Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 13 – ಶ್ಲೋಕಂಗೊ 00 – 06

ಬರದೋರು :   ಚೆನ್ನೈ ಬಾವ°    on   24/01/2013    2 ಒಪ್ಪಂಗೊ

ಚೆನ್ನೈ ಬಾವ°

ಭಗವದ್ಗೀತೆಯ ಹನ್ನೆರಡ್ನೇ ಅಧ್ಯಾಯದ ಸುರುವಾಣ ಶ್ಲೋಕಲ್ಲಿ ಅರ್ಜುನ° ಭಗವಂತನತ್ರೆ ಸಗುಣ ನಿರ್ಗುಣ ಉಪಾಸನೆಲಿ ಏವುದು ಶ್ರೇಷ್ಠ ಹೇದು ಪ್ರಶ್ನಿಸಿತ್ತಿದ್ದ°. ಅದಕ್ಕೆ ಎರಡ್ನೇ ಶ್ಲೋಕಲ್ಲಿ ಭಗವಂತ° ಸಗುಣೋಪಾಸಕನ ಶ್ರೇಷ್ಠತೆಯ ಸಂಕ್ಷೇಪವಾಗಿ ಸಮಾಧಾನ ಹೇಳಿದ°. ಮುಂದಾಣ ಶ್ಲೋಕಲ್ಲಿ ನಿರ್ಗುಣೋಪಾಸನೆಯ ಸ್ವರೂಪವ ಮತ್ತದರ ಪ್ರಯೋಜನವ ಹಾಂಗೇ ಅದರಲ್ಲಿಪ್ಪ ಕ್ಲಿಷ್ಟತೆಯ ೩,೪,೫ನೇ ಶ್ಲೋಕಲ್ಲಿ ನಿರೂಪಿಸಿದ್ದ°. ಮತ್ತೆ ಆರನೇ ಶ್ಲೋಕಂದ ಅಧ್ಯಾಯದ ಅಕೇರಿಯವರೇಂಗೆ ಸಗುಣೋಪಾಸನೆಯ ಮಹತ್ವ, ಫಲ, ಪ್ರಕಾರ, ಭಕ್ತನ ಲಕ್ಷಣಂಗಳ ವರ್ಣಿಸಿದ್ದ°. ಆದರೆ ನಿರ್ಗುಣ ತತ್ತ್ವದ ಸ್ವರೂಪ ಸಾಧನ-ಪ್ರಯೋಜನಂಗಳ ವಿಸ್ತಾರವಾಗಿ ವರ್ಣಿಸಿದ್ದನಿಲ್ಲೆ. ಹಾಂಗಾಗಿ ಆ ಕೊರತೆಯ ನೀಗುಸಲೆ ಈ ಅಧ್ಯಾಯ ಸುರುವಾವ್ತು –

ಶ್ರೀಕೃಷ್ಣಪರಮಾತ್ಮನೇ ನಮಃ ॥

ಶ್ರೀ ಮದ್ಭಗವದ್ಗೀತಾ

ಅಥತ್ರಯೋದಶೋsಧ್ಯಾಯಃ – ಕ್ಷೇತ್ರ-ಕ್ಷೇತ್ರಜ್ಞ-ವಿಭಾಗ-ಯೋಗಃ  – ಶ್ಲೋಕಾಃ 01 – 06

ಶ್ಲೋಕ

ಅರ್ಜುನ ಉವಾಚ

ಪ್ರಕೃತಿಂ ಪುರುಷಂ ಚೈವ ಕ್ಷೇತ್ರಂ ಕ್ಷೇತ್ರಜ್ಞಮೇವ ಚ ।
ಏತದ್ವೇದಿತುಮಿಚ್ಛಾಮಿ ಜ್ಞಾನಂ ಜ್ಞೇಯಂ ಚ ಕೇಶವ ॥00॥

ಪದವಿಭಾಗ

ಅರ್ಜುನಃ ಉವಾಚ

ಪ್ರಕೃತಿಮ್ ಪುರುಷಮ್ ಚ ಏವ ಕ್ಷೇತ್ರಮ್ ಕ್ಷೇತ್ರಜ್ಞಮ್ ಏವ ಚ । ಏತತ್ ವೇದಿತುಮ್ ಇಚ್ಛಾಮಿ ಜ್ಞಾನಮ್ ಜ್ಞೇಯಮ್ ಚ ಕೇಶವ ॥

ಅನ್ವಯ

ಅರ್ಜುನಃ ಉವಾಚ

ಹೇ ಕೇಶವ!, ಪ್ರಕೃತಿಂ ಪುರುಷಂ ಚ ಏವ ಕ್ಷೇತ್ರಂ ಕ್ಷೇತ್ರಜ್ಞಂ ಚ ಏವ ಜ್ಞಾನಂ ಜ್ಞೇಯಂ ಚ ಏತತ್ ವೇದಿತುಮ್ ಇಚ್ಛಾಮಿ ।

ಪ್ರತಿಪದಾರ್ಥ

ಅರ್ಜುನಃ ಉವಾಚ – ಅರ್ಜುನ° ಹೇಳಿದ°, ಹೇ ಕೇಶವ! ಏ ಕೇಶವ!, ಪ್ರಕೃತಿಮ್ – ಪ್ರಕೃತಿಯ, ಪುರುಷಮ್ – ಪುರುಷನ (ಭೋಕ್ತಾರನ), ಚ – ಕೂಡ, ಏವ – ಖಂಡಿತವಾಗಿಯೂ, ಕ್ಷೇತ್ರಮ್ – ಕ್ಷೇತ್ರವ, ಕ್ಷೇತ್ರಜ್ಞಮ್ – ಕ್ಷೇತ್ರವ ತಿಳುದೋನ, ಚ – ಕೂಡ, ಏವ – ಖಂಡಿತವಾಗಿಯೂ (ಪ್ರಕೃತಿಯನ್ನೂ ಭೋಕ್ತಾರನನ್ನೂ ಕ್ಷೇತ್ರವನ್ನೂ ಕ್ಷೇತ್ರ ತಿಳುದವನನ್ನೂ ಹೇಳಿ ಅರ್ಥ) ಜ್ಞಾನಮ್ – ಜ್ಞಾನವ, ಜ್ಞೇಯಮ್ – ಜ್ಞಾನದ ವಿಷಯವ, ಚ – ಕೂಡ, ಏತತ್ – ಈ (ಇದರ), ವೇದಿತುಮ್ – ತಿಳ್ಕೊಂಬಲೆ, ಇಚ್ಛಾಮಿ – ಇಚ್ಛಿಸುತ್ತೆ.

ಅನ್ವಯಾರ್ಥ

ಅರ್ಜುನ° ಹೇಳಿದ° –

ಏ ಕೇಶವ!, ಪ್ರಕೃತಿ, ಪುರುಷ°, ಕ್ಷ್ಗೇತ್ರ, ಕ್ಷೇತ್ರಜ್ಞ°, ಜ್ಞಾನ, ಜ್ಞಾನದ ವಿಷಯ (ಗುರಿ) – ಇದರ ತಿಳ್ಕೊಂಬಲೆ ಬಯಸುತ್ತೆ.

ತಾತ್ಪರ್ಯ / ವಿವರಣೆ

ವಾಸ್ತವವಾಗಿ ಈ ಶ್ಲೋಕ ಭಗವದ್ಗೀತೆಯ ಶ್ಲೋಕ ಅಲ್ಲ. ಪ್ರಾಚೀನ ಭಾಷ್ಯಕಾರಕ್ಕೊ ಆರೂ ಈ ಶ್ಲೋಕವ ಗೀತಾಶ್ಲೋಕವಾಗಿ ಪರಿಗಣಿಸಿದ್ದವಿಲ್ಲೆ. ಅನೇಕರ ಅಭಿಪ್ರಾಯ ಪ್ರಕಾರ ಇದೊಂದು ಪ್ರಕ್ಷಿಪ್ತಶ್ಲೋಕ. ಎಂತಕೆ ಹೇಳಿರೆ – ಗೀತೆಲಿ ಒಟ್ಟು ಏಳ್ನೂರು ಶ್ಲೋಕಂಗೊ. ಹಾಂಗಾಗಿ ಗೀತೆಯ ‘ಸಪ್ತಶತಿ’ ಹೇಳಿಯೂ ಹೇಳುತ್ತವು (‘ಸೂತ್ರಸಪ್ತಶತೀಪತೇ’- ವೇದವ್ಯಾಸ°, ಹೇಳಿ ವಾದಿರಾಜರು ಅವರ ಯುಕ್ತಿಮಲ್ಲಿಕಾಲ್ಲಿ ಸೂಚಿಸಿದ್ದಾಗಿ ಬನ್ನಂಜೆಯವರ ವ್ಯಾಖ್ಯಾನಲ್ಲಿ ಕಂಡುಬತ್ತು). ಇಂತಹ ಏಳ್ನೂರು ಶ್ಲೋಕಂಗಳಿಪ್ಪ ಭಗವದ್ಗೀತೆಲಿ ಈ ಮೇಗಾಣ ಶ್ಲೋಕವ ಸೇರ್ಸಿರೆ ಒಟ್ಟು ಏಳ್ನೂರ ಒಂದು ಶ್ಲೋಕವಾವ್ತು. ಮತ್ತಿನ್ನು ಇಲ್ಲಿ ಶ್ಲೋಕಲ್ಲಿ ಕೇಟದಕ್ಕೆ   ಈ ಹಿಂದಾಣ ಅಧ್ಯಾಯಂಗಳಲ್ಲಿ ನೇರಸಂಬಂಧವಾಗಿ ಎಲ್ಲಿಯೂ ಭಗವಂತ ಉಲ್ಲೇಖಿಸಿಪ್ಪಾಂಗೆ ಕಾಣುತ್ತಿಲ್ಲೆ. ಹಾಂಗಾಗಿ ಅರ್ಜುನ ಈ ರೀತಿಯಾಗಿ ನೇರ ಪ್ರಶ್ನೆ ಮಾಡಿಪ್ಪದಾಗಿ ಸಾಧ್ಯತೆ ಕಾಣುತ್ತಿಲ್ಲೆ. ಹಾಂಗಾಗಿ ಈ ಶ್ಲೋಕ ಪ್ರಕ್ಷಿಪ್ತಶ್ಲೋಕ ಹೇಳಿ ಪರಿಗಣಿಸಲ್ಪಟ್ಟಿದ್ದೇ ಹೊರತು ಗೀತೆಯ ಏಳ್ನೂರು ಶ್ಲೋಕಂಗಳಲ್ಲಿ ಅಂತರ್ಗತವಲ್ಲ.

ಪ್ರಕೃತಿ, ಪುರುಷ°, ಕ್ಷೇತ್ರ, ಕ್ಶೇತ್ರಜ್ಞ°, ಜ್ಞಾನ, ಜ್ಞಾನದ ಗುರಿ (ಜ್ಞೇಯ) ಇವುಗಳ ತಿಳಿವಲೆ ಬಯಸುತ್ತೆ ಹೇದು ಭಗವಂತನತ್ರೆ ಅರ್ಜುನನ ಪೀಠಿಕೆ ಪ್ರಸ್ತಾವನೆಯ ಮೂಲಕ ಈ ಅಧ್ಯಾಯ ಮುಂದೆ ಸುರುವಾವ್ತು.

ಶ್ಲೋಕ

ಶ್ರೀಭಗವಾನುವಾಚ

ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ ।
ಏತದ್ಯೋ ವೇತ್ತಿ ತಂ ಪ್ರಾಹುಃ ಕ್ಷೇತ್ರಜ್ಞ ಇತಿ ತದ್ವಿದಃ ॥೦೧॥

ಪದವಿಭಾಗ

ಶ್ರೀ ಭಗವಾನ್ ಉವಾಚ

ಇದಮ್ ಶರೀರಮ್ ಕೌಂತೇಯ ಕ್ಷೇತ್ರಮ್ ಇತಿ ಅಭಿಧೀಯತೇ । ಏತತ್ ಯಃ ವೇತ್ತಿ ತಮ್ ಪ್ರಾಹುಃ ಕ್ಷೇತ್ರಜ್ಞಃ ಇತಿ ತತ್-ವಿದಃ ॥

ಅನ್ವಯ

ಶ್ರೀ ಭಗವಾನ್ ಉವಾಚ

ಹೇ ಕೌಂತೇಯ!, ಇದಂ ಶರೀರಂ ಕ್ಷೇತ್ರಮ್ ಇತಿ ಅಭಿಧೀಯತೇ । ಯಃ ಏತತ್ ವೇತ್ತಿ ತಂ ಕ್ಷೇತ್ರಜ್ಞಃ ಇತಿ ತತ್-ವಿದಃ ಪ್ರಾಹುಃ ।

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ದೇವೋತ್ತಮ ಪರಮ ಪುರುಷ° ಹೇಳಿದ°, ಹೇ ಕೌಂತೇಯ! – ಏ ಕುಂತೀಪುತ್ರನೇ!, ಇದಮ್ ಶರೀರಮ್ – ಈ ಶರೀರವ, ಕ್ಷೇತ್ರಮ್ ಇತಿ – ಕ್ಷೇತ್ರವು ಹೇದು, ಅಭಿಧೀಯತೇ – ಹೇಳಲಾಯ್ದು. ಯಃ ಏತತ್ ವೇತ್ತಿ – ಯಾವಾತ° ಇದರ ತಿಳಿತ್ತನೋ, ತಮ್ – ಅವನ, ಕ್ಷೇತ್ರಜ್ಞಃ – ಕ್ಷೇತ್ರಜ್ಞ° (ಕ್ಷೇತ್ರವ ತಿಳುದೋನು) ಇತಿ – ಹೇದು, ತತ್-ವಿದಃ – ಇದರ ತಿಳುದೋರು, ಪ್ರಾಹುಃ – ಹೇಳಿದ್ದವು

ಅನ್ವಯಾರ್ಥ

ದೇವೋತ್ತಮ ಪರಮ ಪುರುಷ° ಹೇಳಿದ° –  ಈ ಭೌತಿಕ ಶರೀರವ ಕ್ಷೇತ್ರ ಹೇದು ಹೇಳಲಾಯ್ದು. ಯಾವಾತ° ಇದರ ತಿಳಿತ್ತನೋ, ಅವನ ಕ್ಷೇತ್ರಜ್ಞ° (ಕ್ಷೇತ್ರವ ತಿಳುದೋನು) ಹೇದು ಅದರ ತಿಳುದೋರು ಹೇಳಿದ್ದವು.

ತಾತ್ಪರ್ಯ/ವಿವರಣೆ

ಭಗವಂತ° ಹೇಳಿದ° – ಈ ದೇಹಕ್ಕೆ ಕ್ಷೇತ್ರ ಹೇಳಿಯೂ, ಈ ದೇಹವ ತಿಳುದವಂಗೆ ಕ್ಷೇತ್ರಜ್ಞ° ಹೇಳಿಯೂ ಹೇಳುವದು. ಬದ್ಧ ಆತ್ಮಕ್ಕೆ ಚಟುವಟಿಕೆಗಳ ಕ್ಷೇತ್ರ – ದೇಹ. ಬದ್ಧ ಆತ್ಮ ಐಹಿಕ ಅಸ್ತಿತ್ವಲ್ಲಿ ಸಿಕ್ಕಿಬಿದ್ದಿದು. ಅದು ಐಹಿಕ ಪ್ರಕೃತಿಯ ಮೇಲೆ ಎಜಮಾಂತಿಕೆ ಮಾಡ್ಳೆ ಎಷ್ಟರ ಮಟ್ಟಿಂಗೆ ಸಾಧ್ಯ ಆವ್ತೋ ಅಷ್ಟರ ಮಟ್ಟಿಂಗೆ ಚಟುವಟಿಕೆಯ ಕ್ಷೇತ್ರ ಅದಕ್ಕೆ ಲಭ್ಯ ಆಗಿರ್ತು. ಈ ಕ್ಷೇತ್ರವು ದೇಹ. ಹಾಂಗಾರೆ ದೇಹ ಹೇಳಿರೆಂತರ? – ದೇಹವು ಇಂದ್ರಿಯಂಗಳಿಂದ ಆದ್ದು. ಬದ್ಧ ಆತ್ಮ ಇಂದ್ರಿಯತೃಪ್ತಿಯನ್ನೂ ಬಯಸುತ್ತು. ಒಂದಿಷ್ಟು ತೃಪ್ತಿಯ ಪಡವಲೆ ಶಕ್ತಿ ಇದ್ದಮಟ್ಟಿಂಗೆ ಅದಕ್ಕೆ ದೇಹವ ಅಥವಾ ಚಟುವಟಿಕೆಗಳ ಕ್ಷೇತ್ರವ ಕೊಡಲ್ಪಡುತ್ತು. ಹಾಂಗಾಗಿ ದೇಹಕ್ಕೆ ‘ಕ್ಷೇತ್ರ’ – ಬದ್ಧ ಆತ್ಮದ ಚಟುವಟಿಕೆಗೊಕ್ಕೆ ‘ಬಯಲು’ ಹೇದು ಹೆಸರು. ದೇಹದೊಟ್ಟಿಂಗೆ ತನ್ನ ಗುರುತುಸಿಗೊಂಬವಂಗೆ ಕ್ಷೇತ್ರಜ್ಞ° (ಕ್ಷೇತ್ರವ ತಿಳ್ಕೊಂಡವ°) ಹೇದು ಹೇಳುತ್ತದು.

ಇನ್ನು ‘ಕ್ಷೇತ್ರ’ ಹೇಳ್ವ ಪದಕ್ಕೆ ಒಂದು ನಿಶ್ಚಿತ ಅರ್ಥ ಇಲ್ಲೆ. ಬಯಲು, ಜಾಗೆ, ಸ್ಥಳ, ಪುಣ್ಯಸ್ಥಳ ಹೇಳಿ ಸಾಂದರ್ಭಿಕ ಅರ್ಥಂಗೊ. ಒಟ್ಟಿಲ್ಲಿ ಒಂದು ಜಾಗೆ ಹೇಳಿ ಅರ್ಥ ಮಡಿಕ್ಕೊಂಬದು. ಭಗವಂತ° ಈ ಶ್ಲೋಕಲ್ಲಿ ‘ಕ್ಷೇತ್ರಮ್’ ಹೇಳ್ವ ಪದವ ಏವ ರೀತಿಲಿ ಅರ್ಥೈಸೆಕು ಹೇಳ್ವದರ ಸೂಚಿಸಿದ್ದ°. “ಇದಂ ಶರೀರಂ ಕ್ಷೇತ್ರಮಿತ್ಯಭಿಧೀಯತೇ” – ‘ಈ ಶರೀರವ ಕ್ಷೇತ್ರ ಹೇದು ಹೇಳಲ್ಪಟ್ಟಿದು’. ಇಲ್ಲಿ ಕ್ಷೇತ್ರ ಹೇಳಿರೆ ಜೀವ ವಾಸಮಾಡುವ ನೆಲೆಮನೆ, ಪಿಂಡಾಂಡಂದ ಬ್ರಹ್ಮಾಂಡದ  ವರೇಂಗೆ ಎಲ್ಲವೂ ಕ್ಷೇತ್ರ ಅಪ್ಪು. ಈ ಬ್ರಹ್ಮಾಂಡಕ್ಕೆ ‘ಕ್ಷೇತ್ರ’ ಮತ್ತೆ ‘ಶರೀರ’ ಹೇಳ್ವದು ಅನ್ವರ್ಥನಾಮ, ಇಂತಹ ಕ್ಷೇತ್ರವ ಯಾವಾತ° ಸಮಗ್ರವಾಗಿ ತಿಳುದ್ದನೋ, ಅವನ ಕ್ಷೇತ್ರಜ್ಞ° ಹೇದು ಹೇಳುವದು ಹೇದು ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದು.

ಕ್ಷೇತ್ರ, ಕ್ಷೇತ್ರಜ್ಞ° – ಇದನ್ನೇ ಇನ್ನೊಂದು ಆಯಾಮಂದ ರಜಾ ಚಿಂತುಸಿರೆ – ಬಾಲ್ಯಂದ ಮುಪ್ಪಿನವರೇಂಗೆ ದೇಹಲ್ಲಿ ಅನೇಕ ಬದಲಾವಣೆಗೊ ಅವ್ತು. ಇಷ್ಟಾದರೂ ತಾನು ಅದೇ ವ್ಯಕ್ತಿಯಾಗಿ ಉಳಿತ್ತೆ ಹೇಳಿ ಆರಾರು ಗ್ರೇಶಲೂ ಸಾಕು. ಹೀಂಗೆ ಕ್ಷೇತ್ರಜ್ಞಂಗೂ, ಕ್ಷೇತ್ರಕ್ಕೂ ವ್ಯತ್ಯಾಸ ಇದ್ದು. ಜೀವಂತ ಬದ್ಧ ಆತ್ಮ° ತಾನು ದೇಹಂದ ಭಿನ್ನ ಹೇದು ಅರ್ಥ ಮಾಡಿಗೊಂಗು. ಜೀವಿಯು ದೇಹದೊಳ ಇದ್ದ°, ದೇಹ ಶೈಶವಂದ ಬಾಲ್ಯ, ಕೌಮಾರ, ಯೌವ್ವನ, ಮುಪ್ಪು ಹೇದು ಬದಲಾವ್ತಾ ಇರ್ತು. ದೇಹದ ಒಡೆಯ° ಸ್ಪಷ್ಟವಾಗಿ ಕ್ಷೇತ್ರಜ್ಞ°. ಇನ್ನು ನಾವು ‘ಆನು ಸುಖವಾಗಿದ್ದೆ, ಆನು ಗೆಂಡು, ಹೆಣ್ಣು, ನಾಯಿ, ಪುಚ್ಚೆ .. ಹೇದೆಲ್ಲ ಗ್ರೇಶುತ್ತು. ಇದು ಕ್ಷೇತ್ರಜ್ಞನ ದೇಹದ ಹೆಸರು. ಆದರೆ ಕ್ಷೇತ್ರಜ್ಞ ದೇಹಂದ ಭಿನ್ನವಾಗಿಪ್ಪವ°. ನಾವು ನಮ್ಮ ವಸ್ತ್ರ ಮೊದಲಾದ ವಸ್ತುಗಳ ಉಪಯೋಗುಸುತ್ತಾರೂ, ಉಪಯೋಗುಸುವ ವಸ್ತುವಿಂದ ನಾವು ಬೇರೆಯೇ ಹೇದು ನವಗೆ ಗೊಂತಿದ್ದು. ಹಾಂಗೇ, ರಜಾ ಯೋಚನೆ ಮಾಡಿರೆ ನಾವು ದೇಹಂದ ಬೇರೆ ಹೇಳ್ವದು ಅರ್ಥ ಆವ್ತು. ಇದರ ತಿಳುದವ° ಆನು ನಿಂಗೊ ಕ್ಷೇತ್ರಜ್ಞ°, ಚಟುವಟಿಕೆಗಳ ಕ್ಷೇತ್ರವ ತಿಳುದೋರು. ಹಾಂಗಾಗಿ, ದೇಹವು ಕ್ಷೇತ್ರ (ಚಟುವಟಿಕೆಗಳ ವಲಯ), ದೇಹವ ಸಮಗ್ರವಾಗಿ ತಿಳುದವ° ಕ್ಷೇತ್ರಜ್ಞ°.

ಶ್ಲೋಕ

ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿ ಸರ್ವಕ್ಷೇತ್ರೇಷು ಭಾರತ ।
ಕ್ಷೇತ್ರಕ್ಷೇತ್ರಜ್ಞಯೋರ್ಜ್ಞಾನಂ ಯತ್ತಜ್ಞಾನಂ ಮತಂ ಮಮ ॥೦೨॥

ಪದವಿಭಾಗ

ಕ್ಷೇತ್ರಜ್ಞಮ್ ಚ ಅಪಿ ಮಾಮ್ ವಿದ್ಧಿ ಸರ್ವ-ಕ್ಷೇತ್ರೇಷು ಭಾರತ । ಕ್ಷೇತ್ರ-ಕ್ಷೇತ್ರಜ್ಞಯೋಃ ಜ್ಞಾನಮ್ ಯತ್ ತತ್ ಜ್ಞಾನಮ್ ಮತಮ್ ಮಮ ॥

ಅನ್ವಯ

ಹೇ ಭಾರತ!, ಸರ್ವ-ಕ್ಷೇತ್ರೇಷು ಕ್ಷೇತ್ರಜ್ಞಮ್ ಚ ಅಪಿ ಮಾಮ್ ವಿದ್ಧಿ । ಯತ್ ಕ್ಷೇತ್ರ-ಕ್ಷೇತ್ರಜ್ಞಯೋಃ ಜ್ಞಾನಮ್, ತತ್ ಜ್ಞಾನಮ್ (ಇತಿ) ಮಮ ಮತಮ್  (ಅಸ್ತಿ) ।

ಪ್ರತಿಪದಾರ್ಥ

ಹೇ ಭಾರತ! – ಹೇ ಭರತವಂಶಜನೇ!, ಸರ್ವ-ಕ್ಷೇತ್ರೇಷು – ಎಲ್ಲ ದೈಹಿಕ ಕ್ಷೇತ್ರಂಗಳಲ್ಲಿ, ಕ್ಷೇತ್ರಜ್ಞಮ್ (ಇತಿ) – ಕ್ಷೇತ್ರಜ್ಞ° (ಹೇದು), ಮಾಮ್ – ಎನ್ನ, ಅಪಿ – ಖಂಡಿತವಾಗಿಯೂ,  ಚ – ಕೂಡ,  ವಿದ್ಧಿ – ತಿಳುಕ್ಕೊ, ಯತ್ – ಏವ, ಕ್ಷೇತ್ರ-ಕ್ಷೇತ್ರಜ್ಞಯೋಃ – ಶರೀರ ಮತ್ತೆ ಶರೀರ ತಿಳುದೋರ, ಜ್ಞಾನಮ್ (ಇತಿ) – ನಿಜಜ್ಞಾನ ಹೇದು, ಮಮ ಮತಮ್ (ಅಸ್ತಿ) – ಎನ್ನ ಅಭಿಪ್ರಾಯ ಆಗಿದ್ದು.

ಅನ್ವಯಾರ್ಥ

ಏ ಭರತವಂಶ ಶ್ರೇಷ್ಠನಾದ ಅರ್ಜುನ!, ಎಲ್ಲ ದೇಹಂಗಳಲ್ಲಿ ಕೂಡ ನಿಶ್ಚಯವಾಗಿಯೂ ಕ್ಷೇತ್ರಜ್ಞ° ಆಗಿಪ್ಪವನು ಆನು ಹೇದು ತಿಳುಕ್ಕೊ. ಏವ ಶರೀರ ಮತ್ತು ಶರೀರವ ತಿಳುದೋನ ಬಗ್ಗೆ ತಿಳಿವಲೆ ಇದ್ದೋ ಅದುವೇ ಜ್ಞಾನ (ಕ್ಷೇತ್ರ-ಕ್ಷೇತ್ರಜ್ಞರ ಬಗ್ಗೆ ತಿಳಿವದೇ ಜ್ಞಾನ ) ಹೇಳ್ವದು ಎನ್ನ ಅಭಿಪ್ರಾಯ ಆಗಿದ್ದು.

ತಾತ್ಪರ್ಯ / ವಿವರಣೆ

ಕ್ಷೇತ್ರ ಮತ್ತು ಕ್ಷೇತ್ರಜ್ಞರ ವಿಷಯವ ಬಹುಸೂಕ್ಷ್ಮವಾಗಿ ಅಧ್ಯಯನ ಮಾಡಿ ತಿಳ್ಕೊಂಬದೇ ‘ಜ್ಞಾನ’ ಹೇದು ಹೇಳ್ವದು. ವಿಶ್ವದ ಸಮಸ್ತವುಗಳಲ್ಲಿ ಭಗವಂತ° ಸರ್ವವ್ಯಾಪಿ, ಸರ್ವಗತ°, ಸರ್ವಂತರ್ಯಾಮಿ, ವಿಶ್ವವ್ಯಾಪಿ. ಒಳವೂ ಹೆರವೂ ತುಂಬಿಪ್ಪ ಭಗವಂತನೇ ಎಲ್ಲ ಕ್ಷೇತ್ರಂಗಳಲ್ಲಿ (ಶರೀರಂಗಳಲ್ಲಿ) ಕ್ಷೇತ್ರಜ್ಞ°. ಜೀವ ಕೇವಲ ‘ಕ್ಷೇತ್ರಸ್ಥಃ’. “ಕ್ಷೇತ್ರ-ಕ್ಷೇತ್ರಜ್ಞಯೋರ್ಜ್ಞಾನಮ್ ಯತ್ ತತ್-ಜ್ಞಾನಮ್”  – ಶರೀರ ಮತ್ತೆ ಶರೀರವ ತಿಳುದೋನ ತಿಳಿವದು ಏವುದಿದ್ದೋ ಅದು ‘ಜ್ಞಾನ’.  ಭಗವಂತ° ಸರ್ವಗತ° ಹೇದು ಆದಮತ್ತೆ, ಆ ಭಗವಂತನ ತಿಳಿವದೇ ‘ಜ್ಞಾನ’ ಹೇಳಿ ಆತು. ಭಗವಂತ ವಿಶ್ವವ್ಯಾಪಿ. ಸಮಸ್ತ ವಿಶ್ವವೇ ಭಗವಂತ°. ಹಾಂಗಾಗಿ ಸಮಸ್ತ ವಿಶ್ವಲ್ಲಿ ತುಂಬಿಪ್ಪ ಜ್ಞಾನ (ವಿಶ್ವಜ್ಞಾನ) ಹೇಳಿರೆ ಇಡೀ ವಿಶ್ವಲ್ಲಿ ತುಂಬಿಪ್ಪ ಭಗವಂತನ ತಿಳಿವದು – ‘ಜ್ಞಾನ’. ಈ ವಿಶ್ವದೊಳ (ಇಡೀ ವಿಶ್ವವ ಶರೀರ ಹೇದು ತಿಳ್ಕೊಂಡು) ನಾವು ಹೇಂಗಿದ್ದು, ಈ ವಿಶ್ವ ನವಗೆ ಹೇಂಗೆ ಬಂಧಕವಾಗಿದ್ದು, ಈ ಬಂಧನವ ಕಳಚ್ಚಿ ಆ ವಿಶ್ವಾತ್ಮನಾದ ಭಗವಂತನ ನಾವು ಸೇರುವದು ಹೇಂಗೆ ಹೇದು ತಿಳಿವದೇ – ‘ಜ್ಞಾನ’. ಮದಲಾಣ ಅಧ್ಯಾಯಲ್ಲಿ ಹೇಳಿಪ್ಪಂತೆ ನಾವು ಹದಿನೈದು ಬೇಲಿಗಳ ಸೆರೆಮನೆಲಿ ಇದ್ದು. ಆದರೆ ಇದು ಶಿಕ್ಷೆ ಅಲ್ಲ, ಶಿಕ್ಷಣ. ಈ ಬಂಧನಂದ ಪಾರಾಯೇಕು ಹೇಳಿ ಆದರೆ ಭವಮೋಚಕನಾದ ಆ ಕ್ಷೇತ್ರಜ್ಞನ ನಾವು ತಿಳಿಯೆಕು. ಈ ಎಚ್ಚರವೇ ನಿಜವಾದ ಜ್ಞಾನ ಹೇಳಿ ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದು.

ಶ್ಲೋಕ

ತತ್ ಕ್ಷೇತ್ರಂ ಯಚ್ಚ ಯಾದೃಕ್ ಚ ಯದ್ವಿಕಾರಿ ಯತಶ್ಚ ಯತ್ ।
ಸ ಚ ಯೋ ಯತ್ ಪ್ರಭಾವಶ್ಚ ತತ್ಸಮಾಸೇನ ಮೇ ಶೃಣು ॥೩॥

ಪದವಿಭಾಗ

ತತ್ ಕ್ಷೇತ್ರಮ್ ಯತ್ ಚ ಯಾದೃಕ್ ಚ ಯತ್ ವಿಕಾರಿ ಯತಃ ಚ ಯತ್ । ಸಃ ಚ ಯಃ ಯತ್ ಪ್ರಭಾವಃ ಚ ತತ್ ಸಮಾಸೇನ ಮೇ ಶೃಣು ॥

ಅನ್ವಯ

ತತ್ ಕ್ಷೇತ್ರಂ ಯತ್ ಚ, ಯಾದೃಕ್ ಚ, ಯತ್ ವಿಕಾರಿ (ಚ), ಯತಃ  ಚ ಯತ್, ಸಃ ಚ ಯಃ, ಯತ್ ಪ್ರಭಾವಃ ಚ (ಅಸ್ತಿ) ತತ್, (ತ್ವಂ) ಸಮಾಸೇನ ಮೇ ಶೃಣು ।

ಪ್ರತಿಪದಾರ್ಥ

ತತ್ ಕ್ಷೇತ್ರಮ್ – ಆ ಕ್ಷೇತ್ರ, ಯತ್ – ಏವುದು, ಚ – ಕೂಡ, ಯಾದೃಕ್ – ಹೇಂಗಿಪ್ಪದು/ಸ್ವರೂಪ, ಚ – ಕೂಡ, ಯತ್ ವಿಕಾರಿ – ಏವುದರಿಂದ ಬದಲಾವಣೆಗೊ ಇಪ್ಪದು (ಚ – ಕೂಡ), ಯತಃ – ಏವುದರಿಂದ, ಚ – ಕೂಡ, ಯತ್ – ಹೇಂಗೆ, ಸಃ – ಅವ°, ಚ – ಕೂಡ, ಯಃ – ಆರು, ಯತ್ ಪ್ರಭಾವಃ – ಯಾವುದರ ಪ್ರಭಾವ, ಚ – ಕೂಡ, (ಅಸ್ತಿ – ಇದ್ದು), ತತ್ – ಅದರ, (ತ್ವಮ್ – ನೀನು), ಸಮಾಸೇನ – ಸಾರಾಂಶಂದ, ಮೇ – ಎನ್ನ, ಶೃಣು – ಕೇಳು.

ಅನ್ವಯಾರ್ಥ

ಆ ಕ್ಷೇತ್ರ ಏವುದು, ಮತ್ತೆ ಅದರ ಸ್ವರೂಪ ಎಂತರ,  ಮತ್ತೆ ಅದರಲ್ಲಿ ಅಪ್ಪ ಬದಲಾವಣೆಗೊ (ಅದರ ವಿಕಾರಂಗೊ), ಅದು ಹೇಂಗೆ ಉಂಟಾತು (ಅದರ ಪ್ರೇರಕ ಶಕ್ತಿ ಆರು),  ಅವ°  (ಕ್ಷೇತ್ರಜ್ಞ°) ಆರು/ಎಂತವ°, ಮತ್ತೆ ಅವನ ಪ್ರಭಾವ/ಹಿರಿಮೆ ಎಂತರ ಏವುದು ಹೇಳ್ವದರ ಕುರಿತಾಗಿ ಸಂಕ್ಷಿಪ್ತವಾದ ವಿವರಣೆಯ ಮೂಲಕ ಎನ್ನತ್ರಂದ ಕೇಳು.

ತಾತ್ಪರ್ಯ/ವಿವರಣೆ

ಮದಲಾಣ ಶ್ಲೋಕಲ್ಲಿ ಭಗವಂತ° ಕ್ಶೇತ್ರ-ಕ್ಷೇತ್ರಜ್ಞ ಹೇಳ್ವ ಎರಡು ವಿಷಯಂಗಳ ಎತ್ತಿ ತೋರ್ಸಿದ್ದ°.  ಶರೀರವೇ ಕ್ಷೇತ್ರ ಹೇದೂ, ಅದರ ತಿಳುದೋನೇ ಕ್ಷೇತ್ರಜ್ಞ° ಹೇದೂ ಮತ್ತೆ ಸೂಚಿಸಿದ್ದ°. ಮತ್ತೆ ಮುಂದುವರ್ಸಿ ಸರ್ವಕ್ಷೇತ್ರಂಗಳಲ್ಲಿ ಕ್ಷೇತ್ರಜ್ಞನಾಗಿ ಇಪ್ಪದು ಭಗವಂತನೇ, ಹಾಂಗೇ, ಕ್ಷೇತ್ರ-ಕ್ಷೇತ್ರಜ್ಞರ ಬಗ್ಗೆ ತಿಳಿವದೇ ಜ್ಞಾನ ಹೇದೂ ಮತ್ತಾಣ ಶ್ಲೋಕಲ್ಲಿ ಪ್ರಸ್ತಾಪಿಸಿದ್ದ°. ಅದೇ ವಿಷಯವ ಮತ್ತೆ ಮುಂದುವರ್ಸಿಗೊಂಡು ಭಗವಂತ° ಇಲ್ಲಿ ಹೇಳುತ್ತ° – “ಮದಾಲು ಕ್ಷೇತ್ರ (ಕ್ಷೇತ್ರ=ಶರೀರ=ಬ್ರಹ್ಮಾಂಡ ಮತ್ತೆ ಪಿಂಡಾಂಡ) ಹೇದರೆ ಎಂತರ, ಅದು ಏವುದರಿಂದ ನಿರ್ಮಾಣ ಆತು, ಅದರ ಗುಣಧರ್ಮಂಗೊ (ಸ್ವರೂಪ) ಎಂತರ, ಮತ್ತೆ ಅದು ಏವ್ಯಾವ ರೀತಿ ಏವ್ಯಾವ ಕಾರಣಂಗಳಿಂದ/ಆರಿಂದಾಗಿ/ಏವ ಪ್ರಭಾವಂದಲಾಗಿ ರೂಪಾಂತರ (ಬದಲಾವಣೆ/ವಿಕಾರ) ಇವೆಲ್ಲವ ಸಂಕ್ಷೇಪ್ತವಾಗಿ ಎನ್ನತ್ರಂದ ಕೇಳು”.

ಇದೇ ಶ್ಲೋಕದ ತಾತ್ಪರ್ಯವ ಇನ್ನೂ ಸರಳವಾಗಿ ವಿವೇಚಿಸಿರೆ, ಕ್ಷೇತ್ರ (ಶರೀರ/ದೇಹ), ಕ್ಷೇತ್ರವ ತಿಳುದವ (ಕ್ಷೇತ್ರಜ್ಞ) ಇವುಗಳ ಸಹಜಸ್ವರೂಪದ ಬಗ್ಗೆ ರಜಾ ಮತ್ತೂ ವಿವರವಾಗಿ ಹೇಳ್ಳೆ ಭಗವಂತ° ಇಲ್ಲಿ ಉದ್ಯುಕ್ತನಾಯ್ದ. ಹಾಂಗಾಗಿ, ದೇಹ ಹೇಳಿರೆ ಎಂತರ, ಅದರ ರಚನೆ ಹೇಂಗೆ (ಹೇಂಗೆ ಉಂಟಾತು), ಆರ ನಿಯಂತ್ರಣಲ್ಲಿ ಈ ದೇಹ ಕೆಲಸ ಮಾಡುತ್ತು, ದೇಹಲ್ಲಿ ಬದಲಾವಣೆಗೊ ಹೇಂಗೆ ಉಂಟಾವ್ತು, ಅದರ ಮೂಲ ಎಂತರ, ಅದರ ಕಾರಣ ಎಂತರ ಹಾಂಗೇ ವ್ಯಕ್ತಿಗತ ಆತ್ಮನ (ಕ್ಷೇತ್ರಜ್ಞ) ಪರಮ ಗುರಿ ಎಂತರ, ಆತ್ಮದ ವಾಸ್ತವಿಕ ರೂಪ ಎಂತರ ಇತ್ಯಾದಿಗಳ ತಿಳ್ಕೊಳ್ಳೆಕು ಹೇದು ಭಗವಂತ° ಮುಂದುವರ್ಸುತ್ತ°. ಇನ್ನು, ಇಲ್ಲಿ ಕ್ಷೇತ್ರ ಹೇದರೆ ದೇಹ ಹೇಳಿಯೂ ಅದೇ ಸಮಯಲ್ಲಿ ಇಡೀ ವಿಶ್ವವ ದೇಹ ಹೇಳಿಯೂ, ಹಾಂಗೇ ಕ್ಷೇತ್ರಜ್ಞ ಹೇದರೆ ದೇಹಲ್ಲಿ ಆತ್ಮ ಹೇಳಿಯೂ, ವಿಶ್ವವೆಂಬ ದೇಹಲ್ಲಿ ಪರಮಾತ್ಮ ಹೇಳಿಯೂ ತಿಳ್ಕೊಂಡು ಮುಂದಾಣ ಭಾಗಂಗಳ ವಿವೇಚನೆ ಮಾಡಿ ಅರ್ಥೈಸೆಕ್ಕಾಗಿದ್ದು.

ಶ್ಲೋಕ

ಋಷಿಭಿರ್ಬಹುಧಾ ಗೀತಂ ಛಂದೋಭಿರ್ವಿವಿಧೈಃ ಪೃಥಕ್ ।
ಬ್ರಹ್ಮಸೂತ್ರಪದೈಶ್ಚೈವ ಹೇತುಮದ್ಭಿರ್ವಿನಿಶ್ಚಿತೈಃ ॥೪॥

ಪದವಿಭಾಗ

ಋಷಿಭಿಃ ಬಹುಧಾ ಗೀತಮ್ ಛಂದೋಭಿಃ ವಿವಿಧೈಃ ಪೃಥಕ್ । ಬ್ರಹ್ಮ-ಸೂತ್ರ-ಪದೈಃ ಚ ಏವ ಹೇತುಮದ್ಭಿಃ ವಿನಿಶ್ಚಿತೈಃ ॥

ಅನ್ವಯ

(ಇದಂ ಜ್ಞಾನಮ್), ಋಷಿಭಿಃ ಬಹುಧಾ, (ತಥಾ) ವಿವಿಧೈಃ ಛಂದೋಭಿಃ ಪೃಥಕ್ ಹೇತುಮದ್ಭಿಃ ವಿನಿಶ್ಚಿತೈಃ ಬ್ರಹ್ಮ-ಸೂತ್ರ-ಪದೈಃ ಚ ಗೀತಮ್ ಏವ ।

ಪ್ರತಿಪದಾರ್ಥ

(ಇದಂ ಜ್ಞಾನಮ್ – ಈ ಜ್ಞಾನವ), ಋಷಿಭಿಃ – ಜ್ಞಾನಿ ಋಷಿಗಳಿಂದ,  ಬಹುಧಾ – ಹಲವು ರೀತಿಲಿ, (ತಥಾ – ಹಾಂಗೇ), ವಿವಿಧೈಃ ಛಂದೋಭಿಃ – ವಿವಿಧ ವೇದಮಂತ್ರಂಗಳಿಂದ, ಪೃಥಕ್ – ಬೇರೆಬೇರೆಯಾಗಿ, ಹೇತುಮದ್ಭಿಃ – ಕಾರಣಪರಿಣಾಮಂಗಳೊಟ್ಟಿಂಗೆ, ವಿನಿಶ್ಚಿತೈಃ – ನಿಶ್ಚಿತವಾಗಿ, ಬ್ರಹ್ಮ-ಸೂತ್ರ-ಪದೈಃ – ವೇದಾಂತಸೂತ್ರಪದಗಳಿಂದ, ಚ – ಕೂಡ, ಗೀತಮ್ – ವರ್ಣಿತವಾಗಿದ್ದು (ಹಾಡಿದ್ದು), ಏವ – ಖಂಡಿತವಾಗಿಯೂ.

ಅನ್ವಯಾರ್ಥ

(ಕ್ಷೇತ್ರ-ಕ್ಷೇತ್ರಜ್ಞ° ಈ ಜ್ಞಾನವ) ಅನೇಕ ಋಷಿಗಳಿಂದ ಬೇರೆ ಬೇರೆ ವೈದಿಕ ಬರಹಂಗಳಲ್ಲಿ ಮತ್ತೆ ವೇದಾಂತಸೂತ್ರಲ್ಲಿ ಕಾರ್ಯಕಾರಣ ತರ್ಕಸಹಿತವಾಗಿ ನಿರೂಪಿಸಿದ್ದು (ವರ್ಣಿಸಿದ್ದು) ಇದ್ದು.

ತಾತ್ಪರ್ಯ/ವಿವರಣೆ

ಕ್ಷೇತ್ರ-ಕ್ಷೇತ್ರಜ್ಞರ ಕುರಿತಾಗಿ ಅನಾದಿ ಕಾಲಂದ ಬೇರೆ ಬೇರೆ ಋಷಿಗಳ ಅಭಿಪ್ರಾಯಕ್ಕನುಗುಣವಾಗಿ ಬೇರೆ ಬೇರೆ ದಿಕ್ಕೆ ಪ್ರಪ್ರತ್ಯೇಕವಾಗಿ ವರ್ಣಿಸಿದ್ದವು. ಪ್ರಮಾಣ ಹೇದು ಸ್ವೀಕರಿಸಲ್ಪಡುವ ವೈದಿಕ ಸಾಹಿತ್ಯಲ್ಲಿಯೂ (ವೇದಾಂತ ಸೂತ್ರಲ್ಲಿಯೂ) ಈ ಬಗ್ಗೆ ಬೇಕಾಷ್ಟು ವಿವರಣೆಗೊ ನಿರೂಪಿಸಲ್ಪಟ್ಟಿದು. ಇವುಗಳಲ್ಲಿ ಉಲ್ಲೇಖಿಸಲ್ಪಟ್ಟ ಈ ವಿವರಣೆಗೊ ಅರ್ಥೈಸಿಗೊಂಬಲೆ ಎಲ್ಲರಿಂದಲೂ ಸಾಧ್ಯವಿಲ್ಲೆ. ಅದು ಅವರವರ ಜ್ಞಾನದ ಮಟ್ಟಕ್ಕೆ ಎಟಕುವಂಥದ್ದು. ಹಾಂಗಾಗಿ ಈ ಜ್ಞಾನವ ಸರಳ ರೀತಿಲಿ ಎಲ್ಲೋರಿಂಗೂ ಅರ್ಥ ಅಪ್ಪ ಹಾಂಗೆ ವಿವರುಸಲೆ ದೇವೋತ್ತಮ ಪರಮ ಪುರುಷ°, ಸರ್ವೋತ್ತಮ° ಭಗವಂತನೇ ಅತ್ಯುನ್ನತ ಅಧಿಕಾರಿ (ಸಮರ್ಥ°). ಹಾಂಗಾಗಿ ಮದಲಾಣ ಶ್ಲೋಕಲ್ಲಿ ಭಗವಂತ° ಹೇಳಿದ್ದದು – ತತ್ ಸಮಾಸೇನ ಮೇ ಶೃಣು’ – ‘ಆ ವಿವರವ ಸಂಕ್ಷಿಪ್ತರೂಪಲ್ಲಿ ಎನ್ನಂದ ಕೇಳು’.

ಶ್ಲೋಕ

ಮಹಾಭೂತಾನ್ಯಹಂಕಾರೋ ಬುದ್ಧಿರವ್ಯಕ್ತಮೇವ ಚ ।
ಇಂದ್ರಿಯಾಣಿ ದಶೈಕಂ ಚ ಪಂಚ ಚೇಂದ್ರಿಯಗೋಚರಾಃ ॥೫॥

ಇಚ್ಛಾ ದ್ವೇಷಃ ಸುಖಂ ದುಃಖಂ ಸಂಘಾತಶ್ಚೇತನಾ ಧೃತಿಃ ।
ಏತತ್ ಕ್ಷೇತ್ರಂ ಸಮಾಸೇನ ಸವಿಕಾರಮುದಾಹೃತಮ್ ॥೬॥

ಪದವಿಭಾಗ

ಮಹಾಭೂತಾನಿ ಅಹಂಕಾರಃ ಬುದ್ಧಿಃ ಅವ್ಯಕ್ತಮ್ ಏವ ಚ । ಇಂದ್ರಿಯಾಣಿ ದಶ-ಏಕಮ್ ಚ ಪಂಚ ಚ ಇಂದ್ರಿಯ-ಗೋಚರಾಃ ॥

ಇಚ್ಛಾ ದ್ವೇಷಃ ಸುಖಮ್ ದುಃಖಮ್ ಸಂಘಾತಃ ಚೇತನಾ ಧೃತಿಃ । ಏತತ್ ಕ್ಷೇತ್ರಮ್ ಸಮಾಸೇನ ಸವಿಕಾರಮ್ ಉದಾಹೃತಮ್ ॥

ಅನ್ವಯ

ಮಹಾ-ಭೂತಾನಿ, ಅಹಂಕಾರಃ, ಬುದ್ಧಿಃ, ಅವ್ಯಕ್ತಮ್ ಏವ ಚ, ದಶ ಇಂದ್ರಿಯಾಣಿ ಚ, ಏಕಮ್ (ಮನಃ), ಇಂದ್ರಿಯ-ಗೋಚರಾಃ ಪಂಚ ಚ,

ಇಚ್ಛಾ, ದ್ವೇಷಃ, ಸುಖಮ್, ದುಃಖಮ್, ಸಂಘಾತಃ, ಚೇತನಾ, ಧೃತಿಃ, ಏತತ್ ಸವಿಕಾರಂ ಕ್ಷೇತ್ರಂ (ಮಯಾ) ಸಮಾಸೇನ ಉದಾಹೃತಮ್ ।

ಪ್ರತಿಪದಾರ್ಥ

ಮಹಾ-ಭೂತಾನಿ – ಪಂಚಮಹಾಭೂತಂಗೊ, ಅಹಂಕಾರಃ – ಅಹಂಕಾರ, ಬುದ್ಧಿಃ – ಬುದ್ಧಿಶಕ್ತಿ, ಅವ್ಯಕ್ತಮ್ – ವ್ಯಕ್ತವಾಗದ್ದು, ಏವ – ಖಂಡಿತವಾಗಿಯೂ, ಚ – ಕೂಡ, ದಶ ಇಂದ್ರಿಯಾಣಿ – ಹತ್ತು ಇಂದ್ರಿಯಂಗೊ, ಚ – ಕೂಡ, ಏಕಮ್ – ಒಂದು, (ಮನಃ – ಮನಸ್ಸು), ಇಂದ್ರಿಯ-ಗೋಚರಾಃ – ಇಂದ್ರಿಯ ವಿಷಯಂಗೊ, ಪಂಚ – ಐದು, ಚ – ಕೂಡ

ಇಚ್ಛಾ – ಅಪೇಕ್ಷೆ (ಇಚ್ಛೆ/ಬಯಕೆ), ದ್ವೇಷಃ – ಹಗೆ, ಸುಖಮ್ – ಸುಖ, ದುಃಖಮ್ – ದುಃಖ, ಸಂಘಾತಃ – ಸಮಷ್ಟಿ, ಚೇತನಾ – ಜೀವ ಚಿಹ್ನೆಗೊ, ಧೃತಿಃ – ದೃಢನಿಶ್ಚಯ, ಏತತ್ – ಇವೆಲ್ಲವು, ಸವಿಕಾರಮ್ – ಪರಸ್ಪರ ಕ್ರಿಯೆಗೊಗಳಿಂದ, ಕ್ಷೇತ್ರಮ್ – ಕ್ಷೇತ್ರವು, (ಮಯಾ – ಎನ್ನಿಂದ), ಸಮಾಸೇನ – ಸಾರಾಂಶಲ್ಲಿ, ಉದಾಹೃತಮ್ – ಉದಾಹರಿಸಿದ್ದು.

ಅನ್ವಯಾರ್ಥ

ಪಂಚಮಹಾಭೂತಂಗೊ, ಅಹಂಕಾರ, ಬುದ್ಧಿ, ಅವ್ಯಕ್ತವಾದ್ದು, ಹತ್ತು ಇಂದ್ರಿಯಂಗೊ ಮತ್ತೆ ಮನಸ್ಸು (ಹೀಂಗೆ ದಶೈಕಂ = ಹನ್ನೊಂದು), ಐದು ಇಂದ್ರಿಯ ವಿಷಯಂಗೊ, ಬಯಕೆ, ದ್ವೇಷ, ಸುಖ, ದುಃಖ, ಸಮಷ್ಟಿ (ಒಟ್ಟು), ಚೇತನ, ಧೃತಿ – ಸಾರಾಂಶವಾಗಿ (ಸಂಕ್ಷಿಪ್ತವಾಗಿ) ಇವುಗಳ ಕ್ಷೇತ್ರ ಮತ್ತೆ ಅದರ ಪರಸ್ಪರ ಪ್ರತಿಕ್ರಿಯೆಗೊ ಹೇದು ಎನ್ನಿಂದ ಉದಾಹರಿಸಿದ್ದು.

ತಾತ್ಪರ್ಯ / ವಿವರಣೆ

ಶರೀರಲ್ಲಿಪ್ಪ ಜೀವಾತ್ಮ ಒಟ್ಟು ಇಪ್ಪತ್ತನಾಲ್ಕು ತತ್ವಂಗಳಿಂದ (ಚತುರ್ವಿಂಶತಿ ತತ್ವಾತ್ಮಕಃ) ಕೂಡಿಪ್ಪದು. ಅದೇವುದು ಹೇಳಿರೆ – ಪಂಚಮಹಾಭೂತಂಗೊ  (5) +  ಅಹಂಕಾರತತ್ವ (ಬ್ರಹ್ಮವಾಯು ಮತ್ತೆ ಶಿವ) + ಬುದ್ಧಿತತ್ವ (ಪಾರ್ವತಿ) + ಮೂಲಪ್ರಕೃತಿ (ಶ್ರೀ) (3), + ಐದು ಕರ್ಮೇಂದ್ರಿಯಂಗೊ (5) + ಐದು ಜ್ಞಾನೇಂದ್ರಿಯಂಗೊ (5) + ಮನಸ್ತತ್ವ [5 ಕರ್ಮೇಂದ್ರಿಯಂಗೊ + 5 ಜ್ಞಾನೇಂದ್ರಿಯಂಗೊ  = 10 ಇಂದ್ರಿಯಂಗೊ ಮತ್ತೆ ಹನ್ನೊಂದನೇದು ಮನಸ್ಸು] (ಇಂದ್ರ, ಕಾಮ, ಅನಿರುದ್ಧ) (1) + ಶಬ್ದಾದಿ ಪಂಚಗುಣಂಗೊ (5) = ಒಟ್ಟು 24.

1 – 5 : ಪಂಚಮಹಾಭೂತಂಗೊ –  ಮಣ್ಣು (ಪೃಥಿವೀ), ನೀರು/ಆಪಃ (ವರುಣ), ತೇಜಃ/ಕಿಚ್ಚು (ಅಗ್ನಿ), ಗಾಳಿ (ವಾಯುಪುತ್ರ ಮರೀಚಿ), ಆಕಾಶ (ಅವಕಾಶ ದೇವತೆ, ವಿಘ್ನನಾಶ-ವಿನಾಯಕ)

6 : ಅಹಂಕಾರತತ್ವ (ಬ್ರಹ್ಮವಾಯು, ಶಿವ),

7 : ಬುದ್ಧಿತತ್ವ (ಪಾರ್ವತೀ),

8 : ಮೂಲಪ್ರಕೃತಿ (ಶ್ರೀ),

9 – 18 : ದಶ ಇಂದ್ರಿಯಂಗೊ – ೫ ಕರ್ಮೇಂದ್ರಿಯಂಗೊ + ೫ ಜ್ಞಾನೇಂದ್ರಿಯಂಗೊ,

೫ ಕರ್ಮೇಂದ್ರಿಯಂಗೊ = ವಾಕ್, ಪಾಣಿ, ಪಾದ, ಪಾಯು, ಉಪಸ್ಥ [ಬಾಯಿ (ಅಗ್ನಿ), ಕೈಗೊ (ವಾಯುಪುತ್ರರಿಬ್ರು), ಕಾಲುಗೊ (ಇಂದ್ರಪುತ್ರರಾದ ಯಜ್ಞ°/ಜಯತ°, ಶಂಭು), ಪಾಯು/ ವಿಸರ್ಜನಾಂಗ (ಯಮ), ಉಪಸ್ಥ/ ಜನನೇಂದ್ರಿಯ (ಲಿಂಗದೇವತೆಗೊ – ಮಾಣಿಯಂದ್ರಲ್ಲಿ ಶಿವ°, ಕೂಸುಗಳಲ್ಲಿ ಸ್ವಾಯಂಭುವಮನು)] +

೫ ಜ್ಞಾನೇಂದ್ರಿಯಂಗೊ – ತ್ವಕ್, ಚಕ್ಷುಃ, ಶ್ರೋತೃ, ಜಿಹ್ವಾ, ಪ್ರಾಣ [ಚರ್ಮ (ವಾಯುಪುತ್ರ° ಮರುತ್), ಕಣ್ಣು (ಸೂರ್ಯ°), ಕೆಮಿ (ಚಂದ್ರ°), ನಾಲಗೆ (ವರುಣ), ಮೂಗು (ಅಶ್ವಿನಿದೇವತೆಗಳಿಬ್ರು)]

19 : ಮನಸ್ಸು – (ಇಂದ್ರ, ಕಾಮ, ಅನಿರುದ್ಧ),

20 – 24 : ೫ ಜ್ಞಾನೇಂದ್ರಿಯ ವಿಷಯಂಗೊ (ಗುಣಂಗೊ) – ಶಬ್ದ, ಸ್ಪರ್ಶ, ರೂಪ, ರಸ, ಗಂಧ (ರುದ್ರ ಪುತ್ರರಾದ ಪ್ರಾಣ, ಅಪಾನ, ವ್ಯಾನ, ಉದಾನ, ಮತ್ತೆ ಸಮಾನ)

ಇವು ಜೀವಾತ್ಮ° ಅಡಕವಾಗಿಪ್ಪ ಕ್ಷೇತ್ರಂಗೊ. ಇನ್ನು, ಬಯಕೆ (ಶ್ರೀ ಮತ್ತೆ ಭಾರತಿ), ದ್ವೇಷ (ದ್ವಾಪರ-ಶಕುನಿ), ಸುಖ (ಮುಖ್ಯಪ್ರಾಣ-ವಾಯು-ಭೀಮ), ದುಃಖ (ಕಲಿ-ದುರ್ಯೊಧನ), ಸಮಷ್ಟಿಶರೀರ (ಶರೀರಲ್ಲಿಪ್ಪ ಅಭಿಮಾನಿ ಜೀವ + ಸಮಸ್ತ ಅಭಿಮಾನಿ ದೇವತೆಗೊ), ಮತ್ತೆ, ನೆಂಪು (ಶ್ರೀ, ಧೈರ್ಯ (ಸರಸ್ವತೀ + ಭಾರತೀ) ಇವು ಏಳು ವಿಶೇಷ ಕ್ರಿಯೆಗಳಾದ ವಿಕಾರಂಗೊ. ಹೀಂಗೆ ವಿಕಾರಂಗಳ ಒಟ್ಟಿಂಗೆ ‘ಕ್ಷೇತ್ರ’ ಹೇದು ಸಂಕ್ಷಿಪ್ತವಾಗಿ ಹೇಳಿದ್ದಾಯ್ದು. (ಬ್ರಾಕೆಟ್ಟಿಲ್ಲಿ ಸೂಚಿಸಿದ್ದದು ಇಂದ್ರಿಯಾಭಿಮಾನಿ ದೇವತೆಗಳ ಹೆಸರುಗೊ)

ಈ ಎರಡು ಶ್ಲೋಕಂಗಳಲ್ಲಿ ಭಗವಂತ° ಕ್ಷೇತ್ರ ಮತ್ತೆ ಕ್ಷೇತ್ರದ ವಿಕಾರವ ವಿವರಿಸಿದ್ದ°. ಕ್ಷೇತ್ರ ಹೇಳುವ ಅಖಂಡ ಘಟಕದೊಳ ಇಪ್ಪ ಜಗತ್ತಿನ ಘಟಕಾಂಶಂಗಳ ಭಗವಂತ° ಇಲ್ಲಿ ಸೂತ್ರರೂಪಲ್ಲಿ ಸಂಕ್ಷಿಪ್ತಗೊಳುಸಿ ವಿವರಿಸಿದ್ದ°. ಸುರೂವಾಣದ್ದು ಪಂಚಮಹಾಭೂತಂಗೊ. ಈ ಐದರಿಂದ ಈ ಪಿಂಡಾಂಡ ಮತ್ತೆ ಬ್ರಹ್ಮಾಂಡ ನಿರ್ಮಾಣವಾಯ್ದು. ಹಾಂಗಾಗಿ ಈ ಬ್ರಹ್ಮಾಂಡವ ‘ಪ್ರ-ಪಂಚ’ ಹೇದು ಹೇಳುವದು. ಈ ಪಂಚಮಹಾಭೂತಂಗಳೇ ಈ ಪ್ರಪಂಚದ ಮೂಲದ್ರವ್ಯ. ಪಿಂಡಾಂಡಲ್ಲಿ ಈ ಪಂಚ ಮಹಾಭೂತಂಗಳ ಅನ್ನಮಯಕೋಶ ಮತ್ತೆ ಪ್ರಾಣಮಯಕೋಶ ಹೇದು ಹೇಳುತ್ತದು. ಕಣ್ಣಿಂಗೆ ಕಾಂಬ ಸ್ಥೂಲ ಶರೀರ ಪೃಥಿವಿ ಮತ್ತೆ ನೀರಿನ ಭಾಗವಾಗಿದ್ದು. ಇಂತಹ ಸ್ಥೂಲ ಶರೀರದೊಳ ಕಾಣದ್ದ ಪ್ರಾಣಮಯಕೋಶ ಇಪ್ಪದು. ದೇಹದ ಶಾಖ (ಕಿಚ್ಚು) ಉಸಿರಾಟ (ಗಾಳಿ) ಮತ್ತೆ ಒಳ ನೆತ್ತರು-ಗಾಳಿ ಸಂಚಾರದ ಅವಕಾಶ (ಆಕಾಶ). ಇದರಿಂದಾಚಿಗೆ ಮನಸ್ಸು ಮತ್ತೆ ಬುದ್ಧಿಯ ಒಳಗೊಂಡ ಮನೋಮಯಕೋಶ. ಅದರಿಂದಾಚಿಗೆ ವಿಜ್ಞಾನಮಯಕೋಶ – ಸ್ಮರಣಶಕ್ತಿ. ಹಾಂಗಾಗಿ ಬುದ್ಧಿಗೆ ಮದಲು ಅಹಂಕಾರ ಮತ್ತೆ ಚಿತ್ತ. ಇಲ್ಲಿ ಅಹಂಕಾರ ಹೇಳಿರೆ ತನ್ನ ಅಸ್ತಿತ್ವದ ಅರಿವು (self awareness). ಈ ಅಹಂಕಾರತತ್ವ ಪಿಂಡಾಂಡಲ್ಲಿ ಚಿತ್ತ, ಬ್ರಹ್ಮಾಂಡಲ್ಲಿ  ಮಹತತ್ವ.

ವ್ಯಕ್ತವಪ್ಪ ಈ ಪ್ರಪಂಚದ ಮೂಲ- ‘ಅವ್ಯಕ್ತ’. ಸೃಷ್ಟಿಯ ಮೂಲಸ್ಥಿತಿ – ‘ಪ್ರಳಯಸಾಗರ’. ಹೇಳಿರೆ, ಪರಮಾಣುರೂಪಲ್ಲಿ ಚದುರಿಗೊಂಡಿಪ್ಪ ‘ಅವ್ಯಕ್ತ ಪ್ರಪಂಚ’. ಇಂತಹ ಪ್ರಪಂಚಲ್ಲಿ ಚತುರ್ಮುಖ° ಮಹತತ್ವವ ಸೃಷ್ಟಿ ಮಾಡಿದ°. ಪ್ರಳಯ ಸಾಗರಲ್ಲಿ ತನ್ನ ಅಸ್ತಿತ್ವದ ತಿಳುವಳಿಕೆ ಇಲ್ಲದ್ದ ಜೀವಿಗೊಕ್ಕೆ ‘ಆನು’ ಹೇಳ್ವ ಪರಿಜ್ಞಾನ ಬಪ್ಪದೇ ಮಹತತ್ವದ ಸೃಷ್ಟಿ. ಚಿತ್ತದ ವ್ಯಾಪ್ತಿ ಚೇತನ. ಇದು ನಮ್ಮ ನೆಂಪಿನ ವಿಸ್ತಾರ.

ಇನ್ನು, ಈ ಶರೀರಲ್ಲಿ ಐದು ಜ್ಞಾನೇಂದ್ರಿಯಂಗೊ, ಐದು ಕರ್ಮೇಂದ್ರಿಯಂಗೊ ಮತ್ತೆ ಹನ್ನೊಂದನೇ ಇಂದ್ರಿಯವಾಗಿಪ್ಪದು ಮನಸ್ಸು. ಕೆಮಿಂದ ಶಬ್ದಗ್ರಹಣ, ಕಣ್ಣಿಂದ ರೂಪಗ್ರಹಣ, ಮೂಗಿಂದ ಗಂಧಗ್ರಹಣ, ನಾಲಗೆಂದ ರಸಗ್ರಹಣ, ಚರ್ಮಂದ ಗಾಳಿಯಗ್ರಹಣ. ಹಾಂಗೇ, ಮಾತಾಡುಲೆ ಬಾಯಿ, ಕೆಲಸ ಮಾಡ್ಳೆ ಕೈ, ನಡವಲೆ ಕಾಲು – ಈ ಎಂಟರ (೫+೩) ಗ್ರಹಂಗೊ(receiver) ಹೇದು ಹೇಳುವದು. ಮತ್ತೆ ಪಾಯು ಮತ್ತು ಉಪಸ್ಥ (ವಿಸರ್ಜನಾಂಗ ಮತ್ತು ಜನನೇಂದ್ರಿಯ). ಈ ಎಲ್ಲವನ್ನು ಚಿಂತನಗೆ ಒಳಪಡುಸುವ ಹನ್ನೊಂದನೇ ಇಂದ್ರಿಯ ಮನಸ್ಸು. ಇವೆಲ್ಲವೂ ಕ್ಷೇತ್ರದ ಘಟಕಾಂಶಂಗೊ. ಸಮಷ್ಟಿಯಾಗಿ ಇದು ಕ್ಷೇತ್ರ.

ಈ ಜಗತ್ತು ಸದಾ ಬದಲಾಗಿಯೊಂಡಿರುತ್ತು. ಹಾಂಗಾಗಿ ಜಗತ್ತಿನ ಅಶ್ವತ್ಥ ಹೇಳಿಯೂ ಹೇಳ್ತದು. ಅಶ್ವ ನಿರಂತರ ಚಲನೆಲಿಪ್ಪ ಪ್ರಾಣಿ. ಅದು ನಿಶ್ಚಲವಾಗಿ ಇಪ್ಪ ಕ್ರಮವೇ ಇಲ್ಲೆ. ಹಾಂಗೇ, ಈ ಪ್ರಪಂಚವೂ ಕೂಡ ಸದಾ ಚಲನೆಲಿಪ್ಪದರಿಂದ ಇದರ ಪ್ರಾಚೀನರು ಅಶ್ವತ್ಥ ಹೇಳಿಯೂ ಹೆಸರಿಸಿದ್ದವು. ನಮ್ಮ ದೇಹ ಹೇಳ್ತದು ಭೌತಿಕ ವಿಕಾರ. ಅದರಲ್ಲಿ ಅಪ್ಪಂತ ಮಾನಸಿಕ ಪ್ರಪಂಚದ ಎಲ್ಲ ತೊಳಲಾಟ ಮಾನಸಿಕ ವಿಕಾರ. ವಿಶೇಷವಾಗಿ – ಇಚ್ಛೆ, ದ್ವೇಷ, ಸುಖ, ದುಃಖ, ನೆಂಪಿನ ಹರವು (ಚೇತನ), ಧೃತಿ. ಇದು ಭಗವಂತ° ಹೇಳಿದ ಕ್ಷೇತ್ರದ ಮತ್ತೆ ಅದರ ವಿಕಾರದ ಸೂತ್ರ ರೂಪದ ವಿವರಣೆ ಹೇದು ಬನ್ನಂಜೆಯವರ ವ್ಯಾಖ್ಯಾನಲ್ಲಿ ವಿವರಿಸಿದ್ದವು.

ಮಹರ್ಷಿಗೊ, ವೇದಸ್ತೋತ್ರಂಗೊ, ವೇದಾಂತಸೂತ್ರದ ಸೂತ್ರಂಗಳಲ್ಲಿ ಬೇರೆ ಬೇರೆ ನಮೂನೆಲಿ ಕ್ಷೇತ್ರ ಮತ್ತೆ ಕ್ಷೇತ್ರಜ್ಞರ ವಿಷಯಲ್ಲಿ ಸಾಕಷ್ಟು ವಿಸ್ತಾರವಾಗಿ ವಿವರಿಸಿದ್ದವು. ಅದು ಸುಲಭವಾಗಿ ಅರ್ಥಮಾಡಿಗೊಂಬಲೆ ಎಡಿಗಪ್ಪದಲ್ಲ. ಹಾಂಗಾಗಿ ಅದರ್ಲಿ ಹೇಳಿದ್ದರನ್ನೇ ಭಗವಂತ° ಸರಳ ಸಂಗ್ರಹವಾಗಿ ಇಲ್ಲಿ ಹೇಳಿದ್ದದು. ಜಗತ್ತಿನ ಘಟಕಾಂಶಂಗಳ ಈ ಮೇಗೆ ಹೇಳಿದ್ದದರ  ಹೀಂಗೆ ಅರ್ಥಮಾಡಿಗೊಂಬಲಕ್ಕು. ಸುರೂವಾಣದ್ದಾಗಿ – ಭೂಮಿ, ನೀರು, ಅಗ್ನಿ, ವಾಯು, ಆಕಾಶ – ಇವೈದು – ಪಂಚಭೂತಂಗೊ., ಮತ್ತೆ ಅಹಂಕಾರ, ಬುದ್ಧಿ, ಪ್ರಕೃತಿ – ಈ ಮೂರು ಗುಣಂಗಳ ಅವ್ಯಕ್ತ ಹಂತ. ಇದಾದಿಕ್ಕಿ ಮತ್ತೆ ಇಂದ್ರಿಯಗ್ರಾಹ್ಯವಾದ ಕಣ್ಣು, ಕೆಮಿ, ಮೂಗು, ನಾಲಗೆ, ಚರ್ಮ  – ಇವೈದು – ಜ್ಞಾನೇಂದ್ರಿಯಂಗೊ. ಮತ್ತೆ  ಬಾಯಿ, ಕೈ, ಕಾಲು, ಗುದ, ಜನನೇಂದ್ರಿಯ – ಇವೈದು ಕರ್ಮೇಂದ್ರಿಯಂಗೊ, ಈ ಇಂದ್ರಿಯಂಗಳ ಬಳಿಕ ಮನಸ್ಸು. ಅದು ಒಳ ಇಪ್ಪದು. ಹಾಂಗಾಗಿ ಅದರ ಅಂತರೇಂದ್ರಿಯ ಹೇಳಿಯೂ ಹೇಳುವದು. ಹಾಂಗಾಗಿ ಮನಸ್ಸೂ ಸೇರ್ಸಿ ಹನ್ನೊಂದು (ದಶೈಕ) ಇಂದ್ರಿಯಂಗೊ ಹೇದು ಹೇಳುವದು.  ಮತ್ತೆ ಇಂದ್ರಿಯ ವಿಷಯಂಗೊ ಐದು –  ಶಬ್ದ, ಸ್ಪರ್ಶ, ರೂಪ, ರಸ, ಗಂಧ. ಈ ಇಪ್ಪತ್ತನಾಲ್ಕು ಘಟಕಾಂಶಂಗಳ ಮೊತ್ತವ ‘ಕ್ಷೇತ್ರ’ ಹೇದು ಹೇಳುವದು. ಈ ಇಪ್ಪತ್ತನಾಲ್ಕು ವಿಷಯಂಗಳ ವಿಶ್ಲೇಷಿಸಿ ಅಧ್ಯಯನ ಮಾಡಿದವಂಗೆ ಕ್ಷೇತ್ರದ ಅರ್ಥ ಗೊಂತಾವ್ತು (ಕ್ಷೇತ್ರಜ್ಞ°). ಮತ್ತೆ ಬಯಕೆ, ದ್ವೇಷ, ಸುಖ, ದುಃಖ ಇವು ಪ್ರತಿಕ್ರಿಯೆಗೊ. ಜಡದೇಹದ ಪಂಚಮಹಾಭೂತಂಗಳ ನಿರೂಪಣೆಗೊ. ಪ್ರಜ್ಞೆ (ಚೇತನ) ಮತ್ತೆ ದೃಢವಿಶ್ವಾಸ (ಧೃತಿ) ಜೀವ ಲಕ್ಷಣವ ಪ್ರತಿನಿಧಿಸುತ್ತು. ಜೀವ ಲಕ್ಷಣಂಗೊ ಸೂಕ್ಷ್ಮದೇಹದ ಮನಸ್ಸು, ಅಹಂಕಾರ ಮತ್ತೆ ಬುದ್ಧಿಗಳ ಪ್ರತಿನಿಧಿಯಾಗಿರ್ತು. ಈ ಸೂಕ್ಷ್ಮಘಟಕಾಂಶಂಗೊ ಕ್ಷೇತ್ರಲ್ಲಿ ಸೇರಿದ್ದು.

ಮುಂದೆ ಎಂತರ….. ?     ಬಪ್ಪವಾರ ನೋಡುವೋ° .

                                                                                                                                                     …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 13 – SHLOKAS 00 – 06
ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download: www.addkiosk.in ; www.giri.in

 

2 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 13 – ಶ್ಲೋಕಂಗೊ 00 – 06

  1. ಕ್ಷೇತ್ರ-ಕ್ಷೇತ್ರಜ್ಞರ ಬಗ್ಗೆ ತಿಳಿವದೇ ಜ್ಞಾನ, ಹೇಳಿಕ್ಕಿ ಅದರ ಬಗ್ಗೆ ಎಲ್ಲರಿಂಗೂ ಅರ್ಥ ಅಪ್ಪ ಹಾಂಗೆ ವಿವರಣೆ.
    ಶರೀರ ಹೇಳಿರೆ ಬರೇ ಕಾಣ್ಣಿಂಗೆ ಕಾಂಬ ಭೌತಿಕ ಶರೀರ ಅಲ್ಲ. ಅದರಲ್ಲಿಪ್ಪ ಜೀವಾತ್ಮ ಒಟ್ಟು ೨೪ ತತ್ವಂಗಳ ಸಂಗಮ ಹೇಳ್ತ ವಿಷಯ ಎಲ್ಲರೂ ಅರ್ಥ ಮಾಡಿಗೊಳ್ಳೆಕ್ಕಾದ್ದು.
    ತುಂಬಾ ವಿವರಂಗಳೊಂದಿಂಗೆ, ಮಾಹಿತಿಗಳನ್ನೂ ಒದಗಿಸಿದ ಚೆನ್ನೈ ಭಾವಯ್ಯಂಗೆ ನಮೋ ನಮಃ

  2. ಗಹನವಾದ` ಕ್ಷೇತ್ರ, ಕ್ಷೇತ್ರಜ್ಞ ‘ ವಿಚಾರವ ಸರಳವಾಗಿ, ಸುಲಭವಾಗಿ ತಿಳ್ಶಿದ್ದಿ. ನಿ೦ಗಳ ಮನ ಮೋಹಕ ಶೈಲಿಗೆ ಹಾ೦ಗೂ ವಿವರಣೆಗೆ ಧನ್ಯವಾದ೦ಗೊ ಬಾವ°. ನಮಸ್ತೇ; ಬಪ್ಪ ವಾರ ಕಾ೦ಬೋ°.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×