ಗರುಡಪುರಾಣ – ಅಧ್ಯಾಯ 16 – ಭಾಗ 01

February 13, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶರೀರದ ಅಭಿಮಾನವನ್ನೇ ಮನಸ್ಸಿಲ್ಲಿ ಮಡಿಕ್ಕೊಂಡಿಪ್ಪವರಿಂದ ಅಧ್ಯಾತ್ಮ ಸಾಧನೆ ಸಫಲತೆಯ ಕಾಂಬಲೆ ಎಡಿಯ. ಪಂಚಭೌತಿಕ ಶರೀರವೇ ತಾನು ಹೇದು ಗ್ರೇಶುತ್ತೋರಿಂಗೆ ಎಂದಿಂಗೂ ಅಂತರ್ಮುಖಿಯಾಗಿ ಸಾಧನಾಪಥಲ್ಲಿ ನಡವಲೆ ಎಡಿಯ. ಅಂತರ್ಮುಖಿಯಾಗಿ ಭಗವಂತನ ಚಿಂತನೆ ಮಾಡದ್ದೆ ಭಗವಂತನ ಕಾಂಬಲೂ ಎಡಿಯ. ಹಾಂಗಾರೆ, ಸರಳವಾಗಿ ಹೇಳ್ತದಾದರೆ ಭಗವಂತನ ಭಕ್ತಿಸೇವೆಯೇ ಸುಲಭೋಪಾಯ. ತಪಸ್ಸು ಮತ್ತೆ ಯೋಗಸಾಧನೆಯೇ ಮೋಕ್ಷದ ಮಾರ್ಗವಾಗಿದ್ದರೂ, ಭಗವಂತನ ನಿಜ ಭಕ್ತಿಯ ಜೀವನಲ್ಲಿ ರಕ್ತಗತ ಮಾಡಿಗೊಂಡರೆ ಸಾಧನಾಪಥಲ್ಲಿ ಸೇರ್ಲೆ ಕಷ್ಟ ಆಗ. ಯಜ್ಞಾದಿ ಸದ್ದರ್ಮ ಕಾರ್ಯಂಗೊ ಅಂತಃಕರಣದ ಶುದ್ಧಿಗೇ ಇಪ್ಪದು, ಇದರ ಫಲವಾಗಿ ಭಗವದ್ ಭಕ್ತಿ ಪ್ರಾಪ್ತಿ ಆವ್ತು. ಅದರ ನಿಜವಾಗಿ ಪ್ರಾಪ್ತಿ ಹೊಂದಿದವಂಗೆ ಮತ್ತೆ ಜನನ ಮರಣದ ಚಿಂತೆ ಇಲ್ಲೆ. ಹಾಂಗಾಗಿ ಭಗವಂತನ ಭಕ್ತಿಯೋಗಂದ ಜೀವಿ ಮೋಕ್ಷ ಪದವ ಹೊಂದಲಕ್ಕು ಹೇದು ಕಳುದ ಅಧ್ಯಾಯದ ಭಾಗಲ್ಲಿ ಓದಿದ್ದದು. ಮುಂದೆ-

 

ಗರುಡಪುರಾಣಮ್                                                            ಗರುಡಪುರಾಣ

ಅಥ ಷೋಡಶೋsಧ್ಯಾಯಃ                                                  ಅಧ್ಯಾಯ 16

ಮೋಕ್ಷಧರ್ಮನಿರೂಪಣಮ್                                          ಮೋಕ್ಷಧರ್ಮದ ನಿರೂಪಣೆ

                                                                       (ಜೀವಿಗೆ ಮೋಕ್ಷ ಪಡವಲೆ ಉಪಾಯ)

 

ಗರುಡ ಉವಾಚimages
ಶ್ರುತಾ ಮಯಾ ದಯಾಸಿಂಧೋ ಹ್ಯಜ್ಞಾನಾಜ್ಜೀವಸಂಸ್ಕೃತಿಃ ।
ಅಧುನಾ ಶ್ರೋತುಮಿಚ್ಛಾಮಿ ಮೋಕ್ಷೋಪಾಯಂ ಸನಾತನಮ್ ॥೦೧॥

ಗರುಡ ಹೇಳಿದ° – ಓ ದಯಾಸಾಗರನೇ!, ಅಜ್ಞಾನಂದ ಜೀವಿಯು ಸಂಸಾರ ಚಕ್ರಲ್ಲಿ ಸುತ್ತಿಗೊಂಡಿರುತ್ತ ಹೇದು ಎನ್ನಂದ ಕೇಳಲ್ಪಟ್ಟತ್ತು. ಈಗ ಸನಾತನವಾದ ಮೋಕ್ಷವ ಪಡವಲೆ ಉಪಾಯವ ಕೇಳ್ಳೆ ಬಯಸುತ್ತೆ.

ಭಗವನ್ದೇವದೇವೇಶ ಶರಣಾಗತವತ್ಸಲ ।
ಅಸಾರೇ ಘೋರಸಂಸಾರೇ ಸರ್ವದುಃಖಮಲೀಮಸೇ ॥೦೨॥

ಓ ಭಗವಂತ!, ದೇವದೇವರೇ!, ಶರಣಾಗತರ ಪ್ರೀತಿಂದ ಸಲಹುವವನೇ!, ಸರ್ವದುಃಖಂಗಳಿಂದ ಮಲಿನವಾದ, ನಿಸ್ಸಾರವಾದ ಈ ಘೋರಸಂಸಾರಲ್ಲಿ

ನಾನಾವಿಧಶರೀರಸ್ಥಾ ಅನಂತಾ ಜೀವರಾಶಯಃ ।
ಜಾಯಂತೇ ಚ ಮ್ರಿಯಂತೇ ಚ ತೇಷಾಮಂತೋ ನ ವಿದ್ಯತೇ ॥೦೩॥

ಅನಂತವಾದ ಜೀವರಾಶಿಗೊ ವಿವಿಧ ಶರೀರಂಗಳಲ್ಲಿ ಹುಟ್ಟುತ್ತವು, ಸಾಯುತ್ತವು ಕೂಡ. ಅವಕ್ಕೆ ಅಕೇರಿಯೇ ಇಲ್ಲೆ.

ಸದಾ ದುಃಖತುರಾ ಏವ ನ ಸುಖೀ ವಿದ್ಯತೇ ಕ್ವಚಿತ್ ।
ಕೇನೋಪಾಯೇನ ಮೋಕ್ಷೇಶ ಮುಚ್ಯಂತೇ ವದ ಮೇ ಪ್ರಭೋ ॥೦೪॥

ಏವತ್ತೂ ದುಃಖಿಗಳಾಗಿಯೇ ಇದ್ದು, ಎಂದಿಂಗೂ ಸುಖವ ಪಡೆತ್ತವಿಲ್ಲೆ. ಹೇ ಪ್ರಭೋ!, ಓ ಮೋಕ್ಷದ ಒಡೆಯನೇ!, ಏವ ಉಪಾಯಂದ ಅವು ಮುಕ್ತಿಯ ಪಡೆತ್ತವು ಹೇಳ್ವದರ ಎನ ಹೇಳು.

ಶ್ರೀ ಭಗವಾನುವಾಚ
ಶ್ರುಣುತಾರ್ಕ್ಷ್ಯ ಪ್ರವಕ್ಷ್ಯಾಮಿ ಯನ್ಮಾಂ ತ್ವಂ ಪರಿಪೃಚ್ಛಸಿ ।
ಯಸ್ಯ ಶ್ರವಣಮಾತ್ರೇಣ ಸಂಸಾರಾನ್ಮುಚ್ಯತೇ ನರಃ ॥೦೫॥

ಭಗವಂತ° ಹೇಳಿದ° – ಏ ಗರುಡ!, ಎನ್ನತ್ರೆ ಏವುದರ  ನೀನು ಕೇಟೆಯೋ ಅದರ ಆನು ಹೇಳ್ತೆ ಕೇಳು. ಅದರ ಕೇಳುವದರಿಂದಲೇ ಮನುಷ್ಯ° ಈ ಸಂಸಾರಂದ ಬಿಡುಗಡೆ ಹೊಂದುತ್ತ°.

ಅಸ್ತಿ ದೇವಃ ಪರಬ್ರಹ್ಮಸ್ವರೂಪೀ ನಿಷ್ಕಲಃ ಶಿವಃ ।
ಸರ್ವಜ್ಞಃ ಸರ್ವಕರ್ತಾ ಚ ಸರ್ವೇಶೋ ನಿರ್ಮಲೋsದ್ವಯಃ ॥೦೬॥

ಪರಬ್ರಹ್ಮಸ್ವರೂಪಯಾಗಿ ದೇವರು ಹೇದು ಒಬ್ಬ° ಇದ್ದ°. ಅವ° ನಿಷ್ಕಲಂಕನೂ, ಮಂಗಳಸ್ವರೂಪನೂ, ಎಲ್ಲವನ್ನೂ ಅರ್ತವನೂ, ಎಲ್ಲಕಾರ್ಯಂಗಳ ಕರ್ತೃವೂ, ಎಲ್ಲವುದರ ಒಡೆಯನೂ, ಎಲ್ಲವಿಧಲ್ಲಿಯೂ ನಿರ್ಮಲನೂ (ಕಲ್ಮಷರಹಿತನೂ), ಅದ್ವಿತೀಯನೂ, ಅದ್ವಯನೂ (ದ್ವೈತಭಾವರಹಿತ°) ಆಗಿದ್ದ°.

ಸ್ವಯಂಜ್ಯೋತಿರನಾದ್ಯಂತೋ ನಿರ್ವಿಕಾರಃ ಪರಾತ್ಪರಃ ।
ನಿರ್ಗುಣಃ ಸಚ್ಚಿದಾನಂದಸ್ತದಂಶಾಜ್ಜೀವಸಂಜ್ಞಕಃ ॥೦೭॥

ಅವ° ಸ್ವಯಂ ಪ್ರಕಾಶಿಯೂ, ಆದಿ-ಅಂತ್ಯ ರಹಿತನೂ. ನಿರ್ವಿಕಾರನೂ, ಬ್ರಹ್ಮಾದಿಗಳಿಂದೂ ಹೆಚ್ಚಿನವನೂ, ನಿರ್ಗುಣನೂ, ಸಚ್ಚಿದಾನಂದರೂಪಿಯೂ ಆಗಿದ್ದ. ಅವನ ಪ್ರತಿಬಿಂಬ ಅಂಶವೇ ಈ ಜೀವಿಗೊ.

ಅನಾದ್ಯವಿದ್ಯೋಪಹತಾದ್ಯಥಾಗ್ನೌ ವಿಸ್ಫುಲಿಂಗಕಾಃ ।
ದೇಹಾದ್ಯಪಾಧಿಸಂಭಿನ್ನಾಸ್ತೇ ಕರ್ಮಭಿರನಾದಿಭಿಃ ॥೦೮॥

ಅನಾದಿಕಾಲದ ಅವಿದ್ಯೆಂದ, ಅನಾದಿಯಾದ ಕರ್ಮಸಂಗಂದ ಫಲವಾಗಿ, ದೇಹಂಗಳಿಂದ ಸುತ್ತುವರಿಯಲ್ಪಟ್ಟು, ಕಿಚ್ಚಿಂದ ಕಿಡಿ ರಟ್ಟಿದಾಂಗೆ ಆ ಭಗವಂತನಿಂದ ಬೇರೆಯಾದವುಗೊ.

ಸುಖದುಃಖಪ್ರದೈಃ ಪುಣ್ಯಪಾಪರೂಪೈರ್ನಿಯಂತ್ರಿತಾಃ ।
ತತ್ತಜ್ಜಾತಿಯುತಂ ದೇಹಮಾಯುರ್ಭೋಗಂ ಚ ಕರ್ಮಜಮ್ ॥೦೯॥

ಸುಖ-ದುಃಖಂಗಳ ಕೊಡುವಂತಹ, ಪುಣ್ಯ ಮತ್ತೆ ಪಾಪರೂಪೀ ಕರ್ಮಂಗಳಿಂದ ಬಂಧಿತನಾಗಿ, ಕರ್ಮಾನುಸಾರ ಆಯಾ ಜಾತಿಯ ದೇಹ, ಆಯುಸ್ಸು ಮತ್ತೆ ಭೋಗಂಗಳ

ಪ್ರತಿಜನ್ಮ ಪ್ರಪದ್ಯಂತೇ ತೇಷಾಮಪಿ ಪರಂ ಪುನಃ ।
ಸುಸೂಕ್ಷ್ಮಲಿಂಗಶಾರೀರಮಾಮೋಕ್ಷಾದಕ್ಷರಂ ಖಗ ॥೧೦॥

ಪ್ರತಿಜೆನ್ಮಲ್ಲಿಯೂ ಪಡೆತ್ತವು. ಏ ಪಕ್ಷಿಯೇ!,  ಇವುಗೊಕ್ಕೆ ಇದರಿಂದಲೂ ಶ್ರೇಷ್ಠವಾದ ಇನ್ನೊಂದು ಸೂಕ್ಷ್ಮವಾದ, ಮೋಕ್ಷಪಡೆವವರೇಂಗೂ ನಾಶವಾಗದ ಲಿಂಗ ಶರೀರ ಇದ್ದು.

ಸ್ಥಾವರಾಃ ಕೃಮಯಶ್ಚಾಜಾಃ ಪಕ್ಷಿಣಃ ಪಶವೋ ನರಾಃ ।
ಧಾರ್ಮಿಕಾಸ್ತ್ರಿದಶಾಸ್ತದ್ವನ್ಮೋಕ್ಷಿಣಶ್ಚ ಯಥಾಕ್ರಮಮ್ ॥೧೧॥

ಸ್ಥಾವರಂಗೊ (ವೃಕ್ಷ-ಲತಾದಿ ಜಡ), ಕ್ರಿಮಿಗೊ, ಏಡು ಹಕ್ಕಿ ಮುಂತಾದ ಮೃಗಪಶುಪಕ್ಷಿಗೊ, ಮನುಷ್ಯರು, ಧಾರ್ಮಿಕರು, ದೇವತೆಗೊ ಈ ಕ್ರಮಲ್ಲಿ ಹುಟ್ಟಿ ಮೋಕ್ಷವ ಪಡೆತ್ತವು.

ಚತುರ್ವಿಧ ಶರೀರಾಣಿ ಧೃತ್ಚಾ ಮುಕ್ತ್ವಾ ಸಹಸ್ರಶಃ ।
ಸುಕೃತಾನ್ಮಾನವೋ ಭೂತ್ವಾ ಜ್ಞಾನೀ ಚೇನ್ಮೋಕ್ಷ ಮಾಪ್ನುಯಾತ್ ॥೧೨॥

ಉದ್ಭಿಜ, ಅಂಡಜ, ಸ್ವೇದಜ ಮತ್ತೆ ಪಿಂಡಜ (ಜರಾಯುಜ)  – ಈ ನಾಲ್ಕು ವಿಧವಾದ ಶರೀರಂಗಳ  ಸಾವಿರಾರು ಸರ್ತಿ ಧರಿಸಿ, ಬಿಟ್ಟಿಕ್ಕಿ, ಸತ್ಕಾರ್ಯಂಗಳಿಂದ ಮಾನವನಾಗಿ, ಜ್ಞಾನಿ ಆದರೆ ಮೋಕ್ಷವ ಪಡೆತ್ತ°.

ಚತುರಶೀತಿಲಕ್ಷೇಷು ಶರೀರೇಷು ಶರೀರಿಣಾಮ್ ।
ನ ಮಾನುಷಂ ವಿನಾನ್ಯತ್ರ ತತ್ತ್ವಜ್ಞಾನಂ ತು ಲಭ್ಯತೇ ॥೧೩॥

ಶರೀರಧಾರಿಗೆ 84ಲಕ್ಷ ಶರೀರಂಗಳಲ್ಲಿ ಮನುಷ್ಯ ಶರೀರ ಅಲ್ಲದ್ದೆ ಬೇರೆ ಏವುದರ್ಲಿಯೂ ತತ್ತ್ವಜ್ಞಾನ ಸಿಕ್ಕುತ್ತಿಲ್ಲೆ.

ಅತ್ರ ಜನ್ಮ ಸಹಸ್ರಾಣಾಂ ಸಹಸ್ರೈರಪಿ ಕೋಟಿಭಿಃ ।
ಕದಾಚಿಲ್ಲಭತೇ ಜಂತುರ್ಮಾನುಷ್ಯಂ ಪುಣ್ಯಸಂಚಯಾತ್ ॥೧೪॥

ಸಾವಿರಾರು ಕೋಟ್ಯಂತರ ಸರ್ತಿ, ಸಾವಿರಾರು ಜೀವವರ್ಗಂಗಳಲ್ಲಿ ಜೆನ್ಮತಾಳಿ, ಏವತ್ತಾರು ಪುಣ್ಯಸಂಚಯಂದ ಮನುಷ್ಯ ಜೆನ್ಮ ಸಿಕ್ಕುತ್ತದು.

ಸೋಪಾನಭೂತಂ ಮೋಕ್ಷಸ್ಯ ಮಾನುಷ್ಯಂ ಪ್ರಾಪ್ಯ ದುರ್ಲಭಮ್ ।
ಯಸ್ತಾರಯತಿ ನಾತ್ಮಾನಂ ತಸ್ಮಾತ್ಪಾಪತರೋsತ್ರ ಕಃ ॥೧೫॥

ಮೋಕ್ಷದ ಮೆಟ್ಳು ಆದ, ದುರ್ಲಭವಾದ ಮನುಷ್ಯ ಜೆನ್ಮವ ಪಡದೂ ಆರು ತನ್ನ ಉದ್ಧರಿಸಿಗೊಳ್ಳುತ್ತನಿಲ್ಲೆಯೋ, ಅವನಿಂದ ಹೆಚ್ಚಿನ ಪಾಪಿಗೊ ಆರಿದ್ದವು ?!

ನರಃ ಪ್ರಾಪ್ಯೋತ್ತಮಂ ಜನ್ಮ ಲಭ್ದ್ವಾ ಚೇಂದ್ರಿಯಸೌಷ್ಠವಮ್ ।
ನ ವೇತ್ತ್ಯಾತ್ಮಹಿತಂ ಯಸ್ತು ಸ ಭವೇದ್ಬ್ರಹ್ಮಘಾತಕಃ ॥೧೬॥

ಏವ ಮನುಷ್ಯ° ಅತ್ತ್ಯುತ್ತಮವಾದ ಈ ನರಜನ್ಮದ ಸುಂದರವಾದ ಇಂದ್ರಿಯಂಗಳ ಪಡದೂ ಆತ್ಮದ ಹಿತವ ಅರ್ತುಗೊಂಡಿರುತ್ತನಿಲ್ಲೆಯೋ ಅವ° ನಿಜವಾಗಿ ಬ್ರಹ್ಮಘಾತಕನೇ ಆವುತ್ತ°.

ವಿನಾ ದೇಹೇನ ಕಸ್ಯಾಪಿ ಪುರುಷಾರ್ಥೋ ನ ವಿದ್ಯತೇ ।
ತಸ್ಮಾದ್ದೇಹಂ ಧನಂ ರಕ್ಷೇತ್ಪುಣ್ಯಕರ್ಮಾಣಿ ಸಾಧಯೇತ್ ॥೧೭॥

ದೇಹ ಇಲ್ಲದ್ದೆ ಆರಿಂಗೂ ಪುರುಷಾರ್ಥಂಗಳ ಮಾಡ್ಲೆ ಎಡಿಯ. ಹಾಂಗಾಗಿ ದೇಹವನ್ನೂ, ಧನವನ್ನೂ ರಕ್ಷಿಸಿಗೊಂಡು ಪುಣ್ಯಕರ್ಮಂಗಳ ಮಾಡಿ ಸಾಧುಸೆಕು.

ರಕ್ಷಯೇತ್ಸರ್ವದಾತ್ಮಾನಮಾತ್ಮಾ ಸರ್ವಸ್ಯ ಭಾಜನಮ್ ।
ರಕ್ಷಣೇ ಯತ್ನಮಾತಿಷ್ಠೇಜ್ಜೀವನ್ಭದ್ರಾಣಿ ಪಶ್ಯತಿ ॥೧೮॥

ಎಲ್ಲದಕ್ಕೂ ಆಧಾರವಾಗಿಪ್ಪದು ಆತ್ಮ (ತಾನು). ಹಾಂಗಾಗಿ ತನ್ನ ಏವತ್ತೂ ರಕ್ಷಿಸಿಗೊಳ್ಳೆಕು. ಪ್ರಯತ್ನಪೂರ್ವಕವಾಗಿ ತನ್ನ ರಕ್ಷಿಸಿಗೊಂಬವ° ಜೀವಿತಕಾಲಲ್ಲಿ (ಸತ್ಸಂಗಂದ) ಅನೇಕ (ಅಧ್ಯಾತ್ಮಿಕ) ಕಲ್ಯಾಣವ ಕಾಣುತ್ತ°.

ಪುನರ್ಗಾಮಃ ಪುನಃ ಕ್ಷೇತ್ರಂ ಪುನರ್ವಿತ್ತಂ ಪುನರ್ಗೃಹಮ್ ।
ಪುನಃ ಶುಭಾಶುಭಂ ಕರ್ಮ ನ ಶರೀರಂ ಪುನಃ ಪುನಃ ॥೧೯॥

ಪುನಃ ಗ್ರಾಮ, ಪುನಃ ಭೂಮಿ, ಪುನಃ ಧನ, ಪುನಃ ಮನೆ, ಪುನಃ ಶುಭಾಶುಭ ಕರ್ಮಂಗೊ ದೊರಕುತ್ತು. ಆದರೆ ಈ ಮನುಷ್ಯ ಶರೀರ ಮಾತ್ರ ಪುನಃ ಪುನಃ (ಎಳ್ಪಲ್ಲಿ) ಸಿಕ್ಕುತ್ತಿಲ್ಲೆ.

ಶರೀರರಕ್ಷಣೋಪಾಯಾಃ ಕ್ರಿಯಂತೇ ಸರ್ವದಾ ಬುಧೈಃ ।
ನೇಚ್ಛಂತಿ ಚ ಪುನಸ್ತ್ಯಾಗಮಪಿ ಕುಷ್ಠಾದಿರೋಗಿಣಃ ॥೨೦॥

ಬುಧರು (ಪಂಡಿತಕ್ಕೊ/ತಿಳುದೋರು) ಏವತ್ತೂ ಶರೀರದ ರಕ್ಷಣೋಪಾಯಂಗಳ ಮಾಡುತ್ತವು (ಅಧ್ಯಾತ್ಮ ಸಾಧನೆ ಮಾಡ್ಳೆ). ಕುಷ್ಠಾದಿ ರೋಗಿಗಳೂ ಕೂಡ ಶರೀರ ತ್ಯಾಗಮಾಡ್ಳೆ ಬಯಸುತ್ತವಿಲ್ಲೆ.

ತದ್ಗೋಪಿತಂ ಸ್ಯಾದ್ಧರ್ಮಾರ್ಥಂ ಧರ್ಮೋ ಜ್ಞಾನಾರ್ಥಮೇವ ಚ ।
ಜ್ಞಾನಂ ತು ಧ್ಯಾನಯೋಗಾರ್ಥಮಚಿರಾತ್ಪ್ರವಿಮುಚ್ಯತೇ ॥೨೧॥

ಅದರ ಧರ್ಮಕ್ಕಾಗಿ, ಧರ್ಮವ ಜ್ಞಾನಕ್ಕಾಗಿ, ಜ್ಞಾನವ ಧ್ಯಾನಕ್ಕಾಗಿ ರಕ್ಷಿಸೆಕು. ಅಂಬಗ ಶೀಘ್ರವಾಗಿ ಮುಕ್ತನಾವುತ್ತ°.

ಆತ್ಮೈವ ಯದಿ ನಾತ್ಮಾ ನಮಹಿತೇಭ್ಯೋ ನಿವಾರಯೇತ್ ।
ಕೋsನ್ಯೋ ಹಿತಕರಸ್ತಸ್ಮಾದಾತ್ಮಾನಂ ತಾರಯಿಷ್ಯತಿ ॥೨೨॥

ಒಂದುವೇಳೆ ತನಗೆ ಅಹಿತವಾದ್ದರ ತಾನು ನಿವಾರುಸದ್ದೆ ಹೋದರೆ, ಇನ್ನು ಆರು ಮಾಡುತ್ತವು?!. ಹಾಂಗಾಗಿ ತನಗೆ ಒಳ್ಳೆದಪ್ಪದರ ತಾನೇ ಮಾಡೆಕು.

ಇಹೈವ ನರಕವ್ಯಾಧೇಶ್ಚಿಕಿತ್ಸಾಂ ನ ಕರೋತಿ ಯಃ ।
ಗತ್ವಾ ನಿರೌಷಧಂ ದೇಶಂ ವ್ಯಾಧಿಸ್ಥಃ ಕಿಂ ಕರಿಷ್ಯತಿ ॥೨೩॥

ಆರು ಇಹಲೋಕಲ್ಲ್ಯೇ ನರಕದ ವ್ಯಾಧಿಗಳ ನಿವಾರಣೋಪಾಯಂಗಳ ಮಾಡ್ತನಿಲ್ಯೋ, ಅವ° ರೋಗಿಯಾಗಿ ಔಷಧ ಇಲ್ಲದ್ದ ದೇಶಕ್ಕೆ ಹೋಗಿ ಎಂತ ಮಾಡ್ಳೆ ಇದ್ದು ?!

 

ಗದ್ಯರೂಪಲ್ಲಿ –

ಗರುಡ° ಕೇಳಿದ° – ಹೇ ದಯಾನಿಧೇ!, ಅಜ್ಞಾನದ ಕಾರಣಂದ ಜೀವಿಯು ಜನನ-ಮರಣದ ಈ ಸಂಸಾರ ಚಕ್ರಲ್ಲಿ ಸುತ್ತಿಗೊಂಡಿರುತ್ತ ಹೇಳ್ವದರ ತಿಳ್ಕೊಂಡೆ. ಈಗ ಮೋಕ್ಷ ಪಡವ ಸನಾತನ ಉಪಾಯವ ತಿಳಿವಲೆ ಉತ್ಸುಕನಾಗಿದ್ದೆ. ಹೇ ಭಗವಂತ!, ಹೇ ದೇವದೇವೇಶ!, ಹೇ ಶರಣಾಗತವತ್ಸಲನೇ!, ಸಮಸ್ತ ಪ್ರಕಾರದ ದುಃಖಂಗಳಿಂದ ಮಲಿನ ಹಾಂಗೂ ಸಾರರಹಿತ ಈ ಭಯಾನಕ ಸಂಸಾರಲ್ಲಿ, ಅನೇಕ ಪ್ರಕಾರದ ಶರೀರ ಧಾರಣೆಮಾಡಿ ಅನಂತ ಜೀವರಾಶಿಗೊ ಜೆನ್ಮವೆತ್ತುತ್ತವು, ಮತ್ತೆ ಮರಣ ಹೊಂದುತ್ತವು. ಇದಕ್ಕೆ ಅಂತ್ಯ ಹೇಳ್ವದೇ ಇಲ್ಲೆ. ಈ ಸಮಸ್ತ ಜೀವರಾಶಿಗೊ ಸದಾ ದುಃಖಂದ ಪೀಡಿತವಾಗಿರ್ತವು. ಇವಕ್ಕೆ ಏವತ್ತೂ ಸುಖ ಹೇಳ್ವದೇ ಇಲ್ಲೆ. ಹೇ ಮೋಕ್ಷಪ್ರದಾಯಕ ಪ್ರಭುವೇ!, ಏವ ಉಪಾಯಂದ ಜೀವಿಗೊಕ್ಕೆ ಈ ಸಂಸಾರ ಚಕ್ರಂದ ಮುಕ್ತಿಪ್ರಾಪ್ತಿ ಅಕ್ಕು ಹೇಳ್ವದರ ನೀನು ಎನಗೆ ವಿವರಿಸಿ ಹೇಳು.

ಶ್ರೀಭಗವಂತ° ಹೇಳಿದ° – ಹೇ ಗರುಡ!, ವಿಷಯದ ಬಗ್ಗೆ ನೀನೆಂತರ ಕೇಳಿದೆಯೋ ಅದರ ಆನು ನಿನಗೆ ತಿಳುಸುತ್ತೆ. ಅದರ ಕೇಳ್ವ ಮಾತ್ರಂದಲೇ ಮನುಷ್ಯ° ಈ ಸಂಸಾರಂದ ಮುಕ್ತನಾವುತ್ತ°.

ದೇವರು ಹೇದು ಒಬ್ಬ° ಪರಬ್ರಹ್ಮಸ್ವರೂಪಿಯೂ, ಅವಿಭಕ್ತನೂ, ಮಂಗಳಸ್ವರೂಪನೂ, ನಿಷ್ಕಲಂಕನೂ, ಎಲ್ಲವನ್ನೂ ಅರ್ತವನೂ, ಎಲ್ಲಕಾರ್ಯಂಗಳ ಕರ್ತೃವೂ, ಎಲ್ಲವುದರ ಒಡೆಯನೂ, ಎಲ್ಲವಿಧಲ್ಲಿಯೂ ನಿರ್ಮಲನೂ (ಕಲ್ಮಷರಹಿತನೂ), ಅದ್ವಿತೀಯನೂ, ಅದ್ವಯನೂ (ದ್ವೈತಭಾವರಹಿತ°) ಆಗಿ ಇದ್ದ°. ಅವ° (ಪರಮಾತ್ಮ°) ಸ್ವಯಂಪ್ರಕಾಶಿಯೂ, ಅನಾದಿ, ಅನಂತ, ನಿರ್ವಿಕಾರ, ಪರಾತ್ಪರ, ನಿರ್ಗುಣ ಮತ್ತೆ ಸತ್-ಚಿತ್-ಆನಂದ ಸ್ವರೂಪನೂ ಆಗಿದ್ದ°. ಈ ಜೀವ ಅವನ ಅಂಶವೇ ಆಗಿದ್ದು. ಹೇಂಗೆ ಅಗ್ನಿಂದ ಅನೇಕ ಕಿಡಿಗೊ ರಟ್ಟುತ್ತೋ ಹಾಂಗೇ ಅವಿದ್ಯೆಂದ ಯುಕ್ತನಾಗಿಪ್ಪ ಕಾರಣ ಅನಾದಿ ಕಾಲಂದ ಮಾಡಲಾದ ಕರ್ಮಂಗಳ ಪರಿಣಾಮಸ್ವರೂಪವಾಗಿ ದೇಹಾದಿ ಉಪಾದಿಗಳ ಧಾರಣೆಮಾಡಿ, ಜೀವವು ಭಗವಂತನಿಂದ ಪ್ರತ್ಯೇಕವಾಗಿ ಹೋಯ್ದು. ಆ ಜೀವ ಪ್ರತ್ಯೇಕ ಜೆನ್ಮಲ್ಲಿ ಪುಣ್ಯ ಮತ್ತೆ ಪಾಪರೂಪಿ ಸುಖ-ದುಃಖ ಪ್ರದಾನುಸುವ ಕರ್ಮಂಗಳಿಂದ ನಿಯಂತ್ರಿತವಾಗಿ ಆಯಾ ಯೋನಿಲಿ ದೇಹ, ಆಯಸ್ಸು, ಕರ್ಮಂಗಳ ಅನುಭೋಗುಸುತ್ತು. ಇದರ ಮತ್ತೆಯೂ ಕೂಡ ಪುನಃ ಜೀವಿಗೊ ಸೂಕ್ಷ್ಮ ಲಿಂಗಶರೀರವ ಪ್ರಾಪ್ತಿ ಹೊಂದುತ್ತವು ಹಾಂಗೂ ಈ ಕ್ರಮ ಮೋಕ್ಷಪರ್ಯಂತ ಸ್ಥಿತವಾಗಿರುತ್ತು. ಈ ಜೀವಿಗೊ ಕೆಲವೊಂದರಿ ಸ್ಥಾವರ (ವೃಕ್ಷ-ಲತಾದಿ ಜಡ) ಯೋನಿಗಳಲ್ಲಿ, ಮತ್ತೆ ಕ್ರಿಮಿ ಯೋನಿಗಳಲ್ಲಿ, ಮತ್ತೆ ಜಲಚರ, ಪಕ್ಷಿ-ಮೃಗ-ಪಶು ಯೋನಿಗಳ ಪ್ರಾಪ್ತಿಹೊಂದಿಕ್ಕಿ ಮತ್ತೆ ಕರ್ಮಪುಣ್ಯವಶಾತ್ ಮನುಷ್ಯ ಯೋನಿಯ ಪ್ರಾಪ್ತಿ ಹೊಂದುತ್ತವು. ಮತ್ತೆ ಧಾರ್ಮಿಕ ಮನುಷ್ಯನ ರೂಪಲ್ಲಿ ಮತ್ತೆ ಪುನಃ ದೇವತೆ ಮತ್ತೆ ದೇವಯೋನಿಯ ಮತ್ತೆ ಕ್ರಮವಾಗಿ ಮೋಕ್ಷಪ್ರಾಪ್ತಿಯ ಅಧಿಕಾರಿಯಾವ್ತವು. ಉದ್ಭಿಜ, ಅಂಡಜ, ಸ್ವೇದಜ ಮತ್ತೆ ಪಿಂಡಜ (ಜರಾಯುಜ) – ಈ ನಾಲ್ಕು ಪ್ರಕಾರದ ಶಾರೀರಂಗಳ ಸಹಸ್ರಾರು ಸರ್ತಿ ಧಾರಣೆಮಾಡಿ ಅದರಿಂದ ಮುಕ್ತವಾಗಿ ಸುಕೃತವಶಾತ್ ಜೀವ ಮನುಷ್ಯ ಶರೀರವ ಪ್ರಾಪ್ತಿ ಹೊಂದಿ ಅದು ಜ್ಞಾನಿಯಾಗಿ ಹೋದರೆ ಮೋಕ್ಷಪ್ರಾಪ್ತಿ ಆವುತ್ತು.

ಜೀವಿಗಳ ಎಂಬತ್ತನಾಲ್ಕು ಲಕ್ಷ ಯೋನಿಗಳಲ್ಲಿ ಮನುಷ್ಯ ಯೋನಿಯ ಹೊರತು ಬೇರೆ ಏವುದೇ ಯೋನಿಲಿ ತತ್ತ್ವಜ್ಞಾನ ಪ್ರಾಪ್ತಿ ಆವ್ತಿಲ್ಲೆ. ಸಾವಿರಾರು ಕೋಟ್ಯಂತರ ಸರ್ತಿ ಸಾವಿರಾರು ಜೀವ ವರ್ಗಂಗಳಲ್ಲಿ ಜೆನ್ಮ ಹೊಂದಿ, ಏವತ್ತಾರು ಪುಣ್ಯಸಂಚಯಂದ ಮನುಷ್ಯ ಜೆನ್ಮ ಸಿಕ್ಕುವದು. ಮೋಕ್ಷಪ್ರಾಪ್ತಿಗೆ ಸೋಪಾನಭೂತ ಆದ ಈ ದುರ್ಲಭ ಮನುಷ್ಯ ಶರೀರವ ಹೊಂದಿ, ಆರು ತನ್ನ ತಾನೇ ಉದ್ಧರಿಸಿಕೊಳ್ಳುತ್ತನಿಲ್ಲೆಯೋ ಅವನಿಂದ ಹೆಚ್ಚಿಗಾಣ ಪಾಪಿ ಇನ್ನು ಆರಿಪ್ಪಲೆಡಿಗು! ಉತ್ತಮ ಮನುಷ್ಯ ಶರೀರಲ್ಲಿ ಹುಟ್ಟಿ, ಸಮಸ್ತ ಅಂಗ ಸೌಷ್ಠವ ಸಂಪನ್ನ, ಅವಿಕಲ ಇಂದ್ರಿಯಂಗಳ ಪ್ರಾಪ್ತಿ ಹೊಂದಿಯೂ ಏವ ವ್ಯಕ್ತಿ ತನ್ನ ಹಿತವ ಅರ್ತುಗೊಂಡಿರುತ್ತನಿಲ್ಲೆಯೋ, ಅವ° ಬ್ರಹ್ಮಘಾತುಕನೇ ಸರಿ. ಶರೀರ ಇಲ್ಲದ್ದೆ ಏವ ವ್ಯಕ್ತಿಯೂ ಪುರುಷಾರ್ಥ ಸಾಧನೆಯ ಮಾಡ್ಳೆ ಎಡಿಯ. ಹಾಂಗಾಗಿ ಶರೀರ ಮತ್ತೆ ಧನದ ರಕ್ಷಣೆ ಮಾಡಿಗೊಂಡು ಇವೆರಡರೆಂದ ಪುಣ್ಯ ಸಂಪಾದನೆ ಮಾಡೆಕು. ಮನುಷ್ಯ° ಏವತ್ತೂ ತನ್ನ ಶರೀರದ ರಕ್ಷಣೆ ಮಾಡೆಕು. ಎಂತಕೇಳಿರೆ, ಶರೀರ ಸಮಸ್ತ ಪುರುಷಾರ್ಥ ಸಾಧನೆಯ ಸಾಧನ ಆಗಿದ್ದು. ಹಾಂಗಾಗಿ ಅದರ ರಕ್ಷಣೆಗೆ ಅನಿವಾರ್ಯವಾಗಿ ಉಪಾಯಂಗಳ ಅನುಸರುಸೆಕು. ಶರೀರ ಧಾರಣೆ ಮಾಡಿದ ವ್ಯಕ್ತಿ ತನ್ನ ಕಲ್ಯಾಣವ ತಾನೇ ನೋಡುವಂತನಾವುತ್ತ°. ಗ್ರಾಮ, ಕ್ಷೇತ್ರ, ಧನ, ಮನೆ ಮತ್ತೆ ಶುಭಾಶುಭ ಕರ್ಮಂಗೊ ಪದೇ ಪದೇ ಸಿಕ್ಕುಗು. ಆದರೆ ಮನುಷ್ಯ ಶರೀರ ಮತ್ತೆ ಮತ್ತೆ ಸಿಕ್ಕುವದು ದುರ್ಲಭವೇ.  ಹಾಂಗಾಗಿ ಬುದ್ಧಿವಂತನಾದವ° ಏವತ್ತೂ ತನ್ನ ಶರೀರದ ರಕ್ಷಣೆಯ ಕಾಳಜಿಯ ಮಡಿಕ್ಕೊಂಡಿರುತ್ತ°. ಕುಷ್ಠಾದಿ ಪೀಡಿತ ರೋಗಿಗಳೂ ಕೂಡ ತಮ್ಮ ಶರೀರವ ಬಿಡುವ ಇಚ್ಛೆಗೆ ಹೆರಡುತ್ತವಿಲ್ಲೆ. ಧರ್ಮಾಚರಣೆಯ ಉದ್ದೇಶಕ್ಕಾಗಿ ಮತ್ತೆ ಧರ್ಮಾಚರಣೆಯ ಜ್ಞಾನಪ್ರಾಪ್ತಿಗಾಗಿ, ಜ್ಞಾನ, ಧ್ಯಾನ, ಯೋಗದ ಸಿದ್ಧಿಗೆ ಬೇಕಾಗಿ ಶರೀರವ ರಕ್ಷಣೆ ಮಾಡಿಗೊಂಡರೆ ಮತ್ತೆ ಧ್ಯಾನಯೋಗಂದ ಮನುಷ್ಯ ಬೇಗನೆ ಮೋಕ್ಷವ ಪ್ರಾಪ್ತಿಮಾಡಿಗೊಂಬಲಕ್ಕು.

ಒಂದುವೇಳೆ, ಮನುಷ್ಯ° ಸ್ವಯಂ ತನ್ನ (ಆತ್ಮನ) ಅಹಿತವ ತಾನೇ ದೂರಮಾಡಿಗೊಳ್ಳದ್ದರೆ ಇನ್ನು ಬೇರೆ ಆರು ಮಾಡುತ್ತವು?!. ಯಾವಾತ° ಇಹಲೋಕಲ್ಲಿಯೇ ನರಕದ ವ್ಯಾಧಿಗಳ ನಿವಾರಣೋಪಾಯಂಗಳ ಮಾಡುತ್ತನಿಲ್ಲೆಯೋ, ಅವ° ರೋಗಿಯಾಗಿ, ಔಷಧ ಇಲ್ಲದ್ದ ಲೋಕಕ್ಕೆ ಹೋಗಿ ಮಾಡ್ತದಾದರೂ ಎಂತರ?!

 

ಅಂಬಗಳೋ?! … ಮುಂದೆ ಎಂತರ??!    – ಬಪ್ಪವಾರ ನೋಡುವೋ°

 

[ಚಿಂತನೀಯಾ –

ಹಲವು ಸರ್ತಿ ನಾವು ಓದಿದ್ದು- ಮನುಷ್ಯ ಜೆನ್ಮ ಹೇಳ್ವದು ಬಹು ಅಪರೂಪದ ಸಿದ್ಧಿ. ಜನ್ಮಜನ್ಮಾಂತರದ ಪುಣ್ಯಫಲದ ರೂಪವಾಗಿ ಸಿಕ್ಕುವದು ಮನುಷ್ಯ° ಜೆನ್ಮ.  ಮನುಷ್ಯ ಜೆನ್ಮ ಹೇಳ್ವದು ಸಾಧನಾಪಥಲ್ಲಿ ಹೋಪಲೆ ಇಪ್ಪ ಸಾಧನ. ಇದರ ಸದುಪಯೋಗಪಡಿಸಿಗೊಳ್ಳದ್ದೆ ವ್ಯರ್ಥ ಮಾಡಿಗೊಂಡರೆ ಮತ್ತೆ ಅವಂಗೆ ಈ ಭಾಗ್ಯ ಏವಗ ಸಿಕ್ಕುತ್ತೋ ಗ್ರೇಶಲೂ ಎಡಿಯ. ಪಂಚಭೂತಂಗಳಿಂದ ಉಂಟಾದ್ದು ಅಕೇರಿಲಿ ಪಂಚಭೂತಲ್ಲಿ ಸೇರಿಗೊಳ್ತ ಹಾಂಗೆ, ಆ ಪರಮಾತ್ಮನಿಂದ ಬೇರ್ಪಡೆಯಾದ ಜೀವಾತ್ಮ ಅವನಲ್ಲಿ ಲೀನ ಅಪ್ಪದೇ ಮೋಕ್ಷ. ಅದು ಸತ್-ಚಿತ್-ಆನಂದ ಸ್ವರೂಪ. ಅಲ್ಲಿ ಸೇರಿದವ ಮತ್ತೆ ಇಲ್ಲಿ ಬಂದು ಕೊಣಿವಲೆ ಇಲ್ಲೆ. ಹಾಂಗೇಳಿ ಅದು ಗ್ರೇಶಿದ ಕೂಡ್ಳೆ ಸಿಕ್ಕುವಾಂಗಿಪ್ಪದೋ, ಅಂಗಡಿಂದ ತಂದು ಮಡುಗುವಾಂಗಿರ್ತದೋ ಅಲ್ಲ. ಅದಕ್ಕೆ ನಿರಂತರ ಭಕ್ತಿಯೋಗದ ಸಾಧನೆ ಅಗತ್ಯ. ಆ ಸಾಧನೆ ಮನುಷ್ಯ ಶರೀರಂದ ಮಾತ್ರವೇ ಸಾಧ್ಯ. ಹಾಂಗಾರೆ ಈ ಮನುಷ್ಯ ಶರೀರ ಪಡಕ್ಕೊಂಡವು ನಿಜವಾದ ಭಾಗ್ಯಶಾಲಿಗೊ. ಅದರ ಸದುಪಯೋಗ ಪಡಿಸಿಗೊಂಬದೇ ಬುದ್ಧಿವಂತಿಗೆ. ಅಲ್ಲದ್ದೆ ಅಜ್ಞಾನಂದಲೇ ಕೂದುಗೊಂಡರೆ ತನ್ನ ಅಧಃಪತನವ ತಾನೇ ಮಾಡಿಗೊಂಬದೇ ಸರಿ.

ಅಧ್ಯಾಯದ ಸುರುವಿಲ್ಲಿ ಭಗವಂತ° ಹೇಳುತ್ತ°- “ಈ ಮೋಕ್ಷಸಾಧನೋಪಾಯವ ಕೇಳ್ವ ಮಾತ್ರಂದಲೇ ಮನುಷ್ಯ ಬಂಧನಂದ ಬಿಡುಗಡೆ ಹೊಂದುತ್ತ”. ಆದರೆ ಇಲ್ಲಿ ಬರೇ ಶಬ್ದಾರ್ಥವ ಕೇಳ್ವಮಾತ್ರಂದಲೇ ಹೇದು ನಾವು ಅರ್ಥೈಸಿಗೊಂಡ್ರೆ ಅದು ಎಂತ ಪ್ರಯೋಜನಕ್ಕೂ ಆಗದ್ದು. ಕೇಳೋದು ಹೇದರೆ ಬರೇ ಕೆಮಿಲಿ ಕೇಳುವದು ಅಲ್ಲ. ಅದರ ಸರಿಯಾಗಿ ಯಥಾವತ್ ಅರ್ಥೈಸಿಗೊಂಡು ಮನನ ಆಯೇಕು, ಅದು ಅನುಭವಲ್ಲಿ ಅರ್ಥ ಆಯೇಕು. ಹಾಂಗೆ ಆಯೇಕ್ಕಾರೆ ಭಗವಂತನಲ್ಲಿ ನಿಷ್ಕಲಂಕ ಅನನ್ಯ ಭಕ್ತಿ ಇರೆಕು. ಭಕ್ತಿಯೋಗದ ಸಾಧನೆ ಇರೆಕು. ಅಂದರಷ್ಟೇ ಅದು ಅನುಭವಕ್ಕೆ ಸಿಕ್ಕುವದು. ಹಾಂಗೇ ಮದಲಾಣ ಅಧ್ಯಾಯಂಗಳಲ್ಲಿ ಹೇದ ಕರ್ಮಂಗಳುದೇ. ಬರೇ ತೋರಿಕೆಗೆ ಕರ್ಮ ಮಾಡಿದ್ದೆ ಹೇದರೆ ಅದರಿಂದ ದಕ್ಕುವದು ಎಂತ ಮಣ್ಣೂ ಇಲ್ಲೆ. ಅದರ ಬದಲಿಂಗೆ ಅದರ ನಿಜಸ್ವರೂಪವ ಅರ್ಥೈಸಿಗೊಂಡು ನಿಜಭಕ್ತಿಂದ ಆಚರಿಸಿದವಂಗೆ ಅದರ ಫಲ ಖಂಡಿತ ಸಿಕ್ಕುತ್ತು. ಇನ್ನು ಆಚರುಸುವದು ಹೇದರೆ ಒಂದೊತ್ತಾಣ ಉಂಡಿಕ್ಕಿ ಏಳ್ತಾಂಗೆ ಅಲ್ಲ. ಅದು ನಿರಂತರವಾಗಿ ಜೀವನ ಪರ್ಯಂತ ನಡಕ್ಕೊಂಡೇ ಇರೆಕು. ಕರ್ಮಂದ ಜಾರಿಗೊಂಬ ಪ್ರಶ್ನೆಯೇ ಇಲ್ಲೆ. ಅದು ನಿಜವಾದ ಕರ್ಮಯೋಗ.

ಮತ್ತೆ ಇಲ್ಲಿ ಹೇಳಿಪ್ಪದು ಶರೀರ ರಕ್ಷಣೆ, ಸಂಪತ್ತು ರಕ್ಷಣೆ ಮಾಡುವದು. ಇನ್ನೊಬ್ಬನ ಲಗಾಡಿ ತೆಗವಲೆ ನಮ್ಮ ದೇಹ ರಕ್ಷಣೆ, ನಮ್ಮ ಹೆಗ್ಗಳಿಕೆ ಅಥವಾ ಶ್ರೀಮಂತಿಕೆಯ ತೋರ್ಸಲೆ ಕಾಪಾಡೆಕು ಹೇದು ಹೇಯ್ದನಿಲ್ಲೆ. ಸಾಧನಾ ಪಥಲ್ಲಿ ನಿರಂತರ ಕಾರ್ಯಶೀಲನಾಗಿಪ್ಪಲೆ, ಕರ್ಮ ಮಾಡ್ಳೆ ಶರೀರ, ದಾನಧರ್ಮಲ್ಲಿ ನಿರತನಾಗಿಪ್ಪಲೆ ಸಂಪತ್ತು, ಒಟ್ಟಿಲ್ಲಿ ಭಗವದ್ಪ್ರೀತಿ ಕಾರ್ಯಕ್ಕೆ ನಮ್ಮ ನಾವು ಕಾಪಾಡಿಗೊಂಡಿರೆಕು ಹೇಳ್ವದೇ ತಾತ್ಪರ್ಯ ಹೇದು ಹೇಳ್ವಲ್ಯಂಗೆ  ‘ಧಿಯೋ ಯೋ ನಃ ಪ್ರಚೋದಯಾತ್’  ಹೇದುಗೊಂಡು ಈ ಭಾಗಕ್ಕೆ ಹರೇ ರಾಮ. ]

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಕರ್ಮದ ಆಚರಣೆ ಜೀವನಪರ್ಯ೦ತ. ನಾಟಕ ಮಾಡೊದು ಅಲ್ಲ ಹೇಳ್ತ ಸತ್ಯವ ಸತ್ವಯುತವಾಗಿ ನಮ್ಮ ಪುರಾಣ೦ಗೊ ತೋರ್ಸಿಕೊಟ್ಟಿದು.ಆ ಪುರಾಣಸಾರವ ಹ೦ಚುತ್ತಾ ಇಪ್ಪ ನಿ೦ಗೊಗೆ ಧನ್ಯವಾದ ಚೆನ್ನೈಭಾವ .

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  [“ಈ ಮೋಕ್ಷಸಾಧನೋಪಾಯವ ಕೇಳ್ವ ಮಾತ್ರಂದಲೇ ಮನುಷ್ಯ ಬಂಧನಂದ ಬಿಡುಗಡೆ ಹೊಂದುತ್ತ”. ಆದರೆ ಇಲ್ಲಿ ಬರೇ ಶಬ್ದಾರ್ಥವ ಕೇಳ್ವಮಾತ್ರಂದಲೇ ಹೇದು ನಾವು ಅರ್ಥೈಸಿಗೊಂಡ್ರೆ ಅದು ಎಂತ ಪ್ರಯೋಜನಕ್ಕೂ ಆಗದ್ದು. ಕೇಳೋದು ಹೇದರೆ ಬರೇ ಕೆಮಿಲಿ ಕೇಳುವದು ಅಲ್ಲ. ಅದರ ಸರಿಯಾಗಿ ಯಥಾವತ್ ಅರ್ಥೈಸಿಗೊಂಡು ಮನನ ಆಯೇಕು, ಅದು ಅನುಭವಲ್ಲಿ ಅರ್ಥ ಆಯೇಕು. ಹಾಂಗೆ ಆಯೇಕ್ಕಾರೆ ಭಗವಂತನಲ್ಲಿ ನಿಷ್ಕಲಂಕ ಅನನ್ಯ ಭಕ್ತಿ ಇರೆಕು. ಭಕ್ತಿಯೋಗದ ಸಾಧನೆ ಇರೆಕು. ಅಂದರಷ್ಟೇ ಅದು ಅನುಭವಕ್ಕೆ ಸಿಕ್ಕುವದು. ಹಾಂಗೇ ಮದಲಾಣ ಅಧ್ಯಾಯಂಗಳಲ್ಲಿ ಹೇದ ಕರ್ಮಂಗಳುದೇ. ಬರೇ ತೋರಿಕೆಗೆ ಕರ್ಮ ಮಾಡಿದ್ದೆ ಹೇದರೆ ಅದರಿಂದ ದಕ್ಕುವದು ಎಂತ ಮಣ್ಣೂ ಇಲ್ಲೆ. ಅದರ ಬದಲಿಂಗೆ ಅದರ ನಿಜಸ್ವರೂಪವ ಅರ್ಥೈಸಿಗೊಂಡು ನಿಜಭಕ್ತಿಂದ ಆಚರಿಸಿದವಂಗೆ ಅದರ ಫಲ ಖಂಡಿತ ಸಿಕ್ಕುತ್ತು. ಇನ್ನು ಆಚರುಸುವದು ಹೇದರೆ ಒಂದೊತ್ತಾಣ ಉಂಡಿಕ್ಕಿ ಏಳ್ತಾಂಗೆ ಅಲ್ಲ. ಅದು ನಿರಂತರವಾಗಿ ಜೀವನ ಪರ್ಯಂತ ನಡಕ್ಕೊಂಡೇ ಇರೆಕು. ಕರ್ಮಂದ ಜಾರಿಗೊಂಬ ಪ್ರಶ್ನೆಯೇ ಇಲ್ಲೆ. ಅದು ನಿಜವಾದ ಕರ್ಮಯೋಗ.]-ಆಹಾ!ಕಣ್ಣಿ೦ಗೆ ಕಟ್ಟುವ ಹಾ೦ಗಿದ್ದು ವ್ಯಾಖ್ಯಾನ!ನಮ್ಮ ಚೆನ್ನೈ ಭಾವನ ಈ ಶೈಲಿಗೆ ಮನಸೋಲುತ್ತಿದಾ!ಧನ್ಯವಾದ೦ಗೊ ಭಾವ.ಹರೇರಾಮ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ° Reply:

  ಧನ್ಯೋsಸ್ಮಿ. ಹರೇ ರಾಮ.

  [Reply]

  VN:F [1.9.22_1171]
  Rating: 0 (from 0 votes)
 2. ಕೆ. ವೆಂಕಟರಮಣ ಭಟ್ಟ

  ಹರೇ ರಾಮ.

  [Reply]

  VA:F [1.9.22_1171]
  Rating: 0 (from 0 votes)
 3. vijayaasubrahmanya

  ಹರೇರಾಮ, ಅದೆಷ್ಟು ಇಹ-ಪರಗಳ ಸಂಗತಿಗೊ {ಮಾಡ್ಲಕ್ಕಾದ್ದು,ಆಗದ್ದು} ಸಿಕ್ಕುತ್ತಿದಲ್ಲಿ ಹೀಂಗಿದ್ದದರ ಸಂಗ್ರಹಿಸಿ ಬರದು ಓದುಗರಿಂಗೆ ಕೊಡುತಿಪ್ಪ ಚೆನ್ನೈಭಾವಂಗೆ ನಮೋ ನಮಃ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೆಂಕಟ್ ಕೋಟೂರುಸಂಪಾದಕ°ಪಟಿಕಲ್ಲಪ್ಪಚ್ಚಿಪುಣಚ ಡಾಕ್ಟ್ರುಶ್ರೀಅಕ್ಕ°ಶಾಂತತ್ತೆಎರುಂಬು ಅಪ್ಪಚ್ಚಿಅಜ್ಜಕಾನ ಭಾವಸುಭಗಚುಬ್ಬಣ್ಣದೇವಸ್ಯ ಮಾಣಿಶುದ್ದಿಕ್ಕಾರ°ವಿದ್ವಾನಣ್ಣಮುಳಿಯ ಭಾವವಾಣಿ ಚಿಕ್ಕಮ್ಮಪುಟ್ಟಬಾವ°ದೊಡ್ಡಮಾವ°ಚೆನ್ನೈ ಬಾವ°ಅನುಶ್ರೀ ಬಂಡಾಡಿಅನು ಉಡುಪುಮೂಲೆಒಪ್ಪಕ್ಕತೆಕ್ಕುಂಜ ಕುಮಾರ ಮಾವ°ಪುತ್ತೂರಿನ ಪುಟ್ಟಕ್ಕಉಡುಪುಮೂಲೆ ಅಪ್ಪಚ್ಚಿಡಾಗುಟ್ರಕ್ಕ°ವೇಣಿಯಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ