ಗರುಡ ಪುರಾಣ – ಅಧ್ಯಾಯ 03 – ಭಾಗ 01

August 15, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪಾಪಾತ್ಮರು ಮರಣಾನಂತರ ಮಹಾಘೋರವಾದ ಯಾತನಾಮಯ ಯಮಮಾರ್ಗಲ್ಲಿ ಹೇಂಗೆ ಹೋಗಿ ಯಮಲೋಕವ ಸೇರುತ್ತವು ಹೇಳ್ವದರ ಭಗವಂತ° ಮಹಾವಿಷ್ಣು ಗರುಡಂಗೆ ವಿವರಿಸಿ, ‘ಇಪ್ಪದರ ಇಪ್ಪಾಂಗೆ ಹೇಳಿದ್ದೆ, ಇನ್ನೆಂತ ಹೆಚ್ಚಿಗೆ  ತಿಳಿವಲೆ ಬಯಸುತ್ತೆ?” ಹೇದು ಭಗವಂತ° ಕೇಳಿದಲ್ಯಂಗೆ ಎರಡ್ನೇ ಅಧ್ಯಾಯ ಮುಗುದತ್ತು ಹೇದು ಕಳುದವಾರ ಓದಿ ನಿಲ್ಸಿದ್ದದು. ಮುಂದೆ  –

 

ಗರುಡ ಪುರಾಣಂ

ಅಥ ತೃತೀಯೋsಧ್ಯಾಯಃ

ಯಮಯಾತನಾನಿರೂಪಣಂ

 

ಗರುಡ ಪುರಾಣimages9

ಅಧ್ಯಾಯ 3

ಯಮಯಾತನೆಯ ನಿರೂಪಣೆ

 

ಗರುಡ ಉವಾಚ
ಯಮಮಾರ್ಗಮತಿಕ್ರಮ್ಯ ಗತ್ವಾ ಪಾಪೀ ಯಮಾಲಯೇ ।
ಕೀದೃಶೀಂ ಯಾತನಾಂ ಭುಂಕ್ತೇ ತನ್ಮೇ ಕಥಯ ಕೇಶವ ॥೦೧॥

ಗರುಡ° ಹೇಳಿದ°- ಏ ಕೇಶವನೇ!, ಪಾಪಿಯಾದವ° ಯಮ ಮಾರ್ಗವ ದಾಂಟಿ ಯಮಾಲಯಕ್ಕೆ ಹೋಗಿ ಅಲ್ಲಿ ಏವ ರೀತಿಯ ಕಷ್ಟಂಗಳ ಅನುಭವುಸುತ್ತ° ಹೇಳ್ವದರ ಎನಗೆ ಹೇಳು.

ಶ್ರೀ ಭಗವಾನ್ ಉವಾಚ
ಆದ್ಯಂತಂ ಚ ಪ್ರವಕ್ಷ್ಯಾಮಿ ಶ್ರುಣುಷ್ವ ವಿನತಾತ್ಮಜ ।
ಕಥ್ಯಮಾನೇsಪಿ ನರಕೇ ತ್ವಂ ಭವಿಷ್ಯಸಿ ಕಂಪಿತಃ ॥೦೨॥

ಭಗವಂತ° ಹೇಳಿದ° – ಏ ವಿನತೆಯ ಮಗನೇ!, ಸುರುವಿಂದ ಅಕೇರಿವರೇಂಗೆ ಹೇಳ್ತೆ ಕೇಳು. ನರಕದ ವರ್ಣನೆಯ ಕೇಳ್ತದರಿಂದಲೇ ನೀನು ನಡುಗಿ ಹೋಪೆ.

ಚತ್ವಾರಿಂಶದ್ಯೋಜನಾನಿ ಚತುರ್ಯುಕ್ತಾನಿ ಕಾಶ್ಯಪ ।
ಬಹುಭೀತಿಪುರಾದಗ್ರೇ ಧರ್ಮರಾಜಪುರಂ ಮಹತ್ ॥೦೩॥

ಏ ಕಾಶ್ಯಪ, ಬಹುಭೀತಿಪುರಂದ ಮುಂದೆ ನಲ್ವತ್ತ ನಾಲ್ಕು ಯೋಜನ ವಿಸ್ತೀರ್ಣಲ್ಲಿ ವಿಶಾಲವಾದ ಧರ್ಮರಾಯನ ಪುರ ಇದ್ದು.

ಹಾಹಾಕಾರಸಮಾಯುಕ್ತಂ ದೃಷ್ಟ್ವಾಕ್ರಂದತಿ ಪಾತಕೀ ।
ತತ್ಕ್ರಂದಿತಂ ಸಮಾಕರ್ಣ್ಯ ಯಮಸ್ಯ ಪುರಚಾರಿಣಃ ॥೦೪॥

(ಆ ಊರು) ಹಾಹಾಕಾರ ಕೂಗಿಂದ ಕೂಡಿದ್ದು. ಅದರ ನೋಡಿ ಪಾಪಿ ಕಿರುಚುತ್ತ°. ಆ ಕಿರುಚಾಟವ ಕೇಳಿ ಯಮನ ಊರಿನವು-

ಗತ್ವಾ ಚ ತತ್ರ ತೇ ಸರ್ವೇ ಪ್ರತೀಹಾರಂ ವದಂತಿ ಹಿ ।
ಧರ್ಮಧ್ವಜಃ ಪ್ರತೀಹಾರಸ್ತತ್ರ ತಿಷ್ಠತಿ ಸರ್ವದಾ ॥೦೫॥

ಅವು ದ್ವಾರಪಾಲಕನ ಹತ್ರೆ ಹೋಗಿ ಎಲ್ಲವನ್ನೂ ಹೇಳುತ್ತವು. ಅಲ್ಲಿ ಧರ್ಮಧ್ವಜ ಹೇಳ್ವ ದ್ವಾರಪಾಲಕ° ಏವತ್ತೂ ಇರ್ತ°.

ಸ ಗತ್ವಾ ಚಿತ್ರಗುಪ್ತಾಯ ಬ್ರೂತೇ ತಸ್ಯ ಶುಭಾಶುಭಮ್ ।
ತತಸ್ತಂ ಚಿತ್ರಗುಪ್ತೋsಪಿ ಧರ್ಮರಾಜಂ ನಿವೇದಯೇತ್ ॥೦೬॥

ಅಂವ° ಹೋಗಿ ಚಿತ್ರಗುಪ್ತಂಗೆ ಆ ಪಾಪಿಯ ಶುಭಾಶುಭ ಕರ್ಮಂಗಳೆಲ್ಲವ ಹೇಳುತ್ತ°. ಮತ್ತೆ ಚಿತ್ರಗುಪ್ತ° ಯಮಧರ್ಮರಾಜನತ್ರೆ ನಿವೇದುಸುತ್ತ°.

ನಾಸ್ತಿಕಾ ಯೇ ನರಾಸ್ತಾರ್ಕ್ಷ್ಯ ಮಹಾಪಾಪರತಾಃ ಸದಾ ।
ತಾಂಶ್ಚ ಸರ್ವಾನ್ಯಥಾಯೋಗ್ಯಂ ಸಮ್ಯಗ್ಜಾನಾತಿ ಧರ್ಮರಾಟ್ ॥೦೭॥

ಏವ ಮನುಷ್ಯರು ನಾಸ್ತಿಕರೋ ಮತ್ತೆ ಪಾಪಕಾರ್ಯಂಗಳಲ್ಲೇ ನಿರತರಾಗಿರುತ್ತವೋ ಅವೆಲ್ಲೋರನ್ನೂ ಧರ್ಮರಾಜ° ತಿಳುದುಗೊಂಡಿರುತ್ತ°.

ತಥಾಪಿ ಚಿತ್ರಗುಪ್ತಾಯ ತೇಷಾಂ ಪಾಪಂ ಸ ಪೃಚ್ಛತಿ ।
ಚಿತ್ರಗುಪ್ತೋsಪಿ ಸರ್ವಜ್ಞಃ ಶ್ರವಣಾನ್ಪರಿಪೃಚ್ಛತಿ ॥೦೮॥

ಅಂದರೂ ಅಂವ° ಚಿತ್ರಗುಪ್ತನತ್ರೆ ಅವರ ಪಾಪಂಗಳ ವಿಷಯವಾಗಿ ಕೇಳುತ್ತ°. ಚಿತ್ರಗುಪ್ತ° ಎಲ್ಲವನ್ನೂ ತಿಳುದಂವನಾಗಿದ್ದರೂ ಶ್ರವಣರ ಕೇಳುತ್ತ°.

ಶ್ರವಣಾ ಬ್ರಹ್ಮಣಃ ಪುತ್ರಾಃ ಸ್ವರ್ಭೂಪಾತಾಲಚಾರಿಣಃ ।
ದೂರಶ್ರವಣವಿಜ್ಞಾನಾ ದೂರದರ್ಶನಚಕ್ಷುಷಃ ॥೦೯॥

ಬ್ರಹ್ಮನ ಮಕ್ಕ ಆದ ಶ್ರವಣರು ಸ್ವರ್ಗ, ಭೂಮಿ, ಪಾತಾಳಂಗಳಲ್ಲಿ ಸಂಚರುಸುವವು. ಅವಕ್ಕೆ ದೂರಂದಲೇ ಕೇಳಿ ತಿಳ್ಕೊಂಬ, ಹಾಂಗೇ ದೂರಂದಲೇ ನೋಡ್ಳೆ ಎಡಿಗಪ್ಪ ವಿಶೇಷ ಜ್ಞಾನಶಕ್ತಿ  ಮತ್ತೆ ವೀಕ್ಷಣಾಶಕ್ತಿ ಇದ್ದು.

ತೇಷಾಂ ಪತ್ನ್ಯಸ್ತಥಾಭೂತಾಃ ಶ್ರವಣ್ಯಃ ಪೃಥಗಾಹ್ವಯಾಃ ।
ಸ್ತ್ರೀಣಾಂ ವಿಚೇಷ್ಟಿತಂ ಸರ್ವಂ ತಾ ವಿಜಾನಂತಿ ತತ್ತ್ವತಃ ॥೧೦॥

ಅವರ ಪತ್ನಿಗೊಕ್ಕೂ ಅಂತಹ ಶಕ್ತಿ ಇದ್ದು. ಹಾಂಗಾಗಿ ಅವರ ಶ್ರವಣಿಯರು ಹೇದು ಹೇಳುತ್ತವು. ಸ್ತ್ರೀಯರು ಮಾಡ್ತದೆಲ್ಲವ ಅವು ಯಥಾರ್ಥರೂಪಲ್ಲಿ ತಿಳ್ಕೊಂಡಿರುತ್ತವು.

ನರೈಃ ಪ್ರಚ್ಛನ್ನಪ್ರತ್ಯಕ್ಷಂ ಯತ್ಪ್ರೋಕ್ತಂ ಚ ಕೃತಂ ಚ ಯತ್ ।
ಸರ್ವಮಾವೇಯಂತ್ಯೇವ ಚಿತ್ರಗುಪ್ತಾಯ ತೇ ಚ ತಾಃ ॥೧೧॥

ಮನುಷ್ಯರು ಗುಪ್ತವಾಗಿಯೂ ಬಹಿರಂಗವಾಗಿಯೂ ಹೇಳಿದ್ದರನ್ನೂ ಮಾಡಿದ್ದರನ್ನೂ ಅವು ಚಿತ್ರಗುಪ್ತಂಗೆ ಹೇಳುತ್ತವು.

ಚಾರಾಸ್ತೇ ಧರ್ಮರಾಜಸ್ಯ ಮನುಷ್ಯಾಣಾಂ ಶುಭಾಶುಭಮ್ ।
ಮನೋವಾಕಾಯರಂ ಕರ್ಮ ಸರ್ವಂ ಜಾನಂತಿ ತತ್ತ್ವತಃ ॥೧೨।।

ಯಮಧರ್ಮರಾಜನ ಗುಪ್ತಚರರು ಆದ ಇವ್ವು ಮನುಷ್ಯರ ಶುಭಾಶುಭಂಗಳನ್ನೂ ಮನೋವಾಕ್ಕಾಯಂಗಳಿಂದ ಮಾಡ್ತ ಎಲ್ಲ ಕರ್ಮಂಗಳನ್ನೂ ಸರಿಯಾಗಿ ತಿಳುದುಕೊಂಡಿರುತ್ತವು.

ಏವಂ ತೇಷಾಂ ಶಕ್ತಿರಸ್ತಿ ಮರ್ತ್ಯಾಮರ್ತ್ಯಾಧಿಕಾರಿಣಾಮ್ ।
ಕಥಯಂತಿ ನೃಣಾಂ ಕರ್ಮ ಶ್ರವಣಾಃ ಸತ್ಯವಾದಿನಃ ॥೧೩॥

ಮರ್ತ್ತ್ಯರಿಂಗೂ ಅಮರರಿಂಗೂ ಅಧಿಕಾರಿಗಳಾಗಿಪ್ಪ ಅವಕ್ಕೆ ಇಷ್ಟು ಶಕ್ತಿ ಇದ್ದು. ಸತ್ಯವಾದಿಗೊ ಆದ ಆ ಶ್ರವಣರು ಮನುಷ್ಯನ ಕರ್ಮಂಗಳ ಹೇಳುತ್ತವು.

ವ್ರತೈರ್ದಾನೈಶ್ಚ ಸತ್ಯೋಕ್ತ್ಯಾ ಯಸ್ತೋಷಯತಿ ತಾನ್ನರಃ ।
ಭವಂತಿ ತಸ್ಯ ತೇ ಸೌಮ್ಯಾಃ ಸ್ವರ್ಗಮೋಕ್ಷಪ್ರದಾಯಿನಃ ॥೧೪॥

ಏವ ಮನುಷ್ಯ° ವ್ರತ, ದಾನ, ಸತ್ಯವಾಕ್ಯಂದಲೂ ಅವರ ಸಂತೋಷಪಡಿಸುತ್ತನೋ ಅವಂಗೆ ಅವ್ವು ಸೌಮ್ಯರಾಗಿ ಸ್ವರ್ಗಮೋಕ್ಷಂಗಳ ದಯಪಾಲುಸುತ್ತವು.

ಪಾಪಿನಾಂ ಪಾಪಕರ್ಮಾಣಿ ಜ್ಞಾತ್ವಾ ತೇ ಸತ್ಯವಾದಿನಃ ।
ಧರ್ಮರಾಜಪುರಃ ಪ್ರೋಕ್ತಾ ಜಾಯಂತೇ ದುಃಖದಾಯಿನಃ ॥೧೫॥

ಆ ಸತ್ಯವಾದಿಗೊ ಪಾಪಿಗಳ ದುಷ್ಕರ್ಮಂಗಳನ್ನೂ ತಿಳ್ಕೊಂಡು ಧರ್ಮರಾಜನೆದುರು ಹೇಳಿ ದುಃಖದಾಯಕರಾವುತ್ತವು.

ಆದಿತ್ಯಚಂದ್ರಾವನಿಲೋsನಲಶ್ಚ ದ್ಯೌರ್ಭೂಮಿರಾಪೋ ಹೃದಯಂ ಯಮಶ್ಚ ।
ಅಹಶ್ಚ ರಾತ್ರಿಶ್ಚ ಉಭೇ ಚ ಸಂಧ್ಯೇ ಧರ್ಮಶ್ಚ ಜಾನಾತಿ ನರಸ್ಯ ವೃತ್ತಮ್॥೧೬॥

ಸೂರ್ಯ, ಚಂದ್ರ, ಅಗ್ನಿ, ವಾಯು, ಆಕಾಶ, ಭೂಮಿ, ನೀರು, ಹೃದಯ, ಯಮ, ಹಗಲು, ಇರುಳು, ಎರಡು ಸಂಧ್ಯಾಕಾಲಂಗೊ ಮತ್ತೆ ಧರ್ಮ- ಇವುಗೊ ಮನುಷ್ಯನ ವೃತ್ತಾಂತವ ತಿಳ್ಕೊಂಡಿರುತ್ತವು.

ಧರ್ಮರಾಜಶ್ಚಿತ್ರಗುಪ್ತಃ ಶ್ರವಣಾ ಭಾಸ್ಕರಾದಯಃ ।
ಕಾಯಸ್ಥಂ ತತ್ರ ಪಶ್ಯಂತಿ ಪಾಪಂ ಪುಣ್ಯಂ ಚ ಸರ್ವಶಃ ॥೧೭॥

ಧರ್ಮರಾಜ, ಚಿತ್ರಗುಪ್ತ, ಶ್ರವಣ, ಸೂರ್ಯ ಮೊದಲಾದೋರು ಈ ಶರೀರಲ್ಲಿದ್ದುಗೊಂಡು ಪಾಪಪುಣ್ಯಂಗಳೆಲ್ಲವ ನೋಡುತ್ತವು.

ಏವಂ ಸುನಿಶ್ಚಯಂ ಕೃತ್ವಾ ಪಾಪಿನಾಂ ಪಾತಕಂ ಯಮಃ ।
ಆಹೂಯ ತಾನ್ನಿಜಂ ರೂಪಂ ದರ್ಶಯತ್ಯತಿಭೀಷಣಮ್ ॥೧೮॥

ಈ ರೀತಿ ಪಾಪಿಯ ಪಾಪಂಗಳ ನಿಶ್ಚಯಮಾಡಿ, ಯಮಧರ್ಮರಾಜ ಅವನ ಬರುಸಿ ಅತಿಭಯಂಕರವಾದ ತನ್ನ ನಿಜರೂಪವ ತೋರುಸುತ್ತ°.

ಪಾಪಿಷ್ಠಾಸ್ತೇ ಪ್ರಪಶ್ಯಂತಿ ಯಮರೂಪಂ ಭಯಂಕರಮ್ ।
ದಂಡಹಸ್ತಂ ಮಹಾಕಾಯಂ ಮಹಿಷೋಪರಿ ಸಂಸ್ಥಿತಮ್ ॥೧೯॥

ಆ ಪಾಪಿಷ್ಠರು ದಂಡಪಾಣಿಯಾದ, ಮಹಾಕಾಯನಾದ, ಗೋಣನ ಮೇಗೆ ಕೂದೊಂಡಿಪ್ಪ ಭಯಂಕರನಾದ ಯಮನ ರೂಪವ ನೋಡುತ್ತವು.

ಪ್ರಲಯಾಂಬುದನಿರ್ಘೋಷಂ ಕಜ್ಜಲಾಚಲಸನ್ನಿಭಮ್ ।
ವಿದ್ಯುತ್ಪ್ರಭಾಯುಧೈರ್ಭೀಮಂ ದ್ದ್ವಾತ್ರಿಂಶದ್ಭುಜಸಂಯುತಮ್ ॥೨೦॥

ಪ್ರಳಯಕಾಲದ ಮೇಘಂಗಳ ಗರ್ಜನೆ ಹಾಂಗೆ ಗರ್ಜುಸುವ, ಕಾಡಿಗೆಯ ಪರ್ವತದ ಹಾಂಗೆ ಕಪ್ಪಾಗಿ, ಮಿಂಚಿನಾಂಗೆ ಹೊಳವ ಆಯುಧಂಗಳಿಂದ ಒಡಗೂಡಿ ಭಯಂಕರನಾದ ಮೂವತ್ತೆರಡು ಭುಜಂಗಳ ಹೊಂದಿಪ್ಪ

ಯೋಜನತ್ರಯವಿಸ್ತಾರಂ ವಾಪೀತುಲ್ಯವಿಲೋಚನಮ್ ।
ದಂಷ್ಟ್ರಾಕರಾಲವದನಂ ರಕ್ತಾಕ್ಷಂ ದೀರ್ಘನಾಸಿಕಮ್ ॥೨೧॥

ಮೂರು ಯೋಜನ ವಿಸ್ತಾರದ (ದೇಹಾಕಾಯವಿಪ್ಪ), ಬಾವಿಯಾಂಗೆ ಕಣ್ಣುಗಳಿಪ್ಪ, ಕೋರೆಹಲ್ಲಿಂದ ಭಯಂಕರವಾದ ಮೋರೆಯಿಪ್ಪ, ರಕ್ತರಂಜಿತ ಕಣ್ಣುಗಳಿಪ್ಪ, ಉದ್ದವಾದ ಮೂಗಿಪ್ಪ ಯಮರಾಜನ ಸ್ವರೂಪ ( ಈ ರೀತಿ ಭಯಂಕರವಾದ್ದು).

ಮೃತ್ಯುಜ್ವರಾದಿಭಿರ್ಯುಕ್ತಶ್ಚಿತ್ರಗುಪ್ತೋsಪಿ ಭೀಷಣಃ ।
ಸರ್ವೇ ದೂತಾಶ್ಚ ಗರ್ಜಂತಿ ಯಮತುಲ್ಯಾಸ್ತದಂತಿಕೇ ॥೨೨॥

ಮೃತ್ಯುಜರಾದಿಗಳಿಂದ ಕೂಡಿದ ಚಿತ್ರಗುಪ್ತನೂ ಭಯಂಕರನಾಗಿದ್ದ°. ಯಮರೂಪಕ್ಕೆ ತುಲ್ಯವಾದ ರೂಪವ ಹೊಂದಿ ಎಲ್ಲ ದೂತರು ಗರ್ಜಿಸ್ಯೊಂಡು ಅವನ ಹತ್ರೆ ಇರ್ತವು.

ತಂ ದೃಷ್ಟ್ವಾಭಯಭೀತಸ್ತು ಹಾಹೇತಿ ವದತೇ ಖಲಃ ।
ಅದತ್ತದಾನಃ ಪಾಪಾತ್ಮಃ ಕಂಪತೇ ಕ್ರಂದತೇ ಪುನಃ ॥೨೩॥

ಯಮನ ನೋಡಿ ಭಯಭೀತನಾಗಿ ಆ ದುಷ್ಟ° ಹಾ ಹಾ ಹೇದು ಕಿರುಚುತ್ತ°. ದಾನವನ್ನೂ ಮಾಡದ್ದೆ ಇಪ್ಪ ಪಾಪಿ ನಡುಗಿಯೊಂಡು ಮತ್ತೆ ವಿಲಪಿಸುತ್ತ°.

ತತೋ ವದತಿ ತಾನ್ಸರ್ವಾನ್ ಕ್ರಂದಮಾನಾಂಶ್ಚ ಪಾಪಿನಃ ।
ಶೋಚಂತಃ ಸ್ವಾನಿ ಕರ್ಮಾಣಿ ಚಿತ್ರಗುಪ್ತೋ ಯಮಾಜ್ಞಯಾ ॥೨೩॥

ಮತ್ತೆ ವಿಲಾಪಿಸುತ್ತಿಪ್ಪ ಹಾಂಗೂ ತಾವು ಮಾಡಿದ ಕರ್ಮಂಗಳ ಕುರಿತು ಶೋಕಿಸಿಗೊಂಡು ಇಪ್ಪ ಎಲ್ಲ ಪಾಪಿಗೊಕ್ಕೂ ಯಮನ ಅಪ್ಪಣೆ ಪ್ರಕಾರ ಚಿತ್ರಗುಪ್ತ° ಹೇಳುತ್ತ°-

ಭೋಃ ಭೋಃ ಪಾಪಾ ದುರಾಚಾರಾ ಅಹಂಕಾರಪ್ರದೂಷಿತಾಃ ।
ಕಿಮರ್ಥಮರ್ಜಿತಂ ಪಾಪಂ ಯುಷ್ಮಾಭಿರವಿವೇಕಿಭಿಃ ॥೨೫॥

“ಎಲೈ ಪಾಪಿಗಳೇ, ಕೆಟ್ಟ ನಡತೆಯಿಪ್ಪೋರೇ, ಅಹಂಕಾರಂದ ತುಂಬಿಗೊಂಡಿವಪ್ಪವೇ, ಅವಿವೇಕಿಗಳೇ, ಪಾಪವ ಎಂತಕೆ ಬೇಕಾಗಿ ಸಂಪಾದಿಸಿದ್ದಿ?”

ಕಾಮಕ್ರೋಧಾದ್ಯದುತ್ಪನ್ನಂ ಸಂಗಮೇನ ಚ ಪಾಪಿನಾಮ್ ।
ತತ್ಪಾಪಂ ದುಃಖದಂ ಮೂಢಾಃ ಕಿಮರ್ಥಂ ಚರಿತಂ ಜನಾಃ ॥೨೬॥

“ಕಾಮ, ಕ್ರೋಧಂಗಳಿಂದ ಪಾಪಿಗಳ ಸಹವಾಸಂದ ಉತ್ಪನ್ನವಾದ ದುಃಖದಾಯಕವಾದ ಆ ಪಾಪಂಗಳ ಏ ಮೂಢರೇ, ಎಂತಕೆ ಮಾಡಿದಿ?”

ಕೃತವಂತಃ ಪುರಾ ಯೂಯಂ ಪಾಪಾನ್ಯತ್ಯಂತಹರ್ಷಿತಾಃ ।
ತಥೈವ ಯಾತನಾ ಭೋಗ್ಯಾಃ ಕಿಮಿದಾನೀಂ ಪರಾಙ್ಮುಖಾಃ ॥೨೭॥

“ನಿಂಗೊ ಮದಲೆ ಅತ್ಯಂತ ಹರ್ಷಿತರಾಗಿ ಪಾಪಂಗಳ ಮಾಡಿದ್ದಿ. ಹಾಂಗೇ ಈಗ ಯಾತನೆಗಳ ಅನುಭವುಸಿ. ಈಗ ಎಂತಕೆ ಮೋರೆ ತಿರುಗುಸುತ್ತಿ?”

ಕೃತ್ಯಾನಿ ಯಾನಿ ಪಾಪಾನಿ ಯುಷ್ಮಭಿಃ ಸುಬಹೂನ್ಯಪಿ ।
ತಾನಿ ಪಾಪಾನಿ ದುಃಖಸ್ಯ ಕಾರಣಂ ಚ ನ ವಂಚನಾ ॥೨೮॥

“ನಿಂಗಳಿಂದ ಬಹಳವಾಗಿ ಏವ ಪಾಪಂಗೊ ಮಾಡಲ್ಪಟ್ಟತ್ತೋ ಆ ಪಾಪಂಗಳೇ ಈಗ ದುಃಖದ ಕಾರಣಂಗೊ. ಅದರಲ್ಲಿ ವಂಚನೆ ಏನೂ ಇಲ್ಲೆ”.

ಮೂರ್ಖೇsಪಿ ಪಂಡಿತೇ ವಾಪಿ ದರಿದ್ರೇ ವಾ ಶ್ರಿಯಾನ್ವಿತೇ ।
ಸಬಲೇ ನಿರ್ಬಲೇ ವಾಪಿ ಸಮವರ್ತೀ ಯಮಃ ಸ್ಮೃತಃ ॥೨೯॥

“ಮೂರ್ಖನಾಗಲೀ, ಪಂಡಿತನಾಗಲಿ, ದರಿದ್ರನಾಗಲೆ, ಧನವಂತನಾಗಲಿ, ಬಲವಂತನಾಗಲೆ, ಬಲಹೀನನಾಗಿರಲಿ ಯಮಧರ್ಮರಾಜ ಸಮಾನ ಭಾವನೆಂದ ವರ್ತಿಸುತ್ತ ಹೇಳ್ತದು ಗೊಂತಿಪ್ಪ ವಿಷಯ”.

ಚಿತ್ರಗುಪ್ತಸ್ಯೇತಿ ವಾಕ್ಯಂ ಶ್ರುತ್ವಾ ತೇ ಪಾಪಿನಸ್ತದಾ ।
ಶೋಚಂತಃ ಸ್ವಾನಿ ಕರ್ಮಾಣಿ ತೂಷ್ಣೀಂ ತಿಷ್ಠಂತಿ ನಿಶ್ಚಲಾಃ ॥೩೦॥

ಚಿತ್ರಗುಪ್ತನ ಈ ಮಾತುಗಳ ಕೇಳಿ ಆ ಪಾಪಿಗೊ ತಾವು ಮಾಡಿದ ಕರ್ಮಂಗಳ ಶೋಕಿಸಿಗೊಂಡು ನಿಶ್ಯಬ್ದರಾಗಿ ನಿಶ್ಚಲರಾಗಿ ನಿಂದುಬಿಡುತ್ತವು.

ಧರ್ಮರಾಜೋsಪಿ ತಾನ್ ದೃಷ್ಟ್ವಾ ಚೋರವನ್ನಿಶ್ಚಲಾನ್ ಸ್ಮಿತಾನ್ ।
ಆಜ್ಞಾಪಯತಿ ಪಾಪಾನಾಂ ಶಾಸ್ತಿಂ ಚೈವ ಯಥೋಚಿತಾಮ್ ॥೩೧॥

ಕಳ್ಳಂಗಳಾಂಗೆ ನಿಶ್ಚಲರಾಗಿ ನಿಂದಿಪ್ಪ ಅವರ ಯಮಧರ್ಮರಾಯ ನೋಡಿ, ಅವರ ಪಾಪಂಗೊಕ್ಕೆ ಯಥೋಚಿತವಾದ ಶಿಕ್ಷೆಯ ಆಜ್ಞಾಪುಸುತ್ತ°.

ತತಸ್ತೇ ನಿರ್ದಯಾ ದೂತಾಸ್ತಾಡಯಿತ್ವಾ ವದಂತಿ ಚ ।
ಗಚ್ಛ ಪಾಪಿನ್ ಮಹಾಘೋರಾನ್ನರಕಾನತಿಭೀಷಣಾನ್ ॥೩೨॥

ಮತ್ತೆ ನಿರ್ದಯಿಗಳಾದ ಆ ಯಮದೂತರುಗೊ ಬಡುದು ಹೇಳುತ್ತವು – ಏ ಪಾಪಾತ್ಮನೇ, ಘೋರವಾದ ಅತಿ ಭಯಂಕರವಾದ ನರಕಕ್ಕೆ ಹೋಗು”.

ಯಮಾಜ್ಞಾಕಾರಿಣೋ ದೂತಾಃ ಪ್ರಚಂಡ ಚಂಡಕಾದಯಃ ।
ಏಕಪಾಶೇನ ತಾನ್ಬದ್ಧ್ವಾ ನಯಂತಿ ನರಕಾನ್ಪ್ರತಿ ॥೩೩॥

ಯಮಧರ್ಮರಾಯನ ಆಜ್ಞಾನುವರ್ತಿಗೊ ಆದ ಪ್ರಚಂಡ ಚಂಡಕ ಮೊದಲಾದ ದೂತರುಗೊ, ಒಂದೇ ಪಾಶಂದ ಅವರ ಕಟ್ಟಿ ಘೋರ ನರಕದ ಕಡೇಂಗೆ ಕರ್ಕಂಡು ಹೋವುತ್ತವು.

 

 

ಗದ್ಯರೂಪಲ್ಲಿ –

 

ಭಗವಂತ° ಮಹಾವಿಷ್ಣುವಿನತ್ರೆ ಗರುಡ° ಹೇಳ್ತ° – ಏ ಕೇಶವನೇ, ಪಾಪಿಯಾದವ ಕಷ್ಟಕರವಾದ ಯಮಮಾರ್ಗವ ನಡದು ದಾಂಟಿ ಯಮಾಲಯಕ್ಕೆ ಹೋಗಿ ಅಲ್ಲಿ ಯಾವರೀತಿಯ ಕಷ್ಟಂಗಳ ಅನುಭವುಸುತ್ತ° ಹೇಳ್ವದರ ಎನಗೆ ಹೇಳು. ಅದಕ್ಕೆ ಭಗವಂತ ಹೇಳುತ್ತ° – ಹೇ ವೈನತೇಯನೇ!, ಆನು ನರಕಯಾತನೆಯ ಬಗ್ಗೆ ಸುರುವಿಂದ ಅಕೇರಿಯವರೇಂಗೂ ಹೇಳುತ್ತೆ ಕೇಳು. ಅದರ ಕೇಳಿ ನೀನು ಹೆದರಿ ನಡುಗಲಿದ್ದು.

ಹೇ ಕಶ್ಯಪನಂದನ!,  ಬಹುಭೀತಿಪುರಂದ ಮತ್ತೆ ಮುಂದೆ ನಲ್ವತ್ತನಾಲ್ಕು ಯೋಜನಗಳಷ್ಟು ವಿಸ್ತೀರ್ಣ ವ್ಯಾಪ್ತವಾದ ಧರ್ಮರಾಜನ ವಿಶಾಲವಾದ ಪುರ ಇದ್ದು. ಆ ಊರು ಹಾಹಾಕಾರಾದಿ ಆಕ್ರಂದನಂಗಳಿಂದ ಪೂರಿತವಾಗಿಪ್ಪದರ ನೋಡಿ ಪಾಪಿ ಕಿರುಚಾಡ್ಳೆ ಸುರುಮಾಡುತ್ತ°. ಪಾಪಿಯ ಆಕ್ರಂದನ ಕೇಳಿ ಅಲ್ಲಿಪ್ಪ ಯಮಗಣಂಗೊ ಹೋಗಿ ದ್ವಾರಪಾಲಕನತ್ರೆ ಈ ವಿಷಯವ ಹೇಳುತ್ತವು.  ಧರ್ಮರಾಜನ ಪುರಲ್ಲಿ ಧರ್ಮಧ್ವಜ° ಹೇಳ್ವ ದ್ವಾರಪಾಲಕ ಸದಾ ಸಿದ್ಧನಾಗಿರುತ್ತ°. ಅಂವ ಒಳ ಹೋಗಿ ಚಿತ್ರಗುಪ್ತಂಗೆ ಆ ಪಾಪಿಯ ಶುಭಾಶುಭ ಕರ್ಮಂಗಳ ತಿಳುಶುತ್ತ°. ಮತ್ತೆ ಚಿತ್ರಗುಪ್ತ° ಹೋಗಿ ಯಮಧರ್ಮರಾಜನಲ್ಲಿ ನಿವೇದನೆ ಮಾಡುತ್ತ°.

ಹೇ ಗರುಡ!, ಆರು ನಾಸ್ತಿಕರೋ, ಆರು ಮಹಾಪಾಪಿಗಳೋ ಅವೆಲ್ಲರ ವಿಷಯಲ್ಲಿ ಧರ್ಮರಾಜ° ಯಥಾವತ್ತಾಗಿ ತಿಳುದಿಪ್ಪಂವ° ಆಗಿರುತ್ತ°. ಅಂದರೂ, ಆ ಜೀವಿಯ ಪಾಪ ಕರ್ಮಂಗಳ ಕುರಿತು ಚಿತ್ರಗುಪ್ತನಲ್ಲಿ ಕೇಳುತ್ತ°. ಸರ್ವಜ್ಞನಾದ ಚಿತ್ರಗುಪ್ತ° ಎಲ್ಲವನ್ನೂ ತಿಳುದವನಾಗಿದ್ದರೂ ಮತ್ತೆ ಅಂವ ಶ್ರವಣರ ಕೇಳುತ್ತ°. ಶ್ರವಣರು ಬ್ರಹ್ಮನ ಮಕ್ಕೊ. ಅವು ಸ್ವರ್ಗ ಮರ್ತ್ಯ ಪಾತಾಳ ಲೋಕಂಗಳಲ್ಲಿ ಸಂಚರುಸುವವು ಮತ್ತು ಅವಕ್ಕೆ ದೂರಂದಲೇ ಕೇಳಿಗೊಂಬ ಶ್ರವಣೇಂದ್ರಿಯ ಶಕ್ತಿ, ಬಹುದೂರಂದಲೇ ನೋಡಿಗೊಂಬ ಕಣ್ಣಿನ ದಿವ್ಯ  ಶಕ್ತಿ ಇದ್ದು. ಅವರ ಹೆಂಡತಿಯಕ್ಕೊಗೂ ಇವರ ಹಾಂಗೇ ಯಥಾರ್ಥವ ಇಪ್ಪ ಹಾಂಗೇ ಕೇಳ್ವ ಕಾಂಬ ಶಕ್ತಿಗೊ ಇದ್ದು. ಹಾಂಗಾಗಿ ಅವರ ಶ್ರವಣಿಯರು ಹೇದು ಹೇಳುತ್ತದು. ಸ್ತ್ರೀಯರು ಮಾಡ್ತದೆಲ್ಲವ ಅವು ಯಥಾರ್ಥರೂಪಲ್ಲಿ ತಿಳ್ಕೊಂಡಿರುತ್ತವು. ಮನುಷ್ಯರು ಗುಪ್ತವಾಗಿಯೂ ಬಹಿರಂಗವಾಗಿಯೂ ಮಾಡಿದ್ದದರೆಲ್ಲವನ್ನೂ ಅವ್ವು  (ಶ್ರವಣ ಶ್ರವಣಿಗೊ) ಚಿತ್ರಗುಪ್ತಂಗೆ ಹೇಳುತ್ತವು.

ಯಮಧರ್ಮರಾಯನ ಗುಪ್ತಚರರು ಆದ ಇವ್ವು ಮನುಷ್ಯನ ಮಾನಸಿಕ, ವಾಚಿಕ ಮತ್ತೆ ಕಾಯಿಕ ಎಲ್ಲ ರೀತಿಯ ಶುಭ ಮತ್ತೆ ಅಶುಭ ಕರ್ಮವ ಕುಲಂಕುಷವಾಗಿ ತಿಳಿದಿರುತ್ತವು. ಮನುಷ್ಯರ ಮತ್ತು ದೇವತೆಗಳ ಅಧಿಕಾರಿಗೊ ಆದ ಆ ಶ್ರವಣ ಶ್ರವಣಿಯರು ಸತ್ಯವಾದಿಗೊ ಆಗಿದ್ದವು. ಅವ್ವು ಮನುಷ್ಯನ ಕರ್ಮಂಗಳ ವಿವರವಾಗಿ ಹೇಳುತ್ತವು. ಯಾವ ಮನುಷ್ಯರು ವ್ರತ ದಾನ ಮತ್ತೆ ಸತ್ಯವಚನಂದ ಅವರ ಪ್ರಸನ್ನಗೊಳುಸುತ್ತವೋ ಅದರಿಂದ ಅವು ಸೌಮ್ಯರಾಗಿ ಸ್ವರ್ಗವ ಮೋಕ್ಷವ ದಯಪಾಲುಸುವವರಾವ್ತವು. ಆ ಸತ್ಯವಾದಿಗೊ ಮನುಷ್ಯನ ಸತ್ಯ ಕಥೆಯ ಧರ್ಮರಾಜಂಗೆ ಹೇಳಿಕ್ಕಿ ಅವ್ವು ದುಃಖದಾಯಿಗಳಾವ್ತವು.

ಸೂರ್ಯ°, ಚಂದ್ರ°, ವಾಯು, ಅಗ್ನಿ, ಆಕಾಶ, ಭೂಮಿ, ನೀರು, ಹೃದಯ, ಯಮ°, ದಿನ, ಇರುಳು, ಎರಡು ಸಂಧ್ಯೆಗೊ ಮತ್ತೆ ಧರ್ಮ- ಇವುಗೊ ಮನುಷ್ಯನ ವೃತ್ತಾಂತವ ತಿಳುದಿರುತ್ತವು. ಧರ್ಮರಾಜ°, ಚಿತ್ರಗುಪ್ತ° ಹಾಂಗೂ ಸೂರ್ಯ° ಮುಂತಾದೋರು ಮನುಷ್ಯನ ಶರೀರಲ್ಲಿ ಇದ್ದುಗೊಂಡು ಸಮಸ್ತಪಾಪ ಮತ್ತೆ ಪುಣ್ಯಂಗಳ ಪರಿಪೂರ್ಣವಾಗಿ ನೋಡುತ್ತವು. ಈ ಪ್ರಕಾರವಾಗಿ ಪಾಪಿಗಳ ಪಾಪದ ವಿಷಯಲ್ಲಿ ಸುನಿಶ್ಚಿತ ತಿಳುವಳಿಕೆಯ ಪಡಕ್ಕೊಂಡು ಯಮ° ಅವರ ಕರೆಸಿ ತನ್ನ ಅತ್ಯಂತ ಭಯಂಕರ ರೂಪವ ತೋರುಸುತ್ತ°.

ಆ ಪಾಪಿಷ್ಠರು ದಂಡಪಾಣಿಯಾದ, ಮಹಾಕಾಯನಾದ, ಗೋಣನ ಮೇಗೆ ಕೂದೊಂಡಿಪ್ಪ ಭಯಂಕರನಾದ ಯಮನ ರೂಪವ ನೋಡುತ್ತವು. ಪ್ರಳಯ ಕಾಲದ ಮೇಘಕ್ಕೆ ಸಮಾನ ಧ್ವನಿಯಿಪ್ಪ, ಕಾಡಿಗೆಯ ಪರ್ವತಕ್ಕೆ ಸಮಾನನಾಗಿಪ್ಪ, ಮಿಂಚಿನ ಪ್ರಭಾವ ಇಪ್ಪ, ಆಯುಧಂಗಳ ಒಳಗೂಡಿ ಭಯಂಕರವಾದ ಮುವತ್ತೆರಡು ಭುಜಂಗಳ ಹೊಂದಿಪ್ಪ ಮೂರು ಯೋಜನ ವಿಸ್ತೀರ್ಣದಷ್ಟು ದೇಹಾಕಾಯ ಇಪ್ಪ, ಬಾವಿಯಾಂಗೆ ಕಣ್ಣುಗಳಿಪ್ಪ, ಕೋರೆಹಲ್ಲಿಂದ ಭಯಂಕರವಾದ ಮೋರೆಯಿಪ್ಪ, ರಕ್ತರಂಜಿತ ಕಣ್ಣುಗಳಿಪ್ಪ, ಉದ್ದವಾದ ಮೂಗಿಪ್ಪ ಯಮರಾಜನ ಸ್ವರೂಪ ಈ ರೀತಿ ಭಯಂಕರವಾದ್ದು.

ಮೃತ್ಯು ಮತ್ತೆ ಜ್ವರಾದಿ ಸಂಯುಕ್ತನಾಗಿಪ್ಪ ಚಿತ್ರಗುಪ್ತನೂ ಭಯಾನಕ ರೂಪವುಳ್ಳಂವನಾಗಿದ್ದ° ಯಮಂಗೆ ಸಮಾನ ಭಯಾನಕರಾಗಿಪ್ಪ ಸಮಸ್ತ ದೂತರು, ಪಾಪಿಯ ಹತ್ರೆ ಪಾಪಿಯ ಹೆದರುಸುಲೆ ಗರ್ಜಿಸುತ್ತವು. ಆ ಚಿತ್ರಗುಪ್ತನ ನೋಡಿ ಭಯಭೀತರಾಗಿ ಪಾಪಿಗೊ ಹಾಹಾಕಾರ ಮಾಡ್ಳೆ ಸುರುಮಾಡುತ್ತವು. ದಾನವನೂ ಮಾಡಿರದ ಆ ಪಾಪಾತ್ಮ ಹೆದರಿ ನಡುಗ್ಯೊಂಡು ಮತ್ತೆ ಮತ್ತೆ ಆಕ್ರಂದನಕ್ಕೆ ಸುರುಮಾಡುತ್ತ°. ಅಷ್ಟಪ್ಪಗ ಚಿತ್ರಗುಪ್ತ° ಯಮನ ಆಜ್ಞೆ ಪ್ರಕಾರ ಹಾಹಾಕಾರ ಮಾಡಿಗೊಂಡಿಪ್ಪ ಹಾಂಗೂ ತಮ್ಮ ಪಾಪಕರ್ಮಂಗಳ ಬಗ್ಗೆ ಚಿಂತಿಸಿಗೊಂಡಿಪ್ಪ ಆ ಸಮಸ್ತ ಜೀವಿಗೊಕ್ಕೆ ಹೇಳುತ್ತ°-

“ಎಲೈ ಪಾಪಿಗಳೇ!, ದುರಾಚಾರಿಗಳೇ!, ಅಹಂಕಾರಂದ ದೂಷಿತರಾದವೇ!, ನಿಂಗೊ ಅವಿವೇಕಂದ ಪಾಪಕರ್ಮಂಗಳ ಎಂತಕೆ ಮಾಡಿದಿ?.  ಕಾಮ ಕ್ರೋಧಂದ ಮತ್ತು ಪಾಪಿಗಳ ಸಂಗಂದ ದುಃಖದಾಯಕವಾದ ಆ ಪಾಪಂಗಳ ನಿಂಗೊ ಎಂತಕೆ ಮಾಡಿದಿ?. ನಿಂಗೊ ಮದಲಿಂಗೆ (ಪೂರ್ವಜನ್ಮಲ್ಲಿಯೂ) ಅತ್ಯಂತ ಸಂತೋಷಂದ ಪಾಪಂಗಳ ಮಾಡಿದಿ., ಈಗ ಅದರ ಯಾತನೆಯ ಅನುಭವುಸಿ. ಎಂತಕೆ ಮುಸುಡು ತಿರುಗಿಸಿ ನಿಂದಿದಿ? ನಿಂಗೊ ಯಾವ ಪಾಪಕರ್ಮಂಗಳ ಮಾಡಿದ್ದೀರೋ ಆ ಪಾಪಕರ್ಮವೇ ನಿಂಗಳ ಈ ದುಃಖಕ್ಕೆ ಕಾರಣವಾಗಿದ್ದು. ಇದರ್ಲಿ ಏವ ವಂಚನೆಗಳೂ ಇಲ್ಲೆ. ಮೂರ್ಖನಾಗಲೀ, ಪಂಡಿತನಾಗಲಿ, ದರಿದ್ರನಾಗಲೆ, ಧನವಂತನಾಗಲಿ, ಬಲವಂತನಾಗಲೆ, ಬಲಹೀನನಾಗಿರಲಿ ಯಮಧರ್ಮರಾಜ ಸಮಾನ ಭಾವನೆಂದ ವರ್ತಿಸುತ್ತ ಹೇಳ್ತದು ಗೊಂತಿಪ್ಪ ವಿಷಯ”. ಚಿತ್ರಗುಪ್ತನ ಈ ರೀತಿಯಾದ ಮಾತುಗಳ ಕೇಳಿ ಆ ಪಾಪಿಗೊ ತಾನು ಮಾಡಿದ ಕರ್ಮಂಗಳ ಬಗ್ಗೆ ಚಿಂತಿಸ್ಯೊಂಡು ನಿಶ್ಚೇಷ್ಟಿತರಾಗಿ ತಳಿಯದ್ದೆ ನಿಂದುಗೊಳ್ತವು. ಕಳ್ಳರಾಂಗೆ ತಳಿಯದ್ದೆ ನಿಂದುಗೊಂಡಿಪ್ಪ ಆ ಪಾಪಿಗಳ ನೋಡಿ ಯಮಧರ್ಮರಾಯ ಅವಕ್ಕೆ ತಕ್ಕ ಶಿಕ್ಷೆಯ ಆಜ್ಞಾಪುಸುತ್ತ°.

ಮತ್ತೆ ಆ ನಿರ್ದಯಿ ದೂತರು ಪಾಪಿಗೊಕ್ಕೆ ಬಡುದು ಜೆಪ್ಪಿ  ಹೀಂಗೆ ಹೇಳುತ್ತವು – ಹೇ ಪಾಪಿಯೇ!, ಮಹಾನ್ ಘೋರ ಹಾಂಗೂ ಅತ್ಯಂತ ಭಯಾನಕ ನರಕಕ್ಕೆ ನಡೆ”. ಯಮಧರ್ಮರಾಯನ ಅಜ್ಞಾನುವರ್ತಿಗಳಾದ ಪ್ರಚಂಡ ಚಂಡಕರೇ ಮೊದಲಾದ ದೂತರುಗೊ ಒಂದೇ ಬಳ್ಳಿಲಿ ಅವರ ಕಟ್ಟಿ ಅವರ ಮಹಾನರಕದ ಕಡೆಂಗೆ ಬಲಿಗ್ಯೊಂಡು ಹೋವ್ತವು.

 

[ಚಿಂತನೀಯಾ –

ಸಾಮಾನ್ಯವಾಗಿ ಮನುಷ್ಯರು ಆರಿಂಗೂ ಗೊಂತಾಗ ಹೇಳಿ ಹಲವಾರು ಕೆಲಸವ ಮಾಡುತ್ತವು. ತನಗೆ ಮಾತ್ರ ಗೊಂತಿಪ್ಪದು. ಇನ್ನೊಬ್ಬ ಆರಿಂಗೂ ಕಂಡಿದಿಲ್ಲೆ, ಗೊಂತಾಗ ಹೇಳಿ ಗ್ರೇಶುತ್ತವು. ಸರ್ವಗತನಾದ ಅದ್ವಿತೀಯ ಕಲ್ಪನಾತೀತ° ಭಗವಂತ° ಎಲ್ಲೋದಿಕ್ಕೆ ಇದ್ದು ನೋಡ್ತ. ಅವನ ಕಣ್ತಪ್ಪಿಸಿ ಮಾಡುವೆ ಹೇಳಿ ಗ್ರೇಶೋದು ಅವಿವೇಕತನ. ಈ ಪ್ರಪಂಚಲ್ಲಿ ಒಂದರ್ಯಂಗೆ ಅದರಿಂದ ಸುಖವೋ ಲಾಭವೋ ಗಳಿಸಿಗೊಂಬಲಕ್ಕು. ಆದರೆ ಅದು ಅವನ ಮುಂದಾಣಜೀವನಕ್ಕೆ ಮಾರಕ ಹೇಳ್ವ ಪ್ರಜ್ಞೆ ಮನಸ್ಸಿಂಗೆ ತೋರುತ್ತಿಲ್ಲೆ. ಎದುರಿಲ್ಲಿ ಕಾಂಬ ಕಣ್ಣುಗೊ ಇಲ್ಲದ್ದರೂ ಅವ್ಯಕ್ತ ಕಣ್ಣು ಎಲ್ಯೋ ಇದ್ದು ನಾವು ಮಾಡ್ತ ಪ್ರತಿಯೊಂದು ಕಾರ್ಯಕ್ಕೂ ಸಾಕ್ಷಿಯಾಗಿರ್ತು. ನಮ್ಮ ಶರೀರಲ್ಲಿ ಒಂದೊಂದು ಇಂದ್ರಿಯಲ್ಲಿ ಒಬ್ಬೊಬ್ಬ ಅಧಿದೇವತೆಗೊ ಇರ್ತವು, ಅವಕ್ಕೆ ಅರಡಿಯದ್ದೆ ನಾವೆಂತರನ್ನೂ ಮಾಡ್ಳೆ ಇಲ್ಲೆ. ಅವಿಲ್ಲದ್ದೆ ನಾವೆಂತರನ್ನೂ ಮಾಡ್ಳೆ ಇಲ್ಲೆ. ಅವು ಭಗವಂತನ ಆಜ್ಞಾನುವರ್ತಿಯಾಗಿ ನಾವು ಮಾಡ್ಳೆ ಬಯಸಿದ ಕೆಲಸವ ನಮ್ಮತ್ರಂದ ಮಾಡಿಸ್ಯೊಂಡು ಕೂರ್ತವು. ಆದರೆ ಅದರ ಫಲ ಅನುಭವುಸುತ್ತೋನು ಮಾಡಿದವನೇ. ಇದಕ್ಕೆ ಪಂಚಭೂತಂಗಳೂ ಸಾಕ್ಷಿಯಾಗಿರ್ತವು. ಅದಲ್ಲದೆ ಬ್ರಹ್ಮನ ಮಕ್ಕಳಾದ ಶ್ರವಣರೂ ಅವರ ಹೆಂಡತಿಯಕ್ಕಳೂ ಎಷ್ಟೋ ದೂರಂದ ಯಥಾವತ್ತಾಗಿ ತಿಳಿದಿರುತ್ತವು. ಅವಕ್ಕೆ ಆ ರೀತಿಯ ವಿಶೇಷ ಶಕ್ತಿ ಇದ್ದು. ಐಹಿಕ ನ್ಯಾಯಲಯಲ್ಲಿ ಇವು ಎದುರು ಬಾರದ್ದರೂ ಬದುಕು ಹೇಳ್ವ ನ್ಯಾಯಾಲಯಲ್ಲಿ ನಮ್ಮ ಹೇಳಿಕೆ, ಸ್ಪಷ್ಟೀಕರಣ, ಸಾಕ್ಷಿ ಏವುದೂ ಬೇಕಾಗಿಲ್ಲೆ. ಅಲ್ಲಿ ಸಾಕ್ಷಿಗೊ ಬೇರೆಯೇ ಸದಾ ಸಿದ್ಧರಿದ್ದವು. ಮೃತ್ಯುದೇವತೆ ಯಮನ ಆಸ್ಥಾನಲ್ಲಿ ಚಿತ್ರಗುಪ್ತ° ಹೇಳ್ವ ಕರಣಿಕ° ಇದ್ದ°. ಅಂವ ಪ್ರತಿಯೊಂದು ಜೀವಿಯೂ ಮಾಡುವ ಪ್ರತಿಯೊಂದು ಕಾರ್ಯವ ದಾಖಲೆಮಾಡಿಗೊಂಡೇ ಇರ್ತ°. ಆ ಪುಸ್ತಕ ಯಮನ ಎದುರಿಲ್ಲಿ ಈ ಪಾಪಿ ನಿಂದಪ್ಪಗ ಬಿಡುಸಲೆ ಇಪ್ಪದು. ಅದರ ತುಲನೆ ಮಾಡಿಕ್ಕಿ ಯಮ ಪಾಪಿ ಸಲ್ಲೆಕ್ಕಪ್ಪ ತಕ್ಕ ಶಾಸ್ತಿಯ ವಿಧಿಸುತ್ತ°. ಈ ಚಿತ್ರಗುಪ್ತನ ಆಪೀಸು ನಮ್ಮ ಶರೀರದ ಮನಸ್ಸಿಲ್ಲಿಯೂ ಇದ್ದು, ಏವತ್ತೂ ಜಾಗೃತಾವಸ್ಥೆಲಿ ಇರ್ತು. ಅದಕ್ಕೆ ‘ಗುಪ್ತವಾದ ಚಿತ್ರ’ ಹೇದು ಅರ್ಥ. ಕ್ರಿಯೆಯಾಗಿ ಅರಳುವ ಗುಪ್ತ ಪ್ರಚೋದನೆಗಳೆಲ್ಲವ ಅಂವ° ಚಿತ್ರೀಕರುಸುತ್ತ°. ಮುನ್ನಚ್ಚರಿಕೆಯ ಸೂಚನೆಗಳೂ, ಆ ಸೂಚನೆಯ ಗಮನುಸದ್ದ ಅಥವಾ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದರನ್ನೂ ಗುರುತಿಸಿ ದಾಖಲು ಆವ್ತು. ಪ್ರಪಂಚದ ಕಣ್ಣ ಮುಚ್ಚಲೆ ಎಡಿಗಾದರೂ ಆ ಚಿತ್ರಗುಪ್ತನ ಕಣ್ಣಿನ ಮುಚ್ಚಲೆ ಸಾಧ್ಯ ಇಲ್ಲೆ. ಇದಕ್ಕೆ ಪೂರಕವಾಗಿ ಶ್ರವಣರೂ ಸಾಕ್ಷಿಯಾಗಿರುತ್ತವು. ಯಮಧರ್ಮನ ನ್ಯಾಯಾಲಯಲ್ಲಿ ಎಲ್ಲವೂ ನಿಷ್ಪಕ್ಷವಾದ ನಡವಳಿಕೆ. ಎಲ್ಲ ರೀತಿಯ ಸಾಕ್ಷಿಗಳ ಅಂವ ನೋಡಿಕ್ಕಿಯೇ ಅಂವ ತೀರ್ಪು ಕೊಡುವದು. ಒಂದರ್ಯಂಗೆ ನಾವು ಗ್ರೇಶಿದ್ದರ ಸಾಧುಸಲೆ ಎಡಿಗು ಹೇಳಿ ಕಂಡರೂ ಅದು ಉಚಿತವೋ ಅನುಚಿತವೋ ಹೇಳ್ವ ತೀರ್ಮಾನ ತೆಕ್ಕೊಳ್ಳೆಕ್ಕಾದ್ದು ನಮ್ಮ ಕೈಲಿಯೇ ಇಪ್ಪದು. ‘ನೀನು ಯಾವ ದಾರಿಲಿ ಹೋಪಲೆ ಇಷ್ಟ ಪಡುತ್ತೆಯೋ ಆ ದಾರಿಲಿ ಭಗವಂತ° ನಡವಲೆ ಬಿಡುತ್ತ°. ಆದರೆ ಅದರ ಪರಿಣಾಮವ ಅನುಭವುಸುವದು ನೀನೇ’  ಹೇಳ್ವ ಪ್ರಜ್ಞೆ ಸದಾ ಇರೆಕು. ಅಂತರಂಗಲ್ಲಿ ಆದರೂ ಸರಿ ಬಹಿರಂಗಲಿ ಆದರೂ ಸರಿ ಪರಮಾತ್ಮ ಮಾತ್ರ ನೋಡಿಗೊಂಡೇ ಇದ್ದ° ಹೇಳ್ವ ಪ್ರಜ್ಞೆಲಿ ನಮ್ಮಲ್ಲಿ ಇರೆಕು. ಇದು ನಮ್ಮ ಮನೋವಾಕ್ಕಾಯಕರ್ಮಲ್ಲಿ ಬೇರೂರಿರೆಕು. ಎಂತಕೆ ಹೇಳಿರೆ, ಮಾನಸಿಕ, ವಾಚಿಕ, ಕಾಯಿಕ ಕರ್ಮಂಗೊ ನಮ್ಮ ಬೆನ್ನು ಹಿಡ್ಕೊಂಡೇ ಬತ್ತು. ಪ್ರತಿಯೊಂದು ವಿಚಾರಣಗೆ ಒಳಪ್ಪಡುತ್ತು. ಹಾಂಗಾಗಿ ಭಗವದ್ ಪ್ರಜ್ಞೆ ಹೇಳ್ವದು ನಮ್ಮ ರಕ್ತಲ್ಲಿ ತುಂಬಿಗೊಂಡಿರೆಕು. ಅಂಬಗ ನಾವು ಮಾಡ್ತ ಕಾರ್ಯ ಸಾತ್ವಿಕವಾಗಿರುತ್ತು. ಕರ್ಮವೂ ಸತ್ವಯುತವಾಗಿರುತ್ತು. ಜೀವನವೂ ಸಾರ್ಥಕದತ್ತೆ ಹೋವುತ್ತು.

ನಾಮ್ಮ ಮಾರ್ಗ ಉತ್ತಮವಾಗಿರೆಕಾರೆ ನಾವು ನಾಸ್ತಿಕರ ಮಾತಿಂಗೆ, ಪ್ರಚೋದನೆಗೆ ಬಲಿಯಪ್ಪಲಾಗ. ಅವರ ಸಹವಾಸಂದ ದೂರ ಇಪ್ಪದು ನವಗೆ ಕ್ಷೇಮಕರ. ಪಾಪಕಾರ್ಯಂಗೊ ಕಿಚ್ಚಿನಷ್ಟೇ ಅಪಾಯಕಾರಿ ಹೇಳ್ವದು ನಮ್ಮ ಪ್ರಜ್ಞೆಲಿ ಸದಾ ಇರೆಕು.

ಅಹಂಕಾರವೇ ಕಲ್ಲ ಕಷ್ಟಂಗೊಕ್ಕೆ ಮೂಲ ಕಾರಣ. ಆ ಅಹಂಕಾರ ನಮ್ಮಂದ ಮಾಡ್ಳಾಗದ್ದ ಕಾರ್ಯವ ಮಾಡ್ಳೆ ಪ್ರಚೋದಿಸುತ್ತು. ಹಾಂಗಾಗಿ ನಾವಿ ನಿಗರ್ವಿಗಳಾಗಿ ಅಹಂಕಾರ ತ್ಯಕ್ತರಾಗಿ ಭಗವಂತನೇ ಸರ್ವಸ್ವ ಹೇಳ್ವ ತತ್ತ್ವ ನಮ್ಮ ನಿತ್ಯಾನುಷ್ಠಾನಲ್ಲಿ ತಂದುಗೊಂಡ್ರೆ ನಾವು ಮಾಡುವ ಕಾರ್ಯವೂ ಅಷ್ಟೇ ಧರ್ಮನಿಷ್ಠವಾಗಿರುತ್ತು. ಧರ್ಮವೇ ಮೋಕ್ಷಕ್ಕೆ ದಾರಿ.]

 

ಮುಂದೆ ಎಂತರ?…     ಬಪ್ಪ ವಾರ ನೋಡುವೋ°

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಕೆ. ವೆಂಕಟರಮಣ ಭಟ್ಟ

  ವ್ಯಕ್ತಿ ಸತ್ತರೆ ಅವಕ್ಕೆ ಸದ್ಗತಿ ಸಿಕ್ಕಲೆ ಗರುಡ ಪುರಾಣ ಓದುಸುತ್ತವು ಹೇಳಿ ತಿಳ್ಕೊಂಡಿತ್ತಿದ್ದೆ. ಆದರೆ ಗರುಡ ಪುರಾಣ ಇಪ್ಪದು ಜೀವಂತ ವ್ಯಕ್ತಿಯ ತಿದ್ದುಲೆ ಹೇಳಿ ಈಗ ಗೊಂತಾತು. ಹರೇ ರಾಮ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ° Reply:

  ಹರೇ ರಾಮ ಮಾವ°. ನಿಂಗಳ ಒಪ್ಪ (ಪ್ರತಿಯೊಂದು) ನೋಡಿ ಕೊಶಿ ಆತು. ನಿಂಗಳಾಂಗೇ ನಾವು ಗ್ರೇಶಿಯೊಂಡಿತ್ತಿದ್ದು. ಪುಸ್ತಕ ಬಿಡ್ಸಿ ಓದುವಾಗ ಇದಾ ಒಂದೊಂದು ವಿಷಯ ವಾಸ್ತವ ಎಂತರ ಹೇದು ಗೊಂತಪ್ಪದು. ಗೊಂತಿಪ್ಪೋರು ವಿವರಿಸಿ ಹೇಳ್ಳೆ ನಾಮೋಸು ಮಾಡ್ತವು, ಗೊಂತಿಲ್ಲದ್ದವಕ್ಕೆ ಎಂದೂ ಗೊಂತಪ್ಪಲೆ ಇಲ್ಲೆ ಮತ್ತೆ. ಅರ್ಧಂಬರ್ಧ ಗೊಂತಾದೋರು ಅವಕ್ಕವಕ್ಕೆ ಅರಡಿತ್ತಾಂಗೆ ವರ್ಣಿಸಿ ಮೂಲ ವಿಷಯವ ಹಾದಿ ತಪ್ಪುಸುತ್ತವು. ಹಾಂಗಾಗಿ ಓದಲಾಗ ಹೇದು ಮಾಡಿದವೋ ಏನೋ.
  ಜೀವನ ಮೌಲ್ಯವ ಎತ್ತಿ ಹಿಡಿವ, ಸನಾತನ ಧರ್ಮವ ಎತ್ತಿ ತೋರ್ಸುವ, ಮನುಷ್ಯನ ಅಜ್ಞಾನವ ತೊಲಗುಸುವ, ಮನುಷ್ಯನ ಜೀವನ ಗತಿಯ ಸನ್ಮಾರ್ಗಲ್ಲಿ ಕೊಂಡೋಪ ಇಂತಹ ವಿಷಯಂಗಳ ತಿಳುದೋರು ಸರಳವಾಗಿ ವಿವರಿಸಿರೆ, ಸಣ್ಣ ಪ್ರಾಯಂದಲೇ ಬೋಧಿಸಿರೆ ಮುಂದೆ ‘ಕಾಲ ಹಾಳಾತು ಭಾವಾ’ ಹೇಳೋದು ಕಮ್ಮಿ ಮಾಡ್ಳಕ್ಕಲ್ಲದ.
  ಒಪ್ಪಕ್ಕೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 2. ಕೆ. ವೆಂಕಟರಮಣ ಭಟ್ಟ

  ನಿಂಗಳಿಂದಲೂ ನಿಂಗಳಹಾಂಗೆ ಸಂಸ್ಕ್ರುತ ತಿಳುದವರಿಂದಲೂ ಸಮಾಜ ಈ ತರದ ಉತ್ತಮ ಕಾರ್ಯಂಗಳ ಅಪೇಕ್ಷಿಸುತ್ತು. ದನ್ಯವಾದ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಸಂತರಾಜ್ ಹಳೆಮನೆಒಪ್ಪಕ್ಕಸಂಪಾದಕ°ಜಯಗೌರಿ ಅಕ್ಕ°vreddhiಗಣೇಶ ಮಾವ°ಕಜೆವಸಂತ°ಶರ್ಮಪ್ಪಚ್ಚಿತೆಕ್ಕುಂಜ ಕುಮಾರ ಮಾವ°ವಾಣಿ ಚಿಕ್ಕಮ್ಮಶಾಂತತ್ತೆಪೆಂಗಣ್ಣ°ಪವನಜಮಾವಡಾಗುಟ್ರಕ್ಕ°ಚುಬ್ಬಣ್ಣಬೋಸ ಬಾವಮಂಗ್ಳೂರ ಮಾಣಿಸುಭಗನೀರ್ಕಜೆ ಮಹೇಶಸರ್ಪಮಲೆ ಮಾವ°ದೊಡ್ಮನೆ ಭಾವಅಡ್ಕತ್ತಿಮಾರುಮಾವ°ಅನು ಉಡುಪುಮೂಲೆಪಟಿಕಲ್ಲಪ್ಪಚ್ಚಿಸುವರ್ಣಿನೀ ಕೊಣಲೆಕೊಳಚ್ಚಿಪ್ಪು ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ