ಗರುಡಪುರಾಣ – ಅಧ್ಯಾಯ 16 – ಭಾಗ 03

ವರ್ಣಾಶ್ರಮಧರ್ಮಕ್ಕನುಗುಣವಾಗಿ ಮೋಕ್ಷಧರ್ಮವ ಅರ್ತುಗೊಂಬಲೆ ಎಡಿಗಾಗದ್ದವು ನಿಜವಾಗಿ ವ್ಯರ್ಥವಾಗಿ ಹೋವ್ತವು ಹೇಳಿದಲ್ಯಂಗೆ ಕಳುದ ವಾರದ ಭಾಗ. ಮುಂದೆ –

ಗರುಡಪುರಾಣ – ಅಧ್ಯಾಯ 16 – ಭಾಗ 03images

ಕ್ರಿಯಾಯಾಸಪರಾಃ ಕೇಚಿದ್ವ್ರತಚರ್ಯಾದಿ ಸಂಯುತಾಃ ।
ಅಜ್ಞಾನಸಂವೃತಾತ್ಮಾನಃ ಸಂಚರಂತಿ ಪ್ರತಾರಕಾಃ ॥೫೯॥

ವ್ರತನಿಯಮಾದಿಗಳಲ್ಲಿ ನಿರತರಾಗಿ, ಕರ್ಮಂಗಳಲ್ಲಿ ಶ್ರಮಪಡ್ವ ಕೆಲೋರು ಅಜ್ಞಾನಂದ ಆವೃತರಾಗಿ ವಂಚಕರ ಹಾಂಗೆ ವಿಚಾರ ಮಾಡುತ್ತವು.

ನಾಮಮಾತ್ರೇಣ ಸಂತುಷ್ಟಾಃ ಕರ್ಮಕಾಂಡರತಾ ನರಾಃ ।
ಮಂತ್ರೋಚ್ಛಾರಣ ಹೋಮದ್ಯೈರ್ಭ್ರಾಮಿತಾಃ ಕ್ರತುವಿಸ್ತರೈಃ ॥೬೦॥

ನಾಮಮಾತ್ರಕ್ಕೆ ಸಂತುಷ್ಟರಾದೋರು, ಕರ್ಮಕಾಂಡಲ್ಲಿ ನಿರತರಾದ ನರರು, ಮಂತ್ರೋಚ್ಛಾರಣೆ, ಹೋಮ ಇತ್ಯಾದಿಗಳಿಂದ ಯಜ್ಞದ ವಿಸ್ತಾರಂದ ಭ್ರಮಿತರಾಯ್ದವು.

ಏಕಭುಕ್ತೋಪವಾಸಾದ್ಯೈರ್ನಿಯಮೈಃ ಕಾಯಶೋಷಣೈಃ ।
ಮೂಢಾಃ ಪರೋಕ್ಷಮಿಚ್ಛಂತಿ ಮಮ ಮಾಯಾವಿಮೋಹಿತಾಃ ॥೬೧॥

ಎನ್ನ ಮಾಯೆಂದ ಮೋಹಿತರಾದ ಮೂಢರು ಏಕಭೋಜನ, ಉಪವಾಸ ಇತ್ಯಾದಿ ನಿಯಮಂಗಳಿಂದ ಶರೀರವ ಒಣಗುಸುತ್ತರ ಮೂಲಕ ಮೋಕ್ಷವ ಪಡವಲೆ ಬಯಸುತ್ತವು.

ದೇಹದಂಡನಮಾತ್ರೇಣ ಕಾ ಮುಕ್ತಿರವಿವೇಕಿನಾಮ್ ।
ವಲ್ಮೀಕತಾಡನಾದೇವ ಮೃತಃ ಕುತ್ರ ಮಹೋರಗಃ ॥೬೨॥

ಬರೇ ದೇಹದಂಡನೆ ಮಾಡ್ವದರಿಂದ ಅವಿಗೊಕ್ಕೆ ಮೋಕ್ಷ ಎಲ್ಲಿಂದ ಸಿಕ್ಕುತ್ತು ?!. ಹುತ್ತಕ್ಕೆ ಜೆಪ್ಪಿದಮಾತ್ರಂದಲೇ ಸರ್ಪ ಎಲ್ಲಿಂದ ಸಾಯ್ತು?!

ಜಟಾಭಾರಾಜಿನೈರ್ಯುಕ್ತಾ ದಾಂಭಿಕಾ ವೇಷಧಾರಿಣಃ ।
ಭ್ರಮಂತಿ ಜ್ಞಾನಿವಲ್ಲೋಕೇ ಭ್ರಾಮಯಂತಿ ಜನಾನಪಿ ॥೬೩॥

ಜಟಾಭಾರಂದ, ಮೃಗಚರ್ಮಂದ ಕೂಡಿ ವೇಷಧಾರಿಗಳಾದ ದಾಂಭಿಕ ಜೆನಂಗೊ ಜ್ಞಾನಿಗಳ ಹಾಂಗೆ ತಿರುಗುತ್ತವು, ಅಲ್ಲದ್ದೆ ಇತರ ಜೆನಂಗಳನ್ನೂ ಭ್ರಮೆಗೊಳುಸುತ್ತವು.

ಸಂಸಾರಜಸುಖಾಸಕ್ತಂ ಬ್ರಹ್ಮಜ್ಞೋsಸ್ಮೀತಿ ವಾದಿನಮ್ ।
ಕರ್ಮಬ್ರಹ್ಮೋಭಯಭ್ರಷ್ಟಂ ತಂ ತ್ಯಜೇದಂತ್ಯಜಂ ಯಥಾ ॥೬೪॥

ಸಂಸಾರಲ್ಲಿ ಉತ್ಪನ್ನವಾಗಿಪ್ಪ ಸುಖಂಗಳಲ್ಲಿ ಆಸಕ್ತನಾಗಿ, ‘ಆನು ಬ್ರಹ್ಮಜ್ಞ°’ ಹೇದು ವಾದುಸುವವನ, ಕರ್ಮ ಮತ್ತೆ ಬ್ರಹ್ಮ ಇವೆರೆಡರಿಂದಲೂ ಭ್ರಷ್ಟನಾದವನ, ಚಾಂಡಾಲನ ತ್ಯಜಿಸುವ ಹಾಂಗೆ ಬಿಟ್ಟುಬಿಡೆಕು.

ಗೃಹಾರಣ್ಯಸಮಾ ಲೋಕೇ ಹೃತವ್ರೀಡಾ ದಿಗಂಬರಾಃ ।
ಚರಂತಿ ಗರ್ದಭಾದ್ಯಾಶ್ಚ ವಿರಕ್ತಸ್ತೇ ಭವಂತಿ ಕಿಮ್ ॥೬೫॥

ಮನೆ ಮತ್ತೆ ಕಾಡುಗಳ ಒಂದೇ ಹೇದು ತಿಳುದು ನಾಚಿಕೆ ಇಲ್ಲದ್ದೆ ಬೆತ್ತಲು ಆಗಿ ತಿರುಗು ಕತ್ತೆ ಮುಂತಾದವು ವಿರಕ್ತರಾವುತ್ತವೋ ಎಂತ?!

ಮೃದ್ಭಸ್ಮೋದ್ಧೂಲನಾದೇವ ಮುಕ್ತಾಃ ಸ್ಯುರ್ಯದಿ ಮಾನವಾಃ ।
ಮೃದ್ಭಸ್ಮವಾಸೀ ಶ್ವಾ ಸ ಕಿಂ ಮುಕ್ತೋ ಭವಿಷ್ಯತಿ ॥೬೬॥

ಒಂದುವೇಳೆ ಮನುಷ್ಯ° ಮಣ್ಣು ಬೂದಿ ಮೈಗೆ ಮೆತ್ತಿಗೊಂಡ ಮಾತ್ರಕ್ಕೆ ಮುಕ್ತನಾವ್ತರೆ ನಿತ್ಯವೂ ಮಣ್ಣು ಬೂದಿಲಿ ಹೊಡಚ್ಚುವ ನಾಯಿ ಮುಕ್ತಿ ಹೊಂದುತ್ತೋ ಎಂತ?!

ತೃಣಪರ್ಣೋದಕಾಹಾರಾಃ ಸತತಂ ವನವಾಸಿನಃ ।
ಜಂಬೂಕಾಖುಮೃಗಾದ್ಯಾಶ್ಚ ತಾಪಸಾಸ್ತೇ ಭವಂತಿ ಕಿಮ್ ॥೬೭॥

ಹುಲ್ಲು ಸೊಪ್ಪು ನೀರು ಇವುಗಳ ಆಹಾರವಾಗಿ ಹೊಂದಿ, ಏವತ್ತೂ ಕಾಡಿಲ್ಲಿ ವಾಸಿಸುವ ನರಿ, ಎಲಿ, ಜಿಂಕೆ ಮೊದಲಾದವುಗೊ ತಪಸ್ವಿಗಳಾವುತ್ತವೋ ಎಂತ?!

ಆಜನ್ಮ ಮರಣಾಂತಂ ಚ ಗಂಗಾದಿತಟಿನೀಸ್ಥಿತಾಃ ।
ಮಂಡೂಕಮತ್ಸ್ಯಪ್ರಮುಖಾ ಯೋಗಿನಸ್ತೇ ಭವಂತಿ ಕಿಮ್ ॥೬೮॥

ಹುಟ್ಟಿಂದ ಸಾಯ್ತವರೇಂಗೆ ಗಂಗಾದಿ ನದಿಗಳಲ್ಲಿ ವಾಸಮಾಡ್ತ ಕೆಪ್ಪೆ, ಮೀನು ಇತ್ಯಾದಿಗೊ ಯೋಗಿಗೊ ಆವ್ತವೋ ಎಂತ?!

ಪಾರಾವತಾಃ ಶಿಲಾಹಾರಾಃ ಕದಾಚಿದಪಿ ಜಾತಕಾಃ ।
ನ ಪಿಬಂತಿ ಮಹೀತೋಯಂ ವ್ರತಿನಸ್ತೇ ಭವಂತಿ ಕಿಮ್ ॥೬೯॥

ಪಾರಿವಾಳ ಶಿಲಾಹಾರಿ. ಚಾತಕಪಕ್ಷಿ ಭೂಮಿಯ ಮೇಗೆ ಬಿದ್ದ ನೀರ ಎಂದಿಂಗೂ ಕುಡಿತ್ತಿಲ್ಲೆ. ಹಾಂಗೇದು ಅವು ವ್ರತಲ್ಲಿ ಇದ್ದವು ಹೇದು ಆವ್ತೋ ಎಂತ?!

ತಸ್ಮಾದಿತ್ಯಾದಿಕಂ ಕರ್ಮ ಲೋಕರಂಜನಕಾರಕಮ್ ।
ಮೋಕ್ಷಸ್ಯ ಕಾರಣಂ ಸಾಕ್ಷಾತ್ತತ್ತ್ವಜ್ಞಾನಂ ಖಗೇಶ್ವರ ॥೭೦॥

ಹೇ ಪಕ್ಷಿರಾಜನೇ!, ಈ ಕಾರ್ಯಂಗ ಎಲ್ಲ ಬರೇ ಲೋಕರಂಜನೆಗೆ ಅಕ್ಕಷ್ಟೆ. ಸಾಕ್ಷಾತ್ ತತ್ತ್ವಜ್ಞಾನ ಮಾಂತ್ರ ಮೋಕ್ಷದ ಸಾಧನೆ ಆಗಿದ್ದು.

ಷಟ್‍ದರ್ಶನ ಮಹಾಕೂಪೇ ಪತಿತಾಃ ಪಶವಃ ಖಗ ।
ಪರಮಾರ್ಥಂ ನ ಜಾನಂತಿ ಪಶುಪಾಶನಿಯಂತ್ರಿತಾಃ ॥೭೧॥

ಏ ಪಕ್ಷಿಯೇ!, ಷಟ್‍ದರ್ಶನ ಹೇಳ್ವ ಮಹಾಕೂಪಲ್ಲಿ ಬಿದ್ದು ಮೂರ್ಖರು ಪಶುತ್ವದ ಪಾಶಂದ ಬಂಧಿಸಲ್ಪಟ್ಟು ಪರಮಾರ್ಥವ ತಿಳಿತ್ತವಿಲ್ಲೆ.

ವೇದಶಾಸ್ತ್ರಾರ್ಣವೇ ಘೋರೇ ಊಹ್ಯಮಾನಾ ಇತಸ್ತತಃ ।
ಷಡೂರ್ಮಿನಿಗ್ರಸ್ತಾಸ್ತಿಷ್ಠಂತಿ ಹಿ ಕುತಾರ್ಕಿಕಾಃ ॥೭೨॥

ವೇದ ಶಾಸ್ತ್ರ ಹೇಳ್ವ ಘೋರವಾದ ಸಮುದ್ರಲ್ಲಿ ಇಲ್ಲಿಂದಲ್ಲಿಗೆ ಊಹೆ ಮಾಡ್ತವು ಆರು ಅಲೆಗಳಿಂದ (ಹಶು-ಆಸರ-ಶೋಕ-ಮೋಹ-ಜನನ-ಮರಣ = ಷಡೂರ್ಮಿ = ಆರು ಅಲೆ)) ತಡೆಹಿಡಿಯಲ್ಪಟ್ಟು ಕುತರ್ಕಿಗೊ ಆಗಿ ನಿಲ್ಲುತ್ತವು.

ವೇದಾಗಮಪುರಾಣಜ್ಞಃ ಪರಮಾರ್ಥಂ ನ ವೇತ್ತಿ ಯಃ ।
ವಿಡಂಬಕಸ್ಯ ತಸ್ಯೈವ ತತ್ಸರ್ವಂ ಕಾಕಭಾಷಿತಮ್ ॥೭೩॥

ವೇದ, ಆಗಮ, ಪುರಾಣಂಗಳ ತಿಳುದಿದ್ದರೂ ಆರೂ ಪರಮಾರ್ಥವ ತಿಳಿತ್ತ ಇಲ್ಯೋ, ಆ ಬೂಟಾಟಿಕೆಯವ° ತಿಳ್ಕೊಂಡಿಪ್ಪದೆಲ್ಲವೂ ಕಾಕೆಮಾತಿನಾಂಗೇ ಆಗಿರ್ತು.

ಇದಂ ಜ್ಞಾತಮಿದಂ ಜ್ಞೇಯಮಿತಿ ಚಿಂತಾಸಮಾಕುಲಾಃ ।
ಪಠಂತ್ಯಹರ್ನಿಶಂ ಶಾಸ್ತ್ರಂ ಪರತತ್ತ್ವ ಪರಾಙ್ಮುಖಾಃ ॥೭೪॥

‘ಇದು ಗೊಂತಿದ್ದು, ಇದು ಗೊಂತಾಯೆಕ್ಕಾದ್ದು’ – ಹೀಂಗೆ ಕಾತರರಾಗಿ ಹಗಲೂ ಇರುಳೂ ಪರತತ್ವಂದ ವಿಮುಖರಾಗಿ ಶಾಸ್ತ್ರಂಗಳ ಓದುತ್ತವು.

ವಾಕ್ಯಚ್ಛಂದೋನಿಬಂಧೇನ ಕಾವ್ಯಾಲಂಕಾರಶೋಭಿತಾಃ ।
ಚಿಂತಯಾ ದುಃಖಿತಾ ಮೂಢಾಸ್ತಿಷ್ಠಂತಿ ವ್ಯಾಕುಲೇಂದ್ರಿಯಾಃ ॥೭೫॥

ಕಾವ್ಯ ಅಲಂಕಾರಂದ ಶೋಭಿತವಾಗಿಪ್ಪ ಛಂದಸ್ಸು, ನಿಬಂಧಂಗಳಿಂದ ಕೂಡಿದ ವಾಕ್ಯಂಗಳ ಚಿಂತನೆಲಿ ಮೂಢರು ಕಳವಳಗೊಂಡ ಇಂದ್ರಿಯಂಗಳಿಂದ ಕೂಡಿ ದುಃಖಿತರಾವುತ್ತವು.

ಅನ್ಯಥಾ ಪರಮಂ ತತ್ತ್ವಂ ಜನಾಃ ಕ್ಲಿಶ್ಯಂತಿ ಚಾನ್ಯಥಾ ।
ಅನ್ಯಥಾ ಶಾಸ್ತ್ರಸದ್ಭಾವೋ ವ್ಯಾಖ್ಯಾಂ ಕುರ್ವಂತಿ ಚಾನ್ಯಥಾ ॥೭೬॥

ಪರಮತತ್ತ್ವವೇ ಬೇರೆ. ಜನಂಗೊ ಕಷ್ಟಪಡುವದೇ ಬೇರೆದಕ್ಕೆ. ಶಾಸ್ತ್ರಂಗಳ ಅರ್ಥವೇ ಬೇರೆ. ಇವು ವ್ಯಾಖ್ಯಾನ ಮಾಡ್ತದೇ ಬೇರೆ ರೀತಿಲಿ.

ಕಥಯಂತ್ಯುನ್ಮನಿಭಾವಂ ಸ್ವಯಂ ನಾನುಭವಂತಿ ಚ ।
ಅಹಂಕಾರರತಾಃ ಕೇಚಿದುಪದೇಶಾದಿವರ್ಜಿತಾಃ ॥೭೭॥

ಸ್ವತಃ ಅನುಭವವ ಪಡೆಯದ್ದವು, ಅಹಂಕಾರಿಗೊ ಮತ್ತೆ ಆರಿಂದಲೂ ಉಪದೇಶ ಪಡೆಯದ್ದೆ ಇಪ್ಪವು, ಉನ್ಮತ್ತ ಭಾವವ ಬ್ರಹ್ಮಾನಂದ ಭಾವ ಹೇದು ಹೇಳುತ್ತವು.

ಪಠಂತಿ ವೇದಶಾಸ್ತ್ರಾಣಿ ಭೋಧಯಂತಿ ಪರಸ್ಪರಮ್ ।
ನ ಜಾನಂತಿ ಪರಂ ತತ್ತ್ವಂ ದರ್ವೀ ಪಾಕರಸಂ ಯಥಾ ॥೭೮॥

ಅವು ವೇದಶಾಸ್ತ್ರಂಗಳ ಓದುತ್ತವು. ಪರಸ್ಪರ ಬೋಧನೆ ಮಾಡುತ್ತವು. ಆದರೆ, ಸೌಟು ಪಾಕರಸವ ಹೇಂಗೆ ಅರಡಿತ್ತಿಲ್ಲೆಯೋ ಹಾಂಗೇ ಅವು ಪರಮ ತತ್ತ್ವ ಅರಡಿತ್ತವಿಲ್ಲೆ.

ಶಿರೋ ವಹತಿ ಪುಷ್ಪಾಣಿ ಗಂಧಂ ಜಾನಾತಿ ನಾಸಿಕಾ ।
ಪಠಂತಿ ವೇದಶಾಸ್ತ್ರಾಣಿ ದುರ್ಲಭೋ ಭಾವಬೋಧಕಃ ॥೭೯॥

ಶಿರ ಪುಷ್ಪವ ಹೊತ್ತೊಳ್ತು. ಆದರೆ ಸುಗಂಧವ ಮೂಗು ಅರ್ತುಗೊಳ್ತು. ವೇದಶಾಸ್ತ್ರಂಗಳ ಓದುತ್ತವು, ಆದರೆ ಅದರ ಭಾವವ ಅರ್ತುಗೊಂಬಲೆ ಅವಕ್ಕೆ ಎಡಿಗಾವ್ತಿಲ್ಲೆ.

ತತ್ತ್ವಮಾತ್ಮಸ್ಥ ಮಜ್ಞಾತ್ವಾ ಮೂಢ ಶಾಸ್ತ್ರೇಷು ಮುಹ್ಯತಿ ।
ಗೋಪಃ ಕುಕ್ಷಿಗತೇ ಛಾಗೇ ಕೂಪೇ ಪಶ್ಯತಿ ದುರ್ಮತಿಃ ॥೮೦॥

ತನ್ನಲ್ಲಿಯೇ ಇಪ್ಪ ತತ್ತ್ವವ ತಿಳಿಯದ್ದೆ ಮೂಢ° ಶಾಸ್ತ್ರಂಗಳಲ್ಲಿ ಮೋಹಿತನಾವುತ್ತ°. ಮೂರ್ಖನಾದ ದನಕಾಯ್ವವ° ಕಂಕುಳಲ್ಲಿಪ್ಪ ಏಡಿನ ಬಾವಿಲಿ ಹುಡುಕ್ಕುತ್ತ°.

ಸಂಸಾರಮೋಹನಾಶಾಯ ಶಬ್ದಬೋಧೋ ನಹಿ ಕ್ಷಮಃ ।
ನ ನಿವರ್ತೇತ ತಿಮಿರಂ ಕದಾಚಿದ್ದೀಪವಾರ್ತಯಾ ॥೮೧॥

ಸಂಸಾರದ ಮೋಹವ ನಾಶಮಾಡ್ಳೆ ಶಬ್ದಜ್ಞಾನವು ಸಮರ್ಥ ಅಲ್ಲ. ದೀಪದ ವಿಷಯ ಮಾತಾಡುವದರಿಂದ ಅಂಧಕಾರ ದೂರ ಆವ್ತಿಲ್ಲೆ.

ಪ್ರಜ್ಞಾಹೀನಸ್ಯ ಪಠನಂ ಯಥಾಂಧಸ್ಯ ಚ ದರ್ಪಣಮ್ ।
ಅತಃ ಪ್ರಜ್ಞಾವತಾಂ ಶಾಸ್ತ್ರಂ ತತ್ತ್ವಜ್ಞಾನಸ್ಯ ಲಕ್ಷಣಮ್ ॥೮೨॥

ಬುದ್ಧಿಹೀನಂಗೆ ಓದುವದು ಕುರುಡಂಗೆ ಕನ್ನಟಿ ಹಿಡುದಾಂಗೆ. ಹಾಂಗಾಗಿ ಬುದ್ಧಿವಂತರಿಂಗೆ ಇಪ್ಪದು ಶಾಸ್ತ್ರಂಗೊ, ತತ್ತ್ವಜ್ಞಾನದ ನಿರ್ದೇಶಕಂಗೊ.

ಇದಂ ಜ್ಞಾತಮಿದಂ ಜ್ಞೇಯಂ ಸರ್ವಂ ತು ಶ್ರೋತುಮಿಚ್ಛತಿ ।
ದಿವ್ಯವರ್ಷಸಹಸ್ರಾಯುಃ ಶಾಸ್ತ್ರಾಂತಂ ನೈವ ಗಚ್ಛತಿ ॥೮೩॥

‘ಇದು ತಿಳುದ್ದು, ಇದರ ತಿಳಿಯೆಕು ಹೇದು ಎಲ್ಲವನ್ನೂ ಕೇಳ್ಳೆ ಇಚ್ಛಿಸುತ್ತ°. ದೇವತೆಗಳ ಸಾವಿರ ವರ್ಷಕಾಲ ಆಯಸ್ಸು ಇದ್ದರೂ ಶಾಸ್ತ್ರಂಗಳ ಕೊಡಿಯ ಮುಟ್ಳೆ ಎಡಿಯ.

ಅನೇಕಾನಿ ಶಾಸ್ತ್ರಾಣಿ ಸ್ವಲ್ಪಾಯುರ್ವಿಘ್ನಕೋಟಯಃ ।
ತಸ್ಮಾತ್ಸಾರಂ ವಿಜಾನೀಯಾತ್ ಕ್ಷೀರಂ ಹಂಸ ಇವಾಂಭಸಿ ॥೮೪॥

ಶಾಸ್ತ್ರಂಗೊ ಅನೇಕ. ಆಯಸ್ಸು ರಜ್ಜವೇ. ವಿಘ್ನಂಗೊ ಕೋಟ್ಯಂತರ. ಹಾಂಗಾಗಿ ಹಂಸವು ನೀರಿಂದ ಹಾಲಿನ ಬೇರ್ಪಡುಸುತ್ತಾಂಗೆ ಶಾಸ್ತ್ರಂಗಳ ಸಾರವ ಹೀರೆಕು.

ಅಭ್ಯಸ್ಯ ವೇದಶಾಸ್ತ್ರಾಣಿ ತತ್ತ್ವಂ ಜ್ಞಾತ್ವಾsಥ ಬುದ್ಧಿಮಾನ್ ।
ಪಲಾಲಮಿವ ಧಾನ್ಯಾರ್ಥೀ ಸರ್ವಶಾಸ್ತ್ರಾಣಿ ಸಂತ್ಯಜೇತ್ ॥೮೫॥

ಬುದ್ಧಿವಂತನಾದವ° ವೇದಶಾಸ್ತ್ರಂಗಳ ಅಭ್ಯಾಸ ಮಾಡಿಕ್ಕಿ, ಕೇವಲ ಅದರ ತತ್ತ್ತ್ವವ ತಿಳ್ಕೊಂಡು, ಧಾನ್ಯವ ಬಯಸುವವ° ಹೊಟ್ಟಿನ ಬಿಟ್ಟುಬಿಡ್ತಾಂಗೆ ಸರ್ವಶಾಸ್ತ್ರಂಗಳನ್ನೂ ಬಿಟ್ಟುಬಿಡೆಕು.

ಯಥಾsಮೃತೇನ ತೃಪ್ತಸ್ಯ ನಾಹಾರೇಣ ಪ್ರಯೋಜನಮ್ ।
ತತ್ತ್ವಜ್ಞಸ್ಯ ತಥಾ ತಾರ್ಕ್ಷ್ಯ ಶಾಸ್ತ್ರೇಣ ಪ್ರಯೋಜನಮ್ ॥೮೬॥

ಏ ಗರುಡ!, ಅಮೃತಂದ ತೃಪ್ತನಾದವಂಗೆ ಆಹಾರಂದ ಹೇಗೆ ಪ್ರಯೋಜನ ಇಲ್ಲೆಯೋ, ಹಾಂಗೇ ತತ್ತ್ವಜ್ಞಂಗೆ ಶಾಸ್ತ್ರಂಗಳಿಂದ ಪ್ರಯೋಜನ ಇಲ್ಲೆ.

ನ ವೇದಾಧ್ಯಯನಾನ್ಮುಕ್ತಿರ್ನ ಶಾಸ್ತ್ರಪಠನಾದಪಿ ।
ಜ್ಞಾನದೇವ ಹಿ ಕೈವಲ್ಯಂ ನಾನ್ಯಥಾ ವಿನತಾತ್ಮಜ ॥೮೭॥

ಏ ವಿನತಾಸುತನೇ!, ವೇದಾಧ್ಯಯನಂದಲೋ, ಶಾಸ್ತ್ರಾಧ್ಯಯನಂದಲೋ ಮುಕ್ತಿ ಸಿಕ್ಕುತ್ತಿಲ್ಲೆ. ಜ್ಞಾನಂದಲೇ ಕೈವಲ್ಯ. ಅನ್ಯಥಾ ಇಲ್ಲೆ.

ನಾಶ್ರಮಃ ಕಾರಣಂ ಮುಕ್ತೇರ್ದರ್ಶನಾನಿ ನ ಕಾರಣಮ್ ।
ತಥೈವ ಸರ್ವಕರ್ಮಾಣಿ ಜ್ಞಾನಮೇವ ಹಿ ಕಾರಣಮ್ ॥೮೮॥

ನಾಕು ಆಶ್ರಮಂಗೊ ಮುಕ್ತಿಗೆ ಕಾರಣ ಅಲ್ಲ. ಆರು ದರ್ಶನಂಗಳೂ ಕಾರಣ ಅಲ್ಲ. ಹಾಂಗೇ ಎಲ್ಲ ಕರ್ಮಂಗಳೂ. ಬರೇ ಜ್ಞಾನವೊಂದೇ ಕಾರಣ.

ಮುಕ್ತಿದಾ ಗುರುವಾಗೇಕಾ ವಿದ್ಯಾ ಸರ್ವಾ ವಿಡಂಬಕಾ ।
ಕಾಷ್ಠಭಾರಸಹಸ್ರೇಷು ಹ್ಯೇಕಂ ಸಂಜೀವನಂ ಪರಮ್ ॥೮೯॥

ಒಬ್ಬ° ಗುರುವಿನ ವಾಣಿಯೇ ಮುಕ್ತಿದಾಯಕವಾಗಿಪ್ಪದು. ಎಲ್ಲ ವಿದ್ಯೆಗಳೂ ಬೂಟಾಟಿಕೆ. ಸಾವಿರಾರು ಸೌದಿಕಟ್ಟಲ್ಲಿ ಸಂಜೀವನ ಒಂದೇ ಶ್ರೇಷ್ಠವಾದ್ದು.

ಅದ್ವೈತಂ ಹಿ ಶಿವಂ ಪ್ರೋಕ್ತಂ ಕ್ರಿಯಾಯಾಸವಿವರ್ಜಿತಮ್ ।
ಗುರುವಕ್ತ್ರೇಣ ಲಭ್ಯೇತ ನಾಧೀತಾಗಮಕೋಟಿಭಿಃ ॥೯೦॥

‘ಅದ್ವೈತವೇ ಶಿವ’ ಹೇದು ಹೇಯ್ದು. ಕರ್ಮದ ಶ್ರಮ ಇಲ್ಲದ್ದೆ ಗುರುಮುಖಂದ ಅದು ಸಿಕ್ಕುವದು. ಕೋಟ್ಯಂತರ ಶಾಸ್ತ್ರಂಗಳ ಅಧ್ಯಯನಂದ ಅಲ್ಲ.

ಆಗಮೋಕ್ತಂ ವಿವೇಕೋತ್ಥಂ ದ್ವಿಧಾ ಜ್ಞಾನಂ ಪ್ರಚಕ್ಷತೇ ।
ಶಬ್ದಬ್ರಹ್ಮಾಗಮಮಯಂ ಪರಬ್ರಹ್ಮ ವಿವೇಕಜಮ್ ॥೯೧॥

ಜ್ಞಾನ ಎರಡು ವಿಧವಾಗಿಪ್ಪದು ಹೇದು ಹೇಳಲ್ಪಟ್ಟಿದು- ಶಾಸ್ತ್ರಂಗಳಲ್ಲಿ ಹೇಳಿಪ್ಪದು, ವಿವೇಕಂದ ಉತ್ಪನ್ನವಾಗಿಪ್ಪದು. ಶಾಸ್ತ್ರಂಗಳಲ್ಲಿ ಹೇಳಿಪ್ಪದು ಶಬ್ದಬ್ರಹ್ಮ, ವಿವೇಕಂದ ಉತ್ಪನ್ನವಾಗಿಪ್ಪದು ಪರಬ್ರಹ್ಮ.

ಅದ್ವೈತಂ ಕೇಚಿದಿಚ್ಛಂತಿ ದ್ವೈತಮಿಚ್ಛಂತಿ ಚಾಪರೇ ।
ಸಮಂ ತತ್ತ್ವಂ ಜಾನಂತಿ ದ್ವೈತಾದ್ವೈತವಿವರ್ಜಿತಮ್ ॥೯೨॥

ಕೆಲವು ಜೆನ ಅದ್ವೈತವ ಇಷ್ಟಪಡುತ್ತವು. ಇನ್ನು ಕೆಲವು ಜೆನ ದ್ವೈತವ ಇಷ್ಟಪಡುತ್ತವು. ಆದರೆ ದ್ವೈತಾದ್ವೈತಂಗೊ ಇಲ್ಲದ್ದ ಸಮತತ್ತ್ವವ ಅವು ತಿಳ್ಕೊಂಡಿದವಿಲ್ಲೆ.

ದ್ವೇ ಪದೇ ಬಂಧಮೋಕ್ಷಾಯ ನ ಮಮೇತಿ ಮಮೇತಿ ಚ ।
ಮಮೇತಿ ಬಧ್ಯತೇ ಜಂತುರ್ನ ಮಮೇತಿ ಪ್ರಮುಚ್ಯತೇ ॥೯೩॥

ಬಂಧನ ಮತ್ತೆ ಮೋಕ್ಷಂಗೊಕ್ಕೆ ‘ಎನ್ನದು’ ‘ಎನ್ನದಲ್ಲ’ ಹೇಳ್ವ ಎರಡು ಪದಂಗೊ. ‘ಎನ್ನದು’ ಹೇಳ್ವದರಿಂದ ಜೀವಿ ಬಂಧನಲ್ಲಿ ಬೀಳುತ್ತ°. ‘ಎನ್ನದಲ್ಲ’ ಹೇಳ್ವದರಿಂದ ಮುಕ್ತಿಯ ಹೊಂದುತ್ತ°.

ತತ್ಕರ್ಮ ಯನ್ನ ಬಂಧಾಯ ಸಾ ವಿದ್ಯಾ ಯಾ ವಿಮುಕ್ತಿದಾ ।
ಆಯಾಸಾಯಪರಂ ಕರ್ಮ ವಿದ್ಯಾನ್ಯಾ ಶಿಲ್ಪನೈಪುಣಮ್ ॥೯೪॥

ಏವುದು ಬಂಧಿಸುತ್ತಿಲ್ಲೆಯೋ, ಅದೇ ನಿಜವಾದ ಕರ್ಮ. ಏವುದು ಮುಕ್ತಿಯ ಕೊಡುತ್ತೋ, ಅದೇ ನಿಜವಾದ ವಿದ್ಯೆ. ಇತರ ಕರ್ಮಂಗೊ ಬರೇ ಶ್ರಮವ ಉಂಟುಮಾಡುವದು. ಇತರ ವಿದ್ಯೆಗೊ ಕೇವಲ ಶಿಲ್ಪನೈಪುಣ್ಯ.

ಯಾವತ್ಕರ್ಮಾಣಿ ದೀಯಂತೇ ಯಾವತ್ಸಂಸಾರವಾಸನಾ ।
ಯಾವದಿಂದ್ರಿಯಚಾಪಲ್ಯಂ ತಾವತ್ತತ್ತ್ವಕಥಾ ಕುತಃ ॥೯೫॥

ಎಲ್ಲಿವರೆಂಗೆ ಕರ್ಮಂಗೊ ಮಾಡಲ್ಪಡುತ್ತೋ, ಎಲ್ಲಿವರೆಂಗೆ ಸಂಸಾರ ವಾಸನೆ ಇರುತ್ತೋ, ಎಲ್ಲಿವರೆಂಗೆ ಇಂದ್ರಿಯಂಗಳ ಚಪಲತೆ ಇರುತ್ತೋ ಅಲ್ಲಿವರೇಂಗೆ ತತ್ತ್ವದ ಮಾತು ಎಲ್ಲಿಂದ?!.

ಯಾವದ್ದೇಹಾಭಿಮಾನಶ್ಚ ಮಮತಾ ಯಾವದೇವ ಹಿ ।
ಯಾವತ್ಪ್ರಯತ್ನವೇಗೋsಸ್ತಿ ಯಾವತ್ಸಂಕಲ್ಪಕಲ್ಪನಾ ॥೯೬॥

ಎಲ್ಲಿವರೆಂಗೆ ದೇಹಾಭಿಮಾನ ಇರ್ತೋ, ಎಲ್ಲಿವರೆಂಗೆ ಮಮತೆ ಇರ್ತೋ, ಎಲ್ಲಿವರೆಂಗೆ ಪ್ರಯತ್ನದ ವೇಗ ಇರ್ತೋ, ಎಲ್ಲಿವರೆಂಗೆ ಸಂಕಲ್ಪಂಗಳ ಕಲ್ಪನೆ ಇರ್ತೋ,

ಯಾವನ್ನೋ ಸಮನಃಸ್ಥೈರ್ಯಂ ನ ಯಾವಚ್ಛಾಸ್ತ್ರ ಚಿಂತನಮ್ ।
ಯಾವನ್ನ ಗುರುಕಾರುಣ್ಯೇ ತಾವತ್ತತ್ತ್ವಕಥಾ ಕುತಃ ॥೯೭॥

ಎಲ್ಲಿವರೆಂಗೆ ಮನಸ್ಸಿನ ಸ್ಥೈರ್ಯ ಇಲ್ಲೆಯೋ, ಎಲ್ಲಿವರೆಂಗೆ ಶಾಸ್ತ್ರಂಗಳ ಚಿಂತನೆ ಮಾಡುತ್ತಿಲ್ಯೋ, ಎಲ್ಲಿವರೆಂಗೆ ಗುರುವಿನ ಕರುಣೆ ಇಲ್ಯೋ, ಅಲ್ಲಿವರೇಂಗೆ ತತ್ತ್ವದ ಮಾತು ಎಲ್ಲಿಂದ?!

ತಾವತ್ತಪೋ ವ್ರತಂ ತೀರ್ಥಂ ಜಪಹೋಮಾರ್ಚನಾದಿಕಮ್ ।
ವೇದಶಾಸ್ತ್ರಾಗಮಕಥಾ ಯಾವತ್ತತ್ತ್ವಂ ನ ವಿಂದತಿ ॥೯೮॥

ಎಲ್ಲಿವರೆಂಗೆ ತತ್ತ್ವಜ್ಞಾನವ ಪಡೆತ್ತಿಲ್ಲೆಯೋ, ಅಲ್ಲಿವರೆಂಗೆ ತಪಸ್ಸು, ವ್ರತ, ತೀರ್ಥ, ಜಪ, ಹೋಮ, ಪೂಜೆ ಇತ್ಯಾದಿಗೊ, ವೇದ, ಶಾಸ್ತ್ರ ಮತ್ತೆ ಆಗಮಂಗಳ ಪಠನ ಇರ್ತು.

ತಸ್ಮಾತ್ಸರ್ವಪ್ರಯತ್ನೇನ ಸರ್ವಾವಸ್ಥಾಸು ಸರ್ವದಾ ।
ತತ್ತ್ವನಿಷ್ಠೋ ಭವೇತ್ತಾರ್ಕ್ಷ್ಯ ಯದೀಚ್ಛೇನ್ಮೋಕ್ಷಮಾತ್ಮನಃ ॥೯೯॥

ಏ ಗರುಡ!, ಹಾಂಗಾಗಿ ತನ್ನ ಮೋಕ್ಷವ ಬಯಸುತ್ತರೆ ಎಲ್ಲಾ ರೀತಿಯ ಪ್ರಯತ್ನಂದಲೂ, ಎಲ್ಲಾ ಅವಸ್ಥೆಲಿಯೂ, ಏವತ್ತೂ ತತ್ತ್ವನಿಷ್ಠನಾಗಿಯೇ ಇರೆಕು.

ಧರ್ಮಜ್ಞಾನಪ್ರಸೂನಸ್ಯ ಸ್ವರ್ಗಮೋಕ್ಷಫಲಸ್ಯ ಚ ।
ತಾಪತ್ರಯಾದಿ ಸಂತಪ್ತಶ್ಛಾಯಾಂ ಮೋಕ್ಷತರಂ ಶ್ರಯೇತ್ ॥೧೦೦॥

ಧರ್ಮ, ಜ್ಞಾನ ಹೇಳ್ವ ಹೂಗಳಿಪ್ಪ, ಸ್ವರ್ಗ, ಮೋಕ್ಷ ಹೇಳ್ವ ಹಣ್ಣುಗಳಿಪ್ಪ, ಮೋಕ್ಷವೃಕ್ಷದ ನೆರಳಿಲ್ಲಿ, ಆದಿಭೌತಿಕ, ಆದಿದೈವಿಕ, ಆಧ್ಯಾತ್ಮಿಕ ಎಂಬೀ ತಾಪತ್ರಯಂಗಳಿಂದ ತಪಿಸಲ್ಪಟ್ಟವ° ಆಶ್ರಯ ಪಡೆಕು.

ತಸ್ಮಾಜ್ಞಾನೇನಾತ್ಮತತ್ತ್ವಂ ವಿಜ್ಞೇಯಂ ಶ್ರೀಗುರೋರ್ಮುಖಾತ್ ।
ಸುಖೇನ ಮುಚ್ಯತೇ ಜಂತುರ್ಘೋರಸಂಸಾರಬಂಧನಾತ್ ॥೧೦೧॥

ಹಾಂಗಾಗಿ ಶ್ರೀಗುರುವಿನ ಮುಖಂದ ಜ್ಞಾನಮಾರ್ಗಲ್ಲಿ ಆತ್ಮತತ್ತ್ವವ ತಿಳಿಯೆಕು. ಹಾಂಗೆ ಮಾಡಿರೆ ಸುಖವಾಗಿ ಈ ಘೋರಸಂಸಾರದ ಬಂಧನಂದ ಬಿಡುಗಡೆ ಹೊಂದಲೆಡಿಗು.

ತತ್ತ್ವಜ್ಞಸ್ಯಾಂತಿಮಂ ಕೃತ್ಯಂ ಶ್ರುಣು ವಕ್ಷ್ಯಾಮಿ ತೇsಧುನಾ ।
ಯೇನ ಮೋಕ್ಷಮವಾಪ್ನೋತಿ ಬ್ರಹ್ಮನಿರ್ವಾಣ ಸಂಜ್ಞಕಮ್ ॥೧೦೨॥

ತತ್ತ್ವಜ್ಞ° ಮಾಡೇಕಾದ ಅಂತಿಮ ಕಾರ್ಯವ ಈಗ ನಿನಗೆ ಹೇಳುತ್ತೆ, ಕೇಳು. ಅವ° ಬ್ರಹ್ಮನಿರ್ವಾಣ ಹೇದು ಹೇಳುವ ಮೋಕ್ಷವ ಪಡೆತ್ತ°.

 

ಗದ್ಯರೂಪಲ್ಲಿ –

 

ಇಹಲೋಕಲ್ಲಿ ಸಮಸ್ತ ಜೀವಿಗೊ ಅಜ್ಞಾನಂದ ಮೋಹಿತರಾಗಿ ಸಂಸಾರಲ್ಲಿ ಆಸಕ್ತರಾಗಿ ಮೋಕ್ಷಮಾರ್ಗಂದ ವಂಚಿತರಾವ್ತವು. ಆ ಆಸಕ್ತಿಯ ತ್ಯಾಗ ಮಾಡೆಕ್ಕಾರೆ ಸತ್ಸಂಗಲ್ಲಿ ಆಸಕ್ತರಾಯೇಕು. ಸಂಸಾರರೂಪಿ ವ್ಯಾಧಿಗೆ ಸಂತಪುರುಷರೇ ದಿವ್ಯೌಷಧ. ಸತ್ಸಂಗ ಮತ್ತೆ ವಿವೇಕ ಹೇಳ್ತದು ಎರಡು ನಿರ್ಮಲ ಕಣ್ಣುಗೊ ಇದ್ದ ಹಾಂಗೆ. ಅದಿಲ್ಲದ್ದವ° ಕುರುಡನೇ ಸರಿ. ಕುರುಡರು ಜ್ಞಾನದೀಪವ ಕಾಂಬಲೆ ಹೇಂಗೆ ಎಡಿಗು!, ಕುಮಾರ್ಗಗಾಮಿ ಆಗಿ ಅಧಃಪತನಕ್ಕೆ ತಮ್ಮ ತಾವೇ ತಳ್ಳಿಗೊಳ್ತವು, ಜೀವನ ವ್ಯರ್ಥ ಮಾಡಿಗೊಳ್ತವು. ವರ್ಣಾಶ್ರಮ ಧರ್ಮಾಚರಣೆಲಿ ನಿರತರಾದ ಸಮಸ್ತ ಮನುಷ್ಯರು ಮೂಲತಃ ಧರ್ಮವನ್ನೇ ತಿಳ್ಕೊಳ್ಳದ್ದೆ ಇದ್ದರೆ ಅದು ಬರೇ ಅಹಂಕಾರ ಡಂಬಾಚಾರವಾಗಿ ಜೀವನ ವ್ಯರ್ಥಮಾಡಿಗೊಳ್ತವು ಹೇಳ್ವದು ಕಳುದವಾರದ ಭಾಗದ ಅಕೇರಿ. ಮುಂದೆ –

ಕೆಲವು ಜೆನಂಗೊ ಅನೇಕ ವಿಧ ಕ್ರಿಯೆಗಳ ಮಾಡ್ತ ಪ್ರಯತ್ನವ ಮಾಡ್ತವು ಮತ್ತೆ ಕೆಲವು ಜೆನಂಗೊ ವ್ರತ ಉಪವಾಸಾದಿಗಳಲ್ಲಿ ನಿರತರಾವ್ತವು. ಅಜ್ಞಾನಂದ ಆವೃತವಾದ ಮನಸ್ಸಿನ ಕೆಲವು ಜೆನಂಗೊ ಕಪಟವೇಷಧಾರಿಗೊ ಆಗಿ ಆಚರಣೆ ಮಾಡ್ತವು. ಕರ್ಮಕಾಂಡಲ್ಲಿ ಶ್ರದ್ಧೆ ಇಪ್ಪ ಮನುಷ್ಯರು ಶಾಸ್ತ್ರಬೋಧಿತ ನಾಮಮಾತ್ರದ ಫಲಶ್ರುತಿಗಳಿಂದ ಮಂತ್ರೋಚ್ಛಾರಣೆ ಮತ್ತೆ ಹೋಮಾದಿ ಕೃತ್ಯಂಗಳ ಮತ್ತೆ ಯಜ್ಞದ ವಿಸ್ತೃತ ವಿಧಾನಂಗಳಿಂದ ಭ್ರಾಂತರಾವ್ತವು. ಅದರ್ಲಿಯೇ ಸಿಕ್ಕಿಗೊಳ್ಳುತ್ತವು. ಭಗವಂತನ ಮಾಯೆಂದ ವಿಮೋಹಿತರಾಗಿ ಶರೀರವ ಒಣಗುಸುವ ಮೂರ್ಖರು ಏಕಭುಕ್ತ ಇತ್ಯಾದಿ ಉಪವಾಸ ಮುಂತಾದ ವ್ರತಂಗಳ ಆಚರಿಸಿ ಪರೋಕ್ಷ ಪರಮಗತಿಯ ಹೊಂದಲೆ ಬಯಸುತ್ತವು.

ಶರೀರವ ದಂಡುಸುವ ಮಾತ್ರಂದ ಅವಿವೇಕಿ ಜನಂಗೊಕ್ಕೆ ಮುಕ್ತಿ ಪ್ರಾಪ್ತಿ ಅಪ್ಪಲಿದ್ದೋ?!, ಹುತ್ತವ ಬಡಿವದರಿಂದ ಮಾತ್ರವೇ ಮಹಾಸರ್ಪ ಸಾವಲಿದ್ದೋ?! ತುಂಬ ಉದ್ದದ ಜಟೆಯ ಭಾರವ ಹೊರ್ತ ಮತ್ತೆ ಮೃಗಚರ್ಮಾದಿಗಳಿಂದ ಯುಕ್ತ ಢಾಂಬಿಕ ಸಾಧುಪುರುಷರ ವೇಷಧಾರಣೆ ಮಾಡ್ಯೊಂಡು, ಜ್ಞಾನಿಗಳ ಹಾಂಗೆ ಲೋಕಲ್ಲಿ ತಿರುಗುತ್ತವು. ಜನಂಗಳನ್ನೂ ಭ್ರಮೆಗೊಳುಸುತ್ತವು. ಪ್ರಾಪಂಚಿಕ ಸುಖಲ್ಲಿ (ವಿಷಯಾಸಕ್ತಿಲಿ) ಆಸಕ್ತನಾದ ಏವ ಮನುಷ್ಯ ‘ಆನು ಬ್ರಹ್ಮಜ್ಞಾನಿಯಾಗಿದ್ದೆ’ ಹೇದು ಹೇಳುತ್ತನೋ, ಅವ° ಕರ್ಮಮಾರ್ಗ ಮತ್ತೆ ಬ್ರಹ್ಮಜ್ಞಾನಮಾರ್ಗ – ಎರಡ್ರಂದಿಲೂ ಭ್ರಷ್ಟನಾವ್ತ°. ಅಂಥವರ ಚಾಂಡಲರ ಹಾಂಗೆ ಬಿಟ್ಟುಬಿಡೆಕು. ಪ್ರಪಂಚಲ್ಲಿ ಮನೆ, ಅರಣ್ಯ ಎಲ್ಲ ಒಂದೇ ಹೇದು ನಾಚಿಕೆ ಬಿಟ್ಟಿಕ್ಕಿ ಸಮಾನರೂಪಂದ ನಗ್ನವಾಗಿ ತಿರುಗುತ್ತ ಕತ್ತೆ ಮುಂತಾದವುಗೊ ವಿರಕ್ತಿ ಪಡವಲೆ ಇದ್ದೋ ಎಂತ?! ಮಣ್ಣ ಬೂದಿಯ ಧಾರಣೆ ಮಾಡುವ ಮಾತ್ರಂದ ಮನುಷ್ಯ ಮುಕ್ತನಾಗಿಬಿಡ್ತ° ಹೇದಾದರೆ ಮಣ್ಣ ಬೂದಿಲಿ ಬಿದ್ದೊಂಡಿಪ್ಪ ಆ ನಾಯಿಯೂ ಕೂಡ ಮುಕ್ತಿ ಪ್ರಾಪ್ತಿ ಹೊಂದುಗೋ ಎಂತ?!. ಹುಲ್ಲು, ಸೊಪ್ಪು ಮತ್ತೆ ನೀರನ್ನೇ ಆಹಾರವನ್ನಾಗಿಸಿಗೊಂಡಿಪ್ಪ ಮತ್ತೆ ನಿರಂತರವಾಗಿ ಅರಣ್ಯಲ್ಲೇ ವಾಸುಸುವ ನರಿ, ಇಲಿ ಮತ್ತೆ ಮೃಗಾದಿ ಪಶುಗೊ ಸಾನ ತಪಸ್ವಿ ಯೋಗಿಗೊ ಹೇದಪ್ಪಲೆಡಿಗೊ ಎಂತ?!  ಹೇದರೆ, ಅಶನ ಬಿಡ್ವದರಿಂದ, ಗ್ರಾಮ ವಾ ನಗರದ ಮನೆ (ನಿವಾಸ) ಬಿಟ್ಟಿಕ್ಕಿ ವನಲ್ಲಿ ವಾಸುಸುವ ಮಾತ್ರಂದ ಆರಾರು ಸನ್ಯಾಸಿ ಹೇದು ಅಪ್ಪಲೆಡಿಗೊ?!. ಕೆಪ್ಪೆ ಮೀನು ಇತ್ಯಾದಿ ಜಲಚರ ಜೀವಿಗೊ ಜನ್ಮಂದ ಹಿಡುದು ಸಾವನ್ನಾರ ಗಂಗಾ ಮುಂತಾದ ಜಲಲ್ಲಿ ವಾಸಮಾಡಿರೆ, ಅವು ಯೋಗಿಗೊ ಹೇದು ಆವ್ತವೋ ಎಂತ?!

ಪಾರಿವಾಳ ಶಿಲಾಹಾರಿ ಆದರೆ, ಚಾತಕ ಪಕ್ಷಿ ಭೂಮಿಯ ನೀರಿನ ಕುಡಿತ್ತಿಲ್ಲೇಳಿ ಆದರೆ ಅವುಗೊ ವ್ರತಿಗೊ ಹೇದು ಆವ್ತವೋ ಎಂತ?!. ಹಾಂಗಾಗಿ, ಈ ಮೇಗೆ ಹೇದ ಸಂಪೂರ್ಣ ಅನುಷ್ಠಾನಂಗೊ ಬರೇ ಲೋಕರಂಜನಗೆ ಮಾಂತ್ರ ಇಪ್ಪದು. ಮೋಕ್ಷಕ್ಕೆ ಕಾರಣ ಸಾಕ್ಷಾತ್ ತತ್ತ್ವಜ್ಞಾನವೇ ಆಗಿದ್ದು. ಷಟ್‍ದರ್ಶನ ಹೇಳ್ವ ಮಹಾಕೂಪಲ್ಲಿ ಬಿದ್ದಿಪ್ಪ ಮನುಷ್ಯರೂಪಿ ಪಶು ಪಾರಮಾರ್ಥವ ಅರ್ತುಗೊಂಡಿದಿಲ್ಲೆ. ಎಂತಕೇಳಿರೆ, ಅದು ಪಶುತ್ವ ಪಾಶಂದ (ಪಶುಪಾಶಂದ) ಬಂಧಿಸಲ್ಪಟ್ಟಿದ್ದು.

ವೇದ ಮತ್ತೆ ಶಾಸ್ತ್ರರೂಪಿ ಘೋರಸಮುದ್ರಲ್ಲಿ ಅತ್ತಿತ್ತೆ ಕೊಂಡೋಪ ಕುತಾರ್ಕಿಕ ವ್ಯಕ್ತಿಗೊ ಷಡೂರ್ಮಿಗಳಿಂದ (ಹಶು-ಆಸರ-ಶೋಕ-ಮೋಹ-ಜನನ-ಮರಣ = ಷಡೂರ್ಮಿ = ಆರು ಅಲೆ) ಪೀಡಿತರಾಗಿ ಕುತರ್ಕಿಗಳಾಗಿ ಮೆರೆತ್ತವು. ವೇದ-ಶಾಸ್ತ್ರ ಮತ್ತೆ ಪುರಾಣಂಗಳ ಅರ್ತವನಾಗಿದ್ದೂ, ಮನುಷ್ಯ° ಪಾರಮಾರ್ಥವ ಅರ್ತುಗೊಂಡಿಲ್ಲದ್ರೆ, ವಿಡಂಬನಾಗ್ರಸ್ತ ಅವನ ಪೂರ್ವೋಕ್ತ ಸಂಪೂರ್ಣ ಜ್ಞಾನ ಕಾಕೆಗಳ ಕಾಕಲಾಟವೇ ಸರಿ. ಪರಮತತ್ವಂದ ಪರಾಂಙ್ಮುಖನಾದ ಜೀವ- ಇದು ಜ್ಞಾನ, ಇದು ಜ್ಞೇಯ ಹೇಳ್ವ ಚಿಂತೆಂದ ವ್ಯಾಕುಲನಾಗಿ ಇರುಳೂ ಹಗಲು ಶಾಸ್ತ್ರಂಗಳ ಅಧ್ಯಯನ ಮಾಡುತ್ತ°. ಕಾವ್ಯೋಚಿತ ಅಲಂಕಾರಂಗಳಿಂದ ಶೋಭಿತವಾಗಿಪ್ಪ ಛಂದಸ್ಸು, ನಿಬಂಧಂಗಳಿಂದ ಕೂಡಿದ ವಾಕ್ಯಂಗಳ ಚಿಂತನೆಲಿ ಮೂಢರು ಕಳವಳಗೊಂಡ ಇಂದ್ರಿಯಂಗಳಿಂದ ಕೂಡಿ ದುಃಖಿತರಾವುತ್ತವು.

ಪರಮ ತತ್ತ್ವದ ಪ್ರಾಪ್ತಿ ಅಂತೂ ಅನ್ಯಪ್ರಕಾರಂದ ಅಪ್ಪದು. ಆದರೆ, ಜನಂಗೊ ಇದರ ಅಲ್ಲದ್ದೆ ಅನ್ಯಪ್ರಕಾರದ ಉಪಾಯವ ಮಾಡಿ ಕ್ಲೇಶವ ಪ್ರಾಪ್ತಿಹೊಂದುತ್ತವು. ಶಾಸ್ತ್ರದ ಭಾವ ಒಂದು ರೀತಿಯಾಗಿದ್ದರೆ, ಅವು ಅದರ ವ್ಯಾಖ್ಯಾನವ ಅನ್ಯಪ್ರಕಾರಂದಲೇ ಮಾಡ್ತವು. ಕೆಲವು ಅಹಂಕಾರಿಗೊ ಗುರೂಪದೇಶಾದಿಗಳ ಪ್ರಾಪ್ತಿ ಹೊಂದದ್ದೆಯೂ ಉನ್ಮನೀ ಭಾವದ ವಿಷಯದ ಬಗ್ಗೆ ಹೇಳುತ್ತವು. ಆದರೆ, ಸ್ವಯಂ ಅದರ ಅನುಭವ ಪಡೆತ್ತವಿಲ್ಲೆ. ಅನೇಕರು ವೇದ ಮತ್ತೆ ಶಾಸ್ತ್ರಂಗಳ ಅಧ್ಯಯನ ಮಾಡುತ್ತವು, ಮತ್ತೆ, ಪರಸ್ಪರ ಒಬ್ಬ ಇನ್ನೊಬ್ಬಂಗೆ ಬೋಧನೆ ಮಾಡುಸುತ್ತವು, ತಾತ್ಪರ್ಯವನ್ನೂ ಅರೆತ್ತವು. ಆದರೆ, ಅವು ಬಡುಸುವ ಸೌಟು ಪಾಯಸಾದಿಗಳ ರುಚಿಯ ಅರ್ತುಗೊಂಡಿಪ್ಪಲೆ ಇಲ್ಲದ್ದಾಂಗೇ ಸಮ. ಪರಮತತ್ತ್ವದ ವಿಷಯಲ್ಲಿ ಯಥಾರ್ಥವಾಗಿ ಅವು ಏನನ್ನೂ ಅನುಭವಲ್ಲಿ ಪಡೆದಿರುತ್ತವಿಲ್ಲೆ. ಶಿರ ಹೂಗಿನ ಧಾರಣೆ ಮಾಡ್ತು ಆದರೆ ಅದರ ಪರಿಮ್ಮಳ ಮೂಗಿಂಗೇ ಗೊಂತಿಪ್ಪದು. ಇದೇ ಪ್ರಕಾರ ವೇದ ಮತ್ತೆ ಶಾಸ್ತ್ರದ ಅಧ್ಯಯನ ಎಲ್ಲೋರು ಮಾಡ್ತವು, ಆದರೆ ಶಾಸ್ತ್ರದ ಭಾವವ ಬೋಧನೆ ಮಾಡುಸುವವು ವಿರಳ. ಮೂರ್ಖರು ತನ್ನ ಹೃದಯಲ್ಲಿ ಸ್ಥಿತ ಪರಮತತ್ತ್ವ – ಪರಮಾತ್ಮನ ಅಂಶದ ಕುರಿತಾಗಿ ತಿಳುದಿರುತ್ತವಿಲ್ಲೆ. ಅದರ ತಿಳಿವಲೆ ಶಾಸ್ತ್ರಂಗಳ ಅಧ್ಯಯನಲ್ಲಿ ತೊಡಗುತ್ತವು. ಅವನ ಮನಸ್ಥಿತಿ ಹೇಂಗಿರ್ತು ಹೇದರೆ- ಮೂರ್ಖ ದನಗಾಹಿ ಒಬ್ಬ° ತನ್ನ ಕಂಕುಳಿಲ್ಲಿ ಕುರಿಕುಂಞಿಯ ಮಡಿಕ್ಕೊಂಡು ಅದರ ಹುಡುಕ್ಕಲೆ ಬಾವಿಗೆ ಬಗ್ಗುತ್ತಾಂಗೆ ಆತು. ಪ್ರಾಪಂಚಿಕ ಮೋಹವ ನಾಶಮಾಡ್ಳೆ ಶಾಸ್ತ್ರದ ಶಬ್ದಂಗಳ ಅರ್ಥವ ಮಾಂತ್ರ ಗೊಂತುಮಾಡ್ಯೊಂಡಿರೆ ಸಾಲ. ದೀಪದ ಮಾತುಗಳಿಂದ ಎಂದೂ ಕತ್ತಲೆ ದೂರ ಆವ್ತಿಲ್ಲೆ. ಬುದ್ಧಿಹೀನ ಮನುಷ್ಯ° ಅಧ್ಯಯನ ಮಾಡುವದು ಕುರುಡಂಗೆ ಕನ್ನಟಿ ತೋರಿಸಿದಾಂಗೇ ಸಮ. ಹಾಂಗಾಗಿ ಬುದ್ಧಿವಂತ ವ್ಯಕ್ತಿಲಿ ಮಾಂತ್ರ ಶಾಸ್ತ್ರೀಯ ತತ್ತ್ವಜ್ಞಾನದ ಲಕ್ಷಣ ಇಪ್ಪಲೆ ಎಡಿಗು. ಹೇದರೆ – ಬುದ್ಧಿವಂತಂಗೇ ತತ್ತ್ವಜ್ಞಾನದ ಪ್ರಾಪ್ತಿ ಅಪ್ಪಲೆಡಿಗು.

ಆರು,  ‘ಇದು ಗೊಂತಿದ್ದು, ಇದು ಗೊಂತಾಯೇಕ್ಕಾಗಿದ್ದು’ – ಈ ರೀತಿಯಾದ ಚಿಂತನೆಂದ ಶಾಸ್ತ್ರಪ್ರತಿಪಾದ್ಯ ಎಲ್ಲವನ್ನೂ ತಿಳಿಯೆಕು ಹೇದು ಬಯಸಿರೆ, ಅವ° ಸಾವಿರ ದಿವ್ಯವರ್ಷಂಗಳ ಆಯಸ್ಸ ಪ್ರಾಪ್ತಿಹೊಂದಿರೂ ಸಾನ ಶಾಸ್ತ್ರಂಗಳ ಅಂತ್ಯವ ತಲುಪಲೆ ಎಡಿಯ. ಅನೇಕ ಶಾಸ್ತ್ರಂಗೊ ಇದ್ದು. ಆಯಸ್ಸು ಮಾಂತ್ರ ಅತ್ಯಲ್ಪ, ಅದರ್ಲಿ ಕೋಟಿ ವಿಘ್ನಂಗೊ. ಹಾಂಗಾಗಿ ಹಂಸವು ನೀರ್ಲಿಪ್ಪ ಹಾಲಿನ ಮಾಂತ್ರ ಹೇಂಗೆ ಊಂಜುತ್ತೋ, ಹಾಂಗೇ ಬುದ್ಧಿವಂತ° ವ್ಯಕ್ತಿ ಸಾನ, ಶಾಸ್ತ್ರಂಗಳ ಸಾರತತ್ತ್ವದ ಜ್ಞಾನವ ಪ್ರಾಪ್ತಿಹೊಂದೆಕು. ವೇದ-ಶಾಸ್ತ್ರಂಗಳ ಅಭ್ಯಾಸಮಾಡಿ, ಅಲ್ಲಿಂದ ತತ್ತ್ವಜ್ಞಾನವ ಪ್ರಾಪ್ತಿಹೊಂದೆಕು. ಬುದ್ಧಿವಂತ° ಮನುಷ್ಯ°, ಧಾನ್ಯಪಡವ ವ್ಯಕ್ತಿ ಹೊಟ್ಟಿನ ಬಿಟ್ಟಿಕ್ಕಿ ಹೇಂಗೆ ಧಾನ್ಯವ ಮಾಂತ್ರ ಹೆರ್ಕುತ್ತನೋ, ಹಾಂಗೇ, ತತ್ತ್ವಜ್ಞಾನವ ಪಡದು ಅನ್ಯ ಸಮಸ್ತ ಶಾಸ್ತ್ರಂಗಳ ಬಿಟ್ಟುಬಿಡೆಕು. ಹೇಂಗೆ ಅಮೃತಂದ ತೃಪ್ತನಾದ ವ್ಯಕ್ತಿಗೆ ಏವುದೇ ಭೋಜನದ ಆವಶ್ಯಕತೆ ಇರ್ತಿಲ್ಲ್ಯೋ, ಹಾಂಗೇ, ತತ್ತ್ವಜ್ಞಾನಿಗೆ ಶಾಸ್ತ್ರಂದ ಏವುದೇ ಪ್ರಯೋಜನ ಆವ್ತಿಲ್ಲೆ. ವೇದಾಧ್ಯಯನಂದ ಆಗಲೀ, ಶಾಸ್ತ್ರಾಧ್ಯಯನಂದ ಆಗಲೀ ಮುಕ್ತಿ ಪ್ರಾಪ್ತಿ ಆವ್ತಿಲ್ಲೆ. ಜ್ಞಾನಂದಲೇ ಮೋಕ್ಷದ ಪ್ರಾಪ್ತಿ ಅಪ್ಪದು. ಬೇರೆ ಏವ ಉಪಾಯಂದಲೂ ಮುಕ್ತಿ ಎಡಿಯಲೇ ಎಡಿಯ.

ಮುಕ್ತಿಯ ಪ್ರಾಪ್ತಿಗೆ ಬೇಕಾಗಿ ಬರೇ ಆಶ್ರಮಧರ್ಮದ ಅನುಷ್ಠಾನ ಆಗಲೀ, ಶಾಸ್ತ್ರಂಗಳ ಅಧ್ಯಯನ ಮಾಂತ್ರ ಆಗಲೀ ಹೇಂಗೆ ಕಾರಣ ಆವುತ್ತಿಲ್ಯೋ, ಹಾಂಗೇ ಕರ್ಮವೂ ಕೂಡ ಕಾರಣ ಆವ್ತಿಲ್ಲೆ. ಕೇವಲ ಜ್ಞಾನವೇ ಮೋಕ್ಷದ ಉಪಾಯ. ಗುರುವಿನ ವಚನವೇ ಮೋಕ್ಷ ಕೊಡ್ಳೆ ಎಡಿಗಪ್ಪದು. ಅನ್ಯ ಎಲ್ಲ ವಿದ್ಯೆಗೊ ವಿಡಂಬನೆ ಮಾಂತ್ರ. ಭಾರಹೊರೆ ಸೌದಿಂದ ಒಂದೇ ಒಂದು ಸಂಜೀವಿನಿ ತುಂಡು ಹೇಂಗೆ ಶ್ರೇಷ್ಠವೋ ಹಾಂಗೇ ಜ್ಞಾನ ಮಾಂತ್ರ ಪರಮಶ್ರೇಷ್ಠ. ಕರ್ಮಕಾಂಡ ಮತ್ತೆ ವೇದಶಾಸ್ತ್ರಂಗಳ ಅಧ್ಯಯನರೂಪಿ ಪರಿಶ್ರಮರಹಿತ, ಕೇವಲ ಗುರುಮುಖಂದ ಪ್ರಾಪ್ತ ಅದ್ವೈತಜ್ಞಾನವೇ ಪರಮಕಲ್ಯಾಣಕಾರಿ ಹೇದು ಹೇಳಲಾಯ್ದು. ಹೊರತು, ಅನ್ಯ ಕೋಟ್ಯಾಂತರ ಶಾಸ್ತ್ರಂಗಳ ಅಧ್ಯಯನಂದ ಎಂತ ಲಾಭವೂ ಇಲ್ಲೆ. ವೇದಾದಿ ಆಗಮ ಶಾಸ್ತ್ರಂಗಳ ಅಧ್ಯಯನ ಹಾಂಗೂ ವಿವೇಕ – ಈ ಎರಡೂ ಸಾಧನಂಗಳಿಂದ  ಜ್ಞಾನದ ಪ್ರಾಪ್ತಿ ಆವ್ತು. ಆಗಮಶಾಸ್ತ್ರಂದ ಶಬ್ದಬ್ರಹ್ಮನ ಪ್ರಾಪ್ತಿ ಆವ್ತು, ವಿವೇಕಂದ ಪರಬ್ರಹ್ಮನ ಜ್ಞಾನ ಪ್ರಾಪ್ತಿ ಆವ್ತು. ಕೆಲವು ಜೆನಂಗೊ ಅದ್ವೈತವ ವಾಸ್ತವಿಕ ಪರಮತತ್ತ್ವ ಹೇದು ಹೇಳ್ತವು, ಇನ್ನು ಕೆಲವು ಜೆನಂಗೊ ದ್ವೈತತತ್ತ್ವದ ಪ್ರತಿಷ್ಠೆ ಬಯಸುತ್ತವು. ಆದರೆ ದ್ವೈತ ಮತ್ತೆ ಅದ್ವೈತಂದ ಬೇರೆಯೇ ಆದ ಎಲ್ಲೋರಿಂದಲೂ ಸಮಾನರೂಪಂದ ಗ್ರಹಣಯೋಗ್ಯವಾದ ಪರಮತತ್ತ್ವವ ಆರೂ ಸರಿಯಾದ ರೀತಿಲಿ ಅರ್ತಿದವಿಲ್ಲೆ. ‘ನ ಮಮ’ (ಎನ್ನದಲ್ಲ) ಮತ್ತೆ ‘ಮಮ’ (ಎನ್ನದು) – ಈ ಎರಡು ಪದ ಭಾವನೆಗಳೇ ಬಂಧನ ಮತ್ತೆ ಮೋಕ್ಷಕ್ಕೆ ಕಾರಣ ಆಗಿದ್ದು. ದೇಹ-ಮನೆ-ಮಗ-ಹೆಂಡತಿ ಇತಿ ಸಂಸಾರ ಮೋಹ ಹೇಳ್ವದು ‘ಮಮ’, ಇದೆಲ್ಲ ಬದುಕಿನ ಪಥಲ್ಲಿ ಒಂದು ಮರದ ನೆರಳು ಹೇದು ಅರ್ತುಗೊಂಬದು ‘ನ ಮಮ’. ಈ ಪ್ರಕಾರದ ಭಾವನೆ ಅನುಷ್ಠಾನ ಮಾಡ್ವದರಿಂದ ಮೋಕ್ಷಮಾರ್ಗಲ್ಲಿ ಮುನ್ನಡೆ ಎಡಿಗು.

ಬಂಧನದ ಉದ್ದೇಶಂದ ಆಗದ್ದಿಪ್ಪದೇ ಕರ್ಮ, ಮತ್ತೆ,  ಮೋಕ್ಷ ಪ್ರದಾನುಸುವುದೇ ವಿದ್ಯೆ. ಇದಲ್ಲದ್ದ ಕರ್ಮ ಬರೇ ಶ್ರಮಮಾತ್ರಕ್ಕಾಗಿ ಆವ್ತು. ಅದು ಶರೀರಕ್ಕೆ ದುಃಖಪ್ರದಾನುಸುವದಾಗಿ ಪರಿಣಮುಸುತ್ತು. ಅನ್ಯ ಪ್ರಕಾರದ ವಿದ್ಯೆಗೊ ಬರೇ ಶಿಲ್ಪಚಾತುರ್ಯ ಅಷ್ಟೇ ಆಗಿದ್ದು. ಎಲ್ಲಿವರೇಗೆ ಕರ್ಮ ಮಾಡಿಗೊಂಡಿರುತ್ತೋ, ಅಲ್ಲಿವರೇಗೆ ಇಂದ್ರಿಯಂಗಳ ಚಾಂಚಲ್ಯತೆ ಇರ್ತು. ಅಲ್ಲಿವರೇಂಗೆ ತತ್ತ್ವಜ್ಞಾನದ ವಿಷಯ ಬಪ್ಪಲೂ ಇಲ್ಲೆ. ಎಲ್ಲಿವರೇಂಗೆ ದೇಹಾಭಿಮಾನ ಇರ್ತೋ, ಎಲ್ಲಿವರೇಂಗೆ ಶರೀರ ಬಾಂಧವ್ಯ ಮಮತೆ ಇರುತ್ತೋ, ಎಲ್ಲಿವರೇಂಗೆ ಪ್ರಯತ್ನಂಗಳ ವೇಗ (ಆವೇಗ) ಇರ್ತೋ, ಎಲ್ಲಿವರೇಂಗೆ ಸಂಕಲ್ಪದ ಕಲ್ಪನೆ (ಇಹದ ಕಾಮ) ಇರ್ತೋ, ಎಲ್ಲಿವರೇಂಗೆ ಮನಸ್ಸು ಸ್ಥಿರತೆಯ ಹೊಂದುತ್ತಿಲ್ಯೋ, ಎಲ್ಲಿವರೇಂಗೆ ಶಾಸ್ತ್ರಂಗಳ ನಿಜಚಿಂತನೆ ಮಾಡಲ್ಪಡುತ್ತಿಲ್ಯೋ, ಎಲ್ಲಿವರೇಂಗೆ ಗುರುಕೃಪೆ ಪ್ರಾಪ್ತಿಯಾವ್ತಿಲ್ಯೋ, ಅಲ್ಲಿವರೇಂಗೆ ತತ್ತ್ವಜ್ಞಾನದ ಚರ್ಚೆ ಅಪ್ಪದಾದರೂ ಎಲ್ಲಿಂದ?!

ತಪ, ವ್ರತ, ತೀರ್ಥ, ಜೆಪ, ಹೋಮ ಮತ್ತೆ ಪೂಜಾದಿ ಸತ್ಕರ್ಮಂಗ ಅನುಷ್ಠಾನ ಹಾಂಗೂ ವೇದ, ಶಾಸ್ತ್ರ ಮತ್ತೆ ಆಗಮಂಗಳ ಕಥೆ – ಇವೆಲ್ಲವೂ ಜೀವಿಗೆ ತತ್ತ್ವಜ್ಞಾನ ಪ್ರಾಪ್ತಿ ಆಗದ್ದಿಪ್ಪನ್ನಾರ ಉಪಯುಕ್ತವಾಗಿಪ್ಪದು. ಹಾಂಗಾಗಿ ತನ್ನ ಮೋಕ್ಷದ ಇಚ್ಛೆ ಇದ್ದರೆ ಸದಾ ಸಂಪೂರ್ಣ ಪ್ರಯತ್ನಂದ ಎಲ್ಲ ಅವಸ್ಥೆಗಳಲ್ಲಿಯೂ ನಿರಂತರ ಅನುಷ್ಠಾನ ಮಾಡಿ, ತತ್ತ್ವಜ್ಞಾನದ ಪ್ರಾಪ್ತಿಲಿ ಸಂಲಗ್ನರಾಗಿರೆಕು. ಏವ ಜೀವಿ ಆದಿಭೌತಿಕ, ಆದಿದೈವಿಕ, ಆಧ್ಯಾತ್ಮಿಕ ಎಂಬೀ ತಾಪತ್ರಯಂಗಳಿಂದ ಸಂತಪ್ತನಾಗಿದ್ದನೋ, ಅವಂಗೆ ಮೋಕ್ಷವೃಕ್ಷದ ತಣಿಲಿನ ಆಶ್ರಯ ಮಾಡೆಕು. ಆ ಮೋಕ್ಷವೃಕ್ಷದ ಪುಷ್ಪ, ಧರ್ಮ ಮತ್ತೆ ಜ್ಞಾನಸ್ವರೂಪ ಆಗಿದ್ದು. ಅದರ ಫಲ ಸ್ವರ್ಗ ಹಾಂಗೂ ಮೋಕ್ಷ ಆಗಿದ್ದು. ಹಾಂಗಾಗಿ ಶ್ರೀಗುರುಮುಖಂದ ಆತ್ಮತತ್ತ್ವವಿಷಯಕ ಜ್ಞಾನವ ಪ್ರಾಪ್ತಿಹೊಂದೆಕು. ಜ್ಞಾನಪ್ರಾಪ್ತಿ ಹೊಂದಿರೆ ಜೀವಿ ಈ ಪ್ರಾಪಂಚಿಕ ಬಂಧನಂದ ಸುಖವಾಗಿ ಮುಕ್ತನಾಗಿಬಿಡ್ತ°. ಹೇ ಗರುಡ!, ಆನು ತತ್ತ್ವಜ್ಞಾನಿ ಪುರುಷರ ಮೂಲಕ ಮಾಡಲ್ಪಡುವ ಅಂತಿಮ ಕೃತ್ಯಂಗಳ ವಿಷಯದ ನಿನಗೆ ಹೇಳ್ತೆ, ಕೇಳು. ಆ ಉಪಾಯಂಗಳ ಮಾಡುವದರಿಂದ ಜೀವಿಗೆ ಬ್ರಹ್ಮನಿರ್ವಾಣಸಂಜ್ಞಕ ಮೋಕ್ಷದ ಪ್ರಾಪ್ತಿ ಆವುತ್ತು.

 

ಅದೆಂತರ?!… ಬಪ್ಪ ವಾರ ನೋಡುವೋ° .

 

[ಚಿಂತನೀಯಾ –

 

(ರಜಾ ಉದ್ದ ಆಗಿಹೋತೋ ಈ ವಾರದ ಭಾಗ?! ಒಂದು ವಿಷಯದ ಭಾಗ ಪೂರ್ತಿ ಮಾಡದ್ದೆ ಅರ್ಧಲ್ಲಿ ಬಿಟ್ರೆ ತಲೆಬುಡ ಇಲ್ಲದ್ದಾಂಗೆ ಆಗಿ ಹೋವ್ತೋ ಹೇದು ಒಂದು ಹಂತಕ್ಕೆ ತಂದು ನಿಲ್ಸಿದ್ದದು).

ಮನುಷ್ಯನ ವಿವೇಕ ಚುರುಕು ಅಪ್ಪಲೆ ಸಾಕಷ್ಟು ವೇದಿಕೆಯ ಭಗವಂತ° ಈ ಭಾಗಲ್ಲಿ ನೀಡಿದ್ದ°. ವಿಷಯದ ಮಹತ್ವವ ಪ್ರತಿಯೊಂದನ್ನೂ ಉದಾಹರಣೆ ಸಹಿತ ವಿವರಿಸಿ ಚಿಂತನೆಗೆ ಇಳಿವಲೆ ಆಸ್ಪದ ಕೊಟ್ಟಿದ°. ಹಾಂಗಾಗಿ ಗರುಡಪುರಾಣ ಸಾರೋದ್ಧಾರ ಹೇಳ್ವದರ್ಲಿ ಸಂದೇಹವೇ ಇಲ್ಲೆ. ಆದರೆ ಚಿಂತನೆ ಹೇಂಗಿರೆಕು ಹೇಳ್ವದು ಪುನಃ ನಾವು ನಮ್ಮಷ್ಟಕ್ಕೆ ಚಿಂತಿಸೆಕ್ಕಾಗಿದ್ದು. ಎಂತ ಕೇಳಿರೂ ಎಂತ ಹೇಳಿರೂ ಎಂತ ಓದಿರೂ ವಿಷಯದ ಮೂಲಾರ್ಥವ ಅರ್ತುಗೊಳ್ಳದ್ದೆ ಬರೇ ಶಬ್ದಾರ್ಥದ ಜ್ಞಾನ ವಿಷಯದ ಜ್ಞಾನವ ಒದಗುಸ. ಅದರ ಅರ್ಥಪೂರ್ಣವಾಗಿ ಅರ್ಥೈಸಿಗೊಳ್ಳೆಕ್ಕಾದ ಕರ್ತವ್ಯವ ಭಗವಂತ° ಇಲ್ಲಿ ಒತ್ತಿ ಹೇಯ್ದ°. ಇಲ್ಲದ್ರೆ ಅದೂ ಬರೇ ತಥಾಕಲ್ಪಿತ ವಿಶ್ಲೇಷಣೆ ಆಗಿ ಹೋಕು. ಶಾಸ್ತ್ರ ಹೇಳ್ತದು ಒಂದು, ಶಾಸ್ತ್ರವ ಹೇಳೋದು ಮತ್ತೊಂದು. ಎಂತಹ ಮಾತು ಅಪ್ಪೋ! ಅವರವರ ವಿವೇಕಕ್ಕೆ ಬಿಟ್ಟಿದ° ಭಗವಂತ°. ಆರು ಅದರ ಅರ್ಥವತ್ತಾಗಿ ತಿಳಿತ್ತವೋ ಅವನೇ ಜ್ಞಾನಿ ಅಪ್ಪಲೆಡಿಗು. ಶಾಸ್ತ್ರಂಗಳಲ್ಲಿ ಹೇಳಿಪ್ಪ ವಿಷಯಂಗಳ ಅರ್ತು ಜೀರ್ಣಿಸಿಗೊಂಬಲೆ ಮನುಷ್ಯನ ಆಯಸ್ಸು ಸಾಲ. ಆದರೆ ವಿವೇಕಪೂರ್ವಕವಾಗಿ ಶಾಸ್ತ್ರಸಾರವ ಅರ್ತುಗೊಂಡರೆ ಅದರ ಅನುಷ್ಠಾನ ಮಾಡಿರೆ ಅದುವೇ ಮೋಕ್ಷದ ಸೋಪಾನ. ಬರೇ ಶಾಸ್ತ್ರಾದಿ ಅಧ್ಯಯನಂದ  ಎಂತ ಅಪ್ಪಲೂ ಇಲ್ಲೆ. ಅದು ಜೀವನಲ್ಲಿ ಆಚರಣೆಗೆ ಬರೆಕು. ಇಲ್ಲದ್ರೆ ಓದಿದ್ದು ಶಾಸ್ತ್ರ ಹಾಕಿದ್ದು ಗಾಳ ಆಗಿಹೋಕು. ಹಾಂಗೇಳಿ ಅಧ್ಯಯನ ಬೇಡ ಹೇದು ಎಂದೂ ಎಲ್ಲ್ಯೂ ಹೇಯ್ದಿಲ್ಲೆ. ಅಧ್ಯಯನ ಚಿಂತನೆಗೆ ಬುನಾದಿ ಮಾಂತ್ರ. ಆ ಅಧ್ಯಯನ ಎಲ್ಲಿ ಆಯೇಕು ? – ಸತ್ಸಂಗದ ಹೇಳ್ವದು ಮದಲೇ ಹೇಯ್ದ° ಭಗವಂತ°. ಚಿಂತನೆ ಮಂಥನ ಜ್ಞಾನದಾಹಂದ ಆಯೇಕು ಹೊರತು ಕುತಾರ್ಕಿಕ ಹುಂಬತನಂದ ಅಪ್ಪಲಾಗ. ತತ್ತ್ವಜ್ಞಾನ ಗುರಿರಹಿತ ಅಧ್ಯಯನ ಮೂಢ ಲಕ್ಷಣ.  ಇಲ್ಲದ್ರೆ ರಸಾಸ್ವಾದನೆಗೆ ಅನರ್ಹವಾದ ಸೌಟಿನ ಹಾಂಗೇ ಸರಿ. ಇಹಲ್ಲಿ ಕರ್ಮ ನಿರಂತರ ಆಗಿರೆಕು ಹೇಯ್ದ ಭಗವಂತ°. ಇಲ್ಲಿ ಕರ್ಮ ಹೇಳ್ವದು ಆಧ್ಯಾತ್ಮಿಕ ಕರ್ಮ. ತಪಸ್ಸು, ಯಾಗ, ಯಜ್ಞ, ಅಧ್ಯಯನ ಇತ್ಯಾದಿಗೊ ಕೇವಲ ಪ್ರದರ್ಶನಕ್ಕೆ. ಅವೆಲ್ಲಕ್ಕಿಂತಲೂ ಮಿಗಿಲಾದ್ದು ತತ್ತ್ವಜ್ಞಾನದರ್ಶನ. ಇದಕ್ಕೆ ಅದು ಪೂರಕವಾಗಿ ಇದ್ದರಷ್ಟೇ ಏನಾರು ಉಪಕಾರ ಅಕ್ಕಷ್ಟೆ. ಅಧ್ಯಯನಂದ ಶಬ್ದಬ್ರಹ್ಮನ ಪ್ರಾಪ್ತಿ, ವಿವೇಕಯುಕ್ತ ಅನುಷ್ಠಾನಂದ ಪರಬ್ರಹ್ಮನ ಪ್ರಾಪ್ತಿ!. ದ್ವೈತ ಅದ್ವೈತ ಚರ್ಚೆ ಎಂತ ಗುಣವೂ ಇಲ್ಲೆ. ಏವಾಗ ನವಗೆ ‘ಇದಂ ನ ಮಮ’  ಹೇಳ್ವ ಜ್ಞಾನ ಬತ್ತೋ ಅದು ಮೋಕ್ಷಕ್ಕೆ ಮಾರ್ಗ. ಕರ್ಮ ಮೋಕ್ಷಕ್ಕೆ ಕಾರಣವಾಗಿರೆಕು ಹೊರತು ಬಂಧನಕ್ಕೆ ಹೇತುವಪ್ಪಲಾಗ. ಮೋಕ್ಷಕ್ಕೆ ಕಾರಣವಾಗದ್ದ ಕರ್ಮ ಬರೇ ಶರೀರ ಪರಿಶ್ರಮ ಮಾಂತ್ರ ಅಕ್ಕಷ್ಟೆ. ತಾಪತ್ರಯಂದ ತಪ್ತನಾದವ° ಮೋಕ್ಷದ ತಣಿಲಿನ ಆಶ್ರಯಿಸೆಕು. ಅದಕ್ಕೆ ಶ್ರೀಗುರುಮುಖದ ಆಶೀರ್ವಚನಕ್ಕೆ ಯೋಗ್ಯನಾಯೆಕು. ಹಾಂಗಾಗಿಯೇ ‘ಗುರುವಿನ ಗುಲಾಮನಾಗದ ತನಕ ದೊರಕದಣ್ಣ ಮುಕುತಿ’.

ಹಾಂಗಾರೆ ತತ್ತ್ವಜ್ಞಾನಿ ಮಾಡೇಕ್ಕಾದ ಅಂತಿಮ ಕಾರ್ಯಂಗೊ ಎಂತರ ಹೇಳ್ವದರ ಮುಂದೆ ಹೇಳುತ್ತೆ ಹೇದು ಭಗವಂತ° ಹೇಳಿದಲ್ಯಂಗೆ, “ನೀಡೆಮಗೆ ಸುಜ್ಞಾನವ” ಹೇದುಗೊಂಡು ಈ ಭಾಗಕ್ಕೆ ಹರೇ ರಾಮ.]

ಚೆನ್ನೈ ಬಾವ°

   

You may also like...

3 Responses

  1. Prabhakara Bhatk says:

    ಘೋರ ನರಕ೦ಗಳ ವಣ೯ನೆಗಳ ಎಲ್ಲ ಓದಿ ಈಗ ಸಮಾಧಾನ ಕೊಡುವ ಹ೦ತಕ್ಕೆ ಬ೦ದಾತು. ಚೆನ್ನೈ ಭಾವ ಪ್ರತಿ ವಾರ ತಪ್ಪದ್ದೆ ಗರುಡ ಪುರಾಣವ ಧಾರಾವಾವಿಯ ರೂಪಲ್ಲಿ ವಿವರಣೆ ಸಹಿತ ಪ್ರಸ್ತುತ ಪಡುಸದ್ದೆ ಇದ್ದಿದ್ರೆ ಆನು, ಬಹುಷಃ ಎನ್ನ ಹಾ೦ಗೆ ಅನೇಕರು ಗದುಡ ಪುರಾಣದ ಜ್ನಾನ ಸ೦ಪತ್ತಿ೦ದ ವ೦ಚಿತರಾವುತ್ತಿತಿಯೊ೦. ದನ್ಯವಾದ೦ಗೊ!

  2. ಕೆ. ವೆಂಕಟರಮಣ ಭಟ್ಟ says:

    ಹರೇ ರಾಮ.

  3. ramabhat muliyala says:

    hareeraama

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *