Oppanna.com

ಗರುಡ ಪುರಾಣ – ಅಧ್ಯಾಯ 01 – ಭಾಗ 01

ಬರದೋರು :   ಚೆನ್ನೈ ಬಾವ°    on   11/07/2013    15 ಒಪ್ಪಂಗೊ

ಚೆನ್ನೈ ಬಾವ°

ಮರಣ / ಮೃತ್ಯು ಹೇಳಿರೆ ಎಂತರ?ಕುಳಮರ್ವ ಶ್ರೀ ವೆಂಕಪ್ಪ ಮಾವ° ಬರದ ‘ಪುನರ್ಜನ್ಮ – ಮರಣೋತ್ತರ ಜೀವನ’ ಪುಸ್ತಕಲ್ಲಿ ಈ ಬಗ್ಗೆ ಲಾಯಕ ವಿಮರ್ಶಾತ್ಮಕ ಶುದ್ದಿ ಬರದ್ದವು. ಕಣ್ಣುಗೊಕ್ಕೆ ಕಾಂಬ ಸ್ಥೂಲ ಶರೀರಂದ ಜೀವಾತ್ಮನ ಬೇರ್ಪಡಿಕೆಯೇ ಮರಣ. ಮರಣಂದ ಮತ್ತೆ ಇನ್ನೊಂದು ವಿಧದ ನವೀನ ಜೀವನ ಆರಂಭ ಅಪ್ಪಲಿದ್ದು. ನೂತನ ಜೀವನದ ಪ್ರವೇಶದ್ವಾರ ಜನನ. ಜನನ ಮರಣಂಗೊ ಮಾಯೆಯ ಇಂದ್ರಜಾಲಂದ ಉಂಟಾವುತ್ತು. ಸಂಸಾರ ಹೇಳ್ವ ರಂಗಸ್ಥಳಕ್ಕೆ ಪ್ರವೇಶದ್ವಾರ ಜನನ. ಸಂಸಾರ ಸಾಗರಂದ ನಿರ್ಗಮನ ದ್ವಾರ ಮರಣ. ಮರಣವೇ ಜೀವನ, ಜೀವನವೇ ಮರಣ. ಸೂಕ್ಷ್ಮ ದೃಷ್ಟಿಂದ ಪರಿಶೀಲಿಸಿದರೆ ಆರೂ ಹುಟ್ಟುತ್ತವಿಲ್ಲೆ, ಆರೂ ಸಾಯುತ್ತವೂ ಇಲ್ಲೆ. ಶರೀರಲ್ಲಿಪ್ಪ ಚೈತನ್ಯ (ಬ್ರಹ್ಮ) ಶಾಶ್ವತ.
ಒಂದು ಮನೆಂದ ಹೆರಟು ಇನ್ನೊಂದು ಮನೆಯ ಪ್ರವೇಶಿಸುತ್ತಾಂಗೆ ಜೀವಾತ್ಮ° ಹೊಸ ಅನುಭವಕ್ಕಾಗಿ ಹಿಂದಾಣ ಶರೀರವ ಬಿಟ್ಟು ಹೊಸತಾದ ಇನ್ನೊಂದು ಶರೀರವ ಪ್ರವೇಶಿಸುತ್ತ°. ಗೀತೆಲಿ ಹೇಳಿದಾಂಗೆ “ವಾಸಾಂಸಿ ಜೀರ್ಣಾನಿ ಯಥಾ ವಿಹಾಯ । ನವಾನಿ ಗೃಹ್ಣಾತಿ ನರೋಪರಾಣಿ ॥ ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ॥(ಭ.ಗೀ ೨.೨೨) ಒಬ್ಬ° ಮನುಷ್ಯ° ಹಳೆ ವಸ್ತ್ರವ ಬಿಟ್ಟು ಹೊಸ ವಸ್ತ್ರವ ಸ್ವೀಕರುಸುವ ಹಾಂಗೆ ಜೀವಾತ್ಮ° ತನಗೆ ಉಪಾಧಿಯಾದ ಆಶ್ರಯವಾಗಿದ್ದ ಜರಾಜೀರ್ಣವಾದ ಹಳೆ ಶರೀರವ ಬಿಟ್ಟಿಕ್ಕಿ ಹೊಸ ಶರೀರವ ಪಡಕ್ಕೊಳ್ಳುತ್ತ°. ಜೀವಾತ್ಮ ಎಂದಿಂಗೂ ಶಾಶ್ವತ° – ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ । ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ ॥ (ಭ.ಗೀ.೨.೨೩) – ಆತ್ಮವ ಶಸ್ತ್ರಂಗೊ ತುಂಡು ತುಂಡಾಗಿ ಕತ್ತರುಸವು, ಅಗ್ನಿಯು ಸುಡ, ನೀರು ಚಂಡಿಮಾಡ, ಮತ್ತೆ , ಗಾಳಿಯೂ ಒಣಗುಸ.
ಪ್ರತಿಯೊಬ್ಬ ಜೀವನೂ ತನ್ನ ಕರ್ಮದ ಫಲಾನುಭವಕ್ಕಾಗಿ ಶರೀರವ ಸೇರುತ್ತ°. ಆ ಶರೀರಲ್ಲಿ ನಿರ್ದಿಷ್ಟವಾದ ಫಲಾನುಭವದ ಮತ್ತೆ ಅಂವ° ಅಲ್ಲಿಂದ ಹೆರಡುತ್ತ°. ಹೀಂಗೆ ಮೃತ್ಯು ಅನಿವಾರ್ಯ ಘಟನೆಯಾಗಿದ್ದು. ವಿವೇಕಿಗೊಕ್ಕೆ, ಜ್ಞಾನಿಗೊಕ್ಕೆ ಮೃತ್ಯು ಒಂದು ಭಯ ಅಲ್ಲ. ಮರಣವು ನವೀನ ಜೀವನದ ಪ್ರವೇಶ ಹೇಳಿ ಅವಕ್ಕೆ ಗೊಂತಿದ್ದು. ಸರ್ವೋತ್ತಮ ಸರ್ವಾತಿಶಾಯಿ ಆತ್ಮ° – ಪರಮಾತ್ಮ°. ಅವನೇ ಪುರುಷೋತ್ತಮ°. ಅಂವ° ಮೃತ್ಯು ವಿರಹಿತ°. ದೇಶ, ಕಾಲ, ಕಾರಣರಹಿತ°. ಶರೀರ, ಇಂದ್ರಿಯ, ಪ್ರಾಣ, ಮನಸ್ಸುಗೊಕ್ಕೆ ಆಶ್ರಯದಾತ°. ಭೌತಿಕ ವಸ್ತುಗಳಿಂದ ಸಿದ್ಧವಾದ ಶರೀರಕ್ಕೆ ಮಾಂತ್ರ ಮೃತ್ಯು. ಜನನ ಮರಣಂಗಳಿಂದ ಮುಕ್ತಿ ಸಿಕ್ಕೆಕ್ಕಾರೆ ಕರ್ಮಫಲಲ್ಲಿ ಆಶೆ ಇಲ್ಲದ್ದೆ ಇರೆಕು. ಕರ್ಮದ ಫಲಸ್ವರೂಪವೇ ಶರೀರ. ರಾಗ-ದ್ವೇಷಂಗಳ ಬಿಟ್ಟವನೇ ಮೋಕ್ಷಕ್ಕೆ ಅರ್ಹ°. ಆದರೆ ಅದು ಅಷ್ಟು ಎಳ್ಪವೇ?!
ಶರೀರಕ್ಕೆ ಮೂಲಕಾರಣ ಅಜ್ಞಾನ. ತಾನು ಆರು ಹೇದು ತಿಳಿಯದ್ದಿಪ್ಪದೇ ಅಜ್ಞಾನದ ಮೂಲ. ಎಲ್ಲಿಂದ ಈ ಶರೀರ ಬಂದು ಸೇರಿತ್ತು? ಮುಂದೆ ಎಲ್ಲಿಗೆ? ಅಥವಾ ಪಂಚಕೋಶಲ್ಲಿ ವಿಹರುಸುವ ಜೀವ° ಅವುಗಳಿಂದ ಪ್ರತ್ಯೇಕವಾಗಿ ಇದ್ದ° ಹೇಳ್ವ ಜ್ಞಾನ ಇಲ್ಲದ್ದಿಪ್ಪದೇ ಅಜ್ಞಾನ. ಆತ್ಮವು ಶಬ್ದ, ಸ್ಪರ್ಶ, ರೂಪ, ರಸ, ಗಂಧಂಗಳಿಂದ ವಿರಹಿತವಾದ್ದು. ಅದು ಸ್ವಯಂ ನಿರಾಕಾರ ನಿರ್ಗುಣವಾಗಿದ್ದು ಪ್ರಕೃತಿಂದ ಪ್ರತ್ಯೇಕವಾದ್ದು. ಆತ್ಮವು ಸ್ಥೂಲ, ಸೂಕ್ಷ್ಮ, ಕಾರಣ ಶರೀರಂಗಳಿಂದಲೂ, ಅನ್ನಮಯ , ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ ಕೋಶಂಗಳಿಂದಲೂ ಪ್ರತ್ಯೇಕವಾಗಿಪ್ಪದು. ಸ್ವಯಂಪ್ರಕಾಶ ಆತ್ಮದ ಸಾಕ್ಷಾತ್ಕಾರ ಲಭಿಸಿರೆ ಕಾಲದ ವಶಂದ ಬಿಡುಗಡೆ ಹೊಂದಲೆಡಿಗು.
ಶುಕ್ರಶೋಣಿತ ಸಂಯೋಗಾತ್ ಪಿಂಡೋತ್ಪತ್ತಿಃ ಪ್ರಜಾಯತೇ । (ಗ.ಪು) ॥ – ಸ್ತ್ರೀಯ ಶೋಣಿತ, ಪುರುಷನ ಶುಕ್ರ ಇವುಗಳ ಸಮ್ಮಿಶ್ರಣ ಕ್ರಿಯೆಂದ ಗರ್ಭೋತ್ಪತ್ತಿ ಉಂಟಾವ್ತು. ಇದು ಗರ್ಭದ ಪೂರ್ವ ರೂಪ. ಸುಕೃತಂ ದುಷ್ಕೃತಂ ವಾಪಿ ಭುಕ್ತ್ವಾಪೂರ್ವಂ ಯಥಾರ್ಚಿತಮ್ । ಕರ್ಮಯೋಗಾತ್ತದಾ ತಸ್ಯ ಕಶ್ಚಿದ್ವಾಧಿಃ ಪ್ರಜಾಯತೇ ॥ ಪೂರ್ವಾರ್ಜಿತ ಪಾಪ ಕರ್ಮ ದುಷ್ಕರ್ಮಂಗೊಕ್ಕೆ ಅನುಗುಣವಾಗಿ ಫಲವ ಅನುಭವಿಸಿಯಾದಪ್ಪಗ  ಕರ್ಮಸಂಬಂಧಂದ ಜೀವಿಗೆ ಯಾವುದಾದರೊಂದು ವ್ಯಾಧಿ ಉಂಟಾವುತ್ತು. ಶರೀರಲ್ಲಿ ಉಂಟಪ್ಪ ವ್ಯಾಧಿಗಳಿಂದ ನಾಡಿಗಳ ಶಕ್ತಿ ಕ್ಷೀಣಿಸುತ್ತು. ಅದರ ಪರಿಣಾಮವಾಗಿ ನಾಡಿಗಳ ಸಂಕೋಚ, ವಿಕಾಸ ಗತಿಗೊ ತಮ್ಮ ನಿತ್ಯದ ಕ್ರಮಂದ ವಿರಹಿತವಾವುತ್ತು. ನಾಡಿಗಳ ಕ್ರಮ ತಪ್ಪಿದ ಸಂಕೋಚ ವಿಕಾಸಂದ ಒಳಾಣ ಶ್ವಾಸೋಚ್ಛಾಸ ತಡೆ ಉಂಟಾವುತ್ತು. ಇದರಿಂದ ಚೇಷ್ಟಾ ವಿರಹಿತನಾಗಿ ಮರಣವ ಹೊಂದುತ್ತ°. ಅಷ್ಟಪ್ಪಗ ಅವನ ಇಂದ್ರಿಯಂಗೊ ಸಂಸ್ಕಾರಂಗೊ ಹಿಂಬಾಲುಸುತ್ತು. ತನ್ನ ಪೂರ್ವಜನ್ಮ ಸಂಸ್ಕಾರಂಗಳೊಟ್ಟಿಂಗೆ ಅವನ ಕರ್ಮಫಲವ ಅನುಭವುಸಲೆ ಸ್ಥೂಲಶರೀರಂದ ಹೆರಡುತ್ತ°. ಮದಲಾಣ ಶರೀರವ ಕಳಕ್ಕೊಂಡ ಅಂವ° ಕೆಲವು ಕಾಲ ವಾಯುವಿನೊಟ್ಟಿಂಗೆ ಸೂಕ್ಷ್ಮ ಶರೀರಂದ ನೆಲೆಸುತ್ತ°.
ವಾಯುಮಂಡಲಲ್ಲಿ ಈ ತೆರದ ಸಾವಿರಾರು ಸೂಕ್ಷ್ಮಶರೀರಂಗೊ ನೆಲೆಸಿದ್ದು. ಸೂಕ್ಷ್ಮ ಶರೀರವು ತನ್ನ ಹಿಂದಾಣ ಅನುಭವದಾಂಗೆ ಪ್ರಾಣಮಯವಾಗಿಯೇ ಇದ್ದು ವಾಯುಮಂಡಲಲ್ಲಿ ಇರುತ್ತು. ಅದನ್ನೇ ‘ಪ್ರೇತ’ ಹೇದು ಹೇಳುವದು. ಪ್ರೇತ ಶರೀರಲ್ಲಿಪ್ಪಗ ಅದರ ಅನುಭವವೇ ಬೇರೆ ವಿಧವಾಗಿರುತ್ತು.
ತ್ವಙ್ಮಾಂಸರುಧಿರಸ್ನಾಯುಮೇಧಾಮಜ್ಜಾಸ್ಥಿ ಸಂಕುಲಮ್ |
ಪೂರ್ಣಂ ಮೂತ್ರಪುರೀಷಾಭ್ಯಾಂ ಸ್ಥೂಲಂ ನಿಂದ್ಯಮಿದಂ ವಪುಃ  ||
ತ್ವಕ್ (ಚರ್ಮ), ಮಾಂಸ. ನೆತ್ತರು, ಸ್ನಾಯು, ಮೇಧಸ್ಸು, ಮಜ್ಜಾ, ಎಲುಬು, ಮಲ, ಮೂತ್ರಂಗಳಿಂದ ಕೂಡಿಪ್ಪದು ಸ್ಥೂಲ ದೇಹ.
ವಾಗಾದಿ ಪಂಚ ಶ್ರವಣಾದಿ ಪಂಚ ಪ್ರಾಣಾದಿ ಪಂಚ ಅಭ್ರಮುಖಾನಿ ಪಂಚ |
ಬುಧ್ವಾದ್ಯವಿದ್ಯಾಪಿ ಚ ಕಾಮಕರ್ಮಣೀ ಪುರ್ಯಷ್ಟಕಂ ಸೂಕ್ಷ್ಮ ಶರೀರಮಾಹುಃ ||
ಸೂಕ್ಷ್ಮ ಶರೀರ ಹೇಳಿರೆ- ವಾಕ್ ಆದಿ ಐದು ಕರ್ಮೇಂದ್ರಿಯಂಗೊ –  (ವಾಕ್, ಪಾಣಿ, ಪಾದ, ಪಾಯು, ಉಪಸ್ಥ), ಶ್ರವಣಾದಿ ಐದು ಜ್ಞಾನೇಂದ್ರಿಯಂಗೊ –  (ತ್ವಕ್, ಚಕ್ಷು, ಶ್ರೋತ್ರ, ಜಿಹ್ವಾ, ಪ್ರಾಣ), ಪ್ರಾಣಾಪಾನಾದಿ ಪಂಚ ಪ್ರಾಣಂಗೊ – (ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ), ಆಕಾಶಾದಿ ಪಂಚ ಭೂತಂಗೊ – (ಪೃಥಿವಿ, ನೀರು, ಅಗ್ನಿ, ವಾಯು, ಆಕಾಶ),  ನಾಕು ಅಂತಃಕರಣಂಗೊ – (ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ), ಅವಿದ್ಯಾ, ಕಾಮ, ಕರ್ಮ   ಇವುಗಳ ಸಮುದಾಯವೇ ಸೂಕ್ಷ್ಮ ಶರೀರ. ಇದನ್ನೇ ಲಿಂಗ ಶರೀರ ಹೇಳಿಯೂ ಹೇಳ್ತದು. ಕರ್ಮ ಫಲವ ಅನುಭವುಸುವದು ಇದು.
ನಮ್ಮ ಕಣ್ಣುಗೊಕ್ಕೆ ಗೋಚರುಸುವ ಸ್ಥೂಲ ಶರೀರ ಪೃಥ್ವಿ, ಜಲ, ತೇಜಸ್ಸು, ವಾಯು, ಆಕಾಶ  ಹೇಳ್ವ ಭೌತಿಕ ವಸ್ತುಗಳಿಂದ ಉಂಟಾದ್ದು. ದೇವತೆಗಳ ಶರೀರ ತೈಜಸವಾದ್ದು. ಅವರಲ್ಲಿ ಅಗ್ನಿತತ್ವ ಪ್ರಧಾನವಾಗಿಪ್ಪದು. ಜಲಚರ ಜೀವಿಗಳಲ್ಲಿ ಜಲತತ್ವಕ್ಕೆ ಪ್ರಾಧಾನ್ಯ. ಪಕ್ಷಿಗಳಲ್ಲಿ ಆಕಾಶತತ್ವ ಅಧಿಕ. ಶರೀರಲ್ಲಿಪ್ಪ ಕಠಿಣತೆ ಪಾರ್ಥಿವಾಂಸಂದ ಬಪ್ಪದು. ಶರೀರಲ್ಲಿಪ್ಪ ಉಷ್ಣತೆ ಅಗ್ನಿತತ್ವಂದ ಉಂಟಪ್ಪದು. ಶರೀರದ ಸ್ಪಂದನ ವಾಯುತತ್ವಂದ ಉಂಟಪ್ಪದು. ಜೀವಾತ್ಮ ಈ ತರದ ಪಂಚತತ್ವಂಗಳಿಂದ ಬೇರೆಯೇ ಆಗಿದ್ದ°. ಈ ಪಂಚತತ್ವಂಗೊ ಪ್ರಕೃತಿಯ ಅಕ್ಷಯ ಕೋಶಂದ ಉಂಟಾದ್ದು. ಶರೀರಲ್ಲಿ ಒಟ್ಟಿಂಗೆ ನೆಲೆಸಿದ ಈ ತತ್ವಂಗೊ ಮರಣಾ ನಂತರ ಬೇರೆ ಬೇರೆ ಆಗಿ ತಮ್ಮ ತಮ್ಮ ಮೂಲ ತತ್ವಂಗಳಲ್ಲಿ ವಿಲೀನ ಆವ್ತು. ಪಾರ್ಥಿವ ತತ್ವ ತನ್ನ ಮೂಲವಾದ ಭೂಮಿಲಿ ಸೇರಿಗೊಳ್ತು.
ಮೃತ ಶರೀರವ ಮೀಶಿಕ್ಕಿ ಮತ್ತೆ ಹೊಸ ವಸ್ತ್ರವ ಮುಸುಕಿ ಶ್ಮಶಾನ ಭೂಮಿಗೆ ತತ್ತು. ಅಲ್ಲಿ ಹೇಳ್ವ ಮಂತ್ರಂಗಳಲ್ಲಿ ಆ ತತ್ವಂಗಳೊಟ್ಟಿಂಗೆ ವಿಲೀನವಾಗಲಿ ಹೇಳ್ವ ಅರ್ಥಲ್ಲಿ. ಮತ್ತೆ ಚಿತೆಗೆ ಅಗ್ನಿಸ್ಪರ್ಶ ಮಾಡುವದು. ಪ್ರಾಣಸಹಿತನಾದ ಜೀವಾತ್ಮ° ಈ ರೀತಿಲಿ ಶರೀರಂದ ಬೇರೆ ಆಗಿ ಬಿಟ್ಟ ಮತ್ತೆ ತನ್ನ ಮುಂದಾಣ ಯಾತ್ರೆಯ ಸುರುಮಾಡುವದು. ಇಂದ್ರಿಯಂಗೊ ಅವುಗಳ ಅಧಿಷ್ಥಾನ ದೇವತೆಗಳ ಅಧೀನಂದ ವಿರಹಿತವಾದಪ್ಪಗ ಅವುಗಳ ಕ್ರಿಯೆಗೊ ನಿಂದು ಹೋವುತ್ತು. ದೃಷ್ಟಿಯು ಸೂರ್ಯನಲ್ಲಿ ವಿಲೀನ ಆವುತ್ತು, ವಾಣಿಯು ಅಗ್ನಿಲಿ ವಿಲೀನ ಆವುತ್ತು, ಪ್ರಾಣವು ವಾಯುವಿಲ್ಲಿ ವಿಲೀನ ಆವುತ್ತು, ಶ್ರೋತ್ರಂಗೊ ದಿಕ್ಕುಗಳಲ್ಲಿ, ಶರೀರವು ಭೂಮಿಲಿ ವಿಲೀನಗೊಳ್ಳುತ್ತು. ರಕ್ತವು ಜಲಲ್ಲಿ ವಿಲೀನ ಆವುತ್ತು.
ವಾಯು ಪ್ರಾಣಶಕ್ತಿ ಆಗಿದ್ದು. ಇಂದ್ರಿಯಂಗೊಕ್ಕೆ ಶಕ್ತಿ ಪ್ರಾಣಂದಲೇ ಹರುದು ಬಪ್ಪದು. ಶರೀರದ ಚಲನೆಗೆ ಕಾರಣ ಪ್ರಾಣವೇ ಆಗಿದ್ದು. ಅನ್ನವು ಪಚನ ಅಪ್ಪದು ಪ್ರಾಣಂದ, ರಕ್ತಸಂಚಾರ, ಮಲಮೂತ್ರ ವಿಸರ್ಜನೆ ಪ್ರಾಣದ ಕಾರ್ಯಂಗೊ. ಮರಣ ಕಾಲಲ್ಲಿ ಉದಾನ ವಾಯು ಸೂಕ್ಷ್ಮಶರೀರವ ಸ್ಥೂಲ ಶರೀರಂದ ಪ್ರತ್ಯೇಕಿಸುತ್ತು. ಉದಾನ ವಾಯುವು ಎಲ್ಲ ಪ್ರಾಣಂಗೊಕ್ಕೂ ಆಶ್ರಯ ಆಗಿದ್ದು. ಭೋಜನವ ಉದರದೊಳ ತಳ್ಳುವದು ಉದಾನ ವಾಯುವಿನ ಕೆಲಸ. ಆಯಾಯ ಇಂದ್ರಿಯಂಗಳ ಮೂಲಕ ಶಬ್ದ, ಸ್ಪರ್ಶ, ರೂಪ, ರಸ, ಗಂಧಂಗಳ ಹೀರಲೆ ಪ್ರಾಣವಾಯು ಸಹಕರುಸುತ್ತು. ಸ್ಥೂಲಪ್ರಾಣವು ಶ್ವಾಸೋಚ್ಛ್ವಾಸಂಗಳಲ್ಲಿ ಗೋಚರುಸುತ್ತು. ಜೀವನ ಶಕ್ತಿ ಸೂಕ್ಷ್ಮಪ್ರಾಣಂದ. ಗಾಢ ನಿದ್ರೆಲಿಪ್ಪಗ ಆನಂದಮಯ ಕೋಶಲ್ಲಿ ಜೀವ ಪ್ರವೇಶಿಸುವಾಗ ಆನಂದದ ಬಾಗಿಲ ಈ ವಾಯು ತೆಗವದು. ಉದಾನ ವಾಯುವಿನ ನಿವಾಸ ಸ್ಥಾನ ಕಂಠ.
ಪ್ರಾಣ, ಮನಸ್ಸು, ಇಂದ್ರಿಯ, ಸ್ಥೂಲ ಶರೀರಂಗೊಕ್ಕೆ ಆತ್ಮವೇ ಆಧಾರ  ಆಗಿದ್ದು. ಹೃದಯದ ಅಂತರಾಳಲ್ಲಿ ಜೀವಾತ್ಮ ನೆಲೆಸಿರುತ್ತ°.
ಜೀವನ್ಮುಕ್ತ ಯೋಗಿಗೆ ಪುನರ್ಜನ್ಮ ಇಲ್ಲೆ. ಭಿನ್ನ ಭಿನ್ನ ಲೋಕಂಗಳ ಸಂಪರ್ಕವೂ ಅವಂಗೆ ಇಲ್ಲೆ. ಯೋಗಿಗಳ ಮನಸ್ಸು, ಪ್ರಾಣ ಬ್ರಹ್ಮಲ್ಲಿ ವಿಲೀನ ಆವುತ್ತು. ಅಂಬಗ ಅವರ ಜೀವಾತ್ಮ ಪರಬ್ರಹ್ಮಲ್ಲಿ ವಿಲೀನಗೊಳ್ಳುತ್ತು. ವೈರಾಗ್ಯದ ಮೂಲಕ ರಾಗದ್ವೇಷ ವಿರಹಿತನಾದ ಯೋಗಿ ಮರಣಾನಂತರ ಬ್ರಹ್ಮಲ್ಲಿ ವಿಲೀನನಾವುತ್ತ°. ಆದರೆ ಇಂತಹ ಯೋಗಿಗೊ ಅತಿ ದುರ್ಲಭ. ಗೀತೆಲಿ ಭಗವಂತ° ಹೇಳಿದಾಂಗೆ – ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ಯತತಿ ಸಿದ್ಧಯೇ । ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ ॥ (ಭ.ಗೀ. ೭.೩) – ಸಾವಿರಾರು ಜನರಲ್ಲಿ ಆರೋ ಒಬ್ಬ° ಸಾಧನೆಗೆ ಪ್ರಯತ್ನಿಸುವದಿಕ್ಕು. ಹಾಂಗೆ ಪ್ರಯತ್ನಿಸುವವರಲ್ಲಿ ಆರೋ ಒಬ್ಬ° ಮಾಂತ್ರ ಎನ್ನ ತತ್ತ್ವತಃ (ವಾಸ್ತವಿಕವಾಗಿ, ನಿಜವಾಗಿ)  ಅರ್ಥಮಾಡಿಗೊಳ್ಳುತ್ತ° – ಅರ್ಥಾತ್, ಮೋಕ್ಷಸಾಧನೆಯ ಪಡೆತ್ತ°.
ಆತ್ಮದ ಕುರಿತು ಕಿರುಪರಿಚಯ –
ಆತ್ಮವು ಎರಡು ವಿಧ. ಒಂದು ವ್ಯಕ್ತಿಗತ ಆತ್ಮಾ. ಇನ್ನೊಂದು ಪರಮಾತ್ಮ. ವ್ಯಕ್ತಿಗತ ಆತ್ಮ ಸರ್ವೋತ್ತಮ ಆತ್ಮದ (ಪರಮಾತ್ಮನ) ಪ್ರತಿಬಿಂಬ ಪ್ರತಿಮೂರ್ತಿ. ಒಬ್ಬನೇ ಆದ ಸೂರ್ಯ° ಭಿನ್ನ ಭಿನ್ನ ಜಲಪಾತ್ರೆಲಿ ಬೇರೆ ಬೇರೆಯಾಗಿ ಪ್ರತಿಬಿಂಬಿಸುತ್ತಾಂಗೆ ಪರಮಪುರುಷನ ಪ್ರತಿಬಿಂಬ ಭಿನ್ನ ಭಿನ್ನ ವ್ಯಕ್ತಿಗಳ ಅಂತಃಕರಣಲ್ಲಿ ಪ್ರತಿಬಿಂಬಿಸುವಾಗ ಆ ಪ್ರತಿಬಿಂಬವೇ ಜೀವ ಎನಿಸುತ್ತ°.
ಆತ್ಮವು ಚೈತನ್ಯಮಯ. ಅದು ಭೌತಿಕ ಪದಾರ್ಥ ಅಲ್ಲ. ಅದು ಬುದ್ಧಿರೂಪಲ್ಲಿಯೇ ಶರೀರಲ್ಲಿ ನೆಲೆಸಿದ್ದು. ಪ್ರತಿಬಿಂಬಲ್ಲಿ ಲಿಂಗ ಶರೀರಲ್ಲಿ ನೆಲೆಸಿದ ಪೂರ್ವಜನ್ಮಂಗಳ ಸಂಸ್ಕಾರಕ್ಕೆ ತಕ್ಕ ಹಾಂಗೆ ನವೀನ ಕ್ರಿಯೆಗೊ ರೂಪೀಕರಿಸಲ್ಪಡುತ್ತು. ಮರಣಾನಂತರ ಅಂವ ಯಾವುದೇ ಯೋನಿಗೆ ದಾಂಟಿರೂ ಇಂದ್ರಿಯ, ಮನಸ್ಸು, ಪ್ರಾಣ, ಸಂಸ್ಕಾರ, ವಾಸನಾ ಭಾವನೆಗೊ ಅವನ ಹಿಂಬಾಲುಸುತ್ತು.
ಅಭಿಮಾನ, ಅಹಂಕಾರ, ಲೋಭ, ಕಾಮ, ರಾಗ, ದ್ವೇಷಂಗಳಿಂದ ಜೀವಾತ್ಮ° ಅಶುದ್ಧನಾವುತ್ತ°. ಪರಿಣಾಮವಾಗಿ ಅಂವ ಸೀಮಿತನಾವುತ್ತ°, ಅಲ್ಪಜ್ಞ, ಅಲ್ಪ ಶಕ್ತಿವಂತನಾವುತ್ತ°. ಪರಮಾತ್ಮ°- ಅನಂತ°, ಅವ್ಯಯ°, ನಿರ್ವಿಕಾರ°, ಸರ್ವಶಕ್ತನಾಗಿದ್ದ°. ಜ್ಞಾನಸ್ವರೂಪನೂ, ಸಚ್ಚಿದಾನಂದ ಸ್ವರೂಪನೂ ಅವನೇ.
ಅಜ್ಞಾನಂದ ಜೀವಾತ್ಮ° ಬಂಧನಲ್ಲಿ ಸಿಲುಕಿರುತ್ತ°. ಹಾಂಗಾಗಿ ಮನಸ್ಸು, ಶರೀರ, ಇಂದ್ರಿಯಂಗಳ ನಿಯಮಿತ ಗಡಿಯೊಳ ಮಾಂತ್ರ ಸಂಚರುಸುತ್ತ°. ಇದಕ್ಕೆ ಪ್ರಕೃತಿಯ ಮಾಯೆ/ತ್ರಿಗುಣಂಗೊ ಕಾರಣ. ಜೀವಾತ್ಮ° ಮನಸ್ಸು ಮತ್ತು ಇಂದ್ರಿಯೊಂಗೊಕ್ಕೆ ಪ್ರೇರಣೆಯ ಕೊಡುತ್ತ°. ಇದರಿಂದ ಅಂವ ಕರ್ಮಕ್ಕೆ ತೊಡಗುತ್ತ°.
ಜೀವಾತ್ಮ° ಪ್ರಾಣ ಮನಸ್ಸು ಇಂದ್ರಿಯಂಗೊಳಿಟ್ಟಿಂಗೆ ಮದಲಾಣ ಶರೀರವ ಬಿಡುತ್ತ°. ಮತ್ತೆ ಒಂದು ಹೊಸ ಶರೀರವ ಧರುಸುತ್ತ°. ಜೀವಾತ್ಮ ಮನಸ್ಸು, ಪ್ರಾಣ, ಇಂದ್ರಿಯಸೂಕ್ಷ್ಮ ಭೂತಂಗಳ ಒಟ್ಟಿಂಗೆ ಶರೀರವ ಬಿಡುತ್ತ°, ಇನ್ನೊಂದು ಶರೀರವ ಪ್ರವೇಶಿಸುತ್ತ°.
ಮರಣಾನಂತರ ಶರೀರವ ಬಿಟ್ಟ ಜೀವಾತ್ಮಂಗೆ ಪ್ರೇತ ಹೇದು ಹೆಸರು. ಈವರೇಂಗೆ ಗೋಚರವಾಗಿದ್ದ ಸ್ಥೂಲ ಶರೀರವ ಬಿಟ್ಟವ° ಹೇದು ಅರ್ಥ. ಕರ್ಮಫಲಕ್ಕನುಸಾರವಾಗಿ ಇನ್ನೊಂದು ಶರೀರವ ಪ್ರವೇಶಿಸಿಕ್ಕಾರೆ ಕರ್ಮಫಲವ ಅನುಭವಿಶಿ ಆಯೇಕು. ಅದಕ್ಕೆ ಕೆಲವು ಕಾಲ ಸಮಯ ಹಿಡಿತ್ತು. ಕರ್ಮಫಲವ ಅನುಭವುಸುಲೆ ಪರಲೋಕಯಾತ್ರೆ ಇಲ್ಲಿಂದ ಸುರುವಾವ್ತು. ಜೀವವು ಹತ್ತು ದಿನಂಗಳ ವರೇಂಗೆ ತನ್ನ ಪರಿಚಿತ ಮನೆಲಿಯೇ (ಮನೆಪರಿಸರಲ್ಲೇ) ವಾಸಿಸುತ್ತು. ಈ ಹತ್ತು ದಿನಂಗಳಲ್ಲಿ ಪ್ರೇತದ ಸೂಕ್ಷ್ಮ ಶರೀರಕ್ಕೆ – ಲಿಂಗಶರೀರಕ್ಕೆ ಪ್ರತಿದಿನ ಸಾಕಾರ ರೂಪ ಉಂಟಾವ್ತು. ಹನ್ನೊಂದನೇ ದಿನ ಶರೀರಕ್ಕೆ ಆಕಾರವೂ ಪೂರ್ಣಗೊಳ್ಳುತ್ತು. ತಿಲೋದಕ, ಬಲಿ, ಪಿಂಡ ತರ್ಪಣಂಗಳಿಂದ ಲಿಂಗ ಶರೀರಕ್ಕೆ ಬಲವುಂಟಾವ್ತು. ಹನ್ನೊಂದನೇ ದಿನ ಜೀವಂಗೆ ಒಂದು ಸಾಕಾರವಾದ ಶರೀರ ಲಭಿಸುತ್ತು. ಅಲ್ಲಿಂದ ಯಮಲೋಕಕ್ಕೆ ಪ್ರಯಾಣ ಆರಂಭ. ಈ ಯಮಲೋಕ ದಾರಿ ಸುಲಭವಾದ್ದಲ್ಲ. ಅತ್ಯಂತ ಕಠಿಣ ಹಾಂಗೂ ಕ್ಲೇಶದಾಯಕವಾದ್ದು. ಪಿಂಡದಾನ, ಮಾಸಿಕಶ್ರಾದ್ಧ, ತರ್ಪಣ, ಬ್ರಾಹ್ಮಣಭೋಜನ ಇತ್ಯಾದಿ ಕ್ರಿಯೆಗಳಿಂದ ಕಷ್ಟವು ಕಮ್ಮಿ ಅಪ್ಪ ಸಾಧ್ಯತೆ ಇದ್ದು. ಜನನ ಮರಣ ಅಪರಿಹಾರ್ಯವಾದ್ದರಿಂದ ಬಂಧು ಮಿತ್ರರ  ರೋದನ ಆಕ್ರಂದನಂಗಳಿಂದ ಸತ್ತವಕ್ಕೆ ಏವ ಉಪಕಾರವೂ ಆವುತ್ತಿಲ್ಲೆ. ಪಿಂಡದಾನ ತಿಲತರ್ಪಣಂಗಳಿಂದ ಮಾತ್ರ ಅವಕ್ಕೆ ಸದ್ಗತಿ ಉಂಟಾವುತ್ತು.
ಇವಿಷ್ಟು ಕುಳಮರ್ವ ವೆಂಕಪ್ಪ ಮಾವನ ಪುಸ್ತಕಲ್ಲಿ ಹೇಳಿಪ್ಪದರ ಪೂರ್ವಪೀಠಿಕೆಯಾಗಿ ಅರ್ಥೈಸಿಕ್ಕಿ ಇನ್ನು ಗರುಡ ಪುರಾಣ ಭಾಗವ ಓದಲೆ ಸುರುಮಾಡುವೊ° –
~~~
 
ಓಂ ಶ್ರೀ ಗುರುಭ್ಯೋ ನಮಃ ।images
ಓಂ ಗಂ ಗಣಪತಯೇ ನಮಃ॥
ಸಂ ಸರಸ್ವತೈ ನಮಃ ।
ಓಂ ನಮೋ ಭಗವತೇ ವಾಸುದೇವಾಯ ।

ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ ।
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ ॥
 

ಅಥ ಗರುಡ ಪುರಾಣಂ  
ಉತ್ತರ ಖಂಡಃ । ಪ್ರಥಮೋಧ್ಯಾಯಃ ।
[ಪಾಪಿನಾಂ ಐಹಿಕಾ ಮುಷ್ಮಿಕ ದುಃಖ ನಿರೂಪಣಂ]                         

    [ಪಾಪಿಗಳ ಇಹ ಪರ ದುಃಖಂಗಳ ನಿರೂಪಣೆ]

ಧರ್ಮದೃಢಬದ್ಧಮೂಲೋ ವೇದಸ್ಕಂಧಃ ಪುರಾಣಶಾಖಾಢ್ಯಃ ।
ಕ್ರತುಕುಸುಮೋ ಮೋಕ್ಷಫಲೋ ಮಧುಸೂದನ ಪಾದಪೋ ಜಯತಿ ॥೦೧॥
ಧರ್ಮವೇ ದೃಢವಾದ ಬೇರಾಗಿಯೂ, ವೇದವೇ ಕಾಂಡವಾಗಿಯೂ, ಪುರಾಣಂಗಳೇ ಕೊಂಬೆಗೊಗಳಾಗಿಯೂ, ಯಜ್ಞಂಗಳೇ ಹೂಗಾಗಿಯೂ, ಮೋಕ್ಷವೇ ಫಲವಾಗಿಯೂ ಇಪ್ಪ ಮಧಸೂದನರೂಪೀ ವೃಕ್ಷಕ್ಕೆ ಜಯವಾಗಲಿ.
(ಧರ್ಮವೇ ಜಗತ್ತಿನ ಬೇರು, ಧರ್ಮಸ್ವರೂಪನೂ, ಧರ್ಮದ ಅಧಿಕಾರೀಯೂ ಆಗಿಪ್ಪ ಆ ಭಗವಂತನ ಭಕ್ತಿಂದ ಆರಾಧಿಸೆಕ್ಕಾದ್ದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ. ವೇದ, ಶಾಸ್ತ್ರ, ಪುರಾಣಂಗಳಲ್ಲಿ ವಿವರಿಸಲ್ಪಟ್ಟಿಪ್ಪ ಆ ಧರ್ಮವು ಪರಿಶುದ್ಧವಾದ್ದು. ಇಡೀ ವೇದವ ವಿಭಜಿಸಿ ನಾಲ್ಕು ವೇದಂಗಳಾಗಿಯೂ, ಆ ವೇದವ ಮತ್ತೆ ಭಗವಂತನ ಅನೇಕ ನಾಮರೂಪಂಗಳ ಆಧಾರಲ್ಲಿ ಹದಿನೆಂಟು ಪುರಾಣಂಗಳಾಗಿಯೂ ರಚಿಸಿದ್ದದು ಭಗವದ್ ಸ್ವರೂಪಿ ವೇದವ್ಯಾಸ°. ನೀತಿ ಶಾಸ್ತ್ರಂಗೊ, ಚಾರಿತ್ರಿಕ ಘಟನೆಗೊ, ಅಧ್ಯಾತ್ಮ ತತ್ತ್ವಂಗೊ, ಸಮಾಜದ ಧ್ಯೇಯಂಗೊ ದೃಷ್ಟಾಂತಂಗಳೊಟ್ಟಿಂಗೆ ವಿವರಿಸಲ್ಪಟ್ಟ ಪಠ್ಯ ಪುಸ್ತಕಂಗಳೇ ಈ ಪುರಾಣಂಗೊ. ಇನ್ನು,  ಯಜ್ಞಂಗಳಲ್ಲಿ ಮಾಡಲ್ಪಡುವ ಪಶು ವಧೆ ಆ ಮೂಕ ಪ್ರಾಣಿಗಳ ವಧೆ ಮಾಡುವದಕ್ಕೆ ಅಲ್ಲ. ಇದರ ತಿಳಿಯದ್ದೆ ಪೂರ್ವ ಕಾಲಲ್ಲಿ ಯಜ್ಞದ ಒಟ್ಟಿಂಗೆ ಪಶುವಧೆ ನಡಕ್ಕೊಂಡಿತ್ತಿದ್ದು. ಈ ಯಜ್ಞಂಗಳಲ್ಲಿ ಮಾಡೇಕ್ಕಾಗಿತ್ತಿದ್ದದು ಮೂಕ ಪಶುಗಳ ವಧೆ ಅಲ್ಲ. ಆಧ್ಯಾತ್ಮಿಕ ಭಾಶೆಲಿ ಅಸಲಿ ಪಶು ಹೇಳಿರೆ ಜೀವ ಭಾವ, ಅಹಂಕಾರ ಹೇದರ್ಥ. ಜೀವದೆಶೆಯೇ ಪಶುತ್ವ. ಈ ಅಹಂತ್ವವ ವಧಿಸುವದೇ ಯಜ್ಞಂಗಳಲ್ಲಿ ನಿಜವಾದ ಪಶುವಧೆ. ಅಜ್ಞಾನ ನಮ್ಮ ಪಶುಗಳನ್ನಾಗಿಸುತ್ತು. ಹಾಂಗಾಗಿ ಜ್ಞಾನದ ಮೂಲಕ ನಮ್ಮ ಅಜ್ಞಾನ ಪಶುವ ಬಲಿಕ್ಕೊಡೆಕ್ಕಾಗಿಪ್ಪದು. ಮೋಹದ ಕ್ಷಯವೇ ಮೋಕ್ಷ, ಹೇಳಿರೆ., ಸುಖದುಃಖಂಗಳೆರಡರ ಬಂಧನಂದ ಬಿಡುಗಡೆ ಹೊಂದುವದು. ಮಧುಸೂದನ ಹೇಳಿರೆ ಭಗವಂತನ ಹಲವು ಹೆಸರುಗಳಲ್ಲಿ ಒಂದು. ‘ಮಧು’ ಹೇಳ್ವ ರಾಕ್ಷಸನ ಕೊಂದವ° ಹೇಳಿ ಸರಳವಾದ ನೇರ ಅರ್ಥ. ಹಾಂಗೇ, ಮಧು ಹೇಳಿರೆ ಜೇನ (ಸಿಹಿ). ಎಲ್ಲೋರಿಂಗೂ ಸಿಹಿ / ಮಧುರವಾಗಿಪ್ಪದು ‘ಅಹಂ’. ಭಗವಂತ° ಆ ‘ಅಹಂ’ ನಾಶಮಾಡುತ್ತ°. ಹಾಂಗಾಗಿ ಅಂವ° ಮಧುಸೂದನ. ನಿಜವಾದ ಜ್ಞಾನಿ ಆದವನಲ್ಲಿ ‘ಅಹಂ’ ಇರ್ತಿಲ್ಲೆ. ಭಗವಂತನ ಬಗ್ಗೆ ನಿಜ ಜ್ಞಾನವ ಗಳುಸೇಕ್ಕಾದ್ದು ಮನುಷ್ಯನ ಕರ್ತವ್ಯ. ಹಾಂಗೆ ಆ ನಿರಂತರ ಪ್ರಯತ್ನಲ್ಲಿ ಮುಂದುವರುದಪ್ಪಗ, ಭಗವಂತ° ನಮ್ಮ ಆ  ‘ಅಹಂ’ನ  ನಾಶಮಾಡುತ್ತ°. ಅದು ನಾಶವಾಗದ್ದೆ ಭಗವಂತ° ನವಗೆ ದೊರಕುತ್ತನಿಲ್ಲೆ. ಇನ್ನು ಮಧುಸೂದನ ಪಾದಪಃ – ಭಗವಂತನ ಧರ್ಮದ ವೃಕ್ಷವಾಗಿ ವರ್ಣಿಸಲ್ಪಟ್ಟಿದು. ಮಧುಸೂದನ ವೃಕ್ಷ ಹೇಳಿ ಹೆಸರು. ವೃಕ್ಷ ತನ್ನ ಆಸರೆಯ ಬಯಸಿ ಬಪ್ಪೋರಿಂಗೆಲ್ಲ ನೆರಳ ಆಶ್ರಯವ ನೀಡುತ್ತು. ಹಾಂಗೇ ಧರ್ಮವೇ ಗಟ್ಟಿ ಬೇರುಗಳಾಗಿಪ್ಪ, ಧರ್ಮದ ವಿಚಾರವೇ ಬಲವಾಗಿಪ್ಪ ಆ ವೇದವೇ ಬುಡವಾಗಿಪ್ಪ (ಕಾಂಡ), ಮರಬೆಳದು ಶಾಖಗೊ ಉಂಟಾವ್ತಾಂಗೆ ಪುರಾಣಂಗಳೇ ಆ ಧರ್ಮವೃಕ್ಷದ ಶಾಖೆಗಳಾಗಿಪ್ಪ, ಆ ವೃಕ್ಷದ ಕುಸುಮವೇ ಎಲ್ಲರನ್ನೂ ತನ್ನೆಡೆ ಆಕರ್ಶಿಸುವ ಯಜ್ಞಂಗಳಾಗಿಪ್ಪ, ಮೋಕ್ಷ ಹೇಳ್ವ ಫಲವ ನೀಡುವ ಆ ಮಧುಸೂದನ ವೃಕ್ಷಕ್ಕೆ ಸರ್ವಥಾ ಜಯ ಹೇಳಿ ಇಲ್ಲಿ ವರ್ಣಿತವಾಗಿದ್ದು).
ನೈಮಿಷೇsನಿಮಿಷಕ್ಷೇತ್ರೇ ಋಷಯಃ ಶೌನಕಾದಯಃ ।
ಸತ್ರಂ ಸ್ವರ್ಗಾಯ ಲೋಕಾಯ ಸಹಸ್ರಸಮಮಾಸತ ॥೦೨॥
ದೇವತಾಕ್ಷೇತ್ರವಾದ ನಿಮಿಷಾರಣ್ಯಲ್ಲಿ ಶೌನಕಾದಿ ಋಷಿಗೊ ಸ್ವರ್ಗ ಪ್ರಾಪ್ತಿಗೆ ಬೇಕಾಗಿ ಸಹಸ್ರವರ್ಷ ನಡವ ಒಂದು ಸತ್ಯಯಾಗವ ಮಾಡಿಗೊಂಡಿತ್ತಿದ್ದವು.
(ನೈಮಿಷಾರಣ್ಯಲ್ಲಿ ಯಾವುದೇ ಚಂಚಲವಾದ ಮನಸ್ಸು ಪರಮಾತ್ಮನಲ್ಲಿ ಲಯವಾವ್ತು. ಹಾಂಗಾಗಿ ಪವಿತ್ರವಾದ ಈ ವನಪ್ರದೇಶ ವಿಷ್ಣುವಿನದ್ದು, ದೇವತೆಗಳ ಪ್ರಿಯ ಸ್ಥಳ ಹೇಳಿಯೂ, ಇದಕ್ಕೆ ನೈಮಿಷಾರಣ್ಯ ಹೇಳ್ವ ಹೆಸರು ಬಂತು. ಸ್ವರ್ಗ ಹೇಳಿರೆ ಸಂತೋಷ. ನಿರಂತರ ಸಂತೋಷ ಇಪ್ಪದು ಆ ಭಗವಂತನಲ್ಲೇ. ಹಾಂಗಾಗಿ ಸ್ವರ್ಗಾಯ ಲೋಕಾಯ ಹೇಳಿರೆ ಆ ಭಗವಂತನ ಲೋಕವ ಪಡವಲೆ ಬೇಕಾಗಿ ಹೇಳಿ ಅರ್ಥ. ಅರ್ಥಾತ್ ಮೋಕ್ಷಪ್ರಾಪ್ತಿಗಾಗಿ ಶೌನಕಾದಿ ಋಷಿಗೊ ಅಲ್ಲಿ ತಪಸ್ಸು ನಿರತರಾಗಿತ್ತಿದ್ದವು. ಅಂತಹ ಒಂದು ದಿನಲ್ಲಿ ದೀರ್ಘ ಕಾಲದ ಸತ್ರ (ಹಾಗ) ಮಾಡಿಗೊಂಡಿತ್ತಿದ್ದವು.)
ತ ಏಕದಾ ತು ಮುನಃ ಪ್ರಾತರ್ಹುತಹುತಾಗ್ನಯಃ ।
ಸತ್ಕೃತಂ ಸೂತಮಾಸೀನಂ ಪ್ರಪ್ರಚ್ಛುರಿದಮಾದರಾತ್ ॥೦೩॥
ಒಂದು ದಿನ ಋಷಿಗೊ ಉದಿಯಪ್ಪಾಣ ಆಹುತಿಗಳ ಮುಗಿಶಿಕ್ಕಿ , ತನ್ನ ಆಸನಲ್ಲಿ ಕೂದುಗೊಂಡಿತ್ತಿದ್ದ ಸೂತಪುರಾಣಿಕರ ಆದರಂದ ಉಪಚರಿಸಿ (ಸತ್ಕರಿಸಿ) ಕೇಳಿದವು.
(ಯಾಗ ಹೇಳಿರೆ ದಿನದ ೨೪ ಗಂಟೆಯೂ ಹೋಮ ಆಗಿಯೊಂಡು ಇರ್ತು ಹೇಳ್ವ ಕಲ್ಪನೆ ಅಲ್ಲ. ಹೊತ್ತು ಹೊತ್ತಿಂಗೆ ಹೋಮ ಆಗಿಕ್ಕಿ, ಮತ್ತೆ ಉಳುದ ಸಮಯಾವಕಾಶಲ್ಲಿ ಶಾಸ್ತ್ರಾಸ್ತ್ರ ಚಿಂತನೆಗೊ, ಮಂಥನಂಗೊ ನಡಕ್ಕೊಂಡಿರುತ್ತು.  ಹಾಂಗಿರ್ತಲ್ಲಿ ಒಂದಿನ ಅಲ್ಲಿ ಸೇರಿದ ಋಷಿಗೊ ಒಟ್ಟಿಂಗೆ ಕೂಡಿಗೊಂಡು (ಗುಂಪಾಗಿ) ಹೋಗಿ ಗುರುಗಳಾದ ಸೂತಪುರಾಣಿಕರತ್ರೆ ಹೋಗಿ ಅವರ ಸೇವೋಪಚಾರ ಮಾಡಿ ಅವರತ್ರಂದ ಹೆಚ್ಚಿನ ಜ್ಞಾನವ ತಿಳಿವಲೆ ಅವರತ್ರೆ ಕೇಳಿದವು.)
ಋಷಯಃ ಊಚುಃ
ಕಥಿತೋ ಭವತಾ ಸಮ್ಯಗ್ದೇವಮಾರ್ಗಃ ಸುಖಪ್ರದಃ ।
ಇದಾನೀಂ ಶ್ರೋತುಮಿಚ್ಛಾಮೋ ಯಮಮಾರ್ಗಂ ಭಯಪ್ರದಮ್ ॥೦೪॥
ತಥಾ ಸಂಸಾರದುಃಖಾನಿ ತತ್-ಕ್ಲೇಶಕ್ಷಯಸಾಧನಮ್ ।
ಐಹಿಕಾಮುಷ್ಮಿಕಾನ್-ಕ್ಲೇಶಾನ್-ಯಥಾವದ್ವಕ್ತುಮರ್ಹಸಿ ॥೦೫॥
ಋಷಿಗೊ ಹೇಳಿದವು – ಸುಖಕರವಾದ ದೇವಮಾರ್ಗದ ವಿಷಯವಾಗಿ ವಿವರವಾಗಿ ಲಾಯಕ ಅರ್ಥ ಅಪ್ಪಾಂಗೆ ಹೇಳಿದ್ದಿ. ಈಗ ಭಯಂಕರವಾದ (ಭಯ ಹುಟ್ಟುಸುವಂತ) ಯಮ ಮಾರ್ಗದ ವಿಷಯವ ಕೇಳ್ಳೆ ಇಚ್ಛೆಪಡುತ್ತೆಯೋ°.
ಸಂಸಾರ ದುಃಖಂಗಳನ್ನೂ ಮತ್ತೆ ಅದರ ಪರಿಹರಿಸುವ ವಿಧಾನವನ್ನೂ, ಇಹ ಪರ ಲೋಕಂಗಳಲ್ಲಿ ಉಂಟಪ್ಪ ಕಷ್ಟನೋವುಗಳ ಇಪ್ಪದರ ಇಪ್ಪಾಂಗೆ ಹೇಳ್ಳೆ ನಿಂಗೊ ಸಮರ್ಥರಾಗಿದ್ದಿ.
(ದೇವ ಮಾರ್ಗದ ವಿವರಣೆ ಗರುಡಪುರಾಣದ ಪೂರ್ವ ಭಾಗಲ್ಲಿ ಬಪ್ಪದು ಅಲ್ಲ. ಗರುಡ ಪುರಾಣದ ಪೂರ್ವಖಂಡಲ್ಲಿ ಇಪ್ಪದು – ದೇವಪೂಜಾವಿಧಿಗೊ, ದಾನ, ವ್ರತ, ನೀತಿ, ವ್ಯಾಕರಣ, ಮಂತ್ರ, ರಕ್ಷೆಗೊ, ಔಷಧಿಗೊ, ಸಾಮುದ್ರಿಕ ಶಾಸ್ತ್ರ, ನವರತ್ನಂಗೊ .. ಇತ್ಯಾದಿ ವಿಷಯಂಗೊ. ದೇವಮಾರ್ಗದ ವರ್ಣನೆ ಇಪ್ಪದು ಪದ್ಮ ಪುರಾಣದ ಭೂಮಿ ಖಂಡಲ್ಲಿ 14ನೇ ಅಧ್ಯಾಯದ 19-41 ಶ್ಲೋಕಂಗಳಲ್ಲಿ. ನಿಷ್ಠಾವಂತ ಸತ್ಕರ್ಮಿಯಾಗಿ ಪುಣ್ಯವಂತನಾದವಂಗೆ ದೊರಕುವ ಸುಖ ಮರಣ ಮತ್ತೆ ಅಂವ ಪರಲೋಕಕ್ಕೆ ಹೋಪ ದೇವಮಾರ್ಗ ಅಲ್ಲಿ ವರ್ಣಿಸಲ್ಪಟ್ಟಿದು. ಶಾರದಮ್ಮ ಧಾರ್ಮಿಕ ಪ್ರಕಾಶನದ ‘ಸಾಯಿಬೋಧಾಮೃತಾಗರ’ ಪುಸ್ತಕಲ್ಲಿ ಆ ವಿವರಿವ ಈ ರೀತಿಯಾಗಿ ವಿವರಿಸಿದ್ದವು – ಸತ್ಯ, ಶುಚಿತ್ವ, ಕ್ಷಮೆ, ಶಾಂತಿ, ತೀರ್ಥಸ್ನಾನ, ಪುಣ್ಯಕಾರ್ಯಂಗಳಿಂದ ಧರ್ಮವ ಪಾಲುಸುವವಂಗೆ ಉಂಟಪ್ಪ ಮರಣ – ಅವಂಗೆ ರೋಗ ಬತ್ತಿಲ್ಲೆ, ಅವನ ದೇಹಕ್ಕೆ ಪೀಡೆ, ಶ್ರಮ, ದುಃಖ ಇತ್ಯಾದಿಗೊ ಉಂಟಾವ್ತಿಲ್ಲೆ. ದಿವ್ಯರೂಪವ ಧರಿಸಿದ, ಸಂಗೀತವಿಶಾರದರಾದ ಗಂಧರ್ವರು, ವೇದಪಾರಾಯಣ ಮಾಡುವ ಬ್ರಾಹ್ಮರು ಅವನ ಹತ್ರೆ ಬಂದು ಮಧುರವಾಗಿ ಸ್ತೋತ್ರ ಮಾಡುತ್ತವು. ಅಂವ° ಆರೋಗ್ಯವಾಗಿದ್ದು, ದೇವರ ಪೂಜೆ ಮಾಡಿ, ತೀರ್ಥವ ತೆಕ್ಕೊಂಡು, ಸುಖಾಸನಲ್ಲಿ ಕೂದೊಂಡಿಪ್ಪಗ, ಅಗ್ನಿಹೋತ್ರದ ಕೋಣೆ, ದನದ ಹಟ್ಟಿ, ದೇವಸ್ಥಾನ, ತೋಟ, ಕೆರೆ, ಅಶ್ವತ್ಠ, ಆಲ, ತುಳಸೀ, ಬಿಲ್ವ, ಅಶೋಕ, ಮಾವು ಇವುಗಳ ಹತ್ರೆ ಕುದುರೆ ಲಾಯ, ಗಜಶಾಲೆ, ಬ್ರಹ್ಮಜ್ಞಾನಿಯ ಸನ್ನಿಧಿ, ಅರಮನೆ ಅಥವಾ ರಣಭೂಮಿ – ಈ ಜಾಗೆಲಿ ಮರಣ ಹೊಂದುತ್ತ°. ಈ ಪುಣ್ಯಕರವಾದ ಮೃತ್ಯು ಸ್ಥಾನಂಗೊ ಧರ್ಮದ ಫಲವಾಗಿ ಪ್ರಾಪ್ತವಾವ್ತು. ಪರಿಶುದ್ಧವಾದ ಧರ್ಮವ ನಿತ್ಯವೂ ಆಚರುಸುವ ಧರ್ಮಾತ್ಮನೂ, ಧರ್ಮವತ್ಸಲನೂ ಆದಂವ°, ಮೃತ್ಯು ಹತ್ರೆ ಬಪ್ಪಗ ಈ ಸ್ಥಾನವ ಹೊಂದುತ್ತ°. ಪುಣ್ಯವಂತ° ಅಬ್ಬೆಯ, ಅಪ್ಪನ, ಸಹೋದರರ.. ಇನ್ನಿತರ ಬಂಧುಮಿತ್ರರ ನೋಡುತ್ತ°. ಆ ಪುಣ್ಯವಂತನ ವಂದಿಗೊ ಪುನಃ ಪುನಃ ಸ್ತುತಿಸುತ್ತವು. ಅಂವ ಪಾಪಿಷ್ಠರ ನೋಡುತ್ತನಿಲ್ಲೆ. ಗಂಧರ್ವರು ಗೀತೆ ಹಾಡುತ್ತವು. ಸ್ತುತಿ ಪಾಠಕರು ಸ್ತುತಿ ಗೈತ್ತವು. ವೇದಪಾರಂಗತರು ವೇದಪಾರಾಯಣ ಮಾಡುತ್ತವು. ಅಬ್ಬೆ ಪ್ರೀತಿಂದ ಮಾತಾಡಿಸಿಗೊಂಡಿರುತ್ತು. ಅಪ್ಪನೂ, ಸಜ್ಜನರೂ ಇಪ್ಪಲ್ಲಿ ಧರ್ಮಾತ್ಮನೂ, ಮಹಾಮತಿವಂತನೂ ಆದಂವ° ಈ ರೀತಿ ಪುಣ್ಯ ಸ್ಥಳಲ್ಲಿ ಮರಣವ ಹೊಂದುತ್ತವು. ನೆಗೆನೆಗೆಮಾಡಿಗೊಂಡು, ಸ್ನೇಹಭಾವಂದಲೂ ಇಪ್ಪ ಯಮದೂತರು ಪ್ರತ್ಯಕ್ಷರಾವ್ತವು. ಸ್ವಪ್ನ, ಮೋಹ, ಕ್ಲೇಶಂಗೊ ಇರುತ್ತಿಲ್ಲೆ. “ಮಹಾಪ್ರಾಜ್ಞನಾದ ಧರ್ಮರಾಜ° ನಿನ್ನ ದೆನಿಗೊಂಡಿದ°, ನೀನು ಧರ್ಮರಾಜ° ಇಪ್ಪಲ್ಯಂಗೆ ಬಾ” ಹೇದು ಅವಂಗೆ ದೂತರುಗೊ ನಿವೇದಿಸುತ್ತವು. ಅವಂಗೆ ಮೋಹವಾಗಲೀ, ದುಃಖವಾಗಲೀ, ವಿಸ್ಮೃತಿಯಾಗಲೀ, ಸಂದೇಹವಾಗಲೀ ಉಂಟಾವ್ತಿಲ್ಲೆ. ಅಂವ° ಪ್ರಸನ್ನವದನನಾಗಿರುತ್ತ°. ಜ್ಞಾನವಿಜ್ಞಾನ ಸಂಪನ್ನನಾಗಿ ಅಂವ° ಜನಾರ್ದನನ ಸ್ಮರಿಸುತ್ತ°. ಅವರ (ದೂತರ) ಒಟ್ಟಿಂಗೆ ಸಂತೋಷಚಿತ್ತಂದ ಹೋವುತ್ತ°. ದೇಹವ ಬಿಡುವಾಗ ಅವಂಗೆ ಎಲ್ಲವೊ ಒಂದಾಗಿ ಕಾಣುತ್ತು. ಹತ್ತನೇ ದ್ವಾರಂದ (ಬ್ರಹ್ಮರಂಧ್ರ) ಅವನ ಆತ್ಮ ಹೆರ ಹೋವುತ್ತು. ಅವಂಗೆ ಹಂಸಾಯಾನಂದ ಕೂಡಿದ ಮನೋಹರವಾದ ಪಲ್ಲಕಿ ಬತ್ತು. ಅಂತಹ ವಿಮಾನಲ್ಲಿ ಕೂದು ಪಾವನವಾದ ಪುಣ್ಯವಾದ ಹರಿಯ ಲೋಕಕ್ಕೆ ಹೋವುತ್ತ°. ಧರ್ಮಾತ್ಮ° ಗೀತೆಯನ್ನೂ, ಪಂಡಿತರ, ವಂದಿಗಳ, ವೇದಪಾರಂಗತರಾದ ಬ್ರಾಹ್ಮಣರ ಮತ್ತೆ ಸಾಧುಗಳ ಸ್ತುತಿಗಳ ಕೇಳಿಗೊಂಡು ಸರ್ವ ಸೌಖ್ಯಂದ ಕೂಡಿದವನಾಗಿ, ಪುಣ್ಯ, ದಾನ ಪ್ರಭಾವಂದ ಉಂಟಾದ ಫಲವ ಅಂವ ಅಲ್ಲಿ ಪಡೆತ್ತ°.)
ಸೂತ ಉವಾಚ-
ಶ್ರುಣುಧ್ವಂ ಭೋ ವಿವಕ್ಷ್ಯಾಮಿ ಯಮಮಾರ್ಗಂ ಸುದುರ್ಗಮಮ್ ।
ಸುಖದಂ ಪುಣ್ಯಶೀಲಾನಾಂ ಪಾಪಿನಾಂ ದುಃಖದಾಯಕಮ್ ॥೦೬॥
ಯಥಾ ಶ್ರೀವಿಷ್ಣುನಾ ಪ್ರೋಕ್ತಂ ವೈನತೇಯಾಯ ಪೃಚ್ಛತೇ ।
ತಥೈವ ಕಥಯಿಷ್ಯಾಮಿ ಸಂದೇಹಚ್ಛೇದನಾಯವಃ ॥೦೭॥
ಕದಾಚಿತ್ಸುಖಮಾಸೀನಂ ವೈಕುಂಠೇ ಶ್ರೀ ಹರಿಂ ಗುರುಮ್ ।
ವಿನಯಾವನತೋ ಭೂತ್ವಾ ಪಪ್ರಚ್ಛ ವಿನತಾಸುತಃ ॥೦೮॥ 
ಸೂತ° ಹೇಳಿದ° – ಎಲೈ ಋಷಿಗಳೇ, ಕೇಳಿ., ಪುಣ್ಯವಂತರಿಂಗೆ ಸುಖಕರವಾಗಿಯೂ ಪಾಪಿಗೊಕ್ಕೆ ದುಃಖದಾಯಕವೂ ಆಗಿಪ್ಪ ದುರ್ಗಮವಾದ ಯಮಮಾರ್ಗದ ವಿವರುಸುತ್ತೆ.
ವಿನತೆಯ ಮಗನಾದ ಗರುಡ° (ವೈನತೇಯ°) ಕೇಳಿದ್ದಕ್ಕೆ ಶ್ರೀವಿಷ್ಣುವು ಎಂತ ಹೇಳಿದ್ದನೋ ಅದರನ್ನೇ ಹಾಂಗೇ ನಿಂಗಳ ಸಂದೇಹ ನಿವಾರುಸಲೆ ವಿವರುಸುತ್ತೆ.
ಒಂದು ದಿನ ವೈಕುಂಠಲ್ಲಿ ಜಗದ್ಗುರುವಾದ ಶ್ರೀಹರಿ ಸುಖಾಸೀನನಾಗಿ ಕೂದೊಂಡಿಪ್ಪಗ ವಿನೀತನಾಗಿ (ನಮಸ್ಕರಿಸಿ ವಿನಮ್ರಭಾವಂದ ಶ್ರೀ ಹರಿಯತ್ರೆ) ಕೇಳಿದ° –
 
(ವೈಕುಂಠ ಹೇಳಿರೆ ಯಾವುದಕ್ಕೂ ಕುಂಠಿತ ಇಲ್ಲದ್ದ, ಕೊರತೆ ಇಲ್ಲದ್ದ ಜಾಗೆ. ದೇಹ, ಮನಸ್ಸು, ಬುದ್ಧಿ, ಆನಂದ ಯಾವುದಕ್ಕೂ ಎಲ್ಲಿ ಕುಂಟಿಲ್ಲೆಯೋ ಅದೇ ವೈಕುಂಠ).
(‘ಗುರು’ ಹೇಳ್ವ ಪದಕ್ಕೆ – ಗು = ಅಂಧಕಾರ, ರು = ತೇಜಸ್ಸು. ಅಜ್ಞಾನ ಹೇಳ್ವ ಅಂಧಕಾರವ ಜ್ಞಾನ ಹೇಳ್ವ ತೇಜಸ್ಸಿಂದ ಬೆಳಗಿಸಿ ಪ್ರಕಾಶಿಸುವದು. ಗುರು ನಿತ್ಯಸಿದ್ಧ°, ಬುದ್ಧ°, ನಿರ್ಮಲ ಸ್ವರೂಪ ಇಪ್ಪಂವನಾಗಿರೆಕು. ಗು – ಗುಣಾತೀತ°, ರು – ರೂಪಾತೀತ. ಅಂಥವರ ಗುರುಃ ಬ್ರಹ್ಮ ಗುರುಃ ವಿಷ್ಣು ಗುರುಃ ದೇವಃ ಮಹೇಶ್ವರಃ, ಗುರುಃ ಸಾಕ್ಷಾತ್ ಪರಂಬ್ರಹ್ಮ ., ಅಂತಹ ಗುರುವಿಂಗೆ ನಮಸ್ಕಾರ (ತಸ್ಮೈ ಶ್ರೀ ಗುರುವೇ ನಮಃ). ಈ ಗುಣಂಗೊ ಇಲ್ಲದ್ರೆ ಅದು ಬರೇ ಭಾರ ಹೇಳ್ವ ಅರ್ಥವ ಕೊಡುತ್ತು. ಅಂಥ ಗುರುವ ಸ್ತುತಿಸಿ ವಂದಿಸಿ ಎಂತ ಗುಣವೂ ಇಲ್ಲೆ. ಇದು ಮೇಲ್ಮೈ ನೇರ ಸರಳಾರ್ಥ. ಇದರ ಅಂತರಾರ್ಥ – ಬ್ರಹ್ಮನೇ ಗುರು, ವಿಷ್ಣುಮೂರ್ತಿಯೇ ಗುರು, ಮಹೇಶ್ವರನೇ ಗುರು, ಸಾಕ್ಷಾತ್ ಪರಬ್ರಹ್ಮನೇ ನಿನ್ನ ಗುರು ಹೇದು ತಿಳುದು ಮುಕ್ತನಾಗು. ವಿಷಯ ವಾಸನೆಗಳಲ್ಲಿ ಸಂಬಂಧ ಇಲ್ಲದ್ದ ಗುರು ಸಿಕ್ಕುವದು ಸುಲಭ ಅಲ್ಲದ್ದರಿಂದ ನಮ್ಮಲ್ಲಿ ಅಂತರ್ಯಾಮಿಯಾಗಿಪ್ಪ ಪರಮಾತ್ಮನನ್ನೇ ಗುರು ಹೇದು ಪ್ರಾರ್ಥಿಸಿರೆ ನವಗೆ ನಮ್ಮ ಹೃದಯಂದ ಆ ಪರಮಾತ್ಮ ಸದ್ಭೋದನೆ  ನೀಡಿ ನಮ್ಮ ಮುಕ್ತನನ್ನಾಗಿ ಮಾಡುತ್ತ°. ನವಗೆ ಜ್ಞಾನ ಲಭಿಸುವದು ಗುರುವಿನ ಮೂಲಕ. ಗುರುವಿಂದ ವಿದ್ಯೆ (ಜ್ಞಾನ) ಸಿಕ್ಕೆಕ್ಕಾರೆ ನಾವು ಗುರುವಿಂಗೆ ಸಂಪೂರ್ಣವಾಗಿ ವಿನೀತರಾಗಿ ಶರಣಾಯೇಕ್ಕು. ಗುರು ಹೇಳಿರೆ ಭಗವಂತನ ಪ್ರತಿನಿಧಿ. ಗುರುವಿಂಗೆ ಶರಣಾಗತನಪ್ಪದು ಹೇಳಿರೆ ಆ ಭಗವಂತಂಗೇ ಶರಣಾಗತನಾದಾಂಗೇ. ಆರು ಭಗವಂತಂಗೆ ಅನನ್ಯ ಭಕ್ತಿ ವಿಶ್ವಾಸಂದ ಶರಣಾಗತನಾವ್ತನೋ ಅವನ ಯೋಗಕ್ಷೇಮವ ಆ ಭಗವಂತ° ನೋಡಿಗೊಳ್ತ°. ಅವನಲ್ಲಿ ಸದ್ಬುದ್ಧಿಯ ಪ್ರಚೋದಿಸಿ, ಸನ್ಮಾರ್ಗಲ್ಲಿ ನಿರತನಾಗಿ, ಸಿದ್ಧಿಯ ದಾರಿಲಿ ಮುನ್ನೆಡವಲೆ ಆ ಭಗವಂತ° ಅನುಕೂಲ ಮಾಡಿಕೊಡ್ತ°.)
(ಶ್ರವಣಂ, ಕೀರ್ತನಂ, ವಿಷ್ಣೋಃ ಸ್ಮರಣಂ, ಪಾದಸೇವನಂ, ವಂದನಂ, ಅರ್ಚನಂ, ದಾಸ್ಯಂ, ಸ್ನೇಹಂ, ಆತ್ಮ ನಿವೇದನಂ ಇವು ಒಂಬತ್ತು ವಿಧಂಗೊ. ಇದರಲ್ಲಿ ಯಾವುದಾದರೊಂದರನ್ನಾರು ಸರಿಯಾಗಿ ಆಚರಿಸಿರೆ ಭಗವಂತಂಗೆ ಸಂಪೂರ್ಣ ಶರಣಾಗತನಾದಾಂಗೆ ಆವ್ತು,. ಭಗವಂತ° ಅವಂಗೆ ಒಲುದು ಅವಂಗೆ ಮಾರ್ಗದರ್ಶನವ ನೀಡಿ ಸಲಹುತ್ತ°. ಇದು ಭಗವಂತಂಗೆ ವಿನೀತನಪ್ಪ ಲಕ್ಷಣಂಗೊ).
ಗರುಡ ಉವಾಚ-
ಭಕ್ತಿಮಾರ್ಗೋ ಬಹುವಿಧಃ ಕಥಿತೋ ಭವತಾ ಮಮ ।
ತಥಾ ಚ ಕಥಿತಾ ದೇವಭಕ್ತಾನಾಂ ಗತಿರುತ್ತಮ ॥೦೯॥
ಅಧುನಾ ಶ್ರೋತುಮಿಚ್ಛಾಮಿ ಯಮಮಾರ್ಗಂ ಭಯಂಕರಮ್ ।
ತ್ವದ್ಭಕ್ತಿವಿಮುಖಾನಾಂ ಚ ತತ್ರೈವ ಗಮನಂ ಶ್ರುತಮ್ ॥೧೦॥
ಸುಗಮಂ ಭಗವನ್ನಾಮ ಜಿಹ್ವಾ ಚ ವಶವರ್ತಿನೀ ।
ತಥಾಪಿ ನರಕಂ ಯಾಂತಿ ಧಿಗ್ ಧಿಗಸ್ತು ನರಾಧಮಾನ್ ॥೧೧॥
ಅತೋ ಮೇ ಭಗವನ್ಬ್ರೂಹಿ ಪಾಪಿನಾಂ ಯಾ ಗತಿರ್ಭವೇತ್ ।
ಯಮಮಾರ್ಗಸ್ಯ ದುಃಖಾನಿ ಯಥಾ ತೇ ಪ್ರಾಪ್ನುವಂತಿ ವೈ ॥೧೨॥
 
ಗರುಡ ಹೇಳಿದ°-
ಬಹುವಿಧವಾದ ಭಕ್ತಿಮಾರ್ಗಂಗೊ ನಿನ್ನಂದ ಎನಗೆ ಹೇಳಲ್ಪಟ್ಟತ್ತು, ಹಾಂಗೇ ದೈವಭಕ್ತರಿಂಗೆ ಸಿಕ್ಕುವ ಉತ್ತಮ ಗತಿಯೂ ತಿಳುಶಲ್ಪಟ್ಟತ್ತು.
ಈಗ ಆನು ಭಯಂಕರವಾದ ಯಮಮಾರ್ಗವ ಕುರಿತಾಗಿ ಕೇಳ್ಳೆ ಇಚ್ಛೆಪಡುತ್ತೆ. ನಿನ್ನಲ್ಲಿ ಭಕ್ತಿ ( ದೈವಭಕ್ತಿ ) ಇಲ್ಲದ್ದೋರೂ ಕೂಡಾ ಅದೇ ಮಾರ್ಗಲ್ಲಿ ಹೋವ್ತವು ಹೇಳಿ ಕೇಳಿದ್ದೆ.
ಭಗವಂತನ ನಾಮವೂ ಸುಲಭ, ನಾಲಗೆಯೂ ನಮ್ಮ ವಶವೇ ಆಗಿದ್ದು. ಅಂದರೂ ನರಕಕ್ಕೆ ಹೋಪ ನರಾಧಮರಿಂಗೆ ಧಿಕ್ಕಾರ ಧಿಕ್ಕಾರ.
ಹಾಂಗಾಗಿ ಹೇ ಭಗವನ್, ಪಾಪಿಗೊಕ್ಕೆ ಏವ ಗತಿ ಉಂಟಾವ್ತು, ಅವು ಯಾವ ರೀತಿಲಿ ಯಮಮಾರ್ಗದ ದುಃಖಂಗಳ ಅನುಭವಿಸುತ್ತವು ಹೇಳ್ವದರ ಎನಗೆ ನೀನು ತಿಳಿಹೇಳು.
(ಶ್ರವಣಂ, ಕೀರ್ತನಂ, ವಿಷ್ಣೋಃ ಸ್ಮರಣಂ, ಪಾದಸೇವನಂ, ವಂದನಂ, ಅರ್ಚನಂ, ದಾಸ್ಯಂ, ಸ್ನೇಹಂ, ಆತ್ಮ ನಿವೇದನಂ ಇವು ಭಕ್ತಿ ಮಾರ್ಗದ ಒಂಬತ್ತು ವಿಧಂಗೊ. ಇದರಲ್ಲಿ ಯಾವುದಾದರೊಂದರನ್ನಾರು ಸರಿಯಾಗಿ ಆಚರಿಸಿರೆ ಭಗವಂತಂಗೆ ಸಂಪೂರ್ಣ ಶರಣಾಗತನಾದಾಂಗೆ ಆವ್ತು., ಭಗವಂತ° ಅವಂಗೆ ಒಲುದು ಅವಂಗೆ ಮಾರ್ಗದರ್ಶನವ ನೀಡಿ ಸಲಹುತ್ತ°. ಇದು ಭಗವಂತಂಗೆ ವಿನೀತನಪ್ಪ ಲಕ್ಷಣಂಗೊ. ಭಗವಂತನ ಭಕ್ತಿಮಾರ್ಗ ಹಿಡಿವದರಿಂದ ಮನುಷ್ಯಂಗೆ ಜೀವನದ ಮುಂದಾಣ ದಾರಿ ಸುಗಮ ಆವ್ತು. ಜೀವನದ ಅಂತ್ಯವೂ ಸುಖಪ್ರದವಾಗಿ, ಮರಣೋತ್ತರ ದಾರಿಯೂ ಆನಂದದಾಯಕವಾಗಿ, ಮುಂದೆ ಹೋಗಿ ಆ ಸಚ್ಚಿದಾನಂದನ ಪರಮಾನಂದ ಭಾಗ್ಯವ ಪಡೆತ್ತ°. ಚಿಂತುಸಲೆ ಬುದ್ಧಿಶಕ್ತಿ ಇದ್ದು, ಉಚ್ಚರಿಸುಲೆ ಸುಲಭವಾದ ಭಗವನ್ನಾಮ ಇದ್ದು, ಉಚ್ಚರುಸುವ ನಾಲಗೆ ನಮ್ಮ ಅಧೀನಲ್ಲಿ ಇದ್ದರೂ ಮನುಷ್ಯ° ಅದರ ಅಂದಾಜಿಯನ್ನೇ ಮಾಡದ್ದೆ ತನ್ನ ಜೀವನ ಕಷ್ಟಕರವನ್ನಾಗಿ ತಾನೇ ಮಾಡಿಗೊಳ್ತನಲ್ಲದ್ದೆ, ಜೀವನದ ಅಂತ್ಯಲ್ಲಿ ನರಕಯಾತನೆಯ ಅನುಭವಿಸಿ, ಮರಣಾನಂತರ ಭಯಂಕರವಾದ ನರಕದಾರಿಲಿ ಸಾಗಿ ಘೋರನರಕವ ಸೇರಿ ಕಷ್ಟಪಡುವದು ನಿಜಕ್ಕೂ ದುರದೃಷ್ಟ. ಅಂತಹ ಮನುಷ್ಯ ಜೀವನಕ್ಕೆ ಧಿಕ್ಕಾರ. ಹಾಂಗಾಗಿ, ಭಕ್ತಿಮಾರ್ಗದ ಸುಖವ ವಿವರಿಸಿದ ನೀನು ಯಮಮಾರ್ಗದ ಕಷ್ಟವನ್ನೂ ವಿವರಿಸಿ ತಿಳಿಶೆಕು ಹೇದು ಭಗವಂತನಾದ ಶ್ರೀಮಹಾವಿಷ್ಣುವಿನ ಹತ್ರೆ ವಿನೀತನಾಗಿ ಗರುಡ° ಕೇಳಿಗೊಳ್ತ°).
ಶ್ರೀ ಮಹಾವಿಷ್ಣು ಗರುಡಂಗೆ ಎಂತ ಹೇಳಿದ.. ?   ….ಬಪ್ಪ ವಾರ ನೋಡುವೋ°.

(ಮುಂದುವರಿತ್ತು)

ವಿದ್ಯಾವಾಚಸ್ಪತಿ ಬನ್ನಂಜೆಯವರ ಗರುಡಪುರಾಣ ಪ್ರವಚನ ಅಂತರ್ಜಾಲ ಮೂಲಕ ಕೇಳೇಕ್ಕಾರೆ ಓ ಇಲ್ಲಿ ನೋಡಿ

15 thoughts on “ಗರುಡ ಪುರಾಣ – ಅಧ್ಯಾಯ 01 – ಭಾಗ 01

  1. ರಾಯಚೂರು ದೇವೇಗೌಡರೇ ಇದರಲ್ಲಿರುವ ಭಾಷೆ ನಿಮಗೆ ಅರ್ಥವಾಗಲಿಕ್ಕಿಲ್ಲ. ಉತ್ತರ/ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ನೆಲೆಸಿರುವ ಒಂದು ನಿರ್ದಿಷ್ಟ ಸಮಾಜದ ಮಾತೃ ಭಾಷೆ ಇದು. ಆದುದರಿಂದ ಇದರಲ್ಲಿರುವ ವಿಷಯಗಳನ್ನು
    ಹೊಸಕನ್ನಡದಲ್ಲಿ ಬರೆಯುವ ಪ್ರಶ್ನೆ ಉದ್ಭವವಾಗದು.

  2. ಸುಲಭವಾಗಿ ಈ ಕನ್ನಡ ಅರ್ಥವಾಗುವಂತಿಲ್ಲ ಹೊಸಗನ್ನಡದಲ್ಲಿದ್ದರೆ ತುಂಬಾ ಚೆನ್ನಾಗಿರುತ್ತದೆ ..

  3. ಭಕ್ತಿ ಮಾರ್ಗದ ಸುಖ ಬಗ್ಗೆ ಲಾಯಿಕದ ವಿವರಣೆ. ಒಂಭತ್ತು ವಿಧದ ಭಕ್ತಿ ಮಾರ್ಗಂಗೊ ಇಪ್ಪಗ ಆಯ್ಕೆ ಮಾಡ್ಲೆ ಕಷ್ಟ ಇಲ್ಲೆ. ಇಚ್ಛಾಶಕ್ತಿ ಇದ್ದರೆ ಯಾವುದಾದರೂ ನ್ಯಾಯ ಮಾರ್ಗಲ್ಲಿ ನೆಡಕ್ಕೊಂಡರೆ ಆತು.
    ಗರುಡ ಪುರಾಣದ ಲೇಖನ ಮಾಲೆಗೆ ಸ್ವಾಗತ

  4. ಗರುಡ ಪುರಾಣ ಸರಳ ಸುಂದರವಾಗಿ ಬತ್ತಾ ಇಪ್ಪದು ತುಂಬಾ ಸಂತೋಷ. ಸವಿವರವಾಗಿದ್ದು ಒಳ್ಳೆ ಆಸಕ್ತಿ ಹುಟ್ಟುಸುತ್ತಾ ಇದ್ದು.

  5. ನಮ್ಮ ಪಿತೃಗೊ ಮುಕ್ತಿ ಪಡದು ಸ್ವರ್ಗಲ್ಲಿರುತ್ತವು- ಸ್ವರ್ಗ ಇಪ್ಪದು ಆಕಾಶಲ್ಲಿ- ಹಾಂಗಾಗಿ ಪಿತೃಗಳೂ ಆಕಾಶಲ್ಲಿ ನಕ್ಷತ್ರಂಗಳ ಹಾಂಗೆ ಬೆಳಗುತ್ತಾ ಇರ್ತವು ಹೇಳ್ತ ನಂಬಿಕೆ ತಲತಲಾಂತರಂದ ನಮ್ಮಲ್ಲಿ ಬೇರೂರಿದ್ದು. ಸೂಕ್ಷ್ಮಾವಲೋಕನಕ್ಕೆ ಹದ್ದು ಜಗತ್ಪ್ರಸಿದ್ಧ. ಆಕಾಶಗಾಮಿಯಾಗಿಪ್ಪ ಗರುಡ ಜಗನ್ನಿಯಾಮಕನ ಅನುಗ್ರಹಂದ ಪಡದ ತನ್ನ ಸೂಕ್ಷ್ಮಾತಿಸೂಕ್ಷ್ಮ ದೃಷ್ಟಿಂದ ಜೀವಾತ್ಮನ ಪರಲೋಕ ಯಾತ್ರೆಯ ಪ್ರತೀ ಮಜಲನ್ನೂ ನೋಡುತ್ತ° ಹೇಳುವ ಕಾರಣಕ್ಕೆ, ನಮ್ಮ ಪೂರ್ವಜರು ಗರುಡನಷ್ಟೇ ಸೂಕ್ಷ್ಮವಾಗಿ ಅವಲೋಕಿಸಿ ಬರದ ಪುರಾಣಕ್ಕೆ ಸಾಂಕೇತಿಕವಾಗಿ ಗರುಡನ ಹೆಸರನೇ ಮಡುಗಿದ್ದಾದಿಕ್ಕೋ- ಅಥವಾ ಬೇರೆಂತಾರು ಕಾರಣ ಇದ್ದೋ?

    1. ತನ್ನ ಮೂಲ ಚೈತನ್ಯ ಸ್ವರೂಪವನು ಮಲದ ತಿಳಿದಾಗ ತಾನು ತಾನಾಗಿ,
      ತಿಳಿದು ಸಾಕ್ಷಿ ಅನುಭವಕ್ಕೆ

  6. ತನ್ನ ಶ್ರೇಯಸ್ಸಿಂಗೋಸ್ಕರ ಪಶುಗಳ (ಪ್ರಾಣಿಗಳ) ವಧೆ ಮಾಡಿ ದೇವರ ಮೆಚ್ಚಿಸುವ ಬದಲು ಅಹಂಕಾರ, ಪಶುತ್ವ,ಅಜ್ನಾನಂಗಳ ಬಲಿಕೊದೆಕು —ಉತ್ತಮ ಸಂದೇಶ -ಧನ್ಯವಾದ.

  7. ಪುರಾಣಶ್ರವಣದ ಒಟ್ಟಿ೦ಗೆ ಗುರು,ನವವಿಧ ಭಕ್ತಿ ,ಗೀತೆಲಿ ವಿವರ್ಸಿದ ಆತ್ಮದ ರೂಪ – ಹೀ೦ಗೆ ಸುಮಾರು ವಿಷಯ೦ಗೊ ಸರಳವಾಗಿ ಸಿಕ್ಕಿತ್ತು.
    ಧನ್ಯವಾದ ಭಾವ.

  8. ಸುಲಭವಾಗಿ, ಸರಳವಾಗಿ, ಓದಿರೆ ಲಾಯಕ ಅರ್ಥ ಅಪ್ಪ ಹಾಂಗೆ ಇದ್ದು. ಭಾರಿ ಲಾಯಿಕ ಇದ್ದು. ಹಾಂಗೆ ಇದರ ಓದಿದವರ ಜ್ನಾನ ಬೆಳಗಲಿ… ಶುಭವಾಗಲಿ… ಹರೆ ರಾಮ.

  9. ಅದಾ… ಗರುಡ ರೆಕ್ಕೆಬಿಚ್ಚಿ ಹಾರುಲೆ ಸುರು ಮಾಡಿದ…… ಸ್ವಾಗತ… ಸ್ವಾಗತ…

  10. ಗರುಡ ಪುರಾಣಕ್ಕೆ ಸ್ವಾಗತ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×