ಗರುಡಪುರಾಣ – ಅಧ್ಯಾಯ 16 – ಭಾಗ 02

February 20, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಭಗವಂತ° ಮೋಕ್ಷಮಾರ್ಗದ ನಿರೂಪಣೆ ಮಾಡಿಗೊಂಡಿಪ್ಪದರ ಕಳುದವಾರದ ಭಾಗಲ್ಲಿ ಓದಿಗೊಂಡಿತ್ತದು. ಸ್ಥಾವರ ಜಂಗಮ ಪಶು ಪಕ್ಷಿ ಮೃಗ ಎಲ್ಲವೂ ಭಗವಂತನ ಅಂಶಂದ ಜನಿತವಾದ್ದು. ಅಹಂಕಾರದ ವಾಸನೆಂದಲಾಗಿ ಇಹಲ್ಲಿ ಸಿಕ್ಕಿ ಹಾಕಿಗೊಂಬದು. ಮನುಷ್ಯ ಜೆನ್ಮವ ಸದುಪಯೋಗ ಪಡಿಸಿಗೊಂಡರೆ ಜ್ಞಾನಿಯಾಗಿ ಮೋಕ್ಷಪಡವಲೆ ಸೂಕ್ತ ಅವಕಾಶ ಇಪ್ಪದಾಗಿಯೂ ಭಗವಂತ° ಹೇದ್ದದು.   ಅಪರೂಪಲ್ಲಿ ದಕ್ಕುವ ಮನುಷ್ಯ ಜೆನ್ಮಲ್ಲಿ ಆತ್ಮೋನ್ನತಿಯ ಮಾಡಿಗೊಳ್ಳದವ° ಎಂದೂ ಉದ್ಧಾರ ಅಪ್ಪಲೆ ಇಲ್ಲೆ. ಔಷಧಿ ಇಪ್ಪಲ್ಲಿ ಔಷಧಿಯ ಮಾಡಿಸಿಗೊಳ್ಳದ್ದೆ ಔಷಧಿಯಿಲ್ಲದ್ದಲ್ಲಿ ಹೋಗಿ ಎಂತ ಹರಿವಲೆ ಇದ್ದು ಹೇದು ಸ್ವಯಂ ಚಿಂತನೆ ಮಾಡೇಕ್ಕಾಗಿಪ್ಪದರ ಓದಿದ್ದದು. ಮುಂದೆ –

 ಗರುಡಪುರಾಣ – ಅಧ್ಯಾಯ 16 – ಭಾಗ 02

ವ್ಯಾಘ್ರೀವಾಸ್ತೇ ಜರಾ ಚಾಯುರ್ಯಾತಿ ಭಿನ್ನಘಟಾಂಬುವತ್ ।images
ನಿಘ್ನಂತಿ ರಿಪುವದ್ರೋಗಾಸ್ತಸ್ಮಾಚ್ಛ್ರೇಯಃ ಸಮಭ್ಯಸೇತ್ ॥೨೪॥

ಮುಪ್ಪು ಹೆಣ್ಣು ಹುಲಿಯ ಹಾಂಗೆ ಎರಗುತ್ತು. ಆಯಸ್ಸು ಒಡದ ಮಡಕೆಲಿಪ್ಪ ನೀರಿನ ಹಾಂಗೆ ಕಳದು ಹೋವ್ತು. ರೋಗಂಗೊ ಶತ್ರುಗಳ ಹಾಂಗೆ ಮೇಲೆ ಬೀಳುತ್ತು. ಹಾಂಗಾಗಿ ಶ್ರೇಯಸ್ಸಿಂಗಾಗಿ ಶ್ರಮಪಡೆಕು.

ಯಾವನ್ನಾಶ್ರಯತೇ ದುಃಖಂ ಯಾವನ್ನಾಯಾಂತಿ ಚಾಪದಃ ।
ಯಾವನ್ನೇಂದ್ರಿಯವೈಕಲ್ಯಂ ತಾವಚ್ಛ್ರೇಯಃ ಸಮಭ್ಯಸೇತ್ ॥೨೫॥

ಎಲ್ಲಿವರೆಂಗೆ ದುಃಖಂಗೊ ಬತ್ತಿಲ್ಯೋ, ಎಲ್ಲಿವರೆಂಗೆ ಆಪತ್ತುಗೊ ಬತ್ತಿಲ್ಯೋ, ಎಲ್ಲಿವರೆಂಗೆ ಇಂದ್ರಿಯಂಗೊ ವಿಕಲತೆ ಇರ್ತಿಲ್ಯೋ, ಅಲ್ಲಿವರೇಂಗೆ ಶ್ರೇಯಸ್ಸಿಂಗಾಗಿ ಪ್ರಯತ್ನುಸೆಕು.

ಯಾವತ್ತಿಷ್ಠತಿ ದೇಹೋsಯಂ ತಾವತ್ತತ್ತ್ವಂ ಸಮಭ್ಯಸೇತ್ ।
ಸಂದೀಪ್ತಕೋಣ ಭವನೇ ಕೂಪಂ ಖನತಿ ದುರ್ಮತಿಃ ॥೨೬॥

ಎಲ್ಲಿವರೆಂಗೆ ಈ ದೇಹ ಇರ್ತೋ, ಅಲ್ಲಿವರೆಂಗೆ ತತ್ತ್ವವ ಅಭ್ಯಾಸಮಾಡೆಕು. ದುರ್ಬುದ್ಧಿಯಿಪ್ಪವ° ಮನೆಮೂಲೆಲಿ ಕಿಚ್ಚು ಬಿದ್ದಪ್ಪಗ ಬಾವಿಯ ತೋಡುತ್ತ°.

ಕಾಲೋ ನ ಜ್ಞಾಯತೇ ನಾನಾಕಾರ್ಯೈಃ ಸಂಸಾರಸಂಭವೈಃ ।
ಸುಖಂ ದುಃಖಂ ಜನೋ ಹಂತ ನ ವೇತ್ತಿ ಹಿತಮಾತ್ಮನಃ ॥೨೭॥

ಈ ಸಂಸಾರಂದ ಉಂಟಾದ ನಾನಾ ಕಾರ್ಯಂಗಳಲ್ಲಿ ಕಾಲದ ಪಯಣ ಗೊಂತಾವ್ತಿಲ್ಲೆ. ಅಯ್ಯೋ!, ಮನುಷ್ಯ ಸುಖದುಃಖಂಗಳಲ್ಲಿ ಸಿಲುಕಿ ತನ್ನ ಹಿತವ ಅರ್ತುಗೊಳ್ಳುತ್ತನಿಲ್ಲೆ.

ಜಾತಾನಾರ್ತಾನ್ಮೃತಾನಾಪದ್ದ್ರಸ್ತಾನ್ ದೃಷ್ಟ್ವಾ ಚ ದುಃಖಿತಾನ್ ।
ಲೋಕೋ ಮೋಹಸುರಾಂ ಪೀತ್ವಾ ನ ಬಿಭೇತಿ ಕದಾಚನ ॥೨೮॥

ಹುಟ್ಟಿದನವರ, ಆರ್ತರ, ಸತ್ತವರ, ಆಪತ್ತಿಲ್ಲಿ ಸಿಕ್ಕಿಗೊಂಡವರ ಮತ್ತೆ ದುಃಖಿಗಳ ನೋಡಿಯೂ ಜೆನಂಗೊ ಮೋಹ ಹೇಳ್ವ ಸುರವ (ಅಮಲಿನ) ಪಾನ ಮಾಡ್ವದರಿಂದ ಏವತ್ತೂ ಹೆದರುತ್ತವಿಲ್ಲೆ.

ಸಂಪದಃ ಸ್ವಪ್ನ ಸಂಕಾಶಾ ಯೌವನಂ ಕುಸುಮೋಪಮಮ್ ।
ತಡಿಚ್ಚಪಲಮಾಯುಷ್ಯಂ ಕಸ್ಯ ಸ್ವ್ಯಾಜ್ಜಾನತೋ ಧೃತಿಃ ॥೨೯॥

ಸಂಪತ್ತು ಸ್ವಪ್ನದ ರೀತಿಲಿ ಇದ್ದು (ನಶ್ವರ-ಕ್ಷಣಭಂಗುರ). ಯೌವ್ವನ ಹೂಗಿನ ಸಮಾನ (ಮುದುಡಿ ಹೋಪಂತಾದ್ದು). ಆಯಸ್ಸು ಮಿಂಚಿನಾಂಗೆ ಚಂಚಲ. ಇದರ ತಿಳುದವು ಆರು ಧೈರ್ಯವಂತರಾಗಿರುತ್ತವು ?!

ಶತಂ ಜೀವತಮತ್ಯಲ್ಪಂ ನಿದ್ರಾಲಸ್ಯೈಸ್ತದರ್ಧಕಮ್ ।
ಬಾಲ್ಯರೋಗಜರಾದುಃಖೈರಲ್ಪಂ ತದಪಿ ನಿಷ್ಫಲಮ್ ॥೩೦॥

ನೂರುವರ್ಷಂಗಳ ಜೀವನ ಅತೀ ಅಲ್ಪವಾಗಿಪ್ಪದು. ಅದರ್ಲಿ ಅರ್ಥಭಾಗ ಒರಕ್ಕು, ಆಲಸ್ಯಂಗಳಲ್ಲಿ ಕಳದುಹೋವ್ತು. ಇನ್ನು ರಜಾ ಬಾಲ್ಯ, ರೋಗ, ಮುಪ್ಪು ಮತ್ತೆ ದುಃಖ ಹೇದು ಅದೂ ಸಾನ ನಷ್ಟವಾಗಿಬಿಡ್ತು.

ಪ್ರಾರಬ್ಧವ್ಯೇ ನಿರುದ್ಯೋಗೋ ಜಾಗರ್ತವ್ಯೇ ಪ್ರಸುಪ್ತಕಃ ।
ವಿಶ್ವಸ್ತವ್ಯೋ ಭಯಸ್ಥಾನೇ ಹಾ ನರಃ ಕೋ ನ ಹನ್ಯತೇ ॥೩೧॥

ಮಾಡೇಕ್ಕಾದ್ದರ ಮಾಡ್ಳೆ ಇಲ್ಲೆ, ಎಚ್ಚರ ಇರೆಕಾಗಿಪ್ಪಗ ಒರಗ್ಯೊಂಡಿರುತ್ತ°, ಹೆದರೇಕ್ಕಾದ್ದರ್ಲಿ ವಿಶ್ವಾಸ ಮಡಿಕ್ಕೊಂಡಿರುತ್ತ°. ಹೋ!, ಏವ ಮನುಷ್ಯ ಸಾಯಲ್ಪಡುತ್ತನಿಲ್ಲೆ.

ಅಹಿತೇ ಹಿತಸಂಜ್ಞಃ ಸ್ಯಾದಧ್ರುವೇ ಧ್ರುವಸಂಜ್ಞಕಃ ।
ಅನ್ಯರ್ಥೇ ಚಾರ್ಥವಿಜ್ಞಾನಃ ಸ್ವಮರ್ಥಂ ಯೋ ನ ವೇತ್ತಿ ಸಃ ॥೩೨॥

ಅಹಿತವ ಹಿತ ಹೇದೂ, ಅಸ್ಥಿರವಾದ್ದರ ಸ್ಥಿರ ಹೇದೂ, ಅನುಚಿತವ ಉಚಿತ ಹೇದೂ ತಿಳ್ಕೊಂಬವ° ತನಗೆ ಒಳ್ಳೆದು ಏವುದು ಹೇಳ್ವದರ ತಿಳಿತ್ತನಿಲ್ಲೆ.

ಪಶ್ಯನ್ನಪಿ ಪ್ರಸ್ಖಲತಿ ಶೃಣ್ವನ್ನಪಿ ನ ಬುದ್ಧ್ಯತಿ ।
ಪಠನ್ನಪಿ ನ್ ಜಾನಾತಿ ದೇವಮಾಯಾವಿಮೋಹಿತಃ ॥೩೪॥

ದೇವಮಾಯೆಂದ ಮೋಹಿತನಾದವ° ನೋಡಿಗೊಂಡೇ ಜಾರಿ ಬೀಳುತ್ತ°, ಕೇಟರೂ ಅರ್ತುಗೊಳ್ಳುತ್ತನಿಲ್ಲೆ, ಓದಿರೂ ತಿಳ್ಕೊಳ್ಳುತ್ತನಿಲ್ಲೆ.

ತನ್ನಿಮಜ್ಜಜ್ಜಗದಿದಂ ಗಂಭೀರೇ ಕಾಲಸಾಗರೇ ।
ಮೃತ್ಯುರೋಗಜರಾಗ್ರಾಹೈರ್ನ ಕಶ್ಚಿದಪಿ ಬುದ್ಧ್ಯತೇ ॥೩೫॥

ಈ ಜೆಗತ್ತು ಆಳವಾದ ಕಾಲಸಾಗರಲ್ಲಿ ಮುಳುಗಿದ್ದು. ಮೃತ್ಯು, ರೋಗ, ಮುಪ್ಪು ಹೇಳ್ವ ಮೊಸಳೆಗಳಿಂದ ಹಿಡಿಯಲ್ಪಟ್ಟರೂ ಮನುಷ್ಯ° ರಜವೂ ಅರ್ತುಗೊಳ್ಳುತ್ತನಿಲ್ಲೆ.

ಪ್ರತಿಕ್ಷಣಮಯಂ ಕಾಲಃ ಕ್ಷೀಯಮಾಣೋ ನ ಲಕ್ಷ್ಯತೇ ।
ಆಮಕುಂಭ ಇವಾಂಭಸ್ಥೋ ವಿಶೀರ್ಣೋ ನ ವಿಭಾವ್ಯತೇ ॥೩೬॥

ಏವ ರೀತಿ  ಹಸಿಮಣ್ಣ ಮಡಕೆಲಿ ಇಪ್ಪ ನೀರಿನಾಂಶ ಹೇಂಗೆ ಇಂಗಿ ಹೋಪದು ಹೇಂಗೆ ನವಗರಡಿಯದ್ದೆ ಹೋವ್ತೋ, ಹಾಂಗೇ, ಕ್ಷಣಕ್ಷಣಕ್ಕೂ ಕ್ಷೀಣವಪ್ಪ ಕಾಲವು ಜೀವಿಯ ಲಕ್ಷ್ಯಕ್ಕೆ ಬತ್ತಿಲ್ಲೆ.

ಯುಜ್ಯತೇ ವೇಷ್ಟನಂ ವಾಯೋರಾಕಾಶಸ್ಯ ಚ ಖಂಡನಮ್ ।
ಗ್ರಥನಂ ಚ ತರಂಗಾಣಾಮಾಸ್ಥಾನಾಯುಷಿ ಯುಜ್ಯತೇ ॥೩೭॥

ವಾಯುವ ಬಂಧುಸಲೆ ಎಡಿಗು, ಆಕಾಶವ ತುಂಡುಮಾಡ್ಳೆ ಎಡಿಗು, ನೀರಿನ ಅಲೆಗಳ ಪೋಣುಸಲೆ ಎಡಿಗು ಆದರೆ ಆಯಸ್ಸಿಲ್ಲಿ ವಿಶ್ವಾಸಮಡಿಕ್ಕೊಂಬಲೆಡಿಯ. (ಆಯಸ್ಸಿನ ಶಾಶ್ವತಗೊಳುಸುವ ಆಸ್ಥೆಯ ಕಲ್ಪನೆ ಮಾತ್ರ ಅಸಂಭವ).

ಪೃಥಿವೀ ದಹ್ಯತೇ ಯೇನ ಮೇರುಶ್ಚಾಪಿ ವಿಶೀರ್ಯತೇ ।
ಶುಷ್ಯತೇ ಸಾಗರಜಲಂ ಶರೀರಸ್ಯ ಚ ಕಾ ಕಥಾ ॥೩೮॥

ಯೇವ ಕಾಲನ ಮಹಿಮೆಂದ ಪೃಥ್ವಿ ಭಸ್ಮವಾಗಿ ಹೋವುತ್ತೋ, ಮೇರುಪರ್ವತ ಸಾನ ಛಿದ್ರ-ಛಿದ್ರವಾಗಿ ಹೋವ್ತೋ, ಸಮುದ್ರದ ನೀರು ಸಾನ ಬತ್ತಿ ಹೋವ್ತೋ, ಅಂಥ ಕಾಲನ ಕೈಂದ ಮನುಷ್ಯನ ಶರೀರದ ರಕ್ಷಣೆ ಮಾತ್ರ ಎಂತರ ಕಥೆ?!

ಅಪತ್ಯಂ ಮೇ ಕಲತ್ರಂ ಮೇ ಧನಂ ಮೇ ಬಾಂಧವಶ್ಚ ಮೇ ।
ಜಲ್ಪಂತಮಿತಿ ಮರ್ತ್ಯಾಜಂ ಹಂತಿ ಕಾಲವೃಕೋ ಬಲಾತ್ ॥೩೯॥

ಎನ್ನ ಮಕ್ಕೊ, ಎನ್ನ ಹೆಂಡತಿ, ಎನ್ನ ಸಂಪತ್ತು, ಎನ್ನ ಬಂಧುಗೊ – ಈ ರೀತಿ ಹೇಳುವ ಮರ್ತ್ಯ ಹೇಳ್ವ ಏಡಿನ ಕಾಲ ಹೇಳ್ವ ತೋಳ° ಬಲಾತ್ಕಾರವಾಗಿ ಕೊಲ್ಲುತ್ತು.

ಇದಂ ಕೃತಮಿದಂ ಕಾರ್ಯಮಿದಮನ್ಯತ್ಕೃತಾಕೃತಮ್ ।
ಏವಮೀಹಾಸಮಾಯುಕ್ತಂ ಕೃತಾಂತಃ ಕುರುತೇ ವಶಮ್ ॥೪೦॥

ಇದರ ಮಾಡಿದೆ, ಇದರ ಮಾಡೇಕ್ಕಾಗಿದ್ದು, ಇನ್ನೊಂದರ ರಜಾ ಮಾಡಿದೆ, ರಜಾ ಮಾಡ್ಳೆ ಇದ್ದು – ಹೀಂಗೆ ಅಪೇಕ್ಷೆಯಿಪ್ಪವನ ಯಮ° ತನ್ನ ವಶಮಾಡಿಗೊಳ್ಲುತ್ತ°.

ಶ್ವಃ ಕಾರ್ಯಮದ್ಯ ಕುರ್ವೀತ ಪೂರ್ವಾಹ್ಣೇ ಚಾಪರಾಹ್ಣಿಕಮ್ ।
ನ ಹಿ ಮೃತ್ಯುಃ ಪ್ರತೀಕ್ಷೇತ ಕೃತಂ ವಾಪ್ಯಥವಾsಕೃತಮ್ ॥೪೧॥

ನಾಳೆಯಾಣ ಕೆಲಸ ಇಂದೇ, ಅಪರಾಹ್ನದ ಕೆಲಸ ಪೂರ್ವಾಹ್ನಲ್ಲೇ ಮಾಡೆಕು. ಮೃತ್ಯು ಇವ° ಕೆಲಸ ಮಾಡಿದ್ದನೋ ಇಲ್ಯೋ ಹೇದು ಕಾದುಕೂರ್ತನಿಲ್ಲೆ.

ಜರಾದರ್ಶಿತಪಂಥಾನಂ ಪ್ರಚಂಡವ್ಯಾಧಿ ಸೈನಿಕಮ್ ।
ಮೃತ್ಯುಶತ್ರುಪ್ರಧಿಷ್ಠೋsಸಿ ತ್ರಾತರಂ ಕಿಂ ನ ಪಶ್ಯಸಿ ॥೪೨॥

ವೃದ್ಧಾವಸ್ಥೆ ತೋರುಸುವ ಮಾರ್ಗಲ್ಲಿ ಬಪ್ಪ ಪ್ರಚಂಡರೋಗಂಗೊ ಹೇಳ್ವ ಸೈನಿಕರಿಪ್ಪ ಮೃತ್ಯು ಹೇಳ್ವ ಶತ್ರು ಮೇಗೆ ಬೀಳುತ್ತು. ರಕ್ಷಕನಾದ ಪರಮೇಶ್ವರನ ಏಕೆ ನೋಡುತ್ತಿಲ್ಲೆ?!
ತೃಷ್ಣಾಸೂಚೀವಿನಿರ್ಭಿನ್ನಂ ಸಿಕ್ತಂ ವಿಷಯಸರ್ಪಿಷಾ ।
ರಾಗದ್ವೇಷಾನಲೇ ಪಕ್ವಂ ಮೃತ್ಯುರಶ್ನಾತಿ ಮಾನವಮ್ ॥೪೩॥

ದುರಾಸೆ ಹೇಳ್ವ ಚೂಪಾದ ಆಯುಧಂದ ಚೂರು ಚೂರು ಮಾಡಲ್ಪಟ್ಟ ವಿಷಯ ತುಪ್ಪಂದ ಅದ್ದಿದ ರಾಗದ್ವೇಷ ಹೇಳ್ವ ಕಿಚ್ಚಿಲ್ಲಿ ಬೇಶಿದ ಮನುಷ್ಯನ ಮೃತ್ಯು ತಿಂತು.

ಬಾಲಾಂಶ್ಚ ಯೌವನಸ್ಥಾಂಶ್ಚ ವೃದ್ಧಾನ್ಗರ್ಭಗತಾನಪಿ ।
ಸರ್ವಾನಾವಿಶತೇ ಮೃತ್ಯುರೇವಂ ಭೂತಮಿದಂ ಜಗತ್ ॥೪೪॥

ಬಾಲಾವಸ್ಥೆಲಿ, ಯೌವನಾವಸ್ಥೆಲಿ, ವೃದ್ಧಾವಸ್ಥೆಲಿ, ಗರ್ಭಾವಸ್ಥೆಲಿ ಇಪ್ಪವರಲ್ಲಿ ಎಲ್ಲರಲ್ಲಿಯೂ ಮೃತ್ಯು ಪ್ರವೇಶಿಸುತ್ತು. ಈ ಜಗತ್ತು ಈ ರೀತಿಯಾಗಿದ್ದು.

ಸ್ವದೇಹಮಪಿ ಜೀವೋsಯಂ ಮುಕ್ತ್ವಾ ಯಾತಿ ಯಮಾಲಯಮ್ ।
ಸ್ತ್ರೀಮಾತೃಪಿತೃಪುತ್ರಾದಿಸಂಬಂಧಃ ಕೇನ ಹೇತುನಾ ॥೪೫॥

ಈ ಜೀವ ತನ್ನ ದೇಹವನ್ನೇ ಬಿಟ್ಟಿಕ್ಕಿ ಯಮಾಲಯಕ್ಕೆ ಹೋವುತ್ತು. ಇನ್ನು ಹೆಂಡತಿ, ಅಬ್ಬೆ, ಅಪ್ಪ, ಮಕ್ಕೊ ಇತ್ಯಾದಿಗಳ ಸಂಬಂಧಂದ ಪ್ರಯೋಜನ ಎಂತರ?

ದುಃಖಮೂಲಂ ಹಿ ಸಂಸಾರಃ ಸ ಯಸ್ಯಾಸ್ತಿ ಸ ದುಃಖಿತಃ ।
ತಸ್ಯ ತ್ಯಾಗಃ ಕೃತೋ ಯೇನ ಸ ಸುಖೀ ನಾಪರಃ ಕ್ವಚಿತ್ ॥೪೬॥

ಈ ಸಂಸಾರ ದುಃಖವಾಲವಾಗಿದ್ದು. ಮತ್ತೆ ಅದರ್ಲಿ ಇಪ್ಪವ° ದುಃಖಿತನಾಗಿರುತ್ತ°. ಅದರ ತ್ಯಾಗ ಮಾಡುವವ° ಸುಖಿಯಾಗಿರುತ್ತ°. ಇನ್ನಿಪ್ಪವು ಎಂದಿಂಗೂ ಸುಖಿಯಾಗಿರುತ್ತವಿಲ್ಲೆ.

ಪ್ರಭವಂ ಸರ್ವದುಃಖಾನಾಮಾಲಯಂ ಸಕಲಾಪದಾಮ್ ।
ಆಶ್ರಯಂ ಸರ್ವಪಾಪಾನಾಂ ಸಂಸಾರಂ ವರ್ಜಯೇತ್ ಕ್ಷಣಾತ್ ॥೪೭॥

ಎಲ್ಲ ದುಃಖಂಗೊಕ್ಕೂ ಜೆನ್ಮಸ್ಥಾನವಾದ, ಎಲ್ಲ ತೊಂದರೆಗೊಕ್ಕೂ ಆಲಯವಾದ, ಎಲ್ಲ ಪಾಪಂಗೊಕ್ಕೂ ಆಶ್ರಯವಾದ ಈ ಸಂಸಾರವ ತಕ್ಷಣ ಬಿಡೆಕು.

ಲೋಹದಾರುಮಯೈಃ ಪಾಶೈಃ ಪುಮಾನ್ಬದ್ಧೋ ವಿಮುಚ್ಯತೇ ।
ಪುತ್ರದಾರಾಮಯೈಃ ಪಾಶೈರ್ಮುಚ್ಯತೇ ನ ಕದಾಚನ ॥೪೮॥

ಲೋಹ ಮತ್ತೆ ಮರಂದ ಮಾಡಿದ ಪಾಶಂದ ಬಂಧಿತನಾದವ° ಬಿಡಿಸಿಗೊಳ್ತ°. ಆದರೆ ಹೆಂಡತಿ ಮತ್ತೆ ಮಕ್ಕಳ ಪಾಶಂದ ಮಾತ್ರ ಎಂದಿಂಗೂ ಬಿಡಿಸಿಗೊಂಬಲೆ ಎಡಿಗಾವ್ತಿಲ್ಲೆ.

ಯಾವಂತಃ ಕುರುತೇ ಜಂತುಃ ಸಂಬಂಧಾನ್ಮನಸಃ ಪ್ರಿಯಾನ್ ।
ತಾವಂತೋsಸ್ಯ ನಿಖನ್ಯಂತೇ ಹೃದಯೇ ಶೋಕಶಂಕವಃ ॥೪೯॥

ಜೀವಿ ಮನಸ್ಸಿಲ್ಲಿ ಎಷ್ಟು ಜೆನರ ಪ್ರೇಮಸಂಬಂಧವ ಮಾಡುತ್ತನೋ ಅಷ್ಟೇ ಶೋಕ ಹೇಳ್ವ ಭರ್ಜಿಗೊ ಅವನ ಹೃದಯಲ್ಲಿ ಚುಚ್ಚುತ್ತು.

ವಂಚಿತಾಶೇಷವಿತ್ತೈಸ್ತ್ರೈರ್ನಿತ್ಯಂ ಲೋಕೋ ವಿನಾಶಿತಃ ।
ಹಾ ಹಂತ ವಿಷಯಾಹಾರೈರ್ದೇಹಸ್ಥೇಂದ್ರಿಯತಸ್ಕರೈಃ ॥೫೦॥

ಹಾ! ಹೂ! ವಿಷಯಂಗಳನ್ನೇ ಆಹಾರವಾಗಿಸಿಗೊಂಡಿಪ್ಪ ದೇಹಲ್ಲಿಪ್ಪ ಇಂದ್ರಿಯಂಗೊ ಹೇಳ್ವ ಚೋರರು ನಿತ್ಯವೂ ಸಂಪೂರ್ಣ ಧನವ ವಂಚಿಸಿ, ಲೋಕವ ನಾಶಗೊಳುಸುತ್ತವು.

ಮಾಂಸಲುಬ್ಧೋ ಯಥಾ ಮತ್ಸ್ಯೋ ಲೋಹಶಂಕುಂ ನ ಪಶ್ಯತಿ ।
ಸುಖೇ ಲುಬ್ಧಸ್ತಥಾ ದೇಹೀ ಯಮಬಾಧಾಂ ನ ಪಶ್ಯತಿ ॥೫೧॥

ಮಾಂಸವ ಆಶಿಸುವ ಮತ್ಸ್ಯ ಏವ ರೀತಿ ಲೋಹದ ಕೊಕ್ಕೆಯ ನೋಡುತ್ತಿಲ್ಯೋ, ಅದೇ ರೀತಿ ಸುಖಲೋಲುಪನಾದ ದೇಹಿ ಯಮಯಾತನೆಯ ನೋಡುತ್ತನಿಲ್ಲೆ (ಗಣ್ಯಮಾಡ್ತನಿಲ್ಲೆ).

ಹಿತಾಹಿತಂ ನ ಜಾನಂತೋ ನಿತ್ಯಮುನ್ಮಾರ್ಗಗಾಮಿನಃ ।
ಕುಕ್ಷಿಪೂರಣನಿಷ್ಠಾ ಯೇ ತೇ ನರಾ ನಾರಕಾಃ ಖಗ ॥೫೨॥

ಹೇ ಗರುಡ!, ಆರು ಹಿತ ಮತ್ತೆ ಅಹಿತವ ಅರ್ತುಗೊಂಡಿರ್ತವಿಲ್ಯೋ, ಸದಾ ದುರ್ಮಾರ್ಗಲ್ಲಿ ಹೋಗ್ಯೊಂಡಿರ್ತವೋ ಮತ್ತೆ ತಮ್ಮ ಹೊಟ್ಟೆ ತುಂಬುಸುತ್ತರ್ಲೇ ನಿರತರಾಗಿರ್ತವೋ, ಆ ಮನುಷ್ಯರು ನರಕಕ್ಕೆ ಹೋಪವರಾವ್ತವು.

ನಿದ್ರಾದಿಮೈಥುನಾಹಾರಾಃ ಸರ್ವೇಷಾಂ ಪ್ರಾಣಿನಾಂ ಸಮಾಃ ।
ಜ್ಞಾನವಾನ್ಮಾನವಃ ಪ್ರೋಕ್ತೋ ಜ್ಞಾನಹೀನಃ ಪಶುಃ ಸ್ಮೃತಃ ॥೫೩॥

ನಿದ್ರಾ,ಮೈಥುನ ಮತ್ತೆ ಆಹಾರಂಗೊ ಎಲ್ಲಾ ಪ್ರಾಣಿಗಳಲ್ಯೂ ಒಂದೇ ಹಾಂಗೆ ಇಪ್ಪದು. ಆದರೆ ಮಾನವ° ಜ್ಞಾನವಂತ° ಹೇದು ಕರೆಯಲ್ಪಡುತ್ತ°. ಜ್ಞಾನಹೀನ° ಪಶು ಹೇದು ತಿಳಿಯಲ್ಪಡುತ್ತ°.

ಪ್ರಭಾತೇ ಮಲಮೂತ್ರಾಭ್ಯಾಂ ಕ್ಷುತ್ತೃಡ್ಭ್ಯಾಂ ಮಧ್ಯಗೇ ರವೌ ।
ರಾತ್ರೌ ಮದನನಿದ್ರಾಭ್ಯಾಂ ಬಾಧ್ಯಂತೇ ಮೂಢಮಾನವಾಃ ॥೫೪॥

ಪ್ರಾತಃಕಾಲಲ್ಲಿ ಮಲಮೂತ್ರಂಗಳಿಂದಲೂ, ಸೂರ್ಯ° ಆಕಾಶದ ನೆಡುಕಂಗೆ ಬಂದಪ್ಪಗ ಹಶು ಆಸರಂಗಳಿಂದಲೂ, ಇರುಳಿಲ್ಲಿ ಕಾಮ, ನಿದ್ರೆಗಳಿಂದಲೂ ಮೂಢ ಮನುಷ್ಯರು ಬಾಧಿಸಲ್ಪಡುತ್ತವು.

ಸ್ವದೇಹಧನದಾರಾದಿನಿರತಾಃ ಸರ್ವಜಂತವಃ ।
ಜಾಯಂತೇ ಚ ಮ್ರಿಯಂತೇ ಚ ಹಾ ಹಂತಾಜ್ಞಾನಮೋಹಿತಾಃ ॥೫೫॥

ಹೋ! ಹು!, ತನ್ನ ದೇಹ, ಧನ, ಹೆಂಡತಿ ಮತ್ತಿತರ ವಸ್ತುಗಳಲ್ಲಿ ನಿರತರಾಗಿಪ್ಪ ಎಲ್ಲ ಜೀವಿಗಳೂ ಅಜ್ಞಾನಂದ ಮೋಹಿತರಾಗಿ ಹುಟ್ಟುತ್ತವು ಮತ್ತೆ ಸಾಯ್ತವು.

ತಸ್ಮಾತ್ಸಂಗಃ ಸದಾ ತ್ಯಾಜ್ಯಃ ಸರ್ವಸ್ತ್ಯಕ್ತುಂ ನ ಶಕ್ಯತೇ ।
ಮಹದ್ಭಿಃ ಸಹ ಕರ್ತವ್ಯಃ ಸಂತಃ ಸಂಗಸ್ಯ ಭೇಷಜಮ್ ॥೫೬॥

ಹಾಂಗಾಗಿ ಸಂಗವ ಏವತ್ತೂ ಬಿಡೆಕು. ಸರ್ವಸಂಗಂಗಳ ತ್ಯಾಗಮಾಡ್ಳೆ (ಬಿಟ್ಟಿಕ್ಕಲೆ) ಎಡಿಗಾಗದ್ದವ° ಶ್ರೇಷ್ಠ ಜೆನರ ಸಂಗವ ಮಾಡೆಕು. ಸಜ್ಜನರೇ ಸಂಗದ ಔಷಧಿ.

ಸತ್ಸಂಗಶ್ಚ ವಿವೇಕಶ್ಚ ನಿರ್ಮಲಂ ನಯನದ್ವಯಮ್ ।
ಯಸ್ಯ ನಾಸ್ತಿ ನರಃ ಸೋsಂಧಃ ಕಥಂ ನ ಸ್ಯಾದಮಾರ್ಗಗಃ ॥೫೭॥

ಸತ್ಸಂಗ ಮತ್ತೆ ವಿವೇಕ – ಇವು ನಿರ್ಮಲವಾದ ಎರಡು ಕಣ್ಣುಗೊ. ಇವುಗೊ ಇಲ್ಲದ್ದೆ ಇಪ್ಪ ಮನುಷ್ಯ° ಕುರುಡ°. ಅವ° ಹೇಂಗೆ ದುರ್ಮಾರ್ಗಲ್ಲಿ ಹೋಗದ್ದೆ ಇಪ್ಪಲೆಡಿಗು?!

ಸ್ವಸ್ವವರ್ಣಾಶ್ರಮಾಚಾರನಿರತಾಃ ಸರ್ವಮಾನವಾಃ ।
ನ ಜಾನಂತಿ ಪರಂ ಧರ್ಮಂ ವೃಥಾ ನಶ್ಯಂತಿ ದಾಂಭಿಕಾಃ ॥೫೮॥

ತಮ್ಮ ತಮ್ಮ ವರ್ಣ ಆಶ್ರಮ ಮತ್ತೆ ಆಚಾರಂಗಳಲ್ಲೇ ನಿರತರಾಗಿ ಮೋಕ್ಷಧರ್ಮವ ಅರ್ತುಗೊಳ್ಳದ್ದ ದಾಂಭಿಕರಾದ ಮನುಷ್ಯರು ಎಲ್ಲೋರು ವ್ಯರ್ಥವಾಗಿ ನಾಶವಾವ್ತವು.

 

ಗದ್ಯರೂಪಲ್ಲಿ –

ವೃದ್ಧಾಪ್ಯವು ಹುಲಿಯ ಹಾಂಗೆ ಎದುರು ಬಂದು ನಿಲ್ಲುತ್ತು, ಆಯಸ್ಸು ಒಟ್ಟೆ ಮಡಕೆಯ ನೀರಿನಾಂಗೆ ಮುಗುದು ಹೋವ್ತು, ರೋಗ ಶತ್ರುವಿನ ಹಾಂಗೆ ಹರುದುಬೀಳುತ್ತು., ಹಾಂಗಾಗಿ, ಶ್ರೇಯಃಪ್ರಾಪ್ತಿಗೆ ಬೇಕಾಗಿ ನಾವು ಏವತ್ತೂ ಪ್ರಯತ್ನಿಸೆಕು. ಎಲ್ಲಿವರೆಂಗೆ ದುಃಖ ಪ್ರಾಪ್ತಿಯಾವ್ತಿಲ್ಯೋ, ಅಲ್ಲಿವರೆಂಗೆ ಆಪತ್ತುಗೊ ಆಕ್ರಮಣ ಮಾಡುತ್ತಿಲ್ಲೆ, ಮತ್ತೆ, ಎಲ್ಲಿವರೆಂಗೆ ಇಂದ್ರಿಯಂಗಳಲ್ಲಿ ಶಿಥಿಲತೆ ಉಂಟಾವುತ್ತಿಲ್ಯೋ, ಅಲ್ಲಿವರೆಂಗೆ ಶ್ರೇಯಃಪ್ರಾಪ್ತಿಗೆ ಬೇಕಾಗಿ ಪ್ರಯತ್ನಪಡೆಕು. ಎಲ್ಲಿವರೆಂಗೆ ಶರೀರ ಇರ್ತೋ ಅಲ್ಲಿವರೇಂಗೆ ತತ್ತ್ವಜ್ಞಾನದ ಅಭ್ಯಾಸ ಮಾಡೆಕು. ಮನಗೆ ಕಿಚ್ಚು ಹಿಡುದಪ್ಪಗ ಬಾವಿ ತೋಡ್ತ ಬುದ್ಧಿಹೀನ ಮನುಷ್ಯ ಎಲ್ಯಾರು ಇಕ್ಕೋ!. ಈ ಸಂಸಾರದ ನಾನಾಕಾರ್ಯಂಗಳಲ್ಲಿ ತಲ್ಲೀನನಾಗಿಹೋವ್ತರಂದಲಾಗಿ ಕಾಲದ ಜ್ಞಾನ ಉಂಟಾವ್ತಿಲ್ಲೆ. ಮನುಷ್ಯ ಸುಖದುಃಖಂಗಳಲ್ಲಿ ಸಿಲುಕಿ ತನ್ನ ಹಿತವ ಅರ್ತುಗೊಳ್ಳುತ್ತನಿಲ್ಲೆ.

ಈ ಪ್ರಪಂಚಲ್ಲಿ ಮನುಷ್ಯರು ಹುಟ್ಟಿದನವರ, ಆರ್ತರ, ಸತ್ತವರ, ಆಪತ್ತಿಲ್ಲಿ ಸಿಕ್ಕಿಗೊಂಡವರ ಮತ್ತೆ ದುಃಖಿಗಳ ನೋಡಿಯೂ ಜೆನಂಗೊ ಮೋಹ ಹೇಳ್ವ ಸುರವ (ಅಮಲಿನ) ಪಾನ ಮಾಡ್ವದರಿಂದ ಏವತ್ತೂ ಹೆದರುತ್ತವಿಲ್ಲೆ. ಭೌತಿಕ ಸಂಪತ್ತು ಕನಸಿಂಗೆ ಸಮಾನ (ನಶ್ವರ-ಕ್ಷಣಭಂಗುರ). ಯೌವನ ಹೂಗಿಂಗೆ ಸಮಾನ (ಮುದುಡಿ ಹೋಪಂತಾದ್ದು), ಆಯಸ್ಸು ಮೋಡಂಗಳ ಎಡೆಲಿ ಹೊಳವ ಮಿಂಚಿನ ಹಾಂಗೆ ಚಂಚಲ. ಇವೆಲ್ಲವ ಅರ್ತೊಂಡೂ ಕೂಡ ಮನುಷ್ಯಂಗೆ ಹೇಂಗೆ ಧೈರ್ಯ ಬತ್ತೋ!. ಮನುಷ್ಯಂಗೆ ಇಪ್ಪ ನೂರುವೊರಿಶ ಆಯಸ್ಸು ಹೇಳ್ಸು ತುಂಬ ಕಮ್ಮಿಯೇ. ಅದರ್ಲಿ ಒರಕ್ಕು, ಉದಾಸನ ಸೇರಿಗೊಂಡು ಆಯಸ್ಸಿನ ಅರ್ಧಭಾಗ ಕಳದುಹೋವ್ತು. ಮತ್ತೆ ಉಳುದ ಅರ್ಧಭಾಗ ಬಾಲ್ಯಾವಸ್ಥೆ, ರೋಗ ಮತ್ತೆ ತೊಂಡ° ಆದಪ್ಪಗ ಅಪ್ಪ ದುಃಖಂದಲಾಗಿ ವ್ಯಯ ಆವ್ತು. ಮತ್ತೆ ರಜಾ ಉಳುದರೆ ಅದು ಕೂಡ ನಿಷ್ಫಲವಾಗಿಯೇ ಕಳದುಹೋವ್ತು.

ಈ ಜೀವನಲ್ಲಿ ಮಾಡೇಕ್ಕಾದ್ದರ ಮಾಡ್ಳೆ ಇಲ್ಲೆ, ಎಚ್ಚರ ಇರೆಕಾಗಿಪ್ಪಗ ಒರಗ್ಯೊಂಡಿರುತ್ತ°, ಹೆದರೇಕ್ಕಾದ್ದರ್ಲಿ ವಿಶ್ವಾಸ ಮಡಿಕ್ಕೊಂಡಿರುತ್ತ°. ಅಹಿತವ ಹಿತ ಹೇದೂ, ಅಸ್ಥಿರವಾದ್ದರ ಸ್ಥಿರ ಹೇದೂ, ಅನುಚಿತವ ಉಚಿತ ಹೇದೂ ತಿಳ್ಕೊಂಬವ° ತನಗೆ ಒಳ್ಳೆದು ಏವುದು ಹೇಳ್ವದರ ತಿಳಿತ್ತನಿಲ್ಲೆ. ದೇವಮಾಯೆಂದ ಮೋಹಿತನಾದವ° ನೋಡಿಗೊಂಡೇ ಜಾರಿ ಬೀಳುತ್ತ°, ಕೇಟರೂ ಅರ್ತುಗೊಳ್ಳುತ್ತನಿಲ್ಲೆ, ಓದಿರೂ ತಿಳ್ಕೊಳ್ಳುತ್ತನಿಲ್ಲೆ.

ಮೃತ್ಯು, ರೋಗ, ವೃದ್ಧಾಪ್ಯರೂಪೀ ಈ ಕಾಲಸಾಗರಲ್ಲಿ ಮುಂಗುತ್ತಿಪ್ಪ ಈ ಜಗತ್ತಿನ ಆರಿಂದಲೂ ಕೂಡ ಅರ್ಥೈಸಿಗೊಂಬಲೆ ಎಡಿಯ. ಹಸಿಮಣ್ಣಮಡಕೆಯ ನೀರು ಹೇಂಗೆ ಇಂಗಿ ಹೋಪದು ಹೇಂಗೆ ನವಗರಡಿಯದ್ದೆ ಹೋವ್ತೋ, ಹಾಂಗೇ ಕ್ಷಣಕ್ಷಣಕ್ಕೆ ಗತಿಸಿ ಹೋಪ ಈ ಕಾಲದ ಸೂಕ್ಷ್ಮಗತಿ ಜೀವಿಯ ಗಮನಕ್ಕೆ ಬಾರದ್ದೆ ಇಕ್ಕು. ಏವತ್ತಾರೊಂದರಿ ವಾಯುವ ಸ್ಥಂಭನ ಮಾಡ್ಳೆ ಎಡಿಗು, ಅಕಾಶವ ಕೊಚ್ಚಿ ತುಂಡು ಮಾಡ್ಳೆಡಿಗು, ತರಂಗಂಗಳ ಗುಂಪುಗೂಡುಸುವ ಅಸಂಭವವ ಸಂಭವ ಹೇದು ಕಲ್ಪನೆ ಕೂಡ ಮಾಡ್ಳೆ ಎಡಿಗು, ಆದರೆ, ಆಯಸ್ಸಿನ ಶಾಶ್ವತಗೊಳುಸುವ ಆಸ್ಥೆಯ (ಸ್ಥಿತಿಯ) ಕಲ್ಪನೆ ಮಾತ್ರ ಅಸಂಭವ.

ಯೇವ ಕಾಲನ ಮಹಿಮೆಂದ ಪೃಥ್ವಿ ಭಸ್ಮವಾಗಿ ಹೋವುತ್ತೋ, ಮೇರುಪರ್ವತ ಸಾನ ಛಿದ್ರ-ಛಿದ್ರವಾಗಿ ಹೋವ್ತೋ, ಸಮುದ್ರದ ನೀರು ಸಾನ ಬತ್ತಿ ಹೋವ್ತೋ, ಅಂಥ ಕಾಲನ ಕೈಂದ ಮನುಷ್ಯನ ಶರೀರದ ರಕ್ಷಣೆ ಮಾತ್ರ ಹೇಂಗೆ ಎಡಿಗಕ್ಕು! . ಎನ್ನ ಮಕ್ಕೊ, ಎನ್ನ ಹೆಂಡತಿ, ಎನ್ನ ಸಂಪತ್ತು, ಎನ್ನ ಬಂಧುಗೊ – ಈ ರೀತಿ ಹೇಳುವ ಮರ್ತ್ಯ ಹೇಳ್ವ ಏಡಿನ ಕಾಲ ಹೇಳ್ವ ತೋಳ° ಬಲಾತ್ಕಾರವಾಗಿ ಕೊಲ್ಲುತ್ತು. ಇದರ ಮಾಡಿದೆ, ಇದರ ಮಾಡೇಕ್ಕಾಗಿದ್ದು, ಇನ್ನೊಂದರ ರಜಾ ಮಾಡಿದೆ, ರಜಾ ಮಾಡ್ಳೆ ಇದ್ದು – ಹೀಂಗೆ ಅಪೇಕ್ಷೆಯಿಪ್ಪವನ ಯಮ° ತನ್ನ ವಶಮಾಡಿಗೊಳ್ಲುತ್ತ°. ನಾಳೆಯಾಣ ಕೆಲಸ ಇಂದೇ, ಅಪರಾಹ್ನದ ಕೆಲಸ ಪೂರ್ವಾಹ್ನಲ್ಲೇ ಮಾಡೆಕು. ಮೃತ್ಯು ಇವ° ಕೆಲಸ ಮಾಡಿದ್ದನೋ ಇಲ್ಯೋ ಹೇದು ಕಾದುಕೂರ್ತನಿಲ್ಲೆ. ವೃದ್ಧಾವಸ್ಥೆ ತೋರುಸುವ ಮಾರ್ಗಲ್ಲಿ ಬಪ್ಪ ಪ್ರಚಂಡರೋಗಂಗೊ ಹೇಳ್ವ ಸೈನಿಕರಿಪ್ಪ ಮೃತ್ಯು ಹೇಳ್ವ ಶತ್ರು ಮೇಗೆ ಬೀಳುತ್ತು. ಹೀಂಗಿಪ್ಪಗ ಆ ಪ್ರಬಲ ಶತ್ರುವಿನ ಕೈಂದ ರಕ್ಷಣೆ ಮಾಡುವವನತ್ರೆ (ಪರಮಾತ್ಮನತ್ರೆ) ಏಕೆ ನೋಡುತ್ತಿಲ್ಲೆ?! ತೃಷೆರೂಪಿ ಶೂಲಂದ ಪೀಡಿತನಾದ ಮತ್ತೆ ವಿಷಯವಾಸನಾರೂಪಿ ತುಪ್ಪಂದ ಸಿಂಚನಗೊಂಡ ಹಾಂಗೂ ರಾಗ-ದ್ವೇಷರೂಪಿ ಅಗ್ನಿಲಿ ಬೆಂದ ಮನುಷ್ಯನ ಮೃತ್ಯು ನುಂಗಿಬಿಡ್ತು. ಈ ಜಗತ್ತು ಹೇಂಗಿದ್ದು ಹೇದರೆ, ಇದರಲ್ಲಿ ಮೃತ್ಯು ಮಕ್ಕೊ, ಯುವಕರು, ವೃದ್ಧರು, ಗರ್ಭಸ್ಥ ಶಿಶು ಜೀವಿಗೊ ಹೇದು ಎಲ್ಲವನ್ನೂ ಗ್ರಾಸ (ತುತ್ತು)ವನ್ನಾಗಿಸುತ್ತ°. ಏವಾಗ ಜೀವ ತನ್ನ ದೇಹವನ್ನೂ ಕೂಡ ಇಲ್ಲ್ಯೇ ಬಿಟ್ಟಿಕ್ಕಿ ಯಮಲೋಕಕ್ಕೆ ಹೋವ್ತು ಹೇದಾದಪ್ಪಗ, ಹೆಂಡತಿ, ಅಬ್ಬೆ, ಅಪ್ಪ, ಮಕ್ಕೊ ಇತ್ಯಾದಿಗಳೊಟ್ಟಿಂಗೆ ಏವ ಪ್ರಯೋಜನಕ್ಕೆ ಬೇಕಾಗಿ ಸಂಬಂಧವ ಮಡಿಕ್ಕೊಂಡಿರೆಕು!.

ದುಃಖಕ್ಕೆ ಮೂಲ ಕಾರಣ ಈ ಪ್ರಪಂಚ. ಹಾಂಗಾಗಿ, ಈ ಪ್ರಪಂಚದೊಟ್ಟಿಂಗೆ ಆರು ಸಂಬಂಧ ಮಡಿಕ್ಕೊಂಡಿರುತ್ತವೋ, ಅವು ದುಃಖಿಗೊ ಆಗಿರ್ತವು. ಮತ್ತೆ, ಅರು ಈ ಜಗತ್ತಿನ ತ್ಯಾಗ ಮಾಡಿರ್ತವೋ, ಆ ಮನುಷ್ಯನೇ ಸುಖಿಯಾಗಿರುತ್ತ°. ಅನ್ಯರು ಆರೂ ಎಲ್ಲ್ಯೂ ಸುಖಿಯಾಗಿರ್ತವಿಲ್ಲೆ. ಈ ಪ್ರಪಂಚ ಸಮಸ್ತ ಪ್ರಕಾರದ ದುಃಖಂಗಳ ಉತ್ಪತ್ತಿಸ್ಥಾನ, ಸಮಸ್ತ ಆಪತ್ತುಗಳ ಮನೆ ಆಗಿದ್ದು, ಮತ್ತೆ ಸಮಸ್ತ ಪಾಪಂಗಳ ಆಶ್ರಯಸ್ಥಾನವಾಗಿದ್ದು. ಹಾಂಗಾಗಿ ಇಂಥ ಪ್ರಪಂಚ (ಸಂಸಾರ)ವ ಕ್ಷಣಮಾತ್ರಲ್ಲಿ ಬಿಟ್ಟಿಕ್ಕೆಕು. ಲೋಹ ಮತ್ತೆ ಮರಂದ ಮಾಡಿದ ಪಾಶಂದ ಬಂಧಿಸಲ್ಪಟ್ಟ ಮನುಷ್ಯ ಬಂಧಮುಕ್ತನಪ್ಪಲೆ ಎಡಿಗು. ಆದರೆ ಮಕ್ಕೊ, ಹೆಂಡತಿರೂಪೀ ಪಾಶಂಗಳಿಂದ ಬಂಧಿತನಾದವ° ಎಂದಿಂಗೂ ಕೂಡ ಮುಕ್ತನಪ್ಪಲೆ ಎಡಿಯ.

ಮನುಷ್ಯ ಈ ಜಗತ್ತಿಲ್ಲಿ ತನ್ನ ಮನಸ್ಸಿಂಗೆ ಪ್ರಿಯ ಅಪ್ಪಂತಹ ಎಷ್ಟು ವಸ್ತು/ಪದಾರ್ಥಂಗಳೊಟ್ಟಿಂಗೆ ಸಂಬಂಧ ಹೊಂದಿಗೊಂಡಿರುತ್ತನೋ, ಅಷ್ಟೇ ಅಧಿಕ ಶೋಕದ ಆಣಿಗೆ ಅವನ ಹೃದಯ/ಮನಸ್ಸಿಲ್ಲಿ ಚುಚ್ಚಿಗೊಂಡು ಹೋವ್ತು. ಅತ್ಯಂತ ಖೇದದ ವಿಷಯ ಎಂತ ಹೇದರೆ, (ಮನುಷ್ಯನ ದೇಹಸ್ಥಿತ ಶಬ್ದ-ಸ್ಪರ್ಶ-ರೂಪ-ರಸ-ಗಂಧ), ವಿಷಯಂಗಳ ಆಹಾರ ಸೇವುಸುವ ಇಂದ್ರಿಯರೂಪೀ ಕಳ್ಳರು ಈ ಲೋಕದ ಸಮಸ್ತ ಧನವ ಅಪಹರಣಮಾಡಿ, ಅದರ ನಷ್ಟಗೊಳುಸುತ್ತವು. ಹೇದರೆ, ಪರಲೋಕಕ್ಕಾಗಿ ಹಿತಕಾರಿ ಧರ್ಮರೂಪಿ ಏವ ಧನ ಇದ್ದೋ ಅದರ ಇಂದ್ರಿಯಂಗೊ ಹರಣಮಾಡುತ್ತು. ಮಾಂಸಲೋಭಿ ಮೀನು ಗಾಳಕ್ಕೆ ಕಟ್ಟಿದ ಲೋಹದ ಅಂಕುಶದ ಬಗ್ಗೆ ಹೇಂಗೆ ತಿಳಿತ್ತಿಲ್ಲೆಯೋ, ಹಾಂಗೇ, ವಿಷಯಂಗಳಿಂದ ಪ್ರಾಪ್ತಿಯಪ್ಪ ಸುಖದ ಲೋಭಂದ ಜೀವ ಯಮಯಾತನೆಯ ಬಗ್ಗೆ ಗೊಡವೆ ಹೊಂದಿರುತ್ತನಿಲ್ಲೆ.

ಆರು ತನ್ನ ಹಿತ ಮತ್ತೆ ಅಹಿತವ ಅರ್ತುಗೊಂಡಿರುತ್ತವಿಲ್ಲೆಯೋ, ಆರು ಸದಾ ಕುಮಾರ್ಗಲ್ಲಿ (ದುಷ್ಪ್ರವೃತ್ತಿಲಿ) ನಡೆತ್ತವೋ, ಆರು ಏವತ್ತೂ ತನ್ನ ಹೊಟ್ಟೆ ತುಂಬ್ಸುತ್ತರಲ್ಲೇ ತಲ್ಲೀನರಾಗಿರುತ್ತವೋ ಅವೆಲ್ಲ ನರಕಗಾಮಿಗೊ ಆವುತ್ತವು. ಒರಕ್ಕು, ಮೈಥುನ, ಆಹಾರಾದಿಗೊ ಸ್ವಾಭಾವಿಕ ಪ್ರವೃತ್ತಿ ಸಮಸ್ತ ಜೀವಿಗೊಕ್ಕೂ ಸಮಾನವಾಗಿದ್ದು. ಅವರಲ್ಲಿ ಆರು ವಾಸ್ತವಿಕ ಹಿತ ಅಹಿತವ ತಿಳುದವು ಇರ್ತವೋ ಅವು ಜ್ಞಾನವಂತ ಮನುಷ್ಯರು ಎನಿಸಿಗೊಳ್ಳುತ್ತವು, ಆರು ಆ ಜ್ಞಾನ ಶೂನ್ಯರಾಗಿರ್ತವೋ ಅವು ಪಶುಗೊ ಹೇದು ಹೇಳ್ಸಿಗೊಳ್ಳುತ್ತವು.

ಮೂರ್ಖ ಮನುಷ್ಯರು ಪ್ರಾತಃಕಾಲಲ್ಲಿ ಮಲ-ಮೂತ್ರಂಗಳ ಒತ್ತಡಂದ, ಮಧ್ಯಾಹ್ನಲ್ಲಿ ಹಶು ಆಸರಂದ ಮತ್ತೆ ಇರುಳಿಲ್ಲಿ ಕಾಮಕ್ರೀಡೆ ಮತ್ತು ಒರಕ್ಕಿಂದ ಬಾಧಿತರಾಗಿರುತ್ತವು. ಅಜ್ಞಾನಂದ ಮೋಹಿತರಾಗಿ ಸಮಸ್ತ ಜೀವಿಗೊ ತಮ್ಮ ದೇಹ, ಧನ, ಹೆಂಡತಿ ಮುಂತಾದರ ಸಂಬಂಧಲ್ಲಿ ಆಸಕ್ತರಾಗಿ ಹುಟ್ಟು ಸಾವು ಹೇದು ಮತ್ತೆ ಮತ್ತೆ ಚಕ್ರಲ್ಲಿ ಸಿಕ್ಕಿಹಾಕ್ಯೊಂಡಿರ್ತವು. ಹಾಂಗಾಗಿ, ದೇಹ-ಮನೆ, ಹೆಂಡತಿ-ಮಗ ಮುಂತಾದ ಸಂಗಂದ ದೂರ ಇರೆಕು/ ತ್ಯಾಗಮಾಡಿಬಿಟ್ಟಿಕ್ಕೆಕು. ಒಂದುವೇಳೆ ತನ್ನ ವಿವೇಕಬಲಂದ ಅದರ ಸಮರ್ಥವಾಗಿ ತ್ಯಾಗಮಾಡ್ಳೆ ಎಡಿಗಾಯ್ದಿಲ್ಲೆ ಹೇದಾದರೆ ಮಹಾಪುರುಷರೊಟ್ಟಿಂಗೆ ಸಂಬಂಧ (ಸತ್ಸಂಗ) ಬೆಳೆಶೆಕು. ಎಂತಕೇದರೆ, ಸಂತ ಪುರುಷರು ಸಂಸಾರಾಸಕ್ತಿರೂಪೀ ವ್ಯಾಧಿಗೆ ಔಷಧಿಯಾಗಿರುತ್ತವು.

ಸತ್ಸಂಗ ಮತ್ತೆ ವಿವೇಕ – ಇವ್ವೆರಡೂ ಒಬ್ಬ ವ್ಯಕ್ತಿಯ ಎರಡು ನಿರ್ಮಲ ನೇತ್ರಂಗೊ. ಆರತ್ರೆ ಇದು ಇಲ್ಯೋ, ಅವ° ಕುರುಡನೇ ಸರಿ. ಆ ಅಂಧ° (ಕುರುಡ°) ದುರ್ಮಾರ್ಗಲ್ಲಿ ಹೋಗದ್ದೆ ಮತ್ತೆ ಎಂತಕ್ಕು?!. ತಮ್ಮ ತಮ್ಮ ವರ್ಣ ಮತ್ತೆ ಆಶ್ರಮ ಧರ್ಮಲ್ಲಿ ಶಾಸ್ತ್ರಬೋಧಿತ ಆಚಾರಂಗಳ ಪಾಲನೆ ಮಾಡ್ತದರ್ಲಿ ನಿರತರಾಗಿಪ್ಪ ಸಮಸ್ತ ಮನುಷ್ಯರು ಭಗವಂತನ ಪ್ರೀತಿಸಂಪಾದನಾ ಭಗವದ್ಭಕ್ತಿ ಧರ್ಮವ ಅರ್ತುಗೊಂಡಿರದ್ರೆ, ಆ ಅಹಂಕಾರಿಗೊ ದಾಂಭಿಕರಾಗಿ ವ್ಯರ್ಥವಾಗಿ ನಷ್ಟವಾಗಿ ಹೋವ್ತವು.

 

ಮುಂದೆ ಭಗವಂತ ಎಂತ ಹೇಯ್ದ°? ….   ಬಪ್ಪವಾರ ನೋಡ್ವೊ°

 

[ಚಿಂತನೀಯಾ –

ತಲಗೆ ಹೆಟ್ಟುತ್ತ ಹಾಂಗೆ ಹೆಟ್ಟಿ ಹೇಯ್ದ ಭಗವಂತ° ಈ ಭಾಗಲ್ಲಿ. ಇಷ್ಟು ಕೇಳಿಸಿಗೊಂಡ ಮತ್ತೆ ಇನ್ನೂ ಸ್ವಯಂ ಚಿಂತನೆ ಜಾಗೃತ ಆಗದ್ರೆ ಇನ್ನು ಜೆನ್ಮಲ್ಲಿ ಅಪ್ಪಲೆ ಇಲ್ಲೆ. ಈ ಜೆನ್ಮಲ್ಲಿ ಅಪ್ಪಲೆ ಇಲ್ಲೆ ಹೇದು ಆದರೆ ಇನ್ನು ಹೀಂಗಿರ್ತ ಇನ್ನೊಂದು ಜೆನ್ಮ ಸಿಕ್ಕುತ್ತದು ಎಷ್ಟು ಕೋಟಿ ಜೆನ್ಮಂಗಳ ಮತ್ತೆಯೋ ನವಗರಡಿಯ. ಹಾಂಗಾರೆ ಅಷ್ಟನ್ನಾರ ‘ಹುಟ್ಟು ಸಾವು’ ಸಂಸಾರ ಚಕ್ರಲ್ಲಿ ಸುತ್ತಿಗೊಂಡಿ ವಿಷಯಾಸಕ್ತಿಲ್ಯೇ ನಿರತನಾಗಿ ದುಃಖದ ಮೂಲಲ್ಲೇ ನರಳಿಗೊಂಡೇ ಇರೇಕ್ಕಾವ್ತು ಹೇಳ್ವದೇ ಈ ಭಾಗದ ಒಟ್ಟು ಚಿಂತನೀಯಾ. ಮಾನವ ಜೆನ್ಮ ಸಫಲತೆ ಕಾಣಲಿ, ಅದಕ್ಕೆ ಆ ಭಗವಂತ° ನಮ್ಮೆಲ್ಲರ ಪ್ರಚೋದಿಸಲಿ ಹೇದುಗೊಂಡು ಈ ಭಾಗಕ್ಕೆ ಹರೇ ರಾಮ.]

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ಕೆ. ವೆಂಕಟರಮಣ ಭಟ್ಟ

    ತುಂಬಾ ಯೋಚನೆ ಮಾಡುವ ವಿಚಾರ ಭಾವಾ, ಈ ಅಧ್ಯಾಯ ಓದುವಾಗ ನಮಗೂ ನಮ್ಮ ಸಂಸಾರಕ್ಕೂ ಯಾವ ಸಂಬಂಧ! ಯೋಚನೆ ಮಾಡಿರೆ ಬೇಜಾರಾವುತ್ತು. ಯಾರಿಂಗೋಸ್ಕರ ಇಷ್ಟು ದಿನ ಕಷ್ಟಪಟ್ಟಿದೋ, ಅವಕ್ಕೂ ನವಗೂ ಸತ್ತ ಮೇಲೆ ಯಾವುದೇ ಸಂಬಂಧ ಇಲ್ಲೆನ್ನೆ! ಜೀವನಲ್ಲಿ ವೈರಾಗ್ಯ ಉಂಟುಮಾದಿತ್ತು ಈ ಅಧ್ಯಾಯ. ಹರೇ ರಾಮ.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುಭಗಪೆಂಗಣ್ಣ°ಸುವರ್ಣಿನೀ ಕೊಣಲೆಕಳಾಯಿ ಗೀತತ್ತೆಮಾಲಕ್ಕ°ವಿನಯ ಶಂಕರ, ಚೆಕ್ಕೆಮನೆವೆಂಕಟ್ ಕೋಟೂರುಶ್ಯಾಮಣ್ಣದೊಡ್ಡಮಾವ°ಶರ್ಮಪ್ಪಚ್ಚಿಗಣೇಶ ಮಾವ°ಡಾಮಹೇಶಣ್ಣಪಟಿಕಲ್ಲಪ್ಪಚ್ಚಿವಿಜಯತ್ತೆಬೋಸ ಬಾವಕೆದೂರು ಡಾಕ್ಟ್ರುಬಾವ°ಪುಟ್ಟಬಾವ°ಅಕ್ಷರ°ಶ್ರೀಅಕ್ಕ°ಜಯಗೌರಿ ಅಕ್ಕ°ಒಪ್ಪಕ್ಕಬಟ್ಟಮಾವ°ಪೆರ್ಲದಣ್ಣಉಡುಪುಮೂಲೆ ಅಪ್ಪಚ್ಚಿಅಜ್ಜಕಾನ ಭಾವಶಾ...ರೀ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ