ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 41 – 50

ಸಮಸ್ತ ಜೀವಜಾತಂಗೊ ತ್ರಿಗುಣಂಗಳ ಅಧೀನ. ಪ್ರತಿಯೊಂದು ಜೀವವೂ / ಇಡೀ ಜಗತ್ತು ಈ ತ್ರಿಗುಣಂಗಳ ಮಿಶ್ರಣ.  ನೂರಕ್ಕೆ ನೂರು ಸಾತ್ವಿಕ / ರಾಜಸ/ ತಾಮಸ ಹೇಳಿ ಏವುದೂ ಇಲ್ಲೆ. ಜೀವ ಸ್ವಭಾವವ ನೇರವಾಗಿ ಸಾತ್ವಿಕ / ರಾಜಸ/ ತಾಮಸ ಹೇಳಿ ವಿಭಾಗ ಮಾಡ್ಳೆ ಬತ್ತಿಲ್ಲೆ ಹೇಳಿ ನಾವು ಕಳುದ ವಾರದ ಭಾಗಲ್ಲಿ ಓದಿದ್ದು. ಮುಂದೆ –

 

ಶ್ರೀಮದ್ಭಗವದ್ಗೀತಾ – ಅಷ್ಟಾದಶೋsಧ್ಯಾಯಃ – ಮೋಕ್ಷಸಂನ್ಯಾಸಯೋಗಃ – ಶ್ಲೋಕಾಃ – 41  – 50

 

ಶ್ಲೋಕ

ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚ ಪರಂತಪ ।
ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವಪ್ರಭವೈರ್ಗುಣೈಃ ॥೪೧॥BHAGAVADGEETHA

ಪದವಿಭಾಗ

ಬ್ರಾಹ್ಮಣ-ಕ್ಷತ್ರಿಯ-ವಿಶಾಮ್ ಶೂದ್ರಾಣಾಮ್ ಚ ಪರಂತಪ । ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವ-ಪ್ರಭವೈಃ ಗುಣೈಃ ॥

ಅನ್ವಯ

ಹೇ ಪರಂತಪ!, ಬ್ರಾಹ್ಮಣ-ಕ್ಷತ್ರಿಯ-ವಿಶಾಂ ಶೂದ್ರಾಣಾಂ ಚ ಕರ್ಮಾಣಿ ಸ್ವಭಾವ-ಪ್ರಭವೈಃ ಗುಣೈಃ ಪ್ರವಿಭಕ್ತಾನಿ (ಸಂತಿ) ।

ಪ್ರತಿಪದಾರ್ಥ

ಹೇ ಪರಂತಪ! – ಏ ಶತ್ರುಮರ್ದನನೇ! (ಪರಂ-ತಪ = ಅರಿಗಳ ಉರಿ), ಬ್ರಾಹ್ಮಣ-ಕ್ಷತ್ರಿಯ-ವಿಶಾಂ – ಬ್ರಾಹ್ಮಣ-ಕ್ಷತ್ರಿಯ-ವೈಶ್ಯರ, ಶೂದ್ರಾಣಾಮ್ ಚ – ಮತ್ತೆ ಶೂದ್ರರ ಕೂಡ, ಕರ್ಮಾಣಿ – ಕರ್ಮಂಗೊ, ಸ್ವಭಾವ-ಪ್ರಭವೈಃ ಗುಣೈಃ –  ಸ್ವಭಾವಂದ ಹುಟ್ಟಿದ ಗುಣಂಗಳಿಂದ, ಪ್ರವಿಭಕ್ತಾನಿ  (ಸಂತಿ) – ವಿಭಜಿತವಾಗಿದ್ದು.

ಅನ್ವಯಾರ್ಥ

ಏ ಶತ್ರುಗಳ ಗೆಲ್ಲುವ ಅರ್ಜುನನೇ!, ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತೆ ಶೂದ್ರರ ಕರ್ಮಂಗೊ ಅವು ಸ್ವಭಾವಂದ ಹುಟ್ಟಿಬಂದ ಗುಣಂಗಳಿಂದ ವಿಭಜಿತವಾಗಿದ್ದು. (ಅವರ ಹುಟ್ಟುಸ್ವಭಾವಕ್ಕೆ ಅನುಗುಣವಾಗಿ ಅವರ ಕರ್ಮಂಗೊ ವಿಭಜಿತವಾಗಿದ್ದು (ಬೇರೆ ಬೇರೆಯಾಗಿದ್ದು).

ತಾತ್ಪರ್ಯ / ವಿವರಣೆ

ಜೀವಸ್ವಭಾವಕ್ಕನುಗುಣವಾಗಿ ಮೋಕ್ಷಯೋಗ್ಯವಾದ ಮಾನವರಲ್ಲಿ ನಾಲ್ಕು ವಿಧದ ವರ್ಣಂಗೊ. ಸ್ವಭಾವಕ್ಕನುಗುಣವಾಗಿ ಪ್ರತಿಯೊಬ್ಬನ ನಡೆ-ನುಡಿ, ಆಚಾರ-ವಿಚಾರ. ಸ್ವಭಾವ ಭೇದಂದಾಗಿ ಗುಣ-ಕರ್ಮ ಭೇದ. ಇದು ಪೂರ್ಣವಾಗಿ ಜೀವ ಸ್ವಭಾವಕ್ಕೆ ಸಂಬಂಧಪಟ್ಟು ಇಪ್ಪ ವಿಚಾರವಾದ್ದರಿಂದ ಇದಕ್ಕೂ ಜಾತಿಗೂ ಏವ ಸಂಬಂಧವೂ ಇಲ್ಲೆ. ಜಾತಿ ದೇಹಕ್ಕೆ ಸಂಬಂಧಪಟ್ಟದ್ದು. ವರ್ಣ ಜೀವಸ್ವರೂಪಕ್ಕೆ ಸಂಬಂಧಪಟ್ಟದ್ದು. (ಇದರ ಬಗ್ಗೆ ಹೆಚ್ಚಿನ ವಿವರಣೆಯ ಭ.ಗೀ ಅಧ್ಯಾಯ ೪ – ಶ್ಲೋಕ ೧೩ರಲ್ಲಿ ವಿವರಿಸಿದ್ದು).

ಶ್ಲೋಕ

ಶಮೋ ದಮಸ್ತಪಃ ಶೌಚಂ ಕ್ಷಾಂತಿರಾರ್ಜವಮೇವ ಚ ।
ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್ ॥೪೨॥

ಪದವಿಭಾಗ

ಶಮಃ ದಮಃ ತಪಃ ಶೌಚಮ್ ಕ್ಷಾಂತಿಃ ಆರ್ಜವಮ್ ಏವ ಚ । ಜ್ಞಾನಮ್ ವಿಜ್ಞಾನಮ್ ಆಸ್ತಿಕ್ಯಮ್ ಬ್ರಹ್ಮ-ಕರ್ಮ ಸ್ವಭಾವಜಮ್ ॥

ಅನ್ವಯ

ಶಮಃ, ದಮಃ, ತಪಃ, ಶೌಚಮ್, ಕ್ಷಾಂತಿಃ, ಆರ್ಜವಮ್, ಜ್ಞಾನಮ್, ವಿಜ್ಞಾನಮ್, ಆಸ್ತಿಕ್ಯಮ್ ಏವ ಚ (ಇತಿ) ಸ್ವಭಾವಜಮ್ ಬ್ರಹ್ಮ-ಕರ್ಮ (ಅಸ್ತಿ) ।

ಪ್ರತಿಪದಾರ್ಥ

ಶಮಃ – ಶಾಂತಿ, ದಮಃ – ಆತ್ಮನಿಗ್ರಹ, ತಪಃ – ತಪಸ್ಸು, ಶೌಚಮ್ – ಶುಚಿತ್ವ, ಕ್ಷಾಂತಿಃ – ತಾಳ್ಮೆ, ಆರ್ಜವಮ್ – ಪ್ರಾಮಾಣಿಕತೆ, ಜ್ಞಾನಮ್ – ಜ್ಞಾನ, ವಿಜ್ಞಾನಮ್ – ವಿಜ್ಞಾನ, ಆಸ್ತಿಕ್ಯಮ್ – ಆಸ್ತಿಕತೆ (ಧಾರ್ಮಿಕತೆ), ಏವ – ಖಂಡಿತವಾಗಿಯೂ, ಚ – ಕೂಡ, (ಇತಿ – ಈ ರೀತಿಯಾಗಿ / ಹೇದು) ಸ್ವಭಾವಜಮ್ – ಸ್ವಭಾವಂದ ಜನಿಸಿದ, ಬ್ರಹ್ಮ-ಕರ್ಮ (ಅಸ್ತಿ) – ಬ್ರಾಹ್ಮಣರ ಕರ್ತವ್ಯ ಆಗಿದ್ದು.

ಅನ್ವಯಾರ್ಥ

ಶಾಂತಿಸ್ವಭಾವ, ಆತ್ಮಸಂಯಮ, ತಪಸ್ಸು, ಶುಚಿತ್ವ, ಸಹನೆ, ಪ್ರಾಮಣಿಕತೆ, ಜ್ಞಾನ, ವಿವೇಕ ಮತ್ತೆ ಆಸ್ತಿಕತೆ – ಇವುಗೊ ಬ್ರಾಹ್ಮರ ಸಹಜ ಕರ್ತವ್ಯ ಗುಣಂಗೊ.

ತಾತ್ಪರ್ಯ / ವಿವರಣೆ

ಜೀವದ ಸಹಜ ಸ್ವಭಾವ ‘ಬ್ರಾಹ್ಮಣ’ ಆಗಿದ್ದರೆ ಅವರ ಸಹಜ ಕರ್ಮಂಗೊ ಹೇಂಗಿರುತ್ತು ಹೇಳ್ವದರ ಭಗವಂತ° ಇಲ್ಲಿ ಸೂಚಿಸಿದ್ದ°. ಈ ಬ್ರಾಹ್ಮಣ ವರ್ಗದ ಸಹಜ ಸ್ವಭಾವಂಗೊಮುಖ್ಯವಾದ್ದು ಏವ್ಯಾವುದು ಹೇಳಿರೆ –

ಶಮಃ – ಶಾಂತಿ. ಮನಸ್ಸಿನ ಸಂಪೂರ್ಣವಾಗಿ ಭಗವಂತನಲ್ಲಿ ಊರಿಯಪ್ಪಗ ಮನಸ್ಸಿಂಗೆ ಶಾಂತಿ ಸಿಕ್ಕುತ್ತು.

ದಮಃ – ಆತ್ಮಸಂಯಮ, ಇಂದ್ರಿಯಂಗಳ ಹತೋಟಿ

ತಪಃ – ಮಾನಸಿಕವಾಗಿ ವಿಷಯವ ಆಳವಾಗಿ ಚಿಂತನೆ ಮಾಡುವದು, ನಿರಂತರ ಶಾಸ್ತ್ರಚಿಂತನೆ

ಶೌಚಮ್ – ಮನಸ್ಸಿನ ಶುದ್ಧಿ, ಮತ್ತೆ ಅದಕ್ಕೆ ಪೂರಕವಾದ ಬಾಹ್ಯ ಶುದ್ಧಿ

ಕ್ಷಾಂತಿಃ – ಕ್ಷಮಾಗುಣ, ತಪ್ಪು ಮಾಡಿದವನನ್ನೂ ಸಂದರ್ಭವ ಅರ್ತು ಅವನ ಕ್ಷಮಿಸುವ ಗುಣ – ಹೇಳಿರೆ ಇಲ್ಲಿ ಮುಖ್ಯವಾಗಿ ಕೋಪಗೊಳ್ಳದ್ದೆ ಇಪ್ಪದು ಮತ್ತೆ ಕೋಪದ ಪರಿಣಾಮಕ್ಕೆ ಬಲಿಯಾಗದ್ದಾಂಗೆ ಇಪ್ಪದು

ಆರ್ಜವಮ್ – ಪ್ರಾಮಾಣಿಕತೆ , ಸ್ವಚ್ಛ ನಿರಾಳ ಮನಸ್ಸು, ನೇರ ನಡೆ-ನುಡಿ

ಜ್ಞಾನಮ್ – ಭಗವದ್ ವಿಷಯಲ್ಲಿ ಜ್ಞಾನ

ವಿಜ್ಞಾನಮ್ – ಭಗವಂತನ ವಿಷಯಲ್ಲಿ ವಿಶೇಷ ಅಧ್ಯಯನ, ವಿಶಿಷ್ಠ ಜ್ಞಾನ

ಆಸ್ತಿಕ್ಯಮ್ – ಪೂರ್ಣವಾಗಿ ಧಾರ್ಮಿಕತೆಲಿ ನಂಬಿಕೆ ಮತ್ತೆ ಅನುಸರಣೆ – ಪೂರ್ಣ ನಂಬಿಕೆಯ ಆಸ್ತಿಕತೆಲಿ ಸದಾ ನಡವದು

ಈ ಎಲ್ಲ ಗುಣಂಗೊ ಎಲ್ಲ ವರ್ಣದವರಲ್ಲಿಯೂ ಇರೆಕು. ಆದರೆ ಹೆಚ್ಚಿನ ಪ್ರಮಾಣ ಇಪ್ಪದು ಬ್ರಾಹ್ಮಣವರ್ಣಲ್ಲಿ. ಇವುಗಳಲ್ಲಿ ಒಂದು ಗುಣದ ಕಮ್ಮಿ ಇದ್ದರೂ ಅಂವ ಬ್ರಾಹ್ಮಣ ಎನಿಸುತ್ತನಿಲ್ಲೆ. ಒಂದು ವೇಳೆ ಕ್ಷತ್ರಿಯರಲ್ಲಿ ಈ ಗುಣಂಗಳ ಪ್ರಮಾಣ ಬ್ರಾಹ್ಮಣರಿಂದ ಹೆಚ್ಚಿಗೆ ಕಂಡ್ರೆ ಅಂವ° ರಾಜರ್ಷಿ ಆಗಿ ಹೋವ್ತ° – ಉದಾ – ಜನಕ ಮಹಾರಾಜ°. ಇದೆಲ್ಲ ಬನ್ನಂಜೆಯವರ ವಿವರಣೆಂದ ಹೆರ್ಕಿದ್ದು.

ಶ್ಲೋಕ

ಶೌರ್ಯಂ ತೇಜೋ ಧೃತಿದ್ರಾಕ್ಷ್ಯಂ ಯುದ್ಧೇ ಚಾಪ್ಯಪಲಾಯನಮ್ ।
ದಾನಮೀಶ್ವರಭಾವಶ್ಚ ಕ್ಷಾತ್ರಂ ಕರ್ಮ ಸ್ವಭಾವಜಮ್ ॥೪೩॥

ಪದವಿಭಾಗ

ಶೌರ್ಯಮ್ ತೇಜಃ ಧೃತಿಃ ದಾಕ್ಷ್ಯಮ್ ಯುದ್ಧೇ ಚ ಅಪಿ ಅಪಲಾಯನಮ್ । ದಾನಂ ಈಶ್ವರ-ಭಾವಃ ಚ ಕ್ಷಾತ್ರಮ್ ಕರ್ಮ ಸ್ವಭಾವಜಮ್ ॥

ಅನ್ವಯ

ಶೌರ್ಯಮ್, ತೇಜಃ, ಧೃತಿಃ, ದಾಕ್ಷ್ಯಮ್, ಯುದ್ಧೇ ಅಪಿ ಚ ಅಪಲಾಯನಮ್, ದಾನಮ್, ಈಶ್ವರ-ಭಾವಃ ಚ (ಇತಿ) ಸ್ವಭಾವಜಂ ಕ್ಷಾತ್ರಂ ಕರ್ಮ (ಅಸ್ತಿ) ।

ಪ್ರತಿಪದಾರ್ಥ

ಶೌರ್ಯಮ್ – ಶೌರ್ಯ, ತೇಜಃ – ತೇಜಸ್ಸು, ಧೃತಿಃ – ದೃಢತೆ, ದಾಕ್ಷ್ಯಮ್ – ವ್ಯಾವಹಾರಿಕ ಜಾಣತನ, ಯುದ್ಧೇ – ಯುದ್ಧಲ್ಲಿ, ಅಪಿ – ಮತ್ತೆ,  ಚ – ಕೂಡ, ಅಪಲಾಯನಮ್ – ಓಡಹೋಗದ್ದಿಪ್ಪದು, ದಾನಮ್ – ದಾನ (ಧಾರಾಳತನ), ಈಶ್ವರ-ಭಾವಃ – ನಾಯಕ್ತತ್ವದ ಸ್ವಭಾವ, ಚ – ಕೂಡ, (ಇತಿ – ಹೇದು), ಸ್ವಭಾವಜಮ್ ಕ್ಷಾತ್ರಮ್ – ಸ್ವಭಾವಂದ ಜನಿಸಿದ ಕ್ಷತ್ರಿಯನ, ಕರ್ಮ (ಅಸ್ತಿ) – ಕರ್ತವ್ಯವಾಗಿದ್ದು.

ಅನ್ವಯಾರ್ಥ

ಶೌರ್ಯ, ತೇಜಸ್ಸು, ದೃಢಸಂಕಲ್ಪ, ದಕ್ಷತೆ, ಯುದ್ಧಲ್ಲಿ ಧೈರ್ಯ, ಔದಾರ್ಯ ಮತ್ತೆ ನಾಯಕತ್ವದ ಗುಣ – ಇವು ಕ್ಷತ್ರಿಯನ ಯೋಗ್ಯ ಗುಣಂಗೊ.

ತಾತ್ಪರ್ಯ / ವಿವರಣೆ

ಶೌರ್ಯಮ್ – ಎದುರಾಳಿಯ ಬಗ್ಗುಬಡಿವ ಕೆಚ್ಚೆದೆ ಶಕ್ತಿ

ತೇಜಃ – ಎದುರಾಳಿ ನೋಡಿಯಪ್ಪದ್ದೆ ತಲೆತಗ್ಗುಸುವ ಕ್ಷಾತ್ರ ತೇಜಸ್ಸು (ಶಕ್ತಿ)

ಧೃತಿಃ – ಪ್ರಾಣಾಪಾಯ ಬಂದರೂ ಧೃತಿಗೆಡದ್ದೆ ಮುಂದೆ ಹೋಪ ಸಾಹಸ ಪ್ರವೃತ್ತಿ

ದಾಕ್ಷ್ಯಮ್ – ದಕ್ಷತೆ, ವ್ಯವಹಾರಲ್ಲಿ ಚಾಕಚಕ್ಯತೆ, ಶತ್ರುಗಳ ಮಣಿಸುವ ತಂತ್ರಗಾರಿಕೆ / ಚಾತುರ್ಯ

ಯುದ್ಧೇ ಚ ಅಪಿ ಅಪಲಾಯನಮ್ – ಯುದ್ಧಭೂಮಿಲಿ ಬೆನ್ನು ಹಾಕದ್ದೆ, ಪಲಾಯನ ಮಾಡದ್ದೆ ಹೋರಾಡುವ ಧೀರತನ

ದಾನಮ್ – ಔದಾರ್ಯ, ಧಾರಾಳಿತನ, ತನ್ನಲ್ಲಿಪ್ಪದರ ಇಲ್ಲದ್ದೋರಿಂಗೆ ಪೂರ್ಣಮನಸ್ಸಿಂದ ಕೊಡ್ವ ಪ್ರವೃತ್ತಿ

ಈಶ್ವರ-ಭಾವಃ – ಒಡೆಯ°/ಅಧಿಕಾರಿಯ ನಾಯಕತ್ವದ ಗುಣ

ಈ ಗುಣಂಗೊ ಕ್ಷತ್ರಿಯರಲ್ಲಿ ಹೆಚ್ಚಿಗೆ ಇರ್ತು. ಇತರ ವರ್ಣದೋರಲ್ಲಿ ಕಮ್ಮಿ. ಅರ್ಥಾತ್ ಈ ಗುಣಂಗೊ ಕ್ಷತ್ರಿಯರಿಂಗೇ ಮೀಸಲಾಗಿಪ್ಪದು. ಇಲ್ಲಿ ಅಕೇರಿಗೆ ಹೇಳಿದ ಈಶ್ವರ-ಭಾವಃ = ಅಪರಾಧಿಗೆ ಶಿಕ್ಷೆ ಕೊಡುವ ಅಧಿಕಾರ. ಇದು ಬೇರೆ ವರ್ಣದೋರಿಂಗೆ ಇಲ್ಲೆ. ರಾಜ್ಯವ ಆಳ್ವ / ಧರ್ಮಲ್ಲಿ ನಡೆಶುವ, ಅಧರ್ಮವ ಕಂಡಲ್ಲಿ ಶಿಕ್ಷಿಸುವ ಜವಾಬ್ದಾರಿ ಇಪ್ಪದು ಕ್ಷತ್ರಿಯಂಗೊಕ್ಕೆ.

ಶ್ಲೋಕ

ಕೃಷಿಗೌರಕ್ಷ್ಯವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಮ್ ।
ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯಾಪಿ ಸ್ವಭಾವಜಮ್ ॥೪೪॥

ಪದವಿಭಾಗ

ಕೃಷಿ-ಗೌರಕ್ಷ್ಯ-ವಾಣಿಜ್ಯಮ್ ವೈಶ್ಯ-ಕರ್ಮ ಸ್ವಭಾವಜಮ್ । ಪರಿಚರ್ಯಾ-ಆತ್ಮಕಮ್ ಕರ್ಮ ಶೂದ್ರಸ್ಯ ಅಪಿ ಸ್ವಭಾವಜಮ್ ॥

ಅನ್ವಯ

ಕೃಷಿ-ಗೌರಕ್ಷ್ಯ-ವಾಣಿಜ್ಯಂ ಸ್ವಭಾವಜಂ ವೈಶ್ಯ-ಕರ್ಮ (ಅಸ್ತಿ) ಅಪಿ (ಚ) ಶೂದ್ರಸ್ಯ ಪರಿಚರ್ಯಾ-ಆತ್ಮಕಂ ಕರ್ಮ ಸ್ವಭಾವಜಮ್ (ಅಸ್ತಿ) ।

ಪ್ರತಿಪದಾರ್ಥ

ಕೃಷಿ – ಬೇಸಾಯ, ಗೌರಕ್ಷ್ಯ – ದನಗಳ ರಕ್ಷಣೆ, ವಾಣಿಜ್ಯಮ್ – ವ್ಯಾಪಾರ, ಸ್ವಭಾವಜಮ್ – ಸ್ವಭಾವಂದ ಹುಟ್ಟಿದ, ವೈಶ್ಯ-ಕರ್ಮ (ಅಸ್ತಿ) – ವೈಶ್ಯರ ಕರ್ತವ್ಯ ಆಗಿದ್ದು, ಅಪಿ (ಚ) – ಹಾಂಗೂ, ಶೂದ್ರಸ್ಯ – ಶೂದ್ರನ, ಪರಿಚರ್ಯಾ-ಆತ್ಮಕಮ್ – ಸೇವಾವೃತ್ತಿಂದ ಕೂಡಿಪ್ಪದು, ಕರ್ಮ – ಕರ್ತವ್ಯ (ಕೆಲಸ), ಸ್ವಭಾವಜಮ್ (ಅಸ್ತಿ) – ಹುಟ್ಟುಸ್ವಭಾವಂದ ಇಪ್ಪದಾಗಿದ್ದು.

ಅನ್ವಯಾರ್ಥ

ಕೃಷಿ, ಗೋರಕ್ಷಣೆ, ವಾಣಿಜ್ಯ ಇವು ವೈಶ್ಯರಿಂಗೆ ವೈಶ್ಯರಿಂಗ ಹುಟ್ಟುಸ್ವಭಾವಕ್ಕೆ ಹೇಳಿದ ಕರ್ತವ್ಯಂಗೊ, ಮತ್ತೆ ಶ್ರಮ ಇತರರ ಪರಿಚಾರಿಕೆ / ಸೇವೆ ಶೂದ್ರರಿಂಗೆ ಸಹಜವಾದ ಕರ್ಮವಾಗಿದ್ದು.

ತಾತ್ಪರ್ಯ / ವಿವರಣೆ

ವೈಶ್ಯರು ಸ್ವಭಾವಸಹಜ ಕಾಯಕ ಕೃಷಿ, ಗೋರಕ್ಷಣೆ (ಹೈನುಗಾರಿಕೆ) ಮತ್ತೆ ವಾಣಿಜ್ಯ. ಏವ ದೇಶಲ್ಲಿ ಕೃಷಿಕರು ಮತ್ತೆ ವಾಣಿಜ್ಯೋದ್ಯಮಿಗೊ ಕರಭಾರ ತಡವಲೆಡಿಯದ್ದೆ ಬೇರೆ ದೇಶಕ್ಕೆ ಹೆರಟು ಹೋವ್ತವೋ  ಆ ದೇಶ ಉದ್ಧಾರ ಆವ್ತಿಲ್ಲೆ ಹೇದು ಭೀಷ್ಮಾಚಾರ್ಯ ಧರ್ಮರಾಯಂಗೆ ಹೇಳಿದ್ದನಡ. ಹಾಂಗಾಗಿ ಕೃಷಿ, ವಾಣಿಜ್ಯ ಮತ್ತೆ ಹೈನುಗಾರಿಕೆ ಹೇಳ್ವದು ದೇಶದ ಬೆನ್ನೆಲುಬು ಹೇಳ್ವದು ಆ ಕಾಲಂದಲೇ ಸತ್ಯವಾಗಿಪ್ಪ ಮಾತು. ಈ ಕಾಯಕ ವೈಶ್ಯರ ಸ್ವಭಾವ ಸಹಜವಾದ ಕರ್ಮ.

ಶೂದ್ರರಲ್ಲಿ ಇನ್ನೊಬ್ಬರ ಸೇವೆ ಮಾಡ್ವ ಸೇವಾ ಗುಣ ಇಪ್ಪದೇ ಮಹತ್ವವಾಗಿದ್ದು. ಈ ಗುಣ ಇಲ್ಲದ್ದಂವ ಮನುಷ್ಯನೇ ಅಲ್ಲ. ಆರೂ ಏಕವರ್ಣದವರಾಗಿಲ್ಲೆ. ಎಲ್ಲರಲ್ಲಿಯೂ ಎಲ್ಲ ಸ್ವಭಾವ ಇದ್ದೇ ಇರ್ತು. ಯಾವ ಸ್ವಭಾವ ನಮ್ಮಲ್ಲಿ ಹೆಚ್ಚಾಗಿದ್ದೋ ಆ ವರ್ಣಕ್ಕೆ ನಾವು ಸೇರಿದ್ದು ಹೇಳಿ ಹೆಸರುಸುವದು. ಶೂದ್ರ ಸ್ವಭಾವ ಎಷ್ಟು ಮುಖ್ಯ ಹೇಳಿರೆ ಈ ಸ್ವಭಾವ ಇಲ್ಲದ್ದೆ ಬೇರೆ ಸ್ವಭಾವಕ್ಕೆ ಬೆಲೆ ಇಲ್ಲೆ. ಏವತ್ತೂ ನಾವು ಮಾಡುವ ಕರ್ಮವ ಸೇವಾ ಮನೋವೃತ್ತಿಂದ ಮಾಡೆಕು. ಇಲ್ಲದ್ರೆ ಆ ಕರ್ಮಕ್ಕೆ ಬೆಲೆಯೇ ಇಲ್ಲೆ. ಉದಾಹರಣೆಗೆ ಬ್ರಾಹ್ಮಣನಾದಂವ ಸಮಾಜಸೇವೆಯ ಭಾವಂದ ಜ್ಞಾನದಾನ ಮಾಡೆಕು. ಇಲ್ಲದ್ರೆ ಅದು ಜ್ಞಾನದಾನ ಆವ್ತಿಲ್ಲೆ .

ಬನ್ನಂಜೆಯವು ಈ ವರ್ಣದ ಬಗ್ಗೆ ಇನ್ನೂ ರಜ ವ್ಯಾಖ್ಯಾನವ ನೀಡುತ್ತವು – ವರ್ಣದ ಬಗ್ಗೆ ಭಗವಂತ° ಬಹುರೋಚಕವಾದ ವಿವರಣೆಯ ಕೊಟ್ಟ°. ಸಮಾಜಲ್ಲಿ ಮತ್ತೆ ಕೆಲವು ಪ್ರಾಚೀನ ಗ್ರಂಥಂಗಳಲ್ಲಿ ವರ್ಣವ ಜಾತಿ ಹೇಳ್ವ ಶಬ್ದಂದ ಮತ್ತೆ ಜಾತಿಯ ವರ್ಣ ಹೇಳ್ವ ಶಬ್ದಂದ ಬಳಸಲ್ಪಟ್ಟಿದು. ಇಂತಹ ಸಂದರ್ಭಂಗಳಲ್ಲಿ ನಾವು ಗೊಂದಲ (confuse) ಮಾಡಿಗೊಳ್ಳದ್ದೆ ಅಲ್ಲಲ್ಲಿಗೆ ಯಾವ್ಯಾವ ರೀತಿಲಿ ಅರ್ಥ ಆಯೇಕ್ಕಾದ್ದೋ ಹಾಂಗೇ ವಿವೇಕತನಲ್ಲಿ ತೆಕ್ಕೊಂಡ್ರ ಗೊಂದಲ ಇಲ್ಲದ್ದೆ ಯಥಾರ್ಥವ ಅರ್ಥಮಾಡಿಗೊಂಬಲಕ್ಕು. ಭೀಷ್ಮ ಧರ್ಮರಾಯಂಗೆ ಹೇಳುತ್ತನಡ – “ವರ್ಣ ವಿಭಾಗವೇ ಇಲ್ಲೆ. ಎಲ್ಲೋರು ದೇವರ ಮಕ್ಕೊ. ರಾಜನಾದವಂಗೆ ವರ್ಣಭೇದ ಮಾಡುವ ಅಧಿಕಾರ ಇಲ್ಲೆ”.  ಇಲ್ಲಿ ವರ್ಣ ಹೇಳ್ವದು ಜಾತಿ ಹೇಳ್ವ ಅರ್ಥಲ್ಲಿ ಆವ್ತು.

ಸಾಮಾನ್ಯವಾಗಿ ಸಮಾಜಲ್ಲಿ ಅಬ್ಬೆ ಅಪ್ಪ° ಸ್ವಭಾವ ಯಾವುದು ಇರ್ತೋ ಅದೇ ಸ್ವಭಾವವ ಮಕ್ಕೊ ಅನುಸರುಸುತ್ತವು. ಉದಾಹರಣಗೆ – ಒಬ್ಬ° ಬ್ರಾಹ್ಮಣನ ಮಗ., ಅವಂಗೆ ಬ್ರಾಹ್ಮಣ ಸ್ವಭಾವವ ಅನುಸರುಸುವದು ಸುಲಭ ಆವ್ತು. ಅಂವ° ಅದನ್ನೇ ಅನುಸರಿಸಿಗೊಂಡು ಬೆಳೆತ್ತ°. ಹೀಂಗಿಪ್ಪಗ ನಿಜವಾದ ವರ್ಣವ ಗುರುತುಸುವದು ಕಷ್ಟ. ಅಂವ ಬ್ರಾಹ್ಮಣ ದಂಪತಿಲಿ ಹುಟ್ಟಿದ್ದರೂ, ಪ್ರಕೃತಿ /ಪರಿಸರ ಗುಣಂಗೊ ಅವನಲ್ಲಿ ಇದ್ದರೂ ಅವನಲ್ಲಿ ನಿಜವಾಗಿಪ್ಪ ಮೂಲ ಸ್ವಭಾವ ಅದುವೇ ಆಗಿರೆಕು ಹೇಳಿ ಏನೂ ಇಲ್ಲೆ. ಎಂತಕೆ ಹೇಳಿರೆ ಜನ್ಮ ಬಿತ್ತುವದು ಭಗವಂತನ ಕೆಲಸ ಹೇಳಿ ಭಗವಂತ ಮದಲಾಣ ಅಧ್ಯಾಯಲ್ಲಿ ಹೇಳಿದ್ದ°. ಹೀಂಗೆ ವರ್ಣವ ಗುರುತುಸುಲೆ ಕಷ್ಟ ಆದಪ್ಪಗ ಬಂದದು ಜಾತಿ ಪದ್ಧತಿ. ಜಾತಿ ಬೇರೆ ವರ್ಣ ಬೇರೆ ಹೇಳ್ವದಕ್ಕೆ ಒಂದು ಉತ್ತಮ ಉದಾಹರಣೆ – ಒಬ್ಬ ಬೆಸ್ತನ ಕೂಸಿಲ್ಲಿ ಹುಟ್ಟಿದ್ದದು ವೇದವ್ಯಾಸ°. ಅಂವ ಮಹಾಬ್ರಾಹ್ಮಣ° ಹೇಳ್ವದು ಇಡೀ ಪ್ರಪಂಚವೇ ಒಪ್ಪಿದ್ದು. ಹಾಂಗಾರೆ ಇಲ್ಲಿ ಸಂಸ್ಕಾರವೇ ಮುಖ್ಯ ಹೇಳ್ವದು ನಾವು ಕಂಡುಕೊಳ್ಳೆಕ್ಕಪ್ಪದು.

ಇಂದು ಸಮಾಜಲ್ಲಿ ಜೀವ ಸ್ವಭಾವವ ಗುರುತುಸಿ ಅದಕ್ಕನುಗುಣವಾದ ಕರ್ಮವ ಮಾಡ್ತ ಪದ್ಧತಿ ಇಲ್ಲೆ. ಇದಕ್ಕೆ ವ್ಯತಿರಿಕ್ತವಾಗಿ ಅಬ್ಬೆ ಅಪ್ಪ° ತಮ್ಮ ಇಷ್ಟವ ಮಕ್ಕಳ ಮೇಗೆ ಹೇರುವದು. ಇದು ತೀರಾ ಅವೈಜ್ಞಾನಿಕ ಪದ್ಧತಿ. ಮಕ್ಕಳಲ್ಲಿ ಹುದುಗಿಪ್ಪ ನಿಜವಾದ ಪ್ರತಿಭೆಯ ಗುರುತುಸದ್ದೆ, ಅವ್ವು ಹೇಳಿದ ವಿಷಯಂಗಳ ಮಕ್ಕೊ ಕಲಿಯೆಕು ಹೇಳ್ವದು ವರ್ಣಪದ್ಧತಿಗೆ ವಿರುದ್ಧವಾದ ಸಂಪ್ರದಾಯ. ಅವರವರ ಜೀವ ಸ್ವಭಾವ ಎಂತದೋ ಅದರ ಅರ್ತು ಅದಕ್ಕನುಗುಣವಾಗಿ ಅವರ ಮುಂದಂಗೆ ಕಲಿಶೆಕು. ಅಂಬಗ ಅಂವ ಆ ವಿಷಯಲ್ಲಿ ಪರಿಣತನಾವ್ತ, ಸಾಧಿಸುತ್ತ, ಅದರಿಂದ ಸಮಾಜಕ್ಕೆ ಉಪಯೋಗ ಆವ್ತು ಹೇಳಿ ಬನ್ನಂಜೆಯವು ವಿಶ್ಲೇಷಿಸಿದ್ದವು.

ಶ್ಲೋಕ

ಸ್ವೇ ಸ್ವೇ ಕರ್ಮಣ್ಯಭಿರತಃ ಸಂಸಿದ್ಧಿಂ ಲಭತೇ ನರಃ ।
ಸ್ವಕರ್ಮನಿರತಃ ಸಿದ್ಧಿಂ ಯಥಾ ವಿಂದತಿ ತಚ್ಛೃಣು ॥೪೫॥

ಪದವಿಭಾಗ

ಸ್ವೇ ಸ್ವೇ ಕರ್ಮಣಿ ಅಭಿರತಃ ಸಂಸಿದ್ಧಿಮ್ ಲಭತೇ ನರಃ । ಸ್ವಕರ್ಮ-ನಿರತಃ ಸಿದ್ಧಿಮ್ ಯಥಾ ವಿಂದತಿ ತತ್ ಶೃಣು ॥

ಅನ್ವಯ

ಸ್ವೇ ಸ್ವೇ ಕರ್ಮಣಿ ಅಭಿರತಃ ನರಃ ಸಂಸಿದ್ಧಿಂ ಲಭತೇ । ಸ್ವಕರ್ಮ-ನಿರತಃ (ನರಃ) ಯಥಾ ಸಿದ್ಧಿಮ್ ವಿಂದತಿ, ತತ್ ಶೃಣು ।

ಪ್ರತಿಪದಾರ್ಥ

ಸ್ವೇ ಸ್ವೇ  ಕರ್ಮಣಿ – ತನ್ನ ತನ್ನ ಕೆಲಸಲ್ಲಿ, ಅಭಿರತಃ ನರಃ – ತೊಡಗಿಪ್ಪ ಮನುಷ್ಯ°, ಸಂಸಿದ್ಧಿಮ್ ಲಭತೇ – ಪರಿಪೂರ್ಣತೆಯ ಪಡೆತ್ತ°. ಸ್ವಕರ್ಮ-ನಿರತಃ (ನರಃ) – ತನ್ನ ಕರ್ತವ್ಯಲ್ಲಿ ನಿರತನಾದ ನರ° (ಮನುಷ್ಯ°), ಯಥಾ – ಹೇಂಗೆ, ಸಿದ್ಧಿಮ್ ವಿಂದತಿ – ಸಿದ್ಧಿಯ ಹೊಂದುತ್ತನೋ, ತತ್ ಶೃಣು – ಅದರ ಕೇಳು.

ಅನ್ವಯಾರ್ಥ

(ಸ್ವಭಾವಂದ) ತನ್ನ ತನ್ನ ಕರ್ಮಲ್ಲಿ ನಿರತರಾದ ಮನುಷ್ಯ° ಪರಿಪೂರ್ಣತೆಯ ಸಾಧುಸುತ್ತ°.  ಸ್ವಕರ್ಮಲ್ಲಿ ನಿರತನಾದಂವ ಹೇಂಗೆ ಸಿದ್ಧಿಯ ಪಡೆತ್ತ° ಹೇಳ್ವದರ ಕೇಳು.

ತಾತ್ಪರ್ಯ / ವಿವರಣೆ

ತನ್ನ ತನ್ನ ಸಹಜ ಕರ್ಮಲ್ಲಿ ನಿರತನಾದ ಮನುಷ್ಯ° ಸಿದ್ಧಿಯ ಹೊಂದುತ್ತ° ಹೇಳಿ ಭಗವಂತ° ಭರವಸೆಯ ಹೇಳಿದ್ದ°. ನಿಷ್ಠಾವಂತನಾಗಿ, ಪ್ರಾಮಾಣಿಕವಾಗಿ ತನ್ನ ಕರ್ಮಲ್ಲಿ ತೊಡಗಿದಂವ ಹೇಂಗೆ ಸಿದ್ಧಿಯ ಪಡೆತ್ತ° ಹೇಳ್ವದರ ಮುಂದೆ ವಿವರುಸುಲೆ ಹೋವ್ತ° ಭಗವಂತ°.

ಬನ್ನಂಜೆ ಹೇಳ್ತವು –   ಅವರವರ ಸ್ವಭಾವಕ್ಕೆ ಅನುಗುಣವಾದ ಕರ್ಮವ ‘ಸ್ವಕರ್ಮ’ ಹೇಳಿ  ಭಗವಂತ° ಹೇಳಿದ್ದದು ಇಲ್ಲಿ.  ‘ನಿನ್ನ ಕರ್ಮವ ನೀನು ಮಾಡು’ ಹೇಳಿರೆ ನಿನ್ನ ಸ್ವಭಾವಕ್ಕೆ ಒಗ್ಗುವ ಕರ್ಮವ ನೀನು ಮಾಡು ಹೇದರ್ಥ. ಅದು ಪ್ರಾಮಾಣಿಕತೆ, ಶ್ರದ್ಧೆ, ಇಚ್ಛಾಪೂರ್ವಕ ಮುಂದುವರುಶಿಗೊಂಡು ಹೋಪಲೆ ಸುಲಾಭ / ಯೋಗ್ಯ. ‘ಸ್ವಕರ್ಮ’ನಿಷ್ಠೆಂದ ದೊಡ್ಡ ಧರ್ಮ ಇನ್ನೊಂದಿಲ್ಲೆ. ತನ್ನ ಸ್ವಭಾವಕ್ಕೆ ಸಹಜವಾದ ಕರ್ಮವ ಭಗವದರ್ಪಾಣಾ ಬುದ್ಧಿಂದ ಮಾಡಿಗೊಂಡು ಪ್ರಾಮಾಣಿಕವಾಗಿ ಬದುಕ್ಕುವದೇ ಎಲ್ಲವುದರಿಂದ ಶ್ರೇಷ್ಠ ಧರ್ಮ.

ಬನ್ನಂಜೆಯವು ಇನ್ನೊಂದು ಮುಖ್ಯ ವಿಷಯವನ್ನೂ ಇಲ್ಲಿ ಪ್ರಸ್ತಾಪಿಸುತ್ತವು – ನಮ್ಮಲ್ಲಿ ಕೆಲವರಿಂಗೆ ಸಂಶಯ ಬಕ್ಕು – ‘ಏವ ಕೆಲಸ ಆದರೆಂತ, ಎಲ್ಲಿ ಹೆಚ್ಚಿಗೆ ಸಂಪಾದನೆ ಆವ್ತೋ ಅದರ ಮಾಡಿರೆ ಆತಿಲ್ಯೋದು’. ಆದರೆ ಹಾಂಗಿರ್ಸರ ಭಗವಂತ° ಇಲ್ಲಿ ಮನ್ನಣೆ ಮಾಡಿದ್ದನಿಲ್ಲೆ. ಏವುದೋ ಒಂದು ಕೆಲ್ಸ ಮಾಡ್ತದು ಬದುಕು ಅಲ್ಲ. ಅದು ಯಾತನೆ. ನಿನ್ನ ನಿನ್ನ ಸ್ವಭಾವಸಹಜವಾದ ಕರ್ಮಲ್ಲಿ ನೀನು ಬದುಕಿರೆ ಅದು ಬದುಕು. ಅದೇ ಮೋಕ್ಷ ಮಾರ್ಗ. ನಿನ್ನ ಸ್ವಭಾವಕ್ಕೆ ತಕ್ಕಾಂಗೆ ನಿನ್ನ ಶಿಕ್ಷಣ, ನಿನ್ನ ಶಿಕ್ಷಣಕ್ಕೆ ತಕ್ಕಾಂಗೆ ನಿನ್ನ ಕರ್ಮ. ಹೀಂಗೆ ಮಾಡಿಯಪ್ಪಗ ಕರ್ಮಲ್ಲಿ ‘ಅಭಿರತಿ’ – ಸಂಪೂರ್ಣ ತೃಪ್ತಿ ಮತ್ತೆ ಸಂತೋಷ ಇರ್ತು. ಈ ರೀತಿಂದ ಖುಷೀಂದ ಭಗವದರ್ಪಣೆಯಾಗಿ ಕರ್ಮ ಮಾಡಿಯಪ್ಪಗ ಬದುಕ್ಕಿನ ಅಕೇರಿಗೆ ಮೋಕ್ಷವ ಪಡವಲಕ್ಕು. ಸ್ವಭಾವ ಸಹಜವಾದ ಕರ್ಮಂದ ಹೇಂಗೆ ಸಿದ್ಧಿ ಸಿದ್ಧಿಸುತ್ತು ಹೇಳ್ವದರ ಭಗವಂತ° ಮುಂದೆ ಹೇಳ್ತ° –

ಶ್ಲೋಕ

ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮಿದಂ ತತಮ್ ।
ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ ॥೪೬॥

ಪದವಿಭಾಗ

ಯತಃ ಪ್ರವೃತ್ತಿಃ ಭೂತಾನಾಮ್ ಯೇನ ಸರ್ವಮ್ ಇದಮ್ ತತಮ್ । ಸ್ವಕರ್ಮಣಾ ತಮ್ ಅಭ್ಯರ್ಚ್ಯ ಸಿದ್ಧಿಮ್ ವಿಂದತಿ ಮಾನವಃ ॥

ಅನ್ವಯ

ಯತಃ ಭೂತಾನಾಂ ಪ್ರವೃತ್ತಿಃ (ಅಸ್ತಿ), ಯೇನ ಇದಂ ಸರ್ವಂ ತತಮ್ (ಅಸ್ತಿ), ತಮ್ (ಈಶ್ವರಮ್) ಸ್ವಕರ್ಮಣಾ ಅಭ್ಯರ್ಚ್ಯ ಮಾನವಃ ಸಿದ್ಧಿಂ ವಿಂದತಿ ।

ಪ್ರತಿಪದಾರ್ಥ

ಯತಃ – ಆರಿಂದ, ಭೂತಾನಾಮ್ – ಎಲ್ಲ ಜೀವಿಗಳ, ಪ್ರವೃತ್ತಿಃ – ಉಗಮವೋ,  ಯೇನ – ಆರಿಂದ, ಇದಮ್ ಸರ್ವಮ್  – ಈ ಎಲ್ಲವು , ತತಮ್ (ಅಸ್ತಿ) – ವ್ಯಾಪಿಸಿದ್ದೋ, ತಮ್ (ಈಶ್ವರಮ್) – ಆ ಈಶ್ವರನ, ಸ್ವಕರ್ಮಣಾ – ತನ್ನ ಕರ್ತವ್ಯಂಗಳಿಂದ, ಅಭ್ಯರ್ಚ್ಯ – ಆರಾಧಿಸಿ, ಮಾನವಃ – ಮನಷ್ಯ°, ಸಿದ್ಧಿಮ್ – ಸಿದ್ಧಿಯ, ವಿಂದತಿ – ಪಡೆತ್ತ°.

ಅನ್ವಯಾರ್ಥ

ಆರಿಂದ ಈ ಜೀವಜಾತದ ಉಗಮ (ಸೃಷ್ಟಿ) ಆತೋ, ಆರಿಂದ ಈ ಎಲ್ಲವೂ (ಸಮಸ್ತವೂ) ವ್ಯಾಪಿಸಿದ್ದೋ, ಆ ಈಶ್ವರನ (ಭಗವಂತನ) ತನ್ನ ಕರ್ತವ್ಯಸೇವೆಂದ ಪೂಜಿಸಿ ಮಾನವ° ಸಿದ್ಧಿಯ ಹೊಂದುತ್ತ°.

ತಾತ್ಪರ್ಯ / ವಿವರಣೆ

ನಮ್ಮ ಸ್ವಭಾವ ಸಹಜ ಕರ್ಮವ ಭಗವಂತನೆ ಅಭ್ಯರ್ಚನೆಯಾಗಿ ಮಾಡಿಯಪ್ಪಗ ಅದು ಅಧ್ಯಾತ್ಮವಾವ್ತು. ಇದರಿಂದ ಮಹತ್ತರ ಪೂಜೆ ಇನ್ನೊಂದಿಲ್ಲೆ. ಇಲ್ಲಿ ಅರ್ಚನೆ ಹೇಳಿರೆ ಪುರೋಹಿತರ ಮುಖೇನ ದೇವಸ್ಥಾನಲ್ಲಿಯೋ, ಮಂದಿರಲ್ಲಿಯೋ,  ಮನೆಲಿಯೋ ಮಾಡ್ವ ಅರ್ಚನೆ ಅಲ್ಲ. ಇದು ಇಂದ್ರಿಯನಿಗ್ರಹ, ಶಮಃ, ದಮಃ ಎಲ್ಲವೂ ಸೇರಿ ಸ್ವಯಂ ಮಾಡೇಕ್ಕಾದ ಕರ್ತವ್ಯ ಅರ್ಚನೆ. ಹಾಂಗಾಗಿ ನಾವು ಮಾಡುವ ಸ್ವಭಾವ ಸಹಜ ಕರ್ಮಲ್ಲಿ ನಮ್ಮ ಇಂದ್ರಿಯ ಸೇರಿದ್ದು, ಭಗವನ್ನಿಷ್ಠೆ ಸೇರಿದ್ದು, ಭಗವದರ್ಪಣಾ ಬುದ್ಧಿ ಸೇರಿದ್ದು. ಇವೆಲ್ಲವೂ ಸೇರಿ ನಾವು ಮಾಡ್ವ ಪ್ರತಿಯೊಂದು ಸ್ವಕರ್ಮ/ಸಹಜಕರ್ಮ ಭಗವಂತನ ಪೂಜೆ ಆವ್ತು. ಈ ರೀತಿ ಬದುಕಿರೆ ನಮ್ಮ ಬದುಕು ಇಡೀ ದೇವರ ಪೂಜೆ ಆವ್ತು. ನವಗೆ ಇಚ್ಛೆ ಮತ್ತೆ ಪ್ರವೃತ್ತಿಯ ಕೊಟ್ಟ ಭಗವಂತಂಗೆ ನಮ್ಮ ಕರ್ಮವ ಅರ್ಪಿಸಿಯಪ್ಪಗ ನಮ್ಮ ಕರ್ಮವೇ ಒಂದು ಅರ್ಚನೆ. ಅದು ಭಗವದ್ ಪ್ರೀತಿಗೆ ಭಾಜನ ಆವ್ತು. ಅಷ್ಟಪ್ಪಗ ಭಗವಂತ° ಹೇಳಿದ್ದು – “ತೇಷಾಂ ಅಹಂ ಸಮುದ್ಧರ್ತಾ..” (ಭ.ಗೀ.12.7) – ಅಂಥವರ ಆನು ಉದ್ಧರುಸುತ್ತೆ. ಭಗವಂತನೇ ಸ್ವತಃ ಅಂತಹ ಭಕ್ತನ ಉದ್ಧರುಸುವ ಹೊಣೆ ಹೊತ್ತಿದ್ದ°. ಸ್ವಭಾವ ಸಹಜ ಕರ್ಮಲ್ಲಿ ನಿಷ್ಠೆಂದ ಅಚಲವಾಗಿ ಮುಂದುವರುದರೆ – “ಸಿದ್ಧಿಂ ವಿಂದತಿ” – ಸಿದ್ಧಿ = ಪರಿಪೂರ್ಣತೆ ಪ್ರಾಪ್ತಿಯಾವ್ತು ಹೇಳ್ವ ಭರವಸೆಯ ಭಗವಂತ° ಇಲ್ಲಿ ನವಗೆ ನೀಡಿದ್ದ°.

ಶ್ಲೋಕ

ಶ್ರೇಯಾನ್ಸ್ವಧರ್ಮೋ ವಿಗುಣಃ ಪರಧರ್ಮಾತ್ಸ್ವನುಷ್ಠಿತಾತ್ ।
ಸ್ವಭಾವನಿಯತಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಮ್ ॥೪೭॥

ಪದವಿಭಾಗ

ಶ್ರೇಯಾನ್ ಸ್ವಧರ್ಮಃ ವಿಗುಣಃ ಪರ-ಧರ್ಮಾತ್ ಸ್ವನುಷ್ಠಿತಾತ್ । ಸ್ವಭಾವ-ನಿಯತಮ್ ಕರ್ಮ ಕುರ್ವನ್ ನ ಆಪ್ನೋತಿ ಕಿಲ್ಬಿಷಮ್ ॥

ಅನ್ವಯ

ವಿಗುಣಃ ಸ್ವಧರ್ಮಃ ಸ್ವನುಷ್ಠಿತಾತ್ ಪರ-ಧರ್ಮಾತ್ ಶ್ರೇಯಾನ್ (ಅಸ್ತಿ), ಸ್ವಭಾವ-ನಿಯತಂ  ಕರ್ಮ ಕುರ್ವನ್ (ನರಃ) ಕಿಲ್ಬಿಷಂ ನ ಆಪ್ನೋತಿ ।

ಪ್ರತಿಪದಾರ್ಥ

ವಿಗುಣಃ – ಸರಿಯಾಗಿ ಆಚರುಸದ್ದ, ಸ್ವಧರ್ಮಃ – ಸ್ವ ಪ್ರವೃತ್ತಿಯು,  ಸ್ವನುಷ್ಠಿತಾತ್ – ಪರಿಪೂರ್ಣವಾಗಿ ಆಚರುಸಿದ್ದರಿಂದ, ಪರ-ಧರ್ಮಾತ್ – ಪರ ವೃತ್ತಿಂದ, ಶ್ರೇಯಾನ್ (ಅಸ್ತಿ) – ಉತ್ತಮ (ಶ್ರೇಯಸ್ಸು) ಆಗಿದ್ದು, ಸ್ವಭಾವ-ನಿಯತಮ್ – ಸ್ವಭಾವಕ್ಕನುಗುಣವಾಗಿ ವಿಹಿತವಾದ, ಕರ್ಮ – ಕರ್ಮವ, ಕುರ್ವನ್ – ಮಾಡುವದರಿಂದ, (ನರಃ – ಮನುಷ್ಯ°), ಕಿಲ್ಬಿಷಮ್ – ಪಾಪತ್ವವ (ಕೊಳೆಯ/ದೋಷವ),  ನ ಆಪ್ನೋತಿ – ಪಡೆತ್ತನಿಲ್ಲೆ.

ಅನ್ವಯಾರ್ಥ

ಸರಿಯಾಗಿ (ಪರಿಪೂರ್ಣವಾಗಿ) ಆಚರಿಸ್ದ ಪರಧರ್ಮಕ್ಕಿಂತ ಸರಿಯಾಗಿ ಆಚರುಸದ್ದ (ಆಚರಣೆಲಿ ಕೊರತೆಯಿದ್ದರೂ) ಸ್ವಧರ್ಮವೇ ಮಿಗಿಲು (ಶ್ರೇಯಸ್ಕರ/ಉತ್ತಮ) ಆಗಿದ್ದು.  ಸ್ವಭಾವಕ್ಕನುಗುಣವಾಗಿ ವಿಹಿತ ಕರ್ಮವ ಮಾಡುವದರಿಂದ ಮನುಷ್ಯ° ದೋಷವ ಪಡೆತ್ತನಿಲ್ಲೆ.

ತಾತ್ಪರ್ಯ / ವಿವರಣೆ

ರಜಾ ಒಳ್ಳೆತ ಚಿಂತುಸೆಕ್ಕಾದ ವಿಚಾರ ಇಲ್ಲಿದ್ದು. ಹಿಂದೆ ಭಗವದ್ಗೀತೆಯ ಮೂರ್ನೇ ಅಧ್ಯಾಯಲ್ಲಿ 35ನೇ ಶ್ಲೋಕಲ್ಲಿ ಭಗವಂತ° ಹೇಳಿದ್ದ° – “ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ । ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ” ॥ ಭ.ಗೀ ೩.೩೫॥ – ‘ತನ್ನ ನಿಯತ ಕರ್ತವ್ಯಂಗಳ ತಪ್ಪಾಗಿಯಾದರೂ ನಿರ್ವಹಿಸುವದು, ಪರಧರ್ಮವ ಪರಿಪೂರ್ಣವಾಗಿ ಮಾಡುವದಕ್ಕಿಂತ ಉತ್ತಮವು. ಮತ್ತೊಬ್ಬರ ಧರ್ಮವ ಆಚರುಸುವದಕ್ಕಿಂತ ಸ್ವಧರ್ಮಲ್ಲಿ ನಾಶ ಅಪ್ಪದೇ ಮೇಲು. ಎಂತಕೆ ಹೇಳಿರೆ ಪರಧರ್ಮವು ಅಪಾಯಕಾರಿಯೂ ಭಯಂಕರವೂ ಆಗಿದ್ದು’.

ಇದೇ ವಿಷಯವ ಮತ್ತೆ ಪುನಃ ಇಲ್ಲಿ ಒತ್ತುಗೊಟ್ಟು ಎಚ್ಚರಿಸಿದ್ದ° ಭಗವಂತ°. ಪರಿಪೂರ್ಣವಾಗಿ ಪರಧರ್ಮ ಆಚರಣೆ ಮಾಡುವದರಿಂದ ರಜ ಹೆಚ್ಚುಕಮ್ಮಿ ಇದ್ದರೂ (ಅಪಕ್ವವಾಗಿದ್ದರೂ) ಸ್ವಧರ್ಮ ನಿರತನಾಗಿಪ್ಪದೇ ಉತ್ತಮ. ಪರಧರ್ಮಾಚರಣೆ ಮಾಡುವದರಿಂದ ಸ್ವಧರ್ಮ ನಾಶವೇ ಉಂಟಪ್ಪದು. ಇಲ್ಲಿ ಹೇಳಿದ ಸ್ವಧರ್ಮ, ಪರಧರ್ಮ ಹೇಳ್ವದರ ಅರ್ಥ ಸ್ವಭಾವಸ್ವರೂಪ ಧರ್ಮವ. ಹೊರತು ಐಹಿಕ ಜಾತಿ ಧರ್ಮವ ಅಲ್ಲ. ನಮ್ಮ ಸ್ವಭಾವಕ್ಕೆ ಸಹಜವಾದ ಸ್ವಧರ್ಮ ಮಾಡ್ವದರಲ್ಲಿ ದೋಷ ಇದ್ದರೂ ಕೂಡಾ ಅದರಿಂದ ಪಾಪ ತಟ್ಟುತ್ತಿಲ್ಲೆ (ನ ಆಪ್ನೋತಿ ಕಿಲ್ಬಿಷಂ) ಹೇಳಿ ಭಗವಂತ° ಇಲ್ಲಿ ಭರವಸೆ ಹೇಳುತ್ತ°. ಅದು ಬಿಟ್ಟು ಪರಧರ್ಮ ಮಾಡ್ವದು ಯುಕ್ತ ಅಲ್ಲ. ಇದನ್ನೇ ವೇದವ್ಯಾಸರು ಮುಂದೆ ಧರ್ಮರಾಯಂಗೂ ಹೇಳ್ತವು. ಯುದ್ಧಲ್ಲಿ ಗೆದ್ದ ಧರ್ಮರಾಯ ಸಿಂಹಾಸನ ಏರ್ಲಪ್ಪಗ, ‘ಆನು ಸಿಂಹಾಸನ ಏರ್ತಿಲ್ಲೆ, ಎನಗೆಂತ ಬೇಡ, ಆನು ಕಾಡಿಂಗೆ ಹೋವ್ತೆ ಹೇಳಿ ಹೇಳ್ವಾಗ ವೇದವ್ಯಾಸ° ಧರ್ಮರಾಯಂಗೆ ಹೇಳ್ತ° – ‘ನೀನು ನಿನ್ನ ಸಹಜ ಧರ್ಮವ ಬಿಟ್ಟು ಕಾಡಿಂಗೆ ಹೋಪದು ಎಷ್ಟು ಅಸಂಗತವೋ, ಅಷ್ಟೇ ಅಸಂಗತ ಆನು ತಪಸ್ಸಿನ ಬಿಟ್ಟು ಬಂದು ರಾಜ್ಯಭಾರ ಮಾಡುವದು’ ಹೇಳಿ ಬುದ್ಧಿವಾದ ಹೇಳ್ತ°. ಇದರಿಂದ ನಾವು ಅರ್ಥ ಮಾಡಿಗೊಳ್ಳೆಕ್ಕಾದ್ದಿಲ್ಲಿ ಹೇದು ಹೇಳಿರೆ, – ನಾವು ಪರಧರ್ಮ ಮಾಡುವದಕ್ಕಿಂತ, ದೋಷ ಇದ್ದರೂ ಸರಿ, ನಮ್ಮ ಸಹಜ ಕರ್ಮ ಮಾಡುವದೇ ಅತ್ಯಂತ ಶ್ರೇಷ್ಠ ಧರ್ಮ.

ಶ್ಲೋಕ

ಸಹಜಂ ಕರ್ಮ ಕೌಂತೇಯ ಸದೋಷಮಪಿ ನ ತ್ಯಜೇತ್ ।
ಸರ್ವಾರಂಭಾ ಹಿ ದೋಷೇಣ ಧೂಮೇನಾಗ್ನಿರಿವಾವೃತಾಃ ॥೪೮॥

ಪದವಿಭಾಗ

ಸಹಜಮ್ ಕರ್ಮ ಕೌಂತೇಯ ಸ-ದೋಷಮ್ ಅಪಿ ನ ತ್ಯಜೇತ್ । ಸರ್ವ-ಆರಂಭಾಃ ಹಿ ದೋಷೇಣ ಧೂಮೇನ ಅಗ್ನಿಃ ಇವ ಆವೃತಾಃ

ಅನ್ವಯ

ಹೇ ಕೌಂತೇಯ!, ಸಹಜಂ ಕರ್ಮ ಸ-ದೋಷಮ್ ಅಪಿ ನ ತ್ಯಜೇತ್, ಧೂಮೇನ ಅಗ್ನಿಃ ಇವ ಹಿ ಸರ್ವ-ಆರಂಭಾಃ ದೋಷೇಣ ಆವೃತಾಃ (ಸಂತಿ) ।

ಪ್ರತಿಪದಾರ್ಥ

ಹೇ ಕೌಂತೇಯ! – ಏ ಕುಂತೀಮಗನಾದ ಅರ್ಜುನ!, ಸಹಜಮ್ ಕರ್ಮ – ಸ್ವಭಾವ ಕರ್ಮವ, ಸ-ದೋಷಮ್ ಅಪಿ  – ದೋಷಯುಕ್ತವಾಗಿದ್ದರೂ ಕೂಡ,  ನ ತ್ಯಜೇತ್ – ಬಿಡ್ಳಾಗ, ಧೂಮೇನ ಅಗ್ನಿಃ ಇವ – ಹೊಗೆಂದ ಕಿಚ್ಚು ಇಪ್ಪ ಹಾಂಗೆ, ಹಿ – ಖಂಡಿತವಾಗಿಯೂ, ಸರ್ವ-ಆರಂಭಾಃ – ಎಲ್ಲ ಪ್ರಯತ್ನಂಗೊ, ದೋಷೇಣ – ದೋಷಂದ, ಆವೃತಾಃ (ಸಂತಿ) ಮುಚ್ಚಿಗೊಂಡಿರುತ್ತು (ಆವರಿಸಿಗೊಂಡಿರುತ್ತು).

ಅನ್ವಯಾರ್ಥ

ಏ ಅರ್ಜುನ!, ಸ್ವಭಾವ ಸಹಜ ಕರ್ಮವ ದೋಷ ಇದ್ದರೂ ಎಂದಿಂಗೂ ಬಿಡ್ಳಾಗ. ಕಿಚ್ಚು ಹೇಂಗೆ ಹೊಗೆಂದ ಆವೃತವಾಗಿರುತ್ತೋ, ಹಾಂಗೇ, ಮನುಷ್ಯನ ಸ್ವಧರ್ಮಂದ ಬಪ್ಪ ಕರ್ಮ ಪ್ರಯತ್ನಂಗೊ (ಸರ್ವಾರಂಭಾಃ) ದೋಷಂದ ಆವರಿಸಿಗೊಂಡಿರುತ್ತು.

ತಾತ್ಪರ್ಯ / ವಿವರಣೆ

ನಾವು ನಮ್ಮ ಸ್ವಭಾವಕ್ಕೆ ಮತ್ತೆ ಪರಿಸ್ಥಿತಿಗೆ ಸಹಜವಾದ ಕರ್ಮಲ್ಲಿ ಎಷ್ಟೇ ದೋಷ ಇದ್ದರೂ ಕೂಡ ಆ ಕರ್ಮವ ಮಾಂತ್ರ ಬಿಡ್ಳಾಗ. ಈ ಪ್ರಪಂಚಲ್ಲಿ ದೋಷ ಇಲ್ಲದ್ದ ಒಂದು ಕರ್ಮ ಇಲ್ಲೆ. ಕಿಚ್ಚು ಇಪ್ಪಲ್ಲಿ ಹೊಗೆ ಇದ್ದೇ ಇದ್ದು. ಕರ್ಮಲ್ಲಿ ಹಿಂಸೆ ಇಕ್ಕು, ಆದರೆ ಅದು ಸಹಜ ಧರ್ಮವಾಗಿಪ್ಪಗ ಅದರ ಕೈ ಬಿಡ್ಳಾಗ. ಸಹಜ ಧರ್ಮಲ್ಲಿ ಹಿಂಸೆ ಅನಿವಾರ್ಯವಾದರೆ ಅದರೆ ಬಗ್ಗೆ ತಲೆಬೆಶಿ ಮಾಡೇಕ್ಕಾದ್ದಿಲ್ಲೆ. ನಮ್ಮ ಪಾಲಿಂಗೆ ಒದಗಿ ಬಂದ ಕರ್ಮವ ಭಗವದರ್ಪಣಾ ಬುದ್ಧಿಂದ ನಿಷ್ಕಾಮನಾಗಿ ಮಾಡುವದು ಧರ್ಮ. ಇದರಿಂದ ದೋಷ ಇಲ್ಲೆ. ಇಲ್ಲಿ ಪಾಂಡವರಿಂಗೆ ಅನಿವಾರ್ಯವಾಗಿ ಒದಗಿ ಬಂದದು- ಯುದ್ಧ. ಆದರೆ ಆ ಅನ್ಯಾಯದ ವಿರುದ್ಧ ಹೋರಾಡೇಕ್ಕಾದ್ದು ಕ್ಷತ್ರಿಯರಾದ ಪಾಂಡವರ ಸಹಜ ಧರ್ಮ. ಅಲ್ಲಿ ಸಾವು ನೋವು ಉಂಟಕ್ಕು, ಆದರೆ ಅದು ನಗಣ್ಯ ಹೇಳ್ವದರ ಭಗವಂತ° ಇಲ್ಲಿ ಅರ್ಜುನಂಗೆ ಸೂಕ್ಷ್ಮಾರ್ಥಲ್ಲಿ ಸೂಚಿಸಿದ್ದ°.

ಶ್ಲೋಕ

ಅಸಕ್ತಬುದ್ಧಿಃ ಸರ್ವತ್ರ ಜಿತಾತ್ಮಾ ವಿಗತಸ್ಪೃಹಃ ।
ನೈಷ್ಕರ್ಮ್ಯಸಿದ್ಧಿಂ ಪರಮಾಂ ಸಂನ್ಯಾಸೇನಾಧಿಗಚ್ಛತಿ ॥೪೯॥

ಪದವಿಭಾಗ

ಅಸಕ್ತ-ಬುದ್ಧಿಃ ಸರ್ವತ್ರ ಜಿತ-ಆತ್ಮಾ ವಿಗತ-ಸೃಹಃ । ನೈಷ್ಕರ್ಮ್ಯ-ಸಿದ್ಧಿಮ್ ಪರಮಾಮ್ ಸಂನ್ಯಾಸೇನ ಅಧಿಗಚ್ಛತಿ ॥

ಅನ್ವಯ

ಸರ್ವತ್ರ ಅಸಕ್ತ-ಬುದ್ಧಿಃ, ಜಿತ-ಆತ್ಮಾ, ವಿಗತ-ಸ್ಪೃಹಃ (ನರಃ) ಪರಮಾಂ ನೈಷ್ಕರ್ಮ್ಯ-ಸಿದ್ಧಿಂ ಸಂನ್ಯಾಸೇನ ಅಧಿಗಚ್ಛತಿ ।

ಪ್ರತಿಪದಾರ್ಥ

ಸರ್ವತ್ರ – ಎಲ್ಲ ದಿಕ್ಕೆ, ಅಸಕ್ತ-ಬುದ್ಧಿಃ – ಅನಾಸಕ್ತ ಬುದ್ಧಿ ಹೊಂದಿದ, ಜಿತ-ಆತ್ಮಾ – ಮನಸ್ಸಿನ ನಿಯಂತ್ರಣವ ಹೊಂದಿದ (ಆತ್ಮಸಂಯಮವ ಹೊಂದಿದ), ವಿಗತ-ಸ್ಪೃಹಃ – ಭೌತಿಕ ಆಸೆಗೊ ಇಲ್ಲದ್ದ, (ನರಃ – ಮನುಷ್ಯ°), ಪರಮಾಮ್ – ಪರಮೋನ್ನತವಾದ, ನೈಷ್ಕರ್ಮ್ಯ-ಸಿದ್ಧಿಮ್ – ಪ್ರತಿಕ್ರಿಯಾರಹಿತ ಸಿದ್ಧಿಯ, ಸಂನ್ಯಾಸೇನ – ಸನ್ಯಾಸಂದ, ಅಧಿಗಚ್ಛತಿ – ಹೊಂದುತ್ತ°.

ಅನ್ವಯಾರ್ಥ

ಸರ್ವತ್ರ ಅನಾಸಕ್ತನಾಗಿದ್ದು (ಮೋಹರಹಿತನಾಗಿದ್ದು), ಆತ್ಮಸಂಯಮಿಯಾಗಿದ್ದು, ಭೌತಿಕ ಆಸೆಗೊ ಇಲ್ಲದ್ದೆ ಪರಮೋನ್ನತವಾದ ಪ್ರತಿಕ್ರಿಯಾರಹಿತವಾದ ಸಿದ್ಧಿಯ ಸನ್ಯಾಸಂದ ಮನುಷ್ಯ° ಹೊಂದುತ್ತ°.

ತಾತ್ಪರ್ಯ / ವಿವರಣೆ

ಕೇವಲ ಸ್ವಭಾವ ಸಹಜತೆಂದ ಇದ್ದರೆ ಸಾಲ. ಅದರಿಂದ ಮಾತ್ರವೇ ಮುಕ್ತಿ ಸಿಕ್ಕುತ್ತಿಲ್ಲೆ. ಕೆಲವೊಂದು ಸಾಧನೆ ಅದಕ್ಕೆ ಬೇಕು.  ಮೋಕ್ಷಸಾಧನವಾಗಿಪ್ಪ ಸಿದ್ಧಿಯ ಪಡವಲೆ (ಪಾಪಕರ್ಮ ಪ್ರತಿಕ್ರಿಯೆ ಇಲ್ಲದ್ದ ಸ್ಥಿತಿಯ ಹೊಂದಲೆ), ಸ್ವಕರ್ಮಲ್ಲಿ ತೊಡಗಿರೆ ಸಾಲ.  ಮತ್ತೆ ಅದಕ್ಕೆ ಭಗವಂತ° ಹೇಳುತ್ತ° – ‘ಸರ್ವತ್ರ ಅಸಕ್ತ-ಬುದ್ಧಿಃ…..’ – ಎಲ್ಲಿಯೂ ಏವತ್ತೂ ಯಾವುದೇ ವಿಷಯಲ್ಲಿ ಅಂಟಿಗೊಂಡಿರದ್ದೆ / ಅನಾಸಕ್ತನಾಗಿ, ಯಾವ ವಿಷಯಕ್ಕೂ ಮೋಹಗೊಳ್ಳದ್ದೆ, ಆತ್ಮಸಂಯಮಿಯಾಗಿ (ಜಿತ-ಆತ್ಮಾ), ‘ವಿಗತ-ಸ್ಪೃಹಃ’ – ಏವುದೇ ಫಲಾಪೇಕ್ಷೆಯ ಅಂಟು/ಸೋಂಕು ಇಲ್ಲದ್ದೆ (ಮುಟ್ಟದ್ದೆ), ನಿಷ್ಕಾಮ ಕರ್ಮವ ಮಾಡಿ, ‘ಸಂನ್ಯಾಸೇನ’ – ಸಂನ್ಯಾಸ ಪ್ರವೃತ್ತಿಂದ, ಎಲ್ಲವೂ ಭಗವಂತನಿಂದ, ಎಲ್ಲವೂ ಭಗವಂತನದ್ದು, ಎಲ್ಲವೂ ‘ಶ್ರೀಕೃಷ್ಣಾರ್ಪಣಮಸ್ತು’ – ಆ ಭಗವಂತಂಗೇ ಅರ್ಪಣೆ ಹೇಳ್ವ ಮನೋಭಾವಂದ ಕರ್ಮನಿರತನಾಗಿ ‘ಪರಮಾಂ ನೈಷ್ಕರ್ಮ್ಯಸಿದ್ಧಿಂ’ – ಪರಮೋನ್ನತವಾದ ಕರ್ಮದೋಷಫಲ ಇಲ್ಲದ್ದ ಪವಿತ್ರವಾದ ಸಿದ್ಧಿಯ ಸಾಧುಸೆಕು. ಆನು ಮಾಡಿದ್ದು, ಎನ್ನಂದ ಆತು, ಹೇಳ್ವ ಅಹಂಕಾರ ಲವಲೇಷವೂ ಇಲ್ಲದ್ದೆ ಸರ್ವವನ್ನೂ ಭಗವದರ್ಪಣಾ ಭಾವಂದ ಸ್ವಭಾವ ಸಹಜವಾದ ಕರ್ಮವ ಮಾಡಿಗೊಂಡು ಮುಂದುವರುದಲ್ಲ್ಯಂಗೆ ಸಿದ್ಧಿ ಪ್ರಾಪ್ತಿ ಆವ್ತು ಹೇಳಿ ಭಗವಂತನ ಭರವಸೆ.

ಶ್ಲೋಕ

ಸಿದ್ಧಿಂ ಪ್ರಾಪ್ತೋ ಯಥಾ ಬ್ರಹ್ಮ ತಥಾಪ್ನೋತಿ ನಿಬೋಧ ಮೇ ।
ಸಮಾಸೇನೈವ ಕೌಂತೇಯ ನಿಷ್ಠಾ ಜ್ಞಾನಸ್ಯ ಯಾ ಪರಾ ॥೫೦॥

ಪದವಿಭಾಗ

ಸಿದ್ಧಿಮ್ ಪ್ರಾಪ್ತಃ ಯಥಾ ಬ್ರಹ್ಮ ತಥಾ ಆಪ್ನೋತಿ ನಿಬೋಧ ಮೇ । ಸಮಾಸೇನ ಏವ ಕೌಂತೇಯ ನಿಷ್ಠಾ ಜ್ಞಾನಸ್ಯ ಯಾ ಪರಾ ॥

ಅನ್ವಯ

ಹೇ ಕೌಂತೇಯ!, ಸಿದ್ಧಿಂ ಪ್ರಾಪ್ತಃ (ಮಾನವಃ) ಯಥಾ ಬ್ರಹ್ಮ ಆಪ್ನೋತಿ, ತಥಾ ಮೇ ಸಮಾಸೇನ ಏವ ನಿಬೋಧ, ಯಾ (ಚ ಇಯಂ ಬ್ರಹ್ಮ-ಪ್ರಾಪ್ತಿಃ) (ಸಾ) ಜ್ಞಾನಸ್ಯ ಪರಾ ನಿಷ್ಠಾ (ವರ್ತತೇ) ॥

ಪ್ರತಿಪದಾರ್ಥ

ಹೇ ಕೌಂತೇಯ! – ಏ ಕುಂತೀಮಗನಾದ ಅರ್ಜುನ!, ಸಿದ್ಧಿಮ್ ಪ್ರಾಪ್ತಃ (ಮಾನವಃ) – ಸಿದ್ಧಿಯ ಪಡದ ಮನುಷ್ಯ°, ಯಥಾ – ಹೇಂಗೆ, ಬರಹ್ಮ ಆಪ್ನೋತಿ – ಪರಮೋನ್ನತವ ಪಡೆತ್ತನೋ, ತಥಾ – ಹಾಂಗೇ, ಮೇ – ಎನ್ನತ್ರಂದ, ಸಮಾಸೇನ – ಸಂಗ್ರಹವಾಗಿ, ಏವ – ಖಂಡಿತವಾಗಿಯೂ, ನಿಬೋಧ – ತಿಳಿವಲೆ ಪ್ರಯತ್ನಿಸು, ಯಾ – ಯಾವುದು (ಚ – ಕೂಡ, ಇಯಂ ಬ್ರಹ್ಮ-ಪ್ರಾಪ್ತಿಃ – ಈ ಪರಮೋನ್ನತ ಪ್ರಾಪ್ತಿಯು), (ಸಾ – ಅದರ), ಜ್ಞಾನಸ್ಯ – ಜ್ಞಾನದ, ಪರಾ – ದಿವ್ಯವಾದ (ಶ್ರೇಷ್ಠವಾದ), ನಿಷ್ಥಾ (ವರ್ತತೇ) – ಹಂತವಾಗಿದ್ದು.

ಅನ್ವಯಾರ್ಥ

ಏ ಅರ್ಜುನ!, ಸಿದ್ಧಿಯ ಹೊಂದಿದವ° ಹೇಂಗೆ ಪರಮೋನ್ನತವ (ಬ್ರಹ್ಮತತ್ವವ/ಶ್ರೀತತ್ವವ) ಪಡೆತ್ತನೋ ಹಾಂಗೇ ಅದರ ಸಂಗ್ರಹರೂಪವಾಗಿ ಎನ್ನತ್ರಂದ ತಿಳುಕ್ಕೊ. ಈ ಸಿದ್ಧಿ ಜ್ಞಾನದ ಶ್ರೇಷ್ಥವಾದ ಹಂತ/ ಮಜಲು ಆಗಿದ್ದು.

ತಾತ್ಪರ್ಯ / ವಿವರಣೆ

ಬನ್ನಂಜೆ ಹೇಳ್ತವು – ಏವ ಪಾತಕಂದಲೂ ಕಲುಷಿತವಾಗದ ಜೀವನದ ನಡೆ (ನೈಷ್ಕರ್ಮ್ಯ ಸಿದ್ಧಿ) ರೂಪಿತವಾದಪ್ಪಗ ನಮ್ಮ ಮನಸ್ಸಿಲ್ಲಿ ಭಗವಂತ° ಬಂದು ನೆಲೆಸುತ್ತ°. ಇದರಿಂದ ಅಬ್ಬೆ ಶ್ರೀಲಕ್ಷ್ಮಿಯ ಸೇರಿ ಅಕೇರಿಗೆ ಭಗವಂತನ ಸೇರ್ಲೆ ಸಾಧ್ಯ. ಏವ ರೀತಿಲಿ ಬ್ರಹ್ಮತತ್ವವ ಸೇರುವದು ಹೇಳ್ವದರ ಮುಂದೆ ಭಗವಂತ° ಅಡಕವಾಗಿ (ಸೂಕ್ಷ್ಮವಾಗಿ/ಸಂಗ್ರಹವಾಗಿ – ‘ಸಮಾಸೇನ’) ಹೇಳುತ್ತೆ ಹೇದು ಹೇಳುತ್ತ°. ನೈಷ್ಕರ್ಮ್ಯಸಿದ್ಧಿ ಒಬ್ಬ° ಮನುಷ್ಯನ ಜ್ಞಾನಸಾಧನೆಯ ಅಕೇರಿಯಾಣ ಮೆಟ್ಳು. ಪರಮೋನ್ನತವಾದ ಜ್ಞಾನ. ಅದರಿಂದ ಆಚಿಗೆ ಮತ್ತೆ ತಿಳಿವಲೆ ಎಂತದೂ ಇಲ್ಲೆ. ಈ ಹಂತವ ಹೊಂದೆಕ್ಕಾರೆ ನಾವು ಅಧ್ಯಾತ್ಮಲ್ಲಿ ಕುಂತಿಯ ಹಾಂಗೆ ಛಲವುಳ್ಳ – ‘ಕೌಂತೇಯ’ರಾಯೇಕು ಹೇಳಿ ಭಗವಂತನ ಅಂಬೋಣ.

 

ಮುಂದೆ ಭಗವಂತ° ಎಂತ ಹೇಳುತ್ತ°?!………. ಬಪ್ಪವಾರ ನೋಡುವೋ°

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 18 – SHLOKAS 41 – 50

 

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download: www.addkiosk.in ; www.giri.in

 

ಚೆನ್ನೈ ಬಾವ°

   

You may also like...

1 Response

  1. ಶೌರ್ಯ, ಕ್ಷಾಂತಿ, ಶಮ, ದಮ, ತಪ ಇತ್ಯಾದಿ ಶಬ್ದಂಗಳ ನಿರ್ವಚನ ಮತ್ತು ವಿವರಣೆ ತುಂಬಾ ಲಾಯಕ ಆಯಿದು ಭಾವಾ! ಬಹಳ ಉಪಕಾರ ಆತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *