Oppanna.com

ಶ್ರೀಮದ್ಭಗವದ್ಗೀತಾ – ಚತುರ್ಥೋsಧ್ಯಾಯಃ – ಜ್ಞಾನಯೋಗಃ – ಶ್ಲೋಕಂಗೊ 21 – 30

ಬರದೋರು :   ಚೆನ್ನೈ ಬಾವ°    on   14/06/2012    1 ಒಪ್ಪಂಗೊ

ಚೆನ್ನೈ ಬಾವ°

ಶ್ಲೋಕ

ನಿರಾಶೀರ್ಯತಚಿತ್ತಾತ್ಮಾ ತ್ಯಕ್ತಸರ್ವಪರಿಗ್ರಹಃ ।
ಶಾರೀರಂ ಕೇವಲಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಮ್ ॥೨೧॥

ಪದವಿಭಾಗ

ನಿರಾಶೀಃ ಯತ-ಚಿತ್ತ-ಆತ್ಮಾ ತ್ಯಕ್ತ-ಸರ್ವ-ಪರಿಗ್ರಹಃ । ಶಾರೀರಮ್ ಕೇವಲಮ್ ಕರ್ಮ ಕುರ್ವನ್ ನ ಆಪ್ನೋತಿ ಕಿಲ್ಬಿಷಮ್ ॥

ಅನ್ವಯ

ನಿರಾಶೀಃ ಯತ-ಚಿತ್ತ-ಆತ್ಮಾ  ತ್ಯಕ್ತ-ಸರ್ವ-ಪರಿಗ್ರಹಃ, ಕೇವಲಂ ಶರೀರಂ ಕರ್ಮ ಕುರ್ವನ್ ಕಿಲ್ಬಿಷಂ ನ ಆಪ್ನೋತಿ ॥

ಪ್ರತಿಪದಾರ್ಥ

ನಿರಾಶೀಃ – ಫಲಾಪೇಕ್ಷೆ ಇಲ್ಲದ್ದೆ, ಯತ-ಚಿತ್ತ-ಆತ್ಮಾ  – ನಿಯಂತ್ರಿತವಾದ ಮನಸ್ಸು ಮತ್ತೆ ಬುದ್ಧಿಗಳಿಪ್ಪ, ತ್ಯಕ್ತ-ಸರ್ವ-ಪರಿಗ್ರಹಃ – ಎಲ್ಲ ವಸ್ತುಗಳ ಮೇಲಾಣ ಒಡೆತನದ ಭಾವವ ಬಿಟ್ಟ, ಕೇವಲಮ್ – ಕೇವಲ, ಶರೀರಮ್ – ದೇಹ ಮತ್ತು ಆತ್ಮಂಗಳ ಒಟ್ಟಿಂಗೆ ಮಡಿಕ್ಕೊಂಬದರಲ್ಲಿ,  ಕರ್ಮ – ಕಾರ್ಯವ, ಕುರ್ವನ್ – ಮಾಡ್ಯೊಂಡು, ಕಿಲ್ಬಿಷಮ್ – ಪಾಪಪ್ರತಿಕ್ರಿಯೆಂಗಳ, ನ ಆಪ್ನೋತಿ – ಹೊಂದುತ್ತನಿಲ್ಲೆ, .

ಅನ್ವಯಾರ್ಥ

ಫಲಾಪೇಕ್ಷೆ ಇಲ್ಲದ್ದೆ, ಎಲ್ಲ ಮೋಹವನ್ನೂ ತ್ಯಜಿಸಿ, ಸದಾ ತೃಪ್ತನಾಗಿ, ಸ್ವತಂತ್ರನಾಗಿ ಕರ್ಮವ ಮಾಡೆಕು ಹೇಳ್ವ ಮನುಷ್ಯ° ಮನಸ್ಸು ಮತ್ತು ಬುದ್ಧಿಯ ಸಂಪೂರ್ಣವಾಗಿ ನಿಯಂತ್ರಣಲ್ಲಿ ಮಡಿಕ್ಕೊಂಡು ಕರ್ಮವ ಮಾಡುತ್ತ°. ತನಗೆ ಸೇರಿದ ಸ್ವತ್ತಿನ ವಿಷಯಲ್ಲಿ ತಾನೇ ಒಡೆಯ° ಹೇಳ್ವ ಭಾವನೆಯ ಸಂಪೂರ್ಣವಾಗಿ ಬಿಟ್ಟುಬಿಡುತ್ತ°, ಮತ್ತು ಶರೀರ ರಕ್ಷಣಗೆ ಬೇಕಾದಷ್ಟು ಮಾತ್ರ ಕರ್ಮವ ಮಾಡುತ್ತ°. ಹೀಂಗೆ ಕರ್ಮವ ಮಾಡುವವನ ಮೇಲೆ ಪಾಪಪೂರಿತ ಪ್ರತಿಕ್ರಿಯೆಗೊ ಯಾವುದೇ ಪರಿಣಾಮ ಆವುತ್ತಿಲ್ಲೆ.

ತಾತ್ಪರ್ಯ / ವಿವರಣೆ

ಕೃಷ್ಣಪ್ರಜ್ಞೆ ಇಪ್ಪ ಮನುಷ್ಯ° ತನ್ನ ಕಾರ್ಯಂಗಳಿಂದ ಒಳ್ಳೆಯ ವಾ ಕೆಟ್ಟ ಪರಿಣಾಮಂಗಳ ನಿರೀಕ್ಷಿಸುತ್ತನಿಲ್ಲೆ. ಅವನ ಮನಸ್ಸು ಮತ್ತು ಬುದ್ಧಿ ಸಂಪೂರ್ಣವಾಗಿ ಹಿಡಿತಲ್ಲಿರುತ್ತು. ತಾನು ಪರಮ ಪ್ರಭುವಿನ ವಿಭಿನ್ನಾಂಶನಾದ್ದರಿಂದ ವಿಭಿನ್ನಾಂಶವಾಗಿ ತಾನು ವಹಿಸುವ ಪಾತ್ರ ತನ್ನ ಕಾರ್ಯ ಅಲ್ಲ ಹೇಳ್ವದು ಅವಂಗೆ ಗೊಂತಿರುತ್ತು. ಈ ಕಾರ್ಯವ ಪರಮ ಪ್ರಭುವು ತನ್ನ ಮೂಲಕ ಮಾಡುಸುತ್ತ° ಹೇಳಿ ಅವಂಗೆ ಗೊಂತಿರುತ್ತು. ಒಂದು ಕೈ ಹಂದುತ್ತು ಹೇಳಿ ಆದರೆ ಅದು ತಾನಾಗಿ ಹಂದುತ್ತದು ಅಲ್ಲ. ಇಡೀ ದೇಹದ ಪ್ರಯತ್ನಂದ ಹಂದುತ್ತದದು. ಕೃಷ್ಣಪ್ರಜ್ಞೆಲ್ಲಿಪ್ಪ ಮನುಷ್ಯ° ಪರಮ ಪ್ರಭುವಿನ ಇಚ್ಛೆಯೊಂದಿಂಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತ°. ಎಂತಕೆ ಹೇಳಿರೆ ಅವಂಗೆ ಇಂದ್ರಿಯ ತೃಪ್ತಿಯ ಅಭಿಲಾಷೆ ಇರ್ತಿಲ್ಲೆ. ಅವ° ಯಂತ್ರದ ಒಂದು ಭಾಗದ ಹಾಂಗೆ ಚಲಿಸಿಗೊಂಡಿರುತ್ತ. ಯಂತ್ರದ ಭಾಗಂಗೆ ಸುಸ್ಥಿತಿಲಿ ಕೆಲಸ ಮಾಡ್ಳೆ ಎಣ್ಣೆ ಹಾಕುತ್ಸು, ಗ್ರೀಸು ಹಾಕುತ್ಸು, ಸ್ವಚ್ಛಗೊಳುಸುತ್ತದು ಹೇಳಿ ಇದ್ದೇ ಇರುತ್ತು. ಹಾಂಗೆಯೇ ಕೃಷ್ಣಪ್ರಜ್ಞೆಲಿ ಇಪ್ಪ ಮನುಷ್ಯ° ತನ್ನ ಕಾರ್ಯದ ಮೂಲಕ ತನ್ನ ಶರೀರವ ಸುಸ್ಥಿತಿಲಿ ಇರಿಸಿಗೊಳ್ಳುತ್ತ°. ಇದು ಭಗವಂತನ ಆಧ್ಯಾತ್ಮಿಕ ಪ್ರೇಮಪೂರ್ವಕ ಸೇವೆಲಿ ಕೆಲಸಮಾಡ್ಳೆ ತನ್ನ ಶರೀರವ ಸುಸ್ಥಿತಿಲಿ ಮಡಿಕ್ಕೊಂಬದು ಮಾತ್ರ. ಆದ್ದರಿಂದ ಅವನ ಕೆಲಸದ ಪ್ರತಿಕ್ರಿಯೆಗೊ ಅವಂಗೆ ಬಾಧಿಸುತ್ತಿಲ್ಲೆ. ದೇಹದ ಸ್ವಾತಂತ್ರ್ಯವೂ ಇಲ್ಲೆ. ಐಹಿಕ ವಸ್ತುಗಳ ಒಡೆತನದ ವ್ಯಾಮೋಹವೂ ಇಲ್ಲೆ. ಅವ° ತನ್ನ ಕರ್ಮಂಗಳ ಎಲ್ಲ ಪ್ರತಿಕ್ರಿಯೆಗಳಿಂದ ಬಿಡುಗಡೆ ಹೊಂದಿರುತ್ತ°.

ಬನ್ನಂಜೆ ವಿವರುಸುತ್ತವು – ಮನಸ್ಸು-ಚಿತ್ತವ ನಿಯಂತ್ರಣಲ್ಲಿ ಇರಿಸಿಗೊಂಡಪ್ಪಗ ಹಂಬಲ ದೂರವಾವ್ತು. ಆನು ಎನ್ನದು ಎಂಬ ಒಡೆತನದ ಭಾವವೂ ಮರೆ ಆವುತ್ತು. ದೇಹ ಪೋಷಣೆ ಕರ್ಮ ಮಾಡ್ಳೆ ಮಾತ್ರ. ಕರ್ಮ ಮಾಡುತ್ಸು ಕರ್ಮ ಮಾಡ್ಳೆ ದೇಹವ ಸುಸ್ಥಿಲಿ ಇರಿಸಿಗೊಂಬಲೆ ಮಾತ್ರ. ಹಾಂಗಾಗಿ ಕರ್ಮ ಮಾಡಿರೂ ದೋಷ ತಟ್ಟುತ್ತಿಲ್ಲೆ. ಇನ್ನು ನಿತ್ಯತೃಪ್ತರಾಗಿರೇಕು ಆಸೆ ಇದ್ದರೆ ಅದರ ರೂಢಿಸಿಗೊಂಬದು ಹೇಂಗೆ? ಲೌಕಿಕ ಆಸೆ ಇಪ್ಪಗ ಅತೃಪ್ತಿ ತಪ್ಪಿದ್ದಲ್ಲ. ಇಲ್ಲದ್ದರ ಬಯಸಿ ಎಂದೂ ಸುಖ ಸಿಕ್ಕಲೆ ಇಲ್ಲೆ. ಹಾಂಗಾರೆ ತೃಪ್ತಿ ಇರೆಕ್ಕಾದರೆ ಮದಾಲು ಬೇಕು ಬೇಡಂಗಳ ಪಟ್ಟಿ ಕಮ್ಮಿ ಮಾಡೆಕು. ಅದಕ್ಕೆ , ಮದಾಲು ಯತಚಿತ್ತನಾಗು ಅದರಿಂದ ನಿರಾಶಿಯಾಗು ಹೇಳಿ ಹೇಳುತ್ತ° ಭಗವಂತ°. ಮದಾಲು ನಮ್ಮ ಮನಸ್ಸು ಮತ್ತು ಚಿತ್ತವ ನಿಯಂತ್ರಣಲ್ಲಿ ಮಡಿಕ್ಕೊಂಬದು. ಇಲ್ಲಿ ಚಿತ್ತ ಹೇಳಿರೆ ನಮ್ಮ ಹಿಂದಾಣ ನೆನಪುಗೊ. ಅರ್ಥಾತ್, ಈ ಹಿಂದೆ ನಮ್ಮ ಮನಸ್ಸಿಲ್ಲಿ ಮೂಡಿತ್ತಿದ್ದ ನೆನಪಿನ ಕೋಶ. ಚಿತ್ತಲ್ಲಿ ಬೇಕು ಬೇಡ, ಆಸೆ ನಿರಾಸೆಗಳ ಕಂತೆ ತುಂಬಿಗೊಂಡಿರುತ್ತು. ಹಾಂಗಾಗಿ ಆ ಆಸೆಗೊ ಮತ್ತೆ ಮರುಕಳಿಸದ್ದ ಹಾಂಗೆ ನೋಡಿಗೊ. ಭೂತಕಾಲದ ಆಸೆಯ ಮತ್ತೆ ಕೆದಕೆಡ. ಹೊಸ ಆಸೆಯ ತುಂಬಿಸಿಗೊಳ್ಳೆಡ. ಅದರ ಚಿತ್ತಂದ ಸಂಪೂರ್ಣವಾಗಿ ಕಿತ್ತೊಗೆದು ವರ್ತಮಾನ ಕಾಲಲ್ಲಿ ಬೇಕು ಬೇಡಂಗಳನ್ನೂ ತುಂಬುಸಿಗೊಳ್ಳದ್ದೆ ಮನಸ್ಸಿನ ಹತೋಟಿಲಿ ಮಡಿಕ್ಕೊಂಬದು. ಈ ರೀತಿ ರೂಢಿ ಮಾಡಿಗೊಂಡರೆ ಮತ್ತೆ ನವಗೆ ಆಸೆ ಎಂಬ ಪ್ರಮೇಯವೇ ಇಲ್ಲೆ. ಇಂದ್ರಿಯ ಆಸೆ ಇಲ್ಲದ್ದ ಮತ್ತೆ ಮನಸ್ಸಿನ ಅತೃಪ್ತಿ ಹೇಳ್ವ ಸಂಗತಿಯೇ ಬತ್ತಿಲ್ಲೆ. ಹೀಂಗೆ ಮನಸ್ಸಿನ ತೃಪ್ತಿಪಡಿಸಿ (ಇಂದ್ರಿಯಂಗಳ ಆಸೆ ಮಡಿಕ್ಕೊಳ್ಳದ್ದೆ ಇಂದ್ರಿಯಂಗಳ ಸಂಪೂರ್ಣ ಹತೋಟಿಲಿ ಮಡಿಕ್ಕೊಂಡು ಇಂದ್ರಿಯಂಗಳ ಗೆದ್ದು ತೃಪ್ತಿ)    ಆದ ಮತ್ತೆ ಅದರ ಒಟ್ಟಿಂಗೆ ‘ಆತ್ಮಾ ತ್ಯಕ್ತ ಸರ್ವ ಪರಿಗ್ರಹಃ’. ಇಲ್ಲಿ ಪರಿಗ್ರಹ ಹೇಳಿರೆ ಸಂಸಾರ, ಕುಟುಂಬ ಎಲ್ಲ ಬಿಟ್ಟು ಕಾಡಿಂಗೆ ಹೋವ್ತದು ಹೇಳಿ ಅರ್ಥ ಅಲ್ಲ. ಎಲ್ಲವುದರ ಜೊತೆಲಿಯೇ ಇದ್ದುಗೊಂಡು ಅದರ ಮೇಲಾಣ ಅತೀವ ಮೋಹವ ಬಿಟ್ಟುಬಿಡುವದಾವ್ತು. ಅಭಿಮಾನ ತ್ಯಾಗ. ಎಲ್ಲವೂ ಇರಲಿ ಆದರೆ ಅದರ್ಲೇ ಅಂಟಿಗೊಂಬದು ಬೇಡ ಹೇಳ್ವ ಅರ್ಥ. ಅದರೊಂದಿಂಗೆ ಬದುಕು ಆದರೆ ಅದನ್ನೇ ಅಂಟಿಸಿಗೊಳ್ಳೆಡ. ತಾವರೆಯ ಎಲೆ ಹೇಂಗೆ ನೀರಿಲ್ಲೇ ಇದ್ದು ನೀರಿನ ಆಂಟಿಸಿಗೊಳ್ಳುತ್ತಿಲ್ಲೆಯೋ ಹಾಂಗೆ. ಈ ರೀತಿ ಬದುಕಲೆ ಕಲ್ತರೆ ಆ ಅರಿವಿಂದ ಮಾಡಿದ ಕರ್ಮಂಗಳ ಪ್ರತಿಕ್ರಿಯೆ ನವಗೆ ಅಂಟುತ್ತಿಲ್ಲೆ. ಆಧ್ಯಾತ್ಮಿಕ ಸಾಧನೆ ಹೇಳ್ವದು ಎಲ್ಲವನ್ನೂ ಬಿಟ್ಟು ದೂರ ಕಾಡಿಂಗೆ ಹೋಗಿ ತಪಸ್ಸು ಮಾಡುವದು ಹೇಳಿ ಅಲ್ಲ. ಬದಲಾಗಿ, ಮನೆಲಿಯೇ ಇದ್ದುಗೊಂಡು, ಆದರೆ, ಮನೆವಿಚಾರವನ್ನೇ ಮನಸ್ಸಿಲ್ಲಿ ಮಡಿಕ್ಕೊಳ್ಳದ್ದೆ, ಒಡೆತನವ ಅಥವಾ ಮೋಹವ ಆಂಟುಸಿಗೊಳ್ಳದ್ದೆ ಭಗವಂತನ ಸೇವೆಲಿ ತೊಡಗುವದು. ಇದುವೇ ಆಧ್ಯಾತ್ಮ ಬದುಕು. ಈ ರೀತಿಲಿ ಅರಿವಿಂದ ಕರ್ಮ ಮಾಡಿರೆ ಆ ಕರ್ಮದ ಪ್ರತಿಕ್ರಿಯೆ ಆಂಟುತ್ತಿಲ್ಲೆ.

ಶ್ಲೋಕ

ಯದೃಚ್ಛಾಲಾಭಸಂತುಷ್ಟೋ ದ್ವಂದ್ವಾತೀತೋ ವಿಮತ್ಸರಃ ।
ಸಮಃ ಸಿದ್ಧಾವಸಿದ್ಧೌ ಚ ಕೃತ್ವಾಪಿ ನ ನಿಬಧ್ಯತೇ ॥೨೨॥

ಪದವಿಭಾಗ

ಯದೃಚ್ಛಾ-ಲಾಭ-ಸಂತುಷ್ಟಃ ದ್ವಂದ್ವ-ಅತೀತ ವಿಮತ್ಸರಃ । ಸಮಃ ಸಿದ್ಧೌ ಅಸಿದ್ಧೌ ಚ ಕೃತ್ವಾ ಅಪಿ ನ ನಿಬಧ್ಯತೇ ॥

ಅನ್ವಯ

ಯದೃಚ್ಛಾ-ಲಾಭ-ಸಂತುಷ್ಟಃ ದ್ವಂದ್ವ-ಅತೀತಃ ವಿಮತ್ಸರಃ ಸಿದ್ಧೌ ಅಸಿದ್ಧೌ ಚ ಸಮಃ, ಕೃತ್ವಾ ಅಪಿ ನ ನಿಬಧ್ಯತೇ ॥

ಪ್ರತಿಪದಾರ್ಥ

ಯದೃಚ್ಛಾ-ಲಾಭ-ಸಂತುಷ್ಟಃ  – ತಾನಾಗಿಯೇ ಬಂದ ಲಾಭಂದ ತೃಪ್ತನಾದವ°, ದ್ವಂದ್ವ -ಅತೀತಃ – ದ್ವಂದ್ವಭಾವವ ಮೀರಿದವ°, ವಿಮತ್ಸರಃ – ಮತ್ಸರ ಇಲ್ಲದ್ದವ°,   ಸಿದ್ಧೌ – ಯಶಸ್ಸಿಲ್ಲಿ, ಅಸಿದ್ದೌ – ವೈಫಲ್ಯಲ್ಲಿ, ಚ – ಕೂಡ, ಸಮಃ – ಸ್ಥಿರ° (ಸಮಾನ), ಕೃತ್ವಾ ಅಪಿ – ಮಾಡಿಯೂ ಕೂಡ, ನ ನಿಬಧ್ಯತೇ – ಬಾಧಿತನಾವುತ್ತನಿಲ್ಲೆ.

ಅನ್ವಯಾರ್ಥ

ತಾನಾಗಿ ಬಂದ ಲಾಭಂದ ತೃಪ್ತಿಯಿಪ್ಪವ°, ದ್ವಂದ್ವಾತೀತನಾಗಿಪ್ಪವ°, ಅಸೂಯೆ ಇಲ್ಲದ್ದವ°, ಸೋಲುಗೆಲುವುಗಳ ಏಕಪ್ರಕಾರವಾಗಿ ಸ್ವೀಕರುಸುವವ ಆಗಿಪ್ಪ ಮನುಷ್ಯ° ಕರ್ಮವ ಮಾಡಿರೂ ಬಂಧನಕ್ಕೆ ಸಿಲುಕಿಗೊಳ್ಳುತ್ತನಿಲ್ಲೆ.

ತಾತ್ಪರ್ಯ / ವಿವರಣೆ

ಕೃಷ್ಣಪ್ರಜ್ಞೆಲಿ ಇಪ್ಪ ಮನುಷ್ಯ° ತನ್ನ ದೇಹ ರಕ್ಷಣೆಗೆ ಹೆಚ್ಚಿನ ಪ್ರಯತ್ನವ ಮಾಡಿಗೊಂಡಿರುತ್ತನಿಲ್ಲೆ. ತಾನಾಗಿ ಬಂದದ್ದರಲ್ಲಿ ತೃಪ್ತಿಪಟ್ಟುಗೊಳ್ಳುತ್ತ°. ಅವ° ಆರನ್ನೂ ಬೇಡುತ್ತನಿಲ್ಲ, ಸಾಲವನ್ನೂ ಮಾಡುತ್ತನಿಲ್ಲೆ. ತನ್ನಿಂದ ಎಡಿಗಪ್ಪ ಶ್ರಮವ ಮಾಡುತ್ತ. ತನ್ನ ಪ್ರಾಮಾಣಿಕ ಶ್ರಮಂದ ಬಂದದ್ದರಲ್ಲಿ ಸಂಪೂರ್ಣ ತೃಪ್ತಿ. ಆದ್ದರಿಂದ ತನ್ನ ಜೀವನ ನಿರ್ವಹಣೆಲಿ ಆತ° ಸ್ವತಂತ್ರ. ಭಗವಂತನೆ ಸೇವಗೆ ಯಾವುದೇ ದ್ವಂದ್ವಕ್ಕೆ ಬಲಿಯಾಗದ್ದೆ ಸ್ಥಿತಪ್ರಜ್ಞನಾಗಿ ಕರ್ಮವ ಮಾಡುತ್ತ°. ಆ ಕರ್ಮಲ್ಲಿ ತೃಪ್ತಿಯನ್ನೂ ಕಂಡುಗೊಳ್ಳುತ್ತ°. ಕರ್ಮ ಪಥಲ್ಲಿ ಯಾವ ಅಡಚಣೆಗೊ ಬಂದರೂ ಅದರ ಲಕ್ಷ್ಯಕ್ಕೆ ತೆಕ್ಕೊಳ್ಳುತ್ತನಿಲ್ಲೆ. ಆದ್ದರಿಂದ ಸೋಲು ಗೆಲುವು ಹೇಳ್ವ ಭಾವನೆ ಅವಂಗೆ ಇಲ್ಲೆ. ಎಲ್ಲವೂ ಸಮಾನವೆ. ಅಂಥವಂಗೆ ಯಾವ ಕರ್ಮ ಬಂಧನವೂ ಇಲ್ಲೆ.

ಆಧ್ಯಾತ್ಮ ತೃಪ್ತಿಯ ಸಾಧಿಸಿದ ಮನುಷ್ಯಂಗೆ ಅರ್ಥಾತ್ ಕೃಷ್ಣಪ್ರಜ್ಞೆಲಿ ಇಪ್ಪವಂಗೆ ಅದು ಸಿಕ್ಕೆಕು ಇದು ಸಿಕ್ಕೆಕು ಹೇಳ್ವ ಗೊಂದಲ ಇಲ್ಲೆ. ಏನೇ ಸಿಕ್ಕಿರೂ ಅದು ಭಗವಂತನ ಪ್ರಸಾದ ಹೇಳಿ ಸ್ವೀಕರುಸುವ ಪ್ರಜ್ಞೆ ಅವನದ್ದು. ನವಗೆ ಉದ್ಯೋಗ., ಪ್ರತಿಭೆ ಇಪ್ಪವಕ್ಕೆ ಎಲ್ಲೋರಿಂಗೂ ಉದ್ಯೋಗ ಸಿಕ್ಕುತ್ತಿಲ್ಲೆ. ಉದ್ಯೋಗ ಸಿಕ್ಕಿದವಕ್ಕೆ ಒಳ್ಳೆ ಸಂಬಳ ಸಿಕ್ಕಿಯೇ ಸಿಕ್ಕಿತ್ತು ಹೇಳ್ವ ನಂಬಿಕೆಯೂ ಇಲ್ಲೆ. ಎಲ್ಲಾ ಭಗವಂತನ ಇಚ್ಛೆ. ಆದ್ದರಿಂದ ಎಲ್ಲವೂ ಭಗವಂತನ ಸಂಕಲ್ಪ ಹೇಳಿ ನಿಸ್ವಾರ್ಥ ಸೇವೆಲಿ (ಕರ್ಮಲ್ಲಿ) ತೊಡಗಿಯಪ್ಪಗ ಮನಸ್ಸು ನಿರ್ಮಲ ಆಗಿರುತ್ತು. ಈ ಸ್ಥಿತಿಲಿ ಮತ್ತೆ ಅಹಂಕಾರ ಹತ್ತರೆ ಸುಳಿತ್ತಿಲ್ಲೆ. ಬಡತನವಾಗಲಿ , ಸಿರಿತನವಾಗಲಿ ಯಾವುದೂ ನಮ್ಮ ಕೈಲಿ ಇಲ್ಲೆ. ಎಲ್ಲವೂ ಆ ಭಗವಂತನ ಇಚ್ಛೆ. ಇದರ ತಿಳುಕ್ಕೊಂಬದು ಯತಚಿತ್ತಾತ್ಮನ ಸಾಮರ್ಥ್ಯ. ಹಾಂಗೆ ದ್ವಂದ್ವ . ಹಗಲು ರಾತ್ರಿ ಇಪ್ಪ ಹಾಂಗೆ . ಹೇಂಗೆ ನಾವು ಹಗಲು ರಾತ್ರಿಗೂ ನಮ್ಮ ನಾವು ಒಗ್ಗಿಸಿಗೊಂಡಿರುತ್ತೋ ಹಾಂಗೆಯೇ ಲಾಭ ನಷ್ಟಲ್ಲಿ, ಸೋಲು ಗೆಲುವಿಲ್ಲಿ, ಹುಟ್ಟು ಸಾವಿಲ್ಲಿ ವಿಚಲಿತನಾಗದ್ದೆ ಏಕರೀತಿಯ ಮನೋಭಾವಂದ ಸ್ವೀಕರುಸೆಕು. ಇದುವೇ ದ್ವಂದ್ವಾತೀತ ಜೀವನ. ದ್ವಂದ್ವಾತೀತನಾಗಿ ಬದುಕುವಾಗ ಇನ್ನೊಬ್ಬ ಹೆಚ್ಚಿಗೆ ಗಳುಸುತ್ತ°, ಇನ್ನೊಬ್ಬಂಗೆ ಹೆಚ್ಚಿಗೆ ಸಿಕ್ಕುತ್ತು , ನಮ್ಮಂದ ಕೆಳಮಟ್ಟದೋರು ಮೇಲ್ಮಟ್ಟಕ್ಕೆ ಎತ್ತಿದ್ದವು ಹೇಳಿ ಹೊಟ್ಟೆಕಿಚ್ಚು ಪಟ್ಟುಗೊಂಬಲೂ ಇಲ್ಲೆ. ಇನ್ನೊಬ್ಬನ ಕಂಡು ಎಂದೂ ಮತ್ಸರ ಪಡಬೇಡ ಹೇಳಿ ಭಗವಂತ° ಹೇಳಿದ್ದು. ನಾವು ಎಷ್ಟು ಕೌಶಲ್ಯವಂತರಾಗಿದ್ದರೂ ಭಗವಂತ° ಅನುಗ್ರಹಿಸದ್ರೆ ಎಂತದೂ ಸಿಕ್ಕ, ದಕ್ಕ. ಈ ಎಚ್ಚರೆವೇ ‘ಯದೃಚ್ಛಾ ಲಾಭ ಸಂತುಷ್ಟಃ’. ಇನ್ನು ಸಿದ್ಧಿ-ಅಸಿದ್ಧಿಗೊ. ಯಾವುದಾರು ಸಿದ್ಧಿಸದ್ದೆ ಹೋದರೆ ಅದಕ್ಕೆ ಹೆದರೇಡ. ಅದರಲ್ಲೇ ಭಗವಂತನ ಕಾಣು. ಅಸಿದ್ಧಿಗೆ ತಲೆ ಕೆಡುಸೆಡ. ಮನಸ್ಸಿನ ಏಕಾಗ್ರತೆ ಸದಾ ಮಡಿಕ್ಕೊ. ಅಸಿದ್ಧಿಯು ಸಿದ್ಧಿಯ ಮೆಟ್ಟುಗಲ್ಲು. ಇಂತಹ ಮಾನಸಿಕ ಸಮತೋಲನವ ಕಾಪಾಡಿಗೊಂಡು ಕರ್ಮವ ಮಾಡಿರೆ ಕರ್ಮಬಂಧನ ಇಲ್ಲೆ. ಏಕೆ ಹೇಳಿರೆ ಎಲ್ಲವೂ ನಿಸ್ವಾರ್ಥ ಭಾವದ ಭಗವಂತನ ಸೇವೆ.

ಶ್ಲೋಕ

ಗತಸಂಗಸ್ಯ ಮುಕ್ತಸ್ಯ ಜ್ಞಾನಾವಸ್ಥಿತ ಚೇತಸಃ ।
ಯಜ್ಞಾಯಾಚರತಃ ಕರ್ಮ ಸಮಗ್ರಂ ಪ್ರವಿಲೀಯತೇ ॥೨೩॥

ಪದವಿಭಾಗ

ಗತ-ಸಂಗಸ್ಯ ಮುಕ್ತಸ್ಯ ಜ್ಞಾನ-ಅವಸ್ಥಿತ-ಚೇತಸಃ । ಯಜ್ಞಾಯ ಆಚರತಃ ಕರ್ಮ ಸಮಗ್ರಮ್ ಪ್ರವಲೀಯತೇ ॥

ಅನ್ವಯ

ಗತ-ಸಂಗಸ್ಯ ಜ್ಞಾನ-ಅವಸ್ಥಿತ-ಚೇತಸಃ ಯಜ್ಞಾಯ ಆಚರತಃ ಮುಕ್ತಸ್ಯ ಕರ್ಮ ಸಮಗ್ರಂ ಪ್ರವಲೀಯತೇ ॥

ಪ್ರತಿಪದಾರ್ಥ

ಗತ-ಸಂಗಸ್ಯ – ಪ್ರಕೃತಿಗುಣಂಗಳಲ್ಲಿ ಅನಾಸಕ್ತನಾದವನ, ಜ್ಞಾನ-ಅವಸ್ಥಿತ-ಚೇತಸಃ  – ದಿವ್ಯ ಜ್ಞಾನಲ್ಲಿ ಸ್ಥಿತಿಗೊಂಡ ಜ್ಞಾನವುಳ್ಳ,  ಯಜ್ಞಾಯ – ಯಜ್ಞಂಗಾಗಿ (ಕೃಷ್ಣನಿಗೋಸ್ಕರ), ಆಚರತಃ – ಆಚರುಸುವವನ, ಮುಕ್ತಸ್ಯ – ಮುಕ್ತನಾದವನ, ಕರ್ಮ – ಕರ್ಮವು, ಸಮಗ್ರಮ್ – ಸಮಗ್ರವಾಗಿ, ಪ್ರವಲೀಯತೇ – ಪೂರ್ಣವಾಗಿ ಲೀನ ಆವುತ್ತು.

ಅನ್ವಯಾರ್ಥ

ಐಹಿಕ ಪ್ರಕೃತಿಯ ಗುಣಂಗೊಕ್ಕೆ ಅಂಟಿಗೊಳ್ಳದ್ದವ° ಮತ್ತು ಆಧ್ಯಾತ್ಮಿಕ ಜ್ಞಾನಲ್ಲಿ ಸಂಪೂರ್ಣವಾಗಿ ನೆಲೆಗೊಂಡವನಾದ ಮನುಷ್ಯನ ಕರ್ಮವು ಅಧ್ಯಾತ್ಮಲ್ಲಿ ಸಂಪೂರ್ಣವಾಗಿ ಲೀನವಾವ್ತು.

ತಾತ್ಪರ್ಯ / ವಿವರಣೆ

ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯ ಪಡದಪ್ಪಗ ಮನುಷ್ಯ ಎಲ್ಲ ದ್ವಂದ್ವಂಗಳಿಂದ ಮುಕ್ತನಾವುತ್ತ°. ಹೀಂಗೆ ಆತ° ಐಹಿಕ ಗುಣಂಗಳ ಎಲ್ಲ ಕಲ್ಮಷಂಗಳಿಂದ ಬಿಡುಗಡೆ ಆವುತ್ತ°. ಆತಂಗೆ ಕೃಷ್ಣನ ಸಂಬಂಧಲ್ಲಿ ತನ್ನ ಸ್ವರೂಪದ ಸ್ಥಿತಿ ಅರ್ಥವಾವ್ತು. ಅವನ ಮನಸ್ಸಿನ ಕೃಷ್ಣಪ್ರಜ್ಞೆಂದ ಇತ್ತೆ ಎಳವಲೆ ಸಾಧ್ಯ ಇಲ್ಲೆ. ಈ ರೀತಿಯಾಗಿ ಐಹಿಕ ವಿಷ್ಯಂಗಳಿಂದ ಅವ ಮುಕ್ತನಾಗಿರುತ್ತ°. ಅವ° ಎಂತ ಮಾಡಿರೂ ಅದು ಭಗವಂತನ ಸೇವೆಗಾಗಿಯೇ ಆಗಿರ್ತು. ಆದ್ದರಿಂದ ವಿಶಿಷ್ಟಾರ್ಥಲ್ಲಿ ಆತನ ಕರ್ಮಂಗೊ ಎಲ್ಲವೂ ಯಜ್ಞವೇ. ಎಂತಕೆ ಹೇಳಿರೆ ಯಜ್ಞದ ಕೊನೆ ಉದ್ದೇಶ ಭಗವಂತನ ತೃಪ್ತಿಗೊಳುಸುವದು. ಆದ್ದರಿಂದ ಅವಂಗೆ ಐಹಿಕ ಪರಿಣಾಮಂಗಳ ತೊಂದರಗೆ ಇರ್ತಿಲ್ಲೆ.

ಅರ್ಥಾತ್, ಫಲದ ನಂಟು ಬಿಟ್ಟು, ದೇಹಾಭಿಮಾನ ಬಿಟ್ಟು, ಭಗವಂತನ ಅರಿವಿಲ್ಲಿಯೇ ಮನನೆಟ್ಟು ಪೂಜೆ-ಯಜ್ಞಾದಿಗಳ ಮಾಡುವವನ ಎಲ್ಲ ಕರ್ಮವೂ ಭಗವಂತನಲ್ಲಿ ಲೀನಗೊಳ್ಳುತ್ತು. ಈ ಒಂದು ಶ್ಲೋಕಲ್ಲಿಯೇ ಭಗವಂತ° ಈ ಮದಲೆ ಹೇಳಿದ ವಿಷಯಂಗಳ ಸಾರವ ಹೇಳಿದ್ದ°. ಫಲದ ಬಗ್ಗೆ ಅತಿಯಾದ ಆಸೆ ಮಡಿಕ್ಕೊಳ್ಳೆಡ, ಅತಿಯಾದ ನಿರೀಕ್ಷೆ ಮಾಡೇಡ, ಕರ್ತವ್ಯಲ್ಲಿ ನಿಷ್ಠೆ ಇರಲಿ, ದೇಹಾಭಿಮಾನ, ಪರಿವಾರದ ಅಭಿಮಾನವ ಬಿಟ್ಟು ನಿರ್ಲಿಪ್ತನಾಗಿ ಬದುಕಲೆ ಕಲಿ. ಮನಸ್ಸಿನ ಜ್ಞಾನಸ್ವರೂಪನಾದ ಭಗವಂತನಲ್ಲಿ ನೆಡು. ಹೀಂಗೆ ಬದುಕುವಾಗ ನಾವು ಮಾಡುವ ಕರ್ಮವೆಲ್ಲವೂ ಯಜ್ಞವಾಗಿ ಭಗವಂತನಲ್ಲಿ ಲೀನಗೊಳ್ಳುತ್ತು. ಜ್ಞಾನದ ಕಿಚ್ಚಿಲ್ಲಿ ಕರ್ಮದ ಕೊಳೆ ಸುಟ್ಟು ಹೋವುತ್ತು ಹೇದು ಬನ್ನಂಜೆಯವು ವ್ಯಾಖ್ಯಾನಿಸಿದ್ದವು.

ಶ್ಲೋಕ

ಬ್ರಹ್ಮಾರ್ಪಣಂ ಬ್ರಹ್ಮ ಹವಿಃ ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್ ।
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮಸಮಾಧಿನಾ ॥೨೪॥

ಪದವಿಭಾಗ

ಬ್ರಹ್ಮ-ಅರ್ಪಣಮ್ ಬ್ರಹ್ಮ-ಹವಿಃ ಬ್ರಹ್ಮ-ಅಗ್ನೌ ಬ್ರಹ್ಮಣಾ ಹುತಮ್ । ಬ್ರಹ್ಮ ಏವ ತೇನ ಗಂತವ್ಯಮ್ ಬ್ರಹ್ಮ-ಕರ್ಮ ಸಮಾಧಿನಾ ॥

ಅನ್ವಯ

ಬ್ರಹ್ಮ-ಅರ್ಪಣಂ, ಬ್ರಹ್ಮ-ಹವಿಃ, ಬ್ರಹ್ಮ-ಅಗ್ನೌ ಬ್ರಹ್ಮಣಾ ಹುತಮ್, ಬ್ರಹ್ಮ-ಕರ್ಮ-ಸಮಾಧಿನಾ ತೇನ ಬ್ರಹ್ಮ ಏವ ಗಂತವ್ಯಮ್ ॥

ಪ್ರತಿಪದಾರ್ಥ

ಬ್ರಹ್ಮ-ಅರ್ಪಣಮ್ – ಅಧ್ಯಾತ್ಮ ಸ್ವಭಾವದ ಅರ್ಪಣೆಯು, ಬ್ರಹ್ಮ-ಹವಿಃ – ಪರಮೋನ್ನತವಾದ ಹವಿಸ್ಸು, ಬ್ರಹ್ಮ-ಅಗ್ನೌ  – ಅಧ್ಯಾತ್ಮವಾದ ಅಗ್ನಿಲಿ, ಬ್ರಹ್ಮಣಾ ಹುತಮ್ – ಅಧ್ಯಾತ್ಮ ಚೇತನಂದ ಹೋಮಿಸಲ್ಪಟ್ಟ,  ಬ್ರಹ್ಮ-ಕರ್ಮ-ಸಮಾಧಿನಾ – ಆ  ಆಧ್ಯಾತ್ಮಿಕ  ಚಟುವಟಿಕೆಲಿ ಪೂರ್ಣತಲ್ಲೀನತೆಂದ. ತೇನ – ಅವಂದ,  ಬ್ರಹ್ಮ  ಏವ – ಪರಮೋನ್ನತ ಅಧ್ಯಾತ್ಮನನ್ನೇ,  ಗಂತವ್ಯಂ – ಹೊಂದೆಕ್ಕಾದ್ದು.

ಅನ್ವಯಾರ್ಥ

ಅರ್ಪಣ ಕ್ರಿಯೆ ಬ್ರಹ್ಮ, ಹವಿಸ್ಸು ಬ್ರಹ್ಮ, ಅಗ್ನಿಬ್ರಹ್ಮ , ಹೋಮವೂ ಬ್ರಹ್ಮ. ಕರ್ಮಲ್ಲಿ ಬ್ರಹ್ಮಬುದ್ದಿಯಿಪ್ಪ ಮನುಷ್ಯ° ಪಡವ ಫಲವೂ ಬ್ರಹ್ಮವೇ ಆಗಿರುತ್ತು.

ತಾತ್ಪರ್ಯ / ವಿವರಣೆ

ಇಲ್ಲಿ ಎಲ್ಲವೂ ಬ್ರಹ್ಮವೇ ಹೇಳ್ವದು ಅರ್ಥ. ಇಲ್ಲಿ ಬ್ರಹ್ಮ ಹೇಳಿರೆ ಪರಾತ್ಪರ ಪರಬ್ರಹ್ಮ, ಭಗವಂತ°. ಅರ್ಪಣವೂ ಭಗವಂತ° (ಭಗವಂತನಲ್ಲಿ ಅರ್ಪಣ), ಅರ್ಪುಸುವ ಹವಿಸ್ಸೂ ಭಗವಂತ° (ಭಗವಂತನಿಂದ), ಬೆಂಕಿಯ ರೂಪಲ್ಲಿಪ್ಪ ಭಗವಂತನಲ್ಲಿ (ಭಗವದಧೀನವಾದ ಬೆಂಕಿ) ಹೋಮ ಮಾಡುವದು. ಏಕಾಗ್ರತೆಯ ಜತಗೆ ಕರ್ಮದ ವ್ಯಗ್ರತೆಯೂ ಭಗವಂತನೆ (ಭಗವಂತನ ಅಧೀನ)

ಕೃಷ್ಣಪ್ರಜ್ಞೆಲಿ ಸಂಪೂರ್ಣವಾಗಿ ಮಗ್ನನಾದ ಮನುಷ್ಯ° ನಿಶ್ಚಯವಾಗಿಯೂ ಆ ಭಗವದ್ಧಾಮವ ಸೇರುತ್ತ. ಎಂತಕೆ ಹೇಳಿರೆ ಅವ° ಆಧ್ಯಾತ್ಮಿಕ ಕಾರ್ಯಂಗೊಕ್ಕೆ ಸಂಪೂರ್ಣವಾಗಿ ಅರ್ಪಿತನಾಗಿರುತ್ತ°. ಇಂತಹ ಆಧ್ಯಾತ್ಮಿಕ ಕಾರ್ಯಲ್ಲಿ ಆಹುತಿಯೂ ಪರಾರ್ಮರವಾದ್ದು ಮತ್ತು ಅರ್ಪಣವೂ ಇದೇ ಆಧ್ಯಾತ್ಮಿಕ ಸ್ವಭಾವದ್ದು.  ಕೃಷ್ಣಪ್ರಜ್ಞೆಂದ ಕೂಡಿದ ಕಾರ್ಯ ಚಟುವಟಿಕೆಗೊ ಮನುಷ್ಯನ ಕಡೇಂಗೆ ಹೇಂಗೆ ಆಧ್ಯಾತ್ಮಿಕ ಗುರಿಗೆ ಕೊಂಡೊಯ್ಯುತ್ತು ಹೇಳ್ವದರ ಇಲ್ಲಿ ವಿವರಿಸಿದ್ದು. ಭೌತಿಕ ಕಲ್ಮಷಲ್ಲಿ ಸಿಕ್ಕಿಗೊಂಡಿಪ್ಪ ಬದ್ಧಾತ್ಮ ಖಂಡಿತವಾಗಿಯೂ ಭೌತಿಕ ವಾತಾವರಣಲ್ಲಿ ಕರ್ಮ ಮಾಡುತ್ತ°. ಆದರೆ ಇದಕ್ಕಾಗಿ ಅವ° ಭೌತಿಕ ಆವರಣಂದ ಹೆರಬರೆಕ್ಕಾವ್ತು. ಭೌತಿಕ ಆವಾರಣಂದ ಬದ್ಧಾತ್ಮ ಹೆರಬಪ್ಪ ಪ್ರಕ್ರಿಯೆಯೇ ಕೃಷ್ಣಪ್ರಜ್ಞೆ. ಐಹಿಕಲ್ಲೇ ಮೈಮರದ ಬದ್ಧಾತ್ಮಂಗೆ ಅದರಿಂದ ಹೆರಬಪ್ಪಲೆ ಕೃಷ್ಣಪ್ರಜ್ಞೆಯೇ ಮಾರ್ಗ. ಈ ಪ್ರಕೃಯೆಗೆ ಯಜ್ಞ ಹೇಳಿ ಹೆಸರು. ಅರ್ಥಾತ್ ಕೃಷ್ಣನ (ಭಗವಂತನ) ಸಂಪ್ರೀತಿಗಾಗಿಯೇ ಮಾಡುವ ಕಾರ್ಯ. ಐಹಿಕ ಜಗತ್ತಿನ ಚಟುವಟಿಕೆಗಳ ಕೃಷ್ಣಪ್ರಜ್ಞೆಲಿ ಮಾಡಿಯಪ್ಪಗ ಸಮಾಧಿ ಅಥವಾ ಸಂಪೂರ್ಣ ಲೀನತೆಗೆ ವಾತಾವರಣವು ಆಧ್ಯಾತ್ಮಿಕ ಆವುತ್ತು. ಭಗವಂತ ಹೇಳಿರೆ ಆಧ್ಯಾತ್ಮ. ಬ್ರಹ್ಮ ಹೇಳುವ ಪದಕ್ಕೆ ಆಧ್ಯಾತ್ಮ ಹೇಳುವ ಅರ್ಥವೂ ಕೂಡ. ಅವನ ಅಲೌಕಿಕ ಶರೀರದ ಕಿರಣಂಗೊ ಬ್ರಹ್ಮಜ್ಯೋತಿ ಹೇಳಿ ಹೆಸರು. ಅಸ್ತಿತ್ವಲ್ಲಿಪ್ಪದೆಲ್ಲವೂ ಆ ಬ್ರಹ್ಮಜ್ಯೋತಿಲಿ ನೆಲೆಗೊಂಡಿಪ್ಪಂತದ್ದು. ಆದರೆ ಮಾಯೆ ಅಥವಾ ಇಂದ್ರಿಯತೃಪ್ತಿ ಆ ಜ್ಯೋತಿಯ ಮುಸಿಕಿಯಪ್ಪಗ ಅದಕ್ಕೆ ಐಹಿಕ ಹೇಳಿ ಹೆಸರು. ಕೃಷ್ಣಪ್ರಜ್ಞೆ ಆ ಐಹಿಕ ಮುಸಿಕಿನ ಕಿತ್ತು ಹಾಕಲೆ ಸಾಧ್ಯ. ಹಾಂಗಾಗಿ ಮಾಡಿದ ಕ್ರಿಯೆ ಕೃಷ್ಣಪ್ರಜ್ಞೆಗಾಗಿಯೇ ಅರ್ಪಿಸಿದ್ದು ಹೇಳಿ ಆತು. ಈ ಅರ್ಪಣೆಯ ಆಹುತಿಯಾಗಿ ಸ್ವೀಕರುಸುವ ಪ್ರತಿನಿಧಿ, ಆಹುತಿಗೊಂಬ ಪ್ರಕ್ರಿಯೆ, ಅರ್ಪಿಸುವವ°, ಅದರ ಫಲ ಎಲ್ಲ ಸೇರಿ ಬ್ರಹ್ಮನ್ ಅಥವಾ ಪರಮ ಸತ್ಯ ಪರಬ್ರಹ್ಮ ಭಗವಂತ ಹೇಳಿ ಆತು. ಐಹಿಕದ ಪರಮ ಸತ್ಯವ ಮಾಯೆಯು ಮುಸುಕಿಯಪ್ಪಗ ಅದಕ್ಕೆ ಜಡವಸ್ತು ಆತು. ಪರಮ ಸತ್ಯಕ್ಕಾಗಿ ಜೊತೆಗೂಡುಸಿದ ಜಡವಸ್ತುವು ತನ್ನ ಆಧ್ಯಾತ್ಮಿಕ ಗುಣಂಗಳ ಮರಳಿ ಪಡಕ್ಕೊಳ್ಳುತ್ತು. ಮಾಯಾಪ್ರಜ್ಞೆಯ ಬ್ರಹ್ಮನ್ ಆಗಿ ಪರಿವರ್ತಿಸುವ ಪ್ರಕ್ರಿಯೆಯೇ ಕೃಷ್ಣಪ್ರಜ್ಞೆ. ಮನಸ್ಸು ಕೃಷ್ಣಪ್ರಜ್ಞೆಲಿ ಸಂಪೂರ್ಣವಾಗಿ ತಲ್ಲೀನ ಆದಪ್ಪಗ ಅದು ಸಮಾಧಿ ಸ್ಥಿತಿ. ಇಂತಹ ದಿವ್ಯಪ್ರಜ್ಞೆಲಿ ಮಾಡಿದ ಕಾರ್ಯಕ್ಕೆ ಯಜ್ಞ ಹೇಳಿ ಹೆಸರು.  ಆಧ್ಯಾತ್ಮಿಕ ಪ್ರಜ್ಞೆಯ ಈ ಸ್ಥಿತಿಲಿ ಅರ್ಪಿಸಿದವ, ಅರ್ಪಿಸಿದ್ದು, ಆಹುತಿ ತೆಕ್ಕೊಂಡದು, ಕರ್ತೃ ಅಥವಾ ಯಜಮಾನ, ಯಜ್ಞದ ಪರಮ ಫಲ ಎಲ್ಲವೂ ಅಕೇರಿಗೆ ಪರಬ್ರಹ್ಮ ಭಗವಂತನಲ್ಲೇ ಲೀನ ಅಪ್ಪದು.

ಬನ್ನಂಜೆಯವರ ವ್ಯಾಖ್ಯಾನಲ್ಲಿ ಹೇಳುತ್ತವು – ಇಲ್ಲಿ ಅರ್ಪಣೆ ಹೇಳಿರೆ – ಒಬ್ಬ°  ಹಶುವಿಲ್ಲಿಪ್ಪೋನಿಂಗೆ ಅಶನ ಕೊಡುತ್ತದು – ಇದು ಒಂದು ಅರ್ಪಣೆ., ಒಬ್ಬ ಯೋಗ್ಯ ವರಂಗೆ ಕನ್ಯಾದಾನ ಮಾಡುತ್ತು – ಇದು ಒಂದು ಅರ್ಪಣೆ, ಒಬ್ಬಂಗೆ ಪೈಸೆ ಸಮಸ್ಯೆ ಇಪ್ಪಗ ಧನ ನೀಡಿ ಸಹಾಯ ಮಾಡುತ್ತದು – ಇದೂ ಒಂದು ಅರ್ಪಣೆ. ಇಲ್ಲಿ ಕೊಡುವದು ಆ ಭಗವಂತ°. ತೆಕ್ಕೊಂಬವನ ಒಳ ಇದ್ದುಗೊಂಡು ಸ್ವೀಕರುಸುವವನೂ ಆ ಭಗವಂತ°. ಎಲ್ಲವೂ ಭಗವಂತನ ಇಚ್ಛೆಂದಲೇ ನಡವದು. ಹವಿಸ್ಸು ಹೇಳಿರೆ ಕೊಡುವ ವಸ್ತು . ಅರ್ಪಣ – ಕೊಡುವ ಕ್ರಿಯೆ. ಯಾವ ವಸ್ತೂ ಕೂಡ ಹವಿಸ್ಸಾಗಿಪ್ಪಲಕ್ಕು. ದಾನದ ದ್ರವ್ಯ – ಹವಿಸ್ಸು, ಯಜ್ಞಲ್ಲಿ ಅಗ್ನಿಮುಖೇನ ಅರ್ಪಿಸುವ ದ್ರವ್ಯ – ಹವಿಸ್ಸು. ನಾವು ಹುಟ್ಟುವಾಗ ಏನನ್ನೂ ತೆಕ್ಕೊಂಡು ಬತ್ತಿಲ್ಲೆ. ಎಲ್ಲವೂ ಈ ಪ್ರಕೃತಿಂದ ಪಡದ್ದದು. ಈ ಪ್ರಕೃತಿ ಭಗವಂತನ ಅಧೀನ. ಹೀಂಗೆ ಹೇಳಿ ಆದಮತ್ತೆ ಈ ಐಹಿಕ ಪ್ರಪಂಚಲ್ಲಿ ನಮ್ಮದು , ಎನ್ನದು ಹೇಳಿ ಹೇಳ್ಳೆ ಎಂತ ಇದ್ದು. ಎಲ್ಲವೂ ಭಗವಂತನಿಂದ ಮತ್ತು ಭಗವಂತನಿಗಾಗಿಯೇ. ನಾವು ಅಗ್ನಿಮುಖೇನ ದ್ರವ್ಯವ ಅರ್ಪಿಸುತ್ತು. ಇಲ್ಲಿ ಅಗ್ನಿ ಹೇಳಿರೆ ಬರೇ ಜಡವಾದ ಕಿಚ್ಚು ಅಲ್ಲ. ಅಗ್ನಿ ಹೇಳಿರೆ ಅಗ್ನಿಯ ಅಭಿಮಾನಿ ದೇವತೆ. ಅದು ಚೇತನ. ಅದಕ್ಕಾಗಿಯೇ ಅಗ್ನಿಸಾಕ್ಷಿಯಾಗಿ ಹೇಳಿ ಹೇಳುವದು. ಜಡವ ಎಂದೂ ಸಾಕ್ಷಿಯಾಗಿ ಮಡಿಕ್ಕೊಂಬಲೆ ಸಾಧ್ಯ ಇಲ್ಲೆ. ಈ ಅಗ್ನಿ ದೇವತೆಯ ಒಳ ತಾರಕ ಶಕ್ತಿಯಾಗಿ ಆ ಭಗವಂತ ಇರುತ್ತ°. ಇಲ್ಲಿ ಕೊಡುವದು , ತೆಕ್ಕೊಂಬದು, ಕೊಡುವ ಕ್ರಿಯೆ, ಕೊಟ್ಟದ್ದು ಎಲ್ಲವೂ ಭಗವಂತನ ಅಧೀನ. ಎಲ್ಲಾ ಕ್ರಿಯೆಲಿ ಭಗವಂತನ ಸನ್ನಿಧಾನ ಇರ್ತು. ಕೊಡತಕ್ಕ ವಸ್ತಿವಿಲ್ಲಿಯೂ ಭಗವಂತನ ಸನ್ನಿಧಾನ ಇಪ್ಪದರಿಂದ ಅದು ಭಗವಂತನ ಸಂಪ್ರೀತಿಗೆ ಅರ್ಪುಸಲೆ ಯೋಗ್ಯ. ಜ್ಞಾನರೂಪನಾದ ಭಗವಂತ° ಅಗ್ನಿಲಿ ಸನ್ನಿಹಿತನಾಗಿ ಭಕ್ತಿರೂಪದ ಆಹುತಿಯ ಸ್ವೀಕರುಸುತ್ತ. ಈ ಅನುಸಂಧಾನಂದ ನಮ್ಮ ಕ್ರಿಯೆ ನಡದರೆ ನಾವು ಭಗವಂತನ ಆರಾಧನೆ ಮಾಡಿಯಪ್ಪಗ ‘ಬ್ರಹ್ಮೈವ ತೇನ ಗಂತವ್ಯಂ’ ಹೋಗಿ ಸೇರುವದೂ ಆ ಭಗವಂತನನ್ನೇ. ಎಂತಕೆ ಹೇಳಿರೆ – ‘ಬ್ರಹ್ಮಕರ್ಮಸಮಾಧಿನಾ’- ಎಲ್ಲವೂ ಸರ್ವಶಕ್ತ ಭಗವಂತನ ಅಧೀನ.

ಇಲ್ಲಿ ಬ್ರಹ್ಮಾರ್ಪಣ ಹೇಳಿರೆ ಎಲ್ಲಾ ಕ್ರಿಯೆಯೂ ಭಗವಂತಂಗೆ ಹೇಳಿ ಅರ್ಥ. ಪ್ರಪಂಚಲ್ಲಿಪ್ಪ ಎಲ್ಲಾ ವಸ್ತುಗೊ ಅವ° ಸೃಷ್ಟಿಸಿದ್ದು, ಅವನ ಅಧೀನ. ಪ್ರಕೃತಿಲಿ ಸೃಷ್ಟಿಯಾಗಿಪ್ಪದರ ನಾವು ಉಪಯೋಗುಸುತ್ತು ಅಷ್ಟೆ. ಅಗ್ನಿ ಭಗವಂತನ ಅಧೀನನಾಗಿ ಕಾರ್ಯ ನಿರ್ವಹಿಸುತ್ತ°. ನಾವು ಮಾಡುವ ಕ್ರಿಯೆ ಆ ಭಗವಂತನ ಪ್ರೇರಣೆ. ನಾವು ಮಾಡುವ ಎಲ್ಲ ಕರ್ಮವೂ ಬ್ರಹ್ಮಕರ್ಮ. ಅದು ಭಗವಂತನ ಪೂಜಾರೂಪವಾದ ಕರ್ಮ. ಯಜ್ಞ ಹೇಳಿರೆ ಅಗ್ನಿ ಮುಖೇನ ಮಾಡುವ ಹೋಮ ಮಾತ್ರ ಅಲ್ಲ. ನಮ್ಮ ಬದುಕಿನ ಭಗವನ್ಮಯ ಮಾಡಿಕೊಂಡಪ್ಪಗ ನಮ್ಮ ಜೀವನದ ಎಲ್ಲಾ ನಡೆಯೂ ಯಜ್ಞವೇ. ನಮ್ಮ ಬದುಕ ಭಗವಂತನ ಚಿಂತನಗೆ ಮೀಸಲಿರಿಸಿಯಪ್ಪಗ ನಮ್ಮ ಬದುಕೇ ಒಂದು ಮಹಾಯಜ್ಞ. ಭಗವಂತನ ಚಿಂತನೆ ಇಲ್ಲದೆ ಸ್ವಾರ್ಥಂದ ಮಾಡುವ ಅಗ್ನಿಮುಖೇನವಾದ ಯಜ್ಞ ಕೇವಲ ವ್ಯಾಪಾರ. ನಾವು ಮಾಡುವ ಕಾರ್ಯದ ನಿಜ ಸ್ವರೂಪವ ಅರ್ಥೈಸಿ ಮಾಡೆಕು . ಅದು ಯಜ್ಞ . ಇಲ್ಲದ್ರೆ ಅದು ಸ್ವಾರ್ಥ. ಪೌರೋಹಿತ್ಯವೂ ಅಷ್ಟೇ. ಕರ್ಮವ ತಿಳುದು ಮಾಡಿರೆ ಮಾತ್ರ ಅದು ಪೌರೋಹಿತ್ಯ . ಇಲ್ಲದ್ರೆ ಅದು ಬರೇ ಪೈಸಗೆ ಮಾಡುವ ದಂಧೆ.

ಮುಂದೆ ಯಜ್ಞದ ವಿಶಾಲತೆಯ ಭಗವಂತ° ಹೇಳುತ್ತ° – ಸಾಮಾನ್ಯವಾಗಿ ಯಜ್ಞಲ್ಲಿ ಎರಡು ವಿಧ. ಒಂದು ಅಂತರಂಗದ ಯಜ್ಞ ಮತ್ತೊಂದು ಬಾಹ್ಯ ಯಜ್ಞ. ಅಂತರಂಗದ ಯಜ್ಞಲ್ಲಿ ಮನುಷ್ಯನ ಅಂತರಂಗಲ್ಲಿ ಭಗವಂತನ ನಿರಂತರ ಪೂಜೆ. ಚಿತ್ತ-ಮನಸ್ಸು ಸಂಪೂರ್ಣವಾಗಿ ಭಗವಂತಂಗೆ ಅರ್ಪುಸುವದು ಮತ್ತು ಭಗವಂತನಲ್ಲಿ ಲೀನ ಅಪ್ಪದು. ನಮ್ಮನ್ನೇ ನಾವು ಸಂಪೂರ್ಣವಾಗಿ ಭಗವಂತಂಗೆ ಅರ್ಪುಸುವದು ಪರಿಪೂರ್ಣವಾದ ಮಾನಸ ಯಜ್ಞ. ಇದನ್ನೇ ಇನ್ನೊಂದು ರೀತಿಲಿ ಹೇಳುವದಾದರೆ – ಯಜ್ಞಲ್ಲಿ ಎರಡು ವಿಧ- 1. ಜ್ಞಾನಪ್ರದವಾದ ಯಜ್ಞ. 2.ಕರ್ಮಪ್ರದವಾದ ಯಜ್ಞ.

ಮುಂದೆ ಯಜ್ಞದ ವಿಶಾಲತೆಯ ಭಗವಂತ° ಹೇಳುತ್ತ° –

ಶ್ಲೋಕ

ದೈವಮೇವಾಪರೇ ಯಜ್ಞಂ ಯೋಗಿನಃ ಪರ್ಯುಪಾಸತೇ ।
ಬ್ರಹ್ಮಾಗ್ನಾವಪರೇ ಯಜ್ಞಂ ಯಜ್ಞೇನೈವೋಪಜುಹ್ವತಿ ॥೨೫॥

ಪದವಿಭಾಗ

ದೈವಮ್ ಏವ ಅಪರೇ ಯಜ್ಞಮ್ ಯೋಗಿನಃ ಪರ್ಯುಪಾಸತೇ । ಬ್ರಹ್ಮ-ಅಗ್ನೌ ಯಜ್ಞಮ್ ಯಜ್ಞೇನ ಏವ ಉಪಜುಹ್ವತಿ ॥

ಅನ್ವಯ

ಅಪರೇ ಯೋಗಿನಃ ದೈವಮ್ ಏವ ಯಜ್ಞಂ ಪರ್ಯುಪಾಸತೇ । ಅಪರೇ ಬ್ರಹ್ಮ-ಅಗ್ನೌ ಯಜ್ಞೇನ ಯಜ್ಞಮ್ ಏವ ಉಪಜುಹ್ವತಿ ॥

ಪ್ರತಿಪದಾರ್ಥ

ಅಪರೇ ಯೋಗಿನಃ – ಇತರ ಕೆಲವು ಬೇರೆ ಯೋಗಿಗೊ, ದೈವಮ್ ಏವ  – ದೇವತೆಗಳ ಅರ್ಚನೆಲಿಯೇ,  ಯಜ್ಞಮ್  – ಯಜ್ಞವ, ಪರ್ಯುಪಾಸತೇ – ಸಮಂಜಸವಾಗಿ ಆರಾಧಿಸುತ್ತವು, ಅಪರೇ – ಇನ್ನುಳುದವು,  ಬ್ರಹ್ಮ-ಅಗ್ನೌ – ಪರಮ ಸತ್ಯದ ಅಗ್ನಿಲಿ,  ಯಜ್ಞೇನ – ಯಜ್ಞಂದ, ಯಜ್ಞಮ್ – ಯಜ್ಞವ,  ಏವ – ಹೀಂಗೆ, ಉಪಜುಹ್ವತಿ – ಅರ್ಪಿಸುತ್ತವು.

ಅನ್ವಯಾರ್ಥ

ಕೆಲವು ಯೋಗಿಗೊ ಬೇರೆ ಬೇರೆ ಯಜ್ಞಂಗಳ ಮೂಲಕ ದೇವತೆಗಳ ಪರಿಪೂರ್ಣವಾಗಿ ಆರಾಧುಸುತ್ತವು. ಇನ್ನು ಕೆಲವರು ಪರಬ್ರಹ್ಮನ ಅಗ್ನಿಲಿ ಯಜ್ಞವ ಮಾಡುತ್ತವು. ಅರ್ಥಾತ್, ಕೆಲವು ಮಂದಿ  ದೇವತಾರ್ಚನೆ ಯಜ್ಞಂಗಳ ಮೂಲಕ ತಮ್ಮ ಜೀವನವ ಸಾಗುಸುತ್ತವು, ಇನ್ನು ಕೆಲವರು ಪರಬ್ರಹ್ಮ ಹೇಳ್ವ ಅಗ್ನಿಲಿ ತಮ್ಮ ಜೀವನವ ಹೋಮ ಮಾಡುತ್ತವು.

ತಾತ್ಪರ್ಯ / ವಿವರಣೆ

ಕೃಷ್ಣಪ್ರಜ್ಞೆಲಿ ಕರ್ತವ್ಯಮಗ್ನನಾದವನ ಪರಿಪೂರ್ಣಯೋಗಿ ಹೇದು ಹೇಳುವದು. ಆದರೆ, ವಿವಿಧ ದೇವತೆಗಳ ಪೂಜಿಸಿಗೊಂಡು, ಇಂತದ್ದೇ ಯಜ್ಞಂಗೊ ಹೇಳಿ ಮಾಡುವವೂ ಇದ್ದವು. ಪರಬ್ರಹ್ಮಂಗೆ, ಹೇಳಿರೆ, ಭಗವಂತನ ನಿರಾಕಾರ ಲಕ್ಷಣಕ್ಕೆ ಯಜ್ಞವನ್ನರ್ಪುಸುವವೂ ಇದ್ದದು. ಆದ್ದರಿಂದ ಬೇರೆ ಬೇರೆ ವರ್ಗಂಗೊಕ್ಕೆ ಸಂಬಂಧಿಸಿ ಬೇರೆ ಬೇರೆ ಬಗೆ ಯಜ್ಞಂಗೊ. ಇಲ್ಲಿ ಮೇಲ್ನೋಟಕ್ಕೆ ಮಾತ್ರ ಬೇರೆ ಬೇರೆ ಹೇಳಿ ಕಾಂಬದು. ವಾಸ್ತವವಾಗಿ ಯಜ್ಞ ಹೇಳಿರೆ ಭಗವಂತನ ತೃಪ್ತಿ ಪಡುಸುವದು. ಅವಂಗೂ ‘ಯಜ್ಞ’ ಹೇಳಿ ಹೆಸರು. ಯಾವುದೇ ಯಜ್ಞದ ಅಂತಿಮ ಗುರಿ ಭಗವಂತಂಗೆ ಅರ್ಪಿಸುವದು. ಬೇರೆ ಬೇರೆ ರೀತಿಯಾಗಿ ಕಾಂಬ ಈ ಯಜ್ಞವ ಎರಡು ವಿಭಾಗ ಹೇಳಿ ಹೇಳ್ಳಕ್ಕು. ಪ್ರಾಪಂಚಿಕ ಸ್ವತ್ತಿನ ಯಜ್ಞ ಮತ್ತು ದಿವ್ಯಜ್ಞಾನದ ಅನ್ವೇಷಣೆಯ ಯಜ್ಞ. ಕೃಷ್ಣಪ್ರಜ್ಞೆಲಿಪ್ಪವು ಎಲ್ಲ ಪ್ರಾಪಂಚಿಕ ಸ್ವತ್ತಿನ ಭಗವಂತನ ತೃಪ್ತಿಗಾಗಿ ಅರ್ಪಣೆ ಮಾಡುವದು. ಸ್ವಲ್ಪಕಾಲದ ಪ್ರಾಪಂಚಿಕ ಸುಖವ ಬಯಸುವವು (ಸಾಮಾನ್ಯ ಮನುಷ್ಯರು)  ಇಂದ್ರ ವರುಣ ವಾಯು ಮೊದಲಾದ ದೇವತೆಗಳ ತೃಪ್ತಿಪಡುಸಿ ಅವರ ಮೂಲಕ ಭಗವಂತಂಗೆ ತಮ್ಮ ಪ್ರಾಪಂಚಿಕ ಸೊತ್ತಿನ ಅರ್ಪಣೆ ಮಾಡುತ್ತವು. ನಿರಾಕಾರವಾದಿಗಳಾದ ಇತರರು ನಿರಾಕಾರ ಬ್ರಹ್ಮನ ಅಸ್ತಿತ್ವಲ್ಲಿ ಒಂದಾಗಿ ತಮ್ಮ ವ್ಯಕ್ತಿತ್ವವನ್ನೇ ಅರ್ಪಣೆ ಮಾಡುವದು. ದೇವತೆಗೋ ಪರಬ್ರಹ್ಮನಿಂದ ನೇಮಕಗೊಂಡ ಅಧಿಕಾರಿಗೊ. ಪ್ರಪಂಚದ ಭೌತಿಕ ಕಾರ್ಯಂಗಳ ನಿರ್ವಹಣೆಗೆ ಬೇಕಾದ್ದರ ಬೇಕಾದಲ್ಲಿ ಕೊಡ್ಳೆ ಭಗವಂತ° ಅವರ ನೇಮಕ ಮಾಡಿದ್ದ°. ಐಹಿಕ ಲಾಭಲ್ಲ್ಲಿ ಆಸಕ್ತಿ ಇಪ್ಪವ್ವು ವೈದಿಕ ವಿಧಿಗೆ ಅನುಗುಣವಾಗಿ ಹಲವಾರು ಯಜ್ಞಂಗಳ ಮಾಡಿ ಈ ದೇವತೆಗಳ ಪೂಜಿಸುತ್ತವು. ಅವರ ಬಹೀಶ್ವರವಾದಿಗೊ ಅಥವಾ ಹಲವು ದೇವತೆಗಳಲ್ಲಿ ನಂಬಿಕೆ ಇಪ್ಪವ್ವು ಹೇಳಿ ಹೇಳುವದು. ಇನ್ನು ಕೆಲವರು ಪರಮಸತ್ಯದ ನಿರಾಕಾರ ಲಕ್ಷಣವ ಪೂಜಿಸುವದು. ಇಂಥವು ತಮ್ಮ ವ್ಯಕ್ತಿತ್ವವ ಬ್ರಹ್ಮಾಗ್ನಿಲಿ ಅರ್ಪಣೆ ಮಾಡುವದು. ಈ ರೀತಿಲಿ ಪರಬ್ರಹ್ಮನ ಅಸ್ತಿತ್ವಲ್ಲಿ ಒಂದಾಗಿ ಅವ್ವು ತಮ್ಮ ಪ್ರತ್ಯೇಕ ಅಸ್ತಿತ್ವವ ಅಂತ್ಯಗೊಳುಸುವದು. ಇಂತಹ ನಿರಾಕಾರವಾದಿಗೊ ಪರಬ್ರಹ್ಮದ ದಿವ್ಯ ಸ್ವಭಾವವ ಅರ್ಥಮಾಡಿಗೊಂಬಲೆ ತಮ್ಮ ಜೀವನ ಕಾಲವ ತಾತ್ವಿಕ ಚಿಂತನೆಲಿ ಕಳೆತ್ತವು. ಇನ್ನೊಂದು ರೀತಿಲಿ ಇದರ ಹೇಳುವದಾದರೆ, ಫಲಾಪೇಕ್ಷೆಂದ ಕರ್ಮಮಾಡುವವು ಐಹಿಕ ಭೋಗಕ್ಕಾಗಿ ತಮ್ಮ ಪ್ರಾಪಂಚಿಕ ಸೊತ್ತಿನ ಅರ್ಪಣೆ ಮಾಡುತ್ತವು, ನಿರಾಕಾರವಾದಿಗೊ ಪರಮೋನ್ನತವಾದ ಅಸ್ತಿತ್ವಲ್ಲಿ ಲೀನ ಅಪ್ಪಲೆ ತಮ್ಮ ಪ್ರಾಪಂಚಿಕ ಉಪಾಧಿಗಳ ಅರ್ಪಣೆ ಮಾಡುತ್ತವು. ನಿರಾಕಾರವಾದಿಗೆ ಪರಬ್ರಹ್ಮನೇ ಯಜ್ಞದ ಅಗ್ನಿಕುಂಡ ಮತ್ತು ಆತ್ಮವೇ ಬ್ರಹ್ಮಾಗ್ನಿಗೆ ನೀಡುವ ಅರ್ಪಣ. ಅರ್ಜುನನಂತಹ ಕೃಷ್ಣಪ್ರಜ್ಞೆ ಇಪ್ಪವು ಕೃಷ್ಣನ ತೃಪ್ತಿಗಾಗಿ ಎಲ್ಲವನ್ನೂ ಅರ್ಪಿಸುತ್ತವು. ಅವನ ಐಹಿಕ ಸೊತ್ತುಗೊ ಮತ್ತು ಆತ್ಮ ಎಲ್ಲವೂ ಭಗವಂತಂಗೋಸ್ಕರ ಯಜ್ಞಲ್ಲಿ ಅರ್ಪಿತವಾವ್ತು. ಹೀಂಗೆ ಅವ ಶ್ರೇಷ್ಠ ಯೋಗಿ. ಹೇಳಿರೆ ಅವ° ತನ್ನ ವೈಯಕ್ತಿಕ ಅಸ್ತಿತ್ವವ ಕಳಕ್ಕೊಳ್ಳುತ್ತನಿಲ್ಲೆ.

ಬನ್ನಂಜೆಯವರ ವ್ಯಾಖ್ಯಾನಲ್ಲಿ ಹೇಳಿದ ಹಾಂಗೆ- ಭಗವಂತನ ಉಪಾಸನೆಯ ಮಾರ್ಗಲ್ಲಿ ಸಾಗುವ ಯೋಗಿಗೊ ದೈವವನ್ನೇ ಯಜ್ಞವಾಗಿ ಉಪಾಸನೆ ಮಾಡುತ್ತವು. ಹೇಳಿರೆ , ನಿರಂತರ ಅಂತರಂಗಲ್ಲಿ ಭಗವಂತನ ಉಪಾಸನೆಯೇ ಅವರ ಯಜ್ಞ. ಇದಕ್ಕೆ ಬಾಹ್ಯ ಯಾವ ಪರಿಕರಂಗಳೂ ಬೇಡ. ಇದು ಧ್ಯಾನ ರೂಪ ಯಜ್ಞ. ಈ ರೀತಿ ಬಾಹ್ಯ ಪರಿಕರಂಗೊ ಯಾವುದೂ ಇಲ್ಲದ್ದೆ ಮಾಡುವ ಯಜ್ಞ ಅತ್ಯಂತ ಶ್ರೇಷ್ಠ ಯಜ್ಞ. ಇದು ಸಾಮಾನ್ಯವಾಗಿ ಅತ್ಯಂತ ಎತ್ತರಕ್ಕೇರಿದ ಸಾಧಕರು ಮಾಡ್ಳೆ ಎಡಿಗಪ್ಪ ಯಜ್ಞ. ಎಲ್ಲಾ ಬಾಹ್ಯ ಪರಿಕರಂಗಳ ಬಿಟ್ಟು ಮಾನಸ ಪರಿಗ್ರಹಂದ ಮಾತ್ರವೇ ಮಾಡತಕ್ಕ ಜ್ಞಾನಪ್ರಧಾನವಾದ ಯಜ್ಞ. ಇನ್ನೊಂದು ಪ್ರಕಾರದ ಯಜ್ಞ ಅಗ್ನಿ ಮುಖಲ್ಲಿ ಮಾಡತಕ್ಕ ಕರ್ಮಪ್ರಧಾನವಾದ ಯಜ್ಞ. ಸಾಮಾನ್ಯ ಮನುಷ್ಯರು ಅನುಸರುಸುವ ಯಜ್ಞ. ಭಗವಂತನ ಸನ್ನಿಧಾನ ಇಪ್ಪ ಅಗ್ನಿಯ ಮುಕೇನ ಭಗವಂತಂಗೆ ಅರ್ಪಣೆ ಮಾಡುವದು. ಇದು ಬಾಹ್ಯ ಯಜ್ಞ. ಭಗವಂತನ ಆರಾಧನೆಗೆ ಅತ್ಯಂತ ಮುಖ್ಯವಾದ ಪ್ರತೀಕ ಅಗ್ನಿ ಆಗಿರುತ್ತು. ಅಗ್ನಿ ಏವತ್ತೂ ಅಪವಿತ್ರವಲ್ಲ. ಅಗ್ನಿ ಸ್ಪರ್ಶಂದ ಅಪವಿತ್ರ ಕೂಡ ಪವಿತ್ರ ಆವುತ್ತು. ನವಗೆ ಭಗವಂತಂಗೆ ಏನನ್ನಾರು ತಿನ್ನುಸೆಕು ಹೇಳಿ ಆದರೆ ಅದರ ಅಗ್ನಿಯ ಮೂಲಕ ಕೊಡುವದು. ಸುಡುವ ಅಗ್ನಿಲಿ ಅಗ್ನಿದೇವ°, ಅವನೊಳ ಪ್ರಾಣ°, ಪ್ರಾಣನೊಳ ಭಗವಂತ°. ಈ ಅನುಸಂಧಾನಲ್ಲಿ ಯಜ್ಞ. ಯಜ್ಞನಾಮಕ ಭಗವಂತನ ಯಜ್ಞಂದ ಜ್ಞಾನ ಭಕ್ತಿ ವೈರಾಗ್ಯಂದ ಕೂಡಿದ ಉತ್ಕೃಷ್ಟವಾದ ಆಹ್ವಾನಂದ ಆರಾಧನೆ.

ಶ್ಲೋಕ

ಶ್ರೋತ್ರಾದೀನಿಂದ್ರಿಯಾಣ್ಯನ್ಯೇ ಸಂಯಮಾಗ್ನಿಷು ಜುಹ್ವತಿ ।
ಶಬ್ದಾದೀನ್ ವಿಷಯಾನನ್ಯ ಇಂದ್ರಿಯಾಗ್ನಿಷು ಜುಹ್ವತಿ ॥೨೬॥

ಪದವಿಭಾಗ

ಶ್ರೋತ್ರ-ಆದೀನಿ ಇಂದ್ರಿಯಾಣಿ ಅನ್ಯೇ ಸಂಯಮ-ಅಗ್ನಿಷು ಜುಹ್ವತಿ । ಶಬ್ದ-ಆದೀನ್ ವಿಷಯಾನ್ ಅನ್ಯ ಇಂದ್ರಿಯ-ಅಗ್ನಿಷು ಜುಹ್ವತಿ ॥

ಅನ್ವಯ

ಅನ್ಯೇ ಶೋತ್ರ-ಆದೀನಿ ಇಂದ್ರಿಯಾಣಿ ಸಂಯಮ-ಅಗ್ನಿಷು ಜುಹ್ವತಿ । ಅನ್ಯೇ ಶಬ್ದ-ಆದೀನ್ ವಿಷಯಾನ್ ಇಂದ್ರಿಯ-ಅಗ್ನಿಷು ಜುಹ್ವತಿ ॥

ಪ್ರತಿಪದಾರ್ಥ

ಅನ್ಯೇ – ಇತರರು, ಶ್ರೋತ್ರ-ಆದೀನಿ – ಶ್ರವಣಾದಿ ಪ್ರಕ್ರಿಯೆಗಳ, ಇಂದ್ರಿಯಾಣಿ – ಇಂದ್ರಿಯಂಗಳ, ಸಂಯಮ-ಅಗ್ನಿಷು- ಸಂಯಮದ ಅಗ್ನಿಗಳಲ್ಲಿ, ಜುಹ್ವತಿ – ಅರ್ಪಿಸುತ್ತವು, ಅನ್ಯೇ – ಇತರರು, ಶಬ್ದ-ಆದೀನ್ – ಶಬ್ದಕಂಪನವೇ ಮೊದಲಾದ, ವಿಷಯಾನ್ – ವಿಷಯಂಗಳ, ಇಂದ್ರಿಯ-ಅಗ್ನಿಷು – ಇಂದ್ರಿಯಂಗಳ ಕಿಚ್ಚಿಲ್ಲಿ, ಜುಹ್ವತಿ – ಅರ್ಪಿಸುತ್ತವು.

ಅನ್ವಯಾರ್ಥ

ಪರಿಶುದ್ಧರಾದ ಬ್ರಹ್ಮಚಾರಿಗಳಾದ ಕೆಲವರು ಶ್ರವಣ ಪ್ರಕ್ರಿಯೆಯ ಮತ್ತು ಇಂದ್ರಿಯಂಗಳ ಮನಸ್ಸಿನ ಸಂಯಮದ ಅಗ್ನಿಲಿ ಅರ್ಪಿಸುತ್ತವು. ನಿಯಮಬದ್ಧರಾದ ಗೃಹಸ್ಥರಾದ ಇತರರು ಇಂದ್ರಿಯ ವಿಷಯಂಗಳನ್ನೂ ಇಂದ್ರಿಯಾಗ್ನಿಲಿ ಅರ್ಪಿಸುತ್ತವು.

ತಾತ್ಪರ್ಯ / ವಿವರಣೆ

ಬದುಕಿನ ನಾಲ್ಕು ವಿಭಾಗಂಗೊ ಆಗಿಪ್ಪ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ. ಇವು ಎಲ್ಲವುಗಳ ಉದ್ದೇಶವು ಎಲ್ಲೊರು ಪರಿಪೂರ್ಣರಾದ ಯೋಗಿಗೊ ಆಯೇಕು ಹೇಳಿ ಆಗಿದ್ದು. ಮನುಷ್ಯ ಜನ್ಮ ಪ್ರಾಣಿಗಳಂತೆ ಇಂದ್ರಿಯಭೋಗ ಅಲ್ಲ. ಆದ್ದರಿಂದ ಮನುಷ್ಯ ಆಧ್ಯಾತ್ಮಿಕ ಜೀವನಲ್ಲಿ ಪರಿಪೂರ್ಣನಪ್ಪಲೆ ಮೇಗೆ ಹೇಳಿದ ನಾಲ್ಕು ಆಶ್ರಮಂಗಳ ಏರ್ಪಡಿಸಿದ್ದು. ಒಬ್ಬ ಯೋಗ್ಯ ಗುರುವಿನ ಮಾರ್ಗದರ್ಶನಲ್ಲಿಪ್ಪ ಬ್ರಹ್ಮಚಾರಿಗೊ ಇಂದ್ರಿಯಸುಖಂದ ದೂರವಾಗಿದ್ದು ಮನಸ್ಸಿನ ನಿಯಂತ್ರಣಲ್ಲಿಸಿಕೊಂಡಿರುತ್ತ°. ಬ್ರಹ್ಮಚಾರಿಯು ಕೃಷ್ಣಪ್ರಜ್ಞೆಗೆ ಸಂಬಂಧಿಸಿದ ಮಾತುಗಳ ಮಾತ್ರ ಕೆಮಿಲಿ ಕೇಳುತ್ತ. ತಿಳುವಳಿಕೆಗೆ ಮೂಲತತ್ವ ಶ್ರವಣ, ಆ ಬಳಿಕ ಪಠಣ. ಶಾಲೆಲಿ ಮಾಷ್ಟ್ರು ಪಾಠ ಮಾಡುತ್ತರ ಮದಾಲು ಕೇಳುವದು. ಮತ್ತೆ ಪುಸ್ತಕ ಓದುವದು. ಆದ್ದರಿಂದ ಶುದ್ಧ ಬ್ರಹ್ಮಚಾರಿಯಾಗಿಪ್ಪವ° ಗುರುವಿನ ಮಾರ್ಗದರ್ಶನಲ್ಲಿ ಶ್ರವಣ ಮತ್ತು ಕೀರ್ತನಲ್ಲಿ ತನ್ನ ತಾನು ಸಂಪೂರ್ಣವಾಗಿ  ತೊಡಗಿಸಿಗೊಳ್ಳುತ್ತ°. ಇವಕ್ಕೆ ಪ್ರಾಪಂಚಿಕ ಶಬ್ದಂಗೊ ಯಾವುದೂ ಕೆಮಿಗೆ ಬೀಳದ್ದೆ ನಾಮಸಂಕೀರ್ತನೆ ಮಾತ್ರ ಶ್ರವಣ. ಇನ್ನು, ಗೃಹಸ್ಥರಿಂಗೆ ಇಂದ್ರಿಯಸುಖಕ್ಕಾಗಿ ರಜಾ ಅವಕಾಶ ಕೊಟ್ಟಿದು. ಇದರ ಅವ್ವು ಸಂಯಮಂದ ಬಳಸಿಗೊಳ್ಳುತ್ತವು. ಕಾಮಜೀವನ, ಮದ್ಯಪಾನ, ಮಾಂಸಾಹಾರ ಸೇವನೆ ಇವು ಮನುಷ್ಯ ಸಮಾಜದ ಸಾಮಾನ್ಯ ಪ್ರವ್ಟುತ್ತಿಗೊ. ಆದರೆ ಸಂಯಮಶೀಲನಾದ ಗೃಹಸ್ಥ° ಕಾಮಜೀವನ ಮತ್ತು ಇತರ ಇಂದ್ರಿಯ ಸುಖಂಗಳಲ್ಲಿ ನಿಯಂತ್ರಣ ಇಲ್ಲದ್ದೆ ತೊಡಗುತ್ತನಿಲ್ಲೆ.  ನಿಯಂತ್ರಿತ ಕಾಮಜೀವನಕ್ಕೆ ಮದುವೆಯೇ ಮಾರ್ಗ. ಆದ್ದರಿಂದಲೇ ಧಾರ್ಮಿಕ ತತ್ವಂಗಳಿಂದ ಆಧರಿಸಿದ ವಿವಾಹ ಎಲ್ಲ ನಾಗರಿಕ ಸಮಾಜಲ್ಲಿ ಒಪ್ಪಿಗೆ. ಇಂತಹ ನಿಯಂತ್ರಿತವಾದ ಅನಾಸಕ್ತ ಕಾಮಜೀವನ ಒಂದು ಬಗೆಯ ಯಜ್ಞವೇ. ಇಲ್ಲಿ ಸಂಯಮಶೀಲನಾದ ಗೃಹಸ್ಥ°, ತನ್ನ ಇಂದ್ರಿಯಸುಖದ ಸಾಮಾನ್ಯ ಬಯಕೆಯ ಉನ್ನತವಾದ ಆಧ್ಯಾತ್ಮಿಕ ಬದುಕಿಂಗೆ ತ್ಯಾಗ ಮಾಡುತ್ತ°.

ಬನ್ನಂಜೆಯವು ವ್ಯಾಖ್ಯಾನಿಸಿದ್ದರ ನೋಡಿರೆ – ಒಬ್ಬ ಸಾಧಕನಲ್ಲಿ ವಿಶಿಷ್ಟ ಸಾಧನೆ ಕೂಡ ಒಂದು ಯಜ್ಞ. ಇಂದ್ರಿಯ ಎಂಬ ಹವಿಸ್ಸಿನ ನಿಗ್ರಹ ಎಂಬ ಕಿಚ್ಚಿಂಗೆ ಆಹುತಿ ಕೊಡುವದು ಒಂದು ಯಜ್ಞ. ಕೆಟ್ಟದ್ದರ ಕೇಳುತ್ತಿಲ್ಲೆ, ನೋಡುತ್ತಿಲ್ಲೆ, ಹೇಳುತ್ತಿಲ್ಲೆ – ಹೀಂಗೆ ಇಂದ್ರಿಯ ಸಂಯಮಂದ ಇಂದ್ರಿಯ ಚಾಪಲವ ಹೋಮಿಸುವದು. ಇದು ಇಂದ್ರಿಯ ಚಪಲತೆಯ ಗೆಲ್ಲುವ ಪ್ರಕ್ರಿಯೆ. ಸಂಯಮ ಹೇಳ್ವ ಅಗ್ನಿಲಿ ಇಂದ್ರಿಯ ಚಪಲ ಹೇಳ್ವ ಹವಿಸ್ಸಿನ ಹೋಮಿಸಿ ಭಗವಂತನ ಆರಾದುಸುವದು. ಭಗವಂತ ಪ್ರಸನ್ನನಾಗಲಿ, ಆ ಮೂಲಕ ಎನ್ನ ಸಾಧನೆಯ ದಾರಿಲಿ ಮುನ್ನೆಡಸಲಿ ಹೇಳುವ ಅನುಸಂಧಾನಲ್ಲಿ ಮಾಡುವ ಯಜ್ಞ ಇದು. ಇನ್ನು ಒಳ್ಳೆಯ ಸಂಗತಿಗಳ ಇಂದ್ರಿಯಂಗಳಲ್ಲಿ ಹೋಮಿಸುವುದೂ ಕೂಡ ಒಂದು ಯಜ್ಞ. ಕೆಮಿ ಹೇಳ್ವ ಅಗ್ನಿ ಕುಂಡಲ್ಲಿ ಭಗವಂತನ ಗುಣಗಾನ ಹೇಳ್ವ ಹವಿಸ್ಸಿನ ಹೋಮಿಸುವದು. ಮೂಗು ಎಂಬ ಅಗ್ನಿಕುಂಡಲ್ಲಿ ತುಳಸಿ, ಗಂಧವೇ ಮೊದಲಾದ ಸುಗಂಧ ರೂಪದ ಹವಿಸ್ಸಿನ ಹೋಮಿಸುವದು. ಈ ರೀತಿಯಾಗಿ ಇಂದ್ರಿಯ ನಿಗ್ರಹದ ಜೊತೆಲಿ ಇಂದ್ರಿಯ ಗ್ರಹಣ ಕೂಡಾ ಒಂದು ಯಜ್ಞ. ‘ಭಗವಂತನ ಚಿಂತನೆಗೆ ಪೂರಕವಾದ ವಿಷಯಂಗಳ ಗ್ರಹಣ ಮಾಡು, ಮತ್ತು, ಅಲ್ಲದ ಸಲ್ಲದ ವಿಷಯಂಗಳ ತ್ಯಾಗ ಮಾಡು’, – ಇದು ಸಾಧನೆಯ ಪ್ರಮುಖ ಹೆಜ್ಜೆ.

ಶ್ಲೋಕ

ಸರ್ವಾಣೀಂದ್ರಿಯಕರ್ಮಾಣಿ ಪ್ರಾಣಕರ್ಮಾಣಿ ಚಾಪರೇ ।
ಆತ್ಮಸಂಯಮಯೋಗಾಗ್ನೌ ಜುಹ್ವತಿ ಜ್ಞಾನದೀಪಿತೇ ॥೨೭॥

ಪದವಿಭಾಗ

ಸರ್ವಾಣಿ ಇಂದ್ರಿಯ-ಕರ್ಮಾಣಿ ಪ್ರಾಣ-ಕರ್ಮಾಣಿ ಚ ಅಪರೇ । ಆತ್ಮ-ಸಂಯಮ-ಯೋಗ-ಅಗ್ನೌ ಜುಹ್ವತಿ ಜ್ಞಾನ-ದೀಪಿತೇ ॥

ಅನ್ವಯ

ಅಪರೇ ಜ್ಞಾನ-ದೀಪಿತೇ ಆತ್ಮ-ಸಂಯಮ-ಯೋಗ-ಅಗ್ನೌ ಸರ್ವಾಣಿ ಇಂದ್ರಿಯ-ಕರ್ಮಾಣಿ ಪ್ರಾಣ-ಕರ್ಮಾಣಿ ಚ ಜುಹ್ವತಿ ॥

ಪ್ರತಿಪದಾರ್ಥ

ಅಪರೇ – ಇನ್ನು ಕೆಲೋರು, ಜ್ಞಾನ- ದೀಪಿತೇ – ಆತ್ಮ ಸಾಕ್ಷಾತ್ಕಾರದ ಒತ್ತಾಸೆಂದ,  ಆತ್ಮ-ಸಂಯಮ-ಯೋಗ-ಅಗ್ನೌ – ಮನೋನಿಗ್ರಹ ಸಂಬಂಧಿಸುವ ಪ್ರಕ್ರಿಯೆಯ ಅಗ್ನಿಲಿ, ಸರ್ವಾಣಿ – ಎಲ್ಲ, ಇಂದ್ರಿಯ-ಕರ್ಮಾಣಿ  – ಇಂದ್ರಿಯಂಗಳ ಕ್ರಿಯೆಗಳ, ಪ್ರಾಣ-ಕರ್ಮಾಣಿ – ಪ್ರಾಣವಾಯುವಿನ ಕ್ರಿಯೆಗಳ, ಚ – ಕೂಡ, ಜುಹ್ವತಿ – ಅರ್ಪಿಸುತ್ತವು.

ಅನ್ವಯಾರ್ಥ

ಕೆಲವು ಮನುಷ್ಯರು ಇಂದ್ರಿಯಂಗಳನ್ನೂ ನಿಯಂತ್ರಿಸಿ ಆತ್ಮಸಾಕ್ಷಾತ್ಕಾರ ಸಾಧುಸಲೆ ಬಯಸುತ್ತವು. ಅಂತವು ಎಲ್ಲ ಇಂದ್ರಿಯಂಗಳ ಮತ್ತು ಪ್ರಾಣವಾಯುವಿನ ಕಾರ್ಯಂಗಳ ಆತ್ಮಸಂಯಮ ಹೇಳ್ವ ಅಗ್ನಿಗೆ ಅರ್ಪಿಸುತ್ತವು.

ತಾತ್ಪರ್ಯ / ವಿವರಣೆ

ಜೀವಿಯ ಶರೀರಲ್ಲಿ ಇಂದ್ರಿಯಂಗೊ ಇಂದ್ರಿಯ ವಿಷಯಂಗಳೊಂದಿಂಗೆ ಕಾರ್ಯ ನಿರ್ವಹಿಸುತ್ತು. ಉದಾಹರಣೆಗೆ ಕೆಮಿ ಕೇಳುತ್ತು, ಕಣ್ಣು ನೋಡುತ್ತು, ಮೂಗು ವಾಸನೆಯ ಗಮನುಸುತ್ತು, ನಾಲಗೆ ರುಚಿ ನೋಡುತ್ತು, ಕೈ ಸ್ಪರ್ಶಿಸುತ್ತು. ಹೀಂಗೆ ಎಲ್ಲ ಇಂದ್ರಿಯಂಗಳೂ ಆತ್ಮದ ಹೆರಾಣ ಕಾರ್ಯಲ್ಲಿ ತೊಡಗಿಯೊಂಡಿರುತ್ತು. ಇದರ ಪ್ರಾಣವಾಯುವಿನ ಪ್ರಕ್ರಿಯೆ ಹೇಳಿ ಹೇಳುವದು. ಅಪಾನವಾಯು ಕೆಳಂತಾಗಿ ಹೋವುತ್ತು, ವ್ಯಾನವಾಯುವು ಕುಗ್ಗುತ್ತು ಹಿಗ್ಗುತ್ತು, ಸಮಾನವಾಯುವು ಸಮತೋಲನವ ಕಾಪಾಡುತ್ತು. ಉದಾನವಾಯುವು ಮೇಗಂತಾಗಿ ಹೋವುತ್ತು. ಮನುಷ್ಯಂಗೆ ಜ್ಞಾನೋದಯವಾದ ಅನಂತರ ಇವೆಲ್ಲವನ್ನೂ ನಿಯಂತ್ರಿಸಿ ಆತ್ಮ ಸಾಕ್ಷಾತ್ಕಾರದ ಅನ್ವೇಷಣಗೆ ಬಳಸುತ್ತ°.

ನಮ್ಮ ದೇಹಲ್ಲಿ ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಂಗಳಿಂದ ನಿರಂತರ ಕ್ರಿಯೆ ಆವ್ತಾ ಇರುತ್ತು. ಇದಲ್ಲದೆ ಪ್ರಾಣ ಶಕ್ತಿಂದ ಅಪ್ಪಂತಹ ಕ್ರಿಯೆಗಳೂ ಅನೇಕ (ಉಸಿರಾಟ, ಬಲ, ಸಂತಾನಶಕ್ತಿ, ಸಂತೋಷ, ದುಃಖ ಇತ್ಯಾದಿ). ಮನೋನಿಗ್ರಹ ಎಂಬ ಅಗ್ನಿಲಿ ಈ ಜ್ಞಾನೇಂದ್ರಿಯ, ಕರ್ಮೇಂದ್ರಿಯ ಮತ್ತು ಪ್ರಾಣಶಕ್ತಿಂದ ಅಪ್ಪ ಕ್ರಿಯೆಗಳ ಹೋಮುಸುವದು (ಹಿಡಿತಲ್ಲಿಸಿಗೊಂಬದು) ಒಂದು ಬಗೆ ಯಜ್ಞ. ಇದು ಹಠಸಾಧನೆ ಅಲ್ಲ., ಇದು ಯಜ್ಞರೂಪವಾಗಿ, ಭಗವಂತನ ಪೂಜಾರೂಪವಾಗಿ. ಇದು ಭಗವಂತನ ಅರಿವಿಂದ ಬೆಳಗುವ ಆತ್ಮ ಸಂಯಮ. ಭಗವಂತನ ಅರಿವಿಂಗೋಸ್ಕರ ಮಾಡಿದ ಆತ್ಮ ಸಂಯಮ, ಭಗವಂತನ ಅರಿವಿನೆಡೆಂಗೆ ಕೊಂಡೋಪ ಜ್ಞಾನ ಪೂರ್ವಕ ಸಂಯಮ ಹೇದು ಬನ್ನಂಜೆಯವರ ವ್ಯಾಖ್ಯಾನ.

ಶ್ಲೋಕ

ದ್ರವ್ಯಯಜ್ಞಾಸ್ತಪೋಯಜ್ಞಾ ಯೋಗಯಜ್ಞಾಸ್ತಥಾsಪರೇ ।
ಸ್ವಾಧ್ಯಾಯಜ್ಞಾನಯಜ್ಞಾಶ್ಚ ಯತಯಃ ಸಂಶಿತವ್ರತಾಃ ॥೨೮॥

ಪದವಿಭಾಗ

ದ್ರವ್ಯ-ಯಜ್ಞಾಃ ತಪೋ-ಯಜ್ಞಾಃ ಯೋಗ-ಯಜ್ಞಾಃ ತಥಾ ಅಪರೇ । ಸ್ವಾಧ್ಯಾಯ-ಜ್ಞಾನ-ಯಜ್ಞಾಃ ಚ ಯತಯಃ ಸಂಶಿತ ವ್ರತಾಃ ॥

ಅನ್ವಯ

ಅಪರೇ ಸಂಶಿತವ್ರತಾಃ ದ್ವವ್ಯ-ಯಜ್ಞಾಃ, ತಪೋ-ಯಜ್ಞಾಃ, ಯೋಗ-ಯಜ್ಞಾಃ ತಥಾ ಚ ಸ್ವಾಧ್ಯಾಯ-ಜ್ಞಾನ-ಯಜ್ಞಾಃ ಯತಯಃ ಸಂತಿ॥

ಪ್ರತಿಪದಾರ್ಥ

ಅಪರೇ ಸಂಶಿತವ್ರತಾಃ – ಇತರ ಕಟ್ಟುನಿಟ್ಟಿನ ವ್ರತಂಗಳ ಆಚರುಸುತ್ತವು,  ದ್ರವ್ಯ-ಯಜ್ಞಾಃ – ತನ್ನ ಸ್ವತ್ತುಗಳ ಯಜ್ಞ ಮಾಡುವವು  (ಯಜ್ಞ ಹೇದರೆ ಭಗವಂತಂಗೆ ಅರ್ಪುಸುವದು/ಬಿಟ್ಟಿಕ್ಕುವದು),  ತಪಃ ಯಜ್ಞಾಃ – ತಪಸ್ಸಿನ ಯಜ್ಞ ಮಾಡುವವು, ಯೋಗ-ಯಜ್ಞಾಃ – ಅಷ್ಟಾಂಗ ಯೋಗದ ಯಜ್ಞ ಮಾಡುವೋರು, ತಥಾ – ಹೀಂಗೆ,  ಚ – ಕೂಡ, ಸ್ವಾಧ್ಯಾಯ-ಜ್ಞಾನ-ಯಜ್ಞಾಃ – ವೇದಾಧ್ಯಯನದ ಯಜ್ಞ, ದಿವ್ಯಜ್ಞಾನದ ಪ್ರಗತಿಯ ಯಜ್ಞ ಮಾಡುವೋರು,  ಯತಯಃ – ಜ್ಞಾನೋದಯ ಹೊಂದಿಪ್ಪ ವ್ಯಕ್ತಿಗೊ, ಸಂತಿ – ಇದ್ದವು.

ಅನ್ವಯಾರ್ಥ

ಕಟ್ಟುನಿಟ್ಟಾದ ವ್ರತಂಗಳ ಸ್ವೀಕರುಸಿ ಕೆಲವರು ತಮ್ಮ ಸೊತ್ತುಗಳ ಯಜ್ಞಮಾಡಿ ಜ್ಞಾನೋದಯವ ಪಡೆತ್ತವು. ಇನ್ನು ಕೆಲವರು ತಪ್ಪಸ್ಸು ಮಾಡುವದರ ಮೂಲಕ, ಮತ್ತೆ ಕೆಲವರು ಯೋಗಯಜ್ಞಂದ ಮತ್ತೆ ಕೆಲವರು ವೇದಂಗಳ ಅಭ್ಯಾಸಮಾಡಿ ಜ್ಞಾನಯಜ್ಞವ ಮಾಡುವದರ ಮೂಲಕ ಜ್ಞಾನೋದಯವ ಪಡೆತ್ತವು.

ತಾತ್ಪರ್ಯ / ವಿವರಣೆ

ಯಜ್ಞಂಗಳ ಬೇರೆ ಬೇರೆ ರೀತಿಯಾಗಿ ವಿಂಗಡುಸಲಕ್ಕು. ತಮ್ಮ ಆಸ್ತಿಯ ಹಲವು ಬಗೆಯ ದಾನಂಗಳಲ್ಲಿ ವಿನಿಯೋಗುಸುತ್ತವು. ಶ್ರೀಮಂತ ವರ್ಗದವು ಧರ್ಮಶಾಲೆ, ಅನ್ನಕ್ಷೇತ್ರ, ಅತಿಥಿಶಾಲೆ, ಅನಾಧಾಲಯ, ಆಶ್ರಮ, ಚಿಕಿತ್ಸಾಲಯ ಮತ್ತು ವಿದ್ಯಾಪೀಠಂಗಳಂತಹ ಅನೇಕ ಬಗೆಯ ಧರ್ಮಸಂಸ್ಥೆಗಳ ನಡಶುತ್ತವು.  ಇಂತಹ ಧಾರ್ಮಿಕ ಪ್ರತಿಷ್ಠಾನಂಗೊ ಮಾಡುವ ಕಾರ್ಯಕ್ಕೆ ದ್ರವ್ಯ ಯಜ್ಞ ಹೇಳಿ ಹೇಳುವದು. ಬದುಕಿನ ಉನ್ನತಿಗಾಗಿ ಹಲವರು ಚಾಂದ್ರಾಯಣ, ಚಾತುರ್ಮಾಸ್ಯ ಇತ್ಯಾದಿ ಕಠೋರ ವ್ರತಂಗಳ ತಾವಾಗಿಯೇ ಸ್ವೀಕರುಸುತ್ತವು. ಈ ಪ್ರಕ್ರಿಯೆಲ್ಲಿ ಕಟ್ಟುನಿಟ್ಟಿನ ನಿಯಮಂಗಳ ಪಾಲುಸೆಕ್ಕಾಗಿದ್ದು. ಉದಾಹರಣೆಗೆ ಚಾತುರ್ಮಾಸ್ಯ ವ್ರತವ ಕೈಗೊಂಡವ ವರ್ಷಲ್ಲಿ ಆ ನಾಲ್ಕು ತಿಂಗಳು (ಜೂಲೈ-ಒಕ್ತೋಬರ) ಕ್ಷೌರ ಮಾಡುವ ಹಾಂಗಿಲ್ಲೆ. ಹಲವು ಬಗೆಯ ಆಹಾರ ತಿಂಬಲಿಲ್ಲೆ. ದಿನಕ್ಕೆ ಒಂದು ಹೊತ್ತಿಂದ ಹೆಚ್ಚಿಗೆ ಭೋಜನ ಇಲ್ಲೆ, ಮತ್ತು ಮನೆ ಬಿಟ್ಟು ಹೆರ ಹೋಪಲೆ ಇಲ್ಲೆ ಇತ್ಯಾದಿ. ಹೀಂಗೆ ಬದುಕಿನ ಸುಖಂಗಳ ತ್ಯಾಗಮಾಡುತ್ತದಕ್ಕೆ ತಪೋಮಯ ಯಜ್ಞ ಹೇಳಿ ಹೇಳುವದು. ಪರಬ್ರಹ್ಮಲ್ಲಿ ಲೀನ ಅಪ್ಪಲೆ ಕೆಲವರು ಇನ್ನು ಪತಂಜಲಿ ಯೋಗವನ್ನೋ, ಅಷ್ಟಾಂಗ ಯೋಗವನ್ನೋ ಅನುಸರುಸುತ್ತವು. ಇನ್ನು ಕೆಲವು ಮಂದಿ ಪವಿತ್ರ ಕ್ಷೇತ್ರಕ್ಕೆ ತೀರ್ಥಾಟನೆ ಮಾಡುತ್ತವು. ಈ ರೀತಿಯ ಪ್ರಕ್ರಿಯೆಗೆ ಯೋಗಯಜ್ಞ ಹೇಳಿ ಹೆಸರು. ಈ ರೀತಿ ಮನುಷ್ಯರು ಒಂದು ನಿರ್ದಿಷ್ಟ ಪರಿಪೂರ್ಣತೆಗಾಗಿ ಯಜ್ಞ ಕಾರ್ಯಲ್ಲಿ ತೊಡಗುತ್ತವು. ವಿವಿಧ ವೇದಸಾಹಿತ್ಯವ, ಉಪನಿಷತ್ತುಗಳ , ವೇದಾಂತ ಸೂತ್ರದ, ಸಾಂಖ್ಯದರ್ಶನದ ಅಧ್ಯಯನಲ್ಲಿ ತೊಡಗಿ ಜ್ಞಾನ ಕಂಡುಗೊಂಬವೂ ಇದ್ದವು. ಇದಕ್ಕೆ ಸ್ವಾಧ್ಯಾಯ ಯಜ್ಞ ಹೇಳಿ ಹೆಸರು. ಈ ಯೋಗಿಗೊ ವಿವಿಧ ಯಜ್ಞಂಗಳಲಿ ಶ್ರದ್ಧೆಂದ ನಿರತರಾಗಿರುತ್ತವು. ಈ ರೀತಿಯಾಗಿ ಬದುಕಿಲ್ಲಿ ಉತ್ತಮ ಸ್ಥಿತಿಯ ಹೊಂದಲೆ ಬಯಸುತ್ತವು. ಆದರೆ, ಕೃಷ್ಣಪ್ರಜ್ಞೆ ಇವೆಲ್ಲಕ್ಕಿಂತ ಭಿನ್ನವಾದ್ದು. ಕೃಷ್ಣಪ್ರಜ್ಞೆ ಹೇಳಿರೆ ಭಗವಂತನ ನೇರ ಸೇವೆ. ಮೇಗೆ ಹೇಳಿದ ಯಾವ ಬಗೆ ಯಜ್ಞಂದಲೂ ಕೃಷ್ಣಪ್ರಜ್ಞೆಯ ಪಡವಲೆ ಸಾಧ್ಯ ಇಲ್ಲೆ. ಭಗವಂತನ ಶುದ್ಧ ಭಕ್ತನಾಗಿದ್ದರೆ ಮಾತ್ರ ಕೃಷ್ಣಪ್ರಜ್ಞೆಯ ಹೊಂದಲೆಡಿಗು. ಆದ್ದರಿಂದ ಕೃಷ್ಣಪ್ರಜ್ಞೆಯು ದಿವ್ಯವಾದ್ದು.

ಬನ್ನಂಜೆಯವರ ವ್ಯಾಖ್ಯಾನಲ್ಲಿ ಹೇಳಿಪ್ಪಂತೆ-  1. ದ್ರವ್ಯಯಜ್ಞ – ದ್ರವ್ಯದ ಮೂಲಕ ಭಗವಂತನ ಆರಧನೆ ಮಾಡುವದು. ಇದು ಅಗ್ನಿಮುಖೇನ ಆಗಿಪ್ಪಲೂ ಸಾಕು , ದಾನ ಧರ್ಮದ, ಹೇಳಿರೆ.., ಅನ್ನದಾನ, ಧನದಾನ, ಕನ್ಯಾದಾನ, ಭೂದಾನ, ಗೋದಾನ, ವಿದ್ಯಾದಾನ, ಚಿಕಿತ್ಸಾ ದಾನ – ಯೋಗ್ಯನಾದವಂಗೆ ಯೋಗ್ಯಕಾಲಲ್ಲಿ ಯೋಗ್ಯವಾದ್ದರ ಅವರೊಳ ಇಪ್ಪ ಭಗವಂತನ ಸಂತೋಷಕ್ಕೆ ದಾನರೂಪವಾಗಿ ಕೊಡುವದು . 2. ತಪೋಯಜ್ಞ – ಇದಕ್ಕೆ ಎರಡು ಮುಖ – ಒಂದು ಬಾಹ್ಯ, ಇನ್ನೊಂದು ಅಂತರಂಗ. ಒಂದು ನಿರಂತರ ಧ್ಯಾನ ., ಇದಕ್ಕೆ ಬಾಹ್ಯ ಪರಿಕರಂಗಳ ಅಗತ್ಯ ಇಲ್ಲೆ. ಎರಡ್ನೇದು ಭಗವಂತನ ಚಿಂತನೆಗೆ ಆತ್ಮಸಂಯಮ. ಇದರ ತಪಸ್ಸು ಹೇಳುವದು (ಬ್ರಹ್ಮಚರ್ಯಪಾಲನೆ, ವೃತಾನುಷ್ಠಾನ ಇತ್ಯಾದಿ). 3. ಯೋಗಯಜ್ಞ – ವಿಧವಿಧವಾದ ಕರ್ಮಯೋಗವ ಭಗವಂತನ ಪ್ರೀತ್ಯರ್ಥ ಅನುಷ್ಠಾನ ಮಾಡುವದು. ಇದು ಬಾಹ್ಯ ಕರ್ಮಂಗಳ ಮೂಲಕ ಭಗವಂತನ ಆರಧನೆ. ಯೋಗಶಾಸ್ತ್ರಲ್ಲಿ ಹೇಳಿಪ್ಪ ಶಾರೀರಿಕ ಯೋಗ ಪಾಲನೆ, ದೇವರಿಂಗೆ ಪ್ರದಕ್ಷಿಣೆ, ಅರ್ಚನೆ  ಇತ್ಯಾದಿ. 4. ಸ್ವಾಧ್ಯಾಯ ಜ್ಞಾನಯಜ್ಞ – ಇದು ಭಗವಂತಂಗೆ ಅತ್ಯಂತ ಪ್ರಿಯವಾದ ಯಜ್ಞ. ಇಲ್ಲಿ ಸ್ವಾಧ್ಯಾಯ ಹೇಳ್ತದಕ್ಕೆ ಅನೇಕ ಅರ್ಥಂಗೊ ಇದ್ದು. ತನಗೆ ಸಂಬಂಧಪಟ್ಟದ್ದರ ತಾನು ಓದೆಕ್ಕಪ್ಪದು ಓದುವದು, ತನ್ನ ಶಾಖೆ (ಋಗ್ ಯಜು ಸಾಮ ಅಥರ್ವ) ವೇದಾಧ್ಯಯನ, ಸರ್ವಸ್ವತಂತ್ರ ಭಗವಂತನ ಗುಣವ ಅಧ್ಯಯನ ಮೂಲಕ ಗ್ರಂಥಂಗಳಿಂದ ಅರ್ತುಗೊಂಬದು ಸ್ವಾಧ್ಯಾಯ. ಆ ಸಂದರ್ಭಲ್ಲಿ  ಶಾಸ್ತ್ರದ ಎಲ್ಲ ರಹಸ್ಯವ ತಿಳುದಿಪ್ಪವ ಮಾರ್ಗದರ್ಶನಕ್ಕೆ ಸಿಕ್ಕುವದು ವಿರಳ. ಅಂತಹ ಸಂದರ್ಭಲ್ಲಿ ಕಾಲಹರಣ ಮಾಡದ್ದೆ ತನ್ಗೆ ಭಗವಂತ ಎಷ್ಟು ಬುದ್ಧಿ ಕೊಟ್ಟಿದನೋ, ಅದರ ಸಂಪೂರ್ಣವಾಗಿ ಉಪಯೋಗಿಸಿಗೊಂಡು ಎಡಿಗಪ್ಪಷ್ಟರ ಅರ್ತುಗೊಂಬದು , ಕಲ್ತುಗೊಂಬದು ಸ್ವಾಧ್ಯಾಯ. ಈ ಎಲ್ಲ ಸ್ವಾಧ್ಯಾಯಂಗೊ ನಮ್ಮ ಜ್ಞಾನದ ಬೆಳವಣಿಗೆಗೆ ಪೋಷಕವಾಗಿಪ್ಪದು. ನಾವು ತಿಳಿವದು, ತಿಳುದ್ದರ ಮತ್ತೊಬ್ಬಂಗೆ ಅರ್ಥ ಅಪ್ಪ ಹಾಂಗೆ ತಿಳುಶುವದು (ಪಠನ – ಪಾಠನ) ಭಗವಂತಂಗೆ ಅತ್ಯಂತ ಪ್ರಿಯ. ಇನ್ನೊಬ್ಬರಿಂಗೆ ಹಂಚುವದರಿಂದ ನಮ್ಮಲ್ಲಿಪ್ಪದು ವೃದ್ಧಿಯಪ್ಪ ಏಕಮೇವ ಸಂಪತ್ತು ಹೇಳಿರೆ ಜ್ಞಾನ. ಇದರ ಮಾಡೆಕ್ಕಾರೆ ನಾವು ಯತಿಗೊ ಆಗಿರೆಕು. ಇಲ್ಲಿ ಯತಿ ಹೇಳಿರೆ ಸನ್ಯಾಸಿ ಅಲ್ಲ. ಯತಿ ಹೇಳಿರೆ ನಿರಂತರ ಪ್ರಯತ್ನಶೀಲ° (ಯತಯಃ) ಹೇಳಿ ಅರ್ಥ. ಸಾಧನೆ ಜೊತಗೆ ಹರಿತವಾದ ವೃತಾನುಷ್ಠಾನವೂ ಅಗತ್ಯ. ಹೇಳಿರೆ.., ಸ್ವಚ್ಛವಾದ ಪ್ರಾಮಾಣಿಕ ಬದುಕು. ಇದಿಲ್ಲದ್ದೆ ಮಾಡುವ ಯಾವ ಕರ್ಮವೂ ಕೂಡ ಯಜ್ಞ ಆವ್ತುತ್ತಿಲ್ಲೆ. ಆಧ್ಯಾತ್ಮದ ದಾರಿಲಿ ಮುಂದೆ ಸಾಗೆಕ್ಕಾರೆ ನಿಸ್ವಾರ್ಥ ಛಲ ಅಗತ್ಯ.

ಶ್ಲೋಕ

ಅಪಾನೇ ಜುಹ್ವತಿ ಪ್ರಾಣಂ ಪ್ರಾಣೇsಪಾನಂ ತಥಾಪರೇ ।
ಪ್ರಾಣಾಪಾನಗತೀ ರುದ್ಧ್ವಾ ಪ್ರಾಣಾಯಾಮ ಪರಾಯಣಾಃ ॥೨೯॥

ಪದವಿಭಾಗ

ಅಪಾನೇ ಜುಹ್ವತಿ ಪ್ರಾಣಮ್ ಪ್ರಾಣೇ ಅಪಾನಮ್ ತಥಾ ಅಪರೇ । ಪ್ರಾಣ-ಅಪಾನ-ಗತೀ ರುದ್ಧ್ವಾ ಪ್ರಾಣಾಯಾಮ-ಪರಾಯಣಾಃ ॥

ಅನ್ವಯ

ಅಪಾನೇ ಪ್ರಾಣಮ್, ಪ್ರಾಣೇ ಅಪಾನಂ ಜುಹ್ವತಿ । ತಥಾ ಅಪರೇ, ಪ್ರಾಣ-ಅಪಾನ-ಗತೀ ರುದ್ಧ್ವಾ ಪ್ರಾಣಾಯಾಮ-ಪರಾಯಣಾಃ ಸಂತಿ ॥

ಪ್ರತಿಪದಾರ್ಥ

ಅಪಾನೇ – ಅಧೋವಾಯುವಿಲ್ಲಿ, ಪ್ರಾಣಮ್  – ಬಾಹ್ಯವಾಗಿ ವರ್ತುಸುವ ವಾಯುವ, ಪ್ರಾಣೇ – ಹೆರಹೋಪ ವಾಯುವಿಲ್ಲಿ, ಅಪಾನಮ್ – ಅಧೋವಾಯುವ,  ಜುಹ್ವತಿ – ಅರ್ಪುಸುತ್ತವು, ತಥಾ – ಹಾಂಗೆಯೇ, ಅಪರೇ – ಇತರರು, ಪ್ರಾಣ-ಅಪಾನ-ಗತೀ  ರುದ್ಧ್ವಾ – ಹೆರ ಹೋಪ ವಾಯುವಿನ,  ಅಧೋವಾಯುವಿನ ಚಲನೆಯ ತಡೆಹಿಡುದು, ಪ್ರಾಣ-ಆಯಾಮ – ಸಕಲ ಶ್ವಾಸನಿರೋಧಂದ ಉಂಟಪ್ಪ ಸಮಾಧಿಲಿ, ಪರಾಯಣಾಃ – ಒಲವಿಪ್ಪವು (ನಿಷ್ಠರು), ಸಂತಿ – ಇದ್ದವು.

ಅನ್ವಯಾರ್ಥ

ಪ್ರಾಣಾಯಾಮದ ಪ್ರಕ್ರಿಯೆಯ ಅನುಸರುಸುವ ಕೆಲವು ಮನುಷ್ಯರು ಹೆರಹೋಪ ವಾಯುವಿನ ಚಲನೆಯ ಒಳಂಗೆ ಬಪ್ಪ ವಾಯುವಿನ ಚಲನಗೆ ಮತ್ತು ಒಳಂಗೆ ಬಿಡುವ ಉಸಿರಿನ ಚಲನೆಯ ಹೆರಂಗೆ ಹೋಪ ವಾಯುವಿನ ಚಲನಗೆ ಅರ್ಪಿಸಿ ಕಡೇಂಗೆ ಎಲ್ಲಾ ಉಸಿರಾಟವ  ನಿಲ್ಲುಸಿ ಸಮಾಧಿ ಸ್ಥಿತಿಗೆ ಮುಟ್ಟುತ್ತವು.

ತಾತ್ಪರ್ಯ / ವಿವರಣೆ

ಬನ್ನಂಜೆಯವು ಈ ಭಾಗವ ಮನೋಹರವಾಗಿ ವಿವರಿಸಿದ್ದವು – ಯೋಗಲ್ಲಿ ವಿಶಿಷ್ಟವಾದ ಸಾಧನೆ ಪ್ರಾಣಾಯಾಮ. ಕೆಲವರಿಂಗೆ ಪ್ರಾಣಾಯಾಮವೇ ಬದುಕಿಲ್ಲಿ ಒಂದು ಸಾಧನೆ. ಪ್ರಾಣಾಪಾನಂಗಳ ಭಗವಂತನಲ್ಲಿ ಯಜ್ಞರೂಪವಾಗಿ ಅರ್ಪಿಸಿ ಪ್ರಾಣಾಯಾಮಂದ ಭಗವಂತನ ಉಪಾಸನೆ. ಅಪಾನಲ್ಲಿ ಪ್ರಾಣವ ಹೋಮುಸುವದು. ಇದು ಕುಂಭಕಕ್ಕೆ ಸಂಬಂಧಪಟ್ಟದ್ದು. ದೇಹದ ಒಳಾಣ ಶ್ವಾಸವ ಹೆರಬಿಡುವದು ‘ರೇಚಕ’; ಆಮ್ಲಜನಕಯುಕ್ತ ಶುದ್ಧ ಗಾಳಿಯ ಒಳಂಗೆ ತೆಕ್ಕೊಂಬದು ‘ಪೂರಕ’. ನಮ್ಮ ಹೃದಯ ಕಲಶಲ್ಲಿ ಪ್ರಾಣಶಕ್ತಿಯ ಹಿಡುದು ಮಡಿಕ್ಕೊಂಬದು – ‘ಕುಂಭಕ’. ಇದು ಬಹಳ ಪರಿಣಾಮಕಾರಿ. ಇದರಿಂದ ಏಕಾಗ್ರತೆ, ಆರೋಗ್ಯ, ಆಯಸ್ಸು ಹೆಚ್ಚಿಸುತ್ತು. ಸಾಮಾನ್ಯವಾಗಿ ಒಬ್ಬ ಮನುಷ್ಯನ ಆಯಸ್ಸು ಆತನ ಉಸಿರಾಟದ ಮೇಲೆ ನಿರ್ಧಾರವಾಗಿರುತ್ತು. ಸಹಜ ಉಸಿರಾಟ ಹೇಳಿರೆ ನಾಲ್ಕು ಸೆಕುಂಡಿಂಗೆ ಒಂದು ಉಸಿರಾಟ (ರೇಚಕ ಮತ್ತು ಪೂರಕ). ಒಬ್ಬ ಮನುಷ್ಯ ನೂರು ವರ್ಷ ಬದುಕ್ಕುತ್ತ ಹೇಳಿರೆ ಆತನ ಆಯಸ್ಸು ೭೭ ಕೋಟಿ ೭೬ ಲಕ್ಶ ಉಸುರು. ಒಂದು ವೇಳೆ ನಾಲ್ಕು ಸೆಕುಂಡಿಂಗೆ ಬದಲಾಗಿ ೮ ಸೆಕುಂಡಿಂಗೆ ಒಂದರಿ ಉಸಿರಾಟ ಮಾಡಿದರೆ ಆತ ೨೦೦ ವರ್ಷ ಬದುಕುವ ಸಾಧ್ಯತೆ ಇದ್ದು. ಇದು ಮಾನವ ಅರೋಗ್ಯ ಶಾಸ್ತ್ರ. ಆದ್ರೆ ಸಾವು ಅಥವಾ ಆಯಸ್ಸು ನಮ್ಮ  ಕೈಲಿ ಇಲ್ಲೆ. ನಮ್ಮ ಪೂರ್ವ ಕರ್ಮದ ಫಲಕ್ಕನುಗುಣವಾಗಿ ಪರಮಾತ್ಮ° ಮದಲೇ ನಿಘಂಟು ಮಾಡಿರುತ್ತ°. ಮನುಷ್ಯನಾಗಿ ಹುಟ್ಟಿದ ಮತ್ತೆ ಆಯಸ್ಸು ಬಗ್ಗೆ (ಸಾವಿನ ಬಗ್ಗೆ ) ಚಿಂತೆ ಅಲ್ಲ. ಆಯಸ್ಸು ಪರ್ಯಂತ ಭಗವತ್ ಚಿಂತನೆ, ಆತ್ಮಸಾಕ್ಷಾತ್ಕಾರದ ಲಕ್ಷ್ಯ. ಅದಕ್ಕೆ ಮಾತ್ರ ಹೇಳಿದ್ದು ಆಯಸ್ಸು ವರ್ಧನೆ ಹೇಳಿ. ಈ ರೀತಿಯಾಗಿ ಹಿಂದೆ ಅನೇಕ ಸಾಧಕರು ಇತ್ತಿದ್ದವು (ಪ್ರಾಣಾಯಾಮದ ಮೂಲಕ ಆಯಸ್ಸು ಸಾಧನೆ ಮತ್ತು ಆತ್ಮ ಸಾಕ್ಷಾತ್ಕಾರ).   ಪ್ರಾಣಾಯಾಮಂದ ಪ್ರಾಣಶಕ್ತಿ ವೃದ್ಧಿಗೊಳ್ಳುತ್ತು. ಇದರಿಂದ ಹಲವು ರೋಗಂಗಳೂ ಗುಣ ಆವ್ತು. ಇನ್ನೊಬ್ಬರ ರೋಗವನ್ನೂ ಗುಣಪಡುಸಲೆ ಎಡಿತ್ತು. ಇದಕ್ಕೆ ಸ್ಪರ್ಶ ಅಥವಾ ಹೀಲಿಂಗ್ ಟಚ್ ಹೇಳ್ವದು. ಕೇವಲ ಹಸ್ತ ಸ್ಪರ್ಶಂದ ಭಯ, ರೋಗ, ದುಃಖ, ಮರ್ಳು, ಅಂಧತೆ ಎಲ್ಲವನ್ನೂ ಗುಣಪಡುಸಲೆ ಎಡಿಗು . ಈ ಕಾರಣಂದಾಗಿಯೇ ಒಬ್ಬ ಇನ್ನೊಬ್ಬಂಗೆ ಆಶೀರ್ವಾದ ಮಾಡುವಾಗ ತಲೆ ಮೇಗೆ ಕೈ ಮಡುಗಿ ಆಶೀರ್ವಾದ ಮಾಡುವದು. ಇದರಿಂದ ಪ್ರಾಣಶಕ್ತಿ ಅವಿನಿಂದ ಇವಂಗೆ ಹರುದು ಬತ್ತು. ಹೀಂಗೆ ಪ್ರಾಣಾಯಾಮಲ್ಲಿ ಅನೇಕ ಸಾಧನೆ ಸಾಧ್ಯ. ಮುಖ್ಯವಾಗಿ ಇದರಿಂದ ಮನಸ್ಸು ಭಗವಂತನಲ್ಲಿ ನೆಲೆಗೊಳ್ಳುತ್ತು. ಇದು ಒಂದು ಬಗೆಯ ಯಜ್ಞ.

ವಿವೇಕಿಯಾದ ಯೋಗಿಗೆ ಮುಂದಾಣ ಜನ್ಮದವರೇಂಗೆ ಕಾಯದ್ದೆ ಒಂದು ಜನ್ಮಲ್ಲಿಯೇ ಪರಿಪೂರ್ಣತೆಯ ಕೈಗೂಡಿಸಿಗೊಂಬದರಲ್ಲಿ ಆಸಕ್ತಿ. ಅಂತಹ ಮನುಷ್ಯರು ಪ್ರಾಣಾಯಾಮ ಯಜ್ಞದ ಮೂಲಕ ಸಾಧನೆಲಿ ತೊಡಗುತ್ತವು. ಕೃಷ್ಣಪ್ರಜ್ಞೆಲಿ ಇಪ್ಪ ಮನುಷ್ಯ° ಭಗವಂತನ ದಿವ್ಯ ಪ್ರೇಮಪೂರ್ವಕ ಸೇವೆಲಿ ಸದಾ ನಿರತನಾಗಿಪ್ಪದರಿಂದ ಇಂದ್ರಿಯ ನಿಯಂತ್ರಣದ ಪ್ರತ್ಯೇಕ ಸಾಧನೆ ಇಲ್ಲೆದ್ದೆ ಮುಂದುವರಿಯಲೆ ಎಡಿಗು. ಸದಾ ಕೃಷ್ಣಪ್ರಜ್ಞೆಲಿ ಮಗ್ನನಾಗಿಪ್ಪದರಿಂದ ಅವನ ಇಂದ್ರಿಯಂಗೊ ಬೇರೆ ರೀತಿಯ ಕ್ರಿಯೆಲಿ ತೊಡಗುವ ಸಾಧ್ಯತೆ ಇಲ್ಲೆ. ಆದ್ದರಿಂದ ಬದುಕಿನ ಅಂತ್ಯಲ್ಲಿ ಸಹಜವಾಗಿ ಆತ° ಭಗವಂತನ ದಿವ್ಯ ನೆಲೆಗೆ ಏರಿಬಿಡ್ತ. ಆದ್ದರಿಂದ ಅವ° ಆಯಸ್ಸುವೃದ್ಢಿಯ ಸಾಧನೆ ಪ್ರತ್ಯೇಕ ಮಾಡೆಕ್ಕಾದ್ದಿಲ್ಲೆ. ಕೃಷ್ಣಪ್ರಜ್ಞೆ ಹೇಳುವದು ಬಾಹ್ಯ ಮತ್ತು ಇಂದ್ರಿಯ ವಿಷಯಂಗಳ ಸಂಪೂರ್ಣವಾಗಿ ನಿಯಂತ್ರಿಸಿಗೊಂಡಿಪ್ಪ ವಿಶಿಷ್ಟ ಪೇಕೇಜು.

ಶ್ಲೋಕ

ಅಪರೇ ನಿಯತಾಹಾರಾಃ ಪ್ರಾಣಾನ್ ಪ್ರಾಣೇಷು ಜುಹ್ವತಿ ।
ಸರ್ವೇsಪ್ಯೇತೇ ಯಜ್ಞವಿದೋ ಯಜ್ಞಕ್ಷಪಿತಕಲ್ಮಷಾಃ ॥೩೦॥

ಪದವಿಭಾಗ

ಅಪರೇ ನಿಯತ-ಆಹಾರಾಃ ಪ್ರಾಣಾನ್ ಪ್ರಾಣೇಷು ಜುಹ್ವತಿ । ಸರ್ವೇ ಅಪಿ ಏತೇ ಯಜ್ಞವಿದಃ ಯಜ್ಞ-ಕ್ಷಪಿತ-ಕಲ್ಮಷಾಃ ॥

ಅನ್ವಯ

ಅಪರೇ ನಿಯತ-ಆಹಾರಾಃ ಪ್ರಾಣಾನ್ ಪ್ರಾಣೇಷು ಜುಹ್ವತಿ । ಏತೇ ಸರ್ವೇ ಅಪಿ ಯಜ್ಞವಿದಃ ಯಜ್ಞ-ಕ್ಷಪಿತ-ಕಲ್ಮಷಾಃ ಸಂತಿ ॥

ಪ್ರತಿಪದಾರ್ಥ

ಅಪರೇ – ಇತರರು, ನಿಯತ-ಆಹಾರಾಃ – ನಿಯಂತ್ರಿತವಾದ ತಿಂಬವು, ಪ್ರಾಣಾನ್ – ಹೆರ ಹೋಪ ವಾಯುವ, ಪ್ರಾಣೇಷು – ಹೆರ ಹೋಪ ವಾಯುವಿಲ್ಲಿ, ಜುಹ್ವತಿ – ಅರ್ಪಿಸುತ್ತವು.  ಸರ್ವೇ – ಇವೆಲ್ಲೋರು, ಅಪಿ – (ಸ್ಪಷ್ಟವಾಗಿ ಭಿನ್ನವಾಗಿದ್ದರೂ) ಕೂಡ, ಏತೇ – ಇವು, ಯಜ್ಞವಿದಃ – ಯಜ್ಞಾಚರಣೆಯ ಉದ್ದೇಶಂದ ಪರಿಶ್ರಮ ಇಪ್ಪ, ಯಜ್ಞ-ಕ್ಷಪಿತ-ಕಲ್ಮಷಾಃ  ಸಂತಿ- – ಅಂತಹ ಯಜ್ಞಾಚರಣೆಂದ ಶುದ್ಧವಾದ ಪಾಪಪೂರ್ಣ ಪ್ರತಿಕ್ರಿಯೆಗಳಾಗಿಪ್ಪವು ಇದ್ದವು

ಅನ್ವಯಾರ್ಥ

ಮತ್ತೆ ಕೆಲವು ಜನಂಗೊ ಅಹಾರನಿಯಮವುಳ್ಳವರಾಗಿ ಪ್ರಾಣವ ಪ್ರಾಣವಾಯುವಿಲ್ಲಿ ಹೋಮುಸುತ್ತವು. ಮೇಲೆ ಹೇಳಿದ ಎಲ್ಲಾ ಯಜ್ಞವಿದರು ಆಯಾ ಯಜ್ಞದ ಮೂಲಕ ತಮ್ಮ ಪಾಪದ ಕೊಳೆಯ ನೀಗಿಸಿಗೊಳ್ಳುತ್ತವು.

ತಾತ್ಪರ್ಯ / ವಿವರಣೆ

ಯಜ್ಞದ ಅರ್ಥವ ತಿಳುದ ಇವೆಲ್ಲೋರು ಶ್ರದ್ಧಾಭಕ್ತಿಪೂರ್ವಕ ತಮ್ಮ ತಮ್ಮ ಆಯ್ದ ಯಜ್ಞಂಗಳ ಮೂಲಕ ಪಾಪವ ಕಳಕ್ಕೊಂಡು ನಿರ್ಮಲರಾವುತ್ತವು . ಬೇರೆ ಬೇರೆ ವಿಧವಾದ ಯಜ್ಞಂಗಳ (ದ್ರವ್ಯಯಜ್ಞ, ತಪೋಯಜ್ಞ, ಸ್ವಾಧ್ಯಾಯ ಯಜ್ಞ, ಯೋಗಯಜ್ಞ) ಎಲ್ಲೋದರ ಗುರಿ ಒಂದೇ ಹೇಳ್ವದು ನವಗಿಲ್ಲಿ ತಿಳಿವಲಾವ್ತು. ಅದು ಇಂದ್ರಿಯ ನಿಯಂತ್ರಣ. ಐಹಿಕ ಅಸ್ತಿತ್ವದ ಮೂಲ ಕಾರಣ ಇಂದ್ರಿಯ ತೃಪ್ತಿಯೇ. ಹಾಂಗಾಗಿ ಇಂದ್ರಿಯತೃಪ್ತಿಂದ ದೂರವಾದ ವೇದಿಕೆಲಿ ನಾವು ನೆಲೆಸದ್ದೆ ಹೊದರೆ ಸಂಪೂರ್ಣ ಜ್ಞಾನ, ಸಂಪೂರ್ಣ ಆನಂದ, ಬದುಕಿನ ಸಂಪೂರ್ಣತೆ ಇವುಗಳ ಶಾಶ್ವತ ನೆಲೆಗೆ ನವಗೆ ಏರುಲೆ ಸಾಧ್ಯ ಇಲ್ಲೆ. ಐಹಿಕ ಅಸ್ತಿತ್ವದ ಪಾಪ ಪ್ರತಿಕ್ರಿಯೆಗಳೆಲ್ಲವ ಕಳಕ್ಕೊಂಡು ಶುಚಿಯಪ್ಪಲೆ ಇಂದ್ರಿಯ ಸುಖವ ಮರದು ಯಜ್ಞ ಸುಖಲ್ಲಿ ತೊಡಗೆಕು. ಈ ರೀತಿಂದ ಭಗವಂತನ ಶಾಶ್ವತ ಸಾಮ್ರಾಜ್ಯವ ಪ್ರವೇಶಿಸಲೆಡಿಗು, ನಿರಾಕಾರ ಬ್ರಹ್ಮನಲ್ಲಿ ಲೀನ ಅಪ್ಪಲೆ ಎಡಿಗು.

ಈ ಪ್ರಪಂಚಲ್ಲಿ ಕೆಲವು ಜೆನಂಗೊ ಆಹಾರ ನಿಯಂತ್ರಣಗೊಳುಸಿ, ಇಂದ್ರಿಯ ಚಾಪಲವ ಕಡಮ್ಮೆ ಮಾಡಿಗೊಂಡು ಸಾಧನೆ ಮಾಡುತ್ತವು. ಆಹಾರ ನಿಯಂತ್ರಣ ಹೇಳಿರೆ ಸಂಪೂರ್ಣ ಆಹಾರ ಬಿಡುವದು ಹೇಳಿ ಅರ್ಥ ಅಲ್ಲ. ಮೋಕ್ಷಸಾಧನೆಗೆ ತೊಡಗುವದು ಹೇಲಿರೆ ಎಲ್ಲವನ್ನೂ ತ್ಯಾಗ ಮಾಡಿ  ಸಾಧನೆಗೆ ತೊಡಗುವದಲ್ಲ. ಎಲ್ಲವುದರ ಜೊತೆಲಿ ಇದ್ದುಗೊಂಡು ಎಲ್ಲವನ್ನೂ ಅನುಭವಿಸಿಗೊಂಡು ಆದರೆ ಯಾವುದನ್ನೂ ಆಂಟುಸಿಗೊಳ್ಳದ್ದೆ ಸಾಧನೆ ಮಾಡುವದು. ಆಹಾರ ನಿಯಂತ್ರಣ ಹೇಳಿರೆ ಅತಿ ಆಹಾರ ಸೇವನೆ ವರ್ಜಿಸುವದು, ಉಪ್ಪು-ಹುಳಿ-ಖಾರ ಕಮ್ಮಿ ಮಾಡುವದು ಇತ್ಯಾದಿ. ಇದರಿಂದ ಇಂದ್ರಿಯ ಸೆಳೆತ ಕಮ್ಮಿ ಆವ್ತು. ಇದರ ಪರಿಣಾಮ ನೇರೆ ಮನಸ್ಸಿನ ಮೇಲೆ ಉಂಟಾವ್ತು. ಹೀಂಗೆ ಆಹಾರ ನಿಯಂತ್ರಣದ ಮೂಲಕ ಸಾಧನೆ ಒಂದು ಯಜ್ಞ. ಅದಕ್ಕಾಗಿಯೇ ನಮ್ಮಲ್ಲಿ ಅನೇಕ ಹಬ್ಬ ಹರಿದಿನ ಏಕಾದಶಿ ಹೇಳಿ ಉಪವಾಸ ಪದ್ಧತಿ ಸಮಾಜಲ್ಲಿ ಪ್ರಾರಂಭ ಆದ್ದು. ಇದರಿಂದ ಕನಿಷ್ಠ ಆ ಒಂದು ದಿನ ಆದರೂ ಮನಸ್ಸು ಸ್ವಚ್ಛವಾಗಿ ಭಗವಂತನ (ಉಪ+ವಾಸ) ಉಪಾಸನೆ ತೊಡಗುವದು.

ಇನ್ನೊಂದು ವಿಧವಾದ ಯಜ್ಞ – ‘ಪ್ರಾಣಾನ್ ಪ್ರಾಣೇಶು ಜುಹ್ವತಿ’., ಹೇಳಿರೆ, ಪ್ರಾಣಲ್ಲಿ ಪ್ರಾಣವ ಹೋಮುಸುವದು, ಅಥವಾ, ಇಂದ್ರಿಯಂಗಳಲ್ಲಿ ಇಂದ್ರಿಯವ ಹೋಮುಸುವದು. ಇಲ್ಲಿ ಇಂದ್ರಿಯಂಗೊ ಹೇಳಿರೆ ಇಂದ್ರಿಯಾಭಿಮಾನೆ ದೇವತೆಗೊ. ನಮ್ಮ ಪ್ರತಿಯೊಂದು ಇಂದ್ರಿಯಕ್ಕೂ ಒಬ್ಬೊಬ್ಬ ಅಭಿಮಾನಿ ದೇವತೆ ಹೇಳಿ ಈ ಮದಲೇ ಹೇಳಿದ್ದು. ಈ ದೇವತೆಗೊ ಒಂದೊಂದು ಸ್ತರಲ್ಲಿ ಕೆಲಸ ಮಾಡುತ್ತವು.

ಯಜ್ಞಲ್ಲಿ ಒಂದು ಒಳ್ಳೆದು ಒಂದು ಕೆಟ್ಟದ್ದು ಹೇಳಿ ಇಲ್ಲೆ. ಆರಿಂಗೆ ಯಾವ ಯಜ್ಞ ಒಗ್ಗುತ್ತೊ ಅದರ ಮುಖೇನ ಸಾಧನೆ ಮಾಡ್ಳಕ್ಕು. ಎಲ್ಲರೂ ಎಲ್ಲವನ್ನೂ ಮಾಡ್ಳೆ ಎಡಿಗಾಗ. ಆರಿಂಗೆ ಯಾವುದು ಹಿತ ಆವ್ತೋ, ಸಾಧನೆಗೆ ಅನುಕೂಲ ಆವುತ್ತೋ ಆ ದಾರಿಲಿ ಸಾಗೆಕ್ಕಾದ್ದು. ಯಜ್ಞಂದ ಆರಾಧ್ಯನಾದ ಯಜ್ಞಮೂರ್ತಿಯಾದ ಭಗವಂತನತ್ತ ಸಾಗೆಕ್ಕಾದ್ದು. ನಮ್ಮ ಜೀವನ ಪ್ರತಿಯೊಂದು ನಡೆಯನ್ನು ಭಗವಂತನ ಆರಾಧನೆ ಮಾಡಿಗೊಂಬ ಮೂಲಕ ನಮ್ಮ ಬದುಕಿನ ಕಲ್ಮಷವ ತೊಳಕ್ಕೊಂಡು ಸ್ವಚ್ಛವಾದ ಬದುಕಿಲ್ಲಿ ಬದುಕ್ಕೆಕ್ಕಪ್ಪದು ಮುಖ್ಯ.

ಮುಂದೆ ಎಂತರ..?   ಬಪ್ಪ ವಾರ ನೋಡುವೋ°

….ಮುಂದುವರಿತ್ತು.

ಶ್ಲೋಕ ಕೇಳಿಗೊಂಡು ಓದಲೆ –

BHAGAVADGEETHA – CHAPTER 04 – SHLOKAS 21 – 30 by CHENNAI BHAAVA

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

One thought on “ಶ್ರೀಮದ್ಭಗವದ್ಗೀತಾ – ಚತುರ್ಥೋsಧ್ಯಾಯಃ – ಜ್ಞಾನಯೋಗಃ – ಶ್ಲೋಕಂಗೊ 21 – 30

  1. ಚೆನ್ನೈ ಭಾವನ ವಿವರಣೆಗೊಕ್ಕೆ ನಮೋ ನಮ: ||

    “ಕೃಷ್ಣಪ್ರಜ್ಞೆಲಿ ಸಂಪೂರ್ಣವಾಗಿ ಮಗ್ನನಾದ ಮನುಷ್ಯ° ನಿಶ್ಚಯವಾಗಿಯೂ ಆ ಭಗವದ್ಧಾಮವ ಸೇರುತ್ತ.”
    ಈ ಎರಡು ವರ್ಷಗಳಿಂದ ಆನು ಕೃಷ್ಣಪ್ರಜ್ಞೆಲಿ ಜೀವನ ನಡೆಸುತ್ತಾ ಇದ್ದೆ.ಒಂದು ರೋಚಕವಾದ ಅನುಭವ ಆನು ಅನುಭವಿಸಿದ್ದರ ನಿಂಗಳ ಜೊತೆ ಹಂಚಿಗೊಳ್ಳುತ್ತೆ.

    ಉದಿಯಪ್ಪಗ ಸಾಧಾರಣ ಹತ್ತು ಗಂಟೆಯ ಸಮಯ. ಇವು ಆಫೀಸ್ ಗೆ ಹೋಗಿ ಆಯಿದು. ಮನೇಲಿ ಆನು,ಮಗ ಶ್ರೀಚರಣ,ಮಗಳು ಧಾರಾ ಮಾಂತ್ರ ಇತ್ತಿದ್ದೆಯ. ಎಂತದೋ ಸುಸ್ತು ಆದ ಹಾಂಗೆ ಅಪ್ಪಲೇ ಶುರು ಆತು. ಕೈ ಕಾಲುಗಳಿಂದ ಒಂದು ಶಕ್ತಿಯ ಸೆಳೆತ ಪ್ರಾರಂಭ ಆತು. ಬಾಯಾರಿಕೆ ಆಗಿ ಗಂಟಲು ಒಣಗಿದ ಹಾಂಗೆ ಆತು. ಮುಖ ತುಟಿಗಳಲ್ಲಿ ಏನೋ ಒಂದು ನಡುಕ ಉಂಟಾತು. ಕಣ್ಣಿಂದ ನೀರು ಹರಿತ್ತಾ ಇತ್ತಿದ್ದು. ಮನಸ್ಸು ರಾಮ,ರಾಮ ಹೇಳಿ ರಾಮ ಜಪಲ್ಲಿ ತಲ್ಲೀನ ಆಗಿತ್ತು.ಈ ಶಕ್ತಿ ಹಾಂಗೆ ಮೇಲ್ಮುಖವಾಗಿ ಎದೆ,ತಲೆ ಮೂಲಕ ಹರಿದು ಗುರುಗಳ ಸೇರಿತ್ತು. ಶ್ರೀಚರಣ ಅಮ್ಮಂಗೆ ಎಂತ ಆವುತ್ತಾ ಇದ್ದು ಹೇಳಿ ಎನ್ನ ನೋಡಿಗೊಂಡೆ ಬಾಕಿ. ಎನಗೂ ಈ ತರ ಅನುಭವ ಆದದ್ದು ಮೊದಲ ಸಲ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×