Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 09 – ಶ್ಲೋಕಂಗೊ 27 – 34

ಬರದೋರು :   ಚೆನ್ನೈ ಬಾವ°    on   25/10/2012    4 ಒಪ್ಪಂಗೊ

ಚೆನ್ನೈ ಬಾವ°

ಶ್ರೀಮದ್ಭಗವದ್ಗೀತಾ – ನವಮೋsಧ್ಯಾಯಃ – ರಾಜವಿದ್ಯಾರಾಜಗುಹ್ಯಯೋಗಃ – ಶ್ಲೋಕಾಃ  27 – 34

ಶ್ಲೋಕ

ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್ ।
ಯತ್ತಪಸ್ಯಸಿ ಕೌಂತೇಯ ತತ್ಕುರುಷ್ವ ಮದರ್ಪಣಮ್ ॥೨೭॥

ಪದವಿಭಾಗ

ಯತ್ ಕರೋಷಿ ಯತ್ ಅಶ್ನಾಸಿ ಯತ್ ಜುಹೋಷಿ ದದಾಸಿ ಯತ್ । ಯತ್ ತಪಸ್ಯಸಿ ಕೌಂತೇಯ ತತ್ ಕುರುಷ್ವ ಮತ್ ಅರ್ಪಣಮ್ ॥

ಅನ್ವಯ

ಹೇ ಕೌಂತೇಯ, ಯತ್ ಕರೋಷಿ, ಯತ್ ಅಶ್ನಾಸಿ, ಯತ್ ಜುಹೋಷಿ, ಯತ್ ದದಾಸಿ, ಯತ್ ತಪಸ್ಯಸಿ, ತತ್ ಮತ್ ಅರ್ಪಣಂ ಕುರುಷ್ವ ।

ಪ್ರತಿಪದಾರ್ಥ

ಹೇ ಕೌಂತೇಯ! – ಏ ಕುಂತೀಮಗನಾದ ಅರ್ಜುನ!, ಯತ್ ಕರೋಷಿ – ಏವುದೆಲ್ಲ ಮಾಡುತ್ತೆಯೋ, ಯತ್ ಅಶ್ನಾಸಿ – ಎಂತೆಲ್ಲ ತಿಂತೆಯೋ, ಯತ್ ಜುಹೋಷಿ – ಏವುದೆಲ್ಲ ಅರ್ಪುಸೆತ್ತೆಯೋ, ಯತ್ ದದಾಸಿ – ಏವುದೆಲ್ಲ ಕೊಡುತ್ತೆಯೋ, ಯತ್ ತಪಸ್ಯಸಿ – ಏವದೆಲ್ಲ ವ್ರತಂಗಳ ಆಚರುಸುತ್ತೆಯೋ, ತತ್ – ಅವೆಲ್ಲವ, ಮತ್ ಅರ್ಪಣಮ್ ಕುರುಷ್ವ – ಎನಗೆ ಅರ್ಪಿತವನ್ನಾಗಿ ಮಾಡು.

ಅನ್ವಯಾರ್ಥ

ಏ ಕುಂತೀಪುತ್ರನಾದ ಅರ್ಜುನ!, ನೀನು ಏನೇ ಮಾಡು, ಎಂತದೇ ತಿನ್ನು, ಎಂತರನ್ನೇ ಅರ್ಪಣೆ ಮಾಡು, ಎಂತದೇ ಕೊಡು ಹಾಂಗೇ ಏವುದೇ ತಪಸ್ಸು ಮಾಡು ಅವೆಲ್ಲವ ಎನಗೆ ಅರ್ಪಣೆ ಹೇಳಿ ಆಚರುಸು.

ತಾತ್ಪರ್ಯ / ವಿವರಣೆ

ಏವುದೇ ಸನ್ನಿವೇಶಲ್ಲಿ ಭಗವಂತನ ಏವ ಕಾರಣಕ್ಕೂ ಮರವಲಾಗ, ಆ ನಿಟ್ಟಿಲ್ಲಿ ನಮ್ಮ ಬದುಕಿನ ರೂಪಿಸಿಗೊಳ್ಳೆಕು  ಹೇಳ್ವ ಸಂದೇಶ ಈ ಮೂಲಕ ಗೊಂತಾವುತ್ತು. ಭಗವಂತ° ಸರ್ವ ಸ್ವತಂತ್ರ°. ಅವನ ನಂಬಿ ಎಲ್ಲವೂ ಇದ್ದು ಹೊರತು ಅವ° ಈ ಏವುದರನ್ನೂ ಆಧರಿಸಿ ಇಲ್ಲೆ. ನಾವು ನವಗೆ ಬೇಕಾಗಿ ಏನನ್ನೊ ಬೇಡೆಕ್ಕಾದ್ದಿಲ್ಲೆ, ಮಾಡೆಕ್ಕಾದ್ದಿಲ್ಲೆ. ಆದರೆ ನಾವೆಂತ ಮಾಡುತ್ತೋ ಅದು ಭಗವದ್ ಪ್ರೀತಿಗಾಗಿ ಮಾಡೆಕು ಹೇಳ್ವದು ಭಗವಂತನ ಆದೇಶ ಇಲ್ಲಿ. ನವಗೆ ಎಂತ ಆಯೇಕು, ಏವುದು ಬೇಕು ಹೇಳ್ವದರ ಭಗವಂತ° ನೀಡಿ ಕಾಪಾಡುತ್ತ°. ಹಾಂಗೇಳಿ ಏನನ್ನೂ ಮಾಡದ್ದೆ ಕೈಕಟ್ಟಿ ಕೂರುತ್ತದು ಅಲ್ಲ. ನಮ್ಮ ಕರ್ತವ್ಯವ ನಾವೇ ಶ್ರದ್ಧೆಂದ ಮಾಡೆಕು. ನಾವು ನಮ್ಮ ನಿತ್ಯ ಜೀವನಲ್ಲಿ ಮಾಡೇಕಾದ ಅನೇಕ ಅನಿವಾರ್ಯ ವೃತ್ತಿಗೊ ಇರ್ತು. ಜೀವನ ನಿರ್ಹವಣೆಲಿ ನಮ್ಮ ಕಾಯಕ ಇದ್ದೇ ಇದ್ದು. ಆದರೆ ಅದರ ನಾವು ಭಗವಂತನ ಪೂಜೆ ಹೇಳಿ ಅರ್ತು ಮಾಡೇಕ್ಕಾದ್ದು ಕರ್ತವ್ಯ.

ಬನ್ನಂಜೆ ಹೇಳ್ತವು –  ಧರ್ಮವ್ಯಾಧನ (ಬೇಡರ ಕಣ್ಣಪ್ಪ°) ಕಥೆ ಇದಕ್ಕೆ ಉತ್ತಮ ನಿರೂಪಣೆ. ಮಾಂಸ ವಿಕ್ರಯ ಮಾಡಿ ಜೀವನ ಮಾಡಿಗೊಂಡಿತ್ತಿದದು ಧರ್ಮವ್ಯಾಧ°. ಆದರೆ ಅವನ ಮನಸ್ಸಿಲ್ಲಿ ಒಂದು ಸಂಕಲ್ಪ ಇತ್ತಿದ್ದು. “ಮಾಂಸ ಮಾರುವದು ತಿಂಬದು ಎನಗೆ ಅನುವಂಶೀಯವಾಗಿ ಬಂದ ಅಭ್ಯಾಸ. ಹಾಂಗಾಗಿ ಮಾಂಸ ತಿಂತಾ ಇದ್ದೆ. ಎನಗೆ ಬದುಕ್ಕಲೆಬೇಕಾಗಿ ಮತ್ತು ಎನ್ನ ಅಪ್ಪ ಅಬ್ಬೆಯ ಸಾಂಕಲೆ ಎನ್ನ ಪಾಲಿಂಗೆ ಬಂದ ಈ ವೃತ್ತಿಯ ಆನು ಮಾಡುತ್ತಾ ಇದ್ದೆ. ಇದರಿಂದ ಎನ್ನ ಬದುಕಿಂಗೆ ಬೇಕಾದಷ್ಟರ ಮಾಂತ್ರ ಆನು ಗಳುಸುತ್ತೆ. ಎಂದೂ ಜನರ ಶೋಷಣೆ ಮಾಡುತ್ತಿಲ್ಲೆ” ಹೇಳ್ವ ಸಂಕಲ್ಪ ಅವನ ಮನಸ್ಸಿಲ್ಲಿ ಎಂದೂ ಇತ್ತಿದ್ದು. ಹಾಂಗಾಗಿ ಅವ ದೊಡ್ಡ ಜ್ಞಾನಿ ಧರ್ಮವ್ಯಾಧ° ಹೇಳಿ ಹೆಸರು ಬಂತು. ಋಷಿ ಮುನಿಗಳೂ ಅವನಿಂದ ಪಾಠ ಕಲಿವ ಪ್ರಸಂಗ ಬಂತು. ಇದಕ್ಕೆ ಮೂಲ ಕಾರಣ ಅವ° ತಾನು ಎಂತ ಮಾಡುತ್ತಿದ್ದನೋ ಅದರ ದೇವರ ಪೂಜೆ ಹೇಳಿ ಎಂದೂ ಭಾವಿಸಿಗೊಂಡು ಮಾಡಿಗೊಂಡಿತ್ತಿದ್ದು ಅಷ್ಟೆ. ಹೀಂಗೆ ನಾವು ಮಾಡುವ ವೃತ್ತಿ ಮುಖ್ಯ ಅಲ್ಲ. ಮಾಡುವ ವೃತ್ತಿಯ ಭಗವಂತನ ಪೂಜೆ ಹೇಳಿ ಸಂಪೂರ್ಣ ಪ್ರಜ್ಞೆಂದ ಅನುಸಂಧಾನ ಮಾಡಿಗೊಂಡಿಪ್ಪದೇ ಮುಖ್ಯ.

ನಿನ್ನ ನಿತ್ಯ ಕರ್ತವ್ಯ ಏನಿದ್ದೋ ಅದರ ಭಗವಂತಂಗೆ ಅರ್ಪುಸು. ಅದನ್ನೇ ಭಗವಂತನ ಪೂಜೆ ಹೇಳಿ ಗ್ರೇಶಿ ಮಾಡು. ಭಗವಂತಂಗೆ ಭಕ್ಷ್ಯ ಭೋಜ್ಯವ ಮಾಡಿ ಅರ್ಪುಸೆಕ್ಕಾದ್ದಿಲ್ಲೆ.  ನೀನು ಸಾತ್ವಿಕನೋ, ರಾಜಸವೋ ತಾಪಸವೋ ಅದೇ ಧರ್ಮವ ಅನುಸರುಸು. ನೀನು ಎಂತ ತಿಂತೆಯೋ ಅದನ್ನೇ ಭಗವಂತಂಗೆ ಅರ್ಪುಸು. ಸಾತ್ವಿಕನಾಗಿದ್ದರೆ ಸಾತ್ವಿಕ ನೈವೇದ್ಯವನ್ನೇ ನೀಡು, ತಾಪಸ ಆಚಾರದವನೋ ನೀನು ತಿಂಬದರನ್ನೇ ಭಗವಂತನ ಸಂಪ್ರೀತಿಗೆ ಎನ್ನ ವೃತ್ತಿ ಧರ್ಮ ಹೇಳಿ ಅರ್ಪುಸು. ಹೀಂಗೆ ಮಾಡಿಯಪ್ಪಗ ಭಗವಂತನ ಆರಾಧನೆ ಪ್ರತ್ಯೇಕ ಆವುತ್ತಿಲ್ಲೆ, ಕಷ್ಟ ಆವುತ್ತಿಲ್ಲೆ. ಭಗವಂತಂಗೆ ಬೇಕಾಗಿ ಪ್ರತ್ಯೇಕ ಯಾಗ ಹೋಮ ಹವನ ಮಾಡ್ವ ಅಗತ್ಯ ಇಲ್ಲೆ. ನೀನು ಎಂತ ಹೋಮ ಮಾಡುತ್ತೆಯೋ ಅದನ್ನೇ ‘ಅಗ್ನಿ ಅಂತರ್ಗತ ನಾರಾಯಣಾಯ ಇದಂ ನ ಮಮ’ ಹೇಳಿ ಅರ್ಪುಸು. ಹಶುವಿಲ್ಲಿಪ್ಪ ವ್ಯಕ್ತಿಯ ಕಂಡ್ರೆ ಅವನ ಹೊಟ್ಟೆಲಿ ವೈಶ್ವಾನರ ರೂಪಿ ಭಗವಂತನ ಹೊತ್ತು ಬೈಂದ ಹೇಳಿ ಅವನೊಳ ಇಪ್ಪ ವೈಶ್ವಾನರ ಪ್ರಸನ್ನನಾಗಲಿ ಹೇಳಿ ಆ ವ್ಯಕ್ತಿಯ ಸತ್ಕಾರ ಮಾಡು. ಇದುವೇ ಭಗವಂತನ ಮಹಾಪೂಜೆ.

ಈ ವಿಷಯವ ಎದುರ್ಕಳ ಮಾವನತ್ರೆ ವಿಚಾರವಿನಿಮಯ ಮಾಡುವಾಗ ಅವು ಹೇಳಿದ ವಿವರಣೆಯೂ ಇಲ್ಲಿ ಉಲ್ಲೇಖಿಸೆಕಾಗಿದ್ದು.
ತನಗೆ ಪ್ರಿಯವಾದ ಯಾವದರ ಕೊಟ್ಟರೂ ದೇವರು ಸ್ವೀಕರಿಸುಗು. ಇಲ್ಲಿ ತನಗೆ ಪ್ರೀತಿಯಾಗಿಪ್ಪದು ಹೇಳಿರೆ.., ಶಿಷ್ಟಾಚಾರಕ್ಕೆ ವಿರುದ್ಧವಾಗಿಪ್ಪ ಪ್ರೀತಿಯಾಗಿಪ್ಪದರ ಅಲ್ಲ. ಉದಾಹರಣಗೆ ಡಾ.ಮಹೇಶಣ್ಣ ಹೇಳಿದಾಂಗೆ, ‘ತನಗೆ ಪ್ರೀತಿಯಾಗಿಪ್ಪದು ‘ಗುಟ್ಕಾ’, ಅದನ್ನೇ ನೇವೇದ್ಯ ಮಾಡ್ತೆ’ ಹೇಳಿ ಹೆರಡುವದು ಶಿಷ್ಟಾಚಾರ ಆವ್ತಿಲ್ಲೆ. ಎದುರ್ಕಳ ಮಾವ° ಮುಂದುವರುಸಿ ವಿವರಿಸಿದವುದೇವರಿಂಗೆ ನೈವೇದ್ಯ ಮಾಡಿದ ವಸ್ತುವಿನ ಅದರ ಮಾಡಿದವಂಗೆ ನೈವೇದ್ಯ ಆದ ಮೇಲೆ ‘ಸಂತೋಷಲ್ಲಿ’ ಪ್ರಸಾದರೂಪವಾಗಿ ಸ್ವೀಕರುಸಿ ತಿಂಬಲೆ ಎಡಿಯೇಕ್ಕು. ಹಾಂಗೆ ಇಪ್ಪ ಎಂತದರನ್ನು ನೈವೇದ್ಯ ಮಾಡುಲಕ್ಕು. ಇಲ್ಲಿ ಕಾಂಬದು ಭಕ್ತನ ನಿಜ ಮುಗ್ಧತೆ. ಭಕ್ತಿಯ ಪರಾಕಾಷ್ಟೆಲಿ ಇಪ್ಪವ° ಅವ° ಎಂತ ಮಾಡಿದರೂ ಅದರ ಭಗವಂತಂಗೆ ಅರ್ಪಿಸುತ್ತ°.

ಭಗವಂತ° ಇಲ್ಲಿ “ತತ್ಕುರುಷ್ವ ಮದರ್ಪಣಮ್” ಹೇಳಿ ಆಜ್ಞೆ ಮಾಡಿದ್ದ°. ಹಾಂಗೆ “ತದಹಮ್ ಭಕ್ತಿಯುಪಹೃತಮ್” ಹೇಳಿಯೂ ಶಪಥ ಮಾಡಿದ್ದ° – ಪ್ರೀತಿಂದ ಸ್ವೀಕರುಸುತ್ತೆ. (ಉದಾಹರಣಗೆ – ಬೇಡರ ಕಣ್ಣಪ್ಪ ಮಾಂಸವನ್ನೇ ನೈವೇದ್ಯ ಮಾಡಿದ ಕಥೆ ಇದ್ದು ). ಅಲ್ಲಿ ಮುಖ್ಯ ವಿಷಯ ಎಂತರ ಅರ್ಪಿಸುತ್ತ° ಹೇಳಿ ಅಲ್ಲ ಆದರೆ ಅಲ್ಲಿ ಎಷ್ಟು ‘ಸಹಜ ಮುಗ್ಧತೆಯ ಭಾವ’ ಇದ್ದು ಅಷ್ಟು ಅವ° ಪರಮಾತ್ಮನ ಸಾನಿಧ್ಯಲ್ಲಿ ಇರುತ್ತ° ಹೇಳಿ. ‘ಮುಗ್ಧ ಭಕ್ತಿ’ಗೆ ಬಗ್ಗುವಷ್ಟು ದೇವರು ಯಾವುದಕ್ಕೂ ಬಗ್ಗುತ್ತಾಯಿಲ್ಲೆ. (ಉದಾಹರಣಗೆ – ಒಂದು ಮಗು ಅಪ್ಪನ ಹತ್ತರೆ ಆಪ್ಹೀಸಿಂಗೆ ಹೊಪಾಗ ಹೇಳುತ್ತು –  “ಅಪ್ಪಾ ಬೇಗ ಬನ್ನಿ, ಬೇಗ ಬಂದರೆ ಆನು ನಿಂಗೋಗೆ ಒಂದು “ಚಾಕ್ಲೆಟ್ ” ಕೊಡುವೆ”. ಅಪ್ಪ ಖಂಡಿತಾ ಬೇಗ  ಬತ್ತ°. ಆದರೆ ಚಾಕ್ಲೆಟ್ ಗಾಗಿ ಅಲ್ಲ. ಅದು ಆ ಮಗುವಿನ ಮುಗ್ಧತೆಗಾಗಿ!) ದೇವರೂ ಅಷ್ಟೇ., ಆ ಭಕ್ತನಲ್ಲಿ ಅದೇ ಮಗುವಿನಷ್ಟೇ ಮುಗ್ಧತೆ ಇದ್ದರೆ ದೇವರೇ ಆ ಭಕ್ತನ ಕೈಗೊಂಬೆ.  ಹೀಂಗೆ ಮುಂದುವರಿದವಂಗೆ ದೇವರೇ ಮುಂದೆ ನಿಧಾನಕ್ಕೆ “ಎಂತ ಮಾಡೆಕ್ಕು – ಎಂತ ಮಾಡೆಡ ” ಎಂಬ ಜ್ಞಾನವ ಕರುಣಿಸುತ್ತ°.“ಸರ್ವಥಾ ವರ್ತಮಾನೋಪಿ ಸ ಯೋಗೀ ಮಯಿ ವರ್ತತೆ” (ಭ.ಗೀ. 6.31) – ಈಗ ಯಾವ ಸ್ಥಿತಿಲೆ ಇದ್ದರೂ ಆ ಯೋಗಿಯು ಎನ್ನಲ್ಲಿಯೇ ಇರುತ್ತ° ಹೇಳಿ ಭಗವಂತ° ಹೇಳಿದ್ದು.

ಇದೇ ವಿಷಯವ ಜತ್ತನಕೋಡಿ ಸುಂದರಮಾವನತ್ರೆ ಜಿಜ್ಞಾಸೆ ಮಾಡಿಯಪ್ಪಗ ಅವು ವಿವರಿಸಿದ್ದದು – ಮೇಗಾಣ ಶ್ಲೋಕಲ್ಲಿ, ಪತ್ರ ಹೇಳಿದರೆ ದೇಹ, ಪುಷ್ಪ ಹೇಳಿರೆ ಹೃದಯ ಪುಷ್ಪ, ಫಲ ಹೇಳಿರೆ ಮಾಗಿದ ಮನಸ್ಸು, ತೋಯ-ಭಕ್ತಿಯ ಕಣ್ಣೀರು. ದೇವರಿ೦ಗೆ ಅತ್ಯುನ್ನತ ಭಕ್ತಿಲಿ ನಾವು ಎ೦ತ ಕೊಟ್ಟರು ಸ್ವೀಕರಿಸುತ್ತ°. ಇದಕ್ಕೆ ಬೇಡರ ಕಣ್ಣಪ್ಪನೇ ಸಾಕ್ಷಿ. ಅವ ಬೇಡ°. ಅವನ ಮಾನಸಿಕ ಮಟ್ಟಕ್ಕೆ ಸರಿಯಾಗಿ ಅವ ಶಿವದೇವರಿ೦ಗೆ ಶ್ರೇಷ್ಟವಾದ ಮಾ೦ಸ ನೈವೇದ್ಯವ ಕೊಡುತ್ತ°. ಕಡೆಗೆ ಶಿವನ ಮೆಚ್ಚುಸುಲೆ ತನ್ನ ಕಣ್ಣನ್ನೆ ಕಿತ್ತು ಕೊಡುತ್ತ°. ಇದುವೇ ಭಕ್ತಿಯ ಪರಾಕಾಷ್ಠೆ. ಹಾ೦ಗೆ ಹೇಳಿ, ಸ೦ಸ್ಕಾರವ೦ತರಾದ ನಮಗೆ ಇದು ಒಗ್ಗ. ನಮ್ಮ ಮಾನಸಿಕ ಮಟ್ಟಕ್ಕೆಸರಿಯಾಗಿ ನಾವು ನೈವೇದ್ಯದೇವರಿ೦ಗೆ ಕೊಡೇಕು. ಕಾಡಿನ ಮನುಷ್ಯ೦ಗೂ, ನಾಡಿನವರಿಂಗೂ(ಸ೦ಸ್ಕಾರವ೦ತ) ಎಲ್ಲಾ ವಿಷಯಲ್ಲೂ ವ್ಯತ್ಯಾಸ ಇದ್ದಲ್ಲ?!

ಇದೇ ಸಂದರ್ಭಲ್ಲಿ ಮಾವನತ್ರೆ ಇನ್ನೊಂದು ಜಿಜ್ಞಾಸೆಯನ್ನೂ ಮುಂದಿಟ್ಟತ್ತು. ಸಾಮಾನ್ಯವಾಗಿ ವಿವಿಧ ದೇವತಾ ಪೂಜೆಲಿ ಆಯಾ ದೇವರ ಉದ್ದೇಶಿಸಿ  ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ, ನಾಯಿಕೆ, ಇತ್ಯಾದಿ ನೀನೇ ಪರಬ್ರಹ್ಮ ಹೇಳಿ ಸ್ತುತಿಸುವ ಔಚಿತ್ಯ ಮತ್ತು ವ್ಯಾಪ್ತಿಯ ಬಗ್ಗೆ ರಜಾ ವಿಷದೀಕರಿಸಿಗೊಂಬಲೆ ಅವರತ್ರೆ ಕೇಳಿಗೊಂಡತ್ತು. ಅವು ವಿವರಿಸಿದವು – ದೇವರು ಹೇಳ್ತ ಕಲ್ಪನೆಯೇ ಬಹಳ ದೊಡ್ಡದು. ಸಾಮಾನ್ಯರಿ೦ಗೆ ಈ ಶಬ್ದದ ಕಲ್ಪನೆಯೇ ಕಷ್ಟ. ಅವನ ವರ್ಣುಸುಲೆ ಕಷ್ಟ. ಎಷ್ಟ ವರ್ಣಿಸಿದರೂ ಅದು ಅಪೂರ್ಣ. ಎಷ್ಟು ವರ್ಣಿಸಿದರೂ ಇನ್ನೂ ಸಾಲ ಹೇಳಿ ಕಾ೦ಗು. ನಮ್ಮ ನೆಲೆಗೆ ಸಿಕ್ಕದ್ದ ಆ ಕಲ್ಪನೆಯ ನಾವು ಅಖಿಲಾ೦ಡಕೋಟಿ ಬ್ರಹ್ಮಾ೦ಡ ನಾಯಕ ಹೇಳಿ ನಮ್ಮ ಭಕ್ತಿಯ ವ್ಯಕ್ತ ಪಡುಸುವುದೊ೦ದೇ ನವಗೆ ತೋರುವ ದಾರಿ. ಇದು ನಮಗೆ ಧನ್ಯತೆ, ತೃಪ್ತಿ. ಇಷ್ಟು ಹೇಳಿಯಪ್ಪಗ ಭಗವಂತ° ಗೀತೆಲಿ ವಿವರಿಸಿದ್ದು ವಿವೇಚನೆ ಮಾಡಿರೆ ವಿಷಯ ಸ್ಪಷ್ಟವೂ ಆವ್ತು. ವಿವಿಧ ದೇವತೆಗಳೂ ಭಗವಂತನ ಶಕ್ತಿಗಳೇ. ಅವರ ಮೂಲಕ ಸರ್ವಗತನಾದ ಭಗವಂತನ ಪೂಜೆಯನ್ನೇ ನಾವು ಮಾಡೇಕ್ಕಪ್ಪದು, ಮಾಡುವದು. ವಿವಿಧದೇವತಾರೂಪಿಯಾದ ಭಗವಂತನ ಆರಾಧನೆ ಆವ್ತು ನಾವು ವಿವಿಧ ದೇವತಾರ್ಚನೆ ಹೇಳಿ ಮಾಡುವದು. ಹಾಂಗಾಗಿ ವಿವಿಧ ದೇವತೆಗಳ ಸ್ತುತಿಗೊ ಅಂತರ್ಗತನಾದ ಭಗವಂತನ ಸ್ತುತಿಯೇ ಆಗಿದ್ದು.

“ಯತ್ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಮ್” – ಇಲ್ಲಿ ತಪ್ಪಸ್ಸು ಹೇಳಿರೆ ‘ಚಿಂತನೆ’ ಅಥವಾ ವೃತಾನುಷ್ಠಾನ. ಸಂಕಷ್ಟಿ ಆಚರುಸುವಾಗ ಗಣಪತಿ ಅಂತರ್ಗತ ಭಗವಂತಂಗೆ ಅರ್ಪಣೆ ಹೇಳಿ ಮಾಡು. ಅಲ್ಲಿ ಏವುದೇ ಫಲಾಪೇಕ್ಷೆ ಅಥವಾ ಅಹಂಕಾರ ಮಡಿಕ್ಕೊಳ್ಳೆಡ. ಹೀಂಗೆ ಯಾವ ಆಚರಣೆಯೂ ಕೂಡ ಅಂತತಃ ಪರಮ ಪುರುಷನಾದ ಭಗವಂತಂಗೆ ಅರ್ಪಿತ ಹೇಳಿ ತಿಳುದು ಮಾಡಿರೆ ಅದು ನಿಜವಾದ ತಪಸ್ಸಾವುತ್ತು. ಇಲ್ಲಿ ಅರ್ಜುನಂಗೆ ‘ನಿನ್ನ ಕರ್ತವ್ಯ ಕರ್ಮವಾಗಿ ಬಂದಿಪ್ಪ ಈ ಯುದ್ಧವನ್ನೂ ಭಗವಂತನ ಪೂಜೆ ಹೇಳಿ ಅರ್ತು ಯುದ್ಧಮಾಡು’ ಹೇಳಿ ಸಂದೇಶ.

ಶ್ಲೋಕ

ಶುಭಾಶುಭಫಲೈರೇವಂ ಮೋಕ್ಷ್ಯಸೇ ಕರ್ಮಬಂಧನೈಃ ।
ಸಂನ್ಯಾಸಯೋಗಯುಕ್ತಾತ್ಮಾ ವಿಮುಕ್ತೋ ಮಾಮುಪೈಷ್ಯಸಿ ॥೨೮॥

ಪದವಿಭಾಗ

ಶುಬ-ಅಶುಭ-ಫಲೈಃ ಏವಮ್ ಮೋಕ್ಷ್ಯಸೇ ಕರ್ಮ-ಬಂಧನೈಃ । ಸಂನ್ಯಾಸ-ಯೋಗ-ಯುಕ್ತ-ಆತ್ಮಾ ಮಿಮುಕ್ತಃ ಮಾಮ್ ಉಪೈಷ್ಯಸಿ ॥

ಅನ್ವಯ

ಏವಂ ಕೃತೇ ಸತಿ, ಶುಭ-ಅಶುಭ-ಫಲೈಃ ಕರ್ಮ-ಬಂಧನೈಃ ಸಂನ್ಯಾಸ-ಯೋಗ-ಯುಕ್ತ-ಆತ್ಮಾ ವಿಮುಕ್ತಃ ಭೂತ್ವಾ ಮೋಕ್ಷ್ಯಸೇ ಮಾಮ್ ಉಪ-ಏಷ್ಯಸಿ ।

ಅನ್ವಯ

ಏವಂ ಕೃತೇ ಸತಿ – ಹೀಂಗೆ ಮಾಡಿರೆ, ಶುಭ-ಅಶುಭ-ಫಲೈಃ – ಶುಭ ಅಶುಭ ಫಲಂದ, ಕರ್ಮ-ಬಂಧನೈಃ – ಕರ್ಮ ಬಂಧನಂಗಳಿಂದ, ಸಂನ್ಯಾಸ-ಯೋಕ-ಯುಕ್ತ-ಆತ್ಮಾ – ಸರ್ವ ಪರಿತ್ಯಾಗದ (ಸಂನ್ಯಾಸದ) ಯೋಗಂದ ಮನಸ್ಸಿನ ದೃಢವಾಗಿ ನಿಲ್ಲುಸಿ, ವಿಮುಕ್ತಾ ಭೂತ್ವಾ – ಮುಕ್ತನಾಗಿ, ಮೋಕ್ಷ್ಯಸೇ – ನೀನು ಮುಕ್ತನಾವುತ್ತೆ, ಮಾಮ್ ಉಪ-ಏಷ್ಯಸಿ – ಎನ್ನ ಸೇರುತ್ತೆ.

ಅನ್ವಯಾರ್ಥ

ಈ ರೀತಿಯಾಗಿ ಮಾಡಿರೆ, ನೀನು ಕರ್ಮಬಂಧನಂಗಳಿಂದ ಹಾಂಗೂ ಅದರ ಶುಭಾಶುಭ ಫಲಂಗಳಿಂದ ಬಿಡುಗಡೆ ಹೊಂದುತ್ತೆ. ಈ ತ್ಯಾಗ ತತ್ವಂದ ನಿನ್ನ ಮನಸ್ಸು ಎನ್ನಲ್ಲಿ ನೆಲೆಸಿ ನೀನು ಈ ಇಹಂದ ಮುಕ್ತನಾವುತ್ತೆ, ಹಾಂಗೂ ಎನ್ನ ಹತ್ರಂಗೆ ಬಂದು ಸೇರುತ್ತೆ.

ತಾತ್ಪರ್ಯ / ವಿವರಣೆ

ಭಾಗವತ ಧರ್ಮ ಅನುಷ್ಠಾನಂದ ಏನು ಫಲ ಹೇಳ್ವದರ ಇಲ್ಲಿ ಭಗವಂತ° ಸ್ಪಷ್ಟಪಡುಸಿದ್ದ°.  ಶ್ರೇಷ್ಠ ಮಾರ್ಗದರ್ಶನಲ್ಲಿ ಕೃಷ್ಣಪ್ರಜ್ಞೆಲಿ ಕರ್ಮ ಮಾಡುವವನ ‘ಯುಕ್ತ’ ಹೇಳಿ ಹೇಳುವದು. ಇದಕ್ಕೆ ಶಾಸ್ತ್ರೀಯ ಶಬ್ದ ‘ಯುಕ್ತ ವೈರಾಗ್ಯ’. ನಾವು ಈ ಐಹಿಕ ಜಗತ್ತ್ತಿಲ್ಲಿ ಇಪ್ಪನ್ನಾರ ಕರ್ಮ ಮಾಡುತ್ತಲೇ ಇರೆಕು. ಕರ್ಮವ ಬಿಡ್ವ ಹಾಂಗಿಲ್ಲೆ. ಹಾಂಗೆ ಮಾಡುವ ಆ ಕರ್ಮಂಗಳ ಭಗವದರ್ಪಣಾ ಮನೋಭಾವಂದ ಮಾಡುತ್ತದಕ್ಕೆ ‘ಯುಕ್ತ ವೈರಾಗ್ಯ’ ಹೇಳಿ ಹೇಳುತ್ತದು. ನಾವು ಏವುದೇ ಕರ್ಮವ ‘ಎನಗೆ ಇಂತಹ ಫಲ ಬರೇಕು’ ಹೇಳ್ವ ಫಲದ ನಂಟಿಂದ ಮತ್ತೆ ‘ಅದಕ್ಕಾಗಿ ಆನು ಈ ಕರ್ಮವ ಮಾಡಿದೆ’ ಹೇಳ್ವ ಅಹಂ ಇದ್ದು ಮಾಡಿರೆ ಆ ಕರ್ಮ ನವಗೆ ಅಂಟುತ್ತು. ಹಾಂಗಾಗಿಯೇ ಹಿಂದಾಣ ಕಾಲಲ್ಲಿ ‘ಕರ್ಮ ಕರಿಷ್ಯೇ’ ಹೇಳಿ ಹೇಳುವಾಗ – “ಭಗವತೋ ಬಲೇನ ಭಗವತೋ ವೀರ್ಯೇನ ಭಗವದಃ ತೇಜಸಾ, ಭಗವತಾ ಕರ್ಮಣಾ ಕರ್ಮಕರಿಷ್ಯಾಮಿ ಭಗವತೋ ವಾಸುದೇವಸ್ಯಃ” – ‘ಆನು ಮಾಡ್ತ ಕರ್ಮ ಎನ್ನ ಕರ್ಮ ಅಲ್ಲ, ಎನ್ನೊಳ ಇಪ್ಪ ಭಗವಂತ ಮಾಡುವ ಕರ್ಮ, ಅದರ ಹಿಂದಿಪ್ಪ ಶಕ್ತಿ ಸಾಮರ್ಥ್ಯ ಎಲ್ಲವೂ ಭಗವಂತನದ್ದು, ಎನ್ನದೇನೂ ಇಲ್ಲೆ’ ಹೇಳಿ ಸಂಕಲ್ಪ ಮಾಡಿ ಕರ್ಮ ಮಾಡಿಗೊಂಡಿತ್ತಿದ್ದವು. ಇದು ಭಾಗವತ ಧರ್ಮದ ಸಂಕಲ್ಪ. ಭಗವದ್ ಪ್ರೀತ್ಯರ್ಥ ಮಾಡಿದ ಯಾವ ಕರ್ಮವೂ ನವಗೆ ಬಂಧನವ ಉಂಟುಮಾಡುತ್ತಿಲ್ಲೆ. ಭಗವಂತನ ಜ್ಞಾನ ನಮ್ಮೊಳದಿಕ್ಕೆ ದೃಢವಾಗಿ ಅಪರೋಕ್ಷವಾದಪ್ಪಗ, ಹಿಂದೆ ಫ್ಲಕಾಮನೆಂದ ಮಾಡಿದ ಎಲ್ಲಾ ಪಾಪಂಗಳ ಆ ಜ್ಞಾನಾಗ್ನಿ ಸುಟ್ಟುಬಿಡುತ್ತು. ಹಾಂಗಾಗಿ ಜ್ಞಾನವೇ ಎಲ್ಲಕ್ಕಿಂತ ಶ್ರೇಷ್ಠ. ಆದರೆ ಈ ಜ್ಞಾನ ಬರೇ ಪುಸ್ತಕ ಓದಿ ಕಲ್ತು ಮಡಿಕ್ಕೊಂಡದರಿಂದ ಏವ ಪ್ರಯೋಜನಕ್ಕೂ ಬತ್ತಿಲ್ಲೆ. ಅದರ ಜೀವನಲ್ಲಿ ಅನುಸಂಧಾನ ಮಾಡೆರೆ ಅಷ್ಟೇ ಪ್ರಯೋಜನ. ಭಗವದರ್ಪಣ ಬುದ್ಧಿಂದ ಕರ್ಮ ಅನುಷ್ಠಾನ ಮಾಡಿಯಪ್ಪಗ ಕರ್ಮದ ಅಂಟಿಂದ ಬಿಡುಗಡೆ ಸಾಧ್ಯ.  “ಸಂನ್ಯಾಸಯೋಗಯುಕ್ತಾತ್ಮಾ ವಿಮುಕ್ತೋ ಮಾಮುಪೈಷ್ಯಸಿ” – ಇಲ್ಲಿ ಹೇಳ್ವ ಸಂನ್ಯಾಸ ಒಂದು ಯೋಗ , ಉಪಾಯ. ಎಲ್ಲವನ್ನೂ ಭಗವಂತಂಗೆ ಅರ್ಪಣೆ ಮಾಡಿ ಫಲಕಾಮನೆ ಇಲ್ಲದ್ದೆ ಭಗವದ್ ಪೂಜಾ ದೃಷ್ಟಿಂದ ಮಾಡುವಂತಹ ಸಾತ್ವಿಕರ ಸಾಧನೆ. ಸಂನ್ಯಾಸ ಹೇಳಿರೆ ಸಂಸಾರವ ಬಿಡುವದಲ್ಲ, ಬದಲಾಗಿ, ಕಾಮಸಂಕಲ್ಪವ ಭಗವಂತನಲ್ಲಿ ಅರ್ಪುಸುವದು. ಕಾಮ ಹೇಳಿರೆ ಬೇಕು ಹೇಳ್ವ ಆಸೆ / ಬಯಕೆ, ಸಂಕಲ್ಪ ಹೇಳಿರೆ ಮಾಡುತ್ತೆ ಹೇಳ್ವ ನಿರ್ಧಾರ. ‘ಕಾಮಸಂಕಲ್ಪವರ್ಜಿತ’ ಸಂನ್ಯಾಸವ ಇಲ್ಲಿ ಹೇಳಿದ್ದದು. ಹೀಂಗೆ ಭಾಗವತ ಧರ್ಮ ಪಾಲನೆ ಮಾಡಿರೆ ಸುಲಭವಾಗಿ ಭಗವಂತನ ಸೇರ್ಲೆ ಎಡಿಗು,  “ಮಿಮುಕ್ತಃ ಮಾಂ ಉಪ-ಏಷ್ಯಸಿ” ಹೇಳಿ ಭಗವಂತ° ಭರವಸೆ ಇಲ್ಲಿ ಹೇಳಿದ್ದ°.

ಶ್ಲೋಕ

ಸಮೋsಹಂ ಸರ್ವಭೂತೇಷು ನ ಮೇ ದ್ವೇಷ್ಯೋsಸ್ತಿ ನ ಪ್ರಿಯಃ ।
ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ ॥೨೯॥

ಪದವಿಭಾಗ

ಸಮಃ ಅಹಮ್ ಸರ್ವ-ಭೂತೇಷು ನ ಮೇ ದ್ವೇಷ್ಯಃ ಅಸ್ತಿ ನ ಪ್ರಿಯಃ । ಯೇ ಭಜಂತಿ ತು ಮಾಮ್ ಭಕ್ತ್ಯಾ ಮಯಿ ತೇ ತೇಷು ಚ ಅಪಿ ಅಹಮ್ ॥

ಅನ್ವಯ

ಅಹಂ ಸರ್ವ-ಭೂತೇಷು ಸಮಃ, ಮೇ ದ್ವೇಷ್ಯಃ ಪ್ರಿಯಃ ಚ ನ ಅಸ್ತಿ, ತು, ಯೇ ಮಾಂ ಭಕ್ತ್ಯಾ ಭಜಂತಿ, ತೇ ಮಯಿ, ಅಹಮ್ ಅಪಿ ತೇಷು ಚ ಅಸ್ಮಿ ।

ಪ್ರತಿಪದಾರ್ಥ

ಅಹಮ್ – ಆನು, ಸರ್ವ-ಭೂತೇಷು – ಸಮಸ್ತ ಜೀವಿಗಳಲ್ಲಿ, ಸಮಃ – ಸಮಾನನಾಗಿದ್ದೆ (ಸಮಾನ ಮನೋಭಾವವುಳ್ಳವ° ಆಗಿದ್ದೆ), ಮೇ – ಎನಗೆ, ದ್ವೇಷ್ಯಃ – ದ್ವೇಷವುಳ್ಳವ್ವು, ಪ್ರಿಯಃ – ಪ್ರೀತಿಯೋರು, ಚ ನ ಅಸ್ತಿ – ಕೂಡ ಇಲ್ಲೆ, ತು – ಆದರೆ, ಯೇ ಮಾಮ್ – ಆರು ಎನ್ನ , ಭಕ್ತ್ಯಾ – ಭಕ್ತಿಂದ, ಭಜಂತಿ – ಭಕ್ತಿಸೇವೆ ಮಾಡುತ್ತವೋ, ತೇ – ಅವ್ವು, ಮಯಿ – ಎನ್ನಲ್ಲಿ, ಅಹಮ್ – ಆನು, ತೇಷು – ಅವರಲ್ಲಿ, ಚ ಅಸ್ಮಿ – ಕೂಡ ಇದ್ದೆ.

ಅನ್ವಯಾರ್ಥ

ಆನು ಎಲ್ಲ ಜೀವಿಗಳಲ್ಲಿ ಸಮಾನನಾಗಿದ್ದೆ. ಎನಗೆ ದ್ವೇಷಿಗೊ ವಾ ಪ್ರಿಯರು ಹೇಳಿ ಆರೂ ಇಲ್ಲೆ. (ಎಲ್ಲೋರು ಸಮಾನರು).  ಆದರೂ ಆರು ಎನ್ನ ಅತ್ಯಂತ ಭಕ್ತಿಂದ ಸೇವಿಸುತ್ತವೋ ಎನ್ನಲ್ಲಿ ಅವು ಇರುತ್ತವು, ಅವರಲ್ಲಿ ಆನಿರುತ್ತೆ. 

ತಾತ್ಪರ್ಯ / ವಿವರಣೆ

ಭಗವಂತ° ಎಲ್ಲರ ವಿಷಯಲ್ಲಿಯೂ ಸಮಾನ ಮನೋಭಾವವುಳ್ಳವನಾಗಿರುತ್ತ°. ಅವಂಗೆ ಆರ ಮೇಗೆಯೂ ಹಗೆತನ ಇಲ್ಲೆ ಅಥವಾ ಆರಲ್ಲಿಯೂ ಗೆಳೆತನ ಇಲ್ಲೆ. ಅವ° ಇಷ್ಟಪಡುವದು ವ್ಯಕ್ತಿಯ ಅಲ್ಲ, ಬದಲಾಗಿ, ಜ್ಞಾನಭಕ್ತಿಯ. ಅರ್ಹತೆ ಇಪ್ಪವ್ವು ಭಗವಂತನ ಒಲಿಸಿಗೊಳ್ಳುತ್ತವು. ನಿಜವಾದ ಭಕ್ತರಿಂಗೆ ಭಗವಂತ° ವಶನಾವುತ್ತ°. ಇಲ್ಲಿ ವಶ ಅಪ್ಪದು ಅವರ ಅನನ್ಯ ಭಕ್ತಿಗೆ. ಅದು ಜ್ಞಾನಪೂರ್ವಕ ಭಕ್ತಿಗೆ. ಭಕ್ತರ ಎಂದೂ ಕೈಬಿಡುತ್ತನಿಲ್ಲೆ ಭಗವಂತ°. ನಿಜಭಕ್ತರ ಅಂತರ್ಹೃದಯಲ್ಲಿದ್ದುಗೊಂಡು ಅವರ ಸದಾ ಕಾಪಾಡುತ್ತ° ಭಗವಂತ°. ಅವರಿಂದ ಸದಾ ಸತ್ಕಾರ್ಯವ ನಡೆಶುತ್ತ°. ‘ಮಯಿ ತೇ ತೇಷು ಚಾಪ್ಯಹಂ’ ಹೇಳ್ವ ಮಾತು ಇಲ್ಲಿ ಪರಸ್ಪರವಾದ್ದು. ಭಗವಂತ° ಭಕ್ತರತ್ರೆ ಇರುತ್ತ ಹೇಳಿರೆಂತರ?! ಅಂಬಗ ಬಾಕಿದ್ದೋರ ಹತ್ರವೋ?°!! . ಈ ಮದಲೇ ಭಗವಂತನೇ ಏಳನೇ ಅಧ್ಯಾಯಲ್ಲಿ ಇಪ್ಪತ್ತೊಂದನೇ ಶ್ಲೋಕಲ್ಲಿ ಹೇಳಿಪ್ಪಂತೆ “ಯೋ ಯೋ ಯಾಂ ಯಾಂ ತನುಂ ಭಕ್ತ್ಯಃ ಶ್ರದ್ಧಯಾರ್ಚಿತು ಮಿಚ್ಛತಿ, ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಮ್”  “ಯೇ ಯಥಾ ಮಾಮ್ ಪ್ರಪದ್ಯಂತೇ ತಾನ್ಸ್ತಥೈವ ಭಜಾಮಿ ಅಹಮ್” – ಆರು ಯಾವ ಯಾವ ರೀತಿಲಿ ಭಗವಂತನ ಕಾಣುತ್ತವೋ ಭಗವಂತನೂ ಅವಕ್ಕೆ ಅದೇ ರೀತಿಲಿ ಕಾಣಿಸಿಗೊಳ್ಳುತ್ತ°, ಅವು ಅವರ ಆ ಶ್ರದ್ಧೆಲಿ ನಿರತರಾಗಿಪ್ಪಂತೆ ನೋಡಿಗೊಳ್ಳುತ್ತ°. ಆರೇ ಆಗಲಿ ಭಗವಂತಂಗೆ ಎಷ್ಟರ ಮಟ್ಟಿಂಗೆ ಶರಣಾಗತರಾವುತ್ತವೋ ಅಷ್ಟರ ಮಟ್ಟಿಂಗೆ ಅವ° ಅವರ ಪಾಲುಸುತ್ತ°. ನಿಜವಾದ ಭಕ್ತಂಗೂ ಭಗವಂತಂಗೂ ಪರಸ್ಪರ ಪ್ರಜ್ಞೆ ಈ ರೀತಿಯಾಗಿ ವಿನಿಮಯವಾಗಿರುತ್ತು. ರತ್ನವ ಬಂಗಾರದ ಒಟ್ಟಿಂಗೆ ಪೋಣಿಸಿಯಪ್ಪಗ ಎರಡಕ್ಕೂ ಶೋಭೆ ಬತ್ತ ಹಾಂಗೆ ಹೂವಿನೊಟ್ಟಿಂಗೆ ಇಪ್ಪ ಬಳ್ಳಿಗೂ ಹಿರಿತನ ಬಪ್ಪ ಹಾಂಗೆ ನಿಜವಾದ ಭಕ್ತಂಗೆ ದೇವರತ್ರೆ ಹತ್ರಾಣ ಸಂಬಂಧ ಉಂಟಾವುತ್ತು. ಅದು ದೈಹಿಕ ಸಂಬಂಧ ಅಲ್ಲ ಬದಲಾಗಿ ಪರಸ್ಪರ ಮಾನಸಿಕ ಸಂಬಂಧ.

ಶ್ಲೋಕ

ಅಪಿ ಚೇತ್ಸುದುರಾಚಾರೋ ಭಜತೇ ಮಾಮನನ್ಯಭಾಕ್ ।
ಸಾಧುರೇವ ಸ ಮಂತವ್ಯಃ ಸಮ್ಯಗ್ವ್ಯವಸಿತೋ ಹಿ ಸಃ ॥೩೦॥

ಪದವಿಭಾಗ

ಅಪಿ ಚೇತ್ ಸು-ದುಃ-ಆಚಾರಃ ಭಜತೇ ಮಾಮ್ ಅನನ್ಯ-ಭಾಕ್ । ಸಾಧುಃ ಏವ ಸಃ ಮಂತವ್ಯಃ ಸಮ್ಯಕ್ ವ್ಯವಸಿತಃ ಹಿ ಸಃ ॥

ಅನ್ವಯ

ಸು-ದುಃ-ಆಚಾರಃ ಅಪಿ ಮಾಂ ಅನನ್ಯ-ಭಾಕ್ ಭಜತೇ ಚೇತ್, ಸಃ ಸಾಧುಃ ಏವ ಮಂತವ್ಯಃ ಸಃ ಹಿ ಸಮ್ಯಕ್ ವ್ಯವಸಿತಃ ಅಸ್ತಿ ।

ಪ್ರತಿಪದಾರ್ಥ

ಸು-ದುಃ-ಆಚಾರಃ – ಅತ್ಯಂತ ಅಸಹ್ಯಕಾರ್ಯಂಗಳ ಮಾಡುವವ°, ಅಪಿ – ಕೂಡ, ಮಾಮ್ – ಎನ್ನ, ಅನನ್ಯ-ಭಾಕ್ – ವಿಚಲತೆ ಇಲ್ಲದ್ದೆ, ಭಜತೇ ಚೇತ್ – ಭಕ್ತಿಸೇವೆಲಿ ನಿರತನಾದರೆ, ಸಃ ಸಾಧುಃ ಏವ- ಅವ° ಸಾಧು ಹೇದು ಹೇಳಿಯೇ, ಮಂತವ್ಯಃ – ಪರಿಗಣುಸೆಕು, ಸಃ ಹಿ – ಅವ° ಕೂಡ, ಸಮ್ಯಕ್ – ಸರಿಯಾಗಿ (ಸಂಪೂರ್ಣವಾಗಿ), ವ್ಯವಸ್ಥಿತಃ ಅಸ್ತಿ – ನಿರ್ಧಾರಲ್ಲಿ ನೆಲೆಸಿದವ° ಆಗಿದ್ದ°.

ಅನ್ವಯಾರ್ಥ

ಯಾವನೇ ಆದರೂ ಅತ್ಯಂತ ಹೀನ ಕಾರ್ಯವ ಮಾಡುತ್ತಿದ್ದರೂ, ಅವ° ಭಕ್ತಿಸೇವೆಲಿ ತೊಡಗಿದ್ದರೆ ಅವನ ಸಾಧು ಹೇಳಿಯೇ ಭಾವಿಸೆಕು, ಎಂತಕೆ ಹೇಳಿರೆ ಅವ° ತನ್ನ ನಿರ್ಧಾರಲ್ಲಿ ಸರಿಯಾಗಿ ನೆಲೆಸಿದ್ದ°.

ತಾತ್ಪರ್ಯ / ವಿವರಣೆ

ಇಲ್ಲಿ ‘ಸು-ದುಃ-ಆಚಾರಃ’ (ಸುದುರಾಚಾರಃ) ಹೇಳ್ವ ಪದ ತುಂಬಾ ಅರ್ಥವತ್ತಾದ್ದು. ಅದರ ಸರಿಯಾಗಿ ಅರ್ಥಮಾಡಿಗೊಳ್ಳೆಕ್ಕಾಗಿದ್ದು. ಜೀವಿ ಬದ್ಧನಾಗಿಪ್ಪಗ ಅವನ ಚಟುವಟಿಕೆಗೊ ಎರಡು ಬಗೆಯವು. ೧. ಬದ್ಧವಾದ್ದು, ೨. ಸಹಜಸ್ವರೂಪದ್ದು. ಭಕ್ತರ ಬದ್ಧಜೀವನಕ್ಕೆ ಸಂಬಂಧಿಸಿ ದೇಹರಕ್ಷಣೆ ಮತ್ತೆ ಸಮಾಜ ಸರಕಾರದ ನಿಯಮಂಗಳ ಪಾಲುಸುವಲ್ಲಿ ಬೇರೆ ಬೇರೆ ಚಟುವಟಿಕೆಗೊ ಇರುತ್ತು. ಇದರ ಬದ್ಧ ಚಟುವಟಿಕೆಗೊ ಹೇಳಿ ಹೇಳುತ್ತದು. ಇದು ಅಲ್ಲದ್ದೆ, ತನ್ನ ಆಧ್ಯಾತ್ಮಿಕ ಸ್ವರೂಪದ ಅರಿವು ಇದ್ದುಗೊಂಡು ಕೃಷ್ಣಪ್ರಜ್ಞೆಲಿ ಅಥವಾ ಭಗವಂತನ ಭಕ್ತಿಸೇವೆಲಿ ನಿರತನಾದ ಜೀವಿಯು ನಿರ್ವಹಿಸೆಕಾದ ಆಧ್ಯಾತ್ಮಿಕ ಚಟುವಟಿಕೆಗಳೂ ಇದ್ದು. ಇಂತಹ ಚಟುವಟಿಕೆಗೊ ಜೀವಿಯು ತನ್ನ ಸಹಜಸ್ವರೂಪಂದ ಮಾಡುತ್ತದು. ಇದಕ್ಕೆ ಶಾಸ್ತ್ರೀಯವಾಗಿ ಭಕ್ತಿಸೇವೆ ಹೇಳಿ ಹೇಳುತ್ತದು. ಬದ್ಧಸ್ಥಿತಿಲಿ ಕೆಲವೊಂದರಿ ಭಕ್ತಿಸೇವೆಯೂ ದೇಹಕ್ಕೆ ಸಂಬಂಧಿಸಿದಹಾಂಗೆ ಬದ್ಧಸೇವೆಯೂ ಪರಸ್ಪರ ಸಮಾನಾಂತರವಾವ್ತು. ಆದರೆ ಕೆಲವೊಂದರಿ ಈ ಚಟುವಟಿಕೆಗೊ ವಿರೋಧವೂ ಆವ್ತು. ಹಾಂಗೆ., ಒಂದೊಂದರಿ ಕೃಷ್ಣಪ್ರಜ್ಞೆಲಿಪ್ಪ ಜೀವಿ (ಮನುಷ್ಯ°) ಸಾಮಾಜಿಕವಾಗಿ ವಾ ರಾಜಕೀಯವಾಗಿ ಅತ್ಯಂತ ಹೀನಾಯ ಕೆಲಸಂಗಳ ಮಾಡುವದು ಕಾಂಬಲಕ್ಕು. ಆದರೆ ಇಂತಹ ತಾತ್ಕಾಲಿಕ ಪತನವು ಅವನ ಅಯೋಗ್ಯನನ್ನಾಗಿ ಮಾಡುತ್ತಿಲ್ಲೆ. ಒಬ್ಬ ಮನುಷ್ಯ° ಪತಿತನಾಗಿಪ್ಪಲೂ ಸಾಕು. ಆದರೆ ಅವ° ಮನಃಪೂರ್ವಕವಾಗಿ ಭಗವಂತನ ದಿವ್ಯಸೇವೆಲೆ ನಿರತನಾಗಿದ್ದರೆ ಅವನ ಹೃದಯಲ್ಲಿಪ್ಪ ಭಗವಂತ° ಅವನ ಪರಿಶುದ್ಧನನ್ನಾಗಿ ಮಾಡುತ್ತ°. ಈ ಹೀನ ಕೃತ್ಯಕ್ಕೆ ಅವನ ಕ್ಷಮಿಸುತ್ತ°. ಇದು ಅವ° ತನ್ನ ಸಹಜ ಸ್ಥಿತಿಲಿ ಮಾಡುವದಲ್ಲ ಬದಲಾಗಿ ಪ್ರಭಾವಂದ ಮಾಡುವದಾದರೂ ಮಾನಸಿಕವಾಗಿ ಅವ° ಭಗವಂತನ ಸೇವೆಲಿ ಇರುತ್ತ°. ಹಾಂಗಾಗಿ ಆಕಸ್ಮಿಕವಾಗಿ ಪತನಗೊಂಡ ಭಕ್ತರ ಅಪಹಾಸ್ಯ ಮಾಡ್ಳಾಗ. ಅಂತವರ ‘ಸಾಧುರೇವ ಮಂತವ್ಯಃ’  ಹೇಳಿ ಭಗವಂತ° ಹೇಳುತ್ತ°.

ನಿಜವಾದ ಭಕ್ತರು ಸಾಮಾನ್ಯವಾಗಿ ಎಂದೂ ದುರಾಚಾರಿಗೊರಾಗಿರುತ್ತವಿಲ್ಲೆ. ಅಕಸ್ಮಾತ್ ಒಬ್ಬ° ಸಾತ್ವಿಕ° ಪ್ರಾರಬ್ಧ ಕರ್ಮಂದಲೋ, ಪರಿಸರ ಪ್ರಭಾವಂದಲೋ ನಡತೆಗೇಡಿಯಾಗಿದ್ದರೂ ಕೂಡ ಅವ ಮೂಲತಃ ಉತ್ತಮನೇ ಆಗಿರುತ್ತ. ಎಂತಕೆ ಹೇಳಿರೆ ಅವ° ತನ್ನ ಅನೇಕ ಜನಂಗಳಲ್ಲಿ ಭಗವದ್ ಸಾಧನೆ ಮಾಡಿರುತ್ತ. ಅದು ಅವನ ಸಹಜ ರೂಪ. ಇದು ಸಾಮಾನ್ಯರಾದ ನವಗೆ ಕಾಣದ್ದರೂ ಭಗವಂತಂಗೆ ಕಾಣುತ್ತು. ಭಗವಂತನ ದೃಷ್ಟಿಲಿ ಅವ ಉತ್ತಮನೇ ಆಗಿದ್ದ°. ಹಾಂಗಾಗಿ ನಾವು ಆರನ್ನೂ ಹಗುರವಗಿ ಕಾಂಬಲಾಗ. ಒಬ್ಬ ಕೆಟ್ಟದಾರಿಲಿ ನಡೆತ್ತಾ ಇದ್ದರೆ ಅದಕ್ಕೆ ಅನೇಕ ಕಾರಣಂಗೊ ಇಕ್ಕು. ಅವ° ಸಾತ್ವಿಕನೂ ಆಗಿಕ್ಕು. ಅಂದರೆ ಅವನ ಪ್ರಾರಬ್ಧ ಕರ್ಮ ಅವನ ಆ ಮಾರ್ಗಲ್ಲಿ ನಡವಂತೆ ಮಾಡಿಕ್ಕು.

ಶ್ಲೋಕ

ಕ್ಷಿಪ್ರಂ ಭವತಿ ಧರ್ಮಾತ್ಮಾ ಶಶ್ವಚ್ಛಾಂತಿಂ ನಿಗಚ್ಛತಿ ।
ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ ॥೩೧॥

ಪದವಿಭಾಗ

ಕ್ಷಿಪ್ರಮ್ ಭವತಿ ಧರ್ಮ-ಆತ್ಮಾ ಶಶ್ವತ್ ಶಾಂತಿಮ್ ನಿಗಚ್ಛತಿ । ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ ॥

ಅನ್ವಯ

ಹೇ ಕೌಂತೇಯ!, ಸಃ ಕ್ಷಿಪ್ರಂ ಧರ್ಮ-ಆತ್ಮಾ ಭವತಿ, ಶಶ್ವತ್ ಶಾಂತಿಂ ನಿಗಚ್ಛತಿ, ಮೇ ಭಕ್ತಃ ನ ಪ್ರಣಶ್ಯತಿ ಇತಿ ತ್ವಂ ಪ್ರತಿಜಾನೀಹಿ।

ಪ್ರತಿಪದಾರ್ಥ

ಹೇ ಕೌಂತೇಯ!, – ಏ ಕುಂತೀಮಗನಾದ ಅರ್ಜುನ!, ಸಃ – ಅವ° (ಸುದಾರಾಚಾರಲ್ಲಿವ°), ಕ್ಷಿಪ್ರಮ್ – ಬಹು ಶೀಘ್ರಲ್ಲಿ, ಧರ್ಮ-ಆತ್ಮಾ – ಧರ್ಮಾತ್ಮ°, ಶಶ್ವತ್ ಶಾಂತಿಮ್ – ಶಾಶ್ವತವಾದ ಶಾಂತಿಯ, ನಿಗಚ್ಛತಿ – ಪಡೆತ್ತ°. ಮೇ ಭಕ್ತಃ – ಎನ್ನ ಭಕ್ತ°, ನ ಪ್ರಣಶ್ಯತಿ – ನಾಶ ಆವುತ್ತನಿಲ್ಲೆ, ಇತಿ ತ್ವಮ್ ಪ್ರತಿಜಾನೀಹಿ – ಹೇದು ನೀ ಪ್ರಕಟುಸು.

ಅನ್ವಯಾರ್ಥ

ಏ ಕುಂತೀಮಗನಾದ ಅರ್ಜುನ°!, ಆ ಸುದುರಾಚಾರಲ್ಲಿ ಕರ್ಮವ ಮಾಡುವವ°, ಬಹುಶೀಘ್ರಲ್ಲಿ ಧರ್ಮಾತ್ಮನಾವುತ್ತ° ಮತ್ತೆ ಶಾಶ್ವತ ಶಾಂತಿಯ ಪಡೆತ್ತ°. ಎನ್ನ ಭಕ್ತ° ಎಂದೂ ನಾಶವಾವ್ತನಿಲ್ಲೆ. ಈ ರೀತಿಯಾಗಿ ನೀನು ಘೋಷಿಸು.

ತಾತ್ಪರ್ಯ / ವಿವರಣೆ

ಇಲ್ಲಿ ರಜಾ ತಪ್ಪಾಗಿ ಅರ್ಥ ಮಾಡಿಗೊಂಬ ಸಾಧ್ಯತೆ ಇದ್ದು. ಏಳನೇ ಅಧ್ಯಾಯಲ್ಲಿ ಭಗವಂತ° ಕಿಡಿಗೇಡಿತನಲ್ಲಿ ತೊಡಗಿಪ್ಪವ ಎಂದೂ ಭಗವಂತನ ಭಕ್ತನಪ್ಪಲೆ ಸಾಧ್ಯ ಇಲ್ಲೆ ಹೇಳಿತ್ತಿದ್ದ. ಭಗವಂತನ ಭಕ್ತನಲ್ಲದ್ದವಂಗೆ ಆಧ್ಯಾತ್ಮಿಕಕ್ಕೆ ಅರ್ಹತೆ ಇಲ್ಲೆ. ಹಾಂಗಾರೆ ಆಕಸ್ಮಿಕವಾಗಿಯೋ ಉದ್ದೇಶಪೂರ್ವಕವಾಗಿಯೋ ಅಸಹ್ಯಕರ ಚಟುವಟಿಕೆಲಿ ತೊಡಗಿದವ ಇಲ್ಲಿ ಹೇಳಿದ ಹಾಂಗೆ ಪರಿಶುದ್ಧ ಭಕ್ತ° ಅಪ್ಪೋದು ಹೇಂಗೆ ಹೇದು ಸ್ವಾಭಾವಿಕ ಪ್ರಶ್ನೆ ಮೂಡುತ್ತು. ಆದರೆ, ಭಕ್ತಿಸೇವೆಯ ಒಂಬತ್ತು ವಿಧಂಗಳಲ್ಲಿ ತೊಡಗುವ ಭಕ್ತ° ಹೃದಯಂದ ಎಲ್ಲ ಕಲ್ಮಷವ ತೊಳದು ಹಾಕುವದರಲ್ಲಿ ನಿರತನಾವುತ್ತ°. ಅವನೂ ದೇವೋತ್ತಮ ಪರಮ ಪುರುಷನ ಹೃದಯಲ್ಲಿ ಧರಿಸಿದವನೇ ಆಗಿದ್ದ°. ಭಕ್ತಿಸೇವೆಲಿ ನಿರತನಾಗಿಪ್ಪದರಿಂದ ಸಹಜವಾಗಿಯೇ ಅವನ ಎಲ್ಲ ಪಾಪಕಲ್ಮಷಂಗಳ ತೊಳದು ಹೋವುತ್ತು. ಇಲ್ಲಿ ಪುನಃ ಒಂದರಿ ನೆಂಪು ಮಾಡೇಕ್ಕಾದ್ದು, ಭಕ್ತಿಸೇವೆ ಹೇಳಿರೆ, ಮಾಡುವ ಯಾವುದೇ ಯಜ್ಞ ವಾ ಕರ್ಮ ತನಗಲ್ಲ, ಭಗವಂತಂಗೇ ಅರ್ಪಣೆ ಹೇಳ್ವ ಮನೋಭಾವಂದ ಮಾಡುವ ಯಾವುದೇ ಕರ್ಮ ಭಕ್ತಿಸೇವೆಯೇ ಆವ್ತು. ಅದರ ಹೊರತು ಐಹಿಕ ಲಾಭಕ್ಕಾಗಿ ವಾ ಯಾವುದೋ ಒಂದು ಪ್ರತಿಫಲಾಪೇಕ್ಷೆಂದ ಮಾಡುವ ಪೂಜೆ ನಿಜವಾದ ಭಕ್ತಿಸೇವೆ ಹೇಳಿ ಭಗವಂತನಿಂದ ಪರಿಗಣಿತವಾವುತ್ತಿಲ್ಲೆ. ಸದಾ ಪರಮ ಪ್ರಭು ಭಗವಂತನ ಕುರಿತು ಚಿಂತನೆ ಮಾಡುವದರಿಂದ ಭಕ್ತನ ಹೃದಯ ಪರಿಶುದ್ಧ ಆವುತ್ತು. ವೇದಂಗಳ ಪ್ರಕಾರ, ಉನ್ನತ ಸ್ಥಾನಂದ ಪತನ ಹೊಂದಿದವ° ಪರಿಶುದ್ಧನಪ್ಪಲೆ ಕೆಲವು ಪ್ರಾಯಶ್ಚಿತ್ತ ವಿಧಿಗಳ ಅನುಸರುಸಲೆ ಹೇಳುತ್ತು. ಆದರೆ ನಿಜ ಭಕ್ತಿಸೇವೆಲಿ ಯಾವ ಪ್ರಾಯಶ್ಚಿತ್ತವೂ ಬೇಕಾದ್ಧಿಲ್ಲೆ. ಪಶ್ಚಾತ್ತಾಪವೇ ಪ್ರಾಯಶ್ಚಿತ್ತ, ಭಗವದ್ ನಾಮ ಸ್ಮರಣೆಯೇ, ಭಗವಂತನಲ್ಲಿ ನಿಜ ಭಕ್ತಿಯೇ ಪಾವನ.

ಹೀಂಗೆ ಪ್ರಾರಬ್ಧಕರ್ಮಂದ ದಾರಿತಪ್ಪಿದವು ಯಾವುದೋ ಒಂದು ಸಂದರ್ಭಲ್ಲಿ ತಾವು ಮಾಡುತ್ತಿಪ್ಪ ತಪ್ಪಿನ ಅರಿವು ಉಂಟಾಗಿ ಸರಿದಾರಿಯ ಹಿಡಿತ್ತವು ಮತ್ತು ಶಾಶ್ವತವಾದ ಮೋಕ್ಷವ ಪಡವಲೆ ಅರ್ಹರಾವುತ್ತವು. ಇದು ನಿಶ್ಚಿತ. ಇದರ ಆಣೆಮಾಡಿ ಹೇಳು, ಘೋಷಣಾರೂಪಲ್ಲಿ (ಪ್ರತಿಜಾನೀಹಿ) ಹೇಳು ಹೇಳಿ ಭಗವಂತ° ಅರ್ಜುನಂಗೆ ಹೇಳುತ್ತ°. ಇದಕ್ಕೆ ಅಜಾಮಿಳನ ದೃಷ್ಟಾಂತವೇ ಉತ್ತಮ ನಿದರ್ಶನ. ತನ್ನ ಜೀವನದುದ್ದಕ್ಕೂ ಮಾಡ್ಳಾಗದ್ದನ್ನೇ ಮಾಡಿದ ಅಜಾಮಿಳ ಮೂಲತಃ ಒಬ್ಬ° ಶ್ರೇಷ್ಠ ಜೀವ. ಇಂತಹ ಅಜಾಮಿಳಂಗೆ ಭಗವಂತ° ಜೀವನದ ಕೊನೆಗಾಲಲ್ಲಿ ಸತ್ಯದ ದಾರಿ ತೋರುಸಿ ಉದ್ಧಾರ ಮಾಡುತ್ತ°. ಹಾಂಗೆ ಅಕೇರಿಗೆ ಕೊನೆಕ್ಷಣಲ್ಲಿ ಸಾಧನೆ ಮಾಡಿ ಮೋಕ್ಷವ ಸೇರುತ್ತ. ಇಲ್ಲಿ ಭಗವಂತ° ಅರ್ಜುನಂಗೆ ಎಂತಕೆ “ನೀನು ಪ್ರತಿಜ್ಞೆ (ಘೋಷಣೆ) ಮಾಡು” ಹೇಳಿ ಹೇಳಿದ್ದು ಕೇಳಿರೆ, ಭಗವಂತ° ತನ್ನ ಭಕ್ತರಿಂಗೆ ಬೇಕಾಗಿ ತನ್ನ ಪ್ರತಿಜ್ಞೆಯನ್ನೂ ಮುರಿಗು ಆದರೆ ಎಂದೂ ಭಕ್ತರ ಪ್ರತಿಜ್ಞೆಯ ಅಲ್ಲ. ಇದಕ್ಕೆ ಮಹಾಭಾರತ ಯುದ್ಧದ ಒಂದು ಘಟನೆಯೇ ಸಾಕ್ಷಿ. ಮಹಾಭಾರತ ಯುದ್ಧಲ್ಲಿ ತಾನು ಶಸ್ತ್ರ ಹಿಡಿತ್ತಿಲ್ಲೆ ಹೇಳಿ ಪ್ರತಿಜ್ಞೆ ಮಾಡಿತ್ತಿದ್ದ ಕೃಷ್ಣ°, ಯುದ್ಧದ ಎಡಕ್ಕಿಲ್ಲಿ ಅರ್ಜುನ ಭೀಷ್ಮನ ಮುಂದೆ ಯುದ್ಧ ಮಾಡ್ಳೆ ಹಿಂಜರುದಪ್ಪಗ ಕೋಪಾವೇಶಂದ ಭೀಷ್ಮನ ಕೊಲ್ಲುತ್ತೆ ಹೇಳ್ವಾಂಗೆ ರಥದ ಚಕ್ರವೊಂದರ ಹಿಡುದು ಮುನ್ನುಗ್ಗಿ ಬಂದದು, ಅದರ ನೋಡಿ ಭೀಷ್ಮ ತನ್ನ ಎರಡೂ ಕೈಜೋಡುಸಿ, “ಓ ಭಗವಂತ°, ನಿನ್ನ ಕೈಲಿ ಚಕ್ರವ ಹಿಡುಶುತ್ತೆ ಹೇಳಿ ಪ್ರತಿಜ್ಞೆ ಮಾಡಿತ್ತಿದ್ದೆ, ನೀನು ಚಕ್ರ ಹಿಡಿತ್ತಿಲ್ಲೆ ಹೇಳಿ ಹೇಳಿತ್ತಿದ್ದೆ. ಆದರೆ ಈಗ ನೀನು ಎನ್ನ ಪ್ರತಿಜ್ಞೆ ಈಡೇರುಲೆ ನೀನೇ ಚಕ್ರವ ಹಿಡುದೆ, ನಿನ್ನ ನೀನೇ ಮರದೆ, ಆದರೆ ನಿನ್ನ ಭಕ್ತನ ಪ್ರತಿಜ್ಞೆಯ ಮರದ್ದಿಲ್ಲೆ. ನೀ ಅಲ್ಲದೆ ಇನ್ನಾರು ಗತಿ ನವಗೆ ಭಗವಂತ!” ಹೇಳಿ ಹೇಳಿದ್ದದು. ಈ ಘಟನೆಯ ಮೂಲಕ ಭಗವಂತ° ಎಂತಹ ಭಕ್ತವತ್ಸಲ ಹೇಳ್ವದು ನವಗೆ ಗೊಂತಾವುತ್ತು ಹೇಳಿ ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದು.

ಶ್ಲೋಕ

ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇsಪಿ ಸ್ಯುಃ ಪಾಪಯೋನಯಃ ।
ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಃ ತೇsಪಿ ಯಾಂತಿ ಪರಾಂ ಗತಿಮ್ ॥೩೨॥

ಪದವಿಭಾಗ

ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇ ಅಪಿ ಸ್ಯುಃ ಪಾಪ-ಯೋನಯಃ । ಸ್ತ್ರಿಯಃ ವೈಶ್ಯಾಃ ತಥಾ ಶೂದ್ರಾಃ ತೇ ಅಪಿ ಯಾಂತಿ ಪರಾಮ್ ಗತಿಮ್ ॥

ಅನ್ವಯ

ಹೇ ಪಾರ್ಥ!, ಯೇ ಅಪಿ ಹಿ ಪಾಪ-ಯೋನಯಃ ಸ್ತ್ರಿಯಃ ವೈಶ್ಯಾಃ ತಥಾ ಶೂದ್ರಾಃ ಸ್ಯುಃ , ತೇ ಅಪಿ ಮಾಂ ವ್ಯಪಾಶ್ರಿತ್ಯ, ಪರಾಂ ಗತಿಂ ಯಾಂತಿ ।

ಪ್ರತಿಪದಾರ್ಥ

ಹೇ ಪಾರ್ಥ!, – ಏ ಪೃಥೆಯ ಮಗನಾದ ಅರ್ಜುನ!, ಯೇ ಅಪಿ – ಆರೇ ಆಗಿದ್ದರೂ ಕೂಡ, ಪಾಪ-ಯೋನಯಃ – ನೀಚ ಕುಟುಂಬಲ್ಲಿ ಹುಟ್ಟಿದ, ಸ್ತ್ರಿಯಃ – ಸ್ತ್ರೀಯರು, ವೈಶ್ಯಾಃ – ವರ್ತಕರು, ತಥಾ – ಹಾಂಗೇ, ಶೂದ್ರಾಃ ಸ್ಯುಃ – ಕೆಳವರ್ಗದ ಜನಂಗಳೇ ಆಗಿರಲಿ, ತೇ ಅಪಿ – ಅವ್ವೂ ಕೂಡ, ಮಾಮ್ ವ್ಯಪಾಶ್ರಿತ್ಯ – ಎನ್ನ ವಿಶೇಷವಾಗಿ ಆಶ್ರಯಿಸಿ, ಪರಾಮ್ ಗತಿಮ್ – ಪರೋಮೋನ್ನತವಾದ ಗಮ್ಯಸ್ಥಾನವ, ಯಾಂತಿ –  ಸೇರುತ್ತವು.

ಅನ್ವಯಾರ್ಥ

ಏ ಅರ್ಜುನ!, ಯಾವುದೇ ಕೀಳುಜನ್ಮಲ್ಲಿ ಹುಟ್ಟಿದ ಸ್ತ್ರೀಯರಾಗಲಿ, ವೈಶ್ಯರಾಗಲೀ ವಾ ಶೂದ್ರರಾಗಲಿ ನಿಜಭಕ್ತಿಂದ ಎನ್ನ ಆಶ್ರಯಿಸಿ ಪರಮೋನ್ನತ ಗತಿಯ ಸೇರುತ್ತವು.

ತಾತ್ಪರ್ಯ / ವಿವರಣೆ

ನಿಜ ಭಕ್ತಿಸೇವೆಲಿ ಕೆಳಾಣ ಮೇಲಾಣ ವರ್ಗದವು ಹೇಳಿ ಯಾವ ವ್ಯತ್ಯಾಸವೂ ಇಲ್ಲೆ ಹೇಳ್ವದರ ಭಗವಂತ° ಇಲ್ಲಿ ಸ್ಪಷ್ಟವಾಗಿ ಹೇಳಿದ್ದ°. ಜೀವನದ ಪ್ರಾಪಂಚಿಕ ಪರಿಕಲ್ಪನೆಲಿ ಇಂತಹ ಭೇದಂಗೊ ಇಕ್ಕು. ಆದರೆ ಭಕ್ತಿಸೇವೆಲಿ ನಿರತರಾದವಂಗೆ ಹೀಂಗಿರ್ತ ಭೇದಂಗೊ ಇಲ್ಲೆ. ಎಲ್ಲರೂ ಒಂದೇ. ಎಲ್ಲರೂ ಹೋಪಲೆ ಬಯಸುವದು ಒಂದೇ ಜಾಗ್ಗೆ. ಹುಟ್ಟಿದ ಪ್ರತಿಯೊಬ್ಬನೂ ಪರಮಗತಿಗೆ ಅರ್ಹನೇ ಆಗಿರುತ್ತ°. ಮಾಡಿ ಸಾಧುಸುವದು ವಾ ಬಿಡುವದು ಜೀವಿಯ ಮೂಲ ಸ್ವಭಾವಕ್ಕೆ ಬಿಟ್ಟದು. ಪರಮ ಚಂಡಾಲನೂ ಒಬ್ಬ ಪರಿಶುದ್ಧ ಭಕ್ತನ ಸಹವಾಸಂದ ಪರಿಶುದ್ಧನಪ್ಪಲೆ ಸಾಧ್ಯ ಇದ್ದು. ಭಕ್ತಿಸೇವೆಲಿ ಕೇಳಾಣ ವರ್ಗದೋರು, ಮೇಲಾಣ ವರ್ಗದೋರು ಹೇಳ್ವ ಭೇದಭಾವ ಇಲ್ಲೆ. ಇದೇ ಒಂದು ವಿಷಯವ ಹಿಡ್ಕೊಂಡು ಸಮಾಜಲ್ಲಿ ಅಂತೇ ಗೊಂದಲವ ಉಂಟುಮಾಡುವ ಬುದ್ಧಿಜೀವಿಗೊ ಹೇಳಲ್ಪಡುವವು ಕೆಲವು ಇದ್ದವು. ಭಕ್ತಿ ಎಲ್ಲೋರಿಂಗೂ ಒಂದೇ ಹಾಂಗಾಗಿ ಸಮಪಂಕ್ತಿ ಆಯೇಕು ಹೇಳಿ. ಭಗವಂತ° ಹೃದಯಪರಿಶುದ್ಧ / ಮನಸ್ಸು ಪರಿಶುದ್ಧ ಆಗಿದ್ದರೆ ಸಾಕು ಹೇಳಿ ಹೇಳಿದ್ದಷ್ಟೆ ಹೇಳ್ವದು ಅವರ ತರ್ಕ. ಆದರೆ ಆ ಶುದ್ಧ ಎಷ್ಟರ ಮಟ್ಟಿಂಗೆ ಇದ್ದು ಹೇಳ್ವದರ ಕಿಂಚಿತ್ತೂ ಯೋಚನೆ ಮಾಡಿದ್ದದು ಇರ!. ಬಾಹ್ಯಶುದ್ಧಿಗೆ ಮಹತ್ವ ಇಲ್ಲೆ ಸರಿ ಆದರೆ ಅಂತಃಶುದ್ಧಿ ಆಯೇಕಾರೆ ಬಾಹ್ಯಶುದ್ಧಿ ಇಲ್ಲದ್ದೆ ಅಕ್ಕೋ! ಬರೇ ಬಾಹ್ಯ ಶುದ್ಧಿ ಇದ್ದರೆ ಸಾಲ ಹೇಳ್ವದು ಸತ್ಯ, ಆದರೆ ಬಾಹ್ಯಶುದ್ಧಿ ಇಲ್ಲದ್ದೆ  ಅಂತಃಶುದ್ಧಿಯೂ  ಅಪ್ಪಲಿಲ್ಲೆ ಹೇಳ್ವದು ಪ್ರಾಯೋಗಿಕ ಸತ್ಯ. ಹಾಂಗೆ ಶುದ್ಧಿ ಹೇಳ್ವದು ಸಹವಾಸಂದ ಬಪ್ಪದು ಎಂಬದೂ ಪ್ರಾಯೋಗಿಕ ಸತ್ಯ. ಅದನ್ನೇ ಭಗವಂತ° ಹೇಳಿದ್ದು ನಿಜಭಕ್ತನ ಸಹವಾಸಂದ ಭಕ್ತಿಮಾರ್ಗವ ಕಂಡುಗೊಳ್ಳೆಕು ಹೇಳಿ.

ಪರಿಶುದ್ಧ ಭಕ್ತನ ಆಶ್ರಯವ ಪಡವ ಅತ್ಯಂತ ಸರಳ ಮನುಷ್ಯನೂ ಯೋಗ್ಯವಾದ ಮಾರ್ಗದರ್ಶನಂದ ಪರಿಶುದ್ಧನಾವುತ್ತ°. ಐಹಿಕ ಪ್ರಕೃತಿಯ ಗುಣಂಗೊಕ್ಕನುಸರುಸಿ ಅನುಗುಣವಾಗಿ ಮನುಷ್ಯನ ಸಾತ್ವಿಕ (ಬ್ರಾಹ್ಮಣ°), ರಾಜಸ (ಕ್ಷತ್ರಿಯ°, ಆಡಳ್ತೆದಾರ°), ರಾಜಸ ಮತ್ತೆ ತಾಮಸ ಗುಣಂಗಳ ಬೆರುಸಿದವು (ವೈಶ್ಯ°), ಮತ್ತೆ ತಾಮಸ ಗುಣದವ (ಶೂದ್ರ°, ವಾ ಕಾರ್ಮಿಕ°) ವರ್ಗದವ° ಹೇಳಿ ವರ್ಗೀಕರುಸಿದ್ದು. ಇವಕ್ಕಿಂತ ಕೇಳಾಣದ್ದು ಚಂಡಾಲ°. ಅವು ಪಾಪಿ ಸಂಸಾರಲ್ಲಿ ಹುಟ್ಟುತ್ತವು. ಸಾಮಾನ್ಯವಾಗಿ ಇಂತಹ ಪಾಪಿಸಂಸಾರಲ್ಲಿ ಹುಟ್ಟಿದೋರ ಸಹವಾಸವ ಮೇಲಾಣ ವರ್ಗದವು ಒಪ್ಪುತ್ತವಿಲ್ಲೆ. ಆದರೆ, ಭಕ್ತಿಸೇವೆಯ ಪ್ರಕ್ರಿಯೆಯ ಶಕ್ತಿ ಎಷ್ಟೊಂದು ಪ್ರಭಾವವುಳ್ಳದ್ದು ಹೇಳಿತ್ತುಕಂಡ್ರೆ, ಪರಮ ಪ್ರಭು ಭಗವಂತನ ಪರಿಶುದ್ಧ ಭಕ್ತ ಅತೀ ಕೆಳಾಣವರ್ಗದವನನ್ನೂ ಜೀವನದ ಪರಿಪೂರ್ಣತೆ ಪಡವಲೆ ಅರ್ಹರನ್ನಾಗಿ ಮಾಡುತ್ತು. ಭಗವಂತನ ನಿಜ ಪರಿಶುದ್ಧ ಭಕ್ತನಾದಪ್ಪಗ ಹುಟ್ಟಿದ ಯಾವನೇ ಆದರೂ ಭಗವಂತನ ಆಶ್ರಯವ ಪಡದು ಭಗವಂತನ ಸೇರ್ಲೆಡಿಗು. ‘ವ್ಯಪಾಶ್ರಿತ್ಯ’ – ವಿಶೇಷವಾಗಿ ಆಶ್ರಯಿಸಿ ಹೇಳಿ ಹೇಳ್ವದರ ಇಲ್ಲಿ ಭಗವಂತ° ಒತ್ತಿ ಹೇಳಿದ್ದ°.

ಬನ್ನಂಜೆ ವಿವರುಸುತ್ತವು – ಈ ಶ್ಲೋಕಲ್ಲಿ ಮೇಲ್ನೋಟಕ್ಕೆ ಸ್ತ್ರೀಯರು, ವೈಶ್ಯರು, ಶೂದ್ರರು ಪಾಪಿಗೊ ಹೇಳ್ವ ಅರ್ಥ ಮಾಡಿಗೊಂಬವೂ ಇದ್ದವು. ಆದರೆ ಭಗವಂತ° ಇಲ್ಲಿ ಹೇಳಿದ್ದದು ಸ್ತ್ರೀಯರು ಪಾಪಿಗೊ ಹೇಳಿ ಅಲ್ಲ. ಯಾವುದೋ ಪಾಪಂದ ಅಥವಾ ಶಾಪಂದ ಸ್ತ್ರೀ ಜನ್ಮ ಪಡದ ಗಂಡು ‘ಸ್ತ್ರೀ ಪಾಪಯೋನಿ’ ಹೊರತು ಹೆಣ್ಣಾಗಿಪ್ಪ ಸ್ತ್ರೀಜೀವ ಪಾಪಯೋನಿಯಲ್ಲ. ಭಗವಂತ° ಹೇಳುತ್ತ° “ಯಾವುದೋ ಪಾಪಂದ ಹೀನಯೋನಿ ಬಂದಿಕ್ಕು, ಆದರೆ ಅಂತವು ಎನ್ನ ಆರಾಧುಸಿ ಎಲ್ಲಾ ದೋಷಂಗಳಿಂದ ಬಿಡುಗಡೆ ಹೊಂದಲಕ್ಕು”. ಇದಕ್ಕೆ ಉತ್ತಮ ದೃಷ್ಟಾಂತ ನರಕಾಸುರನ ಸೆರೆಲಿದ್ದ ಹದಿನಾರು ಸಾವಿರದ ನೂರು ಮಂದಿ ಸ್ತ್ರೀಯರು. ಇವು ಅಗ್ನಿಪುತ್ರರು. ಭಗವಂತನ ಪತ್ನಿ ಆಯೇಕು ಹೇಳ್ವ ಆಸೆಂದ ತಮ್ಮ ಅಂತಸ್ತಿನ ಕಳಕ್ಕೊಂಡು ಭೂಮಿಲಿ ಹೆಣ್ಣಾಗಿ ಹುಟ್ಟಿ ನರಕಾಸುರನ ಸೆರೆಮನೆಲಿ ಸಿಕ್ಕಿ ಒದ್ದಾಡಿದವು. ಭಗವಂತ° ಅವರ  ಅಲ್ಲಿಂದ ಬಿಡುಸಿ ಮದುವೆ ಆಗಿ ಉದ್ಧರಿಸಿದ°. ನಂದಗೋಪ° ಮತ್ತೆ ಯಶೋದೆ ಮೂಲತಃ ದೇವಾಂಶ ಸಂಭೂತರು. ‘ದ್ರೋಣ°’ ನಾಮಕ ವಸು ನಂದಗೋಪ° ಮತ್ತೆ ‘ಧರ’ ನಾಮಕ ವಸುಪತ್ನಿ ಯಶೋದೆ. ಅವು ಭೂಮಿಲಿ ವೈಶ್ಯರಾಗಿ ಹುಟ್ಟಿದವು. ಭಗವಂತ° ತನ್ನ ಅವತಾರಲ್ಲಿ ಅವರ ಮನೆಲಿ ಬೆಳದು ಅವರ ಉದ್ಧರುಸಿದ°. ಮಹಾಚೇತನ ವಿಧುರ°, ಇವ° ಸ್ವಯಂ ಧರ್ಮರಾಯ. ವೇದವ್ಯಾಸನ ಮಗನಾಗಿದ್ದರೂ ಶಾಪದ ಫಲವಾಗಿ ‘ದಾಸೀಪುತ್ರ’ ಹೇಳಿಸಿಗೊಳ್ಳೆಕ್ಕಾಗಿ ಬಂತು. ಸಂಧಾನಕ್ಕೆ ಬಂದ ಕೃಷ್ಣ°, ದುರ್ಯೋಧನ, ಭೀಷ್ಮ, ದ್ರೋಣರ ಮನಗೆ ಹೋಗದ್ದೆ ಸೀದಾ ವಿಧುರನ ಮನಗೇ ಹೋಗಿ ಅಲ್ಲಿ ವಿಧುರನ ಸತ್ಕಾರವ ಪ್ರೀತಿಂದ ಸ್ವೀಕರುಸಿ ಅವನ ಸಂತೋಷಗೊಳುಸಿದ°. ಹೀಂಗೆ ಭಗವಂತ° ಬಯಸುವದು ಬಾಹ್ಯ ಪ್ರದರ್ಶನವ ಅಲ್ಲ, ನಿಜ ಪ್ರೀತಿಯ ಹೇಳ್ವದು ಸ್ಪಷ್ಟ ಆವುತ್ತು. ಅವಂಗೆ ಅಂತರಾತ್ಮ ಮುಖ್ಯ ಹೊರತು ಮುಖವಾಡ ಅಲ್ಲ. ಹಾಂಗಾಗಿ ಭಗವಂತ° ಹೇಳುತ್ತ° – “ಏವುದೋ ಪಾಪಕರ್ಮಂದ ಅಥವಾ ಶಾಪಂದ ಹೀನಯೋನಿಲಿ ಹುಟ್ಟಿದವು ಎನ್ನ ಆಶ್ರಯಿಸಿ ಪಾಪ ಮುಕ್ತರಾಗಿ ಎನ್ನ ಸೇರ್ಲಕ್ಕು”.

ಶ್ಲೋಕ

ಕಿಂ ಪುನಬ್ರಾಹ್ಮಣಾಃ ಪುಣ್ಯಾ ಭಕ್ತಾ ರಾಜರ್ಷಯಸ್ತಥಾ ।
ಅನಿತ್ಯಮಸುಖಂ ಲೋಕಮ್ ಇಮಂ ಪ್ರಾಪ್ಯ ಭಜಸ್ವ ಮಾಮ್ ॥೩೩॥

ಪದವಿಭಾಗ

ಕಿಮ್ ಪುನಃ ಬ್ರಾಹ್ಮಣಾಃ ಪುಣ್ಯಾಃ ಭಕ್ತಾಃ ರಾಜರ್ಷಯಃ ತಥಾ । ಅನಿತ್ಯಮ್ ಅಸುಖಂ ಲೋಕಮ್ ಇಮಮ್ ಪ್ರಾಪ್ಯ ಭಜಸ್ವ ಮಾಮ್

ಅನ್ವಯ

ಕಿಂ ಪುನಃ ಪುಣ್ಯಾಃ ಭಕ್ತಾಃ ಬ್ರಾಹ್ಮಣಾಃ ತಥಾ ರಾಜರ್ಷಯಃ? ತಸ್ಮಾತ್ ತ್ವಮ್ ಅನಿತ್ಯಮ್ ಅಸುಖಮ್ ಇಮಂ ಲೋಕಂ ಪ್ರಾಪ್ಯ, ಮಾಂ ಭಜಸ್ವ ।

ಪ್ರತಿಪದಾರ್ಥ

ಕಿಮ್ – ಎಂತರ, ಪುನಃ – ಮತ್ತೆ, ಪುಣ್ಯಾಃ – ಪುಣ್ಯವಂತರು / ಧರ್ಮಿಷ್ಠರು, ಭಕ್ತಾಃ – ಭಕ್ತರು, ಬ್ರಾಹ್ಮಣಾಃ – ಬ್ರಾಹ್ಮರು, ತಥಾ – ಹಾಂಗೇ, ರಾಜರ್ಷಯಃ – ರಾಜರ್ಷಿಗೊ, ತಸ್ಮಾತ್ ತ್ವಮ್ – ಹಾಂಗಾಗಿ ನೀನು, ಅನಿತ್ಯಮ್ – ಅಶಾಶ್ವತವಾದ, ಅಸುಖಮ್ – ಕ್ಲೇಶಮಯವಾದ, ಇಮಮ್ ಲೋಕಮ್ – ಈ ಲೋಕವ, ಪ್ರಾಪ್ಯ – ಹೊಂದಿ, ಮಾಮ್ ಭಜಸ್ವ – ಎನ್ನ ಭಕ್ತಿಸೇವೆಲಿ ತೊಡಗು.

ಅನ್ವಯಾರ್ಥ

ಪುಣ್ಯದ ಫಲವಾಗಿ ಬ್ರಾಹ್ಮಣರಾಗಿ, ರಾಜರ್ಷಿಗೊ ಆಗಿ ಹುಟ್ಟಿ ಬಂದು ಭಕ್ತಿ ಮಾಡ್ತದರ ಬಗ್ಗೆ ಹೇಳ್ದದೆಂತರ?! ಹಾಂಗಾಗಿ ಸ್ಥಿರವಲ್ಲದ್ದ, ಸುಖವಲ್ಲದ್ದ, ನರಜನ್ಮ ಬಂದಿಪ್ಪಗ ನೀನು ಎನ್ನ ಆರಾಧನೆ ಮಾಡು.

ತಾತ್ಪರ್ಯ / ವಿವರಣೆ

ಈ ಐಹಿಕ ಜಗತ್ತಿಲ್ಲಿ ಜನರ ಬೇರೆ ಬೇರೆ ವರ್ಗಂಗೊ ಇಕ್ಕು. ಪುಣ್ಯವಂತರು, ಧರ್ಮಿಷ್ಠರು, ಬ್ರಾಹ್ಮರು, ರಾಜರ್ಷಿಗೊ ಹೇಳಿ ಶ್ರೇಷ್ಠ ಮನೆತನಲ್ಲಿ ಹುಟ್ಟಿ ಬಂದದ್ದಾಯ್ಕು. ಆದರೆ, ಈ ಲೋಕ ಆರಿಂಗೂ ಸುಖದ ತಾಣ° ಅಲ್ಲ . ‘ಅನಿತ್ಯಂ ಅಸುಖಂ ಲೋಕಂ’  – ಈ ಲೋಕ ಅಶಾಶ್ವತವಾದ್ದು, ದುಃಖಂಗಳಿಂದ ತುಂಬಿಗೊಂಡದ್ದು. ಇದು ಯಾವುದೇ ವಿವೇಕಯುಕ್ತನಾದ ಯೋಗ್ಯ ಮನುಷ್ಯ° ವಾಸ ಮಾಡೇಕ್ಕಾದ ಜಾಗೆ ಅಲ್ಲ. ಈ ಪ್ರಪಂಚ ಅಶಾಶ್ವತ ಮತ್ತೆ ದುಃಖಂದ ತುಂಬಿಗೊಂಡಿಪ್ಪದು ಹೇಳಿ ಹೇಳಿದ್ದ°. ಪರಮಾತ್ಮನ ಇನ್ನೊಂದು ಜಗತ್ತು ಇದ್ದು, ಅದು ಶಾಶ್ವತ, ಸದಾನಂದಮಯವಾದ್ದು.

ಅರ್ಜುನ° ಒಂದು ಸಾಧುಸ್ವಭಾವದ ರಾಜಕುಟುಂಬಲ್ಲಿ ಹುಟ್ಟಿದವ°. ಅವಂಗೂ ಭಗವಂತ° “ಎನ್ನ ಭಕ್ತಿಸೇವೆಯೆ ಆರಿಸಿಗೋ, ಶೀಘ್ರವಾಗಿ ಭಗವದ್ಧಾಮಕ್ಕೆ ಬಂದು ಸೇರು” ಹೇಳಿ ಹೇಳುತ್ತ. ದುಃಖಂಗಳೇ ತುಂಬಿಪ್ಪ ಈ ಅಶಾಶ್ವತ ಜಗತ್ತಿಲ್ಲಿ ಆರೂ ನಿಂಬಲಾಗ. ಪ್ರತಿಯೊಬ್ಬನೂ ದೇವೋತ್ತಮ ಪರಮ ಪುರುಷನ ಆದಷ್ಟು ಬೇಗನೆ ಹೋಗಿ ಸೇರೆಕು ಹೇಳ್ವದು ಅಭಿಲಾಷೆ ಹೇಳ್ವದರ ಸ್ಪಷ್ಟಪಡುಸುತ್ತ°. ಹಾಂಗಾದಪ್ಪಗ ಎಲ್ಲೋರು ಶಾಶ್ವತಾಗಿ ಸುಖಿಯಾಗಿಪ್ಪಲೆ ಎಡಿಗು. ಎಲ್ಲ ವರ್ಗದೋರ ಎಲ್ಲ ಸಮಸ್ಯೆಗಳ ಬಗೆಹರುಸುವ ಒಂದೇ ಒಂದು ಪ್ರಕ್ರಿಯೆ ಹೇಳಿರೆ ಭಗವಂತನ ಭಕ್ತಿಸೇವೆ. ಹಾಂಗಾಗಿ ಪ್ರತಿಯೊಬ್ಬನೂ ಕೃಷ್ಣಪ್ರಜ್ಞೆಯ ಮಾರ್ಗವ ಅರ್ತುಗೊಂಡು ತನ್ನ ಬದುಕಿನ ಪರಿಪೂರ್ಣತೆಗೊಳುಸೆಕು.

ಭಗವಂತ° ಹೇಳುತ್ತ° – “ಪುಣ್ಯವಂತರ, ಶ್ರೇಷ್ಠವಂಶಲ್ಲಿ ಹುಟ್ಟಿದವರ ಮಾತೆಂತಕೆ?!. ಯಾವುದೇ ಯೋನಿಲಿ ಹುಟ್ಟಿದ ಪ್ರತಿಯೊಬ್ಬ ಜೀವಿಯೂ  ಭಗವಂತನ ಭಕ್ತಿಸೇವೆಲಿ ನಿರತನಾಗಿ ಅವಂಗೇ ಸಂಪೂರ್ಣ ಶರಣಾಗತನಾಗಿ ಅವನನ್ನೇ ಆರಾಧಿಸಿರೆ ಶಾಶ್ವತ ಸುಖವ ಪಡವಲಕ್ಕು. ಹಾಂಗಾಗಿ ಈ ಪ್ರಪಂಚವೇ ಸರ್ವಸ್ವ ಹೇಳಿ ಇಲ್ಲಿ ಬಿದ್ದು ಒದ್ದಾಡೆಡ. ಅನಿತ್ಯವೂ ಅಸುಖವೂ ಆಗಿಪ್ಪ ಈ ಲೋಕಂದ ನಿತ್ಯಾನಂದಮಯವಾದ ಜ್ಞಾನಾನಂದಮಯವಾದ ಭಗವಂತನ ಲೋಕವ ಸೇರ್ಲೆ ಪ್ರಯತ್ನಮಾಡು. ನಿನ್ನ ಉದ್ಧಾರ ಮಾಡುವ ಹೊಣೆ ಎನ್ನದು”.

ಶ್ಲೋಕ

ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು ।
ಮಾಮೇವೈಷ್ಯಸಿ ಯುಕ್ತ್ವೈವಮ್ ಆತ್ಮಾನಂ ಮತ್ಪರಾಯಣಃ ॥೩೪॥

ಪದವಿಭಾಗ

ಮತ್-ಮನಾಃ ಭವ ಮತ್-ಭಕ್ತಃ ಮತ್-ಯಾಜೀ ಮಾಮ್ ನಮಸ್ಕುರು । ಮಾಮ್ ಏವ ಏಷ್ಯಸಿ ಯುಕ್ತ್ವಾ ಏವಮ್ ಆತ್ಮಾನಮ್ ಮತ್-ಪರಾಯಣಃ॥

ಅನ್ವಯ

ತ್ವಂ ಮತ್-ಮನಾಃ ಮತ್-ಭಕ್ತಃ ಮತ್-ಯಾಜೀ ಚ ಭವ । ಮಾಂ ಮತ್-ಪರಾಯಣಃ ಸನ್ ನಮಸ್ಕುರು । ಏವಮ್ ಆತ್ಮಾನಂ ಯುಕ್ತ್ವಾ ಮಾಮ್ ಏವ ಏಷ್ಯಸಿ ।

ಪ್ರತಿಪದಾರ್ಥ

ತ್ವಮ್ – ನೀನು , ಮತ್-ಮನಾಃ  – ಸದಾ ಎನ್ನನ್ನೇ ಚಿಂತಿಸುತ್ತಿಪ್ಪವ°, ಮತ್- ಭಕ್ತಃ – ಎನ್ನ ಭಕ್ತ°, ಮತ್-ಯಾಜೀ ಚ- ಎನ್ನ ಆರಾಧಕನಾಗಿಯೂ, ಭವ – ಆಗಿರು (ಆಗು), ಮಾಮ್ – ಎನ್ನ, ಮತ್-ಪರಾಯಣಃ ಸನ್ – ಎನ್ನಲ್ಲಿ ಭಕ್ತಿಯುಳ್ಳವನಾಗಿದ್ದುಗೊಂಡು, ನಮಸ್ಕುರು – ನಮಸ್ಕಾರ ಮಾಡು, ಏವಮ್ – ಈ ರೀತಿಯಾಗಿ, ಆತ್ಮಾನಮ್ ಯುಕ್ತ್ವಾ – ನಿನ್ನ ಆತ್ಮವ ತಲ್ಲೀನಗೊಳುಸಿ, ಮಾಮ್  ಏವ ಏಷ್ಯಸಿ – ಎನ್ನಲ್ಯಂಗೇ ಬತ್ತೆ.

ಅನ್ವಯಾರ್ಥ

ಸದಾ ಎನ್ನಲ್ಲೇ ಮನಸ್ಸಿನ ಚಿಂತನೆಗೊಳುಸಿ, ಎನ್ನ ಭಕ್ತನಾಗಿ, ಎನ್ನನ್ನೇ ಆರಾಧಿಸುವವನಾಗಿ ಇದ್ದುಗೊ. ಎನ್ನಲ್ಲಿ ಸಂಪೂರ್ಣ ಭಕ್ತಿಯುಳ್ಳವನಾಗಿ ಎನ್ನ ಪೂಜಿಸಿ ನಮಸ್ಕಾರ ಮಾಡು. ಅಷ್ಟಪ್ಪಗ ನೀನು ಸಂಪೂರ್ಣವಾಗಿ ಎನ್ನಲ್ಲಿ ಮಗ್ನನಾಗಿ ನಿಶ್ಚಯವಾಗಿಯೂ ಎನ್ನಲ್ಯಂಗೇ ಬತ್ತೆ.

ತಾತ್ಪರ್ಯ / ವಿವರಣೆ

ಕಲ್ಮಷಯುಕ್ತವಾದ ಈ ಐಹಿಕ ಜಗತ್ತಿನ ಮುಷ್ಠಿಂದ ಪಾರಾಯೇಕ್ಕಾರೆ ಕೃಷ್ಣಪ್ರಜ್ಞೆ ಒಂದೇ ಮಾರ್ಗ ಹೇಳ್ವದರ ಇಲ್ಲಿ ಸ್ಪಷ್ಟವಾಗಿ ಹೇಳಿದ್ದ° ಭಗವಂತ°.  ನಾವು ನಮ್ಮ ಜೀವನಲ್ಲಿ ಸಾಧುಸೇಕ್ಕಾದ ಒಂದೇ ಒಂದು ಸಂಗತಿ ಹೇಳಿರೆ ಮನಸ್ಸಿನ ಭಗವಂತನಲ್ಲಿ ನೆಲೆಗೊಳುಸುವದು. ವ್ಯವಹಾರ ಪ್ರಪಂಚಲ್ಲಿಪ್ಪ ಸಾವಿರಾರು ವಿಚಾರಂಗೊ ನಮ್ಮ ಉದ್ಧಾರ ಮಾಡ. ಅವು ನಮ್ಮ ಮತ್ತೂ ಮತ್ತೂ ಅಧಃಪತನಕ್ಕೆ ಎಳೆತ್ತು. ಮನಸ್ಸಿಲ್ಲಿ ಕ್ಲೇಶವ ಉಂಟುಮಾಡಿ ಅಶಾಂತಿಯನ್ನೇ ತುಂಬುತ್ತು. ಅವೆಲ್ಲವ ಬಿಟ್ಟು ಮನಸ್ಸಿಲ್ಲಿ ಭಗವಂತನ ತುಂಬುಸೇಕು. ನಾವೆಷ್ಟು ಭಗವಂತನ ಪ್ರೀತಿಸುತ್ತೋ ಅಷ್ಟೇ ಗಾಢವಾಗಿ ಭಗವಂತ° ನಮ್ಮ ಪ್ರೀತಿಸುತ್ತ°. ಬನ್ನಂಜೆ ಹೇಳ್ತವು – ಶ್ರೀಸೂಕ್ತಲ್ಲಿ ಹೇಳಿಪ್ಪಂತೆ “ತ್ವಂ ಮಾಂ ಭಜಸ್ವ ಪದ್ಮಾಕ್ಷಿ, ಯೇನ ಸೌಖ್ಯಂ ಲಭಾಮ್ಯಹಂ” – ಆನು ನಿನ್ನ ಭಜನೆ (ಪ್ರೀತಿ) ಮಾಡುತ್ತೆ, ನೀನು ಎನ್ನ ಪ್ರೀತಿಮಾಡು. ಇದರಿಂದ ಸುಖವ ಪಡೆತ್ತೆ.

ನಾವು ಎಂತ ಪೂಜೆ ಮಾಡುತ್ತೋ ಅದು ಭಗವಂತನ ಪೂಜೆ ಆಗಿರಲಿ. ನಮ್ಮ ಎಲ್ಲಾ ಪ್ರೀತಿಲಿ ಭಗವಂತನ ಕಾಣೆಕು. ನಾವು ಮಾಡುವ ಎಲ್ಲ ನಮಸ್ಕಾರ ಆ ಭಗವಂತಂಗೆ ಮಾಡುವ ನಮಸ್ಕಾರ ಆಗಿರೆಕು. ಹೀಂಗೆ ಮಾಡಿ ನಮ್ಮ ಮನಸ್ಸಿನ ಭಗವಂತನಲ್ಲಿ ನೆಲೆಗೊಳುಸಿ ಇಡೀ ನಮ್ಮ ಬದುಕಿನ ಭಗವನ್ಮಯ ಮಾಡೆಕು. ನವಗೆ ಎಲ್ಲಕ್ಕಿಂತ ದೊಡ್ಡದು ಆ ಭಗವಂತ°. ನಮ್ಮ ಬದುಕಿನ ಸಾರ ಆ ಭಗವಂತ°. ನಿರಂತರ ಚಿಂತನೆಯ ವಸ್ತು ಆ ಭಗವಂತ°. ನಮ್ಮ ಬದುಕಿನ ಒಂದೊಂದು ಕ್ರಿಯೆಯೂ ಭಗವಂತನ ಆರಾಧನೆ ಆಯೇಕು. ಆವಾಗ, ‘ನೀನು ಎನ್ನ ಸೇರುತ್ತೆ’ ಹೇಳಿ ಭಗವಂತ° ಅರ್ಜುನಂಗೆ ಭರವಸೆ ಕೊಡುತ್ತ°.

ಹೀಂಗೆ ಮೋಕ್ಷ ಸಾಧಕವಾದ ಉಪಾಸನೆಯ ಬಗ್ಗೆ ಭಗವಂತ° ಅರ್ಜುನಂಗೆ ವಿವರಿಸಿದ° ಹೇಳುವಲ್ಯಂಗೆ –

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ರಾಜವಿದ್ಯಾರಾಜಗುಹ್ಯಯೋಗೋ ನಾಮ ನವಮೋsಧ್ಯಾಯಃ ॥

ಇಲ್ಲಿಗೆ ಉಪನಿಷತ್ತೂ ಬ್ರಹ್ಮವಿದ್ಯೆಯೂ ಮತ್ತು ಯೋಗಶಾಸ್ತ್ರವೂ ಶ್ರೀಕೃಷ್ಣ-ಅರ್ಜುನರೊಳಾಣ ಸಂವಾದವೂ ಆದ ಶ್ರೀಮದ್ಭಗವದ್ಗೀತೇಲಿ ರಾಜವಿದ್ಯಾರಾಜಗುಹ್ಯಯೋಗಃ ಹೇಳ್ವ ಒಂಬತ್ತನೇ ಅಧ್ಯಾಯ ಮುಗುದತ್ತು.

॥ ಗೀತಾಚಾರ್ಯ ಶ್ರೀಕೃಷ್ಣ ಭಗವಾನ್ ಕೀ…. ಜೈ ॥ ಗೀತಾ ಮಾತಾ ಕೀ …. ಜೈ ॥ ಗೋಪಾಲಕೃಷ್ಣ ಭಗವಾನ್ ಕೀ .. ಜೈ ॥

॥ ಶ್ರೀಕೃಷ್ಣಾರ್ಪಣಮಸ್ತು ॥

….ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 09 – SHLOKAS 27 – 34 by CHENNAI BHAAVA

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

 

 

 

 

4 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 09 – ಶ್ಲೋಕಂಗೊ 27 – 34

  1. ಹರೇ ರಾಮ; ಬಾರೀ ಲಾಯಕದ ವಿವರಣೆ.ಅದರಲ್ಲಿಯುದೆ ಮುಗ್ಧ ಭಕ್ತಿಗೆ ದೇವರು ಬೇಗ ಒಲಿತ್ತ ಹೇಳುವದಕ್ಕೆ ಕೊಟ್ಟ ಉದಾಹರಣೆಯ ಓದಿಯಪ್ಪಗ ಶ್ರೀ ಸೌ೦ದರ್ಯ ಲಹರೀ ಯ ಶ್ರೀ ಶ್ರೀ ಶ೦ಕರಾಚಾರ್ಯ ಸ್ವಾಮಿಗೊ ಬರದ ಸ೦ದರ್ಭದ ಕಥೆ ನೆ೦ಪಾತು.ಕಾರಣಾ೦ತರ೦ದ ಶಿವಗುರು ( ಶ್ರೀ ಆಚಾರ್ಯರ ಪೂರ್ವಾಶ್ರಮದ ಅಪ್ಪ°)ಹೆರ ಪ್ರದೇಶಕ್ಕೆ ಹೋಯೆಕಾಗಿ ಬ೦ತ೦ಡ.ಆ ಸಮಯಲ್ಲಿ ಅವು ನಿತ್ಯ ಮಾಡಿಗೊ೦ಡಿದ್ದ ದೇವಿ ದೇವಸ್ಥಾನದ ಪೊಜೆ ಮಾಡುಸುವ ಜೆವಾಬ್ದಾರಿಯ ಆರ್ಯಾ೦ಬಗೆ ಹೇಳಿ ಹೋದವಡ. ಅ೦ಬಗ ಮನೆಲಿ ಮಗ° ಪುಟ್ಟ° ಶ೦ಕರನ ಬಿಟ್ಟರೆ ಬೇರಾರೂ ಇತ್ತಿದ್ದವಿಲ್ಲೆ. ಹೀ೦ಗಾಗಿ ಅಬ್ಬೆ, ದೇವಿಯ ನೇವೇದ್ಯಕ್ಕೆ ಹಾಲಿನ ಕೊಟ್ಟು, ಇದರ ದೇವಿಗೆ ಅರ್ಪಿಸಿ ಪೂಜೆ ಮಾಡಿಕ್ಕಿ ಬಾ ಹೇಳಿತ್ತಡ. ಹಾ೦ಗೇ ಮಾಣಿ ಶ೦ಕರ ಆ ಹಾಲಿನ ಪಾತ್ರವ ದೇವಿಯ ಮು೦ದೆ ಮಡಗಿ ಭಕ್ತಿಲಿ ಬೇಡ್ಯೊ೦ಡರೂ ದೇವಿ ಹಾಲಿನ ಕುಡಿಯದ್ದಿಪ್ಪದರ ಕ೦ಡು ಮಾಣಿ ಕಣ್ಣು ನೀರು ಹರ್ಶಿಯೊ೦ಡು ಕೂಗುವದರ ದೇವಿಗೆ ನೋಡಿ ಸಹಿಸಲೆಡಿಯದ್ದೆ ಆ ಮುಗ್ಧ ಭಕ್ತಿಯ ಮೆಚ್ಚಿ ಪ್ರತ್ಯಕ್ಷಾಗಿ ಬ೦ದು ಅದರ ಪೂರ್ತಿ ಕೂಡ್ದದಪ್ಪಗ, ಮಾಣಿ “ಎನಗೆ ಎಳ್ಳಷ್ಟೂ ಮಡಗದ್ದೆ ಎಲ್ಲಾ ನೀನೇ ಕುಡ್ದೇ ಹ್ಹೇ…ಹ್ಹೇ….” ಹೇಳ್ಯೊ೦ಡು ಕೂಗುವದರ ಕ೦ಡು ಜಗಜ್ಜನನಿ ಮಾತೃ ಸಹಜ ವಾತ್ಸಲ್ಯ೦ದ ಅವನ ತೆಚ್ಚಿಗೊ೦ಡು ಮೊಟ್ಟೆಲಿ ಕೂರ್ಸೊ೦ಡು ಮಲೆ ತಿನ್ಸಿತ್ತಡ! ಈ ಮಹಿಮೆಯನ್ನೇ ಕೊ೦ಡಾಡ್ಯೊ೦ಡು ಮನಗೆ ಮಾಣಿ ಬ೦ದನಡ.ಅದುವೇ “ಶ್ರೀ ಸೌ೦ದರ್ಯ ಲಹರೀ ” ಸ್ತೋತ್ರ ಆತು ಹೇಳುವ ಕಥೆ ಇದ್ದು. ಈ ಅರ್ಥ ಬಪ್ಪ ಶ್ಲೋಕವುದೆ ಗ್ರ೦ಥಲ್ಲಿ ಸಿಕ್ಕುತ್ತು. ಇದೇ ರೀತಿಯ ಇನ್ನೊ೦ದು ಕಥೆಯ ಕ೦ನಡ ಸಾಹಿತ್ಯಲ್ಲಿ ೧೨ನೇ ಶತಕಲ್ಲಿ ಬ೦ದ ಮಹಾಕವಿ ಹರಿಹರ ” ಕೋಳೂರ ಕೊಡಗೂಸು ” ಲ್ಲಿ ಕಟ್ಟಿ ಕೊಟ್ಟದುದೆ ನೆ೦ಪಾತು. ” ಆನು ಮಾಡುವ ಕರ್ಮ……………..ಎನ್ನೊಳ ಇಪ್ಪ ಭಗವ೦ತ ಮಾಡ್ತ ಕರ್ಮ. ” ಈ ಮಾತು ಶ್ರೀಮನ್ನಾರಾಯಣೀಯದ ” ಸರ್ವ೦ ಭವತ್ಪ್ರೇರಣಯೈವ ಭೂಮನ್.” ವಾಕ್ಯವ ನೆ೦ಪು ಮಾಡ್ಸಿತ್ತು! ಈ ವಿಚಾರ೦ಗೊಕ್ಕೆ ಇನ್ನೂ ಹೆಚ್ಚಿನ ವಿವರವ ಡಿ.ವಿ.ಜಿ.ಯವು ಬರದ ” ಜೀವನ ಧರ್ಮ ಯೋಗ “ಹಾ೦ಗೂ ” ಮ೦ಕು ತಿಮ್ಮನ ಕಗ್ಗ “ಲ್ಲಿಯುದೆ ಕಾ೦ಬಲಾವುತ್ತು.
    ಸರಳವಾದ ನಮ್ಮಬ್ಬೆ ಭಾಷೆಲಿ ಸಹೃದಯ ರ೦ಜಿಸುವ ಹಾ೦ಗೆ ಬರವ ನಿ೦ಗಳ ಶೈಲಿಗೆ ನಮೋನ್ನಮಃ ; ಧನ್ಯವಾದ೦ಗೊ ಚೆನ್ನೈ ಬಾವ೦ಗೆ°

    1. ಧನ್ಯವಾದಂಗೊ ಅಪ್ಪಚ್ಚಿ. ನಿಜ ಮುಗ್ಧ ಭಕ್ತಿಯ ಉದಾಹರಣೆ ವಿವರಿಸಿದ್ದು ಪುಷ್ಟಿಕೊಟ್ಟತ್ತು. ಹರೇ ರಾಮ.

  2. ಸಮರ್ಪಣಾ ಮನೋಭಾವ ಯಾವ ರೀತಿಯಾಗಿರೆಕ್ಕು, ನಿಜ ಭಕ್ತಿ ಹೇಳಿರೆ ಎಂತರ, ಭಗವಂತಂಗೆ ಹೇಂಗೆ ಶರಣಾಯೆಕ್ಕು ಹೇಳ್ತರ ಇಲ್ಲಿಸರಿಯಾಗಿ ತಿಳುಶಿಕೊಟ್ಟಿದ°.
    ಬರೇ ಅರ್ಥ ಮಾತ್ರ ಕೊಡದ್ದೆ, ಬನ್ನಂಜೆಯವರ ವ್ಯಾಖ್ಯಾನ, ಎದುರ್ಕಳ ಮಾವನ ವಿಚಾರಂಗೊ, ಜತನಕೋಡಿ ಮಾವನ ವಿಚಾರಂಗೊ ಎಲ್ಲವನ್ನೂ ಸೇರಿಸಿ, ಚೆನ್ನೈ ಭಾವನ ನಿರೂಪಣೆ ತುಂಬಾ ಲಾಯಿಕ ಆಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×