Oppanna.com

ಗರುಡಪುರಾಣ – ಅಧ್ಯಾಯ 15 – ಭಾಗ 01

ಬರದೋರು :   ಚೆನ್ನೈ ಬಾವ°    on   23/01/2014    3 ಒಪ್ಪಂಗೊ

ಚೆನ್ನೈ ಬಾವ°

ಯಮಧರ್ಮರಾಜನ ಸಭಾ ನಿರೂಪಣೆ ಕಳುದವಾರದ ಭಾಗಲ್ಲಿ ಓದಿದ್ದದು. ಮುಂದೆ –
 
ಗರುಡಪುರಾಣಮ್                                         ಗರುಡಪುರಾಣ
ಅಥ ಪಂಚದಶೋsಧ್ಯಾಯಃ                              ಅಧ್ಯಾಯ 15 ಭಾಗ 01
ಸುಕೃತಿಜನಜನ್ಮಾಚರಣನಿರೂಪಣಮ್                   ಸುಕೃತಿಗಳ ಜನ್ಮ ಮತ್ತೆ ಆಚರಣೆಗಳ ನಿರೂಪಣೆ
 
ಗರುಡ ಉವಾಚimages
ಧರ್ಮಾತ್ಮಾ ಸ್ವರ್ಗತಿಂ ಭುಕ್ತ್ವಾ ಜಾಯತೇ ವಿಮಲೇ ಕುಲೇ ।
ಅತಸ್ತಸ್ಯ ಸಮುತ್ಪತ್ತಿಂ ಜನನೀಜಠರೇ ವದ ॥೦೧॥
ಗರುಡ° ಹೇಳಿದ° – ಧರ್ಮಾತ್ಮ° ಸ್ವರ್ಗವ ಅನುಭವುಸಿ ನಿಷ್ಕಳಂಕ ವಂಶಲ್ಲಿ ಹುಟ್ಟುತ್ತ°. ಅಬ್ಬೆಯ ಹೊಟ್ಟೆಲಿ ಅವನ ಉತ್ಪತ್ತಿ ಹೇಂಗೆ ಆವುತ್ತದು ಹೇಳ್ವದರ ಎನಗೆ ಈಗ ಹೇಳು.
ಯಥಾ ವಿಚಾರಂ ಕುರುತೇ ದೇಹೇsಸ್ಮಿನ್ಸುಕೃತೀ ಜನಃ ।
ತಥಾಹಂ ಶ್ರೋತುಮಿಚ್ಛಾಮಿ ವದ ಮೇ ಕರುಣಾನಿಧೇ ॥೦೨॥
ಸುಕೃತಿಯು ಈ ದೇಹಲ್ಲಿ ಎಂತ ವಿಚಾರ ಮಾಡುತ್ತ° ಹೇಳ್ವದನ್ನೂ ಆನು ಕೇಳ್ಳೆ ಬಯಸುತ್ತೆ. ಹೇ ಕರುಣಾನಿಧೇ!, ಎನಗೆ ಹೇಳು.
ಶ್ರೀಭಗವಾನುವಾಚ
ಸಾಧು ಪೃಷ್ಠಂ ತ್ವಯಾ ತಾರ್ಕ್ಷ್ಯ ಪರಂ ಗೋಪ್ಯಂ ವದಾಮಿ ತೇ ।
ಯಸ್ಯ ವಿಜ್ಞಾನಮಾತ್ರೇಣ ಸರ್ವಜ್ಞತ್ವಂ ಪ್ರಜಾಯತೇ ॥೦೩॥
ಏ ಗರುಡ!, ನಿನ್ನಂದ ಕೇಳಲ್ಪಟ್ಟದು ಲಾಯಕ ಅತು. ಪರಮ ರಹಸ್ಯವ ನಿನಗೆ ಹೇಳುತ್ತೆ. ಇದರ ತಿಳುದಮಾತ್ರಂದಲೆ ಸರ್ವಜ್ಞತ್ವ ಉಂಟಾವ್ತು.
ವಕ್ಷ್ಯಾಮಿ ಚ ಶರೀರಸ್ಯ ಸ್ವರೂಪಂ ಪಾರಮಾರ್ಥಿಕಮ್ ।
ಬ್ರಹ್ಮಾಂಡಗುಣಸಂಪನ್ನಂ ಯೋಗಿನಾಂ ಧಾರಣಾಸ್ಪದಮ್ ॥೦೪॥
ಬ್ರಹ್ಮಾಂಡದ ಗುಣಂಗಳನ್ನೇ ತಾನೂ ಹೊಂದಿಪ್ಪ, ಯೋಗಿಗಳ ಧ್ಯೇಯ ವಸ್ತುವಾದ, ಶರೀರದ ಪಾರಮಾರ್ಥಿಕ ಸ್ವರೂಪವ ನಿನಗೆ ವಿವರುಸುತ್ತೆ.
ಷಟ್‍ಚಕ್ರಚಿಂತನಂ ಯಸ್ಮಿನ್ಯಥಾ ಕುರ್ವಂತಿ ಯೋಗಿನಃ ।
ಬ್ರಹ್ಮರಂಧ್ರೇ ಚಿದಾನಂದರೂಪಧ್ಯಾನಂ ತಥಾ ಶ್ರುಣು ॥೦೫॥
ಯೋಗಿಗೊ ಅದರ್ಲಿ ಷಟ್‍ಚಕ್ರ ಚಿಂತನೆಯನ್ನೂ, ಬ್ರಹ್ಮರಂಧ್ರಲ್ಲಿ ಚಿದಾನಂದ ರೂಪದ ಧ್ಯಾನವನ್ನೂ ಏವ ರೀತಿ ಮಾಡುತ್ತವು ಹೇಳ್ವದರನ್ನೂ ಕೇಳು.
ಶುಚೀನಾಂ ಶ್ರೀಮತಾಂ ಗೇಹೇ ಜಾಯತೇ ಸುಕೃತೀ ಯಥಾ ।
ತಥಾ ವಿಧಾನಂ ನಿಯಮಂ ತತ್ಪಿತ್ರೋಃ ಕಥಯಾಮಿ ತೇ ॥೦೬
ಸುಕೃತಿಯು ಪರಿಶುದ್ಧವಾದ ಶ್ರೀಮಂತರ ಮನೆಲಿ ಹೇಂಗೆ ಹುಟ್ಟುತ್ತ ಹೇಳ್ವದರನ್ನೂ ಅವನ ಅಬ್ಬೆ-ಅಪ್ಪನ ವಿಧಿನಿಯಮಂಗಳನ್ನೂ ನಿನಗೆ ಹೇಳುತ್ತೆ.
ಋತುಕಾಲೇ ತು ನಾರೀಣಾಂ ತ್ಯಜೇದ್ದಿನಚತುಷ್ಟಯಮ್ ।
ತಾವನ್ನಾಲೋಕಯೇದ್ವಕ್ತ್ರಂ ಪಾಪಂ ವಪುಷಿ ಸಂಭವೇತ್ ॥೦೭॥
ಋತುಕಾಲಲ್ಲಿ ಸ್ತ್ರೀಯರ ನಾಕು ದಿನ ದೂರ ಮಡುಗೆಕು. ಪಾಪವು ಅವರ ದೇಹಲ್ಲಿಪ್ಪನ್ನಾರ ಅವರ ಮೋರೆ ಸಾನ ನೋಡ್ಳಾಗ.
ಸ್ನಾತ್ವಾ ಸಚೈಲಂ ಸಾ ನಾರೀ ಚತುರ್ಥೇsಹನಿ ಶುಧ್ಯತಿ ।
ಸಪ್ತಾಹಾತ್ಪಿತೃದೇವಾನಾಂ ಭವೇದ್ಯೋಗ್ಯಾ ವ್ರತಾರ್ಚನೇ ॥೦೮॥
ಆ ನಾರಿ ನಾಲ್ಕನೇ ದಿನ ಸಚೇಲ (ವಸ್ತ್ರಸಹಿತ) ಮಿಂದಿಕ್ಕಿ ಶುದ್ಧ ಆವ್ತು. ಏಳನೇ ದಿನಂದ ಅದು ಪಿತೃಗಳ ಮತ್ತೆ ದೇವತೆಗಳ ವ್ರತ ಮತ್ತೆ ಉಪಾಸನೆ ಮಾಡ್ಲೆ ಯೋಗ್ಯೆ ಆವುತ್ತು.
ಸಪ್ತಾಹಮಧ್ಯೇಯೋ ಗರ್ಭಃ ಸ ಭವೇನ್ಮಲಿನಾಶಯಃ ।
ಪ್ರಾಯಶಃ ಸಂಭವಂತ್ಯತ್ರ ಪುತ್ರಾಸ್ತ್ವಷ್ಟಾಹಮಧ್ಯತಃ ॥೦೯॥
ಏಳುದಿನಂಗಳ ಒಳ ಗರ್ಭ ನಿಂದರೆ ಮಲಿನ ಸ್ವಭಾವದ ಜೀವ ಹುಟ್ಟುತ್ತು. ಎಂಟನೇ ದಿನಲ್ಲಿ ಬಹುಶಃ ಮಗ ಹುಟ್ಟುತ್ತ°.
ಯುಗ್ಮಾಸು ಪುತ್ರಾ ಜಾಯಂತೇ ಸ್ತ್ರೀಯೋsಯುಗ್ಮಾಸು ರಾತ್ರಿಷು ।
ಪೂರ್ವಸಪ್ತಕ ಮುತ್ಸೃಜ್ಯ ತಸ್ಮಾದ್ಯುಗ್ಮಾಸು ಸಂವಿಶೇತ್ ॥೧೦॥
ಸಮಸಂಖ್ಯೆಯ ರಾತ್ರಿಲಿ ಮಗನೂ ಬೆಸ ಸಂಖ್ಯೆಯ ಇರುಳಿಲ್ಲಿ ಮಗಳೂ ಹುಟ್ಟುತ್ತವು. ಹಾಂಗಾಗಿ ಮದಲಾಣ ಏಳು ದಿನಂಗಳ ಬಿಟ್ಟು ಸಮ ಸಂಖ್ಯೆಯ ಇರುಳಿಲ್ಲಿ ಸೇರೆಕು.
ಷೋಡಶರ್ತುನಿಶಾಃ ಸ್ತ್ರೀಣಾಂ ಸಾಮಾನ್ಯಾಃ ಸಮುದಾಹೃತಾಃ ।
ಯಾ ವೈ ಚತುರ್ದಶೀ ರಾತ್ರಿರ್ಗಭಸ್ತಿಷ್ಠತಿ ತತ್ರ ವೈ ॥೧೧॥
ಸ್ತ್ರೀಯರಿಂಗೆ ಋತುಕಾಲಲ್ಲಿ ಹದಿನಾರು ಇರುಳುಗೊ ಸಾಮಾನ್ಯ ಹೇದು ಹೇಳಲ್ಪಡುತ್ತು. ಹದಿನಾಲ್ಕನೇ ಇರುಳಿಲ್ಲಿ ನಿಶ್ಚಯವಾಗಿಯೂ ಗರ್ಭ ನಿಲ್ಲುತ್ತು.
ಗುಣಭಾಗ್ಯನಿಧಿಃ ಪುತ್ರಸ್ತದಾ ಜಾಯೇತ ಧಾರ್ಮಿಕಃ ।
ಸಾ ನಿಶಾ ಪ್ರಾಕೃತೈರ್ಜೀವೈರ್ನ ಲಭ್ಯೇತ ಕದಾಚನ ॥೧೨॥
ಅಂಬಗ ಸದ್ಗುಣವಂತನೂ ಭಾಗ್ಯವಂತನೂ ಧರ್ಮನಿಷ್ಥನೂ ಆದ ಮಗ° ಹುಟ್ಟುತ್ತ°. ಆ ಇರುಳು ಸಾಧಾರಣ ಜೀವಿಗೊಕ್ಕೆ ಯೇವತ್ತೂ ಸಿಕ್ಕುತ್ತಿಲ್ಲೆ.
ಪಂಚಮೇsಹನಿ ನಾರೀಣಾಂ ಕಾರ್ಯಂ ಮಧುರಭೋಜನಮ್ ।
ಕಟು ಕ್ಷಾರಂ ಚ ತೀಕ್ಷ್ಣಂ ಚ ತ್ಯಾಜ್ಯಮುಷ್ಣಂ ಚ ದೂರತಃ ॥೧೩॥
ಐದನೇ ದಿನ ಸ್ತ್ರೀ ಸಿಹಿಯೂಟವ ಮಾಡೆಕು. ಖಾರ, ಒಗರು, ಕಯ್ಕೆ ಮತ್ತೆ ಅತಿ ಬಿಸಿಯಾಗಿಪ್ಪದರ ದೂರಂದಲೇ ಬಿಟ್ಟಿಕ್ಕೆಕು.
ತತ್‍ಕ್ಷೇತ್ರಮೋಷಧೀಪಾತ್ರಂ ಬೀಜಂ ಚಾಪ್ಯಮೃತಾಯಿತಮ್ ।
ತಸ್ಮಿನ್ನುಪ್ತ್ವಾ ನರಃ ಸ್ವಾಮೀ ಸಮ್ಯಕ್ ಫಲಮವಾಪ್ನುಯಾತ್ ॥೧೪॥
ಆ ಕ್ಷೇತ್ರ ಔಷಧಿಯ ಪಾತ್ರೆಯಾಗಿದ್ದು. ಬೀಜವೂ ಅಮೃತಂದೊಡಗೂಡಿಪ್ಪದಾಗಿದ್ದು. ಅಲ್ಲಿ ಬೀಜವ ಬಿತ್ತಿ ಅದರೊಡೆಯ° ಪುರುಷ° ಒಳ್ಳೆಯ ಫಲವ ಪಡೆತ್ತ°.
ತಾಂಬೂಲಪುಷ್ಪಶ್ರೀಖಂಡೈಃ ಸಯುಕ್ತಃ ಶುಚಿವಸ್ತ್ರಭೃತ್ ।
ಧರ್ಮಮಾದಾಯ ಮನಸಿ ಸುತಲ್ಪಂ ಸಂವಿಶೇತ್ಪುಮಾನ್ ॥೧೫॥
ತಾಂಬೂಲವ ಹಾಕ್ಯೊಂಡು, ಪುಷ್ಪ, ಚಂದನ, ಶುಭ್ರವಸ್ತ್ರವ ಧರಿಸಿಗೊಂಡು, ಮನಸ್ಸಿಲ್ಲ್ಯೇ ಧರ್ಮವ ಗ್ರೇಶಿಗೊಂದು ಪುರುಷ° ಉತ್ತಮವಾದ ಶಯ್ಯೆಲಿ ಒರಗೆಕು.
ನಿಷೇಕಸಮಯೇ ಯಾದೃಙ್‍ನರಚಿತ್ತವಿಕಲ್ಪನಾ ।
ತಾದೃಕ್ಸ್ವಭಾವಸಂಭೂತಿರ್ಜಂತುರ್ವಿಶತಿ ಕುಕ್ಷಿಗಃ ॥೧೬॥
ಗರ್ಭಾಧಾನದ ಸಮಯಲ್ಲಿ ಮನುಷ್ಯರ ಮನಸ್ಸಿಲ್ಲಿ ಏವ ಭಾವನೆಗೊ ಇರುತ್ತೋ ಅದೇ ಸ್ವಭಾವದ ಜೀವವು ಹೊಟ್ಟೆಯ ಪ್ರವೇಶಿಸುತ್ತು.
ಚೈತನ್ಯಂ ಬೀಜಭೂತಂ ಹಿ ನಿತ್ಯಂ ಶುಕ್ರೇsಪ್ಯವಸ್ಥಿತಮ್ ।
ಕಾಮಶ್ಚಿತ್ತಂ ಚ ಶುಕ್ರಂ ಚ ಯದಾ ಹ್ಯೇಕತ್ವಮಾಪ್ನುಯಾತ್ ॥೧೭॥
ಶುಕ್ರಲ್ಲಿ ಬೀಜರೂಪವಾದ ಚೈತನ್ಯ ಏವತ್ತೂ ನೆಲೆಸಿರುತ್ತು. ಕಾಮ, ಚಿತ್ತ, ಮತ್ತೆ ಶುಕ್ರ ಏವಾಗ ಒಂದಾವ್ತೋ,
ತದಾ ದ್ರಾವಮವಾಪ್ನೋತಿ ಯೋಷಿದ್ಗರ್ಭಾಶಯೇ ನರಃ ।
ಶುಕ್ರಶೋಣಿತ ಸಂಯೋಗಾತ್ಪಿಂಡೋತ್ಪತ್ತಿಃ ಪ್ರಜಾಯತೇ ॥೧೮॥
ಅಂಬಗ ಸ್ತ್ರೀಯ ಗರ್ಭಾಶಯಲ್ಲಿ ಪುರುಷನ ರೇತಸ್ಸು ಸ್ಖಲನವಾವ್ತು. ಶುಕ್ರ ಶೋಣಿತಂಗಳ ಸಂಯೋಗಂದ ಪಿಂಡದ ಉತ್ಪತ್ತಿ ಆವುತ್ತು.
ಪರಮಾನಂದದಃ ಪುತ್ರೋ ಭವೇದ್ಗರ್ಭಗತಃ ಕೃತೀ ।
ಭವಂತಿ ತಸ್ಯ ನಿಖಿಲಾಃ ಕ್ರಿಯಾಃ ಪುಂಸವನಾದಿಕಾಃ ॥೧೯॥
ಗರ್ಭಕ್ಕೆ ಬಂದ ಧರ್ಮಾತ್ಮನಾದ ಮಗ° (ಮಾತಾ-ಪಿತೃಗೊಕ್ಕೆ) ಪರಮಾನಂದದಾಯಕನಾವುತ್ತ°. ಅವಂಗೆ ಪುಂಸವನಾದಿ ಕರ್ಮಂಗೊ ನಡೆತ್ತು.
ಜನ್ಮ ಪ್ರಾಪ್ನೋತಿ ಪುಣ್ಯಾತ್ಮಾ ಗ್ರಹೇಷೂಚ್ಚಗತೇಷು ಚ ।
ತಜ್ಜನ್ಮಸಮಯೇ ವಿಪ್ರಾಃ ಪ್ರಾಪ್ನುವಂತಿ ಧನಂ ಬಹು ॥೨೦॥
ಪುಣ್ಯಾತ್ಮನಾದವ° ಗ್ರಹಂಗೊ ಉಚ್ಚಗತಿಲಿಪ್ಪಗ ಜನ್ಮ ಪಡೆತ್ತ°.(ಮೇಷ ರಾಶಿಲಿ ಸೂರ್ಯ°, ವೃಷಭ ರಾಶಿಲಿ ಚಂದ್ರ°, ಮಕರ ರಾಶಿಲಿ ಕುಜ°, ಕನ್ಯಾ ರಾಶಿಲಿ ಬುಧ, ಕರ್ಕ ರಾಶಿಲಿ ಗುರು, ಮೀನ ರಾಶಿಲಿ ಶುಕ್ರ ಮತ್ತೆ ತುಲಾ ರಾಶಿಲಿ ಶನಿ ಉಚ್ಛಸ್ಥಿತಿಲಿರುತ್ತವು). ಅವನ ಜನ್ಮಸಮಯಲ್ಲಿ ವಿಪ್ರರು ಬಹು ಧನವ ಪಡೆತ್ತವು.
ವಿದ್ಯಾವಿನಯ ಸಂಪನ್ನೋ ವರ್ಧತೇ ಪಿತೃವೇಶ್ಮನಿ ।
ಸತಾಂ ಸಂಗೇನ ಭವೇತ್ಸರ್ವಾಗಮ ವಿಶಾರದಃ ॥೨೧॥
ಅವ° ವಿದ್ಯಾ ವಿನಯ ಸಂಪನ್ನನಾಗಿ ಅಪ್ಪನೆ ಮನೆಲಿ ಬೆಳೆತ್ತ°. ಸಜ್ಜನರ ಸಹವಾಸಂದ ಅವ° ಎಲ್ಲ ಶಾಸ್ತ್ರಂಗಳಲ್ಲೂ ಪಂಡಿತನಾವುತ್ತ°.
ದಿವ್ಯಾಂಗನಾದಿಭೋಕ್ತಾ ಸ್ಯಾತ್ತಾರುಣ್ಯೇ ದಾನವಾನ್ ಧನೀ ।
ಪೂರ್ವಂ ಕೃತತಪಸ್ತೀರ್ಥಮಹಾಪುಣ್ಯಫಲೋದಯಾತ್ ॥೨೨॥
ಹಿಂದಾಣ ಜೆನ್ಮಲ್ಲಿ ಮಾಡಿದ ತಪ್ಪಸ್ಸು, ತೀರ್ಥಯಾತ್ರೆ ಮತ್ತೆ ಮಹಾಪುಣ್ಯ ಕಾರ್ಯಂಗಳ ಫಲಂದ ಈ ಜೆನ್ಮಲ್ಲಿ ಯೌವನಲ್ಲಿ ದಿವ್ಯಾಂಗನೆಯಾದಿಗಳ (=ಉತ್ತಮ ಕನ್ಯೆ ಮುಂತಾದ ಸೌಭಾಗ್ಯಂಗಳ) ಭೋಗುಸುವವನೂ, ಧನಿಕನೂ, ದಾನಿಯೂ ಆವುತ್ತ°.
ತತಶ್ಚ ಯತತೇ ನಿತ್ಯಮಾತ್ಮಾನಾತ್ಮ ವಿಚಾರಣೇ ।
ಅಧ್ಯಾರೋಪಾಪವಾದಾಭ್ಯಾಂ ಕುರುತೇ ಬ್ರಹ್ಮಚಿಂತನಮ್ ॥೨೩॥
ಮತ್ತೆ ಅವ° ನಿತ್ಯವೂ ಆತ್ಮಾನಾತ್ಮ ವಿಚಾರಂಗಳಲ್ಲಿ ಪ್ರಯತ್ನವ ಮಾಡುತ್ತ°. ಅಧ್ಯಾರೋಪ (ಅಧ್ಯಾರೋಪ = ಒಂದು ವಸ್ತುವಿನ ಗುಣವ ಮತ್ತೊಂದಕ್ಕೆ ಆರೋಪುಸುವದು) ಮತ್ತೆ ಅಪವಾದ ವಿಧಾನಂಗಳಿಂದ (ಅಪವಾದ = ಮಿಥ್ಯಾಜ್ಞಾನ ಅಥವಾ ಭ್ರಮಾಜ್ಞಾನದ ನಿರಾಕರಣೆ) ಬ್ರಹ್ಮಚಿಂತನೆಯ ಮಾಡುತ್ತ°.
ಅಸ್ಯಾಸಂಗಾವಬೋಧಾಯ ಬ್ರಹ್ಮಣೋsನ್ವಯಕಾರಿಣಃ ।
ಕ್ಷಿತ್ಯಾದ್ಯನಾತ್ಮವರ್ಗಸ್ಯ ಗುಣಾಂಸ್ತೇ ಕಥಯಾಮ್ಯಹಮ್ ॥೨೪॥
ಬ್ರಹ್ಮವಸ್ತು ಅದಕ್ಕೆ ಸಂಬಂಧಿಸಿದ ವಸ್ತುಗಳಿಂದ ಬೇರೆ ಹೇಳ್ವದರ ಬೋಧುಸುಲೆ ಪೃಥ್ವಿ ಮೊದಲಾದ ಅನಾತ್ಮ ವಸ್ತುಗಳ ಗುಣಂಗಳ ನಿನಗೆ ವಿವರುಸುತ್ತೆ.
ಗದ್ಯರೂಪಲ್ಲಿ –

ವೈನತೇಯನಾದ ಗರುಡ° ಭಗವಂತನತ್ರೆ ಹೇಳಿದ° – ಹೇ ಕರುಣಾನಿಧೇ!, ಧರ್ಮಾತ್ಮನಾದವ° ಸ್ವರ್ಗದ ಭೋಗಂಗಳ ಅನುಭೋಗುಸಿ, ಪುನಃ ನಿರ್ಮಲ ಕುಲಲ್ಲಿ ಜೆನ್ಮ ತಾಳುತ್ತ°. ಹಾಂಗಾಗಿ ಅಬ್ಬೆಯ ಗರ್ಭಲ್ಲಿ ಅವನ ಉತ್ಪತ್ತಿ ಹೇಂಗೆ ಅಪ್ಪದು?, ಮತ್ತೆ, ಪುಣ್ಯಾತ್ಮಪುರುಷ° ಈ ದೇಹದ ವಿಚಾರವಾಗಿ ಎಂತ ಚಿಂತನೆಯ ಮಾಡುತ್ತ°? ಈ ವಿಷಯ ಬಗ್ಗೆ ನಿನ್ನತ್ರಂದ ಕೇಳ್ಳೆ ಬಯಸುತ್ತೆ. ದಯಮಾಡಿ ಹೇಳಿ.
ಗರುಡನ ಮಾತಿನ ಕೇಟು ಭಗವಂತ ಹೇಳುತ್ತ° – ಹೈ ವೈನತೇಯ!, ನೀನು ಕೇಟ ವಿಷಯ ಸಾಧುವಾದ್ದೆ. ಆನು ನಿನಗೆ ಪರಮ ರಹಸ್ಯದ ವಿಷಯವ ಹೇಳುತ್ತೆ. ಅದ್ರ ತಿಳ್ಕೊಂಡ್ರೆ ಮನುಷ್ಯ° ಸರ್ವಜ್ಞ° ಆವ್ತ°. ಆನು ನಿನಗೆ ಪಾರಮಾರ್ಥಿಕ ಸ್ವರೂಪದ ವಿಷಯದ ಬಗ್ಗೆ ಹೇಳುತ್ತೆ. ಅದು ಬ್ರಹ್ಮಾಂಡದ ಗುಣಂಗಳಿಂದ ಸಂಪನ್ನವಾದ್ದು ಮತ್ತೆ ಯೋಗಿಗೊಕ್ಕೆ ಧಾರಣೆ ಮಾಡ್ಳೆ ಯೋಗ್ಯವಾದ್ದು. ಈ ಪಾರಮಾರ್ಥಿಕ ಶರೀರಲ್ಲಿ ಏವ ರೀತಿಲಿ ಯೋಗಿಗೊ ಷಟ್‍ಚಕ್ರದ ಚಿಂತನೆ ಮಾಡುತ್ತವೋ, ಮತ್ತೆ, ಬ್ರಹ್ಮರಂಧ್ರಲ್ಲಿ ಸಚ್ಚಿದಾನಂದಸ್ವರೂಪ ಬ್ರಹ್ಮನ ಏವ ರೀತಿಲಿ ಧ್ಯಾನಮಾಡುತ್ತವೋ ಅದೆಲ್ಲವನ್ನೂ ನಿನಗೆ ಹೇಳ್ತೆ, ಕೇಳು. ಪುಣ್ಯಾತ್ಮ ಜೀವಿ ಪವಿತ್ರ ಆಚರಣೆಯ ಮಾಡುವ ಲಕ್ಷ್ಮೀಸಂಪನ್ನ ಗೃಹಸ್ಥನ ಮನೆಲಿ ಹೇಂಗೆ ಜೆನ್ಮ ತಾಳುತ್ತ°, ಮತ್ತೆ, ಅವನ ಅಬ್ಬೆ-ಅಪ್ಪಂದ್ರ ವಿಧಾನ ಮತ್ತೆ ನಿಯಮ ಏವ ಪ್ರಕಾರದ್ದಾಗಿರ್ತು ಹೇಳ್ವದರನ್ನೂ ನಿನಗೆ ಹೇಳ್ತೆ.
ಋತುಕಾಲಲ್ಲಿ ಸ್ತ್ರೀಯ ನಾಲ್ಕು ದಿನವರೇಂಗೆ ತ್ಯಾಗ ಮಾಡೆಕು (ದೂರ ಮಡುಗೆಕು). ಅವರ ಶರೀರಲ್ಲಿ ಮಲಿನತ್ವ ಪಾಪದ ಕೊಳೆ ಇಪ್ಪ ಕಾರಣ ಆ ಅವಧಿಲಿ ಅವರ (ಸ್ತ್ರೀಯ) ಮೋರೆ ಕೂಡ ನೋಡ್ಳಾಗ. ನಾಲ್ಕರಂದು ಆ ಸ್ತ್ರೀ ವಸ್ತ್ರಸಹಿತ ಮಿಂದಮತ್ತೆ  ಶುದ್ಧ ಆವ್ತು. ಒಂದು ವಾರದ ಮತ್ತೆ (ಏಳನೇ ದಿನಲ್ಲಿ) ಪಿತೃಕಾರ್ಯ, ದೇವತಾರ್ಚನೆ ಮತ್ತೆ ವ್ರತಾಚರಣೆ ಮಾಡ್ಳೆ ಯೋಗ್ಯೆ ಆವ್ತು. ಒಂದು ವಾರದೊಳ ಎಲ್ಯಾರು ಗರ್ಭಧಾರಣ ಆದರೆ ಅದರಿಂದ ಮಲಿನ ಮನೋವೃತ್ತಿಯ ಸಂತಾನದ ಜನನ ಆವ್ತು. ಪ್ರಾಯಶಃ ಋತುಕಾಲದ ಎಂಟನೇ ದಿನ ಗರ್ಭಾಧಾನಂದ ಮಗನ ಉತ್ಪತ್ತಿ ಆವುತ್ತು. ಋತುಕಾಲದ ಮತ್ತೆ ಸಮರಾತ್ರಿಗಳಲ್ಲಿ ಗರ್ಭಾಧಾನ ಮಾಡುವದರಿಂದ ಮಗ° ಹಾಂಗೂ ಬೆಸರಾತ್ರಿಗಳಲ್ಲಿ ಕೂಡುವದರಿಂದ ಕೂಸಿನ ಉತ್ಪತ್ತಿ ಆವ್ತು. ಹಾಂಗಾಗಿ, ಮದಲಾಣ ಏಳು ಇರುಳುಗಳ ವರ್ಜಿಸಿ, ಸಮರಾತ್ರಿಗಳಲ್ಲೇ ಸಮಾಗಮ ಮಾಡೆಕು. ಕೂಸುಗೊಕ್ಕೆ ರಜೋದರ್ಶನಂದ ಸಾಮಾನ್ಯವಾಗಿ ಹದಿನಾರು ಇರುಳುಗಳ ವರೇಂಗೆ ಋತುಕಾಲ ಹೇದು ಹೇಳಲಾಯ್ದು. ಹದಿನಾಲ್ಕನೇ ಇರುಳಿಲ್ಲಿ ಗರ್ಭಾಧಾನ ಆದರೆ ಗುಣವಂತ°, ಭಾಗ್ಯವಂತ° ಮತ್ತೆ ಧಾರ್ಮಿಕ ಮಗನ ಉತ್ಪತ್ತಿ ಆವುತ್ತು. ಸಾಮಾನ್ಯ ಮನುಷ್ಯರಿಂಗೆ ಗರ್ಭಾಧಾನದ ನಿಮಿತ್ತ ಆ ಇರುಳು ಗರ್ಭಾಧಾನದ ಅವಕಾಶ ಸಿಕ್ಕುತ್ತಿಲ್ಲೆ.
ಐದನೇ ದಿನದ ಅಂದು ಆ ಸ್ತ್ರೀ ಮಧುರ ಭೋಜನವ ಉಣ್ಣೆಕು, ಹುಳಿ, ಖಾರ, ಮಸಾಲೆ ಪದಾರ್ಥಂಗೊ, ಅತಿ ಉಷ್ಣ, ಶೈತ್ಯ ಭೋಜನಂದ ದೂರ ಇರೆಕು. ಅಂಬಗ ಆ ಸ್ತ್ರೀಯ ಆ ಕ್ಷೇತ್ರ (ಗರ್ಭಾಶಯ) ಓಷಧೀಯ ಪಾತ್ರವಾಗಿ ಹೋವ್ತು. ಮತ್ತೆ ಅದರ್ಲಿ ಸಂಸ್ಥಾಪಿತ ಬೀಜ ಅಮೃತದ ಹಾಂಗೆ ಸುರಕ್ಷಿತವಾವ್ತು. ಆ ಔಷಧೀ ಕ್ಷೇತ್ರಲ್ಲಿ ಬೀಜವಪನ (ಗರ್ಭಾಧಾನ) ಮಾಡುವ ಯೆಜಮಾನ ಉತ್ತಮ ಫಲವ(ಆರೋಗ್ಯವಂತ ಸಂತಾನ) ಪಡೆತ್ತ°. ತಾಂಬೂಲವ ಸೇವಿಸಿ, ಪುಷ್ಪ-ಚಂದನಯುಕ್ತನಾಗಿ ಹಾಂಗೂ ಪವಿತ್ರ ವಸ್ತ್ರಂಗಳ ಧಾರಣೆ ಮಾಡಿ, ಮನಸ್ಸಿಲ್ಲಿ ಧಾರ್ಮಿಕ ಭಾವನೆಗಳ ಹೊಂದಿ, ಪುರುಷ° ಸುಂದರ ಶಯ್ಯೆಲಿ ಸಮಾಗಮ ಮಾಡೆಕು.
ಗರ್ಭಾಧಾನದ ಸಮಯಲ್ಲಿ ಪುರುಷನ ಮನೋವೃತ್ತಿ ಏವ ಪ್ರಕಾರವಿರುತ್ತೋ, ಅದೇ ಪ್ರಕಾರದ ಸಂಭವನೀಯ ಜೀವ ಗರ್ಭಲ್ಲಿ ಪ್ರವಿಷ್ಟ ಆವುತ್ತು. ಬೀಜದ ಸ್ವರೂಪವ ಧಾರಣೆಮಾಡಿದ ಚೈತನ್ಯಾಂಶ ಪುರುಷನ ಶುಕ್ರಲ್ಲಿ ಸ್ಥಿತವಾಗಿರುತ್ತು. ಪುರುಷನ ಕಾಮವಾಸನೆ, ಚಿತ್ತವೃತ್ತಿ ಮತ್ತೆ ಶುಕ್ರ ಒಂದು ವೇಳೆ ಏಕತತ್ವವ ಪ್ರಾಪ್ತಿ ಹೊಂದಿರೆ ಅಂಬಗ ಸ್ತ್ರೀಯ ಗರ್ಭಾಶಯಲ್ಲಿ ಪುರುಷ° ದ್ರವಿತ(ಸ್ಖಲಿತ)ನಾವುತ್ತ°. ಸ್ತ್ರೀಯ ಗರ್ಭಾಶಯಲ್ಲಿ ಶುಕ್ರ ಮತ್ತೆ ಶೋಣಿತ (ಗರ್ಭಾಣು) ಸಂಯೋಗಂದ ಪಿಂಡದ ಉತ್ಪತ್ತಿ ಆವುತ್ತು.
ಗರ್ಭಕ್ಕೆ ಬಂದ ಸುಕೃತಪುತ್ರ° ಮಾತಾ-ಪಿತೃಗೊಕ್ಕೆ ಪರಮಾನಂದವ ನೀಡುವವ° ಆವುತ್ತ°. ಅವಂಗೆ ಪುಂಸವನ ಇತ್ಯಾದಿ ಸಮಸ್ತ ಸಂಸ್ಕಾರಂಗಳ ಮಾಡ್ಳಾವ್ತು. ಪುಣ್ಯಾತ್ಮಪುರುಷ° ಗ್ರಹಂಗಳ ಉತ್ತಮ ಸ್ಥಿತಿಲಿ ಜನ್ಮಪ್ರಾಪ್ತಿ ಹೊಂದುತ್ತ°. (ಮೇಷ ರಾಶಿಲಿ ಸೂರ್ಯ°, ವೃಷಭ ರಾಶಿಲಿ ಚಂದ್ರ°, ಮಕರ ರಾಶಿಲಿ ಕುಜ°, ಕನ್ಯಾ ರಾಶಿಲಿ ಬುಧ, ಕರ್ಕ ರಾಶಿಲಿ ಗುರು, ಮೀನ ರಾಶಿಲಿ ಶುಕ್ರ ಮತ್ತೆ ತುಲಾ ರಾಶಿಲಿ ಶನಿ ಉಚ್ಛಸ್ಥಿತಿಲಿರುತ್ತವು). ಇಂತಹ ಮಗನ ಜನನ ಸಮಯಲ್ಲಿ ಬ್ರಾಹ್ಮಣರು ಬಹು ಧನವ ಪಡೆತ್ತವು.
ಆ ಮಗ° ವಿದ್ಯಾ-ವಿನಯ ಸಂಪನ್ನನಾಗಿ ಅಪ್ಪನ ಮನೆಲಿ ಬೆಳೆತ್ತ°, ಮತ್ತೆ ಸತ್ಪುರುಷರ ಸಂಗಂದ ಸಮಸ್ತ ಶಾಸ್ತ್ರಂಗಳಲ್ಲಿ ಪಾಂಡಿತ್ಯವ ಗಳುಸುತ್ತ°. ಅವ ತಾರುಣ್ಯಾವಸ್ಥೆಲಿ ದಿವ್ಯಾಂಗನಾದಿಗಳ (=ಉತ್ತಮ ಕನ್ಯೆ ಮುಂತಾದ ಸೌಭಾಗ್ಯಂಗಳ) ಪ್ರಾಪ್ತಿ ಹೊಂದುತ್ತ°. ದಾನಶೀಲ° ಹಾಂಗೂ ಶ್ರೀಮಂತ° ಆವ್ತ°. ಪೂರ್ವಲ್ಲಿ ಮಾಡಿದ ತಪಸ್ಸು, ತೀರ್ಥಸ್ನಾನಾದಿ ಫಲಂ ಗೊ ಉದಯ ಆದಪ್ಪಗ, ಅವ° ನಿತ್ಯ ಆತ್ಮಾ ಮತ್ತೆ ಅನಾತ್ಮಾದ (ಪರಮಾತ್ಮ ಮತ್ತೆ ಅವನಿಂದ ಭಿನ್ನವಾದ ಪದಾರ್ಥಂಗಳ) ವಿಷಯಲ್ಲಿ ಚಿಂತನೆಯ ಸುರುಮಾಡುತ್ತ°.
ಭಗವಂತ° ಮತ್ತೆ ಮುಂದುವರುಸಿ ಹೇಳುತ್ತ°, ಏ ಗರುಡ!, ಬ್ರಹ್ಮವಸ್ತು ಅದಕ್ಕೆ ಸಂಬಂಧಿಸಿದ ವಸ್ತುಗಳಿಂದ ಬೇರೆ ಹೇಳ್ವದರ ಬೋಧುಸುಲೆ ಪೃಥ್ವಿ ಮೊದಲಾದ ಅನಾತ್ಮ ವಸ್ತುಗಳ ಗುಣಂಗಳ ನಿನಗೆ ವಿವರುಸುತ್ತೆ.
 
[ ಚಿಂತನೀಯಾ –
ಭಗವಂತ° ಗರುಡಂಗೆ ಸುಕೃತಿಯ ವಾ ಸತ್ಪುರಷನ ಜನನ ಮತ್ತೆ ಅವನ ಜೀವನ ಶೈಲಿಯ ವಿವರುಸುತ್ತ ಇದ್ದ°.
ಇಲ್ಲಿ ಓದುವಾಗ ಮುಖ್ಯವಾಗಿ ಒಂದು ವಿಷಯವ ನಾವು ನೆಂಪು ಮಡಿಕ್ಕೊಳ್ಳೆಕ್ಕಾದ್ದು ಎಂತರ ಹೇದರೆ, ಶ್ಲೋಕವ ಓದಿದ ಮತ್ತೆ ಶ್ಲೋಕಾರ್ಥವ ಮದಾಲು ತಿಳ್ಕೊಂಬದು. ಆದರೆ ಅದರಲ್ಲಿ ಇಪ್ಪ ತಾತ್ಪರ್ಯ ಇನ್ನೂ ಗಹನವಾಗಿದ್ದು, ಇನ್ನೂ ವಿಶೇಷ ರಹಸ್ಯ ವಿಷಯಂಗೊ ಅದರೊಳ ಅಡಗಿದ್ದು ಹೇಳ್ವ ಎಚ್ಚರ ನಮ್ಮಲ್ಲಿರೆಕು. ಇಲ್ಲದ್ರೆ ಬರೇ ಶ್ಲೋಕಾರ್ಥವನ್ನೇ ಅಂತಿಮ ಹೇದು ತೆಕ್ಕೊಂಡ್ರೆ ನಾವು ಹೇಳ್ವ ವಿಷಯಂಗೊ ತೀರಾ ಆಭಾಸ ಅಥವಾ ನೆಗೆಗೇಡು ಪಾಲಕ್ಕು. ಎಂತಕೆ ಹೇಳಿರೆ ಗೀತೆಲಿ ಆಗಲಿ, ಪುರಾಣಲ್ಲಿ ಆಗಲಿ ಶ್ಲೋಕಂಗೊ ಯಥಾರ್ಥವ ಹೇಳಿಗೊಂಡು ಹೋಯ್ದು. ಆ ವಿಷಯದೊಳ ಹೊಕ್ಕಿ ಚಿಂತನೆ ಮಾಡಿರೆ ಅದು ಅಂದಿಂಗೂ ಇಂದಿಂಗೂ ಸನಾತನ ಸತ್ಯ ಹೇಳ್ವ ವಿಷಯ ಮನದಟ್ಟು ಅಕ್ಕು. ಆದರೆ ಪ್ರತಿಯೊಂದು ಸೂಕ್ಷ್ಮ ವಿಷಯವನ್ನೂ ಕುಲಂಕುಷವಾಗಿ ಅಲ್ಲಲ್ಲಿಯೇ ವಿವರುಸುಲೆ ಹೆರಟ್ರೆ ಹೇಳೆಕ್ಕಪ್ಪ ವಿಷಯಂಗೊ ತಲೆ ಎತ್ತದ್ದೆ ಹೋಕು. ಹಾಂಗಿರ್ತರ ಪ್ರತ್ಯೇಕ ನೆಂಪು ಮಡಿಕ್ಕೊಂಡು ಪ್ರತ್ಯೇಕವಾಗಿ ಚಿಂತನೆ/ಆಳ ಅಧ್ಯಯನ, ಸೂಕ್ಷ್ಮ ಅವಲೋಕನ, ಚರ್ಚೆ ಮಾಡುವದು ಅನಿವಾರ್ಯ.
ಉದಾಹರಣೆಗೆ ಈ ಅಧ್ಯಾಯದ ಸುರುವಿಲ್ಲಿ ರಜೋದರ್ಶನಸಮಯಲ್ಲಿ ಆ ಸ್ತ್ರೀಯ ದೂರಮಡುಗೆಕು/ವರ್ಜಿಸೆಕು, ಮೋರೆ ಸಾನ ನೋಡ್ಳಾಗ ಹೇದೆಲ್ಲ ಹೇಳ್ತು. ಅದರ ಹಾಂಗೇ ಶಬ್ದಾರ್ಥ ತೆಕ್ಕೊಂಡು, ಅದನ್ನೇ ಗರುಡಪುರಾಣಲ್ಲಿ ಹಾಂಗೆ ಹೇಳಿದ್ದು, ಹೀಂಗೆ ಹೇಳಿದ್ದು ಹೇದು ಹೇಳಿಗೊಂಡು ತಿರುಗಿರೆ ಹಿಡಿಸೂಡಿ ಪೆಟ್ಟು ಬೀಳುಗು. ಯಥಾರ್ಥ ವಿಷಯವ ಅಲ್ಲಿ ಹೇಳಿಪ್ಪದು ಸಮಕಾಲೀನಲ್ಲಿ ಹೇಂಗೆ ನಾವು ಅರ್ಥೈಸಿಗೊಳ್ಳೆಕು ಹೇಳ್ವದೇ ನಾವು ಮಾಡೇಕ್ಕಾದ ಆದ್ಯ ಕರ್ತವ್ಯ. ಅದರನ್ನೂ ಎಲ್ಲಿ ಕೇಳೇಕೋ ಅಲ್ಲಿ ಕೇಳಿರೇ ಸಮರ್ಪಕ ಉತ್ತರ ಸಿಕ್ಕುಗಷ್ಟೇ ಹೊರತು ಅದರ ಇನ್ನು ಹರಟೆ ಚಾವಡಿಲಿ ಕೂದುಗೊಂಡು ಚರ್ಚೆಮಾಡಿರೆ ಏನಕ್ಕೇನಾರು ವಿಷಯ ಪ್ರಸ್ತಾಪ ಆಗಿ, ವಿಷಯಾಂತರ ಆಗಿ, ಅನ್ಯರು ನಮ್ಮ ನೋಡಿ ನೆಗೆ ಮಾಡಿರೆ ಅದು ನಾವು ಮೇಗೆ ನೋಡಿ ತುಪ್ಪುತ್ತಕ್ಕೇ ಸಮ. ಮೇಗೆ ಪ್ರಸ್ತಾಪಿಸಿದ ಉದಾಹರಣೆಲಿ ಸ್ತ್ರೀಯ ಆರೋಗ್ಯವ ಮತ್ತೆ ಆ ಕಾಲದ ಜಾಗ್ರತೆಯ ಅಂದೇ ಎತ್ತಿ ಹೇಳಿದ್ದವು. ಅದರ ಆ ರೀತಿಲಿ ತಿಳ್ಕೊಳ್ಳೆದ್ದೆ ಮೋರೆಯೇ ನೋಡ್ಳಾಗ, ದೂರ ಮಡುಗೆಕು ಹೇಳಿರೆ ಈ ಕಾಲಲ್ಲಿ ಆ ಕೂಸು ಎಲ್ಲಿಗೆ ಹೋಪದು!!!   ಹೀಂಗೆಲ್ಲ ಅಪಾರ್ಥಂಗೊ ಆಗಿ ಹೋಪಲಾಗ ಹೇಳಿಯೇ ಆದಿಕ್ಕು ಪುರಾಣಂಗಳ ಓದಲಾಗ, ಅಂತೆ ಓದಲಾಗ ಹೇದು ಕಪಾಟಿನೊಳ ಸೇರಿದ್ದದು! ಹೇಳಿಪ್ಪ ವಿಷಯವ ಗೌರವವಾಗಿಯೇ ಹೇಳಿದ್ದವು, ಅದು ನವಗೆ ಅರ್ಥ ಆಗದ್ದೆ ನಮ್ಮ ಮೋರೆ ನೇರಕ್ಕೆ ಅರ್ಥೈಸಿರೆ ನಮ್ಮ ಮೂಢತನ ಅಷ್ಟೇ. ಇನ್ನು ಅಲ್ಲಿ ‘ಇರುಳು’  ಹೇದು ಪ್ರತ್ಯೇಕವಾಗಿ ಶಬ್ದಪ್ರಯೋಗ ಮಾಡಿದ್ದರ ಕಾಂಬಲಕ್ಕು. ಎಂತಕ್ಕೆ ದಿನ ಹೇದು ಪ್ರಯೋಗಿಸಿದ್ದವಿಲ್ಲೆ?! ಕಾರಣ, ಏವುದೇ ಕೆಲಸಕ್ಕೂ, ಅದಕ್ಕೂ ವಿಹಿತ ಒಂದು ‘ಸಮಯ/ಹೊತ್ತು’ ಹೇದು ಇದ್ದು. ಎಲ್ಲವೂ ನಿಯಮಿತವಾಗಿಯೇ ಆಯೇಕು ಹೊರತು ಕಂಡ ಕಂಡ ಹೊತ್ತಿಂಗೆ ನಮ್ಮ ಸ್ವೇಚ್ಛಾಪ್ರವೃತ್ತಿ ಬೆಳವಲಾಗ ಹೇಳ್ವದು ಎತ್ತಿ ತೋರ್ಸಿದ್ದರ ಮನಗೊಂಬಲಕ್ಕು.
ರಜೋದರ್ಶನ ಸಮಯಲ್ಲಿ ಸ್ತ್ರೀಯರ ಶರೀರಲ್ಲಿ ಪಾಪತ್ವ ಇರ್ತು ಹೇದವು. ಕೂಡ್ಳೆ ನವಗೆ ಬಿ.ಪಿ ಏರ್ಲಾಗ. ಅಲ್ಲಿ ಮಲಿನತ್ವವ ಹೇಳಿಪ್ಪದು. ಹಾಂಗಾಗಿ ಆರೋಗ್ಯ ದೃಷ್ಟಿಂದ ವರ್ಜಿಸೆಕು ಹೇಳಿ ಸಾರಿದ್ದವು. ಈ ಬಗ್ಗೆ ವಿವರಣೆಗೊ ತೈತ್ತರೀಯ ಸಂಹಿತೆಲಿ, ರಾಮಾಯಣ, ಶಾಂತಿಪರ್ವ, ಬೃಹತ್ಪರಾಶರ ಸ್ಮೃತಿ ಇತ್ಯಾದಿ ಪುರಾಣಂಗಳಲ್ಲಿ ಉಲ್ಲೇಖ ಇದ್ದಡ (ಆನು ಓದಿದ್ದಿಲ್ಲೆ). ಸುಶ್ರುತ ಸಂಹಿತೆಲಿ ರಜಸ್ವಲಾಗಮನಂದ ನೇತ್ರ-ಜ್ಯೋತಿ, ಆಯಸ್ಸು, ತೇಜಸ್ಸು ನಷ್ಟ ಆವ್ತು, ಮನುಸ್ಮೃತಿಲಿ ಪ್ರಜ್ಞಾ, ತೇಜಸ್ಸು, ನೇತ ಮತ್ತೆ ಆಯುಸ್ಸು ಕ್ಷೀಣ ಆವ್ತು ಹೇಳ್ವ ವಿವರಣೆಗೊ ಇದ್ದಡ. ಇನ್ನು ಪಿಂಡೋತ್ಪತ್ತಿ ವಿಷಯಲ್ಲಿಯೂ ಸುಶ್ರುತಸಂಹಿತೆಲಿ ಆಳವಾದ ವಿವರಣೆಗೊ ಇದ್ದಡ. ಗರುಡಪುರಾಣದ ಉತ್ತರಖಂಡ ಸಕಲಶಾಸ್ತ್ರಂಗಳ ಸಾರ ಮಾತ್ರ ಆದ್ದರಿಂದ ಇಲ್ಲಿ ಹೇಳಿಪ್ಪ ವಿಷಯಂಗೊ ಕೇವಲ ಸೂಕ್ಷ್ಮವಾಗಿ ಹೇಳಿಪ್ಪದು ಹೇದು ಅರ್ಥೈಸಿಗೊಳ್ಳೆಕು.
ಇಲ್ಲಿಗೆ ಸುಕೃತಿಯ ಜನನ ಹೇಂಗೆ ಆವ್ತು ಮತ್ತೆ ಅವ° ಸಂಸ್ಕಾರವಂತನಾಗಿ ಆತ್ಮಚಿಂತನೆಲಿ ತೊಡಗುತ್ತ° ಹೇದು ಹೇಳಿದ್ದಾತು. ಬ್ರಹ್ಮವಸ್ತು ಹೇಳ್ವದು ಅದಕ್ಕೆ ಸಂಬಂಧಿಸಿದ ವಸ್ತುಗಳಿಂದ ಬೇರೆಯೇ ಆಗಿಪ್ಪದು, ಅದರ ವಿವರಣೆಯ ಹೇಳುತ್ತೆ ಕೇಳು ಹೇದು ನಿಲ್ಸಿದ್ದದು ಇಲ್ಯಂಗೆ. ಮುಂದೆ ಈ ವಿಷಯವಾಗಿ ಭಗವಂತ° ಎಂತ ಹೇಳಿದ್ದ° ಹೇಳ್ವದರ ಬಪ್ಪ ವಾರ ನೋಡುವೊ° ಹೇದು ಈ ಭಾಗಕ್ಕೆ ಹರೇ ರಾಮ]

3 thoughts on “ಗರುಡಪುರಾಣ – ಅಧ್ಯಾಯ 15 – ಭಾಗ 01

  1. ನಿಜ,ಶ್ಲೋಕವ ಶಬ್ದರೂಪದ ಅರ್ಥ ಮಾ೦ತ್ರವನ್ನೇ ತೆಕ್ಕೊಳ್ಳದ್ದೆ ಅದರ ಹಿ೦ದಾಣ ಚಿ೦ತನೆಗಳ ಅರ್ಥ ಮಾಡೆಕ್ಕು.
    ಚೆನ್ನೈಭಾವಾ, ಗರುಡಪುರಾಣದ ವಿವರಣೆ,ನಿರೂಪಣೆ ತು೦ಬಾ ಲಾಯ್ಕಕೆ ಬತ್ತಾ ಇದ್ದು.ಧನ್ಯವಾದ೦ಗೊ.

  2. ಸುಕೃತಿಯ ಜನನ ಹೇಂಗೆ ಆವ್ತು ಹೇಳ್ತರ ಒಟ್ಟಿಂಗೆ, ಬರೇ ಶಬ್ಧಾರ್ಥ ಮಾತ್ರಮ ತೆಕ್ಕೊಳದ್ದೆ, ಯಾವ ರೀತಿ ಅರ್ಥೈಸೆಕ್ಕು ಹೇಳಿ “ಚಿಂತನೆ” ಮಾಡಿದ್ದು ಲಾಯಿಕ ಆಯಿದು.
    ರಜಸ್ವಲೆ ಆದಿಪ್ಪಗ ದೇವರಿಂಗೆ ಹೂಗು ಕೊಯಿವಲೆ ಆಗ ಹೇಳಿರೆ, ಅಷ್ಟು ಸುಲಭದ ಕೆಲಸವನ್ನೂ ಮಾಡ್ಲಾಗ, ಅವಕ್ಕೆ ಆ ಸಮಯ ಅಷ್ಟು ವಿಶ್ರಾಂತಿ ಬೇಕು ಹೇಳಿ ತಿಳ್ಕೊಳೆಕ್ಕಾದ್ದು ಮುಖ್ಯ. ಆದರೆ ಆಚರಣೆಲಿ ಹೇಂಗೆ ಆಯಿದು ಹೇಳಿರೆ, ಹೂ ಕೊಯಿವಲೆ ಮಾತ್ರ ಆಗ, ಬಾಕಿಪ್ಪ ಕೆಲಸ ಅಕ್ಕು ಹೆಳಿ ಆಯಿದು. ಹಾಂಗಾಗಿ ಇದು ಆಚರಣೆಲಿ ಇಪ್ಪಲ್ಲಿ ಕೂಡಾ, ಬೇರೆ ಕಷ್ಟದ ಕೆಲಸವ ಮಾಡ್ತವು. ಇದರ ಬಗ್ಗೆ ತಿಳುವಳಿಕೆ ಮೂಡೆಕ್ಕು. ಚಿಂತನೀಯ ಈ ಕೆಲಸವ ಮಾಡುತ್ತಾ ಇದ್ದು. ಧನ್ಯವಾದಂಗೊ

  3. ಭಾವಯ್ಯಾ, ನಮ್ಮ ಪೂರ್ವಿಕರು ತುಂಬಾ ಬುದ್ದಿವಂತರು. ಯಾವುದೇ ವಿಷಯವ ನಮಗೆ ತಿಳುಸೆಕ್ಕಾರೆ ಅದರಲ್ಲಿ ಶ್ರದ್ಧೆ ಬಪ್ಪಲೋಸ್ಕರ ಭಯ,ಭಕ್ತಿ, ಪಾಪ ಮತ್ತೆ ಪುಣ್ಯಂಗಳ ಸೇರಿಸಿಯೇ ತಿಳುಸಿಂಡಿತ್ತಿದ್ದವು. ಆದರೆ ಈಗಾಣ ಜೆನಂಗೊ ಅದರ ಮೌಢ್ಯ ಹೇಳಿ ತಿಳುದು ಅಚರಣೆಯ ನಿಲ್ಲುಸಿ ಮಿಶ್ರ ಫಲವ ಪಡೆತ್ತಾ ಇದ್ದವು. ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×