Oppanna.com

ಸಾವಿನ ಹೆದರಿಕೆ – ಆ ನಂತರದ ಜೀವನ…!!!

ಬರದೋರು :   ಮಂಗ್ಳೂರ ಮಾಣಿ    on   16/06/2011    32 ಒಪ್ಪಂಗೊ

ಮಂಗ್ಳೂರ ಮಾಣಿ

ಬೈಲಿನ ಎಲ್ಲರಿಂಗೂ ಪ್ರೀತಿಯ ನಮಸ್ಕಾರಂಗೊ.
ಮೊನ್ನೆ ಬಡೆಕ್ಕೋಡಿಗೆ ಹೋಗಿತ್ತಿದ್ದೆ, ಹೀಂಗೆ ಒಂದು ತಂಬಿಲಕ್ಕೆ ಹೇಳಿತ್ತಿದ್ದವು.
ತಂಬಿಲ ಮುಗಿಶಿ ಉಂಡು ಕಾಲು ನೀಡಿ ಕೂದು ಬಡೆಕ್ಕೋಡಿ ಭಾವನತ್ರೆ ಮಾತಾಡಿಯೊಂಡಿತ್ತಿದ್ದೆ.

ರಾಜಕೀಯ, ಸಿನಿಮಾ ಎಲ್ಲಾ ಆಗಿ ಪುರಾಣ ಕಥೆಗೊಕ್ಕೆ ಬಂತು ಮಾತುಗೊ…
ಮನುಷ್ಯ° ಆದವ° ಸಾರ್ಥಿ ಹೇಳುದು ಅಪ್ಪು.

ಒಬ್ಬ° ಅತಿ ಹೆಚ್ಚು ಪ್ರೀತಿಸುದು ಆರ ಹೇಳಿ ಕೇಳಿರೆ ಹೆಚ್ಚಿನವರ ಉತ್ತರ “ಆನು ಪ್ರೀತಿಸುದು ಎನ್ನನ್ನೇ” ಹೇಳಿಯೇ.
ಜೀವದ ವಿಷಯಕ್ಕೆ ಬಂತು ಹೇಳಿ ಆದರೆ ಮೊತ್ತ ಮೊದಲು ಬಪ್ಪದು ‘ಆನು’ ಹೇಳಿ.ಆನು ಬದುಕೆಕು ಹೇಳಿ ಆದರೆ ಎಂತ ಬೇಕಾರೂ ಮಾಡ್ಲಕ್ಕು.

ಒಬ್ಬ ಸಾಧಾರಣ ಮನುಷ್ಯ°, ಅವನ ಕುಟುಂಬವ, ಗೆಳೆಯರ, ಸಮಾಜವ ದೇಶವ ಖಂಡಿತಾ ಪ್ರೀತಿಸುತ್ತ°.ಆದರೆ ಅದಕ್ಕೋಸ್ಕರ ಜೀವ ಕೊಡ್ತೆ ಹೇಳುದು ತುಂಬಾ ಕಮ್ಮಿ.  ಒಂದು ವೇಳೆ ದೌರ್ಭಾಗ್ಯಲ್ಲಿ ಜೀವ ಕೊಡೆಕ್ಕಾಗಿ ಬಂದರೆ ಮಾತಿಂಗೆ ಗಟ್ಟಿಯಾಗಿ ನಿಂಬವು ಮತ್ತೂ ಕಡಮ್ಮೆ…!!

ಉತ್ತರಕುಮಾರನ ಕಥೆ ಗೊಂತಿದ್ದಲ್ಲದಾ? ಪಾಂಡವರೆಲ್ಲ ವನವಾಸದ ಅವಧಿ ಕಳುದಿಕ್ಕಿ ಇನ್ನು ಅಜ್ಞಾತವಾಸಕ್ಕೆ ಮತ್ಸ್ಯ ದೇಶಕ್ಕೆ ಹೋಪೊ° ಹೇಳಿ ನಿರ್ಧಾರ ಮಾಡಿತ್ತಿದ್ದ ಕಾಲ.  ಎಲ್ಲೋರೂ ಮತ್ಸ್ಯರಾಜನ ಆಸ್ಥಾನಲ್ಲಿ ಒಂದೊಂದು ಕೆಲಸ ಹಿಡಿತ್ತವು. ಅರ್ಜುನ ಮೊದಲು ಊರ್ವಶಿಂದ ಸಿಕ್ಕಿದ ಶಾಪವ ಸದುಪಯೋಗ ಪಡಿಸಿಯೊಂಡು ಶಿಖಂಡಿಯಾಗಿ ರಾಜನ ಮಗಳು ಉತ್ತರೆಗೆ ನೃತ್ಯ ಹೇಳಿಕೊಡ್ಲೆ ಸುರುಮಾಡ್ತ°.

ಉತ್ತರೆಗೆ ಒಬ್ಬ ಅಣ್ಣ, ಉತ್ತರಕುಮಾರ° ಹೇಳಿ ಅವನ ಹೆಸರು.  ಒಂದರಿ ಎಂತಾತು ಹೇಳಿರೆ, ಪಾಂಡವರು ಮತ್ಸ್ಯದೇಶಲ್ಲಿ ಇಕ್ಕು ಹೇಳುವ ಅನುಮಾನಲ್ಲಿ ಕೌರವರೆಲ್ಲ ಸೇರಿ ಆ ದೇಶದ ಮೇಲೆ ಆಕ್ರಮಣ ಮಾಡ್ತವು.  ಆ ದೇಶದ ದನಂಗಳ ಎಲ್ಲ ಕದ್ದೊಂಡು ಹೋವ್ತವು.  ರಾಜ ಆ ಸಮಯಲ್ಲಿ ಬೇರೆ ಕಡೆ ಯುಧ್ಧಕ್ಕೆ ಹೋಗಿರ್ತ°.  ಯುಧ್ಧ ಮಾಡ್ಲೆ ಬೇರೆ ಆರೂ ಮುಕ್ರಿ ಇಲ್ಲದ್ದ ಕಾರಣ ಸೈನಿಕರಿಂಗೆ ಎಂತ ಮಾಡುದು ಅರಡಿತ್ತಿಲ್ಲೆ.  ಸುದ್ದಿ ಉತ್ತರ ಕುಮಾರಂಗೆ ಮುಟ್ಟುತ್ತು.  ಆ ಹೊತ್ತಿಂಗೆ ಕುಮಾರ ಅವನ ಅಂತಪ್ಪುರಲ್ಲಿ ಲೊಟ್ಟೆ ಪಟ್ಟಾಂಗ ಹೊಡಕ್ಕೊಂಡು ಇರ್ತಡ°, ಸುದ್ದಿ ತಿಳುದು ಆನೇ ಯುಧ್ಧಕ್ಕೆ ಹೋವ್ತೆ ಹೇಳ್ತ°. ಹತ್ತರೆ ಕೆಲವು ದಾಸಿಯರೂ, ತಂಗೆ ಎಲ್ಲ ಇಪ್ಪಗ ರಜ್ಜ ಹೆಚ್ಚೇ ಧೈರ್ಯ ಬಂದು ರಜ ಕೊಚ್ಚಿಯೊಂಬಲೆ ಸುರು ಮಾಡ್ತ°. “ಹಾಂ, ಅಪ್ಪ ಇಲ್ಲಿ ಇಲ್ಲದ್ದದು ಒಳ್ಳೆದೇ ಆತು, ಇದ್ದಿದ್ದರೆ ಎನ್ನ ಯುಧ್ಧಕ್ಕೆ ಹೋಪಲೆ ಬಿಡ್ತಿದ್ದವಿಲ್ಲೆ. ಈಗ ಆನು ಎಂತ ಹೇಳಿ ತೋರ್ಸುತ್ತೆ ಆ ಕೌರವರಿಂಗೆ. ಅಲ್ಲಿ ಆರೆಲ್ಲ ಇಪ್ಪದು? ಭೀಶ್ಮಜ್ಜ ಅವ° ತೊಂಡ, ದ್ರೋಣ – ಕೃಪರು ಬ್ರಾಹ್ಮಣರು ಅವರ ಬಿಡು ಎನ್ನ ಎದುರು ಅವ್ವೆಲ್ಲ ಎಂತ? ಕರ್ಣ ಸಾರಥಿಯ ಮಗ° ಅಡ, ಮತ್ತೆ ಒಳುದೋರೆಲ್ಲ ಎನಗೆ ಲೆಕ್ಕವೇ ಅಲ್ಲ….!! ಈಗ ಹೋಗಿ ಸೋಲ್ಸಿಕ್ಕ್ಕಿ ಬಪ್ಪೆ ಅವರೆಲ್ಲರ.”  ಹೇಳಿ ಹೇಳ್ತ°. ತಂಗೆಗೆ ಅಣ್ಣನ ಮಾತು ಕೇಳಿ ಖುಶಿ ಆಗಿ, ” ಅಣ್ಣ ಅಣ್ಣಾ.. ಈ ಕೌರವರಿದ್ದವನ್ನೇ.. ಅವರ ವಸ್ತ್ರ ಎಲ್ಲ ಭಾರೀ ಚೆಂದ ಚೆಂದ ಇರ್ತಡ, ನೀನು ಅವರೆಲ್ಲರ ಸೋಲ್ಸಿದ ಮೇಲೆ ಅವರ ಮೈಮೇಲಿಪ್ಪ ವಸ್ತ್ರ ತೆಕ್ಕೊಂಡು ಬತ್ತೆಯಾ?? ಎನ್ನ ಬೊಂಬೆಗೊಕ್ಕೆ ಅಲಂಕಾರ ಮಾಡುವಾಗ ಹಾಕುತ್ತೆ… ಪ್ಲೀಸ್… ” ಹೇಳಿ ಕೇಳುತ್ತು. “ಅಕ್ಕಕ್ಕು ತಪ್ಪೋ°, ಅದೆಂತ ದೊಡ್ಡ ವಿಷಯ? ಈಗಳೇ ತತ್ತೆ.  ” ಹೇಳಿ ಹೇಳಿಂಡು ರಜ್ಜ ಮೋರೆ ಸಣ್ಣ ಮಾಡ್ತ°. ಅಣ್ಣ ಚಪ್ಪೆ ಆದ್ದು ನೋಡಿ ತಂಗೆ ” ಎಂತಾತಣ್ಣಾ? ” ಕೇಳ್ತು.  ” ಎಂತ ಮಾಡುದು ತಂಗೂ, ಸೋಲ್ಸುದೆಲ್ಲ ಅಪ್ಪು.. ಆದರೆ, ಆನಲ್ಲಿ ಹೋಪದು ಹೆಂಗೆ? ಎನಗೆ ಸರಿಯಾದ ಸಾರಥಿ ಬೇಡದೋ? ಎಲ್ಲ ಇದ್ದು ಸಾರಥಿ ಇಲ್ಲದ್ರೆ ಯುಧ್ಧ ಮಾಡುದೆಂತರ?”  ಹೇಳಿ ರಾಗ ಎಳೆತ್ತ°. ಇವನ ಇಷ್ಟೆಲ್ಲ ಪರಾಕ್ರಮದ ಮಾತುಗಳ ಕೇಳಿಯೊಂಡಿದ್ದ ಅರ್ಜುನಂಗೆ ಒಳಂದೊಳ ನೆಗೆ ಬಂದೊಂಡಿರ್ತು, ಇಷ್ಟು ಹೊತ್ತು ಬಾಯಿ ಮುಚ್ಚಿ ಕೂದೊಂಡಿತ್ತವ ಈಗ ಮೆಲ್ಲಂಗೆ ಸೈರಂಧ್ರಿಯತ್ರೆ ಶಿಫಾರಸು ಮಾಡ್ಲೆ ಹೇಳ್ತ. ಅದು ಹೋಗಿ ಉತ್ತರೆಯತ್ರೆ ಹೇಳ್ತು, ” ಈ ನಮ್ಮ ಬೃಹನ್ನಳೆ ಇದ್ದನ್ನೆ, ಅದು ಒಂದು ಕಾಲಲ್ಲಿ ಅರ್ಜುನಂಗೆ ಸಾರಥಿ ಆಯಿದು.  ಹಾಂಗಾಗಿ ರಜ ರಜ ರಥ ಬಿಡ್ಲೂ ಗೊಂತಿದ್ದು. ನೀ ಎಂತಕೆ ಅಣ್ಣನತ್ರೆ ಹೇಳ್ಲಾಗ?” ಹೇಳಿ.  ಉತ್ತರೆ ಅಣ್ಣಂಗೆ ಹೇಳ್ತು. ಅವ ” ಅಪ್ಪೋ?? ಹಾಂಗಾದರೆ ಆಗದ್ದೆ ಇಲ್ಲೆ” ಹೇಳ್ತ. ಹೆರಡ್ತವು ಇಬ್ರೂ.  ತಂಗೆ ಭಾರೀ ಗೌಜಿಲಿ ಅಣ್ಣಂಗೆ ತಿಲಕ ಎಲ್ಲ ಮಡುಗಿ ಕಳುಸುತ್ತು.

ಅರ್ಜುನ ಬೇಕು ಬೇಕು ಹೇಳಿಯೇ ಕೈಗೆ ಕಟ್ಟುದರ ಕಾಲಿಂಗೆ – ಕವಚವ ತಿರುಗುಸಿ ಎಲ್ಲ ಕಟ್ಟುತ್ತ°. ಅದರ ಎಲ್ಲ ನೋಡಿ ಉತ್ತರ° ನೆಗೆ ಮಾಡ್ತ, ಅವನೇ ಅದ್ರೆಲ್ಲ ಸರಿಯಾಗಿ ಕಟ್ಟಿ ಹೆರಡ್ತವು ಯುಧ್ಧಕ್ಕೆ.

ಅರ್ಜುನ ಭಯಂಕರ ವೇಗಲ್ಲಿ ರಥ ನೆಡೆಶಿಯೊಂಡು ಹೋವ್ತ° ಕೌರವರ ಸೇನೆಯೆದುರು. ದೂರಂದಲೇ ಕೌರವರ ಸೇನೆ ಸಾಗರದ ಹಾಂಗೆ ಕಂಡತ್ತಡ ಕುಮಾರಂಗೆ. ಅವ ಶಿಖಂಡಿಯತ್ತರೆ ಹೇಳ್ತ°, ” ಇದಾ, ಇದಾ, ನಾವು ತಿರುಗಿ ಹೋಪೊ°… ಈ ಸೇನೆಯೊಟ್ಟಿಂಗೆ ಯುಧ್ಧ ಮಾಡಿ ಗೆಲ್ಲುಲಿದ್ದೋ? ಅಲ್ಲಿ ನೋಡು ರಜ್ಜ.. ಆರೆಲ್ಲ ಇದ್ದವು ಹೇಳಿ? ಅವರ ನೋಡಿಯಪ್ಪಗಳೇ ಹೆದರಿಕೆ ಆವುತ್ತು. ಎನಗೆ ಕೈ ಕಾಲು ಬೆಗರ್ತಾ ಇದ್ದು. ಇದಾ ಕಾಲು ನಡುಗಿ ಬೀಳುವೆ ಆನೀಗ. ಎನ್ನ ಶಕ್ತಿ ಇಡೀ ಕಳಕ್ಕೊಂಡು ಆನು ಬೀಳುವ ಮೊದಲು ಮನೆಗೆ ನಡೆ” ಹೇಳ್ತ. ಅಷ್ಟಪ್ಪಗ ಶಿಖಂಡಿ,  ” ಅಪ್ಪೋ? ಅಂಬಗ ಆ ದನಂಗಳ ಕಳಕ್ಕೊಂಡವಕ್ಕೆ ಎಂತ ಹೇಳುದು? ನಿನ್ನ ತಂಗೆ ಕೌರವರ ವಸ್ತ್ರ ಕೇಳಿರೆ ಎಂತ ಹೇಳುದು?” ಹೇಳಿ ಪ್ರಶ್ನೆ ಮಾಡ್ತ°. “ಅಯ್ಯೋ ದೇವರೇ, ದನಂಗಳ ಬೇಕಾರೆ ಹೊಸತ್ತು ಕೊಡ್ಲಕ್ಕು, ಜೀವ ಹೋದರೆ ಮತ್ತೆ ಎಂತ ಇದ್ದು? ನಾವು ಹೋಪೊ° ತಿರುಗಿ, ಜೀವ ಒಳುದರೆ ಮತ್ತೆ ನೋಡಿಗೊಂಬೊ°.” ಹೇಳಿ ಹೇಳ್ತ°.ಆದರೂ ಅರ್ಜುನ ರಥ ನಿಲ್ಲುಸುವ ಲಕ್ಷಣ ಕಾಣ್ತಿಲ್ಲೆ, ಅಂಬಗ ಕುಮಾರ ಹೆದರಿಕೆಲಿ ಹೇಂಗಾರೂ ಜೀವ ಒಳುಶಿಯೊಳ್ತೆ ಹೇಳಿ ರಥಂದ ಕೆಳ ಹಾರಿ ಓಡ್ಲೆ ಸುರು ಮಾಡ್ತ°. ಇದೆಲ್ಲದರ ದೂರಂದಲೇ ನೋಡ್ತಾ ಇದ್ದ ಕೌರವರು ಜೋರಾಗಿ ನೆಗೆ ಮಾಡ್ತವಡ.  ಅವಮಾನ ಆವ್ತಾ ಇಪ್ಪದನೂ ಲೆಕ್ಕಕ್ಕೆ ತೆಕ್ಕೊಳ್ಳದ್ದೆ ಓಡ್ತಾ ಇಪ್ಪ ಕುಮಾರನ,  ಶಿಖಂಡಿ ಓಡಿ ಹೋಗಿ ಹಿಡುದು ತಂದು ಪುನಃ ರಥಲ್ಲಿ ಕೂರ್ಸುತ್ತ°.

ನವಗಿಷ್ಟು ಸಾಕು – ಮತ್ತಾಣ ಕಥೆ ಗೊಂತಿಪ್ಪದೇ ಅರ್ಜುನ ಹೋಗಿ ಯುಧ್ಧ ಮಾಡ್ತ°, ಗೆಲ್ಲುತ್ತ°, ಅವ ಅರ್ಜುನ ಹೇಳಿ ಎಲ್ಲೋರಿಂಗೂ ಗೊಂತಾವುತ್ತು.

ಇರಳಿ ನವಗೆ ಬೇಡ.

ಎರಡ್ಣೇ ಕಥೆ ಮಹಾಭಾರತ ಯುದ್ಧದ್ದು, ಕಥಾನಾಯಕ ಬೇರಾರೂ ಅಲ್ಲ ನಮ್ಮ ಉತ್ತರ ಕುಮಾರ°.

ಸುರೂವಾಣ ದಿನದ ಯುಧ್ಧ..

ಮಹಾರಥಿ ಶಲ್ಯಂಗೆ ನಮ್ಮ ಉತ್ತರ ಕುಮಾರ° ಯುದ್ಧ ಭೂಮಿಲಿ ಸವಾಲು ಹಾಕುತ್ತ°. ಶಲ್ಯ° ಅವನ ರಥಲ್ಲಿ ಕೂದೊಂಡಿಪ್ಪಗ ಆನೆಯಮೇಗೆ ಕೂದೊಂಡು ಉತ್ತರ ಕುಮಾರ° ಬತ್ತ°, “ಇದಾ ಆನು ನಿನಗೆ ಸವಾಲು ಹಾಕುತ್ತಾ ಇದ್ದೆ, ಎನ್ನೊಟ್ಟಿಂಗೆ ಯುಧ್ಧ ಮಾಡು ಹೇಳ್ತ°”.ಶಲ್ಯ ಅಷ್ಟಪ್ಪಗ ಅವನ ಪರಿಚಯ ಕೇಳ್ತ°. ಅವಗ ಉತ್ತರ ಕುಮಾರ ಹೇಳ್ತ° “ಎನ್ನ ಪರಿಚಯ ಆನಲ್ಲ ಎನ್ನ ಬಾಣಂಗೊ ಮಾಡ್ತು ಹೇಳಿ. ಯುಧ್ಧ ಸುರುಆವುತ್ತು. ಉತ್ತರ ಕುಮಾರ° ಆನೆ ಮೇಗೆ ಕೂದೊಂಡು ಭಯಂಕರ ಯುಧ್ಧ ಮಾಡ್ತ°. ಅವನ ಸೈನ್ಯ, ಶಲ್ಯನ ಸೈನ್ಯವ ಹೆಚ್ಚೂ ಕಮ್ಮಿ ಬಡುದು ಹಾಕುತ್ತು. ಅಷ್ಟಪ್ಪಗ ಉತ್ತರ ಕುಮಾರ ಅವನ ಪರಿಚಯವ ಹೇಳ್ತ°, ” ಈಗ ಯಾವ ಮಹಾರಥಿಗೆ ಶ್ರೀ ಕೃಷ್ಣ ಸಾರಥಿ ಆಗಿ ಇದ್ದನೋ ಅವಂಗೆ ವಿರಾಟ ಪರ್ವದ ಯುಧ್ಧಲ್ಲಿ ಆನು ಸಾರಥಿ ಆಗಿತ್ತಿದ್ದೆ. “ಈ ಮಾತುಗಳ ಕೇಳಿ ಶಲ್ಯಂಗೆ ಬೆಶಿ ಏರ್ತು. ಅವನ ಮುರುದು ಬಿದ್ದ ರಥದ ಹತ್ರಂದ ಒಂದು ಈಟಿ ತೆಗದು ಉತ್ತರ ಕುಮಾರನ ಹೊಡೆಂಗೆ ಇಡುಕ್ಕುತ್ತ°. ಅದು ಉತ್ತರ ಕುಮಾರನ ಹೊಟ್ಟೆಯ ಸೀಳಿಯೊಂಡು ಹೋಗಿ ಅವ  ವೀರ ಮೃತ್ಯುವಿಂಗೆ ಪ್ರಾಪ್ತ ಆವ್ತ°. ಅವನ ಆ ದಿನದ ಹೋರಾಟ ನೋಡಿ,  ಶಲ್ಯ ಅವನ ದೇಹದ ಹತ್ರೆ ಬಂದು ಕೈ ಮುಗುದು ಹೇಳ್ತ, “ಇಂದ್ರಾಣ ಯುಧ್ಧಲ್ಲಿ ಅತಿ ಪರಾಕ್ರಮಿಯ ಈ ಜಗತ್ತು ಕಳಕ್ಕೊಂಡತ್ತು” ಹೇಳಿ.

ಆ ಇಡೀ ಇರುಳು.. ಕೌರವ-ಪಾಂಡವ ಸೈನ್ಯಲ್ಲಿ ಉತ್ತರಕುಮಾರಂದೇ ಶುದ್ದಿ, ಆರೀಗೂ ಅವನ ಪರಾಕ್ರಮವ ಹೊಗಳುದು ಬಿಟ್ರೆ ಬೇರೆಂತ ಕಾಣ್ತಿಲ್ಲೆ.

ಅವನ ಅಬ್ಬೆ ಕಣ್ಣಿಲಿ ನೀರು ಹಾಕುವಾಗ ಉತ್ತರ ಕುಮಾರನ ಅಪ್ಪ ಹೇಳ್ತವು ” ಕೂಗಿ ಕಣ್ಣೀರು ಹಾಕಿ ಉತ್ತರನ ವೀರ ಆತ್ಮಕ್ಕೆ ಅವಮಾನ ಮಾಡೆಡ” ಹೇಳಿ.

ಒಂದು ರಜ್ಜ ಯೋಚನೆ ಮಾಡಿದೆ,ಯುಧ್ಧ ಹೇಳಿರೆ ಹೆದರಿ ಹೋಗಿಯೋಂಡಿದ್ದ ರಥಂದ ಹಾರಿ ತಿರುಗಿ ಓಡಿ ಹೋದ ಉತ್ತರ ಕುಮಾರಂಗೆ ಅಷ್ಟು ವೀರತೆ ಎಲ್ಲಿಂದ ಬಂತು?ಶಲ್ಯ ಒಬ್ಬ ಮಹಾರಥಿ, ಉತ್ತರ ಕುಮಾರ ಶಲ್ಯಂಗೇ ಎಂತಕೆ ಸವಾಲು ಹಾಕುದು? ಆರಾದ್ರೂ ಸಣ್ಣಸಣ್ಣ ರಾಜರಿಂಗೆ ಸವಾಲು ಹಾಕಿ ಅವರ ಸೋಲುಸುಲೆ ಆವುತಿತ್ತನ್ನೆ? ಬೇಕು ಬೇಕು ಹೇಳಿ ಹೋಗಿ ಪೆಟ್ಟು ಮಾಡಿ ಸತ್ತದೆಂತಕಪ್ಪ? ಇನ್ನೂ ಸಣ್ಣ ಮಾಣಿ, ಎನಗೆ ಯುಧ್ಧಕ್ಕೆ ಹೋಪ ಮನಸ್ಸಿಲ್ಲೆ ಹೇಳಿರೆ ಆರೂ ಒತ್ತಯ ಮಾಡ್ತಿತ್ತವಿಲ್ಲೆ..!!

ಮತ್ತೆಂತಕೆ ಹಾಂಗೆ ಮಾಡಿದ?

ಮೊನ್ನೆ ಮೊನ್ನೆ “ಬಾಣ” ಕಾದಂಬರಿ ಸಿಕ್ಕಿತ್ತು.

ಅದರಲ್ಲಿ ಒಂದು ಘಟನೆ ಬತ್ತು.

ವಿಂಧ್ಯ ಕಾಡಿನೊಳ ದಂಡಕಾರಣ್ಯ ಹೇಳ್ತ ಒಂದು ಪ್ರದೇಶ, ಅಲ್ಲಿ ಅಗಸ್ತ್ಯ ಮಹರ್ಶಿಯ ಆಶ್ರಮ. ಅಲ್ಲೇ ಹತ್ತರೆ ಒಂದು ಮರಲ್ಲಿ ಹಳೇ ಗೂಡಿನೊಳ ಒಂದು ಪ್ರಾಯದ ಗಿಳಿ ಅದರ ಹೆಂಡತ್ತಿಯೊಟ್ಟಿಂಗೆ ವಾಸ ಮಾಡಿಯೊಂಡಿತ್ತು. ದೈವಕೃಪೆಂದ ಅದಕ್ಕೊಂದು ಮಗು ಹುಟ್ತುತ್ತು. ಹೆರಿಗೆಲಿ ಹೆಂಡತ್ತಿ ಸತ್ತು ಹೋವ್ತು, ಆದರೂ ಆ ದುಃಖವ ಹಿಂದೆ ಹಾಕಿ, ತುಂಬ ಕಷ್ಟಂದ ಮಗುವಿನ ಬೆಳೆಶುತ್ತು. ಪ್ರಾಯ ಆಗಿ ರೆಕ್ಕೆಯ ಗರಿ ಎಲ್ಲ ಬಿದ್ದು ಹೋಗಿ ಕೊಕ್ಕು ಮೊಂಡಾದರೂ ಅಲ್ಲಿ ಇಲ್ಲಿ ಹೋಗಿ ಬೇರೆ ಮರಂಗಳಿಂದ ಬಿದ್ದ ಹಣ್ಣುಗಳ ಹೆರ್ಕಿ ತಂದು ಮಗಂಗೆ ಕೊಡ್ತಾ ಇತ್ತು. ಅದು ಹಶುವಿಲ್ಲಿ ಇದ್ದರೂ ತುಂಬು ಪ್ರೀತಿಲ್ಲಿ ಮಗನ ಜಾಗ್ರತೆ ಮಾಡಿಗೊಂಡಿತ್ತು.

ಹೀಂಗಿಪ್ಪಗ ಒಂದು ದಿನ, ಬೇಟೆಗಾರರು ಕಾಡಿಂಗೆ ಬತ್ತವು.

ಕಾಡಿನ ಮೃಗಂಗೋ ಎಲ್ಲಾ ಸಿಕ್ಕಿದ ಕಡೆಂಗೆಲ್ಲಾ ಓಡ್ಲೆ ಸುರು ಮಾಡ್ತವು, ಈ ನಮ್ಮ ತೊಂಡ ಗಿಳಿ ಅದಾರು ಹೇಳಿ ಕೊರಳುದ್ದ ಮಾಡಿ ನೋಡ್ತು. ಕಾಡಿನೊಳ ಯಮನ ಜೆನಂಗಳ ಹಾಂಗೆ ಕಾಂಬ ಕಪ್ಪು ಬಣ್ಣದ ಸುಮಾರು ಬೇಡರು ಬಂದೊಂಡಿರ್ತವು. ಅವರ ನೋಡಿ ಈ ಗಿಳಿಗೆ ಹೆದರಿಕೆ ಶುರು ಆವುತ್ತು..

ಅದರ ಅಪ್ಪ° ಗಿಳಿಯ ಬೇಡರು ಕೊಂದು ಹಾಕುತ್ತವು..

ಇನ್ನು ಹಾರುಲೆ ಎಡಿಯದ್ರೂ, ಹೊಡಚ್ಚಿಯೋಂಡು ಗೂಡಿಂದ ಹೆರ ಬತ್ತು. ಅಪ್ಪ ಗಿಳಿ ಸತ್ತ ದುಃಖ ಇದ್ದರೂ ಆನು ಉಳಿಯೆಕ್ಕು ಹೇಳ್ತ ಆಶೆಲಿ ಅಪ್ಪನ ಶವವ ಬಿಟ್ಟು ಹೋವ್ತು. ಲೇಖಕ ಬಾಣ, ಆ ಗಿಳಿಯ ಬಾಯಿಲಿ ಹೇಳುಸುತ್ತ ಮಾತು ಎನಗೆ ಆಶ್ಚ್ಗರ್ಯ ತಂದತ್ತು, ” ಎಷ್ಟು ಕಷ್ಟವಾದರೂ ಬದುಕಬೇಕೆಂಬ ಆಶೆಯನ್ನು ಬಿಡುವುದಿಲ್ಲ ! ಸ್ವಾಮೀ, ಜೀವಕ್ಕಿಂತ ಪ್ರಿಯಕರವಾದದ್ದು ಜಗದೊಳಗೆ ಯಾವುದೂ ಇಲ್ಲ ! ನೋಡಿರಿ ! ಅಂಥಾ ನನ್ನ ದಯಾಳು ತಂದೆ ತೀರಿದನೆಂಬ ಹಂಬಲವಿಲ್ಲದೆ, ಆ ಹೆಣವನ್ನು ಲ್ಲಿಯೇ ಬಿಟ್ಟು ನನ್ನ ಜೀವ ಉಳಿಸಿಕೊಳ್ಳುವುದನ್ನೆ ನಾನು ನೋಡಿದೆನು. ಮುಪ್ಪಿನ ಕಾಲದಲ್ಲಿ ಹೆಂಡತಿ ಸತ್ತ ದುಃಖವನ್ನು ತಡಕೊಂಡು, ಹುಟ್ಟಿನಿಂದ ನನ್ನನ್ನು ಜೋಪಾನಮಾಡಿ, ಕಡೆಗೆ ನನ್ನನ್ನು ಮಗ್ಗುಲಲ್ಲಿ ಇಟ್ಟುಕೊಂಡು ಮರಣಹೊಂದಿದ ತಂದೆಯನ್ನು ನಾನಾಗಲೇ ಮರೆತೆನು. ನನ್ನ ಸಲುವಾಗಿ ಎಷ್ಟೋ ಕಷ್ಟಗಳಾನ್ನು ಅನುಭೋಗಿಸಿ, ತನ ಜೀವಕ್ಕಿಂತ ನನ್ನನ್ನು ಹೆಚ್ಚು ನೋಡಿ ಸಲಹಿದ ತಂದೆಯನ್ನು ಮರೆತು ನನ್ನ ಜೀವವನ್ನೇ ನೋಡಿಕೊಂಡೆನು.” ಹೇಳಿ.

ಹೀಂಗೇ ಸುಮ್ಮನೆ ಆಲೋಚನೆ ಮಾಡಿಯೋಂಡು ಇತ್ತಿದ್ದೆ.

ಉತ್ತರ ಕುಮಾರ

ಅಪ್ಪನ್ನೇ ಹೇಳಿ ಕಂಡತ್ತು. ಬಾಯಿಲಿ ಎಷ್ಟೇ ಮಾತಾಡಿರೂ ಸಮಯ ಬಪ್ಪಗ ಮನುಷ್ಯ ಮದಲು ನೋಡುದು ಅವನನ್ನೇ ಅಲ್ಲದಾ?

ತುಂಬ ಧೈರ್ಯ ಅಥವಾ ಅನಿವಾರ್ಯಲ್ಲಿ ಇದ್ದರೂ ಪ್ರಾಣ ಪಣಕ್ಕೆ ಬಂದಪ್ಪಗ ಸ್ವಾರ್ಥ ಬಂದೇ ಬತ್ತಲ್ಲದಾ??ಉತ್ತರ ಕುಮಾರಂಗೂ ಹಾಂಗೇ ಆದಿಕ್ಕು ಅಲ್ಲದಾ?

“ಉತ್ತರ ಕುಮಾರನ ಪೌರುಷ” ಹೇಳಿ ಪಾಠ ಇತ್ತು ಅದರಲ್ಲಿ ಉತ್ತರ ಕುಮಾರ ರಣರಂಗಂದ ಓಡಿಹೋಪದರ ಭಾರೀ ರಸವತ್ತಾಗಿ ಹೇಳಿಯೊಂಡಿತ್ತಿದ್ದವು ರತ್ನಾವತಿ ಟೀಚರ್. ಅವಗೆಲ್ಲ ಅದರ ಓದುವಾಗ ಭಾರಿ ಖುಶಿಅಕ್ಕು. ಆದರೆ ಈಗ ಅನ್ಸುತ್ತು ಆ ಹೊತ್ತಿಲ್ಲಿ ಅರೇ ಇದ್ದಿದ್ದರೂ ಅವಕ್ಕೆ ಹಾಂಗೆ ಆವುತಿತ್ತು.. ಹೋಗಿಯೋಡಿದ್ದ ರಥಂದ ಹಾರಿ ಒಟ್ಟಾರೆ ಬದ್ಕಿಯೊಂಬ°, ಎಂತ ಇದ್ದರೂ ಮತ್ತೆ ನೋಡಿಯೊಂಡರಾತು ಹೇಳಿ ಕಂಡದಲ್ಲಿ ವಿಶೇಷ ಏನೂ ಇಲ್ಲೆ.

ಆದರೆ ಮತ್ತೆ ಅವ ಅಷ್ಟು ವೀರಾವೇಶಲ್ಲಿ ಹೋರಾಡ್ಲೆ ಎಂತ ಕಾರಣ?

ಬಹುಶಃ ಅವ° ಮಾಡಿದ ಕೆಲಸಕ್ಕೆ ಅವಂಗೇ ನಾಚಿಕೆ ಆಗಿರೆಕು. ನೀನು ಹೇಡಿಯ ಹಾಂಗೆ ಓಡಿ ಬಂದೆ ಹೇಳಿ ಅವನ ಮನಸ್ಸು ಅವಂಗೆ ಏವತ್ತೂ ಹೇಳಿಯೊಂಡು ಇತ್ತಾದಿಕ್ಕು.ಒಂದರಿ ಸಾವಿನ ಸಾಕ್ಷಾತ್ ಕಂಡವಕ್ಕೆ ಕೈ ಕಾಲು ದರುಸುದು ಸಾಮಾನ್ಯ, ಆದರೆ ಒಂದು ವೇಳೆ ಅವ್ವು ಅಲ್ಲಿಂದ ತಪ್ಪುಸಿಯೊಳ್ಳೆಕು ಹೇಳಿ ಇನ್ನೊಬ್ಬನ ಮುಂದೆ ಮಡುಗಿ ಆ ಶವವ ದಾಂಟಿಯೊಂಡು ಹೋದರೆ, ಜೀವ ಒಳುದರೂ ಮನಶ್ಶ್ಯಾಂತಿ ಸಿಕ್ಕುತ್ತಿಲ್ಲೆ. ಪ್ರತಿ ದಿನ ಪ್ರತಿ ಕ್ಷಣ ಹೊತ್ತು ಹೊತ್ತಿಂಗೂ ಅವರ ಮನಸ್ಸೇ ಅವರ ಹೀಯಾಳಿಸಿಯೊಂಡಿರ್ತು. ಅದರಂದ ಹೆರಬಪ್ಪಲೆ ಅವು ಬೇರೆ ಬೇರೆ ಮುಖವಾಡ ಹಾಕುಲೆ ಸುರುಮಾಡ್ತವು.ಲೊಟ್ಟೆ, ಕೋಪ, ಜಂಬದ ಮಾತುಗೊ ಇದೆಲ್ಲ ಅವ್ವು ಅವರ ಮನಸ್ಸಿನ ಹಿಡಿತಕ್ಕೆ ತಪ್ಪಲೆ ಗೊಂತಿದ್ದುಗೊಂಡೇ ಮಾಡುವ ಕೆಣಿಗೊ…!!!

ಇದೇ ಕೆಲಸವ ಉತ್ತರನೂ ಮಾಡ್ತ°, “ನೀನಾರು ?? ಪರಿಚಯಕೊಡು..” ಹೇಳಿ ಶಲ್ಯ ಕೇಳುವಾಗ ಉತ್ತರನ ಉತ್ತರಂಗೊ ” ಆನಾರು ಹೇಳುದರ ನಿನ್ನ ದೇಹದ ಮೇಲೆ ಇಪ್ಪ ಗಾಯಂಗೊ ಹೇಳ್ತು” ಹೇಳುವ ಧಾಟಿಲಿ ಇರ್ತು.ಅದು ಅವ ಅವನ ಮನಸ್ಸಿನ ಭಾವನೆಗಳ ಮುಚ್ಚಿ ಹಾಕುವ ಪ್ರಯತ್ನ ಅಗಿಪ್ಪಲಾಗ ಏಕೆ?ಒಂದರಿ ಹಾಂಗೆ ಮನಸ್ಸು ಹೇಳ್ಲೆ ಸುರು ಮಾಡಿತ್ತು ಹೇಳಿರೆ ಮತ್ತೆ ಎಂದಿಂಗೂ ಅವಕ್ಕೆ ಅವರ ಎದುರೇ ನಿಂಬಲೆ ಎಡಿತ್ತಿಲ್ಲೆ. ಹೀಂಗಿಪ್ಪ ಬದುಕ್ಕಿಂದ ಸಾವದೇ ಒಳ್ಳೇದು ಹೇಳಿಪ್ಪ ಭಾವನೆ ಬತ್ತು. ಅದೇ ಉತ್ತರ ಕುಮಾರ ಯುಧ್ಧಕ್ಕೆ ಹೋಪಲೆ ಕಾರಣ ಆದಿಕ್ಕು ಅಲ್ಲದಾ?

ಸಾವಲೇ ಹೇಳಿ ಹೋದ ಹಾಂಗೆ ಆತು. ಆದರೆ ಅವಂಗೆ ಅದೇ ಬೇಕಿತ್ತೋ ಏನೋ?

ಈ ಯುಧ್ಧಕ್ಕೆ ಬೆನ್ನು ತೋರುಸಿ ಬಂದ ಸೈನಿಕರು ಆತ್ಮಹತ್ಯೆ ಮಾಡಿಗೊಂಡ ಪ್ರಕರಣಂಗಳಲ್ಲಿ ಇದೇ ಕಾರಣ ಆದಿಕ್ಕಾ ಹೇಳುವ ಸಂಶಯ…!! ಬಹುಶಃ ” ಆನು ಹೇಡಿಯ ಹಾಂಗೆ ಓಡಿ ಬಂದೆ” ಹೇಳುವ ಅವಮಾನದ ಭಾರವ ಹೊರ್ಲೆ ಅವರ ಲೊಟ್ಟೆ ಮುಖವಾಡಂಗೊಕ್ಕೆ ಎಡಿಗಾಗಿರ..!!

ಅಂತೂ ಉತ್ತರ ಕುಮಾರ° ಸತ್ತ, ಎನ್ನ ತಲೆಲಿ ಸಾವಿನ ಹೆದರಿಕೆಯ ಹುಳು ಬಿಟ್ಟು ಹೋದ°.

ಸಾವಿನ ಹೆದರಿಕೆಂದಲೂ ಅದರಿಂದ ಬದುಕಿ ಬಂದ ಮೇಲೆ ಅವಮಾನದ ಹೆದರಿಕೆಯೇ ಮನುಷ್ಯನ ಕೊಲ್ಲುತ್ತು ಹೇಳಿ ಅನ್ಸಿತ್ತು…!!!


ನಿಂಗಳ
ಮಂಗ್ಳೂರ ಮಾಣಿ…

32 thoughts on “ಸಾವಿನ ಹೆದರಿಕೆ – ಆ ನಂತರದ ಜೀವನ…!!!

  1. ವಿಷಯ ನಿರೂಪಣೆ ಭಾರೀ ಲಾಯ್ಕಾಯಿದು ಅಣ್ಣ. ಚಿಂತನೆಗೆ ಹಚ್ಚುವ ಬರಹ.
    ಇನ್ನೂ ಬರೆ.

  2. ಲೇಖನ ಓದುಸಿಗೊ೦ಡು ಹೋತು.
    {ಸಾವಿನ ಹೆದರಿಕೆಂದಲೂ ಅದರಿಂದ ಬದುಕಿ ಬಂದ ಮೇಲೆ ಅವಮಾನದ ಹೆದರಿಕೆಯೇ ಮನುಷ್ಯನ ಕೊಲ್ಲುತ್ತು} ಒ೦ದರಿ ಯೋಚನೆ ಆತು.ಎ೦ತಗೋ ಉತ್ತರನ ಪ್ರಕರಣಕ್ಕೂ ಮನ್ನೆ ನೆಡದ ಬಾಬಾ ರಾಮದೇವರ ಘಟನೆಗೂ ಹೋಲಿಕೆ ಇದ್ದೋ ಹೇಳಿ ಸ೦ಶಯವೂ ಆತು.
    ಸೋಲಿನ ಅನುಭವ ಉತ್ತರಕುಮಾರನ ಹೆಚ್ಚು ಧೈರ್ಯಶಾಲಿಯಾಗಿಸುತ್ತೊ ಅಲ್ಲ ತನ್ನ ಹಿ೦ದೆ ಪಾ೦ಡವರ ಸೇನಾಶಕ್ತಿ ಇದ್ದು ಹೇಳುವ ಧೈರ್ಯವೋ?
    ಏನೇ ಆದರೂ ಸಾವಿನ ಹತ್ತರ೦ದ ನೋಡುವ ಅನುಭವ ಇದ್ದನ್ನೇ….ಅಬ್ಬಾ!

    1. {ಉತ್ತರನ ಪ್ರಕರಣಕ್ಕೂ ಮನ್ನೆ ನೆಡದ ಬಾಬಾ ರಾಮದೇವರ ಘಟನೆಗೂ ಹೋಲಿಕೆ ಇದ್ದೋ ಹೇಳಿ ಸ೦ಶಯವೂ ಆತು.} – ಎನಗೂ.:)

      ಧನ್ಯವಾದ ರಘುಮಾವ..

  3. ಶ್ರೀ / ಶ್ರೀಮತಿ / ಕು ಉಷೈ ಅವರೇ.. ನಿ೦ಗಳ ಬ್ಲೋಗ್ ಓದಿದ್ದೆ. ಬೈಲಿ೦ಗೆ ಸ್ವಾಗತ. ಬೈಲಿಲ್ಲಿಯೂ ನಿ೦ಗಳ ಬರಹ ನಿರೀಕ್ಷೆ ಮಾಡುತ್ತಿಯೊ°.

    1. ಗಣೇಶಣ್ಣ,

      ತುಂಬಾ ಖೊಷಿ ಆತು.. ಖಂಡಿತಾ ಎನ್ನಂದ ಆದ ರೀತಿಲ್ಲಿ ಬರೆತ್ತೆ.. ಆನು ಬೈಲಿಂಗೆ ತಪ್ಪದೆ ಭೇಟಿ ಕೊಡ್ತನೇ ಇರ್ತೆ.

  4. ವಿವರಣೆ ಭಾರಿ ಚೆಂದಲ್ಲಿ ಬೈಂದು.. ಅದಪ್ಪು ಉತ್ತರಕುಮಾರ ಹೇಳಿರೆ ಯಾವಾಗಲೂದೆ ಅವನ ’ಹೇಡಿತನ’ದ ಪ್ರಸಂಗವೇ ನೆನಪ್ಪಿಂಗೆ ಬಪ್ಪದು.
    ಹೀಂಗೆ ಬೇರೆ ಬೇರೆ ವಿಷಯಂಗ ತುಂಬಾ ಬರಲಿ.

  5. ಉತ್ತರ ಕುಮಾರ ನಿಜವಾಗಿಯೂ ಪಡಪೋಶಿ ಅಲ್ಲ.ವೀರನೇ.ಗೋಗ್ರಹಣ ಸಮಯಲ್ಲಿ ಅವಂಗೆ ಸಭಾಕಂಪದ ಹಾಂಗೆ ಎಂತದೋ ಆತು.ಅದರ ಕುಮಾರವ್ಯಾಸ ರಂಜನೆ ಮಾಡಿ ಬರದ್ದ. ವ್ಯಾಸ ಅಷ್ಟು ತಮಾಷೆ ಮಾಡಿದ್ದ ಇಲ್ಲೆ ಹೇಳಿ ನಾರಾಯಣಾಚಾರ್ಯರು ಬರೆದ್ದವು.
    ಹಾಂಗಾಗಿ ಅವ ಮಹಾಭಾರತ ಯುದ್ಧಲ್ಲಿ ಭಾಗವಹಿಸಿ ವೀರಸ್ವರ್ಗ ಪಡೆತ್ತ.
    ಮಂಗಳೂರ ಮಾಣಿ ಬರೆದ್ದು ಚೊಕ್ಕ ಆಯಿದು.ಗಂಭೀರ ವಿಷಯವ ಎತ್ತಿಕೊಂಡು ಅಭಿಪ್ರಾಯ ಮಂಡಿಸಿದ್ದಕ್ಕೆ ಅಭಿನಂದನೆ.ಇನ್ನೂ ವಿಚಾರಲಹರಿ ಹೆರಬರಲಿ.

  6. ಲೋಕದ mobility ಇಪ್ಪದೇ ನಾಳೆ/ಸಾವು ಹೇಳುವದರ ಮೇಲೆ.ನಾಳಂಗೆ ಎಂಥ ಹೇಳಿ ಗೊಂತಿದ್ದರೆ ಆನು ಇಂದು ಹೀಂಗೆ ಇರ್ತಿತಿರೆ.ನಾಳೆ ಹೇಳುವದರ ಮುಚ್ಚಿ ಮಡುಗಿ ದೇವರು ಈ ಲೋಕಕ್ಕೆ dynamism ಕೊಟ್ಟಿದ.ಮನುಷ್ಯನ control ಮಾಡ್ಳೆ ನಾಳೆ/ಸಾವಿನ ಹೆದರಿಕೆ ಎರಡೇ ಸಾಕು.ದೇವರಿಂಗೆ ತಲೆ ಇದ್ದು ಹೇಳಿ ಇದರಿಂದಲೇ ಗೊಂತಾವುತ್ತಿಲ್ಯೋ?
    ಮಂಗ್ಳೂರು ಮಾಣಿ ಇದರ ಎಲ್ಲಾ ಆಲೋಚನೆ ಮಾಡಿದರೂ ಅವನ ಅವಸ್ಥೆಯೂ ಇದೇ ಅಲ್ಲದೋ?
    ಆಲೋಚನೆ ಸರಿಯಾಗಿ ಹರಿದು ಬಯಿಂದು,ಇನ್ನೂ ಬರಲಿ..

  7. ಸಾವಿನ ಹತ್ತರಂಗೆ ಹೋದವನ ಅನುಭವ ಅವನ ಜೀವನಲ್ಲಿ ಮರವಲೆ ಏಡಿಯದ್ದ ಘ್ಹಟನೆ ಆಗಿ ಒಳಿಗು. ಒಂದರಿ ಹಾಂಗೆ ಹೋದವಂಗೆ ಅದರ ಹೆದರಿಕೆ ಬಿಡುಗೋ ಹೇಳಿ ಎನಗೆ ಒಂದು ಸಂಶಯ.
    ಹುಟ್ಟಿದವಂಗೆ ಸಾವು ಹೇಳುವದು ನಿಶ್ಛಿತವೇ ಆದರೂ ಆರೂ ಬಯಸದ್ದ ನಿತ್ಯ ಸತ್ಯ.
    ಒಂದು ಮಂಗನ ಕತೆ ಹೀಂಗೆ ಇದ್ದು:
    ಹೊಳೆ ದಾಂಟುವಾಗ ಅದರ ಕುಙಿಯ ಹೆಗಲ ಮೇಗೆ ಹಿಡ್ಕೊಂಡು ದಾಂಟುತ್ತು. ನೀರು ಮೇಗೆ ಮೇಗೆ ಬಂದ ಹಾಂಗೆ, ಕುಙಿಯ ಒಳುಶಲೆ ಪ್ರಯತ್ನ ಮಾಡುತ್ತು. ಅಕೇರಿಗೆ ನೀರು ಇನ್ನೂ ಜಾಸ್ತಿ ಅಪ್ಪಗ ತನ್ನ ಕುಙಿಯನ್ನೇ ಅಡಿಂಗೆ ಹಾಕಿ ಅದರ ಮೇಗೆ ನಿಂದು ತಾನು ಬಚಾವು ಅಪ್ಪಲೆ ಪ್ರಯತ್ನ ಮಾಡ್ತು.
    ಇದು ಕತೆ ಅದಿಕ್ಕು. ಆದರೂ ಜೀವನಲ್ಲಿ ಅಪ್ಪದು ಹೀಂಗೆ ಅಲ್ಲದಾ? ತನ್ನ ತಪ್ಪಿನ ಮುಚ್ಚಲೆ ಬೇಕಾಗಿ ಆಪ್ತರನ್ನೂ ಬಲಿ ಕೊಡುವವು ಕೂಡಾ ಇರ್ತವಲ್ಲದಾ?
    ನಿನ್ನ ನಿರೂಪಣೆ ಲಾಯಿಕ ಆಯಿದು.

    1. ಒಪ್ಪಕ್ಕೆ ಧನ್ಯವಾದ ಅಪ್ಪಚ್ಚಿ…:):):)
      { ಒಂದರಿ ಹಾಂಗೆ ಹೋದವಂಗೆ ಅದರ ಹೆದರಿಕೆ ಬಿಡುಗೋ ಹೇಳಿ ಎನಗೆ ಒಂದು ಸಂಶಯ.} – ಸಾವಿನ ಹೆದರಿಕೆ ಬಿಟ್ಟುಹೋಗಿ ಬದುಕಿನ ಹೆದರಿಕೆ ಸುರುವಕ್ಕೋ ಹೇಳಿ…
      ಮಂಗನ ಕಹೆ ಲಾಯಕಿದ್ದು :):):)

      1. ಮೃತ್ಯುವಿಂ ಭಯವೇಕೆ ? ದೇಶಾಂತರಕ್ಕೊಯ್ವ
        ಮಿತ್ರನಾತಂ, ಚಿತ್ರ ಹೊಸದಿರ್ಪುದಲ್ಲಿ
        ಸಾತ್ವಿಕದಿ ಬಾಳ್ವವಂಗೆತ್ತಲೇಮ್ ಭಯವಿಹುದು
        ಸತ್ರ ಹೊಸದಿಹುದು ನಡೆ, ಮಂಕುತಿಮ್ಮ !

        ನಮ್ಮಲ್ಲಿಪ್ಪ ಕೋಪ – ದ್ವೇಷ – ನೋವು – ನಲಿವು – ಪ್ರೀತಿ ಇವೆಲ್ಲವುಗಳ ದೂರ ನಿಂದು ನೋಡ್ಲೆ ಕಲಿಯೆಕ್ಕಡ!( ಶ್ರೀಗಳು ಹೇಳುವ ‘ಸಾಕ್ಷೀ ಭಾವ’?)
        ಆವಾಗ ‘ಸಾಯ್ತಾ’ ಇಪ್ಪದು ದೇಹ ಮಾತ್ರವೇ, ನಾವಲ್ಲ ಹೇಳಿ ಅನಿಸೆಕ್ಕಡ! ಹೊಸ ಜನ್ಮಕ್ಕೆ ಅದು ದ್ವಾರ ಅಡ!
        ಮತ್ತೆ ಈ ಜ್ಞಾನವೇ ಭಯವ ನಿವಾರಿಸುವ ದಿವ್ಯಾಸ್ತ್ರ ಹೇಳಿ ದೊಡ್ಡವು ಹೇಳುವುದಡ ! ಎಲ್ಲ “ಅಡ”, ಎನಗೂ ಗೊಂತಿಲ್ಲೆ!! 🙂

        1. ಮತ್ತೆ, ಹಾ೦..

          ಸಾಯುವ ಹೊತ್ತಿಂಗೆ ‘ದೂರ ನಿಂದು’ ನೋಡುದಲ್ಲ,

          ನಮ್ಮ ದಿನ-ನಿತ್ಯದ ಜೀವನಲ್ಲಿ ನಮ್ಮ ಎಲ್ಲ ನಡೆ-ನುಡಿ, ಆಗು-ಹೋಗುಗಳ ‘ಹೀಂಗೆ ‘ ನೋಡುವ ಅಭ್ಯಾಸಮಾಡಿಗೊಂಬದದು! 🙂

  8. ಅವಮಾನದ ಹೆದರಿಕೆ ಮನುಶ್ಯನ ಕೈಲಿ ಊಹಿಸಲೂ ಎಡಿಯದ್ದ ಕೆಲಸಮಾಡ್ಸುತ್ತು.
    “glory of a win is much smaller than the ignominy of a defeat”
    ಅವಮಾನದ ಹೆದರಿಕೆ,ಸಮಾಜಲ್ಲಿ ಸೋಲಿಂಗೆ ಇಪ್ಪ ಮರ್ಯಾದಿ (!) ಅಸಾಧ್ಯವ ಸಾಧ್ಯಆಗುಸ್ತು
    ಲಾಯಕ್ಕಾಯಿದು.

  9. ಭಾರೀ ಲಾಯಿಕ ಆಯಿದು.. ‘ಉತ್ತರ ಕುಮಾರ’ ಹೇಳಿಯಪ್ಪಗ ಅವನ ಹೇಡಿತನವೇ ನೆನಪಾವ್ತಶ್ಟೆ. ಎರಡನೇ ಸರ್ತಿ ಅವ ಹೋರಾಡಿದ್ದು ನೆನಪೇ ಆವುತ್ತಿಲ್ಲೆ..

    1. ಧನ್ಯವಾದ ಕಿಟ್ಟಣ್ಣ.
      ಎರಡನೇ ಕತೆ ಓ ಮೊನ್ನೆ ಓದಿದ್ದು.. ಹಳೇ ಪುಸ್ತಕ ಸಿಕ್ಕಿತ್ತು ಮಹಾಭಾರತದ್ದು, ಸುಮ್ಮನೆ ಹೀಂಗೆ ಒಂದು ಪುಟ ಬಿಡುಸಿದೆ.. ಈ ಕತೆ ಸಿಕ್ಕಿತ್ತು..

  10. ಪ್ರೌಢ ವಿಚಾರ.ವಿಚಾರ ಮಂಡನೆಯೂ ಲಾಯಿಕ್ಕಾಯಿದು.
    ಮಂಗಳೂರ ಭಾವ – ಅಣ್ಣ ಹೇಳಿ ಹೆಸರು ಬದಲಿಸಿ..ಎಂತ ?

    1. ಕುಮಾರಣ್ಣ,
      ಬೇಜಾರು ಮಾಡಿಕ್ಕೆಡಿ ಹೀಂಗೆ ಹೇಳ್ತೆ ಹೇಳಿ..
      ಎನಗೆ ಮಂಗ್ಳೂರ ಮಾಣಿ ಹೇಳಿಪ್ಪ ಹೆಸರು ತುಂಬಾ ಆಪ್ತ.. ಆನು ಸುಬ್ರಹ್ಮಣ್ಯ ವೇದ ಪಾಠ ಶಾಲೆಲಿ ಕಲುತ್ತೊಂಡಿಪ್ಪಗ ಎನ್ನ ಗುರುಗೊ (ಬೈಲಿನ ಗಣೇಶ ಮಾವ) ಆ ಹೆಸರಿಲ್ಲಿ ದಿನಿಗೇಳಿಯೊಂಡಿತ್ತಿದ್ದವು..
      ಹಾಂಗೆ ಆ ಹೆಸರೇ ಗಟ್ಟಿ ಮಾಡಿಗೊಂಡೆ.
      ನಿಂಗೊ ಎನ್ನ ಮಂಗ್ಳೂರಣ್ಣ ಹೇಳಿ ಆನು ನಿಂಗಳ ಕುಮಾರಣ್ಣ ಹೇಳ್ತೆ ಆಗದಾ???
      :):)

      ತುಂಬು ಪ್ರೀತಿಯ ಒಪ್ಪಕ್ಕೆ ತುಂಬಾ ತುಂಬಾ ಧನ್ಯವಾದ…

  11. ಒಪ್ಪ ಆಯ್ದು ಮಂಗಳೂರ ಭಾವ. ಸುಲಭ ಕತೆ ಹಿಡುದು ಸರಳ ವಿಷಯವ ಸೂಕ್ಷ್ಮ ಚಿಂತನೆ ಮಾಡಿದ್ದಿ ಹೇಳಿ ಇಲ್ಲಿಂದ ನಮ್ಮ ಒಪ್ಪ.

  12. ಓಹ್!!!! ಸರಳ ಶೈಲಿಲಿ, ಗ೦ಭೀರ ವಿಷಯ೦ಗಳ ಚರ್ಚಿಸಿದ ಉತ್ತಮ ಲೇಖನ. ಓದಲೆ ಹತ್ತು ನಿಮಿಷ, ಇದರ ಬಗ್ಗೆ ಆಲೋಚನೆ ಮಾಡ್ಲೆ ಹತ್ತು ಘ೦ಟೆ ಸಾಕೋ? ಭಾರೀ ಲಾಯಿಕಾಯಿದು. ಒಪ್ಪ೦ಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×