ಭಾಗ 12 : ವಿವಾಹ : ಹದಿನಾರು ಸಂಸ್ಕಾರಂಗೊ

ಸಮಾವರ್ತನ ಸಂಸ್ಕಾರ ಪಡದು ಸ್ನಾತಕನಾಗಿ ಶಾಸ್ತ್ರಾರ್ಥ ಮಾಡುವ ಮೂಲಕ ತನ್ನ ವಿದ್ಯಾಪ್ರದರ್ಶನ ಮಾಡಿ ಧನ ಸಂಪಾದನೆ ಮಾಡುವ ಉದ್ದೇಶಂದ ಕಾಶೀಯಾತ್ರಗೆ ಹೆರಡುತ್ತ° ಮಾಣಿ. ಮದಲೆಲ್ಲ ಸಕಲ ಶಾಸ್ತ್ರ ಮಹಾನ್ ಪಂಡಿತಂಗೋ ಇತ್ತಿದ್ದು ಉತ್ತರ ಭಾರತದ ಕಾಶೀ ಪಟ್ಟಣಲ್ಲಿ. ದೇಶದ ನಾನಾ ಮೂಲೆಂದ ವೇದ ವಿದ್ಯಾ ವಿಶಾರದಂಗೋ ಕಾಶೀ ನಗರಕ್ಕೆ ಹೋಗಿ ಅಲ್ಲಿಪ್ಪ ಮಹಾ ವಿದ್ವಾಂಸರ ಹತ್ರೆ ತಮ್ಮ ವಿದ್ಯಾಪ್ರಾವಿಣ್ಯ ಪ್ರದರ್ಶಿಸಿ ಪ್ರಶಂಸೆ ಪಡಕ್ಕೊಂಡು ಬಪ್ಪ ಕ್ರಮ ಇದ್ದತ್ತು. ಈಗಾಣ ಕಾಲಲ್ಲಿ ಪರದೇಶಕ್ಕೆ ಹೋವ್ತ ಹಾಂಗೇ ಇದು. ಈ ರೀತಿ ಎಲ್ಲೋರು ಕಾಶಿಗೆ ಹೋಗಿ ಸೇರಿಗೊಂಡರೆ ಎಂತಕ್ಕು?!. ಹಾಂಗೆ ಕಾಶೀ ಯಾತ್ರಗೆ ಹೆರಟಪ್ಪಗ ಕನ್ಯಾಪಿತೃ ಎದುರ್ಲಿ ಸಿಕ್ಕಿ ತಡದು ಎದುರ್ಗೊಂಡು “ಸಾಲಂಕೃತ ಎನ್ನ ಮಗಳ ನಿನಗೆ ಧಾರೆ ಎರದು ಕೊಡುತ್ತೆ. ಕನ್ಯೆಯ ಪರಿಗ್ರಹಿಸಿ, ಶಾಸ್ತ್ರೋಕ್ತ ಗೃಹಸ್ಥಾಶ್ರಮ ಜೀವನ ನಡೆಸಿ, ಮತ್ತೆ ಮುಂದೆ ಸಕಾಲಲ್ಲಿ ಪತ್ನೀ ಸಮೇತ ಕಾಶೀಯಾತ್ರೆ ಮಾಡು” ಹೇಳಿ ಸಲಹೆ ಮಾಡುತ್ತ°. ಒಂದು ಕಾಲಲ್ಲಿ ನಮ್ಮಲ್ಲಿ ಸೋದರಿಕೆ ಸಂಬಂಧಂಗಳೇ ಹೆಚ್ಚಾಗಿ ನಡಕ್ಕೊಂಡು ಇತ್ತಿದ್ದಡಾ. ಹಾಂಗಾಗಿ ಸಮಾವರ್ತನೆಲಿ ಸೋದರಮಾವ° ಬಂದುಗೊಂಡಿತ್ತಿದ್ದವು ತಡವಲೆ – ‘ಎನ್ನ ಮಗಳ ಇಂತ ದಿನ ಧಾರೆ ಎರದು ಕೊಡುತ್ತೆ’ ಹೇಳ್ಳೆ. ಮತ್ತೆ, ಹಲವು ಸರ್ತಿ ಕೂಸಿನ ಮನೆ ಬಹು ದೂರ ಇಪ್ಪದರಿಂದಲಾಗಿ ಕೂಸಿನ ಅಪ್ಪಂಗೆ ಅಷ್ಟು ದೂರಕ್ಕೆ ಈ ಕಾರ್ಯಕ್ರಮಕ್ಕೆ ಬಂದುಗೊಂಬಲೆ ಎಡಿಗಾಗ್ಯೊಂಡಿತ್ತಿಲ್ಲೆ. ಹಾಂಗಾಗಿ ಸೌಕರ್ಯಕ್ಕಾಗಿ ಸೋದರಮಾವನ ಕೂರ್ಸಿ ಈ ಕಾರ್ಯಕ್ರಮ ಆಗಿಯೊಂಡಿತ್ತಿದ್ದು. ಅದುವೇ ಈಗ ನಮ್ಮಲ್ಲಿ ಸೋದರಮಾವ° ತಡವದು ಹೇಳಿ ಪ್ರಚಲಿತಲ್ಲಿ ಆತು. ಈ ಸೋದರಮಾವ ತಡದು ಹೇಳುವದು ‘ಇಂತಾ ದಿನ, ಇಂಥವನ ಮಗಳ ಧಾರೆ ಎರಸಿ ಕೊಡುತ್ತು’ ಹೇಳಿ.

ವಿವಾಹ ಸಂಸ್ಕಾರಲ್ಲಿ ಬ್ರಾಹ್ಮ, ದೈವ, ಆರ್ಷ, ಪ್ರಾಜಾಪತ್ಯ, ಅಸುರ, ಗಾಂಧರ್ವ, ರಾಕ್ಷಸ, ಪೈಶಾಚ ಹೇಳಿ ಮುಖ್ಯ ಎಂಟು ವಿಧ. ಅನುಲೋಮ, ಪ್ರತಿಲೋಮ, ಸಂಬಂಧಂ, ಸ್ವಯಂವರ, ಫಣ ವಿವಾಹ, ಪ್ರೇಮ ವಿವಾಹ, ವಿನಿಮಯ ವಿವಾಹ, ಹೀಂಗೆ ಇನ್ನು ಕೆಲವು.  ಎಲ್ಲೋ ಹುಟ್ಟಿ ಬೆಳೆವ ಒಂದು ಕೂಸು ಮಾಣಿ ಶಾಸ್ತ್ರೋಕ್ತ ವಿವಾಹವಾಗಿ ಸಹ ಜೀವನ ನಡೆಸಿ ತಮ್ಮ ಜೀವನದ ಸಾರ್ಥಕ ಪಡೆವುದಕ್ಕೆ ಒಟ್ಟಿಂಗೆ ಜೀವಿಸುವ ನಿರ್ಧಾರ ಮಾಡಿ, ಗುರುಹಿರಿಯರ ಸಮ್ಮುಖಲ್ಲಿ ಅಗ್ನಿಸಾಕ್ಷಿಯಾಗಿ ಕೈ ಹಿಡುದು ಸತಿಪತಿ ಎನಿಸಿಗೊಂಬುದೇ ಬ್ರಾಹ್ಮ ಪದ್ದತಿಯ ವಿವಾಹ ಸಂಸ್ಕಾರ.   ಬ್ರಾಹ್ಮ ವಿವಾಹ ವಿಧವು ಅತ್ಯಂತ ಪರಿಶುದ್ಧವಾದ್ದು. ವಧುವಿನ ಪಿತ°,   ವಿದ್ವಾನ್, ಗುಣ, ಶೀಲವಂತ ವರನ ಕರೆತಂದು ಅವನ ವಿಧಿಯುಕ್ತ ಸತ್ಕರಿಸಿ ಅವನಿಂದ ಯಾವುದೇ ಶುಲ್ಕ ಸ್ವೀಕರುಸದ್ದೆ ಅಲಂಕೃತ ಕನ್ಯೆಯ ದಕ್ಷಿಣೆ ಪೂರ್ವಕ “ಧರ್ಮ-ಪ್ರಜಾ-ಸಂಪತ್ ಸಿದ್ಧ್ಯರ್ಥ್ಯಂ” ಹೇಳಿ ಅವಂಗೆ ಧಾರೆ  ಎರದು ಕೊಡುವದು.

ಮದಾಲು ವಿವಾಹ ನಿಶ್ಚಯ ಆಯೆಕ್ಕಾರೆ ಪರಸ್ಪರ ಕುಲ ಗೋತ್ರ ಪ್ರವರ ತಿಳ್ಕೊಳ್ಳೆಕ್ಕು. ಕುಲ: ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ, ಗೋತ್ರ: ವಿಶ್ವಾಮಿತ್ರ, ಜಮದಗ್ನಿ, ಭರದ್ವಾಜ, ಗೌತಮ, ಅತ್ರಿ, ವಸಿಷ್ಠ ಮತ್ತು ಕಶ್ಯಪ ಹೇಳಿ ಸಪ್ತ ಗೊತ್ರಂಗೊ. ಪ್ರವರ : ಗೋತ್ರಗಳ ಪೂರ್ವಜರು (ಅದು ಒಂದು ಎರಡು ಮೂರು ಅಥವಾ ಐದು ಕೂಡ), ಪ್ರವರಕ್ಕೆ ಆರ್ಷೇಯ ಅಥವಾ ಆರ್ಷ ಹೇಳಿ ಕೂಡ ಹೆಸರು. ಗೋತ್ರೋಭಿವಾದನ ಮಾಡುವಾಗ ಗೋತ್ರ ಪ್ರವರ ಸೂತ್ರ ಹೇಳ್ವಾಗ ಗಮನಿಸಿರೆ ನಮ್ಮ ಪ್ರವರ ಸಿಕ್ಕುತ್ತು. (ಉದಾ: ಭಾರದ್ವಾಜ ಗೋತ್ರ: ಶ್ರೀಮದ್ ಯಜುಃ ಶಾಖಾ; ಬೋಧಾಯನ ಸೂತ್ರನ್ವಿತ, ಆಂಗೀರಸ, ಬಾರ್ಹಸ್ಪತ್ಯ;  ಭಾರದ್ವಾಜತ್ರ್ಯಾರ್ಷೇಯ ಪ್ರವರಾನ್ವಿತ; ಭಾರದ್ವಾಜ ಗೊತ್ರೋತ್ಪನ್ನಃ; ‘…… ಶರ್ಮಾ ಅಹಮಸ್ಮಿ, ಭೋ, ಅಭಿವಾದಯೇ||).

ಸಗೋತ್ರ ವಿವಾಹ, ಸಪಿಂಡ (ಏಳು ತಲೆಮಾರಿನ ವರೇಂಗೆ – ಒಂದೇ ಪಿಂಡದವು = ಸಪಿಂಡರು ) ವಿವಾಹ ಎಂಬುದು ಶಾಸ್ತ್ರನಿಷಿದ್ಧ.  ಇವುಗಳ ಹೊಂದಾಣಿಕೆ ಆದರೆ, ಮುಂದೆ ಜಾತಕ  ಹೊಂದಾಣಿಕೆ. ಇದಲ್ಲಿ ವರ್ಣ, ವಶ್ಯ, ನಕ್ಷತ್ರ, ಯೋನಿ, ಗ್ರಹ, ಗಣ, ಕೂಟ, ನಾಡಿ ಹೇಳಿ ಎಂಟು ವಿಷಯ. ಇದರಲ್ಲಿ ಒಟ್ಟು ೩೬ ಗುಣ. ೫೦% ವಾ ಹೆಚ್ಚು  ಗುಣ ಕೂಡಿ ಬರೆಕ್ಕು ಮತ್ತು ಏಕ ನಾಡಿ ( ಮಾಣಿ ಕೂಸಿನ ಇಬ್ರ ನಾಡಿ ಒಂದೇ) ನಿಷೇಧ. ಮಂಗಳ  ದೋಷ (ಕುಜ ದೋಷ) – ಜನ್ಮಕುಂಡಲಿಲಿ ೧ ೪ ೭ ೮ ಮತ್ತು ೧೨ ಈ ಐದು ಸ್ಥಾನಲ್ಲಿ ಕುಜ ಬಂದರೆ ಅದು ಕುಜ ದೋಷ. ಇದಕ್ಕೆ ಕೆಲವೊಂದು ಅಪವಾದಂಗಳೂ ಶಾಸ್ತ್ರ ಸಮ್ಮತ ಇದ್ದು. ಮತ್ತೆ ಷಡಷ್ಟಕ, ಏಕರೂಪತೆ ಇತ್ಯಾದಿ ಇತ್ಯಾದಿ.  ಇದೆಲ್ಲ ಜ್ಯೋತಿಷ್ಯ ಅಭ್ಯಾಸ ಇಪ್ಪವಕ್ಕೆ ಆರಡಿಗಷ್ಟೇ. ನಮ್ಮ ಮಂಡಗೆ ಅರ್ಥ ಆಗ. ಅಂತೂ ಜ್ಯೋತಿಷಿಗಳ ಸಮ್ಮುಖಲ್ಲಿ ಕೂಸು ಮಾಣಿಯ  ಜಾತಕ ಕೂಡಿ ಬತ್ತೋ ಹೇಳ್ವದರ ಚಿಂತುಸೆಕ್ಕು ಹೇಳಿ ನಾವಿಲ್ಲಿ ಹೇಳ್ವದು.  ಹಾಂಗೆಯೇ ಸೋದರಿಕೆ ಸಂಬಂಧ ಪ್ರಚಲಿತ ಇಪ್ಪದಾದರೂ ಶಾಸ್ತ್ರ ಸಮ್ಮತ ಅಲ್ಲ. ಅದೇ ರೀತಿ ಮನಶಾಸ್ತ್ರ ದೃಷ್ಠಿ೦ದ ಜೀವನ ಪರ್ಯಂತ ಕೂಡಿ ಬಾಳುವ ಸಂಬಂಧ ಅಪ್ಪ ಕಾರಣ ಕುಲ, ಸ್ಥಾನ, ಮಾನ, ಅಂತಸ್ತು ಪರಸ್ಪರ ಕೂಡಿ ಬರೆಕ್ಕಾದ್ದು ಅಗತ್ಯ ಹೇಳಿ ಶಾಸ್ತ್ರವೂ. ನಾಳೆ ಮತ್ತೆ ‘ಎನ್ನ ಅಪ್ಪನ ಮನೆ ಶ್ರೀಮಂತ / ಬಡವ’ ಹೇಳ್ವ ಮಾತು ಬಪ್ಪಲಾಗ ನೋಡಿ.

ಹೀಂಗೆ ಜಾತಕ ಕೂಡಿ ಬಂತು, ಎರಡೂ ಕಡೆ ಸಂಬಂಧಕ್ಕೆ ಪರಸ್ಪರ ಒಪ್ಪಿಗೆ ಆತು ಕಂಡ್ರೆ ಮತ್ತೆ ಬದ್ಧ. (ನಿಶ್ಚಯ ತಾಂಬೂಲ). ಏವ ದಿನ, ಎಲ್ಲಿ, ಹೇಂಗೆ ಹೇಂಗೆ ಇತ್ಯಾದಿ ಜ್ಯೋತಿಷಿಯತ್ರೆ  ಮುಹೂರ್ತ ನೋಡಿ ಗುರು ಹಿರಿಯರಿದ್ದು ಪರಸ್ಪರ ಮಾತಾಡಿ  ನಿಶ್ಚೈಸುವದು. ನಿಶ್ಚಿತ ದಿನಕ್ಕೆ ದಿಬ್ಬಾಣ ಸಹಿತ ಮಾಣಿಯ ಕರಕ್ಕೊಂಡು ಬರೆಕ್ಕು, ಮಾಣಿಗೆ ಕೂಸಿನ ಕನ್ಯಾದಾನ ವಿವಾಹ ಪೂರ್ವಕ ಮಾಡಿ ಕೊಡುತ್ತೆ ಹೇಳಿ ವಧುವಿನ ಅಪ್ಪ ವರನ ಅಪ್ಪನತ್ರೆ ಕೇಳಿಕ್ಕೊಂಬದು ಮತ್ತು ವಧು ವರರ ಅಪ್ಪಂದ್ರು ಪರಸ್ಪರ ತಾಂಬೂಲ ವಿನಿಮಯ ಮಾಡಿಗೊಂಬದು ಗುರು ಹಿರಿಯರ ಸಮ್ಮುಖಲ್ಲಿ  ಮತ್ತು ಬಂಧು ಮಿತ್ರಾದಿಗೊಕ್ಕೆ ಹೇಳಿಕೆ ಹೇಳುವದು. ಬದ್ಧಕ್ಕೆ ಬಂದವಕ್ಕೆ ಪುನಃ ಹೇಳಿಕೆ ಇಲ್ಲೆ ಆತೋ. ದಶರಾತ್ರಿ ಮುಂಚಿತ ನಾಂದಿ ಕರ್ಮ ಎರಡೂ ಕಡೆ.

ಮದುವೆ ಹೇಂಗೆ ನಡೆತ್ತು ಹೇಳಿ ಸಾಮಾನ್ಯ ಎಲ್ಲೋರಿಂಗೂ ನೋಡಿ ಗೊಂತಿದ್ದು. ಅದರ ದೀರ್ಘ ವಿವರ ಇಲ್ಲಿ ಅಗತ್ಯ ಇಲ್ಲೆ. ಮದಲಿಂಗೆ ನೆಂಟರಿಷ್ಟರು ಮುಹೂರ್ತಂದ ಮದಲೇ ಬಂದು ಸಭೆ ಸೇರುಗು. ಮಂಟಪದ ಹತ್ರೆಯೇ ಕೂರುಗು. ಕೆಲವರಿಂಗೆ ಈ ನಮ್ಮ ಜೆಂಬಾರವ ಸಭೆ ಚಂದಗಾಣಿಸಿಕೊಡೆಕ್ಕು ಹೇಳ್ವ ಗಂಭೀರ ವಿಷಯವೂ, ಕೆಲವರಿಂಗೆ ಹೊಸ ಮದುವೆ ಅಪ್ಪ ಮಾಣಿ – ಕೂಸು ಹೇಂಗೆ ನಾಚಿಕೆ ಮಾಡಿಗೊಳ್ತವು ಹೇಳಿ ನೋಡುವ  ಮೋಜು, ಮತ್ತೆ ಕೆಲವರಿಂಗೆ ಮುಹೂರ್ತ ದಕ್ಷಿಣೆ ತಪ್ಪಿ ಹೋಕೋ ಹೆದರಿಕೆಯೂ,  ಇನ್ನು ಕೆಲವು ತೊಳಚಟೆ ಜಿಜ್ಞಾಸುಗೊಕ್ಕೂ ಊಹಾಪೋಹ ಕಲ್ಪನಗೂ ವಿಹಾಹ ಮಂಟಪದ ಹತ್ತರೆ ಕೂದು ಆಸ್ವಾದಿಸುವ ಸುಖವೇ ಅನುಭವಿಸಿದವಕ್ಕೇ ಗೊಂತು.  ಮದುವೆ ಮಹೋತ್ಸವವ ಹತ್ರಂದ ಕಣ್ಣಾರೆ ನೋಡಿ ಆಶೀರ್ವಾದ ಮಾಡುಗು. ಎಂಗಳ ಕೂಸು / ಮಾಣಿಯ ಮದುವೆ ಹೇಂಗೆ ಕಳುತ್ತು ಹೇಳ್ವ ಸನ್ನಿವೇಶ  ನೆಂಪು ಅವಿಸ್ಮರಣೀಯವಾಗಿ ಮನಸ್ಸಿಲ್ಲಿ ದೀರ್ಘ ಕಾಲ ಉಳಿಗು. ಈಗ ಎಲ್ಲಾ ಮತ್ತೆ ವೀಡಿಯೋ ನೋಡಿ ಆಶೀರ್ವದಿಸಿರೆ ಆತಿದಾ!.

ದಿಬ್ಬಣಿಗನಾಗಿ ಬಂದ ವರನ ವಧುವಿನ ಅಪ್ಪ° ಎದುರುಗೊಂಡು ಮಂಟಪಕ್ಕೆ ಕರೆದೊಯ್ದು  ವಿಶೇಷ ಆದರೋಪಚಾರಂದ ಸತ್ಕರಿಸುವುದು, ಮಂತ್ರ ಭಿನ್ನಹ – ಸಭಾವಂದನೆ, ಪುಣ್ಯಾಹ, ಮಧುಪರ್ಕ ಇತ್ಯಾದಿ ವರೋಪಚಾರ, ವಾಕ್ದಾನ (ಮಾಣಿಗೆ ಕೂಸು ಕೊಡುವದು , ತಪ್ಪದು ಹೇಳಿ ವಾಕ್ದಾನ, “ಶ್ರೀಮದ್ ಯದ್ಯಜು:ಶಾಖಾ ……. ನಾಮ್ನೀಂ ಕನ್ಯಾಂ ಜ್ಯೋತಿರ್ವಿದಾದಿಷ್ಟೆ ದಾಸ್ಯೇ”, “ ವಾಚಾ ದತ್ತಾ ಮಾಯಾ ಕನ್ಯಾ ಪುತ್ರಾರ್ಥ ಸ್ವೀಕೃತಾ ತ್ವಯಾ | ಕನ್ಯಾವಲೋಕನ ವಿಧೌ ನಿಶ್ಚಿತತ್ವಂ ಸುಖೀ ಭವ|| ಹೇಳಿ ಕೂಸಿನಪ್ಪ° ಹೇಳಿಯಪ್ಪಗ ಮಾಣಿ     “….ಸ್ವೀಕೃತಾ ಮಯಾ” ಹೇಳಿ ಮಾತು ಕೊಡುವದು). ಮತ್ತೆ ಮಂಟಪಲ್ಲಿ ಅಂತಃಪಟ ಹಿಡುದು,  ವರ ಪೂರ್ವಾಭಿಮುಖವಾಗಿ (ತೆಕ್ಕೊಂಬವ ) ನಿಲ್ಲಿಸಿ , ವಧುವಿನ ಕರಕ್ಕೊಂಡು ಬಂದು  ಪಶ್ಚಿಮಾಭಿಮುಖವಾಗಿ ಅಂತಃಪಟದ ಆಚೀಚೆ ನಿಲ್ಲಿಸಿ ಗೋತ್ರ ಪ್ರವರ ಹೇಳಿ (ಇಂತವನ ಮಗಳ .. ಇಂತವನ ಮಗ … ಇವಂಗೆ ಕೊಡುತ್ತೆ, ತತ್ತೆ ಹೇಳಿ ಅರ್ಥ), ಮಂಗಳಾಷ್ಟಕ ಸಹಿತ ‘ಸುಮುಹೂರ್ತೇ  ಸಾವಧಾನ……..’ ಹೇಳಿ ವೇದ ವಿದ್ವಾಂಸರಿಂದ ಆಶೀರ್ವಾದ ಪಡೆದು ಅಂತಃಪಟ (ತೆರೆಸೀರೆ) ತೆಗವದು. ಮದಾಲು ಕೂಸು ಮಾಣಿಗೆ ಹೂಮಾಲೆ ಹಾಕಿದ ಬಳಿಕ ಮಾಣಿ ಕೂಸಿಂಗೆ ಮಾಲೆ ಹಾಕುವದು. ಅಥ: ವರಃ ಕನ್ಯಾಮೀಕ್ಷ್ಯತೆ-’    ಹೇಳಿಯಪ್ಪಗ ಮಾಣಿ ಕೂಸಿನ ಮದಾಲು, ಮತ್ತೆ ಕೂಸು ಮಾಣಿಯ ಅತ್ತಿತ್ತೆ ಪ್ರಪ್ರಥವಾಗಿ ನೋಡುವದು. ಅಲ್ಲಿಯವರೇಂಗೆ ಮಾಣಿ ಕೂಸು ಪರಸ್ಪರ ಕಣ್ಣಿಲ್ಲಿ ಕಾಂಬಲೆ ಇಲ್ಲೆ. ಮತ್ತೆ ಮಾಣಿ ಕೂಸಿನ ಭ್ರೂ ಮಧ್ಯವ ದರ್ಭೆಲಿ ಮುಟ್ಟುವದು. ಭ್ರೂ ಮಧ್ಯ ಆಜ್ಞಾಚಕ್ರದ ಸ್ಥಾನ. ಹೀಂಗೆ ಮಂತ್ರ ಸಹಿತ ದರ್ಭೆಲಿ ಆಜ್ಞಾಚಕ್ರವ ಭೇದಿಸುವುದು ಹೇಳಿ ಸಾಂಕೇತಿಕ. ಅಲ್ಲಿಂದ ಪತ್ನಿಯು ಪತಿಯ ಆಜ್ಞೆಲಿ ಇರೆಕ್ಕು, ಇನ್ನು ಮುಂದೆ ಅಪ್ಪ°, ಗುರು ಎಲ್ಲವೂ ಮಾಣಿಯೇ ಹೇಳಿ ಭಾವಾರ್ಥ. ಬಳಿಕ ಪೂರ್ವ ಪಶ್ಚಿಮಾಭಿಮುಖವಾಗಿ ವಧೂ ವರರ ಕುಳ್ಳಿರಿಸಿ ವಧುವಿನ ವಧೂ ವರರ ಪಾದ ತೊಳಸಿ ಅವಕ್ಕೆ  ಲಕ್ಷ್ಮೀ ನಾರಾಯಣರ ಆವಾಹನೆ ಮಾಡುವದು. ಮದುಮಕ್ಕೊ ಹೇಳಿರೆ ಲಕ್ಷ್ಮೀ ನಾರಾಯಣ ಸ್ವರೂಪಿಯಾಗಿ ಜೀವನದ ಉದ್ದಕ್ಕೂ ಪರಸ್ಪರ ಅರ್ತುಗೊಂಡು ಪ್ರೀತಿ ಪೂರ್ವಕ ಜೀವನ ಸಾಗುಸೆಕ್ಕು ಹೇಳಿ ಸೂಚ್ಯ. ಆ ಅವಾಹನೆಯ ಉದ್ವಾಸನೆ ಮಾಡ್ಳೆ ಇಲ್ಲೆ ಮತ್ತೆ. ಮತ್ತೆ ವಧು ವರರ ಕೈಗೆ ಅಕ್ಕಿ ಹಾಕಿ ಅದ್ರ ಮೇಗೆಂದ ಎಲೆ ಅಡಕ್ಕೆ ಮಡುಗಿ ಮುಹೂರ್ತ ಮುಟ್ಟಿಸಿ (ಅವರ ಸಾಕ್ಷಿಯಾಗಿ, ಅವರ ಆಶೀರ್ವಾದಪೂರ್ವಕವಾಗಿ, ಮುಹೂರ್ತಕ್ಕೆ ಅವರ ಶುಭಾಶಯ ಆಶಿಸಿ )   ಅಬ್ಬೆ ಅಪ್ಪ° ಧಾರೆ ಕೂಸಿನ ಎರವದು ಮಾಣಿಗೆ.  ವರದಕ್ಷಿಣೆ (ಇಲ್ಲಿ ಪೈಸೆ ಕಟ್ಟ ಎಷ್ಟು ಹೇಳಿ ಲೆಕ್ಕ ಅಲ್ಲ, ದಕ್ಷಿಣೆ ಸಹಿತ ಕನ್ಯಾದಾನ ಹೇಳಿ ಶಾಸ್ತ್ರ), ವಸ್ತ್ರ ಗ್ರಂಥಿ ಬಂಧನ (ಆ ಧಾರೆ ಎರದ ಒಂದು ಹಿಡಿ ಅಕ್ಕಿ, ಎಲೆ ಅಡಕ್ಕೆ ಉತ್ತರೀಯದ ಒಂದು ಪದರಲ್ಲಿ ಮಡುಗಿ ಕಟ್ಟುವದು ), ಮಾಂಗಲ್ಯಕ್ಕೆ ಮಂಗಲದೇವತಾ ಪೂಜೆ, ಮಾಣಿ ಕೂಸಿನ ಕೊರಳಿಂಗೆ ಮಾಂಗಲ್ಯಂ ತಂತು ನಾನೇನ ಮಮ ಜೀವನ ಹೇತುನಾ , ಕಂಠೇ ಬಧ್ನಾಮಿ ಸುಭಗೇ ತ್ವಂ ಜೀವ ಶರದಾಂ ಶತಾಂಹೇಳಿ ಮಂಗಲತಾಳಿ ಕಟ್ಟುವದು (ಬೇಂಡು – ಓಲಗ ಕೇಳೆಕ್ಕದಾ ಈಗ). ಕೂಸಿನ – ಮಾಣಿಯ ಉತ್ತರೀಯ ಗಂಟು ಕಟ್ಟಿ ಕೂಸಿನ ಕೈ ಎತ್ತಿ ಮಾಣಿ ಕೈಗೆ ಕೊಟ್ಟು ಸಪ್ತಿಪದಿ, ‘ಏಳು ಹೆಜ್ಜೆ ನಡದಪ್ಪಗ ಸ್ನೇಹ ಗಾಢ ಆವುತ್ತು ಹೇಳಿ ಶಾಸ್ತ್ರ ವಚನ. (ಒಂದೊಂದು ಹೆಜ್ಜೆಗೂ ಒಂದೊಂದು ಮಂತ್ರ, ಅರ್ಥ. ಗಂಡನ ಜೊತೇಲಿ ಪ್ರೀತಿ ವಿಶ್ವಾಸ ಅಜ್ಞಾನುವರ್ತಿ ಜವಾಬ್ದಾರಿ ಸುಶೀಲೆಯಾಗಿ ಗಂಡನೊಂದಿಂಗೆ ದೀರ್ಘ ಕಾಲ ಗಂಡನ ಎಲ್ಲಾ ಸುಖ ದುಃಖದಲ್ಲಿ ಅನುವರ್ತಿಯಾಗಿ ಬಾಳುತ್ತೆ ಹೇಳಿ ವಧುವಿನ ಪ್ರತಿಜ್ಞೆ ಅದು.,  ಆದ್ದರಿಂದಲೇ ವಿವಾಹಲ್ಲಿ ಸಪ್ತಪದಿಗೆ ವಿಶೇಷ ಮಹತ್ವ) ಮೆಟ್ಟಿಗೊಂಡು ಬಂದು ಹತ್ರೆ ಹತ್ರೆ ಕೂರ್ಸುವದು, ಉತ್ತರೀಯ ಗಂಟು ಬಿಡುಸುವದು,  ವೇದ ವಿದ್ವಾಂಸರಿಂದ ಆಶೀರ್ವಚನ ಮಂತ್ರ, ಮಂತ್ರಾಕ್ಷತೆ ಇತ್ಯಾದಿ ಕ್ರಮಂಗೊ ವಿವಾಹ ವೇದಿಕೆಲಿ.

ವಿವಾಹದ ಬಗ್ಗೆ ನಮ್ಮ ಗಣೇಶ ಮಾವ ಈ ಹಿಂದೆ ಬೈಲಿಲಿ ಶುದ್ದಿ ಹೇಳಿದ್ದು ಇಲ್ಲಿ ಇದ್ದು – http://oppanna.com/lekhana/vivaha

ಸಪ್ತಪದಿ ಬಗ್ಗೆ ನಮ್ಮ ಗಣೇಶ ಮಾವ ಈ ಹಿಂದೆ ಬೈಲಿಲಿ ಶುದ್ದಿ ಹೇಳಿದ್ದು ಇಲ್ಲಿ ಇದ್ದು – http://oppanna.com/lekhana/ganaka/saptapadi

ನಂತರ ವಿವಾಹ ಹೋಮ. “ವಿವಾಹ ವಿಧಿಯಿಂದ ಸ್ವೀಕರಿಸಿದ ಈ ವಧುವಿನಲ್ಲಿ ಪತ್ನಿತ್ವ ಸಿದ್ಧವಾಗಲು ಮತ್ತು ಗೃಹ್ಯಾಗ್ನಿ ಸಿದ್ಧವಾಗಲು ( … ಪ್ರತಿಗೃಹೀತಾಯ ಅಸ್ಯಾಂ ವಧ್ವಾಂ ಭಾರ್ಯಾತ್ವ ಸಿದ್ಧಯೇ ಗೃಹ್ಯಾಗ್ನಿ ಸಿದ್ಧಯೇ ವಿವಾಹ ಹೋಮಂ ಕರಿಷ್ಯೇ) ವಿವಾಹ ಹೋಮ ಮಾಡುತ್ತೇನೆ” ಹೇಳಿ ಸಂಕಲ್ಪ. ಮದಿಮ್ಮಾಳಿನ ಬಲಕೈ ಐದು ಬೆರಳು ಸಮೇತ ಮದಿಮ್ಮಾಯ ಹಿಡ್ಕೊಂಡು ಪಾಣಿಗ್ರಹಣ ಮಂತ್ರ ಹೇಳುವದು. ಬಳಿಕ ಲಾಜ ಹೋಮ (ವಿವಾಹ ಹೋಮ).  “ಇಯಂ ನಾರ್ಯುಪ ಬ್ರೂತೇ ಕುಲ್ಪಾನ್ಯಾವಪಂತಿಕಾ । ದೀರ್ಘಾಯುರಸ್ತು ಮೇ ಪತಿರ್ಜೀವಾತು ಶರದಶ್ಶತಂ ॥ ….” , ಈ ಮಂತ್ರಂದ ಮದಿಮ್ಮಾಳ ಕೈಂದ ಹೋಮಕ್ಕೆ ಹೋದಳು ಹೋಮುಸುವದು. ಪತ್ನಿಯ ಪಿತೃ ಗೃಹ ಪಾಷಂದ ಬಿಡುಸಲಿ, ಪತಿ ಗೃಹದ ಮೋಹ ವೃದ್ಧಿಯಾಗಲಿ ಎಂಬ ತಾತ್ಪರ್ಯ.  ಬಳಿಕ ಕೂಸಿನ ಕೈ ಹಿಡ್ಕೊಂಡು ಅಗ್ನಿಗೆ ಪ್ರದಕ್ಷಿಣೆ ಮತ್ತು ಕೂಸು ಮಾಂತ್ರ ಮಾಣಿ ಕೈಹಿಡ್ಕೊಂಡಿಪ್ಪಾಂಗೆ ಅರ್ಧ ಸುತ್ತು ಬಂದು ಅಲ್ಲಿಪ್ಪ ಒರೆಗಲ್ಲು ಬಲಕಾಲಿಲ್ಲಿ ಮುಟ್ಟಿಕ್ಕಿ ಹಿಂದೆ ಬಪ್ಪದು. ಈ ಕಲ್ಲಿನ ಸಾಕ್ಷಿಯಾಗಿ, ಈ ಹೆಜ್ಜೆ ಈ ಕಲ್ಲಿಂದ ಮುಂದೆ ದಾಂಟೆ (ಗಂಡನ ಮಾತು ಮೀರೆ), ಕಷ್ಟಕೋಟಲೆ ಎದುರಾದಪ್ಪಗ ನೀನು ಆ ಕಲ್ಲಿನ ಹಾಂಗೆ ಸ್ಥೈರ್ಯಗೆಡದೆ ಧೃಢವಾಗಿರು , ಆರಾರು ವಿರೋಧಿಸಿರೆ ಧೈರ್ಯವಾಗಿ ಕಲ್ಲಿನ ಹಾಂಗೆ ಎದುರುಸು  ಹೇಳಿ ಅರ್ಥ. ಕಲ್ಲು ಸ್ಥೈರ್ಯ ಮತ್ತು ದೃಢತೆಯ ತುಂಬುಸುವ ಪ್ರತೀಕ. ವಿವಾದಂದಿಂದ ಪ್ರಾರಂಭಿಸಿ ಮತ್ತೆ ಜೀವನ ಪರ್ಯಂತ ಆ ವಿವಾಹ ಹೋಮಾಗ್ನಿ(ಗೃಹ್ಯಾಗ್ನಿ) ಯ ನಂದುಸದ್ದೆ ಕಾಪಾಡಿಗೊಂಡು ಅದೇ ಅಗ್ನಿಲಿ ನಿತ್ಯಹೋಮಾದಿಗಳ ಮಾಡೆಕ್ಕಪ್ಪದು ದಂಪತಿಗಳ ಕರ್ತವ್ಯ. ಆದ್ದರಿಂದ ವಿವಾಹಹೋಮದ ಅದೇ ಅಗ್ನಿಲಿ ಆವ್ತು ವಿವಾಹ ವ್ರತಹೋಮ ಔಪಾಸನ ಆರಾಧನೆ ಹೋಮಾದಿಗಳ ಮಾಡೆಕ್ಕಪ್ಪದು. ಆದರೆ, ಪ್ರಾಯೋಗಿಕ ಜೀವನ ಪರಿಸ್ಥಿತಿಲಿ ಆ ಅಗ್ನಿಯ ಅಕೇರಿವರೇಂಗೆ ಸಂರಕ್ಷಿಸಿ ಮಡಿಕ್ಕೊಂಬಲೆ ಎಡಿಗಾವ್ತಿಲ್ಲೆ. ಆದ್ದರಿಂದ ಆ ಅಗ್ನಿಯ ಸಮಿತ್ತಿಲ್ಲಿ ಆರೋಪಿಸಿ ಔಪಾಸನದ ಒಟ್ಟಿಂಗೆ ಮಡುಗುವದು. ಮುಂದೆ ಮಾಡುವ ಹೋಮಕ್ಕೆ ಅದೇ ಸಮಿತ್ತಿಲ್ಲಿ ಸಂರಕ್ಷಿಸಿದ ಅಗ್ನಿಂದ ಹೋಮಾಗ್ನಿಯ ತಯಾರು ಮಾಡುವದು. ಈ ಔಪಾಸನ ಅಗ್ನಿ ಆ ದಂಪತಿಗಳ ಜೀವನ ಪರ್ಯಂತ ಆರಾಧಿಸಿಗೊಂಡು ಸಂರಕ್ಷಿಸಿಗೊಂಡು ಬರೆಕ್ಕಪ್ಪದು ವಿಧಿ. ‘ಔಪಾಸನಾಗ್ನಿಂ ಪ್ರತಿಷ್ಠಾಪಯಾಮಿ’ ಹೇಳಿ ಭಟ್ಟಮಾವ° ನಿಂಗಳ ಔಪಾಸನ ಅಂಡೆಂದ ಸಮಿತ್ತು ತೆಗದು ಹೋಮಕ್ಕೆ ಹಾಕುವದು ಇದುವೇ. ಗಂಡ-ಹೆಂಡಿರಲ್ಲಿ ಆರೊಬ್ಬ° ಅವಸಾನ ಆದರೂ ಅವನ ಅಂತ್ಯೇಷ್ಟಿಯ ಅದೇ ಅಗ್ನಿಂದ ಮಾಡಿ ಸಮಾರೋಪ ಮಾಡುವದು. ಮತ್ತೆ ಉಳುದವಂಗೆ ಲೌಕಿಕಾಗ್ನಿಂದ ಕ್ರಿಯೆ. ಮತ್ತೆ ಅಂದಿರುಳು ವಿವಾಹ ವ್ರತ ಹೋಮ, ಔಪಾಸನ, ಚತುರ್ಥಿ, ಅರುಂಧತಿ ದರ್ಶನ, ವ್ರತ ವಿಸರ್ಜನೆ, ಕಂಕಣಾದಿ ವಿಸರ್ಜನೆ ಹೇಳಿ ನಾಕು ದಿನಾಣ ಕಾರ್ಯಕಲಾಪಂಗೊ ಒಂದೇ ದಿನಲ್ಲಿ ಮಾಡ್ತದು. ಐದರಂದು (ಈಗಾಣ ಕಾಲಲ್ಲಿ ಮರುದಿನ ಸಟ್ಟುಮುಡಿ ದಿನ ಸಟ್ಟುಮುಡಿ ಒಟ್ಟಿಂಗೆ ಮಾಡುವದು) ಸ್ಥಾಲೀಪಾಕ, ವೈಶ್ವದೇವ ಹೇಳಿ ಐದು ದಿನಾಣ ಕಾರ್ಯಕಲಾಪಂಗೊ ಮದಲಿಂಗೆ. ಸದ್ಧರ್ಮಲ್ಲಿ ಹೋಮ ಹವನಾದಿಲಿ ಇದ್ದುಗೊಂಡು ಪರಸ್ಪರ ಅರ್ಥ ಮಾಡಿಗೊಂಡಿರೆಕ್ಕು, ದಾಂಪತ್ಯ ಒಂದೇ ಉದ್ದೇಶ ಅಲ್ಲ  ವಿವಾಹದ್ದು ಹೇಳಿ  ಅರ್ಥ. ಮತ್ತೆ ಮರುದಿನ (ಆರನೇ ದಿನ) ವಧು ವರರ ದಿಬ್ಬಾಣ ಹೆರಡುವದು ವರನ ಮನಗೆ ವಧೂ ಗೃಹಪ್ರವೇಶಕ್ಕೆ. (ಕೆಲವು ಜೆನರ ಬಾಯಿಲಿ ಅದು ಗ್ರಹಪ್ರವೇಶವೂ ಆಯ್ದು!!)

ಮದಲಿಂಗೆ ಆರು ದಿನಾಣ ಮದುವೆ ಹೇಳಿ ಲೆಕ್ಕ. ಈಗ ಅದು ಎರುಡು ದಿನ, ಒಂದೇ ದಿನ, ಒಂದೇ ಹೊತ್ತಿಲ್ಲಿಯೂ ನಡೆತ್ತು.  ಅಂಬಾಗ ಈ ಆರು ದಿನ ಲೆಕ್ಕ ಎಂತೆಲ್ಲ? . ಸುರುವಾಣ ದಿನ ಮದುವೆ. ಅಂದಿರುಳು ಔಪಾಸನ ಹೋಮ. ದಂಪತಿಗೊ ನಿತ್ಯ ಅಗ್ನಿಯ ಆರಾಧನೆಲಿ ಇರೆಕು. ಮದುವೆ ಆದ ಮತ್ತೆ ದಂಪತಿಗೊ ನಿತ್ಯ ಎರಡು ಹೊತ್ತು ಔಪಾಸನ ಹೋಮ ಮಾಡೆಕು ಹೇಳಿ ಶಾಸ್ತ್ರ. ಔಪಾಸನ ಹೋಮ ಕಾರಣಾಂತರಂದ ಮಾಡ್ಳೆ ತಪ್ಪಿಹೋದಲ್ಲಿ ಮುಂದೆ ಹೋಮ ಮಾಡೆಕ್ಕಾರೆ ಮದಾಲು ಪ್ರಾಯಶ್ಚಿತ್ತ ಹೋಮ ಮಾಡೆಕು. ಪ್ರಾಯಶ್ಚಿತ್ತಕ್ಕಾಗಿ ದಂಡ (fine) ಕೂಡ ಕಟ್ಟೇಕ್ಕಾವ್ತು. ಮತ್ತೆ ಎರಡುದಿನ ವಿವಾಹವ್ರತಲ್ಲಿ ಇದ್ದುಗೊಂಡು ಔಪಾಸನ ಆರಾಧನೆ ಮಾತ್ರ. ಚತುರ್ಥೇ ಹನಿ (ನಾಲ್ಕನೇ ದಿನ) ಚತುರ್ಥಿ ಹೋಮ (ಪಕ್ವ ಹೋಮಂ ಕರಿಷ್ಯೇ ಇತಿ ಸಂಕಲ್ಪಃ), ತಾಂಬೂಲ ಚರ್ವಣ, ಅರುಂಧತೀ ದರ್ಶನ, ಹಸೆ ಹಾಕುವದು, ವಿವಾಹ ವ್ರತ ವಿಸರ್ಜನೆ. ಇದು ಸತಿಪತಿಯರಲ್ಲಿ ಅನ್ಯೋನ್ಯ ಪ್ರೀತಿ ಪ್ರೇಮ ವಿಶ್ವಾಸ ಅಭಿಮಾನ ಮೂಡಲೂ ಸಹಾಯಕ ಆವ್ತು. ಪಂಚಮೇ ಹನಿ (ಐದನೇ ದಿನ) ಕೆರೆಮೀಯಾಣ, ಉದುಂಬರ ಪೂಜೆ ( ಅತ್ತಿ ಮರದ ಅಡಿಲಿ ಕಾರ್ಯ ಕಲಾಪ) ಕಂಕಣ ಬಿಚ್ಚುವದು. ಮತ್ತೆ ಸ್ಥಾಲೀಪಾಕ ಹೋಮ. ಬಳಿಕ ಆ ಹೋಮದ ಅಗ್ನಿಲಿ ಮದಿಮ್ಮಾಳು ಪ್ರಥಮವಾಗಿ ಅಡಿಗೆ ಮಾಡುವದು (ಇದುವೇ ಸಟ್ಟುಮುಡಿ ಹೇಳಿರೂ.  ಸ್ಥಾಲೀ = ಪಾತ್ರೆ. ಅಗ್ನಿಯ ಉಪಾಸನೆ ಮಾಡಿ ಪಾತ್ರೇಲಿ ಅಶನ ಬೇಶಿ ಸಟ್ಟುಗಲ್ಲಿ ಬಳುಸುವದು). ಶಷ್ಟೇ ಹನಿ (ಆರನೇ ದಿನ) ವೈಶ್ವದೇವ, ಬಲಿಹರಣ, ಪಂಚಯಜ್ಞ, ವಧೂಗೃಹ ಪ್ರವೇಶ.

ನವ ವಧು ಪತಿಗೃಹಲ್ಲಿ ಎಲ್ಲರೊಂದಿಂಗೂ ಯಾವ ರೀತಿ ಜೀವಿಸಬೇಕೆಂಬ ಆಕಾಂಕ್ಷೆ ವ್ಯಕ್ತ ಪಡಿಸಿ ಆ ರೀತಿಲಿ ಆದರ್ಶ ಗೃಹಿಣಿಯಾಗಿ ಜೀವುಸಲೆ ನೆರವು ನೀಡೆಕ್ಕು ಹೇಳಿ ದೇವತಾ ಪ್ರಾರ್ಥನೆ ಮಾಡುವದು. ಹೊಸ್ತಿಲ ಪೂಜೆ ಮಾಡಿ ಪ್ರಸಾದ ತೆಕ್ಕೊಂಡು ಅಕ್ಕಿ ಸೇರಿನ ಬಲಕಾಲಿಲ್ಲಿ ತಟ್ಟಿ (ಅದರಿಂದ ಧಾನ್ಯ ಹೇಂಗೆ ಮನೆಲಿ ಹರಡುತ್ತೋ ಹಾಂಗೇ ಈ ವಧು ಪ್ರವೇಶಂದ ಧನ ಕನಕ ವಸ್ತು ವಾಹನ ಸಮೃದ್ಧಿ ಆಯೆಕ್ಕು ಹೇಳಿ ಭಾವನೆ) ಗೃಹಪ್ರವೇಶ ಮಾಡುವದು (ದೇವರ ಕೋಣೆಲಿ ಹೆಮ್ಮಕ್ಕೋ ಬಾಗಿಲು ತಡವದು ಇತ್ಯಾದಿ ಸ್ಥಳೀಯ ಸಂಪ್ರದಾಯ ಅಷ್ಟೇ). ಮತ್ತೆ ಪುಣ್ಯಾಹವಾಚನ, ವಧೂಗೃಹಪ್ರವೇಶ ಹೋಮ.  ವಧುವಿಂಗೆ ಗಂಡನ ಮನೇಲಿ ಹೇಂಗೆ ಇರೆಕ್ಕು ಹೇಳಿ ಹಿತೋಪದೇಶ,  ಕೂಸಿನ ಕೈ ಎತ್ತಿ ಕೊಡುವುದು (ಧರ್ಮ-ಪ್ರಜಾ-ಸಂಪತ್ ಸಿದ್ಧ್ಯರ್ಥಂ ಇಮಾಂ ಕನ್ಯಾಂ ಪ್ರತಿಗೃಣ್ಣಾಮಿ ಹೇಳಿ ಮದಿಮ್ಮಾಯ ಮಾತು ಕೊಡುವದು), ಉಡುಗೊರೆ, ಮಂತ್ರಾಕ್ಷತೆ (ಧಾರ್ಮಿಕ ವಿಧಿಲಿ ಮಂತ್ರಾಕ್ಷತೆ ಹಾಕಿ ಆಶೀರ್ವದಿಸೆಕ್ಕಾದ್ದು ನಾವು ಮಾಡೆಕ್ಕಪ್ಪದ್ದು, ಮಂಟಪಕ್ಕೆ ಹೋಗಿ ಕವರು ಗಿಪ್ಟ್ ಕೊಟ್ಟು ಕೈ ಕುಲುಕಿಸಿ ಬಪ್ಪದು ನವಗೆ ಹೇಳಿದ್ದಲ್ಲ) ಇತ್ಯಾದಿ ವೈದಿಕ ಕಾರ್ಯಂಗೊ. ಊಟದ ಸಮಯಲ್ಲಿ ಮದಿಮ್ಮಾಳ ಕೈಲಿ ಸಟ್ಟುಗ ಹಿಡುಸುವದು ಸಂಪ್ರದಾಯ. ಅಲ್ಲಿ ಅದು ಪ್ರಪ್ರಥಮ ಅಡುಗೆ ಮಾಡಿ ಬಳ್ಸುವ ಔಪಚಾರಿಕ ಕ್ರಮ. ವಧೂಗೃಹಪ್ರವೇಶ ಹೋಮ ಹೇಳಿರೆ- ಸ್ಥಾಲೀಪಾಕ ಅರ್ಥಾತ್ ಅಗ್ನಿಯ ಆರಾಧನೆ ಮತ್ತು ವೈಶ್ವದೇವಾರಂಭ ಹೋಮ.ಪಂಚಸೂನಾ ಗೃಹಸ್ಥಸ್ಯ ಚುಲ್ಲೀ ಪೇಷಣ್ಯಪಸ್ಕರಃ | ಕಂದನೀ ಚೋದ ಕುಂಭಶ್ಚ ಬಧ್ಯತೇ ಯಾಸ್ತು ವಾಹಯನ್( ಮನುಸ್ಮೃತಿ)– ಒಲೆ, ಬೀಸುಕಲ್ಲು, ಒರಳು, ಒನಕೆ, ಹಿಡಿಸೂಡಿ, ಪಾತ್ರೆ ಇತ್ಯಾದಿ  ನಿತ್ಯ ಉಪಯೋಗ ಮಾಡುವಾಗ ಗೃಹಸ್ಥ ಅನಿವಾರ್ಯವಾಗಿ ಹಿಂಸೆ ಮಾಡಿದ ವಾ ಹತ್ಯಾ ದೋಷ ಆವ್ತು. ಈ ಹತ್ಯಾ ದೋಷ ಪ್ರಾಯಶ್ಚಿತ್ತಕ್ಕಾಗಿ ವೈಶ್ವದೇವ ಹಾಂಗೂ ಪಂಚ ಯಜ್ನ೦ಗಳ ನಿತ್ಯವೂ ಆಚರುಸೆಕ್ಕು. ಪಂಚಯಜ್ಞ : 1. ವೇದ ಹೇಳಿಕೊಡುವದು – ಬ್ರಹ್ಮ ಯಜ್ಞ, 2. ಪಿತೃಗಳಿಂಗೆ ತರ್ಪಣ ಕೊಡುವದು – ಪಿತೃಯಜ್ಞ, 3. ದೇವರ ಕುರಿತಾಗಿ ಹೋಮ ಮಾಡುವದು – ದೇವ ಯಜ್ಞ, 4 ಭೂತಂಗೊಕ್ಕೆ ಬಲಿ ಕೊಡುವದು – ಭೂತ ಯಜ್ಞ, 5. ಅತಿಥಿ ಸತ್ಕಾರ ಮಾಡುವದು – ಅತಿಥಿ ಯಜ್ಞ.

ವಿವಾಹ ಆದಲ್ಲ್ಯಂಗೆ ತನ್ನ ಕಾರ್ಯ ಆತು ಹೇಳಿ ಆವ್ತಿಲ್ಲೆ. ಸಮಾಜಲ್ಲಿ ಆದರ್ಶ ಪ್ರಾಯರಾಗಿ ಸತಿಪತಿ ಕೀರ್ತಿ ಪಡೆಕ್ಕು. ಸಮರಸಪೂರ್ಣ ಸಾಹಚರ್ಯಂದ ವಂಶಾಭಿವೃದ್ಧಿ ಮಾಡಿ, ಆತ್ಮೋನ್ನತಿ ಸಾಧಿಸಿ, ಮಾನವತ್ವಂದ ದೈವತ್ವಕ್ಕೇರುವ ದಿಸೆಲಿ ಉಳಿದ ಆಶ್ರಮ ವಾಸಿಗಳ (ಬ್ರಹ್ಮಚಾರಿ, ವಾನಪ್ರಸ್ತಿ, ಸನ್ಯಾಸ) ಯೋಗಕ್ಷೇಮ ನೋಡಿಗೊಂಡು ಧರ್ಮ ಬದ್ಧರಾಗಿ ಸೇವೆಸಲ್ಲುಸಲೆ ಸೂಕ್ತ ತರಬೇತಿ ಪಡೆಯುವ ಅವಕಾಶ ಕಲ್ಪಿಸುವ ಶಾಸ್ತ್ರೋಕ್ತ ಸಂಸ್ಕಾರವೇ ವಿವಾಹ.

ನಮ್ಮ ಜೀವನಲ್ಲಿ ಅರುವತ್ತು ಸಂವತ್ಸರ (ವರ್ಷ) ಕಳುದಪ್ಪಗ ಸಂವತ್ಸರ ಚಕ್ರದ ಒಂದು ಸುತ್ತು ಪೂರ್ಣ ಆವ್ತು. ಅಷ್ಟರಲ್ಲಿ ದೇಹದ ಶಕ್ತಿ ಉಡುಗಿ ಅರುವತ್ತರ ಅರೆಮರುಳು ಸುರುವಾವ್ತು. ಆ ದೋಷ ನಿವೃತ್ತಿಗೆ ‘ಉಗ್ರರಥ ಶಾಂತಿ’ ಹೇಳಿ ಒಂದು ಸಂಸ್ಕಾರ. ಅರುವತ್ತೈದರಲ್ಲಿ ‘ಮಹಾರಥೀ ಶಾಂತಿ’. ನಮ್ಮ ಜೀವನದ ಎಪ್ಪತ್ತನೇ ವಯಸ್ಸು ಮುಟ್ಟುವಾಗ ಇನ್ನು ಹೆಚ್ಚಿನ ದೇಹ ಕಷ್ಟಂಗೊ ಎದುರುಪ್ಪ ಸಂಭವ ಜಾಸ್ತಿ. ಇದರ ಪರಿಹಾರಕ್ಕಾಗಿ ‘ಭೀಮರಥ ಶಾಂತಿ’. ಎಪ್ಪತ್ತೈದರಲ್ಲಿ ಐಂದ್ರೀ ಶಾಂತಿ. ಎಂಬತ್ತನೇ ವರ್ಷಲ್ಲಿ ‘ಸಹಸ್ರಚಂದ್ರದರ್ಶನ ಶಾಂತಿ’, ಎಂಬತ್ತೈದರಲ್ಲಿ ‘ರೌದ್ರೀ ಶಾಂತಿ’, ತೊಂಬತ್ತರಲ್ಲಿ ‘ಸೌರೀ ಶಾಂತಿ’ ತೊಂಬತ್ತೈದರಲ್ಲಿ ‘ತ್ರ್ಯಂಬಕ ಮೃತ್ಯುಂಜಯ ಶಾಂತಿ’ ನೂರರಲ್ಲಿ ‘ಮಹಾಮೃತ್ಯುಂಜಯ ಶಾಂತಿ’ ( ಶತಮಾನ ಶಾಂತಿ / ಕನಕಾಭಿಷೇಕ). ಸಹಸ್ರಚಂದ್ರ ದರ್ಶನ ಹೇಳಿರೆ ವ್ಯಕ್ತಿ ಒಬ್ಬಂಗೆ ಎಂಬತ್ತು ವರ್ಷ ಕಳುದಪ್ಪಗ ಅವನ ಜೀವನಲ್ಲಿ ಸಹಸ್ರ ಪೌರ್ಣಮಿ ದರ್ಶನ ಆಗಿರುತ್ತು. ಅರ್ಥಾತ್, ಸಾವಿರ ಹುಣ್ಣಮೆಚಂದ್ರ ಕಂಡ ಸಮಯ. ಎಂಬತ್ತರ ಪ್ರಾಯ ದಾಂಟಿದ ಮತ್ತೆ ಆಯುರಾರೋಗ್ಯ ಸಂಪ್ರಾರ್ಥಿಸಿ ಮಾಡುವದು ‘ಸಹಸ್ರಚಂದ್ರದರ್ಶನ ಶಾಂತಿ’ ಎಂಬಿತ್ಯಾದಿ ಸಂಸ್ಕಾರ ಕರ್ಮಂಗೊ. ವ್ಯಕ್ತಿಯೊಬ್ಬನ ಜೀವಿತಾವಧಿಲಿ ಮಕ್ಕೊ, ಮೊಮ್ಮಕ್ಕೊ, ಮರಿಮಕ್ಕಳ ಕಾಂಬದು ಸಾಮಾನ್ಯ. ಆದರೇ, ತನ್ನ ಮೂರು ತಲೆಮಾರಿನ ಕಾಂಬದು ಭಾರೀ ಅಪರೂಪವೇ ಸರಿ. ಅದೂ ಗಂಡು ಸಂತತಿಲಿ ನಾಲ್ಕು ತಲೆಮಾರಿನವರೇಂಗೆ ಬದುಕ್ಕಿಪ್ಪದು ದೈವ ಕೃಪೆಯೆ.  ಇಂಥಾ ಸನ್ನಿವೇಶಲ್ಲಿ ‘ಕನಕಾಭಿಷೇಕ’ ಹೇಳಿ ಒಂದು ಸಂಸ್ಕಾರ. ತಮ್ಮ ಮುಂದಿನ ಜನಾಂಗವ “ಶತಮಾನಂ ಭವತಿ, ಶತಾಯು: ಪುರುಷಃ …” ಹೇಳಿ ಆಶೀರ್ವದುಸುವದು. ನೂರು ವರ್ಷ ಆಯುರಾರೋಗ್ಯಂದ ಸುಖ ಶಾಂತಿಲಿ ಬಾಳು ಹೇಳಿ. ಹೀಂಗೆ ಬಾಳಿ ಇಪ್ಪದು ಬಲು ಅಪರೂಪ. ಅಲ್ಲಿಗೆ ತಮ್ಮ ಪೂರ್ಣಾಯುಷ್ಯ ಕಂಡವ ಸಂತೋಷಲ್ಲಿ ಆಚರಿಸುವದೇ ‘ಶತಮಾನೋತ್ಸವ’.

ಎಲ್ಲೋರಿಂಗೂ ಒಳ್ಳೆದಾಗಲಿ. ಗುರುದೇವತಾ ಸಂಪೂರ್ಣ ಅನುಗ್ರಹ ಎಲ್ಲೋರಿಂಗೂ ಲಭಿಸಲಿ.

ಇದಾ.. ಬಂದವಕ್ಕೆಲ್ಲಾ ಹಸ್ತೋದಕ ಭೋಜನ ದಕ್ಷಿಣೆ ಎಲ್ಲಾ ಇದ್ದು., ಕೇಳಿತ್ತೋ!. ಬಳುಸಲೆ, ಸುಧಾರಿಕಗೆ ಹೇಳಿ ಪ್ರತ್ಯೇಕ ಜೆನ ಮಾಡಿದ್ದಿಲ್ಲೇ ಇದಾ!! . ಎಲ್ಲಾ ನೆಂಟ್ರು ಇಷ್ಟರು ನೆರೆಕರೆವು ಸೇರಿ ಸುಧಾರ್ಸೇಕು ಆತೋ ಏ°!!!.

ವಿವಾಹದ ಬಗ್ಗೆ ಪಳ್ಳತ್ತಡ್ಕ ಬಟ್ಟಮಾವ ಹೇಳಿದ್ದು

|| ಹರೇ ರಾಮ ||

(ಮುಂದುವರಿತ್ತು)

ಕಳುದ ವಾರ :  ಭಾಗ 11: ಸಮಾವರ್ತನ

http://oppanna.com/lekhana/samskara-lekhana/bhaga-11-samavartana-16-samskarango

ಚೆನ್ನೈ ಬಾವ°

   

You may also like...

17 Responses

 1. jayashree.neeramoole says:

  ತುಂಬಾ ಅರ್ಥಪೂರ್ಣವಾದ, ಅನೇಕ ಮಾಹಿತಿಗಳಿಂದ ಕೂಡಿದ ಅತ್ಯಂತ ಉಪಯುಕ್ತವಾದ ಲೇಖನ…

  “ವಿವಾಹ ಸಂಸ್ಕಾರಲ್ಲಿ ಬ್ರಾಹ್ಮ, ದೈವ, ಆರ್ಷ, ಪ್ರಾಜಾಪತ್ಯ ಅಸುರ, ಗಾಂಧರ್ವ, ರಾಕ್ಷಸ, ಪೈಶಾಚ ಹೇಳಿ ಮುಖ್ಯ ಎಂಟು ವಿಧ. ಅನುಲೋಮ, ಪ್ರತಿಲೋಮ, ಸಂಬಂಧಂ, ಸ್ವಯಂವರ, ಫಣ ವಿವಾಹ, ಪ್ರೇಮ ವಿವಾಹ, ವಿನಿಮಯ ವಿವಾಹ, ಹೀಂಗೆ ಇನ್ನು ಕೆಲವು…” ಹೇಳಿದ್ದಿ…

  ಊಟಕ್ಕೆ ಬಾಳೆಲೆ ಹಾಕುಲೇ ಇನ್ನುದೆ ಸಮಯ ಇದ್ದು ಅಲ್ಲದ? ಬಾಕಿ ಪದ್ದತಿಯ ವಿವಾಹ ಸಂಸ್ಕಾರಂಗಳ ಬಗ್ಗೆ ಗೊಂತಿದ್ದರೆ ಹೇಳುತ್ತಿರ?

  • ಚೆನ್ನೈ ಭಾವ says:

   ನವಗೆಂತದಕ್ಕೆ ಅಕ್ಕೋ ಅದು!. ನಮ್ಮದು ಬ್ರಾಹ್ಮ ವಿವಾಹ ಅಲ್ಲದೋ. ಅಂದರೂ, ಎಂತರ ಅದು ಹೇಳ್ವದರ ಅಂತೇ ತಿಳ್ಕೊಂಬಲಾತು ಹೇಳಿ ಗೊಂತಿದ್ದದರ ಬರೆತ್ತೆ ಇದಾ –

   ಬ್ರಾಹ್ಮ ವಿವಾಹ – ಅತ್ಯಂತ ಶುದ್ಧವಾದ್ದು , ಸರ್ವ ವಿಷಯಲ್ಲಿಯೂ ಸುಂದರ ಮತ್ತು ವಿಕಾಸ ಹೊಂದಿಪ್ಪದ್ದು. ಕೂಸಿನ ಅಪ್ಪ° ವಿದ್ವಾನ್ ಮತ್ತು ಒಳ್ಳೆ ಗುಣ ಶೀಲ ಇಪ್ಪ ವರನ ಕರೆತಂದು, ವರನ ವಿಧಿಯುಕ್ತ ಉಪಚರಿಸಿ, ಸತ್ಕರಿಸಿ, ಅವನತ್ರಂದ ಯಾವುದೇ ವಿಧದ ಶುಲ್ಕವನ್ನೂ ಸ್ವೀಕರುಸದ್ದೆ ಅಲಂಕೃತ ಕನ್ಯೆಯ ದಕ್ಷಿಣೆ ಸಹಿತವಾಗಿ ಧರ್ಮಪ್ರಜಾಸಂಪತ್ ವೃದ್ಧಿಯಾಗಲಿ ಹೇಳಿ ಬಯಸಿ ಅವಂಗೆ ಧಾರೆ ಎರದು ದಾನ ಕೊಡುವದು.
   ದೈವ ವಿವಾಹ – ಇದಲ್ಲಿ ವಧುಪಿತ° ಕನ್ಯೆಯ ಅಲಂಕೃತಗೊಳುಸಿ, ತಾನು ಆರಂಭಿಸಿಪ್ಪ ಯಜ್ಞದ ಪೌರೋಹಿತ್ಯಂಗೆ ಕನ್ಯಾದಾನ ಮಾಡುವದು. ದೇವರ ಉದ್ದೇಶಿಸಿ ಮಾಡುವ ಯಜ್ಞಲ್ಲಿ ಈ ಕನ್ಯಾದಾನ ಅಪ್ಪದರಿಂದ ಇದಕ್ಕೆ ದೈವ ವಿಹಾಹ ಹೇಳಿ ಹೆಸರು. ಈ ಶುದ್ದವಾದ್ದು ಹೇಳಿ ಪರಿಗಣಿಸಲಾವ್ತಿಲ್ಲೆ. ಇಲ್ಲಿ ದಕ್ಷಿಣೆಯ ರೂಪಲ್ಲಿ ಕನ್ಯಾದಾನ ಅಪ್ಪದರಿಂದ ವಿಶುದ್ಧ.
   ಆರ್ಷ ವಿವಾಹ – ಯಜ್ಞ ಯಾಗಾದಿ ಧರ್ಮಕಾರ್ಯ ಮಾಡಲೆ ವರನ ಕೈಂದ ಹಸು – ಎತ್ತಿನ ಜೋಡಿಯ ಪಡಕ್ಕೊಂಡು ಕನ್ಯಾದಾನ ಮಾಡುವದು.
   ಪ್ರಾಜಾಪತ್ಯ ವಿವಾಹ – ಮಗಳ ಕೇಳುವ ಮಾಣಿಗೆ ವಧುವಿನ ಅಪ್ಪ° ‘ನಿಂಗೊ ಇಬ್ರು ಪರಸ್ಪರ ಸಹಕಾರಂದ ಧರ್ಮಾಚರಣೆ ಮತ್ತು ಕರ್ತವ್ಯಪಾಲನೆ ಮಾಡಿ’ ಹೇಳಿ ತನ್ನ ಮಗಳ ಕೊಡುವದು.
   ಆಸುರೀ ವಿವಾಹ – ವಧುವಿನ ಅಪ್ಪಂಗೆ ಧನ-ದ್ರವ್ಯಾದಿ ಕೊಟ್ಟು ಕನ್ಯೆಯ ಕೇಳುವದು. ಇದು ಕನ್ಯೆಯ ಖರೀದಿಸಿದ ಹಾಂಗೆ.
   ಗಾಂಧರ್ವ ವಿವಾಹ – ಮದುವೆ ಮಾಡಿಗೊಳ್ಳದೇ ವಧುವಿನ ಸಮ್ಮತಿಯೊಂದಿಂಗೆ ದೈಹಿಕ ಸಂಬಂಧ ಇಟ್ಟುಗೊಂಬದು.
   ರಾಕ್ಷಸ ವಿವಾಹ – ವಧುವಿನ ಸಂಬಂಧಿಕರ ಬಡುದು ಹಾಕಿ ಕೂಗಿಯೊಂಡಿಪ್ಪ ಕೂಸಿನ ಬಲವಂತ ಮದುವೆ ಅಪ್ಪದು.
   ಪೈಶಾಚ ವಿವಾಹ – ನಿದ್ರಿಸಿಯೊಂಡಿಪ್ಪ / ಪ್ರಜ್ಞಾಹೀನ ಸ್ಥಿತಿಲಿಪ್ಪ ಅಥವಾ ಹುಚ್ಚಿಯಾಗಿಪ್ಪ ಕೂಸಿನ ಬಲಾತ್ಕಾರ ಸಂಬಂಧ ಮಾಡುವದು.
   ಅನುಲೋಮ , ಪ್ರತಿಲೋಮ ವಿವಾಹ – ಲೋಮ ಹೇಳಿರೆ ಶರೀರಲ್ಲಿ ಉತ್ಪನ್ನವಾಗಿಪ್ಪ ತೇಜ. ಅನುಲೋಮ ವಿವಾಹ ಹೇಳಿರೆ ಉಚ್ಛ ವರ್ಣದ ಮಾಣಿ ಕನಿಷ್ಠ ವರ್ಣದ ಕೂಸಿನ ಮದುವೆ ಅಪ್ಪದು. ಪ್ರತಿಲೋಮ ಹೇಳಿರೆ ಕನಿಷ್ಠ ವರ್ಣದ ಮಾಣಿ ಉಚ್ಛ ವರ್ಣದ ಕೂಸಿನ ಮದುವೆ ಅಪ್ಪದು. ಇಲ್ಲಿ ಉತ್ಪನ್ನವಾದ ಸಂತತಿಗೆ ಅನುಲೋಮ ಉತ್ಪತ್ತಿ , ಅನುಲೋಮ ಉತ್ಪತ್ತಿ ಹೇಳಿ ಹೆಸರು. ಇದು ಧರ್ಮಮಾನ್ಯ ಅಲ್ಲವಾಗಿದ್ದರೂ ಇದರಿಂದ ಆಗಿಪ್ಪ ಸಂತತಿಗೆ ಈಶ್ವರ ಪ್ರಾಪ್ತಿ ಅಧಿಕಾರ ಇದ್ದು. ಸುತಮುನಿಗಳ ಶುಕ್ರಾಚಾರ್ಯ ಅಂತರಂಗ ಶಿಷ್ಯನಾಗಿ ಸ್ವೀಕರಸಿದ ಇದು ದೃಢ ಆವ್ತು. ಸುತಮುನಿಗಳ ಅಪ್ಪ° ಬ್ರಾಹ್ಮಣ° , ಅಬ್ಬೆ ಕ್ಷತ್ರಿಯ ಆಗಿತ್ತವು. ಮುಂದೆ ಸುತಮುನಿಗೊ ಶೌನಕಾದಿ ಮುನಿಗೊಕ್ಕೆ ಪುರಾಣೋಪದೇಶ ಮಾಡಿಗೊಂಡಿತ್ತವು ಹೇಳಿ ನಾವು ಕತೆಲಿ ಕೇಳಿದ್ದು. ಸುತಮುನಿಗೊ ಶ್ರೇಷ್ಠ ಧರ್ಮಾಧಿಕಾರಿಗಳಾಗಿದ್ದರೂ ತಮ್ಮ ಉತ್ಪತ್ತಿ ಅನುಲೋಮ ಪದ್ದತಿಂದ ಆದ್ದರಿಂದ ತಾನು ಶೂದ್ರ ಎನಿಸಿಗೊಂಡ°. ಮಹರ್ಷಿ ವ್ಯಾಸ, ಪಾಂಡವರು ಮುಂತಾದವರ ಜನ್ಮವೂ ವಿವಾಹ ಸಂಬಂಧಂದ ಆದ್ದದಲ್ಲ. ಮುಂದೆ ಸಂಸ್ಕಾರಕರ್ಮಂದ ಕರ್ಮದ ಹಕ್ಕು ಪಡಕ್ಕೊಂಡದು.

   ಇತರ ವಿವಾಹಂಗೊ –
   ಸಂಬಂಧಮ್ ವಿವಾಹ – ಕೇರಳಲ್ಲಿ ನಾಯರ್ ಜಾತಿಲಿ ಅಳಿಯಕಟ್ಟು ಕುಟುಂಬ ಪದ್ಧತಿ ಪ್ರಚಲಿತ. ಆ ಪದ್ಧತಿಲಿ ಮಾಡುವ ವಿವಾಹಕ್ಕೆ ಸಂಬಂಧಮ್ ಹೇಳಿ ಹೆಸರು.
   ಸ್ವಯಂವರ ವಿವಾಹ – ಕೂಸು ತನ್ನ ಇಚ್ಛೆಗನುಸಾರವಾಗಿ ವರನ ಆರಿಸಿಗೊಂಬದಕ್ಕೆ ಸ್ವಯಂವರ ವಿವಾಹ ಹೇಳಿ ಹೆಸರು.
   ಫಣ ವಿವಾಹ – ಏವುದಾರು ಸ್ಪರ್ಧೆಯ ಮಡುಗಿ ಆ ಸ್ಪರ್ಧೇಲಿ ಜೆಯಿಸಿದೋನಿಂಗೆ ತನ್ನ ಮಗಳ ಮದುವೆ ಮಾಡಿ ಕೊಡುತ್ತದಕ್ಕೆ ಫಣವಿವಾಹ ಹೇಳಿ ಹೆಸರು.
   ಪ್ರೇಮವಿವಾಹ – ಯುವಕ ಯುವತಿಯರ ಪ್ರೇಮವು ವಿವಾಹಲ್ಲಿ ರೂಪಾಂತರ ಅಪ್ಪದು ಪ್ರೇಮವಿವಾಹ.
   ಸೇವಾವಿವಾಹ – ಮಾಣಿ ಆರ್ಥಿಕ ದೃಷ್ಟಿಂದ ವಧುವಿನ ಪಡವಲೆ ಅಸಮರ್ಥನಾಗಿದ್ದರೆ, ವಧುಮೂಲ್ಯವ ನಿರ್ಧರಿಸಿ , ವಧುಮೂಲ್ಯ ತೀರುವವರೆಂಗೆ ವಧುವಿನ ಮನೇಲಿ ನೌಕರಿ ಮಾಡಿಗೊಂಡು, ವಧುಮೂಲ್ಯ ತೀರಿದ ನಂತರ ಆ ಕೂಸಿನ ಮದುವೆ ಅಪ್ಪದು .
   ವಿನಿಮಯ ವಿವಾಹ – ವಿವಾಹ ಅಪ್ಪಲೆ ಆರ್ಥಿಕ ದೃಷ್ಟಿಲಿ ಅಪಾತ್ರನಾಗಿಪ್ಪ, ಅಥವಾ, ಯಾವುದಾದರು ಶಾರೀರಿಕ ಅಂಗವಿಕಲತೆ, ಅಲ್ಲಾ ಮತ್ತಾವುದೋ ಕೌಟುಂಬಿಕ ಪರಿಸ್ಥಿತಿಲಿ ತನ್ನ ಅಕ್ಕ ತಂಗೆಯ ಬೇರೊಂದು ಮನೆ ಮಾಣಿಗೆ ಮದುವೆ ಮಾಡಿಕೊಟ್ಟು. ಆಚ ಮನೆ ಮಾಣಿಯ ಅಕ್ಕ-ತಂಗೆಯ ಈ ಮನಗೆ ಮದುವೆ ಮಾಡಿ ತಪ್ಪದು ವಿನಿಮಯ ವಿವಾಹ ಪದ್ಧತಿ.

   ಹೀಂಗೆ ಮೇಗೆ ವಿವರಿಸಿದ ವಿವಾಹಂಗಳಲ್ಲಿ ಬ್ರಾಹ್ಮವಿವಾಹ ಪದ್ಧತಿ ಅತ್ಯಂತ ಶ್ರೇಷ್ಠವಾದ್ದು.

   • jayashree.neeramoole says:

    ಧನ್ಯವಾದಂಗೋ… ನಮ್ಮ ಪದ್ದತಿಯೇ ಶ್ರೇಷ್ಠ… ಆದರೂ ಉಳಿದವುಗಳ ಬಗ್ಗೆ ತಿಳುಕ್ಕೊಂಬಲೇ ಕೇಳಿದೆ…

   • ಸಿಂಧೂ says:

    ಈಗ ಪ್ರಾಜಾಪತ್ಯ ವಿವಾಹವೇ ಹೆಚ್ಚಾವ್ತಾ ಇದ್ದಾಳಿ.

    • ಚೆನ್ನೈ ಭಾವ says:

     ಶುದ್ದಿಯ ವಿವರವಾಗಿ ಓದಿ ಅರ್ಥಮಾಡಿಗೊಂಡು ಕೊಟ್ಟ ಒಪ್ಪಕ್ಕೆ ಅಕ್ಕಂಗೆ ಧನ್ಯವಾದ.

 2. ಪೆಂಗಣ್ಣ says:

  ಓಯೇ
  ಆ ವೀಡ್ಯಲ್ಲಿ ಕೆಂಪಗಿ, ಕಪ್ಪು ಕನ್ನಡಕ ಹಾಕಿಯೊಂಡು ರಜಾ ಹಿನ್ದೆ ತಲಕಸವು ಮಡಿಕ್ಕೊಂಡು ಕೂದ್ದು ಆರಪ್ಪಾ?
  ಬೋಚ ಬಾವನ ಕಂಡತ್ತಿಲ್ಲೆ… ಹು ಹು..

  • ಚೆನ್ನೈ ಭಾವ says:

   ಹೇ…, ನಿಂಗೊ ಹುಡ್ಕುತ್ತದು ನೋಡಿರೆ ನಿಂಗಳತ್ರೆ ಏನೋ ಸಾಲ ಮಾಡಿ ಕಣ್ತಪ್ಪಿಸಿದವನೋ ಗ್ರೇಶೆಕು!!. ಓಯಿ., ಅವ° ಎಡದ ಕರೆಲಿ ಕೂದೊಂಡಿಪ್ಪದು . ಹಾಂಗಾದಕಾರಣ ಅವ° ಕೂಸಿನ ಕಡೆಯವನೇ!!
   ಬೋಚಬಾವಂಗೆ ಬೇರೆ ಇತ್ತೋಳಿ!!

 3. ತೆಕ್ಕುಂಜ ಕುಮಾರ ಮಾವ° says:

  ವಿವಾಹ ಸಂಸ್ಕಾರದ ಬಗ್ಗೆ ಸಮಗ್ರ ಮಾಹಿತಿ ಈ ಲೇಖನ ಮಾಲೆಲಿ ಸಿಕ್ಕಿತ್ತು. ಒಟ್ಟಿಂಗೆ ಎಂಟು ವಿಧದ ವಿವಾಹ ಸಂಸ್ಕಾರ,ಅನುಲೋಮ, ಪ್ರತಿಲೋಮ, ಸಂಬಂಧಂ, ಸ್ವಯಂವರ, ಫಣ ವಿವಾಹ, ಪ್ರೇಮ ವಿವಾಹ, ವಿನಿಮಯ ವಿವಾಹ ಇತ್ಯಾದಿಗಳ ಸಂಬಂಧದ ಟಿಪ್ಪಣಿ- ಸಂಗ್ರಹಯೋಗ್ಯ ಆಯಿದು ಭಾವ.

  ಆದರೆ, ಈ ವಿಷಯ ನಮ್ಮ ತಲೆಗೆ ಹೋಯಿದಿಲೆ ಹೇಳಿ ಚಾವಡಿಲಿ ಕೆಲವು ಜೆನ ಅಸಬಡಿತ್ತವು.

  • ಚೆನ್ನೈ ಭಾವ says:

   ‘ಮದುವೆ ಆಗಿ ನೋಡು, ಮನೆ ಕಟ್ಟಿ ನೋಡು’ ಹೇಳುವನೋ ಅವಕ್ಕೆ?!!

 4. ವಿದ್ಯಾ ರವಿಶಂಕರ್ says:

  ಮಹತ್ವದ ಮಾಹಿತಿಯ ತುಂಬಾ ಚೆಂದಕೆ ಬರದ್ದಿ ಭಾವ.ಪಳ್ಲತ್ತಡ್ಕ ಬಟ್ಟಮಾವನ ವಿವರಣೆಯಂತೂ ಅದ್ಭುತ. ಅವರ ಭಾಷಣಂಗಳ ತುಂಬಾ ಸರ್ತಿ ಕೇಳಿದ್ದೆ.ಯಾವುದೇ ವಿಷಯವನ್ನಾದರೂ ಅರ್ಥಗರ್ಭಿತವಾಗಿ ವಿವರುಸುತ್ತವು.ಅವರ ವಿದ್ವತ್ತೇ ಹಾಂಗಿಪ್ಪದು. ವರ್ಣಿಸುಲೆ ಎಡಿಯ. ಧನ್ಯವಾದಂಗೊ ಭಾವ.

 5. ಗಣೇಶ ಪೆರ್ವ says:

  ಯೆಬ್ಬಾ ಇಷ್ಟೆಲ್ಲ ಸ೦ಗತಿ ಇದ್ದಲ್ಲದೊ??
  😉

  • ಚೆನ್ನೈ ಭಾವ says:

   ಇನ್ನೂ ಇದ್ದಪ್ಪ. ಪೂರ್ತಿ ಆಳಕ್ಕೆ ನವಗೂ ಆರಡಿಯ. ಶುದ್ದಿಯ ಅವಲೋಕನ ಮಾಡಿದ್ದಕ್ಕೆ ಧನ್ಯವಾದ.

 6. ಶರ್ಮಪ್ಪಚ್ಚಿ says:

  ಒಂದು ಲೇಖನಲ್ಲಿ ಅದಕ್ಕೆ ಸಂಬಂಧ ಪಟ್ಟ ಎಲ್ಲಾ ವಿವರಂಗೊ. ಎಲ್ಲರಿಂಗೂ ಅರ್ಥ ಆವ್ತ ಹಾಂಗೆ.
  ಒಟ್ಟಿಂಗೆ ಭಟ್ಟ್ಟಮಾವನ ಅರ್ಥ ಗರ್ಭಿತ ಮಾತುಗೊ.
  ಭಲೇ
  ಮದುವೆಗೆ ಹೋಗಿ ಉಂಡಿಕ್ಕಿ ಅಂತೇ ಲೊಟ್ಟೆ ಪಟ್ಟಾಂಗ ಹೊಡದಿಕ್ಕಿ ಬಪ್ಪದರ ಕಮ್ಮಿ ಮಾಡಿ, ಹೀಂಗಿಪ್ಪ ವಿಶಯಂಗಳ ತಿಳ್ಕೊಳೆಕ್ಕಾದು ಮುಖ್ಯ ಹೇಳಿ ಅರ್ಥ ಆತು.
  ಸಂಗ್ರಹ ಮಾಡಿ ಮುಂದಿನ ಪೀಳಿಗೆಗೆ ತಿಳುಸಲೆ ಅತ್ಯಂತ ಸೂಕ್ತ ಲೇಖನ.

  • ಚೆನ್ನೈ ಭಾವ says:

   ಧನ್ಯವಾದ ಅಪ್ಪಚ್ಚಿಯ ಪ್ರೋತ್ಸಾಹದ ಒಪ್ಪಕ್ಕೆ.

 7. thirumala raya halemane says:

  oLLeya, agathyada maahithi. samskrtha nda bhaashaanthara maaDuvaga kelavu sala adara artha sari batthille. kelavella context dependent aada kaaraNa interpret maaDuvaga jaagrathe ireku.

  Oduvavange shaastragaLalli hemmakkaLa abuse maaDLakku hELi baraddadu aagira, kelavu vidhada vivaahangaLalli. yuddhada samayalli ella bandhugaLa naasha aagippaga aada dukhitha vivaaha sandarbha aagikkashte.

  braahmaNa ra vivaaha paddhathi haangilladdaroo shaastralli hELiddara vishayalli thappu kalpane bappalaaga.

  paLLatthaDka bhatta ra bhaashaNa video bharee laayikiddu. keep up the good work. all the best.

  • ರಘು ಮುಳಿಯ says:

   ಹಳೆಮನೆ ತಿರುಮಲರಾಯರಿ೦ಗೆ ಬೈಲಿನ ಎಲ್ಲಾ ಬ೦ಧುಗಳ ಪರವಾಗಿ ಆತ್ಮೀಯ ಸ್ವಾಗತ.
   ನ೦ತೂರಿನ ಪದುವಾ ಪ್ರೌಡ ಶಾಲೆಲಿ ಅಧ್ಯಾಪಕರು ನಿ೦ಗಳ ಬಗ್ಗೆ ಮೆಚ್ಚಿಗೆಯ ಮಾತುಗಳ ಯೇವಗಳೂ ಹೇಳೊದರ ಬಾಲ್ಯದ ದಿನ೦ಗಳಲ್ಲಿ ಕೇಳಿಗೊ೦ಡಿತ್ತಿದ್ದೆ. ಇಲ್ಲಿ ನಿ೦ಗಳ ಕ೦ಡು ಭಾರೀ ಕೊಶಿಯಾತು. ಬೈಲಿ೦ಗೆ ಬ೦ದುಗೊ೦ಡಿರಿ,ಬರೆತ್ತಾ ಇರಿ.ನಿ೦ಗಳ ಪ್ರೋತ್ಸಾಹ ಬೈಲಿನವಕ್ಕೆಲ್ಲಾ ಹೊಸ ಉತ್ಸಾಹವ ಕೊಡುತ್ತಾ ಇದ್ದು.
   ನಮಸ್ಕಾರ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *