ಗರುಡ ಪುರಾಣ – ಅಧ್ಯಾಯ 12

December 12, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದವಾರದ ಹನ್ನೊಂದನೇ ಅಧ್ಯಾಯಲ್ಲಿ ದಶಗಾತ್ರವಿಧಿಯ ಬಗ್ಗೆ ಭಗವಂತ° ನಿರೂಪಣೆ ಮಾಡಿದ್ದ°. ಮುಂದೆ –

ಗರುಡ ಪುರಾಣಮ್                                                                              ಗರುಡ ಪುರಾಣ

ಅಥ ದ್ವಾದಶೋsಧ್ಯಾಯಃ                                                                    ಅಧ್ಯಾಯ 12

ಏಕಾದಶದಿನವಿಧಿನಿರೂಪಣಮ್                                                            ಹನ್ನೊಂದನೇ ದಿನಾಣ ಕರ್ಮದ ನಿರೂಪಣೆ

 

ಗರುಡ ಉವಾಚimages
ಏಕಾದಶದಿನಸ್ಯಾಪಿ ವಿಧಿಂ ಬ್ರೂಹಿ ಸುರೇಶ್ವರ ।
ವೃಷೋತ್ಸರ್ಗವಿಧಾನಂ ಚ ವದ ಮೇ ಜಗದೀಶ್ವರ ॥೦೧॥

ಗರುಡ ಹೇಳಿದ°- ಹೇ ಸುರೇಶ್ವರ!, ಹನ್ನೊಂದನೇ ದಿನಾಣ ವಿಧಿಯ ಹೇಳು. ಹೇ ಜಗದೀಶ್ವರ!, ವೃಷೋತ್ಸರ್ಗ ವಿಧಾನವನ್ನೂ ಎನಗೆ ಹೇಳು.

ಶ್ರೀ ಭಗವಾನುವಾಚ
ಏಕಾದಶೇsಹ್ನಿ ಗಂತವ್ಯಂ ಪ್ರಾತರೇವ ಜಲಾಶಯೇ ।
ಔರ್ಧ್ವದೇಹಿಕ್ರಿಯಾ ಸರ್ವಾ ಕರಣೀಯಾ ಪ್ರಯತ್ನತಃ ॥೦೨॥

ಭಗವಂತ° ಹೇಳಿದ° – ಹನ್ನೊಂದನೇ ದಿನ ಪ್ರಾತಃಕ್ಕಾಲಲ್ಲಿಯೇ ಜಲಾಶಯದ ಹತ್ರಂಗೆ ಹೋಯೆಕು. ಮತ್ತೆ ಎಲ್ಲ ಔರ್ಧ್ವದೇಹಿಕ ಕ್ರಿಯೆಗಳನ್ನೂ ಪ್ರಯತ್ನ ಪೂರ್ವಕವಾಗಿ ಮಾಡೆಕು.

ನಿಮಂತ್ರಯೇದ್ಬ್ರಾಹ್ಮಣಾಂಶ್ಚ ವೇದಶಾಸ್ತ್ರಪರಾಯಣಮ್ ।
ಪ್ರಾರ್ಥಯೇತ್ಪ್ರೇತಮುಕ್ತಿಂ ಚ ನಮಸ್ಕೃತ್ಯ ಕೃತಾಂಜಲಿಃ ॥೦೩॥

ವೇದಶಾಸ್ತ್ರಪಾರಂಗತರಾದ ಬ್ರಾಹ್ಮಣರ ಆಮಂತ್ರುಸೆಕು ಮತ್ತೆ ಕೈಜೋಡುಸಿ ನಮಸ್ಕರಿಸಿಗೊಂಡು ಪ್ರೇತಕ್ಕೆ ಮುಕ್ತಿಯ ಪ್ರಾರ್ಥಿಸೆಕು.

ಸ್ನಾನಸಂಧ್ಯಾದಿಕಂ ಕೃತ್ವಾ ಹ್ಯಾಚಾರ್ಯೋsಪಿ ಶುಚಿರ್ಭವೇತ್ ।
ವಿಧಾನಂ ವಿಧಿವತ್ಕುರ್ಯಾದೇಕಾದಶದಿನೋಚಿತಮ್ ॥೦೪॥

ಮೀಯಾಣ, ಸಂಧ್ಯಾವಂದನೆ ಇತ್ಯಾದಿಗಳ ಮಾಡಿಕ್ಕಿ, ಆಚಾರ್ಯನೂ ಶುಚಿಯಾಯೆಕು ಮತ್ತೆ ಹನ್ನೊಂದನೇ ದಿನಾಣ ಕರ್ಮವ ವಿಧಿಪೂರ್ವಕವಾಗಿ ಮಾಡೆಕು.

ಅಮಂತ್ರಂ ಕಾರಯೇಚ್ಛ್ರಾದ್ಧಂ ದಶಾಹಂ ನಾಮಗೋತ್ರತಃ ।
ಏಕಾದಶೇsಹ್ನಿ ಪ್ರೇತಸ್ಯ ದದ್ಯಾತ್ಪಿಂಡಂ ಸಮಂತ್ರಕಮ್ ॥೦೫॥

ಹತ್ತು ದಿನವರೆಂಗೆ ಮಂತ್ರ ಇಲ್ಲದ್ದೆ ನಾಮಗೋತ್ರಂಗಳ ಹೇಳ್ಯೊಂಡು ಶ್ರಾದ್ಧ ಮಾಡೆಕು. ಹನ್ನೊಂದನೇ ದಿನ ಮಂತ್ರ ಪೂರ್ವಕವಾಗಿ ಪ್ರೇತಕ್ಕೆ ಪಿಂಡವ ಕೊಡೆಕು.

ಸೌವರ್ಣಂ ಕಾರಯೇದ್ವಿಷ್ಣುಂ ಬ್ರಹ್ಮಾಣಂ ರೌಪ್ಯಕಂ ತಥಾ ।
ರುದ್ರಸ್ತಾಮ್ರಮಯಃ ಕಾರ್ಯೋ ಯಮೋ ಲೋಹಮಯಃ ಖಗ ॥೦೬॥

ಏ ಪಕ್ಷಿಯೇ!, ಚಿನ್ನಂದ ವಿಷ್ಣುವಿನ ಪ್ರತಿಮೆಯನ್ನೂ, ಬೆಳ್ಳಿಂದ ಬ್ರಹ್ಮನ, ಮತ್ತೆ, ತ್ರಾಮ್ರಂದ ರುದ್ರನ, ಕಬ್ಬಿಣಂದ ಯಮನ ಪ್ರತಿಮೆಯನ್ನೂ ಮಾಡೆಕು.

ಪಶ್ಚಿಮೇ ವಿಷ್ಣುಕಲಶಂ ಗಂಗೋದಕಸಮನ್ವಿತಮ್ ।
ತಸ್ಯೋಪರಿ ನ್ಯಸೇದ್ವಿಷ್ಣುಂ ಪೀತವಸ್ತ್ರೇಣ ವೇಷ್ಟಿತಮ್ ॥೦೭॥

ಪಡುಹೊಡೆಲಿ ಗಂಗೋದಂದ ತುಂಬಿದ ವಿಷ್ಣು ಕಲಶವನ್ನೂ, ಅದರ ಮೇಗೆ ಪೀತಾಂಬರವ (ಹಳದಿ ವಸ್ತ್ರ) ಧರಿಸಿದ ವಿಷ್ಣು ಪ್ರತಿಮೆಯನ್ನೂ ಮಡುಗೆಕು.

ಪೂರ್ವೇ ತು ಬ್ರಹ್ಮಕಲಶಂ ಕ್ಷೀರೋದಕಸಮನ್ವಿತಮ್ ।
ಬ್ರಹ್ಮಾಣಂ ಸ್ಥಾಪಯೇತ್ತತ್ರ ಶ್ವೇತವಸ್ತ್ರೇಣ ವೇಷ್ಟಿತಮ್ ॥೦೮॥

ಮೂಡಹೊಡೆಲಿ ಹಾಲು ಮತ್ತೆ ನೀರು ತುಂಬಿದ ಬ್ರಹ್ಮಕಲಶವನ್ನೂ, ಅಲ್ಲಿ ಶ್ವೇತಾಂಬರ ಧರಿಸಿದ ಬ್ರಹ್ಮನ ಮೂರ್ತಿಯನ್ನೂ ಮಡುಗೆಕು.

ಉತ್ತರಸ್ಯಾಂ ರುದ್ರಕುಂಭಂ ಪೂರಿತಂ ಮಧುಸರ್ಪಿಷಾ ।
ಶ್ರೀರುದ್ರಂ ಸ್ಥಾಪಯೇತ್ತತ್ರ ರಕ್ತವಸ್ತ್ರೇಣ ವೇಷ್ಟಿತಮ್ ॥೦೯॥

ಬಡಗಹೊಡೆಲಿ ಜೇನು ಮತ್ತೆ ತುಪ್ಪಂದ ತುಂಬಿದ ರುದ್ರಕುಂಭವನೂ, ಅಲ್ಲಿ ಕೆಂಪುವಸ್ತ್ರ ಧರಿಸಿದ ರುದ್ರನ ಪ್ರತಿಮೆಯನ್ನೂ ಮಡುಗೆಕು.

ದಕ್ಷಿಣಸ್ಯಾಂ ಯಮಘಟಮಿಂದ್ರೋದಕ ಸಮನ್ವಿತಮ್ ।
ಕೃಷ್ಣವಸ್ತ್ರೇಣ ಸಂವೇಷ್ಟ್ಯ ತಸ್ಯೋಪರಿ ಯಮಂ ನ್ಯಸೇತ್ ॥೧೦॥

ತೆಂಕಹೊಡೆಲಿ ಇಂದ್ರೋದಕಂದ ತುಂಬಿದ (ತೀರ್ಥಜಲಪೂರ್ಣ/ಮಳೆನೀರು) ಯಮಘಟವನ್ನೂ, ಅದರ ಮೇಗೆ ಕಪ್ಪುವಸ್ತ್ರ ಧರಿಸಿದ ಯಮನ ಪ್ರತಿಮೆಯನ್ನೂ ಮಡುಗೆಕು.

ಮಧ್ಯೇತು ಮಂಡಲಂ ಕೃತ್ವಾ ಸ್ಥಾಪಯೇತ್ಕೌಶಿಕಂ ಸುತಃ ।
ದಕ್ಷಿಣಾಮಭಿಮುಖೋ ಭೂತ್ವಾಪಸವ್ಯೇನ ಚ ತರ್ಪಯೇತ್ ॥೧೧॥

ನಡುಕೆ ಮಂಡ್ಳವ್ ಮಾಡಿ ಅದರ ಮೇಗೆ  ಕೂರ್ಚೆ ಮಡುಗಿ (ಕೌಶಿಕ = ದರ್ಭೆಯ ಬೊಂಬೆ – ಸೂಕ್ಷ್ಮ ಶರೀರದ ಪ್ರತೀಕ), ಮಗ° ದಕ್ಷಿಣಾಭಿಮುಖವಾಗಿದ್ದುಗೊಂಡು ಅಪಸವ್ಯವಾಗಿ ತರ್ಪಣ ಕೊಡೆಕು.

ವಿಷ್ಣುಂ ವಿಧಿಂ ಶಿವಂ ಧರ್ಮಂ ವೇದಮಂತ್ರೈಶ್ಚ ತರ್ಪಯೇತ್ ।
ಹೋಮಂ ಕೃತ್ವಾ ಚರೇತ್ಪಶ್ಚಾಚ್ಛ್ರಾದ್ಧಂ ದಶಘಟಾದಿಕಮ್ ॥೧೨॥

ವಿಷ್ಣು, ಬ್ರಹ್ಮ, ಶಿವ, ಧರ್ಮರಾಜರಿಂಗೆ ವೇದ ಮಂತ್ರಂಗಳಿಂದ ತರ್ಪಣ ಕೊಡೆಕು. ಹೋಮವ ಮಾಡಿ ಮತ್ತೆ ದಶಘಟಾದಿಕ ಶ್ರಾದ್ಧವ ಮಾಡೆಕು.

ಗೋದಾನಂ ಚ ತತೋ ದದ್ಯಾತ್ಪಿತೄಣಾಂ ತಾರಣಾಯ ವೈ ।
ಗೌರೇಷಾ ಹಿ ಮಯಾದತ್ತಾ ಪ್ರೀತಯೇ ತೇsಸ್ತು ಮಾಧವ ॥೧೩॥

ಮತ್ತೆ ಪಿತೃಗಳ ಉದ್ಧಾರಕ್ಕಾಗಿ ಗೋದಾನವ ಕೊಡೆಕು. “ಹೇ ಮಾಧವ!, ಎನ್ನಿಂದ ಕೊಡಲ್ಪಟ್ಟ ಈ ಗೋವು ನಿನಗೆ ಪ್ರೀತಿಯಪ್ಪಲೆ” ಹೇದು ಹೇಳೆಕು.

ಉಪಭುಕ್ತಂ ತು ತಸ್ಯಾಸೀದ್ವಸ್ತ್ರಭೂಷಣವಾಹನಮ್ ।
ಘೃತಪೂರ್ಣಂ ಕಾಂಸ್ಯಪಾತ್ರಂ ಸಪ್ತಧಾನ್ಯಂ ತದೀಪ್ಸಿತಮ್ ॥೧೪॥

ಮತ್ತೆ, ಅವನಿಂದ ಉಪಭೋಗಿಸಲ್ಪಟ್ಟ ಅವನ ವಸ್ತ್ರಂಗಳ, ಆಭರಣಂಗಳ, ಮತ್ತೆ ವಾಹನಂಗಳ, ತುಪ್ಪಂದ ತುಂಬಿದ ಕಂಚಿನ ಪಾತ್ರೆ, ಸಪ್ತಧಾನ್ಯಂಗಳ ಹಾಂಗೂ ಅವಂಗೆ ಇಷ್ಟವಾದ ವಸ್ತುಗಳ

ತಿಲಾದ್ಯಷ್ಟ ಮಹಾದಾನಮಂತಕಾಲೇ ನ ಚೇತ್ಕೃತಮ್ ।
ಶಯ್ಯಾಸಮೀಪೇಧೃತ್ವೈತದ್ದಾನಂ ತಸ್ಯಾಃ ಪ್ರದಾಪಯೇತ್ ॥೧೫॥

ಎಳ್ಳು ಮೊದಲಾದ ಎಂಟು ಮಹಾದಾನಂಗಳ ಮರಣಕಾಲಲ್ಲಿ ಮಾಡದ್ರೆ, ಅವನ ಹಾಸಿಗೆಯ ಹತ್ರೆ ಮಡಿಗಿ ಆ ದಾನವ ಮಾಡೆಕು.

ಪ್ರಕ್ಷಾಲ್ಯ ವಿಪ್ರಚರಣೌ ಪೂಜಯೇದಂಬರಾದಿಭಿಃ ।
ಸಿದ್ಧಾನ್ನಂ ತಸ್ಯ ದಾತವ್ಯಂ ಮೋದಕಾಪೂಪಕಾಃ ಪಯಃ ॥೧೬॥

ವಿಪ್ರನ ಪಾದವ ತೊಳದು ವಸ್ತ್ರಾದಿಗಳಿಂದ ಅವನ ಪೂಜಿಸೆಕು. ಅವಂಗೆ ಸಿದ್ಧವಾದ ಅನ್ನ, ಮೋದಕ, ವಡೆ ಮುಂತಾದ ಹೊರುದ ಖಾದ್ಯಂಗಳ, ಹಾಲು ಇವೆಲ್ಲವ ನೀಡೆಕು (ಅಡಿಗೆ ಮಾಡಿದ್ದರ ಬಳುಸಿ ಭೋಜನವ ಮಾಡುಸೆಕು).

ಸ್ಥಾಪಯೇತ್ಪುರುಷಂ ಹೈಮಂ ಶಯ್ಯೋಪರಿ ತದಾ ಸುತಃ ।
ಪೂಜಯಿತ್ವಾ ಪ್ರದಾತವ್ಯಾ ಮೃತಶಯ್ಯಾ ಯಥೋದಿತಾ ॥೧೭॥

ಮತ್ತೆ ಮಗ°, ಹಾಸಿಗೆ ಮೇಗೆ (ತಲೆಗೊಂಬು ಹೊದಕ್ಕೆ ಕಂಬಳಿ ಸಹಿತ ಹಾಸಿಗೆ) ಚಿನ್ನಂದ ಮಾಡಿದ ವಿಷ್ಣು ಮೂರ್ತಿಯ ಮಡುಗಿ ಅದಕ್ಕೆ ಶಾಸ್ತ್ರೋಕ್ತ ಪೂಜೆಮಾಡಿ ಮೃತಶಯ್ಯೆಯ ದಾನ ನೀಡೆಕು.

ಪ್ರೇತಸ್ಯ ಪ್ರತಿಮಾಯುಕ್ತಾ ಸರ್ವೋಪಕರಣೈರ್ವೃತಾ ।
ಪ್ರೇತಶಯ್ಯಾ ಮಯಾ ಹ್ಯೇಷಾ ತುಭ್ಯಂ ವಿಪ್ರ ನಿವೇದಿತಾ ॥೧೮॥

ಮತ್ತೆ, ಪ್ರೇತದ ಒಂದು ಪ್ರತಿಮೆಯ ಮಾಡಿ ಸರ್ವವಸ್ತ್ರಾಭರಣ ಸಹಿತ ಪೂಜಿಸಿ “ಹೇ ವಿಪ್ರನೇ!, ಈ ಪ್ರೇತಶಯ್ಯೆಯ ನಿನಗೆ ಅರ್ಪಿಸಲ್ಪಟ್ಟಿದು”

ಇತ್ಯಾಚಾರ್ಯಾಯ ದಾತವ್ಯ ಬ್ರಾಹ್ಮಣಾಯ ಕುಟುಂಬಿನೇ ।
ತತಃ ಪ್ರದಕ್ಷಿಣೀಕೃತ್ಯ ಪ್ರಣಿಪತ್ಯ ವಿಸರ್ಜಯೇತ್ ॥೧೯॥

ಹೀಂಗೆ ಹೇದು, ಶಯ್ಯಾದಾನವ ಕುಟುಂಬಸ್ಥನಾದ ಆಚಾರ್ಯಂಗೆ (ಬ್ರಾಹ್ಮಣಂಗೆ) ದಾನ ಮಾಡಿ ಪ್ರದಕ್ಷಿಣೆ ಬಂದು ನಮಸ್ಕರಿಸಿ ವಿಸರ್ಜಿಸೆಕು.

ಏವಂ ಶಯ್ಯಾಪ್ರದಾನೇನ ಶ್ರಾದ್ಧೇನ ನವಕಾದಿನಾ ।
ವೃಷೋತ್ಸರ್ಗವಿಧಾನೇನ ಪ್ರೇತೋ ಯಾತಿ ಪರಾಂ ಗತಿಮ್ ॥೨೦॥

ಈ ರೀತಿ ಶಯ್ಯಾದಾನ ಮಾಡುವದರಿಂದ ನವಕಾದಿ ಶ್ರಾದ್ಧಂಗಳಿಂದ (ಒಂಬತ್ತು ದಿನಗಳ ಶ್ರಾದ್ಧಂಗಳಿಂದ) ಮತ್ತು ಯಥಾವಿಧಿ ವೃಷೋತ್ಸರ್ಗ ಮಾಡುವದರಿಂದ ಪ್ರೇತವು ಪರಮ ಗತಿಯ ಹೊಂದುತ್ತು.

ಏಕಾದಶೇsಹ್ನಿ ವಿಧಿನಾ ವೃಷೋತ್ಸರ್ಗಂ ಸಮಾಚರೇತ್ ।
ಹೀನಾಂಗಂ ರೋಗಿಣಂ ಬಾಲಂ ತ್ಯಕ್ತ್ವಾ ಕುರ್ಯಾತ್ಸಲಕ್ಷಣಮ್ ॥೨೧॥

ಹನ್ನೊಂದನೇ ದಿನ ವಿಧಿಪೂರ್ವಕವಾಗಿ ವೃಷೋತ್ಸರ್ಗವ ಮಾಡೆಕು. ಆ ಹೋರಿ ಅಂಗಹೀನವಾದ್ದರ, ರೋಗ ಇಪ್ಪದರ, ಬರೇ ಸಣ್ಣ ಪ್ರಾಯದ (ಎಳೆಯ ವಯಸ್ಸಿನ) ಬಿಟ್ಟಿಕ್ಕಿ (ಹೊರತುಪಡಿಸಿ), ಒಳ್ಳೆಯ ಲಕ್ಷಣವುಳ್ಳ ಹೋರಿಯ ಉಪಯೋಗುಸೆಕು.

ರಕ್ತಾಕ್ಷಃ ಪಿಂಗಲೋ ಯಸ್ತು ರಕ್ತಃ ಶೃಂಗೇ ಗಲೇ ಖುರೇ ।
ಶ್ವೇತೋದರಃ ಕೃಷ್ಣಪೃಷ್ಠೋ ಬ್ರಾಹ್ಮಣಸ್ಯ ವಿಧೀಯತೇ ॥೨೨॥

ಏವುದರ ಕಣ್ಣು ಪಿಂಗಲ – ರಕ್ತ ಬಣ್ಣ ಇರುತ್ತೋ, ಕೊಂಬು , ಕೊರಳು, ಗೊರಸಿನ ಹತ್ರೆ ಕೆಂಪು ಇದ್ದು, ಹೊಟ್ಟೆ ಹತ್ರೆ ಬೆಳಿ ಮತ್ತೆ ಕಪ್ಪು ಬೆನ್ನಿನ ಹೋರಿ (ವೃಷಭ) ಬ್ರಾಹ್ಮಣಂಗೆ ಕೊಡ್ಳೆ ಯೋಗ್ಯ ಹೇದು ಹೇಳಲ್ಪಟ್ಟಿದು.

ಸುಸ್ನಿಗ್ಧವರ್ಣೋ ಯೋ ರಕ್ತಃ ಕ್ಷತ್ರಿಯಸ್ಯ ವಿಧೀಯತೇ ।
ಪೀತವರ್ಣಶ್ಚ ವೈಶ್ಯಸ್ಯ ಕೃಷ್ಣಃ ಶೂದ್ರಸ್ಯ ಶಸ್ಯತೇ ॥೨೩॥

ಒಳ್ಳೆತ ಕೆಂಪು ಬಣ್ಣದ ಹೋರಿ ಕ್ಷತ್ರಿಯಂಗೆ, ಪೀತವರ್ಣದ್ದು ವೈಶ್ಯಂಗೆ, ಮತ್ತು ಕೃಷ್ಣವರ್ಣದ್ದು ಶೂದ್ರಂಗೆ ವೃಷೋತ್ಸರ್ಗಕ್ಕೆ ಆಯೇಕು ಹೇದು ಹೇಳಲ್ಪಟ್ಟಿದು.

ಯಸ್ತು ಸರ್ವಾಂಗಪಿಂಗಃ ಸ್ಯಾಚ್ಛೈತಃ ಪುಚ್ಛೇ ಪದೇಷು ಚ ।
ಸ ಪಿಂಗೋ ವೃಷ ಇತ್ಯಾಹುಃ ಪಿತೄಣಾಂ ಪ್ರೀತಿವರ್ಧನಃ ॥೨೪॥

ಏವ ಹೋರಿಯ ಸರ್ವಾಂಗವೂ ಪೀತವರ್ಣದ್ದಾಗಿದ್ದು, ಬೀಲ ಮತ್ತೆ ಕಾಲುಗೊ ಶ್ವೇತವರ್ಣದ್ದಾಗಿದ್ದೋ, ಅದು ಪಿಂಗ ನಾಮದ  (ಹೆಸರಿನ) ಹೋರಿ ಹೇದು ಹೇಳಲ್ಪಟ್ಟಿದು. ಅದು ಪಿತೃಗೊಕ್ಕೆ ಪ್ರೀತಿವರ್ಧಕವಾಗಿದ್ದು.

ಚರಣಾಸ್ತು ಮುಖಂ ಪುಚ್ಛಂ ಯಸ್ಯ ಶ್ವೇತಾನಿ ಗೋಪತೇಃ ।
ಲಾಕ್ಷಾರಸಸವರ್ಣೋ ಯಃ ಸ ನೀಲ ಇತಿ ಕೀರ್ತಿತಃ ॥೨೫॥

ಏವ ಹೋರಿಯ ಪಾದ, ಮೋರೆ ಮತ್ತೆ ಬೀಲ ಬೆಳಿ ಬಣ್ಣದ್ದಾಗಿದ್ದೋ, ಲಾಕ್ಷಾರಸದ (ಅರಗಿನ ಬಣ್ಣ) ಹಾಂಗೆ ದೇಹದ ಬಣ್ಣವಿದ್ದೋ ಅದರ ನೀಲ ಹೇದು ಹೇಳಲ್ಪಟ್ಟಿದು.

ಲೋಹಿತೋ ಯಸ್ತು ವರ್ಣೇನ ಮುಖೇ ಪುಚ್ಛೇ ಚ ಪಾಂಡುರಃ ।
ಪಿಂಗಃ ಖುರವಿಷಾಣಾಭ್ಯಾಂ ರಕ್ತನೀಲೋ ನಿಗದ್ಯತೇ ॥೨೬॥

ಏವುದರ ಶರೀರ ಕೆಂಪುಬಣ್ಣ ಇದ್ದು ಮೋರೆ, ಬೀಲಲ್ಲಿ ಬೆಳಿ ಇದ್ದು, ಗೊರಸು ಮತ್ತೆ ಕೊಂಬಿನತ್ರೆ ಪೀತ ವರ್ಣ ಇದ್ದರೆ ಅದಕ್ಕೆ ರಕ್ತನೀಲ ವೃಷಭ ಹೇದು ಹೇಳುತ್ತವು.

ಸರ್ವಾಂಗೇಷ್ವೇಕವರ್ಣೋ ಯಃ ಪಿಂಗಃ ಪುಚ್ಛೇ ಖುರೇಷು ಯಃ ।
ತಂ ನೀಲಪಿಂಗಮಿತ್ಯಾಹುಃ ಪೂರ್ವಜೋದ್ಧಾರಕಾರಕಮ್ ॥೨೭॥

ಏವುದು ಎಲ್ಲ ಅಂಗಂಗಳಲ್ಲಿಯೂ ಒಂದೇ ಬಣ್ಣವುಳ್ಳದ್ದಾಗಿ, ಯಾವುದರ ಬೀಲ ಮತ್ತೆ ಗೊರಸು ಕಂದು ಬಣ್ಣವುಳ್ಳದ್ದಾಗಿದ್ದೋ ಅದರ ‘ನೀಲಪಿಂಗ’ ಹೇದು ಹೇಳುತ್ತವು. ಅದು ಪೂರ್ವಿಕರ ಉದ್ಧಾರಕಾರಕವಾಗಿದ್ದು.

ಪಾರಾವತಸವರ್ಣಸ್ತು ಲಲಾಟೇ ತಿಲಕಾನ್ವಿತಃ ।
ತಂ ಬಭ್ರುನೀಲಮಿತ್ಯಾಹುಃ ಪೂರ್ಣಂ ಸರ್ವಾಂಗಶೋಭನಮ್ ॥೨೮॥

ಪಾರಿವಾಳದ ಬಣ್ಣದ್ದಾಗಿದ್ದು ಹಣೆಲಿ ತಿಲಕವ ಹೊಂದಿದ್ದಾಗಿದ್ದರೆ ಅದಕ್ಕೆ ಬಭ್ರುನೀಲ ಹೇದು ಹೇಳುತ್ತವು. ಅದು ಪೂರ್ಣವಾಗಿ ಸರ್ವಾಂಗ ಶೋಭಿತವಾಗಿಯೂ ಇದ್ದು.

ನೀಲಃ ಸರ್ವಶರೀರೇಷು ರಕ್ತಶ್ಚ ನಯನದ್ವಯೇ ।
ತಮಪ್ಯಾಹುರ್ಮಹಾನೀಲಂ ನೀಲಃ ಪಂಚವಿಧಃ ಸ್ಮೃತಃ ॥೨೯॥

ಶರೀರ ಇಡೀ ನೀಲವರ್ಣದ್ದಾಗಿ, ಎರಡು ಕಣ್ಣುಗೊ ಕೆಂಪಾಗಿಪ್ಪ ವೃಷಭವ ‘ಮಹಾನೀಲ’ ಹೇದು ಹೇಳುತ್ತವು. ಈ ರೀತಿ ನೀಲ ವೃಷಭವು ಐದು ವಿಧ ಹೇದು ತಿಳಿಯಲ್ಪಟ್ಟಿದು.

ಅವಶ್ಯಮೇವ ಮೋಕ್ತವ್ಯೋ ನ ಸ ಧಾರ್ಯೋ ಗೃಹೇ ಭವೇತ್ ।
ತದರ್ಥಮೇಷಾ ಚರತಿ ಲೋಕೇ ಗಾಥಾ ಪುರಾತನೀ ॥೩೦॥

ಇಂಥ ನೀಲವರ್ಣದ ವೃಷಭವ ಅವಶ್ಯವಾಗಿಯೂ (ವೃಷಭ ಸಂಸ್ಕಾರ ಮಾಡಿ) ಬಿಟ್ಟುಬಿಡೆಕು, ಮನೆಲಿ ಬೇಸಾಯಕ್ಕೆ ಹೇದು ಮಡಿಕ್ಕೊಂಬಲಾಗ. ಅದಕ್ಕೋಸ್ಕರವಾಗಿ ಈ ವಿಷಯದ ಕುರಿತಾಗಿ ಒಂದು ಪ್ರಾಚೀನ ಕತೆಯೂ ಲೋಕಲ್ಲಿ ಪ್ರಸಿದ್ಧವಾಗಿದ್ದು.

ಏಷ್ಟವ್ಯಾ ಬಹವಃ ಪುತ್ರಾ ಯದ್ಯೇಕೋsಪಿ ಗಯಾಂ ವ್ರಜೇತ್ ।
ಗೌರೀಂ ವಿವಾಹಯೇತ್ಕನ್ಯಾಂ ನೀಲಂ ವಾ ವೃಷಮುತ್ಸೃಜೇತ್ ॥೩೧॥

ಬಹುಮಂದಿ ಪುತ್ರರ ಇಚ್ಛಿಸೆಕು. ಒಂದು ವೇಳೆ ಅವರಲ್ಲಿ ಒಬ್ಬ° ಆದರೂ ಗಯೆಗೆ ಹೋಪಲೂ ಸಾಕು. ಗೌರೀಕನ್ಯೆಯ ಮದುವೆ ಅಪ್ಪಲೂ ಸಾಕು ಅಥವಾ ನೀಲವೃಷಭವ ಬಿಡ್ಳಕ್ಕು.

[ಬಹು ಪುತ್ರರ ಅಪೇಕ್ಷಿಸುವದು ಎಂತಕೇಳಿರೆ ಅದರಲ್ಲಿ ಒಬ್ಬನಾದರೂ ಗಯೆಗೆ ಹೋಕು, ಮತ್ತೆ ಗೌರೀಕನ್ಯೆಯ (ಅಷ್ಟವರ್ಷದ ಕನ್ಯೆ ಆದಪ್ಪಗ) ಮದುವೆ (ಕನ್ಯಾದಾನ) ಮಾಡುವದು ಮತ್ತು ಮೇಗೆ ಹೇಳಿದಾಂಗೆ ನೀಲ ವೃಷಭವ ಬಿಡುವದು.]

ಸ ಏವ ಪುತ್ರೋ ಮಂತವ್ಯೋ ವೃಷೋತ್ಸರ್ಗಂ ತು ಯಶ್ಚರೇತ್ ।
ಗಯಾಯಾಂ ಶ್ರಾದ್ಧದಾತಾ ಚ ಯೋsನ್ಯೋ ವಿಷ್ಠಾಸಮಃ ಕಿಲ ॥೩೨॥

ಯಾವಾತ° ವೃಷೋತ್ಸರ್ಗ ಆಚರುಸುತ್ತನೋ, ಗಯೆಲಿ ಶ್ರಾದ್ಧವ ಮಾಡುತ್ತನೋ, ಅವನನ್ನೇ ಪುತ್ರ° ಹೇದು ತಿಳಿಯೆಕು. ಇನ್ನುಳುದವು ನಿಜವಾಗಿಯೂ ಮಲದ ಸಮಾನರು. [ಪಿತೃವಿನ ಉದ್ದೇಶಕ್ಕಾಗಿ ವೃಷೋತ್ಸರ್ಗ ಮಾಡಿದವ°, ಹಾಂಗೇ ಗಯಾಶ್ರಾದ್ಧವ ಮಾಡಿದವ° ಮಗ°/ಪುತ್ರ°. ಇವೆರಡನ್ನೂ ಮಾಡದವ ವಿಷ್ಠೆಯ (ಮಲದ) ಸಮ]

ರೌರವಾದಿಷು ಯೇ ಕೇಚಿತ್ಪಚ್ಯಂತೇ ಯಸ್ಯ ಪೂರ್ವಜಾಃ ।
ವೃಷೋತ್ಸರ್ಗೇಣ ತಾನ್ಸರ್ವಾಂಸ್ತಾಯಯೇದೇಕವಿಂಶತಿಮ್ ॥೩೩॥

ಆರ ಪೂರ್ವಿಕರು ರೌರವಾದಿ ನರಕಂಗಳಲ್ಲಿ ಬೆಂದುಗೊಂಡುರುತ್ತವೋ, ಅವ° ವೃಷೋತ್ಸರ್ಗವ ಮಾಡಿ ಅವೆಲ್ಲರನ್ನೂ ಇಪ್ಪತ್ತೊಂದು ಪೀಳಿಗೆವರೆಂಗೆ ಉದ್ಧರುಸುತ್ತ°.

ವೃಷೋತ್ಸರ್ಗಂ ಕಿಲೇಚ್ಛಂತಿ ಪಿತರಃ ಸ್ವರ್ಗತಾ ಅಪಿ ।
ಅಸ್ಮದ್ವಂಶೇ ಸುತಃ ಕೋsಪಿ ವೃಷೋತ್ಸರ್ಗಂ ಕರಿಷ್ಯತಿ ॥೩೪॥

ಸ್ವರ್ಗಲ್ಲಿಪ್ಪ ಪಿತೃಗಳೂ ಸಾನ ನಿಜವಾಗಿಯೂ ವೃಷೋತ್ಸರ್ಗವ ಇಚ್ಛೆಪಡುತ್ತವು. “ನಮ್ಮ ವಂಶಲ್ಲಿ ಯಾವ ಪುತ್ರನಾದರೂ ವೃಷೋತ್ಸರ್ಗವ ಮಾಡುಗೋ

ತದುತ್ಸರ್ಗಾದ್ವಯಂ ಸರ್ವೇ ಯಾಸ್ಯಾಮಃ ಪರಮಾಂ ಗತಿಮ್ ।
ಸರ್ವಯಜ್ಞೇಷು ಚಾಸ್ಮಾಕಂ ವೃಷಯಜ್ಞೋ ಹಿ ಮುಕ್ತಿದಃ ॥೩೫॥

ಆ ವೃಷೋತ್ಸರ್ಗಂದ ನಾವೆಲ್ಲರೂ ಪರಮಗತಿಯ ಹೊಂದುತ್ತೆಯೊ°. ಎಲ್ಲ ಯಜ್ಞಂಗಳಲ್ಲಿ ವೃಷಯಜ್ಞವೇ ನವಗೆ ಮುಕ್ತಿದಾಯಕವಾಗಿದ್ದು”

ತಸ್ಮಾತ್ಪಿತೃವಿಮುಕ್ತ್ಯರ್ಥಂ ವೃಷಯಜ್ಞಂ ಸಮಾಚರೇತ್ ।
ಯಥೋಕ್ತೇನ ವಿಧಾನೇನ ಕುರ್ಯಾತ್ಸರ್ವಪ್ರಯತ್ನತಃ ॥೩೬॥

ಹಾಂಗಾಗಿ ಪಿತೃಗಳ ಮುಕ್ತಿಗಾಗಿ ವೃಷಯಜ್ಞವ ಆಚರುಸೆಕು. ಯಥೋಕ್ತ ವಿಧಿಪೂರ್ವಕವಾಗಿ ಎಲ್ಲವನ್ನೂ ಪ್ರಯತ್ನಪೂರ್ವಕವಾಗಿ ಮಾಡೆಕು.

ಗ್ರಹಾಣಾಂ ಸ್ಥಾಪನಂ ಕೃತ್ವಾ ತತ್ತನ್ಮಂತ್ರೈಶ್ಚ ಪೂಜನಮ್ ।
ಹೋಮಂ ಕುರ್ಯಾದ್ಯಥಾಶಾಸ್ತ್ರಂ ಪೂಜಯೇದ್ವೃಷಮಾತುರಃ ॥೩೭॥

ನವಗ್ರಹಂಗಳ ಸ್ಥಾಪನೆಮಾಡಿ ಆಯಾ ಗ್ರಹಮಂತ್ರಂಗಳಿಂದ ಪೂಜೆಮಾಡೆಕು. ಶಾಸ್ತ್ರಲ್ಲಿ ಹೇಳಿಪ್ಪ ರೀತಿಲಿ ಹೋಮ ಮಾಡೆಕು ಮತ್ತು  ವೃಷಭದ ಮಾತೆ ಗೋವುಗಳ ಪೂಜಿಸೆಕು.

ವತ್ಸ ವತ್ಸೀಂ ಸಮಾನಾಯ್ಯ ಬಧ್ನೀಯಾತ್ಕಂಕಣಂ ತಯೋಃ ।
ವೈವಾಹ್ಯೇನ ವಿಧಾನೇನ ಸ್ತಂಭಮಾರೋಪಯೇತ್ತದಾ ॥೩೮॥

ಗೆಂಡು ಮತ್ತು ಗೆಣ್ಣು ಕಂಜಿಗಳ ಕರಕ್ಕೊಂಡು ಬಂದು ಅವುಗೊಕ್ಕೆ ಕಂಕಣಂಗಳ ಕಟ್ಟಿ ವಿವಾಹದ ವಿಧಿಗಳಿಂದ ಕಂಭಕ್ಕೆ ಕಟ್ಟೆಕು.

ಸ್ನಾಪಯೇಚ್ಚ ವೃಷಂ ವತ್ಸೀಂ ರುದ್ರಕುಂಭೋದಕೇನ ಚ ।
ಗಂಧಮಾಲ್ಯೈಶ್ಚ ಸಂಪೂಜ್ಯ ಕಾರಯೇಚ್ಚ ಪ್ರದಕ್ಷಿಣಾಮ್ ॥೩೯॥

ಹೋರಿ ಮತ್ತೆ ಹೆಣ್ಣು ಕಂಜಿಯ ರುದ್ರಕುಂಭದ ನೀರಿಂದ ಮೀಶೆಕು. ಗಂಧ ಮತ್ತೆ ಮಾಲೆಗಳಿಂದ ಪೂಜೆ ಮಾಡಿ ಪ್ರದಕ್ಷಿಣೆ ಮಾಡೆಕು.

ತ್ರಿಶೂಲಂ ದಕ್ಷಿಣೇ ಪಾರ್ಶ್ವೇ ವಾಮೇ ಚಕ್ರಂ ಪ್ರದಾಪಯೇತ್ ।
ತಂ ವಿಮುಚ್ಯಾಂಜಲೀಂ ಬದ್ಧ್ವಾ ಪಠೇನ್ಮಂತ್ರಮಿಮಂ ಸುತಃ ॥೪೦॥

ಆ ವೃಷಭದ ಬಲದ ಹೊಡೆಲಿ ತ್ರಿಶೂಲ ಮತ್ತೆ ಎಡದ ಹೊಡೆಲಿ ಚಕ್ರದ ಚಿಹ್ನೆಗಳ ಹಾಕೆಕು. ಕೈ ಜೋಡಿಸಿಗೊಂಡು ಮಗ° ಈ ಮಂತ್ರವ ಹೇಳಿ ಅದರ ಬಿಡೆಕು –

ಧರ್ಮಸ್ತ್ವಂ ವೃಷರೂಪೇಣ ಬ್ರಹ್ಮಣಾ ನಿರ್ಮಿತಃ ಪುರಾ ।
ತವೋತ್ಸರ್ಗಪ್ರದಾನೇನ ತಾರಯಸ್ವ ಭವಾರ್ಣವಾತ್ ॥೪೧॥

“ನೀನು ಧರ್ಮ°. ಬ್ರಹ್ಮ° ಪೂರ್ವಕಾಲಲ್ಲಿ ವೃಷಭದ ರೂಪಲ್ಲಿ ನಿನ್ನ ನಿರ್ಮಿಸಿದ್ದ°. ನಿನ್ನ ಬಿಡುಗಡೆ ಮಾಡುವದರಿಂದ ಸಂಸಾರ ರೂಪೀ ಸಮುದ್ರಂದ ಉದ್ಧಾರ ಮಾಡು.

ಇತಿ ಮಂತ್ರಾನ್ನಮಸ್ಕೃತ್ಯ ವತ್ಸಂ ವತ್ಸೀಂ ಸಮುತ್ಸೃಜೇತ್ ।
ವರದೋsಹಂ ಸದಾ ತಸ್ಯ ಪ್ರೇತಮೋಕ್ಷಂ ದದಾಮಿ ಚ ॥೪೨॥

ಈ ಮಂತ್ರಂದ ನಮಸ್ಕಾರ ಮಾಡಿ, ಆ ಗೆಂಡು ಮತ್ತೆ ಹೆಣ್ಣು ಕಂಜಿಗಳ ಬಿಟ್ಟುಬಿಡೆಕು. ಈ ವಿಧಿಯ ಮಾಡುವವಂಗೆ ಆನು ಸದಾ ವರವ ಕೊಟ್ಟು, ಪ್ರೇತಕ್ಕೆ ಮೋಕ್ಷವ ಕೊಡುತ್ತೆ.

ತಸ್ಮಾದೇಷ ಪ್ರಕರ್ತವ್ಯಸ್ತತ್ಫಲಂ ಜೀವತೋ ಭವೇತ್ ।
ಅಪುತ್ರಸ್ತು ಸ್ವಯಂ ಕೃತ್ವಾ ಸುಖಂ ಯಾತಿ ಪರಾಂ ಗತಿಮ್ ॥೪೩॥

ಹಾಂಗಾಗಿ ಈ ವೃಷೋತ್ಸರ್ಗ ವಿಧಿಯ ಮಾಡ್ಳೇ ಬೇಕು, ಅದರ ಫಲ ಬದುಕಿಪ್ಪಗಳೇ ಉಂಟಾವ್ತು. ಪುತ್ರ ಇಲ್ಲದ್ರೆ ತಾನೇ ಇದರ ಮಾಡಿ ಸುಖವಾಗಿ ಪರಮಗತಿಯ ಹೊಂದಲಕ್ಕು.

ಕಾರ್ತಿಕಾದೌ ಶುಭೇ ಮಾಸೇ ಚೋತ್ತರಾಯಣಗೇ ರವೌ ।
ಶುಕ್ಲಪಕ್ಷೇsಥ ವಾ ಕೃಷ್ಣೇ ದ್ವಾದಶ್ಯಾದಿ ತಿಥೌ ತಥಾ ॥೪೪॥

ಕಾರ್ತಿಕ ಮುಂತಾದ ಶುಭ ಮಾಸಂಗಳಲ್ಲಿ, ಉತ್ತರಾಯಣಲ್ಲಿ ಶುಕ್ಲಪಕ್ಷ ಅಥವಾ ಕೃಷ್ಣಪಕ್ಷಲ್ಲಿ ಮತ್ತೆ ದ್ವಾದಶಿ ಮೊದಲಾದ ತಿಥಿಗಳಲ್ಲಿ

ಗ್ರಹಣದ್ವಿತಯೇ ಚೈವ ಪುಣ್ಯತೀರ್ಥೇsಯನದ್ವಯೇ ।
ವಿಷುವದ್ವಿತಯೇ ಚಾಪಿ ವೃಷೋತ್ಸರ್ಗಂ ಸಮಾಚರೇತ್ ॥೪೫॥

ಸೂರ್ಯ – ಚಂದ್ರ ಗ್ರಹಣಂಗಳಲ್ಲಿ, ಪುಣ್ಯತೀರ್ಥಂಗಳಲ್ಲಿ, ಉತ್ತರ ದಕ್ಷಿಣ ಎರಡೂ ಅಯನಂಗಳಲ್ಲಿ ಮತ್ತೆ ಎರಡೂ ವಿಷುವತ್ (ಮೇಷ – ತುಲಾ) ಸಂಕ್ರಾಂತಿಗಳಲ್ಲಿ ವೃಷೋತ್ಸರ್ಗವ ಮಾಡೆಕು.

ಶುಭಲಗ್ನೇ ಮುಹೂರ್ತೇ ಚ ಶುಚೌ ದೇಶೇ ಸಮಾಹಿತಃ ।
ಬ್ರಾಹ್ಮಣಂ ತು ಸಮಾಹೂಯ ವಿಧಿಜ್ಞಂ ಶುಭಲಕ್ಷಣಮ್ ॥೪೬॥

ಶುಭಲಗ್ನಲ್ಲಿ, ಶುಭಮುಹೂರ್ತಲ್ಲಿ ಶುದ್ಧವಾದ ಪ್ರದೇಶಲ್ಲಿ, ಶಾಂತಚಿತ್ತನಾಗಿ, ವಿಧಿಗಳ ತಿಳುದ ಶುಭಲಕ್ಷಣ ಬ್ರಾಹ್ಮಣನ ಆಹ್ವಾನಿಸೆಕು.

ಜಪೈರ್ಹೋಮೈಸ್ತಥಾ ದಾನೈಃ ಪ್ರಕುರ್ಯಾದ್ದೇಹಶೋಧನಮ್ ।
ಪೂರ್ವವತ್ಸಕಲಂ ಕೃತ್ಯಂ ಕುರ್ಯಾದ್ಧೋಮಾದಿಲಕ್ಷಣಮ್ ॥೪೭॥

ಜಪ, ಹೋಮಂಗಳಿಂದ ಮತ್ತೆ ದಾನಂಗಳಿಂದ, ದೇಹವ ಶುದ್ಧಗೊಳಿಸಿ ಹೋಮಾದಿ ಕಾರ್ಯಂಗಳ ಮೇಗೆ ಹೇಳಿದ ರೀತಿಲಿ ಮಾಡೆಕು.

ಶಾಲಗ್ರಾಮಂ ಚ ಸಂಸ್ಥಾಪ್ಯ ವೈಷ್ಣವಂ ಶ್ರಾದ್ಧಮಾಚರೇತ್ ।
ಆತ್ಮಶ್ರಾದ್ಧಂ ತತಃ ಕುರ್ಯಾದ್ದದ್ಯಾದ್ದಾನಂ ದ್ವಿಜನ್ಮನೇ ॥೪೮॥

ಶಾಲಗ್ರಾಮವ ಮಡುಗಿ ವೈಷ್ಣವ ಶ್ರಾದ್ಧವ ಮಾಡೆಕು. ಮತ್ತೆ ತನ್ನ ಶ್ರಾದ್ಧವ ಮಾಡಿಕ್ಕಿ ದ್ವಿಜಂಗೆ (ಬ್ರಾಹ್ಮಣಂಗೆ) ದಾನವ ಕೊಡೆಕು.

ಏವಂ ಯಃ ಕುರುತೇ ಪಕ್ಷಿನ್ನಪುತ್ರಸ್ಯಾಪಿ ಪುತ್ರವಾನ್ ।
ಸರ್ವಕಾಮಫಲಂ ತಸ್ಯ ವೃಷೋತ್ಸರ್ಗಾತ್ಪ್ರಜಾಯತೇ ॥೪೯॥

ಹೇ ಪಕ್ಷಿಯೇ!,  ಈ ರೀತಿಯಾಗಿ ಪುತ್ರವಂತನಾಗಲೀ ಅಪುತ್ರಕನಾಗಲೀ ಯಾವಾತ° ಮಾಡುತ್ತನೋ ಅವಂಗೆ ವೃಷೋತ್ಸರ್ಗದ ಎಲ್ಲ ಇಷ್ಟಾರ್ಥಂಗಳೂ ಸಿಕ್ಕುತ್ತು.

ಅಗ್ನಿಹೋತ್ರಾದಿಭಿರ್ಯಜ್ಞೈರ್ದಾನೈಶ್ಚ ವಿವಿಧೈರಪಿ ।
ನ ತಾಂ ಗತಿಮವಾಪ್ನೋತಿ ವೃಷೋತ್ಸರ್ಗೇಣ ಯಾಂ ಲಭೇತ್ ॥೫೦॥

ಆಗ್ನಿಹೋತ್ರಾದಿ ವಿವಿಧ ಯಜ್ಞ ದಾನಂಗಳಿಂದ ದೊರಕದ್ದ ಗತಿ ವೃಷೋತ್ಸರ್ಗ ಮಾಡುವದರಿಂದ ಪ್ರಾಪ್ತಿಯಾವ್ತು.

ಬಾಲೈ ಕೌಮಾರೇ ಪೌಗಂಡೇ ಯೌವನೇ ವಾರ್ಧಕೇ ಕೃತಮ್ ।
ಯತ್ಪಾಪಂ ತದ್ವಿನಶ್ಯೇತ ವೃಷೋತ್ಸರ್ಗಾನ್ನ ಸಂಶಯಃ ॥೫೧॥

ಬಾಲ್ಯ, ಕೌಮಾರ, ಪೌಗಂಡಾ (೫ರಿಂದ ೧೬ ವರ್ಷ ಪ್ರಾಯದೊಳಾಣ), ಯೌವನ, ಮುಪ್ಪಿಲ್ಲಿ ಮಾಡಿಪ್ಪ ಪಾಪಂಗೊ ವೃಷೋತ್ಸರ್ಗ ಮಾಡುವದರಿಂದ ನಿಸ್ಸಂಶಯವಾಗಿ ನಾಶವಾವ್ತು.

ಮಿತ್ರದ್ರೋಹೀ ಕೃತಘ್ನಶ್ಚ ಸುರಾಪೋ ಗುರುತಲ್ಪಗಃ ।
ಬ್ರಹ್ಮಹಾ ಹೇಮಹಾರೀ ಚ ವೃಷೋತ್ಸರ್ಗಾತ್ಪ್ರಮುಚ್ಯತೇ ॥೫೨॥

ಮಿತ್ರದ್ರೋಹಿ, ಕೃತಘ್ನ, ಮದ್ಯಸೇವಿ, ಗುರುಶಯ್ಯಾಗಾಮಿ, ಬ್ರಹ್ಮಹತ್ಯಾಪಾಪಿ, ಚಿನ್ನ ಅಪಹಾರಿ ಇವೆಲ್ಲೋರೂ ವೃಷೋತ್ಸರ್ಗ ಮಾಡುವದರಿಂದ ಮುಕ್ತರಾವ್ತವು.

ತಸ್ಮಾತ್ಸರ್ವಪ್ರಯತ್ನೇನ ವೃಷಯಜ್ಞಂ ಸಮಾಚರೇತ್ ।
ವೃಷೋತ್ಸರ್ಗಸಮಂ ಪುಣ್ಯಂ ನಾಸ್ತಿ ತಾರ್ಕ್ಷ್ಯ ಜಗತ್ರಯೇ ॥೫೩॥

ಹಾಂಗಾಗಿ, ಎಲ್ಲ ಪ್ರಯತ್ನಂಗಳಿಂದಲೂ ವೃಷೋತ್ಸರ್ಗವ ಆಚರುಸೆಕು. ಹೇ ಗರುಡ!, ಈ ವೃಷೋತ್ಸರ್ಗಕ್ಕೆ ಸಮಾನವಾದ ಬೇರೆ ಪುಣ್ಯ ಮೂರು ಲೋಕಲ್ಲಿಯೂ ಇಲ್ಲೆ.

ಪತಿಪುತ್ರವತೀ ನಾರೀ ದ್ವಯೋರಗ್ರೇ ಮೃತಾ ಯದಿ ।
ವೃಷೋತ್ಸರ್ಗಂ ನೈವ ಕುರ್ಯಾದ್ದದ್ಯಾದ್ಗಾಂ ಚ ಪಯಸ್ವಿನೀಮ್ ॥೫೪॥

ಗೆಂಡ ಮತ್ತೆ ಮಕ್ಕಳಿಪ್ಪ ಸ್ತ್ರೀ ಒಂದು ವೇಳೆ ಅವಿಬ್ರೂ ಇಪ್ಪಗಳೇ ಮೃತ ಆದರೆ ವೃಷೋತ್ಸರ್ಗವ ಮಾಡ್ಳಾಗ. ಆದರೆ ಹಾಲು ಕೊಡುವ ಹಸುವ ದಾನ ಕೊಡೆಕು.

ವೃಷಭಂ ವಾಹಯೇದ್ಯಸ್ತು ಸ್ಕಂಧೇ ಪೃಷ್ಠೇ ಚ ಖೇಚರ ।
ಸ ಪತೇನ್ನರಕೇ ಘೋರೇ ಯಾವದಾಭೂತಸಂಪ್ಲವಮ್ ॥೫೫॥

ಹೇ ಗರುಡ!, ಯಾವಾತ° ವೃಷಭದ ಭುಜ ಮತ್ತೆ ಬೆನ್ನ ಮೇಗೆ ಭಾರವ ಹೊರುಸುತ್ತನೋ, ಅವ° ಪ್ರಳಯ ಕಾಲದವರೇಂಗೆ ಘೋರವಾದ ನರಕಲ್ಲಿ ಬಿದ್ದಿರುತ್ತ°.

ವೃಷಭಂ ತಾಡಯೇದ್ಯಸ್ತು ನಿರ್ದಯೋ ಮುಷ್ಟಿಯಷ್ಟಿಭಿಃ ।
ಸ ನರಃ ಕಲ್ಪಪರ್ಯಂತಂ ಭುನಕ್ತಿ ಯಮಯಾತನಾಮ್ ॥೫೬॥

ಯಾವಾತ° ವೃಷಭವ ಮುಷ್ಟಿಪ್ರಹಾರಂದ, ದೊಣ್ಣೆಂದ ನಿರ್ದಯವಾಗಿ ಬಡಿತ್ತನೋ, ಆ ಮನುಷ್ಯ° ಒಂದು ಕಲ್ಪ ಪರ್ಯಂತ ಯಮಯಾತನೆಯ ಅನುಭವುಸುತ್ತ°.

ಏವಂ ಕೃತ್ವಾ ವೃಷೋತ್ಸರ್ಗಂ ಕುರ್ಯಾಚ್ಛ್ರಾದ್ಧಾನಿ ಷೋಡಶ ।
ಸಪಿಂಡೀಕರಣಾದರ್ವಾಕ್ ತದಹಂ ಕಥಯಾಮಿ ತೇ ॥೫೭॥

ಈ ರೀತಿ ವೃಷೋತ್ಸರ್ಗವ ಮಾಡಿ, ಷೋಡಶ ಶ್ರಾದ್ಧಂಗಳನ್ನೂ ಸಪಿಂಡೀಕರಣಕ್ಕೆ ಮದಲು ಮಾಡೆಕು. ಅದರ ಆನು ನಿನಗೆ ಹೇಳುತ್ತೆ –

ಸ್ಥಾನೇ ದ್ವಾರೇsರ್ಧಮಾರ್ಗೇ ಚ ಚಿತಾಯಾಂ ಶವಹಸ್ತಕೇ ।
ಅಸ್ಥಿಸಂಚಯನೇ ಷಷ್ಠೋ ದಶಪಿಂಡಾ ದಶಾಹ್ನಿಕಾಃ ॥೫೮॥

ಮೃತಸ್ಥಾನಲ್ಲಿ (ಒಂದನೇದು), ದ್ವಾರಲ್ಲಿ (ಎರಡ್ನೇದು), ಅರ್ಧಮಾರ್ಗಲ್ಲಿ (ಮೂರ್ನೇದು) ಮತ್ತೆ ಚಿತೆಯ ಮೇಗೆ ಶವದ ಹಸ್ತಲ್ಲಿ ಎರಡು (ನಾಲ್ಕನೇದು, ಐದ್ನೇದು), ಅಸ್ಥಿ ಸಂಚಯನ ಮಾಡುವಾಗ (ಆರ್ನೇದು) ಮತ್ತೆ ಹತ್ತು ದಿನಾಣ ಹತ್ತು ಪಿಂಡಂಗೊ (ಹೀಂಗೆ ಹದಿನಾರು ಪಿಂಡದಾನಂಗೊ)

ಮಲಿನಂ ಷೋಡಶಂ ಚೈತತ್ಪ್ರಥಮಂ ಪರಿಕೀರ್ತಿತಮ್ ।
ಅನ್ಯಚ್ಚ ಷೋಡಶಂ ಮಧ್ಯೇ ದ್ವಿತೀಯಂ ಕಥಯಾಮಿ ತೇ ॥೫೯॥

ಇದು ಸುರುವಾಣ ‘ಮಲಿನ’ ಹೇಳ್ವ ಹದಿನಾರು ಪಿಂಡಂಗೊ. ಇನ್ನು ಎರಡ್ನೇ ಹದಿನಾರು ಪಿಂಡದಾನದ ಬಗ್ಗೆ ನಿನಗೆ ಹೇಳ್ತೆ –

ಪ್ರಥಮಂ ವಿಷ್ಣವೇ ದದ್ಯಾದ್ದ್ವಿತೀಯಂ ಶ್ರೀ ಶಿವಾಯ ಚ ।
ಯಾಮ್ಯಾಯ ಪರಿವಾರಾಯ ತೃತೀಯಂ ಪಿಂಡಮುತ್ಸೃಜೇತ್ ॥೬೦॥

ಸುರುವಾಣ ಪಿಂಡ ವಿಷ್ಣುವಿಂಗೆ, ಎರಡ್ನೇದು ಶಿವಂಗೆ ಕೊಡೆಕು. ಮೂರ್ನೇ ಪಿಂಡವ ಪರಿವಾರಸಮೇತನಾದ ಯಮಂಗೆ ಕೊಡೆಕು.

ಚತುರ್ಥಂ ಸೋಮರಾಜಾಯ ಹವ್ಯವಾಹಾಯ ಪಂಚಮಮ್ ।
ಕವ್ಯವಾಹಾಯ ಷಷ್ಠಂ ಚ ದದ್ಯಾತ್ಕಾಲಾಯ ಸಪ್ತಮಮ್ ॥೬೧॥

ನಾಲ್ಕನೇ ಪಿಂಡವ ಸೋಮರಾಜಂಗೆ, ಐದ್ನೇದು ಹವ್ಯವಾಹನನಾದ ಅಗ್ನಿಗೆ, ಆರ್ನೇದು ಕವ್ಯವಾಹನನಾದ ಅಗ್ನಿಗೆ ಮತ್ತೆ ಏಳ್ನೇದು ಕಾಲಂಗೆ ಕೊಡೆಕು.

ರುದ್ರಾಯ ಚಾಷ್ಟಮಂ ದದ್ಯಾನ್ನವಮಂ ಪುರುಷಾಯ ಚ ।
ಪ್ರೇತಾಯ ದಶಮಂ ಚೈವೈಕಾದಶಂ ವಿಷ್ಣವೇ ನಮಃ ॥೬೨॥

ಎಂಟ್ನೇ ಪಿಂಡ ರುದ್ರಂಗೆ, ಒಂಬತ್ನೇದು ಪರಮಪುರುಷಂಗೆ, ಹತ್ನೇದು ಪ್ರೇತಕ್ಕೆ, ಹನ್ನೊಂದನೇದು ವಿಷ್ಣುವಿಂಗೆ ಕೊಡೆಕು.

ದ್ವಾದಶಂ ಬ್ರಹ್ಮಣೇ ದದ್ಯಾನ್ವಿಷ್ಣವೇ ಚ ತ್ರಯೋದಶಮ್ ।
ಚತುರ್ದಶಂ ಶಿವಾಯೈವ ಯಮಾಯ ದಶಪಂಚಕಮ್ ॥೬೩॥

ಹನ್ನೆರಡನೇ ಪಿಂಡ ಬ್ರಹ್ಮಂಗೆ, ಹದಿಮೂರ್ನೆದು ವಿಷ್ಣುವಿಂಗೆ, ಹದಿನಾಲ್ಕನೇದು ಶಿವಂಗೆ ಮತ್ತೆ ಹದಿನೈದನೇದು ಯಮಂಗೆ ಕೊಡೆಕು.

ದದ್ಯಾತ್ತತ್ಪುರುಷಾಯೈವ ಪಿಂಡಂ ಷೋಡಶಕಂ ಖಗ ।
ಮಧ್ಯಂ ಷೋಡಶಕಂ ಪ್ರಾಹುರೇತತ್ತತ್ತ್ವವಿದೋ ಜನಾಃ ॥೬೪॥

ಹದ್ನಾರನೇ ಪಿಂಡವ ತತ್ಪುರುಷಂಗೇ ಕೊಡೆಕು. ಹೇ ಪಕ್ಷಿಯೇ!, ತತ್ತ್ವವ ತಿಳುದೋರು ಇದನ್ನೇ ‘ಷೋಡಶ ಮಧ್ಯಮ’ ಹೇದು ಹೇಯ್ದವು.

ದ್ವಾದಶ ಪ್ರತಿಮಾಸೇಷು ಪಾಕ್ಷಿಕಂ ಚ ತ್ರಿಪಾಕ್ಷಿಕಮ್ ।
ನ್ಯೂನಷಾಣ್ಮಾಸಿಕ ಪಿಂಡಂ ದದ್ಯಾನ್ನ್ಯೂನಾಬ್ದಿಕಂ ತಥಾ ॥೬೫॥

ಮತ್ತೆ ಪ್ರತಿ ತಿಂಗಳ ಹನ್ನೆರಡು, ಪಾಕ್ಷಿಕ, ತ್ರಿಪಾಕ್ಷಿಕ, ಊನಷಣ್ಮಾಸಿಕ ಮತ್ತೆ ಊನಾಬ್ದಿಕಂಗಳಲ್ಲಿ ಪಿಂಡದಾನವ ಮಾಡೆಕು

ಉತ್ತಮಂ ಷೋಡಶಂ ಚೈತನ್ಮಯಾ ತೇ ಪರಿಕೀರ್ತಿತಮ್ ।
ಶ್ರಪಯಿತ್ವಾ ಚರುಂ ತಾರ್ಕ್ಷ್ಯ ಕುರ್ಯಾದೇಕಾದಶೇsಹನಿ ॥೬೬॥

ಈ ‘ಉತ್ತಮ ಷೋಡಶ’ ಕುರಿತಾಗಿ ಎನ್ನಿಂದ ನಿನಗೆ ಹೇಳಲ್ಪಟ್ಟತ್ತು. ಹೇ ಗರುಡ!, ಇವುಗೊಕ್ಕೆ ಹನ್ನೊಂದನೇ ದಿನ ಹೋಮಾನ್ನವ ಬೇಶಿ- ಚರುವಿಂದ ಪಿಂಡದಾನ ಮಾಡೆಕು.

ಚತ್ವಾರಿಂಶತ್ತಥೈವಾಷ್ಟೌ ಶ್ರಾದ್ಧಂ ಪ್ರೇತತ್ವನಾಶನಮ್ ।
ಯಸ್ಯ ಜಾತಂ ವಿಧಾನೇನ ಸ ಭವೇತ್ಪಿತೃಪಂಕ್ತಿಭಾಕ್ ॥೬೭॥

ಈ ನಲ್ವತ್ತೆಂಟು ಶ್ರಾದ್ಧಂಗೊ ಪ್ರೇತತ್ವವ ನಾಶ ಮಾಡುತ್ತು. ಇವು ಆರಿಂಗೋಸ್ಕರವಾಗಿ ವಿಧಿಪೂರ್ವಕವಾಗಿ ಮಾಡಲ್ಪಡುತ್ತೋ, ಅವ° ಪಿತೃಪಂಕ್ತಿಲಿ ಸೇರುತ್ತ°.

ಪಿತೃಪಂಕ್ತಿಪ್ರವೇಶಾರ್ಥಂ ಕಾರಯೇತ್ಷೋಡಶತ್ರಯಮ್ ।
ಏತಚ್ಛ್ರಾದ್ಧ ವಿಹೀನಶ್ಚೇತ್ಪ್ರೇತೋ ಭವತಿ ಸುಸ್ಥಿರಮ್ ॥೬೮॥

ಪಿತೃಪಂಕ್ತಿಲಿ ಪ್ರವೇಶಮಾಡ್ಳೆ ಬೇಕಾಗಿ ಈ ಮೂರು ಷೋಡಶ ಶ್ರಾದ್ಧಂಗಳ ಮಾಡೆಕು. ಆರಿಂಗೆ ಈ ಶ್ರಾದ್ಧಂಗೊ ಮಾಡಲ್ಪಡುತ್ತಿಲ್ಯೋ ಅವ° ಏವತ್ತೂ ಪ್ರೇತವಾಗಿಯೇ ಇರುತ್ತ°.

ಯಾವನ್ನ ದೀಯತೇ ಶ್ರಾದ್ಧಂ ಷೋಡಶತ್ರಯಸಂಜ್ಞಕಮ್ ।
ಸ್ವದತ್ತಂ ಪರದತ್ತಂ ಚ ತಾವನ್ನೈವೋಪತಿಷ್ಠತೇ ॥೬೯॥

ಎಲ್ಲಿವರೇಂಗೆ ಈ ಷೋಡಷತ್ರಯ ಹೇಳ್ವ ಹೆಸರಿನ 48 ಶ್ರಾದ್ಧಂಗೊ ಮಾಡಲ್ಪಡುತ್ತಿಲ್ಯೋ ಅಲ್ಲಿವರೇಂಗೆ ತಾನೇ ಕೊಟ್ಟದ್ದು ಮತ್ತೆ ಪರರು ಕೊಟ್ಟ ಶ್ರಾದ್ಧ ದಾನ ಫಲಂಗೊ ಆ ಪ್ರೇತಕ್ಕೆ ದಕ್ಕುತ್ತಿಲ್ಲೆ.

ತಸ್ಮಾತ್ಪುತ್ರೇಣ ಕರ್ತವ್ಯಂ ವಿಧಿನಾ ಷೋಡಶತ್ರಯಮ್ ।
ಭರ್ತುರ್ವಾಕುರುತೇ ಪತ್ನೀ ಯಸ್ಯ ಶ್ರೇಯೋ ಹ್ಯನಂತಕಮ್ ॥೭೦॥

ಹಾಂಗಾಗಿ ಮಗನಿಂದ ಪಿತೃವಿನ 48 ಶ್ರಾದ್ಧಂಗೊ (48ಪಿಂಡದಾನಂಗೊ) ಮಾಡಲ್ಪಡೆಕು. ಯಾವಾಕೆ ಪತ್ನಿ ತನ್ನ ಗೆಂಡಂಗೆ ಇವುಗಳ ಮಾಡುತ್ತೋ ಅದಕ್ಕೆ ಅನಂತವಾದ ಶ್ರೇಯಸ್ಸು ಉಂಟಾವ್ತು.

ಸಂಪರೇತಸ್ಯ ಯಾ ಪತ್ಯುಃ ಕುರುತೇ ಚೌರ್ಧ್ವದೇಹಿಕಮ್ ।
ಕ್ಷಯಾಹಂ ಪಾಕ್ಷಿಕಶ್ರಾದ್ಧಂ ಸಾ ಸತೀ ಹ್ಯುಚ್ಯತೇ ಮಯಾ ॥೭೧॥

ಯಾವ ಸ್ತ್ರೀ ಮೃತನಾದ ತನ್ನ ಗೆಂಡಂಗೆ ಅವನ ಔರ್ಧ್ವದೇಹಿಕ ಕ್ರಿಯೆಗಳ ಮತ್ತೆ ಕ್ಷಯಾಹ (ಪರಲೋಕ ಸಂಬಂಧಿ ಕಾರ್ಯಂಗೊ) ಹಾಂಗೂ ಪಾಕ್ಷಿಕ ಶ್ರಾದ್ಧಂಗಳ ಮಾಡುತ್ತೋ ಅದು ಎನ್ನಿಂದ ‘ಸತೀ’ ಹೇದು ಕರೆಯಲ್ಪಡುತ್ತು.

ಉಪಕಾರಾಯ ಸಾ ಭರ್ತುರ್ಜೀವತ್ಯೇಷಾ ಪತಿವ್ರತಾ ।
ಜೀವಿತಂ ಸಫಲಂ ತಸ್ಯಾ ಯಾ ಮೃತಂ ಸ್ವಾಮಿನಂ ಭಜೇತ್ ॥೭೨॥

ಆ ಪತಿವ್ರತಾ ಸ್ತ್ರೀ ಪತಿಯ ಉಪಕಾರಕ್ಕಾಗಿಯೇ ಜೀವಿಸಿಗೊಂಡಿರುತ್ತು. ಯಾವ ಸ್ತ್ರೀ ಮರಣಹೊಂದಿದ ತನ್ನ ಸ್ವಾಮಿಯ ಸ್ಮರಿಸುತ್ತೋ/ಸೇವೆಮಾಡುತ್ತೋ ಅದರ ಜೀವನ ಸಫಲವಾವುತ್ತು.

ಅಥ ಕಶ್ಚಿತ್ಪ್ರಮಾದೇನ ಮ್ರಿಯತೇ ವಹ್ನಿವಾರಿಭಿಃ ।
ಸಂಸ್ಕಾರಪ್ರಮುಖಂ ಕರ್ಮ ಸರ್ವಂ ಕುರ್ಯಾದ್ಯಥಾವಿಧಿ ॥೭೩॥

ಹಾಂಗೇ, ಆರಾರು ಪ್ರಮಾದವಶಾತ್ ಕಿಚ್ಚು ಅಥವಾ ನೀರಿಂದ ಮರಣಹೊಂದಿರೆ ಅವರ ಮುಖ್ಯ ಸಂಸ್ಕಾರಂಗಳನ್ನೂ ಮತ್ತೆ ಎಲ್ಲ ಕರ್ಮಂಗಳನ್ನೂ ವಿಧಿಪೂರ್ವಕವಾಗಿಯೇ ಮಾಡೆಕು.

ಪ್ರಮಾದಾದಿಚ್ಛಯಾ ವಾsಪಿ ನಾಗಾದ್ವಾ ಮ್ರಿಯತೇ ಯದಿ ।
ಪಕ್ಷಯೋರುಭರ್ನಾಗಂ ಪಂಚಮೀಷು ಪ್ರಪೂಜಯೇತ್ ॥೭೪॥

ಒಂದುವೇಳೆ ಪ್ರಮಾದವಶಾತ್ ಆಗಲೀ ಇಚ್ಛಾಪೂರ್ವಕವಾಗಲೀ ಸರ್ಪಂದ ಮರಣ ಹೊಂದಿರೆ ಎರಡೂ ಪಕ್ಷಂಗಳ ಪಂಚಮೀ ತಿಥಿಗಳಲ್ಲಿ ನಾಗನ ಪೂಜೆ ಮಾಡೆಕು.

ಕುರ್ಯಾತ್ಪಿಷ್ಟಮಯೀಂ ಲೇಖ್ಯಾಂ ನಾಗಭೋಗಾಕೃತಿಂ ಭುವಿ ।
ಅರ್ಚಯೇತ್ತಾಂ ಸಿತೈಃ ಪುಷ್ಪೈಃ ಸುಗಂಧೈಶ್ಚಂದನೇನ ಚ ॥೭೫॥

ಭೂಮಿಯ ಮೇಗೆ ಪಿಷ್ಟಂದ (ಹಿಟ್ಟು) ಸರ್ಪದ ಶರೀರದ ಆಕೃತಿಯ ರಚಿಸೆಕು. ಅದರ ಬೆಳಿ ಮತ್ತು ಸುವಾಸನಾಯುಕ್ತ ಪುಷ್ಪಂಗಳಿಂದ ಮತ್ತೆ ಚಂದನಂದ ಪೂಜೆಮಾಡೆಕು.

ಪ್ರದದ್ಯಾದ್ಧೂಪದೀಪೌ ಚ ತಂಡುಲಾಂಶ್ಚ ತಿಲಾನ್ಕ್ಷಿಪೇತ್ ।
ಆಮಪಿಷ್ಟಂ ಚ ನೈವೇದ್ಯಂ ಕ್ಷೀರಂ ಚ ವಿನಿವೇದಯೇತ್ ॥೭೬॥

ಧೂಪ ದೀಪಂಗಳ ಸಮರ್ಪಿಸೆಕು. ಅಕ್ಕಿ ಮತ್ತೆ ಎಳ್ಳು  ಹರುಗೆಕು. ಹಸಿಹಿಟ್ಟಿನ ನೈವೇದ್ಯವನ್ನೂ ಹಾಲನ್ನೂ ನಿವೇದಿಸೆಕು.

ಸೌವರ್ಣಂ ಶಕ್ತಿತೋ ನಾಗಂ ಗಾಂ ಚ ದದ್ಯಾದ್ದ್ವಿಜನ್ಮನೇ ।
ಕೃತಾಂಜಲಿಸ್ತತೋ ಬ್ರೂಯಾತ್ಪ್ರೀಯತಾಂ ನಾಗರಾಡಿತಿ ॥೭೭॥

ತನ್ನ ಶಕ್ತ್ಯಾನುಸಾರ ಚಿನ್ನದ ನಾಗನ ಮತ್ತೆ ಗೋವಿನ ಬ್ರಾಹ್ಮಣಂಗೆ ದಾನ ಕೊಡೆಕು. ಮತ್ತೆ ಕೈ ಜೋಡುಸಿ “ನಾಗರಾಜ ಪ್ರಸನ್ನನಾಗು” ಹೇದು ಪ್ರಾರ್ಥಿಸೆಕು.

ಪುನಸ್ತೇಷಾಂ ಪ್ರಕುರ್ವೀತ ನಾರಾಯಣಬಲಿಕ್ರಿಯಾಮ್ ।
ತಯಾ ಲಭಂತೇ ಸ್ವರ್ವಾಸಂ ಮುಚ್ಯಂತೇ ಸರ್ವಪಾತಕೈಃ ॥೭೮॥

ಮತ್ತೆ ಅವಕ್ಕೆ ನಾರಾಯಣ ಬಲಿ ಕ್ರಿಯೆಯ ಮಾಡೆಕು. ಅದರಿಂದ ಅವು ಎಲ್ಲ ಪಾಪಂಗಳಿಂದಲೂ ಬಿಡುಗಡೆ ಹೊಂದುತ್ತವು ಮತ್ತು ಸ್ವರ್ಗವ ಪಡೆತ್ತವು.

ಏವಂ ಸರ್ವಕ್ರಿಯಾಂ ಕೃತ್ವಾ ಘಟಸ್ನಾನಂ ಜಲಾನ್ವಿತಮ್ ।
ದದ್ಯಾದಾಬ್ದಂ ಯಥಾಸಂಖ್ಯಾನ್ಪಿಂಡಾನ್ವಾ ಸಜಲಾನ್ಕ್ರಮಾತ್ ॥೭೯॥

ಈ ಪ್ರಕಾರ ಎಲ್ಲ ಕ್ರಿಯೆಗಳ ಮಾಡಿ ಅನ್ನ ಮತ್ತು ಜಲ ತುಂಬಿದ ಪಾತ್ರೆಯ ಒಂದು ವರ್ಷ ಪರ್ಯಂತ ದಾನ ಮಾಡೆಕು. ಅಥವಾ ಅಷ್ಟೇ ಸಂಖ್ಯೆಯ ಪಿಂಡವ ಕ್ರಮವಾಗಿ ಜಲಸಮೇತವಾಗಿ ಕೊಡೆಕು.

ಏವಮೇಕಾದಶೇ ಕೃತ್ವಾ ಕುರ್ಯಾತ್ಸಾಪಿಂಡನಂ ತತಃ ।
ಶಯ್ಯಾಪದಾನಾಂ ದಾನಂ ಚ ಕಾರಯೇತ್ಸೂತಕೇ ಗತೇ ॥೮೦॥

ಈ ರೀತಿ ಹನ್ನೊಂದನೇ ದಿನದ ಕರ್ಮಂಗಳ ಮಾಡಿಕ್ಕಿ ಮತ್ತೆ ಸಪಿಂಡಿಕರಣವ ಮಾಡೆಕು. ಸೂತಕವು ಹೋದಮತ್ತೆ ಶಯ್ಯಾದಾನ ಮತ್ತೆ ಪದದಾನಂಗಳ ಮಾಡೆಕು. [ಆಸನ, ಪಾದುಕೆ, ಛತ್ರ, ಉಂಗುರ, ಕಮಂಡಲ, ಪಂಚಪಾತ್ರೆ, ವಸ್ತ್ರ, ಯಜ್ಞೋಪವೀತ, ದಂಡ, ಭೋಜನ, ಅನ್ನದ ಪಾತ್ರೆ, ತುಪ್ಪ, ದೀಪ. ಇವಿಷ್ಟರ ವಸ್ತುಗಳ ಗುಂಪಿಂಗೆ ತ್ರಯೋದಶ ‘ಪದ’ ಹೇಳ್ವ ಸಂಜ್ಞೆ (ತ್ರಯೋದಶ ಪದದಾನಂಗೊ). ದಶಪದದಾನ, ತ್ರಯೋದಶಪದದಾನ, ಉಪಪದದಾನ ಹೇಳಿ ಹದಿನಾಲ್ಕು ವಸ್ತುಗಳ ಗುಂಪು ಇತ್ಯಾದಿಗೊ ಬೇರೆ ಬೇರೆ ಇದ್ದು]

ಇತಿ ಶ್ರೀ ಗರುಡಪುರಾಣೇ ಸಾರೋದ್ಧಾರೇ ಏಕಾದಶದಿನವಿಧಿನಿರೂಪಣಂ ನಾಮ ದ್ವಾದಶೋಧ್ಯಾಯಃ ॥

ಇಲ್ಲಿಗೆ ಶ್ರೀ ಗರುಡಪುರಾಣಲ್ಲಿ ಸಕಲಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಹನ್ನೊಂದನೇ ದಿನದ ಕರ್ಮದ ನಿರೂಪಣೆ’ ಹೇಳ್ವ ಹನ್ನೆರಡ್ನೇ ಅಧ್ಯಾಯ ಮುಗುದತ್ತು.

 

ಗದ್ಯರೂಪಲ್ಲಿ-

ಗರುಡ° ಕೇಳಿದ° – ಹೇ ಸುರೇಶ್ವರ!, ಹನ್ನೊಂದನೇ ದಿನ ಮಾಡೇಕಾದ ವಿಧಿಯ ಎನಗೆ ಹೇಳು. ಹಾಂಗೇ ವೃಷೋತ್ಸರ್ಗದ ವಿಧಾನವನ್ನೂ ಎನಗೆ ತಿಳುಶು.

ಭಗವಂತ° ಹೇಳಿದ°- ಹನ್ನೊಂದನೇ ದಿನ ಪ್ರಾತಃಕಾಲಲ್ಲಿಯೇ ಜಲಾಶಯದ ಹತ್ರೆ ಹೋಗಿ ಸಮಸ್ತ ಔರ್ಧ್ವದೇಹಿಕ ಕ್ರಿಯೆಗಳ ಪ್ರಯತ್ನಪೂರ್ವಕವಾಗಿ ಮಾಡೆಕು. ವೇದಶಾಸ್ತ್ರ ಪಾರಂಗತನಾದ ಬ್ರಾಹ್ಮಣನ ಆಮಂತ್ರಿಸಿ, ಕೈ ಜೋಡುಸಿ ನಮಸ್ಕರಿಸಿ ಪ್ರೇತಮುಕ್ತಿಗಾಗಿ ಪ್ರಾರ್ಥನೆ ಮಾಡೆಕು. ಸ್ನಾನ-ಸಂಧ್ಯಾವಂದನೆ ಇತ್ಯಾದಿಗಳ ಮಾಡಿ ಆಚಾರ್ಯನೂ ಶುಚಿಯಾಯೆಕು ಮತ್ತೆ ಹನ್ನೊಂದನೇ ದಿನದ ಕರ್ಮವ ವಿಧಿಪೂರ್ವಕವಾಗಿ ಸುರುಮಾಡೆಕು. ಹತ್ತು ದಿನವರೆಂಗೆ ಮೃತನ ನಾಮ-ಗೋತ್ರ ಉಚ್ಛಾರಣೆ ಮಾಡಿ ಇತರ ಮಂತ್ರೋಚ್ಛಾರ ಇಲ್ಲದ್ದೆ ಕರ್ಮವ ಮಾಡುವದು. ಹನ್ನೊಂದನೇ ದಿನ ಪ್ರೇತಕ್ಕೆ ಪಿಂಡದಾನವ ಮಂತ್ರಸಹಿತ ಮಾಡೆಕು.

ಹೇ ಪಕ್ಷಿಯೇ!, ಚಿನ್ನದ ವಿಷ್ಣುವಿನ ಮೂರ್ತಿಯ/ಪ್ರತಿಮೆಯ, ತಾಮ್ರಂದ ರುದ್ರನ ಮತ್ತೆ ಲೋಹದ ಯಮನ ಪ್ರತಿಮೆಗಳ ಮಾಡುಸೆಕು. ಪಡುದಿಕ್ಕೆ ಗಂಗಾಜಲಂದ ಪರಿಪೂರ್ಣ ವಿಷ್ಣುಕಲಶ ಸ್ಥಾಪನೆ ಮಾಡಿ ಅದರ ಮೇಗೆ ಹಳದಿ ವಸ್ತ್ರ ಧಾರಣೆ ಮಾಡಿಸಿದ ವಿಷ್ಣುವಿನ ಪ್ರತಿಮೆಯ ಮಡುಗೆಕು. ಮೂಡಹೊಡೆಲಿ ಹಾಲು ನೀರಿಂದ ತುಂಬಿದ ಬ್ರಹ್ಮಕಲಶವ ಸ್ಥಾಪನೆ ಮಾಡಿ ಅದರ ಮೇಗಂದ ಶ್ವೇತವಸ್ತ್ರ ಧಾರಣೆ ಮಾಡಿಸಿದ ಬ್ರಹ್ಮನ ಪ್ರತಿಮೆಯ ಮಡುಗೆಕು. ಬಡಗ ಹೊಡೆಲಿ ಜೇನು ಮತ್ತೆ ತುಪ್ಪಂದ ಪೂರಿತ ರುದ್ರಕುಂಭವ ಸ್ಥಾಪನೆ ಮಾಡಿ, ರಕ್ತವರ್ಣ ವಸ್ತ್ರ ಧಾರಣೆ ಮಾಡಿಸಿದ ರುದ್ರನ ಪ್ರತಿಮೆಯ ಮಡುಗೆಕು. ತೆಂಕ ಹೊಡೆಲಿ ಇಂದ್ರೋದಕ (ಮಳೆನೀರು/ತೀರ್ಥನೀರು) ತುಂಬಿದ ಯಮಘಟವ ಸ್ಥಾಪನೆ ಮಾಡಿ ಅದರ ಮೇಗಂದ ಕಪ್ಪು ವಸ್ತ್ರ ಧಾರಣೆ ಮಾಡಿಸಿದ ಯಮನ ಪ್ರತಿಮೆಯ ಸ್ಥಾಪನೆ ಮಾಡೆಕು.

ಮಗ° ಮತ್ತೆ ಅವುಗಳ ಮಧ್ಯಲ್ಲಿ ಒಂದು ಮಂಡಲವ ಮಾಡಿ ಅದರ ಮೇಗೆ ದರ್ಭೆಂದ ಮಾಡಿದ ಪ್ರೇತದ ಪ್ರತಿಮೆಯ ಸ್ಥಾಪನೆ ಮಾಡಿ ದಕ್ಷಿಣಾಭಿಮುಖವಾಗಿ ಕೂದೊಂಡು ಅಪಸವ್ಯವಾಗಿ ತರ್ಪಣ ಬಿಡೆಕು. ವಿಷ್ಣು, ಬ್ರಹ್ಮ, ಶಿವ ಮತ್ತೆ ಯಮ- ಇವಕ್ಕೆ  ವೇದಮಂತ್ರಂಗಳಿಂದ ತರ್ಪಣ ಮಾಡೆಕು. ಮತ್ತೆ ಹೋಮ ಮಾಡಿಕ್ಕಿ, ಶ್ರಾದ್ಧ ಮತ್ತು ದಶಘಟದಾನ ಇತ್ಯಾದಿಗಳ ಮಾಡೆಕು.

ಮತ್ತೆ ಪಿತೃಗಳ ಉದ್ಧಾರಕ್ಕಾಗಿ ಗೋದಾನ ಮಾಡೆಕು. ಗೋದಾನ ಮಾಡುವಾಗ “ಹೇ ಮಾಧವ!, ನಿನ್ನ ಸಂಪ್ರೀತಿಗಾಗಿ ಈ ಗೋದಾನವ ನೀಡುತ್ತೆ” ಹೇದು ಹೇಳೆಕು. ಮತ್ತೆ ಮೃತನಿಂದ ಉಪಭೋಗಿಸಲ್ಪಟ್ಟ ಆಭರಣ, ವಸ್ತ್ರ, ವಾಹನ ಇತ್ಯಾದಿಗೊ, ತುಪ್ಪಂದ ಪೂರಿತ ಕಂಚಿನ ಪಾತ್ರೆ, ಸಪ್ತಧಾನ್ಯಂಗೊ ಮತ್ತು ಮೃತಂಗೆ ಇಷ್ಟವಾಗಿತ್ತಿದ್ದ ವಸ್ತುಗಳ, ಮತ್ತೆ ತಿಲಾದಿ ಅಷ್ಟಮಹಾದಾನಂಗಳ ಮೃತನ ಶಯ್ಯೆ ಹತ್ರೆ ಮಡಿಗಿ ಅಲ್ಲಿಂದ ದಾನ ಕೊಡೆಕು. ಬ್ರಾಹ್ಮಣನ ಪಾದ ತೊಳದು ವಸ್ತ್ರಾದಿಗಳ ನೀಡಿ ಅವನ ಪೂಜಿಸೆಕು.  ಅವಂಗೆ ಹಾಲು ಪಕ್ವಾನ್ನ, ಮೋದಕ, ವಡೆ ಇತ್ಯಾದಿ ಹೊರುದ ಪಾಕಾಯತನವ ನೀಡೆಕು.

ಮತ್ತೆ ಶಯ್ಯೆಯ ಮೇಗೆ ಮಗ° ಸ್ವರ್ಣದ ವಿಷ್ಣುಪ್ರತಿಮೆಯ ಮಡಿಗಿ ಅದಕ್ಕೆ ಪೂಜೆ ಮಾಡಿ ವಿಧಿಪೂರ್ವಕವಾಗಿ ಮೃತಶಯ್ಯಾ ದಾನ ಮಾಡೆಕು. ಮತ್ತೆ ಪ್ರೇತದ ಒಂದು ಪ್ರತಿಮೆಯಮಾಡಿ ಸರ್ವವಸ್ತ್ರಾಭರಣ ಸಹಿತ ಪೂಜಿಸಿ,  “ಹೇ ವಿಪ್ರ!, ಸರ್ವೋಪರಕರಣಸಿದ್ಧವಾಗಿಪ್ಪ ಈ ಪ್ರೇತಶಯ್ಯೆಯ ನಿನಗೆ ಅರ್ಪಿಸಿದ್ದೆ” ಹೇದು ಹೇಳೆಕು. ಈ ಪ್ರಕಾರ ಕುಟುಂಬಸ್ಥ ಸುಲಕ್ಷಣ ಬ್ರಾಹ್ಮಣಂಗೆ ಶಯ್ಯಾದಾನವ ಕೊಟ್ಟಿಕ್ಕಿ ಪ್ರದಕ್ಷಿಣೆ ಬಂದು ನಮಸ್ಕಾರ ಮಾಡೆಕು.  ಹೀಂಗೆ ಶಯ್ಯಾದಾನ ಮಾಡುವದರಿಂದ ನವಕಾದಿ ಶ್ರಾದ್ಧ (ಒಂಬತ್ತು ದಿನಾಣ ಪಿಂಡದಾನ) ಮತ್ತೆ ವೃಷೋತ್ಸರ್ಗ ವಿಧಾನ ಮಾಡುವದರಿಂದ ಪ್ರೇತ ಪರಮ ಗತಿಯ ಹೊಂದುತ್ತು.

ಹನ್ನೊಂದನೇ ದಿನ ವಿಧಿಪೂರ್ವಕವಾಗಿ ವೃಷೋತ್ಸರ್ಗವ ಮಾಡೆಕು. ಅಂಗಹೀನ, ರೋಗಯುಕ್ತ, ಎಳೆಪ್ರಾಯದ ಹೊರತುಪಡಿಸಿ/ಬಿಟ್ಟಿಕ್ಕಿ ಒಳ್ಳೆಯ ಲಕ್ಷಣಂಗಳಿಪ್ಪ ಹೋರಿಯನ್ನೇ ವೃಷೋತ್ಸರ್ಗಕ್ಕೆ ಉಪಯೋಗುಸೆಕು. ಬ್ರಾಹ್ಮಣನ ಉದ್ದೇಶಂದ ವೃಷೋತ್ಸರ್ಗ ಮಾಡ್ಳೆ ಕೆಂಪು ಕಣ್ಣುಗಳಿಪ್ಪ, ಪಿಂಗಲವರ್ಣ ಮೈಮಾಟದ, ಕೆಂಪು ಕೊಂಬಿನ, ಕೆಂಪು ಕೊರಳಿನ, ಕೆಂಪು ಗೊರಸಿನ, ಶ್ವೇತವರ್ಣದ ಹೊಟ್ಟೆ ಮತ್ತು ಕಪ್ಪು ಬೆನ್ನಿನ ವೃಷಭದ ಉತ್ಸರ್ಜನೆ ಮಾಡೆಕು. ಕ್ಷತ್ರಿಯಂಗೆ ಪ್ರಕಾಶಮಾನವಾದ (ನುಣುಪಾದ) ರಕ್ತವರ್ಣದ, ವೈಶ್ಯಂಗೆ ಪೀತವರ್ಣದ ಮತ್ತೆ ಅನ್ಯರಿಂಗೆ ಕಪ್ಪು ವರ್ಣದ ವೃಷಭ ವೃಷೋತ್ಸರ್ಗಕ್ಕಾಗಿ ಪ್ರಶಸ್ತ ಹೇದು ಹೇಳಲ್ಪಟ್ಟಿದು.

ಯಾವ ವೃಷಭದ ಸರ್ವಾಂಗ ಪಿಂಗಲವರ್ಣದ್ದಾಗಿದ್ದೋ ಹಾಂಗೂ ಬೀಲ ಮತ್ತೆ ಕಾಲು ಶ್ವೇತವರ್ಣದ್ದಾಗಿದ್ದೋ ಅದರ ‘ಪಿಂಗವೃಷ’ ಹೇದು ಹೇಳುವದು, ಅದು ಪಿತೃಗೊಕ್ಕೆ ಪ್ರೀತಿಕಾರಕ. ಯಾವ ವೃಷಭದ ಕಾಲು, ಮೋರೆ ಮತ್ತೆ ಬೀಲ ಶ್ವೇತವರ್ಣದ್ದಾಗಿದ್ದೋ ಮತ್ತೆ ಶರೀರ ಅರಗಿನ ವರ್ಣದ್ದಾಗಿದ್ದೋ ಅದಕ್ಕೆ ‘ನೀಲವೃಷ’ ಹೇದು ಹೇಳುವದು. ಯಾವ ವೃಷಭ ರಕ್ತವರ್ಣಕ್ಕೆ ಮತ್ತೆ ಬೀಲ ಬೆಳಿ, ಗೊರಸು, ಕೊಂಬು ಪಿಂಗಲ (ಕಂದು) ವರ್ಣಕ್ಕೆ ಇರುತ್ತೋ ಅದಕ್ಕೆ ‘ರಕ್ತನೀಲ’ ವೃಷಭ ಹೇದು ಹೇಳುವದು. ಯಾವುದು ಇಡೀ ಮೈ ಒಂದೇ ಬಣ್ಣವುಳ್ಳದ್ದಾಗಿ, ಬೀಲ, ಗೊರಸು, ಕೊಂಬು ಕಂದು ಬಣ್ಣದ್ದಾಗಿರುತ್ತೋ ಅದರ ‘ನೀಲಪಿಂಗ’ ವೃಷಭ ಹೇದು ಹೇಳುವದು. ಅದು ಪೂರ್ವಿಕರ ಉದ್ಧಾರ ಮಾಡುತ್ತು ಹೇದು ಪ್ರತೀತಿ. ಯಾವುದು ಪಾರಿವಾಳದ ಬಣ್ಣದ್ದಾಗಿ ಹಣೆಲಿ ತಿಲಕ ಹೊಂದಿರುತ್ತೋ, ಮತ್ತೆ ಸರ್ವಾಂಗ ಸುಂದರವಾಗಿರುತ್ತೋ ಅದರ ‘ಬಭ್ರುನೀಲ’ ವೃಷಭ ಹೇದು ಹೇಳುತ್ತವು. ಯಾವುದರ ಸಂಪೂರ್ಣ ಶರೀರ ನೀಲವರ್ಣದ್ದಾಗಿದ್ದೋ ಮತ್ತೆ ಕಣ್ಣುಗೊ ರಕ್ತವರ್ಣದ್ದಾಗಿದ್ದೋ ಅದಕ್ಕೆ ‘ಮಹಾನೀಲ’ ವೃಷಭ ಹೇದು ಹೇಳುವದು. ಈ ರೀತಿ ಐದು ಪ್ರಕಾರದ ನೀಲವೃಷಭಂಗೊ ಇರುತ್ತು.

ವೃಷಭ ಸಂಸ್ಕಾರ ಮಾಡಿ ಅದರ ಅವಶ್ಯ ಮುಕ್ತಗೊಳುಸಿ ಬಿಡೆಕು (ಬಿಟ್ಟುಬಿಡೆಕು). ಅದರ ಮನೆಲಿ ಮಡಿಕ್ಕೊಂಬಲಾಗ. ಇದೇ ವಿಷಯ ಕುರಿತಾಗಿ ಲೋಕಲ್ಲಿ ಪ್ರಾಚೀನ ಕಥೆ ಪ್ರಚಲಿತಲ್ಲಿದ್ದು ಪ್ರಸಿದ್ಧವಾಗಿದ್ದು. ಬಹುಪುತ್ರಸಂತಾನವ ಅಪೇಕ್ಷಿಸೆಕು. ಎಂತಕೇಳಿರೆ ಅವರಲ್ಲಿ ಒಬ್ಬ° ಆದರೂ ಗಯೆಗೆ (ಗಯಾಶ್ರಾದ್ಧ ಮಾಡ್ಳೆ) ಹೋಕು. ಅಥವಾ ಗೌರಿಕನ್ಯೆಯ (ಅಷ್ಟವರ್ಷಾಭವೇದ್ಗೌರೀ – ಎಂಟು ವರ್ಷದ ಕನ್ಯೆ ಗೌರಿ ಎನಿಸಿಗೊಳ್ಳುತ್ತು) ವಿವಾಹ (ಕನ್ಯಾದಾನ) ಮಾಡುಗು ಅಥವಾ ವೃಷೋತ್ಸರ್ಗ ಮಾಡುಗು. ವೃಷೋತ್ಸರ್ಗ ಮಾಡುವ ಅಥವಾ ಗಯಾಶ್ರ್ಹಾದ್ಧ ಮಾಡುವ ಪುತ್ರ° ಸತ್ಪುತ್ರ ಎನಿಸಿಗೊಳ್ಳುತ್ತ°. ಮಾಡದ ಮಕ್ಕೊ ಮಲಕ್ಕೆ (ವಿಷ್ಠಾ) ಸಮಾನರಾವ್ತವು.

ಯಾವನ ಪೂರ್ವಿಕರು ರೌರವಾದಿ ನರಕಂಗಳಲ್ಲಿ ಯಾತನೆಯ ಅನುಭವುಸಿಗೊಂಡಿದ್ದರೆ ವೃಷೋತ್ಸರ್ಗ ಮಾಡುವ ಪುತ್ರ° ಅವನೂ ಸೇರಿದಾಂಗೆ ಇಪ್ಪತ್ತೊಂದು ಪೀಳಿಗೆಗಳ ಉದ್ಧಾರ ಮಾಡುತ್ತ°. ಸ್ವರ್ಗಕ್ಕೆ ಹೋದ ಪಿತೃಗಳೂ ಸಾನ ನಿಶ್ಚಯವಾಗಿ ವೃಷೋತ್ಸರ್ಗವ ಇಚ್ಛೆಪಡುತ್ತವು. “ನಮ್ಮ ವಂಶಲ್ಲಿ ಯಾವ ಮಗನಾದರೂ ವೃಷೋತ್ಸರ್ಗ ಮಾಡುಗೋ, ಆ ವೃಷೋತ್ಸರ್ಗಂದ ನಾವೆಲ್ಲರೂ ಪರಮಗತಿಯ ಹೊಂದುಗೊ, ಎಲ್ಲ ಯಜ್ಞಂಗಳಲ್ಲಿ ವೃಷೋತ್ಸರ್ಗ ಯಜ್ಞವೇ ನವಗೆ ಮುಕ್ತಿದಾಯಕವಾದ್ದು ” ಹೇದು ಗ್ರೇಶಿಗೊಂಡಿರುತ್ತವು. ಹಾಂಗಾಗಿ ಪಿತೃಗಳ ವಿಮುಕ್ತಿಗಾಗಿ ವೃಷಯಜ್ಞವ ಆಚರುಸೆಕು. ಯಥೋಕ್ತ ವಿಧಿಪೂರ್ವಕವಾಗಿ ಸರ್ವಪ್ರಯತ್ನಂದ ವೃಷೋತ್ಸರ್ಗವ ಮಾಡೆಕು.

ನವಗ್ರಹದೇವತೆಗಳ ತತ್ತದ್ ಮಂತ್ರಂಗಳಿಂದ ಸ್ಥಾಪಿಸಿ, ಪೂಜಿಸಿ, ಶಾಸ್ತ್ರೋಕ್ತ ಹೋಮ ಮಾಡಿ ಮತ್ತೆ ವೃಷಭದ ಅಬ್ಬೆಯ ಪೂಜೆ ಮಾಡೆಕು. ಒಂದು ಹೆಣ್ಣು, ಒಂದು ಗೆಂಡು ಕಂಜಿಯ ತಂದು ಅವಕ್ಕೆ ಕಂಕಣ ಕಟ್ಟೆಕು ವೈವಾಹಿಕ ವಿಧಿಗಳಿಂದ ಕಂಬಕ್ಕೆ ಕಟ್ಟೆಕು. ಮತ್ತೆ ಎರಡೂ ಕಂಜಿಗಳ ರುದ್ರಕುಂಭದ ಜಲಂದ ಮೀಶಿ, ಗಂಧ ಮಾಲೆಗಳಿಂದ ಪೂಜೆ ಮಾಡಿ ಪ್ರದಕ್ಷಿಣೆ ಮಾಡೆಕು. ಮತ್ತೆ ವೃಷಭದ ಬಲದ ಹೊಡೆಲಿ ತ್ರಿಶೂಲ ಮತ್ತು ಎಡದ ಹೊಡೆಲಿ ಚಕ್ರದ ಚಿಹ್ನೆಗಳ ಅಂಕಿತಗೊಳುಸೆಕು. ಮತ್ತೆ ಕೈಜೋಡಿಸಿಗೊಂಡು ಮಗ ಈ ಮಂತ್ರವ ಹೇಳೆಕು – “ಧರ್ಮಸ್ತ್ವಂ ವೃಷರೂಪೇಣ…”   – “ಪೂರ್ವಕಾಲಲ್ಲಿ ಬ್ರಹ್ಮನಿಂದ ನಿರ್ಮಿತನಾದ ನೀನು ವೃಷಭರೂಪಿ ಧರ್ಮನಾಗಿದ್ದೆ. ನಿನ್ನ ಉತ್ಸರ್ಗ ಮಾಡುವದರಿಂದ ನೀನು ಭವಸಾಗರವ ದಾಂಟುಸುವೆ”. ಹೀಂಗೆ ಮಂತ್ರವ ಹೇದಿಕ್ಕಿ, ನಮಸ್ಕಾರ ಮಾಡಿ ಆ ಎರಡು ಕಂಜಿಗಳ ಬಿಟ್ಟುಬಿಡೆಕು (ಉತ್ಸರ್ಗಗೊಳುಸೆಕು). ಭಗವಂತ° ಹೇಳಿದ° – “ಈ ರೀತಿಯಾಗಿ ಆರು ವೃಷೋತ್ಸರ್ಗ ಮಾಡುತ್ತವೋ ಅವಕ್ಕಾನು ಸದಾ ವರವ ನೀಡುತ್ತೆ, ಪ್ರೇತಕ್ಕೆ ಮೋಕ್ಷವ ಕೊಡುತ್ತೆ”.  ಹಾಂಗಾಗಿ ವೃಷೋತ್ಸರ್ಗವ ಅಗತ್ಯ ಮಾಡ್ಳೇ ಬೇಕು. ಅದರ ಫಲ ಬದುಕ್ಕಿಪ್ಪಗಳೇ ಉಂಟಾವ್ತು. ಮಕ್ಕೊ ಇಲ್ಲದ್ದರೆ ತಾನೇ ಇದರ ಮಾಡಿ ಸುಖವಾಗಿ ಪರಮಗತಿಯ ಪಡವಲಕ್ಕು.

ಕಾರ್ತಿಕಾದಿ ಶುಭಮಾಸಂಗಳಲ್ಲಿ, ಉತ್ತರಾಯಣಲ್ಲಿ, ಶುಕ್ಲಪಕ್ಷ ವಾ ಕೃಷ್ಣಪಕ್ಷದ ದ್ವಾದಶಿ ಮುಂತಾದ ತಿಥಿಗಳಲ್ಲಿ, ಸೂರ್ಯ-ಚಂದ್ರ ಗ್ರಹಣ ಕಾಲಂಗಳಲ್ಲಿ, ಪವಿತ್ರ ತೀರ್ಥಕ್ಷೇತ್ರಂಗಳಲ್ಲಿ, ಮೇಷ – ತುಲಾ ಸಂಕ್ರಮಣಂಗಳಲ್ಲಿ ವೃಷೋತ್ಸರ್ಗ ಮಾಡೆಕು. ಶುಭಲಗ್ನಲ್ಲಿ, ಶುಭಮುಹೂರ್ತಲ್ಲಿ, ಶುದ್ಧವಾದ ಪ್ರದೇಶಲ್ಲಿ ಶಾಂತಚಿತ್ತನಾಗಿ, ವಿಧಿ-ವಿಧಾನಂಗಳ ಅರ್ತ ಶುಭಲಕ್ಷಣಂಗಳಿಪ್ಪ ಬ್ರಾಹ್ಮಣನ ಆಮಂತ್ರಿಸಿ, ಜಪ, ಹೋಮ, ದಾನಾದಿಗಳಿಂದ ದೇಹ ಶುದ್ಧಿಯಮಾಡಿಗೊಂಡು ಹಿಂದೆ ಹೇಳಿದ ರೀತಿಲಿ ಹೋಮಾದಿ ಕಾರ್ಯಂಗಳ ನೆರವೇರುಸೆಕು. ಮತ್ತೆ ಶಾಲಿಗ್ರಾಮವ ಸ್ಥಾಪನೆಮಾಡಿ, ವೈಷ್ಣವ ಶ್ರಾದ್ಧವ ಆಚರುಸೆಕು. ಮತ್ತೆ ತನ್ನ ಶ್ರಾದ್ಧವ ಮಾಡಿ ದ್ವಿಜಂಗೆ ದಾನ ಕೊಡೆಕು. ಪುತ್ರವಂತನಾಗಲೀ, ಪುತ್ರಹೀನನಾಗಿರಲೀ.. ಯಾವಾತ° ಈ ಪ್ರಕಾರ ಮಾಡುತ್ತನೋ ಅವಂಗೆ ವೃಷೋತ್ಸರ್ಗಂದ ಎಲ್ಲ ಇಷ್ಟಾರ್ಥಂಗಳೂ ನೆರವೇರುತ್ತು. ಅಗ್ನಿಹೋತ್ರಾದಿ ವಿವಿಧ ಯಜ್ಞ, ದಾನಾದಿಗಳಿಂದ ಯಾವ ಉತ್ತಮ ಗತಿ ಲಭಿಸಿದ್ದೆಲ್ಲೆಯೋ ಅದು ವೃಷೋತ್ಸರ್ಗಂದ ಪ್ರಾಪ್ತಿಯಾವುತ್ತು. ಬಾಲ್ಯ, ಕೌಮಾರ, ಪೌಗಂಡ, ಯೌವನ, ವೃದ್ಧಾವಸ್ಥೆಲಿ ಯಾವ ಸಂಚಿತ ಪಾಪಂಗಳಿರುತ್ತೋ ಅವೆಲ್ಲವೂ ವೃಷೋತ್ಸರ್ಗಂದ ನಾಶ ಆವುತ್ತು. ಇದರ್ಲಿ ಏವ ಸಂಶಯವೂ ಇಲ್ಲೆ.

ಮಿತ್ರದ್ರೋಹಿ ಕೃತಘ್ನ, ಸುರಾಪಾನ ಮಾಡುವವ°, ಗುರುಪತ್ನಿಗಾಮಿ, ಬ್ರಹ್ಮಹತ್ಯಾಪಾಪಿ ಮತ್ತೆ ಸ್ವರ್ಣ ಚೌರ್ಯವ ಮಾಡಿದವ° ಕೂಡ ವೃಷೋತ್ಸರ್ಗಂದ ಪಾಪಮುಕ್ತನಾಗಿ ಹೋವ್ತವು. ಹಾಂಗಾಗಿ ಹೇ ವೈನತೇಯ!, ಸರ್ವಪ್ರಯತ್ನ ಮಾಡಿ ವೃಷೋತ್ಸರ್ಗವ ಮಾಡೆಕು. ಮೂರುಲೋಕಂಗಳಲ್ಲಿಯೂ ಇದಕ್ಕೆ ಸಮಾನವಾದ ಇನ್ನೊಂದು ಪುಣ್ಯಕಾರ್ಯ ಇಲ್ಲೆ.

ಪತಿ ಮತ್ತೆ ಪುತ್ರವಂತ ಸ್ತ್ರೀ ಒಂದುವೇಳೆ ಅವಿಬ್ರು ಇಪ್ಪಗಳೇ ಮರಣ ಹೊಂದಿರೆ, ಅದರ ಉದ್ದೇಶಕ್ಕಾಗಿ ವೃಷೋತ್ಸರ್ಗ ಮಾಡ್ಳಾಗ. ಬದಲಿಂಗೆ ಹಾಲು ಕರವ ದನವ ದಾನ ಮಾಡೆಕು. ಹೇ ಗರುಡ!, ಯಾವ ವ್ಯಕ್ತಿ ವೃಷೋತ್ಸರ್ಗವಾದ ವೃಷಭವ ಹೆಗಲ ಅಥವಾ ಬೆನ್ನಮೇಗೆ ಭಾರ ಹೊರುಸುವ ಕಾರ್ಯಕ್ಕೆ ಉಪಯೋಗುಸುತ್ತನೋ ಅಂಥವ ಪ್ರಳಯಕಾಲ ಪರ್ಯಂತ ಘೋರ ನರಕಲ್ಲಿ ಬಿದ್ದಿರುತ್ತ°. ಯಾವಾತ° ಮುಷ್ಠಿ ವಾ ಬಡಿಗೆಂದ ವೃಷಭಕ್ಕೆ ಬಡಿತ್ತನೋ ಅವ° ಒಂದು ಕಲ್ಪದವರೇಂಗೆ ಯಮಯಾತನೆಯ ಅನುಭವುಸುತ್ತಲೇ ಇರುತ್ತ°.

ಹೇ ಗರುಡ!, ಈ ಪ್ರಕಾರ ವೃಷೋತ್ಸರ್ಗವ ಮಾಡಿ,  ಷೋಡಶ ಶ್ರಾದ್ಧಂಗಳ ಸಪಿಂಡೀಕರಣಂದ ಮದಲು ಮಾಡೆಕು. ಅದರ ನಿನಗೆ ಹೇಳುತ್ತೆ ಕೇಳು – ಮೃತಸ್ಥಾನಲ್ಲಿ ಒಂದು, ದ್ವಾರಲ್ಲಿ ಒಂದು, ಅರ್ಧಮಾರ್ಗಲ್ಲಿ ಒಂದು ಮತ್ತೆ ಚಿತೆಯ ಮೇಗೆ ಶವಹಸ್ತಲ್ಲಿ ಎರಡು, ಅಸ್ಥಿಸಂಚಯನಲ್ಲಿ ಒಂದು ಮತ್ತೆ ಹತ್ತು ದಿನಾಣ ಹತ್ತು ಪಿಂಡಂಗೊ- ಈ ರೀತಿಯಾಗಿ ಒಟ್ಟು ಹದಿನಾರು,  ಈ ಸುರುವಾಣ ಹದ್ನಾರು ಪಿಂಡಂಗೊ/ಶ್ರಾದ್ಧಂಗೊ ‘ಷೋಡಶ ಪ್ರಥಮ’ ಅಥವಾ ‘ಮಲಿನ ಷೋಡಶ’  ಹೇದು ಹೇಳುವದು. ಇನ್ನು ಮತ್ತೆ ಮಧ್ಯಲ್ಲಿ ಮಾಡುವ ಇನ್ನೂ ಬೇರೆ ‘ದ್ವಿತೀಯ ಷೋಡಶ’ ಅಥವಾ ಮಧ್ಯಷೋಡಶೀ ಶ್ರಾದ್ಧದ ಬಗ್ಗೆ ನಿನಗೆ ಹೇಳುತ್ತೆ ಕೇಳು –

ಮಧ್ಯಷೋಡಶೀಲಿ ಸುರುವಾಣ ಮಲಿನ ಷೋಡಶೀಲಿ ಇಪ್ಪಾಂಗೆ ಹದ್ನಾರು ಪಿಂಡಪ್ರದಾನ ಶ್ರಾದ್ಧ. ಸುರುವಾಣ ಪಿಂಡ ಭಗವಂತ° ವಿಷ್ಣುವಿಂಗೆ, ಎರಡ್ನೇದು ಶಿವಂಗೆ, ಮೂರ್ನೇದು ಪರಿವಾರಸಮೇತ ಯಮಂಗೆ ಕೊಡೆಕು. ನಾಕನೇದು ಸೋಮರಾಜಂಗೆ, ಐದ್ನೇದು ಹವ್ಯವಾಹನನಾದ ಅಗ್ನಿಗೆ, ಆರ್ನೇದು ಕವ್ಯವಾಹನನಾದ ಅಗ್ನಿಗೆ ಮತ್ತೆ ಏಳ್ನೇದು ಕಾಲಂಗೆ ಕೊಡೆಕು. ಎಂಟ್ನೇ ಪಿಂಡ ರುದ್ರಂಗೆ, ಒಂಬತ್ನೇದು ಪರಮಪುರುಷಂಗೆ, ಹತ್ನೇದು ಪ್ರೇತಕ್ಕೆ, ಹನ್ನೊಂದನೇದು ವಿಷ್ಣುವಿಂಗೆ ಕೊಡೆಕು. ಹನ್ನೆರಡನೇ ಪಿಂಡ ಬ್ರಹ್ಮಂಗೆ, ಹದಿಮೂರ್ನೆದು ವಿಷ್ಣುವಿಂಗೆ, ಹದಿನಾಲ್ಕನೇದು ಶಿವಂಗೆ ಮತ್ತೆ ಹದಿನೈದನೇದು ಯಮಂಗೆ ಕೊಡೆಕು. ಹದ್ನಾರನೇ ಪಿಂಡವ ತತ್ಪುರುಷಂಗೇ ಕೊಡೆಕು. ಹೇ ಪಕ್ಷಿಯೇ!, ತತ್ತ್ವವ ತಿಳುದೋರು ಇದನ್ನೇ ‘ಷೋಡಶ ಮಧ್ಯಮ’ ಹೇದು ಹೇಯ್ದವು. ಮತ್ತೆ ಪ್ರತಿ ತಿಂಗಳ ಹನ್ನೆರಡು, ಪಾಕ್ಷಿಕ, ತ್ರಿಪಾಕ್ಷಿಕ, ಊನಷಣ್ಮಾಸಿಕ ಮತ್ತೆ ಊನಾಬ್ದಿಕಂಗಳಲ್ಲಿ ಪಿಂಡದಾನವ ಮಾಡೆಕು. ಈ ಶ್ರಾದ್ಧಂಗೊಕ್ಕೆ ‘ಉತ್ತಮಷೋಡಶೀ’ ಹೇದು ಹೇಳುವದು.

ಹೇ ಗರುಡ!, ಇವುಗೊಕ್ಕೆ ಹನ್ನೊಂದನೇ ದಿನ ಚರುವಿಂದ ಪಿಂಡಪ್ರದಾನ ಮಾಡೆಕು. ಈ ನಲ್ವತ್ತೆಂಟು ಶ್ರಾದ್ಧಂಗೊ (ಮಲಿನ ಷೋಡಶೀ ಹದಿನಾರು + ಮಧ್ಯಮ ಷೋಡಶೀ ಹದಿನಾರು + ಉತ್ತಮ ಷೋಡಶೀ ಹದಿನಾರು = ನಲ್ವತ್ತೆಂಟು)  ಪ್ರೇತತ್ವವ ಮುಕ್ತಗೊಳುಸುತ್ತು. ಯಾವ ಮೃತನ ಉದ್ದೇಶಂದ ಈ ನಲ್ವತ್ತೆಂಟು ಶ್ರಾದ್ಧಂಗೊ ಮಾಡಲಾವ್ತೋ ಅವ° ಪಿತೃಪಂಕ್ತಿಗೆ ಯೋಗ್ಯನಾವುತ್ತ°. ಹಾಂಗಾಗಿ, ಮೃತನ ಪಿತೃಗಳ ಪಂಕ್ತಿಲಿ ಪ್ರವೇಶಗೊಳುಸಲೆ ಷೋಡಶತ್ರಯೀ (ಮಲಿನ+ಮಧ್ಯಮ+ಉತ್ತಮ) ಮಾಡೆಕು. ಈ ಶ್ರಾದ್ಧಂಗಳಿಂದ ವಿಹೀನನಾದ ಮೃತನ ಪ್ರೇತತ್ವ ಸುಸ್ಥಿರವಾಗಿ ಹೋವ್ತು ಮತ್ತು ಎಲ್ಲಿವರೇಂಗೆ ಷೋಡಶತ್ರಯಸಂಜ್ಞಕ ಶ್ರಾದ್ಧಂಗೊ ಮಾಡಲಾಯ್ದಿಲ್ಯೋ ಅಲ್ಲಿವರೆಂಗೆ ಆ ಪ್ರೇತ ತನ್ನ ಮೂಲಕ ವಾ ಅನ್ಯರ ಮೂಲಕ ನೀಡಲಾದ ಯಾವುದೇ ಪದಾರ್ಥವ ಪ್ರಾಪ್ತಿ ಹೊಂದುತ್ತಿಲ್ಲೆ.

ಹಾಂಗಾಗಿ, ಷೋಡಶತ್ರಯಿಯ ಅನುಷ್ಠಾನ ಮಾಡೆಕು. ಒಂದುವೇಳೆ ಪತ್ನಿ ತನ್ನ ಪತಿಯ ಉದ್ದೇಶಕ್ಕಾಗಿ ಈ ಶ್ರಾದ್ಧಂಗಳ ಮಾಡಿರೆ ಅದಕ್ಕೆ ಅನಂತ ಶ್ರೇಯಸ್ಸು ಪ್ರಾಪ್ತಿಯಾವ್ತು. ಯಾವ ಸ್ತ್ರೀ ತನ್ನ ಮೃತ ಪತಿಯ ಔರ್ಧ್ವದೇಹಿಕ ಕ್ರಿಯೆ, ಕ್ಷಯಾಹ ಶ್ರಾದ್ಧ (ವಾರ್ಷಿಕ) ಮತ್ತೆ ಪಾಕ್ಷಿಕ (ಮಹಾಲಯ) ಮಾಡುತ್ತೋ, ಅದು ಎನ್ನಿಂದ ‘ಸತೀ’ ಎನಿಸಿಗೊಳ್ಳುತ್ತು. ಯಾವ ಸ್ತ್ರೀ ತನ್ನ ಪತಿಯ ಉದ್ಧಾರಕ್ಕಾಗಿಯೇ ಜೀವಿಸಿರುತ್ತೋ, ಯಾವ ಸ್ತ್ರೀ ಮರಣಹೊಂದಿದ ತನ್ನ ಪತಿಯ ಸದಾ ಸ್ಮರಣೆಲಿ (ಶ್ರಾದ್ಧಾದಿ ಸ್ಮರಣೆ/ಸೇವೆ) ಇರುತ್ತೋ ಆ ಸ್ತ್ರೀ ಪತಿವ್ರತೆ ಎನಿಸಿಗೊಳ್ಳುತ್ತು ಮತ್ತು ಆಕೆಯ ಜನ್ಮ ಸಫಲವಾವುತ್ತು.

ಒಂದುವೇಳೆ ಆರಾರು ಪ್ರಮಾದಂದ ಅಗ್ನಿಯ ಆಘಾತಕ್ಕೆ ಸಿಲುಕಿ ಅಥವಾ ನೀರಿಲ್ಲಿ ಮುಳುಗಿ ಮರಣಹೊಂದಿರೆ, ಅವರ ಸಮಸ್ತ ಸಂಸ್ಕಾರಂಗಳ ವಿಧಿ-ವಿಧಾನಪೂರ್ವಕವಾಗಿಯೇ ಮಾಡೆಕು. ಒಂದುವೇಳೆ ಆರಾರು ಪ್ರಮಾದಂದ ವಾ ಸ್ವೇಚ್ಛೆಂದ ಅಥವಾ ಸರ್ಪದಂಶಂದ ಮರಣಹೊಂದಿರೆ ಕೃಷ್ಣ-ಶುಕ್ಲ ಪಂಚಮಿಗಳಂದು ನಾಗನ ಪೂಜೆ ಮಾಡೆಕು. ನೆಲಕ್ಕಲ್ಲಿ ಹಿಟ್ಟಿಂದ ನಾಗನ ರಚನೆಮಾಡಿ, ಸುವಾಸನಾ ಶ್ವೇತಪುಷ್ಪ ಮತ್ತೆ ಚಂದನಂಗಳಿಂದ ಅದಕ್ಕೆ ಪೂಜೆಮಾಡೆಕು. ಧೂಪ, ದೀಪ ಸಮರ್ಪಿಸೆಕು. ಅಕ್ಕಿ ಮತ್ತು ಎಳ್ಳು ಹರಗೆಕು. ಹಸಿಹಿಟ್ಟಿನ ನೈವೇದ್ಯವನ್ನೂ, ಹಾಲನ್ನೂ ನಿವೇದಿಸೆಕು. ಶಕ್ತ್ಯಾನುಸಾರ ಸುವರ್ಣದ ನಾಗ ಮತ್ತೆ ಗೋವಿನ ದಾನ ಬ್ರಾಹ್ಮಣಂಗೆ ನೀಡೆಕು. ಮತ್ತೆ ಕೈಜೋಡಿಸಿ ನಮಸ್ಕರಿಸಿ “ನಾಗರಾಜಾ ಪ್ರಸನ್ನನಾಗು” ಹೇದು ಪ್ರಾರ್ಥಿಸೆಕು.

ಮತ್ತೆ ಆ ಜೀವಿಗಳ ಉದ್ದೇಶಂದ ನಾರಾಯಣಬಲಿ ಕ್ರಿಯೆಯ ಮಾಡೆಕು. ಹೀಂಗೆ ಮಾಡುವದರಿಂದ ಮೃತವ್ಯಕ್ತಿಯ ಸಮಸ್ತಪಾಪಂಗಳೂ ಕ್ಷಯವಾಗಿ ಸ್ವರ್ಗವ ಪ್ರಾಪ್ತಿಸಿಗೊಳ್ಳುತ್ತ°. ಈ ಪ್ರಕಾರ ಸಂಪೂರ್ಣ ಕ್ರಿಯೆಗಳ ಮಾಡಿ ಒಂದು ವರ್ಷದವರೆಂಗೆ ನಿತ್ಯ ಅನ್ನ ಮತ್ತೆ ಜಲಸಹಿತ ಘಟವ ದಾನ ಮಾಡೆಕು ಅಥವಾ ಅಷ್ಟೇ ಸಂಖ್ಯೆಯ ಪಿಂಡದಾನ ಜಲಸಹಿತ ಮಾಡೆಕು. ಈ ಪ್ರಕಾರ ಹನ್ನೊಂದನೇ ದಿನ ಶ್ರಾದ್ಧವ ಮಾಡಿ, ಸಪಿಂಡೀಕರಣ ಮಾಡೆಕು ಮತ್ತು ಸೂತಕ ಕಳುದ ಮತ್ತೆ ಶಯ್ಯಾದಾನ ಹಾಂಗೂ ಪದದಾನಂಗಳ ಮಾಡೆಕು. [ಆಸನ, ಪಾದುಕೆ, ಛತ್ರ, ಉಂಗುರ, ಕಮಂಡಲ, ಪಂಚಪಾತ್ರೆ, ವಸ್ತ್ರ, ಯಜ್ಞೋಪವೀತ, ದಂಡ, ಭೋಜನ, ಅನ್ನದ ಪಾತ್ರೆ, ತುಪ್ಪ, ದೀಪ. ಇವಿಷ್ಟರ ವಸ್ತುಗಳ ಗುಂಪಿಂಗೆ ತ್ರಯೋದಶ ‘ಪದ’ ಹೇಳ್ವ ಸಂಜ್ಞೆ (ತ್ರಯೋದಶ ಪದದಾನಂಗೊ). ದಶಪದದಾನ, ತ್ರಯೋದಶಪದದಾನ, ಉಪಪದದಾನ ಹೇಳಿ ಹದಿನಾಲ್ಕು ವಸ್ತುಗಳ ಗುಂಪು ಇತ್ಯಾದಿಗೊ ಬೇರೆ ಬೇರೆ ಇದ್ದು]

 

ಇಲ್ಲಿಗೆ ಗರುಡಪುರಾಣಲ್ಲಿ ಸಕಲಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ಹನ್ನೊಂದನೇ ದಿನಾಣ ಕರ್ಮದ ನಿರೂಪಣೆ ಹೇಳ್ವ ಹನ್ನೆರಡ್ನೇ ಅಧ್ಯಾಯ ಮುಗುದತ್ತು.

 

[ಚಿಂತನೀಯಾ –

ಈ ಭಾಗಲ್ಲಿ ಭಗವಂತ° ಮುಖ್ಯವಾಗಿ ಹನ್ನೊಂದನೇ ದಿನ ಮಾಡೇಕ್ಕಪ್ಪ ಕರ್ಮಂಗಳ ಅದರಲ್ಲಿಯೂ ಮುಖ್ಯವಾಗಿ ಪ್ರಯತ್ನಪೂರ್ವಕವಾಗಿ ಶ್ರದ್ಧೆಂದ ಮಾಡೇಕಾದ ವೃಷೋತ್ಸರ್ಗದ ಮತ್ತು ಷೋಡಶತ್ರಯೀ ಬಗ್ಗೆ ಹೇಳಿದ್ದ°. ಪ್ರೇತತ್ವ ವಿಮೋಚನೆ ಯಾಗಿ ಸದ್ಗತಿ ಪ್ರಾಪ್ತಿಯಪ್ಪಲೆ ವೃಷೋತ್ಸರ್ಗ ಅತೀ ಮಹತ್ವ. ಹಾಂಗೇ ಮೂರು ವಿಧ ಷೋಡಶ ಪಿಂಡದಾನ ಕಾರ್ಯಂಗೊ. ಪಿತೃವಿನ ಉದ್ಧಾರಕ್ಕಾಗಿ ಮಗನಿಂದ ಮಾಡಲ್ಪಡುವ ಈ ಕಾರ್ಯಂಗೊ ಪಿತೃವಿಂಗೆ ಮಾತ್ರ ಅಲ್ಲದೆ ತನಗೂ ತನ್ನ ಇಪ್ಪತ್ತೊಂದು ತಲೆಮಾರಿಂಗೂ ಶ್ರೇಯಸ್ಸಾವ್ತು ಹೇದು ಭಗವಂತ° ಹೇಳಿದ್ದ°. ಭಗವತೋಕ್ತ ಧರ್ಮ ಸರ್ವರಿಂಗೂ ಅನುಸರಣ ಯೋಗ್ಯ.

ಭಗವಂತಂಗೆ ಅತೀ ಪ್ರಿಯವಾದ್ದು ದಾನ. ದಾನದ ಬಗ್ಗೆ ಈ ಹಿಂದೆಯೇ ಹಲವಾರು ವಿಷಯಂಗಳ ನಾವು ಓದಿದ್ದು. ಸತ್ಪಾತ್ರಂಗೆ ಸಕಾಲಲ್ಲಿ ಮೋಹರಹಿತನಾಗಿ ದಾನ ಮಾಡೇಕ್ಕಾದ್ದು ಅತೀ ಮುಖ್ಯ ವಿಚಾರ. ಇದರಿಂದ ಭಗವಂತನ ಸೇವೆ ಮಾಡಿದಾಂಗೂ ಆವ್ತು, ಆ ವಸ್ತುವಿಲ್ಲಿ ಎನ್ನದು ಹೇಳ್ವ ಮೋಹವೂ ದೂರ ಆವ್ತು.

ವೃಷಭ ಧರ್ಮದ ಸಂಕೇತ. ವೃಷಭಲ್ಲಿಪ್ಪ ಬಣ್ಣಂಗೊ ಚತುರ್ವರ್ಣಂಗಳ ಸಂಕೇತ.

ಜೀವನಲ್ಲಿ ವೇದೋಕ್ತ ಧರ್ಮಾಚರಣೆ ಮೀರ್ಲಾಗ. ವೇದೋಕ್ತ ಧರ್ಮಂಗೊ ನಮ್ಮ ಹೃದಯ ಶುದ್ಧಿಗಾಗಿ ಇಪ್ಪದು. ನಾವು ಒಂದಿಕ್ಕೆ ಕೂರೆಕ್ಕಾರೆ ಅಲ್ಲಿ ಧೂಳು ಇದ್ದೋ, ಕಸವು ಇದ್ದೋ ಹೇದು ನೋಡಿ ಕುಡಿಗಿ/ತಟ್ಟಿ ಕೂರುತ್ತು. ಹಾಂಗಾರೆ ನಮ್ಮ ಶರೀರದೊಳ ಕೂದಿಪ್ಪ ಭಗವಂತ° ಕೂಬ ಹೃದಯ ಎಷ್ಟು ಪರಿಶುದ್ಧವಾಗಿರೆಡ! , ಮನಸ್ಸು ಎಷ್ಟು ಪ್ರಶಾಂತವಾಗಿರೆಡ!.

 

ಎಲ್ಲೋರು ಸದ್ಧರ್ಮಪರಾಯಣರಾಗಿ ಶ್ರದ್ದೆಂದ ಕರ್ಮ ಮಾಡುವಂತೆ ಭಗವಂತ° ಎಲ್ಲೋರನ್ನು ಪ್ರಚೋದಿಸಲಿ ಹೇಳಿಗೊಂಡು ಈ ಭಾಗಕ್ಕೆ ಹರೇ ರಾಮ.]

 

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಕೆ. ವೆಂಕಟರಮಣ ಭಟ್ಟ

  “ವೇದ ಸುಳ್ಳಾದರೂ ಗಾದೆ ಸುಳ್ಳಾಗದು” ಹೇಳಿ ಒಂದು ಸಾಮಾನ್ಯ ಗಾದೆ ಮಾತು. ಗರುಡ ಪುರಾಣದ ೧೨ನೇ ಅಧ್ಯಾಯ ಓದಿದ ಮೇಲೆ, ಅದರಲ್ಲಿ ನಮ್ಮ” ಶರೀರದೊಳಗಿಪ್ಪ ಭಗವಂತ ಕೂಬ್ಬ ಜಾಗೆ ಎಷ್ಟು ಪರಿಶುದ್ಧವಾಗಿರೆಡ ?” ಹೇಳಿ ನಿಂಗಳ ಚಿಂತನೀಯ. ಮೇಲೆ ಹೇಳಿದ ಪಿತ್ರು ಕಾರ್ಯಂಗಳ ಮಾಡುವವಂಗೆ ಅವನ ಕಾರ್ಯಲ್ಲಿ ಶ್ರದ್ಧೆ, ಭಯ, ಭಕ್ತಿ ಹಾಗೂ ಭಾವನೆಗೊ ಸೇರಿದ್ದರೇನೇ ಅದು ಅವಂಗೆ ಫಲ ಕೊಡುಗಷ್ಟೆ. ಮದಾಲು ನಮ್ಮ ಶರೀರ, ಮನಸ್ಸು ಶುದ್ಧ ಮಾಡಿಕ್ಕಿ ಯಾವದೇ ಕೆಲಸ ಮಾದೆಕ್ಕು ಹೇಳುವ ನಿಂಗಳ ಅಭಿಪ್ರಾಯಕ್ಕೆ ಹರೇ ರಾಮ.

  [Reply]

  VA:F [1.9.22_1171]
  Rating: +2 (from 2 votes)
 2. Radhakrishna

  sadyaviddare ella adhyayangala ,garuda purana kannada email kalusuviro?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ° Reply:

  ಹರೇ ರಾಮ. ಒಂದನೇ ಅಧ್ಯಾಯಂದ ಹನ್ನೆರಡನೇ ಅಧ್ಯಾಯದ ವರೇಗೆ ಇಲ್ಲಿ ಬೈಲಿಲ್ಲಿ ಪ್ರಕಟ ಆಯ್ದು. ಇಲ್ಲಿಂದ ನಿಂಗೊ ತೆಗದು ಮಡಿಕ್ಕೊಂಬಲಕ್ಕು. ಹರೇ ರಾಮ.

  [Reply]

  VA:F [1.9.22_1171]
  Rating: 0 (from 0 votes)
 3. ಪವನಜಮಾವ

  ಆದಷ್ಟು ಬೇಗ ಎಲ್ಲ ಅಧ್ಯಾಯಂಗಳ ಪೂರ್ತಿ ಮಾಡಿ ನಂತ್ರ ಅದರ ಪುಸ್ತಕ ಮಾಡಿ. ಎಲ್ಲವಕ್ಕೂ ಉಪಯೋಗ ಅಕ್ಕು

  [Reply]

  VN:F [1.9.22_1171]
  Rating: +2 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿಜಯತ್ತೆಕೆದೂರು ಡಾಕ್ಟ್ರುಬಾವ°ಬೋಸ ಬಾವಕೊಳಚ್ಚಿಪ್ಪು ಬಾವಜಯಗೌರಿ ಅಕ್ಕ°ರಾಜಣ್ಣಚೂರಿಬೈಲು ದೀಪಕ್ಕಪುಟ್ಟಬಾವ°ಗೋಪಾಲಣ್ಣಚೆನ್ನೈ ಬಾವ°ನೀರ್ಕಜೆ ಮಹೇಶಅಕ್ಷರದಣ್ಣvreddhiಬೊಳುಂಬು ಮಾವ°ವೇಣಿಯಕ್ಕ°ದೊಡ್ಮನೆ ಭಾವಸುಭಗವಿನಯ ಶಂಕರ, ಚೆಕ್ಕೆಮನೆಯೇನಂಕೂಡ್ಳು ಅಣ್ಣಶಾ...ರೀಶುದ್ದಿಕ್ಕಾರ°ಶರ್ಮಪ್ಪಚ್ಚಿಪವನಜಮಾವಸುವರ್ಣಿನೀ ಕೊಣಲೆದೀಪಿಕಾಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ