ಶ್ರೀಮದ್ಭಗವದ್ಗೀತಾ – ಅಧ್ಯಾಯ 11 – ಶ್ಲೋಕಂಗೊ 43 – 55

ವಿಶ್ವರೂಪ ದರ್ಶನಲ್ಲಿ ಭಗವಂತನ ಯಥಾರ್ಥ ಸ್ವರೂಪವ ಕಂಡ ಅರ್ಜುನ° ಇಡೀ ಪ್ರಪಂಚವೇ ಅವ°, ಅವನಲ್ಲೇ ಎಲ್ಲವೂ ಇಪ್ಪದು ಹೇಳ್ವದರ ಕಂಡು ಬೆರಗಾಗಿ ಆ ಭಗವಂತಂಗೆ ಸಂಪೂರ್ಣ ಶರಣಾಗತನಾಗಿ ಅವನ ಕೊಂಡಾಡ್ತಾ ಇಪ್ಪ ಅರ್ಜುನ° ಮುಂದೆ ಹೇಳುತ್ತ° – 

 

ಶ್ರೀಮದ್ಭಗವದ್ಗೀತಾ – ಏಕಾದಶೋsಧ್ಯಾಯಃ – ವಿಶ್ವರೂಪದರ್ಶನಯೋಗಃ – ಶ್ಲೋಕಾಃ 43 – 55

ಶ್ಲೋಕ

ಪಿತಾಸಿ ಲೋಕಸ್ಯ ಚರಾಚರಸ್ಯ ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್ ।
ನ ತ್ವತ್ಸಮೋsಸ್ತ್ಯಭ್ಯಧಿಕಃ ಕುತೋsನ್ಯೋ ಲೋಕತ್ರಯೇsಪ್ಯಪ್ರತಿಮಪ್ರಭಾವ ॥೪೩॥

ಪದವಿಭಾಗ

ಪಿತಾ ಅಸಿ ಲೋಕಸ್ಯ ಚರ-ಅಚರಸ್ಯ ತ್ವಮ್ ಅಸ್ಯ ಪೂಜ್ಯಃ ಚ ಗುರುಃ ಗರೀಯಾನ್ । ನ ತ್ವತ್ ಸಮಃ ಅಸ್ತಿ ಅಭ್ಯಧಿಕಃ ಕುತಃ ಅನ್ಯಃ ಲೋಕ-ತ್ರಯೇ ಅಪಿ ಅಪ್ರತಿಮ-ಪ್ರಭಾವ ॥

ಅನ್ವಯ

ಹೇ ಅಪ್ರತಿಮ-ಪ್ರಭಾವ! ತ್ವಮ್ ಅಸ್ಯ ಚರ-ಅಚರಸ್ಯ ಲೋಕಸ್ಯ ಪಿತಾ, ಗರೀಯಾನ್ ಪೂಜ್ಯಃ ಗುರುಃ ಚ ಅಸಿ, ಲೋಕ-ತ್ರಯೇ ಅಪಿ ತ್ವತ್ ಸಮಃ ನ ಅಸ್ತಿ, ಕುತಃ ಅಭ್ಯಧಿಕ ಅನ್ಯಃ ?

ಪ್ರತಿಪದಾರ್ಥ

ಹೇ ಅಪ್ರತಿಮ-ಪ್ರಭಾವ! – ಓ ಅಳತೆಮಾಡ್ಳೆಡಿಯದ್ದಷ್ಟು ಬಲಶಾಲಿಯಾದವನೇ!, ತ್ವಮ್ – ನೀನು, ಅಸ್ಯ ಚರ-ಅಚರಸ್ಯ ಲೋಕಸ್ಯ – ಈ ಚರಾಚರ ಲೋಕದ, ಪಿತಾ – ಅಪ್ಪ°, ಗರೀಯಾನ್ – ಮಹಿಮಾನ್ವಿತ°/ಶ್ರೇಷ್ಠ°, ಪೂಜ್ಯಃ – ಪೂಜನೀಯ°, ಗುರುಃ ಚ ಅಸಿ – ಗುರುವು ಕೂಡ ಆಗಿದ್ದೆ, ಲೋಕ-ತ್ರಯೇ ಅಪಿ – ಮೂರ್ಲೋಕಲ್ಲಿಯೂ ಕೂಡ, ತ್ವತ್ ಸಮಃ ನ ಅಸ್ತಿ – ನಿನ್ನ ಸಮ ಆರೂ ಇಲ್ಲೆ, ಕುತಃ ಅಭ್ಯಧಿಕಃ ಅನ್ಯಃ ? – ಬೇರೆಲ್ಲಿ ಇನ್ನು ಆರಿದ್ದವು ಹೆಚ್ಚಿಗಾಣವ° (ಉನ್ನತ°)?

ಅನ್ವಯಾರ್ಥ

ಹೇ ಅಪ್ರತಿಮ ಬಲಶಾಲಿಯೇ (ಪ್ರಭಾವಿಯೇ!), ನೀನು ಈ ಸಮಸ್ತ ವಿಶ್ವದ ಚರಾಚರ ವಸ್ತುಗಳ ಅಪ್ಪನೂ, ಮಹಿಮಾನ್ವಿತನೂ, ಪೂಜನೀಯನೂ ಹಾಂಗೇ ಗುರುವು ಕೂಡ ಆಗಿದ್ದೆ. ಮೂರ್ಲೋಕಲ್ಲಿಯೂ ನಿನಗೆ ಸರಿಸಾಟಿ ಇನ್ನೊಬ್ಬ ಇಲ್ಲೆ ಮತ್ತಿನ್ನು ಬೇರೆದಿಕ್ಕೆ ಉನ್ನತರಾಗಿಪ್ಪವು ಎಲ್ಲಿದ್ದವು ?

ತಾತ್ಪರ್ಯ / ವಿವರಣೆ

ದೇವೋತ್ತಮ ಪರಮ ಪುರುಷ° ಆ ಭಗವಂತ°, ಮಗಂಗೆ ಅಪ್ಪ° ಪೂಜ್ಯನಾಗಿಪ್ಪಾಂಗೆ ಪೂಜ್ಯ°. ಮೂಲತಃ ಬ್ರಹ್ಮಂಗೇ ವೇದಂಗಳ ಬೋಧಿಸಿದವ° ಆ ಭಗವಂತ° ಈಗ ಅರ್ಜುನಂಗೆ ಭಗವದ್ಗೀತೆಯ ಬೋಧುಸುವದೂ ಅವನೇ. ಹಾಂಗಾಗಿ ಆ ಭಗವಂತನೇ ಆದಿಗುರು. ಭಗವಂತ ನಿಜ ಸ್ವರೂಪವ ಕಂಡುಗೊಂಡ ಅರ್ಜುನ° ಹಾಂಗಾಗಿ ಹೇಳುತ್ತ° – ‘ಎಲ್ಲವನ್ನೂ ಎಲ್ಲರನ್ನೂ ಸೃಷ್ಟಿಸಿದವ° ಎಲ್ಲರನ್ನೂ ಪಾಲುಸುವ ಈ ಸಮಸ್ತ ವಿಶ್ವದ ಅಪ್ಪ° ನೀನು. ಜಗತ್ತಿನ ಗುರುವಾದ ನಿನ್ನತ್ರೆ ಆನು ಬಲುಸಲುಗೆಂದ ನಡಕ್ಕೊಂಡೆ ಈ ಮದಲು. ನಿನಗೆ ಸಾಟಿಯಾದವ° ಮೂರ್ಲೋಕಲ್ಲಿಯೇ ಇಲ್ಲೆ, ಮತ್ತಿನ್ನೆಲ್ಲಿ ಆರಿದ್ದವು ?! , ನಿನ್ನ ಸಮ ಇನ್ನೊಂದು ದೃಷ್ಟಾಂತ ಇಲ್ಲೆ. ಇಡೀ ಜಗತ್ತಿಲ್ಲಿ ನಿನ್ನ ಮೀರುಸುವ ಇನ್ನೊಂದು ಶಕ್ತಿ ಇಲ್ಲೆ. ನೀನು ಅಪ್ರತಿಮ ಬಲಶಾಲಿ/ಮಹಿಮಾನ್ವಿತ°”. ಬನ್ನಂಜೆ ಹೇಳ್ತವು – ಇಲ್ಲಿ ಲೋಕತ್ರಯೇ ಹೇಳಿರೆ ಬರೇ ಮೂರು ಲೋಕ ಹೇಳಿ ಅರ್ಥ ಅಲ್ಲ, ಬದಲಾಗಿ, ಭೂಮಿ ಮತ್ತೆ ಭೂಮಿಂದ ಕೆಳ ಇಪ್ಪ ಲೋಕಂಗೊ, ಮತ್ತು ಭೂಮಿಂದ ಮೇಲೆ ಇಪ್ಪ ಲೋಕಂಗೊ ಹೇಳಿ ಅರ್ಥೈಸೆಕು. ಅದು – “ಈರೇಳು ಲೋಕಲ್ಲಿಯೂ ನಿನ್ನ ಮೀರುಸುವ ಬೇರೆ ಶಕ್ತಿ ಇಲ್ಲೆ. ನಿನ್ನಂದ ಮಿಗಿಲು ಇನ್ನೆಲ್ಲಿ?!” ಹೇಳಿ ಅರ್ಜುನ° ಹೇಳುತ್ತ°.

ಶ್ಲೋಕ

ತಸ್ಮಾತ್ಪ್ರಣಮ್ಯ ಪ್ರಣಿಧಾಯ ಕಾಯಂ ಪ್ರಸಾದಯೇ ತ್ವಾಮಹಮೀಶಮೀಡ್ಯಮ್ ।
ಪಿತೇವ ಪುತ್ರಸ್ಯ ಸಖೇವ ಸಖ್ಯುಃ ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಢುಮ್ ॥೪೪॥

ಪದವಿಭಾಗ

ತಸ್ಮಾತ್ ಪ್ರಣಮ್ಯ ಪ್ರಣಿಧಾಯ ಕಾಯಮ್ ಪ್ರಸಾದಯೇ ತ್ವಾಮ್ ಹಮ್ ಈಶಮ್ ಈಡ್ಯಮ್ । ಪಿತ ಇವ ಪುತ್ರಸ್ಯ ಸಖಾ ಇವ ಸಖ್ಯುಃ ಪ್ರಿಯಃ ಪ್ರಿಯಾಯಾಃ ಅರ್ಹಸಿ ದೇವ ಸೋಢುಮ್ ॥

ಅನ್ವಯ

ಹೇ ದೇವ!, ತಸ್ಮಾತ್ ಕಾಯಂ ಪ್ರಣಿಧಾಯ, ಪ್ರಣಮ್ಯ, ಅಹಮ್ ಈಡ್ಯಮ್ ಈಶಮ್ ತ್ವಾಮ್ ಪ್ರಸಾದಯೇ, ಪುತ್ರಸ್ಯ ಪಿತಾ ಇವ, ಸಖ್ಯುಃ ಸಖಾ, ಪ್ರಿಯಾಯಾಃ ಪ್ರಿಯಃ (ಇವ ಮಮ ಅಪರಾಧಾನ್) ಸೋಢುಮ್ ಅರ್ಹಸಿ ।

ಪ್ರತಿಪದಾರ್ಥ

ಹೇ ದೇವ! – ಓ ದೇವರೇ!, ತಸ್ಮಾತ್ – ಹಾಂಗಾಗಿ, ಕಾಯಮ್ ಪ್ರಣಿಧಾಯ – ಶರೀರವ ನೆಲಕ್ಕೊರಗಿಸಿ, ಪ್ರಣಮ್ಯ – ನಮಸ್ಕರಿಸಿ, ಅಹಮ್ – ಆನು, ಈಡ್ಯಮ್ ಈಶಮ್ – ಪೂಜನೀಯನಾದ ಪರಮಪ್ರಭುವಾದ (ಈಶನಾದ/ಒಡೆಯನಾದ), ತ್ವಾಮ್ – ನಿನ್ನ, ಪ್ರಸಾದಯೇ – ಅನುಗ್ರಹ ಯಾಚಿಸುತ್ತೆ, ಪುತ್ರಸ್ಯ ಪಿತಾ ಇವ – ಮಗನ ಅಪ್ಪನ ಹಾಂಗೆ, ಸಖ್ಯುಃ ಸಖಾ – ಮಿತ್ರನ ಮಿತ್ರನ (ಹಾಂಗೆ), ಪ್ರಿಯಾಯಾಃ ಪ್ರಿಯಃ – ಪ್ರಿಯತಮೆಯೊಂದಿಂಗೆ ಪ್ರಿಯಕರನ (ಹಾಂಗೆ), (ಇವ ಮಮ ಅಪರಾಧಾನ್ – ಹಾಂಗೆ ಎನ್ನ ಅಪರಾಧಂಗಳ), ಸೋಢುಮ್ ಅರ್ಹಸಿ – ಸಹಿಸಲೆ ನೀನು ಅರ್ಹನಾಗಿದ್ದೆ.

ಅನ್ವಯಾರ್ಥ

ಏ ದೇವೋತ್ತಮನೇ!, ಹಾಂಗಾಗಿ ಆನು ಎನ್ನ ಶರೀರವ ನೆಲಕ್ಕೊರಗಿಸಿ ಪೂಜನೀಯ ಪರಮಪ್ರಭುವಾದ ನಿನಗೆ ನಮಸ್ಕರಿಸುತ್ತಿದ್ದೆ (ನಿನಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಲಿದ್ದೆ). ಮಗನತ್ರೆ ಅಪ್ಪನಂತೆ, ಗೆಳೆಯನತ್ರೆ ಗೆಳೆಯನಾಂಗೆ, ಪ್ರಿಯತಮೆಯತ್ರೆ ಪ್ರಿಯಕರನಂತೆ, ನೀನು ಎನ್ನ ಅಪರಾಧಂಗಳ ಸಹಿಸಿ ಸಲಹಲೆ ಅರ್ಹನಾಗಿದ್ದೆ.

ತಾತ್ಪರ್ಯ / ವಿವರಣೆ

ಅರ್ಜುನ° ಹೇಳುತ್ತ° – “ಪ್ರತಿಯೊಂದು ಜೀವಿಯೂ ಪೂಜಿಸೆಕಾದ ಪರಮ ಪ್ರಭುವು ನೀನು. ಆನು ನಿನಗೆ ಸಾಷ್ಟಾಂಗ ನಮಸ್ಕಾರ ನಮಸ್ಕಾರ ಮಾಡಿ ಎನ್ನ ಸಂಪೂರ್ಣ ಗೌರವ ಪ್ರಣಾಮವ ಸಲ್ಲುಸುತ್ತೆ. ನಿನ್ನ ದಯೆಯ ಬೇಡುತ್ತೆ. ಅಪ್ಪ° ಮಗನ ಅವಿಧೇಯತೆಯ, ಸ್ನೇಹಿತ ತನ್ನ ಸ್ನೇಹಿತನ ಅಧಿಕಪ್ರಸಂಗವ, ಗಂಡ ತನ್ನ ಹೆಂಡತಿಯ ಸಲುಗೆಯ ಕ್ಷಮಿಸುತ್ತಾಂಗೆ ನೀನು ಆನು ಮಾಡಿಪ್ಪ ತಪ್ಪುಗಳ ಕ್ಷಮಿಸು”.  ಅರ್ಜುನಂಗೆ ಭಗವಂತನೆದುರು ನಿಂಬಲೆಡಿತ್ತಿಲ್ಲೆ. ಮೈಚಾಚಿ ನಮಸ್ಕರುಸೆಕು ಹೇಳಿ ಹೆರಡತ್ತ°. ಎಲ್ಲೋರಿಂದಲೂ ಸ್ತುತ್ಯಾರ್ಹನಾದ ಭಗವಂತನತ್ರೆ ಸಾಷ್ಟಾಂಗ ನಮಸ್ಕಾರ ಮಾಡಿ ಸರ್ವಾಪರಾಧವ ಕ್ಷಮಿಸಿ ಉದ್ಧರುಸು ಹೇಳಿ ಬೇಡಿಗೊಳ್ತ°. “ಮಗ ಮಾಡಿದ ತಪ್ಪಿನ ಅಪ್ಪ° ಕ್ಷಮಿಸುತ್ತಾಂಗೆ, ಗೆಳೆಯನ ತಪ್ಪಿನ ಗೆಳೆಯ° ಕ್ಷಮಿಸುತ್ತಾಂಗೆ, ಹೆಂಡತಿಯ ತಪ್ಪಿನ ಗಂಡ ಸಹಿಸುತ್ತಾಂಗೆ, ಜಗದ ಪಿತೃವಾದ ನೀನು, ಜಗತ್ತಿನ ಅಲ್ಲ ಅಂತಃಕರಣದ ಗೆಳೆಯನಾದ ನೀನು ಎನ್ನ ತಪ್ಪುಗಳ ಸಹಿಸಿ ಮನ್ನಿಸಿ ಪಾರುಮಾಡು” ಹೇಳಿ ಅರ್ಜುನ° ಭಗವಂತಂಗೆ ನಮಸ್ಕರಿಸಿ ಬೇಡಿಗೊಳ್ತ°.

ಶ್ಲೋಕ

ಅದೃಷ್ಟಪೂರ್ವಂ ಹೃಷಿತೋsಸ್ಮಿ ದೃಷ್ಟ್ವಾ ಭಯೇನ ಚ ಪ್ರವ್ಯಥಿತಂ ಮನೋ ಮೇ ।
ತದೇವ ಮೇ ದರ್ಶಯ ದೇವ ರೂಪಂ ಪ್ರಸೀದ ದೇವೇಶ ಜಗನ್ನಿವಾಸ ॥೪೫॥

ಪದವಿಭಾಗ

ಅದೃಷ್ಟ-ಪೂರ್ವಮ್ ಹೃಷಿತಃ ಅಸ್ಮಿ ದೃಷ್ಟ್ವಾ ಭಯೇನ ಚ ಪ್ರವ್ಯಥಿತಮ್ ಮನಃ ಮೇ । ತತ್ ಏವ ಮೇ ದರ್ಶಯ ದೇವ ರೂಪಮ್ ಪ್ರಸೀದ ದೇವೇಶ ಜಗತ್-ನಿವಾಸ ॥

ಅನ್ವಯ

ಹೇ ದೇವೇಶ!, ಹೇ ಜಗತ್-ನಿವಾಸ!, ಅದೃಷ್ಟ-ಪೂರ್ವಮ್ (ತ್ವಾಮ್ ವಿಶ್ವರೂಪಮ್ ) ದೃಷ್ತ್ವಾ (ಅಹಮ್) ಹೃಷಿತಃ ಅಸ್ಮಿ । ಮೇ ಮನಃ ಭಯೇನ ಪ್ರವ್ಯಥಿತಮ್ (ಅಸ್ತಿ), (ಅತಃ) ಹೇ ದೇವ! (ತ್ವಮ್) ಪ್ರಸೀದ ಚ ತತ್ ಏವ (ಪೂರ್ವ) ರೂಪಮ್ ಮೇ ದರ್ಶಯ ।

ಪ್ರತಿಪದಾರ್ಥ

ಹೇ ದೇವೇಶ! – ಓ ದೇವಾಧಿದೇವನೇ, ಹೇ ಜಗತ್-ನಿವಾಸ! – ಓ ವಿಶ್ವಾಶ್ರಯನೇ!, ಅದೃಷ್ಟ-ಪೂರ್ವಮ್ – ಹಿಂದೆಂದೂ ನೋಡದ್ದ, (ತ್ವಾಮ್ ವಿಶ್ವರೂಪಮ್ – ನಿನ್ನ ವಿಶ್ವರೂಪವ),  ದೃಷ್ಟ್ವಾ – ನೋಡಿ, (ಅಹಮ್ – ಆನು), ಹೃಷಿತಃ ಅಸ್ಮಿ – ಹರ್ಷಿತನಾಗಿದ್ದೆ, ಮೇ ಮನಃ – ಎನ್ನ ಮನಸ್ಸು, ಭಯೇನ – ಹೆದರಿಕೆಂದ, ಪ್ರವ್ಯಥಿತಮ್ (ಅಸ್ತಿ) – ಕ್ಷೋಭೆಗೊಂಡಿದು, (ಅತಃ – ಹಾಂಗಾಗಿ), ಹೇ ದೇವ! – ಓ ಪ್ರಭುವೇ!, (ತ್ವಮ್ – ನೀನು), ಪ್ರಸೀದ – ಅನುಗ್ರಹುಸು, ಚ – ಕೂಡ, ತತ್ ಏವ (ಪೂರ್ವಮ್) – ಅದೇ (ಮದಲಾಣ) ರೂಪಮ್ – ರೂಪವ, ಮೇ – ಎನಗೆ, ದರ್ಶಯ – ತೋರುಸು.

ಅನ್ವಯಾರ್ಥ

ಏ ದೇವಾಧಿದೇವನೇ!, ಓ ಜಗದಾಶ್ರಯನೇ!, ಹಿಂದೆಂದೂ ಕಾಣದ್ದ ನಿನ್ನ ವಿಶ್ವರೂಪವ ನೋಡಿ ಅನು ಹರ್ಷಿತನಾಗಿದ್ದೆ. ಹಾಂಗೇ, ಭಯಂದ ಗಾಬರಿಗೊಂಡಿದ್ದೆ ಕೂಡ. ಹಾಂಗಾಗಿ ಓ ದೇವರೇ!, ನೀನು ಪ್ರಸನ್ನನಾಗಿ ಅನುಗ್ರಹುಸು, ನಿನ್ನ ಮದಲಾಣ ರೂಪಂದಲೇ ಮತ್ತೆನಗೆ ತೋರುಸು.

ತಾತ್ಪರ್ಯ / ವಿವರಣೆ

ಅರ್ಜುನ° ಭಗವಂತನ ಪ್ರಿಯಸಖನಾದ್ದರಿಂದ ಅವಂಗೆ ಏವತ್ತೂ ಪ್ರೀತಿಪಾತ್ರನಾಗಿದ್ದ°. ಅರ್ಜುನ° ತನ್ನ ಪ್ರಿಯಸ್ನೇಹಿತನ ಪರಮತೇಜಸಿರಿವೈಭವವ ನೋಡಿ ಅತೀವ ಹರ್ಷಚಿತ್ತನಾಯ್ದ. ಆದರೆ ಈ ಹಿಂದೆ ಅದೆಷ್ಟು ಸಮಯಂದಲೇ ಒಟ್ಟಿಂಗೆ ಇತ್ತಿದ್ದ ತನ್ನ ಮಿತ್ರನೂ ದೇವರೂ ಗುರುವೂ ರಕ್ಷಕನೂ ಆಗಿಪ್ಪ ಭಗವಂತನ ಈ ಮಹಿಮೆಯ ಕಣ್ಣಾರೆ ಕಂಡಪ್ಪಗ ಸಂತೋಷದೊಟ್ಟಿಂಗೆ ವಿಸ್ಮಯವೂ ಗಾಬರಿಯೂ ಆಗಿ ಒಟ್ಟಿಲ್ಲಿ ಒಂದರಿಯಂಗೆ ಭಯಂದ ರೋಮಾಂಚನಗೊಂಡಿದ. ಭಗವಂತನ ವಿಶ್ವರೂಪವ ನೋಡಿ ಹೆಚ್ಹು ಹೊತ್ತು ನೋಡಿಗೊಂಡು ನಿಂಬಲೆಡಿತ್ತಿಲ್ಲೆ. ಮನಸ್ಸು ನಿಜಸ್ಥಿತಿಯ ನೋಡಿ ಹೆದರಿತ್ತು. ಭಯಂದ ಮನಸ್ಸು ವ್ಯಗ್ರಗೊಂಡತ್ತು. ಕಲ್ಪನಾತೀತನಾದ ಭಗವಂತನತ್ರೆ ಹೇಳುತ್ತ° – “ನಿನ್ನ ಭಯಂಕರ ನಿಜರೂಪವ ನೋಡಿ ಸಂತೋಷ ಆತು, ಒಟ್ಟಿಂಗೆ ನಿನ್ನ ಉಗ್ರ ರೂಪವ ನೋಡಿ ಹೆದರಿಕೆಯೂ ಆವ್ತು. ನೋಡಿ ಸಂತೋಷವ ಸಹಿಸುಲೆ ಶಕ್ತಿ ಸಾಲ. ಒಂದಿಕ್ಕೆ ಸಂತೋಷ, ಇನ್ನೊಂದೊಡೆಲಿ ದಿಗಿಲು ಎದ್ದೇಳುತ್ತು. ಒಟ್ಟಿಲ್ಲಿ ಆನು ಕಂಗಾಲಾಯ್ದೆ. ಜಗತ್ತೇ ನಿನ್ನ ಆಶ್ರಯಿಸಿಗೊಂಡಿಪ್ಪದು. ಹಾಂಗಾಗಿ ಓ ದೇವ! ಪ್ರಸನ್ನನಾಗಿ ನಿನ್ನ ಮದಲಾಣ ರೂಪಂದಲೇ ಕಾಪಾಡು”.

ಶ್ಲೋಕ

ಕಿರೀಟಿನಂ ಗದಿನಂ ಚಕ್ರಹಸ್ತಂ ಇಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ ।
ತೇನೈವ ರೂಪೇಣ ಚತುರ್ಭುಜೇನ ಸಹಸ್ರಬಾಹೋ ಭವ ವಿಶ್ವಮೂರ್ತೇ ॥೪೬॥

ಪದವಿಭಾಗ

ಕಿರೀಟಿನಮ್ ಗದಿನಮ್ ಚಕ್ರ-ಹಸ್ತಮ್ ಇಚ್ಛಾಮಿ ತ್ವಾಮ್ ದ್ರಷ್ಟುಮ್ ಅಹಮ್ ತಥಾ ಏವ । ತೇನ ಏವ ರೂಪೇಣ ಚತುಃ-ಭುಜೇನ ಸಹಸ್ರಬಾಹೋ ಭವ ವಿಶ್ವ-ಮೂರ್ತೇ ॥

ಅನ್ವಯ

ಹೇ ಸಹಸ್ರಬಾಹೋ! ಹೇ ವಿಶ್ವಮೂರ್ತೇ!, ಅಹಂ ತ್ವಾಂ ಕಿರೀಟಿನಂ ಗದಿನಂ ತಥಾ ಏವ ಚಕ್ರ-ಹಸ್ತಂ ದ್ರಷ್ಟುಮ್ ಇಚ್ಛಾಮಿ । (ತಸ್ಮಾತ್) ತೇನ ಏವ ಚತುಃ-ಭುಜೇನ ರೂಪೇಣ (ಯುಕ್ತಃ) ಭವ ।

ಪ್ರತಿಪದಾರ್ಥ

ಹೇ ಸಹಸ್ರಬಾಹೋ – ಓ ಸಹಸ್ರಬಾಹುವೇ!, ಹೇ ವಿಶ್ವಮೂರ್ತೇ – ಓ ವಿಶ್ವರೂಪಿಯೇ, ಅಹಮ್ – ಆನು, ತ್ವಾಮ್ – ನಿನ್ನ, ಕಿರೀಟಿನಮ್ – ಕಿರೀಟದೊಟ್ಟಿಂಗಿಪ್ಪ, ಗದಿನಮ್ – ಗದೆಯೊಟ್ಟಿಂಗಿಪ್ಪ, ತಥಾ ಏವ – ಹಾಂಗೆಯೇ, ಚಕ್ರ-ಹಸ್ತಮ್ – ಚಕ್ರಪಾಣಿಯಾಗಿಪ್ಪ, ದ್ರಷ್ಟುಮ್ – ನೋಡ್ಳೆ, ಇಚ್ಛಾಮಿ – ಇಚ್ಛಿಸುತ್ತೆ, (ತಸ್ಮಾತ್ – ಹಾಂಗಾಗಿ) ತೇನ ಏವ – ಅದೇ, ಚತುಃ-ಭುಜೇನ ರೂಪೇಣ (ಯುಕ್ತಃ) ಭವ – ಚತುರ್ಭುಜರೂಪಧಾರಿಯಾಗು.

ಅನ್ವಯಾರ್ಥ

ಓ ಸಹಸ್ರಬಾಹುವೇ, ವಿಶ್ವಮೂರ್ತಿಯೇ, ಆನು ನಿನ್ನ ಕಿರೀಟಧಾರಿಯಾಗಿ, ಗದಾಧಾರಿಯಾಗಿ, ಚಕ್ರಪಾಣಿಯಾಗಿ ನೋಡ್ಳೆ ಬಯಸುತ್ತೆ. ಹಾಂಗಾಗಿ, ಓ ಸಹಸ್ರಬಾಹುವೇ ನೀನು ಮದಲಾಣ ಹಾಂಗೆ ಚತುರ್ಭುಜರೂಪಿಯಾಗಿ ಮೈದೋರು.

ತಾತ್ಪರ್ಯ / ವಿವರಣೆ

ಸಹಸ್ರಬಾಹುರೂಪಿ, ವಿಶ್ವರೂಪಿ, ಉಗ್ರಮೂರ್ತಿ, ಸರ್ವಗತ, ಸರ್ವಾಂತರ್ಯಾಮಿಯಾಗಿಪ್ಪ  ಭಗವಂತನತ್ರೆ ಹಾಂಗಾಗಿ ಅರ್ಜುನ ಬೇಡಿಗೊಳ್ತ° – ಸಹಸ್ರಬಾಹುವಾಗಿಪ್ಪ, ವಿಶ್ವರೂಪಿ, ಭೀಕರ ರೂಪವ ಮರೆಮಾಚಿ ನಿನ್ನ ಮದಲಾಣ ಶಂಖಚಕ್ರಗದಾಪಾಣಿಯಾಗಿಪ್ಪ ಚತುರ್ಬಾಹುವಾಗಿ ಸೌಮ್ಯಸ್ವರೂಪನಾಗಿ ಮೈದೋರು, ಪ್ರಶಾಂತನಾಗಿ ಕಾಪಾಡು”. ಬನ್ನಂಜೆ ವಿವರುಸುತ್ತವು – ಕೃಷ್ಣ° ತನ್ನ ಅಂತರಂಗದ ಭಕ್ತರಿಂಗೆ ತನ್ನ ಚತುರ್ಭುಜ ರೂಪವ ತೋರಿದ್ದ°. ಇದರ ಅರ್ಜುನನೂ ನೋಡಿದ್ದ°. ಹಾಂಗಾಗಿ ವಿಶ್ವರೂಪ ದರ್ಶನವ  ನಿಲ್ಲುಸಿ ಚತುರ್ಭುಜರೂಪವ ತೋರು ಹೇಳಿ ಅರ್ಜುನ° ಬೇಡಿಗೊಳ್ತ ಇದ್ದ°.

ಬನ್ನಂಜೆ ಹೇಳ್ತವು – ಇಲ್ಲಿ ನಾವು ತಿಳಿಯೇಕ್ಕಾದ ಒಂದು ಮುಖ್ಯ ವಿಚಾರ ಹೇದರೆ, ಭಗವಂತನ ವಿಶ್ವರೂಪದ ಉಪಾಸನೆ ಸಾಮಾನ್ಯರಾದ ನವಗೆ ಅಸಾಧ್ಯ. ಅವನ ವಿಶ್ವರೂಪವ ಮಹಾಜ್ಞಾನಿಯಾದ ಅರ್ಜುನನಿಂದಲೇ ನೋಡಿ ತಡಕ್ಕೊಂಬಲೆ ಎಡಿಗಾಯ್ದಿಲ್ಲೇಳಿಯಾದರೆ ಅದರಿನ್ನು ಸಾಮಾನ್ಯರಾದ ನಾವು ಧ್ಯಾನಲ್ಲಿ ಜೀರ್ಣಿಸಿಗೊಂಬಲೆ ಸಾಧ್ಯವೋ!. ಹಾಂಗಾಗಿ ಧ್ಯಾನಲ್ಲಿ ಭಗವಂತನ ವಿಶ್ವರೂಪವ ಉಪಾಸನೆ ಮಾಡ್ವದಕ್ಕಿಂತ ಭಗವಂತನ ವಿಶ್ವಶಕ್ತಿಯ ಎಚ್ಚರಂದ ಅವನ ಅವತಾರ ರೂಪಲ್ಲಿ ಉಪಾಸನೆ ಮಾಡ್ವದು ಶ್ರೇಯಸ್ಕರ.

ಶ್ಲೋಕ

ಶ್ರೀಭಗವಾನುವಾಚ

ಮಯಾ ಪ್ರಸನ್ನೇನ ತವಾರ್ಜುನೇದಂ ರೂಪಂ ಪರಂ ದರ್ಶಿತಮಾತ್ಮಯೋಗಾತ್ ।
ತೇಜೋಮಯಂ ವಿಶ್ವಮನಂತಮಾದ್ಯಂ ಯನ್ಮೇ ತ್ವದನ್ಯೇನ ನ ದೃಷ್ಟಪೂರ್ವಮ್ ॥೪೭॥

ಪದವಿಭಾಗ

ಶ್ರೀ ಭಗವಾನ್ ಉವಾಚ

ಮಯಾ ಪ್ರಸನ್ನೇನ ತವ ಅರ್ಜುನ ಇದಮ್ ರೂಪಮ್ ಪರಮ್ ದರ್ಶಿತಮ್ ಆತ್ಮ-ಯೋಗಾತ್ । ತೇಜೋಮಯಮ್ ವಿಶ್ವಮ್ ಅನಂತಮ್ ಆದ್ಯಮ್ ಯತ್ ಮೇ ತ್ವತ್ ಅನ್ಯೇನ ನ ದೃಷ್ಟ-ಪೂರ್ವಮ್ ॥

ಅನ್ವಯ

ಶ್ರೀ ಭಗವಾನ್ ಉವಾಚ – ಹೇ ಅರ್ಜುನ! ಯತ್ ತ್ವತ್ ಅನ್ಯೇನ ದೃಷ್ಟ-ಪೂರ್ವಂ ನ, (ತತ್) ಇದಂ ಮೇ ತೇಜೋಮಯಂ ವಿಶ್ವಮ್ ಅನಂತಮ್ ಆದ್ಯಂ ಪರಂ ರೂಪಂ ಪ್ರಸನ್ನೇನ ಮಯಾ ಆತ್ಮ-ಯೋಗಾತ್ ತವ ದರ್ಶಿತಮ್ ।

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ದೇವದೇವೋತ್ತಮ ಪರಮ ಪುರುಷ° ಹೇಳಿದ,  ಹೇ ಅರ್ಜುನ! – ಏ ಅರ್ಜುನ! ಯತ್ – ಯಾವ, ತ್ವತ್ ಅನ್ಯೇನ – ನಿನ್ನ ಉಳುದು ಬೇರಯವರಿಂದ, ದೃಷ್ಟ-ಪೂರ್ವಮ್ ನ – ನೋಡಲ್ಪಟ್ಟಿದಿಲ್ಯೋ, (ತತ್ – ಅದು), ಇದಮ್ – ಈ, ಮೇ – ಎನ್ನ, ತೇಜೋಮಯಮ್ (ತೇಜಃ-ಮಯಮ್) – ತೇಜೋಮಯವಾದ,  ವಿಶ್ವಮ್ – ಪೂರ್ಣಬ್ರಹ್ಮಾಂಡವ, ಅನಂತಮ್ – ಅಪರಿಮಿತವಾದ, ಆದ್ಯಮ್ – ಮೂಲವಾದ, ಪರಮ್ ರೂಪಮ್ – ದಿವ್ಯವಾದ ರೂಪವ, ಪ್ರಸನ್ನೇನ – ಸಂತೋಷಂದ, ಮಯಾ – ಎನ್ನಿಂದ, ಆತ್ಮ-ಯೋಗಾತ್ – ಎನ್ನ ಅಂತರಂಗಶಕ್ತಿಂದ, ತವ – ನಿನಗೆ, ದರ್ಶಿತಮ್ – ತೋರಿಸಲ್ಪಟ್ಟತ್ತು.

ಅನ್ವಯಾರ್ಥ

ದೇವೋತ್ತಮ ಪರಮ ಪುರುಷ° ಹೇಳಿದ° – ಏ ಅರ್ಜುನ!, ಏವುದು ನಿನ್ನ ಬಿಟ್ಟು ಬೇರೆಯವರಿಂದ ಈ ಹಿಂದೆ ನೋಡಲ್ಪಟ್ಟಿದಿಲ್ಯೋ, ಅಂತಹ ಈ ತೇಜೋಮಯವಾದ, ಅಪರಿಮಿತವಾದ, ಮೂಲವಾದ, ಪೂರ್ಣಬ್ರಹ್ಮಾಂಡದ ಎನ್ನ ದಿವ್ಯರೂಪವ ಸಂತೋಷಂದ ಎನ್ನಿಂದ ಎನ್ನ ಅಂತರಂಗಶಕ್ತಿಂದ ನಿನಗೆ ತೋರಿಸಲ್ಪಟ್ಟತ್ತು.

ತಾತ್ಪರ್ಯ / ವಿವರಣೆ

ಅರ್ಜುನನ ಕ್ಷೋಭೆಗೊಂಡ ಮನಸ್ಸಿನ ಆತಂಕವ ನೋಡಿ, ಅವನ ಮಾತುಗಳ ಕೇಳಿ, ಅವನ ಗಾಬರಿಯ ವರ್ತನೆಯ ನೋಡಿ ಮೆಚ್ಚಿ  ಭಗವಂತ° ಹೇಳುತ್ತ° – ” ಏ ಅರ್ಜುನ! ಆನು ನಿನ್ನ ಗುಣವ ಮೆಚ್ಚಿ ಸಂತೋಷಂದ ಎನ್ನ ಆತ್ಮಶಕ್ತಿಂದ, ಈ ಜಗತ್ತಿನ ಆದಿಯಾಗಿಪ್ಪ, ಅಪರಿಮಿತ ಪೂರ್ಣತೇಜ ಎನ್ನ ಈ ಹಿರಿಯ ದಿವ್ಯ ರೂಪವ ನಿನಗೆ ತೋರಿಸಿದ್ದೆ. ಎನ್ನ ಈ ರೂಪವ ಈ ವರೇಂಗೆ ಆರು ಕಂಡದ್ದಿಲ್ಲೆ”.  ಭಗವಂತನ ಸಂಹಾರ ರೂಪವ ಕಂಡು ಭಯಗ್ರಸ್ತನಾಗಿಪ್ಪ ಅರ್ಜುನನ ಭಗವಂತ° ಇಲ್ಲಿ ಸಂತೈಸುತ್ತ°. ಹಾಂಗಾಗಿ ಹೇಳುತ್ತ°, “ಎನ್ನೀ ವಿಶ್ವರೂಪವ ನಿನಗೆ ತೋರಿಸುದ್ದು ನಿನ್ನ ಭಕ್ತಿಗೆ ಪ್ರಸನ್ನನಾಗಿ ಹೊರತು ಹೆದರುಸಲೆ ಅಲ್ಲ”. ಇಲ್ಲಿ ಇನ್ನೊಂದು ಮುಖ್ಯ ವಿಷಯವೂ ತಿಳ್ಕೊಳ್ಳೆಕ್ಕಾಗಿದ್ದು. ಭಗವಂತ° ಹೇಳುತ್ತ°  “ಯನ್ಮೇ ತ್ವದನ್ಯೇನ ನ ದೃಷ್ಟಪೂರ್ವಮ್” – ನಿನ್ನ ಉಳುದು ಬೇರಾರಿಂದಲೂ ಈ ಹಿಂದೆ ನೋಡಲ್ಪಟ್ಟಿದ್ದಿಲ್ಲೆ. ಮೇಲ್ನೋಟಕ್ಕೆ ರಜಾ ವಿಚಿತ್ರವಾಗಿ ಕಾಣುತ್ತು. ಎಂತಕೆ ಹೇಳಿರೆ ಭಗವಂತ ಭಗವದ್ಗೀತೆಯ ಈ ಹಿಂದೆ (ಬಹುಹಿಂದೆ ಆವಾಗಲೇ) ಕೆಲವರಿಂಗೆ ಹೇಳಿದ್ದೆ ಹೇಳಿ ಮದಲೇ ಹೇಳಿತ್ತಿದ್ದ°. ಕೃಷ್ಣಾವತಾರಲ್ಲಿ ಯಶೋದೆ ಮಣ್ಣು ತಿಂದ ಕೃಷ್ಣನ ಬಾಯಿಯ ಬಿಡುಸಿ ಹೇಳಿಯಪ್ಪಗ ಯಶೋದಗೆ ತನ್ನ ಬಾಯೊಳ ಇಡೀ ವಿಶ್ವವನ್ನೇ ತೋರುಸಿದ್ದ°,  ಮತ್ತೊಂದರಿ ಹಶುವಿನ ಹಾಲು ಕುಡುದು ಆಕಳಿಸ ಪುಟ್ಟ ಕೃಷ್ಣನ ಬಾಯಿಲಿ ಯಶೋದೆ ಭಗವಂತನ ವಿಶ್ವರೂಪವನ್ನೇ ಕಂಡಿದು. ಸಂಧಾನಕ್ಕೇದು ದೃತರಾಷ್ಟ್ರನ ಸಭಗೆ  ರಾಯಭಾರಿಯಾಗಿ ಬಂದ ಕೃಷ್ಣನ ದುರ್ಯೋಧನ ಬಂಧುಸಲೆ ಪ್ರಯತ್ನಿಸಿಯಪ್ಪಗ ಅಲ್ಲಿ ಕೃಷ್ಣ ತನ್ನ ವಿಶೇಷ ರೂಪವ ತೋರಿದ್ದ. ಗರ್ಗಾಚಾರ್ಯರಿಂಗೂ, ಉದಂಕ ಮುನಿಗೂ ಕೂಡ ಕೃಷ್ಣನ ವಿಶ್ವರೂಪ ದರ್ಶನ ಆಗಿತ್ತು. ಆದರೆ…, ಇಲ್ಲಿ ಅರ್ಜುನಂಗೆ ಕೃಷ್ಣ ತೋರಿಸಿದ ಈ ವಿಶ್ವರೂಪ ಈ ಎಲ್ಲವುದಕ್ಕಿಂತ ಅಪರಿಮಿತವಾದ್ದು. ಹಾಂಗಾಗಿ ಭಗವಂತ° ಇಲ್ಲಿ ಹೇಳಿದ್ದು – “ಈ ವರೇಂಗೆ ಆರೂ ಇದರ ಕಂಡಿದವಿಲ್ಲೆ”. ಭಗವಂತನ ವಿಶ್ವರೂಪ  – ಅದೊಂದು ಬೆಳಕಿನ ಪುಂಜ, ಅದು ಗುಣಂಗಳ ಸಾಗರ. ಅನಂತವಾದ ಈ ವಿಶ್ವರೂಪ ದರ್ಶನವ ಅರ್ಜುನ° ಪಡದ° ಹೇಳಿ ಬನ್ನಂಜೆಯವು ವ್ಯಾಖ್ಯಾನಿಸಿದ್ದವು.

ಶ್ಲೋಕ

ನ ವೇದಯಜ್ಞಾಧ್ಯಯನೈರ್ನ ದಾನೈಃ ನ ಚ ಕ್ರಿಯಾಭಿರ್ನ ತಪೋಭಿರುಗ್ರೈಃ ।
ಏವಂ ರೂಪಃ ಶಖ್ಯ ಅಹಂ ನೃಲೋಕೇ ದ್ರಷ್ಟುಂ ತ್ವದನ್ಯೇನ ಕುರುಪ್ರವೀರ ॥೪೮॥

ಪದವಿಭಾಗ

ನ ವೇದ-ಯಜ್ಞ-ಅಧ್ಯಯನೈಃ ನ ದಾನೈಃ ನ ಚ ಕ್ರಿಯಾಭಿಃ ನ ತಪೋಭಿಃ ಉಗ್ರೈಃ । ಏವಮ್ ರೂಪಃ ಶಖ್ಯಃ ಅಹಮ್ ನೃ-ಲೋಕೇ ದ್ರಷ್ಟುಮ್ ತ್ವತ್ ಅನ್ಯೇನ ಕುರು-ಪ್ರವೀರ ॥

ಅನ್ವಯ

ಹೇ ಕುರು-ಪ್ರವೀರ!, ಅಹಮ್ ಏವಂ ರೂಪಃ ನೃ-ಲೋಕೇ ನ, ವೇದ-ಯಜ್ಞ-ಅಧ್ಯಯನೈಃ ನ, ದಾನೈಃ ನ, ಕ್ರಿಯಾಭಿಃ ನ, ಉಗ್ರೈಃ ತಪೋಭಿಃ ಚ ನ ತ್ವತ್ ಅನ್ಯೇನ ದ್ರಷ್ಟುಂ ಶಕ್ಯಃ ।

ಪ್ರತಿಪದಾರ್ಥ

ಹೇ ಕುರು-ಪ್ರವೀರ! – ಏ ಕುರುವೀರರಲ್ಲಿ ಶ್ರೇಷ್ಠನೇ!, ಅಹಮ್ – ಆನು, ಏವಮ್ ರೂಪಃ – ಈ ರೂಪದವನಾಗಿ, ನೃ-ಲೋಕೇ ನ – ಈ ಭೌತಿಕ ಜಗತ್ತಿಲ್ಲಿ ಇಲ್ಲೆ, ನ ವೇದ-ಯಜ್ಞ-ಅಧ್ಯಯನೈಃ ನ – ವೇದಾಧ್ಯಯನ-ಯಾಗಯಜ್ಞಂಗಳಿಂದ ಇಲ್ಲೆ, ದಾನೈಃ ನ – ದಾನಂಗಳಿಂದ ಇಲ್ಲೆ, ಕ್ರಿಯಾಭಿಃ ನ – ಪುಣ್ಯಕಾರ್ಯಂಗಳಿಂದ ಇಲ್ಲೆ, ಉಗ್ರೈಃ ತಪೋಭಿಃ ಚ ನ – ಉಗ್ರತಪಸ್ಸುಗಳಿಂದಲೂ ಇಲ್ಲೆ, ನ ತ್ವತ್ ಅನ್ಯೇನ ದ್ರಷ್ಟುಮ್ ಶಕ್ಯಃ – ನಿನ್ನ ಉಳುದು ಬೇರಾರಿಂದಲೂ ನೋಡ್ಳೆ ಎಡಿಯ.

ಅನ್ವಯಾರ್ಥ

ಏ ಕುರುವೀರರಲ್ಲಿ ಶ್ರೇಷ್ಠನಾದವನೇ!, ಎನ್ನ ಈ ರೂಪವ ಈ ಭೌತಿಕ ಪ್ರಪಂಚಲ್ಲಿ ನಿನ್ನ ಬಿಟ್ಟು ಬೇರೆ ಆರಿಂದಲೂ ನೋಡ್ಳೆ ಎಡಿಯ. (ಎಂತಕೇಳಿರೆ) ಆನು ವೇದಾಧ್ಯಯನಂದಾಗಲೀ, ಯಜ್ಞಯಾಗಾದಿಗಳಿಂದಲಾಗಲೀ, ದಾನ ಪುಣ್ಯಕರ್ಮಂಗಳಿಂದಲಾಗಲೀ, ಉಗ್ರ ತಪಸ್ಸಿಂದಲಾಗಲೀ ಈ ಐಹಿಕ ಜಗತ್ತಿಲ್ಲಿ ಎನ್ನ ಈ ರೂಪವ ನೋಡ್ಳೆ ಆರಿಂದಲೂ ಸಾಧ್ಯ ಇಲ್ಲೆ.

ತಾತ್ಪರ್ಯ / ವಿವರಣೆ

ಭಗವಂತನ ಪ್ರೀತಿಗೆ ಪಾತ್ರರಾಗದ ಆರೂ ಅವನ ವಿಶ್ವರೂಪ ದರ್ಶನ ಪಡವಲೆ ಸಾಧ್ಯ ಇಲ್ಲೆ. ವೇದಾಧ್ಯಯನಂದ, ಯಜ್ಞಂದ, ದಾನಂದ ಮೊದಲಾದ ಪುಣ್ಯಕರ್ಮಮಾತ್ರಂದ ಸರ್ವೋತ್ತಮನಾದ, ಸರ್ವ ಲಿಲಕ್ಷಣನಾದ ಭಗವಂತನ ವಿಶ್ವರೂಪ ದರ್ಶನ ಪಡವಲೆ ಸಾಧ್ಯ ಇಲ್ಲೆ. “ಅಂತಹ ಭಗವಂತನ ಮಹತ್ ರೂಪವ ಕರ್ಮನಿಷ್ಠನಾದ (ಕುರುಪ್ರವೀರ) ನೀನು ಕಂಡೆ” ಹೇಳಿ ಭಗವಂತ° ಹೇಳುತ್ತ°.
ಇಲ್ಲಿ ನಾವು ದೈವೀದೃಷ್ಟಿಯ ಸ್ಪಷ್ಟವಾಗಿ ಅರ್ಥೈಸೆಕ್ಕಾಗಿದ್ದು. ದೈವೀದೃಷ್ಟಿ ಆರಿಂಗೆ ಆವ್ತು? ದೈವೀ ಹೇದರೆ ದೇವರಿಂಗೆ ಸಂಬಂಧಿಸಿದ್ದು. ದೇವತೆಯಾಗಿ ದೈವೀ ಅಂತಸ್ತಿನ ಮನುಷ್ಯ ಪಡಯದ್ರೆ ಅವಂಗೆ ದೈವೀದೃಷ್ಟಿ ಸಾಧ್ಯ ಇಲ್ಲೆ. ಭಗವಂತನ ಪರಿಶುದ್ಧ ಭಕ್ತರಾಗದ್ದೆ ದೈವೀದೃಷ್ಟಿ ಅಲಭ್ಯ. ವಾಸ್ತವಿಕವಾಗಿ ದೈವಿಕರಾದವು ಭಗವಂತನ ವಿಶ್ವರೂಪವ ಕಾಂಬಲೆ ಎಡಿಗು. ದೈವಿಕ ಸ್ವಭಾವ ಇದ್ದುಗೊಂಡು ದೈವಿಕ ದೃಷ್ಟಿ ಇಪ್ಪವಕ್ಕೆ ಭಗವಂತನ ವಿಶ್ವರೂಪವ ನೋಡುವದರಲ್ಲಿ ಹೆಚ್ಚು ಆಸಕ್ತಿ ಇರ್ತಿಲ್ಲೆ. ಹಾಂಗಾಗಿ ಅರ್ಜುನ ಭಗವಂತನ ಶ್ರೀಕೃಷ್ಣನ ಚತುರ್ಭುಜ ರೂಪವ ನೋಡ್ಳೆ ಬಯಸಿದ್ದು. ವಿಶ್ವರೂಪಂದ ಅವಂಗೆ ಬಯವೇ ಉಂಟಾದ್ದು.

ಇನ್ನೊಂದು ಮುಖ್ಯ ವಿಷಯ ಇಲ್ಲಿ ಗಮನುಸೆಕ್ಕಾದ್ದು ಇದ್ದು. ವೇದಯಜ್ಞಾಧ್ಯಯನೈಃ – ಇದು ವೈದಿಕ ಸಾಹಿತ್ಯದ ಮತ್ತು ಯಜ್ಞಂಗಳ ನಿಯಮಂಗಳ ಅಧ್ಯಯನ ವಿಷಯಕ್ಕೆ ಸಂಬಂಧಿಸಿದ್ದು. ನಾಲ್ಕು ವೇದ, ಹದಿನೆಂಟು ಪುರಾಣ, ಉಪನಿಷತ್ತು, ವೇದಾಂತ ಸೂತ್ರ ಇಂತಹ ಎಲ್ಲ ಬಗೆಯ ವೇದ ಸಾಹಿತ್ಯಕ್ಕೆ ಸಂಬಂಧಿಸಿದ್ದು. ಇದರ ಮನೆಲಿಯೋ ಅಥವಾ ಬೇರೆಲ್ಲಿಯಾರು ಹೋಗಿ ಅಧ್ಯಯನ ಮಾಡ್ಳೆ ಎಡಿಗು. ಹಾಂಗೇ, ಯಜ್ಞವಿಧಾನದ ಅಧ್ಯಯನ ಮಾಡ್ಳೆ ಕಲ್ಪಸೂತ್ರ, ಮೀಮಾಂಸ ಸೂತ್ರಂಗೆ ಹೇಳಿ ಕೆಲವು ಬಗೆಗೊ ಇದ್ದು. ‘ದಾನೈಃ – ಯೋಗ್ಯನಾದವಂಗೆ ಕೊಡ್ತ ದಾನವ ಸೂಚಿಸಿದ್ದು. ಬ್ರಾಹ್ಮಣರಂತೆ , ವೈಷ್ಣವರಂತೆ ಭಗವಂತನ ಪ್ರೀತಿಯ ದಿವ್ಯಸೇವೆಲಿ ನಿರತರಾದವು ದಾನ ಪಡವಲೆ ಯೋಗ್ಯರು. ಹಾಂಗೇ , ‘ಪುಣ್ಯಕಾರ್ಯಂಗೊ’ ಹೇಳ್ವದು ಅಗ್ನಿಹೋತ್ರ ಮತ್ತೆ ಬೇರೆ ಬೇರೆ ಜಾತಿಯೋರಿಂಗೆ ವಿಧಿಸಿಪ್ಪ ಕರ್ತವ್ಯಂಗೊಕ್ಕೆ ಸಂಬಂಧಿಸಿದ್ದು. ದೇಹದಂಡನೆಂದ ಸ್ವ-ಇಚ್ಛೆಂದ ಒಪ್ಪಿಗೊಂಬದು ‘ತಪಸ್ಯ’. ಒಬ್ಬ ಮನುಷ್ಯ ಇವೆಲ್ಲವನೂ ಮಾಡ್ಳೆ ಎಡಿಗು. ದೇಹದಂಡನೆ (ತಪಸ್ಸು), ದಾನ, ವೇದಾಧ್ಯಯನ ಅಭ್ಯಾಸಪೂರ್ವಕ ಮಾಡ್ಳೆ ಎಡಿಗು. ಆದರೆ ನಿರಾಕಾರವಾದಿಯಾಗಿಯೋ, ಜೀವನಲ್ಲಿ ಅನುಸಂಧಾನ ಇಲ್ಲದ್ದೆ ಇವೆಲ್ಲವುದರ ಅಧ್ಯಯನ ವಾ ಕ್ರಿಯೆ ಮಾಡಿರೆ, ಅರ್ಥಾತ್, ಸಂಪೂರ್ಣ ಕೃಷ್ಣಪ್ರಜ್ಞೆಲಿ ಜೀವನಲ್ಲಿ ಇವುಗಳ ಅನುಸಂಧಾನ ಮಾಡದ್ದೆ ಕರ್ಮನಿಷ್ಠನಾದರೆ ಇದರಿಂದ ಭಗವಂತನ ಸಂಪ್ರೀತಿಗೆ ಯೋಗ್ಯನಪ್ಪಲೆ ಎಡಿಯ. ಅರ್ಜುನನಾಂಗೆ ಭಕ್ತನಾಯೇಕು. ಅವನಾಂಗೆ ಇಲ್ಲದ್ದವಂಗೆ ಆ ವಿಶ್ವರೂಪವ ಕಾಂಬಲೆ ಎಡಿಯ.

ಶ್ಲೋಕ

ಮಾ ತೇ ವ್ಯಥಾ ಮಾ ಚ ವಿಮೂಢಭಾವೋ ದೃಷ್ಟ್ವಾ ರೂಪಂ ಘೋರಮೀದೃಙ್ಮಮೇದಮ್ ।
ವ್ಯಪೇತಭೀಃ ಪ್ರೀತಮನಾಃ ಪುನಸ್ತ್ವಂ ತದೇವ ಮೇ ರೂಪಮಿದಂ ಪ್ರಪಶ್ಯ ॥೪೯॥

ಪದವಿಭಾಗ

ಮಾ ತೇ ವ್ಯಥಾ ಮಾ ಚ ವಿಮೂಢ-ಭಾವಃ ದೃಷ್ಟ್ವಾ ರೂಪಮ್ ಘೋರಮ್ ಈದೃಕ್ ಮಮ ಇದಮ್ । ವ್ಯಪೇತ-ಭೀಃ ಪ್ರೀತ-ಮನಾಃ ಪುನಃ ತ್ವಮ್ ತತ್ ಏವ ಮೇ ರೂಪಮ್ ಇದಮ್ ಪ್ರಪಶ್ಯ ॥

ಅನ್ವಯ

ಮಮ ಇದಮ್ ಈದೃಕ್ ಘೋರಂ ರೂಪಂ ದೃಷ್ಟ್ವಾ ತೇ ವ್ಯಥಾ ಮಾ (ಅಸ್ತು), ವಿಮೂಢ-ಭಾವಃ ಚ ಮಾ (ಅಸ್ತು) । ತ್ವಂ ವ್ಯಪೇತ-ಭೀಃ ಪ್ರೀತ-ಮನಾಃ (ಭೂತ್ವಾ) ಪುನಃ ತತ್ ಏವ ಇದಂ ಮೇ ರೂಪಂ ಪ್ರಪಶ್ಯ ।

ಪ್ರತಿಪದಾರ್ಥ

ಮಮ – ಎನ್ನ , ಇದಮ್ ಈದೃಕ್ ಘೋರನ್ ರೂಪನ್ – ಈ ಈರೀತಿಯ ಘೋರ ರೂಪವ, ದೃಷ್ಟ್ವಾ – ನೋಡಿ, ತೇ – ನಿನಗೆ, ವ್ಯಥಾ ಮಾ (ಅಸ್ತು) – ತೊಂದರೆ (ವ್ಯಥೆ/ಚಿಂತೆ) ಆಗದಿರಲಿ, ವಿಮೂಢ-ಭಾವಃ ಚ ಮಾ (ಅಸ್ತು) – ದಿಗ್ಭ್ರಮೆ ಕೂಡ ಬೇಕಾಗಿಲ್ಲೆ, ತ್ವಮ್ – ನೀನು, ವ್ಯಪೇತ-ಭೀಃ – ಎಲ್ಲ ಭಯಂದ ಬಿಡುಗಡೆ ಹೊಂದಿ, ಪ್ರೀತ-ಮನಾಃ (ಭೂತ್ವಾ) – ಸಂತೋಷಮನಸ್ಸುಳ್ಳವನಾಗಿ, ಪುನಃ – ಮತ್ತೆ, ತತ್ ಏವ – ಆ ಅದೇ, ಇದಮ್ – ಈ, ಮೇ – ಎನ್ನ, ರೂಪಮ್ – ರೂಪವ, ಪ್ರಪಶ್ಯ – ನೋಡು.

ಅನ್ವಯಾರ್ಥ

ಎನ್ನ ಈ ಘೋರರೂಪವ ನೋಡಿ ನೀನು ಚಿಂತುಸೆಕ್ಕಾದ್ದಿಲ್ಲೆ , ಗಿಗ್ಭ್ರಮೆಗೊಳ್ಳೆಕ್ಕಾದ್ದಿಲ್ಲೆ, ನಿನ್ನ ಭೀತಿಗೆ ಮುಕ್ತಾಯವಾಗಿ ಸಂತೋಷಚಿತ್ತನಾಗಿ ಮತ್ತೆ ಎನ್ನ ಆ (ಮದಲಾಣ) ರೂಪವ ನೋಡು.

ತಾತ್ಪರ್ಯ / ವಿವರಣೆ

ಭಗವಂತ° ಅರ್ಜುನನ ಕಳವಳವ ಉದ್ವೇಗವ ಸಮಾಧಾನ ಪಡುಸುತ್ತ°. ಅವ° ಅರ್ಜುನನತ್ರೆ ಹೇಳುತ್ತ° – “ಎನ್ನ ಘೋರರೂಪಂದ ನೀನು ಹೆದರೆಕ್ಕಾದ್ದಿಲ್ಲೆ, ಗಾಬರಿಯಾಗಿ ಬೆಗರು ಹರುಸೆಕ್ಕಾದ್ದಿಲ್ಲೆ. ಎನ್ನ ಉಗ್ರರೂಪಂದ ನಿನಗುಂಟಾದ ಚಿಂತೆ ದೂರವಾಗಿ ನಿನ್ನ ಭಯವಲ್ಲೆವ ಬಿಟ್ಟು ನಿನಗಿಷ್ಟವಾದ ಎನ್ನ ಚತುರ್ಭುಜ ರೂಪವ ನೋಡು”.

ಭಗವದ್ಗೀತೆಯ ಸುರುವಿಲ್ಲಿ ತನ್ನ ಪೂಜ್ಯ ಅಜ್ಜ° ಮತ್ತು ಗುರುಗಳಾದ ಭೀಷ್ಮ ದ್ರೋಣರ ಕೊಲ್ಲುವ ವಿಷಯಲ್ಲಿ ಅರ್ಜುನಂಗೆ ಚಿಂತೆ ಸುರುವಾತು. ಆದರೆ ಅವರ ಕೊಲ್ಲುವ ವಿಷಯಲ್ಲಿ ನೀನು ಹೆದರೆಕ್ಕಾದ್ದಿಲ್ಲೆ ಹೇಳಿ ಭಗವಂತ° ಹೇಳಿದ°. ಕುರುಸಭೆಲಿ ದ್ರೌಪದಿಯ ಸೀರೆಯ ಧೃತರಾಷ್ಟ್ರನ ಮಕ್ಕೊ ಎಳವಲೆ ಕೈ ಹಾಕಿಯಪ್ಪಗ ಭೀಷ್ಮ ದ್ರೋಣರೂ ಮೌನವಾಗಿತ್ತವು. ಹೀಂಗೆ ಅವು ಕರ್ತವ್ಯವ ಅಲಕ್ಷ್ಯಮಾಡಿದ್ದಕ್ಕೆ ಅವರ ಕೊಲ್ಲೆಕ್ಕಾಯ್ದು. ತಮ್ಮ ಅನ್ಯಾಯದ ಕಾರ್ಯಂದಲಾಗಿ ಅವು ಆಗಲೇ ಸತ್ತಿದವು ಹೇಳ್ತದರ ತೋರ್ಸಲೆಬೇಕಾಗಿಯೇ ಭಗವಂತ° ಅರ್ಜುನಂಗೆ ತನ್ನ ವಿಶ್ವರೂಪವ ತೋರಿಸಿದ°. ಭಗವಂತನ ನಿಜ ಭಕ್ತರು ಏವತ್ತೂ ಶಾಂತರು ಮತ್ತು ನೀಚ ಕೆಲಸಕ್ಕೆ ಇಳಿಯವು. ಹಾಂಗಾಗಿ ಅರ್ಜುನಂಗೆ ಆ ದೃಷ್ಯವ ತೋರಿಸಿತ್ತು. ವಿಶ್ವರೂಪ ಪ್ರಕಟನೆಯ ಉದ್ದೇಶವ ತೋರಿಸಿದಾಂಗಾತು. ಈಗ ಅರ್ಜುನ° ಭಗವಂತನ ಶಾಂತಸ್ವಭಾವದ ಚತುರ್ಭುಜ ಸ್ವರೂಪವ ನೋಡ್ಳೆ ಬಯಸಿದ°. ನಿಜಭಕ್ತ  ಕೇಳಿದ ಬಯಕೆಯ ಈಡೇರುಸಲೆ ಭಗವಂತ° ಉದ್ಯುಕ್ತನಾವ್ತ°. ಭಗವಂತನ ನಿಜಭಕ್ತಂಗೆ ವಿಶ್ವರೂಪವ ನೋಡಿಗೊಂಡು ನಿಂಬದರಲ್ಲಿ  ಹೆಚ್ಚು ಆಸಕ್ತಿ  ಇಲ್ಲೆ. ಎಂತಕೆ ಹೇಳಿರೆ ಅಲ್ಲಿ ಪ್ರೀತಿಯ ಭಾವನೆಗಳ ಪರಸ್ಪರ ತೋರುಸುವ ಅವಕಾಶ ಇಲ್ಲೆ. ಭಕ್ತ° ತನ್ನ ಭಕ್ತಿಭಾವಂಗಳ ಅರ್ಪುಸಲೆ ಬಯಸುತ್ತ°. ಅಲ್ಲದ್ರೆ ದೇವೋತ್ತಮ ಪರಮ ಪುರುಷನ ಪ್ರೇಮಪೂರ್ವಕ ಸೇವೆಲಿ ವಿನಿಮಯ ಮಾಡಿಗೊಂಬಲೆ ಸಾಧ್ಯ ಆವ್ತಾಂಗೆ ಭಗವಂತನ ಶಾಂತಸ್ವರೂಪವ ನೋಡಿಗೊಂಡಿಪ್ಪಲೆ ಬಯಸುತ್ತ°.

ಶ್ಲೋಕ

ಸಂಜಯ ಉವಾಚ

ಇತ್ಯರ್ಜುನಂ ವಾಸುದೇವಸ್ತಥೋಕ್ತ್ವಾ ಸ್ವಕಂ ರೂಪಂ ದರ್ಶಯಾಮಾಸ ಭೂಯಃ ।
ಆಶ್ವಾಸಯಾಮಾಸ ಚ ಭೀತಮೇನಂ ಭೂತ್ವಾ ಪುನಃ ಸೌಮ್ಯವಪುರ್ಮಹಾತ್ಮಾ ॥೫೦॥

ಪದವಿಭಾಗ

ಸಂಜಯಃ ಉವಾಚ

ಇತಿ ಅರ್ಜುನಮ್ ವಾಸುದೇವಃ ತಥಾ ಉಕ್ತ್ವಾ ಸ್ವಕಮ್ ರೂಪಮ್ ದರ್ಶಯಾಮಾಸ ಭೂಯಃ । ಆಶ್ವಾಸಯಾಮಾಸ ಚ ಭೀತಮ್ ಏನಮ್ ಭೂತ್ವಾ ಪುನಃ ಸೌಮ್ಯ-ವಪುಃ ಮಹಾತ್ಮಾ ॥

ಅನ್ವಯ

ಸಂಜಯಃ ಉವಾಚ – ಮಹಾತ್ಮಾ ವಾಸುದೇವಃ ಇತಿ ತಥಾ ಅರ್ಜುನಮ್ ಉಕ್ತ್ವಾ ಭೂಯಃ ಸ್ವಕಂ ರೂಪಂ ದರ್ಶಯಾಮಾಸ । ಪುನಃ ಚ ಸೌಮ್ಯ-ವಪುಃ ಭೂತ್ವಾ, ಭೀತಮ್ ಏನಮ್ ಆಶ್ವಾಸಯಾಮಾಸ ।

ಪ್ರತಿಪದಾರ್ಥ

ಸಂಜಯಃ ಉವಾಚ – ಸಂಜಯ° ಹೇಳಿದ°, ಮಹಾತ್ಮಾ ವಾಸುದೇವಃ – ಮಹಾತ್ಮನಾದ ವಾಸುದೇವ° (ಕೃಷ್ಣ°), ಇತಿ – ಈ ರೀತಿಯಾಗಿ (ಹೀಂಗೆ), ತಥಾ – ಆ ರೀತಿಲಿ, ಅರ್ಜುನಮ್ ಉಕ್ತ್ವಾ – ಅರ್ಜುನಂಗೆ ಹೇಳಿಕ್ಕಿ, ಭೂಯಃ – ಪುನಃ, ಸ್ವಕಮ್ ರೂಪಮ್ – ತನ್ನದೇ ಆದ ರೂಪವ,  ದರ್ಶಯಾಮಾಸ (ದರ್ಶಯಾಮ್-ಆಸ) – ತೋರಿಸಿದ°, ಪುನಃ – ಮತ್ತೆ, ಚ – ಕೂಡ , ಸೌಮ್ಯ-ವಪುಃ ಭೂತ್ವಾ – ಸುಂದರರೂಪನಾಗಿ , ಭೀತಮ್ – ಹೆದರಿದ, ಏನಮ್ – ಅವನ, ಆಶ್ವಾಸಯಾಮಾಸ (ಆಶ್ವಾಸಯಾಮ್-ಆಸ) – ಪ್ರೋತ್ಸಾಹಿಸತೊಡಗಿದ°.

ಅನ್ವಯಾರ್ಥ

ಸಂಜಯ° (ಧೃತರಾಷ್ಟ್ರಂಗೆ) ಹೇಳಿದ° – ಮಹಾಪುರುಷನಾದ ಕೃಷ್ಣ°, ಅರ್ಜುನಂಗೆ ಹೀಂಗೆ ಹೇಳಿಕ್ಕಿ, ತನ್ನದೇ ಆದ  ರೂಪವ (ಚತುರ್ಭುಜ ರೂಪವ) ತೋರಿದ°. ಮತ್ತೆ, ಪುನಃ ಸುಂದರ ಶರೀರರೂಪನಾಗಿ ಮೈದೋರಿ ಹೆದರಿದ ಅರ್ಜುನಂಗೆ ಸಾಂತ್ವನವ ಹೇಳಿ ಪ್ರೋತ್ಸಾಹಿಸಿದ°.

ತಾತ್ಪರ್ಯ / ವಿವರಣೆ

ಧೃತರಾಷ್ಟ್ರಂಗೆ ಸಂಜಯ° ವಿವರುಸುತ್ತ° – ಕೃಷ್ಣ ವಸುದೇವ-ದೇವಕಿಯರ ಮಗನಾಗಿ ಕಾಣಿಸಿಗೊಂಡಪ್ಪಗ ಮದಾಲು ನಾಲ್ಕು ಕೈಗಳ ನಾರಾಯಣನಾಗಿ ಕಾಣಿಸಿಗೊಂಡ°. ಮತ್ತೆ ತನ್ನ ಅಪ್ಪ-ಅಬ್ಬೆಯ ಪ್ರಾರ್ಥನೆಯಂತೆ ಸಾಮಾನ್ಯ ಮಗುವಿನ ರೂಪವ ತಳೆದ°. ಹಾಂಗೇ ಅರ್ಜುನಂಗೆ ಭಗವಂತನ ಚತುರ್ಭುಜ ರೂಪವ ನೋಡಿಗೊಂಡೇ ಇರೆಕು ಹೇಳ್ವ ಆಸಕ್ತಿ ಇಲ್ಲೆ ಹೇಳ್ವದು ಭಗವಂತಂಗೂ ಗೊಂತಿದ್ದು. ಆದರೆ ಅರ್ಜುನ° ಚತುರ್ಭುಜ ರೂಪವ ಕಾಣೆಕು ಹೇದು ಕೇಳಿಗೊಂಡದ್ದರಿಂದ, ಕೃಷ್ಣ ಅವಂಗೆ ಮತ್ತೆ ಈ ರೂಪವ ತೋರುಸಿ ಮತ್ತೆ ಪುನಃ ತನ್ನ ಎರಡು ಕೈಗಳ ಸಾಮಾನ್ಯ ಮನುಷ್ಯರೂಪಲ್ಲಿ ಕಾಣಿಸಿಗೊಂಡ°. ಇಲ್ಲಿ ‘ಸೌಮ್ಯವಪುಃ’  ಹೇಳ್ತ ಮಾತು ಬಹು ಅರ್ಥಪೂರ್ಣ. ಸೌಮ್ಯವಪುಃ ಹೇದರೆ ಬಹು ಸುಂದರ ರೂಪ. ಇದು ಅತ್ಯಂತ ಮೋಹಕ ರೂಪ ಹೇದು ಪ್ರಸಿದ್ಧಿ. ಕೃಷ್ಣ ಇದ್ದಲ್ಲಿ ಪ್ರತಿಯೊಬ್ಬನೂ ಅವನ ರೂಪಕ್ಕೇ ಆಕರ್ಷಿತರಾವ್ತವು. ಕೃಷ್ಣ ವಿಶ್ವದ ಸೂತ್ರಧಾರಿಯಾದ್ದರಿಂದ ಅವ° ತನ್ನ ಭಕ್ತನಾದ ಅರ್ಜುನನ ಭಯವ ತೊಡದು ಹಾಕಿ ಅವಂಗೆ ಮತ್ತೆ ಕೃಷ್ಣನ ಸುಂದರ ರೂಪವ ತೋರಿದ°.

ಬನ್ನಂಜೆ ವಿವರುಸುತ್ತವು – ಇಲ್ಲಿ ಸಂಜಯ° ಭಗವಂತನ ‘ವಾಸುದೇವಃ’ ಹೇಳಿ ಸಂಬೋಧಿಸಿದ್ದ°. ಭಗವಂತನ ಈ ನಾಮಕ್ಕೆ ಅನೇಕ ಅರ್ಥಂಗೊ ಇದ್ದು. ವಾಸು+ದೇವ = ವಾಸುದೇವ. ಭಗವಂತ ವಾಸು, ಹೇದರೆ ತನ್ನ ತಾನು ಮುಚ್ಚಿಗೊಂಡವ°. ಯಾವಾಗ ನಾವು ಸಂಸಾರ ಬಂಧನದ ಹದಿನೈದು ಬೇಲಿಗಳ ದಾಂಟಿ, ಸಮಾಧಿಸ್ಥಿತಿಲಿ ಅಡಿಯಂಗೆ ಇಳುದು, ಹದಿನಾರನೇ ಜೀವಸ್ವರೂಪವ ಕಾಣುತ್ತೋ, ಅಂಬಗ ಭಗವಂತನ ಸಾಕ್ಶಾತ್ಕಾರ ಆವ್ತು.

ಈ ಹದಿನೈದು ಬೇಲಿಗೊ ಹೇದರೆ –

೧. ಶ್ರದ್ಧೆಯ ಬೇಲಿ – ಕಿತ್ತಿಡುಕ್ಕಲೆ ಎಡಿಯದ್ದ ಬೇಲಿ – ಜೀವ ಸ್ವಭಾವಂದ ಬಂದ ಶ್ರದ್ಧೆ ., ಮತ್ತೆ, ಕಿತ್ತಿಡುಕ್ಕೆಕ್ಕಾದ ಬೇಲಿ – ಮನೆತನ, ಕುಟುಂಬ, ಬೆಳದ ವಾತಾವರಣದ ಪ್ರಭಾವಂದ ಬಂದ ಶ್ರದ್ಧೆ.

೨ – ೬.  ಪಂಚಭೂತಂಗಲ ಬೇಲಿ – ಮಣ್ಣು-ನೀರು (ಅನ್ನಮಯಕೋಶ) ಕಿಚ್ಚು-ಗಾಳಿ-ಆಕಾಶ (ಪ್ರಾಣಮಯ ಕೋಶ)

೭. ಇಂದ್ರಿಯಂಗಳ ಬೇಲಿ – ಐದು ಜ್ಞಾನೇಂದ್ರಿಯಂಗೊ, ಐದು ಕರ್ಮೇಂದ್ರಿಯಂಗೊ.

೮. ಅಂತಃಕರಣದ ಬೇಲಿ – ಕೆಟ್ಟದ್ದರ ಯೋಚನೆ ಮಾಡ್ವ ಮನಸ್ಸು.

೯ ಅನ್ನದ ಬೇಲಿ – ಆಹಾರ.

೧೦ ವೀರ್ಯದ ಬೇಲಿ – ಶಕ್ತಿ

೧೧. ತಪಃ – ಹಾಂಗಾಯೇಕು ಹೀಂಗಾಯೇಕು ಹೇಳ್ವ ಆಲೋಚನೆ (ತಿರುಕನ ಕನಸ್ಸಿನಾಂಗೆ)

೧೨. ಮಂತ್ರಃ – ತನ್ನ ಕನಸ್ಸಿನ ನನಸು ಮಾಡ್ಳೆ ಆಡುವ ಮಾತುಗೊ

೧೩. ಕರ್ಮಃ – ಕನಸ್ಸಿನ ಸಾಧುಸಲೆ ಮಾಡುವ ಕರ್ಮ

೧೪. ಲೋಕಂಗೊ – ಸ್ಥಿರ-ಚರ ಸೊತ್ತುಗೊ (ಆನು ಮಾಡಿದ್ದು, ಎನ್ನದು ಹೇಳ್ವ ಸೊತ್ತುಗೊ)

೧೫ ನಾಮದ ಬೇಲಿ – ಕೀರ್ತಿ.

ಈ ಸ್ಥಿತಿಲಿ ಮುಚ್ಚಿಗೊಂಡಿತ್ತಿದ್ದ ಭಗವಂತ° ದೇವನಾಗಿ ಪ್ರಕಟಗೊಳ್ಳುತ್ತ° / ವ್ಯಕ್ತನಾವ್ತ°. ಭಗವಂತನ ಕಾಣೇಕ್ಕಾರೆ ಮದಾಲು ನಾವು ನಮ್ಮ ಕಾಣೆಕು. ನಮ್ಮ ನವಗೇ ಗೊಂತಿಲ್ಲದ್ದ ಮತ್ತೆ ಭಗವಂತನ ಕಾಣ್ತದೆಲ್ಲಿಂದ! ನಾವು ನಮ್ಮ ಜೀವಸ್ವರೂಪವ ಕಂಡಪ್ಪಗ ಅದರೊಳಂದ ಸಾಕ್ಷಾತ್ಕಾರಗೊಂಬ ಭಗವಂತ° – ‘ದೇವಃ’. ನಾವು ನಮ್ಮ ಪಂಚಕೋಶಂಗಳ (ಅನ್ನಮಯ, ಪ್ರಾಣಮಯ, ವಿಜ್ಞಾನಮಯ, ಮನೋಮಯ, ಆನಂದಮಯ ಕೋಶಂಗೊ) ಪರದೆಲಿಪ್ಪಗ ವಾಸುವಾಗಿ, ಪರದೆಂದಾಚಿಕೆ ಬಂದು ಜೀವ ಸ್ವರೂಪವ ಕಂಡಪ್ಪಗ ದೇವನಾದ ದರ್ಶನ ಕೊಡುವ ಭಗವಂತ° – ‘ವಾಸುದೇವಃ’.

ಶ್ಲೋಕ

ಅರ್ಜುನ ಉವಾಚ

ದೃಷ್ಟ್ವೇದಂ  ಮಾನುಷಂ ರೂಪಂ ತವ ಸೌಮ್ಯಂ ಜನಾರ್ದನ ।
ಇದಾನೀಮಸ್ಮಿ ಸಂವೃತ್ತಃ ಸಚೇತಾಃ ಪ್ರಕೃತಿಂ ಗತಃ ॥೫೧॥

ಪದವಿಭಾಗ

ಅರ್ಜುನಃ ಉವಾಚ

ದೃಷ್ಟ್ವಾ ಇದಮ್ ಮಾನುಷಮ್ ರೂಪಮ್ ತವ ಸೌಮ್ಯಮ್ ಜನಾರ್ದನ । ಇದಾನೀಮ್ ಅಸ್ಮಿ ಸಂವೃತ್ತಃ ಸಚೇತಾಃ ಪ್ರಕೃತಿಮ್ ಗತಃ ॥

ಅನ್ವಯ

ಅರ್ಜುನಃ ಉವಾಚ – ಹೇ ಜನಾರ್ದನ! ತವ ಇದಂ ಮಾನುಷಂ ಸೌಮ್ಯಂ ರೂಪಂ ದೃಷ್ಟ್ವಾ (ಅಹಮ್) ಇದಾನೀಂ ಸಚೇತಾಃ ಸಂವೃತ್ತಾಃ ಅಸ್ಮಿ, ಪ್ರಕೃತಿಂ ಗತಃ ಅಸ್ಮಿ ।

ಪ್ರತಿಪದಾರ್ಥ

ಅರ್ಜುನಃ ಉವಾಚ – ಅರ್ಜುನ° ಹೇಳಿದ°, ಹೇ ಜನಾರ್ದನ – ಓ ಜನಾರ್ದನ! (ದುರ್ಜನನಾಶಕ°), ತವ – ನಿನ್ನ, ಇದಮ್ ಮಾನುಷಮ್ – ಈ ಮನುಷ್ಯನ (ಈ ಮಾನುಷ) , ಸೌಮ್ಯಮ್ ರೂಪಮ್  – ಸುಂದರ ರೂಪವ, ದೃಷ್ಟ್ವಾ – ನೋಡಿ, (ಅಹಮ್ – ಆನು), ಇದಾನೀಮ್ – ಈಗ, ಸಚೇತಾಃ ಸಂವೃತ್ತಾಃ ಅಸ್ಮಿ – ಪ್ರಜ್ಞೆಲಿ ಸ್ಥಿಮಿತ ಸ್ಥಿತಿಗೆ ಬಂದವನಾಗಿದ್ದೆ. ಪ್ರಕೃತಿಮ್ ಗತಃ ಅಸ್ಮಿ – ಎನ್ನ ಪ್ರಕೃತಿಗೆ / ಸ್ವಭಾವಕ್ಕೆ ಹಿಂದುರಿಗಿದವನಾಗಿದ್ದೆ.

ಅನ್ವಯಾರ್ಥ

ಅರ್ಜುನ° ಹೇಳಿದ° – ಏ ಜನಾರ್ದನ!, ಇಷ್ಟೊಂದು ಸುಂದರವಾದ ನಿನ್ನ ಈ ಮಾನವಸದೃಶ ರೂಪವ ಕಂಡು ಈಗ ಆನು ಎನ್ನ ಪ್ರಜ್ಞೆಯ ಪಡದು ಸಹಜ ಪ್ರಕೃತಿಗೆ/ ಸ್ವಭಾವದ ಸ್ಥಿತಿಗೆ ಮರಳಿದ್ದೆ. ಮನಸ್ಸು ಸಮಧಾನ ಆತು.

ತಾತ್ಪರ್ಯ / ವಿವರಣೆ

ಉಗ್ರರೂಪದ ಭಗವಂತನ ವಿಶ್ವರೂಪವ ಕಂಡು ಬೆಚ್ಚಿಬಿದ್ದ ಅರ್ಜುನ°, ಭಗವಂತನ ಚತುರ್ಭುಜ ರೂಪವ ನೋಡಿ, ಮತ್ತೆ ಅದೂ ಅಲ್ಲ , ಭಗವಂತನ ಮಾನವ ಸದೃಶರೂಪವೇ ಚಂದ ಹೇಳಿ ಅದನ್ನೇ ಬಯಸಿದವನಾದ್ದರಿಂದ ಭಗವಂತ° ಅರ್ಜುನನ ಪ್ರೀತಿಯ ಮನ್ನಿಸಿ ಮಾನವರೂಪಿಯಾಗಿ ಸೌಮ್ಯಮೂರ್ತಿಯಾಗಿ ನಿಲ್ಲುತ್ತ°. ಜನಾರ್ದನನ ಈ ಸೌಮ್ಯರೂಪವ ಕಂಡು ಅರ್ಜುನ ಪೂರ್ಣಪ್ರಜ್ಞೆಲಿ ತನ್ನ ಸಹಜ ಪ್ರಕೃತಿಸ್ವಭಾವಕ್ಕೆ ಮರಳುತ್ತ°.

ಬನ್ನಂಜೆ ಹೇಳ್ತವು – ಇಲ್ಲಿ, ಜನಾರ್ದನ = ಜನ+ಅರ್ದನ. ಅರ್ದನ ಹೇಳಿರೆ ಕೊನೆಗೊಳುಸುವದು ಹೇಳ್ತ ಅರ್ಥ. ಜನ ಹೇಳ್ತ ಪದಕ್ಕೆ ಅನೇಕ ಅರ್ಥಂಗ. ಜನ ಹೇದರೆ ದುರ್ಜನ. ಹಾಂಗಾಗಿ ಜನಾರ್ದನ ಹೇಳಿ ಇಲ್ಲಿ ದೆನಿಗೊಂಡದು ದುರ್ಜನ ನಾಶಕ° ಹೇಳ್ತ ಅರ್ಥಲ್ಲಿ. ಜನ ಹೇಳಿರೆ ಜನನ ಉಳ್ಳವ ಹೇಳಿಯೂ ಅರ್ಥ ಇದ್ದು. ಆ ಕೋನಲ್ಲಿ , ಜನಾರ್ದನ ಹೇಳಿರೆ ಜನನವ ಮುಕ್ತಗೊಳುಸುವವ° ಹೇಳಿರೆ ಮುಕ್ತಿಪ್ರದಾಯಕ° ಹೇಳ್ತ ಅರ್ಥವೂ ಆವ್ತು. “ದುರ್ಜನರ ಸಂಹಾರಕ್ಕೇದು ಎದ್ದು ನಿನ್ನ ಆ ರೂಪವ ಕಂಡು ಆನು ಭಯಗೊಂಡೆ. ಭಕ್ತರ ದ್ವನಿಗೆ ಓಗೊಟ್ಟು, ತನ್ನ ಭಕ್ತರಿಂಗೆ ಮೋಕ್ಷವ ಕರುಣುಸುವ ನಿನ್ನ ಈ ಸೌಮ್ಯ ರೂಪವ ಕಂಡು ಆತು ಸಹಜ ಸ್ಥಿತಿಗೆ ಚೇತರಿಸಿಗೊಂಡೆ” ಹೇಳಿ ಅರ್ಜನ° ಹೇಳುತ್ತ°

ಶ್ಲೋಕ

ಶ್ರೀ ಭಗವಾನುವಾಚ

ಸುದುರ್ದಶಮಿದಂ ರೂಪಂ ದೃಷ್ಟವಾನಸಿ ಯನ್ಮಮ ।
ದೇವಾ ಅಪ್ಯಸ್ಯ ರೂಪಸ್ಯ ನಿತ್ಯಂ ದರ್ಶನಕಾಂಕ್ಷಿಣಃ ॥೫೨॥

ಪದವಿಭಾಗ

ಶ್ರೀ ಭಗವಾನ್ ಉವಾಚ

ಸುದುರ್ದರ್ಶಮ್ ಇದಮ್ ರೂಪಮ್ ದೃಷ್ಟವಾನ್ ಅಸಿ ಯತ್ ಮಮ । ದೇವಾಃ ಅಪಿ ಅಸ್ಯ ರೂಪಸ್ಯ ನಿತ್ಯಮ್ ದರ್ಶನ-ಕಾಂಕ್ಷಿಣಃ ॥

ಅನ್ವಯ

ಶ್ರೀ ಭಗವಾನ್ ಉವಾಚ

ಯತ್ ಮಮ ಸುದುರ್ದರ್ಶಮ್ ಇದಂ ರೂಪಂ ದೃಷ್ಟವಾನ್ ಅಸಿ, ಅಸ್ಯ ರೂಪಸ್ಯ ದೇವಾಃ ಅಪಿ ನಿತ್ಯಂ ದರ್ಶನ-ಕಾಂಕ್ಷಿಣಃ (ಸಂತಿ) ।

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ಭಗವಂತ° ಹೇಳಿದ°, ಯತ್ – ಯಾವ, ಮಮ – ಎನ್ನ, ಸುದುರ್ದಶಮ್ – ನೋಡ್ಳೆ ಬಹುಕಷ್ಟವಾದ, ಇದಮ್ ರೂಪಮ್ – ಈ ರೂಪ, ದೃಷ್ಟವಾನ್ ಅಸಿ – ನೋಡಿದವನಾಗಿದ್ದೆಯೋ, ಅಸ್ಯ ರೂಪಸ್ಯ – ಈ ರೂಪದ, ದೇವಾಃ ಅಪಿ – ದೇವತೆಗೊ ಕೂಡ, ನಿತ್ಯಮ್ – ಶಾಶ್ವತವಾಗಿ, ದರ್ಶನ-ಕಾಂಕ್ಷಿಣಃ (ಸಂತಿ) – ದರ್ಶನಕಾಂಕ್ಷಿಗೊ ಆಗಿದ್ದವು (ನೋಡ್ಳೆ ಹಂಬಲುಸುತ್ತಿಪ್ಪವವರಾಗಿದ್ದವು.)

ಅನ್ವಯಾರ್ಥ

ಭಗವಂತ° ಹೇಳಿದ° – ನೋಡ್ಳೆ ಬಹುಕಷ್ಟವಾದ ಯಾವ ಎನ್ನ ಈ ರೂಪವ ನೀನು ನೋಡಿದವನಾಗಿದ್ದೆಯೋ, ಈ ರೂಪವ ನೋಡ್ಳೆ ದೇವತೆಗಳೂ ಕೂಡ ನಿತ್ಯ ಹಂಬಲಿಸುತ್ತಲಿದ್ದವು.

ತಾತ್ಪರ್ಯ / ವಿವರಣೆ

ಭಗವಂತ° ಅರ್ಜುನಂಗೆ ಕಾಣಿಸಿದ ತನ್ನ ಅಪೂರ್ವ ರೂಪ ಬಹು ದುರ್ಲಭರೂಪ. ಇಂತಹ ಅಪೂರ್ವ ರೂಪವ ನೋಡ್ಳೆ ದೇವತೆಗೊ ಕೂಡ ನಿತ್ಯ ಆಸೆಂದ ಕಾಯ್ತಾ ಇದ್ದವು ಹೇಳಿ ಅರ್ಜುನಂಗೆ ಭಗವಂತ° ಹೇಳಿದ°.

ಶ್ಲೋಕ  

ನಾಹಂ ವೇದೈರ್ನ ತಪಸಾ ನ ದಾನೇನ ನ ಚೇಜ್ಯಯಾ ।
ಶಕ್ಯ ಏವಂವಿಧೋ ದ್ರಷ್ಟುಂ ದೃಷ್ಟವಾನಸಿ ಮಾಂ ಯಥಾ ॥೫೩॥

ಪದವಿಭಾಗ

ನ ಅಹಂ ವೇದೈಃ ನ ತಪಸಾ ನ ದಾನೇನ ನ ಚ ಇಜ್ಯಯಾ । ಶಕ್ಯಃ ಏವಂ-ವಿಧಿಃ ದ್ರಷ್ಟುಂ ದ್ರಷ್ಟವಾನ್ ಅಸಿ ಮಾಂ ಯಥಾ ॥

ಅನ್ವಯ

(ತ್ವಂ)  ಯಥಾ ಮಾಂ ದೃಷ್ಟವಾನ್ ಅಸಿ, ಏವಮ್-ವಿಧಃ ಅಹಂ ನ ವೇದೈಃ, ನ ತಪಸಾ, ನ ದಾನೇನ , ನ ಚ ಇಜ್ಯಯಾ ದ್ರಷ್ಟುಂ ಶಕ್ತ್ಯಃ  (ಅಸ್ಮಿ) ॥

ಪ್ರತಿಪದಾರ್ಥ

(ತ್ವಮ್ – ನೀನು), ಯಥಾ – ಹೇಂಗೆ, ಮಾಮ್ – ಎನ್ನ, ದೃಷ್ಟವಾನ್ ಅಸಿ – ನೋಡಿದವನಾಗಿದ್ದೆಯೋ, ಏವಮ್ ವಿಧಃ – ಈ ರೀತಿಲಿ, ಅಹಮ್ – ಆನು,  ನ ವೇದೈಃ  ವೇದಂಗಳ ಅಧ್ಯಯನಂದ ಎಡಿಯ, (ವೇದಂಗಳ ಅಧ್ಯಯನ ಮೂಲಕವಾಗಿ ಎಡಿಯ), ನ ತಪಸಾ – ತಪಸ್ಸಿನಮೂಲಕವಾಗಿಯೂ ಎಡಿಯ, ನ ದಾನೇನ – ದಾನದ ಮೂಲಕವಾಗಿಯೂ ಎಡಿಯ, ನ ಚ ಇಜ್ಯಯಾ ದ್ರಷ್ಟುಮ್ ಶಕ್ಯಃ ಅಸ್ಮಿ – ಮತ್ತು ಆರಾಧನೆಯ ಮೂಲಕವಾಗಿಯೂ ನೋಡ್ಳೆ ಎಡಿಯದವನಾಗಿ ಆನಿದ್ದೆ.

ಅನ್ವಯಾರ್ಥ

ನೀನು ಎನ್ನ ನೋಡಿದಾಂಗೆ ಆನು ಬರೇ ವೇದಾಧ್ಯಯನ ಮಾಡುವುದರ ಮೂಲಕವಾಗಲಿ, ತಪಸ್ಸು, ಆರಾಧನೆ ಮೂಲಕವಾಗಿಲೀ ಕಾಂಬಲೆ ಎಡಿಗಪ್ಪವನಲ್ಲ.

ತಾತ್ಪರ್ಯ / ವಿವರಣೆ

ಭಗವಂತ° ಈಗಾಗಲೇ ಹೇಳಿದ್ದರ ಮತ್ತೆ ಒತ್ತಿ ಹೇಳುತ್ತ° – “ಸ್ವಸಾಮರ್ಥ್ಯಂದ ವೇದಾಧ್ಯಯನ, ಯಜ್ಞ, ದಾನ ತಪಸ್ಸು ಇತ್ಯಾದಿ ಕರ್ಮಂಗಳ ಮಾಡುವ ಮುಖೇನ ಎನ್ನ ಈ ವಿಶಿಷ್ಠ ರೂಪವ ಕಾಂಬಲೆ ಎಡಿಯ”.

ಹಾಂಗಾರೆ ಭಗವಂತನ ಅರ್ಥಮಾಡಿಗೊಂಬದು ಹೇಂಗೆ ? –

ಶ್ಲೋಕ

ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂವಿಧೋsರ್ಜುನ ।
ಜ್ಞಾತುಂ ದ್ರಷ್ಟುಂ ಚ ತತ್ತ್ವೇನ ಪ್ರವೇಷ್ಟುಂ ಚ ಪರಂತಪ ॥೫೪॥

ಪದವಿಭಾಗ

ಭಕ್ತ್ಯಾ ತು ಅನನ್ಯಯಾ ಶಕ್ಯಃ ಅಹಮ್ ಏವಮ್-ವಿಧಃ ಅರ್ಜುನ । ಜ್ಞಾತುಮ್ ದ್ರಷ್ಟುಮ್ ಚ ತತ್ತ್ವೇನ ಪ್ರವೇಷ್ಟುಮ್ ಚ ಪರಂತಪ ॥

ಅನ್ವಯ

ಹೇ ಪರಂತಪ ಅರ್ಜುನ!, ಅಹಮ್ ಏವಂ-ವಿಧಃ ತತ್ತ್ವೇನ ಜ್ಞಾತುಂ ಚ ದ್ರಷ್ಟುಂ ಪ್ರವೇಷ್ಟುಂ ಚ ಅನನ್ಯಯಾ ಭಕ್ತ್ಯಾ ತು ಶಕ್ಯಃ ।

ಪ್ರತಿಪದಾರ್ಥ

ಹೇ ಪರಂತಪ ಅರ್ಜುನ!, ಏ ಪರಂತಪನಾದ ಅರ್ಜುನ!, ಅಹಮ್ – ಆನು, ಏವಮ್ ವಿಧಃ – ಈ ರೀತಿಯ, ತತ್ತ್ವೇನ – ವಾಸ್ತವವಾಗಿ, ಜ್ಞಾತುಮ್ – ತಿಳಿವಲೆ, ಚ – ಕೂಡ, ದ್ರಷ್ಟುಮ್ – ಕಾಂಬಲೆ, ಪ್ರವೇಷ್ಟುಮ್ ಚ – ಪ್ರವೇಶಿಸುಲೆ ಕೂಡ, ಅನನ್ಯಯಾ ಭಕ್ತ್ಯಾ ತು – ಅನನ್ಯ ಭಕ್ತಿಯ ಮೂಲಕ ಮಾಂತ್ರ, ಶಕ್ಯಃ – ಸಾಧ್ಯ.

ಅನ್ವಯಾರ್ಥ

ಏ ಎನ್ನ ಪ್ರೀತಿಯ ಅರ್ಜುನ! ಏಕಚಿತ್ತದ ಭಕ್ತಿಸೇವೆಂದ (ಅನನ್ಯಯಾ ಭಕ್ತ್ಯಾ), ಮಾಂತ್ರ ನಿನ್ನ ಮುಂದೆ ನಿಂದಿಪ್ಪ ಎನ್ನ ಆನಿಪ್ಪಂತೆ (ತತ್ತ್ವೇನ) ಅರ್ಥಮಾಡಿಗೊಂಬಲೆ ಸಾಧ್ಯ. ಹೀಂಗೆ ಮಾಂತ್ರ ಎನ್ನ ನೇರವಾಗಿ ನೋಡ್ಳೆ ಸಾಧ್ಯ. ಈ ರೀತಿಲಿ ಮಾಂತ್ರ ಎನ್ನ ತಿಳಿವ ರಹಸ್ಯಂಗಳ ಪ್ರವೇಶಿಸಲೆ ಸಾಧ್ಯ.

ತಾತ್ಪರ್ಯ / ವಿವರಣೆ

ಭಗವಂತನ ಕಾಂಬಲೆ ಇಪ್ಪ ಮೂಲ ಮಂತ್ರ – ಭಕ್ತಿ. ಏಕನಿಷ್ಠೆಂದ ಭಗವಂತನ ಅನನ್ಯವಾಗಿ ಭಕ್ತಿಮಾಡುವದರಿಂದ ಭಗವಂತನ ತಿಳಿವಲೆ , ಕಾಂಬಲೆ , ಅರ್ಥಮಾಡಿಗೊಂಬಲೆ, ಸೇರ್ಲೆ ಸಾಧ್ಯ. ಎಲ್ಲರಿಂದಲೂ ಮಿಗಿಲಾಗಿಪ್ಪ ಭಗವಂತ° ಭಕ್ತ ಪರಾಧೀನ. ಇಲ್ಲಿ ಹೇಳಿದ್ದದು ಅಂತೇ ತೋರಿಕೆಯ ಭಕ್ತಿ ಅಲ್ಲ. ಅಂತೇ ಆನೂ ಪೂಜೆ ಮಾಡುತ್ತೇನೆ, ಉಪಾಸನೆ ಮಾಡುತ್ತೇನೆ ಹೇಳಿರೆ ಸಾಲ.ಅನನ್ಯ ಭಕ್ತಿ. ಏಕ ನಿಷ್ಠೆ. ಭಗವಂತನೇ ಸರ್ವಸ್ವ ಹೇಳಿ ಕಾಯಾವಾಚಾಮನಸಾ ಅನುಸಂಧಾನ ಆಗಿರೆಕು ಭಕ್ತಿಸೇವೆಲಿ. ಅದು ನಿರಂತರ ಭಕ್ತಿ ಆಗಿರೆಕು. ಆ ಭಕ್ತಿಯ ಗುರಿ ಪರಮಾತ್ಮನೇ ಆಗಿರೆಕು. ಇದುವೇ ಅನನ್ಯ ಭಕ್ತಿ.

ಅರ್ಜುನನ ‘ಪರಂತಪ’ ಹೇಳ್ವ ವಿಶೇಷಣಂದ ದೆನಿಗೊಂಡಿದ°. ಮೇಲ್ನೋಟಕ್ಕೆ ಶತ್ರುಗಳ ಸೋಲುಸುವವ° ಹೇಳಿ ಅರ್ಥ. ನಮ್ಮ ಜೀವನ ಯುದ್ಧಲ್ಲಿ ನಮ್ಮ ಶತ್ರುಗೊ ಹೇಳಿರೆ ನಮ್ಮೊಳ ಇಪ್ಪ ಅಜ್ಞಾನ, ಮೋಹ, ಕಾಮ, ಕ್ರೋಧ ಇತ್ಯಾದಿಗೊ. ಪ್ರತಿಯೊಬ್ಬ ಸಾಧಕನೂ ಕೂಡ ಆ ಪರತತ್ವಲ್ಲಿ ಶ್ರದ್ಧೆಯ ಇರಿಸಿಗೊಂಡು ಇಂತಹ ಶತ್ರುಗಳ ಸುಟ್ಟು ಬೆಳಗುವ ಪರಂತಪ° ಆಯೇಕು ಹೇಳಿ ಬನ್ನಂಜೆಯವರ ವ್ಯಾಖ್ಯಾನಲ್ಲಿ ಹೇಳಿದ್ದವು. ಪರತತ್ವದ ನಿರಂತರ ಚಿಂತನೆಲಿ ತನ್ಮಯನಾದವ° – ‘ಪರಂತಪ°’ ಹೇಳಿ ಅರ್ಥ. ಶತ್ರುದಮನನಾದ ಅರ್ಜುನ ಒಬ್ಬ ಅಪರೋಕ್ಷ ಜ್ಞಾನಿ ಹೇಳ್ವದೂ ಇಲ್ಲಿ ಸೂಚಿತ.

ಶ್ಲೋಕ

ಮತ್ಕರ್ಮಕೃನ್ಮತ್ಪರಮೋ ಮದ್ಭಕ್ತಃ ಸಂಗವರ್ಜಿತಃ ।
ನಿರ್ವೈರಃ ಸರ್ವಭೂತೇಷು ಯಃ ಸ ಮಾಮೇತಿ ಪಾಂಡವ ॥೫೫॥

ಪದವಿಭಾಗ

ಮತ್-ಕರ್ಮ-ಕೃತ್ ಮತ್-ಪರಮಃ ಮತ್-ಭಕ್ತಃ ಸಂಗ-ವರ್ಜಿತಃ । ನಿರ್ವೈರಃ ಸರ್ವ-ಭೂತೇಷು ಯಃ ಸಃ ಮಾಮ್ ಏತಿ ಪಾಂಡವ ॥

ಅನ್ವಯ

ಹೇ ಪಾಂಡವ!, ಯಃ ಮತ್-ಕರ್ಮ-ಕೃತ್, ಮತ್-ಪರಮಃ, ಸಂಗ-ವರ್ಜಿತಃ ಸರ್ವ-ಭೂತೇಷು ನಿರ್ವೈರಃ ಮತ್-ಭಕ್ತಃ (ಅಸ್ತಿ) ಸಃ ಮಾಮ್ ಏತಿ ॥

ಪ್ರತಿಪದಾರ್ಥ

ಹೇ ಪಾಂಡವ – ಏ ಪಾಂಡುಕುವರನೇ!, ಯಃ ಮತ್-ಕರ್ಮ-ಕೃತ್ – ಆರು ಎನ್ನ ಕಾರ್ಯಮಾಡುವದರಲ್ಲಿ ತೊಡಗಿ, ಮತ್-ಪರಮಃ – ಎನ್ನ ಪರಮ ಹೇದು, ಸಂಗ-ವರ್ಜಿತಃ – ಕಾಮ್ಯ ಕರ್ಮಂಗಳ ಮತ್ತು ಊಹಾತ್ಮಕ ಚಿಂತನೆಗಳ ವರ್ಜಿತ°(ಮುಕ್ತ°), ಸರ್ವ-ಭೂತೇಷು – ಸಮಸ್ತ ಜೀವಿಗಳಲ್ಲಿ, ನಿರ್ವೈರಃ – ವೈರ ಇಲ್ಲದ್ದೆ, ಮತ್-ಭಕ್ತಃ (ಅಸ್ತಿ) – ಎನ್ನ ಭಕ್ತನಾಗಿ ಇರುತ್ತನೋ, ಸಃ – ಅವ°, ಮಾಮ್ ಏತಿ – ಎನ್ನ ಸೇರುತ್ತ° (ಎನ್ನ ಪಡೆತ್ತ°, ಎನ್ನಲ್ಲಿಗೆ ಬತ್ತ°).

ಅನ್ವಯಾರ್ಥ

ಏ ಪಾಂಡುತನಯ° ಅರ್ಜುನ! ಆರು ಸಂಪೂರ್ಣವಾಗಿ ಎನ್ನ ಕಾರ್ಯಮಾಡುವದರಲ್ಲಿ ತೊಡಗಿ (ಭಕ್ತಿಸೇವೆಲಿ ತೊಡಗಿ), ಎನ್ನನ್ನೇ ಆಶ್ರಯಿಸಿ, ಎಲ್ಲಾ ಕಾಮ್ಯ ಕರ್ಮಫಲ ಚಿಂತನೆಂದ ಮುಕ್ತರಾಗಿ ಸಮಸ್ತ ಜೀವಿಗಳಲ್ಲೂ ವೈರ ಇಲ್ಲದ್ದೆ ಎನ್ನ ಭಕ್ತನಾಗಿ ಸೇವೆಮಾಡುವದರಲ್ಲಿ ನಿರಂತರ ತೊಡಗುತ್ತನೋ ಅವ° ಎನ್ನನ್ನೇ ಬಂದು ಸೇರುತ್ತ°.

ತಾತ್ಪರ್ಯ / ವಿವರಣೆ

ಗವಂತನ ಕಾಂಬಲೆ ಭಕ್ತಿಯ ಒಟ್ಟಿಂಗೆ ಇರೆಕ್ಕಾದ ಅತೀ ಮುಖ್ಯವಾದ ಅಂಶವ ಇಲ್ಲಿ ಭಗವಂತ° ಹೇಳುತ್ತ°. ನಾವು ಮಾಡುವ ಕಾರ್ಯವ ‘ಆನು ಮಾಡಿದೆ’ ಹೇಳ್ವ ಅಹಂಕಾರವ ಪಡದೆ, ಭಗವಂತ° ಅವಂಗೆ ಬೇಕಾಗಿ ಎನ್ನ ಕೈಂದ ಈ ಕಾರ್ಯವ ಮಾಡುಸಿದ° ಹೇಳ್ವ ಅನುಸಂಧಾನ, ಅರ್ಪಣ ಭಾವ, ಫಲದ ಅಪೇಕ್ಷೆ ಇಲ್ಲದ್ದೆ ಅನನ್ಯ ಭಕ್ತಿಂದ ದ್ವೇಷ ಪ್ರತೀಕಾರ ಇಲ್ಲದ್ದೆ ಸಂಪೂರ್ಣ ಭಗವಂತನಲ್ಲೇ ಶರಣಾಗತನಾಗಿ, ನಿರ್ಲಿಪ್ತ ಭಾವಂದ ‘ಭಗವಂತ° ಸರ್ವೋತ್ತಮ°’  ಹೇಳ್ವ ಸತ್ಯವ ಅರ್ತು ನಿರಂತರ ಭಗವಂತನ ಭಕ್ತಿಸೇವೆಲಿ ಸಂಪೂರ್ಣ ಕೃಷ್ಣಪ್ರಜ್ಞೆಂದ ನಿರತನಾವ್ತನೋ ಅವ° ಭಗವದ್ಪ್ರೀತಿಗೆ ಪಾತ್ರನಾವುತ್ತ°. ಅಕೇರಿಲಿ ಪರಂಧಾಮನ ಪುಣ್ಯಧಾಮವ ಸೇರುತ್ತ° ಹೇಳಿ ಭಗವಂತ° ಅರ್ಜುನಂಗೆ ಭರವಸೆ ಹೇಳಿದಲ್ಯಂಗೆ –

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ವಿಶ್ವರೂಪದರ್ಶನಯೋಗೋ ನಾಮ ಏಕಾದಶೋsಧ್ಯಾಯಃ ॥

ಇಲ್ಲಿಗೆ ಉಪನಿಷತ್ತೂ ಬ್ರಹ್ಮವಿದ್ಯೆಯೂ ಮತ್ತು ಯೋಗಶಾಸ್ತ್ರವೂ ಶ್ರೀಕೃಷ್ಣ-ಅರ್ಜುನ ರೊಳಾಣ ಸಂವಾದವೂ ಆದ ಶ್ರೀಮದ್ಭಗವದ್ಗೀತೇಲಿ ವಿಶ್ವರೂಪದರ್ಶನಯೋಗಃ ಹೇಳ್ವ ಹನ್ನೊಂದನೇ ಅಧ್ಯಾಯ ಮುಗುದತ್ತು.

 

॥ ಗೀತಾಚಾರ್ಯ ಶ್ರೀಕೃಷ್ಣ ಭಗವಾನ್ ಕೀ…. ಜೈ ॥ ಗೀತಾ ಮಾತಾ ಕೀ …. ಜೈ ॥ ಗೋಪಾಲಕೃಷ್ಣ ಭಗವಾನ್ ಕೀ .. ಜೈ ॥


॥ ಶ್ರೀಕೃಷ್ಣಾರ್ಪಣಮಸ್ತು ॥

 

ಮುಂದೆ ಎಂತರ….. ?     ಬಪ್ಪವಾರ ನೋಡುವೋ° .

 

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 11 – SHLOKAS 43 – 55 

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download : www.addkiosk.in ; www.giri.in

ಚೆನ್ನೈ ಬಾವ°

   

You may also like...

5 Responses

 1. ಪಟಿಕ್ಕಲ್ಲಪ್ಪಚ್ಚಿ says:

  ಚೆನ್ನೈ ಭಾವಂಗೆ ಅನಂತ ನಮನಂಗ – ಗೀತಾಮೃತವ ಉಣಿಸುತ್ತಾ ಇದ್ದಿ.
  ಮನುಷ್ಯ ಎಂತೆಲ್ಲ ತಿಳ್ಕೊಳ್ಳೆಕ್ಕು ಅದೆಲ್ಲವೂ ಅಡಕವಾಗಿದ್ದು ಭಗವಂತನ ವಾಣಿಯಾದ ಗೀತೆಲಿ.
  ಬಹುಶ: ಇದರ ನಮ್ಮ ಘನ ಸರಕಾರದೋವು ಕಡ್ಡಾಯವಾಗಿ ಪಠ್ಯಲ್ಲಿ ಅಳವಡಿಸಿರೆ ಎಷ್ಟೋ ಅನಾಚಾರಂಗ ಕಡಮ್ಮೆ ಅಕ್ಕು.

  • ಬಹು ಉತ್ತಮ ಅನಿಸಿಕೆ ಅಪ್ಪಚ್ಚಿ. ಹರೇ ರಾಮ.

   ಆದರೆಂತ… ಎಷ್ಟಾದರೂ ನಮ್ಮದಿದು ಭಾರತ (ಭಾರತವೋ?!) . ರಾಮ ಹೇಳಿ ಇತ್ತಿದ್ದ ಕೇರಳ ಸಂಸ್ಕೃತ ಪಠ್ಯಪುಸ್ತಕಲ್ಲಿ ರಹೀಮ, ಜೋಸೇಪ್ಪ ನ ತಂದು ಕೂರ್ಸಿದ್ದವು 🙁

 2. ಯ೦. ಕೆ. says:

  ಆಧ್ತಾತ್ಮಿಕ ವಿಶ್ವರೂಪ ದರುಶನ ಹಾಗೂ ಸಿದ್ದಾ೦ತ ರೂಪೀ ವಿಶ್ವ ಪರ್ಯಟನ ,ಹೊಸ ವರುಶದ ಜುಗಲ್ ಬ೦ದಿ ಆತು.ಸ ಧ್ಯಕ್ಕ೦ತೂ ಬರೋಬ್ಬರಿ ಆತು.

 3. ಶರ್ಮಪ್ಪಚ್ಚಿ says:

  [ಸಂಪೂರ್ಣ ಭಗವಂತನಲ್ಲೇ ಶರಣಾಗತನಾಗಿ, ನಿರ್ಲಿಪ್ತ ಭಾವಂದ ‘ಭಗವಂತ° ಸರ್ವೋತ್ತಮ’ ಹೇಳ್ವ ಸತ್ಯವ ಅರ್ತು ನಿರಂತರ ಭಗವಂತನ ಭಕ್ತಿಸೇವೆಲಿ ಸಂಪೂರ್ಣ ಕೃಷ್ಣಪ್ರಜ್ಞೆಂದ ನಿರತನಾವ್ತನೋ ಅವ° ಭಗವದ್ಪ್ರೀತಿಗೆ ಪಾತ್ರನಾವುತ್ತ.]
  ಹರೇ ಕೃಷ್ಣ,ಹರೇ ಕೃಷ್ಣ
  ಕೃಷ್ಣ ಕೃಷ್ಣ ಹರೇ ಹರೇ.

 4. ಚೆನ್ನೈ ಭಾವಂಗೆ ನಮೋನ್ನಮಃ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *