Oppanna.com

ಗರುಡಪುರಾಣ – ಅಧ್ಯಾಯ 07 – ಭಾಗ 01

ಬರದೋರು :   ಚೆನ್ನೈ ಬಾವ°    on   03/10/2013    6 ಒಪ್ಪಂಗೊ

ಚೆನ್ನೈ ಬಾವ°

ಕಳುದವಾರದ ಭಾಗಲ್ಲಿ ‘ಪಾಪಿಗಳ ಜನ್ಮಾದಿ ದುಃಖಂಗಳ ನಿರೂಪಣೆ’ ಓದಿದ್ದದು. ಮುಂದೆ –
 
ಗರುಡಪುರಾಣಮ್                                                      ಗರುಡಪುರಾಣ
ಅಥ ಸಪ್ತಮೋsಧ್ಯಾಯಃ                                             ಅಧ್ಯಾಯ – 07
ಬಭ್ರುವಾಹನೇನ ಪ್ರೇತಸಂಸ್ಕಾರಃ                           ಬಭ್ರುವಾಹನನ ಮೂಲಕ ಪ್ರೇತಸಂಸ್ಕಾರ
 
ಸೂತ ಉವಾಚ-
ಇತಿ ಶ್ರುತ್ವಾ ತು ಗರುಡಃ ಕಂಪಿತೋsಶ್ವತ್ಥ ಪತ್ರವತ್ ।
ಜನನಾಮುಪಕಾರಾರ್ಥಂ ಪುನಃ ಪಪ್ರಚ್ಛ ಕೇಶವಮ್ ॥೦೧॥
ಸೂತ° ಹೇಳಿದ° – ಇದರ ಕೇಳಿ ಗರುಡ° ಅಶ್ವತ್ಥ ಎಲೆಯ ಹಾಂಗೆ ನೆಡುಗ್ಯೊಂಡು ಜನರ ಉಪಕಾರಕ್ಕೋಸ್ಕರ ಮತ್ತೆ ಕೇಶವನತ್ರೆ ಕೇಳಿದ°.
ಗರುಡ ಉವಾಚ-
ಕೃತ್ವಾ ಪಾಪಾನಿ ಮನುಜಾಃ ಪ್ರಮಾದಾದ್ಬುದ್ಧಿತೋsಪಿ ವಾ ।
ನ ಯಾಂತಿ ಯಾತನಾ ಯಾಮ್ಯಾಃ ಕೇನೋಪಾಯೇನ ಕಥ್ಯತಾಮ್ ॥೦೨॥shri_narayana_on_shesha_venerated_by_garuda_wj19 copy
ಗರುಡ° ಹೇಳಿದ° – ಮನುಷ್ಯರು ತಿಳುದೋ ತಿಳಿಯದ್ದೆಯೋ ಪಾಪಂಗಳ ಮಾಡಿ, ಏವ ಉಪಾಯಂದ ಯಮಯಾತನೆಯ ಪಡೆತ್ತವಿಲ್ಲೆ ಅವು ಎನಗೆ ಹೇಳಲ್ಪಡಲಿ.
ಸಂಸಾರಾರ್ಣವಮಗ್ನಾನಾಂ ನರಾಣಾಂ ದೀನಚೇತಸಾಮ್ ।
ಪಾಪೋಪಹತಬುದ್ಧೀನಾಂ ವಿಷಯೋಪಹತಾತ್ಮನಾಮ್ ॥೦೩॥
ಏವ ಮನುಷ್ಯರು ಈ ಸಂಸಾರ ಹೇಳ್ವ ಸಮುದ್ರಲ್ಲಿ ಮುಂಗಿ ಅಲ್ಪಬುದ್ಧಿಯಿಪ್ಪವರಾಗಿದ್ದವೋ, ಆರ ಬುದ್ಧಿ ಪಾಪಂಗಳಿಂದ ಮಂಕಾಗಿದ್ದೋ, ಆರ ಆತ್ಮವು ವಿಷಯ ಭೋಗಂಗಳಿಂದ ಘಾಸಿ ಹೊಂದಿದೋ
ಉದ್ಧಾರಾರ್ಥಂ ವದ ಸ್ವಾಮಿನ್ ಪುರಾಣಾರ್ಥವಿನಿಶ್ಚಯಮ್ ।
ಉಪಾಯಂ ಯೇನ ಮನುಜಾಃ ಸದ್ಗತಿಂ ಯಾಂತಿ ಮಾಧವ ॥೦೪॥
ಹೇ ಸ್ವಾಮಿಯೇ, ಅಂತವರ ಉದ್ಧಾರಕ್ಕೋಸ್ಕರ ಪುರಾಣಂಗಳ ಅರ್ಥಂಗಳಲ್ಲಿ ವಿಶೇಷವಾಗಿ ನಿಶ್ಚಯಿಸಲ್ಪಟ್ಟ ಏವ ಉಪಾಯಂಗಳಿಂದ ಮನುಷ್ಯರು ಸದ್ಗತಿ ಪಡೆತ್ತವು ಹೇಳ್ವದರ ಎನಗೆ ಹೇಳು ಮಾಧವನೇ!
ಶ್ರೀಭಗವಾನುವಾಚ-
ಸಾಧು ಪೃಷ್ಟಂ ತ್ವಯಾ ತಾರ್ಕ್ಷ್ಯ ಮಾನುಷಾಣಾಂ ಹಿತಾಯ ವೈ ।
ಶ್ರುಣುಷ್ವಾವಹಿತೋ ಭೂತ್ವಾ ಸರ್ವಂ ತೇ ಕಥಯಾಮ್ಯಹಮ್ ॥೦೫॥
ಶ್ರೀ ಭಗವಂತ° ಹೇಳಿದ° – ಏ ಗರುಡ!, ನೀನು ಮನುಷ್ಯರ ಹಿತಕ್ಕಾಗಿ ಒಳ್ಳೆಯ ಪ್ರಶ್ನೆಯನ್ನೇ ಕೇಳಿದೆ. ಈಗ ನೀನು ಸಮಧಾನಲ್ಲಿ ಕೇಳು. ಆನು ನಿನಗೆ ಎಲ್ಲವನ್ನೂ ಹೇಳುತ್ತೆ.
ದುರ್ಗತಿಃ ಕಥಿತಾ ಪೂರ್ವಮಪುತ್ರಾಣಾಂ ಚ ಪಾಪಿನಾಮ್ ।
ಪುತ್ರಿಣಾಂ ಧಾರ್ಮಿಕಾಣಾಂ ತು ನ ಕದಾಚಿತ್ಖಗೇಶ್ವರ ॥೦೬॥
ಏ ಪಕ್ಷಿರಾಜನೇ!, ಹಿಂದೆ ಪುತ್ರಹೀನರಾದ ಪಾಪಿಗಳ ದುರ್ಗತಿಯ ಹೇಳಿದ್ದೆ. ಪುತ್ರವಂತರಾದ ಧರ್ಮನಿಷ್ಠರು ಎಂದಿಂಗೂ ಹಾಂಗಾವುತ್ತವಿಲ್ಲೆ.
ಪುತ್ರಜನ್ಮವಿರೋಧಃ ಸ್ಸಾದ್ಯದಿ ಕೇನಾಪಿ ಕರ್ಮಣಾ ।
ತದಾ ಕಶ್ಚಿದುಪಾಯೇನ ಪುತ್ರೋತ್ಪತ್ತಿಂ ಪ್ರಸಾಧಯೇತ್ ॥೦೭॥
ಒಂದುವೇಳೆ ಏವುದಾರು ಕರ್ಮಫಲಂದ ಅವಂಗೆ ಮಗ ಹುಟ್ಟದ್ರೆ, ಅಂವ ಈ ಯಾವುದಾರು ಉಪಾಯಂದ ಪುತ್ರೋತ್ಪತ್ತಿಯ ಸಾಧ್ಯತೆಯ ಮಾಡಿಗೊಂಬಲಕ್ಕು.
ಹರಿವಂಶಕಥಾಂ ಶ್ರುತ್ವಾ ಶತಚಂಡೀವಿಧಾನತಃ ।
ಭಕ್ತ್ಯಾಶ್ರೀಶಿವಮಾರಾಧ್ಯ ಪುತ್ರಮುತ್ಪಾದಯೇತ್ಸುಧೀಃ ॥೦೮॥
ಹರಿವಂಶದ ಕಥೆಯ ಕೇಳುವದರಿಂದಲಾಗಲೀ, ಶತಚಂಡೀ ವಿಧಾನಂದಲಾಗಲೀ, ಭಕ್ತಿಂದ ಶಿವನ ಆರಾಧಿಸುವದರಿಂದಲಾಗಲೀ, ಬುದ್ಧಿವಂತನಾದ ಮನುಷ್ಯ° ಪುತ್ರೋತ್ಪತ್ತಿಯ ಮಾಡಲಿ.
ಪುನ್ನಾಮ್ನೋ ನರಕಾದ್ಯಸ್ಮಾತ್ಪಿತರಂ ತ್ರಾಯತೇ ಸುತಃ ।
ತಸ್ಮಾತ್ಪುತ್ರ ಇತಿ ಪ್ರೋಕ್ತಃ ಸ್ವಯಮೇವ ಸ್ವಯಂಭುವಾ ॥೦೯॥
‘ಪುಂ’ ಹೇಳ್ವ ನರಕಂದ ರಕ್ಷಿಸುವವನೇ ಪುತ್ರ°. ಹಾಂಗಾಗಿ ಸ್ವತಃ ಸ್ವಯಂಭುವೇ ಅವನ ‘ಪುತ್ರ’ ಹೇಳಿ ಹೇಳಿದ್ದ°.
ಏಕೋಪಿ ಪುತ್ರೋ ಧರ್ಮಾತ್ಮಾ ಸರ್ವಂ ತಾರಯತೇ ಕುಲಮ್ ।
ಪುತ್ರೇಣ ಲೋಕಾಂಜಯತಿ ಶ್ರುತಿರೇಷಾ ಸನಾತನೀ ॥೧೦॥
ಒಬ್ಬನೇ ಧರ್ಮಾತ್ಮನಾದ ಪುತ್ರ° ಎಲ್ಲ ಕುಲವನ್ನೂ ದಾಂಟುಸುತ್ತ°. ಪುತ್ರನಿಂದ ಲೋಕಂಗಳೆಲ್ಲವ ಜಯಿಸುತ್ತ° ಹೇಳ್ವದು ಸನಾತನ ಸೂಕ್ತಿ.
ಇತಿ ವೇದೈರಪಿ ಪ್ರೋಕ್ತಂ ಪುತ್ರಮಾಹಾತ್ಮ್ಯಮುತ್ತಮಮ್ ।
ತಸ್ಮಾತುತ್ರಮುಖಂ ದೃಷ್ಟ್ವಾ ಮುಚ್ಯತೇ ಪೈತೃಕಾದೃಣಾತ್ ॥೧೧॥
ಈ ರೀತಿಯಾಗಿ ವೇದಂಗೊ ಉತ್ತಮವಾದ ಪುತ್ರನ ಮಹಾತ್ಮೆಯ ಹೇಳಿದ್ದು. ಹಾಂಗಾಗಿ ಪುತ್ರನ ಮೊರೆಯ ನೋಡಿ ಪಿತೃ ಋಣಂದ ಮುಕ್ತರಾವುತ್ತ°.
ಪೌತ್ರಸ್ಯ ಸ್ಪರ್ಶನಾನ್ಮರ್ತ್ಯೋ ಮುಚ್ಯತೇ ಚ ಋಣತ್ರಯಾತ್ ।
ಲೋಕಾನತ್ಯೇದ್ದಿವಃ ಪ್ರಾಪ್ತಿಃ ಪುತ್ರಪೌತ್ರಪ್ರಪೌತ್ರಕೈಃ ॥೧೨॥
ಮೊಮ್ಮಗನ ಸ್ಪರ್ಶಂದ ಮನುಷ್ಯ° ಮೂರು ಋಣಂಗಳಿಂದ ಮುಕ್ತನಾವುತ್ತ°. ಮಗ°, ಮೊಮ್ಮಗ°, ಮರಿಮೊಮ್ಮಗ° ಇದರಿಂದ ಯಮಲೋಕಂಗಳ ದಾಂಟಿ ಸ್ವರ್ಗಾದಿ ಲೋಕಂಗಳ  ಹೊಂದುತ್ತ°.
ಬ್ರಾಹ್ಮೋಢಾ ಪುತ್ರೋನ್ನಯತಿ ಸಂಗೃಹೀತಸ್ತ್ವಧೋನಯೇತ್ ।
ಏವಂ ಜ್ಞಾತ್ವಾ ಖಗಶ್ರೇಷ್ಠ ಹೀನಜಾತಿಸುತಾಂಸ್ತ್ಯಜೇತ್ ॥೧೩॥
ಬ್ರಹ್ಮವಿವಾಹದ (ಬ್ರಹ್ಮ, ದೈವ, ಆರ್ಷ, ಪ್ರಜಾಪತ್ಯ, ಆಸುರ, ಗಂಧರ್ವ, ರಾಕ್ಷಸ, ಪೈಶಾಚ – ಇವು ಎಂಟು ಪ್ರಮುಖ ವಿವಾಹ ವಿಧಂಗೊ. ಇದರ್ಲಿ ಬ್ರಹ್ಮವಿವಾಹ ಅತೀ ಶ್ರೇಷ್ಠವಾದ್ದು) ವಿಧಿಂದ ವಿವಾಹವಾದ ಪತ್ನಿಂದ ಜನಿಸಿದ ಔರಸ ಪುತ್ರ° ಊರ್ಧ್ವಗತಿ (ಉತ್ತಮಗತಿ)ಯ ಪ್ರಾಪ್ತಿ ಮಾಡುಸುತ್ತ° ಮತ್ತು ಸಂಗೃಹೀತ (ದುಷ್ಟ ಪದ್ಧತಿಯ ವಿವಾಹಂದ ಜನಿಸಿದ) ಪುತ್ರ ಅಧೋಗತಿಯತ್ತೆ (ನರಕದತ್ತೆ) ಕೊಂಡೋವುತ್ತ°. ಹಾಂಗಾಗಿ ಹೇ ಪಕ್ಷಿಶ್ರೇಷ್ಠನೇ!, ವ್ಯಕ್ತಿಯು ಹೀನ ಜಾತಿಯ ಸ್ತ್ರೀಂದ ಜನಿಸಿದ ಪುತ್ರನ ಬಿಡೆಕು. (ಅರ್ಥಾತ್, ಹೀನ ವಿವಾಹ ಪದ್ಧತಿಯ ಪ್ರೋತ್ಸಾಹಿಸಲಾಗ, ಅದು ಉನ್ನತಿಗೆ ಯೋಗ್ಯವಲ್ಲ).
ಸವರ್ಣೇಭ ಸವರ್ಣಾಸು ಯೇ ಪುತ್ರಾ ಔರಸಾಃ ಖಗ ।
ಸ ಏವ ಶ್ರಾದ್ಧದಾನೇನ ಪಿತೃಣಾಂ ಸ್ವರ್ಗಹೇತವಃ ॥೧೪॥
ಏ ಗರುಡ!, ಸವರ್ಣ ಪುರುಷರಿಂದ ಸವರ್ಣ ಸ್ತ್ರೀಲಿ ಹುಟ್ಟುವ ಪುತ್ರಂಗೆ ‘ಔರಸ ಪುತ್ರ’ ಹೇದು ಹೇಳುವದು. ಅವನೇ ಶ್ರಾದ್ಧಕರ್ಮಾದಿಗಳ ಮಾಡಿ ಪಿತೃಗಳ ಸ್ವರ್ಗ ಪ್ರಾಪ್ತಿ ಮಾಡುಸಲೆ ಕಾರಣ ಆವುತ್ತ°.
ಶ್ರಾದ್ಧೇನ ಪುತ್ರದತ್ತೇನ ಸ್ವರ್ಯಾತೀತಿ ಕಿಮುಚ್ಯತೇ ।
ಪ್ರೇತೋsಪಿ ಪರದತ್ತೇನ ಗತಃ ಸ್ವರ್ಗಮಥೋ ಶ್ರುಣು ॥೧೫॥
ಪುತ್ರ° ಮಾಡಿದ ಶ್ರಾದ್ಧಂದ ಸ್ವರ್ಗಕ್ಕೆ ಹೋವುತ್ತ°. ಪ್ರೇತವೂ ಇನ್ನೊಬ್ಬ° ಮಾಡಿದ ಶ್ರಾದ್ಧಂದ ಸ್ವರ್ಗಕ್ಕೆ ಹೋತು. ಅದರ ಕೇಳು.
ಅತ್ರೈವೋದಾಹರಿಷ್ಯೇsಹಮಿತಿಹಾಸಂ ಪುರಾತನಮ್ ।
ಔರ್ಧ್ವದೇಹಿಕದಾನಸ್ಯ ಪರಂ ಮಾಹಾತ್ಮ್ಯಸೂಚಕಮ್ ॥೧೬॥
ಅದರ ಸಂಬಂಧವಾಗಿಯೇ ಔರ್ಧ್ವದೇಹಿಕ ದಾನದ ಉತ್ತಮವಾದ ಮಹಿಮೆಯ ಸೂಚುಸುವ ಒಂದು ಪ್ರಾಚೀನ ಇತಿಹಾಸವ ಉದಾಹರುಸುತ್ತೆ.
ಪುರಾ ತ್ರೇತಾಯುಗೇ ತಾರ್ಕ್ಷ್ಯ ರಾಜಸೀದ್ಬಭ್ರುವಾಹನಃ ।
ಮಹೋದಯೇ ಪುರೇ ರಮ್ಯೇ ಧರ್ಮನಿಷ್ಠೋ ಮಹಾಬಲಃ ॥೧೭॥
ಏ ಗರುಡ!, ಪೂರ್ವಕಾಲಲ್ಲಿ,  ತ್ರೇತಾಯುಗಲ್ಲಿ ಮನೋಹರವಾದ ಮಹೋದಯಪುರಲ್ಲಿ, ಧರ್ಮನಿಷ್ಠನೂ, ಮಹಾಬಲಶಾಲಿಯೂ ಆದ ಬಭ್ರುವಾಹನ ಹೇಳ್ವ ರಾಜ° ಇತ್ತಿದ್ದ°.
ಯಜ್ವಾ ದಾನಪತಿಃ ಶ್ರೀಮಾನ್ಬ್ರಹ್ಮಣ್ಯಃ ಸಾಧುವತ್ಸಲಃ ।
ಶೀಲಾಚಾರಗುಣೋಪೇತೋ ದಯಾದಾಕ್ಷಿಣ್ಯ ಸಂಯುತಃ ॥೧೮॥
ಯಜ್ಞಂಗಳ ಮಾಡುವವನೂ, ಶ್ರೇಷ್ಠನಾದ ದಾನಿಯೂ, ಶ್ರೀಮಂತನೂ, ಬ್ರಾಹ್ಮಣರ ಆದರುಸುವವನೂ, ಸಾಧುಗಳ ಪ್ರೀತುಸುವವನೂ, ಶೀಲಾಚಾರ ಸದ್ಗುಣ ಸಂಪನ್ನನೂ, ದಯಾದಾಕ್ಷಿಣ್ಯಂಗಳಿಂದ ಕೂಡಿದವನೂ ಅಂವ° ಆಗಿತ್ತಿದ್ದ°.
ಪಾಲಯಾಮಾಸ ಧರ್ಮೇಣ ಪ್ರಜಾಃ ಪುತ್ರಾನಿವೌರಸಾನ್ ।
ಕ್ಷತ್ರಧರ್ಮರತೋ ನಿತ್ಯಂ ಸ ದಂಡ್ಯಾನ್ದಂಡಯನ್ನೃಪಃ ॥೧೯॥
ಅಂವ° ಧರ್ಮಂದ ಔರಸಪುತ್ರರ ರೀತಿಲಿ ಪ್ರಜೆಗಳ ಪಾಲಿಸಿಗೊಂಡಿತ್ತಿದ್ದ°. ನಿತ್ಯವೂ ಕ್ಷತ್ರಿಯ ಧರ್ಮಲ್ಲಿ ತತ್ಪರನಾಗಿ ಅಪರಾಧಿಗಳ ದಂಡಿಸಿಗೊಂಡಿತ್ತಿದ್ದ°.
ಸ ಕದಾಚಿನ್ಮಹಾಬಾಹುಃ ಸುಸೈನ್ಯೋ ಮೃಗಯಾಂ ಗತಃ ।
ವನಂ ವಿವೇಶ ಗಹನಂ ನಾನಾವೃಕ್ಷ ಸಮನ್ವಿತಮ್ ॥೨೦॥
ಒಂದು ಸರ್ತಿ ಆ ಮಹಾಬಾಹುವು ಸೇನಾಸಮೇತನಾಗಿ, ಮೃಗಂಗಳ ಬೇಟೆಯಾಡ್ಳೆ ಹೋದ°. ಅನೇಕ ವೃಕ್ಷಂಗಳಿಂದ ಕೂಡಿದ ಒಂದು ದಟ್ಟವಾದ ವನವ ಅವ° ಪ್ರವೇಶಿಸಿದ°.
ನಾನಾಮೃಗಗಣಾಕೀರ್ಣಂ ನಾನಾಪಕ್ಷಿ ನಿನಾದಿತಮ್ ।
ವನಮಧ್ಯೇ ತದಾ ರಾಜಾ ಮೃಗಂ ದೂರಾದಪಶ್ಯತ ॥೨೧॥
ಆ ವನ ನಾನಾ ತರದ ಪ್ರಾಣಿಗಳ ಗುಂಪಿಂದ ಕೂಡಿ, ನಾನಾ ಪ್ರಕಾರದ ಪಕ್ಷಿಗಳ ಶಬ್ದಂದ ತುಂಬಿ ಹೋಗಿತ್ತು.  ಅಷ್ಟಪ್ಪಗ ಆ ರಾಜ° ಆ ಕಾಡಿನ ಮಧ್ಯಲ್ಲಿ ಒಂದು ಜಿಂಕೆಯ ದೂರಂದಲೇ ನೋಡಿದ°.
ತೇನ ವಿದ್ಧೋಮೃಗೋsತೀವ ಬಾಣೇನ ಸುದೃಢೇನ ಚ ।
ಬಾಣಮಾದಾಯ ತಂ ತಸ್ಯ ವನೇsದರ್ಶನಮೇಯಿವಾನ್ ॥೨೨॥
ಅವನ ಸದೃಢವಾದ ಬಾಣಂದ ಆ ಜಿಂಕೆಯ ಅತಿಯಾಗಿ ಗಾಯಗೊಂಡು ಬಾಣಸಮೇತವಾಗಿ ಕಾಡಿನೊಳ ಕಣ್ಣಿಂಗೆ ಕಾಣದ್ದಾತು.
ಕಕ್ಷೇಣ ರುಧಿರಾರ್ದ್ರೇಣ ಸ ರಾಜಾನುಜಗಾಮ ತಮ್ ।
ತತೋ ಮೃಗಪ್ರಸಂಗೇನ ವನಮನ್ಯದ್ವಿವೇಶ ಸಃ ॥೨೩॥
ಆ ರಾಜ° ರಕ್ತಲೇಪಿತವಾಗಿದ್ದ ಹುಲ್ಲಿನ ಗುರುತಿಂದ ಆ ಜಿಂಕೆಯ ಹಿಂಬಾಲಿಸಿಗೊಂಡು ಮತ್ತೊಂದು ಕಾಡಿನ ಪ್ರವೇಶಿಸಿದ°.
ಕ್ಷುತ್ಕ್ಷಾಮಮಕಂಠೋ ನೃಪತಿಃ ಶ್ರಮಸಂತಾಪಮೂರ್ಛಿತಃ ।
ಜಲಾಶಯಂ ಸಮಾಸಾದ್ಯ ಸಾಶ್ವ ಏವ ವ್ಯಗಾಹತ ॥೨೪॥
ಹಶುವಿಂದ, ಒಣಗಿದ ಗಂಟಲಿಂದ ಆ ರಾಜ° ಶ್ರಮದ ತಾಪಂದ ಇನ್ನೆಂತ ಮೂರ್ಛೆ ತಪ್ಪುವ ಸ್ಥಿತಿಗೆ ಎತ್ತಿದ್ದ°. ಅಲ್ಲಿ ಒಂದು ಜಲಾಶಯದ ಹತ್ರಂಗೆ ಹೋಗಿ ಕುದುರೆಯ ಸಮೇತ ಮಿಂದುಗೊಂಡ°.
ಪಪೌ ತದುದಕಂ ಶೀತಂ ಪದ್ಮ ಗಂಧಾದಿವಾಸಿತಮ್ ।
ತತೋsವತೀರ್ಯ ಸಲಿಲಾದ್ವಿಶ್ರಮೋ ಬಭ್ರುವಾಹನಃ ॥೨೫॥
ಕಮಲ ಸುವಾಸೆನೆಂದ ಕೂಡಿದ, ಶೀತಲವಾದ ಆ ನೀರಿನ ಕುಡುದು ಬಚ್ಚಲು ಸುಧಾರಿಸಿಗೊಂಡ ಮತ್ತೆ ಆ ಬಭ್ರುವಾಹನ° ನೀರಿಂದ ಹೆರ ಬಂದ.
ದದರ್ಶ ನೃಗ್ರೋಧತರುಂ ಶೀತಚ್ಛಾಯಂ ಮನೋಹರಮ್ ।
ಮಹಾವಿಟಪವಿಸ್ತೀರ್ಣಂ ಪಕ್ಷಿ ಸಂಘನಿನಾದಿತಮ್ ॥೨೬॥
ಅಲ್ಲಿ ಶೀತಲವಾದ ತಣಿಲು ಇಪ್ಪ, ಅಗಾಲಕ್ಕೆ ವಿಸ್ತರಿಸಿಪ್ಪ ಕೊಂಬೆಗಳಿಪ್ಪ, ನಾದಗೈವ ಪಕ್ಷಿಗಳಿಂದ ಕೂಡಿದ ಮನೋಹರವಾದ ಒಂದು ಆಲದ ಮರವ ಅಂವ° ನೋಡಿದ°.
ವನಸ್ಯ ತಸ್ಯ ಸರ್ವಸ್ಯ ಮಹಾಕೇತುಮಿವ ಸ್ಥಿತಮ್ ।
ಮೂಲಂ ತಸ್ಯ ಸಮಾಸಾದ್ಯ ನಿಷಸಾದ ಮಹೀಪತಿಃ ॥೨೭॥
ಅದು ಆ ಕಾಡಿಂಗೆಲ್ಲ ಮಹಾಧ್ವಜದ ಹಾಂಗೆ ಇದ್ದತ್ತು. ರಾಜ° ಹತ್ರಂಗೆ ಹೋಗಿ ಆ ಮರದ ಬುಡಲ್ಲಿ ವಿಶ್ರಮಿಸಿಗೊಂಡ°.
ಅಥ ಪ್ರೇತಂ ದದರ್ಶಾಸೌ ಕ್ಷುತ್ತೃಡ್ಭ್ಯಾಂ ವ್ಯಾಕುಲೇಂದ್ರಿಯಮ್ ।
ಉತ್ಕಚಂ ಮಲಿನಂ ಕುಬ್ಜಂ ನಿರ್ಮಾಂಸಂ ಭೀಮದರ್ಶನಮ್ ॥೨೮॥
ಆ ಸಮಯಲ್ಲಿ ಅಂವ° ಹಶು, ಆಸರಂದ ವ್ಯಾಕುಲವಾದ, ಇಂದ್ರಿಯಂಗಳಿಂದ ಕೂಡಿದ, ಕೆದರಿದ ತಲೆಕಸವುಗಳಿಪ್ಪ, ಮಲಿನವಾದ, ಗೂನ ಬೆನ್ನ, ಮಾಂಸರಹಿತವಾದ, ನೋಡ್ಳೆ ಅತಿ ಭಯಂಕರವಾದ ಒಂದು ಪ್ರೇತವ ನೋಡಿದ°.
ತಂ ದೃಷ್ಟ್ವಾ ವಿಕೃತಂ ಘೋರಂ ವಿಸ್ಮಿತೋ ಬಭ್ರುವಾಹನಃ ।
ಪ್ರೇತೋsಪಿ ದೃಷ್ಟ್ವಾ ತಂ ಘೋರಾಮಟವೀಮಾಗತಂ ನೃಪಮ್ ॥೨೯॥
ಆ ವಿಕಾರವಾದ ಭಯಂಕರವಾದ ರೂಪವ ನೋಡಿ ಬಭ್ರುವಾಹನ° ಅಶ್ಚರ್ಯಪಟ್ಟ°. ಆ ಪ್ರೇತವೂ ಆ ಘೋರವಾದ ಕಾಡಿಂಗೆ ಬಂದ ರಾಜನ ನೋಡಿ –
ಸಮುತ್ಸುಕಮನಾ ಭೂತ್ವಾ ತಸ್ಯಾಂತಿಕಮುಪಾಗತಃ ।
ಅಬ್ರವೀತ್ಸ ತದಾ ತಾರ್ಕ್ಷ್ಯ ಪ್ರೇತರಾಜೋ ನೃಪಂ ವಚಃ ॥೩೦॥
ಕುತೂಹಲಂದ ಅವನ ಹತ್ರಂಗೆ ಬಂತು. ಏ ಗರುಡ!, ಆ ಪ್ರೇತರಾಜ° ರಾಜನತ್ರೆ ಮಾತಾಡಿತ್ತು –
ಪ್ರೇತಭಾವೋ ಮಯಾ ತ್ಯಕ್ತಃ ಪ್ರಾಪ್ತೋsಸ್ಮಿ ಪರಮಾಂಗತಿಮ್ ।
ತ್ವತ್ಸಂಯೋಗಾನ್ಮಹಾಬಾಹೋ ಜಾತೋ ಧನ್ಯತರೋsಸ್ಮ್ಯಹಮ್ ॥೩೧॥
“ಏ ಮಹಾಬಾಹುವೇ!, ನಿನ್ನ ಸಂಯೋಗಂದ ಎನ್ನ ಪ್ರೇತಭಾವವ ಬಿಟ್ಟು ಪರಮಗತಿಯ ಪಡದ್ದೆ. ಆನು ಅತಿ ಧನ್ಯನಾಗಿದ್ದೆ”.
ರಾಜೋವಾಚ-
ಕೃಷ್ಣವರ್ಣ ಕರಾಲಾಸ್ಯ ಪ್ರೇತತ್ವಂ ಘೋರದರ್ಶನಮ್ ।
ಕೇನ ಕರ್ಮವಿಪಾಕೇನ ಪ್ರಾಪ್ತಂ ತೇ ಬಹ್ವಮಂಗಲಮ್ ॥೩೨॥
ರಾಜ° ಹೇಳಿದ° – ಈ ಕಪ್ಪು ಬಣ್ಣದ, ಕರಾಳ ಮೋರೆಯ, ನೋಡ್ಳೆ ಭಯಂಕರವಾದ ಅತ್ಯಂತ ಅಮಂಗಳಕರವಾದ ಈ ಪ್ರೇತತ್ವವ ನೀನು ಏವ ಕರ್ಮಫಲಂದ ಪಡದೆ?
ಪ್ರೇತತ್ವಕಾರಣಂ ತಾತ ಬ್ರೂಹಿ ಸರ್ವಮಶೇಷತಃ ।
ಕೋsಸಿ ತ್ವಂ ಕೇನ ದಾನೇನ ಪ್ರೇತತ್ವಂ ತೇ ವಿನಶ್ಯತಿ ॥೩೩॥
ಹೇ ಮಿತ್ರನೇ,!, ನಿನ್ನ ಪ್ರೇತತ್ವಕ್ಕೆ ಕಾರಣವ ಎಲ್ಲವನ್ನೂ ರಜವೂ ಬಿಡದ್ದೆ ಹೇಳು. ನೀನು ಆರು?, ಏವ ದಾನಂಗಳಿಂದ ನಿನ್ನ ಪ್ರೇತತ್ವ ನಾಶ ಅಕ್ಕು ?
 
ಗದ್ಯರೂಪಲ್ಲಿ –
 
ಸೂತಪುರಾಣಿಕ° ಹೇಳಿದ° – ವೈನತೇಯ ಗರುಡ°, ಭಗವಂತನ ಮಾತುಗಳ ಕೇಳಿ ಅಶ್ವತ್ಥಮರದ ಎಲೆ ಹಾಂಗೆ ನೆಡುಗ್ಯೊಂಡು, ಮತ್ತೆ ಜನರ ಉಪಕಾರಕ್ಕಾಗಿ ಭಗವಂತ° ವಿಷ್ಣುವಿನತ್ರೆ ಕೇಳಿದ°.
ಗರುಡ° ಹೇಳಿದ° – ಹೇ ಮಾಧವನೇ!, ಮನುಷ್ಯರು ಪ್ರಮಾದವಶರಾಗಿ ತಿಳುದೋ ತಿಳಿಯದ್ದೆಯೋ ಪಾಪಂಗಳ ಮಾಡಿಯೂ ನರಕಕ್ಕೆ ಹೋಗದ್ದಾಂಗೆ ಇಪ್ಪಲೆ ಏನಾರು ಉಪಾಯ ಇದ್ದರೆ ಎನಗೆ ಹೇಳು. ಏವ ಮನುಷ್ಯರು ಈ ಸಂಸಾರ ಸಮುದ್ರಲ್ಲಿ ಮುಂಗಿ, ಅಲ್ಪ ಮತಿಗಳಾಗಿದ್ದು, ಆರ ಬುದ್ಧಿ ಪಾಪಂಗಳಿಂದ ಮಂಕಾಗಿ, ಆರ ಮನಸ್ಸು ವಿಷಯಭೋಗಂಗಳಿಂದ ಘಾಸಿಯಾಗಿದ್ದೋ, ಅಂತವರ ಉದ್ಧಾರಕ್ಕಾಗಿ, ಅವರ ಸದ್ಗತಿ ಪ್ರಾಪ್ತಿಗಾಗಿ, ಪುರಾಣಂಗಳಲ್ಲಿ ಸುನಿಶ್ಚಿತವಾಗಿ ಹೇಳಲ್ಪಟ್ಟ ಏನಾರು ಉಪಾಯಂಗೊ ಇದ್ದರೆ ವಿವರಿಸಿ ಹೇಳು.
ಗರುಡನ ಸದಾಶಯವ ಕೇಳಿದ ಮಹಾವಿಷ್ಣು ಗರುಡಂಗೆ ಹೇಳಿದ° – ಹೇ ಗರುಡ!, ಮನುಷ್ಯರ ಹಿತದ ಕಾಮನೆಂದ ನೀನು ಉತ್ತಮ ವಿಷಯದ ಕುರಿತು ಕೇಳಿದ್ದೆ. ಎಲ್ಲವನ್ನೂ ನಿನಗೆ ಆನು ಹೇಳುತ್ತೆ, ಶ್ರದ್ಧೆಕೊಟ್ಟು ಕೇಳು-
ಗರುಡ!, ಆನು ಈ ಮದಲು ಪುತ್ರಹೀನ ಮತ್ತೆ ಪಾಪಿ ಮನುಷ್ಯರ ಯಾತನೆಯ ಬಗ್ಗೆ ವರ್ಣನೆ ಮಾಡಿದ್ದೆ. ಪುತ್ರವಂತ° ಮತ್ತೆ ಧಾರ್ಮಿಕ ಮನುಷ್ಯರಿಂಗೆ ಈ ಹಿಂದೆ ವರ್ಣಿಸಿದ ದುರ್ಗತಿಗೊ ಬತ್ತಿಲ್ಲೆ. ಒಂದುವೇಳೆ ತಮ್ಮ ಪೂರ್ವಾರ್ಜಿತ ಕರ್ಮಂಗಳ ಕಾರಣಂದಲಾಗಿ ಪುತ್ರಪ್ರಾಪ್ತಿಲಿ ವಿಘ್ನಂಗೊ ಉಂಟಾದರೆ, ಏವುದಾರು ಉಪಾಯಂದ ಪುತ್ರೋತ್ಪತ್ತಿಯ ಪಡವಲಕ್ಕು. ಹರಿವಂಶದ ಕಥೆಯ ಶ್ರವಣ ಮಾಡಿ, ವಿಧಿವಿಧಾನಂಗಳಿಂದ ಶತಚಂಡೀ ಯಜ್ಞವ ಮಾಡಿ, ಭಕ್ತಿಂದ ಶಿವನ ಆರಾಧನೆ ಮಾಡಿ ಬುದ್ಧಿವಂತನಾದ ಮನುಷ್ಯ° ಪುತ್ರೋತ್ಪತ್ತಿಯ ಮಾಡೆಕು.
ಪುತ್ರ° ಪಿತೃವಿನ ‘ಪುಮ್’ ಹೇಳ್ವ ನರಕಂದ ಪಾರುಮಾಡುತ್ತ°. ಹಾಂಗಾಗಿ ಸ್ವಯಂ ಸ್ವಯಂಭುವೇ ಅವನ ‘ಪುತ್ರ’  ಹೇಳ್ವ ಹೆಸರಿಂದ ದೆನಿಗೊಂಡದು. ಒಬ್ಬನೇ ಧರ್ಮಾತ್ಮನಾದ ಮಗ° ಸಂಪೂರ್ಣ ಕುಲವ ಉದ್ಧಾರ ಮಾಡುತ್ತ°. ಪುತ್ರನ ಮೂಲಕ ಲೋಕಂಗಳ ಜಯಿಸುತ್ತ° ಹೇಳ್ವದು ಸನಾತನ ಶ್ರುತಿ.
ಈ ರೀತಿಯಾಗಿ ವೇದಂಗೊ ಉತ್ತಮವಾದ ಪುತ್ರನ ಮಹಾತ್ಮೆಯ ಹೇಳಿದ್ದು. ಹಾಂಗಾಗಿ ಪುತ್ರಸುಖವ ನೋಡಿದ ಮನುಷ್ಯ ಪಿತೃಋಣಂದ ಮುಕ್ತನಾವುತ್ತ°. ಪೌತ್ರನ ಸ್ಪರ್ಶ ಮಾಡಿ ಮನುಷ್ಯ°  ದೇವ, ಋಷಿ, ಪಿತೃ ಹೇಳ್ವ ಈ ಮೂರು ಋಣಂಗಳಿಂದ ಮುಕ್ತನಾವುತ್ತ°. ಈ ರೀತಿಯಾಗಿ ಪುತ್ರ, ಪೌತ್ರ, ಪ್ರಪೌತ್ರರಿಂದ ಯಮಲೋಕವ ದಾಂಟಿ ಸ್ವರ್ಗಾದಿ ಲೋಕಂಗಳ ಹೊಂದುತ್ತ°. ಬ್ರಹ್ಮವಿವಾಹದ ವಿಧಿಂದ ಮದುವೆ ಆದ ಪತ್ನಿಂದ ಜನಿಸಿದ ಔರಸ ಪುತ್ರ° ಊರ್ಧ್ವಗತಿಯ ಪ್ರಾಪ್ತಿ ಮಾಡುಸುತ್ತ°. ಸಂಗೃಹೀತ (ದುಷ್ಟ ಪದ್ಧತಿಯ ವಿವಾಹಂದ ಜನಿತ ಮಗ°) ಪುತ್ರ ಅಧೋಗತಿಯತ್ತೆ ಕೊಂಡೋವುತ್ತ°.  ಹೇ ಪಕ್ಷಿಶ್ರೇಷ್ಠನೇ, ಹಾಂಗಾಗಿ ಹೀನ ವಿವಾಹವ ವರ್ಜಿಸೆಕು. ಹೇ ಗರುಡ, ಸವರ್ಣ ಸ್ತ್ರೀ ಪುರುಷರ ಸಂಯೋಗಂದ ಹುಟ್ಟುವ ಪುತ್ರಂಗೆ ‘ಔರಸ ಪುತ್ರ’ ಹೇದು ಹೇಳುವದು. ಅವನೇ ಶ್ರಾದ್ಧಕರ್ಮಾದಿಗಳ ಮಾಡಿ ಪಿತೃಗೊಕ್ಕೆ ಸ್ವರ್ಗ ಪ್ರಾಪ್ತಿ ಮಾಡುಸಲೆ ಕಾರಣನಾವುತ್ತ°.
ಔರಸ ಪುತ್ರನ ಮೂಲಕ ಮಾಡಲಾದ ಶ್ರಾದ್ಧಂದ ಅಪ್ಪಂಗೆ ಸ್ವರ್ಗ ಪ್ರಾಪ್ತಿ ಆವುತ್ತು. ಈ ವಿಷಯಲ್ಲಿ ಹೇಳ್ಳೆ ಎಂತ ಇದ್ದು!.  ಅನ್ಯರ ಮೂಲಕ ಮಾಡಿದ ಶ್ರಾದ್ಧಂದಲೂ ಪ್ರೇತ ಸ್ವರ್ಗಕ್ಕೆ ಹೋಯಿದು. ಈ ವಿಷಯದ ವಿವರವ ಹೇಳ್ತೆ ಕೇಳು. ಅದರ ಸಂಬಂಧವಾಗಿ ಔರ್ಧ್ವದೇಹಿಕ ದಾನದ ಉತ್ತಮವಾದ ಮಹಿಮೆಯ ಸಾರುವ ಒಂದು ಪ್ರಾಚೀನ ಇತಿಹಾಸವ ಹೇಳುತ್ತೆ ಕೇಳು-
ಹೇ ಗರುಡ!, ಪೂರ್ವಕಾಲಲ್ಲಿ ತ್ರೇತಾಯುಗಲ್ಲಿ ಮಹೋದಯ ಹೇಳ್ವ ಮನೋಹರವಾದ ನಗರಲ್ಲಿ ಮಹಾಬಲಶಾಲಿಯಾದ, ಧರ್ಮಪರಾಯಣನೂ ಆದ ಬಭ್ರುವಾಹನ ಹೇಳ್ವ ರಾಜ° ಒಬ್ಬ° ಇತ್ತಿದ್ದ°. ಅಂವ° ಯಜ್ಞಾನುಷ್ಠಾನ ಮಾಡುವಂವನೂ, ಮಹಾ ದಾನಿಯೂ, ಸಂಪತ್ಭರಿತನೂ, ಬ್ರಾಹ್ಮಣರ ಗೌರವುಸುವವನೂ, ಸಾಧುಗಳ ಪ್ರೀತುಸುವವನೂ, ಶೀಲಾಚಾರನೂ, ಸದ್ಗುಣ ಸಂಪನ್ನನೂ, ದಯಾದಾಕ್ಷಿಣ್ಯಂಗಳಿಂದ ಕೂಡಿದವನೂ ಆತಿತ್ತಿದ್ದ°. ಪ್ರಜಾವರ್ಗವ ಔರಸ ಪುತ್ರರ ಹಾಂಗೇ ನೋಡಿಗೊಂಡಿತ್ತಿದ್ದ ಅವ° ನಿತ್ಯವೂ ಕ್ಷತ್ರಿಯ ಧರ್ಮಲ್ಲೇ ಧರ್ಮತತ್ಪರನಾಗಿ ಅಪರಾಧಿಗಳ ನಿರ್ದಾಕ್ಷಿಣ್ಯವಾಗಿ ದಂಡುಸುವವನೂ ಆಗಿತ್ತಿದ್ದ°.
ಆ ಮಹಾಬಲಿಷ್ಠನಾದ ಆ ರಾಜ° ಒಂದರಿ ಸೇನಾಸಮೇತನಾಗಿ ಮೃಗಬೇಟೆಯಾಡ್ಳೆ  ಅನೇಕ ಮರಂಗಳಿಂದ ಕೂಡಿದ ದಟ್ಟವಾದ ಅರಣ್ಯವ ಪ್ರವೇಶಿಸಿದ°. ಆ ವನವು ನಾನಾಪ್ರಕಾರದ ಮೃಗಗಣಂಗಳಿಂದ ಮತ್ತು ಅನೇಕ ಪ್ರಕಾರದ ಪಕ್ಷಿಗಳಿಂದ ನಿನಾದಿತವಾಗಿತ್ತು. ಆ ಸಮಯಲ್ಲಿ ರಾಜ° ಕಾಡಿನ ಮಧ್ಯಲ್ಲಿ ಒಂದು ಜಿಂಕೆಯ ದೂರಂದಲೇ ನೋಡಿದ°. ರಾಜನ ಸುದೃಢ ಬಾಣಂದ ಪೆಟ್ಟುತಿಂದ ಆ ಮೃಗ ಬಾಣಸಹಿತ ಅರಣ್ಯಲ್ಲಿ ಅದೃಶ್ಯವಾಗಿ ಹೋತು. ಅಲ್ಲಿ ಹುಲ್ಲುಗಳ ಮೇಲೆ ಲೇಪಿತವಾದ ನೆತ್ತರಿನ ಗುರುತಿನ ನೋಡಿಗೊಂಡು ಆ ಹರಿಣವ ಹಿಂಬಾಲಿಸಿಗೊಂಡು ಹೋದ ರಾಜ° ಮತ್ತೊಂದು ಕಾಡಿನ ಪ್ರವೇಶಿಸಿದ°.  ಬಹು ಶ್ರಮದ ಫಲವಾಗಿ ಹಶು ಆಸರಂದ ಬಳಲಿ ಮೂರ್ಛೆ ತಪ್ಪುವ ಸ್ಥಿತಿಗೆ ಬಪ್ಪಲಾದ ಆ ರಾಜ° ಅಲ್ಲಿ ಒಂದು ಜಲಾಶಯದ ಹತ್ರಂಗೆ ಬಂದು ಅಲ್ಲಿ ತನ್ನ ಕುದುರೆ ಸಹಿತ ಮಿಂದು ಅಲ್ಲಿ ಕಮಲಾದಿಗಳ ಸುಗಂಧಿತ ಶೀತಲ ಜಲವ ಕುಡುದು ಮತ್ತೆ ಆ ಜಲಾಶಯಂದ ಹೆರಬಂದು ಅಲ್ಲಿ ಶೀತಲವಾದ ನೆರಳು ಇಪ್ಪ ವಿಸ್ತಾರವಾಗಿ ಹಬ್ಬಿಗೊಂಡಿಂದ ರೆಂಬೆಗಳಿಪ್ಪ ಹಕ್ಕಿಗಳ ಕಲರವ ನಾದಂಗಳಿಂದ ಕೂಡಿದ್ದ ಮನೋಹರವಾದ ದೊಡ್ಡ ಒಂದು ಆಲದ ಮರವ ನೋಡಿದ°.
ಆ ಮರ ಇಡೀ ಆ ವನದ ದೊಡ್ಡ ಮಹತ್ವದ ಪತಾಕೆಯ ಹಾಂಗೆ ಇತ್ತಿದ್ದು. ಅದರ ಬುಡಕ್ಕೆ ಹೋಗಿ ರಾಜ ವಿಶ್ರಾಂತಿಗಾಗಿ ಕೂದುಗೊಂಡ°. ಅಷ್ಟಪ್ಪಗ ಅಲ್ಲಿ ಹಶು ಆಸರಂದ ವ್ಯಾಕುಲವಾದ ಇಂದ್ರಿಯಂಗಳಿಂದ ಕೂಡಿದ, ತಲೆಯ ರೋಮಂಗೊ ಮೆಗಂತಾಗಿ ನೆಟ್ಟಂಗಾಗಿ ಇತ್ತಿದ್ದ ಅತ್ಯಂತ ಮಲಿನ, ಕುಬ್ಜ ಮತ್ತು ಮಾಂಸರಹಿತ (ಕೃಶ) ಒಂದು ಭಯಾನಕ ಪ್ರೇತವ ನೋಡಿದ°. ಆ ವಿಕೃತ ಆಕೃತಿಯ ಭಯಾನಕ ಪ್ರೇತವ ನೋಡಿ ರಾಜ° ಬಭ್ರುವಾಹನ° ವಿಸ್ಮಿತನಾದ°. ಆ ಪ್ರೇತವೂ ಕೂಡ ಆ ದಟ್ಟ ಕಾಡಿಂಗೆ ಬಂದ ರಾಜನ ನೋಡಿ ಕುತೂಹಲಂದ ರಾಜನ ಹತ್ರಂಗೆ ಬಂತು. ಆ ಪ್ರೇತ ಈ ರಾಜನತ್ರೆ ಮಾತಾಡಿತ್ತು – “ಎಲೈ ಮಹಾಬಾಹುವೇ!, ನಿನ್ನ ಸಂಯೋಗಂದ ಎನ್ನ ಪ್ರೇತಭಾವವ ಬಿಟ್ಟು ಪರಮಗತಿಯ ಪಡದ್ದೆ. ಆನು ಅತಿ ಧನ್ಯನಾದೆ”.
ರಾಜ° ಬಭ್ರುವಾಹನ ಹೇಳಿದ° – ” ಹೇ ಕರ್ಕಟೆ (ಕೃಷ್ಣವರ್ಣದ) ಹಾಂಗೂ ಭಯಾನಕ ಪ್ರೇತವೇ!, ಏವ ಕರ್ಮದ ಪ್ರಭಾವಂದ ನೋಡ್ಳೇ ಅತೀ ಭಯಾನಕವಾದ ಹಾಂಗೂ ಅಮಂಗಳಕರವಾದ ಈ ಪ್ರೇತತ್ವ ಸ್ವರೂಪವ ನೀನು ಪಡದೆ? ಹೇ ಮಿತ್ರನೇ, ನಿನ್ನ ಪ್ರೇತತ್ವ ಕಾರಣವ ಎಲ್ಲವನ್ನೂ ಎನಗೆ ಹೇಳು. ಏವ ದಾನಂದ ನಿನ್ನ ಪ್ರೇತತ್ವ ನಷ್ಟವಕ್ಕು?”
 
ರಾಜನ ಪ್ರಶ್ನಗೆ ಪ್ರೇತ ಎಂತ ಹೇಳಿತ್ತು ? ವಿವರವ ಮುಂದಾಣ ಭಾಗಲ್ಲಿ ಬಪ್ಪ ವಾರ ನೋಡುವೋ° 
 
[ ಚಿಂತನೀಯಾ –
 
ಪ್ರಪಂಚದ ಪ್ರತಿಯೊಂದೂ ತ್ರಿಗುಣಂಗಳ ಸಮ್ಮಿಶ್ರಣ. ಇದು ಶುದ್ಧ, ಇದೇ ಗುಣ ಹೇದು ಹೇಳ್ವಾಂಗೆ ಯಾವುದೂ ಇಲ್ಲೆ. ಏವ ಗುಣ ಅಧಿಕವಾಗಿದ್ದೋ ಆ ಗುಣಲ್ಲಿ ಮೆರವದು, ಗುರುತುಸುವದು ಮಾಂತ್ರ. ಮೂಲತಃ ಪ್ರತಿಯೊಂದು ಜೀವಿಯೂ ಸತ್ವಗುಣಂದಲೇ ಹುಟ್ಟುವದು. ಆದರೆ ಪ್ರಕೃತಿಲೇ ಬೆರೆಕೆಯಾಗಿಪ್ಪ ತ್ರಿಗುಣಂಗಳಿಂದಲಾಗಿ ಏವುದಾದರೊಂದು ಗುಣದ ಅಧಿಕ ಪ್ರಭಾವದ ಸೆಳೆತಕ್ಕೆ ತುತ್ತಾಗಿ ಕೊಚ್ಚಿ ಹೋಪದು. ಅದು ಆಗದ್ದಾಂಗೆ ನೋಡಿಗೊಂಬದು ಬುದ್ಧಿವಂತಿಕೆ. ಆದರೆ ಅದೆಲ್ಲ ಅಷ್ಟು ಎಳ್ಪಕ್ಕೆ ಎಡಿಗಪ್ಪದು ಅಲ್ಲ ಹೇಳ್ವದು ಸತ್ಯ ವಿಚಾರವೂ ಅಪ್ಪು. ಆದರೆ ಅದಕ್ಕೆ ಯಾವುದೇ ಅನುಕಂಪದ ಅಲೆ ಸಿಕ್ಕುತ್ತು ಹೇಳ್ವದು ತಪ್ಪು ಕಲ್ಪನೆ. ಯಾವ ಗುಣದ ಪ್ರಭಾವ ಹೇಳ್ವದು ಮುಖ್ಯ ಆವ್ತಿಲ್ಲೆ. ಜೀವಿ ಯಾವ ಕರ್ಮವ ಮಾಡಿದನೋ ಅದರ ಫಲವ ತಪ್ಪದ್ದೆ ಅನುಭವುಶೆಕ್ಕಾದ್ದು ನಿಯಮ. ಇದರ ತಪ್ಪುಸಲೆ ಆರಿಂದಲೂ ಎಡಿಯ. ಆದರೆ ಮತ್ತೆ ಭಗವಂತನ ಮೊರೆ ಹೋಪದೆಂತದಕ್ಕೆ? ಅವ° ಏನಾರು ಅದರ ತೊಳದು ಹಾಕುತ್ತನೋ?! ನಿಜವಾಗಿ ಇಲ್ಲೆ. ಆದರೆ ಅವನ ಶ್ರದ್ಧಾ ಭಕ್ತಿಂದ ನಂಬಿ ಅವಂಗೆ ಶರಣಾಗತನಾಗಿ ಅವನ ಪ್ರಾರ್ಥಿಸುವದರಿಂದ ಇನ್ನು ಮುಂದೆ ನಮ್ಮ ನಾವು ಹತೋಟಿಲಿ ಮಡಿಕ್ಕೊಂಬಲಾವ್ತು. ಅವನ ಕೃಪಾದೃಷ್ಟಿ ನಮ್ಮ ಮೇಲೆ ಬಿದ್ದು ನಾವು ಅನುಭವುಶೆಕಾದ ಕಷ್ಟದ ಕಾಠಿಣ್ಯ ಹಗುರ ಆವ್ತು., ಅರ್ಥಾತ್, ಅದರ ಸಹುಸುವ ಶಕ್ತಿ ದೊರಕುತ್ತು. ಅವನ ಕೃಪೆ ಇಲ್ಲದ್ರೆ ನವಗೆ ಅದರ ತಡಕ್ಕೊಂಬ ಶಕ್ತಿ ಏನೇನೂ ಇಲ್ಲೆ.
ಅರ್ತೋ ಅರಡಿಯದ್ದೆಯೋ ಮಾಡಿದ ಪಾಪಂಗಳ ಫಲವ ನಾವು ಅನುಭವಿಶಿಯೇ ತೀರೇಕು ಹೇಳ್ವದು ನಿಘಂಟು. ಭಗವಂತನ ನಂಬಿ ಅವನ ಪೂಜಿಸಿ ಪ್ರೀತಿಯ ಪಡಕ್ಕೊಂಡರೆ ಅವ° ನಮ್ಮ ಕಾಪಾಡುತ್ತ° ಹೇದರೆ ನವಗೆ ಅದರ ಸಹುಸುವ ಶಕ್ತಿಯ ನೀಡುತ್ತ°. ಅವಂಗೆ ಎಡಿಯದ್ದದು ಏವುದೂ ಇಲ್ಲೆ. ಎಲ್ಲವೂ ಅವನಿಂದಲೇ ಅಪ್ಪದು. ಅವನೇ ನಡಶುತ್ತದು. ಹಾಂಗಿಪ್ಪಗ ಅವನನ್ನೇ ನಂಬಿ, ಅವನನ್ನೇ ಆಶ್ರಯಿಸಿ ಮುನ್ನೆಡವದು ಬುದ್ಧಿಶಾಲಿತನ. ಅವ° ಮನಸ್ಸು ಮಾಡಿರೆ ನಾವು ಅಜ್ಞಾನಂದ ಮಾಡಿದ ಪಾಪಂಗಳ ತೊಳವ ಶಕ್ತಿಯೂ ಅವಂಗೆ ಇದ್ದು. ಅದು ನಮ್ಮ ಶ್ರದ್ಧಾ ಭಕ್ತಿಯ ಯೋಗ್ಯತೆಯ ಹೊಂದಿಗೊಂಡು ಅವ° ತೀರ್ಮಾನುಸುವದು. ಅವ° ಮಾಧವ°. ಮಾ ಹೇಳಿರೆ ಮಾತೆ ಲಕ್ಷ್ಮಿ, ಮಾಯೆ, ಪ್ರಕೃತಿ; ಧವ ಹೇಳಿರೆ ಪತಿ, ಪ್ರಭು.. ಮಾಯೆಯ, ಲಕ್ಷ್ಮಿಯ, ಸಿರಿಯ, ಪಕೃತಿಯ ನಾಥ° ಆಗಿಪ್ಪ ಅವನ ಮಾಧವ° ಹೇದು ಪರಿಶುದ್ಧ ಭಕ್ತಿಂದ ನಮ್ಮಲ್ಲಿ ಅವನ ಸ್ವರೂಪವ ಪ್ರತಿಷ್ಠಾಪಿಸಿ ಸಂತೋಷಿಸಿದರೆ ಅವ° ನಮ್ಮ ಇಷ್ಟಾರ್ಥವ ಈಡೇರುಸುತ್ತ° ಹೇಳ್ವದು ಪುರಾಣೋಕ್ತಿ.  ಸಂಸಾರ ಸಾಗರವ ದಾಂಟ್ಳೆ ಭಗವದ್ ಆರಾಧನೆಯೇ ದೋಣಿ. ನಮ್ಮ ಶ್ರದ್ಧಾಭಕ್ತಿಯೇ ದೋಣಿಯ ಮುಂದೆ ತಳ್ಳುಲೆ ಇಪ್ಪ ಝಳ್ಳ.  ಭಗವಂತನ ಮಹಿಮೆಯ ಸಾರುವ ಕಥೆಯ ಕೇಳಿ ಪಾಡಿ ಸ್ಮರಣೆ ಮಾಡಿ ಹೇಳುವುದೇ ಎಲ್ಲ ಪುರಾಣಂಗಳ ಸಾರ. ಇದರಿಂದ ನಮ್ಮ ಬದುಕು ಪರಿಶುದ್ಧವಾಗಿರುತ್ತು. ಜ್ಞಾನದ ಮಾರ್ಗಲಿ ಮುನ್ನೆಡವಲೆ ಸಾಧ್ಯ ಆವ್ತು.
 ‘ಪುಮ್’ ನಾಮ ನರಕಂದ ಪಾರುಮಾಡ್ಳೆ ಪುತ್ರ°. ಕರ್ಮವಶಾತ್ ಪುತ್ರ ಇಲ್ಲದ್ದಂವ° ಭಗವದ್ ಪ್ರೀತಿ ಕಾರ್ಯವ ಮಾಡಿ ಪುತ್ರನ ಪಡವಲಕ್ಕು. ಇಲ್ಲಿ ಭಗವಂತನ ಪ್ರೀತಿಗೆ ಯೋಗ್ಯನಾಯೇಕ್ಕಪ್ಪದು ಮುಖ್ಯ. ಪುತ್ರನಿಂದ ಮಾಡಲ್ಪಟ್ಟ ಔರ್ಧ್ವದೇಹಿಕ ಕರ್ಮಂಗಳಿಂದಲಾಗಿ ಸದ್ಗತಿ ಪ್ರಾಪ್ತಿ ಆವ್ತು ಹೇಳ್ವದರ್ಲಿ ಸಂದೇಹ ಇಲ್ಲೆ. ಹಾಂಗಾರೆ ಇಲ್ಲದ್ದವಂಗೆ?! ಅದನ್ನೇ ಮಹಾವಿಷ್ಣು ಈ ಭಾಗಲ್ಲಿ ಬಭ್ರುವಾಹನನ ಕಥೆಯ ಉದಾಹರಿಸಿ ವಿವರುಸುತ್ತಾ ಇಪ್ಪದು. ಭಗವಂತ° ಆ ವಿಷಯವಾಗಿ ಗರುಡಂಗೆ ಎಂತ ಹೇಳುತ್ತ° ಹೇಳ್ವದರ ಮುಂದಾಣ ಭಾಗಲ್ಲಿ ನೋಡುವೋ°. ಎಲ್ಲೋರಿಂಗೂ ಒಳ್ಳೆದಾಗಲಿ. ]
 
ಹರೇ ರಾಮ.
 

6 thoughts on “ಗರುಡಪುರಾಣ – ಅಧ್ಯಾಯ 07 – ಭಾಗ 01

  1. ಶ್ಶೇ… ಕತೆ ಒಳ್ಳೆ ಕುತೂಹಲದ ಘಟ್ಟಲ್ಲಿ ಬ೦ದಪ್ಪಗ ಈ ಅಧ್ಯಾಯ ಮುಗುತ್ತನ್ನೆ… 🙂

  2. ಮನಸ್ಸಿನ ನಿಗ್ರಹ ಶಕ್ತಿಗೆ ಬೇಕಾಗಿ ಬೇರೆಸಮಯಲ್ಲಿ ಓದಲಾಗ ಹೇದು ಮಾಡಿದ್ದೊ? ಮಕ್ಕೊಲ್ಲ ಹೆದರಿಯೊಂಗಿದ! ಹೇಂಗೂಇರಲಿ ಒಪ್ಪಣ್ಣ ಬಯಲಿಲ್ಲಿ ಅಂತೂ ಓದಲಕ್ಕನ್ನೆ!

  3. ಎಲ್ಲರೂ ಓದಿ ತಿಳಿಯೆಕ್ಕಾದ ಈ ಪುರಾಣವ ಬಾಕಿ ಸಮಯಲ್ಲಿ ಓದಲಾಗ ಹೇಳ್ತ ಹಣೆ ಪಟ್ಟಿ ಎಂತಕೆ ಹಾಕ್ಸಿಗೊಂಡತ್ತು ಗೊಂತಾವ್ತಿಲ್ಲೆ.
    ಶ್ಲೋಕಾರ್ಥ, ಒಟ್ಟು ಭಾವಾರ್ಥ ಮತ್ತೆ ಚಿಂತನೆಗೆ ಇಪ್ಪದು ಹೇಳಿ ಪ್ರತಿ ಕಂತು ಕೂಡಾ, ಮೂರು ಭಾಗವಾಗಿ ತುಂಬಾ ಲಾಯಿಕಕೆ ನಿರೂಪಣೆ ಆವ್ತಾ ಇದ್ದು.
    ಚೆನ್ನೈ ಭಾವಯ್ಯಂಗೆ ನಮೋ ನಮಃ

  4. ಚೆನ್ನೈ ಭಾವ ಪ್ರತಿ ವಾರ ಪ್ರಸ್ತುತ ಪಡಿಸುತ್ತಾ/ಬರೆತ್ತಾ ಇಪ್ಪ ಗರುಡ ಪುರಾಣ, ಅದರ ಕನ್ನಡ ಅನುವಾದ ಮತ್ತೆ ಚಿ೦ತನೀಯ ಎಲ್ಲವನ್ನೂ ಆನು ತಪ್ಪದ್ದೆ ಓದುತ್ತಾ ಇದ್ದೆ. ತು೦ಬ ಲಾಯಕ್ಕಾಗಿ ಮುಊಡಿ ಬತ್ತಾ ಇದ್ದು.ಇದು ನಿಜವಾಗಿಯೂ ತು೦ಬ ಉಪಯುಕ್ತ. ಚೆನ್ನೈ ಭಾವ೦ಗೆ ಎನ್ನ ಧನ್ಯವಾದ೦ಗೊ.

  5. ಪಿತ್ರು ಪಕ್ಷದ ಈ ಸುಸಂಧರ್ಭಲ್ಲಿ ಪಿತ್ರುಕಾರ್ಯಗಳ ಬಗ್ಗೆ ಸುಧೀರ್ಗವಾಗಿ ಸಮಾಜಕ್ಕೆ ಗರುಡಪುರಾಣದ ಮೂಲಕ ತಿಳಿಸಿದ ನಿಂಗೊಗೆ ಧನ್ಯವಾದ. ಹಾಂಗೇ ಸಮಸ್ತ ಹವ್ಯಕ ಭಾಂದವರಿಂಗೂ ದಸರಾ ಹಬ್ಬದ ಶುಭಾಷಯ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×