ಮೋರೆ ತಿರುಗಿಸಿ ನೆಡದ ಮೋರೆಪುಸ್ತಕದ ‘ಕಲ್ಪನ’…

ಅಂಬಗ ಆನು ಬೆಂಗಳೂರಿಂಗೆ ಹೊಸಬ°. ಬೈಲ ಕರೇಲಿ ಇಪ್ಪ ಗೆದ್ದೆಲಿ ಪುಳ್ಳರುಗಳೊಟ್ಟಿಂಗೆ ಆಟ ಆಡಿಂಡು,

ಅಮ್ಮನ ಕೈಯಿಂದ ಬೈಗಳು ತಿಂದೊಂಡು,  ಕಾಲೇಜಿಂಗೆ ಹೋಗಿಂಡು, ಪರೀಕ್ಷೆಲಿ ಹೇಂಗಾರು ಪಾಸಾಗಿ, ಇನ್ನು ಮನೆಲಿ ಕೂದರೆ ಆಗ, ಮದುವೆಗಪ್ಪಗ  ಕೂಸು ಸಿಕ್ಕ ಹೇಳಿ;  ಅಪ್ಪ° ಒತ್ತಾಯ ಮಾಡಿ ಬೆಂಗಳೂರಿನ ಬಸ್ಸಿನ ಹತ್ಸಿಬಿಟ್ಟ ನಂತರ ಅಲ್ಲದೋ ಮಹಾಸಾಗರದ ಹಾಂಗಿಪ್ಪ ಈ ಊರಿಂಗೆ ಬಂದು ಬಿದ್ದದು!

ನಿರ್ಚಾಲು, ಬದಿಯಡ್ಕ, ಪುತ್ತೂರು, ಉಪ್ಪಿನಂಗಡಿ, ವಿಟ್ಲ… ಹೀಂಗಿಪ್ಪ ಸಣ್ಣ ಪೇಟೆಯ ಸುತ್ತಿದ್ದು, ಕಂಡದು ಬಿಟ್ರೆ ನಾವು ಬಹು ದೊಡ್ಡ ಪೇಟೆಯ ನೋಡಿದ್ದು ಟಿವಿಲಿ ಮಾತ್ರ ಇದಾ. ಹೇಳಿದಾಂಗೆ ಕೊಡೆಯಾಲವನ್ನು ಒಂದೆರಡು ಸರ್ತಿ ಸುತ್ತಿದ್ದು. ಬೆಂಗ್ಳೂರಿಂಗೆ  ಹೋಲಿಸಿದರೆ ಅದೆಂತಾ ಅಷ್ಟು ದೊಡ್ಡ ಪೇಟೆ ಅಲ್ಲ ಹೇಳಿ ನಮ್ಮ ಅಭಾವನೇ ಹೇಳುಗು.

ಹೀಂಗಿಪ್ಪ ಬೆಂಗ್ಳೂರಿಲ್ಲಿ ಬಂದ ಹೊಸತರಲ್ಲಿ ನವಗೆ ಗೊಂತಿದ್ದದು ಕೆಲವೇ ಕೆಲವು ಜಾಗೆಗೊ. ಗಿರಿನಗರಲ್ಲಿ ನಮ್ಮ ಮಠ, ಮಲ್ಲೇಶ್ವರಲ್ಲಿಪ್ಪ ಹವ್ಯಕ ಮಹಾ ಸಭಾ ಆಫೀಸು, ಹುಳಿಮಾವಿಲ್ಲಿಪ್ಪ ಚಾಮುಂಡಿ ಮನೆ, ಓ ಅಲ್ಲಿ ವೈಟ್‌ ಫೀಲ್ಡಿಲ್ಲಿಪ್ಪ ರಾಘವೇಂದ್ರ ಅಪಾರ್ಟುಮೆಂಟು,  ಕಸ್ತೂರಿ ನಗರ, ರಾಜರಾಜೇಶ್ವರಿ ನಗರಲ್ಲಿಪ್ಪ  ಎರಡು ಮನೆಗಳ ಬಿಟ್ರೆ ನವಗೆ ಬೇರೆಂತು ಅರಡಿಯ. ಸರಿಯಾಗಿ ದಾರಿ ಗೊಂತಿದ್ದದು ಮೆಜೆಸ್ಟಿಕ್ಕಿಂಗೆ ಮಾತ್ರ. ಅಷ್ಟು ಗೊಂತಿದ್ದರೆ ಸಾಕು ಹೇಳಿ ಎನ್ನ ಕೋಂಗಿ ಮಾಡುಗು ಜಾಲ್ಸೂರು ಸುಪುತ್ರ°!  ;) ಇರಲಿ.

ಇರುಳು ಉಳ್ಕೊಂಬಲೇ ಎಂತ ಸಮಸ್ಯೆಯೂ ಇತ್ತಿದಿಲ್ಲೆ.  ನಮ್ಮವರದ್ದೇ ಐದಾರು ಮನೆ ಇದ್ದ ಕಾರಣ! ದಿನಕ್ಕೊಬ್ಬನ ಮನೆಲಿ ಕೂದೊಂಡು ಬಂದ ಹೊಸತ್ತರಲ್ಲಿ ದಿನ ನೂಕಿದ್ದು ನಾವು. ಬೆಂಗ್ಳೂರಿಂಗೆ ಬಂದು ಸುಮ್ಮನೆ ಕೂಪಲೆ ಆವ್ತಾ. ಬಂದ ಉದ್ದೇಶವೇ ಕೆಲಸ ಹುಡ್ಕಲೆ ಆದ ಕಾರಣ, ಹಗಲೆಲ್ಲಾ ಕೆಲಸ ಹುಡ್ಕುವ ತೆರಕ್ಕು ನವಗೆ.  ಕೆಲಸ ಹುಡ್ಕುದು ಹೇಳಿದರೆ, ಹಿಂದಾಣ ಕಾಲಲ್ಲಿ ಮನೆಲಿ ಆಳುಗ ಬಂದು ಬೇಲೆ ಉಂಡ ಅಣ್ಣೇರೆ ಹೇಳಿ ಕೇಳಿದಾಂಗೆಯೋ? ಅಲ್ಲಪ್ಪಾ  ಅಲ್ಲಾ.. ಅದಕ್ಕೆ ರೆಸ್ಯೂಮು (ಸಿ.ವಿ ಹೇಳಿಯೂ ಹೇಳುಗು) ಆಯೆಕ್ಕು, ಅದರ ಕಂಪೆನಿಗೆ ಕಳುಸೆಕ್ಕು. ಕಂಪೆನಿಯವು ಅದರ ನೋಡಿ ನಮ್ಮ ಪರೀಕ್ಷೆಗೆ ದಿನಿಗೇಳೆಕ್ಕು. ಅದರಲ್ಲಿ ಇಂಟ್ರೂ ಪಾಸಾಯೆಕ್ಕು. ಹು ಹು ಕೆಲಸ ಸಿಕ್ಕಲೆ ಕೆಲಸ ಎಷ್ಟಿದ್ದು?

Page 1 of 6 | Next page