Oppanna.com

ಗರುಡಪುರಾಣಶ್ರವಣಫಲಮ್

ಬರದೋರು :   ಚೆನ್ನೈ ಬಾವ°    on   13/03/2014    12 ಒಪ್ಪಂಗೊ

ಚೆನ್ನೈ ಬಾವ°

 
ಅಥ ಗರುಡಪುರಾಣಶ್ರವಣಫಲಮ್
 
ಶ್ರೀಭಗವಾನುವಾಚimages
ಇತ್ಯಾಖ್ಯಾತಂ ಮಯಾ ತಾರ್ಕ್ಷ್ಯ ಸರ್ವಮೇವೌರ್ಧ್ವದೇಹಿಕಮ್ ।
ದಶಾಹಾಭ್ಯಂತರೇ ಶ್ರುತ್ವಾ ಸರ್ವಪಾಪೈಃ ಪ್ರಮುಚ್ಯತೇ ॥೦೧॥
ಭಗವಂತ° ಹೇಳಿದ°- ಹೇ ಗರುಡ!, ಹೀಂಗೆ ಎನ್ನಿಂದ ಹೇಳಲ್ಪಟ್ಟ ಎಲ್ಲ ಔರ್ಧ್ವದೇಹಿಕ ವಿಷಯಂಗಳನ್ನೂ ಹತ್ತು ದಿನಂಗಳ ಒಳ ಕೇಳಿರೆ, ಎಲ್ಲ ಪಾಪಂಗಳಿಂದ ಮುಕ್ತಿಯಾವುತ್ತು.
ಇದಂ ಚಾಮುಷ್ಮಿಕಂ ಕರ್ಮ ಪಿತೃಮುಕ್ತಿಪ್ರದಾಯಕಮ್ ।
ಪುತ್ರವಾಂಛಿತದಂ ಚೈವ ಪರತ್ರೇಹ ಸುಖಪ್ರದಮ್ ॥೦೨॥
ಈ ಪರಲೋಕದ ಕರ್ಮವು ಪಿತೃಗೊಕ್ಕೆ ಮುಕ್ತಿಯ ಕೊಡುತ್ತು. ಮಗಂಗೆ ಇಷ್ಟಪಟ್ಟ ಫಲಂಗಳ ನೀಡುತ್ತು ಮತ್ತು ಇಹಪರಲ್ಲಿ ಸುಖವ ನೀಡುತ್ತು.
ಇದಂ ಕರ್ಮ ನ ಕುರ್ವ್ಂತಿ ಯೇ ನಾಸ್ತಿಕನರಾಧಮಾಃ ।
ತೇಷಾಂ ಜಪಮಪೇಯಂ ಸ್ಯಾತ್ಸುರಾತುಲ್ಯಂ ನ ಸಂಶಯಃ ॥೦೩॥
ಏವ ನಾಸ್ತಿಕ ನರಾಧಮರುಗೊ ಈ ಕರ್ಮಂಗಳ ಮಾಡುತ್ತವಿಲ್ಲೆಯೋ, ಅವಕ್ಕೆ ನೀರು ಸಾನ ಸುರೆಯ ರೀತಿಲಿ ಅಪೇಯ (ಕುಡಿವಲಾಗದ್ದು) ಆವ್ತು. ಇದರ್ಲಿ ಸಂಶಯ ಇಲ್ಲೆ.
ದೇವತಾಃ ಪಿತರಶ್ಚೈವ ನೈವ ಪಶ್ಯಂತಿ ತಗ್ದೃಹಮ್ ।
ಭವಂತಿ ತೇಷಾಂ ಕೋಪೇನ ಪುತ್ರಾಃ ಪೌತ್ರಾಶ್ಚ ದುರ್ಗತಾಃ ॥೦೪॥
ದೇವತೆಗೊ ಮತ್ತೆ ಪಿತೃಗೊ ಆ ಮನೆಯ ನೋಡ್ತವೂ ಕೂಡ ಇಲ್ಲೆ. ಅವರ ಕೋಪಂದ ಮಕ್ಕೊ ಮತ್ತೆ ಪುಳ್ಳಿಯಕ್ಕೊ ದುರ್ಗತಿಯ ಹೊಂದುತ್ತವು.
ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾಶ್ಚೈವೇತರೇsಪಿ ಚ ।
ತೇ ಚಾಂಡಾಲಸಮಾ ಜ್ಞೇಯಾಃ ಸರ್ವೇ ಪ್ರೇತಕ್ರಿಯಾಂ ವಿನಾ ॥೦೫॥
ಬ್ರಾಹ್ಮರು, ಕ್ಷತ್ರಿಯರು, ವೈಶ್ಯರು, ಶೂದ್ರರು ಮತ್ತೆ ಇತರರೂ ಸಾನ ಪ್ರೇತಕಾರ್ಯಂಗಳ ಮಾಡದ್ದೆ ಇದ್ದರೆ ಅವೆಲ್ಲೊರೂ ಚಾಂಡಾಲರಿಂಗೆ ಸಮಾನ ಹೇದು ತಿಳಿಯೆಕು.
ಪ್ರೇತಕಲ್ಪಮಿದಂ ಪುಣ್ಯಂ ಶೃಣೋತಿ ಶ್ರಾವಯೇಚ್ಚ ಯಃ ।
ಉಭೌ ತೌ ಪಾಪನಿರ್ಮುಕ್ತೌ ದುರ್ಗತಿಂ ನೈವ ಗಚ್ಛತಃ ॥೦೬॥
ಈ ಪುಣ್ಯಕರವಾದ ಪ್ರೇತಕಲ್ಪವ ಕೇಳುವವ°, ಕೇಳುಸುವವ° ಇಬ್ರುದೆ ತಮ್ಮ ಪಾಪಂಗಳಿಂದ ಬಿಡುಗಡೆ ಹೊಂದುತ್ತವಲ್ಲದೆ, ಎಂದಿಂಗೂ ದುರ್ಗತಿಯ ಪಡೆತ್ತವಿಲ್ಲೆ.
ಮಾತಾಪಿತ್ರೋಶ್ಚ ಮರಣೇ ಸೌಪರ್ಣಂ ಶೃಣುತೇ ತು ಯಃ ।
ಪಿತರೌ ಮುಕ್ತಿಮಾಪನ್ನೌ ಸುತಃ ಸಂತತಿಮಾನ್ಭವೇತ್ ॥೦೭॥
ಅಬ್ಬೆ-ಅಪ್ಪ° ಮರಣ ಆದಪ್ಪಗ ಗರುಡಪುರಾಣವ ಏವ ಮಗ° ಕೇಳುತ್ತನೋ, ಅವನ ಮಾತಾ-ಪಿತೃಗೊ ಮುಕ್ತಿಯ ಪಡೆತ್ತವು, ಮಗ° ಸಂತಾನ ಭಾಗ್ಯವ ಪಡೆತ್ತ°.
ನ ಶ್ರುತಂ ಗಾರುಡಂ ಯೇನ ಗಯಾಶ್ರಾದ್ಧಂ ಚ ನೋ ಕೃತಮ್ ।
ವೃಷೋತ್ಸರ್ಗಃ ಕೃತೋ ನೈವ ನ ಚ ಮಾಸಿಕವಾರ್ಷಿಕೇ ॥೦೮॥
ಗರುಡಪುರಾಣವ ಕೇಳದ್ದೆ ಇಪ್ಪವ°, ಗಯಾಶ್ರಾದ್ಧವ, ವೃಷೋತ್ಸರ್ಗವ ಮತ್ತೆ ಮಾಸಿಕ, ವಾರ್ಷಿಕ ಶ್ರಾದ್ಧಂಗಳ ಮಾಡದ್ದೆ ಇಪ್ಪವ°
ಸ ಕಥಂ ಕಥ್ಯತೇ ಪುತ್ರಃ ಕಥಂ ಮುಚ್ಯೇದೃಣತ್ರಯಾತ್ ।
ಮಾತರಂ ಪಿತರಂ ಚೈವ ಕಥಂ ತಾರಯಿತುಂ ಕ್ಷಮಃ ॥೦೯॥
ಅವ° ಹೇಂಗೆ ಮಗ° (ಪುತ್ರ°) ಹೇದು ಕರೆಯಲ್ಪಡುತ್ತ°?  ಹೇಂಗೆ ಮೂರು ಋಣಂಗಳಿಂದ ಮುಕ್ತನಾವುತ್ತ°?, ಮಾತಾಪಿತೃಗಳ ದಾಂಟುಸಲೆ ಹೇಂಗೆ ಸಮರ್ಥನಾವುತ್ತ°?
ತಸ್ಮಾತ್ಸರ್ವಪ್ರಯತ್ನೇನ ಶ್ರೋತವ್ಯಂ ಗಾರುಡಂ ಕಿಲ ।
ಧರ್ಮಾರ್ಥಕಾಮಮೋಕ್ಷಾಣಾಂ ದಾಯಕಂ ದುಃಖನಾಶನಮ್ ॥೧೦॥
ಹಾಂಗಾಗಿ ಎಲ್ಲ ರೀತಿಯ ಪ್ರಯತ್ನಂಗಳಿಂದಲೂ ಗರುಡಪುರಾಣವ ಕೇಳೆಕು. ಅದು ಧರ್ಮ, ಅರ್ಥ, ಕಾಮ, ಮೋಕ್ಷಂಗಳ ಕೊಡುವಂತಾದ್ದೂ, ದುಃಖವ ನಾಶಮಾಡುವಂತಾದ್ದೂ ಆಗಿದ್ದು.
ಪುರಾಣಂ ಗಾರುಡಂ ಪುಣ್ಯಂ ಪವಿತ್ರಂ ಪಾಪನಾಶನಮ್ ।
ಶೃಣ್ವತಾಂ ಕಾಮನಾಪೂರಂ ಶ್ರೋತವ್ಯಂ ಸರ್ವದೈವ ಹಿ ॥೧೧॥
ಈ ಗರುಡಪುರಾಣವು ಪುಣ್ಯಕರವೂ, ಪವಿತ್ರವೂ, ಪಾಪನಾಶಕವೂ ಆಗಿದ್ದು. ಇದರ ಕೇಳಿದವರ ಇಚ್ಛೆಗೊ ಪೂರೈಸಲ್ಪಡುತ್ತು. ಹಾಂಗಾಗಿ ಇದರ ಏವತ್ತೂ ಕೇಳೆಕು.
ಬ್ರಾಹ್ಮಣೋ ಲಭತೇ ವಿದ್ಯಾಂ ಕ್ಷತ್ರಿಯಃ ಪೃಥಿವೀಂ ಲಭೇತ್ ।
ವೈಶ್ಯೋ ಧನಿಕತಾಮೇತಿ ಶೂದ್ರಃ ಶುಧ್ಯತಿ ಕರ್ಮಣಿ ॥೧೨॥
ಬ್ರಾಹ್ಮಣಂಗೆ ವಿದ್ಯಾಪ್ರಾಪ್ತಿ, ಕ್ಷತ್ರಿಯಂಗೆ ಭೂಮಿಪ್ರಾಪ್ತಿ, ವೈಶ್ಯಂಗೆ ಧನಪ್ರಾಪ್ತಿ, ಶೂದ್ರ° ಕರ್ಮಂಗಳಲ್ಲಿ ಶುದ್ಧನಾವುತ್ತ°.
ಶ್ರುತ್ವಾ ದಾನಾನಿ ದೇಯಾನಿ ವಾಚಕಾಯಾಖಿಲಾನಿ ಚ ।
ಪೂರ್ವೋಕ್ತಶಯನಾದೀನಿ ನಾನ್ಯಥಾ ಸಫಲಂ ಭವೇತ್ ॥೧೩॥
ಗರುಡಪುರಾಣವ ಕೇಳಿಕ್ಕಿ, ವಾಚಕಂಗೆ ಮದಲೆ ಹೇದ ಶಯನಾದಿ ಎಲ್ಲ ದಾನಂಗಳ ಕೊಡೆಕು. ಇಲ್ಲದ್ರೆ ಕೇಳಿಯೂ ಫಲ ಇಲ್ಲೆ.
ಪುರಾಣಂ ಪೂಜಯೇತ್ಪೂರ್ವಂ ವಾಚಕಂ ತದನಂತರಮ್ ।
ವಸ್ತ್ರಾಲಂಕಾರಗೋದಾನೈರ್ದಕ್ಶಿಣಾಭಿಶ್ಚ ಸಾದರಮ್ ॥೧೪॥
ಮದಾಲು ಪುರಾಣವ ಪೂಜೆ ಮಾಡೆಕು. ಮತ್ತೆ ವಾಚಕಂಗೆ ವಸ್ತ್ರ, ಅಲಂಕಾರ, ಗೋದಾನ, ದಕ್ಷಿಣೆ ಇತ್ಯಾದಿಗಳಿಂದ ಆದರಪೂರ್ವಕವಾಗಿ ಪೂಜೆ ಮಾಡೆಕು.
ಅನ್ನೈಶ್ಚ ಹೇಮದಾನೈಶ್ಚ ಭೂಮಿದಾನೈಶ್ಚ ಭೂರಿಭಿಃ ।
ಪೂಜಯೇದ್ವಾಚಕಂ ಭಕ್ತ್ಯಾ ಬಹುಪುಣ್ಯಫಲಾಪ್ತಯೇ ॥೧೫॥
ಬಹು ಪುಣ್ಯಫಲಂಗಳ ಪಡವಲೆ ಅನ್ನದಾನ, ಸುವರ್ಣದಾನ, ಮಹತ್ವದ ಭೂದಾನಂಗಳಿಂದ ವಾಚಕನ ಭಕ್ತಿಂದ ಪೂಜೆ ಮಾಡೆಕು.
ವಾಚಕಸ್ಯಾರ್ಚನೇನೈವ ಪೂಜಿತೋsಹಂ ನ ಸಂಶಯಃ ।
ಸಂತುಷ್ಟೇ ತುಷ್ಟಿತಾಂ ಯಾಮಿ ವಾಚಕೇ ನಾತ್ರ ಸಂಶಯಃ ॥೧೬॥
ವಾಚಕನ ಪೂಜೆಂದಲೇ ಆನೂ ಪೂಜಿತನಾವುತ್ತೆ°. ಇದರ್ಲಿ ಸಂಶಯವೇ ಇಲ್ಲೆ. ವಾಚಕ° ಸಂತುಷ್ಟ° ಆದರೆ ಆನೂ ಸಂತುಷ್ಟ° ಆವುತ್ತೆ. ಇದರ್ಲಿ ಸಂಶಯವೇ ಇಲ್ಲೆ.
 
ಇತಿ ಶ್ರೀ ಗರುಡಪುರಾಣೇ ಶ್ರವಣಫಲಮ್ ॥
ಇಲ್ಲಿಗೆ ಗರುಡಪುರಾಣಲ್ಲಿ ಶ್ರವಣಫಲ ಹೇಳ್ವ ಭಾಗ ಮುಗುದತ್ತು.
 
ಗದ್ಯರೂಪಲ್ಲಿ –
ಗರುಡಪುರಾಣದ ಶ್ರವಣ ಫಲ –
ಶ್ರೀ ಭಗವಂತ° ಗರುಡಂಗೆ ಹೇಳಿದ° – ಹೇ ವೈನತೇಯ, ಗರುಡ!, ಈ ಪ್ರಕಾರ ಆನು ನಿನಗೆ ಔರ್ಧ್ವದೈಹಿಕ ಕ್ರಿಯೆಗಳ ವಿಷಯಲ್ಲಿ ಎಲ್ಲವನ್ನೂ ಹೇಳಿದೆ. ಮರಣಸೂತಕಲ್ಲಿ ಹತ್ತು ದಿನಂದೊಳ ಇದರ ಶ್ರವಣ ಮಾಡಿದ ವ್ಯಕ್ತಿ ಸಮಸ್ತಪಾಪಂಗಳಿಂದ ಮುಕ್ತನಾಗಿ ಹೋವ್ತ°. ಈ ಪರಲೋಕಸಂಬಧಿ ಕರ್ಮ ಪಿತೃಗೊಕ್ಕೆ ಮುಕ್ತಿಪ್ರದಾಯಕವಾಗಿದ್ದು, ಹಾಂಗೂ ಮಕ್ಕೊಗೆ ವಾಂಛಿತ ಫಲಂಗಳ ನೀಡಿ ಸುಖಪ್ರದಾನಿಸುವಂಥದ್ದಾಗಿದ್ದು.
ಏವ ನಾಸ್ತಿಕ° ಅಥವಾ ವ್ಯಕ್ತಿ, ಪ್ರೇತದ ಈ ಔರ್ಧ್ವದೈಹಿಕ ಕ್ರಿಯೆಗಳ ಮಾಡ್ತನಿಲ್ಲೆಯೋ, ಅವಂಗೆ ನೀರು ಸುರೆಯ ಸಮಾನ ಅಪೇಯವಾವ್ತು. ಇದರ್ಲಿ ಏವ ಸಂಶಯವೂ ಇಲ್ಲೆ. ದೇವತೆ ಮತ್ತೆ ಪಿತೃಗಣ ಅವನ ಮನೆಹೊಡೆಂಗೇ ನೋಡ್ತವಿಲ್ಲೆ(ಅವರ ಕೃಪಾದೃಷ್ಟಿ ಇವರ ಮೇಗೆ ಇರ್ತಿಲ್ಲೆ). ಮತ್ತೆ, ಅವರ ಕೋಪಂದ ಪುತ್ರ-ಪೌತ್ರಾದಿಗೊ ಕೂಡ ದುರ್ಗತಿಯ ಹೊಂದುತ್ತವು. ಪ್ರೇತಕ್ರಿಯೆಯ ಮಾಡದ್ದ ಬ್ರಾಹ್ಮಣ°, ಕ್ಷತ್ರಿಯ°, ವೈಶ್ಯ°, ಶೂದ್ರ ಮತ್ತೆ ಇತರ ಜನಂಗಳೂ ಚಾಂಡಾಲಂಗೆ ಸಮಾನ ಹೇದು ತಿಳಿಯೆಕು.
ಆರು ಈ ಪುಣ್ಯಪ್ರದಾಯಕ ಗರುಡಪುರಾಣ ಪ್ರೇತಕಲ್ಪವ ಶ್ರವಣ ಮಾಡುತ್ತವೋ, ಶ್ರವಣ ಮಾಡುಸುತ್ತವೋ – ಅವಿಬ್ರೂ  ಸಕಲ ಪಾಪಂಗಳಿಂದ ಮುಕ್ತರಾಗಿ, ದುರ್ಗತಿಯ ಹೊಂದುತ್ತವಿಲ್ಲೆ. ಅಬ್ಬೆ-ಅಪ್ಪನ ಮರಣಲ್ಲಿ ಏವ ಪುತ್ರ° ಗರುಡಪುರಾಣವ ಶ್ರವಣ ಮಾಡುತ್ತನೋ, ಅವನ ಅಬ್ಬೆ-ಅಪ್ಪಂಗೆ ಮುಕ್ತಿಪ್ರಾಪ್ತಿ ಆವುತ್ತು, ಮಗಂಗೆ ಸಂತಾನ ಪ್ರಾಪ್ತಿ ಆವುತ್ತು .  ಅಬ್ಬೆ-ಅಪ್ಪನ ಮರಣದ ಸಮಯಲ್ಲಿ ಗರುಡಪುರಾಣವ ಕೇಳದ್ದೆ ಇಪ್ಪ ಮಗ°, ಗಯಾಶ್ರಾದ್ಧವ, ವೃಷೋತ್ಸರ್ಗವ ಮತ್ತೆ ಮಾಸಿಕ, ವಾರ್ಷಿಕ ಶ್ರಾದ್ಧಂಗಳ ಮಾಡದ್ದೆ ಇಪ್ಪವ° ಸತ್ಪುತ್ರ° ಹೇದು ಹೇಳ್ಸುಸಲೆ ಹೇಂಗೆ ಯೋಗ್ಯನಾವುತ್ತ°? ಅಂಥ ಮಗ° ಅಬ್ಬೆ-ಅಪ್ಪನ ಉದ್ಧರುಸಲೆ ಹೇಂಗೆ ಸಮರ್ಥ° ಆವುತ್ತ°?
ಹಾಂಗಾಗಿ ಸರ್ವಪ್ರಯತ್ನಂಗಳಿಂದ ಧರ್ಮ-ಅರ್ಥ-ಕಾಮ-ಮೋಕ್ಷಪ್ರದಾಯಕರೂಪಿ ಪುರುಷಾರ್ಥ ಚತುಷ್ಟಯವ ನೀಡುವ ಹಾಂಗೂ ಸರ್ವವಿಧ ದುಃಖಂಗಳ ನಾಶಮಾಡುವ ಮೋಕ್ಷರೂಪಿ ಗರುಡಪುರಾಣವ ಅಗತ್ಯ ಶ್ರವಣ ಮಾಡೆಕು. ಈ ಗರುಡಪುರಾಣ ಮಹಾಪುಣ್ಯಪ್ರದಾಯಕ, ಪವಿತ್ರ ಹಾಂಗೂ ಪಾಪನಾಶಕ ಆಗಿದ್ದು. ಇದರ ಶ್ರವಣ ಮಾಡುತ್ತವವರ ಕಾಮನೆಗೊ ಪೂರ್ಣಗೊಳಿಸಲ್ಪಡುತ್ತು. ಹಾಂಗಾಗಿ ಇದರ ಸದಾ ಶ್ರವಣ ಮಾಡೆಕು. ಈ ಪುರಾಣದ ಶ್ರವಣಂದ ಬ್ರಾಹ್ಮಣ ವಿದ್ಯೆಯ ಪ್ರಾಪ್ತಿ ಹೊಂದುತ್ತ°, ಕ್ಷತ್ರಿಯ ಪೃಥ್ವಿಯ ಪ್ರಾಪ್ತಿ ಹೊಂದುತ್ತ°, ವೈಶ್ಯ ಧನವಂತನಾವುತ್ತ°, ಮತ್ತೆ ಅನ್ಯರು ಪಾಪಕೃತ್ಯಂಗಳಿಂದ ಶುದ್ಧರಾಗಿ ಹೋವ್ತವು.
ಈ ಗರುಡಪುರಾಣವ ಶ್ರವಣ ಮಾಡಿ, ಶ್ರವಣ ಮಾಡುಸುವವು ಆಚಾರ್ಯಂಗೆ ಇದರ್ಲಿ ಈ ಮದಲೇ ವರ್ಣಿಸಿಪ್ಪ ಶಯ್ಯಾದಾನಾದಿ ದಾನಂಗಳ ಪೂರ್ಣದಾನ ಮಾಡೆಕು. ಅನ್ಯಥಾ ಇದರ ಶ್ರವಣ ಫಲದಾಯಕ ಆವುತ್ತಿಲ್ಲೆ. ಮದಾಲು, ಪುರಾಣಕ್ಕೆ ಪೂಜೆ ಮಾಡೆಕು, ಮತ್ತೆ ವಸ್ತ್ರ-ಅಲಂಕಾರ-ಗೋದಾನ-ದಕ್ಷಿಣಾದಿಗಳ ಆಚಾರ್ಯಂಗೆ/ವಾಚಕಂಗೆ ಕೊಟ್ಟು, ಆದರಪೂರ್ವಕ ವಾಚಕನ ಪೂಜೆಯ ಮಾಡೆಕು. ವಾಚಕನ ಪೂಜೆಂದಲೇ ಭಗವಂತನ ಪೂಜೆಯೂ ಆಗಿಹೋವ್ತು. ಇದರ್ಲಿ ಸಂಶಯ ಇಲ್ಲೆ. ವಾಚಕ° ಸಂತುಷ್ಟ° ಆದರೆ ಭಗವಂತನೂ ಸಂತುಷ್ಟ° ಆವುತ್ತ°. ಇದರ್ಲಿಯೂ ಏವ ಸಂಶಯವೂ ಇಲ್ಲೆ.
ಈ ಪ್ರಕಾರವಾಗಿ ಹೇಳಿದಲ್ಯಂಗೆ ಗರುಡಪುರಾಣದ ಶ್ರವಣಫಲ ಭಾಗ ಸಂಪೂರ್ಣ ಆತು.
 
[ಚಿಂತನೀಯಾ –
ಪಾಪ ಪುಣ್ಯಂಗೊ ಕಣ್ಣಿಂಗೆ ಕಾಂಬಲೆಡಿಯದ್ದ ಮಹತ್ತರ ವಿಷಯಂಗೊ. ಕಣ್ಣಿಂಗೆ ಕಾಂಬಲೆಡಿಯದ್ದರೂ ಬುದ್ಧಿಪೂರ್ವಕವಾಗಿ ವಿವೇಕಯುಕ್ತವಾಗಿ ಗಮನಿಸಿರೆ ಅದರ ಅನುಭವುಶಲೆ ಎಡಿಗು. ಪ್ರಾಪಂಚಿಕ ಪ್ರಕೃತಿ ಆಕರ್ಷಣೆಲಿ ತಲ್ಲೀನನಾಗಿಪ್ಪವಂಗೆ ಎಂದೂ ದುಃಖ ಮಾತ್ರವೇ ಅನುಭವುಸಲೆ ಎಡಿಗಪ್ಪದು. ಪರಮಾತ್ಮನಲ್ಲಿ ಮನಸ್ಸು ಕೇಂದ್ರೀಕರಿಸಿದವಂಗೆ ಅವನ ಕಾರುಣ್ಯಕೃಪಾಕಟಾಕ್ಷಂದ ಸುಖವ ಅನುಭವುಸಲೆ ಎಡಿಗು.
ಭವಸಾಗರ ಕ್ಲೇಶವ ತೊಳವ ಮಹಾಪುಣ್ಯಪ್ರದಾಯಕ ಈ ಗರುಡಪುರಾಣಂದ ಪಠಣ, ಶ್ರವಣಂದ ಇಹ-ಪರ ಶ್ರೇಯಸ್ಸಾವ್ತು ಹೇಳಿ ಭಗವಂತನೇ ಗರುಡನ ಮೂಲಕ ನವಗೆ ಹೇಳಿದ್ದ°. ವ್ಯಕ್ತಿಯ ವಾಂಛಿತಫಲವ ಪೂರೈಸುವ ಈ ಗರುಡಪುರಾಣದ ಪ್ರಭಾವ ಓದುಗನ/ಕೇಳುಗನ ಮನೋಧರ್ಮವ ಹೊಂದಿಯೊಂಡಿದ್ದು ಹೇಳ್ತರ ಎಂದಿಂಗೂ ಮರವಲಾಗ. ಪಾಪ ಪುಣ್ಯಂಗೊ ನಮ್ಮ ಕರ್ಮವ ಅವಲಂಬಿಸಿಪ್ಪದು ಆದರೆ ಭಗವಂತ° ನೀಡುವ ಸುಖ ನಮ್ಮ ಯೋಗ್ಯತೆಯ ಹೊಂದಿಗೊಂಡಿಪ್ಪದು. ನಮ್ಮ ಮಟ್ಟಿಂಗೆ ನಾವು ಮಹಾಯೋಗ್ಯ° ಹೇದು ಎನಿಸಿಗೊಂಡಿದ್ದರೂ ಭಗವಂತನ ದೃಷ್ಟಿಲಿ ನಮ್ಮ ಯೋಗ್ಯತೆ ಎಂತರ ಹೇಳ್ವದು ಮುಖ್ಯ. ದಾಂಭಿಕ ಭಕ್ತಿ ಭಗವಂತನ ಅವಗಾಹನೆಗೆ ಬಂದರೂ ಅದು ಲೆಕ್ಕಕ್ಕೆ ಸೇರ್ಸಿಗೊಳ್ಳುತ್ತನಿಲ್ಲೆ. ಹಾಂಗಾಗಿ ಫಲಪ್ರದಾನ ಸಂಪೂರ್ಣವಾಗಿ ವ್ಯಕ್ತಿಯ ಅಧ್ಯಾತ್ಮ ವ್ಯಕ್ತಿತ್ವವ ಹೊಂದಿಗೊಂಡಿದ್ದು ಹೇಳ್ವದರ ಮರವಲಾಗ. 
ಭಕ್ತಿ ಜ್ಞಾನ ವೈರಾಗ್ಯ ಪ್ರದಾಯಕವಾದ ಮಹಾಪುಣ್ಯಕರ ಈ ಗರುಡಪುರಾಣ ಶ್ರವಣ ಎಲ್ಲೋರಿಂಗೂ ಸದ್ಬುದ್ಧಿಯ, ಸತ್ಚಿಂತನೆಯ ಪ್ರಚೋದಿಸಲಿ ಹೇದು ಈ ಭಾಗಕ್ಕೆ ಹರೇ ರಾಮ.]  
 
ಪರಿಸಮಾಪ್ತಿ
ಶಾಸ್ತ್ರಂಗೊ ಪುರಾಣಂಗೊ ಗ್ರಂಥಂಗೊ ನವಗೆಲ್ಲ ದಾರಿದೀಪ ಆಗಿಪ್ಪದು. ಅದು ಅಂತೇ ಮನೆಲಿ ಕವಾಟಿಲ್ಲಿಯೋ, ಪೂಜಾಗೃಹಲ್ಲಿಯೋ ಮಡಿಕ್ಕೊಂಡಿದ್ದರೆ ಅದರಿಂದ ಎಂತ ಪ್ರಭಾವವೂ ಉಂಟಾಗ. ಅದರ ನಿರಂತರ ಪಠಣ, ಅಧ್ಯಯನ, ಚಿಂತನ, ಹಾಂಗೇ ಒಟ್ಟಿಂಗೆ ಅನುಷ್ಠಾನವೂ ಆಯೆಕು. ಅಂಬಗಷ್ಟೇ ಅದರ ಬಗ್ಗೆ ನವಗಿಪ್ಪ ಶ್ರದ್ಧಾಭಕ್ತಿಯ ಸಾರ್ಥಕತೆ ಕಾಂಬಲೆಡಿಗು. ಭಗವಂತ° ಮದಲೇ ಇಲ್ಲಿ ಹೇದಿಪ್ಪಾಂಗೆ ಶಾಸ್ತ್ರಲ್ಲಿ ಹೇದಿಪ್ಪದು ಒಂದು, ಜನಂಗೊ ಅರ್ಥಮಾಡಿಗೊಂಬದೇ ಇನ್ನೊಂದು. ಹಾಂಗಾಗಿ ತಥಾಕಲ್ಪಿತ ವ್ಯಾಖ್ಯಾನಂಗಳಿಂದ ಈ ಕಾಲಲ್ಲಿ ಶಾಸ್ತ್ರ-ಪುರಾಣ-ಗ್ರಂಥಂಗಳ ಅಪಮೌಲ್ಯ ಆವ್ತಾ ಇದ್ದು. ಅನೇಕ ಶಾಸ್ತ್ರಂಗೊ ಇದ್ದು, ಅದರೆಲ್ಲ ಓದಿ, ಅರ್ತು, ಅದರಾಂಗೇ ನಡಕ್ಕೊಂಬಲೆ ಪ್ರಯತ್ನುಸುವದು ಎಡಿಗಾಗದ್ದ ಮಾತು. ಹಾಂಗಾಗಿ ಭಗವಂತನೇ ಹೇದ್ದದು- ಶಾಸ್ತ್ರಂಗಳ ಓದಿಕ್ಕಿ ಶಾಸ್ತ್ರಾರ್ಥವ ಶ್ರದ್ಧಾಭಕ್ತಿಲಿ ತೆಕ್ಕೊಂಡು ಜೀವನಲ್ಲಿ ಪಾಲುಸೆಕು. ಅದರಿಂದ ಖಂಡಿತಾ ಶ್ರೇಯಸ್ಸಾವ್ತು. ಸದ್ಗುರುವಿನ ಕೃಪಾಕಟಾಕ್ಷಕ್ಕೆ ಸಿಕ್ಕದ್ದ ಕುತರ್ಕವಾದಿಗೊಕ್ಕೆ ಶಾಸ್ತ್ರಂಗೊ ಎಂದಿಂಗೂ ಕನಸಿನ ಗೆಂಟೇ ಅಕ್ಕಷ್ಟೆ.
ಗರುಡಪುರಾಣದ ಮಹತ್ವ ತಿಳ್ಕೊಂಡು, ಅದು ಬರೇ ಸೂತಕದ ಮನಗೆ ಮಾಂತ್ರ ಸೀಮಿತವಾಗದ್ದೆ, ಎಲ್ಲದಿಕ್ಕೆ ಪ್ರವಚನ ಶ್ರವಣ ಆಗ್ಯೊಂಡಿರಲಿ, ನಿರಂತರ ಪಠಣಂದ ನಮ್ಮ ಬದುಕಿನ ಧ್ಯೇಯ ಮತ್ತೆ ಗತಿಯೇ ಬದಲಾಗಿ ಜನಂಗೊ ಮನುಷ್ಯತ್ವವ ಇನ್ನಷ್ಟು ಹೆಚ್ಚಿಗೆ ಬೆಳೆಶಿ ಯೋಗ್ಯರಪ್ಪಲೆಡಿಗು ಹೇದು ಸದಾಶಯ.
ಗರುಡಪುರಾಣಲ್ಲಿ ಎಂತ ಹೇಳಿದ್ದು ಹೇಳ್ವದರ ತಿಳ್ಕೊಂಬ ಉದ್ದೇಶಂದ ಹೆರಟ ಈ ಎನ್ನ ಕಾರ್ಯಕ್ಕೆ ನಮ್ಮ ಬೈಲು ಪ್ರೋತ್ಸಾಹ ಕೊಟ್ಟದಕ್ಕೆ ಬೈಲ ಗುರಿಕ್ಕಾರ್ರ ಸಹಿತ ಸಮಸ್ತ ಓದುಗರಿಂಗೆ, ಒಪ್ಪ ಕೊಟ್ಟುಗೊಂಡು ಪ್ರೋತ್ಸಾಹಿಸಿದ ಎಲ್ಲ ಬಂಧುಗೊಕ್ಕೂ ಅನಂತಾನಂತ ಧನ್ಯವಾದಂಗೊ.
ಇಲ್ಲಿ ಬರವಲೆ ಆಧಾರವಾಗಿ ಆನು ತೆಕ್ಕೊಂಡ ಹಿರಿಯ ಮಹನೀಯರುಗಳ ಕೃತಿಗೊ – ಅ) ಕುಳಮರ್ವ ವೆಂಕಪ್ಪ ಭಟ್ಟರ – ಪುನರ್ಜನ್ಮ – ಮರಣೋತ್ತರ ಜೀವನ.  ಆ) ಡಾ॥ ಆರ್. ಸೀತಾಲಕ್ಷಿ ಬೆಂಗಳೂರು ಪ್ರಕಾಶಿತ ಗರುಡಪುರಾಣ- ಸಾಯಿಬೋಧಾಮೃತಾಗರ, ಇ) ಶ್ರೀನಿಧಿ ಪಬ್ಲಿಕೇಷನ್ಸ್ ನವರ ಸಟೀಕ ಗರುಡಪುರಾಣ – ಈ ಪುಸ್ತಕಂಗೊಕ್ಕೆ, ಲೇಖಕರಿಂಗೆ, ಪ್ರಕಾಶಕರಿಂಗೆ ನಮೋ ನಮಃ .
ನಮ್ಮ ಆರಾಧ್ಯ ಗುರು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಪರಂಪರಾ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಚರಣಾರವಿಂದಂಗೊಕ್ಕೆ ನಮೋ ನಮಃ .
ಎನ್ನ ಅಬ್ಬೆ ಅಪ್ಪನ ನೆಂಪಿಸಿಗೊಂಡು, ಶ್ರೀ ಗುರುವಿನ ಮನಸ್ಸಿಲ್ಲಿ ಧ್ಯಾನಿಸಿಗೊಂಡು, ಭಗವಂತನ ಮಹಿಮೆ ಹೇದು ಗ್ರೇಶಿಗೊಂಡು, ಭಗವತ್ಕಾರ್ಯ ಹೇದು ತಿಳ್ಕೊಂಡು ಬರಕ್ಕೊಂಡು ಬಂದ ಈ ಗರುಡಪುರಾಣ ಶುದ್ದಿಯ ಬೈಲಿನ ಮೂಲಕ ನಿಂಗೊ ಎಲ್ಲೋರ ಎದುರೆ ಶ್ರೀ ಕೃಷ್ಣಾರ್ಪಣಮಸ್ತು ಹೇದುಗೊಂಡು ಭಗವಂತ° ಶ್ರೀಮನ್ನಾರಯಣನ ಪಾದಕ್ಕೆ ಅರ್ಪಣೆ.
ಶಾಂತಿಮಂತ್ರಃ –
ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯೇಣ ಮಾರ್ಗೇಣ ಮಹೀಂ ಮಹೀಶಾಃ ।
ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ ಲೋಕಾಃ ಸಮಸ್ತಾಃ ಸುಖಿನೋ ಭವಂತು ॥
(ದೇಶಲ್ಲಿ ರಾಜರುಗೊ ನ್ಯಾಯನೀತಿಂದ ರಾಜ್ಯಭಾರಮಾಡುತ್ತಿರಲಿ,  ಎಲ್ಲ ಪ್ರಜಗೊ ಕ್ಷೇಮಂದ ಇರಲಿ, ದೇಶದ ಸಂಪತ್ತುಗಳಾದ ಗೋವುಗೊಕ್ಕೂ, ಬ್ರಾಹ್ಮಣರಿಂಗೂ ಶುಭವಾಗಿರಲಿ, ಸಮಸ್ತ ಲೋಕವಾಸಿಗೊ ಸುಖಿಗಳಾಗಲಿ.)
ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ ।
ದೇಶೋsಯಂ ಕ್ಷೋಭ ರಹಿತಃ ಸಜ್ಜನಾಃ ಸಂತು ನಿರ್ಭಯಾಃ ॥
(ಕಾಲಕಾಲಕ್ಕೆ ಮಳೆಸುರುದು ಭೂಮಿ ಸಸ್ಯಶ್ಯಾಮಲೆಯಾಗಿ ಶೋಭಿಸಲಿ. ಈ ದೇಶದೆಲ್ಲಿಯೂ ಕ್ಷೋಭೆ ಇಲ್ಲದ್ದೆ ಜನಂಗೊ ಸಜ್ಜನರಾಗಿ ನಿರ್ಭೀತಿಂದ ಇಪ್ಪಂತಾಗಲಿ.)
ಅಪುತ್ರಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ ।
ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್ ॥
(ಮಕ್ಕೊ ಇಲ್ಲದ್ದವಕ್ಕೆ ಮಕ್ಕಳಾಗಿ, ಮಕ್ಕೊಗೆ ಮತ್ತೆ ಮಕ್ಕೊ ಉಂಟಾಗಲಿ. ನಿರ್ಧನರು ಧನವಂತರಾಗಿ ನೂರು ವರ್ಷ ಬಾಳುವಂತಾಗಲಿ.)
ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ ।
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿದ್ ದುಃಖಭಾಗ್ಭವೇತ್ ॥
(ಸಮಸ್ತ ಜನಂಗೊ ಸುಖಿಗಳಾಗಲಿ, ಸಮಸ್ತರೂ ಅನಾಯಾಸರಾಗಿಲಿ, ಯಾವುದೇ ದುಃಖಭಾಜನರಾಗದ್ದೆ ಎಲ್ಲೋರು ಕ್ಷೇಮವಾಗಿರಲಿ.)
ಗಾವೋಮೇ ಪುರತಃ ಸಂತು ಗಾವೋಮೇ ಸಂತು ಪೃಷ್ಠತಃ ।
ಗಾವೋಮೇ ಹೃದಯೇ ನಿತ್ಯಂ ಗವಾಂ ಮಧ್ಯೇ ವಸಾಮ್ಯಹಮ್ ॥
(ಎನ್ನ ಮುಂದೆ ಹಿಂದೆ ಮತ್ತೆ ಹೃದಯಲ್ಲಿಯೂ ಗೋಮಾತೆ ನೆಲೆಸಿ ಗೋವುಗಳ ಮಧ್ಯಲ್ಲೇ ಎನ್ನ ಉಸಿರು ವಾಸವಾಗಲಿ.)
ಓಂ ಅಸತೋ ಮಾ ಸದ್ಗಮಯ । ತಮಸೋ ಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂಗಮಯ । ಓಂ ಶಾಂತಿಃ ಶಾಂತಿಃ ಶಾಂತಿಃ ॥೦೪॥
(ಹೇ ಪರಮಾತ್ಮ, ಅಸತ್ಯಂದ ಸತ್ಯಕ್ಕೆ , ಅಂಧಕಾರಂದ ಪ್ರಕಾಶಕ್ಕೆ, ಮೃತ್ಯುವಿಂದ ಅಮೃತತ್ವಕ್ಕೆ ಎನ್ನ ಕರಕ್ಕೊಂಡು ಹೋಗು. ಎಲ್ಲ ದಿಕ್ಕೆ ಶಾಂತಿಯಾಗಲಿ.)
ಓಂ ಸಹ ನಾವವತು  ಸಹ ನೌ ಭುನಕ್ತು ಸಹ ವೀರ್ಯಂ ಕರವಾವಹೈ ।
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ ॥ ಓಂ ಶಾಂತಿಃ ಶಾಂತಿಃ ಶಾಂತಿಃ ॥೦೫॥
(ನಮ್ಮಿಬ್ಬರನ್ನೂ ತೇಜೋವೀರ್ಯಸಹಾನುಭೂತಿಗಳಿಂದ ಅಭಿವೃದ್ಧಿಯಪ್ಪಂತೆ ಮಾಡು. ಎಲ್ಲ ದಿಕ್ಕೆ ಶಾಂತಿಯಾಗಲಿ.)
ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ ।
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ॥ ಓಂ ಶಾಂತಿಃ ಶಾಂತಿಃ ಶಾಂತಿಃ ॥೦೬॥
(ಅದೂ, ಇದೂ, ಸೃಷ್ಟಿಯೂ, ಅವಶಿಷ್ಟವೂ ಪೂರ್ಣ ಪರಬ್ರಹ್ಮವೇ ಆಗಿದ್ದು. ಎಲ್ಲ ದಿಕ್ಕೆ ಶಾಂತಿಯಾಗಲಿ.)
ಕಾಯೇನವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ ।
ಕರೋಮಿ ಯದ್ಯತ್ಸಕಲಂ ಪರಸ್ಮೈ ನಾರಾಯಣೇತಿ ಸಮರ್ಪಯಾಮಿ ॥ ಓಂ ತತ್ಸತ್॥  ಓಂ ನಮೋ ನಾರಾಯಣಾಯ ॥೦೭॥
(ಪ್ರಕೃತಿರೀತ್ಯಾ ಕಾಯಾವಾಚಾಮನಸಾ ಮಾಡಿದ ಈ ಇಡೀ ಕರ್ಮವ ಪರಬ್ರಹ್ಮನಾದ ನಿನಗೆ ನಾರಾಯಣ ಹೇದು ಅರ್ಪುಸುತ್ತೆ. ಅದುವೇ ಸತ್ಯ. ನಾರಾಯಣ!, ನಿನಗೆ ನಮಸ್ಕಾರ.)
ಯದಕ್ಷರ ಪದಭ್ರಷ್ಟಂ ಮಾತ್ರಾಹೀನಂತು ಯದ್ಭವೇತ್ ।
ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಸ್ತುತೇ ॥
॥ಹರಿಃ ಓಂ ॥
(ಇಲ್ಲಿ ಹೇಳಿದ ವಿಷಯಂಗಳಲ್ಲಿ ಯಾವುದೇ ಪದಲೋಪವೋ ಅಕ್ಷರಲೋಪವೋ ಮಾತ್ರಾಲೋಪವೋ ಆಗಿದ್ದಲ್ಲಿ ಅದೆಲ್ಲವನ್ನೂ ಕ್ಷಮಿಸೆಕು ಹೇದು ದೇವದೋತ್ತಮ° ನಾರಾಯಣನಾದ ನಿನಗೆ ನಮಸ್ಕರಿಸುತ್ತೆ.)
॥ ಶ್ರೀಕೃಷ್ಣಾರ್ಪಣಮಸ್ತು ॥ ಓಂ ತತ್ಸತ್ ॥
॥ ಹರೇ ರಾಮ ॥
 

12 thoughts on “ಗರುಡಪುರಾಣಶ್ರವಣಫಲಮ್

  1. ನಿಂಗಳ ಪ್ರಯತ್ನ ನಿಜಕ್ಕೂ ಅಭಿನಂದನೀಯ. ಗರುಡ ಪುರಾಣವ ಸರಳವಾಗಿ ನಮ್ಮ ಭಾಷೆಲಿ ಎಲ್ಲೋರಿಂಗೂ ಅರ್ಥ ಅಪ್ಪ ಹಾಂಗೆ ಹೇಳಿದ್ದಿ. ಇದರ ಎಲ್ಲ ಸಂಕಲನ ಮಾಡಿ ವನ್ ಪುಸ್ತಕ ಮಾಡಿ ಪ್ರಕಟಿಸಿರೆ ಎಲ್ಲೋರಿಂಗೂ ತುಂಬಾ ಅನುಕೂಲ. ಪುರುಸೊತ್ತಿಲ್ಲಿ ಪಾರಾಯಣ ಮಾಡ್ಲಕ್ಕು ಹೇಳಿ ಎನಗೆ ಅನಿಸುತ್ತು.

    1. ಶ್ರೀಕೃಷ್ಣಾರ್ಪಣಮಸ್ತು. ಹರೇ ರಾಮ ನಿಂಗಳ ಪ್ರೀತಿಯ ಒಪ್ಪ ನುಡಿಗೆ.

  2. ಭಾವಯ್ಯಾ, ನಮಸ್ಕಾರ. ಸುಮ್ಮನೆ ಕೂಬ್ಬಲಂತೂ ನಿಂಗೊಗೂ ,ಎನಗೂ ಎಡಿಯ. ಬಪ್ಪವಾರಂದ ಯಾವುದು ?????????.

  3. ಬೈಲ ಸಹೃದಯ ಬಂಧುಗಳ ಒಪ್ಪಕ್ಕೆ ಅಭಿಮಾನದ, ಧನ್ಯತೆಯ ನಮೋ ನಮಃ . ಹರೇ ರಾಮ.

  4. ಭಾವಯ್ಯ ಗರುಡ ಪುರಾಣವ ಬೈಲಿಂಗೆ ಕೊಡ್ತಾ ಬಂದದು ನಿಜವಾಗಿಯೂ ಶ್ಲಾಘನೀಯ. ಎಲ್ಲವನ್ನುದೆ ಎನಗೆ ಓದಲೆಡಿಗಾಯಿದಿಲ್ಲೆ. ಪುರುಸೊತ್ತು ಮಾಡಿ ಎಲ್ಲ ಕಂತುಗಳ ಒಂದರಿ ಓದೆಕು. ಭಾವಯ್ಯಂಗೆ ಅಭಿನಂದನೆಗೊ.

    1. ಚೆನ್ನೈ ಭಾವ,
      ನಮಸ್ತೇ;ಬಾರೀ ಒ೦ದು ಸ್ತುತ್ಯ ಕಾರ್ಯವ ಮಾಡಿದ್ದಿ,ಎಲ್ಲ ಕ೦ತುಗಳನ್ನುದೆ ಪೂರ್ತಿ ಓದಿ ಆಯಿದಿಲ್ಲೆ. “ಗರುಡ ಪುರಾಣವ ನಿತ್ಯ ಓದಲಾಗ ಹೇಳುವ ಭಾವನೆಯೇ ಸರಿಯಲ್ಲ ಹೇಳುವ ಅ೦ಶವ ತಪ್ಪು ಹೇದು ನಿ೦ಗೊ ಸರಿಯಾಗಿ ಮನದಟ್ಟು ಮಾಡಿಸಿದ್ದಿ.ಅಭಿನ೦ದನಗೊ.ಬಹುಶಃ ಇದರ ನಿತ್ಯ ಓದಿರೆ ಸ೦ಸಾರಲ್ಲಿ ವೈರಾಗ್ಯ ಬ೦ದಿಕ್ಕಗು ಹೇದು ಹೇಳುವ ಕಲ್ಪನೆಲಿ ಇ೦ಥ ಒ೦ದು ನ೦ಬಿಕೆಯ ಜನರಲ್ಲಿ ಬಿತ್ತಿಕ್ಕು ಹೇದು ತೋರ್ತು.ಧನ್ಯವಾದ೦ಗೊ.

  5. ಎಲ್ಲ ರೀತಿಯ ಪ್ರಯತ್ನಂಗಳಿಂದಲೂ ಗರುಡಪುರಾಣವ ಕೇಳೆಕು, ಪುಣ್ಯಕರವೂ, ಪವಿತ್ರವೂ, ಪಾಪನಾಶಕವೂ ಆಗಿಪ್ಪ ಇದರ ಕೇಳಿದವರ ಇಚ್ಛೆಗೊ ಪೂರೈಸಲ್ಪಡುತ್ತು ಹೇಳಿ ಗರುಡಪುರಾಣದ ಫಲಶ್ರುತಿಲಿ ಹೇಳಿದ್ದು.
    ಯಾವುದರ ಓದಲೆ ಆಗ ಹೇಳ್ತ ಪರಿಕಲ್ಪನೆ ಜೆನಂಗೊಕ್ಕೆ ಮನಸ್ಸಿಲ್ಲಿ ಇತ್ತಿದೋ ಅದು ತಪ್ಪು, ನಿತ್ಯಾ ಇದರ ಓದೆಕ್ಕು, ಗ್ರೆಹಿಸೆಕ್ಕು, ಅದರಂತೆ ನೆಡೆಕ್ಕೊಳೆಕ್ಕು ಹೇಳ್ತ ಸತ್ಯವ ಹಲವಾರು ಕಂತುಗಳ ಮೂಲಕ ಬೈಲಿನ ಓದುಗರಿಂಗೆ ಒದಗಿಸಿದ ಈ ಪುಣ್ಯ ಕಾರ್ಯ ಅತ್ಯಂತ ಶ್ಲಾಘನೀಯ.
    ಮುಂದೆಯೂ ಇಂತಹ ಚಿಂತನೆಗೊ ಚೆನ್ನೈ ಭಾವಯ್ಯರಿಂದ ಹರುದು ಬರಲಿ, ಬೈಲ ಬಾಂಧವರು ಇದರ ಸದುಪಯೋಗ ಪಡಕ್ಕೊಳಲಿ ಹೇಳಿ ಹಾರೈಸುತ್ತಾ..
    ಹರೇ ರಾಮ

  6. ತುಂಬ ತುಂಬ ಪುಣ್ಯ ಕಾರ್ಯವ ಮಾಡಿದಿ ಭಾವ.ಪ್ರತಿಯೊಂದು ಕಂತು ಓದುಲೆ ಎಡಿಗಾಯಿದಿಲೆ. ಇನ್ನೊಂದರಿ ಆದ್ಯಂತ ಓದುತ್ತೆ.
    ಹರೇ ರಾಮ.

  7. ಬಾವಯ್ಯ, ದೂರಲ್ಲಿದ್ದಿ. ಹಾಂಗಾಗಿ ಇಲ್ಲಿಂದಲೇ ಸಾಷ್ಟಾಂಗ ನಮಸ್ಕಾರ ಮಾಡ್ತೆ. ಗುರು ಸ್ಥಾನಲ್ಲಿ ನಿಂದು ಎಲ್ಲೋರಿಂಗೂ ಸರಳವಾಗಿ ಗರುಡ ಪುರಾಣವ ವಿವರಿಸಿದ್ದಿ. ನಿಂಗಳ ಈ ಕಾರ್ಯಕ್ಕೆ ಶ್ರೀ ಗುರುಗಳ, ದೇವರ ಅನುಗ್ರಹ ಸದಾ ನಿಂಗೊಗೆ ಸಿಗಲಿ ಹೇಳಿ ಎಲ್ಲಾ ಓದುಗರ ಪರವಾಗಿ ಪ್ರಾರ್ಥನೆ ಮಾಡ್ತೆ. ಹರೇ ರಾಮ.

  8. ಹರೇ ರಾಮ. ಚೆನ್ನೈ ಭಾವನ ಪ್ರಯತ್ನ ಸ್ತುತ್ಯರ್ಹವಾದ್ದು,ಎರಡು ಮಾತಿಲ್ಲೆ.ಇನ್ನೊಂದಾರಿ ಎಲ್ಲಾ ಕಂತುಗಳನ್ನೂ ಪುರುಸೊತ್ತಿಲಿ ಓದೆಕು.ಎಲ್ಲರಿಂಗೂ ಶುಭವಾಗಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×