Oppanna.com

ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 1-10

ಬರದೋರು :   ಚೆನ್ನೈ ಬಾವ°    on   26/04/2012    12 ಒಪ್ಪಂಗೊ

ಚೆನ್ನೈ ಬಾವ°

ಶ್ರೀಕೃಷ್ಣಪರಮಾತ್ಮನೇ ನಮಃ ॥

ಶ್ರೀಮದ್ಭಗವದ್ಗೀತಾ । 

ಅಥ ತೃತೀಯೋsಧ್ಯಾಯಃ – ಕರ್ಮಯೋಗಃ ॥

ಶ್ಲೋಕ

ಅರ್ಜುನ ಉವಾಚ –
ಜ್ಯಾಯಸೀ ಚೇತ್ ಕರ್ಮಣಸ್ತೇ ಮತಾ ಬುದ್ಧಿರ್ಜನಾರ್ದನ ।
ತತ್ ಕಿಮ್ ಕರ್ಮಣಿ ಘೋರೇ ಮಾಂ ನಿಯೋಜಯಸಿ ಕೇಶವ ॥೦೧॥

ಪದವಿಭಾಗ

ಅರ್ಜುನಃ ಉವಾಚ –
ಜ್ಯಾಯಸೀ ಚೇತ್ ಕರ್ಮಣಃ ತೇ ಮತಾ ಬುದ್ಧಿಃ ಜನಾರ್ದನ । ತತ್ ಕಿಮ್ ಕರ್ಮಣಿ ಘೋರೇ ಮಾಮ್ ನಿಯೋಜಯಸಿ ಕೇಶವ ॥

ಅನ್ವಯ

ಅರ್ಜುನಃ ಉವಾಚ – ಹೇ ಜನಾರ್ದನ !, ಕರ್ಮಣಃ  ಬುದ್ಧಿಃ ಜ್ಯಾಯಸೀ ತೇ ಮತಾ ಚೇತ್, ತತ್ ಹೇ ಕೇಶವ!, ಮಾಮ್ ಘೋರೇ ಕರ್ಮಣಿ ಕಿಮ್ ನಿಯೋಜಯಸಿ?!

ಪ್ರತಿಪದಾರ್ಥ

ಅರ್ಜುನಃ ಉವಾಚ – ಅರ್ಜುನ° ಹೇಳಿದ°,  ಹೇ ಜನಾರ್ದನ! – ಏ ಜನಾರ್ದನನೆನಿಸಿದ ಕೃಷ್ಣನೇ!, ಕರ್ಮಣಃ – ಕಾಮ್ಯಕರ್ಮಕ್ಕಿಂತಲೂ,  ಬುದ್ಧಿಃ – ಬುದ್ಧಿಯು, ಜ್ಯಾಯಸೀ – ಉತ್ತಮ ಹೇದು ಹೇಳ್ವದು, ತೇ – ನಿನ್ನ, ಮತಾ – ಭಾವನೆ,  ಚೇತ್ – ಆಗಿದ್ದರೆ,   ತತ್ – ಅದು, ಹೇ ಕೇಶವ – ಏ ಕೇಶವನಾದ ಕೃಷ್ಣನೇ!,  ಮಾಮ್ – ಎನ್ನ, ಘೋರೇ – ಭೀಕರವಾದ, ಕರ್ಮಣಿ – ಕರ್ಮಲ್ಲಿ,  ಕಿಮ್ – ಎಂತಕೆ,   ನಿಯೋಜಯಸಿ – ತೊಡಗುಸುತ್ತೆ?!

 ಅನ್ವಯಾರ್ಥ

ಅರ್ಜುನ ° ಹೇಳಿದ° – ಹೇ ಜನಾರ್ದನ!, ಹೇ ಕೇಶವ!, ಬುದ್ಧಿಯು ಕಾಮ್ಯಕರ್ಮಕ್ಕಿಂತ ಉತ್ತಮ ಹೇದು ನೀನು ಭಾವಿಸುತ್ತೆ ಹೇದು ಆದರೆ, ಎನ್ನ ಮತ್ತೆ ಈ ಘೋರ ಕರ್ಮಲ್ಲಿ (ಯುದ್ಧಲ್ಲಿ) ಎಂತಕೆ ತೊಡಗುಸುತ್ತಿದ್ದೆ ?!

ತಾತ್ಪರ್ಯ / ವಿವರಣೆ

ತನ್ನ ಆತ್ಮೀಯ ಸಖ°, ಶಿಷ್ಯ°, ಬಂಧು ಅರ್ಜುನನ ಲೌಕಿಕ ದುಃಖವ ನೀಗುಸಲೆ ದೇವೋತ್ತಮ ಪರಮ ಪುರುಷ° ಹಿಂದಾಣ ಅಧ್ಯಾಯಲ್ಲಿ ಆತ್ಮದ ಸ್ವರೂಪವ ಚಂದಕ್ಕೆ ವಿವರಿಸಿದ್ದ°. ಆತ್ಮ ಸಾಕ್ಷಾತ್ಕಾರಕ್ಕೆ ಕೃಷ್ಣಪ್ರಜ್ಞೆ ವಾ ಬುದ್ಧಿಯೋಗವೇ ಬಲುಶ್ರೇಷ್ಠ ಹೇಳ್ವದರ ಮನವರಿಕೆ ಮಾಡಿಕೊಟ್ಟಿದ. ಇಲ್ಲಿ ಕೃಷ್ಣಪ್ರಜ್ಞೆ ಹೇಳಿರೆ ಸಂಪೂರ್ಣ ಜಡತ್ವವೋ ಹೇಳಿ ಅನುಮಾನ ಕೆಲವರಿಂಗೆ. ಕೃಷ್ಣಪ್ರಜ್ಞೆ ಹೇಳಿರೆ ಕ್ರಿಯಾಶೀಲ ಬದುಕಿನಿಂದ ದೂರವಾಗಿ ಏಕಾಂತ ಸ್ಥಳಕ್ಕೆ ಹೋಗಿ ವ್ರತ ತಪಸ್ಸು ಮಾಡುವದೋ ಹೇಳಿಯೂ ಕೆಲವರಿಂಗೆ ಅನಿಸಿ ಹೋಕು. ಆದ್ದರಿಂದ ಈ ವಿಷಯವ ತನ್ನ ಗುರು ಶ್ರೀಕೃಷ್ಣನ ಮುಂದಿಟ್ಟು ಅತ್ಯಂತ ಯೋಗ್ಯವಾದ ಕಾರ್ಯಮಾರ್ಗ ಯಾವುದು ಹೇಳಿ ಕೇಳ್ತ. ಎರಡ್ನೇ ಅಧ್ಯಾಯಲ್ಲಿ ಭಗವಂತ ಭಗವಂತನ ಅರಿವು, ಆ ಅರಿವಿನ ಪಡೆವ ಉಪಾಯ ವಿವರಿಸಿದ್ದ. ಈ ಉಪದೇಶಲ್ಲಿ ಜ್ಞಾನ ಎಲ್ಲದವುಕ್ಕಿಂತ ಶ್ರೇಷ್ಠ, ಜ್ಞಾನದ ಎದುರು ಕರ್ಮ ಏನೂ ಅಲ್ಲ ಹೇಳಿಯೂ ಹೇಳುತ್ತ° ಕೃಷ್ಣ°. ಅದೇ ಅಕೇರಿಗೆ ತಾಮಸಿಕವಾದ ಯುದ್ಧವ ಮಾಡು ಹೇಳಿಯೂ ಹೇಳುತ್ತ ಅರ್ಜುನಂಗೆ ಶ್ರೀಕೃಷ್ಣ°!.      ಜ್ಞಾನವೇ ಅತ್ಯಂತ ಶ್ರೇಷ್ಠ ಹೇಳಿ ಆದರೆ ಇನ್ನೀಗ ತಾಮಸಿಕವಾದ , ರಾಗ-ದ್ವೇಶ ಇಪ್ಪ ಈ ಯುದ್ಧ ಎಂತದಕ್ಕೆ? ಕೃಷ್ಣಪ್ರಜ್ಞೆ ಮತ್ತು ಕರ್ಮದ ವಿವರಣೆಂದ ಅರ್ಜುನಂಗೆ ಈಗ ಗೊಂದಲ ಸುರುವಾವ್ತು. ತನಗೆ ಯಾವ ಕಾರ್ಯ ಉಚಿತ ಎಂಬ ದ್ವಂದ್ವಕ್ಕೆ ಸಿಲುಕುತ್ತ ಅರ್ಜುನ°. ಕೃಷ್ಣ ಒಂದರಿ ಜ್ಞಾನ ಮಾರ್ಗಲ್ಲಿ ಸಾಗು ಹೇಳುತ್ತ°, ಮತ್ತೆ ಯುದ್ಧ ಮಾಡು ಹೇಳಿಯೂ ಉಪದೇಶಿಸುತ್ತ°. ಈ ಗೊಂದಲಂದಲಾಗಿ ಅರ್ಜುನ ಕೃಷ್ಣನತ್ರೆ ಕೇಳುತ್ತ° – “ಹೇ ಜನಾರ್ದನ!, ಕರ್ಮಕ್ಕಿಂತ ಜ್ಞಾನ ಶ್ರೇಷ್ಠ ಹೇಳಿ ನಿನ್ನ ಅಭಿಮತವಾದರೆ, ಎನ್ನತ್ರೆ ಮತ್ತೀಗ ಕರ್ಮ ಮಾಡು ಹೇಳಿ ಎಂತಕೆ ಹೇಳುತ್ತಾ ಇದ್ದೆ ? ಯುದ್ಧ ಹೇಳ್ವದು ರಾಗ-ದ್ವೇಶಂಗಳಿಂದ ಕೂಡಿದ ತಾಮಸ ಕಾರ್ಯ. ಅದು ಅಧ್ಯಾತ್ಮ ಸಾಧನೆಗೆ ತೀರ ವಿರುದ್ಧವಾದ ಕರ್ಮ. ಮತ್ತೆಂತಕೆ ಎನ್ನ ನೀನು ಈ ಕಾರ್ಯಲ್ಲಿ ತೊಡಗುಸುತ್ತ ಇದ್ದೆ ?”

ಈ ಶ್ಲೋಕಲ್ಲಿ ‘ಜನಾರ್ದನ’, ಮತ್ತು ‘ಕೇಶವ’ ಹೇಳಿ ಎರಡು ನಾಮವಿಶೇಷಣ ಬಳಕೆ ಆಯ್ದು. ಬನ್ನಂಜೆ ಹೇಳ್ತವು – ಈ ವಿಶೇಷಣಲ್ಲಿ ಪ್ರಶ್ನೆ ಮಾಡುತ್ತಿಪ್ಪ ಅರ್ಜುನನ ಭಾವ ಅಡಗಿದ್ದು. ಜನ+ಅರ್ದನ = ಜನಾರ್ದನ. ಜನರ ನಾಶ ಮಾಡುವವ°. ಇಲ್ಲಿ ಜನ ಹೇಳಿರೆ ದುರ್ಜನ. = ದುರ್ಜನ ನಾಶಕ. “ದುಷ್ಟನಿಗ್ರಹ ಕಾರ್ಯಕ್ಕಾಗಿ ಅವತರಿಸಿದವ ನೀನು. ಎನ್ನಂದ ಈ ಕಾರ್ಯವ ಮಾಡುಸುತ್ತ ಇದ್ದೆ. ಆದರೆ ಇಲ್ಲಿ ಸೇರಿಪ್ಪವೆಲ್ಲರೂ ದುರ್ಜನರಲ್ಲ. ಹೀಂಗಿಪ್ಪಗ ಅವರನ್ನೂ ಕೊಲ್ಲುವ ಕರ್ಮ ಹೇಂಗೆ ಶ್ರೇಷ್ಠ ಆಕ್ಕು ? ಜನನ ಮುಕ್ತಗೊಳುಸಿ ಮೋಕ್ಷವ ಕರುಣುಸುವವ ನೀನು, ಎನ್ನಂದ ಈ ಗುರುಹಿರಿಯರ ಕೊಲ್ಲುವ ಈ ಘೋರ ಕರ್ಮವ ಎಂತಕೆ ಮಾಡುಸುತ್ತ ಇದ್ದೆ?. ‘ಕೇಶವ’., –  ಅರ್ಜುನನ ಶರಣಾಗತಿಯ ಸೂಚಿಸುತ್ತು. ಕಾ+ಈಶ+ವ = ಕೇಶವರ. ಸೃಷ್ಟಿಗೆ ಕಾರಣವಾಗಿಪ್ಪವ° ಚತುರ್ಮುಖ ಬ್ರಹ್ಮ°. ಈಶ° ಹೇಳಿರೆ ಸಂಹಾರಕ್ಕೆ ಕಾರಣವಾಗಿಪ್ಪವ – ಶಂಕರ°. ಬ್ರಹ್ಮಶಕ್ತಿ ಮತ್ತು ಶಿವಶಕ್ತಿಯ ಒಳಗೊಂಡದ್ದು – ಪರಶಕ್ತಿ. ಸೃಷ್ಟಿ-ಸ್ಥಿತಿ-ಸಂಹಾರ- ಮೋಕ್ಷಕ್ಕೆ ಕಾರಣವಾಗಿಪ್ಪವ° ನೀನು ಎನ್ನ ಈ ಗೊಂದಲಂದ ಪಾರುಮಾಡು. – ಇದು ಬನ್ನೆಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದದು.

ಶ್ಲೋಕ

ವ್ಯಾಮಿಶ್ರೇಣೇವ ವಾಕ್ಯೇನ ಬುದ್ಧಿಂ ಮೋಹಯಸೀವ ಮೇ ।
ತದೇಕಂ ವದ ನಿಶ್ಚಿತ್ಯ ಯೇನ ಶ್ರೇಯೋsಹಮಾಪ್ನುಯಾಮ್ ॥೦೨॥

ಪದವಿಭಾಗ

ವ್ಯಾಮಿಶ್ರೇಣ ಇವ ವಾಕ್ಯೇನ ಬುದ್ಧಿಂಮ್ಮೋಹಯಸಿ ಇವ ಮೇ । ತತ್ ಏಕಮ್ ವದ ನಿಶ್ಚಿತ್ಯ ಯೇನ ಶ್ರೇಯಃ ಅಹಮ್ ಆಪ್ನುಯಾಮ್ ॥

ಅನ್ವಯ

ವ್ಯಾಮಿಶ್ರೇಣ ಇವ ವಾಕ್ಯೇನ ಮೇ ಬುದ್ಧಿಂ ಮೋಹಯಸಿ ಇವ । ತತ್ ನಿಶ್ಚಿತ್ಯ ಏಕಂ ವದ, ಯೇನ ಅಹಂ ಶ್ರೇಯಃ ಆಪ್ನುಯಾಮ್॥

ಪ್ರತಿಪದಾರ್ಥ

ವ್ಯಾಮಿಶ್ರೇಣ ಇವ – ಸಂದಿಗ್ಧಾರ್ಥದ ಹಾಂಗೆ ಇಪ್ಪ, ವಾಕ್ಯೇನ – ಮಾತಿಂದ, ಮೇ – ಎನ್ನ, ಬುದ್ಧಿಮ್ – ಬುದ್ಧಿಯ, ಮೋಹಯಸಿ ಇವ – ಭ್ರಾಂತಿಗೊಳುಸುತ್ತಲಿಪ್ಪ ಹಾಂಗೆ ಇದ್ದು,   ತತ್ – ಅದರ, ನಿಶ್ಚಿತ್ಯ – ನಿಶ್ಚೈಸಿ, ಏಕಂ – ಒಂದೇ ಒಂದರ, ವದ – ದಯವಿಟ್ಟು ಹೇಳು, ಯೇನ – ಏವುದರಿಂದ, ಅಹಂ – ಆನು, ಶ್ರೇಯಃ – ನೈಜ ಪ್ರಯೋಜನವ,  ಆಪ್ನುಯಾಮ್ – ಹೊಂದಲಕ್ಕು.

 ಅನ್ವಯಾರ್ಥ

ನಿನ್ನ ಸಂದಿಗ್ಧಾರ್ಥದ ಮಾತುಗಳಿಂದ ಎನ್ನ ಬುದ್ಧಿಗೆ ಮೋಹವು ಕವಿಯುತ್ತ ಇದ್ದು, (ಭ್ರಾಂತಿಗೊಳ್ಳುತ್ತ ಇದ್ದು ಬುದ್ಧಿ). ಹಾಂಗಾಗಿ, ದಯವಿಟ್ಟು ಎನಗೆ ಅತ್ಯಂತ ಶ್ರೇಯಸ್ಕರವಾದ ಮಾರ್ಗ ಏವುದು ಹೇದು ನಿಶ್ಚಯವಾಗಿ ಹೇಳು.

ತಾತ್ಪರ್ಯ / ವಿವರಣೆ

ಹಿಂದಾಣ ಅಧ್ಯಾಯಲ್ಲಿ ಪ್ರಸ್ತಾವನೆಯಾಗಿ ಸಾಂಖ್ಯಯೋಗ, ಬುದ್ಧಿಯೋಗ, ಬುದ್ಧಿಯ ಮೂಲಕ ಇಂದ್ರಿಯ ನಿಗ್ರಹ, ನಿಷ್ಕಾಮಕರ್ಮ ಇಂತಹ ಹಲವು ಮಾರ್ಗಂಗಳ ಮತ್ತು ಆರಂಭಿಕ ಶಿಷ್ಯನ ಸ್ಥಾನವನ್ನೂ ವಿವರಿಸಿದ್ದ ಶ್ರೀಕೃಷ್ಣ° ಅರ್ಜುನಂಗೆ. ಆದರೆ, ವ್ಯವಸ್ಥಿತವಾಗಿ ಅರ್ಜುನಂಗೆ ವಿಷದ ಆಯ್ದಿಲ್ಲೆ. ಕ್ರಿಯೆ ಮತ್ತು ಗ್ರಹಿಕೆ ಸಾಧ್ಯವಪ್ಪಲೆ ಇನ್ನೂ ವ್ಯವಸ್ಥಿತವಾದ ಮಾರ್ಗದ ರೂಪುರೇಖೆಯ ಕೊಡೆಕು, ತಪ್ಪುಗ್ರಹಿಕೆ ಇಲ್ಲದ್ದೆ, ಸಾಮಾನ್ಯ ಮನುಷ್ಯನೂ ಇದರ ಸ್ವೀಕರುಸಲೆ, ಅರ್ಥೈಸುಲೆ ಸಾಧ್ಯವಾಯೇಕು. ಗೊಂದಲಮಯವಾಗಿ ಕಾಂಬ ಈ ವಿಷಯಂಗಳ ಸ್ಪಷ್ಟಪಡುಸೆಕು ಹೇಳಿ ಅರ್ಜುನ ಪುನಃ ಶ್ರೀಕೃಷ್ಣನತ್ರೆ ಇಲ್ಲಿ ಕೇಳಿಕೊಳ್ತ°.    ವ್ಯಾಮಿಶ್ರೇಣ ಹೇಳಿರೆ ಸಂದಿಗ್ಧಾರ್ಥದ (ಇಬ್ಬಗೆಯ).

ಶ್ಲೋಕ

ಶ್ರೀಭಗವನುವಾಚ-
ಲೋಕೇsಸ್ಮಿನ್ ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾನಘ ।
ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಮ್ ॥೦೩॥

ಪದವಿಭಾಗ

ಶ್ರೀಭಗವಾನ್ ಉವಾಚ-
ಲೋಕೇ ಅಸ್ಮಿನ್ ದ್ವೇ-ವಿಧಾ (ದ್ವಿವಿಧಾ) ನಿಷ್ಠಾ ಪುರಾ ಪ್ರೋಕ್ತಾ ಮಯಾ ಅನಘ । ಜ್ಞಾನ-ಯೋಗೇನ ಸಾಂಖ್ಯಾನಾಮ್ ಕರ್ಮ-ಯೋಗೇನ ಯೋಗಿನಾಮ್ ॥

ಅನ್ವಯ

ಶ್ರೀಭಗವಾನ್ ಉವಾಚ- ಹೇ ಅನಘ!, ಅಸ್ಮಿನ್ ಲೋಕೇ ಸಾಂಖ್ಯಾನಾಂ ಜ್ಞಾನ-ಯೋಗೇನ, ಯೋಗಿನಾಂ ಕರ್ಮ-ಯೋಗೇನ ದ್ವಿವಿಧಾ ನಿಷ್ಠಾ ಇತಿ ಪುರಾ ಮಯಾ ಪ್ರೋಕ್ತಾ ।

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ದೇವೋತ್ತಮ ಪರಮ ಪುರುಷ ಹೇಳಿದ°, ಹೇ ಅನಘ! – ಏ ಪಾಪರಹಿತನೇ!,  ಅಸ್ಮಿನ್ ಲೋಕೇ – ಈ ಜಗತ್ತಿಲ್ಲಿ,  ಸಾಂಖ್ಯಾನಾಮ್ – ಅನುಭವಗಮ್ಯ ದಾರ್ಶನಿಕರ, ಜ್ಞಾನ-ಯೋಗೇನ – ಜ್ಞಾನಯೋಗ ವಿಧಾನಂದ,  ಯೋಗಿನಾಮ್ – ಭಕ್ತರ, ಕರ್ಮ-ಯೋಗೇನ – ಭಕ್ತಿಯೋಗ ಪ್ರಕ್ರಿಯೆಂದ, ದ್ವಿವಿಧಾ – ಎರಡು ವಿಧದ, ನಿಷ್ಠಾ – ಶ್ರದ್ಧೆಯು, ಇತಿ – ಹೇದು, ಪುರಾ – ಹಿಂದೆ,  ಮಯಾ – ನನ್ನಿಂದ, ಪ್ರೋಕ್ತಾ – ಹೇಳಲ್ಪಟ್ಟಿದು.   

 ಅನ್ವಯಾರ್ಥ

ದೇವೋತ್ತಮ ಪರಮ ಪುರುಷ° ಭಗವಂತ° ಶ್ರೀಕೃಷ್ಣ° ಹೇಳಿದ° – ಎಲೈ ಪಾಪರಹಿತನಾದ ಅರ್ಜುನನೇ!, ಆತ್ಮಸಾಕ್ಷಾತ್ಕಾರ ಪಡವಲೆ ಎರಡು ಬಗೆಯ ಮನುಷ್ಯರು ಪ್ರಯತ್ನಿಸುತ್ತವು ಹೇಳಿ ಆಗಲೇ ನಿನಗೆ ಹೇಳಿದ್ದೆ. ಕೆಲವರು ಅದರ ಅನುಭವಗಮ್ಯವಾದ ತತ್ವಜ್ಞಾನದ ಊಹೆಯ ಮೂಲಕ ಸಾಧುಸಲೆ ಯತ್ನಿಸುತ್ತವು. ಇನ್ನು ಕೆಲವರು ಭಕ್ತಿಸೇವೆಯ ಮೂಲಕ ಸಾಧುಸಲೆ ಯತ್ನಿಸುತ್ತವು.

ತಾತ್ಪರ್ಯ / ವಿವರಣೆ

ಎರಡ್ನೇ ಅಧ್ಯಾಯದ ೩೯ನೇ ಶ್ಲೋಕಲ್ಲಿ ಭಗವಂತ° ಎರಡು ಮಾರ್ಗವ ವಿವರಿಸಿದ್ದ° – ಸಾಂಖ್ಯಯೋಗ ಮತ್ತು ಕರ್ಮಯೋಗ ಅಥವಾ ಬುದ್ಧಿಯೋಗ. ಸಾಂಖ್ಯಯೋಗವು ಆತ್ಮ ಮತ್ತು ಜಡವಸ್ತು ಇವುಗಳ ಸ್ವರೂಪದ ವಿಶ್ಲೇಷಣಾತ್ಮಕ ಅಧ್ಯಯನ. ಪ್ರಯೋಗಂಗಳಿಂದ ಪಡೆದ ತಿಳುವಳಿಕೆಯ ಮೂಲಕ ಮತ್ತು ತತ್ವಶಾಸ್ತ್ರದ ಮೂಲಕ ವಿಷಯಂಗಳ ಬಗ್ಗೆ ಊಹಿಸಲೆ ಮತ್ತು ಅರ್ಥಮಾಡಿಗೊಂಬಲೆ ಬಯಸುವವಕ್ಕೆ ಸಾಂಖ್ಯಯೋಗವು ವಸ್ತು. ಎರಡನೇ ಅಧ್ಯಾಯದ ೬೧ನೇ ಶ್ಲೊಕಲ್ಲಿ ವಿವರಿಸಿದಾಂಗೆ, ಇನ್ನೊಂದು ವರ್ಗದ ಜನಂಗೊ ಕೃಷ್ಣಪ್ರಜ್ಞೆಲಿ ಕೆಲಸ ಮಾಡುವವು. ಸುರುವಾಣ ಭಾಗಲ್ಲಿ ಬುದ್ಧಿಯೋಗ ಅಥವಾ ಕೃಷ್ನಪ್ರಜ್ಞೆಯ ತತ್ವಂಗೊಕ್ಕೆ ಅನುಗುಣವಾಗಿ ಕಾರ್ಯಮಾಡುವದರಿಂದ ಕರ್ಮಬಂಧನಂದ ಮುಕ್ತನಪ್ಪಲಕ್ಕು ಹೇಳಿ ವಿವರಿಸಿದ್ದ°. ಈ ಪ್ರಕ್ರಿಯೆಲಿ ದೋಷವೂ ಇಲ್ಲೆ ಹೇಳಿಯೂ ಹೇಳಿದ್ದ°. ಬುದ್ಧಿಯೋಗವು ಪರಮೋನ್ನತವಾದ್ದು, ಇನ್ನೂ ನಿರ್ದಿಷ್ಟವಾಗಿ, ಕೃಷ್ಣನ ಸಂಪೂರ್ಣವಾಗಿ ಅವಲಂಬಿಸೇಕ್ಕು ಮತ್ತು ಈ ರೀತಿಲಿ ಎಲ್ಲಾ ಇಂದ್ರಿಯಂಗಳ ಬಹುಸುಲಭವಾಗಿ ನಿಗ್ರಹಿಸಲೆಡಿಗು. ಆದ್ದರಿಂದ ಈ ಎರಡು ಯೋಗಂಗಳೂ ಧರ್ಮ ಮತ್ತು ತತ್ವಜ್ಞಾನ ಒಂದಕ್ಕೊಂದು ಅವಲಂಬಿಸಿಗೊಂಡಿದ್ದು. ತತ್ವಜ್ಞಾನ ಇಲ್ಲದ ಧರ್ಮ ಬರಿಯ ಒಂದು ಭಾವ ಅಷ್ಟೇ. ಅದು ಒಂದೊಂದರಿ ಧರ್ಮಾಂಧತೆ ಕೂಡ ಆವುತ್ತು. ಧರ್ಮವಿಲ್ಲದ ತತ್ವಜ್ಞಾನವು ಮಾನಸಿಕ ಊಹೆಯಷ್ಟೇ ಆವುತ್ತು. ಕಡೇಯ ಗುರಿ ಕೃಷ್ಣನೇ. ಎಂತಕೆ ಹೇಳಿರೆ, ಸಂಪೂರ್ಣವಾದ ಪ್ರಾಮಾಣಿಕವಾಗಿ ಅರಸುವ ತತ್ವಜ್ಞಾನಿಗೊ ಕಡೇಂಗೆ ಕೃಷ್ಣಪ್ರಜ್ಞಗೇ ಬತ್ತವು.

ಪರಮಾತ್ಮಂಗೆ ಸಂಬಂಧಿಸಿದ ಹಾಂಗೆ ಆತ್ಮನ ನಿಜವಾದ ಸ್ಥಾನವ ಅರ್ಥಮಾಡಿಗೊಂಬದೇ ಸಂಪೂರ್ಣ ಪ್ರಕ್ರಿಯೆ. ಪರೋಕ್ಷ ಪ್ರಕ್ರಿಯೆ ಹೇಳಿರೆ ತತ್ವಶಾಸ್ತ್ರದ ಊಹೆ. ಇದರಿಂದ ಮನುಷ್ಯ° ಕ್ರಮೇಣ ಕೃಷ್ಣಪ್ರಜ್ಞೆಯ ಮುಟ್ಟುತ್ತ°. ಇನ್ನೊಂದು ಪ್ರಕ್ರಿಯೆಲಿ, ಕೃಷ್ಣಪ್ರಜ್ಞೆಲಿ ಪ್ರತಿಯೊಂದರೊಡನೆಯೂ ನೇರ ಸಂಪರ್ಕವ ಕಲ್ಪುಸುತ್ತ. ಇವೆರಡರಲ್ಲಿ ಕೃಷ್ಣಪ್ರಜ್ಞೆಯ ಮಾರ್ಗ ಉತ್ತಮ. ಎಂತಕೆ ಹೇಳಿರೆ, ತತ್ವಶಾಸ್ತ್ರದ ಪ್ರಕ್ರಿಯೆಯ ಮೂಲಕ ಇಂದ್ರಿಯ ಪರಿಶುದ್ಧಗೊಳುಸುವದರ ಅದು ಅವಲಂಬಿಸಿಲ್ಲೆ. ಕೃಷ್ಣಪ್ರಜ್ಞೆಯೇ ಪರಿಶುದ್ಧಗೊಳುಸುವ ಪ್ರಕ್ರಿಯೆ. ಭಕ್ತಿಸೇವೆಯ ನೇರವಿಧಾನಂದಾಗಿ ಅದು ಏಕಕಾಲಲ್ಲಿ ಸುಲಭವೂ ಭವ್ಯವೂ ಆವ್ತು.

ಬನ್ನಂಜೆಯವರ ವ್ಯಾಖ್ಯಾನವ ಗಮನಿಸಿದರೆ – ಈ ಲೋಕಲ್ಲಿ ಮುಕ್ತಿಪಡವಲೆ ಜ್ಞಾನಮಾರ್ಗಿಗೊಕ್ಕೆ ಜ್ಞಾನಪ್ರಧಾನವಾದ ಸಾಧನೆಂದ ಮತ್ತು ಕರ್ಮಮಾರ್ಗಿಗೊಕ್ಕೆ ಕರ್ಮಪ್ರಧಾನವಾದ ಸಾಧನೆಂದ. ಇಲ್ಲಿ ‘ನಿಷ್ಠಾ’ ಹೇಳಿರೆ ಜೀವನದ ನಡೆ ಅಥವಾ ಕೊನೇಯ ಸ್ಥಿತಿ. ಸಾಧಕರಲ್ಲಿ ಎರಡು ವಿಧ – ‘ಸಾಂಖ್ಯರು’ ಮತ್ತು ‘ಯೋಗಿಗೊ’. ಸಾಂಖ್ಯರು ಹೇಳಿರೆ ಜ್ಞಾನಮಾರ್ಗಲ್ಲಿ ಸಾಧನೆ ಮಾಡುವವು. ಯೋಗಿಗೊ ಹೇಳಿರೆ ಕರ್ಮಸಾಧನೆಯ ಮೂಲಕ ಮೋಕ್ಷ ಸಾಧನೆ ಮಾಡುವವು. ಹಾಂಗಾದರೆ, ಅರ್ಜುನ ಕರ್ಮದ ಮೂಲಕ ಸಾಧನೆ ಮಾಡು ಹೇಳಿ ಕೃಷ್ಣ ಹೇಳಿದ್ದೋ?!. ಅಲ್ಲ, ಅದು ತಪ್ಪು ಗ್ರಹಿಕೆ. ಎಂತಕೆ ಹೇಳಿರೆ ಅರ್ಜುನ ಆ ಕಾಲದ ಮಹಾಜ್ಞಾನಿಗಳಲ್ಲಿ ಒಬ್ಬ°. ಹಾಂಗಾಗಿ ಮೇಲ್ನೋಟದ ಅರ್ಥವ ಯಥಾವತ್ತಾಗಿ ತೆಕ್ಕೊಂಬಲೆ ಎಡಿಯ. ಶಾಸ್ತ್ರಂಗಳಲ್ಲಿ ಹೇಳಿಪ್ಪಂತೆ ಜ್ಞಾನಂದ ಮಾತ್ರ ಮೋಕ್ಷಕ್ಕೆ ಹೋಪಲೆ ಸುಲಭ ಸಾಧ್ಯ. ಹಾಂಗಾರೆ, ಮೋಕ್ಷ ಸಾಧನೆಗೆ ಜ್ಞಾನ ಬೇಕೇ ಬೇಕು ಹೇಳಿ ಆತು. ಕರ್ಮ ಇಪ್ಪದು ಜ್ಞಾನಕ್ಕಾಗಿ. ಜ್ಞಾನಕ್ಕೆ ಪೂರಕವಲ್ಲದ ಕರ್ಮ ಕರ್ಮವೇ ಅಲ್ಲ. ಉದಿಯಪ್ಪಂದ ಕಸ್ತಲಪ್ಪವರೇಗೆ ಜಪಮಣಿ ಹಿಡುದು ಮಡಿ ಮಡಿ ಹೇಳಿ ಕೂದರೆ ಅದು ನಮ್ಮ ಜ್ಞಾನದತ್ತ ಕೊಂಡೋಗ. ನಾವು ಏನೇ ಕರ್ಮ ಮಾಡುತ್ತರೂ ಅದರ ವಿವರ ಅರ್ತು ಮಾಡೇಕು. ಮಾಡುವ ಕರ್ಮ ಜ್ಞಾನಕ್ಕೆ ಪೂರಕವಾಗಿರೇಕು. ಹಾಂಗಾಗಿ ‘ಕರ್ಮ ಇಲ್ಲದ್ದೆ ಜ್ಞಾನ ಇಲ್ಲೆ, ಜ್ಞಾನ ಇಲ್ಲದ್ದೆ ಕರ್ಮವೂ ಇಲ್ಲೆ’.  ಅಜ್ಞಾನಂದ ಮಾಡುವ ಕರ್ಮ ವ್ಯರ್ಥ. 
ಶ್ಲೋಕ
ನ ಕರ್ಮಣಾಮನಾರಂಭಾನ್ ನೈಷ್ಕರ್ಮ್ಯಂ ಪುರುಷೋsಶ್ನುತೇ ।
ನ ಚ ಸಂನ್ಯಸನಾದೇವ ಸಿದ್ಧಿಂ ಸಮಧಿಗಚ್ಛತಿ ॥೦೪॥

ಪದವಿಭಾಗ

ನ ಕರ್ಮಣಾಮ್ ಅನಾರಂಭಾತ್ ನೈಷ್ಕರ್ಮ್ಯಮ್ ಪುರುಷಃ ಅಶ್ನುತೇ । ನ ಚ ಸಂನ್ಯಸನಾತ್ ಏವ ಸಿದ್ಧಿಮ್ ಸಮಧಿಗಚ್ಛತಿ ।

ಅನ್ವಯ

ಕರ್ಮಣಾಮ್ ಅನಾರಂಭಾತ್ ಪುರುಷಃ ನೈಷ್ಕರ್ಮ್ಯಂ ನ ಅಶ್ನುತೇ । ಕರ್ಮಣಾಂ ಚ ಸಂನ್ಯಸನಾತ್ ಏವ ಸಿದ್ಧಿಂ ನ ಸಮಧಿಗಚ್ಛತಿ ।

ಪ್ರತಿಪದಾರ್ಥ

ಕರ್ಮಣಾಮ್ – ವಿದ್ಯುಕ್ತಕರ್ತವ್ಯಂಗಳ, ಅನಾರಂಭಾತ್ – ಆಚರುಸದೆ ಇಪ್ಪದರಿಂದ, ಪುರುಷಃ – ಮನುಷ್ಯ°, ನೈಷ್ಕರ್ಮ್ಯಮ್ – ಪ್ರತಿಕ್ರಿಯೆಗಳಿಂದ ಬಿಡುಗಡೆಯ, ನ ಅಶ್ನುತೇ – ಸಾಧಿಸುತ್ತನಿಲ್ಲೆ, ಕರ್ಮಣಾಮ್ – ವಿದ್ಯುಕ್ತಕರ್ತವ್ಯಂಗಳ, ಚ – ಕೂಡ, ಸಂನ್ಯಸನಾತ್ – ವಿರಕ್ತಿಂದ, ಏವ – ಕೇವಲ, ಸಿದ್ಧಿಮ್ – ಜಯವ,  ನ ಸಮಧಿಗಚ್ಛತಿ – ಹೊಂದುತ್ತನಿಲ್ಲೆ.

ಅನ್ವಯಾರ್ಥ

ಕಾರ್ಯಮಾಡುವದರಿಂದಲೇ ಪ್ರತಿಕ್ರಿಯೆಗಳಿಂದ ಬಿಡುಗಡೆ ಹೊಂದಲೆಡಿಯ. ವೈರಾಗ್ಯ ಮಾತ್ರದಿಂದಲೇ ಪರಿಪೂರ್ಣತೆಯ ಸಾಧುಸಲೂ ಎಡಿಯ.

ತಾತ್ಪರ್ಯ / ವಿವರಣೆ

ಲೌಕಿಕ ಜನರ ಹೃದಯಂಗಳ ಪರಿಶುದ್ಧಗೊಳುಸಲೆ ವಿಧಿಸಿಪ್ಪ ಕರ್ತವ್ಯಂಗೊ ಇದ್ದು. ಅವುಗಳ ನಿರ್ವಹಿಸಿ ಪರಿಶುದ್ಧನಾದನಂತರ ಮನುಷ್ಯ° ಸಂನ್ಯಾಸವ ಸ್ವೀಕರುಸಲಕ್ಕು. ಪರಿಶುದ್ಧವಾಗದ್ದೇ ಥಟ್ಟನೆ ಸಂನ್ಯಾಸ ಸ್ವೀಕರುಸಿದ ಮಾತ್ರಕ್ಕೆ ಮನುಷ್ಯಂಗೆ ಜಯವು ಲಭಿಸುತ್ತಿಲ್ಲೆ. ಅನುಭವಗಮ್ಯ ತತ್ವಶಾಸ್ತ್ರಜ್ಞರ ಅಭಿಪ್ರಾಯಲ್ಲಿ, ಸಂನ್ಯಾಸವ ಸ್ವೀಕರುಸಿದ ಮಾತ್ರಂದ ಅಥವಾ ಫಲಾಪೇಕ್ಷಿತ ಕರ್ಮಂದ ದೂರವಾದ ಮಾತ್ರಕ್ಕೇ ಮನುಷ್ಯ ನಾರಾಯಣಂಗೆ ಸಮನಾವುತ್ತ°.  ಆದರೆ, ಶ್ರೀಕೃಷ್ಣ ಇದರ (ಈ ತತ್ವವ) ಒಪ್ಪುತ್ತನಿಲ್ಲೆ. ಹೃದಯವು ಶುದ್ಧವಾಗದ್ದೆ ಸಂನ್ಯಾಸವು ಸಾಮಾಜಿಕ ವ್ಯವಸ್ಥೆಯ ಕ್ಷೋಭೆಯಷ್ಟೇ ಆವುತ್ತು. ಅದಕ್ಕೆ ಪ್ರತಿಯಾಗಿ ಮನುಷ್ಯ° ತನ್ನ ನಿಯತ ಕರ್ತವ್ಯಂಗಳ ಮಾಡಿಗೊಂಡು ಭಗವಂತನ ಅಲೌಕಿಕ ಸೇವೆಲಿ ನಿರತನಾದರೆ, ಈ ಗುರಿಲಿ ಸಾಧಿಸಿದುದೆಲ್ಲವ ಭಗವಂತ ಸ್ವೀಕರುಸುತ್ತ°. “ಸ್ವಲ್ಪಮ್ ಅಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್” – ಎರಡ್ನೇ ಅಧ್ಯಾಯಲ್ಲಿ ಹೇಳಿದ್ದದು., ಇಂತಹ ತತ್ವವ ಸ್ವಲ್ಪಮಟ್ಟಿಂಗೆ ಆಚರಿಸಿದರೂ ಅಂತಹ ಮನುಷ್ಯ° ಮಹಾ ಕಷ್ಟಂಗಳ ನಿಭಾಯಿಸಬಲ್ಲ. ಶಾಸ್ತ್ರಂಗಳಲ್ಲಿ ಹೇಳಿಪ್ಪಂತೆ ಕರ್ಮ ಬಂಧನದ ದಾರಿ ಮತ್ತು ಜ್ಞಾನ ಬಿಡುಗಡೆಯ ದಾರಿ. ಕರ್ಮಂಗಳಲ್ಲಿ ತೊಡಗದ್ದೆ ಇಪ್ಪದರಿಂದ ಕರ್ಮಂಗಳಿಂದ ಬಿಡುಗಡೆ ಹೊಂದುತ್ತನಿಲ್ಲೆ. ಕರ್ಮಫಲವ ತೊರೆದ ಮಾತ್ರಕ್ಕೆ ಸಿದ್ಧಿಯೂ ಪಡವಲೆಡಿಯ. ಕೃಷ್ಣ ಉಪದೇಶಿಸಿದಾಂಗೆ, ಮೋಕ್ಷಕ್ಕೆ ಜ್ಞಾನಪ್ರದವಾದ ಮತ್ತು ಕರ್ಮಪ್ರದವಾದ ಎರಡು ಮಾರ್ಗಂಗೊ. ಮೋಕ್ಷ ನಿಷ್ಕ್ರರ್ಮಂದ ಪಡೆಯುವಂತದ್ದು. ಕರ್ಮ-ಬಂಧಕ ಹೇಳ್ತರೆ, ಒಂದು ಶರೀರಲ್ಲಿ ಜೀವ ಏನೂ ಕರ್ಮ ಮಾಡದ್ದೆ ಇಪ್ಪಲೆ ಸಾಧ್ಯವೇ ಇಲ್ಲೆ. ದೇಹ ಬಂದ ಮೇಲೆ ಕರ್ಮ ಕ್ರಿಯೆ ನಡದೇ ತೀರುತ್ತು. ಕರ್ಮ ಮಾಡುವುದರ ಬಿಟ್ಟ ತಕ್ಷನ ಮೋಕ್ಷ ದೊರಕಲೆ ಅಸಾಧ್ಯ. ಮೂಲತಃ ಕರ್ಮ ತೊರವಲೂ ಸಾಧ್ಯ ಇಲ್ಲೆ. ಜ್ಞಾನಕ್ಕೆ ಪೂರಕವಲ್ಲದ ಕರ್ಮ ಬಂಧಕ. ಜ್ಞಾನಕ್ಕೆ ಪೂರಕವಾದ ಕರ್ಮ ಎಂದೂ ಬಂಧಕವಲ್ಲ. ಕರ್ಮದ ಫಲವ ಬಯಯದೇ ಇದ್ದ ತಕ್ಷನ ಸಿದ್ಧಿಯೂ ಆಗ. ಕೇವಲ ಕರ್ಮತ್ಯಾಗ ಮಾಡುವುದರಿಂದ ಎಂದೂ ಸಿದ್ಧಿ ಪಡವಲೆ ಸಾಧ್ಯ ಇಲ್ಲೆ.

ಶ್ಲೋಕ

ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್ ।
ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗುಣೈಃ ॥೦೫॥

ಪದವಿಭಾಗ

ನ ಹಿ ಕಶ್ಚಿತ್ ಕ್ಷಣಮ್ ಅಪಿ ಜಾತು ತಿಷ್ಠತಿ ಅಕರ್ಮ ಕೃತ್ । ಕಾರ್ಯತೇ ಹಿ ಅವಶಃ ಕರ್ಮ ಸರ್ವಃ ಪ್ರಕೃತಿಜೈಃ ಗುಣೈಃ ॥

ಅನ್ವಯ

ಕಶ್ಚಿತ್ ಜಾತು ಕ್ಷಣಮ್ ಅಪಿ ಅಕರ್ಮಕೃತ್ ನ ಹಿ ತಿಷ್ಠತಿ । ಪ್ರಕೃತಿಜೈಃ ಗುಣೈಃ ಸರ್ವಃ ಹಿ ಅವಶಃ ಕರ್ಮ ಕಾರ್ಯತೇ ।

ಪ್ರತಿಪದಾರ್ಥ

ಕಶ್ಚಿತ್ – ಆರೊಬ್ಬನೂ, ಜಾತು – ಯಾವುದೇ ಕಾಲಲ್ಲಿಯೂ, ಕ್ಷಣಮ್ ಅಪಿ – ಒಂಡು ಕ್ಷಣವೂ ಕೂಡ,  ಅಕರ್ಮಕೃತ್ – ಏನನ್ನಾರು ಕರ್ಮ ಮಾಡದ್ದೆ, ನ ಹಿ ತಿಷ್ಠತಿ – ಖಂಡಿತವಾಗಿಯೂ ಇರುತ್ತನೇ ಇಲ್ಲೆ°,  ಪ್ರಕೃತಿಜೈಃ – ಭೌತಿಕ ಪ್ರಕೃತಿಂದ ಹುಟ್ಟಿದ, ಗುಣೈಃ – ಗುಣಂಗಳಿಂದ, ಸರ್ವಃ – ಎಲ್ಲರೂ/ಪ್ರತಿಯೊಬ್ಬನೂ, ಹಿ – ಖಂಡಿತವಾಗಿಯೂ, ಅವಶಃ – ಅಸಹಾಯಕನಾಗಿ, ಕರ್ಮ – ಕಾರ್ಯವ/ಕರ್ಮವ, ಕಾರ್ಯತೇ – ಮಾಡಿಸಲ್ಪಡುತ್ತ°.

ಅನ್ವಯಾರ್ಥ

ಪ್ರಕೃತಿಯಿಂದ ಬಂದ ಗುಣಂಗೊಕ್ಕೆ ಅನುಗುಣವಾಗಿ ಕರ್ಮವ ಪ್ರತಿಯೊಬ್ಬನೂ ಮಾಡ್ಳೇಬೇಕಾವ್ತು.  ಹಾಂಗಾಗಿ ಆರೊಬ್ಬನೂ ಒಂದು ಕ್ಷಣ ಆದರೂ ಏನನ್ನೂ ಮಾಡದ್ದೆ ಇಪ್ಪಲೆ ಸಾಧ್ಯವಿಲ್ಲೆ.

ತಾತ್ಪರ್ಯ / ವಿವರಣೆ

ಇದು ದೇಹಗತ ಜೀವನದ ಪ್ರಶ್ನೆ ಅಲ್ಲ. ಸದಾ ಕಾರ್ಯ ನಿರತನಾಗಿಪ್ಪದೇ ಆತ್ಮನ ಸ್ವಭಾವ. ಆತ್ಮವು ದೇಹದಲ್ಲಿ ಇಲ್ಲದ್ರೆ ದೇಹವು ಚಲಿಸ. ಆತ್ಮವೂ ಸದಾ ಕಾರ್ಯನಿರತವಾಗಿರುತ್ತು. ಒಂದು ಕ್ಷಣವೂ ಸುಮ್ಮನಿರ. ದೇಹವೇನಿದ್ದರೂ ಆತ್ಮವ ಕೆಲಸಲ್ಲಿ ತೊಡಗುಸಲೆ ಇಪ್ಪ ಒಂದು ನಿರ್ಜೀವ ವಾಹನ. ಈ ಕಾರಣಂದ ಆತ್ಮವ ಕೃಷ್ಣಪ್ರಜ್ಞೆಯ ಪುಣ್ಯ ಕಾರ್ಯಲ್ಲಿ ತೊಡಗುಸೆಕು. ಇಲ್ಲದ್ರೆ ಅದು ಮಾಯಾ ಶಕ್ತಿಯ ನಿರ್ದೇಶನಕ್ಕೆ ತುತ್ತಾವ್ತು. ಐಹಿಕ ಶಕ್ತಿಯೊಡನೆ ಸಂಪರ್ಕ ಇಪ್ಪಗ ಆತ್ಮವು ಐಹಿಕ ಗುಣಂಗಳ ಪಡಕ್ಕೊಳ್ಳುತ್ತು. ಇಂತಹ ವ್ಯಾಮೋಹಂಗಳಿಂದ ಆತ್ಮವ ಶುದ್ಧಿಗೊಳುಸಲೆ ಶಾಸ್ತ್ರಂಗೊ ವಿಧಿಸಿದ ಕರ್ತವ್ಯಂಗಳಲ್ಲಿ ತೊಡಗುವುದು ಅಗತ್ಯ. ಆದರೆ ಆತ್ಮವು ಕೃಷ್ಣಪ್ರಜ್ಞೆಯ ತನ್ನ ಸಹಜ ಕ್ರಿಯೆಲಿ ತೊಡಗಿದರೆ ಅದು ಮಾಡಿದ್ದೆಲ್ಲ ಅದಕ್ಕೆ ಒಳಿತಾಗಿಪ್ಪದೇ ಆವ್ತು. ಕೃಷ್ಣಪ್ರಜ್ಞೆಯ ಅನುಸರುಸುವವ° ಶಾಸ್ತ್ರಂಗೊ ವಿಧಿಸಿದ ಕರ್ತವ್ಯಂಗಳ ಮಾಡದ್ದಿಕ್ಕು., ಭಕ್ತಿಸೇವೆಲಿ ಸಮರ್ಪಕವಾಗಿ ತೊಡಗದ್ದೆ ಇಕ್ಕು, ಆವಾಗ ,ತಾನಿರಬೇಕಾದ ಮಟ್ಟಂದ ಕೆಳಂಗೆ ಬೀಳುಗು. ಆದರೊ ಅವಂಗೆ ನಷ್ಟವಾಗಲೀ ಕೇಡಾಗಲೀ ಇಲ್ಲೆ. ಆದರೆ, ಶಾಸ್ತ್ರಂಗೊ ಪರಿಶುದ್ಧವಾಗುವುದಕ್ಕಾಗಿ ವಿಧಿಸಿದ ಎಲ್ಲಾ ಆಜ್ಞೆಗಳ ಪರಿಪಾಲಿಸಿದರೂ ಆತ° ಕೃಷ್ಣಪ್ರಜ್ಞೆಲಿ ಇಲ್ಲದ್ರೆ ಏನು ಪ್ರಯೋಜನ? ಆದ್ದರಿಂದ ಪರಿಶುದ್ಧವಾಗುವ ಪ್ರಕ್ರಿಯೆಯು ಕೃಷ್ಣಪ್ರಜ್ಞೆಯ ಹಂತವ ಮುಟ್ಳೆ ಅಗತ್ಯ. ಯಾವುದೇ ಪರಿಶುದ್ಧತೆಯ ಪ್ರಕ್ರಿಯೆ ಅಥವಾ ಸಂನ್ಯಾಸವು ಅಂತಿಮಗುರಿಯಾದ ಕೃಷ್ಣಪ್ರಜ್ಞೆಯ ಮುಟ್ಳೆ ನೆರವಾವ್ತು. ಆದರೆ, ಕೃಷ್ಣಪ್ರಜ್ಞೆ ಇಲ್ಲದ್ದೆ ಹೋದರೆ ಉಳುದ್ದೆಲ್ಲ ವಿಫಲ.

ಬನ್ನಂಜೆಯವರ ವ್ಯಾಖ್ಯಾನವ ಗಮನಿಸಿರೆ – ಯಾವಬ್ಬೊನೂ ಒಂದು ಕ್ಷಣ ಏನನ್ನೂ ಮಾಡದ್ದೆ ಕೂಬಲೆ ಎಡಿಯ. ಪ್ರತಿಯೊಬ್ಬನೂ ಪ್ರಕೃತಿಯ ಗುಣಂಗಳಿಂದ ತನಗರಿವಿಲ್ಲದ್ದೆಯೂ ಭಗವಂತನ ಅಧೀನನಾಗಿ ಕರ್ಮ ಮಾಡಿಗೊಂಡೇ ಇರುತ್ತ. ಕರ್ಮತ್ಯಾಗಂದ ಸಿದ್ಧಿ ಸಿಕ್ಕ. ಅಷ್ಟೇ ಅಲ್ಲ, ಕರ್ಮತ್ಯಾಗವು ಸಾಧ್ಯವೂ ಇಲ್ಲದ್ದು. ನಮ್ಮ ಅನ್ನಮಯ ಮತ್ತು ಪ್ರಾಣಮಯಕೋಶ ನಿರಂತರ ಕಾರ್ಯ ನಿರ್ವಹಿಸುತ್ತಿರುತ್ತ. ಬದಿಕ್ಕಿಪ್ಪಗ ನಿಷ್ಕ್ರಿಯಾಗಿಪ್ಪಲೆ ಅಸಾಧ್ಯ. ಯಾವ ಕಾಲಲ್ಲಿಯೂ ಕೂಡ ಒಂದು ಕ್ಷಣ ನಿಷ್ಕ್ರಿಯನಾಗಿಪ್ಪಲೆ ಆರಿಂದಲೂ ಎಡಿಯ. “ಕಾರ್ಯತೇ ಹಿ ಅವಶಃ” – ದೇಹದ ಒಳ ಇಪ್ಪ ಜೀವನಲ್ಲಿ ಆತನ ದೇಹದ ಮೂಲಕ, ಮನಸ್ಸಿನ ಮೂಲಕ, ಮಾತಿನ ಮೂಲಕ ಕೆಲಸ ಮಾಡಿಸಲ್ಪಡುತ್ತು. ಅದು ಜೀವನ ಸ್ವಾಧೀನದಲ್ಲಿರುತ್ತಿಲ್ಲೆ. ಅದು ಭಗವಂತನ ವಶ. ಇಡೀ ವಿಶ್ವವೇ ಪ್ರಕೃತಿಯಿಂದಲಾಗಿ ಸೃಷ್ಠಿಯಾದ್ದು. ಅದರ ಮೂಲ ದ್ರವ್ಯ ಸತ್ವ-ತಮಸ್ಸು-ರಜಸ್ಸು. ಜೀವಕ್ಕೆ ಅದರದ್ದೇ ಆದ ಸ್ವಭಾವ ಇರುತ್ತು. ಅದಕ್ಕನುಗುಣವಾಗಿ ಪ್ರಕೃತಿಯ ಈ ತ್ರಿಗುಣಂಗಳ ಪ್ರಭಾವ ನಮ್ಮ ಮೇಲೆ ಆವುತ್ತು. ಆದ್ದರಿಂದ ನಿಷ್ಕ್ರೀಯತೆ ಹೇಳ್ವದು ಅರ್ಥಶೂನ್ಯ. ನಾವು ಜೀವನಲ್ಲಿ ನಮ್ಮ ತೊಡಗಿಸಿಗೊಳ್ಳೆಕು. ಕರ್ತವ್ಯಶೀಲರಾಗಿರೇಕು. ಅದರೊಟ್ಟಿಂಗೆ ಮಾನಸಿಕವಾಗಿ ಐಹಿಕ ಪ್ರಪಂಚದ ಆಚೆ ಇಪ್ಪ ಸತ್ಯದ ಕಡೆ ನಮ್ಮ ಮನಸ್ಸು ಜಾಗೃತವಾಗಿರೇಕು. ಈ ಎಚ್ಚರಂದ ಎಲ್ಲಾ ಕರ್ತವ್ಯ ಕರ್ಮಂಗಳ ಮಾಡೆಕು. ನಿಷ್ಕ್ರೀಯತೆ ವೇದಾಂತವಲ್ಲ, ಕರ್ತವ್ಯಚ್ಯುತಿ ಅಧ್ಯಾತ್ಮವಲ್ಲ. ಭಗವಂತನ ಪ್ರಜ್ಞೆಯೊಂದಿಗೆ ನಮ್ಮ ಪಾಲಿನ ಕರ್ಮ ನಾವು ಮಾಡೆಕ್ಕಪ್ಪದು. ಹೀಂಗೆ ಮಾಡಿಯಪ್ಪಗ ಕರ್ಮ ಮತ್ತು ಜ್ಞಾನ ಮಾರ್ಗಂಗೊ ಒಂದಕ್ಕೊಂದು ಪೂರಕವಾಗಿರುತ್ತು.

ಶ್ಲೋಕ

ಕರ್ಮೇಂದ್ರಿಯಾಣಿ ಸಂಯಮ್ಯ ಯ ಆಸ್ತೇ ಮನಸಾ ಸ್ಮರನ್ ।
ಇಂದ್ರಿಯಾರ್ಥಾನ್ ವಿಮೂಢಾತ್ಮಾ ಮಿಥ್ಯಾಚಾರಃ ಸ ಉಚ್ಯತೇ ॥೦೬॥

ಪದವಿಭಾಗ

ಕರ್ಮ-ಇಂದ್ರಿಯಾಣಿ ಸಂಯಮ್ಯ ಯಃ ಆಸ್ತೇ ಮನಸಾ ಚರನ್ । ಇಂದ್ರಿಯ-ಅರ್ಥಾನ್ ವಿಮೂಢ-ಆತ್ಮಾ ಮಿಥ್ಯಾ-ಆಚಾರಃ ಸಃ ಉಚ್ಯತೇ।

ಅನ್ವಯ

ಯಃ ಕರ್ಮ-ಇಂದ್ರಿಯಾಣಿ ಸಂಯಮ್ಯ, ಮನಸಾ ಇಂದ್ರಿಯ-ಅರ್ಥಾನ್ ಸ್ಮರನ್ ಆಸ್ತೇ, ಸಃ ಮಿಮೂಢ-ಆತ್ಮಾ ಮಿಥ್ಯ-ಆಚಾರಃ ಉಚ್ಯತೇ।

ಪ್ರತಿಪದಾರ್ಥ

ಯಃ – ಆರು, ಕರ್ಮ-ಇಂದ್ರಿಯಾಣಿ – ಐದು ಕರ್ಮೇಂದ್ರಿಯಂಗಳ, ಸಂಯಮ್ಯ – ನಿಯಂತ್ರಿಸಿ, ಮನಸಾ – ಮನಸ್ಸಿಂದ, ಇಂದ್ರಿಯ-ಅರ್ಥಾನ್ – ಇಂದ್ರಿಯ ವಿಷಯಂಗಳ, ಸ್ಮರನ್ – ಯೋಚನೆ ಮಾಡ್ಯೊಂಡು,   ಆಸ್ತೇ – ಇರುತ್ತನೋ,  ಸಃ – ಅವ°, ವಿಮೂಢ-ಆತ್ಮಾ – ಮೂರ್ಖನಾದ ಆತ್ಮನು,  ಮಿಥ್ಯಾ-ಆಚಾರಃ – ನಟನೆ ಮಾಡುವವ°(ಸುಳ್ಳು ಆಚರಣೆ ಮಾಡುವವ°) , ಉಚ್ಯತೇ – ಹೇದು ಹೇಳ್ಳಾವ್ತು.

ಅನ್ವಯಾರ್ಥ

ಕರ್ಮೇಂದ್ರಿಯಂಗಳ ನಿಗ್ರಹಿಸಿ, ಇಂದ್ರಿಯ ವಿಷಯಂಗಳಲ್ಲಿ ಮನಸ್ಸು ಮಡಿಕ್ಕೊಂಡಿಪ್ಪ ಮನುಷ್ಯನ ‘ವಿಮೂಢ’ ಎಂದೂ, ‘ಮಿಥ್ಯಾಚಾರಿ’ ಹೇಳಿಯೂ ಹೇಳ್ಳಾವ್ತು.

ತಾತ್ಪರ್ಯ / ವಿವರಣೆ

ಅನೇಕ ಮಂದಿ ವಿಥ್ಯಾಚಾರಿಗೊ ಇರುತ್ತವು. ಅವ್ವು ಕೃಷ್ಣಪ್ರಜ್ಞೆಲಿ ಕೆಲಸ ಮಾಡ್ಳೆ ನಿರಾಕರುಸುತ್ತವು. ಅವರ ಮನಸ್ಸು ಸದಾ ಯಾವುದಾದರೂ ಇಂದ್ರಿಯ ಭೋಗಲ್ಲಿ ನೆಟ್ಟಿರುತ್ತು. ಆದರೂ ತೋರಿಕೆಗೆ ಧ್ಯಾನ ಮಾಡುವಂತೆ ಇರುತ್ತವು. ಇದಕ್ಕೆ ನಟನೆ ಹೇಳ್ವದು. ಕುತರ್ಕಪ್ರಿಯರಾದ ತಮ್ಮ ಅನುಯಾಯಿಗಳ ಮೋಸಮಾಡ್ಳೆ ಇಂತಹ ಮಿಥ್ಯಾಚಾರಿಗೊ ಒಣ ತತ್ವಜ್ಞಾನವ ಕುರಿತು ಮಾತಾಡುತ್ತವು. ಅವ್ವು ಮಹಾ ಮೋಸಗಾರಂಗೊ. ಇಂದ್ರಿಯ ಸಂತೋಷಕ್ಕಾಗಿ ಮನುಷ್ಯನು ಸಾಮಾಜಿಕ ವ್ಯವಸ್ಥೆಲಿ ಯಾವುದೇ ಸ್ಥಾನಂದಲೂ ಉದ್ಯುಕ್ತನಕ್ಕು. ಆದರೆ, ಒಬ್ಬ ಮನುಷ್ಯ° ತನ್ನ ವಿಶಿಷ್ಠ ಸ್ಥಾನಮಾನದ ವಿಧಿನಿಯಮಂಗಳ ಅನುಸರಿಸಿದರೆ ತನ್ನ ಅಸ್ತಿತ್ವವ ಪರಿಶುದ್ಧಮಾಡಿಗೊಂಡು ಕ್ರಮೇಣ ಪ್ರಗತಿಯ ಸಾಧುಸುತ್ತ°. ಆದರೆ, ಇಂದ್ರಿಯ ತೃಪ್ತಿಗಾಗಿ ಸಾಧನಂಗಳ ಅರಸುತ್ತ ಯೋಗಿಯ ಹಾಂಗೆ ತೋರಿಗೊಂಬವ ಆಗಾಗ ತತ್ವ ಶಾಸ್ತ್ರವ ಮಾತಾಡುಗು. ಆದರೂ ಆತನ ಅತ್ಯಂತ ಕುಟಿಲ ಮನುಷ್ಯ ಹೇಳಿಯೇ ಹೇಳೇಕ್ಕಾವ್ತು. ಇಂತಹ ಪಾಪಿಯ ವಿದ್ಯೆಯ ಫಲವ ಭಗವಂತ° ತನ್ನ ಮಾಯಾಶಕ್ತಿಯ ವಶಮಾಡಿಕೊಳ್ಳುತ್ತ°. ಆದ್ದರಿಂದ ಇವನ ವಿದ್ಯೆಗೆ ಯಾವ ಬೆಲೆಯೂ ಇಲ್ಲೆ. ಇಂತಹ ಮಿಥ್ಯಾಚಾರಿಯ ಮನಸ್ಸು ಯಾವಾಗಲೂ ಮಲಿನವಾಗಿರುತ್ತು. ಆದ್ದರಿಂದ ಅವನ ಯೋಗ ಧ್ಯಾನದ ಪ್ರದರ್ಶನಕ್ಕೆ ಯಾವ ಬೆಲೆಯೂ ಇಲ್ಲೆ.

ಈ ಶ್ಲೋಕಲ್ಲಿ ಶ್ರೀಕೃಷ್ಣ ಒಂದು ಮುಖ್ಯು ವಿಚಾರವ ಹೇಳಿದ್ದ°. – ಸಾಮಾನ್ಯವಾಗಿ ಇಂದ್ರಾಣ ಪ್ರಪಂಚಲ್ಲಿ ಹೆರಾಣ ವೇಷಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತ ಇಪ್ಪದು ನಾವು ಕಾಣುತ್ತು. ಮನಸ್ಸಿಲ್ಲಿ ಎಲ್ಲಾ ಆಸೆ ಭಾವನೆ ಇರ್ಸಿಗೊಂಡು ಯಾವುದೋ ಭಯಂದ ಹೊರನೋಟಕ್ಕೆ ಸದಾಚಾರಸಂಪನ್ನರಂತೆ ಬದುಕ್ಕುವವು. ಅವರ ಕಪಟ ಧಾರ್ಮಿಕತೆ ಹೇಳ್ವದಿದರ. ನಾವು ಮದಾಲು ನಮ್ಮ ಆತ್ಮಸಾಕ್ಷಿಗೆ ವಂಚನೆ ಮಾಡದ್ದೆ ಬದುಕ್ಕೆಕು. ಹೆರಾಣ ಆಚಾರಕ್ಕಿಂತಲೂ ಒಳಾಣ ಆಚಾರ ಶುದ್ಧಿ ಮುಖ್ಯ. ಇದಿಲ್ಲದ್ರೆ ಎಂದೂ ಉದ್ಧಾರ ಇಲ್ಲೆ. ಕರ್ಮೇಂದ್ರಿಯಂಗಳ ಅದುಮಿಟ್ಟುಗೊಂಡು ಮನಸ್ಸಿಂದಲೇ ಇಂದ್ರಿಯ ವಿಷಯಂಗಳ ಕನಸು ಕಾಣುವ ತಿಳಿಗೇಡಿಗಳ ಮಿಥ್ಯಾಚಾರಿ, ಡಂಭಾಚಾರಿ ಹೇಳಿ ಹೇಳ್ಳಕ್ಕು ಹೇದು ಬನ್ನಂಜೆಯವು ಈ ಶ್ಲೋಕವ ವ್ಯಾಖ್ಯಾನಿಸಿದ್ದವು.

ಶ್ಲೋಕ

ಯಸ್ತ್ವಿಂದ್ರಿಯಾಣೀ ಮನಸಾ ನಿಯಮ್ಯಾರಭತೇsರ್ಜುನ ।
ಕರ್ಮೇಂದ್ರಿಯೈಃ ಕರ್ಮಯೋಗಂ ಅಸಕ್ತಃ ಸ ವಿಶಿಷ್ಯತೇ ॥೦೭॥

ಪದವಿಭಾಗ

ಯಃ ತು ಇಂದ್ರಿಯಾಣಿ ಮನಸಾ ನಿಯಮ್ಯ ಆರಭತೇ ಅರ್ಜುನ । ಕರ್ಮ-ಇಂದ್ರಿಯೈಃ ಕರ್ಮ-ಯೋಗಮ್ ಅಸಕ್ತಃ ಸಃ ವಿಶಿಷ್ಯತೇ ।

ಅನ್ವಯ

ಹೇ ಅರ್ಜುನ!, ಯಃ ತು ಮನಸಾ ಇಂದ್ರಿಯಾಣಿ ನಿಯಮ್ಯ, ಅಸಕ್ತಃ ಕರ್ಮ-ಇಂದ್ರಿಯೈಃ ಕರ್ಮ-ಯೋಗಮ್ ಆರಭತೇ, ಸಃ ವಿಶಿಷ್ಯತೇ।

ಪ್ರತಿಪದಾರ್ಥ

ಹೇ ಅರ್ಜುನ! –  ಏ ಅರ್ಜುನ!, ಯಃ – ಆರು,  ತು – ಆದರೋ, ಮನಸಾ – ಮನಸ್ಸಿಂದ , ಇಂದ್ರಿಯಾಣಿ – ಇಂದ್ರಿಯಂಗಳ, ನಿಯಮ್ಯ – ನಿಯಂತ್ರಿಸಿಗೊಂಡು, ಅಸಕ್ತಃ – ಅನಾಸಕ್ತಿಂದ, ರ್ಮ ಇಂದ್ರಿಯೈಃ – ಸಕ್ರಿಯ ಇಂದ್ರಿಯಂಗಳಿಂದ, ಕರ್ಮ-ಯೋಗಮ್ – ಭಕ್ತಿಯ, ಆರಭತೇ – ಪ್ರಾರಂಭಿಸುತ್ತಾನೋ, ಸಃ – ಅವ°, ವಿಶಿಷ್ಯತೇ – ಎಷ್ಟೋ ಉತ್ತಮನು.

ಅನ್ವಯಾರ್ಥ

ಪ್ರಾಮಾಣಿಕನಾದ ಮನುಷ್ಯ° ಕ್ರಿಯಾಶಾಲಿಗಳಾದ ಇಂದ್ರಿಯಂಗಳ ಮನಸ್ಸಿನಿಂದ ನಿಗ್ರಹಿಸಲೆ ಪ್ರಯತ್ನಿಸಿ (ಕೃಷ್ಣಪ್ರಜ್ಞೆಲಿ) ಕರ್ಮಯೋಗವ ಅನಾಸಕ್ತನಗಿ ಪ್ರಾರಂಭಿಸಿದರೆ ಅವ° ಎಷ್ಟೋ ಉತ್ತಮ°.

ತಾತ್ಪರ್ಯ / ವಿವರಣೆ

ಸ್ವೇಚ್ಛಾ ಜೀವನ ಮತ್ತು ಇಂದ್ರಿಯಭೋಗಕ್ಕಾಗಿ ಹುಸಿ ಆಧ್ಯಾತ್ಮಿಕವಾದಿ ಅಪ್ಪದಕ್ಕಿಂತ ತನ್ನ ವ್ಯವಹಾರಂಗಳಲ್ಲಿಯೇ ಉಳುಕ್ಕೊಂಡು ಬದುಕಿನ ಉದ್ದೇಶವ ಕಾರ್ಯಗತ ಮಾಡುವದು ಉತ್ತಮ. ಐಹಿಕ ಬಂಧನಂದ ಬಿಡುಗಡೆ ಹೊಂದಿ ಭಗವಂತನ ರಾಜ್ಯವ ಸೇರುವುದೇ ಬದುಕಿನ ಉದ್ದೇಶ.  ಮುಖ್ಯ ಸ್ವಾರ್ಥಗತಿ ಅಥವಾ ಸ್ವಹಿತದ ಗುರಿ ವಿಷ್ಣುವ ಸೇರುವದು. ಇಡೀ ವರ್ಣಾಶ್ರಮ ವ್ಯವಸ್ಥೆಯ ನಾವು ಈ ಗುರಿಯ ತಲುಪಲೆ ಸಾಧ್ಯ ಆವ್ತ ಹಾಂಗೇ ರೂಪಿಸಲಾಯ್ದು. ಕೃಷ್ಣಪ್ರಜ್ಞೆಲಿ ನಿಯಂತ್ರಿತ ರೀತಿಲಿ ಸೇವೆ ಮಾಡುವದರಿಂದ ಗೃಹಸ್ಥರು ಕೂಡ ಈ ಗುರಿಯ ಮುಟ್ಟಲೆ ಸಾಧ್ಯ. ಆತ್ಮಸಾಕ್ಷಾತ್ಕಾರಕ್ಕಾಗಿ ಮನುಷ್ಯನು ಶಾಸ್ತ್ರಂಗಳಲ್ಲಿ ವಿಧಿಸಿಪ್ಪಂತೆ ನಿಯಮಬದ್ಧ ಜೀವನವ ನಡೆಸಲಕ್ಕು. ಅನಾಸಕ್ತಿಂದ ತನ್ನ ವ್ಯವಹಾರಂಗಳನ್ನೂ ನಿರ್ವಹಿಸಲಕ್ಕು. ಈ ರೀತಿಲಿ ಪ್ರಗತಿಯ ಸಾಧುಸಲೆಡಿಗು . ಈ ವಿಧಾನವ ಅನುಸರುಸುವ ಪ್ರಾಮಾಣಿಕ ಮನುಷ್ಯ ಮುಗ್ಧ ಸಾರ್ವಜನಿಕರ ವಂಚುಸಲೆ, ಆಧ್ಯಾತ್ಮಿಕತೆಯ ಹೊರಪ್ರದರ್ಶನವ ಬಳಸುವವನಗಿಂತ ಬಹುಪಾಲು ಉತ್ತಮ ಸ್ಥಿತಿಲಿ ಇರುತ್ತ°. ಹೊಟ್ಟೆಹೊರುವುದಕ್ಕಾಗಿಯೇ ಧ್ಯಾನದ ಸೋಗು ಹಾಕುವವನಿಗಿಂತ ಪ್ರಾಮಾಣಿಕನಾದ ಝಾಡಮಾಲಿಯೇ ಎಷ್ಟೋ ಉತ್ತಮ°.

ಮನಸ್ಸು ಸ್ವಚ್ಛವಾಗಿದ್ದು, ಇಂದ್ರಿಯಂಗಳ ಮೇಲೆ ಮಾನಸಿಕ ಕಡಿವಾಣ ಗಟ್ಟಿಯಿಪ್ಪಗ – ಕರ್ಮೇಂದ್ರಿಯಂದ ಮಾಡುವ ಸಾಧನೆ ಕರ್ಮಯೋಗ ಆವುತ್ತು. ಇದು ಶುದ್ಧ ಅಧ್ಯಾತ್ಮ ಸಾಧನೆ. ಈ ಸ್ಥಿತಿಲಿ ಇಂದ್ರಿಯಂಗೊ ದಾರಿ ತಪ್ಪುತ್ತಿಲ್ಲೆ. ತನ್ನ ಜೀವ ಸ್ವರೂಪದ ಸ್ವಭಾವಕ್ಕನುಗುಣವಾಗಿ ಚಿತ್ತ ಶುದ್ಧಿಂದ ಮಾಡುವ ಕರ್ಮ ನಿಜವಾದ ಅಧ್ಯಾತ್ಮ ಸಾಧನೆ. ಈ ರೀತಿಯ ಸಾಧನೆಲಿ ತೊಡಗುವವ ಶ್ರೇಷ್ಠನೆನಿಸಿಗೊಳ್ತ°. ಇಂಥವು ಒಳ ಒಂದು ಹೆರ ಒಂದು ಆಗಿರದೆ ಮನೋಬಲಂದ ಇಂದ್ರಿಯಂಗಳ ಗೆದ್ದು ಫಲದ ನಂಟು ತೊರದು ಎತ್ತರಕ್ಕೇರುತ್ತವು.

ನಿಯತಂ ಕುರು ಕರ್ಮ ತ್ವಂ ಕರ್ಮ ಜ್ಯಾಯೋ ಹ್ಯಕರ್ಮಣಃ ।
ಶರೀರಯಾತ್ರಾಪಿ ಚ ತೇ ನ ಪ್ರಸಿದ್ಧ್ಯೇದಕರ್ಮಣಃ ॥೦೮॥

ಪದವಿಭಾಗ

ನಿಯತಮ್ ಕುರು ಕರ್ಮ ತ್ವಮ್ ಕರ್ಮ ಜ್ಯಾಯಃ ಹಿ ಅಕರ್ಮಣಃ । ಶರೀರ-ಯಾತ್ರಾ ಅಪಿ ಚ ತೇ ನ ಪ್ರಸಿದ್ಧ್ಯೇತ್ ಅಕರ್ಮಣಃ ॥

ಅನ್ವಯ

ತ್ವಂ ನಿಯತಂ ಕರ್ಮ ಕುರು, ಅಕರ್ಮಣಃ ಹಿ ಕರ್ಮ ಜ್ಯಾಯಃ । ತೇ ಶರೀರ-ಯಾತ್ರಾ ಚ ಅಪಿ ಅಕರ್ಮಣಃ ನ ಪ್ರಸಿದ್ಧ್ಯೇತ್ ।

ಪ್ರತಿಪದಾರ್ಥ

ತ್ವಮ್ – ನೀನು, ನಿಯತಮ್ – ವಿದ್ಯುಕ್ತವಾದ, ಕರ್ಮ – ಕರ್ತವ್ಯಂಗಳ, ಕುರು – ಮಾಡು, ಅಕರ್ಮಣಃ – ಕರ್ಮಮಾಡದೇ ಇಪ್ಪದಕ್ಕಿಂತ, ಹಿ – ಖಂಡಿತವಾಗಿಯೂ,  ಕರ್ಮ – ಕರ್ಮವು, ಜ್ಯಾಯಃ – ಉತ್ತಮವು, ತೇ – ನಿನ್ನ ,  ಶರೀರ-ಯಾತ್ರಾ ಅಪಿ ಚ  – ದೇಹದ ಪೋಷಣೆಯೂ ಕೂಡ, ಅಕರ್ಮಣಃ – ಕೆಲಸಮಾಡದ್ದೆ, ನ ಪ್ರಸಿದ್ಧ್ಯೇತ್ – ಆಗ, 

ಅನ್ವಯಾರ್ಥ

ನೀನು ನಿನ್ನ ನಿಯತ ಕರ್ಮವ ಮಾಡು. ಎಂತಕೆ ಹೇಳಿರೆ, ಹಾಂಗೆ ಮಾಡುವದು ಕರ್ಮವ ಮಾಡದ್ದೇ ಇಪ್ಪದಕ್ಕಿಂತ ಉತ್ತಮ. ಕರ್ಮವ ಮಾಡದ್ದೆ ದೇಹವ ಉಳಿಸಿಗೊಂಬಲೆ ಸಾಧ್ಯ ಇಲ್ಲೆ.

ತಾತ್ಪರ್ಯ / ವಿವರಣೆ

ನಾವು ಸತ್ಕುಲಪ್ರಸೂತರು ಹೇದು ಲೊಟ್ಟೆ ತೋರಿಸಿಗೊಂಬ ಬಹುಮಂದಿ ಹುಸಿ ಧ್ಯಾನಿಗೊ ಇರುತ್ತವು. ಆಧ್ಯಾತ್ಮಿಕ ಬದುಕಿಲ್ಲಿ ಮುಂದುವರಿವಲೆ ಅವು ಎಲ್ಲವನ್ನೂ ತ್ಯಾಗಮಾಡಿಗೊಂಡಿದು ಹೇದು ಸುಳ್ಳು ಹೇಳ್ವ ವೃತ್ತಿ ನಿರತರಾಗಿರ್ತವು. ಅರ್ಜುನ° ಒಬ್ಬ ಮಿಥ್ಯಾಚಾರಿ ಆಗಿ ಹೋಪಲೆ ಕೃಷ್ಣ° ಬಯಸುತ್ತನಿಲ್ಲೆ. ಕ್ಷತ್ರಿಯರಿಂಗೆ ವಿಧಿಸಿಪ್ಪ ನಿಯತ ಕರ್ಮಂಗಳ ಅರ್ಜುನ° ಮಾಡು ಹೇದು ಭಗವಂತ° ಅಪೇಕ್ಷಿಸಿದ°. ಅರ್ಜುನ ಒಬ್ಬ° ಗೃಹಸ್ಥ, ದಂಡನಾಯಕ°. ಅವ° ಹಾಂಗೇ ಉಳುದು ಗೃಹಸ್ಥನಾದ ಕ್ಷತ್ರಿಯಂಗೆ ನಿಯಮಿಸಿಪ್ಪ ಕರ್ತವ್ಯಂಗಳ ಮಾಡುವದೇ ಉತ್ತಮ ಹೇದು ಅರ್ಜುನಂಗೆ ಉಪದೇಶ. ಇಂತಹ ಕರ್ಮಂಗೊ ಕ್ರಮೇಣ ಪ್ರಾಪಂಚಿಕ ಮನುಷ್ಯನ ಹೃದಯವ ಶುದ್ಧಿ ಮಾಡುತ್ತು ಮತ್ತು ಅವನ ಐಹಿಕ ಕಲ್ಮಷಂಗಳ ತೊಡೆದು ಹಾಕುತ್ತು. ಹೊಟ್ಟೇಪ್ಪಾಡಿಂಗಾಗಿ ಮಾಡುವ ತ್ಯಾಗದ ತೋರಿಕೆಲಿ ಭಗವಂತನಾಗಲೀ, ಯಾವುದೇ ಧರ್ಮಗ್ರಂಥಂಗಳಾಗಲೀ ಅನುಮೋದುಸುತ್ತಿಲ್ಲೆ. ಯಾವುದಾರು ಕೆಲಸಮಾಡಿ ಮನುಷ್ಯನಾದವ° ದೇಹ ಮತ್ತು ಆತ್ಮವ ಒಟ್ಟಿಂಗೆ ಇರಿಸಿಗೊಳ್ಳೆಕು ಹೇಳ್ವದು ನಿಜ. ಐಹಿಕ ಪ್ರವೃತ್ತಿಂಗಳಿಂದ ಪರಿಶುದ್ಧನಾಗದ್ದೇ ಮನಸ್ವೀ ರೀತಿಲಿ ಕೆಲಸವ ಬಿಟ್ಟುಬಿಡ್ಳಾಗ. ಈ ಜಗತ್ತಿಲ್ಲಿಪ್ಪ ಆರಿಂಗೇ ಆಗಲಿ ಐಹಿಕ ಪ್ರಕೃತಿಯ ಮೇಲೆ ದಬ್ಬಾಳಿಕೆ ನಡೆಸುವ, ಹೇಳಿರೆ, ಇಂದ್ರಿಯ ತೃಪ್ತಿ ಪಡೆಯುವ, ಕಲುಷಿತ ಪ್ರವೃತ್ತಿಯು ಇದ್ದೇ ಇರುತ್ತು. ಇಂತಹ ಕಲುಷಿತ ಪ್ರವೃತ್ತಿಗಳ ದೂರಮಾಡೆಕು. ನಿಯತ ಕರ್ಯವ್ಯಂಗಳ ಮೂಲಕ ಹೀಂಗೆ ಮಾಡೆಕ್ಕಲ್ಲದ್ದೇ ಕರ್ಮವ ತ್ಯಜಿಸಿ ಇತರರ ಖರ್ಚಿಲ್ಲಿ ಹೊಟ್ಟೇ ಹೊರವ ಆಧ್ಯಾತ್ಮಿಕವಾದಿ ಎನಿಸಿಗೊಂಬಲೆ ಆರೂ ಪ್ರಯತ್ನಿಸಲಾಗ.

ಕೃಷ್ಣ° ಹೇಳುತ್ತ° – ನೀನು ನಿನ್ನ ಜೀವ ಸ್ವಭಾವಕ್ಕೆ ಅನುಗುಣವಾದ, ಜ್ಞಾನಕ್ಕೆ ಪೂರಕವಾದ ನಿಯತ ಕರ್ಮವ ಮಾಡು. ಇಲ್ಲಿ ಅರ್ಜುನನ ನೋಡಿರೆ, ಅವನ ಜೀವ ಸ್ವಭಾವ ಅನ್ಯಾಯದ ವಿರುದ್ಧ ಹೋರಾಡಿ ದೇಶದ ಪ್ರಜೆಗಳ ರಕ್ಷಣೆ ಮಾಡುವ ಕ್ಷತ್ರಿಯ ಸ್ವಭಾವ. ಅದರ ಬಿಟ್ಟು, ದೇಶಲ್ಲಿ ಅನ್ಯಾಯ ತಾಂಡವ ಆಡ್ಯೋಂಡಿಪ್ಪಗ, ಜ್ಞಾನ ಮಿಗಿಲೆಂದು ತಪಸ್ಸಾಚರಿಸಿದರೆ ಅದು ನಿಜವಾದ ಯೋಗ ಆವ್ತಿಲ್ಲೆ. “ಎಂದೂ ನಿಷ್ಕ್ರೀಯನಾಗೆಡ. ನಿನ್ನ ಕರ್ಮವ ಮಾಡು. ಅದರಿಂದ ಎಂತ ಸಿಕ್ಕುತ್ತೋ ಅದರ ಅನುಭವುಸು. ಆದರೆ, ಮಾಡುವ ಕರ್ಮ ಜ್ಞಾನಕ್ಕೆ ಪೂರಕವಾಗಿರಲಿ. ಭಗವಂತನ ಎಚ್ಚರ ಯಾವಾಗಲೂ ಇರಲಿ”.  “ಭಗವಂತ ಈ ಕರ್ಮವ ಎನ್ನ ಕೈಂದ ಮಾಡುಸುತ್ತಾ ಇದ್ದ°, ಇದು ಅವಂಗೆ ಅರ್ಪಿತ” ಹೇಳ್ವ ಮನೋಭಾವನೆಂದ ಕರ್ಮ ಮಾಡಿರೆ ಯಾವ ಕರ್ಮವೂ ನವಗೆ ಬಂಧಕ ಆವ್ತಿಲ್ಲೆ.

ಇಲ್ಲಿ ಒಂದು ವಿಷಯವ ಚಿಂತುಸೆಕ್ಕಾಗಿದ್ದು. ಶಾಸ್ತ್ರಂಗೆ ಹೇಳ್ವ ಪ್ರಕಾರ ಕರ್ಮ ಬಂಧಕ. ಪುನಃ ಕರ್ಮ ಮಾಡುವದರಿಂದ ನಾವು ಕರ್ಮ ಚಕ್ರಲ್ಲಿ ಸಿಲುಕಿಗೊಳ್ಳುತ್ತು. ಕರ್ಮ ಅನಿವಾರ್ಯ. ಹಾಂಗಾದರೆ ಮೋಕ್ಷದ ಮಾರ್ಗ ಯಾವುದು? –

ಶ್ಲೋಕ

ಯಜ್ಞಾರ್ಥಾತ್ ಕರ್ಮಣೋsನ್ಯತ್ರ ಲೋಕೋsಯಂ ಕರ್ಮಬಂಧನಃ ।
ತದರ್ಥಂ ಕರ್ಮ ಕೌಂತೇಯ ಮುಕ್ತಸಂಗಃ ಸಮಾಚರ ॥೦೯॥

ಪದವಿಭಾಗ

ಯಜ್ಞ-ಅರ್ಥಾತ್ ಕರ್ಮಣಃ ಅನ್ಯತ್ರ ಲೋಕಃ ಅಯಮ್ ಕರ್ಮ ಬಂಧನಃ । ತತ್ ಅರ್ಥಮ್ ಕರ್ಮ ಕೌಂತೇಯ ಮುಕ್ತ-ಸಂಗಃ ಸಮಾಚರ ।

ಅನ್ವಯ

ಯಜ್ಞ-ಅರ್ಥಾತ್ ಕರ್ಮಣಃ ಅನ್ಯತ್ರ ಅಯಂ ಲೋಕಃ ಕರ್ಮ-ಬಂಧನಃ । ಹೇ ಕೌಂತೇಯ, ಮುಕ್ತ-ಸಂಗಃ ತತ್ ಅರ್ಥಂ ಕರ್ಮ ಸಮಾಚರ ।

ಪ್ರತಿಪದಾರ್ಥ

ಯಜ್ಞ-ಅರ್ಥಾತ್  ಕರ್ಮಣಃ  – ಯಜ್ಞದ ಅಥವಾ ವಿಷ್ಣುವಿನ ಸಲುವಾಗಿ ಮಾಡಿದ ಕರ್ಮಂಗೊಕ್ಕಿಂತ, ಅನ್ಯತ್ರ – ಬೇರೆ ಎಲ್ಲಿಯೂ, ಅಯಂ ಲೋಕಃ – ಈ ಪ್ರಪಂಚವು, ಕರ್ಮ-ಬಂಧನಃ – ಕರ್ಮಬಂಧನವು, ಹೇ ಕೌಂತೇಯ! – ಏ ಕುಂತೀಪುತ್ರ ಅರ್ಜುನನೇ!, ಮುಕ್ತ-ಸಂಗಃ – ಸಹವಾಸಂದ ಬಿಡುಗಡೆ ಪಡದು, ತತ್ ಅರ್ಥಂ – ಅದರ ಸಲುವಾಗಿ, ಕರ್ಮ – ಕರ್ಮವ,   ಸಮಾಚರ – ಪರಿಪೂರ್ಣವಾಗಿ ಆಚರುಸು.

ಅನ್ವಯಾರ್ಥ

ಯಜ್ಞದ ಅರ್ಥಾತ್ ಮಹಾವಿಷ್ಣುವಿನ ಸಲುವಾಗಿ ಮಾಡಿದ ತ್ಯಾಗ ಹೇಳಿ ಗ್ರೇಶಿಗೊಂಡು ಕರ್ಮವ ಮಾಡೆಕು. ಇಲ್ಲದ್ದ್ರೆ ಕರ್ಮವು ಇಹಬಂಧನವ ಸೃಷ್ಟಿ ಮಾಡುತ್ತು. ಹಾಂಗಾಗಿ, ಕೌಂತೇಯ!, ಭಗವಂತನ ತೃಪ್ತಿಗಾಗಿ ನಿನ್ನ ನಿಯತ ಕರ್ತವ್ಯಂಗಳ ಮಾಡು. ಆ ರೀತಿಲಿ ನೀನು ಬಂಧನಂದ ಸದಾ ಮುಕ್ತನಾವುತ್ತೆ.

ತಾತ್ಪರ್ಯ / ವಿವರಣೆ

ದೇಹವ ಉಳಿಸಿಗೊಂಬದಕ್ಕಾದರೂ ಮನುಷ್ಯ° ಏವುದಾರು ಕೆಲಸ ಮಾಡಲೇ ಬೇಕು. ಆದ್ದರಿಂದ ಆ ಉದ್ಧೇಶವ ಸಾಧುಸಲೆ ಸಾಧ್ಯ ಅಪ್ಪ ಹಾಂಗೆ ನಿರ್ದಿಷ್ಟ ಸಮಾಜ, ಸ್ಥಾನ, ಮತ್ತು ಗುಣಂಗೊಕ್ಕೆ ತಕ್ಕಂತೆ ಕರ್ತವ್ಯಂಗಲ ನಿಯತಗೊಳುಸಿದ್ದು. ಯಜ್ಞ ಹೇಳಿರೆ ಮಹಾವಿಷ್ಣು (ಯಜ್ಞೋ ವೈ ವಿಷ್ಣುಃ) ಅಥವಾ ಧಾರ್ಮಿಕವಿಧಿಗನುಸಾರವಾಗಿ ಅರ್ಪಣೆ ಮಾಡುವದು. ಎಲ್ಲ ಯಜ್ಞಂಗಳೂ ಮಾಡುವದು ವಿಷ್ಣುವಿನ ಪ್ರಸನ್ನಗೊಳುಸಲೆ ಬೇಕಾಗಿಯೇ. ಇನ್ನೊಂದು ರೀತಿಲಿ ಹೇಳುವದಾದರೆ, ಯಜ್ಞಮಾಡುವದೂ ಒಂದೇ ಶ್ರೀ ಮಹಾವಿಷ್ಣುವಿನ ನೇರವಾಗಿ ಸೇವಿಸಿದರೂ ಒಂದೇ. ಆದ್ದರಿಂದ ಕೃಷ್ಣಪ್ರಜ್ಞೆ ಹೇಳಿರೆ ಈ ಶ್ಲೋಕಲ್ಲಿ ವಿಧಿಸಿಪ್ಪಂತೆ ಯಜ್ಞವ ಮಾಡುವದೇ. ವರ್ಣಾಶ್ರಮ ಸಂಸ್ಥೆಯ ಗುರಿಯೂ ವಿಷ್ಣುವಿನ ಸಂತೃಪ್ತಿಯೇ.

ಹಾಂಗಾಗಿ ವಿಷ್ಣುವಿನ ಸಂತೃಪ್ತಿಗಾಗಿ ಕೆಲಸ ಮಾಡೆಕು. ಐಹಿಕ ಜಗತ್ತಿಲ್ಲಿ ಬೇರೆ ಯಾವ ಕೆಲಸ ಮಾಡಿದರೂ ಅದು ಬಂಧನಕ್ಕೆ ಕಾರಣ ಆವುತ್ತು. ಎಂತಕೆ ಹೇಳಿರೆ ಒಳ್ಳೆಯ ಕೆಲಸ ಕೆಟ್ಟ ಕೆಲಸ ಎರಡಕ್ಕೂ ಪ್ರತಿಕ್ರಿಯೆ ಇದ್ದೇ ಇದ್ದು. ಯಾವುದೇ ಪ್ರತಿಕ್ರಿಯೆಂದಲೂ ಕೆಲಸ ಮಾಡಿದವ ಬಂಧನಕ್ಕೆ ಒಳಗಾವ್ತ°. ಆದ್ದರಿಂದ ಕೃಷ್ಣನ ( ವಿಷ್ಣುವಿನ) ಸಂತೃಪ್ತಿಗಾಗಿ ಕೃಷ್ಣಪ್ರಜ್ಞೆಲಿ ಕೆಲಸಮಾಡೆಕು. ಈ ರೀತಿ ಕರ್ಮ ಮಾಡುವಾಗ ಮನುಷ್ಯ ಮುಕ್ತಿಯ ಸ್ಥಿತಿಲಿ ಇರುತ್ತ°.  (ತುಸು ಗಮನಿಸಿದರೆ ನಾವು ಮಾಡುವ ಯಾವುದೇ ವೈದಿಕ ಕ್ರಿಯೆಯ ಅಕೇರಿಗೆ – ” ಕಾಯೇನವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾವಾ ಪ್ರಕೃತೇಃ ಸ್ವಭಾವಾತ್ । ಕರೋಮಿ ಯದ್ಯತ್ಸಕಲಂ ಪರಸ್ಮೈ ನಾರಾಯಣೇತಿ ಸಮರ್ಪಯಾಮಿ”॥ ಕಾಯಾವಾಚಾಮನಸಾ ಮಾಡಿದ ಈ ಕರ್ಮ ನಾರಯಣಾ ಇದು ನಿನಗೇ ಅರ್ಪಿತ ಹೇಳ್ವ ಭಾವನೆ). ಇದು ಕರ್ಮ ಮಾಡುವ ಮಹಾಕಲೆ. ಪ್ರಾರಂಭಲ್ಲಿ ಈ ಪ್ರಕ್ರಿಯೆಗೆ ಪರಿಣತ ಗುರುವಿನ ಮಾರ್ಗದರ್ಶನ ಅಗತ್ಯ. ಆದ್ದರಿಂದ ಅರ್ಜುನಂಗೆ ಪರಮಾತ್ಮನೇ ಗುರು. ಇಂದ್ರಿಯತೃಪ್ತಿಗಾಗಿ ಏನನ್ನೂ ಮಾಡ್ಳಾಗ. ಎಲ್ಲವೂ ಭಗವಂತನ ತೃಪ್ತಿಗಾಗಿಯೇ ಮಾಡೆಕು. ಇದರ ಅರ್ತುಗೊಂಡು ಕರ್ಮ ಮಾಡಿದವ ಕರ್ಮ ಬಂಧನಕ್ಕೆ ಒಳಪ್ಪಡುತ್ತನಿಲ್ಲೆ. ಇಂತಹ ಭಕ್ತಿಸೇವೆಯೊಂದೇ ಮನುಷ್ಯನ ಭಗವದ್ಧಾಮಕ್ಕೆ ಏರುಸುತ್ತು.

ಬನ್ನಂಜೆಯವು ಈ ರೀತಿಯಾಗಿ ವ್ಯಾಖ್ಯಾನಿಸುತ್ತವು – ಈ ಲೋಕ ಕರ್ಮದ ಬಂಧನಕ್ಕೆ ಒಳಪ್ಪಟ್ಟಿದ್ದು. ಆದರೆ, ಎಲ್ಲಾ ಕರ್ಮವೂ ಬಂಧಕ ಅಲ್ಲ. ಅರ್ತು ಮಾಡುವ ಕರ್ಮ ಎಂದೂ ಬಂಧಕ ಆವುತ್ತಿಲ್ಲೆ. ನಾವು ಮಾಡುವ ಕರ್ಮವ ಭಗವತ್ಪ್ರಜ್ಞೆಂದ ಮಾಡೆಕು. ನಾವು ಆ ಭಗವಂತನ ಸೂತ್ರದ ಗೊಂಬೆಗೊ. ಭಗವಂತ ಸೂತ್ರದಾರ. ಈ ಎಚ್ಚರಂದ ನಾವು ಕರ್ಮ ಮಾಡಿರೆ ನಮ್ಮ ಪ್ರತಿಯೊಂದು ಕರ್ಮವೂ ಕೂಡ ಯಜ್ಞ ಆವುತ್ತು. ಉದಾ – ನಾವು ಉಸಿರಾಡುತ್ತು. ಹೆರಾಣ ಆಮ್ಲಜನಕವ ಹೀರಿ ಅಂಗಾರಾಮ್ಲವ ಹೆರ ಹಾಕುತ್ತು. ನಮ್ಮೊಳ ಇಪ್ಪ ಈ ವಿಶೇಷ ಯಂತ್ರದ ಕಲ್ಪನೆ ನವಗೆ ಇರುತ್ತಿಲ್ಲೆ. ನವಗೆ ಅರಿವಿಲ್ಲದೆಯೂ ಈ ಕ್ರಿಯೆ ನಡೆತ್ತಾ ಇರುತ್ತು. ನಾವು ಬಿಟ್ಟ ಗಾಳಿಯ ಗಿಡಸಸ್ಯಂಗೊ ಸೇವಿಸಿ ನವಗೆ ಬೇಕಾದ ಆಮ್ಲಜನಕವ ಒದಗುಸುತ್ತು. ಇದೆಲ್ಲವೂ ಆ ಭಗವಂತನ ವ್ಯವಸ್ಥೆ. ಈ ಕಾರಣಕ್ಕಾಗಿಯೇ ಸನಾತನ ಭಾರತೀಯ ಸಂಸ್ಕೃತಿಲಿ ಅತಿಹೆಚ್ಚು ಆಮ್ಲಜನಕವ ಕೊಡುವ ಅಶ್ವತ್ಥವೃಕ್ಷವ ಪೂಜಿಸುತ್ತು. ಆ ವೃಕ್ಷಲ್ಲಿ ಭಗವಂತನ ವಿಶೇಷ ವಿಭೂತಿ ಅಡಗಿದ್ದು. ಈ ರೀತಿ ನಾವು ನಮ್ಮ ಪ್ರತಿಯೊಂದು ಕಾರ್ಯಲ್ಲಿಯೂ ಭಗವಂತನ ಹಿರಿಮೆಯ ತಿಳುದು ಮಾಡುವಾಗ,  ನಾವು ಮಾಡುವ ಕರ್ಮ – ಕರ್ಮಯೋಗ ಆವುತ್ತು ಮತ್ತು ಅದು ಎಂದೂ ಬಂಧಕ ಆವುತ್ತಿಲ್ಲೆ.

ಇಲ್ಲಿ ಬಳಕೆ ಆದ ‘ಯಜ್ಞ’ ಹೇಳಿರೆ ‘ಯಜ-ದೇವ-ಪೂಜಾ’ ಹೇಳಿರೆ ದೇವರ ಪೂಜೆ ಎಂಬರ್ಥ. ದೇವರನ್ನೂ ಯಜ್ಞ ಹೇಳಿ ದೆನಿಗೊಂಬದು. ಆದ್ದರಿಂದ ಕೇವಲ ಅಗ್ನಿಮುಖಲ್ಲಿ ಮಾಡುವ ಪೂಜೆ ಮಾತ್ರ ಯಜ್ಞವಲ್ಲ. ನಮ್ಮ ಪ್ರತಿಯೊಂದು ಕರ್ಮವ ಭಗವದ್ಪ್ರಜ್ಞೆಂದ ಮಾಡಿಯಪ್ಪಗ ಅದು ಯಜ್ಞ ಆವುತ್ತು. ಇಲ್ಲಿ ನಾವು ಬಿಡೇಕ್ಕಾದ್ದು ಕರ್ಮವ ಅಲ್ಲ . ಬದಲು, ನಾವು ಕರ್ಮದ ಬಗ್ಗೆ ಇಪ್ಪ ನಮ್ಮ ತಪ್ಪು ಭಾವನೆಯ. ಕರ್ಮ ಹೇಳಿರೆ – ‘ಕರ+ಮ’, ಎಂದರೆ ಭಗವಂತನ ರಾಜ್ಯದ ಪ್ರಜೆಗೊ ಆದ ನಾವು ಅವಂಗೆ ಸಲ್ಲುಸುವ ‘ಕರ’ ಅಥವಾ ಕಂದಾಯವೇ – ‘ಕರ್ಮ’. ಭಗವಂತ ಎಂದೂ ಪೈಸೆಯ ಕಂದಾಯ ಪಡೆತ್ತನಿಲ್ಲೆ. ಅವನ ಕರ ಸಂದಾಯವ ನಾವು ನಮ್ಮ ಸಮಾಜ ಕ್ರಿಯೆಲಿ ತೊಡಗಿಸಿಗೊಂಡು ಸಲ್ಲುಸೆಕ್ಕು. ಈ ಭಾವನೆ ಬಂದಪ್ಪಗ ಕರ್ಮ ಬಂಧಕವಾಗದ್ದೇ ಮೋಕ್ಷ ಮಾರ್ಗ ಆವುತ್ತು.

ಇಲ್ಲಿ ಕೃಷ್ಣ° ಅರ್ಜುನನ ಕೌಂತೇಯ° ಹೇದು ದೆನಿಗೊಂಡಿದ°.,  ಬನ್ನಂಜೆ ಹೇಳ್ತವು – ಇದಕ್ಕೂ ಒಂದು ಕಾರಣ ಇಕ್ಕು. ಕುಂತಿ ಅಷ್ಟು ದೊಡ್ಡ ಮನೆತನಲ್ಲಿ ಹುಟ್ಟಿ ಬೆಳದರೂ ಕೂಡ, ಆಕೆ, ಎಂದೂ ಭೋಗದ ಆಸಗೆ ಬಲಿಬಿದ್ದೋಳಲ್ಲ. ತನ್ನ ಯೌವನಲ್ಲಿ ಕಾಡಿಲ್ಲಿ ಕಳೆದ ಆಕೆ, ತನ್ನ ಮಕ್ಕೊ ಧೈರ್ಯಗೆಟ್ಟಪ್ಪಗ ದೈರ್ಯ ತುಂಬಿದ ಧೀರ ಮಹಿಳೆ. ಆಕೆ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಆದರೆ, ಆಕೆ ಕೃಷ್ಣನತ್ರೆ ಎನಕ್ಗೆ ಕಷ್ಟವನ್ನೇ ಕೊಡು. ಎಂತಕೇದರೆ, ಅಂಬಗ ಎಂಗೊಗೆ ಸದಾ ನಿನ್ನೊಟ್ಟಿಂಗೆ ಇಪ್ಪ ಭಾಗ್ಯ ಇರ್ತು. ಇಂಥ ಧೀರ ಮಹಿಳೆಯ ಮಗನಾದ ನಿನಗೆ ಕರ್ಮ ಯೋಗದ ಬಗ್ಗೆ ತಿಳುದಿರೆಕು ಹೇಳಿ ಕೃಷ್ಣ° ಅರ್ಜುನನ ಎಚ್ಚರುಸುತ್ತ°.

ಶ್ಲೋಕ

ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರೋವಾಚ ಪ್ರಜಾಪತಿಃ ।
ಅನೇನ ಪ್ರಸವಿಷ್ಯಧ್ವಮ್ ಏಷವೋsಸ್ತ್ವಿಷ್ಟಕಾಮಧುಕ್ ॥೧೦॥

ಪದವಿಭಾಗ

ಸಹ-ಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರಾ ಉವಾಚ ಪ್ರಜಾಪತಿಃ । ಅನೇನ ಪ್ರಸವಿಷ್ಯಧ್ವಮ್ ಏಷಃ ವಃ ಅಸ್ತು ಇಷ್ಟ-ಕಾಮಧುಕ್  ॥

ಅನ್ವಯ

ಪುರಾ ಪ್ರಜಾಪತಿಃ ಸಹ-ಯಜ್ಞಾಃ ಪ್ರಜಾಃ ಸೃಷ್ಟ್ವಾ । ಅನೇನ ಯೂಯಂ ಪ್ರಸವಿಧ್ವಮ್ , ಏಷಃ ವಃ ಇಷ್ಟ-ಕಾಮಧುಕ್ ಅಸ್ತು ಇತಿ ಉವಾಚ ॥

ಪ್ರತಿಪದಾರ್ಥ

ಪುರಾ – ಹಿಂದೆ (ಪ್ರಾಚೀನ ಕಾಲಲ್ಲಿ), ಪ್ರಜಾಪತಿಃ – ಜೀವಿಗಳ ಒಡೆಯ°, ಸಹ-ಯಜ್ಞಾಃ – ಯಜ್ಞಂಗಳ ಜೊತೆಗೂಡಿ, ಪ್ರಜಾಃ – ಪ್ರಜಾಸಂತತಿಂಗಳ, ಸೃಷ್ಟ್ವಾ – ಸೃಷ್ಟಿಸಿ, ಅನೇನ – ಇದರಿಂದ, ಯೂಯಮ್ – ನಿಂಗೊ, ಪ್ರಸವಿಷ್ಯಧ್ವಂ – ಹೆಚ್ಚು ಹೆಚ್ಚು ಸಮೃದ್ಧರಾಗಿರಿ, ಏಷಃ – ಇದು, ವಃ – ನಿಂಗಳ, ಇಷ್ಟ-ಕಾಮಧುಕ್ – ಅಪೇಕ್ಷಿತವಾದ ಎಲ್ಲ ವಸ್ತುಗಳ ಪ್ರದಾಯಕವು, ಅಸ್ತು – ಆಗಲಿ, ಉವಾಚ – ಹೇದು ಹೇಳಿದ°,

ಅನ್ವಯಾರ್ಥ

ಸೃಷ್ಟಿಯ ಪ್ರಾರಂಭಲ್ಲಿ ಸಕಲ ಜೀವಿಗಳ ಪ್ರಭುವು ಮನುಷ್ಯರ ಮತ್ತು ದೇವತೆಗಳ ಪೀಳಿಗೆಗಳ ವಿಷ್ಣುವಿಂಗಾಗಿ ಯಜ್ಞಗಳೊಂದಿಂಗೆ ಕಳುಹಿಸಿಕೊಟ್ಟ°. ಅವಕ್ಕೆ, “ಈ ಯಜ್ಞಂದ ಸುಖವಾಗಿರಿ, ಇದರ ನಡೆಶಿರೆ ನಿಂಗೊಗೆ ಇಷ್ಟಕಾಮಂಗಳೆಲ್ಲ ಸಿದ್ಧಿಸುತ್ತು ಮತ್ತು ಮುಕ್ತಿಸಾಧನೆಯು ಕೈಗೂಡುತ್ತು” ಹೇದು ಹೇದ°.

ತಾತ್ಪರ್ಯ / ವಿವರಣೆ

ಸಕಲ ಜೀವಿಗಳ ಪ್ರಭುವು (ಮಹಾವಿಷ್ಣು) ಇಹಲೋಕವ ಸೃಷ್ಟಿಮಾಡಿದ್ದದು ಭಗವದ್ಧಾಮಕ್ಕೆ ಹಿಂತುರುಗಲೆ ಬದ್ಧಜೀವಿಗೊಕ್ಕೆ ಒಂದು ಅವಕಾಶ. ಐಹಿಕ ಸೃಷ್ಟಿಯಲ್ಲಿನ ಎಲ್ಲ ಜೀವಿಗೊ ಪ್ರಕೃತಿಗೆ ಬದ್ಧರು. ಅವ್ವು ದೇವೋತ್ತಮ ಪರಮ ಪುರುಷನಾದ ಕೃಷ್ಣ ಅಥವಾ ವಿಷ್ಣುವಿನೊಡನೆ ತಮ್ಮ ಸಂಬಂಧವ ಮರದು ಬಿಡುತ್ತವು. ವೇದತತ್ವಂಗೊ ಈ ಸನಾತನ ಬಾಂಧವ್ಯವ ತಿಳ್ಕೊಂಬಲೆ ಸಹಾಯ ಮಾಡುತ್ತು. ಭಗವಂತನ ತಿಳಿವದೇ ವೇದದ ಗುರಿ. ಪತಿಂ ವಿಶ್ವಸ್ಯಾತ್ಮೇಶ್ವರಮ್’ ಹೇಳಿ ವೇದಲ್ಲಿ ಹೇಳಿದ ಪ್ರಕಾರ ಸಕಲ ಜೀವಿಗಳ ಪ್ರಭುವು (ಪತಿಯು/ಒಡೆಯ)ದೇವೋತ್ತಮ ಪರಮ ಪುರುಷನಾದ ಶ್ರೀ ಮಹಾವಿಷ್ಣು.

ಪ್ರಜಾಪತಿಯು ಶ್ರೀವಿಷ್ಣು; ಅವ° ಎಲ್ಲ ಜೀವಿಗಳ, ಎಲ್ಲ ಲೋಕಂಗಳ, ಎಲ್ಲ ಚೆಲುವುಗಳ ಪತಿ, ಎಲ್ಲರ ರಕ್ಷಕ°. ಭಗವಂತ° ಈ ಐಹಿಕ ಜಗತ್ತಿನ ಒಂದು ಉದ್ಧೇಶಂದ ಸೃಷ್ಟಿಸಿದ°. ಬದ್ಧಜೀವಿಗೊ ವಿಷ್ಣುವಿನ ಸಂತೃಪ್ತಿಗಾಗಿ ಯಜ್ಞವ ಮಾಡುವದು ಹೇಂಗೆ ಹೇಳಿ ಕಲಿಯೆಕ್ಕು. ಇದರಿಂದ ಅವ್ವು ಐಹಿಕ ಜಗತ್ತಿಲ್ಲಿಪ್ಪಗ ನಿರಾತಂಕವಾಗಿ ನೆಮ್ಮದಿಯಾಗಿ ಬಾಳಿ ಅನಂತರ ಈ ಐಹಿಕ ಶರೀರದ ವಾಸವ ಮುಗುಶಿ ದೇವರ ರಾಜ್ಯವ ಸೇರೆಕು ಹೇಳ್ವದು ಈ ಉದ್ದೇಶ. ಬದ್ಧ ಆತ್ಮಕ್ಕೆ ಇದು ಸಮಗ್ರಕಾರ್ಯಕ್ರಮ. ಯಜ್ಞವ ಮಾಡುವುದರಿಂದ ಬದ್ಧ ಆತ್ಮವು ಕ್ರಮೇಣ ಕೃಷ್ಣಪ್ರಜ್ಞೆಯ ಪಡೆತ್ತು, ಎಲ್ಲ ರೀತಿಗಳಲ್ಲಿ ದೈವಶ್ರದ್ಧೆಯ ಪಡೆತ್ತು. ವೇದಶಾಸ್ತ್ರಂಗೊ ಕಲಿಯುಗಲ್ಲಿ ಸಂಕೀರ್ತನ ಯಜ್ಞವ ನಡೆಸೆಕು ಹೇದುಹೇಳುತ್ತು. ಈ ಯುಗದ ಎಲ್ಲ ಮನುಷ್ಯರ ಉದ್ಧಾರಕ್ಕಾಗಿ ಈ ಆಧ್ಯಾತ್ಮಿಕ ವ್ಯವಸ್ಥೆ ಹಿಂದಾಣ ಕಾಲಲ್ಲಿ ಪ್ರಾರಂಭಿಸಿದ್ದು. ಸಂಕೀರ್ತನ ಯಜ್ಞವು ಎಲ್ಲಾ ಉದ್ಧೇಶಸಾಧನೆಗೊಕ್ಕೂ ಮಹತ್ವಪೂರ್ಣವೂ, ಸುಲಭವೂ ಭವ್ಯವೂ ಅಪ್ಪು.

ಬನ್ನಂಜೆ ವ್ಯಾಖ್ಯಾನಿಸುತ್ತವು – ಹಿಂದೆ ಚತುರ್ಮುಖ ಪ್ರಜಾಪತಿಯು ಚಿಂತನಶೀಲ ಮಾನವರ ಸೃಷ್ಠಿ ಮಾಡಿ, ಅವಕ್ಕಾಗಿ, ಅವ್ವು ಆಚರುಸೆಕ್ಕಾದ ಯಜ್ಞವ ಸೃಷ್ಠಿ ಮಾಡಿದ ಮತ್ತು ಈ ಪೂಜಾ ವಿಧಾನಂದ ನಿಂಗೊ ಬೇಕಾದ್ದರ ಪಡೆಯಿರಿ ಹೇಳಿ ಹೇಳಿದ. ಇದು ನಿಂಗು ಬಯಸಿದ ಅಭೀಷ್ಟವ ಕೊಡುವ ಕಾಮದೇನು. ಈ ಮದಲೇ ಹೇಳಿದಾಂಗೆ ಯಜ್ಞ ಹೇಳಿರೆ ದೇವತೆಗಳ ಉಪಾಸನೆ ಮಾಡುವ ವಿಧಾನ . ದಾನ ಮತ್ತು ಸಂಗತೀಕರಣ ಕೂಡ ಯಜ್ಞ. ದಾನ ಹೇಳುವುದಕ್ಕೆ ವಿಶೇಷ ಅರ್ಥ ಇದ್ದು. ತನ್ನಲ್ಲಿ ಬೇಕಾದಷ್ಟು ಇದ್ದು, ತನಗೆ ಬೇಡವಾದ್ದರ ಕೊಡುತ್ತದು ದಾನವಲ್ಲ. ತನ್ನಲ್ಲಿ ಎರಡು ಹೊತ್ತಿನ ಊಟ ಇದ್ದು, ಇನ್ನೊಬ್ಬನಲ್ಲಿ ಒಂದು ಹೊತ್ತಿನ ಊಟ ಕೂಡ ಇಲ್ಲದ್ದಿಪ್ಪಗ, ಅವಂಗೆ ತನ್ನಲ್ಲಿಪ್ಪದರ ಭಾಗವ ಕೊಟ್ಟು ಹಂಚಿ ಉಂಬದೇ ನಿಜವಾದ ದಾನ. ಇನ್ನೊಬ್ಬನ ಕಷ್ಟಲ್ಲಿ ನಿಜಮನಸ್ಸಿಂದ ಭಾಗಿಯಪ್ಪದೇ ನಿಜವಾದ ದಾನ. ಇನ್ನು ಸಂಗತೀಕರಣ ಹೇದರೆ ಜ್ಞಾನಾರ್ಜನೆಗಾಗಿ ಒಂದು ಕಡೆ ಸೇರುವದು, ಪ್ರವಚನ ಮತ್ತು ಅರ್ಥಮಾಡಿಗೊಂಬದು.

ಮುಂದೆ ಎಂತಾತು ….. ಬಪ್ಪವಾರ ನೋಡುವೋ°

……. ಮುಂದುವರಿತ್ತು.

ಕೆಮಿಲಿ ಕೇಳ್ಳೆ –
SRIMADBHAGAVADGEETHA – CHAPTER 03 – SHLOKAS 1 -10 by CHENNAI BHAAVA

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download : www.addkiosk.in ; www.giri.in

12 thoughts on “ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 1-10

  1. ಓದಿದಷ್ಟು ಮತ್ತೆ ಮತ್ತೆ ಓದುಸುವ ಈ ಗೀತಾನುವಾದದ ಮೂರನೆಯ ಅಧ್ಯಾಯದ ಈ ಶ್ಲೋಕ೦ಗೊ ಲೌಕಿಕಕ್ಕೆ ಅ೦ಟದ್ದೆ ದೇವರ ಸಮರ್ಪಣೆಯಾಗಿ ತನ್ನ ಕರ್ಮವ ಕೈಗೊಳ್ಳೆಕ್ಕು ಹೇಳುವ ಭಗವಾನ್ ಸ೦ದೇಶದ ಚೆ೦ದದ ವಿವರ ಕೊಟ್ಟತ್ತು.
    “ಕಾರ್ಯಮಾಡುವದರಿಂದಲೇ ಪ್ರತಿಕ್ರಿಯೆಗಳಿಂದ ಬಿಡುಗಡೆ ಹೊಂದಲೆಡಿಯ. ವೈರಾಗ್ಯ ಮಾತ್ರದಿಂದಲೇ ಪರಿಪೂರ್ಣತೆಯ ಸಾಧುಸಲೂ ಎಡಿಯ.” ಈ ಮಾತು ಚಿರನೂತನ.

  2. ಏನೂ ಮಾಡದ್ದೇ ಇಪ್ಪಲೆ ಗೊಂತಿಲ್ಲೆ,
    ಒಂದೋ ಕೆಲಸ ಮಾಡೆಕು – ಇಲ್ಲದ್ದರೆ ಕೆಲಸ ಮಾಡದ್ದೇ ಕೂಪ ಕೆಲಸ ಮಾಡೆಕು 😉
    ಹಾಂಗಾಗಿ, ಕರ್ಮತ್ಯಾಗ ಈ ದೇಹಲ್ಲಿಪ್ಪಗ ಸಾಧ್ಯವೇ ಇಲ್ಲೆ.
    ಅನ್ನಮಯ-ಪ್ರಾಣಮಯ ಕೋಶಂಗೊ ಅಕರ್ಮಕ್ಕೆ ಅವಕಾಶ ಕೊಡ್ತವಿಲ್ಲೆ.
    ಹಾಂಗಾಗಿ ಮಾಡುವ ಕರ್ಮವ ಯಜ್ನ ಹೇಳಿ ಗ್ರೇಶಿಯೊಂಡು, ಆಶೆ ಬಿಟ್ಟು ಮಾಡು ಹೇಳಿ ಕೃಷ್ಣ ಹೇಳಿದ್ದು ಸರಿಯೇ ಇದ್ದು 🙂

    ವಿವರಣೆ ಚೆಂದ ಬೈಂದು ಭಾವಾ 🙂
    ಸರೀ ಅರ್ಥ ಆಯೆಕಾರೆ ಇನ್ನೂ ೨-೩ ಸರ್ತಿ ಓದೆಕು 🙂

  3. “ಕರ್ಮಯೋಗ” – ಸುರುವಾದ್ದು ಒಳ್ಳೆದಾಯ್ದು. ಒಟ್ಟಿಂಗೆ ಎದುರ್ಕಳ ಮಾವನ ಟಿಪ್ಪಣಿಯೂ ಯೇವತ್ರಾಣ ಹಾಂಗೆ ಲಾಯಿಕಿದ್ದು.
    ಹೀಂಗೆ ಮುಂದುವರಿಯಲಿ, ಭಾವ.

  4. “ನಿಷ್ಕಾಮ ಕರ್ಮ” — ” ಸಾತ್ವಿಕ ” ಪ್ರವೃತ್ತಿ | “ಕಾಮ್ಯ ಕರ್ಮ” — ಅದು ಸತ್ಕರ್ಮ ವಾದಲ್ಲಿ ” ರಾಜಸ ” — ದುಷ್ಕರ್ಮ ವಾದಲ್ಲಿ ” ತಾಮಸ ” – ಅಥವಾ ತಾಮಸ ಭರಿತ ರಾಜಸ |
    ಇನ್ನು ಅದರ ಪರಿಣಾಮ ? ” ಸತ್ವಾತ್ ಸಂಜಾಯತೇ ಜ್ಞಾನಂ — ರಜಸೋ ಲೋಭ ಏವ ಚ | ಪ್ರಮಾದಮೊಹೌ ತಮಸೋ ಭಾವತೋ ಅಜ್ಞಾನಮೇವಚ ||ಭ.ಗೀ. ೧೪-೧೭ || — ಅರ್ಥ ಸ್ಪಷ್ಟ | — ಸಾತ್ವಿಕ ಪ್ರವೃತ್ತಿ — ” ಜ್ಞಾನ ” ವ ಹುಟ್ಟುಸಿ ಕೊಡುತ್ತು — ಜ್ಞಾನ ದ ಮಹತ್ವ — ” ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ” = ಜ್ಞಾನ ಕ್ಕೆ ಸಮವಾದ “ಪವಿತ್ರ ತತ್ವ” ಈ ಜಗತ್ತಿಲಿ ಇನ್ನೊಂದಿಲ್ಲೇ | ಭ.ಗೀ – ೪-೩೮ |

  5. ಯಜ್ಞ ||– ೧. ಆಡಕ್ಕೆ ಗಿಡಕ್ಕೆ ಗೊಬ್ಬರ ಹಾಕುವಾಗ ನೀರು ಹಾಕುವಾಗ — ಇದು ಹೆಚ್ಚು ಫಸಲು ಕೊಡೆಕ್ಕು ಎಂಬ ಭಾವ ಇದ್ದರೆ — ಅದು “ಯಜ್ಞ ” ಅಲ್ಲ — ಒಂದು ಸಾಮಾನ್ಯ – “ಕಾಮ್ಯ ಕರ್ಮ” || ೨. ಆ ಗಿಡಂಗಳ ಮೇಲೆ ಪ್ರೀತಿ ಮಡುಗಿ “ಅಮ್ಮ ಮಗುವಿನ ಸಾಂಕುವ” ಭಾವಲ್ಲಿ ಸಾಂಕಿದರೆ — ಮತ್ತೂ ಅದಲ್ಲಿ ಮಧ್ಯ ದ ಒಂದೊಂದು ಸಸಿಗೋ ಫಲ ಕೊಡುವ ಸಮಯಲ್ಲಿ ಫಲ ಕೊಡದಿದ್ದರೆ ಅಥವಾ ಕಮ್ಮಿ ಕೊಟ್ಟರೆ ಅದರ ಮೇಲೆ ಕೊಪ ತಾಳದ್ದೆ — ಎಳ್ಳಷ್ಟು ಬೇಧ ಮಾಡದ್ದೆ ಅದಕ್ಕೂ ನೀರು ಗೊಬ್ಬರ ಹಾಕಿ ಬೆಳೆಸಿ ದರೆ — ಅದೊಂದು “ಯಜ್ಞ ” — ಮತ್ತು ಆ ಕರ್ಮ ವೇ “ನಿಷ್ಕಾಮ ಕರ್ಮ ” ಅವಾಗ ಅಡಕೆ ಯ ರೂಪಲ್ಲಿ ಬಪ್ಪ ಫಲ “ಯಜ್ಞ ಶಿಷ್ಟಾಮೃತ” ಪ್ರಸಾದ — ಈ ರೀತಿ ಯ ಜೀವನ ವೂ “ಮನಃ ಶಾಂತಿ” ಯ ಒದಗುಸುತ್ತು ||

    1. ಸುರುವಾಣ ಭಾಗಲ್ಲಿ , ಪೂಜಾ – ಯಜ್ಞ ದ ಸಂಕಲ್ಪ ಮಹತ್ವ, ಸಮರ್ಪಣಾ ಭಾವ, ಪ್ರಾಣಾಪಾನ ಸಮಾಯುಕ್ತ.., ಯಜ್ಞ ಶಿಷ್ಟ ಪ್ರಸಾದ, ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು ವಿಷಯಂಗಳ ವಿವರಣೆ ಲಾಯಕ ಅರ್ಥ ಅಪ್ಪಂತೆ ಆಯ್ದು.
      ಎರಡನೇ ಭಾಗಲ್ಲಿ – ಕಾಮ್ಯಕರ್ಮ, ಅದೊಂದು ಯಜ್ಞ ಹೇಳ್ವ ತತ್ವವ ಲಾಯಕ ವಿವರಿಸಿದ್ದಿ ಹೇಳಿ ಧನ್ಯತಾಪೂರ್ವಕ -‘ಚೆನ್ನೈವಾಣಿ’

  6. ಇಲ್ಲಿ ಈ ಕರ್ಮ ಭೂಮಿ ಲಿ ಇಪ್ಪವರಿಂಗೆ ಹೇಳುವ ಮಾತು — ಮೇಲೆ ಹೇಳಿದ ಶ್ಲೋಕ — ಯಜ್ಞಾರ್ಥಾತ್ ಕರ್ಮಣೋನ್ಯತ್ರ—————— || ೩-೯ || ಇಲ್ಲಿ ತಿಳಿಯೆಕ್ಕಪ್ಪ ವಿಷಯ — ಈ ಲೋಕಲ್ಲಿ ಎಲ್ಲಾ ಕರ್ಮಂಗಳು ಮನುಷ್ಯನ ಬಂದನಕ್ಕೆ ಒಳಪಡಿಸುತ್ತಿಲ್ಲೆ | ಯಜ್ಞ ರೂಪಲ್ಲಿ ಮಾಡಿದ ಕರ್ಮ ಬಂದನ ಅಲ್ಲ | ಮಾತ್ರ ವಲ್ಲ — “ಯಜ್ಞ ಶಿಷ್ಟಾಮೃತ ಭುಜೋ ಯಾಂತಿ ಬ್ರಹ್ಮ ಸನಾತನಂ ” ——– || ಭ.ಗೀ. ೪-೩೧ || ಮಾಡುವ ಕರ್ಮಂಗಳ ಯಜ್ಞ ರೂಪಲ್ಲಿ ಮಾಡಿ — ಬಂದ ಫಲವ ಪ್ರಸಾದ ರುಪಲ್ಲಿ ಸ್ವೀಕರಿಸಿದರೆ ಅದು ಮನುಷ್ಯನ “ಮೋಕ್ಷ ಕ್ಕೆ” ದಾರಿ ಮಾಡಿ ಕೊದುತ್ತು — ಹೇಳಿ |
    ಅಮ್ಬಗ ನಾವು ಮಾಡುವ ಎಷ್ಟೋ ನಿತ್ಯ ಕರ್ಮಂಗಳ ಯಜ್ಞ ರೂಪಕ್ಕೆ ಪರಿವರ್ತಿಸುಲೇ ಎಡಿಗು | ೧. ಪೂಜೆ — ಇಲ್ಲಿ ಸಂಕಲ್ಪಲ್ಲಿ — ಮಮ ಸಕುಟುಂಬ ಸ್ಯ ಎಂಬಲ್ಲಿ — ಹೆಚ್ಚಾಗಿ ಎಲ್ಲರು ಗ್ರಹಿಸಿಗೊಮ್ಬದು “ಅವರವರ ಹೆಂಡತಿ ಮಕ್ಕೋ” ಮತ್ತು ಹೆಚ್ಚಾದರೆ ಉಳಿದ ಮನೆಯವರು ಮಾತ್ರ — ಇಲ್ಲಿ ಇಡೀ “ವಿಶ್ವ ವೇ ” ಎನ್ನ ಕುಟುಂಬ ಎಂಬ ಸಂಕಲ್ಪಲ್ಲಿ ಪ್ರಾಮಾಣಿಕ ವಾಗಿ ಮಾಡುವ ಪೂಜೆ — ಯಜ್ಞ || ಪುನಃ — ಪೂಜೆ ಮುಗುದ ಮೇಲೆ ಅಥವಾ ೨. ಪೂಜೆ ಮಾಡದ್ದೆ ಇಪ್ಪೋರು — ಸಮರ್ಪಣಾ ಭಾವಲ್ಲಿ ಉದಿಯಪ್ಪ ಗ ಎದ್ದು ದೇವರಲ್ಲಿ ಒಂದು ಪ್ರಾರ್ಥನೆ — ಹೇ ಪರಮಾತ್ಮನೇ (ಅವರವರ ಇಷ್ಟ ದೈವ ವ ಮನಸಿಲಿ ಗ್ರಹಿಸಿ) — ಎನ್ನ ಮನಸಿಲಿ ನೆಲಸಿ ಎನ್ನ ಮನಸಿನ ಮೂಲಕ “ಸದ್ಭಾವನೆ” ಗಳನ್ನೇ ಮೂಡಿಸು — ಎನ್ನ ” ಹೃದಯ ಮಂದಿರಲ್ಲಿ ” ನೆಲಸಿ ಎನ್ನ ಇಂದ್ರಿಯಂಗಳ ಮೂಲಕ “ಸತ್ಕಾರ್ಯ ಗಳನ್ನೇ” ಮಾಡಿಸು || -“ಇಂದ್ರಿಯಾಣಾಂ” ಮನಶ್ಚಾಸ್ಮಿ ಭೂತಾನಾಂ ಅಸ್ಮಿ ಚೇತನಾ — ||ಭ.ಗೀ ೧-೨೨ || ಶ್ರೀ ಕೃಷ್ಣ ಪರಮಾತ್ಮ ನು ಹೇಳುತ್ತಾನೆ — ಇಂದ್ರಿಯಗಳಲ್ಲಿ “ಮನಸು” ಹಾಗು ಜೀವಿಗಳಲ್ಲಿ ಚೈತನ್ಯವು ಸ್ವಯಂ ಆನೇ || — ಇದರ ನಾವು ಸಂಕಲ್ಪ ಪೂರ್ವಕ ಗ್ರಹಿಸಿಕೊಂಡು — ಮೇಲಾಣ ಪ್ರಾರ್ಥನೆ ಯ ಮಾಡಿದಲ್ಲಿ — ಅದು ನಮ್ಮನ್ನೇ ನಾವು ಯಜ್ಞ ಕಾರ್ಯಕ್ಕೆ ಸಮರ್ಪಿಸಿದ ಹಾಂಗೆ ಆತು || ೩. ಮುಂದೆ — ಉಂಬಾಗ ಕೈನೀರು ತೆಗವದು — ಕಾರಣ — ಅದು ಒಂದು ಯಜ್ಞ ಹೇಳಿ — ಅದಕ್ಕಾಗಿಯೇ ಅಂಗಿ ಹಾಕಿಗೊಂಡು ಉಮ್ಪಲೇ ಆಗ ಹೇಳುದು |- ಪ್ರತಿಯೊಂದು ಪ್ರಾಣಿ ಯ ದೇಹವನ್ನುದೇ ಆ ಪರಮಾತ್ಮ “ವೈಶ್ವಾನರಾಗ್ನಿ” ರೂಪಲ್ಲಿ ಸದಾ ಆಶ್ರಯಿಸಿಗೊಂಡು ಅವು ತಿಂದ ಆಹಾರವ “ಪ್ರಾನಾಪಾನ” ಸಮಾಯುಕ್ತ ನಾಗಿ ಜೀರ್ಣಿಸುತ್ತ – ಇದ್ದ || ಅಹಂ ವೈಶ್ವಾನರೋ ಭೂತ್ವಾ ——–ಪ್ರಾಣಾ ಪಾನ ಸಮಾ ಯುಕ್ತಃ ಪಚಾಮ್ಯನ್ನಂ ಚತುರ್ವಿಧಂ ||ಭ.ಗೀ. ೧೫-೧೪|| ಹಂಗಾಗಿ ನಾವು ತಿಂಬ ಆಹಾರ ಆ ಪರಮಾತ್ಮಂಗೆ ಅರ್ಪಿಸುವ ನೇರ ಹವಿಸ್ಸು || ಈಗಾಣ ಕಾಲಲ್ಲಿ ಎಲ್ಲ ಕಡೆ ಕೈನೀರು ತೆಗವಲೆ ಎಡಿಯದ್ದರೆ — ತಿಂಬದಕ್ಕೆ ಉಂಬದಕ್ಕೆ ಮೊದಲು – ಮನಸಿಲೆ ಒಂದು ಸಣ್ಣ ಪ್ರಾರ್ಥನೆ — ವೈಶ್ವಾನರ ರೂಪಿಯಾಗಿ ಎನ್ನಲ್ಲಿ ನೆಲಸಿದ ಪರಮಾತ್ಮನೇ “ನಿನಗೆ ಆನು ಈ ಹವಿಸ್ಸಿನ ” ಅರ್ಪಿಸುತ್ತಿದ್ದೇ — ಇದರ ಸ್ವೀಕರಿಸಿ ಎನ್ನ ದೇಹವ “ಲೋಕ ಸಂಗ್ರಹ ” ಕಾರ್ಯಕ್ಕೆ ಉಪಯೋಗ ಅಪ್ಪ ಹಾಂಗೆ ಬೆಳೆಸು — ಈಗ ಈ ಊಟ ಒಂದು “ಯಜ್ಞ ಶಿಷ್ಟ ಪ್ರಸಾದ ” || ಈ ಕಾರ್ಯ ವ ಜಾತಿ ಲಿಂಗ ವಯೋಮಾನ ಬೇಧ ಇಲ್ಲದ್ದೆ ಯಾರು ಮಾಡುಲಕ್ಕು || ೪. ಕೆಲಸಕ್ಕೆ ಹೊಪಾಗ — ಸಂಕಲ್ಪ — ಪರಮಾತ್ಮಾ ಈ ವಿಶ್ವ ದ ಎಲ್ಲಾ ಕೆಲಸಂಗಳು ನಿನ್ನದೇ – ಎನ್ನ ನೀನು “ಕರಣ” (ಉಪಕರಣ) ವಾಗಿ ಸ್ವೀಕರಿಸು — ಹಾಂಗೆ ಬಪ್ಪ ಫಲ – ಸಂಬಳ , ಲಾಭ — ನಷ್ಟವೂ ಅವ ಕೊಟ್ಟ ಪ್ರಸಾದ – ರೂಪಲ್ಲಿ ಸ್ವೀಕಾರ — ಇಲ್ಲಿ ಕೆಲಸ ಯಜ್ಞ — ಸಿಗುವ ಪ್ರಸಾದ (ಸಂಬಳ) “ಯಜ್ಞ ಶಿಷ್ಥಾಮೃತ “|| — ಇರುಳು ಮನುಗುವಾಗ — ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು | — ಈಗ ಇಡೀ ದಿನ ಮಾಡಿದ್ದು ಯಜ್ಞ ವೇ ||

  7. ಚೆನೈ, ಭಾವ ನಮೋ ನಮಃ | ಕೆ. ಜಿ. ಭಾವ ಬರದ್ದು ನೋಡಿಯೇ ಎನಗುದೆ “ನಮ್ಮ ಹವ್ಯಕ ಭಾಷೆ ” ಇಷ್ಟು ಸಮೃದ್ಧ ಹೇಳಿ ಅರಿವಾತು — ಶುಭಾಷಯ | ಹಾಂಗೆ ಗೋಪಾಲಕೃಷ್ಣ ಭಾವ ಬರದ “ನಿತ್ಯ ನೂತನ ನಿತ್ಯ ಸತ್ಯ” ಹೇಳ್ತದು ಸರ್ವ ಸಮ್ಮತ ||

  8. ಅರ್ಜುನನ ಹಾಂಗೆ ಕೇಳಿತ್ತುಕಂಡರೆ ಮಾತ್ರ ಇಂತಾ ಉತ್ತರಂಗೊ ಸಿಕ್ಕುಗು!ಅವ ಎಷ್ಟು ಸರಿಯಾಗಿ ಕೇಳಿದ ನೋಡಿ -ಯಾವುದು ಸರಿದಾರಿ ಹೇಳಿ ಸ್ಪಷ್ಟವಾಗಿ ಹೇಳು ಹೇಳಿ.
    ಅದಕ್ಕೆ ಕೃಷ್ಣನ ಉತ್ತರ ಎಷ್ಟು ಸ್ಪಷ್ಟವಾಗಿ ಇದ್ದು ಅಲ್ಲದೋ?ಕರ್ಮತ್ಯಾಗಂದ ಕರ್ಮಯೋಗ ಉತ್ತಮ ಹೇಳಿ !
    ಗೀತೆಲಿ ಎನಗೆ ತುಂಬಾ ಕುಷಿಯಾದ ಅಧ್ಯಾಯ ಇದು.ಈ ವಿಚಾರಂಗೊ ನಿತ್ಯನೂತನ ,ನಿತ್ಯಸತ್ಯ.

    1. ಗೋಪಾಲಣ್ಣನ ವಾರ ವಾರದ ಒಪ್ಪ ಸದಾ ಎನ್ನ ಜಾಗೃತಗೊಳುಸುತ್ತಲೇ ಇರುತ್ತು ಮತ್ತು ಇನ್ನೂ ಜವಾಬ್ದಾರಿಯುತವಾಗಿ ಬರೆ ಹೇಳಿ ಪ್ರಚೋದುಸುತ್ತು. ತುಂಬಾ ಧನ್ಯವಾದಂಗೊ.

  9. ನಮ್ಮ ಭಾಷೆಲಿ ಶಬ್ದಂಗೊ ಕಮ್ಮಿ ಹೇಳಿ ತಿಳ್ಕೊಂಡಿತ್ತಿದ್ದೆ.ನಿಂಗೊ ಬರದ್ದರ ನೋಡಿರೆ/ಓದಿರೆ ಅದು ಎನ್ನ ತಪ್ಪು ಕಲ್ಪನೆಯಾಗಿತ್ತು ಹೇಳಿ ಗೊಂತಾತು.ಲಾಯಕಾಯಿದು.

    1. ಬಹು ಆಳವೂ, ಗಾಢವೂ, ವಿಶಾಲವೂ ಆಗಿಪ್ಪ ನಮ್ಮ ಸನಾತನ ಸಂಸ್ಕೃತಿಯ ಪ್ರತೀಕ ಮತ್ತು ದೇಶೀಯ ಗ್ರಂಥ ಶ್ರೀಮದ್ಭಗವದ್ಗೀತೆ ಅದೆಷ್ಟೋ ವಿದ್ವಾಂಸರು ವಿಸ್ತೃತವಾಗಿ ಈಗಾಗಲೇ ಬರದು ಪುಸ್ತಕರೂಪಲ್ಲಿಯೂ ಲಭ್ಯ ಇಪ್ಪಗ ಈ ಸರಳ ಶೈಲಿಯ ಎನ್ನ ಪ್ರಯತ್ನ ಇಲ್ಲೆ ಅದೆಷ್ತು ಜೆನಕ್ಕೆ ಹಿತ ಆವ್ತೋ, ಕೇವಲ ಬೆರಳೆಣಿಕೆ ಬೈಲ ಬಂಧುಗೊ ಮಾತ್ರ ಇದರ ನೋಡುವದಾಯ್ಕು ಹೇಳಿ ಗ್ರೇಶಿತ್ತಿದ್ದೆ. ಕೆ.ಜಿ. ಮಾವನ ಒಪ್ಪ ನೋಡಿದ ಮತ್ತೆ ಈ ಮಾತು ಹುಸಿ ಹೇಳಿ ಗೊಂತಾತು. ಕೆ.ಜಿ ಮಾವನ ಒಪ್ಪ ಇನ್ನೂ ಸ್ಪೂರ್ತಿ ಕೊಟ್ಟತ್ತು ಹೇಳಿಗೊಂಡು ಧನ್ಯವಾದ. ಬರವಾಗ ಏನಾರು ತಪ್ಪಿದ್ದಲ್ಲಿ ಆರೇ ಆದರೂ ತಿದ್ದಿ ಕೊಡೆಕು ಹೇಳಿ ವಿಜ್ಞಾಪನೆಯೂ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×