ಫ್ರಾನ್ಸ್ ನಾಗರಿಕರೂ ಸಾವಯವ ಕೃಷಿಯೂ

March 28, 2011 ರ 5:33 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಫ್ರಾನ್ಸಿನ ನಾಗರಿಕರಿ೦ಗುದೆ  ವಿಷ ತು೦ಬಿದ ತರಕಾರಿಗಳ, ಮೇಣ ಮೆತ್ತಿದ ಏಪ್ಲ್ ಕ೦ಡು ಅಸಹ್ಯ ಅಪ್ಪಲೆ ಸುರುವಾಯಿದಡ!!

ಆದ ಕಾರಣ ಸತ್ತ್ವ ಇಪ್ಪ ತರಕಾರಿಗೊ ಸಿಕ್ಕಲೆ ಒ೦ದು ರೀತಿಯ ಯೋಜನೆಲ್ಲಿ ತಮ್ಮ ತೊಡಗಿಸಿಯೊ೦ಡಿದವು. ಅದೆ೦ತದು ಹೇಳಿ ತಿಳಿವ ಅವಕಾಶ ಸಿಕ್ಕಿತ್ತು ಮೊನ್ನೆ ಅಯಾಚಿತವಾಗಿ.

ಎನ್ನ ಸಹೋದ್ಯೋಗಿ ಎನ್ನತ್ರೆ ಕೇಳಿತ್ತು-
“ಎ೦ಗೊ ಒ೦ದು ಕೃಷಿ ಫಾರ್ಮಿ೦ಗೆ ಹೋವುತ್ತೆಯೊ°. ಅಲ್ಲಿಪ್ಪ ರೈತರೊಟ್ಟಿ೦ಗೆ ಕೆಲಸ ಮಾಡ್ಲೆ” ಹೇಳಿ (ಗಮನಿಸಿ-ಪಿಕ್ನಿಕ್ ಹೋಪದು ಹೇಳಿ ಹೇಳಿದ್ದವಿಲ್ಲೆ!)
ನವಗೆ ಕೊಶಿ ಆತು ಫ್ರಾನ್ಸಿನ ಬಗ್ಗೆ ತಿಳ್ಕೊ೦ಬಲೆ ಒಳ್ಳೆ ಅವಕಾಶ ಹೇಳಿ.
“ಬಪ್ಪ ಯೋಚನೆ ಇದ್ದೊ? ಫಾರ್ಮಿಲ್ಲಿ ಎಡಿಯದ್ರೆ ನೀನು ಹೆಚ್ಚು ಕೆಲಸ ಮಾಡೆಕು ಹೇಳಿ ಇಲ್ಲೆ, ಆರುದೆ ತಪ್ಪು ತಿಳ್ಕೊಳ್ಳವು ‘ವೆಜಿಟೆರಿಯನ್’ ಆದ ಕಾರಣ’ ” ಹೇಳಿ ಸಲಹೆಯೂ ಸಿಕ್ಕಿತ್ತು!

ಇಲ್ಲಿ೦ದ ೧೨೦ ಕಿಮೀ ದೂರ ಇಪ್ಪ ಪ್ರದೇಶ ಅದು.  `ಕೊಸಿ ಲೆ ಶೆಟು’ ಹೇಳಿ ಹೆಸರು. ಇಲ್ಲಿ ಒ೦ದು ಕೋಟೆ ಇದ್ದು ೧೩ನೇ ಶತಮಾನದ್ದು. ಪ್ರಥಮ ಮಹಾಯುದ್ಧದ ಸಮಯಲ್ಲಿ (೧೯೧೭) ಜರ್ಮನರು ಇದರ ಸುಮಾರು ಹೊಡಿ ಮಾಡಿದ್ದದಡ ೨೮ ಟನ್ ಬೆಡಿ ಮಡುಗಿ. `ಸೈ೦ಟ್ ಗೋಬೈನ್’ ಗಾಜಿನ ಕಾರ್ಖಾನೆ ಇಪ್ಪದು ಇಲ್ಲಿಯೇ ಹತ್ತರೆ ಸೊಯಿಸ್ಸೊ° ಹೇಳುವಲ್ಲಿ.

ಅಲ್ಲಿಪ್ಪ ಕೃಷಿಕರು ಸಾವಯವ ಕೃಷಿಕರು.  ಆರೋಗ್ಯಕರ ತರಕಾರಿಗಳ ಪೂರೈಕೆಗೆ ಪ್ರೋತ್ಸಾಹಿಸಲೆ, ಸಾವಯವ ತರಕಾರಿ ಬೆಳಶಲೆ ನಾಗರಿಕರು ಒ೦ದು ಸ೦ಘಟನೆ ಮಾಡಿಯೊ೦ಡಿದವು. ಎಮೇಪ್ (AMAP – Associations for the maintenance of family farming) ಹೇಳಿ ಸ೦ಘಟನೆಯ ಹೆಸರು. ಇದರ ಸದಸ್ಯರು ಕೆಲವು ರೈತರೊಟ್ಟಿ೦ಗೆ ನಿರ೦ತರವಾಗಿ ಸ೦ಪರ್ಕಲ್ಲಿರ್ತವು. ಪ್ರತಿ ವಾರ ಅವು ತರಕಾರಿಯ ಪೇಟೆಗೆ ತತ್ತವಡ. ಇವ್ವದರ ತೆಕ್ಕೊಳ್ಳೆಕು.

“ಈ ಸಾವಯವ ತರಕಾರಿಯ ರೇಟ್ ಹೆಚ್ಚೊ ಕಮ್ಮಿಯೋ ಮಾರ್ಕೆಟಿಲ್ಲಿ ಸಿಕ್ಕುವ ಆಚ ತರಕಾರಿ೦ದ?” ಕೇಳಿದೆ.
“ಕಮ್ಮಿ ಅಲ್ಲ, ಕೆಲವು ಸರ್ತಿ ಹೆಚ್ಚೇ ಆವ್ತು. ಆದರೆ ತರಕಾರಿಯ ರುಚಿಯೂ, ಶುದ್ದತೆಯೂ ಆಕರ್ಷಿಸುತ್ತು” ಹೇಳಿ ತೃಪ್ತಿ ಅವಕ್ಕೆ.

“ಅವು ಬೆಳೆದ ತರಕಾರಿಗೆ ಪೆಸ್ಟಿಸೈಡ್ ಉಪಯೋಗಿಸಿದ್ದವಿಲ್ಲೆ ಹೇಳಿ ಹೇ೦ಗೆ ಗೊ೦ತಪ್ಪದು?” ಕೇಳಿದೆ.

“ಅದು ನ೦ಬಿಕೆಲ್ಲಿ ಇಪ್ಪದು. (ಆ ವ್ಯಕ್ತಿಗೆ ದೇವರಲ್ಲಿ ನ೦ಬಿಕೆ ಇಲ್ಲೆಡ! ಇದೆನಗೆ ಕೆಲ ಸಮಯ ಮೊದಲು ಬೇರೆ ವಿಶಯದ ಚರ್ಚೆಲ್ಲಿ ಗೊ೦ತಾಗಿತ್ತು) “ಸದಸ್ಯರು ಹೀ೦ಗೆ ಅ೦ಬಗ೦ಬಗ ಹೋವ್ತಾ ಇರ್ತೆಯೊ°. ಅವರ ಟೆಸ್ಟ್ ಮಾಡ್ಲೆ ಹೇಳಿ ಹೋಪದಲ್ಲ. It is a matter of  solidarity.” ಅಡ!

(ಮತ್ತೆ ಅವರ ಒಡನಾಟ ನೋಡಿಯಪ್ಪಗ ಗೊ೦ತಾತು. ಹೀ೦ಗಿಪ್ಪ ಒಡನಾಟ ಇದ್ದರೆ ಆ ರೈತ೦ಗೆ ವಿಷ ಸಿ೦ಪಡುಸೆಕು ಹೇಳಿ ಅನಿಸ.)
ನಾವುದೆ ಎರಡು ವಾರ ಹಿ೦ದೆ ‘ಸಹಾನುಭೂತಿ’ಯ ಬಗ್ಗೆ ಮಾತಾಡಿತ್ತಿದ್ದು ಹೇಳಿ ನೆ೦ಪಾತೆನಗೆ.

ಓರ್ಗೇನಿಕ್ ಗೊಬ್ಬರಕ್ಕೆ ಎ೦ತ ಮಾಡ್ತವು? ಬ೦ಬುಚ್ಚಿಯ ಹಾ೦ಗಿಪ್ಪದರ ಹೇ೦ಗೆ ನಿಯ೦ತ್ರಿಸುತ್ತವು? ಹೇಳಿ ತಿಳಿವಲೆ ಒ೦ದು ಕುತೂಹಲ ಇತ್ತು ನವಗೆ.
ಎನ್ನ ಪ್ರಶ್ನೆಗೆ ಉತ್ತರುಸಲೆ ಅಲ್ಲಿ ಒಬ್ಬ ಸಮರ್ಥವಾದ ವ್ಯಕ್ತಿ ಇದ್ದ ಹೇಳಿ ಒ೦ದು ಆಶ್ವಾಸನೆ ಕೊಟ್ಟವೆನಗೆ- ಕಾರಿಲ್ಲಿ ಹೋವ್ತಾ ಇಪ್ಪಗ.

ಆ ವ್ಯಕ್ತಿಯ ಹೆಸರು ‘ಆರ್ವೆ (Harve)’ – ಏಷ್ಯಾ ಸುತ್ತಿದ ವ್ಯಕ್ತಿಗೆ ಭಾರತೀಯನ ಕ೦ಡು ಕೊಶಿ ಆತೋ ಕಾಣ್ತು. ತು೦ಬ ಮಾತಾಡಿದ.  ಫಿಲಿಪ್ಪೈನ್ಸ್, ಭಾರತ, ಯುಎಸ್, ಕೆನಡ ಹೀ೦ಗೆ ಸುಮಾರು ಕಡೆಲ್ಲಿ ಕೆಲಸ  ಮಾಡಿ ಗೊ೦ತಿಪ್ಪ ಫ಼್ರೆ೦ಚ್ ಪ್ರಜೆ. ಈಗ ಅಲ್ಲಿ ಕೃಷಿಯ ರಕ್ಷಣೆ ಯ ಜವಾಬ್ದಾರಿಲ್ಲಿಪ್ಪದಡ. ತಾನುದೆ ಒ೦ದು ಸಣ್ಣ ಜಾಗೆಲ್ಲಿ ತರಕಾರಿ ಬೆಳೆಸುತ್ತೆ ಹೇಳಿ ಅಭಿಮಾನಲ್ಲಿ ತೋರುಸಿದ.
ಎನ್ನ ವಿಷಯ `ಇ೦ಡಿಯನ್ ಆಸ್ಟ್ರೋನಮಿ’ ಹೇಳಿ ಗೊ೦ತಾದಪ್ಪಗ — “ಏಷ್ಯಾದ (ಚೈನಾ, ಭಾರತ…) ಪರ೦ಪರೆಲ್ಲಿ ಹೀ೦ಗಿಪ್ಪ ವಿಷಯ೦ಗ ಸುಮಾರು ಸಿಕ್ಕುಗು- ಏಷ್ಯಲ್ಲಿಪ್ಪದು ತು೦ಬಾ ಹಳೇ ಕಾಲ೦ದ ನಡೆದು ಬ೦ದ ಪರ೦ಪರೆ” ಹೇಳಿ ಮೆಚ್ಚುಗೆ ವ್ಯಕ್ತ ಆತು ಅವನ ಮಾತಿಲ್ಲಿ.  ಏಶ್ಯಾದ ಜೀವನ ಅವ೦ಗೆ ಕೊಶಿ ಕೊಟ್ಟಿದಡ (ಫ್ರೆ೦ಚರು ಇತಿಹಾಸದ ಬಗ್ಗೆ ಅಭಿಮಾನ ಇಪ್ಪವು). ಅಮೇರಿಕಲ್ಲಿಪ್ಪಗ ಮಾ೦ತ್ರ ಅವ೦ಗೆ ಬೊಡುದು ಹೋಯಿದಡ (ಅಲ್ಲಿ ಹೇಳಿಕೊ೦ಬ೦ತಹ ಇತಿಹಾಸವೇ ಇಲ್ಲೆ).

ನೀರುಳ್ಳಿ ಗೆದ್ದೆಲ್ಲಿ ಕೆಲಸ ರಜ ಹೊತ್ತು ಕೆಲಸ ಮಾಡಿದ ಮತ್ತೆ ನಮ್ಮ ಬುತ್ತಿ ಬಿಚ್ಚುವ ಸಮಯ ಆತು. ನಮ್ಮ ಆಹಾರದ ಹೆಸರೆ೦ತದು ಹೇಳಿ ಅವ೦ಗೆ ಕುತೂಹಲ.  ಉದಿಯಪ್ಪಗ ಐದು ಗ೦ಟೆಗೆ ಗಡಿಬಿಡಿಲ್ಲಿ ಎ೦ತದೋ ಮಾಡಿ ತೆಕ್ಕೊ೦ಡು ಹೋದ್ದದಕ್ಕೆ ಸುಮ್ಮನೆ ಒ೦ದು ಹೆಸರು – ‘ಭಿ೦ಡೀ ರೈಸ್’ ಹೇಳಿದೆ (ಹಾ೦ಗೊ೦ದು ಇದ್ದೊ ಕೇಳೆಡಿ!) ಈ ತರಕಾರಿ ಭಾರತಲ್ಲಿ ನೋಡಿ ಗೊ೦ತಿದ್ದಡ ಅವ೦ಗೆ. ರುಚಿ ನೋಡಿ `ಡೆಲಿಶಿಯಸ್’ ಹೇಳಿದ. `ಡೆಲ್ಲಿ’ಶಿಯಸ್ ಹೇಳಿರೆ ಭಾರತದ್ದು ಹೇಳಿ ಅರ್ಥ ಹೇಳಿ ಅರ್ಥೈಸಿಗೊ೦ಡೆ!!

ತಲೆಯ ಹಸಿವಿ೦ಗೆ  ಆರ್ವೆಯ ನೆನಪಿನ ಬುತ್ತಿಯೂ – ಅಲ್ಯಾಣ ವಿಚಾರ೦ಗಳೂ ಪೂರಕ ಆವ್ತಾ ಇತ್ತು!
~

ಇಲ್ಲಿಯ ಕೆಲವು ವಿಚಾರ೦ಗ–

ಕೀಟನಾಶಕ
ಒ೦ದು ರೀತಿಯ ಹುಲ್ಲು ಬೆಳೆತ್ತು ಆ ಪ್ರದೇಶಲ್ಲಿ.  ಮೈಗೆ ತಾಗಿರೆ ತೊರುಸುವ೦ಥಾದ್ದು – ಉರುಸಣಿಗೆ. ಅದರ ಕೊಚ್ಚಿ ನೀರಿಲ್ಲಿ ಐದು ದಿನ ಮಡುಗೆಕಡ. ಆ ನೀರಿನ ಸಿ೦ಪಡಿಸಿರೆ ಯಾವ ಕೀಟ೦ಗಳೂ ಬತ್ತವಿಲ್ಲೆ. ಆ ನೀರು ತೊರುಸುತ್ತಿಲ್ಲೆಡ. ಇದರ ಕಮರ್ಶಿಯಲ್ ಉತ್ಪಾದನೆಯ ಸರಕಾರ ನಿಷೇಧಿಸಿದ್ದಡ. ಕೀಟನಾಶಕ ಕ೦ಪೆನಿಗಳ ಲಾಬಿ೦ದಾಗಿ!

ನೀರು ಪೂರೈಕೆ
ನೀರಿನ ಅಭಾವ ಅಷ್ಟಾಗಿ ಏನೂ ಇಲ್ಲೆ ಅಲ್ಲಿ. ನೀರಿನ ಪೂರೈಕೆಯ ವ್ಯವಸ್ಥೆ ನಗರಪಾಲಿಕೆದು. ಅದಕ್ಕೆ ಶುಲ್ಕ ಕಟ್ಟೆಕು. ಆದರೆ ಇವರ ವಿಚಾರಲ್ಲಿ ಅಚ್ಚರಿಯ ವಿಷಯ ಎ೦ತದು ಕೇಳಿರೆ — ಇಲ್ಯಾಣ ಮೇಯರು ಈ ಸಾವಯವ ಯೋಜನೆಲ್ಲಿ ಭಾಗಿದಾರಿ ಅಡ. ಹಾ೦ಗಾಗಿ ಉಚಿತ ನೀರು ಪೂರೈಕೆ ಆವ್ತಡ!!

ಗೊಬ್ಬರ
ತರಕಾರಿ ಸಿಪ್ಪೆ, ಹುಲ್ಲು, ಕಾ೦ಪೋಸ್ಟ್, ಕೋಳಿ ಹಿಕ್ಕೆ, ಆಡಿನ ಪಿಟ್ಟೆ ಹೀ೦ಗಿಪ್ಪದೆಲ್ಲ ಅಡ.
ಅವರತ್ರೆ ದನ ಇಲ್ಲೆಡ, ಹಾ೦ಗಾಗಿ ಹಟ್ಟಿ ಗೊಬ್ಬರವೂ ಇಲ್ಲೆ, ಬಯೋ ಗೇಸುದೆ ಇಲ್ಲೆ.

ಬೆಳ್ಳುಳ್ಳಿ ಸೆಸಿಯ ಕಾಕೆ ಒಕ್ಕಿ ತೆಗೆತ್ತಡ. ಮಣ್ಣಿ೦ದ ಎಳದು ಹಾಕುವದು ಮಾ೦ತ್ರ. ಅದರ ತಿ೦ತಿಲ್ಲೆ.  ಅದರ ಪುನಾ ಸರೀ ನೆಡುವ ಕೆಲಸ ಸಿಕ್ಕಿತ್ತು. ಆನು ಬೆಳ್ಳುಳ್ಳಿ ಸೆಸಿ ನೋಡಿದ್ದು ಮೊನ್ನೆಯೇ.

~

ನೀರುಳ್ಳಿ ಗೆದ್ದೆ
ಬೆಳ್ಳುಳ್ಳಿ ಕೃಷಿ

ಹೀ೦ಗಿಪ್ಪ ಒ೦ದು ಯೋಜನೆ ಕೈಗೊ೦ಡರೆ ಅದಕ್ಕೆ ಸಮರ್ಥನೆ ಎಲ್ಲಿ೦ದ ಸಿಕ್ಕುಗು ಹೇಳುವದುದೆ ಒ೦ದು ಮಹತ್ತ್ವದ ವಿಚಾರ. ಮೂರು ರೀತಿಯ ಜೆನ ಈ ಯೋಜನೆಯ ಬೆ೦ಬಲಿಸುತ್ತವು ಹೇಳಿ ಅವರ ಅ೦ಬೋಣ–
೧. ತಾತ್ತ್ವಿಕವಾಗಿ/ಸೈದ್ಧಾ೦ತಿಕವಾಗಿ ಸಾವಯವ ಕೃಷಿಯ ಸಮರ್ಥಕರು.
೨. ಇದೊ೦ದು ಒಳ್ಳೆ ಕಾರ್ಯಕ್ರಮ ಹೇಳಿ ಅದರ ಪ್ರೀತಿಸುವ ಸಹೃದಯರು.
೩. ಇದರಿ೦ದ ಆರೋಗ್ಯಕರವಾದ ಆಹಾರ ಸಿಕ್ಕುತ್ತು ಹೇಳುವ ಲಾಭದ ದೃಷ್ಟಿಯ ಹೊ೦ದಿದವು.

ಕೆಲವು ನಿಯಮ೦ಗ-
ಆರು ತಿ೦ಗಳು ಮೊದಲು ಮು೦ಗಡವಾಗಿ ಪೈಸೆ ಕೊಡುವದು.
ಪ್ರಾಕೃತಿಕ ವಿಕೋಪ೦ದಾಗಿ ಬೆಳೆ ಹಾಳಾದರೆ ನಷ್ಟವ ಸಹಿಸೆಕು.
ಸೀಸನಿ೦ಗೆ ಅನುಗುಣವಾಗಿ ಬ೦ದ ಬೆಳೆಯ ತೆಕ್ಕೊಳ್ಳೆಕಾವ್ತು.
ಎಡೆಡೆಲ್ಲಿ (ಐದಾರು ತಿ೦ಗಳಿ೦ಗೊ೦ದರಿ ಆದರೂ) ಕೃಷಿಕ್ಷೇತ್ರದ ಸ೦ದರ್ಶನ ಮಾಡೆಕು.
ವಾರವಾರ ಟ್ರಕ್ಕಿಲ್ಲಿ ತರಕಾರಿ ವಿಲೇವಾರಿ ಆವ್ತು. ರೈತರೇ ನಗರಕ್ಕೆ ಬ೦ದು ಕೊಡ್ತವು. ತಾವು ಹೇಳಿದ ಕೋಟಾವ ತೆಕ್ಕೊ೦ಡು ಹೋಯೆಕು.
ಮಧ್ಯವರ್ತಿ ಇಲ್ಲೆ. ಉತ್ಪಾದಕರೂ, ಗ್ರಾಹಕನರೂ ಮಾ೦ತ್ರ ಇಪ್ಪದು ಈ ವ್ಯವಹಾರಲ್ಲಿ.

ಹೆಚ್ಚಿನ ವಿವರಕ್ಕೆ:

http://translate.google.fr/translate?hl=en&sl=fr&u=http://www.reseau-amap.org/&ei=S7mPTeZ8kLfxA8Py5KAP&sa=X&oi=translate&ct=result&resnum=1&ved=0CDQQ7gEwAA&prev=/search%3Fq%3Damap%26hl%3Den%26client%3Dfirefox-a%26hs%3DsFz%26rls%3Dorg.mozilla:en-US:official%26prmd%3Divns

ಕೆಲವು ಸಹಕಾರಿ ಸ೦ಘ೦ಗ ಸಾಮೂಹಿಕವಾಗಿ ಭೂಮಿಯ ಕ್ರಯಕ್ಕೆ ತೆಕ್ಕೊ೦ಡು ಅದರ  ಕೆಲವು ಕೃಷಿಕರಿ೦ಗೆ ಗೇಣಿಗೆ ಕೊಡುವದಿದ್ದು. ಬೆಳದ್ದದರಲ್ಲಿ ಇ೦ತಿಷ್ಟು ಭಾಗ ಹೇಳಿ ಬೆಳೆಗಾರರು ತೆಕ್ಕೊ೦ಬಲಕ್ಕು ಹೇಳಿ ನಿಯಮ ಮಾಡ್ಯೊಳ್ತವಡ.

~
ಇಲ್ಲಿ ಮತ್ತೊ೦ದು ಸಹಯೋಗೀ ಸ೦ಸ್ಥೆ ಇದ್ದಡ! ಅದರ ಹಿನ್ನೆಲೆ ಹೀ೦ಗೆ–
ಜೇಕ್ ಹೆಸರಿನ ಒಬ್ಬ ಇ೦ಜಿನಿಯರ್ ಜೀರ್ಣಾವಸ್ಥೆಲ್ಲಿಪ್ಪ ಕೃಷಿಭೂಮಿಯ ತೆಕ್ಕೊ೦ಡು ಕೆಲಸ ಸುರುಮಾಡಿದ. ವಿಶಾಲವಾಗಿಪ್ಪ ಜಾಗೆ– ಅಲ್ಲಿ ಕೆಲಸ ಸಾಗೆಕಾರೆ ತು೦ಬಾ ಜೆನ ಬೇಕು. ಜೀವನಕ್ಕೆ ಅನುಕೂಲ ಅಷ್ಟು ಇಲ್ಲದ್ದವರ, ಜೈಲಿ೦ದ ಬಿಡುಗಡೆ ಆದವರ ಸೇರುಸಿಯೊ೦ಡು ಮು೦ದೆ ಹೋಪದು ಹೇಳಿ ಕಾರ್ಯಕ್ರಮ ರೂಪಿಸಿದ.  ಕೆಲವು ಸಮಯ ಈ ಕಾರ್ಯಲ್ಲಿ ತೊಡಗಿಸಿಯೊ೦ಡು, ಎಡೆಲ್ಲಿ ಬೇರೆ ಕೆಲವು ಕೌಶಲ೦ಗಳನ್ನುದೆ ಪಡಕ್ಕೊ೦ಡು ತನಗೆ ಸ್ವ೦ತವಾಗಿ ಜೀವನ ಸಾಗುಸಲೆಡಿಗು ಹೇಳಿ ಅನುಸಿರೆ ಅವು ತಮ್ಮ ದಾರಿ ಹಿಡಿತ್ತವು. ಹಾ೦ಗೆ ಹೋಪಲೆ ಪ್ರೋತ್ಸಾಹ ಕೊಡ್ತವು. ಕೆಲವು ಜೆನ ಅಲ್ಲಿಯೇ ಉಳಕ್ಕೊಳ್ತವಡ ಕೃಷಿಯೇ ಲಾಯಕ ಹೇಳ್ಯೊ೦ಡು.

ರಜ್ಜ ಸಮಯ ಕಳುದಪ್ಪಗ ಅವನೊಟ್ಟಿ೦ಗೆ ಬೇರೆ ಕೆಲವು ಜೆನ ಸಮಾನಮನಸ್ಕರು ಕೈಜೋಡುಸಿದವು. ಮತ್ತೆ ಈ ಎಸೋಸಿಯೇಷನ್ ಅಸ್ತಿತ್ವಕ್ಕೆ ಬ೦ತು. ಅದರ ಡೈರೆಕ್ಟರ್  ಆಗಿ ಒಬ್ಬ ಮಹಿಳೆ ಇಪ್ಪದು ಈಗ. ಪ್ರಸ್ತುತ ಅಲ್ಲೀಗ ೧೮ ಜೆನ ಇದ್ದವು. ಈಗ ಆ ಜೇಕ್ ಅಜ್ಜನ ಪ್ರಾಯ ೮೩.

~

ಪಟ೦ಗ–

ಸ್ಟ್ರಾಬೆರಿ ಹೂ
Urusanige
Jenugudu
Harve
Kote, drakshe krishi,
Chateau (durga)
Mahila director
Daffodils
ಮೊಟ್ಟೆಗಾಗಿ
ಮಾ೦ಸಕ್ಕಾಗಿ

hima biddu baggi hoda tentu
naagarikara krishi kaarubaaru

ಸಮಸ್ಯೆಗ ಇಲ್ಲಿಯೂ ಇದ್ದು–
ಹೀ೦ಗಿಪ್ಪ ಕೃಷಿಗೆ ಸರಕಾರದ ಆಸಕ್ತಿ ಇಲ್ಲೆ, ಯುವಕರು ಕೃಷಿ೦ದ ದೂರ ಹೋವ್ತವು, ಕೃಷಿಭೂಮಿಯ ಇತರ ಉಪಯೋಗ೦ಗಕ್ಕೆ ಬಳಕೆ ಆವ್ತು….
ಯೋಜನೆಲ್ಲಿ ಸೇರಿಯೊ೦ಡು ಸರಿಯಾಗಿ ಸಹಕರಿಸದ್ದೆ ತಕರಾರು ಮಾಡುವ ಕೆಲವು ಜೆನ೦ಗಳುದೆ ಇದ್ದವಡ ಎಡೆಲ್ಲಿ. ಆದರುದೆ ಇದೆಲ್ಲ ಗೌಣ — ಇವರ ಆಸಕ್ತಿಯ ಎದುರಿಲ್ಲಿ.

ಇ೦ತಹ ಅಡೆತಡೆಗಳ ಲೆಕ್ಕಿಸದ್ದೆ ಮುನ್ನಡೆವವೇ ಉತ್ತಮರಲ್ಲದೊ? ವಿಘ್ನ ಬಕ್ಕು ಹೇಳಿ ‘ರಿಸ್ಕ್’ ತೆಕ್ಕೊಳ್ಳದ್ದವರಿ೦ದ…

ಫ್ರಾನ್ಸ್ ನಾಗರಿಕರೂ ಸಾವಯವ ಕೃಷಿಯೂ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ನೀರ್ಕಜೆ ಮಹೇಶ
  ನೀರ್ಕಜೆ ಮಹೇಶ

  ಒಳ್ಳೆ ಮಾಹಿತಿ. ನಮ್ಮ ಓರಿನೋರ ಬ್ಲಾಗು ಒಂದರಲ್ಲಿ ಇದೇ ರೀತಿಯ ಫಾರಿನಿಲಿ ಹಳ್ಳಿಗೆ ಹೋಗಿ ಬಂದ ಅನುಭವದ ಬಗ್ಗೆ ಬರದಿತ್ತಿದವು. ಆ ಮನುಷ್ಯ ಅಲ್ಲಿಯಾಣವರತ್ತರೆ ಕೇಳಿದಡ – ಕೃಷಿ ಕಾರ್ಮಿಕರು ಸಿಕ್ಕುತ್ತವೋ ಹೇಳಿ. ಅದಕ್ಕೆ ಅವ ಹೇಳಿದಡ್ಡ – ಇಲ್ಲೆ ಇಲ್ಲಿಂದ ಹೆಚ್ಚಿನ ಜನ ಪೇಟೆಗೆ ಹೋಯಿದವು. ಹಾಂಗೆಂತ ಎನಗೆ ಚಿಂತೆ ಇಲ್ಲೆ, ಎಂತಕ್ಕೆ ಹೇಳಿದರೆ ಇಲ್ಲಿ ಆಸಕ್ತಿ ಇಪ್ಪವು ಮಾತ್ರ ಉಳ್ಕೊಂಡಿದವು ಹಾಂಗಾಗಿ ಒಳ್ಳೆದೇ ಆತು ಹೇಳಿ.

  ಫಾರಿನಿಲಿ, ಅದರಲ್ಲೂ ಅಮೆರಿಕಲ್ಲಿ, ಬ್ರೆಜಿಲ್ ಇತ್ಯಾದಿಗಳಲ್ಲಿ ಪರ್ಮಾಕಲ್ಚರ್ ಹೇಳ್ತ ಕೃಷಿ ತುಂಬ ಜನ ಮಾಡ್ತ ಇದ್ದವಡ. ಪರ್ಮ ಕಲ್ಚರ್ ಹೇಳಿದರೆ “ಪರ್ಮನೆಂಟ್ ಅಗ್ರಿಕಲ್ಚರ್” ಹೇಳುದರ ಹೃಸ್ವರೂಪ. ಮತ್ತೆ ಬ್ರೆಜಿಲ್ ಲಿ ಅಂತೂ “ಹೋಮ ಫಾರ್ಮಿಂಗ್” ಹೇಳಿ ಕೆಲವು ಜನ ಮಾಡ್ತವಡ. ಹೇಳಿರೆ ಅಗ್ನಿಹೋತ್ರ, ಇತ್ಯಾದಿ ಕ್ರಮಂಗಳ ಮೂಲಕ ಮಣ್ಣಿನ ಫಲವತ್ತತೆಯ ಹೆಚ್ಚುಸಿ ಅದರ ಮೂಲಕ ಕೃಷಿ ಮಾಡಿ ನೈಸರ್ಗಿಕ ಸರಳ ಜೀವನ ನಡೆಶಿಯೊಂಡಿಪ್ಪವು. ಈ ಕಾನ್ಸೆಪ್ಟುಗೊ ಎಲ್ಲ ನಮ್ಮ ವೈದಿಕ ಕೃಷಿ ಪರಂಪರೆ ಮೇಲೆ ಆಧರಿಸಿದ್ದಡ್ಡ.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ನಾವಾದರೆ ಕಲಬೆರಕೆ ಮಾಡಿ ನಾಕು ಪೈಸೆ ಲಾಭ ಮಾಡದ್ದೆ ಕೂರ್ತಿತ್ತಿಲ್ಲೆ ಅಪ್ಪೋ. ಯೆವಾಗಪ್ಪ ಈ ಜೆನಂಗೊಕ್ಕೆ ಒಪ್ಪ ಬುದ್ದಿ ಬಕ್ಕೋ. ಮಾದಾಲು ಜೆನಂಗೋ ಪರಸ್ಪರ ಪ್ರೀತಿ ವಿಶ್ವಾಸ ಗೌರವಲ್ಲಿ ನಡಕ್ಕೊಂಬದರ ಕಲಿಯೆಕ್ಕಪ್ಪ. ಅವ ಪೈಸೆ ಮಾಡ್ಲೇ ಮಾಡುತ್ತು ಹೇಳ್ವ ಭಾವನೆ ತೊಲಗೆಕು.

  ಒಪ್ಪವಾಗಿ ಬರದ್ದಿ ಹೇಳಿ ಇತ್ಲಾಗಿಂದ ಒಪ್ಪ.

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಮಹೇಶಾ,
  ಒಳ್ಳೆ ಮಾಹಿತಿ ಸಿಕ್ಕಿತ್ತು.
  ಮಧ್ಯವರ್ತಿ ಇಲ್ಲದ್ದೆ ಉತ್ಪಾದಕ ಮತ್ತೆ ಗ್ರಾಹಕರ ನೆಡುಕೆ ಸರಿಯಾದ ಸ೦ಪರ್ಕಸೇತುವೆ ಗಟ್ಟಿಯಾಗಿ ಬೆಳದರೆ ಇಬ್ರಿ೦ಗೂ ಅನುಕೂಲ.ಅ೦ತೂ ಅಲ್ಲಿಯೂ ಒ೦ದು ವಾರಾ೦ತ್ಯ ಕೊಟ್ಟುಪಿಕ್ಕಾಸು ಹಿಡಿವ ಅವಕಾಶ ಸಿಕ್ಕಿತ್ತು ನಿನಗೆ,ಅಲ್ಲದೋ?

  [Reply]

  VA:F [1.9.22_1171]
  Rating: 0 (from 0 votes)
 4. ಮುಣ್ಚಿಕಾನ ಭಾವ

  ವಿದೇಶದವು technologyಲಿ ಎಷ್ಟೇ ಮುಂದುವರೆದರೂ ಕೃಷಿಯುದೇ ಅಷ್ಟೇ ಆಸಗ್ತಿಯಿಂದ ಮಾಡ್ತವು. ಆದರೆ ನಮ್ಮವು technologyಗಾಗಿ ಇಪ್ಪ ಕೃಷಿಯನ್ನುದೆ ಹಾಳು ಮಾಡುತ್ತವೇ ಹೊರತು ಅದರಿಂದ ಅಪ್ಪ ನಷ್ಟಂಗಳ ಲೆಕ್ಕ ಹಾಕುತ್ತವಿಲ್ಲೆ.
  ಪಟಂಗೊ ಎಲ್ಲಾ ತುಂಬಾ ಒಪ್ಪ ಬೈಂದು ಮಹೇಶಣ್ಣ. ಮತ್ತೆ ಫ್ರಾನ್ಸ್ ನವರ ಸಾವಯವ ಕೃಷಿಯ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಂಗೊಇದ್ದು.

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಬೊಳುಂಬು ಗೋಪಾಲ ಮಾವ

  ಫ್ರಾನ್ಸಿಲ್ಲಿ ಸಾವಯವ ಕೃಷಿ ಮಾಡ್ತ ಬಗ್ಗೆ ಕೇಳಿ ತುಂಬಾ ಕೊಶಿ ಆತು. ಒಳ್ಳೆ ಮಾಹಿತಿ ಕೊಟ್ಟ ಲೇಖನ. ಕಾಕೆ ಒಕ್ಕಿ ಹಾಕಿದ ಬೆಳ್ಳುಳ್ಳಿ ಸೆಸಿಗಳ ನೆಡ್ಳೆ ಮಹೇಶಂಗೆ ಸಿಕ್ಕಿದ್ದದು, ಸ್ವಯಂಸೇವೆ ಮಾಡಿದ್ದದು, ಬೆಂಡೆ ಅನ್ನವ ಹಂಚಿ ಉಂಡದು ಒಳ್ಳೆ ಅನುಭವ ಅಲ್ಲದೊ. ಅಲ್ಯಾಣ ವಿಷಯಂಗಳ ಎಲ್ಲ ತಿಳುಸಿದ ಹಾರ್ವೆಯ ಭೇಟಿ, ಸಮಾನ ಮನಸ್ಸಿನವೆಲ್ಲ ಒಟ್ಟು ಸೇರಿದ್ದದು ಕೇಳುವಗ ಕೊಶಿ ಆವ್ತಾ ಇದ್ದು. ಕೀಟನಾಶಕವಾಗಿ ಉಪಯೋಗಿಸಲೆಡಿತ್ತ ಉರುಸಣಿಗೆಯ ರಸ ಮಾಡ್ಳೆ ಬಿಡದ್ದ ಕಂಪೆನಿಯವರ ಲಾಬಿಯ ಕೇಳುವಗ ನಮ್ಮ ಇಲ್ಯಾಣವರ ನೆಂಪಾತು. ಆ ತೊರುಸುತ್ತ ಸಸ್ಯವ ಕಾಂಬಗ ಕೊತ್ತಂಬರಿ ಸೊಪ್ಪಿನ ಹಾಂಗೆ ಕಾಣ್ತಾ ಇದ್ದು. ಫೊಟೊಂಗಳೂದೆ ಒಳ್ಳೆ ವಿವರ ಕೊಟ್ಟತ್ತು. ಫ್ರಾನ್ಸಿಲ್ಲಿ ಕುಟ್ಟಾರೆ ಹಿಡುದ ಮಹೇಶನ ಪಟ ಚೆಂದ ಬಯಿಂದು. ಈ ಪಟವ ಕಾಂಬಗ ಕನ್ನಡ ಸಿನೆಮಾದ ಗಾಯಕ/ನಟ ನೊಬ್ಬನ ಹಾಂಗೆ ಕಂಡತ್ತು. ಉತ್ತಮ ಲೇಖನವೊಂದರ ಕೊಟ್ಟದಕ್ಕೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 6. ಹಳೆಮನೆ ಅಣ್ಣ

  ಫ್ರಾನ್ಸ್ ಹೇಳಿ ಅಲ್ಲ, ಯುರೋಪಿನ ಬಹುತೇಕ ದೇಶಂಗಳಲ್ಲಿ ಸಾವಯವ ಕೃಷಿಯ ಬಗ್ಗೆ ಒಲವು ಇಪ್ಪದಪ್ಪು. ಕೀಟನಾಶಕಂಗಳ ಲಾಬಿ ಅಲ್ಲಿಯೂ ಇದ್ದು ಅಲ್ಲದೋ ಮಹೇಶಣ್ಣ? ಇಲ್ಲಿ ನಮ್ಮ ದೇಶಲ್ಲಿ ಒಂದು ಎಂಡೋಸಲ್ಫಾನ್ ನ ಮೇಲೆ ನಿಷೇಧ ಹಾಕೆಕ್ಕಾದರೆ ಮೇಲೆ ಕೆಳ ನೋಡ್ತವು. ನಮ್ಮ ದೇಶದ ಕೃಷಿ ಮಂತ್ರಿಗೆ ಕೃಷಿಂದ ಹೆಚು ಕ್ರಿಕೆಟ್ ಮುಖ್ಯ ಅಲ್ಲದಾ? ಪಟಂಗಳೂ ಚೆಂದ ಬೈಂದು, ಲೇಖನವೂ. ನಿಂಗಳ ಈ ಅನುಭವವ ಅಡಿಕೆ ಪತ್ರಿಕೆಗೆ ಏಕೆ ಬರವಲಾಗ? ಅವು ಖಂಡಿತ ಪ್ರಕಟ ಮಾಡುಗು. ನಮ್ಮ ಬೈಲಿನವು ಮಾಂತ್ರ ಅಲ್ಲದ್ದೆ ಇತರ ಕೃಷಿಕರಿಂಗೂ ಒೞೆ ಮಾಹಿತಿ ಸಿಕ್ಕುಗು.

  [Reply]

  VA:F [1.9.22_1171]
  Rating: 0 (from 0 votes)
 7. ಗೋಪಾಲಣ್ಣ
  Gopalakrishna BHAT S.K.

  ಸಾವಯವ ಕೃಷಿಯ ಬಗ್ಗೆ ಈಗ ಓದುವಾಗ ಎನಗೆ ಆಶ್ಚರ್ಯ ಆವುತ್ತು.ಆನು ಸಣ್ಣ ಇಪ್ಪಾಗ ಎಲ್ಲಾ ಪತ್ರಿಕೆಲೂ ರಾಸಾಯನಿಕ ಗೊಬ್ಬರ ಬಗ್ಗೆ ಲೇಖನ,ರೇಡಿಯೊಲ್ಲೂ ಅದೇ. ಅದಕ್ಕಿಂತ ಮೊದಲು ಎಲ್ಲರೂ ಸಾವಯವ ಕೃಷಿಯೇ ಮಾಡಿಕೊಂಡಿತ್ತಿದ್ದವು-ನಮಗೆ ಆಹಾರ ವಸ್ತುಗೊ ಸಾಕಾಗಿಕೊಂಡಿತ್ತಿದ್ದಿಲ್ಲೆ. ಅಮೇರಿಕಂದ ಗೋಧಿ,ರಂಗೂನು ಅಕ್ಕಿ ಬಂದುಕೊಂಡಿತ್ತಿದ್ದು!೧೯೭೨-೭೪ ರಲ್ಲಿ ಅಡಕ್ಕೆಯ ಬೆಲೆ ಕಿಲೊಗೆ೪ ರೂ.ಗೆ ಇಳುದತ್ತು ಅಕ್ಕಿಯ ಕ್ರಯ ೩-೪ ರೂಪಾಯಿಗೆ ವರೆಗೆ ಏರಿತ್ತು.ಇಡೀ ಊರಿಂಗೆ ಕಷ್ಟದ ಕಾಲ ಅದು.ಅನಂತರ ಹಸುರು ಕ್ರಾಂತಿ ಯಶಸ್ವಿ ಆಗಿ ಅಕ್ಕಿ ಧಾರಾಳ ಆತು-ಆನುಪಾತಿಕವಾಗಿ ಕ್ರಯ ಇಳುದತ್ತು.ಇದರ ಮರೆವಲಾಗ.
  ಹೀಂಗಾಗಿ ರಸಗೊಬ್ಬರವ ಬಿಡುವ ಮೊದಲು ನಾವು ಐದಾರು ಸರ್ತಿ ಆಲೋಚನೆ ಮಾಡೆಕ್ಕು.{ ಆವಾಗಲೂ ಪತ್ರಿಕೆಲಿ ಹಟ್ಟಿಗೊಬ್ಬರ ಹಾಕಿ ಮೇಲುಗೊಬ್ಬರವಾಗಿ ರಸಗೊಬ್ಬರ ಹಾಕುಲೆ ಹೇಳಿಕೊಂಡಿದ್ದದ್ದು.ಕೃಷಿಕಂಗೊ ಅದೇ ರೀತಿ ಮಾಡದ್ದರೆ ಮಣ್ಣು ಬರಡಾಗದ್ದೆ ಇಕ್ಕೊ?]
  ಸಾವಯವ ಕೃಷಿ ಒೞೆದೆ.[ಅಲ್ಲ ಹೇಳಿ ಎನ್ನ ಅಭಿಪ್ರಾಯ ಅಲ್ಲ.]ಆದರೆ ನಮ್ಮ ಅಗತ್ಯವ ಪೂರೈಸುವ ಶಕ್ತಿ ಅದಕ್ಕಿಲ್ಲೆ-ಹೇಳುದು ಎಂದೋ ಸ್ಪಷ್ಟ ಆಯಿದು.

  [Reply]

  ನೀರ್ಕಜೆ ಮಹೇಶ

  ನೀರ್ಕಜೆ ಮಹೇಶ Reply:

  ಹಸುರು ಕ್ರಾಂತಿ ಬರೇ ರಸಗೊಬ್ಬರ ಕೀಟನಾಶಕಂದ ಆದ್ದಲ್ಲ. ಮುಖ್ಯವಾಗಿ ನೀರಾವರಿ ಮತ್ತೆ ಯಂತ್ರೋಪಕರಣಂಗಳ ಬಳಕೆ ಶುರು ಆದ್ದು ಅದೇ ಸಮಯಕ್ಕೆ. ಹಾಂಗಾಗಿ ಆಹಾರೋತ್ಪಾದನೆ ರಾಸಾಯನಿಕ ಕೃಷಿಂದಲೇ ಆದ್ದು ಹೇಳಿದರೆ ತಪ್ಪಾವುತ್ತು.

  ಇಲ್ಲಿ ಇನ್ನೊಂದು ವಿಷಯ. ನಲ್ವತ್ತರ ದಶಕಲ್ಲಿ ಬಂದ ಬರಗಾಲಕ್ಕೆ ಬ್ರಿಟಿಷರು ಕಾರಣ. ಅದು ಸಾವಯವ ಕೃಷಿಯ ಸಮಸ್ಯೆ ಆಗಿತ್ತಿದಿಲ್ಲೆ. ಭೂ ಹಿಡುವಳಿ ಬ್ರಿಟಿಷರ ಕೈಲಿ ಇದ್ದದ್ದರಿಂದ ಅವು ಜನರಿಂಗೆ ಉಪಕಾರ ಅಪ್ಪಂಥಾ ವ್ಯವಸ್ಥೆ ಮಾಡಿತ್ತಿದವಿಲ್ಲೆ. ಇದೇ ವ್ಯವಸ್ಥೆ ಸ್ವಾತಂತ್ರ್ಯ ಸಿಕ್ಕಿದ ಮೇಲೂ ಮುಂದುವರೆದಿತ್ತು. ನಿಂಗ ಹೇಳಿದ ಎಪ್ಪತ್ತರ ದಶಕದ ಬರಗಾಲಕ್ಕೂ ಈ ವ್ಯವಸ್ಥೆಯ ಲೋಪವೇ ಕಾರಣ (ಮಳೆ ಕಮ್ಮಿ ಆದ್ದರ ಒಟ್ಟಿಂಗೆ). ಅಷ್ಟಪ್ಪಗ ಹಸಿರು ಕ್ರಾಂತಿ ಬಂತು. ವ್ಯವಸ್ಥೆಗೊ ಎಲ್ಲ ಚೂರು ಸರಿ ಆದವು. ನೀರಾವರಿ ವ್ಯವಸ್ಥೆಗೊ ಬಂತು. ಮಾರುಕಟ್ಟೆ ಬಂತು. ಯಂತ್ರೋಪಕರಣಂಗ ಬಂದವು. ಒಟ್ಟಿಂಗೆ ರಾಸಾಯನಿಕವುದೆ ಬಂತು. ಇದರಲ್ಲಿ ರಾಸಾಯನಿಕ ಮಾತ್ರ ಹಾನಿ ಮಾಡಿದ್ದು ಒಳುದ್ದು ಈಗಲೂ ಉಪಯೋಗಕ್ಕೆ ಬಪ್ಪವೇ. ಹಾಂಗಾಗಿ ನವಗೆ ಈ ರಾಸಾಯನಿಕ ರಹಿತ ಹಸಿರು ಕ್ರಾಂತಿ ಬೇಕು. ಈ ಬಗ್ಗೆ ಹೆಚ್ಚು ಮಾಹಿತಿ ಇಲ್ಲಿ ಸಿಕ್ಕುಗು : http://www.goodnewsindia.com/Pages/content/milestones/greenRev.html

  ಕೊನೆಯದಾಗಿ – ಒಂದು ನಿರ್ದಿಷ್ಟ ಭೂಮಿಲಿ ಸಾವಯವ ವಿಧಾನಲ್ಲೇ ರಾಸಾಯನಿಕಂದ ಹೆಚ್ಚು ಬೆಳೆ ಬೆಳದವು ಇದ್ದವಡ್ಡ. ಇದಕ್ಕೆ ಎಂತ ಹೇಳುತ್ತಿ? ಇದು ನಿಜವೋ ಲೊಟ್ಟೆಯೋ ಹೇಳಿ ನಾವು ನಾವೆ ವಿಚಾರ್ಸೆಕ್ಕಾದ ವಿಷಯ. ಇದು ನಿಜ ಆಗಿದ್ದರೆ ಸಾವಯವ ದಾರಿಯನ್ನೇ ಹಿಡಿದರೆ ತಪ್ಪೆಂತ? ಒಂದು ವೇಳೆ ರಾಸಾಯನಿಕಂದ ಒಂದು ಹತ್ತಿಪ್ಪತ್ತು ಪರ್ಸೆಂಟ್ ಬೆಳೆ ಕಮ್ಮಿ ಬತ್ತು ಹೇಳಿ ಇದ್ದರುದೆ, ದೂರದೃಷ್ಟಿಯ ಕಾರಣಕ್ಕೆ ಅದನ್ನೇ ಅಪ್ಪಿಕೊಂಬದು ಉತ್ತಮ ಅಲ್ಲದ! ಆ ಕಮ್ಮಿ ಬಿದ್ದ ವಾಶಿ ಮಾರುಕಟ್ಟೆ ಸುಧಾರಣೆಂದ ಆಹಾರ ಧಾನ್ಯ ಹಾಳಾವುತ್ತಾ ಇಪ್ಪದರ ತಪ್ಪಿಸಿದರೆ ಆತನ್ನೆ.

  [Reply]

  GOPALAKRISHNA BHAT SK Reply:

  ಎನ್ನ ಸಂಶಯ ಸಾವಯವ ಕೃಷಿ ಸರಿ ಅಲ್ಲ ಯಾ ಅಪ್ಪು ಹೇಳಿ ಅಲ್ಲ.ತಲೆತಲಾಂತರಂದ ಸಾವಯವ ಕೃಷಿ
  ಭಾರತಲ್ಲಿ ಇದ್ದು-ಸರಿಯಾಗಿಯೂ ಇದ್ದು.ಆದರೆ ನಮ್ಮ ಈಗಾಣ ಜನಸಂಖ್ಯೆಗೆ ಇದು ಸಾಕಕ್ಕೊ ಹೇಳಿ.೧೯೭೨-೭೪ ರಲ್ಲಿ ಕ್ಷಾಮ ಇತ್ತಿಲ್ಲೆ.ಆವಾಗ ಬ್ರಿಟಿಶರೂ ಇಲ್ಲಿ ಇತ್ತಿದ್ದವಿಲ್ಲೆ.ಕೃಷಿ ಉತ್ಪಾದನೆ ಮತ್ತೆ ಬೇಡಿಕೆಯ ಅಸಮತೋಲನ ಆದ್ದದು.
  ಪ್ರಯೋಗ ರೀತಿಲಿ ತುಂಬಾ ಜನ ಮಾಡಿ ಯಶಸ್ವಿ ಆಯಿದವು-ಎಲ್ಲಾ ಊರಿಲೊ ಇದು ಸರಿ ಅಕ್ಕೊ-ಹೇಳಲೆ ಎಡಿಯ.

  [Reply]

  ನೀರ್ಕಜೆ ಮಹೇಶ

  ನೀರ್ಕಜೆ ಮಹೇಶ Reply:

  {.ಆವಾಗ ಬ್ರಿಟಿಶರೂ ಇಲ್ಲಿ ಇತ್ತಿದ್ದವಿಲ್ಲೆ.}
  ಬ್ರಿಟಿಷರು ಇಲ್ಲದ್ದರು ಅವರ ಸಿಸ್ಟಮುಗಳ ಇದ್ದ ಹಾಂಗೆ ನಾವು ಅನಿಸರಿಸಿದ್ದನ್ನೆ!

  {-ಎಲ್ಲಾ ಊರಿಲೊ ಇದು ಸರಿ ಅಕ್ಕೊ-ಹೇಳಲೆ ಎಡಿಯ.}
  ಸಾವಯವ ಕೃಷಿಯ ಜಪಾನಿಂದ ಹಿಡುದು ಅಮೆರಿಕದವರೆಗೆ, ಭಾರತಲ್ಲಿ ಪಂಜಾಬಿಂದ ಹಿಡುದು ಕೇರಳದವರೆಗೆ ಯಶಸ್ವಿಯಾಗಿ ಮಾಡಿದವಿದ್ದವು. ಇನ್ನೊಬ್ಬರ ಸಹಕಾರ, ಸರಕಾರದ ಅಸಹಕಾರದ ಹೊರತಾಗಿಯೂ ಇದು ಸಾಧ್ಯ ಹೇಳಿ ಇದ್ದರೆ ಇನ್ನು ಸರಕಾರವೇ ಈ ರೀತಿ ಪಾಲಿಸಿ ತಂದರೆ ಅದೇಕೆ ಅಸಾಧ್ಯ? ನಿಂಗೊ ಕೇಳಿಪ್ಪಿ.. ನಮ್ಮ ದೇಶದ ಸಿಕ್ಕಿಂ ರಾಜ್ಯ ಈಗ ಅಧಿಕೃತವಾಗಿ ಸಂಪೂರ್ಣ ಸಾವಯವ ರಾಜ್ಯ. ಅಲ್ಲಿ ಸಾಧ್ಯ ಅಪ್ಪದು ಉಳಿದ ಕಡೆ ಏಕೆ ಅಸಾಧ್ಯ ಆಗೆಕ್ಕು ಹೇಳಿ ಅರ್ಥ ಆವುತ್ತಿಲ್ಲೆ.

  VA:F [1.9.22_1171]
  Rating: 0 (from 0 votes)
 8. ಲಕ್ಶ್ಮಿಅಕ್ಕ

  ಉತ್ತಮ ಲೇಖನ. ಅನುಭವಿಸುದಕ್ಕು , ಅನುಭವಿಸಿ ಬರವದಕ್ಕು, ವ್ಯತ್ಯಾಸ ಇದ್ದು.ಅನುಭವ ಯಾವಾಗಲು ಪರಿಪೂರ್ಣ ಆಗಿರ್ತು. ಆದರೆ ಬರವಲೆ , ಹೆಳುಲೆ ಎಲ್ಲೋರಿಂಗು ಎದಿತ್ತಿಲ್ಲೇ . ನಿನಗೆ ಆ ವಿದ್ಯೆ ಕರಗತ ಆಯಿದು ಹೇಳಿ ಸರಿ ಗೊಂಥಾವುತು . ಈ ಲೇಖನ ಎಲ್ಲಾ ಕೃಷಿ ಪತ್ರಿಕೆಗೊಕ್ಕು ಕೊಡುವ ಹಾಂಗಿದ್ದು .
  ( ಇದರ ಎಡೆಲಿ ಎನಗೆ ಸಂಸ್ಕೃತ ಶ್ಲೋಕ ರೂಪಲ್ಲಿ/ಪದ ರೂಪಲ್ಲಿ ಗೊಂತಿಪ್ಪ ವಿಚಾರಂಗೋ ಗೊಂತ್ಹಾತು . ಇದು ಆನು ಗೊಂತಿಲ್ಲದ್ದೆ ಮಾಡಿದ ತಪ್ಪು. ಕ್ಷಮೆ ಇರಲಿ.)
  ಕೋಟೆಯ ಬುರುಜು ತುಂಬ ಚಂದ ಇದ್ದು. ಜೇನು ಗೊಡುಗಳ ಅಸ್ತ್ಹು ಹತ್ಹರೆ ಮಡುಗಿ ಸಾಂಕುಥವೋ ?
  ಕೂಡಿಗೊಂದು ಕೃಷಿ ಮಾಡುವ ವಿಚಾರ ಮೆಚ್ಚೆಕ್ಕಪ್ಪದೆ . ಆ ಹಕ್ಕಿ ಹವ್ಯಾಸಕ್ಕಾಗಿ ಇಪ್ಪದೋ? ಇದರ ಬಗ್ಗೆ ರಜ ಮಾಹಿತಿ ಸಿಕ್ಕುಗೋ?
  ನಮ್ಮಲ್ಲಿ ಹವ್ಯಕರಲ್ಲಿ ಕೃಷಿ ಇಂದು ಭಾವನಾತ್ಮಕ ಸಂಬ್ಹಂದ ಆಗಿ ಒಳ್ದಸ್ಥೆ.” ಹಿಂಗೆ ಆದರೆ ಹೆಂಗೆ” ? – ಹೇಳುದು ಎಲ್ಲೊರ ಸಮಸ್ಸ್ಯೆ ಆಯಿದು. ಹವ್ಯಕರಲ್ಲಿ ( ನಮ್ಮ ಊರಿಲಿ) ಹೆಚ್ಚಿನೋರಿಂಗು ಕೆಲಸದ ಆಳಿನ ಹತ್ತರೆ ಮಾಡುಸಿ ಗೊಂಥಿಪ್ಪದು. ಸ್ವತಃ ಮಾಡಲೇ ಎಡಿಗಾದೋರು ಕಮ್ಮಿ. ನಾವು ಅವಕ್ಕೂ ( ಆಳುಗಕ್ಕು )ನವಗೂ ಒಂದು ಅಂತರ ಮದುಗಿಗೊಲ್ತು .ಎಸ್ಥು ಯಂತ್ರನ್ಗೋ ಬಂದರೂ ಎಲ್ಲೋರಿಂಗು ಅದರ ಉಪಯೋಗಿಸುಲೇ ಎಡಿತಿಲ್ಲೆ .ಕಮ್ಮಿ ಕ್ರಯಲ್ಲಿ ಸಿಕ್ಕುವ ಹಾಂಗೆ ಇರ್ತಿಲ್ಲೆ.ಸಾಧಾರಣ ೨೫ ವರ್ಷದ ಹಿಂದೆ ಹವ್ಯಕರು ಬತ್ತದ ಕೃಷಿ ಮಾಡಿಗೊಂದ್ದಿತ್ತಿದ್ದವು. ಆದರೆ ಅದು ಲಾಭ ಇಲ್ಲೇ ಹೇಳಿ ಕಂಡ ಕಾರಣ ಅದರ ಬಿಟ್ಟವು. ಇಂದು ಅದಕ್ಕೆ ಬೇಕಾದ ಯಂತ್ರನ್ಗೋ ಇದ್ದು ಆದರೆ ಹೆಚ್ಚಿನೋರಿಂಗು ಮಾಡುವ ಉತ್ಸಾಹ ಇಲ್ಲೆ.

  ಇಂದು ಹಳ್ಳಿಗೆ ಲೋಕ ಇಡಿ ಕಾಂಬ ವ್ಯವಸ್ಥೆ ಇದ್ದು. ಆದರೆ ರಾಜಕರನಿಗೊಕ್ಕೆ ಹಳ್ಳಿಯ ದಿನ ನಿತ್ಯದ ಕಷ್ಟದ ಬದುಕು (ಹೊಲ,ಗದ್ದೆ, ತೋಟ) ಕಾಂಬ ವ್ಯವಸ್ತೆ ಇಲ್ಲೆ . ಇದುವೇ ದೊಡ್ಡ ಅಂತರ ಹೇಳಿ ಎನ್ನ ಅಭಿಪ್ರಾಯ .

  [Reply]

  VA:F [1.9.22_1171]
  Rating: 0 (from 0 votes)
 9. shivakumar

  ಸಾವಯವ ಕ್ರಿಷಿ ಯ ಬಗ್ಗೆ ಒಳ್ಳೆಯ ಲೇಕನ. ಇಲ್ಲಿಯೂ ಕೀಟ ನಿಯಂತ್ರಕ(ಕೀಟ ನಾಶಕ ಅಲ್ಲ) ಆಗಿ ತುರಿಸುವ ಜಾತಿಯ ಗಿಡಗಳ,ಗೆಡ್ಡೆಗಳ,ಗಾಂದಾರಿ ಮೆಣಸಿನ ಕಷಾಯ ಮಾಡಿ ಬಳಸುವ ಕ್ರಮ ಇದೆ. ಸಾವಯವ ಕ್ರೀಷಿಯಿಂದ ಒಳೆ ಉತ್ಪಾದನೆ ಆಗುತ್ತದೆ
  ಈಗ ಅದರ ಬಗ್ಗೆ ಬಾರಿ ಉತ್ತೇಜನ ಹಾಗು ಬೇಡಿಕೆ ಇದೆ, ಮಾರುಕಟ್ಟೆ ವ್ಯವಸ್ಥೆ ಮಾತ್ರ ಆಗಬೇಕಷ್ತೆ, ಇನ್ನು ಕೆಲವೇ ತಿಂಗಳಿನಲ್ಲಿ ನಮ್ಮ ರಾಜ್ಯದಲ್ಲಿ ಆಗುವ ನೀರಿಕ್ಷೆ ಇದೆ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೊಳಚ್ಚಿಪ್ಪು ಬಾವದೊಡ್ಡಭಾವಕಾವಿನಮೂಲೆ ಮಾಣಿಶ್ರೀಅಕ್ಕ°ವೇಣಿಯಕ್ಕ°ಡೈಮಂಡು ಭಾವಡಾಮಹೇಶಣ್ಣಕಳಾಯಿ ಗೀತತ್ತೆಪೆಂಗಣ್ಣ°ಜಯಗೌರಿ ಅಕ್ಕ°ಯೇನಂಕೂಡ್ಳು ಅಣ್ಣಪ್ರಕಾಶಪ್ಪಚ್ಚಿಹಳೆಮನೆ ಅಣ್ಣಗೋಪಾಲಣ್ಣದೊಡ್ಮನೆ ಭಾವಮಾಲಕ್ಕ°ಚೆನ್ನಬೆಟ್ಟಣ್ಣವಿದ್ವಾನಣ್ಣವೇಣೂರಣ್ಣಜಯಶ್ರೀ ನೀರಮೂಲೆಅಡ್ಕತ್ತಿಮಾರುಮಾವ°ಮಾಷ್ಟ್ರುಮಾವ°ಉಡುಪುಮೂಲೆ ಅಪ್ಪಚ್ಚಿಶಾಂತತ್ತೆಸುಭಗವಿಜಯತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ