ಶ್ರೀಮದ್ಭಗವದ್ಗೀತಾ – ಅಧ್ಯಾಯ 13 – ಶ್ಲೋಕಂಗೊ 07 – 11

ಮದಲಾಣ ಭಾಗಲ್ಲಿ ಭಗವಂತ° ಕ್ಷೇತ್ರ-ಕ್ಷೇತ್ರಜ್ಞರ ಬಗ್ಗೆ ಹೇಳಿಕ್ಕಿ ಮತ್ತೆ ಅದರ ಸ್ವರೂಪ ಮತ್ತೆ ವಿಕಾರದ ಬಗ್ಗೆ ಹೇಳಿದ್ದ. ಅದು ಭಗವಂತನ ಕ್ಷೇತ್ರ ಮತ್ತೆ ಅದರ ವಿಕಾರದ ಸೂತ್ರ ರೂಪದ ನಿರೂಪಣೆ. ಭಗವಂತ° ಮತ್ತೆ ಮುಂದುವರ್ಸಿ, ಜ್ಞಾನದ ವಿಷಯದ ಬಗ್ಗೆ ವಿವರುಸುತ್ತ ಇಲ್ಲಿ –

ಶ್ರೀಮದ್ಭಗವದ್ಗೀತಾ – ತ್ರಯೋದಶೋsಧ್ಯಾಯಃ – ಕ್ಷೇತ್ರಕ್ಷೇತ್ರಜ್ಞವಿಭಾಗಯೋಗಃ – ಶ್ಲೋಕಾಃ – 07 – 11

ಶ್ಲೋಕ

ಅಮಾನಿತ್ವಮದಂಭಿತ್ವಮ್ ಅಹಿಂಸಾ ಕ್ಷಾಂತಿರಾರ್ಜವಮ್ ।
ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹಃ ॥೦೭॥

ಪದವಿಭಾಗ

ಅಮಾನಿತ್ವಮ್ ಅದಂಭಿತ್ವಮ್ ಅಹಿಂಸಾ ಕ್ಷಾಂತಿಃ ಆರ್ಜವಮ್ । ಆಚಾರ್ಯ-ಉಪಾಸನಮ್ ಶೌಚಮ್ ಸ್ಥೈರ್ಯಮ್ ಆತ್ಮ-ವಿನಿಗ್ರಹಃ ॥

ಅನ್ವಯ

ಅಮಾನಿತ್ವಮ್, ಅದಂಭಿತ್ವಮ್, ಅಹಿಂಸಾ, ಕ್ಷಾಂತಿಃ, ಆರ್ಜವಮ್, ಆಚಾರ್ಯ-ಉಪಾಸನಮ್, ಶೌಚಮ್, ಸ್ಥೈರ್ಯಮ್, ಆತ್ಮ-ವಿನಿಗ್ರಹಃ ,

ಪ್ರತಿಪದಾರ್ಥ

ಅಮಾನಿತ್ವಮ್ – ನಮ್ರತೆ, ಅದಂಭಿತ್ವಮ್ – ನಿಗರ್ವ (ಗರ್ವ ಇಲ್ಲದ್ದೆ ಇಪ್ಪದು), ಅಹಿಂಸಾ – ಅಹಿಂಸೆ, ಕ್ಷಾಂತಿಃ – ಸಹನೆ, ಆರ್ಜವಮ್ – ಸರಳತೆ, ಆಚಾರ್ಯ-ಉಪಾಸನಮ್ – ಸದ್ಗುರು ಹತ್ರೆ ಹೋಪದು, ಶೌಚಮ್ – ಶುಚಿತ್ವ, ಸ್ಥೈರ್ಯಮ್ – ಸ್ಥೈರ್ಯ, ಆತ್ಮ-ವಿನಿಗ್ರಹಃ – ಆತ್ಮಸಂಯಮ,

ಶ್ಲೋಕ

ಇಂದ್ರಿಯಾರ್ಥೇಷು ವೈರಾಗ್ಯಮ್ ಅನಹಂಕಾರ ಏವ ಚ ।
ಜನ್ಮಮೃತ್ಯುಜರಾವ್ಯಾಧಿ ದುಃಖದೋಷಾನುದರ್ಶನಮ್ ॥೦೮॥

ಪದವಿಭಾಗ

ಇಂದ್ರಿಯ-ಅರ್ಥೇಷು ವೈರಾಗ್ಯಮ್ ಅನಹಂಕಾರಃ ಏವ ಚ । ಜನ್ಮ-ಮೃತ್ಯು-ಜರಾ-ವ್ಯಾಧಿ ದುಃಖ-ದೋಷ-ಅನುದರ್ಶನಮ್ ॥

ಅನ್ವಯ

ಇಂದ್ರಿಯ-ಅರ್ಥೇಷು ವೈರಾಗ್ಯಮ್, ಅನಹಂಕಾರಃ ಏವ ಚ, ಜನ್ಮ-ಮೃತ್ಯು-ಜರಾ-ವ್ಯಾಧಿ ದುಃಖ-ದೋಷ-ಅನುದರ್ಶನಮ್,

ಪ್ರತಿಪದಾರ್ಥ,

ಇಂದ್ರಿಯ-ಅರ್ಥೇಷು ವೈರಾಗ್ಯಮ್ – ಇಂದ್ರಿಯಸುಖಕಾರಣಂಗಳಲ್ಲಿ ವಿರಕ್ತಿ, ಅನಹಂಕಾರಃ – ಅಹಂಕಾರ ರಹಿತತೆ, ಏವ – ಖಂಡಿತವಾಗಿಯೂ, ಚ – ಕೂಡ, ಜನ್ಮ-ಮೃತ್ಯು-ಜರಾ-ವ್ಯಾಧಿ – ಹುಟ್ಟು-ಸಾವು-ಮುಪ್ಪು-ರೋಗ, ದುಃಖ-ದೋಷ-ಅನುದರ್ಶನಮ್ – ದುಃಖ-ದೋಷದ-ಅವಲೋಕನ,

ಶ್ಲೋಕ

ಅಸಕ್ತಿರನಭಿಷ್ವಂಗಃ ಪುತ್ರದಾರಗೃಹಾದಿಷು ।
ನಿತ್ಯಂ ಚ ಸಮಚಿತ್ತತ್ವಂ ಇಷ್ಟಾನಿಷ್ಟೋಪಪತ್ತಿಷು ॥೦೯॥

ಪದವಿಭಾಗ

ಅಸಕ್ತಿಃ ಅನಭಿಷ್ವಂಗಃ ಪುತ್ರ-ದಾರ-ಗೃಹ-ಆದಿಷು । ನಿತ್ಯಮ್ ಚ ಸಮ-ಚಿತ್ತತ್ವಮ್ ಇಷ್ಟ-ಅನಿಷ್ಟ-ಉಪಪತ್ತಿಷು ॥

ಅನ್ವಯ

ಅಸಕ್ತಿಃ, ಪುತ್ರ-ದಾರ-ಗೃಹ-ಆದಿಷು ಅನಭಿಷ್ವಂಗಃ, ಇಷ್ಟ-ಅನಿಷ್ಟ-ಉಪಪತ್ತಿಷು ನಿತ್ಯಂ ಸಮ-ಚಿತ್ತತ್ವಂ ಚ

ಪ್ರತಿಪದಾರ್ಥ

ಅಸಕ್ತಿಃ – ಅನಾಸಕ್ತಿ, ಪುತ್ರ-ದಾರ-ಗೃಹ-ಆದಿಷು – ಮಗ°-ಹೆಂಡತಿ-ಮನೆ-ಮೊದಲಾದವುಗಳಲ್ಲಿ, ಅನಭಿಷ್ವಂಗಃ – ಸಹವಾಸ ಇಲ್ಲದ್ದಿಪ್ಪದು, ಇಷ್ಟ-ಅನಿಷ್ಟ-ಉಪಪತ್ತಿಷು – ಇಷ್ಟವಾದ್ದು-ಇಷ್ಟವಿಲ್ಲವಲ್ಲದ್ದು-ಪ್ರಾಪ್ತಿಲಿ, ನಿತ್ಯಮ್ – ನಿತ್ಯವೂ, ಸಮ-ಚಿತ್ತತ್ವಮ್ – ಸಮಚಿತ್ತತೆ, ಚ – ಕೂಡ

ಶ್ಲೋಕ

ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ ।
ವಿವಿಕ್ತದೇಶಸೇವಿತ್ವಮ್ ಅರತಿರ್ಜನಸಂಸದಿ ॥೧೦॥

ಪದವಿಭಾಗ

ಮಯಿ ಚ ಅನನ್ಯ-ಯೋಗೇನ ಭಕ್ತಿಃ ಅವ್ಯಭಿಚಾರಿಣೀ । ವಿವಿಕ್ತ-ದೇಶ-ಸೇವಿತ್ವಮ್ ಅರತಿಃ ಜನ-ಸಂಸದಿ ॥

ಅನ್ವಯ

ಮಯಿ ಚ ಅನನ್ಯ-ಯೋಗೇನ ಅವ್ಯಭಿಚಾರಿಣೀ ಭಕ್ತಿಃ, ವಿವಿಕ್ತ-ದೇಶ-ಸೇವಿತ್ವಮ್, ಜನ-ಸಂಸದಿ ಅರತಿಃ,

ಪ್ರತಿಪದಾರ್ಥ

ಮಯಿ – ಎನ್ನಲ್ಲಿ, ಚ – ಕೂಡ, ಅನನ್ಯ-ಯೋಗೇನ – ನಿಷ್ಕಲ್ಮಷ ಭಕ್ತಿಂದ (ಅನನ್ಯ ಭಕ್ತಿಂದ) ,  ಅವ್ಯಭಿಚಾರಿಣೀ ಭಕ್ತಿಃ – ಚ್ಯುತಿಯಿಲ್ಲದ್ದ ಭಕ್ತಿ, ವಿವಿಕ್ತ-ದೇಶ-ಸೇವಿತ್ವಮ್ – ಏಕಾಂತದ ಜಾಗೆಯ ಹಂಬಲ, ಜನ-ಸಂಸದಿ – ಜನಜಂಗುಳಿಲಿ, ಅರತಿಃ – ಅನಾಸಕ್ತಿ,

ಶ್ಲೋಕ

ಅಧ್ಯಾತ್ಮಜ್ಞಾನನಿತ್ಯತ್ವಂ ತತ್ತ್ವಜ್ಞಾನಾರ್ಥದರ್ಶನಮ್ ।
ಏತಜ್ಞಾನಾಮಿತಿ ಪ್ರೋಕ್ತಮ್ ಅಜ್ಞಾನಂ ಯದತೋsನ್ಯಥಾ ॥೧೧॥

ಪದವಿಭಾಗ

ಅಧ್ಯಾತ್ಮ-ಜ್ಞಾನ-ನಿತ್ಯತ್ವಮ್ ತತ್ತ್ವ-ಜ್ಞಾನ-ಅರ್ಥ-ದರ್ಶನಮ್ । ಏತತ್ ಜ್ಞಾನಮ್ ಇತಿ ಪ್ರೋಕ್ತಮ್ ಅಜ್ಞಾನಮ್ ಯತ್ ಅತಃ ಅನ್ಯಥಾ ॥

ಅನ್ವಯ

ಅಧ್ಯಾತ್ಮ-ಜ್ಞಾನ-ನಿತ್ಯತ್ವಂ, ತತ್ತ್ವ-ಜ್ಞಾನ-ಅರ್ಥ-ದರ್ಶನಮ್, ಏತತ್ ಜ್ಞಾನಮ್ ಇತಿ ಪ್ರೋಕ್ತಮ್, ಯತ್ ಅತಃ ಅನ್ಯಥಾ (ತತ್)  ಅಜ್ಞಾನಮ್ (ಇತಿ ಪ್ರೋಕ್ತಮ್) ।

ಪ್ರತಿಪದಾರ್ಥ

ಅಧ್ಯಾತ್ಮ-ಜ್ಞಾನ-ನಿತ್ಯತ್ವಮ್ – ಅಧ್ಯಾತ್ಮಜ್ಞಾನಲ್ಲಿ ನಿರಂತರವಾಗಿಪ್ಪ ಸ್ಥಿತಿ, ತತ್ತ್ವ-ಜ್ಞಾನ-ಅರ್ಥ-ದರ್ಶನಮ್ – ತತ್ವಜ್ಞಾನಕ್ಕೆ (ಅಪರೋಕ್ಷ ಜ್ಞಾನ) ಸಂಬಂಧಿಸಿದ ವಿಷಯಕ್ಕಾಗಿ ಸಿದ್ಧಾಂತದ ಅಧ್ಯಯನ, ಏತತ್ – ಇವೆಲ್ಲ, ಜ್ಞಾನಂ ಇತಿ ಪ್ರೋಕ್ತಮ್ – ‘ಜ್ಞಾನ’ ಹೇದು ಹೇಳಲಾಯ್ದು, ಯತ್ ಅತಃ – ಏವುದು ಇದರಿಂದ, ಅನ್ಯಥಾ ತತ್ – ಬೇರೆಯೋ ಅದು, ಅಜ್ಞಾನಮ್ ಇತಿ ಪ್ರೋಕ್ತಮ್ – ‘ಆಜ್ಞಾನ’ ಹೇದು ಹೇಳಲಾಯ್ದು.

ಅನ್ವಯಾರ್ಥ (೦೭ – ೧೧)

ನಮ್ರತೆ, ನಿಗರ್ವ, ಅಹಿಂಸೆ, ತಾಳ್ಮೆ, ಸರಳತೆ, ನಿಜವಾದ ಗುರುಗಳ ಹತ್ರಂಗೆ ಹೋಪದು, ಶೌಚ, ಸ್ಥೈರ್ಯ, ಆತ್ಮಸಂಯಮ, ಇಂದ್ರಿಯತೃಪ್ತಿಯ ವಿಷಯಂಗಳಲ್ಲಿ ವೈರಾಗ್ಯ, ಅಹಂಕಾರ ಇಲ್ಲದ್ದಿಪ್ಪದು, ಹುಟ್ಟು,ಸಾವು, ಮುಪ್ಪು, ರೋಗಂಗಳ ದುಗುಡದ ಬಾಳಿನ ಎಚ್ಚರ,  ಅನಾಸಕ್ತಿ, ಮಗ (ಮಕ್ಕೊ), ಹೆಂಡತಿ, ಮನೆ, ಮುಂತಾದ ವಿಷಯಂಗಳಲ್ಲಿ ಸಿಕ್ಕಿಹಾಕಿಗೊಳ್ಳದ್ದೆ ಮುಕ್ತವಾಗಿಪ್ಪದು, ಇಷ್ಟ-ಅನಿಷ್ಟಂಗಳ ವಿಷಯಲ್ಲಿ ಸಮಚಿತ್ತತೆ, ಎನ್ನಲ್ಲಿ ನಿರಂತರವಾದ ಪರಿಶುದ್ಧ ಭಕ್ತಿ, ಏಕಾಂತಪ್ರದೇಶಲ್ಲಿ ವಾಸಮಾಡುವ ಅಭಿಲಾಷೆ, ಜನಸಮೂಹಲ್ಲಿ ಆಸಕ್ತಿಯಿಲ್ಲದ್ದಿಪ್ಪದು, ಆತ್ಮಸಾಕ್ಷಾತ್ಕಾರದ ಮಹತ್ವವ ಒಪ್ಪಿಗೊಂಬದು, ಪರಿಪೂರ್ಣ ಸತ್ಯದ ತತ್ವಜ್ಞಾನಾರ್ಥ ಅನ್ವೇಷಣೆ – ಇವೆಲ್ಲ ‘ಜ್ಞಾನ’ ಹೇಳಿ ಹೇಳಲ್ಪಡುತ್ತು. ಇದಲ್ಲದ್ದೆ ಇಪ್ಪದೆಲ್ಲ ಅಜ್ಞಾನ ಹೇದು ಹೇಳಲ್ಪಡುತ್ತು.

ತಾತ್ಪರ್ಯ/ವಿವರಣೆ

ಜ್ಞಾನದ ಹಾದಿಲಿ ಮುಂದುವರಿಯೇಕ್ಕಾರೆ ನಮ್ಮ ನಡತೆಲಿ ನಾವು ಅನುಸರುಸೆಕ್ಕಾದ ಕೆಲವು ನೀತಿಸಂಹಿತೆಗಳ ಬಗ್ಗೆ ಇಲ್ಲಿ ವಿವರಿಸಿಲ್ಪಟ್ಟಿದು. ನಾವು ನಮ್ಮ ಜೀವನಲ್ಲಿ ಅನುಸರುಸೆಕ್ಕಾದ ಇಪ್ಪತ್ತು ಗುಣಂಗಳ ಈ ಐದು ಶ್ಲೋಕಲ್ಲಿ ಭಗವಂತ° ವಿವರಿಸಿದ್ದ°. ಈ ಗುಣಂಗಳ ನಮ್ಮ ಜೀವನಲ್ಲಿ ಎಷ್ಟು ಹೆಚ್ಚು ಅಳವಡುಸುತ್ತೋ ಅಷ್ಟು ನಾವು ಜ್ಞಾನ ದಾರಿಲಿ ಮುಂದುವರಿಯಲಕ್ಕು. ಇಲ್ಲದ್ರೆ ನಾವು ಅಜ್ಞಾನದ ದಾರಿಲಿ ಮುಂದುವರಿಯೇಕ್ಕಾವ್ತು ಹೇಳ್ವ ಎಚ್ಚರವ ಭಗವಂತ° ಇಲ್ಲಿ ನೀಡಿದ್ದ°. ಭಗವಂತ° ಹೇಳಿದ ಆ ಗುಣಂಗೊ ಏವುದೆಲ್ಲ ಹೇಳ್ವದರ ಒಂದೊಂದಾಗಿ ನಾವಿಲ್ಲಿ ಸರಳವಾಗಿ ಅರ್ಥ ಅಪ್ಪ ಹಾಂಗೆ ಬನ್ನಂಜೆಯವರ ವ್ಯಾಖ್ಯಾನಂದ ನೋಡುವೋ° –

 1. ಅಮಾನಿತ್ವಮ್ನಮ್ರತೆ. ಜ್ಞಾನ ಸಂಪಾದನೆ ಆಯೇಕ್ಕಾರೆ ನಾವು ಮಾನ-ಸಮ್ಮಾನದ ಬಯಕೆಯ ಬಿಡೆಕು. ಎನಗೆ ಸನ್ಮಾನ ಆಯೆಕು, ಪ್ರಶಸ್ತಿ ಸಿಕ್ಕೆಕು ಹೇಳ್ವ ನಿರೀಕ್ಷೆಂದ ಮುಂದುವರಿವವಂಗೆ ಜ್ಞಾನ ಸಿದ್ಧಿಯಾಗ. ಅದಕ್ಕಿಪ್ಪ ಪ್ರಚಾರಪ್ರಿಯತೆಯ ನಾವು ಮದಾಲು ಬಿಡೆಕು. ನಾಕು ಜೆನಕ್ಕೆ ಗೊಂತಾಯೇಕು, ನಾಕು ಜೆನ ಹೊಗಳೆಕು ಹೇಳ್ವ ಹಂಬಲವ ಬಿಟ್ಟು ಜ್ಞಾನದ ಬಗ್ಗೆ ತಿಳಿಯೆಕು ಹೇಳ್ವ ಮನಃಪೂರ್ವಕ ಶ್ರದ್ಧಾಪೂರ್ವಕ ಪ್ರಯತ್ನದ ಮೂಲಕ ಶ್ರಮತೊಟ್ಟರೆ ಜ್ಞಾನ ಸಿದ್ಧಿಯಾವ್ತು. ‘ಆರಾರು ನಿನ್ನ ಮೆಚ್ಚಿದರೆ, ಹೊಗಳಿದರೆ ಅದು ಅವರ ದೊಡ್ಡಸ್ತಿಕೆ. ನೀನು ಮಾಂತ್ರ ಅಲ್ಲಿ ನಮ್ರತೆಂದ ನಡಕ್ಕೊ’. ನಮ್ರತೆ ಇಲ್ಲದ್ದೆ ಹೋದರೆ ಮನಸ್ಸು ಹೊಗಳಿಕೆಯ ಹುಡುಕ್ಕಲೆ ಸುರುಮಾಡಿ ನಮ್ಮ ಹಾದಿ/ಲಕ್ಷ್ಯ ತಪ್ಪುಸುಗು. ಹಾಂಗಾಗಿ ಪ್ರಚಾರ-ಹೊಗಳಿಕೆಯ ವಿಷಯಲ್ಲಿ ನಮ್ರತೆಂದ ನಡಕ್ಕೊಳ್ಳೆಕು.
 2. ಅಡಂಭಿತ್ವಮ್‘ಗರ್ವ ಇಲ್ಲದ್ದಿಪ್ಪದು’. ಆಡಂಬರ ಇಪ್ಪಲಾಗ. ದೊಡ್ಡಸ್ತಿಕೆಯ ಪ್ರದರ್ಶನ ಬೇಡ. ಎಲ್ಲೋರ ಎದುರು ಸಣ್ಣವನಾಗಿ ಬದುಕ್ಕಲೆ ಕಲಿಯೆಕು. ಜ್ಞಾನದ ಹಾದಿಲಿ ಪ್ರಾಮಾಣಿಕತೆಂದ ಜಾರಿ ಗರ್ವದ ಅಮಲಿಂಗೆ ಬೀಳ್ಳಾಗ. ನಮ್ಮಲ್ಲಿ ಇಲ್ಲದ್ದರ ಇದ್ದು ಹೇದು ತೋರ್ಸಲೆ ಹೋಪಲಾಗ. ಸದಾ ಸರಳತೆಯ ಬದುಕು ನಮ್ಮ ಜೀವನ ಆಗಿರೆಕು.
 3. ಅಹಿಂಸಾಅಹಿಂಸೆ. ಇನ್ನೊಬ್ಬರಿಂಗೆ ಹಿಂಸೆ ಮಾಡ್ಳಾಗ. ಇನ್ನೊಬ್ಬನ ನೋಯಿಸಿ ಅದರಿಂದ ಲಾಭ ಪಡಕ್ಕೊಂಬ ನೀಚ ಮನಸ್ಸು ನಮ್ಮದಪ್ಪಲಾಗ. ಶಾರೀರಿಕ ಬೇನಗೆ ಔಷಧಿ ಮೂಲಕ ಬೇನೆ ಶಮನ ಮಾಡ್ಳೆಡಿಗು. ಆದರೆ ಮಾನಸಿಕ ಹಿಂಸಗೆ ಮದ್ದೇ ಇಲ್ಲೆ. ಇನ್ನೊಬ್ರ ದೂಷಣೆ ಮಾಡುವದೋ, ಬೈವದೋ, ಮುಖಭಂಗ ಮಾಡುವದೋ, ಅನಗತ್ಯ ಕಷ್ಟಕ್ಕೆ ದೂಡುವದೋ, ಘಾಸಿಮಾಡುವದೋ ಮಾಡ್ಳಾಗ. ಇನ್ನೊಬ್ಬಂಗೆ ನಮ್ಮಿಂದ ಅಪ್ಪ ಏವುದೇ ಅಡಚಣೆ (ತೊಂದರೆ) ಅದು ಬೇನೆ ಹೇಳಿ ಆವ್ತು. ಅದನ್ನೇ ಹಿಂಸೆ ಹೇದು ಹೇಳುವದು. ಹಾಂಗಾಗಿ ಇನ್ನೊಬ್ಬಂಗೆ ಹಿಂಸೆ ಕೊಡದ್ದೆ/ಮಾಡದ್ದೆ ಅಹಿಂಸೆ ಮೂಲಕ ಬದುಕ್ಕೆಕು. 
 4. ಕ್ಷಾಂತಿಃತಾಳ್ಮೆ. ಪ್ರತೀಕಾರ ಮಾಡದ್ದೆ ಇಪ್ಪದು. ಒಬ್ಬ ನವಗೆ ಕೇಡು ಬಗದರೆ ಅವರಲ್ಲಿ ವೈರ ಸಾಧುಸುವದು, ಪ್ರತಿಕೇಡು ಮಾಡ್ಳೆ ಹೊಣವದು ಇತ್ಯಾದಿ, ಇದರಿಂದ ಸರ್ವಥಾ ಶ್ರೇಯಸ್ಸಿಲ್ಲೆ. ತಪ್ಪು ಮಾಡಿದವಕ್ಕೆ ಶಿಕ್ಷೆ ಕೊಡ್ಳೆ ಪ್ರತ್ಯೇಕ ವ್ಯವಸ್ಥೆಯೇ ಇದ್ದು. ಲೌಕಿಕ ಜೀವನಲ್ಲಿ ನೋಡಿರೆ ತಪ್ಪಿತಸ್ಥನ ವಿರುದ್ಧ ಕ್ರಮ ಕೈಗೊಂಬಲೆ ಕಾನೂನು, ಆರಕ್ಷಕ ಠಾಣೆ, ನ್ಯಾಯಾಲಯ ಇದ್ದು. ಅದು ಬಿಟ್ಟು ನೇರವಾಗಿ ಕಾನೂನಿನ ಕೈಗೆತ್ತಿಗೊಂಡು ಸಲ್ಲದ ಕಾರ್ಯಕ್ಕೆ ಇಳಿವದು ಎಂದಿಂಗೂ ಒಳ್ಳೆದಲ್ಲ. ಹಾಂಗೇ ಭಗವಂತನ ರಾಜ್ಯಲ್ಲಿ ತಪ್ಪಿತಸ್ಥನ ಮೇಲೆ ಕ್ರಮ ಕೈಗೊಂಬಲೆ ಪ್ರತ್ಯೇಕ ವ್ಯವಸ್ಥೆ ಇದ್ದು. ಪಾಪಿಗಳ ಹಿಡುದು ದಂಡುಸುವ/ತಿದ್ದುವ ಕ್ರಮ ಭಗವಂತ° ನೋಡಿಗೊಳ್ತ°. ಹಾಂಗಾಗಿ ಪ್ರತೀಕಾರ ಮನೋಭಾವ ನಮ್ಮಲ್ಲಿ ಇರೆಕ್ಕಾದ್ದಲ್ಲ. ಇನ್ನೊಬ್ಬಂಗೆ ಕೆಡುಕಿನ ಬಗವದೋ ಶಾಪ ಕೊಡುವದೋ ನವಗೆ ಅಧಿಕಾರ ಇಲ್ಲದ್ದು. ಇದರ ಬದಲು, ಭಗವಂತ° ನೋಡಿಗೊಳ್ತ° ಹೇಳ್ವ ಅಚಲ ಭರವಸೆಯೊಂದಿಂಗೆ ನಮ್ಮ ಕಾರ್ಯ ಎಂತ ಇದ್ದೋ ಅದರ ನೋಡಿಗೊಂಡು ಹೋಪದು ಉತ್ತಮ ಲಕ್ಷಣ.
 5. ಆರ್ಜವಮ್ಸರಳತೆ. ಸರಳ ಜೀವನ, ಮುಖವಾಡ ಇಲ್ಲದ್ದ ಬದುಕು, ನೇರ ನಡೆ-ನುಡಿ. ಒಳ ಒಂದು ಹೆರ ಒಂದು ಹೇಳಿ ಇಲ್ಲದ್ದ ಪ್ರಾಮಾಣಿಕ ಜೀವನ. ಇನ್ನೊಬ್ಬ ನೋಡೆಕು, ಮೆಚ್ಚೆಕು, ಹೊಗಳೆಕು ಹೇದು ನಮ್ಮಲ್ಲಿ ಇಲ್ಲದ್ದರ ಪ್ರದರ್ಶನಕ್ಕೆ ಹೆರಡುವದು ಎಂದಿಂಗೂ ಶ್ರೇಯಸ್ಕರವಲ್ಲ. 
 6. ಆಚಾರ್ಯೋಪಾಸನಮ್ (ಗುರೋಪಾಸನೆ) ಆಚಾರ್ಯ° ಹೇದರೆ ಏವುದು ಸರಿ (ಮಾಡ್ಳಕ್ಕು), ಏವುದು ತಪ್ಪು (ಮಾಡ್ಳಾಗ) ಹೇಳ್ವದರ ಸರಿಯಾಗಿ ಅರ್ತು ಅದರ ಆಚರಣಗೆ ತಪ್ಪವ°. ತಾನು ಸತ್ಯವ ಕಂಡು, ಸಮಾಜದ ಮುಂದೆ ಅದರ ನಡದು ತೋರುಸುವವ°. ಅಂಥವರ ಸೇವೆ ಮಾಡೆಕು ಹೇಳಿ ಭಗವಂತ° ಇಲ್ಲಿ ಹೇಳುತ್ತ°. ಜ್ಞಾನಿಗೊ ಸುಲಭವಾಗಿ ಸಿಕ್ಕುತ್ತವಿಲ್ಲೆ. ಹಾಂಗೇ, ಅವು ಸರಿಯಾಗಿ ಪರೀಕ್ಷಿಸದ್ದೆ ಆರಿಂಗೂ ಜ್ಞಾನಧಾರೆ ಎರೆತ್ತವಿಲ್ಲೆ. ಏನೇ ಆದರೂ ಜ್ಞಾನಿಗಳ ಬೆನ್ನು ಬಿಡ್ಳಾಗ. ನಮ್ಮಲ್ಲಿಪ್ಪ ಜ್ಞಾನತೃಷೆ ಗಾಢವಾಗಿದ್ದಲ್ಲಿ ಖಂಡಿತಾ ಅವ್ವು ಜ್ಞಾನ ಧಾರೆ ಮಾಡುತ್ತವು. ಜ್ಞಾನ ಬೇಕಾರೆ ಜ್ಞಾನಿಗೊ ಕೊಡುವ ತನಕ ಕಾಯೇಕು. ಹಾಂಗಾಗಿ ಯೋಗ್ಯ ಆಚಾರ್ಯ° = ಗುರುವಿನ ಸಂಪರ್ಕಲ್ಲಿ ಇರೆಕು. ಗುರುಸೇವೆ ಮಾಡಿ ಗುರುಪ್ರೀತಿಗೆ  ಪಾತ್ರರಾಗಿ ಗುರುಕೃಪೆಯ ಪಡಕ್ಕೊಂಡು ಮುಂದಾಣ ದಾರಿಯ ಜ್ಞಾನಮಯದೀಪವಾಗಿಸಿಕೊಳ್ಳೆಕು.
 7. ಶೌಚಮ್ಶುಚಿತ್ವ. ಶುಚಿ ಹೇಳಿರೆ ಮಡಿ. ನಾವು ಮಾಡಿ ಮಾಡುತ್ತರ ಬದಲು ಮಡಿಯಾಗಿಪ್ಪಲೆ ಕಲಿಯೆಕು. ಇಲ್ಲಿ ಬರೇ ಸ್ನಾನದ ಮಡಿ ಅಲ್ಲ. ಸ್ನಾನದ ಮಡಿ ನಮ್ಮ ಬಾಹ್ಯ ಮಡಿಯಷ್ಟನ್ನೇ ಸೂಚಿಸುತ್ತು. ಚಂಡಿ ವಸ್ತ್ರ ಕಚ್ಚೆ ಕಟ್ಟಿಗೊಂಡು ದಾರಿ ಬಿಡಿ ದಾರಿ ಬಿಡಿ, ಮುಟ್ಟಬಾರದು ಹೇಳ್ವದು ನಿಜವಾದ ಮಡಿ ಅಲ್ಲ. ಅದು ಕೇವಲ ಮಾನಸಿಕ ಭ್ರಮೆ. ಶುಚಿ ಹೇಳ್ವದು ಮೂಲಭೂತವಾಗಿ ಮನಸ್ಸಿಂಗೆ ಸಂಬಂಧಪಟ್ಟದ್ದು. ಅದಕ್ಕೆ ಪೂರಕವಾಗಿ ದೇಹ ಶುದ್ಧಿ. ದೇಹಶುದ್ಧಿ ಇಲ್ಲದ್ದೆ ಮಾನಸಿಕ ಶುದ್ಧಿ ಅಸಾಧ್ಯ. ಹಾಂಗೇ ಶರೀರ ಶುದ್ಧಿ ಮಡಿಕ್ಕೊಂಡಿಪ್ಪ ಮಾಂತ್ರಕ್ಕೆ ಎಂತ ಸಾಧಿಸಿದ ಹಾಂಗೂ ಆವ್ತಿಲ್ಲೆ. ಪ್ರಾಪಂಚಿಕ ವಿಷಯ (ಕಶ್ಮಲ)ವ ಬಿಟ್ಟು (ಅದುವೇ ಒಂದು ಸ್ನಾನ), ಸಂಪೂರ್ಣ ಮನಸ್ಸಿನ ಭಗವಂತನಲ್ಲಿ ನೆಲೆ ಮಾಡುವದು ಆಧ್ಯಾತ್ಮಿಕ ಮಡಿ. ಅದು ಕಾಯಾವಾಚಾಮನಸಾ ಮಡಿ. ಮನಸ್ಸಿಲ್ಲಿ ಕೆಟ್ಟ ಯೋಚನೆ ಬಂದರೆ, ಬಾಯಿಲಿ ಕೆಟ್ಟ ಮಾತು ಬಂದರೆ, ಕಣ್ಣಿಲ್ಲಿ ಕೆಟ್ಟದ್ದರ ನೋಡಿರೆ.. ಇವೆಲ್ಲವೂ ಮೈಲಿಗೆಯೇ. ಶಾಸ್ತ್ರಜ್ಞಾನ ಇಲ್ಲದ್ದ ಮಡಿ, ಮಡಿ ಆವ್ತಿಲ್ಲೆ. ಶರೀರ ಶುದ್ಧಿಯಾಗಿ ಮನಸ್ಸು ತುಂಬಾ ದೇವರ ಸ್ಮರಣೆ ಚಿಂತನೆ ಯಥಾರ್ಥವ ತಿಳಿವದೇ ನಿಜವಾದ ಮಡಿ. ಹಾಂಗಾಗಿ ನಮ್ಮ ಮನಸ್ಸಿಲ್ಲಿ ಏವತ್ತೂ ‘ಹರೇ ರಾಮ ಹರೇ ಕೃಷ್ಣ’ ಹೇಳಿ ಸ್ಮರಣೆ ಆವ್ತಾ ಇರೆಕು.

            ಶರೀರವ ಶುದ್ಧಿ ಮಾಡ್ಳೆ ಇಪ್ಪದು ಮೀಯಾಣ. ಮನಸ್ಸಿನ ಶುದ್ಧಮಾಡ್ಳೆ ಬೇಕಾಗಿ ಇಪ್ಪದು ಆಚಮನ, ಪ್ರಾಣಾಯಾಮ. “ಓ  ಭಗವಂತ, ನಿನ್ನ ಕಾರುಣ್ಯಧಾರೆಂದ ಎನ್ನ ಸಹಸ್ರಾರಂದ ಅಮೃತವ ಕೆಳ ಇಳಿಶಿ, ಎನ್ನ ಇಡೀ ಮೈ ಪಾವನ ಅಪ್ಪಾಂಗೆ ಮಾಡು, ಎನ್ನೊಳ ಇಲ್ಲ ಎಲ್ಲ ಪಾಪದ ಕೊಳೆ ಸುಟ್ಟು ತೊಳದು ಹೋಗಲಿ” ಹೇಳ್ವ ಅನುಸಂದಾನಂದ ಧ್ಯಾನಪೂರ್ವಕ ನಿರಸನ ಮಾಡೆಕು.  ಇಲ್ಲಿ ನಮ್ಮ ತಲೆಂದ ಅಮೃತಧಾರೆ ಇಳುದು ಬಪ್ಪದರ ನಾವು ಅನುಭವಪೂರ್ವಕ ಅನುಭವುಸೆಕು. ಪ್ರಾಣಾಯಾಮಂದ ನಮ್ಮ ಒಳಾಣ ಕೊಳೆ ಸುಟ್ಟು ತೊಳದು ಹೋವ್ತು. ನಮ್ಮ ಅಂಗಾಂಗಲ್ಲಿ ಕೂದುಗೊಂಡಿಪ್ಪ ಭಗವಂತನ ಸ್ಮರಣೆಯೇ ಆಚಮನ. “ಓ ನೀರೆ, ನೀನು ಸುಖದ ಸೆಲೆ, ನೀನು ಸುಖದ ನೆಲೆ, ನಿನ್ನ ಪ್ರೋಕ್ಷಿಸಿಗೊಳ್ಳುತ್ತೆ. ಆ ಭಗವಂತ ಎನ್ನಲ್ಲಿ ಬಂದು ನೆಲಸವ ಹಾಂಗೆ ಮಾಡು” ಹೇದು ಪ್ರಾರ್ಥಿಸಿಗೊಂಡು ಪ್ರೋಕ್ಷಣೆ ಮಾಡಿಗೊಂಬದು. ಇವೆಲ್ಲವ ನಾವು ಅರ್ತು ಮಾಡಿಯಪ್ಪಗ ಮಾಂತ್ರ ಅದು ನಮ್ಮ ಆಂತರಿಕ ಮಡಿಯಾವುತ್ತು. ದೇವರ ನೆನಪಿಸಿಗೊಂಬದೇ ಮಡಿ, ದೇವರ ಮರವದೇ ಮೈಲಿಗೆ. “ಯಃ ಸ್ಮರೇತ್ ಪುಂಡರೀಕಾಕ್ಷಂ ಸಃ ಬಾಹ್ಯಾಭ್ಯಂತರಃ ಶುಚಿಃ” – ಪುಂಡರೀಕಾಕ್ಷನ ಆರು ಸ್ಮರಣೆ ಮಾಡುತ್ತನೋ, ಅವ° ಹೆರವೂ ಒಳವೂ ಶುಚಿಯಾಗಿದ್ದ°. ದೇವರ ಸ್ಮರಣೆ ಇಲ್ಲದ್ದೆ ಅಂತರಂಗ ಶುದ್ಧಿ ಇಲ್ಲೆ.

8. ಸ್ಥೈರ್ಯಮ್ಮನಸ್ಸಿನ ಸ್ಥಿರತೆಯ ಸ್ಥೈರ್ಯ ಹೇದು ಹೇಳುವದು. ನವಗೆ ನಮ್ಮದೇ ಆದ ಸ್ವಂತ ನಿರ್ಧಾರಂಗೊ ಬೇಕು. ಆರೋ ಹೇಳಿದಾಂಗೆಲ್ಲ ನಾವು ನಮ್ಮ ನಿರ್ಧಾರವ ಬದಲಿಸಿಗೊಂಡು ಗೊಂದಲಕ್ಕೀಡಪ್ಪಲಾಗ. ನಮ್ಮತನಲ್ಲಿ ಚಿಂತನೆ ಮಾಡ್ಳೆ ಶಕ್ತಿವಂತರಾಯೇಕು. ನವಗೆ ಏವುದಾರು ಪ್ರಶ್ನೆ ಬಂದರೆ ಅದಕ್ಕೆ ಉತ್ತರವ ಕಂಡುಗೊಂಬ ಸಾಮರ್ಥ್ಯ ನಮ್ಮ ತಲೆಲಿಯೇ ಇರ್ತು. “ಎಲ್ಲಿ ಪ್ರಶ್ನೆ ಇದ್ದೋ, ಅಲ್ಲಿ ಉತ್ತರವೂ ಇದ್ದು”. ಶಾಸ್ತ್ರವ ಸರಿಯಾಗಿ ಅಧ್ಯಯನ ಮಾಡಿ ನಮ್ಮ ಸಮಸ್ಯೆಗೊಕ್ಕೆ ಉತ್ತರವ ಕಂಡುಗೊಂಡು ದೃಢವಾಗಿ ಕೆಲಸ ಮಾಡೆಕು. ಮತ್ತೂ ಸಂದೇಹ ಬಂದರೆ ನಿಜಗುರುವಿನತ್ರೆ ಕೇಳಿ ತಿಳಿಯೆಕು. ಅಲ್ಲದ್ದೆ, ಆರಾರೋ ಹೇಳ್ತ ಮಾತಿನ ಸೋಗಿಂಗೆ ಮರುಳಾಗಿ ನಮ್ಮತನವ ಕಳಕ್ಕೊಂಡು ಪತನಕ್ಕೆ ಗುರಿಯಪ್ಪಲಾಗ. ಅದಕ್ಕಾಗಿ ನಾವು ಆತ್ಮಸ್ಥೈರ್ಯವ ಸಾಧುಸೆಕು.

9. ಆತ್ಮವಿನಿಗ್ರಹಃಆತ್ಮಸಂಯಮ / ಇಂದ್ರಿಯ ನಿಯಂತ್ರಣ. ನಮ್ಮ ಇಂದ್ರಿಯ ನಮ್ಮ ಹಿಡಿತಲ್ಲಿರೆಕು. ಇಂದ್ರಿಯ ಹಿಡಿತಲ್ಲಿರೆಕ್ಕಾರೆ ನಮ್ಮ ಮನಸ್ಸು ನಮ್ಮ ಹಿಡಿತಲ್ಲಿರೆಕು. ಮನಸ್ಸಿನ ಕೈಲಿ ಮಂಗ° ಅಪ್ಪಲಾಗ. ಮನಸ್ಸಿನ ಮದಾಲು ನಿಯಂತ್ರಿಸೆಕು. ಅದಕ್ಕಾಗಿ ಮದಾಲು ಸಂಪೂರ್ಣ ಭಗವಸೆ, ನಂಬಿಕೆಂದ  ಮನಸ್ಸಿನ ಭಗವಂತನಲ್ಲಿ ನೆಲೆ ನಿಲ್ಲುಸೆಕು. ಹೀಂಗೆ ಮನೋನಿಗ್ರಹದ ಮೂಲಕ ಇಂದ್ರಿಯ ನಿಗ್ರಹ ಶಕ್ತಿಯ ಗಳುಸೆಕು. ಇದಕ್ಕಾಗಿ ಸತತವಾಗಿ ಯೋಗಾಭ್ಯಾಸ ಮಾಡೆಕು. ಯೋಗಾಭ್ಯಾಸ ಕೇವಲ ಶಾರೀರಿಕ ವ್ಯಾಯಮದ ಉದ್ದೇಶಂದ ಮಾಡುವದರಿಂದ ಆಧ್ಯಾತ್ಮಿಕ ಸಾಧನೆ ಮಾಡಿದ ಹಾಂಗಾವ್ತಿಲ್ಲೆ. ಮನಸ್ಸಿನ ಸ್ಥಿರತೆ ಸಾಧುಸಲೆ ಮಾಡುವ ಯೋಗ ಪ್ರಕ್ರಿಯೆ ಆಧ್ಯಾತ್ಮಿಕ ಯೋಗ ಪ್ರಕ್ರಿಯೆ ಆವ್ತು.

10. ಇಂದ್ರಿಯಾರ್ಥೇಷು ವೈರಾಗ್ಯಃಇಂದ್ರಿಯಂಗಳ ಹೆರಪ್ರಪಂಚ ವಿಷಯಲ್ಲಿ ಆಸಕ್ತಿ ತಾಳದ್ದಾಂಗೆ ತಡದು ಮನಸ್ಸಿನ ಭಗವಂತನಲ್ಲಿ ನೆಲೆಗೊಳುಸುವದು. ಇಂದ್ರಿಯ ಚಾಪಲ್ಯ ವಿಷಯಂಗಳಲ್ಲಿ ವಿರಕ್ತಿ ತಾಳುವದು. ಅದನ್ನೇ ಶಮ-ಧಮ ಹೇಳಿ ಹೇಳ್ವದು. ಇಂದ್ರಿಯಂಗಳ ಲೌಕಿಕ ವಿಚಾರಲ್ಲಿ ಹರಿಬಿಡುವದು ಧಮ, ಅದರ ಭಗವಂತನ ಕಡೆಂಗೆ ಹರಿಬಿಡುವದು ಶಮ. ಭಗವಂತನ ಬಗ್ಗೆ ತಿಳುದಪ್ಪಗ ಇಂದ್ರಿಯ ಇನ್ಯಾವುದೇ ಲೌಕಿಕ ವಿಷಯಲ್ಲಿ ಆಸಕ್ತಿ ತಾಳುತ್ತಿಲ್ಲೆ. ಭಗವಂತಂಗೆ ಇಷ್ಟ ಆಲ್ಲದ್ದ ಅನ್ಯ ವಿಷಯಂಗಳಲ್ಲಿ ವಿರಕ್ತಿ ಉಂಟಾವ್ತು. ಪಂಚೇಂದ್ರಿಯ ವಿಷಯಂಗಳಾದ ಶಬ್ದ, ಸ್ಪರ್ಶ, ರೂಪ, ರಸ, ಗಂಧದ ಬಗ್ಗೆ ವಿರಕ್ತಿ ತಾಳೆಕು. ಇಂದ್ರಿಯ ತೃಪ್ತಿಗಾಗಿ ಅದು ಬೇಕು, ಇದು ಇದ್ದರಾವ್ತಿತ್ತು ಹೇಳ್ವ ಚಿಂತನೆಗೆ ಪಂಚೇಂದ್ರಿಯವ ಹರಿವಲೆ ಬಿಡ್ಳಾಗ. ಬೇಕು ಬೇಡ ಆಯ್ಕೆ ಇಲ್ಲದ್ದೆ ಸಿಕ್ಕಿದಷ್ಟು ಭಗವಂತನ ಪ್ರಸಾದ, ಅವನ ಸೇವೆಯ ಮುಂದುವರ್ಸುಲೆ ಈ ಪ್ರಸಾದವ ಸ್ವೀಕರುಸುತ್ತೆ ಹೇಳ್ವ ನಿರ್ಧಾರ ಇರೆಕು.

11. ಅನಹಂಕಾರಃನಿರಹಂಕಾರ ಅಥವಾ ಅಹಂಕಾರ ಇಲ್ಲದ್ದೆ ಇಪ್ಪದು. ನಮ್ಮತ್ರೆ ಏವ ದೊಡ್ಡ ಗುಣ ಇದ್ದರೂ ಅಹಂಕಾರದ ಮುಂದೆ ಅವೆಲ್ಲವೂ ವ್ಯರ್ಥ ಆವ್ತು. ಅಹಂಕಾರ ನಮ್ಮ ಇತರ ಎಲ್ಲ ಗುಣಂಗಳ ಹಾಳು ಮಾಡುತ್ತು. ಅಹಂಕಾರ ಇದ್ದಲ್ಲಿ  ಬಾಕಿ ಗುಣಂಗೊಕ್ಕೆ ಅಸ್ತಿತ್ವವೇ ಇಲ್ಲೆ. ಆನೇ ಪಂಡಿತ°, ವಿದ್ವಾಂಸ°, ಅನುಷ್ಠಾನವಂತ°, ಮಡಿವಂತ°.. ಇತ್ಯಾದಿ ನವಗೆ ಅಡರಿರೆ ಅದು ಅಹಂಕಾರ, ಪ್ರತಿಯೊಂದು ವಿಷಯಲ್ಲಿಯೂ ನಮ್ಮ ಕೆಳಮಟ್ಟಕ್ಕೆ ದೂಡುತ್ತು. ಅಹಂಕಾರ ಸಹಿತ ಅನುಷ್ಠಾನ – ಅನುಷ್ಠಾನವೇ ಅಲ್ಲ. ಅದು ಕೇವಲ ಪ್ರದರ್ಶನದ ಆಡಂಬರ. ಅಹಂಕಾರ ಇದ್ದಲ್ಲಿ ಸಾಧನೆ ವ್ಯರ್ಥ. ಎಲ್ಲಿ ಅಹಂಕಾರ ಇದ್ದೋ ಅಲ್ಲಿ ದೇವರು ಒಲಿತ್ತನಿಲ್ಲೆ. ಹಾಂಗಾಗಿ ನಾವು ದೇವರಿಂದ ದೂರ ಸರಿಯೇಕ್ಕಾವ್ತು. ಹಾಂಗಾಗಿ ಆನು ಮಾಡಿದ್ದು, ಎನ್ನಂದ ಆತು ಹೇಳ್ವ ಬೀಗುತ್ತರ ಬಿಡೆಕು. ಭಗವಂತ° ಅವಂಗೆ ಬೇಕಾಗಿ ಎನ್ನ ಕೈಂದ ಮಾಡಿಸಿದ° ಹೇದು ಅವಂಗೆ ಕೃತಜ್ಞತೆಯ ತೋರ್ಸೆಕು.

12. ಜನ್ಮ-ಮೃತ್ಯು-ಜರಾ-ವ್ಯಾಧಿಃ ದುಃಖ-ದೋಷ-ಅನುದರ್ಶನಮ್ಜನ್ಮ-ಮೃತ್ಯು-ಮುಪ್ಪು-ರೋಗ-ದುಃಖ ಅವಲೋಕನ. ಈ ಜೀವನ ಹೇಳ್ವದು ಹುಟ್ಟು ಸಾವಿನ ನೆಡುಕಾಣ ಒಂದು ಪ್ರವಾಹ. ಈ ಪ್ರವಾಹಲ್ಲಿ ವ್ಯಾಧಿ, ಮುಪ್ಪು, ದುಃಖ, ಶೋಕ ಹೇಳ್ವ ಅಲೆಗಳ ಸರಮಾಲೆ. ಈ ನಮ್ಮ ಬದುಕಿನ ಉದ್ದೇಶ ಎಂತರ, ಭಗವಂತ° ನಮ್ಮ ಎಂತಕೆ ಹುಟ್ಟುಸಿದ°, ಮಾನವ ಜನ್ಮವ ಹೇಂಗೆ ಸಾರ್ಥಕ ಮಾಡಿಗೊಳ್ಳೆಕು ಹೇಳ್ವದರ ಅನುದರ್ಶನ (ಅವಲೋಕನೆ) ಮಾಡೆಕು. ಹುಟ್ಟಿಸಿದ°. ಸಾಯಿಸಿದ°, ರೋಗ ಹಿಡುಶಿದ°, ಕಷ್ಟ ಕೊಟ್ಟ° ಹೇದು ಕೊರಗಿಯೊಂಡಿಪ್ಪಲಾಗ. ಅದರ ಬದಲು ಎಂತಕೆ, ಆನೆಂತರ, ಆನೆಂತಕೆ, ಆನೆಂತಮಾಡೆಕು ಹೇಳ್ವ ಚಿಂತನೆಲಿ ಮನಸ್ಸಿನ ಆಳವಾಗಿ ಇಳುಶೆಕು. ಆಹಾರ, ನಿದ್ರಾ, ಭಯ, ಮೈಥುನ ಇವಿಷ್ಟೇ ಜೀವನ ಅಲ್ಲ. ಇದರ ಪ್ರಾಣಿಗಳೂ ಅನುಭವುಸುತ್ತವು. ಹಾಂಗಾಗಿ ಶಾಸ್ತ್ರವ ಓದಿ ಸತ್ಯಕ್ಕೆ ಅನುಗುಣವಾದ ಯಥಾರ್ಥ ದರ್ಶನ ಮಾಡಿಗೊಳ್ಳೆಕು. ಕೇವಲ ಲೌಕಿಕ ಸುಖದ ನಿರೀಕ್ಷೆಲಿ ಬದುಕುವದರ ಬಿಟ್ಟು ಸತ್ಯದ ಸಾಕ್ಷಾತ್ಕಾರಕ್ಕಾಗಿ, ಭಗವಂತನ ಸೇರ್ಲೆ ಬೇಕಾಗಿ, ಲೌಕಿಕ ಸಂಪತ್ತಿನ ವಿಸ್ತಾರಕ್ಕೆ ಹಂಬಲುಸದ್ದೆ, ಭಗವಂತನ ಅಲೌಕಿಕ ಸಂಪತ್ತಿನ ಸುಖವ ಅನುಭವುಸಲೆ ಜೀವನದ ಗುರಿಯಾಗಿ ಮಾಡಿಕೊಳ್ಳೆಕು. ಎಲ್ಲ ಲೌಕಿಕ ಸುಖ ಸಂಪತ್ತು ನಿಸ್ಸಾರ, ಅದರಿಂದಾಚಿಗೆ ಇಪ್ಪ ಭಗವಂತನ ಸಂಪತ್ತೇ ಪರಮ ಸಾರ. ಅದರತ್ತ ಹೆಜ್ಜೆ ಹಾಕೆಕು.

13. ಅಸಕ್ತಿಃನಿರಾಸಕ್ತಿ. ‘ಸಕ್ತಿ’ ಹೇಳಿರೆ ಅಂಟುಸಿಗೊಂಬದು. ‘ಅಸಕ್ತಿ’ ಹೇಳಿರೆ ಅಂಟಿಸಿಗೊಳ್ಳದ್ದೆ ಇಪ್ಪದು. ನಮ್ಮ ಎಲ್ಲ ದುಃಖಕ್ಕೆ ಮೂಲಕಾರಣ ‘ಸಕ್ತಿ’. ಹಾಂಗಾಗಿ ಏವುದರನ್ನೂ ಅಂಟಿಸಿಗೊಂಬಲಾಗ. ಹುಟ್ಟುವಾಗ ಎಂತದೂ ತೈಂದಿಲ್ಲೆ, ಸಾವಾಗ ಎಂತದೂ ಕೊಂಡೋಪಲಿಲ್ಲೆ. ಹಾಂಗಾಗಿ ಲೌಕಿಕವಾದ ಈ ಅಂಟಿಂದ ದೂರ ಇರೆಕು. ಪಾಲಿಂಗೆ ಬಂದರ ಭಗವಂತನ ಪ್ರಸಾದ ಹೇದು ಸ್ವೀಕರಿಸಿಗೊಂಡು ಮತ್ತೂ ಭಗವದ್ಪ್ರೀತಿಗೆ ಭಗವಂತನ ಭಕ್ತಿಸೇವೆಲಿ ತನ್ನ ತೊಡಗಿಸಿಕೊಳ್ಳೆಕು.

14. ಅನಭಿಷ್ವಂಗಃ ಪುತ್ರ-ದಾರ-ಗೃಹ-ಆದಿಷುಮಗ°-ಹೆಂಡತಿ-ಮನೆ-ಮೊದಲಾದವುಗಳಲ್ಲಿ ಸಹವಾಸ ಇಲ್ಲದ್ದಿಪ್ಪದು. ‘ಅಭಿಷ್ವಂಗ’ ಹೇಳಿರೆ ಅತಿಯಾಗಿ ಅಂಟುಸಿಗೊಂಡಿಪ್ಪದು, ಸಹವಾಸಲ್ಲಿಪ್ಪದು. ಅಂಬಗ ಹೆಂಡತಿ ಮನೆ ಮಕ್ಕಳ ಬಿಟ್ಟಿಕ್ಕಿ ಕಾಡಿಂಗೆ ಹೋಪದೋ?! – ಅಲ್ಲ. ಅನಭಿಷ್ವಂಗ ಹೇಳಿರೆ ಅತಿಯಾಗಿ ಅಂಟಿಸಿಗೊಳ್ಳದ್ದೆ ಇಪ್ಪದು. ‘ಇದರ ಬಿಟ್ಟು ಎನ್ನಂದಿಪ್ಪಲೆಡಿಯ’ ಹೇಳ್ವಷ್ಟು ಮಟ್ಟಿಂಗೆ ಅಂಟು- ನಂಟು ಇಪ್ಪಲಾಗ. ಸಮಾಜಲ್ಲಿ, ಕುಟುಂಬಲ್ಲಿ ಇದ್ದುಗೊಂಡು ಕರ್ತವ್ಯವ ನಿಭಾಯಿಸಿಗೊಂಡು ಅಧ್ಯಾತ್ಮ ಸಾಧನೆ ಮಾಡೆಕು ಹೇಳಿ ಭಗವಂತ ಈ ಮೊದಲೇ ಹೇಳಿದ್ದದು. ಹಾಂಗಾಗಿ ಜೀವನಲ್ಲಿ ಮನೆಮಡದಿಮಕ್ಕಳು ಹೇಳ್ವ ಚಿಂತನೆ ಒಂದನ್ನೇ ತಲಗೆ ಹಂಚಿಗೊಳ್ಳದ್ದೆ ಜೀವನಲ್ಲಿ ಎಂತ ಬತ್ತೋ ಅದರ ಸಾಕ್ಷಿಭೂತನಾಗಿ ನೋಡು. ಜೀವನೇ ಒಂದು ನಾಟಕ, ನಾವದರಲ್ಲಿ ಪಾತ್ರಧಾರಿ, ಪ್ರೇಕ್ಷಕ°,  ಭಗವಂತ° ಅದರ ಸೂತ್ರಧಾರಿ , ನಿರ್ದೇಶಕ° ಹೇಳ್ವ  ಸಂಪೂರ್ಣ ಪ್ರಜ್ಞೆ ನಮ್ಮಲ್ಲಿ ಇರೆಕು. ಅದು ಹೊರತು ಎನ್ನ ಹೆಂಡತಿ ಗೆಂಡ ಮಕ್ಕೊ ಮನೆ ಸಂಪಾದನೆ, ಇದರ ಬಿಟ್ಟು ಎನಗೆ ಬದುಕ್ಕಲೇ ಎಡಿಯ ಹೇಳ್ವ ಭಾವನೆಯ ಸಂಪೂರ್ಣವಾಗಿ ಮನಸ್ಸಿಂದ ಹೆರ ಇಡ್ಕೆಕು. ಅತಿಯಾದ ವ್ಯಾಮೋಹ ಇಪ್ಪಲಾಗ, ಪ್ರೀತಿಸಿಗೊ ಆದರೆ ಕೊರಗೆಡ, ನಿರಾಶನಾಗೆಡ ಹೇಳ್ವ ಜೀವನ ತತ್ವ ನಮ್ಮದಾಯೆಕು. ಹಾಂಗಾದಪ್ಪಗ ಹೆಂಡತಿ ಗೆಂಡ ಮಕ್ಕೊ ಸಂಪತ್ತೂ ದೂರ ಅಪ್ಪಗ ದುಃಖ ನಿರಾಶೆ ಉಂಟಾವ್ತಿಲ್ಲೆ, ಆಘಾತ ಉಂಟಾವ್ತಿಲ್ಲೆ. ಬದುಕು ಸುಂದರವಾಗಿರ್ತು. ನೆಮ್ಮದಿಂದ ಕೂಡಿರ್ತು.

15. ನಿತ್ಯಮ್ ಚ ಸಮ-ಚಿತ್ತತ್ವಮ್ ಇಷ್ಟ-ಅನಿಷ್ಟ-ಉಪಪತ್ತಿಷುಇಷ್ಟಾನಿಷ್ಟ ಪ್ರಾಪ್ತಿಲಿ ಸಮ ಚಿತ್ತತೆ. ಜೀವನಲ್ಲಿ ನವಗೆ ಇಷ್ಟವಾದ ಘಟನೆ ನಡಗು, ಅನಿಷ್ಟವಾದ ಘಟನೆಯೂ ನಡಗು. ಇಷ್ಟಾನಿಷ್ಟಂಗೊ ಬಂದಪ್ಪಗ ಮನಸ್ಸಿನ ಸಮತೋಲನವ ಕಳಕ್ಕೊಂಬಲಾಗ. ನಮ್ಮ ಚಿತ್ತ ಸದಾ ಸಮತೋಲನಲ್ಲಿ ಕಾಪಾಡಿಗೊಳ್ಳೆಕು. ಇಷ್ಟ-ಅನಿಷ್ಟ ಹೇದು ಮನಸ್ಸಿಂಗೆ ಲೇಪಿಸಿಗೊಳ್ಳದ್ದೆ ಬಂದದರ ‘ನಾಹಂ ಕರ್ತಾ ಹರಿಃ ಕರ್ತಾ’ – ನಮ್ಮ ಜೀವನಲ್ಲಿ ನಡವ ಪ್ರತಿಯೊಂದು ಘಟನೆ ಭಗವಂತ ನಮ್ಮ ತರಭೇತಿಗೆ ಸೃಷ್ಟಿಸಿದ ಪ್ರಾಯೋಗಿಕ ಶಿಕ್ಷಣ, ಭಗವಂತ° ನವಗೆ ದುಃಖವ ಕೊಟ್ಟು ನಮ್ಮ ಜಾಣರನ್ನಾಗಿ ಮಾಡುತ್ತ° ಹೇಳ್ವ ಚಿಂತನೆಲಿ ಮುನ್ನಡೆಕು. ಅಂಬಗ ಬದುಕು ಆನಂದಮಯವಾಗಿರ್ತು. 

16. ಮಯಿ ಚ ಅನನ್ಯ-ಯೋಗೇನ ಭಕ್ತಿಃ ಅವ್ಯಭಿಚಾರಿಣೀಎನ್ನಲ್ಲಿ (ಭಗವಂತನಲ್ಲಿ) ಪರಿಶುದ್ಧ ಭಕ್ತಿ ಚ್ಯುತಿಯಿಲ್ಲದ್ದೆ  ನಿರಂತರವಾಗಿರಲಿ. ಭಗವಂತ° ಒಬ್ಬನೆ, ಅವನ ಹೆಸರು ಹಲವು. ಅವನತ್ರೆ ಅನನ್ಯ ಭಕ್ತಿಯ ಮಡಿಕ್ಕೊಳ್ಳೆಕು. ಇಲ್ಲಿ ಏಕಭಕ್ತಿ ಬಹಳ ಮುಖ್ಯ. ಬೇರೆ ಬೇರೆ ದೇವತೆಗೊ ಇದ್ದರೂ ಎಲ್ಲ ದೇವತೆಗೊ ಭಗವಂತನ ಅಧೀನ. ಭಗವಂತಂಗೆ ಅರ್ಪುಸದ್ದೆ ಏವುದನ್ನೂ ಬೇರೆ ಏವ ದೇವತೆಗೊ ಕೂಡ ಸ್ವೀಕರುಸುತ್ತವಿಲ್ಲೆ. ಒಂದೊಂದು ದಿನ ಒಂದೊಂದು ದೇವರ ಪೂಜೆ ಮಾಡುವದು, ಒಬ್ಬ ದೇವತೆಯ ಪೂಜಿಸಿರೆ ಇನ್ನೊಬ್ಬ ದೇವತೆ ಕೋಪಿಸಿಗೊಂಗೋ ಹೇದು ಗ್ರೇಶುದು, ಅದಕ್ಕೆ ಮತ್ತೆ ವಿವಿಧ ದೇವತೆಗಳ ಆರಾಧನೆ ಮಾಡುವದು – ಇದು ವ್ಯಭಿಚಾರ ಆವ್ತು. ಹಾಂಗಾಗಿ, ವ್ಯಭಿಚಾರ ಇಲ್ಲದ್ದ., ಚ್ಯುತಿಯಿಲ್ಲದ್ದ, ನಿರಂತರ ಭಕ್ತಿ ಉಪಾಸನೆ ಆಯೇಕು. ಅದರಲ್ಲಿ ಸಂಪೂರ್ಣ ವಿಶ್ವಾಸ ನಂಬಿಕೆ ಸ್ಥೈರ್ಯ ಭಕ್ತಿ ಇರೆಕು. ಭಗವಂತ° ಇಲ್ಲಿ ಹೇಳಿದ್ದ° – ‘ಭಕ್ತಿಃ ಅವ್ಯಭಿಚಾರಿಣೀ’ – ನಮ್ಮ ಭಕ್ತಿ ಅನನ್ಯವಾಗಿದ್ದು ಅವ್ಯಭಿಚಾರಿಣಿಯಾಗಿರೆಕು. ಭಗವಂತ° ಒಬ್ಬನೇ ಸರ್ವಸಮರ್ಥ°, ಸರ್ವಶಕ್ತ°, ಸರ್ವಕಾರಣಂಗಳ ಕಾರಣ° ಹೇಳ್ವ ನಿಷ್ಠಾಭಕ್ತಿ ನಮ್ಮಲ್ಲಿರೆಕು. ದೇವರ ಮೇಗೆ ನಂಬಿಕೆ ಇಲ್ಲದ್ದೆ ಏವ ಶಾಸ್ತ್ರ ಓದಿಯೂ ಉಪಯೋಗ ಇಲ್ಲೆ. ಭಗವಂತನಲ್ಲಿ ಪೂರ್ಣ ನಂಬಿಕೆಂದ ಮಾತ್ರವೇ ಜ್ಞಾನ ಸಾಧನೆ ಸಾಧ್ಯ.

17. ವಿವಿಕ್ತ-ದೇಶ-ಸೇವಿತ್ವಮ್ಏಕಾಂತದ ಜಾಗೆಯ ಹಂಬಲ. ಎಡಿಗಾಷ್ಟು ಅತೀ ಹೆಚ್ಚು ಸಾತ್ವಿಕ ಕಂಪನ ಇಪ್ಪಲ್ಲಿ, ಸಾತ್ವಿಕ ಜನರೊಟ್ಟಿಂಗೆ ವಾಸ ಮಾಡೇಕು. ಪೂರ್ಣಪ್ರಮಾಣಲ್ಲಿ ಅಖಂಡವಾದ ಸಾತ್ವಿಕ ಕಂಪನ ಇಪ್ಪ ಜಾಗೆ ಪುಣ್ಯಕ್ಷೇತ್ರ ಎಣಿಸುತ್ತು. ಅಂತಹ ಸ್ಥಳಲ್ಲಿ ಒಳ್ಳೆದರ ಮಾತ್ನಾಡುವ, ಒಳ್ಳೆಯ ಚಿಂತನೆ ಮಾಡುವ, ಸಜ್ಜನರ ಸಹವಾಸ ಸಾಧ್ಯ. ‘ಇದು ಎಡಿಗಾಗದ್ದೇ ಹೋದಲ್ಲಿ, ಆದಷ್ಟು ಏಕಾಂತವಾಸವ ಅಭ್ಯಾಸ ಮಾಡು. ಅಂತೇ ತಲೆಹರಟೆ ವಿಷಯಕ್ಕೆ ಹತ್ರೆ ಸಿಕ್ಕಿ, ನಿನ್ನ ಅಮೂಲ್ಯ ಜನ್ಮವ ವ್ಯರ್ಥ ಮಾಡಿಗೊಳ್ಳೆಡ’ ಹೇಳಿ ಭಗವಂತ° ಇಲ್ಲಿ ಎಚ್ಚರಿಸಿದ್ದ°.

18. ಅರತಿಃ ಜನ-ಸಂಸದಿಃಜನಜಂಗುಳಿಲಿ ಅನಾಸಕ್ತಿ. ಸಾಮಾನ್ಯವಾಗಿ ಎಲ್ಲಿ ಹೆಚ್ಚು ಜೆನಜಂಗುಳಿ ಇರ್ತೋ ಅಲ್ಲಿ ಮಜಾ ಇರ್ತು ಹೇದು ಗ್ರೇಶಿ ಹೋಪದು. ಆದರೆ ಅಲ್ಲಿ ಅನಗತ್ಯ ವಿಚಾರಂಗಳ ಹೊಳೆಯೇ ಹರ್ಕೊಂಡಿರುತ್ತು. ಇದರಿಂದಾಗಿ ಮನಸ್ಸು ವಿಕಲ್ಪಗೊಳ್ಳುತ್ತೇ ಹೊರತು ಸಾಧನೆ ಮಾಡ್ಳೆ ಏವ ಪ್ರಯೋಜನವೂ ಲಭ್ಯ ಆವ್ತಿಲ್ಲೆ. ಹಾಂಗಾಗಿ ಅಂತಹ ಬೇಡದ್ದ ವಿಚಾರಕ್ಕೆ ಎಲ್ಲಿ ಜೆನಜೆಂಗುಳಿ ಸೇರಿರೋ ಅಂತಹ ಜನಜಂಗುಳಿಂದ ದೂರ ಇದ್ದುಗೊಳ್ಳೆಕು. ಅದರ್ಲಿ ಆಸಕ್ತಿ ತೋರ್ಸಲಾಗ. ಅನಾಸಕ್ತಿ ತಾಳೆಕು.

19. ಅಧ್ಯಾತ್ಮ-ಜ್ಞಾನ-ನಿತ್ಯತ್ವಮ್ಅಧ್ಯಾತ್ಮದ ಜ್ಞಾನಲ್ಲಿ ನಿರಂತರವಾಗಿರೆಕು. ಸಂಪೂರ್ಣ ಕೃಷ್ಣಪ್ರಜ್ಞೆಲಿ ಸಾಧನೆಯ ಪ್ರಗತಿ ಸುಲಭ. ಮದಾಲು ಪಿಂಡಾಂಡ-ಬ್ರಹ್ಮಾಂಡವ ತಿಳಿಯೆಕು. ಮತ್ತೆ ಅದರ ತಿಳಿವ ಅಪೂರ್ವ ಮನಸ್ಸಿನ ವಿಸ್ಮಯದ ಬಗ್ಗೆ ತಿಳಿಯೆಕು. ಮತ್ತೆ ಆನು ಹೇಳಿರೆ ಎಂತರ ಹೇಳ್ವದರ ತಿಳಿಯೆಕು. ಅದಾದ ಮತ್ತೆ ಆತ್ಮವ ನಿಯಂತ್ರುಸುವ ಪರಮಾತ್ಮನ ತಿಳಿಯೆಕು. ಇದು ಅಧ್ಯಾತ್ಮಜ್ಞಾನ. ನಮ್ಮ ಬದುಕಿನ / ಅಧ್ಯಯನದ ಗುರಿ ಅಧ್ಯಾತ್ಮ ಜ್ಞಾನ ಆಗಿರೆಕು. ಅದು ನಿರಂತರವಾಗಿ ಮುಂದುವರಿತ್ತಲೇ ಇರೆಕು.

20. ತತ್ತ್ವ-ಜ್ಞಾನ-ಅರ್ಥ-ದರ್ಶನಮ್ತತ್ವಜ್ಞಾನಕ್ಕೆ (ಅಪರೋಕ್ಷ ಜ್ಞಾನ) ಸಂಬಂಧಿಸಿದ ವಿಷಯಕ್ಕಾಗಿ ಸಿದ್ಧಾಂತದ ಅಧ್ಯಯನ. ಜಗತ್ತಿನ ಮೂಲಭೂತ ಸತ್ಯ ತಿಳಿವಲೆ ನಮ್ಮ ಅಧ್ಯಯನ ಮೀಸಲಾಗಿರೆಸೆಕು. ಮೇಗಾಣ ಎಲ್ಲ ಗುಣಂಗಳಿಂದ ಎಲ್ಲ ಶಾಸ್ತ್ರಂಗೊಕ್ಕೆ ವಿಷಯಭೂತನಾದ, ಎಲ್ಲ ಶಾಸ್ತ್ರಂಗಳಿಂದ ಪ್ರತಿಪಾಧ್ಯಾನಾದ ಭಗವಂತನ ಸಾಕ್ಷಾತ್ಕಾರಕ್ಕೆ ಜೀವನ ಬದ್ಧವಾಗಿರೆಕು.

ಇಲ್ಲಿ ಮೇಗೆ ಹೇಳಿಪ್ಪ ಈ ಗುಣಂಗಳೇ ಜ್ಞಾನ ಮತ್ತೆ ಜ್ಞಾನ ಸಾಧನಂಗೊ. ಇದರಿಂದ ಬೇರೆಯಾಗಿಪ್ಪದೆಲ್ಲವೂ ಅಜ್ಞಾನ ಮತ್ತೆ ಆಜ್ಞಾನದ ಗುರಿ ಆವ್ತು.

ಮುಂದೆ ಎಂತರ….. ?     ಬಪ್ಪವಾರ ನೋಡುವೋ° .

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 13 – SHLOKAS 07 – 11

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download : www.addkiosk.in ; www.giri.in

 

ಚೆನ್ನೈ ಬಾವ°

   

You may also like...

2 Responses

 1. ಉಡುಪುಮೂಲೆ ಅಪ್ಪಚ್ಚಿ says:

  ಚೆನ್ನೈ ಬಾವ,
  ಹರೇ ರಾಮ; ವಾರ ವಾರವೂ ಬಪ್ಪ ನಿ೦ಗಳ ಈ ವಿವರಣೆ ವಾರ೦ದ ವಾರಕ್ಕೆ ಕುತೂಹಲವ ಕೆರಳುಸುತ್ತು.ಈ ಸರ್ತಿಯಾಣ ಕ೦ತಿನ ಓದಿಯಪ್ಪಗ ದೇವರು ಭಕ್ತನಾದವ ಏವದೆಲ್ಲ ಬಿಡೆಕು ಹೇಳಿದ್ದವೋ ಅದೇ ಇ೦ದು ನಮ್ಮಲ್ಲಿ ಮೆರೆತ್ತಾ ಇದ್ದು ಹೇದನುಸುತ್ತು.
  ಎಲ್ಲ ಗುಣ೦ಗಳ ವಿವರಣಗಳುದೆ ಬಾರೀ ಲಾಯಕಕೆ ಬಯಿ೦ದು.ಮು೦ದಾಣ ಕ೦ತಿನ ಹಾದಿಯ ಕಾದೊ೦ಡು ಸದ್ಯ ವಿರಮುಸುತ್ತೆ. ಧನ್ಯವಾದ೦ಗೊ; ನಮಸ್ತೇ.

 2. ಶರ್ಮಪ್ಪಚ್ಚಿ says:

  ನಾವು ನಮ್ಮ ಜೀವನಲ್ಲಿ ಅನುಸರುಸೆಕ್ಕಾದ ಇಪ್ಪತ್ತು ಗುಣಂಗಳ ಐದು ಶ್ಲೋಕಲ್ಲಿ ಭಗವಂತ° ವಿವರಿಸಿದ್ದ.
  ಅದರ ಎಲ್ಲರಿಂಗು ತಲುಪಿಸುವ ಕಾರ್ಯ ಚೆನ್ನೈ ಭಾವಯ್ಯನಿಂದ ಆವ್ತಾ ಇದ್ದು.
  [ದೇವರ ನೆನಪಿಸಿಗೊಂಬದೇ ಮಡಿ, ದೇವರ ಮರವದೇ ಮೈಲಿಗೆ.]
  [‘ನಾಹಂ ಕರ್ತಾ ಹರಿಃ ಕರ್ತಾ’]- ಎಂತಹ ಅದ್ಭುತವಾದ ಮಾತುಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *