ಶ್ರೀಮದ್ಭಗವದ್ಗೀತಾ – ಅಧ್ಯಾಯ 16 – ಶ್ಲೋಕಂಗೊ 01 – 12

ಹಿಂದಾಣ ಅಧ್ಯಾಯಲ್ಲಿ ಬ್ರಹ್ಮಾಂಡಲ್ಲಿ ಭಗವಂತನ ಅಭಿವ್ಯಕ್ತಿ ಎಂತರ, ಜೀವಾತ್ಮನೊಟ್ಟಿಂಗೆ ಪರಮಾತ್ಮ ಹೇಂಗೆ ಇರ್ತ°, ಆ ಪರಮಾತ್ಮನ ಯಾವರೀತಿಲಿ ತಿಳ್ಕೊಂಡು ಉಪಾಸನೆ ಮಾಡೆಕು, ಎಂಬುದರ ‘ಅನಘ’ನಾಗಿ, ‘ಭಾರತ’ನಾಗಿ ತಿಳ್ಕೊಂಡು ಭಗವಂತನ ಹತ್ರೆ ಸೇರುವ ಮಾರ್ಗವ ಹಿಡಿವಲಕ್ಕು ಹೇಳ್ವ ರಹಸ್ಯಂಗಳ ವಿವರಿಸಿದ್ದ°. ಮುಂದೆ ಇಲ್ಲಿ “ದೇವಾಸುರ ಸಂಪತ್ ವಿಭಾಗ ಯೋಗ” (ದೈವ-ಆಸುರ-ಸಂಪತ್-ವಿಭಾಗ-ಯೋಗ)  ಹೇಳ್ವ ಅಧ್ಯಾಯ ಪ್ರಾರಂಭ ಆವ್ತು. ಹೇದರೆ, ಇಲ್ಲಿ ಭಗವಂತ° ‘ದೈವೀಸ್ವಭಾವ’ ಮತ್ತೆ ‘ಆಸುರೀಸ್ವಭಾವ’ ಇವುಗಳ ಗುಣಲಕ್ಷಣ, ಅದರಿಂದ ಪ್ರಯೋಜನಂಗಳ ಬಗ್ಗೆ ಸವಿಸ್ತಾರವಾಗಿ ಹೇಳುತ್ತ°. ದೈವೀ ಸ್ವಭಾವ ಜ್ಞಾನದ ದಾರಿ, ಆಸುರೀ ಸ್ವಭಾವ ಅಜ್ಞಾನದ ದಾರಿ ಹೇಳ್ವದರ ಇಲ್ಲಿ ವಿವರಿಸಿದ್ದ°.  ಮಾನವ ಸ್ವಭಾವ ಈ ಎರಡೂ ಸ್ವಭಾವಂಗಳ ಮಿಶ್ರಣ. ಈ ಮಿಶ್ರಣಲ್ಲಿ ಪ್ರಮಾಣ ಭೇದ ಮಾಂತ್ರ ಮನುಷ್ಯರಿಂದ ಮನುಷ್ಯರಿಂಗೆ ಇಕ್ಕಷ್ಟೆ. ನಾವು ಏವುದರ ಬೆಳೆಶಿಗೊಳ್ಳೆಕ್ಕಾದ್ದು ಹೇಳ್ವದರ ಪ್ರಜ್ಞಾಪೂರ್ವಕ ಆಯ್ಕೆಮಾಡಿಗೊಂಬದು ಜೀವಿಯ ಸ್ವಾತಂತ್ರ್ಯ. ಇಂತಹ ದೈವೀ-ಆಸುರೀ ಸ್ವಭಾವದ ಬಗ್ಗೆ ಭಗವಂತ° ಅರ್ಜುನನ ಮೂಲಕ ನವಗೆ ಎಂತ ಸಾರಿದ್ದ° ಹೇಳ್ವದರ ಈ ಮುಂದೆ ನೋಡುವೋ° –

ಶ್ರೀಕೃಷ್ಣಪರಮಾತ್ಮನೇ ನಮಃ

ಶ್ರೀಮದ್ಭಗವದ್ಗೀತಾ

ಅಥ ಷೋಡಶೋsಧ್ಯಾಯಃ – ದೈವಾಸುರಸಂಪದ್ವಿಭಾಗಯೋಗಃ  – ಶ್ಲೋಕಾಃ 01 – 10
(
ದೈವ-ಅಸುರ-ಸಂಪತ್-ವಿಭಾಗ-ಯೋಗಃ)

 

ಶ್ಲೋಕ

ಶ್ರೀಭಗವಾನುವಾಚ

ಅಭಯಂ ಸತ್ತ್ವಸಂಶುದ್ಧಿಃ ಜ್ಞಾನಯೋಗವ್ಯವಸ್ಥಿತಿಃ ।
ದಾನಂ ದಮಶ್ಚ ಯಜ್ಞಶ್ಚ ಸ್ವಾಧ್ಯಾಯಸ್ತಪ ಆರ್ಜವಮ್ ॥೦೧॥

ಅಹಿಂಸಾ ಸತ್ಯಮಕ್ರೋಧಃ ತ್ಯಾಗಃ ಶಾಂತಿರಪೈಶುನಮ್ ।
ದಯಾಭೂತೇಷ್ವಲೋಲುಪ್ತ್ವಂ ಮಾರ್ದವಂ ಹ್ರೀರಚಾಪಲಮ್ ॥೦೨॥

ತೇಜಃ ಕ್ಷಮಾ ಧೃತಿಃ ಶೌಚಮ್ ಅದ್ರೋಹೋ ನಾತಿಮಾನಿತಾ ।
ಭವಂತಿ ಸಂಪದಂ ದೈವೀಮ್ ಅಭಿಜಾತಸ್ಯ ಭಾರತ ॥೦೩॥

ಪದವಿಭಾಗ

ಶ್ರೀ ಭಗವಾನ್ ಉವಾಚ

ಅಭಯಮ್ ಸತ್ತ್ವ-ಸಂಶುದ್ಧಿಃ ಜ್ಞಾನ-ಯೋಗ-ವ್ಯವಸ್ಥಿತಿಃ । ದಾನಮ್ ದಮಃ ಚ ಯಜ್ಞಃ ಚ ಸ್ವಾಧ್ಯಾಯಃ ತಪಃ ಆರ್ಜವಮ್ ॥

ಅಹಿಂಸಾ ಸತ್ಯಮ್ ಅಕ್ರೋಧಃ ತ್ಯಾಗಃ ಶಾಂತಿಃ ಅಪೈಶುನಮ್ । ದಯಾ ಭೂತೇಷು ಅಲೋಲುಪ್ತ್ವಮ್ ಮಾರ್ದವಮ್ ಹ್ರೀಃ ಅಚಾಪಲಮ್ ॥

ತೇಜಃ ಕ್ಷಮಾ ಧೃತಿಃ ಶೌಚಮ್ ಅದ್ರೋಹಃ ನ ಅತಿ-ಮಾನಿತಾ । ಭವಂತಿ ಸಂಪದಮ್ ದೈವೀಮ್ ಅಭಿಜಾತಸ್ಯ ಭಾರತ ॥BHAGAVADGEETHA

ಅನ್ವಯ

ಶ್ರೀ ಭಗವಾನ್ ಉವಾಚ

ಅಭಯಮ್, ಸತ್ತ್ವ-ಸಂಶುದ್ಧಿಃ, ಜ್ಞಾನ-ಯೋಗ-ವ್ಯವಸ್ಥಿತಿಃ, ದಾನಮ್, ದಮಃ ಚ ಯಜ್ಞಃ ಚ, ಸ್ವಾಧ್ಯಾಯಃ, ತಪಃ, ಆರ್ಜವಮ್ ,

ಅಹಿಂಸಾ, ಸತ್ಯಮ್, ಅಕ್ರೋಧಃ, ತ್ಯಾಗಃ, ಶಾಂತಿಃ, ಅಪೈಶುನಮ್, ಭೂತೇಷು ದಯಾ, ಅಲೋಲುಪ್ತ್ವಮ್, ಮಾರ್ದವಮ್, ಹ್ರೀಃ, ಅಚಾಪಲಮ್,

ಹೇ ಭಾರತ!, ತೇಜಃ ಕ್ಷಮಾ, ಧೃತಿಃ, ಶೌಚಮ್, ಅದ್ರೋಹಃ, ನ ಅತಿ-ಮಾನಿತಾ (ಇತಿ ಏತಾನಿ ಲಕ್ಷಣಾನಿ) ದೈವೀಮ್ ಸಂಪದಮ್ ಅಭಿಜಾತಸ್ಯ (ಪುರುಷಸ್ಯ) ಭವಂತಿ ।

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ದೇವೋತ್ತಮ ಪರಮ ಪುರುಷ° ಹೇಳಿದ°-

ಅಭಯಮ್ – ನಿರ್ಭೀತಿ, ಸತ್ತ್ವ-ಸಂಶುದ್ಧಿಃ – ತನ್ನ ಅಸ್ತಿತ್ವದ ಶುದ್ಧಿ, ಜ್ಞಾನ-ಯೋಗ-ವ್ಯವಸ್ಥಿತಿಃ – ಜ್ಞಾನಲ್ಲಿ ಸಂಯೋಗವಪ್ಪ ಸನ್ನಿವೇಶ, ದಾನಮ್ – ದಾನ, ದಮಃ – ಮನೋನಿಗ್ರಹ, ಚ – ಕೂಡ, ಯಜ್ಞಃ – ಯಜ್ಞಾಚರಣೆ, ಚ – ಕೂಡ, ಸ್ವಾಧ್ಯಾಯಃ – ವೇದ ಸಾಹಿತ್ಯಾಧ್ಯಯನ, ತಪಃ – ತಪಸ್ಸು, ಆರ್ಜವಮ್ – ಸರಳತೆ,

ಅಹಿಂಸಾ – ಅಹಿಂಸೆ, ಸತ್ಯಮ್ – ಸತ್ಯ, ಅಕ್ರೋಧಃ – ಕೋಪಯಿಲ್ಲದ್ದೆ ಇಪ್ಪದು, ತ್ಯಾಗಃ – ತ್ಯಾಗ, ಶಾಂತಿಃ – ಶಾಂತಿ, ಅಪೈಶುನಮ್ – ತಪ್ಪುಹುಡ್ಕುತ್ತರಲ್ಲಿ ವಿಮುಖತೆ, ಭೂತೇಷು ದಯಾ – ಎಲ್ಲ ಜೀವಿಗಳಲ್ಲಿ ದಯೆ, ಅಲೋಲುಪ್ತ್ವಮ್ – ಅಲೋಭ,  ಮಾರ್ದವಮ್ – ಸಭ್ಯತೆ, ಹ್ರೀಃ – ಸೌಜನ್ಯ/ನಾಚಿಕೆ, ಅಚಾಪಲಮ್ – ದೃಢತೆ,

ಹೇ ಭಾರತ! – ಏ ಭರತವಂಶಜನಾದ ಅರ್ಜುನ!, ತೇಜಃ – ತೇಜಸ್ಸು, ಕ್ಷಮಾ – ಕ್ಷಮೆ, ಧೃತಿಃ – ಸ್ಥೈರ್ಯ, ಶೌಚಮ್ – ಶುಚಿತ್ವ, ಅದ್ರೋಹಃ – ದ್ರೋಹ/ಅಸೂಯೆ ಇಲ್ಲದ್ದಿಪ್ಪದು, ನ ಅತಿ-ಮಾನಿತಾ – ಗೌರವನಿರೀಕ್ಷೆ ಇಲ್ಲದ್ದಿಪ್ಪದು (ಇತಿ ಏತಾನಿ ಲಕ್ಷಣಾನಿ – ಎಂಬೀ ಲಕ್ಷಣಂಗೊ), ದೈವೀಮ್ – ದಿವ್ಯಸ್ವಭಾವದ (ದೈವೀಸ್ವಭಾವದ),  ಸಂಪದಮ್ – ಗುಣಂಗಳ, ಅಭಿಜಾತಸ್ಯ (ಪುರುಷಸ್ಯ) ಭವಂತಿ – ಹೊತ್ತುಗೊಂಡು ಹುಟ್ಟಿದ ಮನುಷ್ಯರದ್ದಾಗಿರುತ್ತು.

ಅನ್ವಯಾರ್ಥ

ದೇವೋತ್ತಮ ಪರಮಪುರುಷನಾದ ಭಗವಂತ° ಹೇಳಿದ°-

ಏ ಭರತವಂಶಜನಿತನಾದ ಅರ್ಜುನ°!, ಅಭಯ, ತನ್ನ ಅಸ್ತಿತ್ವದ ಶುದ್ಧಿ, ದಿವ್ಯಜ್ಞಾನವ ಬೆಳೆಶಿಗೊಂಬದು, ದಾನ, ಆತ್ಮಸಂಯಮ (ಮನೋನಿಗ್ರಹ), ಯಜ್ಞಾಚರಣೆ, ವೇದಾಧ್ಯಯನ, ತಪಸ್ಸು, ಸರಳತೆ, ಅಹಿಂಸೆ, ಸತ್ಯ, ಅಕೋಪ, ತ್ಯಾಗ, ಶಾಂತಿ, ತಪ್ಪುಹುಡ್ಕುವದರಿಂದ ವಿಮುಖನಾಗಿಪ್ಪದು, ಎಲ್ಲ ಜೀವಿಗಳತ್ರೆ ದಯೆ, ದುರಾಶೆಯಿಲ್ಲದ್ದಿಪ್ಪದು, ಮೃದುಸ್ವಭಾವ, ನಮ್ರತೆ, ದೃಢಸಂಕಲ್ಪ, ತೇಜಸ್ಸು, ಕ್ಷಮೆ, ಸ್ಥೈರ್ಯ, ಶುಚಿತ್ವ ಮತ್ತೆ ಅಸೂಯೆ ಪಡದ್ದಿಪ್ಪದು ಹಾಂಗೇ ಗೌರವಕ್ಕಾಗಿ ಆಸೆಪಡದ್ದೆ ಮುಕ್ತನಾಗಿಪ್ಪದು – ಈ ಗುಣಂಗೊ ದೈವೀಸ್ವಭಾವಂದ ಕೂಡಿ ಹುಟ್ಟುವ ಪುರುಷರಲ್ಲಿ (ಮನುಷ್ಯರಲ್ಲಿ) ಇರುತ್ತು.

ತಾತ್ಪರ್ಯ / ವಿವರಣೆ

ಧ್ಯಾತ್ಮ ಸಾಧನೆಲಿ ಇರೇಕಾದ ಇಪ್ಪತ್ತಾರು ಸದ್ಗುಣಂಗಳ ಭಗವಂತ° ಇಲ್ಲಿ ವಿವರಿಸಿದ್ದ°. ಈ ಇಪ್ಪತ್ತಾರು ಗುಣಂಗಳ ತಿಳ್ಕೊಂಡು ಅದರ ಬೆನ್ನುಹಿಡುದು ನಮ್ಮಲ್ಲಿಪ್ಪ ಗುಣಂಗಳ ಗುರುತಿಸಿ ಆ ಸದ್ಗುಣಂಗಳ ನಮ್ಮಲ್ಲಿ ವೃದ್ಢಿಪಡಿಸಿಗೊಳ್ಳೆಕು, ನಮ್ಮಲ್ಲಿ ಇಲ್ಲದ್ದ ಗುಣಂಗಳ  ನಾವು ರೂಢಿಸಿ ಬೆಳೆಶಿಗೊಳ್ಳೆಕು. ಮುಕ್ತಿಮಾರ್ಗದ ಪಥಲಿ ಮುನ್ನೆಡವಲೆ ನಮ್ಮಲ್ಲಿ ದೈವೀಪ್ರಕೃತಿ ಹೇದು ಹೇಳಲ್ಪಡುವ ಸದ್ಗುಣಂಗೊ ನಮ್ಮಲ್ಲಿರೆಕು. ಈ ದಿವ್ಯ ಸ್ವಭಾವಲ್ಲಿ ಸಾಧಕ ಸಾಧೆನೆಯ ಗುರಿಯ ತಲಪುತ್ತ°. ಹೇಳಿರೆ, ಸಾತ್ವಿಕ ಗುಣಂಗಳ ಮೂಲಕವಷ್ಟೇ ಮುಕ್ತಿಮಾರ್ಗ ಸಾಧನೆ ಶ್ರೇಯಸ್ಕರ. ರಾಜಸ, ತಾಮಸ ಗುಣಂಗಳಿಂದ ಮುಕ್ತಿಯ ಸಾಧ್ಯತೆ ಇಲ್ಲೆ, ಅವು ಮತ್ತೆ ತಿರುಗಿ ಈ ಐಹಿಕ ಜಗತ್ತಿಂಗೆ ಮನುಷ್ಯ° ವಾ ಪ್ರಾಣಿವರ್ಗವ ಅಥವಾ ಇನ್ನೂ ಕೆಳಮಟ್ಟದ ಜೀವರೂಪಲ್ಲಿ  ತೆರಳುತ್ತವು ಹೇಳ್ವದರ ಭಗವಂತ° ಈ ಮದಲೇ ಮದಲಾಣ ಅಧ್ಯಾಯಂಗಳಲ್ಲಿ ತಿಳಿಶಿದ್ದ°. ಹಾಂಗಾಗಿ ಭಗವಂತ° ಇಲ್ಲಿ ದೈವೀಪ್ರವೃತ್ತಿಲ್ಲಿ ಅಥವಾ ದಿವ್ಯಗುಣಂಗಳೊಟ್ಟಿಂಗೆ ಹುಟ್ಟಿದವನ ‘ಅಭಿಜಾತಸ್ಯ’ ಹೇಳ್ವ ಶಬ್ದಂದ ಹೇಳಿದ್ದ°. ದೈವೀ ವಾತಾವರಣಲ್ಲಿ ಸಂತಾನವ ಪಡವಲೆ ವೈದಿಕ ಧರ್ಮಗ್ರಂಥಂಗಳಲ್ಲಿ ಹೇಳಲ್ಪಟ್ಟ ಗರ್ಭಾಧಾನ ಸಂಸ್ಕಾರ ಕ್ರಿಯೆ ಮಹತ್ವವಾದ್ದು. ಅರ್ಥಾತ್ ಕೃಷ್ಣಪ್ರಜ್ಞೆಯ ಸಂತಾನವ ಪಡೇಕ್ಕಾದ್ದು ಅತೀ ಮುಖ್ಯ. ಐಹಿಕ ಜೀವನ ಹೇಳ್ತದು ಕೇವಲ ಐಹಿಕ ಭೋಗಕ್ಕೆ ಇಪ್ಪದು ಅಲ್ಲ. ನಾಯಿ ಪುಚ್ಚೆಗಳ ಹಾಂಗೆ ಸಂತಾನಪಡವದು ಅಲ್ಲ. ಅದು ಧರ್ಮ-ಅರ್ಥ-ಕಾಮ-ಮೋಕ್ಷ ಸಿದ್ಧಿಗೆ ಸಾಧನೆ ಮಾಡ್ಳೆ ಇಪ್ಪ ಒಂದು ವ್ಯವಸ್ಥೆ. ಹಾಂಗಾಗಿ ಸಂಸ್ಕಾರ ಹೇಳ್ವದು ಅತೀ ಪ್ರಾಮುಖ್ಯ. ಹೀಂಗೆ ಸುಸಂಸ್ಕೃತನಾಗಿ ಜನಿಸಿದ ಜೀವಿಲಿ ಇರೇಕ್ಕಾದ ಭಗವಂತ° ಹೇಳಿದ ಆ ಇಪ್ಪತ್ತಾರು ಗುಣಂಗಳ ಬಗ್ಗೆ ಇನ್ನೀಗ ಒಂದಿಷ್ಟು ದೃಷ್ಟಿ ಹರುಸುವೊ°.

೧) ಅಭಯಮ್ – ನಿರ್ಭಯತ್ವ (Fearlessness).  ಇದು ಅಧ್ಯಾತ್ಮ ಸಾಧನೆಲಿ ಇರೆಕ್ಕಾದ ಸುರುವಾಣ ಗುಣ. ಅಧ್ಯಾತ್ಮ ಸಾಧನೆಲಿ ಗುರಿಯ ಸಾಧಿಸಿಯೇ ಸಾಧುಸೆಕು ಹೇಳ್ವ ದೃಢ ವಿಶ್ವಾಸ ಮನಸ್ಸಿಲ್ಲಿ ಇರೆಕು. ಅಧ್ಯಾತ್ಮ ಸಾಧನೆ ಹೇಳಿರೆ ಅದೊಂದು ಕಠಿಣ ಅವಿರತ ಪರಿಶ್ರಮ. ಅದು ಐಹಿಕವಾದ ಏವುದೋ ಒಂದು ವಿಷಯವ ಸಾಧುಸಲೆ ಇಪ್ಪ ಕಾರ್ಯ ಅಲ್ಲ. ಅದು ಅಲೌಕಿಕ ಶಾಶ್ವತ ಮುಕ್ತಿಯ ಪಡೆವ ಗುರಿ. ಹಿಡುದ ಮಾರ್ಗಲ್ಲಿ  ಎಂತ ಎದುರಾದರೂ ಅದಕ್ಕೆ ಹೆದರ್ಲಾಗ. ‘ಹಿಡುದ ದಾರಿಯ ಬಿಡೆ, ಏನೇ ಬಂದರೂ ಅದರ ದೇವರು ನೋಡಿಗೊಳ್ತ°, ಅವ° ಒಬ್ಬನೇ ಒಬ್ಬ° ಎಲ್ಲವನ್ನೂ ಸರಿಯಾದ ರೀತಿಲಿ ಕೊಂಡೋಪ ಸಮರ್ಥ°, ಅವನ ಬಿಟ್ಟು ಬೇರೆ ಆರೂ ರಕ್ಷಿಸಲೆ ಸಾಧ್ಯ ಇಲ್ಲೆ ‘ ಹೇಳ್ವ ಅಚಲ ಧೈರ್ಯಂದ ವಿಚಲಿತನಾಗದ್ದೆ ಇಪ್ಪದೇ ‘ಅಭಯಂ’. ಕೆಲವೊಂದು ಸರ್ತಿ ನಮ್ಮ ಸುತ್ತಮುತ್ತ ಇಪ್ಪವು ‘ಹಾಂಗಲ್ಲ, ಹೀಂಗಲ್ಲ, ಹಾಂಗೆ ಮಾಡ್ಳಾಗ, ಹೀಂಗೆ ಮಾಡ್ಳಾಗ, ಅದರಿಂದ ದೋಷ ಬಕ್ಕು’ ಹೇಳಿ ಅಂತೇ ನಮ್ಮ ಹೆದರುಸುವವು ಇದ್ದವು.  ಆದರೆ ಭಗವಂತನೊಬ್ಬನೇ ಸತ್ಯ, ಬಾಕಿಯೆಲ್ಲ ಮಿಥ್ಯ ಹೇದು ಸಂಪೂರ್ಣ ಕೃಷ್ಣಪ್ರಜ್ಞೆಲಿ ಇಪ್ಪವಂಗೆ ಈ ತರದ ಯಾವುದೂ ಗಣ್ಯವೇ ಅಲ್ಲ. ಪ್ರಹ್ಮಾದನ ಹಾಂಗೆ ಅಚಲ ಭಕ್ತಿ, ನಂಬಿಕೆ ಅವಂಗೆ. ಅದು ಇಲ್ಲದ್ದವಕ್ಕೆ ಹಿರಣ್ಯಕಶುಪಿವಿನ ಹಾಂಗೆ ಇಪ್ಪವಕ್ಕೆದಾ ಹೆದರಿಕೆ. ಹಾಂಗಾಗಿ ಅಧ್ಯಾತ್ಮ ಸಾಧನೆಲಿ ಪ್ರಾಮುಖ್ಯವಾಗಿ ಮದಾಲು ಬೇಕಪ್ಪದು ‘ಅಭಯಂ’.

೨) ಸತ್ತ್ವ-ಸಂಶುದ್ಧಿಃ  (Pure Mind) – ನಮ್ಮ ಮನಃಶುದ್ಧಿ ಅಧ್ಯಾತ್ಮ ಸಾಧನೆಲಿ ಬಹುಮುಖ್ಯ. ಸಾಮಾನ್ಯವಾಗಿ ನಮ್ಮ ಮನಸ್ಸು ಅನುವಂಶೀಯ ಕಾರಣಂದಲೋ, ಪರಿಸರದ ಪ್ರಭಾವಂದಲೋ ಶುದ್ಧವಾಗಿರುತ್ತಿಲ್ಲೆ. ಮನಸ್ಸಿನಲ್ಲಿ ನಾನಾತೆರದ ಭಾವನೆಗೊ ಪುಂಖಾನುಪುಂಖವಾಗಿ ಮೂಡಿ ಗೊಂದಲಕ್ಕೆ ತಳ್ಳಿ ಚಂಚಲಗೊಳುಸುತ್ತು. ಇಲ್ಲಿ ಬರೇ ಸತ್ತ್ವ ಶುದ್ಧಿ ಹೇದು ಹೇಳಿದ್ದನಿಲ್ಲೆ, ಅದಕ್ಕೆ ಪ್ರಾಮುಖ್ಯತೆ ಇದ್ದು ಹೇಳಿ ಸೂಚಿಸುವದಕ್ಕಾಗಿಯೇ ‘ಸಂ-ಶುದ್ಧಿ’ ಹೇಳಿ ಹೇಳಿದ್ದ°. ಹೇಳಿರೆ, ಸದಾ ಜಾಗೃತವಾಗಿಪ್ಪ ಶುದ್ಧ ಮನಸ್ಸು. ಅಂತಹ ಶುದ್ಧ ಮನಸ್ಸಿಂಗೆ ಮಾತ್ರವೇ ಭಗವಂತ° ಗೋಚರವಾವ್ತ° ಹೇಳ್ವ ಧ್ವನಿ. ಹೀಂಗೆ ನಿಷ್ಕಲ್ಮಶ, ಪೂರ್ವಗ್ರಹ ಇಲ್ಲದ ಮನಸ್ಸಿಂದ ಅಧ್ಯಾತ್ಮ ಸಾಧನೆಯ ತೊಡಗೆಕು.

೩) ಜ್ಞಾನ-ಯೋಗ-ವ್ಯವಸ್ಥಿತಿಃ – ನಿರಂತರ ಜ್ಞಾನಯೋಗಲ್ಲಿ ಮನಸ್ಸಿನ ನೆಲೆಗೊಳುಸುವದು. ಉಪಾಸನಾಯೋಗ ಹೇಳ್ವದು ಅತ್ಯಂತ ಮುಖ್ಯವಾದ್ದು. ಭಕ್ತಿ, ಜ್ಞಾನ ಮತ್ತೆ ಕರ್ಮಯೋಗ ಇದರ ಮೂರು ಮುಖಂಗೊ. ಇವು ಒಂದಕ್ಕೊಂದು ಹೊಂದಿಗೊಂಡೇ ಇಪ್ಪದು. ಒಂದರ ಬಿಟ್ಟು ಇನ್ನೊಂದು ಹೇದು ಹೇಳ್ವ ಕ್ರಮ ಇಲ್ಲೆ. ಮೂರುದೇ ಪರಸ್ಪರ ಸಂಬಂಧ ಇಪ್ಪಾಂತಾದ್ದು. ಜ್ಞಾನಯೋಗದ ಮೂಲಕ ಭಗವಂತನ ಉಪಾಸನೆ ಮಾಡೇಕ್ಕಪ್ಪದು ಮುಖ್ಯ. ಜ್ಞಾನಯೋಗ ಹೇಳಿರೆ ಭಗವಂತನ ನಿಜ ಅರ್ಥಲ್ಲಿ ಅವನ ಹಿರಿಮೆಯ ತಿಳ್ಕೊಂಡು, ಅವನ ಪೂಜಾರೂಪವಾಗಿ ಕರ್ಮವ ಮಾಡಿ ಅವನಲ್ಲಿ ಭಕ್ತಿಯ ಮಡಿಕ್ಕೊಂಬದು. ‘ವ್ಯವಸ್ಥಿತಿಃ’ ಹೇದರೆ ವ್ಯವಸ್ಥೆ. ಆ ವ್ಯವಸ್ಥೆಲಿ ಸದಾ ನೆಲೆನಿಂದುಗೊಂಡಿಪ್ಪದು. ಅದು ಅಚಲವಾದ ಸ್ಥಿತಿ. ಇದು ನಿರಂತರ ಪ್ರಕ್ರಿಯೆ. ಒಂದರಿ ಮಾಡಿ ಅಲ್ಲಿಗೆ ನಿಲ್ಸಿ ಬಿಟ್ಟುಬಿಡುವಂತಾದ್ದಲ್ಲ. ಭವಗವಂತನ ವಿಷಯಲ್ಲಿ ಅಚಲವಾದ ಅಭಯವಾದ ಮನಸ್ಸಿನ ನೆಟ್ಟು, ನಿರಂತರ ಭಗವಂತನ ಚಿಂತನೆಲಿ, ಕರ್ಮವ ಪೂಜಾ ರೂಪಲ್ಲಿ ಮಾಡಿಸಿಗೊಂಡು ಬಪ್ಪ ಸ್ವಚ್ಛಮನಸ್ಸಿನ ಕಾರ್ಯವೇ – ‘ಜ್ಞಾನ-ಯೋಗ-ವ್ಯವಸ್ಥಿತಿಃ’.

೪) ದಾನಮ್ – ನಮ್ಮಲ್ಲಿಪ್ಪದರ ಇನ್ನೊಬ್ಬಂಗೆ ಕೊಡುವದು. ಇಲ್ಲಿ ದಾನ ಕೊಡ್ತದು ಹೇಳಿರೆ ಅದು ಸತ್ಪಾತ್ರಂಗೆ ದಾನ ಕೊಡ್ತದು ಆಗಿರೆಕು. ಅಂತೆ ನಮ್ಮ ಪೈಕಿಯೊಬ್ಬಗೆ ನವಗೆ ಬೇಡದ್ದರ ದಾಂಟುಸಿ ದಾನ ಕೊಟ್ಟಿದ್ದೇನೆ ಹೇಳಿ ಮಾಡಿದ್ದು ಲೆಕ್ಕಕ್ಕೆ ಸೇರ್ತಿಲ್ಲೆ. ನಮ್ಮಲ್ಲಿ ಇಪ್ಪದರ/ ಇಪ್ಪಗ ಇನ್ನೊಬ್ಬಲ್ಲಿ ಇಲ್ಲದ್ದಿಪ್ಪಗ, ಅದು ಬಹಳ ಅಗತ್ಯ ಇಪ್ಪಗ, ಅದು ಮುಂದಂಗೆ ನವಗೆ ಅಗತ್ಯ ಬೀಳ್ತರೂ ಗಣ್ಯಮಾಡದ್ದೆ ಅದರ ಬಗ್ಗೆ ಯೋಚಿಸದ್ದೆ ಅರ್ಪಣಾ ಭಾವಂದ ಕೊಡುವದೇ ದಾನ. ಇದು ಅವನೊಳ ಇಪ್ಪ ಭಗವಂತಂಗೆ ಅರ್ಪಣೆ ಹೇಳ್ವ ಮನೋಭಾವಂದ ನೀಡ್ತದು ಆಯೇಕು. ಹಾಂಗೇ ದಾನ ಕೊಡುವಾಗ ನವಗೆ ಬೇಡದ್ದರನ್ನೋ, ಇಪ್ಪದರಲ್ಲಿ ಲಾಯಕದ್ದರ ಹೆರ್ಕಿ ಮಡುಗಿ ಕಳಪೆಯ ಅತ್ಲಾಗಿ ದೂಡುವದು ದಾನ ಆವ್ತಿಲ್ಲೆ. ಕೊಡ್ತ ವಸ್ತುವಿಲ್ಲಿ ಏವುದೇ ಪೂರ್ವಾಗ್ರಹ ಇಲ್ಲದ್ದೆ , ಏವ ಮಮಕಾರವೂ ಇಲ್ಲದ್ದೆ ಅದು ಭಗವಂತನ ಪ್ರೀತಿಗೋಸ್ಕರ ಕೊಡುತ್ತಾ ಇದ್ದೆ ಹೇಳಿ ಜಾನ್ಸಿ ಕೊಡೆಕು. ದಾನ ವಸ್ತು ರೂಪವೇ ಅಯೇಕು ಹೇದೇನಿಲ್ಲೆ. ಜ್ಞಾನದಾನವೂ ದಾನವೇ. ಅಭಯ ನೀಡುವದೂ ದಾನವೇ, ಸಕಾಯ ಮಾಡುವದೂ ದಾನವೇ. ಇಲ್ಲಿ ದಾನ ಕಾರ್ಯಕ್ಕಿಂತ ದಾನಲ್ಲಿಪ್ಪ ಭಾವನೆಯೇ ಮುಖ್ಯ.

೫) ದಮಃ – ಆತ್ಮ ಸಂಯಮ / ಮನೋನಿಗ್ರಹ. ನಮ್ಮ ಮನಸ್ಸಿಲ್ಲಿ ಸಂಯಮ ಇರೆಕು. ಅವೇಶಕ್ಕೊ ಉದ್ವೇಗಕ್ಕೊ ತುತ್ತಪ್ಪಲಾಗ. ಹಾಂಗೇ ಯಾವುದೋ ಸಲ್ಲದ ಕಾರ್ಯಕ್ಕ್ರೆ ಮನಸ್ಸಿನ ಹರಿವಲೆ ಬಿಡ್ಳಾಗ. ಅದೇ ರೀತಿ ಇಂದ್ರಿಯಂಗಳ ಮೇಲೂ ಹತೋಟಿ ಇರೆಕು. ಚಪಕ್ಕೆ ಬಲಿಯಪ್ಪಲಾಗ. ಆಕರ್ಷಣೆಗೆ ಮನಸೋಲುಲಾಗ. ಎಲ್ಲದಕ್ಕೂ ನಮ್ಮಲ್ಲಿ ನವಗೇ ನಿಯಂತ್ರಣ ಇರೆಕು. ಇಂದ್ರಿಯ ನಿಗ್ರಹ ಹೇಳಿರೆ ಬರೇ ಕಾಮಜೀವನ ನಿಗ್ರಹ ಅಲ್ಲ. ಎಲ್ಲ ರೀತಿಯ ಕಾಮವೂ ಸೇರಿತ್ತು.

೬) ಯಜ್ಞಃ – ಯಜ್ಞ ಹೇಳಿರೆ ಗೃಹಸ್ಥ ಮಾಡುವ ನಿತ್ಯ ಯಜ್ಞವೋ, ಅಥವಾ ವಿಶೇಷ ಯಜ್ಞವೋ ಹೇಳಿ ಅರ್ಥ ಅಲ್ಲ. ನಾವು ಮಾಡುವ ಎಲ್ಲ ಕೆಲಸವನ್ನೂ ಭಗವದರ್ಪಣಾ ಭಾವಂದ ಮಾಡುವ ಎಲ್ಲ ಕೆಲಸವೂ ಯಜ್ಞವೇ. ಯಜ್ಞದ ಬಗ್ಗೆ ಈ ಮದಲೇ ನಾವು ವಿವರವಾಗಿ ನಾಲ್ಕನೇ ಅಧ್ಯಾಯಲ್ಲಿ ನೋಡಿದ್ದು. ಜೀವನವೇ ಒಂದು ಯಜ್ಞವಾಗಿರೆಕು.

೭) ಸ್ವಾಧ್ಯಾಯಃ –ದರ್ಲಿ ಮೂರು ತರದ್ದು. ಸ್ವತಂತ್ರನಾದ ಭಗವಂತನ ಬಗ್ಗೆ ಇಪ್ಪಂತಹ ಸಮಗ್ರ ವೇದಂಗಳ ಅಧ್ಯಯನ – ಸ್ವಾಧ್ಯಾಯ; ಇದು ಎಡಿಯದ್ರೆ ಅವರವರ ಶಾಖೆಯ (ಸ್ವಂ) ವೇದಾಧ್ಯಯನ (ಇದೂ ಕೂಡ ಸ್ವಾಧ್ಯಾಯವೇ); ಅದೂ ಎಡಿಯದ್ರೆ, ನಾವು ಗುರುಗಳಿಮ್ದ ಕೇಳಿದ ಅಧ್ಯಾತ್ಮ ವಿಚಾರವ ಮನನಮಾಡಿ ಸ್ವಪ್ರವಚನ ಮಾಡುವದು, ನಮ್ಮ ಆತ್ಮಕ್ಕೆ ಆ ವಿಚಾರ ತಿಳುದಮತ್ತೆ ತಿಳುದ್ದರ ಇನ್ನೊಬ್ಬಂಗೆ ಅರ್ಥ ಅಪ್ಪಾಂಗೆ ಹೇಳುವದು ಮೂರನೇ ಬಗೆಯ ಸ್ವಾಧ್ಯಾಯ. ಅಧ್ಯಯನ ಅಧ್ಯಾಪನ ಎರಡೂ ನಮ್ಮ ಜೀವನದ ಅಂಗವಾಗಿರೆಕು. ಇಲ್ಲಿ ಬರೇ ಅಧ್ಯಯನ ನಾಮ ಮಾತ್ರದ ಅಧ್ಯಯನ ಅಲ್ಲ. ಅದು, ಆ ವಿಚರ ಸತ್ಯ ಹೇದು ಮನನವಾಯೇಕು. ಆ ವಿಷಯದ ಬಗ್ಗೆ ಚಿಂತನೆ ಹರುದು ವಿಷಯ ಅಪ್ಪು ಹೇಳ್ವದು ಮನಸ್ಸಿಲ್ಲಿ ಸ್ಥಿರವಾಗಿ ನಿಲ್ಲೆಕು. ಬರೇ ಬಾಯಿಪಾಠ ಮಾಡ್ತದು ಸ್ವಾಧ್ಯಾಯ ಅಲ್ಲ. ಅರ್ಥಾತ್ ಅದರ ಪ್ರಜ್ಞಾಪೂರ್ವಕ ಅರ್ಥೈಸಿಗೊಂಡಿರೆಕು. ಇನ್ನೊಂದು ಮುಖ್ಯ ವಿಷಯವನ್ನೂ ತಿಳ್ಕೊಳ್ಳೆಕ್ಕಾದ್ದು ಇದ್ದು. ಸ್ವಾಧ್ಯಾಯಕ್ಕೂ ಬ್ರಹ್ಮಚರ್ಯಕ್ಕು ಇಪ್ಪ ಒಂದು ಸಂಬಂಧ. ಅಧ್ಯಯನ ಸಮಯಲ್ಲಿ ಬ್ರಹ್ಮಚರ್ಯ ಪಾಲುಸೆಕು. ಜೀವನ ಪೂರ್ತಿ ಯಜ್ಞ, ಅಧ್ಯಯನ ಹೇಳಿ ಆದರೆ ಗೃಹಸ್ಥನಾಗಿಪ್ಪ ಸಾಧಕಂಗೆ ಇದೇಂಗೆ ಹೇಳ್ವ ಕುತೂಹಲ ಪ್ರಶ್ನೆಯೂ ಉದ್ಭವಿಸುತ್ತು. ಈ ಮದಲೇ ಹಲವು ದಿಕ್ಕೆ ಈಗಾಗಲೇ ಹೇಳಿಪ್ಪಂತೆ ಸಾಧನೆ ಹೇಳಿರೆ ಸರ್ವವನ್ನೂ ಬಿಟ್ಟು ಕಾಡಿಂಗೆ ಹೋಗಿ ಸಾಧನೆ ಮಾಡುವದು ಅಲ್ಲ. ಬದಲಾಗಿ ಎಲ್ಲದರ ಒಟ್ಟಿಂಗೆ ಇದ್ದುಗೊಂಡು ಎಲ್ಲದರಲ್ಲಿಯೂ ನಿರ್ಲಿಪ್ತತೆಯ ಇರಿಸಿಗೊಂಡು ಭಗವದ್ಪ್ರಸಾದ ಹೇಳಿ ಸಾಧನೆ ಮಾಡುವದೇ ಸಾಧನೆ. ಹಾಂಗಾಗಿ ಇಲ್ಲಿ ಬ್ರಹ್ಮಚರ್ಯ ಹೇಳಿ ಹೇಳಿರೆ ಬ್ರಹ್ಮಚಾರಿಯಾಗಿರೇಕು ಹೇಳಿ ಅರ್ಥ ಅಲ್ಲ, ಬದಲಾಗಿ ನೈಮಿತ್ತಿಕ ಬ್ರಹ್ಮಚರ್ಯ.

೮) ತಪಃ – ಭಗವಂತ° ಹೇಳಿದ ಈ ತಪಃ ಕಾಡಿಂಗೆ ಹೋಗಿ ಒಂಟಿಕಾಲಿಲ್ಲಿ ನಿಂದುಗೊಂಡೋ, ಕೂದು ಕಣ್ಮುಚ್ಚಿ ಮೂಗು ಹಿಡ್ಕೊಂಡು ಮಾದ್ತ ತಪಸ್ಸು ಅಲ್ಲ. ಮಾನವ ಜೀವನ ಇಡೀ ಒಂದು ತಪಸ್ಸು. ನಮ್ಮ ಮನಸ್ಸಿನ ಶುದ್ಧಗೊಳಿಸಿ, ಜ್ಞಾನಯೋಗಲ್ಲಿದ್ದು, ‘ದಮ’ವ ಗೂಡಿಸಿ, ದಾನ ಯಜ್ಞ ಧರ್ಮ ಸಹಿತ ಕರ್ಮದೊಟ್ಟಿಂಗೆ ‘ಸ್ವಾಧ್ಯಾಯ’ಲ್ಲಿದ್ದುಗೊಂಡು ಧರ್ಮಿಷ್ಠನಾಗಿ ಭಗವದ್ ಪ್ರೀತಿ ಕಾರ್ಯಲ್ಲಿ ನಿರಂತರನಾಗಿ ಇಪ್ಪದು-  ‘ತಪಃ’.  ಸಾಧನಾ ಪ್ರಕ್ರಿಯೆ ಏಕಾಏಕಿಯಾಗಿ ಒಂದು ದಿನಲ್ಲಿ ಸುರುವಪ್ಪದಲ್ಲ. ಅದು ಹಂತಹಂತವಾಗಿ ಹುಟ್ಟಿಂದಲೇ ಸುರುವಪ್ಪ ಕ್ರಿಯೆ. ಸಾಧನೆಯ ಗುರಿಯ ತಲುಪೆಕಾರೆ ಹಂತಹಂತವಾಗಿ ಒಂದೊಂದೇ ಮೆಟ್ಳ ಹಂತಿಗೊಂಡು ಹೋಪದು. ಅಂತಿಮ ಹಂತಲ್ಲಿ ಐಹಿಕ ಸರ್ವಸ್ವವನ್ನೂ ಬಿಟ್ಟು ಸನ್ಯಾಸಿಯಾಗಿ ಭಗವಂತನಲ್ಲಿ ಸೇರುವದು ಮೋಕ್ಷ. ಸಾಮಾನ್ಯವಾಗಿ ಮನುಷ್ಯನ ಆಯುಷ್ಯ ೧೦೦ ವರ್ಷ ಹೇದು ತೆಕ್ಕೊಂಡರೆ ಸುರುವಾಣ ೨೫ ವರ್ಷ ಬ್ರಹ್ಮಚರ್ಯ, ಮತ್ತೆ ೨೫ ವರ್ಷ ಗೃಹಸ್ಥಾಶ್ರಮ, ಮುಂದೆ ೨೫ ವರ್ಷದ ವಾನಪ್ರಸ್ಥ ಮತ್ತೆ ಅಕೇರಿಯಾಣ ೨೫ ವರ್ಷ ಸನ್ಯಾಸ ಹೇಳಿ ತೆಕ್ಕೊಳ್ಳೆಕ್ಕು. ಈ ಕಾಲಮಾನಲ್ಲಿ ಆಯಾ ಕಾಲಕ್ಕೆ ಯೋಗ್ಯವಾದ್ದರ ಅತ್ಮಸಂಯಮಂದ ಬಂದದರ ಅನುಭವಿಸಿ ಮುಂದುವರ್ಕೊಂಡು ಹೋಪದು – ‘ತಪಃ’. ಒಟ್ಟಿಲ್ಲಿ ಮನುಷ್ಯ ಜೀವನ ಪೂರ್ತಿ ಸರಳವಾಗಿ ಮತ್ತೆ ನೇರವಾಗಿ ಇರೆಕು ಹೇಳ್ವದು ತಾತ್ಪರ್ಯ.

೯) ಆರ್ಜವಮ್ – ಪ್ರಾಮಾಣಿಕತೆ. ನೇರವಾದ ನಡೆ ನುಡಿ. ಹೇಳ್ತದೊಂದು ಮಾಡ್ತದು ಇನ್ನೊಂದು ಹೇಳಿ ಆಗದ್ದೆ ನಿಜವಾದ ಪ್ರಾಮಾಣಿಕತೆಂದ ಬದುಕುವದು ಸಾಧನೆಯ ಒಂದು ಲಕ್ಷಣ.  ಅದೇ ರೀತಿ ಹಿಂದಂದ ಒಂದು ಮುಂದಂದ ಇನ್ನೊಂದು ಹೇಳ್ವ ನಡಾವಳಿಕೆ ಇಪ್ಪಲಾಗ. ಎಲ್ಲ ವಿಷಯಲ್ಲಿ ಪ್ರಾಮಾಣಿಕ ನಿಷ್ಠೆ ಇರೆಕು.

೧೦) ಅಹಿಂಸಾ – ನಡೆ ನುಡಿಲಿ ಇನ್ನೊಬ್ಬಂಗೆ ಹಿಂಸೆ ಅಪ್ಪಲಾಗ. ಹಿಂಸೆ ಅದು ಮನುಷ್ಯಂಗೆ ಆಗಲಿ, ಪ್ರಾಣಿ-ಕ್ರಿಮಿ-ಕೀಟಂಗೊಕ್ಕೆ ಆಗಲಿ, ಸಸ್ಯ ಕಲ್ಲು ಮಣ್ಣಿಂಗೆ ಆಗಲಿ ಏವುದಕ್ಕೂ ಹಿಂಸೆ ಆಗದ್ದಾಂಗೆ ನೋಡಿಗೊಂಬದೇ ಅಹಿಂಸೆ. ಹಾಂಗೇಳಿ ಅನಿವಾರ್ಯವಾಗಿಪ್ಪದರ ಹಿಂಸಿಸುವದು, ದಂಡಿಸುವದು, ಉದಾ – ಅಯೋಗ್ಯನ ತಿದ್ದಲೆ ದಂಡನೆ, ಅಪರಾಧಿಗೆ ಶಿಕ್ಷೆ, ಅಹಾರಕ್ಕಾಗಿ ವನಸ್ಪೈಗಳ ಸೇವನೆ, ಬ್ರಾಹ್ಮಣೇತರರ ಮಾಂಸಭಕ್ಷಣೆ ಇತ್ಯಾದಿ, ನಡವಾಗ, ಉಸುಲು ಬಿಡುವಾಗ ನವಗೆ ಅರಡಿಯದ್ದೆ ಸೂಕ್ಷ್ಮಜೀವಿಗೊಕ್ಕೆ ಅಪ್ಪ ಸಾವು ನೋವು ಅಹಿಂಸೆ ಆವ್ತಿಲ್ಲೆ. ಅದೆಲ್ಲ ಭಗವಂತನ ಏರ್ಪಾಡುಗೊ. ಅದು ಹಾಂಗೆಯೇ ಆಯೇಕ್ಕಪ್ಪದು ಹೇದು ಅವನ ನಿರ್ಣಯ, ಅಂತೆಯೇ ನಡವದು. ಧರ್ಮಪಾಲನೆಗೆ ಶತ್ರುಗಳ ಕೊಂದರೆ ಅದು ಹಿಂಸೆ ಅಲ್ಲ., ದೇಶದ ಹಿತಕ್ಕಾಗಿ ಆಕ್ರಮಣ, ಮರಣ, ಸಾವಿರಾರು ಮಂದಿಯ ಹಿತಕ್ಕಾಗಿ ಒಬ್ಬನ ಕೊಲ್ಲುತ್ತದು ಹೀಂಗಿಪ್ಪದು ಹಿಂಸೆ ಅಲ್ಲ. ಒಟ್ಟಿಲ್ಲಿ ಅನಗತ್ಯವಾಗಿ ಹಿಂಸೆ ಮಾಡ್ಳಾಗ, ಅನಿವಾರ್ಯಕ್ಕೋ, ಧರ್ಮಹಿತಕ್ಕೋ ಹಿಂಸೆ ತಪ್ಪುಸೆಕ್ಕಾದ್ದೂ ಇಲ್ಲೆ.  ವೈದ್ಯ ರೋಗಿಯ ಬದುಕುಸುಲೆ ಮಾಡುವ ಕ್ರಿಯೆ ಹಿಂಸೆ ಅಲ್ಲ. ಅದು ಹಿತಕ್ಕಾಗಿ. ಹೀಂಗೆ ಒಟ್ಟಿಲ್ಲಿ ದ್ವೇಷ, ಅಸಹನೆ, ಅಸೂಯೆ, ಸ್ವಾರ್ಥ ಇಲ್ಲದ್ದೆ ನಡವ ಅನಿವಾರ್ಯವಾದ ಹಿಂಸೆಗೊ  ಅಹಿಂಸೆ ಹೇದು ಪರಿಗಣಿಸಲ್ಪಡುತ್ತು. ಇನ್ನು ಹಿಂಸೆ ಹೇಳಿರೆ ಅದು ಶಾರೀರಿಕ ಹಿಂಸೆಯೇ ಆಯೇಕು ಹೇದೇನಿಲ್ಲೆ. ಇನ್ನೊಬ್ಬನ ಮನಸ್ಸಿಂಗೆ ಗಾಯಮಾಡುತ್ತದೂ ಹಿಂಸೆಯೇ. ಇನ್ನೊಬ್ಬನ ಹಂಗುಸುವದು, ಚೇಡುಸುವದು, ಚುಚ್ಚುಮಾತಿಂದ ತೆಗಳುವದು, ಶಾಪ ಹಾಕುವದು, ಇತ್ಯಾದಿ ಮಾತಿನ ಮೂಲಕವೂ ಹಿಂಸೆ ಆಗದ್ದಾಂಗೆ ನೋಡಿಗೊಳ್ಳೆಕು.

೧೧) ಸತ್ಯಮ್ – ಇದು ಪ್ರಾಮಾಣಿಕತೆಯ ಮತ್ತೊಂದು ಮುಖ. ಇಲ್ಲಿ ‘ಸತ್ಯ’ ಹೇಳಿರೆ ಬರೇ ಇಪ್ಪದರ ಇಪ್ಪಂತೆ ಹೇಳ್ತದು ಮಾಂತ್ರ ಅಲ್ಲ. ಸಮಾಜಲ್ಲಿ ಸಾದುಸಜ್ಜನಂಗೊಕ್ಕೆ ಹಿತವಪ್ಪಂತ ಮಾತುಗಳೂ ಸತ್ಯ ಹೇಳಿ ಪರಿಗಣಿಸಲ್ಪಡುತ್ತು. ಕೆಲವೊಂದರಿ ದೇಶಹಿತಕ್ಕಾಗಿ ನಾವು ಹೇಳ್ವ ಸುಳ್ಳೂ ಸತ್ಯವಾವ್ತು. ಲೋಕಕ್ಕೆ ಅನ್ಯಾಯವಾಗದ್ದ ಸುಳ್ಳೂ ಸತ್ಯವಾವ್ತು. ಒಂದು ಮಾಂತ್ರ ನೆಂಪಿಲ್ಲಿರೆಕು – ಅದು ಸಾರ್ವಜನಿಕ ಹಿತಕ್ಕಾಗಿ ಆಗಿರೆಕು. ಹೇಳಿರೆ ಆಪತ್ಕಾಲದ ಜೀವರಕ್ಷಣೆಗೆ ಹೇಳ್ವ ಸುಳ್ಳು ಸುಳ್ಳಲ್ಲ.  ಲೊಟ್ಟೆ ಹೇಳಿ ಮಾಡುವದು, ಲೊಟ್ಟೆಹೇಳಿ ಮದುವೆ ತಪ್ಪುಸೋದು ಇತ್ಯಾದಿಗೊ ಅಕ್ಷಮ್ಯ. ತನ್ನ ವಾ ಪರರ ಲಾಭಕ್ಕಾಗಿ ಸುಳ್ಳು ಬಳಸಲಾಗ. ಅದು ಹಿತಕ್ಕಾಗಿ ಆಪತ್ಕಾಲಲ್ಲಿ ಉಪಯೋಗುಸುವಂತಾದ್ದು. ಇಲ್ಲದ್ರೆ ಯಥಾರ್ಥವನ್ನೇ ಪಾಲುಸೆಕು.

೧೨) ಅಕ್ರೋಧಃ – ಏವ ಕಾಲಕ್ಕೂ ಇನ್ನೊಬ್ಬನತ್ರೆ ಕೋಪುಸದ್ದೆ ಇಪ್ಪದು. ಅಪ್ರಿಯ ಘಟನೆಗೊ ನಡವಾಗ ಕೋಪ ಬತ್ತು. ಕೋಪ ಮನುಷ್ಯನ ಉದ್ವಿಗ್ನ ಗೊಳುಸಿ ದಾರಿ ತಪ್ಪುಸುತ್ತು. ಅದರಿಂದ ಅನಾಹುತಂಗಳೇ ನಡವದು. ನೆಮ್ಮದಿಯ ಜೀವನಕ್ಕೆ ಇದು ಮಾರಕ. ಹಾಂಗಾಗಿ ಶಾಂತತೆ ನಮ್ಮ ಜೀವನದ ಉಸಿರಾಗಿರೆಕು.

೧೩) ತ್ಯಾಗಃ – ಮೇಲ್ನೋಟಕ್ಕೆ ದಾನ ಮತ್ತೆ ತ್ಯಾಗ ಹೇಳಿರೆ ಒಂದೇ ಹಾಂಗೆ ಕಾಣುತ್ತು. ಆದರೆ ತ್ಯಾಗ ಹೇಳ್ವದು ನಮ್ಮಲ್ಲಿಪ್ಪ ವಸ್ತುವೂ ಕೂಡ ನಮ್ಮದಲ್ಲ, ಭಗವಂತನದ್ದು ಹೇಳ್ವ ಭಾವನೆಂದ ಬದುಕ್ಕುವದು. ಅದರ ಬಿಡ್ಳೂ ಸಿದ್ಧನಿರೆಕು. ಅಭಿಮಾನ ತ್ಯಾಗ, ಫಲತ್ಯಾಗ, ಅಹಂಕಾರತ್ಯಾಗ, ಮಮಕಾರತ್ಯಾಗ ಇತ್ಯಾದಿ ಇತ್ಯಾದಿ. ಪ್ರೀತಿ ಇರಲಿ ಆದರೆ ಮೋಹ ಇಪ್ಪಲಾಗ. ‘ಎನ್ನದು’ ಹೇಳ್ವ ಭಾವನೆಂದ ದೂರ ಇರೆಕು. ‘ಸಂತೋಷಂದ ಸ್ವೀಕರುಸು, ಹೋದಪ್ಪಗ ನಿರ್ಲಿಪ್ತತೆಂದ ಇರು’  ಹೇಳ್ವ ಮನೋಭಾವ. ಜೀವನ ಪಯಣಲ್ಲಿ ಏವುದೊಂದೂ ಶಾಶ್ವತವಲ್ಲ. ಭಗವಂತ° ಒಬ್ಬನೇ ನಿತ್ಯ ಹೇದು ತಿಳುದು ಆ ಗುರಿಯತ್ತ ನಡೆಕು.

೧೪) ಶಾಂತಿಃ – ತ್ಯಾಗಂದ ಮದಾಲು ಸಿಕ್ಕುವದು ನೆಮ್ಮದಿ. ರಜವೂ ಉದ್ವೇಗಕ್ಕೆ ಒಳಗಾಗದ್ದೆ ಪ್ರತಿಯೊಂದನ್ನೂ ಭಗವದ್ ಪ್ರಸದ ಹೇಳಿ ಸ್ವೀಕರಿಸಿಯಪ್ಪಗ ಮನಸ್ಸು ಶಾಂತ ಸ್ಥಿತಿಲಿ ನಿಲ್ಲುತ್ತು. ಕ್ಷುದ್ರವಾದ ಲೌಕಿಕ ವಿಷಯಲ್ಲಿ ತಲೆಹಾಕುವದರಿಂದ ಶಾಂತಿ ಸಿಕ್ಕಲೆ ಅವಕಾಶವೇ ಇಲ್ಲೆ. ಪೈಪೋಟಿ, ವಿರಸ, ಜಗಳವೇ ಮುಂದೆ ಕಾಂಬದು. ಹಾಂಗಾಗಿ ಭಗವಂತನಲ್ಲಿ ಮನಸ್ಸಿನ ಸ್ಥಿರಗೊಳಿಸಿ ಶಾಂತಿಯ ಸಾಧುಸೆಕು.

೧೫) ಅಪೈಶುನಮ್ – ‘ಪೈಶುನಮ್’ ಹೇಳಿರೆ ಚಾಡಿ ಹೇಳಿ ವಿರಸ ಹುಟ್ಟುಸುವದು. ಇದು ಅತ್ಯಂತ ನಿಕೃಷ್ಟ ಗುಣ. ನಮ್ಮ ಸ್ವಾರ್ಥಕ್ಕಾಗಿ ದೊಡ್ಡಾವರತ್ರೆ ಚಾಡಿ ಹೇಳಿ ಸಮಾಜಸ್ವಾಸ್ಥ್ಯವ ಕೆಡುಸುವದು ಮಹಾ ಪಾಪ ಕಾರ್ಯ. ಹಾಂಗಾಗಿ ಇನ್ನೊಬ್ಬನ್ನಲ್ಲಿ ತಪ್ಪು ಕಂಡುಹುಡುಕುಸ್ಸು, ಚಾಡಿ ಹೇಳುಸ್ಸು ಇತ್ಯಾದಿಗಳಿಂದ ವಿಮುಖನಾಗಿರೆಕು ಹೇಳಿ ಭಗವಂತನ ಉಪದೇಶ.

೧೬) ಭೂತೇಷು ದಯಾ – ಎಲ್ಲ ಜೀವಿಗಳಲ್ಲಿ ದಯೆ. ಚೈತನ್ಯಯಿಪ್ಪ ಪ್ರತಿಯೊಂದು ಜೀವಿಗಳಲ್ಲಿಯೂ ಅನುಕಂಪ ಇರೆಕು. ಅದು ಮನುಷ್ಯ, ಪ್ರಾಣಿ, ಮೃಗ, ಪ್ರಾಣಿ, ಜಂತುವಾಗಿರಲಿ, ವನಸ್ಪತಿಗಳಾಗಿರಲ್ಲಿ ಎಲ್ಲದರಲ್ಲಿಯೂ ದಯೆ ಇರಲಿ. ಅದರ್ಲಿ ಮಿತ್ರ ಶತ್ರು ಹೇಳ್ವ ಭೇದಭಾವ ಇಪ್ಪಲಾಗ. ಎಲ್ಲರಲ್ಲಿಯೂ ದಯೆ ತೋರುವದು ಬಹು ದೊಡ್ಡ ಗುಣ. ಹಸಿದವಂಗೆ ಅಶನ ನೀಡುವದು, ಕಷ್ಟಲ್ಲಿಪ್ಪವ ಕಂಡು ಕನಿಕರಬೀರಿ ಸಕಾಯ ಮಾಡುವದು ದಯಾಗುಣ.

೧೭) ಅಲೋಲುತ್ವಮ್  – ಒಂದರನ್ನೇ ಮನಸ್ಸಿಂಗೆ ಅತಿಯಾಗಿ ಅಂಟುಸಿಗೊಂಬದು ಲೋಲುತ್ವ. ಏವುದರ ಮೇಗೆಯೂ ಅತಿಯಾದ ಮೋಹ ಇಪ್ಪಲಾಗ. ಅದು ದುಃಖಕ್ಕೆ ಕಾರಣ. ಅದಕ್ಕೆ ನಮ್ಮಲ್ಲಿ ಅಲೋಲುತ್ವ ಗುಣ ಇರೆಕು.

೧೮) ಮಾರ್ದವಮ್ – ಸೌಜನ್ಯ / ಮೃದುಸ್ವಭಾವ. ನಮ್ಮ ನಡೆ ನುಡಿಗಳಲ್ಲಿ ಸೌಜನ್ಯತೆ ಇರೆಕು. ಅಹಂಕಾರಂದ ಬೀಗಿ ಮಾತಾಡ್ಳಾಗ. ಪ್ರತಿಯೊಬ್ಬನಲ್ಲೂ ಸೌಜನ್ಯತೆಂದ ವ್ಯವಹಾರ ಮಾಡೆಕು. ದಾರ್ಷ್ಟ್ಯತೆ ತೋರಿರೆ ಅದು ಅವನೊಳ ಇಪ್ಪ ಭಗವಂತನ ಧಿಟ್ಟಿಸಿದಾಂಗೆ ಆವ್ತು. ಇದು ಅಹಂಕಾರದ ಇನ್ನೊಂದು ಮುಖ. ಹಾಂಗಾಗಿ ನಮ್ಮ ನಡತೆ, ನುಡಿಲಿ ನಯವಿನಯತೆ ಸೌಜನ್ಯ ಇರೆಕು.

೧೯) ಹ್ರೀಃ – ನಾಚಿಗೊಂಬದು.  ಇದೂ ಸಭ್ಯತೆಯ ಸೌಜನ್ಯದ ಇನ್ನೊಂದು ಮುಖ. ಇನ್ನೊಬ್ಬ ಟೀಕೆ ಮಾಡ್ತಾಂಗೆ ನಾವು ನಡಕ್ಕೊಂಬಲಾಗ. ಅಷ್ಟು ನಾಚಿಕೆ ನವಗೆ ಇರೆಕು.

೨೦) ಅಚಾಪಲಮ್ – ಸ್ವಂತ ನಿರ್ಧಾರ ತೆಕ್ಕೊಂಬ ಸ್ಥೈರ್ಯ ಅಥವ ದೃಢತೆ. ವಿಷಯವ ವಿಶ್ಲೇಷಣೆ ಮಾಡಿ ಏವುದು ಸರಿ ಏವುದು ತಪ್ಪು , ಏವುದು ಆಯೇಕ್ಕಾದ್ದು, ಮಾಡೇಕ್ಕಾದ್ದು ಹೇದು ಸ್ವಯಂ ನಿರ್ಧಾರ ತೆಕ್ಕೊಂಬ ಶಕ್ತಿ ಮತ್ತೆ ಅದರ್ಲಿ ದೃಢವಾದ ವಿಶ್ವಾಸ, ನಂಬಿಕೆಂದ ಇಪ್ಪದು – ‘ಅಚಾಪಲಮ್’. ಅದುವೋ ಇದುವೋ ಹೇಳ್ವ ಚಾಪಲ್ಯತೆ ಇಪ್ಪಲಾಗ.

೨೧) ತೇಜಃ – ತೇಜಸ್ಸು. ಅದುವೇ ನಮ್ಮ ವರ್ಚಸ್ಸು. ಮೋರೆಲಿ ಕಳೆ, ಕಣ್ಣಿಲ್ಲಿ ತೇಜಸ್ಸು, ಶರೀರಲ್ಲಿ ಕಾಂತಿ. ಒಟ್ಟಿಲ್ಲಿ ಕಾಂಬಗ ಅಸಹ್ಯ ಹುಟ್ಟುಸುವಾಂಗೆ ಇಪ್ಪಲಾಗ. ಆಕರ್ಷಕ ಶಕ್ತಿ ನಮ್ಮಿಲ್ಲಿ ಇರೆಕು. ಮನಸ್ಸು ಸ್ವಚ್ಛ ಇಪ್ಪ ಸಾಧನೆಯ ಮಾರ್ಗಲ್ಲಿ ತೇಜಸ್ಸು ತಾನಾಗಿಯೇ ಮೈದುಂಬಿ ನಿಲ್ಲುತ್ತು.

೨೨) ಕ್ಷಮಾ – ಕ್ಷಮಾಗುಣ. ತಪ್ಪು ಮಾಡಿದರ ಮೇಗೆ ಪ್ರತೀಕಾರ ಭಾವನೆ ಬಾರದ್ದೆ ಇಪ್ಪದು. ಪ್ರತೀಕಾರ ಭಾವನೆ ಇಪ್ಪಷ್ಟು ದಿನ ಮನುಷ್ಯಂಗೆ ಏಳಿಗೆಯೇ ಇಲ್ಲೆ. ಅದರಿಂದ ಮನಸ್ಸು ಸದಾ ಉದ್ವೇಗಲ್ಲೇ ಮುಳುಗಿರುತ್ತು. ನಮ್ಮ ಮನಸ್ಸಿನ ಎಂದೂ ಪ್ರತೀಕಾರ ಭಾವನೆ ಉಂಟಪ್ಪಂತೆ ತಳ್ಳಲೇ ಆಗ. ಅದರ ಬದಲು ‘ದೇವರೆ! ಅವನ ಕ್ಷಮಿಸು, ಒಳ್ಳ್ಳೆ ಬುದ್ಧಿ ಕೊಡು’ ಹೇಳ್ವ ಪ್ರಾರ್ಥನೆ ಮಾಡೆಕು.

೨೩) ಧೃತಿಃ – ಸ್ಥೈರ್ಯ. ಎಂತದೇ ಆದರೂ ನಮ್ಮ ಮನಸ್ಸಿನ ಧೃತಿಗೆಡದ್ದೆ ಇಪ್ಪದು. ಸ್ಥಿರ ಮನಸ್ಸು. ಏವ ವಿಷಯ ಎದುರಾದರೂ ಧೈರ್ಯಗೆಡುಲಾಗ, ಹೇಡಿಯಪ್ಪಲಾಗ, ಮುಂದೆ ಎಂತಕೋ ಹೇಳ್ವ ಆತಂಕ ಉಂಟಪ್ಪಲಾಗ. ಬಂದದರ ಬಪ್ಪದರ ಎದುರುಸ್ವ ಶಕ್ತಿ ಭಗವಂತ ಕೊಡುತ್ತ ಹೇಳ್ವ ಪೂರ್ತಿ ನಂಬಿಕೆ ನಮ್ಮಲ್ಲಿರೆಕು. ಎಲ್ಲವೂ ಜಗನ್ನಿಯಾಮಕನಾದ ಭಗವಂತ° ಬೇಕಾದಾಂಗೆ ನಡಶುತ್ತ°, ಆ ಪ್ರಕಾರವಾಗಿ ನಾವು ಕುಣಿಯೆಕ್ಕಪ್ಪದು ಹೇಳ್ವ ಅಚಲ ವಿಶ್ವಾಸ ನಮ್ಮಲ್ಲಿ ಇರೆಕು. ಇದುವೇ ಆತ್ಮವಿಶ್ವಾಸ.

೨೪) ಶೌಚಮ್ – ಶುಚಿತ್ವ. ಬರೇ ಬಾಹ್ಯ ಶುಚಿ ಮಾತ್ರ ಇದ್ದರೆ ಸಾಲ. ಮೇಗಾಣ ಗುಣಂಗಳ ನಮ್ಮಲ್ಲಿ ಸಂಪೂರ್ಣ ಅಳವಡಿಸಿ ಮನಸ್ಸು ಶುಚಿಯಾಗಿರಿಸಿಗೊಳ್ಳೆಕು. ಆಂತರಿಕ ಶುಚಿ ಆಗದ್ದೆ ಜ್ಞಾನ ದೀಪ ಬೆಳಗಲೆ ಸಾಧ್ಯ ಇಲ್ಲೆ. ಆಂತರಿಕ ಶುಚಿ ಆಯೇಕಾರೆ ಬಾಹ್ಯ ಶುಚಿ ಅಗತ್ಯ. ಬಾಹ್ಯ ಶುಚಿ  ಇಲ್ಲದ್ದೆ ಮನಸ್ಸಿಲ್ಲಿ ರಗಳೆ ತೊಳದು ಹೋಗ. ಬಾಹ್ಯ ಶುಚಿ ಹೇಂಗೆ ಲೌಕಿಕವಾಗಿ ನಮ್ಮ ಆಕರ್ಷಕರನ್ನಾಗಿ ಮಾಡುತ್ತೋ ಹಾಂಗೇ ಆಂತರಿಕ ಶುಚಿಂದ ಭಗವಂತನ ಕೃಪಾದೃಷ್ಟಿ ನಮ್ಮತ್ರೆ ಬೀರುವ ಹಾಂಗೆ ಆಕರ್ಷಣೆ ಮಾಡೇಕ್ಕಾದು. ಸಮಾಜಲ್ಲಿ ನಮ್ಮಂದಾಗಿ ತೊಂದರೆ ಅಪ್ಪಲಾಗ, ನಮ್ಮ ಮೈಮನ ಸ್ವಚ್ಛ ಇದ್ದರೆ ಮಾಂತ್ರ ಇದು ಸಾಧ್ಯ ಹೇಳ್ವ ಪ್ರಜ್ಞೆ ಸದಾ ಜಾಗೃತವಾಗಿರೆಕು. ನಮ್ಮ ಮೈ ಮನ ಶುಚಿಯಾದಪ್ಪಗ ಸುತ್ತಮುತ್ತಲಿನ ವಾತಾವರಣವೂ ಶುಚಿಯಾವ್ತು.

೨೫) ಅದ್ರೋಹಃ – ಇನ್ನೊಬ್ಬನ ಮೇಗೆ ದ್ರೋಹ ಚಿಂತನೆ ಮಾಡದ್ದೆ ಇಪ್ಪದು. ಇನ್ನೊಬ್ಬಂಗೆ ಕೆಡುಗು ಎಣುಸಲಾಗ, ಬಗವಲಾಗ, ಎಲ್ಲೋರಿಂಗೂ ಒಳ್ಳೆದಾಯೇಕು ಹೇಳ್ವ ಗುಣ ನಮ್ಮಲ್ಲಿರೆಕು.

೨೬) ನಾತಿಮಾನಿತಾಃ – ‘ನ ಅತಿ-ಮಾನಿತಾಃ’ – ತನ್ನ ಬಗ್ಗೆ ಅತಿಯಾದ ಹೆಗ್ಗಳಿಕೆ ಪಟ್ಟುಗೊಳ್ಳದ್ದೆ ಇಪ್ಪದು, ಇತರರಿಂದ ಏವುತ್ತೂ ತನಗೆ ಗೌರವನ್ನೇ ಬಯಸಿಗೊಂಡಿಲ್ಲದ್ದೆ ಇಪ್ಪದು. ಅಹಂಕಾರ ರಹಿತನಾಗಿದ್ದರೆ ಮಾಂತ್ರ ಇದು ಸಾಧ್ಯ. ಗೌರವ ತಾಆಗಿಯೇ ಬರೇಕು. ಅದಕ್ಕಾಗಿ ಅದರ ಹುಡ್ಕಿಯೊಂಡು, ಬೆನ್ನು ಹಿಡ್ಕೊಂಡು ಹೋಪಲಾಗ. ನಮ್ಮ ಕಾರ್ಯಲ್ಲಿ ನಿಷ್ಠರಾದರೆ ಗೌರವ ತಾನಾಗಿಯೇ ನಮ್ಮತ್ರೆ ಬತ್ತು. ಬಂದ ಗೌರವವ ಸ್ವೀಕರಿಸಿ ಸಂತೋಷಪಡೆಕು ಆದರೆ ಬೀಗಲಾಗ. ಇನ್ನೊಬ್ಬ ಎನಗೆ ಮರ್ಯಾದೆ ಕೊಟ್ಟಿದನಿಲ್ಲೆ, ಕೊಟ್ಟ ಮರ್ಯಾದೆ ಸಾಕಾಯ್ದಿಲ್ಲೆ ಹೇಳಿ ಗ್ರೇಶುವದರಿಂದ ಅದಕ್ಕೆ ತಾನು ಇನ್ನೂ ಅರ್ಹನಾಯಿದಿಲ್ಲೆ ಹೇಳಿ ಗ್ರೇಶೋದೇ ದೊಡ್ಡತನ.

ಹೀಂಗೆ ನಾವು ಜೀವನಲ್ಲಿ ಅಳವಡಿಸಿಗೊಳ್ಳೆಕ್ಕಾದ (ಸಾಧಕನಲ್ಲಿ ಇರೆಕಾದ) ದೈವೀಕ / ಸಾತ್ವಿಕ ಗುಣಂಗೊ.  ಅದು ಆಹಾರ ವಿಹಾರ ನಡೆ ನುಡಿಲಿ ಹಾಸುಹೊಕ್ಕಾಗಿರೆಕು. “ಭವಂತಿ ಸಂಪದಂ ದೈವೀಮಭಿಜಾತಸ್ಯ..” – ದೈವೀ ಸಂಪತ್ತಿನ ಬಯಸಿ ಹುಟ್ಟಿದವನಲ್ಲಿ ಈ ಗುಣಂಗೊ ಇರುತ್ತು ಹೇಳಿ ಭಗವಂತ° ಹೇಳಿದ್ದದು. ಅರ್ಥಾತ್, ಆರು ಹುಟ್ಟುವಾಗಲೇ ಸಾತ್ವಿಕತೆ ಅಭಿಲಾಷೆಂದ ಹುಟ್ಟುತ್ತನೋ, ಅವನಲ್ಲಿ ಈ ಗುಣಂಗೊ ಸಹಜವಾಗಿಯೇ ಹುಟ್ಟಿಲ್ಲಿ ಇರುತ್ತು. ಉಳುದೋರು ಈ ಗುಣಂಗಳ ಬೆಳೆಶಿಗೊಂಡು ಮುಂದಾಣ ದಾರಿ ಸುಗಮಗೊಳುಸೆಕು ಹೇದು ವಿವರಣೆಯ ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದು.

ಶ್ಲೋಕ

ದಂಬೋ ದರ್ಪೋsಭಿಮಾನಶ್ಚ ಕ್ರೋಧಃ ಪಾರುಷ್ಯಮೇವ ಚ ।
ಅಜ್ಞಾನಂ ಚಾಭಿಜಾತಸ್ಯ ಪಾರ್ಥ ಸಂಪದಮಾಸುರೀಮ್ ॥೦೪॥

ಪದವಿಭಾಗ

ದಂಭಃ ದರ್ಪಃ ಅಭಿಮಾನಃ ಚ ಕ್ರೋಧಃ ಪಾರುಷ್ಯಮ್ ಏವ ಚ । ಅಜ್ಞಾನಮ್ ಚ ಅಭಿಜಾತಸ್ಯ ಪಾರ್ಥ ಸಂಪದಮ್ ಆಸುರೀಮ್ ॥

ಅನ್ವಯ

ಹೇ ಪಾರ್ಥ!, ದಂಭಃ, ದರ್ಪಃ, ಅಭಿಮಾನಃ ಚ, ಕ್ರೋಧಃ, ಪಾರುಷ್ಯಮ್ ಏವ ಚ ಅಜ್ಞಾನಂ ಚ (ಏತಾನಿ ಲಕ್ಷಣಾನಿ) ಆಸುರೀಂ ಸಂಪದಮ್ ಅಭಿಜಾತಸ್ಯ (ಪುರುಷಸ್ಯ ಭವಂತಿ) ।

ಪ್ರತಿಪದಾರ್ಥ

ಹೇ ಪಾರ್ಥ! – ಏ ಅರ್ಜುನ!, ದಂಭಃ – ಅಹಂಕಾರ, ದರ್ಪಃ – ದರ್ಪ, ಅಭಿಮಾನಃ – ದುರಭಿಮಾನ, ಚ – ಮತ್ತೆ, ಕ್ರೋಧಃ – ಕೋಪ, ಪಾರುಷ್ಯಮ್ – ಕಾಠಿಣ್ಯ, ಏವ ಚ – ಖಂಡಿತವಾಗಿಯೂ ಕೂಡ, ಅಜ್ಞಾನಮ್ ಚ – ಅಜ್ಞಾನ ಕೂಡ, ಏತಾನಿ ಲಕ್ಷಣಾನಿ – ಇವೆಲ್ಲ ಲಕ್ಷಣಂಗೊ,  ಆಸುರೀ ಸಂಪದಮ್ ಅಭಿಜಾತಸ್ಯ (ಪುರುಷಸ್ಯ ಭವಂತಿ) – ಅಸುರು ಸ್ವಭಾವದ ಗುಣಂಗಳಿಂದ ಹುಟ್ಟಿದವರದ್ದಾಗಿದ್ದು.

ಅನ್ವಯಾರ್ಥ

ಏ ಪೃಥೆಯ ಮಗನಾದ ಪಾರ್ಥನೇ!, ಅಹಂಕಾರ/ ಜಂಬ, ದರ್ಪ, ದುರಭಿಮಾನ, ಕ್ರೋಧ, ಕ್ರೌರ್ಯ ಮತ್ತೆ ಅಜ್ಞಾನ ಈ ಗುಣಂಗೊ ಆಸುರೀ ಸ್ವಭಾವಂದ ಹುಟ್ಟಿದವರಲ್ಲಿ ಇರುತ್ತು.

ತಾತ್ಪರ್ಯ / ವಿವರಣೆ

ಆಸುರೀ / ರಾಕ್ಷಸೀ ಸ್ವಭಾವದ ಆರು ಗುಣಲಕ್ಷಣಂಗಳ ಭಗವಂತ ಇಲ್ಲಿ ವಿವರಿಸಿದ್ದ°. ಆಸುರೀ ಸ್ವಭಾವ ನರಕಕ್ಕೆ ದಾರಿ.  ರಾಕ್ಷಸೀ ಸ್ವಭಾವದವು ಅಧ್ಯಾತ್ಮಿಕ ಮುನ್ನಡೆಗೆ ಬೇಕಾದ ತತ್ವಂಗಳ ಅನುಸರುಸದ್ದೆ ಅಂತೇ ಡಂಬಾಚಾರ ಪ್ರದರ್ಶನಕ್ಕೆ ಮಿಥ್ಯ ಅಹಂಕಾರಲ್ಲಿ ವಿಜೃಂಭಿಸುತ್ತವು. ಅವರ ಅಜ್ಞಾನವೇ ಇದಕ್ಕೆ ಕಾರಣ. ಜಂಬಂದ ಬೀಗುವದು, ದರ್ಪಲ್ಲಿ ಮೆರವದು, ದುರಭಿಮಾನ, ತಿಳುವಳಿಕೆ ಇಲ್ಲದ್ದೆ ಕ್ರೋಧ ಸಾಧುಸುವದು, ಕಾರ್ಯಸಾಧನೆಗೆ ಎಂತಹ ಕ್ರೌರ್ಯಕ್ಕೂ ಹೆಸದ್ದ ಅವರ ಅಜ್ಞಾನವೇ ಅವರ ಬದುಕಿನ ಕಠಿಣಗೊಳುಸುತ್ತು. ಭಗವಂತ° ಹೇಳಿದ ಆಸುರೀ ಸ್ವಭಾವದ ಈ ಆರು ಗುಣಂಗಳ ವಿಶ್ಲೇಷಿಸುವೋ° –

೧) ಡಂಭಃ – ಇಲ್ಲದ್ದರ ಇದ್ದು ಹೇದು ತೋರಿಸಿಗೊಂಬದು. ಒಳ ಎಂತ ಇಲ್ಲೆಯೋ ಅದು ಇದ್ದು ಹೇಳಿ ಸುಭಗತನದ ಪ್ರದರ್ಶನ. ಒಳ ಇಪ್ಪದರ ಮುಚ್ಚಿಮಡುಗಿ ತುಂಬ ಒಳ್ಳೆಯವನ ಹಾಂಗೆ ಪ್ರದರ್ಶನ ಮಾಡುವದು ಇತ್ಯಾದಿ ಡಂಭತನ. ಇದು ಮೇಗೆ ಹೇಳಿದ ‘ಆರ್ಜವಂ’ ಕ್ಕೆ ವಿರುದ್ಧ ಗುಣ.

೨) ದರ್ಪಃ – ಎಂತ ತಪ್ಪು ಕೆಲಸ ಮಾಡ್ಳೂ ಹೇಸದ ಮನೋವೃತ್ತಿ. ಇದು ಹ್ರೀ ಎಂಬ ಸದ್ಗುಣದ ವಿರುದ್ಧ ಗುಣ.

೩) ಅಭಿಮಾನಃ – ಇದು ದುರಭಿಮಾನದ ಬಗ್ಗೆ ಹೇಳಿದ್ದದು. ತನ್ನ ಬಗ್ಗೆ ಅತಿರೇಕದ ಕಲ್ಪನೆ. ತಾನೇ ದೊಡ್ಡ ಮನುಷ್ಯ ಹೇಳ್ವ ಭ್ರಮೆ. ಅನೊಬ್ಬಂಗೆ ಅಗೌರವ ತೋರುವದು. ಎಲ್ಲರೂ ತನ್ನ ಕಾಲು ಹಿಡಿಯೇಕು ಹೇಳಿ ಅಪೇಕ್ಷೆಪಡುವದು ಇತ್ಯಾದಿ ದುರಭಿಮಾನದ ಲಕ್ಷಣಂಗೊ . ಇದು ಅತಿಮಾನ ಎನುಸುತ್ತು.

೪) ಕ್ರೋಧಃ – ಮನುಷ್ಯ° ಬಿಡೆಕು ಹೇಳಿರೂ ಬಿಡ್ಳೆ ಎಡಿಗಾಗದ್ದಪ್ಪ ಕೆಟ್ಟ ಗುಣ ಇದು. ನವಗೆ ಅರಡಿಯದ್ದೆ ನಮ್ಮ ದಾರಿತಪ್ಪುಸುವ ದುರ್ಗುಣ.

೫) ಪಾರುಷ್ಯಮ್ – ಉಗ್ರವಾದ, ಕಟುವಾದ, ಅಸಹ್ಯವಾದ ಮಾತುಗೊ. ಇನ್ನೊಬ್ಬನ ತಾತ್ಸಾರಂದ ಕಾಂಬದು ಇತ್ಯಾದಿಗೊ. ಇದು ಮನುಷ್ಯನ ಎಂದಿಂಗೂ ಶ್ರೇಯಸ್ಸಿನ ದಾರಿಲಿ ಕೊಂಡೋವ್ತಿಲ್ಲೆ.

೬) ಅಜ್ಞಾನಮ್ – ಮೇಗಾಣ ಎಲ್ಲ ಈ ದುರ್ಗುಣಂಗಳ ಚಕ್ರವರ್ತಿ ಈ ಅಜ್ಞಾನ. ಇದಕ್ಕೆ ಮನಸ್ಸಿಲ್ಲಿ ಇಪ್ಪ ಕಶ್ಮಲವೇ ಕಾರಣ. ನಿಜವಾದ ಜ್ಞಾನವ ತಿಳಿವ ಮನಸ್ಸೇ ಉಂಟಾವ್ತಿಲ್ಲೆ ಹೀಂಗಿರ್ತವಕ್ಕೆ. ಅಕೇರಿಯವರೇಂಗೂ ಹೀಂಗೆ ಕಳಿಯೇಕ್ಕಾವ್ತು ಮತ್ತೆ ಪುನಃ ನರಕಕ್ಕೆ ತಳ್ಳಲ್ಪಡುತ್ತವು.

ಈ ಎಲ್ಲ ಅಸುರೀ ಗುಣಂಗ ನಮ್ಮಲ್ಲಿ ಮನೆ ಮಾಡಿ ನಮ್ಮನ್ನೇ ಅಧ್ಯಾತ್ಮ ಚಿಂತನೆಂದ ಹೆರಹಾಕುತ್ತು. ಹಾಂಗಾಗಿ ಈ ದುರ್ಗುಣಂಗಳ ಅರ್ತು ಅದರ ಮದಾಲು ಬಡುದಟ್ಟೆಕು. ಅಂಬಗ ಬದುಕು ಸುಂದರ. ಯಥಾರ್ಥ ಬದುಕಿನ ಬದುಕುವ ಪಾರ್ಥರಾಯೇಕು ಹೇಳಿ ಭಗವಂತ° ಇಲ್ಲಿ ಎಚ್ಚರಿಸಿದ್ದ°. ಈ ವಿಶ್ಲೇಷಣೆಗಳ ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದು.

ಶ್ಲೋಕ

ದೈವೀ ಸಂಪದ್ವಿಮೋಕ್ಷಾಯ ನಿಬಂಧಾಯಾಸುರೀ ಮತಾ ।
ಮಾ ಶುಚಃ ಸಂಪದಂ ದೈವೀಂ ಅಭಿಜಾತೋsಸಿ ಪಾಂಡವ ॥೦೫॥

ಪದವಿಭಾಗ

ದೈವೀ ಸಂಪತ್ ವಿಮೋಕ್ಷಾಯ ನಿಬಂಧಾಯ ಆಸುರೀ ಮತಾ । ಮಾ ಶುಚಃ ಸಂಪದಮ್ ದೈವೀಮ್ ಅಭಿಜಾತಃ ಅಸಿ ಪಾಂಡವ ॥

ಅನ್ವಯ

ದೈವೀ ಸಂಪತ್ ವಿಮೋಕ್ಷಾಯ, ಆಸುರೀ ( ಸಂಪತ್ ) ನಿಬಂಧಾಯ ಮತಾ । ಹೇ ಪಾಂಡವ (ತ್ವಮ್) ದೈವೀಂ ಸಂಪದಮ್ ಅಭಿಜಾತಃ ಅಸಿ, ಮಾ ಶುಚಃ ।

ಪ್ರತಿಪದಾರ್ಥ

ದೈವೀ ಸಂಪತ್ – ದೈವೀಕ ಗುಣಂಗೊ, ವಿಮೋಕ್ಷಾಯ – ಮೋಕ್ಷಕ್ಕಾಗಿ (ಬಿಡುಗಡೆಗೆ/ವಿಮೋಚನೆಗೆ), ಆಸುರೀ (ಸಂಪತ್ ಚ) ಆಸುರೀ ಗುಣಂಗೊ ಬಂಧನಕ್ಕಾಗಿ ಕೂಡ, ಮತಾ – ಪರಿಗಣಿತವಾಯ್ದು, ಹೇ ಪಾಂಡವ! – ಏ ಪಾಂಡುಪುತ್ರನಾದ ಅರ್ಜುನ!, (ತ್ವಮ್ – ನೀನು), ದೈವೀಮ್ ಸಂಪದಮ್ ಅಭಿಜಾತಃ ಅಸಿ – ದೈವೀಕ ಗುಣಂಗಳ ಒಳಗೊಂಡವನಾಗಿ ಜನಿಸಿದ್ದೆ, ಮಾ ಶುಚಃ – ಶೋಕಪಡೆಡ/ ಚಿಂತೆಮಾಡೆಡ.

ಅನ್ವಯಾರ್ಥ

ದೈವೀಗುಣಂಗೊ ಮುಕ್ತಿಗೆ ಸಾಧನ, ಆಸುರೀ ಗುಣಂಗೊ ಬಂಧನಕ್ಕೆ ಕಾರಣ. ಪಾಂಡುಪುತ್ರನಾದ ಅರ್ಜುನ! ನೀನು ದೈವೀಕ ಗುಣಂಗಳಿಂದ ಜನಿಸಿದವನಾಗಿದ್ದೆ. ಚಿಂತೆ ಪಡೆಡ.

ತಾತ್ಪರ್ಯ / ವಿವರಣೆ

ದೈವೀಕ ಗುಣ, ಆಸುರೀ ಗುಣಲಕ್ಷಣಂಗಳ ವಿವರಿಸಿದ ಭಗವಂತ° ಅದರ ಪ್ರಯೋಜನವನ್ನೂ ಇಲ್ಲಿ ಹೇಳುತ್ತಲಿದ್ದ°. ದೈವೀ ಸಂಪತ್ತು (ಸ್ವಭಾವ) ಮೋಕ್ಷಕ್ಕೆ ಸಾಧನ, ಆಸುರೀ ಸಂಪತ್ತು (ಸ್ವಭಾವ) ನಿಬಂಧ (ಬಂಧನ)ಕ್ಕೆ ಕಾರಣ ಆವ್ತು. ಬನ್ನಂಜೆ ಹೇಳ್ತವು – ಇಲ್ಲಿ ಭಗವ್ಂತ° ವಿ-ಮೋಕ್ಷ, ನಿ-ಬಂಧ ಹೇಳ್ವ ಎರಡು ಪದಂಗಳ ವಿಶೇಷವಾಗಿ ಬಳಸಿದ್ದ°. ‘ವಿ-ಮೋಕ್ಷ’ ಹೇದರೆ ಅವರವರ ಸಾಧನೆಗೆ ತಕ್ಕಂತೆ ವಿವಿಧ ಸ್ತರಲ್ಲಿ ವ್ಯಕ್ತಿತ್ವ ವಿಕಾಸ ಮತ್ತೆ ಮೋಕ್ಷ, ‘ನಿ-ಬಂಧ’ ಹೇದರೆ ಮೇಲ್ಮೈಗೆ ಸಂಸಾರ ಬಂಧ, ಗೂಢಾರ್ಥಲ್ಲಿ ನೀಚ ಬಂಧ ., ಅರ್ಥಾತ್, ನಮ್ಮ ಕತ್ತಲೆಯ ತಮಸ್ಸಿಗೆ ತಳ್ಳುತ್ತ ಬಂಧ.

ಇನ್ನು ಭಗವಂತ° ಅರ್ಜುನನ ಆಸುರೀಗುಣಂಗಳೊಟ್ಟಿಂಗೆ ನೀನು ಹುಟ್ಟಿದ್ದಿಲ್ಲೆ, ಚಿಂತುಸೇಡ ಹೇಳಿ ಪ್ರೋತ್ಸಾಹಿಸುತ್ತ°, ಆತ್ಮ ವಿಶ್ವಾಸವ ತುಂಬುಸುತ್ತ°. “ನೀನು ದೈವೀಸಂಪತ್ತಿನ ಪೂರ್ಣಪ್ರಮಾಣದ ಆವಿಷ್ಕಾರ, ನಿನ್ನ ಸ್ವಭಾವ ಮತ್ತೆ ನೀನು ಹುಟ್ಟಿದ ಮನೆತನದ ಪ್ರಭಾವ ಒಂದಕ್ಕೊಂದು ಪೂರಕ. ಇದಕ್ಕಾಗಿ ನೀನು ಯೋಚಿಸೆಕ್ಕಾದ್ದಿಲ್ಲೆ”. ಹಾಂಗಾಗಿಯೇ ಭಗವಂತ° ಇಲ್ಲಿ ‘ಪಾಂಡವ’ ಹೇಳ್ವ ಪದಪ್ರಯೋಗವನ್ನೂ ಮಾಡಿದ್ದ. ಯೋಗ್ಯಮನೆತನಲ್ಲಿ (ಶ್ರೇಷ್ಠಮನತನಲ್ಲಿ ಹುಟ್ಟಿದ ನೀನು ದೈವೀಕಗುಣಂಗಳ ಹೊಂದಿಪ್ಪವ° ಹೇಳ್ವ ಧ್ವನಿ.

ಅರ್ಜುನ ಯುದ್ಧಲ್ಲಿ ತೊಡಗುವದು ಆಸುರೀ ವೃತ್ತಿ ಅಲ್ಲ. ಎಂತಕೆ ಹೇಳಿರೆ ಅವ° ಅದರ ಸಾಧಕಬಾಧಕಂಗಳ ಕುರಿತು ಚಿಂತಿಸುತ್ತ°. ಭೀಷ್ಮದ್ರೋಣರಂತ ಗೌರವಾರ್ಹರ ಕೊಲ್ಲೆಕೋ ಬೇಡದೋ ಹೇಳಿ ಯೋಚನೆಲ್ಲಿ ನಿಂದ ಅವ° ಕೋಪ, ಒಣಪ್ರತಿಷ್ಠೆ ಅಥವಾ ಕ್ರೌರ್ಯದ ಪ್ರಭಾವಂದ ಕ್ರಿಯೆಲಿ ತೊಡಗಿದ್ದನಿಲ್ಲೆ. ಹಾಂಗಾಗಿ ಅವ° ಆಸೂರೀಸಂಪದ° ಅಲ್ಲ. ಕ್ಷತ್ರಿಯನಾದವ° ಧರ್ಮ ಕಾಪಾಡ್ಳೆ ಶತ್ರುಗಳ ನಿಗ್ರಹಿಸುವದು ದಿವ್ಯಗುಣ, ಅಂತಹ ಕರ್ತವ್ಯವ ಮಾಡದ್ದಿಪ್ಪದು ಆಸುರೀ ಗುಣ. ಹಾಂಗಾಗಿ ಭಗವಂತ° ಅಕೇರಿಗೆ ಅರ್ಜುನಂಗೆ ಧೈರ್ಯವ ತುಂಬಿದ್ದದು – ‘ಮಾ ಶುಚಃ’ – ಚಿಂತಿಸೆಕ್ಕಾದ್ದಿಲ್ಲೆ,.

ಶ್ಲೋಕ

ದ್ವೌ  ಭೂತಸರ್ಗೌ ಲೋಕೋsಸ್ಮಿನ್ ದೈವ ಆಸುರ ಏವ ಚ ।
ದೈವೋ ವಿಸ್ತರಶಃ ಪ್ರೋಕ್ತ ಆಸುರಂ ಪಾರ್ಥ ಮೇ ಶೃಣು ॥೦೬॥

ಪದವಿಭಾಗ

ದ್ವೌ ಭೂತ-ಸರ್ಗೌ ಲೋಕೇ ಅಸ್ಮಿನ್ ದೈವಃ ಆಸುರಃ ಏವ ಚ । ದೈವಃ ವಿಸ್ತರಶಃ ಪ್ರೋಕ್ತಃ ಆಸುರಮ್ ಪಾರ್ಥ ಮೇ ಶೃಣು ॥

ಅನ್ವಯ

ಹೇ ಪಾರ್ಥ!, ಅಸ್ಮಿನ್ ಲೋಕೇ ದೈವಃ ಆಸುರಃ ಚ ಏವ ದ್ವೌ । ಭೂತ-ಸರ್ಗೌ ದೈವಃ ವಿಸ್ತರಶಃ ಪ್ರೋಕ್ತಃ ಆಸುರಂ ಮೇ ಶೃಣು ।

ಪ್ರತಿಪದಾರ್ಥ

ಹೇ ಪಾರ್ಥ!, – ಏ ಪೃಥೆಯ ಮಗನಾದ ಅರ್ಜುನ°!, ಅಸ್ಮಿನ್ ಲೋಕೇ -ಈ ಸೃಷ್ಟಿಲಿ (ಲೋಕಲ್ಲಿ), ದೈವಃ – ದೈವೀ ವರ್ಗ, ಆಸುರಃ – ಆಸುರೀ ವರ್ಗ, ಚ – ಕೂಡ, ಏವ – ಖಂಡಿತವಾಗಿಯೂ, ದ್ವೌ – ಎರಡು ವಿಧ, ಭೂತ-ಸರ್ಗೌ – ಸೃಷ್ಟಿಸಿದ ಜೀವಿಗೊ, ದೈವಃ – ದೈವಿಕವು, ವಿಸ್ತರಶಃ ಪ್ರೋಕ್ತಃ – ವಿಸ್ತಾರವಾಗಿ ಹೇಳಲ್ಪಟ್ಟಿದು, ಆಸುರಮ್ – ಆಸುರಿಯ, ಮೇ ಶೃಣು – ಎನ್ನಿಂದ ಕೇಳು.

ಅನ್ವಯಾರ್ಥ

ಹೇ ಪಾರ್ಥ!, – ಏ ಪೃಥೆಯ ಮಗನಾದ ಅರ್ಜುನ°!, ಈ ಸೃಷ್ಟಿಲಿ (ಲೋಕಲ್ಲಿ) ದೈವೀವರ್ಗ, ಆಸುರೀವರ್ಗ ಹೇದು ಎರಡುಬಗೆ ಜೀವಸೃಷ್ಟಿಗೊ ಇದ್ದು.  ದೈವೀಕದ ಬಗ್ಗೆ ವಿಸ್ತಾರವಾಗಿ ಹೇಳಿದ್ದಾತು, ಇನ್ನು ಆಸುರಿ ಸ್ವಭಾವದ ಕುರಿತು ಎನ್ನಂದ ಕೇಳು.

ತಾತ್ಪರ್ಯ / ವಿವರಣೆ

ಅರ್ಜುನ ದೈವೀಕಗುಣಂಗಳ ಹೊಂದಿದವ ಹೇಳಿ ಆಶ್ವಾಸನೆಯ ಕೊಟ್ಟ ಭಗವಂತ ಮತ್ತೆ ಮುಂದುವರ್ಸಿ ಹೇಳುತ್ತ° – ಈ ಪ್ರಪಂಚಲ್ಲಿ ಬದ್ಧ ಜೀವಿಗಳ ದೈವೀಕ ವರ್ಗ, ಆಸುರೀ ವರ್ಗ ಹೇದು ಎರಡು ಬಗೆ. ದೈವೀಕ ಗುಣಂಗಳೊಡನೆ ಜನಿಸಿದವ°  ಶಾಸ್ತ್ರೋಕ್ತ ಜ್ಞಾನಪ್ರಕಾಶದ ಅಡಿಲಿ ಪ್ರಜ್ಞಾಪೂರ್ವಕವಾಗಿ ನಿಯಂತ್ರಿತ ಬದುಕಿನ ಅಳವಡಿಸಿಗೊಂಡು ಮೋಕ್ಷದ ಮಾರ್ಗಲ್ಲಿ ಮುನ್ನೆಡವಲೆ ಪ್ರಯತ್ನಿಸುತ್ತ°. ಇದರ ಪಾಲುಸದ್ದೆ, ತಿಳಿಯದ್ದೆ, ತನ್ನಿಚ್ಚೆ ಹಾಂಗೆ ನಡವವು ಆಸುರೀಗುಣದವು. ಇವು ಭಗವಂತಂಗೆ ಬೆನ್ನು ಹಾಕಿ ನಡವವು. ದೈವೀಕಗುಣ ಮೋಕ್ಷಕ್ಕೆ ದಾರಿ ಹೇಳ್ವದರ ತಿಳುದ ಮತ್ತೆ ಆಸುರೀಗುಣದ ವಿಚಾರವಾಗಿಯೂ ಭಗವಂತ° ಮುಂದೆ ಹೇಳ್ಳೆ ಮುಂದಾವ್ತ°. ಅದರ ಪಾರ್ಥನಾಗಿ ನೀನು ಎನ್ನತ್ರಂದ ಕೇಳು ಹೇಳಿ ಭಗವಂತ° ಮುಂದೆ ಹೇಳ್ತ° –

ಶ್ಲೋಕ

ಪ್ರವೃತ್ತಿಂ ಚ ನಿವೃತ್ತಿಂ ಚ ಜನಾ ನ ವಿದುರಾಸುರಾಃ ।
ನ ಶೌಚಂ ನಾಪಿ ಚಾಚಾರೋ ನ ಸತ್ಯಂ ತೇಷು ವಿದ್ಯತೇ ॥೦೭॥

ಪದವಿಭಾಗ

ಪ್ರವೃತ್ತಿಮ್ ಚ ನಿವೃತ್ತಿಮ್ ಚ ಜನಾಃ ನ ವಿದುಃ ಆಸುರಾಃ । ನ ಶೌಚಮ್ ನ ಅಪಿ ಚ ಆಚಾರಃ ನ ಸತ್ಯಮ್ ತೇಷು ವಿದ್ಯತೇ ॥

ಅನ್ವಯ

ಆಸುರಾಃ ಜನಾಃ ಪ್ರವೃತ್ತಿಂ ಚ ನಿವೃತ್ತಿಂ ಚ ನ ವಿದುಃ, ತೇಷು ಚ ನ ಶೌಚಮ್, ನ ಆಚಾರಃ, ನ ಅಪಿ ಸತ್ಯಂ ವಿದ್ಯತೇ ।

ಪ್ರತಿಪದಾರ್ಥ

ಆಸುರಾಃ ಜನಾಃ – ಆಸುರೀಗುಣಂಗಳಿಪ್ಪ ಜೆನಂಗೊ, ಪ್ರವೃತ್ತಿಮ್ ಚ – ನೇರ್ಪಕ್ಕೆ ವರ್ತಿಸುವದರನ್ನೋ, ನಿವೃತ್ತಿಮ್ ಚ – ಸಮಂಜಸವಾಗಿ ಮಾಡದ್ದಿಪ್ಪದರನ್ನೋ, ನ ವಿದುಃ – ತಿಳಿದಿರುತ್ತವಿಲ್ಲೆ, ತೇಷು – ಅವರಲ್ಲಿ, ಚ – ಕೂಡ, ನ ಶೌಚಮ್ – ಶುಚಿತ್ವವೂ ಇಲ್ಲೆ, ನ ಆಚಾರಃ – ಆಚಾರವೂ ಇಲ್ಲೆ, ನ ಅಪಿ ಸತ್ಯಂ ವಿದ್ಯತೇ – ಸತ್ಯವೂ ಕೂಡ ಇರುತ್ತಿಲ್ಲೆ.

ಅನ್ವಯಾರ್ಥ

ಆಸುರೀ ಪ್ರಕೃತಿಯ ಜೆನಂಗೊಕ್ಕೆ ಪ್ರವೃತ್ತಿಯಾಗಲೀ ನಿವೃತ್ತಿಯಾಗಲೀ (ಎಂತರ ಮಾಡೇಕು, ಎಂತರ ಮಾಡ್ಳಾಗ ಹೇಳ್ವದಾಗಲೀ) ಗೊಂತಿರುತ್ತಿಲ್ಲೆ. ಅವರಲ್ಲಿ ಶುಚಿತ್ವವೋ, ಆಚಾರವೋ (ಸನ್ನಡತೆಯೋ), ಸತ್ಯವೂ ಕೂಡ ಇರುತ್ತಿಲ್ಲೆ.

ತಾತ್ಪರ್ಯ / ವಿವರಣೆ

ಪ್ರತಿಯೊಂದು ನಾಗರಿಕ ಮಾನವ ಸಮಾಜಲ್ಲಿ ಮದಲಿಂದಲೇ ನಡೆಶಿಗೊಂಡು ಬಂದಿಪ್ಪ ಧಾರ್ಮಿಕ ಗ್ರಂಥಂಗಳ ನಿಯಮ ನಿಬಂಧನೆಗೊ ಇರುತ್ತು. ಆರ್ಯರು ವೈದಿಕ ನಾಗರಿಕತೆಯ ಸ್ವೀಕರುಸಿ ಅತ್ಯಂತ ಉನ್ನತ ನಾಗರಿಕತೆಯ ಜನಂಗೊ ಹೇದು ಪ್ರಸಿದ್ಧರಾಯ್ದವು. ವಿಶೇಷವಾಗಿ ಅವರಲ್ಲಿ ಧರ್ಮಗ್ರಂಥಂಗಳ ಆದೇಶವ ಅನುಸರುಸದ್ದೆ ಇಪ್ಪವರ ಅಸುರರು ಹೇದು ಹೇದವು. ಅವಕ್ಕೆ ಧರ್ಮಗ್ರಂಥಂಗಳ ಒಲವೂ ಇಲ್ಲೆ., ಶಾಸ್ತ್ರಂಗಳ ನಿಯಮಂಗಳೂ ಅರ್ಥೈಸಿಗೊಂಬ ಶಕ್ತಿಯೂ ಇಲ್ಲೆ. ಹಾಂಗಾಗಿ ಅವಕ್ಕೆ ಪ್ರವೃತ್ತಿ, ಶ್ರದ್ಧೆ,  ಇಲ್ಲೆ. ಎಂತರ ಮಾಡ್ಳಕ್ಕು , ಎಂತರ ಮಾಡ್ಳಾಗ ಹೇಳ್ವ ಪರಿಜ್ಞಾನವೇ ಇರ್ತಿಲ್ಲೆ. ಬಹಿರಂಗವಾಗಿಯೋ ಅಂತರಂಗವಾಗಿಯೋ ಶುಚಿತ್ವಊ ಇಲ್ಲೆ. ಸತ್ಯ ಹೇಳ್ವದು ಎಂತರ ಹೇಳಿಯೇ ಗೊಂತಿಲ್ಲೆ. ಸಮಯಕ್ಕೆ ತಕ್ಕ ಹಾಂಗೆ ನಡಕ್ಕೊಂಬ ಅವರ ಸ್ವೇಚ್ಛರು ಹೇಳಿಯೇ ಹೇಳ್ಳಕ್ಕು. ನ್ಯಾಯ-ಅನ್ಯಾಯದ ಗೊಡವೇಯೇ ಇಲ್ಲದ್ದ ಅವಕ್ಕೆ ಸ್ವಯಂಲಾಭದ ಚಿಂತನೆಯೇ ಸದಾ. ನೈರ್ಮಲ್ಯರಹಿತರಾದ ಅವು ಒಳ್ಳೆಯ ನಡೆ ನುಡಿಗಳ ಗೊಡವೆ ಇಲ್ಲದ್ದೋರು ಆಗಿರ್ತವು. ಶುದ್ಧರಂತೆ ನಾಟಕವಾಡಿಗೊಂಡು ಪ್ರಾಮಣಿಕತೆಯ ಗಂಧಗಾಳಿ ಇಲ್ಲದ್ದೆ ಬದುಕುವ ಅವರ ಜೀವನ ಐಹಿಕ ನಾಟಕವೇ ಸರಿ.

ಈ ಆಸುರೀ ಪ್ರವೃತ್ತಿಯವು ಎಂತ ಮಾಡುತ್ತವು ಹೇದರೆ –

ಶ್ಲೋಕ

ಅಸತ್ಯಮಪ್ರತಿಷ್ಠಂ ತೇ ಜಗದಾಹುರನೀಶ್ವರಮ್ ।
ಅಪರಸ್ಪರಸಂಭೂತಂ ಕಿಮನ್ಯತ್ಕಾಮಹೈತುಕಮ್ ॥೦೮॥

ಪದವಿಭಾಗ

ಅಸತ್ಯಮ್ ಅಪ್ರತಿಷ್ಠಮ್ ತೇ ಜಗತ್ ಆಹುಃ ಅನೀಶ್ವರಮ್ । ಅಪರಸ್ಪರ-ಸಂಭೂತಮ್ ಕಿಮ್ ಅನ್ಯತ್ ಕಾಮ-ಹೈತುಕಮ್ ॥

ಅನ್ವಯ

(ಇದಂ) ಜಗತ್ ಅಸತ್ಯಮ್, ಅಪ್ರತಿಷ್ಠಮ್, ಅನೀಶ್ವರಮ್, ಅಪರಸ್ಪರ-ಸಂಭೂತಮ್, ಕಾಮ-ಹೈತುಕಮ್ (ಚ ಅಸ್ತಿ) ಅನ್ಯತ್ ಕಿಂ (ಇತಿ) ತೇ ಆಹುಃ ।

ಪ್ರತಿಪದಾರ್ಥ

(ಇದಮ್) ಜಗತ್ – ಈ ಜಗತ್ತು, ಅಸತ್ಯಮ್ – ನಿಜವಲ್ಲದ್ದು, ಅಪ್ರತಿಷ್ಠಮ್ – ಆಧಾರ ಇಲ್ಲದ್ದು, ಅನೀಶ್ವರಮ್ – ನಿಯಂತ್ರಕಯಿಲ್ಲದ್ದು, ಅಪರಸ್ಪರ-ಸಂಭೂತಮ್ – ಕಾರಣವಿಲ್ಲದ್ದೆ ಹುಟ್ಟಿದ್ದದು, ಕಾಮ-ಹೈತುಕಮ್ (ಚ ಅಸ್ತಿ) – ಕಾಮನಿಮಿತ್ತವಾದ್ದು, ಅನ್ಯತ್ ಕಿಮ್ (ಇತಿ) ಅಲ್ಲದ್ದೆ ಬೇರೆಂತರ ಹೇದು, ತೇ ಆಹುಃ – ಅವು ಹೇಳುತ್ತವು.

ಅನ್ವಯಾರ್ಥ

ಈ ಜಗತ್ತು ಅಸತ್ಯ, ಅದಕ್ಕೆ ಆಧಾರ ಇಲ್ಲೆ, ಅದರ ನಿಯಂತ್ರುಸುವ ಈಶ್ವರ° ಇಲ್ಲೆ, ಇದು ಕಾಮಂದ ಹುಟ್ಟಿದ್ದದು, ಕಾಮನಿಮಿತ್ತವಾದ್ದು ಅಲ್ಲದ್ದೆ ಇದಕ್ಕೆ ಬೇರವ ಕಾರಣವೂ ಇಲ್ಲೆ ಹೇದು ಅವು ಹೇಳುತ್ತವು.

ತಾತ್ಪರ್ಯ / ವಿವರಣೆ

ರಾಕ್ಷಸರು (ಆಸುರೀ ಗುಣದವು) ಈ ಪ್ರಪಂಚವ ಕಾಲ್ಪನಿಕ ದೃಶ್ಯಂಗಳ ಮಾಲೆ ಹೇದಷ್ಟೇ ತಿಳಿತ್ತವು. ಇದಕ್ಕೆ ಕಾರ್ಯಕಾರಣ ಇಲ್ಲೆ, ನಿಯಂತ್ರಕ ಒಬ್ಬ ಇಲ್ಲೆ, ಇದಕ್ಕೆ ಉದ್ದೇಶವೂ ಇಲ್ಲೆ. ಎಲ್ಲವೂ ಅವಾಸ್ತವ / ಸುಳ್ಳು. ಈ ವಿಶ್ವದ ಅಭಿವ್ಯಕ್ತಿ ಆಕಸ್ಮಿಕವಾದ ಕ್ರಿಯೆ, ಪ್ರತಿಕ್ರಿಯೆಂದ ಮೂಡುತ್ತದು ಹೇದು ಅವರ ವಾದ. ಜಗತ್ತಿನ ದೇವರು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಸೃಷ್ಟಿಸಿದ ಹೇದು ಅವು ತಿಳಿತ್ತವಿಲ್ಲೆ. ಅವಕ್ಕೆ ಅವರದ್ದೇ ಸಿದ್ಧಾಂತ. ಜಗತ್ತು ತನ್ನಷ್ಟಕ್ಕೆ ಆದ್ದು ಹೇದು ಅವರ ನಂಬಿಕೆ. ಅದರ ಹಿಂದೆ ನಿಯಂತ್ರಕ ಶಕ್ತಿ ದೇವರು (ಈಶ್ವರ) ಇದ್ದ° ಹೇಳ್ವದರ ಅವು ತಿಳಿತ್ತವಿಲ್ಲೆ. ಅವರು ಪರಮಾತ್ಮನನ್ನೂ ಒಪ್ಪುತ್ತವಿಲ್ಲೆ. ಈ ಎಲ್ಲವೂ ಜಡವಸ್ತುಗೊ, ಇಡೀ ವಿಶ್ವ ಅಜ್ಞಾನದ ಮುದ್ದೆ ಹೇದು ಅವು ಗ್ರೇಶುತ್ತವು.  ಭಗವಂತ° ಗೀತೆಲಿ ಹೇಳಿದ “ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚಾರಾಚರಮ್” – ‘ಇಡೀ ಐಹಿಕ ಪ್ರಪಂಚ ಎನ್ನ ಆದೇಶಕ್ಕೆ ಅನುಗುಣವಾಗಿ ಮುಂದುವರಿತ್ತು’ ಹೇಳ್ವ ಮಾತಿಲ್ಲಿ ಕಿಂಚಿತ್ತೂ ನಂಬಿಕೆ ಇಲ್ಲೆ. ಪರಮಾತ್ಮನನ್ನೇ ಒಪ್ಪದ ಮತ್ತೆ ಪರಮಾತ್ಮನ ನುಡಿಗಳ ಅವು ನಂಬುವುದಾದರೂ ಎಲ್ಲಿಂದ!.

ಬನ್ನಂಜೆ ವ್ಯಾಖ್ಯಾನಿಸುತ್ತವು – ಆಸುರೀ ಸ್ವಭಾವದವು ಈ ವಿಶ್ವ ಸತ್ಯಸ್ವರೂಪನಾದ ಭಗವಂತನ ಕೊಡುಗೆ ಹೇಳ್ವದರ ಒಪ್ಪುತ್ತವಿಲ್ಲೆ. ಅವಕ್ಕೆ ಇದೊಂದು ಸುಳ್ಳಿನ ಕಂತೆ ಅಷ್ಟೇ. ಇದು ಭಗವಂತನಲ್ಲಿ ನೆಲೆಗೊಂಡಿದ್ದು. ಇದಕ್ಕೆ ಆಧಾರ ಭಗವಂತ° ಇದ್ದ ಹೇಳ್ವದು ಅವಕ್ಕೆ ಸಮ್ಮತವಲ್ಲ. ಇದಕ್ಕೆ ಆಧಾರವೇ ಇಲ್ಲೆ ಹೇಳ್ವದು ಅವರ ತರ್ಕ. ಇದರ ನಿಯಂತ್ರುಸುವವ° ಸರ್ವಶಕ್ತನಾದ, ಸರ್ವಗತನಾದ, ಸರ್ವಾಂತರ್ಯಾಮಿಯಾದ ‘ಈಶ್ವರ°’ ಹೇಳ್ವದು ಹುರುಳಿಲ್ಲದ ಮಾತು ಹೇಳಿ ಅವರ ನಿಶ್ಚಯ. ಒಂದರಿಂದ ಮತ್ತೆ ಇನ್ನೊಂದು ಕ್ರಮವಾಗಿ ಹುಟ್ಟಿಗೊಂಡತ್ತು ಹೇಳ್ವದರನ್ನೂ ಅವು ಒಪ್ಪುತ್ತವಿಲ್ಲೆ. ಇದೆಲ್ಲ ಆಕಸ್ಮಿಕ ಘಟನೆ ಅವಕ್ಕೆ. ಅವರ ದೃಷ್ಟಿಲಿ ಈ ಸೃಷ್ಟಿ ಬೇರೆಯೇ ರೀತಿ. ಇದೊಂದು ಕಾಮದ ಕೂಸು, ಮಾಯಾಸೃಷ್ಟಿ ಅಲ್ಲದ್ದೆ ಬೇರೆಂತದೂ ಅಲ್ಲ ಹೇಳ್ವದು ಅವರ ಚಿಂತನೆಗೊ.

ಬನ್ನಂಜೆ ಇನ್ನೊಂದು ವಿಚಾರದತ್ತೆಯೂ ಬೆಳಕುಚೆಲ್ಲುತ್ತವು – ಅಸುರರಲ್ಲಿ ಎರಡು ವಿಧ. ಜಗತ್ತಿಂಗೆ ಇನ್ನೊಂದು ಸತ್ಯ ಇಲ್ಲೆ, ಜಗತ್ತಿಂಗೆ ಇನ್ನೊಂದು ಪ್ರತಿಷ್ಠೆ ಇಲ್ಲೆ, ಜಗತ್ತಿಂಗೆ ಒಬ್ಬ° ಈಶ್ವರ° ಇಲ್ಲೆ ಹೇಳ್ವ ನಾಸ್ತಿಕತೆಯ ತಿಳುವಳಿಕೆಲಿ ಇಪ್ಪವು ಒಂದು ವರ್ಗ. ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಒಳಪಡುಸುವ ಶಕ್ತಿ (ಸತ್ಯ) ಇಲ್ಲೆ ಹೇಳ್ವದು ಇವು ನಂಬಿರುತ್ತವು. ಜಗತ್ತಿಂಗೆ ಆಧಾರವಾಗಿ ಒಬ್ಬ° ದೇವರು ಇಲ್ಲೆ, ಹಾಂಗಾಗಿ ಜಗತ್ತು ನಿರೀಶ್ವರ (ನಿಯಂತ್ರುಸುವ ಸ್ವಾಮಿ ಇಲ್ಲೆ), ಎಲ್ಲವೂ ಭ್ರಮೆ ಹೇಳಿ ಅವರ ವಾದ. ಸೃಷ್ಟಿಚಕ್ರ ಸಿದ್ಧಾಂತ ಒಂದು ಮೂಖತನದ ಹೇಳಿಕೆ ಹೇಳ್ವದು ಅವರ ಅಭಿಪ್ರಾಯಂಗೊ.

ಇನ್ನೊಂದು ವಿಧದ ಅಸುರರು – ಈ ಜಗತ್ತಿಲ್ಲಿ ನವಗೆ ಎಂತ ಕಾಣುತ್ತೋ ಅದು ಕೇವಲ ನಮ್ಮ ಭ್ರಮೆ ಹೇದು ಶೂನ್ಯವಾದಿಗೊ. ಇವರ ಪ್ರಕಾರ ಈ ಪ್ರಪಂಚ ನಮ್ಮ ಬಯಕೆಗಳಿಂದಾಗಿ ಬೆಳೆತ್ತದು ಹೊರತು ಇನ್ನೊಂದು ಶಕ್ತಿಂದ ಅಲ್ಲ ಹೇಳ್ವ ತರ್ಕ.

ಶ್ಲೋಕ

ಏತಾಂ ದೃಷ್ಟಿಮವಷ್ಟಾಭ್ಯ ನಷ್ಟಾತ್ಮನೋsಲ್ಪಬುದ್ಧಯಃ ।
ಪ್ರಭವಂತ್ಯುಗ್ರಕರ್ಮಾಣಃ ಕ್ಷಯಾಯ ಜಗತೋsಹಿತಾಃ ॥೦೯॥

ಪದವಿಭಾಗ

ಏತಾಮ್ ದೃಷ್ಟಿಮ್ ಅವಷ್ಟಭ್ಯ ನಷ್ಟ-ಆತ್ಮಾನಃ ಅಲ್ಪ-ಬುದ್ಧಯಃ । ಪ್ರಭವಂತಿ ಉಗ್ರ-ಕರ್ಮಾಣಃ ಕ್ಷಯಾಯ ಜಗತಃ ಅಹಿತಾಃ ॥

ಅನ್ವಯ

ಏತಾಂ ದೃಷ್ಟಿಮ್ ಅವಷ್ಟಭ್ಯ ನಷ್ಟ-ಆತ್ಮಾನಃ, ಅಲ್ಪ-ಬುದ್ಧಯಃ, ಉಗ್ರ-ಕರ್ಮಾಣಃ, ಅಹಿತಾಃ ಜಗತಃ ಕ್ಷಮಾಯ ಪ್ರಭವಂತಿ ।

ಪ್ರತಿಪದಾರ್ಥ

ಏತಾಮ್ ದೃಷ್ಟಿಮ್ – ಈ ದೃಷ್ಟಿಯ, ಅವಷ್ಟಭ್ಯ – ಸ್ವೀಕರಿಸಿ, ನಷ್ತ-ಆತ್ಮಾನಃ – ತಮ್ಮನ್ನೇ ಕಳಕ್ಕೊಂಡು, ಅಲ್ಪ-ಬುದ್ಧಯಃ – ಮಂದಮತಿಗೊ, ಉಗ್ರ-ಕರ್ಮಾಣಃ – ದುಃಖಮಯ ಕಾರ್ಯಂಗಳಲ್ಲಿ ನಿರತರಾಗಿ, ಅಹಿತಾಃ ಜಗತಃ – ಜಗತ್ತಿನ ಅಹಿತಕರಾಗಿ, ಕ್ಷಯಾಯ ಪ್ರಭವಂತಿ – ನಾಶಕ್ಕಾಗಿ ಬೆಳೆತ್ತವು.

ಅನ್ವಯಾರ್ಥ

ಈ ರೀತಿಯ ಆಸುರೀ ಸಿದ್ಧಾಂತ ದೃಷ್ಟಿಯ ಹೊಂದಿ / ಅನುಸರುಸಿ/ ಸ್ವೀಕರುಸಿ ರಾಕ್ಷಸೀ ಸ್ವಭಾವದು ತಮ್ಮತನವ ಕಳಕ್ಕೊಂಡು ಮಂದಮತಿಗಳಾಗಿ ಜಗತ್ತಿಲ್ಲಿ ಅಹಿತಕಾರ, ದುಃಖಮಯ ಕಾರ್ಯಂಗಳಲ್ಲಿ ನಿರತರಾಗಿ  ಜಗತ್ತಿನ  ನಾಶಕ್ಕೆ ಕಾರಣರಾವುತ್ತವು.

ತಾತ್ಪರ್ಯ / ವಿವರಣೆ

ಈ ರೀತಿಯ ತಾಮಸೀ ನಿಲುವ ಹೊತ್ತುಗೊಂಡು ತಮ್ಮ ವಿವೇಕವನ್ನೇ ಕಳಕ್ಕೊಂಡ (ನಷ್ಟ-ಆತ್ಮಾನಃ) ಅರಿವು ತಿಳಿಗೇಡಿಗೊ ಒರಟು ನಡತೆ ಕಾರ್ಯಂಗಳಿಂದ ಜಗದ ನಾಶಕ್ಕೆ ಕಾರಣರಾವ್ತವು. ಇಲ್ಲಿ ಗಮನುಸೆಕ್ಕಾದ್ದು ಭಗವಂತ° ಹೇಳಿಪ್ಪಂತೆ ದೈವೀಕ ಗುಣ ಇಲ್ಲದ್ರೆ ಅಪ್ಪದೆಂತರ ಹೇಳಿ ತಿಳ್ಕೊಂಬಲಕ್ಕು. ಭಗವಂತನಿಂದ ವಿಮುಖರಪ್ಪ ಅವು ಜಗತ್ತಿಲ್ಲಿ ಸ್ವೇಚ್ಛಾ ಪ್ರವೃತ್ತಿಂದಲಾಗಿ ಜ್ಞಾನಾರ್ಜನೆಯೂ ಇಲ್ಲದ್ದೆ ತಮ್ಮ ಅಭಿವೃದ್ಧಿಯ ಕಂಡುಗೊಂಬಲೆ ಎಡಿಗಾಗದ್ದೆ ತನ್ನನ್ನೇ ನಾಶದತ್ತೆ ತಳ್ಳಲ್ಪಡುತ್ತದಕ್ಕೆ ಕಾರಣರಾವ್ತವು. ಮಾಂತ್ರ ಅಲ್ಲ ಅವರ ಉಗ್ರಗಾಮಿ ಚಟುವಟಿಕೆಗೊಜಗತ್ತಿನ ನಾಶಕ್ಕೆ ಕಾರಣ ಆವ್ತು. ಈ ರೀತಿಯ ಮನೋವೃತ್ತಿಯಿಪ್ಪ ಮನುಷ್ಯರು ಅಸುರರೇ ಸರಿ.   ಉಗ್ರಗಾಮಿ ಚಟುವಟಿಕೆ ಲೋಕ ವಿನಾಶವ ತಂದೊಡ್ಡುತ್ತು ಹೇಳ್ವದರ ಭಗವಂತ° ಅಂದೇ ಎಚ್ಚರಿಸಿದ್ದ°. ಹಾಂಗಾಗಿ ಹಿಂಸೆ, ಕ್ರೌರ್ಯ ಸಮಾಜಲ್ಲಿ ವ್ಯಕ್ತಿಗತವಾಗಿಯೂ ಸಮಾಜ ಹಿತವಾಗಿಯೂ ಶ್ರೇಯಸ್ಸಲ್ಲ. ಇದರಿಂದ ಲೋಕಕ್ಕೆ ನಾಶವೇ ಹೊರತು ಹಿತ ಇಲ್ಲೆ.

ಶ್ಲೋಕ

ಕಾಮಮಾಶ್ರಿತ್ಯ ದುಷ್ಪೂರಂ ದಂಭಮಾನಮದಾನ್ವಿತಾಃ ।
ಮೋಹಾದ್ಗೃಹೀತ್ವಾಸದ್ಗ್ರಾಹಾನ್ಪ್ರವರ್ತಂತೇsಶುಚಿವ್ರತಾಃ ॥೧೦॥

ಪದವಿಭಾಗ

ಕಾಮಮ್ ಆಶ್ರಿತ್ಯ ದುಷ್ಪೂರಮ್ ದಂಭ-ಮಾನ-ಮದ-ಆನ್ವಿತಾಃ । ಮೋಹಾತ್ ಗೃಹೀತ್ವಾ ಅಸತ್ ಗ್ರಾಹಾನ್ ಪ್ರವರ್ತಂತೇ ಅಶುಚಿ-ವ್ರತಾಃ ॥೧೦॥

ಅನ್ವಯ

ದುಷ್ಪೂರಂ ಕಾಮಮ್ ಆಶ್ರಿತ್ಯ, ಮೋಹಾತ್ ಅಸತ್ ಗ್ರಾಹಾನ್ ಗೃಹೀತ್ವಾ, ಅಶುಚಿ-ವ್ರತಾಃ ದಂಭ-ಮಾನ-ಮದ-ಆನ್ವಿತಾಃ ಪ್ರವರ್ತಂತೇ ।

ಪ್ರತಿಪದಾರ್ಥ

ದುಷ್ಪೂರಮ್ ಕಾಮಮ್ – ಪೂರೈಸಲಾಗದ್ದ ಕಾಮವ, ಆಶ್ರಿತ್ಯ – ಆಶ್ರಯಿಸಿ, ಮೋಹಾತ್ – ಭ್ರಮೆಂದ, ಅಸತ್ ಗ್ರಾಹಾನ್ – ಅಸತ್ಯ/ಅಶಾಶ್ವತವಾದ ವಸ್ತುಗಳ, ಗೃಹೀತ್ವಾ – ಗ್ರೇಶಿ, ಅಶುಚಿ-ವ್ರತಾಃ – ಕೊಳಕ್ಕು ವರ್ತನೆಯುಳ್ಳವು, ದಂಭ-ಮಾನ-ಮದ-ಆನ್ವಿತಾಃ – ಗರ್ವ-ಮಿಥ್ಯಾಮರ್ಯಾದಿ,ಮದಂಗಳಿಂದೊಡಗೂಡಿ, ಪ್ರವರ್ತಂತೇ – ಪ್ರವೃತ್ತಿಸುತ್ತವು (ಮೆರೆತ್ತವು)

ಅನ್ವಯಾರ್ಥ

ಆಸೂರೀ ಸ್ವಭಾವದವು ಪೂರೈಸಲಾಗದ್ದ ಕಾಮವ ಆಶ್ರಯಿಸಿ ಡಂಭ ಒಣಪ್ರತಿಷ್ಠೆಗಳಲ್ಲಿ ಮೈಮರದು ಮತ್ತೂ ಮೋಹಂದ ಅಸತ್ಯವನ್ನೇ ಸತ್ಯ ಹೇದು ಗ್ರೇಶಿಗೊಂಡು ಮದಾನ್ವಿತರಾಗಿ ಅಶೌಚ (ಕೊಳಕ್ಕು) ವೃತ್ತಿಲ್ಲಿ ನಿರತರಾವುತ್ತವು.

ತಾತ್ಪರ್ಯ/ವಿವರಣೆ

ಆಸುರೀ ಸ್ವಭಾವದ ಮನೋಧರ್ಮವ ಇಲ್ಲಿ ವಿವರಿಸಲ್ಪಟ್ಟಿದು. ರಾಕ್ಷಸೀ ಸ್ವಭಾವದೋರ ಕಾಮಕ್ಕೆ ತೃಪ್ತಿಯೇ ಇಲ್ಲೆ. ಐಹಿಕ ಭೋಗಲ್ಲಿ ತೃಪ್ತಿಯೇ ಇಲ್ಲದ್ದ ಅವು ತಮ್ಮ ಬಯಕೆಗಳ ಬೆಳಶಿಗೊಂಡು ಬೆಳೆಶಿಗೊಂಡು ಹೋವುತ್ತವು. ಅಶಾಶ್ವತವಾದ ವಸ್ತುಗಳಲ್ಲಿ ತಲ್ಲೀನರಪ್ಪದರಿಂದ ಅವು ಸದಾ ಆತಂಕಲ್ಲೇ ತುಂಬಿಗೊಂಡಿರುತ್ತವು. ಎಷ್ಟು ಸಿಕ್ಕಿರೂ ಇನ್ನಷ್ಟು ಬೇಕಾತು ಹೇಳಿಯೇ ಅವಕ್ಕೆ ಗ್ರಹಿಕೆ ಅಪ್ಪದು. ಉದಾಹರಣಗೆ ಬನ್ನಂಜೆ ಹೇಳ್ತವು – ಕೆಲಸವೇ ಇಲ್ಲದ್ದಿಪ್ಪಗ ಒಂದು ಕೆಲಸ ಸಿಕ್ಕುಗೋ ಹೇದಾಶೆ., ಕೆಲಸ ಸಿಕ್ಕಿಯಪ್ಪಗ ಸಂಬಳ ಏವಾಗ ಸಿಕ್ಕುಗು ಹೇಳ್ವದರ್ಲೇ ಮನಸ್ಸು, ಸಂಬಳ ಸಿಕ್ಕಿಯಪ್ಪಗ ಹೆಚ್ಚು ಸಂಬಳ ಸಿಕ್ಕುಗೋ ಹೇಳ್ವ ನೋಟ, ಒಟ್ಟಿಂಗೆ ಇಪ್ಪವಂಗೆ ಹೆಚ್ಚು ಸಂಬಳ ಸಿಕ್ಕುತ್ತನ್ನೇದು ಹೇದು ಆತಂಕ… ಹೀಂಗೆ ಮುಂದುವರಿತ್ತಲೇ ಇರ್ತು. ಕಡೇಂಗೆ ತನ್ನ ಕೆಲಸವ ಮಾಡ್ಳೆ ಮನಸ್ಸು ತಲ್ಲೀನವಾಗಿರದ್ದೆ ಬೇಡದ್ದರಲ್ಲೇ ಮನಸ್ಸು ಕೇಂದ್ರೀಕೃತವಾಗಿ ತನ್ನ ಕೆಲಸವನ್ನೂ ನಿಷ್ಠೆಂದ ಮಾಡ್ಳೆ ಎಡಿಗಾಗದ್ದೆ ನಾಶಕ್ಕೆ ತಳ್ಲಲ್ಪಡುತ್ತದು. ಸಾಕು ಹೇಳ್ವದು ದೈವೀ ಸ್ವಭಾವ, ಬೇಕು ಹೇಳ್ವದು ಆಸುರೀ ಸ್ಸಭಾವ. ಹೀಂಗೆ ಆಸುರೀ ಸ್ವಭಾವದೋರು ಬಯಕೆಗಳ ಬೆನ್ನು ಹಿಡ್ಕೊಂಡು ತೀರದ ಬಯಕೆಯ ಈಡೇರಿಸಿಗೊಂಬಲೆ ಮಾಡ್ಳಾಗದ್ದ ಕಾರ್ಯಕ್ಕೆ ತೊಡಗುತ್ತವು. ಇವರ ಜೀವನವೇ ಡಂಭಾಚಾರ, ಬಿಗುಮಾನ, ದುರಹಂಕಾರ, ನಾಟಕೀಯಂದ ನಡೆ ನುಡಿಲಿ ಸ್ವಚ್ಛತೆ ಪ್ರಾಮಾಣಿಕತೆ ಇಲ್ಲದ್ದ ಕೊಳಕು ಬದುಕು ಇವರದ್ದಾವ್ತು.

ಶ್ಲೋಕ

ಚಿಂತಾಮಪರಿಮೇಯಾಂ ಚ ಪ್ರಲಯಾಂತಾಮುಪಾಶ್ರಿತಾಃ ।
ಕಾಮೋಪಭೋಗಪರಮಾ ಏತಾವದಿತಿ ನಿಶ್ಚಿತಾಃ ॥೧೧॥

ಆಶಾಪಾಶಶತೈರ್ಬದ್ಧಾಃ ಕಾಮಕ್ರೋಧಪರಾಯಣಾಃ ।
ಈಹಂತೇ ಕಾಮಭೋಗಾರ್ಥಮ್ ಅನ್ಯಾಯೇನಾರ್ಥಸಂಚಯಾನ್ ॥೧೨॥

ಪದವಿಭಾಗ

ಚಿಂತಾಮ್ ಅಪರಿಮೇಯಾಮ್ ಚ ಪ್ರಲಯಾಂತಾಮ್ ಉಪಾಶ್ರಿತಾಃ । ಕಾಮ-ಉಪಭೋಗ-ಪರಮಾಃ ಏತಾವತಿ ಇತಿ ನಿಶ್ಚಿತಾಃ ॥

ಆಶಾ-ಪಾಶ-ಶತೈಃ ಬದ್ಧಾಃ ಕಾಮ-ಕ್ರೋಧ-ಪರಾಯಣಾಃ । ಈಹಂತೇ ಕಾಮ-ಭೋಗಾರ್ಥಮ್ ಅನ್ಯಾಯೇನ ಅರ್ಥ-ಸಂಚಯಾನ್ ॥

ಅನ್ವಯ

(ತೇ) ಅಪರಿಮೇಯಾಂ ಪ್ರಲಯಾಂತಾಂ ಚಿಂತಾಮ್ ಉಪಾಶ್ರಿತಾಃ ಕಾಮ-ಉಪಭೋಗ-ಪರಮಾಃ ಚ ಏತಾವತ್ ಇತಿ ನಿಶ್ಚಿತಾಃ  ।

ಅಶಾ-ಪಾಶ-ಶತೈಃ ಬದ್ಧಾಃ, ಕಾಮ-ಕ್ರೋಧ-ಪರಾಯಣಾಃ, ಕಾಮ-ಭೋಗಾರ್ಥಮ್ ಅನ್ಯಾಯೇನ ಅರ್ಥ-ಸಂಚಯಾನ್ ಈಹಂತೇ ।

ಪ್ರತಿಪದಾರ್ಥ

ತೇ – ಅವು, ಅಪರಿಮೇಯಾಮ್ – ಪ್ರಮಾಣಕ್ಕೆ ಸಿಲುಕದ (ಲೆಕ್ಕಕ್ಕೆ ಸಿಕ್ಕದ್ದ/ಅಳತೆಗೆ ಸಿಕ್ಕದ್ದ), ಪ್ರಲಯಾಂತಾಮ್ (ಪ್ರಲಯ-ಅಂತಾಮ್)  – ಸಾಯ್ವನ್ನಾರ, ಚಿಂತಾಮ್ ಉಪಾಶ್ರಿತಾಃ – ಚಿಂತೆಯ (ಭಯ+ಆತಂಕ) ಆಶ್ರಯಿಸಿ, ಕಾಮ-ಉಪಭೋಗ-ಪರಮಾಃ – ಇಂದ್ರಿಯತೃಪ್ತಿಯೇ (ಕಾಮವೇ) ಜೀವನದ ಅತ್ಯುನ್ನತ ಗುರಿಯುಳ್ಳವರಾಗಿ, ಚ – ಕೂಡ, ಏತಾವತ್ ಇತಿ ನಿಶ್ಚಿತಾಃ – ಹೀಂಗೆ ಈ ರೀತಿಯಾಗಿ ಹೇದು ನಿಶ್ಚೈಸಿಗೊಂಡು,

ಅಶಾ-ಪಾಶ-ಶತೈಃ – ಆಶೆಯ ಬಲೆ ನೂರಾರಿಂದ, ಬದ್ಧಾಃ – ಬದ್ಧರಾಗಿ, ಕಾಮ-ಕ್ರೋಧ-ಪರಾಯಣಾಃ – ಕಾಮ-ಕ್ರೋಧಂಗಳ ಮನೋಭಾವಲ್ಲೇ ಏವತ್ತೂ ಇದ್ದುಗೊಂಡು  ಕಾಮ-ಭೋಗಾರ್ಥಮ್ – ಕಾಮದ ಬಯಕೆಗಾಗಿ / ಇಂದ್ರಿಯತೃಪ್ತಿಗಾಗಿ, ಅನ್ಯಾಯೇನ – ಅನ್ಯಾಯಂದ,  ಅರ್ಥ-ಸಂಚಯಾನ್ ಈಹಂತೇ – ಸಂಪತ್ತಿನ ಸಂಗ್ರವವ ಬಯಸುತ್ತವು.

ಅನ್ವಯಾರ್ಥ

ಆಸುರೀ ಸ್ವಭಾವದ ಅವು ಬದುಕ್ಕಿನ ಅಕೇರಿವರೆಗೂ ಅಳವಲೆಡಿಯದ್ದ ಚಿಂತೆ ಆತಂಕಂದ ಒಡಗೂಡಿ ಇಂದ್ರಿಯ ತೃಪ್ತಿಯೇ ಜೀವನದ ಗುರಿ ಹೇದು ನಿಶ್ಚೈಸಿಗೊಂಡು,

ನೂರಾರು ಅಶೆಯ ಬಲೆಯೊಳ ಸಿಕ್ಕಿಹಾಕಿಗೊಂಡವರಾಗಿ, ಕಾಮಕ್ರೋಧತತ್ಪರರಾಗಿ, ಇಂದ್ರಿಯ ತೃಪ್ತಿಗಾಗಿ ಅನ್ಯಾಯದ ರೀತಿಲಿ ಆರ್ಥಿಕ ಸಂಪಾದನೆಲಿ ತತ್ಪರರಾಗಿರುತ್ತವು.

ತಾತ್ಪರ್ಯ / ವಿವರಣೆ

ಇಂದ್ರಿಯ ಭೋಗವೇ ಬದುಕಿನ ಪರಮ ಗುರಿ ಹೇದು ರಾಕ್ಷಸೀ ಸ್ವಭಾವದೋರು ತಿಳುಕ್ಕೊಂಡಿರುತ್ತವು. ಸಾಯ್ವನ್ನಾರವೂ ಇದೇ ಪರಿಕಲ್ಪನೆಲಿ ಕಾಲಕಳೆತ್ತವು. ಸಾವಿನ ನಂತರದ ವಿಷಯಲ್ಲಿ ಅವಕ್ಕೇ ಏವ ನಂಬಿಕೆಯೂ ಇಲ್ಲೆ. ಹಾಂಗಾಗಿ ಮುಕ್ತಾಯ ಇಲ್ಲದ್ದ  ಬಯಕೆಯ ಈಡೇರಿಕೆಗಾಗಿ ನ್ಯಾಯಾನ್ಯಾಯದ ವಿವೇಚನೆ ಇಲ್ಲದ್ದೆ ಬಯಕೆಯ ಬೆನ್ನು ಹಿಡುಕ್ಕೊಂಡು ಸದಾ ಅದೇ ಚಿಂತೆಲಿ ಕಾಮಭೋಗ ವಿಷಯಲ್ಲಿ ತನ್ಮಯರಾಗಿ ಅದರ ಪಡವಲೆ (ಈಡೇರುಸಲೆ) ಆರ್ಥಿಕ ಸಂಪಾದೆನೆಲಿ ನಿರತರಾವುತ್ತವು. ದೈವೀಕ ಸ್ವಭಾವವೇ ಇಲ್ಲದ್ದ ಈ ಆಸುರೀ ಸ್ವಭಾವದೋರು ತನ್ನೊಳ ಆತ್ಮನಾಗಲೀ ಪರಮಾತ್ಮನಾಗಲಿ ಇಪ್ಪದರ ನಂಬಿಕೆ ಇಲ್ಲದ್ದೆ ಇಂದ್ರಿಯ ತೃಪ್ತಿಗಾಗಿ ಎಲ್ಲ ವಿಧಧ ಪಾಪಕರ್ಮಂಗಳ ಮಾಡುತ್ತವು. ಅವು ತೊಡಗುವ ದಾರಿ ನ್ಯಾಯವೋ ಅನ್ಯಾಯವೋ ಹೇಳ್ವ ಚಿಂತನೆ ಅವಕ್ಕೆ ಇರುತ್ತಿಲ್ಲೆ. ಅವಕ್ಕೆ ಒಟ್ಟಿಲ್ಲಿ ಆಯೇಕ್ಕಾದ್ದು ಕಾರ್ಯಸಾಧನೆ. ಅದು ಹೇಂಗೂ ಅಕ್ಕೂ. ಅನ್ಯಾಯದ ರೀತಿಯೂ ಅಕ್ಕು ಆದರೆ ಗ್ರೇಶಿದ್ದು ಸಿಕ್ಕೆಕು. ಅದರ ಪರಿಣಾಮ ಕೆಟ್ಟದು ಹೇಳ್ತ ಪರಿಜ್ಞಾನ ಅವಕ್ಕೆ ಇಲ್ಲೆ. ಅದು ಅವಕ್ಕೆ ನಿರ್ಲ್ಯಕ್ಷ. ಅವರ ಶ್ರದ್ಧೆ ಪೂರ್ತಿ ಗಳಿಕೆಲಿ. ಇದಕ್ಕೆ ಕಾರಣ ಅವು ಆಸುರೀ ಸ್ವಭಾವಂದ ಆಶಾಪಾಶಕ್ಕೆ ತುತ್ತಾದ್ದು, ಬಯಕೆಯ ಇಡೇರಿಕೆಲಿಯೇ ತನ್ಮಯರಾದ್ದು.

 

ಮುಂದೆ ಎಂತರ ?   … ಬಪ್ಪವಾರ ನೋಡುವೋ°

 

 … ಮುಂದುವರಿತ್ತು.

ಮೇಗಾಣ ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 16 – SHLOKAS 01 – 12
ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download : www.addkiosk.in ; www.giri.in

ಚೆನ್ನೈ ಬಾವ°

   

You may also like...

3 Responses

  1. ಭಾಗ್ಯಲಕ್ಶ್ಮಿ says:

    ಧೀರ್ಘ ವಿವರಣೆ. ಲಾಯಿಕಾಯಿದು. ಓದುಲೆ ಸುಮಾರು ಸಮಯ ಹಿಡುದತ್ತು. ಇನ್ನು ಬರವಲೆ…. ದಿನಗಟ್ಳೇ ಬೇಕಕ್ಕು

    • ಹರೇ ರಾಮ. ಧನ್ಯವಾದಂಗೊ ಭಾಗ್ಯಕ್ಕ°. ಇಲ್ಲಿ ಒಬ್ಬ ಓದಿರೂ ಎನ್ನ ಕೆಲಸ ಸಾರ್ಥಕ ಆತು., ಆಗದ್ರೂ ಆವ್ತು 🙁 ಎಂತಕೆ ಹೇಳಿರೆ ಇದು ಬರವಲೆ ಸುರುಮಾಡಿದ್ದದು- ಇಲ್ಲಿಗೆ ಸುದ್ದಿಯೂ ಆತು, ಎನಗೆ ಅಭ್ಯಾಸಕ್ಕೂ ಆತು ಹೇಳಿಯೇ 😀

  2. ಶರ್ಮಪ್ಪಚ್ಚಿ says:

    ೨೬ ಗುಣಂಗಳ ಬಗ್ಗೆ, ೬ ಅಸುರೀ ಗುಣಂಗಳ ಬಗ್ಗೆ ವಿಶ್ಲೇಷಣಾತ್ಮಕ ವಿವರಣೆ ಲಾಯಿಕ ಆಯಿದು.
    ಇದರೆಲ್ಲಾ ಸಂಗ್ರಹಿಸಿ, ಓದುವವಕ್ಕೆ ಕೊಡ್ತಾ ಇಪ್ಪ ಚೆನ್ನೈ ಭಾವಯ್ಯನ ಪರಿಶ್ರಮಕ್ಕೆ ನಮೋನಮಃ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *