ಗರುಡ ಪುರಾಣ – ಅಧ್ಯಾಯ 08 – ಭಾಗ 03

October 31, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಭೂದಾನ ಮಹತ್ವವ ತಿಳಿಸಿದ ಭಗವಂತ°, ಭೂದಾನ ಮಾಡ್ಳೆ ಎಡಿಗಾಗದ್ದವಂಗೆ ಗೋದಾನ ಪರಿಹಾರವ  ಹೇಳಿದ್ದದು. “ಗೋದಾನದ ಮಹತ್ವವನ್ನೂ ವಿವರಿಸಿ ವೈತರಣೀ ಗೋದಾನದ ಬಗ್ಗೆ ಹೇಳ್ತೆ, ಕೇಳು.. ” ಹೇದು ಗರುಡಂಗೆ ಹೇಳಿದಲ್ಯಂಗೆ ಕಳುದವಾರ ನಿಲ್ಸಿದ್ದದು. ಮುಂದೆ-  

 

ಗರುಡ ಪುರಾಣ – ಅಧ್ಯಾಯ 08  – ಭಾಗ 03

ಕೃಷ್ಣಾಂ ವಾ ಪಾಟಲಾಂ ವಾಪಿ ಧೇನುಂ ಕುರ್ಯಾದಲಂಕೃತಾಮ್ ।images
ಸ್ವರ್ಣಶೃಂಗೀಂ ರೌಪ್ಯಖುರಾಂ ಕಾಂಸ್ಯಪಾತ್ರೋಪದೋಹಿನೀಮ್ ॥೭೦॥

ಕಪ್ಪು ಅಥವಾ ನಸುಕೆಂಪು ಬಣ್ಣದ ಗೋವಿಂಗೆ ಚಿನ್ನದ ಕೊಂಬುಗಳನ್ನೂ, ಬೆಳ್ಳಿಯ ಗೊರಸನ್ನೂ ಹಾಕಿ,  ಒಂದು ಹಾಲು ಕರವ ಕಂಚಿನ ಪಾತ್ರವ ಕಟ್ಟಿ ಅಲಂಕರುಸೆಕು.

ಕೃಷ್ಣವಸ್ತ್ರಯುಗಚ್ಛನ್ನಾಂ ಕಂಠಘಂಟಾಸಮನ್ವಿತಾಮ್ ।
ಕಾರ್ಪಾಸೋಪರಿ ಸಂಸ್ಥಾಪ್ಯ ತಾಮ್ರಪಾತ್ರಂ ಸಚೈಲಕಮ್ ॥೭೧॥

ಎರಡು ಕಪ್ಪು ವಸ್ತ್ರವ ಹೊದುಸಿ, ಕಂಠಲ್ಲಿ ಒಂದು ಘಂಟೆಯ ಕಟ್ಟಿ ವಸ್ತ್ರ ಸಮೇತವಾಗಿ ಒಂದು ತಾಮ್ರದ ಪಾತ್ರೆಯ ಹತ್ತಿಯ ವಸ್ತ್ರದ ಮೇಗೆ ಮಡುಗೆಕು.

ಯಮಂ ಹೈಮಂ ನ್ಯಸೇತ್ತತ್ರ ಲೋಹದಂಡ ಸಮನ್ವಿತಮ್ ।
ಕಾಂಸ್ಯಪಾತ್ರೇ ಘೃತಂ ಕೃತ್ವಾ ಸರ್ವಂ ತಸ್ಯೋಪರಿ ನ್ಯಸೇತ್ ॥೭೨॥

ಅಲ್ಲಿ ಲೋಹದ ದಂಡವ ಹಿಡುದ, ಚಿನ್ನಂದ ಮಾಡಲ್ಪಟ್ಟ ಯಮರಾಜನ ಪ್ರತಿಮೆಯ ಮಡುಗೆಕು.  ಕಂಚಿನ ಪಾತ್ರೆಲಿ ತುಪ್ಪವ ಹಾಕಿ, ಎಲ್ಲವನ್ನೂ ಅದರ ಮೇಗೆ ಮಡುಗೆಕು.

ನಾವಮಿಕ್ಷುಮಯೀಂ ಕೃತ್ವಾ ಪಟ್ಟಸೂತ್ರೇಣ ವೇಷ್ಟಯೇತ್ ।
ಗರ್ತಂ ವಿಧಾಯ ಸಜಲಂ ಕೃತ್ವಾ ತಸ್ಮಿನ್ ಕ್ಷಿಪೇತ್ತರೀಮ್ ॥೭೩॥

ಕಬ್ಬಿಂದ ಒಂದು ನಾವೆಯ ಮಾಡಿ ಅದರ ರೇಷ್ಮೆ ವಸ್ತ್ರಂದ ಸುತ್ತೆಕು. ಒಂದು ಹಳ್ಳವ (ಗುಂಡಿಯ) ಮಾಡಿ, ಅದಕ್ಕೆ ನೀರು ತುಂಬುಸಿ,  ನಾವೆಯ ಅದರ್ಲಿ ಬಿಡೆಕು.

ತಸ್ಯೋಪರಿ ಸ್ಥಿತಾಂ ಕೃತ್ವಾ ಸೂರ್ಯದೇಹಸಮುದ್ಭವಾಮ್ ।
ಧೇನುಂ ಸಂಕಲ್ಪಯೇತ್ತತ್ರ ಯಥಾಶಾಸ್ತ್ರ ವಿಧಾನತಃ ॥೭೪॥

ಅದರ ಮೇಗೆ (ಹತ್ರೆ) ಸೂರ್ಯನ ದೇಹಂದ ಹುಟ್ಟಿದ ಧೇನುವ ನಿಲ್ಲುಸಿ ವಸ್ತುಗಳ ಮಡಿಗಿ ಶಾಸ್ತ್ರೋಕ್ತ ವಿಧಿ ಪ್ರಕಾರ ಅಲ್ಲಿ ಧೇನು ದಾನವ ಸಂಕಲ್ಪ ಮಾಡೆಕು.

ಸಾಲಂಕಾರಾಣೀ ವಸ್ತ್ರಾಣಿ ಬ್ರಾಹ್ಮಣಾಯ ಪ್ರಕಲ್ಪಯೇತ್ ।
ಪೂಜಾಂ ಕುರ್ಯಾದ್ವಿಧಾನೇನ ಗಂಧಪುಷ್ಪಾಕ್ಷತಾದಿಭಿಃ ॥೭೫॥

ಅಲಂಕಾರ ವಸ್ತುಗಳ ಮತ್ತು ವಸ್ತ್ರಂಗಳ ಬ್ರಾಹ್ಮಣಂಗೆ ದಾನ ಕೊಡೆಕು. ವಿಧಿಪೂರ್ವಕವಾಗಿ ಗಂಧಾಕ್ಷತೆ ಪುಷ್ಪ ಮೊದಲಾದವುಗಳಿಂದ (ನಾವೆಗೆ) ಪೂಜೆಯ ಮಾಡೆಕು.

ಪುಚ್ಛಂ ಸಂಗೃಹ್ಯ ಧೇನೋಸ್ತು ನಾವಮಾಶ್ರಿತ್ಯ ಪಾದತಃ ।
ಪುರಸ್ಕೃತ್ಯ ತತೋ ವಿಪ್ರಮಿಮಂ ಮಂತ್ರಮುದೀರಯೇತ್ ॥೭೬॥

ಆ ಧೇನುವಿನ ಬೀಲವ ಹಿಡ್ಕೊಂಡು ಧೇನುವ ಪಾದವ ನಾವೆಯ ಮೇಗೆ ಮಡುಗಿ, ಅದರ ಮುಂದೆ ವಿಪ್ರನ ನಿಲ್ಲುಸಿ ಈ ಮಂತ್ರವ ಹೇಳೆಕು –

ಭವಸಾಗರಮಗ್ನಾನಾಂ ಶೋಕತಾಪೋರ್ಮಿದುಃಖಿನಾಮ್ ।
ತ್ರಾತಾ ತ್ವಂ ಜಗನ್ನಾಥಃ ಶರಣಾಗತವತ್ಸಲ॥೭೭॥

ಹೇ ಶರಣಾಗತವತ್ಸಲನೇ!, ಈ ಸಂಸಾರ ಹೇಳ್ವ ಸಮುದ್ರಲ್ಲಿ ಮುಂಗಿ, ಶೋಕ ತಾಪಂಗಳಿಂದ ದುಃಖಿತರಾಗಿಪ್ಪೋರಿಂಗೆ ನೀನೇ ರಕ್ಷಕನು, ಜಗನ್ನಾಥ°.

ವಿಷ್ಣುರೂಪ ದ್ವಿಜಶ್ರೇಷ್ಠ ಮಾಮುದ್ಧರ ಮಹೀಸುರ ।
ಸದಕ್ಷಿಣಾ ಮಯಾ ದತ್ತಾ ತುಭ್ಯಂ ವೈತರಣೀಂ ನಮಃ ॥೭೮॥

ಹೇ ವಿಷ್ಣುರೂಪನೇ!, ಹೇ ದ್ವಿಜಶ್ರೇಷ್ಠನೇ!, ಹೇ ಮಹೀಸುರನೇ!(ಭೂಮಿದೇವನೇ!), ಎನ್ನ ಉದ್ಧರುಸು. ದಕ್ಷಿಣೆಯ ಸಹಿತವಾಗಿ ಎನ್ನಿಂದ ಇದು ಕೊಡಲ್ಪಟ್ಟಿದು. ವೈತರಣಿಗೆ ನಮಸ್ಕಾರ.

ಯಮಮಾರ್ಗೇ ಮಹಾಘೋರೇ ತಾಂ ನದೀಂ ಶತಯೋಜನಾಮ್ ।
ತರ್ತುಕಾಮೋ ದದಾಮ್ಯೇತಾಮ್ ತುಭ್ಯಂ ವೈತರಣೀಂ ನಮಃ ॥೭೯॥

ಅತಿ ಭಯಂಕರವಾದ ಯಮಮಾರ್ಗಲ್ಲಿಪ್ಪ ನೂರು ಯೋಜನ ವಿಸ್ತಾರವಾದ ಆ ನದಿಯ ದಾಂಟ್ಳೆ ಇಚ್ಛಿಸಿ ಆನು ಇದರ ದಾನ ಮಾಡಿದ್ದೆ. ವೈತರಣಿಗೆ ನಮಸ್ಕಾರ.

ಧೇನುಕೇ ಮಾಂ ಪ್ರತೀಕ್ಷಸ್ವ ಯಮದ್ವಾರ ಮಹಾಪಥೇ ।
ಉತ್ತಾರಣಾರ್ಥಂ ದೇವೇಶಿ ವೈತರಣ್ಯೈ ನಮೋsಸ್ತುತೇ ॥೮೦॥

ಹೇ ಧೇನುವೇ, ಯಮದ್ವಾರದ ಮಹಾಮಾರ್ಗಲ್ಲಿ ಅದರ ದಾಂಟುಸಲೆ ಎನ್ನ ಪ್ರತೀಕ್ಷೆ ಮಾಡುತ್ತಿರು. ಎಲೈ ದೇವೇಶಿ, ವೈತರಣಿಯೇ, ನಿನಗೆ ನಮಸ್ಕಾರ.

ಗಾವೋ ಮೇ ಅಗ್ರತಃ ಸಂತು ಗಾವೋ ಮೇ ಸಂತು ಪೃಷ್ಠತಃ ।
ಗಾವೋ ಮೇ ಹೃದಯೇ ನಿತ್ಯಂ ಗವಾಂ ಮಧ್ಯೇ ವಸಾಮ್ಯಹಮ್ ॥೮೧॥

ಗೋವುಗೊ ಎನ್ನ ಮುಂದೆ ಇರಲಿ. ಗೋವುಗೊ ಎನ್ನ ಹಿಂದೆ ಇರಲಿ. ಗೋವುಗೊ ಎನ್ನ ಹೃದಯಲ್ಲಿ ನಿತ್ಯ ಇರಲಿ. ಆನು ಗೋವುಗಳ ಮಧ್ಯೆ ವಾಸಿಸುತ್ತೆ.

ಯಾ ಲಕ್ಷೀಃ ಸರ್ವಭೂತಾನಾಂ ಯಾ ಚ ದೇವೇ ಪ್ರತಿಷ್ಠಿತಾ ।
ಧೇನುರೂಪೇಣ ಸಾ ದೇವೀ ಮಮ ಪಾಪಂ ವ್ಯಪೋಹತು ॥೮೨॥

ಆರು ಎಲ್ಲ ಜೀವಿಗೊಕ್ಕೂ ಲಕ್ಷ್ಮೀಸ್ವರೂಪಳೋ, ಆರು ದೇವತೆಗಳಲ್ಲಿ ಪ್ರತಿಷ್ಠಿತಳಾಗಿದ್ದೋ, ಆ ದೇವಿ ಹಸುವಿನ ರೂಪಲ್ಲಿ ಎನ್ನ ಪಾಪಂಗಳ ನಾಶಮಾಡಲಿ.

ಇತಿ ಮಂತ್ರೈಶ್ಚ ಸಂಪ್ರಾರ್ಥ್ಯ ಸಾಂಜಲಿರ್ಧೇನುಕಾಂ ಯಮಮ್ ।
ಸರ್ವಂ ಪ್ರದಕ್ಷಿಣೀಕೃತ್ಯ ಬ್ರಾಹ್ಮಣಾಯ ನಿವೇದಯೇತ್ ॥೮೩॥

ಈ ಮಂತ್ರಂಗಳಿಂದ ಪ್ರಾರ್ಥಿಸಿಸ್ಯೊಂಡು, ಕೈ ಜೋಡುಸಿ  ಧೇನುವನ್ನೂ, ಯಮಧರ್ಮರಾಜನನ್ನೂ  ಪ್ರದಕ್ಷಿಣೆ ಮಾಡಿ ಎಲ್ಲವನ್ನೂ ಭಕ್ತಿಂದ ಬ್ರಾಹ್ಮಣಂಗೆ ಕೊಡೆಕು.

ಏವಂ ದದ್ಯಾದ್ವಿಧಾನೇನ ಯೋ ಗಾಂ ವೈತರಣೀಂ ಖಗ ।
ಸ ಯಾತಿ ಧರ್ಮಮಾರ್ಗೇಣ ಧರ್ಮರಾಜಸಭಾಂತರೇ ॥೮೪॥

ಎಲೈ ಪಕ್ಷಿಯೇ!, ಈ ರೀತಿ ವಿಧಿಪೂರ್ವಕವಾಗಿ ಯಾವಾತ° ವೈತರಣೀ ಗೋವಿನ ದಾನ ಮಾಡುತ್ತನೋ ಅವ° ಧರ್ಮಮಾರ್ಗಂದ ಧರ್ಮರಾಜನ ಸಭೆ ಒಳಂಗೆ ಹೋವುತ್ತ°.

ಸ್ವಸ್ಥಾವಸ್ಥ ಶರೀರೇ ತು ವೈತರಣ್ಯಾಂ ವ್ರತಂ ಚರೇತ್ ।
ದೇಯಾ ಚ ವಿದುಷಾ ಧೇನುಸ್ತಾಂ ನದೀಂ ತರ್ತುಮಿಚ್ಛತಾ ॥೮೫॥

ಶರೀರ ಸ್ವಸ್ಥವಾಗಿರಲೀ, ಅಸ್ವಸ್ಥವಾಗಿರಲೀ, ಈ ವೈತರಣೀ ವ್ರತವ ಆಚರುಸೆಕು. ವೈತರಣೀ ನದಿಯ ದಾಂಟ್ಳೆ ಇಚ್ಛುಸುವ ಬುದ್ಧಿವಂತ° ಧೇನುವ ದಾನ ಕೊಡೆಕು.

ಸಾ ನಾಯಾತಿ ಮಹಾಮಾರ್ಗೇ ಗೋದಾನೇನ ನದೀ ಖಗ ।
ತಸ್ಮಾದವಶ್ಯಂ ದಾತವ್ಯಂ ಪುಣ್ಯಕಾಲೇಷು ಸರ್ವದಾ ॥೮೬॥

ಎಲೈ ಪಕ್ಷಿಯೇ!, ಗೋದಾನಂದ ಆ ನದಿ ಮಹಾಮಾರ್ಗಲ್ಲಿ ಬತ್ತಿಲ್ಲೆ. ಹಾಂಗಾಗಿ ಎಲ್ಲ ಪುಣ್ಯ ಕಾಲಂಗಳಲ್ಲಿಯೂ ಅವಶ್ಯವಾಗಿ ಗೋದಾನ ಮಾಡೆಕು.

ಗಂಗಾದಿಸರ್ವತೀರ್ಥೇಷು ಬ್ರಾಹ್ಮಣಾವಸಥೇಷು ಚ ।
ಚಂದ್ರಸೂರ್ಯೋಪರಾಗೇಷು ಸಂಕ್ರಾಂತೌ ದರ್ಶವಾಸರೇ ॥೮೭॥

ಗಂಗೆ ಮೊದಲಾದ ಎಲ್ಲ ತೀರ್ಥಂಗಳಲ್ಲಿ, ಬ್ರಾಹ್ಮಣರ ನಿವಾಸ ಸ್ಥಾನಂಗಳಲ್ಲಿ, ಚಂದ್ರ ಸೂರ್ಯರ ಗ್ರಹಣ ಕಾಲಲ್ಲಿ, ಸಂಕ್ರಾಂತಿಗಳಲ್ಲಿ, ಅಮವಾಸೆ ದಿನಂಗಳಲ್ಲಿ

ಅಯನೇ ವಿಷುವೇ ಚೈವ ವ್ಯತೀಪಾತೇ ಯುಗಾದಿಷು ।
ಅನ್ಯೇಷು ಪುಣ್ಯಕಾಲೇಷು ದದ್ಯಾದ್ಗೋದಾನಮುತ್ತಮಮ್ ॥೮೮॥

ಅಯನ, ವಿಷು, ವ್ಯತೀಪಾತ, ಯುಗಾದಿ ತಿಥಿಗಳಲ್ಲಿ, ಇನ್ನೂ ಇತರ ಪುಣ್ಯ ಕಾಲಂಗಳಲ್ಲಿ ಉತ್ತಮವಾದ ಗೋದಾನವ ಮಾಡೆಕು.

ಯದೈವ ಜಾಯತೇ ಶ್ರದ್ಧಾ ಪಾತ್ರಂ ಸಂಪ್ರಾಪ್ಯತೇ ಯದಾ ।
ಸ ಏವ ಪುಣ್ಯಕಾಲಃ ಸ್ಯಾದ್ಯತಃ ಸಂಪತ್ತಿರಸ್ಥಿರಾ ॥೮೯॥

ಏವಾಗ ಶ್ರದ್ಧೆಯುಂಟಾವುತ್ತೋ, ಏವಾಗ ಸತ್ಪಾತ್ರ° ದೊರಕುತ್ತನೋ ಅದೇ ಪುಣ್ಯ ಕಾಲವು. ಎಂತಕೇಳಿರೆ ಈ ಸಂಪತ್ತು ಸ್ಥಿರವಾಗಿರುತ್ತಿಲ್ಲೆ.

ಅಸ್ಥಿರಾಣಿ ಶರೀರಾಣಿ ವಿಭವೋ ನೈವ ಶಾಶ್ವತಃ ।
ನಿತ್ಯಂ ಸನ್ನಿಹಿತೋ ಮೃತ್ಯುಃ ಕರ್ತವ್ಯೋ ಧರ್ಮಸಂಚಯಃ ॥೯೦॥

ಈ ಶರೀರವು ಅಸ್ಥಿರವು. ಈ ವೈಭವವೂ ಶಾಶ್ವತ ಅಲ್ಲ. ಮೃತ್ಯುವು ನಿತ್ಯವೂ ಹತ್ತರೆ ಆವುತ್ತು. ಹಾಂಗಾಗಿ ಧರ್ಮಸಂಗ್ರಹ ಮಾಡೆಕು.

ಆತ್ಮವಿತ್ತಾನುಸಾರೇಣ ತತ್ರ ದಾನಮನಂತಕಮ್ ।
ದೇಯಂ ವಿಪ್ರಾಯವಿದುಷೇ ಸ್ವಾತ್ಮನಃ ಶ್ರೇಯ ಇಚ್ಛತಾ ॥೯೧॥

ತನ್ನಲ್ಲಿಪ್ಪ ಸಂಪತ್ತಿಗನುಗುಣವಾಗಿ ಅಲ್ಲಿ ಕೊಟ್ಟ ದಾನವು ಅನಂತವಾದ ಫಲವ ಕೊಡುತ್ತು. ಹಾಂಗಾಗಿ ತನ್ನ ಆತ್ಮ ಶ್ರೇಯಸ್ಸಿನ ಇಚ್ಛಿಸುವ ಬುದ್ಧಿವಂತ° ವಿಪ್ರಂಗೆ ದಾನ ಕೊಡೆಕು.

ಅಲ್ಪೇನಾಪಿ ಹಿ ವಿತ್ತೇನ ಸ್ವಹಸ್ತೇನಾತ್ಮನೇ ಕೃತಮ್ ।
ತದಕ್ಷಯ್ಯಂ ಭವೇದ್ದಾನಂ ತತ್ಕಾಲಂ ಚೋಪತಿಷ್ಠತಿ ॥೯೨॥

ಸ್ವಲ್ಪ ಧನಂದಲಾದರೂ ಸ್ವಹಸ್ತಂದ ತಾನೇ ಮಾಡಿದ ದಾನವು ಅಕ್ಷಯವಾವುತ್ತು ಮತ್ತು ಅದರ ಫಲವು ಸಮಯಕ್ಕೆ ಸರಿಯಾಗಿ ದೊರಕುತ್ತು.

ಗೃಹೀತದಾನಪಾಥೇಯಃ ಸುಖಂ ಯಾತಿ ಮಹಾಧ್ವನಿ ।
ಅನ್ಯಥಾ ಕ್ಲಿಶ್ಯತೇ ಜಂತುಃ ಪಾಥೇಯರಹಿತಃ ಪಥಿ ॥೯೩॥

ದಾನ ಹೇಳ್ವ ಎಂಬ ಬುತ್ತಿಯ ಪಡದವ° ಮಹಾಮಾರ್ಗಲ್ಲಿ ಸುಖವಾಗಿ ಹೋವುತ್ತ°. ಇಲ್ಲದ್ರೆ ಬುತ್ತಿ ಇಲ್ಲದ ಜೀವಾತ್ಮ° ಯಮಮಾರ್ಗಲ್ಲಿ ಮಹಾಕ್ಲೇಶವ ಹೊಂದುತ್ತ°.

ಯಾನಿ ಯಾನಿ ಚ ದಾನಾನಿ ದತ್ತಾನಿ ಭುವಿ ಮಾನವೈಃ ।
ಯಮಲೋಕಪಥೇ ತಾನಿ ಹುಪತಿಷ್ಠಂತಿ ಜಾಗ್ರತಃ ॥೯೪॥

ಈ ಭೂಮಿಲಿ ಮನುಷ್ಯ° ಯಾವ ಯಾವ ದಾನಂಗಳ ಕೊಟ್ಟಿರುತ್ತನೋ ಅವುಗೊ (ಆ ಫಲಂಗೊ) ಯಮಲೋಕದ ಮಾರ್ಗಲ್ಲಿ ಇವನ ಮುಂದೆ ಉಪಸ್ಥಿತವಾವುತ್ತು .

ಮಹಾಪುಣ್ಯಪ್ರಭಾವೇಣ ಮಾನುಷಂ ಜನ್ಮ ಲಭ್ಯತೇ ।
ಯಸ್ತತ್ಪ್ರಾಪ್ಯ ಚರೇದ್ಧರ್ಮಂ ಸ ಯಾತಿ ಪರಮಾಂ ಗತಿಮ್ ॥೯೫॥

ಮಹಾಪುಣ್ಯದ ಪ್ರಭಾವಂದ ಮನುಷ್ಯ ಜನ್ಮವು ಲಭುಸುವದು.  ಅದರ ಪಡದು, ಧರ್ಮಮಾರ್ಗಲ್ಲಿ ನಡದರೆ ಅವ° ಪರಮಗತಿಯ ಹೊಂದುತ್ತ°.

ಅವಿಜ್ಞಾಯ ನರೋ ಧರ್ಮಂ ದುಃಖಮಾಯಾತಿ ಯಾತಿ ಚ ।
ಮನುಷ್ಯ ಜನ್ಮಸಾಫಲ್ಯಂ ಕೇವಲಂ ಧರ್ಮಸೇವನಮ್ ॥೯೬॥

ಧರ್ಮವ ತಿರಸ್ಕರಿಸಿದ ಮನುಷ್ಯ° ದುಃಖಂದಲೇ ನಡೆತ್ತ°. ಮಾನವ ಜನ್ಮದ ಸಫಲತೆ ಕೇವಲ ಧರ್ಮಸೇವೆಲಿಯೇ ಇಪ್ಪದಾವ್ತು.

ಧನಪುತ್ರ ಕಲತ್ರಾದಿ ಶರೀರಮಪಿ ಬಾಂಧವಾಃ ।
ಅನಿತ್ಯಂ ಸರ್ವಮೇವೇದಂ ತಸ್ಮಾದ್ಧರ್ಮಂ ಸಮಾಚರೇತ್ ॥೯೭॥

ಧನ, ಪುತ್ರ°, ಪತ್ನಿ ಮೊದಲಾದ ಬಂಧುಗೊ, ಈ ಶರೀರ ಎಲ್ಲವೂ ಅನಿತ್ಯವಾದವುಗೊ. ಹಾಂಗಾಗಿ ಧರ್ಮವ ಆಚರುಸೆಕು.

ತಾವದ್ಬಂಧುಃ ಪಿತಾ ತಾವದ್ಯಾವಜ್ಜೀವತಿ ಮಾನವಃ ।
ಮೃತಾನಾಮಂತರಂ ಜ್ಞಾತ್ವಾ ಕ್ಷಣಾತ್ಸ್ನೇಹೋ ನಿವರ್ತತೇ ॥೯೮॥

ಮಾನವ° ಜೀವಿಸಿಪ್ಪನ್ನಾರ ಮಾಂತ್ರ ಅವಂಗೆ ಅಪ್ಪ° ಮೊದಲಾದ ಬಂಧುಗೊ. ಮರಣಹೊಂದಿದ ಹೇದು ತಿಳುದ ಕ್ಷಣಂದಲೇ ಸ್ನೇಹ ದೂರ ಆವ್ತು.

ಆತ್ಮೈವಹ್ಯಾತ್ಮನೋ ಬಂಧುರಿತಿ ವಿದ್ಯಾನ್ಮುಹುರ್ಮುಹುಃ ।
ಜೀವನ್ನಪೀತಿ ಸಂಚಿಂತ್ಯ ಮೃತಾನಾಂ ಕಃ ಪ್ರದಾಸ್ಯತಿ ॥೯೯॥

ತನ್ನ ಆತ್ಮವೇ ತನ್ನ ಬಂಧು ಹೇಳ್ವದರ ತಿಳ್ಕೊಂಡು, ಪದೇ ಪದೇ ಯೋಚನೆ ಮಾಡಿಗೊಂಡು ತನ್ನ ಜೀವನ ನಡಸೆಕು. ಮರಣ ಹೊಂದಿದ ಮತ್ತೆ ಆರು ಕೊಡುತ್ತವು?!

ಏವಂ ಜಾನನ್ನಿದಂ ಸರ್ವಂ ಸ್ವಹಸ್ತೇನೈವ ದೀಯತಾಮ್ ।
ಅನಿತ್ಯಂ ಜೀವಿತಂ ಯಸ್ಮಾತ್ಪಶ್ಚಾತ್ಕೋsಪಿ ನ ದಾಸ್ಯತಿ ॥೧೦೦॥

ಈ ರೀತಿ ಇದರ ತಿಳುಕ್ಕೊಂಡು ಎಲ್ಲವನ್ನೂ ಸ್ವಹಸ್ತಂದಲೇ ದಾನ ಕೊಡೆಕು. ಎಂತಕೇಳಿರೆ, ಈ ಜೀವನ ಅನಿತ್ಯ. ಮರಣಾನಂತರ ಆರೂ ದಾನ ಕೊಡುತ್ತವಿಲ್ಲೆ.

ಮೃತಂ ಶರೀರಮುತ್ಸೃಜ್ಯ ಕಾಷ್ಠಲೋಷ್ಟಸಮಂ ಕ್ಷಿತೌ ।
ವಿಮುಖಾ ಬಾಂಧವಾ ಯಾಂತಿ ಧರ್ಮಸ್ತಮನುಗಚ್ಛತಿ ॥೧೦೧॥

ಮೃತನ ಶರೀರವ ಮರತ್ತುಂಡು ಅಥವಾ ಮಣ್ಣ ಹೆಂಟೆಯ ಹಾಂಗೆ ಭೂಮಿಲಿ ಮಡಿಗಿಕ್ಕಿ ಅವನ ನೆಂಟ್ರುಗೊ ಮೋರೆ ತಿರುಗಿಸಿಯೊಂಡು ಹೆರಟು ಹೋವ್ತವು. ಬರೇ ಧರ್ಮ ಮಾತ್ರ ಅವನೊಟ್ಟಿಂಗೆ ಬಪ್ಪದು ಮತ್ತೆ.

ಗೃಹಾದರ್ಥಾ ನಿವರ್ತಂತೇ ಶ್ಮಶಾನಾತ್ಸರ್ವಬಾಂಧವಾಃ ।
ಶುಭಾಶುಭಂ ಕೃತಂ ಕರ್ಮ ಗಚ್ಛಂತಮನುಗಚ್ಛತಿ ॥೧೦೨॥

ಮನೆಂದ ಧನ (ಸಂಪತ್ತು), ಶ್ಮಶಾನಂದ ಎಲ್ಲ ನೆಂಟ್ರುಗೊಎಲ್ಲೋರು ದೂರ ಆವ್ತವು. ಬರೇ ತಾನು ಮಾಡಿದ ಶುಭ ಮತ್ತೆ ಅಶುಭ ಕರ್ಮಂಗೊ ಮಾಂತ್ರ ಅವನ ಒಟ್ಟಿಂಗೆ ಹೋವುತ್ತು.

ಶರೀರಂ ವಹ್ನಿನಾ ದಗ್ಧಂ ಕೃತಂ ಕರ್ಮ ಸಹಾಸ್ಥಿತಮ್ ।
ಪುಣ್ಯಂ ವಾ ಯದಿ ವಾ ಪಾಪಂ ಭುಂಕ್ತೇ ಸರ್ವತ್ರ ಮಾನವಃ ॥೧೦೩॥

ಶರೀರ ಅಗ್ನಿಲಿ ದಗ್ಧ ಆವುತ್ತು. ಮಾಡಿದ ಕರ್ಮ ಒಟ್ಟಿಲ್ಲಿ ಉಳಿತ್ತು. ಪುಣ್ಯ ಆಗಲೀ, ಪಾಪ ಆಗಲಿ ಅದರ ಮಾಡಿದ ಮನುಷ್ಯ ಎಲ್ಲಿದ್ದರೂ ಅನುಭವುಸುತ್ತ°.

ನ ಕೋsಪಿ ಕಸ್ಯಚಿದ್ಬಂಧುಃ ಸಂಸಾರೇ ದುಃಖಸಾಗರೇ ।
ಆಯಾತಿ ಕರ್ಮಸಂಬಂಧಾದ್ಯಾತಿ ಕರ್ಮಕ್ಷಯೇ ಪುನಃ ॥೧೦೪॥

ದುಃಖಸಾಗರವಾದ ಈ ಸಂಸಾರಲ್ಲಿ ಆರೂ ಆರ ಬಂಧುವೂ ಅಲ್ಲ. ಕರ್ಮ ಸಂಬಂಧಂದ ಇಲ್ಲಿಗೆ ಬಪ್ಪದಾವ್ತು. ಕರ್ಮ ಕ್ಷಯ ಆದಪ್ಪಗ ಪುನಃ ಹೆರಟು ಹೋವುತ್ತ°.

ಮಾತೃಪಿತೃಸುತಭಾತೃಬಂಧುದಾರಾದಿಸಂಗಮಃ ।
ಪ್ರಪಾಯಾಮಿವ ಜಂತೂನಾಂ ನದ್ಯಾಂ ಕಾಷ್ಠೌಘವಚ್ಚಲಃ ॥೧೦೫॥

ಅಬ್ಬೆ, ಅಪ್ಪ°, ಮಗ°, ಸಹೋದರ°, ನೆಂಟ್ರುಗೊ, ಹೆಂಡತಿ ಇತ್ಯಾದಿಗಳ ಸಹವಾಸ ಕೆರೆ ಹತ್ರೆ ಬಂದ ಪ್ರಾಣಿಯ ಹಾಂಗೆ. ನೀರಿಲ್ಲಿ ತೇಲುತ್ತಿಪ್ಪ ಸೌದಿ ರಾಶಿಯ ಹಾಂಗೆ ಇರ್ತು.

ಕಸ್ಯ ಪುತ್ರಾಶ್ಚ ಪೌತ್ರಾಶ್ಚ ಕಸ್ಯ ಭಾರ್ಯಾ ಧನಂ ಚ ವಾ ।
ಸಂಸಾರೇ ನಾಸ್ತಿ ಕಃ ಕಸ್ಯ ಸ್ವಯಂ ತಸ್ಮಾತ್ಪ್ರದೀಯತಾಮ್ ॥೧೦೬॥

ಆರ ಮಗ°? ಆರ ಪುಳ್ಳಿ, ಆರ ಹೆಂಡತಿ, ಆರ ಪೈಸೆ?. ಈ ಸಂಸಾರಲ್ಲಿ ಆರೂ ಅರಾರವೂ ಅಲ್ಲ. ಹಾಂಗಾಗಿ ತಾನೇ ತನಗೆ ಬೇಕಾಗಿ ದಾನವ ಮಾಡೆಕು.

ಆತ್ಮಯತ್ತಂ ಧನಂ ಯಾವತ್ತಾವದ್ವಿಪ್ರೇ ಸಮರ್ಪಯೇತ್ ।
ಪರಾಧೀನೇ ಧನೇ ಜಾತೇ ನಂ ಕಿಂಚಿದ್ವಕ್ತು ಮುತ್ಸಹೇತ್ ॥೧೦೭॥

ಎಲ್ಲಿವರೇಂಗೆ ಪೈಸೆ ತನ್ನ ಅಧೀನಲ್ಲಿರುತ್ತೋ, ಅಲ್ಲಿವರೇಂಗೆ ವಿಪ್ರಂಗೆ ದಾನ ಮಾಡೆಕು. ಪೈಸೆ ಪರಾಧೀನವಾಗಿ ಹೋದಮತ್ತೆ ಏನನ್ನೂ ಹೇಳ್ಳೆ ಉತ್ಸಾಹ ಇರುತ್ತಿಲ್ಲೆ.

ಪೂರ್ವಜನ್ಮ ಕೃತಾದ್ದಾನಾದತ್ರ ಲಬ್ಧಂ ಧನಂ ಬಹು ।
ತಸ್ಮಾದೇವಂ ಪರಿಜ್ಞಾಯ ಧರ್ಮಾರ್ಥ ದೀಯತಾಂ ಧನಮ್ ॥೧೦೮॥

ಪೂರ್ವಜನ್ಮಲ್ಲಿ ಮಾಡಿದ ದಾನಂದಲಾಗಿ ಇಲ್ಲಿ ಬಹು ಧನ ಲಭಿಸಿತ್ತು. ಈ ರೀತಿಯಾಗಿ ತಿಳ್ಕೊಂಡು ಧರ್ಮಕ್ಕೋಸ್ಕರ ಧನವ ದಾನ ಮಾಡೆಕು.

ಧರ್ಮಾತ್ಸಂಜಾಯತೇsರ್ಥಶ್ಚ ಧರ್ಮಾತ್ಕಾಮೋsಭಿಜಾಯತೇ ।
ಧರ್ಮ ಏವಾಪರ್ಗಾಯ ತಸ್ಮಾದ್ಧರ್ಮಂ ಸಮಾಚರೇತ್ ॥೧೦೯॥

ಧರ್ಮಂದ ಧನ ಪ್ರಾಪ್ತಿಯಾವುತ್ತು. ಧರ್ಮಂದ ಕಾಮನೆಗೊ ಪೂರ್ತಿಯಾವುತ್ತು. ಧರ್ಮವೇ ಮೋಕ್ಷಕ್ಕೆ ಕಾರಣವು. ಹಾಂಗಾಗಿ ಧರ್ಮವ ಆಚರುಸೆಕು.

ಶ್ರದ್ಧಯಾ ಧಾರ್ಯತೇ ಧರ್ಮೋ ಬಹುಭಿರ್ನಾರ್ಥರಾಶಿಭಿಃ ।
ನಿಷ್ಕಿಂಚನಾ ಹಿ ಮುನಯಃ ಶ್ರದ್ಧಾವಂತೋ ದಿವಂ ಗತಾಃ ॥೧೧೦॥

ಶ್ರದ್ಧೆಂದಲೇ ಧರ್ಮವ ಧರಿಸೆಕು. ಬಹಳವಾಗಿಪ್ಪ ಧನದ ರಾಶಿಂದ ಅಲ್ಲ. ಧನಹೀನರಾದರೂ ಮುನಿಗೊ ಶ್ರದ್ಧಾವಂತರಾಗಿ ಸ್ವರ್ಗಲೋಕಕ್ಕೆ ಹೋಯಿದವು.

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ ।
ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ॥೧೧೧॥

ಯಾವಾತ° ಭಕ್ತಿಂದ ಎಲೆ, ಹೂಗು, ಹಣ್ಣು, ನೀರು ಇವುಗಳ ಎನಗೆ ಸಮರ್ಪಿಸುತ್ತನೋ, ಆ ಪವಿತ್ರಾತ್ಮ° ಭಕ್ತಿಂದ ಕೊಟ್ಟದ್ದರ ಆನು ಸ್ವೀಕರುಸುತ್ತೆ.

ತಸ್ಮಾದವಶ್ಯಂ ದಾತವ್ಯಂ ತದಾ ದಾನಂ ವಿಧಾನತಃ ।
ಅಲ್ಪಂ ವಾ ಬಹು ವೇತೀಮಾಂ ಗಣನಾಂ ನೈವ ಕಾರಯೇತ್ ॥೧೧೨॥

ಹಾಂಗಾಗಿ ಅವಶ್ಯವಾಗಿಯೂ ವಿಧ್ಯುಕ್ತವಾಗಿ ದಾನ ಮಾಡೆಕು. ಕಮ್ಮಿಯೋ ಹೆಚ್ಚೋ ಹೇಳ್ವ ಆ ವಿಷಯವ ಗಣ್ಯ ಮಾಡ್ಳಾಗ.

ಧರ್ಮಾತ್ಮಾ ಚ ಸ ಪುತ್ರೋ ವೈ ದೈವತೈರಪಿ ಪೂಜ್ಯತೇ ।
ದಾಪಯೇದ್ಯಸ್ತು ದಾನಾನಿ ಪಿತರಂ ಹ್ಯಾತುರಂ ಭುವಿ ॥೧೧೩॥

ಈ ಭೂಮಿಲಿ ಪಿತೃವಿನ ಮರಣಕಾಲಲ್ಲಿ ಅವನತ್ರಂದ ದಾನ ಕೊಡುಸುವ ಧರ್ಮಾತ್ಮ ಪುತ್ರ° ದೇವತೆಗಳಿಂದಲೂ ಪೂಜಿಸಲ್ಪಡುತ್ತ°.

ಪಿತ್ರೋರ್ನಿಮಿತ್ಥಂ ಯದ್ವಿತ್ತಂ ಪುತ್ರೈಃ ಪಾತ್ರೇ ಸಮರ್ಪಿತಮ್ ।
ಆತ್ಮಾ ಪಿ ಪಾವಿತಸ್ತೇನ ಪುತ್ರಪೌತ್ರಪ್ರಪೌತ್ರಕೈಃ ॥೧೧೪॥

ಪಿತೃಗೊಕ್ಕಾಗಿ ಪುತ್ರ° ಪೈಸೆಯ ಸತ್ಪಾತ್ರನಲ್ಲಿ ಸಮರ್ಪುಸುವದರಿಂದ ಪುತ್ರ°, ಪೌತ್ರ°, ಪ್ರಪೌತ್ರರೊಡನೆ ತಾನೂ ಪವಿತ್ರನಾವುತ್ತ°.

ಪಿತುಃ ಶತಗುಣಂ ಪುಣ್ಯಂ ಸಹಸ್ರಂ ಮಾತುರೇವ ಚ ।
ಭಗನೀದಶಸಾಹಸ್ರಂ ಸೋದರೇ ದತ್ತಮಕ್ಷಯಮ್ ॥೧೧೫॥

ಅಪ್ಪನೈಲಿ (ಅಪ್ಪನ ಕೈಂದ)  ದಾನ ಕೊಡಿಸಿರೆ ಪುಣ್ಯ ನೂರು ಪಾಲು, ಅಬ್ಬೈಂದ ಸಾವಿರ ಪಾಲು, ಸೋದರಿಕೈಂದ ಹತ್ತು ಸಾವಿರ ಪಾಲು, ಸೋದರನ ಕೈಲಿ ಕೊಡಿಸಿದ ದಾನದ ಪುಣ್ಯ ಅಕ್ಷಯವೂ ಆವುತ್ತು.

ನ ಚೈವೋಪದ್ರವಾ ದಾತುರ್ನ ವಾ ನರಕಯಾತನಾಃ ।
ಮೃತ್ಯುಕಾಲೇ ಚ ಭಯಂ ಯಮದೂತಸಮದ್ಭವಮ್ ॥೧೧೬॥

ದಾನಿಗೆ ಯಾವ ತೊಂದರೆಯಾಗಲೀ, ನರಕಯಾತನೆಗಳಾಗಲೀ ಉಂಟಾವುತ್ತಿಲ್ಲೆ. ಅವಂಗೆ ಮರಣಕಾಲಲ್ಲಿ ಯಮದೂತರಿಂದ ಯಾವ ಭಯವೂ ಉಂಟಾವುತ್ತಿಲ್ಲೆ.

ಯದಿ ಲೋಭಾನ್ನ ಯಚ್ಛಂತಿ ಕಾಲೇ ಹ್ಯಾತುರಸಂಜ್ಞಕೇ ।
ಮೃತಾಃ ಶೋಚಂತಿ ತೇ ಸರ್ವೇ ಕದರ್ಯಾ: ಪಾಪಿನಃ ಖಗ ॥೧೧೭॥

ಏ ಪಕ್ಷಿಯೇ!, ಒಂದು ವೇಳೆ ಆರು ಮರಣಕಾಲಲ್ಲಿಯೂ ಲೋಭವಶರಾಗಿ ದಾನ ಮಾಡುತ್ತವಿಲ್ಲೆಯೋ, ಆ ಎಲ್ಲ ಜಿಪುಣ ಪಾಪಿಗೊ ಸತ್ತಪ್ಪಗ ದುಃಖಪಡುತ್ತವು.

ಪುತ್ರಾಃ ಪೌತ್ರಾಃ ಸಹ ಭ್ರಾತ್ರಾ ಸಗೋತ್ರಾಃ ಸುಹೃದಸ್ತು ಯೇ ।
ದದತಿ ನಾತುರೇ ದಾನಂ ಬ್ರಹ್ಮಘ್ನಾಸ್ತೇ ನ ಸಂಶಯಃ ॥೧೧೮॥

ಪುತ್ರ°, ಪೌತ್ರ°, ಸೋದರ°, ಸಗೋತ್ರಿಗೊ, ಮಿತ್ರರು ಇವು ಆರು ಮರಣಕಾಲಲ್ಲಿ ದಾನವ ಕೊಡುತ್ತವಿಲ್ಲೆಯೋ ಅವು ನಿಸ್ಸಂದೇಹವಾಗಿ ಬ್ರಹ್ಮಹತ್ಯಾದೋಷವ ಪಡೆತ್ತವರಾವುತ್ತವು.

 

ಇತಿ ಶ್ರೀ ಗರುಡಪುರಾಣೇ ಸಾರೋದ್ಧಾರೇ ಆತುರದಾನ ನಿರೂಪಣಂ ನಾಮ ಅಷ್ಟಮೋsಧ್ಯಾಯಃ ॥

ಇಲ್ಲಿಗೆ ಗರುಡಪುರಾಣಲ್ಲಿ ಸಕಲಶಾಸ್ತ್ರಂಗಳ ‘ಸಾರೋದ್ಧಾರ’ ವಿಭಾಗಲ್ಲಿ ‘ಮರಣಕಾಲದ ದಾನಂಗಳ ನಿರೂಪಣೆ’ ಹೇಳ್ವ ಎಂಟನೇ ಅಧ್ಯಾಯ ಮುಗುದತ್ತು.

 

ಗದ್ಯ ರೂಪಲ್ಲಿ –

ವೈತರಣೀ ಗೋದಾನದ ಬಗ್ಗೆ ಭಗವಂತ° ಗರುಡಂಗೆ ಹೇಳುತ್ತ° –

ಕಪ್ಪು ಅಥವಾ ನಸು ಕೆಂಪು ವರ್ಣದ ಗೋವಿಂಗೆ ಬಂಗಾರದ ಕೊಂಬು, ಬೆಳ್ಳಿಯ ಗೊರಸು ಮತ್ತೆ ಹಾಲು ಹಿಂಡುವ ಕಂಚಿನ ಪಾತೆಯ ಸಹಿತ, ಎರಡು ಕಪ್ಪು ವರ್ಣದ ವಸ್ತ್ರಂಗಳಿಂದ ಅಲಂಕಾರ ಮಾಡೆಕು. ಅದರ ಕೊರಳಿಲ್ಲಿ ಗಂಟೆಯ ಕಟ್ಟೆಕು. ಮತ್ತೆ ವಸ್ತ್ರ ಸಮೇತವಾಗಿ ಒಂದು ತಾಮ್ರದ ಪಾತ್ರೆಯ ಹತ್ತಿವಸ್ತ್ರದ ಮೇಗೆ ಮಡುಗೆಕು. ಲೋಹದಂಡಸಮೇತನಾದ ಯಮನ ಸ್ವರ್ಣಪ್ರತಿಮೆಯ ಮಡುಗೆಕು. ಕಂಚಿನ ಪಾತ್ರೆಲಿ ತುಪ್ಪವ ಹಾಕಿ, ಈ ಎಲ್ಲವನ್ನೂ ತಾಮ್ರದ ಪಾತ್ರೆಯ ಮೇಗೆ ಮಡುಗೆಕು. ಕಬ್ಬಿನ ದೋಣಿಯ ಮಾಡಿ, ಅದರ ರೇಷ್ಮೆ ದಾರಂದ ಕಟ್ಟಿ ಭೂಮಿಲಿ ಗುಂಡಿ ತೋಡೆಕು. ಮತ್ತೆ ಅದರ್ಲಿ ನೀರು ತುಂಬಿ, ಕಬ್ಬಿನ ನಾವೆಯ ಅದರ್ಲಿ ಮಡುಗೆಕು. ಅದರ ಹತ್ರೆ ಸೂರ್ಯನ ದೇಹಂದ ಉತ್ಪನ್ನವಾದ ಧೇನುವ ನಿಲ್ಲುಸಿ, ಶಾಸ್ತ್ರೀಯ ವಿಧಿ-ವಿಧಾನಂಗಳ ಪ್ರಕಾರ ಅದರ ದಾನ ಸಂಕಲ್ಪ ಮಾಡೆಕು. ಬ್ರಾಹ್ಮಣರಿಂಗೆ ಅಲಂಕಾರದ ಮತ್ತು ವಸ್ತ್ರದ ದಾನ ಮಾಡೇಕು ಹಾಂಗೂ ಗಂಧ-ಪುಷ್ಟ, ಅಕ್ಷತಾದಿಗಳಿಂದ ವಿಧಿವಿಧಾನಂದ ದೋಣಿಗೆ ಪೂಜೆ ಸಲ್ಲುಸೆಕು. ಗೋವಿನ ಬೀಲ ಹಿಡ್ಕೊಂಡು ಆ ನಾವೆಲಿ ಕಾಲು ಮಡುಗಿಸಿ ಬ್ರಾಹ್ಮಣನ ಎದುರು ನಿಲ್ಲಿಸಿ, “ಭವಸಾಗರಮಗ್ನಾನಾಂ ಶೋಕತಾಪೋರ್ಮಿದುಃಖಿನಾಮ್ …….” ಮಂತ್ರವ ಹೇಳೆಕು – “ಹೇ ಜಗನ್ನಾಥ!, ಹೇ ಶರಣಾಗತವತ್ಸಲ, ಭವಸಾಗರಲ್ಲಿ ಮುಂಗಿದ ಶೋಕಸಂತಾಪದ ಅಲೆಗಳಿಂದ ದುಃಖ ಪ್ರಾಪ್ತಿ ಹೊಂದುವ ಜನರ ರಕ್ಷಕ ನೀನೇ. ಹೇ ಬ್ರಾಹ್ಮಣಶ್ರೇಷ್ಠನೇ!, ವಿಷ್ಣುರೂಪನೇ! ಭೂಮಿದೇವನೇ!, ನೀನು ಎನ್ನ ಉದ್ಧಾರ ಮಾಡು. ಆನು ದಕ್ಷಿಣೆಯ ಸಹಿತ ಈ ವೈತರಣೀ ರೂಪಿಣೀ ಗೋವಿನ ನಿನಗೆ ನೀಡಿದ್ದೆ. ನನಗೆ ಎನ್ನ ವಂದನೆಗೊ. ಆನು ಮಹಾ ಭಯಾನಕ ಯಮ ಮಾರ್ಗಲ್ಲಿ ನೂರು ಯೋಜನ ವಿಸ್ತಾರವಿಪ್ಪ ವೈತರಣೀ ನದಿಯ ದಾಂಟುವ ಇಚ್ಛೆಂದ ನಿನಗೆ ಈ ವೈತರಣೀ ಗೋವಿನ ದಾನ ನೀಡಿದ್ದೆ. ನಿನಗೆ ಎನ್ನ ವಂದನೆಗೊ. ಹೇ ಧೇನುಕೇ!, ಯಮದ್ವಾರದ ಮಹಾಮಾರ್ಗಲ್ಲಿ ಅದರ ದಾಂಟುಸಲೆ ಎನ್ನ ಪ್ರತೀಕ್ಷೆ ಮಾಡಿಗೊಂಡಿರು. ಏ ದೇವೇಶಿಯೇ ನಿನಗೆ ನಮಸ್ಕಾರ. ಎನ್ನ ಎದುರಿಲ್ಲಿ ಗೋವುಗಳಿರಲಿ, ಎನ್ನ ಹಿಂದೆಕೆಯೂ ಗೋವುಗಳಿರಲಿ, ಎನ್ನ ಹೃದಯಲ್ಲಿಯೂ ಗೋವುಗಳಿರಲಿ ಮತ್ತೆ ಆನು ಗೋವುಗಳ ಮಧ್ಯೆ ವಾಸಮಾಡುತ್ತಿರಲಿ. ಯಾವ ಲಕ್ಷ್ಮಿ ಸಮಸ್ತ ಜೀವಿಗಳಲ್ಲಿ ಪ್ರತಿಷ್ಥಿತಳಾಗಿದ್ದೋ, ಅದೇ ಧೇನು ರೂಪಿ ಲಕ್ಷ್ಮೀದೇವಿ ಎನ್ನ ಪಾಪಂಗಳ ನಾಶ ಮಾಡಲಿ”.  ಈ ಪ್ರಕಾರ ಮಂತ್ರಂಗಳಿಂದ ಸೂಕ್ತ ರೀತಿಲಿ ಪ್ರಾರ್ಥನೆ ಸಲ್ಲುಸಿ, ಕೈ ಮುಕ್ಕೊಂಡು ಪ್ರದಕ್ಷಿಣೆ ಮಾಡಿ ಆ ಎಲ್ಲವನ್ನೂ ಬ್ರಾಹ್ಮಣಂಗೆ ನೀಡೆಕು.

ಹೇ ಗರುಡನೇ!, ಈ ವಿಧಾನಂದ ಆರು ವೈತರಣೀ ಧೇನುವ ದಾನ ಮಾಡುತ್ತನೋ ಅವ° ಧರ್ಮಮಾರ್ಗಂದ ಧರ್ಮರಾಜನ ಸಭಗೆ ಹೋವುತ್ತ°. ಶರೀರವು ಸ್ವಸ್ಥವಾಗಿರಲೀ ಅಥವಾ ಅಸ್ವಸ್ಥವಾಗಿರಲಿ ವೈತರಣೀವಿಷಯಕ ವ್ರತಾಚರಣೆಯ ಮಾಡ್ಳೇಬೇಕು. ವೈತರಣೀ ನದಿಯ ದಾಂಟ್ಳೆ ಬಯಸುವ ಬುದ್ಧಿವಂತ ವೈತರಣೀ ಧೇನುವ ದಾನ ಮಾಡೆಕು. ಹೇ ಗರುಡನೇ!, ವೈತರಣೀ ಗೋವ ದಾನ ಮಾಡುವದರಿಂದ ಮಹಾಮಾರ್ಗಲ್ಲಿ ಆ ನದಿ ಬತ್ತಿಲ್ಲೆ. ಹಾಂಗಾಗಿ ಸದಾ ಪುಣ್ಯಕಾಲಲ್ಲಿ ಗೋದಾನ ಮಾಡೆಕು. ಗಂಗಾ ಮುಂತಾದ ಸಮಸ್ತ ತೀರ್ಥಂಗಳಲ್ಲ್ಲಿ, ಬ್ರಾಹ್ಮಣರ ನಿವಾಸಸ್ಥಾನಂಗಳಲ್ಲಿ, ಚಂದ್ರ ಮತ್ತೆ ಸೂರ್ಯ ಗ್ರಹಣ ಕಾಲಲ್ಲಿ, ಸಂಕ್ರಾಂತಿಲಿ, ಅಮಾವಾಸೆ ತಿಥಿಲಿ, ಉತ್ತರಾಯಣ, ದಕ್ಷಿಣಾಯಾಣ (ಕರ್ಕ ಹಾಂಗೂ ಮಕರ ಸಂಕ್ರಾಂತಿ) ದಿನಂಗಳಲ್ಲಿ, ವ್ಯತಿಪಾತ ಯೋಗಲ್ಲಿ (ವತಿಪಾತ ಯೋಗ – ಧನಿಷ್ಠಾ, ಆದ್ರಾದಿ ನಕ್ಷತ್ರಂಗಳಲ್ಲಿ ಚಂದ್ರಸ್ಥಿತನಾಗಿಪ್ಪಗ ರವಿವಾರದಂದು ಬಪ್ಪ ಅಮವಾಸೆ), ಯುಗಾದಿ ತಿಥಿಗಳಲ್ಲಿ ಹಾಂಗೂ ಯಾವುದೇ ಪುಣ್ಯ ಕಾಲಂಗಳಲ್ಲಿ  ಉತ್ತಮ ಗೋದಾನ ಮಾಡೆಕು. ಏವಾಗ (ಏವ ಸಮಯಲ್ಲಿ) ಶ್ರದ್ಧೆ ಉಂಟಾವುತ್ತೋ, ಏವಾಗ ಸತ್ಪಾತ್ರ° ದೊರಕುತ್ತನೋ ಅದುವೇ ಪುಣ್ಯಕಾಲ. ಎಂತಕೆ ಹೇಳಿರೆ ಈ ಸಂಪತ್ತು ಸ್ಥಿರವಲ್ಲದ್ದು, ಈ ಶರೀರ ನಶ್ವರವಾದ್ದು. ಈ ವೈಭವವೂ ಶಾಶ್ವತವಲ್ಲದ್ದು. ಮೃತ್ಯು ಕೂಡ ಹತ್ರಂಗೆ ಬಂದುಗೊಂಡೇ ಇರುತ್ತು. ಹಾಂಗಾಗಿ ಧರ್ಮ ಸಂಚಯ ಮಾಡೆಕು.

ತನ್ನ ಸಂಪತ್ತಿನ ಅನುಸಾರ ಮಾಡಲಾದ ದಾನ ಅನಂತ ಫಲದಾಯಕ ಆವುತ್ತು. ಹಾಂಗಾಗಿ ತನ್ನ ಆತ್ಮ ಶ್ರೇಯಸ್ಸಿನ ಬಯಸುವ ಬುದ್ಧಿವಂತ ಜೀವಿಯು ಬ್ರಾಹ್ಮಣಂಗೆ ದಾನವ ಕೊಡೆಕು. ಸ್ವಲ್ಪ ಧನಂದಲಾದರೂ ಸ್ವಹಸ್ತಂದ ತಾನೇ ಮಾಡಿದ ದಾನವು ಅಕ್ಷಯವಾವುತ್ತು ಮತ್ತು ಅದರ ಸತ್ಫಲವು ಸಮಯಕ್ಕೆ ಸರಿಯಾಗಿ ದೊರಕುತ್ತು. ದಾನ ಹೇಳ್ವ ಬುತ್ತಿಯ ಪಡಕ್ಕೊಂಡವ° ಮಹಾಮಾರ್ಗಲ್ಲಿ ಸುಖವಾಗಿ ಹೋವುತ್ತ°. ಇಲ್ಲದ್ರೆ, ಬುತ್ತಿ ಇಲ್ಲದ್ದ ಜೀವ° ಮಾರ್ಗಲ್ಲಿ ಕ್ಲೇಶವ ಹೊಂದಿರುತ್ತ°. ಈ ಭೂಮಿಲಿ ಮನುಷ್ಯನಿಂದ ಯಾವ ಯಾವ ದಾನಂಗೊ ಕೊಡಲ್ಪಟ್ಟಿದೋ ಅವು ಯಮಲೋಕದ ಮಾರ್ಗಲ್ಲಿ ಇವನ ಮುಂದಂಗೆ ಬಂದು ದೊರಕುತ್ತು (ಸಹಾಯಕವಾವುತ್ತು).

ಮಹಾಪುಣ್ಯದ ಫಲವಾಗಿ ಮನುಷ್ಯಜನ್ಮ ಪ್ರಾಪ್ತಿ ಅಪ್ಪದು. ಅದರ ಪಡದು ಧರ್ಮದ ಮಾರ್ಗಲ್ಲಿ ನಡದರೆ ಅವ° ಪರಮಗತಿಯ ಪ್ರಾಪ್ತಿ ಹೊಂದುತ್ತ°. ಧರ್ಮವ ತಿರಸ್ಕರಿಸಿದ ಮನುಷ್ಯ° ದುಃಖಂದಲೇ ಜನ್ಮತಾಳುತ್ತ°, ಮರಣವ ಹೊಂದುತ್ತ°. ಮಾನವ ಜನ್ಮದ ಸಾಫಲ್ಯ ದೇವಲ ಧರ್ಮಸೇವೆಲಿಯೇ ಇಪ್ಪದು.

ಧನ, ಪುತ್ರ, ಪತ್ನಿ ಮುಂತಾದ ಬಂಧುಗೊ ಹಾಂಗೂ ಶರೀರಾದಿಗೊ ಎಲ್ಲವೂ ಅನಿತ್ಯವಾದಂಥದ್ದು. ಹಾಂಗಾಗಿ ಧರ್ಮಾಚರಣೆ ಮಾಡೆಕು. ಎಲ್ಲಿವರೇಂಗೆ ಮನುಷ್ಯ ಜೀವಿಸಿರುತ್ತನೋ ಅಲ್ಲಿವರೇಂಗೆ ಅಪ್ಪ°, ಬಂಧು-ಬಳಗ ಮುಂತಾದ ಸಂಬಂಧ ಇಪ್ಪದು. ಮರಣದ ಮತ್ತಾಣ ಕ್ಷಣಂದ ಸ್ನೇಹ ಸಂಬಂಧ ಕಳಚಿ ಹೋವ್ತು. ಜೀವಿತಾವಸ್ಥೆಲಿ ಆತನ ಆತ್ಮವೇ ಆತನ ಬಂಧುವಾಗಿರುತ್ತು ಎಂಬುದಾಗಿ ಪದೇ ಪದೇ ಚಿಂತನೆ ಮಾಡೆಕು. ಮರಣದ ಮತ್ತೆ ಅವಂಗಾಗಿ ಆರು ದಾನ ಕೊಡುತ್ತವು?! ಈ ರೀತಿ ತಿಳ್ಕೊಂಡು ತನ್ನ ಕೈಂದಲೇ ಎಲ್ಲ ದಾನವ ಮಾಡೆಕು. ಎಂತಕೇಳಿರೆ, ಜೀವನ ಅನಿತ್ಯವಾದ್ದು, ಮರಣಾನಂತರ ಆರೂ ಕೂಡ ಅವಂಗಾಗಿ ದಾನ ಮಾಡುತ್ತವಿಲ್ಲೆ. ಮೃತ ಶರೀರವ ಕಟ್ಟಿಗೆ ಮತ್ತೆ ಮಣ್ಣಿನ ಹೆಂಟೆಯ ನಮೂನೆ ಹೇದು ತಿಳುದು ಭೂಮಿಯ ಮೇಲೆ ಬಿಟ್ಟಿಕ್ಕಿ (ಶವಸಂಸ್ಕಾರ ಮಾಡಿ), ಬಂಧು ಬಾಂಧವರು ವಿಮುಖರಾಗಿ ಹಿಂತಿರಿಗಿ ಹೋವುತ್ತವು. ಕೇವಲ ಧರ್ಮ ಮಾತ್ರ ಅವನ ಹಿಂಬಾಲುಸುತ್ತು. ಧನ-ಸಂಪತ್ತು ಮನೆಲಿಯೇ ಉಳುದು ಹೋವ್ತು. ಸಮಸ್ತ ಬಂಧು-ಬಳಗದೋರು ಶ್ಮಶಾನಂದಲೇ ದೂರ ಸರಿತ್ತವು. ಆದರೆ, ಜೀವಿಯಿಂದ ಮಾಡಲ್ಪಟ್ಟ ಶುಭಾಶುಭ ಕರ್ಮಂಗೊ ಪರಲೋಕಲಿ ಆತನ ಹಿಂದೆ ಹಿಂದೆ ಹೋವುತ್ತು. ಶರೀರ ಅಗ್ನಿಲಿ ಭಸ್ಮವಾಗಿ ಹೋವುತ್ತು. ಆದರೆ ಮಾಡಿದ ಕರ್ಮ ಒಟ್ಟಿಂಗೇ ಇರುತ್ತು. ಜೀವಿಯು ಯಾವ ಪಾಪ ಅಥವಾ ಪುಣ್ಯವ ಮಾಡುತ್ತನೋ, ಅವ° ಅದರ ಭೋಗವ ಎಲ್ಲೆಡೆಯೂ ಪ್ರಾಪ್ತಿ ಹೊಂದುತ್ತ°. ಈ ದುಃಖಪೂರಿತ ಸಂಸಾರ ಸಾಗರಲ್ಲಿ ಆರೂ ಆರ ಬಂಧುಗಳಲ್ಲ. ಜೀವಿ ತನ್ನ ಕರ್ಮ ಸಂಬಂಧಂದ ಪ್ರಪಂಚಕ್ಕೆ ಬತ್ತ° ಮತ್ತು ಫಲಭೋಗಂದ ಕರ್ಮಂಗ ಕ್ಷಯವಾದ ಮತ್ತೆ ಪುನಃ ಹೆರಟು ಹೋವುತ್ತ°. ಅಪ್ಪ°-ಅಬ್ಬೆ, ಪುತ್ರ, ಸಹೋದರ, ಬಂಧು ಮತ್ತೆ ಹೆಂಡತಿ ಮುಂತಾದ ಪರಸ್ಪರ ಸಹವಾಸ ಕೆರೆಹತ್ರೆ ಬಂದ ಪ್ರಾಣಿಗಳ ಹಾಂಗೆ, ನೀರಿಲ್ಲಿ ತೇಲುವ ಕಟ್ಟಿಗೆ ತುಂಡುಗಳ ಹಾಂಗೆ ಸಮಾನ (ನಿರಂತರ ಚಂಚಲ). ಆರ ಮಗ? ಆರ ಮೊಮ್ಮಗ?, ಆರ ಹೆಂಡತಿ? ಮತ್ತೆ ಆರ ಧನ?. ಈ ಪ್ರಪಂಚಲ್ಲಿ ಏವುದೂ ಆರದ್ದೂ ಅಲ್ಲ. ಹಾಂಗಾಗಿ ತಮ್ಮ ಕೈಂದಲೇ ಸ್ವಯಂ ದಾನ ಮಾಡೆಕು. ಎಲ್ಲಿವರೇಂಗೆ ಧನ ತನ್ನ ಅಧೀನಲ್ಲಿ ಇರುತ್ತೋ, ಅಲ್ಲಿವರೇಂಗೆ  ಬ್ರಾಹ್ಮಣರಿಂಗೆ ದಾನವ ಮಾಡೆಕು. ಎಂತಕೇಳಿರೆ, ಧನ ಅನ್ಯರ ಅಧೀನ ಆಗಿಹೋದರೆ, ದಾನ ಮಾಡಿ ಹೇದು ಹೇಳುವ ಉತ್ಸಾಹ (ಧೈರ್ಯ) ಬತ್ತಿ ಹೋವ್ತು.

ಪೂರ್ವಜನ್ಮಲ್ಲಿ ಮಾಡಿದ ದಾನದ ಫಲಸ್ವರೂಪಂದಲಾಗಿ, ಇಲ್ಲಿ ಅಧಿಕ ಧನ  ಪ್ರಾಪ್ತಿಯಾವುತ್ತು. ಹೀಂಗೇದು ಅರ್ತುಗೊಂಡು ಧರ್ಮಕ್ಕಾಗಿ ದಾನ ಮಾಡೆಕು. ಧರ್ಮಂದ ಧನ ಪ್ರಾಪ್ತಿಯಾವುತ್ತು. ಧರ್ಮಂದ ಕಾಮದ ಪ್ರಾಪ್ತಿಯಾವುತ್ತು ಮತ್ತು ಧರ್ಮಂದಲೇ ಮೋಕ್ಷ ಪ್ರಾಪ್ತಿಯಾವುತ್ತು. ಹಾಂಗಾಗಿ ಧರ್ಮಾಚರಣೆ ಮಾಡೆಕು. ಧರ್ಮವ ಶ್ರದ್ಧೆಂದಲೇ ಧಾರಣೆ ಮಾಡೆಕು. ಅಧಿಕ ಧನದ ರಾಶಿಂದ ಅಲ್ಲ. ಧನಹೀನರಾದರೂ ಮುನಿಗೊ ಶ್ರದ್ಧಾವಂತರಾಗಿ ಸ್ವರ್ಗಲೋಕಕ್ಕೆ ಹೋಯ್ದವು. ಏವ ಮನುಷ್ಯ° ಪತ್ರ, ಪುಷ್ಪ, ಫಲ ಅಥವಾ ಜಲವ ಭಕ್ತಿಭಾವಂದ ಎನಗೆ ಅರ್ಪುಸುತ್ತನೋ, ಆ ಪವಿತ್ರಾತ್ಮ° ಭಕ್ತಿಪೂರ್ವಕವಾಗಿ ಸಮರ್ಪಿಸಿದ್ದರ ಆನು ಪ್ರೀತಿಂದ ಸ್ವೀಕರುಸುತ್ತೆ. ಹಾಂಗಾಗಿ ವಿಧಿ-ವಿಧಾನಂದ ಅವಶ್ಯವಾಗಿ ದಾನ ಮಾಡೆಕು. ಕಮ್ಮಿಯೋ ಹೆಚ್ಚೋ ಹೇಳಿ ಗಣನೆ ಮಾಡ್ಳಾಗ.

ಈ ಭೂಮಿಲಿ ಪಿತೃವಿನ ಮರಣಕಾಲಲ್ಲಿ ಅವನಿಂದ ದಾನ ಕೊಡುಸುವ° ಸತ್ಪುತ್ರ° ದೇವತೆಗಳಿಂದಲೂ ಪೂಜಿಸಲ್ಪಡುತ್ತ°. ಪುತ್ರನಾದವ° ಅಬ್ಬೆ-ಅಪ್ಪನ ನಿಮಿತ್ಥವಾಗಿ ಧನವ ಸತ್ಪಾತ್ರನಲ್ಲಿ ಸಮರ್ಪಿಸುವದರಿಂದ ಪೌತ್ರ ಪ್ರಪೌತ್ರರೊಟ್ಟಿಂಗೆ ತಾನೂ ಪವಿತ್ರನಾವುತ್ತ°. ಅಪ್ಪನಿಂದ ದಾನ ಕೊಡಿಸಿರೆ ನೂರುಪಾಲು, ಅಬ್ಬೆಂದ ದಾನ ಕೊಡಿಸಿರೆ ಸಾವಿರಪಾಲು, ಸೋದರಿಂದ ಹತ್ತು ಸಾವಿರಪಾಲು, ಸೊದರನಿಂದ ಅಕ್ಷಯವೂ (ಅಕ್ಷಯ ಪುಣ್ಯಪ್ರಾಪ್ತಿ) ಆವುತ್ತು.

ದಾನ ನೀಡುವವ° ಉಪದ್ರವಗ್ರಸ್ತನಾವುತ್ತನಿಲ್ಲೆ. ಅವಂಗೆ ನರಕ ಯಾತನೆ ಪ್ರಾಪ್ತಿಸುತ್ತಿಲ್ಲೆ ಮತ್ತು ಅವಂಗೆ ಯಮದೂತರಿಂದ ಕೂಡ ಏವುದೇ ಭಯವೂ ಇಲ್ಲೆ. ಹೇ ಗರುಡ!, ಒಂದು ವೇಳೆ ಏವ ವ್ಯಕ್ತಿಗೊ ಲೋಭಂದ ದಾನ ನೀಡುತ್ತವಿಲ್ಲೆಯೋ ಆ ಜಿಪುಣಾಗ್ರೇಸರ ಜೀವಿಗೊ ಮರಣದ ನಂತ್ರ ಶೋಕಮಗ್ನನಾವುತ್ತವು°. ಮರಣಕಾಲಲ್ಲಿ ಏವ ಪುತ್ರ°, ಪೌತ್ರ°, ಸಹೋದರ°, ಸಗೋತ್ರಿ ಮತ್ತೆ ಬಂಧು-ಮಿತ್ರರು ದಾನ ನೀಡುತ್ತವಿಲ್ಲೆಯೋ ಅವಕ್ಕೆ ಬ್ರಹ್ಮಹತ್ಯಾ ದೋಷ ಉಂಟಾವುತ್ತು ಹೇಳ್ವದರ್ಲಿ ಸಂಶಯ ಇಲ್ಲೆ.

ಇಲ್ಲಿಗೆ ಗರುಡಪುರಾಣದಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಮರಣಕಾಲದ ದಾನಂಗಳ ನಿರೂಪಣೆ’  ಹೇಳ್ವ ಎಂಟನೇ ಅಧ್ಯಾಯ ಮುಗುದತ್ತು.

 

[ಚಿಂತನೀಯಾ –

ದಾನ ಕೊಡುವದು ಮನುಷ್ಯನ ಶ್ರೇಷ್ಠತೆ. ಸತ್ಪಾತ್ರಂಗೆ ದಾನ ಕೊಡೆಕು ಹೇಳ್ವದು ಏವತ್ತೂ ಮನಸ್ಸಿಲ್ಲಿ ಮಡಿಕ್ಕೊಳ್ಳೆಕ್ಕಾದ ಬಹುಮುಖ್ಯ ವಿಷಯ. ಅಂತೇ ಹರಕೆ ಸಂದಾಯಕ್ಕೆ ಆರಿಂಗೊ ಒಬ್ಬಂಗೆ ಕೈ ತಾಂಟಿಸಿ ಬಿಟ್ಟಿಕ್ಕಿ ಎನ್ನ ಜವಾಬುದಾರಿ ಮುಗಾತು ಹೇಳಿ ತಿಳ್ಕೊಂಡ್ರೆ ಅದು ಶುದ್ಧ ಮೂರ್ಖತನ. ದಾನ ಕೊಡುವದು ಉಪಯೋಗ ಇಪ್ಪದಾಯೆಕು, ದಾನ ತೆಕ್ಕೊಂಡವನೂ ಅದರ ಸದುಪಯೋಗ ಪಡುಸೆಕು. ಒಂದು ವಸ್ತುವ ಹಲವು ಜನಕ್ಕೆ ಹಂಚಿ ದಾನ ಕೊಡ್ವ ಕ್ರಮ ಸರಿಯಲ್ಲ. ಹಾಂಗೇ ಒಂದು ವಸ್ತುವಿನ ದಾನರೂಪವಾಗಿ ಸ್ವೀಕರಿಸಿದ್ದರ ಮರುದಾನಕ್ಕೆ ಉಪಯೋಗುಸುವುದೂ ಶಾಸ್ತ್ರಸಮ್ಮತ ಅಲ್ಲ. ಗೋದಾನವ ಸ್ವೀಕರಿಸಿ ಪುನಃ ಅದೇ ಗೋವಿನ ಮತ್ತೊಬ್ಬಂಗೆ ದಾನ ಕೊಟ್ರೆ ಅದು ದಾನ ಹೇದು ಭಗವಂತನಿಂದ ಅಂಗೀಕರಿಸಲ್ಪಡುತ್ತಿಲ್ಲೆ.

ಪೂರ್ವಜನ್ಮ ಸುಕೃತಂದ ಲಭ್ಯವಾದ ಈ ಮಾನವ ಜನ್ಮವ ಸದುಪಯೋಗ ಪಡಿಸಿಗೊಂಬದೇ ಬುದ್ಧಿಶಾಲಿತನ. ಅದು ಮಾನವ ಧರ್ಮ. ಅದು ಮುಕ್ತಿ ಸಾಧನೆಗೆ ಸಿಕ್ಕಿದ ಸುವರ್ಣ ಅವಕಾಶ. ಈ ಅವಕಾಶವ ಕಳಕ್ಕೊಂಡ್ರೆ ಮತ್ತೆ ಯಾವಾಗ ಇಂತಹ ಅವಕಾಶ ಸಿಕ್ಕುತ್ತು ಹೇಳಿ ನವಗೆ ಅರಡಿಯ. ಅದು ಕರ್ಮವ ಅನುಸರಿಸಿ ಇಪ್ಪದು. ಈ ಜನ್ಮಲ್ಲಿ ಮನುಷ್ಯನಾದವ° ಇನ್ನಾಣ ಜನ್ಮಲ್ಲಿಯೂ ಮನುಷ್ಯನಾಗಿಯೇ ಹುಟ್ಟುತ್ತ° ಹೇಳ್ವ ಏವ ಭರವಸೆಯೂ ಇಲ್ಲೆ. 84 ಲಕ್ಷ ಜೀವ ಜಾತಿಲಿ ಏವ ಜಾತಿಲಿಯೂ ಹುಟ್ಟುವ ಸಂದರ್ಭ ಇದ್ದು. ಹಾಂಗಾಗಿ ಸನ್ಮಾರ್ಗಲ್ಲಿ ನಡವದೇ ಶ್ರೇಯಸ್ಕರ. ಮನಷ್ಯ ಜನ್ಮ ಎಷ್ಟು ದಿನ, ಎಷ್ಟು ವರ್ಷ ಹೇಳ್ವದೂ ನಮ್ಮ ಕೈಲಿ ಇಪ್ಪದಲ್ಲ. ಕ್ಷಣ ಕ್ಷಣವೂ ಮೃತ್ಯು ಹತ್ರೆ ಹತ್ರೆ ಬಪ್ಪದೇ. ಹಾಂಗಾಗಿ ಶರೀರ ಗಟ್ಟಿಯಿಪ್ಪಗಳೇ ಸದ್ದರ್ಮಚರಿತನಾಗಿ ಇದ್ದರೆ ಅಂತ್ಯಕಾಲಲ್ಲಿಯೂ ಅದೇ ಮನೋಧರ್ಮ ಇರುತ್ತು. ಅದು ಉಪಯೋಗಕ್ಕೆ ದೊರಕುತ್ತು.

ಧರ್ಮಚರಣೆ ಸ್ವಯಂ ನಾವೇ ಮಾಡಿಗೊಂಡು ಮುಂದೆಂಗೆ ಹೋಪದು ನವಗೆ ಶ್ರೇಯಸ್ಕರ. ಈ ಪ್ರಪಂಚಲ್ಲಿ ಬಂಧುತ್ವ ಸ್ನೇಹ ಎಲ್ಲ ಈ ಶರೀರ ಇಪ್ಪನ್ನಾರ ಮಾತ್ರ. ಸತ್ತಮತ್ತೆ ಕಾಷ್ಠಕ್ಕೇರಿಸಿ ಶ್ಮಶಾನಂದ ಹಿಂತುರುಗುವವೇ. ನಮ್ಮ ಒಟ್ಟಿಂಗೆ ಬಪ್ಪದು ಸ್ವಾರ್ಜಿತ ಕರ್ಮಫಲ ಮಾಂತ್ರ. ಹಾಂಗಾಗಿ ನಾವು ನಮ್ಮಿಂದ ಎಡಿಗಾಗಿಯೊಂಡಿಪ್ಪಗಳೇ ಧರ್ಮಾಚರಣೆಯ ಮಾಡೆಕು. ನಮ್ಮ ನಂತ್ರ ನಮ್ಮ ನಂತ್ರಾಣವು ಮಾಡುತ್ತವೋ, ಬಿಡುತ್ತವೋ ನವಗರಡಿಯ. ಹಾಂಗಾಗಿ ನಮ್ಮ ಆತ್ಮೋನ್ನತಿಗೆ ಸದ್ಧರ್ಮಪರಾಯಣನಾಗಿದ್ದರೆ ಮುಂದಾಣ ಪ್ರಯಾಣ ಸುಖಕರವಾಗಿ ಇರುತ್ತು ಹೇಳ್ವದು ಭಗವಂತನ ಮಾತು. ಹುಟ್ಟುವಾಗ ಎಂತದೂ ತಂದದಿಲ್ಲೆ, ಸತ್ತಪ್ಪಗ ಎಂತರ್ನೂ ಕೊಂಡೋಪಲಿಲ್ಲೆ. ಹಾಂಗಾಗಿ ಸಂಪಾದನೆ ಮಾಡಿದ್ದರ ಸದ್ಧರ್ಮಕ್ಕೆ ವಿನಿಯೋಗಿಸಿರೆ ಅದು ಭಗವಂತಂಗೆ ಪ್ರೀತಿ.

ದಾನ ಮಾಡೆಕು ಹೇದು ಸಾಲ ಮಾಡಿ ದಾನ ಮಾಡೆಕು ಹೇದು ಏನೂ ಇಲ್ಲೆ. ನಮ್ಮಲ್ಲಿ ಇಲ್ಲದ್ದರ ಇನ್ನೊಬ್ಬನತ್ರಂದ ಎರವಲು ಪಡದೋ, ಸಾಲ ತೆಕ್ಕೊಂಡೋಮಣ್ಣ ಮಾಡೇಕ್ಕಾದ್ದದು ಇಲ್ಲೆ. ತನ್ನಲ್ಲಿ ಇಪ್ಪದರ ಶ್ರದ್ಧಾಭಕ್ತಿಂದ ವಿನಿಯೋಗಿಸಿರೆ ಅದರಿಂದಲೇ ಸಂಪೂರ್ಣ ತೃಪ್ತಿ. ಇಲ್ಲದ್ದಕ್ಕೆ ಎನ್ನತ್ರೆ ಇಲ್ಲೆನ್ನೇ ಹೆದು ಕೊರಗಲೂ ಬೇಡ. ಮಾಡ್ವ ಆಚರಣೆಲಿ ಶ್ರದ್ಧೆ ಬೇಕು. ಶ್ರದ್ಧೆ ಇಲ್ಲದ್ದೆ ಮಾಡಿದ ಏವುದೇ ಕಾರ್ಯ ಬರೇ ಡಂಬಾಚಾರ ಅಕ್ಕಷ್ಟೆ. ಆಚರಣೆಲಿ ಹೆಚ್ಚೋ ಕಮ್ಮಿಯೋ ಹೇಳಿ ತುಲನೆ ಮಾಡೆಕ್ಕಾದ ಅಗತ್ಯ ಇಲ್ಲೆ.   ಶ್ರದ್ಧೆಂದ ನಮ್ಮಲ್ಲಿಪ್ಪದರ ಅದು ಪತ್ರ, ಪುಷ್ಪ, ಫಲ.. ಅಲ್ಲ., ಏನಿಲ್ಲದ್ದರೆ ಒಂದು ಹನಿ ನೀರನ್ನಾರೂ ಶ್ರದ್ಧೆಂದ ಅರ್ಪಿಸಿದ್ದರ ಭಗವಂತ° ಪ್ರೀತಿಂದ ಸ್ವೀಕರಿಸಿ ಅನುಗ್ರಹುಸುತ್ತ°.

ಬದುಕ್ಕಿಲ್ಲಿ ನಾವೆಷ್ಟು ಸಂಪತ್ತು , ಬದುಕ್ಕು ಸಂಗ್ರಹಿಸಿದ್ದು ಹೇಳ್ವದು ಮುಖ್ಯ ಅಲ್ಲ. ಸಂಪತ್ತು ಇಂದು ಬಕ್ಕು ನಾಳೆ ಹೋಕು. ಒಂದು ವೇಳೆ ಇದ್ದರೂ ನವಗದರ  ಮುಂದಾಣ ದಾರಿಲಿ ಹಿಡ್ಕೊಂಡು ಹೋಪಲೆ ಎಡಿಯ. ಎಲ್ಲವನ್ನೂ ಇಲ್ಲಿ ಬಿಟ್ಟಿಕ್ಕಿ ಹೋಪದು. ಧರ್ಮಸಂಪತ್ತು ಮಾಂತ್ರ ನವಗೆ ಶಾಶ್ವತ. ಅದು ನಮ್ಮ ಹಿಂಬಾಲಿಸಿಗೊಂಡು ಬತ್ತು. ಬೇಕಾದಲ್ಲಿ ಎದುರು ಬಂದು ಲಭುಸುತ್ತು.

ನಿಷ್ಕಲ್ಮಶ ಶ್ರದ್ಧಾಭಕ್ತಿಂದ ಕೂಡಿದ ಧರ್ಮಾಚರಿತ ಜೀವನ ಮನುಷ್ಯನ ಶ್ರೇಯಸ್ಸಿನ ಸೋಪಾನ ಎಂಬಲ್ಯಂಗೆ ಈ ಅಧ್ಯಾಯಕ್ಕೆ ಹರೇ ರಾಮ ಹೇಳೋಣವಾವ್ತು.   ಎಲ್ಲೋರಿಂಗೂ ಸನ್ಮಂಗಳವುಂಟಾಗಲಿ.]

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ಕೆ. ವೆಂಕಟರಮಣ ಭಟ್ಟ

    ಭಾವಯ್ಯಾ, ಒಂದು ಗೋವಿನ ದಾನಂದ ಮೇಲೆ ತಿಳುಸಿದ ಇಷ್ಟೊಂದು ಪುಣ್ಯ ಪಡೆವಲೆಡಿತ್ತರೆ, ಒಂದು ಗೋವಿನ ಪ್ರಾಣ ಉಳುಸಿದರೆ ನವಗೆ ಎಷ್ಟೊಂದು ಪುಣ್ಯ ಬಕ್ಕು. ಇದರ ಯೋಚಿಸಿಯೇ ನಮ್ಮ ಗುರುಗೊ ಮಠಲ್ಲಿ “ಗೋ ಪುಷ್ಟಿ ಮಹಾ ಯಜ್ನ” ಹೇಳುವ ಕಾರ್ಯಕ್ರಮ ಮಾಡಿದ್ದವು. ನಾವೆಲ್ಲಾ ಆ ಕಾರ್ಯಕ್ರಮಲ್ಲಿ ಪಾಲ್ಗೊಂಬೊ. ಹರೇ ರಾಮ.

    [Reply]

    VA:F [1.9.22_1171]
    Rating: +3 (from 3 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ಯಾಮಣ್ಣಚೆನ್ನಬೆಟ್ಟಣ್ಣಬೋಸ ಬಾವಪುತ್ತೂರುಬಾವಕಾವಿನಮೂಲೆ ಮಾಣಿವೇಣೂರಣ್ಣಹಳೆಮನೆ ಅಣ್ಣವಿಜಯತ್ತೆಡಾಮಹೇಶಣ್ಣಚೂರಿಬೈಲು ದೀಪಕ್ಕಶೇಡಿಗುಮ್ಮೆ ಪುಳ್ಳಿvreddhiಕಳಾಯಿ ಗೀತತ್ತೆಅನು ಉಡುಪುಮೂಲೆಪವನಜಮಾವಸರ್ಪಮಲೆ ಮಾವ°ಸುಭಗಉಡುಪುಮೂಲೆ ಅಪ್ಪಚ್ಚಿಕೆದೂರು ಡಾಕ್ಟ್ರುಬಾವ°ವೆಂಕಟ್ ಕೋಟೂರುಕೇಜಿಮಾವ°ಚೆನ್ನೈ ಬಾವ°ಬಟ್ಟಮಾವ°ಮಾಷ್ಟ್ರುಮಾವ°ಪುಟ್ಟಬಾವ°ಜಯಗೌರಿ ಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ