ಶ್ರೀಮದ್ಭಗವದ್ಗೀತಾ – ಅಧ್ಯಾಯ 12 – ಶ್ಲೋಕಂಗೊ 11 – 20

January 17, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ಭಾಗಲ್ಲಿ ಸುರುವಿಂಗೆ ಅರ್ಜುನ° ಭಗವಂತನತ್ರೆ ಸಗುಣೋಪಾಸನೆ – ನಿರ್ಗುಣೋಪಾಸನೆ ಇವುಗಳಲ್ಲಿ ಏವುದು ಶ್ರೇಷ್ಠ ಹೇಳಿ ಕೇಳಿದ್ದಕ್ಕೆ ಭಗವಂತ° ಪ್ರಜ್ಞಾಪೂರ್ವಕವಾದ ಸಗುಣೋಪಾಸನೆಯೇ ಶ್ರೇಷ್ಠ, ನಿರ್ಗುಣೋಪಾಸನೆ ಸುಲಭ ಮಾರ್ಗ ಅಲ್ಲ, ಅದು  ಅಧಿಕತರಕ್ಲೇಶಯುಕ್ತವಾದ್ದು ಹೇಳಿ ಹೇಳಿದ್ದ°. ಭಗವಂತನನ್ನೇ ಸರ್ವಸ್ವ ಹೇಳಿ ಸಂಪೂರ್ಣ ಮನಸ್ಸಿಂದ ಉಪಾಸನೆ ಮಾಡುವವರ ಭಗವಂತ° ಉದ್ಧರುಸುತ್ತ° ಹೇಳ್ವ ಭರವಸೆಯನ್ನೂ ಸೂಚಿಸಿದ್ದ°.  ಮತ್ತೆ ಮುಂದುವರಿಸಿ ನೇರಸೇವೆಲಿ ತೊಡಗಲೆ ಸಾಧ್ಯ ಇಲ್ಲದ್ದವ° ಸಂಪೂರ್ಣ ಮನಸ್ಸಿಂದ ಪರೋಕ್ಷಸೇವೆಲಿ ತೊಡಗಿ ಮುಂದಾಣ ಮೆಟ್ಳ ಹತ್ತಲೆ ತನ್ನ ಹಾದಿಯ ಸುಗಮಗೊಳುಸಲಕ್ಕು ಹೇಳಿ ಭಗವಂತ° ಎಚ್ಚರಿಸಿದ್ದ°. ಮುಂದೆ –

 

ಶ್ರೀ ಮದ್ಭಗವದ್ಗೀತಾ – ದ್ವಾದಶೋsಧ್ಯಾಯಃ – ಭಕ್ತಿಯೋಗಃ – ಶ್ಲೋಕಾಃ  –11 – 20

 

ಶ್ಲೋಕ

ಅಥೈತದಪ್ಯಶಕ್ತೋsಸಿ ಕರ್ತುಂ ಮದ್ಯೋಗಮಾಶ್ರಿತಃ ।
ಸರ್ವಕರ್ಮಫಲತ್ಯಾಗಂ ತತಃ ಕುರು ಯತಾತ್ಮವಾನ್ ॥೧೧॥

ಪದವಿಭಾಗ

ಅಥ ಏತತ್ ಅಪಿ ಅಶಕ್ತಃ ಅಸಿ ಕರ್ತುಮ್ ಮತ್-ಯೋಗಮ್ ಆಶ್ರಿತಃ । ಸರ್ವ-ಕರ್ಮ-ಫಲ-ತ್ಯಾಗಮ್ ತತಃ ಕುರು ಯತ-ಆತ್ಮವಾನ್ ॥

ಅನ್ವಯ

ಅಥ ಏತತ್ ಅಪಿ ಕರ್ತುಮ್ ಅಶಕ್ತಃ ಅಸಿ (ಚೇತ್), ತತಃ ಯತ-ಆತ್ಮವಾನ್ ಮತ್-ಯೋಗಮ್ ಆಶ್ರಿತಃ (ಸನ್) ಸರ್ವ-ಕರ್ಮ-ಫಲ-ತ್ಯಾಗಮ್ ಕುರು ।

ಪ್ರತಿಪದಾರ್ಥ

ಅಥ – ಈಗ (ಇನ್ನು), ಏತತ್ – ಇದು, ಅಪಿ – ಕೂಡ, ಅಶಕ್ತಃ – ಅಸಮರ್ಥ°, ಅಸಿ ಚೇತ್ – ಆಗಿದ್ದರೆ,  ತತಃ – ಅಂಬಗ, ಯತ-ಆತ್ಮವಾನ್ – ಆತ್ಮಸ್ಥಿತನಾಗಿ, ಮತ್-ಯೋಗಮ್ ಆಶ್ರಿತಃ ಸನ್ – ಎನ್ನಲ್ಲಿ (ಎನ್ನ ಭಕ್ತಿಸೇವೆಲಿ) ಅಶ್ರಯವ ಹೊಂದಿಗೊಂಡು, ಸರ್ವ-ಕರ್ಮ-ಫಲ-ತ್ಯಾಗಮ್ ಕುರು – ಎಲ್ಲ ಕರ್ಮಫಲಂಗಳ ತ್ಯಾಗ ಮಾಡು.

ಅನ್ವಯಾರ್ಥ

ಇನ್ನು ಇದು ಕೂಡ ಮಾಡ್ಳೆ ನೀನು ಅಸಮರ್ಥ° ಹೇದಾದರೆ, ನಿನ್ನ ಎಲ್ಲ ಕರ್ಮಫಲಂಗಳ ಎನ್ನಲ್ಲಿ ತ್ಯಾಗಮಾಡಿ ಆತ್ಮಸ್ಥಿತನಾಗಿಪ್ಪಲೆ ಪ್ರಯತ್ನ ಮಾಡು.

ತಾತ್ಪರ್ಯ / ವಿವರಣೆ

ಭಗವಂತ° ಈ ಮದಲು ಭಕ್ತಿಯೋಗದ ಸೇವೆಲಿ ಅಭ್ಯಾಸದ ಮೂಲಕ ಸಾಧನೆಯ ಮಾಡಿ ಎನ್ನ ಸೇರ್ಲಕ್ಕು ಹೇಳಿ ಸೂಚಿಸಿದ್ದ°. ಅದು ಎಡಿಯದ್ರೆ ತಾನು ಮಾಡುವ ಕರ್ಮವ ಭಗವತ್ಪ್ರೀತ್ಯರ್ಥ ಹೇಳಿ ಸಂಕಲ್ಪಂದ ಮಾಡಿರೂ ಸಾಧನೆ ದಾರಿಲಿ ಮುನ್ನೆಡವಲಕ್ಕು ಹೇಳಿ ಮತ್ತೆ ಸೂಚಿಸಿದ್ದ°. ಇನ್ನೀಗ, ಗುರುವಿನ ಮಾರ್ಗದರ್ಶನಲ್ಲಿ ಭಕ್ತಿಯೋಗದ ನಿಯಂತ್ರಕ ತತ್ವಂಗಳ ಆಚರುಸಲೆ ಎಡಿಗಾಗದ್ದವನೇ ಆಗಿದ್ದರೂ ಅವನೂ ಭಗವಂತನ ಸೇರುವ ಮಾರ್ಗಲ್ಲಿ ಹೇಂಗೆ ಮುನ್ನಡವಲಕ್ಕು ಹೇಳ್ವದರ ಭಗವಂತ° ಇಲ್ಲಿ ಹೇಳಿದ್ದ°.  ಸಾಮಾಜಿಕ, ಕೌಟುಂಬಿಕ ಅಥವಾ ಇನ್ಯಾವುದೇ ಕಾರಣಂಗಳಿಂದಾಗಿ ಅಥವಾ ಬೇರೇನಾರು ವೈಯಕ್ತಿಕ ಅಡ್ಡಿಗಳಿಂದಾಗಿ ಮನುಷ್ಯಂಗೆ ಕೃಷ್ಣಪ್ರಜ್ಞೆಯ ಚಟುವಟಿಕೆಲಿ  ಸಹಾನುಭೂತಿ ತೋರ್ಲೂ ಎಡಿಗಾಗದ್ದೆ ಹೋಪಲೂ ಸಾಕು. ಇಂತಹ ಸಮಸ್ಯೆ ಇಪ್ಪೋರು ತನ್ನ ಚಟುವಟಿಕೆಂದ ಸಂಗ್ರಹವಾದ ಫಲವ ಒಂದು ಒಳ್ಳೆಯ ಕಾರ್ಯಕ್ಕೆ ತ್ಯಾಗಮಾಡ್ಳಕ್ಕು ಹೇಳಿ ಭಗವಂತ° ಸೂಚಿಸಿದ್ದ°. ಕೃಷ್ಣಪ್ರಜ್ಞೆಲಿ ನೇರ ಸಾಧನೆ ಮಾಡ್ಳೆ ಎಡಿಗಾಗದ್ದವು ಕೃಷ್ಣಪ್ರಜ್ಞೆಯ ಪ್ರಸಾರಕ್ಕೆ ಸಕಾಯ ಮಾಡಿ ತನ್ನ ಗಳಿಕೆ ಉಪಯೋಗಿಸಲಕ್ಕು ಆ ಮೂಲಕ ಭಗವದ್ ಸೇವೆ ಹೇದು ಅರ್ತು ಭಗವದ್ ಪ್ರೀತಿಗೆ ಪಾತ್ರರಪ್ಪಲಕ್ಕು. ಇನ್ನು ಏವುದಾರು ಸಾರ್ವಜನಿಕ ಆಸ್ಪತ್ರೆಗೊ, ವಿದ್ಯಾಕೇಂದ್ರಂಗೊಕ್ಕೋ, ಸಾಮಾಜಿಕ ಕಾರ್ಯಕ್ಕೋ, ಧಾರ್ಮಿಕ ಕಾರ್ಯಕ್ಕೋ ದಾನ ದೇಣಿಗೆ ನೀಡಿ ಸಕಾಯ ಮಾಡುವ ಮೂಲಕ ಭಗವದ್ ಪ್ರೀತಿಯ ಸಂಪಾದುಸಲಕ್ಕು. ಈ ರೀತಿ ಮಾಡುವದರಿಂದ ತನ್ನ ಗಳಿಕೆಯ (ಕರ್ಮಫಲವ) ಭಗವಂತಂಗೆ ತ್ಯಾಗಮಾಡಿದಾಂಗೆ ಆವ್ತು. ಕರ್ಮಫಲವ ತ್ಯಾಗ ಮಾಡ್ಳೆ ಅಭ್ಯಾಸ ಮಾಡಿದವ° ಕ್ರಮೇಣ ತನ್ನ ಮನಸ್ಸಿನ ಪರಿಶುದ್ಧಗೊಳುಸಲೆ ಸಮರ್ಥನಾವುತ್ತ°. ಆ ಪರಿಶುದ್ಧವಾದ ಮನಸ್ಸಿನ ಸ್ಥಿತಿಲಿ ಕೃಷ್ಣಪ್ರಜ್ಞೆಯ ಅರ್ಥಮಾಡಿಗೊಂಬಲೆ ಸಮರ್ಥನಾವುತ್ತ°.

ಒಟ್ಟಿಲ್ಲಿ, ಭಗವಂತನ ಭಕ್ತಿಸೇವೆಲಿ  ಪ್ರತ್ಯಕ್ಷವಾಗಿ ಅಥವಾ ನೇರವಾಗಿ ತೊಡಗಿಯೊಂಬಲೆ ಅಸಮರ್ಥನಾದರೆ, ಪರೋಕ್ಷವಾಗಿಯೂ ಕೃಷ್ಣಪ್ರಜ್ಞೆಯ ಬೆಳೆಶಿಗೊಂಡು ಅಧ್ಯಾತ್ಮಿಕ ಹಾದಿಲಿ ನಡವಲಕ್ಕು ಹೇಳ್ವದರ ಭಗವಂತ° ಇಲ್ಲಿ ಸ್ಪಷ್ಟಪಡಿಸಿದ್ದ°. ಕಾರಣಾಂತರಂಗಳಿಂದ ತನ್ನ ಎಲ್ಲ ಕರ್ಮವ ಭಗವಂತಂಗೆ ಅರ್ಪುಸಲೆ ಎಡಿಗಾಗದ್ದಲ್ಲಿ, ಎಲ್ಲವನ್ನೂ ಭಗವಂತನ ಪೂಜೆ ಹೇದು ಮಾಡ್ಳೆ ಎಡಿಗಾಗದ್ದಲ್ಲಿ ತನ್ನ ಕರ್ಮಫಲವ ಭಗವಂತಂಗೆ ತ್ಯಾಗಮಾಡಿ ಅರ್ಥಾತ್ ಕರ್ಮಫಲಾಸಕ್ತನಾಗಿರದ್ದೆ  ಕರ್ಮವ ಮಾಡಿಗೊಂಡು ತ್ಯಾಗಮನೋಭಾವಂದ ಭಗವದ್ಪ್ರೀತಿಗೆ ಪಾತ್ರನಪ್ಪಲೆ ಸಾಧ್ಯ ಹೇಳ್ವದರ ಭಗವಂತ° ಇಲ್ಲಿ ಒತ್ತಿ ಹೇಳಿದ್ದ°. ಅರ್ಥಾತ್., ಭಗವಂತ° ಸುರುವಿಲ್ಲಿ ಹೇಳಿದ್ದದು ಸಂಪೂರ್ಣ ಕೃಷ್ಣಪ್ರಜ್ಞೆಲಿ ಭಗವಂತನ ನೇರ ಭಕ್ತಿಸೇವೆ. ಎರಡ್ನೇದು ಭಗವದ್ ಅರ್ಪಣಾ ಭಾವಂದ ಕರ್ಮಮೂಲಕ ಭಗವದ್ ಸೇವೆ. ಈಗ ಮೂರನೇದು ತ್ಯಾಗಮನೋಭಾವಂದ ಭಗವಂತನ ಸೇವೆ.

ಶ್ಲೋಕ

ಶ್ರೇಯೋ ಹಿ ಜ್ಞಾನಮಭ್ಯಾಸಾತ್ ಜ್ಞಾನಾದ್ಧ್ಯಾನಂ ವಿಶಿಷ್ಯತೇ ।
ಧಾನಾತ್ಕರ್ಮಫಲತ್ಯಾಗಃ ತ್ಯಾಗಾಚ್ಛಾಂತಿರನಂತರಮ್ ॥೧೨॥

ಪದವಿಭಾಗ

ಶ್ರೇಯಃ ಹಿ ಜ್ಞಾನಮ್ ಅಭ್ಯಾಸಾತ್ ಜ್ಞಾನಾತ್ ಧ್ಯಾನಮ್ ವಿಶಿಷ್ಯತೇ । ಧ್ಯಾನಾತ್ ಕರ್ಮ-ಫಲ-ತ್ಯಾಗಃ ತ್ಯಾಗಾತ್ ಶಾಂತಿಃ ಅನಂತರಮ್ ॥

ಅನ್ವಯ

ಅಭ್ಯಾಸಾತ್ ಜ್ಞಾನಂ ಶ್ರೇಯಃ ಹಿ । ಜ್ಞಾನಾತ್ ಧ್ಯಾನಂ ವಿಶಿಷ್ಯತೇ, ಧ್ಯಾನಾತ್ ಕರ್ಮ-ಫಲ-ತ್ಯಾಗಃ (ವಿಶಿಷ್ಯತೇ), ಅನಂತರಂ ತ್ಯಾಗಾತ್ ಶಾಂತಿಃ ಹಿ ಭವತಿ ।

ಪ್ರತಿಪದಾರ್ಥ

ಅಭ್ಯಾಸಾತ್ – ಅಭ್ಯಾಸಂದ(ಅಭ್ಯಾಸಕ್ಕಿಂತ), ಜ್ಞಾನಂ – ಜ್ಞಾನ, ಶ್ರೇಯಃ – ಶ್ರೇಷ್ಠ (ಉತ್ತಮ), ಹಿ – ಖಂಡಿತವಾಗಿಯೂ, ಜ್ಞಾನಾತ್ – ಜ್ಞಾನಕ್ಕಿಂತ (ಜ್ಞಾನಂದ), ಧ್ಯಾನಂ – ಧ್ಯಾನವು, ವಿಶಿಷ್ಯತೇ – ಉತ್ತಮವೆನಿಸುತ್ತು, ಧ್ಯಾನಾತ್ – ಧ್ಯಾನಂದ, ಕರ್ಮ-ಫಲ-ತ್ಯಾಗಃ (ವಿಶಿಷ್ಯತೇ) – ಕರ್ಮಫಲತ್ಯಾಗ (ವಿಶಿಷ್ಠವಾದ್ದು), ಅನಂತರಂ – ಬಳಿಕ/ಮತ್ತೆ/ಆನಂತ್ರ, ತ್ಯಾಗಾತ್ – ತ್ಯಾಗಂದ, ಶಾಂತಿಃ ಹಿ ಭವತಿ – ಶಾಂತಿಯೇ ಉಂಟಾವ್ತು.

ಅನ್ವಯಾರ್ಥ

ನಿರಂತರ ಅಭ್ಯಾಸಂದ ಜ್ಞಾನವು (ಅಭ್ಯಾಸಯುಕ್ತ ಜ್ಞಾನ) ಶ್ರೇಯಸ್ಸಾವ್ತು.  ಜ್ಞಾನಂದ ಧ್ಯಾನವು (ಜ್ಞಾನಯುಕ್ತ ಧ್ಯಾನ) ಉತ್ತಮ, ಧ್ಯಾನಂದ ಕರ್ಮಫಲತ್ಯಾಗ (ಧ್ಯಾನಯುಕ್ತ ಕರ್ಮಫಲತ್ಯಾಗ) ಉತ್ತಮವು. (ಎಂತಕೆ ಹೇಳಿರೆ) ಮತ್ತೆ ತ್ಯಾಗಂದ  ಮನಃಶಾಂತಿಯೇ ಉಂಟಾವ್ತು.

ತಾತ್ಪರ್ಯ/ವಿವರಣೆ

ಇಲ್ಲಿ ಮೇಲ್ನೋಟಕ್ಕೆ ಅರ್ಥ ರಜಾ ವಿಚಿತ್ರವಾಗಿ ಕಾಣುತ್ತು. ಆದರೆ, ಅದರ ಮೂಲ ಆಶಯವ ಚಿಂತುಸೆಕ್ಕಾಗಿದ್ದು. ‘ಅಭ್ಯಾಸಾತ್ ಜ್ಞಾನಂ ಶ್ರೇಯಃ’ – ‘ಭಕ್ತಿಯೋಗ ಅಭ್ಯಾಸಮಾಡುವದಕ್ಕಿಂತ ಜ್ಞಾನವೇ ಶ್ರೇಷ್ಠ’ ಹೇಳಿ ಹೇಳಿದಾಂಗೆ ಕಾಣುತ್ತು ಇಲ್ಲಿ. ಆದರೆ ಅದು ಅಲ್ಲ. ‘ಭಕ್ತಿಯೋಗ ಅಭ್ಯಾಸಪೂರ್ವಕ (ಯುಕ್ತ/ಕೂಡಿದ) ಜ್ಞಾನವು ಶ್ರೇಷ್ಠ ಹೇಳಿ ತಾತ್ಪರ್ಯ. ಇಲ್ಲಿ ಅಭ್ಯಾಸ ಹೇಳ್ವದು ಅರಿವಿಲ್ಲದ್ದ ಅಭ್ಯಾಸವ. ಹೇಳಿರೆ ಎಂತರ ಹೇದು ಅರ್ತುಗೊಳ್ಳದ್ದೆ ಮಾಡುವ ಅಭ್ಯಾಸವ. ಅರಿವಿಲ್ಲದ್ದ ಅಭ್ಯಾಸಕ್ಕಿಂತ ಜ್ಞಾನ ಮೇಲು. ಹಾಂಗಾಗಿ.,  ಅರಿವು ಇಲ್ಲದ್ದ ಅಭ್ಯಾಸಕ್ಕಿಂತ ಜ್ಞಾನವೇ ಶ್ರೇಷ್ಠ. ಹೇಳಿರೆ, ಎಂತ ಮಾಡುತ್ತರೂ ಸಂಪೂರ್ಣ ಪ್ರಜ್ಞೆಂದ/ತಿಳುವಳಿಕೆಂದ/ಜ್ಞಾನಂದ, ಅರ್ತು ಮಾಡೇಕು ಹೇದು ಹೇಳಿದ್ದದು. ‘ಜ್ಞಾನಾತ್ ಧ್ಯಾನಂ ವಿಶಿಷ್ಯತೇ’ – ಜ್ಞಾನಂದ ಧ್ಯಾನವು (ಜ್ಞಾನಯುಕ್ತ ಧ್ಯಾನ) ಉತ್ತಮ. ಅರ್ಥಾತ್ ಜ್ಞಾನಹೀನ ಧ್ಯಾನ ದಂಡ. ಹಾಂಗೇ, ಬರೇ ಜ್ಞಾನಯುಕ್ತವಾಗಿದ್ದರೆ ಸಾಲ, ಜ್ಞಾನಪೂರ್ವಕ ಧ್ಯಾನ ಶ್ರೇಷ್ಠ ಹೇಳಿ ಇಲ್ಲಿ ತಾತ್ಪರ್ಯ. ಅಂತೇ ಅರ್ತುಗೊಂಡ್ರೆ ಸಾಲ, ಬದಲಾಗಿ ಅರ್ತು ಧ್ಯಾನಿಸೆಕು ಹೇಳಿ ಆಶಯ. ‘ಧ್ಯಾನಾತ್ ಕರ್ಮಫಲತ್ಯಾಗಃ…’ – ಧ್ಯಾನಂದ (ಧ್ಯಾನಯುಕ್ತ) ಕರ್ಮಫಲತ್ಯಾಗ (ಮೇಲು). ಹೇಳಿರೆ., ಮದಾಲು ಅರ್ತುಗೊಳ್ಳೆಕು, ಮತ್ತೆ ಅರ್ತು ಧ್ಯಾನಿಸೆಕು, ಮತ್ತೆ.., ಬರೇ ಧ್ಯಾನಮಾಡಿಗೊಂಡಿದ್ದರೆ ಸಾಲ, ಆ ಧ್ಯಾನಲ್ಲಿ ಕರ್ಮಫಲದ ನಂಟಿಪ್ಪಲಾಗ. ಕರ್ಮಫಲ ಆಶೆಂದ ಧ್ಯಾನ ಮಾಡ್ಳಾಗ ಹೇಳಿ ಇಲ್ಲಿ ಅರ್ಥ. ಕರ್ಮಫಲತ್ಯಾಗಬುದ್ಧಿಂದ ಧ್ಯಾನ ಮಾಡೆಕು. ಎಂತಕೆ ಹೇಳಿರೆ – ‘ತ್ಯಾಗಾತ್  ಶಾಂತಿಃ ಹಿ ಭವತಿ’ – ತ್ಯಾಗಂದ ಶಾಂತಿ ಉಂಟಾವ್ತು. ಇಲ್ಲಿ ಶಾಂತಿ ಹೇಳಿರೆ ಭಗವಂತನ (ಪರಂಧಾಮನ) ಶಾಂತಿಧಾಮದ ಶಾಂತಿ, ಅರ್ಥಾತ್ – ಮುಕ್ತಿ.

ಭಗವಂತನ ಉಪಾಸನೆ ಹೇಂಗಿರೆಕು ಹೇಳ್ವದರ ಇಲ್ಲಿ ಭಗವಂತ° ವಿವರಿಸಿದ್ದ°. ಜ್ಞಾನವಿಲ್ಲದ್ದ ಧ್ಯಾನಕ್ಕಿಂತ ಜ್ಞಾನವೇ ಶ್ರೇಷ್ಥ. ಜ್ಞಾನ ಅಧ್ಯಾತ್ಮ ಸಾಧನೆಲಿ ಮೂಲಭೂತ ಆವಶ್ಯಕತೆ. ಜ್ಞಾನವಿಲ್ಲದ್ದೆ ಧ್ಯಾನ (ಕರ್ಮ) ಮಾಡಿ ಉಪಯೋಗ ಇಲ್ಲೆ. ತಿಳುವಳಿಕೆ ಇಲ್ಲದ್ದ ಶ್ರದ್ಧೆ ಅಂಧಃಶ್ರದ್ಧೆ ಆವ್ತು. ಹಾಂಗೆ ನಂಬಿಕೆ ಇಲ್ಲದ್ದ ತಿಳುವಳಿಕೆ ಅಹಂಕಾರ ಆವ್ತು. ಹಾಂಗಾಗಿ ಮದಾಲು ತಿಳಿಯೆಕು, ತಿಳುದು ನಂಬೆಕು. ನಂಬಿಕೆ ಇದ್ದರೆ ಸಾಲ, ಅದರ ಜೀವನಲ್ಲಿ ಅನುಸಂಧಾನ ಮಾಡೆಕು. ಹಾಂಗಾಗಿ ಭಗವಂತ° ಹೇಳಿದ್ದದು – ಜ್ಞಾನಂದ (ಜ್ಞಾನ ಸಹಿತ) ಧ್ಯಾನ ಮೇಲು, ಧ್ಯಾನಂದ ಕರ್ಮಫಲತ್ಯಾಗ ಮೇಲು, ಕರ್ಮಫಲತ್ಯಾಗಂದ ಶಾಂತಿ ಮುಂದೆ ಲಭಿಸುತ್ತು. ಎಲ್ಲಕ್ಕಿಂತ ಹಿರಿದು ಕರ್ಮಫಲತ್ಯಾಗ. ಹಾಂಗಾಗಿ ಮದಾಲು ತಿಳುಕ್ಕೊ, ತಿಳುದು ಅಭ್ಯಾಸ ಮಾಡು, ಅಭ್ಯಾಸ (ಧ್ಯಾನ) ಕರ್ಮಫಲಾಸಕ್ತಿ ಇಲ್ಲದ್ದೆ ಇರಲಿ. ಈ ರೀತಿಯ ಜೀವನ ಕ್ರಮ ಮುಂದೆ ಶಾಂತಿಯ ನೀಡುತ್ತು – ಮೋಕ್ಷಪ್ರಾಪ್ತಿಗೆ ಕಾರಣ ಆವ್ತು.

ಶ್ಲೋಕ

ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ ।
ನಿರ್ಮಮೋ ನಿರಹಂಕಾರಃ ಸಮದುಃಖಸುಖಃ ಕ್ಷಮೀ ॥೧೩॥

ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ ।
ಮಯ್ಯರ್ಪಿತಮನೋಬುದ್ಧಿಃ  ಯೋಮದ್ಭಕ್ತಃ ಸ ಮೇ ಪ್ರಿಯಃ ॥೧೪॥

ಪದವಿಭಾಗ

ಅದ್ವೇಷ್ಟಾ ಸರ್ವ-ಭೂತಾನಾಮ್ ಮೈತ್ರಃ ಕರುಣಃ ಏವ ಚ । ನಿರ್ಮಮಃ ನಿರಹಂಕಾರಃ ಸಮ-ದುಃಖ-ಸುಖಃ ಕ್ಷಮೀ ॥

ಸಂತುಷ್ಟಃ ಸತತಮ್ ಯೋಗೀ ಯತ-ಆತ್ಮಾ ದೃಢ-ನಿಶ್ಚಯಃ । ಮಯಿ ಅರ್ಪಿತ-ಮನಃ-ಬುದ್ಧಿಃ ಯಃ ಮತ್-ಭಕ್ತಃ ಸಃ ಮೇ ಪ್ರಿಯಃ ॥

ಅನ್ವಯ

ಯಃ ಸರ್ವ-ಭೂತಾನಾಮ್ ಅದ್ವೇಷ್ಟಾ, ಮೈತ್ರಃ ಕರುಣಃ ಚ ಏವ, ನಿರ್ಮಮಃ, ನಿರಹಂಕಾರಃ, ಸಮ-ದುಃಖ-ಸುಖಃ ಕ್ಷಮೀ, ಸತತಂ ಸಂತುಷ್ಟಃ, ಯೋಗೀ, ಯತ-ಆತ್ಮಾ, ದೃಢ-ನಿಶ್ಚಯಃ, ಮಯಿ ಅರ್ಪಿತ-ಮನಃ-ಬುದ್ಧಿಃ, ಸಃ ಮತ್-ಭಕ್ತಃ ಮೇ ಪ್ರಿಯಃ (ಅಸ್ತಿ) ।

ಪ್ರತಿಪದಾರ್ಥ

ಯಃ – ಯಾವಾತ°, ಸರ್ವ-ಭೂತಾನಾಮ್ – ಸಕಲ ಜೀವಂಗಳ (ಎಲ್ಲ ಜೀವಿಗಳಲ್ಲಿ ಹೇದಿಲ್ಲಿ ಅರ್ಥ), ಅದ್ವೇಷ್ಟಾ – ಅಸೂಯೆಯಿಲ್ಲದ್ದ, ಮೈತ್ರಃ – ಸ್ನೇಹಂದ, ಕರುಣಃ – ಕರುಣೆಯುಳ್ಳ, ಚ – ಕೂಡ, ಏವ – ಖಂಡಿತವಾಗಿಯೂ, ನಿರ್ಮಮಃ (ನಿರ್-ಮಮ) –  ಒಡೆತನದ ಭಾವನೆಯಿಲ್ಲದ್ದೆ, ನಿರಹಂಕಾರಃ (ನಿರ್-ಅಹಂಕಾರಃ) – ಅಹಂಕಾರ ಇಲ್ಲದ್ದೆ, ಸಮ-ದುಃಖ-ಸುಖಃ – ಸಮವಾಗಿ ಸುಖ-ದುಃಖಂಗಳುಳ್ಳ, ಕ್ಷಮೀ – ಕ್ಷಮಾಗುಣ ಇಪ್ಪ, ಸತತಮ್ ಸಂತುಷ್ಟಃ – ಏವತ್ತೂ ತೃಪ್ತನಾದ, ಯೋಗೀ – ಯೋಗಿಯು (ಭಕ್ತಿಲಿ ನಿರತನಾದವ°), ಯತ-ಆತ್ಮಾ – ಆತ್ಮಸಂಯಮಿಯಾದ, ದೃಢ-ನಿಶ್ಚಯಃ – ದೃಢನಿರ್ಧಾರವುಳ್ಳ, ಮಯಿ ಅರ್ಪಿತ-ಮನಃ ಬುದ್ಧಿಃ – ಎನ್ನಲ್ಲಿ ಅರ್ಪಣೆ ಮಾಡಿದ ಮನಸ್ಸು ಬುದ್ಧಿಯುಳ್ಳವ°, (ಇದ್ದನೋ), ಸಃ – ಅವ°, ಮತ್-ಭಕ್ತಃ  – ಎನ್ನ ಭಕ್ತ°, ಮೇ ಪ್ರಿಯಃ (ಅಸ್ತಿ) – ಎನಗೆ ಪ್ರಿಯ° ಆಗಿದ್ದ°.

ಅನ್ವಯಾರ್ಥ

ಆರಿಂಗೆ ಎಲ್ಲ ಜೀವಿಗಳಲ್ಲಿ ಅಸೂಯೆ ಇಲ್ಯೋ,  ಸ್ನೇಹಂದ, ಕರುಣೆಂದ, ಒಡೆತನ ಭಾವನೆಯಿಲ್ಲದ್ದ, ಅಹಾಂಕಾರ ರಹಿತನಾಗಿದ್ದು, ಸುಖ-ದುಃಖಂಗಳ ಸಮಾನವಾಗಿ ಭಾವಿಸುತ್ತನೋ, ಕ್ಷಮಾಗುಣ ಇಪ್ಪಂತ, ಏವತ್ತೂ ಸಂತುಷ್ಟನೋ, ಆತ್ಮ ಸಂಯಮಿಯೋ, ದೃಢ ಸಂಕಲ್ಪ ಚಿತ್ತವಿಪ್ಪವನೋ, ಎನ್ನಲ್ಲಿ ಅರ್ಪಿತ ಮನೋಬುದ್ಧಿಯುಳ್ಳವನೋ ಅಂತಹ ಅವ ಎನ್ನ ನಿಜಭಕ್ತನಾಗಿದ್ದ°, ಮತ್ತು, ಎನಗೆ ತುಂಬಾ ಇಷ್ಟದವ° ಆಗಿರ್ತ°.

ತಾತ್ಪರ್ಯ / ವಿವರಣೆ

ಶುದ್ಧ ಭಕ್ತಿಸೇವೆಯ ವಿಷಯಕ್ಕೆ ಮತ್ತೆ ಬಂದು ಭಗವಂತ ಈ ಎರಡು ಶ್ಲೋಕಂಗಳಲ್ಲಿ ಭಕ್ತನ ಆಧ್ಯಾತ್ಮಿಕ ಅರ್ಹತೆಗಳ ವರ್ಣಿಸಿದ್ದ°. ಭಗವಂತ° ಮೆಚ್ಚುವ ಮಾನವ ವರ್ತನೆಯ ಬಗ್ಗೆ ಇಲ್ಲಿ ಹೇಳಲ್ಪಟ್ಟಿದು. ಭಗವಂತ° ಹೇಳುತ್ತ “ಅದ್ವೇಷ್ಟಾ ಸರ್ವಭೂತಾನಾಮ್” – ಸಕಲ ಜೀವಿಗಳಲ್ಲಿ ದ್ವೇಷರಹಿತನಾಗಿಪ್ಪದು. ಇದು ಆಧ್ಯಾತ್ಮಿಕ ಸಾಧಕನತ್ರೆ  ಇರೆಕಾದ ಪ್ರಥಮ ಗುಣ. ಅವನ ಸಾಧನೆಯ ಗುರಿ ಭಗವಂತನ ಸೇರುವದು. ಈ ಪ್ರಪಂಚದ ಸರ್ವಸ್ವವೂ ಭಗವಂತ° ಹೇಳಿ ಅರ್ತಮತ್ತೆ ಇನ್ನು ಈ ಜೀವಿಗಳತ್ರೆ ದ್ವೇಷಮಾಡಿ ಎಂತ ಹರಿವಲೆ ಇದ್ದು. ಬನ್ನಂಜೆ ಹೇಳುತ್ತವು – ದ್ವೇಷಲ್ಲಿಯೂ ಎರಡು ಬಗೆ ಇದ್ದು. ಒಂದು ಇನ್ನೊಬ್ಬ ಉದ್ಧಾರ / ಏಳಿಗೆಯ ಕಂಡು ದ್ವೇಷಿಸುವದು, ಇನ್ನೊಂದು ಕೆಟ್ಟವರ ಕೆಟ್ಟತನವ ನೋಡಿ ದ್ವೇಷಭಾವನೆ ತಂದುಗೊಂಬದು. ಅದೂ ಭಗವಂತನಿಂದಲೇ ಹೇದು ಆದಮತ್ತೆ ಇನ್ನೀಗ ನಾವು ದ್ವೇಷಕಟ್ಟುವದು ಹೇಳಿರೆ ಆ ಭಗವಂತನತ್ರೇ ದ್ವೇಷ ತಾಳಿದ ಹಾಂಗೆ ಆವ್ತಿಲ್ಲೆಯಾ!. ದ್ವೇಷ ಬಪ್ಪದು ಅಸಹನೆ ಮತ್ತೆ ಹೊಟ್ಟೆಕಿಚ್ಚಿಂದಲಾಗಿ. ಇನ್ನೊಬ್ಬನ ಉತ್ಕರ್ಷವನ್ನೋ ಕೆಟ್ಟದ್ದರನ್ನೋ ಕಂಡು ಅಸಹನೆ ಪಟ್ಟು ದ್ವೇಷಗೊಂಬಲಾಗ. “ಮೈತ್ರಃ ಕರುಣಃ ಚ ಏವ…” ಸಕಲ ಜೀವಿಗಳಲ್ಲಿಯೂ ಮಿತ್ರಭಾವನೆಂದ, ಕರುಣೆಂದ ಕಾಂಬವನಾಗಿರೆಕು. ಎಲ್ಲಿ ಒಳ್ಳೆತನ ಇದ್ದೋ ಅದರ ಪ್ರೀತಿಸು, ಇನ್ನೊಬ್ಬನ ಕಷ್ಟವ ಕಂಡು ಕರಗುವ ಮನಸ್ಸುಳ್ಳವನಾಗಿದ್ದುಗೊ, ಕೆಟ್ಟದ್ದರಿಂದ ದೂರ ಇದ್ದುಗೊ ಹೇಳ್ವ ತತ್ವ ವಿಚಾರವ ಭಗವಂತ° ಪ್ರಸ್ತಾಪಿಸಿದ್ದ°.  ಹಾಂಗೇ, “ನಿರ್ಮಮಃ ನಿರಹಂಕಾರಃ..”  ಆನು ಎನ್ನದು ಹೇಳ್ವ ಒಡೆತನದ ಅಧಿಕಾರವ (ನಿರ್ಮಮಃ) ಆಸೆಯ ಬಿಡೆಕು, ಅಹಂಕಾರವ ಬಿಡೆಕು. ‘ಈಶಾವಾಸ್ಯಮ್ ಇದಂ ಸರ್ವಮ್’ ಹೇಳ್ವದರ ಎಂದಿಂಗೂ ಮನಸ್ಸಿಲ್ಲಿ ಮಡಿಕ್ಕೊಳ್ಳೆಕು. ಭಗವಂತ° ಕೊಟ್ಟದ್ದರಿಂದ ಎನಗೆ ಇದ್ದು ಹೇದು ಪ್ರಜ್ಞೆ ಏವತ್ತೂ ಇರೆಕು. ಅಹಂಕಾರವನ್ನೂ ಮಮಕಾರವನ್ನೂ ತ್ಯಜಿಸೆಕು. ನಿರ್ಲಿಪ್ತತೆಲಿ ಜೀವನ ಸಾಗುಸೆಕು. “ಸಮದುಃಖಸುಖಃ ಕ್ಷಮೀ” – ದುಃಖವನ್ನೂ ಸುಖವನ್ನೂ ಸಮಾನ ರೀತಿಲಿ ಸ್ವೀಕರುಸುವ ಮನಸ್ಥಿತಿ ಇಪ್ಪವನಾಗಿರೆಕು. ಹಾಂಗೇ ಎಂತ ಕಂಡ್ರೂ ಕೋಪುಸುವ ವ್ಯವಹಾರಕ್ಕೆ ಇಳಿವಲಾಗ. ಕೋಪ ಮನುಷ್ಯನ ಸಕಲ ಅನಾಹುತಕ್ಕೆ ನಾಂದಿಯಾವ್ತು. ಕ್ಷಮಾಗುಣ ಇರೆಕು. ಹಾಂಗೇಳಿ ನ್ಯಾಯಾಧೀಶನೋ, ಕಾನೂನು ಪಾಲಕನೋ ಕೊಡುವ ದಂಡನೆ ಪ್ರತೀಕಾರ ಅಲ್ಲ., ಅದು ಅವರ ಕರ್ತವ್ಯ ಧರ್ಮ.  ಹೀಂಗೆ ಜೀವನಲ್ಲಿ ಅಳವಡಿಸಿಗೊಂಡರೆ “ಸಂತುಷ್ಟಃ ಸತತಮ್” ಏವತ್ತೂ ಸಂತುಷ್ಟನಾಗಿರುತ್ತ°. ಈ ಸ್ಥಿತಿಲಿ, “ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ” –  ಸಂತುಷ್ಟನಾಗಿಪ್ಪ ಮನಸ್ಥಿತಿಲಿ ಭಕ್ತಿಸೇವೆಲಿ ನಿರತನಾಗಿಪ್ಪವ° ಆವುತ್ತ ಮತ್ತೆ ಆತ್ಮಸಂಯಮಿ (ಯತಾತ್ಮಾ) ಆಗಿದ್ದು ದೃಢ ನಿಶ್ಚಯ ಮನಸ್ಸಿಂದ ಭಗವಂತನಲ್ಲಿ ತನ್ನ ಗುರಿಯ ಕೇಂದ್ರೀಕರಿಸಿ ಭಕ್ತಿಸೇವೆಂದ ಮುಂದುವರುದರೆ ಅಂತವ° ಭಗವಂತನ ನಿಜಭಕ್ತ° ಹೇದು ಪರಿಗಣಿಸಲ್ಪಡುತ್ತ°, ಅವ° ಭಗವಂತಂಗೆ ಅತ್ಯಂತ ಪ್ರೀತಿಪಾತ್ರನಾಗಿರುತ್ತ°.

ಶ್ಲೋಕ

ಯಸ್ಮಾನ್ನೋದ್ವಿಜತೇ ಲೋಕೋ ಲೋಕಾನ್ನೋದ್ವಿಜತೇ ಚ ಯಃ ।
ಹರ್ಷಾಮರ್ಷಭಯೋದ್ವೇಗೈಃ ಮುಕ್ತೋ ಯಃ ಸ ಚ ಮೇ ಪ್ರಿಯಃ ॥೧೫॥

ಪದವಿಭಾಗ

ಯಸ್ಮಾತ್ ನ ಉದ್ವಿಜತೇ ಲೋಕಃ ಲೋಕಾತ್ ನ ಉದ್ವಿಜತೇ ಚ ಯಃ । ಹರ್ಷ-ಆಮರ್ಷ-ಭಯ-ಉದ್ವೇಗೈಃ ಮುಕ್ತಃ ಯಃ ಸಃ ಚ ಮೇ ಪ್ರಿಯಃ ॥

ಅನ್ವಯ

ಲೋಕಃ ಯಸ್ಮಾತ್ ನ ಉದ್ವಿಜತೇ, ಯಃ ಚ ಲೋಕಾತ್ ನ ಉದ್ವಿಜತೇ, ಯಃ ಚ ಹರ್ಷ-ಆಮರ್ಷ-ಭಯ-ಉದ್ವೇಗೈಃ ಮುಕ್ತಃ, ಸಃ ಮೇ ಪ್ರಿಯಃ (ಅಸ್ತಿ) ।

ಪ್ರತಿಪದಾರ್ಥ

ಲೋಕಃ – ಲೋಕದ ಜನಂಗೊ(ಲೋಕವು), ಯಸ್ಮಾತ್ – ಆರಿಂದ, ನ ಉದ್ವಿಜತೇ – ಕ್ಷೋಭೆಗೊಳ್ಳುತ್ತವಿಲ್ಲೆಯೋ, ಯಃ – ಆರು (ಯಾವಾತ°), ಚ – ಕೂಡ, ಲೋಕಾತ್ – ಲೋಕಂದ (ಜನರಿಂದ) ನ ಉದ್ವಿಜತೇ – ಉದ್ವಿಗ್ನಗೊಳ್ಳುತ್ತನಿಲ್ಲೆಯೋ, ಯಃ – ಆರು, ಚ – ಕೂಡ, ಹರ್ಷ-ಆಮರ್ಷ-ಭಯ-ಉದ್ವೇಗೈಃ – ಸಂತೋಷ-ದುಃಖ-ಭಯ-ಉದ್ವೇಗಂಗಳಿಂದ, ಮುಕ್ತಃ – ಮುಕ್ತನಾದವ° (ಆಗಿರುತ್ತನೋ), ಸಃ – ಅವ°, ಚ – ಕೂಡ, ಮೇ – ಎನಗೆ, ಪ್ರಿಯಃ – ಪ್ರಿಯನಾದವ°.

ಅನ್ವಯಾರ್ಥ

ಏವ ವ್ಯಕ್ತಿಂದ ಲೋಕದ ಜನಂಗೊ ಉದ್ವೇಗಗೊಳ್ಳುತ್ತವಿಲ್ಲೆಯೋ , ಯಾವಾತ° ಲೋಕದ ಜನರಿಂದ ಉದ್ವೇಗಗೊಳ್ಳುತ್ತನಿಲ್ಲೆಯೋ, ಯಾವಾತ° ಸುಖ-ದುಃಖಂಗಳಲ್ಲಿ, ಭಯ-ಆತಂಕಂಗಳಲ್ಲಿ ಸಮಚಿತ್ತನಾಗಿರುತ್ತನೋ ಅವನೂ ಕೂಡ ಎನಗೆ ಪ್ರಿಯನಾಗಿರುತ್ತ°.

ತಾತ್ಪರ್ಯ /ವಿವರಣೆ

ಭಗವದ್ ಭಕ್ತನ ಇನ್ನೂ ಕೆಲವು ಅರ್ಹತೆಗಳ ಇಲ್ಲಿ ವರ್ಣಿಸಿದ್ದ° ಭಗವಂತ°. “ಯಸ್ಮಾತ್ ನ ಉದ್ವಿಜತೇ ಲೋಕಃ….” – ಆರಿಂದ ಲೋಕ ಉದ್ವಿಗ್ನಗೊಳ್ಳುತ್ತಿಲ್ಲೆಯೋ, ರೇಗುತ್ತಿಲ್ಯೋ, ತಲ್ಲಣಗೊಳ್ಳುತ್ತಿಲ್ಯೋ ,ಹೇದರೆ., ಆರನ್ನೂ ನೋಯಿಸದವ°, “ಲೋಕಾತ್ ನ ಉದ್ವಿಜತೇ ಚ ಯಃ ..” – ಆರು ಲೋಕಂದ ಉದ್ವೇಗಕ್ಕೆ ಒಳಗಾವ್ತನಿಲ್ಲೆಯೋ, ಅರ್ಥಾತ್., ಆರಿಂದಲೂ ನೋವುಣ್ಣದ್ದವ°, ರೇಗದ್ದವ°, ತಲ್ಲಣಗೊಳ್ಳದ್ದವ° ಹಾಂಗೇ “ಹರ್ಷಾಮರ್ಷಭಯೋದ್ವೇಗೈರ್ಮುಕ್ತಃ ಯಃ ಸ ಚ ಮೇ ಪ್ರಿಯಃ “  ಸುಖದುಃಖಂಗಳಿಂದ, ಭಯ ಆತಂಕಗಳಿಂದ ಮುಕ್ತನಾದವ°, ಹೇಳಿರೆ ಎಲ್ಲ ಪರಿಸ್ಥಿತಿಲಿಯೂ ಸಮಭಾವವ ತಾಳುವವ° ಭಗವಂತನ ಅತ್ಯಂತ ಪ್ರೀತಿಯ ಭಕ್ತನೆನಿಸುತ್ತ°. ಒಟ್ಟಿಲ್ಲಿ ಏವ ಪರಿಸ್ಥಿತಿಲಿಯೂ ಚಿತ್ತ ವಿಕಲ್ಪಗೊಳ್ಳದ್ದವ° ಅಧ್ಯಾತ್ಮಿಕ ಸಾಧನೆಗೆ ಅರ್ಹನಾಗಿರುತ್ತ°. ಬಹುಬೇಗವಾಗಿ ಭಗಂತನ ಹತ್ರೆ ಸೇರ್ಲಕ್ಕು.

ಬನ್ನಂಜೆ ವಿವರುಸುತ್ತವು – ನಮ್ಮ ನೋಡಿ ಇನ್ನೊಬ್ಬ ಉದ್ವೇಗಕ್ಕೆ ತುತ್ತಪ್ಪಲಾಗ, ಹಾಂಗೇ, ಇನ್ನೊಬ್ಬನ ನೋಡಿ ನಾವು ಉದ್ವೇಗಕ್ಕೆ ತುತ್ತಪ್ಪಲಾಗ. ನಮ್ಮ ನೋಡಿ ಆರಿಂಗೂ ಅಸಹನೆ, ಅತೃಪ್ತಿ ಉಂಟಪ್ಪಲಾಗ ಹಾಂಗೇ, ನಾವೂ ಇನ್ನೊಬ್ಬನ ನೋಡಿ ಅಸಹನೆ ಅತೃಪ್ತಿಗೆ ಬಲಿಯಪ್ಪಲಾಗ. ಉದ್ವೇಗಂದಲಾಗಿ  (tension) ಕ್ಷುಲ್ಲಕ ಕಾರಣಕ್ಕಾಗಿ ವಿವಿಧ ರೋಗಂಗೊಕ್ಕೆ ತುತ್ತಾಯೇಕ್ಕಾವ್ತು. ನಮ್ಮ ಮನಸ್ಸಿನ ಸ್ಥಿಮಿತ ತಪ್ಪುತ್ತು. ಇದರಿಂದ ಧ್ಯಾನಕ್ಕೆ ತೊಡಗಲೆ ಅಡಚಣೆ ಉಂಟಾವ್ತು. ವೃಥಾ ವಿಚಲಿತನಾಗೇಕ್ಕಾವ್ತು. ಹಾಂಗಾಗಿ ಭಗವಂತನ ನಂಬಿ ನಿಸ್ವಾರ್ಥವಾಗಿ ನಿಶ್ಚಿಂತೆಂದ ಬದುಕ್ಕಲೆ ಕಲಿಯೆಕು. “ಜೀವನಲ್ಲಿ ಎಲ್ಲೋರನ್ನೊ ಪ್ರೀತುಸುವ ಸಾಧಕ, ಹರ್ಷ-ದುಃಖ ಭಯ-ಉದ್ವೇಗಂದ ಗೆದ್ದ ಸಾಧಕನಾಗಿ ಭಗವಂತನ ಪ್ರೀತಿಗೆ ಪಾತ್ರನಾವ್ತ°.

ಶ್ಲೋಕ

ಅನಪೇಕ್ಷಃ ಶುಚಿರ್ದಕ್ಷ ಉದಾಸೀನೋ ಗತವ್ಯಥಃ ।
ಸರ್ವಾರಮ್ಭಪರಿತ್ಯಾಗೀ ಯೋ ಮದ್ಭಕ್ತಃ ಸ ಮೇ ಪ್ರಿಯಃ ॥೧೬॥

ಪದವಿಭಾಗ

ಅನಪೇಕ್ಷಃ ಶುಚಿಃ ದಕ್ಷಃ ಉದಾಸೀನಃ ಗತ-ವ್ಯಥಃ । ಸರ್ವ-ಆರಂಭ-ಪರಿತ್ಯಾಗೀ ಯಃ ಮತ್-ಭಕ್ತಃ ಸಃ ಮೇ ಪ್ರಿಯಃ ॥

ಅನ್ವಯ

ಯಃ ಮತ್-ಭಕ್ತಃ ಅನಪೇಕ್ಷಃ, ಶುಚಿಃ, ದಕ್ಷಃ , ಉದಾಸೀನಃ, ಗತ-ವ್ಯಥಃ, ಸರ್ವ-ಆರಂಭ-ಪರಿತ್ಯಾಗೀ (ಅಸ್ತಿ), ಸಃ ಮೇ ಪ್ರಿಯಃ ಅಸ್ತಿ ।

ಪ್ರತಿಪದಾರ್ಥ

ಯಃ – ಯಾವ ವ್ಯಕ್ತಿ, ಮತ್-ಭಕ್ತಃ – ಎನ್ನ ಭಕ್ತ°, ಅನಪೇಕ್ಷಃ – ತಟಸ್ಥ° (ಬಯಸದ್ದವ°/ ಅಪೇಕ್ಷಯಿಲ್ಲದ್ದವ°), ಶುಚಿಃ – ಶುದ್ಧ°, ದಕ್ಷಃ – ಪರಿಣತ°, ಉದಾಸೀನಃ – ಉದಾಸೀನ°, ಗತ-ವ್ಯಥಃ – ವ್ಯಥೆಂದ ಮುಕ್ತ°, ಸರ್ವ-ಆರಂಭ-ಪರಿತ್ಯಾಗೀ – ಎಲ್ಲ ಪ್ರಯತ್ನಂಗಳ ತ್ಯಾಗಿ, (ಅಸ್ತಿ – ಆಗಿದ್ದನೋ), ಸಃ – ಅವ°, ಮೇ – ಎನಗೆ, ಪ್ರಿಯಃ ಅಸ್ತಿ – ಪ್ರಿಯನಾಗಿದ್ದ°.

ಅನ್ವಯಾರ್ಥ

ಏನನ್ನೂ ಬಯಸದ್ದವ° (ಅನಪೇಕ್ಷಃ), ಶುದ್ಧನಾಗಿಪ್ಪವ° ಸಮರ್ಥನಾಗಿಪ್ಪವ/ದಕ್ಷನಾಗಿಪ್ಪವ° (ಚೊಕ್ಕವಾಗಿ ಚುರುಕಾಗಿಪ್ಪವ°), ಉದಾಸೀನ (ಏವುದನ್ನೂ ಹಚ್ಚಿಕೊಳ್ಳದ್ದವ°), ಕಂಗೆಡದವ (ವ್ಯಥೆಂದ ಮುಕ್ತ°), ಭಗವಂತನ ಆರಾಧನೆಯಲ್ಲದ್ದೆ ಯಾವ ಆರಂಭವನ್ನೂ ತೊಡಗದ್ದವ° (ಸರ್ವಾರಂಭಪರಿತ್ಯಾಗೀ / ಎಲ್ಲವನ್ನೂ ಭಗವಂತಂಗೆ ಅರ್ಪುಸಿ ಆನು ಎನ್ನದು ಹೇಳ್ವದರಲ್ಲಿ ತೊಡಗದ್ದವ°) ಯಾವಾತ° ಎನ್ನ ಭಕ್ತನಿದ್ದನೋ ಅವ° ಎನಗೆ ಪ್ರಿಯನಾಗಿದ್ದ°.

ತಾತ್ಪರ್ಯ / ವಿವರಣೆ

ಬನ್ನಂಜೆ ಈ ಭಾಗವ ಸರಳವಾಗಿ ಲಾಯಕಕ್ಕೆ ವಿವರಿಸಿದ್ದವು – ಭಗವಂತ° ತನ್ನ ಭಕ್ತನಲ್ಲಿರೆಕ್ಕಾದ, ಭಕ್ತಿಗೆ ಪೂರಕವಾದ ಆರು ಗುಣಂಗಳ ಇಲ್ಲಿ ವಿವರಿಸಿದ್ದ°. ಅದು ಎಂತರ ಹೇಳಿರೆ –

೧. ಅನಪೇಕ್ಷಃ ಅದು ಬೇಕು ಇದು ಬೇಕು ಹೇದು ಬಯಸ್ಸದ್ದೆ ಇಪ್ಪದು. ಹೇಳಿರೆ ಏವುದು ತಾತ್ಕಾಲಿಕ ಸುಖವೋ ಅದರ ಬಯಸಿ ಅದರ ಹಿಂದೆ ಹೋಗದ್ದಿಪ್ಪದು. ಶಾಶ್ವತವಾದ ಸುಖ – ಮೋಕ್ಷದ ಮಾರ್ಗಲ್ಲೇ ನಡವದು. ಎಂತ ಸಿಕ್ಕಿತ್ತೋ ಅದರ್ಲೆ ಸಂತೋಷಪಟ್ಟುಗೊಂಬದು – ಅನಪೇಕ್ಷಃ.

೨. ಶುಚಿಃ – ನಿರ್ಮಲ ಮತ್ತು ನಿರಾಳನಾಗಿಪ್ಪದು. ಇದುವೇ ಮಡಿ. ಬಾಯಿಲಿ ಬೇಡಂಗಟ್ಟೆ, ಮನಸ್ಸಿಲ್ಲಿ ದುರಾಲೋಚನೆ, ಮೈಲಿ ಕೊಳೆ – ಇದು ಭಕ್ತಿಮಾರ್ಗಲ್ಲಿ ಮೈಲಿಗೆ.  ಮದಾಲು ನಾವು ನಮ್ಮ ಮನಸ್ಸಿನ ಕೊಳೆಯ ತೊಳೆಕು. ಮನಸ್ಸು ನಿರ್ಮಲವಾಗಿರೆಕು. ಮನಸ್ಸಿಲ್ಲಿ ಭಗವಂತನ ಚಿಂತನೆ ಬಿಟ್ಟು ಅನ್ಯ ಭೌತಿಕ ವಿಷಯಲ್ಲಿ ಮನಸ್ಸು ಹರಿವಲಾಗ. ಇದಕ್ಕೆ ಪೂರಕವಾಗಿ ಬಾಹ್ಯ ಶುದ್ಧಿ. ಅಂತಃ ಶುದ್ಧಿ, ಬಹಿರ್ಶುದ್ಧಿ ಎರಡೂ ಅಗತ್ಯ. ಒಂದರ ಬಿಟ್ಟಿಕ್ಕಿ ಇನ್ನೊಂದು ಆಚರಣೆ ಮಾಡಿ ಗುಣ ಇಲ್ಲೆ. ಎರಡೂ ಪರಸ್ಪರ ಪೂರಕ. ಚಂದಕೆ ಮಿಂದಿಕ್ಕಿ ವಿಭೂತಿ ಪಟ್ಟೆ ಎಳ್ಕೊಂಡು ಪಟ್ಟೆ ಮಡಿ ಸುತ್ತಿಗೊಂಡು ಕೂದರೆ ಅಂತಃಶುದ್ಧಿ ಆವ್ತಿಲ್ಲೆ. ಶಾಂತಿ ಪಾಠಲ್ಲಿ ಹೇಳಿದ್ದದು – ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ” – ಕೆಮಿಲಿ ಒಳ್ಳೆದರ ಕೇಳುವೋ, ಕಣ್ಣಿಂದ ಒಳ್ಳೆದರ ಕಾಂಬೊ,  ಹೀಂಗೆ ಒಳ್ಳೆಯದನ್ನೇ ಯೋಚುಸುವೋ°. ಇದುವೇ ನಿಜವಾದ ಮಡಿ. ಮಡಿಯ ಬಗ್ಗೆ ಹೆಚ್ಹು ಪ್ರಸಿದ್ಧವಾದ ಒಂದು ಶ್ಲೋಕ ನಾವಿಲ್ಲಿ ನೆಂಪು ಮಾಡಿಗೊಂಬಲಕ್ಕು. – “ಅಪವಿತ್ರಃ ಪವಿತ್ರೋವ ಸರ್ವಾವಸ್ಥಾಂ ಗತೋಪಿವಾ । ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ॥ – ಇಲ್ಲಿ ಪುಂಡರೀಕಾಕ್ಷನ ಸ್ಮರಣೆ ಮಾಡೆಕು ಹೇಳಿ ಹೇಳಿದ್ದು. ಪುಂಡರೀಕಾಕ್ಷ ಹೇದರೆ ಕೆಂದಾವರೆಯಂತಹ ಕಣ್ಣಿಪ್ಪವ° ಹೇದರ್ಥ. ಭಗವಂತನ ಕಣ್ಣು ಏವತ್ತೂ ಕೆಂದಾವರೆ ಎಸಳಿನಾಂಗೆ ನಳನಳಿಸುತ್ತಿರ್ತು. ಸಾಮಾನ್ಯವಾಗಿ ನವಗೆ ತುಂಬ ಸಂತೋಷ ಆದಪ್ಪಗ ನಮ್ಮ ಕಣ್ಣುಗೊ ಅರಳುತ್ತು. ಆದರೆ ಭಗವಂತ ಸದಾ ಸಂತೋಷದ ಬುಗ್ಗೆ. ಭಗವಂತ° ಪ್ರೀತಿಂದ ಕಣ್ಣರಳಿಸಿ ನಮ್ಮ ನೋಡುತ್ತಿರುತ್ತ°. ಅವನ ಕಣ್ಣಿಂದ ಹರುದುಬಪ್ಪ ಅನುಗ್ರಹ ರಸಧಾರೆಲಿ ನಾವು ಮೀಯೆಕು. ಅವನ ಅನುಗ್ರಹದ ಕೃಪಾದೃಷ್ಟಿ ನಮ್ಮ ಮೇಲೆ ಹರುದ್ದು. ನಾವದರ್ಲ್ಲಿ ಮಿಂದಿದು ಹೇಳ್ವ ಅನುಸಂಧಾನ – ಶುಚಿಃ. ಹೀಂಗೆ ನಾವು ಭಗವಂತನ ಅನುಗ್ರಹಂದ ಒಳವೂ ಹೆರವೂ ಮಡಿಯಾಯೇಕು.

೩. ದಕ್ಷಃ – ನಮ್ಮಲ್ಲಿ ಮನಸ್ಸಿನ ಭಗವಂತನತ್ರೆ ಹರ್ಸುವ ದಕ್ಷತೆ ಇರೆಕು. ಅವ° ನಮ್ಮ ಬಾಹ್ಯ ಪ್ರಯತ್ನಕ್ಕೆ ಒಲಿಯ°. ನಾವು ಅಂತರಂಗಂದ ಅವನತ್ರಂಗೆ ಹೋಯೇಕು. ಬಾಹ್ಯಕ್ರಿಯೆಗೊ ನಮ್ಮ ಅಂತರಂಗದ ಸಾಧನೆಗೆ ಪೂರಕ ಮಾಂತ್ರ. ಭಗವಂತನ ಹೇಂಗೆ ಸೇರ್ಲಕ್ಕು ಹೇಳ್ವ ತಿಳುವಳಿಕೆ, ಜಾಣತನ ನಮ್ಮಲ್ಲಿ ಇರೆಕ್ಕಪ್ಪದೇ – ದಕ್ಷಃ.

೪. ಉದಾಸೀನಃ – ಅಂತರ್ಯಾಮಿಯಾಗಿಪ್ಪದು. ಯಾವುದೇ ಬಾಹ್ಯ ಕ್ರಿಯೆಯ ಒತ್ತಡಕ್ಕೆ ಮಣಿವಲಾಗ. ಆಗ್ರಹ ಬೇಡ. ಉದಾಹರಣೆಗೆ – ನಮ್ಮ ಪೈಕಿಲಿ ಏವುದೋ ಕುಟುಂಬಲ್ಲಿ ಆರೋ ಒಬ್ಬ° ತಮ್ಮ ಏವುದೋ ಒಂದು ಫಲಾಪೇಕ್ಷೆಯ ಈಡೇರುಸಲೆ ಏವುದೋ ಒಂದು ಪೂಜೆ ಮಾಡುತ್ತ°. ಅಂತಹ ಸಂದರ್ಭಲ್ಲಿ ಫಲಾಪೇಕ್ಷೆಂದ ಭಗವದಾರಧನೆ ತಪ್ಪು ಹೇದು ಅದರ ವಿರೋಧಿಸಿ ನಿಂಬದು ಒಳ್ಳೆದಲ್ಲ. ಏನೇ ಇರಲಿ, ಅದು ಭಗವಂತನ ಸೇವೆ, ಅದು ಭಗವಂತಂಗೆ ಸೇರಲಿ ಹೇದು ಪ್ರಾರ್ಥಿಸಿಗೊಂಬದು. ಎಲ್ಲವುದರ ಒಟ್ಟಿಂಗೆ ಇದ್ದುಗೊಂಡು ಏವುದನ್ನೂ ಅಂಟುಸಿಗೊಳ್ಳದ್ದೆ, ಆಗ್ರಹ ಇಲ್ಲದ್ದೆ ಬದುಕುವದು – ಉದಾಸೀನ.

೫. ಗತವ್ಯಥಃ – ಏನೇ ಆದರೂ ಚಿಂತೆ ಮಾಡಿಗೊಂಡಿಲ್ಲದ್ದಿಪ್ಪದು, ಸದಾ ಆನಂದಲ್ಲಿ ಮನಸ್ಸಿನ ಮಡಿಕ್ಕೊಂಡಿಪ್ಪದು – ಗತವ್ಯಥಃ.

೬. ಸರ್ವಾರಂಭಪರಿತ್ಯಾಗೀ – ಭಗವಂತನ ಪ್ರೀತಿಗೆ ವಿರುದ್ಧವಾದ ಏವ ಆರಂಭಕ್ಕೂ ತೊಡಗದ್ದೆ ಇಪ್ಪದು. ಎಲ್ಲ ಆರಂಭವನ್ನೂ ಫಲಕಾಮನೆಂದ ಮಾಡ್ತದರ ಬಿಡೆಕು. ಎಲ್ಲವನ್ನೂ ಅಕೇರಿಗೆ ಶ್ರೀಕೃಷ್ಣಾರ್ಪಣಮಸ್ತು ಹೇದು ಭಗವಂತಂಗೆ ಅರ್ಪಿಸೆಕು.

‘ಆರು ಈ ಗುಣಂಗಳಿಂದ ಎನ್ನ ಪ್ರೀತಿಸುತ್ತವೋ ಅಂತಹ ಭಕ್ತ° ಎನಗೆ ಅಚ್ಚುಮೆಚ್ಚು’  ಹೇದು ಹೇಳಿದ್ದ ಇಲ್ಲಿ ಭಗವಂತ°.

ಶ್ಲೋಕ

ಯೋ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ ।
ಶುಭಾಶುಭಪರಿತ್ಯಾಗೀ ಭಕ್ತಿಮಾನ್ಯಃ ಸ ಮೇ ಪ್ರಿಯಃ ॥೧೭॥

ಪದವಿಭಾಗ

ಯಃ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ । ಶುಭ-ಅಶುಭ-ಪರಿತ್ಯಾಗೀ ಭಕ್ತಿಮಾನ್ ಯಃ ಸಃ ಮೇ ಪ್ರಿಯಃ ॥

ಅನ್ವಯ

ಯಃ ನ ಹೃಷ್ಯತಿ, ನ ದ್ವೇಷ್ಟಿ, ನ ಶೋಚತಿ, ನ ಕಾಂಕ್ಷತಿ, ಯಃ ಶುಭ-ಅಶುಭ-ಪರಿತ್ಯಾಗೀ, ಭಕ್ತಿಮಾನ್ (ಅಸ್ತಿ), ಸಃ ಮೇ ಪ್ರಿಯಃ ।

ಪ್ರತಿಪದಾರ್ಥ

ಯಃ – ಯಾವಾತ°, ನ  ಹೃಷ್ಯತಿ – ಸಂತೋಷಪಡುತ್ತನಿಲ್ಲೆಯೋ, ನ ದ್ವೇಷ್ಟಿ – ದುಃಖಿಸುತ್ತನಿಲ್ಲೆಯೋ, ನ ಕಾಂಕ್ಷತಿ – ಅಪೇಕ್ಷಿಸುತ್ತನಿಲ್ಲೆಯೋ, ಯಃ – ಯಾವಾತ°, ಶುಭ-ಅಶುಭ-ಪರಿತ್ಯಾಗೀ – ಶುಭಕರವಾದ್ದನ್ನೂ ಅಶುಭಕರವಾದ್ದನೂ ಪರಿತ್ಯಜಿಸುವವನಾಗಿದ್ದನೋ, ಭಕ್ತಿಮಾನ್ (ಅಸ್ತಿ) – ಭಕ್ತ°ನಾಗಿದ್ದನೋ, ಸಃ – ಅವ°, ಮೇ – ಎನ್ನ, ಪ್ರಿಯಃ – ಪ್ರಿಯ°

ಅನ್ವಯಾರ್ಥ

ಯಾವಾತ° ಸಂತೋಷಪಡುತ್ತನಿಲ್ಲೆಯೋ, ದುಃಖಿಸುತ್ತನಿಲ್ಲೆಯೋ, ಅಪೇಕ್ಷಿಸುತ್ತನಿಲ್ಲೆಯೋ, ಶುಭಕರವಾದ್ದನ್ನೂ ಅಶುಭಕರವಾದ್ದನ್ನೂ ತ್ಯಜಿಸುವ ಭಕ್ತನಾಗಿದ್ದನೋ, ಅವ° ಎನ್ನ ಪ್ರೀತಿಪಾತ್ರನಾಗಿರುತ್ತ°.

ತಾತ್ಪರ್ಯ/ವಿವರಣೆ

ಭಗವಂತನ ನಿಜ ಭಕ್ತನಾದವಂಗೆ ಪ್ರಾಪಂಚಿಕ ಯಾವ ಲಾಭನಷ್ಟಲ್ಲಿಯೂ ಸಂತೋಷ ದುಃಖಂಗೊ ಇಲ್ಲೆ. ಪ್ರಾಪಂಚಿಕವಾಗಿ  ಏನಾರು ಪಡೇಕು ಹೇಳ್ವ ಅಪೇಕ್ಷೆಯೂ ಇಲ್ಲೆ. ಶುಭಾಶುಭ ನಿಮಿತ್ಥಲ್ಲಿ ಸಂಕಟವೂ ಇಲ್ಲೆ. ಅದನ್ನೇ ಭಗವಂತ° ಇಲ್ಲಿ ಹೇಳಿದ್ದದು – “ಸಂತೋಷ ಬಂದಪ್ಪಗ ಹಿಗ್ಗದ, ದುಃಖಬಂದಪ್ಪಗ ಕುಗ್ಗದ, ಐಹಿಕ ಇಚ್ಛೆಗಳಿಂದ ಮೀರಿ ನಿಂದಿಪ್ಪ ಭಕ್ತ° ಎನ್ನ ಪ್ರೀತಿಪಾತ್ರನಾಗಿದ್ದ°”. ಮದಲಾಣ ಶ್ಲೋಕಲ್ಲಿ ಹೇಳಿದ್ದನ್ನೇ ಇಲ್ಲಿ ಮತ್ತೆ ಒತ್ತಿಹೇಳಿ ಸ್ಪಷ್ಟಪಡಿಸಿದ್ದದು. ಐಹಿಕ ಲಾಭದಾಯಕ ವಿಷಯಲ್ಲಿ ವಾ ನಷ್ಟ ವಿಷಯಲ್ಲಿ ಭಗವದ್ಭಕ್ತಂಗೆ ಚಿಂತೆ ಇರ್ತಿಲ್ಲೆ. ಅವಂಗೆ ಬೇಕಾದ್ದು ಒಂದೇ ಒಂದು. ಅದು ಭಗವಂತನ ಆನಂದ ಧಾಮ, ಶಾಂತಿ ಧಾಮ. ಜೀವನ್ಮುಕ್ತಿ. ಈ ಪ್ರಪಂಚಲ್ಲಿ ಏವುದೂ ಆಕಸ್ಮಿಕವಲ್ಲ. ಪ್ರತಿಯೊಂದು ಘಟನೆಯ ಹಿಂದೆ ನವಗೆ ಗೊಂತಿಲ್ಲದ್ದೇ ಇಪ್ಪ ಏವುದೋ ಒಂದು ಕಾರಣ ಇದ್ದೇ ಇರ್ತು. ಹಾಂಗಾಗಿ ಅದು ಶುಭ-ಅಶುಭ ಹೇಳಿ ನಿರ್ಧರುಸಲೆ ನಾವು ಸಮರ್ಥರಾಗಿಲ್ಲೆ. ಈ ರೀತಿ ಅರ್ತು ಬದುಕ್ಕುವ ಭಕ್ತ° ಭಗವಂತಂಗೆ ಪ್ರಿಯ° ಹೇಳಿ ಬನ್ನಂಜೆಯವು ವಿಶ್ಲೇಷಿಸಿದ್ದವು.

ಶ್ಲೋಕ

ಸಮಃ ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋಃ ।
ಶೀತೋಷ್ಣಸುಖದುಃಖೇಷು ಸಮಃ ಸಂಗವಿವರ್ಜಿತಃ ॥೧೮॥

ತುಲ್ಯನಿಂದಾಸ್ತುತಿರ್ಮೌನೀ ಸಂತುಷ್ಟೋ ಯೇನ ಕೇನಚಿತ್ ।
ಅನಿಕೇತಃ ಸ್ಥಿರಮತಿಃ ಭಕ್ತಿಮಾನ್ಮೇ ಪ್ರಿಯೋ ನರಃ ॥೧೯॥

ಪದವಿಭಾಗ

ಸಮಃ ಶತ್ರೌ ಚ ಮಿತ್ರೇ ಚ ತಥಾ ಮಾನ-ಅಪಮಾನಯೋಃ । ಶೀತ-ಉಷ್ಣ-ಸುಖ-ದುಃಖೇಷು ಸಮಃ ಸಂಗ-ವಿವರ್ಜಿತಃ ॥

ತುಲ್ಯ-ನಿಂದಾ-ಸ್ತುತಿಃ ಮೌನೀ ಸಂತುಷ್ಟಃ ಯೇನ ಕೇನಚಿತ್ । ಅನಿಕೇತಃ ಸ್ಥಿರ-ಮತಿಃ ಭಕ್ತಿಮಾನ್ ಮೇ ಪ್ರಿಯಃ ನರಃ ॥

ಅನ್ವಯ

(ಯಃ) ಶತ್ರೌ ಮಿತ್ರೇ ಚ ತಥಾ ಮಾನ-ಅಪಮಾನಯೋಃ ಸಮಃ, ಶೀತ-ಉಷ್ಣ-ಸುಖ-ದುಃಖೇಷು ಸಮಃ, ಸಂಗ-ವಿವರ್ಜಿತಃ ಚ (ಅಸ್ತಿ), ತುಲ್ಯ-ನಿಂದಾ-ಸ್ತುತಿಃ, ಮೌನೀ, (ಯಃ) ಯೇನ ಕೇನಚಿತ್ ಸಂತುಷ್ಟಃ (ಭವತಿ) ಅನಿಕೇತಃ, ಸ್ಥಿರ-ಮತಿಃ, ಭಕ್ತಿಮಾನ್ (ಸಃ) ಮೇ ಪ್ರಿಯಃ ॥

ಪ್ರತಿಪದಾರ್ಥ

(ಯಃ – ಯಾವಾತ°), ಶತ್ರೌ – ವೈರಿಯತ್ರೆ, ಮಿತ್ರೇ – ಮಿತ್ರನತ್ರೆ, ಚ – ಕೂಡ, ತಥಾ – ಹಾಂಗೇ, ಮಾನ-ಅಪಮಾನಯೋ – ಮಾನಾಪಮಾನಂಗಳಲ್ಲಿ, ಸಮಃ – ಸಮಚಿತ್ತ°, ಶೀತ-ಉಷ್ಣ-ಸುಖ-ದುಃಖೇಷು – ಶೀತೋಷ್ಣಸುಖದುಃಖಂಗಳಲ್ಲಿ, ಸಮಃ – ಸಮಚಿತ್ತ°, ಸಂಗ-ವಿವರ್ಜಿತಃ – ಸಹವಾಸಮುಕ್ತ°, ಚ – ಕೂಡ, (ಅಸ್ತಿ – ಆಗಿದ್ದನೋ), ತುಲ್ಯ-ನಿಂದಾ-ಸ್ತುತಿಃ – ನಿಂದೆ ಮತ್ತೆ ಸ್ತುತಿಗಳಲ್ಲಿ ಸಮಾನಚಿತ್ತ° (ತುಲ್ಯ), ಮೌನೀ – ಮೌನಂದಿಪ್ಪವ°, (ಯಃ – ಯಾವಾತ°), ಯೇನ ಕೇನಚಿತ್ – ಯಾವುದರಿಂದಲೂ, ಸಂತುಷ್ಟಃ – ತೃಪ್ತ°, (ಭವತಿ – ಆಗಿರುತ್ತನೋ), ಅನಿಕೇತಃ – ನಿವಾಸ ಇಲ್ಲದ್ದವ°, ಸ್ಥಿರ-ಮತಿಃ – ದೃಢಮನಸ್ಸುಳ್ಳವ°, ಭಕ್ತಿಮಾನ್ – ಭಕ್ತಿಲಿ ನಿರತನಾಗಿಪ್ಪವ°, (ಸಃ – ಅವ°), ನರಃ – ಮನುಷ್ಯ°, ಮೇ ಪ್ರಿಯಃ  – ಎನ್ನ ಪ್ರೀತಿಪಾತ್ರನಾಗಿದ್ದ°.

ಅನ್ವಯಾರ್ಥ

ಮಿತ್ರ-ಶತ್ರುಗಳ ವಿಷಯಲ್ಲಿ ಒಂದೇ ರೀತಿ ಇಪ್ಪವ° (ಸಮಾನ ಭಾವ ಹೊಂದಿಪ್ಪವ°), ಮಾನ ಅಪಮನಂಗಳಲ್ಲಿ, ಶೀತೋಷ್ಣಲ್ಲಿ, ಕೀರ್ತಿ ಅಪಕೀರ್ತಿಗಳಲ್ಲಿ ಸಮಚಿತ್ತವುಳ್ಳವ°, ಕಲ್ಮಷವುಂಟುಮಾಡುವ ಎಲ್ಲ ಸಹವಾಸಂದ ಮುಕ್ತನಾಗಿಪ್ಪವ°, ಸದಾ ಮೌನಿ, ಐಹಿಕ ವಿಷಯಲ್ಲಿ ತೃಪ್ತಿ ಹೊಂದಿಪ್ಪವ°, ವಾಸಸ್ಥಳಲ್ಲಿ ಆಸಕ್ತಿ ಇಲ್ಲದ್ದವ° (ಅನಿಕೇತಃ), ಸ್ಥಿರಮತಿಯಾಗಿಪ್ಪವ° ಭಕ್ತಿಸೇವೆಲಿ ನಿರತನೂ ಆಗಿಪ್ಪವ ಯಾವತ° ಭಕ್ತ° ಇದ್ದನೋ  ಅವ° ಎನಗೆ ಅತ್ಯಂತ ಪ್ರೀತಿಪಾತ್ರನಾಗಿದ್ದ°.

ತಾತ್ಪರ್ಯ / ವಿವರಣೆ

ನಾವು ಸಾಮಾನ್ಯವಾಗಿ ಶತ್ರು ಅಥವಾ ಮಿತ್ರ° ಹೇಳ್ವ ಭಾವನೆಯ ವ್ಯಾವಹಾರಿಕವಾಗಿ ರೂಢಿಸಿಗೊಳ್ಳುತ್ತು. ನಮ್ಮ ಹೊಗಳುತ್ತವು ನವಗೆ ಮಿತ್ರರು, ನಮ್ಮ ತೆಗಳುವವು ನಮ್ಮ ಶತ್ರುಗೊ ಹೇಳಿ ನಾವು ತೀರ್ಮಾನ ಮಾಡಿಗೊಂಡಿರುತ್ತು. ಇದು ನಮ್ಮ ಅಪ್ರಬುದ್ಧತೆ. ಸ್ನೇಹದ ಹಿಂದೆ ದ್ವೇಷ ಇಕ್ಕು, ದ್ವೇಷದ ಹಿಂದೆ ಸ್ನೇಹ ಇಕ್ಕು. ಅದಕ್ಕೇ ಪುರಂದರ ದಾಸರು ಹಾಡಿರೆಕು – “ನಿಂದಕರಿರಬೇಕು…”. ನಿಂದಕರು ನಮ್ಮ ನಿಂದೆ ಮಾಡುವ ಮೂಲಕ ನಮ್ಮಲ್ಲಿಪ್ಪ ನಿಂದ್ಯವಾದ ದೋಷಂಗಳ ಫಲವ ತೆಕ್ಕೊಳ್ತವು. ಹೊಗಳುವವು ಹೊಗಳುವ ಮೂಲಕ ನಮ್ಮಲ್ಲಿಪ್ಪ ಒಳ್ಳೆಯತನದ ಪುಣ್ಯದ ಫಲದ ಪಾಲು ಪಡಕ್ಕೊಳ್ಳುತ್ತವು. ಹಾಂಗಾಗಿ ಸಾಧನೆಯ ಮಾರ್ಗಲ್ಲಿ ಹೊಗಳುವವರಿಂದ ನಿಂದಕರು ಸಹಾಯಕರು. ಹಾಂಗಾಗಿ, ಶತ್ರು ಮಿತ್ರ ಹೇಳ್ವ ಪರಿಭೇದ ಮಾಡಿಗೊಂಡು ಆರನ್ನೋ ಟೀಕೆ ಮಾಡುವದಾಗಲೀ, ದ್ವೇಷಕಟ್ಟಿಗೊಂಬದಾಗಲಿ ಮಾಡ್ಳಾಗ. ದುರ್ಗುಣಂಗಳಿಂದ ದೂರ ಇದ್ದುಗೊ, ಒಳ್ಳೆಯ ಗುಣವ ಪ್ರೀತಿಮಾಡಿಗೊ. ಎಲ್ಲಿ ಒಳ್ಲೆತನ ಇದ್ದೋ ಅವರ ಒಡನಾಟ ಮಾಡಿಗೊ (ಮೈತ್ರಿ), ದುಃಖವ ಕಂಡು ಕರಗೆಕು (ಕರುಣೆ), ಇನ್ನೊಬ್ಬರ ಸಂತೋಷವ ಕಂಡು ಸಂತೋಷ ಪಡೇಕು (ಮುದಿತ), ಕೆಟ್ಟದ್ದರಿಂದ ದೂರ ಇರೇಕು (ಉಪೇಕ್ಷೆ). ಮೂಲಭೂತವಾಗಿ ಶತ್ರು ಮಿತ್ರ ಹೇಳ್ವ ವಿಭಾಗ ಮಾಡೆಡ. ಎಲ್ಲರಲ್ಲಿಯೂ ಭಗವಂತನ ಕಂಡುಗೊಂಬಲೆ ಕಲಿ. ಲೌಕಿಕ ಶತ್ರು ಮಿತ್ರ ಭಾವನೆ ಬಿಡೆಕು.

ಸನ್ಮಾನ ಮಾಡಿಯಪ್ಪಗ ಉಬ್ಬೇಡ. ಅವಮಾನ ಆದಪ್ಪಗ ಕುಗ್ಗೇಡ. ಮಾನ-ಅಪಮಾನ್ವ ಗೆದ್ದುಗೊ. ಇನ್ನೊಬ್ಬ ಎಂತ ಹೇಳಿದವು ಹೇಳ್ವದು ಮುಖ್ಯ ಅಲ್ಲ. ನಮ್ಮ ಅಂತರಾತ್ಮ ಎಂತ ಹೇಳ್ತು ಹೇಳ್ವದು ಮುಖ್ಯ. ಇನ್ನೊಬ್ಬ ಹೊಗಳಿಯಪ್ಪಗ ನಮ್ಮಲ್ಲಿ ಇಲ್ಲದ್ದ ಗುಣ ಬಂದು ನಮ್ಮ ಸೇರುತ್ತಿಲ್ಲೆ. ಹಾಂಗೇ ಇನ್ನೊಬ್ಬ ನಮ್ಮ ತೆಗಳಿಯಪ್ಪಗ ನಾವು ಕೆಳ ಹೋವ್ತಿಲ್ಲೆ. ಹೊಗಳಿಕೆ ಬಗ್ಗೆಎಚ್ಚರ ಇರೆಕು. ಅದರಿಂದ ದಾರಿ ತಪ್ಪುವ ಸಾಧ್ಯತೆ ಹೆಚ್ಚಿಗೆ. ಅವಮಾನಂದ ನಾವು ತಪ್ಪು ದಾರಿಯ ಬಿಟ್ಟು ಸರಿ ದಾರಿಲಿ ಸಾಗಿ ಎತ್ತರಕ್ಕೇರುವ ಸಾಧ್ಯತೆ ಇದ್ದು.

ಸುಖ-ದುಃಖವ ಸಮವಾಗಿ ಕಾಣೆಕು. ಏವುದೇ ವಸ್ತು ನವಗೆ ಶಾಶ್ವತ ಸುಖ-ದುಃಖವ ಕೊಡುತ್ತಿಲ್ಲೆ. ಆ ವಸ್ತುವಿನ ನಾವು ನೋಡುವ ಭಾವನೆ ನವಗೆ ಸುಖ-ದುಃಖವ ಕೊಡುತ್ತದು. ಹಾಂಗಾಗಿ ಶೀತ-ಉಷ್ಣದ ಹಾಂಗೆ ಸುಖದುಃಖವ ಸಮಾನವಾಗಿ ಕಂಡುಗೊಂಬದರ ರೂಢಿಸಿಗೊಳ್ಳೆಕು.

ಇವೆಲ್ಲವೂ ಮಾನವ ಸಹಜಪ್ರವೃತ್ತಿ ಹೇದು ನವಗೆ ತೋರುತ್ತು. ಆದರೆ ಇದು ಸಹಜ ಧರ್ಮ ಅಲ್ಲ. ನಾವು ಅಂಟುಸಿಗೊಂಬದರಿಂದ ನಮ್ಮಲ್ಲಿ ನವಗೆ ಬೇಡದ್ದ ಈ ಗುಣಂಗೊ ತುಂಬಿಗೊಳ್ತು. ಹಾಂಗಾಗಿ ಹೊಗಳಿಕೆ ಮತ್ತೆ ತೆಗಳಿಕಗೆ ತಕ್ಷಣ ಪ್ರತಿಕ್ರಿಯಿಸೆಡ. ಮೌನಿಯಾಗಿದ್ದುಗೊ. ವಿಷಯದ ಬಗ್ಗೆ ಮನನ ಮಾಡು. ದುಡುಕಿ ಕಾರ್ಯಕ್ಕೆ ಇಳಿಯೆಡ. ಮಾತು ಎಷ್ಟು ಎಡಿಗೊ ಅಷ್ಟು ಕಮ್ಮಿ ಮಾಡು. ಯೋಚನೆ ಮಾಡಿ ಮಾತಾಡು. ನಮ್ಮತ್ರೆ ಎಂತ ಇದ್ದೋ ಅದರಿಂದ ತೃಪ್ತಿ ಪಡೆ. ಸ್ಥಿರ-ಚರ ವಸ್ತುಗೊ ಹೇದು ಐಹಿಕವಾಗಿ ಆಕರ್ಶಿಸುವ ವಿಷಯ-ವಸ್ತುಗಳ ಕಟ್ಟಿಮಡುಗಳ ಅವುಗಳ ಬೆನ್ನು ಹಿಡಿಯೆಡ. ಭಗವಂತ° ಎಂತ ಕೊಟ್ಟಿದನೋ ಅದರಲ್ಲಿ ತೃಪ್ತಿಯ ಕಂಡುಗೊ. ಭಕ್ತಿಂದ ಭಗವಂತನಲ್ಲಿ ಸಂಪೂರ್ಣ ಶರಣಾಗತನಾದಪ್ಪಗ ನಾವು ನಮ್ಮ ಸಾಧನೆಯ ಹಾದಿಲಿ ಎತ್ತರಕ್ಕೇರ್ಲೆಡಿಗು ಹೇದು ಭಗವಂತ ° ಈ ಶ್ಲೋಕಲ್ಲಿ ವಿವರ್ಸಿದ್ದರ ಬನ್ನಂಜೆ ಸೊಗಸಾಗಿ ವಿಶ್ಲೇಷಿಸಿದ್ದವು. “ಇಂತಹ ಗುಣಂಗಳ ಹೊಂದಿಪ್ಪ ಭಕ್ತ° ಎನಗೆ ಅಚ್ಚುಮೆಚ್ಚು”  ಹೇಳಿ ಹೇಳಿದ್ದ ಇಲ್ಲಿ ಭಗವಂತ°.

ಶ್ಲೋಕ

ಯೇ ತು ಧರ್ಮ್ಯಾಮೃತಮಿದಂ ಯಥೋಕ್ತಂ ಪರ್ಯುಪಾಸತೇ ।
ಶ್ರದ್ದಧಾನಾ ಮತ್ಪರಮಾ ಭಕ್ತಾಸ್ತೇsತೀವ ಮೇ ಪ್ರಿಯಾಃ ॥೨೦॥

ಪದವಿಭಾಗ

ಯೇ ತು ಧರ್ಮ್ಯಾ-ಅಮೃತಮ್ ಇದಮ್ ಯಥಾ ಉಕ್ತಮ್ ಪರ್ಯುಪಾಸತೇ । ಶ್ರದ್ಧಧಾನಾಃ ಮತ್-ಪರಮಾಃ ಭಕ್ತಾಃ ತೇ ಅತೀವ ಮೇ ಪ್ರಿಯಾಃ ॥

ಅನ್ವಯ

ಯೇ ತು ಶ್ರದ್ಧಧಾನಾಃ ಮತ್-ಪರಮಾಃ ಭಕ್ತಾಃ ಇದಂ ಯಥಾ ಉಕ್ತಂ ಧರ್ಮ್ಯ-ಅಮೃತಂ ಪರ್ಯುಪಾಸತೇ, ತೇ ಮೇ ಅತೀವ ಪ್ರಿಯಾಃ ಸಂತಿ ।

ಪ್ರತಿಪದಾರ್ಥ

ಯೇ – ಆರು, ತು – ಆದರೋ, ಶ್ರದ್ದಧಾನಾಃ – ಶ್ರದ್ಧೆಂದ, ಮತ್-ಪರಮಾಃ ಭಕ್ತಾಃ – ಎನ್ನ ಪರಮ ಪ್ರಭು, ಸರ್ವಸ್ವ ಹೇದು ತಿಳಿದು ಸ್ವೀಕರುಸುವ ಭಕ್ತರು, ಇದಮ್ ಯಥಾ ಉಕ್ತಮ್ – ಈ ಇದರ  ಹಾಂಗೇ ಹೇಳಿದಾಂಗೇ, ಧರ್ಮ್ಯ-ಅಮೃತಮ್ – ಧರ್ಮದ ಅಮೃತವ, ಪರ್ಯುಪಾಸತೇ – ಸಂಪೂರ್ಣವಾಗಿ ಉಪಾಸನೆ ಮಾಡುತ್ತವೋ, ತೇ – ಅವ್ವು, ಮೇ ಅತೀವ ಪ್ರಿಯಾಃ ಸಂತಿ – ಎನಗೆ ಬಹು ಪ್ರಿಯರು ಆಗಿದ್ದವು.

ಅನ್ವಯಾರ್ಥ

ಆರು ಸಂಪೂರ್ಣ ಶ್ರದ್ಧೆಂದ ಎನ್ನನ್ನೇ ಸರ್ವಸ್ವ ಹೇದು ಅರ್ತು ಈ ಇಲ್ಲಿ ಹೇಳಿದ್ದರ ಹೇಳಿಪ್ಪಾಂಗೇ ಧರ್ಮದ ಅಮೃತವ ನಿಷ್ಠೆಂದ ಉಪಾಸನೆ ಮಾಡುತ್ತವೋ, ಅವ್ವು ಎನಗೆ ಅತ್ಯಂತ ಪ್ರೀತಿಪಾತ್ರರಾಗಿದ್ದವು.

ತಾತ್ಪರ್ಯ / ವಿವರಣೆ

ಅಕೇರಿಗೆ ಭಗವಂತ° ಹೇಳುತ್ತ° – ನಮ್ಮ ಭಕ್ತಿ ಹೇಂಗಿರೆಕು, ಭಕ್ತನಲ್ಲಿರೆಕಾದ ಗುಣಂಗೊ ಏವುದೆಲ್ಲ ಹೇಳ್ವ ಈ ಅಮೃತ (ಮೋಕ್ಷ)ಸಾಧನಾ ಧರ್ಮವ ಇಲ್ಲಿ ಹೇಳಿಪ್ಪಂತೆ ಅನುಸರುಸುವವು , ಉಪಾಸನೆ ಮಾಡುವವು, ಗುಣಧರ್ಮವ ಬೆಳೆಶಿಗೊಂಡವು, ಭಕ್ತಿಂದ ಆಚರಣಗೆ ತಪ್ಪ ಭಕ್ತರು ಭಗವಂತನ ಅತ್ಯಂತ ಪ್ರೀತಿಪಾತ್ರರಾವ್ತವು.

ಈ ಅಧ್ಯಾಯದ ಎರಡ್ನೇ ಶೋಕ (ಮಯ್ಯಾವೇಶ್ಯ ಮನೋ ಯೇ ಮಾಂ…” – ‘ಎನ್ನಲ್ಲಿ ಮನಸ್ಸಿನ ಸ್ಥಿರಗೊಳುಸಿ…’) ಎಂಬಲ್ಲಿಂದ “ಯೇ ತು ಧರ್ಮ್ಯಾಮೃತಮಿದಂ….” –  ‘ಧರ್ಮದ ಅಮೃತವಾಗಿಪ್ಪ ಇದರ..’ ವರೇಂಗೆ ಭಗವಂತ° ಭಗವಂತನತ್ರಂಗೆ ಹೋಪಲೆ ಬೇಕಾದ ಅಲೌಕಿಕ ಸೇವೆಯ ಪ್ರಕ್ರಿಯೆಯ ವಿವರಿಸಿದ್ದ°. ಇಂತಹ ಪ್ರಕ್ರಿಯೆಗೊ ಭಗವಂತಂಗೆ ಇಷ್ಟವಾದ್ದು, ಅಂತಹ ಭಕ್ತರು ಭಗವಂತಂಗೆ ಪ್ರೀತಿಪಾತ್ರರು.

ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ನಿರಾಕಾರ ಭಕ್ತಿಸೇವೆ (ನಿರ್ಗುಣ ಭಕ್ತಿ), ಸಕಾರ ಭಕ್ತಿಸೇವೆ (ಸಗುಣ ಭಕ್ತಿ) ಎರಡು ಮಾರ್ಗಂಗೊ. ಇದರಲ್ಲಿ ನಿರ್ಗುಣ ಭಕ್ತಿಂದ (ಶ್ತೀ ತತ್ವ ಸೇವೆ) ಸಗುಣ ಭಕ್ತಿ ಸೇವೆಯೇ ಸುಲಭವೂ ಶ್ರೇಷ್ಠವೂ ಹೇಳಿ ಭಗವಂತ° ವಿವರಿಸಿದ್ದ°.  ಮುಂದೆ ಭಕ್ತಿಸೇವೆಲಿ ಭಕ್ತನಲ್ಲಿರೆಕ್ಕಾದ ಗುಣಂಗಳ ಬಗ್ಗೆ ಮತ್ತೆ ವಿವರಿಸಿದ್ದ°.

ಹೀಂಗೆ ಆತ್ಮ ಸಾಕ್ಷಾತ್ಕಾರಕ್ಕೆ, ದೇವೋತ್ತಮ ಪರಮ ಪುರುಷನ ಸೇರುವದಕ್ಕೆ ಭಕ್ತಿಸೇವೆ ಒಂದೇ ಪರಿಪೂರ್ಣ ಮಾರ್ಗ ಹೇಳಿ ಭಗವಂತ° ಅರ್ಜುನಂಗೆ ವಿವರಿಸಿದ್ದಾಗಿ ಹೇಳಿದಲ್ಯಂಗೆ –

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಭಕ್ತಿಯೋಗೋ ನಾಮ ದ್ವಾದಶೋsಧ್ಯಾಯಃ ॥

ಇಲ್ಲಿಗೆ ಉಪನಿಷತ್ತೂ ಬ್ರಹ್ಮವಿದ್ಯೆಯೂ ಮತ್ತು ಯೋಗಶಾಸ್ತ್ರವೂ ಶ್ರೀಕೃಷ್ಣ-ಅರ್ಜುನರೊಳಾಣ ಸಂವಾದವೂ ಆದ ಶ್ರೀಮದ್ಭಗವದ್ಗೀತೇಲಿ ಭಕ್ತಿಯೋಗಃ ಹೇಳ್ವ ಹನ್ನೆರಡ್ನೇ ಅಧ್ಯಾಯ ಮುಗುದತ್ತು.

 

॥ ಗೀತಾಚಾರ್ಯ ಶ್ರೀಕೃಷ್ಣ ಭಗವಾನ್ ಕೀ…. ಜೈ ॥ ಗೀತಾ ಮಾತಾ ಕೀ …. ಜೈ ॥ ಗೋಪಾಲಕೃಷ್ಣ ಭಗವಾನ್ ಕೀ .. ಜೈ ॥

 

॥ ಶ್ರೀಕೃಷ್ಣಾರ್ಪಣಮಸ್ತು ॥

 

ಮುಂದೆ ಎಂತರ….. ?     ಬಪ್ಪವಾರ ನೋಡುವೋ° .

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 12 – SHLOKAS 11 – 20

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download : www.addkiosk.in ; www.giri.in

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಬೊಳುಂಬು ಮಾವ°
  ಗೋಪಾಲ್ ಬೊಳುಂಬು

  ದೇವರ ಪ್ರೀತಿಪಾತ್ರ ಭಕ್ತ ಹೇಂಗಿಪ್ಪವ, ಸೊಗಸಾದ ವಿವರಣೆ. ಚೆನ್ನೈಭಾವನ ಆಸಕ್ತಿ, ಸಹನೆ ಕಂಡು ಕೊಶಿ ಆತು. ಇದು ಬೇರೆಯವಕ್ಕೆ ಸ್ಪೂರ್ತಿಯಾಗಲಿ.

  [Reply]

  VA:F [1.9.22_1171]
  Rating: +1 (from 1 vote)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ತನಗೆ ಪ್ರಿಯನಾದ ಭಕ್ತ ಹೇಳಿರೆ ಆರು ಹೇಳ್ತರ ಇಲ್ಲಿ ತುಂಬಾ ವಿವರವಾಗಿ ಕೊಟ್ಟಿದವು.
  ಚೆನ್ನೈ ಭಾವಯ್ಯಂಗೆ ಧನ್ಯವಾದಂಗೊ

  [Reply]

  VA:F [1.9.22_1171]
  Rating: +1 (from 1 vote)
 3. ಕೋಳ್ಯೂರು ಕಿರಣ

  ತುಲ್ಯನಿಂದಾಸ್ತುತಿರ್ಮೌನೀ ಸಂತುಷ್ಟೋ ಯೇನ ಕೇನಚಿತ್ ಅನಿಕೇತಃ ಸ್ಥಿರಮತಿಃ ಭಕ್ತಿಮಾನ್ಮೇ ಪ್ರಿಯೋ ನರಃ ತುಂಬಾ ಅರ್ಥವತ್ತಾದ್ದು ಚೆನ್ನೈಭಾವಾ.. ನಿಂಗಳ ಬರಹ ವಿಸ್ತಾರವಾಗಿ ಎಲ್ಲವನ್ನೂ ಅತ್ಯಂತ ಲಾಯ್ಕಲ್ಲಿ ಕೊಡುತ್ತು. ಭಾರೀ ಫಷ್ಟಾಯುದು. ಧನ್ಯವಾದ.

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಚೆನ್ನೈ ಬಾವ,
  ಹರೇ ರಾಮು. ಕು೦ದಲ್ಲಿ ಮಾಣಿಕ್ಯವ ತ೦ದು ಕುರಿಸಿದಾ೦ಗೆ ಬಾರೀ ಲಾಯಕಾಯಿದು.

  ೧. ಅನಪೇಕ್ಷಃ ,೨. ಶುಚಿಃ ,೩. ದಕ್ಷಃ ೪. ಉದಾಸೀನಃ, ೫. ಗತವ್ಯಥಃ, ೬.ಸರ್ವಾರ೦ಭ ಪರಿತ್ಯಾಗಿ. । ಇದರ ವಿವರುಸಿದ ಬಗೆ ಕೊಶಿ ಕೊಟ್ಟತ್ತು!ಚೊಕ್ಕ ವಿವರಣೆ! ಅಷ್ಟೇ ಅಲ್ಲ —
  ಎಲ್ಲಿ ಒಳ್ಲೆತನ ಇದ್ದೋ ಅವರ ಒಡನಾಟ ಮಾಡಿಗೊ (ಮೈತ್ರಿ)।
  ದುಃಖವ ಕಂಡು ಕರಗೆಕು(ಕರುಣೆ), ।
  ಇನ್ನೊಬ್ಬರ ಸಂತೋಷವ ಕಂಡು ಸಂತೋಷ ಪಡೇಕು (ಮುದಿತ)।
  ಕೆಟ್ಟದ್ದರಿಂದ ದೂರ ಇರೇಕು (ಉಪೇಕ್ಷೆ).।
  ಮೂಲಭೂತವಾಗಿ ಶತ್ರು ಮಿತ್ರ ಹೇಳ್ವ ವಿಭಾಗ ಮಾಡೆಡ.
  ಎಲ್ಲರಲ್ಲಿಯೂ ಭಗವಂತನ ಕಂಡುಗೊಂಬಲೆ ಕಲಿ.ಲೌಕಿಕ ಶತ್ರು ಮಿತ್ರ ಭಾವನೆ ಬಿಡೆಕು.]
  __ ಸರಳ, ಸು೦ದರ ಸ್ವಾರಸ್ಯಪೂರ್ಣ ವಿವರಣೆ; ನಮೋನ್ನಮ; ಧನ್ಯವಾದ;ಬಪ್ಪ ವಾರ ಕಾ೦ಬೊ.°

  [Reply]

  VN:F [1.9.22_1171]
  Rating: +1 (from 1 vote)
 4. ಡಾಮಹೇಶಣ್ಣ

  ಇನ್ನೊಬ್ಬರೊಟ್ಟಿಂಗೆ ವ್ಯವಹರಿಸುವಗ ಈ ಶ್ಲೋಕಾರ್ಥಂಗ ಮನಸ್ಸಿಲ್ಲಿದ್ದರೆ ನಮ್ಮ ಜೀವನದ ಶೈಲಿ ಉತ್ತಮ ಅಕ್ಕು. ಸಾಫಲ್ಯವೂ ಸಿಕ್ಕುಗು.
  ಒಳ್ಳೆ ವಿಚಾರವ ಪ್ರಚುರಪಡುಸಿದ್ದಕ್ಕೆ ತುಂಬಾ ಧನ್ಯವಾದಂಗ ಚೆನ್ನೈಭಾವಂಗೆ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ° Reply:

  ಭಗವದ್ಗೀತೆಲಿ ಜೀವನಾದರ್ಶ ತತ್ವಂಗಳ ಸಾರಲ್ಪಟ್ಟಿದು. ಅದರ ಅರ್ಥೈಸಿ ಜೀವನವ ರೂಪಿಸಿಗೊಂಬದು ಮನುಷ್ಯನ ಕೈಲಿ ಇಪ್ಪದು ಅಲ್ಲದೋ. ಓದಿ ಪ್ರೋತ್ಸಾಹಿಸುತ್ತ ಇಪ್ಪ ಪ್ರತಿಯೊಬ್ಬಂಗೂ ಕೃತಜ್ಞತಪೂರ್ವಕ ನಮಸ್ಕಾರಂಗೊ. ಸರ್ವಂ ಕೃಷ್ಣಾರ್ಪಣಮಸ್ತು.

  ಬಂದುಗೊಂಡಿರಿ, ಶುದ್ದಿಯ ಓದಿ ಅಭಿಪ್ರಾಯ, ಸಲಹೆ ಕೊಡುತ್ತಲೇ ಇರಿ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಂಗ್ಳೂರ ಮಾಣಿವಿಜಯತ್ತೆಚೆನ್ನಬೆಟ್ಟಣ್ಣನೀರ್ಕಜೆ ಮಹೇಶಪೆಂಗಣ್ಣ°ಶಾಂತತ್ತೆಪುತ್ತೂರಿನ ಪುಟ್ಟಕ್ಕಅಡ್ಕತ್ತಿಮಾರುಮಾವ°ಮಾಷ್ಟ್ರುಮಾವ°ವೇಣಿಯಕ್ಕ°ಅಕ್ಷರದಣ್ಣವೇಣೂರಣ್ಣಅಜ್ಜಕಾನ ಭಾವಸರ್ಪಮಲೆ ಮಾವ°ಪುಟ್ಟಬಾವ°ಶೇಡಿಗುಮ್ಮೆ ಪುಳ್ಳಿರಾಜಣ್ಣದೊಡ್ಮನೆ ಭಾವಪವನಜಮಾವದೇವಸ್ಯ ಮಾಣಿಶುದ್ದಿಕ್ಕಾರ°ಮಾಲಕ್ಕ°ಪುಣಚ ಡಾಕ್ಟ್ರುಪ್ರಕಾಶಪ್ಪಚ್ಚಿಗಣೇಶ ಮಾವ°vreddhi
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ