Oppanna.com

ಎದೆಯ ದನಿ-ಕವನ ಸಂಕಲನ

ಬರದೋರು :   ಶರ್ಮಪ್ಪಚ್ಚಿ    on   28/04/2015    9 ಒಪ್ಪಂಗೊ

ಎದೆಯ ದನಿ-ಕವನ ಸಂಕಲನ, ಗುಣಾಜೆ ರಾಮಚಂದ್ರ ಭಟ್

ಎದೆಯ ದನಿ- ಗುಣಾಜೆ ರಾಮಚಂದ್ರ ಭಟ್- ಮುಖ ಪುಟಈ ವರ್ಷದ ವಿಷು ವಿಶೇಷ ಸ್ಪರ್ಧೆಯ ಪ್ರಬಂಧ ಬರವದರಲ್ಲಿ ಪ್ರಥಮ ಬಹುಮಾನ ತೆಕ್ಕೊಂಡ ಗುಣಾಜೆ ರಾಮಚಂದ್ರ ಭಟ್, ಮಂಗಳೂರಿನ ಸೈಂಟ್ ಅಲೋಶಿಯಸ್ ಪ್ರೌಢ ಶಾಲೆಲಿ 35 ವರ್ಷಕ್ಕಿಂತಲೂ ಹೆಚ್ಚು ಸಮಯ ಕನ್ನಡ ಅಧ್ಯಾಪನ ವೃತ್ತಿ ಕೈಗೊಂಡ ಅನುಭವ ಇಪ್ಪವು. 2014 ನೆಯ ಸಾಲಿನ ದ.ಕ. ಜಿಲ್ಲಾ ಮಟ್ಟದ “ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಯ ತನ್ನದಾಗಿಸಿಗೊಂಡಿದವು. ವೃತ್ತಿಂದ ನಿವೃತ್ತಿ ಹೊಂದುವ ಈ ಸಂದರ್ಭಲ್ಲಿ “ಎದೆಯ ದನಿ” ಹೇಳ್ತ ಕವನ ಸಂಕಲನವ ಹೆರ ತಯಿಂದವು.

ಇವು ಕವನ, ಹನಿಗವನ, ಚುಟುಕುಗಳ ಮೂಲಕ ತಮ್ಮ ಭಾವನೆಗಳ ವ್ಯಕ್ತಪಡುಸಲೆ ಸಮರ್ಥರಾಗಿ, ತಾಲೂಕು, ಜಿಲ್ಲಾ, ಅಂತರ್ ಜಿಲ್ಲೆ, ಅಂತಾರಾಜ್ಯ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದು ಮಾತ್ರ ಅಲ್ಲದ್ದೆ, ಬಹುಮಾನವನ್ನೂ ಪಡಕ್ಕೊಂಡಿದವು.

ತನ್ನ ಕವನಂಗಳ ಗಮಕ ಶೈಲಿಲಿ ಹಾಡುವದು ಇವರ ವಿಶೇಷತೆ.

ಇವರ ಈ ಪುಸ್ತಕಕ್ಕೆ ಮುನ್ನುಡಿ ಬರದ ಶ್ರೀ ವಸಂತ ಕುಮಾರ ಪೆರ್ಲ ಇವು ಹೇಳಿದ ಮಾತುಗೊ:-

ಭಾವುಕ ಕವಿಹೃದಯದ ಗುಣಾಜೆ ರಾಮಚಂದ್ರ ಭಟ್ಟರು ಕವಿತೆಯ ಅಂತರಂಗ ಬಹಿರಂಗ ದರ್ಶನ ಮಾಡುತ್ತ, ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತ, ಕಾವ್ಯದ ಬಗ್ಗೆ ತನ್ನದೇ ಆದ ಧೋರಣೆಯೊಂದನ್ನು ಬೆಳೆಸಿಕೊಂಡರು, ಮತ್ತು ಆ ಹಾದಿಯಲ್ಲಿ ತಮ್ಮ ರಚನೆಗಳನ್ನು ಮಾಡುತ್ತಾ ಬಂದರು

’ನನ್ನ ಕವಿತೆ’ ಎಂಬ ಕವನದಲ್ಲಿ ಕವಿ ಹೇಳುತ್ತಾರೆ,

ನನ್ನ ಕವಿತೆಗಳು
ನವಭಾವಗೀತೆಗಳು
ನೋವು ನಲಿವಿನ ಪಾಕಗಳು
ಭಾವನೆಗಳ ತುಡಿತಗಳು
ಕವಿತೆಯ ಪ್ರತಿಸಾಲುಗಳು
ಹೃದಯದ ಹದಮಿಡಿತಗಳು
ಮೂಡಿ ಬರುವುದು ಕವಿತೆಗಳು
ಹಾಡ ಹೊಮ್ಮುವುವು ಕವಿತೆಗಳು

ಕವಿತೆಗಳು ನವಭಾವಗೀತೆಗಳಾಗಿ, ನೋವು ನಲಿವಿನ ಕಥನಗಳಾಗಿ, ಹೃದಯದ ಹದಮಿಡಿತಗಳಾಗಿ ಅನಾವರಣಗೊಳ್ಳುತ್ತಿರುವುದು ಕವಿಗೆ ಸ್ಪಷ್ಟವಾಗಿ ಕಾಣುತ್ತಿದೆ…..
ತರಂಗತರಂಗವಾಗಿ ಬರುವ ಯೋಚನಾಲಹರಿಗಳನ್ನು ಹೀಗೆ ಕವಿತೆಯ ಮೈಯಲ್ಲಿ ಕಂಡರಿಸುವ ಕವಿಗೆ ಶಬ್ದಸಂಪತ್ತು ವಿಪುಲವಾಗಿದೆ
….. ಈ ಕವಿಯಲ್ಲಿರುವ ಪದಮೈತ್ರಿ ಮತ್ತು ಶಬ್ದಶಯ್ಯೆ ಸಂತೋಷ ಕೊಡುವ ಸಂಗತಿ

’ತೆಂಗು ಕಂಗು ತೂಗಿಬಾಗಿ ತೊನೆಯುವ, ಕಡಲತೆರೆ ನೊರೆ ದಡಕ್ಕಪ್ಪಳಿಸಿ ಮೊರೆಯುವ” (ಗೋವಾ)
’ಕಾಸರಗೋಡಿನ ಚೆಲುವ ಕಯ್ಯಾರ, ಕನ್ನಡಮ್ಮನ ಕೊರಳ ಹಾರ (ಕಯ್ಯಾರರಿಗೆ ನಮನ),
ಮರಗಿಡ ಬಳ್ಳಿ, ತಾಯ ಕರುಳಬಳ್ಳಿ, ಮಿನುಗುವ ಮಿಂಚುಳ್ಳಿ, ಈ ನಿಸರ್ಗವು ಸಗ್ಗವು, ನೆಲತಾಯ ಮಡಿಲು, ಆಗದಿರಲಿ ಬರಸಿಡಿಲು, ತಾಯೆದೆಗೆ ವಿಷವೂಡಿ, ಕೊಳೆಗುಪ್ಪೆ ಕೂಡಿ, ನಾವೆಲ್ಲ ಉಳಿದೇವು? ಬಾಳೇವು? ಬದುಕೇವು? (ಹಕ್ಕಿ ಹಾಡುತ್ತಿರಲಿ) ಮೊದಲಾದೆಡೆಗಳಲ್ಲಿ ಅದನ್ನು ಗುರುತಿಸಬಹುದು.

ಕಾವ್ಯವಸ್ತುವನ್ನು ಹಿಡಿಯುವ ಚಾತುರ್ಯ, ಕಲ್ಪನೆ , ಭಾಷಾ ಸಂಪತ್ತು ಇವುಗಳೊಂದಿಗೆ ಅವನ್ನು ಒಂದು ಹದಪಾಕದಲ್ಲಿ ಹಿಡಿದಿಟ್ಟು ಧ್ವನಿಪೂರ್ಣವಾಗಿ ಹೇಳುವ ಪ್ರಯತ್ನ ಈ ಕವಿಯಲ್ಲಿ ಕಂಡುಬರುತ್ತದೆ.
ತನ್ನ ಅಗಾಧವಾದ ಜೀವನಾನುಭವ ಮತ್ತು ಜೀವಪ್ರೀತಿಗಳಿಂದ ಈ ಕವಿ ಇನ್ನಷ್ಟು ಒಳ್ಳೆಯ ರಚನೆಗಳನ್ನು ಮುಂದಕ್ಕೆ ನೀಡಲಿ ಎಂದು ಹಾರೈಸುತ್ತೇನೆ.

ಇವರ ಕವನದ ಒಂದೆರಡು ತುಣುಕು ಇಲ್ಲಿ ಕೊಡ್ತೆ

ಕಯ್ಯಾರರಿಗೆ ನಮನ

ನಾಡೋಜ, ಕವಿ, ಕಯ್ಯಾರ
ಕನ್ನಡದ ಕಟ್ಟಾಳು ದೀರಾ|
ಹುಟ್ಟು ಹೋರಾಟಗಾರ
ಹೆಸರು ಕಯ್ಯಾರ ಕಿಞ್ಞಣ್ಣ
ಕನ್ನಡಿಗರ ಹಿರಿ ಸಿರಿಯಣ್ಣ
ನೂರು ವರಷ ಮೀರಿ ಬಾಳಿರಣ್ಣಾ

—–
—–
ಕಾಸರಗೋಡಿನ ಚೆಲುವ ಕಯ್ಯಾರ|
ಕನ್ನಡಮ್ಮನ ಕೊರಳ ಹಾರ||
ನಾಡಬಿಡುಗಡೆಯ ಹೋರಾ|ಟಗಾರ|
ಕವಿ ಕಯ್ಯಾರ, ಹೆಸರು ಅಮರ||
ನಶ್ವರವಲ್ಲ, ಅಕ್ಷರ, ಅಜರಾಮರ|
ಶಾಶ್ವತವು ಇವರ ಕಾವ್ಯಸಾಗರ||

 ಗಾಂಧಿ

ಗಾಂಧಿ ಎಂಬುವನೊಬ್ಬನಿದ್ದ,
ಗಾದಿಯನೆಂದು ಬಯಸದೆ ಇದ್ದ |
ಇದ ತಿಳಿ, ಆತನೊಬ್ಬ ಬುದ್ಧ, ಸಿದ್ಧ,
ಗಾಂಧಿ ಇದ್ದಲ್ಲಿ ಇಲ್ಲಾ ಯುದ್ಧ |
ಇಂದಿನ ಕಂದನೀತನ ಮರೆತೇ ಹೋದ
ಗಾಂಧಿ ಎಂದರೆ? ಯಾವ ಗಾಂಧಿ ? ಎಂದ

ಕಡು ಬಡವರ ಕಂಬನಿ ಒರೆಸಿದ್ದ,
ಬಡವಗೆ ಇಲ್ಲದ ಉಡುಪು ತನಗೇಕೆಂದ |
ತುಂಡು ಬಟ್ಟೆಯಲ್ಲಿ ನಡೆದಾಡಿದ್ದ
ತುಂಡಾಗದ ದೇಶದ ಕನಸ ಕಂಡಿದ್ದ |
ಗೋಡ್ಸೆ ಗುಂಡಿಗೆ ಎದೆಯೊಡ್ಡಿದ್ದ
’ಹೇ ರಾಮ್’ ಎಂದು ಆಗ ಉಸುರಿದ್ದ|
ಕೊಲ್ಲ ಬಂದವಗೆ, ಕೊಂದೇ ಬಿಡು ಎಂದ
ನಂಬರಾರೂ, ಇಂತ, ಸಂತನೊಬ್ಬನಿದ್ದ||

ಐವತ್ತು ಕವನಗಳ ಈ ಸಂಕಲನಕ್ಕೆ ಅರ್ಥಪೂರ್ಣವೂ ಸುಂದರವೂ ಆದ ಮುಖಚಿತ್ರ ರಚನೆ ಮಾಡಿಕೊಟ್ಟದು, ಇವರ ಹಳೆವಿದ್ಯಾರ್ಥಿ, ಸಹೋದ್ಯೋಗಿ, ಹೆಸರಾಂತ ಕಲಾವಿದ ಜಾನ್ ಚಂದ್ರನ್ (ತರಂಗಲ್ಲಿ ಬಪ್ಪ ತೆನ್ನಾಲಿ ರಾಮ ಚಿತ್ರಕತೆಗೆ ಚಿತ್ರ ಬಿಡುಸುವವ°)

ಪುಸ್ತಕವ ಕೊಂಡು ಓದಿ, ಕವಿಗೆ ಪ್ರೋತ್ಸಾಹ ಕೊಡುವಿರಾದರೆ, ಪ್ರತಿ ಸಿಕ್ಕುವ ವಿಳಾಸ ಇಲ್ಲಿದ್ದು:

ಗುಣಾಜೆ ರಾಮಚಂದ್ರ ಭಟ್
“ಶ್ರೀವನ” ಕವನ ಸದನ
ಬೆಳ್ಮ ಗ್ರಾಮ, ದೇರಳೆಕಟ್ಟೆ ಅಂಚೆ 575018
ಮಂಗಳೂರು ತಾಲೂಕು, ದ. ಕ.
ಸಂಚಾರ ದೂರವಾಣಿ: 9743902522

ಪಸ್ತಕದ ಬೆಲೆ: ರೂ 60/=

~~~***~~~

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

9 thoughts on “ಎದೆಯ ದನಿ-ಕವನ ಸಂಕಲನ

  1. ‘ ಎದೆಯ ದನಿ’ ಯನು ಕೇಳಿ
    ಹರ್ಷವಾಯ್ತೆನಗೆ
    ಕವನದಲಿ ಸುತ್ತಿ
    ಮುದವಾಯ್ತು ಕೊನೆಗೆ

    ಜೀವನದಿ ಕಂಡುದನು
    ಮನ ಮುಟ್ಟುವಂತೆ
    ಬಣ್ಣಪರು ಹಲರಿಲ್ಲ
    ಬರೆದು ನಿಮ್ಮಂತೆ

    ಕವನಗಳು ನಿಮ್ಮಿಂದ
    ಹುಟ್ಟುತಿವೆ ಸಹಜ
    ಕೃತಕತೆಯ ಸುಳಿವಿಲ್ಲ
    ನೀವೆ ಪದ ಕಣಜ

    ನಿಮ್ಮಿಂದ ಹೊರಬರಲಿ
    ಇನ್ನಷ್ಟು ಪದ್ಯ
    ಗದ್ಯ ನಾಟಕ ಕಥೆಯ
    ಪ್ರಕಟಿಸಿರಿ ಸದ್ಯ

    ನಿಮಗೆನ್ನ ಶುಭ ನುಡಿಯ
    ಹಾರೈಕೆ ಯುಂಟು
    ನಿರತ ಬೆಳೆಯಲಿ ನಮ್ಮ
    ಸಾಹಿತ್ಯನಂಟು

    ಗುಣಾಜೆ ರಾಮಚಂದ್ರ ಭಟ್ಟರ ‘ಎದೆಯ ದನಿ’ ಕವನ ಸಂಕಲನ ಓದಿ ಹಿರಿಯ ಕವಿ , ಸಾಹಿತಿ ಪ್ರೊ । ವಿ. ಬಿ. ಅರ್ತಿಕಜೆ ಯವು ಈ ಪದ್ಯವ ಬರದ್ದವು .

    ಎನ್ನ ‘ಎದೆಯ ದನಿ’ ಕೃತಿಯ ವಿಮರ್ಶೆಯ ಶರ್ಮಪ್ಪಚ್ಚಿ (ಹಳೆಮನೆ ಶ್ರೀಕೃಷ್ಣ ಶರ್ಮಣ್ಣ ) ಒಪ್ಪಣ್ಣನ ಬಯಲಿಲ್ಲಿ ಬರದ್ದರ ಬಗ್ಗೆ ಮೆಚ್ಚಿ ಪ್ರತಿಕ್ರಿಯೆ ಬರೆದ ಸಹೃದಯರಿಗೆಲ್ಲ ಗುಣಾಜೆ ಭಾವನ ಧನ್ಯವಾದಂಗೊ .

    ೧) “ಶ್ರೀ ವಸಂತ ಕುಮಾರ್ ಪೆರ್ಲ ಹೇಳಿದ ಮಾತುಗೊ ಒಪ್ಪಕ್ಕೆ ಒಂಬುತ್ತು ” ಹೇಳಿ ಎನ್ನ ಕೃತಿಲಿಪ್ಪ ಕವನಂಗಳ ಬಗ್ಗೆ ಮೆಚ್ಚಿ ಬರದ ಚೆನ್ನೈ ಭಾವಂಗೆನ್ನ ಹಾರ್ದಿಕ ಧನ್ಯವಾದಂಗೊ . ಇನ್ನಷ್ಟು ಬರವಲೆ ನಿಂಗಳ ಮಾತು ಉಮೇದು ಕೊಟ್ಟಿದು.

    ೨) ಈ ಸರ್ತಿಯ ವಿಷು ವಿಶೇಷ ಸ್ಪರ್ಧೆಯ ಪ್ರಬಂಧ ಸ್ಪರ್ಧೆಲ್ಲಿ ಎನಗೆ ಮೊದ್ಲಾಣ ಬಹುಮಾನ ಸಿಕ್ಕಿದಕ್ಕೆ ‘ಬಹುಮಾನ ಅರ್ಹ ವ್ಯಕ್ತಿಗೆ ಸಂದಿದು ಹೇಳ್ಸು ಹೆಮ್ಮೆಯ ವಿಚಾರ ‘ ಹೇಳಿ ಶ್ರೀ ರವಿ ದೊಡ್ಡಮಾಣಿ ಎನ್ನ ಸಂತೊಷವ ನೂರುಪಟ್ಟು ಹೆಚ್ಚಿಸಿದ್ದವು.

    ೩) ಎನ್ನ ‘ಎದೆಯ ದನಿ ‘ ಕವನಂಗಳ ಹದ ಮಿಡಿತ ‘ ನಮ್ಮ ಎದೆಗೂ ಹದವಾಗಿ ತಟ್ಟುತ್ತು’ ಹೇಳುವ ವಿಜಯಕ್ಕನ ಮಾತಿನ ಎನಗೆ ಮರವಲೆಡಿಯ.

    ೪) ನೀರ್ಚಾಲಿನ ಕಾರ್ಯಕ್ರಮದ ಬಗ್ಗೆ ಆನು ಬರದು ಹಾಡಿದ ಚುಟುಕು , ಕವಿತೆ ರಂಜಿಸಿದ್ದು ಹೇಳಿ ತೆಕ್ಕುಂಜ ಕುಮಾರ ಭಾವ ಇವು ಭಾವನೆ ವ್ಯಕ್ತಪಡಿಸಿದ್ದು ಎನಗೆ ಬರವಣಿಗೆ ಮುಂದುವರಿಸುಲೆ, ಇನ್ನಷ್ಟು ಒಳ್ಳೆದಾಗಿ ಹಾಡ್ಲೆ ಪ್ರೇರಣೆ ಕೊಟ್ಟಿದು.

    ೫) ಆನು ಕವಿತೆ ಓದುದರ ಬಗ್ಗೆ ತುಂಬಾ ಮೆಚ್ಚಿ ಹಾಡಿ ಹೊಗಳಿ ಎನ್ನ ಅಟ್ಟಕ್ಕೇರಿಸಿದ ಕವಿ ಎಸ್. ಕೆ. ಗೋಪಾಲಕೃಷ್ಣ ರ ಸಹೃದಯತೆಯ ಸೀವಿನ ನೆಂಪು ಬಹುಕಾಲ ಮರವಲಾಗದ್ದು.

    ೬) ಆನು ಎಷ್ಟೋ ಚುಟುಕು ಸಾಹಿತ್ಯ ಸಭೆಲಿ ಹಾಡಿದ ‘ ಕವನಂಗಳ ವಸ್ತು, ಅರ್ಥ, ಅದರ ಹೇಳುವ ಸ್ವರ ಲಾಲಿತ್ಯ ಎಲ್ಲವುದೆ ಚೆಂದ ‘ ಹೇಳಿ ಎನ್ನ ಪ್ರಶಂಸಿದ ಸ್ವತಃ ಕವಿಗಳೂ ಸಹೃದಯೂ ಆಗಿಪ್ಪ ಶ್ರೀ ಬೊಳುಂಬು ಗೋಪಾಲಕೃಷ್ಣ ಇವರ ಮುತ್ತಿನ ಮಾತು ಎನಗೆ ದೊಡ್ಡ ಪ್ರಶಸ್ತಿ ಹೇಳಿ ಭಾವಿಸುತ್ತೆ.

    ೭) ಮುಳಿಯದ ರಘು ಭಾವಂಗೆ ಧನ್ಯವಾದ ಅರ್ಪಿಸುತ್ತೆ.

    – ಗುಣಾಜೆ ರಾಮಚಂದ್ರ ಭಟ್.

    (ಅಪ್ಪನ ಪರವಾಗಿ ಬರದ್ದು ಆನು . -ಮಹೇಶ ಗುಣಾಜೆ )

  2. ಗುಣಾಜೆ ರಾಮಚಂದ್ರಂಗೆ ಕಂಪ್ಯೂಟರ್ ವ್ಯವಸ್ಥೆ ಇಲ್ಲದ್ದ ಕಾರಣ, ಇಲ್ಲಿ ಬಂದ ಒಪ್ಪಂಗಳ ನೋಡ್ಲೆ ಆಯಿದಿಲ್ಲೆ. ಎಲ್ಲಾ ಒಪ್ಪಂಗಳನ್ನೂ ಅವರ ಮೊಬೈಲಿಂಗೆ ಕಳುಸಿದ್ದೆ.
    ತುಂಬಾ ಕೊಶಿಪಟ್ಟಿದವು. ಅವಕ್ಕೆ ಸಿಕ್ಕಿದ ಈ ಪ್ರೋತ್ಸಾಹಂದ ಇನ್ನೂ ಹೆಚ್ಚು ಹವಿಗನ್ನಡಲ್ಲಿ ಬರೆತ್ತೆ ಹೇಳಿ ಹೇಳಿದವು, ಮಾತ್ರ ಅಲ್ಲದ್ದೆ, ಹವಿಗನ್ನಡಲ್ಲಿಯೇ ಕವನ ಬರದು ಪ್ರಕಟಿಸುವ ಬಯಕೆಯನ್ನೂ ಹೇಳಿದ್ದವು. ನಮ್ಮ ಸಹಕಾರ ಇದ್ದು ಹೇಳಿ ಅವಕ್ಕೆ ತಿಳಿಸಿ ಆಯಿದು.
    ಶುದ್ಧ ಮನಸ್ಸಿನ ಭಾವುಕ ಕವಿಗೆ ಧನ್ಯವಾದಂಗೊ.

  3. ಗುಣಾಜೆ ಅಪ್ಪಚ್ಚಿಯ ” ಎದೆಯ ದನಿ ” ಕವನ ಸಂಕಲನವ ಇಡೀ ಓದಿದೆ . ಗುಬ್ಬಿ ಎಲ್ಲಿ ?, ನಮ್ಮೂರ ಹೆಸರು ,ಹಕ್ಕಿ ಹಾಡು ,ಕಯ್ಯಾರ .. ಹೀ೦ಗೆ ವೈವಿಧ್ಯಮಯ ವಸ್ತುಗಳ ತನ್ನ ವಿಶಿಷ್ಟ ಶೈಲಿಯ ಕವನಂಗಳಲ್ಲಿ ರಚನೆ ಮಾಡಿದ್ದವು .
    ನನ್ನ ಕವಿತೆಗಳು
    ಭಾವದ ಕಾವಿನ ಓಣಿಗಳು
    ನನ್ನ ಕವಿತೆಗಳು
    ಯೋಚನೆ ಲಹರಿಯ ತರಂಗಗಳು
    ಹೇಳಿದ ಮಾತುಗೊ ಈ ಕವಿತೆಗಳ ಓದಿಯಪ್ಪಗ ಗೊಂತಾವುತ್ತು . ಬಹುಷಃ ಅವರ ಕಂಚಿನ ಕಂಠಲ್ಲಿ ಹಾಡಿರೆ ಇನ್ನೂ ರೈಸುಗು ..
    ಕವಿತೆಯ ಪ್ರವೇಶಿಕೆಗೆ ಧನ್ಯವಾದ , ಶರ್ಮಪ್ಪಚ್ಚಿ .

  4. ಗುಣಾಜೆ ರಾಮಚಂದ್ರಣ್ಣನ ಎದೆಯ ದನಿಯ ಆನುದೆ ಪೂರ್ತಿ ಓದಿದ್ದೆ. ಅವು ಭಾಗವಹಿಸಿದ ಹಲವಾರು ಚುಟುಕು ಸಾಹಿತ್ಯ ಸಭೆಲಿ ಆನುದೆ ಭಾಗವಹಿಸಿ ಅವರ ಕವನಂಗಳ ಕೇಳಿದ್ದೆ. ಅವರ ಕವಿತೆಗಳಲ್ಲಿಪ್ಪ ಅರ್ಥ, ಅವು ಅದರ ಹೇಳುವ ಸ್ವರಲಾಲಿತ್ಯ ಎಲ್ಲವುದೆ ಚೆಂದ. ಮನ್ನೆ ಅವರ ಕಂಚಿನ ಕಂಠಲ್ಲಿ ಅವು ಒಪ್ಪಣ್ಣನ ಹೊಗಳಿದ್ದದು ಈಗಲುದೆ ನೆಂಪಾವುತ್ತು.

  5. ರಾಮಚಂದ್ರಣ್ಣ ಕವಿತೆಯ ಓದುದು ಕೇಳಲೇ ಚೆಂದ . ಏರು -ಇಳಿಯ ಸ್ವರದ ಬದಲಾವಣೆ , ಭಾವುಕವಾದ ರಾಗ, ಸ್ಪಷ್ಟ ಉಚ್ಚಾರ , ಲಯ, ಮೇಲಾಗಿ ಒಳ್ಳೆ ಕಂಠ – ಅವು ಕವಿತಾವಾಚನ ಮಾಡುದು ಭಾರೀ ಲಾಯಕ ಆವ್ತು . ಇನ್ನಾಣ ವರ್ಷ ಅವರದ್ದೇ ಒಂದು ಅರ್ಧ ಗಂಟೆ ಚುಟುಕ ವಾಚನ ಏರ್ಪಡಿಸಲಕ್ಕು .

  6. ಈ ಸರ್ತಿಯಾಣ ವಿಷು ವಿಶೇಷ ಸ್ಪರ್ಧೆಯ ಪ್ರಬಂಧ ವಿಭಾಗದ ಪ್ರಥಮ ಬಹುಮಾನ ಈ ಅರ್ಹ ವ್ಯಕ್ತಿಗೆ ಸಂದಿದು ಹೇಳ್ಸು ಹೆಮ್ಮೆಯ ವಿಚಾರ.

    1. ನಮ್ಮ ನೀರ್ಚಾಲಿನ ಕಾರ್ಯಕ್ರಮದ ಬಗ್ಗೆಯೂ ಚುಟುಕ ಕವಿತೆ ಹಾಡಿ ರಂಜಿಸಿದ್ದವು.

  7. ಶುದ್ದಿಯ ಓದಿಯಪ್ಪಗ ಗುಣಾಜೆ ಭಾವನ ಬಗ್ಗೆ ಪುಸ್ತಕಕ್ಕೆ ಮುನ್ನುಡಿ ಬರದ ಶ್ರೀ ವಸಂತ ಕುಮಾರ ಪೆರ್ಲ ಹೇಳಿದ ಮಾತುಗೊ ಒಪ್ಪಕ್ಕೆ ಒಂಬುತ್ತು. ಹರೇ ರಾಮ ಶುದ್ದಿಗೆ, ಗುಣಾಜೆ ಭಾವಂಗೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×