Oppanna.com

ಗರುಡ ಪುರಾಣ – ಅಧ್ಯಾಯ 06

ಬರದೋರು :   ಚೆನ್ನೈ ಬಾವ°    on   26/09/2013    2 ಒಪ್ಪಂಗೊ

ಚೆನ್ನೈ ಬಾವ°

ಕಳುದ ವಾರದ ಭಾಗಲ್ಲಿ ಪಾಪಚಿಹ್ನೆಗಳ ಕುರಿತಾಗಿ ಭಗವಂತ° ಗರುಡಂಗೆ ಹೇಳಿದ್ದರ ನಾವು ಓದಿದ್ದು. ಮುಂದೆ –
 
ಗರುಡ ಪುರಾಣಮ್                                                       ಗರುಡ ಪುರಾಣ
ಅಥ ಷಷ್ಠೋsಧ್ಯಾಯಃ                                                  ಅಧ್ಯಾಯ ಆರು
ಪಾಪಜನ್ಮಾದಿದುಃಖನಿರೂಪಣಮ್                               ಪಾಪಿಗಳ ಜನ್ಮಾದಿ ದುಃಖಂಗಳ ನಿರೂಪಣೆ
 
ಗರುಡ ಉವಾಚ-
ಕಥಮುತ್ಪದ್ಯತೇ ಮಾತುರ್ಜಠರೇ ನರಕಾಗತಃ ।

ಗರ್ಭಾದಿದುಃಖಂ ಯದ್ಭುಂಕ್ತೇ ತನ್ಮೇ ಕಥಯ ಕೇಶವ ॥೦೧॥
ಗರುಡ ಹೇಳಿದ° – ಏ ಕೇಶವನೇ, ನರಕಂದ ಬಂದಂವ° ಅಬ್ಬೆಯ ಗರ್ಭಲ್ಲಿ ಯಾವ ರೀತಿ ಉತ್ಪನ್ನ ಆವುತ್ತ, ಗರ್ಭಲ್ಲಿ ಯಾವ ದುಃಖವ ಅನುಭವುಸುತ್ತ° ಹೇಳ್ವದರ ಎನಗೆ ವಿವರುಸು.
ವಿಷ್ಣುರುವಾಚ-for chapter 6
ಸ್ತ್ರೀಪುಂಸೋಸ್ತು ಪ್ರಸಂಗೇನ ನಿರುದ್ಧೇ ಶುಕ್ರಶೋಣಿತೇ ।
ಯಥಾsಯಂ ಜಾಯತೇ ಮರ್ತ್ಯಸ್ತಥಾ ವಕ್ಷ್ಯಾಮ್ಯಹಂ ತವ ॥೦೨॥
ವಿಷ್ಣು ಹೇಳಿದ° – ಸ್ತ್ರೀ ಪುರುಷರ ಸಂಯೋಗಂದ ವೀರ್ಯಾಣು ಮತ್ತು ಅಂಡಾಣು(ಗರ್ಭಾಣು)ಗೊ ಗರ್ಭಲ್ಲಿ ತಡೆಹಿಡಿಯಲ್ಪಟ್ಟು ಯಾವ ರೀತಿಲಿ ಮನುಷ್ಯ° ಹುಟ್ಟುತ್ತ° ಹೇಳ್ವದರ ನಿನಗೆ ಆನು ಹೇಳುತ್ತೆ.
ಋತುಮಧ್ಯೇ ಹಿ ಪಾಪಾನಾಂ ದೇಹೋತ್ಪತ್ತಿಃ ಪ್ರಜಾಯತೇ ।
ಇಂದ್ರಸ್ಯ ಬ್ರಹ್ಮಹತ್ಯಾಸ್ತಿ ಯಸ್ಮಿಂಸ್ತಸ್ಮಿನ್ ದಿನತ್ರಯೇ ॥೦೩॥
ಋತುಕಾಲದ ಸುರುವಾಣ ಮೂರುದಿನಂಗಳವರೇಂಗೆ ಇಂದ್ರಂಗೆ ತಗುಲಿದ ಬ್ರಹ್ಮಹತ್ಯಾದೋಷದ ನಾಲ್ಕನೆಯ ಭಾಗ ರಜಸ್ವಲಾ ಸ್ತ್ರೀಯರಲ್ಲಿ ಇರುತ್ತು. ಆ ಋತುಕಾಲಲ್ಲಿ ಮಧ್ಯಲ್ಲಿ ಮಾಡಿದ ಗರ್ಭಾಧಾನದ ಫಲವಾಗಿ ಪಾಪಾತ್ಮರುಗಳ ದೇಹದ ಉತ್ಪತ್ತಿಯಾವುತ್ತು. [ಸ್ತ್ರೀಯರು ತಾವು ಸದಾ ಪುರುಷರ ಸಹವಾಸ ಮಾಡುವಂತೆ ವರವ ಪಡದು ಇಂದ್ರನ ಬ್ರಹ್ಮಹತ್ಯಾ ದೋಷದ ಕಾಲುಭಾಗವ ಸ್ವೀಕರುಸಿದವು. ಅವರ ಈ ಬ್ರಹ್ಮಹತ್ಯಾ ದೋಷ ಪ್ರತ್ಯೇಕ ತಿಂಗಳಿಲ್ಲಿ ಈ ಮೂರು ದಿನಂಗಳ ಕಾಲ ರಜಸ್ಸಿನ ರೂಪಲ್ಲಿ ಪ್ರಕಟವಾವುತ್ತು- ಶ್ರೀ ಮದ್ಭಾ.೬.೯.೯ ]  
ಪ್ರಥಮೇsಹನಿ ಚಾಂಡಾಲೀ ದ್ವಿತೀಯೇ ಬ್ರಹ್ಮಘಾತಿನೀ ।
ತೃತೀಯೇ ರಜಕೀ ಹ್ಯೇತಾ ನರಕಾಗತಮಾತರಃ ॥೦೪॥
ರಜಸ್ವಲಾ ಸ್ತ್ರೀ ಸುರುವಾಣ ದಿನ ಚಾಂಡಲಿ, ಎರಡ್ನೇ ದಿನ ಬ್ರಹ್ಮಘಾತಿನಿ, ಮತ್ತೆ ಮೂರ್ನೇ ದಿನ ಮಡ್ಯೋಳ್ತಿ (ಮಡಿವಾಳಿ/ಅಗಸಗಿತ್ತಿ) ಎನಿಸುತ್ತು (ತದನುಸಾರ ಸ್ಪರ್ಶದೋಷ ಹೇದು ಅರ್ಥ). ನರಕಂದ ಬಂದ ಜೀವಿಗೊಕ್ಕೆ ಇವ್ವೇ ಮೂವರು ಮಾತೆಯರುಗೊ.
ಕರ್ಮಣಾ ದೈವನೇತ್ರೇಣ ಜಂತುರ್ದೇಹೋಪಪತ್ತಯೇ ।
ಸ್ತ್ರಿಯಾಃ ಪ್ರವಿಷ್ಟ ಉದರಂ ಪುಂಸೋ ರೇತಃಕಣಾಶ್ರಯಃ ॥೦೫॥
ದೈವ ನೇತೃತ್ವಲ್ಲಿ ತನ್ನ ಕರ್ಮಂಗನುಗುಣವಾಗಿ ಆ ಜೀವವು ದೇಹದ ಉತ್ಪತ್ತಿಗೋಸ್ಕರ ಪುರುಷನ ವೀರ್ಯಾಣುವ ಆಶ್ರಯಿಸಿ ಸ್ತ್ರೀಯ ಗರ್ಭವ ಪ್ರವೇಶಿಸುತ್ತು.
ಶುಕ್ರಶೋಣಿತ ಸಂಯೋಗಾತ್ ಪಿಂಡೋತ್ಪತ್ತಿಃ ಪ್ರಜಾಯತೇ ।
ರಕ್ತಾಧಿಕೇ ಭವೇನ್ನಾರೀ ಶುಕ್ರಾಧಿಕೇ ಭವತ್ಪುಮಾನ್ ॥
ಕಲಲಂ ತ್ವೇಕರಾತ್ರೇಣ ಪಂಚರಾತ್ರೇಣ ಬುದ್ಬುದಮ್ ।

ದಶಾಹೇನ ತು ಕರ್ಕಂಧೂಃ ಪೇಶ್ಯಂಡಂ ವಾ ತತಃ ಪರಮ್ ॥೦೬॥
ಶುಕ್ರ ಮತ್ತು ಶೋಣಿತ (ಗರ್ಭಾಣು) ಸಂಯೋಗಂದ ಪಿಂಡೋತ್ಪತ್ತಿ ಆವುತ್ತು. ಸಂಯೋಗಲ್ಲಿ ಸ್ತ್ರೀಕಾರಕ ಅಂಶ ಪ್ರಾಬಲ್ಯ ಅಧಿಕವಾಗಿದ್ದರೆ ಕೂಸೂ,  ಗೆಂಡುಕಾರಕ ಅಂಶ ಪ್ರಾಬಲ್ಯ ಅಧಿಕವಾಗಿದ್ದರೆ ಮಾಣಿಯಾಗಿಯೂ ಪಿಂಡೋತ್ಪತ್ತಿ ಆವುತ್ತು (ಅದೂ ಪೂರ್ವ ಕರ್ಮ ಸುಕೃತಂದಲೇ . ಶುಕ್ರಶೋಣಿತಯೋ ಸಾಮ್ಯೇ  ಜಾಯತೇ ಚ ನಪುಂಸಕಃ  – ವೀರ್ಯಾಣು ಅಂಡಾಣು(ಗರ್ಭಾಣು)ವಿನ ಸಂಯೋಗಲ್ಲಿ ಸಮಾನವಾಗಿದ್ದರೆ ನಪುಂಸಕತ್ವ).  ಒಂದು ಇರುಳಿಲ್ಲಿ ‘ಕಲಲ’ ಹೇದೂ, ಐದು ಇರುಳಿಲ್ಲಿ ‘ಬುದ್ಬುದ’ ಹೇದೂ, ಹತ್ತು ಇರುಳಿಲ್ಲಿ ‘ಕರ್ಕಂದು’ ಹೇದೂ, ಮತ್ತೆ ‘ಪೇಶ್ಯಂಡ’ ಹೇದೂ ಅದರ ಹೇಳುತ್ತದು.
ಮಾಸೇನ ತು ಶಿರೋ ದ್ವಾಭ್ಯಾಂ ಬಾಹ್ವಂಗಾದ್ಯಂಗವಿಗ್ರಹಃ ।
ನಖಲೋಮಾಸ್ಥಿ ಚರ್ಮಾಣಿ ಲಿಂಗಚ್ಛಿದ್ರೋದ್ಭವಸ್ತ್ರಿಭಿಃ ॥೦೭॥
ಮದಲಾಣ ತಿಂಗಳಿಲ್ಲಿ ತಲೆಯೂ, ಎರಡು ತಿಂಗಳ್ಳಿ ಬಾಹು ಮತ್ತಿತರ ಅಂಗಭಾಗಂಗಳೂ, ಮೂರು ತಿಂಗಳ್ಳಿ ಉಗುರು, ತಲೆಕಸವು, ಎಲುಬು, ಚರ್ಮ, ಲಿಂಗ ಮತ್ತೆ ದಶದ್ವಾರಂಗಳೂ ಉದ್ಭವವಾವುತ್ತು.
ಚತುರ್ಭಿರ್ಧಾತವಃ ಸಪ್ತ ಪಂಚಭಿಃ ಕ್ಷುತ್ತೃಡುದ್ಭವಃ ।
ಷಡ್ಭಿರ್ಜರಾಯುಣಾ ವೀತಃ ಕುಕ್ಷೌಭ್ರಾಮ್ಯತಿ ದಕ್ಷಿಣೇ ॥೦೮॥
ನಾಲ್ಕು ತಿಂಗಳ್ಳಿ ಏಳು ಧಾತುಗಳೂ (ರಸ, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ ಹಾಂಗೂ ಶುಕ್ರ), ಐದು ತಿಂಗಳ್ಳಿ ಹಶು ಆಸರುಗಳೂ ಹುಟ್ಟುತ್ತು. ಆರು ತಿಂಗಳ್ಳಿ ಗರ್ಭಾಶಯದ ಒಳ ಗರ್ಭಕೋಶದ ಬಲಭಾಗಲ್ಲಿ ಅದು ಚಲುಸುತ್ತು.
ಸಮಾನೇ ದ್ರವ್ಯಸಂಯೋಗೇ ತೃತೀಯಾ ಪ್ರಕೃತಿರ್ಭವೇತ್ ।
ವಿಭಕ್ತೇ ರೇತಸಿ ಪ್ರಾಯೋ ಭವೇದ್ಯುಗ್ಮಮಪಿ ಕ್ವಚಿತ್॥
ಮಾತುರ್ಜಗ್ಧಾನ್ನಪಾನಾದ್ಯೈರೇಧದ್ಧಾತುರಸಂಮತೇ ।

ಶೇತೇ ವಿಣ್ಮೂತ್ರಯೋರ್ಗರ್ತೇ ಸ ಜಂತುರ್ಜಂತುಸಂಭವೇ ॥೦೯॥
ಸಂಯೋಗಸಮಯಲ್ಲಿ ವೀರ್ಯಾಣು ಮತ್ತು ಅಂಡಾಣು ಸಮಾನವಾಗಿ ಕೂಡಿ ವಿಭಜನೆ ಅಪ್ಪಗ ಕೆಲವೊಂದರಿ ಮೂರನೇ ಪ್ರಕೃತಿಯೂ (ನಪುಂಸಕ) ಅಪ್ಪ ಸಾಧ್ಯತೆ ಇದ್ದು. ಅಬ್ಬೆ ತಿಂದ ಅನ್ನಪಾನಾದಿಗಳಿಂದ ಅದರ ಧಾತುಗೊ ವೃದ್ಧಿಯಾವುತ್ತು. ಆ ಜೀವವು ಕ್ರಿಮಿಗೊ ಇಪ್ಪ ಮಲಮೂತ್ರದ ಹೊಂಡಲ್ಲಿ ತನ್ನ ಇಚ್ಛೆಗೆ ವಿರೋಧವಾಗಿ ಮನಿಕ್ಕೊಂಡಿರುತ್ತು.
ಕೃಮಿಭಿಃ ಕ್ಷತಸರ್ವಾಂಗಃ ಸೌಕುಮಾರ್ಯಾತ್ಪ್ರತಿಕ್ಷಣಮ್ ।
ಮೂರ್ಛಾಮಾಪ್ನೋತ್ಯುರುಕ್ಲೇಶಸ್ತತ್ರತ್ಯೈಃ ಕ್ಷುಧಿತೈರ್ಮುಹುಃ ॥೧೦॥
ಅಲ್ಲಿಪ್ಪ ಹಶುವಾದ ಕ್ರಿಮಿಗಳಿಂದ ಕೋಮಲವಾದ ಸರ್ವಾಂಗಂಗಳೂ ಪ್ರತಿಕ್ಷಣ ಕಚ್ಚಲ್ಪಟ್ಟು, ಅಧಿಕ ಬೇನೆಂದ ಪದೇ ಪದೇ ಮೂರ್ಛಿತವಾವುತ್ತು.
ಕಟುತೀಕ್ಷ್ಣೋಷ್ಣ ಲವಣರೂಕ್ಷಾಮ್ಲಾದಿಭಿರುಲ್ಪಣೈಃ ।
ಮಾತೃಭುಕ್ತೈರುಪಸ್ಪೃಷ್ಟಃ ಸರ್ವಾಂಗೋತ್ಥಿತವೇದನಃ ।
ಉಲ್ಬೇನ ಸಂವೃತಸ್ತಸ್ಮಿನ್ನಂತ್ರೈಶ್ಚ ಬಹಿರಾವೃತಃ ॥೧೧॥
ಗರ್ಭಾಶಯಂದ ಆವರಿಸಲ್ಪಟ್ಟು, ಹೆರ ಅಬ್ಬೆಯ ಕರುಳುಗಳಿಂದ ಸುತ್ತುವರುದು, ಅಬ್ಬೆ ತಿಂಬ ಕಯ್ಕೆ, ಖಾರ, ಬೆಶಿ, ಉಪ್ಪು, ಒಗರು, ಹುಳಿ ಮುಂತಾದ ತೀಕ್ಷ್ಣ ರಸಂಗಳ ಸ್ಪರ್ಶಂದ ಎಲ್ಲ ಅಂಗಗಳಲ್ಲಿಯೂ ಬೇನೆಯ ಅನುಭವುಸುತ್ತು.
ಅಸ್ತೇ ಕೃತ್ವಾ ಶಿರಃ ಕುಕ್ಷೌ ಭುಗ್ನಪೃಷ್ಠಶಿರೋಧರಃ ।
ಕಲ್ಪಃ ಸ್ವಾಂಗಚೇಷ್ಟಾಯಾಂ ಶಕುಂತ ಇವ ಪಂಜರೇ ॥೧೨॥
ಗರ್ಭಾಶಯದ ಒಳ ತಲೆ ಬೆನ್ನು ಮತ್ತೆ ಕೊರಳು ಬಗ್ಗಿಪ್ಪಗ ತನ್ನ ಅಂಗ ಚೇಷ್ಟೆಗಳ ಮಾಡ್ಳೆ ಅಶಕ್ತನಾಗಿ ಪಂಚರಲ್ಲಿಪ್ಪ ಹಕ್ಕಿಯ ಹಾಂಗೆ ಇರುತ್ತು.
ತತ್ರ ಲಬ್ಧಸ್ಮೃತಿರ್ದೈವಾತ್ಕರ್ಮ ಜನ್ಮಶತೋದ್ಭವಮ್ ।
ಸ್ಮರನ್ ದೀರ್ಘಮುಚ್ಛ್ವಾಸಂ ಶರ್ಮ ಕಿಂ ನಾಮ ವಿಂದತೇ ॥೧೩॥
ಅಲ್ಲಿ ದೈವಶಕ್ತಿಂದ ನೂರು ಜನ್ಮಂಗಳಲ್ಲಿ ಮಾಡಿದ ಕರ್ಮಂಗಳ ನೆಂಪು ಆವುತ್ತು. ಅವುಗಳ ಸ್ಮರಿಸಿ ದೀರ್ಘಕಾಲ ಉಸುರು ಕಟ್ಟಿದವನಾಂಗೆ ರಜವೂ ಸುಖ ಇಲ್ಲದ್ದೆ ಇರುತ್ತ°.
ನಾಥಮಾನ ಋಷಿರ್ಭೀತಃ ಸಪ್ತವಧ್ರಿಃ ಕೃತಾಜಲಿಃ ।
ಸ್ತುವೀತ ತಂ ವಿಕ್ಲವಯಾ ವಾಚಾ ಯೇನೋದರೇsರ್ಪಿತಃ ॥೧೪॥
ಆತ್ಮದರ್ಶಿಯಾದ ಅಂವ° ಸಪ್ತಧಾತುಗಳೆಂಬ ಏಳು ಬಂಧನಗಳಿಂದ ಬಂಧಿಸಲ್ಪಟ್ಟು ಕೈ ಮುಕ್ಕೊಂಡು, ಸಹಾಯವ ಬೇಡಿಗೊಂಡು, ಭೀತನಾಗಿ, ಆರ್ತತೆಂದ ತನ್ನ ಈ ಗರ್ಭಕ್ಕೆ ಕಳುಹಿದವನ ದೀನಸ್ವರಲ್ಲಿ ಸ್ತುತಿಸುತ್ತ°.
ಆರಭ್ಯ ಸಪ್ತಮಾನ್ಮಾಸಾಲ್ಲಬ್ಧಬೋಧೋsಪಿ ವೇಪಿತಃ ।
ನೈಕತ್ರಾಸ್ತೇ ಸೂತಿವಾತೈರ್ವಿಷ್ಠಾಭೂರಿವ ಸೋದರಃ ॥೧೫॥
ಏಳನೇ ತಿಂಗಿಳಿನ ಪ್ರಾರಂಭಲ್ಲಿ ಅವಂಗೆ ಜ್ಞಾನವುಂಟಾದರೂ ಪ್ರಸೂತಿ ವಾಯುವಿನ ಪ್ರಭಾವಂದ ಅದೇ ಹೊಟ್ಟೆಲಿ ಮಲಲ್ಲಿಪ್ಪ ಹುಳುಗಳ ಹಾಂಗೆ ಒಂದೇ ದಿಕ್ಕೆ ಇರುತ್ತಿಲ್ಲೆ.
ಜೀವ ಉವಾಚ-
ಶ್ರೀಪತಿಂ ಜಗದಾಧಾರಾಮಶುಭಕ್ಷಯಕಾರಕಮ್ ।
ವ್ರಜಾಮಿ ಶರಣಂ ವಿಷ್ಣುಂ ಶರಣಾಗತವತ್ಸಲಮ್ ॥೧೬॥
ಜೀವ ಹೇಳುತ್ತ°- ಶ್ರೀಪತಿಯೂ, ಜಗತ್ತಿಂಗೆಲ್ಲ ಆಧಾರ ಸ್ವರೂಪನೂ, ಅಶುಭವ ನಾಶಮಾಡುವವನೂ, ಶರಣಾಗತವತ್ಸಲನೂ ಆದ ವಿಷ್ಣುವಿಂಗೆ ಶರಣು ಹೋವುತ್ತೆ.
ತ್ವನ್ಮಾಯಾಮೋಹಿತೋ ದೇಹೇ ತಥಾ ಪುತ್ರಕಲತ್ರಕೇ ।
ಅಹಂಮಮಾಭಿಮಾನೇನ ಗತೋsಹಂ ನಾಥ ಸಂಸ್ಕೃತಿಮ್ ॥೧೭॥
ಹೇ ನಾಥ!, ನಿನ್ನೆ ಮಾಯೆಂದ ಮೋಹಿತನಾಗಿ ದೇಹ ಹಾಂಗೂ ಪತ್ನೀಪುತ್ರರಲ್ಲಿ ಆನು ಎನ್ನವು ಹೇಳ್ವ ಅಭಿಮಾನಂದ ಈ ಸಂಸಾರವ ಪಡದ್ದೆ.
ಕೃತಂ ಪರಿಜನಸ್ಯಾರ್ಥೇ ಮಯಾ ಕರ್ಮ ಶುಭಾಶುಭಮ್ ।
ಏಕಾಕೀ ತೇನ ದಗ್ಧೋsಹಂ ಗತಾಸ್ತೇ ಫಲಭಾಗಿನಃ ॥೧೮॥
ಎನ್ನ ಪರಿಜನರಿಂಗೋಸ್ಕರವಾಗಿ ಆನು ಶುಭಾಶುಭ ಕರ್ಮಂಗಳ ಮಾಡಿರುತ್ತೆ. ಅವುಗಳಿಂದಲೇ ಆನು ಏಕಾಂಗಿಯಾಗಿ ದಗ್ಧನಾಗ್ಯೊಂಡಿದ್ದೆ. ಆದರೆ ಫಲಲ್ಲಿ ಭಾಗಿಗೊ ಆದವು ಹೆರಟು ಹೋದವು.
ಯದಿ ಯೋನ್ಯಾಃ ಪ್ರಮುಚ್ಯೇsಹಂ ತತ್ಸ್ಮರಿಷ್ಯೇ ಪದಂ ತವ ।
ತಮುಪಾಯಂ ಕರಿಷ್ಯಾಮಿ ಯೇನ ಮುಕ್ತಿಂ ವ್ರಜಾಮ್ಯಹಮ್ ॥೧೯॥
ಒಂದು ವೇಳೆ ಈ ಗರ್ಭಂದ ಆನು ಬಿಡುಗಡೆ ಹೊಂದಿರೆ ನಿನ್ನ ಪಾದವ ಸ್ಮರುಸುತ್ತೆ. ಯಾವುದರಿಂದ ಆನು ಮುಕ್ತಿಯ ಹೊಂದಲೆಡಿಗೋ ಅಂತಹ ಉಪಾಯವ ಆನು ಮಾಡುತ್ತೆ.
ವಿಣ್ಮೂತ್ರಕೂಪೇ ಪತಿತೋ ದಗ್ಧೋsಹಂ ಜಠರಾಗ್ನಿನಾ ।
ಇಚ್ಛನ್ನಿತೋ ವಿವಸಿತುಂ ಕದಾ ನಿರ್ಯಾಸ್ಯತೇ ಬಹಿಃ ॥೨೦॥
ಮಲ ಮೂತ್ರಂಗಳ ಕೂಪಲ್ಲಿ ಬಿದ್ದು ಆನು ಜಠರಾಗ್ನಿಂದ ಬೆಂದು ಹೆರ ಬಪ್ಪಲೆ ಇಚ್ಛಿಸುತ್ತಿದ್ದೆ. ಎನ್ನ ಏವಾಗ ಹೆರ ಕಳುಸುತ್ತೆ?
ಯೇನೇದೃಶಂ ಮೇ ವಿಜ್ಞಾನಂ ದತ್ತಂ ದೀನದಯಾಲುನಾ ।
ತಮೇವ ಶರಣಂ ಯಾಮಿ ಪುನರ್ಮೇ ಮಾsಸ್ತು ಸಂಸೃತಿಃ ॥೨೧॥
ಏವ ದೀನದಯಾಳುವು ಈ ರೀತಿಯ ವಿಶೇಷವಾದ ಜ್ಞಾನವ ಎನಗೆ ಕೊಟ್ಟಿದನೋ ಅವನನ್ನೇ ಶರಣುಹೋವುತ್ತೆ. ಪುನಃ ಎನಗೆ ಈ ಸಂಸಾರವು ಇಲ್ಲದಾಗಲಿ.
ನ ಚ ನಿರ್ಗಂತುಮಿಚ್ಛಾಮಿ ಬಹಿರ್ಗರ್ಭಾತ್ಕದಾಚನ ।
ಯತ್ರ ಯಾತಸ್ಯ ಮೇ ಪಾಪಕರ್ಮಣಾ ದುರ್ಗತಿರ್ಭವೇತ್ ॥೨೨॥
ಇಲ್ಲೆ, ಆನು ಏವತ್ತೂ ಗರ್ಭಂದ ಹೆರಬಪ್ಪಲೆ ಇಚ್ಛಿಸುತ್ತಿಲ್ಲೆ. ಹೆರ ಎನ್ನ ಪಾಪಕರ್ಮಂಗಳ ಫಲವಾಗಿ ದುರ್ಗತಿ ಉಂಟಾವುತ್ತು.
ತಸ್ಮಾದತ್ರ ಮಹದ್ದುಃಖೇ ಸ್ಥಿತೋsಪಿ ವಿಗತಕ್ಲಮಃ ।
ಉದ್ಧರಿಷ್ಯಾಮಿ ಸಂಸಾರಾದಾತ್ಮಾನಂ ತೇ ಪದಾಶ್ರಯಃ ॥೨೩॥
ಹಾಂಗಾಗಿ ಇಲ್ಲಿ ಮಹಾದುಃಖಲ್ಲಿ ಮುಳುಗಿದ್ದರೂ ಆನು ದುಃಖರಹಿತನಾಗಿದ್ದೆ. ನಿನ್ನ ಪಾದಂಗಲಲ್ಲಿ ಆಶ್ರಯ ಪಡದು ಎನ್ನ ಆತ್ಮವ ಸಂಸಾರಂದ ಉದ್ಧರಿಸಿಗೊಳ್ಳುತ್ತೆ.
ಶ್ರೀಭಗವಾನುವಾಚ-
ಏವಂ ಕೃತಮತಿರ್ಗರ್ಭೇ ದಶಮಾಸ್ಯಃ ಸ್ತುವನ್ ಋಷಿಃ ।
ಸದ್ಯಃ ಕ್ಷಿಪತ್ಯವಾಚೀನಂ ಪ್ರಸೂತ್ಯೈ ಸೂತಿಮಾರುತಃ ॥೨೪॥
ಭಗವಂತ° ಹೇಳಿದ° – ಈ ರೀತಿ ಮನಸ್ಸಿಲ್ಲಿ ನಿರ್ಧರಿಸಿಗೊಂಡು ಗರ್ಭಲ್ಲಿ ಹತ್ತು ತಿಂಗಳಪ್ಪನ್ನಾರ ಸ್ತುತಿ ಮಾಡುತ್ತಿಪ್ಪ ಆತ್ಮದರ್ಶಿಯಾದ ಜೀವ ಆ ಕ್ಷಣ ಪ್ರಸೂತಿವಾಯುವಿಂದ ತಲೆಕೆಳಂತಲಾಗಿ ನೂಕಲ್ಪಟ್ಟು ಪ್ರಸವಿಸಲ್ಪಡುತ್ತ°.
ತೇನಾವಸೃಷ್ಟಃ ಸಹಸಾ ಕೃತ್ವಾsವಾಕ್ಶಿರ ಆತುರಃ ।
ವಿನಿಷ್ಕ್ರಾಮತಿ ಕೃಚ್ಛ್ರೇಣ ನಿರುಚ್ಛ್ವಾಸೋ ಹತಸ್ಮೃತಿಃ ॥೨೫॥
ಅದರಿಂದ ಬಲವಾಗಿ ಹೆರಡುಸಲ್ಪಟ್ಟು ತಲೆಯ ಬಗ್ಗಿಸ್ಯೊಂಡು ಕಳವಳಂದ ಸ್ಮೃತಿಶೂನ್ಯನಾಗಿ ಉಸುರುಕಟ್ಟಿಗೊಂಡಾಂಗೆ ಅತಿ ಕಷ್ಟಂದ ಹೆರಬತ್ತ°.
ಪತಿತೋ ಭುವಿ ವಿಣ್ಮೂತ್ರೇ ವಿಷ್ಠಾಭೂರಿವ ಚೇಷ್ಟತೇ ।
ರೋರೂಯತಿ ಗತೇ ಜ್ಞಾನೇ ವಿಪರೀತಾಂ ಗತಿಂ ಗತಃ ॥೨೬॥
ಭೂಮಿಯ ಮೇಗೆ ಮಲಮೂತ್ರಲ್ಲಿ ಬಿದ್ದು, ಮಲಲ್ಲಿಪ್ಪ ಹುಳುವಿನಾಂಗೆ ವರ್ತಿಸುತ್ತ°. ಜ್ಞಾನವು ಹೆರಟುಹೋಗಿ ವಿಪರೀತವಾದ ಗತಿಯ ಹೊಂದಿ ದೊಡ್ಡಕೆ ಕೂಗುತ್ತ°.
ಗರ್ಭೇ ವ್ಯಾಧೌ ಶ್ಮಶಾನೇ ಚ ಪುರಾಣೇ ಯಾ ಮತಿರ್ಭವೇತ್ ।
ಸಾ ಯದಿ ಸ್ಥಿರತಾಂ ಯಾತಿ ಕೋ ನ ಮುಚ್ಯೇತ ಬಂಧನಾತ್ ॥೨೭॥
ಗರ್ಭಲ್ಲಿ, ಕಾಯಿಲೆಲ್ಲಿ, ಸ್ಮಶಾನಲ್ಲಿ ಮತ್ತೆ ಪುರಾಣಂಗಳ ಕೇಳುವಾಗ ಯಾವ ಬುದ್ಧಿ ಉಂಟಾವುತ್ತೋ ಅದು ಒಂದು ವೇಳೆ ಸ್ಥಿರವಾಗಿದ್ದರೆ, ಆರು ಈ ಸಂಸಾರ ಬಂಧನಂದ ಬಿಡುಗಡೆ ಹೊಂದುತ್ತನಿಲ್ಲೆ ?!
ಯದಾ ಗರ್ಭಾದ್ಬಹಿರ್ಯಾತಿ ಕರ್ಮಭೋಗಾದನಂತರಮ್ ।
ತದೈವ ವೈಷ್ಣವೀ ಮಾಯಾ ಮೋಹಯತ್ಯೇವ ಪೂರುಷಮ್ ॥೨೮॥
ಕರ್ಮಫಲವ ಅನುಭವಿಸಿದಮತ್ತೆ ಗರ್ಭಂದ ಹೆರಬತ್ತ°. ಕೂಡ್ಳೆ ವೈಷ್ಣವೀ ಮಾಯೆ ಪುರುಷನ (ಜನ್ಮವೆತ್ತಿದವನ) ಮೋಹಗೊಳುಸುತ್ತು.
ಸ ತದಾ ಮಾಯಯಾ ಸ್ಪೃಷ್ಟೋನ ಕಿಂಚಿದ್ವದತೇsವಶಃ ।
ಶೈಶವಾದಿಭವಂ ದುಃಖಂ ಪರಾಧೀನತಯಾsಶ್ನುತೇ ॥೨೯॥
ಅಂಬಗ ಅಂವ° ಮಾಯೆಗೆ ವಶನಾಗಿ ರಜವೂ/ಏನನ್ನೂ ಹೇಳ್ಳೆ ಎಡಿತ್ತಿಲ್ಲೆ. ಮತ್ತೆ ಪರಾಧೀನತೆಂದ ಬಾಲ್ಯಲ್ಲಿ ಉಂಟಪ್ಪ ದುಃಖವ ಅನುಭವುಸುತ್ತ°.
ಪರಚ್ಛಂದಂ ನ ವಿದುಷಾ ಪುಷ್ಯಮಾಣೋ ಜನೇನ ಸಃ ।
ಅನಭಿಪ್ರೇತಮಾಪನ್ನಃ ಪ್ರತ್ಯಾಖ್ಯಾತುಮನೀಶ್ವರಃ ॥೩೦॥
ಅವನ ಇಚ್ಛೆಯ ಅರ್ತುಗೊಳ್ಳದ್ದೆ ಇಪ್ಪ ಜನರಿಂದ ಅಂವ ಪೋಷಿಸಲ್ಪಡುತ್ತ ಮತ್ತು ತನಗೆ ಇಚ್ಛೆಯಿಲ್ಲದ್ದ ವಸ್ತುವ ಪಡದು ಅದಕ್ಕೆ ಪ್ರತಿ ಹೇಳ್ಳೆ ಅಸಮರ್ಥನಾಗಿರುತ್ತ°
ಶಾಯಿತೋsಶುಚಿಪರ್ಯಂಕೇ ಜಂತುಸ್ವೇದಜದೂಷಿತೇ ।
ನೇಶಃ ಕಂಡೂಯನೇಂsಗಾನಾಮಾಸನೋತ್ಥಾನಚೇಷ್ಟನೇ ॥೩೧॥
ಅಶುಚಿಯಾದ ಹಾಸಿಗೆಲಿ ಮನುಗಿದ, ಬೆವರಿಂದ ಹುಟ್ಟುವ ಕ್ರಿಮಿಗಳಿಂದ ಕೂಡಿದ ಆ ಶಿಶುವು ತನ್ನ ಅಂಗಗಳ ಕೆರಕ್ಕೊಂಬಲೆ, ಕೂಬಲೆ, ಏಳ್ಳೆ ಮತ್ತೆ ಚಲುಸಲೆ ಅಸಮರ್ಥನಾಗಿರುತ್ತ°.
ತುದಂತ್ಯಾಮತ್ವಚಂ ದಂಶಾ ಮಶಕಾ ಮತ್ಕುಣಾದಯಃ ।
ರುದಂತಂ ವಿಗತಜ್ಞಾನಂ ಕೃಮಯಃ ಕೃಮಿಕಂ ಯಥಾ ॥೩೨॥
ನೆಳವು, ನುಸಿ, ತಿಗಣೆ ಇತ್ಯಾದಿಗೊ ಅವನ ಎಳೆಚರ್ಮವ ಕ್ರಿಮಿಗೊ ಸಣ್ಣ ಹುಳುಗಳ ಕಚ್ಚುತ್ತಾಂಗೆ ಕಚ್ಚಿಯಪ್ಪಗ ಜ್ಞಾನರಹಿತನಾಗಿ ಕೂಗುತ್ತ°.
ಇತ್ಯೇವಂ ಶೈಸವಂ ಭುಕ್ತ್ವಾ ದುಃಖಂ ಪೌಗಂಡಮೇವ ಚ ।
ತತೋ ಯೌವನಮಾಸಾದ್ಯ ಯಾತಿ ಸಂಪದಮಾಸುರೀಮ್ ॥೩೩॥
ಈ ರೀತಿ ಬಾಲ್ಯ ಹಾಂಗೂ ಕೌಮಾರ್ಯವಸ್ಥೆಗಳ ದುಃಖಂಗಳ ಅನುಭವುಸಿ, ಮತ್ತೆ ಯೌವನ ಪಡದು ಆಸುರೀ ಸಂಪತ್ತ ಪಡೆತ್ತ°.
ತದಾ ದುರ್ವ್ಯಸನಾಸಕ್ತೋ ನೀಚಸಂಗಪರಾಯಣಃ ।
ಶಾಸ್ತ್ರಸತ್ಪುರುಷಾಣಾಂ ಚ ದ್ವೇಷ್ಟಾ ಸ್ಯಾತ್ಕಾಮಲಂಪಟಃ ॥೩೪॥
ಅಷ್ಟಪ್ಪಗ ದುರ್ವ್ಯಸನಲ್ಲಿ ಆಸಕ್ತನಾಗಿ, ನೀಚರ ಸಂಗಲ್ಲಿ ತಲ್ಲೀನನಾಗಿ ಶಾಸ್ತ್ರಂಗಳನ್ನೂ ಸತ್ಪುರುಷರನ್ನೂ ದ್ವೇಷಿಸಿಗೊಂಡು ಕಾಮಲಂಪಟನಾಗಿ ಇರುತ್ತ°.
ದೃಷ್ಟ್ವಾ ಸ್ತ್ರಿಯಂ ದೇವಮಾಯಾಂ ತದ್ಭಾವೈರಜಿತೇಂದ್ರಿಯಃ ।
ಪ್ರಲೋಭಿತಃ ಪತತ್ಯಂಧೇ ತಮಸ್ಯಗ್ನೌ ಪತಂಗವತ್ ॥೩೫॥
ದೇವಮಾಯೆಂದ ಸ್ತ್ರೀಯ ನೋಡಿಯಪ್ಪದ್ದೆ ಅದರ ಹಾವಭಾವಂಗಳಿಂದ ಪ್ರಲೋಭಿತನಾಗಿ, ಇಂದ್ರಿಯಂಗೊಕ್ಕೆ ಅಧೀನನಾದ ಅಂವ° ಅಗ್ನಿಲಿ ಬೀಳುವ ಪತಂಗದಾಂಗೆ ಕಗ್ಗತ್ತಲೆಲಿ ಬೀಳುತ್ತ°.
ಕುರುಂಗಮಾತಂಗಪತಂಗಭೃಂಗಮೀನಾ ಹತಾಃ ಪಂಚಭಿರೇವ ಪಂಚ ।
ಏಕಃ ಪ್ರಮಾದೀ ಸ ಕಥಂ ನ ಹನ್ಯತೇ ಯಃ ಸೇವತೇ ಪಂಚಭಿರೇವ ಪಂಚ ॥೩೬॥
ಜಿಂಕೆ, ಆನೆ, ದೀಪದ ಹುಳು, ಭ್ರಮರ, ಮೀನು ಈ ಐದು ಪ್ರಾಣಿಗೊ ಐದು ಇಂದ್ರಿಯಂಗಳಲ್ಲಿ ಒಂದೊಂದರಿಂದ ಹತವಾವುತ್ತು. ಐದು ವಿಷಯಂಗಳನ್ನೂ ತನ್ನ ಐದು ಇಂದ್ರಿಯಂಗಳಿಂದ ಸೇವಿಸಿ ವಿಷಯ ಸುಖದ ಅಮಲೇರಿದಂವ° ಹೇಂಗೆ ಹತನಾಗದ್ದೆ ಇರುತ್ತ°?!
ಅಲಬ್ಧಾಭೀಪ್ಸಿತೋsಜ್ಞಾನಾದಿದ್ಧಮನ್ಯುಃ ಶುಚಾರ್ಪಿತಃ ।
ಸಹ ದೇಹೇನ ಮಾನೇನ ವರ್ಧಮಾನೇನ ಮನ್ಯುನಾ ॥೩೭॥
ತಾನು ಇಚ್ಛೆಪಟ್ಟದ್ದು ಲಭಿಸದ್ರೆ ಅಜ್ಞಾನಂದ ಕೋಪವು ಉಜ್ವಲಿಸಿ ದುಃಖಿತನಾವುತ್ತ°. ಅವನ ದೇಹದ ಒಟ್ಟಿಂಗೆ ಅಷ್ಟೇ ಪ್ರಮಾಣಲ್ಲಿ ಅವನ ಕೋಪವು ವೃದ್ಷಿಯಾವುತ್ತು.
ಕರೋತಿ ವಿಗ್ರಹಂ ಕಾಮೀ ಕಾಮಿಷ್ವಂತಾಯ ಚಾತ್ಮನಃ ।
ಬಲಾಧಿಕೈಃ ಸ ಹನ್ಯೇತ ಗಜೈರನ್ಯೈರ್ಗಜೋ ಯಥಾ ॥೩೮॥
ಕಾಮೀ ಪುರುಷ° ತನ್ನ ನಾಶಕ್ಕಾಗಿ ಇತರ ಕಾಮೀಪುರುಷರೊಟ್ಟಿಂಗೆ ಯುದ್ಧ ಮಾಡುತ್ತ°. ಅಂವ ತನ್ನಿಂದ ಹೆಚ್ಚಿನ ಬಲವಂತನಿಂದ, ಒಂದು ಆನೆಂದ ಇನ್ನೊಂದು ಆನೆ ಹತ ಆವ್ತಾಂಗೆ ಕೊಲ್ಲಲ್ಪಡುತ್ತ°.
ಏವಂ ಯೋ ವಿಷಯಾಸಕ್ತ್ಯಾ ನರತ್ವಮತಿದುರ್ಲಭಮ್ ।
ವೃಥಾ ನಾಶಯತೇ ಮೂಢಸ್ತಸ್ಮಾತ್ಪಾಪತರೋ ಹಿ ಕಃ ॥೩೯॥
ಹೀಂಗೆ ಏವ ಮೂಢ° ವಿಷಯ ಭೋಗಂಗಳಲ್ಲಿ ಆಸಕ್ತನಾಗಿ ಅತಿ ದುರ್ಲಭವಾದ ಮನುಷ್ಯತ್ವವ ವ್ಯರ್ಥವಾಗಿ ನಾಶಮಾಡುತ್ತನೋ ಅವನಿಂದ ಹೆಚ್ಚಿನ ಪಾಪಿಗೊ ಆರಿದ್ದವು ?!
ಜಾತೀಶತೇಷು ಲಭತೇ ಭುವಿ ಮಾನುಷತ್ವ ತತ್ರಾಪಿ ದುರ್ಲಭತರಂ ಖಲು ಭೋ ದ್ವಿಜತ್ವಮ್ ।
ಯಸ್ತನ್ನ ಪಾಲಯತಿ ಲಾಲಯತೀಂದ್ರಿಯಾಣಿ ತಸ್ಯಾಮೃತಂ ಕ್ಷರತಿ ಹಸ್ತಗತಂ ಪ್ರಮಾದಾತ್ ॥೪೦॥
ಈ ಭೂಮಿಲಿಪ್ಪ ನೂರಾರು ಜೀವ ಜಾತಿಗಳಲ್ಲಿ ಮನುಷ್ಯತ್ವವು ಅದರ್ಲಿಯೂ ದ್ವಿಜತ್ವವು ನಿಜವಾಗಿಯೂ ಅತ್ಯಂತ ದುರ್ಲಭವಾದ್ದು.  ಯಾವತ° ಅದರ ಪಾಲುಸುತ್ತನಿಲ್ಲೆಯೋ ಮತ್ತೆ ಇಂದ್ರಿಯಂಗಳ ಲಾಲುಸುತ್ತನೋ ಅಂವ° ಕೈಗೆ ಸಿಕ್ಕಿದ ಅಮೃತವ ಮೂರ್ಖತನಂದ ಹಾಳು ಮಾಡಿಗೊಳ್ಳುತ್ತ°.
ತತಸ್ತಾಂ ವೃದ್ಧತಾಂ ಪ್ರಾಪ್ಯ ಮಹಾವ್ಯಾಧಿಸಮಾಕುಲಃ ।
ಮೃತ್ಯುಂ ಪ್ರಾಪ್ಯ ಮಹದುಃಖಂ ನರಕಂ ಯಾತಿ ಪೂರ್ವವತ್ ॥೪೧॥
ಅದರಮತ್ತೆ ವೃದ್ಧನಾಗಿ, ಮಹಾವ್ಯಾಧಿಗಳ ಹೊಂದಿ, ಅತಿ ದುಃಖಂದ ಮರಣಹೊಂದಿ, ಮದಲಾಣ ಹಾಂಗೆ ನರಕಕ್ಕೆ ಹೋವುತ್ತ°.
ಏವಂ ಗತಾಗತೈಃ ಕರ್ಮಪಾಶೈರ್ಬದ್ಧಾಶ್ಚ ಪಾಪಿನಃ ।
ಕದಾಪಿ ನ ವಿರಜ್ಯಂತೇ ಮಮ ಮಾಯಾವಿಮೋಹಿತಾಃ ॥೪೨॥
ಹೀಂಗೆ ನರಕಕ್ಕೆ ಹೋವ್ತಾ ಬತ್ತಾ ಇಪ್ಪ ಕರ್ಮಪಾಶಂದ ಬದ್ಧರಾದ ಪಾಪಿಗೊ ಎನ್ನ ಮಾಯೆಂದ ಮೋಹಿತರಾಗಿ ಏವತ್ತೂ ವೈರಾಗ್ಯವ ಪಡೆತ್ತವಿಲ್ಲೆ.
ಇತಿ ತೇ ಕಥಿತಾ ತಾರ್ಕ್ಷ್ಯ ಪಾಪಿನಾಂ ನಾರಕೀ ಗತಿಃ ।
ಅಂತ್ಯೇಷ್ಟಿಕರ್ಮಹೀನಾನಾಂ ಕಿಂ ಭೂಯಃ ಶ್ರೋತುಮಿಚ್ಛಸಿ ॥೪೩॥
ಏ ಗರುಡನೇ, ಹೀಂಗೆ ಆನು ನಿನಗೆ ಪಾಪಿಗೊ ಮತ್ತೆ ಅಂತ್ಯೇಷ್ಟಿ ಕರ್ಮ ಮಾಡಲ್ಪಡದವರ ನರಕದ ಗತಿಯ ಹೇಳಿದ್ದೆ. ಇನ್ನು ಹೆಚ್ಚಿಗೆ ಎಂತ ಕೇಳ್ಳೆ ಇಚ್ಛಿಸುತ್ತೆ?
ಇತಿ ಶ್ರೀಗರುಡಪುರಾಣೇ ಸಾರೋದ್ಧಾರೇ ಪಾಪಿಜನ್ಮಾದಿ ದುಃಖನಿರೂಪಣಂ ನಾಮ ಷಷ್ಠೋsಧ್ಯಾಯಃ ॥
ಇಲ್ಲಿ ಶ್ರೀ ಗರುಡಪುರಾಣಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಪಾಪಿಗಳ ಜನ್ಮಾದಿ ದುಃಖಂಗಳ ನಿರೂಪಣೆ’ ಹೇಳ್ವ ಆರನೇ ಅಧ್ಯಾಯ ಮುಗುದತ್ತು.
 
ಗದ್ಯರೂಪಲ್ಲಿ –
 
ಗರುಡ° ಹೇಳಿದ° – ಏ ಕೇಶವ!, ನರಕಂದ ಬಂದವ° ಅಬ್ಬೆಯ ಗರ್ಭಲ್ಲಿ ಏವ ರೀತಿ ಉತ್ಪನ್ನನಾವುತ್ತ°, ಗರ್ಭಲ್ಲಿ ಏವ ಏವ ದುಃಖಂಗಳ ಅನುಭವುಸುತ್ತ° ಹೇಳ್ವದರ ಎನಗೆ ಹೇಳು.
ಭಗವಂತ° ಮಹಾವಿಷ್ಣು ಹೇಳುತ್ತ° – ಸ್ತ್ರೀ-ಪುರುಷರ ಸಂಯೋಗಂದ ವೀರ್ಯಾಣು ಮತ್ತೆ ಗರ್ಭಾಣು (ಅಂಡಾಣು) ಗರ್ಭಲ್ಲಿ ತಡೆಹಿಡಿಯಲ್ಪಟ್ಟು ಮನುಷ್ಯ° ಹೇಂಗೆ ಹುಟ್ಟುತ್ತ° ಹೇಳ್ವದರ ಹಾಂಗೆಯೇ ಹೇಳುತ್ತೆ.- ಋತುಕಾಲದ ಸುರುವಾಣ ಮೂರುದಿನಂಗಳವರೇಂಗೆ ಇಂದ್ರಂಗೆ ತಗುಲಿದ ಬ್ರಹ್ಮಹತ್ಯಾದೋಷದ ನಾಲ್ಕನೆಯ ಭಾಗ ರಜಸ್ವಲಾ ಸ್ತ್ರೀಯರಲ್ಲಿ ಇರುತ್ತು. ಆ ಋತುಕಾಲಲ್ಲಿ ಮಧ್ಯಲ್ಲಿ ಮಾಡಿದ ಗರ್ಭಾದಾನದ ಫಲವಾಗಿ ಪಾಪಾತ್ಮರುಗಳ ದೇಹದ ಉತ್ಪತ್ತಿಯಾವುತ್ತು. ರಜಸ್ವಲಾ ಸ್ತ್ರೀ ಸುರುವಾಣ ದಿನ ಚಾಂಡಲಿ, ಎರಡ್ನೇ ದಿನ ಬ್ರಹ್ಮಘಾತಿನಿ, ಮತ್ತೆ ಮೂರ್ನೇ ದಿನ ಮಡ್ಯೋಳ್ತಿ (ಮಡಿವಾಳಿ/ಅಗಸಗಿತ್ತಿ) ಎನಿಸುತ್ತು (ತದನುಸಾರ ಸ್ಪರ್ಶದೋಷ ಹೇದು ಅರ್ಥ). ನರಕಂದ ಬಂದ ಜೀವಿಗೊಕ್ಕೆ ಇವ್ವೇ ಮೂವರು ಮಾತೆಯರುಗೊ. ದೈವನೇತೃತ್ವಲ್ಲಿ ತನ್ನ ಕರ್ಮಂಗೊಕ್ಕೆ ಅನುಸಾರವಾಗಿ ಆ ಜೀವಿಯು ದೇಹದ ಉತ್ಪತ್ತಿಗೋಸ್ಕರವಾಗಿ ಪುರುಷನ ವೀರ್ಯಾಣುವ ಆಶ್ರಯಿಸಿ ಸ್ತ್ರೀಯ ಗರ್ಭವ ಪ್ರವೇಶಿಸುತ್ತ°. ವೀರ್ಯಾಣು ಮತ್ತು ಶೋಣಿತ (ಗರ್ಭಾಣು) ಸಂಯೋಗಂದ ಪಿಂಡೋತ್ಪತ್ತಿ ಆವುತ್ತು. ಸಂಯೋಗಲ್ಲಿ ಸ್ತ್ರೀಕಾರಕ ಅಂಶ ಪ್ರಾಬಲ್ಯ ಅಧಿಕವಾಗಿದ್ದರೆ ಕೂಸೂ ಆಗಿಯೂ, ಗೆಂಡುಕಾರಕ ಅಂಶ ಪ್ರಾಬಲ್ಯ ಅಧಿಕವಾಗಿದ್ದರೆ ಮಾಣಿಯಾಗಿಯೂ ಪಿಂಡೋತ್ಪತ್ತಿ ಆವುತ್ತು. ಅಲ್ಲಿ ಒಂದು ರಾತ್ರಿಲಿ ‘ಕಲಲ’ ಹೇದೂ, ಐದು ರಾತ್ರಿಲಿ ‘ಬುದ್ಬುದ’ ಹೇದೂ, ಹತ್ತು ರಾತ್ರಿಲಿ ‘ಕರ್ಕಂಧು’ ಹೇದೂ, ಮತ್ತೆ ‘ಪೇಶ್ಯಂಡ’ ಹೇದೂ ಅದರ ಹೇಳುತ್ತವು.
ಒಂದು ತಿಂಗಳಿಲಿ ತಲೆಯೂ, ಎರಡು ತಿಂಗಳಿಲಿ ಭುಜ ಮತ್ತೆ ಇತರ ಅಂಗಭಾಗಂಗಳೂ, ಮೂರು ತಿಂಗಳಿಲಿ ಉಗುರು, ತಲೆಕಸವು, ಎಲುಬು, ಚರ್ಮ, ಲಿಂಗ ಮತ್ತೆ ದಶದ್ವಾರಂಗೊ ಉದ್ಭವವಾವುತ್ತು. ನಾಲ್ಕು ತಿಂಗಳಿಲಿ ಏಳು ಧಾತುಗಳೂ (ರಸ, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ ಮತ್ತೆ ಶುಕ್ರ), ಐದು ತಿಂಗಳಿಲಿ ಹಶು ಆಸರಂಗಳೂ ಹುಟ್ಟುತ್ತು. ಆರು ತಿಂಗಳಿಲಿ ಗರ್ಭಾಶಯದ ಒಳ ಗರ್ಭಕೋಶದ ಬಲದಿಕ್ಕೆ ಅದು ಚಲುಸುತ್ತು.
ಅಬ್ಬೆ ತಿಂದ ಅನ್ನಪಾನಾದಿಗಳಿಂದ ಅದರ ಧಾತುಗೊ ವೃದ್ಧಿಯಾವುತ್ತು (ಬಲಿಷ್ಠವಾವುತ್ತು). ಆ ಜೀವವು ಕ್ರಿಮಿಗಳಿಂದ ಕೂಡಿದ ಮಲಮೂತ್ರಂಗಳ ಹೊಂಡಲ್ಲಿ ತನ್ನ ಇಚ್ಛೆಗೆ ವಿರುದ್ಧವಾಗಿ ಮನಿಕ್ಕೊಂಡಿರುತ್ತು. ಅಲ್ಲಿಪ್ಪ ಹಶುವಾದ ಕ್ರಿಮಿಗಳಿಂದ ಕೋಮಲವಾದ ಸರ್ವಾಂಗಂಗಳೂ ಪ್ರತಿಕ್ಷಣ ಕಚ್ಚಲ್ಪಟ್ಟು ಹೆಚ್ಚೆಚ್ಚು ಬೇನೆಂದ ಪದೇ ಪದೇ ಮೂರ್ಛಿತವಾವುತ್ತು. ಗರ್ಭಾಶಯದ ಒಳ ತಲೆ, ಬೆನ್ನು ಮತ್ತು ಕೊರಳು ಬಗ್ಗಿಯೊಂಡು ತನ್ನ ಅಂಗ ಚೇಷ್ಟೆಗಳ ಮಾಡ್ಳೆ ಅಶಕ್ತನಾಗಿ ಪಂಜರಲ್ಲಿಪ್ಪ ಹಕ್ಕಿಯ ಹಾಂಗೆ ಇರುತ್ತು.
ಅಲ್ಲಿ ದೈವಶಕ್ತಿಂದ ನೂರು ಜನ್ಮಂಗಳಲ್ಲಿ (ನೂರಾರು ಜನ್ಮಂಗಳಲ್ಲಿ) ಮಾಡಿದ ಕರ್ಮಂಗಳ ನೆಂಪು ಉಂಟಾವ್ತು. ಅವುಗಳ ಸ್ಮರಿಸಿ ದೀರ್ಘಕಾಲ ಉಸುರುಕಟ್ಟಿದ ಹಾಂಗೆ ತಳಮಳಿಸಿ ರಜಾವೂ ಸುಖವಿಲ್ಲದ್ದೆ ಇರುತ್ತು. ಆತ್ಮದರ್ಶಿಯಾದ ಅಂವ° ಸಪ್ತಧಾತುಗಳೆಂಬ ಏಳು ಬಂಧನಂದ ಬಂಧಿಸಲ್ಪಟ್ಟು ಕೈ ಮುಕ್ಕೊಂಡು, ಸಹಾಯ ಹಸ್ತವ ಬೇಡ್ಯೊಂಡು, ಭೀತನಾಗಿ, ಆರ್ತತೆಂದ ತನ್ನ ಈ ಗರ್ಭಕ್ಕೆ ಕಳುಹಿದವನ ದೀನಸ್ವರಂದ ಸ್ತುತಿಸುತ್ತು. ಏಳನೇ ತಿಂಗಳಿನ ಸುರುವಿಲ್ಲಿ ಅದಕ್ಕೆ ಜ್ಞಾನವುಂಟಾದರೂ ಪ್ರಸೂತಿ ವಾಯುವಿನ ಪ್ರಭಾವಂದ ಅದೇ ಹೊಟ್ಟೆಲಿ ಮಲಲ್ಲಿಪ್ಪ ಹುಳುಗಳ ಹಾಂಗೆ ಒಂದೇ ದಿಕ್ಕೆ ಇರುತ್ತಿಲ್ಲೆ.
ಆ ಸಮಯಲ್ಲಿ ಆ ಜೀವ ಈ ರೀತಿಯಾಗಿ ಹೇಳುತ್ತು –  “ಶ್ರೀಪತಿಯೂ, ಜಗತ್ತಿಂಗೆಲ್ಲ ಆಧಾರ ಸ್ವರೂಪನೂ, ಅಶುಭವ ನಾಶಮಾಡುವವನೂ, ಶರಣಾಗತವತ್ಸಲನೂ ಆದ ವಿಷ್ಣುವಿಂಗೆ ಶರಣಾವುತ್ತೆ. ಹೇ ನಾಥ!, ನಿನ್ನೆ ಮಾಯೆಂದ ಮೋಹಿತನಾಗಿ ದೇಹ ಮತ್ತೆ ಪತ್ನೀಪುತ್ರರಲ್ಲಿ ಆನು, ಎನ್ನವು ಹೇಳ್ವ ಅಭಿಮಾನಂದ ಈ ಸಂಸಾರವ ಪಡದ್ದೆ. ಎನ್ನ ಪರಿಜನಂಗೋಸ್ಕರವಾಗಿ ಆನು ಶುಭಾಶುಭ ಕರ್ಮಂಗಳ ಮಾಡಿರುತ್ತೆ. ಅವುಗಳಿಂದಲೇ ಆನು ಏಕಾಂಗಿಯಾಗಿ ದಗ್ಧನಾವುತ್ತಿದ್ದೆ. ಆದರೆ ಫಲಲ್ಲಿ ಭಾಗಿಗಳಾದವು ಹೆರಟು ಹೋಯ್ದವು. ಒಂದು ವೇಳೆ ಈ ಗರ್ಭಂದ ಆನು ಬಿಡುಗಡೆ ಹೊಂದಿರೆ ನಿನ್ನ ಪಾದವ ಸ್ಮರಿಸುತ್ತೆ. ಏವುದರಿಂದ ಆನು ಮುಕ್ತಿಯ ಪಡವಲೆಡಿಗೋ ಅಂತಹ ಉಪಾಯವ ಆನು ಮಾಡುತ್ತೆ. ಮಲ ಮೂತ್ರಂಗಳ ಕೂಪಲ್ಲಿ ಬಿದ್ದು ಆನು ಜಠರಾಗ್ನಿಂದ ಬೆಂದು ಹೆರಹೋಪಲೆ ಇಚ್ಛಿಸುತ್ತೆ. ಎನ್ನ ಏವಾಗ ಹೆರ ಕಳುಸುತ್ತೆ?. ಏವ ದೀನದಯಾಳು ಈ ರೀತಿಯ ವಿಶೇಷವಾದ ಜ್ಞಾನವ ಎನಗೆ ಕೊಟ್ಟಿದನೋ ಅವನನ್ನೇ ಶರಣು ಹೋವುತ್ತೆ. ಪುನಃ ಎನಗೆ ಈ ಸಂಸಾರವು ಇಲ್ಲವಾಗಲಿ. ಆನು ಏವತ್ತೂ ಗರ್ಭಂದ ಹೆರಬಪ್ಪಲೆ ಇಚ್ಛಿಸುತ್ತಿಲ್ಲೆ. ಹೆರ ಎನ್ನ ಪಾಪಕರ್ಮಂಗಳ ಫಲವಾಗಿ ದುರ್ಗತಿ ಉಂಟಾವ್ತು. ಹಾಂಗಾಗಿ ಇಲ್ಲಿ ಮಹಾದುಃಖಲ್ಲಿ ಮುಳುಗಿದ್ದರೂ ಆನು ದುಃಖ ರಹಿತನಾಗಿದ್ದೆ. ನಿನ್ನ ಪಾದಂಗಳಲ್ಲಿ ಆಶ್ರಯ ಪಡದು ಎನ್ನ ಆತ್ಮವ ಸಂಸಾರಂದ ಉದ್ಧರಿಸಿಕೊಳ್ಳುತ್ತೆ.”
ಭಗವಂತ° ಹೇಳಿದ° – ಈ ರೀತಿ ನಿಶ್ಚೈಸಿಗೊಂಡು, ಗರ್ಭಲ್ಲಿ ಹತ್ತು ತಿಂಗಳನ್ನಾರ ಸ್ತುತಿ ಮಾಡುತ್ತಿಪ್ಪ ಆತ್ಮದರ್ಶಿಯಾದ ಆ ಜೀವ° ಆ ಕ್ಷಣ ಪ್ರಸೂತಿವಾಯುವಿಂದ ತಲೆಕೆಳಂತಾಗಿಯಾಗಿ ನೂಕಲ್ಪಟ್ಟು ಪ್ರಸವಿಸಲ್ಪಡುತ್ತ°. ಅದರಿಂದ ಬಲವಾಗಿ ಹೆರಡಿಸಲ್ಪಟ್ಟು ತಲೆಯ ಬಗ್ಗಿಸ್ಯೊಂಡು, ಕಳವಳಂದ ಸ್ಮೃತಿಶೂನ್ಯನಾಗಿ, ಉಸುರು ಕಟ್ಟಿಗೊಂಡು ಅತಿ ಕಷ್ಟಪಟ್ಟುಗೊಂಡು ಹೆರಬತ್ತ°. ಭೂಮಿಯ ಮೇಗೆ ಮಲಮೂತ್ರಲ್ಲಿ ಬಿದ್ದು, ಮಲಲ್ಲಿಪ್ಪ ಹುಳುವಿನಾಂಗೆ ವರ್ತಿಸುತ್ತ°. ಜ್ಞಾನವು ಹೆರಟುಹೋಗಿ ವಿಪರೀತವಾದ ಗತಿಯ ಹೊಂದಿ ಗಟ್ಟಿಯಾಗಿ ಕೂಗುತ್ತ°. ಗರ್ಭಲ್ಲಿ, ಕಾಯಿಲೆಲಿ, ಸ್ಮಶಾನಲ್ಲಿ ಮತ್ತೆ ಪುರಾಣ ಕೇಳುವಾಗ ಯಾವ ಬುದ್ಧಿಯುಂಟಾವುತ್ತೋ ಅದು ಒಂದು ವೇಳೆ ಸ್ಥಿರವಾಗಿದ್ದರೆ ಆರು ಈ ಸಂಸಾರ ಬಂಧನಂದ ಬಿಡುಗಡೆ ಹೊಂದುತ್ತನಿಲ್ಲೆ! ಕರ್ಮಫಲ ಅನುಭವಿಸಿದ ಮತ್ತೆ ಗರ್ಭಂದ ಹೆರ ಬತ್ತ°. ಕೂಡಲೆ ವೈಷ್ಣವೀ ಮಾಯೆ ಆ ಜೀವವ ಮೋಹಗೊಳುಸುತ್ತು. ಅಷ್ಟಪ್ಪಗ ಅಂವ ಆ ಮಾಯೆಗೆ ವಶನಾಗಿ ಎಂತರ್ನೂ ಹೇಳ್ಳೆ ಎಡಿಗಾವ್ತನಿಲ್ಲೆ. ಮತ್ತೆ ಪರಾಧೀನತೆಲಿ ಬಾಲ್ಯಲ್ಲಿ ಉಂಟಪ್ಪ ದುಃಖವ ಅನುಭವುಸುತ್ತ°.
ಅವನ ಇಚ್ಛೆಯ ಅರ್ತುಗೊಳ್ಳದ್ದೆ ಇಪ್ಪ ಜನರಿಂದ ಪೋಷಿಸಲ್ಪಡುತ್ತ°. ತನಗೆ ಇಚ್ಛೆಯಿಲ್ಲದ್ದ ವಸ್ತುವಿನ ಪಡದು ಅದಕ್ಕೆ ಪ್ರತಿ ಹೇಳ್ಳೆ ಅಸಮರ್ಥನಾಗಿರುತ್ತ°. ಅಶುಚಿಯಾದ ಹಾಸಿಗೆಲಿ ಮನಿಗಿ, ಬೆವರಿಂದ ಹುಟ್ಟುವ ಕ್ರಿಮಿಗಳಿಂದ ಕೂಡಿದ ಆ ಶಿಶುವು ತನ್ನ ಅಂಗಂಗಳ ಕೆರಕ್ಕೊಂಬಲೆ, ಕೂಬಲೆ, ಏಳ್ಳೆ ಮತ್ತೆ ಅತ್ತಿತ್ತೆ ಹಂದಲೆ ಅಸಮರ್ಥನಾಗಿರುತ್ತ°. ನೆಳವು, ನುಸಿ, ಸವಣೆ ಇತ್ಯಾದಿಗೊ ಅವನ ಎಳೆ ಚರ್ಮವ ಕ್ರಿಮಿಗೊ ಎಳೆ ಹುಳುಗಳ ಕಚ್ಚುತ್ತಾಂಗೆ ಕಚ್ಚುವಾಗ ಜ್ಞಾನರಹಿತನಾಗಿ ಕೂಗುತ್ತ°.
ಈ ರೀತಿ ಬಾಲ್ಯ, ಕೌಮಾರಾವಸ್ಥೆಯ ದುಃಖಂಗಳ ಅನುಭವುಸಿ, ಮತ್ತೆ ಯೌವನ ಪಡದು ಆಸುರೀ ಸಂಪತ್ತಿನ ಪಡೆತ್ತ°. ಅಂಬಗ ದುರ್ವ್ಯಸನಂಗಳಲ್ಲಿ ಆಸಕ್ತನಾಗಿ, ನೀಚರ ಸಂಗಲ್ಲಿ ತಲ್ಲೀನನಾಗಿ, ಶಾಸ್ತ್ರಂಗಳನ್ನೂ, ಸತ್ಪುರುಷರನ್ನೂ ದ್ವೇಷಿಸಿಗೊಂಡು ಕಾಮಲಂಪಟನಾಗಿ ಇರುತ್ತ°. ದೇವ ಮಾಯೆಂದ ಸ್ತ್ರೀಯ ನೋಡಿಯಪ್ಪದ್ದೆ ಅದರ ಹಾವಭಾವಂಗಳಿಂದ ಪ್ರಲೋಭಿತನಾಗಿ, ಇಂದ್ರಿಯೊಂಗೆಕ್ಕೆ ಅಧೀನನಾದ ಅಂವ ಅಗ್ನಿಗೆ ಬೀಳುವ ಹಾತೆಗಳ ಹಾಂಗೆ ಕಗ್ಗತ್ತೆಲಿಲಿ ಬೀಳುತ್ತ°. ಜಿಂಕೆ, ಆನೆ, ದೀಪದ ಹುಳು, ಭ್ರಮರ, ಮೀನು ಈ ಐದು ಪ್ರಾಣಿಗಳೂ ಐದು ಇಂದ್ರಿಯಂಗಳಲ್ಲಿ ಒಂದೊಂದರಿಂದ ಹತವಾವ್ತು. ಐದು ವಿಷಯಂಗಳನೂ ತನ್ನ ಐದು ಇಂದ್ರಿಯಂಗಳಿಂದ ಸೇವಿಸಿ ವಿಷಯ ಸುಖದ ಅಮಲೇರಿದಂವ ಹೇಂಗೆ ಹತನಾಗದ್ದೆ ಇರುತ್ತ°!.
ತಾನು ಇಚ್ಛೆಪಟ್ಟದ್ದು ಸಿಕ್ಕದಿದ್ದಲ್ಲಿ ಅಜ್ಞಾನಂದ ಕೋಪ ಉಜ್ವಲಿಸಿ ದುಃಖಿತನಾವುತ್ತ°. ಅವನ ದೇಹದೊಟ್ಟಿಂಗೆ ಅಷ್ಟೇ ಪ್ರಮಾಣದ ಅವನ ಕೋಪವೂ ವೃದ್ಧಿಯಾವುತ್ತು. ಕಾಮೀಪುರುಷ° ತನ್ನ ನಾಶಕ್ಕಾಗಿ ಇತರ ಕಾಮೀಪುರುಷರೊಟ್ಟಿಂಗೆ ಯುದ್ಧ ಮಾಡುತ್ತ°. ಅಂವ ತನ್ನಿಂದ ಹೆಚ್ಚು ಬಲವಂತನಿಂದ, ಒಂದು ಆನೆಯ ಇನ್ನೊಂದು ಆನೆ ಬಡುದುರುಳುಸುತ್ತಾಂಗೆ ಕೊಲ್ಲಲ್ಪಡುತ್ತ°.
ಈ ರೀತಿ ಏವ ಮೂಢ° ವಿಷಯ ಭೋಗಂಗಳಲ್ಲಿ ಆಸಕ್ತನಾಗಿ ಅತಿ ದುರ್ಲಭವಾದ ಮನುಷ್ಯತ್ವವ ವ್ಯರ್ಥವಾಗಿ ನಾಶಮಾಡುತ್ತನೋ ಅವನಿಂದ ಹೆಚ್ಚು ಪಾಪಿಗೊ ಇನ್ನು ಆರಿದ್ದವು!. ಈ ಭೂಮಿಲಿಪ್ಪ ನೂರಾರು ಜೀವ ಜಾತಿಗಳಲ್ಲಿ ಮನುಷ್ಯತ್ವವು ಅದರ್ಲಿಯೂ ದ್ವಿಜತ್ವವೂ ನಿಜವಾಗಿಯೂ ಅತ್ಯಂತ ದುರ್ಲಭವಾದ್ದು. ಯಾವಾತ° ಅದರ ಪಾಲುಸುತ್ತನಿಲ್ಲೆಯೋ ಮತ್ತು ಇಂದ್ರಿಯಂಗಳನ್ನೇ ಲಾಲಿಸುತ್ತನೋ, ಅಂವ° ಕೈಗೆ ಸಿಕ್ಕಿದ ಅಮೃತವ ಮೂರ್ಖತನಂದ ಹಾಳುಮಾಡಿಗೊಳ್ಳುತ್ತ°. ಮತ್ತೆ ಮುದುಕನಾಗಿ ಮಹಾವ್ಯಾಧಿಗಳ ಹೊಂದಿ ಅತಿ ದುಃಖತರಂದ ಮರಣಹೊಂದಿ ಮದಲಾಣ ಹಾಂಗೆ ನರಕಕ್ಕೆ ಹೋವುತ್ತ°.
ಈ ರೀತಿ ನರಕಕ್ಕೆ ಹೋಗ್ಯೊಂಡು ಬಂದೊಂಡು ಇಪ್ಪ ಕರ್ಮಪಾಶಂದ ಬದ್ಧರಾದ ಪಾಪಿಗೊ ಭಗವಂತನ ಮಾಯೆಂದ ಮೋಹಿತರಾಗಿ ಏವತ್ತೂ ವೈರಾಗ್ಯವ ಪಡೆತ್ತವಿಲ್ಲೆ.
ಎಲೈ ಗರುಡ! ಈ ರೀತಿಯಾಗಿ ಆನು ನಿನಗೆ ಪಾಪಿಗೊ ಮತ್ತೆ ಅಂತ್ಯೇಷ್ಟಿ ಕರ್ಮ ಮಾಡಲ್ಪಡದವರ ನರಕದ ಗತಿಯ ಹೇಳಿದ್ದೆ. ಇನ್ನು ಹೆಚ್ಚಿಗೆ ಎಂತರ ಕೇಳ್ಳೆ ಇಚ್ಛಿಸುತ್ತೆ?
ಇಲ್ಲಿಗೆ ಗರುಡಪುರಾಣಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ಪಾಪಿಗಳ ಜನ್ಮಾದಿ ದುಃಖಂಗಳ ನಿರೂಪಣೆ’ ಹೇಳ್ವ ಆರನೇ ಅಧ್ಯಾಯ ಮುಗುದತ್ತು.
 
[ಚಿಂತನೀಯಾ –
‘ಜಂತೂನಾಂ ನರಜನ್ಮ ದುರ್ಲಭಂ’ ಹೇಳ್ವದು ನಾವು ಹಲವು ದಿಕ್ಕೆ ಓದಿದ್ದು. ಅದು ಸತ್ಯ ಹೇಳ್ವದು ನಾವು ಗರುಡ ಪುರಾಣದ ಈ ಭಾಗವ ಓದಿಯಪ್ಪಗ ಪ್ರತ್ಯಕ್ಷ ಅನುಭವಲ್ಲಿ ತಿಳ್ಕೊಂಬಲೆ ಸಾಧ್ಯ ಆವ್ತು. ಎಷ್ಟೋ ಜನ್ಮಂಗಳ ಸುಕೃತಕರ್ಮದ ಫಲವಾಗಿ ದಕ್ಕುವದು ನರಜನ್ಮ. ನರಜನ್ಮ ಮಾತ್ರ ಮೋಕ್ಷ ಸಾಧನೆಗೆ ಯೋಗ್ಯವಾದ್ದು.  ಅದರ್ಲಿಯೂ ದ್ವಿಜನಾಗಿ ಜನುಸುವದು ಮಹಾಪುಣ್ಯವೇ ಸರಿ.
ಜೀವಿಯ ಈ ಪ್ರಪಂಚದ ದಿನ ಮುಗುದಮತ್ತೆ ಕರ್ಮಫಲಕ್ಕನುಸಾರವಾಗಿ ಸ್ವರ್ಗ-ನರಕವ ಸೇರಿ ಅಲ್ಲಿ ಕರ್ಮ ಫಲವ ಅನುಭವುಸಿ ಅಲ್ಲಿಂದ ಆಕಾಶಕ್ಕೆ ಬಂದು ಸೇರುತ್ತ°. ಅಲ್ಲಿ ವಾಯುವಿಲ್ಲಿ ಸೇರುತ್ತ°. ಅಲ್ಲಿಂದ ಮೇಘಲ್ಲಿ ಸೇರುತ್ತ°. ಅಲ್ಲಿಂದ ಮಳೆಯ ಮೂಲಕ ಭೂಮಿಗೆ ಬಂದು ಸೇರುತ್ತ°. ಭೂಮಿಗೆ ಬಂದಿಕ್ಕಿ ಧಾನ್ಯಾದಿ ಭಕ್ಷಣ ಸಾಧನಂಗೊಳೊಟ್ಟಿಂಗೆ ಬಂದು ಸೇರುತ್ತ°. ಅಲ್ಲಿಂದ ಪುರುಷನ ಆಹಾರವಾಗಿ ಪುರುಷನ ಶರೀರವ ಸೇರಿ ರಸ, ರಕ್ತ, ಮಾಂಸ, ಮೇದಸ್ಸು, ವಸಾಮಜ್ಜಾ ಶುಕ್ರರೂಪಲ್ಲಿ ಪರಿವರ್ತನೆಗೊಂಡು ಕ್ರಮೇಣ ಸ್ತ್ರೀ ಪುರುಷರ ಸಮಾಗಮಲ್ಲಿ ಸ್ತ್ರೀ ಗರ್ಭವ ಪ್ರವೇಶಿಸಿ ಪುನಃ ಇಹಲೋಕದ ಜೀವನವ ಪಡೆತ್ತ°.  ಇಲ್ಲಿ ಯಾವ ಜೀವಿಯೊಳ ಪ್ರವೇಶಿಸುತ್ತ ಹೇಳ್ವದು ದೈವೇಚ್ಛೆ, ಸುಕೃತ ಕರ್ಮ ಫಲ. ಹಾಂಗಾಗಿ ಲೋಕಲ್ಲಿ ವಿವಿಧ ಪ್ರಕಾರದ ಜೀವಿಯಾಗಿ ಮನುಷ್ಯ ಅಥವ ಪ್ರಾಣಿರೂಪಲ್ಲಿ  ಸುಂದರನಾಗಿ, ಕುರೂಪಿಯಾಗಿ, ಶ್ರೀಮಂತನಾಗಿ, ಬಡವನಾಗಿ, ಸಜ್ಜನನಾಗಿ, ದುರ್ಜನನಾಗಿ, ಗಂಡು ಹೆಣ್ಣು ನಪುಂಸಕ  ಹುಟ್ಟುವದೆಲ್ಲವೂ ಕರ್ಮಫಲಾಧೀನ. ಸೃಷ್ಟಿಲಿ ೩೦ ಲಕ್ಷ ಸ್ಥಾವರಯೋನಿಗೊ, ೯ ಲಕ್ಷ ಜಲಜಯೋನಿಗೊ, ೧೦ ಲಕ್ಷ ಕ್ರಿಮಿಜಯೋನಿಗೊ, ೧೧ ಲಕ್ಷ ಪಕ್ಷಿ ಯೋನಿಗೊ,  ೨೦ ಲಕ್ಷ ಪಶುಯೋನಿಗೊ. “ಏತೇಷು ಭ್ರಮಣಂ ಕೃತ್ವಾ ಮನುಷ್ಯತ್ವಮುಪಜಾಯತೇ” – ಇಷ್ಟು ಯೋನಿಗಳಲ್ಲಿ ಹುಟ್ಟುಸಾವುಗಳ ನಂತ್ರ ಮನುಷ್ಯಯೋನಿ ಸಿಕ್ಕುವದು. (ಮನುಷ್ಯಯೋನಿ ೪ ಲಕ್ಷ. ಹೀಂಗೆ ಒಟ್ಟು ೮೪ ಲಕ್ಷ ಜೀವಜಾತಿಗೊ).   ಹಾಂಗಾಗಿ ಮನುಷ್ಯ ಜನ್ಮ ದುರ್ಲಭ ಹೇಳಿ ಹೇಳಿದ್ದದು. ಅದರ್ಲಿಯೂ ಬ್ರಾಹ್ಮಣನಾಗಿ ಹುಟ್ಟುವದು ಜನ್ಮಾಂತರ ಸುಕೃತಫಲ.  ಸದ್ಧರ್ಮಪರಾಯಣನಾಗಿ ಶಾಸ್ತ್ರೋಕ್ತ ವಿಹಿತ ಕರ್ಮಾನುಷ್ಠಾನಲ್ಲಿ ಮೋಕ್ಷಸಾಧನೆಗೆ ಈ ದ್ವಿಜ ಜನ್ಮ ಸರ್ವೋತ್ಕೃಷ್ಟವಾದ್ದು. ಮನುಷ್ಯ° ಹೇಳಿರೆ ಬುದ್ಧಿ ಜೀವಿ. ಸುಬುದ್ಧಿಯ ಉಪಯೋಗಿಸಿ ಸನ್ಮಾರ್ಗಲ್ಲಿ ನಡೆದು ಮೋಕ್ಷ ಪಡವಲೆ ತಕ್ಕುದಾದ ಜನ್ಮ ಮನುಷ್ಯ ಜನ್ಮ. ಈ ಪ್ರಪಂಚ ಭಗವಂತನ ಮಾಯೆಂದ ಆಕರ್ಷಣೆಯಾಗಿ ಕಾಂಬದು. ಪ್ರತಿ ಜನ್ಮತಾಳಿದವನೂ ಈ ಮಾಯೆಯ ಬಲೆಯೊಳ ಬೀಳುವದೇ. ಆದರೆ ಬುದ್ಧಿಪೂರ್ವಕವಾಗಿ ಸ್ಥಿರಮನಸ್ಸಿಂದ ಮುಂದುವರುದರೆ ಮಾಯೆಂದ ಹೆರಬಪ್ಪಲೆಡಿಗು. ಮಾಯಾಪಾಶಂದ ಮುಕ್ತನಾಗದ್ದೆ ಮೋಕ್ಷ ಪಡವಲೆ ಎಂದಿಂಗೂ ಸಾಧ್ಯ ಇಲ್ಲೆ. ಎಲ್ಲಿಯವರೇಂಗೆ ಮನುಷ್ಯ ಮಾಯೆಯ ಸುಳಿಲೇ ಬದುಕಿ ಇರ್ತನೋ ಅಲ್ಲಿ ವರೇಂಗೆ ಹುಟ್ಟು ಸಾವು, ಸುಖ ದುಃಖ, ಸ್ವರ್ಗ ನರಕ ಈ ಸಂಸಾರ ಚಕ್ರಲ್ಲಿ ಆವರ್ತನೆ ಆಗ್ಯೊಂಡೇ ಇರ್ತು. ಈಗ ಮನುಷ್ಯ ಜನ್ಮ ಪಡದವಂಗೆ ಮುಂದಾಣ ಜನ್ಮವೂ ಮನುಷ್ಯನಾಗಿ ಹುಟ್ಟಲೆಡಿಗು ಹೇಳ್ವ ಭರವಸೆ ಎಳ್ಳಷ್ಟೂ ಬೇಡ. ಅದು ನಮ್ಮ ಕರ್ಮವ ಹೊಂದಿಗೊಂಡಿಪ್ಪದು. ಈ ಜನ್ಮಲ್ಲಿ ಮನುಷ್ಯನಾಗಿಪ್ಪಂವ ಮುಂದಾಣ ಜನ್ಮಲ್ಲಿ ಎಂತ ಆವ್ತ ಹೇಳ್ವ ಕಲ್ಪನೆ ಕೂಡ ನವಗೆ ಮಾಡ್ಳೆ ಎಡಿಯದ್ದದು. ಹಾಂಗಾಗಿ ಮನುಷ್ಯ ಜನ್ಮ ಸಿಕ್ಕಿಯಪ್ಪಗ ಅದರ ಸದುಪಯೋಗಪಡಿಸಿಗೊಂಬದು ಬುದ್ಧಿಶಾಲಿತನ.
ಭಗವಂತ° ಸರ್ವಾಂತರ್ಯಾಮಿ- ಸರ್ವಗತ°, ಸರ್ವಶಕ್ತ°, ಸರ್ವಜ್ಞ°. ಅವನ ಮೀರಿ ಇನ್ನೊಂದಿಲ್ಲೆ. ಅವಂಗೆ ಸಮಾನವಾದ್ದೂ ಇನ್ನೊಂದಿಲ್ಲೆ. ಎಲ್ಲವುದರಲ್ಲಿಯೂ ಇದ್ದುಗೊಂಡು ಯಾವುದೂ ಅಲ್ಲದ್ದೆ ಇದ್ದುಗೊಂಡು ಇಪ್ಪ ಅಂವ ಒಬ್ಬ° ಕಲ್ಪನಾತೀತ°, ಮಹಿಮಾತಿಶಯ°. ಸೃಷ್ಟಿ-ಸ್ಥಿತಿ-ಲಯ ಎಲ್ಲವೂ ಅವನಿಂದಲೇ. ಬಾಕಿಯೆಲ್ಲವೂ ಒಂದು ಸಾಧನ ಅಥವಾ ಮಾಧ್ಯಮ ಅಷ್ಟೆ. ಉತ್ಪತ್ತಿಗೆ ಬೇಕಪ್ಪ ಎರಡು ಶಕ್ತಿಗಳ ಒಂದುಗೂಡುಸಿ ಹೊಸ ಒಂದು ರೂಪವ ಪಡವದು ಅವನಿಂದಲೇ. ಇದರ ತಿಳಿಯದ್ದೆ ನಾವೇ ಮಕ್ಕಳ ಉಂಟುಮಾಡಿದ್ದದು ಹೇಳ್ವದು ಅಜ್ಞಾನ. ಭ್ರೂಣದ ಉತ್ಪತ್ತಿಗೆ ವೀರ್ಯಾಣು ಅಂಡಾಣು ಮಾತ್ರ ಇದ್ದರೆ ಸಾಲ, ಅದಕ್ಕೊಂದು ಚೈತನ್ಯವೂ ಬೇಕು. ಅದು ಭಗವಂತನೊಬ್ಬನಿಂದಲೇ ಸಾಧ್ಯ. ಜೀವ° ಪ್ರಪ್ರಥಮವಾಗಿ ಧಾನ್ಯವಾಗಿ ಪುರುಷನ ದೇಹವ ಆಹಾರದ ಮೂಲಕ ಒಳಹೊಕ್ಕು ವೀರ್ಯಣುವ ಸೇರಿ ಅಲ್ಲಿಂದ ಮುಂದೆ ಹೊಸ ಉತ್ಪತ್ತಿ ಹೇದು ಪ್ರಪಂಚಲ್ಲಿ ಕಂಡುಗೊಂಬದು. ಇದು ಭಗವಂತನ ಶಕ್ತಿಂದ ಮಾತ್ರವೇ ಸಾಧ್ಯ.
ಕಲಲ ಹೇಳಿರೆ ಕಲೆತಿಪ್ಪದು. ವೀರ್ಯಾಣು ಮತ್ತು ಅಂಡಾಣು ಒಂದಾಗಿ ಇನ್ನೂ ವಿಭಜನೆಯಾಗದ್ದ ಸ್ಥಿತಿ ಇದು. ಬುದ್ಬುದ ಹೇಳಿರೆ ನೀರಿನ ಗುಳ್ಳೆ ಹಾಂಗಿಪ್ಪದು. ಐದು ದಿನಾಣ ಭ್ರೂಣದ ಸ್ಥಿತಿ ಇದು. ಕರ್ಕಂಧು ಹೇಳಿರೆ ಎಲಚಿ ಹಣ್ಣಿನಾಂಗಿಪ್ಪದು ಹೇದರ್ಥ. ಹತ್ತನೇ ದಿನಲ್ಲಿ ಭ್ರೂಣ ಈ ಸ್ಥಿತಿಲಿ ಇರುತ್ತು. ಪೇಶ್ಯಂಡ ಹೇಳಿರೆ ಮಾಂಸ ಸಹಿತವಾದ ಮೊಟ್ಟೆ. ಗರ್ಭ ನಿಂದ ಎರಡು ವಾರಲ್ಲಿ ಭ್ರೂಣ ಮೊಟ್ಟೆಯಾಂಗೆ ಇದ್ದು ಅದರೊಳ ಮಾಂಸಖಂಡ ಇತ್ಯಾದಿಗೊ ಪ್ರಥಮ ರೂಪ ತಕ್ಕಮಟ್ಟಿಂಗೆ ಪಡಕ್ಕೊಂಡಿಪ್ಪ ಸ್ಥಿತಿ. ಸೂಕ್ಶ್ಮದರ್ಶಕ ಮೊದಲಾದ ಆಧುನಿಕ ಉಪಕರಣಂಗಳ ಮೂಲಕ ವಿಜ್ಞಾನಿಗೊ ಕಂಡುಗೊಂಬ ವಿಷಯಂಗಳ ಇವು ತಿಳಿವಂದ ಎಷ್ಟೋ ಕಾಲ ಮದಲೇ ಋಷಿಮುನಿಗೊ ಕಂಡುಗೊಂಡಿದವು ಹೇಳ್ವದರ ಈ ಮೂಲಕ ಅರ್ಥೈಸಿಗೊಂಬಲಕ್ಕು. ಆಧುನಿಕ ವಿಜ್ಞಾನ ಹೊಸತ್ತು ಎಂತರನ್ನೂ ವಿಶೇಷವಾಗಿ ಕಂಡುಗೊಂಡಿದಿಲ್ಲೆ. ಎಲ್ಲವೂ ಮದಲಿಂಗೇ ಇತ್ತಿದ್ದದು. ಆಧುನಿಕಲ್ಲಿ ಅರ್ತುಗೊಂಬ ಪ್ರಕಟಗೊಂಬ ರೀತಿ ಮಾಂತ್ರ ವ್ಯತ್ಯಾಸ ಅಷ್ಟೆ.
ಮನುಷ್ಯ ಹುಟ್ಟುವಂದ ಮದಲು ಭ್ರೂಣಾವಸ್ಥೆಲಿ ಜನ್ಮಾಂತರ ವಾಸನೆಯ ತಿಳಿತ್ತ°. ಅದೇ ರೀತಿಲಿ ಮರಣಂದ ಮದಲು ದಿವ್ಯದೃಷ್ಟಿಯ ಒಂದು ಕ್ಷಣಕ್ಕೆ ಹೊಂದಿ ಪೂರ್ವ ಯಥಾರ್ಥವ ತಿಳಿತ್ತ° ಹೇಳ್ವದು ಒಂದನೇ ಅಧ್ಯಾಯಲ್ಲಿ ಭಗವಂತ° ಹೇಳಿಪ್ಪದರ ನಾವು ತಿಳಿವಲಕ್ಕು.
ಮಾಯಾಮಹಿಮನೂ, ಮಾಯಾತೀತನೂ ಆದ ಆ ಭಗವಂತಂಗೆ ಶರಣಾಗತನಪ್ಪದು ಒಂದೇ ಮೋಕ್ಷಕ್ಕೆ ದಾರಿ. ಅದು ಸಚ್ಚಿದಾನಂದನ ಅನನ್ಯ ಭಕ್ತಿಂದ ಕೂಡಿರೆಕು, ಸ್ಥಿರವಾಗಿರೆಕು. ಇಲ್ಲದ್ರೆ ಮಾಯಾಪ್ರಪಂಚಲ್ಲಿ ನರ್ತಿಸಿಗೊಂಡೇ ಇರೆಕು. ಸಮಸ್ತಕ್ಕೂ ಆಧಾರ° ಆ ಭಗವಂತ°. ಅವಂಗೆ ಆಧಾರ ಏವುದೂ ಬೇಕಾಗಿಲ್ಲೆ. ಹಾಂಗಾಗಿ ಅವನನ್ನೇ ಸಂಪೂರ್ಣವಾಗಿ ಅಶ್ರಯಿಸುವದು ಶ್ರೇಯಸ್ಕರ ಮಾರ್ಗ. ಅದನ್ನೇ ಭಗವಂತ° ಭಗವದ್ಗೀತೆಲಿಯೂ ಹೇಳಿದ್ದದು – ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ । ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ ॥ಭ.ಗೀ.೯.೨೨॥ – ಅನ್ಯಚಿಂತೆಯಿಲ್ಲದ್ದೆ ಒಂದೇ ಮನಸ್ಸಿಂದ ಆರು ಎನ್ನ ದಿವ್ಯರೂಪವ ಭಕ್ತಿಂದ ಧ್ಯಾನಿಸುತ್ತವೋ ಅವರ ಯೋಗಕ್ಷೇಮವ ಆನು ನೋಡಿಗೊಳ್ಳುತ್ತೆ. ಸಂಪೂರ್ಣ ಶ್ರದ್ಧಾಭಕ್ತಿನಂಬಿಕೆಂದ ಅವನ ಸೇವೆ ಹೇದು ಅರ್ತು ಕರ್ಮವ ಮಾಡುತ್ತವಂಗೆ ಬೇರೆ ಏವ ಚಿಂತೆಯೂ ಬೇಕಾದ್ದಿಲ್ಲೆ. ಅವನ ಯೋಗಕ್ಷೇಮವ ಭಗವಂತ° ನೋಡಿಗೊಳ್ತ°. ಅವಂಗೆ ಆಯೇಕ್ಕಾದ್ದರ ಭಗವಂತ° ಕೊಡುತ್ತ°.
ದೇಹಿಯಾದ ಆತ್ಮವೇ ತಾನು ಹೇಳ್ವದರ ತಿಳ್ಕೊಳ್ಳದ್ದೆ ದೇಹವೇ ಆನು ಹೇಳಿ ತಿಳಿವದು ಮಾಯೆ. ಈ ಮಾಯೆಯ ಮೆಟ್ಟಿನಿಂದು ಆತ್ಮೋನ್ನತಿ ಕ್ರಮವ ಕೈಗೊಳ್ಳೆಕು. ಅದಕ್ಕೆ ಮದಾಲು ದೇಹಾಭಿಮಾನ ಬಿಡೆಕು. ದೇಹಾಭಿಮಾನ ಇಪ್ಪನ್ನಾರ ಅತ್ಮೋನ್ನತಿ ಕಲ್ಪನೆಗೂ ನಿಲುಕ್ಕದ್ದು. ದೇಹಾಭಿಮಾನ ಅಜ್ಞಾನ. ಅದಕ್ಕೆ ‘ಆನು’ ಹೇಳಿರೆ ಆರು ಹೇಳ್ವದರ ಚಿಂತನೆಲಿ ತೊಡಗೆಕು. ಅದರ ಗುರಿಯತ್ತ ನಿರಂತರ ಸಾಗೆಕು. ಅಲ್ಲದ್ರೆ ‘ಆನು’ ಹೇಳ್ವ ದುರಭಿಮಾನ ಮಾತ್ರ ಉಳಿವದು. ಈ ಅಹಂಭಾವ ತೊಲಗದ್ದೆ ‘ಆನು’ ಆರು ಹೇಳ್ವದರ ತಿಳಿವಲೆ ಎಡಿಯ. ಭಗವಂತಂಗೆ ಸಂಪೂರ್ಣ ಶರಣಾಗತನಾಯೇಕ್ಕಾರೆ ಈ ‘ಆನು’ ಮದಾಲು ಬಲ್ಗಿ ಇಡ್ಕಿ ಆಯೇಕು. ಇಲ್ಲದ್ರೆ ಹುಡ್ಕುವ ಹಾದಿಲಿ ಇದೊಂದು ದೊಡ್ಡ ಅಡಚಣೆಯೇ ಸರಿ. ಅದಕ್ಕಾಗಿ ಭಗವಂತನ ಜ್ಞಾನ ಮದಾಲು ನಮ್ಮಲ್ಲಿ ಹುಟ್ಟಿಗೊಳ್ಳೆಕು. ಭಗವದ್ ಜ್ಞಾನಂದ ಮಾತ್ರ ಭಗವದ್ ಮಾಯೆಯ ಗೆದ್ದುಗೊಂಬಲೆ ಎಡಿಗು.
ಮಗು ಭೂಮಿಲಿ ಜನಿಸಿಯಪ್ಪದ್ದೆ ಅಳುತ್ತು. ಅದರ ನೋಡಿ ಸುತ್ತುಮುತ್ತಲಿಪ್ಪವು ಆನಂದ ಪಡುತ್ತವು! ಎಂತಹ ವಿಪರ್ಯಾಸ ಇದು ಅಲ್ಲದ!!. ಮಗು ಕೂಗುವದು ‘ಅಯ್ಯೋ ಈ ಭೂಮಿಲಿ ಪುನಃ ಆನು ಹುಟ್ಟಿದೆನ್ನೇಳುವ ದುಃಖಲ್ಲಿ’. ಅದು ಕಷ್ಟಪಡುವದರ ದುಃಖಪಡುವದರ ನೋಡಿ ಆನಂದ ಪಡುವದು ಈ ಪ್ರಪಂಚ!.
ಒಟ್ಟಿಲ್ಲಿ ನೋಡಿರೆ ಈ ಹುಟ್ಟು ಸಾವು ಹೇಳ್ವದು ಒಂದು ಬಂಧನವೇ. ಇಲ್ಲಿ ಸುಖ ದುಃಖ ಎರಡೂ ಇದ್ದು. ಅದು ನಮ್ಮ ಕರ್ಮಕ್ಕೆ ಅನುಗುಣವಾಗಿ ಹೆಚ್ಚು ಕಡಮ್ಮೆ ಹೇಳಿ ಮಾಂತ್ರ ಲೆಕ್ಕ. ಹುಟ್ಟೆಕ್ಕಾರೆ ಮದಲೆ ಗರ್ಭಸ್ಥ ಸ್ಥಿತಿಲಿಯೇ ಮಲಕ್ರಿಮಿಗಳ ಕಡಿತದ ಯಾತನೆಯ ಅನುಭವುಸುವದು. ಹುಟ್ಟಿದ ಮತ್ತೆ ತನ್ನ ನಿಜಪ್ರಜ್ಞೆಯ ವಿರುದ್ಧವಾಗಿ ಪೋಷಿಸಲ್ಪಡುವದು. ಮಾಯೆಲಿ ಸಿಲುಕಿ ಹಾಕಿ ಮಾಡ್ಳಾಗದ್ದ ಅಥರ್ವಣಕ್ಕೂ ಇಳಿವದು. ಮತ್ತೆ ಅಕೇರಿಕೆ ವ್ಯಾಧಿಲಿ ಬಿದ್ದು ನರಳಿ ನರಳಿ ಅಂತ್ಯವ ಕಾಂಬದು, ನರಕಕ್ಕೆ ಹೋಪದು. ಇದಕ್ಕೆ ಕಾರಣ ಅಜ್ಞಾನ. ಅಜ್ಞಾನಂದಲಾಗಿ ಕಗ್ಗತ್ತೆಲಿಲಿ ಬಿದ್ದು ಯಾತನೆಯ ಜನ್ಮ ಜನ್ಮಾಂತರಕ್ಕೂ ನಾವೇ ಕೊಂಡೋವ್ತು. ನಾವು ಮಾಡಿದ ಕರ್ಮಫಲವ ಅನುಭವಿಸಿಯೇ ತೀರೇಕ್ಕಾದ್ದು. ಅದರ ಬಿಟ್ಟಿಕ್ಕಿ ಹೋಪಾಂಗೆ ಇಲ್ಲೆ. ಅದು ಮುಗಿಯದ್ದೆ ಬಿಡ್ಳೂ ಇಲ್ಲೆ. ಎಷ್ಟು ಸಮಯ ಹೇಳ್ವದು ಅದರ ಆಳವ ಹೊಂದಿಪ್ಪದು. ಇದಕ್ಕೆಲ್ಲ ನಿವೃತ್ತಿಗೆ ಒಂದೇ ಒಂದು ದಾರಿ ಅಪೂರ್ವವಾಗಿ ದೊರಕಿದ ಮನುಷ್ಯ ಜನ್ಮವ ಸಾರ್ಥಕ ಪಡಿಸಿಗೊಂಬದು. ಭಗವಂತನ ಜ್ಞಾನವ ಪಡವಲೆ ಸಾಧಕನಪ್ಪದು. ಸಾಧನೆಯ ಗುರಿಯ ವಿಚಲಿತನಾಗದ್ದೆ ಹೊಂದುವದು. ಸಮರ್ಪಣಾ ಭಾವಂದ, ಬುದ್ಧಿಂದ, ಶರಣಾಗತಿ ಭಾವಂದ ಕರ್ಮವ ಮಾಡುವದು. ಹೀಂಗೆ ಮಾಡಿದವಂಗೆ ಕರ್ಮ ಬಂಧನ ಇಲ್ಲೆ ಹೇಳ್ವದರ ಭಗವಂತ° ಭಗವದ್ಗೀತೆಲಿಯೂ ಹೇಳಿದ್ದ°.
ಮಲಿನಲ್ಲಿ ಹುಟ್ಟಿದ ಮನುಷ್ಯ ಮಲಿನಂದ ಎದ್ದು ಬಪ್ಪದೇ ಮಾನವತ್ವ.  ಸ್ವಧರ್ಮಾಚರಣೆಲಿ ಇದ್ದುಗೊಂಡು ಭಗವದ್ಪ್ರಜ್ಞೆಯ ತಂದುಗೊಂಡು ಆತ್ಮೋನ್ನತಿ ಕಾರ್ಯವ ಕೈಗೊಂಬದು ಮನುಷ್ಯ ಮಾಡೇಕ್ಕಾದ ಕರ್ತವ್ಯ. ಅದಲ್ಲದ್ದೆ ಕಾಮಕ್ರೋಧಾದಿ ವೈರಿಗಳ ಬಲಿಯಾದರೆ ತನ್ನ ಈ ಮಾನವ ಜನ್ಮವ ಹಾಳುಮಾಡಿ ತನ್ನ ಅಧೋಗತಿಯತ್ತೆ ಕೊಂಡೋಪದೇ ಆವ್ತು. ಮಾಧವನ ಕೈಗೊಂಬೆಯಾಗಿಪ್ಪ ಮನುಷ್ಯ° ಮಾಯೆಯ ಕೈಗೊಂಬೆಯಾಗದ್ದಾಂಗೆ ಜಾಗೃತೆ ವಹಿಸಿ ಪ್ರಪಂಚಲ್ಲಿ ವೈರಾಗ್ಯವ ಹೊಂದಿ ಸಚ್ಚಿದಾನಂದನ ಪಾದವ ಸೇರುವದು ನಿತ್ಯಾನಂದ ಪಡವದು ಮೋಕ್ಷ. ಇಲ್ಲಿ ವೈರಾಗ್ಯ ಹೇಳಿರೆ ನವಗಿಪ್ಪ ಮನೆ ಭೂಮಿ ರಾಜ್ಯ ವಸ್ತು ರಥ ಸಂಬಂಧವ ಎಲ್ಲ ಬಿಟ್ಟು ನಡವದು ಅಲ್ಲ. ಎಲ್ಲವುದರೊಟ್ಟಿಂಗೇ ಇದ್ದು ಏವುದನ್ನೂ ಅಂಟುಸಿಕೊಳ್ಳದ್ದೆ ಎಲ್ಲವುದರಲ್ಲಿಯೂ ಭಗವಂತನ ಕಾಂಬದೇ ವೈರಾಗ್ಯ ಎಂಬಲ್ಯಂಗೆ ಎಲ್ಲೋರಿಂಗೂ ಸನ್ಮಾರ್ಗವುಂಟಾಗಲಿ ಹೇಳಿಗೊಂಡು ‘ಹರೇ ರಾಮ’.]

2 thoughts on “ಗರುಡ ಪುರಾಣ – ಅಧ್ಯಾಯ 06

  1. ಮನುಷ್ಯ ಪಾಪಸಂಭವ ಹೇಳಿ ಆದರೂ ದೈವತ್ವಕ್ಕೆ ಏರುವ ಸಾಮರ್ಥ್ಯ ಇದ್ದವ.ಗರುಡಪುರಾಣ ಇದರ ಚೆನ್ನಾಗಿ ವಿವರಿಸುತ್ತಾ ಇದ್ದು.

  2. ಹರೇರಾಮ.ಚಿಂತನೀಯ ಭಾರೀ ಲಾಯ್ಕಾಯಿದು. ಓದುಗರು ತಾವು ಮಾಡಿದ ಪಾಪ- ಪುಣ್ಯಂಗಳ ತೂಕಹಾಕಿ ನೋಡಿಕೊಂಬಹಾಂಗಿದ್ದು.ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×