Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 11 – ಶ್ಲೋಕಂಗೊ 21 – 31

ಬರದೋರು :   ಚೆನ್ನೈ ಬಾವ°    on   20/12/2012    3 ಒಪ್ಪಂಗೊ

ಚೆನ್ನೈ ಬಾವ°

ಕಳುದವಾರ ಅರ್ಜುನ° ಭಗವಂತನಿಂದ ಅನುಗ್ರಹವಾದ ದಿವ್ಯಚಕ್ಷುವಿನ ಮೂಲಕ ಭಗವಂತನ ವಿರಾಟ್ ಸ್ವರೂಪವ ನೋಡುತ್ತಲಿತ್ತಿದ್ದ°.  “ಅನೇಕವಕ್ತ್ರನಯನಂ ಅನೇಕಾದ್ಭುತದರ್ಶನಂ” ಹೇದು ಸುರುಮಾಡಿ ಭಗವಂತನ ಅದ್ಭುತ ರೂಪವ ನೋಡಿ ರೋಮಾಂಚನಗೊಂಡೇ ” ದ್ಯಾವಾಪೃಥಿವ್ಯೋರಿದಮಂತರಂ ಹಿ ವ್ಯಾಪ್ತಮ್” ಹೇಳ್ವದರ  ಕಂಡು “ಲೋಕತ್ರಯಂ ಪ್ರವ್ಯಥಿತಂ ಮಹಾತ್ಮನ್” – ‘ಮೂರ್ಲೋಕವೇ ಗಾಬರಿಗೊಂಡು ತತ್ತರಿಸಿದ್ದು ಮಹಾತ್ಮನೇ!’ ಹೇದು ಭಗವಂತನತ್ರೆ  ಉದ್ಗರಿಸಿದ° ಅರ್ಜುನ°.  ಮುಂದೆ –

ಶ್ರೀಮದ್ಭಗವದ್ಗೀತಾ – ಏಕಾದಶೋsಧ್ಯಾಯಃ – ವಿಶ್ವರೂಪದರ್ಶನಯೋಗಃ – ಶ್ಲೋಕಾಃ 21 – 31

ಶ್ಲೋಕ

ಅಮೀ ಹಿ ತ್ವಾಂ ಸುರಸಂಘಾ ವಿಶಂತಿ ಕೇಚಿದ್ಭೀತಾಃ ಪ್ರಾಂಜಲಯೋ ಗೃಣಂತಿ ।
ಸ್ವಸ್ತೀತ್ಯುಕ್ತ್ವಾ ಮಹರ್ಷಿಸಿದ್ಧಸಂಘಾಃ ಸ್ತುವಂತಿ ತ್ವಾಂ ಸ್ತುತಿಭಿಃ ಪುಷ್ಕಲಾಭಿಃ ॥೨೧॥

ಪದವಿಭಾಗ

ಅಮೀ ಹಿ ತ್ವಾಮ್ ಸುರ-ಸಂಘಾಃ ವಿಶಂತಿ ಕೇಚಿತ್ ಭೀತಾಃ ಪ್ರಾಂಜಲಯಃ ಗೃಣಂತಿ । ಸ್ವಸ್ತಿ ಇತಿ ಉಕ್ತ್ವಾ ಮಹರ್ಷಿ-ಸಿದ್ಧ-ಸಂಘಾಃ ಸ್ತುವಂತಿ ತ್ವಾಮ್ ಸ್ತುತಿಭಿಃ ಪುಷ್ಕಲಾಭಿಃ ॥

ಅನ್ವಯ

ಅಮೀ  ಸುರ-ಸಂಘಾಃ ತ್ವಾಂ ವಿಶಂತಿ ಹಿ, ಕೇಚಿತ್ ಭೀತಾಃ ಪ್ರಾಂಜಲಯಃ ಗೃಣಂತಿ, ಮಹರ್ಷಿ-ಸಿದ್ಧ-ಸಂಘಾಃ ಸ್ವಸ್ತಿ ಇತಿ ಉಕ್ತ್ವಾ ಪುಷ್ಕಲಾಭಿಃ ಸ್ತುತಿಭಿಃ ತ್ವಾಂ ಸ್ತುವಂತಿ ।

ಪ್ರತಿಪದಾರ್ಥ

ಅಮೀ – ಈ, ಸುರ-ಸಂಘಾಃ – ದೇವತಾಸಮೂಹವು, ತ್ವಾಮ್ ವಿಶಂತಿ ಹಿ – ನಿನ್ನ ಖಂಡಿತವಾಗಿಯೂ ಪ್ರವೇಶಿಸುತ್ತಾ ಇದ್ದವು. ಕೇಚಿತ್ ಭೀತಾಃ – ಕೆಲವು ಮಂದಿ ಭಯಂದ, ಪ್ರಾಂಜಾಲಯಃ – ಕೈಮುಗುದು, ಗೃಣಂತಿ – ಪ್ರಾರ್ಥಿಸುತ್ತಿದ್ದವು, ಮಹರ್ಷಿ-ಸಿದ್ಧ-ಸಂಘಾಃ – ಮಹರ್ಷಿ-ಸಿದ್ಧಪುರುಷರ ಸಮೂಹವು, ಸ್ವಸ್ತಿ ಇತಿ ಉಕ್ತ್ವಾ – ಸಕಲಶಾಂತಿ (ಶುಭ) ಹೇಳಿಗೊಂಡು, ಪುಷ್ಕಲಾಭಿಃ –  ವೇದಮಂತ್ರಂಗಳಿಂದ, ಸ್ತುತಿಭಿಃ – ಸ್ತೋತ್ರಂಗಳಿಂದ, ತ್ವಾಮ್ – ನಿನ್ನ, ಸ್ತುವಂತಿ – ಸ್ತುತಿಸುತ್ತಿದ್ದವು.

ಅನ್ವಯಾರ್ಥ

ದೇವತೆಗಳ ಸಮೂಹ ನಿನ್ನ ಮುಂದೆ ಶರಣಾಗತರಾಗಿ ನಿನ್ನನ್ನೇ ಪ್ರವೇಶಿಸುತ್ತ ಇದ್ದವು. ಕೆಲವು ಮಂದಿ ದೇವತೆಗೊ ಭಯಭೀತರಾಗಿ ಕೈಮುಗುದು ನಿನ್ನ ಪ್ರಾರ್ಥನೆ ಮಾಡುತ್ತಿದ್ದವು. ಮಹರ್ಷಿ-ಸಿದ್ಧಪುರುಷರ ಗುಂಪು ‘ಸ್ವಸ್ತಿ’ ಹೇಳಿ ವೇದ ಸ್ತುತಿಗಳಿಂದ ನಿನ್ನ ಪ್ರಾರ್ಥನೆ ಮಾಡಿಗೊಂಡಿದ್ದವು.

ತಾತ್ಪರ್ಯ / ವಿವರಣೆ

ಭಗವಂತನ ಅತ್ಯದ್ಭುತ ಕಲ್ಪನಾತೀತ ಶಕ್ತಿಸ್ವರೂಪ ಈ ವಿಶ್ವರೂಪದ ಉಗ್ರ ಅಭಿವ್ಯಕ್ತಿಯ ನೋಡಿ  ಅದರ ಕಣ್ಣುಕೋರೈಸುವ ಪ್ರಭೆಯ ನೋಡಿ ಇಡೀ ಪ್ರಪಂಚಲ್ಲಿ ಸಾತ್ವಿಕರು ಹೆದರಿಹೋದವು. ದೇವತೆಗೊ ಗುಂಪುಗುಂಪಾಗಿ ಭಗವಂತನ ಒಳಸೇರ್ಲೆ ತೊಡಗಿದವು. ಜ್ಞಾನಿಗೊ ಭಗವಂತನ ವೇದಮಂತ್ರ, ಸ್ತುತಿಗಳಿಂದ ಸ್ತುತಿಸಿ ಜಗತ್ತಿಂಗೆ ಮಂಗಳವಾಗಲಿ (ಸ್ವಸ್ತಿ) ಹೇದು ಹರಸುತ್ತಿದ್ದವು. ಋಷಿಮುನಿಗೊ ನಾನಾ ಸ್ತೊತ್ರಂಗಳಿಂದ ಭಗವಂತನ ಪ್ರಾರ್ಥಿಸಲೆ ತೊಡಗಿದವು. 

ಶ್ಲೋಕ

ರುದ್ರಾದಿತ್ಯಾ ವಸವೋ ಯೇ ಚ ಸಾಧ್ಯಾ ವಿಶ್ವೇsಶ್ವಿನೌ ಮರುತಶ್ಚೋಷ್ಮಪಾಶ್ಚ ।
ಗಂಧರ್ವಯಕ್ಷಾಸುರಸಿದ್ಧಸಂಘಾಃ ವೀಕ್ಷಂತೇ ತ್ವಾಂ ವಿಸ್ಮಿತಾಶ್ಚೈವ ಸರ್ವೇ ॥೨೨॥

ಪದವಿಭಾಗ

ರುದ್ರ-ಆದಿತ್ಯಾಃ ವಸವಃ ಯೇ ಚ ಸಾಧ್ಯಾಃ ವಿಶ್ವೇ ಅಶ್ವಿನೌ ಮರುತಃ ಚ ಉಷ್ಮಪಾಃ ಚ । ಗಂಧರ್ವ-ಯಕ್ಷ-ಅಸುರ-ಸಿದ್ಧ-ಸಂಘಾಃ ವೀಕ್ಷಂತೇ ತ್ವಾಮ್ ವಿಸ್ಮಿತಾಃ ಚ ಏವ ಸರ್ವೇ ॥

ಅನ್ವಯ

ರುದ್ರ-ಆದಿತ್ಯಾಃ, ವಸವಃ, ಯೇ ಚ ಸಾಧ್ಯಾಃ, ವಿಶ್ವೇ ಅಶ್ವಿನೌ ಚ, ಮರುತಃ ಉಷ್ಮಪಾಃ ಚ, ಗಂಧರ್ವ-ಯಕ್ಷ-ಅಸುರ-ಸಿದ್ಧ-ಸಂಘಾಃ ಚ ಸರ್ವೇ ವಿಸ್ಮಿತಾಃ ಏವ ತ್ವಾಂ ವೀಕ್ಷಂತೇ ।

ಪ್ರತಿಪದಾರ್ಥ

ರುದ್ರ-ಆದಿತ್ಯಾಃ  – ಏಕಾದಶರುದ್ರರು-ದ್ವಾದಶಾದಿತ್ಯರು, ವಸುವಃ – ಅಷ್ಟವಸುಗೊ, ಯೇ ಚ ಸಾಧ್ಯಾಃ – ಯಾವೆಲ್ಲ ಸಾಧ್ಯರಿದ್ದವೋ ಅವೆಲ್ಲರೂ ಕೂಡ, ವಿಶ್ವೇ – ವಿಶ್ವೇದೇವರು, ಅಶ್ವಿನೌ ಚ – ಅಶ್ವಿನೀಕುಮಾರರು ಕೂಡ, ಮರುತಃ – ಮರುತ್ತುಗ, ಉಷ್ಮಪಾಃ ಚ – ಪಿತೃಗೊ ಕೂಡ, ಗಂಧರ್ವ-ಯಕ್ಷ-ಅಸುರ-ಸಿದ್ಧ-ಸಂಘಾಃ – ಯಕ್ಷ-ಗಂಧರ್ವ-ಅಸುರ-ಸಿದ್ಧರ ಸಮೂಹವು, ಚ ಕೂಡ ಸರ್ವೇ – ಎಲ್ಲೋರು, ವಿಸ್ಮಿತಾಃ – ವಿಸ್ಮಯಚಕಿತರಾಗಿ, ಏವಂ – ಖಂಡಿತವಾಗಿಯೂ, ತ್ವಾಮ್ ವೀಕ್ಷಂತೇ – ನಿನ್ನ ನೋಡುತ್ತಿದ್ದವು.

ಅನ್ವಯಾರ್ಥ

ಏಕಾದಶರುದ್ರರು, ದ್ವಾದಶಾದಿತ್ಯರು, ಅಷ್ಟವಸುಗೊ, ಸಾಧ್ಯರು, ವಿಶ್ವೇದೇವತೆಗೊ, ಅಶ್ವಿನೀಕುಮಾರರು, ಮರುತ್ತುಗೊ, ಪಿತೃದೇವತೆಗೊ, ಯಕ್ಷರು, ಗಂಧರ್ವರು, ಅಸುರರು, ಮತ್ತೆ ಸಿದ್ಧ ದೇವತೆಗೊ ಬೆರಗಾಗಿ ನಿನ್ನ ನೋಡುತ್ತಿದ್ದವು.

ತಾತ್ಪರ್ಯ/ವಿವರಣೆ

ಭಗವಂತನ ಹತ್ರಂದೆ ಅರ್ಥಮಾಡಿಗೊಂಡ ಪ್ರತಿಯೊಬ್ಬನೂ ಕಣ್ಣಾರೆ ನೋಡಿರದ ಭಗವಂತನ ಈ ವಿಶ್ವರೂಪವ ನೋಡಿ  ಆಶ್ಚರ್ಯಂದ ಗಾಬರಿಯಾಗಿ/ವಿಸ್ಮಯಚಕಿತರಾಗಿ /ಬೆರಗಾಗಿ ಭಗವಂತನನ್ನೇ ನೋಡುತ್ತಿದ್ದವು. ಇವರಲ್ಲಿ ಅವ° ಇವ° ಹೇಳ್ವ ತಾರತಮ್ಯ ಇಲ್ಲೆ. ಭಗವಂತನ ನೋಡ್ಳೆ ಆರೆಲ್ಲ ಯೋಗ್ಯರಾಗಿದ್ದವೋ ಅವೆಲ್ಲರೂ ಈ ವಿಸ್ಮಯವ ನೋಡ್ವ ಅವಕಾಶವ ಪಡಕ್ಕೊಂಡವು.

ಶ್ಲೋಕ

ರೂಪಂ ಮಹತ್ತೇ ಬಹುವಕ್ತ್ರನೇತ್ರಂ ಮಹಾಬಾಹೋ ಬಹುಬಾಹೂರುಪಾದಮ್ ।
ಬಹೂದರಂ ಬಹುದಂಷ್ಟ್ರಾಕರಾಲಂ ದೃಷ್ಟ್ವಾ ಲೋಕಾಃ ಪ್ರವ್ಯಥಿತಾಸ್ತಥಾಹಮ್ ॥೨೩॥

ಪದವಿಭಾಗ

ರೂಪಮ್ ಮಹತ್ ತೇ ಬಾಹು-ವಕ್ತ್ರ-ನೇತ್ರಮ್ ಮಹಾ-ಬಾಹೋ ಬಾಹು-ಬಾಹು-ಊರು-ಪಾದಮ್ । ಬಹು-ಉದರಮ್ ಬಹು-ದಂಷ್ಟ್ರಾ-ಕರಾಲಮ್ ದೃಷ್ಟ್ವಾ ಲೋಕಾಃ ಪ್ರವ್ಯಥಿತಾಃ ತಥಾ ಅಹಮ್ ॥

ಅನ್ವಯ

ಹೇ ಮಹಾ-ಬಾಹೋ!, ಬಹು-ವಕ್ತ್ರ-ನೇತ್ರಮ್, ಬಹು-ಬಾಹು-ಊರು-ಪಾದಮ್, ಬಹು-ಉದರಮ್, ಬಹು-ದಂಷ್ಟ್ರಾ-ಕರಾಲಮ್ ತೇ ಮಹತ್ ರೂಪಂ ದೃಷ್ಟ್ವಾ ಲೋಕಾಃ ಪ್ರವ್ಯಥಿತಾಃ, ತಥಾ ಅಹಮ್ (ಅಪಿ ವ್ಯಥಿತಃ ಅಸ್ಮಿ) ।

ಪ್ರತಿಪದಾರ್ಥ

ಹೇ ಮಹಾ-ಬಾಹೋ – ಓ ಮಹಾಬಾಹುವೇ!, ಬಹು-ವಕ್ತ್ರ-ನೇತ್ರಮ್ – ಅನೇಕ ಮೋರೆ ಕಣ್ಣುಗಳ,  ಬಹು-ಬಾಹು-ಊರು-ಪಾದಮ್ – ಹಲವು ತೋಳು ತೊಡೆ ಕಾಲುಗಳ, ಬಹು-ಉದರಮ್ – ಅನೇಕ ಹೊಟ್ಟೆಗಳಿಪ್ಪ, ಬಹು-ದಂಷ್ಟ್ರಾ-ಕರಾಲಮ್ – ಅನೇಕ ಹಲ್ಲುಗಳಿಂದ ಭೀಕರವಾದ, ತೇ – ನಿನ್ನ, ಮಹತ್ ರೂಪಮ್ – ಮಹತ್ತರ ರೂಪವ, ದೃಷ್ಟ್ವಾ – ನೋಡಿ, ಲೋಕಾಃ – ಲೋಕಂಗಳೇ (ಎಲ್ಲ ಲೋಕಂಗೊ),  ಪ್ರವ್ಯಥಿತಾಃ – ಕ್ಷೋಭೆಗೊಂಡಿದು, ತಥಾ ಅಹಮ್ (ಅಪಿ ವ್ಯಥಿತಃ ಅಸ್ಮಿ) – ಹಾಂಗೇ ಆನೂ ಕೂಡ ಕ್ಷೋಭೆಗೊಂಡವನಾಗಿದ್ದೆ.

ಅನ್ವಯಾರ್ಥ

ಓ ಮಹಾಬಾಹುವೇ – ಹಲವು ಮೋರೆಕಣ್ಣುಗಳುಳ್ಳ, ಅನೇಕ ತೋಳು ತೊಡೆ ಕಾಲು ಉದರಗಳುಳ್ಳ, ಅನೇಕ ಕೋರೆ ಹಲ್ಲುಗಳಿಂದ ಕಾಂಬ ನಿನ್ನ ಈ ಮಹತ್ ರೂಪವ ಕಂಡು ದೇವತೆಗಳನ್ನೊಳಗೊಂಡು ಎಲ್ಲ ಲೋಕಂಗಳೂ ಭಯಗೊಂಡು ದಿಗ್ಭ್ರಮೆಗೊಂಡಿದು. ಹಾಂಗೇ ಆನೂ ಕೂಡ ದಿಗ್ಭಮೆಗೊಂಡವನಾಗಿದ್ದೆ.

ತಾತ್ಪರ್ಯ/ವಿವರಣೆ

ಅರ್ಜುನ° ಹೇಳುತ್ತ° – “ಓ ಇಡೀ ವಿಶ್ವದ ನಿಜವಾದ ಮಹಾಬಾಹುವೇ! ನಿನ್ನ ಈ ಗ್ರೇಶಲೆಡಿಗಾಗದ್ದ ಅದ್ಭುತ ಸ್ವರೂಪವ ಕಂಡು ಇಡೀ ಪ್ರಪಂಚವೇ ನಿಬ್ಬರಗಾಯ್ದು. ಹಾಂಗೇ ಆನೂ ಕೂಡ ಬೆಚ್ಚಿಬಿದ್ದಿದೆ”.

ಬನ್ನಂಜೆ ಈ ಭಾಗವ ವಿವರುಸುತ್ತ ಮತ್ತೆ ಹೇಳುತ್ತವು – ಅರ್ಜುನಂಗೆ ಭಗವಂತನಲ್ಲಿ ಕಂಡದೆಂತರ? ಭಗವಂತನ ನಿಜಸ್ವರೂಪ ಅದು. ಪುರುಷಸೂಕ್ತಲ್ಲಿ ಹೇಳಿಪ್ಪಂತೆ – ಬ್ರಾಹ್ಮಣೋಸ್ಯ ಮುಖಮಾಸೀತ್ । ಬಾಹೂ ರಾಜನ್ಯ ಕೃತಃ । ಊರು ತದಸ್ಯ ಯದ್ವೈಶ್ಯಃ  । ಪದ್ಭ್ಯಾಗ್‍ಂ ಶೂದ್ರೋ ಅಜಾಯತಭಗವಂತನ ಮುಖಂದ ಜ್ಞಾನಿಗಳ ಸೃಷ್ಟಿ, ಬಾಹುವಿಂದ ಕ್ಷತ್ರಿಯರ ಸೃಷ್ಟಿ, ಸೊಂಟ/ತೊಡೆಂದ ವೈಶ್ಯರ ಸೃಷ್ಟಿ ಹಾಂಗೇ ಪವಿತ್ರವಾದ ಪಾದಂದ ಶೂದ್ರರ ಸೃಷ್ಟಿ. ಈ ನಾಲ್ಕು ವರ್ಗಂಗೊ ಈ ಸಮಾಜದ ಆಧಾರ ಸ್ಥಂಭಂಗೊ. ಅರ್ಜುನಂಗೆ ಈ ನಾಲ್ಕು ವರ್ಗದ ಸೃಷ್ಟಿ ಭಗವಂತನ ದೇಹಲ್ಲಿ  ಅಪ್ಪದು ಕಾಣುತ್ತು. ಅದರ ಒಟ್ಟಿಂಗೆ ಆ ಭಗವಂತನೇ ಅಲ್ಲಿ ಎಲ್ಲೋರನ್ನು ಸಂಹರಿಸುವ ಕ್ರಿಯೆ. ಹಲವು ದಾಡೆಗಳಿಂದ ತುಂಬಿದ ರೂಪವ ಅರ್ಜುನ ನೋಡುತ್ತ°. ಭಗವಂತನ ಈ ರೂಪವ ಕಂಡು ಎಲ್ಲೋರು ವಿಸ್ಮಯರಾಯ್ದವು. ಹಾಂಗೇ ಅರ್ಜುನನನೂ ಗಾಬರಿಗೊಳಗಾಯ್ದ°.

ಶ್ಲೋಕ

ನಭಃಸ್ಪೃಶಂ ದೀಪ್ತಮನೇಕವರ್ಣಾನ್ ವ್ಯಾತ್ತಾನನಂ ದೀಪ್ತವಿಶಾಲನೇತ್ರಮ್ ।
ದೃಷ್ಟ್ವಾ ಹಿ ತ್ವಾಂ ಪ್ರವ್ಯಥಿತಾಂತರಾತ್ಮಾ ಧೃತಿಂ ನ ವಿಂದಾಮಿ ಶಮಂ ಚ ವಿಷ್ಣೋ ॥೨೪॥

ಪದವಿಭಾಗ

ನಭಃ-ಸ್ಪೃಶಮ್ ದೀಪ್ತಮ್ ಅನೇಕ-ವರ್ಣಾನ್ ವ್ಯಾತ್ತ-ಆನನಮ್ ದೀಪ್ತ-ವಿಶಾಲ-ನೇತ್ರಮ್ । ದೃಷ್ಟ್ವಾ ಹಿ ತ್ವಾಮ್ ಪ್ರವ್ಯಥಿತ-ಅಂತರ-ಆತ್ಮಾ ಧೃತಿಮ್ ನ ವಿಂದಾಮಿ ಶಮಮ್ ಚ ವಿಷ್ಣೋ ॥ 

ಅನ್ವಯ

ಹೇ ವಿಷ್ಣೋ!, ತ್ವಾಮ್ ನಭಃ-ಸ್ಪೃಶಮ್, ದೀಪ್ತಮ್, ಅನೇಕ-ವರ್ಣಾನ್, ವ್ಯಾತ್ತ-ಆನನಮ್, ದೀಪ್ತ-ವಿಶಾಲ-ನೇತ್ರಮ್, ದೃಷ್ಟ್ವಾ ಹಿ (ಅಹಮ್) ಪ್ರವ್ಯಥಿತ-ಅಂತರ-ಆತ್ಮಾ (ಭೂತ್ವಾ) ಧೃತಿಂ ಶಮಂ ಚ ನ ವಿಂದಾಮಿ ।

ಪ್ರತಿಪದಾರ್ಥ

ಹೇ ವಿಷ್ಣೋ! – ಏ ವಿಷ್ಣುವೇ!, ತ್ವಾಮ್ – ನಿನ್ನ, ನಭಃ-ಸ್ಪೃಶಮ್ – ಆಕಾಶವ ಮುಟ್ಟುವ, ದೀಪ್ತಮ್ – ಹೊಳವ, ಅನೇಕ-ವರ್ಣಾನ್ – ಅನೇಕ ವರ್ಣಂಗಳಿಪ್ಪ, ವ್ಯಾತ್ತ-ಆನನಮ್ – ತೆರೆದ ಬಾಯಿಗಳಿಪ್ಪ, ದೀಪ್ತ-ವಿಶಾಲ-ನೇತ್ರಮ್ – ತೆರೆದ ವಿಶಾಲ ಕಣ್ಣುಗಳ, ದೃಷ್ಟ್ವಾ – ನೋಡಿ, ಹಿ – ಖಂಡಿತವಾಗಿಯೂ, (ಅಹಮ್ – ಆನು), ಪ್ರವಿಥಿತ-ಅಂತರ-ಆತ್ಮಾ ಭೂತ್ವಾ – ಕ್ಷೋಭೆಗೊಂಡವನಾಗಿ (ಪ್ರವಿಥಿತ -ಕ್ಷೋಭೆಗೊಂಡ, ಅಂತರ – ಒಳ, ಆತ್ಮಾ – ಆತ್ಮವು), ಧೃತಿಮ್ – ಸ್ಥಿಮಿತವ, ಶಮಮ್ – ಮಾನಸಿಕ ನೆಮ್ಮದಿಯ, ಚ – ಕೂಡ, ನ ವಿಂದಾಮಿ – ಹೊಂದುತ್ತಿಲ್ಲೆ.

ಅನ್ವಯಾರ್ಥ

ಓ ಸರ್ವಾಂತರ್ಯಾಮಿಯಾದ ವಿಷ್ಣುವೇ!, ಆಕಾಶವ ಮುಟ್ಟುತ್ತಿಪ್ಪ ನಿನ್ನ ಅನೇಕ ಉಜ್ವಲ ವರ್ಣಂಗೊ, ತೆರೆದಿಪ್ಪ ಬಾಯಿಗೊ, ನಿನ್ನ ವಿಶಾಲ ಹೊಳವ ಕಣ್ಣುಗ, ಇವೆಲ್ಲವ ಕಂಡು ಎನ್ನ ಮನಸ್ಸು ಭಯಂದ ತಲ್ಲಣಗೊಂಡಿದು. ಎನಗೆ ಮಾನಸಿಕ ಸ್ತಿಮಿತವಾಗಲೀ ನೆಮ್ಮದಿಯಾಗಲೀ ಹೊಂದಲೆಡಿತ್ತಿಲ್ಲೆ.

ತಾತ್ಪರ್ಯ / ವಿವರಣೆ

ಬನ್ನಂಜೆ ಹೇಳ್ತವು – ಭೂಮಿ ಆಕಾಶವ ವ್ಯಾಪಿಸಿಪ್ಪ ಭಗವಂತನ ಅನಂತ ರೂಪ – ಕತ್ತಲೆಯ ಸ್ಪರ್ಶವೇ ಇಲ್ಲದ್ದ ಬೆಣಚ್ಚಿಯ ಪುಂಜ. “ನಿನ್ನೊಳ ಅನೇಕರು ಶ್ರುತಿ ವಚನಂಗಳಿಂದ, ವೇದಮಂತ್ರಂಗಳಿಂದ ನಿನ್ನ ಹೊಗಳಿ ಸ್ತುತಿಸುತ್ತಿದ್ದವು. ನಿನ್ನ ಅಪ್ರಾಕೃತವಾದ ಬಣ್ಣವ ಕಾಣುತ್ತಲಿದ್ದು. ನಿನ್ನ ಅನುಗ್ರಹ ಬೀರುವ ಕಾರುಣ್ಯದ ಅರಳುಗಣ್ಣುಗಳ ಆನು ನೋಡಿ ಮನಸ್ಸು ಗೊಂದಲವಾವ್ತ ಇದ್ದು. ಓ ವಿಷ್ಣೋ!, [ಯದ್ ವಿಶಿತೋ ಭವತಿ ತತ್ ವಿಷ್ಣುಃ – ಸರ್ವಾಂತರ್ಯಾಮಿ, ಸರ್ವಗತ°, ವಿಶ್ವರೂಪಿ., ‘ವೇತೀತಿ – ವಿಷ್ಣುಃ’ – ಎಲ್ಲೋರು ಆರ ಆಶ್ರಯಿಸಿಕೊಂಡಿದ್ದವೋ ಅವ°- ವಿಷ್ಣು. ‘ವೇತಿ-ಪ್ರಜನಯತಿ’- ಆರು ಈ ಇಡೀ ಪ್ರಪಂಚವ ಸೃಷ್ಟಿ ಮಾಡಿದನೋ ಅವ° ವಿಷ್ಣು; ವೇತಿ-ಗತಿ = ವಿಷ್ಣು – ಎಲ್ಲರನ್ನೂ ರಕ್ಷಣೆ ಮಾಡುವ ಸರ್ವ ರಕ್ಷಕ°, ವೇತಿ-ಕಾಂತಿ(ಇಚ್ಛೆ) – ಇಡೀ ಜಗತ್ತಿನ ರಕ್ಷಿಸಿ ಉದ್ಧಾರ ಮಾಡೆಕು ಹೇಳ್ವ ಸತ್ಯ ಸಂಕಲ್ಪ ಇಪ್ಪವ° – ವಿಷ್ಣು. ಒಟ್ಟಿಲ್ಲಿ ಎಲ್ಲೋರಿಂಗೂ ಆಶ್ರಯನಾದ, ಎಲ್ಲರ ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣನಾದ, ಎಲ್ಲವುದರ ಒಳವೂ ಹೆರವೂ ತುಂಬಿಪ್ಪ, ಮೂರು ಹೆಜ್ಜೆಂದ ಮೂರು ಲೋಕವ ಅಳದವ° – ‘ವಿಷ್ಣು’.], ಈ ನಿನ್ನ ವಿಚಿತ್ರ ರೂಪವ ಅರ್ಥಮಾಡಿಗೊಂಬಲೆಡಿಗಾವ್ತಿಲ್ಲೆ” ಹೇಳಿ ಅರ್ಜುನ° ಭಗವಂತನತ್ರೆ ಹೇಳುತ್ತ°.

ಶ್ಲೋಕ

ದಂಷ್ಟ್ರಾಕರಾಲಾನಿ ಚ ತೇ ಮುಖಾನಿ ದೃಷ್ಟ್ವೈವ ಕಾಲಾನಲಸನ್ನಿಭಾನಿ ।
ದಿಶೋ ನ ಜಾನೇ ನ ಲಭೇ ಚ ಶರ್ಮ ಪ್ರಸೀದ ದೇವೇಶ ಜಗನ್ನಿವಾಸ ॥೨೫॥

ಪದವಿಭಾಗ

ದಂಷ್ಟ್ರಾ-ಕರಾಲಾನಿ ಚ ತೇ ಮುಖಾನಿ ದೃಷ್ಟ್ವಾ ಏವ ಕಾಲ-ಅನಲ-ಸನ್ನಿಭಾನಿ । ದಿಶಃ ನ ಜಾನೇ ನ ಲಭೇ ಚ ಶರ್ಮ ಪ್ರಸೀದ ದೇವೇಶ ಜಗತ್-ನಿವಾಸ ॥

ಅನ್ವಯ

ಹೇ ದೇವೇಶ!, ಹೇ ಜಗತ್-ನಿವಾಸ!, ಕಾಲ-ಅನಲ-ಸನ್ನಿಭಾನಿ ದಂಷ್ಟ್ರಾ-ಕರಾಲಾನಿ ಚ ತೇ ಮುಖಾನಿ ದೃಷ್ಟ್ವಾ ಏವ (ಅಹಂ) ದಿಶಃ ನ ಜಾನೇ, ಶರ್ಮ ಚ ನ ಲಭೇ । (ಅತಃ ತ್ವಂ) ಪ್ರಸೀದ ।

ಪ್ರತಿಪದಾರ್ಥ

ಹೇ ದೇವೇಶ! (ದೇವಾನಾಮ್ ಈಶಃ = ದೇವೇಶಃ ) – ಓ ದೇವ ದೇವನೇ!,  ಕಾಲ-ಅನಲ-ಸನ್ನಿಭಾನಿ  – ಕಾಲಾಗ್ನಿಯ ಸದೃಶವಾಗಿ (ಕಾಲಾಗ್ನಿಯೋ ಎಂಬ ಹಾಂಗೆ), ದಂಷ್ಟ್ರಾ-ಕರಾಲಾನಿ – ಕೋರೆ ಹಲ್ಲುಗಳ, ಚ – ಕೂಡ, ತೇ ಮುಖಾನಿ – ನಿನ್ನ ಮೋರೆಯ, ದೃಷ್ಟ್ವಾ – ನೋಡಿ, ಏವ – ಖಂಡಿತವಾಗಿಯೂ (ಅಹಮ್ – ಆನು), ದಿಶಃ ನ ಜಾನೇ – ದಿಕ್ಕುಗೊ ಗೊಂತಾಗದವನಾಗಿದ್ದೆ, ಶರ್ಮ ಚ ನ ಲಭೇ – ಅನುಗ್ರಹವೂ ಎನ ಸಿಕ್ಕುತ್ತಿಲ್ಲೆ. ಹೇ ಜಗತ್-ನಿವಾಸ! – ಓ ಜಗತ್ತಿಂಗೆ ಆಶ್ರಯನಾದವನೇ!, ಅತಃ ತ್ವಮ್ ಪ್ರಸೀದ – ಹಾಂಗಾಗಿ ನೀನು ಪ್ರಸನ್ನನಾಗು.

ಅನ್ವಯಾರ್ಥ

ಓ ಎಲ್ಲ ದೇವರುಗಳ ದೇವನೇ!,  ಕಾಲಾಗ್ನಿಯ ಹಾಂಗೆ ಪ್ರಾಜ್ವಲ್ಯಮಾನವಾಗಿ ಕಾಂಬ ನಿನ್ನ ಈ ಮೋರೆಯ, ವಿಚಿತ್ರ ಕೋರೆಹಲ್ಲುಗಳ ನೋಡಿ ಎನಗೆ ದಿಕ್ಕೇ ತೋಚುತ್ತಿಲ್ಲೆ. (ಸಮತೋಲನವ ಕಳಕ್ಕೊಂಡು ದಿಗ್ಭ್ರಾಂತನಾಯ್ದೆ). ನಿನ್ನ ಅನುಗ್ರಹವವನೂ ಪಡವಲೆ ಎಡಿತ್ತಿಲ್ಲೆ. ಹಾಂಗಾಗಿ ಓ ಸಮಸ್ತಲೋಕಂಗಳ ಆಶ್ರಯನೇ!, ನೀನು ಪ್ರಸನ್ನನಾಗು. 

ತಾತ್ಪರ್ಯ / ವಿವರಣೆ

ಭಗವಂತನ ಅದ್ಭುತ ಶಕ್ತಿಸಾಮರ್ಥ್ಯರೂಪ, ನೋಡುವಾಗಲೇ ಭಯಂದ ತತ್ತರಿಸಿ ದಿಗ್ಭ್ರಮೆಗೊಂಬ ರೂಪವ ನೋಡಿ ಇಡೀ ಜಗತ್ತು ಭೀತಿಂದ ಬೆರಗಾಯ್ದು. ಹಾಂಗಾಗಿ ಅರ್ಜುನ° ಭಗವಂತನಲ್ಲಿ ಹೇಳುತ್ತ° – “ಹೇ ದೇವೇಶ!, ನಿನ್ನ ಕೋರೆದಾಡೆಗಳಿಂದ ತೆರದ ಬಾಯಿ, ಪ್ರಳಯಕಾಲದ ಕಿಚ್ಚಿನಂತಿಪ್ಪ ಮೋರೆಯ ನೋಡಿ ಗಾಬರಿ ಆಯ್ದು. ನೆಮ್ಮದಿ ಸ್ಥಿಮಿತ ತಪ್ಪಿದ್ದು. ಎಂತ ಮಾಡೆಕು ಹೇಳಿ ದಾರಿಯೇ ಕಾಣುತ್ತಿಲ್ಲೆ. ಓ ಸರ್ವದೇವತೆಗಳ ಒಡಯನೇ!, ಜಗತ್ತಿಂಗೆ ಆಸರೆಯಾಗಿಪ್ಪ ನೀನು ದಯೆದೋರಿ ಪ್ರಸನ್ನನಾಯೆಕು”.

ಶ್ಲೋಕ

ಅಮೀ ಚ ತ್ವಾಂ ದೃತರಾಷ್ಟ್ರಸ್ಯ ಪುತ್ರಾಃ ಸರ್ವೇ ಸಹೈವಾವನಿಪಾಲಸಂಘೈಃ ।
ಭೀಷ್ಮ ದ್ರೋಣಃ ಸೂತಪುತ್ರಸ್ತಥಾಸೌ ಸಹಾಸ್ಮದೀಯೈರಪಿ ಯೋಧಮುಖ್ಖೈಃ ॥೨೬॥

ವಕ್ತ್ರಾಣಿ ತೇ ತ್ವರಮಾಣಾ ವಿಶಂತಿ ದಂಷ್ಟ್ರಾಕರಾಲಾನಿ ಭಯಾನಕಾನಿ ।
ಕೇಚಿದ್ವಿಲಗ್ನಾ ದಶನಾಂತರೇಷು ಸಂದೃಶ್ಯಂತೇ ಚೂರ್ಣಿತೈರುತ್ತಮಾಂಗೈಃ ॥೨೭॥

ಪದವಿಭಾಗ

ಅಮೀ ಚ ತ್ವಾಮ್ ದೃತರಾಷ್ಟ್ರಸ್ಯ ಪುತ್ರಾಃ ಸರ್ವೇ ಸಹ ಏವ ಅವನಿಪಾಲ-ಸಂಘೈಃ । ಭೀಷ್ಮಃ ದ್ರೋಣಃ ಸೂತ-ಪುತ್ರಃ ತಥಾ ಅಸೌ ಸಹ ಅಸ್ಮದೀಯೈಃ ಅಪಿ ಯೋಧ ಮುಖ್ಖೈಃ ॥

ವಕ್ತ್ರಾಣಿ ತೇ ತ್ವರಮಾಣಾಃ ವಿಶಂತಿ ದಂಷ್ಟ್ರಾ-ಕರಾಲಾನಿ ಭಯಾನಕಾನಿ । ಕೇಚಿತ್ ವಿಲಗ್ನಾಃ ದಶನ-ಅಂತರೇಷು ಸಂದೃಶ್ಯಂತೇ ಚೂರ್ಣಿತೈಃ ಉತ್ತಮ-ಅಂಗೈಃ ॥

ಅನ್ವಯ

ಅಮೀ ಚ ಸರ್ವೇ ದೃತರಾಷ್ಟ್ರಸ್ಯ ಪುತ್ರಾಃ ಅವನಿಪಾಲ-ಸಂಘೈಃ ಸಹ ಏವ, ತಥಾ ಭೀಷ್ಮಃ ದ್ರೋಣಃ ಅಸೌ ಸೂತ-ಪುತ್ರಃ ಅಸ್ಮದೀಯೈಃ ಅಪಿ ಯೋಧ-ಮುಖ್ಖೈಃ ಸಹ ತ್ವಾಂ ವಿಶಂತಿ । ತೇ ದಂಷ್ತ್ರಾ-ಕರಾಲಾನಿ ಭಯಾನಕಾನಿ ವಕ್ತ್ರಾಣಿ ತ್ವರಮಾಣಾಃ ವಿಶಂತಿ, ಕೇಚಿತ್ ದಶನ-ಅಂತರೇಷು ವಿಲಗ್ನಾಃ ಚೂರ್ಣಿತೈಃ ಉತ್ತಮ-ಅಂಗೈಃ ಯುಕ್ತಾಃ ಸಂದೃಶ್ಯಂತೇ ।

ಪ್ರತಿಪದಾರ್ಥ

ಅಮೀ – ಈ, ಚ – ಕೂಡ, ಸರ್ವೇ ದೃತರಾಷ್ಟ್ರಸ್ಯ ಪುತ್ರಾಃ – ದೃತರಾಷ್ಟ್ರನ ಎಲ್ಲಾ ಮಕ್ಕೊ, ಅವನಿಪಾಲ-ಸಂಘೈಃ ಸಹ – ಕ್ಷತ್ರಿಯದೊರೆಗಳ ಗುಂಪುಗಳಿಂದ ಕೂಡಿ, ಏವ – ಖಂಡಿತವಾಗಿಯೂ, ತಥಾ – ಹಾಂಗೇ, ಭೀಷ್ಮಃ ದ್ರೋಣಃ – ಭೀಷ್ಮ, ದ್ರೋಣರು, ಅಸೌ ಸೂತ್ರ-ಪುತ್ರಃ – ಈ ಸೂತ್ರಪುತ್ರ° ಕರ್ಣ°, ಅಸ್ಮದೀಯೈಃ ಅಪಿ – ನಮ್ಮವರಿಂದಲೂ ಕೂಡ, ಯೋಧ-ಮುಖ್ಖೈಃ ಸಹ- ಯೋಧಮುಖಂಡರಿಂದ ಕೂಡಿ,  ತ್ವಾಮ್ – ನಿನ್ನ, ವಿಶಂತಿ – ಪ್ರವೇಶಿಸುತ್ತಲಿದ್ದವು. ತೇ – ನಿನ್ನ, ದಂಷ್ಟ್ರಾ-ಕರಾಲಾನಿ – ಕೋಡೆ ದಾಡೆಗಳ, ಭಯಾನಕಾನಿ ವಕ್ತ್ರಾಣಿ – ಭಯಾನಕವಾದ ಬಾಯಿಯ, ತ್ವರಮಾಣಾಃ – ಧಾವಿಸುತ್ತಾ, ವಿಶಂತಿ – ಪ್ರವೇಶಿಸುತ್ತಿದ್ದವು. ಕೇಚಿತ್ – ಕೆಲವರು, ದಶನ-ಅಂತರೇಷು  – ಹಲ್ಲುಗಳೆಡಕ್ಕಿಲಿ, ವಿಲಗ್ನಾಃ – ಸಿಕ್ಕಿಹಾಕ್ಯೊಂಡು, ಚೂರ್ಣಿತೈಃ ಉತ್ತಮ-ಅಂಗೈಃ ಯುಕ್ತಾಃ -ತಲೆಂದ ಜಜ್ಜಲ್ಪಟ್ಟವರಾಗಿ, ಸಂದೃಶ್ಯಂತೇ – ಕಾಣುತ್ತಿದ್ದವು.  

ಅನ್ವಯಾರ್ಥ

ಈ ದೃತರಾಷ್ಟನ ಎಲ್ಲ ಮಕ್ಕೊ ತಮ್ಮ ಮಿತ್ರರಾಜರುಗಳ ಸಹಿತ ಒಂದುಗೂಡ್ಯೊಂಡು, ಹಾಂಗೇ ಭೀಷ್ಮ, ದ್ರೋಣ, ಸೂತಪುತ್ರ ಕರ್ಣ ಸಹಿತ, ಹಾಂಗೇ, ನಮ್ಮ ಕಡೆ ಇಪ್ಪ ಕಾದಾಳುಗಳ ಮುಖಂಡರೂ ಕೂಡ ವೇಗವಾಗಿ ನಿನ್ನ ಭೀಕರ ಬಾಯಿಯೊಳ ಹೊಕ್ಕಿ ಅದರಲ್ಲಿ ಕೆಲವರು ನಿನ್ನ ಕಟವಾಯಿಯೆಡೆಲಿ ಸಿಕ್ಕಿ ನುಜ್ಜುಗುಜ್ಜಾದ ತಲೆಬುರುಡೆಗಳಿಪ್ಪವರಾಗಿ ಕಾಣುತ್ತಿದ್ದು.

ತಾತ್ಪರ್ಯ / ವಿವರಣೆ

ಬನ್ನಂಜೆ ಹೇಳ್ತವು – ಅರ್ಜುನ° ಭವಿಷ್ಯತ್ಕಾಲಲ್ಲಿ ನಡವಲಿಪ್ಪ ಘಟನೆಗಳ ಭಗವಂತನಲ್ಲಿ ಕಾಣುತ್ತಲಿದ್ದ°.  ಪ್ರಪಂಚಲ್ಲಿ ಎಲ್ಲವೂ ಪೂರ್ವ ನಿರ್ಧಾರಿತ. ಇದರ ಅರ್ಜುನ ತನ್ನ ದಿವ್ಯ ದೃಷ್ಟಿಲಿ ಕಾಣುತ್ತಲಿದ್ದ°. ಭೀಷ್ಮ, ದ್ರೋಣ ಮತ್ತೆ ಈ ಕರ್ಣ ಎಲ್ಲೋರು ಆ ಭಗವಂತನ ಬಾಯಿಯೊಳದಿಕೆ ಹೋವ್ತಲಿದ್ದವು. ಒಟ್ಟಿಂಗೆ ಪಾಂಡವ ಪಕ್ಷದ ಸೈನ್ಯದ ಮುಖಂಡರೂ ಕೂಡ. ಅಲ್ಲಿ ಕೆಲವರು ಭಗವಂತನ ಭಯಂಕರ ಕೋರೆ ದಾಡೆಗಳೆಡಕ್ಕಿಲ್ಲಿ ಸಿಕ್ಕಿ ಮಂಡೆ ಹೊಡಿಯಾಗಿ ನುಜ್ಜುಗೊಜ್ಜಾದ್ದು ಕಾಣುತ್ತಲಿದ್ದು.

ಶ್ಲೋಕ

ಯಥಾ ನದೀನಾಂ ಬಹವೋs೦ಬುವೇಗಾಃ ಸಮುದ್ರಮೇವಾಭಿಮುಖಾ ದ್ರವಂತಿ ।
ತಥಾ ತವಾಮಿ ನರಲೋಕವೀರಾ ವಿಶಂತಿ ವಕ್ತ್ರಾಣ್ಯಭಿವಿಜ್ವಲಂತಿ ॥೨೮॥

ಪದವಿಭಾಗ

ಯಥಾ ನದೀನಾಮ್ ಬಹವಃ ಅಂಬು-ವೇಗಾಃ ಸಮುದ್ರಮ್ ಏವ ಅಭಿಮುಖಾಃ ದ್ರವಂತಿ । ತಥಾ ತವ ಅಮೀ ನರ-ಲೋಕ-ವೀರಾಃ ವಿಶಂತಿ ವಕ್ತ್ರಾಣಿ ಅಭಿವಿಜ್ವಲಂತಿ ॥

ಅನ್ವಯ

ಯಥಾ ನದೀನಾಂ ಬಹವಃ ಅಂಬು-ವೇಗಾಃ ಅಭಿಮುಖಾಃ ಸಮುದ್ರಮ್ ಏವ ದ್ರವಂತಿ, ತಥಾ ಅಮೀ ನರ-ಲೋಕ-ವೀರಾಃ ತವ ಅಭಿವಿಜ್ವಲಂತಿ ವಕ್ತ್ರಾಣಿ ವಿಶಂತಿ ।

ಪ್ರತಿಪದಾರ್ಥ

ಯಥಾ ನದೀನಾಮ್  – ಹೇಂಗೆ ನದಿಗಳ, ಬಹವಃ ಅಂಬು-ವೇಗಾಃ – ಅನೇಕ ನೀರಿನ ತೆರಗೊ, ಅಭಿಮುಖಾಃ ಸಮುದ್ರಮ್ ಏವ  – ಸಮುದ್ರದ ಕಡೆಂಗೆಯೇ, ದ್ರವಂತಿ – ಹರಿತ್ತೋ , ತಥಾ – ಹಾಂಗೇ, ಅಮೀ ನರ-ಲೋಕ-ವೀರಾಃ – ಈ ಎಲ್ಲ ಮಾನವ ಸಮುದಾಯದ ವೀರರು, ತವ – ನಿನ್ನ, ಅಭಿವಿಜ್ವಲಂತಿ – ಉರಿಯುತ್ತಿಪ್ಪ, ವಕ್ತ್ರಾಣಿ ವಿಶಂತಿ – ಬಾಯಿಗಳ ಪ್ರವೇಶಿಸುತ್ತಿದ್ದವು.

ಅನ್ವಯಾರ್ಥ

ನದಿಗಳ ಅಧಿಕ ಸಂಖ್ಯೆಯ ಅಲೆಗೊ ಸಮುದ್ರದತ್ತ ಹರಿವ ಹಾಂಗೆ, ಈ ಎಲ್ಲ ಮಹಾಯೋಧರು ಪ್ರಜ್ವಲಿಸುತ್ತಿಪ್ಪ ನಿನ್ನ ಬಾಯಿಯ ಪ್ರವೇಶಿಸುತ್ತಿದ್ದವು.

ತಾತ್ಪರ್ಯ / ವಿವರಣೆ

ಜೀವಿಗೊ ಭಗವಂತನ ಬಾಯಿಯೊಳ ಹೇಂಗೆ ಪ್ರವೇಶಿಸುತ್ತಿದ್ದವು ಹೇಳ್ತದರ ಅರ್ಜುನ ಇಲ್ಲಿ ವರ್ಣನೆ ಮಾಡುತ್ತ°. ನದಿಯ ನೀರು ಹರುದು ಹೇಂಗೆ ಸಮುದ್ರವ ಸೇರ್ಲೆ ಮುನ್ನೆಡೆತ್ತೋ ಹಾಂಗೇ, ಈ ನರಲೋಕದ ವೀರರು ನಿನ್ನ ಸೇರ್ಲೆ ನಿನ್ನ ಪ್ರಜ್ವಲಿಪ ಬಾಯಿಯತ್ತೆ ಹೋಪದು ಕಾಣುತ್ತು!.

ಶ್ಲೋಕ

ಯಥಾ ಪ್ರದೀಪ್ತಂ ಜ್ವಲನಂ ಪತಂಗಾ ವಿಶಂತಿ ನಾಶಾಯ ಸಮೃದ್ಧವೇಗಾಃ ।
ತಥೈವ ನಾಶಾಯ ವಿಶಂತಿ ಲೋಕಾಃ ತವಾಪಿ ವಕ್ತ್ರಾಣಿ ಸಮೃದ್ಧವೇಗಾಃ ॥೨೯॥

ಪದವಿಭಾಗ

ಯಥಾ ಪ್ರದೀಪ್ತಮ್ ಜ್ವಲನಮ್ ಪತಂಗಾಃ ವಿಶಂತಿ ನಾಶಾಯ ಸಮೃದ್ಧ-ವೇಗಾಃ । ತಥಾ ಏವ ನಾಶಾಯ ವಿಶಂತಿ ಲೋಕಾಃ ತವ ಅಪಿ ವಕ್ತ್ರಾಣಿ ಸಮೃದ್ಧ-ವೇಗಾಃ ॥

ಅನ್ವಯ

ಯಥಾ ಪತಂಗಾಃ ಸಮೃದ್ಧ-ವೇಗಾಃ ನಾಶಾಯ ಪ್ರದೀಪ್ತಂ ಜ್ವಲನಂ ವಿಶಂತಿ, ತಥಾ ಏವ ಲೋಕಾಃ ಸಮೃದ್ಧ-ವೇಗಾಃ ನಾಶಾಯ ತವ ಅಪಿ ವಕ್ತ್ರಾಣಿ ವಿಶಂತಿ ।

ಪ್ರತಿಪದಾರ್ಥ

ಯಥಾ ಪತಂಗಾಃ – ಹೇಂಗೆ, ದೀಪದ ಹಾತಗೊ, ಸಮೃದ್ಧ-ವೇಗಾಃ – ತುಂಬುವೇಗಂದ, ನಾಶಾಯ – ನಾಶಕ್ಕಾಗಿ, ಪ್ರದೀಪ್ತಮ್ ಜ್ವಲನಮ್ – ಉರಿಯುತ್ತಿಪ್ಪ ಕಿಚ್ಚಿನ, ವಿಶಂತಿ – ಪ್ರವೇಶಿಸುತ್ತವೋ, ತಥಾ ಏವ – ಹಾಂಗೆಯೇ, ಲೋಕಾಃ – ಇಡೀ ಜಗತ್ತು, ಸಮೃದ್ಧ-ವೇಗಾಃ – ಅತೀವೇಗವಾಗಿ, ನಾಶಾಯ – ವಿನಾಶಕ್ಕಾಗಿ, ತವ – ನಿನ್ನ, ಅಪಿ – ಕೂಡ, ವಕ್ತ್ರಾಣಿ – ಬಾಯಿಯ, ವಿಶಂತಿ – ಪ್ರವೇಶಿಸುತ್ತವು.

ಅನ್ವಯಾರ್ಥ

ತಮ್ಮ ನಾಶಕ್ಕಾಗಿ ಹೇಂಗೆ ಪತಂಗಂಗೊ (ಹಾತೆಗೊ) ಉರಿವ ಕಿಚ್ಚಿನ ವೇಗವಾಗಿ ಪ್ರವೇಶಿಸುತ್ತವೋ ಹಾಂಗೇ ಈ ಲೋಕದ ಜನಂಗೊ ವಿನಾಶಹೊಂದಲೆ ನಿನ್ನ ಬಾಯಿಯತ್ರಂಗೆ ಧಾವುಸುತ್ತಿದ್ದವು.

ತಾತ್ಪರ್ಯ / ವಿವರಣೆ

‘ದೀಪದ ಹಾತೆಗೊ ಸಾವಲೇಳಿಯೇ ಜೋರಾಗಿ ಹಾರಿಬಡ್ಕಂಡು ಹೊತ್ತುವ ದೀಪದ ಕಿಚಿಂಗೆ ಬಂದು ತಾಗುತ್ತಾಂಗೆ ಈ ಲೋಕದ ಮನುಷ್ಯರು ಗಡಬಡಿಲಿ ಓಡ್ಯೊಂಡು ಸಾವಲೆ ಹೇದು ನಿನ್ನ ಬಾಯಿಯ ಪ್ರವೇಶಿಸುತ್ತಿಪ್ಪಾಂಗೆ ಕಾಣುತ್ತು’ ಹೇಳಿ ಅರ್ಜುನ° ಹೇಳುತ್ತ°. ಪಾಪಿಗೊ ಹೇಂಗೆ ಭಗವಂತನ ಭೀಕರ ಬಾಯಿಯೊಳ ಪ್ರವೇಶಿಸುತ್ತಿದ್ದವು ಹೇಳ್ವದರ ಅರ್ಜುನ° ಇಲ್ಲಿ ವರ್ಣಿಸಿದ್ದು.

ಶ್ಲೋಕ

ಲೇಲಿಹ್ಯಸೇ ಗ್ರಸಮಾನಃ ಸಮಂತಾತ್ ಲೋಕಾನ್ಸಮಗ್ರಾನ್ವದನೈರ್ಜ್ವಲದ್ಭಿಃ ।
ತೇಜೋಭಿರಾಪೂರ್ಯ ಜಗತ್ಸಮಗ್ರಂ ಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ ॥೩೦॥

ಪದವಿಭಾಗ

ಲೇಲಿಹ್ಯಸೇ ಗ್ರಸಮಾನಃ ಸಮಂತಾತ್ ಲೋಕಾನ್ ಸಮಗ್ರಾನ್ ವದನೈಃ ಜ್ವಲದ್ಭಿಃ । ತೇಜೋಭಿ ಆಪೂರ್ಯ ಜಗತ್ ಸಮಗ್ರಂ ಭಾಸಃ ತವ ಉಗ್ರಾಃ ಪ್ರತಪಂತಿ ವಿಷ್ಣೋ ॥೩೦॥

ಅನ್ವಯ

ಹೇ ವಿಷ್ಣೋ!, ಸಮಂತಾತ್ ಜ್ವಲದ್ಭಿಃ ವದನೈಃ ಸಮಗ್ರಂ ಲೋಕಾನ್ ಗ್ರಸಮಾನಃ ತ್ವಂ ಲೇಲಿಹ್ಯಸೇ । ತವ ಉಗ್ರಾಃ ಭಾಸಃ ತೇಜೋಭಿಃ ಸಮಗ್ರಂ ಜಗತ್ ಆಪೂರ್ಯ ಪ್ರತಪಂತಿ ।

ಪ್ರತಿಪದಾರ್ಥ

ಹೇ ವಿಷ್ಣೋ! – ಓ ಸರ್ವವ್ಯಾಪಕನಾದ ವಿಷ್ಣುವೇ!, ಸಮಂತಾತ್ – ಎಲ್ಲ ದಿಕ್ಕುಗಳಿಂದ, ಜ್ವಲದ್ಭಿಃ ವದನೈಃ – ಉರಿಯುತ್ತಿಪ್ಪ ಬಾಯಿಂದ, ಸಮಗ್ರಮ್ ಲೋಕಾನ್ – ಸಮಸ್ತ ಜನರ, ಗ್ರಸಮಾನಃ – ನುಂಗುತ್ತಾ, ತ್ವಮ್ – ನೀನು, ಲೇಲಿಹ್ಯಸೇ – ನಕ್ಕಿಯೊಂಡಿದ್ದೆ. ತವ – ನಿನ್ನ,  ಉಗ್ರಾಃ ಭಾಸಃ – ತೀಕ್ಷ್ಣವಾದ ರಶ್ಮಿಗೊ, ತೇಜೋಭಿಃ – ಜ್ವಾಲೆಗಳಿಂದ, ಸಮಗ್ರಮ್ ಜಗತ್ – ಇಡೀ ಪ್ರಪಂಚ, ಆಪೂರ್ಯ – ಆವರಿಸಿ, ಪ್ರತಪಂತಿ – ಸುಡುತ್ತಿದ್ದು.

ಅನ್ವಯಾರ್ಥ

ಓ ವಿಷ್ಣುವೇ!, ಎಲ್ಲ ದಿಕ್ಕಿಂದ ನಿನ್ನ ಉರಿವ ಬಾಯಿಂದ ಎಲ್ಲ ಜನರ ನುಂಗಿ ನಕ್ಕುತ್ತಾ ಇದ್ದೆ. ನಿನ್ನ ತೀಕ್ಷ್ನ ತೇಜಸ್ಸಿನ ಕಿಡಿಂದ (ಕಿರಣಂದ) ಇಡೀ ಪ್ರಪಂಚವೇ ಸುಡುತ್ತಾ ಇದ್ದು. 

ತಾತ್ಪರ್ಯ / ವಿವರಣೆ

ಅರ್ಜುನ° ಹೇಳುತ್ತ° – “ಓ ಎಲ್ಲೆಲ್ಲೂ ತುಂಬಿಪ್ಪ ಭಗವಂತನೇ (ವಿಷ್ಣುವೇ!), ಕೆಂಡ ಕಾರುವ ನಿನ್ನ ಬಾಯಿಂದ ಎಲ್ಲ ಲೋಕವನ್ನೂ ನುಂಗಿ ನೊಣೆತ್ತಾ ಇದ್ದೆ. ಕೋರೈಸುವ ನಿನ್ನ ಮೈಯ ಹೊಳಪು ತೀಕ್ಷ್ಣ ಕಿರಣಂದ ಇಡೀ ವಿಶ್ವವೇ ಸುಡುತ್ತಿದ್ದು. ಎಲ್ಲವನ್ನೂ ನಿನ್ನ ಭೀಕರ ನಾಲಗೆಂದ ನಕ್ಕಿ ನುಂಗುತ್ತಾ ಇದ್ದೆ. ಎಲ್ಲವೂ ನಿನ್ನ ಹೊಟ್ಟೆ ಸೇರುತ್ತಲಿದ್ದು. ಇಡೀ ಜಗತ್ತೇ ನಿನಗೊಂದು ತುತ್ತು. ಆ ನಿನ್ನ ಮೈಯ ತೇಜಸ್ಸಿನ ಕಿರಣ ಪ್ರಖರವಾಗಿದ್ದು ಇಡೀ ವಿಶ್ವವನ್ನೇ ಸುಡುತ್ತು. ಎಲ್ಲರ ಒಳವೂ ಹೆರವೂ ತುಂಬಿಪ್ಪ ನೀನು ಸರ್ವ ಸಂಹಾರಕನಾಗಿ ಕಾಣುತ್ತಲಿದ್ದೆ ವಿಷ್ಣುವೇ

ಶ್ಲೋಕ

ಆಖ್ಯಾಹಿ ಮೇ ಕೋ ಭವಾನುಗ್ರರೂಪೋ ನಮೋsಸ್ತು ತೇ ದೇವವರ ಪ್ರಸೀದ ।
ವಿಜ್ಞಾತುಮಿಚ್ಛಾಮಿ ಭವಂತಮಾದ್ಯಂ ನ ಹಿ ಪ್ರಜಾನಾಮಿ ತವ ಪ್ರವೃತ್ತಿಮ್ ॥೩೧॥

ಪದವಿಭಾಗ

ಆಖ್ಯಾಹಿ ಮೇ ಕಃ ಭವಾನ್ ಉಗ್ರ-ರೂಪಃ ನಮ-ಅಸ್ತು-ತೇ ದೇವವರ ಪ್ರಸೀದ । ವಿಜ್ಞಾತುಮ್ ಇಚ್ಛಾಮಿ ಭವಂತಮ್ ಆದ್ಯಮ್ ನ ಹಿ ಪ್ರಜಾನಾಮಿ ತವ ಪ್ರವೃತ್ತಿಮ್ ॥ 

ಅನ್ವಯ

ಹೇ ದೇವವರ!, ತೇ ನಮಃ ಅಸ್ತು । ತ್ವಂ ಪ್ರಸೀದ । ಭವಾನ್ ಉಗ್ರ-ರೂಪಃ ಕಃ ಅಸ್ತಿ? ತತ್ ಮೇ ಆಖ್ಯಾಹಿ । ಅಹಮ್ ಆದ್ಯಂ ಭವಂತಮ್ ವಿಜ್ಞಾತುಮ್ ಇಚ್ಛಾಮಿ । ತವ ಪ್ರವೃತ್ತಿಂ ಹಿ ಅಹಂ ನ ಪ್ರಜಾನಾಮಿ ।

ಪ್ರತಿಪದಾರ್ಥ

ಹೇ ದೇವವರ! – ಓ ದೇವತೆಗಳಲ್ಲಿ ಶ್ರೇಷ್ಠನಾದವನೇ!, ತೇ ನಮಃ ಅಸ್ತು – ನಿನಗೆ ನಮಸ್ಕಾರ. ತ್ವಮ್ ಪ್ರಸೀದ – ನೀನು ಪ್ರಸನ್ನನಾಗು. ಭವಾನ್ – ನೀನು, ಉಗ್ರ-ರೂಪಃ ಕಃ ಅಸ್ತಿ ? – ಉಗ್ರರೂಪ° ಆರು ಆಗಿದ್ದೆ?. ತತ್ ಮೇ – ಅದರ ಎನಗೆ, ಆಖ್ಯಾಹಿ – ಖಂಡಿತವಾಗಿಯೂ ವಿವರುಸು. ಅಹಮ್ – ಆನು, ಆದ್ಯಮ್ – ಮದಾಲಿಗನಾದ, ಭವಂತಮ್ – ನಿನ್ನ, ವಿಜ್ಞಾತುಮ್ – ತಿಳಿವಲೆ, ಇಚ್ಛಾಮಿ – ಇಚ್ಛಿಸುತ್ತೆ. ತವ ಪ್ರವೃತ್ತಿಮ್ – ನಿನ್ನ ಉದ್ದೇಶವು (ನಡವಳಿಕೆ), ಹಿ – ಖಂಡಿತವಾಗಿಯೂ, ಅಹಮ್ – ಆನು, ನ ಪ್ರಜಾನಾಮಿ – ತಿಳಿಯಲಾರೆ.

ಅನ್ವಯಾರ್ಥ

ಓ ದೇವತೋತ್ತಮನೇ!, ನಿನಗೆ ನಮಸ್ಕಾರ. ನೀನು ಪ್ರಸನ್ನನಾಗು. ಉಗ್ರರೂಪನಾಗಿ ಕಾಂಬ ನೀನು ಆರು? ಅದರ ಎನಗೆ ವಿವರುಸು. ಮದಾಲು ಆನು ಈ ಪ್ರಪಂಚದ ಮೊದಲಿಗನಾದ ನಿನ್ನ ಬಗ್ಗೆ ಸರೀಯಾಗಿ ತಿಳಿವಲೆ ಬಯಸುತ್ತೆ. ನಿನ್ನ ಉದ್ದೇಶವಾದರೂ ಎಂತರ ಹೇಳ್ವದು ಎನಗೆ ಅರ್ಥ ಆವುತ್ತಿಲ್ಲೆ.

ತಾತ್ಪರ್ಯ / ವಿವರಣೆ

ಅರ್ಜುನ° ಭಗವಂತನಲ್ಲಿ ಕಾಂಬ  ವಿಚಿತ್ರ ಸಂಗತಿಗಳ ನೋಡಿ ಕಂಗಾಲಾಗಿ ಹೇಳುತ್ತ° – ಹೇ ದೇವದೇವೋತ್ತಮ! ದೇವತೆಗಳಲ್ಲಿ ಶ್ರೇಷ್ಥನೇ!, ಇಡೀ ಪ್ರಪಂಚವನ್ನೇ ಅಂಜುಸುವ ನೀನಾರು?!. ನಿನ್ನ ಭೀಕರ ರೂಪವ ನಿಲ್ಲುಸಿ ಪ್ರಸನ್ನನಾಗು. ನಿನಗೆ ತಲೆಬಾಗಿ ನಮಸ್ಕಾರ ಸಲ್ಲುಸುತ್ತಾ ಇದ್ದೆ. ದಯೆತೋರು. ಮದಾಲು ಎಲ್ಲೋದಕ್ಕೂ ಮೊದಲಿಗನಾದ ನಿನ್ನ ತಿಳಿವಲೆ ಆನು ಬಯಸುತ್ತೆ. ನಿನ್ನ ಉದ್ದೇಶವಾದರೂ ಎಂತರ?”. ಈ ರೀತಿಯಾಗಿ ದೈನ್ಯಭಾವಂದ ತಲೆಬಾಗಿ ನಮಸ್ಕರಿಸಿ ಅಂಗಲಾಚಿ ಭಗವಂತನಲ್ಲಿ ಬೇಡುತ್ತ° ಅರ್ಜುನ°.

ಮುಂದೆ ಎಂತಾತು….. ?     ಬಪ್ಪವಾರ ನೋಡುವೋ° .

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 11 – SHLOKAS 21 – 31

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

3 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 11 – ಶ್ಲೋಕಂಗೊ 21 – 31

  1. ಭಗವಂತನ ವಿಶ್ವರೂಪ ವರ್ಣನೆಯ ನಮ್ಮ ಭಾಷೆಲಿ ಓದಿ ಕೊಶಿ ಆತು. ಶ್ರಮಪಟ್ಟು ಪ್ರತಿವಾರವೂ ಒದಗುಸಿ ಕೊಡ್ತಾ ಇಪ್ಪ ಚೆನ್ನೈ ಭಾವಂಗೆ ಧನ್ಯವಾದಂಗೊ.

  2. ಸ್ವಯಂ ಭಗವಂತನ ಮುಖಂದ ಬಂದ ಗೀತೆಯ ನಮ್ಮದೇ ಭಾಷೆಲಿ ವಿವರಿಸುತ್ತಾ ಇಪ್ಪ ಚೆನ್ನೈ ಭಾವಂಗೆ ನಮೋ ನಮ:. ಮುಂದಾಣ ಕಂತುಗಳ ಕಾತುರಂದ ಕಾಯುತ್ತಾ ಇದ್ದೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×