನಿಂಗಳ ಜೀವನಲ್ಲಿ ಹೀಂಗಿಪ್ಪ ಅನುಭವಂಗ ಎಂತಾರು ಇದ್ದರೆ ಈ  ಕೆಳಾಣ  ಒಪ್ಪ ಕೊಡ್ತರ ಮೂಲಕ ನೆಂಪು ಮಾಡಿಗೊಂಬ. ಆ ಮೂಲಕ ನಮ್ಮ ಬೈಲಿಲಿ ನಮ್ಮ ಹಿರಿಯವು ಅನುಭವಿಸಿದ ನೆಂಪುಗಳ ಪರಸ್ಪರ ಹಂಚಿಗೊಂಬ.ಆತೋ?

24 thoughts on “ಕಾಗದ ಬರವ ಹವ್ಯಾಸ

  1. Kagada baravadu enna mecchina havyasa.iga kammi aayidu.iga mobile,phone ella banda karana heengatu.kagada baravadu ondu kale.adara ellaroo ulisekku.

  2. ನಾವು ಜೀವನಲ್ಲಿ ಹತ್ತನೇ ಮೆಟ್ಲು ಹತ್ತೆಕ್ಕು ಹೇಳಿ ಆದರೆ ಒಂದನೇ ಮೆಟ್ಲು ಹತ್ತಿದ್ದು ನೆಂಪಿರೆಕು ಅಲ್ದಾ? ಈಗಾಣ ಈ ಮೈಲುಗಕ್ಕೂ ಆಧಾರ ಹಿಂದಾಣ ನಮ್ಮ ಅಂಚೆ ಪದ್ಧತಿಗಳೇ ಅಲ್ದಾ? ಒಂದರಿ ನಾವು ಜೀವನಲ್ಲಿ ಮುಂದೆ ಬಂದ ಬಂದ ದಾರಿಯ ತಿರುಗಿ ನೋಡಿಯಪ್ಪಗ ಅಪ್ಪ ಸಂತೋಷ ಬೇರೆಯೇ..

  3. ಒಪ್ಪಣ್ಣ, ಈ ಲೇಖನ ಭಾರೀ ಲಾಇಕಿದ್ದು. ಕಾಗದ ಬರಕ್ಕೊಂಡಿದ್ದ ಸಮಯವ ಎಲ್ಲೋರಿಂಗುದೆ ನೆಂಪು ಮಾಡಿಕೊಟ್ಟತ್ತು. ಎಲ್ಲೋರುದೆ ಅವರವರ ಪತ್ರಲೇಖನದ ಅನುಭವಂಗಳ ಹಂಚಿಗೊಂಡಿದವು. ಪತ್ರಕ್ಕೆ ಕಾದುಕೂಪದು, ಪುನಾ ಪುನಾ ಓದುದು ಇದರ ಎಲ್ಲೋರುದೆ ನೆಂಪು ಮಾದಿಗೊಂಡಿದವು.
    ಕಾಗದ ಬರಕ್ಕೊಂಡಿದ್ದ ಸಮಯಲ್ಲಿ ನಾವು ಎಲ್ಲೋರುದೆ ಅದರ ಬೇರೆ ಬೇರೆ ನಮೂನೆಲಿ enjoy ಮಾಡಿದ್ದು. ಆದರೆ ಈಗ, e – ಮೇಲ್ ಬರವದು/ಫೋನ್ ಮಾಡುದರ ಬದಲು ಪತ್ರ ಬರೆಯಕ್ಕು ಹೇಳಿದರೆ ಇದು ರಜಾ ಕಷ್ಟ ಅಲ್ಲದ? ನಾವು ಕಾಗದ ಬರವ ಉದ್ದೇಶ ನಮ್ಮ ಸುದ್ದಿ ತಿಳಿಶುದು(ನೀನು ಎಂಗೊಗೆ ಕಾಗದ ಬರೆಯದ್ದೆ ಇಷ್ಟು ಲಾಇಕಲ್ಲಿ ಸುದ್ದಿ ಹೇಳ್ತೆ!). ಆದರೆ ಈಗಾಣ ತಂತ್ರಜ್ಞಾನ ಕಾಗದ ಬರವದರ outdate ಮಾಡಿದ್ದು. ನಾವು ಈಗಳುದೇ ಪತ್ರ ಬರಕ್ಕೊಂಡು ಇರ್ತಿತ್ತರೆ ಇಷ್ಟು ಜನಂಗಳ ಅಭಿಪ್ರಾಯ(ಒಪ್ಪ) ಹೀಂಗೆ ಒಂದೇ ದಿಕ್ಕೆ ನೋಡ್ಲೆ ಸಿಕ್ತಿತ್ತಿಲ್ಲೆ!
    ಕಾಗದ ಬರವದಕ್ಕೆ ಮೊದಲು ನಾವು ಹೇಂಗೆ communicate ಮಾದಿಗೊಂಡು ಇತ್ತು? ಕಾಗದ ಬರವದು ಸುರು ಆದ ಸಮಯಲ್ಲಿ ಮೊದಲಾಣ ಕ್ರಮದೋರುದೇ ಮಾತಾದಿಗೊಂಡಿಕ್ಕಲ್ಲದ “ಪತ್ರ ಬರವಲಾಗ, ಎಂತದು ಇದು? ಜನಂಗಳ ಮೋರೆ ನೋಡುಲೆ ಸಿಕ್ಕುತ್ತೆ ಇಲ್ಲೆ ಈಗ. ಎಂಗ ಆದರೆ ಆವಗಾವಾಗ ಹೋಗಿ ಮೋರೆ ತೋರ್ಸಿಕ್ಕಿ ಮಾತಡ್ಸಿಗೊಂದು ಬಪ್ಪೆಯ. ಈಗ ಬರೇ postman ನ ಮೋರೆ ಮಾತ್ರ !!” ಹೀಂಗೆ ಮಾತಾದಿಗೊಂಡಿಕ್ಕ??
    (ಇದು ಆನು ಇಲ್ಲಿ ಚರ್ಚೆ ಮಾಡುಲೆ ಬೇಕಾಗಿ ತೆಗದ ವಿಷಯ ಅಲ್ಲ. ಎನ್ನ ಅಭಿಪ್ರಾಯ technology ನಮ್ಮ ಜೀವನವ ಮತ್ತಷ್ಟು ಸುಲಭ ಮಾಡ್ತಾ ಇದ್ದು. ಅದರ ನಾವು ಒಪ್ಪಿಗೊಂಡು ಮುಂದುವರಿವದು ಒಳ್ಳೇದು ಹೇಳಿ ಕಾಣ್ತು. ಸತ್ಯ ಹೇಳಿ, ಜೆಂಬರದ ಕಾಗದ ಕೊಡುಲೆ ಬಿಟ್ಟು ಬೇರೆ ಯಾವುದಕ್ಕಾದರುದೆ ಈಗಾಣ ಕಾಲಲ್ಲಿ ಪತ್ರ ಬರವದಕ್ಕೆ ಅರ್ಥ ಇದ್ದಾ? ಒಪ್ಪುತ್ತೀರಾ?)

  4. ನಿಂಗೋಗೆ ಆರಿಂಗಾದರೂ ಚಂದಮಾಮ ಓದಿದ ನೆಂಪು, ಮತ್ತೆ ಓದುವ ಆಸೆ ಇದ್ದರೆ, ಈ ಕೊಂಡಿಯ ಒತ್ತಿ
    http://www.chandamama.com
    ಹಳತ್ತಿಂಗೆ ಮಡಗಿದ್ದರ ಓದುಲೆ ಮರಯೆಡಿ

  5. ಹಳೆಯ ನೆನಪುಗಳ ಪುನಃ ನೆನಪಿಸುತ್ತ ಒಳ್ಳೆಯ ಲೇಖನ. ಈಗಾಣ ಮಕ್ಕೊಗೆ, ಪತ್ರ ಬರೆತ್ತದು ಹೇಳಿರೆ ಅದು ಶಾಲೆಲಿ ಪ್ರಬಂಧ ಬರವಲಿಪ್ಪ ವಿಷಯ ಹೇಳಿ ಮಾಂತ್ರ ಗೊಂತಿದ್ದಷ್ಟೆ. ಆ ಪತ್ರ ಬರೆತ್ತರಲ್ಲಿ, ಅದಕ್ಕೆ ಮರುತ್ತರ ಬರೆತ್ತರಲ್ಲಿ, ಅದಕ್ಕೆ ಕಾಯುವುದರಲ್ಲಿ ಇದ್ದ ಪ್ರೀತಿ, ತಾಳ್ಮೆ, ತಲ್ಲಣಂಗೊ ಅನುಭವಿಸಿದವಂಗೇ ಗೊಂತು. ಈಗ ಪತ್ರ ಹೇಳಿರೆ, ಬ್ಯಾಂಕಿನ ನೋಟೀಸು, ಕೇಸಿನ ನೋಟಿಸು, ಕಂಪೆನಿ ಡಿವಿಡೆಂಡು, ವಾರ್ಷಿಕ ಮಹಾಸಭೆಗೆ ಸೀಮಿತ ಆಯಿದು. ಮನ್ನೆ ಮನ್ನೆ, ಎನ್ನ 3ನೇ ಕ್ಲಾಸಿಲ್ಲಿ ಕಲಿತ್ತ ಮಗನ ಹತ್ರೆ ಅವನ ಅಕ್ಕಂಗೊಂದು ಕಾಗದ ಬರವಲೆ ಹೇಳಿ, ಬರೆಸಿ, ಪೋಸ್ಟು ಮಾಡುಸಿದ್ದೆ. ಅವನ ಅಕ್ಕಂಗೆ ಪೋನ್ ಮಾಡಿ ಅದಕ್ಕೆ ಒಂದು ಉತ್ತರ ಬರೆ ಮಾರಾಯ್ತೀ ಹೇಳಿ ಹೇಳಿದ್ದೆ ಕೂಡ ! ಅವನ ಅಕ್ಕನ ಪತ್ರದ ಉತ್ತರಕ್ಕೆ ಕಾಯ್ತಾ ಇದ್ದೆಯೊ ! ಸುಮ್ಮನೇ ಕೆಟ್ಟ ಕೆಟ್ಟ ಇಂಗ್ಳೀಷು ಬಾಶೆಲಿ ಮೊಬೈಲಿಲ್ಲಿ ಸಮೋಸ ಹೇಳಿ ಕಳುಸುತ್ತ ಮಕ್ಕೊ ಎಲ್ಲ ಲಕ್ಷಣವಾಗಿ ಕನ್ನಡಲ್ಲೊ, ನಮ್ಮ ಬಾಶೆಲೊ ಆತ್ಮೀಯರಿಂಗೆ ಪತ್ರ ಬರವಲೆ ಏಕೆ ಆಗ ? ಪತ್ರ ಬರೆತ್ತ ಅನುಭವ ಪಡೆವಲೆ ಅವರ ಪ್ರೋತ್ಸಾಹಿಸುತ್ತದು ನಮ್ಮ ಜವಾಬ್ಚಾರಿ ಅಲ್ಲದೊ ?

    1. ಈಗ ಮದುವೆ ಕಾಗದ ಕಳ್ಸೆಕಾದರೂ ಎಡ್ರಾಸ್ ಹುಡ್ಕುಲೆ ಫೋನಿಂಗೆ ಸುಮಾರು ಪೈಸೆ ಖರ್ಚು ಮಾಡ್ತು. ಹಾಂಗಾಗಿ ವರ್ಷಲ್ಲಿ ಕೆಲವು ದಿನ ಆದರೂ ಮರತ್ತು ಹೋಗದ್ದ ಹಾಂಗೆ ಕಾಗದ ಬರವ ಪದ್ಧತಿ ಒಳಿಸಿಗೊಂಡರೆ ಮುಂದಾಣ ನಮ್ಮ ಪರಂಪರೆಗೆ ಒಂದು ದಾಖಲೆಗೆ ಮಡುಗುಲಾದರೂ ಒಳಿಗು… ಎಂಥ ಹೇಳ್ತಿ?

    2. ಅಪ್ಪು ಮಾವ, ನಿಂಗೊ ಹೇಳಿದ್ದು ಸರಿ. ಈಗಾಣವಕ್ಕೆ ಪತ್ರ ಬರೆವಲೆ ನಾವು ಹೇಳಿಕೊಡೆಕ್ಕು. ಅದರಲ್ಲಿಯೂ ರಜೆ ಅರ್ಜಿ ಬರೆವಲೆ ಗೊಂತಿರೆಕ್ಕನ್ನೇ?

    3. @ ಬೊಳುಂಬು ಮಾವ°
      ನಿಂಗೊ ಬೇಂಕಿಲಿ ಕೂದ ಕಾರಣ ಸಾವಿರಾರು ಜೆನ ಲೋನಿಂಗೆ ಕಾಗತ ಬರೆತ್ತವಡ ಅಲ್ಲದೋ – ನಿಂಗೊಗೆ?!
      ಚೆ, ಎಷ್ಟು ಚೆಂದ ಅಲ್ಲದೋ – ಎಷ್ಟು ಕಾಗತಂಗೊ!!! – ಹೇಳಿ ಗಣೇಶಮಾವಂಗೆ ಕೊಶಿ ಅಕ್ಕು!

  6. ಗಣೇಶ ಮಾವ …
    ಒಳ್ಳೆ ಲೇಖನ … ಈಗ ಫೋನ್, ಈ ಮೇಲ್ ಇಂದಾಗಿ ಕಾಗದ ಬರವ ಹವ್ಯಾಸವೇ ಬಿಟ್ಟು ಹೊಯಿದು.. ಈಗ ಜನನ್ಗೊಕ್ಕೆ ಒಂದು ಇನ್ಲ್ಯಾಂಡ್ ಲೆಟರ್ ಅಥವಾ ಒಂದು ಪೋಸ್ಟ್ ಕಾರ್ಡ್ ಇಂಗೆ ಇಷ್ಟು ರುಪಾಯಿ ಇದ್ದು ಹೇಳುದೆ ಗೊಂತಿಲ್ಲೇ .. ಸದ್ಯದ ಇನ್ಲ್ಯಾಂಡ್ ಲೆಟರ್ ಮತ್ತು ಕಾರ್ಡ್ ಇಂಗೆ ಎಷ್ಟು ರುಪಾಯಿ ಇದ್ದು ಹೇಳಿ ಹೇಳುವಿರ..

    1. ಇನ್ಲ್ಯಾಂಡ್ ಲೆಟರ್ ಎರಡೂವರೆ ರುಪಾಯಿ.. ಪೋಷ್ಟು ಕಾರ್ಡಿನ್ಗೆ ೫೦ ಪೈಸೆ.ಅದರಲಿ ಮೇಘದೂತ ಕಾರ್ಡು ಹೇಳಿ ಇದ್ದು.ಅದಕ್ಕೆ ನಾಕಾಣೆ(೨೫ ಪೈಸೆ.)ಇನೂ ಹೆಚ್ಚು ವಿವರ ಬೇಕು ಹೇಳಿ ಆದರೆ ಇದರ್ಲಿ ಯಾವುದಾದರೂ ಒಂದರ್ಲಿ ಎನಗೆ ಕಾಗದ ಬರದರೆ ಮತ್ತೆ ತಿಳಿಶುವೆ..

    2. ಯೆಬೆ ಅದು ಗೊ೦ತಿಲೆಯ ?? ಹೆ೦ಗು ಗನಕಯ೦ತ್ರ ಉಪೊಯೊಗಿಸುತ್ತಿಯನ್ನೆ. oppanna.com ಓದುವಗ ಇನ್ನೊ೦ದು ಪೆಜು ಒಪನ್ ಮಾಡಿ http://www.indiapost.gov.in ಟಯಿಪು ಮಾಡಿ. ನಿ೦ಗೊಗೆ ಉತ್ತರ ರೆಡಿ.

  7. ಊರೊಳದಿಕೆ- ನೀರ್ಚಾಲಿಂದ ಗುರುವಾಯನಕೆರೆಗೆ ಕಾಗತ ಬರದು ಅಸಲಕ್ಕೋ..
    ಅದರಿಂದ ಒಂದು ದಿನ ಹೋದರಾತು, ಆಯಿತ್ಯವಾರ – ಕೆಂಪಂಗಿ ಕೈಲಿ ಹಿಡ್ಕೊಂಡು.
    – ಹೇಳಿದ ದೊಡ್ಡಬಾವ.
    ಅಲ್ಲದೋ ಗಣೇಶಮಾವ°?

  8. ಮಾವಾ,ಸುಮಧುರ ನೆನಪುಗಳ ತಪ್ಪ ಲೇಖನ. ಇನ್ಲೆಂಡ್ ಕಾಕದ ಬರದ್ದು,ಪೋಸ್ಟಿನ್ಗೆ ಕಾದು ಕೂದ್ದು, ಊರಿಂಗೆ ಟ್ರಂಕ್ ಕಾಲ್ ಬುಕ್ಕು ಮಾಡಿ ಘಂಟೆಗಟ್ಲೆ ಫೋನಿನ ಬುಡಲ್ಲಿ ಇದ್ದದು, ಕೆಮರಾಕ್ಕೆ ರೋಲು ಹಾಕಿ ಪಟ ತೆಗದು ಪ್ರಿಂಟ್ ಮಾಡುಸಿ ಆ ೩೬ ಪಟಂಗಳ ನೋಡಿದ್ದು … ದಶಕಂಗಳಲ್ಲಿ ಜೀವನ ಎಷ್ಟು ಫಾಸ್ಟ್ ಆತು.ಮದಲು ಆಫೀಸುಗಳಲ್ಲಿ ಕೆಲಸವೂ ಅದೇ ಗತಿಲಿತ್ತು.ಒಂದು ಕಾಕದ ಬರದು ಅದರ ಉತ್ತರಕ್ಕೆ ಕಾದು ಕೂರೆಕ್ಕು.ಅರ್ಜೆಂಟ್ ಆದರೆ ಟೆಲೆಕ್ಷ್ ಕಳುಸೋದು.ಈಗ ಈಮೈಲಿನ ,ಮೊಬೈಲಿನ ಹಾವಳಿಲಿ ಆಫೀಸುಗಳಲ್ಲಿ ಕೆಲಸ ೧೦ ಪಾಲು ಜಾಸ್ತಿ ಆತು.ಮಾನಸಿಕ ನೆಮ್ಮದಿ ಕಮ್ಮಿ ಆತು !!
    ಎಲ್ಲಾ ನೆನಪುಗಳ ಹಂಚುಲೆಡಿಯದ್ದರೂ(?!) ಒಂದೆರಡು ಹೇಳೆಕ್ಕನ್ನೇ!!
    ಇಂಜಿನಿಯರಿಂಗ್ ಮಾಡಿಗೊಂಡಿಪ್ಪಗ ಪ್ರತಿ ತಿಂಗಳೂ ಆನು ತುಮಕೂರಿಂದ ಒಂದು ಕಾಕದ ಮೆನೆಗೆ ಬರವೋದು ನಿಘಂಟು. ಪೂಜ್ಯರಾದ ತೀರ್ಥರೂಪರ ಚರಣಗಳಲ್ಲಿ…ಹೇಳಿ ಶುರು ಆಗಿ,ಅಬ್ಬೆ,ಅಜ್ಜಿ,ಅಣ್ಣ,ತಮ್ಮನ ಕ್ಷೇಮ ಸಮಾಚಾರ ವಿಚಾರಿಸಿ ಮುಖ್ಯ ವಿಷಯಕ್ಕೆ ಎತ್ತೊದು.ನನಗೆ ಹಾಸ್ಟೆಲ್ ಬಿಲ್ಲು ಕಟ್ಟಲು ಮತ್ತು ಖರ್ಚಿಗೆ ೪೦೦ ರೂ.ಮನಿ ಆರ್ಡರ್ ಮಾಡಿ ಹೇಳಿ.ಅಪ್ಪಂದು ಎರಡು ಉತ್ತರವೂ ಬಕ್ಕು,ಒಂದು ಕ್ಷೇಮ ಸಮಾಚಾರಂಗಳ ಇನ್ಲೆಂಡ್ ಲೆಟರ್,ಇನ್ನೊಂದು ಮನಿ ಆರ್ಡರ್.
    ಮದುವೆ ಆದ ಹೊಸತ್ತರಲ್ಲಿ ಆನು ಪಂಜಾಬಿಲಿ ೪ ತಿಂಗಳು ಡ್ಯೂಟಿ ಮೇಲೆ ಹೊಯೇಕ್ಕಾತು.ಎಪ್ರಿಲಿ ತಿಂಗಳಿಲಿ ಊರಿಂದ ಒಂದು ಕಾಕತ ಬಂತು.ಕೊಶಿಲಿ ಬಿಡುಸಿ ಅಪ್ಪಗ ಕಂಡದು…ಇಡೀ ಕಾಕದಲ್ಲಿ ಎಪ್ರಿಲ್ ಫೂಲ್ ಹೇಳ್ತ ಬರಹ!!!
    ವಿವೇಕಾನಂದ ಕಾಲೇಜು ಹಾಸ್ಟೆಲಿನ ವಾರ್ಡನ್ ಕಾಕದ ಬಿಡುಸಿದ್ದರ ಕತೆಯೇ ಬೇರೆ!!ಇಲ್ಲಿ ಬೇಡಪ್ಪಾ ಆ (ರಘು)ರಾಮಾಯಣ!!

    1. { ಕಾಲೇಜು ಹಾಸ್ಟೆಲಿನ ವಾರ್ಡನ್ ಕಾಕದ ಬಿಡುಸಿದ್ದರ ಕತೆಯೇ ಬೇರೆ!!ಇಲ್ಲಿ ಬೇಡಪ್ಪಾ ಆ (ರಘು)ರಾಮಾಯಣ!! }
      ಬೇಕಾದ್ದು ಬೇಡದ್ದು ಬೈಲಿನೋರಿಂಗೆ ಬಿಟ್ಟದು ಭಾವಾ..
      ಆ ಶುದ್ದಿ ಹೇಳುಲೇಬೇಕು! 😉
      ಹೇಳುಲೆ ನಿಂಗೊ, ಕೇಳುಲೆ ಎಂಗೊ ಇಪ್ಪಗ ತಡವೆಂತಕೆ, ರಘುರಾಮಾಯಣ ಸುರುಆಗಲಿ..
      ಕುಶಲವರಿಂದ ಮೊದಲೇ ಬೈಲಿಂಗೆ ಗೊಂತಾಗಲಿ! 😉

      1. ರಘುರಾಮಣ್ಣ ,
        ಹಾಂಗಾರೆ ನಿಂಗೊ ಕವಿತೆ ಬರವಲೆ ಶುರು ಮಾಡಿದ್ದು ಅಂಬಗಳೊ?
        ನಿಂಗೊ ಆ ಕತೆ ಹೇಳಿರೆ ನಿಂಗೊ ಹೇಳಿದ್ದಿ ಹೇಳಿ ಆನು ಅತ್ತಿಗೆಯತ್ರೆ ಹೇಳ್ತಿಲ್ಲೆ, ನಿಂಗೊ ಹೇಳಿ ಅಣ್ಣಾ!
        ಕತೆಗೆ “ಶ್ರೀ ಗಣೇಶ” ಅಂತೂ ಆಯಿದನ್ನೇ!!
        ನಿಂಗೊ ಹೇಳದ್ರೆ ಮತ್ತೆ ಅತ್ತಿಗೆಯತ್ರೇ ಕೇಳೆಕಷ್ಟೆ 🙂
        {ಕುಶಲವರಿಂದ ಮೊದಲೇ ಬೈಲಿಂಗೆ ಗೊಂತಾಗಲಿ!}
        ಒಪ್ಪಣ್ಣನ ಉತ್ತರ ಭಾರೀ ಲಾಯ್ಕಾಯಿದು 🙂

  9. ಕಾಗದ ಬರವದು, ಅದರ ಉತ್ತರಕ್ಕೆ ಪೋಸ್ಟ್ ಮೇನ್ ಬಪ್ಪದರ ಕಾವದು, ಎಲ್ಲರಿಂಗೂ ಓದಿ ಹೇಳುವದು, ಜಾಗ್ರತೆಲಿ ತೆಗದು ಮಡುಗುವದು, ನೆಂಪು ಅಪ್ಪಗ ಪುನಃ ಪುನಃ ಓದಿ ಕೊಶಿ ಪಡುವದು…. ಎಲ್ಲ ಹಳೆ ನೆಂಪುಗಳ ಮತ್ತೆ ತಂದು ಕೊಟ್ಟದಕ್ಕೆ ಧನ್ಯವಾದಂಗೊ

  10. ಸಾಂದರ್ಭಿಕ ಲೇಖನ….
    ಲಾಯಿಕ ಆಯಿದು…

  11. enna appan anu kalivaaga vaaravu kagada barakkondittiddavu.Kudle uttara baradre mundana kagada reply paid aagittiddu.eega aayevadaru kaagada sikkire manasella hindange hoovuttu.andrana kaagadangalu nempugalu nitya nutana.Oppangalottinge

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×