Oppanna.com

ಶ್ರೀಮದ್ಭಗವದ್ಗೀತಾ – ಸಪ್ತಮೋsಧ್ಯಾಯಃ – ಜ್ಞಾನವಿಜ್ಞಾನಯೋಗಃ – ಶ್ಲೋಕಂಗೊ 11 – 20

ಬರದೋರು :   ಚೆನ್ನೈ ಬಾವ°    on   30/08/2012    2 ಒಪ್ಪಂಗೊ

ಚೆನ್ನೈ ಬಾವ°

ಶ್ಲೋಕ

ಬಲಂ ಬಲವತಾಂ ಚಾಹಂ ಕಾಮರಾಗವಿವರ್ಜಿತಮ್ ।
ಧರ್ಮಾವಿರುದ್ಧೋ ಭೂತೇಷು ಕಾಮೋsಸ್ಮಿ ಭರತರ್ಷಭ ॥೧೧॥

ಪದವಿಭಾಗ

ಬಲಮ್ ಬಲವತಾಮ್ ಚ ಅಹಮ್ ಕಾಮ-ರಾಗ-ವಿವರ್ಜಿತಮ್ । ಧರ್ಮ-ಅವಿರುದ್ಧಃ ಭೂತೇಷು ಕಾಮಃ ಅಸ್ಮಿ ಭರತರ್ಷಭ ॥

ಅನ್ವಯ

ಅಹಂ  ಬಲವತಾಂ ಕಾಮ-ರಾಗ-ವಿವರ್ಜಿತಂ ಬಲಂ ಚ ಅಸ್ಮಿ । ಹೇ ಭರತರ್ಷಭ!, ಭೂತೇಷು ಧರ್ಮ-ಅವಿರುದ್ಧಃ ಕಾಮಃ (ಅಹಮ್) ಅಸ್ಮಿ ।

ಪ್ರತಿಪದಾರ್ಥ

ಅಹಮ್ – ಆನು, ಬಲವತಾಮ್ – ಬಲಿಷ್ಠರ, ಕಾಮ-ರಾಗ-ವಿವರ್ಜಿತಮ್ – ಕಾಮ-ಆಸಕ್ತಿಗಳ-ವಿರಹಿತವಾದ, ಬಲಮ್ – ಬಲವು, ಚ ಅಸ್ಮಿ – ಕೂಡ ಆಗಿದ್ದೆ. ಹೇ ಭರತರ್ಷಭ! – ಏ ಭರತಶ್ರೇಷ್ಠನೇ!, ಭೂತೇಷು – ಎಲ್ಲ ಜೀವಿಗಳಲ್ಲಿ, ಧರ್ಮ-ಅವಿರುದ್ಧಃ – ಧರ್ಮತತ್ವಂಗೊಕ್ಕೆ ವಿರುದ್ಧ ಅಲ್ಲದ್ದ, ಕಾಮಃ – ಲೈಂಗಿಕಜೀವನವು, (ಅಹಮ್ ) ಅಸ್ಮಿ  – (ಆನು) ಆಗಿದ್ದೆ.

ಅನ್ವಯಾರ್ಥ

ಆನು ಬಲಶಾಲಿಗಳಲ್ಲಿ ಕಾಮ-ಆಸಕ್ತಿಗಳಿಲ್ಲದ್ದೆ ಬಲವಾಗಿ ಇದ್ದೆ (‘ಬಲ’ ನಾಮಕ°; ಬಲವಂತರ ಬಯಕೆ-ಒಲವು ಎನ್ನಿಂದ), ಏ ಭರತಶ್ರೇಷ್ಠನೇ!, ಧರ್ಮತತ್ವಂಗೊಕ್ಕೆ ಅವಿರುದ್ಧವಾಗಿಪ್ಪ ಕಾಮವೂ ಆನೇ ಆಗಿದ್ದೆ (‘ಕಾಮ’ ನಾಮಕ°; ಧರ್ಮಜೀವಿಗಳಲ್ಲಿ ಧರ್ಮಕ್ಕನುಗುಣವಾದ ಕಾಮ-ಬಯಕೆ ಆನೇ ಆಗಿದ್ದೆ).

ತಾತ್ಪರ್ಯ / ವಿವರಣೆ

ಬಲಶಾಲಿಯಾಗಿಪ್ಪವು ಬಲವ ವೈಯುಕ್ತಿಕ ಆಕ್ರಮಣಕ್ಕೆ ಬಳಸಲಾಗ. ದುರ್ಬಲರ ರಕ್ಷಣಗೆ ಬಳಸೆಕು. ಹೀಂಗೆಯೇ ಧರ್ಮಕ್ಕನುಗುಣವಾಗಿ ಕಾಮವು ಸಂತಾನ ಪಡವದಕ್ಕೆ ಮಾತ್ರ ಇರೆಕು ಹೊರತು ಚಪಲತೆಗೆ ಆಗಿಬಿಡ್ಳಾಗ. ತಮ್ಮ ಮಕ್ಕಳಲ್ಲಿ ಕೃಷ್ಣಪ್ರಜ್ಞೆಯ ಬೆಳಶುವದು ಅಬ್ಬೆ ಅಪ್ಪಂದಿರ ಹೊಣೆ. ಭಗವಂತ° ಇಲ್ಲಿ ಹೇಳಿದ್ದು – ಧರ್ಮಕ್ಕನುಗುಣವಾದ ನಡವಳಿಕೆ ಅದು ಭಗವಂತನಿಂದ. ಬಲ ಬಂದಪ್ಪಗ ಕಾಮನೆಗೊ ಹುಟ್ಟಿಕೊಂಬದು. ಆದರೆ ಭಗವಂತ° ಕಾಮ-ರಾಗ ವಿವರ್ಜಿತ ಬಲಸ್ವರೂಪ°. ಇಲ್ಲಿ ಭಗವಂತ° ಕಾಮನೆ ಬೇಡ್ಳೇ ಬೇಡ ಹೇಳಿ ಏನೂ ಹೇಳಿದ್ದನಿಲ್ಲೆ. ಕಾಮನೆ ಬೇಕು.. ಆದರೆ, ಯಾವುದರಲ್ಲಿ..?! ಧರ್ಮಲ್ಲಿ. ಭಗವಂತನಲ್ಲಿ ಕಾಮನೆಗಳ ಇರಿಸಿಗೊಳ್ಳೆಕು. ಭಗವಂತನ ತಿಳಿಯೆಕು, ಅದರ ಅನುಭವವ ಸವಿಯೆಕು ಹೇಳ್ವ ಕಾಮನೆಗೊ ಇರೆಕ್ಕಾದ್ದು. ಯಾವಶಕ್ತಿ ನವಗೆ ಧಾರಕಶಕ್ತಿಯಾಗಿ ನಿಲ್ಲುತ್ತೋ, ಅಲ್ಲಿ ‘ಕಾಮವಿವರ್ಜಿತನಾಗಿ’ ಭಗವಂತ ಇರ್ತ. “ಸಮಸ್ತ ಜೀವಜಾತಲ್ಲಿ ಧರ್ಮಕ್ಕೆ ಅವಿರುದ್ಧವಾಗಿಪ್ಪ ಕಾಮನೆಲಿ ಆನು ಇದ್ದೆ” ಹೇಳಿ ಭಗವಂತ° ಇಲ್ಲಿ ಹೇಳಿದ್ದು.

ಪರಮಾತ್ಮ° ಹೇಳಿದ್ದು ಇಲ್ಲಿ – ಒಳ್ಳೆದರಲ್ಲಿ ದೇವರಿದ್ದ°, ಅರ್ಥಾತ್ ಧರ್ಮಕಾರ್ಯಲ್ಲಿ, ಧರ್ಮಕ್ಕೆ ಅವಿರುದ್ಧವಲ್ಲದ ಶಕ್ತಿಲಿ, ಬಯಕೆಲಿ ಸದಾಚಾರಲ್ಲಿ, ಸದ್ಗುಣಂಗಳಲ್ಲಿ ಭಗವಂತ° ಇದ್ದ°. ಹಾಂಗಾರೆ ದುಷ್ಟಶಕ್ತಿಲಿ/ಕಾರ್ಯಲ್ಲಿ/ಕಾಮನೆಲಿ ?

ಶ್ಲೋಕ

ಯೇ ಚೈವ ಸಾತ್ವಿಕಾ ಭಾವಾ ರಾಜಸಾಸ್ತಾಮಸಾಶ್ಚ ಯೇ ।
ಮತ್ತ ಏವೇತಿ ತಾನ್ವಿದ್ಧಿ ನ ತ್ವಹಂ ತೇಷು ತೇ ಮಯಿ ॥೧೨॥ 

ಪದವಿಭಾಗ

ಯೇ ಚ ಏವ ಸಾತ್ವಿಕಾಃ ಭಾವಾಃ ರಾಜಸಾಃ ತಾಮಸಾಃ ಚೆ ಯೇ । ಮತ್ತಃ ಏವ ಇತಿ ತಾನ್ ವಿದ್ಧಿ ನ ತು ಅಹಮ್ ತೇಷು ತೇ ಮಯಿ ॥

ಅನ್ವಯ

ಯೇ ಚ ಏವ ಸಾತ್ವಿಕಾಃ ರಾಜಸಾಃ ತಾಮಸಾಃ ಚ ಭಾವಾಃ, ತೇ ಮತ್ತಃ ಏವ ಇತಿ ತಾನಿ ವಿದ್ಧಿ । ಅಹಂ ತೇಷು ನ (ಅಸ್ಮಿ), ತು ತೇ ಮಯಿ (ವರ್ತಂತೇ) ।

ಪ್ರತಿಪದಾರ್ಥ

ಯೇ  – ಯಾವುದೆಲ್ಲ, ಚ – ಕೂಡ, ಏವ – ಖಂಡಿತವಾಗಿಯೂ, ಸಾತ್ವಿಕಾಃ – ಸಾತ್ವಿಕಂಗೊ, ರಾಜಸಾಃ – ರಾಜಸಂಗೊ, ತಾಮಸಾಃ – ತಾಮಸಂಗೊ, ಚ – ಕೂಡ, ಭಾವಾಃ – ಸ್ಥಿತಿಗೊ ಇದ್ದೋ , ತೇ – ಅವು, ಮತ್ತಃ – ಎನ್ನಂದ, ಇತಿ – ಹೇದು (ಎಂದು) ತಾನಿ – ಅವುಗಳ, ವಿದ್ಧಿ – ತಿಳುಕ್ಕೊ. ಅಹಮ್ – ಆನು, ತೇಷು – ಅವುಗಳಲ್ಲಿ, ನ (ಅಸ್ಮಿ) – ಇಲ್ಲೆ, ತು – ಆದರೆ, ತೇ – ಅವು, ಮಯಿ (ವರ್ತಂತೆ) – ಎನ್ನಲ್ಲಿ ಇದ್ದು .

ಅನ್ವಯಾರ್ಥ

ಯಾವುದೆಲ್ಲ ಸಾತ್ವಿಕ, ರಾಜಸ, ತಾಮಸ ಶಕ್ತಿಗೊ ಇದ್ದೋ ಅವೆಲ್ಲವೂ ಎನ್ನಿಂದಲೇ ಪ್ರಕಟವಾದ್ದು. ಅವೆಲ್ಲವೂ ಎನ್ನದೇ ಎಂಬುದರ ನೀನು ತಿಳುಕ್ಕೊ. ಆದರೆ ಅನು ಅದರಲ್ಲಿ ಇಲ್ಲೆ. (ಐಹಿಕ ಪ್ರಕೃತಿಯ ಗುಣಂಗೊಕ್ಕೆ ಒಳಪಟ್ಟಿಲ್ಲೆ ಹೇಳ್ವ ಧ್ವನಿ ಇಲ್ಲಿ).

ತಾತ್ಪರ್ಯ / ವಿವರಣೆ

ಈ ಜಗತ್ತೇ ಭಗವಂತನದ್ದು. ಈ ಜಗತ್ತಿನ ಪ್ರತಿಯೊಂದರಲ್ಲೂ ಭಗವಂತ° ಇದ್ದ°. ಆದರೆ ಈ ಜಗತ್ತಿಲ್ಲಿ ಎಲ್ಲ ಜೀವಿಗಳ ಐಹಿಕ ಚಟುವಟಿಕೆಗೊ ಐಹಿಕ ಪ್ರಕೃತಿಯ ತ್ರಿಗುಣಂಗೊಕ್ಕೆ ಅನುಗುಣವಾಗಿ ನಡವದು ಹೇಳಿ ಭಗವಂತ ಮೊದಲಾಣ ಅಧ್ಯಾಯಲ್ಲೇ ಹೇಳಿದ್ದ ಭಗವಂತ°. ಇಲ್ಲಿ ಭಗವಂತ° ಹೇಳುತ್ತ° – ಈ ಪ್ರಕೃತಿಯ ಐಹಿಕ ಗುಣಂಗೊ ಭಗವಂತನಿಂದಲೇ ಹೊರಹೊಮ್ಮಿದ್ದಾದರೂ ಅವ° ಅದಕ್ಕೆ ಒಳಪ್ಪಟ್ಟವನಲ್ಲ°. ಜೀವಿಗೊಕ್ಕೆ ಬೇಕಾಗಿ ಈ ಐಹಿಕ ಪ್ರಕೃತಿಯ ಭಗವಂತ° ಸೃಷ್ಟಿಸಿದ್ದು. ಜೀವಿಗೊ ಬುದ್ಧಿಶಕ್ತಿಯ ಉಪಯೋಗಿಸಿ ಕಾರ್ಯಲ್ಲಿ ತೊಡಗೆಕ್ಕಪ್ಪದು. ಪ್ರಕೃತಿಯ ತ್ರಿಗುಣಂಗೊ ಭಗವಂತನಿಂದಲೇ ಮೂಡಿಬಂದಿಪ್ಪದಾದರೂ ಭಗವಂತ ಅವುಗಳ ಅಧೀನ° ಅಲ್ಲ. ಆದರೆ ಅವು ಭಗವಂತನ ಅಧೀನ. ಪ್ರಕೃತಿಯ ಸತ್ವ-ತಮ-ರಾಜಸ ಗುಣಂಗೊ ಅವನ ಬಾಧಿಸುತ್ತಿಲ್ಲೆ. ಇದು ಭಗವಂತನ ವಿಶಿಷ್ಟ ಗುಣಂಗಳಲ್ಲಿ ಒಂದು.

ಬನ್ನಂಜೆಯವು ಈ ಭಾಗವ ಲಾಯಕಕ್ಕೆ ವಿಶ್ಲೇಷಿಸುತ್ತವು – ಈ ಪ್ರಪಂಚ ತ್ರಿಗುಣ ವಿಷಯಂಗಳಿಂದ ಕೂಡಿಪ್ಪದು. ಅದು ಸತ್ವ,ರಜ, ತಮ. ಮಣ್ಣು ತಮೋಗುಣದ, ನೀರು ರಜೋಗುಣದ ಮತ್ತೆ ಕಿಚ್ಚು ಸತ್ವಗುಣಂದ ಪ್ರತೀಕಂಗೊ. ಹಾಂಗಾಗಿ ಈ ಪ್ರಪಂಚಲ್ಲಿ ನವಗೆ ಕಾಂಬ ಪ್ರತಿಯೊಂದು ವಸ್ತುವೂ ಈ ಮೂರರ ಸಮಾವೇಶ. ನಮ್ಮ ಅಂತರಂಗದ ಭಾವನೆಗಳೂ ಈ ಸತ್ವ-ತಮ-ರಜ ಹೇಳ್ವ ಮೂರು ಗುಣಂಗಳಿಂದ ಕೂಡಿಪ್ಪದು. ನಮ್ಮಲ್ಲಿಪ್ಪ ವರ್ಣಪದ್ಧತಿಯೂ ತ್ರಿಗುಣಂಗಳಿಂದ ಆಧಾರಿತ. ಎಲ್ಲದರಲ್ಲಿಯೂ ಈ ಮೂರು ಗುಣಂಗೊ ರ್ತು. ಸತ್ವದ ಗುಣ ಹೆಚ್ಚಿದ್ದು, ರಜಸ್ಸು ಮತ್ತು ತಮಸ್ಸು ಗುಣ ಕಡಮ್ಮೆ ಇಪ್ಪವ° ಬ್ರಾಹ್ಮಣ ವರ್ಣ, ರಜಸ್ಸಿನ ಅಂಶ ಹೆಚ್ಚಿದ್ದು ಸತ್ವ ಮತ್ತೆ ತಮೋಗುಣ ಕಮ್ಮಿ ಇಪ್ಪವ° ಕ್ಷತ್ರಿಯ ವರ್ಣ, ರಜಸ್ಸು ಹೆಚ್ಚಾಗಿದ್ದು ಮತ್ತೆ ಸತ್ವ, ತಮೋಗುಣವೂ ಅಧಿಕವಾಗಿಯೇ ಇಪ್ಪವ° ವೈಶ್ಯವರ್ಣ, ತಮೋಗುಣ ಹೆಚ್ಚಾಗಿದ್ದು, ಅದರ ಒಟ್ಟಿಂಗೆ ರಜೋಗುಣ, ಸತ್ವಗುಣವೂ ಇಪ್ಪವ° ಶೂದ್ರವರ್ಣ. ಈ ಎಲ್ಲ ವರ್ಣದವ್ವೂ ಮೋಕ್ಷಕ್ಕೆ ಯೋಗ್ಯರೇ. ಸೃಷ್ಟಿಯ ಆದಿಲಿ ಈ ಮೂರು ಗುಣಂಗಳ ಮಿಶ್ರಣವಾಗಿಯೇ ಸೃಷ್ಟಿ ಸುರುವಾದ್ದು. ಇಲ್ಲಿ ಶುದ್ಧ ಸತ್ವ ಹೇಳ್ವ ಸಂಗತಿ ಇಲ್ಲೆ. ಹೀಂಗೇ ನಮ್ಮ ಭಾವಲ್ಲಿಯೂ ಮೂರು ಅಂಶಂಗೊ ಇದ್ದು. ಈ ಮೂರು ಗುಣಂಗಳ ಸಂಕೀರ್ಣ ಪ್ರಪಂಚ ಬಹಳ ವಿಚಿತ್ರ. ಇಲ್ಲಿ ಏವುದು ಒಳ್ಳೆದು , ಏವುದು ಕೆಟ್ಟದ್ದು ಹೇಳಿ ತೀರ್ಮಾನ ಮಾಡಿಗೊಂಬದೇ ಗೊಂದಲ. ಭಗವಂತ° ಇಲ್ಲಿ ಹೇಳುತ್ತ° – “ತ್ರಿಗುಣಂಗಳವರ್ಜಿತನಾಗಿ (ತ್ರಿಗುಣಾತೀತ°) ಈ ಮೂರು ಗುಣಂಗಳ ಕೊಡುವವನೂ ಆನೇ!”. ಪ್ರತಿಯೊಂದು ಜೀವದ ಜೀವ ಸ್ವಭಾವಕ್ಕನುಗುಣವಾಗಿ, ಅದಕ್ಕೆ ಬೇಕಾದ ಗುಣಪ್ರವೃತ್ತಿಯ ಕೊಡುವವ° ಭಗವಂತ°. ಆರಲ್ಲಿಯೂ ಯಾವ ಕ್ರಿಯೆಯೂ ಭಗವಂತನ ಪ್ರೇರಣೆ ಇಲ್ಲದ್ದೆ ಕಾರ್ಯ ಆವುತ್ತಿಲ್ಲೆ. ಈ ಮದಲೇ ಹೇಳಿಪ್ಪಂತೆ ಜೀವಕ್ಕೆ ಸ್ವತಂತ್ರ ಇಚ್ಛಾಪೂರ್ವಕ ಕ್ರಿಯೆ ಇಲ್ಲೆ. ಬಿಂಬಲ್ಲಿ ಕ್ರಿಯೆ ಇಲ್ಲದ್ದೆ ಪ್ರತಿಬಿಂಬಲ್ಲಿ ಕ್ರಿಯೆ ಇಲ್ಲೆ. ಭಗವಂತನ ಅಧೀನವಾಗಿ ಈ ಮೂರು ಗುಣಂಗೊ ಈ ಪ್ರಪಂಚಲ್ಲಿ ತುಂಬಿಗೊಂಡಿದ್ದು. ಇದು ನಮ್ಮ ಜೀವ ಪಕ್ವವಾಗಿ ಮೋಕ್ಷವ ಸೇರಲೆ ಭಗವಂತ° ನಿರ್ಮಿಸಿಪ್ಪ ಪಾಠಶಾಲೆ. ಹಾಂಗಾಗಿ ಇಡೀ ಜಗತ್ತು ತ್ರಿಗುಣಕ್ಕೆ ಒಳಪಟ್ಟಿದು ಆದರೆ ಭಗವಂತ° ತ್ರಿಗುಣಾತೀತ°!

ಶ್ಲೋಕ

ತ್ರಿಭಿರ್ಗುಣಮಯೈರ್ಭಾವೈಃ ಏಭಿಃ ಸರ್ವಮಿದಂ ಜಗತ್ ।
ಮೋಹಿತಂ ನಾಭಿಜಾನಾತಿ ಮಾಮೇಭ್ಯಃ ಪರಮವ್ಯಯಮ್ ॥೧೩॥

ಪದವಿಭಾಗ

ತ್ರಿಭಿಃ ಗುಣಮಯೈಃ ಭಾವೈಃ ಏಭಿಃ ಸರ್ವಮ್ ಇದಮ್ ಜಗತ್ । ಮೋಹಿತಮ್ ನ ಅಭಿಜಾನಾತಿ ಮಾಮ್ ಏಭ್ಯಃ ಪರಮ್ ಅವ್ಯಯಮ್

ಅನ್ವಯ

ಏಭಿಃ ತ್ರಿಭಿಃ ಗುಣಮಯೈಃ ಭಾವೈಃ ಇದಂ ಸರ್ವಂ ಜಗತ್ ಮೋಹಿತಮ್ । ಏಭ್ಯಃ ಪರಮ್ ಅವ್ಯಯಂ ಮಾಂ ನ ಅಭಿಜಾನಾತಿ ।

ಪ್ರತಿಪದಾರ್ಥ

ಏಭಿಃ  ತ್ರಿಭಿಃ ಗುಣಮಯೈಃ  – ಈ ಮೂರು ಗುಣಂಗಳಿಂದ ಕೂಡಿಪ್ಪ, ಭಾವೈಃ – ಸ್ಥಿತಿಂದ, ಇದಮ್ ಸರ್ವಮ್ ಜಗತ್ – ಈ ಇಡೀ ಪ್ರಪಂಚವು, ಮೋಹಿತಮ್ – ಮೋಹಿಸಲ್ಪಟ್ಟಿದು. ಏಭ್ಯಃ – ಇವುಗೊಕ್ಕಿಂತ, ಪರಮ್ – ಪರಮೋನ್ನತವಾದ, ಅವ್ಯಯಮ್ – ಅವ್ಯಯನಾದ, ಮಾಮ್ – ಎನ್ನ, ನ ಅಭಿಜಾನಾತಿ – ತಿಳಿತ್ತವಿಲ್ಲೆ.

ಅನ್ವಯಾರ್ಥ

ಸತ್ವತಮರಾಜಸ ಈ ಮೂರು ಗುಣಂಗಳಿಂದ ಈ ಸಮಸ್ತ್ರ ಪ್ರಪಂಚ ಮೋಹಕ್ಕೊಳಪ್ಪಟ್ಟಿದು. ಇದರಿಂದ ಶ್ರೇಷ್ಠವಾದ, ಅವ್ಯಯನಾದ ಎನ್ನ ಈ ಪ್ರಪಂಚ ತಿಳುಕ್ಕೊಳ್ಳುತ್ತವಿಲ್ಲೆ.

ತಾತ್ಪರ್ಯ / ವಿವರಣೆ

ಇಡೀ ಜಗತ್ತು ಐಹಿಕ ಪ್ರಕೃತಿಯ ಮೂರು ಗುಣಂಗಳಿಂದ ಮೋಹಕ್ಕೆ ಸುಲುಕಿಹಾಕಿಯೊಂಡಿದು. ಈ ತ್ರಿಗುಣಕ್ಕೆ ಬದ್ಧರಾದವು ಈ ಐಹಿಕ ಪ್ರಕೃತಿಗೆ ಮೀರಿಪ್ಪ ಪರಮಶ್ರೇಷ್ಠ°, ಅವ್ಯಯ, ಸತ್ಯ, ಶಾಶ್ವತನಾದ, ಸನಾತನನಾದ ಭಗವಂತನ ಅರ್ಥಮಾಡಿಗೊಂಬೆಲೆಡಿಯ.  ಐಹಿಕ ಪ್ರಕೃತಿಯ ಪ್ರಭಾವಕ್ಕೆ ಸಿಕ್ಕಿಪ್ಪ ಪ್ರತಿಯೊಂದು ಜೀವಿಗೂ ಒಂದು ವಿಶಿಷ್ಟ ದೇಹವೂ, ಅದಕ್ಕನುಗುಣವಾಗಿ ಒಂದು ವಿಶಿಷ್ಟ ರೀತಿಯ ಮಾನಸಿಕ ಮತ್ತು ದೈಹಿಕ ಚಟುವಟಿಕೆಗೊ ಇರುತ್ತು. ಪ್ರಕೃತಿಯ ತ್ರಿಗುಣಕ್ಕೆ ಒಳಪ್ಪಟ್ಟು ನಾಲ್ಕು ವರ್ಣದವೂ ಕಾರ್ಯಪ್ರವೃತ್ತರಾಗಿರುತ್ತವು. ಅದಕ್ಕೂ ಕೀಳಾಗಿಪ್ಪವು ಪ್ರಾಣಿವರ್ಗ.  ಆದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವಾ ಪ್ರಾಣಿವರ್ಗ ಈ ಉಪಾಧಿಗೊ ಶಾಶ್ವತವಾದ್ದಲ್ಲ. ಏನಿದ್ದರೂ ಈ ಜನ್ಮ ತಾತ್ಕಾಲಿಕ. ಬದುಕು ತಾತ್ಕಾಲಿಕವಾಗಿದ್ದರೂ ಬದುಕಿನುದ್ದಕ್ಕೂ ನಮ್ಮ ಚಟುವಟಿಕೆ ಅನಿವಾರ್ಯ. ಮುಂದಾಣ ಜನ್ಮಲ್ಲಿ ನಾವೆಂತ ಆವ್ತು ಹೇಳ್ವ ಪರಿಕಲ್ಪನೆ ನಮ್ಮ ಶಕ್ತಿಯ ಮೀರಿಪ್ಪದು. ಹಾಂಗಾಗಿ ಐಹಿಕ ಮಾಯಾಶಕ್ತಿಯ ಸಮ್ಮೋಹನಕ್ಕೆ ಒಳಪ್ಪಟ್ಟು ದೈಹಿಕ ಪರಿಕಲ್ಪನೆಯೇ ನಮ್ಮ ವಿಷಯಂಗಳ ಯೋಚನೆ ಮಾಡುತ್ತು. ನಾವು ಐಹಿಕ ಪ್ರಕೃತಿಯ ಗುಣಂಗಳಲ್ಲಿ ಸಿಕ್ಕಿಬಿದ್ದರೆ ದೇವೋತ್ತಮ ಪರಮ ಪುರುಷನನ್ನೇ ಮರೆದುಬಿಡ್ತು. ಪ್ರಾಪಂಚಿಕಲ್ಲಿಯೂ ನಡವದು ಇದುವೇ. ನವಗೆ ಉಪಕಾರ / ಅನುಕೂಲ ಮಾಡಿದವರ ಎಷ್ತು ದಿನ ನೆಂಪುಮಡಿಕ್ಕೊಳ್ಳುತ್ತು! ಐಹಿಕ ಪ್ರಕೃತಿಯ ತ್ರಿಗುಣ ಮಾಯೆಗೆ ಸಿಕ್ಕಿ ದೇವೋತ್ತಮನನ್ನೇ ಮರದುಬಿಡ್ತು ಹೇಳಿ ಭಗವಂತ° ಇಲ್ಲಿ ಎಚ್ಚರಿಸಿದ್ದ°. ಯಾವುದೇ ರಾಜಸ, ತಾಮಸ, ಸಾತ್ವಿಕ ಗುಣದವೂ ಕೂಡ ಪರಾತ್ಪರ ಸತ್ಯದ ನಿರಾಕಾರ ಬ್ರಹ್ಮನ್ ಪರಿಕಲ್ಪನೆಂದಾಚಿಗೆ ಹೋಪಲೆ ಎಡಿಯ. ಸಂಪೂರ್ಣ ಕೃಷ್ಣಪ್ರಜ್ಞೆಯು ಐಹಿಕ ಪ್ರಕೃತಿಯ ಈ ಮೂರು ಗುಣಂಗಳನ್ನೂ ಮೀರಿದ್ದು. ಹಾಂಗಾಗಿ ಸಂಪೂರ್ಣಕೃಷ್ಣಪ್ರಜ್ಞೆಲಿ ನೆಲೆಸಿದವ° ಮೋಕ್ಷಕ್ಕೆ ಅರ್ಹನಾಗಿರುತ್ತ°..

ಇಡೀ ಜಗತ್ತು ತ್ರಿಗುಣಂಗಳಿಂದ ಮೋಹಿತವಾಗಿದ್ದು, ಈ ಸ್ಥಿತಿಲಿ ಅವ್ಯಯನಾಗಿಪ್ಪ ತ್ರಿಗುಣಾತೀತನ ಯೋಚನೆ ಅಸಾಧ್ಯ. ಹಾಂಗಾರೆ ಭಗವಂತನ ತಿಳಿಯೆಕ್ಕಾರೆ ಈ ತ್ರಿಗುಣಚಕ್ರಂದ ಹೆರ ಬರೆಕು.  ಈ ತ್ರಿಗುಣಮಾಯಾಬಂಧನಂದ ಹೆರಬಪ್ಪದು ಹೇಂಗೆ? –

ಶ್ಲೋಕ

ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ ।
ಮಾಮೇವ ಯೇ ಪ್ರಪದ್ಯಂತೇ ಮಾಯಾಮೇತಾಂ ತರಂತಿ ತೇ ॥೧೪॥

ಪದವಿಭಾಗ

ದೇವೀ ಹಿ ಏಷಾ ಗುಣಮಯೀ ಮಮ ಮಾಯಾ ದುರತ್ಯಯಾ । ಮಾಮ್ ಏವ ಯೇ ಪ್ರಪದ್ಯಂತೇ ಮಾಯಾಮ್ ಏತಾಮ್ ತರಂತಿ ತೇ ॥

ಅನ್ವಯ

ಏಷಾ ದೈವೀ ಗುಣಮಯೀ ಮಮ ಮಾಯಾ ಹಿ ದುರತ್ಯಯಾ । ಯೇ ಮಾಮ್ ಏವ ಪ್ರಪದ್ಯಂತೇ, ತೇ ಏತಾಂ ಮಾಯಾಂ ತರಂತಿ ।

ಪ್ರತಿಪದಾರ್ಥ

ಏಷಾ – ಈ, ದೈವೀ – ದಿವ್ಯವಾದ, ಗುಣಮಯೀ – ಭೌತಿಕ ಪ್ರಕೃತಿಯ ಮೂರುಗುಣಂಗಳಿಂದ ಕೂಡಿಪ್ಪ, ಮಮ – ಎನ್ನ, ಮಾಯಾ – ಮಾಯೆಯ (ಶಕ್ತಿಯ), ಹಿ ದುರತ್ಯಯಾ – ಖಂಡಿತವಾಗಿಯೂ ಮೀರ್ಲೆ ಕಷ್ಟಕರವಾಗಿಪ್ಪದು, ಯೇ – ಆರು, ಮಾಮ್ – ಎನ್ನ, ಏವ – ಖಂಡಿತವಾಗಿಯೂ, ಪ್ರಪದ್ಯಂತೇ – ಶರಣಾವುತ್ತವೋ, ತೇ – ಅವು, ಏತಾಮ್ ಮಾಯಾಮ್ – ಈ ಮಾಯಾಶಕ್ತಿಯ, ತರಂತಿ – ದಾಂಟುತ್ತವು.   

ಅನ್ವಯಾರ್ಥ

ತ್ರಿಗುಣಂಗಳಿಂದ ಕೂಡಿಪ್ಪ ಎನ್ನ ದಿವ್ಯವಾದ ಮಾಯಾಶಕ್ತಿಯ ಮೀರುವದು ಅತೀ ಕಷ್ಟಸಾಧ್ಯವಾದ್ದು. ಆರು ಸಂಪೂರ್ಣವಾಗಿ ಎನ್ನನ್ನೇ ನಂಬಿ ಎನಗೆ ಶರಣಾವುತ್ತವೋ ಅವು ಈ ಮಾಯೆಂದ ಮುಕ್ತರಾವುತ್ತವು (ಮಾಯೆಯ ದಾಂಟುತ್ತವು).

ತಾತ್ಪರ್ಯ / ವಿವರಣೆ

ದೇವೋತ್ತಮ ಪರಮ ಪುರುಷಂಗೆ (ಭಗವಂತಂಗೆ) ಅಸಂಖ್ಯಾತ ಶಕ್ತಿಗೊ. ಅವೆಲ್ಲವೂ ದೈವಿಕವಾಗಿಪ್ಪದು. ಜೀವಿಗೊ ಭಗವಂತನ ಭಾಗವೇ ಆಗಿಪ್ಪದರಿಂದ ಅವು ದೈವಿಕವೇ. ಅಂದರೂ ಐಹಿಕ ಶಕ್ತಿಯ ಸಂಪರ್ಕಂದ ಅವುಗಳ ಮೂಲ ಶ್ರೇಷ್ಠಶಕ್ತಿಯು ಮುಚಿಹೋಗಿರುತ್ತು. ಐಹಿಕ ಶಕ್ತಿ ಹೀಂಗೆ ಮುಸುಕುವದರಿಂದ ಅದರ ಪ್ರಭಾವಂದ ಜೀವಿಗೆ ತಪ್ಪಿಸಿಗೊಂಬಲೆ ಎಡಿತ್ತಿಲ್ಲೆ. ಐಹಿಕ ಮತ್ತು ಆಧ್ಯಾತ್ಮಿಕ ಪ್ರಕೃತಿಗೊ ಎರಡೂ ದೇವೋತ್ತಮ ಭಗವಂತನದ್ದೇ. ಆದರೆ ಜೀವಿಗೆ ಮೇಲೈಗೆ ಕಾಂಬದು ಪ್ರಕೃತಿ. ಈ ಮೇಲ್ತರಗತಿಯ ಪ್ರಕೃತಿ ಭಗವಂತನ ಮೂಲ್ತರಗತಿಯ ಗುಣಂಗಳ ಜೀವಿಗೆ ಮಸುಕು ಮಾಡುತ್ತು. ಹಾಂಗಾಗಿ ಪ್ರಕೃತಿಗೆ ಆತ್ಮ ಬದ್ಧನಾವುತ್ತ. ಹಾಂಗಾಗಿ ಬದ್ಧಾತ್ಮ ಹೇಳಿ ಹೇಳುವದು. ಆದರೆ ಜೀವಿಯ ದೈವಿಕ ಸಂಬಂಧ ಮತ್ತೆ ದೈವಿಕ ಸಂಕಲ್ಪ ಈ ಪ್ರಕೃತಿಯ ನಿಯಂತ್ರಿಸುತ್ತು. ದೈವೀಸಂಕಲ್ಪ ನಿರ್ದೇಶಿಸುವದರಿಂದ ಐಹಿಕ ಪ್ರಕೃತಿಲಿ ಮನುಷ್ಯಂಗೆ ಚಟುವಟಿಕೆಗಳ ಮಾಡ್ಳೆ ಅನುವುಮಾಡಿ ಕೊಡುತ್ತು. ಪ್ರಜ್ಞಾಪೂರ್ವಕವಾಗಿ ದೈವೀಶಕ್ತಿಯ ಅರ್ತುಗೊಂಡು ಆ ಶಕ್ತಿಗೆ ಸಂಪೂರ್ಣ ಶರಣಾದರೆ (ಸಂಪೂರ್ಣ ಕೃಷ್ಣಪ್ರಜ್ಞೆಯ ಸ್ಥಿತಿಯ ತಲುಪಿದರೆ) ಈ ಪ್ರಕೃತಿಶಕ್ತಿಯ ತಿರಸ್ಕರಿಸಿ ಭಗವದ್ ಶಕ್ತಿಲಿ ನೆಲೆಗೊಂಬಲೆ ಸಾಧ್ಯ ಹೇಳಿ ಭಗವಂತ° ಇಲ್ಲಿ ಸ್ಪಷ್ಟಪಡುಸುತ್ತ°.

ಗುಣ ಹೇಳ್ವದಕ್ಕೆ ಇನ್ನೊಂದು ಅರ್ಥ ಬಳ್ಳಿ (ಹಗ್ಗ). ಬದ್ಧ ಆತ್ಮವ ಮಾಯೆಯ ಸೂತ್ರಂಗೊ ಬಲವಾಗಿ ಕಟ್ಟಿಹಾಕಿದ್ದು ಹೇಳಿ ಅರ್ಥೈಸಲಕ್ಕು. ಕೈಕಾಲುಗಳ ಕಟ್ಟಿಹಾಕಿದ ಮನುಷ್ಯಂಗೆ ಮತ್ತೆ ಸುಲಭಲ್ಲಿ ಬಿಡಿಸಿಗೊಂಬಲೆ ಸಾಧ್ಯ ಇಲ್ಲೆ. ಬಂಧನಕ್ಕೆ ಸಿಕ್ಕಿಲ್ಲದ್ದ ಇನ್ನೊಬ್ಬ° ಆರಾರ ಸಹಾಯ ಬೇಕು ಬಿಡಿಸಿಗೊಳ್ಳೆಕ್ಕಾರೆ. ಹಾಂಗಾಗಿ ಸರ್ವಗುಣ ಶ್ರೇಷ್ಠನಾದ, ತ್ರಿಗುಣಾತೀತನಾದ ಭಗವಂತನೊಬ್ಬನೇ ಇದಕ್ಕೆ ಸಮರ್ಥ. ಹಾಂಗಾಗಿ ನೇರವಾಗಿ ಅವನನ್ನೇ ಶರಣು ಹೋಯೇಕು. ಶಿವನೋ ಬ್ರಹ್ಮನೋ ವಾ ಇತರ ಏವ ದೇವರುಗಳೂ ಬ್ರಹ್ಮನ್ ಗೆ ಸಮಾನರಲ್ಲ. ಅವು ಕೂಡ ರಜೋಗುಣ, ತಮೋಗುಣಂಗಳ ಅಧಿಕ ಅಂಶಂದ ಕೂಡಿಪ್ಪವು, ಭಗವಂತನ ಅದೇಶಕ್ಕೆ ಒಳಪ್ಪಟ್ಟವು. ಮಾಯೆಯ ಪ್ರಭಾವಕ್ಕೆ ಒಳಪ್ಪಟ್ಟವು. ಭಗವಂತ° ಮಾತ್ರ ಮಾಯೆಯ ಪ್ರಭು. ಮಾಯೆ ಅವನಿಂದ ಸೃಷ್ಟಿ ಆದ್ದು. “ಮುಕ್ತಿಪ್ರದಾತಾ ಸರ್ವೇಷಾಂ ವಿಷ್ಣುರೇವ ನ ಸಂಶಯಃ” – ಪ್ರತಿಯೊಬ್ಬರಿಂಗೂ ಮುಕ್ತಿಯ ಅನುಗ್ರಹ ಮಾಡ್ಳೆ ಆ ಭಗವಂತ° ಒಬ್ಬನೇ ಸಮರ್ಥ° ಹೇಳ್ವದರ್ಲಿ ಏವ ಸಂಶಯವೂ ಇಲ್ಲೆ ಹೇಳಿ ಶಿವದೇವರೇ ಹೇಳಿದ್ದ°.

ಬನ್ನಂಜೆಯವರ ವ್ಯಾಖ್ಯಾನಲ್ಲಿ ವಿಶ್ಲೇಷಿಸಿದ್ದವು – ತ್ರಿಗುಣಾತ್ಮಕವಾದ ಮೂರು ಭಾವಂಗಳಲ್ಲಿ ಇನ್ನೊಂದು ಮುಖವೂ ಇದ್ದು. ತ್ರಿಗುಣದ ಮಾನಿನಿ (ಶ್ರೀಲಕ್ಷ್ಮೀ) ಕೂಡ ಮೂರು ಮುಖದೋಳು. ಶ್ರೀ-ಭೂ-ದುರ್ಗ ಇವು ತ್ರಿಗುಣಂಗಳ ನಿಯಂತ್ರುಸುವ ಮೂರು ರೂಪಂಗೊ. ಈ ಗುಣಮಯೀ ಅಬ್ಬೆ ಮಾಯೆಯಾಗಿ ಜಗತ್ತಿಲ್ಲಿ ತುಂಬಿದ್ದು. ಇಡೀ ಜಗತ್ತಿನ ನಿಯಂತ್ರುಸುವ ಮಹಾಶಕ್ತಿಸ್ವರೂಪ ಆ ಮಾಯೆ ಭಗವಂತನ ಅಧೀನ. ನಾವು ಭಗವಂತನ ಕಾಣೆಕ್ಕಾರೆ ಆ ಮಾಯಾಪರದೆಯ ಸರುಸಿ ನೋಡೆಕು. ಅದು ನಮ್ಮಂದ ಸಾಧ್ಯ ಅಪ್ಪ ಕೆಲಸ ಅಲ್ಲ. ಹಾಂಗಾಗಿ ಭಗವಂತನ ಸೇರ್ಲೆ ಏಕೈಕ ಮಾರ್ಗ ಭಗವಂತನಲ್ಲಿ ಸಂಪೂರ್ಣ ಶರಣಾಗತಿ. ಅವ° ಈ ಮಾಯಾ ಪರದೆಯ ಸರುಸಿ ದರ್ಶನ ಕೊಡ್ಳೆ ಎಡಿಗಪ್ಪವ°. ಸಂಸಾರದ ಮೋಹಪಾಶಂದ ದೂರ ಸರುದು ಭಗವಂತನಲ್ಲಿ ಸಂಪೂರ್ಣ ಶರಣಾದಲ್ಲಿ, ಅವ° ಆ ಮಾಯಾ ಪರದೆಂದ ನಮ್ಮ ದಾಂಟುಸುತ್ತ°. ಭಗವಂತ° ಅಲ್ಲದ್ದೆ ನವಗೆ ಬೇರೆ ಅಸ್ತಿತ್ವ ಇಲ್ಲೆ ಹೇಳ್ವ ಎಚ್ಚರಂದ ನಾವು ನಮ್ಮ ಸಂಪೂರ್ಣವಾಗಿ ಅವಂಗೆ ಅರ್ಪುಸೆಕು. ನವವಿಧ ಭಕ್ತಿಲಿ ಇದು ಶ್ರೇಷ್ಠವಾದ ಭಕ್ತಿ. ಇದಕ್ಕೆ ಆತ್ಮನಿವೇದನ ಹೇಳಿ ಹೇಳುವದು. ಮದಾಲು ನಮ್ಮೊಳ ಇಪ್ಪ ಭಗವಂತನ ಅರ್ತು, ಅಹಂಕಾರ, ಮಮಕಾರವ ತೊಲಗಿಸಿ ನಮ್ಮ ಸಂಪೂರ್ಣವಾಗಿ ಭಗವಂತನಲ್ಲಿ ಅರ್ಪಿಸಿಗೊಂಡಪ್ಪವ ಭಗವದ್ ಸಾಕ್ಷಾತ್ಕಾರ ಆವ್ತು. ಇಲ್ಲಿ ಮುಖ್ಯವಾಗಿ ಬೇಕಪ್ಪದು ಏಕಭಕ್ತಿ, ಏಕನಲ್ಲಿ ಶರಣಾಗತಿ. ಭಗವಂತ° ಹೇಳುತ್ತ° –  ” ಮಾಮೇವ ಯೇ ಪ್ರಪದ್ಯಂತೇ ಮಾಯಾಮೇತಾಂ ತರಂತಿ ತೇ ” – ಆರು ಎನ್ನಲ್ಲಿ ಸಂಪೂರ್ಣ ಶರಣಾವುತ್ತವೋ ಅವು ಮಾಯಾಪಾಶಂದ ಪಾರಾವುತ್ತವು.

ಹಾಂಗಾರೆ ಎಲ್ಲೋರು ಏಕೆ ಭಗವಂತನಲ್ಲಿ ಶರಣಾವುತ್ತವಿಲ್ಲೆ?! –

ಶ್ಲೋಕ

ನ ಮಾಂ ದುಷ್ಕೃತಿನೋ ಮೂಢಾಃ ಪ್ರಪದ್ಯಂತೇ ನರಾಧಮಾಃ ।
ಮಾಯಯಾಪಹೃತಜ್ಞಾನಾ ಆಸುರಂ ಭಾವಮಾಶ್ರಿತಾಃ ॥೧೫॥

ಪದವಿಭಾಗ

ನ ಮಾಮ್ ದುಷ್ಕೃತಿನಃ ಮೂಢಾಃ ಪ್ರಪದ್ಯಂತೇ ನರ-ಅಧಮಾಃ । ಮಾಯಯಾ ಅಪಹೃತ-ಜ್ಞಾನಾಃ ಆಸುರಮ್ ಭಾವಮ್ ಆಶ್ರಿತಾಃ

ಅನ್ವಯ

ಮಾಯಯಾ ಅಪಹೃತ-ಜ್ಞಾನಾಃ ಆಸುರಂ ಭಾವಮ್ ಆಶ್ರಿತಾಃ । ದುಷ್ಕೃತಿನಃ ಮೂಢಾಃ ನರ-ಅಧಮಾಃ ಮಾಂ ನ ಪ್ರಪದ್ಯಂತೇ

ಪ್ರತಿಪದಾರ್ಥ

ಮಾಯಯಾ – ಮಾಯಾಶಕ್ತಿಯ ದೆಸೆಂದ, ಅಪಹೃತ-ಜ್ಞಾನಾಃ – ಅಪಹರಿಸಲ್ಪಟ್ಟ ಜ್ಞಾನವುಳ್ಳವ್ವು ಆಸುರಮ್ ಭಾವಮ್ – ಆಸುರೀ ಸ್ವಭಾವವ, ಆಶ್ರಿತಾಃ – ಸ್ವೀಕರಿಸಿಪ್ಪವ್ವು, ದುಷ್ಕೃತಿನಃ – ದುಷ್ಟರು, ಮೂಢಾಃ  – ಮೂಢರು, ನರ-ಅಧಮಾಃ – ನೀಚ ಮನುಷ್ಯರು, ಮಾಮ್ – ಎನ್ನ, ನ ಪ್ರಪದ್ಯಂತೆ – ಶರಣಾವುತ್ತವಿಲ್ಲೆ.

ಅನ್ವಯಾರ್ಥ

ಮಾಯಾಶಕ್ತಿಯ ದೆಸೆಂದ  ಜ್ಞಾನಶೂನ್ಯರಾದವು, ಆಸುರೀಸ್ವಭಾವಕ್ಕೆ ಒಳಗಾದವ್ವು, ದುಷ್ಟರು, ಮೂರ್ಖರು, ನೀಚಸ್ವಭಾವದವು – ಈ ಬಗೆಯ ಮನುಷ್ಯರು ಎನಗೆ ಶರಣಾವುತ್ತವಿಲ್ಲೆ.

ತಾತ್ಪರ್ಯ / ವಿವರಣೆ   

ಕೃಷ್ಣಪ್ರಜ್ಞೆಲಿ ನೆಲೆಗೊಂಡವು ಐಹಿಕ ಪಕೃತಿಯ ಕಠಿಣ ನಿಯಮಂಗೊಕ್ಕೆ ತಾಗಿಗೊಳ್ಳದ್ದೆ ಭಗವಂತನಲ್ಲಿ ಶರಣಾವುತ್ತವು. ಆದರೆ ನಾವು ಐಹಿಕಲ್ಲಿ ಕಾಂಬ ಜ್ಞಾನಿಗೊ, ವಿಜ್ಞಾನಿಗೊ, ತತ್ವಶಾಸ್ತ್ರಜ್ಞರುಗೊ, ವಿದ್ಯಾವಂತರುಗೊ, ಉದ್ಯಮಿಗೊ, ಆಢಳಿತದಾರರುಗೊ ವಾ ಜನಸಾಮಾನ್ಯರುಗೊ ಏಕೆ ಶರಣಾವುತ್ತವಿಲ್ಲೆ?! ಇದಕ್ಕೆ ಅವರ ಐಹಿಕ ಪ್ರಕೃತಿಯ ಗುಣಂಗಳೇ ಕಾರಣ. ಬರೇ ತೋರ್ಪಡಿಕಗೆ ವಿದ್ಯಾವಂತನಾದರೋ, ಪಂಡಿತನೋ, ಜ್ಞಾನಿಯೋ ಆದರೆ ಸಾಲ. ಜೀವನಲ್ಲಿ ಆ ತತ್ವಂಗಳ ಅನುಸಂಧಾನ ಮಾಡಿಗೊಂಡವನೇ ನಿಜವಾದ ಜ್ಞಾನಿ. ಬರೇ ಪುಸ್ತಕ ಓದಿ, ಡಿಗ್ರಿ ಸರ್ಟಿಫಿಕೇಟು ಕೈಲಿ ಹಿಡ್ಕೊಂಡರೆ ಅದು ಐಹಿಕ ಜಗತ್ತಿಲ್ಲಿ ವಿದ್ಯಾಜ್ಞಾನಿ ಹೇಳಿ ಅಷ್ಟೇ ಅಕ್ಕಷ್ಟೇ. ಆಧ್ಯಾತ್ಮಿಕ ಪ್ರಪಂಚಂಗೆ ಹೋಯೇಕಾರೆ ಭಗವದ್ ಜ್ಞಾನ ಪಡೆಕು. ಅದಕ್ಕೆ ಅಹಂಕಾರವ, ಕಾಮವ ಬಿಟ್ಟು ಸತ್ಯವ ಕಾಂಬ ಪರಿಶ್ರಮ ಬೇಕು. ಅರ್ಥಾತ್ ಭಗವತ್ಪ್ರಜ್ಞೆ ಜೀವನಲ್ಲಿ ಅಳವಡಿಸಿಗೊಂಡಿರೆಕು.  ಅಲ್ಲದ್ರೆ ಅವೆಲ್ಲ ತಿಳಿಗೇಡಿಗಳೇ ಸರಿ, ಅವೆಲ್ಲ ಹುಲುಮನುಜರು, ಐಹಿಕ ಮೈ ಸುಖಲ್ಲಿ ಮೈ ಮರವ ಮಾಯೆಯ ಸುಳಿಲಿ ಸಿಕ್ಕಿ ಮಂಕಾದವು. ಅವಕ್ಕೆ ಭಗವದ್ ಪ್ರಜ್ಞೆ ರುಚಿಸುತ್ತಿಲ್ಲೆ. ಅವು ಭಗವಂತಂಗೆ ಶರಣಾವುತ್ತವಿಲ್ಲೆ. ಅದಕ್ಕೆ ಮಾಯೆಯೇ ಕಾರಣ.

ಬನ್ನಂಜೆ ವಿವರುಸುತ್ತವು – ಭಗವಂತ° ಹೇಳುತ್ತ° – ಆರು ಎನ್ನ ಸಂಪೂರ್ಣ ಆಶ್ರಯಿಸುತ್ತವೋ (ಶರಣಾವುತ್ತವೋ) ಅಂತವು ಮಾಯಾಪಾಶಂದ ವಿಮೋಚನೆ ಪಡೆತ್ತವು, ಅಂತವರ ಆನು ಮಾಯೆಂದ ಬಿಡುಸುತ್ತೆ. ಇಲ್ಲಿ ಮಾಯೆ ಹೇಳಿ ಹೇಳ್ವದು ಪ್ರಕೃತಿಯ ತ್ರಿಗುಣ ಮಾಯೆ. ಅಂದರೂ ಎಲ್ಲೋರು ಎನ್ನ ಶರಣಾವುತ್ತವಿಲ್ಲೆ. ಇದಕ್ಕೆ ಕಾರಣ ಅವರ ಸ್ವಭಾವಂಗೊ, ದುಷ್ಕೃತಿಗೊ. ‘ದುಷ್ಕೃತಿನಃ’   ಹೇಳಿರೆ ದುಷ್ಕರ್ಮಿಗೊ. ಕೃತೀ ಹೇಳಿರೆ ಮೆಚ್ಚೆಕ್ಕಪ್ಪ ಕಾರ್ಯವ ಮಾಡಿದವ°. ಆದರೆ, ನಾಸ್ತಿಕರೂ ಮೆಚ್ಚುವ ಕಾರ್ಯವ ಮಾಡುತ್ತವು. ಆದರೆ ನಾಸ್ತಿಕ ಎಂತಹ ಕಾರ್ಯ ಮಾಡಿದ್ದರೂ ಅದು ಭಗವದ್ ಪ್ರೀತಿಗೆ ಸಲ್ಲುತ್ತಿಲ್ಲೆ. ಹಾಂಗಾಗಿ ಹಾಂಗಿಪ್ಪವೂ ‘ದುಷ್ಕೃತಿನಃ’.  ಇನ್ನು ದುಷ್ಕೃತಿಗಳಲ್ಲಿ ಎರಡು ವಿಧ. ಯಾವುದೋ ಪ್ರಾರಬ್ಧಕರ್ಮಕ್ಕೊಳಗಾಗಿ , ಪರಿಸರದ ಪ್ರಭಾವಂದ ಪಾಪದ ದಾರಿಲಿ ಸಾಗುವವು ( ಉದಾಃ ಕರ್ಣ, ಅಜಾಮಿಳ) ಮತ್ತೆ ಸ್ವಭಾವತಃ ಪಾತಕಿಗೊ (ಉದಾಃ ದುರ್ಯೋಧನ, ಶಕುನಿ). ಪಾಪಕಾರ್ಯಕ್ಕೆ ಸಹಾಯ, ಅನುಮೋದನೆ ಕೊಡುವವನೂ ಪಾಪಿಯೇ ಆವ್ತ. ಅವಕ್ಕೆ ಎಷ್ಟೇ ಬುದ್ದಿ ಹೇಳಿರೂ ಅರ್ಥ ಆವುತ್ತಿಲ್ಲೆ. ಇಂತವು ಮಾಯಾಬಲೆಲಿಯೇ ಬಿದ್ದು ಇಂದ್ರಿಯಲ್ಲೇ ಸುಖ ಇದ್ದು ಹೇಳ್ವದರ ನಂಬಿ ಬದುಕ್ಕುತ್ತವು. ಪ್ರಭಾವಂದ ಮಾಯೆಯ ಬಲಗೆ ಬೀಳ್ವ ಸಜ್ಜನರುಗೊಕ್ಕೆ ಮತ್ತೆ ಸರಿದಾರಿಗೆ ಬಪ್ಪ ವ್ಯವಸ್ಥೆ ಸೃಷ್ಟಿಲಿ ಇದ್ದು. ಜೀವ ಸ್ವಭಾವಲ್ಲೇ ನೀಚನಾಗಿದ್ದರೆ ಅಂತವನ ಎಂದೂ ತಿದ್ದುಲೆ ಸಾಧ್ಯ ಇಲ್ಲೆ. ಹಾಂಗಿಪ್ಪವೂ ಎಂದೂ ಭಗವಂತನ ತಿಳಿವಲೆ ಪ್ರಯತ್ನಿಸುತ್ತವಿಲ್ಲೆ. ತಮ್ಮ ದುಷ್ಕೃತ್ಯಂಗಳೇ ಸರಿ, ಕರ್ತವ್ಯ ಹೇಳಿ ತಿಳ್ಕೊಂಬ ತಿಳಿಗೇಡಿಗೊ ಅವು. ಇಂತವರ ಇಲ್ಲಿ ಭಗವಂತ° “ನರಾಧಮಃ” ಹೇಳಿ ಹೇಳಿದ್ದ°. ಪ್ರಭಾವಂದ ದುಷ್ಕೃತ್ಯಕ್ಕಿಳುದವರ ಬುದ್ಧಿಯ ಮಾಯೆ ಆವರಿಸಿರುತ್ತ್ತು. ಕಾಲ ಪಕ್ವ ಅಪ್ಪಗ ಅವು ಪರಿಸರದ ಲೌಕಿಕ ಪ್ರಭಾವಂದ ಕಳಚಿಗೊಂಡು ಮರಳಿ ಭಗವಂತಂಗೆ ಶರಣಾವುತ್ತವು. ಇದಕ್ಕೆ ಉತ್ತಮ ದೃಷ್ಟಾಂತ ಅಜಾಮಿಳನ ಜೀವನ ಕಥನ.  ಅಜಾಮಿಳ ಒಬ್ಬ° ಬ್ರಾಹ್ಮಣ°, ಸರಳ ಮನುಷ್ಯ°, ಮಿತಭಾಷಿ, ಸಾತ್ವಿಕ°, ವಿದ್ವಾಂಸ° ಆಗಿತ್ತಿದ್ದ°.  ಗುರುಹಿರಿಯರ ಅತಿಥಿಗಳ ಸೇವೆ ಮಾಡಿಗೊಂಡಿತ್ತಿದ್ದ°, ಒಳ್ಳೆ ಸಂಸಾರಿಯೂ ಆಗಿತ್ತಿದ್ದ°. ಆದರೆ, ಒಂದಿನ ಕಾಡಿಲ್ಲಿ ಅರೆನಗ್ನ ಹೆಣ್ಣೊಂದರ ಕಂಡು ಅದರತ್ರೆ ಆಕರ್ಷಣಗೆ ಒಳಗಾದ°. ಅದರ ದೇಹಸುಖಕ್ಕೆ ಆಕರ್ಷಿತನಾಗಿ ತನ್ನ ಸರ್ವಸ್ವವನ್ನೂ ಮರದ°. ಅದಕ್ಕೆ ತೃಪ್ತಿಪಡುಸಲೆ ಬೇಕಾಗಿ ಮಾಡ್ಳಾಗದ ಎಲ್ಲ ಕೆಲಸಂಗಳ ಮಾಡಿದ°. ಕುಡುಕನಾಗಿ, ಕಳ್ಳತನ ಮಾಡಿ, ಜೂಜಾಡಿ ಕಾಡಿಲ್ಲಿಯೇ ಅದರೊಟ್ಟಿಂಗೆ ಸಂಸಾರ ಹೂಡಿಗೊಂಡ. ಮಕ್ಕೊ ಆದವು. ಅಕೇರಿಯಾಣ ಮಗನ ಹೆಸರು ನಾರಾಯಣ. ಒಂದಿರುಳು ಅಜಾಮಿಳಂಗೆ ಘೋರರೂಪದ ಯಮದೂತರೇ ಕಣ್ಣೆದುರು ನಿಂದಾಂಗೆ ಆತು. ಅವರ ಕೈಲಿ ಯಮಪಾಶ. ಅದರ ನೋಡಿ ಅಜಾಮಿಳಂಗೆ ಹೆದರಿ ಪೆರ್ಜೀವ ಹಾರಿತ್ತು. ಅವನ ಮಗ ನಾರಾಯಣನ ಗಟ್ಟಿಗೆ ದೆನಿಗೊಂಡ!. ಅಷ್ಟಪ್ಪಗ ಮಗನ ಬದಲು ಅವಂತೆ ವಿಷ್ಣುದೂತರು ಕಣ್ಣಿಂಗೆ ತೋರುತ್ತವು. ಎಚ್ಚರ ಆದಪ್ಪಗ, ಅವಂಗೆ ತಾನು ಮಾಡಿದ ತಪ್ಪಿನ ಗೊಂತಾತು. ಹಳಿತಪ್ಪಿದ ಅವನ, ಭಗವಂತ° ಪುನಃ ಸರಿದಾರಿಲಿ ತಂದು ಉದ್ಧಾರ ಮಾಡುತ್ತ. ಮುಂದೆ ಅವ° ಒಬ್ಬ ಮಹಾತ್ಮನಾಗಿ ಬದುಕಿ ತನ್ನ ಸಾಧನೆಂದ ಮೋಕ್ಷವ ಪಡೆತ್ತ°.

ನಮ್ಮಲ್ಲಿ ಸಾತ್ವಿಕತೆ ಮತ್ತೆ ಜ್ಞಾನ ಅನೇಕ ಜನ್ಮಂಗಳ ಫಲಂದ ಬಪ್ಪದು. ಯಾವುದೋ ಕೆಟ್ಟ ಕಾರಣಂದ ನಾವು ದಾರಿತಪ್ಪಿಯಪ್ಪಗ, ಭಗವಂತ ನಮ್ಮ ಶಿಕ್ಷಿಸುವ ಬದಲು ಕ್ಷಮಿಸಿ ಉದ್ಧಾರ ಮಾಡುತ್ತ°. ಎಂತಹ ತಪ್ಪನ್ನೂ ಕ್ಷಮಿಸುವ ಕಾರುಣ್ಯಮೂರ್ತಿ ಆ ಭಗವಂತ°. ಭಗವಂತ ನವಗೆ ಕೊಡುವ ದುಃಖ – ಅಬ್ಬೆ ತನ್ನ ಮಗುವಿನ ತಿದ್ದಲೆ ಕೊಡುವ ಶಿಕ್ಷೆ ಹಾಂಗೆ. ಅವನ ಶಿಕ್ಷೆ ಕಾರುಣ್ಯದ ರಕ್ಷೆ. ಅವ° ಆರನ್ನೂ ದ್ವೇಷಿಸುತ್ತನಿಲ್ಲೆ. ಎಲ್ಲರ ಅಪರಾಧಂಗಳನ್ನೂ ಸಹಿಸುವವ ಭಗವಂತ° ಸಹಿಷ್ಣು. ಭಗವಂತ° ಅವರವರ ಜೀವ ಸ್ವಭಾವಕ್ಕೆ ತಕ್ಕ ಹಾಂಗೆ ವ್ಯಕ್ತಿತ್ವ ವಿಕಾಸಗೊಳುಸುತ್ತ°. ಜೀವ ಸ್ವಭಾವವ ಅವ° ಎಂದೂ ಬದಲುಸುತ್ತನಿಲ್ಲೆ. ಪಾಪಿಗೊ ಆಗಿಪ್ಪವಕ್ಕೆ ಪಾಪದ ಫಲ, ಪುಣ್ಯವಂತರಿಂಗೆ ಪುಣ್ಯದ ಫಲ. ಈ ಅವನ ವ್ಯವಸ್ಥೆ ಎಂದೂ ಬದಲಾವುತ್ತಿಲ್ಲೆ. ಹೀಂಗಾಗಿ ಈ ಪ್ರಪಂಚಲ್ಲಿ ಎಲ್ಲಾ ವಿಧದ ಮನುಷ್ಯರ ಕಾಂಬದು. ಸಾಮಾನ್ಯವಗಿ ಪ್ರಪಂಚಲ್ಲಿ ಭಗವದ್ಭಕ್ತರು ಮತ್ತೆ ಜ್ಞಾನಿಗೊ ಅಲ್ಪಸಂಖ್ಯಾತರುಗಳೇ. ಯಾವ ಕಾಲಲ್ಲಿಯೂ ಇವು ಬಹುಸಂಖ್ಯೆಲಿ ಇರ್ತವಿಲ್ಲೆ.

ಮಾಯೆಯ ಪ್ರಭಾವ ನಮ್ಮ ಮೇಲೆ ಕಾಲಕ್ಕನುಗುಣವಾಗಿರುತ್ತು. ಸಾತ್ವಿಕಯುಗಲ್ಲಿ ಸಾತ್ವಿಕ ಸ್ವಭಾವ ಬಲಿಷ್ಠವಾಗಿರುತ್ತು. ಕಲಿಯುಗಲ್ಲಿ ತಾಮಸ ಗುಣ ಬಲಿಷ್ಠವಾಗಿದ್ದು. ಅದರ ಮೀರಿ ಭಗವಂತನ ಹತ್ರೆ ಮನಸ್ಸು ಹರುದರೆ ಅದು ಪರಮಶ್ರೇಷ್ಠ. ಹಾಂಗಾಗಿ ಕಲಿಯುಗಲ್ಲಿ ಹರಿನಾಮ ಸಂಕೀರ್ತನೆಯೇ ಪರಮಶ್ರೇಷ್ಠ ಹೇಳಿ ಹೇಳಿದ್ದವು. “ಕಲಿಯುಗದೊಳು ಹರಿನಾಮವ ನೆನೆದರೆ ಕುಲಕೋಟಿಗಳು ಉದ್ಧರಿಸುವವು” ಹೇಳಿ ದಾಸರು ಹಾಡಿದ್ದು. ಕಲಿಯುಗಲ್ಲಿ ತಾಮಸ ಪ್ರಭಾವಕ್ಕೊಳಗಾಗಿ ಮಾಡಿದ ತಪ್ಪಿಂಗೆ ಶಿಕ್ಷೆ ಕಡಮ್ಮೆ. ಹಾಂಗೇ ಪುಣ್ಯಕ್ಕೆ ಮಹಾಫಲ.

ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತಸ್ವಾಮಿ ಪ್ರಭುಪಾದ ಅವರ ಭಗವದ್ಗೀತಾ ವ್ಯಾಖ್ಯಾನವ ಕನ್ನಡಲ್ಲಿ ಅನುವಾದಿಸಿದ ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಬರದ ಭಗವದ್ಗೀತಾ ಯಥಾರೂಪ ವ್ಯಾಖ್ಯಾನಲ್ಲಿ ಉಲ್ಲೇಖಿಸಿಪ್ಪಂತೆ –

ಇನ್ನು ಇಲ್ಲಿ ಈ ಶ್ಲೋಕಲ್ಲಿ ಹೇಳಿಪ್ಪ ಕೆಲವೊಂದು ಪದಂಗಳ ಗಮನುಸಿದರೆ – ‘ದುಷ್ಕೃತಿನಃ’. ದುಷ್ಕೃತಿನಃ ಹೇಳಿರೆ ದುಷ್ಕ್ರರ್ಮಿಗೊ. ಈ ಮದಲೇ ಹೇಳಿಪ್ಪಂತೆ ಜೀವಿಯು ಜೀವಸ್ವಭಾವಕ್ಕನುಗುಣವಾಗಿ ಪ್ರಕೃತಿಯ ಮೂರುಗುಣಂಗಳ ಮಾಯೆಲಿ ಸಿಲುಕಿ ಕಾರ್ಯವ ಮಾಡುತ್ತದ್ದು. ಐಹಿಕ ಶಕ್ತಿಯು ಸಂಪೂರ್ಣವಾಗಿ ಭಗವಂತನ ಮಾರ್ಗದರ್ಶನಲ್ಲಿ ಕೆಲಸ ಮಾಡುತ್ತು. ಅದಕ್ಕೆ ಪ್ರತ್ಯೇಕ ಅಧಿಕಾರ ಇಲ್ಲೆ. ವ್ಯಕ್ತಿ ಜೀವಸ್ವಭಾವಕ್ಕನುಗುಣವಾಗಿ ಬುದ್ಧಿಶಕ್ತಿಯ ಉಪಯೋಗಿಸಿ ವಿವೇಕಂದ ಕಾರ್ಯಮಾಡೆಕ್ಕಪ್ಪದು ಕರ್ತವ್ಯ. ಐಹಿಕ ಶಕ್ತಿಯು ಬಹು ಬಲಶಾಲಿಯಾದ್ದು. ತನ್ನ ಮನೋಧರ್ಮಂದಲಾಗಿ ಅದು ಅವನ ಮೇಲೆ ಕೆಲಸ ಮಾಡುತ್ತು ಹೇಳ್ವದು ತಿಳಿವಲೆ ಸಾಧ್ಯ ಆವುತ್ತಿಲ್ಲೆ. ಈ ದುಷ್ಕೃತಿನಃ (ದುಷ್ಕರ್ಮಿಗೊ) ನಾಲ್ಕು ಬಗೆ –

೧. ಮೂಢರು – ಅತ್ಯಂತ ಮೂರ್ಖರು. ಇವು ಹೊರೆ ಸಾಗುಸುವ ಪ್ರಾಣಿಯ ಹಾಂಗೆ. ತಮ್ಮ ಶ್ರಮದ ಫಲವ ತಾವೇ ಸವಿಯಲೆ ಬಯಸುವವು. ಭಗವಂತಂಗೆ ಬೇಕಾಗಿ ಬಿಟ್ಟುಕೊಡ್ಳೆ ಸಿದ್ಧರಿಲ್ಲದ್ದವು. ಹೊರೆಸಾಗುಸುವ ಪ್ರಾಣಿಗೆ ಉತ್ತಮ ಉದಾಹರಣೆ – ಕತ್ತೆ. ಯಜಮಾನ ಈ ದೀನಪ್ರಾಣಿಯ ಸಮಕ್ಕೆ ದುಡುಶುತ್ತ°. ಆರಿಂಗೆ ಬೇಕಾಗಿ ತಾನು ದುಡಿತ್ತಾ ಇದ್ದೆ ಹೇಳ್ವದು ಕತ್ತಗೆ ಗೊಂತಿಲ್ಲೆ. ಒಂದು ಕಟ್ಟು ಹುಲ್ಲು ತಿಂದು ಹೊಟ್ಟೆ ತುಂಬಿಸಿಗೊಂಬದು, ಯಜಮಾನ ಬಡಿಗು ಹೇಳ್ವ ಹೆದರಿಕೆಲಿಯೇ ಅರ್ಧ ವರಗುವದು, ಹೆಣ್ಣುಕತ್ತೆಂದ ಒದೆಸಿಗೊಂಬದು .. ಇಷ್ಟರಲ್ಲೇ ಅದಕ್ಕೆ ತೃಪ್ತಿ. ಕತ್ತೆ ಒಂದೊಂದರಿ ಕಾವ್ಯವನ್ನೋ ತತ್ವವನ್ನೋ ಹಾಡುತ್ತು., ಆದರೆ, ಅದರ ಗಾಯನ ಇತರರಿಂಗೆ ತೊಂದರೆಯೇ ಅಪ್ಪದು. ತಾನು ಆರಿಂಗಾಗಿ ಕೆಲಸ ಮಾಡುತ್ತದು ಹೇಳ್ವದರ ತಿಳಿಯದ್ದೆ ಮೂರ್ಖ ಫಲಾಪೇಕ್ಷಿ ಮನುಷ್ಯರ ಸ್ಥಿತಿಯೂ ಇದುವೇ. ಕರ್ಮದ ಉದ್ದ್ದೇಶವು ಯಜ್ಞ ಹೇಳ್ವದು ಅರಡಿಯ ಅವಕ್ಕೆ. ಹಗಲು ರಾತ್ರೆ ಈ ಜೀವಿಗೊ ದುಡಿತ್ತವು. ಎಂತಕೆ ಹೇಳಿ ತಿಳ್ಕೊಳ್ತವಿಲ್ಲೆ. ತನ್ನ ಕರ್ಮದ ಸ್ವಲ್ಪ ಭಾಗವ ಮಾತ್ರ ಸವಿಯುತ್ತವು. ಅಂದರೂ ನಾಶವಾಗಿ ಹೋಪ ಐಹಿಕ ಗಳಿಕೆಲಿಯೇ ಅವಕ್ಕೆ ಆಸಕ್ತಿ. ಅಜೀರ್ಣ ಆವ್ತರೂ ಕರ್ಮಫಲಕ್ಕಾಗಿ ಹಗಲು ಇರುಳು ಒರಕ್ಕಿಲ್ಲದ್ದೆ ದುಡಿತ್ತವು. ತಿಂದರೂ ಅಕ್ಕು, ತಿನ್ನದ್ರೂ ಅಕ್ಕು. ಭ್ರಾಮಕ ದನಿಯ (ಯಜಮಾನನ) ಲಾಭಕ್ಕಾಗಿ ಅಹರ್ನಿಶಿ ದುಡಿವವ°. ಈ ಐಹಿಕ ಜಗತ್ತಿನ ಚಲುಸುವ ಶಾಶ್ವತ ಶಕ್ತಿಯ ವಿಷಯವ ತಿಳ್ಕೊಂಬಲೆ ಅವಕ್ಕೆ ಸಮಯವೇ ಇಲ್ಲೆ!

೨. ನರಾಧಮ. ನರ ಹೇಳಿರೆ ಮನುಷ್ಯ°, ಅಧಮ ಹೇಳಿರೆ ಕೀಳುಮಟ್ಟದವ°. ಜೀವಿಗಳಲ್ಲಿ 84,00,000 ಬಗೆಗಳಲ್ಲಿ 4,00,000 ಮನುಷ್ಯರ ಬಗಗೊ. ಇವುಗಳಲ್ಲಿ ಬಹುಮಟ್ಟಿಂಗೆ ಅನಾಗರಿಕ ಮನುಷ್ಯರ ಸಂಖ್ಯೆಯೂ ಸೇರಿದ್ದು. ಸಾಮಾಜಿಕವಾಗಿ, ರಾಜಕೀಯವಾಗಿ ಬೆಳದಿದ್ದರೂ ಧಾರ್ಮಿಕ ತತ್ವಂಗೊ ಇಲ್ಲದ್ದಿಪ್ಪ ಮನುಷ್ಯರ ‘ನರಾಧಮರು’ ಹೇಳುವದು. ಧಾರ್ಮಿಕ ತತ್ವಂಗಳ ಅನುಸರುಸುವ ಉದ್ದೇಶವೇ ಪರಮ ಸತ್ಯವನ್ನೂ, ಅವನತ್ರೆ ಇಪ್ಪ ತನ್ನ ಸಂಬಂಧವನ್ನೂ ಅರ್ತುಗೊಂಬದು. ಈ ಅವಕಾಶವ ಕಳಕ್ಕೊಂಡವ° ನರಾಧಮ°. ಮಗು ಅಬ್ಬೆಯ ಗರ್ಭಲ್ಲಿಪ್ಪಗ ತನ್ನ ಅಲ್ಲಿಂದ ಬಿಡುಗಡೆಮಾಡು ಹೇಳಿ ಭಗವಂತನ ಬೇಡಿಗೊಳ್ತು. ಕಷ್ಟಲ್ಲಿಪ್ಪಗ ಭಗವಂತನ ಪ್ರಾರ್ಥಿಸುವದು ಜೀವಿಯ ಸಹಜ ಪ್ರವೃತ್ತಿ.  ಆದರೆ, ಗರ್ಭಂದ ಹೆರಬಂದ ಮತ್ತೆ ಮಗು ಮಾಯೆಯ ಪ್ರಭಾವಂದ ತನ್ನ ಜನನದ ಕಷ್ಟಂಗಳ ಮರದುಬಿಡ್ತು. ತನ್ನ ಉದ್ಧಾರಕನನ್ನೂ ಮರದು ಬಿಡ್ತು. ಮಕ್ಕಳಲ್ಲಿ ಸುಪ್ತವಾಗಿಪ್ಪ ದೈವಿಕ ಪ್ರಜ್ಞೆಯ ಪುನಶ್ಚೇತನಗೊಳುಸೆಕ್ಕಪ್ಪದು ಹೆತ್ತವರ ಕರ್ತವ್ಯ. ಸಂಸ್ಕಾರಂಗಳ ಉದ್ದೇಶವೂ ಅದುವೇ. ಆದರೆ, ಈಗಾಣ ಜಗತ್ತಿಲ್ಲಿ ಯಾವುದೇ ಭಾಗಲ್ಲಿ ಈ ಯಾವ ಪ್ರಕ್ರಿಯೆಯೂ ಕಟ್ಟುನಿಟ್ಟಾಗಿ ಅನುಸರಿಸಲ್ಪಡುತ್ತಿಲ್ಲೆ. ಆದ್ದರಿಂದ ಅಂತವು ನರಾಧಮರು. ನರಾಧಮ ಮನುಷ್ಯರು ತನ್ನ ಮುಖ್ಯ ಕರ್ತವ್ಯವನ್ನೇ ಸಂಪೂರ್ಣವಾಗಿ ಕಡೆಗೆಣಿಸುತ್ತವು.

೩. ಮಾಯಯಾಪಹೃತಜ್ಞಾನಾಃ . ಇವರ ವಿದ್ವತ್ತು ಮಾಯೆಯ ಐಹಿಕ ಶಕ್ತಿಯ ಪ್ರಭಾವಂದ ನಿಷ್ಪಲವಾಗಿರುತ್ತು. ಸಾಮಾನ್ಯವಾಗಿ ಅವು ತುಂಬ ಪಾಂಡಿತ್ಯ ಇಪ್ಪವು. ಹಿರಿಯ ತತ್ವಜ್ಞಾನಿಗೊ, ಕವಿಗೊ, ಸಾಹಿತಿಗೊ, ವಿಜ್ಞಾನಿಗೊ … ಇತ್ಯಾದಿ. ಆದರೆ ಮಾಯಾಶಕ್ತಿಯ ಪ್ರಭಾವಕ್ಕೆ ಒಳಪ್ಪಟ್ಟು ಅವು ಕಲ್ತದೆಲ್ಲ ಅನುಸಂಧಾನಕ್ಕೆ ಉಪಯೋಗ ಮಾಡುತ್ತವಿಲ್ಲೆ. ಹಾಂಗಿರ್ತವೂ ಕಲ್ತೂ ಅಧ್ಯಾತ್ಮಿಕ ಸಾಧನೆಲಿ ಎಂತ ಗುಣವನ್ನೂ ಪಡೆತ್ತವಿಲ್ಲೆ.

೪. ಆಸುರಂ ಭಾವಂ ಆಶ್ರಿತಾಃ . ಇದಕ್ಕೆ ರಾಕ್ಷಸೀ ತತ್ವ ಅನುಸರುಸುವವು ಹೇಳಿ ಹೇಳ್ವದು. ಈ ವರ್ಗದವು ಬಹಿರಂಗವಾಗಿಯೇ ನಾಸ್ತಿಕರು. ಈ ಭೌತಿಕ ಜಗತ್ತಿಂಗೆ ದೇವರು ಇಳುದು ಬಪ್ಪಲಿಲ್ಲೆ ಹೇಳಿ ಅವರ ವಾದ. ಏಕೆ ಹೇಳಿರೆ ಅದಕ್ಕೆ ಕಾರಣವೂ ಅವರತ್ರೆ ಇಲ್ಲೆ. ಭಗವಂತ° ನಿರಾಕಾರರೂಪಕ್ಕಿಂತಲೂ ಶ್ರೇಷ್ಠನಾದವ° ಹೇಳಿ ಭಗವದ್ಗೀತೆಲಿ ಘೋಷಿಸಿದ್ದರೂ ಅವನ ನಿರಾಕಾರ ರೂಪಕ್ಕೆ ಅಧೀನನ್ನಾಗಿ ಮಾಡುವ ಕ್ರಮ ಇವರದ್ದು. ಭಗವಂತನ ಮೇಲೆ ಅಸೂಯೆ ಇವಕ್ಕೆ. ಇಂತಹ ಮೆದುಳೆಂಬ ಕಾರ್ಖಾನೆಲಿ ನಿಷಿದ್ಧಗಳನ್ನೇ ಉತ್ಪನ್ನಮಾಡುವ ಇವ್ವು ಭಗವಂತಂಗೆ ಶರಣಪ್ಪಲಿಲ್ಲೆ.

ಹಾಂಗಾಗಿ ಭಗವಂತ° ಹೇಳುತ್ತ° – ಅತ್ಯಂತ ಮೂಢರು, ನರಾಧಮರು, ಭ್ರಮಿತರಾದ ಊಹಾತ್ಮಕ ಚಿಂತಕರು, ಬಹಿರಂಗ ನಾಸ್ತಿಕರು – ಇವೆಲ್ಲ ಶರಣಾವುತ್ತವಿಲ್ಲೆ. ಇದಕ್ಕೆ ಅವರ ಜೀವ ಸ್ವಭಾವವೇ ಕಾರಣ. ಹೀಂಗಿರ್ತವಕ್ಕೆ ಅಧಾತ್ಮ ಪ್ರಪಂಚಕ್ಕೆ ಕಾಲುಮಡುಗಲೂ ಅವಕಾಶ ಇರ್ತಿಲ್ಲೆ.

ಇವಿಷ್ಟು ದುಷ್ಕೃತಿಗಳ ಬಗ್ಗೆ. ಹಾಂಗಾರೆ ಸುಕೃತಿಗಳ ಬಗ್ಗೆ..? –

ಶ್ಲೋಕ

ಚತುರ್ವಿಧಾ ಭಜಂತೇ ಮಾಂ ಜನಾಃ ಸುಕೃತಿನೋರ್ಜುನ ।
ಆರ್ತೋ ಜಿಜ್ಞಾಸುರರ್ಥಾರ್ಥೀ ಜ್ಞಾನೀ ಚ ಭರತರ್ಷಭ ॥೧೬॥

 ಪದವಿಭಾಗ

ಚತುಃ-ವಿಧಾಃ ಭಜಂತೇ ಮಾಮ್ ಜನಾಃ ಸುಕೃತಿನಃ ಅರ್ಜುನ । ಆರ್ತಃ ಜಿಜ್ಞಾಸುಃ ಅರ್ಥಾರ್ಥೀ ಜ್ಞಾನೀ ಚ ಭರತರ್ಷಭ

ಅನ್ವಯ

ಹೇ ಭರತರ್ಷಭ! ಅರ್ಜುನ!, ಆರ್ತಃ ಜಿಜ್ಞಾಸುಃ ಅರ್ಥಾರ್ಥೀ (ಅರ್ಥ-ಅರ್ಥೀ) ಜ್ಞಾನೀ ಚ ಇತಿ ಚತುಃ-ವಿಧಾಃ ಸುಕೃತಿನಃ ಜನಾಃ ಮಾಂ ಭಜಂತೇ ।

ಪ್ರತಿಪದಾರ್ಥ

ಹೇ ಭರತರ್ಷಭ! ಅರ್ಜುನ! – ಏ ಭರತವಂಶಲ್ಲಿ ಶ್ರೇಷ್ಠನಾದ ಅರ್ಜುನನೇ!, ಆರ್ತಃ – ದುಃಖಿ, ಜಿಜ್ಞಾಸುಃ – ವೀಚಾರಶೀಲ°, ಅರ್ಥಾರ್ಥೀ – ಭೌತಿಕ ಲಾಭಾಪೇಕ್ಷಿ, ಜ್ಞಾನೀ – ವಿಷಯಂಗಳ ಯಥಾಸ್ಥಿತಿಲಿ ತಿಳುದವ°, ಚ – ಕೂಡ, ಇತಿ – ಹೀಂಗೆ, ಚತುಃ-ವಿಧಾಃ – ನಾಲ್ಕು ಬಗೆಯ, ಸುಕೃತಿನಃ – ಪುಣ್ಯವಂತರಾದ, ಜನಾಃ – ಜನಂಗೊ, ಮಾಮ್ – ಎನ್ನ, ಭಜಂತೇ – ಭಜಿಸುತ್ತವು (ಸೇವೆಮಾಡುತ್ತವು/ಪೂಜಿಸುತ್ತವು).

ಅನ್ವಯಾರ್ಥ

ಏ ಭರತವಂಶಲ್ಲಿ ಶ್ರೇಷ್ಠನಾದ ಅರ್ಜುನ°!, ದುಃಖಿಗೊ, ಜಿಜ್ಞಾಸುಗೊ, ಅರ್ಥಾರ್ಥಿಗೊ, ಜ್ಞಾನಿಗೊ ಹೀಂಗೆ ನಾಲ್ಕು ಬಗೆಯ ಪುಣ್ಯವಂತರುಗೊ ಎನ್ನ ಸೇವೆ ಮಾಡುತ್ತವು / ಎನ್ನ ಪೂಜಿಸುತ್ತವು (ಎನಗೆ ಶರಣಾವ್ತವು).

ತಾತ್ಪರ್ಯ / ವಿವರಣೆ

ಶಾಸ್ತ್ರಂಗಳ ನಿಯಂತ್ರಕ ತತ್ವಂಗಳ ನೈತಿಕ ಮತ್ತೆ ಸಾಮಾಜಿಕ ನಿಯಮಂಗಳನ್ನೂ ಅನುಸರುಸುವವಕ್ಕೆ ‘ಸುಕೃತಿನಃ’  ಹೇಳಿ ಹೆಸರು. ಇವು ಭಗವದ್ಪ್ರೀತಿ ಸಂಪಾಲುಸಲೆ ಕರ್ಮವ ಮಾಡುವವು. ಇವರಲ್ಲಿ ನಾಲ್ಕು ವಿಧ – ಆರ್ತಃ – ದುಃಖಿಗೊ – ಕಷ್ಟಲ್ಲಿ ಸಿಲುಕಿ ಯಾತನೆಯ ಅನುಭವುಸುವವ°, ಅರ್ಥಾರ್ಥೀ – ಪೈಸೆಯ ಅಡಚಣೆಲಿಪ್ಪವ°- ಪೈಸೆ ಸಂಪಾಲುಸಲೆ ಹೊಣವವ°, ಜಿಜ್ಞಾಸು – ಸತ್ಯವ ತಿಳ್ಕೊಳ್ಳೆಕು ಹೇಳ್ವ ಕುತೂಹಲ ಇಪ್ಪವ°, ಜ್ಞಾನೀ – ಸತ್ಯದ ಯಥಾಸ್ಥಿತಿಯ ಅರ್ತವ°. ಇವ್ವು ಭಗವಂತನ ಭಕ್ತಿಸೇವೆಗೆ ಬೇರೆ ಬೇರೆ ಸ್ಥಿತಿಗಳಲ್ಲಿ ಬತ್ತವು. ಇವು ಸುರುವಿಲ್ಲಿ ಪರಿಶುದ್ಧ ಭಕ್ತರಲ್ಲ. ಇವಕ್ಕೆ ಭಕ್ತಿಸೇವೆಗೆ ಬದಲಾಗಿ ಯಾವುದೋ ಆಕಾಂಕ್ಷೆಯ ನೆರೆವೇರೆಕು ಬೇಳ್ತ ಬಯಕೆ ಇರ್ತು. ನಿಜವಾದ ಪರಿಶುದ್ಧ ಭಕ್ತಿಗೆ ಯಾವುದೇ ಆಕಾಂಕ್ಷೆ ಅಥವಾ ಲೌಕಿಕ ಲಾಭದ ಬಯಕೆ ಇರುತ್ತಿಲ್ಲೆ. ಆದರೆ ಈ ನಾಲ್ಕು ಬಗೆಯ ಜನಂಗೊ ಭಕ್ತಿಸೇವೆ ಮಾಡ್ಳೇಳಿ ಭಗವಂತನ ಹತ್ರೆ ಬಂದು ಪರಿಶುದ್ಧ ಭಕ್ತನೊಬ್ಬನ ಸಹಯೋಗಂದ ಸಂಪೂರ್ಣವಾಗಿ ಪರಿಶುದ್ಧರಾದಪ್ಪಗ ತಾವೂ ಪರಿಶುದ್ಧ ಭಕ್ತರಾವ್ತವು. ಹೀಂಗೆ ಯಾವುದೋ ಆಕಾಂಕ್ಷೆಂದ ಸುರುವಾಗಿ ಅಕಸ್ಮಾತ್ ಪರಿಶುದ್ಧ ಭಕ್ತನೊಬ್ಬನ ಸಂಪರ್ಕಕ್ಕೆ ಬಂದಪ್ಪಗ ಪರಿಶುದ್ಧ ಭಕ್ತರಾವುತ್ತವು.

ಫಲಾಪೇಕ್ಷಿತ ಕರ್ಮಂಗಳಲ್ಲಿ ಸದಾ ಮುಳುಗಿಪ್ಪವ್ವು ಐಹಿಕವಾಗಿ ಕಷ್ಟಲ್ಲಿಪ್ಪಗ ಭಗವಂತನ ಹತ್ರೆ ಬತ್ತವು. ಹಾಂಗೆ ಮುಂದಂಗೆ ಪರಿಶುದ್ಧ ಭಕ್ತರೊಂದಿಂಗೆ ಸೇರಿಗೊಳ್ತವು. ಅವು ತಮ್ಮ ಬೇನೆಯ ಕಾರಣಂದ ಭಗವದ್ಭಕ್ತರಾವುತ್ತವು. ಹತಾಶೆಲಿಪ್ಪವೂ ಕೂಡ ಅಕೇರಿಗೆ ಭಕ್ತರ ಸಹವಾಸಂದ ಭಗವಂತನ ವಿಷಯವ ತಿಳ್ಕೊಂಬಲೆ ಕುತೂಹಲವುಳ್ಳವರಾವುತ್ತವು. ಇದೇರೀತಿ ಒಣಕ್ಕು ತತ್ತ್ವಶಾಸ್ತ್ರಜ್ಞರು ಜ್ಞಾನದ ಎಲ್ಲ ಕ್ಷೇತ್ರಂಗಳಲ್ಲಿ ನಿರಾಶರಾದಪ್ಪಗ ಭಗವಂತನ ವಿಷಯಲ್ಲಿ ತಿಳ್ಕೊಂಬಲೆ ಬಯಸಿ ಮತ್ತೆ ಭಗವದ್ಭಕ್ತರಾವುತ್ತವು. ಒಟ್ಟಿಲ್ಲಿ ಈ ರೀತಿಯಾಗಿ ದುಃಖಿಗೊ, ಜಿಜ್ಞಾಸುಗೊ, ಜ್ಞಾನಿಗೊ ಮತ್ತೆ ಪೈಸೆ ಹಂಬಲವಿಪ್ಪವ್ವು ಹೇಳಿ ನಾಲ್ಕು ಬಗೆಯ ಮನುಷ್ಯರು ಅಕೇರಿಗೆ ಐಹಿಕ ಬಯಕೆಂದ ದೂರವಾಗಿ, ಐಹಿಕ ಪ್ರತಿಫಲಕ್ಕೂ, ಆಧ್ಯಾತ್ಮಿಕ ಉತ್ಕರ್ಷಕ್ಕೂ ಸಂಬಂಧ ಇಲ್ಲೆ ಹೇಳ್ವದರ ಅರ್ಥಮಾಡಿಗೊಂಡಪ್ಪಗ ಪರಿಶುದ್ಧ ಭಕ್ತರಾವುತ್ತವು. ಇಂತಹ ಶುದ್ಧ ಹಂತವ ತಲುಪುವಲ್ಲಿವರೇಂಗೆ ಭಗವಂತನ ಆಧ್ಯಾತ್ಮಿಕ ಸೇವೆಲಿ ನಿರತರಾದ ಭಕ್ತರಿಂಗೆ ಫಲಾಪೇಕ್ಷೆಯ ಕರ್ಮಂಗೊ , ಐಹಿಕ ವಿದ್ಯೆಯ ಅನ್ವೇಷಣೆ ಇತ್ಯಾದಿಗಳ ಮಾಲಿನ್ಯ ಇದ್ದೇ ಇರುತ್ತು. ಮನುಷ್ಯ° ಪರಿಶುದ್ಧ ಭಕ್ತಿಸೇವೆಯ ಹಂತಕ್ಕೆ ಬರೆಕ್ಕಾರೆ ಮದಾಲು ಇವೆಲ್ಲವನ್ನೂ ದಾಂಟೆಕು. 

ಬನ್ನಂಜೆಯವು ಈ ಭಾಗವ ಇನ್ನೂ ಸರಳವಾಗಿ ವಿವರುಸುತ್ತವು- ಭಗವಂತ° ಈ ಮದಲು ದುಷ್ಕೃತಿಗಳ ಬಗ್ಗೆ ಹೇಳಿಕ್ಕಿ ಇಲ್ಲಿ ಈಗ ಸುಕೃತಿಗಳ ಬಗ್ಗೆ ವಿವರುಸುತ್ತ°. ಭಗವಂತನ ಕಡೇಂಗೆ ಸಾಗುತ್ತದು ಒಂದು ಸರಳರೇಖೆಯ ದಾರಿ ಇದ್ದ ಹಾಂಗೆ. ಅದಕ್ಕೆ ಕವಲು ದಾರಿ ಇಲ್ಲೆ. ಈ ಸರಳರೇಖೆಲಿ ಭಗವಂತಂಗೆ ಬೆನ್ನು ಹಾಕಿ ಹೋಪವ್ವು ಸ್ವಭಾವತಃ ದುಷ್ಕೃತಿಗೊ. ಭಗವಂತಂಗೆ ಬೆನ್ನು ಹಾಕಿ ಹೋಗಿ ಮುಂದೆ ಮತ್ತೆ ಅರಿವು (ತಿಳುವಳಿಕೆ) ಬಂದು ಪುನಃ ಭಗವಂತನ ಕಡೆಂಗೆ ಮೋರೆ ಹಾಕುವವು ಮದಲು ದುಷ್ಕೃತಿಗೊ ಆಗಿದ್ದು ಈಗ ಸುಕೃತಿಗೊ ಆವುತ್ತವು. ಇನ್ನು ಭಗವಂತನತ್ರೆ ಮೋರೆಮಾಡಿ ಸಾಗುವವ್ವು ಸ್ವಭಾವತಃ ಸುಕೃತಿಗೊ. ಇವು ದೇವರ ನಂಬಿಗೊಂಡು ಪೂಜಿಸುತ್ತವು. ಈ ಸುಕೃತಿಗಳಲ್ಲಿ ನಾಲ್ಕು ವಿಧ. ೧.ಆರ್ತಃ ೨. ಜಿಜ್ಞಾಸುಃ, ೩. ಅರ್ಥ ಅರ್ಥೀ ೪. ಜ್ಞಾನೀ. 

ಮನುಷ್ಯ° ಯಾವುದೋ ತೊಂದರಗೆ ಸಿಕ್ಕಿಗೊಂಡು ದುಃಖಕ್ಕೆ ಸಿಲುಕಿ ಪರಿಹಾರ ಕೋರಿ ದೇವರ ಪ್ರಾರ್ಥನೆ ಮಾಡುವವ° – ಆರ್ತ°. ಈ ಭಕ್ತಿಲಿ ಅತ್ಯಂತ ಕೆಳಮಟ್ಟಂದ ಮುಂದೆ ಶ್ರೇಷ್ಠ ಮಟ್ಟವ ಕಾಂಬಲೆಡಿಗು. ‘ಸಂಕಟ ಬಪ್ಪಗ ವೇಂಕಟರಮಣ’ ಹೇಳ್ತಾಂಗೆ ಇದು ಅತ್ಯಂತ ಕೆಳಮಟ್ಟದ ಆರ್ತಭಕ್ತಿ. ದ್ರೌಪದಿ ನಿತ್ಯ ಭಗವಂತನ ಪೂಜಿಸಿಗೊಂಡಿದ್ದರೂ ಮಾನಭಂಗ ಪ್ರಸಂಗ ಎದುರಾದಪ್ಪಗ ಕೃಷ್ಣನ ಕೂಗಿದ್ದು ಆರ್ತಭಕ್ತಿ, ಮೊಸಳೆ ತನ್ನ ಕಾಲು ಕಚ್ಹಿಹಿಡುದಪ್ಪಗ ಗಜೇಂದ್ರ ಮಾಡಿದ್ದು ಆರ್ತಭಕ್ತಿ. ಆರ್ತಭಕ್ತಿಲಿ ಇನ್ನೊಂದು ವಿಷಯವೂ ಅಡಕವಾಗಿದ್ದು. ಸಾಮಾನ್ಯವಾಗಿ ನವಗೆ ಸುಖ ಇಪ್ಪಗ ನವಗೆ ಭಗವಂತನ ನೆಂಪು ಆವುತ್ತಿಲ್ಲೆ. ನಮ್ಮ ಶಕ್ತಿ ಸಂಪತ್ತು ಎಲ್ಲವೂ ನಮ್ಮ ದುಡಿಮೆಯ ಫಲ ಹೇಳಿ ಗ್ರೇಶಿಗೊಂಡಿರುತ್ತು. ದೇವರ ನೆಂಪು ಅಂಬಗ ಆವ್ತಿಲ್ಲೆ. ಎಂದಾರು ಕಷ್ಟ ಬಂದಪ್ಪಗ ಕೂಡ್ಳೆ ಭಗವಂತನ ನೆಂಪು ಆವ್ತು , ‘ಯೇ ದೇವರೇ ಎನಗೆಂತಕ್ಕೆ ಈ ಕಷ್ಟವ ಕೊಟ್ಟೆ’ ಹೇಳಿ ಅವನ ಮೇಗೆಯೇ ದೂರು ಹಾಕುತ್ಸು!. ಮತ್ತೆ ಪರಿಹಾರದ ದಾರಿ ಕಾಣದ್ರೆ ಅರ್ಧಂಬರ್ಧ ತಿಳುದವರತ್ರೆ ಕೇಳುವದು. ಅವು ಅವಕ್ಕೆ ಗೊಂತಿಪ್ಪ ಅಲ್ಪ ಜ್ಞಾನಕ್ಕೆ ಕೈಕಾಲು ಕೂಡುಸಿ ರಂಜಿಸಿ ಮತ್ತೂ ಭ್ರಮೆಗೊಳುಸುವುದು. ಇದೇ ಏವುದರನ್ನೂ ಬಗೆಹರಿಯದ್ರೆ ಅಕೇರಿಗೆ ಜೋಯ್ಸರಲ್ಲಿಗೆ ಹೋವುತ್ಸು. ಅವು ಪ್ರಶ್ನೆ ಮಡುಗಿ ಶಾಂತಿ, ಹವನ , ನವಗ್ರಹ ಪೂಜೆ, ನಾಗಾರಾಧನೆ, ಸೇವೆ , ಬಲಿ ಹೇಳಿ ದೊಡ್ಡ ಪಟ್ಟಿ ಕೊಡುತ್ತವು. ಇಲ್ಲಿ ಮುಖ್ಯವಾಗಿ ಅವರ ಮೇಗೆ ದೋಷರೋಪ ಮಾಡ್ಳೆ ಆವ್ತಿಲ್ಲೆ. ಭಕ್ತನ ಸರಿದಾರಿಗೆ ತಪ್ಪ ಕಾರ್ಯವ ಅವು ಮಾಡುವದು. ಈ ಪ್ರಪಂಚ ಭಗವಂತನದ್ದು, ಅವನ ಹೊರತು ಬೇರೆ ಇನ್ನೊಂದಿಲ್ಲೆ ಹೇಳ್ವದು ಗೊಂತಿಪ್ಪದೇ. ಬಾಕಿ ಎಲ್ಲ ದೇವರುಗಳೂ ಅವನ ಅಧೀನ. ಆದರೆ ಭಗವಂತನ ನೇರ ಸೇವೆ ಅಷ್ಟು ಸುಲಭವಲ್ಲ. ಹಲವು ಬಗೆಯ ನಿಷ್ಠೆ ಮತ್ತು ಸತತ ಪ್ರಯತ್ನ ಅನನ್ಯ ಭಕ್ತಿ ಇದ್ದರಷ್ಟೇ ಎಡಿಗಷ್ಟೆ. ಅದಕ್ಕೆ ಬೇಕಾಗಿ ಭಗವಂತನ ಅಂಶವೇ ಆಗಿಪ್ಪ ವಿವಿಧ ದೇವತೆಗಳ ಮೂಲಕ ಭಗವಂತನ ಸೇವೆ ಮಾಡುವದು ಹೇಳಿ ತಿಳ್ಕೊಳ್ಳೆಕ್ಕು. ದೇವಿ ಕೋಪಗೊಂಡಿದು, ದೇವರು ಮುನಿಸಿದ್ದು, ಶಾಪಕೊಟ್ಟದು ಹೇಳ್ವ ಮೂಢತೆಗೆ ಹೋಪಲಾಗ. ತನ್ನ ಪೂರ್ವಕರ್ಮದ ಫಲಂದಾಲಾಗಿ ಕಷ್ಟವ ಅನುಭವುಸುವದು. ಅದಕ್ಕೀಗ ಭಗವಂತನ ಪ್ರಸನ್ನೀಕರುಸುವದು ಒಂದೇ ದಾರಿ. ಭಗವಂತನ ಪ್ರಸನ್ನೀಕರಿಸಿದರೆ ಪೂರ್ವಕರ್ಮಫಲ ಕಮ್ಮಿ ಆವ್ತೋ ಕೇಳಿರೆ – ‘ಇಲ್ಲೆ’. ಅದು ಪ್ರಾರಬ್ಧ. ಪ್ರಾರಬ್ಧವ ಅನುಭವುಸಲೇ ಬೇಕು. ಮತ್ತೆ ಇಪ್ಪದು ಸಂಚಿತ ಮತ್ತು ಆಗಾಮಿ. ಈ ಸಂಚಿತ, ಆಗಾಮಿಯ ಹಗುರಮಾಡ್ಳೆ ಅರ್ಥಾತ್ ಮುಂದಂಗೆ ದಾರಿ ಸುಗಮ ಅಪ್ಪಲೆ, ಪ್ರಕೃತಲ್ಲಿ ದುಷ್ಕೃತಿಗೊ ಆಗದ್ದಾಂಗೆ ತಡವಲೆ ಭಕ್ತಿಸೇವೆಲಿ ನಿರತನಾಗಿ ಸುಕೃತಿಗೊ ವೃದ್ಧಿಯಪ್ಪಲೆ ಭಗವದ್ ಸೇವೆಲಿ ನಿರತನಪ್ಪದು ಪರಿಹಾರ. ಒಂದರಿ ಭಗವಂತ ಪ್ರಸನ್ನನಾದರೆ ಅವನ ಪೂರ್ವ ಪಾಪಂಗೊ ಎಲ್ಲವೂ ತೊಳದು ಹೋವ್ತು, ಅವ° ಪಾವನನಾವ್ತ°, ಮುಕ್ತಿಪಥಲ್ಲಿ ಮುನ್ನಡವಲೆ ಯೋಗ್ಯನಾವುತ್ತ°. ಆದರೆ, ಪಾಪ (ಪಾರಬ್ಧಕರ್ಮಫಲ) ತೊಲಗದ್ದೆ ಭಗವಂತ° ಪ್ರಸನ್ನನಾವುತ್ತನೂ ಇಲ್ಲೆ.  ಕಾಲ ಪಕ್ವ ಆದಪ್ಪಗ ಜೀವಿ ಅದರ ಅನುಭವಿಸಿ ಮುಗುದು ತಾನಾಗಿಯೇ ಭಗವಂತನ ಸೇವಗೆ ಮನಸ್ಸಿನ ತೊಡಗುಸುವದು. ಅಂಬಗ, ಕಾಲಪಕ್ವ ಅಪ್ಪದು ಹೇಳಿರೆ ತನ್ನ ದುಷ್ಕೃತ ಫಲಂದ ಬಿಡುಗಡೆ ಹೊಂದುವ ಕಾಲ. ಆ ಕಾಲಕ್ಕೆ ಜೀವಿಗೆ ಭಗವಂತನ ಸೇವೆ ಮಾಡೆಕು ಹೇಳ್ವ ಮಾನಸಿಕ ಸ್ಥಿತಿ ಉಂಟಾವ್ತು.  

ಆರ್ತರು ಈ ರೀತಿಯಾದರೆ ಇನ್ನು ಜಿಜ್ಞಾಸುಗೊ ಜ್ಞಾನಕ್ಕಾಗಿ ಭಗವಂತನ ಭಕ್ತಿಸೇವೆಲಿ ತೊಡಗುತ್ತವು. ಅಲ್ಲಿ ಅವನ ಆಕಾಕ್ಷೆ ಇಪ್ಪದು ವಿಷಯದ ಮೇಲೆ ಇಪ್ಪ ಕುತೂಹಲ ಮಾಂತ್ರ. ಹಾಂಗೇ ಅರ್ಥಾರ್ಥಿಗೊ, ಐಹಿಕ ಸಂಪತ್ತಿಂಗೆ, ಇನ್ನೇನನ್ನೋ ಪಡವಲೆ ಭಗವಂತಂಗೆ ಶರಣಾವುತ್ತವು.

ಇನ್ನು, ಈ ಮೂರು ರೀತಿಯ ಭಕ್ತರಿಂದ ಭಿನ್ನವಾದ್ದು ನಾಲ್ಕನೇಯ ಭಕ್ತ° – ‘ಜ್ಞಾನೀ’. ಅವ° ಎಂತ ಬೇಕು, ಎಂತ ಬೇಡ ಹೇಳ್ವದರ ಯೋಚಿಸುತ್ತನಿಲ್ಲೆ. ಅವ° ಭಗವಂತನ ಮಹಿಮೆಯ ಸಂಪೂರ್ಣ ತಿಳುದವ°, ಸಹಜವಾಗಿ ಭಗವಂತನ ಅನನ್ಯ ಭಕ್ತಿಂದ ಪ್ರೀತಿಸುತ್ತ°. ಇವನಲ್ಲಿ ಏಕಭಕ್ತಿ ಹಾಂಗೇ ನಿರಂತರ ಭಕ್ತಿ. ಯಾವುದೇ ಐಹಿಕ ಫಲಾಪೇಕ್ಷೆ ಇಲ್ಲದ್ದೆ ಇವು ಭಗವಂತನ ಪೂಜಿಸುವದು.

ಶ್ಲೋಕ

ತೇಷಾಂ ಜ್ಞಾನೀ ನಿತ್ಯಯುಕ್ತ ಏಕಭಕ್ತಿರ್ವಿಶಿಷ್ಯತೇ ।
ಪ್ರಿಯೋ ಹಿ ಜ್ಞಾನಿನೋsತ್ಯರ್ಥಂ ಅಹಂ ಸ ಚ ಮಮ ಪ್ರಿಯಃ ॥೧೭॥

ಪದವಿಭಾಗ

ತೇಷಾಮ್ ಜ್ಞಾನೀ ನಿತ್ಯಯುಕ್ತಃ ಏಕ-ಭಕ್ತಿಃ ವಿಶಿಷ್ಯತೇ ।   ಪ್ರಿಯಃ ಹಿ ಜ್ಞಾನಿನಃ ಅತ್ಯರ್ಥಮ್ ಅಹಮ್ ಸಃ ಚ ಮಮ ಪ್ರಿಯಃ ॥

ಅನ್ವಯ

ತೇಷಾಂ ನಿತ್ಯ-ಯುಕ್ತಃ ಏಕ-ಭಕ್ತಿಃ ಜ್ಞಾನೀ ವಿಶಿಷ್ಯತೇ । ಅಹಂ ಜ್ಞಾನಿನಃ ಅತ್ಯರ್ಥಂ ಪ್ರಿಯಃ ಅಸ್ಮಿ । ಸಃ [ಜ್ಞಾನೀ] ಚ ಮಮ ಪ್ರಿಯಃ ಅಸ್ತಿ ।

ಪ್ರತಿಪದಾರ್ಥ

ತೇಷಾಮ್ – ಅವರುಗಳಲ್ಲಿ, ನಿತ್ಯ-ಯುಕ್ತಃ – ಸದಾನಿರತನಾಗಿಪ್ಪ, ಏಕ-ಭಕ್ತಿಃ ಜ್ಞಾನೀ – ಒಂದೇ ಒಂದಾದ ಭಕ್ತಿಯುಳ್ಳ ಜ್ಞಾನೀ, ವಿಶಿಷ್ಯತೇ – ವಿಶಿಷ್ಟನಾಗಿರುತ್ತ°, ಅಹಮ್ – ಆನು, ಜ್ಞಾನಿನಃ ಅತ್ಯರ್ಥಮ್ ಪ್ರಿಯಃ ಅಸ್ಮಿ – ಜ್ಞಾನಿಯ ಅತ್ಯಂತ ಪ್ರೀತಿಪಾತ್ರನಾದವ° ಆಗಿದ್ದೆ, ಸಃ  ಚ – ಅವ° (ಅವನೂ) ಕೂಡ, ಮಮ ಪ್ರಿಯಃ ಅಸ್ತಿ – ಎನ್ನ ಪ್ರೀತಿಪಾತ್ರನಾದವ° ಆಗಿದ್ದ°.

ಅನ್ವಯಾರ್ಥ

ಅವರುಗಳಲ್ಲಿ ಸದಾ ಒಂದೇ ಭಕ್ತಿಲಿಪ್ಪ ಜ್ಞಾನೀ ವಿಶಿಷ್ಟನಾಗಿರುತ್ತ° ( ಶ್ರೇಷ್ಠನಾಗಿರುತ್ತ°). ಅಂತಹ ಜ್ಞಾನಿಗೆ ಆನು ಅತ್ಯಂತ ಪ್ರೀತಿಪಾತ್ರನು ಹಾಂಗೇ ಅವ° ಎನಗೂ ಪ್ರೀತಿಪಾತ್ರ° ಆಗಿರ್ತ°.

ತಾತ್ಪರ್ಯ / ವಿವರಣೆ

ದುಃಖಲಿಪ್ಪವು, ಕುತೂಹಲಿಗೊ, ಪೈಸೆ ಇಲ್ಲದ್ದವು ಮತ್ತೆ ಪರಮಸತ್ಯವ ಅನ್ವೇಷಿಸುತ್ತವು ( ಆರ್ತಃ, ಜಿಜ್ಞಾಸುಃ, ಅರ್ಥಾರ್ಥೀ, ಜ್ಞಾನೀ) ಎಲ್ಲ ಐಹಿಕ ಅಪೇಕ್ಷೆಗಳಿಂದ ಮುಕ್ತನಾದವ° ಭಗವಂತನ ಪರಿಶುದ್ಧ ಭಕ್ತನಾವುತ್ತ°. ಇವರಲ್ಲಿ ಸಂಪೂರ್ಣಜ್ಞಾನ ಇಪ್ಪವ°, ಏಕಭಕ್ತಿಂದ ಎನ್ನನ್ನೇ ಪೂಜಿಸುತ್ತ°. ಅಂತಹ ಜ್ಞಾನಿ ಅತ್ಯಂತ ಶ್ರೇಷ್ಠನಾಗಿದ್ದ°. ಅವ° ಅವಿರತವಾಗಿ ಭಗವಂತನ ಭಕ್ತಿಸೇವೆಲಿ ತೊಡಗಿರುತ್ತ, ಅವಂಗೆ ಭಗವಂತ° ಅತ್ಯಂತ ಪ್ರೀತಿಪಾತ್ರನಾಗಿರುತ್ತ°, ಹಾಂಗೇ, ಅಂತಹ ಜ್ಞಾನೀ ಭಗವಂತಂಗೂ ಅತ್ಯಂತ ಪ್ರೀತಿಪಾತ್ರನಾಗಿರುತ್ತ°. ಜ್ಞಾನಾನ್ವೇಷಣೆಲಿ ತೊಡಗಿಪ್ಪ ಮನುಷ್ಯಂಗೆ ತಾನು ಐಹಿಕ ದೇಹಂದ ಬೇರೆ ಹೇಳ್ವದು ಅರ್ಥ ಆವುತ್ತು. ಇನ್ನೂ ಮುಂದೆ ಹೋದಪ್ಪಗ ಅವಂಗೆ ನಿರಾಕಾರ ಬ್ರಹ್ಮನ ಮತ್ತು ಪರಮಾತ್ಮನ ಅರಿವು ಉಂಟಾವ್ತು. ಸಂಪೂರ್ಣವಾಗಿ ಪರಿಶುದ್ಧನಾದಪ್ಪಗ ಭಗವಂತನ ನಿರಂತರ ಸೇವಕನಾಗಿಪ್ಪದೇ ತನ್ನ ಸಹಜ ಸ್ವರೂಪ ಹೇಳ್ವ ಜ್ಞಾನವ ಅವ° ಪಡೆತ್ತ°. ಅವಕ್ಕೆ ಐಹಿಕ ಕಲ್ಮಶಂಗೊ ಅಂಟುತ್ತಿಲ್ಲೆ. ಆಧ್ಯಾತ್ಮದ ಪ್ರಥಮ ಹಂತಲ್ಲಿ ಭಗವಂತನ ಸಂಪೂರ್ಣ ಜ್ಞಾನವ ಪಡದು ಅದೇ ಕಾಲಲ್ಲಿ ಭಗವಂತನ ಭಕ್ತಿಸೇವೆಲಿ ನಿರತನಾಗಿಪ್ಪವ ಭಗವಂತಂಗೆ ಅತ್ಯಂತ ಪ್ರಿಯನಾಗಿರುತ್ತ°.

ಬನ್ನಂಜೆ ಹೇಳುತ್ತವು – ಇಲ್ಲಿ ‘ಏಕಃ ಭಕ್ತಿಃ’ ಹೇಳಿ ಹೇಳಿದ್ದು. ಏಕಭಕ್ತಿ ಹೇಳಿರೆ ಒಂದೇ ಒಂದು ಭಕ್ತಿ, ಒಬ್ಬನಲ್ಲೇ ಭಕ್ತಿ. ಹಾಂಗೆ ಹೇಳಿರೆ ಎಲ್ಲವನ್ನೂ ಎಲ್ಲೋರನ್ನೂ ಬಿಟ್ಟು ಭಗವಂತನ ಒಬ್ಬನ ಮಾತ್ರ ನಂಬುತ್ಸು ಹೇದಲ್ಲ. ಜೋಯಿಸರು ಹೇಳುತ್ತವು ನವಗ್ರಹ ಪೂಜೆ ಮಾಡು, ನಾಗ ಆರಾಧನೆ ಮಾಡು …ಇತ್ಯಾದಿ. ಅಂಬಗ ಏಕಭಕ್ತಿ ಹೇಳಿರೆ ಇದೆಲ್ಲ ಮಾಡದ್ದೆ ನೇರ ವಿಷ್ಣುಪೂಜೆ ಮಾಡುವದು ಅಲ್ಲ. ಭಗವಂತನ ಅಂಶವೇ ಆಗಿಪ್ಪ ಆ ಮೂಲಕ ಭಗವಂತನ ಪೂಜೆ ಮಾಡೆಕು ಹೇಳಿ ಅರ್ಥ. ಅಂತಿಮ ಗುರಿ ಮಾತ್ರ ಭಗವಂತ°. ಭಗವಂತನ ಸಮಸ್ತ ಪರಿವಾರದ ವೈಭವವ ನೆಂಪುಮಾಡಿಗೊಂಡು ಮಾಡುತ್ತ ಯಾವ ಪೂಜೆಯೂ ಶ್ರೇಷ್ಠಪೂಜೆ ಆವುತ್ತು. ಸಮಸ್ತ ದೇವತೆಗಳ ಸಹಿತನಾದ ಭಗವಂತನ ಉಪಾಸನೆಯೇ ಏಕಭಕ್ತಿ. ಭಗವಂತ° ಏಕಾಕಿ ಅಲ್ಲ. ಅವ° ಅನಂತ ಪ್ರಜಾಪತಿ. ಹಾಂಗಾಗಿ ಭಗವಂತನ ಪ್ರಧಾನವಾಗಿರಿಸಿಗೊಂಡು ಇತರ ದೇವತೆಗಳ ಭಗವಂತನ ಪರಿವಾರ ಹೇಳ್ವದರ ಅರ್ತುಗೊಂಡು ನಿಷ್ಠೆಂದ ಪೂಜೆ ಮಾಡುವದು. ಇದು ಭಗವಂತನ ಸೇರ್ಲೆ ಶ್ರೇಷ್ಥ ಮಾರ್ಗ. ಇದು ಶ್ರೇಷ್ಥ ಭಕ್ತಿ. ಹಾಂಗೇ ಭಗವಂತನ ಮರದು ಇತರ ದೇವತೆಗಳ ಪೂಜಿಸಿರೂ ಅದರ ಅವು ಸ್ವೀಕರುಸುತ್ತವಿಲ್ಲೆ, ಭಗವಂತಂಗೂ ಸೇರುತ್ತಿಲ್ಲೆ. ಹಾಂಗಾಗಿ ನಾವು ಏಕಭಕ್ತಿಲಿ ಭಗವಂತನ ಆರಾಧನೆ ಮಾಡೆಕು. ಗುರುಭಕ್ತಿ ಕೂಡ ಇದೇ ರೀತಿ. ಗುರುಭಕ್ತಿಲಿ ನಾವು ಕಾಣೆಕ್ಕಪ್ಪದು ಗುರುವಿನ ಅಂತರಂಗದೊಳ ಇಪ್ಪ ಭಗವಂತನ. ಜ್ಞಾನಿಯಾದವ° ಎಲ್ಲವುದರಲ್ಲಿಯೂ ಅದರ ಅಂತರ್ಯಾಮಿಯಾದ ಭಗವಂತನ ಕಂಡುಗೊಂಡು ಐಹಿಕ ಫಲಾಪೇಕ್ಷೆ ಇಲ್ಲದ್ದೆ ಏಕಭಕ್ತಿ ಮತ್ತೆ ನಿರಂತರ ಭಕ್ತಿಯ ತನ್ನಲ್ಲಿ ರೂಢಿಸಿಗೊಳ್ಳುತ್ತ°.

ಶ್ಲೋಕ

ಉದಾರಾಃ ಸರ್ವ ಏವೈತೇ ಜ್ಞಾನೀ ತ್ವಾತ್ಮೈವ ಮೇ ಮತಮ್ ।
ಆಸ್ಥಿತಃ ಸ ಹಿ ಯುಕ್ತಾತ್ಮಾ ಮಾಮೇವಾನುತ್ತಮಾಂ ಗತಿಮ್ ॥೧೮॥ 

ಪದವಿಭಾಗ

ಉದಾರಾಃ ಸರ್ವೇ ಏವ ಏತೇ ಜ್ಞಾನೀ ತು ಆತ್ಮಾ ಏವ ಮೇ ಮತಮ್ । ಆಸ್ಥಿತಃ ಸಃ ಹಿ ಯುಕ್ತ-ಆತ್ಮಾ ಮಾಮ್ ಏವ ಅನುತ್ತಮಾಮ್ ಗತಿಮ್ ॥

ಅನ್ವಯ

ಏತೇ ಸರ್ವೇ ಏವ ಉದಾರಾಃ ಸಂತಿ । ಜ್ಞಾನೀ ತು ಮಮ ಆತ್ಮಾ ಏವ ಅಸ್ತಿ ಇತಿ ಮೇ ಮತಂ । ಸಃ ಯುಕ್ತ-ಆತ್ಮಾ ಅನುತ್ತಮಾಂ ಗತಿಂ ಮಾಂ ಏವ ಆಸ್ಥಿತಃ ಹಿ ಅಸ್ತಿ ।

ಪ್ರತಿಪದಾರ್ಥ

ಏತೇ ಸರ್ವೇ – ಈ ಎಲ್ಲೋರೂ, ಏವ – ಖಂಡಿತವಾಗಿಯೂ, ಉದಾರಾಃ  ಸಂತಿ – ಉದಾರ ಹೃದಯವುಳ್ಳವು ಆಗಿದ್ದವು, ಜ್ಞಾನೀ ತು – ಜ್ಞಾನಲ್ಲಿಪ್ಪವ°ನಾದರೋ, ಮಮ ಆತ್ಮಾ ಏವ – ಎನ್ನಾಂಗೆಯೇ , ಅಸ್ತಿ ಇತಿ – ಇದ್ದ° ಹೇದು, ಮೇ ಮತಮ್ – ಎನ್ನ ಅಭಿಪ್ರಾಯ, ಸಃ – ಅವ°, ಯುಕ್ತ-ಆತ್ಮಾ – ಭಕ್ತಿಸೇವೆಲಿ ನಿರತನಾದವ°, ಅನುತ್ತಮಾಮ್ – ಅತ್ತ್ಯುತ್ತಮವಾದ, ಗತಿಮ್ ಮಾಮ್ ಏವ- ಗತಿಯಾದ ಎನ್ನನ್ನೇ, ಆಸ್ಥಿತಃ ಹಿ ಅಸ್ತಿ – ಆಶ್ರಯಸಿದವನೇ ಆವ್ತ° (ನೆಲೆಸಿದವನೇ ಆವ್ತ°).

ಅನ್ವಯಾರ್ಥ

ಮೇಗೆ ಹೇಳಿದ ನಾಲ್ಕುವಿಧ ಭಕ್ತಿಯ ಈ ಎಲ್ಲೋರೂ ಉತ್ತಮರೇ (ಉದಾರರು) ಆಗಿದ್ದವು. ಅದರಲ್ಲೂ ಜ್ಞಾನಿಯಾಗಿಪ್ಪವ° ಸಾಕ್ಷಾತ್ ಎನ್ನ ಸ್ವರೂಪವೇ. ಅವ° ಎಲ್ಲ ರೀತಿಲಿ ಎನ್ನನ್ನೇ ಅತೀ ಉತ್ತಮವಾದ ಗತಿ ಹೇಳ್ವ ಬಲವಾದ ಮನೋಸ್ಥಿತಿಲಿ ನೆಲೆಸಿರುತ್ತ°. 

ತಾತ್ಪರ್ಯ / ವಿವರಣೆ

ಪರಿಪೂರ್ಣ ಅರಿವಿಲ್ಲದ್ದವ್ವು ಭಗವಂತಂಗೆ ಅಪ್ರಿಯರು ಹೇಳಿ ಹೇಳಿದ್ದನಿಲ್ಲೆ ಭಗವಂತ°. ಇಲ್ಲಿ ಭಗವಂತ° ಹೇಳುತ್ತ° – ಭಕ್ತಿಸೇವೆಲಿ ನಿತರರಾಗಿಪ್ಪ ಅವು ಎಲ್ಲೋರು ಉದಾರರೇ ಆಗಿದ್ದವು. ಯಾವ ಉದ್ದೇಶಂದಲಾದರೂ ಭಗವಂತನ ನಂಬಿ ಭಗವಂತನ ಹತ್ರೆ ಬಪ್ಪವ° ಮಹಾತ್ಮನೇ ಆವ್ತ. ಭಕ್ತಿಸೇವೆಂದ ಏನಾರು ಪ್ರಯೋಜನ ಪಡವಲೆ ಬಪ್ಪ ಭಕ್ತರನ್ನೂ ಭಗವಂತ ಸ್ವೀಕರುಸುತ್ತ°. ಇಲ್ಲಿ ಪ್ರೀತಿಯ ವಿನಿಮಯ ಇದ್ದು. ಭಗವಂತನ ಪ್ರೀತುಸುವದರಿಂದ ಅವು ಭಗವಂತನ ಯಾವುದಾರು ಐಹಿಕ ಲಾಭಕ್ಕಾಗಿ ಬೇಡುತ್ತವು, ಮತ್ತೆ ಅದರ ಪಡದಪ್ಪಗ ಅವಕ್ಕೆ ಎಷ್ಟು ತೃಪ್ತಿ ಆವ್ತು ಹೇಳಿರೆ ಮುಂದೆ ಅವ್ವೂ ಭಗವಂತನ ಭಕ್ತಿಸೇವೆಲಿ ಮುನ್ನೆಡೆತ್ತವು. ಅವರ ಆಧ್ಯಾತ್ಮ ಪ್ರಗತಿಗೆ ಭಗವಂತ ಪ್ರಚೋದನೆ ಕೊಡುತ್ತ°. ಆದರೆ, ಪರಿಪೂರ್ಣ ಕೃಷ್ಣಪ್ರಜ್ಞೆ (ಪರಿಪೂರ್ಣ ಜ್ಞಾನ) ಇಪ್ಪ ಭಕ್ತ° ಭಗವಂತಂಗೆ ಅತ್ಯಂತ ಪ್ರಿಯನಾದವ°. ಅವಂಗೆ ಭಗವಂತನ ಸೇವೆ, ಭಗವಂತನ ತೃಪ್ತಿ, ಭಗವಂತನ ಸಂತೋಷ ಒಂದೇ ಮುಖ್ಯ ಉದ್ದೇಶ. ಇಂತಹ ಭಕ್ತ° ಭಗವಂತನ ಸಂಪರ್ಕ ಪಡೆಯದ್ದೆ, ಅಥವಾ ಭಗವಂತನ ಭಕ್ತಿಸೇವೆಲಿ ಇರದ್ದೆ ಒಂದು ಕ್ಷಣವೂ ಕೂರ. ಹಾಂಗಾಗಿ ಅಂತಹ ಭಕ್ತರಲ್ಲಿ ಭಗವಂತಂಗೂ ಅತಿಶಯ ಪ್ರೀತಿ. ಭಗವಂತನೂ ಅಂತಹ ಭಕ್ತರ ಎಂದೂ ಕೈಬಿಡುತ್ತನಿಲ್ಲೆ. ಅವು ಭಗವಂತನಲ್ಲೆ ನೆಲೆಗೊಂಡಿರುತ್ತವು. ಭಗವಂತ ತನ್ನ ಹೃದಯಲ್ಲಿ ನೆಲೆಗೊಂಡಿದ್ದ° ಹೇಳ್ವದರ ಅವು ತಿಳುಕ್ಕೊಂಡಿರುತ್ತವು. ಅದರಿಂದ ಆಚಿಗೆ ಬೇರೇನೂ ಇಲ್ಲೆ ಹೇಳ್ವದರ ತಿಳಿದಿರುತ್ತವು. ಅಂತಹ ಭಕ್ತರು ‘ಮಮ ಪ್ರಿಯಃ’ – ಎನ್ನ ಅತ್ಯಂತ ಪ್ರೀತಿಪಾತ್ರರು ಹೇಳಿ ಭಗವಂತ ಇಲ್ಲಿ ಹೇಳುತ್ತ°.    

ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದು – ಭಗವಂತ° ಹೇಳುತ್ತ° – “ಭಕ್ತಿಮಾರ್ಗಲ್ಲಿ ನಡವ ಎಲ್ಲ ರೀತಿಯ ಸುಕೃತಿಗೊ ಉತ್ತಮವೇ. ಅದರಲ್ಲಿಯೂ ಜ್ಞಾನಿಯಾದರೋ ಎನಗೆ ತುಂಬಾ ಹತ್ತರೆ ಮತ್ತು ಆತ್ಮೀಯ”. ಜ್ಞಾನ ಇಲ್ಲದ್ದ ಭಕ್ತಿ ಪೂರ್ಣಭಕ್ತಿ ಆವುತ್ತಿಲ್ಲೆ. ಜ್ಞಾನಪೂರ್ವಕವಾಗಿ ಭಕ್ತಿ ಮಾಡುವವ° ಸರ್ತ ಭಗವಂತನನ್ನೇ ಹೋಗಿ ಸೇರುತ್ತ°. ಹಾಂಗಾಗಿ ಅದು ವಿಶಿಷ್ಟ / ಶ್ರೇಷ್ಥ ಭಕ್ತಿ. ಜ್ಞಾನಿಗೊ ಆರ್ತರಾಗಿಕ್ಕು, ಜಿಜ್ಞಾಸುಗೊ ಆಗಿಕ್ಕು, ಅರ್ಥಾರ್ಥಿಯಾಗಿಕ್ಕು. ಆದರೆ, ಆರ್ತರು, ಜಿಜ್ಞಾಸುಗೊ, ಅರ್ಥಾರ್ಥಿಗೊ ಜ್ಞಾನಿಗೆ ಆಗಿಕ್ಕು ಹೇಳಿ ಏನಿಲ್ಲೆ. ಜ್ಞಾನಿಗೆ ಸದೃಶವಾದ ಭಕ್ತಿ ಇನ್ನೊಂದಿಲ್ಲೆ. ಜ್ಞಾನಿಯ ಮನಸ್ಸು ಸದಾ ಭಗವಂತನಲ್ಲಿ ನೆಟ್ಟಿರುತ್ತು. ಭಕ್ತಿಯ ಮಾರ್ಗಲ್ಲಿ ಸಾಗುವ ಮನುಷ್ಯ° ಎಷ್ಟೇ ದೊಡ್ಡವ ಆಗಿದ್ದರೂ, ಎಲ್ಲೋರು ಭಕ್ತರೇ ಆಗಿದ್ದರೂ ಜ್ಞಾನಿ ಮಾತ್ರ ಭಗವಂತಂಗೆ ಅತೀ ಆತ್ಮೀಯ.

ಶ್ಲೋಕ

ಬಹೂನಾಂ ಜನ್ಮನಾಮಂತೇ ಜ್ಞಾನವಾನ್ಮಾಂ ಪ್ರಪದ್ಯತೇ ।
ವಾಸುದೇವಃ ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ ॥೧೯॥

ಪದವಿಭಾಗ

ಬಹೂನಾಮ್ ಜನ್ಮನಾಮ್ ಅಂತೇ ಜ್ಞಾನವಾನ್ ಮಾಮ್ ಪ್ರಪದ್ಯತೇ । ವಾಸುದೇವಃ ಸರ್ವಮ್ ಇತಿ ಸಃ ಮಹಾತ್ಮಾ ಸುದುರ್ಲಭಃ

ಅನ್ವಯ

ಜ್ಞಾನವಾನ್ ಬಹೂನಾಂ ಜನ್ಮನಾಮ್ ಅಂತೇ , ವಾಸುದೇವಃ ಸರ್ವಮ್ ಇತಿ (ಅನುಭೂಯ) ಮಾಂ ಪ್ರಪದ್ಯತೇ । ಸಃ  ಮಹತ್ಮಾ ಸುದುರ್ಲಭಃ ।

ಪ್ರತಿಪದಾರ್ಥ

ಜ್ಞಾನವಾನ್ – ಪೂರ್ಣಜ್ಞಾನಲ್ಲಿಪ್ಪವ°, ಬಹೂನಾಮ್ ಜನ್ಮನಾಮ್ – ಅನೇಕ ಜನ್ಮಂಗಳ, ಅಂತೇ – ತರುವಾಯ, ವಾಸುದೇವಃ – ವಾಸುವೇವನು (ದೇವೋತ್ತಮ ಪರಮ ಪುರುಷ°, ಭಗವಂತ°, ಕೃಷ್ಣ°) , ಸರ್ವಮ್ ಇತಿ – ಸರ್ವವೂ (ಎಲ್ಲವೂ) ಹೇದು (ಅನುಭೂಯ – ಅನುಭವಿಸಿ) ಮಾಮ್ – ಎನ್ನ, ಪ್ರಪದ್ಯತೇ – ಶರಣಾಗತನಾವುತ್ತ°, ಸಃ – ಆ, ಮಹಾತ್ಮಾ (ಮಹಾ-ಆತ್ಮಾ) – ಮಹಾತ್ಮನೂ, ಸುದುರ್ಲಭಃ – ಬಹು ವಿರಳ°. 

ಅನ್ವಯಾರ್ಥ

ಜ್ಞಾನಿಯೂ (ಜ್ಞಾನವಂತನೂ) ಕೂಡ ಅನೇಕ ಜನ್ಮಂಗಳ ಬಳಿಕ (ತರುವಾಯ) ಭಗವಂತನೊಬ್ಬನೇ ಸರ್ವಸ್ವವೂ ಹೇಳ್ವದರ ಯಥಾವತ್ತಾಗಿ ಕಂಡು ಎನಗೆ ಶರಣಾಗತನಾವುತ್ತ°. ಅಂತಹ ಜ್ಞಾನಿ ಕಾಂಬದು ಬಹು ಅಪರೂಪ.

ತಾತ್ಪರ್ಯ / ವಿವರಣೆ

ದೇವೋತ್ತಮ ಪರಮ ಪುರುಷ° ಆಧ್ಯಾತ್ಮಿಕ ಸಾಕ್ಷಾತ್ಕಾರದ ಕಟ್ಟಕಡೆಯ ಗುರಿ. ಅನೇಕ ಜನ್ಮಂಗಳ ಭಕ್ತಿಯಸೇವೆಯ ಬಳಿಕ ಆಧ್ಯಾತ್ಮಿಕ ವಿಧಿಗಳ ಸರಿಯಗಿ ಅರ್ತು ಮಾಡುವಾಗ ಜೀವಿಗೆ ಈ ದಿವ್ಯ ಪರಿಶುದ್ಧ ಜ್ಞಾನದ ಅನುಭವ ಆವುತ್ತು. ಅಷ್ಟು ಆಯೇಕ್ಕಾರೆ ಅನೇಕ ಜನಂಗಳೇ ಸಂದಿರುತ್ತು. ಆಧ್ಯಾತ್ಮಿಕ ಸಾಕ್ಷಾತ್ಕಾರದ ಪ್ರಾರಂಭದ ಹಂತಲ್ಲಿ ಸಾಧಕ° ಪ್ರಾಪಂಚಿಕ ಮೋಹವ ಕಳಕ್ಕೊಂಬಲೆ ಪ್ರಯತ್ನುಸುವಾಗ ನಿರಾಕಾರದ ಹೊಡೆಂಗೆ ರಜಾ ಒಲವು ಬತ್ತು. ಅದರ್ಲಿ ಇನ್ನೂ ಪ್ರಗತಿಯ ಸಾಧಿಸಿಯಪ್ಪಗ ಅವಂಗೆ ಆಧ್ಯಾತ್ಮಿಕ ಬದುಕಿನ ಚಟುವಟಿಕೆಳಲ್ಲಿ ತೀವ್ರ ಆಸಕ್ತಿ, ನಂಬಿಕೆ ಬಂದು ಸತ್ಯವ ಯಥಾವತ್ತಾಗಿ ತಿಳ್ಕೊಂಬಲೆ ಸಾಧ್ಯ ಆವ್ತು. ಭಗವಂತನೇ ಶ್ರೇಷ್ಠ°, ಅವನಲ್ಲದ್ದೆ ಬೇರೆಂತದೂ ಈ ಪ್ರಪಂಚಲ್ಲಿ ಇಲ್ಲೆ ಹೇಳ್ವ ಜ್ಞಾನ ಸತ್ಯವಾಗಿ ಅವನ ಪ್ರಜ್ಞಗೆ ಮೂಡುತ್ತು. ಭಗವಂತನೊಬ್ಬನೇ ಸರ್ವಸ್ವ ಹೇಳ್ವ ಪರಿಜ್ಞಾನಲ್ಲಿ ಭಗವಂತಂಗೆ ಅವ° ಸಂಪೂರ್ಣ ಶರಣಾವುತ್ತ. ಐಹಿಕ ಜಗತ್ತು ಆಧ್ಯಾತ್ಮಿಕ ವೈವಿಧ್ಯದ ವಕ್ರಪ್ರತಿಬಿಂಬ, ಪ್ರತಿಯೊಂದಕ್ಕೂ ಭಗವಂತನ ಸಂಬಂಧ ಇದ್ದು ಹೇಳ್ವದರ ತಿಳಿತ್ತ°. ಪ್ರತಿಯೊಂದನ್ನೂ ವಾಸುದೇವ ಸಂಬಂಧಿಸಿಯೇ ಯೋಚಿಸುತ್ತ°. ಅವನೇ ಅತ್ಯುನ್ನತ ಗುರಿ ಹೇಳಿ ಶರಣಾವುತ್ತ°. ಹೀಂಗೆ ಶರಣಾಗತರಪ್ಪವು ಬಹಳ ಅಪರೂಪ ಆತಿರುತ್ತವು.

ಬನ್ನಂಜೆ ಹೇಳುತ್ತವು – ಜೀವನಲ್ಲಿ ಜ್ಞಾನಿ ಹೇದು ಎಣಿಸಿಗೊಂಬದು ಸುಲಭದ ಕೆಲಸ ಅಲ್ಲ. ವಿಷಯವ ವಸ್ತುಸ್ಥಿತಿಲಿ ಅದರ ಮರ್ಮವ ತಿಳ್ಕೊಂಬ ಜ್ಞಾನ ಅವಂಗೆ ಇರೆಕು. ಇದು ಏಕಾಏಕಿ ಅಥವಾ ರಜಾ ಪ್ರಯತ್ನಂದ ಸಾಧ್ಯ ಅಪ್ಪದಲ್ಲ. ಭಗವಂತ° ಇಲ್ಲಿ ಹೇಳುತ್ತ° – “ಬಹೂನಾಂ ಜನ್ಮನಾಮಂತೇ ಜ್ಞಾನವಾನ್ ಮಾಂ ಪ್ರಪದ್ಯತೇ” – ‘ಅನೇಕಾನೇಕ ಜನ್ಮಂಗಳ ಸಾಧನೆಂದ, ಜಿಜ್ಞಾಸೆಂದ, ಅಧ್ಯಯನಂದ ಜ್ಞಾನ ಪ್ರಾಪ್ತಿಯಪ್ಪದು. ಇಂತಹ ಜ್ಞಾನಿ ಸಹಜವಾಗಿ ಎನಗೆ ಶರಣಾಗತರಾವುತ್ತವು°’.  ಹಾಂಗಾರೆ ಸತ್ಯವ (ಸತ್ಯ ವಿಷಯವ ತಿಳಿಯೆಕ್ಕಾರೆ ಅದರಲ್ಲಿ ಆಸಕ್ತಿ ಬೇಕು, ಕುತೂಹಲ ಇರೆಕು, ಅಧ್ಯಯನದ ಪರಿಶ್ರಮ ಬೇಕು, ಅನೇಕ ಸಮಯದ ಅವಿರತ ಪ್ರಯತ್ನವೂ ಬೇಕು ಹೇಳುವದರ ನಾವಿಲ್ಲಿ ಅರ್ಥೈಸಿಗೊಂಬಲಕ್ಕು. ಈ ಮದಲೇ ಹೇಳಿಪ್ಪಂತೆ ಆಧ್ಯಾತ್ಮಿಕ ಅಧ್ಯಯನ/ ಜ್ಞಾನ ಹೇಳಿರೆ ಕೇವಲ ಒಂದು ಜನ್ಮದ ಸಾಧನೆ ಅಲ್ಲ. ಅದು ‘ಬಹೂನಾಂ ಜನ್ಮನಾಂ ಅಂತೇ’ – ಅನೇಕಾನೇಕ ಜನ್ಮಂಗಳ ತರುವಾಯ. ಹಾಂಗಾರೆ ನಾವು ಹುಟ್ಟುವಾಗಳೇ ಹಿಂದಾಣ ಜನ್ಮದ ಆಧ್ಯಾತ್ಮಿಕ ಜ್ಞಾನವ ಹೊತ್ತುಗೊಂಡು ಹುಟ್ಟುತ್ತು. ಇದು ಮನುಷ್ಯಂಗೆ ಭಗವಂತನ ಮಹಾ ವರಪ್ರಸಾದ. ಈ ಮದಲೇ ಹೇಳಿದಂತೆ ಹಿಂದಾಣ ಜನ್ಮಲ್ಲಿ ನಿಂದುಹೋದಲ್ಲಿಂದ ಈ ಜನ್ಮಲ್ಲಿ ಆಧ್ಯಾತ್ಮಿಕ ಸಾಧನೆ ಮುಂದುವರಿತ್ತು. ನೂರಾರು ಜನ್ಮಂಗಳ ಸಂಚಯನ ಇಲ್ಲಿ ಇರುತ್ತು. ಹೀಂಗೆ ಆರು ಜನ್ಮಜನ್ಮಾಂತರ ಸಾಧನೆಂದ ಜ್ಞಾನೀ ಹೇದು ಎಣಿಸಿಗೊಳ್ಳುತ್ತನೋ, ಅವ° ಸರ್ವಸ್ವವೂ ಭಗವಂತನೇ ಹೇಳ್ವದರ ಅರ್ತುಗೊಂಡು ಸರ್ವಸ್ವವನ್ನೂ ಅವಂಗೆ ಅರ್ಪಿಸಿ ಮೊಕ್ಷವ ಪಡೆತ್ತ°.

ಇಲ್ಲಿ ವಾಸುದೇವ ಹೇಳ್ವ ಪದಕ್ಕೆ ವಿಶೇಷ ಅರ್ಥ ಇದ್ದು. ವಾಸು + ದೇವ = ವಾಸುದೇವ. ವಾಸು ಹೇಳಿರೆ ತನ್ನ ತಾನು ಮುಚ್ಚಿಗೊಂಡವ°, ಅರ್ಥಾತ್ – ಭಗವಂತ°. ಯಾವಾಗ ನಾವು ಅಷ್ಟು ಆಳಕ್ಕಿಳುದು ಜೀವಸ್ವರೂಪವ ಕಂಡುಗೊಂಬಲೆ ಎಡಿಗಾವ್ತೋ, ಅಂಬಗ ಭಗವಂತನ ಸಾಕ್ಷಾತ್ಕಾರ ಆವ್ತು. ಭಗವಂತನ ಕಾಣೇಕ್ಕಾರೆ ಮದಾಲು ನಾವು ನಮ್ಮ ಸಹಜ ಸ್ಥಿತಿಯ ಅರ್ಥಮಾಡಿಗೊಳ್ಳೆಕು. ನಮ್ಮ ಜ್ಞಾನವೇ ನವಗಿಲ್ಲದ್ದೆ ಭಗವಂತನ ಕಾಂಬಲೆ ಎಡಿಯ. ನಾವು ನಮ್ಮ ಜೀವಸ್ವರೂಪವ ಕಂಡಪ್ಪಗ ಅದರೊಳಂದ ಸಾಕ್ಷಾತ್ಕಾರ ಅಪ್ಪವ° ದೇವಃ – ಭಗವಂತ = ವಾಸುದೇವಃ. ನಾವು ನಮ್ಮ ಪಂಚಕೋಶಂಗಳ ಪರದೆಯೊಳ ಇಪ್ಪಗ ಭಗವಂತ – ವಾಸುವಾಗಿ, ಜ್ಞಾನ ಸಂಪಾದನೆಂದ ಪರದೆಯಾಚಿಗಂದ ಬಂದು ಜೀವ ಸ್ವರೂಪವ ಕಂಡಪ್ಪಗ ದೇವನಾಗಿ ದರ್ಶನ ಕೊಡುವವ ಭಗವಂತ – ‘ವಾಸುದೇವಃ’. ಹೀಂಗೆ ಅನೇಕಾನೇಕ ಜನ್ಮಂಗಳ ಸಾಧನೆಂದ ಜ್ಞಾನವ ಸಂಪಾಲುಸಿ ಭಗವಂತನ ಅರ್ತು ಭಗವಂತಂಗೆ ಶರಣಾಗತನಪ್ಪ ಜ್ಞಾನಿ ಬಹು ಶ್ರೇಷ್ಠ ಮತ್ತೂ ಬಹು ಅಪರೂಪ. 

ಶ್ಲೋಕ

ಕಾಮೈಸ್ತೈಸ್ತೈಹೃತಜ್ಞಾನಾಃ ಪ್ರಪದ್ಯಂತೇsನ್ಯದೇವತಾಃ ।
ತಂ ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ ॥೨೦॥

ಪದವಿಭಾಗ

ಕಾಮೈಃ ತೈ ತೈಃ ಹೃತ-ಜ್ಞಾನಾಃ ಪ್ರಪದ್ಯಂತೇ ಅನ್ಯ-ದೇವತಾಃ । ತಮ್ ತಮ್ ನಿಯಮಮ್ ಆಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ ॥

ಅನ್ವಯ

ತೈಃ ತೈಃ ಕಾಮೈಃ ಹೃತ-ಜ್ಞಾನಾಃ ಸ್ವಯಾ ಪ್ರಕೃತ್ಯಾ ನಿಯತಾಃ (ಅಜ್ಞಾನಿನಃ), ತಂ ತಂ ನಿಯಮಮ್ ಆಸ್ಥಾಯ ಅನ್ಯ-ದೇವತಾಃ ಪ್ರಪದ್ಯಂತೇ ।

ಪ್ರತಿಪದಾರ್ಥ

ತೈಃ ತೈಃ  – ವಿವಿಧವಾದ, ಕಾಮೈಃ – ಆಸೆಗಳಿಂದ, ಹೃತ-ಜ್ಞಾನಾಃ – ಜ್ಞಾನವಿಹೀನರಾದವು (ಹೃತ – ಇಲ್ಲದಂತೆ ಮಾಡಿದ, ಜ್ಞಾನಾಃ – ಜ್ಞಾನವುಳ್ಳವು, ವಿವೇಕವ ಕಳಕ್ಕೊಂಡವು), ಸ್ವಯಾ ಪ್ರಕೃತ್ಯಾ – ತಮ್ಮದೇ ಆದ ಸ್ವಭಾವಂದ, ನಿಯತಾಃ – ನಿಯಂತ್ರಿತರಾವುತ್ತವು (ಅಜ್ಞಾನಿಗೊ ಆವ್ತವು),  ತಮ್ ತಮ್ – ಅದಕ್ಕೆ ಅನುಗುಣವಾಗಿ, ನಿಯಮಮ್ ಆಸ್ಥಾಯ – ನಿಯಮವ ಅನುಸರುಸಿ, ಅನ್ಯ-ದೇವತಾಃ – ಇತರ (ಅನ್ಯ) ದೇವತೆಗೊಕ್ಕೆ, ಅಜ್ಞಾನಿನಃ  – ಅಜ್ಞಾನಿಗೊ, ಪ್ರಪದ್ಯಂತೇ – ಶರಣಾಗತರಾವುತ್ತವು.

ಅನ್ವಯಾರ್ಥ

(ಮನಸ್ಸಿಲ್ಲಿ ಉಂಟಪ್ಪ) ಬಗೆ ಬಗೆಯ ಕಾಮಾದಿ ಬಯಕೆಗಳಿಂದಲಾಗಿ ವಿವೇಕ ಕಳಕ್ಕೊಂಡವರಾಗಿ, ಆ ಬಯಕೆಗಳ ಪೂರೈಸಲೆ ಅದಕ್ಕನುಗುಣವಾಗಿ ಅನ್ಯ (ಇತರ) ದೇವತೆಗೊಕ್ಕೆ ಅಜ್ಞಾನಿಗೊ ಶರಣಾಗತರಾವುತ್ತವು.  

ತಾತ್ಪರ್ಯ / ವಿವರಣೆ

ಭಗವಂತ° ಈ ವರೇಂಗೆ ನಾಲ್ಕು ಬಗೆಯ ಭಕ್ತರ ಮತ್ತೆ ಅದರಲ್ಲಿ ಜ್ಞಾನಿಯ ಶ್ರೇಷ್ಠತೆಯನ್ನೂ ವಿವರಿಸಿದ್ದರ ನಾವು ನೋಡಿತ್ತು. ಈ ನಾಲ್ಕು ಬಗೆಯೊಳವೂ ಸೇರದ್ದೆ ಪಂಚಮರಾಗಿ ಉಳಿವ ಬಾಕಿ ಜನರ ವಿಚಾರವ ಭಗವಂತ° ಇಲ್ಲಿ ಹೇಳುತ್ತ°. 

ಎಲ್ಲ ಐಹಿಕ ಕಶ್ಮಲಂಗಲ ಬಿಡುಗಡೆಯಾದವು ಭಗವಂತಂಗೆ ಶರಣಾಗತರಾಗಿ ಅವನ ಭಕ್ತಿಸೇವೆಲಿ ನಿರತರಾವುತ್ತವು. ಐಹಿಕ ಕಶ್ಮಲ ಸಂಪೂರ್ಣ ತೊಳದು ಹೋಗದ್ದೆ ವಿನಾ ಅವು ಭಗವಂತನ ಪರಿಶುದ್ಧ ಭಕ್ತರಪ್ಪಲೆ ಆವ್ತಿಲ್ಲೆ. ಐಹಿಕ ಬಯಕೆಗಳ ಮಡಿಕ್ಕೊಂಡು ಭಗವಂತನ ಹತ್ರಂಗೆ ಹೋಪವು ಇದ್ದವಾದರೂ ಭಗವಂತ° ಆ ಬಗ್ಗೆ ಆಕರ್ಷಿತನಾವುತ್ತನಿಲ್ಲೆ. ಭಗವಂತ° ಹೇಳುತ್ತ° – ತಮ್ಮ ಆಧ್ಯಾತ್ಮಿಕ ಜ್ಞಾನವ ಕಳಕ್ಕೊಂಡ ಅಷ್ಟು ಬುದ್ಧಿಶಾಲಿಗೊ (ಜ್ಞಾನಿಗೊ ಅಲ್ಲದ್ದೋರು) ಅಲ್ಲದ್ದೋರು ಐಹಿಕ ಬಯಕೆಯ ಶ್ರೀಘ್ರ ಪೂರೈಕೆಗೊಕ್ಕೆ ಬೇಕಾಗಿ ವಿವಿಧ ದೇವತೆಗಳ ಆಶ್ರಯ ಪಡೆತ್ತವು ( ಬೇರೆ ಬೇರೆ ದೇವತೆಗೊಕ್ಕೆ ಶರಣಾಗತರಾವುತ್ತವು). ಇಡೀ ವಿಶ್ವ ಭಗವಂತನ ಅಧೀನ, ಎಲ್ಲ ದೇವತೆಗಳೂ ಭಗವಂತನ ಅಧೀನ ಹೇಳಿ ಈ ಮದಲೇ ಹೇಳಿದ್ದು. ಜಗತ್ತಿನ ಒಂದೊಂದು ಕಾರ್ಯವ ಸುಸೂತ್ರವಾಗಿ ನಡೆಶಿಗೊಂಡು ಬಪ್ಪಲೆ ಒಬ್ಬೊಬ್ಬ ದೇವರಿಂಗೆ ಒಂದೊಂದು ಅಧಿಕಾರ ಕೊಟ್ಟದು ಭಗವಂತ°. ಹಾಂಗಾಗಿ ವಿಶ್ವಲ್ಲಿ ಒಂದೊಂದು ಶಕ್ತಿಗೆ ಒಬ್ಬೊಬ್ಬ ಅಭಿಮಾನಿ ದೇವತೆ. ಸ್ವಯಂ ಭಕ್ತರು ಎಣಿಸಿಗೊಂಡವು ತಮ್ಮ ಶೀಘ್ರ ಇಚ್ಛಾಪೂರ್ತಿಗಾಗಿ ನಿಜಜ್ಞಾನವ ಕಳಕ್ಕೊಂಡವರಾಗಿ ಹಾಂಗಿಪ್ಪ ಆಯಾ ಅಭಿಮಾನಿದೇವತೆಗೊಕ್ಕೆ ಶರಣಾಗತರಾವುತ್ತವು. ಆ ಮೂಲಕ ತಾತ್ಕಾಲಿಕ ಲಾಭವ ಪಡಕ್ಕೊಳ್ಳುತ್ತವು. ವೈದಿಕಸಾಹಿತ್ಯಲ್ಲಿ ಬೇರೆ ಬೇರೆ ಉದ್ದೇಶಕ್ಕೆ ಬೇರೆ ಬೇರೆ ದೇವತೆಗಳ ಪೂಜಿಸೆಕು ಹೇಳಿ ಹೇಳಿದ್ದು . ಉದಾಹರಣೆಗೆ ರೋಗಿಯು ಸೂರ್ಯನ ಪೂಜಿಸುತ್ತದು. ಐಶ್ವರ್ಯಕ್ಕೆ ಲಕ್ಷ್ಮೀಯ ..,   ಆ ಮೂಲಕ ಅವ ಆರೋಗ್ಯ ಭಾಗ್ಯವ ಏನೋ ಪಡೆತ್ತವೇನೋ ಸರಿ, ಆದರೆ ಇವೆಲ್ಲವೂ ಐಹಿಕ ಅಶಾಶ್ವತ ಸುಖವೇ ಸರಿ. ಜೀವನದ ಪರಮಗುರಿ ಭಗವಂತ° ಆಗಿರೆಕು. ಭಗವಂತನ ಕಂಡುಗೊಂಡಲ್ಯಂಗೆ ಜೀವನ ಸಾರ್ಥಕ ಆವ್ತು, ಮೋಕ್ಷಪ್ರಾಪ್ತಿ ಆವ್ತು.

ಬನ್ನಂಜೆ ವ್ಯಾಖ್ಯಾನಲ್ಲಿ ಹೇಳುತ್ತವು – ಪ್ರಪಂಚಲ್ಲಿ ಯಾವ ಯಾವುದೋ ಬಯಕೆಂಗಳಿಂದ ಜ್ಞಾನವ ಕಳಕ್ಕೊಂಡವು ತಮ್ಮ ಐಹಿಕ ಪ್ರಕೃತಿ ಸ್ವಭಾವಕ್ಕೆ ಅನುಗುಣವಾಗಿ ಆಯಾ ಕಟ್ಟಳಗೆ ಕಟ್ಟುಬಿದ್ದು ಬೇರೆ ಬೇರೆ ದೇವತೆಗಳ ಮೊರೆಹೊಕ್ಕುತ್ತವು. ಭಗವಂತ° ಈ ಮದಲೇ ಹೇಳಿಪ್ಪಂತೆ ಮನುಷ್ಯ° ತನ್ನ ಆಧ್ಯಾತ್ಮ ಮಾರ್ಗಲ್ಲಿ ಮುನ್ನೆಡೆಯಂದೆ ವಿಮುಖನಪ್ಪಲೆ ಮೂಲಕಾರಣ ಅವನಲ್ಲಿ ಹುಟ್ಟುವ ಬೆಗುಡು ಕಾಮನೆಗೊ. ಇದು ಜ್ಞಾನದ ಮಾರ್ಗಲ್ಲಿ ದೊಡ್ಡ ಅಡ್ಡಗೋಡೆ. ಬಯಕೆಂಗಳ ನಿಯಂತ್ರುಸುಲೆ ಅಸಾಧ್ಯನಾದ ಮನುಷ್ಯ ತನ್ನ ಬಯಕೆಗಳ ಈಡೇರಿಕೆಗಾಗಿ ಮಾಡ್ಳಾಗದ್ದ ಕೆಲಸಕ್ಕೆ ಮುಂದಾವುತ್ತ°. ಬೇರೆ ಬೇರೆ ದೇವತೆಗೊಕ್ಕೆ ಮೊರೆಹೊಕ್ಕುತ್ತು. ಶ್ರೇಯಸ್ಸಿನತ್ತೆ ಹೋಗದ್ದೆ ಅಕೇರಿಗೆ ಅಧಃಪತನವ ಹೊಂದುತ್ತ°.   ಮನುಷ್ಯ ಬಯಕೆಗಳ ಬೆನ್ನುಹಿಡುದಪ್ಪಗ ಅವನ ಬಯಕೆ ಅವನ ಅರಿವ (ಜ್ಞಾನವ) ನಿಯಂತ್ರುಸಲೆ ಸುರುಮಾಡುತ್ತು. ಆ ಸಮಯಕ್ಕೆ ಆರಾರು – ‘ನಿನ್ನ ಇಷ್ಟಾರ್ಥ ಸಿದ್ಧಿಗಾಗಿ ಈ ದೇವಾಲಯಕ್ಕೆ ಹೋಗು, ಈ ಶಾಂತಿಯ ಮಾಡು, ಆ ಹೋಮವ ಮಾಡು…’ ಹೇಳಿ ಅವರ ಕಿಸೆ ತುಂಬಿಸಿಗೊಳ್ಳುತ್ತವು. ಅದರ ಹಿಂದೂಮುಂದು ಯೋಚಿಸದ್ದ್ದೆ ತನ್ನ ಮೂಲ ಆಧ್ಯಾತ್ಮ ತತ್ವವ ಬಿಟ್ಟು, ಏಕಭಕ್ತಿಂದ ದೂರ ಜಾರಿ, ಎಲ್ಲಿ ತನ್ನ ಅಪೇಕ್ಷೆ ಈಡೇರುತ್ತೋ ಅಲ್ಲಿ, ಆಯಾ ದೇವತೆಗಳ ತನ್ನ ಭೌತಿಕ ಬಯಕೆಗಳ ಈಡೇರುಸುಲೆ ಪೂಜಿಸಲೆ ಸುರುಮಾಡುತ್ತ°. ಅದಕ್ಕಾಗಿ ಯಾವ್ಯಾವುದೋ ವ್ರತಾಚರಣೆ ಸುರುಮಾಡುತ್ತ°. ಇದರಿಂದಾಗಿ ಅವ° ನಿಜವಾದ ಭಗವಂತನ ಉಪಾಸನೆಯ ಮಾರ್ಗಂದ ದೂರ ಸರಿತ್ತ°. ಏಕಭಕ್ತಿ ಉಪಾಸನೆಂದ ಈ ರೀತಿಯ ಅಲ್ಪ ಬಯಕೆಗೊ ಈಡೇರುತ್ತಿಲ್ಲೆ. ಏಕಭಕ್ತಿ ಉಪಾಸನೆ ಮೋಕ್ಷದ ಮಾರ್ಗ. ‘ಯದುನುಗ್ರಹಮಿಚ್ಛಾಮಿ ತಸ್ಯ ವಿತ್ತಂ ಹರಾಮ್ಯಹಂ’ – ಭಕ್ತರ ಸಂಪತ್ತಿನ (ಬಯಕೆಗಳ) ಇಲ್ಲದ್ದಾಂಗೆ ಮಾಡಿ, ಪರೀಕ್ಷಿಸಿ, ಮತ್ತೆ ಅವರ ಉದ್ಧಾರ ಮಾಡುವದು ಭಗವಂತನ ಸಂಕಲ್ಪ. ನವಗೆ ಎಂತ ಬೇಕು, ಎಂತ ಬೇಡ ಹೇಳುವದು ನಮ್ಮ ಯೋಗ್ಯತೆಯ ತೂಗುವದು ಭಗವಂತ°. ಅವನ ಅನುಗ್ರಹವೇ ಮಹಾಪ್ರಸಾದ. ಈ ಜ್ಞಾನ ಇಲ್ಲದ್ದೆ ಐಹಿಕ ಬಯಕೆಯ ಬೆನ್ನುಹತ್ತಿದವಂಗೆ  ನಿಜ ಭಗವದುನುಗ್ರಹ ಲಭಿಸುತ್ತಿಲ್ಲೆ. 

ಎಂತಕೆ ಹೀಂಗೆ ?! ಎಂತಕೆ ಎಲ್ಲೋರು ಒಂದೇ ರೀತಿಯಾಗಿ ಭಗವಂತನ ಪೂಜಿಸುತ್ತವಿಲ್ಲೆ?! . ಇದಕ್ಕೆ ಭಗವಂತ° ಹೇಳುತ್ತ° – “ತಂ ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ” – ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ  ಪ್ರಕೃತಿ (ಜೀವ ಸಹಜ ಸ್ವಭಾವ) ಇದ್ದು. ಇದು ಜೀವ ಹುಟ್ಟಿಬಂದ ‘ಪರಿಸರ ಮತ್ತೆ ಮನೆತನದ ಸಂಸ್ಕಾರವ’ (genes and environmental factor) ಹೊಂದಿಗೊಂಡು ಬಪ್ಪದು. ಇದು ಆರಿಂದಲೂ ಬದಲುಸಲೆ ಇಲ್ಲೆ. ಇದು ಪೂರ್ವಜನ್ಮದ ಪುಣ್ಯಾಪುಣ್ಯ ಫಲ. ಒಂದೊಂದು ಜೀವದ ಜೀವಸ್ವಭಾವ ಒಂದೊಂದು ರೀತಿ. ಒಂದೇ ಅಬ್ಬೆ-ಅಪ್ಪಂಗೆ ಹುಟ್ಟಿದ ಮಕ್ಕಳೂ ಒಂದೇ ಸ್ವಭಾವ ಇರೆಕು ಹೇಳಿ ಏನೂ ಇಲ್ಲೆ. ಇಲ್ಲಿ ಜೀವದ ಸಹಜ ಸ್ಥಿತಿ (ಸ್ವರೂಪ) ಯಾವುದು ಇರ್ತೋ ಅದು ಬೆಳವದು. ಈ ಕಾರಣಂದ ಎಲ್ಲೋರಲ್ಲೂ ಏಕರೂಪ ಭಾವವ ಈ ಜಗತ್ತಿಲ್ಲಿ ಕಾಂಬಲೆ ಎಡಿಯ.  ಈ ಭೂಮಿಲಿ ಎಷ್ಟೋ ಸರ್ತಿ ಭಗವಂತ ಅವತರಿಸಿರೂ, ಎಷ್ಟೋ ಮಹಾತ್ಮರುಗೊ ಹುಟ್ಟಿ ಬಂದು ಹೇಳಿರೂ ಭಗವಂತನ ತಿಳ್ಕೊಂಬ ಜೀವಸ್ವಭಾವ ಇಪ್ಪ ಜೀವಿಗೆ ಮಾತ್ರ ಈ ಬೋಧನೆ ಅರ್ಥ ಅಕ್ಕಷ್ಟೆ. ಬಾಕಿ ಜೀವಿಗೊಕ್ಕೆ ಅರ್ಥ ಆಗ. ಅವಕ್ಕೆ ಅದರ ಗ್ರಹಿಸಿಗೊಂಬ ಸ್ಥಿತಿ ಇಲ್ಲೆ. ಕುರುಕ್ಷೇತ್ರಲ್ಲಿ ಎಲ್ಲೋರ ಮುಂದೆ ಭಗವಂತ° ಅರ್ಜುನಂಗೆ ಉಪದೇಶ ಕೊಟ್ಟದ್ದಾಗಿದ್ದರೂ, ಸಂಜಯನ ಮೂಲಕ ಅಂಧ ಧೃತರಾಷ್ಟ್ರಂಗೆ ವಿಷಯಂಗೊ ಗೊಂತಾದರೂ ಅದು ಸಂಪೂರ್ಣ ವೇದ್ಯ ಆದ್ದು ಅರ್ಜುನಂಗೆ ಒಬ್ಬಂಗೆ ಮಾಂತ್ರ!. ಅದಕ್ಕಾಗಿ ಭಗವಂತ° ಹೇಳುತ್ತ- ‘ಸತ್ಯವ ಒಪ್ಪಿಗೊಂಬಲೂ ಕೂಡ ಜೀವಕ್ಕೆ ಯೋಗ್ಯತೆ ಬೇಕು’. ಇದು ತೀರಾ ಸಹಜ. ಹೀಂಗೆ ಜೀವಸ್ವರೂಪದ ಯೋಗ್ಯತೆಗನುಗುಣವಾಗಿ ಅವಕ್ಕವಕ್ಕೆ ಇಷ್ಟವಪ್ಪ್ಪ ದೇವತಾ ಉಪಾಸನೆ ಪ್ರಪಂಚಲ್ಲಿ ನಡೆತ್ತು. ಈ ಕಾರಣಂದ ಪ್ರಪಂಚಲ್ಲಿ ಎಲ್ಲೋರು ನಿಜವಾದ ಭಗವದ್ ಭಕ್ತರಪ್ಪಲೆ ಸಾಧ್ಯ ಇಲ್ಲೆ. ಅದು  ಕೇವಲ ಸಾತ್ವಿಕ ಚೇತನಕ್ಕೆ ಮಾಂತ್ರ ಸಾಧ್ಯ. ಇದು ಪ್ರಪಂಚಲ್ಲಿ ಸಹಜ.

ಮುಂದೆ ಎಂತರ..?     ಬಪ್ಪ ವಾರ ನೋಡುವೋ.

…ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 07 – SHLOKAS 11 – 20 by CHENNAI BHAAVA
ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

 

2 thoughts on “ಶ್ರೀಮದ್ಭಗವದ್ಗೀತಾ – ಸಪ್ತಮೋsಧ್ಯಾಯಃ – ಜ್ಞಾನವಿಜ್ಞಾನಯೋಗಃ – ಶ್ಲೋಕಂಗೊ 11 – 20

  1. ಚೆನ್ನೈ ಭಾವನ ತಪಸ್ಸು. ನಮಗೆ ವರ. 🙂

  2. ಪಶ್ಚಿಮದ ಮತಂಗಳಲ್ಲಿ ಹೇಳುವ ಸೈತಾನ ಆಸುರೀ ಶಕ್ತಿ ಆದಿಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×