Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 09 – ಶ್ಲೋಕಂಗೊ 11 – 17

ಬರದೋರು :   ಚೆನ್ನೈ ಬಾವ°    on   11/10/2012    2 ಒಪ್ಪಂಗೊ

ಚೆನ್ನೈ ಬಾವ°

ಶ್ರೀಮದ್ಭಗವದ್ಗೀತಾ – ನವಮೋsಧ್ಯಾಯಃ – ರಾಜವಿದ್ಯಾರಾಜಗುಹ್ಯಯೋಗಃ – ಶ್ಲೋಕಾಃ  11 – 17

ಶ್ಲೋಕ

ಅವಜಾನಂತಿ ಮಾಂ ಮೂಢಾಃ ಮಾನುಷೀಂ ತನುಮಾಶ್ರಿತಮ್ ।
ಪರಂ ಭಾವಮಜಾನಂತೋ ಮಮ ಭೂತಮಹೇಶ್ವರಮ್ ॥೧೧॥

ಪ್ರತಿಪದಾರ್ಥ

ಅವಜಾನಂತಿ ಮಾಮ್ ಮೂಢಾಃ ಮಾನುಷೀಮ್ ತನುಮ್ ಆಶ್ರಿತಮ್ । ಪರಮ್ ಭಾವಮ್ ಅಜಾನಂತಃ ಮಮ ಭೂತ-ಮಹೇಶ್ವರಮ್ ॥

ಅನ್ವಯ

ಭೂತ-ಮಹೇಶ್ವರಂ ಮಮ ಪರಂ ಭಾವಮ್ ಅಜಾನಂತಃ ಮೂಢಾಃ ಮಾನುಷೀಂ ತನುಮ್ ಆಶ್ರಿತಂ ಮಾಮ್ ಅವಜಾನಂತಿ ।

ಪ್ರತಿಪದಾರ್ಥ

ಭೂತ-ಮಹೇಶ್ವರಮ್ –  ಇಪ್ಪದರೆಲ್ಲವುಗಳ ಪರಮ ಈಶನಾದ, ಮಮ – ಎನ್ನ, ಪರಮ್ – ದಿವ್ಯವಾದ, ಭಾವಮ್ – ಪ್ರಕೃತಿಯ, ಅಜಾನಂತಃ – ತಿಳಿಯದ್ದೆ, ಮೂಢಾಃ – ಮೂಢರು, ಮಾನುಷೀಮ್ ತನುಮ್ – ಮಾನವರೂಪದ ದೇಹವ, ಆಶ್ರಿತಮ್ – ಧರಿಸಿದ, ಮಾಮ್ – ಎನ್ನ, ಅವಜಾನಂತಿ – ಕಡೆಗೆಣುಸುತ್ತವು (ತಿಳಿತ್ತವಿಲ್ಲೆ).

ಅನ್ವಯಾರ್ಥ

ಭೌತಿಕಪ್ರಪಂಚದ ಇಪ್ಪದೆಲ್ಲದರ ಪರಮ ಈಶನಾದ ಆನು ಮನುಷ್ಯರೂಪಲ್ಲಿ ಇಳುದುಬಂದಪ್ಪಗ ಮೂಢರಾದ ಜನಂಗೊಎನ್ನ ದಿವ್ಯಪ್ರಕೃತಿಯ ತಿಳಿಯದ್ದೆ ಎನ್ನ ಕಡೆಗೆಣುಸುತ್ತವು.

ತಾತ್ಪರ್ಯ / ವಿವರಣೆ

ಈ ಅಧ್ಯಾಯದ ಇತರ ವಿವರಣೆಗಳಿಂದ ದೇವೋತ್ತಮ ಪರಮ ಪುರುಷ° ಮನುಷ್ಯರೂಪಲ್ಲಿ ಕಾಣಿಸಿಗೊಂಡರೂ ಅವ° ಸಾಮನ್ಯ ಮನುಷ್ಯ ಅಲ್ಲ ಹೇಳ್ವದು ಸ್ಪಷ್ಟವಾವ್ತು. ಸಮಸ್ತ ವಿಶ್ವದ ಸೃಷ್ಟಿ, ಸ್ಥಿತಿ, ಲಯಂಗಳ ನಿರ್ವಹಿಸುವ ದೇವೋತ್ತಮ ಪರಮ ಪುರುಷ° ಬರೇ ಮನುಷ್ಯನಾಗಿಪ್ಪಲೆ ಸಾಧ್ಯ ಇಲ್ಲೆ. ಅಂದರೂ ಕೃಷ್ಣ° ಒಬ್ಬ° ಬಲಶಾಲಿ ಮನುಷ್ಯ, ಮಾಯಾಶಕ್ತಿ ಇಪ್ಪ ಮನುಷ್ಯ°, ಬೇರೆಂತದೂ ಅಲ್ಲ ಹೇಳಿ ಗ್ರೇಶುವ ಜನಂಗೊ ಇದ್ದವು. ಅವರ ಮೂಢರು ಹೇಳಿ ಹೇಳೇಕ್ಕಷ್ಟೆ. ಈಶ್ವರರು, ನಿಯಂತ್ರಕರು ಅನೇಕರಿರುತ್ತವು. ಒಬ್ಬ° ಇನ್ನೊಬ್ಬನಿಂದ ದೊಡ್ಡವನಾಗಿ ಕಾಣುತ್ತವು. ಆದರೆ ಈ ಐಹಿಕ ಜಗತ್ತಿನ ಎಲ್ಲ ವ್ಯವಹಾರಂಗಳ ನಿರ್ವಹಣೆ ಮಾಡುತ್ತದು ಆ ಒಬ್ಬ ಮಾಂತ್ರ. ಅವನೇ ಪರಮ ಈಶ. ಜಗತ್ತಿಲ್ಲಿ ಒಬ್ಬ° ಅಧಿಕಾರಿ, ಅವನ ಮೇಗೆ ಒಬ್ಬ ಕಾರ್ಯದರ್ಶಿ, ಅವನ ಮೇಗೆ ಒಬ್ಬ° ಮಂತ್ರಿ, ಅದರ ಮೇಗೆ ಒಬ್ಬ° ಅಧ್ಯಕ್ಷ° … ಹೀಂಗೆ ಇರುತ್ತವು. ಎಲ್ಲರೂ ಅವರವರ ಸೀಮಿತ ವ್ಯಾಪ್ತಿಲಿ ನಿಯಂತ್ರುಸುವವೆ. ಅದರೆ ಅಧ್ಯಕ್ಷ ಹೇಳಿದ್ದು ಅಕೇರಿ. ಹಾಂಗೇ ಇಡೀ ಜಗತ್ತಿಂಗೆ ಆ ಪರಮ ಪ್ರಭು- ಭಗವಂತ° ಪರಮ ನಿಯಂತ್ರಕ°. ಆಧ್ಯಾತ್ಮಿಕ ಜಗತ್ತಿಲ್ಲಿಯೂ ಹಾಂಗೇ. ಅನೇಕ ಈಶರು ಇದ್ದವು. ಅವೆಲ್ಲೋರು ಭಗವಂತನ ಆಜ್ಞೆಗೆ ಒಳಪಟ್ಟವು. ಅವಂಗೆ ಅರಡಿಯದ್ದೆ ಎಂತದೂ ನಡೆಯ. ಹಾಂಗಾಗಿಯೇ ಹೇಳಿದ್ದು – “ಈಶ್ವರಃ ಪರಮಃ ಕೃಷ್ಣಃ”.

ಹಿಂದಾಣ ಶ್ಲೋಕಂಗಳಲ್ಲಿ ವರ್ಣಿಸಿಪ್ಪ ಆಶ್ಚರ್ಯಕರ ಕಾರ್ಯಂಗಳ ಐಹಿಕ ದೇಹಲ್ಲಿಪ್ಪವರಾರಿಂದಲೂ ಮಾಡ್ಳೆ ಸಾಧ್ಯ ಇಲ್ಲೆ. ಆದರೆ ಭಗವಂತನ ದೇಹ ಶಾಶ್ವತವಾದ್ದು, ಆನಂದಮಯವಾದ್ದು ಮತ್ತೆ ಜ್ಞಾನಪೂರ್ಣವಾದ್ದು. ಅವ° ಸಾಮಾನ್ಯ ಮನುಷ್ಯನಾಗಿ ಕಾಂಬದಾದರೂ ಅವನ ಜನಂಗೊ ಅರ್ಥೈಸದ್ದೆ ಅವನ ಸಾಮಾನ್ಯ ಮನುಷ್ಯ ಹೇಳಿ ಗ್ರೇಶಿಗೊಂಡು ಅಪಹಾಸ್ಯ ಮಾಡುತ್ತವು. ಇಲ್ಲಿ ಅವನ ದೇಹವ ‘ಮಾನುಷೀಂ’ ಹೇಳಿ ಹೇಳಿದ್ದು. ಅವ° ಮನುಷ್ಯನ ಹಾಂಗೆ ದೇಹಧಾರಿಯಾಗಿ, ಅರ್ಜುನನ ಚೆಂಙಾಯಿಯಾಗಿ, ಹಾಂಗೇ, ಕುರುಕ್ಷೇತ್ರ ಯುದ್ಧಲ್ಲಿ ಒಬ್ಬ ರಾಜಕಾರಣಿಯ ಹಾಂಗೆ ವರ್ತಿಸುತ್ತಿದ್ದ°. ಅನೇಕ ರೀತಿಲಿ ಅವ° ಸಾಮಾನ್ಯ ಮನುಷ್ಯರ ಹಾಂಗೆ ವರ್ತಿಸಿದ್ದ°. ಆದರೆ ಅವನ ದೇಹ ಸಚ್ಚಿದಾನಂದವಿಗ್ರಹ , ಶಾಶ್ವತ ಮತ್ತೆ ಪರಿಪೂರ್ಣಜ್ಞಾನ. ಶ್ರೀಕೃಷ್ಣನ ದೇಹಕ್ಕೆ ದಿವ್ಯಗುಣಂಗಳಿದ್ದರೂ, ವಿದ್ವಾಂಸರು ಹೇಳಿಗೊಂಬ ಹಲವರು ಅವನ ಸಾಮಾನ್ಯ ಮನುಷ್ಯನಾಗಿ ತಿರಸ್ಕಾರಂದ ಕಾಣುತ್ತವು. ಅವು ಹಿಂದಾಣ ಕರ್ಮಫಲಂದಾಗಿ ಮನುಷ್ಯ ಜನ್ಮ ಪಡದ್ದದಾದರೂ ಅವಕ್ಕೆ ಕೃಷ್ಣನ ಬಗ್ಗೆ ಸರಿಯಾಗಿ ತಿಳ್ಕೊಂಬ ಯೋಗ್ಯತೆ ಬೈಂದಿಲ್ಲೆ ಹೇಳಿಯೇ ಹೇಳೆಕ್ಕಷ್ಟೆ. ಅವು ಎಂತ ಜ್ಞಾನ ಸಂಪಾದನೆ ಮಾಡಿದ್ದರೂ ಭಗವಂತನ ಬಗ್ಗೆ ಅವರ ಜ್ಞಾನ ಅಲ್ಪವೇ ಸರಿ. ಹಾಂಗಾಗಿಯೇ ಭಗವಂತ ಅವರ ‘ಮೂಢಾಃ’ – ಮೂಢರು ಹೇಳಿ ಹೇಳಿದ್ದ°.

ಈ ಶ್ಲೋಕವ ಬನ್ನಂಜೆಯವು ಸೊಗಸಾಗಿ ನಿರೂಪಣೆ ಮಾಡಿದ್ದವು – ಈ ಶ್ಲೋಕಲ್ಲಿ ಭಗವಂತ° ತನ್ನ ಸ್ವರೂಪದ ಬಗ್ಗೆ ಇನ್ಯಾರಿಂಗೂ ಹೇಳ್ಳೆ ಎಡಿಯದ್ದ ಒಂದು ಸಂಗತಿಯ ಹೇಳಿದ್ದ°. ಭಗವಂತಂಗೆ ಪಂಚಭೌತಿಕ ಶರೀರ ಇಲ್ಲೆ. ಅವತಾರ ರೂಪಿ ಭಗವಂತ° ನಮ್ಮ ಹಾಂಗೆ ಶರೀರಧಾರಿಯಾಗಿ ನವಗೆ ಕಾಂಬದು ಮಾಂತ್ರ. ಅಲ್ಲಿ ಕಾಂಬ ಶರೀರವ ಕಂಡು ಭಗವಂತ° ನಮ್ಮ ಹಾಂಗೇ ಶರೀರ ಇಪ್ಪವ° ಹೇಳಿ ತಿಳ್ಕೊಂಬದು ಮೂಢತನ. ಇನ್ನು ಇಲ್ಲಿ ಭೂತಮಹೇಶ್ವರ ಹೇಳಿ ಒಂದು ವಿಶೇಷಣ ಇದ್ದು. ಇದು ಭಗವಂತನ ಹಿರಿಮೆಯ ಹೇಳುವ ವಿಶೇಷ ಪದ. ಸಮಷ್ಟಿಯಾಗಿ ಈ ಪದವ ನೋಡಿರೆ ಭೂತಂಗೊ ಹೇಳಿರೆ ಸಮಸ್ತ ಜೀವಿಗೊ. ಅವಕ್ಕೆ ಈಶರು ಹೇಳಿರೆ ಬ್ರಹ್ಮಾದಿ ದೇವತೆಗೊ(ಭೂತೇಶರು). ಈ ದೇವತೆಗೊಕ್ಕೆ ಮಹತ್ತಾದವು ಶ್ರೀಲಕ್ಷ್ಮಿ (ಭೂತಮಹೇಶಳು). ಇಂತಹ ಲಕ್ಷ್ಮಿಗೆ ವರನಾಗಿಪ್ಪ ಭಗವಂತ “ಭೂತಮಹೇಶ್ವರ”. ಇದೇ ಪದವ ಬಿಡಿಸಿ ನೋಡಿರೆ ಭೂತಮಹಾನ್+ಈಶ್ವರ, ಹೇಳಿರೆ., ಬ್ರಹ್ಮಾದಿ ಸಮಸ್ತ ಭೂತಂಗಳಿಂಗೂ ಮಹಾನಿ ಆಗಿ ಎಲ್ಲವನ್ನೂ ನಿಯಂತ್ರುಸುವ, ಸರ್ವೋನ್ನತನಾದ, ಸರ್ವಸಮರ್ಥನಾದ ಆ ಭಗವಂತ°. ಇನ್ನೊಂದು ರೀತಿಲಿ ನೋಡಿರೆ, ಭೂತ+ಮಹತ್+ಈಶ್ವರ. ಇಲ್ಲಿ ಭೂತ ಹೇಳಿರೆ ಉನ್ನತಿಯ ತುತ್ತ ತುದಿಲಿಪ್ಪ, ಹುಟ್ಟುಸಾವಿಲ್ಲದ್ದ ಅನಾಧಿನಿತ್ಯ°. ಮಹತ್ ಹೇಳಿರೆ ಕಾಲತಃ, ದೇಶತಃ, ಗುಣತಃ ಪರಿಪೂರ್ಣವಾಗಿಪ್ಪ ತತ್ತ್ವ. ಈಶ್ವರ ಹೇಳಿರೆ ಸರ್ವಸಮರ್ಥ°, ಭಗವಂತ°. ಹೀಂಗೆ ವಿಶೇಷಣಲ್ಲಿ ಅನೇಕ ರೂಪಲ್ಲಿ ಭಗವಂತನ ಹಿರಿಮೆಯ ಸಾರುತ್ತು.

ಶ್ಲೋಕ

ಮೋಘಾಶಾ ಮೋಘಕರ್ಮಾಣೋ ಮೋಘಜ್ಞಾನಾ ವಿಚೇತಸಃ ।
ರಾಕ್ಷಸೀಮಾಸುರೀಂ ಚೈವ ಪ್ರಕೃತಿಂ ಮೋಹಿನೀಂ ಶ್ರಿತಾಃ ॥೧೨॥

ಪದವಿಭಾಗ

ಮೋಘ-ಆಶಾಃ ಮೋಘ-ಕರ್ಮಾಣಃ ಮೋಘ-ಜ್ಞಾನಾಃ ವಿಚೇತಸಃ । ರಾಕ್ಷಸೀಮ್ ಆಸುರೀಮ್ ಚ ಏವ ಪ್ರಕೃತಿಮ್ ಮೋಹಿನೀಮ್  ಶ್ರಿತಾಃ ॥

ಅನ್ವಯ

ತೇ ಮೋಘ-ಆಶಾಃ ಮೋಘ-ಕರ್ಮಾಣಃ ಮೋಘ-ಜ್ಞಾನಾಃ ವಿಚೇತಸಃ ಮೋಹಿನೀಂ ರಾಕ್ಷಸೀಮ್ ಆಸುರೀಂ ಪ್ರಕೃತಿಂ ಚ ಏವ ಶ್ರಿತಾಃ ।

ಪ್ರತಿಪದಾರ್ಥ

ತೇ – ಅವು (ಆ), ಮೋಘ-ಆಶಾಃ – ತಮ್ಮ ಆಶೆಲಿ ದಿಗ್ಭ್ರಮಿತರಾದವು, ಮೋಘ-ಕರ್ಮಾಣಃ – ಕಾಮ್ಯಕರ್ಮಂಗಳಲ್ಲಿ ದಿಗ್ಬ್ರಮಿತರಾದವು, ಮೋಘ-ಜ್ಞಾನಾಃ – ಜ್ಞಾನಲ್ಲಿ ದಿಗ್ಭ್ರಮಿತರಾದವು, ವಿಚೇತಸಃ – ಬುದ್ಧಿ ಭ್ರಾಂತಿಗೊಂಡವು, ಮೋಹಿನೀಮ್ – ದಿಗ್ಭ್ರಮೆಗೊಳುಸುವ, ರಾಕ್ಷಸೀಮ್ – ರಾಕ್ಷಸೀಯವಾದ, ಆಸುರೀಮ್ – ನಾಸ್ತಿಕವಾದ, ಪ್ರಕೃತಿಮ್ – ಪ್ರಕೃತಿಯ, ಚ – ಕೂಡ, ಏವ – ಖಂಡಿತವಾಗಿಯೂ, ಶ್ರಿತಾಃ – ಆಶ್ರಯಿಸಿದ್ದವು.

ಅನ್ವಯಾರ್ಥ

ಹೀಂಗೆ ತಮ್ಮ ಆಶೆ, ಕರ್ಮ, ಜ್ಞಾನ, ಬುದ್ಧಿಲಿ ಭ್ರಾಂತಿಗೊಂಡು ದಿಗ್ಭ್ರಮಿತರಾದವು ರಾಕ್ಷಸೀ ಮತ್ತೆ ನಾಸ್ತಿಕವಾದ ಪ್ರಕೃತಿಯ ಆಶ್ರಯಿಸಿಗೊಂಡಿರುತ್ತವು.

ತಾತ್ಪರ್ಯ / ವಿವರಣೆ

ಭಗವಂತನ ಸತ್ಯಸ್ಥಿತಿಯ ಅರ್ಥೈಸಿಗೊಂಬಲೆ ಎಡಿಗಾಗದ್ದೆ ಆಧ್ಯಾತ್ಮಿಕ ವಿಷಯಲ್ಲಿ ಗೊಂದಲಂಗಳಲ್ಲಿ ಸಿಲುಕಿ ಭ್ರಾಂತಿಗೆ ಒಳಗಾಗಿ ಯಾವ್ಯಾವುದೋ ಮೋಹಗೊಳುಸುವ ಆಕರ್ಷಣಗೆ ತುತ್ತಾಗಿ ಸಾಧನೆಯ ಮಾರ್ಗಲ್ಲಿ ಮುನ್ನಡವಲೆ ಸಾಧ್ಯ ಆಗದ್ದೆ ಹೋವ್ತವು. ಅವರ ನಾಸ್ತಿಕ ಮತ್ತು ರಾಕ್ಷಸೀ ಜ್ಞಾನದ ಪಾಲನೆ ಎಂದೂ ನಿರರ್ಥಕವೇ ಸರಿ. ಅಂತವಕ್ಕೆ ವೇದಾಂತ ಸೂತ್ರಂಗೊ, ವೈದಿಕ ಸಾಹಿತ್ಯದ ಜ್ಞಾನ ಸದಾ ಗೊಂದಲವೇ ಅಪ್ಪದು. ಈ ರಾಕ್ಷಸೀ ದುಷ್ಕರ್ಮಿಗೊ ಭಗವಂತನ ಸರ್ವೋತ್ತಮ ಹೇಳಿ ಅರ್ತು ಅವಂಗೆ ಶರಣಾಗತರಪ್ಪಲೆ ಸಿದ್ಧರಿರುತ್ತವಿಲ್ಲೆ. ಹಾಂಗಾಗಿ ಅವಕ್ಕೆ ಆಧ್ಯಾತ್ಮಿಕ ಮೋಕ್ಷ ಗೊಂದಲವೇ ಸರಿ. ಭ್ರಾಂತಿಗೆ ತುತ್ತಾದವ° ಎಂದೂ ಯಶಸ್ಸು ಕಾಂಬಲೆ ಸಾಧ್ಯ ಇಲ್ಲೆ. ಭಗವಂತನ ಸಾಮಾನ್ಯ ಮನುಷ್ಯ ಹೇಳಿ ಗ್ರೇಶುವದು ದೊಡ್ಡ ಅಪರಾಧ. ಹಾಂಗೆ ತಿಳ್ಕೊಂಡವಕ್ಕೆ ಸದಾ ಭ್ರಾಂತಿಯೇ ಒಳಿವದು. ಅವಕ್ಕೆ ಭಗವಂತನ ನಿತ್ಯರೂಪವ ಅರ್ಥೈಸಿಗೊಂಬಲೆ ಸಾಧ್ಯ ಇಲ್ಲೆ. ಭಗವಂತನ ಸಾಮಾನ್ಯ ಮನುಷ್ಯ° ಹೇಳಿ ತಿಳ್ಕೊಂಡು ಅವು ಯಾವ ಶಾಸ್ತ್ರ ಓದಿಯೂ ಉಪಯೋಗ ಇಲ್ಲೆ. ಅವರ ಮನಸ್ಸು ಅಧ್ಯಾತ್ಮವ ಗ್ರಹಿಸಲೆ ಅಶಕ್ತವೇ. ಇಂತವು ರಾಕ್ಷಸರು ಅಥವಾ ಆಸುರೀ ಸ್ವಭಾವದವು ಹೇಳಿ ಭಗವಂತ° ಇಲ್ಲಿ  ಹೇಳಿದ್ದ°. ರಾಕ್ಷಸರು ಹೇಳಿರೆ ಸ್ವಭಾವತಃ ತಾಮಸರು, ಅಸುರರು ಹೇಳಿರೆ ರಾಜಸೀ ಸ್ವಭಾವ ಇಪ್ಪವ್ವು – ಸದಾ ಇಂದ್ರಿಯ ಭೋಗಲ್ಲೇ ಪುರುಷಾರ್ಥ ಕಾಂಬವು. ಇವರ ಈ ಸ್ವಭಾವಂದ ಅವು ಚಿಂತನಾಶೀಲತೆಯ ಕಳಕ್ಕೊಂಡಿರುತ್ತವು. ಅವಕ್ಕೆ ಎಂದೂ ಸಹಜ ಚಿಂತನೆ ಬತ್ತಿಲ್ಲೆ. ಇವು ಏವತ್ತ್ತೂ ಸತ್ಯಕ್ಕೆ ವಿರುದ್ಧವಾಗಿಯೇ ಚಿಂತುಸುವವು. ಹಾಂಗಾಗಿ ಅವು ನಿಜವಾದ ಭಗವದ್ ಭಕ್ತರಪ್ಪಲೆ ಸಾಧ್ಯ ಇಲ್ಲೆ. ಅಂತವರ ಆಧ್ಯಾತ್ಮ ಆಸೆಯೂ ನೆರವೇರುತ್ತಿಲ್ಲೆ.

ಶ್ಲೋಕ

ಮಹಾತ್ಮಾನಸ್ತು ಮಾಂ ಪಾರ್ಥ ದೈವೀಂ ಪ್ರಕೃತಿಮಾಶ್ರಿತಾಃ ।
ಭಜಂತ್ಯನನ್ಯಮನಸೋ ಜ್ಞಾತ್ವಾ ಭೂತಾದಿಮವ್ಯಯಂ ॥೧೩॥

ಪದವಿಭಾಗ

ಮಹಾತ್ಮಾನಃ ತು ಮಾಮ್ ಪಾರ್ಥ ದೈವೀಮ್ ಪ್ರಕೃತಿಮ್ ಆಶ್ರಿತಾಃ । ಭಜಂತಿ ಅನನ್ಯ-ಮನಸಃ ಜ್ಞಾತ್ವಾ ಭೂತಾದಿಮ್ ಅವ್ಯಯಮ್ ॥

ಅನ್ವಯ

ಹೇ ಪಾರ್ಥ!, ದೈವೀಂ ಪ್ರಕೃತಿಮ್ ಆಶ್ರಿತಾಃ ಮಹಾತ್ಮಾನಃ ತು ಮಾಂ ಭೂತಾದಿಮ್ ಅವ್ಯಯಂ ಜ್ಞಾತ್ವಾ, ಅನನ್ಯ-ಮನಸಃ ಮಾಂ ಭಜಂತಿ ।

ಪ್ರತಿಪದಾರ್ಥ

ಹೇ ಪಾರ್ಥ!, ಏ ಪೃಥೆಯ ಮಗನಾದ ಅರ್ಜುನ!, ದೈವೀಮ್ ಪ್ರಕೃತಿಮ್ – ದೈವೀಕವಾದ ಪ್ರಕೃತಿಯ, ಆಶ್ರಿತಾಃ – ಆಶ್ರಯಿಸಿದೋರು, ಮಹಾತ್ಮಾನಃ – ಮಹಾತ್ಮರು, ತು – ಆದರೋ, ಮಾಮ್ – ಎನ್ನ, ಭೂತ-ಆದಿಮ್ ಅವ್ಯಯಮ್ – ಅವ್ಯಯವಾದ ಸೃಷ್ಟಿಯ ಮೂಲವ, ಜ್ಞಾತ್ವಾ – ತಿಳ್ಕೊಂಡು, ಮಾಮ್ – ಎನ್ನ, ಭಜಂತಿ – ಭಜಿಸುತ್ತವು (ಪೂಜಿಸುತ್ತವು, ಭಕ್ತಿಸೇವೆಯ ಮಾಡುತ್ತವು).

ಅನ್ವಯಾರ್ಥ

ಏ ಅರ್ಜುನ!, ಭ್ರಾಂತಿಗೆ ಸಿಲುಕ್ಕದ್ದ ಮಹಾತ್ಮರು, ದೈವೀ ಪ್ರಕೃತಿಯ ಆಶ್ರಯಲ್ಲಿರುತ್ತವು, ಅವು ಮೂಲನೂ ಅವ್ಯಯನೂ ಆದ ಎನ್ನ ತಿಳ್ಕೊಂಡು, ಅನನ್ಯ ಭಕ್ತಿಂದ ಭಕ್ತಿಸೇವೆಲಿ ನಿರತರಾವುತ್ತವು.  

ತಾತ್ಪರ್ಯ / ವಿವರಣೆ

ಮದಲಾಣ ಶ್ಲೋಕಲ್ಲಿ ಆಸುರೀ, ರಾಕ್ಷಸೀ ಸ್ವಭಾವವ ವಿವರಿಸಿದ ಭಗವಂತ° ಕೃಷ್ಣ° ಇಲ್ಲಿ ದೈವೀ ಸ್ವಭಾವವ ವಿವರುಸುತ್ತ°. ದೈವೀ ಸ್ವಭಾವದವು, ಸದಾ ಜ್ಞಾನದ, ಬೆಣಚ್ಚಿಯ, ಸತ್ಯದ ದಾರಿಲಿ ಸಾಗುತ್ತವು. ಅವರ ‘ಮಹಾತ್ಮರು’  ಹೇಳಿ ವರ್ಣಿಸಿದ್ದ° ಇಲ್ಲಿ ಭಗವಂತ°. ಅವರ ಮೇಗೆ ಭಗವಂತಂಗೆ ಅಪಾರ ಪ್ರೀತಿ. ಅವು ಭಗವಂತನ ಅನನ್ಯ ಭಕ್ತಿಂದ ಸೇವೆ ಮಾಡುತ್ತವು. ನಾವು ದೇವರ ಪ್ರೀತಿಸುವದು ದೇವರು ನಮ್ಮ ಪ್ರೀತಿಸುವದು ನಿಜವಾದ ಭಜನೆ. ದೈವೀ ಸ್ವಭಾವದೋರು ಭಗವಂತನ ಬಿಟ್ಟು ಮಿಕ್ಕಿ ಉಳುದ್ದೆಲ್ಲ ನಶ್ವರ, ಭಗವಂತ° ಮಾತ್ರ ಸತ್ಯ ಹೇಳ್ವದರ ಅರ್ತುಗೊಂಡಿರುತ್ತವು. ಪ್ರಪಂಚಲ್ಲಿ ಭಗವಂತ° ಮತ್ತೆ ಅವನ ಜ್ಞಾನ ಮಾತ್ರ ಅವ್ಯಯ. ಒಳುದ್ದೆಲ್ಲ ವ್ಯಯ ಹೇಳಿ ಮಹಾತ್ಮರುಗಳ ಸದಾ ಚಿಂತನೆ ಆಗಿರುತ್ತು.

ಇಲ್ಲಿ ಭಗವಂತ° ಅರ್ಜುನನ ‘ಪಾರ್ಥ°’ ಹೇಳಿ ದೆನಿಗೊಂಡಿದ°. ‘ಪೃಥೆ’ಯ ಮಗ- ‘ಪಾರ್ಥ’ ಹೇಳ್ವದು ಮೇಲ್ನೋಟ ಅರ್ಥ. ಯಾವುದು ಎಲ್ಲೆಡೆ ಹಬ್ಬಿಗೊಂಡಿದ್ದೋ, ವಿಸ್ತಾರವಾಗಿದ್ದೋ ಅದು ‘ಪ್ರಥ’ (ಪ್ರಥ-ವಿಸ್ತಾರೆ ಧಾತು). ಇದು ಭಗವಂತನ ಸರ್ವಗತತ್ವವ ಸೂಚಿಸುತ್ತು. ಭಗವಂತನ ಈ ಸರ್ವಗತ ತತ್ವವ ಅರ್ತು ಅವನ ಎಲ್ಲ ಕಡೆ ಕಾಂಬವ – ‘ಪಾರ್ಥ’. ವೇದಾರ್ಥಭೂತನಾದ ಭಗವಂತನ ಗುಣಂಗಳ ಸದಾ ಪಾನ ಮಾಡುವವ- ‘ಪಾರ್ಥ’. ಹಾಂಗಾಗಿ ನಾವೆಲ್ಲೋರು ಭಗವಂತನ ಸರ್ವಗತ ತತ್ವವ ನಮ್ಮೊಳದಿಕ್ಕೆಯೂ ಕಂಡುಗೊಂಡು ‘ಪಾರ್ಥರು’ ಆಯೆಕು.

‘ಭಜಂತಿ ಅನನ್ಯ-ಮನಸಃ ಜ್ಞಾತ್ವಾ ಭೂತಾದಿಮ್ ಅವ್ಯಯಂಮ್’ – ಎನ್ನ ಆದಿಭೂತ, ಅವ್ಯಯ ತತ್ವವ ತಿಳ್ಕೊಂಡವು ಎನ್ನ ಅನನ್ಯ ಭಕ್ತಿಂದ ಪೂಜಿಸುತ್ತವು ಹೇಳಿ ಭಗವಂತ° ಹೇಳಿದ್ದ°. ಅದು ಹೇಂಗೆ? –

ಶ್ಲೋಕ

ಸತತಂ ಕೀರ್ತಯಂತೋ ಮಾಂ ಯತಂತಶ್ಚ ದೃಢವ್ರತಾಃ ।
ನಮಸ್ಯಂತಶ್ಚ ಮಾಂ ಭಕ್ತ್ಯಾ ನಿತ್ಯಯುಕ್ತಾ ಉಪಾಸತೇ ॥೧೪॥

ಪದವಿಭಾಗ

ಸತತಮ್ ಕೀರ್ತಯಂತಃ ಮಾಮ್ ಯತಂತಃ ಚ ದೃಢ-ವ್ರತಾಃ । ನಮಸ್ಯಂತಃ ಚ ಮಾಮ್ ಭಕ್ತ್ಯಾ ನಿತ್ಯ-ಯುಕ್ತಾಃ ಉಪಾಸತೇ

ಅನ್ವಯ

ತೇ ನಿತ್ಯ-ಯುಕ್ತಾಃ ಭಕ್ತ್ಯಾ ಮಾಂ ಸತತಂ ಕೀರ್ತಯಂತಃ ಯತಂತಃ ಚ ದೃಢ-ವ್ರತಾಃ ನಮಸ್ಯಂತಃ ಚ ಮಾಮ್ ಉಪಾಸತೇ ॥

ಪ್ರತಿಪದಾರ್ಥ

ತೇ – ಅವ್ವು, ನಿತ್ಯ-ಯುಕ್ತಾಃ – ನಿರಂತರವಾಗಿ ತೊಡಗ್ಯೊಂಡು, ಭಕ್ತ್ಯಾ – ಭಕ್ತಿಂದ, ಮಾಮ್ – ಎನ್ನ, ಸತತಮ್ – ಏವತ್ತೂ, ಕೀರ್ತಯಂತಃ – ಕೀರ್ತಿಸಿಗೊಂಡು, ಯತಂತಃ – ಪೂರ್ಣವಾಗಿ ಪ್ರಯತ್ನಿಸಿಗೊಂಡು, ಚ – ಕೂಡ, ದೃಢ-ವ್ರತಾಃ  – ದೃಢನಿರ್ಧಾರಂದ, ನಮಸ್ಯಂತಃ – ನಮಸ್ಕರಿಸಿಗೊಂಡು, ಚ – ಕೂಡ, ಮಾಮ್ – ಎನ್ನ, ಉಪಾಸತೇ – ಆರಾಧಿಸುತ್ತವು.

ಅನ್ವಯಾರ್ಥ

ಆ ದೈವೀಸ್ವಭಾವವುಳ್ಳವ್ವು, ಸದಾ ಎನ್ನ ಕೀರ್ತನೆ ಮಾಡಿಗೊಂಡು, ದೃಢಸಂಕಲ್ಪಂದ ಪ್ರಯತ್ನವ ಮಾಡಿಗೊಂಡು, ಎನಗೆ ನಮಸ್ಕರಿಸಿಗೊಂಡು ಸತತವಾಗಿ (ನಿರಂತರವಾಗಿ) ಭಕ್ತಿಂದ ಎನ್ನ ಆರಾಧಿಸುತ್ತವು (ಪೂಜಿಸುತ್ತವು, ಭಕ್ತಿಸೇವೆಯ ಮಾಡುತ್ತವು).

ತಾತ್ಪರ್ಯ / ವಿವರಣೆ

ದೈವೀಸ್ವಭಾವದೋರು ನಿರಂತರ ಭಗವಂತನ ಕೀರ್ತನೆ ಮಾಡಿಗೊಂಡಿರುತ್ತವು. ಅವರ ಪ್ರತಿಯೊಂದು ಚಟುವಟಿಕೆಗಳಲ್ಲಿಯೂ ಭಗವದ್ ಪ್ರಜ್ಞೆ ಗಾಢವಾಗಿರುತ್ತು. ಭಗವಂತನ ಕೀರ್ತನೆಲಿ ನಿತ್ಯ ತಮ್ಮ ತೊಡಗಿಸಿಗೊಂಡಿರುತ್ತವು. ಅವಕ್ಕೆ ಭಗವಂತನಲ್ಲದ್ದೆ ಬೇರೆ ಯಾವುದೂ ಗಣ್ಯವೇ ಅಲ್ಲ. ಅನನ್ಯ ಭಕ್ತಿ. ಅವು ನಿರಂತರ, ದೃಢಸಂಕಲ್ಪಂದ, ನಿಶ್ಚಲಭಕ್ತಿಂದ ಭಗವಂತನ ಸೇವೆಲಿ ನಿರತರಾಗಿರುತ್ತವು. 

‘ಸತತಮ್ ಕೀರ್ತಯಂತಃ’ – ಏವತ್ತೂ ಕೀರ್ತನೆ ಮಾಡುವದು. ‘ಮಹಾತ್ಮರು’ ಸದಾ (ಏವತ್ತೂ) ಭಗವಂತನ ಕೀರ್ತನೆಲಿ ನಿರತರಾಗಿರುತ್ತವು. ಅವಕ್ಕೆ ಬೇರೆ ಕೆಲಸವೇ ಇಲ್ಲೆ. ಅವರ ಲಕ್ಷ್ಯ ಎಲ್ಲವೂ ಆ ಭಗವಂತನ ಸಂಪ್ರೀತಿ ಮಾತ್ರ. ಹಾಂಗಾಗಿ ಸದಾ ಆ ಭಗವಂತನ ಸ್ತುತಿ ಮಾಡುತ್ತದರಲ್ಲಿ ನಿರತರಾಗಿರುತ್ತವು. ಭಗವಂತನ ಪವಿತ್ರ ನಾಮವ, ದಿವ್ಯರೂಪವ, ದಿವ್ಯಗುಣವ ಗಾನ ಮಾಡುವುದು ಭಗವಂತಂಗೆ ಪ್ರೀತಿ. ಅವನ ಅಸಾಧಾರಣ ಲೀಲೆಯ ಹೊಗಳುವುದು ಕೀರ್ತನೆ. ಅಂತವರ ಮೇಗೆ ಭಗವಂತಂಗೂ ಅತೀ ಪ್ರೀತಿ. ಹಾಂಗಾಗಿ ಮಹಾತ್ಮರುಗಳ ಆಸಕ್ತಿ ಸಂಪೂರ್ಣವಾಗಿ ಭಗವಂತನ ಕೀರ್ತನೆಯೇ ಆಗಿರುತ್ತು. ಇಲ್ಲಿ ಭಕ್ತಿ – “ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಮ್” – ಭಗವಂತನ ಕುರಿತಾಗಿ ಶ್ರವಣ, ಕೀರ್ತನ ಮತ್ತೆ ಅವೆಲ್ಲವ ಸ್ಮರಣೆ ಮಾಡುವದು. ಇದು ಮಹಾತ್ಮನ ವಜ್ರಸಂಕಲ್ಪ (ದೃಢವ್ರತಾಃ). ಇದರಲ್ಲಿಯೇ ಅವು ದೃಢವಾಗಿರುತ್ತವು. ಇದನ್ನೇ ಸಂಪೂರ್ಣ ಕೃಷ್ಣಪ್ರಜ್ಞೆ ಹೇಳಿ ಹೇಳುವದು.

ಶ್ಲೋಕ

ಜ್ಞಾನಯಜ್ಞೇನ ಚಾಪ್ಯನ್ಯೇ ಯಜಂತೋ ಮಾಮುಪಾಸತೇ ।
ಏಕತ್ವೇನ ಪೃಥಕ್ತ್ವೇನ ಬಹುಧಾ ವಿಶ್ವತೋಮುಖಮ್ ॥೧೫॥

ಪದವಿಭಾಗ

ಜ್ಞಾನ-ಯಜ್ಞೇನ ಚ ಅಪಿ ಅನ್ಯೇ ಯಜಂತಃ ಮಾಮ್ ಉಪಾಸತೇ । ಏಕತ್ವೇನ ಪೃಥಕ್ತ್ವೇನ ಬಹುಧಾ ವಿಶ್ವತೋಮುಖಮ್॥

ಅನ್ವಯ

ಅನ್ಯೇ ಚ ಅಪಿ ಜ್ಞಾನ-ಯಜ್ಞೇನ ಯಜಂತಃ ಏಕತ್ವೇನ, ಪೃಥಕ್ತ್ವೇನ, ಬಹುಧಾ ವಿಶ್ವತೋಮುಖಂ ಮಾಮ್ ಉಪಾಸತೇ ।

ಪ್ರತಿಪದಾರ್ಥ

ಅನ್ಯೇ ಚ ಅಪಿ – ಇತರರೂ ಕೂಡ(ಬಾಕಿದ್ದೋರು ಕೂಡ),  ಜ್ಞಾನ-ಯಜ್ಞೇನ – ಜ್ಞಾನದ ಅಭಿವೃದ್ಧಿಂದ (ಜ್ಞಾನಯಜ್ಞಂದ), ಯಜಂತಃ – ಯಜ್ಞಮಾಡಿಗೊಂಡು, ಏಕತ್ವೇನ – ಏಕತೆಲಿ, ಪೃಥಕ್ತ್ವೇನ – ದ್ವಂದ್ವಲ್ಲಿ, ಬಹುಧಾ – ವೈವಿಧ್ಯಲ್ಲಿ, ವಿಶ್ವತೋಮುಖಮ್ ಮಾಮ್ – ವಿಶ್ವರೂಪನಾದ ಎನ್ನ, ಉಪಾಸತೇ – ಎನ್ನ ಆರಾಧಿಸುತ್ತವು.

ಅನ್ವಯಾರ್ಥ

ಕೆಲವು ಮಂದಿ ಜ್ಞಾನಯಜ್ಞಂದ, ಕೆಲವು ಮಂದಿ ಏಕತ್ವಭಾವಂದ, ಇನ್ನು ಕೆಲವರು ದ್ವಂದ್ವಬೇಧಭಾವಂದ ಮತ್ತೂ ಕೆಲವರು ವೈವಿಧ್ಯತೆಂದ ವಿಶ್ವರೂಪನಾದ ಎನ್ನ ಆರಾಧಿಸುತ್ತವು.

ತಾತ್ಪರ್ಯ / ವಿವರಣೆ

ಪ್ರಪಂಚಲ್ಲಿ ಮನುಷ್ಯರು ಭಗವಂತನ ನಾನಾ ಭಾವಂದ ಪೂಜಿಸುತ್ತವು. ಎಲ್ಲ ದಿಕ್ಕೆ ವ್ಯಾಪಿಸಿಪ್ಪ ಭಗವಂತ° ಒಬ್ಬನೇ (ಏಕಮೂರ್ತಿ), ಎಲ್ಲಕ್ಕಿಂತ ಬೇರೆ, ಬಗೆಬಗೆಯ ಸ್ವರೂಪದವ° (ಅನೇಕಮೂರ್ತಿ) ಹೀಂಗೆ ಹಲವಾರು ಭಾವಂದ ಪೂಜಿಸುತ್ತವು. ಧ್ಯಾನಲ್ಲಿ ಭಗವಂತನ ಅನೇಕ ಆಯಾಮಲ್ಲಿ ಕಾಂಬದೇ ಈ ಉಪಾಸನೆ. ಇಲ್ಲಿ ಹೆರಪ್ರಪಂಚದ ಗೊಡವೆ ಇಲ್ಲೆ. ಭಗವಂತನ ನಾನಾ ರೀತಿಲಿ ಭಾವಿಸಿಗೊಂಬದು ಮಾಂತ್ರ. ಧ್ಯಾನಪೂರ್ವಕ ಯಜ್ಞ ಇದು. ಬಾಹ್ಯವಾಗಿ ಇವರ ಮಹಾತ್ಮರು ಹೇಳಿ ಗುರುತುಸುವದು ಕಷ್ಟ. ಇಂತವು ಭಗವಂತ ಒಂದಾಗಿ, ಬೇರೆಯಾಗಿ, ಬಹುವಾಗಿ ಕಾಣುತ್ತವು. ಇಲ್ಲಿ ಏಕತ್ವೇನ ಹೇಳಿ ಏಕಭಾವಂದ , ಭಗವಂತ° ಒಬ್ಬನೇ ಹೇಳ್ವ ಭಾವಂದ ಉಪಾಸನೆ ಮಾಡುವದು. ಒಂದೊಂದು ದೇಶಕ್ಕೆ , ಒಂದೊಂದು ಜಾತಿಗೆ, ವಾ ಒಂದೊಂದು ಮತಕ್ಕೆ ಒಬ್ಬೊಬ್ಬ ದೇವರು ಹೇಳ್ವ ಪರಿಕಲ್ಪನೆ ಅಲ್ಲ. ಎಲ್ಲೋರಿಂಗೂ ದೇವರು ಒಬ್ಬನೇ – ಆ ಭಗವಂತ° ಹೇಳ್ವ ಭಾವಂದ ಉಪಾಸನೆ. ಪೃಥಕ್ತ್ವೇನ ಹೇಳಿರೆ ಎಲ್ಲರಿಂದ ವಿಲಕ್ಷಣನಾದ ಭಗವಂತನ ಅನೇಕ ಬಗೆಂದ ಕಾಂಬದು. ಅವನ ಚತುರ್ಮೂರ್ತಿ ಹೇಳಿಯೂ ಅನೇಕಮೂರ್ತಿ ಹೇಳಿಯೂ ಅನೇಕ ವರ್ಣ ಹೇಳಿಯೂ ಉಪಾಸನೆ ಮಾಡುವದು. ಒಟ್ಟಿಲ್ಲಿ ಭಗವಂತನ ಬಗೆಬಗೆಯಾಗಿ ಮನಸ್ಸಿಲ್ಲಿ ಮಡಿಕ್ಕೊಂಡು ಭಗವಂತನೇ ಪರಮಶ್ರೇಷ್ಥ° ಹೇಳ್ವ ಭಾವನೆಂದ ಇಪ್ಪದು. 

ಶ್ಲೋಕ

ಅಹಂ ಕ್ರತುರಹಂ ಯಜ್ಞಃ ಸ್ವಧಾಹಮಹಮೌಷಧಮ್ ।
ಮಂತ್ರೋsಹಮಹಮೇವಾಜ್ಯಮ್ ಅಹಮಗ್ನಿರಹಂ ಹುತಮ್ ॥೧೬॥

ಪದವಿಭಾಗ

ಅಹಮ್ ಕ್ರತುಃ ಅಹಮ್ ಯಜ್ಞಃ ಸ್ವಧಾ ಅಹಮ್ ಅಹಮ್ ಔಷಧಮ್ । ಮಂತ್ರಃ ಅಹಮ್ ಅಹಮ್ ಏವ ಆಜ್ಯಮ್ ಅಹಮ್ ಅಗ್ನಿಃ ಅಹಮ್ ಹುತಂ ॥

ಅನ್ವಯ

ಅಹಂ ಕ್ರತುಃ, ಅಹಂ ಯಜ್ಞಃ, ಅಹಂ ಸ್ವಧಾ, ಅಹಮ್ ಔಷಧಮ್, ಅಹಂ ಮಂತ್ರಃ, ಅಹಮ್ ಏವ ಆಜ್ಯಂ, ಅಹಮ್ ಅಗ್ನಿಃ, ಅಹಂ ಹುತಮ್  ಅಸ್ಮಿ ।

ಪ್ರತಿಪದಾರ್ಥ

ಅಹಮ್ ಕ್ರತುಃ – ಆನು ವೈದಿಕ ಕರ್ಮಕಾಂಡವು, ಅಹಮ್ ಯಜ್ಞಃ – ಆನು ಸ್ಮೃತಿಯಜ್ಞ, ಅಹಮ್ ಸ್ವಧಾ – ಆನು ಪಿತೃಗೊಕ್ಕೆ ಅರ್ಪುಸುವ ಆಹುತಿ, ಅಹಮ್ ಔಷಧಮ್ – ಆನು ಗುಣಪಡುಸುವ ಮೂಲಿಕೆ (ಔಷಧಿ), ಅಹಮ್ ಮಂತ್ರಃ – ಆನು ದಿವ್ಯಮಂತ್ರವು, ಅಹಮ್ ಏವ ಆಜ್ಯಮ್ – ಆನೇ ತುಪ್ಪವು,  ಅಹಮ್ ಅಗ್ನಿಃ – ಆನೇ ಅಗ್ನಿಯು, ಅಹಮ್ ಹುತಮ್ – ಅನು ಅರ್ಪಣೆಯು, ಅಸ್ಮಿ – ಆಗಿದ್ದೆ.

ಅನ್ವಯಾರ್ಥ

ಆನು ವೈದಿಕವಿಧಿ, ಆನೇ ಯಜ್ಞ, ಸ್ವಧಾ, ಆನೇ ಔಷಧಿ, ಆನೇ ಮಂತ್ರ, ಆನೇ ಆಜ್ಯ, ಆನೇ ಅಗ್ನಿ, ಆನೇ ಹುತ (ಅರ್ಪಣೆಯಾದವ) ಆಗಿದ್ದೆ.

ತಾತ್ಪರ್ಯ / ವಿವರಣೆ

ಬನ್ನಂಜೆಯವರ ವ್ಯಾಖ್ಯಾನವ ಗಮನಿಸಿರೆಭಗವಂತ° ಹೇಳುತ್ತ° –  ಇಲ್ಲಿ ಕ್ರಿಯೆ ಎನ್ನ ಸ್ವರೂಪವಾದ್ದರಿಂದ ಆನು ಕ್ರತು, ಎನ್ನಂದ ಹವನ ಕ್ರಿಯೆ, ಎಲ್ಲವನ್ನೂ ತಿಳುದವನಾದ್ದರಿಂದ ಆನೇ ಯಜ್ಞ, ಎನಗೆ ಆನೇ ಆಸರೆಯಾದ್ದರಿಂದ ಪಿತೃಗಳ ಅನ್ನ ಎನ್ನಿಂದ – ಸ್ವಧಾ., ಬೆಂದವಕ್ಕೆ ಆಸರೆಯಾಗಿಪ್ಪ ಔಷಧ ಆನೇ, ಜ್ಞಾನವಿತ್ತು ಸಲಹುವದರಿಂದ ಮಂತ್ರ ಆನೇ, ಎಲ್ಲಕ್ಕಿಂತ ಹಿರಿಯವನಾದ್ದರಿಂದ ಆನೇ ಆಜ್ಯ, ಈ ವಿಷ್ವಕ್ಕೆ ಚಲನೆ ನೀಡುವ ಕಿಚ್ಚು (ಅಗ್ನಿ – ಪವರ್) ಆನೇ, ಎನ್ನಂದ ಹೋಮದ ಹವಿ – ಭಕ್ತರು ಎನ್ನನ್ನೇ ದೆನಿಗೊಳ್ತಕಾರಣ ಆನೇ ಹುತ ಆನೇ ಆಗಿದ್ದೆ.

ಭಗವಂತನ ಉಪಾಸನೆ ಮಾಡ್ಳೆ ಮೂರು ಪ್ರತೀಕಂಗೊ ಶಾಸ್ತ್ರಕಾರರು ಹೇಳಿದ್ದು. ೧.ಅಗ್ನಿಪ್ರತೀಕ ೨.ವಾಯುಪ್ರತೀಕ ೩.ಆದಿತ್ಯಪ್ರತೀಕ. ಭೂಸ್ತರಲ್ಲಿ ಭಗವಂತನ ಉಪಾಸನೆ ಮಾಡುವದು ಅಗ್ನಿಪ್ರತೀಕಲ್ಲಿ, ಅಂತರಿಕ್ಷ ಸ್ತರಲ್ಲಿ ಆದಿತ್ಯಮುಖಲ್ಲಿ, ಮತ್ತೆ ಅಂತರಂಗಲ್ಲಿ ಉಪಾಸನೆ ಮಾಡುವದು ವಾಯುಪ್ರತೀಕ. ಭೂಮಿಲಿ ಸಾಮಾನ್ಯವಾಗಿ ಮನುಷ್ಯರು ಜ್ಞಾನಮಾರ್ಗಕ್ಕಿಂತ ಕರ್ಮಮಾರ್ಗಕ್ಕೇ ಅಂಟಿಗೊಂಡಿಪ್ಪದು. ಇಲ್ಲಿ ಜ್ಞಾನಕ್ಕಿಂತ ಕರ್ಮಕ್ಕೆ ಹೆಚ್ಚು ಒತ್ತು. ಉದಿಯಂದ ಕಸ್ತಲೆವರೇಗೆ ಪೂಜೆ ಮಾಡಿಗೊಂಡಿರುತ್ತವು. ಆದರೆ ಮಾಡುವ ಅನುಷ್ಥಾನದ ಬಗ್ಗೆ ಜ್ಞಾನ ಇರ್ತಿಲ್ಲೆ. ಇವಕ್ಕೆ ಜ್ಞಾನಸಂಪಾದನೆ ದ್ವಿತೀಯಕ (ಸೆಕಂಡರಿ). ಇದು ಮನುಷ್ಯನ ದೌರ್ಬಲ್ಯ. ಮಡಿವಂತಿಕೆ ಬಾಹ್ಯಾನುಷ್ಠಾನಕ್ಕೇ ಹೆಚ್ಚು ಒತ್ತು, ಮಹತ್ವ ಕೊಟ್ಟು ಮಾಡುವ ಕಾರ್ಯದ ಜ್ಞಾನ ಇಲ್ಲೆ. ಬಾಹ್ಯಾನುಷ್ಥಾನವ ಯಾಂತ್ರಿಕವಾಗಿ ಮಾಡುವದಕ್ಕಿಂತ ಜ್ಞಾನ ಅಭಿವೃದ್ಧಿಗೊಳುಸುವದು ದೇವರು ಮೆಚ್ಚುವ ಮಹಾಪೂಜೆ. ಇಲ್ಲಿ ಜ್ಞಾನ ಸಂಪಾದನೆ ಹೇಳಿರೆ ಅಂತೇ ಬಾಯಿಪಾಠ ಮಾಡುವದು ಅಲ್ಲ, ಬದಲಾಗಿ, ವಿಶ್ವಾಸ ಶ್ರದ್ಧಾ ಭಕ್ತಿಂದ , ವಿನಯಂದ ವಿಷಯವ ತಿಳ್ಕೊಂಬದು ಮತ್ತು ತಿಳ್ಕೊಂಡದರ ಇತರರಿಂಗೆ (ನಿಜ ಅಪೇಕ್ಷಿಗೊಕ್ಕೆ) ತಿಳಿಯಪಡುಸುವದು.

ಕರ್ಮಪ್ರಧಾನವಾಗಿಪ್ಪವಕ್ಕೆ ಭಗವಂತನ ಅನುಷ್ಠಾನ ಹೇಂಗಿರೆಕು ಹೇಳ್ವದರ ಇಲ್ಲಿ ಭಗವಂತ ಹೇಳಿದ್ದ°. “ಅಹಂ ಕ್ರತುಃ ಅಹಂ ಯಜ್ಞಃ” – ಭಗವಂತನ ಆರಾಧನೆಗೆ ಮಾಡುವ ಅಗ್ನಿ ಆರಾಧನೆ ಪ್ರಕ್ರಿಯೆ ‘ಕ್ರತು’. ಇಲ್ಲಿ ಯಜ್ಞದ ಮೂಲಕ ಭಗವಂತಂಗೆ ಆಹುತಿ ಕೊಡುವಾಗ ಹೇಳ್ವ – ಅಗ್ನಯೇ ಸ್ವಾಹಾ – ಅಗ್ನಯ ಇದಂ ನ ಮಮ; ಪ್ರಜಾಪತಯೇ ಸ್ವಾಹಾ – ಪ್ರಜಾಪತಯ ಇದಂ ನ ಮಮ; ಇಂದ್ರಾಯ ಸ್ವಾಹಾ – ಇಂದ್ರಾಯ ಇದಂ ನ ಮಮ ; ವಾಯವೇ ಸ್ವಾಹ – ವಾಯವೇ ಇದಂ ನ ಮಮ … ಇತ್ಯಾದಿ. ಹೀಂಗೆ ಬೇರೆ ಬೇರೆ ಪ್ರತೀಕಲ್ಲಿ ಭಗವಂತಂಗೆ ಆಹುತಿ ಕೊಡುವದು ಯಜ್ಞ. ನಾವು ಮಾಡುವ ಕ್ರತುವಿನ ನಿಯಾಮಕ ಅವ° – ಆ ಭಗವಂತ°. ಇಲ್ಲಿ ನ ಮಮ – ಇದು ಎನ್ನದಲ್ಲ., ಆ ಭಗವಂತನದ್ದು, ಅವಂಗೆ ಸಲ್ಲೆಕ್ಕಪ್ಪದು ಹೇಳ್ವ ಅರ್ಥ. ನಾವು ಯಾವ ಪ್ರತೀಕಲ್ಲಿ ಪೂಜೆ ಮಾಡಿರೂ ಅಕೇರಿಗೆ ಅದು ಸಲ್ಲುವದು ಆ ದೇವೆತೆಗಳ ಮೂಲಕ ಆ ದೇವತೆಗಳಲ್ಲಿ ಅಂತರ್ಯಾಮಿಯಾಗಿಪ್ಪ ಭಗವಂತಂಗೆ. ಅದಕ್ಕೇ ಹೇಳಿದ್ದು “ಸರ್ವದೇವನಮಸ್ಕಾರಃ ಕೇಶವಂ ಪ್ರತಿಗಚ್ಛತಿ” ಹೇಳಿ. ಉದಾಹರಣೆಗೆ ಗಣಪತಿ ಹೋಮ, ಚಂಡಿಕಾಹೋಮ, ನವಗ್ರಹ ಹೋಮ ಇತ್ಯಾದಿ. ಇಲ್ಲಿ ಯಾವ ದೇವತೆಯ ಪ್ರತೀಕಲ್ಲಿ ಯಜ್ಞ ಮಾಡಿರೂ ಕೂಡ ಆ ಯಜ್ಞ ಭಗವಂತಂಗೇ ಅಕೇರಿಗೆ ಮುಟ್ಟುವದು (ಸಲ್ಲುವದು). ಈ ಜ್ಞಾನ ನಮ್ಮಲ್ಲಿ ಇರೆಕು. ಅವನ ಉಪಾಸನೆ ಇಲ್ಲದ್ದೆ ಬೇರೆ ಯಾವ ದೇವತಗಳ ಪೂಜಿಸಿದರೂ ಅದರ ಅವು ಸ್ವೀಕರುಸುತ್ತವಿಲ್ಲೆ. ಎಂತಕೆ ಹೇಳಿರೆ ವಿವಿಧ ದೇವತೆಗೊ ಭಗವಂತನ ವಿವಿಧ ಅಂಶವೇ. ಒಬ್ಬೊಬ್ಬ ದೇವತೆಗೊಕ್ಕೆ ಒಂದೊಂದು ಅಧಿಕಾರ. ಭಗವಂತ ಆ ಅಭಿಮಾನಿ ದೇವತೆಗಳ ಮೂಲಕ ನವಗೆ ಅನುಗ್ರಹ ಮಾಡುವದು. ಭಗವಂತ° ಅನೇಕ ಶಕ್ತಿ ರೂಪಲ್ಲಿ ಅಭಿವ್ಯಕ್ತನಾದರೂ ಕೂಡ ಸರ್ವನಿಯಾಮಕ° ಭಗವಂತ° ಒಬ್ಬನೇ.  ನವಗೆ ಬಂದಿಪ್ಪ ಆಪತ್ತಿನ ನಿವಾರಣಗೆ ಜ್ಯೋತಿಷಿಗೊ ಭಗವಂತನ ಆಯಾ ಶಕ್ತಿಪ್ರತೀಕ ಪೂಜಿಸೆಕು ಹೇಳಿ ಹೇಳುತ್ತದೇ ಹೊರತು ಬೇರೆ ಬೇರೆ ದೇವತೆಗಳ ಪೂಜಿಸು ಹೇಳಿ ಅಲ್ಲ. ಒಂದೊಂದು ಶಕ್ತಿಗೆ ಒಂದೊಂದು ಅಭಿಮಾನಿ ದೇವತೆಗೊ. ಆ ಅಭಿಮಾನಿ ದೇವತೆಗೊ ಭಗವಂತನ ಅಧೀನ. ಆ ದೇವತೆಯ ಒಳ ಇಪ್ಪ ಭಗವಂತ° ಪ್ರೀತನಾದಪ್ಪಗ ಅಷ್ಟೇ ಅದು ಆ ದೇವತೆಗೂ ಭಗವಂತಂಗೂ ಸಲ್ಲುತ್ತು. ಹಾಂಗಾಗಿ ನಾವು ಮಾಡುವದು ಒಂದೊಂದು ದೇವತೆಯ ಆರಾಧನೆ ಅಲ್ಲ, ಬದಲಾಗಿ ಸರ್ವಾಂತರ್ಯಾಮಿ ಭಗವಂತನ ವಿವಿಧ ಪ್ರತೀಕಲ್ಲಿ ಆರಾಧನೆ. ನಮ್ಮ ಶರೀರಲ್ಲಿಯೂ ಅನೇಕ ತತ್ವಾಭಿಮಾನಿ ದೇವತೆಗೊ ಇದ್ದವು. ಅವು ದೇವರ ಪರಿವಾರ. ಅವರ ನಿಯಮನ ಮಾಡಿಗೊಂಡು ಭಗವಂತ ಇದ್ದ°. ಈ ತತ್ವಾಭಿಮಾನಿ ದೇವತೆಗೊ ಭಗವಂತನ ಅನುಗ್ರಹಂದ ನಮ್ಮ ಸನ್ಮಾರ್ಗಲ್ಲಿ ನಡೆಶಲಿ ಹೇಳಿ ಅವರ ಅಂತರ್ಯಾಮಿಯಾದ ಭಗವಂತನ ನಾವು ಆರಾಧಿಸುವದು.

ನಾವು ನಿತ್ಯ ಪೀಠಲ್ಲಿ ಮಾಡುವ ಪೂಜೆ ತತ್ವಾಭಿಮಾನಿ ದೇವತೆಗಳ ಕುರಿತಾಗಿ ಮಾಡುವ ಯಜ್ಞವಾದರೆ, ಶ್ರಾದ್ಧ ಪಿತೃದೇವತೆಗಳ ಕುರಿತಾಗಿ ಮಾಡುವ ಯಜ್ಞ. ಶ್ರಾದ್ಧ ಹೇಳ್ವದು ನಾವು ನಮ್ಮ ಸತ್ತು ಹೋದ ಹಿರಿಯರಿಂಗೆ ಮಾಡುತ್ತದು ಹೇಳ್ವ ತಪ್ಪು ಕಲ್ಪನೆ ನಮ್ಮಲ್ಲಿ ಇಪ್ಪದು. ದೇಹ ತ್ಯಾಗ ಮಾಡಿದ ಜೀವಕ್ಕೆ ಶ್ರಾದ್ಧ ಮಾಡುತ್ತದು ಅಲ್ಲ. ಶ್ರಾದ್ಧ ಸ್ಥೂಲ ದೇಹವ ತ್ಯಜಿಸಿ ಸೂಕ್ಷ್ಮ ಶರೀರಲ್ಲಿಪ್ಪ ಜೀವವ ನಿಯಂತ್ರುಸುವ ಪಿತೃದೇವತೆಗೊಕ್ಕೆ ಮಾಡುವಂತಾದ್ದು. ವಿಶೇಷವಾಗಿ ಹತ್ತು ಮಂದಿ ವಿಶ್ವೇದೆವತೆಗೊ (ಕ್ರತು, ದಕ್ಷ, ವಸು, ಸತ್ಯ, ಕಾಮ, ಕಾಲ, ಧುರಿ, ಲೋಚನ, ಪುರೂರವ ಆರ್ದ್ರವ) ; ಇವರಲ್ಲಿ ಪುರೂರವ ಮತ್ತೆ ಆರ್ದ್ರವರದ್ದು ಪಿತೃಗಣದ ನಿಯಮನ ಮಾಡುವ ಖಾತೆ (ಪೋರ್ಟ್ ಫೋಲಿಯೋ). ಪಿತೃದೇವತೆಗಳ ಗಣ ಹತ್ತು (ನೂರು ಮಂದಿ ಪಿತೃಗಳಲ್ಲಿ ಇವು ಪ್ರಧಾನರು) – ಯಮ, ಸೋಮ , ಕವ್ಯವಾಹ (ಇವು ಮೂರು ಪಿತೃಪತಿಗೊ), ಸೋಮಸದರು, ಅಗ್ನಿಷ್ವಾತ್ತರು, ಬಹಿರ್ಷದರು, ಸೋಮಪರು, ಹವಿರ್ಭುಜರು, ಅಜ್ಯಪರು, ಸುಕಾಲಿಗೊ. ನಾವು ಪಿಂಡ ಹಾಕುತ್ತದು ಬಿಟ್ಟುಹೋದ ಜೀವದ ಹಸಿವಿಂಗೆ ಅಲ್ಲ. ನಮ್ಮ ಹಿರಿಯರು ಸ್ವರ್ಗಕ್ಕೆ ವಾ ನರಕಕ್ಕೆ ಹೋವ್ತದು ಅವು ಮಾಡಿದ ಕರ್ಮಫಲಂದ ಹೊರತು ನಾವು ಮಾಡುವ ತಿಥಿಂದ ಅಲ್ಲ. ಶ್ರಾದ್ಧ ಎಂತಕೆ ಹೇಳಿರೆ, ಪಿತೃದೇವತೆಗಳ ಸ್ವಾಧೀನಲ್ಲಿಪ್ಪ ಜೀವ ಯಾವುದೋ ದುರಿತದ ಪ್ರಭಾವಂದ ದಾರಿಲಿ ತಡೆಯ ಎದುರುಸೆಕಾಗಿ ಬಕ್ಕು. ಆ ಸಮಯಲ್ಲಿ ಅದರ ನಿವಾರಣೆ ಮಾಡುವ ಕರ್ಮಾನುಷ್ಠಾನ ಆ ಸೂಕ್ಷ್ಮ ಶರೀರಕ್ಕೆ ಇರ್ತಿಲ್ಲೆ.  ಹಾಂಗಾಗಿ ಅಂತಹ ಪ್ರತಿಬಂಧಕಂಗಳಿಂದ ಅವರ ಪಾರು ಮಾಡಿ, ಮುಂದೆ ಹೋಪಲೆ ನೆರವು ಬೇಡಿಗೊಂಡು ಪಿತೃದೇವತೆಗಳ ಪೂಜೆಯೇ ಶ್ರಾದ್ಧ. ಒಟ್ಟಾರೆ ಇದು ಹಿರಿಯರು ಸತ್ತ ದಿನದ ನೆಂಪು, ಅವಕ್ಕೆ ಕೃತಜ್ಞತೆ ಮತ್ತು ಪಿತೃದೇವತೆಗಳ ಪೂಜೆ.

ಭಗವಂತ° ಹೇಳುತ್ತ° – “ಸ್ವಧಾ ಅಹಮ್” . ಮಂತ್ರಂಗಳ ವಿಳಾಸ ಪ್ರಕಾರ ‘ಸ್ವಾಹ’ ತತ್ವಾಭಿಮಾನಿ ದೇವತೆಗೊಕ್ಕೆ, ‘ಸ್ವಧಾ’ ಪಿತೃದೇವತೆಗೊಕ್ಕೆ. ‘ಎನ್ನ ಮುಖೇನವೇ ಶ್ರಾದ್ಧ ಪಿತೃದೇವತೆಗೊಕ್ಕೆ ಸಲ್ಲುತ್ತದು’ ಹೇಳಿ ಹೇಳ್ತ° ಭಗವಂತ°.

ತತ್ವಾಭಿಮಾನಿ ದೇವತೆಗೊ ಮತ್ತೆ ಪಿತೃದೇವತೆಗಳ ನಂತ್ರ ಮನುಷ್ಯರು. ಮನುಷ್ಯರ ಮುಖ್ಯವಾದ ಆಹಾರ ‘ಓಷಧಿ’. ಫಲ ಕೊಟ್ಟು ಸಾಯುವ ಗಿಡವ ಸಂಸ್ಕೃತಲ್ಲಿ ‘ಓಷಧಿ’ ಹೇಳುತ್ತದು. ಮುನುಷ್ಯ ತಿಂಬ ದವಸಧಾನ್ಯ ಎಲ್ಲವೂ ‘ಓಷಧಿಗೊ’. ಹಸಿವು ಹೇಳ್ವ ವ್ಯಾಧಿಯ ಗುಣಪಡುಸುವ ಮದ್ದು (ಆಹಾರ) – ‘ಓಷಧಿ’. ಇಂತಹ ಓಷಧಿಗಳ ಸಮುದಾಯವೇ ಔಷಧಿ. ಭಗವಂತ° ಹೇಳುತ್ತ° – “ಅಹಮ್ ಔಷಧಮ್” ಹೇಳಿ. ನಾವು ತಿಂಬ ಆಹಾರ (ದವಸ ಧಾನ್ಯ, ಔಷಧಿ) ಸಲ್ಲುತ್ತದು ಕೂಡ ವೈಶ್ವಾನರನಾಗಿ ಒಳ ಕೂದೊಂಡಿಪ್ಪ ಭಗವಂತಂಗೆ. ಔಷಧ ಕೊಡತಕ್ಕವ°, ಅದರಿಂದ ರೋಗವ ನಿವಾರುಸುವವ°, ಹಶು ನೀಗಿಸಿ ರಕ್ಷಣೆ ಮಾಡುವವ° – ಭಗವಂತ°. (ಹಾಂಗಾಗಿಯೇ ಹೇಳಿದ್ದು – “ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ” – ಈ ಬಗ್ಗೆ ವಿವರಣೆ ಮತ್ತೆ  ಮುಂದೆ ಬಪ್ಪಲಿದ್ದು).

ನಾವು ಬೇರೆ ಬೇರೆ ಮಂತ್ರಂಗಳಿಂದ ಆಹುತಿ ಕೊಡುತ್ತು. ಮಂತ್ರ ಹೇಳಿರೆ ವಿಳಾಸ ಇಪ್ಪ ಹಾಂಗೆ. ಕೊಡುವ ಆಹುತಿ ಎಲ್ಲವೂ ಭಗವಂತಂಗೆ ಸೇರುತ್ತದಾದರೆ ಬೇರೆ ಬೇರೆ ವಿಳಾಸ ಎಂತಕೆ?! ಅದು ಭಗವಂತ° ಹೇಳುತ್ತ° – ಬೇರೆ ಬೇರೆ ವಿಳಾಸಲ್ಲಿ ಇಪ್ಪ ಭಗವಂತಂಗೆ. ಭಗವಂತ° ಒಬ್ಬ° ಆದರೆ ಅವನ ರೂಪ ಅನೇಕ. ಸರ್ವಾಂತರ್ಯಾಮಿಯಾದ ಭಗವಂತ ಬೇರೆ ಬೇರೆ ರೂಪವ ಬೇರೆ ಬೇರೆ ದೇವತಾ ಪ್ರತೀಕಲ್ಲಿ ಪೂಜಿಸಿರೂ ಅಕೇರಿಗೆ ಹೋಗಿ ಸೇರುತ್ತದು ಅವಂಗೇ. ಎಲ್ಲವುದರ ಸಾರ ಆ ಭಗವಂತ°. ಉದಾಹರಣಗೆ – ತೆಂಗಿನಕಾಯಿ. ಸಿಪ್ಪೆ ಇಪ್ಪ ಕಾಯಿ ಹೊತ್ತುವ ಕಿಚ್ಚಿನ ಹಾಂಗೆ, ಸಿಪ್ಪೆಯೊಳ ಇಪ್ಪ ಕಾಯಿ ಕಿಚ್ಚಿನೊಳ ಅಂತರ್ಯಾಮಿ ಅಗ್ನಿದೇವತೆಯ ಹಾಂಗೆ, ಚಿಪ್ಪಿನೊಳ ಇಪ್ಪ ಕೊಬ್ಬರಿ ಅಗ್ನಿದೇವತೆಯೊಳ ಇಪ್ಪ ಭಗವಂತನ ಹಾಂಗೆ. ಒಟ್ಟಿಂಗೆ ನಾವು ಹೇಳುತ್ತದು ತೆಂಗಿನಕಾಯಿ ಹೇಳಿ ಅಷ್ಟೇ, ಹೇಂಗೆ ನಿಜವಾದ ತೆಂಗಿನಕಾಯಿ ಸಾರ ಅದರ ಒಳಾದಿಕೆ ಇಪ್ಪದೋ ಹಾಂಗೇ ಅಂತತಃ ಅಂತರ್ಯಾಮಿ ಎಲ್ಲವುದರಲ್ಲ್ಲಿ ಇಪ್ಪದು ಆ ಭಗವಂತನೆ. ಇದನ್ನೇ ಭಗವಂತ ಹೇಳಿದ್ದು “ಅಹಂ ಅಗ್ನಿಃ”. 

ಹಾಂಗೇ ಭಗವಂತ° ಹೇಳುತ್ತ° “ಅಹಮ್ ಏವ ಆಜ್ಯಮ್”  – ತುಪ್ಪ. ಆಜ್ಯಲ್ಲಿ ವಿಶಿಷ್ಟವಾದ ಶಕ್ತಿ ಇದ್ದು . ಆ ಶಕ್ತಿ ಭಗವಂತ°. ‘ಅಹಮ್ ಹುತಮ್’ . ಹುತಂ ಹೇಳಿರೆ ಹವಿಸ್ಸು, ಹೋಮುಸುವ ದ್ರವ್ಯ. ಆ ಹವಿಸ್ಸಿಲ್ಲಿ ವಿಶೇಷ ಶಕ್ತಿ ಇದ್ದು. ಅದು ಭಗವಂತನಿಂದ. ಅಗ್ನಿಗೆ ಅರ್ಪಿಸಿ ಅಗ್ನಿಂದ ಹೆರ ಬಪ್ಪ ಏಳು ಬಣ್ಣಗಳ ಮುಖೇನ ಹೆರಬಪ್ಪ ಶಕ್ತಿ ಸೂರ್ಯಕಿರಣದೊಟ್ಟಿಂಗೆ ಸೇರಿ ಸಮಾಜಕ್ಕೆ ಫಲ ಕೊಡುತ್ತು. ಹೀಂಗೆ ಶಬ್ದವಾಚ್ಯನಾದ ಭಗವಂತ ಎಲ್ಲೆಡೆ ಇದ್ದ. ಯಾವ ಶಬ್ದವ ಹೇಳಿರೂ ಅದು ಸೇರುವದು ಅವನನ್ನೇ. ಹೀಂಗೆ ಹವಿಸ್ಸಿನ ಸ್ವೀಕರಿಸಿ ಭಕ್ತರ ಪಾಪವ ಪರಿಹರಿಸುವ ಭಗವಂತ° – ‘ಹವಿರ್ಹರಿಃ’. 

ಬನ್ನಂಜೆ ಈ ಶ್ಲೋಕವ ಇನ್ನೂ ಇನ್ನೊಂದು ಆಯಾಮಲ್ಲಿ ವಿಶ್ಲೇಷಿಸುತ್ತವು – ‘ಕ್ರತುಃ’ – ಭಗವಂತನೇ ಕ್ರತು ಶಬ್ದದ ಮುಖ್ಯಾರ್ಥ. ‘ಕ್ರತು’ – ಕ್ರಿಯೆ, ಜ್ಞಾನ ಇತ್ಯಾದಿ ಅರ್ಥ. ಕ್ರಿಯಾ ಸ್ವರೂಪ, ಜ್ಞಾನ ಸ್ವರೂಪ ಭಗವಂತ° – ಕ್ರತುಃ. ನಮ್ಮಲ್ಲಿ ನಂಬಿಕೆ, ಇಚ್ಛಾಶಕ್ತಿ, ಕ್ರಿಯಾಶಕ್ತಿ ಹಾಂಗೇ ಇತರ ಅನುಕೂಲತೆಯ ಮಾಡಿಕೊಟ್ಟು, ನಮ್ಮ ಹಿಂದೆ ನಿಂದುಗೊಂಡು ನಮ್ಮಿಂದ ಕ್ರಿಯಾಕಲಾಪಂಗಳ ನಡೆಶುವವ°, ಜ್ಞಾನಸ್ವರೂಪನೂ, ಕರ್ಮದ ಕಟ್ಟಿಂದ ನಮ್ಮ ಪಾರುಮಾಡುವವನೂ ಆದ ಆ ಭಗವಂತ° – ‘ಕ್ರತುಃ’. ‘ಯಜ್ಞಃ’ – ಯಜ್ಞ ಹೇಳಿರೆ ಎಲ್ಲವನ್ನೂ ತಿಳುದವ°. ಜ್ಞಾನಸ್ವರೂಪಿಯಾಗಿ ಎಲ್ಲೆಡೆ ಇಪ್ಪ ಭಗವಂತ°, ಎಲ್ಲ ಕ್ರಿಯೆಗಳಿಂದ ಎಲ್ಲೋರು ಆರಾಧಿಸೆಕ್ಕಾದ ಯಜ್ಞದ ಅಂತರ್ಯಾಮಿ ಅವ°. ‘ಸ್ವಧಾ’ – ಸ್ವಧಾ ಹೇಳಿರೆ ತನ್ನ ತಾನೇ ಆದರಿಸಿ ನಿಂದಿಪ್ಪ ಸರ್ವ ನಿಯಾಮಕ. ‘ಔಷಧಃ’ – ಭಗವಂತ ಸಕಲ ವಸ್ತುಗಳಲ್ಲಿ ಇದ್ದುಗೊಂಡು ಸಂಸಾರ ತಾಪಲ್ಲಿ ಬಿದ್ದು ಒದ್ದಾಡುವವಕ್ಕೆ ಆಸರೆ ಕೊಡುವವ ಓಷಧಿ – ಮೋಕ್ಷಪ್ರದಾತ°. ‘ಮಂತ್ರ’ – ಜ್ಞಾನಪೂರ್ವಕವಾಗಿ ಅನುಸಂಧಾನ ಮಾಡುವವರ ರಕ್ಷಣೆ ಮಾಡುವ ಭಗವಂತ° – ‘ಮಂತ್ರಃ’.  ಮಂತ್ರ ನಮ್ಮ ರಕ್ಷಣೆ ಮಾಡುತ್ತದು ನಾವು ಅದರ ಅರ್ತು ಪಠಿಸಿಯಪ್ಪಗ ಮಾಂತ್ರ. ಇಲ್ಲದ್ರೆ ಅದು ಕಿಂಚಿತ್ ಫಲ ಮಾಂತ್ರ. ‘ಆಜ್ಯ’ – ಎಲ್ಲಕ್ಕಿಂತ ದೊಡ್ಡದು, ಭಗವಂತ° ಎಲ್ಲಕ್ಕಿಂತ ದೊಡ್ಡವ°, ಶ್ರೇಷ್ಠ°. ‘ಅಗ್ನಿ’ – ಚಲುಸದ್ದೇ ಇಪ್ಪ ವಸ್ತುವಿಂಗೆ ಚಲನೆ ಕೊಡುವ ಭಗವಂತ° – ‘ಅಗ್ನಿಃ’. ‘ಹುತಃ’ – ಎಲ್ಲ ಭಕ್ತರಿಂದ ಆಹುತನಾದ್ದರಿಂದ ಭಗವಂತ° – ‘ಹುತಃ’.

ಶ್ಲೋಕ

ಪಿತಾಹಮಸ್ಯ ಜಗತೋ ಮಾತಾ ಧಾತಾ ಪಿತಾಮಹಃ।
ವೇದ್ಯಂ ಪವಿತ್ರಮೋಂಕಾರ ಋಕ್ಸಾಮ ಯಜುರೇವ ಚ ॥೧೭॥

ಪದವಿಭಾಗ

ಪಿತಾ ಅಹಮ್ ಅಸ್ಯ ಜಗತಃ ಮಾತಾ ಧಾತಾ ಪಿತಾಮಹಃ । ವೇದ್ಯಮ್ ಪವಿತ್ರಮ್ ಒಂಕಾರಃ ಋಕ್-ಸಾಮ ಯಜುಃ ಏವ ಚ ॥

ಅನ್ವಯ

ಅಹಮ್ ಅಸ್ಯ ಜಗತಃ ಮಾತಾ, ಪಿತಾ, ಧಾತಾ, ಪಿತಾಮಹಃ , ವೇದ್ಯಮ್, ಪವಿತ್ರಮ್, ಓಂಕಾರಃ, ಋಕ್, ಸಾಮ, ಯಜುಃ ಏವ ಚ ಅಸ್ಮಿ ।

ಪ್ರತಿಪದಾರ್ಥ

ಅಹಮ್ – ಆನು, ಅಸ್ಯ ಜಗತಃ – ಈ ಜಗತ್ತಿನ, ಮಾತಾ – ಅಬ್ಬೆ, ಪಿತಾ – ಅಪ್ಪ°, ಧಾತಾ – ಆಧಾರಕ°, ಪಿತಾಮಹಃ – ಅಜ್ಜ°, ವೇದ್ಯಮ್ – ತಿಳುಕ್ಕೊಳ್ಳೆಕ್ಕಾದ, ಪವಿತ್ರಮ್ – ಪವಿತ್ರವಾದ, ಓಂಕಾರಃ – ಓಂಕಾರ°, ಋಕ್ – ಋಗ್ವೇದ, ಸಾಮ – ಸಾಮವೇದ, ಯಜುಃ – ಯಜುರ್ವೇದ, ಏವ ಚ ಅಸ್ಮಿ – ಕೂಡ ಆಗಿದ್ದೆ.

ಅನ್ವಯಾರ್ಥ

ಆನು ಈ ವಿಶ್ವದ ಅಬ್ಬೆ, ಅಪ್ಪ°, ಆಧಾರ°, ಅಜ್ಜ°, ಜ್ಞಾನದ ಗುರಿ (ವೇದ್ಯ), ಪವಿತ್ರೀಕರುಸುವವ°, ಸರ್ವವೇದದ ಸಾರ ಓಂಕಾರ, ಋಗ್,ಸಾಮ,ಯಜುರ್ವೇದವೂ ಆಗಿದ್ದೆ.

ತಾತ್ಪರ್ಯ / ವಿವರಣೆ

ಇಡೀ ವಿಶ್ವದ ಚರಾಚರವಾದ ಎಲ್ಲ ಅಭಿವ್ಯಕ್ತಿಗೊ ಭಗವಂತನ ವಿವಿಧ ಶಕ್ತಿಗಳಿಂದ ಪ್ರಕಟವಾದ್ದು. ಐಹಿಕ ಅಸ್ತಿತ್ವಲ್ಲಿ ನಾವು ಬೇರೆ ಬೇರೆ ಜೀವಿಗಳೊಟ್ಟಿಂಗೆ ಬೇರೆ ಬೇರೆ ಸಂಬಂಧವ ಸೃಷ್ಟಿಸಿಗೊಂಬದು. ಆದರೆ, ಆ ಜೀವಿಗೊ ಎಲ್ಲವೂ ಭಗವಂತನ ತಟಸ್ಥ ಶಕ್ತಿಗಳೇ. ಪಕೃತಿಯ ಸೃಷ್ಟಿಲಿ ಅಬ್ಬೆ, ಅಪ್ಪ°, ಅಜ್ಜ°, ಸೃಷ್ಟಿಕರ್ತ° (ಮೂಲ ವ್ಯಕ್ತಿ) ಹೇಳಿ ಎಲ್ಲೋರ ನಾವು ಗುರುತುಸುತ್ತು. ಇಲ್ಲಿ ಧಾತಾ ಹೇಳಿರೆ ‘ಸೃಷ್ಟಿಕರ್ತ’ ಹೇಳಿಯೂ ಅರ್ಥ. ಇವೆಲ್ಲೋರೂ ಭಗವಂತನ ವಿಭಿನ್ನಾಂಶರೇ. ಸೃಷ್ಟಿಲಿಪ್ಪ ಪ್ರತಿಯೊಂದುದೇ ಭಗವಂತನ ವಿಭಿನ್ನಾಂಶವೇ. ಹಾಂಗಾಗಿ ಎಲ್ಲ ವಿದ್ಯೆಯೂ, ಎಲ್ಲ ವೇದವೂ, ಸರ್ವವೇದಂಗಳ ಸಾರ ಓಂಕಾರವೂ ಆ ಭಗವಂತನೇ ಆಗಿದ್ದ°.

ಬನ್ನಂಜೆ ವಿಶ್ಲೇಷಿಸಿ ಹೇಳುತ್ತವು –  ಭಗವಂತ° ಈ ಜಗತ್ತಿನ ಸೃಷ್ಟಿ ಮಾಡಿ ಸಲಹುವವ°.  ಅವ° ಸೃಷ್ಟಿಸಿ ಸಲಹುವದರಿಂದ ‘ಪಿತೃ’, ನಮ್ಮ ತಿಳ್ಕೊಂಬದರಿಂದ ‘ಮಾತೃ’, ನಮ್ಮ ಬೆಳಶುವದರಿಂದ ‘ಧಾತೃ’, ಅಪ್ಪನಿಂದಲೂ ಹಿರಿಯೋನು ಆದ್ದರಿಂದ ‘ಪಿತಾಮಹ°’, ಇಡೀ ಜಗತ್ತೇ ತಿಳಿಯೇಕಾದವ° ಅವ° ವೇದ್ಯ, ಇಡೀ ಜಗತ್ತಿಂಗೆ ಪಾವನನಾಗಿಪ್ಪವ° ಅವ° ಪವಿತ್ರ°, ಎಲ್ಲ ವೇದಂಗಳೂ ಅವನ ಬಗ್ಗೆಯೇ ಆದ್ದರಿಂದ ಅವ° ವೇದಂಗಳ ಸಾರ, ಓಂಕಾರಂದ ಕರೆಯಲ್ಪಡುವವ° ಅವ° ‘ಓಂಕಾರ°, ಹಾಂಗೇ ,   ಪೂಜನೀಯನಾದ ಅವ ‘ಋಕ್’, ಸಮಾನನಾದ್ದರಿಂದ ‘ಸಾಮ’, ಯಜ್ಞಂಗಳಿಂದ ಆರಾಧ್ಯನಾದ್ದರಿಂದ ಅವ° ‘ಯಜುಸ್’ ಆಗಿದ್ದ°.

ಬನ್ನಂಜೆ ಮತ್ತೂ ವಿವರುಸುತ್ತವು – ಬದುಕಿನ ಸಂಬಂಧಂಗೊಕ್ಕೆ ಸಂಬಂಧಿಸಿ ಭಗವಂತನ° ಉಪಾಸನೆಯ ಭಗವಂತ ಇಲ್ಲಿ ವಿವರಿಸಿದ್ದ°. “ಪಿತಾ ಅಹಂ ಅಸ್ಯ ಜಗತಃ ಮಾತಾ ಧಾತಾ ಪಿತಾಮಹಃ”. ಪ್ರಪಂಚಲ್ಲಿ ಒಬ್ಬನೇ ಅಪ್ಪ°, ಅಬ್ಬೆ, ಅಜ್ಜ°, ಧಾರಕ° ಅಪ್ಪಲೆ ಎಡಿಗಪ್ಪದು ಅವಂಗೆ ಒಬ್ಬಂಗೇ. ಆ ಭಗವಂತನ ನಾವು ಪ್ರಾರ್ಥಿಸುವ ಬಗೆ –

ತ್ವಮೇವ ಮಾತಾಚ ಪಿತಾ ತ್ವಮೇವ, ತ್ವಮೇವ ಬಂಧುಶ್ಚ ಸಖಾ ತ್ವಮೇವ ।
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ, ತ್ವಮೇವ ಸರ್ವಂ ಮಮ ದೇವ ದೇವ ॥ 

ಗಾಯತ್ರೀ ಮಂತ್ರಲ್ಲಿಯೂ ಮೂಲತಃ ಈ ಅನುಷ್ಠಾನ ಇದ್ದು. “ತತ್ಸವಿತುರ್ವರೇಣ್ಯಂ ಭರ್ಗಃ” – ಇಲ್ಲಿ ಭಗವಂತ ಜಗತ್ತಿನ ಸೃಷ್ಟಿ ಮಾಡಿದ ‘ಅಪ್ಪ°’ ಹೇಳ್ವ ಅರ್ಥ. ‘ಸವಿತ’ ಹೇಳಿರೆ ಜಗತ್ತಿನ ಹೆತ್ತವ°. ಪ್ರಳಯಕಾಲಲ್ಲಿ ಜಗತ್ತಿನ ತನ್ನ ಉದರಲ್ಲಿ ಧರಿಸಿ, ಸೃಷ್ಟಿಕಾಲಲ್ಲಿ ಹೆತ್ತು , ಹೀಂಗೆ ಹೆತ್ತು ಹೊತ್ತು ಸಲಹುವ ‘ಅಬ್ಬೆ’ ಮಾತ್ರವಲ್ಲದೆ ಪ್ರತಿಯೊಬ್ಬ ಅಬ್ಬೆಯ ತಾಯ್ತನಲ್ಲಿ ಇದ್ದು ಆ ತಾಯ್ತನವ ಜಾಗೃತಗೊಳುಸಿ ಅಬ್ಬೆಯೊಳ ಅಬ್ಬೆಯಾಗಿ ನಿಂದುಗೊಂಡಿಪ್ಪವ° ಅವ° ಅಬ್ಬೆ, ಎಲ್ಲ ಅಪ್ಪಂದಿರ ಒಳ ಇದ್ದುಗೊಂಡು ಅವರಲ್ಲಿ ಪಿತೃತ್ವವ ಜಾಗೃತಗೊಳುಸುವವ° ಅವ° ಏಕಕಾಲಲ್ಲಿ ಅಬ್ಬೆಯೂ ಅಪ್ಪನೂ ಅಪ್ಪು. ರಕ್ಷಕನೂ ಅಪ್ಪು.

ಲೋಕಲ್ಲಿ ಗೆಂಡು ಹೆಣ್ಣಲ್ಲ , ಹೆಣ್ಣು ಗೆಂಡಲ್ಲ. ಆದರೆ ಭಗವಂತ° ಎಲ್ಲರ ಪ್ರತಿಬಿಂಬ. ಹಾಂಗಾಗಿ ಭಗವಂತ ಉಭಯಲಿಂಗ°. ಹಾಂಗೇ ಲಿಂಗಾತೀತನೂ ಅಪ್ಪು. ಅನಾದಿ ಅನಂತಕಾಲಲ್ಲಿ ಈ ಜಗತ್ತಿನ ಧಾರಣೆ ಮತ್ತೆ ಪೋಷಣೆ ಮಾಡುವವ° ಭಗವಂತ° – ‘ಧಾತಾ’. ಚತುರ್ಮುಖ ಬ್ರಹ್ಮನೊಳ ಇದ್ದು ‘ಪಿತಾಮಹ’  ಶಬ್ದವಾಚ್ಯನೂ ಆ ಭಗವಂತನೇ.

ಇಲ್ಲಿ ಭಗವಂತ° ಕೇವಲ ಮುಖ್ಯವಾದ ಸಂಬಂಧವ ಮಾತ್ರ ಹೇಳಿದ್ದ°. ಇದರರ್ಥ ಎಲ್ಲಾ ಸಂಬಂಧಲ್ಲಿಯೂ ಆ ಭಾವವ ಜಾಗೃತಗೊಳುಸುವ ಅಂತರ್ಯಾಮಿ ಆ ಭಗವಂತ° ಹೇಳಿ ಆವ್ತು.  ಪ್ರತಿಯೊಂದು ಸಂಬಂಧದ ಹಿಂದೆ ಆ ಭಗವಂತನ ಸಂಬಂಧ ಇದ್ದು. ಆದರೆ ನವಗೆ ಈ ಕಲ್ಪನೆ ಇರ್ತಿಲ್ಲೆ. ಆಯಾ ಜೀವದ ಪ್ರಾರಬ್ಧ ಕರ್ಮಕ್ಕನುಗುಣವಾಗಿ ಸಂಬಂಧವ ನಾವು ಕಲ್ಪಿಸಿಗೊಳ್ಳುತ್ತಷ್ಟೆ. ಅಲ್ಲಿಪ್ಪ ಪ್ರೀತಿ, ಮಮತೆ, ಶತ್ರುತ್ವ ಎಲ್ಲವೂ ಭಗವಂತನ ಕಾರ್ಯಕ್ರಮ. ಹೀಂಗೆ ನಾವು ಅರ್ಥೈಸಿಗೊಂಡರೆ ನಮ್ಮ ಜೀವನ ಸುಗಮ. ಹಾಂಗಾಗಿ ಒಬ್ಬರೊನ್ನೊಬ್ಬ ದ್ವೇಷಿಸುವುದಾಗಲೀ, ಅತೀ ಹೆಚ್ಚು ಪ್ರೀತಿಸುವ ಸೆಳೆತಕ್ಕೆ ಬೀಳುವ ಪ್ರಮೇಯ ಇರ್ತಿಲ್ಲೆ. ಎಲ್ಲವೂ ನಮ್ಮ ಜೀವಸ್ವಭಾವ ಮತ್ತೆ ಪ್ರಾರಬ್ಧಕರ್ಮಕ್ಕನುಗುಣವಾಗಿ ಭಗವಂತನ ಲೀಲೆ ಹೇಳ್ವ ಎಚ್ಚರ ನಮ್ಮಲ್ಲಿ ಇರೆಕು.

ಕ್ರಿಯೆ, ಸಂಬಂಧಂಗಳ ವಿವರುಸಿದ ಭಗವಂತ° ಮತ್ತೆ ಜ್ಞಾನದ ಬಗ್ಗೆ ಹೇಳುತ್ತ°. “ವೇದ್ಯಂ ಪವಿತ್ರಮೋಂಕಾರ ಋಕ್-ಸಾಮ ಯಜುರೇವ ಚ”.  ಪ್ರಪಂಚದ ಜ್ಞಾನ – ‘ವೇದ’, ಆ ವೇದ – ಆ ಭಗವಂತ° – ‘ವೇದ್ಯ’. ವೇದಂಗಳ ಸಾರ – ಓಂಕಾರ / ಪ್ರಣವ. ಅದು ಭಗವಂತ°. ಪ್ರಪಂಚದ ಎಲ್ಲ ಶಬ್ದಂಗೊ ಹುಟ್ಟಿದ್ದು ಓಂಕಾರಂದ. ಹಾಂಗಾಗಿ ಭಗವಂತ ಸರ್ವಶಬ್ದವಾಚ್ಯ. ಸಂಸ್ಕೃತದಲ್ಲಿಪ್ಪ ಎಲ್ಲ ಶಬ್ದಂಗಳೂ ಓಂಕಾರಂದ ಆವಿರ್ಬಾವಗೊಂಡ ಶಬಂಗಳೇ.

ವೈದಿಕವಾಙ್ಮಯದ ಮೂಲಾಕ್ಷರವಾದ ಓಂಕಾರಲ್ಲಿ ಎಂಟು ಅಕ್ಷರಂಗೊ – ಅಕಾರ, ಉಕಾರ, ಮಕಾರ, ನಾದ, ಬಿಂದು, ಕಲೆ, ಶಾಂತ, ಅತಿಶಾಂತ. ಇದರಿಂದ ವ್ಯಕ್ತವಾದ್ದು ನಾರಾಯಣ ಅಷ್ಟಾಕ್ಷರ – “ಓಂ ನಮೋ ನಾರಾಯಣಾಯ”. ಓಂಕಾರದ ಎಂಟು ಮೂಲವರ್ಣಂಗಳಿಂದ ಅಕ್ಷರ ಮಾಲಿಕೆಯ ಎಂಟು ವರ್ಗಂಗೊ ರೂಪುಗೊಂಡದು –

೧. ಸ್ವರಾಕ್ಷರಂಗೊ – ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಅಃ
೨. ಕ-ವರ್ಗ – ಕ ಖ ಗ ಘ ಙ
೩. ಚ-ವರ್ಗ – ಚ ಛ ಜ ಝ ಞ
೪. ಟ-ವರ್ಗ – ಟ ಠ ಡ ಢ ಣ
೫. ತ-ವರ್ಗ – ತ ಥ ದ ಧ ನ
೬. ಪ-ವರ್ಗ – ಪ ಫ ಬ ಭ ಮ
೭. ಅಂತಸ್ಥಾಕ್ಷರಂಗೊ – ಯ ರ ಲ ವ
೮. ಅಕೇರಿಯಾಣ ಆರು ಅಕ್ಷರಂಗೊ – ಶ ಷ ಸ ಹ ಳ ಕ್ಷ

ಒಟ್ಟು ‘ಅ’ವಿಂದ ‘ಕ್ಷ’ ವರೇಂಗೆ ಐವತ್ತೊಂದು ಅಕ್ಷರಂಗೊ (ಅ’ಂದ ಕ್ಷ ವರೇಂಗೆ – ಹಾಂಗಾಗಿ ಅ-ಕ್ಷ-ರ).

ಇಡೀ ಪ್ರಪಂಚಲ್ಲಿಪ್ಪ ಎಲ್ಲಾ ಶಬ್ದಂಗಳೂ ಈ ಅಕ್ಷರಂಗಳ ಸಂಯೋಜನೆ. ಎಲ್ಲ ಶಬ್ದಂಗಳೂ ಓಂಕಾರಂದ ಹುಟ್ಟುತ್ತದರಿಂದ ಓಂಕಾರ ವಾಚ್ಯ ಭಗವಂತ° ಸರ್ವಶಬ್ದ ವಾಚ್ಯ. ಹಾಂಗಾಗಿ ಎಲ್ಲ ಶಬ್ದಂಗಳ ಮೂಲಭೂತ ಪವಿತ್ರ ಅರ್ಥ ಭಗವಂತನ ಹೇಳುತ್ತು. ದೋಷಂಗಳ ಹೇಳ್ವ ಪದಂಗಳೂ ಭಗವಂತನಲ್ಲಿ ಕೇವಲ ಪವಿತ್ರ ಅರ್ಥವನ್ನೇ ಹೇಳುತ್ಸು. ಉದಾಹರಣಗೆ ‘ದುಃಖಿ’. ಇದು ಭಗವಂತನಲ್ಲಿ ಹೇಳುವಾಗ ‘ದುಃಖದ ಒಡೆಯ°’ ಹೇಳ್ವ ಅರ್ಥವ ಕೊಡುತ್ತು.

ಐವತ್ತೊಂದು ಅಕ್ಷರಂಗಳಿಂದ (ಮಾತೃಕೆಗಳಿಂದ) ವಾಚ್ಯನಾದ ಭಗವಂತನ ರೂಪಂಗೊ ಐವತ್ತೊಂದು. ಅಜ, ಆನಂದ, ಇಂದ್ರ, ಈಶ, ಉಗ್ರ, ಊರ್ಜ, ಋತಂಭರ, ೠಘ, ಲ್ ಶ, ಲ್ ಂಜಿ, ಏಕಾತ್ಮ, ಐರ, ಓಜೋಭೃತ್ ಔರಸ, ಅಂತ, ಅರ್ಧಗರ್ಭ, ಕಪಿಲ, ಖಪತಿ, ಗರುಡಾಸನ, ಘರ್ಮ, ಙಸಾರ, ಚಾರ್ವಾಂಗ, ಛಂದೋಗಮ್ಯ, ಜನಾರ್ದನ, ಝೂಟಿತಾರಿ, ಞಮ, ಟಂಕಿ, ಠಕಲ, ಡರಕ, ಢರಿ, ಣಾತ್ಮ, ತಾರ, ಥಭ, ದಂಡಿ, ಧನ್ವಿ, ನಮ್ಯ, ಪರ, ಫಲಿ, ಬಲಿ, ಭಗ, ಮನು, ಯಜ್ಞ, ರಾಮ, ಲಕ್ಷ್ಮೀಪತಿ, ವರ, ಶಾಂತಸಂವಿತ್, ಷಡ್ಗುಣ, ಸಾರಾತ್ಮ, ಹಂಸ, ಳಾಳುಕ, ನೃಸಿಂಹ(ನೃಹರ್ಯಕ್ಷ).

ಓಂಕಾರದ ಮೂಲ ಮೂರಕ್ಷರ ಅ ಉ ಮ ಪದ್ಯ-ಗದ್ಯ-ಗಾನ. ಇದು ಮೂರು ರೂಪದ ವೇದವ ಮತ್ತು ವೇದ ಪ್ರತಿಪಾದ್ಯ° ಭಗವಂತನ ಹೇಳುವದು. ‘ಅ’ಕಾರ ಋಗ್ವೇದಕ್ಕೆ ( ಋಗ್ವೇದ ಮಂತ್ರ ಸುರುವಪ್ಪದು”ಅಗ್ನಿಮೀಳೇ ಪುರೋಹಿತಂ …….ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ” ಹೇಳಿ ಇ’ಕಾರಲ್ಲಿ ಅಂತ್ಯ), ಅಲ್ಲಿಂದ ಮುಂದುವರುದು ಯಜುರ್ವೇದ “ಇಷೇ ತ್ವೋರ್ಜೆ ತ್ವಾ …. ಇ’ಕಾರಲ್ಲಿ ಪ್ರಾರಂಭವಾಗಿ ….”ಸಮುದ್ರೋ ಬಂಧುಃ” ಹೇಳಿ ಉಕಾರಲ್ಲಿ ಅಂತ್ಯ. ಹೀಂಗೆ ಓಂಕಾರಲ್ಲಿಪ್ಪ ಅ’ಕಾರ ಮತ್ತೆ ಉ’ಕಾರ ಋಗ್ವೇದ ಮತ್ತೆ ಯಜುರ್ವೇದವ ಪೂರ್ಣವಾಗಿ ಸೂಚುಸುವ ಸಂಕ್ಷೇಪಣಾ ರೂಪ, ಇಲ್ಲಿಂದ ಮುಂದೆ ಸಾಮವೇದ “ಅಗ್ನ ಆ ಯಾಹಿ ……… ಅ’ಕಾರಲ್ಲಿ ಸುರುವಾಗಿ …..ಬೃಹಸ್ಪತಿರ್ದಧಾತು” ಹೇಳಿ ಉ’ಕಾರಲ್ಲಿ  ಅಂತ್ಯ. ಆದರೆ ಇಲ್ಲಿ ಮ’ಕಾರ ಬೈಂದಿಲ್ಲೆನ್ನೆ!! . ಅದು, ನವಗೆ ಗೊಂತಿಪ್ಪಾಂಗೆ, ಸಾಮವೇದ ನಾದ ರೂಪಲ್ಲಿಪ್ಪದು(ಸಂಗೀತ).  ಓಂಕಾರಲ್ಲಿಯೂ ಕೂಡ ‘ಮ’ ಹೇಳ್ವದು ನಾದರೂಪಲ್ಲಿ ಹೊರಹೊಮ್ಮುವ ಅಕ್ಷರ. ಹೀಂಗೆ ಓಂಕಾರವು ವೇದದ ಸಂಕ್ಷೇಪಣಾರೂಪ ಬೀಜಾಕ್ಷರ. ಹಾಂಗಾಗಿ ಓಂಕಾರವು ಭಗವಂತನ ಸ್ತೋತ್ರ ಮಾಡುವ ಮಂತ್ರಂಗಳಲ್ಲಿ ಅತ್ಯಂತ ಪ್ರಕೃಷ್ಟವಾದ್ದು. ಇದರಿಂದ ದೊಡ್ಡಾ ಸ್ತೋತ್ರಮಾಡ್ತ ಶಬ್ದ ಈ ಪ್ರಪಂಚಲ್ಲಿ ಇಲ್ಲೆ. ಹಾಂಗಾಗಿ ಓಂಕಾರವು ಭಗವಂತನ ದೆನಿಗೊಂಬಲೆ ಬಳಸುವ ಅವನ ವಿಶೇಷ ನಾಮ.

ಓಂಕಾರ ವಿಸ್ತೃತ ಆದಪ್ಪಗ ವ್ಯಾಹೃತಿ, ವ್ಯಾಹೃತಿ ವಿಸ್ತಾರವಾಗಿ ಗಾಯತ್ರಿ, ಗಾಯತ್ರಿ ವಿಸ್ತಾರವಾಗಿ ಕುರುಡ ಸೂಕ್ತ, ಮತ್ತೆ ಮೂರು ವೇದಂಗೊ, ಅಲ್ಲಿಂದ ಸಮಸ್ತ ವೇದಂಗೊ. ಹೀಂಗೆ ಪ್ರಣವಲ್ಲಿ, ವ್ಯಾಹೃತಿಲಿ, ಪುರುಷಸೂಕ್ತಲ್ಲಿ, ಸಮಸ್ತವೇದಂಗಳಲ್ಲಿ ಭಗವಂತ° ನೆಲೆಸಿದ್ದ°. ವೇದದ ಶಬ್ದಂಗಳಿಂದಲೇ ಹುಟ್ಟಿ ಬಂದ ಪ್ರಪಂಚದ ಎಲ್ಲಾ ಶಬ್ದಂಗಳಲ್ಲಿಯೂ, ಲೌಕಿಕ ಎಲ್ಲಾ ನಾದಲ್ಲಿಯೂ ಆ ಭಗವಂತ° ತುಂಬಿಗೊಂಡಿದ್ದ°. ಆಕಾಶಲ್ಲಿ ಅನಂತ ಶಬ್ದಂಗೊ, ಅನಂತ ನಾದಂಗಳ ಸೃಷ್ಟಿ ಭಗವಂತನಿಂದ. ನವಗೆ ಶಬ್ದಂದ ಅನಂತ ಅನುಭವವ ಕೊಟ್ಟು ಆ ಶಬ್ದವ ಗ್ರಹಿಸುವ ಮತ್ತೆ ಗ್ರಹಿಸಿ ಪುನರುಚ್ಛರುಸುವ ವಿಶೇಷ ಶಕ್ತಿಯ ಕೊಟ್ಟದು ಆ ಭಗವಂತ°. ಜ್ಞಾನದ ಮೂಲಕ ಈ ಶಬ್ದನಾಮಕ ಭಗವಂತನ ತಿಳ್ಕೊಂಬ ವಿಶೇಷ ಶಕ್ತಿ ಜೀವಿಗೊಕ್ಕೆ ಆ ಭಗವಂತನ ವಿಶೇಷ ಕೊಡುಗೆ.

ಇನ್ನು ‘ಋಕ್’ – ಏವುದರಿಂದ ನಾವು  ಭಗವಂತನ ಅರ್ಚನೆ ಮಾಡುತ್ತೋ ಅದು ಋಕ್. ಅದು ಮಂತ್ರಂಗೊ. ಆರು ಅರ್ಚಿಸಲ್ಪಡುತ್ತನೋ ಅವ° ಋಕ್ ನಾಮಕ ಭಗವಂತ. ಎಲ್ಲ ಮಂತ್ರಂಗಳಿಂದ ಅರ್ಚಿಸಲ್ಪಡುವವ°, ಸ್ತುತಿತೆ ಪಾತ್ರನಾದವ° – ಋಕ್. ಮತ್ತೆ ‘ಸಾಮ’ – ತನ್ನ ಎಲ್ಲ ರೂಪಲ್ಲಿ ಜ್ಞಾನಾನಂದಾದಿ ಗುಣಂಗಳಿಂದ ಸಮ ಆದ್ದರಿಂದ ಮತ್ತೆ ಅವರವರ ಯೋಗ್ಯತಗೆ ಸಮನಾಗಿ ಜೀವನ ಕೊಡುವ ಭಗವಂತ° – ‘ಸಾಮ°’. ಮತ್ತೆ ‘ಯಜುಸ್’ – ಎಲ್ಲ ಯಾಗಂಗಳಿಂದ ಹೋಮುಸಲ್ಪಡುವ, ವೇದಂಗಲಲ್ಲಿ ಸನ್ನಿಹಿತನಾಗಿಪ್ಪ ಸರ್ವಶಬ್ದವಾಚ್ಯ ಭಗವಂತ° – ‘ಯಜುಸ್’.

[ಈ ಎಲ್ಲ ವಿವರಣೆ ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದು. ಅವರ ಜ್ಞಾನ, ವಿದ್ವತ್ತಿಂಗೆ ಬೆಲೆ ಕಟ್ಳೆ ಎಂದಿಂಗೂ ಎಡಿಯ.  ನವಗೆ ವಿಷಯ ಅರ್ತುಗೊಂಬಲೆ ಆತು ಹೇಳಿ ಅವು ಹೇಳಿದ್ದರ ಹಾಂಗೇ ಹೆರ್ಕಿ ಇಲ್ಲಿ ಬರದ್ದದು. ಹಾಂಗಾಗಿ ಅವರ ಪಾಂಡಿತ್ಯಕ್ಕೆ ಇಲ್ಲಿಂದಲೇ ನಮೋ ನಮಃ]

ಮುಂದೆ ಎಂತರ…?     ಬಪ್ಪ ವಾರ ನೋಡುವೋ°.

 ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 09 – SHLOKAS 11 – 17 by CHENNAI BHAAVA

 

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

 

2 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 09 – ಶ್ಲೋಕಂಗೊ 11 – 17

  1. ದೇವರ ಯಾವ ರೀತಿಲಿ ಕಾಣೆಕ್ಕು, ಪೂಜಿಸೆಕ್ಕು ಹೇಳುವ ವಿವರಣೆ , ಓಂಕಾರದ ಸ್ವರೂಪ, ಶ್ರಾದ್ಧದ ಬಗ್ಗೆ ಜಿಜ್ಞಾಸೆ ಎಲ್ಲವೂ ತುಂಬಾ ಲಾಯಿಕಲಿ ವ್ಯಾಖ್ಯಾನ ಆಯಿದು.
    ಧನ್ಯವಾದಂಗೊ ಚೆನ್ನೈ ಭಾವಯ್ಯಂಗೆ ಮತ್ತೆ ಬನ್ನಂಜೆಯವಕ್ಕೆ

  2. ಪ್ರಣವಾಕ್ಷರ ಓಂಕಾರದ ಮೂಲವರ್ಣಂಗೊ, ಅದರಿಂದ ಅಕ್ಷರವರ್ಣಂಗಳ ವ್ಯುತ್ಪತ್ತಿ, “ಓಂ”ಕಾರದ ಮಹತ್ವ – ಈ ಎಲ್ಲ ವಿವರಣೆಗೊ ತುಂಬ ಅರ್ಥಪೂರ್ಣವಾಗಿದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×