Oppanna.com

ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 21 – 30

ಬರದೋರು :   ಚೆನ್ನೈ ಬಾವ°    on   22/03/2012    57 ಒಪ್ಪಂಗೊ

ಚೆನ್ನೈ ಬಾವ°

ಶ್ಲೋಕ

ವೇದಾವಿನಾಶಿನಂ ನಿತ್ಯಂ ಯ ಏನಮಜಮವ್ಯಯಮ್ ।
ಕಥಂ ಸ ಪುರುಷಃ ಪಾರ್ಥ ಕಂ ಘಾತಯತಿ ಹಂತಿ ಕಮ್ ॥೨೧॥

ಪದವಿಭಾಗ

ವೇದ ಅವಿನಾಶಿನಮ್ ನಿತ್ಯಮ್ ಯಃ ಏನಮ್ ಅಜಮ್ ಅವ್ಯಯಮ್ । ಕಥಮ್ ಸಃ ಪುರುಷಃ ಕಮ್ ಘಾತಯತಿ ಹಂತಿ ಕಮ್॥

ಅನ್ವಯ

ಹೇ ಪಾರ್ಥ!, ಯಃ ಏನಮ್ ಅವಿನಾಶಿನಂ ನಿತ್ಯಮ್ ಅಜಮ್ ಅವ್ಯಯಂ ವೇದ, ಸಃ ಪುರುಷಃ ಕಥಂ ಕಂ ಘಾತಯತಿ, ಕಂ ಹಂತಿ?

ಪ್ರತಿಪದಾರ್ಥ

ಹೇ ಪಾರ್ಥ – ಏ ಪೃಥೆಯ ಮಗನಾದ ಅರ್ಜುನ!, ಯಃ – ಆರು,  ಏನಮ್ – ಇದರ (ಆತ್ಮವ), ಅವಿನಾಶಿನಮ್ – ನಾಶವಿಲ್ಲದ, ನಿತ್ಯಮ್ – ಏವತ್ತೂ ಅಸ್ತಿತ್ವಲ್ಲಿಪ್ಪ, ಅಜಮ್ – ಜನನರಹಿತನಾದ, ಅವ್ಯಯಮ್ – ವಿಕಾರರಹಿತನಾದ, ವೇದ – ತಿಳಿತ್ತನೋ, ಸಃ – ಆ , ಪುರುಷಃ – ಪುರುಷ°, ಕಥಮ್ – ಹೇಂಗೆ,  ಕಮ್ – ಆರ, ಘಾತಯತಿ – ಕೊಲ್ಲುಸುತ್ತನೋ, ಕಮ್ – ಆರ,  ಹಂತಿ – ಕೊಲ್ಲುತ್ತ°.  

ಅನ್ವಯಾರ್ಥ

ಹೇ ಪಾರ್ಥ!, ಆತ್ಮವು ಅವಿನಾಶಿ, ನಿತ್ಯ. ಅದಕ್ಕೆ ಹುಟ್ಟಿಲ್ಲೆ, ಕ್ಷಯ ಇಲ್ಲೆ ಹೇದು ತಿಳುದವ° ಹೇಂಗೆ ಆರನ್ನಾರು ಕೊಲ್ಲುಗು ಅಥವಾ ಕೊಲ್ಲುಸುಗು ?

ತಾತ್ಪರ್ಯ / ವಿವರಣೆ

ದೋಷ ಸಂಬಂಧ ಇಲ್ಲದ್ದ, ನಿತ್ಯವಾದ, ಎಂದೂ ಬದಲಾಗದ್ದ ಜೀವ ಸ್ವರೂಪವ ಆರು ತಿಳಿತ್ತವೋ ಅಂತಹ ಮನುಷ್ಯರು ಆರನ್ನೂ ಕೊಲ್ಲುವದು ವಾ ಕೊಲ್ಲುಸುವದು ಹೇಂಗೆ ಸಾಧ್ಯ. ಸ್ವರೂಪತಃ ಆತ್ಮಕ್ಕೆ ನಾಶ ಇಲ್ಲೆ ಹೇಳಿ ತಿಳುದಪ್ಪಗ, ಸ್ಥೂಲ ಪ್ರಪಂಚಲ್ಲಿ ಹುಟ್ಟು-ಸಾವು ಭಗವಂತನ ಇಚ್ಛೆಯಂತೆ ನಡೆತ್ತು ಹೇದು ಅರ್ಥಮಾಡಿಗೊಂಡ ಮತ್ತೆ ಆರು ಆರ ಕೊಲ್ಲುದು ಅಥವಾ ಕೊಲ್ಲುಸುವದು?!. ಹುಟ್ಟು-ಸಾವಿನ ಹಿಂದಿಪ್ಪ ಭಗವತ್ ಶಕ್ತಿಯ ನಾವು ಅರ್ತುಗೊಳ್ಳೆಕ್ಕಷ್ಟೆ. ಪ್ರತಿಯೊಂದು ವಸ್ತುವಿಂಗೂ ವಾ ವಿಷಯಕ್ಕೂ ಅದರದ್ದೇ ಆದ ಪ್ರಯೋಜನ ಇದ್ದು. ಪರಿಪೂರ್ಣ ವಿದ್ಯೆಯ ನೆಲೆ ಇಪ್ಪೋನಿಂಗೆ ಅದರ ಸರಿಯಾದ ಪ್ರಯೋಜನದ, ಅರ್ಥ ತಿಳ್ಕೊಂಬಲೆ ಮತ್ತೆ ಎಲ್ಲಿ ಹೇಂಗೆ ಅದರ ಉಪಯೋಗುಸೆಕ್ಕು ಹೇಳಿ ಗೊಂತಿರುತ್ತು. ಇದೇ ರೀತಿ ಹಿಂಸೆಗೂ ಅದರ ಪ್ರಯೋಜನ ಇದ್ದು. ಹಿಂಸೆಯ ಹೇಂಗೆ ಬಳಸಿಗೊಳ್ಳೆಕ್ಕು ಹೇದು ತಿಳುವಳಿಕೆ ಇಪ್ಪ ಮನುಷ್ಯನ ಅವಲಂಬಿಸಿಕೊಂಡಿದ್ದು. ಕೊಲೆಮಾಡಿದವ° ಹೇದು ಸಾಬೀತು ಅಪ್ಪಗ ನ್ಯಾಧೀಶ ಮರಣದಂಡನೆ ಶಿಕ್ಷೆ ವಿಧಿಸುತ್ತ°. ಇಲ್ಲಿ ನ್ಯಾಯಾಧೀಶನ ಆಕ್ಷೇಪಿಸುವ ಹಾಂಗಿಲ್ಲೆ. ಎಂತಕೆ ಹೇದರೆ , ಅವ° ನ್ಯಾಯಸಂಹಿತೆಗೆ ಅನುಗುಣವಾಗಿ ಮತ್ತೊಬ್ಬನ ಮೇಲೆ ಹಿಂಸೆ ಪ್ರಯೋಗುಸುತ್ತ°. ಕೊಲೆಮಾಡಿದವ° ತಾನು ಮಾಡಿದ ಹೇಯ ಪಾಪಕ್ಕಾಗಿ ಮುಂದಾಣ ಜನ್ಮಲ್ಲಿ ಕಷ್ಟಪಡದ ಹಾಂಗೆ ಅವಂಗೆ ಮರಣದಂಡನೆ ಕೊಡೆಕು ಹೇದು ಮನುಸಂಹಿತೆ ಸಮರ್ಥಿಸಿದ್ದಡ. ಹಾಂಗಾಗಿ ರಾಜ° ಕೊಲೆಗಡುಕಕ್ಕೆ ನೇಣುಹಾಕೆಕು ಹೇಳಿ ವಿಧಿಸಿಯಪ್ಪಗ ಅವಂಗೆ (ಕೊಲೆಗಡುಕಂಗೆ) ಉಪಕಾರವನ್ನೇ ಮಾಡುತ್ತ°. ಹಾಂಗೆಯೇ ಕೃಷ್ಣ° ಅರ್ಜುನನತ್ರೆ ಯುದ್ಧ ಮಾಡು ಹೇದು ಆಜ್ಞಾಪಿಸಿಯಪ್ಪಗ ಈ ಹಿಂಸೆಯು ಪರಮ ನ್ಯಾಯಕ್ಕೋಸ್ಕರ ಹೇದು ತಿಳ್ಕೊಳ್ಳೆಕ್ಕು. ಕೃಷ್ಣನ ಮಾತಿನ ಪ್ರಕಾರ ಯುದ್ಧ ಮಾಡುವಾಗ ಅಪ್ಪ ಹಿಂಸೆ ಹಿಂಸೆಯೇ ಅಲ್ಲ. ಎಂತಕೆ ಹೇಳಿರೆ ಒಬ್ಬ ಮನುಷ್ಯನ ಅಥವಾ ಅವನ ಆತ್ಮವ  ಕೊಲ್ಲುಲೆ ಸಾಧ್ಯವೇ ಇಲ್ಲೆ. ನ್ಯಾಯದ ನಿರ್ವಹಣೆಗೆ ಬೇಕಾಗಿ ಹೊರತೋರಿಕೆಯ ಹಿಂಸೆ ಅಪ್ಪದಿದ್ದು. ಶಸ್ತ್ರಚಿತಿಕಿತ್ಸೆಯ ಉದ್ದೇಶ ರೋಗಿಯ ಬೇನೆ (ಘಾಸಿ) ಮಾಡುದೋ, ಕೊಲ್ಲಲೆ ಹೆರಡುವದೋ ಅಲ್ಲ. ಅವನ ಆ ಮೂಲಕ ಗುಣಪಡುಸುವದು. ನೋವೆಂಬ ಹಿಂಸೆ ಇಲ್ಲಿ ಹೊರತೋರಿಕೆ ಕಾಂಬದು. ಕೃಷ್ಣನ ಆದೇಶದ ಹಾಂಗೆ ಅರ್ಜುನ° ಮಾಡುವ ಯುದ್ಧಕ್ಕೆ ಸಂಪೂರ್ಣ ತಿಳುವಳಿಕೆಯೇ ಆಧಾರ. ಹಾಂಗಾಗಿ ಪಾಪಕರ್ಮದ ಫಲದ ಸಾಧ್ಯತೆಯೇ ಇಲ್ಲೆ.

ಹಾಂಗಾರೆ ಇಲ್ಲಿ ಈಗ ಹೇಳಿದಾಂಗೆ ಆತ್ಮಕ್ಕೆ ಅಳಿವಿಲ್ಲೆ, ಹುಟ್ಟು-ಸಾವು ಇಲ್ಲೆ ಹೇಳಿ ಆದರೆ, ನಾವು ಪ್ರಾಪಂಚಿಕವಾಗಿ ಕಾಂಬ ಸಾವಿಂಗೆ ಎಂತರ ಅರ್ಥ ? ಮುಂದೆ ಹೇಳುತ್ತ° ಕೃಷ್ಣ ° –

ಶ್ಲೋಕ

ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋsಪರಾಣಿ ।
ತಥಾ ಶರೀರಾಣಿ ವಿಹಾಯ ಜೀರ್ಣಾನ್ ಅನ್ಯಾನಿ ಸಂಯಾತಿ ನವಾನಿ ದೇಹೀ ॥೨೨॥

ಪದವಿಭಾಗ

ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರಃ ಅಪರಾಣಿ । ತಥಾ ಶರೀರಾಣಿ ವಿಹಾಯ ಜೀರ್ಣಾನಿ ಅನ್ಯಾನಿ ಸಂಯಾತಿ ನವಾನಿ ದೇಹೀ।

ಅನ್ವಯ

ಯಥಾ ನರಃ ಜೀರ್ಣಾನಿ ವಾಸಾಂಸಿ ವಿಹಾಯ, ಅಪರಾಣಿ ನವಾನಿ ಗೃಹ್ಣಾತಿ, ತಥಾ ದೇಹೀ ಜೀರ್ಣಾನಿ ಶರೀರಾಣಿ ವಿಹಾಯ ಅನ್ಯಾನಿ ನವಾನಿ ಸಂಯಾತಿ ।

ಪ್ರತಿಪದಾರ್ಥ

ಯಥಾ – ಹೇಂಗೆ, ನರಃ – ಮನುಷ್ಯ°, ಜೀರ್ಣಾನಿ – ಹಳತ್ತಾಗಿ ಹರುದುಹೋದ, ವಾಸಾಂಸಿ – ವಸ್ತ್ರಂಗಳ, ವಿಹಾಯ – ತ್ಯಜಿಸಿ, ಅಪರಾಣಿ – ಬೇರೇ, ನವಾನಿ – ಹೊಸ (ಹೊಸ ವಸ್ತ್ರಂಗಳ) ಗೃಹ್ಣಾತಿ – ಸ್ವೀಕರುಸುತ್ತನೋ, ತಥಾ – ಅದೇ ರೀತಿಲಿ, ದೇಹೀ – ದೇಹಗತವಾದವ° (ಆತ್ಮ),   ಜೀರ್ಣಾನಿ – ಹಳೆಯದಾದ ಮತು ಅನುಪಯುಕ್ತವಾದ, ಶರೀರಾಣಿ – ದೇಹಂಗಳ, ವಿಹಾಯ – ತ್ಯಜಿಸಿ, ಅನ್ಯಾನಿ – ಬೇರೇ, ನವಾನಿ – ಹೊಸತ್ತಾದ, ಸಂಯಾತಿ = ನಿಶ್ಚಯವಾಗಿ ಸ್ವೀಕರುಸುತ್ತ°.

ಅನ್ವಯಾರ್ಥ

ಒಬ್ಬ ಮನುಷ್ಯ° ಹೇಂಗೆ ಹಳತ್ತು ಹರುದ ವಸ್ತ್ರಂಗಳ ತ್ಯಜಿಸಿ ಹೊಸ ವಸ್ತ್ರಂಗಳ ಸ್ವೀಕರುಸುತ್ತನೋ, ಹಾಂಗೆಯೇ, ಆತ್ಮವು ಜೀರ್ಣವಾದ ದೇಹವ ಬಿಟ್ಟು ಹೊಸ ದೇಹವ ಸ್ವೀಕರುಸುತ್ತು.

ತಾತ್ಪರ್ಯ / ವಿವರಣೆ

ಹೇಂಗೆ ಅಬ್ಬೆ ಮಗುವಿಂಗೆ ಅಂಗಿ ಬದಲುಸುತ್ತೋ ಹಾಂಗೆ ಭಗವಂತ° ಜೀವಾತ್ಮಕ್ಕೆ ದೇಹ ಬದಲುಸುತ್ತ°.  ಜೀವಕ್ಕೆ ಸ್ವತಃ ದೇಹ ಬದಲುಸುವ ಸ್ವಾತಂತ್ರ್ಯ ಇಲ್ಲೆ. ಅಂದರೆ ಆತ್ಮ ಸಾಕ್ಷಾತ್ಕಾರ ಪಡದ ಯೋಗಿಗೊಕ್ಕೆ ಇದು ಸಾಧ್ಯ. ನೈಜ ಜೀವನಲ್ಲಿ ನವಗೆ ಅರಿವು ಮೂಡಿದ ಮತ್ತೆ ನಾವೇ ಅಂಗಿ ಬದಲುಸುತ್ತ ಹಾಂಗೆ.

ಶ್ಲೋಕ

ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ ।
ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ ॥೨೩॥

ಪದವಿಭಾಗ

ನ ಏನಮ್ ಛಿಂದಂತಿ ಶಸ್ತ್ರಾಣಿ ನ ಏನಮ್ ದಹತಿ ಪಾವಕಃ । ನ ಚ ಏನಮ್  ಕ್ಲೇದಯಂತಿ ಆಪಃ  ನ ಶೋಷಯತಿ ಮಾರುತಃ ॥

ಅನ್ವಯ

ಏನಂ ಶಸ್ತ್ರಾಣಿ ನ ಛಿಂದಂತಿ, ಏನಂ ಪಾವಕಃ ನ ದಹತಿ, ಏನಮ್ ಆಪಃ ನ ಕ್ಲೇದಯಂತಿ, ಏನಂ ಚ ಮಾರುತಃ ನ ಶೋಷಯತಿ ।

ಪ್ರತಿಪದಾರ್ಥ

ಏನಮ್ – ಇದರ (ಈ ಆತ್ಮವ), ಶಸ್ತ್ರಾಣಿ – ಶಸ್ತ್ರಂಗೊ, ನ ಛಿಂದಂತಿ – ತುಂಡುಗಳಾಗಿ ಕತ್ತರುಸುತ್ತಿಲ್ಲೆ, ಏನಮ್ – ಈ ಆತ್ಮವ, ಪಾವಕಃ – ಕಿಚ್ಚು, ನ ದಹತಿ – ಸುಡುತ್ತಿಲ್ಲೆ, ಏನಮ್ – ಈ ಆತ್ಮವ, ಆಪಃ – ನೀರು,  ನ ಕ್ಲೇದಯಂತಿ – ಚಂಡಿಮಾಡುತ್ತಿಲ್ಲೆ, ಚ – ಕೂಡ, ಮಾರುತಃ – ಗಾಳಿಯು,  ನ ಶೋಷಯಂತಿ – ಒಣಗುಸುತ್ತಿಲ್ಲೆ.

ಅನ್ವಯಾರ್ಥ

ಆತ್ಮವ ಶಸ್ತ್ರಂಗೊ ತುಂಡು ತುಂಡಾಗಿ ಕತ್ತರುಸವು, ಅಗ್ನಿಯು ಸುಡ, ನೀರು ಚಂಡಿಮಾಡ, ಮತ್ತೆ , ಗಾಳಿಯೂ ಒಣಗುಸ.

ತಾತ್ಪರ್ಯ / ವಿವರಣೆ

ಸೂಕ್ಷಾತಿಸೂಕ್ಷ್ಮ ಆಗಿಪ್ಪ ಆತ್ಮವ ಯಾವ ಕತ್ತಿ ದೊಣ್ಣೆ ಬೆತ್ತ ಬಡಿಗೆ ಅಸ್ತ್ರ ಶಸ್ತ್ರಂಗೊ ತುಂಡುಮಾಡಿ ಕತ್ತರುಸ. ಕತ್ತಿ, ವಾ  ಈಗಾಣ ಕಾಲದ ಆಧುನಿಕ ಕಿಚ್ಚಿನುಂಡೆ ತುಪ್ಪುವ ಅಣು ಅಸ್ತ್ರಂಗಳ ಹಾಂಗೆ ಮದಲಿಂಗೆ ಆ ಕಾಲದ ಆಗ್ನೇಯಾಸ್ತ್ರ, ವಾರುಣಾಸ್ತ್ರ, ವಾಯವ್ಯಾಸ್ತ್ರಂಗೊ ಯಾವುದೇ ಆತ್ಮವ ಕೊಲ್ಲ.

ಪರಮಾತ್ಮನಿಂದಲೂ ಜೀವಾತ್ಮವ ಭಾಗ ಮಾಡ್ಳೆ ಸಾಧ್ಯ ಇಲ್ಲೆ. ಜೀವಾತ್ಮ ಪರಮಾತ್ಮನಿಂದ ನಿರಂತರವಾಗಿ ಬೇರ್ಪಟ್ಟ ಭಾಗಾಂಶ. ಇದು ಮಾಯಾಶಕ್ತಿಂದ ಆವೃತವಾದ್ದು. ಕಿಚ್ಚಿನ ಕಿಡಿಗೊ ಗುಣಲ್ಲಿ ಬೆಂಕಿಯೊಟ್ಟಿಂಗೆ ಒಂದೇ ಆದರೂ ಅದು ಕಿಚ್ಚಿಂದ ಬೇರ್ಪಟ್ಟಪ್ಪಗ ಆರಿಹೋವುತ್ತು. ಹಾಂಗೆಯೇ, ಜೀವಾತ್ಮ ಭಗವಂತನ ಸಂಗಮಂದ ಬೇರೆ ಆವ್ತು. ಬೇರೆ ಆಗಿಯೇ ಉಳಿತ್ತು. ಭಗವಂತನ ಮಾಯೆಂದ ಬೇರ್ಪಟ್ಟ ಮೇಲೂ ಜೀವಾತ್ಮವು ಪ್ರತ್ಯೇಕ ಅಸ್ತಿತ್ವಲ್ಲಿ ಇರ್ತು.

ಅಂಬಗ ಇದು ಇಂದು ನಾಶಮಾಡ್ಳೆ ಎಡಿಯದ್ದ ಆತ್ಮ ನಿರಂತರ ಮುಂದೆಯೂ ನಾಶ ಆಗದ್ದೇ ಉಳಿತ್ತೋ?! –

ಶ್ಲೋಕ

ಅಚ್ಛೇದ್ಯೋsಯಮದಾಹ್ಯೋsಯಮ್ ಅಕ್ಲೇದ್ಯೋsಶೋಷ್ಯ ಏವ ಚ ।
ನಿತ್ಯಃ ಸರ್ವಗತಃ ಸ್ಥಾಣುಃ ಅಚಲೋsಯಂ ಸನಾತನಃ ॥೨೪॥

ಪದವಿಭಾಗ

ಅಚ್ಛೇದ್ಯಃ ಅಯಮ್ ಅದಾಹ್ಯಃ ಅಯಮ್ ಅಕ್ಲೇದ್ಯಃ ಅಶೋಷ್ಯಃ ಏವ ಚ । ನಿತ್ಯಃ ಸರ್ವಗತಃ ಸ್ಥಾಣು ಅಚಲಃ ಅಯಮ್ ಸನಾತನಃ ॥

ಅನ್ವಯ

ಅಯಮ್ ಅಚ್ಛೇದ್ಯಃ, ಅಯಮ್ ಅದಾಹ್ಯಃ, ಅಯಮ್ ಅಕ್ಲೇದ್ಯಃ, ಅಯಮ್ ಅಶೋಷ್ಯಃ ಚ ಏವ । ಅಯಂ ನಿತ್ಯಃ, ಸರ್ವಗತಃ, ಸ್ಥಾಣುಃ, ಅಚಲಃ, ಸನಾತನಃ ।

ಪ್ರತಿಪದಾರ್ಥ

ಅಯಂ – ಈ ಆತ್ಮವು, ಅಚ್ಛೇದ್ಯಃ – ಒಡೆಯಲಾಗದ್ದು, ಅಯಮ್ – ಈ ಆತ್ಮವು, ಅದಾಹ್ಯಃ – ಸುಡಲಾಗದ್ದು, ಅಯಮ್ – ಈ ಆತ್ಮವು, ಅಕ್ಲೇದ್ಯಃ – ಕರಗಿಸಲಾಗದ್ದು, ಅಯಮ್ – ಈ ಆತ್ಮವು, ಅಶೋಷ್ಯಃ – ಒಣಗುಸಲಾಗದ್ದು, ಚ – ಕೂಡ, ಏವ – ಖಂಡಿತವಾಗಿಯೂ, ಅಯಮ್ – ಈ ಆತ್ಮವು, ನಿತ್ಯಃ – ನಿತ್ಯವಾದ್ದು, ಸರ್ವಗತಃ – ಸರ್ವವ್ಯಾಪಿಯಾದ್ದು, ಸ್ಥಾಣುಃ- ಬದಲಾವಣೆಯಿಲ್ಲದ್ದು, ಅಚಲಃ – ಸ್ಥಿರವಾದ್ದು,  ಸನಾತನಃ – ಶಾಶ್ವತವಾಗಿಪ್ಪದು.

ಅನ್ವಯಾರ್ಥ

ಜೀವಾತ್ಮ° ಒಡೆಯಲಾಗದ್ದು, ಕಿಚ್ಚಿಲ್ಲಿ ಸುಡ್ಳೆ ಎಡಿಯದ್ದು, ನೀರಿಲ್ಲಿ ಕರಗುಸಲೆ ಸಾಧ್ಯವಿಲ್ಲದ್ದು, ಒಣಗುಸಲೆ ಸಾಧ್ಯ ಇಲ್ಲದ್ದು. ಜೀವಾತ್ಮ° ನಿತ್ಯ°, ಎಲ್ಲ ದಿಕ್ಕೆ ವ್ಯಾಪಿಸಿಕೊಂಡಿಪ್ಪದು, ಬದಲಾವಣೆ ಇಲ್ಲದ್ದು, ಅಚಲವಾಗಿಪ್ಪಂತದ್ದು, ಮತ್ತೆ ಸನಾತನವಾಗಿಯೂ ಅದೇ ಒಂದೇ ಆಗಿಪ್ಪದು .

ತಾತ್ಪರ್ಯ / ವಿವರಣೆ

ಜೀವಾತ್ಮ° ನಿರಂತರವಾಗಿ ಪೂರ್ಣಚೇತನದ ಅಣುವಾಗಿ ಉಳಿಯುವಂತದ್ದು ಮತ್ತೆ ಸರ್ವಕಾಲಕ್ಕೆ ಸ್ಥಾಣುವಾಗಿ ಅರ್ಥಾತ್ ಬದಲಾವಣೆ ಇಲ್ಲದ್ದೆ ಅದೇ ಆತ್ಮವಾಗಿ ಉಳಿಯುವಂತದ್ದು. ಸರ್ವಗತಃ ಹೇದು ಮೇಲೆ ಹೇಳಿದ್ದದು-  ಎಲ್ಲದಿಕ್ಕೆ ಇಪ್ಪಂತಹ (ವ್ಯಾಪಿಸಿಕೊಂಡಿಪ್ಪಂತಹ) ಎಂಬ ಮಹತ್ವದ ಅರ್ಥ. ಎಂತಕೆ ಹೇಳಿರೆ, ಜೀವಿಗೊ ಭಗವಂತನ ಸೃಷ್ಟಿಲ್ಲಿ ಎಲ್ಲೆಲ್ಲೂ ಇದ್ದು ಹೇಳುವದರಲ್ಲಿ ಸಂದೇಹವೇ ಇಲ್ಲೆ. ಅದು ಭೂಮಿಯ ಮೇಲೆ, ನೀರಿಲ್ಲಿ, ವಾಯುವಿಲ್ಲಿ, ಭೂಮಿಯ ಒಳ, ಹೆರ, ಅಕಾಶಲ್ಲಿಯೂ, ಅಗ್ನಿಲಿಯೂ ವ್ಯಾಪಿಸಿಕೊಂಡಿಪ್ಪದ್ದು. ಹೀಂಗೆ ತನ್ನ ಗುಣಧರ್ಮಂದ ವಾ ಪರಸರದ ಪ್ರಭಾವಂದ ಎಂದೂ ಬದಲಾಗದ, ಸರ್ವಗತನಾದ, ವಿಚಲಿತನಾದ, ಭಗವಂತನ ಪಡಿಯಚ್ಚು, ಯಾವ ಆಯುಧಕ್ಕೂ ನಿಲುಕದ ಎಲ್ಲ ಕಾಲಲ್ಲಿಯೂ ಏಕರೂಪಲ್ಲಿಪ್ಪ, ಎಲ್ಲ ಕಡೆ ಸ್ಥಿರವಾಗಿ, ಬದಲಾವಣೆ ಇಲ್ಲದ್ದೆ  ಇಪ್ಪ ಗುಣಧರ್ಮ ಆತ್ಮಕ್ಕೆ.

ಶ್ಲೋಕ

ಅವ್ಯಕ್ತೋsಯಮಚಿಂತ್ಯೋsಯಂ ಅವಿಕಾರ್ಯೋsಯಮುಚ್ಯತೇ ।
ತಸ್ಮಾದೇವಂ ವಿದಿತ್ವೈನಂ ನಾನುಶೋಚಿತುಮರ್ಹಸಿ ॥೨೫॥

ಪದವಿಭಾಗ

ಅವ್ಯಕ್ತಃ ಅಯಮ್ ಅಚಿಂತ್ಯಃ ಅಯಮ್ ಅವಿಕಾರ್ಯಃ ಅಯಮ್ ಉಚ್ಯತೇ । ತಸ್ಮಾತ್ ಏವಮ್ ವಿದಿತ್ವಾ ಏನಮ್ ನ ಅನುಶೋಚಿತುಮ್ ಅರ್ಹಸಿ॥

ಅನ್ವಯ

ಅಯಮ್ ಅವ್ಯಕ್ತಃ, ಅಯಮ್ ಅಚಿಂತ್ಯಃ, ಅಯಮ್ ಅವಿಕಾರ್ಯಃ ಉಚ್ಯತೇ । ತಸ್ಮಾತ್ ಏನಂ ವಿದಿತ್ವಾ ತ್ವಮ್ ಅನುಶೋಚಿತುಂ ನ ಅರ್ಹಸಿ ।

ಪ್ರತಿಪದಾರ್ಥ

ಅಯಮ್ – ಈ ಆತ್ಮವು, ಅವ್ಯಕ್ತಃ – ಅಗೋಚರವು, ಅಯಮ್ – ಈ ಆತ್ಮವು, ಅಚಿಂತ್ಯಃ – ಅಚಿಂತ್ಯವು,  ಅಯಮ್ – ಈ ಆತ್ಮವು, ಅವಿಕಾರ್ಯಃ – ಬದಲಾವಣೆಗೊಳ್ಳದ್ದು,  ಉಚ್ಯತೇ – ಹೇದು ಹೇಳಲ್ಪಡುತ್ತು. ತಸ್ಮಾತ್ – ಹಾಂಗಾಗಿ, ಏನಮ್ – ಇದರ, ವಿದಿತ್ವಾ – ಲಾಯಕಕ್ಕೆ ತಿಳ್ಕೊಂಡು, ತ್ವಮ್ – ನೀನು, ಅನುಶೋಚಿತುಮ್ – ದುಃಖಿಸಲೆ, ನ ಅರ್ಹಸಿ – ಅರ್ಹನಾವುತ್ತಿಲ್ಲೆ.

ಅನ್ವಯಾರ್ಥ

ಆತ್ಮವು ಕಣ್ಣಿಂಗೆ ಕಾಣದ್ದೆ ಅಗೋಚರವಾಗಿಯೂ, ಗ್ರಹಿಸಲೂ ಎಡಿಯದ್ದೆಯೂ, ವಿಕಾರಗೊಳ್ಳದ್ದೆಯೂ ಇಪ್ಪದು ಹೇದು ಹೇಳಲ್ಪಟ್ಟಿದು. ಹಾಂಗಾಗಿ ಇದರ ನೀನು ತಿಳ್ಕೊಂಡು ದೇಹಕ್ಕಾಗಿ ದುಃಖಿಸಲಾಗ.

ತಾತ್ಪರ್ಯ / ವಿವರಣೆ

ಈ ಮದಲೇ ಹೇದಾಂಗೆ, ಆತ್ಮ ನಮ್ಮ ಲೌಕಿಕ ಲೆಕ್ಕಾಚಾರಕ್ಕೆ ಸಿಕ್ಕದ್ದ, ಕಣ್ಣಿಂಗೂ ಕಾಣದ , ಅಗೋಚರವಾಗಿಪ್ಪ, ಅದೃಶ್ಯವಾಗಿಪ್ಪಂತದ್ದು. ಆತ್ಮದ ಅಸ್ತಿತ್ವವ ಪ್ರಜ್ಞೆಂದ ಮಾತ್ರ ಅರ್ತುಗೊಂಬಲೆ ಸಾಧ್ಯ. ಆತ್ಮವ ಅರ್ಥಮಾಡಿಗೊಂಬಲೆ ಬೇರೆ ಯಾವುದೇ ರೀತಿಯ ಪ್ರಮಾಣ ಇಲ್ಲೆ. ಶ್ರೇಷ್ಠ ಪ್ರಜ್ಞೆಂದ ಮಾತ್ರ ಒಪ್ಪಿಗೊಂಬಲೆ ಸಾಧ್ಯ. ತನ್ನ ಅಬ್ಬೆ ಅಧಿಕಾರಯುತವಾಗಿ ಅಪ್ಪ ಆರು ಹೇಳಿ ಹೇಳುವದರ ಆರೂ ತಿರಸ್ಕರುಸಲೆ ಸಾಧ್ಯವಿಲ್ಲೆ. ಅಪ್ಪ ಆರು ಹೇದು ತಿಳ್ಕೊಂಬಲೆ ಅಬ್ಬೆಯ ಮಾತಲ್ಲದೆ ಬೇರೆ ಪ್ರಮಾಣ ಇಲ್ಲೆ. ಆತ್ಮ ಪ್ರಜ್ಞೆ ಮತ್ತು ಪ್ರಜ್ಞಾಶೀಲ. ಇದು ವೇದಂಗಳ ಹೇಳಿಕೆ. ನಾವು ಒಪ್ಪೆಕ್ಕಾವ್ತು. ದೇಹಲ್ಲಿ ಬದಲಾವಣೆ ಆವ್ತು ಆದರೆ ಆತ್ಮಕ್ಕೆ ಇಲ್ಲೆ. ಸರ್ವಕಾಲಕ್ಕೂ ಅವಿಕಾರವಾಗಿ ಉಳಿವ ಆತ್ಮವ ಪರಮಾತ್ಮಂಗೆ ಹೋಲಿಸಿದರೆ, ಅತ್ಮ ಅಣುಮಾತ್ರ. ಆದ್ದರಿಂದ ಬದಲಾವಣೆ ಆಗದ್ದ ಆತ್ಮವ ಪರಮಾತ್ಮಂಗೆ ಹೋಲುಸಿದರೆ ಎಂದೆಂದಿಂಗೂ ದೇವೋತ್ತಮ ಪರಮ ಪುರುಷನ ಸಮಾನ ಅಪ್ಪಲೆಡಿಯ.

ಶ್ಲೋಕ

ಅಥ ಚೈನಂ ನಿತ್ಯಜಾತಂ ನಿತ್ಯಂ ವಾ ಮನ್ಯಸೇ ಮೃತಮ್ ।
ತಥಾಪಿ ತ್ವಂ ಮಹಾಬಾಹೋ ನೈನಂ ಶೋಚಿತುಮರ್ಹಸಿ ॥೨೬॥

ಪದವಿಭಾಗ

ಅಥ ಚ ನಿತ್ಯ-ಜಾತಮ್ ನಿತ್ಯಮ್ ವಾ ಮನ್ಯಸೇ ಮೃತಮ್ । ತದಾ ಅಪಿ ತ್ವಮ್ ಮಹಾ-ಬಾಹೋ ನ ಏನಮ್ ಶೋಚಿತುಮ್ ಅರ್ಹಸಿ ॥

ಅನ್ವಯ

ಅಥ ಚ ಏನಂ ನಿತ್ಯ-ಜಾತಮ್, ನಿತ್ಯಂ ವಾ ಮೃತಂ ಮನ್ಯಸೇ । ತಥಾ ಅಪಿ, ಹೇ ಮಹಾ-ಬಾಹೋ!, ತ್ವಮ್ ಏನಂ ಶೋಚಿತುಂ ನ ಅರ್ಹಸಿ ।

ಪ್ರತಿಪದಾರ್ಥ

ಅಥ ಚ – ಹಾಂಗೇ,  ಏನಮ್ – ಈ ಆತ್ಮವ, ನಿತ್ಯ-ಜಾತಮ್ – ಸದಾಹುಟ್ಟಿಪ್ಪ, ನಿತ್ಯಮ್- ನಿತ್ಯವೂ (ಸದಾ), ವಾ – ಅಥವಾ, ಮೃತಮ್ – ಸತ್ತ° ಹೇದು, ಮನ್ಯಸೇ – ಭಾವುಸುವೆ, ತಥಾ ಅಪಿ – ಹಾಂಗೆ ಆದರೂ, ಹೇ ಮಹಾ-ಬಾಹೋ – ಏ ಮಹಾಬಾಹುವೇ!, ತ್ವಮ್ – ನೀನು, ಏನಮ್ – ಈ ಆತ್ಮನ ವಿಚಾರಲ್ಲಿ, ಶೋಚಿತುಮ್ – ದುಃಖಿಸುತ್ತಕ್ಕೆ, ನ ಅರ್ಹಸಿ – ಎಂದಿಂಗೂ ಅರ್ಹನಾಗಿಲ್ಲೆ.

ಅನ್ವಯಾರ್ಥ

ಆತ್ಮವು ಯಾವತ್ತೂ ಹುಟ್ಟುತ್ತಿಪ್ಪದೇದೂ, ಯಾವತ್ತೂ ಸಾಯುವಂತದ್ದಾಗಿಯೂ ನೀನು ಭಾವಿಸಿದ್ದರೂ, ಏ ಮಹಾಬಾಹು ಅರ್ಜುನ!, ನೀನು ಶೋಕಿಸೆಕ್ಕಾದ್ದಿಲ್ಲೆ.

ತಾತ್ಪರ್ಯ / ವಿವರಣೆ

ಲೋಕದ ದೃಷ್ಟಿಲಿ ನೋಡಿರೆ, ವಿಚಾರ ಮಾಡಿರೆ, ಆತ್ಮ ದೇಹದ ಮೂಲಕ ವ್ಯಕ್ತ ಅಪ್ಪದು, ಸಾವಿನ ಮೂಲಕ ಅವ್ಯಕ್ತ ಅಪ್ಪದು. ಹುಟ್ಟು-ಸಾವಿನ ಮೀರಿ ನಿಂಬಲೆ ಎಂದಿಂಗೂ ಸಾಧ್ಯವಿಲ್ಲೆ. ಹಾಂಗಾಗಿ ಸಾವಿನ ಬಗ್ಗೆ ನೀ ಚಿಂತೆಸುಕ್ಕಾದ್ದಿಲ್ಲೆ. ಮಹಾಬಲಿಷ್ಠನಾದ ನೀನು ಹಿಂದೆ ಅದೆಷ್ಟೋ ಯುದ್ಧಂಗಳ ಮಾಡಿದ್ದೆ. ಆಗ ಬಾರದ್ದ ಇಲ್ಲದ್ದ ಚಿಂತೆ ಈಗ ಎಂತಕೆ? ನೀನು ಮಾಡುತ್ತ ಇಪ್ಪದು ನಿನ್ನ ಕರ್ತವ್ಯವನ್ನೇ ಹೊರತು  ಬೇರೆಂತದೂ ಅಲ್ಲ.

ಶ್ಲೋಕ

ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ ।
ತಸ್ಮಾದಪರಿಹಾರ್ಯೇsರ್ಥೇ ನ ತ್ವಂ ಶೋಚಿತುಮರ್ಹಸಿ ॥೨೭॥

ಪದವಿಭಾಗ

ಜಾತಸ್ಯ ಹಿ ಧ್ರುವಃ ಮೃತ್ಯುಃ ಧ್ರುವಮ್ ಜನ್ಮ ಮೃತಸ್ಯ ಚ । ತಸ್ಮಾತ್ ಅಪರಿಹಾರ್ಯೇ ಅರ್ಥೇ ನ ತ್ವಮ್ ಶೋಚಿತುಮ್ ಅರ್ಹಸಿ ॥

ಅನ್ವಯ

ಜಾತಸ್ಯ ಮೃತ್ಯುಃ ಧ್ರುವಃ , ಮೃತಸ್ಯ ಚ ಜನ್ಮಂ ಧ್ರುವಂ ಹಿ। ತಸ್ಮಾತ್ ಅಪರಿಹಾರ್ಯೇ ಅರ್ಥೇ ತ್ವಂ ಶೋಚಿತುಂ ನ ಅರ್ಹಸಿ ।

ಪ್ರತಿಪದಾರ್ಥ

ಜಾತಸ್ಯ – ಹುಟ್ಟಿದವನ, ಮೃತ್ಯುಃ – ಸಾವು,  ಧ್ರುವಃ – ನಿಶ್ಚಿತ, ಮೃತಸ್ಯ – ಸತ್ತವನ, ಚ – ಕೂಡ, ಜನ್ಮಮ್- ಜನನ, ಧ್ರುವಮ್ – ನಿಶ್ಚಿತವೇ,  ಹಿ – ಖಂಡಿತವಾಗಿಯೂ, ತಸ್ಮಾತ್ – ಹಾಂಗಾಗಿ, ಅಪರಿಹಾರ್ಯೇ ಅರ್ಥೇ – ತಪ್ಪುಸಲೆ ಸಾಧ್ಯ ಇಲ್ಲದ್ದ ವಿಚಾರಕ್ಕಾಗಿ (ಕಾರಣಕ್ಕಾಗಿ),  ತ್ವಮ್  – ನೀನು, ಶೋಚಿತುಮ್ – ದುಃಖುಸಲೆ, ನ ಅರ್ಹಸಿ – ಅರ್ಹನಾಗಿಲ್ಲೆ.

ಅನ್ವಯಾರ್ಥ

ಹುಟ್ಟಿದವ° ಸಾಯಲೇಬೇಕು. ಸತ್ತವ° ಖಂಡಿತವಾಗಿಯೂ ಮತ್ತೆ ಹುಟ್ಟುತ್ತ°. ಹಾಂಗಾಗಿ ತಪ್ಪುಸಲೆ ಸಾಧ್ಯ ಇಲ್ಲದ್ದ ವಿಚಾರಕ್ಕಾಗಿ (ಕಾರಣಕ್ಕಾಗಿ) (ಅನಿವಾರ್ಯವಾದ ನಿನ್ನ ಕರ್ತವ್ಯಪಾಲನೆ ಮಾಡುವದಕ್ಕೆ ವಿಮುಖನಾಗಿ) ಚಿಂತಿಸೆಕ್ಕಾದ್ದಿಲ್ಲೆ.

ತಾತ್ಪರ್ಯ / ವಿವರಣೆ

ತನ್ನ ಬದುಕಿನ ಕರ್ಮಂಗೊಕ್ಕೆ ಅನುಗುಣವಾಗಿ ಆರೇ ಆಗಲಿ ಹುಟ್ಟಲೇಬೇಕು. ಕರ್ಮಂಗಳ ಅವಧಿ ಮುಗುದ ಮತ್ತೆ ಅವ° ಮತ್ತೆ ಹುಟ್ಟ್ಳೆ- ಸಾಯಲೇ ಬೇಕು. ಹೀಂಗೆ ಮನುಷ್ಯ° ಮುಕ್ತಿಯಿಲ್ಲದ್ದೆ ಹುಟ್ಟು-ಸಾವುಗಳ ಒಂದು ಚಕ್ರದ ಮತ್ತೆ ಮತ್ತೊಂದು ಚಕ್ರಲ್ಲಿ ಸಾಗುತ್ತ°. ಆದರೆ, ಹುಟ್ಟು ಸಾವುಗಳ ಈ ಚಕ್ರ ಅನಗತ್ಯ ಕೊಲೆ ಮತ್ತೆ ವಿನಾಶ, ಯುದ್ಧಂಗಳ ಸಮರ್ಥಿಸುತ್ತಿಲ್ಲೆ. ಆದರೆ, ಮಾನವ ಸಮಾಜಲ್ಲಿ ನಿಯಮ ಮತ್ತು ವ್ಯವಸ್ಥೆಯ ರಕ್ಷಿಸುಲೆ ಹಿಂಸೆ ಮತ್ತು ಯುದ್ಧ ಕೆಲವೊಂದರಿ ಅನಿವಾರ್ಯ.

ಕುರುಕ್ಷೇತ್ರ ಸಮರ ದೇವೋತ್ತಮ ಪರಮ ಪುರುಷನ ಸಂಕಲ್ಪ. ಹಾಂಗಾಗಿ ಅದು ಅನಿವಾರ್ಯ. ಧರ್ಮಕ್ಕಾಗಿ ಕ್ಷತ್ರಿಯ ಹೋರಾಡೆಕ್ಕಾದ್ದು ಕ್ಷತ್ರಿಯನ ಕರ್ತವ್ಯ. ಅರ್ಜುನ ತನ್ನ ನ್ಯಾಯವಾದ ಕರ್ತವ್ಯವನ್ನಷ್ಟೇ ಮಾಡೆಕ್ಕಪ್ಪದ್ದರಿಂದ ತನ್ನ ಬಂಧುಗಳ ಸಾವಿಂಗೆ ಬೇಕಾಗಿ ಹೆದರೆಕ್ಕಾದ್ದಿಲ್ಲೆ, ದುಃಖಿಸೆಕ್ಕಾದ್ದಿಲ್ಲೆ. ತನ್ನ ನ್ಯಾಯವಾದ ಕರ್ತ್ಯವ್ಯವ ಮಾಡ್ಳೆ ಹೆದರಿ ಹಿಂದೆ ಉಳುದರೂ ತನ್ನ ಬಂಧುಗಳ ಸಾವಿನ ತಡವಲೆ ಅವನಿಂದ ಎಡಿಯ. ಅದು ಪರಮಾತ್ಮನ ಸಂಕಲ್ಪ.

ಶ್ಲೋಕ

ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ ಭಾರತ ।
ಅವ್ಯಕ್ತನಿಧನಾನ್ಯೇವ ತತ್ರ ಕಾ ಪರಿದೇವನಾ ॥೨೮॥

ಪದವಿಭಾಗ

ಅವ್ಯಕ್ತ-ಆದೀನಿ ಭೂತಾನಿ ವ್ಯಕ್ತ-ಮಧ್ಯಾನಿ ಭಾರತ । ಅವ್ಯಕ್ತ-ನಿಧನಾನಿ ಏವ ತತ್ರ ಕಾ ಪರಿದೇವನಾ ॥

ಅನ್ವಯ

ಹೇ ಭಾರತ!, ಭೂತಾನಿ ಅವ್ಯಕ್ತ-ಆದೀನಿ ವ್ಯಕ್ತ-ಮಧ್ಯಾನಿ ಅವ್ಯಕ್ತ-ನಿಧನಾನಿ ಏವ। ತತ್ರ ಪರಿದೇವನಾ ಕಾ ?

ಪ್ರತಿಪದಾರ್ಥ

ಹೇ ಭಾರತ! – ಏ ಭರತ ಕುಲದವನೇ!, ಭೂತಾನಿ – ಸೃಷ್ತಿಯಾದ ಎಲ್ಲವೂ, ಅವ್ಯಕ್ತ-ಆದೀನಿ – ಸುರೂವಿಲ್ಲಿ ಅವ್ಯಕ್ತವಾಗಿಪ್ಪ,  ವ್ಯಕ್ತ-ಮಧ್ಯಾನಿ – ಮಧ್ಯಲ್ಲಿ ವ್ಯಕ್ತವಾದ, ಅವ್ಯಕ್ತ-ನಿಧನಾನಿ – ನಾಶವಾದಪ್ಪಗ ವ್ಯಕ್ತವಾಗದ್ದು, ಏವ – ಖಂಡಿತವಾಗಿಯೂ,  ತತ್ರ – ಅಲ್ಲಿ (ಅದರ್ಲಿ), ಪರಿದೇವನಾ – ಶೋಕ, ಕಾ – ಎಂತರ?

ಅನ್ವಯಾರ್ಥ

ಸೃಷ್ಟಿಯಾದ ಎಲ್ಲ ಜೀವಿಗೊ ಮದಾಲು ಕಾಣುತ್ತಿಲ್ಲೆ. ಮಧ್ಯೆ ಕೆಲಕಾಲ ಕಾಣಿಸಿಗೊಳ್ಳುತ್ತು. ಮತ್ತೆ ನಾಶವಾದ ಮೇಲೆ ಕಾಣುತ್ತಿಲ್ಲೆ. ಹೀಂಗಿಪ್ಪಗ ಅಲ್ಲಿ (ಅದರ್ಲಿ/ಆ ವಿಷಯಲ್ಲಿ) ಶೋಕಿಸೆಕ್ಕಾದ ಕಾರಣ ಎಂತರ?

ತಾತ್ಪರ್ಯ / ವಿವರಣೆ

ಒಬ್ಬ° ವ್ಯಕ್ತಿ ನಮಗೆ ಸಂಬಂಧಿ ಅಪ್ಪದು ಅವ° ಹುಟ್ಟಿದ ಮತ್ತೆಯೇ.  ಆದರೆ, ಹುಟ್ಟಿನ ಮದಲು ಅವ° ಎಂತಾಗಿತ್ತಿದ್ದ°, ಎಲ್ಲಿತ್ತಿದ್ದ? ಅಲ್ಲ ಸತ್ತ ಮತ್ತೆ ಎಲ್ಲಿ ಹೋವ್ತ°?. ಈ ಹುಟ್ಟು-ಸಾವಿನ ಹಿಂದೆ ಮತ್ತು ಮುಂದೆ ನವಗೂ  ಆ ಜೀವಕ್ಕೂ ಏನೂ ಸಂಬಂಧ ಇಲ್ಲೆ. ಈ ಸಂಬಂಧ ಜೀವದ ನಿರಂತರ ಬದುಕಿನ ಸರಳ ರೇಖೆಲಿಪ್ಪ ಒಂದು ಬಿಂದು. ಅದು ಮಾತ್ರ ನವಗೆ ವ್ಯಕ್ತ. ಉಳುದ್ದದು ಅವ್ಯಕ್ತ. ಹಾಂಗಾಗಿ ಸರಳ ರೇಖೆಯ ಒಂದು ಬಿಂದುವಿಲ್ಲಿ ನಿಂದು ದುಃಖಿಸಿಗೊಂಬದು ಸರಿಯಲ್ಲ. ಹಾಂಗೇದು ನಾವು ಬದುಕ್ಕಿಪ್ಪಗ ಒಬ್ಬರನ್ನೊಬ್ಬ ಪ್ರೀತಿಸಲೆ ಆಗ ಹೇದು ಅಲ್ಲ. ಇದ್ದಿಪ್ಪಗ ಪ್ರೀತಿಸು. ಆದರೆ, ಇಲ್ಲದಪ್ಪಗ ಭಗವಂತ° ಕರಕ್ಕೊಂಡ° ಹೇದು ಮನಸ್ಸಿಂಗೆ ನಿಶ್ಚಿಂತತೆಯ ತರಭೇತಿ ಕೊಡು ಹೇದು ಕೃಷ್ಣನ ಆದೇಶ ಹೇದು ಬನ್ನಂಜೆ ಇದರ ವ್ಯಾಖ್ಯಾನಿಸಿದ್ದವು.

ಶ್ಲೋಕ

ಆಶ್ಚರ್ಯವತ್ ಪಶ್ಯತಿ ಕಶ್ಚಿದೇನಮ್ ಆಶ್ಚರ್ಯವದ್ ವದತಿ ತಥೈವ ಚಾನ್ಯಃ ।
ಆಶ್ಚರ್ಯವಚ್ಚೈನಮನ್ಯಃ ಶೃಣೋತಿ ಶ್ರುತ್ವಾಪ್ಯೇನಂ ವೇದ ನ ಚೈವ ಕಶ್ಚಿತ್ ॥೨೯॥

ಪದವಿಭಾಗ

ಆಶ್ಚರ್ಯವತ್ ಪಶ್ಯತಿ ಕಶ್ಚಿತ್ ಏನಮ್ ಆಶ್ಚಯವತ್ ವದತಿ ತಥಾ ಏವ ಚ ಅನ್ಯಃ । ಆಶ್ಚರ್ಯವತ್ ಚ ಏನಮ್ ಅನ್ಯಃ ಶೃಣೋತಿ ಅಪಿ ಏನಮ್ ವೇದ ನ ಚ ಏವ ಕಶ್ಚಿತ್ ॥

ಅನ್ವಯ

ಕಶ್ಚಿತ್ ಏನಮ್ ಆಶ್ಚರ್ಯವತ್ ಪಶ್ಯತಿ, ತಥಾ ಏವ ಚ ಅನ್ಯಃ  ಏನಮ್ ಆಶ್ಚರ್ಯವತ್ ವದತಿ, ಅನ್ಯಃ ಚ ಏನಮ್ ಆಶ್ಚರ್ಯವತ್ ಶೃಣೋತಿ । ಶೃತ್ವಾ ಅಪಿ ಚ ಕಶ್ಚಿತ್ ಏವ ನ ವೇದ ।

ಪ್ರತಿಪದಾರ್ಥ

ಕಶ್ಚಿತ್ – ಆರೋ ಒಬ್ಬ°, ಏನಮ್ – ಈ ಆತ್ಮವ, ಆಶ್ಚರ್ಯವತ್ – ಆಶ್ಚರ್ಯ ಎಂಬ ಹಾಂಗೆ, ಪಶ್ಯತಿ – ನೋಡುತ್ತ°, ತಥಾ – ಹಾಂಗೆಯೇ, ಏವ – ಖಂಡಿತವಾಗಿಯೂ ಚ – ಕೂಡ,  ಏನಮ್ – ಈ ಆತ್ಮವ, ಅನ್ಯಃ – ಇನ್ನೊಬ್ಬ°, ಆಶ್ಚರ್ಯವತ್ – ಆಶ್ಚರ್ಯ ಎಂಬ ಹಾಂಗೆ, ವದತಿ – ಹೇಳುತ್ತ°, ಅನ್ಯಃ – ಇನ್ನೊಬ್ಬ°, ಚ – ಕೂಡ, ಏನಮ್ – ಈ ಆತ್ಮವ, ಆಶ್ಚರ್ಯವತ್ – ಆಶ್ಚರ್ಯ ಎಂಬ ಹಾಂಗೆ, ಶೃಣೋತಿ – ಕೇಳುತ್ತ°, ಶ್ರುತ್ವಾ – ಕೇಳಿಕ್ಕಿ,  ಚ – ಕೂಡ,  ಕಶ್ಚಿತ್  ಅಪಿ- ಆರಾರೊಬ್ಬನೂ ಕೂಡ, ಏವ – ಖಂಡಿತವಾಗಿಯೂ, ನ ವೇದ – (ಸರಿಯಾಗಿ) ತಿಳಿತ್ತನಿಲ್ಲೆ

ಅನ್ವಯಾರ್ಥ

ಕೆಲವೊಬ್ಬ° ಆತ್ಮವ ಆಶ್ಚರ್ಯಂದ ಕಾಣುತ್ತ°, ಕೆಲವೊಬ್ಬ° ಆತ್ಮವ ಆಶ್ಚರ್ಯಕರ ಹೇದು ವರ್ಣುಸುತ್ತ°, ಮತ್ತೆ ಕೆಲವೊಬ್ಬ° ಆಶ್ಚರ್ಯಕರ ಹೇಳಿ ಹೇಳುವುದರ ಕೇಳುತ್ತ°, ಇನ್ನು ಕೆಲವರಾದರೋ ಅವನ ವಿಷಯ ಕೇಟರೂ ಒಂದಿಷ್ಟೂ ಅರ್ಥಮಾಡಿಗೊಳ್ತವಿಲ್ಲೆ.

ತಾತ್ಪರ್ಯ / ವಿವರಣೆ

ಇದು ಜೀವ ಮತ್ತು ಭಗವಂತನ ಬಗ್ಗೆ ಇಪ್ಪ ವಿಚಾರ. ಭಗವಂತನ ಕಂಡವು ವಿರಳ. ಒಂದುವೇಳೆ ಬಹಳ ಸಾಧನೆಂದ ಅವನ ಕಂಡುಗೊಂಡರೆ, ಕಂಡವರ ಉದ್ಗಾರ ಕೇವಲ ಅಚ್ಚರಿ!. ಅದೊಂದು ವಿಸ್ಮಯ!, ಈ ವಿಶ್ವವೇ ಒಂದು ಅದ್ಭುತ!, ಹಾಂಗಿಪ್ಪಗ, ಈ ವಿಶ್ವವ ನಿರ್ಮಿಸಿದ ಆ ಭಗವಂತ° ಅದೆಷ್ಟು ಅದ್ಭುತವಾಗಿರೆಡ!. ಹಾಂಗಾಗಿ ಅವನ ಕಂಡವಂಗೆ ಅವನ ವರ್ಣುಸುಲೆ ಅಸಾಧ್ಯ. ಒಂದುವೇಳೆ ವರ್ಣಿಸಿರೆ ಕೇಳುವವಂಗೆ ಅಚ್ಚರಿ!. ಆರು ಎಷ್ಟೇ ಕೇಳಿರೂ ಹೇಳಿರೂ ಅಕೇರಿಗೆ ಭಗವಂತ° ಅಚ್ಚರಿಯಾಗಿಯೇ ಉಳಿತ್ತ°. ಎಂತಕೆ ಹೇದರೆ ಭಗವಂತನ ತಿಳ್ಕೊಂಬದು ಸುಲಭ ಅಲ್ಲ. ಇದೇ ರೀತಿ ಜೀವ., ಆತ್ಮಸಾಕ್ಷಾತ್ಕಾರ ಆದಪ್ಪಗ ಅಪ್ಪದು ಕೇವಲ ವಿಸ್ಮಯ. ಅದರ ವರ್ಣಿಸುವುದು ಅಸಾಧ್ಯ. ಜೀವ ಒಂದು ಬೆಣಚ್ಚಿನ ಪುಂಜ. ಅದೊಂದು ಮಹಾನ್ ಅಚ್ಚರಿ. ಅದು ಸೂರ್ಯಂದಲೂ ಪ್ರಖರ, ಚಂದ್ರನಿಂದಲೂ ತಂಪು. ಜೀವ ತತ್ವದ ಬಗ್ಗೆ ಖಚಿತವಾದ ತೀರ್ಮಾನಕ್ಕೆ ಬಪ್ಪದು ಅಸಾಧ್ಯ.

ಶ್ಲೋಕ

ದೇಹೀ ನಿತ್ಯಮವಧ್ಯೋsಯಂ ದೇಹೇ ಸರ್ವಸ್ಯ ಭಾರತ ।
ತಸ್ಮಾತ್ ಸರ್ವಾಣಿ ಭೂತಾನಿ ನ ತ್ವಂ ಶೋಚಿತುಮರ್ಹಸಿ ॥೩೦॥

ಪದವಿಭಾಗ

ದೇಹೀ ನಿತ್ಯಮ್ ಅವಧ್ಯಃ ಅಯಮ್ ದೇಹೇ ಸರ್ವಸ್ಯ ಭಾರತ । ತಸ್ಮಾತ್ ಸರ್ವಾಣಿ ಭೂತಾನಿ ನ ತ್ವಮ್ ಶೋಚಿತುಮ್ ಅರ್ಹಸಿ ॥

ಅನ್ವಯ

ಹೇ ಭಾರತ!, ಸರ್ವಸ್ಯ ದೇಹೇ ಅಯಂ ದೇಹೀ ನಿತ್ಯಮ್ ಅವಧ್ಯಃ, ತಸ್ಮಾತ್ ತ್ವಂ ಸರ್ವಾಣಿ ಭೂತಾನಿ ಶೋಚಿತುಂ ನ ಅರ್ಹಸಿ ।

ಪ್ರತಿಪದಾರ್ಥ

ಹೇ ಭಾರತ! – ಏ ಭರತವಂಶ ಸಂಜಾತನೇ!, ಸರ್ವಸ್ಯ – ಪ್ರತಿಯೊಬ್ಬನ (ಎಲ್ಲೋರ), ದೇಹೇ – ಶರೀರಲ್ಲಿ , ಅಯಮ್ – ಈ ಆತ್ಮವ, ದೇಹೀ – ಭೌತಿಕ ಶರೀರದ ಒಡೆಯ°,  ನಿತ್ಯಮ್ – ಶಾಶ್ವತವಾಗಿ, ಅವಧ್ಯಃ – ಕೊಲ್ಲಲ್ಪಡ°,  ತಸ್ಮಾತ್ – ಹಾಂಗಾಗಿ, ಸರ್ವಾಣಿ – ಎಲ್ಲ , ಭೂತಾನಿ – (ಹುಟ್ಟಿದ) ಜೀವಿಗಳ ಕುರಿತು , ಶೋಚಿತುಮ್ – ದುಃಖಿಸಲೆ, ನ ಅರ್ಹಸಿ – ನೀನು ಅರ್ಹನಾಗಿಲ್ಲೆ.

ಅನ್ವಯಾರ್ಥ

ಹೇ ಭರತವಂಶಜನಾದ ಅರ್ಜುನ!, ಪ್ರತಿಯೊಬ್ಬನ ದೇಹಲ್ಲಿ ವಾಸಿಸುವ ಇವನ (ಆತ್ಮವ) ಕೊಲ್ಲುಲೆ ಯಾವ ದೇಹೀಯೂ ಎಂದೂ ಸಾಧ್ಯ ಇಲ್ಲೆ. ಹಾಂಗಾಗಿ ನೀನು ಯಾವ ಜೀವಿಗಾಗಿಯೂ ದುಃಖಿಸೆಕ್ಕಾದ ಕಾರಣವಿಲ್ಲೆ.

ತಾತ್ಪರ್ಯ / ವಿವರಣೆ

ಮೂಲಭೂತವಾಗಿ ಆರೊಬ್ಬನ ದೇಹಲ್ಲಿಪ್ಪ ಜೀವವನ್ನೂ ಸಾಯಿಸುಲೆ ಸಾಧ್ಯ ಇಲ್ಲೆ. ದೇಹ ಸಾಯೆಕು ಹೇಳ್ವದು ವಿಧಿ ನಿಯಮ. ಅದಕ್ಕೆ ಆರೂ ದುಃಖ ಪಡೆಕ್ಕಾದ್ದಿಲ್ಲೆ. ತನ್ನ ಸ್ವ-ಇಚ್ಛೆಂದ ದೇಹ ತ್ಯಜಿಸಲೂ ಸಾಧ್ಯವಿಲ್ಲೆ. ‘ಅಯಮ್ ದೇಹೇ ಸರ್ವಸ್ಯ’ – ರಕ್ಷಣೆ ಮಾಡುವ ಭಗವಂತನೇ ಒಳ ಕೂದೊಂಡಿಪ್ಪಗ ಹುಟ್ಟು ಸಾವಿಂಗೆ ನೀನು ಹೊಣೆಯಾಗೆ. ಭರತವಂಶಲ್ಲಿ ಹುಟ್ಟಿಬಂದ ನೀನು ಈ ಸತ್ಯವ ತಿಳುಕ್ಕೊ.

ಮುಂದೆ ಎಂತಾತು .. , ಬಪ್ಪ ವಾರ ನೋಡುವೋ°

http://snd.sc/w0dtP9 SHLOKAS 21 -30 by CHENNAI BHAAVA

….. ಮುಂದುವರಿತ್ತು.

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

57 thoughts on “ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 21 – 30

  1. ಆತ್ಮ ಒಂದು ದೇಹವ ಬಿಟ್ಟು ಇನ್ನೊಂದಕ್ಕೆ ಅದರ ಬಿಟ್ಟು ಮತ್ತೊಂದಕ್ಕೆ ಹೋಪಗ, ಹಿಂದಾಣ ದೇಹದ ಮತ್ತೆ ಅದರ ನೆಂಪು ಎಂತ ಇರದ್ದದು?
    ಆತ್ಮ ದೇಹ ಬದಲುಸುವಾಗ, ಮನಸ್ಸು – ಬುದ್ಧಿ – ಚಿತ್ತ ಆತ್ಮದೊಟ್ಟಿಂಗೆ ಹೋವುತ್ತಿಲ್ಲೆಯೋ?
    ಹೊಸ ಹೊಸ ದೇಹಕ್ಕೆ ಹೊಸ ಹೊಸ ಮನಸ್ಸು ಮತ್ತು ಬುದ್ಧಿಗಳೋ?
    ಈ ಚಿತ್ತ ಹೇಳುದು, ಹಳತ್ತರ ಎಲ್ಲ store ಮಾಡಿಮಡಗುತ್ತಿಲ್ಲೆಯೋ?

    1. ಮಂಗ್ಳೂರು ಭಾವನ ಸಂಶಯಂಗೊ ಸಹಜವಾದ್ದೇ. ಮುಂದಾಣ ಭಾಗಲ್ಲಿ ಮತ್ತು ಅಧ್ಯಾಯಲ್ಲಿ ಇದಕ್ಕೆ ಉತ್ತರ ಸಿಕ್ಕುತ್ತು. ನಿಂಗೊ ನಾಲ್ಕನೇ ಅಧ್ಯಾಯದವರೇಂಗೆ ಈಗಾಗಲೇ ಓದಿಯಾಗಿದ್ರೆ ಸಂಶಯ ಪರಿಹಾರ ಆದಿಕ್ಕು ಹೇಳಿ ಗ್ರೇಶುತ್ತೆ. ಭಗವದ್ಗೀತೆಲಿ ಒಂದಿಕ್ಕೆ ಒಂದು ಸಂಶಯ ಬಂದರೆ ಅದಕ್ಕೆ ಉತ್ತರ ರೂಪವಾಗಿ ಮತ್ತಾಣ ಭಾಗಲ್ಲಿ ಭಗವಂತ° ವಿವರಿಸಿದ್ದ. ಹಾಂಗಾಗಿ ಪೂರ್ತಿ ಆಗದ್ದೇ ಅಲ್ಲಲ್ಲಿಯೇ ಜಿಜ್ಞಾಸೆಗೊಕ್ಕೆ ಉತ್ತರ ಬರವಲೆ ಹೆರಟಿದ್ದಿಲ್ಲೆ. ಆನುದೇ ಈಗಷ್ಟೇ ಭಗವದ್ಗೀತೆಯ ಆಯಾ ವಾರದ್ದರ ಓದಿ ಅರ್ಥಮಾಡಿಗೊಂಡು ಎನಗೆ ಅರ್ಥ ಆದ ರೀತಿಲಿ ನಿಂಗಳೊಟ್ಟಿಂಗೆ ಹಂಚಿಗೊಳ್ಳುತ್ತ ಇಪ್ಪದು. ಆನು ಇಲ್ಲಿ ಬರೆತ್ತಾ ಇಪ್ಪದರಲ್ಲಿ ವ್ಯತ್ಯಾಸವೋ ತಪ್ಪುಗಳೊ ಇದ್ದರೆ ತಿದ್ದಿಕೊಡೆಕು ಹೇಳಿಯೂ ಪ್ರಾರ್ಥನೆ.

  2. ಚಿತ್ತ ವೃತ್ತಿ
    ಈ ವಿಷಯ ಬರವಲೆ ಬಾಕಿ ಇದ್ದು | ಮನುಷ್ಯನ ಊರ್ಧ್ವ ಮುಖವಾಗಿ ಮಾಡಿ ಜ್ಞಾನ ದ ಬಾಗಿಲಿಂಗೆ ಕರಕೊಂಡು ಹೊಪದುದೆ ಚಿತ್ತ ವೃತ್ತಿ ಯೇ | ಚಿತ್ತವೃತ್ತಿ ಲಿ ಯೂ ಮೂರು ವಿಧ – ೧. ಸಾತ್ವಿಕ ೨. ರಾಜೆಸಿಕ ೩. ತಾಮಸಿಕ | – ಮತ್ತೆ ಮುಂದೆ ಬರೆತ್ತೆ ||
    ಜಯಶ್ರೀ ಅಕ್ಕ ಹೇಳಿದ – ಗೆಳತಿ ಯ ವಿಚಾರ ಯೋಚಿಸುತ್ತಾ ಇದ್ದೆ || ವಿಷಯಂಗೋ ಎಲ್ಲಾ ಗೊಂತಿಲ್ಲದ್ದೆ ಹೇಳುಲೇ ಕಷ್ಟ | ಒಂದು ಸಲಹೆ ಭಗವದ್ಗೀತೆ ಯ ಆರನೇ ಅಧ್ಯಾಯ ದ ಶ್ಲೋಕ ೫ ಮತ್ತು ೬ (೬-೫ ಮತ್ತು ೬-೬ )
    ಉದ್ಧರೆತ್ ಆತ್ಮನಾ —————– ಇದರ ಓದಿ ಅರ್ಥ ಮಾಡೆಕ್ಕು || ರಾಮಕೃಷ್ಣ ಆಶ್ರಮ ದ ಮತ್ತು ಚಿನ್ಮಯಾ ದ ವರ ವ್ಯಾಖ್ಯಾನ ಓದುಲಕ್ಕು||

    1. ಧನ್ಯವಾದ ಮಾವ… ಖಂಡಿತ ನಿಂಗ ಹೇಳಿದ ಶ್ಲೋಕಂಗಳ ಓದಿ ನೋಡುತ್ತೆ… ಈ ವಿಚಾರಂಗಳಲ್ಲಿ ಗೊಂತಿಪ್ಪ ವಿಷಯಂಗಳ ಹೇಳುದು ಎಷ್ಟು ಕಷ್ಟ ಹೇಳಿ ಎನಗೂ ಅನುಭವ ಇದ್ದು…

  3. ದೀಪ ತನ್ನ ಬೆಳಕಲ್ಲಿ ಆರೋಗ್ಯ ಕರ ತಿನಸನ್ನು ಕಾಣುಸುತ್ತು ಆರೋಗ್ಯಕ್ಕೆ ಹಾನಿ ಇಪ್ಪ “ಮದ್ಯ ಇತ್ಯಾದಿ” ಹಾನಿಕರ ವಸ್ತುಗಳನ್ನು ತೋರುಸುತ್ತು | ಅದಲ್ಲಿ ಯಾವುದರ ಸ್ವೀಕಾರ ಮಾಡೆಕ್ಕು ಹೇಳುವ ವಿಚಾರ ಆ ಬೆಳಕಿಲಿ ನೋಡುತ್ತಿಪ್ಪ ಮನುಷ್ಯನ ಮನಸಿನ ಭಾಗಗಳಾದ “ಬುದ್ಧಿ, ಅಹಂಕಾರ, ಚಿತ್ತ” ಇವುಗಳ ಅಂಕೆಲಿ ಇಪ್ಪದು | ಇವೆಲ್ಲವೂ ಮನಸಿನ ಭಾಗಂಗಳೇ — ಹೇಳಿದರೆ ಇವೆಲ್ಲಾ ಕೆಲಸ ಮಾಡುವುದು ಮನಸಿನ ಮೂಲಕ | ಇದಲ್ಲಿ, ಬುದ್ಧಿ = ಎಲ್ಲಾ ವಿಷಯಂಗಳ ಸರಿಯಾಗಿ ವಿವೇಚನೆ ಮಾಡಿ ಮಥಿಸಿ ನೋಡುವ ಶಕ್ತಿ | ಅಹಂಕಾರ = ಇದು ತಾನು ಎಂಬ “ಪ್ರಜ್ಞೆ” ಯ ಈ ದೇಹಕ್ಕೆ ಸೀಮಿತವಾಗಿ ಮಡುಗುವ ಶಕ್ತಿ, ಹೆಚ್ಚಾಗಿ ಯಾವದರ ಸ್ವೀಕರಿಸುದು ಹೇಳುವ ವಿಚಾರಲ್ಲಿ ಕೊನೆಯ ನಿಶ್ಚ ಯ ಇದರದ್ದೇ | ಚಿತ್ತ = ನಾವು ಅನುಭವಿಸಿದ “ಸಿಹಿ ಕಹಿ” ಗಳ ನೆನಪಿಲಿ ಮಡುಗುವ ಮನಸಿನ ಒಂದು ಭಾಗ | ಮತ್ತು ಆ ನೆನಪಿನ ಆಧಾರಲ್ಲಿ ಮುಂದಿನ ಕಾರ್ಯಂಗಳ ನಿಯಂತ್ರಣ ಮಾಡುದು ಇದುವೇ (ಈ ನೆನಪಿನ ಸುರುಲಿಗಳೇ) | ನಾವು ಯಾವುದೇ ಕೆಲಸ ಮಾಡುವಾಗ ಈ ಕೆಲಸಕ್ಕೆ ಸಂಬಂಧಿಸಿದ ಈ ನೆನಪುಗಳ “ಪುನರಾವರ್ತನೆ” ಯೇ ಚಿತ್ತ ವೃತ್ತಿ | ಇದುವೇ ನಮ್ಮ ಕೆಲಸದ ಮೇಲೆ ಪ್ರಭಾವ ಬೀರುವ ಪ್ರಧಾನ ಶಕ್ತಿ | ಉದಾ : ಸಣ್ಣ ಪ್ರಾಯಲ್ಲಿ ಒಂದರಿ ಬೆಂಕಿ ಹತ್ತರೆ ಕೈ ಸುಟ್ಟುಗೊಂಡರೆ — ಮತ್ತೆ ಮತ್ತೆ ಬೆಂಕಿ ನೋಡುವಾಗಲೇ ಅಪ್ಪ ಹೆದರಿಕೆ ” ಚಿತ್ತ ವೃತ್ತಿ” ಯ ಪ್ರಭಾವ | ಆದರೆ ಅದೇ ಬೆಂಕಿ ಯ ಕೈ ಸುಡದ್ದ ಹಾಂಗೆ ಹೇಂಗೆ ಉಪಯೋಗಿಸುಲೇ ಅಕ್ಕು — ಹೇಳಿ ಚಿಂತನೆ ಮಾಡುದು “ಬುದ್ಧಿ” | ಚಿತ್ತ ವೃತ್ತಿ ಯ ಹೆಚ್ಚಿನ ಅಧ್ಯಯನಕ್ಕೆ ” ಪತಂಜಲಿ ಯೋಗ ಸೂತ್ರ — ವ್ರುತ್ತಯಃ ಪಂಚತಯ್ಯಃ ಕ್ಲಿಷ್ಟಾಕ್ಲಿಷ್ಟ (ಕ್ಲಿಷ್ಟ + ಅಕ್ಲಿಷ್ಟ) ಇವುಗಳ ನೋಡಿ | ಚಿತ್ತವೃತ್ತಿ ಸಾಮಾನ್ಯ ಮನುಷ್ಯರಲ್ಲಿ ಹೆಚ್ಚಾಗಿ ಹೊರ ಪ್ರಪಂಚದ — ಸಿಹಿ ಅನುಭವಂಗಳ ಪೂರ್ವಾ ಪರ ಯೋಚನೆ ಇಲ್ಲದ್ದೆ ಪುನಃ ಪುನಃ ಅನುಭವಿಸುವ ಪ್ರಚೋದನೆ ಯ ಕೊಡುತ್ತು | ಬುದ್ಧಿ ಲಿ ಯೂ ಮುಖ್ಯ ವಾಗಿ 2 ವಿಧ –೧. ವ್ಯವಸಾಯಾತ್ಮಿಕಾ ಬುದ್ಧಿ = ದೈವೀ ತತ್ವ, ಕರ್ಮ ಯೋಗ ಇತ್ಯಾದಿ ಗಳಲ್ಲಿ ಇಪ್ಪಂತಹಾ ಏಕ ನಿಷ್ಠೆ ಯ ಬುದ್ಧಿ | ಇನ್ನೊಂದು “ಅವ್ಯವಸಾಯೀ” = “ಬಹು ಶಾಖಾ ಹಿ ಅನಂತಾಶ್ಚ ಚ — ಅಸ್ತಿರವಾದ ವಿವಿಧ ರೀತಿಗಳಲ್ಲಿ ಓಡುವ ಬುದ್ಧಿ ಭ.ಗೀ.೨-೪೧ | ಇದನ್ನೇ ಮುಂದೆ ಗೀತೆ ಲಿ ಹೇಳುದು “ಬುದ್ಧೌ ಶರಣ ಮನ್ವಿಚ್ಚ” – ಕೃಪ ಣಾಃ ಫಲ ಹೆತವಃ || ಭ.ಗೀ.೨-೪೯|| ಹೇಳಿದರೆ ಈ “ಫಲ ಮೂಲ” ದ ಆಧಾರಲ್ಲಿ ಕೆಲಸ ಮಾಡುವ ಚಿತ್ತ ವೃತ್ತಿ ಯ ಮೇಲೆ ಶರಣು ಹೋಗಿ ಕೃಪಣ ನಾಗಡ “ವ್ಯವಸಾಯಾತ್ಮಿಕವಾದ “ಏಕ ಬುಧ್ಧಿ” ಗೆ ಶರಣು ಹೋಗು ಈ ಬುದ್ಧಿ “ಆತ್ಮ ಶಕ್ತಿ” ಯ ಉಪಯೋಗಿಸಿ ಕೆಲಸ ಮಾದುತ್ತು | ಆದರೆ “ಆಚದು” ಫಲ ದ ಆಸೆಂದ “ಚಿತ್ತ ಶಕ್ತಿ” ಯ ಮೂಲಂದ ಕೆಲಸ ಮಾದುತ್ತು||
    ಪ್ರಶ್ನೆ ಇದ್ದರೆ ಸ್ವಾಗತ – ತಿಳಿದಷ್ಟು ಹೇಳುವ ಪ್ರಯತ್ನ ಆವುತ್ತು ||

    1. ಎನ್ನ ಗೆಳತಿ ಒಂದು ಯಾವಾಗಲೂ ಹೇಳುದು – ಅದಕ್ಕೆ ಯಾವುದೇ ಸಂದರ್ಭಲ್ಲಿ ಎಂತ ಮಾಡೆಕ್ಕಾದ್ದು ಹೇಳಿ ಆಂತರ್ಯಂದ ಅತ್ಯುತ್ತಮ ನಿರ್ಣಯ ತಕ್ಷಣ ಸಿಕ್ಕುತ್ತು ಅಡ. ಆದರೆ ಕರ್ಮೆಂದ್ರಿಯಂಗ ಅದಕ್ಕೆ ಸರಿಯಾಗಿ ಸಹಕಾರ ನೀಡುತ್ತವಿಲ್ಲೆ ಅಡ.

      ಮಾಡೆಕ್ಕು ಹೇಳಿ ಅನ್ನಿಸಿತ್ತು… ಮಾಡಿದ್ದಿಲ್ಲೇ! ಹೇಳೆಕ್ಕು ಹೇಳಿ ಅನ್ನಿಸಿತ್ತು… ಹೇಳಿದ್ದಿಲ್ಲೇ! ಹೊಯೇಕ್ಕು ಹೇಳಿ ಅನ್ನಿಸಿತ್ತು… ಹೊಯಿದಿಲ್ಲೇ! ಛೆ!!!ಹೇಳಿ ಯಾವಾಗಲೂ ಬೇಜಾರು ಮಾಡುತ್ತಾ ಇರುತ್ತು…

      ಇದು ಎಂತ ಸಮಸ್ಯೆಂದಾಗಿ ಹೀಂಗೆ ಅಪ್ಪದು ಆದಿಕ್ಕು ಮಾವ? ಅದಕ್ಕೆ ಎಂತಾರು ಪರಿಹಾರ ಇದ್ದಾ?

    2. ಈ‍ಐ ಮಾವಾ°,
      ಆತ್ಮ ಒಂದು ದೇಹವ ಬಿಟ್ಟು ಇನ್ನೊಂದಕ್ಕೆ ಅದರ ಬಿಟ್ಟು ಮತ್ತೊಂದಕ್ಕೆ ಹೋಪಗ, ಹಿಂದಾಣ ದೇಹದ ಮತ್ತೆ ಅದರ ನೆಂಪು ಎಂತ ಇರದ್ದದು?
      ಆತ್ಮ ದೇಹ ಬದಲುಸುವಾಗ, ಮನಸ್ಸು – ಬುದ್ಧಿ – ಚಿತ್ತ ಆತ್ಮದೊಟ್ಟಿಂಗೆ ಹೋವುತ್ತಿಲ್ಲೆಯೋ?
      ಹೊಸ ಹೊಸ ದೇಹಕ್ಕೆ ಹೊಸ ಹೊಸ ಮನಸ್ಸು ಮತ್ತು ಬುದ್ಧಿಗಳೋ?
      ಈ ಚಿತ್ತ ಹೇಳುದು, ಹಳತ್ತರ ಎಲ್ಲ store ಮಾಡಿಮಡಗುತ್ತಿಲ್ಲೆಯೋ?

      1. ಉತ್ತರ ಮುಂದಾಣ ಭಾಗಂಗಳಲ್ಲಿ (ಅಧ್ಯಾಯಂಗಳಲ್ಲಿ) ಬತ್ತು.

        ಭಗವದ್ಗೀತೆಯ ಸಂಪೂರ್ಣ ವಿಷಯ ಇಪ್ಪದು ಎರಡನೇ ಅಧ್ಯಾಯಲ್ಲಿ. ಭಗವಂತ ಅರ್ಜುನಂಗೆ ಅವ ವ್ಯಕ್ತಪಡಿಸಿದ ಎಲ್ಲ ಸಂಶಯಂಗೊಕ್ಕೆ ಈ ಅಧ್ಯಾಯಲ್ಲಿ ಸೂಕ್ಷ್ಮವಾಗಿ ಉತ್ತರಿಸಿದ್ದ°. ಅದರ ವಿಸ್ತರಣೆ ಮತ್ತು ವಿವರಂಗೊ ಮುಂದಾಣ ಅಧ್ಯಾಯಂಗಳಲ್ಲಿ ಕಾಂಬದು.

    3. ಆತ್ಮ “ಅವಿನಾಶಿ” ಹೇಳಿ ಆದರೆ “ಆತ್ಮಹತ್ಯೆ” ಹೇಳುವ ಪದ ಎ೦ತಕೆ ಬಳಕೆಲಿದ್ದು ? ಆತ್ಮಹತ್ಯೆ ಮಹಾಪಾಪ ಹೇಳುವುದು ಎ೦ತಕೆ?ಆತ್ಮಹತ್ಯೆ ಮಾಡಿಗೊ೦ಡ ಜೀವನ ಚೈತನ್ಯ (ಅ೦ಶ) ಪೂರ್ಣ (ವಿಶ್ವಚೈತನ್ಯ)ದೊಟ್ಟಿ೦ಗೆ ಲೀನ ಅವುತ್ತಿಲ್ಲೆಯೊ?

      1. ಆತ್ಮ ಅವಿನಾಶಿಯೇ. ಈ ವರೇಗೆ ಓದಿದ್ದರ್ಲಿ ಆ ಬಗ್ಗೆ ಸಂಶಯವೇ ಇಲ್ಲೆ. ಕರ್ಮಕ್ಕೂ ಆತ್ಮಕ್ಕೂ ಸಂಬಂಧ ಇಲ್ಲೆ ಹೇಳಿ ಮುಂದಾಣ ಭಾಗಲ್ಲಿ ಬತ್ತು. ‘ಆತ್ಮಹತ್ಯೆ’ ಎಂಬುದು ಪ್ರಾಪಂಚಿಕ ಪಾರಿಭಾಷಿಕ ಪದ (ಶಬ್ದ) ಅಷ್ಟೆ. ಹುಟ್ಟುಸುದು ಅವನೇ, ಸಾಯಿಸುವುದೂ ಅವನೇ. ದೈಹಿಕವಾಗಿ ಲೌಕಿಕ ಕಣ್ಣಿಂಗೆ ತನ್ನ ತಾನೇ ಸಾಯಿಸಿಗೊಂಬದು ಹೇಳಿ ಕಾಂಬದು. ಕರ್ಮವ ಮಾಡುವದು ಆರು, ಕರ್ಮವ ಮಾಡುಸುವದು ಆರು, ಮನುಷ್ಯರು ಕೆಲವರು ಒಳ್ಳೆ ಕಾರ್ಯವ ಮಾಡುವವು, ಕೆಲವರು ಕೆಟ್ಟ ಕಾರ್ಯವನ್ನೇ ಮಾಡುತ್ತವು – ಇದಕ್ಕೆ ಕಾರಣ ಎಂತ ಇತ್ಯಾದಿ ವಿಷಯಂಗೊ ಮುಂದಾಣ ಅಧ್ಯಾಯಂಗಳಲ್ಲಿ ಇದ್ದು. ಈಗಾಗಲೇ ಆ ಭಾಗಂಗೊ ಬೈಲಿಲ್ಲಿ ಬೈಂದು.

      2. ಆತ್ಮಹತ್ಯೆ ಹೇಳುವ ಪ್ರಯೋಗ ಸಾಧು ಅಲ್ಲ ಸ್ವಹತ್ಯೆ ಹೇಳುದು ಸರಿ ಹೇಳುವ ಅಭಿಪ್ರಾಯ ಹಲವರು ಮೊದಲು ಬೇರೆ ಕಡೆ ಬರೆದ್ದವು.
        ಆತ್ಮ ಅವಿನಾಶಿ ಹೇಳಿ ಆದ ಕಾರಣ ಆತ್ಮಹತ್ಯೆ ಸರಿ ಅಲ್ಲ-ಹೇಳಿ ಆ ವಾದ.
        ಕನ್ನಡ ವ್ಯಾಕರಣದ ಸಂದರ್ಭಲ್ಲಿ ನಾವು ಆತ್ಮಹತ್ಯೆ ಹೇಳುವ ಶಬ್ದವ ಅರ್ಥ ಮಾಡೆಕ್ಕು ಹೇಳಿ ಎನ್ನ ಮನವಿ.
        ಕನ್ನಡಲ್ಲಿ ನಾನು,ನಾವು ,ತಾನು[ಕುಮಾರವ್ಯಾಸ ಭಾರತಲ್ಲಿ ಈ ಪ್ರಯೋಗ ನೋಡಲಕ್ಕು]-ಇದರ ಆತ್ಮಾರ್ಥಕ ಸರ್ವನಾಮ ಹೇಳಿ ಹೇಳುತ್ತವು.ಇದರ ಅರ್ಥ ಸ್ವಯಂ ಅನ್ನೇ ಸೂಚಿಸುದು ಹೇಳಿ!ಇದಕ್ಕೆ ಆಧ್ಯಾತ್ಮಿಕ ಅರ್ಥ ಇಲ್ಲೆ. ಆತ್ಮಹತ್ಯೆಯನ್ನೂ ನಾವು ಇದೇ ರೀತಿ ಆಧ್ಯಾತ್ಮಿಕ ಅರ್ಥ ಮಾಡದ್ದರೆ,ಯಾವ ಗೊಂದಲ ಬತ್ತಿಲ್ಲೆ ಹೇಳಿ ಎನ್ನ ನಮ್ರ ಸೂಚನೆ.

        1. ಗೊಪಾಲಣ್ಣ೦ಗೂ, ಚೆನ್ನೈ ಭಾವ೦ಗೂ ಸ೦ಶಯ ನಿವಾರಿಸಿದ್ದಕ್ಕೆ ಧನ್ಯವಾದ೦ಗೊ

  4. ಕೆಲವು ದಿನ ಕಾರನಾನ್ತರಂದ ಬರವಲಾಯಿದಿಲ್ಲೇ.| ಇಂದು ನಾಳೆ ಬರೆತ್ತೆ |
    ಜಯಶ್ರೀ ಅಕ್ಕ ಬರದ “ಸಾಕ್ಷೀ ಭಾವ” (ಚಿತ್ತ ವೃತ್ತಿ ಯಿಂದಲೂ ಅತೀತ) | ಬಹಳ ಯೋಗ್ಯವಾದ ವಿವರಣೆ | ಆ ಸಾಕ್ಷೀ ಭಾವವೇ “ಆತ್ಮ ಶಕ್ತಿ” | ಇದೆ ಆತ್ಮ ಸಾಕ್ಷಿ — ಎಷ್ಟೋ ಜನ ತಪ್ಪು ಮಾಡುವಾಗ ಅವರ ಅಂತರಾಳಂದ “ಇದು ತಪ್ಪು” ಹೇಳಿ ಅಂತಃ ಪ್ರಜ್ಞೆ ಹೇಳುತ್ತು| ಅದು ಆತ್ಮ ಶಕ್ತಿ ಕೊಡುವ ಬೆಳಕು ಅಷ್ಟೇ (ಜಯಶೀ ಅಕ್ಕ ಹೇಳಿದ ಹಾಂಗೆ ಇದೊಂದು ಅಂತಃ ಕರಣಲ್ಲಿ ಜೀವನಾರ್ಭ್ಯ ಜೀವಿತಾಂತ ದ ವರೆಗೆ ಉರುದುಕೊಂಡು ಇಪ್ಪ “ದೀಪ”) | ಮುಂದೆ “ಭಾಗ್ಯ ಲಕ್ಷ್ಮೀ ಅಕ್ಕ” ಕೊಟ್ಟ ವಿವರಣೆ ಅಂತ್ಯಂತ ಪ್ರಶಸ್ತವಾಗಿದ್ದು | ಈ “ಚಿತ್ತ ವೃತ್ತಿ” ಆತ್ಮ ಪ್ರಜ್ಞೆಯ ಬೆಳಕಿನ ಕಂಡರೂ – ಅದರ ತನ್ನ ದೇ ಆದ “ಅಜ್ಞಾನ” ದ ಪರದೆಯಿಂದ ಮುಚ್ಚಿ – ಮುಂದೆ ಕಾರ್ಯ ಪ್ರವೃತ್ತಿ ಗೆ ಮೊದಲ ಮಜಲಾದ ಮನಸಿನ “ಮೋಹ” ಗೊಳಿಸುತ್ತು (ಅಜ್ಞಾನೇನ ಆವೃತಂ ಜ್ಞಾನಂ ತೆನ ಮುಹ್ಯಂತಿ ಜಂತವಃ (ಭ.ಗೀ ೫-೧೫ ) | ಇದುವೇ ಮನುಷ್ಯ ಅನುಭವಿಸುವ “ಭವ ಬಂದನ”| ಸಾಮಾನ್ಯ ಮನುಷ್ಯರಲ್ಲಿ “ಮನಸು ” ಎಲ್ಲಾ ವಿಷಯ ಪ್ರವೃತ್ತಿ ಗೆ “ಚಿತ್ತ ವೃತ್ತಿ” ಕೊಡುವ ಆಜ್ಞೆ ಯ ಪಾಲನೆ ಮಾದುತ್ತು — ಮುಂದೆ ಬಂಧನಲ್ಲಿ ಸಿಲುಕಿ ಒದ್ದಾಡುತ್ತು | ಈಗ ಒದ್ದಾಡುವ “ಮನಸು” ಪರಮಾತ್ಮ ಮೊರೆ ಹೊವುತ್ತು – ಇದುವೇ ಭಕ್ತಿ ಯ ಉಗಮ| ಅವಾಗ ಮನಸಿಂಗೆ ದೇವರು ಶಕ್ತಿ ಕೊಡುತ್ತ| ಆ ಶಕ್ತಿ ಯ ಉಪಯೋಗಿಸಿ ಅದು ಯಾವಾಗ “ಚಿತ್ತ ವೃತ್ತಿ ಯ” ದಾಂಟಿ ಸೀದಾ ಆತ್ಮ ಪ್ರಜ್ಞೆಯ ವಾಣಿ ಯ ಮೇರೆ ಗೆ ಕೆಲಸ ಮಾಡುತ್ತೋ ಅದುವೇ “ಮೋಕ್ಷ” ದ ಮೊದಲ ಮೆಟ್ಟಿಲು | ಅದುವೇ “ಚಿತ್ತ ವೃತ್ತಿ ನಿರೋಧ” | ನಮ್ಮ ಬಂಧಿಸು ವ ಶಕ್ತಿಯೇ “ಚಿತ್ತ ವೃತ್ತಿ” | ಜಯಶ್ರೀ ಮತ್ತು ಭಾಗ್ಯಲಕ್ಷ್ಮಿ ಅಕ್ಕ ಇವಕ್ಕೆ ಅನಂತ ಧನ್ಯವಾದ ||

  5. ತೆಕ್ಕುಂಜ ಮಾವ ಧನ್ಯವಾದ — ನಿಂಗೋ ಬರದ ಈ ಶ್ಲೋಕ ಬಹಳ ಅರ್ಥವತ್ ಆಗಿಪ್ಪದು ಮಾತ್ರವಲ್ಲ ಅದಲ್ಲಿ ಇಪ್ಪ ಎರಡನೇ ಭಾಗ |
    ಎಕೊಪಿ ದೇವೋ ಬಹುದಾ ವಿಭಕ್ತ |
    ಸ್ತಂ ಸರ್ವ ಧೀ ಸಾಕ್ಷಿಣಂ ಆಶ್ರಯೇಹಂ || ಇದು ಮಹಾಮಂತ್ರ “ಗಾಯತ್ರಿ” ಗೇ ಸಮಾನ ವಾಗಿದ್ದು|
    ಪದ ವಿಭಾಗ ಬರೆತ್ತೆ — ಏಕಃ ಅಪಿ = ಒಬ್ಬನೇ ಆದರೂ , ದೇವಃ = ಆ ದೇವರು, ಬಹುದಾ ವಿಭಕ್ತ = ಬಹುರೂಪಲ್ಲಿ (ವಿಭಕ್ತನಾದ ಹಾಂಗೆ) ತೋರುತ್ತಿಪ್ಪ, ತಮ್ = ಆ, ಸರ್ವಧೀ = ಎಲ್ಲಾ ಬುದ್ಧಿ ಗಳ (ಹೇಳಿದರೆ ಬುದ್ಧಿ ಯ ಮೂಲಕ ಕೆಲಸ ಮಾಡುವ /ಸಂಚರಿಸುತ್ತಿಪ್ಪ ಸಮಸ್ತ ಜೀವಿಗಳ), ಸಾಕ್ಷಿಣಂ = ಸಾಕ್ಷೀ ರೂಪಲ್ಲಿ ಇಪ್ಪ (ಹೇಳಿದರೆ ಸಾಕ್ಷೀ ರೂಪಲ್ಲಿ ಎಲ್ಲರ ಒಳ ಇಪ್ಪ “ಪ್ರಜ್ಞೆ”) , ಆಶ್ರಯೇ ಅಹಂ = (ಅಂತಹಾ ಅವನ) ಆನು (ಅಹಂ ) ಆಶ್ರಯಿಸುತ್ತೆ || ಒಟ್ಟರ್ಥ — ಆ – ಸಮಸ್ತ ಜೀವಿಗಳ ಬುದ್ಧಿ ಯ ಒಳ “ಸಾಕ್ಷೀ ಭೂತ” ನಾಗಿ ಸದಾ ನೆಲಸಿಪ್ಪ ಒಬ್ಬನೇ ದೇವ ನ ಆನು ಆಶ್ರಯಿಸುತ್ತೆ || ಧಿಯೋ ಯೋ ನಃ ಪ್ರಚೋದಯಾತ್ = ನಃ (ನಮ್ಮ), ಧಿಯಃ (ಬುಧ್ಧಿ ಗಳ ), ಯಃ =ಯಾವನು,( ಯಾವನು= ಹೇಳಿದರೆ ಹಿಂದಾಣ ಭಾಗಲ್ಲಿ ಹೇಳಿದ ಭರ್ಗಃ, ಭರ್ಗಃ ಹೇಳಿದರೆ ಸೃಷ್ಟಿ ಸ್ತಿತಿ ಲಯ ಕಾರಕ ಪರಬ್ರಹ್ಮ) ಇವನು ಪ್ರಚೋದಿಸಲಿ ||
    ತೆಕ್ಕುಂಜ ಮಾವಂಗೆ ಅನಂತ ಧನ್ಯವಾದ – “ತೆಕ್ಕುಂಜ ಶಂಕರ ಭಟ್ಟ”ರ ಅಗಾದ ಪಾಂಡಿತ್ಯ ದ ವಿಚಾರ ಕೇಳಿ ತಿಳುಕ್ಕೊಂಡಿದೆ, ಅದು ಸಂಸ್ಕೃತ ಮನೆತನ|

  6. ಮಾವನ ವಿವರಣೆ ಓದಿಯಪ್ಪದ್ದೆ, ಎನ್ನ ಅಜ್ಜ ತೆಕ್ಕುಂಜ ಶಂಕರ ಭಟ್ಟರು ಬರದ್ದು ನೆಂಪಾತು -( ಸತ್ಕೃತಿ ಮಂಜರಿ) ಅದರ ಇಲ್ಲಿ ಹಾಕುತ್ತೆ,ಅನುವಾದದೊಟ್ಟಿಂಗೆ –
    ಘಟೇಷು ಬಿಂಬಂ ಸವಿತುರ್ವಿಲೋಕ್ಯ
    ನಾನಾತ್ವಮೈಕ್ಷಂತ ಯಥಾ ವಿಮೂಢಾಃ ॥

    ಏಕೋಪಿ ದೇವೋ ಬಹುಧಾ ವಿಭಕ್ತ
    ಸ್ತಂ ಸರ್ವಧೀಸಾಕ್ಷಿಣಮಾಶ್ರಯೇಹಂ ॥೬॥

    ಭೂಮಿಯ ಮೇಲೆ ನೀರು ತುಂಬಿದ ಅನೇಕ ಪಾತ್ರೆಗಳನ್ನಿರಿಸಿದಾಗ – ಪ್ರತಿಯೊಂದು ಪಾತ್ರೆಯಲ್ಲೂ ಸೂರ್ಯನ ಪ್ರತಿಬಿಂಬವು ಬೀಳುವುದು. ಮೂಢರಾದವರು ಆ ಹಲವು ಪ್ರತಿಬಿಂಬಗಳನ್ನು ಕಂಡು – ( ಆಕಾಶದಲ್ಲಿನ ನಿಜ ಸುರ್ಯನನ್ನು ಕಾಣದೆ) ಸೂರ್ಯರು ಅನೇಕರು ಎಂದು ಭ್ರಮೆಗೊಳ್ಳುವರು.ಹಾಗೆಯೇ ಒಂದೇ ಪರಮತ್ಮ ತತ್ವವು, ದೇವ-ಮನುಷ್ಯ-ತಿರ್ಯಂಚ-ಕ್ರಿಮಿಕೀಟ-ಪತಂಗಾದಿ ಸಕಲದೇಹಗಳಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಪ್ರತಿಬಿಂಬಿಸಿದ್ದನ್ನು ಕಂಡು, ” ಹಲವು ಆತ್ಮಗಳು” ಎಂದು ಅಜ್ಞಾನಿಗಳು ಭ್ರಾಂತಿಹೊಂದುವರು, ವಸ್ತುಶಃ ತಾನು ಸೂರ್ಯನಂತೆ ಸರ್ವ ಶರೀರಗಳಲ್ಲೂ ಅಭಿನ್ನವಾಗಿ ವ್ಯಾಪಿಸಿಕೊಂಡಿದ್ದು, ಅಂತಃಕರಣಕ್ಕೆ ಸಾಕ್ಷಿರೂಪವಾಗಿರುವ ಆ ಆತ್ಮ ತತ್ವವನ್ನು ನಾನು ಆಶ್ರಯಿಸುವೆನು

    1. ಎದುರ್ಕಳ ಮಾವ ಮತ್ತೆ ತೆಕ್ಕು೦ಜ ಮಾವ ಹೇಳಿದ ಉದಾಹರಣೆಗೊ ಎನ್ನ ಮೂರನೆಯ ಸ೦ಶಯವ ದೂರ ಮಾಡಿತ್ತು.ಧನ್ಯವಾದ

  7. ಆತ್ಮ ನಿರ್ದ್ವಯತ್ವಾತ್ ಸ್ವಾತ್ಮ ನಿಷ್ಠತಾ ಏವ ಆತ್ಮ ದರ್ಶನಂ || – ಇದು ಶ್ರೀ ಭಗವಾನ್ “ರಮಣ ಮಹಾ ಋಷಿ” ಗಳ ವಾಕ್ಯ | ಅರ್ಥ — ಆತ್ಮ ನಿರ್ದ್ವಯತ್ವಾತ್ = ಆತ್ಮವು ಎರಡಿಲ್ಲದಾದುದರಿಂದ (ಎಲ್ಲೆಲ್ಲಿಯೂ ಹರಡಿ ನಿಂತಿರುವ ಆತ್ಮ ವು ಒಂದೇ ಆದುದರಿಂದ) ಸ್ವಾತ್ಮ = ತನ್ನದೇ ಆತ್ಮ ದ — ನಿಷ್ಠತಾ = ನಿಷ್ಠೆ ಯಿಂದಲೇ — ಆತದರ್ಶನಂ = ಆತ್ಮ ದರ್ಶನ ವಾಗುತ್ತದೆ || ವಾಕ್ಯಾರ್ಥ :– ಆತ್ಮ ಒಂದೇ ಆದುದರಿಂದ ತನ್ನ ದೇ ಆದ “ಅಂತರಾತ್ಮ” ನಿಷ್ಠೆ ಇದ್ದಲ್ಲಿ ಆತ್ಮ ದರ್ಶನ ವಾಗುವುದು (ಆತ್ಮ ಜ್ಞಾನ ಉಂಟಾಗುವುದು)||

  8. ಪ್ರಶ್ನೆಗಳೂ ಅದಕ್ಕೆ ಉತ್ತರಂಗಳೂ ಎರಡೂ ಖುಷಿ ಆತು… ಎಲ್ಲರಿಂಗೂ ಧನ್ಯವಾದಂಗ…

  9. ರಘು ರಾಮನ ಮೂರನೇ ಪ್ರಶ್ನೆ ಹಾಂಗೂ ಚೆನೈ ಭಾವನ ಕೆಲವು ಸಂಶಯಂಗಳ ನಿವಾರಣೆ |
    ಇನ್ನೊಂದು ಉದಾಹರಣೆ : ನೀರು (ಜಲ) ಎಲ್ಲೆಲ್ಲಿಯೂ ಹರಡಿಪ್ಪ “ಆತ್ಮ” ಹೇಳಿ ತೆಕ್ಕೊಂಡರೆ — ಅದಲ್ಲಿ ಅಲ್ಲಲ್ಲಿ ತೇಲಿ ಗೊಂಡಿಪ್ಪ ಮಂಜು ಗಡ್ಡೆ ಮಾತ್ತು ಅದರ ಮೇಲೆ ಹರಡಿಪ್ಪ ಮೋಡ ಇವು ನೀರಿನದ್ದೇ ಬೇರೆ ಬೇರೆ ರೂಪಲ್ಲಿ ಇಪ್ಪ ಜೀವಿಗೊಕ್ಕೆ ಹೋಲಿಕೆ | ವಿಶ್ವದ ಪ್ರತಿ ಯೊಂದು ಚರಾಚರ ವಸ್ತು ಗಳು ಆತ್ಮ ದ ಬೇರೆ ಬೇರೆ ರೂಪ — ನೀರಿನ ಮೇಲೆ ಮಂಜು ಗಡ್ಡೆ ಮತ್ತು ಮೋಡ ಇದ್ದ ಹಾಂಗೆ|
    ಇನ್ನು ರಘುರಾಮ ಹೇಳಿದ “demand supply ” ಮಾತಿಂಗೆ ಈ ಅನಂತ ವಿಶ್ವಲ್ಲಿ ಎಡೆ ಇಲ್ಲೇ | “ಜಗದಂಡ ಕೋಟಿ ಕೊಟೀಷ್ವಶೇಷ ವಸುಧಾದಿ ವಿಭೂತಿ ಭಿನಂ” ( ಶ್ರೀಮದ್ಭಾಗವತ ) ಕೋಟಿ ಕೋಟಿ ಬ್ರಹ್ಮಾಂಡ ಗಳೇ ಇವೆ (ಅಂದರೆ galaxy ಗಳು) ಅದರಲ್ಲಿ ಈ ವಸುಧೆ ಯಂತಹಾ (ಭೂಮಿಯಂತಹಾ) ಎಷ್ಟೋ ಕೋಟಿ ಕೋಟಿ ಭೂಮಿ ಗಳಿರಬಹುದು| ಇವೆ ಆದುದರಿಂದ demand supply ಅರ್ಥ ಬತ್ತಿಲ್ಲೆ — ಇಲ್ಲಿ ಜಾಗೆ ಕಮ್ಮಿ ಅಪ್ಪಗ ಇನ್ನೊಂದು “ಭೂಮಿ” ಆ ಪರಮಾತ್ಮಂದೆ ಎಲ್ಲೆಲ್ಲು ಒಡೆತನ |
    ಪ್ರಶ್ನೆ ಈದರೆ ಮುಜುಗರ ಇಲ್ಲದ್ದೆ ಕೇಳಿ ||

  10. ವಿವರ ಓದಿ ಕುಶಿ ಆತು ಮಾವ. ತುಂಬ ಧನ್ಯವಾದಂಗೊ. ಇಳುದಷ್ಟೂ ಆಳ ಇದ್ದು ಹೇಳ್ವದಂತೂ ಸತ್ಯ ಆತಿಲ್ಲಿಗೆ.

  11. ರಘು ರಾಮನ ಮೂರನೇ ಪ್ರಶ್ನೆ ಹಾಂಗೂ ಚೆನೈ ಭಾವನ ಕೆಲವು ಸಂಶಯಂಗಳ ನಿವಾರಣೆ |
    ಮೊದಲನೆಯದಾಗಿ ನಿಂಗಳ ಅಭಿಪ್ರಾಯಲ್ಲಿ ಒಂದೊಂದು ಶರೀರಕ್ಕೆ ಒಂದೊಂದು ಆತ್ಮ ಹೇಳಿ ಇದ್ದ ಹಾಂಗೆ ಕಾಣುತ್ತು | ಆದರೆ ನಿಜ ಹಾಂಗಲ್ಲ | ಇಲ್ಲಿ ಹೇಳುದಕ್ಕೆ ೧. ಆಧಾರ ಶ್ಲೋಕಂಗಳ ಬರೆತ್ತೆ ೨. ಆದಷ್ಟು ಸರಳವಾಗಿ ವೈಜ್ಞಾನಿಕ ವಾಗಿ ಬರೆತ್ತೆ | ೩. ಅದ್ವೈತ, ದ್ವೈತ, ವಿಶಿಷ್ತಾದ್ವೈತ ಈ ಮೂರರಲ್ಲಿ ಒಂದರ ಚೌಕಟ್ಟಿಲಿ ನಿಲುಸುವ ಪ್ರಯತ್ನವ ಮಾಡುತ್ತೆ |
    ಈಗ ಉತ್ತರ ೧. ಆತ್ಮವು ಸ್ವಯಂ ಪರಬ್ರಹ್ಮವೇ ೨. ಅದು ಸರ್ವ ವ್ಯಾಪಿ ೩. ಅದು ಅಖಂಡ ಅನಿರ್ವಚನೀಯ (Indefinable) ಆದುದರಿಂದ ಸುಲಭ ಮಾತಿಲಿ ಹೇಳೆಕ್ಕಾರೆ ಉದಾ 1 – ಗಾಳಿ ಯ (ವಾಯು ವಿನ) ” ಆತ್ಮ ” ಹೇಳಿತಿಳುಕ್ಕೊಂಡರೆ – | ಯೋಚಿಸಿ | ನಾಲ್ಕೈದು ಪಾತ್ರೆ ಗಳ ಕೌಂಚಿ ಹಾಕಿದರೆ ಆ ಗ್ಲಾಸು ಗಳೇ ” ಜೀವಂಗೋ”– ಅದರ ಒಳಾಣ ವಾಯು ವಿಭಾಗ ಆದ ಹಾಂಗೆ ಕಾಣುತ್ತು — ಆದರೆ ಗ್ಲಾಸು ತೆಗದ ಕೂಡಲೇ ವಾಯುವು ಒಂದೇ ರಾಶಿಯಾಗಿರುತ್ತು | ಆಧಾರ ಶ್ಲೋಕ ಭ.ಗೀ. ೧೩-೧೬ – ಅವಿಭಕ್ತಂ ಚ ಭೂತೇಷು ವಿಭಕ್ತಮಿವ ಚ ಸ್ಥಿತಂ | ಅರ್ಥ — ಅವಿಭಕ್ತಂ = ಬೇರೆ ಬೇರೆ ಯಾಗಿರದೆ (ಅಖಂಡ ವಾಗಿದೆ) ಭೂತೇಷು = ಜನ್ಮಿಸಿದ ಜೀವಿಗಳಲ್ಲಿ/ವಸ್ತು ಗಳಲ್ಲಿ (ಆದರು) ವಿಭಕ್ತಂ ಇವ = ಬೇರೆ ಬೇರೆ ಯಾದಂತೆ — ಸ್ತಿತಂ = ನಿಂತಿದೆ ಭಾಸ ವಾಗುತ್ತದೆ. (ಈ ಆತ್ಮ/ ಪರಬ್ರಹ್ಮ) | ಇದಕ್ಕೆ ಪೂರಕ ವಾದ ಇನ್ನೊಂದು ಶ್ಲೋಕ — ಭ.ಗೀ. ೯-೬ ಯಥಾಕಾಶಸ್ಥಿತೋನಿತ್ಯಂ ಯಾಯು: ಸರ್ವತ್ರ ಗೋ ಮಹಾನ್ | ತಥಾ ಸರ್ವಾಣಿ ಭೂತಾನಿ ಮತ್ಸ್ಥಾನೀತ್ಯುಪಧಾರಾಯ || ಅರ್ಥ ಪರಬ್ರಹ್ಮ ಸ್ವರೂಪನಾದ ಶ್ರೀ ಕೃಷ್ಣಾ ಹೇಳುತ್ತಾ — ಯಥಾ ಆಕಾಶಸ್ಥಿತೋ ನಿತ್ಯಂ ವಾಯು: (ಮಹಾನ್ ವಾಯು:) = ಯಾವರೀತಿಲಿ ನಿತ್ಯವೂ ಆಕಾಶಲ್ಲಿ ಇಪ್ಪ ಮಹಾನ್ ವಾಯುವು — ಸರ್ವತ್ರ ಗೋ (ಗಃ ) ಹರಡಿ (ಗೋ =ಗಃ = (ಚಲಿಸು) ಹರಡಿಗೊಂಡು ನಿಂದಿದೋ (ಎಲ್ಲ ಜೀವಿಗಳ ಪ್ರಾಣ ಭೂತವಾಗಿ ) ತಥಾ = ಹಾಂಗೆ ಈ ವಿಶ್ವ ಸಮಸ್ತಲ್ಲಿ ಹರಡಿ ಸಾದಾ ನಿಂದಿಪ್ಪ ಎನ್ನ ಒಳ ಈ ವಿಶ್ವ ದ ವ್ಯಕ್ತ ಸ್ಥಿತಿಲಿ ಇಪ್ಪ ಎಲ್ಲಾ ಚರಾಚರ ವಸ್ತು ಗೋ ನಿಂತಿದವು (ಮತ್ಸ್ಥಾನಿ ) — ಇತಿ ಉಪಧಾರಾಯ = ಹೇಳಿ ತಿಳುಕ್ಕೋ ||
    ಇನ್ನೊಂದು ಉದಾಹರಣೆ ಮುಂದೆ ಕೊಡುತ್ತೆ

  12. ಮೇಲೆ ಹೇಳಿದ “ವಿದ್ಯುತ್ ಶಕ್ತಿ” ತಾನು ಶಕ್ತಿ ಕೊಟ್ಟ ಯಂತ್ರ ದ ಒಳ ಒಬ್ಬ ಸಾವಾಗ ಬೇಸರವೂ ಮಾದುತ್ತಿಲ್ಲೇ ಹಾಂಗೆ ತಾನು ಶಕ್ತಿ ಕೊಡುತ್ತಿಪ್ಪ ಒಂದು ಯಂತ್ರ ದ ಒಳ ಒಬ್ಬ ಪೋಷಣೆ ಒಳ ಪಡುತ್ತ ಹೇಳಿ ಉದ್ವೇಗ ಸಂತೋಷ ಪಡುತ್ತಿಲ್ಲೇ — ಹಾಂಗೆ ಆತ್ಮವೂ|
    ಪ್ರಶ್ನೆ 2 .ಸುಖ ದುಕ್ಖ, ಪ್ರೀತಿ, ದ್ವೇಷ ಇತ್ಯಾದಿ ಭಾವನಗಳ “ಅಂತಃ ಶಕ್ತಿ” ಅದುವೇ ಆದರೂ ಈ ಬೇರೆ ಬೇರೆ ಭಾವನೆಗಳ ಪ್ರಚೋದನೆ ಗೆ “ಆತ್ಮ” ಕಾರಣ ವಲ್ಲ| ಈ ಪ್ರಚೋದನೆ ಗೆ ಕಾರಣ ಮನಸಿನ ಒಂದು ಭಾಗ ವಾದ “ಚಿತ್ತ ವೃತ್ತಿ” (ಹೇಳಿದರೆ pre -concieved notions), ಇದುವೇ ಒಂದು ಅಗಾದ ವಿಷಯ “ಪತಂಜಲಿ ಯೋಗ ಸೂತ್ರ ದ ತಿರುಳು” ಇದೆ ಶಬ್ಧ | – “ಯೋಗಃ ಚಿತ್ತ ವೃತ್ತಿ ನಿರೋದಃ” – ಬೋರಾಗದ್ದರೆ ಓದಿ – ಯೋಗವೇ “ಚಿತ್ತ ವೃತ್ತಿ ನಿರೋಧ” — ಈ “ಚಿತ್ತ ವೃತ್ತಿ” ಯೇ ಮನುಷ್ಯನ ಎಲ್ಲಾ ಕಾರ್ಯಾಂಗಳ ನ್ನುದೇ ನಿಯಂತ್ರಿಸುದು | ಉದಾ : “ಒಬ್ಬ ಮನುಷ್ಯ ಸರಿ ಇಲ್ಲೇ” ಹೇಳಿ ಮನಸಿಂಗೆ ಒಂದರಿ ಹೊಗ್ಗಿದರೆ — ಅವ ಎಂತ ಹೇಳಿದರು ಎಂತ ಮಾಡಿದರೂ ನವಗೆ “ಅರಿವಿಲ್ಲದ್ದೆ” ಅವ ಸರಿಯೇ ಮಾಡಿದರೂ ತಪ್ಪೆ ಕಾಣುತ್ತು | ಇಲ್ಲಿ “ಆ ಮನುಷ್ಯ ಸರಿ ಇಲ್ಲೇ” ಹೇಳುದು ಒಂದು ಚಿತ್ತ ವೃತ್ತಿ – ಅದುವೇ ಮಸಿನ ಒಂದು soft wear ನ ಹಾಂಗೆ ಕೆಲಸ ಮಾಡುತ್ತು | ಚಿತ್ತ ವೃತ್ತಿ ನಿರೋಧ (to be beyond these notions ) ಅಪ್ಪದೆ ಆತ್ಮ ದರ್ಶನ (ಆತ್ಮ ಜ್ಞಾನ ದ) ಮೆಟ್ಟಲು |
    ಮುಂದುವರಿತ್ತು

    1. ಧನ್ಯವಾದ ಮಾವ.
      ಇಲ್ಲಿ ‘ವಿದ್ಯುತ್ ಶಕ್ತಿ’ ಹೇಳಿರೆ ಆತ್ಮ,ಯ೦ತ್ರ ಹೇಳಿರೆ ದೇಹ ,ಆ ಯ೦ತ್ರ ಮಾಡುತ್ತ ಕೆಲಸ (ಕೊಲ್ಲೊದು ಯಾ ಕಾಯೊದು) ಕರ್ಮ ಹೇಳಿ ಅರ್ಥ ಮಾಡಿಗೊ೦ಬಲಕ್ಕು,ಅಲ್ಲದೋ?
      ಹೊಸ ಸ೦ಶಯ ಮನಸ್ಸಿನ ನಿಯ೦ತ್ರಣ ಮಾಡೊದು ಆತ್ಮ ಅಲ್ಲದೊ?ಈ ‘ಚಿತ್ತವೃತ್ತಿ’ ಅರ್ಥ ಆತಿಲ್ಲೆ.

      1. ಈ ಚಿತ್ತವೃತ್ತಿ ಯ ಎಲ್ಲ ಮೀರಿ ‘ಸಾಕ್ಷೀ ಭಾವ’ ಹೇಳುವ ಭಾವಲ್ಲಿ ನಮಗೆ ಇಪ್ಪಲೆ ಎಡಿತ್ತು. ಆ ಭಾವಲ್ಲಿ ಇಪ್ಪಗ ನಾವು ಕೋಣೆಲ್ಲಿ ಇಪ್ಪ ಒಂದು ದೀಪದ ಹಾಂಗೆ ನಮ್ಮ ಎದುರು ನಡವ ಎಲ್ಲ ಕ್ರಿಯೆಗೊಕ್ಕೆ ಸಾಕ್ಷಿ ಮಾಂತ್ರ ಆಗಿರುತ್ತು. ನಾವು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲೆ. ಕೋಣೆಲ್ಲಿ ಇಪ್ಪ ದೀಪದ ಎದುರು ಒಳ್ಳೆ ಕೆಲಸ ನಡದರೂ, ಕೆಟ್ಟ ಕೆಲಸ ನಡದರೂ ದೀಪ ಅದಕ್ಕೆ ಸಾಕ್ಷಿ ಮಾಂತ್ರ ಆಗಿರುತ್ತು.ಮಾವ ಹೇಳಿದ ‘ವಿದ್ಯುತ್ ಉಪಕರಣಗಳಲ್ಲಿ’ – ‘ವಿದ್ಯುತ್’ ಇಪ್ಪ ಹಾಂಗೆ ‘ಜಗತ್ತಿಲ್ಲಿ’- ‘ಸಾಕ್ಷೀ ಭಾವಲ್ಲಿ ಇಪ್ಪ ನಾವು’ ಇರುತ್ತು.

    2. ಮಾವ,
      ಚಿತ್ತ ವ್ರುತ್ತಿ ಹೇಳಿದರೆ ಹೀ೦ಗೆ ಅರ್ಥ ಮಾದ್ಲಕ್ಕೊ?—- ನಡೆತ್ತಾ ಇಪ್ಪ ಕ್ರಿಯೆಯ ಯಾವುದೆ ಕೆಟ್ಟ / ಒಳ್ಲೇಯ ಅನುಭವದ ಆಧಾರಲ್ಲಿ ನೋಡದ್ದೆ ಇಪ್ಪದು.
      ಹೇಳಿದರೆ- ಪೂರ್ವಾಗ್ರಿಹ ಪೀಡಿತರಾಗದ್ದೆ,ಇದ್ದದರ ಇಪ್ಪ ಹಾ೦ಗೆ ನೋಡುದು ಹೆಳಿ ಅರ್ಥ ಮಾಡ್ಲಕ್ಕೊ ? ನಮ್ಮ ಓಳ ಇಪ್ಪ ವೀಕ್ಶಕ ಮತ್ತು ವಿಮರ್ಶಕ ಇಲ್ಲದ್ದೆ ಇಪ್ಪ ಸ್ಥಿತಿ?

  13. ಈ ಪ್ರಶ್ನೆ ಗೆ ವಿವರಣೆ ಬಹಳ ಕ್ಲಿಷ್ಟ ಹಾಂಗೂ ಉದ್ದ — ಆದರು ಅತ್ಯಂತ ಸಣ್ಣದಾಗಿ “ಲೌಕಿಕ” ಉದಾಹರಣೆ ಗಳ ಕೊಡುತ್ತೆ | ಲೌಕಿಕ ಉದಾಹರಣೆ ಪೂರ್ಣ ಅಲ್ಲದ್ದರು ರಜ್ಜ ಅರ್ಥ ಅಪ್ಪಲೇ ಸಾಕು |
    ರಘುರಾಮನ ಮೊದಲನೇ ಪ್ರಶ್ನೆ— ಬದಲಾವಣೆ ಗೆ ಒಳ ಪಡದ್ದ ಗುಣಧರ್ಮಂಗಳಿಗೆ ಅತೀತ ವಾದ ಆತ್ಮಕ್ಕೆ ಕರ್ಮಂಗೋ ಅಂಟಿಗೊಳ್ಳುತ್ತಿಲ್ಲೇ – ಇದು ಸರಿ | ಭ.ಗೀ ಶ್ಲೋ — ೫-೧೫ -ನಾದತ್ತೆ ಕಸ್ಯಚಿತ್ ಪಾಪಂ ನ ಚೈವ ಸುಕ್ರುತಂ ವಿಭು: ————— ಇಲ್ಲಿ ವಿಭು ಹೇಳಿದರೆ “ಆತ್ಮನೇ” ಅವ (ಆತ್ಮ) ನ ಆದತ್ತೆ = ತೆಕ್ಕೊಳ್ಳುತಾ ಇಲ್ಲೇ (ಎಂತರ ?) ಕಸ್ಯಚಿತ್ ಪಾಪಂ = ಯಾರೊಬ್ಬನ ಪಾಪವನ್ನೂ – ನ ಚ ಏವ ಸುಕ್ರುತಂ = ಹಾಗೂ ಇನ್ನೊಬ್ಬನ ಪಾಪವನ್ನೂ ಅರ್ಥಾತ್ ಕರ್ಮ ದ ಅಂಟುವಿಕೆ ಇಲ್ಲೇ | ಈ ಆತ್ಮಂಗೆ ಹಟ್ಟು ಸಾವು ಗಳೂ ಇಲ್ಲೇ – ಇಲ್ಲೇ ಓದಿ ಶ್ಲೋ — ೨-೨೦ ನ ಜಾಯತೇ ಮ್ರಿಯತೇ ವಾ = ಹುತ್ತುಟ್ಟನು ಇಲ್ಲೇ ಸಾಯುತ್ತನು ಇಲ್ಲೇ | ಅಂಬಗ ಹುಟ್ಟುದು ಆರು ಸಾವದು ಆರು ? ದ್ವೈತ ಲ್ಲಿ ಅದು “ಜೀವ”| ಜೀವ = ಆನು ಇದ್ದೆ ಹೇಳಿ ಅರಿವು ಇಪ್ಪ ಒಂದು ಕಣ |ಅದ್ವೈತಲ್ಲಿ ಈ ಜೀವ ಆನು “ಆತ್ಮಂದ ಬೇರೆ” ಹೇಳಿ ಭ್ರಮಿಸಿಗೊಂಡಿಪ್ಪ ಒಂದು ತತ್ವ| ಈಗ ಲೌಕಿಕ ಉದಾಹರಣೆ – ಈ ಜೀವಕ್ಕೆ (ಎಲ್ಲಾ ತರದ ಜೀವಿಗಳಲ್ಲಿ ಯು ) “ಶಕ್ತಿ” ತುಂಬುದು “ಆತ್ಮ” ಉದಾ : ಒಂದು ಹೊಡೆಲಿ “electic cremation ” ಇಲ್ಲಿ ಇದರ ಒಳ ಜೀವ ಇಪ್ಪವ ಹೋದರು ಸಾಯಿಗು | ಹಾಗೆ ಇನ್ನೊಂದು ಹೊಡೆಲಿ ಶಿಶು ಹುಟ್ಟಿದೊಡನೆ ಯೇ ಅದರ ” ಜೀವ ಪೋಷಣೆ ” ಗೆ ಅದರ “Incubater ” ಲಿ ಮಡುಗುತ್ತವು — ಈಗ ನೋಡಿ ಒಂದಲ್ಲಿ ಜೀವ ನಾಶ – ಇನ್ನೊಂದಲ್ಲಿ ಜೀವ ದ ರಕ್ಷಣೆ — ಈ ಎರಡಕ್ಕೂ (ಒಂದು ನಾಶ ಇನ್ನೊಂದು ರಕ್ಷಣೆ ) ಶಕ್ತಿ ಒಂದೇ ಅದು “ವಿದ್ಯುತ್ ಶಕ್ತಿ” ಅದು ಅದಾಗಿ ಎಂತದೂ ಮಾದುತ್ತಿಲ್ಲೇ — ಆದರೆ ಅದಿಲ್ಲದ್ದರೆ (ವಿದ್ಯುತ್ ಇಲ್ಲದ್ದರೆ) ಮೇಲೆ ಹೇಳಿದ ಎರಡು ಸಲಕರಣೆ ಗೊಕ್ಕು –“ಅರ್ಥವೇ ಇಲ್ಲೇ” ಹಾಂಗೆ ಆತ್ಮ ಶಕ್ತಿ ಇಲ್ಲದ್ದರೆ ಯಾವ ಜೀವಕ್ಕೂ ಅಸ್ತಿತ್ವ ಇಲ್ಲೇ |– ಪ್ರಶ್ನೆ ಇದ್ದಾರೆ ಕೆಳುಳಕ್ಕು –

    1. ಮಾವಾ,
      ಆತ್ಮಕ್ಕೆ ಕರ್ಮ೦ಗೊ ಅ೦ಟಿಗೊಳ್ಳದ್ದರೆ ಸ೦ಚಿತ,ಪ್ರಾರಬ್ಧ ಇತ್ಯಾದಿ ಕರ್ಮ೦ಗೊ ಆರಿ೦ಗೆ?ವಿಕೃತಿ೦ದ ಪ್ರಕೃತಿಗೆ ನೆಡವ ಜೀವನಲ್ಲಿ ಮನಸ್ಸಿನ ನಿಯ೦ತ್ರಣ ಮಾಡೊದು ಆತ್ಮ ಅಲ್ಲದೋ?

  14. ಗೀತೆಯ ಸರಿಯಾಗಿ ಓದುವ ಯೋಗ ಸಿಕ್ಕಿದ್ದು ಈಗಳೇ ! ಕಳುದ ಎರಡು ವಾರದ ಶ್ಲೋಕಾರ್ಥ೦ಗಳ ಓದಿಗೊ೦ಡು ಹೋದ ಹಾ೦ಗೆ ಪ್ರಶ್ನೆಗೊ ಹುಟ್ಟಿಗೊ೦ಡಿದು.

    ೧. ಬದಲಾವಣೆ ಇಲ್ಲದ್ದ,ಗುಣಧರ್ಮ ಇಲ್ಲದ್ದ ಆತ್ಮಕ್ಕೆ ಕರ್ಮ೦ಗೊ ಅ೦ಟಿಗೊ೦ಬದು ಹೇ೦ಗೆ?
    ೨. ಕೋಪ,ಪ್ರೀತಿ ಸ೦ತೋಷ,ದುಃಖ ಇತ್ಯಾದಿ ಮನಸ್ಸಿನ ಭಾವನೆಗೊ ಮನಸ್ಸಿಲಿ ಹುಟ್ಟೊದಕ್ಕೆ ಆತ್ಮದ ಪ್ರಚೋದನೆ ಇದ್ದೋ?
    ೩. ಭೂಮಿಯ ಮೇಗೆ ದಿನ೦ದ ದಿನಕ್ಕೆ ಹೆಚ್ಚಪ್ಪ ಜನಸ೦ಖ್ಯೆಗೂ ಆತ್ಮಸ೦ಖ್ಯೆಗೂ ಬೇಡಿಕೆ -ಪೂರೈಕೆ ಗಳ ವೆತ್ಯಾಸ (demand supply gap) ಇಲ್ಲೆಯೋ? ಹಾ೦ಗಾರೆ ಸಾವು – ಮರುಹುಟ್ಟಿನ ಮಧ್ಯಲ್ಲಿ ಆತ್ಮ೦ಗಳ ನೆಲೆ ಎಲ್ಲಿ?
    ತಿಳುದವು ಹೇಳುವಿರೋ?

  15. ವರಾಹ ಪುರಾಣೋಕ್ತ ಶ್ರೀಮದ್ಭಗವದ್ಗೀತಾ ಮಾಹಾತ್ಮ್ಯಂ ಮೂರನೆ ಶ್ಲೋಕ –
    ಮಹಾ ಪಾಪಾತಿಪಾಪಾನಿ ಗೀತಾ ಧ್ಯಾನಂ ಕರೋತಿ ಚೇತ್ |
    ಕ್ವಚಿತ್ ಸ್ಪರ್ಶಂ ನ ಕುರ್ವಂತಿ ನಲಿನೀ ದಲಮಂಬುವತ್ ||೩ ||
    ಮಹಾ ಪಾಪ -ಅತಿ ಪಾಪಂಗಳೂ “ಗೀತಾ ಧ್ಯಾನ” ಮಾಡಿಕೊಂಡಿಪ್ಪವನ ರಜ್ಜವು ಮುಟ್ಟುಲೇ ಬಾರವು – ಹೇಂಗೆ ತಾವರೆ ಯ ಎಲೆಯ ನೀರು ರಜವೂ ಸೊಂಕದ್ದೆ ಜಾರಿ ಕೆಳ ಬೀಳುತ್ತೋ ಹಾಂಗೇ |

    ಗೀತಾಯಾಃ ಪುಸ್ತಕಂ ಯತ್ರ ಯತ್ರ ಪಾಠ: ಪ್ರವರ್ತತೇ |
    ತತ್ರ ಸರ್ವಾಣಿ ತೀರ್ಥಾನಿ ಪ್ರಯಾಗಾದೀನಿ ತತ್ರ ವೈ ||೪ ||
    ಎಲ್ಲಿ ಗೀತೆ ಯ ಪುಸ್ತಕ ಇರುತ್ತೋ ಎಲ್ಲಿ ಗೀತೆ ಯ ಪಾಠ ಆಗುತ್ತಾ ಇರುತ್ತೋ ಅಲ್ಲಿ ಪ್ರಯಾಗಾದಿ ಸಮಸ್ತ ತೀರ್ಥಂಗಳೂ ನೆಲಸಿರುತ್ತವು |

  16. ಇಲ್ಲಿ ಹೇಳುತ್ತಿರುವ ಜ್ಞಾನ ಬರೇ ಶಾಸ್ತ್ರಾರ್ಥ ಜ್ಞಾನ | ಶ್ರೀ ಆಚಾರ್ಯ ಶಂಕರ ರು ಹೇಳುವ “ಜ್ಞಾನಾದೇವ ಹಿ ಕೈವಲ್ಯಂ” ಹೇಳುವ — ಈ ಜ್ಞಾನ “ಆತ್ಮ ಜ್ಞಾನ” — ಇದು ದೊರೆತ ಮೇಲೆ ಮತ್ತೆ ದೊರೆಯಬೇಕಾದ್ದು ಯಾವದು ಉಳುದಿರುತ್ತಿಲ್ಲೇ | ಶಾಸ್ತ್ರಾರ್ಥ ಜ್ಞಾನ ದ ರಜ್ಜ ಪಾಲಾದರು “ವಿಜ್ಞಾನ” ಕ್ಕೆ ಪರಿವರ್ತನೆ ಆವುತ್ತಾ ಇದ್ದರೆ ಅಹಂಕಾರ ಹತ್ತರೆ ಸುಳಿಯ | ಶ್ರೀ ಗುರು ಕಟಾಕ್ಷ ಇದ್ದರೆ ಜ್ಞಾನಿ ಆದರೂ ಅಜ್ಞಾನಿ ಯೇ ಆದರೂ ಯಾವ ಎತ್ತರಕ್ಕೂ ಏರುಲೆ ಎಡಿಗು |

    1. [“ಆತ್ಮ ಜ್ಞಾನ” — ಇದು ದೊರೆತ ಮೇಲೆ ಮತ್ತೆ ದೊರೆಯಬೇಕಾದ್ದು ಯಾವದು ಉಳುದಿರುತ್ತಿಲ್ಲೇ ] – ಒತ್ತಿ ಹೇಳಿದ್ದು ಲಾಯಕ ಆತೀಗ.

  17. ಭಕ್ತಿ = “ಸಾ ಪರಾ ಅನುರಕ್ತಿರೀಶ್ವರೇ” | ಸಾ = ಅದು (ಭಕ್ತಿ ) ಈಶ್ವರೇ = ಪರಮೇಶ್ವರ ನಲ್ಲಿ = ಸೃಷ್ಟಿ ಯ ಮೂಲ ಪುರುಷ ಇವನಲ್ಲಿ, ಪರಾ = ಎಲ್ಲದಕ್ಕೂ ಮಿಗಿಲಾದ, ಪರಿಪೂರ್ಣ ವಾದ, ಅನುರಕ್ತಿ: = ಅನುರಾಗ =ಅದಮ್ಯ, ದಮನ ಮಾಡಲಾಗದ ಸೆಳೆತ – ಇದನ್ನು ಭಕ್ತಿ ಎನ್ನುವರು | ಈ ಅನುರಾಗವು (ಪ್ರೀತಿ ಯು) ಅದಕ್ಕೆ ಬದಲಾಗಿ ಏನನ್ನೂ ಬಯಸದು | ಆ ಪರಮ ಪುರುಷನಲ್ಲಿ ಪೂರ್ಣ ” ಶ್ರದ್ಧೆ ” ಇರುವವ ನಿಗೆ ಜ್ಞಾನದ ಅಭಾವದಲ್ಲೂ ಅವನ “ಮುಗ್ಧ ಪ್ರೀತಿಯೇ” ಭಕ್ತಿ ಯಾಗಿರುತ್ತದೆ | ಜ್ಞಾನಿ ಗೆ ಈ ಪ್ರಪಂಚವೆಲ್ಲಾ ಸುಂದರ ವಾಗಿಯೇ ತೋರುತ್ತದೆ — ಹಾಗೆಯೇ ಈ ಸುಂದರ ಪ್ರಪಂಚ ದ ಸೃಷ್ಟಿ ಕರ್ತ ನ ಹುಡುಕುವಿಕೆ ಯ ಭಾಗವಾಗಿ ಸಮಸ್ತ ಶಾಸ್ತ್ರಗಳನ್ನೂ ಮೊರೆಹೋಗಿ “ಅಣು ರೇಣು ತೃಣ ಕಾಷ್ಠ” ಗಳಲ್ಲೂ ಆ ಪರಮ ಪುರುಷ ನ ಹುಡುಕುವಿಕೆಯಲ್ಲಿ ಮಗ್ನ ನಾಗುತ್ತಾನೆ | ಇದುವೇ ಜ್ಞಾನಿ ಯ “ಪರಾ ಅನುರಕ್ತಿ” | ಆದರೆ ಇಲ್ಲಿ ಜ್ಞಾನ ದ “ಅಹಂಕಾರವು” ಒಮ್ಮೊಮ್ಮೆ ತೊಡಕನ್ನೇ ತಂದೊಡ್ಡಲೂ ಬಹುದು |
    ವೈರಾಗ್ಯ = ವಿರಾಗ, ರಾಗ = ಬಲವಾದ ಸೆಳೆತ | ವಿ ರಾಗ = ಸೆಳೆತದಿಂದ ವಿಮುಖ ನಾಗುವುದು| ಇದು ಜಿಗುಪ್ಸೆ ಯಲ್ಲ ಹಾಗು ವಿಷಯಗಳ ಮೇಲಿನ ದ್ವೇಷ ವೂ ಅಲ್ಲ – ” ಪೂರ್ಣ ನಾದ ಪರಮಾತ್ಮ ನ ಎದುರು ಆ ವಿಷಗಳ ಅಪೂರ್ಣತೆ ಯ ಅರಿವು” (ನಿಜ ಕುದುರೆ ಯ ಎದುರು ಬೊಂಬೆ ಕುದುರೆ ಯ ನಿರರ್ಥಕತೆ ಯ ಅರಿವಾದಂತೇ) | ರಾಗ ವಿದ್ದಲ್ಲಿ ದ್ವೇಷವೂ ಇರುತ್ತದೆ | ಆದರೆ ಅದೇ ರಾಗವು ವಿಷಯಗಳಿಂದ ವಿಮುಖವಾಗಿ ಪರಮ ಪುರುಷನೆಡೆಗೆ ಒಮ್ಮೆ ಮುಖ ಮಾಡಿದರೆ ಅಲ್ಲಿ ದ್ವೇಷ ವಿಲ್ಲ ಬರೆ “ಪರಾ ಅನುರಕ್ತಿ” ಇರುತ್ತದೆ |

    1. ಅತ್ಯುತ್ತಮವಾದ ಭಾವ ಇದು. ಇದರ ಸುಲಭಲ್ಲಿ ಬೆಳೆಸುದು ಹೇಂಗೆ ಹೇಳಿ ತಿಳಿಸುತ್ತೆ. ನಮಗಿಷ್ಟವಾದ ದೇವರ ಯಾವುದಾದರೂ ಒಂದು ರೂಪವ(ಗುರುಗಳೂ ಅಕ್ಕು) ಮನಸ್ಸಿಲ್ಲಿ ಕಲ್ಪಿಸಿಗೊಲ್ಲೆಕ್ಕು. ಅಪ್ಪ,ಅಮ್ಮನ,ಅಣ್ಣ,ತಂಗೆಯ,ಗೆಂಡನ,ಹೆಂಡತಿಯ,ಪ್ರಿಯಕರನ,ಪ್ರಿಯೆಯ,ಮಿತ್ರರ ಮೇಲೆ ನಮಗೆ ಪ್ರೀತಿ ಇರುತ್ತು ಅಲ್ಲದ. ಆ ಪ್ರೀತಿಯ ದೇವರ ಮೇಲೆ ಬೆಳೆಸೆಕ್ಕು. ಆ ಪ್ರೀತಿ ಅದೆಷ್ಟು ತೀವ್ರ ಆಯೆಕ್ಕು ಹೇಳಿರೆ ಎಲ್ಲ ಸಂಬಂಧಗಳಿಂದ ಮತ್ತು ಎಲ್ಲ ವಸ್ತುಗಳ ಮೇಲಿನ ಪ್ರೀತಿಗಿಂತ ಹೆಚ್ಚು ಆಯೆಕ್ಕು. ಅಷ್ಟಪ್ಪಗ (ಅಪ್ಪ,ಅಮ್ಮನ,ಅಣ್ಣ,ತಂಗೆಯ,ಗೆಂಡನ,ಹೆಂಡತಿಯ,ಪ್ರಿಯಕರನ,ಪ್ರಿಯೆಯ,ಮಿತ್ರರ) ಎಲ್ಲರಲ್ಲಿಯೂ ಆ ದೇವರ ಕಾಮ್ಬಲೆ ಸುರು ಆವುತ್ತು. “ತಂದೆ,ತಾಯಿ,ಬಂಧು ಬಳಗ ಎಲ್ಲ ನೀನೆ ಎನ್ನಿರಿ…” ಹೇಳಿ ಪ್ರಾರ್ಥಿಸುತ್ತು ಅಲ್ಲದ… ಅದರ ಕಾರ್ಯ ರೂಪಕ್ಕೆ ತಪ್ಪದು ಅಷ್ಟೇ..

      ಇದರಿಂದ ಲೌಕಿಕವಾದ ಜೀವನಕ್ಕೆ ತೊಂದರೆ ಆವುತ್ತಿಲ್ಲೆಯ? ಏನೇನೂ ತೊಂದರೆ ಆವುತ್ತಿಲ್ಲೇ. ಬದಲಿಂಗೆ ಅನಂತ ಲಾಭಂಗ ಆವುತ್ತು… ನಮಗೆ ದೇವಸ್ಹಾನಕ್ಕೆ ಹೋದರೆ ಅಥವಾ ಗುರುಗಳ ಕಂಡರೆ ಅದೆಷ್ಟು ನೆಮ್ಮದಿ,ಆನಂದ ಸಿಕ್ಕುತ್ತು ಅಲ್ಲದ…ಇನ್ನು ಪ್ರತಿಕ್ಷಣವೂ ಆ ಅನನಂದ ಸಿಕ್ಕಿರೆ ಹೆಂಗಿಕ್ಕು… ಅಷ್ಟೆಯ ಲಾಭ?ಅಲ್ಲ… ಧನಕನಕಂಗ,ಆರ್ಥಿಕ ಸಂಪತ್ತು,ಜ್ಹಾನ ಸಂಪತ್ತು,ಅರೋಗ್ಯ ಸಂಪತ್ತು ನಾವು ಬಯಸಿದ್ದದು ಸಿಕ್ಕುತ್ತು…

  18. ಜ್ಞಾನ ಭಕ್ತಿ ವೈರಾಗ್ಯ — ” ಜ್ಞಾನ ” ನಮ್ಮ “ಭವಸಾಗರಲ್ಲಿ” ದಾಟುಸುವ ನಾವೆ (ದೋಣಿ ) ಆದರೆ “ಭಕ್ತಿ ಮತ್ತು ವೈರಾಗ್ಯ” ಇವೆರಡು ನಮ್ಮ ನಾವೆಲಿ ಎತ್ತಿಸಿ ಕೂರುಸುವ ಎರಡು “ದಿವ್ಯ ಹಸ್ತಂಗೋ” | ಜ್ಞಾನ ಹೇಳಿದರೆ “ಆತ್ಮೋನ್ನತಿ” ಗಾಗಿ ನಮ್ಮ ಅಧ್ಯಾತ್ಮಿಕವಾಗಿ ಮೇಲೆ ಏರುಸಬಲ್ಲ ಒಂದು ಪಕ್ಷಿ (ಹಕ್ಕಿ) ಆದರೆ — ಭಕ್ತಿ ಮತ್ತು ವ್ಯರಾಗ್ಯ ಎಂಬುದು ಆ ಹಕ್ಕಿ ಯ ಎರಡು “ರೆಕ್ಕೆ” ಗೋ | ರೆಕ್ಕೆ ಇಲ್ಲದ್ದೆ ಹಕ್ಕಿ ಹಾರ. ಭಕ್ತಿ ವೈರಾಗ್ಯದ ಅಭಾವ ಇಪ್ಪ ಜ್ಞಾನ “ಸಾತ್ವಿಕ ಅಹಂಕಾರ” ವ ತಂದು ಕೊಡುಗು | ಆಗ ಅದು ಒಂದು ಚಿನ್ನ ದ ಸರಪಳಿ ಯ ಬಂಧನ || ತತ್ರ ಸತ್ವಂ ನಿರ್ಮಲತ್ವಾತ್ ಪ್ರಕಾಶಕಂ ಅನಾಮಯಂ — ಸುಖ ಸಂಘೇನ ಬಧ್ನಾತಿ “ಜ್ಞಾನ ಸಂಘೇನ ಚಾನಘ ||ಭ. ಗೀ ೧೪-೬|| ಈ ಜ್ಞಾನ ಹೇಳುದು ಸುಖ ಮತ್ತು “ಜ್ಞಾನ ಸಂಘ” ಲ್ಲಿ ಮನುಷ್ಯನ ಬಂಧಿಸುತ್ತು|| shubham |

    1. ‘ಜ್ಹಾನೋದಯ’ ಆದ ಮೇಲೆಯೂ ‘ಭಕ್ತಿ’ ಮತ್ತು ‘ವೈರಾಗ್ಯ’ಗಳ ಕೊರತೆಯಿದ್ದರೆ ‘ಅಹಂ’ ಆಕ್ರಮಣ ಮಾಡುವ ಸಾಧ್ಯತೆ ಇದ್ದು ಹೇಳಿರೆ ‘ಅಹಂ’ ಅದೆಷ್ಟು ಪ್ರಬಲವಾದ ವೈರಿ ಹೇಳಿ ಅರ್ಥ ಮಾಡಿಗೊಮ್ಬಲಕ್ಕು…

      1. ಇಂತಹ ಸಂದರ್ಭಲ್ಲಿಯೂ ಬಂಧನಕ್ಕೊಳಗಾಗದ್ದ ಹಾಂಗೆ ಕಾಪಾಡುದು ಆ ‘ಗುರುಚರಣ೦ಗ’… ಗುರುಚರಣ ಮಹಿಮೆಯ ಅದೆಷ್ಟು ಬಣ್ಣಿಸಿದರೂ ಸಾಲ… ಈಶ್ವರ ಮಾವಂಗೆ ನಮೋ ನಮ:

  19. ಜ್ಞಾನ ಭಕ್ತಿ ವೈರಾಗ್ಯ — ” ಜ್ಞಾನ ” ನಮ್ಮ “ಭವಸಾಗರಲ್ಲಿ” ದಾಟುಸುವ ನಾವೆ (ದೋಣಿ ) ಆದರೆ “ಭಕ್ತಿ ಮತ್ತು ವೈರಾಗ್ಯ” ಇವೆರಡು ನಮ್ಮ ನಾವೆಲಿ ಎತ್ತಿಸಿ ಕೂರುಸುವ ಎರಡು “ದಿವ್ಯ ಹಸ್ತಂಗೋ” | ಜ್ಞಾನ ಹೇಳಿದರೆ “ಆತ್ಮೋನ್ನತಿ” ಗಾಗಿ ನಮ್ಮ ಅಧ್ಯಾತ್ಮಿಕವಾಗಿ ಮೇಲೆ ಏರುಸಬಲ್ಲ ಒಂದು ಪಕ್ಷಿ (ಹಕ್ಕಿ) ಆದರೆ — ಭಕ್ತಿ ಮತ್ತು ವ್ಯರಾಗ್ಯ ಎಂಬುದು ಆ ಹಕ್ಕಿ ಯ ಎರಡು “ರೆಕ್ಕೆ” ಗೋ | ರೆಕ್ಕೆ ಇಲ್ಲದ್ದೆ ಹಕ್ಕಿ ಹಾರ. ಭಕ್ತಿ ವೈರಾಗ್ಯದ ಅಭಾವ ಇಪ್ಪ ಜ್ಞಾನ “ಸಾತ್ವಿಕ ಅಹಂಕಾರ” ವ ತಂದು ಕೊಡುಗು | ಆಗ ಅದು ಒಂದು ಚಿನ್ನ ದ ಸರಪಳಿ ಯ ಬಂಧನ || ತತ್ರ ಸತ್ವಂ ನಿರ್ಮಲತ್ವಾತ್ ಪ್ರಕಾಶಕಂ ಅನಾಮಯಂ — ಸುಖ ಸಂಘೇನ ಬಧ್ನಾತಿ “ಜ್ಞಾನ ಸಂಘೇನ ಚಾನಘ ||ಭ. ಗೀ ೧೪-೬|| ಈ ಜ್ಞಾನ ಹೇಳುದು ಸುಖ ಮತ್ತು “ಜ್ಞಾನ ಸಂಘ” ಲ್ಲಿ ಮನುಷ್ಯನ ಬಂಧಿಸುತ್ತು||

  20. ಜಯಶ್ರೀ ನೀರಮೂಲೇ — ನಿಂಗೋ ಬರದ್ದು ಬಹಳ ಸಮರ್ಪಕವಾಗಿದ್ದು |

  21. ಆದರೂ “ಜ್ಞಾನ ಭಕ್ತಿ ವೈರಾಗ್ಯ” ಇದರೊಂದಿಗೆ ಗೀತಾಭ್ಯಾಸ ಮಾಡುವವ—- — ಸದ್ಗುರು ಪಾದ ಕಮಲವೇ ಸರ್ವಸ್ವ ಹೇಳಿ ತಿಳುಕೊಳ್ಳುತ್ತ.| ಹಾಂಗೆ ತನ್ನ ಪ್ರಾರಬ್ಧ ಕರ್ಮಲ್ಲಿ ತನ್ನಂದಾಗಿ ಇನ್ನೊಬ್ಬ ತೊಂದರೆ ಗೆ ಒಳಗಾಯಿದ ಹೇಳಿ ಆಗಿದ್ದರೆ ಅವ — ಆ ದುಷ್ಕರ್ಮ ದ ಫಲ ನಾಶ ವ ಕೆಳುತ್ತಾಯಿಲ್ಲೆ —- ಅದರ ಬದಲು ಆ “ಕರ್ಮ ಪಲ” ದ ತೀವ್ರತೆ ಯ ಸಹಿಸಿ ಎದುರಿಸುವ ಶಕ್ತಿ ಯ ಮಾತ್ರ ಕೊಡುಲೆ ಗುರುಗಳ ಹತ್ತರೆ ಬೇಡಿಗೊಳ್ಳುತ್ತ — ಹಾಂಗಿದ್ದಲ್ಲಿ ಅವಂಗೆ ಜ್ಞಾನೋದಯ ಆಯಿದು ಹೇಳಿ ಅರ್ಥ | ಇಲ್ಲಿ “ವೈರಾಗ್ಯ” ಹೇಳಿದರೆ ದೊಡ್ಡ ಕಷ್ಟ ದ ವಿಷಯ, ಕಾವಿ ಸುತ್ತಿ ಸಂಸಾರ ಬಿಡುದು ಹೇಳಿ ಕೆಲವರು ತಿಳಿತ್ತವು | ನಿಜ ಅರ್ಥಲ್ಲಿ ಅದು ಹಾಂಗೇ ಹೇಳಿ ಅಲ್ಲ — ಸಂಸಾರಲ್ಲಿ ಎಲ್ಲರ ಹಾಂಗೆ ಇದ್ದುಕೊಂಡೇ “ವಿರಾಗಿ” ಆಗಿ ಇಪ್ಪಲೆಡಿಗು | ಉದಾ — ಸಣ್ಣ ಪ್ರಾಯಲ್ಲಿ “ಆಟದ ಗೊಂಬೆ” ಗಳ ಮೇಲೆ ಎಂತಹಾ ಸೆಳೆತ ! ಆದರೆ ಪ್ರಬುದ್ಧರಾದ ಮೇಲೆ – ಈ ಗೀತೆ ಓದುವ ಆಸೆ ಅಪ್ಪ ಪ್ರಾಯಲ್ಲಿ ಆ “ಆಟದ ಗೊಂಬೆ” ಮೇಲಣ ಸೆಳೆತ “ಶೂನ್ಯ” — ಆದರೂ ಮಕ್ಕಳ ಒಡನೆ ನಾವು ಮಕ್ಕಳ ಹಾಂಗೆ ಗೊಂಬೆ ಲಿ ಆಡುತ್ತು ಅಲ್ಲದೋ ? — ಅರ್ಥ ಆ ಗೊಂಬೆ ಯ ಮೇಲೆ ಈಗ ವೈರಾಗ್ಯ ಹೇಳಿ | ಹಾಂಗೇ ಈ ಪ್ರಪಂಚ ದ ಎಲ್ಲಾ ಕಾರ್ಯಂಗಳು “ಬೊಂಬೆ ಯ ಆಟದ ಹಾಂಗೆ” ಕಂಡರೆ ಅವ ಈ ಸಂಸಾರಲ್ಲಿ ಇದ್ದರು “ವಿರಾಗಿಯೇ” | — ಅವ ಸಂಸಾರಲ್ಲಿ ಎಲ್ಲ ರ ಒಟ್ತಿಂಗು ಸಾಮಾನ್ಯರ ಹಾಂಗೆ ನಲಿದಾಡಿದರು ಅವನ ಅಂತರಾಳ ದ ಪ್ರಪಂಚ ಬೇರೆಯೇ ಆಗಿರ್ತು | ಅಂತಹವನು “ಪ್ರಾರಬ್ಧ ಕರ್ಮ ಫಲ” ನಾಶ ಕೇಳುತ್ತಾ ಇಲ್ಲೇ — ಬದಲಿಂಗೆ ಅದರ ನೋವಿನ ಸಹಿಸುವ ಶಕ್ತಿ ಕೇಳಿ ಗೊಳ್ಳುತ್ತಾ ||

    1. ವೈರಾಗ್ಯ ಲಾಯಕ ವಿಶ್ಲೇಷಣೆ. ಈವರೇಗೆ ಲೌಕಿಕ ವೈರಾಗ್ಯ ಹೇಳಿಯೇ ಅರ್ಥಮಾಡಿಗೊಂಡಿದ್ದದು. ಧನ್ಯವಾದ ಎದುರ್ಕಳ ಮಾವಂಗೆ.

    2. ತುಂಬಾ ಒಳ್ಳೆ ವಿವರಣೆ… ಈ ವಿಷಯಕ್ಕೆ ಪೂರಕವಾಗಿ ಗೊಂತಿಪ್ಪ ವಿಷಯವ ಹೇಳುತ್ತೆ…

      ಜ್ಹಾನೋದಯ ಆದ ಮೇಲೆ ಕರ್ಮ ಫಲವ ಅನುಭವಿಸುಲೆ ಅವಂಗೆ ಯಾವುದೇ ಕಷ್ಟ ಆವುತ್ತಿಲ್ಲೇ… ಎಂತಕೆ ಹೇಳಿರೆ ತನ್ನ ಕೈಲಿ ವಿಧಿ ಆ ಕರ್ಮವ ಎಂತಕೆ ಮಾಡುಸಿತ್ತು ಹೇಳುದರ ಉದ್ದೇಶ ಅವಂಗೆ ಗೊಂತಿರುತ್ತು…
      ~~
      ಅಲೌಕಿಕವಾದ ಆನಂದವ ಪಡದವ ಲೌಕಿವಾದ ಜೀವನಲ್ಲಿ ಯಾವ ತರ ಇರುತ್ತ ಮತ್ತು ಎಂತಕೆ ಇರುತ್ತ ಹೇಳುದಕ್ಕೆ ಇಲ್ಲಿ ಉತ್ತರ ಸಿಕ್ಕುತ್ತು…

    3. ಸ೦ಸಾರಲ್ಲಿ ಎಲ್ಲೊರ ಹಾ೦ಗೆ ಇದ್ದುಗೊ೦ಡು ” ವಿರಾಗಿ” ಅಪ್ಪಲೆ ಎಡಿಗು—– ಕೆಸುವಿನ ಎಲೆಯ ಮೇಲೆ ನೀರ ಹನಿ ಇಪ್ಪ ಹಾನ್ಗೆ ಅಲ್ಲದ ಮಾವ?-

  22. ವರಾಹ ಪುರಾಣೋಕ್ತ ಶ್ರೀಮದ್ಭಗವದ್ಗೀತಾ ಮಾಹಾತ್ಮ್ಯಂ —
    ಧರೋವಾಚ : ಭೂ ಮಾತೆ ಯು ಮಾತನಾಡಿದಳು (ಕೇಳಿದಳು)

    ಭಗವನ್ ಪರಮೆಶಾನಾ ಭಕ್ತಿರವ್ಯಭಿಚಾರಿಣೀ|
    ಪ್ರಾರಬ್ಧಂ ಭುಜ್ಯಮಾನಸ್ಯ ಕಥಂ ಭವತಿ ಹೇ ಪ್ರಭೋ ||೧ ||
    ಭೂ ಮಾತೆ ಶ್ರೀ ಮಹಾ ವಿಷ್ಣು ವಿನ ಹತ್ತರೆ ಹೋಗಿ ತನ್ನ ಮಕ್ಕೊಗಾಗಿ ಹೀಂಗೆ ಕೇಳಿತ್ತು : ಹೇ ಭಗವನ್ ಪರ ಮೇಶನೇ ” ಪ್ರಾರಬ್ಧ” ವ ಅನುಭವಿಸುತ್ತಾ ಇಪ್ಪವನಲ್ಲಿ ಅವ್ಯಭಿಚಾರಿಯಾದ (ಏಕ ನಿಷ್ಠೆ ಯ) ಭಕ್ತಿ ಹೇಂಗೆ ಹುಟ್ಟುತ್ತು ? ಸಣ್ಣ ವಿವರಣೆ — ಕರ್ಮಂಗಳಲ್ಲಿ ಮೂರು ಬಗೆ ೧. ಸಂಚಿತ ಕರ್ಮ ೨. ಪ್ರಾರಬ್ದ ಕರ್ಮ ೩. ಆಗಾಮಿ ಕರ್ಮ ಈ ಮೂರು ಕರ್ಮಂಗಳಲ್ಲಿ – ಪ್ರಾರಬ್ಧ ಕರ್ಮ ವ ಅನುಭವಿಸಿಯೇ ಸಿದ್ಧ ಹೇಳಿ ಶಾಸ್ತ್ರ – ಹಾಂಗಿದ್ದರು ಅವನಲ್ಲಿ ಭಕ್ತಿ ಮತ್ತು ಜ್ಞಾನ ಹುಟ್ಟಿದರೆ ಅವ ಮುಂದೆ ಪವಿತ್ರಾತ್ಮ ಆವುತ್ತ |– ಹಾಂಗಾಗಿ ಇದರ ಉಂಟು ಮಾಡುವ ಉಪಾಯ ಎಂತ ಹೇಳಿ ಭೂ ಮಾತೆ ಭಗವಾನ್ ಶ್ರೀ ಹರಿ ಯ ಹತ್ತರೆ ಕೆಳುತ್ತಿಪ್ಪದು | ಉತ್ತರ ನೋಡುವಾ |
    ಶ್ರೀವಿಷ್ಣು: ಉವಾಚ —
    ಪ್ರಾರಬ್ಧಂ ಭುಜ್ಯಮಾನೋ ಹಿ ಗೀತಾಭ್ಯಾಸ ರತಃ ಸದಾ
    ಸ ಮುಕ್ತಃ ಸ ಸುಖೀ ಲೋಕೆ ಕರ್ಮಣಾ ನೋಪಲಿಪ್ಯತೆ ||೨ ||
    ಪ್ರಾರಬ್ಧವನ್ನು ಅನುಭವಿಸುತ್ತಿದ್ದರೂ ಯಾವನು ಗೀತಾಭ್ಯಾಸದಲ್ಲಿ ಸದಾ ನಿರತ ನಾಗಿರುವನೋ ಅವನು ಮುಕ್ತನು, ಸುಖಿಯೂ, ಲೋಕದಲ್ಲಿ ಕರ್ಮಗಳಿಂದ ಅವನು ಬಂಧಿಸಲ್ಪದುವುದಿಲ್ಲಾ ||

    1. ಈಶ್ವರ ಮಾವನ ವಿವರಣೆ ತುಂಬಾ ಇಷ್ಟ ಆವುತ್ತಾ ಇದ್ದು… ಈ ವಿಷಯಕ್ಕೆ ಪೂರಕವಾಗಿ ಗೊಂತಿಪ್ಪ ವಿಷಯವ ಹೇಳುತ್ತೆ…

      “ಪ್ರಾರಬ್ಧ ಕರ್ಮ ವ ಅನುಭವಿಸಿಯೇ ಸಿದ್ಧ ಹೇಳಿ ಶಾಸ್ತ್ರ – ಹಾಂಗಿದ್ದರು ಅವನಲ್ಲಿ ಭಕ್ತಿ ಮತ್ತು ಜ್ಞಾನ ಹುಟ್ಟಿದರೆ ಅವ ಮುಂದೆ ಪವಿತ್ರಾತ್ಮ ಆವುತ್ತ”

      ಈ ಕಾರಣಂದಲೇ “ಪ್ರಾರಬ್ದವ ಬದಲುಸುವ ಸಾಮರ್ಥ್ಯ ದೇವರಿಂಗೆ ಇಲ್ಲೇ… ಆದರೆ ಗುರುವಿಂಗೆ ಇದ್ದು…” ಹೇಳಿ ಹೇಳುದು. ಗುರುಸೇವೆ ಮಾಡುದರಿಂದಾಗಿ ಭಕ್ತಿ ಮತ್ತು ಜ್ಹಾನ ಸುಲಭಲ್ಲಿ ಹುಟ್ಟುವ ಕಾರಣ ಗುರುಸೇವೆ ಅತ್ಯಂತ ಶ್ರೇಷ್ಠ ಹೇಳುದು.

  23. ಇಲ್ಲಿ ಈ ಅಂಕಣಲ್ಲಿ ಮುಂದೆ ಬಪ್ಪ ವಿಷಯಂಗೋ — ಪ್ರತಿ ಶ್ಲೋಕದ ಅರ್ಥ ವಿವರಣೆ ಅಲ್ಲ | ೧. ಪ್ರತಿ ಅಧ್ಯಾಯಲ್ಲಿ ಅಗತ್ಯ ಇಪ್ಪಲ್ಲಿ ಕೆಲವು ಶ್ಲೋಕಂಗಳ ವಿವರಣೆ ೨. ಕೆಲವು ಶ್ಲೋಕಂಗಳ ಆಧಾರ ದ ಮೇಲೆ ನಾವು ಜೀವನಲ್ಲಿ ಅಳವಡಿಸಿಗೊಮ್ಬಲೆ ಎಡಿವ ವಿಷಯಂಗಳಲ್ಲಿ — ಅದು ಹೇಂಗೆ ಹೇಳಿ ಇಪ್ಪ ವಿವರಣೆ (ಒಂದು ರೀತಿಲಿ “ವಿಜ್ಞಾನ ” ಹೇಂಗೆ ಹೇಳಿ ) — ಅದಲ್ಲಿ ಯಾವದಾದರು ಪ್ರಶ್ನೆ ಇದ್ದರು ಉತ್ತರ ಕೊಡುವ ಪ್ರಯತ್ನ ಆವುತ್ತು | ಒಂದನೇ ಅಧ್ಯಾಯಂದ ಸುರು ಅಪ್ಪದು ಏಪ್ರಿಲ್ ಮೂರನೆ ಯ ವಾರಂದ | ನಾಳೆ ಕೆಲವು “ನಿಜ ಘಟನೆ” ಗಳ ವಿವರದೊಡನೆ “ವರಾಹ ಪುರಾಣೋಕ್ತ – ಶ್ರೀಮದ್ಭಗವದ್ಗೀತಾ ಮಾಹಾತ್ಮ್ಯಂ ” ಇದರ ಆಯ್ದ ಶ್ಲೋಕಂಗೋ||

    1. ಮಾವನ ಆ ಶುದ್ದಿಗೆ ಆಸಕ್ತಿಂದ ಕಾಯ್ತಾ ಇದ್ದು. ನಿಂಗಳ ಪ್ರೋತ್ಸಾಹಕ್ಕೆ ಹೃತ್ಪೂರ್ವಕ ವಂದನೆಗೊ.

  24. ಒಪ್ಪಣ್ಣನ ಬೈಲಿನ ಈ ಭಾಗಲ್ಲಿ ಚೆನೈ ಭಾವ ಬಹಳ ಉತ್ಕೃಷ್ಟ ರೀತಿಲಿ ಶ್ರೀಮದ್ಭಗವದ್ಗೀತೆ ಯ ವಿವರಣೆ ಕೊಡುತ್ತಾ ಇದ್ದವು | ಮೊದಲಾಗಿ ಅವಕ್ಕೆ ಅನಂತ ಧನ್ಯವಾದಂಗೋ | ಇಲ್ಲಿ ಅತ್ಯಂತ ಶ್ರದ್ಧಾ ಪೂರ್ವಕವಾಗಿ ಭಾಗವಹಿಸುತ್ತಾ ಇಪ್ಪ ಎಲ್ಲೋರು ಬರದ್ದರ ಓದಿ ಖುಷಿ ಪಟ್ಟೆ | ಶ್ರೀ ತೆಕ್ಕುಂಜ ಮಾವ, ಜಯಶ್ರೀ ಅಕ್ಕ, ಭಾಗ್ಯಲಕ್ಷ್ಮಿ ಅಕ್ಕ, ಬೊಳುಂಬು ಮಾವ, ಶ್ಯಾಮ್ ಪ್ರಸಾದ, ಏನ್. ಕೆ. ಗೋಪಾಲಕೃಷ್ಣ ಅಣ್ಣ, ಮಂಗಳೂರ ಮಾಣಿ, ಶೆಡಿಗುಮ್ಮೆ ಪುಳ್ಳಿ, ವಿದ್ಯಾ ರವಿಶಂಕರ್ ಅಕ್ಕ, ಶರ್ಮ ಅಪ್ಪಚ್ಚಿ, ಮುಳಿಯ ರಘುರಾಮ, ಇವೆಲ್ಲಾ ಬರದ್ದರ ಓದಿದೆ — ನಿಂಗೋಗೆ ಎಲ್ಲ ಹೃತ್ಪೂರ್ವಕ ಧನ್ಯವಾದಂಗೋ, ಇದಲ್ಲಿ ಕೆಲವರ ಬರಹಂಗೋ ಬಹಳ ಜ್ಞಾನಪ್ರದವಾಗಿ ಇದ್ದು | ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ —– ಭ.ಗೀ. ೪-೩೮, ಜ್ಞಾನಕ್ಕೆ ಮಿಗಿಲಾದ ಪವಿತ್ರ ವಸ್ತು ಈ ಲೋಕಲ್ಲಿ ಇನ್ನೊಂದಿಲ್ಲೆ — ಇಂತಹಾ “ಜ್ಞಾನ ಪಾನ” ಮಾಡುವ ನಾವೆಲ್ಲರೂ ನಿಜವಾಗಿಯೂ ಧನ್ಯರು ||

  25. [ಆಶ್ಚರ್ಯವಚ್ಚೈನಮನ್ಯಃ ಶೃಣೋತಿ]
    ಈ ವಿವರಣೆಗಳ ಎಲ್ಲಾ ಆನು ಆಶ್ಚರ್ಯಂದ ನೋಡುತ್ತೆ,ಕೇಳುತ್ತೆ.ಕೂಗಿಕೊಂಡಿದ್ದ ಅರ್ಜುನಂಗೆ ಲೌಕಿಕ ಕಾರಣ ಕೊಟ್ಟು ಸಮಾಧಾನಿಸುವ ಬದಲು ಕೂಡಲೇ ಆತ್ಮವಿಚಾರ ವಿವರಿಸುವ ಕೃಷ್ಣನ ಅಸಾಧಾರಣ ಕ್ರಮವನ್ನೇ ಅಚ್ಚರಿಯಾಗಿ ಕಾಣುತ್ತೆ.

  26. “ಹೇಂಗೆ ಅಬ್ಬೆ ಮಗುವಿಂಗೆ ಅಂಗಿ ಬದಲುಸುತ್ತೋ ಹಾಂಗೆ ಭಗವಂತ ಜೀವಾತ್ಮಕ್ಕೆ ದೇಹ ಬದಲುಸುತ್ತ°. ಜೀವಕ್ಕೆ ಸ್ವತಃ ದೇಹ ಬದಲುಸುವ ಸ್ವಾತಂತ್ರ್ಯ ಇಲ್ಲೆ. ಅಂದರೆ ಆತ್ಮ ಸಾಕ್ಷಾತ್ಕಾರ ಪಡದ ಯೋಗಿಗೊಕ್ಕೆ ಇದು ಸಾಧ್ಯ. ನೈಜ ಜೀವನಲ್ಲಿ ನವಗೆ ಅರಿವು ಮೂಡಿದ ಮತ್ತೆ ನಾವೇ ಅಂಗಿ ಬದಲುಸುತ್ತ ಹಾಂಗೆ.”

    ಇಷ್ಟೊಂದು ಅವಕಾಶ ಇಪ್ಪ ನಾವು ಕೇವಲ ಈ ಶರೀರಕ್ಕೆ ಹಾಕುವ ಅಂಗಿಯ ಬಗ್ಗೆ ಚಿಂತೆ ಮಾಡಿಗೊಂಡು ಕಾಲಹರಣ ಮಾಡುದು ಕಾಮ್ಬಗ …… 🙁 🙁 🙁

  27. ಆತ್ಮವೇ ಪರಮ ಸತ್ಯ ಹೇಳಿ ವಿವರುಸುವ ಗೀತೆಯ ಈ ವಿವರಣೆ ಯೇವತ್ತಿಂಗೂ ಉತ್ಕೃಷ್ಟ.
    ನೈನಂ ಛಿಂದಂತಿ… ಶ್ಲೋಕವಂತೂ ತುಂಬ ಅರ್ಥಪೂರ್ಣ !

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×