Oppanna.com

ಗರುಡಪುರಾಣ – ಅಧ್ಯಾಯ 13 – ಭಾಗ 03

ಬರದೋರು :   ಚೆನ್ನೈ ಬಾವ°    on   02/01/2014    6 ಒಪ್ಪಂಗೊ

ಚೆನ್ನೈ ಬಾವ°

ವಿಧಿಪೂರ್ವಕವಾಗಿ ಶಯ್ಯಾದಾನವ ಮಾಡಿಕ್ಕಿ ಮತ್ತೆ ಪದದಾನ ಮಾಡೆಕು ಹೇದು ಭಗವಂತ° ಗರುಡಂಗೆ ಹೇದ್ದರ ಕಳುದವಾರದ ಭಾಗಲ್ಲಿ ನೋಡಿದ್ದದು. ಮುಂದೆ ಪದದಾನದ ಬಗ್ಗೆ ಭಗವಂತ° ಎಂತ ಹೇಳಿದ್ದ° ಹೇಳ್ವದರ ನೋಡ್ವೊ° –
ಗರುಡಪುರಾಣ – ಅಧ್ಯಾಯ 13 – ಭಾಗ 03
 
ಛತ್ರೋಪಾನಹವಸ್ತ್ರಾಣಿ ಮುದ್ರಿಕಾ ಚ ಕಮಂಡಲುಃ ।images
ಆಸನಂ ಪಂಚಪಾತ್ರಾಣಿ ಪದಂ ಸಪ್ತವಿಧಂ ಸ್ಮೃತಮ್ ॥೮೩॥
ಕೊಡೆ, ಪಾದರಕ್ಷೆ, ವಸ್ತ್ರ, ಉಂಗುರ, ಕಮಂಡಲ, ಆಸನ, ಮತ್ತೆ ಪಂಚಪಾತ್ರೆ- ಇವುಗೊ ಏಳು ರೀತಿಯ ‘ಪದಂಗೊ’ ಹೇದು ಹೇಳಿದ್ದು.
ದಂಡೇನ ತಾಮ್ರಪಾತ್ರೇಣ ಹ್ಯಾಮಾನ್ನೈರ್ಭೋಜನೈರಪಿ ।
ಅರ್ಥಯಜ್ಞೋಪವೀತೈಶ್ಚ ಪದಂ ಸಂಪೂರ್ಣತಾಂ ವ್ರಜೇತ್ ॥೮೪॥
ದಂಡ, ತಾಮ್ರದ ಪಾತ್ರೆ, ಅಕ್ಕಿ, ಭೋಜನ, ಧನ ಮತ್ತೆ ಯಜ್ಞೋಪವೀತ ಇವುಗಳಿಂದ ‘ಪದಂಗೊ’ ಸಂಪೂರ್ಣವಾವ್ತು.
ತ್ರಯೋದಶಪದಾನೀತ್ಥಂ ಯಥಾಶಕ್ತ್ಯಾ ವಿಧಾಯ ಚ ।
ತ್ರಯೋದಶಭ್ಯೋ ವಿಪ್ರೇಭ್ಯಃ ಪ್ರದದ್ಯಾದ್ದ್ವಾದಶೇsಹನಿ ॥೮೫
ಈ ರೀತಿ ಹದಿಮೂರು ಪದಂಗಳ ಯಥಾಶಕ್ತಿ ಹನ್ನೆರಡ್ನೇ ದಿನ ಹದಿಮೂರು ಜನ ಬ್ರಾಹ್ಮಣರಿಂಗೆ ದಾನ ಕೊಡೆಕು.
ಅನೇನ ಪದದಾನೇನ ಧಾರ್ಮಿಕಾ ಯಾಂತಿ ಸದ್ಗತಿಮ್ ।
ಯಮಮಾರ್ಗಗತಾನಾಂ ಚ ಪದದಾನಂ ಸುಖಪ್ರದಮ್ ॥೮೬॥
ಈ ಪದದಾನಂದ ಧಾರ್ಮಿಕರು ಸದ್ಗತಿಯ ಹೊಂದುತ್ತವು. ಯಮಮಾರ್ಗಲ್ಲಿ ಹೋಪವಕ್ಕೂ ಈ ಪದದಾನ ಸುಖವ ನೀಡುತ್ತು.
ಆತಪ್ರಸ್ತತ್ರ ವೈ ರೌದ್ರೋ ದಹ್ಯತೇ ಯೇನ ಮಾನವಃ ।
ಛತ್ರದಾನೇನ ಸುಚ್ಛಾಯಾ ಜಾಯತೇ ತಸ್ಯ ಮೂರ್ಧನಿ ॥೮೭॥
ಅಲ್ಲಿ ಖಂಡಿತವಾಗ್ಯೂ ಮನುಷ್ಯ° ಬೆಶಿಲಿಂದ ದಹಿಸಲ್ಪಡುವ ರೌದ್ರನರಕ ಇದ್ದು. ಕೊಡೆ ದಾನ ಕೊಡುವದರಿಂದ ಶೀತಲವಾದ  ತಣಿಲು ಅವನ ತಲೆ ಮೇಗೆ ಬೀಳುತ್ತು.
ಅತಿಕಂಟಕಸಂಕೀರ್ಣೇ ಯಮಲೋಕಸ್ಯ ವರ್ತ್ಮನಿ ।
ಅಶ್ವಾರೂಢಾಶ್ಚ ತೇ ಯಾಂತಿ ದದತೇ ಯದ್ಯುಪಾನಹೌ ॥೮೮॥
ಮೆಟ್ಟುದಾನ ಕೊಡುವದರಿಂದ ಬಹು ಮುಳ್ಳುಗಳಿಂದ ತುಂಬಿಪ್ಪ ಯಮಮಾರ್ಗಲ್ಲಿ ಹೋವ್ತೋರು ಅಶ್ವಾರೋಹಿಗಳಾಗಿ ಹೋವುತ್ತವು.
ಶೀತೋಷ್ಣವಾತದುಃಖಾನಿ ತತ್ರ ಘೋರಾಣಿ ಖೇಚರ ।
ವಸ್ತ್ರದಾನಪ್ರಭಾವೇಣ ಸುಖಂ ನಿಸ್ತರತೇ ಪಥಿ ॥೮೯॥
ಹೇ ಗರುಡ!, ಆ ಯಮಮಾರ್ಗಲ್ಲಿ ಶೀತ, ಉಷ್ಣ ಮತ್ತೆ ವಾಯುವಿನ ಘೋರವಾದ ದುಃಖಂಗೊ ಇರ್ತು. ಆದರೆ ವಸ್ತ್ರದಾನ ಪ್ರಭಾವಂದ ಮಾರ್ಗಲ್ಲಿ ಅವ° ಸುಖವಾಗಿ ಹೋವ್ತ°.
ಯಮದೂತಾ ಮಹಾರೌದ್ರಾಃ ಕರಾಲಃ ಕೃಷ್ಣಪಿಂಗಲಾ ।
ನ ಪೀಡಯಂತಿ ತಂ ಮಾರ್ಗೇ ಮುದ್ರಿಕಾಯಾಃ ಪ್ರದಾನತಃ ॥೯೦॥
ಮಹಾರೌದ್ರರೂ, ಭಯಂಕರರೂ, ಕರಿ ಮತ್ತೆ ಕಂದು ಬಣ್ಣದೋರೂ ಆದ ಯಮದೂತರು ಉಂಗುರದಾನ ಮಾಡ್ವದರಿಂದ ಯಮಮಾರ್ಗಲ್ಲಿ ಅವನ ಅವು ಹಿಂಸೆ ಮಾಡ್ತವಿಲ್ಲೆ.
ಬಹುಘರ್ಮಸಮಾಕೀರ್ಣೇ ನಿರ್ವಾತೇ ತೋಯವರ್ಜಿತೇ ।
ಕಮಂಡಲುಪ್ರದಾನೇನ ತೃಷಿತಃ ಪಿಬತೇ ಜಲಮ್ ॥೯೧॥
ಅತಿ ಬೆಶಿಲಿನ ಬೇಗೆಂದ ಕೂಡಿಪ್ಪ, ಗಾಳಿ ಮತ್ತೆ ನೀರು ಇಲ್ಲದಿಪ್ಪ ಆ ಯಮ ಮಾರ್ಗಲ್ಲಿ ಕಮಂಡಲ ದಾನ ಮಾಡುವದರಿಂದ ಅವ° ಆಸರಪ್ಪಗ ನೀರು ಕುಡಿತ್ತ°.
ಮೃತೋದ್ದೇಶೇನ ದದ್ಯಾದುದಪಾತ್ರಂ ಚ ತಾಮ್ರಜಮ್ ।
ಪ್ರಪಾದಾನಸಹಸ್ರಸ್ಯ ಯತ್ಫಲಂ ಸೋsಶ್ನುತೇ ಧ್ರುವಮ್ ॥೮೨॥
ಮೃತನ ಉದ್ದೇಶಂದ ಆರಾರು ತಾಮ್ರದ ನೀರಿನ ಪಾತ್ರ ದಾನ ಮಾಡಿರೆ ಅವ° ಖಂಡಿತವಾಗಿಯೂ ನೀರುಕುಡಿವಲೆ ಸಾವಿರ ಕೊಟ್ಟಗೆ (ಜಲತಾಣ) ನಿರ್ಮಿಸಿದಷ್ಟು ಫಲವ ಪಡೆತ್ತ°.
ಆಸನೇ ಭೋಜನೇ ಚೈವ ದತ್ತೇ ಸಮ್ಯಗ್ದ್ವಿಜಾತಯೇ ।
ಸುಖೇನ ಭುಂಕ್ತೇ ಪಾಥೇಯಂ ಪಥಿ ಗಚ್ಛನ್ ಶನೈಃ ಶನೈಃ ॥೯೩॥
ಆಸನ ಮತ್ತೆ ಭೋಜವನ ಒಳ್ಳೆ ಬ್ರಾಹ್ಮಣಂಗೆ ದಾನ ಕೊಟ್ರೆ, ಯಮ ಮಾರ್ಗಲ್ಲಿ ಹೋಪ ಪಥಿಕ° (ಹೋಪವ°) ಮೆಲ್ಲ ಮೆಲ್ಲಂಗೆ (ಸಾವಕಾಶವಾಗಿ) ಸುಖವಾಗಿ ದಾರಿಬುತ್ತಿಯ (ಪುಣ್ಯದ ಫಲವ)  ಉಂಡುಗೊಂಡು ಹೋವ್ತ°.
ಏವಂ ಸಪಿಂಡನದಿನೇ ದತ್ತ್ವಾ ದಾನಂ ವಿಧಾನತಃ ।
ಬಹೂನ್ಸಂಭೋಜಯೇದ್ವಿಪ್ರಾನ್ ಯಃ ಶ್ವಪಾಕಾದಿಕಾನಪಿ ॥೯೪॥
ಈ ರೀತಿ ಸಪಿಂಡೀಕರಣ ದಿನ ವಿಧಿಪೂರ್ವಕವಾಗಿ ದಾನಂಗಳ ಕೊಟ್ಟು ಬಹು ಜನ ವಿಪ್ರರಿಂಗೂ, ಅಲ್ಲದ್ದೆ, ಚಾಂಡಾಲ ಮೊದಲಾದೋರಿಂಗೂ ಭೋಜನ ಮಾಡುಸೆಕು.
ತತಃ ಸಪಿಂಡನಾದೂರ್ದ್ಧ್ವಮರ್ವಾಕ್ಸಂವತ್ಸರಾದಪಿ ।
ಪ್ರತಿಮಾಸಂ ಪ್ರದಾತವ್ಯೋ ಜಲಕುಂಭಃ ಸಪಿಂಡಕಃ ॥೯೫॥
ಸಪಿಂಡೀಕರಣ ಆಯ್ಕಿ ಮತ್ತೆ ಮುಂದೆ ಒಂದು ವರ್ಷದವರೆಂಗೆ ಪ್ರತಿ ತಿಂಗಳೂ ಪಿಂಡದೊಟ್ಟಿಂಗೆ ಜಲಕುಂಭವ ದಾನ ಕೊಡೆಕು.
ಕೃತಸ್ಯ ಕರಣಂ ನಾಸ್ತಿ ಪ್ರೇತಕಾರ್ಯಾದೃತೇ ಖಗ ।
ಪ್ರೇತಾರ್ಥಂ ತು ಪುನಃ ಕುರ್ಯಾದಕ್ಷಯ್ಯತೃಪ್ತಿಹೇತವೇ ॥೯೬॥
ಹೇ ಗರುಡ!, ಪ್ರೇತಕಾರ್ಯವ ಬಿಟ್ಟಿಕ್ಕಿ ಉಳುದ ಕಾರ್ಯಂಗಳ ಮತ್ತೆ ಮಾಡ್ಳಾಗ. ಪ್ರೇತಕಾರ್ಯಂಗಳ ಅದಕ್ಕೆ ಅಕ್ಷಯ ತೃಪ್ತಿಯಾಯೆಕು ಹೇದು ಪುನಃ ಮಾಡೆಕು.
ಅತೋ ವಿಶೇಷಂ ವಕ್ಷ್ಯಾಮಿ ಮಾಸಿಕಸ್ಯಾಬ್ದಿಕಸ್ಯ ಚ ।
ಪಾಕ್ಷಿಕಸ್ಯ ವಿಶೇಷಂ ಚ ವಿಶೇಷತಿಥಿಷು ಮೃತೇ ॥೯೭॥
ವಿಶೇಷ ತಿಥಿಗಳಲ್ಲಿ ಮರಣ ಹೊಂದಿರೆ, ಮಾಸಿಕ, ವಾರ್ಷಿಕ, ಮತ್ತೆ ಪಾಕ್ಷಿಕಂಗಳ ವೈಶಿಷ್ಠ್ಯಂಗಳ ವಿವರುಸುತ್ತೆ ಕೇಳು –
ಪೌರ್ಣಮಾಸ್ಯಾಂ ಮೃತೋ ಯಸ್ತು ಚತುರ್ಥೀ ತಸ್ಯ ಊನಿಕಾ ।
ಚತುರ್ಥ್ಯಾಂ ತು ಮೃತೋ ಯಸ್ತು ನವಮೀ ತಸ್ಯ ಊನಿಕಾ ॥೯೮॥
ಹುಣ್ಣಮೆಲಿ ಮರಣ ಹೊಂದಿರೆ (ಅಮಾಸೆಂದ ಮದಲು) ಚತುರ್ಥಿ ಊನಿಕಾ ಆವ್ತು. ಚತುರ್ಥಿಲಿ ಮರಣ ಹೊಂದಿರೆ ಮತ್ತಾಣ ಚತುರ್ಥಿಂದ ಮದಲಾಣ ನವಮಿಯಂದು ಊನಿಕಾ ಆವ್ತು.
ನವಮ್ಯಾಂ ಮೃತೋ ಯಸ್ತು ರಿಕ್ತಾ ತಸ್ಯ ಚತುರ್ದಶೀ ।
ಇತ್ಯೇವಂ ಪಾಕ್ಷಿಕಂ ಶ್ರಾದ್ಧಂ ಕುರ್ಯಾದ್ವಿಂಶತಿಮೇ ದಿನೇ ॥೯೯॥
ನವಮಿಲಿ ಮರಣ ಹೊಂದಿರೆ ಮುಂದಾಣ ನವಮಿಂದ ಮದಲಾಣ ಚತುರ್ದಶಿಲಿ ಊನಿಕಾ ಆವ್ತು. ಹೀಂಗೆ ಪಾಕ್ಷಿಕ ಶ್ರಾದ್ಧವನ್ನೂ ಇಪ್ಪತ್ತನೇ ದಿನಲ್ಲಿ ಮಾಡೆಕು.
ಏಕ ಏವ ಯದಾ ಮಾಸಃ ಸಂಕ್ರಾಂತಿದ್ವಯಸಂಯುತಃ ।
ಮಾಸದ್ವಯಗತಂ ಶ್ರಾದ್ಧಂ ಮಲಮಾಸೇ ಹಿ ಶಸ್ಯತೇ ॥೧೦೦॥
ಏವಾಗ ಒಂದೇ ತಿಂಗಳ್ಳಿ ಎರಡು ಸಂಕ್ರಾಂತಿಗೊ ಬತ್ತೋ (ಕ್ಷಯಮಾಸ- ಕಾರ್ತಿಕ ಅಥವಾ ಮಾರ್ಗಶಿರ ಮಾಸಲ್ಲಿ ಬಪ್ಪದು), ಅಂಬಗ ಎರಡು ತಿಂಗಳಾಣ ಶ್ರಾದ್ಧವ ಮಲಮಾಸಲ್ಲೇ (ಮದಲಾಣ ತಿಂಗಳ್ಳೇ) ಮಾಡ್ತದು ಉತ್ತಮ.
ಏಕಸ್ಮಿನ್ಮಾಸಿ ಮಾಸೌ ದ್ವೌ ಯದಿ ಸ್ಯಾತಾಂ ತಯೋರ್ದ್ವಯೋಃ ।
ತಾವೇವ ಪಕ್ಷೌ ತಾ ಏವ ತಿಥಯಸ್ತ್ರಿಂಶದೇವ ಹಿ ॥೧೦೧॥
ಒಂದುವೇಳೆ ಒಂದೇ ಮಾಸಲ್ಲಿ ಎರಡೂ ಮಾಸಂಗೊ ಬಂದರೆ, ಅಂಬಗ ಎರಡೂ ಮಾಸಂಗಳಲ್ಲಿ ಅವೇ ಎರಡೂ ಪಕ್ಷಂಗಳನ್ನೂ ಮತ್ತೆ ಅದೇ ಮುವತ್ತು ತಿಥಿಗಳನ್ನೂ ತೆಕ್ಕೊಳ್ಳೆಕು. (ಅದೇ ಮಾಸದ ೧೫ ತಿಥಿಗಳ ೩೦ ತಿಥಿಗೊ ಹೇದು ತೆಕ್ಕೊಳ್ಳೆಕು).
ತಿಥ್ಯರ್ಧೇ ಪ್ರಥಮೇ ಪೂರ್ವೇ ದ್ವಿತೀಯೇsರ್ಧೇ ತದುತ್ತರಃ ।
ಮಾಸಾವಿತಿ ಬುಧ್ಯೈಶ್ಚಿಂತ್ಯೌ ಮಲಮಾಸಸ್ಯ ಮಧ್ಯಗೌ ॥೧೦೨॥
ತಿಥಿಯ ಮದಲಾಣ ಅರ್ಧಭಾಗಕ್ಕೆ ಮದಲಾಣ ಮಾಸವನ್ನೂ, ಎರಡ್ನೇ ಅರ್ಧಭಾಗಕ್ಕೆ ಎರಡ್ನೇ ಮಾಸವಾಸಿಗಿಯೂ ತೆಕ್ಕೊಳ್ಳೆಕು. ಮಲಮಾಸದ ವಿಷಯವಾಗಿ ಈ ರೀತಿಯಾಗಿ ಪಂಡಿತರುಗೊ ಹೇಯ್ದವು.
ಅಸಂಕ್ರಾಂತೇ ಚ ಕರ್ತವ್ಯಂ ಸಪಿಂಡೀಕರಣಂ ಖಗ ।
ತಥೈವ ಮಾಸಿಕಂ ಶ್ರಾದ್ಧಂ ವಾರ್ಷಿಕಂ ಪ್ರಥಮಂ ತಥಾ ॥೧೦೩॥
ಹೇ ಗರುಡ, ಸಂಕ್ರಾಂತಿ ಇಲ್ಲದ್ದ ತಿಂಗಳ್ಳಿ (ಕ್ಷಯಮಾಸ) ಕೂಡ ಸಪಿಂಡೀಕರಣವ ಮಾಡೆಕು. ಹಾಂಗೇ ಮಾಸಿಕ ಶ್ರಾದ್ಧ ಮತ್ತೆ ವರ್ಷಾಂತಿಕ ಶ್ರಾದ್ಧವನ್ನೂ ಹಾಂಗೆಯೇ ಮಾಡೆಕು.
ಸಂವತ್ಸರಸ್ಯ ಮಧ್ಯೇ ತು ಯದಿ ಸ್ಯಾದಧಿಮಾಸಕಃ ।
ತದಾ ತ್ರಯೋದಶೇ ಮಾಸಿ ಕ್ರಿಯಾ ಪ್ರೇತಸ್ಯ ವಾರ್ಷಿಕೀ ॥೧೦೪॥
ಒಂದು ವೇಳೆ ಸಂವತ್ಸರದ ಎಡಕ್ಕಿಲ್ಲಿ ಅಧಿಕ ಮಾಸ ಬಂದರೆ, ಹದಿಮೂರ್ನೇ ತಿಂಗಳ್ಳಿ ಪ್ರೇತದ ವಾರ್ಷಿಕ ಕ್ರಿಯೆಯ ಮಾಡೆಕು.
ಪಿಂಡವರ್ಜ್ಯಮಸಂಕ್ರಾಂತೇ ಸಂಕ್ರಾಂತೇ ಪಿಂಡಸಂಯುತಮ್ ।
ಪ್ರತಿಸಂವತ್ಸರ ಶ್ರಾದ್ಧಂಮೇವಂ ಮಾಸದ್ವಯೇsಪಿ ಚ ॥೧೦೫॥
ಸಂಕ್ರಾಂತಿ ಇಲ್ಲದ್ದ ಮಾಸಲ್ಲಿ ಪಿಂಡಯಿಲ್ಲದ್ದೆ, ಸಂಕ್ರಾಂತಿ ಇಪ್ಪ ಮಾಸಲ್ಲಿ ಪಿಂಡಸಹಿತವಾಗಿ – ಈ ರೀತಿ ವಾರ್ಷಿಕ ಶ್ರಾದ್ಧವ ಎರಡೂ ತಿಂಗಳ್ಳಿ ಮಾಡೆಕು.
ಏವಂ ಸಂವತ್ಸರೇ ಪೂರ್ಣೇ ವಾರ್ಷಿಕಂ ಶ್ರಾದ್ಧಮಾಚರೇತ್ ।
ತಸ್ಮಿನ್ನಪಿವಿಶೇಷೇಣ ಭೋಜನೀಯ ದಿಜಾತಯಃ ॥೧೦೬॥
ಹೀಂಗೆ, ಒಂದು ಸಂವತ್ಸರ ಪೂರ್ಣ ಆದ ಮತ್ತೆ ವಾರ್ಷಿಕ ಶ್ರಾದ್ಧವ ಆಚರುಸೆಕು. ಅದರ್ಲಿಯೂ ವಿಶೇಷವಾಗಿ ಬ್ರಾಹ್ಮಣರಿಂಗೆ ಭೋಜನವ ಮಾಡುಸೆಕು.
ಕುರ್ಯಾತ್ಸಂವಸ್ತ್ರರಾದೂರ್ಧ್ವಂ ಶ್ರಾದ್ಧೇ ಪಿಂಡತ್ರಯಂ ಸದಾ ।
ಏಕೋದ್ದಿಷ್ಟಂ ನ ಕರ್ತವ್ಯಂ ತೇನ ಸ್ಯಾತ್ಪಿತೃಘಾತಕಃ ॥೧೦೭॥
ಒಂದು ವರ್ಷ ಆದ ಮತ್ತೆ ಶ್ರಾದ್ಧಲ್ಲಿ ಏವತ್ತೂ ಮೂರು ಪಿಂಡವ ಮಾಡೆಕು. ಏಕೋದ್ದಿಷ್ಟವ ಮಾಡ್ಳಾಗ. ಅದರ ಮಾಡುವದರಿಂದ ಅವ° ಪಿತೃಘಾತಕ° ಆವ್ತ°.
ತೀರ್ಥಾಶ್ರಾದ್ಧಂ ಗಯಾಶ್ರಾದ್ಧಂ ಗಜಚ್ಛಾಯಾಂ ಚ ಪೈತೃಕಮ್ ।
ಅಬ್ದಮಧ್ಯೇ ಕುರ್ವೀತ ಗ್ರಹಣೇ ನ ಯುಗಾದಿಷು ॥೧೦೮॥
ತೀರ್ಥಶ್ರಾದ್ಧವ, ಗಯಾಶ್ರಾದ್ಧವ ಗಜಚ್ಛಾಯಾ ಯೋಗಲ್ಲಿ (ಚಂದ್ರ° ಮಘಾ ನಕ್ಷತ್ರಲ್ಲಿದ್ದರೆ, ಸೂರ್ಯ° ಹಸ್ತ ನಕ್ಷತ್ರಲ್ಲಿದ್ದರೆ ಹಾಂಗೂ ತ್ರಯೋದಶಿ ತಿಥಿಯಾಗಿದ್ದರೆ ಅದು ಗಯಾಚ್ಛಾಯಾ ಯೋಗ), ಗ್ರಹಣಕಾಲಲ್ಲಿ, ಯುಗಾದಿಲಿ ಮಾಡುವ ಪಿತೃಸಂಬಂಧೀ ಕಾರ್ಯಂಗಳ ವರ್ಷಾಂತದೊಳ ಮಾಡ್ಳಾಗ.
ಯದಾ ಪುತ್ರೇಣ ವೈ ಕಾರ್ಯಂ ಗಯಾಶ್ರಾದ್ಧಂ ಖಗೇಶ್ವರ ।
ತದಾ ಸಂವತ್ಸರಾದೂರ್ಧ್ವಂ ಕರ್ತವ್ಯಂ ಪಿತೃಭಕ್ತಿತಃ ॥೧೦೯॥
ಹೇ ಗರುಡ, ಮಗ° ನಿಶ್ಚಯವಾಗಿಯೂ ಗಯಾಶ್ರಾದ್ದ್ಹವ ಮಾಡುವದಾದರೆ ಒಂದು ವರ್ಷ ಆಗಿಕ್ಕಿ ಮತ್ತೆ ಪಿತೃಭಕ್ತಿಂದ ಅದರ ಮಾಡೆಕು.
ಗಯಾಶ್ರಾದ್ಧಾತ್ಪ್ರಮುಚ್ಯಂತೇ ಪಿತರೋ ಭವಸಾಗರಾತ್ ।
ಗದಾಧರಾನುಗ್ರಹೇಣ ತೇ ಯಾಂತಿ ಪರಮಾಂ ಗತಿಮ್ ॥೧೧೦॥
ಗಯಾಶ್ರಾದ್ಧಂದ ಪಿತೃಗೊ ಭವಸಾಗರಂದ ಮುಕ್ತರಾವ್ತವು. ಗದಾಧರನ ಅನುಗ್ರಹಂದ ಅವು ಪರಮಗತಿಯ ಹೊಂದುತ್ತವು.
ತುಲಸೀಮಂಜರೀಭಿಶ್ಚ ಪೂಜಯೇದ್ವಿಷ್ಣು ಪಾದುಕಮ್ ।
ತಸ್ಯಾಲವಾದಿತೀರ್ಥೇಷು ಪಿಂಡಾನ್ದದ್ಯಾದ್ಯಥಾಕ್ರಮಮ್ ॥೧೧೧॥
ತುಳಸಿಕೊಡಿಂದ ವಿಷ್ಣುವಿನ ಪಾದುಕೆಗಳ ಪೂಜೆ ಮಾಡೆಕು. ಮತ್ತಿ ಅಲ್ಯಾಣ ಲವಾದಿ ತೀರ್ಥಂಗಳ್ಳಿ ಯಥಾಕ್ರಮವಾಗಿ ಪಿಂಡದಾನ ಮಾಡೆಕು.
ಉದ್ಧರೇತ್ಸಪ್ತ ಗೋತ್ರಾಣಿ ಕುಲಮೇಕೋತ್ತರಂ ಶತಮ್ ।
ಶಮೀಪತ್ರಪ್ರಮಾಣೇನ ಪಿಂಡಂ ದದ್ಯಾದ್ಗಯಾಶಿರೇ ॥೧೧೨॥
ಆರು ಗಯೆಯ ಶಿರಲ್ಲಿ ಶಮೀಪತ್ರ ಪ್ರಮಾಣದ ಪಿಂಡವ ಕೊಡ್ತನೋ, ಅವ° ಏಳು ಗೋತ್ರಂಗಳನ್ನೂ , ನೂರ ಒಂದು ಕುಲವನ್ನೂ ಉದ್ಧರುಸುತ್ತ°.
ಗಯಾಮುಪೇತ್ಯ ಯಃ ಶ್ರಾದ್ಧಂ ಕರೋತಿ ಕುಲನಂದನಃ ।
ಸಫಲಂ ತಸ್ಯ ತಜ್ಜನ್ಮ ಜಾಯತೇ ಪಿತೃತುಷ್ಟಿದಮ್ ॥೧೧೩॥
ತಮ್ಮ ಕುಲಕ್ಕೆ ಆನಂದ ತಪ್ಪಂತಹ ಯಾವಾತ° ಗಯಗೆ ಹೋಗಿ, ಅಲ್ಲಿ ಶ್ರಾದ್ಧವ ಮಾಡುತ್ತನೋ, ಪಿತೃಗೊಕ್ಕೆ ಸಂತೋಷ ಉಂಟುಮಾದುವ ಅವನ ಆ ಜನ್ಮ ಸಫಲ ಆವುತ್ತು.
ಶ್ರೂಯತೇ ಚಾಪಿ ಪಿತೃಭಿರ್ಗೀತಾ ಗಾಥಾ ಖಗೇಶ್ವರ ।
ಇಕ್ಷ್ವಾಕೋರ್ಮನುಪುತ್ರಸ್ಯ ಕಲಾಪೋಪವನೇ ಸುರೈಃ ॥೧೧೪॥
ಹೇ ಗರುಡ!, ಪಿತೃಗೊ ದೇವಲೋಕಲ್ಲಿ ಹಾಡುವ ಗೀತೆಯ ಕತೆ/ಚರಿತ್ರೆ, ಮನುಪುತ್ರನಾದ ಇಕ್ಷ್ವಾಕುವಿಂಗೆ ಕಲಾಪ ನಗರದ ಉಪವನಲ್ಲಿ ಪಿತೃದೇವತೆಗೊ ಹೇಳಿದ್ದು ಕೇಳಿ ಬತ್ತು.-
ಅಪಿ ನಸ್ತೇ ಭವಿಷ್ಯಂತಿ ಕುಲೇ ಸನ್ಮಾರ್ಗಶೀಲಿನಃ ।
ಗಯಾಮುಪೇತ್ಯ ಯೇ ಪಿಂಡಾನ್ದಾಸ್ಯಂತ್ಯಸ್ಮಾಕಮಾದರಾತ್ ॥೧೧೫॥
“ನಮ್ಮ ಕುಲಲ್ಲಿ ಗಯಗೆ ಹೋಗಿ ಆದರಪೂರ್ವಕವಾಗಿ ನವಗೆ ಪಿಂಡವ ಕೊಡುವ ಸನ್ಮಾರ್ಗಶೀಲರು ಆರಾರು ಹುಟ್ಟುಗೋ” – ಹೇದು ಪಿತೃಲೋಕಲ್ಲಿ ಅಮುಕ್ತ ಪಿತೃಗೊ ಯೇಚನೆಲಿ ಇರ್ತವು.
ಏವಮಾಮುಷ್ಮಿಕೀಂ ತಾರ್ಕ್ಷ್ಯ ಯಃ ಕರೋತಿ ಕ್ರಿಯಾಂ ಸುತಃ ।
ಸ ಸ್ಯಾತ್ಸುಖೀ ಭವೇನ್ಮುಕ್ತಃ ಕೌಶಿಕಸ್ಯಾತ್ಮಜಾ ಯಥಾ ॥೧೧೬॥
ಹೇ ಗರುಡ!, ಹೀಂಗೆ ಏವ ಮಗ° ಪರಲೋಕಕ್ಕೆ ಸಂಬಂಧಿಸಿದ ಕ್ರಿಯೆಗಳ ಮಾಡುತ್ತನೋ, ಅವ° ಕೌಶಿಕನ ಮಕ್ಕಳ ಹಾಂಗೆ ಸುಖವ ಹೊಂದಿ ಮುಕ್ತನಾವುತ್ತ°.
ಭರದ್ವಾಜಾತ್ಮಜಾಃ ಸಪ್ತಭುಕ್ತ್ವಾ ಜನ್ಮಪರಂಪರಾಮ್ ।
ಕೃತ್ವಾಪಿ ಗೋವಧಂ ತಾರ್ಕ್ಷ್ಯ ಮುಕ್ತಾಃ ಪಿತೃಪ್ರಸಾದತಃ ॥೧೧೭॥
ಹೇ ಗರುಡ!, ಭರದ್ವಾಜನ ಏಳು ಮಕ್ಕೊ ಜನ್ಮ ಪರಂಪರೆಯ ಅನುಭವುಸಿ, ಗೋವಧೆಯನ್ನೂ ಮಾಡಿದ್ದರೂ, ಪಿತೃಗಳ ಅನುಗ್ರಹಂದ ಮುಕ್ತರಾದವು.
ಸಪ್ತವ್ಯಾಧಾ ದಶಾರ್ಣೇಷು ಮೃಗಾಃ ಕಾಲಾಂಜಿರೇ ಗಿರೌ ।
ಚಕ್ರವಾಕಾಃ ಶರದ್ವೀಪೇ ಹಂಸಾಃ ಸರಸಿ ಮಾನಸೇ ॥೧೧೮॥
(ಸುರೂವಾಣ ಜೆನ್ಮಲ್ಲಿ) ದಶಾರ್ಣ ದೇಶಲ್ಲಿ ಏಳು ಜೆನ ಬೇಡರಾಗಿ, (ಮತ್ತಾಣ ಜನ್ಮಲ್ಲಿ) ಕಾಲಂಜಿರ ಪರ್ವತಲ್ಲಿ ಪ್ರಾಣಿಗಳಾಗಿ, (ಅದರಿಂದ ಮತ್ತಾಣ ಜನ್ಮಲ್ಲಿ) ಶರದ್ವೀಪಲ್ಲಿ ಚಕ್ರವಾಕ ಪಕ್ಷಿಗೊ ಆಗಿ, (ಅದರಿಂದಲೂ ಮತ್ತಾಣ ಜನ್ಮಲ್ಲಿ) ಮಾನಸ ಸರೋವರಲ್ಲಿ ಹಂಸಂಗೊ ಆಗಿತ್ತಿದ್ದ
ತೇಪಿ ಜಾತಾಃ ಕುರುಕ್ಷೇತ್ರೇ ಬ್ರಾಹ್ಮಣಾ ವೇದಪಾರಗಾಃ ।
ಪಿತೃಭಕ್ತ್ಯಾ ಚ ತೇ ಸರ್ವೇ ಗತಾ ಮುಕ್ತಿಂ ದ್ವಿಜಾತ್ಮಜಾಃ ॥೧೧೯॥
ಅವ್ವೇ (ಮರುಮತ್ತಾಣ ಜೆನ್ಮಲ್ಲಿ) ಕುರುಕ್ಷೇತ್ರಲ್ಲಿ ವೇದಪಾರಂಗತರಾದ ಬ್ರಾಹ್ಮಣರಾಗಿ ಹುಟ್ಟಿ ಪಿತೃಭಕ್ತಿಂದ ಆ ಬ್ರಾಹ್ಮಣಮಕ್ಕೊ ಎಲ್ಲೊರೂ ಮುಕ್ತಿಯ ಪಡದವು.
ತಸ್ಮಾತ್ಸರ್ವಪ್ರಯತ್ನೇನ ಪಿತೃಭಕ್ತೋ ಭವೇನ್ನರಃ ।
ಇಹಲೋಕೇ ಪರೇ ವಾಪಿ ಪಿತೃಭಕ್ತ್ಯಾ ಸುಖೀ ಭವೇತ್ ॥೧೨೦॥
ಹಾಂಗಾಗಿ ಎಲ್ಲ ಪ್ರಯತ್ನಂಗಳಿಂದಲೂ ಮನುಷ್ಯ° ಪಿತೃಭಕ್ತನಾಗಿರೆಕು. ಇಹಲೋಕಲ್ಲಿಯೂ ಪರಲೋಕಲ್ಲಿಯೂ ಪಿತೃಭಕ್ತಿಂದ ಸುಖವುಂಟಾವ್ತು.
ಏತತ್ತಾರ್ಕ್ಷ್ಯ ಮಯಾಖ್ಯಾತಂ ಸರ್ವಮೇವೌರ್ಧ್ವದೇಹಿಕಮ್ ।
ಪುತ್ರವಾಂಛಾಪ್ರದಂ ಪುಣ್ಯಂ ಪಿತೃಮುಕ್ತಿಪ್ರದಾಯಕಮ್ ॥೧೨೧॥
ಹೇ ಗರುಡ!, ಎನ್ನಂದ ಹೇಳಲ್ಪಟ್ಟಾ ಈ ಔರ್ಧ್ವದೇಹಿಕ ಕ್ರಿಯೆಗೊ ಎಲ್ಲವೂ ಮಗನಾದವನ ಅಪೇಕ್ಷೆಯ ಪೂರೈಸುವಂತಾದ್ದೂ, ಪುಣ್ಯಕರವೂ ಹಾಂಗೂ ಪಿತೃಗೊಕ್ಕೆ ಮುಕ್ತಿಯ ಕೊಡುವಂತಾದ್ದೂ ಆಗಿದ್ದು.
ನಿರ್ಧನೋsಪಿ ನರಃ ಕಶ್ಚಿದ್ಯಃ ಶೃಣೋತಿ ಕಥಾಮಿಮಾಮ್ ।
ಸೋsಪಿ ಪಾಪನಿರ್ಮುಕ್ತೋ ದಾನಸ್ಯ ಫಲಮಾಪ್ನುಯಾತ್ ॥೧೨೨॥
ನಿರ್ಧನನಾಗಿಪ್ಪ (ಬಡವ°) ಏವ ಮನುಷ್ಯನಾರೂ ಈ ಕಥೆ ಕೇಳಿರೆ, ಅವನೂ ಪಾಪಂಗಳಿಂದ ವಿಮುಕ್ತನಾಗಿ ದಾನದ ಫಲವ ಪಡೆತ್ತ°.
ವಿಧಿನಾ ಕುರುತೇ ಯಸ್ತು ಶ್ರಾದ್ಧಂ ದಾನಂ ಮಯೋದಿತಮ್ ।
ಶ್ರುಣುಯಾದ್ಗಾರುಡಂ ಚಾಪಿ ಶ್ರುಣು ತಸ್ಯಾಪಿ ಯತ್ಫಲಮ್ ॥೧೨೩॥
ಆರು ಆನು ಹೇಳಿದ ರೀತಿಲಿ ವಿಧಿಪೂರ್ವಕವಾಗಿ ಶ್ರಾದ್ಧವನ್ನೂ, ದಾನವನ್ನೂ ಮಾಡುತ್ತವೋ, ಆರು ಗರುಡ ಪುರಾಣವನ್ನೂ ಕೇಳುತ್ತವೋ, ಅವಕ್ಕೆ ಏವ ಫಲ ದೊರಕುತ್ತು ಹೇಳ್ವದರನ್ನೂ ಕೇಳು –
ಪಿತಾ ದದಾತಿ ಸತ್ಪುತ್ರಾನ್ಗೋಧನಾನಿ ಪಿತಾಮಹಃ ।
ಧನದಾತಾ ಭವೇತ್ಸೋsಪಿ ಯಸ್ತಸ್ಯ ಪ್ರಪಿತಾಮಹಃ ॥೧೨೪॥
ಅಪ್ಪ°ಸಂತುಷ್ಟನಾಗಿ ಮಗಂಗೆ ಸತ್ಪುತ್ರರ ಕರುಣಿಸುತ್ತ°, ಅಜ್ಜ°ಗೋಧನವ ಕೊಡುತ್ತ°, ಮುತ್ತಜ್ಜ° ಧನವ(ಸಂಪತ್ತು)  ಕೊಡುವವನಾವುತ್ತ°.
ದದ್ಯಾದ್ವಿಪುಲಮನ್ನಾದ್ಯಂ ವೃದ್ಧಸ್ತು ಪ್ರಪಿತಾಮಹಃ ।
ತೃಪ್ತಾಃ ಶ್ರಾದ್ಧೇನ ತೇ ಸರ್ವೇ ದತ್ವಾ ಪುತ್ರಸ್ಯ ವಾಂಛಿತಮ್ ॥೧೨೫॥
ಮುದಿಯಜ್ಜ° ಬಹುವಾಗಿ ಅನ್ನ ಮೊದಲಾದವುಗಳ ಕೊಡುತ್ತ° ಶ್ರಾದ್ಧಂದ ತೃಪ್ತರಾಗಿ ಅವೆಲ್ಲೊರೂ ಆ ಮಗನ ಅಪೇಕ್ಷೆಯ ಎಲ್ಲವ ನೆರೆವೇರುಸುತ್ತವು.
ಗಚ್ಛಂತಿ ಧರ್ಮಮಾರ್ಗೈಶ್ಚ ಧರ್ಮರಾಜಸ್ಯ ಮಂದಿರಮ್ ।
ತತ್ರ ಧರ್ಮಸಭಾಯಾಂ ತೇ ತಿಷ್ಠಂತಿ ಪರಮಾದರಾತ್ ॥೧೨೬॥
ಮತ್ತೆ, ಆ ಪಿತೃಗಣದವು ಧರ್ಮಮಾರ್ಗಂದ ಯಮಧರ್ಮರಾಜನ ಮಂದಿರಕ್ಕೆ ಹೋವುತ್ತವು. ಅಲ್ಲಿ ಧರ್ಮಸಭೆಲಿ ಅತ್ಯಂತ ಆದರಪೂರ್ವಕವಾಗಿ ಕೂರುತ್ತವು.
 
ಸೂತ ಉವಾಚ
ಏವಂ ಶ್ರೀವಿಷ್ಣುನಾ ಪ್ರೋಕ್ತಮೌರ್ಧ್ವದಾನಸಮುದ್ಭವಮ್ ।
ಶ್ರುತ್ವಾ ಮಾಹಾತ್ಮ್ಯಮತುಲಂ ಗರುಡೋ ಹರ್ಷಮಾರ್ಗತಃ ॥೧೨೭॥
ಸೂತ° ಹೇಳಿದ° – ಈ ರೀತಿಯಾಗಿ ಶ್ರೀಮಹಾವಿಷ್ಣುವಿನ ಹೇಳಲ್ಪಟ್ಟ ಔರ್ಧ್ವದೇಹಿಕ ದಾನಂಗಳ ಅತ್ಯಂತ ಹೆಚ್ಚಿಗಾಣ ಮಹಾತ್ಮೆಯ ಕೇಳಿ ಹರ್ಷಿತನಾದ°.
 
ಇತಿ ಶ್ರೀ ಗರುಡಪುರಾಣೇ ಸಾರೋದ್ಧಾರೇ ಸಪಿಂಡನಾದಿ ಸರ್ವಕರ್ಮನಿರೂಪಣಂ ನಾಮ ತ್ರಯೋದಶೋsಧ್ಯಾಯಃ ॥
ಇಲ್ಲಿಗೆ ಶ್ರೀ ಗರುಡಪುರಾಣಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಸಪಿಂಡನ ಮೊದಲಾದ ಎಲ್ಲ ಕರ್ಮಂಗಳ ನಿರೂಪಣೆ’   ಹೇಳ್ವ ಹದಿಮೂರ್ನೇ ಅಧ್ಯಾಯ ಮುಗುದತ್ತು.
 
ಗದ್ಯರೂಪಲ್ಲಿ-
ಮಗನಾದವ° ಮೃತ ಅಪ್ಪನ ಸಪಿಂಡೀಕರಣ ಮಾಡಿಕ್ಕಿ, ಅವನ ಉದ್ದೇಶಂದ ಶಯ್ಯಾದಾನವ ಮಾಡಿ ಮತ್ತೆ ಪದದಾನವ ಮಾಡೆಕು. ಕೊಡೆ, ಪಾದರಕ್ಷೆ, ವಸ್ತ್ರ, ಉಂಗುರ, ಕಮಂಡಲ, ಆಸನ, ಪಂಚಪಾತ್ರೆ – ಈ ಏಳು ಪದಾರ್ಥ/ವಸ್ತುಗೊಕ್ಕೆ ‘ಪದ’ ಹೇದು ಹೇಳಲಾವ್ತು. ದಂಡ, ತಾಮ್ರಪಾತ್ರೆ, ಅಕ್ಕಿ, ಭೋಜನ, ಅರ್ಘ್ಯಪಾತ್ರೆ ಮತ್ತೆ ಯಜ್ಞೋಪವೀತ ಸೇರುಸಿ’ಪದ’ ಸಂಪೂರ್ಣತೆ ಆವ್ತು. ಈ ಪ್ರಕಾರ, ಶಕ್ತ್ಯಾನುಸಾರ ಹದಿಮೂರು ಪದದಾನಂಗಳ ರೂಢಿಸಿಗೊಂಡು, ಹನ್ನೆರಡ್ನೇ ದಿನ ಹದಿಮೂರು ಜೆನ ಬ್ರಾಹ್ಮಣರಿಂಗೆ ಪದದಾನ ಮಾಡೆಕು. ಈ ಪದದಾನಂದ ಧಾರ್ಮಿಕಪುರುಷ° ಸದ್ಗತಿಯ ಹೊಂದುತ್ತ°. ಯಮಮಾರ್ಗಲ್ಲಿ ಹೋದ ಜೀವಿಗೊಕ್ಕೂ ಪದದಾನ ಸುಖಪ್ರದಕರವಾಗಿಪ್ಪಂತಾದ್ದು ಆಗಿದ್ದು.
ಯಮಮಾರ್ಗಲ್ಲಿ ಹೋಪಗ ರೌದ್ರ ನರಕಲ್ಲಿ ತಡವಲೆಡಿಯದ್ದಷ್ಟು ಮನುಷ್ಯ ಮೈ ಬೆಂದು ಹೋವ್ತಷ್ಟು ಬೆಶಿಲಿನ ತಾಪ ಇರ್ತು. ಕೊಡೆ ದಾನ ಕೊಡ್ವದರಿಂದ ಅಲ್ಲಿ ಅವನ ತಲೆಮೇಲ್ಕಟೆ ಶೀತಲ ತಣಿಲಿನ ಆಸರೆ ಉಂಟಾವ್ತು. ಪಾದೆರಕ್ಷೆಗಳ ದಾನ ಕೊಡುವದರಿಂದ ಅತ್ಯಂತ ವಿಷಮುಳ್ಳುಗಳಿಪ್ಪ ಯಮ ಮಾರ್ಗಲ್ಲಿ ಅಶ್ವಾರೂಢನಾಗಿ ಹೋವುತ್ತ°. ವಸ್ತ್ರದಾನ ಪ್ರಭಾವಂದ ಅತಿ ಶೀತೋಷ್ಣ ವಾಯುಕ್ಲೇಶ ಅಪ್ಪ ಯಮಮಾರ್ಗಲ್ಲಿ ಸುಖಕರವಾಗಿ ಸಾಗಲೆ ಎಡಿಗಾವ್ತು. ಉಂಗುರ ದಾನ ಕೊಡ್ವದರಿಂದ ಯಮಮಾರ್ಗಲ್ಲಿ ಅತ್ಯಂತ ಘೋರರೂಪಿಗಳಾದ, ಕರಾಳವದನರಾದ ಯಮದೂತರ ಹಿಂಸೆ ಉಂಟಾವುತ್ತಿಲ್ಲೆ. ಕಮಂಡಲು ದಾನ ಮಾಡುವದರಿಂದ, ಅತೀ ಬೇಸಗೆಯ ಬೆಶಿ ಗಾವು, ಗಾಳಿ ನೀರಿಂಗೆ ತತ್ವಾರ ಇಪ್ಪಂತ ಆ ಯಮಮಾರ್ಗಲ್ಲಿ ಹೋಪ ಆ ದಾಹಯುಕ್ತ ಜೀವಿಗೆ ನೀರು ಕುಡಿವಲೆ ಎಡಿಗಾವ್ತು. ಮೃತವ್ಯಕ್ತಿಯ ಉದ್ದೇಶಂದ ಆರು ತಾಮ್ರದ ಜಲಪಾತ್ರೆಯ ದಾನ ಮಾಡುತ್ತವೋ ಅವಕ್ಕೆ ಒಂದು ಸಾವಿರ ಕುಡಿವ ನೀರಿನ ಕಟ್ಟೆ ಸ್ಥಾಪಿಸಿದ ಫಲ ಪ್ರಾಪ್ತಿ ಆವ್ತು. ಬ್ರಾಹ್ಮಣಂಗೆ ಒಳ್ಳೆ ಆಸನ ಭೋಜನವ ಕೊಟ್ರೆ ಯಮ ಮಾರ್ಗಲ್ಲಿ ಕಷ್ಟಕರವಾಗಿ ಹೋಪ ಜೀವಿ ನಿಧಾನವಾಗಿ, ಸುಖವಾಗಿ ದಾರಿಬುತ್ತಿಯ (ಪುಣ್ಯದ ಫಲವ) ಉಂಡುಗೊಂಡು ಹೋವ್ತ°.
ಈ ಪ್ರಕಾರವಾಗಿ ಸಪಿಂಡೀಕರಣದ ದಿನ ದಾನಂಗಳ ಕೊಟ್ಟಿಕ್ಕಿ ಅನೇಕ ಬ್ರಾಹ್ಮಣರಿಂಗೆ ಮತ್ತೆ ಚಾಂಡಾಲ ಮುಂತಾದೋರಿಂಗೂ ಸಾನ ಭೋಜನ ಮಾಡುಸೆಕು. ಮತ್ತೆ, ವರ್ಷಾಬ್ದಿಕದ ವರೆಗಾಣ ತಿಂಗಳು ತಿಂಗಳೂ ಕೊಡುವ ಪಿಂಡದೊಟ್ಟಿಂಗೆ ಜಲಕುಂಭವನ್ನೂ ಕೊಡೆಕು.
ಪ್ರೇತಕಾರ್ಯವ ಹೊರತುಪಡುಸಿ ಉಳುದ ಕಾರ್ಯಂಗಳ ಮತ್ತೆ ಅನುಷ್ಠಾನ ಮಾಡ್ಳೆ ಇಲ್ಲೆ. ಆದರೆ ಪ್ರೇತದ ಅಕ್ಷಯ್ಯತೃಪ್ತಿಗಾಗಿ ಪುನಃ ಪುನಃ ಪಿಂಡದಾನಾದಿಗಳ ಮಾಡೆಕು. ಹಾಂಗಾಗಿ ಹೇ ಗರುಡ!, ಇನ್ನೀಗ ವಿಶೇಷ ತಿಥಿ ದಿನಂಗಳಲ್ಲಿ ಮರಣ ಹೊಂದುವ ಜೀವಿಯ ಮಾಸಿಕ, ವಾರ್ಷಿಕ, ಪಾಕ್ಷಿಕ ಶ್ರಾದ್ಧದ ವಿಷಯಲ್ಲಿ ರಜಾ ವಿಶೇಷ ಅಂಶಂಗಳ ಹೇಳುತ್ತೆ ಕೇಳು – ಹುಣ್ಣಮೆಲಿ ಮರಣ ಹೊಂದಿರೆ (ಅಮಾಸೆಂದ ಮದಲು) ಚತುರ್ಥಿ ಊನಿಕಾ ಆವ್ತು. ಚತುರ್ಥಿಲಿ ಮರಣ ಹೊಂದಿರೆ ಮತ್ತಾಣ ಚತುರ್ಥಿಂದ ಮದಲಾಣ ನವಮಿಯಂದು ಊನಿಕಾ ಆವ್ತು. ನವಮಿಲಿ ಮರಣ ಹೊಂದಿರೆ ಮುಂದಾಣ ನವಮಿಂದ ಮದಲಾಣ ಚತುರ್ದಶಿಲಿ ಊನಿಕಾ ಆವ್ತು. ಹೀಂಗೆ ಪಾಕ್ಷಿಕ ಶ್ರಾದ್ಧವನ್ನೂ ಇಪ್ಪತ್ತನೇ ದಿನಲ್ಲಿ ಮಾಡೆಕು. ಏವಾಗ ಒಂದೇ ತಿಂಗಳ್ಳಿ ಎರಡು ಸಂಕ್ರಾಂತಿಗೊ ಬತ್ತೋ (ಕ್ಷಯಮಾಸ- ಕಾರ್ತಿಕ ಅಥವಾ ಮಾರ್ಗಶಿರ ಮಾಸಲ್ಲಿ ಬಪ್ಪದು), ಅಂಬಗ ಎರಡು ತಿಂಗಳಾಣ ಶ್ರಾದ್ಧವ ಮದಲಾಣ ತಿಂಗಳ್ಳೇ ಮಾಡ್ತದು ಉತ್ತಮ.
ಒಂದುವೇಳೆ ಒಂದೇ ಮಾಸಲ್ಲಿ ಎರಡೂ ಮಾಸಂಗೊ ಬಂದರೆ, ಅಂಬಗ ಎರಡೂ ಮಾಸಂಗಳಲ್ಲಿ ಅವೇ ಎರಡೂ ಪಕ್ಷಂಗಳನ್ನೂ ಮತ್ತೆ ಅದೇ ಮುವತ್ತು ತಿಥಿಗಳನ್ನೂ ತೆಕ್ಕೊಳ್ಳೆಕು. (ಅದೇ ಮಾಸದ ೧೫ ತಿಥಿಗಳ ೩೦ ತಿಥಿಗೊ ಹೇದು ತೆಕ್ಕೊಳ್ಳೆಕು). ತಿಥಿಯ ಮದಲಾಣ ಅರ್ಧಭಾಗಕ್ಕೆ ಮದಲಾಣ ಮಾಸವನ್ನೂ, ಎರಡ್ನೇ ಅರ್ಧಭಾಗಕ್ಕೆ ಎರಡ್ನೇ ಮಾಸವಾಸಿಗಿಯೂ ತೆಕ್ಕೊಳ್ಳೆಕು. ಮಲಮಾಸದ ವಿಷಯವಾಗಿ ಈ ರೀತಿಯಾಗಿ ಪಂಡಿತರುಗೊ ಹೇಯ್ದವು. ಮತ್ತೆ, ಸಂಕ್ರಾಂತಿ ಇಲ್ಲದ್ದ ತಿಂಗಳ್ಳಿ (ಮಲಮಾಸ / ಕ್ಷಯಮಾಸ) ಕೂಡ  ಸಪಿಂಡೀಕರಣವ ಮಾಡೆಕು. ಹಾಂಗೇ ಮಾಸಿಕ ಶ್ರಾದ್ಧ ಮತ್ತೆ ವರ್ಷಾಂತಿಕ ಶ್ರಾದ್ಧವನ್ನೂ ಹಾಂಗೆಯೇ ಮಾಡೆಕು. ಒಂದು ವೇಳೆ ಸಂವತ್ಸರದ ಎಡಕ್ಕಿಲ್ಲಿ ಅಧಿಕ ಮಾಸ ಬಂದರೆ, ಹದಿಮೂರ್ನೇ ತಿಂಗಳ್ಳಿ ಪ್ರೇತದ ವಾರ್ಷಿಕ ಕ್ರಿಯೆಯ ಮಾಡೆಕು. ಸಂಕ್ರಾಂತಿ ಇಲ್ಲದ್ದ ಮಾಸಲ್ಲಿ ಪಿಂಡಯಿಲ್ಲದ್ದೆ, ಸಂಕ್ರಾಂತಿ ಇಪ್ಪ ಮಾಸಲ್ಲಿ ಪಿಂಡಸಹಿತವಾಗಿ – ಈ ರೀತಿ ವಾರ್ಷಿಕ ಶ್ರಾದ್ಧವ ಎರಡೂ ತಿಂಗಳ್ಳಿ ಮಾಡೆಕು. ಹೀಂಗೆ, ಒಂದು ಸಂವತ್ಸರ ಪೂರ್ಣ ಆದ ಮತ್ತೆ ವಾರ್ಷಿಕ ಶ್ರಾದ್ಧವ ಆಚರುಸೆಕು. ಹಾಂಗೇ ವಿಶೇಷವಾಗಿ ಬ್ರಾಹ್ಮಣರಿಂಗೆ ಭೋಜನವ ಮಾಡುಸೆಕು.
ಒಂದು ವರ್ಷ ಆದ ಮತ್ತೆ ಶ್ರಾದ್ಧಲ್ಲಿ ಏವತ್ತೂ ಮೂರು ಪಿಂಡವ ಮಾಡೆಕು. ಏಕೋದ್ದಿಷ್ಟವ ಮಾಡ್ಳಾಗ. ಅದರ ಮಾಡುವದರಿಂದ ಅವ° ಪಿತೃಘಾತಕನಾವ್ತ°. ತೀರ್ಥಶ್ರಾದ್ಧವ, ಗಯಾಶ್ರಾದ್ಧವ ಗಜಚ್ಛಾಯಾ ಯೋಗಲ್ಲಿ (ಚಂದ್ರ° ಮಘಾ ನಕ್ಷತ್ರಲ್ಲಿದ್ದರೆ, ಸೂರ್ಯ° ಹಸ್ತ ನಕ್ಷತ್ರಲ್ಲಿದ್ದರೆ ಹಾಂಗೂ ತ್ರಯೋದಶಿ ತಿಥಿಯಾಗಿದ್ದರೆ ಅದು ಗಯಾಚ್ಛಾಯಾ ಯೋಗ), ಗ್ರಹಣಕಾಲಲ್ಲಿ, ಯುಗಾದಿಲಿ ಮಾಡುವ ಪಿತೃಸಂಬಂಧೀ ಕಾರ್ಯಂಗಳ ವರ್ಷಾಂತದೊಳ ಮಾಡ್ಳಾಗ. ಮಗ° ನಿಶ್ಚಯವಾಗಿಯೂ ಗಯಾಶ್ರಾದ್ದ್ಹವ ಮಾಡುವದಾದರೆ ಒಂದು ವರ್ಷ ಆಗಿಕ್ಕಿ ಮತ್ತೆ ಪಿತೃಭಕ್ತಿಂದ ಅದರ ಮಾಡೆಕು. ಗಯಾಶ್ರಾದ್ಧಂದ ಪಿತೃಗೊ ಭವಸಾಗರಂದ ಮುಕ್ತರಾವ್ತವು. ಗದಾಧರನ ಅನುಗ್ರಹಂದ ಅವು ಪರಮಗತಿಯ ಹೊಂದುತ್ತವು. ತುಳಸಿಕೊಡಿಂದ ವಿಷ್ಣುವಿನ ಪಾದುಕೆಗಳ ಪೂಜೆ ಮಾಡೆಕು. ಮತ್ತಿ ಅಲ್ಯಾಣ ಲವಾದಿ ತೀರ್ಥಂಗಳ್ಳಿ ಯಥಾಕ್ರಮವಾಗಿ ಪಿಂಡದಾನ ಮಾಡೆಕು. ಆರು ಗಯೆಯ ಶಿರಲ್ಲಿ ಶಮೀಪತ್ರ ಪ್ರಮಾಣದ ಪಿಂಡವ ಕೊಡ್ತನೋ, ಅವ° ಏಳು ಗೋತ್ರಂಗಳನ್ನೂ , ನೂರ ಒಂದು ಕುಲವನ್ನೂ ಉದ್ಧರುಸುತ್ತ°. ತಮ್ಮ ಕುಲಕ್ಕೆ ಆನಂದ ತಪ್ಪಂತಹ ಯಾವಾತ° ಗಯಗೆ ಹೋಗಿ, ಅಲ್ಲಿ ಶ್ರಾದ್ಧವ ಮಾಡುತ್ತನೋ, ಪಿತೃಗೊಕ್ಕೆ ಸಂತೋಷ ಉಂಟುಮಾದುವ ಅವನ ಆ ಜನ್ಮ ಸಫಲ ಆವುತ್ತು. ಪಿತೃಗೊ ದೇವಲೋಕಲ್ಲಿ ಹಾಡುವ ಗೀತೆಯ ಕತೆ/ಚರಿತ್ರೆ, ಮನುಪುತ್ರನಾದ ಇಕ್ಷ್ವಾಕುವಿಂಗೆ ಕಲಾಪ ನಗರದ ಉಪವನಲ್ಲಿ ಪಿತೃದೇವತೆಗೊ ಹೇಳಿದ್ದು ಕೇಳಿ ಬತ್ತು. “ನಮ್ಮ ಕುಲಲ್ಲಿ ಗಯಗೆ ಹೋಗಿ ಆದರಪೂರ್ವಕವಾಗಿ ನವಗೆ ಪಿಂಡವ ಕೊಡುವ ಸನ್ಮಾರ್ಗಶೀಲರು ಆರಾರು ಹುಟ್ಟುಗೋ” ಹೇದು ಪಿತೃಲೋಕಲ್ಲಿ ಅಮುಕ್ತ ಪಿತೃಗೊ ಯೇಚನೆಲಿ ಇರ್ತವು. ಹೀಂಗೆ ಏವ ಮಗ° ಪರಲೋಕಕ್ಕೆ ಸಂಬಂಧಿಸಿದ ಕ್ರಿಯೆಗಳ ಮಾಡುತ್ತನೋ, ಅವ° ಕೌಶಿಕನ ಮಕ್ಕಳ ಹಾಂಗೆ ಸುಖವ ಹೊಂದಿ ಮುಕ್ತನಾವುತ್ತ°. ಭರದ್ವಾಜನ ಏಳು ಮಕ್ಕೊ ಜನ್ಮ ಪರಂಪರೆಯ ಅನುಭವುಸಿ, ಗೋವಧೆಯನ್ನೂ ಮಾಡಿದ್ದರೂ, ಪಿತೃಗಳ ಅನುಗ್ರಹಂದ ಮುಕ್ತರಾದವು.
ದಶಾರ್ಣ ದೇಶಲ್ಲಿ (ಸುರೂವಾಣ ಜೆನ್ಮಲ್ಲಿ) ಏಳು ಜೆನ ಬೇಡರಾಗಿ, (ಮತ್ತಾಣ ಜನ್ಮಲ್ಲಿ) ಕಾಲಂಜಿರ ಪರ್ವತಲ್ಲಿ ಪ್ರಾಣಿಗಳಾಗಿ, (ಅದರಿಂದ ಮತ್ತಾಣ ಜನ್ಮಲ್ಲಿ) ಶರದ್ವೀಪಲ್ಲಿ ಚಕ್ರವಾಕ ಪಕ್ಷಿಗೊ ಆಗಿ, (ಅದರಿಂದಲೂ ಮತ್ತಾಣ ಜನ್ಮಲ್ಲಿ) ಮಾನಸ ಸರೋವರಲ್ಲಿ ಹಂಸಂಗೊ ಆಗಿತ್ತಿದ್ದ ಅವ್ವೇ (ಮರುಮತ್ತಾಣ ಜೆನ್ಮಲ್ಲಿ) ಕುರುಕ್ಷೇತ್ರಲ್ಲಿ ವೇದಪಾರಂಗತರಾದ ಬ್ರಾಹ್ಮಣರಾಗಿ ಹುಟ್ಟಿ ಪಿತೃಭಕ್ತಿಂದ ಆ ಬ್ರಾಹ್ಮಣಮಕ್ಕೊ ಎಲ್ಲೊರೂ ಮುಕ್ತಿಯ ಪಡದವು.
ಹಾಂಗಾಗಿ ಎಲ್ಲ ಪ್ರಯತ್ನಂಗಳಿಂದಲೂ ಮನುಷ್ಯ° ಪಿತೃಭಕ್ತನಾಗಿರೆಕು. ಇಹಲೋಕಲ್ಲಿಯೂ ಪರಲೋಕಲ್ಲಿಯೂ ಪಿತೃಭಕ್ತಿಂದ ಸುಖವುಂಟಾವ್ತು. ಹೇ ಗರುಡ!, ಎನ್ನಂದ ಹೇಳಲ್ಪಟ್ಟಾ ಈ ಔರ್ಧ್ವದೇಹಿಕ ಕ್ರಿಯೆಗೊ ಎಲ್ಲವೂ ಮಗನಾದವನ ಅಪೇಕ್ಷೆಯ ಪೂರೈಸುವಂತಾದ್ದೂ, ಪುಣ್ಯಕರವೂ ಹಾಂಗೂ ಪಿತೃಗೊಕ್ಕೆ ಮುಕ್ತಿಯ ಕೊಡುವಂತಾದ್ದೂ ಆಗಿದ್ದು. ನಿರ್ಧನನಾಗಿಪ್ಪ (ಬಡವ°) ಏವ ಮನುಷ್ಯನಾರೂ ಈ ಕಥೆ ಕೇಳಿರೆ, ಅವನೂ ಪಾಪಂಗಳಿಂದ ವಿಮುಕ್ತನಾಗಿ ದಾನದ ಫಲವ ಪಡೆತ್ತ°. ಆರು ಆನು ಹೇಳಿದ ರೀತಿಲಿ ವಿಧಿಪೂರ್ವಕವಾಗಿ ಶ್ರಾದ್ಧವನ್ನೂ, ದಾನವನ್ನೂ ಮಾಡುತ್ತವೋ, ಆರು ಗರುಡ ಪುರಾಣವನ್ನೂ ಕೇಳುತ್ತವೋ, ಅವಕ್ಕೆ ಏವ ಫಲ ದೊರಕುತ್ತು ಹೇಳ್ವದರನ್ನೂ ಕೇಳು –
ಅಪ್ಪ°ಸಂತುಷ್ಟನಾಗಿ ಮಗಂಗೆ ಸತ್ಪುತ್ರರ ಕರುಣಿಸುತ್ತ°, ಅಜ್ಜ°ಗೋಧನವ ಕೊಡುತ್ತ°, ಮುತ್ತಜ್ಜ° ಧನವ(ಸಂಪತ್ತು)  ಕೊಡುವವನಾವುತ್ತ°. ಮುದಿಯಜ್ಜ° ಬಹುವಾಗಿ ಅನ್ನ ಮೊದಲಾದವುಗಳ ಕೊಡುತ್ತ° ಶ್ರಾದ್ಧಂದ ತೃಪ್ತರಾಗಿ ಅವೆಲ್ಲೊರೂ ಆ ಮಗನ ಅಪೇಕ್ಷೆಯ ಎಲ್ಲವ ನೆರೆವೇರುಸುತ್ತವು. ಮತ್ತೆ, ಆ ಪಿತೃಗಣದವು ಧರ್ಮಮಾರ್ಗಂದ ಯಮಧರ್ಮರಾಜನ ಮಂದಿರಕ್ಕೆ ಹೋವುತ್ತವು. ಅಲ್ಲಿ ಧರ್ಮಸಭೆಲಿ ಅತ್ಯಂತ ಆದರಪೂರ್ವಕವಾಗಿ ಕೂರುತ್ತವು.
ಸೂತ° ಹೇಳಿದ° – ಈ ರೀತಿಯಾಗಿ ಶ್ರೀಮಹಾವಿಷ್ಣುವಿನ ಹೇಳಲ್ಪಟ್ಟ ಔರ್ಧ್ವದೇಹಿಕ ದಾನಂಗಳ ಅತ್ಯಂತ ಹೆಚ್ಚಿಗಾಣ ಮಹಾತ್ಮೆಯ ಕೇಳಿ ಹರ್ಷಿತನಾದ°.
 
ಇಲ್ಲಿಗೆ ಶ್ರೀ ಗರುಡಪುರಾಣಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಸಪಿಂಡನ ಮೊದಲಾದ ಎಲ್ಲ ಕರ್ಮಂಗಳ ನಿರೂಪಣೆ’   ಹೇಳ್ವ ಹದಿಮೂರ್ನೇ ಅಧ್ಯಾಯ ಮುಗುದತ್ತು.
 
ಮುಂದೆಂತರ… , ಬಪ್ಪವಾರ ನೋಡುವೋ°.
 
[ಚಿಂತನೀಯಾ –
ಕಳುದವಾರದ ಭಾಗಲ್ಲಿ ಶಯ್ಯಾದಾನದ ಮಹತ್ವದ ಬಗ್ಗೆ ಭಗವಂತ° ವಿವರಿಸಿದ್ದರ ನಾವು ಓದಿದ್ದು. ಈ ಭಾಗಲ್ಲಿ ಪದದಾನದ ವಿಷಯವಾಗಿ ವಿವರಿಸಿದ್ದ. ದಾನ ಕೊಡ್ತ ಪ್ರತಿಯೊಂದು ವಸ್ತುವಿಲ್ಲಿಯೂ ವಿಶೇಷ ಸಾಂಕೇತಿಕ ಅರ್ಥ ಇದ್ದು ಹೇಳ್ವದರ ನಾವಿಲ್ಲಿ ಮನಗಾಂಬಲಕ್ಕು. ಹಾಂಗೇ ವಿಶೇಷ ತಿಥಿಗಳಲ್ಲಿ ಮರಣ ಹೊಂದಿರೆ ಮಾಡೇಕ್ಕಪ್ಪ ಊನಮಬ್ದಿಕ ಮತ್ತೆ ವರ್ಷಾಂತಿಕ ಕಾಲ ನಿರ್ಣಯವನ್ನೂ ಭಗವಂತ° ಇಲ್ಲಿ ಹೇಳಿದ್ದ°. ಪಾವನಕರವಾದ ಗರುಡಪುರಾಣ ಪಠಣಂದ ಪಿತೃಗೊ ಸಂತುಷ್ಟರಾಗಿ ಮಕ್ಕೊಗೆ ಸತ್ಫಲವ ನೀಡುತ್ತವು. ಎಲ್ಲೋರಿಂಗೂ ಒಳ್ಳೆದಾಗಲಿ. ಹರೇ ರಾಮ.]

6 thoughts on “ಗರುಡಪುರಾಣ – ಅಧ್ಯಾಯ 13 – ಭಾಗ 03

  1. ಭಾವಯ್ಯಾ, ಗಯಾ ಶ್ರಾಧ್ಧ ಮಾಡಿಕ್ಕಿ ಬಂದ ಮೇಲೆ ವರ್ಷಾವದಿ ಶ್ರಾಧ್ಧವ ಮುಂದುವರಿಸಲಿದ್ದೋ ? ತಿಳಿಸಿ. ದಾನಂಗಳ ವಿಶೇಷತೆ ವಿವರವಾಗಿ ತಿಳಿಸಿದ್ದಿ. ಧನ್ಯವಾದ. ಹರೇ ರಾಮ.

    1. ಗಯಾ ಶ್ರಾದ್ಧವೋ, ಕಾಶಿ, ರಾಮೇಶ್ವರ, ಗೋಕರ್ಣ, ಭಾಗಮಂಡಲ …. ಎಲ್ಲಿ ಬೇಕಾರು ಮಾಡಲಿ.., ವರ್ಷಾವಧಿ ಶ್ರಾದ್ಧ ಮಾಡ್ಳೇ ಬೇಕು. ಮಾಡ್ಸು ಬೇಡ ಹೇಳ್ತದಕ್ಕೆ ಏವ ಆಧಾರವೂ ಇಲ್ಲೆ. ನಾವು ಇಪ್ಪನ್ನಾರ ನಮ್ಮ ಹಿರಿಯೋರ ಶ್ರಾದ್ಧಮಾಡೇಕ್ಕಾದ್ದು ನಮ್ಮ ಕರ್ತವ್ಯ.
      ಓದಿ ಒಪ್ಪಕ್ಕೊಟ್ಟು ಪ್ರೋತ್ಸಾವ ಎಲ್ಲೊರಿಂಗು ಹರೇ ರಾಮ

  2. ಎಲ್ಲರೂ ಓದಲೇ ಬೇಕಾದ ಪುರಾಣ.
    ಯಾವ ದಾನಂಗಳಿಂದ ಹೇಂಗಿಪ್ಪ ಸದ್ಗತಿ ಪಿತೃಗೊಕ್ಕೆ ಸಿಕ್ಕುತ್ತು ಹೇಳಿ ಚೆಂದಕೆ ವಿವರಣೆ ಇದ್ದು. ಆರು ಗರುಡ ಪುರಾಣವನ್ನೂ ಕೇಳುತ್ತವೋ, ಅವಕ್ಕೆ ಏವ ಫಲ ದೊರಕುತ್ತು ಹೇಳ್ವದರನ್ನೂ ತಿಳುಶಿ ಕೊಟ್ಟಿದವು.

  3. ಹರೇರಾಮ, ಚೆನ್ನೈ ಭಾವನ ಸಫಲ ಸಾಧನಗೆ ಆತ್ಮೀಯ ಒಪ್ಪ. ಗರುಡ ಪುರಾಣದ ಶುದ್ದಿ ಬಪ್ಪಗೆಲ್ಲ ನಮ್ಮ ಗ್ರಂಥಾಲಯಲ್ಲಿ ಚೆನ್ನೈ ಬಾವನ ಶುದ್ದಿ ಹೇಳಿಯೇ ಹೇಳ್ತ್ತೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×