ಗರುಡ ಪುರಾಣ – ಅಧ್ಯಾಯ 11

December 5, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಸ್ಥಿ ಸಂಚಯನದ ಕುರಿತಾಗಿ ಕಳುದವಾರದ ಭಾಗಲ್ಲಿ ಓದಿದ್ದದು. ಮುಂದೆ –

 

ಗರುಡ ಪುರಾಣಮ್                                                           ಗರುಡ ಪುರಾಣ

ಅಥ ಏಕಾದಶೋsಧ್ಯಾಯಃ                                              ಅಧ್ಯಾಯ 11

ದಶಗಾತ್ರವಿಧಿನಿರೂಪಣಮ್                                              ಹತ್ತು ದಿನಾಣ ಕರ್ಮಂಗಳ ನಿರೂಪಣೆ

 

ಗರುಡ ಉವಾಚimages
ದಶಗಾತ್ರವಿಧಿಂ ಬ್ರೂಹಿ ಕೃತೇ ಕಿಂ ಸುಕೃತಂ ಭವೇತ್ ।
ಪುತ್ರಾಭಾವೇ ತು ಕಃ ಕುರ್ಯಾದಿತಿ ಮೇ ವದ ಕೇಶವ ॥೦೧॥

ಗರುಡ° ಹೇಳಿದ° – ಹೇ ಕೇಶವ!, ದಶಗಾತ್ರವಿಧಿಯ ಮಾಡಿರೆ ಏವ ಪುಣ್ಯ ಸಿಕ್ಕುತ್ತು. ಮಗ° ಇಲ್ಲದ್ರೆ ಅದರ ಆರು ಮಾಡೆಕ್ಕಾದ್ದು ಹೇಳ್ವದರ ಎನಗೆ ಹೇಳು.

ಶ್ರೀ ಭಗವಾನುವಾಚ
ಶ್ರುಣು ತಾರ್ಕ್ಷ್ಯ ಪ್ರವಕ್ಷ್ಯಾಮಿ ದಶಗಾತ್ರವಿಧಿಂ ತವ ।
ಯದ್ವಿಧಾಯ ಚ ಸತ್ಪುತ್ರೋ ಮುಚ್ಯತೇ ಪೈತೃಕಾದೃಣಾತ್ ॥೦೨॥

ಹೇ ಗರುಡ!, ನಿನಗೆ ದಶಗಾತ್ರವಿಧಿಯ ವಿವರುಸುತ್ತೆ ಕೇಳು. ಆ ವಿಧಿಯ ಮಾಡುವದರಿಂದ ಸತ್ಪುತ್ರ° ಪಿತೃಋಣಂದ ಬಿಡುಗಡೆ ಹೊಂದುತ್ತ°.

ಪುತ್ರಃ ಶೋಕಂ ಪರಿತ್ಯಜ್ಯ ಧೃತಿಮಾಸ್ಥಾಯ ಸಾತ್ವಿಕೀಮ್ ।
ಪಿತುಃ ಪಿಂಡಾದಿಕಂ ಕುರ್ಯಾದಶ್ರುಪಾತಂ ನ ಕಾರಯೇತ್ ॥೦೩॥

ಮಗನಾದವ° ಶೋಕವ ಬಿಟ್ಟು, ಧೈರ್ಯವ ತಂದುಗೊಂಡು ಸತ್ವಗುಣಿಯಾಗಿ, ಅಪ್ಪಂಗಾಗಿ ಪಿಂಡಾದಿಗಳ ಮಾಡೆಕು. ಕಣ್ಣೀರು ಹಾಕಲಾಗ.

ಶ್ಲೇಷ್ಮಾಶ್ರು ಬಾಂಧವೈರ್ಮುಕ್ತಂ ಪ್ರೇತೋ ಭುಂಕ್ತೇ ಯತೋsವಶಃ ।
ಅತೋ ನ ರೋದಿತವ್ಯಂ ಹಿ ತದಾ ಶೋಕಾನ್ನಿರರ್ಥಕಾತ್ ॥೦೪॥

ಬಂಧುಗೊ ಸುರಿಸಿದ ಕಣ್ಣೀರ ಮತ್ತೆ ಶ್ಲೇಷ್ಮವ ಪ್ರೇತವು ಭುಂಜಿಸಲೇ ಬೇಕಾವುತ್ತು. ಹಾಂಗಾಗಿ ಕೂಗಲಾಗ. ಅಂಬಗ ದುಃಖವುದು ನಿರರ್ಥಕ (ಎಂತ ಪ್ರಯೋಜನವೂ ಇಲ್ಲೆ).

ಯದಿ ವರ್ಷಸಹಸ್ರಾಣಿ ಶೋಚತೇsಹರ್ನಿಶಂ ನರಃ ।
ತಥಾಪಿ ನೈವ ನಿಧನಂ ಗತೋ ದೃಶ್ಯೇತ ಕರ್ಹಿಚಿತ್ ॥೦೫॥

ಒಂದುವೇಳೆ ಮನುಷ್ಯ° ಸಾವಿರ ವರ್ಷಂಗಳವರೆಂಗೆ ಹಗಲೂ ಇರುಳು ದುಃಖಿಸಿರೂ ಎಂದಿಂಗೂ ಏವ ವಿಧಲ್ಲಿಯೂ ಮರಣಹೊಂದಿದವ ದೃಷ್ಟಿಗೆ ಬೀಳುತ್ತನಿಲ್ಲೆ.

ಜಾತಸ್ಯ ಹಿ ಧ್ರುವೋ ಮೃತ್ಯುಧ್ರುವಂ ಜನ್ಮ ಮೃತಸ್ಯ ಚ ।
ತಸ್ಮಾದಪರಿಹಾರ್ಯೇsರ್ಥೇನ ಶೋಕಂ ಕಾರೇಯದ್ಬುಧಃ ॥೦೬॥

ಹುಟ್ಟಿದವಂಗೆ ಮರಣ ನಿಶ್ಚಯ. ಹಾಂಗೇ ಮರಣ ಹೊಂದಿದವಂಗೆ ಜನ್ಮವೂ ನಿಶ್ಚಯ. ಹಾಂಗಾಗಿ ಅದರ ತಪ್ಪುಸಲೆ ಎಡಿಯ ಹೇದು ಬುದ್ದಿವಂತ° ದುಃಖಿಸಲಾಗ.

ನಹಿ ಕಶ್ಚಿದುಪಾಯೋsಸ್ತಿ ದೈವೋ ವಾ ಮಾನುಷೋsಪಿ ವಾ ।
ಯೋ ಹಿ ಮೃತ್ಯುವಶಂ ಪ್ರಾಪ್ತೋ ಜಂತುಃ ಪುನರಿಹಾವ್ರಜೇತ್ ॥೦೭॥

ದೈವೀಕವಾಗಿಯಾಗಲೀ ಅಥವಾ ಮಾನುಷಿಕವಾಗಿಯಾಗಲಿ ಏವುದರಿಂದಲೂ ಮರಣ ಹೊಂದಿದವ° ಪುನಃ ಇಹಲೋಕಕ್ಕೆ ಬಪ್ಪಂತಹ ಏವುದೇ ಉಪಾಯಂಗೊ ಇಲ್ಲೆ.

ಅವಶ್ಯಂಭಾವಿಭಾವಾನಾಂ ಪ್ರತೀಕಾರೋ ಭವೇದ್ಯದಿ ।
ತದಾ ದುಃಖೈರ್ನ ಯುಜ್ಯೇರನ್ನಲರಾಮಹುಧಿಷ್ಠಿರಾಃ ॥೦೮॥

ಒಂದುವೇಳೆ ಅನಿವಾರ್ಯವಾದ್ದರ ತಪ್ಪುಸುವ ಉಪಾಯಂಗೊ ಏನಾರು ಇರ್ತಿದ್ರೆ, ಅಂಬಗ ನಳರಾಜ°, ರಾಮ°, ಯುಧಿಷ್ಠಿರರು ಖಂಡಿತವಾಗಿಯೂ ದುಃಖವ ಅನುಭವುಶುತ್ತಿತ್ತವಿಲ್ಲೆ.

ನಾಯಮತ್ಯಂತಸಂವಾಸಃ ಕಸ್ಯ ಚಿತ್ಕೇನಚಿತ್ಸಹ ।
ಅಪಿ ಸ್ವಸ್ಯ ಶರೀರೇಣ ಕಿಮುತಾನ್ಯೈಃ ಪೃಥಗ್ಜನೈಃ ॥೦೯॥

ಆರಿಂಗೂ ಆರತ್ರೆಯೂ ತನ್ನ ಶರೀರಕ್ಕಿಂತ ಹೆಚ್ಚಿಗೆ ಅತಿ ನಿಕಟ ಸಹವಾಸ ಇರ್ತಿಲ್ಲೆ. ಮತ್ತೆ, ಇತರರ ಜೊತೆಲಿ ಹೇಂಗೆ ಸಾಧ್ಯ ಆವ್ತು?!

ಯಥಾ ಹಿ ಪಥಿಕಃ ಕಶ್ಚಿಚ್ಛಾಯಾಮಾಶ್ರಿತ್ಯ ವಿಶ್ರಮೇತ್ ।
ವಿಶ್ರಮ್ಯ ಚ ಪುನರ್ಗಚ್ಛೇತ್ತದ್ವದ್ಭೂತಸಮಾಗಮಃ ॥೧೦॥

ಏವ ರೀತಿಲಿ ಪ್ರಯಾಣಿಕ° ಏವುದಾರು ಒಂದು ನೆರಳ ಆಶ್ರಯಿಸ್ಯೊಂಡು ವಿಶ್ರಮಿಸಿಗೊಂಡು, ಮತ್ತೆ ಪುನಃ ಮುಂದಂತಾಗಿ ಹೋವುತ್ತನೋ, ಹಾಂಗೇ ಈ ಜೀವಿಗಳ ಸಮಾಗಮವೂ ಇಲ್ಲಿ ಆವುತ್ತದು.

ಯತ್ಪ್ರಾತಃ ಸಂಸ್ಕೃತಂ ಭೋಜ್ಯಂ ಸಾಯಂ ತಚ್ಚ ವಿನಶ್ಯತಿ ।
ತದನ್ನರಸಸಂಪುಷ್ಟೇ ಕಾಯೇ ಕಾ ನಾಮ ನಿತ್ಯತಾ ॥೧೧॥

ಉದಿಯಪ್ಪಗ ಶುದ್ಧವಾಗಿ ಮಾಡಿದ ಭೋಜ್ಯವಸ್ತು ಹೊತ್ತೋಪಗಪ್ಪಗ ಹಳಸಿರುತ್ತು. ಇನ್ನು ಆ ಅನ್ನರಸಂದ ಪೋಷಿತವಾದ ಈ ಶರೀರವು ಹೇಂಗೆ ಸ್ಥಿರವಾಗಿಕ್ಕು ?!

ಭೈಷಜ್ಯಮೇತದ್ದುಃಖಸ್ಯ ವಿಚಾರಂ ಪರಿಚಿಂತ್ಯ ಚ ।
ಅಜ್ಞಾನಪ್ರಭವಂ ಶೋಕಂ ತ್ಯಕ್ತ್ವಾ ಕುರ್ಯಾತ್ಕ್ರಿಯಾಂ ಸುತಃ ॥೧೨॥

ಈ ವಿಚಾರವ ಚಿಂತಿಸುವದೇ ಆ ದುಃಖಕ್ಕೆ ಔಷಧ. ಈ ರೀತಿ ಅಜ್ಞಾನಂದ ಹುಟ್ಟಿದ ಶೋಕವ ಬಿಟ್ಟಿಕ್ಕಿ ಮಗನಾದವ° ಕ್ರಿಯೆಗಳ ಮಾಡೆಕು.

ಪುತ್ರಾಭಾವೇ ವಧೂಃ ಕುರ್ಯಾದ್ಭಾರ್ಯಾಭಾವೇ ಚ ಸೋದರಃ ।
ಶಿಷ್ಯೋ ವಾ ಬ್ರಾಹ್ಮಣಸ್ಯೈವ ಸಪಿಂಡೋ ವಾ ಸಮಾಚರೇತ್ ॥೧೩॥

ಮಗ ಇಲ್ಲದ್ರೆ ಹೆಂಡತಿ ಮಾಡೆಕು. ಹೆಂಡತಿ ಇಲ್ಲದ್ರೆ ಸೋದರ ಮಾಡೆಕು. ಅಥವಾ ಬ್ರಾಹ್ಮಣನ (ಸಾತ್ವಿಕಗುಣಂಗಳ ಮೂಲಕ ಬ್ರಹ್ಮತತ್ವವ ಅರ್ತವ = ಬ್ರಾಹ್ಮಣ) ಕರ್ಮಂಗಳ ಶಿಷ್ಯ° ಮಾಡೆಕು ಅಥವಾ ಸಪಿಂಡ ಬಂಧುಗೊ ಮಾಡೆಕು.

ಜ್ಯೇಷ್ಠಸ್ಯ ವಾ ಕನಿಷ್ಥಸ್ಯ ಭ್ರಾತುಃ ಪುತ್ರೈಶ್ವ ಪೌತ್ರಕೈಃ ।
ದಶಗಾತ್ರದಿಕಂ ಕಾರ್ಯಂ ಪುತ್ರಹೀನೇ ನರೇ ಖಗ ॥೧೪॥

ಏ ಗರುಡ!, ಮೃತನಾದವ° ಪುತ್ರಹೀನನಾಗಿದ್ದರೆ ಅಣ್ಣನ ಅಥವಾ ತಮ್ಮನ ಮಗ, ಪೌತ್ರಾದಿಗೊ ದಶಗಾತ್ರವಿಧಿ ಮೊದಲಾದವುಗಳ ಮಾಡೆಕು.

ಭ್ರಾತೃಣಾಮೇಕಜಾತಾನಾಮೇಕಶ್ಚೇತ್ಪುತ್ರವಾನ್ಭವೇತ್ ।
ಸರ್ವೇ ತೇ ತೇನ ಪುತ್ರೇಣ ಪುತ್ರಿಣೋ ಮನುರಬ್ರವೀತ್ ॥೧೫॥

ಒಬ್ಬನೇ ಅಪ್ಪನಿಂದ ಹುಟ್ಟಿದ ಸೋದರರಲ್ಲಿ ಏವ ಒಬ್ಬ° ಪುತ್ರವಂತನಾಗಿದ್ದರೂ ಅವನ ಪುತ್ರನಿಂದಲೇ ಅವೆಲ್ಲೊರು ಪುತ್ರವಂತರಾವುತ್ತವು ಹೇದು ಮನುವೇ ಹೇಳಿದ್ದ°.

ಪತ್ನ್ಯಶ್ಚ ಬಹ್ವ್ಯ ಏಕಸ್ಯ ಚೈಕಾ ಪುತ್ರವತೀ ಭವೇತ್ ।
ಸರ್ವಾಸ್ತಾಃ ಪುತ್ರವತ್ಯಃ ಸ್ಯುಸ್ತೇನ್ಯೇಕೇನ ಸುತೇನ ಹಿ ॥೧೬॥

ಒಬ್ಬಂಗೆ ಅನೇಕ ಹೆಂಡತಿಯಕ್ಕೊ ಇದ್ದರೆ, ಅವರಲ್ಲಿ ಒಬ್ಬಾಕೆ ಮಾತ್ರ ಪುತ್ರವತಿಯಾಗಿದ್ದರೂ, ಆ ಒಬ್ಬ ಮಗಂದಲೇ ಎಲ್ಲೋರು ಪುತ್ರವತಿಯರು ಹೇದು ಕರೆಯಲ್ಪಡುತ್ತವು.

ಸರ್ವೇಷಾಂ ಪುತ್ರಹೀನಾನಾಂ ಮಿತ್ರಃ ಪಿಂಡಂ ಪ್ರದಾಪಯೇತ್ ।
ಕ್ರಿಯಾಲೋಪೋ ನ ಕರ್ತವ್ಯಃ ಸರ್ವಾಭಾವೇ ಪುರೋಹಿತಃ ॥೧೭॥

ಅವೆಲ್ಲೋರೂ ಪುತ್ರಹೀನರಾಗಿದ್ದರೆ ಮಿತ್ರ° ಪಿಂಡವ ಕೊಡೆಕು. ಆರೂ ಇಲ್ಲದ್ದರೆ ಪುರೋಹಿತನೇ ಮಾಡೆಕು. ಕ್ರಿಯಲೋಪ ಅಪ್ಪಲಾಗ.

ಸ್ತ್ರೀ ವಾsಥ ಪುರುಷಃ ಕಶ್ಚಿದಿಷ್ಟಸ್ಯ ಕುರುತೇ ಕ್ರಿಯಾಮ್ ।
ಅನಾಥಪ್ರೇತಸಂಸ್ಕಾರಾತ್ಕೋಟಿಯಜ್ಞಫಲಂ ಲಭೇತ್ ॥೧೮॥

ಆರಾರು ಸ್ತೀ ಅಥವ ಪುರುಷ° ತನಗ ಪ್ರಿಯನಾದವನ ಕ್ರಿಯೆಗಳ ಮಾಡಿರೆ, ಆ ಅನಾಥ ಪ್ರೇತದ ಸಂಸ್ಕಾರಂದ ಕೋಟಿಯಜ್ಞಂಗಳ ಮಾಡಿದ ಫಲ ದೊರಕುತ್ತು.

ಪಿತುಃ ಪುತ್ರೇಣ ಕರ್ತವ್ಯಂ ದಶಗಾತ್ರಾದಿಕಂ ಖಗ ।
ಮೃತೇ ಜ್ಯೇಷ್ಠೇsಪ್ಯತಿಸ್ನೇಹಾನ್ನ ಕುರ್ವೀತ ಪಿತಾ ಸುತೇ ॥೧೯॥

ಹೇ ಗರುಡ!, ಅಪ್ಪನ ಕಾರ್ಯವ ಮಗನಿಂದ ಮಾಡಲ್ಪಡೆಕು. ಹಿರಿಯವ° ಮೃತನಾಗಿದ್ದರೆ ಅತಿ ಸ್ನೇಹಂದ ಅಪ್ಪ° ಮಗಂಗೆ ಈ ವಿಧಿಗಳ ಮಾಡ್ಳಾಗ.

ಬಹವೋsಪಿ ಯದಾ ಪುತ್ರಾ ವಿಧಿಮೇಕಃ ಸಮಾಚರೇತ್ ।
ದಶಗಾತ್ರಂ ಸಪಿಂಡತ್ವಂ ಶ್ರಾದ್ಧಾನ್ಯನ್ಯಾನಿ ಷೋಡಶ ॥೨೦॥

ಮೃತಂಗೆ ಅನೇಕ ಪುತ್ರರಿದ್ದರೆ ದಶಗಾತ್ರವಿಧಿ, ಸಪಿಂಡನ ವಿಧಿ, ಷೋಡಶಶ್ರಾದ್ಧ ಮತ್ತೆ ಇನ್ನೂ ಇತರ ವಿಧಿಗಳ ಒಬ್ಬನೇ ಮಗ ಆಚರುಸೆಕು.

ಏಕೇನೈವ ತು ಕಾರ್ಯಾಣಿ ಸಂವಿಭಕ್ತಧನೇಷ್ವಪಿ ।
ವಿಭಕ್ತೈಸ್ತು ಪೃಥಕ್ಕಾರ್ಯಂ ಶ್ರಾದ್ಧಂ ಸಾಂವತ್ಸರಾದಿಕಮ್ ॥೨೧॥

ಧನ-ಸಂಪತ್ತುಗಳ ಪಾಲುಹಂಚಿಕೆ ಆಗಿದ್ದರೂ ಒಬ್ಬನೇ ಆ ಕರ್ಮವ (ದಶಗಾತ್ರಂದ ಷೋಡಶ ಶ್ರಾದ್ಧದ ವರೇಂಗೆ) ಮಾಡೆಕು. ಮತ್ತೆ ವಿಭಕ್ತ ಮಕ್ಕೊ ವಾರ್ಷಿಕ ಶ್ರಾದ್ಧಾದಿಗಳ ಬೇರೆ ಬೇರೆಯಾಗಿಯೇ ಮಾಡೆಕು.

ತಸ್ಮಾಜ್ಜ್ಯೇಷ್ಠಃ ಸುತೋ ಭಕ್ತ್ಯಾ ದಶಗಾತ್ರಂ ಸಮಾಚರೇತ್ ।
ಏಕಭೋಜೀ ಭೂಮಿಶಾಯೀ ಭೂತ್ವಾ ಬ್ರಹ್ಮಪರಃ ಶುಚಿಃ ॥೨೨॥

ಹಾಂಗಾಗಿ ಜೇಷ್ಠಪುತ್ರ° ಭಕ್ತಿಂದ ಒಂದೊತ್ತು ಊಟಮಾಡಿಗೊಂಡು, ನೆಲಕ್ಕಲಿ ಮನಿಕ್ಕೊಂಡು, ಬ್ರಹ್ಮಚಾರಿಯಾಗಿ, ಶುಚಿಯಾಗಿ ದಶಗಾತ್ರವಿಧಿಯ ಮಾಡೆಕು.

ಸಪ್ತವಾರಂ ಪರಿಕ್ರಮ್ಯ ಧರಣೀಂ ಯತ್ಫಲಂ ಲಭೇತ್ ।
ಕ್ರಿಯಾಂ ಕೃತ್ವಾ ಪಿತುರ್ಮಾತುಸ್ತತ್ಫಲಂ ಲಭತೇ ಸುತಃ ॥೨೩॥

ಏಳು ಸರ್ತಿ ಭೂಪ್ರದಕ್ಷಿಣೆ ಮಾಡಿರೆ ಎಷ್ತು ಫಲ ದೊರಕುತ್ತೋ ಅಷ್ಟು ಫಲವ ಅಪ್ಪ° ಅಬ್ಬೆಯ ಕರ್ಮಂಗಳ ಮಾಡಿರೆ ಮಗ° ಹೊಂದುತ್ತ°.

ಆರಭ್ಯ ದಶಗಾತ್ರಂಚ ಯಾವದ್ವೈವಾರ್ಷಿಕಂ ಭವೇತ್ ।
ತಾವತ್ಪುತ್ರಃ ಕ್ರಿಯಾಂ ಕುರ್ವನ್ ಗಯಾಶ್ರಾದ್ಧಫಲಂ ಲಭೇತ್ ॥೨೪॥

ದಶಗಾತ್ರವಿಧಿಂದ ವಾರ್ಷಿಕ ಶ್ರಾದ್ಧದವರೆಂಗೆ ಎಲ್ಲ ಕರ್ಮಂಗಳನ್ನೂ ಮಾಡುವ ಮಗ° ಗಯಾ ಶ್ರಾದ್ಧವ ಫಲವ ಪಡೆತ್ತ°.

ಕೂಪೇ ತಡಾಗೇ ವಾssರಾಮೇ ತೀರ್ಥೇ ದೇವಾಲಯೇsಪಿ ವಾ ।
ಗತ್ವಾಮಧ್ಯಮಯಾಮೇ ತು ಸ್ನಾನಂ ಕುರ್ಯಾದಮಂತ್ರಕಮ್ ॥೨೫॥

ಬಾವಿ, ಕೆರೆ, ತೋಟ/ಉದ್ಯಾನ, ತೀರ್ಥ ಅಥವಾ ದೇವಾಲಯಕ್ಕೆ ಹೋಗಿ ಮಧ್ಯಾಹ್ನ ಹೊತ್ತಿಲ್ಲಿ ಮಂತ್ರೋಚ್ಛಾರಣೆ ಮಾಡದ್ದೆ ಮೀಯೆಕು.

ಶುಚಿರ್ಭೂತ್ವಾ ವೃಕ್ಷಮೂಲೇ ದಕ್ಷಿಣಾಭಿಮುಖಃ ಸ್ಥಿತಃ ।
ಕುರ್ಯಾಚ್ಚ ವೇದಿಕಾಂ ತತ್ರ ಗೋಮಯೇನೋಪಲಿಪ್ಯತಾಮ್ ॥೨೬॥

ಶುಚಿಯಾಗಿ ಒಂದು ಮರದ ಬುಡಲ್ಲಿ ದಕ್ಷಿಣಾಭಿಮುಖನಾಗಿ ಕೂದುಗೊಂಡು ಒಂದು ವೇದಿಕೆಯ ಸಿದ್ಧಗೊಳುಸಿ ಅಲ್ಲಿ ಗೋಮಯ ಸಾರುಸೆಕು.

ತಸ್ಯಾಂ ಪರ್ಣೇ ದರ್ಭಮಯಂ ಸ್ಥಾಪಯೇತ್ಕೌಶಿಕಂ ದ್ವಿಜಮ್ ।
ತಂ ಪಾದ್ಯಾದಿಭಿರಭ್ಯರ್ಚ್ಯ ಪ್ರಣಮೇದತಸೀತಿ ಚ ॥೨೭॥

ಆ ವೇದಿಕೆಲಿ ಪರ್ಣಾಸನವ ಹಾಕಿ ದರ್ಭೆಲಿ ಮಾಡಿದ ಬ್ರಾಹ್ಮಣನ ಕೂರುಸಿ, ಅದಕ್ಕೆ ಪಾದ್ಯಾದಿಗಳಿಂದ ಅರ್ಚಿಸಿ, ‘ಅತಸೀ ಪುಷ್ಪ ಸಂಕಾಶಮ್..’ ಹೇಳ್ವ ಮಂತ್ರಂದ ನಮಸ್ಕಾರ ಮಾಡೆಕು.

ತದಗ್ರೇ ಚ ತತೋ ದತ್ವಾ ಪಿಂಡಾರ್ಥ ಕೌಶಮಾಸನಮ್ ।
ತಸ್ಯೋಪರಿ ತತಃ ಪಿಂಡಂ ನಾಮಗೋತ್ರೋಪಕಲ್ಪಿತಮ್ ॥೨೮॥

ಅದರ ಮುಂದೆ ಪಿಂಡವ ಮಡುಗಲೆ ದರ್ಭೆಗಳ ಹಾಸಿ ಅದರ ಮೇಗೆ ಪ್ರೇತದ ನಾಮಗೋತ್ರಂದ ಪಿಂಡವ ಕೊಡೆಕು.

ದದ್ಯಾತ್ತುಂಡುಲಪಾಕೇನ ಯವಪಿಷ್ಟೇನ ವಾ ಸುತಃ ।
ಉಶೀರಂ ಚಂದನಂ ಭೃಂಗರಾಜಪುಷ್ಪಂ ನಿವೇದಯೇತ್ ।
ಧೂಪಂ ದೀಪಂ ಚ ನೈವೇದ್ಯಂ ಮುಖವಾಸಂ ಚ ದಕ್ಷಿಣಾಮ್ ॥೨೯॥

ಮಗ° ಪಿಂಡವ ಅನ್ನಂದ ಅಥವಾ ಯವಹಿಟ್ಟಿಂದ ಮಾಡೆಕು. ಲಾವಂಚ, ಚಂದನ, ತುಂಬೆಹೂಗು ಇವುಗಳ ನಿವೇದಿಸೆಕು. ಧೂಪ, ದೀಪ, ನೈವೇದ್ಯ, ಮುಖವಾಸ (ಬಾಯಿಪರಿಮಳಗೊಳುಸುವಂತಾದ್ದರ), ಮತ್ತೆ ದಕ್ಷಿಣೆಗಳ ನೀಡೆಕು.

ಕಾಕಾನ್ನಂ ಪಯಸೋಃ ಪಾತ್ರೇ ವರ್ಧಮಾನಜಲಾಂಜಲೀನ್ ।
ಪ್ರೇತಾಯಾಮುಕನಾಮ್ನೇ ಚ ಮದ್ದತ್ತಮುಪತಿಷ್ಠತು ॥೩೦॥

ಹಾಲು ಮತ್ತೆ ನೀರಿನ ಪಾತ್ರೆಲಿ ಕಾಕಗೆ ಅನ್ನವ ಮಡಿಗಿ “…..ನಾಮ್ನೇ ಪ್ರೇತಾಯ ಮದ್ದತ್ತಮುಪತಿಷ್ಠತು” (..ಹೇಳ್ವ ಹೆಸರಿನ ಪ್ರೇತಕ್ಕೆ ಆನು ಕೊಟ್ಟದ್ದು ಪ್ರಾಪ್ತಿಯಾಗಲಿ) ಹೇದು ವರ್ಧಮಾನ ಜಲಾಂಜಲಿಯ ಕೊಡೆಕು.

ಅನ್ನಂ ವಸ್ತ್ರಂ ಜಲಂ ದ್ರವ್ಯಮನ್ಯದ್ವಾ ದೀಯತೇ ಯತ್ ।
ಪ್ರೇತಶಬ್ದೇನ ಯದ್ದತ್ತಂ ಮೃತಸ್ಯಾನಂತದಾಯಕಮ್ ॥೩೧॥

ಅನ್ನ, ವಸ್ತ್ರ, ನೀರು, ದ್ರವ್ಯ ಮತ್ತೆ ಇತರ ಏವ ವಸ್ತುಗಳ ಕೊಟ್ರೂ ‘ಪ್ರೇತ’ ಶಬ್ದಂದ ಕೊಟ್ರೆ ಅದು ಮೃತಂಗೆ ಅನಂತವಾದ ಫಲವ ಕೊಡುತ್ತು.

ತಸ್ಮಾದಾದಿದಿನಾದೂರ್ಧ್ವಂ ಪ್ರಾಕ್ಸಪಿಂಡೀವಿಧಾನತಃ ।
ಯೋಷಿತಃ ಪುರುಷಸ್ಯಾಪಿ ಪ್ರೇತಶಬ್ದಂ ಸಮುಚ್ಚರೇತ್ ॥೩೨॥

ಹಾಂಗಾಗಿ ಸುರೂವಣದಿನಂದ ಸಪಿಂಡಿದಿನವರೆಂಗೆ ಸ್ತ್ರೀ ಪುರುಷರಿಂಗೆ ‘ಪ್ರೇತ’ಶಬ್ದವ ಉಚ್ಚರಿಸೆಕು.

ಪ್ರಥಮೇsಹನಿ ಯತ್ಪಿಂಡೋ ದೀಯತೇ ವಿಧಿ ಪೂರ್ವಕಮ್ ।
ತೇನೈವ ವಿಧಿನಾsನ್ನೇನ ನವ ಪಿಂಡಾನ್ಪ್ರದಾಪಯೇತ್ ॥೩೩॥

ಸುರೂವಾಣದಿನ ಪಿಂಡವ ಏವ ವಿಧಿಂದ ಕೊಡುತ್ತನೋ ಅದೇ ವಿಧಿಂದಲೇ (ಅದೇ ಪ್ರಕಾರವಾಗಿ) ಅನ್ನಂದ ಒಂಬತ್ತು ದಿನ ಪಿಂಡವ ಕೊಡೆಕು.

ನವಮೇ ದಿವಸೇ ಚೈವ ಸಪಿಂಡೈಃ ಸಕಲೈರ್ಜನೈಃ ।
ತೈಲಾಭ್ಯಂಗಃ ಪ್ರಕರ್ತವ್ಯೋ ಮೃತಕಸ್ವರ್ಗಕಾಮ್ಯಯಾ ॥೩೪॥

ಒಂಬತ್ನೇ ದಿನ, ಮೃತನ ಜನಂಗೊ ಎಲ್ಲೋರು ಸೇರಿ ಮೃತಂಗೆ ಸ್ವರ್ಗಪ್ರಾಪ್ತಿಯಾಗಲಿ ಹೇದು ಇಚ್ಚಿಸಿ, ಎಣ್ಣೆಕಿಟ್ಟಿ ಮೀಯೆಕು.

ಬಹಿಃ ಸ್ನಾತ್ವಾ ಗೃಹೀತ್ವಾ ಚ ದೂರ್ವಾ ಲಾಜಸಮನ್ವಿತಾಃ ।
ಅಗ್ರತಃ ಪ್ರಮದಾಂ ಕೃತ್ವಾ ಸಮಾಗಚ್ಛೇನ್ಮೃತಾಲಯಮ್ ॥೩೫॥

ಹೆರ ಮಿಂದಿಕ್ಕಿ, ಕರಿಕ್ಕೆ ಮತ್ತೆ ಹೊದಳು ತೆಕ್ಕೊಂಡು ಸ್ತ್ರೀಯರು ಮುಂದಾಗಿ ಮೃತನ ಮನೆಯೊಳ ಹೋಯೆಕು.

ದೂರ್ವಾವತ್ಕುಲವೃದ್ಧಿಸ್ಟೇ ಲಾಜಾ ಇವ ವಿಕಾಸತಾ ।
ಏವಮುಕ್ತ್ವಾ ತ್ವಜೇದ್ಗೇಹೇ ಲಾಜಾನ್ದೂರ್ವಾಸಮನ್ವಿತಾನ್ ॥೩೬॥

‘ಕರಿಕ್ಕೆಹುಲ್ಲಿನ ಹಾಂಗೆ ನಿನ್ನ ಕುಲ ವೃದ್ಧಿಯಾಗಲಿ ಮತ್ತೆ ಹೊದಳಿನ ರೀತಿಲಿ ವಿಕಾಸ ಹೊಂದಲಿ’ ಹೇದು ಹೇಳಿ ಆ ಮನೆಲಿ ಕರಿಕ್ಕೆಯ ಹೊದಳಿನ ಒಟ್ಟಿಂಗೆ ಹಾಕೆಕು.

ದಶಮೇsಹನಿ ಮಾಂಸೇನ ಪಿಂಡಂ ದದ್ಯಾತ್ಖಗೇಶ್ವರ ।
ಮಾಷೇಣ ತನ್ನಿಷೇಧಾದ್ವಾ ಕಲೌ ನ ಫಲಪೈತೃಕಮ್ ॥೩೭॥

ಏ ಪಕ್ಷಿರಾಜನೇ!, ಹತ್ತನೇ ದಿನ ಮಾಂಸದ ಪಿಂಡ ಕೊಡೆಕು. ಆದರೆ ಕಲಿಯುಗಲ್ಲಿ ಪೈತೃಕಂಗಳಲ್ಲಿ ಮಾಂಸವು ನಿಷೇಧಿಸಲ್ಪಟ್ಟಿಪ್ಪದರಿಂದ ಉದ್ದಿನ ಪಿಂಡವ ಕೊಡೆಕು.

ದಶಮೇ ದಿವಸೇ ಕ್ಷೌರೌ ಬಾಂಧವಾನಾಂ ಸಮುಂಡನಮ್ ।
ಕ್ರಿಯಾಕರ್ತುಃ ಸುತಸ್ಯಾಪಿ ಪುನರ್ಮುಂಡನಮಾಚರೇತ್ ॥೩೮॥

ಹತ್ತನೇ ದಿನ ಬಂಧುಗೊ ಮುಂಡನವನ್ನೂ ಕ್ಷೌರವನ್ನೂ ಮಾಡಿಸಿಗೊಳ್ಳೆಕು. ಕರ್ಮವ ಮಾಡುವ ಪುತ್ರನೂ ಕೂಡ ಪುನಃ ಮುಂಡನ ಮಾಡಿಸಿಗೊಳ್ಳೆಕು.

ಮಿಷ್ಟಾನ್ನೈರ್ಭೋಜಯೇದೇಕಂ ದಿನೇಷು ದಶಸು ದ್ವಿಜಮ್ ।
ಪ್ರಾರ್ಥಯೇತ್ಪ್ರೇತಮುಕ್ತಿಂ ಚ ಹರಿಂ ಧ್ಯಾತ್ವಾ ಕೃತಾಂಜಲಿಃ ॥೩೯॥

ಹತ್ತು ದಿನ್ನಂಗಳಲ್ಲಿ ಒಬ್ಬ° ಬ್ರಾಹ್ಮಣಂಗೆ ಮಿಷ್ಟಾನ್ನ ಭೋಜನ ಮಾಡುಸೆಕು ಮತ್ತೆ ಕೈಜೋಡಿಸಿಗೊಂಡು ಶ್ರೀ ಹರಿಯ ಧ್ಯಾನಿಸಿಗೊಂಡು ಪ್ರೇತದ ಮುಕ್ತಿಗಾಗಿ ಪ್ರಾರ್ಥನೆ ಮಾಡೆಕು.

ಅತಸೀಪುಷ್ಟಸಂಕಾಶಾಂ ಪೀತವಾಸಸಮುಚ್ಯುತಮ್ ।
ಯೇ ನಮಸ್ಯಂತಿ ಗೋವಿಂದಂ ನ ತೇಷಾಂ ವಿದ್ಯತೇ ಭಯಮ್ ॥೪೦॥

ಅಗಸೆಹೂಗಿಂಗೆ ಸಮಾನವಾದ ಕಾಂತಿಯಿಪ್ಪ, ಪೀತಾಂಬರಧಾರಿಯಾದ, ಅಚ್ಯುತನಾದ, ಗೋವಿಂದಂಗೆ ಆರು ನಮಸ್ಕರಿಸುತ್ತವೋ ಅವಕ್ಕೆ ಎಂದಿಂಗೂ ಭಯ ಉಂಟಾವುತ್ತಿಲ್ಲೆ.

ಅನಾದಿನಿಧನೋ ದೇವಃ ಶಂಖಚಕ್ರಗದಾಧರಃ ।
ಅಕ್ಷಯ್ಯಃ ಪುಂಡರೀಕಾಕ್ಷ ಪ್ರೇತಮೋಕ್ಷಪ್ರದೋ ಭವ ॥೪೧॥

ಆದಿ ಅಂತ್ಯಂಗೊ ಇಲ್ಲದ್ದ ದೇವನೇ ಶಂಖ, ಚಕ್ರ, ಗದೆಗಳ ಧರಿಸಿದವನೇ, ಕ್ಷಯರಹಿತನೇ, ಪುಂಡರೀಕಾಕ್ಷನೇ, ಪ್ರೇತಕ್ಕೆ ಮೋಕ್ಷವ ದಯಪಾಲುಸು.

ಇತಿ ಸಂಪ್ರಾರ್ಥನಾಮಂತ್ರಂ ಶ್ರಾದ್ಧಾಂತೇ ಪ್ರತ್ಯಹಂ ಪಠೇತ್ ।
ಸ್ನಾತ್ವಾ ಗತ್ವಾ ಗೃಹೇದತ್ತ್ವಾ ಗೋಗ್ರಾಸಂ ಭೋಜನಂ ಚರೇತ್ ॥೪೨॥

ಈ ಪ್ರಾರ್ಥನಾ ಮಂತ್ರವ ಪ್ರತಿದಿನವೂ ಶ್ರಾದ್ಧದ ಅಕೇರಿಲಿ ಹೇಳೆಕು. ಮತ್ತೆ ಮಿಂದಿಕ್ಕಿ ಮನಗೆ ಹೋಗಿ ಗೋಗ್ರಾಸವ ಕೊಟ್ಟು ಭೋಜನವ ಮಾಡೆಕು.

 

ಇತಿ ಶ್ರೀ ಗರುಡಪುರಾಣೇ ಸಾರೋದ್ಧಾರೇ ದಶಗಾತ್ರವಿಧಿನಿರೂಪಣಂನಾಮ ಏಕಾದಶೋsಧ್ಯಾಯಃ ॥

ಇಲ್ಲಿಗೆ ಗರುಡಪುರಾಣಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ಹತ್ತುದಿನಂಗಳ ಕರ್ಮಂಗಳ ನಿರೂಪಣೆ ಹೇಳ್ವ ಹನ್ನೊಂದನೇ ಅಧ್ಯಾಯ ಮುಗುದತ್ತು.

 

ಗದ್ಯರೂಪಲ್ಲಿ –

 

ಗರುಡ° ಹೇಳಿದ° – ಹೇ ಕೇಶವ!, ದಶಗಾತ್ರ ವಿಧಿಯ ಮಾಡಿರೆ ಎಂತ ಪುಣ್ಯ ಸಿಕ್ಕುತ್ತು, ಮಗ° ಇಲ್ಲದ್ರೆ ಅದರ ಆರು ಮಾಡೇಕ್ಕಾದ್ದು ಹೇಳ್ವ ವಿವರವ ಎನಗೆ ಹೇಳು.

ಭಗವಂತ° ಹೇಳಿದ° – ಹೇ ವೈನತೇಯ!, ನಿನಗೆ ದಶಗಾತ್ರ ವಿಧಿಯ ಹೇಳುತ್ತೆ, ಕೇಳು. ಆ ವಿಧಿಯ ಮಾಡುವದರಿಂದ ಸತ್ಪುತ್ರನಾದವ° ಪಿತೃಋಣಂದ ಮುಕ್ತನಾವುತ್ತ°. ಮಗನಾದವ° ಪಿತೃವಿನ ಮರಣ ಆದಪ್ಪಗ ಶೋಕವ ಬಿಟ್ಟಿಕ್ಕಿ ಧೈರ್ಯವ ತಾಳಿ ಸಾತ್ವಿಕ ಭಾವ ಸಮನ್ವಿತನಾಗಿ ಪಿಂಡದಾನಾದಿ ಕಾರ್ಯವ ಮಾಡೆಕು. ಕಣ್ಣೀರು ಹಾಕ್ಯೊಂಡು ಇಪ್ಪಲಾಗ. ಬಂಧುಗೊ ಸುರಿಸಿದ ಕಣ್ಣೀರ ಮತ್ತು ಶ್ಲೇಷ್ಮವ ಪ್ರೇತವು ಭುಂಜಿಸಲೇ ಬೇಕಾವ್ತು. ಹಾಂಗಾಗಿ ಕೂಗಿಯೊಂಡಿಪ್ಪಲಾಗ. ದುಃಖಪಟ್ಟುಗೊಂಡು ಕಣೀರು ಹಾಕುವದರಿಂದ ಎಂತ ಪ್ರಯೋಜನವೂ ಸಿಕ್ಕುತ್ತಿಲ್ಲೆ.

ಒಂದುವೇಳೆ, ಮನುಷ್ಯ° ಸಹಸ್ರಾರು ವರ್ಷ ಹಗಲೂ ಇರುಳು ಶೋಕಲ್ಲಿ ಮುಳುಗಿರೂ ಕೂಡ, ಮೃತ ಜೀವಿ ನಿಶ್ಚಯವಾಗಿ ಮತ್ತೆ ಎದ್ದು ಬತ್ತನಿಲ್ಲೆ. ಹುಟ್ಟಿದವಂಗೆ ಮರಣ ನಿಶ್ಚಯ, ಮರಣ ಹೊಂದಿದವಂಗೆ ಪುನಃ ಜನ್ಮವೂ ನಿಶ್ಚಯ. ಹಾಂಗಾಗಿ ಅದರ ತಪ್ಪುಸಲೆ ಆರಿಂದಲೂ ಎಡಿಯ ಹೇದು ಬುದ್ದಿವಂತ° ಶೋಕಪಡ್ಳಾಗ. ಮೃತ್ಯುವಶನಾದ ವ್ಯಕ್ತಿ ಪುನಃ ಇಲ್ಲಿಗೆ ಹಿಂತಿರುಗಿ ಬಪ್ಪಂತ ಏವುದೇ ದೈವೀ ಅಥವಾ ಮಾನುಷಿಕ ಉಪಾಯಂಗೊ ಇಲ್ಲೆ. ಒಂದುವೇಳೆ ಇಂತಹ ಅನಿವಾರ್ಯವ ತಪ್ಪುಸುವ ಉಪಾಯಂಗೊ ಏನಾರು ಇರ್ತಿದ್ರೆ ನಳಮಹರಾಜ, ರಾಮ, ಯುಧಿಷ್ಠಿರಾದಿಗೊ ಖಂಡಿತವಾಗಿಯೂ ದುಃಖ ಹೊಂದಿರುತ್ತಿತ್ತವಿಲ್ಲೆ. ಈ ಜಗತ್ತಿಲ್ಲಿ ಆರಿಂಗೂ ಆರೊಟ್ಟಿಂಗೆಯೂ ತನ್ನ ಶರೀರಕ್ಕಿಂತ ಹೆಚ್ಚಿನ ನಿಕಟ ಸಹವಾಸ ಇರ್ತಿಲ್ಲೆ. ಇನ್ನು ಮತ್ತೊಬ್ಬನ ಜೊತೆಲಿ ಹೇಗೆ ಇಪ್ಪಲೆಡಿಗು?!.

ಏವ ರೀತಿಲಿ ಒಬ್ಬ ಪ್ರಯಾಣಿಕ° ನೆರಳಿನ ಆಶ್ರಯವ ಪಡಕ್ಕೊಂಡು ವಿಶ್ರಾಂತಿಯ ಹೊಂದಿ ಮತ್ತೆ ಎದ್ದಿಕ್ಕಿ ಹೆರಟು ಹೋವ್ತನೋ, ಅದೇ ರೀತಿಲಿ ಪ್ರಪಂಚಲ್ಲಿ ಜೀವಿಗಳ ಪರಸ್ಪರ ಮಿಲನ ಅಪ್ಪದು. ಪುನಃ ಪ್ರಾರಬ್ಧಕರ್ಮಂಗಳ ಭೋಗಿಸಿ ತನ್ನ ಮಾರ್ಗ ಹಿಡ್ಕೊಂಡು ಹೆರಟು ಹೋವುತ್ತ°. ಉದಿಯಪ್ಪಗ ಏವ ಆಹಾರ ಪದಾರ್ಥ ಸಿದ್ಧಪಡಿಸಲಾವ್ತೋ ಅದು ಹೊತ್ತೋಪಗಪ್ಪಗ ಹಳಸಿ (ಹಾಳಾಗಿ/ ನಷ್ಟವಾಗಿ) ಹೋವುತ್ತು. ಹೀಂಗೆ ಹಳಸುವ ಅನ್ನಂದ ಪುಷ್ಟವಾದ ಈ ಶರೀರದ ಸ್ಥಿರತೆ ಮಾಂತ್ರ ಹೇಂಗೆ ಸಾಧ್ಯ?!

ಪಿತೃ ಮರಣಂದ ಉಂಟಪ್ಪ ದುಃಖಕ್ಕೆ ಈ ಮೇಗೆ ಹೇಳಿದ ವಿಚಾರವೇ ಔಷಧ ಸ್ವರೂಪವಾಗಿದ್ದು. ಹಾಂಗಾಗಿ ಇದರ ಕುರಿತು ಸಮಗ್ರ ಚಿಂತನೆ ಮಾಡಿ, ಅಜ್ಞಾನಂದ ಆಗಿಹೋಪ ಶೋಕವ ಬಿಟ್ಟಿಕ್ಕಿ, ಪುತ್ರನಾದವ° ತನ್ನ ಪಿತೃವಿನ ಕ್ರಿಯೆಗಳ ಶ್ರದ್ಧೆಂದ ಮಾಡೆಕು.

ಪುತ್ರನ ಅಭಾವಲ್ಲಿ (ಮಗ° ಇಲ್ಲದ್ರೆ) ಪತ್ನಿ, ಪತ್ನಿಯ ಅಭಾವಲ್ಲಿ ಸಹೋದರ°, ಸಹೋದರನ ಅಭಾವಲ್ಲಿ ಬ್ರಾಹ್ಮಣನ ಕರ್ಮವ ಶಿಷ್ಯ° ಅಥವಾ ಸಗೋತ್ರಿಗೊ (ಸಪಿಂಡ ಬಂಧುಗೊ) ಕ್ರಿಯೆಗಳ ಮಾಡೆಕು.  ವ್ಯಕ್ತಿ ಪುತ್ರಹೀನನಾಗಿದ್ದರೆ ಅವನ ಹಿರಿಯ ಅಥವಾ ಕಿರಿಯ ಸಹೋದರನ ಮಗ, ಮೊಮ್ಮಕ್ಕೊ ದಶಗಾತ್ರವಿಧಿ ಮೊದಲಾದವುಗಳ ಮಾಡೆಕು. ಒಬ್ಬನೇ ಅಪ್ಪನಿಂದ ಜನಿಸುವ ಸಹೋದರರಲ್ಲಿ, ಒಂದು ವೇಳೆ ಒಬ್ಬ° ಆದರೂ ಪುತ್ರವಂತನಾಗಿದ್ದರೆ ಅದೇ ಪುತ್ರನಿಂದ ಎಲ್ಲಾ ಸಹೋದರರೂ ಪುತ್ರವಂತರಾಗಿಬಿಡ್ತವು. ಹೀಂಗೇದು ಮನುವೇ ಹೇಳಿದ್ದ°.

ಒಂದು ವೇಳೆ,  ಒಬ್ಬ° ವ್ಯಕ್ತಿಗೆ ಅನೇಕ ಪತ್ನಿಯರಿದ್ದು ಅವರಲ್ಲಿ ಆರೊಬ್ಬನಾರೂ ಪುತ್ರವತಿಯಾಗಿದ್ದರೆ, ಆ ಪುತ್ರನಿಂದಲೇ ಅವೆಲ್ಲೋರು ಪುತ್ರವತಿಯಾಗಿಬಿಡ್ತವು. ಎಲ್ಲೋರೂ ಪುತ್ರಹೀನರಾಗಿದ್ರೆ, ಅವರ ಮಿತ್ರ ಪಿಂಡದಾನ ಮಾಡೆಕು. ಅಥವಾ ಎಲ್ಲರ ಅಭಾವ ಆದರೆ, ಪುರೋಹಿತನೇ ಕ್ರಿಯೆಗಳ ಮಾಡೆಕು. ಕ್ರಿಯೆಯ ಲೋಪ ಮಾಡ್ಳಾಗ. ಒಂದು ವೇಳೆ, ಯಾವುದೇ ಸ್ತ್ರೀ ಅಥವಾ ಪುರುಷ ತಮ್ಮ ಇಷ್ಟಮಿತ್ರನ ಔರ್ಧ್ವದೇಹಿಕ ಕ್ರಿಯೆಯ ಮಾಡಿರೆ, ಅನಾಥ ಪ್ರೇತದ ಸಂಸ್ಕಾರ ಮಾಡುವದರಿಂದ ಅವಕ್ಕೆ ಕೋಟಿ ಯಜ್ಞದ ಫಲ ಪ್ರಾಪ್ತಿಯಾವ್ತು.

ಪಿತೃವಿನ ದಶಗಾತ್ರಾದಿ ಕರ್ಮವ ಪುತ್ರನಾದವ° ಮಾಡೆಕು. ಒಂದು ವೇಳೆ ಜ್ಯೇಷ್ಠ ಪುತ್ರ° ಮರಣ ಹೊಂದಿದ್ದರೆ, ಅತಿ ಸ್ನೇಹ ಇದ್ದರೂ ಸಾನ ಅಪ್ಪ° ಅವನ ದಶಗಾತ್ರಾದಿ ಕ್ರಿಯೆಯ ಮಾಡ್ಳಾಗ. ಅನೇಕ ಪುತ್ರರು ಇದ್ದರೂ ಕೂಡ, ದಶಗಾತ್ರ, ಸಪಿಂಡನ ಹಾಂಗೂ ಅನ್ಯ ಷೋಡಶ ಶ್ರಾದ್ಧವ ಒಬ್ಬನೇ ಮಗ° ಮಾಡೆಕು. ಪಿತ್ರಾರ್ಜಿತ ಸಂಪತ್ತಿನ ಪಾಲುಹಂಚಿಕೆ ಆಗಿದ್ದರೂ ಕೂಡ ದಶಗಾತ್ರ, ಸಪಿಂಡನ ಮತ್ತೆ ಷೋಡಶ ಶ್ರಾದ್ಧವ ಒಬ್ಬನೇ ಮಾಡೆಕು. ಆದರೆ, ವಾರ್ಷಿಕ ಮುಂತಾದ ಶ್ರಾದ್ಧಂಗಳ ವಿಭಕ್ತ ಮಕ್ಕೊ ಬೇರೆ ಬೇರೆಯಾಗಿಯೇ ಮಾಡೆಕು.

ಹಾಂಗಾಗಿ, ಜ್ಯೇಷ್ಠಪುತ್ರ° ಒಂದು ಹೊತ್ತಾಣ ಭೋಜನ, ಭೂಮಿಲಿ ಶಯನ ಹಾಂಗೂ ಬ್ರಹ್ಮಚರ್ಯವ ಪಾಲಿಸಿ ಪವಿತ್ರನಾಗಿ ಭಕ್ತಿಭಾವಂದ ದಶಗಾತ್ರ ಮತ್ತು ಶ್ರಾದ್ಧ ವಿಧಿಗಳ ಮಾಡೆಕು. ಏಳು ಸರ್ತಿ ಭೂಪ್ರದಕ್ಷಿಣೆ ಬಂದರೆ ಎಂತ ಫಲ ಸಿಕ್ಕುತ್ತೋ ಅದೇ ಸಮಾನ ಫಲ ಅಬ್ಬೆ ಅಪ್ಪನ ಕರ್ಮಂಗಳ ಮಾಡುವದರಿಂದ ಮಗ° ಪಡೆತ್ತ°. ದಶಗಾತ್ರಂದ ಹಿಡುದು ವಾರ್ಷಿಕ ಶ್ರಾದ್ಧಪರ್ಯಂತ ಪಿತೃವಿನ ಕರ್ಮಂಗಳ ಮಾಡುವ ಮಗ° ಗಯಾಶ್ರಾದ್ಧದ ಫಲವ ಪಡೆತ್ತ°.

ಮಗ° ಬಾವಿ, ಕೆರೆ, ತೋಟ, ತೀರ್ಥಸ್ಥಳ ಅಥವಾ ದೇವಾಲಯದತ್ರೆ  ಮಧ್ಯಾಹ್ನ ಹೊತ್ತಿಂಗೆ ಹೋಗಿ ಮಂತ್ರರಹಿತವಾಗಿ ಮೀಯೆಕು. ಶುಚಿಯಾಗಿ ಒಂದು ವೃಕ್ಷದ ಬುಡಲ್ಲಿ ದಕ್ಷಿಣಾಭಿಮುಖವಾಗಿ ಕೂದೊಂಡು ಒಂದು ವೇದಿಕೆಯ ಸಿದ್ಧಪಡಿಸಿ, ಅದರ ಮೇಗೆ ಗೋಮಯ ಸಾರೆಕು. ಮತ್ತೆ ಆ ವೇದಿಕೆಯ ಮೇಗೆ ಪರ್ಣಾಸನವ ಹಾಕಿ ಅದರ ಮೇಗೆ ದರ್ಭೆಂದ ನಿರ್ಮಿಸಿದ ಬ್ರಾಹ್ಮಣ ಗೊಂಬೆಯ ಸ್ಥಾಪಿಸಿ, ಅರ್ಘ್ಯ ಪಾದ್ಯಾದಿಗಳಿಂದ ಅವನ ಪೂಜೆ ಮಾಡೆಕು. ಮತ್ತೆ “ಅತಸೀ ಪುಷ್ಪಸಂಕಾಶಂ…” ಮಂತ್ರವ ಹೇಳಿಗೊಂಡು ನಮಸ್ಕಾರ ಮಾಡೆಕು. ಇದಾದಿಕ್ಕಿ, ಅವನ ಎದುರಿಂಗೆ ಪಿಂಡಪ್ರದಾನ ಮಾಡ್ಳೆ ಕುಶ ಆಸನವ ಮಡಿಗಿ, ಅದರ ಮೇಗೆ ನಾಮ-ಗೋತ್ರ ಉಚ್ಚಾರಣೆ ಮಾಡಿಗೊಂಡು ಅನ್ನದ ಅಥವಾ ಹಿಟ್ಟಿನ ಪಿಂಡವ ಪ್ರದಾನಿಸೆಕು. ಲಾವಂಚ, ಚಂದನ, ತುಂಬೆಹೂಗು ಇತ್ಯಾದಿಗಳಿಂದ ಅರ್ಚಿಸೆಕು. ದೂಪ, ದೀಪ, ನೈವೇದ್ಯ, ತಾಂಬೂಲ (ಮುಖವಾಸ), ದಕ್ಷಿಣೆಯ ಸಮರ್ಪಿಸೆಕು. ಮತ್ತೆ, ಹಾಲು ಮತ್ತು ನೀರಿನ ಪಾತ್ರೆಲಿ ಕಾಕಗೆ ಅನ್ನವ ಮಡಿಗಿ, “…ನಾಮ್ನೇ ಪ್ರೇತಾಯ ಮುದ್ದತ್ತಮುಪತಿಷ್ಠತು” – ..ಎಂಬ ಹೆಸರಿನ ಪ್ರೇತಕ್ಕೆ ಆನು ಕೊಟ್ಟದ್ದು ಪ್ರಾಪ್ತಿಯಾಗಲಿ ಹೇದು ವರ್ಧಮಾನ ಜಲಾಂಜಲಿಯ ಕೊಡೆಕು. ಅಶನ, ವಸ್ತ್ರ, ಜಲ, ದ್ರವ್ಯ ಅಥವಾ ಬೇರೆ ಏವ ವಸ್ತುಗಳ ಕೊಟ್ರೂ ‘ಪ್ರೇತ’ ಶಬ್ದೋಚ್ಛಾರಣೆ ಮಾಡಿಯೇ ಮೃತಂಗೆ ಕೊಟ್ರೆ ಅವಂಗೆ ಅನಂತ ಫಲ ದೊರಕುತ್ತು.

ಸುರೂವಾಣ ದಿನ ವಿಧಿಪೂರ್ವಕವಾಗಿ ಏವ ಅನ್ನದ ಪಿಂಡವ ನೀಡಲಾವ್ತೋ, ಅದೇ ಪ್ರಕಾರ ವಿಧಿಪೂರ್ವಕವಾಗಿ ಒಂಬತ್ತು ದಿನಂಗಳವರೇಂಗೆ ಅದೇ ಪ್ರಕಾರದ ಅನ್ನಂದ ಪಿಂಡದಾನ ಮಾಡೆಕು. ಒಂಬತ್ತನೇ ದಿನ ಎಲ್ಲ ಸಗೋತ್ರಿಗೊ ಮೃತಜೀವಿಗೆ ಸ್ವರ್ಗಪ್ರಾಪ್ತಿಯಾಗಲಿ ಹೇಳ್ವ ಕಾಮನೆಂದ ತೈಲಾಭ್ಯಂಗವ ಮಾಡೆಕು ಮತ್ತೆ ಮನೆಯ ಹೆರ ಮಿಂದಿಕ್ಕಿ, ಗರಿಕ್ಕೆ ಮತ್ತು ಹೊದಳು ತೆಕ್ಕೊಂಡು, ಸ್ತ್ರೀಯರ ಮುಂದೆ ಮಾಡಿಗೊಂಡು ಮೃತಜೀವಿಯ ಮನೆಯೊಳ ಹೋಗಿ, “ಗರಿಕ್ಕೆ ಹುಲ್ಲಿನ ರೀತಿಲಿ ನಿನ್ನ ಕುಲ ವೃದ್ಧಿಯಾಗಲಿ ಹಾಂಗೂ ಹೊದಳಿನ ರೀತಿಲಿ ವಿಕಾಸ ಹೊಂದಲಿ” ಹೇದು ಹೇಳಿ, ಆ ಮನೆಲಿ ಗರಿಕ್ಕೆ ಮತ್ತು ಹೊದಳಿನ ಮನೆಯ ನಾಕೂ ದಿಕ್ಕೆ ಬಿಕ್ಕೆಕು.

ಹತ್ತನೇ ದಿನ ಮಾಂಸಂದ ಪಿಂಡದಾನ ಮಾಡೆಕು. ಆದರೆ ಕಲಿಯುಗಲ್ಲಿ ಮಾಂಸದ ಪಿಂಡದಾನ ನಿಷೇಧವಾದ್ದರಿಂದ ಉದ್ದಿನ ಮೂಲಕ ಪಿಂಡದಾನ ಮಾಡೆಕು. ( ಅಶ್ವಮೇಧಂ, ಗವಾಲಭ್ಯಂ, ಸನ್ಯಾಸಂ, ಪಲಪೈತೃಕಮ್ । ದೇವರೇಣ ಸುತೋತ್ಪತ್ತಿಂ ಕಲೌ ಪಂಚ ವಿವರ್ಜಯೇತ್ ॥ –  ಅಶ್ವಮೇಧ, ಗೋಮೇಧ, ಸನ್ಯಾಸ, ಶ್ರಾದ್ಧಲ್ಲಿ ಮಾಂಸ ಉಪಯೋಗ ಮತ್ತು ಮೈದುನನ ಮೂಲಕ ಪುತ್ರೋತ್ಪತ್ತಿ – ಇವೈದು ಕಲಿಯುಗಲ್ಲಿ ನಿಷೇಧ). ಹತ್ತನೇ ದಿನ ಬಂಧುಗಳದವು ಮುಂಡನ ಕ್ಷೌರಕರ್ಮವ ಮಾಡಿಸಿಗೊಳ್ಳೆಕು. ಕ್ರಿಯೆಗಳ ಮಾಡುವ ಪುತ್ರನೂ ಕೂಡ ಪುನಃ ಮುಂಡನ ಮಾಡಿಸಿಗೊಳ್ಳೆಕು. ಹತ್ತು ದಿನಂಗಳವರೇಂಗೆ ಒಬ್ಬ ಬ್ರಾಹ್ಮಣಂಗೆ ಮೃಷ್ಟಾನ್ನ ಭೋಜನವ ಮಾಡುಸೆಕು ಮತ್ತೆ ಕೈಮುಗುದು ಭಗವಂತ° ವಿಷ್ಣುವಿನ ಧ್ಯಾನ ಮಾಡಿಗೊಂಡು ಪ್ರೇತದ ಮುಕ್ತಿಗಾಗಿ ಈ ಪ್ರಾರ್ಥನೆಯ ಮಾಡೆಕು – “ಅತಸೀ ಪುಷ್ಪಸಂಕಾಶಂ ಪೀತವಾಸಸಮಚ್ಯುತಮ್….” – “ಅಗಸೆಹೂವಿನ ಕಾಂತಿಗೆ ಸಮಾನ ಕಾಂತಿಯಿಪ್ಪ, ಪೀತವಸ್ತ್ರ ಧಾರಣೆ ಮಾಡಿದ, ಅಚ್ಯುತ°, ಭಗವಂತ°, ಗೋವಿಂದಂಗೆ ಆರು ನಮಸ್ಕರಿಸುತ್ತವೋ, ಅವಕ್ಕೆ ಏವುದೇ ಪ್ರಕಾರದ ಭಯ ಉಂಟಾವುತ್ತಿಲ್ಲೆ.  ಹೇ ಆದಿ ಅಂತ್ಯ ರಹಿತನೇ, ಶಂಖ-ಚಕ್ರ ಗದೆ ಧಾರಣೆ ಮಾಡಿದ, ಅವಿನಾಶಿ ಹಾಂಗೂ ಕಮಲಕ್ಕೆ ಸಮಾನ ಕಣ್ಣುಗೊ ಇಪ್ಪ ದೇವ ವಿಷ್ಣುವೇ!, ನೀನು ಪ್ರೇತಕ್ಕೆ ಮೋಕ್ಷ ನೀಡು”. ಈ ಪ್ರಾರ್ಥನಾ ಮಂತ್ರವ ಪ್ರತಿದಿನವೂ ಶ್ರಾದ್ಧದ ಕೊನೆಲಿ ಹೇಳೆಕು. ಮತ್ತೆ ಮಿಂದಿಕ್ಕಿ ಮನಗೆ ಹೋಗಿ, ಗೋಗ್ರಾಸ ಕೊಟ್ಟಿಕ್ಕಿ, ಭೋಜನವ ಮಾಡೆಕು.

ಇಲ್ಲಿಗೆ ಗರುಡ ಪುರಾಣಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ಹತ್ತು ದಿನಗಳ ಕರ್ಮಂಗಳ ನಿರೂಪಣೆ ಹೇಳ್ವ ಹನ್ನೊಂದನೇ ಅಧ್ಯಾಯ ಮುಗುದತ್ತು. 

 

 

[ಚಿಂತನೀಯಾ –

‘ಜಾತಸ್ಯ ಹಿ ಧ್ರುವೋ ಮೃತ್ಯುಃ.. ‘ ಹುಟ್ಟಿದವಂಗೆ ಸಾವು ನಿಶ್ಚಿತ, ಸತ್ತವಂಗೆ ಮೋಕ್ಷ ಸಿಕ್ಕದ್ರೆ ಪುನಃ ಹುಟ್ಟು ನಿಶ್ಚಿತ ಹೇದು ಭಗವಂತ° ಹೇಳಿದ್ದರ ದ್ರಷ್ಟಾರರು ಹಲವು ಸರ್ತಿ ಹೇಳಿ ನಮ್ಮ ಎಚ್ಚರಿಸಿದ್ದವು. ಹಾಂಗಾಗಿ ಮರಣ ಹೊಂದಿದವನ ಗ್ರೇಶಿಗೊಂಡು ಕಣ್ಣೀರು ಹಾಕ್ಯೊಂಡು ಕೂಪದು ವೃಥಾ ಶರೀರ ದಂಡನೆ ಅಕ್ಕಷ್ಟೇ ವಿನಾ ಕೂಗ್ಯೊಂಡು ಕೂಬದರಿಂದ ಸತ್ತವನ ಮರಳಿ ಪಡವಲೆ ಸಾಧ್ಯವೇ ಇಲ್ಲೆ. ಅದರ ಬದಲಿಂಗೆ ಮೃತನ ಸದ್ಗತಿಗಾಗಿ ಶ್ರದ್ಧೆಂದ ವಿಧಿಪೂರ್ವಕ ಶ್ರಾದ್ಧವ ಆಚರುಸುವುದರಿಂದ ಮೃತನ ಸದ್ಗತಿಗಾಗಿ ಕ್ಷೇಮ ಆವ್ತು, ಶ್ರಾದ್ಧವ ಆಚರಿಸಿದವಂಗೂ ಕ್ಷೇಮ ಲಭುಸುತ್ತು ಹೇದು ಭಗವಂತನ ಆದೇಶ. ಕ್ಷಣಿಕವಾದ ದೇಹಸಂಬಂಧದ ಮೋಹಂದ ಅಜ್ಞಾನಾವೃತರಾಗಿ ದುಃಖ ಪಡುವದು ಮೂಢತನ. ಈ ಸಂಬಂಧ ಹೇಳ್ವದು ಪಥಿಕನ ದಾರಿಲಿ ಸಿಕ್ಕಿದ ನೆರಳಿನ ಆಶ್ರಯದಷ್ಟೇ ಕ್ಷಣಿಕ ವಿರಾಮ. ಪಥಿಕ ರಜಾ ಕಳುದು ಮತ್ತೆ ತನ್ನ ದಾರಿ ಹಿಡ್ಕೊಂಡು ಮುಂದೆ ಸಾಗುತ್ತ°. ಹಾಂಗಾಗಿ ಅತಿಯಾದ ಮೋಹ ಲೇಸಲ್ಲ ಹೇದು ಭಗವಂತನ ಸ್ಪಷ್ಟ ಆದೇಶ.

ನಮ್ಮಿಂದಲೇ ಎಲ್ಲವೂ ಅಪ್ಪದು, ನಾವೇ ಎಲ್ಲವನ್ನೂ ಮಾಡುವದು ಹೇಳಿ ಗ್ರೇಶುವದೂ ತಪ್ಪು. ನಮ್ಮಿಂದ ಭಗವಂತ° ಮಾಡುಸುವದು ಹೇದು ತಿಳ್ಕೊಂಡು ಅದರ ಸುಖದುಃಖವ ಭಗವಂತಂಗೇ ಅರ್ಪಿಸಿರೆ ನವಗೆ ಸುಖದುಃಖದ ಚಿಂತೆ ಅಗತ್ಯ ಇಲ್ಲೆ. ಸುಖದುಃಖವ ಸಮಾನವಾಗಿ ಅರ್ಥೈಸಿಗೊಂಡವಂಗೆ ಯಾವ ತಲೆಬೇನೆಯೂ ಇಲ್ಲೆ. ನಮ್ಮಿಂದ ಮಾಡ್ಳೆ ಎಡಿಗಪ್ಪದು ಎಂತದೂ ಇಲ್ಲೆ, ಭಗವಂತನಿಂದ ಮಾಡ್ಳೆ ಎಡಿಗಾಗದ್ದೂ ಎಂತದೂ ಇಲ್ಲೆ. ಹಾಂಗಾಗಿ “ಯಥಾ ಯೋಗ್ಯಂ ತಥಾ ಕುರು” ಹೇದು ಅವನ ಪ್ರಾರ್ಥನೆಮಾಡುವದೇ ಕ್ಷೇಮ.

ಮರಣ ಹೊಂದಿದವನ ಬಗ್ಗೆ ತಿರಸ್ಕಾರ ಭಾವನೆಯ ಬಿಟ್ಟು ಅವನ ಸದ್ಗತಿ ಕಾರ್ಯವ ಮಾಡುವದರಿಂದ ನವಗೂ ಕ್ಷೇಮ ಇದ್ದು ಹೇಳ್ವದರ ಭಗವಂತ° ಇಲ್ಲಿ ಹೇಳಿದ್ದ°. ಮೃತನ ಮಗನಿಂದ ಹಿಡುದು ಶಿಷ್ಯನಾದವನೂ, ಮಿತ್ರನಾದವನೂ ವಾ ಪುರೋಹಿತನೂ ಕೂಡ ಮೃತನ ಸದ್ಗತಿಯ ಮಾಡ್ಳೆ ಅರ್ಹರೇ ಅಪ್ಪು. ಒಂದು ಜೀವಿಯ ಪ್ರೇತತ್ವಂದ ಮುಕ್ತಿಯ ದೊರಕಿಸಿ ಕೊಟ್ರೆ ಅದರಿಂದ ಉತ್ತಮ ಫಲ ಇದ್ದು ಹೇಳ್ವದು ನಾವಿಲ್ಲಿ ಅರ್ಥೈಸಿಗೊಂಬಲಕ್ಕು. ಒಟ್ಟಿಲ್ಲಿ ಮನುಷ್ಯ° ಮನುಷ್ಯನ ಗೌರವಾದರಣೆಂದ ಕಂಡುಗೊಳ್ಳೆಕು ಹೇಳ್ವ ತತ್ವವ ನಾವಿಲ್ಲಿ ತಿಳ್ಕೊಂಬಲಕ್ಕು. ಪ್ರತಿಯೊಂದರಲ್ಲೂ ಪ್ರತಿಯೊಬ್ಬನಲ್ಲೂ ಇಪ್ಪದು ಪರಮಾತ್ಮ, ಅವನೇ ಸರ್ವಸ್ವ ಹೇದು ತಿಳ್ಕೊಂಡು, ಎಲ್ಲವೂ ಅವನ ಪೂಜೆ ಹೇಳಿ ತಿಳಿವದೇ ಬುದ್ಧಿವಂತಿಕೆ. 

ಅಕ್ಷಯ್ಯನಾದ, ಆದಿ ಅಂತ್ಯಂಗಳಿಲ್ಲದ, ಸರ್ವಗುಣಪರಿಪೂರ್ಣನಾದ, ಸನಾತನನಾದ ಆ ಭಗವಂತನ ಆಶ್ರಯಿಸಿದವಂಗೆ ಏವತ್ತೂ ಭಯ ಇಲ್ಲೆ. ಪರಮಾತ್ಮ ಎಲ್ಲೋರಿಂಗೂ ಆ ಸದ್ಬುದ್ಧಿಯ ಪ್ರಚೋದಿಸಲಿ ಹೇದುಗೊಂಡು ಈ ಭಾಗಕ್ಕೆ ಹರೇ ರಾಮ.]  

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಕೆ. ವೆಂಕಟರಮಣ ಭಟ್ಟ

  ಹತ್ತು ದಿನದ ವರೇಗಾಣ ಎಲ್ಲಾ ಕಾರ್ಯಂಗಳನ್ನೂ ಸವಿಸ್ತಾರವಾಗಿ ತಿಳಿಸಿದ್ದಕ್ಕೆ ಧನ್ಯವಾದ. ಬೆಂಗಳೂರಿಲ್ಲಿ ಪಿಂಡ ಮಡುಗಲೆ ದರ್ಭೆಯಲ್ಲದ್ದೆ, ವಿಷ್ಣು ಪಾದ (ತಾಂಮ್ರದ ಪಾದದ ರೂಪ) ವನ್ನೂ ಉಪಯೋಗಿಸುತ್ತವು. ಅದರ ವಿಶೇಷತೆ ತಿಳಿಸಿ. ಹರೇ ರಾಮ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ° Reply:

  ಹರೇ ರಾಮ.

  1. ಅವು ಶಿವಳ್ಳಿಯಕ್ಕ ಅಥವಾ ಶಿವಳ್ಳಿಯ ಪ್ರಭಾವಲ್ಲಿಪ್ಪವಾಯ್ಕು. ಅವಕ್ಕೆ ನಿತ್ಯಪೂಜೆಗೂ ವಿಷ್ಣುಪಾದ ವಿಶೇಷ. (ಅಲ್ಲಾ… ಇದ್ದರೆ ನವಗೂ ಆಗದ್ದಿಲ್ಲೆಪ್ಪ. ವಿಶೇಷವೇ. ಶಾಲಿಗ್ರಾಮದ ಬದಲಿಂಗೂ ಉಪಯೋಗುಸಲಕ್ಕದ)

  2. ಸೂಕ್ಷ್ಮಲ್ಲಿ ಹೇಳ್ತದಾದರೆ – ಪಿತೃಮುಕ್ತಿಗಾಗಿ ಗಯಾಶ್ರಾದ್ಧ ಮಾಡೆಕು ಹೇಳ್ತದು ಶಾಸ್ತ್ರ. (ಗಯಾಯಾಂ ಧರ್ಮಪೃಷ್ಠೇಷು ಸದಸಿ ಬ್ರಹ್ಮಣಸ್ಪತೇ | ಗಯಾಶೀರ್ಷೇ ವಟೇ ಚೈವ ಪಿತೄಣಾಂ ದತ್ತಮಕ್ಷಯಂ || ಶಮೀಪತ್ರಪ್ರಮಾಣೇನ ಪಿಂಡಂ ದದ್ಯಾದ್ಗಯಾಶಿರೇ | ಉದ್ಧರೇತ್ಸಪ್ತ ಗೋತ್ರಾಣಿ ಕುಲಮೇಕೋತ್ತರಂ ಶತಂ || – ವಿವರ ಮುಂದೆ ‘ಗಯಾಶ್ರಾದ್ಧ ಮಹತ್ವ’ ಹೇಳ್ತ ಭಾಗಲ್ಲಿ ನೋಡುವೋ°). ಗಯಾಸುರನ ಮಹಾವಿಷ್ಣು ತನ್ನ ಪಾದಂಗಳಿಂದ ಒತ್ತಿಹಿಡುದು ಸಂಹರಿಸಿದ ಆ ಜಾಗಗೆ ಅಲ್ಲಿಂದ ಮತ್ತೆ ‘ಗಯಾ’ ಹೇಳ್ತ ಹೆಸರು ಬಂತು. ಮೂರು ಹೊಡೆಂದ ಬೆಟ್ಟಂಗಳಿಂದಲೂ ಒಂದು ಹೊಡೆಂದ ಫಲ್ಗೂ ನದಿಂದಲೂ ಆವೃತವಾದ ಈ ಕ್ಷೇತ್ರ ಬಹು ಪಾವನ ಹೇದು ಪರಿಗಣಿಸಲ್ಪಟ್ಟಿದು. ಆ ಗಯಾಸುರ ಮಹಾಮಹಿಮಾವಂತ ಆಗಿದ್ದು ಅವನ ನೋಡುವವರ ಅವನ ಮುಟ್ಟುವವರ ಪಾಪಂಗೊ ಎಲ್ಲ ಕಳದು ಹೋಗಿ ಪಾವನ ಅಪ್ಪಂತಹ ವಿಶೇಷತೆ ಅವನಲ್ಲಿ ಇದ್ದತ್ತು. ದೇವತೆಗೊ ಆ ಗಯಾಸುರನ ಮರಣಾನಂತರ ಅವನ ಕಾಯಲ್ಲಿ ನೆಲೆಸುತ್ತೆಯೋ ಹೇದು ಮಾತು ಕೊಟ್ಟಿತ್ತಿದ್ದವು. ಮರಣಾನಂತರ ಆ ಗಯಾ ಸಣ್ಣ ಸಣ್ಣ ಗುಡ್ಡೆಗಳಾಗಿ ಪರಿವರ್ತಿತನಾದನಡ. ಹಾಂಗಿ ಆ ಜಾಗೆ ಪುಣ್ಯಸ್ಥಳವಾಗಿಹೋತು. ಅಲ್ಲಿ ಹೋದವರ ಪಾಪಂಗೊ ನಿವಾರಣೆ ಆವ್ತು ಹೇಳ್ತ ನಂಬಿಕೆ.
  ಫಲ್ಗೂ ನದಿ ಹರಿವ ಆ ಪರಿಸರಲ್ಲಿ ಅನೇಕ ಮಂದಿರಂಗೊ, ಸ್ನಾನಘಟ್ಟಂಗೊ ಇದ್ದು. ಅಲ್ಲಿ ಮಿಂದು ಪಿತೃಕಾರ್ಯವ ಮಾಡಿರೆ ಪಿತೃಗಳ ಪಾಪಂಗೊ ನೀಗಿ ಅವಕ್ಕೆ ಮುಕ್ತಿ ಸಿಕ್ಕುತ್ತು ಹೇಳ್ತದು ನಂಬಾಣಿಕೆ. ಹಾಂಗೇ ಅಲ್ಲಿ ಅಕ್ಷಯವಟ ಹೇಳ್ತ ಒಂದು ಆಲದ ಮರ ಬಹುಪವಿತ್ರ ಹೇದು ಪರಿಗಣಿಸಲ್ಪಟ್ಟಿದು. ಇವೆಲ್ಲವಕ್ಕೂ ಹೆಚ್ಹಿನ ಪುಣ್ಯಸ್ಥಳ ಹೇದು ಅಲ್ಲಿ ‘ವಿಷ್ಣುಪಾದ’ ದೇವಸ್ಥಾನ. ಗಯಾಸುರನ ನೆಲಕ್ಕಂಗೆ ಒತ್ತಿಹಿಡುದ ವಿಷ್ಣುವಿನ ಪಾದ ಆ ಶಿಲೆಲಿ ಕಾಣುತ್ತಡ. ಹಾಂಗಾಗಿ ಆ ಪವಿತ್ರವಾದ ವಿಷ್ಣುಪಾದಲ್ಲಿ ಶ್ರಾದ್ಧ ಮಾಡಿರೆ ಬಹುವಿಶೇಷ, ಮೋಕ್ಷದಾಯಕ ಹೇಳ್ತದು ನಂಬಾಣಿಕೆ.

  ಈ ವಿಷ್ಣುಪಾದದ ಪ್ರತೀಕವಾಗಿ ಊರ್ಲಿ ವಿಷ್ಣುಪಾದ ಮಡಿಗಿ ಪೂಜೆ ಮಾಡುಸ್ಸು, ಪಿಂಡಪ್ರದಾನ ಮಾಡುತ್ಸು. ಅಲ್ಲಿಗೆ ಹೋಪಲೆ ಎಡಿಯದ್ರೂ ಇದನ್ನೇ ಆ ವಿಷ್ಣುಪಾದವಾಗಿ ನಂಬಿಗೊಂಬದು. ನಂಬಾಣಿಕೆಯೇ ಅಲ್ಲದ ನಮ್ಮ ಕರ್ಮಕ್ಕೆಲ್ಲ ಆಧಾರ. ಹಾಂಗಾಗಿ ನಮ್ಮ ಊರ್ಲಿ ಪರಿಕರ್ಮಿಗಳೂ ಬಟ್ಟಮಾವಂಗೆ ಉಪಕ್ಕಾರಕ್ಕಾತು ಹೇದು ಸ್ರುವತಟ್ಟೆ ಒಂದು ಸೆಟ್ಟು ಚೀಲಲ್ಲಿ ಮಡಿಕ್ಕೊಂಡಿಪ್ಪಾಂಗೆ! ಶಿವಳ್ಳಿಯೋರು ವಿಷ್ಣುಪಾದ ಚೀಲಲ್ಲಿ ಒಂದು ಸೆಟ್ಟು ಮಡಿಕ್ಕೊಂಡಿರ್ತವು. ಪೂಜಗೂ ಆವ್ತು, ಪಿಂಡ ಹಾಕಲೂ ಆವ್ತು. ಒಟ್ಟಿಲ್ಲಿ ಕೃಷ್ಣಾರ್ಪಣಮಸ್ತು.

  [Reply]

  VA:F [1.9.22_1171]
  Rating: +2 (from 2 votes)
 2. ಕೆ. ವೆಂಕಟರಮಣ ಭಟ್ಟ

  ಬಾವಾ, ತುಂಬಾ ಸಂತೋಷ ಆತು ವಿವರಣೆ ಕೇಳಿ. ನಮ್ಮ ಹಿರಿಯರು ದೂರ ಪ್ರಯಾಣ ಮಾಡ್ಳೆ ಸಾಧ್ಯವಿಲ್ಲದ್ದವಕ್ಕಾಗಿ ಹಲವಾರು ಹೀಂಗಿಪ್ಪ ಅನುಕೂಲಂಗಳ ಮಾಡಿದ್ದು, ಯಾವುದನ್ನೂ ತಿಳುಕ್ಕೊಂಡು ಮಾಡಿದರೆ ಶ್ರೇಷ್ಟ ಹೇಳುವ ಉದ್ದೇಶ. ವಿವರಣೆಗೆ ಧನ್ಯವಾದ. ಹರೇ ರಾಮ.

  [Reply]

  VA:F [1.9.22_1171]
  Rating: +2 (from 2 votes)
 3. durgasharma korikkar

  ಮನುಷ್ಯನ ಮರಣದ ನಂತ್ರದ ಕ್ರಿಯೆಂಗಳ ಬಗ್ಗೆ ಬಹಳ ಕುತೂಹಲ ಇದ್ದತ್ತು. ಸರಳವಾಗಿ ವಿವರಿಸಿ ಕುತೂಹಲ ತಣಿಶಿದ್ದಕ್ಕೆ ಧನ್ಯವಾದ ಅಪ್ಪಚ್ಚಿ…

  [Reply]

  VA:F [1.9.22_1171]
  Rating: +2 (from 2 votes)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಮೃತನ ಸದ್ಗತಿಗೆ ಆರಾರು ಉತ್ತರ ಕ್ರಿಯಾದಿಗಳ ಮಾಡ್ಲೆ ಅರ್ಹತೆ ಹೊಂದಿದ್ದವು ಹೇಳಿ ವಿವರವಾದ ಲೇಖನ.
  ಧನ್ಯವಾದಂಗೊ

  [Reply]

  VA:F [1.9.22_1171]
  Rating: +2 (from 2 votes)
 5. ಪವನಜಮಾವ

  ಇತ್ತೀಚೆಗೆ ಎನ್ನ ಅಮ್ಮ ತೀರಿಹೋದವು. ಗೋಕರ್ಣಲ್ಲಿ ಕೂತುಕೊಂಡು ನಿಂಗೊ ಬರೆದ ಗರುಡ ಪುರಾಣದ ಎಲ್ಲ ಅಧ್ಯಾಯಂಗಳ ಓದಿದೆ. ತುಂಬ ಉಪಕಾರ ಆತು. ಸುಮಾರು ಅನುಮಾನಂಗೊ ಪರಿಹಾರ ಆತು. ಆದಷ್ಟು ಬೇಗ ಉಳಿದ ಎಲ್ಲ ಅಧ್ಯಾಯಂಗೊಳ ಹಾಕಿ. ನಿನ್ನೆಯಷ್ಟೆ ಎಲ್ಲ ಮುಗಿಸಿ ಬೆಂಗಳೂರಿಂಗೆ ಬಂದೆ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ° Reply:

  ಧನ್ಯೋsಸ್ಮಿ ಮಾವ°. ಎನ್ನ ಕೆಲಸ ಸಾರ್ಥಕ ಆತು. ಇಲ್ಲಿ ತಿಳಿಶಿದ್ದಕ್ಕೆ ಧನ್ಯವಾದ. ಕೃಷ್ಣಾರ್ಪಣಮಸ್ತು.

  ಅಮ್ಮನ ಚೇತನಕ್ಕೆ ಸದ್ಗತಿ ಪ್ರಾಪ್ತಿಯಾಗಲಿ ಹೇದು ಹರೇ ರಾಮ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುಭಗವಸಂತರಾಜ್ ಹಳೆಮನೆಶ್ಯಾಮಣ್ಣಶ್ರೀಅಕ್ಕ°ಸರ್ಪಮಲೆ ಮಾವ°ವಾಣಿ ಚಿಕ್ಕಮ್ಮಕೇಜಿಮಾವ°ಜಯಶ್ರೀ ನೀರಮೂಲೆvreddhiಗೋಪಾಲಣ್ಣಪುತ್ತೂರಿನ ಪುಟ್ಟಕ್ಕಬಂಡಾಡಿ ಅಜ್ಜಿಪುತ್ತೂರುಬಾವವಿದ್ವಾನಣ್ಣಡಾಮಹೇಶಣ್ಣಅಜ್ಜಕಾನ ಭಾವಚೂರಿಬೈಲು ದೀಪಕ್ಕಎರುಂಬು ಅಪ್ಪಚ್ಚಿಕಜೆವಸಂತ°ಶರ್ಮಪ್ಪಚ್ಚಿಶೇಡಿಗುಮ್ಮೆ ಪುಳ್ಳಿಗಣೇಶ ಮಾವ°ಡಾಗುಟ್ರಕ್ಕ°ಶೀಲಾಲಕ್ಷ್ಮೀ ಕಾಸರಗೋಡುಯೇನಂಕೂಡ್ಳು ಅಣ್ಣಮಾಷ್ಟ್ರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ