Oppanna.com

ಗರುಡ ಪುರಾಣ – ಅಧ್ಯಾಯ 09

ಬರದೋರು :   ಚೆನ್ನೈ ಬಾವ°    on   07/11/2013    3 ಒಪ್ಪಂಗೊ

ಚೆನ್ನೈ ಬಾವ°

ಗರುಡ ಪುರಾಣಮ್                                                     ಗರುಡ ಪುರಾಣ
ಅಥ ನವಮೋsಧ್ಯಾಯಃ                                                ಅಧ್ಯಾಯ 9
ಮ್ರಿಯಮಾಣ ಕೃತ್ಯ ನಿರೂಪಣಮ್                                    ಮರಣಕಾಲದ ವಿಧಿಗಳ ನಿರೂಪಣೆ
 
ಗರುಡ ಉವಾಚ
ಕಥಿತಂ ಭವತಾ ಸಮ್ಯಗ್ದಾನಮಾತುರಕಾಲಿಕಮ್ ।images
ಮ್ರಿಯಮಾಣಸ್ಯ ಯತ್ಕೃತ್ಯಂ ತದಿದಾನೀಂ ವದ ಪ್ರಭೋ ॥೦೧॥
ಗರುಡ° ಹೇಳಿದ° – ಹೇ ಪ್ರಭೋ!, ರೋಗಪೀಡಿತನಾದ ಕಾಲಲ್ಲಿ ಮಾಡೇಕಾದ ದಾನಂಗಳ ಬಗ್ಗೆ ಲಾಯಕಕ್ಕೆ ನಿನ್ನಂದ ಹೇಳಲ್ಪಟ್ಟತ್ತು. ಈಗ, ಮರಣ ಕಾಲಲ್ಲಿ ಮಾಡೇಕಾದ ಕರ್ಮಂಗಳ ಬಗ್ಗೆ ಹೇಳು.
ಶ್ರೀ ಭಗವಾನ್ ಉವಾಚ
ಶ್ರಣು ತಾರ್ಕ್ಷ್ಯ ಪ್ರವಕ್ಷ್ಯಾಮಿ ದೇಹತ್ಯಾಗಸ್ಯ ತದ್ವಿಧಿಮ್ ।
ಮೃತಾ ಯೇನ ವಿಧಾನೇನ ಸದ್ಗತಿಂ ಯಾಂತಿ ಮಾನವಾಃ ॥೦೨॥
ಭಗವಂತ° ಹೇಳಿದ° – ಹೇ ಗರುಡನೇ!, ಏವ ವಿಧಿಂದ ಮನುಷ್ಯ° ಸತ್ತಮತ್ತ ಸದ್ಗತಿಯ ಪಡೆತ್ತನೋ ಆ ದೇಹತ್ಯಾಗದ ವಿಧಿಯ ಆನು ನಿನಗೆ ಹೇಳುತ್ತೆ, ಕೇಳು –
ಕರ್ಮಯೋಗಾದ್ಯದಾ ದೇಹೀ ಮುಂಚತ್ಯತ್ರ ನಿಜಂ ವಪುಃ ।
ತುಲಸೀಸನ್ನಿಧೌ ಕುರ್ಯಾನ್ಮಂಡಲಂ ಗೋಮಯೇನ ತು ॥೦೩॥
ಏವಾಗ ದೇಹಿಯ ಕರ್ಮಂಗಳ ಫಲವಾಗಿ ತನ್ನ ದೇಹತ್ಯಾಗ ಮಾಡುತ್ತನೋ, ಅಂಬಗ ತುಳಸಿ ಗೆಡುವಿನ ಹತ್ರೆ ದನದ ಸಗಣಂದ ಮಂಡಲ (ಮಂಡ್ಳ) ಮಾಡೆಕು (ಸಗಣ ಬಳಿಯೆಕು).
ತಿಲಾಂಶ್ಚೈವ ವಿಕೀರ್ಯಾಥ ದರ್ಭಾಂಶ್ಚೈವ ವಿನಿಕ್ಷಿಪೇತ್ ।
ಸ್ಥಾಪಯೇದಾಸನೇ ಶುಭ್ರೇ ಶಾಲಗ್ರಾಮಶಿಲಾಂ ತದಾ ॥೦೪॥
ಅಲ್ಲಿ (ಆ ಮಂಡ್ಳದ ಮೇಗೆ) ಎಳ್ಳು ಚೆಲ್ಲಿ ದರ್ಭೆಗಳ ಹರಡೆಕು. ಮತ್ತೆ, ಒಂದು ಶುಭ್ರವಾದ ಆಸನದ ಮೇ ಶಾಲಗ್ರಾಮ ಶಿಲೆಯ ಮಡುಗೆಕು.
ಶಾಲಗ್ರಾಮಶಿಲಾ ಯತ್ರ ಪಾಪದೋಷಭಯಾಪಹಾ ।
ತತ್ಸನ್ನಿಧಾನಮರಣಾನ್ಮುಕ್ತಿರ್ಜಂತೋಃ ಸುನಿಶ್ಚಿತಾಃ ॥೦೫॥
ಏವ ಜಾಗೆಲಿ ಪಾಪ ದೋಷ ಭಯಂಗಳ ನಾಶಮಾಡುವ ಶಾಲಗ್ರಾಮ ಶಿಲೆ ಇರುತ್ತೋ, ಅದರ ಹತ್ರೆ ಮರಣ ಹೊಂದಿರೆ ಜೀವಾತ್ಮ ನಿಶ್ಚಯವಾಗಿಯೂ ಮುಕ್ತಿಯ ಹೊಂದುತ್ತ°.
ತುಲಸೀವಿಟಪಚ್ಛಾಯಾ ಯತ್ರಾಸ್ತಿ ಭವತಾಪಹಾ ।
ತತ್ರೈವ ಮರಣಾನ್ಮುಕ್ತಿಃ ಸರ್ವದಾ ದಾನದುರ್ಲಭಾ ॥೦೬॥
ಸಂಸಾರತಾಪವ ನಾಶಮಾಡುವ ತುಳಸೀ ಗೆಡುವಿನ ತಣಿಲು ಎಲ್ಲಿ ಇರುತ್ತೋ ಅಲ್ಲಿ ಮರಣ ಹೊಂದಿರೆ ದುರ್ಲಭವಾದ ಮುಕ್ತಿಯು ಸಿಕ್ಕುತ್ತು.
ತುಲಸೀವಿಟಾಪಸ್ಥಾನಂ ಗೃಹೇ ಯಸ್ಯಾವತಿಷ್ಠತೇ ।
ತದ್ಗೃಹಂ ತೀರ್ಥರೂಪಂ ಹಿ ನ ಯಾಂತಿ ಯಮಕಿಂಕರಾಃ ॥೦೭॥
ಆರ ಮನೆಲಿ ತುಳಸೀ ಗೆಡುವಿನ ಸ್ಥಾಪನೆಯಾಗಿದ್ದೋ, ಆ ಮನೆ ತೀರ್ಥಸ್ಥಳವಾಗಿದ್ದು. ಅಲ್ಲಿಗೆ ಯಮಕಿಂಕರರು ಬತ್ತವಿಲ್ಲೆ.
ತುಲಸೀಮಂಜರೀಯುಕ್ತೋ ಯಸ್ತು ಪ್ರಾಣಾನ್ವಿಮುಂಚತಿ ।
ಯಮಸ್ತಂ ನೇಕ್ಷಿತುಂ ಶಕ್ತೋ ಯುಕ್ತಂ ಪಾಪಶತೈರಪಿ ॥೦೮॥
ಆರು ತುಳಸೀ ದಳದೊಟ್ಟಿಂಗೆ ಪ್ರಾಣವ ಬಿಡುತ್ತವೋ ಅವು ನೂರಾರು ಪಾಪಂಗಳ ಮಾಡಿದ್ದರೂ, ಯಮ° ಅವರ ಕಡೆಂಗೆ ನೋಡ್ಳೂ ಕೂಡ ಶಕ್ತನಾವುತ್ತನಿಲ್ಲೆ.
ತಸ್ಯಾದಲಂ ಮುಖೇ ಕೃತ್ವಾ ತಿಲದರ್ಭಾಸನೇ ಮೃತಃ ।
ನರೋ ವಿಷ್ಣುಪುರಂ ಯಾತಿ ಪುತ್ರಹೀನೋsಪ್ಯಸಂಶಯಃ ॥೦೯॥
ತುಳಸೀದಲವ ಬಾಯಲಿಮಡಿಕ್ಕೊಂಡು ಎಳ್ಳು ದರ್ಭೆಗಳ ಆಸನದ ಮೇಲೆ ಮರಣವ ಹೊಂದಿದ ಮನುಷ್ಯ° ಪುತ್ರಹೀನನಾಗಿದ್ದರೂ ನಿಸ್ಸಂದೇಹವಾಗಿ ವಿಷ್ಣುಪುರಕ್ಕೆ ಹೋವುತ್ತ°.
ತಿಲಾಃ ಪವಿತ್ರಾ ಸ್ತ್ರಿವಿಧಾ ದರ್ಭಾಶ್ಚ ತುಲಸೀರಪಿ ।
ನರಂ ನಿವಾರಯಂತ್ಯೇತೇ ದುರ್ಗತಿಂ ಯಾಂ ತಮಾತುರಮ್ ॥೧೦॥
ಎಳ್ಳು, ದರ್ಭೆ ಮತ್ತೆ ತುಳಸೀ ಎಸಳು – ಈ ಮೂರು ಪವಿತ್ರವಾದ ವಸ್ತುಗೊ. ಕಾಯಿಲೆಯ ಮನುಷ್ಯ° ದುರ್ಗತಿ ಪಡವದರ ನಿವಾರುಸುತ್ತು.
ಮಮ ಸ್ವೇದಸಮದ್ಭೂತಾ ಯತಸ್ತೇ ಪಾವನಾಸ್ತಿಲಾಃ ।
ಅಸುರಾ ದಾನವಾ ದೈತ್ಯಾ ವಿದ್ರವಂತಿ ತಿಲೈಸ್ತತಃ ॥೧೧॥
ಎಳ್ಳು ಎನ್ನ ಬೆವರಿಂದ ಹುಟ್ಟಿದ್ದದು. ಹಾಂಗಾಗಿ ಅದು ಪವಿತ್ರವಾಗಿಪ್ಪದಾಯ್ದು. ಎಳ್ಳಿಂದ ಅಸುರರು, ದಾನವರು, ದೈತ್ಯರು ಓಡಿಹೋವುತ್ತವು.
ದರ್ಭಾ ವಿಭೂತಿರ್ಮೇ ತಾರ್ಕ್ಷ್ಯ ಮಮ ರೋಮಸಮುದ್ಭವಾಃ ।
ಅತಸ್ತತ್ಸ್ಪರ್ಶನಾದೇವ ಸ್ವರ್ಗಂ ಗಚ್ಛಂತಿ ಮಾನವಾಃ ॥೧೨॥
ಹೇ ಗರುಡ!, ಎನ್ನ ರೋಮಂಗಳಿಂದ ಹುಟ್ಟಿದ ದರ್ಭೆ ಎನ್ನ ವಿಭೂತಿ. ಹಾಂಗಾಗಿ ಅದರ ಸ್ಪರ್ಶಮಾತ್ರಂದಲೇ ಮನುಷ್ಯರು ಸ್ವರ್ಗಕ್ಕೆ ಹೋವುತ್ತವು.
ಕುಶಮೂಲೆ ಸ್ಥಿತೋ ಬ್ರಹ್ಮಾ ಕುಶಮಧ್ಯೇ ಜನಾರ್ದನಃ ।
ಕುಶಾಗ್ರೇ ಶಂಕರೋ ದೇವಸ್ತ್ರಯೋ ದೇವಾಃ ಕುಶೇ ಸ್ಥಿತಾಃ ॥೧೩॥
ದರ್ಭೆಯ ಮೂಲಲ್ಲಿ ಬ್ರಹ್ಮನೂ, ದರ್ಭೆಯ ಮಧ್ಯಲ್ಲಿ ಜನಾರ್ದನನೂ, ದರ್ಭೆಯ ಕೊಡಿಲಿ ಶಂಕರ ದೇವನೂ ನೆಲೆಸಿದ್ದವು. ಈ ರೀತಿ ಮೂರು ದೇವರ್ಕಳೂ ದರ್ಭೆಲಿ ನೆಲೆಸಿದ್ದವು.
ಅತಃ ಕುಶಾ ವಹ್ನಿಮಂತ್ರ ತುಲಸೀವಿಪ್ರಧೇನವಃ ।
ನೈತೇ ನಿರ್ಮಾಲ್ಯತಾಂ ಯಾಂತಿ ಕ್ರಿಯಾಮಾಣಾಃ ಪುನಃ ಪುನಃ ॥೧೪॥
ಹಾಂಗಾಗಿ ದರ್ಭೆ, ಅಗ್ನಿ, ಮಂತ್ರ, ತುಳಸಿ, ಬ್ರಾಹ್ಮಣ, ಗೋವು ಇವುಗೊ ಮತ್ತೆ ಮತ್ತೆ ಕಾರ್ಯಲ್ಲಿ ಉಪಯೋಗಿಸಿರೂ ಅಶುದ್ಧವಾವ್ತಿಲ್ಲೆ.
ದರ್ಭಾಃ ಪಿಂಡೇಷು ನಿರ್ಮಾಲ್ಯಾ ಬ್ರಾಹ್ಮಣಾಃ ಪ್ರೇತಭೋಜನೇ ।
ಮಂತ್ರಾಗೌಸ್ತುಲಸೀ ನೀಚೇ ಚಿತಾಯಾಂ ಚ ಹುತಾಶನಃ ॥೧೫॥
ದರ್ಭೆಯು ಪಿಂಡಲ್ಲಿ, ಬ್ರಾಹ್ಮಣ° ಪ್ರೇತಭೋಜನಲ್ಲಿ, ಮಂತ್ರ, ಗೋವು ಮತ್ತೆ ತುಳಸಿ ನೀಚನಲ್ಲಿ ಮತ್ತೆ ಅಗ್ನಿ ಚಿತೆಲಿ ಅಶುದ್ಧರಾಗಿದ್ದವು.
ಗೋಮಯೇನೋಪಲಿಪ್ತೇತು ದರ್ಭಾಸ್ತರಣಸಂಸ್ಕೃತೇ ।
ಭೂತಲೇ ಹ್ಯಾತುರಂ ಕುರ್ಯಾದಂತರಿಕ್ಷಂ ವಿವರ್ಜಯೇತ್ ॥೧೬॥
ದನದ ಸಗಣಂದ ನೆಲಸಾರ್ಸಿ, ದರ್ಭೆಯ ಹರಡಿ ಸಂಸ್ಕಾರ ಮಾಡಿ, ಮರಣೋನ್ಮುಖನಾದವನ ಆ ಭೂಮಿಯ ಮೇಗೆ ಮನುಗುಸೆಕು. ಅಂತರಿಕ್ಷವ ವರ್ಜಿಸೆಕು – ಅಂತರಿಕ್ಷಲ್ಲಿ ಹೇಳಿರೆ ಎತ್ತರಲ್ಲಿ/ ಮಂಚಲ್ಲಿ ಮನುಗುಸಲಾಗ.
ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಸರ್ವೇ ದೇವಾ ಹುತಾಶನಃ ।
ಮಂಡಲೋಪರಿ ತಿಷ್ಠಂತಿ ತಸ್ಮಾತ್ಕುರ್ವೀತ ಮಂಡಲಮ್ ॥೧೭॥
ಬ್ರಹ್ಮ, ವಿಷ್ಣು, ರುದ್ರ ಈ ಎಲ್ಲ ದೇವರುಗೊ, ಯಜ್ಞೇಶ್ವರನೂ ಕೂಡ ಮಂಡ್ಳದ ಮೇಗೆ ನೆಲೆಸಿಗೊಂಡಿರುತ್ತವು. ಹಾಂಗಾಗಿ ಮಂಡ್ಳವ ಹಾಕೆಕು.
ಸರ್ವತ್ರ ವಸುಧಾ ಪೂತಾ ಲೇಪೋ ಯತ್ರ ನ ವಿದ್ಯತೇ ।
ಯತ್ರ ಲೇಪಃ ಕೃತಸ್ತತ್ರ ಪುನರ್ಲೇಪೇನ ಶುಧ್ಯತಿ ॥೧೮॥
ಏವ ಭೂಮಿ (ಜಾಗೆ/ಸ್ಥಳ) ಲೇಪರಹಿತವಾಗಿದ್ದೋ (ಮಲ ಮೂತ್ರಾದಿ ಕೊಳಕ್ಕುರಹಿತವಾಗಿದ್ದೋ) ಅದು ಪವಿತ್ರವಾಗಿರುತ್ತು. ಎಲ್ಲಿ ಮದಲೇ ಗೋಮಯ ಲೇಪನವಾಗಿದ್ದೋ ಅಲ್ಲಿ ಪುನಃ ಗೋಮಯ ಬಳುದರೆ ಶುದ್ಧವಾವ್ತು.
ರಾಕ್ಷಸಾಶ್ಚ ಪಿಶಾಚಾಶ್ಚ ಭೂತಾಃ ಪ್ರೇತಾ ಯಮಾನುಗಾಃ ।
ಅಲಿಪ್ತದೇಶೇ ಖಟ್ವಾಯಾಮಂತರಿಕ್ಷೇ ವಿಶಂತಿ ಚ ॥೧೯॥
ರಾಕ್ಷಸರು, ಪಿಶಾಚಿಗೊ, ಭೂತಂಗೊ, ಪ್ರೇತಂಗೊ ಮತ್ತೆ ಯಮದೂತರು ನೆಲಸಾರುಸದ್ದ ಜಾಗೆಯ, ಭೂಮಿಂದ ಎತ್ತರಲ್ಲಿಪ್ಪ ಮಂಚವ ಪ್ರವೇಶಿಸುತ್ತವು.
ಅತೋsಗ್ನಿ ಹೋತ್ರಂ ಶ್ರಾದ್ಧಂ ಚ ಬ್ರಹ್ಮಭೋಜ್ಯಂ ಸುರಾರ್ಜನಮ್ ।
ಮಂಡಲೇನ ವಿನಾ ಭೂಮ್ಯಾ ಮಾತುರಂ ನೈವ ಕಾರಯೇತ್ ॥೨೦॥
ಹಾಂಗಾಗಿ ಅತ್ನಿಹೋತ್ರ, ಶ್ರಾದ್ಧ, ಬ್ರಾಹ್ಮಣ ಭೋಜನ ಮತ್ತೆ ದೇವತಾಪೂಜೆ ಇವುಗಳ ಮಂಡ್ಳ ಮಾಡದ್ದೆ ಇಪ್ಪ ಭೂಮಿಯ ಮೇಗೆ ಮಾಡ್ಳಾಗ. ಮರಣ ಹೊಂದುತ್ತಿಪ್ಪವನ ಅಂತಹ ನೆಲಕ್ಕಲಿ ಮಡುಗಲಾಗ.
ಲಿಪ್ತಭೂಮ್ಯಾಮತಃ ಕೃತ್ವಾ ಸ್ವರ್ಣರತ್ನಂ ಮುಖೇ ಕ್ಷಿಪೇತ್ ।
ವಿಷ್ಣೋಃ ಪಾದೋದಕಂ ದದ್ಯಾಚ್ಛಾಲಗ್ರಾಮಸ್ವರೂಪಿಣಃ ॥೨೧॥
ಹಾಂಗಾಗಿ ಲೇಪಿಸಲ್ಪಟ್ಟ ಭೂಮಿಯ ಮೇಗೆ ಅವನ ಮನಿಶಿ, ಅವನ ತುಟಿಗಳ ಮೇಲೆ ಬಂಗಾರವನ್ನೂ, ರತ್ನವನ್ನೂ ಮಡಿಗಿ, ಶಾಲಗ್ರಾಮ ಸ್ವರೂಪವಾದ ವಿಷ್ಣುವಿನ ಪಾದೋದಕವ ಬಿಡೆಕು.
ಶಾಲಗ್ರಾಮಶಿಲಾತೋಯಂ ಯಃ ಪಿಬೇದ್ಬಿಂದು ಮಾತ್ರಕಮ್ ।
ಸ ಸರ್ವಪಾಪನಿರ್ಮುಕ್ತೋ ವೈಕುಂಠಭುವನಂ ವ್ರಜೇತ್ ॥೨೨॥
ಶಾಲಗ್ರಾಮ ಶಿಲೆಯ ನೀರ ಯಾವಾತ° ಒಂದು ಬಿಂದುವಾದರೂ ಕುಡಿತ್ತನೋ ಅವ° ಎಲ್ಲ ಪಾಪಂಗಳಿಂದ ಮುಕ್ತನಾಗಿ ವೈಕುಂಠಕ್ಕೆ ಹೋವುತ್ತ°.
ತತೋ ಗಂಗಾಜಲಂ ದದ್ಯಾನ್ಮಹಾಪಾತಕನಾಶನಮ್ ।
ಸರ್ವತೀರ್ಥಕೃತಸ್ನಾನದಾನಪುಣ್ಯಫಲಪ್ರದಮ್ ॥೨೩॥
ಮತ್ತೆ ಮಹಾಪಾಪಂಗಳ ನಾಶಮಾಡುವಂತಹ ಗಂಗಾಜಲವ ಕೊಡೆಕು. ಅದು ಎಲ್ಲ ತೀರ್ಥಂಗಳಲ್ಲಿ ಮಾಡಿದ ಸ್ನಾನ, ದಾನಂಗಳ ಪುಣ್ಯಫಲಂಗ ಕೊಡುವಂತಾದ್ದು.
ಚಾಂದ್ರಾಯಣಂ ಚರೇದ್ಯಸ್ತು ಸಹಸ್ತಂ ಕಾಶಶೋಧನಮ್ ।
ಪಿಬೇದ್ಯಶ್ಚೈವ ಗಂಗಾಂಭಃ ಸಮೌ ಸ್ಯಾತಾಮುಭಾವಪಿ ॥೨೪॥
ಶರೀರವ ಶುದ್ಧಿಮಾಡುವ ಒಂದು ಸಾವಿರ ಚಾಂದ್ರಾಯಣ ವ್ರತವ ಆಚರುಸುವವ° ಮತ್ತು ಗಂಗಾಜಲವ ಕುಡುದವ° ಇವಿಬ್ರೂ ಸಮಾನ ಹೇದು ಪರಿಗಣಿಸಲ್ಪಟ್ಟಿದು.
ಅಗ್ನಿಂ ಪ್ರಾಪ್ಯ ಯಥಾ ತಾರ್ಕ್ಷ್ಯ ತೂಲರಾಶಿರ್ವಿನಶ್ಯತಿ ।
ತಥಾ ಗಂಗಾಂಬುಪಾನೇನ ಪಾತಕಂ ಭಸ್ಮಸಾದ್ಭವೇತ್ ॥೨೫॥
ಹೇ ಗರುಡ!, ಏವ ರೀತಿ ಹತ್ತಿಯ ರಾಶಿ ಕಿಚ್ಚಿಂಗೆ ಸಿಕ್ಕಿ ನಾಶವಾವ್ತೋ, ಅದೇ ರೀತಿ ಗಂಗಾಜಲವ ಕುಡಿವದರಿಂದ ಪಾಪಂಗೊ ಭಸ್ಮೀಭೂತವಾವುತ್ತು.
ಯಸ್ತು ಸೂರ್ಯಾಂಶುಸಂತಪ್ತಂ ಗಾಂಗಂ ಯಃ ಸಲಿಲಂ ಪಿಬೇತ್ ।
ಸ ಸರ್ವಯೋನಿನಿರ್ಮುಕ್ತಃ ಪ್ರಯಾತಿ ಸದನಂ ಹರೇಃ ॥೨೬॥
ಯಾವಾತ° ಸೂರ್ಯನ ಕಿರಣಂಗಳಿಂದ ತಪಿಸಲ್ಪಟ್ಟ ಗಂಗಾಜಲವ ಕುಡಿತ್ತನೋ, ಅವ° ಎಲ್ಲ ಜನ್ಮಂಗಳಿಂದಲೂ ಬಿಡುಗಡೆಹೊಂದಿ ಶ್ರೀ ಹರಿಯ ನಿವಾಸಕ್ಕೆ ಹೋವುತ್ತ°.
ನದ್ಯೋ ಜಲಾವಗಾಹೇನ ಪಾವಯಂತೀತರಾ ಜನಾನ್ ।
ದರ್ಶನಾತ್ಸ್ಪರ್ಶನಾತ್ಪಾನಾತ್ತಥಾ ಗಂಗೇತಿ ಕೀರ್ತನಾತ್ ॥೨೭॥
ಇತರ ನದಿಗಳಿಂದ ಸ್ನಾನ ಮಾಡ್ತದರಿಂದ ಜನರ ಶುದ್ಧರಾವ್ತು. ಆದರೆ, ಗಂಗಾನದಿಯ ದರ್ಶನ, ಸ್ಪರ್ಶನ, ಪಾನಂಗಳಿಂದ ಮತ್ತು ಸಂಕೀರ್ತನೆಂದ ಪವಿತ್ರವಾವ್ತು.
ಪುನಾತ್ಯಪುಣ್ಯಾನ್ಪುರುಷಾನ್ ಶತಶೋsಥ ಸಹಸ್ರಶಃ ।
ಗಂಗಾ ತಸ್ಮಾತ್ಪಿಬೇತ್ತಸ್ಯಾ ಜಲಂ ಸಂಸಾರತಾರಕಮ್ ॥೨೮॥
ನೂರಾರು, ಸಾವಿರಾರು ಪುಣ್ಯಹೀನ ಪುರುಷರ ಗಂಗಾಜಲವು ಪವಿತ್ರರನ್ನಾವುಸುತ್ತು. ಹಾಂಗಾಗಿ ಈ ಸಂಸಾರವ ದಾಂಟುಸುವಂತಹ ಗಂಗಾಜಲವ ಕುಡಿಯೆಕು.
ಗಂಗಾ ಗಂಗೇತಿ ಯೋ ಬ್ರೂಯಾತ್ಪ್ರಾಣೈಃ ಕಂಠಗತೈರಪಿ ।
ಮೃತೋ ವಿಷ್ಣುಪುರಂ ಯಾತಿ ನ ಪುನರ್ಜಾಯತೇ ಭುವಿ ॥೨೯॥
ಯಾವಾತ° ಪ್ರಾಣ ಕೊರಳಿಂಗೆ ಬಂದಪ್ಪಗಳೂ ‘ಗಂಗಾ-ಗಂಗಾ’ ಹೇದು ಹೇಳುತ್ತನೋ, ಅವ° ಮರಣಾನಂತ್ರ ವಿಷ್ಣುಪುರಕ್ಕೆ ಹೋವುತ್ತ°. ಭೂಮಿಲಿ ಮತ್ತೆ ಹುಟ್ಟುತ್ತನಿಲ್ಲೆ.
ಉತ್ಕ್ರಾಮದ್ಭಿಶ್ಚ ಯಃ ಪ್ರಾಣೈಃ ಪುರುಷಃ ಶ್ರದ್ಧಯಾನ್ವಿತಃ ।
ಚಿಂತಯೇನ್ಮನಸಾ ಗಂಗಾಂ ಸೋsಪಿ ಯಾತಿ ಪರಾಂ ಗತಿಮ್ ॥೩೦॥
ಯಾವಾತ ಮನುಷ್ಯ° ಪ್ರಾಣ ಹೋಗ್ಯೊಂಡಿಪ್ಪಗ ಶ್ರದ್ಧೆಂದ ಮನಸ್ಸಿಲ್ಲಿಯೇ ಗಂಗೆಯ ಸ್ಮರಣೆ ಮಾಡುತ್ತನೋ ಅವನೂ ಪರಮಗತಿಯ ಹೊಂದುತ್ತ°.
ಅತೋ ದ್ಯಾಯೇನ್ನಮೇದ್ಗಂಗಾಂ ಸಂಸ್ಮರೇತ್ತಜ್ಜಲಂ ಪಿಬೇತ್ ।
ತತೋ ಭಾಗವತಂ ಕಿಂಚಿಚ್ಛೃಣುಯಾನ್ಮೋಕ್ಷದಾಯಕಮ್ ॥೩೧॥
ಹಾಂಗಾಗಿ ಗಂಗೆಯ ಧ್ಯಾನಿಸೆಕು. ನಮಸ್ಕರಿಸೆಕು. ನಾಮಸ್ಮರಣೆ ಮಾಡೆಕು ಮತ್ತು ಅದರ ಜಲವ ಕುಡಿಯೆಕು. ಮತ್ತೆ ಮೋಕ್ಷದಾಯಕವಾದ ಭಾಗವತವ ರಜಾರು ಕೇಳೆಕು.
ಶ್ಲೋಕಂ ಶ್ಲೋಕಾರ್ಧಪಾದಂ ವಾ ಯೋsಂತೇ ಭಾಗವತಂ ಪಠೇತ್ ।
ನ ತಸ್ಯ ಪುನರಾವೃತ್ತಿ ರ್ಬ್ರಹ್ಮಲೋಕಾತ್ಕದಾಚನ ॥೩೨॥
ಆರು ತನ್ನ ಅಂತ್ಯಕಾಲಲ್ಲಿ ಭಾಗವತದ ಒಂದು ಶ್ಲೋಕವನ್ನಾಗಲಿ, ಅರ್ಧಶ್ಲೋಕವನ್ನಾಗಲೀ ಅಥವಾ ನಾಲ್ಕನೇ ಒಂದು ಭಾಗ ಶ್ಲೋಕವನ್ನಾಗಲೀ ಪಠಿಸುತ್ತನೋ ಅವ° ಬ್ರಹ್ಮಲೋಕಂದ ಮತ್ತೆ ಎಂದಿಂಗೂ ಹಿಂದಿರಿಗಿ ಬತ್ತನಿಲ್ಲೆ.
ವೇದೋಪನಿಷದಾಂ ಪಾಠಾಚ್ಛಿವ ವಿಷ್ಣುಸ್ತವಾದಪಿ ।
ಬ್ರಾಹ್ಮಣಕ್ಷತ್ರಿಯ ವಿಶಾಂ ಮರಣಂ ಮುಕ್ತಿದಾಯಕಮ್ ॥೩೩॥
ಬ್ರಾಹ್ಮಣ ಕ್ಷತ್ರಿಯ ವೈಶ್ಯರಿಂಗೆ ಮರಣಕಾಲಲ್ಲಿ ವೇದೋಪನಿಷತ್ತು (ಭಗವದ್ಗೀತೆಯ) ಪಠಣ, ಶಿವ ವಿಷ್ಣು ಸ್ತುತಿ ಮುಕ್ತಿದಾಯಕವಾಗಿದ್ದು.
ಪ್ರಾಣಪ್ರಯಾಣಸಮಯೇ ಕುರ್ಯಾದನಶನಂ ಖಗ ।
ದದ್ಯಾದಾತುರಸಂನ್ಯಾಸಂ ವಿರಕ್ತಸ್ಯ ದ್ವಿಜನ್ಮನಃ ॥೩೪॥
ಹೇ ಖಗನೇ! ಪ್ರಾಣ ಹೆರಟು ಹೋಪ ಸಮಯಲ್ಲಿ ಉಪವಾಸವ ಮಾಡೆಕು. ಮನಸಾ ವಿರಕ್ತನಾದ ದ್ವಿಜಂಗೆ ಆತುರ ಸಂನ್ಯಾಸವ ಕೊಡೆಕು.
ಸಂನ್ಯಸ್ತಮಿತಿ ಯೋ ಬ್ರೂಯಾತ್ಪ್ರಾಣೈಃ ಕಂಠಗತ್ರೈರಪಿ ।
ಮೃತೋ ವಿಷ್ಣುಪುರಂ ಯಾತಿ ನ ಪುನರ್ಜಾಯತೇ ಭುವಿ ॥೩೫॥
ಪ್ರಾಣ ಕೊರಳಿಂಗೆ ಬಂದರೂ ‘ಆನು ಸಂನ್ಯಾಸ ತೆಕ್ಕೊಂಡಿದೆ’ ಹೇದು ಯಾವಾತ° ಹೇಳುತ್ತನೋ, ಅವ° ಮರಣಹೊಂದಿ ವಿಷ್ಣುಪುರಕ್ಕೆ ಹೋವುತ್ತ°,  ಭೂಮಿಲಿ ಮತ್ತೆ ಹುಟ್ಟುತ್ತನಿಲ್ಲೆ.
ಏವಂ ಜಾತವಿಧಾನಸ್ಯ ಧಾರ್ಮಿಕಸ್ಯ ತದಾ ಖಗ ।
ಊರ್ಧ್ವಚ್ಛಿದ್ರೇಣ ಗಚ್ಛಂತಿ ಪ್ರಾಣಾಸ್ತಸ್ಯ ಸುಖೇನ ಹಿ ॥೩೬॥
ಹೇ ಪಕ್ಷಿ!, ಈ ರೀತಿ ವಿಧಿಪೂರ್ವಕವಾಗಿ ಧಾರ್ಮಿಕ ಕ್ರಿಯೆಗಳ ಮಾಡಿರೆ ಅಂಬಗ ಅವನ ಪ್ರಾಣವು ಊರ್ಧ್ವ ಮಾರ್ಗವಾಗಿ ಬ್ರಹ್ಮರಂಧ್ರಂದ ಸುಖವಾಗಿ ಹೆರ ಹೋವುತ್ತು.
ಮುಖಂ ಚ ಚಕ್ಷುಷೀ ನಾಸೇ ಕರೌ ದ್ವಾರಾಣಿ ಸಪ್ತ ಚ ।
ಏಭ್ಯಃ ಸುಕೃತಿನೋ ಯಾಂತಿ ಯೋಗಿನಸ್ತಾಲುರಂಧ್ರತಃ ॥೩೭॥
ಬಾಯಿ, ಕಣ್ಣು, ಮೂಗಿನ ಹೊಳ್ಳೆ, ಕೆಮಿ – ಇವ್ವೇಳು ಸಪ್ತದ್ವಾರಂಗೊ. ಈ ದ್ವಾರಂಗಳಿಂದ ಸುಕೃತಿಗಳ ಪ್ರಾಣವು ಹೋವುತ್ತು. ಯೋಗಿಯ ಪ್ರಾಣವು ತಾಲುರಂಧ್ರದ (ಗಂಟಲ ಮೇಲ್ಬಾಗ) ಮೂಲಕ ಹೋವುತ್ತು.
ಅಪಾನಾನ್ಮಿಲಿತಪ್ರಾಣೌ ಯದಾ ಹಿ ಭವತಃ ಪೃಥಕ್ ।
ಸೂಕ್ಷ್ಮೀಭೂತ್ವಾ ತದಾ ವಾಯುರ್ವಿನಿಷ್ಕ್ರಾಮತಿ ಪುತ್ತಲಾತ್ ॥೩೮॥
ಅಪಾನದ ಒಟ್ಟಿಂಗೆ ಮಿಲಿತವಾಗಿಪ್ಪ ಪ್ರಾಣವು ಏವಾಗ ಬೇರೆ ಆವುತ್ತೋ, ಆಗ ಪ್ರಾಣವಾಯುವು ಈ ಜಡ ಶರೀರಂದ ಸೂಕ್ಷ್ಮ ರೂಪಲ್ಲಿ ನಿರ್ಗಮಿಸುತ್ತು.
ಶರೀರಂ ಪತತೇ ಪಶ್ಚಾನ್ನಿರ್ಗತೇ ಮರುತೀಶ್ವರೇ ।
ಕಾಲಾಹತಂ ಪತತ್ಯೇವಂ ನಿರಾಧಾರೋ ಯಥಾ ದ್ರುಮಃ ॥೩೯॥
ಮುಖ್ಯ ಪ್ರಾಣವು ನಿರ್ಗಮಿಸಿದ ಮತ್ತೆ ಶರೀರ ಕಾಲವಶವಾಗಿ, ನಿರಾಧಾರವಾಗಿ ಮರದ ಹಾಂಗೆ ಬಿದ್ದು ಹೋವುತ್ತು.
ನಿರ್ವಿಚೇಷ್ಟಂ ಶರೀರಂ ಪ್ರಾಣೈರ್ಮುಕ್ತಂ ಜುಗುಪ್ಸಿತಮ್ ।
ಅಸ್ಪೃಶ್ಯಂ ಜಾಯತೇ ಸದ್ಯೇ ದುರ್ಗಂಧಂ ಸರ್ವನಿಂದಿತಮ್ ॥೪೦॥
ಪ್ರಾಣವು ಹೆರಟು ಹೋದಮತ್ತೆ ಶರೀರ ಚೇತನಾರಹಿತವಾಗಿ, ಅಸಹ್ಯವಾಗಿ, ಮುಟ್ಳೂ ಯೋಗ್ಯವಲ್ಲದುದಾಗಿ, ದುರ್ಗಂಧಯುಕ್ತವಾಗಿ ಎಲ್ಲರಿಂದಲೂ ನಿಂದಿಸಲ್ಪಡುತ್ತು.
ತ್ರಿಧಾವಸ್ಥಾ ಶರೀರಸ್ಯ ಕೃಮಿವಿಡ್ಭಸ್ಮರೂಪತಃ ।
ಕಿಂ ಗರ್ವಃ ಕ್ರಿಯತೇ ದೇಹೇ ಕ್ಷಣವಿಧ್ವಂಸಿಭಿರ್ನರೈಃ ॥೪೧॥
ಕ್ರಿಮಿ, ಮಲ, ಭಸ್ಮ ಇವು ಮೂರು ರೂಪಂಗಳಲ್ಲಿ ಶರೀರದ ಅವಸ್ಥೆಗಳಿಪ್ಪದು. ಒಂದು ಕ್ಷಣಲ್ಲಿ ಧ್ವಂಸವಪ್ಪ ಶರೀರದ ಮೇಗೆ ಮನುಷ್ಯರು ಎಂತಕೆ ಗರ್ವ ಪಡುತ್ತವು ?!
ಪೃಥಿವ್ಯಾಂ ಲೀಯತೇ ಪೃಥ್ವೀ ಆಪಶ್ಚೈವ ತಥಾsಪ್ಸು ಚ ।
ತೇಜಸ್ತೇಜಸಿ ಲೀಯೇತ ಸಮೀರಸ್ತು ಸಮೀರಣೇ ॥೪೨॥
ಪೃಥ್ವಿಲಿ ಪೃಥ್ವಿ, ನೀರಿಲ್ಲಿ ನೀರು, ತೇಜಸ್ಸಿಲ್ಲಿ ತೇಜಸ್ಸು ಲೀನ ಆವುತ್ತು. ಮತ್ತೆ ವಾಯುವಿಲ್ಲಿ ವಾಯು ಲೀನ ಆವುತ್ತು.
ಆಕಾಶಶ್ಚ ತಥಾಕಾಶೇ ಸರ್ವವ್ಯಾಪೀ ಚ ಶಂಕರಃ ।
ನಿತ್ಯಮುಕ್ತೋ ಜಗತ್ಸಾಕ್ಷೀ ಆತ್ಮಾ ದೇಹೇಷ್ವಜೋಮರಃ ॥೪೩॥
ಹಾಂಗೇ ಆಕಾಶಲ್ಲಿ ಆಕಾಶವು ಲೀನ ಆವುತ್ತು. ಹೇಹಲ್ಲಿಪ್ಪ ಆತ್ಮ ಸರ್ವವ್ಯಾಪಿ, ಚಿದಾನಂದದಾಯಕ, ನಿತ್ಯಮುಕ್ತ, ಜಗತ್ತಿಂಗೆ ಸಾಕ್ಷಿ ಮತ್ತು ಹುಟ್ಟು ಸಾವುಗೊ ಇಲ್ಲದ್ದು.
ಸರ್ವೇಂದ್ರಿಯಯುತೋ ಜೀವಃ ಶಬ್ದಾದಿವಿಷಯೈರ್ವೃತಃ ।
ಕಾಮರಾಗಾದಿಭಿರ್ಯುಕ್ತಃ ಕರ್ಮಕೋಶಸಮನ್ವಿತಃ ॥೪೪॥
ಜೀವ° ಸರ್ವೇಂದ್ರಿಯಂಗಳಿಂದ ಕೂಡಿ, ಶಬ್ದ ಮೊದಲಾದಿ ವಿಷಯಂಗಳಿಂದ ಸುತ್ತುವರ್ಕೊಂಡು ಕಾಮರಾಗಾದಿಗಳಿಂದ ತುಂಬಿ, ಕರ್ಮಂಗಳ ಕೋಶಂದ ಒಡಗೂಡಿ
ಪುಣ್ಯವಾಸನಯಾ ಯುಕ್ತೋ ನಿರ್ಮಿತೇ ಸ್ವೇನ ಕರ್ಮಣಾ ।
ಸ ಪ್ರವಿಶ್ಯ ನವೇ ದೇಹೇ ಗೃಹೇ ದಗ್ಧೇ ಯಥಾ ಗೃಹೀ ॥೪೫॥
ಪುಣ್ಯವಾಸೆನೆಂದ ಕೂಡಿ ತನ್ನ ಮನೆ ಸುಟ್ಟುಹೋದ ಗೃಹಸ್ಥ° ಮಾಡುತ್ತಾಂಗೆ ತನ್ನ ಕರ್ಮಂಗೊಕ್ಕನುಸಾರವಾಗಿ ನಿರ್ಮಿತವಾದ ಹೊಸ ದೇಹವ ಪ್ರವೇಶಿಸುತ್ತ°.
ತದಾ ವಿಮಾನಮಾದಾಯ ಕಿಂಕಿಣೀ ಜಾಲಮಾಲಿ ಯತ್ ।
ಆಯಾಂತಿ ದೇವದೂಶ್ಚ ಲಸಚ್ಚಾಮರಶೋಭಿತಾಃ ॥೪೬॥
ಅಷ್ಟಪ್ಪಗ ಕಿಂಕಿಣಿಯ ಜಾಳಿಗೆಗಳ ಮಾಲೆಗಳಿಂದ ಕೂಡಿದ ವಿಮಾನವ ತೆಕ್ಕೊಂಡು, ಹೊಳವ ಚಾಮರಂಗಳಿಂದ ಶೋಭಿತರಾಗಿ ದೇವದೂತರು ಬತ್ತವು.
ದರ್ಮತತ್ತ್ವವಿದಃ ಪ್ರಾಜ್ಞಾಃ ಸದಾ ಧಾರ್ಮಿಕವಲ್ಲಭಾಃ ।
ತದೈನಂ ಕೃತಕೃತ್ಯಂ ಸ್ವರ್ವಿಮಾನೇನ ನಯಂತಿ ತೇ ॥೪೭॥
ಧರ್ಮತತ್ವಂಗಳ ತಿಳುದಿಪ್ಪ ಪಂಡಿತರಾದ ಮತ್ತು ಏವತ್ತೂ ಧಾರ್ಮಿಕವ ಪ್ರೀತುಸುವ ಅವು ಕೃತಕೃತ್ಯನಾದ ಅವನ ವಿಮಾನಲ್ಲಿ ಸ್ವರ್ಗಕ್ಕೆ ಕರಕ್ಕೊಂಡು ಹೋವುತ್ತವು.
ಸುದಿವ್ಯದೇಹೋ ವಿರಜಾಂಬರಸ್ರಕ್ಸುವರ್ಣರತ್ನಾಭರಣೈರುಪೇತಃ ।
ದಾನಪ್ರಭಾವಾತ್ಸ ಮಹಾನುಭಾವಃ ಪ್ರಾಪ್ನೋತಿ ನಾಕಂ ಸುವಪೂಜ್ಯಮಾನಃ ॥೪೮॥
ದಿವ್ಯವಾದ ದೇಹವ ಪಡದು, ಶುಭ್ರವಾದ ವಸ್ತ್ರ ಮತ್ತೆ ಮಾಲೆಗಳ ಧರಿಸಿ, ಸುವರ್ಣ ಮತ್ತೆ ರತ್ನದ ಆಭರಣಂಗಳಿಂದ ಕೂಡಿದವರಾಗಿ, ದಾನದ ಪ್ರಭಾವಂದ ಆ ಮಹಾನುಭಾವ° ಸ್ವರ್ಗವ ಸೇರಿ, ಅಲ್ಲಿ ದೇವತೆಗಳಿಂದ ಗೌರವಿಸಲ್ಪಡುತ್ತ°.
 
ಇತಿ ಶ್ರೀಗರುಡಪುರಾಣೇ ಸಾರೋದ್ಧಾರೇ ಮ್ರಿಯವಾಣ ಕೃತ್ಯ ನಿರೂಪಣಂ ನಾಮ ನವಮೋsಧ್ಯಾಯಃ ॥
ಇಲ್ಲಿಗೆ ಗರುಡಪುರಾಣಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಮರಣಕಾಲದ ವಿಧಿಗಳ ನಿರೂಪಣೆ’ ಹೇಳ್ವ ಒಂಬತ್ತನೇ ಅಧ್ಯಾಯ ಮುಗುದತ್ತು.
 
ಗದ್ಯರೂಪಲ್ಲಿ –
ಗರುಡ° ಹೇಳಿದ° – ಹೇ ಪ್ರಭೋ!, ಮರಣಸನ್ನ ಕಾಲಲ್ಲಿ ಮಾಡೇಕಾದ ದಾನಂಗಳ ಕುರಿತಾಗಿ ನೀನು ಲಾಯಕಕ್ಕೆ ತಿಳಿಶಿದೆ. ಇನ್ನೀಗ ಮರಣಸನ್ನ ಕಾಲಲ್ಲಿ ಮಾಡೇಕ್ಕಪ್ಪ ಕಾರ್ಯಂಗಳ ಬಗ್ಗೆ ಎನಗೆ ತಿಳುಶು.
ಭಗವಂತ° ಹೇಳಿದ° – ಹೇ ಗರುಡ!, ಯಾವ ವಿಧಾನಂದ ಮನುಷ್ಯ° ಹೊಂದಿದ ಮತ್ತೆ ಸದ್ಗತಿಯ ಪಡೆತ್ತನೋ ಆ ದೇಹತ್ಯಾಗದ ವಿಧಿಯ ಆನು ಹೇಳುತ್ತೆ, ಕೇಳು.
ಕರ್ಮಸಂಬಂಧಂದ ಏವಾಗ ದೇಹಧಾರಿಯು ತನ್ನ ಶರೀರವ ಬಿಡ್ಳೆ ತೊಡಗುತ್ತನೋ ಆ ಸಂದರ್ಭಲ್ಲಿ ತುಳಸಿ ಸೆಸಿಯ ಹತ್ರೆ ಗೋಮಯಂದ ಒಂದು ಮಂಡ್ಳ ರಚನೆ ಮಾಡೆಕು (ಸಗಣ ಬಳಿಯೆಕು). ಆ ಮಂಡ್ಳದ ಮೇಗೆ ಎಳ್ಳು ಹಾಕಿ (ಬಿಕ್ಕಿ) ದರ್ಭೆ ಹರಗೆಕು. ಮತ್ತೆ ಒಂದು ಶುಭ್ರವಾದ ಆಸನದ ಮೇಗೆ ಶಾಲಗ್ರಾಮ ಶಿಲೆಯ ಮಡುಗೆಕು. ಎಲ್ಲಿ ಪಾಪ-ದೋಷಂಗಳ ನಿವಾರಣೆ ಮಾಡುವ ಶಾಲಗ್ರಾಮ ಶಿಲೆ ಇರುತ್ತೋ ಅದರ ಹತ್ರೆ ಮರಣ ಹೊಂದಿರೆ ಜೀವಿ ನಿಶ್ಚಯವಗಿ ಮುಕ್ತಿಯ ಪಡೆತ್ತ°.
ಸಂಸಾರ ತಾಪವ ನಾಶಮಾಡುವಂತಹ ತುಳಸಿ ಸೆಸಿಯ ತಣಿಲು ಎಲ್ಲಿ ಇರುತ್ತೋ ಅಲ್ಲಿ ಮರಣ ಹೊಂದಿರೆ ದಾನಂಗೊಕ್ಕೆ ದುರ್ಲಭವಾದ ಮುಕ್ತಿದಾಯಕವಾಗಿದ್ದು. ಆರ ಮನೆಲಿ ತುಳಸಿ ಸ್ಥಾಪನೆ ಆಗಿದ್ದೋ ಆ ಮನೆ ತೀರ್ಥಸ್ಠಳವಾಗಿದ್ದು. ಅಲ್ಲಿಗೆ ಯಮಕಿಂಕರರು ಬತ್ತವಿಲ್ಲೆ. ತುಳಸಿದಳದೊಟ್ಟಿಂಗೆ ಯಾವ ಜೀವಿ ತನ್ನ ಪ್ರಾಣತ್ಯಾಗ ಮಾಡುತ್ತನೋ, ಅವ° ನೂರಾರು ಪಾಪಂಗಳಿಂದ ಯುಕ್ತನಾಗಿದ್ದರೂ ಕೂಡ ಯಮರಾಜಂಗೆ ಅವನ ನೋಡ್ಳೂ ಕೂಡ ಎಡಿತ್ತಿಲ್ಲೆ. ತುಳಸಿದಳವ ಬಾಯಿಲಿ ಮಡಿಕ್ಕೊಂಡು, ಎಳ್ಳು ದರ್ಭೆಗಳ ಆಸನದ ಮೇಗೆ ಇದ್ದುಗೊಂಡು ಮರಣ ಹೊಂದಿದ ಮನುಷ್ಯ° ಪುತ್ರಹೀನನಾಗಿದ್ದರೂ ನಿಸ್ಸಂದೇಹವಾಗಿ ವಿಷ್ಣುಪುರಕ್ಕೆ ಹೋವುತ್ತ°. ಮೂರು ಪ್ರಕಾರದ ಎಳ್ಳು ( ಕಪ್ಪು, ಬೆಳಿ, ಕಂದು), ತುಳಸಿ ಮತ್ತೆ ದರ್ಭೆ ಇವು ಮೂರು ಮರಣಸನ್ನ ವ್ಯಕ್ತಿಯ ದುರ್ಗತಿಯ ತಪ್ಪುಸುತ್ತು.
ಎಳ್ಳು ಎನ್ನ ಬೆವರಿಂದ ಹುಟ್ಟಿದ್ದದು ಹಾಂಗಾಗಿ ಅದು ಪವಿತ್ರವಾದ್ದು. ಎಳ್ಳಿಂದ ಅಸುರರು, ದಾನವರು, ದೈತ್ಯರು ಓಡಿಹೋವ್ತವು. ಹೇ ವೈನತೇಯ!, ಎನ್ನ ರೋಮಂಗಳಿಂದ ಹುಟ್ಟಿದ ದರ್ಭೆ ಎನ್ನ ವಿಭೂತಿ. ಹಾಂಗಾಗಿ ಅದರ ಸ್ಪರ್ಶ ಮಾತ್ರಂದಲೇ ಮನುಷ್ಯರು ಸ್ವರ್ಗಕ್ಕೆ ಹೋವುತ್ತವು. ದರ್ಭೆಯ ಮೂಲಲ್ಲಿ ಬ್ರಹ್ಮ, ದರ್ಭೆಯ ಮಧ್ಯಲ್ಲಿ ಜನಾರ್ದನ ಮತ್ತೆ ಕೊಡಿಲಿ ಶಂಕರ ದೇವ° ನೆಲೆಸಿದ್ದವು. ಈ ರೀತಿ ಮೂರೂ ದೇವರ್ಕಳೂ ದರ್ಭೆಲಿ ನೆಲೆಸಿದ್ದವು. ಹಾಂಗಾಗಿ ದರ್ಭೆ, ಅಗ್ನಿ, ಮಂತ್ರ, ತುಳಸಿ, ಬ್ರಾಹ್ಮಣ ಮತ್ತೆ ಗೋವು ಇವುಗೊ ಮತ್ತೆ ಮತ್ತೆ ಕಾರ್ಯಲ್ಲಿ ಉಪಯೋಗಿಸಿರೂ ಅಶುದ್ಧವಾವ್ತಿಲ್ಲೆ. ದರ್ಭೆ ಪಿಂಡಲ್ಲಿ (ಪಿಂಡ ದಾನಲ್ಲಿ ಉಪಯೋಗಿಸಿದ ದರ್ಭೆ), ಬ್ರಾಹ್ಮಣ ಪ್ರೇತಭೋಜನಲ್ಲಿ (ಪ್ರೇತದ ನಿಮಿತ್ಥ ಭೋಜನ ಮಾಡಿದ ಬ್ರಾಹ್ಮಣ), ನೀಚನ ಬಾಯಿಂದ ಉಚ್ಚರಿಸಲ್ಪಟ್ಟ ಮಂತ್ರ, ನೀಚಂಗೆ ಸಂಬಂಧಿಸಿದ ಗೋವು ಮತ್ತೆ ತುಳಸಿ ಹಾಂಗೂ ಚಿತಾಭಸ್ಮ ಅಶುದ್ಧಿ (ನಿರ್ಮಾಲ್ಯ / ಅಪವಿತ್ರ) ಆಗಿರುತ್ತು.
ಗೋಮಯಂದ ನೆಲ ಸಾರುಸಿ ಮತ್ತು ದರ್ಭೆಗಳ ಹರಡಿ, ಸಂಸ್ಕಾರಗೊಳುಸಿ, ಆ ಭೂಮಿಲಿ ಮರಣೋನ್ಮುಖನಾದ ವ್ಯಕ್ತಿಯ ಮನುಗುಸೆಕು., ಅಂತರಿಕ್ಷವ ವರ್ಜಿಸೆಕು (ಎತ್ತರದ ಮಂಚ ಇತ್ಯಾದಿಗಳಲ್ಲಿ ಮನುಗುಸಲಾಗ). ಬ್ರಹ್ಮ, ವಿಷ್ಣು, ರುದ್ರ ಹಾಂಗೂ ಅನ್ಯ ಸಮಸ್ತ ದೇವತೆಗೊ ಮತ್ತು ಅಗ್ನಿ ಇವೆಲ್ಲೊರೂ ಮಂಡ್ಳಲ್ಲಿ ನೆಲೆಸಿರುತ್ತವು. ಹಾಂಗಾಗಿ ಮಂಡ್ಳ ಮಾಡೆಕು. ಏವ ಭೂಮಿ ಲೇಪ ರಹಿತ ಅರ್ಥಾತ್ ಮಲ-ಮೂತ್ರಾದಿ ಅಶುದ್ಧ ರಹಿತವಾಗಿರುತ್ತೋ, ಅದೆಲ್ಲದಿಕ್ಕೆಯೂ ಪವಿತ್ರವಾಗಿರುತ್ತು. ಏವ ಜಾಗೆ ಏವತ್ತೋ ಮದಲೆ ಗೋಮಯಂದ ಸಾರಿಸಿದ್ದದಾಗಿದ್ದರೆ ಅಥವಾ ಅಲ್ಲಿ ಅಶುಚಿ ಆಗಿದ್ದರೆ ಅಲ್ಲಿ ಪುನಃ ಗೋಮಯಂದ ಸಾರಿಸಿರೆ ಅದು ಶುದ್ಧಿಯಾಗಿ ಹೋವುತ್ತು. ಎಲ್ಲಿಯೂ ಕಲೆ ಕಾಣದ್ದಾಂಗೆ ಭೂಮಿಯ (ನೆಲಕ್ಕವ) ಎಲ್ಲ ದಿಕ್ಕೆ ಪರಿಶುದ್ದವಾಗಿರೆಕು. ಕಲೆ ಕಂಡುಬಂದರೆ ಪುನಃ ಗೋಮಯ ಬಳುಗೆಕು. ಗೋಮಯಂದ ಸಾರುಸದ್ದ ಜಾಗೆಯ, ಭೂಮಿಂದ ಎತ್ತರಲ್ಲಿ ಇಪ್ಪ ಮಂಚವ ರಾಕ್ಷಸರು, ಪಿಶಾಚಿಗೊ, ಭೂತಂಗೊ, ಪ್ರೇತಂಗೊ ಮತ್ತೆ ಯಮದೂತರು ಪ್ರವೇಶಿಸುತ್ತವು.
ಹಾಂಗಾಗಿ ಅಗ್ನಿಹೋತ್ರ, ಶ್ರಾದ್ಧ, ಬ್ರಾಹ್ಮಣ ಭೋಜನ, ದೇವಪೂಜಾದಿಗಳ ಮಂಡ್ಳ ಮಾಡದ್ದೆ ಇಪ್ಪ ಜಾಗೆಲಿ (ಸಗಣ ಬಳುಗದ್ದ ಜಾಗೆಲಿ) ಮಾಡ್ಳಾಗ. ಮರಣಸನ್ನ ವ್ಯಕ್ತಿಯ ಅಂತಹ ನೆಲಕ್ಕಲಿ ಮನುಶಲಾಗ. ಹಾಂಗಾಗಿ ಸಗಣ ಬಳುದ ಜಾಗೆಲಿ ಅವನ ಮನಿಶಿ ಅವನ ತುಟಿಲಿ ಬಂಗಾರವನ್ನೂ, ರತ್ನವನ್ನೂ ಮಡಿಗಿ ಶಾಲಗ್ರಾಮ ಸ್ವರೂಪನಾದ ವಿಷ್ಣುವಿನ ಪಾದೋದಕವ ಬಿಡೆಕು. ಆರು ಶಾಲಿಗ್ರಾಮ ಶಿಲೆಯ ನೀರಿನ ಒಂದು ಹುಂಡಾದರೂ ಕುಡಿತ್ತನೋ ಅವ° ಎಲ್ಲ ಪಾಪಂಗಳಿಂದ ಮುಕ್ತನಾಗಿ ವೈಕುಂಠಕ್ಕೆ ಹೋವುತ್ತ°.
ಮತ್ತೆ ಮಹಾಪಾಪಂಗಳ ನಾಶಮಾಡುವಂತಹ ಗಂಗಾಜಲವ ಕೊಡೆಕು. ಅದು ಸಮಸ್ತ ತೀರ್ಥಂಗಳಲ್ಲಿ ಮಾಡಿದ ಸ್ನಾನ-ದಾನಾದಿ ಪುಣ್ಯಫಲಂಗಳ ಕೊಡುವಂತಾದ್ದು. ಶರೀರವ ಶುದ್ಧಗೊಳುಸುವ ಒಂದು ಸಾವಿರ ಚಾಂದ್ರಾಯಣ ವ್ರತವ ಆಚರುಸುತ್ತವ°, ಗಂಗಾಜಲವ ಕುಡುವವ° – ಇವಿಬ್ರೂ ಸಮಾನ(ಫಲ)ರೇ ಆಗಿರುತ್ತವು. ಹೇ ಗರುಡ!, ಹತ್ತಿಯ ರಾಶಿಗೆ ಹೇಂಗೆ ಕಿಚ್ಚು ತಾಗಿರೆ ಪೂರ್ಣ ನಾಶ ಆವ್ತೋ, ಹಾಂಗೇ, ಗಂಗಾಜಲ ಕುಡಿವದರಿಂದ ಸಂಪೂರ್ಣ ಪಾಪಂಗೊ ನಾಶವಾವ್ತು. ಆರು ಸೂರ್ಯನ ಕಿರಣಂದ ತಪ್ತ ಗಂಗಾಜಲವ ಕುಡಿತ್ತವೋ ಅವು ಎಲ್ಲ ಜನ್ಮಂಗಳಿಂದಲೂ ಬಿಡುಗಡೆಹೊಂದಿ ಶ್ರೀ ಹರಿಯ ನಿವಾಸಕ್ಕೆ ಹೋವುತ್ತವು.
ಇತರ ನದಿಗಳಲ್ಲಿ ಮಿಂದಪ್ಪಗ ಮನುಷ್ಯನ ಶುದ್ಧಗೊಳುಸುತ್ತು., ಆದರೆ, ಗಂಗಾಮಾತೆಯ ದರ್ಶನ, ಸ್ಪರ್ಶನ, ಸ್ನಾನ ಅಥವಾ ‘ಗಂಗಾ’ ನಾಮದ ಸಂಕೀರ್ತನೆ ಮಾತ್ರಂದಲೇ ನೂರಾರು, ಸಹಸ್ರಾರು ಪುಣ್ಯರಹಿತ ಪುರುಷರ ಪಾಪಂಗಳ ಪವಿತ್ರಗೊಳುಸುತ್ತು. ನೂರಾರು, ಸಹಸ್ರಾರು ಪುಣ್ಯಹೀನ ಪುರುಷರ ಗಂಗಾಜಲವು ಪವಿತ್ರರನ್ನಾಗಿ ಮಾಡುತ್ತು. ಹಾಂಗಾಗಿ ಈ ಸಂಸಾರವ ದಾಂಟುಸುವ ಗಂಗಾಜಲವ ಕುಡಿಯೆಕು. ಆರು ಪ್ರಾಣ ಹೋಪ ಸಮಯಲ್ಲಿ ‘ಗಂಗಾ-ಗಂಗಾ’ ಹೇದು ಹೇಳುತ್ತನೋ ಅವು ಮರಣಾನಂತರ ವಿಷ್ಣುಪುರಕ್ಕೆ ಹೋವುತ್ತವು. ಭೂಮಿಲಿ ಮತ್ತೆ ಹುಟ್ಟುತ್ತವಿಲ್ಲೆ. ಯಾವಾತ° ಮನುಷ್ಯ° ಪ್ರಾಣ ಹೋವ್ತಾ ಇಪ್ಪಗ ಶ್ರದ್ಧೆಂದ ಮನಸ್ಸಿಲ್ಲಿಯೇ ಗಂಗೆಯ ಸ್ಮರಿಸುತ್ತನೋ ಅವನೂ ಪರಮ ಗತಿಯ ಹೊಂದುತ್ತ°. ಹಾಂಗಾಗಿ ಗಂಗೆಯ ಧ್ಯಾನಿಸೆಕು, ನಮಸ್ಕರಿಸೆಕು, ನಾಮಸ್ಮರಣೆ ಮಾಡೆಕು ಮತ್ತು ಅದರ ಜಲವ ಕುಡಿಯೆಕು. ಮತ್ತೆ ಮೋಕ್ಷಪ್ರದಾಯಕವಾದ ಭಾಗವತವ ರಜಾರು ಕೇಳೆಕು. ಆರು ತನ್ನ ಅಂತ್ಯಕಾಲಲ್ಲಿ ಭಾಗವತದ ಒಂದು ಶ್ಲೋಕವನ್ನಾಗಲಿ, ಅರ್ಧಶ್ಲೋಕವನ್ನಾಗಲೀ ಅಥವಾ ನಾಲ್ಕನೇ ಒಂದು ಭಾಗ ಶ್ಲೋಕವನ್ನಾಗಲೀ ಪಠಿಸುತ್ತನೋ ಅವ° ಬ್ರಹ್ಮಲೋಕಂದ ಮತ್ತೆ ಎಂದಿಂಗೂ ಹಿಂದಿರಿಗಿ ಬತ್ತನಿಲ್ಲೆ. ಬ್ರಾಹ್ಮಣ ಕ್ಷತ್ರಿಯ ವೈಶ್ಯರಿಂಗೆ ಮರಣಕಾಲಲ್ಲಿ ವೇದೋಪನಿಷತ್ತು (ಭಗವದ್ಗೀತೆಯ) ಪಠಣ, ಶಿವ ವಿಷ್ಣು ಸ್ತುತಿ ಮುಕ್ತಿದಾಯಕವಾಗಿದ್ದು. ಹೇ ಖಗನೇ!, ಪ್ರಾಣತ್ಯಾಗದ ಸಮಯಲ್ಲಿ ಮನುಷ್ಯ° ‘ಅನಶನ ವ್ರತ’ (ಜಲ ಮತ್ತೆ ಜಲ ತ್ಯಾಗ) – ಉಪವಾಸವ ಮಾಡೆಕು. ಒಂದುವೇಳೆ ಅವ° ವಿರಕ್ತ ದ್ವಿಜನಾಗಿದ್ದರೆ, ಅವ° ಆತುರಸನ್ಯಾಸವ ಸ್ವೀಕರುಸೆಕು.
ಪ್ರಾಣವು ಕೊರಳಿಂಗೆ ಬಂದಪ್ಪಗ ಯಾವಾತ° ‘ಆನು ಸನ್ಯಾಸ ಸ್ವೀಕರಿಸಿದ್ದೆ’ ಹೇದು ಹೇಳಿರೆ, ಅವ° ಮರಣಾನಂತರ ವಿಷ್ಣುಲೋಕಕ್ಕೆ ಹೋವುತ್ತ°. ಮತ್ತೆ ಭೂಮಿಲಿ ಹುಟ್ಟುತ್ತನಿಲ್ಲೆ. ಏ ಗರುಡ!, ಈ ಪ್ರಕಾರ ವಿಧಿಪೂರ್ವಕವಾಗಿ ಧಾರ್ಮಿಕ ಕ್ರಿಯೆಗಳ ಮಾಡಿರೆ ಅಂಬಗ ಅವನ ಪ್ರಾಣವು ಊರ್ಧ್ವ ಮಾರ್ಗವಾಗಿ ಬ್ರಹ್ಮರಂಧ್ರದ ಮೂಲಕ ಸುಖವಾಗಿ ಹೆರ ಹೋವುತ್ತು.  ಬಾಯಿ, ಕಣ್ಣು, ಮೂಗಿನ ಹೊಳ್ಳೆ, ಕೆಮಿ – ಇವ್ವೇಳು ಸಪ್ತದ್ವಾರಂಗೊ. ಈ ದ್ವಾರಂಗಳಿಂದ ಸುಕೃತಿಗಳ (ಪುಣ್ಯಾತ್ಮರ) ಪ್ರಾಣವು ಹೋವುತ್ತು. ಯೋಗಿಯ ಪ್ರಾಣವು ತಾಲುರಂಧ್ರದ(ಗಂಟಲ ಮೇಲ್ಬಾಗ)  ಮೂಲಕ ಹೆರ ಹೋವುತ್ತು. ಅಪಾನಂದ ಕೂಡಿದ ಪ್ರಾಣ ಒಂದು ವೇಳೆ ಪ್ರತ್ಯೇಕವಾಗಿ ಹೋದರೆ ಅಂಬಗ ಪ್ರಾಣವಾಯು ಸೂಕ್ಷ್ಮವಾಗಿ ಶರೀರಂದ ಹೆರಹೋವುತ್ತು. ಪ್ರಾಣವಾಯು ರೂಪಿ ಭಗವಂತ ಹೆರಹೋದಮತ್ತೆ ಕಾಲನಿಂದ ಪೆಟ್ಟುತಿಂದ ನಿರಾಧಾರ ಶರೀರ, ವೃಕ್ಷದಾಂಗೆ ನೆಲಕ್ಕೆ ಉರುಳುತ್ತು. ಪ್ರಾಣಂದ ಮುಕ್ತವಾದ ಮತ್ತೆ ಶರೀರ ತಕ್ಷಣ ಚಟುವಟಿಕೆರಹಿತ, ಹೀನ, ದುರ್ಗಂಧಯುಕ್ತ, ಅಸ್ಪೃಶ ಮತ್ತು ಎಲ್ಲರಿಂದಲೂ ನಿಂದ್ಯ ಆವುತ್ತು.
ಈ ಶರೀರಕ್ಕೆ ಕ್ರಿಮಿ, ಮಲ, ಭಸ್ಮರೂಪ ಅವಸ್ಥೆಗೊ. ಇದರ್ಲಿ ಕ್ರಿಮಿಗೊ ಬೀಳುತ್ತು. ಇದು ಮಲಕ್ಕೆ ಸಮಾನ ದುರ್ಗಂಧವಾವ್ತು ಮತ್ತೆ ಅಂತಿಮವಾಗಿ ಚಿತೆಗೆ ಏರಿ ಭಸ್ಮವಾಗಿ ಹೋವುತ್ತು. ಹಾಂಗಾಗಿ, ಕ್ಷಣಮಾತ್ರಲ್ಲಿ ನಷ್ಟವಾಗಿ ಹೋಪ ಈ ದೇಹಕ್ಕಾಗಿ ಮನುಷ್ಯರು ಎಂತಕೆ ಗರ್ವ ಪಡುತ್ತವು?! ಪಂಚಭೂತಂದ ನಿರ್ಮಿತವಾದ ಶರೀರವು, ಪೃಥ್ವಿತತ್ವಂಗೊ ಪೃಥ್ವಿಲಿ ಲೀನವಾಗಿ ಹೋವುತ್ತು, ಜಲತತ್ವ ಜಲಲ್ಲಿ, ತೇಜಸ್ ತತ್ವ ತೇಜಲ್ಲಿ ಮತ್ತೆ ವಾಯುತತ್ವ ವಾಯುವಿಲ್ಲಿ ಲೀನವಾವುತ್ತು. ಇದೇ ಪ್ರಕಾರ ಆಕಾಶ ತತ್ವ ಕೂಡ ಆಕಾಶಲ್ಲಿ ಲೀನವಾಗಿ ಹೋವುತ್ತು. ಸಮಸ್ತ ಜೀವಂಗಳ ದೇಹಲ್ಲಿ ಸ್ಥಿತನಾಗಿಪ್ಪ ಸರ್ವವ್ಯಾಪಿ, ವಿಶ್ವಸ್ವರೂಪ, ನಿತ್ಯಮುಕ್ತ ಮತ್ತೆ ಜಗತ್ ಸಾಕ್ಷಿ ಆತ್ಮವು ಹುಟ್ಟುಸಾವುಗೊ ಇಲ್ಲದ್ದದು.
ಸಮಸ್ತ ಇಂದ್ರಿಯಂಗಳುಳ್ಳ ಮತ್ತು ಶಬ್ದಾದಿ ವಿಷಯಂಗಳುಳ್ಳ ಮೃತವ್ಯಕ್ತಿಂದ ಹೋದ ಜೀವ ಕರ್ಮ-ಕೋಶಂದ ಸಮನ್ವಿತ ಹಾಂಗೂ ಕಾಮರಾಗಾದಿ ಸಹಿತ ಪುಣ್ಯದ ವಾಸನಾಯುಕ್ತವಾಗಿ ತನ್ನ ಕರ್ಮದ ಮೂಲಕ ನಿರ್ಮಿತ ಹೊಸ ಶರೀರಲ್ಲಿ, ಮನೆಯೊಂದು ಅಗ್ನಿಗೆ ಆಹುತಿಯಾಗಿ ಹೋದಮತ್ತೆ ಗೃಹಸ್ಥ° ಅನ್ಯ ಹೊಸ ಮನೆಯ ಪ್ರವೇಶಿಸುವ ಹಾಂಗೆ ಪ್ರವೇಶಿಸುತ್ತು.
ಅಷ್ಟಪ್ಪಗ, ಮಧುರ ಶಬ್ದಂಗಳ ಉಂಟುಮಾಡುವ ಗಂಟೆಗಳ ಮಾಲೆಯುಕ್ತ ವಿಮಾನವ ತೆಕ್ಕೊಂಡು ಚಾಮರಂಗಳಿಂದ ಶೋಭಿತರಾಗಿ ದೇವದೂತರು ಆಗಮಿಸುತ್ತವು. ಧರ್ಮದ ತತ್ವವ ಅರ್ತ, ಬುದ್ಧಿವಂತ°, ಧಾರ್ಮಿಕ ಜನಂಗೊಕ್ಕೆ ಪ್ರಿಯರಾದ ದೇವದೂತರುಗೊ ಕೃತಕೃತ್ಯ (ಪುಣ್ಯ) ಈ ಜೀವಿಯ ವಿಮಾನದ ಮೂಲದ ಸ್ವರ್ಗಕ್ಕೆ ಕರಕ್ಕೊಂಡು ಹೋವುತ್ತವು. ಸುಂದರ, ದಿವ್ಯಶರೀರ ಧಾರಣೆ ಮಾಡಿ ನಿರ್ಮಲ ವಸ್ತ್ರ ಮತ್ತು ಮಾಲೆಯ ಧರಿಸಿ, ಸುವರ್ಣ ಮತ್ತು ರತ್ನಾದಿ ಆಭರಣಂಗಳಿಂದ ಯುಕ್ತನಾಗಿ ಆ ಮಹಾನುಭಾವ ಜೀವಿಯ ದಾನದ ಪ್ರಭಾವಂದ ದೇವತೆಗಳಿಂದ ಗೌರವಿಸಲ್ಪಟ್ಟು ಸ್ವರ್ಗವ ಸೇರುತ್ತ° ಎಂಬಲ್ಯಂಗೆ ಶ್ರೀ ಗರುಡಪುರಾಣಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಮರಣಕಾಲದ ವಿಧಿಗಳ ನಿರೂಪಣೆ’ ಹೇಳ್ವ ಒಂಬತ್ತನೇ ಅಧ್ಯಾಯ ಮುಗುದತ್ತು.
[ಚಿಂತನೀಯಾ –
ಮನುಷ್ಯ ಜನ್ಮದ ಗುರಿ- ಮೋಕ್ಷ ಸಾಧನೆ. ಹುಟ್ಟು ಸಾವು ಹೇಳ್ವದು ನಿರಂತರ ಪ್ರಕ್ರಿಯೆ. ಇದರಿಂದ ನಿವೃತ್ತಿ ಪಡವದೇ ಮೋಕ್ಷ. ಮೋಕ್ಷ ಹೊಂದಿದವಂಗೆ ಮತ್ತೆ ಈ ಪ್ರಪಂಚಲ್ಲಿ ಹುಟ್ಟೇಕ್ಕಾದ್ದಿಲ್ಲೆ. ಅವ° ಭಗವಂತನ ಪರಮ ಗತಿಯ ಹೊಂದಿ ಅವನ ಸಚ್ಚಿದಾನಂದ ಆನಂದವ ನಿರಂತರ ನಿರಾತಂಕವಾಗಿ ಪಡಕ್ಕೊಂಡಿರುತ್ತ°. ಅದು ಆಯೇಕ್ಕಾರೆ ಮೋಕ್ಷ ಸಾಧನೆಲಿ ಗೆಲುವು ಸಿಕ್ಕೆಕು. ಅದು ಅಷ್ಟು ಸುಲಭ ಸಾಧ್ಯ ಅಲ್ಲದ್ದರೂ ಸಾಧ್ಯವೇ ಇಲ್ಲದ್ದ ಕಾರ್ಯವೇನಲ್ಲ. ಮೋಕ್ಷ ಸಾಧನೆಯ ದಾರಿಯ ಭಗವಂತ° ಹಲವು ದಿಕ್ಕೆ ಹೇಳಿದ್ದ°. ಅದರ ಶ್ರದ್ಧಾಭಕ್ತಿಂದ ಜೀವನಲ್ಲಿ ಅಳವಡಿಸಿಗೊಂಬದೇ ಬುದ್ಧಿವಂತ° ಜೀವಿಯ ಕರ್ತವ್ಯ. ಅದುವೇ ಜೀವನದ ಸಫಲತೆ. ಯಾವುದೋ ಒಂದು ಹಂತಲ್ಲಿ ದಾರಿ ತಪ್ಪಿದ ತನ್ನ ಪ್ರಜ್ಞೆಯ ಉಪಯೋಗಿಸಿ ಸರಿ ದಾರಿಗೆ ಬಂದು ಮೋಕ್ಷ ಪಡವಲೆ ಸಾಧ್ಯ ಇದ್ದು ಹೇಳ್ವದನ್ನೂ ಭಗವಂತ° ಹೇಳಿದ್ದ°. ಮರಣಾಸನ್ನ ಜೀವಿಯೂ ಕೂಡ ಮೋಕ್ಷವ ಪಡವದೋ, ಸ್ವರ್ಗವ ಪಡವದೋ ಪ್ರಯತ್ನವ ಮಾಡಿರೆ ಘೋರ ನರಕಯಾತೆನೆಂದ ತಪ್ಪುಸಲೆಡಿಗು ಹೇಳ್ವ ಸಾರವ ಈ ಅಧ್ಯಾಯಂದ ಕಂಡುಗೊಂಬಲಕ್ಕು.
ಸದ್ದರ್ಮಪರಾಯಣರಾಗಿಪ್ಪಲೆ ಎಲ್ಲೋರಿಂಗೂ ಜಗದಾಧಾರಮೂರ್ತಿಯಾದ ಆ ಪರಮಾತ್ಮ° ಅನುಗ್ರಹಿಸಲಿ ಹೇದುಗೊಂಡು ಹರೇ ರಾಮ. ]
 
ಮುಂದೆ ಎಂತರ…?    ಬಪ್ಪ ವಾರ ನೋಡುವೋ°.

3 thoughts on “ಗರುಡ ಪುರಾಣ – ಅಧ್ಯಾಯ 09

  1. ಧನ್ಯವಾದಂಗೊ ಭಾವಾ,
    ನಿಂಗಳ ವಿವರಣೆ ತುಂಬಾ ಲಾಯ್ಕಾವುತ್ತು. ಬೆಂಗಳೂರು ಪೇಟೆಲಿ (ಕೆಲವರು) ಭಟ್ಟಕ್ಕಳೂ ಕಮರ್ಶಿಯಲ್ ಆಯಿದವು. ಆರಾರು ತೀರಿ ಹೋದರೆ ಮಾಡೆಕ್ಕಾದ ಶಾಸ್ತ್ರಂಗಳನ್ನೂ ಸರಿಯಾಗಿ ಮಾಡ್ಸಲೆ ಸಮಯ ಇಲ್ಲೆ. ಎಲ್ಲದಕ್ಕೂ ಅರ್ಜೆಂಟು ಮಾಡ್ತವು. ಗುರಿಕ್ಕಾರಂಗಾದರೂ ಗೊಂತಿದ್ದರೆ ಅಲ್ಪ ಸ್ವಲ್ಪ ಶಾಸ್ತ್ರಂಗಳನ್ನಾದರೂ ಹೇಳಿ ಮಾದ್ಸುಗು. ಹರೇ ರಾಮ.(ಆರನ್ನೂ ದೂರುವ ಉದ್ದೇಷಂದ ಬರದ್ದದಲ್ಲ-ಕ್ಷಮಿಸಿ).

  2. ದರ್ಭೆ, ತುಳಸಿ, ಗೋಮಯ,ಸಾಲಿಗ್ರಾಮ ಮತ್ತೆ ಗಂಗಾ ಜಲ ಇತ್ಯಾದಿ ಪೂಜ್ಯ ವಸ್ತುಗಳ ವಿಶಿಷ್ಟತೆಗಳ (ಮರಣ ಕಾಲಲ್ಲಿ) ತುಂಬಾ ಲಾಯಕ್ಕಾಗಿ ವಿವರುಸಿದ್ದಿ. ಆನು ಸಣ್ಣ ಇಪ್ಪಗ ಊರಿಲ್ಲಿ ಆರಾರು ತೀರಿ ಹೋದರೆ ನಾಲಗೆ ಅಡಿಯಂಗೆ ಒಂದು ಸಣ್ಣ ತುಂಡು ಚಿನ್ನವ ಹಾಕುವದು ನೋಡಿದ್ದೆ. ಈ ಅಧ್ಯಾಯವ ಗುರಿಕ್ಕಾರಕ್ಕೊ ಒಂದು (ಅಂತ್ಯಕ್ರಿಯೆ ಸಂಧರ್ಭಂಗಳಲ್ಲಿ) ವಿಶೇಷ ಪಾಠವಾಗಿ ಸ್ವೀಕಾರ ಮಾಡೆಕ್ಕು. ಹರೇ ರಾಮ.

    1. ಹರೇ ರಾಮ ಭಾವ°. ವಾರ ವಾರ ಪ್ರೋತ್ಸಾಹದ, ಚಿಂತನೀಯಕ್ಕೆ ಪೂರಕ ನಿಂಗಳ ಒಪ್ಪ ಜವಾಬ್ದಾರಿಯ ಹೆಚ್ಚುಸುತ್ತು. ಧನ್ಯವಾದಂಗೊ.
      ಚಿನ್ನದ ವಿಷಯ ಮುಂದಾಣ ಅಧ್ಯಾಯಲ್ಲಿ ಬತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×