Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 09 – ಶ್ಲೋಕಂಗೊ 01 – 10

ಬರದೋರು :   ಚೆನ್ನೈ ಬಾವ°    on   04/10/2012    5 ಒಪ್ಪಂಗೊ

ಚೆನ್ನೈ ಬಾವ°
ಶ್ರೀಮದ್ಭಗವದ್ಗೀತಾ – ನವಮೋsಧ್ಯಾಯಃ – ರಾಜವಿದ್ಯಾರಾಜಗುಹ್ಯಯೋಗಃ – ಶ್ಲೋಕಾಃ 01 – 10

 

ಶ್ರೀ ಕೃಷ್ಣಪರಮಾತ್ಮನೇ ನಮಃ

ಶ್ರೀಮದ್ಭಗವದ್ಗೀತಾ

ಅಥ ನವಮೋsಧ್ಯಾಯಃರಾಜವಿದ್ಯಾರಾಜಗುಹ್ಯಯೋಗಃ (ರಾಜ-ವಿದ್ಯಾ-ರಾಜ-ಗುಹ್ಯ-ಯೋಗಃ)

ಶ್ಲೋಕ

ಶ್ರೀಭಗವಾನುವಾಚ –
ಇದಂ ತು ತೇ ಗುಹ್ಯತಮಂ ಪ್ರವಕ್ಷ್ಯಾಮ್ಯನಸೂಯವೇ ।

ಜ್ಞಾನಂ ವಿಜ್ಞಾನಸಹಿತಂ ಯಜ್ಞಾತ್ವಾ ಮೋಕ್ಷ್ಯಸೇsಶುಭಾತ್ ॥೦೧॥

ಪದವಿಭಾಗ

ಶ್ರೀ ಭಗವಾನ್ ಉವಾಚ –
ಇದಮ್ ತು ತೇ ಗುಹ್ಯತಮಮ್ ಪ್ರವಕ್ಷ್ಯಾಮಿ ಅನಸೂಯವೇ । ಜ್ಞಾನಮ್ ವಿಜ್ಞಾನ-ಸಹಿತಮ್ ಯತ್ ಜ್ಞಾತ್ವಾ ಮೋಕ್ಷ್ಯಸೇ ಅಶುಭಾತ್ ॥

ಅನ್ವಯ

ಶ್ರೀ ಭಗವಾನ್ ಉವಾಚ –
ಯತ್ ಜ್ಞಾತ್ವಾ ತ್ವಮ್ ಅಶುಭಾತ್ ಮೋಕ್ಷ್ಯಸೇ, ತತ್ ತು ಇದಂ ಗುಹ್ಯತಮಂ ವಿಜ್ಞಾನ-ಸಹಿತಂ ಜ್ಞಾನಮ್ ಅನಸೂಯವೇ ತೇ ಪ್ರವಕ್ಷ್ಯಾಮಿ ।

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ದೇವೋತ್ತಮ ಪರಮ ಪುರುಷ° ಹೇಳಿದ°, ಯತ್ ಜ್ಞಾತ್ವಾ – ಯಾವುದರ ತಿಳುದು (ಅರ್ತು), ತ್ವಮ್ – ನೀನು, ಅಶುಭಾತ್ – ಈ ಕ್ಲೇಶಮಯ ಭೌತಿಕ ಅಸ್ತಿತ್ವಂದ, ಮೋಕ್ಷ್ಯಸೇ – ಮುಕ್ತನಾವುತ್ತೆಯೋ, ತತ್ – ಅದರ, ತು – ಆದರೆ (ಆದರೋ) ಇದಮ್ ಗುಹ್ಯತಮಮ್ – ಈ (ಇದರ) ಅತ್ಯಂತ ರಹಸ್ಯವಾದ, ವಿಜ್ಞಾನ-ಸಹಿತಮ್ – ಸಾಕ್ಷಾತ್ಕಾರದ ಜ್ಞಾನದ, ಜ್ಞಾನಮ್ – ಜ್ಞಾನವ, ಅನಸೂಯವೇ – ಅಸೂಯಾರಹಿತ°ನಾದ, ತೇ – ನಿನಗೆ, ಪ್ರವಕ್ಷ್ಯಾಮಿ – ಹೇಳುತ್ತೆ.

ಅನ್ವಯಾರ್ಥ

ದೇವೋತ್ತಮ ಪರಮ ಪುರುಷ° ಹೇಳಿದ° – ಏವುದರ ಅರ್ತು ಕ್ಲೇಶಮಯವಾದ ಭೌತಿಕ ಅಸ್ತಿತ್ವಂದ ( ಭೌತಿಕ ಸಂಸಾರಭವಸಾಗರವ)  ಮುಕ್ತನಾವುತ್ತೆಯೋ (ದಾಂಟುತ್ತೆಯೋ), ಆ ಗುಪ್ತವಾದ ವಿಜ್ಞಾನಸಹಿತವಾದ ಜ್ಞಾನವ (ಅಧ್ಯಾತ್ಮ ವಿಜ್ಞಾನವ) ಅಸೂಯಾರಹಿತನಾದ ನಿನಗೆ ಹೇಳುತ್ತೆ.

ತಾತ್ಪರ್ಯ / ವಿವರಣೆ

ಭಕ್ತನಾದವ ಭಗವಂತನ ಕುರಿತು ವಿಷಯವ ಕೇಳಿದಷ್ಟೂ ಜ್ಞಾನವ ಪಡೆತ್ತ°. ಊಹಾತ್ಮಕ ಚಿಂತನೆಲಿ ತೊಡಗಿರೆ ಅಥವಾ ಅಪ್ರಬುದ್ಧರೊಂದಿಂಗೆ ಚರ್ಚಿಸಿಗೊಂಡು ಕೂದರೆ ಸಂದೇಹಂಗಳೂ, ಕ್ಲೇಶಂಗಳೂ ಹೆಚ್ಚಿಗೆ ಅಕ್ಕೇ ವಿನಾ ನಿಜವಾದ ಅಧ್ಯಾತ್ಮ ಜ್ಞಾನವ ಪಡವಲೆ ಸಾಧ್ಯ ಇಲ್ಲೆ. ಹಾಂಗಾಗಿ ಪ್ರಬುದ್ಧರೊಂದಿಂಗೆ ಅರ್ಥಾತ್ ಸಾಕ್ಷಾತ್ಕಾರ ಮಾಡಿಗೊಂಡವರೊಟ್ಟಿಂಗೆ ವಿಷಯವ ಕುಲಂಕುಷ ತಿಳ್ಕೊಳ್ಳೆಕ್ಕಾದ್ದು ಸಾಧನೆಯ ಮಾಡುವವರ ಕರ್ತವ್ಯ. ಇಲ್ಲಿ ಅರ್ಜುನ ಭಗವಂತನನ್ನೇ ತನ್ನ ಗುರುವಾಗಿ ಸ್ವೀಕರಿಸಿಗೊಂಡು ತನ್ನ ಜಿಜ್ಞಾಸೆಗಳ ಕೇಳಿಗೊಂಡು ಪರಮ ಶ್ರೇಷ್ಠನಾದ ಅವನಿಂದಲೇ ಪರಿಹಾರ ಕೇಳಿಗೊಳ್ಳುತ್ತ°. ಕೃಷ್ಣಪ್ರಜ್ಞೆಲಿ ತೊಡಗಿಪ್ಪ ಯಾವುದೇ ಜೀವಿಯ ಮನೋಧರ್ಮವ, ಶ್ರದ್ಧೆಯ ಭಗವಂತ ಲಾಯಕಕ್ಕೆ ಅರ್ಥಮಾಡಿಗೊಂಡಿರುತ್ತ°, ಹಾಂಗೇ, ಕೃಷ್ಣವಿಜ್ಞಾನವ ಅರ್ಥಮಾಡಿಗೊಂಬಲೆ ಅವಂಗೆ ಬುದ್ಧಿಶಕ್ತಿಯ ಪ್ರಚೋದನೆ ಮಾಡುತ್ತ°.   

ಭಗವದ್ಗೀತೆಯ ಸುರುವಾಣ ಅಧ್ಯಾಯ ಉಳುದ ಭಾಗಕ್ಕೆ ಒಂದು ಪ್ರವೇಶ. ಎರಡ್ನೇ ಮತ್ತೆ ಮೂರನೇ ಅಧ್ಯಾಯಂಗಳಲ್ಲಿ ಆಧ್ಯಾತ್ಮಿಕ ಜ್ಞಾನವ ರಹಸ್ಯ ಹೇಳಿ ವರ್ಣಿಸಿದ್ದವು. ಏಳನೇ ಮತ್ತೆ ಎಂಟನೇ ಅಧ್ಯಾಯಂಗಳಲ್ಲಿ ಚರ್ಚಿಸಿಪ್ಪ ವಿಷಯಂಗೊ ವಿಶೇಷವಾಗಿ ಭಕ್ತಿಸೇವಗೆ ಸಂಬಂಧಿಸಿದ್ದು. ಅವು ಕೃಷ್ಣಪ್ರಜ್ಞೆಲಿ ಜ್ಞಾನೋದಯವ ತಪ್ಪದರಿಂದ ಅದನ್ನೂ ರಹಸ್ಯ ಹೇಳಿ ಹೇಳ್ತವು. ಇನ್ನು ಒಂಬತ್ತನೇ ಅಧ್ಯಾಯಲ್ಲಿ ವರ್ಣಿಸಿಪ್ಪ ವಿಷಯಂಗೊ ಮಿಶ್ರ ಇಲ್ಲದ್ದ ಪರಿಶುದ್ಧ ಭಕ್ತಿಗೆ ಸಂಬಂಧಿಸಿದ್ದು. ಹಾಂಗಾಗಿ ಇದರ ‘ಗುಹ್ಯತಮ’ (ಪರಮ ಗಹನವಾದ ರಹಸ್ಯವಾದ) ಹೇಳಿ ಹೇಳ್ತವು. ಭಗವಂತ° ಗುಹ್ಯತಮ ಜ್ಞಾನಲ್ಲಿ ನೆಲೆಸಿಪ್ಪವ°. ಸಹಜವಾಗಿ ಆಧ್ಯಾತ್ಮಿಕ ಸ್ಥಿತಿಲಿಪ್ಪವ°. ಹಾಂಗಾಗಿ ಐಹಿಕ ಜಗತ್ತಿಲ್ಲಿ ಇದ್ದರೂ ಅವಂಗೆ ಏವುದೇ ಐಹಿಕ ಬೇನಗೊ ಇಲ್ಲೆ. 

ಭಗವಂತ° ಅರ್ಜುನಂಗೆ ಏಳನೇ ಅಧ್ಯಾಯದ ಸುರುವಿಲ್ಲಿ ಹೇಳಿತ್ತಿದ್ದ° “… ಯಜ್ಞಾತ್ವಾ ನೇಹ ಭೂಯಃ ಅನ್ಯತ್ ಜ್ಞಾತವ್ಯಮವಶಿಷ್ಯತೇ” – ‘ಇದರ ತಿಳ್ಕೊಂಡಮತ್ತೆ  ನೀನು ತಿಳಿಯೆಕ್ಕಪ್ಪದು  ಬೇರೆಂತದೂ ಉಳಿತ್ತಿಲ್ಲೆ’. ಇಲ್ಲಿ ಮತ್ತೆ ಜ್ಞಾನ ವಿಜ್ಞಾನದ ಬಗ್ಗೆ ವಿವರುಸುತ್ತ°. ಎಂತಕೆ? ಒಂದರಿ ಹೇಳಿದ್ದನ್ನೇ ಮತ್ತೂ ಮತ್ತೂ ಎಂತಕೆ ಹೇಳುತ್ತಾ ಇದ್ದ° ?! . ಅದು ಅಲ್ಲಿ ಹೇಳಿದ್ದು ವಿಷಯವ. ಇಲ್ಲಿ ಹೇಳುತ್ತಾ ಇಪ್ಪದು ಆ ವಿಷಯದ ಮತ್ತೂ ವಿವರಣೆಗೊ, ಬೇರೆ ಬೇರೆ ಆಯಾಮಲ್ಲಿ ವಿವರಣೆ ಮತ್ತೆ ಸ್ಪಷ್ಟೀಕರಣ. ಸಂಕ್ಷಿಪ್ತವಾಗಿ ಅಲ್ಲಿ ಹೇಳಿಪ್ಪ ವಿಷಯಂಗಳ ಇನ್ನೂ ಕೆಲವು ಹೊಸ ಅರ್ಥಂಗಳೊಟ್ಟಿಂಗೆ ಇನ್ನೊಂದು ರೀತಿಲಿ ವಿವರಣೆ ಮಾಡ್ತಾ ಇಪ್ಪದು. ಭಗವಂತನ ತತ್ವ ಚಿಂತನೆಯ ಒಂದರಿ ಮಾಡಿರೆ ನಮ್ಮ ತಲೆಯೊಳ ಸಂಪೂರ್ಣವಾಗಿ ಗ್ರಹಿಸಿಗೊಂಬಲೆ ಸಾಧ್ಯ ಇಲ್ಲೆ. ಹಾಂಗಾಗಿ ನಿರಂತರ ಚಿಂತನೆ ಮಾಡಿಗೊಂಡಿದ್ದರ ಎಲ್ಯೋ ರಜಾ ನಮ್ಮ ತಲಗೆ ಹೊಕ್ಕುತ್ತು. ಪಾಠವ ಒಂದು ಸರ್ತಿ ಓದಿರೆ ಸಾಕಾವುತ್ತಿಲ್ಲೆ. ರಜಾ ಹೊತ್ತು ಕಳುದಪ್ಪಗ ಒಂದರಿ ಓದಿದ್ದು ತಲೆಲಿ ನಿಲ್ಲುತ್ತೂ ಇಲ್ಲೆ. ಹಾಂಗಾಗಿ ಆವೃತ್ತಿ ಮಾಡೆಕು ಹೇಳುವದು. ಹಾಂಗಾಗಿ ಭಗವಂತ° ಅದೇ ವಿಷಯಂಗಳ ಇನ್ನಷ್ಟು ಸ್ಪಷ್ಟೀಕರಣ ರೂಪಲ್ಲಿ ಬೇರೆ ಬೇರೆ ಆಯಾಮಲ್ಲಿ, ರೀತಿಲಿ ವಿವರುಸುತ್ತ°. 

ಒಬ್ಬ ಸೈನಿಕಂಗೆ ಯುದ್ಧರಂಗಲ್ಲಿ ನಿಂತಿಪ್ಪ ವ್ಯಕ್ತಿಯ ಮಾನಸಿಕ ಸ್ಥಿತಿ ಅಧ್ಯಾತ್ಮ ಚಿಂತನಗೆ ಬಹಳ ಹತ್ತಿರ ಇರ್ತು. ಅದಕ್ಕಾಗಿಯೇ ಅರ್ಜುನಂಗೆ ಭಗವಂತ° ಯುದ್ಧರಂಗಲ್ಲಿ ಅಧ್ಯಾತ್ಮವ ಬಿಚ್ಚುತ್ತ°. ಅರ್ಜುನ ಬಹುದೊಡ್ಡ ಜ್ಞಾನಿ ಎಂಬುದು ನಿಸ್ಸಂದೇಹ. ಸದಾ ಭಗವದ್ ಚಿಂತನೆಲಿ ಇರೆಕ್ಕಪ್ಪ ದೇವಾಂಶಸಂಭೂತ°. ಅದರೊಟ್ಟಿಂಗೆ ಅವನ ಯುದ್ಧರಂಗಲ್ಲಿ ನಿಲ್ಲುಸಿ, ಮಾನಸಿಕವಾಗಿ ಹುಟ್ಟು ಸಾವು ಲೀಲೆಯ ಆಚಿಗಂಗೆ ಎಳಕ್ಕೊಂಡು ಹೋಗಿ ಮಾನಸಿಕವಾಗಿ ಅಣಿಗೊಳುಸಿ ಭಗವಂತ° ಅವಂಗೆ ಅಧ್ಯಾತ್ಮ ಜ್ಞಾನವ ತುಂಬುಸುತ್ತ°. ಇಂತಹ ಕ್ಷಣಲ್ಲಿ ಭಗವಂತನ ಕುರಿತು ಹೇಳಿರೆ ಬಹುಬೇಗ ಹೃದಯ ತುಂಬಿಗೊಳ್ಳುತ್ತು ಹೇಳಿ ಭಗವಂತನ ಆಶಯ.

ಇಲ್ಲಿ ಭಗವಂತ° ಹೇಳಿದ್ದು – “ಇದಮ್ ಜ್ಞಾನಮ್” – ಈ ಜ್ಞಾನವು ಹೇಳ್ವದು ಪರಿಶುದ್ಧವಾದ ಭಕ್ತಿಸೇವೆಯ ಸೂಚಿಸುತ್ತು. ಇದರಲ್ಲಿ ಶ್ರವಣ, ಕೀರ್ತನ, ಸ್ಮರಣ, ಸೇವೆ, ಪೂಜೆ, ವಿಧೇಯತೆ, ಸ್ನೇಹವ ಪಾಲಿಸಿಗೊಂಡು ಬಪ್ಪದು ಮತ್ತೆ ಸರ್ವಸಮರ್ಪಣ – ಈ ಒಂಬತ್ತು ಚಟುವಟಿಕೆಗೊ ಅಡಕವಾಗಿದ್ದು. ಭಕ್ತಿಸೇವೆಯ ಈ ಒಂಬತ್ತು ಅಂಶಂಗಳ ಅನುಷ್ಠಾನ ಮಾಡಿದವ° ಆಧ್ಯಾತ್ಮಿಕ ಪ್ರಜ್ಞಗೆ / ಕೃಷ್ಣಪ್ರಜ್ಞಗೆ ಏರಿಸಲ್ಪಡುತ್ತ°. ಮನುಷ್ಯನ ಹೃದಯ ಹೀಂಗೆ ಐಹಿಕ ಕಶ್ಮಲದ ಸೋಂಕಿನ ಕಳಕ್ಕೊಂಡು ಅವಂಗೆ ಕೃಷ್ಣವಿಜ್ಞಾನ ಅರ್ಥ ಆವುತ್ತು.

ಈ ಶ್ಲೋಕಲ್ಲಿ ‘ಅನಸೂಯವೇ’ ಹೇಳ್ವ ಪದವೂ ಅರ್ಥವತ್ತಾದ್ದು. ಸಾಮಾನ್ಯವಾಗಿ, ವ್ಯಾಖ್ಯಾನಗಾರರುಗೊ, ಒಳ್ಳೆ ವಿದ್ವಾಂಸರಾಗಿದ್ದರೂ, ದೇವೋತ್ತಮ ಪರಮ ಪುರುಷನ ವಿಷಯಲ್ಲಿ ಅಸೂಯೆ ಪಡುತ್ತವು. ಅತ್ಯಂತ ಪ್ರಗಲ್ಭ ಪಂಡಿತರೂ ತಪ್ಪಾಗಿ ವ್ಯಾಖ್ಯಾನ ಮಾಡ್ಳೆ ಸುರುಮಾಡುತ್ತವು. ಹಾಂಗಾಗಿ ಅವರ ವ್ಯಾಖ್ಯಾನಂಗೊ ಎಲ್ಲ ನಿಷ್ಪ್ರಯೋಜಕ ಆವ್ತು ಕಡೇಂಗೆ. ಅಸೂಯಾಪರನಾಗಿಪ್ಪವ° ಭಗವದ್ಗೀತೆಯ ಅರ್ಥೈಸಿಗೊಂಬಲೆ ಸಾಧ್ಯನಾವುತ್ತನಿಲ್ಲೆ. ಅಸೂಯೆ ಇಪ್ಪವ ಕೃಷ್ಣನ (ಭಗವಂತನ) ಬಗ್ಗೆ ಪರಿಪೂರ್ಣ ಜ್ಞಾನವ ತಿಳುಕ್ಕೊಂಬಲೆ ಸಾಧ್ಯನಾವುತ್ತನಿಲ್ಲೆ. ಹಾಂಗಾಗಿ ಭಗವಂತನ ಸರ್ವಶ್ರೇಷ್ಠ° ಹೇಳಿ ಮನಸಾರೆ ಅರ್ತುಗೊಂಡವ° ಅರ್ಜುನ ಹೇಳ್ವದರ ಇಲ್ಲಿ ಭಗವಂತ° ಅನುಮೋದಿಸುತ್ತ°.  ಭಗವಂತ° ದೇವೋತ್ತಮ ಪರಮ ಪುರುಷ°, ಪರಿಶುದ್ಧ ದಿವ್ಯ ಪುರುಷ° ಹೇಳಿ ಅರ್ಥಮಾಡಿಗೊಂಡವಕ್ಕೆ ಈ ಅಧ್ಯಾಯ ಬಹು ಪ್ರಯೋಜನ ಇದ್ದು ಹೇಳ್ವದು ಭಗವಂತನ ಆಶಯ ಇಲ್ಲಿ ವ್ಯಕ್ತಪಡಿಸಿದ್ದ°.

ಬನ್ನಂಜೆ ವಿವರುಸುತ್ತವು ಇಲ್ಲಿ ಭಗವಂತ° ಹೇಳುತ್ತ° – ‘ಭಗವದ್ ತತ್ವದ ಕುರಿತಾಗಿ ನಿನಗೆ ಪುನಃ ಹೇಳುತ್ತೆ, ಅತ್ಯಂತ ರಹಸ್ಯವಾದ ಉಪಾಸನೆ ಸಂಗತಿಯ ನಿನ್ನ ಮುಂದೆ ಬಿಚ್ಚಿಮಡುಗುತ್ತೆ’. ಹೇಳಿರೆ ಇದು ಎಲ್ಲೋರ ಎದುರು ಬಿಚ್ಚಿಮಡುಗುವ ಸಂಗತಿ ಅಲ್ಲ ಹೇಳಿ ಆತು. ಆರಿಂಗೆ ಭಗವಂತನ ಉಪಾಸನೆಲಿ ಅನನ್ಯವಾದ ಕಾತರ ಇದ್ದೋ, ಆ ಭಗವಂತ ಅಲ್ಲದ್ದೆ ಎನಗೆ ಇನ್ನೇನೂ ಬೇಡ ಹೇಳ್ವ ಮನಸ್ಸು ಇಪ್ಪವಕ್ಕೆ, ಭಗವಂತನ ಸೇರ್ಲೆ ಬೇಕಾಗಿ ಹಾತೊರೆವ ನಿಜ ಸಾಧನೆ ಮಾಡುತ್ತವರ ಎದುರು ಹೇಳೆಕ್ಕಾಗಿಪ್ಪ ವಿಷಯಂಗೊ ಇವು.  ಅತ್ಯಂತ ರಹಸ್ಯವಾದ (ಗೌಪ್ಯವಾದ) ವಿಚಾರಂಗೊ, ಅದರ ನಿನಗೆ ಹೇಳುತ್ತೆ ಹೇಳಿ ಭಗವಂತ ಶುರುಮಾಡುತ್ತ°. ಇಲ್ಲಿ ಅರ್ಜುನಂಗೆ ಈ ವಿಚಾರವ ತಿಳಿವ ಜಿಜ್ಞಾಸೆ ಮತ್ತೆ ಅರ್ಹತೆ ಇಪ್ಪದರಿಂದಾವ್ತು ಭಗವಂತ° ಅವಂಗೆ ಈ ಗೋಪ್ಯವಾದ ವಿಚಾರ ಹೇಳ್ಳೆ ಉದ್ಯುಕ್ತನಾದ್ದು. ಹಾಂಗಾಗಿ ಕೇಳ್ಳೆ ಅರ್ಹತೆ ಮತ್ತೆ ಬಯಕೆ ಇಪ್ಪೋವಕ್ಕೆ ಮಾಂತ್ರ ಕೊಡೆಕ್ಕಾದ ವಿದ್ಯೆ ಇದು ಹೇಳಿ ಭಗವಂತನ ಅಂಬೋಣ.

ಇಲ್ಲಿ ಕೃಷ್ಣ “ಅನಸೂಯವೇ” ಹೇಳ್ವ ವಿಶೇಷ ಪದ ಅರ್ಜುನಂಗೆ ಬಳಸಿದ್ದ°. ಮನುಷ್ಯಂಗೆ ವೇದಾಂತ ಓದುವ ಮತ್ತೆ ಓದಿದ ಮತ್ತೆಯೂ ಇರೆಕಾದ ಗುಣ – ‘ಅಹಂಕಾರ ರಹಿತತೆ’ (ಅನಸೂಯ). ಅಹಂಕಾರ ಇದ್ದು ವೇದಾಂತ ಓದಿರೆ ಏನೂ ಉಪಯೋಗ ಇಲ್ಲೆ. ವೇದಾಂತ ಓದುವ ಮದಲು ಅಹಂ ಇಪ್ಪಲಾಗ. ಭಗವಂತನ ಎದುರು ತಾನು ಏನೂ ಅಲ್ಲ ಹೇಳ್ವ ನಿಜ ಜ್ಞಾನ ಮನಸ್ಸಿಲ್ಲಿ ಅಡರೆಕು. ವೇದಾಂತ ಓದಿ ‘ಆನು ದೊಡ್ಡ ಜ್ಞಾನಿ’ ಹೇಳ್ವ ಅಹಂಕಾರ ಬಂದರೆ, ಓದಿ ಅದರ ಕಳಕ್ಕೊಂಡದಕ್ಕೆ ಸಮ. ಇಂದು ನಮ್ಮಲ್ಲಿ ಸಾಮಾನ್ಯವಾಗಿ ಒಂದಲ್ಲ ಒಂದು ಅಹಂಕಾರ ಇದ್ದೇ ಇದ್ದು. ಜ್ಞಾನದ ಅಹಂ, ಅಧಿಕಾರದ ಅಹಂ, ಸಂಪತ್ತಿನ ಅಹಂ, ಸೌಂದರ್ಯದ ಅಹಂ, ಯೌವನದ ಅಹಂ…. ಹೀಂಗೆ ಅನೇಕ ಸಂಗತಿಗೊ ನಮ್ಮ ಕಾಡುತ್ತ ಇರುತ್ತು. ಅದರ ಕಳಚಿಯೊಂಡರೆ ಮಾಂತ್ರ ವೇದಾಂತವ ತಿಳಿವಲೆ ನಾವು ಅರ್ಹತೆ  ಪಡೆತ್ತಷ್ಟೆ. ಎಲ್ಲಿ ವರೇಂಗೆ ನಮ್ಮಲ್ಲಿ ಅಹಂಕಾರ ಇರ್ತೋ ಅಲ್ಲಿವರೇಂಗೆ ನವಗೆ ವೇದಾಂತೆ ದಕ್ಕ. ಎಲ್ಲಾ ಅಹಂಕಾರಂದ ಜ್ಞಾನದ ಅಹಂಕಾರ ಬಹಳ ಅಪಾಯಕಾರಿ. ಇತರ ಅಹಂಕಾರಕ್ಕೆ ಅಕೇರಿ ಇದ್ದು. ಆದರೆ, ಜ್ಞಾನದ ಅಹಂಕಾರಕ್ಕೆ ಮುಕ್ತಾಯ ಇಲ್ಲೆ. ‘ಆನು ಪಂಡಿತ’ ಹೇಳ್ವ ಅಹಂಕಾರ ತಲಗೆ ಬಂದರೆ ಅಂತವ° ಮಹಾ ದರಿದ್ರನೇ ಸರಿ. ಅಹಂಕಾರದ ಕುಂಞಿ – ‘ಅಸೂಯೆ’. ಇದು ನಮ್ಮ ಸುಡುವ ಕಿಚ್ಚು. ಅದಕ್ಕೇ ಇದರ ‘ಹೊಟ್ಟೆಕಿಚ್ಚು’ ಹೇಳಿ ಹೇಳ್ವದು. ಇದು ನಮ್ಮ ವ್ಯಕ್ತಿತ್ವವ ನಾಶ ಮಾಡುವಂತಾದ್ದು. ಅಂತವಕ್ಕೆ ವೇದಾಂತ ಹೇಳಿ ಉಪಯೋಗ ಇಲ್ಲೆ, ಅಂತವರ ವೇದಾಂತ ಕೇಳಿಯೂ ಪ್ರಯೋಜನ ಇಲ್ಲೆ. ಹಾಂಗಾಗಿ ಅರ್ಜುನಂಗೆ ಭಗವಂತ° ಹೇಳಿದ್ದು – ‘ಅಸೂಯಾರಹಿತನಾದ ನಿನಗೆ ಈ ಗೋಪ್ಯವ ಹೇಳುತ್ತೆ’.

ಯುದ್ಧರಂಗಲ್ಲಿ ನಿಂದ ವ್ಯಕ್ತಿಗೆ ಅಸೂಯೆ ಇಲ್ಲದ್ದೆ ಇಪ್ಪದು ಬಹುದೊಡ್ಡ ಸಂಗತಿ. ದ್ವೇಷ-ಅಸೂಯೆ ಅಹಂಕಾರಂಗೊ ಯುದ್ಧರಂಗಲ್ಲಿ ಸದಾ ತುಂಬಿ ತುಳುಕುತ್ತಿಪ್ಪ ಸಂಗತಿಗೊ. ಇದರ ಗೆದ್ದು ನಿಂದ ಅರ್ಜುನ  ಶ್ರೇಷ್ಠ°. ಭಗವಂತ° ಹೇಳುತ್ತ° – ‘ಇದರ ತಿಳ್ಕೊಂಡರೆ (ಈ ರಹಸ್ಯವ ತಿಳ್ಕೊಂಡರೆ) ನಿನ್ನ ಮನಸ್ಸು ಪರಿಶುದ್ಧವಾಗಿ ಭಗವಂತನ ಸೇರ್ಲೆ ಯೋಗ್ಯನಾವುತ್ತೆ’. ಜ್ಞಾನ ಬಂದರೆ ನಮ್ಮೊಳ ಇಪ್ಪ ಕೊಳೆ ತೊಳದು ಹೋಗಿ ಮನಸ್ಸು ನಿರ್ಮಲ ಆವ್ತು. ನಿರ್ಮಲ ಮನಸ್ಸು ಭಗವಂತನ ಸೇರ್ಲೆ ಯೋಗ್ಯವಾಗಿರುತ್ತು. ನಮ್ಮ ಅತೀ ದೊಡ್ಡ ಸಂಪತ್ತು ಹೇಳಿರೆ ಪ್ರಸನ್ನವಾದ ಸ್ವಚ್ಛ ಮನಸ್ಸು. ಅಂತಹ ಮನಸ್ಸಿಂಗೆ ಭಗವಂತ° ಕಾಣಿಸಿಗೊಳ್ಳುತ್ತ°. ಅಹಂಕಾರ-ಅಸೂಯೆ ಇಲ್ಲದ್ದ ಮನಸ್ಸು ‘ವಸುದೇವ’ ಹಾಂಗೇ, ಇಂತಹ ಮನಸ್ಸಿಂಗೆ ಕಾಂಬ ಭಗವಂತ ‘ವಾಸುದೇವ’. ಶುದ್ಧ ಮನಸ್ಸಿಂದ ಜ್ಞಾನ, ಜ್ಞಾನಂದ ಆನಂದ. ಆನಂದಮಯವಾದ ಈ ಸ್ಥಿತಿಂದ ಪಂಚಭೌತಿಕ ಶರೀರಂದ ಮತ್ತೆ ಸಂಸಾರ ಬಂಧನಂದ ಬಿಡುಗಡೆ ಮತ್ತೆ ಮೋಕ್ಷ. 

ನವಗೆ ಪಂಚಭೌತಿಕವಾದ ಮೂರು ಆವರಣಂಗೊ ಇದ್ದು. ಈ ಮೂರು ಆವರಣದ ಒಳ ಜ್ಞಾನಾನಂದಮಯನಾದ ಆತ್ಮಸ್ವರೂಪ. ಲಿಂಗಶರೀರ, ಸೂಕ್ಷ್ಮಶರೀರ ಮತ್ತೆ ಸ್ಥೂಲಶರೀರ ಇವು ಆತ್ಮವ ಆವರಿಸಿಪ್ಪ ಮೂರು ಆವರಣಂಗೊ. ನಾವು ಈ ಮೂರೂ ಅಂಗಿಗಳ ಕಳಚಿ, ಅಶುಭಂದ ಬಿಡುಗಡೆಹೊಂದಿ, ಸ್ವರೂಪಭೂತನಾದ ನೈಜಸ್ಥಿತಿಲಿ ಭಗವಂತನ ಮುಂದೆ ನಿಂಬದಕ್ಕೆ ಇಲ್ಲಿ ಭಗವಂತ° ಹೇಳಿದ್ದು – “ಮೋಕ್ಷ್ಯಸೇsಶುಭಾತ್”. ನಾವು ದೇವಸ್ಥಾನಲ್ಲಿ ದೇವರ ಮುಂದೆ ಅಂಗಿ ತೆಗದು ನಿಂಬದು – ‘ಭಗವಂತನ ಮುಂದೆ ಹಾಕಿಗೊಂಡಿಪ್ಪ ಎಲ್ಲ ಆವರಣವ ತೆಗದು ದೇವರ ಮುಂದೆ ಬೆತ್ತಲಪ್ಪದು’ ಹೇಳ್ವ ಮುಖ್ಯಾರ್ಥವ ಹೊಂದಿದ್ದು. ನಾವು ಭಗವಂತನ ಎದುರು ಹಾಕಿಗೊಂಡ ಎಲ್ಲ ಮುಖವಾಡವ ಬಿಚ್ಚಿ ಅವನ ಮುಂದೆ ಬಿಡಿಸಿಗೊಳ್ಳೆಕು, ಹಾಂಗಾದಪ್ಪಗ ಅವ° ನವಗೆ ಬಿಡಿಸಿಗೊಳ್ಳುತ್ತ° ಎಂಬ ಅರ್ಥ.

ಶ್ಲೋಕ

ರಾಜವಿದ್ಯಾ ರಾಜಗುಹ್ಯಂ ಪವಿತ್ರಮಿದಮುತ್ತಮಮ್ ।
ಪ್ರತ್ಯಕ್ಷಾವಗಮಂ ಧರ್ಮ್ಯಂ ಸುಸುಖಂ ಕರ್ತುಮವ್ಯಯಮ್ ॥೦೨॥

ಪದವಿಭಾಗ

ರಾಜ-ವಿದ್ಯಾ ರಾಜ-ಗುಹ್ಯಮ್ ಪವಿತ್ರಮ್ ಇದಮ್ ಉತ್ತಮಮ್ । ಪ್ರತ್ಯಕ್ಷ-ಅವಗಮಮ್ ಧರ್ಮ್ಯಮ್ ಸುಸುಖಮ್ ಕರ್ತುಮ್ ಅವ್ಯಯಮ್ ॥

ಅನ್ವಯ

ಇದಂ (ಜ್ಞಾನಂ) ರಾಜ-ವಿದ್ಯಾ, ರಾಜ-ಗುಹ್ಯಮ್, ಉತ್ತಮಮ್, ಪವಿತ್ರಮ್, ಅವ್ಯಯಮ್, ಪ್ರತ್ಯಕ್ಷ-ಅವಗಮಮ್, ಕರ್ತುಂ ಸುಸುಖಂ ಧರ್ಮ್ಯಮ್ (ಚ ಅಸ್ತಿ) ।

ಪ್ರತಿಪದಾರ್ಥ

ಇದಮ್ (ಜ್ಞಾನಮ್) – ಈ ಜ್ಞಾನವು, ರಾಜ-ವಿದ್ಯಾ – ವಿದ್ಯೆಯ ರಾಜ°, ರಾಜ-ಗುಹ್ಯಮ್ – ರಹಸ್ಯಜ್ಞಾನದ ರಾಜ°, ಉತ್ತಮಮ್ – ದಿವ್ಯವಾದ್ದು, ಪವಿತ್ರಮ್ – ಪವಿತ್ರವಾದ್ದು, ಅವ್ಯಯಮ್ – ಶಾಶ್ವತವಾದ್ದು, ಪ್ರತ್ಯಕ್ಷ-ಅವಗಮಮ್ – ನೇರ ಅನುಭವಂದ ತಿಳಿಯಲ್ಪಡುತ್ತದು, ಕರ್ತುಮ್ ಸುಸುಖಮ್ – ಆಚರುಸಲೆ ಅತೀ ಸಂತೋಷಕರವಾದ್ದು, ಧರ್ಮ್ಯಮ್ – ಧರ್ಮತತ್ವವಾದ್ದು, ಚ ಅಸ್ತಿ – ಕೂಡ ಆಗಿದ್ದು.

ಅನ್ವಯಾರ್ಥ

ಈ ಜ್ಞಾನವು (ವಿದ್ಯೆಯು) ಎಲ್ಲ ವಿದ್ಯೆಯಿಂದಲೂ ಶ್ರೇಷ್ಠವಾದ್ದು, ರಹಸ್ಯವಾದ್ದು, ಉತ್ತಮವಾದ್ದು, ಪವಿತ್ರವಾದ್ದು, ಶಾಶ್ವತವಾದ್ದು, ಪ್ರತ್ಯಕ್ಷ ಅನುಭವಂದ ತಿಳ್ಕೊಂಬಲೆ ಸಾಧ್ಯವಾಗಿಪ್ಪದು, ಆಚರುಸಲೆ ಸುಖಕರವೂ ಧರ್ಮತತ್ವ ವಿಚಾರವೂ ಆಗಿದ್ದು.

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° – ‘ಇದು ರಾಜವಿದ್ಯೆ, ಅತ್ಯಂತ ರಹಸ್ಯವಾದ್ದು, ಹಾಂಗೇ ಅತ್ಯಂತ ಪರಿಶುದ್ಧವಾದ ಜ್ಞಾನ, ಸಂತೋಷಂದ ಅನುಷ್ಠಾನ ಮಾಡ್ಳೆ ಎಡಿಗಪ್ಪ ಅವ್ಯಯವಾದ ವಿಶಿಷ್ಥವಾದ ಜ್ಞಾನವ ನಿನಗೆ ವಿವರುಸುತ್ತ ಇದ್ದೆ’.  ಹಾಂಗಾಗಿ ಭಗವದ್ಗೀತೆಯ ಈ ಅಧ್ಯಾಯವ ರಾಜವಿದ್ಯೆ, ರಾಜಗುಹ್ಯ ಹೇಳಿ ಹೆಸರಿಸಿದ್ದವು. ಹಿಂದೆ ಹೇಳಿದ ಎಲ್ಲ ಸಿದ್ಧಾಂತಂಗಳ ಮತ್ತೆ ಚಿಂತನೆಗಳ ಸಾರ ಇದು. ಹಾಂಗಾಗಿ ಇದು ವಿದ್ಯೆಯ/ಜ್ಞಾನದ ರಾಜ°, ತಿರುಳು ಹೇಳಿ ಪರಿಗಣಿಸುತ್ತ° ಭಗವಂತ°. ಇದು ಅತ್ಯಂತ ರಹಸ್ಯವೂ ಕೂಡ. ಎಂತಕೆ ಹೇಳಿರೆ ಅಧ್ಯಾತ್ಮಿಕ ಜ್ಞಾನಕ್ಕೆ ಆತ್ಮ ಮತ್ತೆ ದೇಹದ ವ್ಯತ್ಯಾಸದ ಅರಿವು ಅಗತ್ಯ. ಸಾಮಾನ್ಯರಿಂಗೆ ಈ ರಹಸ್ಯದ ವಿದ್ಯೆ ತಲಗೆ ಹೋಗ. ಪ್ರಪಂಚಲ್ಲಿ ಬಹಿರ್ವಿದ್ಯೆ ಶಿಕ್ಷಣ ಎಲ್ಲ ಕಡೆ ಸಿಕ್ಕು, ದೊಡ್ಡ ದೊಡ್ಡ ಪದವಿಯನ್ನೂ ಗಳುಸಲೆ ಎಡಿಗು. ಪ್ರಪಂಚದಾದ್ಯಂತ ಜ್ಞಾನದ/ವಿದ್ಯೆಯ ಹಲವು ಶಾಖೆಗೊ ಇಕ್ಕು. ಆದರೆ ಚೇತನಾತ್ಮದ ಶಾಸ್ತ್ರವ ಹೇಳಿಕೊಡುವ ವಿದ್ಯಾಸಂಸ್ಥೆ ಹೇಳಿ ಇಲ್ಲೆ. ಆತ್ಮವೇ ದೇಹದ ಅತ್ಯಂತ ಮುಖ್ಯ ವಿಷಯ. ಆತ್ಮ ಇಲ್ಲದ್ರೆ ದೇಹ ನಿಷ್ಪ್ರಯೋಜಕ. ಆದರೂ ಜನಂಗೊ ದೇಹಕ್ಕೇ ಪ್ರಾಮುಖ್ಯತೆ ಕೊಡುವದು ಹೆಚ್ಚು. ಬಹುಮುಖ್ಯವಾದ ಆತ್ಮದ ಕಡೆಂಗೆ ಗಮನವೇ ಇರ್ತಿಲ್ಲೆ. ಹಾಂಗಾಗಿ ಆತ್ಮ , ದೇಹ ಸಂಬಂಧ ವಿಚಾರಂಗೊ ರಹಸ್ಯವಾಗಿ ಇಪ್ಪದರ ತಿಳಿವ ಸಾಹಸಕ್ಕೆ ಇಳಿವಲೆ ಮನಸ್ಸು ಬಾಹ್ಯ ಆಕರ್ಷಣೆಂದ ಹೆರಬತ್ತಿಲ್ಲೆ.

ಭಗವದ್ಗೀತೆಯ ಎರಡನೇ ಅಧ್ಯಾಯಂದಲೇ ಆತ್ಮದ ಮಹತ್ವವ ಒತ್ತಿ ಹೇಳಿಗೊಂಡು ಬೈಂದು. ಸುರುವಿಲ್ಲಿಯೇ ಭಗವಂತ°, ದೇಹ ನಾಶ ಅಪ್ಪದು, ಆತ್ಮಕ್ಕೆ ನಾಶ ಇಲ್ಲೆ ಹೇಳಿ ಹೇಳಿದ್ದ°. ಚೇತನಾತ್ಮವು ಈ ದೇಹಂದ ಭಿನ್ನ, ಸ್ವಭಾವಲ್ಲಿ ನಿರ್ವಿಕಲ್ಪ, ನಾಶ ಇಲ್ಲದ್ದು, ಶಾಶ್ವತವಾದು ಹೇಳ್ವ ತಿಳುವಳಿಕೆಯೇ ಜ್ಞಾನದ ರಹಸ್ಯ ಭಾಗ. ಪ್ರತ್ಯಕ್ಷ ಅನುಭವಂದ ಭಗವಂತನ ಪ್ರತ್ಯಕ್ಷ ತೋರುಸುವ, ಜಗತ್ತಿನ ಧಾರಕಶಕ್ತಿಯಾದ ಭಗವಂತನ ನೇರ ವಿಷಯಕ್ಕೆ ಸಂಬಂಧಿಸಿದ ಸಾಕ್ಷಾ ಭಗವದ್ ವಿಷಯಕ ವಿದ್ಯೆ. ಈ ವಿದ್ಯೆಯ ಅರ್ತು ಭಗವಂತನ ಒಲಿಸಿಗೊಂಬಲೆ ಸುಲಭ. ಎಂತಕೆ ಹೇಳಿರೆ ಭಗವಂತಂಗೆ ಅತ್ಯಂತ ಪ್ರಿಯವಾದ್ದು ಜ್ಞಾನ. ಹಾಂಗಾಗಿ ಇದು ಅಳಿವಿಲ್ಲದ ದಾರಿ. ಜ್ಞಾನದ ದಾರಿ ಎಂದೂ ವ್ಯರ್ಥ ಆವುತ್ತಿಲ್ಲೆ. ಭಗವಂತನ ಭಕ್ತಿಸೇವೆಲಿ ತೊಡಗಿ ಐಹಿಕ ಪಾಪಂದ ಮುಕ್ತಗೊಳುಸುವ ಪವಿತ್ರವಾದ , ಉತ್ತಮವಾದ ಜ್ಞಾನ ಇದು. ಪ್ರತ್ಯಕ್ಷ ಅನುಭವಕ್ಕೆ ಬಪ್ಪಲೆಡಿಗಪ್ಪ ‘ಸುಸುಖಂ’ – ಸುಖಕರವಾದ ( ಭಗವಂತನ ಭಕ್ತಿಸೇವೆಂದ ಸಿಕ್ಕುವದು ಸುಖಕರವಾದ್ದು) ಶಾಶ್ವತವಾದ್ದು ಹೇಳಿ ಭಗವಂತ° ಈ ಜ್ಞಾನದ ರಹಸ್ಯವ ಅರ್ಜುನಂಗೆ ಹೇಳುತ್ತ°.

ಶ್ಲೋಕ

ಅಶ್ರದ್ಧಧಾನಾಃ ಪುರುಷಾ ಧರ್ಮಸ್ಯಾಸ್ಯ ಪರಂತಪ ।
ಅಪ್ರಾಪ್ಯ ಮಾಂ ನಿವರ್ತಂತೇ ಮೃತ್ಯುಸಂಸಾರವರ್ತ್ಮನಿ ॥೦೩॥

ಪದವಿಭಾಗ

ಅಶ್ರದ್ಧಧಾನಾಃ ಪುರುಷಾಃ ಧರ್ಮಸ್ಯ ಅಸ್ಯ ಪರಂತಪ । ಅಪ್ರಾಪ್ಯ ಮಾಮ್ ನಿವರ್ತಂತೇ ಮೃತ್ಯು-ಸಂಸಾರ-ವರ್ತ್ಮನಿ ॥

ಅನ್ವಯ

ಹೇ ಪರಂತಪ!, ಅಸ್ಯ ಧರ್ಮಸ್ಯ ಅಶ್ರದ್ಧಧಾನಾಃ ಪುರುಷಾಃ ಮಾಮ್ ಅಪ್ರಾಪ್ಯ ಮೃತ್ಯು-ಸಂಸಾರ-ವರ್ತ್ಮನಿ ನಿವರ್ತಂತೇ ।

ಪ್ರತಿಪದಾರ್ಥ

ಹೇ ಪರಂತಪ – ಏ ಶತ್ರುಸಂಹಾರಕನಾದ ಅರ್ಜುನನೇ!, ಅಸ್ಯ ಧರ್ಮಸ್ಯ – ಈ ಧರ್ಮದ ಪ್ರಕ್ರಿಯೆಲಿ, ಅಶ್ರದ್ಧಧಾನಾಃ ಪುರುಷಾಃ – ಶ್ರದ್ಧಾಹೀನರಾದ ವ್ಯಕ್ತಿಗೊ, ಮಾಮ್ ಅಪ್ರಾಪ್ಯ – ಎನ್ನ ಹೊಂದದ್ದೆ, ಮೃತ್ಯು-ಸಂಸಾರ-ವರ್ತ್ಮನಿ – ಸಾವಿನ ಭೌತಿಕ ಅಸ್ತಿತ್ವದ ಮಾರ್ಗಲ್ಲಿ, ನಿವರ್ತಂತೇ – ಹಿಂತುರುಗುತ್ತವು.

ಅನ್ವಯಾರ್ಥ

ಏ ಶತ್ರುಸಂಹಾರಕನಾದ ಅರ್ಜುನ!, ಈ ಭಕ್ತಿಸೇವೆಲಿ ಶ್ರದ್ಧಾವಂತರಲ್ಲದ್ದವು ಎನ್ನ ಪಡವಲೆ ಎಡಿಗಾಗದ್ದೆ ಈ ಜಗತ್ತಿನ ಜನನ-ಮರಣ ಮಾರ್ಗಕ್ಕೆ ಹಿಂತುರುಗುತ್ತವು.

ತಾತ್ಪರ್ಯ / ವಿವರಣೆ

ಶ್ರದ್ಧೆ ಇಲ್ಲದ್ದೆ ಈ ಭಕ್ತಿಸೇವೆಯ ಪ್ರಕ್ರಿಯೆಲಿ ತೊಡಗಲೋ, ಮುಂದುವರುಸಲೋ , ಸಾಧುಸಲೋ ಸಾಧ್ಯ ಇಲ್ಲೆ. ಭಕ್ತರ ಸಹವಾಸಂದ ಶ್ರದ್ಧೆ ಹುಟ್ಟಿಗೊಳ್ಳುತ್ತು. ಮಾಹಾತ್ಮರಿಂದ ವೈದಿಕ ಸಾಹಿತ್ಯದ ಎಲ್ಲ ಸಾಕ್ಷ್ಯವ ಕೇಳಿರೂ ದುರದೃಷ್ಟವಂತರಿಂಗೆ ದೇವರಲ್ಲಿ ಶ್ರದ್ಧೆ ಬತ್ತಿಲ್ಲೆ. ಅವು ಅರೆಮನಸ್ಸಿನವು. ಈ ಅರೆಮನಸ್ಸಿನವು ಭಗವಂತನ ಭಕ್ತಿಸೇವೆಲಿ ಸ್ಥಿರವಾಗಿ ನಿಂಬಲೆ ಇಲ್ಲೆ. ಹಾಂಗಾಗಿ ಕೃಷ್ಣಪ್ರಜ್ಞೆಲಿ ಮುಂದುವರಿವಲೆ ದೃಢವಾದ ಶ್ರದ್ಧೆ ಬಹು ಮುಖ್ಯ ಅಂಶ. ಪರಮಪ್ರಭು ಭಗವಂತನ ಅನನ್ಯ ಭಕ್ತಿಂದ ಸೇವಿಸಿರೆ ಪರಿಪೂರ್ಣತೆಯ ಸಾಧುಸಲೆ ಎಡಿತ್ತು ಹೇಳ್ವ ನಂಬಿಕೆಯೂ ಅಚಲ ಶ್ರದ್ಧೆಯೂ ಮದಾಲು ಬೇಕು.  ಶ್ರದ್ಧೆಯ ಬೆಳವಣಿಗೆಯೇ ಕೃಷ್ಣಪ್ರಜ್ಞೆಯ ಪ್ರಕ್ರಿಯೆ. ಕೃಷ್ಣಪ್ರಜ್ಞೆಲಿ ಇಪ್ಪವರಲ್ಲಿ ಮೂರು ವರ್ಗಂಗೊ. ಶ್ರದ್ಧೆಯಿಲ್ಲದ್ದೋರು ಮೂರನೇ ವರ್ಗ. ಅವು ಔಪಚಾರಿಕವಾಗಿ ಭಕ್ತಿಸೇವೆಲಿ ತೊಡಗಿರೂ ಪರಿಪೂರ್ಣತೆಯ ಹಂತಕ್ಕೆ ಮುಟ್ಳೆ ಇಲ್ಲೆ. ಅಲ್ಪಕಾಲಲ್ಲಿಯೇ ಅವು ಜಾರಿಗೊಳ್ತವು. ಅವು ಕೆಲಸಲ್ಲಿ ತೊಡಗಿಕ್ಕು ಆದರೆ ಅವಕ್ಕೆ ಪೂರ್ಣವಾದ ದೃಢನಂಬಿಕೆಯಾಗಲೀ ಶ್ರದ್ಧೆಯಾಗಲೀ ಇರ್ತಿಲ್ಲೆ. ಹಾಂಗಾಗಿ ಅವಕ್ಕೆ ಕೃಷ್ಣಪ್ರಜ್ಞೆಲಿ ಮುಂದುವರಿವಲೆ ಕಷ್ಟವೇ. ಇದು ಬರೇ ತೋರಿಕೆಯ ಭಕ್ತಿ ಆಗಿರ್ತೇ ವಿನಾ ನಿಜಭಕ್ತಿಯಾಗಿರುತ್ತಿಲ್ಲೆ. ಇದು ಕೇವಲ ಎಲ್ಯಾರು ಭಾಷಣ ಬಿಗಿವಲೋ, ಪೈಸೆ ಮಾಡ್ಳೋ ಚಮತ್ಕಾರ ವಿದ್ಯೆಯಾಗಿ ಮಾಂತ್ರ ಅವಕ್ಕೆ ತಾತ್ಕಾಲಿಕ ಲಾಭ ಪಡವಲ್ಲಿ ಸಫಲವಾಗಿ ಮುಂದೆ ದೊಡ್ಡ ಹೊಂಡಕ್ಕೆ ತಳ್ಳುಲೆ ನಾಂದಿಯಾವ್ತು.  ಭಕ್ತಿಸಾಹಿತ್ಯವ ಸರಿಯಾಗಿ ಅರ್ತುಗೊಂಡು ದೃಢಭಕ್ತಿಯ ಘಟ್ಟಕ್ಕೆ ಬಂದವರ ಕೃಷ್ಣಪ್ರಜ್ಞೆಲಿ ಇಪ್ಪ ಪ್ರಥಮ ವರ್ಗದವು ಹೇಳಿ ಗುರುತುಸುವದು. ಭಕ್ತಿಯ ಪವಿತ್ರಗ್ರಂಥಂಗಳ ತಿಳುವಳಿಕೆಲಿ ಹೆಚ್ಚು ಮುಂದುವರಿಯದ್ದೆ ಇದ್ದರೂ ಕೃಷ್ಣಭಕ್ತಿಯೇ ಅತಿಶ್ರೇಷ್ಠ ಮಾರ್ಗ ಹೇಳಿ ಸಹಜವಾಗಿ ದೃಢನಂಬಿಕೆ ಇದ್ದು ನಿಷ್ಠೆಂದ ಅದರ ಆರಿಸಿಗೊಂಡವು ಎರಡನೇ ವರ್ಗ. ಭಕ್ತಿಸೇವೆಯ ನಿಜವಾದ ಸಾಧಕ° ಹೇಳಿರೆ ಸಂಪೂರ್ಣ ಕೃಷ್ಣಪ್ರಜ್ಞೆ, ಜ್ಞಾನದ ತಿಳುವಳಿಕೆ, ಅನುಷ್ಠಾನ ಇರೆಕು. ಅದು ಇಲ್ಲದ್ದೆ – ಸರಿಯಾದ ಜ್ಞಾನ ಇಲ್ಲದ್ದೆ ಒಟ್ಟಾರೆ ಆನೂ ಭಕ್ತಿಸೇವೆಯ ಮಾಡುತ್ತೇನೆ ಹೇದು ಸುರುಮಾಡಿರೆ ಅದು ನಿಜ ಭಕ್ತಿಸೇವೆ ಆವ್ತಿಲ್ಲೆ, ಅದು ದೃಢವಾಗಿ ಮುಂದುವರಿವಲೂ ಇಲ್ಲೆ. ಮತ್ತೆ ಶ್ರದ್ಧೆಯೇ ಇಲ್ಲದ್ದೋರಿಂಗೆ ಜ್ಞಾನವಾದರೂ ಎಲ್ಲಿಂದ ಸಿಕ್ಕುಗು!. ಅಂತಹ ಅಶ್ರದ್ಧರು  ಪರಿಪೂರ್ಣತೆಯ ಸಾಧುಸಲೆ ಸಾಧ್ಯವಾಗದ್ದೆ ಪುನಃ ಐಹಿಕ ಪ್ರಪಂಚಲ್ಲಿ ಹುಟ್ಟುಸಾವಿನ ಚಕ್ರಲ್ಲಿ ಸಿಕ್ಕಿಗೊಳ್ಳುತ್ತವು.  

ಭಗವಂತ° ಈ ಮದಲೇ ಅಸೂಯೆ ಬಗ್ಗೆ ಒಂದನೇ ಶ್ಲೋಕಲ್ಲಿ ಹೇಳಿದ್ದ. ಅದೇ ರೀತಿ ಇಲ್ಲಿ ಶ್ರದ್ಧೆ ಬಗ್ಗೆಯೂ ಹೇಳುತ್ತ. ಆರಿಂಗೆ ಶ್ರದ್ಧೆ ಇಲ್ಯೋ ಅವಕ್ಕೆ ಅ ವಿಷಯ ಏನ ಹೇಳಿಯೂ ಪ್ರಯೋಜನ ಇಲ್ಲೆ. ನವಗೆ ಯಾವುದರ ಮೇಲೆ ಶ್ರದ್ಧೆ ಇಲ್ಯೋ ಅದರ ನಮ್ಮ ಮನಸ್ಸು ಸ್ವೀಕರುಸುತ್ತೂ ಇಲ್ಲೆ. ಒಂದು ವಿಷಯ ಅರ್ಥ ಆಯೇಕ್ಕಾರೆ ಆ ವಿಷಯಲ್ಲಿ ಆಸಕ್ತಿ ಇರೆಕು, ನಂಬಿಕೆ ಇರೆಕು, ಹಾಂಗೇ ಶ್ರದ್ಧೆಯೂ ಬೇಕು. ‘ಎನಗೆ ಗೊಂತಿಲ್ಲದ್ದ ವಿಷಯಂಗೊ ಇಕ್ಕು, ಎನಗೆ ಗೊಂತಿಲ್ಲದ್ದೇ ಇಪ್ಪ ಹಲವು ವಿಷಯಂಗೊ ಇಕ್ಕು, ಅದರ ಆನು ಉಪಯೋಗಕ್ಕೆ ಬೇಕಾಗಿ ತಿಳ್ಕೊಳ್ಳೆಕು ಹೇಳ್ವ ಮನಸ್ಸೇ ಶ್ರದ್ಧೆಯ ಮದಲಾಣ ಮೆಟ್ಳು. ನಮ್ಮ ಆಜ್ಞಾನದ ಪರಿಜ್ಞಾನ ನವಗೆ ಇರೆಕು. ಅಂಬಗ ಗೊಂತಿಲ್ಲದ್ದರ ಗೊಂತಿಮಾಡಿಗೊಳ್ಳೆಕು ಹೇಳ್ವ ಶ್ರದ್ಧೆ ಉಂಟಾವ್ತು. ಮದಾಲು ಗೊಂತಿಲ್ಲದ್ದರ ಬಗ್ಗೆ (ಗೊಂತಿಲ್ಲೆ ಹೇಳ್ವದರ ಬಗ್ಗೆ) ಗೊಂತಾಯೇಕು, ಆ ಗೊಂತಿಲ್ಲದ್ದ ವಿಷಯಲ್ಲಿ ಸತ್ಯ ಇಕ್ಕು ಹೇಳ್ವ ನಂಬಿಕೆ ಇರೆಕು. ಅಂಬಗ ಅದರ ಅರ್ತುಗೊಳ್ಳೆಕು ಹೇಳ್ವ ಮನಸ್ಸು ಉಂಟಾವ್ತು. ಜ್ಞಾನದ ದಾರಿಲಿ ಸಾಧಕಂಗೆ ಮೂಲಭೂತವಾಗಿ ನಂಬಿಕೆ ಬೇಕು. ನಂಬದವನ ಹತ್ರೆ ಎಂತ ಹೇಳಿಯೂ ಗುಣ ಇಲ್ಲೆ. ಆರಿಂಗೆ ಶ್ರದ್ಧೆ ಇಲ್ಯೋ ಅಂತವರ ಪಾಲಿಂಗೆ ‘ಸತ್ಯ’ ಇಲ್ಲೆ ಹೇಳಿ ಭಗವಂತ° ಇಲ್ಲಿ ಹೇಳುತ್ತ°. ಸರ್ವಾಂತರ್ಯಾಮಿ, ಸರ್ವ ನಿಯಾಮಕ°, ಸರ್ವ ಶ್ರೇಷ್ಠ° ಆ  ಭಗವಂತನ ಬಗ್ಗೆ ನಂಬಿಕೆ ಇಲ್ಲದ್ದೋರು ಭಗವಂತನ ಸೇರ್ಲೆ ಇಲ್ಲೆ. ಅವು ಸಂಸಾರಸುಳಿಲಿ ಸುತ್ತಿಗೊಂಡಿರುತ್ತವು.

ಇಲ್ಲಿ ಭಗವಂತ° ಅರ್ಜುನನ ‘ಪರಂತಪ’ ಹೇಳ್ವ ವಿಶೇಷಣಂದ ದೆನಿಗೊಂಡಿದ°. ಮೇಲ್ನೋಟಕ್ಕೆ ಶತ್ರುಗಳ ಸೋಲುಸುವವ° ಹೇಳಿ ಅರ್ಥ. ನಮ್ಮ ಜೀವನ ಯುದ್ಧಲ್ಲಿ ನಮ್ಮ ಶತ್ರುಗೊ ಹೇಳಿರೆ ನಮ್ಮೊಳ ಇಪ್ಪ ಅಜ್ಞಾನ, ಮೋಹ, ಕಾಮ, ಕ್ರೋಧ ಇತ್ಯಾದಿಗೊ. ಪ್ರತಿಯೊಬ್ಬ ಸಾಧಕನೂ ಕೂಡ ಆ ಪರತತ್ವಲ್ಲಿ ಶ್ರದ್ಧೆಯ ಇರಿಸಿಗೊಂಡು ಇಂತಹ ಶತ್ರುಗಳ ಸುಟ್ಟು ಬೆಳಗುವ ಪರಂತಪ° ಆಯೇಕು ಹೇಳಿ ಬನ್ನಂಜೆಯವರ ವ್ಯಾಖ್ಯಾನಲ್ಲಿ ಹೇಳಿದ್ದವು.

ಶ್ಲೋಕ

ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ ।
ಮತ್ಸ್ಥಾನಿ ಸರ್ವಭೂತಾನಿ ನ ಚಾಹಂ ತೇಷ್ವವಸ್ಥಿತಃ ॥೦೪॥

ಪದವಿಭಾಗ

ಮಯಾ ತತಮ್ ಇದಮ್ ಸರ್ವಮ್ ಜಗತ್ ಅವ್ಯಕ್ತ-ಮೂರ್ತಿನಾ । ಮತ್-ಸ್ಥಾನಿ ಸರ್ವ-ಭೂತಾನಿ ನ ಚ ಅಹಮ್ ತೇಷು ಅವಸ್ಥಿತಃ

ಅನ್ವಯ

ಅವ್ಯಕ್ತ-ಮೂರ್ತಿನಾ ಮಯಾ ಇದಂ ಸರ್ವಂ ಜಗತ್ ತತಮ್ । ಸರ್ವ-ಭೂತಾನಿ ಮತ್-ಸ್ಥಾನಿ  ಚ (ಸಂತಿ), ಅಹಂ ತೇಷು ನ ಅವಸ್ಥಿತಃ ಅಸ್ಮಿ ।

ಪ್ರತಿಪದಾರ್ಥ

ಅವ್ಯಕ್ತ-ಮೂರ್ತಿನಾ – ಅವ್ಯಕ್ತರೂಪಂದ, ಮಯಾ – ಎನ್ನಂದ, ಇದಮ್ ಸರ್ವಮ್ ಜಗತ್ – ಈ ಸಮಸ್ತ ವಿಶ್ವ ಅಭಿವ್ಯಕ್ತಿ, ತತಮ್ – ವ್ಯಾಪ್ತವಾಗಿದ್ದು, ಸರ್ವ-ಭೂತಾನಿ – ಎಲ್ಲ ಜೀವಿಗೊ, ಮತ್-ಸ್ಥಾನಿ ಸಂತಿ ಚ – ಎನ್ನಲ್ಲಿ ಇದ್ದು ಕೂಡ, ಅಹಮ್  – ಆನು, ತೇಷು – ಅವುಗಳಲ್ಲಿ, ನ ಅವಸ್ಥಿತಃ ಅಸ್ಮಿ – ನೆಲೆಸಿಗೊಂಡಿಲ್ಲೆ.

ಅನ್ವಯಾರ್ಥ

ಈ ಇಡೀ ಜಗತ್ತು ಎನ್ನ ಅವ್ಯಕ್ತ ಸ್ವರೂಪಂದ ವ್ಯಾಪಿಸಿಗೊಂಡಿದ್ದು, ಸಮಸ್ತ ಜೀವಿಗೊ ಎನ್ನಲ್ಲಿ ಇದ್ದವು, ಆದರೂ ಆನು ಅವರಲ್ಲಿ ಇಲ್ಲೆ (ಅವರ ಅವಲಂಬಿಸಿಗೊಂಡಿಲ್ಲೆ).

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° – ಆನು ಇಡೀ ಜಗತ್ತಿಲ್ಲಿ ತುಂಬಿಪ್ಪ ಅವ್ಯಕ್ತಮೂರ್ತಿ. ಅವ್ಯಕ್ತ ಹೇಳಿರೆ ವ್ಯಕ್ತ ಆಗದ್ದೆ ಇಪ್ಪದು (ಅಗೋಚರ, ಆಕಾರ ಇಲ್ಲದ್ದು), ಮೂರ್ತಿ ಹೇಳಿರೆ ಆಕೃತಿ/ರೂಪ. ಅರ್ಥಾತ್ ಭಗವಂತ° ಆಕಾಶದ ಹಾಂಗೆ ಎಲ್ಲ ಕಡೆ ವ್ಯಾಪಿಸಿಪ್ಪ ಅವ್ಯಕ್ತ°, ಜ್ಞಾನಾನಂದಮಯನಾಗಿ ಎಲ್ಲೋರೊಳ ತುಂಬಿಗೊಂಡಿಪ್ಪ ಮೂರ್ತಿ. ಒಂದೊಂದು ವಸ್ತುವಿಲ್ಲಿಯೂ ಒಂದೊಂದು ರೂಪಲ್ಲಿ ತುಂಬಿಪ್ಪ ಅನಂತರೂಪ° ಆ ಭಗವಂತ. ಪ್ರತಿಯೊಂದು ವಸ್ತುವಿಂಗೂ ಆ ಭಗವಂತನೇ ಆಧಾರ°, ಈ ಇಡೀ ಪ್ರಪಂಚ ಅವನನ್ನೇ ಅವಲಂಬಿಸಿಗೊಂಡಿಪ್ಪದು. ಆದರೆ ಅವ° ಎಲ್ಲೆಡೆ ತುಂಬಿದ್ದನೇ ಹೊರತು ಅವ° ಆರನ್ನೂ ಆಶ್ರಯಿಸಿಲ್ಲೆ. ಅವ° ಎಲ್ಲೋರಲ್ಲಿ ಇದ್ದೂ ಸ್ವತಂತ್ರ. ಎಲ್ಲವುದರಲ್ಲಿ ಇದ್ದುಗೊಂಡು ಎಲ್ಲೋದರಿಂದ ದೂರವಾಗಿಯೇ ಇದ್ದ°.

ಶ್ಲೋಕ

ನ ಚ ಮತ್ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮೈಶ್ವರಮ್ ।
ಭೂತಭೃನ್ನ ಚ ಭೂತಸ್ಥೋ ಮಮಾತ್ಮಾ ಭೂತಭಾವನಃ ॥೦೫॥

ಪದವಿಭಾಗ

ನ ಚ ಮತ್-ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮ್ ಐಶ್ವರಮ್ । ಭೂತ-ಭೃತ್ ನ ಚ ಭೂತ-ಸ್ಥಃ ಮಮ ಆತ್ಮಾ ಭೂತ-ಭಾವನಃ ॥

ಅನ್ವಯ

ಭೂತಾನಿ ಚ ಮತ್-ಸ್ಥಾನಿ ನ ಸಂತಿ, ಮೇ ಐಶ್ವರಂ ಯೋಗಂ ಪಶ್ಯ । ಅಹಂ ಭೂತ-ಭೃತ್ ಅಪಿ ಭೂತ-ಸ್ಥಃ ನ । ಮಮ ಆತ್ಮಾ ಚ ಭೂತ-ಭಾವನಃ ಅಸ್ತಿ ।

ಪ್ರತಿಪದಾರ್ಥ

ಭೂತಾನಿ – ಎಲ್ಲ ಸೃಷ್ಟಿಯು, ಚ – ಕೂಡ, ಮತ್-ಸ್ಥಾನಿ – ಎನ್ನಲ್ಲಿ , ನ ಸಂತಿ – ನೆಲೆಸಿಲ್ಲೆ. ಮೇ – ಎನ್ನ, ಐಶ್ವರಮ್ ಯೋಗಮ್ – ಅಚಿಂತ್ಯ ಯೋಗಶಕ್ತಿಯ, ಪಶ್ಯ – ನೋಡು, ಅಹಮ್ – ಆನು, ಭೂತ-ಭೃತಿ ಅಪಿ – ಸಕಲಜೀವಿಗಳ ಪಾಲಕ ಆಗಿದ್ದರೂ ಕೂಡ, ಭೂತ-ಸ್ಥಃ ನ – ವಿಶ್ವಾಭಿವ್ಯಕ್ತಿಲಿ ಇಲ್ಲೆ, ಮಮ ಆತ್ಮಾ ಚ – ಎನ್ನ ಪರಮಾತ್ಮವೂ ಕೂಡ, ಭೂತ-ಭಾವನಃ ಅಸ್ತಿ – ಸಕಲ ಅಭಿವ್ಯಕ್ತಿಗಳ ಆಕರವು ಆಗಿದ್ದು.

ಅನ್ವಯಾರ್ಥ

ಸೃಷ್ಟಿಯಾದ್ದೆಲ್ಲವೂ ಎನ್ನಂದ ಆದರೂ ಅದು ಎನ್ನನ್ನೇ ಆಧರಿಸಿಪ್ಪದಲ್ಲ. ಎನ್ನ ಯೋಗಸಮೃದ್ಧಿಯ ನೋಡು. ಎಲ್ಲ ಜೀವಿಗಳ ಪಾಲಕ° ಆನಾದರೂ ಮತ್ತೆ ಎಲ್ಲ ದಿಕ್ಕೆ ಇಪ್ಪವ°ನಾದರೂ ಆನು ಈ ವಿಶ್ವದ ಅಭಿವ್ಯಕ್ತಿಯ ಭಾಗವಲ್ಲ. (ಅವುಗಳಲ್ಲಿ ಆನಿಲ್ಲೆ, ಆನೇ ಸೃಷ್ಟಿಯ ಮೂಲ).

ತಾತ್ಪರ್ಯ / ವಿವರಣೆ

ಇದು ರಜಾ ಗಹನವಾದ ವಿಚಾರವ ಭಗವಂತ° ಇಲ್ಲಿ ಮುಂದಿರಿಸಿದ್ದ°. ಮೇಲ್ಮೈಗೆ ಗೊಂದಲಕ್ಕೆ ಉಂಟುಮಾಡುವ ಹಾಂಗೆ ಇದ್ದು. ಎಲ್ಲದಕ್ಕೂ ತಾನೇ ಆಧಾರ° (ಮತ್ ಸ್ಥಾನಿ ಸರ್ವಭೂತಾನಿ) ಹೇಳಿ ಭಗವಂತ° ಸುರುವಿಂಗೆ ಹೇಳಿದ್ದ. ಭೌತಿಕ ಅಭಿವ್ಯಕ್ತಿಯ ನಿರ್ವಹಣೆ ಮತ್ತು ಪಾಲನೆಯ ವಿಷಯಲ್ಲಿ ಭಗವಂತಂಗೆ ನೇರ ಕಾಳಜಿ ಇಲ್ಲೆ. ಅದು ಅವನವನ ಬುದ್ಧಿಶಕ್ತಿಗೆ ಬಿಟ್ಟದ್ದು. ಬುದ್ಧಿಪೂರ್ವಕವಾಗಿ ನಾವು ಏನ ಮಾಡ್ಳೆ ಹೆರಡುತ್ತೋ ಅದನ್ನೇ ಭಗವಂತ° ನಮ್ಮಿಂದ ಮಾಡುಸುವದು. ಇಲ್ಲಿ ಸರಿಯಾದ ತೀರ್ಮಾನ ಮಾಡೆಕ್ಕಾದ್ದು ಜೀವಿಯ ಜವಾಬ್ದಾರಿ. ಸಕಲ ವಿಶ್ವವೂ ಪರಮ ಪ್ರಭುವಿನ ಶಕ್ತಿ. ಆದರೆ ಅವ° ಅದರ ಒಳ ಇಲ್ಲೆ. ಅವನ ಸನ್ನಿವೇಶವೇ ಬೇರೆ. ಹಾಂಗಾಗಿ, ಭಗವಂತನ ಕಲ್ಪನಾಶಕ್ತಿ ನವಗೆ ಆಧಾರವಾಗಿದ್ದರೂ ದೇವೋತ್ತಮ ಪರಮ ಪುರುಷ ಅವ ಇವೆಲ್ಲವುಗಳಿಂದಲೂ ದೂರವಾಗಿಯೇ ಇರುತ್ತ. ಇದು ಅವನ ಕಲ್ಪನಾತೀತ ಐಶ್ವರ್ಯ.  ಭಗವಂತ ತನ್ನ ಶಕ್ತಿಲಿ ಮೆರೆದು, ನಮ್ಮ ಕಲ್ಪನಗೆ ಸಿಲುಕದ  ಅದ್ಭುತ ಲೀಲೆಗಳಲ್ಲಿ ತೊಡಗಿಯೊಂಡಿರುತ್ತ°. ಅವನ ವ್ಯಕ್ತಿತ್ವಲ್ಲಿ ಬೇರೆ ಬೇರೆ ಪ್ರಬಲ ಶಕ್ತಿಗೊ ತುಂಬಿ ತುಳುಕುತ್ತು. ಅವನ ಸಂಕಲ್ಪವೇ ನಿಜವಾದ ವಾಸ್ತವಾಂಶ. ಅವ° ಏನಬೇಕಾರೂ ಯೋಚನೆ ಮಾಡುಗು, ಅದರ ಅವ° ಇಚ್ಛಾಶಕ್ತಿಂದಲೇ ಪೂರೈಸುಗು. ನಾವು ಎಂತೆಂತದೋ ಯೋಚನೆ ಮಾಡುತ್ತು, ಆದರೆ ಹೆರಟಪ್ಪಗ ಹಲವಾರು ವಿಘ್ನಂಗೊ ಬಂದು ಎಲ್ಲೆಲ್ಲಿಗೋ ಹೋಗಿ ಮುಟ್ಟುತ್ತು. ಎಂತಕೆ ಹೇಳಿರೆ ನಡಶುವದು ಅವ°, ಅವ° ನಮ್ಮ ಮನಸ್ಥಿತಿಯ ನೋಡಿಗೊಂಡು ನಮ್ಮಿಂದ ಕಾರ್ಯ ಮಾಡುಸುವದು. ಅವ° ತಾನು ಮಾಡೆಕು ಹೇಳಿ ಗ್ರೇಶಿದ್ದರ ಎಲ್ಲಿದ್ದರಲ್ಲಿಂದಲೇ ಮಾಡಿ ಪೂರೈಸಿಗೊಂಬ ಮಹತ್ ಶಕ್ತಿ. ಹಾಂಗಾಗಿ ಇಡೀ ಭೌತಿಕ ಅಭಿವ್ಯಕ್ತಿಯ ಕಾಪಾಡಿ ಪಾಲುಸುವವ° ಅವ° ಆದರೂ ಅವ° ಈ ಭೌತಿಕ ಅಭಿವ್ಯಕ್ತಿಯ ಮುಟ್ಟುತ್ತನಿಲ್ಲೆ. ಅವನ ಪರಮಸಂಕಲ್ಪ ಮಾಂತ್ರಂದಲೇ ಎಲ್ಲವೂ ಸೃಷ್ಟಿಯಾವ್ತು, ಪಾಲನೆ ಆವ್ತು, ಲಯವೂ ಆವ್ತು. ಹಾಂಗಾಗಿ ಅವ° ಪರಿಪೂರ್ಣ ಚೇತನ°. ಏಕಕಾಲಲ್ಲಿ ಭಗವಂತ° ಎಲ್ಲರಲ್ಲಿಯೂ ಇರುತ್ತ° ಆದರೆ ಅವ° ವೈಯಕ್ತಿಕವಾಗಿ ಹೇಂಗೆ ಇರುತ್ತ° ಹೇಳ್ವದರ ಸಾಮಾನ್ಯ ಮನುಷ್ಯರಿಂಗೆ ಕಲ್ಪನೆ ಮಾಡಿಗೊಂಬಲೂ ಎಡಿಯ. ಅವ° ಈ ಐಹಿಕ ಅಭಿವ್ಯಕ್ತಿಂದ ಬೇರೆಯೇ ಆಗಿದ್ದ°. ಆದರೆ ಎಲ್ಲಕ್ಕೂ ಅವನೇ ಆಧಾರ°. ಇದನ್ನೇ ಇಲ್ಲಿ ‘ಯೋಗಂ ಐಶ್ವರ್ಯಂ’ – ‘ಭಗವಂತನ ರಹಸ್ಯ ಶಕ್ತಿ’ ಹೇಳಿ ಹೇಳಿದ್ದು.

ಮೇಲ್ನೋಟಕ್ಕೆ ಇವು ಒಂದಕ್ಕೊಂದು ವಿರುದ್ಧವಾಗಿಪ್ಪ ಒಗಟಿನ ಹಾಂಗೆ ಕಾಣುತ್ತು. ಎನ್ನಲ್ಲಿ ಎಲ್ಲವೂ ಇದ್ದು, ಆದರೆ ಎನಗಿಲ್ಲೆ ಏವುದರ ನಂಟು! ಭಗವಂತನ ಮಹಿಮೆ ಹೇಳಿರೆ ಇದುವೆ. ಭಗವಂತ ಹೇಳುತ್ತ° – “ಎನ್ನ ರೂಪ ಸೃಷ್ಟಿಯಲ್ಲಿಪ್ಪದಕ್ಕೆ ರೂಪ ಕೊಟ್ಟಿದು, ಹೊತ್ತು ಸಲಹುತ್ತಿದ್ದೆ, ಅಂದರೂ ಇವುಗಳಲ್ಲಿ ಆನಿಲ್ಲೆ”!! ವಿರೋಧಾತ್ಮಕ ಹೇಳಿಕೆಗೊ!!. ಆದರೆ ಇದು ಭಗವಂತನ ಅಚಿಂತ್ಯ ಶಕ್ತಿಯ ಅನುಸಂಧಾನ. ಇದರ ಗೂಢಾರ್ಥ “ಎಲ್ಲವೂ ಎನ್ನಲ್ಲಿದ್ದು ಆದರೆ ಯಾವುದರಲ್ಲಿಯೂ ಎನಗೆ ಮಮಕಾರ ಇಲ್ಲೆ” ಹೇಳ್ವದು. ಇದು ಭಗವಂತನ ನಿರ್ಲಿಪ್ತತೆಯ ತೋರುಸುತ್ತು. ಅವ° ಯಾವುದನ್ನೂ ಅಂಟಿಸಿಗೊಳ್ಳುತ್ತನಿಲ್ಲೆ. ಅವ° ಯಾವುದನ್ನೂ ಆಶ್ರಯಿಸಿಲ್ಲೆ. ಯಾವುದರ ಲೇಪವೂ ಅವಂಗೆ ಇಲ್ಲೆ. ಇದು ಅವನ ಈಶ್ವರೀಯ ಶಕ್ತಿ. ಇದು ಭಗವಂತನ ಸರ್ವಸಮರ್ಥತೆ. ಇಲ್ಲಿ ಭಗವಂತ° ಸಂಕ್ಷಿಪ್ತವಾಗಿ “ಭೂತಭೃತ್ ನಚ ಭೂತಸ್ಥಃ” ಹೇಳಿ ‘ನಚ’ ಹೇಳ್ವದರ ಹೊಸ್ತಿಲಿಲಿ ಮಡುಗಿದ ದೀಪದ ಹಾಂಗೆ ಹೇಳಿಬಿಟ್ಟಿದ°. ಇದರರ್ಥ “ಆನು ಭೂತಭೃತ್- ಎಲ್ಲ ಜೀವಜಾತವ ಧರಿಸಿದ್ದೆ, ಹಾಂಗೇ, ನಚಭೂತಭೃತ್ – ಏನನ್ನೂ ಧರಿಸಿಲ್ಲೆ. ಆನು ಭೂತಸ್ಥಃ – ಎಲ್ಲ ಜೀವಜಾತಂಗೊ ಎನ್ನಲ್ಲಿದ್ದು ಮತ್ತೆ ಆನು ನಚಭೂತಸ್ಥಃ – ಯಾವುದರಲ್ಲಿಯೂ ಆನಿಲ್ಲೆ. ಮತ್ತೆ ಭಗವಂತ° ಹೇಳುತ್ತ° – “ಮಮ ಆತ್ಮಾ ಭೂತಭಾವನಃ” – ಹೇಳಿರೆ, ಈ ಜಗತ್ತಿನ ಸೃಷ್ಟಿ-ಸ್ಥಿತಿ-ಲಯ-ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷ ಎಲ್ಲವೂ ಭಗವಂತನಿಂದ. ಅವ° ಜ್ಞಾನಾನಂದ ಸ್ವರೂಪ°. ಭಗವಂತ° ಬೇರೆ, ಅವನ ದೇಹ ಬೇರೆ ಹೇಳ್ವ ಕಲ್ಪನೆ ಇದಲ್ಲ. ಅವನ ಗುಣ ಕ್ರಿಯೆ ಬೇರೆ ಬೇರೆ ಅಲ್ಲ. ಅವೆಲ್ಲವೂ ಅಖಂಡ. ಇದರ ಪಂಚಭೌತಿಕ ಮತ್ತೆ ತ್ರೈಗುಣ್ಯದ ಪರಿಧಿಲಿ ನವಗೆ ಕಲ್ಪುಸಲೆ ಸಾಧ್ಯ ಇಲ್ಲೆ ಹೇಳಿ ಬನ್ನಂಜೆ ವಿವರುಸುತ್ತವು.

ಶ್ಲೋಕ

ಯಥಾssಕಾಶಸ್ಥಿತೋ ನಿತ್ಯಂ ವಾಯುಃ ಸರ್ವತ್ರಗೋ ಮಹಾನ್ ।
ತಥಾ ಸರ್ವಾಣಿ ಭೂತಾನಿ ಮತ್ಸ್ಥಾನಿತ್ಯುಪಧಾರಯ ॥೦೬॥

ಪದವಿಭಾಗ

ಯಥಾ ಅಕಾಶ-ಸ್ಥಿತಃ ನಿತ್ಯಮ್ ವಾಯುಃ ಸರ್ವತ್ರಗಃ ಮಹಾನ್ । ತಥಾ ಸರ್ವಾಣಿ ಭೂತಾನಿ ಮತ್-ಸ್ಥಾನಿ ಇತಿ ಉಪಧಾರಯ ॥

ಅನ್ವಯ

ಯಥಾ ಸರ್ವತ್ರಗಃ ಮಹಾನ್ ವಾಯುಃ ನಿತ್ಯಮ್ ಆಕಾಶ-ಸ್ಥಿತಃ ಅಸ್ತಿ, ತಥಾ ಸರ್ವಾಣಿ ಭೂತಾನಿ ಮತ್-ಸ್ಥಾನಿ ಸಂತಿ ಇತಿ ತ್ವಂ ಉಪಧಾರಯ ।

ಪ್ರತಿಪದಾರ್ಥ

ಯಥಾ – ಹೇಂಗೆ, ಸರ್ವತ್ರಗಃ ಮಹಾನ್ ವಾಯುಃ – ಎಲ್ಲೆಡೆ ಬೀಸುತ್ತಿಪ್ಪ ಬಲಶಾಲಿ ಗಾಳಿಯು, ನಿತ್ಯಮ್ – ಏವತ್ತೂ, ಆಕಾಶ-ಸ್ಥಿತಃ ಅಸ್ತಿ – ಆಕಾಶಲ್ಲಿ ನೆಲೆಸಿರುತ್ತೋ, ತಥಾ – ಹಾಂಗೇ, ಸರ್ವಾಣಿ ಭೂತಾನಿ – ಸೃಷ್ಟಿಯ ಸಮಸ್ತ ಜೀವಜಾತಂಗೊ, ಮತ್-ಸ್ಥಾನಿ ಸಂತಿ ಇತಿ – ಎನ್ನಲ್ಲಿ ನೆಲೆಸಿದ್ದು ಹೇದು, ತ್ವಮ್ ಉಪಧಾರಯ – ನೀನು ತಿಳಿಕ್ಕೊ.

ಅನ್ವಯಾರ್ಥ

ಹೇಂಗೆ ಎಲ್ಲೋದಿಕ್ಕೆ ಬೀಸುವ ಬಲಶಾಲಿಯಾದ ಗಾಳಿಯು ಸದಾ ಆಕಾಶಲ್ಲಿ ನೆಲಿಸಿರುತ್ತೋ ಹಾಂಗೇ ಸೃಷ್ಟಿಯಾದ್ದೆಲ್ಲವೂ ಎನ್ನಲ್ಲಿ ನೆಲೆಸಿರುತ್ತು.

ತಾತ್ಪರ್ಯ / ವಿವರಣೆ

ಬೃಹತ್ ಐಹಿಕ ಸೃಷ್ಟಿಯು ಭಗವಂತನಲ್ಲಿ ಹೇಂಗೆ ನೆಲೆಸಿದ್ದು ಹೇಳ್ವದರ ಭಗವಂತ° ಇಲ್ಲಿ ಸೂಚ್ಯವಾಗಿ ಹೇಳುತ್ತ°. ನವಗೆ ಊಹಿಸಿಗೊಂಬಲೆ ಸಾಧ್ಯ ಅಪ್ಪ ಬೃಹತ್ ಸೃಷ್ಟಿ ಹೇಳಿರೆ ಆಕಾಶ. ಈ ಆಕಾಶಲ್ಲಿ ವಾಯು/ಗಾಳಿ ವಿಶ್ವದ ಅತ್ಯಂತ ದೊಡ್ಡ ಅಭಿವ್ಯಕ್ತಿ. ಗಾಳಿಯ ಚಲನೆ ಪ್ರತಿಯೊಂದು ವಸ್ತುವಿನ ಚಲನೆಯ ಮೇಲೆ ಪ್ರಭಾವವ ಬೀರುತ್ತು. ವಾಯುವು ಮಹತ್ತರವಾದದ್ದಾಗಿದ್ದರೂ ಅದು ಆಕಾಶಲ್ಲಿ ನೆಲೆಸಿದ್ದು. ವಾಯುವು ಆಕಾಶಂದ ಆಚಿಗೆ ಇಲ್ಲೆ. ಹಾಂಗೇ, ಎಲ್ಲ ಬೆರಗುಗೊಳುಸುವ ವಿಶ್ವ ಅಭಿವ್ಯಕ್ತಿಗಳೂ ಭಗವಂತನ ಪರಮಸಂಕಲ್ಪಂದ ಅಸ್ತಿತ್ವಲ್ಲಿದ್ದು. ಅವೆಲ್ಲವೂ ಪರಮ ಸಂಕಲ್ಪಕ್ಕೆ ಅಧೀನ. ಅವನ ಇಚ್ಛೆ ಇಲ್ಲದ್ದೆ ಹುಲ್ಲುಕಡ್ಡಿಯೂ ಹಂದ. ಹಾಂಗಾಗಿ ಪ್ರತಿಯೊಂದೂ ಅವನ ಇಚ್ಛಾನುಸಾರ ನಡವದು. ಅರ್ಥಾತ್ ಅವ° ನಮ್ಮ ಕೊಣುಶುವದು. ಅವನ ಇಚ್ಛೆಪ್ರಕಾರವೇ ಎಲ್ಲದರ ಪಾಲನೆ ಅಪ್ಪದು, ನಾಶ ಅಪ್ಪದು. ಅಂದರೂ ಆಕಾಶವು ಏವತ್ತೂ ವಾಯುವಿನ ಕ್ರಿಯೆಂದ ದೂರ ಇಪ್ಪ ಹಾಂಗೆ ಭಗವಂತನೂ ವಿಶ್ವದ ಅಭಿವ್ಯಕ್ತಿಂದ ದೂರವಾಗಿಯೇ ಇರುತ್ತ°.

ಗಾಳಿ ಎಲ್ಲ ಕಡೆ ಇರುತ್ತು. ಅದು ಒಳವೂ ಇರ್ತು ಹೆರವೂ ಇರ್ತು. ಗಾಳಿ ನವಗೆ ಕಣ್ಣಿಂಗೆ ಕಾಣುತ್ತಿಲ್ಲೆ. ಗಾಳಿ ಈ ಆಕಾಶಲ್ಲಿ ತುಂಬಿಗೊಂಡಿದ್ದು. ಹಾಂಗೇ ಭಗವಂತ° ನಮ್ಮ ಒಳವೂ ಹೆರವೂ ತುಂಬಿಗೊಂಡಿದ್ದ°. ಆದರೆ ಯಾವುದರ ಲೇಪವೂ ಅವಂಗೆ ಇಲ್ಲೆ . ಈ ರೀತಿಲಿ  ವಿಶ್ವದ ಸರ್ವ ಇರುವಿಕೆಯೂ ಭಗವಂತನಲ್ಲೇ ಇಪ್ಪದು.

ಶ್ಲೋಕ

ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಮ್ ।
ಕಲ್ಪಕ್ಷಯೇ ಪುನಸ್ತಾನಿ ಕಲ್ಪಾದೌ ವಿಸೃಜಾಮ್ಯಹಮ್ ॥೦೭॥

ಪದವಿಭಾಗ

ಸರ್ವ-ಭೂತಾನಿ ಕೌಂತೇಯ ಪ್ರಕೃತಿಮ್ ಯಾಂತಿ ಮಾಮಿಕಾಮ್ । ಕಲ್ಪ-ಕ್ಷಯೇ ಪುನಃ ತಾನಿ ಕಲ್ಪ-ಆದೌ ವಿಸೃಜಾಮಿ ಅಹಮ್ ॥

ಅನ್ವಯ

ಹೇ ಕೌಂತೇಯ!, ಸರ್ವ-ಭೂತಾನಿ ಕಲ್ಪ-ಕ್ಷಯೇ ಮಾಮಿಕಾಂ ಪ್ರಕೃತಿಂ ಯಾಂತಿ । ಪುನಃ ಕಲ್ಪ-ಆದೌ ತಾನಿ ಅಹಂ ವಿಸೃಜಾಮಿ ।

ಪ್ರತಿಪದಾರ್ಥ

ಹೇ ಕೌಂತೇಯ! – ಏ ಕುಂತೀ ಮಗನಾದ ಅರ್ಜುನನೇ!, ಸರ್ವ-ಭೂತಾನಿ – ಸೃಷ್ಟಿಯಾಗಿಪ್ಪ ಎಲ್ಲ ಜೀವಿಗೊ, ಕಲ್ಪ-ಕ್ಷಯೇ – ಕಲ್ಪಾಂತ್ಯಲ್ಲಿ, ಮಾಮಿಕಾಮ್ – ಎನ್ನ , ಪ್ರಕೃತಿಮ್ ಯಾಂತಿ – ಪ್ರಕೃತಿಯ ಹೊಂದುತ್ತವು (ಸೇರುತ್ತವು/ಪ್ರವೇಶಿಸುತ್ತವು), ಪುನಃ – ಮತ್ತೆ, ಕಲ್ಪ-ಆದೌ – ಕಲ್ಪದ ಪ್ರಾರಂಭಲಿ, ತಾನಿ – ಅವುಗಳ, ಅಹಮ್ ವಿಸೃಜಾಮಿ – ಆನು ಸೃಷ್ಟಿಸುತ್ತೆ.  

ಅನ್ವಯಾರ್ಥ

ಏ ಕುಂತೀಮಗನಾದ ಅರ್ಜುನ!, ಕಲ್ಪಾಂತ್ಯಲ್ಲಿ ಎಲ್ಲ ಐಹಿಕ ಅಭಿವ್ಯಕ್ತಿಗೊ (ಸೃಷ್ಟಿಯ ಎಲ್ಲವೂ) ಎನ್ನ ಪ್ರಕೃತಿಲಿ ಲೀನ ಆವುತ್ತು ಮತ್ತೆ ಪುನಃ ಇನ್ನೊಂದು ಕಲ್ಪ ಸುರುವಪ್ಪಗ ಎನ್ನ ಶಕ್ತಿಂದ ಅವುಗಳ ಸೃಷ್ಟಿಸುತ್ತೆ.

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° – “ಸೃಷ್ಟಿಯ ಕೊನೆಲಿ ಎಲ್ಲ ವಸ್ತುಗೊ ಅವನ ಮೂಲಪ್ರಕೃತಿಯ ಸೇರುತ್ತು. ಮತ್ತೆ ಮತ್ತಣ ಕಲ್ಪಲ್ಲಿ ಮರುಸೃಷ್ಟಿ ಮಾಡುತ್ತೆ”.

ಸೃಷ್ಟಿಯಾಗಿ 31,104 ಸಾವಿರ ಕೋಟಿ ವರ್ಷದ ಮತ್ತೆ ಮಹಾಪ್ರಳಯ. ಇದು ಚತುರ್ಮುಖ ಬ್ರಹ್ಮನ ನೂರು ವರ್ಷ. ಇದರ ಕಲ್ಪಕ್ಷಯ / ಕಲ್ಪಾಂತ್ಯ ಹೇಳಿ ಹೇಳುತ್ತವು. [ಬ್ರಹ್ಮನ ಒಂದು ಹಗಲು ಹೇಳಿರೆ ನಮ್ಮ ಭೂಲೋಕದ 4,30,00,00,000 ವರ್ಷಕ್ಕೆ ಸಮನಾದ ಲೆಕ್ಕ. ಅಷ್ಟೇ ಇರುಳು. ಅವನ ತಿಂಗಳ್ಳಿಲಿಯೂ 30 ದಿನದ ಲೆಕ್ಕ, ಅವನ ವರ್ಷಲ್ಲಿಯೂ 12 ತಿಂಗಳ ಲೆಕ್ಕ. ಇಂತಹ ನೂರು ವರ್ಷ ಬ್ರಹ್ಮನ ಕಾಲ. ಅಲ್ಲಿಗೆ ಕಲ್ಪಾಂತ್ಯ – ಮಹಾಪ್ರಳಯ. ಪುನಃ ಅಷ್ಟೇ ( 31,104 ಸಾವಿರ ಕೋಟಿ ವರ್ಷ) ಪ್ರಳಯ ಕಾಲ]. ಅಲ್ಲಿಗೆ ಭಗವಂತ° ಪ್ರಕಟ ಮಾಡಿದ ಶಕ್ತಿ (ಸತ್ಯಲೋಕಂದ ಹಿಡುದು ಸಮಸ್ತ ವಿಶ್ವ/ಜಗತ್ತು) ಅವನಲ್ಲಿ ಲೀನವಾಗಿ ಕೊನೆಗೊಳ್ಳುತ್ತು. ಅದಾದ ಮತ್ತೆ ವಿಶ್ವದ ರೂಪ ಕೊಡುವದು ಪುನಃ ಅವನ ಸಂಕಲ್ಪಂದ. ಅರ್ಥಾತ್, ಮರಳಿ ಈ ಸೃಷ್ಟಿ ನಿರ್ಮಾಣ ಆವ್ತು. ಮರಳಿ ಸೂಕ್ಷ್ಮರೂಪಂದ ಸ್ಥೂಲರೂಪವ ಪಡೆತ್ತು.

ಶ್ಲೋಕ

ಪ್ರಕೃತಿಂ ಸ್ವಾಮವಷ್ಟಭ್ಯ ವಿಸೃಜಾಮಿ ಪುನಃ ಪುನಃ ।
ಭೂತಗ್ರಾಮಮಿಮಂ ಕೃತ್ಸ್ನಮ್ ಅವಶಂ ಪ್ರಕೃತೇರ್ವಶಾತ್ ॥೦೮॥

ಪದವಿಭಾಗ

ಪ್ರಕೃತಿಂ ಸ್ವಾಮ್ ಅವಷ್ಟಭ್ಯ ವಿಸೃಜಾಮಿ ಪುನಃ ಪುನಃ । ಭೂತ-ಗ್ರಾಮಮ್ ಇಮಮ್ ಕೃತ್ಸ್ನಮ್ ಅವಶಮ್ ಪ್ರಕೃತೇಃ ವಶಾತ್ ॥

ಅನ್ವಯ

ಅಹಂ ಸ್ವಾಂ ಪ್ರಕೃತಿಮ್ ಅವಷ್ಟಭ್ಯ ಪ್ರಕೃತೇಃ ವಶಾತ್ ಅವಶಮ್ ಇಮಂ ಕೃತ್ಸ್ನಂ ಭೂತ-ಗ್ರಾಮಂ ಪುನಃ ಪುನಃ ವಿಸೃಜಾಮಿ

ಪ್ರತಿಪದಾರ್ಥ

ಅಹಮ್ – ಆನು, ಸ್ವಾಮ್ ಪ್ರಕೃತಿಮ್ ಅವಷ್ಟಭ್ಯ –  ಸ್ವಯಂ ಭೌತಿಕ ಪ್ರಕೃತಿಯ ಒಳಪ್ರವೇಶಿಸಿ, ಪ್ರಕೃತೇಃ ವಶಾತ್ – ಪ್ರಕೃತಿಯ ಬಲದ ವಶಂದ, ಅವಶಮ್ – ತಾನೇ ತಾನಾಗಿ, ಇಮಮ್  ಕೃತ್ಸ್ನಮ್ – ಈ ಸಮಗ್ರ, ಭೂತ-ಗ್ರಾಮಮ್ – ಎಲ್ಲ ವಿಶ್ವ ಅಭಿವ್ಯಕ್ತಿಗಳ, ಪುನಃ ಪುನಃ – ಮತ್ತೆ ಮತ್ತೆ, ವಿಸೃಜಾಮಿ – ಸೃಷ್ಟಿಸುತ್ತೆ.

ಅನ್ವಯಾರ್ಥ

ಎನ್ನ ಸ್ವಯಂ ಪ್ರಕೃತಿಸ್ವಭಾವಂದ ( ಎನ್ನ ಮಾಯಾಶಕ್ತಿಂದ) ಈ ಭೌತಿಕ ಪ್ರಕೃತಿಯ ಎನ್ನಲ್ಲಿ ಅಧೀನಗೊಳಿಸಿ ಮತ್ತೆ ಮತ್ತೆ ಸೃಷ್ಟಿಸುತ್ತೆ.

ತಾತ್ಪರ್ಯ / ವಿವರಣೆ

ಇಡೀ ವಿಶ್ವವ್ಯವಸ್ಥೆ ಭಗವಂತನ ಅಧೀನ. ಅವನ ಸಂಕಲ್ಪಂದ ಅದು ಮತ್ತೆ ಮತ್ತೆ ರೂಪತಾಳುತ್ತು, ಹಾಂಗೇ ಅವನ ಸಂಕಲ್ಪಂದ ಅವನಲ್ಲಿ ಅದು ಐಕ್ಯವಾವ್ತು. ಈ ಭೌತಿಕ ಜಗತ್ತು ದೇವೋತ್ತಮ ಪರಮ ಪುರುಷನ ಶಕ್ತಿಯ ಅಭಿವ್ಯಕ್ತಿ. ಸೃಷ್ಟಿಯ ಕಾಲಲ್ಲಿ ಐಹಿಕ ಶಕ್ತಿಯು ಮಹತ್ ತತ್ವವಾಗಿ ಬಿಡುಗಡೆ ಹೊಂದುದ್ದು. ಪ್ರಳಯಕಾಲಲ್ಲಿ ಸೂಕ್ಷ್ಮರೂಪಲ್ಲಿ ಭಗವಂತನ ಸೇರಿದ ಜಡ ಮತ್ತು ಜೀವವ ಭಗವಂತ ತನ್ನ ಅಧೀನವಾದ ಪ್ರಕೃತಿಯ ಬಳಸಿಗೊಂಡು ಮತ್ತೆ ಸೃಷ್ಟಿ ಮಾಡುತ್ತ°. ಭಗವಂತನ ಈ ಸೃಷ್ಟಿ ಮತ್ತೆ ಸಂಹಾರಚಕ್ರ ನಿರಂತರ ನಡಕ್ಕೊಂಡೇ ಇರುತ್ತು. ಇಂತಹ ಅನಂತ ಬ್ರಹ್ಮಾಂಡಂಗೊ ಹಿಂದೆ ನಿರ್ಮಾಣವಾಗಿ ಸಂಹಾರ ಆಯ್ದು. ಇನ್ನೂ ಅನಂತ ಕಾಲಲ್ಲಿಯೂ ಇದು ಮುಂದುವರಿತ್ತಲೇ ಇರ್ತು. ಹಾಂಗಾಗಿಯೇ ಭಗವಂತ° ಅನಂತಕೋಟಿ ಬ್ರಹ್ಮಾಂಡನಾಯಕ°.

ಭಗವಂತ° ತನ್ನ ಸುರುವಾಣ ಪುರುಷಾವತಾರವಾದ ವಿಷ್ಣುವಾಗಿ ಮಹತ್ ತತ್ವವ ಪ್ರವೇಶಿಸುತ್ತ°. ಅವ° ಕಾರಣ ಸಮುದ್ರಲ್ಲಿ ಮನಿಕ್ಕೊಂಡು ಗರ್ಭೋದಕಶಾಯೀ ವಿಷ್ಣುವಾಗಿ ತನ್ನ ಉಸಿರಿಂದಲೇ  ಅಸಂಖ್ಯ ವಿಶ್ವವ ಸೃಷ್ಟಿಸುತ್ತ°. ಈ ರೀತಿಲಿ ಪ್ರತಿಯೊಂದು ವಿಶ್ವವೂ ಸೃಷ್ಟಿಯಾವ್ತು. ಮುಂದೆ ಅವ° ಕ್ಷೀರೋದಕಶಾಯೀ ವಿಷ್ಣುವಾಗಿ ಪ್ರಕಟಗೊಳ್ಳುತ್ತ°. ಈ ವಿಷ್ಣುವು ಪರಮಾಣುವಲ್ಲಿವರೇಂಗೆ ಎಲ್ಲವನ್ನೂ ಪ್ರವೇಶಿಸಿ ಅದಕ್ಕೊಂದು ಚೈತನ್ಯವ ಕೊಡುತ್ತ°. ಅರ್ಥಾತ್, ಅವ° ಅವೆಲ್ಲದರಲ್ಲಿಯೂ ಅಂತರ್ಯಾಮಿಯಾಗಿ ಪ್ರವೇಶಿಸುತ್ತ°. ಜೀವಿಗಳ ಮಾತು ಹೇಳ್ತದಾದರೆ, ಅವು ಈ ಐಹಿಕ ಪ್ರಕೃತಿಯ ಗರ್ಭಲ್ಲಿ ಸೇರುತ್ತವು. ತಮ್ಮ ಹಿಂದಾಣ ಕರ್ಮಂಗಳ ಫಲವಾಗಿ ಬೇರೆ ಬೇರೆ ಸ್ಥಾನಂಗಳ ಪಡೆತ್ತವು. ಹೀಂಗೆ ಐಹಿಕ ಜಗತ್ತಿನ ಚಟುವಟಿಕೆಗೊ ಪ್ರಾರಂಭ ಆವ್ತು. ಬೇರೆ ಬೇರೆ ಜೀವಿವರ್ಗಂಗಳ ಚಟುವಟಿಕೆಗೊ ಈ ರೀತಿಲಿ ಸೃಷ್ಟಿಯ ಕ್ಷಣಂದಲೇ ಪ್ರಾರಂಭವಾವ್ತು. ಎಲ್ಲವೂ ವಿಕಸನ ಆವ್ತು ಹೇಳಿ ಅಲ್ಲ. ಬೇರೆ ಬೇರೆ ಜೀವವರ್ಗಂಗೊ ವಿಶ್ವದೊಟ್ಟಿಂಗೆಯೇ ಸೃಷ್ಟಿಯಾವ್ತು. ಪ್ರಕೃತಿ, ಮನುಷ್ಯರು, ಪ್ರಾಣಿಗೊ, ಪಕ್ಷಿಗೊ , ವಸ್ತುಗೊ ಎಲ್ಲವೂ ಒಟ್ಟಿಂಗೆ ಸೃಷ್ಟಿಯಾವ್ತು. ಜೀವಿಗೊ ಹಿಂದಾಣ ವಿನಾಶದ ಹೊತ್ತಿಲ್ಲಿ ಇಟ್ಟುಗೊಂಡಿದ್ದ ಬಯಕೆಗೊ ಮತ್ತೆ ಪ್ರಕಟವಾವ್ತು. ಹಿಂದಾಣ ಸೃಷ್ಟಿಲಿ ತಮ್ಮ ಹಿಂದಾಣ ಜನ್ಮಲ್ಲಿ ಅವಿದ್ದ ಸ್ಥಿತಿಂದ ಮತ್ತೆ ಪ್ರಕಟವಪ್ಪದು. ಇದು ಭಗವಂತನ ಇಚ್ಛೆಯಂತೇ ನಡವದು. ಇದು ಭಗವಂತನ ಊಹಾತೀತ ಶಕ್ತಿ. ಬೇರೆ ಬೇರೆ ಜೀವಮಾರ್ಗವ ಸೃಷ್ಟಿಸಿದ ಮತ್ತೆ ಅವಂಗೂ ಅವಕ್ಕೂ ಯಾವುದೇ ಸಂಬಂಧ ಇಲ್ಲೆ. ವಿವಿಧ ಜೀವಿಗಳ ಪ್ರವೃತ್ತಿಗೆ ಅವಕಾಶ ಮಾಡಿಕೊಡ್ಳೆ ಸೃಷ್ಟಿ ನಡೆತ್ತು. ಹಾಂಗಾಗಿ ಭಗವಂತ° ಅದರಲ್ಲಿ ಸಿಕ್ಕಿಹಾಕಿಗೊಳ್ಳುತ್ತನಿಲ್ಲೆ.

ಶ್ಲೋಕ

ನ ಚ ಮಾಂ ತಾನಿ ಕರ್ಮಾಣಿ ನಿಬಧ್ನಂತಿ ಧನಂಜಯ ।
ಉದಾಸೀನವದಾಸೀನಮ್ ಅಸಕ್ತಂ ತೇಷು ಕರ್ಮಸು ॥೦೯॥

ಪದವಿಭಾಗ

ನ ಚ ಮಾಮ್ ತಾನಿ ಕರ್ಮಾಣಿ ನಿಬಧ್ನಂತಿ ಧನಂಜಯ । ಉದಾಸೀನವತ್ ಆಸೀನಮ್ ಅಸಕ್ತಮ್ ತೇಷು ಕರ್ಮಸು ॥

ಅನ್ವಯ

ಹೇ ಧನಂಜಯ!, ತೇಷು ಕರ್ಮಸು ಅಸಕ್ತಮ್ ಉದಾಸೀನವತ್ ಆಸೀನಂ ಮಾಂ ತಾನಿ ಕರ್ಮಾಣಿ ಚ ನ ನಿಬಧ್ನಂತಿ ।

ಪ್ರತಿಪದಾರ್ಥ

ಹೇ ಧನಂಜಯ!  – ಏ ಧನಂಜಯ!, ತೇಷು ಕರ್ಮಸು – ಆ ಕಾರ್ಯಂಗಳಲ್ಲಿ, ಅಸಕ್ತಮ್ – ಆಕರ್ಷಣೆಯಿಲ್ಲದ್ದೆ, ಉದಾಸೀನವತ್ – ತಟಸ್ಥನ ಹಾಂಗೆ, ಆಸೀನಮ್ – ನೆಲೆಸಿಪ್ಪ, ಮಾಮ್ – ಎನ್ನ, ತಾನಿ ಕರ್ಮಾಣಿ – ಅವೆಲ್ಲ ಚಟುವಟಿಕೆಗೊ, ಚ – ಕೂಡ, ನ ನಿಬಧ್ಯಂತಿ – ಬಂಧಿಸುತ್ತಿಲ್ಲೆ.

ಅನ್ವಯರ್ಥ

ಏ ಧನಂಜಯ!, ಈ ಸೃಷ್ಟಿಕಾರ್ಯಲ್ಲಿ ಆನು ತಟಸ್ಥನಾಗಿ, ನಿರ್ಲಿಪ್ತತೆಂದ ನೆಲೆಸಿರುತ್ತೆ, ಈ ಕಾರ್ಯಂದ ಎನಗೆ ಯಾವುದೇ ಬಂಧನ ಇಲ್ಲೆ.

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° – “ಸೃಷ್ಟಿಕಾರ್ಯ ಮಾಡಿ ತಾನು ಕಾರ್ಯ ಮಾಡಿಯೂ ಮಾಡದವನ ಹಾಂಗೆ ಇದ್ದು ಬಿಡುತ್ತೆ. ಆ ಕರ್ಮಲ್ಲಿ ಎನಗೆ ನಂಟಿಲ್ಲೆ. ಹಾಂಗಾಗಿ ಆ ಕರ್ಮಂಗೊ ಎನ್ನ ಕಟ್ಟಿಹಾಕುತ್ತಿಲ್ಲೆ”. ಭಗವಂತ° ನಿರ್ಲಿಪ್ತ°. ಅವ° ಕರ್ಮ ಮಾಡುತ್ತದು ಅವಂಗೆ ಬೇಕಾಗಿ ಅಲ್ಲ. ಸ್ವತಂತ್ರನಾದ ಭಗವಂತನ ಎಂದೂ ಯಾವ ಕರ್ಮವೂ ಕಟ್ಟಿ ಹಾಕುತ್ತಿಲ್ಲೆ. ಅವ° ಅವಂಗೆ ಬೇಕಾಗಿ ಏನನ್ನೂ ಮಾಡುತ್ತನಿಲ್ಲೆ, ಐಹಿಕವಾದ ಏನನ್ನೂ ಬಯಸುತ್ತನಿಲ್ಲೆ. ಹಾಂಗಾಗಿ ಅವಂಗೆ ಕರ್ಮ ಅಂಟುತ್ತಿಲ್ಲೆ.

ಇಲ್ಲಿ ಅರ್ಜುನನ ಭಗವಂತ° ಧನಂಜಯ ಹೇಳಿ ದೆನಿಗೊಂಡಿದ°. ಧನಂಜಯ ಹೇಳಿತ್ತುಕಂಡ್ರೆ ಶತ್ರುಗಳ ಜೆಯಿಸಿ, ಸಂಪತ್ತಿನ ಗೆದ್ದವ°, ಧನವ ಆರ್ಜಿಸಿದವ° ಹಾಂಗೇ ಅದರ ಇತರರಿಂಗಾಗಿ ಸದ್ವಿನಿಯೋಗ ಮಾಡುವವ°. ತನ್ನ ಸ್ವಾರ್ಥಕ್ಕಾಗಿ ಇನ್ನೊಬ್ಬನ ಮೇಲೆ ಧಾಳಿ ಮಾಡಿ ಧನ ಗಳಿಸಿದವ ಧನಂಜಯ ಆವ್ತನಿಲ್ಲೆ ಬದಲಾಗಿ ಅವ ದರೋಡೆಕೋರ ಹೇಳಿ ಅಷ್ಟೆ ಅಪ್ಪದು. ಮಹಾಭಾರತಲ್ಲಿ ಏಕಲವ್ಯ ಈ ಎರಡನೇ ಗುಂಪಿಂಗೆ ಸೇರಿದವ°. ಹಾಂಗಾಗಿ ಅವನ ಬೆರಳ ಕತ್ತರಿಸಿತ್ತು ಹಾಂಗೇ ಕೃಷ್ಣ ಸ್ವತಃ ತಾನೇ ಅವನ ಸಂಹಾರ ಮಾಡಿದ°.  ಆಧ್ಯಾತ್ಮಿಕವಾಗಿ ನಿಜವಾದ ಧನ ಹೇಳಿರೆ ಭಗವಂತ°. ಅಂತಹ ಭಗವಂತನ ಜ್ಞಾನವ ಪಡದವ ಧನಂಜಯ. ನಾವೆಲ್ಲ ಅರ್ಜುನನ ಹಾಂಗೆ ಧನಂಜಯ ಆಯೇಕು.

ಶ್ಲೋಕ

ಮಯಾsಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚರಾಚರಮ್ ।
ಹೇತುನಾನೇನ ಕೌಂತೇಯ ಜಗದ್ವಿಪರಿವರ್ತತೇ ॥೧೦॥

ಪದವಿಭಾಗ

ಮಯಾ ಅಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚರ-ಅಚರಮ್ । ಹೇತುನಾ ಅನೇನ ಕೌಂತೇಯ ಜಗತ್ ವಿಪರಿವರ್ತತೇ ॥

ಅನ್ವಯ

ಹೇ ಕೌಂತೇಯ!, ಮಯಾ ಅಧ್ಯಕ್ಷೇಣ ಪ್ರಕೃತಿಃ ಸಚರ-ಅಚರಂ ಸೂಯತೇ, ಅನೇನ ಹೇತುನಾ ಜಗತ್ ವಿಪರಿವರ್ತತೇ ।

ಪ್ರತಿಪದಾರ್ಥ

ಹೇ ಕೌಂತೇಯ! – ಏ ಕುಂತಿಯ ಮಗನಾದ ಅರ್ಜುನ!, ಮಯಾ ಅಧ್ಯಕ್ಷೇಣ – ಎನ್ನ ಅಧೀಕ್ಷಣೆಂದ, ಪ್ರಕೃತಿಃ – ಭೌತಿಕ ಪ್ರಕೃತಿಯು, ಸಚರ-ಅಚರಮ್ – ಚಲಲುಸುವ ಮತ್ತೆ ಚಲುಸದ್ದ , ಸೂಯತೇ – ವ್ಯಕ್ತವಾವ್ತು, ಅನೇನ ಹೇತುನಾ – ಈ ಕಾರಣಂದ, ಜಗತ್ – ವಿಶ್ವಾಭಿವ್ಯಕ್ತಿಯು, ವಿಪರಿವರ್ತತೇ – ಕೆಲಸಮಾಡುತ್ತು.

ಅನ್ವಯಾರ್ಥ

ಏ ಕುಂತಿಯ ಮಗನಾದ ಅರ್ಜುನ! ಎನ್ನ ಶಕ್ತಿಗಳಲ್ಲಿ ಒಂದಾದ ಈ ಐಹಿಕ ಪ್ರಕೃತಿಯು ಎಲ್ಲ ಚರಾಚರ ವಸ್ತುಗೊ ಎನ್ನ ಅಪ್ಪಣೆಪ್ರಕಾರ ಕೆಲಸ ಮಾಡುತ್ತು (ಅಧ್ಯಕ್ಷೇಣ ಸೂಯತೇ). ಈ ಅಭಿವ್ಯಕ್ತಿಯು ಅದರ ನಿಯಮಕ್ಕೆ ಅನುಗುಣವಾಗಿ ಮತ್ತೆ ಮತ್ತೆ ಸೃಷ್ಟಿಯಾವ್ತು ಮತ್ತೆ ನಾಶ ಆವ್ತು (ಜಗತ್ ವಿಪರಿವರ್ತತೇ).

ತಾತ್ಪರ್ಯ / ವಿವರಣೆ

ಭಗವಂತ° ಈ ಐಹಿಕ ಜಗತ್ತಿನ ಎಲ್ಲ ಚಟುವಟಿಕೆಗಳಿಂದ ದೂರವಾಗಿದ್ದರೂ ಅದರ ಪರಮ ನಿರ್ದೇಶಕನಾಗಿ ಉಳಿತ್ತ° ಹೇಳ್ವದರ ಇಲ್ಲಿ ಸ್ಪಷ್ಟವಾಗಿ ಹೇಳಿದ್ದ°. ಜಗತ್ತಿನ ಸೃಷ್ಟಿ ಮಾಡ್ಳೆ ಬೇಕಾದ ಮೂಲದ್ರವ್ಯ ಜಡಪ್ರಕೃತಿ ಮತ್ತೆ ಅದಕ್ಕೆ ಆಕಾರ ಕೊಡುವದು ಜಡಪ್ರಕೃತಿಯ ಮಾನಿನಿಯಾದ ಚೇತನ ಪ್ರಕೃತಿ ಲಕ್ಷ್ಮಿ. ಭಗವಂತ ಇಡೀ ಸೃಷ್ಟಿಯ ಅಧ್ಯಕ್ಷನಾಗಿ ನಿಂದು, ಕ್ರಿಯೆಯ ಹಿಂದಾಣ ಶಕ್ತಿಯಾಗಿ, ಜಡ ಮತ್ತೆ ಚೇತನಪ್ರಕೃತಿಯ ಮೂಲಕ ಈ ಸೃಷ್ಟಿ ನಿರ್ಮಾಣ ಮಾಡುತ್ತ°. ಪ್ರಪಂಚಲ್ಲಿಪ್ಪ ಪ್ರತಿಯೊಂದು ವಸ್ತುವಿಲ್ಲಿಯೂ ಒಂದು ವಿಶಿಷ್ಟ ಶಕ್ತಿಯಾಗಿ ಭಗವಂತ° ತುಂಬಿದ್ದ°

ಈ ಮದಲೇ ಭಗವಂತ° ಹೇಳಿದ ಪ್ರಕಾರ, ಬೇರೆ ಬೇರೆ ರೂಪಂಗಳ ಮತ್ತೆ ವರ್ಗಂಗಳ ಜೀವಿಗೊಕ್ಕೆಲ್ಲ ಅಪ್ಪ° ಅವನೇ. ಅಪ್ಪ° ಮಗುವಿನ ಜನನಕ್ಕಾಗಿ ಅಬ್ಬೆಯ ಗರ್ಭಕ್ಕೆ ಬೀಜವ ಬಿತ್ತುತ್ತ°. ಇದೇ ರೀತಿಲಿ ಭಗವಂತ° ತನ್ನ ಕಡೆಗಣ್ಣ ನೋಟ ಮಾತ್ರಂದಲೇ ಐಹಿಕ ಪ್ರಕೃತಿಯ ಗರ್ಭದೊಳ ಎಲ್ಲ ಜೀವಿಗಳ ಸೇರುಸುತ್ತ°. ಅವು ತಮ್ಮ ಹಿಂದಾಣ ಆಸೆ ಮತ್ತೆ ಚಟುವಟಿಗೊಕ್ಕೆ ಅನುಗುಣವಾಗಿ ಹೆರ ಬತ್ತವು. ಈ ಎಲ್ಲ ಜೀವಿಗೊ ಭಗವಂತನ ಕಡೆಗಣ್ಣ ನೋಟ ಮಾತ್ರಂದ ಜನಿಸಿದ್ದರೂ ತಮ್ಮ ಹಿಂದಾಣ ಕಾರ್ಯಕ್ಕನುಗುಣವಾಗಿ ಬೇರೆ ಬೇರೆ ದೇಹವ ಪಡೆತ್ತವು. ಭಗವಂತಂಗೆ ಈ ಐಹಿಕ ಸೃಷ್ಟಿಲಿ ನೇರವಾಗಿ ಆಸಕ್ತನಾಗಿರುತ್ತನಿಲ್ಲೆ. ಅವ° ಕಟಾಕ್ಷ ಬೀರುತ್ತದು ಮಾಂತ್ರ. ಇದರಿಂದ ಐಹಿಕ ಪ್ರಕೃತಿ ಚುರುಕಾವ್ತು ಮತ್ತು ಸೃಷ್ಟಿಯಾವ್ತು. ಕಣ್ನೋಟ ಬೀರುವದರಿಂದ ಭಗವಂತ° ನಿಶ್ಚಯವಾಗಿಯೂ ಚಟುವಟಿಕೆಲಿ ತೋರಿಗೊಳ್ಳುತ್ತ. ಆದರೆ ಐಹಿಕ ಜಗತ್ತಿನ ಅಭಿವ್ಯಕ್ತಿಗೂ ಅವಂಗೂ ನೇರವಾದ ಯಾವ ಸಂಬಂಧವೂ ಇಲ್ಲೆ.  ಒಟ್ಟಿಲ್ಲಿ ಹೇಳ್ತದಾದರೆ, ದೇವೋತ್ತಮ ಪರಮ ಪುರುಷನ ಮೇಲ್ತನಿಕೆಲಿ ಈ ಐಹಿಕ ಪ್ರಕೃತಿ ಕಾರ್ಯ ನಡವದು ಹೊರತು ಅವಂಗೆ ಅದರಲ್ಲಿ ಯಾವುದೇ ನಂಟು ಇಲ್ಲೆ.

ಮುಂದೆ ಎಂತರ…?     ಬಪ್ಪ ವಾರ ನೋಡುವೋ°

ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 09 – SHLOKAS 01 -1 0 by CHENNAI BHAAVA

 

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

5 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 09 – ಶ್ಲೋಕಂಗೊ 01 – 10

  1. ಈಗ ಎಲ್ಲಾ ಚಾನೆಲ್ಲಾಗೂ ಪ್ರಳಯದ್ದೇ ಶುದ್ಧಿ, ಒಪ್ಪಣ್ಣನ ಬಯಿಲೂ ಬಿಟ್ಟಿದ್ದಿಲ್ಲೆ!
    “ಸೃಷ್ಟಿಯಾಗಿ 31,104 ಸಾವಿರ ಕೋಟಿ ವರ್ಷದ ಮತ್ತೆ ಮಹಾಪ್ರಳಯ”…. ಹೀ೦ಗ೦ದ್ರೆ ನ೦ಗೋ ನರಪಿಳ್ಳೆಗಳ ಲೆಕ್ಕಾಚಾರದಲ್ಲಿ ಎಷ್ಟಾಗ್ತು? ಬ್ಯಾರೆ ಧರ್ಮದ್ದು ಎ೦ತಾರೂ ಹೇಳಲಿ ಹಿ೦ದೂ ಕ್ಯಾಲೆ೦ಡರ್ ಪ್ರಕಾರ ಇನ್ನೂ ರಾಶಿ ವರ್ಷ ಇದ್ದು ಅ೦ತ ಎಲ್ಲೋ ಓದಿದ ನೆ೦ಪು.
    ಆದ್ರೆ ಈಗಿನ ಶುದ್ದಿ ಚಾನೆಲ್ ಗಳು ಹೇಳೋ ಹಾ೦ಗೆ ಡಿಸೆ೦ಬರ್ ರಲ್ಲಿ ಎ೦ತಾರೂ ಇದ್ದೊ ಹ್ಯಾ೦ಗೆ?! ಆನು ಒಪ್ಪಣ್ಣನ ಬೈಲಿಗೆ ಇನ್ನೂ ಸುಮಾರು ಸಲ ಬ೦ದು ಹೋಪ ಲೆಕ್ಕಾಚಾರ ಮಾಡಿದ್ದೆ, ಇನ್ನೂ ಭೂಮಿ ಮೇಲೆ ರಾಶಿ ಕೆಲ್ಸ ಪೆ೦ಡಿ೦ಗ್ ಇದ್ದು . ಆದ್ರೆ ಈಗ ಚೆನ್ನೈ ಭಾವನೂ ಹೇಳಿದ್ಮೇಲೆ ಅನುಮಾನ ಶುರುವಾಗ್ತಾ ಇದ್ದಲ್ರಾ…!

    ಅದಿರ್ಲಿ, ಈ ಚೆನ್ನೈ ಭಾವನ ಉತ್ಸಾಹ, ತಾಳ್ಮೆ, ನೈಪುಣ್ಯತೆಯನ್ನ ಯಾರಾದ್ರೂ ಮೆಚ್ಚಿಕೊಳ್ಳೇ ಬೇಕು, ’ವ್ಯಗ್ತಿ ಪರಿಚಯ’ದಲ್ಲಿ ಬರೇದ ಹಾ೦ಗೆ ತಾನು ಬರೀ ಬಿಕಾ೦ ಓದಿದ್ದೆ ಅ೦ತ ಹೇಳುತ್ರು. ಆದ್ರೆ ಎನಗೆ ಅನ್ನುಸ್ತು, ಇವ್ರು ಎಷ್ಟೋ ’ಓದಿಕೊ೦ಡವರಿಗೂ’ ಮಾದರಿ ಅ೦ತ. ಪ್ರತ್ಯೇಕವಾಗಿ ಕೆಲ್ಸವನ್ನೂ ಮಾಡುತ್ರು, ವೈದಿಕರೂ ಹೌದು. ಶೆ, ಬರೂಲೆ ಅದೆ೦ತಾ ಶ್ರದ್ಧೆಯಾ….?. ಶ್ಲೋಕಗಳನ್ನ ಓದಿ ಅರ್ಥಮಾಕ್ಕೊ೦ಡು, ಭಾವಾರ್ಥ ಸ೦ಯೋಜಿಸಿ, ಕ೦ಪ್ಯೂಟರಲ್ಲಿ ಬರೆದು, ತಪ್ಪಿಲ್ದ೦ಗೆ ಎಡಿಟ್ ಮಾಡಿ, ಅದುನ್ನ ಬೈಲಲ್ಲಿ ಅಪ್ಲೋಡ್ ಮಾಡಿ, ರ೦ಗನಾಥನ್ ಅವರ ಹತ್ರನೂ ಕುಳ್ತು ಅವರ ಧ್ವನಿಯ ಶ್ಲೋಕವನ್ನೂ ಅಪ್ಲೋಡ್ ಮಾಡಿ… ಏನು ಸ್ವಲ್ಪಾ ಕೆಲ್ಸ ಇದ್ದಾ…? ಇವತ್ತಿನ ದಿನ ಎಷ್ಟೋ ಜನ ಟೈಮಿಲ್ಲೆ ಅ೦ತ ಬರೂಲೆ-ಓದುಲೆ ಸೋಮಾರಿತನ ಮಾಡ್ತೊ, ತ೦ಗ್ಳಲ್ಲಿ ಇಪ್ಪೋ ಪ್ರತಿಭೆಯನ್ನ ವೇಸ್ಟ್ ಮಾಡಿಕೊಳ್ತಾ ಇದ್ದ. ನಿಜಕ್ಕೂ ವೈಯಕ್ತಿಕವಾಗಿ ಎನಗ೦ತೂ ಇವರನ್ನ ನೋಡಿ ಕಲೂಲೆ ರಾಶಿ ಇದ್ದು. ಇವರ ವಿಸ್ತಾರವಾದ ಬರವಣಿಗೆ ಓದಿದ ಮೇಲೂ ಕೊನೇಪಕ್ಷ ಒ೦ದು ವಾಕ್ಯ – ಒಳ್ಳೇ ಮಾತು ಬರೀದೆ ಹೋದ್ರೆ ಇವರ ಶ್ರಮ-ಪ್ರತಿಭೆಗೆ ಅಪಚಾರ ಮಾಡಿದ ಹಾ೦ಗೆ ಆಗ್ತು ಅ೦ತ ಎನಗೆ ಅನ್ನಿಸ್ತು.
    ಚೆನ್ನೈ ಭಾವ, ನಮೋನ್ನಮಃ

    1. ನಮೋ ನಮಃ ದೊಡ್ಮನೆ ಭಾವ°. ನಿಮ್ಮೆಲ್ಲರ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದ. ನಂದೇನೂ ದೊಡ್ಡ ಮಹಾಕಾರ್ಯ ಎಂತೂ ಇಲ್ಲೆ ಇಲ್ಲಿ. ಕೂತು ಸಂಗ್ರಹಿಸಿ ಬರವದು ಮಾಂತ್ರ. ನಂಗೂ ಗೊತ್ತಿಲ್ಲೆ ಆ ಗೀತೆಲಿ ಆ ಪರಮಾತ್ಮ ಎಂತ ಹೇಳಿದ ಅಂತ. ಹಾಂಗೆ ಎಂತ ಹೇಳಿದ° ಅಂತ ನೋಡಿ ತಿಳ್ಕೊಂಬ ಅಂತ ಪ್ರಯತ್ನ ಶುರುಮಾಡಿದ್ದು ಇದು.
      ಪ್ರಳಯದ ಬಗ್ಗೆ ಚಿಂತೆ ಮಾಡ್ಕೋಬೇಡಿ ಭಾವ.., ಇಲ್ಲಿ ಹೇಳಿದ್ದು ಮಹಾಪ್ರಳಯ. ಸುಖ ಆತು ಮತ್ತೆ. ಎಲ್ಲವೂ ಆ ಭಗವಂತನಲ್ಲಿ ಲೀನ ಆವ್ತು ನೋಡಿ. ಆ ಟಿ.ವಿ. ಮಾಧ್ಯಮದೋರು ಯಾವ ಪ್ರಳಯವ ಹಿಡ್ಕೊಂಡು ಹುಚ್ಚುಗಟ್ತಾರೋ ಹೇಳ್ತಾರೋ !!
      ನಿಮ್ಮ ಮೆಚ್ಚುಗೆ ನುಡಿ ಆ ಗೀತಾಚಾರ್ಯಂಗೆ ಅರ್ಪಣೆ. ಎಲ್ಲೋರಿಂಗೂ ಭಗವದ್ಕೃಪೆ ಆಗಲಿ ಅಂತ ಅನ್ನೋಣ.

  2. ರಾಜವಿದ್ಯಾ ರಾಜಗುಹ್ಯ ಯೋಗ ಅದ್ಭುತವಾಗಿ ಬತ್ತಾ ಇದ್ದು.

  3. ಅಬ್ಬ..! ಚೆನ್ನೈಭಾವನ ತಾಳ್ಮೆಗೂ, ಸಾಧನೆಗೂ ಎಷ್ಟು ಅಭಿನಂದಿಸಿರೂ ಸಾಲ.
    ಖುಶೀ ಆವುತ್ತು ಓದುಲೆ.

  4. ಪ್ರತಿಯೊಂದು ವಾಕ್ಯವೂ ತೂಕದ್ದು. ಚೆನ್ನೈ ಭಾವಯ್ಯಂಗೆ ಧನ್ಯವಾದಂಗೊ.
    ಆದರೂ ಎನ್ನ ಮನಸ್ಸಿಂಗೆ ನಾಟಿದ ಕೆಲವು ಸಾಲುಗೊಃ
    [*ಮನುಷ್ಯಂಗೆ ವೇದಾಂತ ಓದುವ ಮತ್ತೆ ಓದಿದ ಮತ್ತೆಯೂ ಇರೆಕಾದ ಗುಣ – ‘ಅಹಂಕಾರ ರಹಿತತೆ’ ] – ಈ “ಅಹಂ” ಇಲ್ಲದ್ದ ಮನುಷ್ಯ ಸ್ವಭಾವ ಇದ್ದರೆ ಅವನಷ್ಟು ಆತ್ಮ ಜ್ನಾನ ಇಪ್ಪವು ಬೇರೆ ಆರೂ ಇರವು.
    [*ಆತ್ಮವೇ ದೇಹದ ಅತ್ಯಂತ ಮುಖ್ಯ ವಿಷಯ. ಆತ್ಮ ಇಲ್ಲದ್ರೆ ದೇಹ ನಿಷ್ಪ್ರಯೋಜಕ. ಆದರೂ ಜನಂಗೊ ದೇಹಕ್ಕೇ ಪ್ರಾಮುಖ್ಯತೆ ಕೊಡುವದು ಹೆಚ್ಚು] – ಬಾಹ್ಯ ಸೌಂದರ್ಯಕ್ಕೆ ಕೊಡುವ ಒಂದಂಶವ ಅಂತರ್ ಸೌಂದರ್ಯಕ್ಕೆ ಕೊಟ್ಟರೆ!!!
    [*ನಮ್ಮ ಜೀವನ ಯುದ್ಧಲ್ಲಿ ನಮ್ಮ ಶತ್ರುಗೊ ಹೇಳಿರೆ ನಮ್ಮೊಳ ಇಪ್ಪ ಅಜ್ಞಾನ, ಮೋಹ, ಕಾಮ, ಕ್ರೋಧ ಇತ್ಯಾದಿಗೊ]- ಇದರೆ ಮೀರಲೆ ಎಡಿಗಾದರೆ ನಮ್ಮ ಗೆಲ್ಲಲೆ ಆರಿಂಗೂ ಎಡಿಯ ಅಲ್ಲದಾ?
    [*ಎಲ್ಲವೂ ಎನ್ನಲ್ಲಿದ್ದು ಆದರೆ ಯಾವುದರಲ್ಲಿಯೂ ಎನಗೆ ಮಮಕಾರ ಇಲ್ಲೆ” ಹೇಳ್ವದು. ಇದು ಭಗವಂತನ ನಿರ್ಲಿಪ್ತತೆಯ ತೋರುಸುತ್ತು.]ನಮ್ಮಲ್ಲಿಯೂ ಈ ಗುಣ ಅಳವಡಿಸಿಗೊಂಬಲೆ ಎಡಿಗಾರೆ ಎಷ್ಟು ಒಳ್ಳೆದು
    *ಅಂತಹ ಭಗವಂತನ ಜ್ಞಾನವ ಪಡದವ ಧನಂಜಯ. ನಾವೆಲ್ಲ ಅರ್ಜುನನ ಹಾಂಗೆ ಧನಂಜಯ ಆಯೇಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×