Oppanna.com

ಪುಸ್ತಕ ಪರಿಚಯ – 8 “ಬ್ರಹ್ಮಪುರಿಯ ಭಿಕ್ಷುಕ”

ಬರದೋರು :   ತೆಕ್ಕುಂಜ ಕುಮಾರ ಮಾವ°    on   18/06/2011    10 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ಶತಾವಧಾನಿ ಡಾ.ಆರ್. ಗಣೇಶರ ಹೆಸರು ಗೊಂತಿಲ್ಲದ್ದ ಜೆನ ಬಹುಶಃ ಆರೂ ಇರವು. ಪುರಾತನ ಕಾಲದ ಸಂಸ್ಕ್ರತ ‘ಅವಧಾನ’ ಕಲೆಯ ಕನ್ನಡಿಗರಿಂಗೆ ಪರಿಚಯ ಮಾಡಿಸಿದ ಕೀರ್ತಿ ಅವರದ್ದು. ಕನ್ನಡ, ಸಂಸ್ಕ್ರತ ಭಾಷೆಲಿ ಪ್ರಕಾಂಡ ಜ್ಞಾನ ಇಪ್ಪವು. ಸುಮಾರು ಮೂವತ್ತಕ್ಕೂ ಹೆಚ್ಚು ಪುಸ್ತಕಂಗಳ ಬರದ್ದವು. ‘ಬ್ರಹ್ಮಪುರಿಯ ಭಿಕ್ಷುಕ ‘ ಪುಸ್ತಕವ ಬರದು ಇದೇ ವರುಷದ ಶುರುವಿಲಿ ಬಿಡುಗಡೆ ಮಾಡಿದ್ದವು. ಇದು ಡಿವಿಜಿಯವರ ಜೀವನಲ್ಲಿ ಆಗಿಹೋದ ಹಲವು ರಸ ಪ್ರಸಂಗಗಳ ಪೋಣಿಸಿ ಬರದ ಪುಸ್ತಕ. ಡಿವಿಜಿಯವರ ವ್ಯಕ್ತಿತ್ವ, ಕಾವ್ಯ, ಕೃತಿಗಳ ಬಗ್ಗೆ ಹಲವಾರು ಸಂಶೋಧನ ಪ್ರಬಂಧಂಗೋ  ಚರ್ಚೆಗೊ, ಸಂವಾದಂಗೋ ಪತ್ರಿಕೆ, ರೇಡಿಯೋ, ಟಿವಿ ಕಾರ್ಯಕ್ರಮಂಗಳಲ್ಲಿ  ಇಗಲೂ ಬತ್ತಾ ಇರ್ತು. ಅವರ ಕಗ್ಗದ ಉಪನ್ಯಾಸ ಒಂದಲ್ಲ ಒಂದು ದಿನ ಆಗಿಗೊಂಡು ಇರ್ತು. ಉದಿಯಂದ ಕಸ್ತಲೆವರೆಗೆ  ಯೇವುದಾದರೊಂದು ರೇಡಿಯೋ ಅಥವಾ ಟಿವಿ ಕಾರ್ಯಕ್ರಮಲ್ಲಿಯೋ, ಪುಸ್ತಕ ಅಥವಾ ಪೇಪರಿನ ಸೂಕ್ತಿಲಿಯೊ ಡಿವಿಜಿಯವರ ಹೆಸರು ಅನುರಣಿಸಿಗೊಂಡು ಇರ್ತು. ಅವರ ಒಟ್ಟಾರೆ ವ್ಯಕ್ತಿವತ್ವವ  ಒಂದೇ ಶಬ್ದಲ್ಲಿ  ಗಣೇಶರು  – “ಸಾರ್ವಕಾಲೀನಸಮುದ್ದರಣ” ಹೇಳಿ ವಿವರಿಸಿದ್ದವು.  ಗಣೇಶರು ಹೇಳುವ ಹಾಂಗೆ ” ಬರೆದಂತೆ ಬಾಳಿದ ವಿರಳ ರೀತಿಯ ಮಹಾನುಭಾವರಲ್ಲಿ ಡಿವಿಜಿಯವರು ಅಗ್ರಗಣ್ಯರು. ಸಾಹಿತ್ಯ, ಸಂಸ್ಕೃತಿ, ಪತ್ರಿಕೋದ್ಯಮ ಸಮಾಜಸೇವೆಗಳಂಥ ಹತ್ತಾರು ಪ್ರಕಾರಗಳಲ್ಲಿ ದುಡಿದ ಡಿವಿಜಿಯವರ ಬದುಕೇ ಒಂದು ಮಹಾ ಕಾವ್ಯ” ಇಂಥಾ ಮೇರು ವ್ಯಕ್ತಿತ್ವದ ಡಿವಿಜಿಯವರ ಬಾಳಿಲಿ ನಡದ  ನೂರಾರು ರಸಮಯ ಪ್ರಸಂಗಂಗಳ ಗಣೇಶರು ಈ ಪುಸ್ತಕಲ್ಲಿ ಅತಿ ರೋಚಕವಾಗಿ ಬರದ್ದವು. ಪುಸ್ತಕದ ಪ್ರಸ್ತಾವನೆಲಿ ಡಿವಿಜಿಯವರ ವ್ಯಕ್ತಿತ್ವದ ಪರಿಚಯ ಕೊಡ್ತವು. “ಮೂರಡಿಗಳಿಂದಲೇ ಮೂರು ಲೋಕಗಳನ್ನಳೆದು ಅದನ್ನು ಮೀರಿದ ತ್ರಿವಿಕ್ರಮನಂತೆ ಡಿವಿಜಿ ಎಂಬ ಮೂರಕ್ಷರಗಳಿಂದ ಭಾರತಿಯ ಸಾಹಿತ್ಯ – ಸಂಸ್ಕೃತಿ –ಸಾಮಾಜಿಕ ಲೋಕದಲ್ಲಿ ಮಾಸಲಾಗದ ಮುದ್ರೆಯನ್ನೊತ್ತಿದ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರನ್ನು ಕನ್ನಡಿಗರಿಗೆ ಇವರು ಇಂಥವರೆಂದು ಹೊಸತಾಗಿ ಪರಿಚಯಿಸಬೇಕಾದ ಅವಶ್ಯಕತೆಯೇ ಇಲ್ಲ.” ಈ ಪುಸ್ತಕ ಓದಿದ ಮೇಲೆ ಡಿವಿಜಿಯವರ ವಿದ್ವತ್ತು, ವಿನಯ, ನಿಸ್ಪ್ರಹತೆ, ನಿರ್ಮಮತೆ ಸೌಜನ್ಯ, ಸ್ನೇಹ ಹೀಂಗೆ ಬಹುಮುಖಂಗಳ ಪರಿಚಯವೂ ಅವರ ಹಾಸ್ಯ,ವಿನೋದಂಗಳ ರಸಪಾಕದ ರುಚಿಯೂ ನವಗೆ ಸಿಕ್ಕುತ್ತು .

ಇಲ್ಲಿ ಬಂದ ಒಂದೆರಡು ಪ್ರಸಂಗಂಗಳ ಮಾಂತ್ರ ಆನು ವಿವರುಸುತ್ತೆ.  ಆ ಕಾಲಲ್ಲಿ ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಮುಂತಾದ ಸಾರ್ವಜನಿಕ ಮಹಾನುಭಾವರಿಂಗೆ ಡಿವಿಜಿ ಅರ್ಥಶಾಸ್ತ್ರ, ಪತ್ರಿಕೋದ್ಯಮ,ಸಮಾಜಶಾಸ್ತ್ರ ಕ್ಷೇತ್ರಂಗಳಲ್ಲಿ ತರತರದ ಸೂಚನೆ ಸಲಹೆಗಳ ಕೊಟ್ಟುಗೊಂಡಿತ್ತಿದ್ದವು. ಇದಕ್ಕೆ ಬೇಕಾಗಿ ತುಂಬಾ ಸಮಯ,ಶೃದ್ಧೆ ವಿನಿಯೋಗ ಮಾಡಿಗೊಂಡಿತ್ತಿದ್ದವು. ಇವರ ಈ ಪರಿಶ್ರಮಕ್ಕೆ ತಕ್ಕ ಗೌರವಧನ ಕೊಡುವಾಗ ವಿನಮ್ರತೆಂದ ಬೇಡ ಹೇಳಿ ಸ್ವೀಕಾರ ಮಾಡದ್ದೆ ಕೂದವು. ಆದರೆ ವಿಶೇಶ್ವರಯ್ಯ ಆಗಲಿ, ಮಿರ್ಜಾ ಆಗಲಿ ಸುಮ್ಮನೆ ಇತ್ತಿದ್ದವಿಲ್ಲೆ. ಸಂಭಾವನೆ ಹಣವ ಚೆಕ್ ಮೂಲಕ ಕೊಡುಲೆ ಶುರು ಮಾಡಿದವು. ಡಿವಿಜಿ ಇದರ ಸ್ವೀಕಾರ ಮಾಡಿದರೂ ಯಾವುದನ್ನೂ ನಗದಾಗಿ ಪರಿವರ್ತನೆ ಮಾಡದ್ದೆ ಹಾಂಗೆ ಮಡಿಕ್ಕೊಂಡು ಇತ್ತಿದ್ದವು. ಹೀಂಗೆ ನಗದಾಗಿ ಮಾಡದ್ದೆ ಮಡಗಿದ ಚೆಕ್ಕುಗಳ ಮೌಲ್ಯ ಲಕ್ಷಕ್ಕೂ ಮೀರಿತ್ತಿದ್ದು !. 1987 ರಲ್ಲಿ ಬೆಂಗಳೂರಿನ ಭಾರತಿಯ ವಿದ್ಯಾಭಾವನಲ್ಲಿ ನಡದ ಪ್ರದರ್ಶನದ ಸಮಯಲ್ಲಿ ಹೀಂಗೆ ‘ಒಳುಗಡೆ’ ಮಡಗಿದ ಚೆಕ್ಕುಗಳ ಒಪ್ಪಲ್ಲಿ ಅಣಿ ಮಾಡುವ ‘ಪುಣ್ಯಕೆಲಸ’ ತನಗೆ ಸಿಕ್ಕಿತ್ತಿದು ಹೇಳಿ ಲೇಖಕ ಬರದ್ದವು.

ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಮೆಂಬರ್ ಅಗಿಪ್ಪ ಕಾಲಲ್ಲಿ, ಒಂದು ಸೆನೆಟ್ ಮೀಟಿಂಗಿನ ಸಮಯಲ್ಲಿ ಒಬ್ಬ ಸದಸ್ಯ ಯಾರೋ ಒಬ್ಬ ಸಿಬ್ಬಂದಿಯ ಮೇಲೆ ಆರೋಪ, ಆಕ್ಷೇಪಣೆಗಳ ಮಾಡಿಗೊಂಡಿತ್ತಿದ್ದವು. ಡಿವಿಜಿಗೆ ಇದು ಸರಿ ಕಂಡಿದಿಲ್ಲೆ. ಆದರೆ ಸಭಾಗೌರವ ಬಿಟ್ಟು ಇಪ್ಪಲೆ ಸಾಧ್ಯ ಇತ್ತಿಲೆ. ಆಗಾಣ ರಿಜಿಸ್ಟ್ರಾರ್ ಆಗಿತ್ತಿದ್ದ ಬಿಎಂಶ್ರೀಗೆ ಒಂದು ಚೀಟಿ ಬರದು ಕಳಿಸಿಕೊಡ್ತವು.

ಗೋಳಂ ಪೊಯ್ಕೊಳ್ಳುವನೀ

ಸೂಳೆಯ ಮಗನೇತಕಿಂತು ಸುಜನರನಕಟಾ |

ಕೋಳಿಯ ಕೂಗೇಂ ಕಾವ್ಯಂ

ಬೋಳಿಯ ತಲೆಯೊಂದು ರಾತ್ರಿಯೋಳ್ ತುರುಬಹುದೇಂ ? ||

ಇದರ ತೋಡಿ ರಾಗಲ್ಲಿ ಹಾಡೆಕ್ಕು ಹೇಳ್ತ ಟಿಪ್ಪಣಿ ಬೇರೆ. ಬಿಎಂಶ್ರೀ ಇವರ ಆಚಿಕ್ಕೆ ದೆನುಗೇಳಿ ಇದರ ಹೇಂಗೆ ತೋಡಿ ರಾಗಲ್ಲಿ ಹಾಡೆಕ್ಕು ಹೇಳಿ ವಿಚಾರ್ಸುವಾಗ ದೊಡ್ಡ ಸ್ವರಲ್ಲಿ ಡಿವಿಜಿಯೇ ಓದಿದವು. ಸದಸ್ಯರುಗೋ ಎಲ್ಲೊರು ಕೇಳಿ ನೆಗೆ ಮಾಡಿ ಸುಮ್ಮನಾದವು. ಮೀಟಿಂಗಿಲಿ ಆಗಿಗೊಂಡಿತ್ತಿದ್ದ ಆರೋಪ, ಆಕ್ಷೇಪ ಎಲ್ಲವೂ ಗಾಳಿಗೆ ಹಾರಿತ್ತು.

ಸಾಹಿತ್ಯಾಸಕ್ತರಿಂಗೆ ಔತಣವನ್ನೇ ಬಡಿಸಿದ ಡಿವಿಜಿಗೆ ಊಟ, ತಿಂಡಿ ಮೇಲೆ ಅತಿಯಾದ ಪ್ರೀತಿ ಇತ್ತಿದ್ದು. ಒಂದರಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಲಿ ನಡದ ಸಾಹಿತ್ಯ ಸಮಾರಂಭಲ್ಲಿ ಅಕೇರಿಗೆ ಔತಣದ ಏರ್ಪಾಡು ಮಾಡಿತ್ತಿದ್ದವು. ಬಗೆ ಬಗೆಯ ಅಡಿಗೆ ಖಾದ್ಯ೦ಗಳ ನೋಡಿ ಡಿವಿಜಿ ಉತ್ಸಾಹಲ್ಲಿ ಒಂದು ಚಾಟು ಶ್ಲೋಕವ ಹೇಳುತ್ತವು.

ಅನ್ನಸಿಂಹಾಸನಾಸೀನೋ ಘ್ರತಮಂತ್ರಿಸಮನ್ವಿತಃ |

ಸೋಪಸ್ಕರಪರಿವಾರಃ ಸುಪಭೂಪೋ ವಿರಾಜತೇ ||

ಹೆಸರಿಂಗೆ ಅನ್ವರ್ಥವಾಗಿ ಗುಂಡು ಗುಂಡಾಗಿ ಇತ್ತಿದ್ದ ಡಿವಿಜಿ ಅವರ ಆರೋಗ್ಯ ಒಳ್ಳೆದಿತ್ತಿದ್ದರೂ ಮೂಲವ್ಯಾಧಿಯ ತೊಂದರೆ ಯಾವಾಗಲೂ ಇತ್ತು. ಅದು ಆಗಾಗ ತೊಂದರೆ ಕೊಟ್ಟುಗೊಂಡೂ ಇತ್ತಿದ್ದು. ಆ ಕಾಲಲ್ಲಿ ಹಲವು ದಿಕ್ಕೆ ಅಪ್ಪ ಸಭೆ ಸಮಾರಂಭಕ್ಕೆ ಡಿವಿಜಿಗೆ ಆಹ್ವಾನ ಬಕ್ಕು. ಒಂದಿಕ್ಕೆ ಹೀಂಗೆ ಒಂದು ಸಮಾರಂಭಕ್ಕೆ ಆಹ್ವಾನ ಕೊಡ್ಲೆ ಕಾರ್ಯಕರ್ತರುಗೋ ಇವರ ಭೇಟಿ ಆವುತ್ತವು. ಆ ಸಮಯಕ್ಕೆ ಇವು ಮೂಲವ್ಯಾಧಿಯ ಬೇನೆಲಿ ಕಂಗಾಲಾಗಿತ್ತಿದ್ದವು. ಎಷ್ಟು ಹೇಳಿದರೂ ಕೇಳದ್ದೆ ಅಕೇರಿಗೆ ಒಂದು ಸಂದೇಶವನ್ನಾದರೂ ಕೊಡೆಕ್ಕು ಹೇಳಿ ಗೆಂಟು ಹಿಡಿತ್ತವು. ಪಿಸುರು ಬಂದು ಸಭೆಲಿ ಓದಿ ಹೇಳೆಕ್ಕು ಹೇಳ್ತ ನಿಬಂಧನೆಲಿ ಡಿವಿಜಿ ಸಂದೇಶ ಕೊಡ್ಲೆ ಒಪ್ಪುತ್ತವು.  – ಗುಂಡಪ್ಪನಾದೊಡೇಂ ಕುಂಡೆಯದು ನೋಯದೇಂ…‘ ಛಂದೋಬದ್ದವಾಗಿ ಹೆರಟ ಆಶುಸಂದೇಶವ ಕೇಳಿ ಕಾರ್ಯಕರ್ತರು ಮತ್ತೆ ಅಲ್ಲಿ ನಿಂದಿದವಿಲ್ಲೆ……

ಸ್ಥಾನಮಾನ, ಸಂಮಾನಂಗೋ ಡಿವಿಜಿಯವರ ಅರಸಿಗೊಂಡು ಬಯಿಂದು –  ಪ್ರತಿಷ್ಠಿತ “ಟ್ರಿಬ್ಯೂನ್” ಪತ್ರಿಕೆಯ ಸಂಪಾದಕ ಸ್ಥಾನ, 1926ರ ಮೇ ತಿಂಗಳಿಲಿ ನಾಲ್ವಡಿ ಕೃಷ್ಣ ರಾಜ ಒಡೆಯರಿಂದ ಮಾಸಿಕ ೫೦೦ ರೂಪಾಯಿ ವೇತನದ ಉನ್ನತ ಹುದ್ದೆ, ಇವೆಲ್ಲವನ್ನೂ ನಯವಾಗಿ ತಿರಸ್ಕಾರ ಮಾಡಿದ್ದವು. ಖ್ಯಾತಿ- ಲಾಭ- ಪ್ರತಿಷ್ಠೆ ಗೊಕ್ಕೆ ಏವತ್ತೂ ಮಣೆ ಹಾಕಿದ್ದವಿಲ್ಲೆ. ಅವು ಇತ್ತಿದ್ದ ಮನೆಯ ಮಾರ್ಗ ‘ನಾಗಸಂದ್ರ ಬೀದಿ’ಗೆ – ‘ಡಿವಿಜಿ ರಸ್ತೆ’ ಹೆಸರು ಮಡುಗೆಕ್ಕು ಹೇಳಿ ಮೇಯರ್ ಆಪೀಸಿನವು ಇವರ ಒಪ್ಪಿಗೆ ಕೇಳಿದ್ದಕೆ ಸುತಾರಾಮ್ ಕೊಟ್ಟಿದವಿಲ್ಲೆ. ಆದರೂ ಕೋರ್ಪೊರೇಶನ್ನಿನವು ಆ ಹೆಸರು ಮಡುಗಿದ ಮೇಲೆ ಡಿವಿಜಿ ತಮ್ಮ ವಿಳಾಸವ ( ಲೆಟರ್ ಹೆಡ್ಡಿಲಿ) ನಾಗಸಂದ್ರ ಬೀದಿ ಹೇಳಿಯೇ ಬರಕ್ಕೊಂಡಿತ್ತಿದ್ದವು. ಅವರ “ಭಗವದ್ಗೀತಾತಾತ್ಪರ್ಯ” ಅಥವಾ “ಜೀವನಧರ್ಮಯೋಗ” ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕಾರ ಸಿಕ್ಕಿಪ್ಪಗ ತೆಕ್ಕೊಂಬಲೆ ಬೇಕಾಗಿ ಡೆಲ್ಲಿಗೆ ಹೋಯಿದವೇ ಇಲ್ಲೆ, ಸಾಹಿತ್ಯ ಅಕಾಡಮಿಯ ಇತಿಹಾಸಲ್ಲಿ ಮದಲಾಗಿ ಪ್ರಶಸ್ತಿ ಪುರಸ್ಕ್ರತರ ಮನೆ ಬಾಗಿಲಿಂಗೆ ಬಂದು ಪ್ರಶಸ್ತಿ ಸಂದಾಯ ಮಾಡೆಕ್ಕಾಗಿ ಬಂತು. ಡಿವಿಜಿ ಪುರಸ್ಕಾರದೊಟ್ಟಿಂಗೆ ಬಂದ ಪ್ರಶಸ್ತಿ ಧನವ ಗೋಖಲೆ ಸಂಸ್ಥೆಗೆ ದಾನ ಕೊಟ್ಟವು.

ತುಂಬ ಸಮಯಕ್ಕೆ ಹಿಂದೆ – “ಮಂಕುತಿಮ್ಮನ ಕಗ್ಗ” ಕ್ಕೆ ನ್ಯಾಯವಾಗಿ ಸಿಕ್ಕೆಕ್ಕಾದ ಜ್ಞಾನಪೀಠ ಪ್ರಶಸ್ತಿಯ ಮದಲ ಪುರಸ್ಕಾರ “ಕ್ಷುಲ್ಲಕಕಾರಣಾಭಾಸ'”೦ದಾಗಿ, ತಪ್ಪಿ ಹೋದ ಸಮಯಲ್ಲಿ ಅವರ ಆತ್ಮೀಯ ಒಬ್ಬ ಸಂಕಟ ಮಾಡಿಗೊಂಡು ಇದ್ದದಕ್ಕೆ ಡಿವಿಜಿ ಕಾಗದ ಬರದು ತಮ್ಮ ಅಭಿಪ್ರಾಯವ ಸ್ಪಷ್ಟ ಮಾಡಿದವು. ” ಅಕ್ಕ ಡುಮ್ಮಿ( ಅಕಾಡೆಮಿ ಎಂಬುದಕ್ಕೆ ಡಿವಿಜಿಯವರ ತದ್ಭವ !) ಪ್ರಶಸ್ತಿಗಳಾವುವೂ ಲೇಖಕನಿಗೆ ದಿಟವಾದ ಪುರಸ್ಕಾರಗಳಲ್ಲ. ಪಾಠಕ ಸಹೃದಯರ ಸಂತತ ಪ್ರೋತ್ಸಾಹವೇ ಶಾಶ್ವತ ಸಮ್ಮಾನ” .

18-1-1970 ರಲ್ಲಿ ಬೆಂಗಳೂರಿನ ಪುರಭವನಲ್ಲಿ ಡಿವಿಜಿಗೆ ಅದ್ಧೂರಿ ಸಮ್ಮಾನ ನಡದು ಒಂದು ಲಕ್ಷಕ್ಕೂ ಹೆಚ್ಚಿನ ನಿಧಿಯ ಸಮರ್ಪಿಸುತ್ತವು. ದೇಶ-ವಿದೇಶಂದ ಅವರ ಅಭಿಮಾನಿಗೊ ಸಾಹಿತ್ಯ – ಪತ್ರಿಕೋದ್ಯಮ -ಸಾಂಸ್ಕ್ರತಿಕ ಲೋಕದ ಅಸಂಖ್ಯ ಮಹನೀಯಂಗೊ ಬಂದು ತಮ್ಮ ತಮ್ಮ ಗೌರವ ಸಲ್ಲಿಸಿದವು. ಆದರೆ, ಡಿವಿಜಿ ಆ ಎಲ್ಲಾ ನಿಧಿಯ ಗೋಖಲೆ ಸಂಸ್ಥೆಗೆ ದೇಣಿಗೆಯಾಗಿ ಕೊಡುತ್ತವು. ಇಂಥಾ ಸಮ್ಮಾನದ ಮರದಿನ, ಇವರ ಮನೆಯ ಹತ್ತರೆ ಇದ್ದ ಚಿಲ್ಲರೆ ಕಿರಾಣಿ ಅಂಗಡಿಯ ಕಟ್ಟೆಲಿ ‘ಸುಧಾ’ ಪತ್ರಿಕೆ ಸಂಪಾದಕ ಇ.ಆರ್.ಸೇತುರಾಮ್, ತಮ್ಮ ಕೂಟದವರೊಟ್ಟಿಂಗೆ ಹರಟಿಗೊಂಡು ಇತ್ತಿಪ್ಪ ಸಮಯಲ್ಲಿ, ಡಿವಿಜಿಯ ಮನೆವಾರ್ತೆಯ ಆಳು ಕರುಪಯ್ಯ ಅಂಗಡಿಲಿ ಬಂದು ಚೀಟಿ ಕೊಟ್ಟತ್ತು. ಕುತೂಹಲ ತಡೆಯದ್ದೆ ಸೇತುರಾಮ್ ನೋಡುವಾಗ  ಕಂಡದು – ಮನೆಗೆ ಅನಿರೀಕ್ಷಿತವಾಗಿ ಆತ್ಮೀಯರು ಬಂದಿದ್ದಾರೆ. ಕಾಫಿ ಪುಡಿ – ಸಕ್ಕರೆ ಉದ್ದರಿ ಕೊಟ್ಟಲ್ಲಿ ನಾಳೆ ಹಣ ಚುಕ್ತಾ ಮಾಡುತ್ತೇನೆ. ಹೇಳ್ತ ವಿನಮ್ರ ಕೋರಿಕೆ. ಈ ಸಂಬಂಧ ಸೇತುರಾಮ್ ಬರದ ಪ್ರತಿಕ್ರಿಯೆ – “ನಿನ್ನೆ ಸಂಜೆ ನನ್ನದಲ್ಲ ಎಂದು ಒಂದು ಲಕ್ಷ ರೂಪಾಯಿಯನ್ನು ದಾನ ಮಾಡಿದವರ ಪರಿಸ್ಥಿತಿ ಹೊತ್ತು ಹೊತ್ತಿನ ಕಾಫಿ ಪುಡಿ – ಸಕ್ಕರೆಗೂ ಕಷ್ಟವೆನಿಸುವಂಥದ್ದು, ಇಂತಿದ್ದರೂ ಈ ಬಗೆಗೆ ಬೇಸರವಿಲ್ಲದೆ ಕೀಳರಿಮೆ – ಮೇಲರಿಮೆಗಳಿಲ್ಲದ ಮಹನೀಯರು” ಡಿವಿಜಿ  ಒಬ್ಬ ಮಹಾತ್ಮನೇ ಸರಿ !

ಡಿವಿಜಿ ಕನ್ನಡ ಸಾಹಿತ್ಯವನದ ಅಶ್ವತ್ಠ ವೃಕ್ಷ , ಇಂಥಾ ದೊಡ್ಡ ವೃಕ್ಷಕ್ಕೆ ಈ ‘ಪುಸ್ತಕ’ ದ ‘ಕಟ್ಟೆ’ ಕಟ್ಟಿ ಅಭಿಮಾನಿಗೊಕ್ಕೆ ಪೂಜನೆಗೆ ಅವಕಾಶ ಮಾಡಿ ಕೊಟ್ಟ ಶತಾವಧಾನಿಗೆ ನೂರೆಂಟು ನಮನ.

10 thoughts on “ಪುಸ್ತಕ ಪರಿಚಯ – 8 “ಬ್ರಹ್ಮಪುರಿಯ ಭಿಕ್ಷುಕ”

  1. ನಾಕಕ್ಷರ ಬರವಲೆ ಗೊಂತಾದ ಕೂಡಲೇ ಸಾಹಿತಿ ಹೇಳಿ ಬೋರ್ಡ್ ಹಾಕಿಂಡು, ಇಲ್ಲದ್ದ politics ಮಾಡಿಂಡು, ಪ್ರಶಸ್ತಿಗೆ ವಶೀಕರಣ ಮಾಡಿಂಡು, ದೊಡ್ಡ ಜೆನ ಹೇಳಿಸಿಗೊಂಬ ಈಗಾಣ ಕೆಲವು ಲೇಖಕರಿಂಗೂ, ಡಿ.ವಿ.ಜಿ. ಗೂ ಎಶ್ಟೊಂದು ವೆತ್ಯಾಸ.
    ತನಗೆ ಸಿಕ್ಕಿದ್ದನ್ನೂ ಸಮಾಜಕ್ಕೆ ಸಲ್ಲಿಸಿದ ಈ ಮಹಾನ್ ವ್ಯಕ್ತಿಗೆ ಸರಿ ಸಮಾನರು ಆರೂ ಇರವು ಹೇಳಿ ಕಾಣುತ್ತು.
    ” ಮಂಕು ತಿಮ್ಮನ ಕಗ್ಗ ” ಅಂತೂ ಇನ್ನೊಂದು ಭಗವದ್ಗೀತೆ ಹೇಳಿಯೇ ಹೇಳಲಕ್ಕು.
    ಇಲ್ಲಿ, ಅವರ ಜೀವನ ಕೆಲವೊಂದು ಘಟನೆಗಳ ತಿಳಿಶಿ ಕೊಟ್ಟದು ಅವರ ಬಗ್ಗೆ ಇನ್ನಷ್ಟು ತಿಳಿವಲೆ ಪ್ರೇರಣೆ ಕೊಡ್ತು.

  2. ಕುಮಾರ ಮಾವ,

    ಈ ಪುಸ್ತಕದ ಪರಿಚಯ ಮಾಡ್ಸಿದ್ದಕ್ಕೆ ಧನ್ಯವಾದ.ಈ ವಾರವೇ ತೆಕ್ಕೊಳ್ಳೆಕ್ಕು ಹೇಳಿ ಆಸೆ ಆಯಿದು.

  3. ನವಗೆ ಗೊಂತಿಲ್ಲದ್ದ ಡಿವಿಜಿಯವರ ಇನ್ನಷ್ಟು ವಿಷಯಂಗಳ ಶತಾವಧಾನಿಯ ಪುಸ್ತಕದ ವಿಮರ್ಶೆ ಮಾಡ್ತಾ ತಿಳುಸಿಕೊಟ್ಟ ಕುಮಾರಂಗೆ ಧನ್ಯವಾದಂಗೊ. ಬ್ರಹ್ಮಪುರಿಯ ಭಿಕ್ಷುಕ ಹೇಳ್ತ ಹೆಸರು ಪುಸ್ದ್ತಕಕ್ಕೆ ಒೞೆ ಹೊಂದಾಣಿಕೆಯುದೆ ಆವ್ತು. ಕುಮಾರನ ಸಾಹಿತ್ಯಾಭಿಮಾನವ ಮೆಚ್ಚೆಕು. ಒಪ್ಪಂಗೊ.

    1. “ಬ್ರಹ್ಮಪುರಿಯ ಭಿಕ್ಷುಕ” ಹೇಳ್ತ ಹೆಸರು ಡಿವಿಜಿ ತನ್ನನ್ನೇ ತಾನು ಹೆಸರಿಸಿಗೊಂಡದು.ಇದನ್ನೇ ಶತಾವಧಾನಿ ಪುಸ್ತಕಕ್ಕೆ ಮಡಗಿದ್ದು.

  4. ಡಿ.ವಿ.ಜಿ.ಗೆ ನಿಜವಾಗಿ ಜ್ನ್ಹಾನಪೀಠ ಪುರಸ್ಕಾರ ಸಿಕ್ಕೆಕ್ಕಾತು.ಸಿಕ್ಕದ್ದು ಬೇಜಾರದ ವಿಷಯ. ಅವು ಬರೆದ ಜ್ಹ್ನ್ಹಾಪಕ ಚಿತ್ರಶಾಲೆ ಅದ್ಭುತ ಪುಸ್ತಕ.೮ ಸಂಪುಟ ಇದ್ದು.

  5. ತುಂಬಾ ಒೞ ಪುಸ್ತಕ ಕುಮಾರಣ್ಣಾ..
    ಮಂಗ್ಳೂರ ಪುಸ್ತಕದ ಅಂಗಡಿಲಿ ನೋಡಿತ್ತಿದ್ದೆ.. ಎನ್ನ next targetಲಿ ಈ ಪುಸ್ತಕ ಇದ್ದು…

    1. ಪುಸ್ತಕ ಕೊಂಡು ಓದಿ… ಸಾಹಿತ್ಯ ಬೆಳೆಗು ಒಟ್ಟಿಂಗೆ ಸಾಹಿತಿಗಳೂ ಬೆಳೆಗು

  6. [ಡಿವಿಜಿ ಕನ್ನಡ ಸಾಹಿತ್ಯವನದ ಅಶ್ವತ್ಠ ವೃಕ್ಷ , ಇಂಥಾ ದೊಡ್ಡ ವೃಕ್ಷಕ್ಕೆ ಈ ‘ಪುಸ್ತಕ’ ದ ‘ಕಟ್ಟೆ’ ಕಟ್ಟಿ ಅಭಿಮಾನಿಗೊಕ್ಕೆ ಪೂಜನೆಗೆ ಅವಕಾಶ ಮಾಡಿ ಕೊಟ್ಟ ಶತಾವಧಾನಿಗೆ ನೂರೆಂಟು ನಮನ.] – ‘ಈ ಸರ್ತಿಯಾಣ ನಿರೂಪಣೆ ಈ ಹಿಂದಿಗಿಂತ ಲಾಯಕ್ಕ ಆಯ್ದು ಕುಮಾರಣ್ಣ’ ಹೇಳಿರೆ ಬೇಜಾರಾಗನ್ನೇ ಕುಮಾರಣ್ಣ . ಬಹುಶಃ ನಿಂಗೊ ಆಯ್ಕೆ ಮಾಡಿದ ಪುಸ್ತಕ ವಿಶೇಷತೆಯೇ ಇದು. ಒಪ್ಪ.

    1. ಪುಸ್ತಕ, ಪುಸ್ತಕ ಬರದವು, ಪುಸ್ತಕದ ವಿಷಯ..ಈ ಮೂರರ ತ್ರಿವೇಣಿ ಸಂಗಮ ಇದರಲ್ಲಿದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×