Oppanna.com

ಶ್ರೀಮದ್ಭಗವದ್ಗೀತಾ – ಸಪ್ತಮೋsಧ್ಯಾಯಃ – ಜ್ಞಾನವಿಜ್ಞಾನಯೋಗಃ – ಶ್ಲೋಕಂಗೊ 21 – 30

ಬರದೋರು :   ಚೆನ್ನೈ ಬಾವ°    on   06/09/2012    1 ಒಪ್ಪಂಗೊ

ಚೆನ್ನೈ ಬಾವ°

ಶ್ಲೋಕ

ಯೋ ಯೋ ಯಾಂ ಯಾಂ ತನುಂ ಭಕ್ತಃ ಶ್ರದ್ಧಯಾರ್ಚಿತುಮಿಚ್ಛತಿ ।
ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಂ ॥೨೧॥

ಪದವಿಭಾಗ

ಯಃ ಯಃ ಯಾಂ ಯಾಂ ತನುಂ ಭಕ್ತಃ ಶ್ರದ್ಧಯಾ ಅರ್ಚಿತುಂ ಇಚ್ಛತಿ । ತಸ್ಯ ತಸ್ಯ ಅಚಲಾಂ ಶ್ರದ್ಧಾಂ ತಾಂ ಏವ ವಿದಧಾಮಿ ಅಹಂ॥

ಅನ್ವಯ

ಯಃ ಯಃ ಭಕ್ತಃ ಯಾಂ ಯಾಂ ತನುಂ  ಶ್ರದ್ಧಯಾ ಅರ್ಚಿತುಂ ಇಚ್ಛತಿ, ತಸ್ಯ ತಸ್ಯ ತಾಂ ಏವ ಶ್ರದ್ಧಾಂ ಅಹಂ ಅಚಲಾಂ ವಿದಧಾಮಿ॥

ಪ್ರತಿಪದಾರ್ಥ

ಯಃ ಯಃ – ಯಾವ ಯಾವ, ಭಕ್ತಃ – ಭಕ್ತ°, ಯಾಂ ಯಾಂ – ಯಾವ ಯಾವ, ತನುಂ – ಶರೀರವ [ಇಲ್ಲಿ – ದೇವತಾರೂಪವ], ಶ್ರದ್ಧಯಾ – ಶ್ರದ್ದೆಂದ, ಅರ್ಚಿತುಂ – ಪೂಜಿಸಲೆ, ಇಚ್ಛತಿ – ಅಪೇಕ್ಷಿಸುತ್ತನೋ, ತಸ್ಯ ತಸ್ಯ – ಅವರ ಅವರ, ತಾಂ – ಆ, ಏವ – ಖಂಡಿತವಾಗಿಯೂ, (ತಾಂ ಏವ – ಅದನ್ನೇ, ಹಾಂಗೆಯೇ ಹೇಳಿ ಇಲ್ಲಿ ಅರ್ಥ), ಶ್ರದ್ಧಾಂ – ಶ್ರದ್ಧೆಯ, ಅಹಂ – ಆನು, ಅಚಲಾಂ – ಸ್ಥಿರವಾದ, ವಿದಧಾಮಿ – ಕೊಡುತ್ತೆ.    

ಅನ್ವಯಾರ್ಥ

ಯಾವ ಯಾವ ಭಕ್ತರು ಯಾವ ಯಾವ ರೂಪಲ್ಲಿ (ತನುಂ) ದೇವತೆಗಳ ಶ್ರದ್ಧಾಪೂರ್ವಕವಾಗಿ ಪೂಜಿಸುತ್ತವೋ, ಅವಕ್ಕವಕ್ಕೆ ಆಯಾ ದೇವತಾರೂಪಲ್ಲಿಯೇ ಸ್ಥಿರವಾದ ಶ್ರದ್ಧೆ ಉಂಟಪ್ಪಂತೆ ಆನು ಮಾಡುತ್ತೆ (ಅವಕ್ಕವಕ್ಕೆ ಆಯಾ ರೂಪಲ್ಲಿ ಶ್ರದ್ಧಾಪೂರ್ವಕವಾಗಿ ಇಪ್ಪ ಹಾಂಗೆ ಸ್ಥಿರವಾದ ಶ್ರದ್ಧೆಯ ಆನು ಕೊಡುತ್ತೆ).

ತಾತ್ಪರ್ಯ / ವಿವರಣೆ

ಭಗವಂತ° ಪರಮಾತ್ಮನಾಗಿ ಪ್ರತಿಯೊಬ್ಬರ ಹೃದಯಲ್ಲಿಯೂ ಇದ್ದ°. ಆರು ಆರು ಯಾವ ಯಾವ ದೇವತೆಗಳ (ದೇವತಾ ರೂಪವ) ಪೂಜಿಸಲೆ ಇಚ್ಛಿಸುತ್ತವೋ, ಭಗವಂತ° ಅವಕ್ಕೆ ಆಯಾ ದೇವತೆಲಿ ಶ್ರದ್ಧೆ ಮುಡಿಪ್ಪಾಗಿಪ್ಪಾಂಗೆ ಶ್ರದ್ಧೆಯ ಸ್ಥಿರಗೊಳುಸುತ್ತ°. ಭಗವಂತ ಪ್ರತಿಯೊಬ್ಬಂಗೂ ಸ್ವಾತಂತ್ರ್ಯವ ಕೊಟ್ಟಿದ°. ಹಾಂಗಾಗಿ ಯಾವುದೇ ಮನುಷ್ಯ ಐಹಿಕ ಭೋಗವ ಬಯಸಿ ಅಂತಹ ಸೌಲಭ್ಯಂಗಳ ಐಹಿಕ ದೇವತೆಗಳಿಂದ ಪಡವಲೆ ಮನಃಪೂರ್ವಕವಾಗಿ ಅಪೇಕ್ಷಿಸಿರೆ ಎಲ್ಲೋರ ಹೃದಯಲ್ಲಿ ಪರಮಾತ್ಮನಾಗಿ ಭಗವಂತ° ಅವರ ಅಪೇಕ್ಷೆಯ ಅರ್ಥಮಾಡಿಗೊಂಡು ಸೌಲಭ್ಯಂಗಳ ಕೊಡುತ್ತ°. ಎಲ್ಲ ಜೀವಿಗಳ ಜನಕನಾಗಿ ಅವ° ಆರೊಬ್ಬನ ಸ್ವಾತಂತ್ರ್ಯಕ್ಕೂ ಅಡ್ಡಿಬತ್ತನಿಲ್ಲೆ. ಜೀವಿಯೂ ದೇವತೆಗಳೂ ದೇವೋತ್ತಮ ಪರಮ ಪುರುಷ° ಭಗವಂತಂಗೆ ಅಧೀನರು. ಹಾಂಗಾಗಿ ಜೀವಿಯು ಸ್ವಂತ ಇಚ್ಛೆಂದ ಯಾವ ದೇವತೆಯನ್ನೂ ಪೂಜಿಸಲೆ ಸಾಧ್ಯ ಇಲ್ಲೆ. ಪರಮ ಸಂಕಲ್ಪಕ್ಕೆ ಹೊರತಾಗಿ ಯಾವ ದೇವತೆಯೂ ವರ ಕೊಡ್ಳೆ ಸಾಧ್ಯ ಇಲ್ಲೆ. ಸಾಮಾನ್ಯವಾಗಿ ಐಹಿಕ ಜಗತ್ತಿಲ್ಲಿ ದುಃಖಕ್ಕೆ ಒಳಗಾದವು ವೈದಿಕ ಸಾಹಿತ್ಯಲ್ಲಿ ಸೂಚಿಸಿಪ್ಪಂತೆ ದೇವತೆಗೊಕ್ಕೆ ಶರಣಾಗತರಾವುತ್ತವು. ಯಾವುದೋ ಒಂದು ಸುಖವ/ವಸ್ತುವ/ವಿಷಯವ ಬಯಸುವವು ತಮ್ಮ ಅಪೇಕ್ಷೆಗಳ ಈಡೇರಿಕೆಗಾಗಿ ಹೀಂಗೆ ವಿವಿಧ ದೇವತೆಗಳ ಪೂಜಿಸಲಕ್ಕು. ವಿದ್ಯೆ ಬಯಸುವವ° ಸರಸ್ವತಿಯ ಆರಾಧುಸಲೆ ಅಕ್ಕು, ಆರೋಗ್ಯವ ಬಯಸುವವ ಆದಿತ್ಯನ ಪೂಜಿಸಲಕ್ಕು, ಐಶ್ವರ್ಯವ ಬಯಸಿ ಲಕ್ಷ್ಮೀಯ ಸ್ತುತಿಸಲಕ್ಕು. ಹೀಂಗೆ ಶಾಸ್ತ್ರಂಗಳಲ್ಲಿ ಆಯಾ ಅಭಿಮಾನಿ ದೇವತೆಗಳ ಪೂಜಿಸಲೆ ಪೂಜಾಮಾರ್ಗವ ಹೇಳಿದ್ದು. ಒಂದು ಜೀವಿ ಯಾವುದೋ ಒಂದು ನಿರ್ದಿಷ್ಟ ಸೌಲಭ್ಯವ ಬಯಸುವದರಿಂದ, ಆ ನಿರ್ದಿಷ್ಟ ದೇವತೆಂದ ಆ ಅನುಗ್ರಹವ ಪಡಕ್ಕೊಂಬಂತೆ ಆ ಜೀವಿಗೆ ಭಗವಂತ° ಪ್ರಬಲ ಪ್ರೇರಣೆಯ ಕೊಡುತ್ತ°. ಭಕ್ತನ ಮನೋಭಾವವ ಭಗವಂತ ತಿಳಿತ್ತ°, ಆ ಭಕ್ತನ ಮನಸ್ಸು ಅದರ್ಲಿ ನೆಲೆ ನಿಂಬಹಾಂಗೆ ಭಗವಂತ° ಪ್ರಚೋದಿಸುತ್ತ°. ದೇವತೆಗೊ ಭಗವಂತನ ವಿವಿಧ ರೂಪಂಗೊ / ಶಕ್ತಿಗೊ ಅರ್ಥಾತ್ ಆದಿಯೂ ಅವನಿಂದ ಅಂತ್ಯವೂ ಅವನಲ್ಲೇ. ಪರಮಾತ್ಮನಾಗಿ ಭಗವಂತ° ಎಲ್ಲ ಜೀವಿಗಳ ಹೃದಯಲ್ಲಿಯೂ ನೆಲೆಸಿದ್ದ°. ಹಾಂಗಾಗಿ ಜೀವಿ ಬಯಸಿದ್ದರ ಪಡಕ್ಕೊಂಬಲೆ ಭಗವಂತ° ವಿವಿಧ ದೇವತೆಗಳ ಮೂಲಕ ವ್ಯವಸ್ಥೆ ಮಾಡುತ್ತ. ಆದರೆ ದೇವತೆಗಳೂ ಸ್ವತಂತ್ರರಲ್ಲ. ಅವು ಭಗವಂತನ ಆಜ್ಞಾಪಾಲಕರು ಅಷ್ಟೆ. ದೇವತೆಗಳೂ ಭಗವಂತನ ಪರಮ ಸಂಕಲ್ಪವ ಅವಲಂಬಿಸಿಪ್ಪವ್ವು. ಭಗವಂತ° ಆ ದೇವತೆಗಳ ಮೂಲಕ ಭಕ್ತನ ಇಚ್ಛೆಯ ಅನುಗ್ರಹಿಸುತ್ತ°, ಭಕ್ತನ ಬಯಕೆಯ ಪೂರೈಸುತ್ತ°, ಭಕ್ತನ ಆಯಾರೂಪದ ಶ್ರದ್ಧೆಯ ಅಚಲವಾಗಿಪ್ಪಂತೆ ಮಾಡುತ್ತ°.      

ಬನ್ನಂಜೆ ಹೇಳುತ್ತವು – ಮನುಷ್ಯ° ಶ್ರದ್ದೆಯ ಸ್ವರೂಪ°. ಯಾವುದರಲ್ಲಿ ಶ್ರದ್ಧೆ ಮೂಡಿತ್ತೋ ಅದು ಹಾಂಗೇ ಮತ್ತೆ ಬೆಳಕ್ಕೊಂಡು ಹೋವುತ್ತು. ಯಾವ ದೇವತಾಶಕ್ತಿಯ ಮೇಗೆ ಶ್ರದ್ಧೆಯ ಮಡುಗಿ ಆರಾಧನೆ ಮಾಡುತ್ತೋ ಅದೇ ನಂಬಿಕೆ ಶ್ರದ್ಧೆಯ ಗಟ್ಟಿಯಾವುತ್ತಾ ಹೋವ್ತು. ಆ ಶ್ರದ್ಧೆ ಮತ್ತೆ ನಿಶ್ಚಲಗೊಳ್ಳುತ್ತು. ಇದರ ಬದಲುಸುವದು ಕಷ್ಟ. ದೇವರು ಮತ್ತು ದೇವತಾ ಪರಿವಾರ ಹೇಳಿರೆ ಅದು ಮನುಷ್ಯರ ಹಾಂಗೆ ಒಬ್ಬರನ್ನೊಬ್ಬರ ದೇಷಿಸುವ, ಅಸೂಯೆ ಪಡುವ ಸಂಸ್ಕೃತಿ ಇಪ್ಪಂತ ಒಂದು ಗುಂಪು ಹೇಳಿ ತಿಳ್ಕೊಂಡ್ರೆ ಅದು ನಮ್ಮ ಮೌಢ್ಯದ ಪರಮಾವದಿ. ಭಗವಂತ° ಹೇಳಿರೆ ಅದು ಏಕಶಕ್ತಿ. ಅವ° ತನ್ನ ದೇವತಾಪರಿವಾರದೊಟ್ಟಿಂಗೆ ಅಭಿವ್ಯಕ್ತನಾವುತ್ತ. ನಾವು ಗಣಪತಿಯನ್ನೋ, ದುರ್ಗೆಯನ್ನೋ, ಶಿವನನ್ನೋ, ನವಗ್ರಹರನ್ನೋ,  ಅರಾಧನೆ ಮಾಡುವಾಗ ನವಗೆ ಆ ಏಕಶಕ್ತಿಯ ಎಚ್ಚರ ಇದ್ದು ಮಾಡಿರೆ ಆ ಪೂಜೆ ಮಹಾಪೂಜೆ ಆವುತ್ತು. ಅದು ಭಗವಂತಂಗೆ ಅರ್ಪಿತ ಆವುತ್ತು. ಅದನ್ನೇ ದೇವನೊಬ್ಬನೆ ರೂಪ ಹಲವು – ನಾಮ ಹಲವು ಹೇಳಿ ಹೇಳ್ವದು. ಈ ಪ್ರಜ್ಞೆ ಇಲ್ಲದ್ದೆ ನಾವು ಗಣಪತಿ ವಿಗ್ರಹಕ್ಕೆ, ವಾ ಯಾವುದೇ ದೇವತಾ ಕಲ್ಲಿಂಗೆ ಪೂಜೆ ಮಾಡಿರೆ ಅದು ಕಲ್ಲಿನ ಮೂರ್ತಿಯ ದೇವರೆಂದು ಭಾವಿಸಿ ಪೂಜೆ ಮಾಡಿದ ಹಾಂಗೆ ಆವ್ತು. ಕಲ್ಲಿನ ಮೂರ್ತಿ ಕೇವಲ ದೇವತಾ ಪ್ರತೀಕ. ಸರ್ವಶಕ್ತ ಭಗವಂತ ಆ ಮೂರ್ತಿಯೊಳ ಅಂತರ್ಗತನಾಗಿದ್ದ°. ಹಾಂಗಾಗಿ ಯಾವುದೇ ದೇವತಾ ಪ್ರತೀಕವ ನಾವು ಪೂಜುಸುವಾಗ ‘ಭಗವಂತ ಒಬ್ಬನೇ, ಆ ಭಗವಂತ° ಈ  ದೇವತಾ ಪ್ರತೀಕಲ್ಲಿ ಅಂತರ್ಗತನಾಗಿ, ತನ್ನ ಸಮಸ್ತ ದೇವತಾ ಪರಿವಾರದ ಮೂಲಕ ನಮ್ಮ ರಕ್ಷಿಸುತ್ತ°’ ಹೇಳ್ವ ಭಾವನೆ ಮತ್ತೆ ಅನುಸಂಧಾನ ನಮ್ಮದಾಗಿರೆಕು. ಅದು ನಮ್ಮ ಶ್ರದ್ಧೆಯ ಮತ್ತೂ ಆಳಕ್ಕೆ ಕೊಂಡೋವುತ್ತು, ಸ್ಥಿರವಾಗಿ ನಿಲ್ಲುತ್ತು.  ನಮ್ಮ ಪೂಜೆ-ಪುರಸ್ಕಾರ, ವ್ರತ-ಅನುಷ್ಠಾನ, ಉಪವಾಸ ಎಲ್ಲವೂ ಆ ಭಗವದ್ ಪ್ರೀತ್ಯರ್ಥವಾಗಿರೆಕು. ಭಗವಂತ° ಸರ್ವಶಬ್ದವಾಚ್ಯ°, ಹಾಂಗಾಗಿ ಯಾವ ಹೆಸರಿಂದ ದೆನಿಗೊಂಡ್ರೂ ಅದು ಭಗವಂತನ ಹೆಸರೇ ಆವುತ್ತು. ಭಗವಂತ° ಸರ್ವಗತ°, ಸರ್ವಸಮರ್ಥ°, ಸರ್ವಭೂತಸ್ಥಿತ°,  ಹಾಂಗಾಗಿ ಅವ° ಕಲ್ಲಿಲ್ಲಿಯೂ ಇಕ್ಕು, ಕಂಬಲ್ಲಿಯೂ ಇಕ್ಕು. ಭಗವಂತ° ಸರ್ವಾಂತರ್ಯಾಮಿ, ಸರ್ವ ದೇವತೆಗಳ ಅಂತರ್ಯಾಮಿಯಾಗ್ಯೊಂಡು ನಮ್ಮ ರಕ್ಷಿಸುವದು ಭಗವಂತ°. ಈ ಅನುಸಂಧಾನಂದ ಮಾಡುವ ಭಕ್ತಿ-ಶ್ರದ್ಧೆ ಶ್ರೇಷ್ಠವಾಗಿರ್ತು, ಅಚಲವಾಗಿರ್ತು.  

ಶ್ಲೋಕ

ಸ ತಯಾ ಶ್ರದ್ಧಯಾ ಯುಕ್ತಃ ತಸ್ಯಾರಾಧನಮೀಹತೇ ।
ಲಭತೇ ಚ ತತಃ ಕಾಮಾನ್ ಮಯೈವ ವಿಹಿತಾನ್ಹಿತಾನ್ ॥೨೨॥

ಪದವಿಭಾಗ

ಸಃ ತಯಾ ಶ್ರದ್ಧಯಾ ಯುಕ್ತಃ ತಸ್ಯ ಆರಾಧನಂ ಈಹತೇ । ಲಭತೇ ಚ ತತಃ ಕಾಮಾನ್ ಮಯಾ ಏವ ವಿಹಿತಾನ್ ಹಿ ತಾನ್

ಅನ್ವಯ

ಸಃ ತಯಾ ಶ್ರದ್ಧಯಾ ಯುಕ್ತಃ ತಸ್ಯ ಆರಾಧನಂ ಈಹತೇ , ತತಃ ಚ ಮಯಾ ಏವ ವಿಹಿತಾನ್ ತಾನ್ ಕಾಮಾನ್ ಲಭತೇ ಹಿ ॥

ಪ್ರತಿಪದಾರ್ಥ

ಸಃ – ಅವ° (ಭಕ್ತ°), ತಯಾ ಶ್ರದ್ಧಯಾ – ಆ ಶ್ರದ್ಧೆಂದ(ಪ್ರೇರಣೆಂದ), ಯುಕ್ತಃ – ಕೂಡಿದವ°ನಾಗಿ, ತಸ್ಯ ಆರಾಧನಂ – ಅವನ (ದೇವತೆಯ) ಪೂಜೆಯ (ಆರಾಧನೆಯ), ಈಹತೇ – ಬಯಸುತ್ತ° (ಇಚ್ಛಿಸುತ್ತ°), ತತಃ – ಅದರಿಂದ, ಚ – ಮತ್ತು, ಮಯಾ ಏವ – ಎನ್ನಿಂದಲೇ, ವಿಹಿತಾನ್ – ವ್ಯವಸ್ಥೆಗೊಳಿಸಲ್ಪಟ್ಟ, ತಾನ್  ಕಾಮಾನ್ – ಆ ಅಸೆಗಳ, ಲಭತೇ ಹಿ – ಖಂಡಿತವಾಗಿಯೂ ಪಡೆತ್ತ°.  

ಅನ್ವಯಾರ್ಥ

ಅವ° ತನ್ನ ಶ್ರದ್ಧೆಂದ ಆ ದೇವತೆಯ ಆರಾಧನೆಯ ಮಾಡುತ್ತ°. ಆ ಮೂಲಕ ಎನ್ನಂದಲೇ ವಿಹಿತವಾದ ತನ್ನ ಕಾಮನೆಗಳ ಪಡೆತ್ತ°.

ತಾತ್ಪರ್ಯ / ವಿವರಣೆ

ಭಗವಂತನ ಅನುಮತಿ ಇಲ್ಲದ್ದೆ ಯಾವ ದೇವತೆಗಳೂ ತಮ್ಮ ಭಕ್ತರಿಂಗೆ ವರಂಗಳ ಕೊಡುವ ಅಧಿಕಾರ ಇಲ್ಲೆ. ಎಲ್ಲವೂ ಭಗವಂತನ ಸ್ವತ್ತು ಹೇಳ್ವದರ ಭಕ್ತ (ಜೀವಿ) ಮರದಿಕ್ಕು ಆದರೆ ದೇವತೆಗೊ ಮರೆತ್ತವಿಲ್ಲೆ. ಹಾಂಗಾಗಿ ವರಸಿದ್ಧಿಗೆ / ಇಷ್ಟಾರ್ಥಸಿದ್ಧಿಗೆ ಭಗವಂತನೇ ಕಾರಣನಾಗಿರುತ್ತ°. ಇದು ಭಗವಂತನಿಂದಲೇ ಈ ರೀತಿಯ ವ್ಯವಸ್ಥೆ. ಮಂದಬುದ್ಧಿಯ ಜೀವಿ ಇದರ ತಿಳಿಯದ್ದೇ ಮಾಯಾ ಪ್ರಚೋದನೆಂದ ಮೂಢನಾಗಿ ವಿವಿಧ ದೇವತಾರಾಧನೆಗೆ ತೊಡಗುತ್ತವು. ಆದರೆ ಪರಿಪೂರ್ಣ ಜ್ಞಾನಿ ಭಗವಂತನನ್ನೇ ನೇರವಾಗಿ ಪ್ರಾರ್ಥಿಸುತ್ತ°. ಐಹಿಕ ಲಾಭವ ಬೇಡುವದು ಪರಿಶುದ್ಧ ಭಕ್ತನ ಲಕ್ಷಣ ಅಲ್ಲ. ಸಾಮಾನ್ಯವಾಗಿ ಜೀವಿ, ತನ್ನ ಐಹಿಕ ಇಚ್ಛಾಪೂರ್ತಿಗಾಗಿ ವಿವಿಧ ದೇವತೆಗಳ ಬಳಿ ಸಾರಿ ಶರಣಾಗತರಾವುತ್ತವು. ಆದರೆ ಜೀವಿ ಯಾವುದಾರು ಅನುಚಿತವಾದ್ದರ ಬಯಸಿರೆ ಅದು ಇಡೇರುತ್ತಿಲ್ಲೆ. ಭಗವಂತನೇ ಕೊಡುವ ಬಿಡುವ ನಿರ್ಧಾರ ಮಾಡುವದು. ಅವ° ಕೊಡದ್ದ ಮತ್ತೆ ಬೇರೆ ಎಲ್ಲಿಂದ ಸಿಕ್ಕುಗು !. ಭಗವದ್ಧಾಮಕ್ಕೆ ಹೆರಡುವ ಜೀವಿಗೆ ಪ್ರಾಪಂಚಿಕ ಬಯಕೆಗಳೇ ತೊಡಕುಗೊ. ಹಾಂಗಾಗಿ ಮಂದಬುದ್ಧಿಂದ ಬಯಸುವ ಪ್ರಾಪಂಚಿಕ ಲಾಭ ಭಗವಂತನ ಪರಿಶುದ್ಧ ಭಕ್ತಂಗೆ ಕೊಡಲ್ಪಡುತ್ತಿಲ್ಲೆ. ಅವಂಗೆ ಎಂತರ ಕೊಡೆಕ್ಕಪ್ಪದು ಹೇಳ್ವದರ ಭಗವಂತ ತೀರ್ಮಾನಿಸುತ್ತ°. ಹಾಂಗಾಗಿ ಭಗವಂತನ ಪರಿಶುದ್ಧ ಭಕ್ತಿಸೇವೆಯೇ ಸಂಪೂರ್ಣ ಆಧ್ಯಾತ್ಮಿಕವಾದ್ದು. ಹಾಂಗಾಗಿ ಭಗವಂತ° ಇಲ್ಲಿ ಹೇಳುತ್ತ° – ‘ಭಕ್ತರು ತಮ್ಮ ಬಯಕೆಗಳ ಪೂರೈಕೆಗಾಗಿ ಶ್ರದ್ಧೆಂದ ವಿವಿಧ ದೇವತೆಗಳ ಆರಾಧಿಸಿದರೂ ಅವರ ಇಚ್ಚೆಗಳ ಕೊಡುವವ° ಆನೇ ಆಗಿದ್ದೆ’. ಭಕ್ತರು ವಿವಿಧ ದೇವತೆಗಳ ಮೂಲಕ ಪಡವದು ಭಗವಂತನ ಇಚ್ಛೆಂದಲೇ.

ಬನ್ನಂಜೆ ವಿವರುಸುತ್ತವುಈ ಮದಲೇ ಹೇಳಿದ ಏಕಭಕ್ತಿಯ ಪಾಲುಸದ್ದೆ ಯಾವುದೋ ಒಂದು ದೇವತೆಯ ಅಚಲವಾಗಿ ಪೂಜಿಸಿ ಫಲಪಡವವರ ಪ್ರಪಂಚಲ್ಲಿ ಕಾಣುತ್ತು. ಹಾಂಗಾರೆ ಈ ತಪ್ಪು ಪೂಜಾಕ್ರಮಂದ ಫಲ ಸಿಕ್ಕುವದು ಹೇಂಗೆ? ಭಗವಂತ° ಹೇಳುತ್ತ° – ‘ನೀನು ಆರ ಉಪಾಸನೆ ಮಾಡಿರೂ ಅಕೇರಿಗೆ ಫಲ ಕೊಡುವವ° ಆನೇ’. ವೇದಲ್ಲಿ ಹೇಳಿಪ್ಪಂತೆ – ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ” – ಆರನ್ನೇ ಪೂಜೆ ಮಾಡಿರೂ ಅದು ಸಲ್ಲುವದು ಅಲ್ಲಿಪ್ಪ ಭಗವಂತಂಗೇ. ಆ ವ್ಯತ್ಯಾಸವ ತಿಳಿದು ಪೂಜೆ ಮಾಡಿರೆ  ‘ಶಾಶ್ವತವಾದ ಪೂರ್ಣಫಲ’, ತಿಳಿಯದ್ದೇ ಫಲಕಾಮನೆಂದ ಮಾಡಿರೆ ‘ಭೌತಿಕವಾದ ಅಲ್ಪಫಲ’. ನಾವು ಯಾವುದೇ ಆರಾಧ್ಯ ಮೂರ್ತಿಯ ಪೂಜಿಸಿರೂ ಕೂಡ ಆ ಆರಾಧ್ಯ ಮೂರ್ತಿಲಿ ಅಂತರ್ಯಾಮಿಯಾಗಿದ್ದು ಫಲ ಕೊಡುವವ° ಭಗವಂತನೇ. ಆದರೆ ‘ದೇವತಾ ಅಂತರ್ಗತನಾದ ಭಗವಂತ° ಕೊಟ್ಟ’ ಹೇಳ್ವ ಜ್ಞಾನ ನವಗಿಲ್ಲದ್ದಿಪ್ಪದು ನಮ್ಮ ಅಜ್ಞಾನ. ಹಾಂಗಾಗಿ ನಮ್ಮ ಪ್ರತಿಯೊಂದು ಕ್ರಿಯೆಲಿಯೂ ಈ ಎಚ್ಚರ ನವಗಿರೆಕು. ನಾವು ನಮ್ಮ ಪ್ರತಿಯೊಂದು ಅನುಸಂಧಾನವ ಭಗವಂತನ ಪೂಜಾರೂಪವಾಗಿ ಮಾಡಿ ಭವ್ಯವನ್ನಾಗಿಸೆಕು. ಇಲ್ಲದ್ರೆ ಮಹಾಫಲಂದ ವಂಚಿತರಾಗಿ ಅಲ್ಪಫಲ ನಮ್ಮದಾವ್ತು. ಭಗವಂತ° ಇಲ್ಲಿ ಹೇಳಿದ್ದ° – “ಮಯೈವ ವಿಹಿತಾನ್ ಹಿ ತಾನ್” – ‘ಎನ್ನಿಂದಲೇ ಅವೆಲ್ಲ ಇಚ್ಛೆಗೊ ಕೊಡಲ್ಪಡುತ್ತು’ ಹೇಳಿಯೂ ಅರ್ಥಮಾಡ್ಳಕ್ಕು, “ಮಯೈವ ವಿಹಿತಾನ್ ಹಿತಾನ್” – ‘ನೀನು ಬಯಸಿದ ನಿನಗೆ ಹಿತವಾದ’ ಕ್ಷಣಿಕ ಫಲವ ಎನ್ನಿಂದ ಪಡೆತ್ತೆ ಹೇಳ್ವ ಅರ್ಥವೂ ಆವ್ತು.

ಶ್ಲೋಕ

ಅಂತವತ್ತು ಫಲಂ ತೇಷಾಂ ತದ್ಭವತ್ಯಲ್ಪಮೇಧಸಾಂ ।
ದೇವಾಂದೇವಯಜೋ ಯಾಂತಿ ಮದ್ಭಕ್ತಾ ಯಾಂತಿ ಮಾಮಪಿ ॥೨೩॥

ಪದವಿಭಾಗ

ಅಂತವಂತ್ ತು  ಫಲಂ ತೇಷಾಂ ತತ ಭವತಿ ಅಲ್ಪ-ಮೇಧಸಾಂ । ದೇವಾನ್ ದೇವ-ಯಜಃ ಯಾಂತಿ ಮತ್ ಭಕ್ತಾಃ ಯಾಂತಿ ಮಾಂ ಅಪಿ॥

ಅನ್ವಯ

ತೇಷಾಂ ಅಲ್ಪ-ಮೇಧಸಾಂ ತತ್ ಫಲಂ ತು ಅಂತವತ್ ಭವತಿ; ದೇವ-ಯಜಃ ದೇವಾನ್ ಯಾಂತಿ, ಮತ್ ಭಕ್ತಾಃ ಅಪಿ ಮಾಂ ಯಾಂತಿ ॥

ಪ್ರತಿಪದಾರ್ಥ

ತೇಷಾಂ ಅಲ್ಪ-ಮೇಧಸಾಂ – ಆ ಅಲ್ಪಬುದ್ಧಿಯುಳ್ಳವರ, ತತ್ ಫಲಂ ತು – ಆ ಫಲವಾದರೋ, ಅಂತವತ್ ಭವತಿ – ನಾಶಶೀಲವಾಗಿ ಆವ್ತು, ದೇವ-ಯಜಃ – ದೇವತೆಗಳ ಆರಾಧಕರು, ದೇವಾನ್ – ದೇವತೆಗಳ, ಯಾಂತಿ – ಹೊಂದುತ್ತವು (ಹೋವುತ್ತವು),  ಮತ್ ಭಕ್ತಾಃ – ಎನ್ನ ಭಕ್ತರು, ಅಪಿ – ಕೂಡ, ಮಾಂ ಯಾಂತಿ – ಎನ್ನಲ್ಲಿಗೆ ಎತ್ತುತ್ತವು).

ಅನ್ವಯಾರ್ಥ

ಆ ಅಲ್ಪಬುದ್ಧಿಯಿಪ್ಪವ್ವು ದೇವತೆಗಳ ಪೂಜಿಸುತ್ತವು. ಅವು ಪಡವ ಫಲವು ಮಿತವಾದ್ದು (ಐಹಿಕ ಫಲವು ಶಾಶಶೀಲವಾದ್ದು) ಅಲ್ಪಕಾಲದ್ದು. ದೇವತೆಗಳ ಪೂಜಿಸುತ್ತವು ದೇವತೆಗಳ ಪಡೆತ್ತವು, ಎನ್ನ ಪೂಜಿಸುವವು ಎನ್ನ ಪಡೆತ್ತವು .[ದೇವತೆಗಳ ಪೂಜಿಸುತ್ತವು ದೇವತೆಗಳ ಲೋಕಕ್ಕೆ ಹೋವುತ್ತವು. ಆದರೆ, ಎನ್ನ ಭಕ್ತರು ಕಡೇಂಗೆ ಎನ್ನ ಲೋಕವ ಮುಟ್ಟುತ್ತವು].

ತಾತ್ಪರ್ಯ / ವಿವರಣೆ

ಭಗವಂತ° ಇಲ್ಲಿ ಹೇಳುತ್ತ – ಅಲ್ಪಮತಿಗಳಾದ ಅಂತವರ ಆ ಫಲಕ್ಕೆ ಅಳಿವಿದ್ದು. ‘ಅಂತವತ್ ತು ಭವತಿ’ – ಕೊನೆಯಿಪ್ಪದ್ದು ಆಗಿರುತ್ತು; ಶಾಶ್ವತವಾದ್ದು ಅಲ್ಲ. ಅಕೇರಿಗೆ ಆಯಾ ದೇವತೆಗಳ ಶ್ರದ್ಧೆಂದ ಪೂಜಿಸಿ ಅಕೇರಿಗೆ ಅಯಾ ದೇವತೆಗಳ ಲೋಕವ ಸೇರುತ್ತವು. ಹಾಂಗೇ ಎನ್ನನ್ನೇ ಭಕ್ತಿಂದ ಉಪಾಸನೆ ಮಾಡಿದವು ಶಾಶ್ವತನಾದ ಎನ್ನನ್ನೇ ಪಡೆತ್ತವು. ಅರ್ಥಾತ್ – ಬೇರೆ ಬೇರೆ ದೇವತೆಗಳ ಉಪಾಸನೆಂದ ಶಾಶ್ವತವಲ್ಲದ ಅಲ್ಪಸುಖದ ಐಹಿಕ ಫಲವ ಪಡೆತ್ತವು. ಎನ್ನ ನಿಜಭಕ್ತಿಲಿ ಪೂಜಿಸಿದವು ಶಾಶ್ವತವಾಗಿ ಎನ್ನ ಸೇರುತ್ತವು. ಯಾವೊಬ್ಬ ದೇವತೆಯ ಪೂಜಿಸಿರೂ ಅಂತ್ಯಲ್ಲಿ ಭಗವಂತನ ಸೇರುತ್ತು ಹೇಳ್ವದು ತಪ್ಪು ಕಲ್ಪನೆ. ಆ ಸ್ಥಾನವ ಕೊಡ್ಳೆ ಭಗವಂತನೊಬ್ಬನೇ ಸಮರ್ಥ. ಐಹಿಕ ಫಲಾಪೇಕ್ಷೆಂದ ವಿವಿಧ ಅಭಿಮಾನಿ ದೇವತೆಗಳ ಪೂಜಿಸಿ ಆಯಾ ಫಲಂಗಳ ಪಡವಲೆಡಿಗು. ಆದರೆ ಅದು ಶಾಶ್ವತ ಅಲ್ಲ. ಅಲ್ಪಕಾಲದ ಸುಖ ಮಾಂತ್ರ. ಆದರೆ ಭಗವಂತನ ನಿಜಭಕ್ತರಿಂಗೆ ಐಹಿಕ ಕಾಮನೆ ಇರ್ತಿಲ್ಲೆ . ಹಾಂಗಾಗಿ ಅವು ಭಗವಂತನನ್ನೇ ನೇರವಾಗಿ ಸೇರುತ್ತವು. ಅದು ಶ್ರೇಷ್ಠವಾದ್ದು, ಶಾಶ್ವತವಾದ್ದು.

ದೇವತೆಗೊ ಪರಮ ಪುರುಷ° ಆ ಭಗವಂತನ ದೇಹದ ಬೇರೆ ಬೇರೆ ಶಕ್ತಿಗಳೇ. ಆದರೆ, ಅವನ ಭಾಗವೇ ಆಗಿದ್ದರೆ ಅವರ ಪೂಜಿಸಿರೂ ಭಗವಂತನ ಆ ಗುರಿಯ ಸಾಧ್ಯ ಆವುತ್ತಿಲ್ಲೆ ಏಕೆ?. ಇದಕ್ಕೆ ಅವರ ಕಾಮನೆ – ಐಹಿಕ ಫಲಪ್ರಾಪ್ತಿ. ಅವಕ್ಕೆ ಬೇಕಾದ್ದು ಐಹಿಕ ಲಾಭ. ದೇಹದ ಯಾವ ಭಾಗಕ್ಕೆ ಆಹಾರ ಕೊಡೆಕು ಹೇಳ್ವ ಸ್ಪೆಷಲಿಸ್ಟ್ ಅವು ಅಲ್ಲ. ಎಂತ ಬೇಕು ಹೇಳಿ ನೇರವಾಗಿ ನಾವು ಕೇಳುತ್ತೋ ಅದರ ಮಾಂತ್ರ ಅವ್ವು ಕೊಡುವದು. ಎಲ್ಲಿಗೆ ಎಂತರ ಕೊಡೆಕು ಹೇಳಿ ಗೊಂತಿಪ್ಪದು ಭಗವಂತಂಗೆ ಒಬ್ಬಂಗೆ. ವಿವಿಧ ದೇವತೆಗಳಿಂದ ಪಡದ ವರಂಗೊ ಶಾಶ್ವತವಾದ್ದು ಅಲ್ಲ. ಅಲ್ಪಕಾಲಲ್ಲಿ ನಾಶ ಅಪ್ಪಾಂತಾದ್ದು. ಹಾಂಗಾಗಿ ಭಗವಂತ° ಇಲ್ಲಿ ಹೇಳುತ್ತ° – ತೇಷಾಂ ಅಲ್ಪಮೇಧಸಾಂ ತತ್ ಫಲಂ ತು ಅಂತವತ್ ಭವತಿ । ದೇವತೆಗಳೂ ಜೀವಿಯೂ ಭಗವಂತನ ವಿಭಿನ್ನಾಂಶಂಗಳೇ. ಭಗವಂತನಿಂದ ನೇರವಾಗಿ ಪಡವ ಭಾಗ್ಯ ‘ಅಮಿತ’, ಸದಾನಂದ. ಹಾಂಗಾಗಿ ಭಗವಂತ° ತನ್ನ ಪರಿಶುದ್ಧ ಭಕ್ತರೀಮ್ಗೆ ತೋರುವ ಕರುಣೆ ಅಪರಿಮಿತವಾದ್ದು. 

ಬನ್ನಂಜೆ ವಿವರುಸುತ್ತವುಅಲ್ಪಮತಿಗಳಿಂದ ವಿವಿಧ ದೇವತೆಗಳ ಪೂಜಿಶಲ್ಪಟ್ಟು ಪಡದ ಐಹಿಕ ಫಲಕ್ಕೆ ಅಳಿವಿದ್ದು. ವಿವಿಧ ದೇವತೆಗಳ ಆರು ಪೂಜಿಸುತ್ತವೊ ಅವ್ವು ಆಯಾ ದೇವತೆಗಳ ಸೇರುತ್ತವು. ಭಗವಂತನ ನಿಜಭಕ್ತರು ಭಗವಂತನ ಸೇರುತ್ತವು. ಆರು ಫಲ ಕೊಟ್ರೆ ನವಗೆಂತ? ನವಗೆ ನಮ್ಮ ಇಷ್ಟಾರ್ಥ ಸಿದ್ಧಿ ಆದರೆ  ಸಾಕು ಹೇಳಿ ಗ್ರೇಶುವದು ಅಲ್ಪತನ. ಅದು ಐಹಿಕ ಅಲ್ಪಾವಧಿಯ ಫಲವ ಗಳುಸಲೆ ಅಕ್ಕಷ್ಟೆ. ಶಾಶ್ವತವಾದ ಸುಖ ಅದರಲ್ಲಿ ಇಲ್ಲೆ. ವಿವಿಧ ದೇವತೆಗಳ ಪೂಜಿಸಿರೆ ಯಾವ ದೇವತೆಯ ಪೂಜಿಸುತ್ತೋ ಆ ದೇವತೆಯ ಸೇರ್ಲಕ್ಕು ಹೊರತು ಮೋಕ್ಷವ ಅಲ್ಲ. ಯಾವದೇವತೆಗೊಕ್ಕೂ ಕೂಡ ಅನಂತ ಕಾಲ ನಮ್ಮ ಅವರ ಲೋಕಲ್ಲಿ ಮಡಿಕ್ಕೊಂಬಲೆ ಎಡಿಯ. ನಾವು ಮಾಡಿದ ಕರ್ಮಫಲದ ಅವಧಿ ಮುಗುದಪ್ಪಗ ಮತ್ತೆ ಮರ್ತ್ಯಲೋಕಕ್ಕೆ ಬರೆಕ್ಕಾವ್ತು. ಹಾಂಗಾಗಿ ಭಗವದ್ ಪ್ರಜ್ಞೆ ಇಲ್ಲದ್ದೆ ಮಾಡಿದ ಉಪಾಸನೆ ಶಾಶ್ವತ ಮೋಕ್ಷವ ಕೊಡ. ಭಗವಂತನಲ್ಲಿ ಮನಸ್ಸು ಮಡಗಿ, ಏಕಭಕ್ತಿಂದ ಭಗವಂತನ ಪೂಜಿಸಿರೆ ಶಾಶ್ವತ ಮೋಕ್ಷವ ಪಡವಲೆ ಎಡಿಗು. ಭಗವಂತನ ನಿಜಭಕ್ತಿಂದ ಯಥಾರ್ಥಜ್ಞಾನ ಸಿದ್ಧಿ ಆವುತ್ತು. ಇದರಿಂದ ಎಂದೆಂದೂ ದುಃಖ ಇಲ್ಲದ್ದ ಭಗವದ್ ಪ್ರಾಪ್ತಿ ರೂಪದ ಮೋಕ್ಷವ ಪಡವಲೆಡಿಗು. 

ಬನ್ನಂಜೆ ಮತ್ತೂ ಹೇಳುತ್ತವುಭಗವಂತ° ಎಂತಕೆ ಹೊಗಳುವಿಕೆಯ ಇಷ್ಟಪಡುತ್ತ°? ತನ್ನ ಹೊಗಳುತ್ತವರ ಮಾಂತ್ರ ಎಂತಕೆ ಉದ್ಧರುಸುತ್ತ°? ಬಾಕಿದ್ದವರ ಏಕೆ ಉದ್ಧರುಸುತ್ತನಿಲ್ಲೆ?!. ಇಲ್ಲಿ ನಾವು ನಿಜವಾಗಿ ಅರ್ಥಮಾಡೇಕ್ಕಪ್ಪದು ಇದರಲ್ಲಿಪ್ಪ ತತ್ವವ. ಭಗವಂತ° ನಿಜವಾಗಿ ಇಷ್ಟಪಡುವದು ಹೊಗಳಿಕೆ/ಸ್ತುತಿಯ ಅಲ್ಲ!; ಸತ್ಯವ!!. ಸ್ತುತಿಲಿ / ಸಹಸ್ರನಾಮಲ್ಲಿ ಇಪ್ಪದು ಅವನ ಮಹಾತ್ಮೆ. ಮಹಾತ್ಮೆ ಹೇಳಿರೆ ಅದರಲ್ಲಿ ಇಪ್ಪ ಸತ್ಯ. ಆ ಸತ್ಯವ ನಾವೂ ಅರ್ತು (ಜ್ಞಾನಂದ ಅರ್ತು) ಜ್ಞಾನಭಕ್ತಿಲಿ ಭಗವಂತನ ಸತ್ಯವ ಹೇಳುವದೇ ಸ್ತುತಿ. ಆರು ಸತ್ಯವ ಹೇಳುತ್ತನೋ ಅವನ ಭಗವಂತ° ಇಷ್ಟಪಡುತ್ತ°. ಅವ ಬಯಸುವದು ಯಥಾರ್ಥ ಜ್ಞಾನವ. ಯಥಾರ್ಥಜ್ಞಾನ ಭಕ್ತಿರೂಪಲ್ಲಿಪ್ಪದು. ನಿಜವಾದ ಭಕ್ತಿ ಯಥಾರ್ಥಜ್ಞಾನಲ್ಲಿಪ್ಪದು. ಯಥಾರ್ಥದ ಜ್ಞಾನ ಭಗವಂತಂಗೆ ಇಷ್ಟ ಅದರ ಯಥಾವತ್ ಅರ್ಥಮಾಡಿಗೊಂಡಪ್ಪಗ ಮೋಕ್ಷವ ಪಡವಲೆ ಅರ್ಹತೆ ಲಭಿಸುತ್ತು. ಹಾಂಗಾಗಿ ಭಗವಂತ° ತನ್ನ ಹೊಗಳುತ್ತವರ ಉದ್ಧರುಸುವದು ಅಲ್ಲ; ಅವ, ಯಥಾರ್ಥವ ಕಂಡುಕೊಂಡವರ ಉದ್ಧರುಸುವದು ಹಾಂಗೂ ಅರ್ಹತೆ ಪಡದವಂಗೆ ಮೋಕ್ಷವ ಕರುಣುಸುವದು.  “ಶಾಶ್ವತ ಫಲವ ಕೊಡುವ ಅಂತರ್ಯಾಮಿಯ ಉಪಾಸನೆಲಿ ಸ್ಥಿರವಾಗಿ ನಿಂದುಗೊಂಡು ಮೋಕ್ಷವ ಪಡೆ’ ಹೇಳುವದು ಇಲ್ಲಿ ಭಗವಂತನ ಸಂದೇಶ.

ಹಾಂಗಾರೆ ಆ ಭಗವಂತನ ತಿಳಿವದು ಎಷ್ಟು ಕಷ್ಟ? –

ಶ್ಲೋಕ

ಅವ್ಯಕ್ತಂ ವ್ಯಕ್ತಿಮಾಪನ್ನಂ ಮನ್ಯಂತೇ ಮಾಮಬುದ್ಧಯಃ ।
ಪರಂ ಭಾವಮಜಾನಂತೋ ಮಮಾವ್ಯಯಮನುತ್ತಮಂ ॥೧೪॥

ಪದವಿಭಾಗ

ಅವ್ಯಕ್ತಂ ವ್ಯಕ್ತಿಂ ಆಪನ್ನಂ ಮನ್ಯಂತೇ ಮಾಂ ಅಬುದ್ಧಯಃ । ಪರಂ ಭಾವಂ ಅಜಾನಂತಃ ಮಮ ಅವ್ಯಯಂ ಅನುತ್ತಮಂ ॥

ಅನ್ವಯ

ಮಮ ಪರಂ ಅವ್ಯಯಂ ಅವ್ಯಕ್ತಂ ಅನುತ್ತಮಂ ಭಾವಂ ಅಜಾನಂತಃ ಅಬುದ್ಧಯಃ ಮಾಂ ವ್ಯಕ್ತಿಂ ಆಪನ್ನಂ ಮನ್ಯಂತೇ ॥

ಪ್ರತಿಪದಾರ್ಥ

ಮಮ ಪರಂ – ಎನ್ನ ಪರಮೋನ್ನತವಾದ, ಅವ್ಯಯಂ – ಅವಿನಾಶಿಯಾದ, ಅವ್ಯಕ್ತಂ – ಅವ್ಯಕ್ತವಾಗಿಪ್ಪ, ಅನುತ್ತಮಂ – ಅತ್ಯುತ್ಕೃಷ್ಟವಾದ , ಭಾವಂ – ಅಸ್ತಿತ್ವವ, ಅಜಾನಂತಃ – ತಿಳಿಯದ್ದೋರಾಗಿ, ಅಬುದ್ಧಯಃ – ಬುದ್ಧಿಹೀನರು, ಮಾಂ – ಎನ್ನ, ವ್ಯಕ್ತಿಂ – ವ್ಯಕ್ತಿತ್ವವ, ಆಪನ್ನಂ – ಹೊಂದಿದವ°, ಮನ್ಯಂತೇ – ಹೇದು ತಿಳಿತ್ತವು.

ಅನ್ವಯಾರ್ಥ

ಎನ್ನ ಪರಮೋನ್ನತವಾದ ಅವ್ಯಯ, ಅನುತ್ತಮ,  ಅವ್ಯಕ್ತಸ್ವರೂಪವ ಪರಿಪೂರ್ಣವಾಗಿ ಅರಡಿಯದ್ದೆ,   ಬುದ್ಧಿಹೀನರು, ತಿಳಿಯದ್ದೋರು ಈ ವ್ಯಕ್ತಿತ್ವವ ಪಡಕ್ಕೊಂಡೆ ಹೇದು ತಿಳಿತ್ತವು. [ ಅಳಿವಿಲ್ಲದ್ದ, ಮಿಗಿಲಿಲ್ಲದ್ದ ಎನ್ನ ಹಿರಿಮೆಯ (ಮಹಿಮೆಯ / ಯಥಾರ್ಥವ) ಅರಡಿಯದ್ದ ಅವಿವೇಕಿಗೊ ಅವ್ಯಕ್ತನಾದ ಎನ್ನ ವ್ಯಕ್ತಿತ್ವ ಹುಟ್ಟಿಬಂದದ್ದಾಗಿ ತಿಳಿತ್ತವು].

ತಾತ್ಪರ್ಯ / ವಿವರಣೆ

ಬನ್ನಂಜೆಯವು ವಿವರುಸುತ್ತವು –    ಸಾಮಾನ್ಯವಾಗಿ ಭಗವಂತನ ಬಗ್ಗೆ ತಿಳ್ಕೊಂಬದು ಅಷ್ಟು ಸುಲಭ ಅಲ್ಲ. ಅದರೆ ತಪ್ಪು ಗ್ರಹಿಕೆ ಸುಲಭ!. ಇಲ್ಲಿ ಭಗವಂತ° ಹೇಳುತ್ತ° – “ಆನು ವಸ್ತುತಃ ಅವ್ಯಕ್ತ°”. ಜೀವ ವ್ಯಕ್ತ ಅಪ್ಪದು ಅದಕ್ಕೆ ಪಂಚಭೌತಿಕ ಶರೀರ ಬಂದಪ್ಪಗ. ಆದ್ದರಿಂದ ಸ್ಥೂಲವಾದ ಶರೀರ ಇಪ್ಪಂತದ್ದು ‘ವ್ಯಕ್ತ’ ಹೇಳಿ ಹೇಳುತ್ತವು. ಭಗವಂತಂಗೆ ಒಂದಿನ ನಾಶ ಅಪ್ಪದು ಹೇಳ್ವ ಪಂಚಭೌತಿಕ ಶರೀರ ಇಲ್ಲೆ. ಅವ° ಸರ್ವದಾ ಅವ್ಯಕ್ತ°. ಇಂತಹ ಭಗವಂತ° ತನ್ನ ಅವತಾರಲ್ಲಿ ತನ್ನ ಸ್ವಂತ ಇಚ್ಛೆಂದ ಒಂದು ರೂಪಲ್ಲಿ ಪ್ರಪಂಚಲ್ಲಿ ಕಾಣಿಸಿಗೊಳ್ಳುತ್ತ°. ಪ್ರಾಪಂಚಿಕವಾಗಿ ಅವತಾರರೂಪಿಯಾಗಿ ಕಾಂಬ ಭಗವಂತಂಗೆ ಪಂಚಭೌತಿಕ ಶರೀರ ಇದ್ದು, ಒಂದಿನ ಅವ ದೇಹತ್ಯಾಗ ಮಾಡುತ್ತ° ಹೇಳಿ ಯಥಾರ್ಥ ಜ್ಞಾನ ಇಲ್ಲದ್ದೋರು ತಿಳ್ಕೊಳ್ಳುತ್ತವು. ವ್ಯಕ್ತವಾದ, ಸ್ಥೂಲವಾದ, ನಶ್ವರವಾದ, ಪ್ರಾಕೃತವಾದ ಶರೀರ ಇಲ್ಲದ ಭಗವಂತನ ಅಂತಹ ಸ್ಥೂಲವಾದ ಶರೀರದೊಳ ಬದ್ಧನಾಗಿಪ್ಪವ° ಹೇಳ್ವ ಅರ್ಥಲ್ಲಿ  ಸಾಮಾನ್ಯ ಜನಂಗೊ ತಿಳಿತ್ತವು. ಆಸೆ, ಆಕಾಂಕ್ಷೆ, ಬಯಕೆಗಳ ದೆಸೆಂದ ಬುದ್ಧಿಯ (ವಿವೇಕವ) ಕಳಕ್ಕೊಂಡವು ಕೃಷ್ಣನ (ಭಗವಂತನ) ಸರ್ವೋತ್ತಮವಾದ, ಅವಿನಾಶಿಯಾದ, ಪರಮ ಪ್ರಭಾವವ ತಿಳಿಯದ್ದೆ ಹೋವ್ತವು.  ಹಾಂಗಾಗಿ ಅವ್ವು ಅವ್ಯಕ್ತನಾದ ಕೃಷ್ಣನ (ಭಗವಂತನ) ವ್ಯಕ್ತಿಭಾವಂದ ಮನುಷ್ಯನಾಗಿ ತಿಳ್ಕೊಳ್ಳುತ್ತವು. ಅರ್ಥಾತ್, ಶ್ರೀಕೃಷ್ಣನೂ ಮನುಷ್ಯದೇಹವ ಧರಿಸಿಗೊಂಡಿಪ್ಪ ಯೋಗೀ, ಯೋಗೇಶ್ವರ°. ಸ್ವತಃ ತಾನೂ ಯೋಗಿಯಾಗಿದ್ದು, ಮತ್ತಿಪ್ಪವಕ್ಕೂ ಯೋಗವ ಕೊಡ್ಳೆ ಎಡಿಗಪ್ಪವ° – ಯೋಗೇಶ್ವರ°. ಭಗವಂತ° (ಶ್ರೀಕೃಷ್ಣ) ಪ್ರಾಪಂಚಿಕವಾಗಿ ದೇಹಧಾರಿಯಾಗಿದ್ದರೂ ಅದೇ ಅವ್ಯಕ್ತ ಸ್ವರೂಪಲ್ಲಿ ಸ್ಥಿರನಾಗಿಪ್ಪವ°. ಬುದ್ಧಿಶೂನ್ಯರಾದವು ಭಗವಂತನ ಈ ಸ್ಥಿತಿಯ ಅರ್ಥಮಾಡಿಗೊಳ್ಳುತ್ತವಿಲ್ಲೆ. ನಮ್ಮಾಂಗೆ ಇವನೂ ಹುಟ್ಟಿಬಂದವ°, ಇವ ದೇವರಪ್ಪಲೆ ಹೇಂಗೆ ಸಾಧ್ಯ ಹೇಳಿ ಯೋಚಿಸುತ್ತವು.   ಹೀಂಗೆ ತಿಳ್ಕೊಂಬವು ‘ಬುದ್ಧಿಶೂನ್ಯರು’ (ಅಬುದ್ಧಯಃ) ಹೇಳಿ ಇಲ್ಲಿ ಭಗವಂತ° ಹೇಳುತ್ತ°. ಕೃಷ್ಣಪ್ರಜ್ಞೆಯ ಬೆಳೆಶಿಗೊಳ್ಳದ್ದೆ ಆರೂ ಭಗವಂತನ ಅರ್ಥಮಾಡಿಗೊಂಬಲೆ ಎಡಿಯ. ಬರೇ ಮಾನಸಿಕ ಊಹಾತ್ಮಕ ಚಿಂತನೆಂದ ಅಥವಾ ವೈದಿಕ ಸಾಹಿತ್ಯವ ಚರ್ಚಿಸುವದರಿಂದ ದೇವೋತ್ತಮ ಪರಮ ಪುರುಷನ ರೂಪವನ್ನಾಗಲೀ, ಗುಣವನ್ನಾಗಲೀ, ನಾಮಂಗಳನ್ನಾಗಲೀ ಅರ್ಥಮಾಡಿಗೊಂಬಲೆ ಎಡಿಯ. ಭಕ್ತಿಸೇವೆಂದ ಮಾತ್ರವೇ ಇದು ಸಾಧ್ಯ.

ಶ್ಲೋಕ

ನಾಹಂ ಪ್ರಕಾಶಃ ಸರ್ವಸ್ಯ ಯೋಗಮಾಯಾಸಮಾವೃತಃ ।
ಮೂಢೋsಯಂ ನಾಭಿಜಾನಾತಿ ಲೋಕೋ ಮಾಮಜಮವ್ಯಯಂ ॥೨೫॥

 ಪದವಿಭಾಗ 

ನ ಅಹಂ ಪ್ರಕಾಶಃ ಸರ್ವಸ್ಯ ಯೋಗ-ಮಾಯಾ-ಸಮಾವೃತಃ । ಮೂಢಃ ಅಯಂ ನ ಅಭಿಜಾನಾತಿ ಲೋಕಃ ಮಾಂ ಅಜಂ ಅವ್ಯಯಂ॥ 

ಅನ್ವಯ 

ಯೋಗ-ಮಾಯಾ-ಸಮಾವೃತಃ ಅಹಂ ಸರ್ವಸ್ಯ ಪ್ರಕಾಶಃ ನ । ಅಯಂ ಮೂಢಃ ಲೋಕಃ ಅಜಂ ಅವ್ಯಯಂ ಮಾಂ ನ ಅಭಿಜಾನಾತಿ॥ 

ಪ್ರತಿಪದಾರ್ಥ

ಯೋಗ-ಮಾಯಾ-ಸಮಾವೃತಃ – ಅಂತರಂಗಶಕ್ತಿಂದ ಆವೃತನಾದವ°, ಅಹಂ – ಆನು, ಸರ್ವಸ್ಯ ಪ್ರಕಾಶಃ ನ – ಪ್ರತಿಯೊಬ್ಬನ ವ್ಯಕ್ತ ನಾಗಿಲ್ಲೆ (ಪ್ರತಿಯೊಬ್ಬನ ಕಣ್ಣಿಂಗೆ ಕಾಣುತ್ತಿಲ್ಲೆ). ಅಯಂ ಮೂಢಃ ಲೋಕಃ – ಈ  ಮೂಢ ಪ್ರಪಂಚವು (ಜನಂಗೊ),  ಅಜಂ – ಜನ್ಮರಹಿತ°, ಅವ್ಯಯಂ – ಅಕ್ಷಯ°ನಾದ, ಮಾಂ – ಎನ್ನ, ನ ಅಭಿಜಾನಾತಿ – ತಿಳಿತ್ತಿಲ್ಲೆ.

ಅನ್ವಯಾರ್ಥ

ಅಂತರಂಗಶಕ್ತಿಗಳಿಂದ (ಮಾಯೆಂದ) ಆವೃತನಾದ ಆನು ಎಲ್ಲೋರ ಕಣ್ಣಿಂಗೆ ಕಾಣುತ್ತಿಲ್ಲೆ.  ಎನಗೆ ಹುಟ್ಟು ಇಲ್ಲೆ, ಆನು ಅವ್ಯಯ, ಅಕ್ಷಯ° ಎಂಬುದರ ತಿಳಿತ್ತವಿಲ್ಲೆ.

ತಾತ್ಪರ್ಯ / ವಿವರಣೆ

ಭಗವಂತ° ಎಲ್ಲಾ ದಿಕ್ಕೆಯೂ, ಎಲ್ಲೋರಲ್ಲಿಯೂ ಇದ್ದೆ ಹೇಳಿದ್ದ°. ಆದರೆ ಎಲ್ಲೋರ ಕಣ್ಣಿಂಗೆ ಕಾಣಿಸಿಗೊಳ್ಳುತ್ತನಿಲ್ಲೆ. ಅವನ ಅನಂತ ಗುಣದ ಸ್ಪಷ್ಟ ಚಿತ್ರ ಆರಿಂಗೂ ಅರಡಿಯ. ಮನುಷ್ಯನ ಚಿಂತನಗೆ ಒಂದು ಮಿತಿ ಇದ್ದು. ಆದರೆ ಭಗವಂತ° ಆ ಮಿತಿಯ ಒಳ ಇಲ್ಲೆ. ಹಾಂಗಾಗಿ ನಮ್ಮ ಬುದ್ಧಿಗೆ ಅವನ ಅನಂತವಾದ ಜ್ಞಾನವ, ಶಕ್ತಿಯ, ರೂಪವ ಗ್ರೇಶಲೆ  ಎಡಿಗಾವ್ತಿಲ್ಲೆ. ನಾವು ಬಯಸಿಯಪ್ಪಗ ಅವ° ನಮ್ಮ ಕಣ್ಣಮುಂದೆ ಕಾಣುತ್ತನೂ ಇಲ್ಲೆ. ಆದರೆ ಕಾಲ ಪಕ್ವ ಆದಪ್ಪಗ ತನ್ನ ಇಚ್ಛೆಯಂತೆ ಭಗವಂತ° ಜ್ಞಾನಾನಂದ ಸ್ವರೂಪವಾದ ಮನಸ್ಸು ಮತ್ತು ಜ್ಞಾನಾನಂದ ಸ್ವರೂಪವಾದ ಇಂದ್ರಿಯಂಗೊಕ್ಕೆ ಯಥಾಶಕ್ತಿ ಗೋಚರ ಆವ್ತ°. ಈ ಲೋಕಲ್ಲಿ ಅಜ್ಞಾನದ ಮೋಹಕ್ಕೆ ಒಳಗಾದ ಜೀವಜಾತ ಎಂದೂ ಭಗವಂತನ ಗ್ರೇಶುಲೆ ಎಡಿಗಾಗ. ಜೀವಂಗೂ ಭಗವಂತಂಗೂ ನಡುವೆ ಇಪ್ಪ ಅಜ್ಞಾನ ಹೇಳ್ವ ಮಾಯಾ ಪರದೆಯಿಂದಲಾಗಿ ನವಗೆ ಭಗವಂತ° ಕಾಣುತ್ತನಿಲ್ಲೆ. ಜ್ಞಾನವೆಂಬ ಬೆಳಕಿಂದ ಮಾಯೆಯೆಂಬ ಪರದೆಯ ಸರಿಸಿ ಭಗವಂತನ ಕಾಂಬಲೆ ಎಡಿಗಷ್ತೇ ಹೇಳ್ವದರ ಇಲ್ಲಿ ಭಗವಂತ ಪ್ರಸ್ತುತಪಡಿಸಿದ್ದ°. ಭಗವಂತ° ಅಂತರ್ಯಾಮಿಯಾಗಿ ಜಗತ್ತಿನ ನಡೆಶುತ್ತ°. ಭಗವಂತನ ಕಾಂಬಲೆ ನವಗೆ ನಮ್ಮ ಮನಸ್ಸಿಲ್ಲಿ ಅಜ್ಞಾನ ಪರದೆ ತಡೆಯಾಗಿದ್ದು. ಹಾಂಗಾಗಿ ನಮ್ಮ ಮಾಯಾಶಕ್ತಿಂದ ಆವೃತನಾದ ಭಗವಂತನ ಸಾಮಾನ್ಯ ದೃಷ್ಟಿಲಿ ಕಾಂಬಲೆ ಎಡಿಯ. ಜ್ಞಾನದ ಅನುಭವಪೂರ್ವಕವಾಗಿ ಭಗವಂತ° ಜನ್ಮರಹಿತ°, ಅವ್ಯಯ°, ಅಕ್ಷಯ°, ಅನಂತ ಶಕ್ತಿ, ಜ್ಞಾನಾನಂದ ಸ್ವರೂಪ°  ಹೇಳ್ವದರ ತಿಳುದರೆ ಭಗವಂತನ ಕಾಂಬ ಯೋಗ್ಯತೆ ಬತ್ತಷ್ಟೆ. ಇಲ್ಲದ್ದೆ ನಮ್ಮ ಮೂಢಮನಸ್ಸಿಂಗೆ ಭಗವಂತನ ತಿಳ್ಕೊಂಬ ಯೋಗ್ಯತೆ ಇಲ್ಲೆ. ಸಂಪೂರ್ಣ ಕೃಷ್ಣಪ್ರಜ್ಞೆಂದ ಮಾತ್ರವೇ ಭಗವಂತನ ತಿಳಿವಲೆ ಪ್ರಯತ್ನಿಸಲೆಡಿಗಷ್ಟೆ.

ಶ್ಲೋಕ

ವೇದಾಹಂ ಸಮತೀತಾನಿ ವರ್ತಮಾನಾನಿ ಚಾರ್ಚುನ ।
ಭವಿಷ್ಯಾಣಿ ಚ ಭೂತಾನಿ ಮಾಂ ತು ವೇದ ನ ಕಶ್ಚನ ॥೨೬॥

ಪದವಿಭಾಗ

ವೇದ ಅಹಂ ಸಮತೀತಾನಿ ವರ್ತಮಾನಾನಿ ಚ ಅರ್ಜುನ । ಭವಿಷ್ಯಾಣಿ ಚ ಭೂತಾನಿ ಮಾಂ ತು ವೇದ ನ ಕಶ್ಚನ ॥

ಅನ್ವಯ

ಹೇ ಅರ್ಜುನ!, ಅಹಂ ಸಮತೀತಾನಿ ವರ್ತಮಾನಾನಿ ಚ ಭವಿಷ್ಯಾಣಿ ಚ ಭೂತಾನಿ ವೇದ । ಕಶ್ಚನ ತು ಮಾಂ ನ ವೇದ ॥

ಪ್ರತಿಪದಾರ್ಥ

ಹೇ ಅರ್ಜುನ!, – ಏ ಅರ್ಜುನ!, ಅಹಂ – ಆನು, ಸಮತೀತಾನಿ – ಸಂಪೂರ್ಣವಾಗಿ ಗತಿಸಿಹೋದ (ಪ್ರಾಕಿನ, ಭೂತಕಾಲದ), ವರ್ತಮಾನಾನಿ – ಈಗಾಣ (ವರ್ತಮಾನ ಕಾಲದ), ಚ – ಕೂಡ, ಭವಿಷ್ಯಾಣಿ – ಮುಂದಾಣ (ಭವಿಷ್ಯತ್ ಕಾಲದ), ಚ – ಕೂಡ, ಭೂತಾನಿ –  ವ್ಯಕ್ತಿಗಳ ವಿಷಯಂಗಳ, ವೇದ – ತಿಳುದ್ದೆ. ಕಶ್ಚನ ತು – ಆರೊಬ್ಬನೂ (ಆರೊಬ್ಬನಾದರೋ), ಮಾಂ – ಎನ್ನ, ನ ವೇದ – ತಿಳುದ್ದವಿಲ್ಲೆ.

ಅನ್ವಯ

ಏ ಅರ್ಜುನ!, ಆನು ಬಹುಹಿಂದಾಣ ಮತ್ತೆ  ಭೂತ-ವರ್ತಮಾನ-ಭವಿಷ್ಯತ್ ವಿಷಯಂಗಳ ತಿಳುದವನಾಗಿದ್ದೆ. ಆದರೆ ಆರೊಬ್ಬನೂ ಎನ್ನ ತಿಳುದ್ದದು ಇಲ್ಲೆ.

ತಾತ್ಪರ್ಯ / ವಿವರಣೆ

ಭಗವಂತ° ಇಲ್ಲಿ ಜೀವಿಗೂ ಭಗವಂತಂಗೂ ಇಪ್ಪ ಇನ್ನೊಂದು ವ್ಯತ್ಯಾಸವ ಹೇಳುತ್ತ°. ಭೌತಿಕ ಶರೀರಲ್ಲಿಪ್ಪ ಜೀವಿ ತನ್ನ ಹಿಂದಾಣ ಜನ್ಮವ ನೆಂಪಿಲ್ಲಿ ಮಡಿಕ್ಕೊಂಬಲೆ ಶಕ್ತನಲ್ಲ. ಸಂಪೂರ್ಣವಾಗಿ ಮರದಿರುತ್ತ°. ಈ ಜನ್ಮದ ಭೂತವಿಷಯಂಗಳನ್ನೇ ಐಹಿಕ ಜೀವಿ ಮರದಿರುತ್ತ°. ಭವಿಷ್ಯತ್ ಜನ್ಮ ಹೇಂಗೂ ಹೇಳ್ಳೆ ಸಾಧ್ಯ ಇಲ್ಲೆ. ಹಾಂಗಾಗಿ ಭೂತ-ವರ್ತಮಾನ-ಭವಿಷ್ಯತ್ ಹೇಳ್ಳೆ ಜೀವಿ ಸಾಧ್ಯ ಆವುತ್ತನಿಲ್ಲೆ. ಆದರೆ ಭಗವಂತ ಹಾಂಗಲ್ಲ. ಅವಂಗೆ ಭೂತ-ವರ್ತಮಾನ-ಭವಿಷ್ಯತ್ ಜನ್ಮ ಮತ್ತು ವಿಷಯಂಗೊ ಸಮಗ್ರವಾಗಿ ತಿಳಿದಿಪ್ಪವ°. ಹಿಂದಾಣ ಜನ್ಮಲ್ಲಿ ಎಂತಾಗಿತ್ತು, ವರ್ತಮಾನದ ಸ್ಥಿತಿ ಎಂತರ, ಮುಂದಾಣ ಕಾಲಲ್ಲಿ ಎಂತ ಅಪ್ಪಲಿದ್ದು ಹೇಳ್ವದರ ಅವ° ಸ್ಪಷ್ಟವಾಗಿ ತಿಳುದ್ದ. ಈ ಜಗತ್ತೇ ಅವನದ್ದು, ಅವನೇ ಇದರ ಸೃಷ್ಟಿಕರ್ತ°, ಪಾಲನೆ ಮಾಡುವವ°, ಲಯ ಮಾಡುವವನೂ ಅವನೇ. ಮುಂದೆ ಎಂತ ಆಯೇಕು ಹೇಳ್ವದರ ತೀರ್ಮಾನುಸುವದೂ ಅವನೇ. ವರ್ತಮಾನಲ್ಲಿ ಕೃಷ್ಣರೂಪಿಯಾಗಿ ಅವತರಿಸಿಗೊಂಡ ಭಗವಂತ° ಲಕ್ಷಾಂತರ ವರ್ಷಂಗಳ ಹಿಂದೆ ವಿವಸ್ವಾನಂಗೆ ಉಪದೇಶ ಮಾಡಿದ್ದು ಕೃಷ್ಣಂಗೆ ಗೊಂತಿದ್ದು ಹೇಳ್ವದರ ನಾಲ್ಕನೇ ಅಧ್ಯಾಯಲ್ಲಿ ಹೇಳಿದ್ದ°. ಪರಮಾತ್ಮನಾಗಿ ಅವ° ಪ್ರತಿಯೊಬ್ಬ ಜೀವಿಯ ಹೃದಯಲ್ಲಿ ಇಪ್ಪದರಿಂದ ಅವ° ಪ್ರತಿಯೊಂದು ಜೀವಿಯನ್ನೂ ಬಲ್ಲವ°. ಪರಮಾತ್ಮನಾಗಿ ಭಗವಂತ° ಪ್ರತಿಯೊಬ್ಬ° ಜೀವಿಯ ಹೃದಯಲ್ಲಿ ಇಪ್ಪದಾದರೂ, ದೇವೋತ್ತಮ ಪರಮ ಪುರುಷನಾಗಿ ಅವನ ಸನ್ನಿಧಿ ಇದ್ದರೂ ಮಂದಬುದ್ಧಿಯವು ಮಾಂತ್ರ ನಿರಾಕಾರ ಬ್ರಹ್ಮನ ಸಾಕ್ಷಾತ್ಕಾರ ಮಾಡಿಗೊಂಡೂ ಭಗವಂತನ ಸಂಪೂರ್ಣವಾಗಿ ತಿಳ್ಕೊಂಬಲೆ ಸಾಧ್ಯ ಆವ್ತವಿಲ್ಲೆ. ನಿಶ್ಚಯವಾಗಿಯೂ ಭಗವಂತನ (ಇಲ್ಲಿ ಕೃಷ್ಣನ) ದಿವ್ಯ ಶರೀರವು ನಾಶ ಆವುತ್ತಿಲ್ಲೆ. ಸೂರ್ಯನ ಹಾಂಗೆ ಇರುತ್ತ°, ಮಾಯೆಯ ಮೋಡ ಇರ್ತು. ಐಹಿಕ ಜಗತ್ತಿಲ್ಲಿ ಸೂರ್ಯನೂ, ಮೋಡವೂ, ಬೇರೆ ಬೇರೆ ನಕ್ಷತ್ರಂಗಳೂ, ಗ್ರಹಂಗಳೂ ಇಪ್ಪದರ ಕಾಣುತ್ತು. ಆಕಾಶಲ್ಲಿ ತುಸುಕಾಲ ಇವೆಲ್ಲವನ್ನೂ ಮೋಡಂಗೊ ಮುಚ್ಚುಗು. ಆದರೆ ನಮ್ಮ ಪರಿಮಿತ ದೃಷ್ಟಿಗೆ ಮಾತ್ರ ಮುಚ್ಚಿಗೊಂಡಿಪ್ಪಂತೆ ಕಾಂಬದು. ಸೂರ್ಯ, ಚಂದ್ರ, ನಕ್ಷತ್ರಂಗೊ ನಿಜವಾಗಿ ಮುಚ್ಚಲ್ಪಡುತ್ತಿಲ್ಲೆ. ಹಾಂಗೆಯೇ ಮಾಯೆಯು ಭಗವಂತನ ಮುಚ್ಚುತ್ತಿಲ್ಲೆ. ಅವನ ಅಂತರಂಗ ಶಕ್ತಿಯ ಕಾರಣಂದ ಮಂದಮತಿಗಳಾದ ಮನುಷ್ಯರಿಂಗೆ ಭಗವಂತನ ಕಾಂಬಲೆ ಎಡಿಗಾವ್ತಿಲ್ಲೆ.  ಈ ಅಧ್ಯಾಯದ ಮೂರನೇ ಶ್ಲೋಕಲ್ಲಿ ಹೇಳಿಪ್ಪ ಹಾಂಗೆ, ಲಕ್ಷಾಂತರ ಮಂದಿಗಳಲ್ಲಿ ಕೆಲವು ಜನಂಗೊ ಮಾತ್ರ ಮನುಷ್ಯ ಜನ್ಮಲ್ಲಿ ಪರಿಪೂರ್ಣರಪ್ಪಲೆ ಪ್ರಯತ್ನಿಸುತ್ತವು. ಹೀಂಗೆ ಪ್ರಯತ್ನಿಸಿ ಪರಿಪೂರ್ಣರಾದ ಸಹಸ್ರಾರು ಮಂದಿಗಳಲ್ಲಿ ಒಬ್ಬಂಗಾದರೂ ಕೂಡ ಭಗವಂತನ ಸಂಪೂರ್ಣವಾಗಿ ಅರ್ಥವಪ್ಪದು ವಿರಳ. ಪರಿಪೂರ್ಣ ನಿಜವಾದ ಕೃಷ್ಣಪ್ರಜ್ಞೆ ಇಲ್ಲದ್ದೆ ಭಗವಂತನ ಅರ್ಥಮಾಡಿಗೊಂಬಲೆ ಸಾಧ್ಯ ಇಲ್ಲೆ. 

ಬನ್ನಂಜೆಯವರ ವ್ಯಾಖ್ಯಾನಲ್ಲಿ ಹೇಳುತ್ತವು –  ಜೀವ ಮತ್ತು ಭಗವಂತನ ನೆಡುಕಾಣ ವ್ಯತ್ಯಾಸವ ಹೇಳಿಗೊಂಡು ಭಗವಂತ° ಮತ್ತೂ ಮುಂದೆ ಹೇಳುತ್ತ° – “ಹಿಂದೆ ಆಗಿ ಹೋದ್ದು, ಹೇಳಿರೆ ಪ್ರಾಕಿನ ವಾ ಭೂತಕಾಲದ, ವರ್ತಮಾನ ಕಾಲದ, ಮತ್ತು ಭವಿಷ್ಯತ್ ಕಾಲದ  ಎಲ್ಲ ಭೂತಂಗಳ (ಭೂತಾನಿ = ಜೀವಿಗೊ, ವ್ಯಕ್ತಿಗೊ) ಸರಿಯಾಗಿ ಆನು ಅರ್ತುಗೊಂಡು ಇದ್ದೆ. ಇಲ್ಲಿ ಭೂತಾನಿ ಹೇಳಿರೆ ಹಲವು ಅರ್ಥವ ಕೊಡುತ್ತು. ಪಂಚಭೂತಂಗೊ, ಅದರಿಮ್ದ ನಿರ್ಮಾಣವಾದ ಬ್ರಹ್ಮಾಂಡ, ಅದರಿಂದ ರೂಪುಗೊಂಡ ಈ ವಿಶ್ವಲ್ಲಿ ಇಪ್ಪ ಸಮಸ್ತ ವಸ್ತುಗೊ, ಪ್ರಕೃತಿ ಮತ್ತು ಜೀವರಾಶಿಗೊ ಇವೆಲ್ಲವೂ ಭೂತಂಗಳೇ (ಭೂತಾನಿ). ಈ ಹಿಂದೆ ಸೃಷ್ಟಿಯಾದ ಅನಂತ ಬ್ರಹ್ಮಾಂಡ, ಈಗಿಪ್ಪ ಬ್ರಹ್ಮಾಂಡ ಮತ್ತೆ ಮುಂದೆ ಸೃಷ್ಟಿಯಪ್ಪಲಿಪ್ಪ ಬ್ರಹ್ಮಾಂಡ, ಅದರೀತಿ ಸೃಷ್ಟಿಯಾದ ಮತ್ತು ಸೃಷ್ಟಿಯಪ್ಪಲಿಪ್ಪಂತಹ ಅನಂತ ಜೀವಜಾತಂಗೊ  ಇವೆಲ್ಲವ ಕುಲಂಕುಷವಾಗಿ ತಿಳಿದಿಪ್ಪದು ಅನಂತಕೋಟಿ ಬ್ರಹ್ಮಾಂಡ ನಾಯಕ° –  ಭಗವಂತ° ಒಬ್ಬಂಗೆ. ಆದರೆ “ಮಾಂ ತು ವೇದ ನ ಕಶ್ಚನ” – ಆದರೆ ಎನ್ನ ಮಾತ್ರ ಆರೂ ತಿಳುದ್ದವಿಲ್ಲೆ, ಎನ್ನ ಬಿಟ್ಟು ಇನ್ನಾರೂ ಇದರ ಪೂರ್ತಿಯಾಗಿ ತಿಳುದ್ದದು ಇಲ್ಲೆ. ಭಗವಂತನ ಪೂರ್ಣವಗಿ ತಿಳಿವದು ಅಸಾಧ್ಯ. ಅವ ಸ್ವತಂತ್ರ°, ಪೂರ್ಣ° ಮತ್ತೆ, ನಿತ್ಯಸತ್ಯ°. ಆದರೆ ಜೀವ° ಅಪೂರ್ಣ°, ಅಸ್ವತಂತ್ರ ಮತ್ತೆ ಅನಿತ್ಯಸತ್ಯ°.

ಭಗವಂತನ ಪೂರ್ಣವಾಗಿ ತಿಳಿವದು ಅಸಾಧ್ಯ. ಆದರೆ  ನಮ್ಮ ಯಥಾಶಕ್ತಿಗೆ ತಿಳ್ಕೊಂಬಲೂ ಎಂತಕೆ ಎಲ್ಲೋರಿಂಗೂ ಸಾಧ್ಯ ಆವುತ್ತಿಲ್ಲೆ ?

ಶ್ಲೋಕ

ಇಚ್ಛಾದ್ವೇಷಸಮುತ್ಥೇನ ದ್ವಂದ್ವಮೋಹೇನ ಭಾರತ ।
ಸರ್ವಭೂತಾನಿ ಸಂಮೋಹಂ ಸರ್ಗೇ ಯಾಂತಿ ಪರಂತಪ ॥೨೭॥ 

ಪದ ವಿಭಾಗ 

ಇಚ್ಛಾ-ದ್ವೇಷ-ಸಮುತ್ಥೇನ ದ್ವಂದ್ವ-ಮೋಹೇನ ಭಾರತ । ಸರ್ವ-ಭಾತಾನಿ ಸಂಮೋಹಂ ಸರ್ಗೇ ಯಾಂತಿ ಪರಂತಪ ॥

ಅನ್ವಯ

ಹೇ ಪರಂತಪ, ಭಾರತ!, ಸರ್ವ-ಭೂತಾನಿ ಇಚ್ಛಾ-ದ್ವೇಷ-ಸಮುತ್ಥೇನ ದ್ವಂದ್ವ-ಮೋಹೇನ ಸರ್ಗೇ ಸಂಮೋಹಂ ಯಾಂತಿ ॥

ಪ್ರತಿಪದಾರ್ಥ

ಹೇ ಪರಂತಪ – ಏ ಶತ್ರುಗಳ ಜಯಿಸುವವನೇ!, ಭಾರತ! – ಭರತವಂಶದವನೇ!, ಸರ್ವ-ಭೂತಾನಿ – ಸಮಸ್ತ ಜೀವಿಗೊ, ಇಚ್ಛಾ-ದ್ವೇಷ-ಸಮುತ್ಥೇನ – ಆಶೆ ದ್ವೇಷಂಗಳಿಂದ ಹುಟ್ಟಿಗೊಂಡ, ದ್ವಂದ್ವ-ಮೋಹೇನ – ದ್ವಂದ್ವಂಗಳ ಭ್ರಾಂತಿಂದ, ಸರ್ಗೇ – ಹುಟ್ಟುವಾಗ, ಸಂಮೋಹಿತಂ – ಭ್ರಮೆಯ, ಯಾಂತಿ – ಹೊಂದುತ್ತವು.

ಅನ್ವಯಾರ್ಥ

ಏ ಭರತವಂಶಲ್ಲಿ ಹುಟ್ಟಿದ ಅರ್ಜುನ! ಶತ್ರುಗಳ ಜಯಿಸುವವನೇ!, ಆಸೆ ದ್ವೇಷಂಗಳಿಂದ ಹುಟ್ಟಿದ ದ್ವಂದ್ವಂಗಳಿಂದಾಗಿ ಎಲ್ಲ ಜೀವಿಗೊ ಹುಟ್ಟುವಾಗಲೇ ಭ್ರಾಂತಿಯ ಹೊಂದಿರುತ್ತವು.

ತಾತ್ಪರ್ಯ / ವಿವರಣೆ

ಪರಿಶುದ್ಧ ಜ್ಞಾನವಾದ ಪರಮ ಪ್ರಭು ಭಗವಂತಂಗೆ ಅಧೀನನಾಗಿಪ್ಪದೇ ಜೀವಿಯ ಸಹಜ ಸ್ವರೂಪ. ಭ್ರಾಂತಿಂದ ಮನುಷ್ಯ° ಈ ಪರಿಶುದ್ಧ ಜ್ಞಾನದೊಟ್ಟಿಂಗೆ ಬೆರೆಯದ್ದೆ ಬೇರೆಯಾದಪ್ಪಗ ಮಾಯಾಶಕ್ತಿಯು ಅವನ ನಿಯಂತ್ರಿಸುತ್ತು. ಅವ° ದೇವೋತ್ತಮ ಪರಮ ಪುರುಷನ ಅರ್ಥಮಾಡಿಗೊಂಬಲ ಅಸಮರ್ಥನಾವುತ್ತ°. ಈ ಮಾಯಾಶಕ್ತಿ ಬಯಕೆ ಮತ್ತೆ ದ್ವೇಷ ಈ ದ್ವಂದ್ವಲ್ಲಿ ಪ್ರಕಟ ಆವ್ತು. ಬಯಕೆ ಮತ್ತೆ ದ್ವೇಷಂಗಳಿಂದ ಅಜ್ಞಾನಿಯಾಗಿ ಭಗವಂತನೊಡನೆ ಒಂದಪ್ಪಲೆ ಬಯಸುತ್ತ°, ಮತ್ತೆ, ಈಡೇರುತ್ತಿಲ್ಲೇಳಿ ಕಾಂಬಗ ಭಗವಂತನ ವಿಷಯಲ್ಲಿ ಅಸೂಯೆ ಪಡುತ್ತ°. ಭ್ರಾಂತಿಗೆ ತುತ್ತಾಗದ್ದ ಮತ್ತೆ ಬಯಕೆ ದ್ವೇಷಂಗಳಿಂದ ಕಲುಷಿತರಾಗದ್ದ ಪರಿಶುದ್ಧ ಭಕ್ತರುಗೊ ಭಗವಂತ ತನ್ನ ಒಳಾಣ ಶಕ್ತಿಂದ ಕಾಣಿಸಿಗೊಳ್ಳುತ್ತ° ಹೇಳ್ವದರ ಅರ್ಥ ಮಾಡುತ್ತವು. ಆದರೆ ದ್ವಂದ್ವ ಮತ್ತೆ ಅಜ್ಞಾನಂದ ಭ್ರಮೆಗೊಂಡವು ಭಗವಂತ° ಐಹಿಕ ಶಕ್ತಿಂದ ಸೃಷ್ಟಿಯಾದವ° ಹೇಳಿ ಗ್ರೇಶುತ್ತವು. ಅದು ಅವರ ದುರದೃಷ್ಟ. ಭಗವಂತ° ಇಲ್ಲಿ ಹೇಳುತ್ತ° – ನಾವು ಹುಟ್ಟುವಾಗಳೇ ಹುಟ್ಟಿನೊಟ್ಟಿಂಗೇ ‘ಇಚ್ಛಾ-ದ್ವೇಷ’ ಸೇರಿಸಿಗೊಂಡೇ ಹುಟ್ಟುತ್ತು. ಶರೀರ ಬೆಳದಾಂಗೆ ಅದೂ ಬೆಳೆತ್ತು. ಇದರಿಂದ ದ್ವಂದ್ವಂಗಳ ಗೊಂದಲ ಸುರುವಾವ್ತು. ಏವುದರಿಂದ ಸುಖ, ಏವುದರಿಂದ ದುಃಖ ಹೇಳ್ವದು ಅರಡಿಯದ್ದೆ ದುಃಖವನ್ನೇ ಸುಖ ಹೇದು ತಿಳ್ಕೊಂಡು ಅದರ ಬೆನ್ನು ಹಿಡ್ಕೊಂಡು ಅಕೇರಿಗೆ ದುಃಖ ಬಂದಪ್ಪಗ ಅಯ್ಯೋಪ ಹೇಳಿ ಹಲುಬುತ್ತು. ಸುಳ್ಳನ್ನೇ ಸತ್ಯ ಹೇಳಿ ನಂಬುವದು, ಜ್ಞಾನ-ಅಜ್ಞಾನದ ಗೊಂದಲ, ಸತ್ಯ-ಅಸತ್ಯದ ಗೊಂದಲ.. ಹೀಂಗೆ, ದ್ವಂದ್ವಮೋಹಕ್ಕೆ ಬಲಿಯಾದವರ ತಿದ್ದುವದು ಬಹುಕಷ್ಟ. ಇದು ಬರೇ ಮೋಹ ಮಾತ್ರವಲ್ಲ, ಇದೊಂದು ಸಮ್ಮೋಹ!. ಆನು ತಿಳುದ್ದದೇ ಸರಿ ಹೇಳ್ವ ಹಠ, ತನ್ನದೇ ಸರಿ ಹೇಳ್ವ ಆಗ್ರಹ. ಇದರಿಂದ ಮನುಷ್ಯ° ಸತ್ವವ ಅರಡಿಗೊಂಬಲೆ ಎಡಿಗಾಗದ್ದೆ ಮತ್ತೂ ಅಜ್ಞಾನಿಯಾವುತ್ತ. ಹೀಂಗೆ ಅಜ್ಞಾನಂದ ಮೋಹ, ಮೋಹಂದ ಸಂಮೋಹ. ಗೊಂತಿಲ್ಲದ್ದರ ತಿಳ್ಕೊಂಬಲೆ ಪ್ರಯತ್ನುಸದ್ದೆ ಇಪ್ಪಗ ಅದರಿಂದ ವಿಪರೀತ ಜ್ಞಾನ. ಮತ್ತೆ ತಾನು ನಂಬಿದ್ದೇ ಸರಿ ಹೇಳ್ವ ಆಗ್ರಹ. ಇದು ಮನುಷ್ಯನ ಸಾಮಾನ್ಯ ದೌರ್ಬಲ್ಯ. ಈ ಪ್ರಪಂಚಲ್ಲಿ ಪ್ರತಿಯೊಬ್ಬ° ಹೆಡ್ಡನೂ ತಾನು ಬಾಕಿದ್ದೋರಿಂದ ಬುದ್ಧಿವಂತ° ಹೇಳಿ ತಿಳ್ಕೊಳ್ಳುತ್ತ°. ಅದರಿಂದಾಗಿ ಇಡೀ ಜಗತ್ತಿನ ವ್ಯವಹಾರವ ತನ್ನ ಬುದ್ಧಿಯ ಮಾನದಂಡಂದ ಅಳದು ದಾರಿತಪ್ಪುತ್ತ° ಹೇಳಿ ಬನ್ನಂಜೆಯವರ ವ್ಯಾಖ್ಯನಲ್ಲಿ ವಿವರಣೆ ಕೊಟ್ಟಿದವು.

ಬನ್ನಂಜೆ ಹೇಳುತ್ತವು – ಇಲ್ಲಿ ಭಗವಂತ° ಅರ್ಜುನನ ‘ಪರಂತಪ’  ‘ಭಾರತ’ ಹೇಳಿ ಎರಡು ವಿಶೇಷಣಂದ ದೆನಿಗೊಂಡಿದ°. ಸಾಮಾನ್ಯ ಅರ್ಥಲ್ಲಿ ಭರತವಂಶಲ್ಲಿ ಹುಟ್ಟಿದವ°, ಶತ್ರುಗಳ ಜಯಿಸಿದವ° ಹೇಳಿ ಅಷ್ಟೇ ಕಾಂಬದಾದರೂ ಅದರಲ್ಲಿ ಇಪ್ಪ ಗೂಢಾರ್ಥ –   ಭಗವಂತನ ಅರಿವು ಪಡೆಯೆಕ್ಕಾರೆ ನಾವು ಭಾರತ-ಪರಂತಪರಾಗಿರೆಕು ಹೇಳಿ ಸಂಕೇತ. ಬೆಣಚ್ಚಿಯ ದಾರಿಲಿ ರಥನಾಗಿ ಸಾಗಿ (ಬಾರತ) ಪರತತ್ವದ ನಿರಂತರ ಚಿಂತನೆ (ಪರಂತಪ) ಮಾಡಿರೆ ಮಾತ್ರ ನವಗೆ ಭಗವಂತನ ಛಾಯೆ ತಿಳಿಗು ಹೇಳ್ವ ವಿಶೇಷ ಅರ್ಥ ಇಲ್ಲಿ ಇದ್ದು.

ಮನುಷ್ಯರು ಹುಟ್ಟಿಂದಲೇ ಬಂದ ಇಚ್ಛಾ-ದ್ವೇಷಂದ ಹುಟ್ಟಿಗೊಂಡ ದ್ವಂದ್ವಂಗಳಲ್ಲಿ ಸಿಲುಕಿ ಭ್ರಾಂತಿಗೆ ಸಿಲುಕಿಗೊಳ್ಳುತ್ತವು. ಹಾಂಗಾರೆ ಇದರಂದ ತಪ್ಪುಸುತ್ತದು ಹೇಂಗೆ? – 

ಶ್ಲೋಕ

ಯೇಷಾಂ ತ್ವಂತಗತಂ ಪಾಪಂ ಜನಾನಾಂ ಪುಣ್ಯಕರ್ಮಣಾಂ ।
ತೇ ದ್ವಂದ್ವಮೋಹನಿರ್ಮುಕ್ತಾ ಭಜಂತೇ ಮಾಂ ದೃಢವ್ರತಾಃ ॥೨೮॥

ಪದವಿಭಾಗ

ಯೇಷಾಂ ತು ಅಂತಗತಂ ಪಾಪಂ ಜನಾನಾಂ ಪುಣ್ಯ-ಕರ್ಮಣಾಂ । ತೇ ದ್ವಂದ್ವ-ಮೋಹ-ನಿರ್ಮುಕ್ತಾಃ ಭಜಂತೇ ಮಾಂ ದೃಢ-ವ್ರತಾಃ ॥

ಅನ್ವಯ

ಯೇಷಾಂ ಪುಣ್ಯ-ಕರ್ಮಣಾಂ ಜನಾನಾಂ ತು ಪಾಪಂ ಅಂತಗತಂ । ತೇ ದೃಢ-ವ್ರತಾಃ ದ್ವಂದ್ವ-ಮೋಹ-ನಿರ್ಮುಕ್ತಾಃ ಮಾಂ ಭಜಂತೇ ॥

ಪ್ರತಿಪದಾರ್ಥ

ಯೇಷಾಂ ಪುಣ್ಯ-ಕರ್ಮಣಾಂ ಜನಾನಾಂ ತು – ಯಾವ ಪುಣ್ಯಕರ್ಮಂಗಳಿಪ್ಪ ಜನಂಗಳದ್ದಾದರೋ, ಪಾಪಂ – ಪಾಪವು, ಅಂತಗತಂ – ಸಂಪೂರ್ಣವಾಗಿ ನಿರ್ಮೂಲವಾಗಿದ್ದೋ, ತೇ – ಅವು, ದೃಢ-ವ್ರತಾಃ  – ದೃಢಸಂಕಲ್ಪಂದ (ದೃಢನಿಷ್ಠೆಂದ), ದ್ವಂದ್ವ-ಮೋಹ-ನಿರ್ಮುಕ್ತಾಃ – ದ್ವಂದ್ವದಮೋಹಂದ ಮುಕ್ತರಾಗಿ, ಮಾಂ – ಎನ್ನ, ಭಜಂತೇ – ಭಕ್ತಿಸೇವೆಲಿ ನಿರತರಾವುತ್ತವು.

ಅನ್ವಯಾರ್ಥ

ಆರು ತಮ್ಮ ಹಿಂದಾಣ ಜನ್ಮಂಗಳಲ್ಲಿ ಮತ್ತು ಈ ಜನ್ಮಲ್ಲಿ ಪುಣ್ಯಕರ್ಮಂಗಳ ಮಾಡಿದ್ದವೋ, ಮತ್ತೆ ಆರ ಪಾಪಕರ್ಮಂಗೊ ಸಂಪೂರ್ಣವಾಗಿ ನಿರ್ಮೂಲವಾಗಿದ್ದೋ, ಅವ್ವು ಭ್ರಾಂತಿಯ ದ್ವಂದ್ವಂಗಳಿಂದ ಮುಕ್ತರಾಗಿ, ದೃಢಮನಸ್ಸಿಂದ ಎನ್ನ ಭಕ್ತಿಸೇವೆಲಿ ನಿರತರಾವುತ್ತವು.

ತಾತ್ಪರ್ಯ / ವಿವರಣೆ

ಸಂಪೂರ್ಣ ಕೃಷ್ಣಪ್ರಜ್ಞೆಯ ದಿವ್ಯಸ್ಥಿತಿಗೆ ಏರ್ಲೆ ಅರ್ಹತೆ ಆರಿಂಗೆ ಇರುತ್ತು ಹೇಳ್ವದರ ಇಲ್ಲಿ ಭಗವಂತ° ಹೇಳುತ್ತ°.

ಪಾಪಿಗೊ, ನಾಸ್ತಿಕರು, ಮೂರ್ಖರು, ಅವಿವೇಕಿಗೊ, ಮೋಸಗಾರರು, ಅಸೆ-ದ್ವೇಷಂದ ಸಂಮೋಹಕ್ಕೆ ಒಳಗಾದವು, ದ್ವಂದ್ವಂಗಳಿಂದ ಪಾರಪ್ಪದು ಬಹುಕಷ್ಟ. ಆರು ಧರ್ಮದ ನಿಯಂತ್ರಕ ತತ್ವಂಗಳ ಅನುಷ್ಠಾನಕ್ಕೆ ನಿಜ ಅನುಸಂಧಾನಲ್ಲಿ ತಯಿಂದವೋ, ದೈವಭಕ್ತರಾಗಿ ನಡಕ್ಕೊಂಡಿದ್ದವೋ, ಪಾಪಕರ ಪ್ರತಿಕ್ರಿಯೆಗಳ ಜೆಯಿಶಿದ್ದವೋ ಅವು ಮಾಂತ್ರ ಭಕ್ತಿಸೇವೆಯ ಸ್ವೀಕರುಸಲೆ ಎಡಿಗಪ್ಪವ್ವು ಮತ್ತು ಕ್ರಮ ಕ್ರಮವಾಗಿ ಭಗವಂತನ ಪರಿಶುದ್ಧ ಜ್ಞಾನದ ಮಟ್ಟಕ್ಕೆ ಏರ್ಲೆ ಎಡಿಗಾದವು ಆವ್ತವು. ಆ ಬಳಿಕ ಅವು ಆ ಸ್ಥಿತಿಲಿ (ಸಮಾಧಿಸ್ಥಿತಿಲಿ) ಭಗವಂತನ ಸಂಪೂರ್ಣ ಭಕ್ತಿಂದ ಧ್ಯಾನಿಸುತ್ತವು. ಇದು ಆಧ್ಯಾತ್ಮಿಕ ನೆಲೆಲಿ ನೆಲೆಗೊಂಬ ಪ್ರಕ್ರಿಯೆ. ಪರಿಶುದ್ಧ ಭಕ್ತರ ಸಹವಾಸಲ್ಲಿ, ಕೃಷ್ಣಪ್ರಜ್ಞೆಲಿ ಈ ಉತ್ಕರ್ಷ ಸಾಧ್ಯ. ಭಗವಂತನ ನಿಜಭಕ್ತರ ಸಹವಾಸಂದ ಮನುಷ್ಯ° ಮಾಯೆಂದ ಬಿಡುಗಡೆ ಹೊಂದುತ್ತ°. ಅಲ್ಲದ್ದೆ ಅವಂಗೆ ದೃಢಸಂಕಲ್ಪವ ಮಾಡಿಗೊಂಬಲೆ ಸಾಧ್ಯ ಇಲ್ಲೆ.

ಬನ್ನಂಜೆ ವಿವರುಸುತ್ತವು – ಭಗವಂತ° ಈ ಮದಲೇ ಹೇಳಿಪ್ಪಾಂಗೆ,  ದ್ವಂದ್ವಮೋಹಕ್ಕೆ ಎರಡು ಕಾರಣಂಗೊ. ಒಂದು ಜೀವಸ್ವರೂಪ (ದುರ್ಯೋಧನ, ಶಕುನಿ..ಇತ್ಯಾದಿ), ಇನ್ನೊಂದು ಪ್ರಾರಬ್ಧಕರ್ಮ (ಕರ್ಣ, ಅಜಾಮಿಳ… ಇತ್ಯಾದಿ). ಜೀವಸ್ವರೂಪವೇ ಇಂತಹ ಗತಿಲಿ ಇದ್ದರೆ ಅದಕ್ಕೆ ಸದ್ಯಕ್ಕೆ ಪರಿಹಾರ ಇಲ್ಲೆ. ಆದರೆ, ಯಾವುದೋ ಕಾರಣಂದ ಕೆಟ್ಟದಾರಿಲಿ ಸಾಗುವ ಸಾತ್ವಿಕ ಜೀವಕ್ಕೆ ಜ್ಞಾನದ ಮಾರ್ಗ ಇದ್ದು. ಯಾವುದೋ ಒಂದು ದುರಂತಕ್ಕೆ ಕೆಲವೊಂದರಿ ಅಪರೋಕ್ಷ ಜ್ಞಾನಿಗೊ ದಾರಿ ತಪ್ಪುವದಿದ್ದು. ಇಂತವರ ಪಾಪಕರ್ಮ ತೊಳದು ಹೋಪನ್ನಾರ ಅವರ ಸರಿದಾರಿಗೆ ತಪ್ಪಲೆಡಿಯ. ಆದರೆ, ಕೆಲವೊಂದರಿ ಜೀವನಲ್ಲಿ ನಡವ ಕೆಲವು ದುರಂತಂಗೊ / ಆಘಾತಂಗೊ ಇಂತವರ ಮತ್ತೆ ಸತ್ಯದ ಮಾರ್ಗಕ್ಕೆ ತತ್ತು. ಇಂತಹ ಸಂದರ್ಭಲ್ಲಿ ಅವಕ್ಕೆ ತಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಭಾವನೆಂದ ದೇವರಲ್ಲಿ ಅಗಾಧವಾದ ಶ್ರದ್ಧಾಭಕ್ತಿ ಮೂಡುತ್ತು.

ಪಶ್ಚಾತ್ತಾಪಕ್ಕಿಂತ ಶ್ರೇಷ್ಠವಾದ ಪ್ರಾಯಶ್ಚಿತ್ತ ಇನ್ನೊಂದಿಲ್ಲೆ. ಎಂತಹ ಪಾತಕವನ್ನೂ ಕೂಡ ಪಶ್ಚಾತ್ತಾಪಂದ ತಿದ್ದಿಗೊಂಬಲಕ್ಕು. ನಾವು ನಮ್ಮ ಜೀವನಲ್ಲಿ ನವಗೆ ಗೊಂತಿದ್ದೋ ಗೊಂತಿಲ್ಲದ್ದೆಯೋ ತಪ್ಪು ಮಾಡುತ್ತು. ಮಾನಸಿಕವಾಗಿ, ದೈಹಿಕವಾಗಿ, ವಾಚಕವಾಗಿ, ನವಗೆ ಅರಡಿಯದ್ದೆ ಕೆಲವೊಂದು ತಪ್ಪುಗೊ ನಡೆತ್ತು. ಆದರೆ ಆ ತಪ್ಪಿನ ಅರಿವು ಆದಪ್ಪಗ ಹೃದಯಾಂತರಾಳಂದ ಮೂಡುವ ಪಶ್ಚಾತ್ತಾಪ ಇಂತಹ ತಪ್ಪಿಂಗೆ ಪ್ರಾಯಶ್ಚಿತ್ತ. ಆದರೆ ಅದು ನಿಜಮನಸ್ಸಿಂದ ಯಥಾರ್ಥವ ಅರ್ತು ಬಪ್ಪದಾಗಿರೆಕು. ಅಂತೇ ಮೊಸಳೆ ಕಣ್ಣೀರು ಹಾಕಿರೆ ಭಗವಂತ° ಗುಮಾನ ಮಾಡ°. ನಾವು ವೈದಿಕ ಸಂಪ್ರದಾಯಲ್ಲಿ ದೇವತಾರ್ಚನೆಯ ಮಾಡಿ ಅಕೇರಿಗೆ ನಮಸ್ಕಾರ ಮಾಡುವಾಗ ಸಾಮಾನ್ಯವಾಗಿ ಹೇಳ್ವ ಶ್ಲೋಕ –

ಪಾಪೋsಹಂ ಪಾಪಕರ್ಮಾಹಂ ಪಾಪಾತ್ಮಾ ಪಾಪಸಂಭವ ।
ತ್ರಾಹಿ ಮಾಂ ಕೃಪಯಾ ದೇವ ಸರ್ವಪಾಪಹರೋ ಭವ ॥

ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ ।
ತಸ್ಮಾತ್ ಕಾರುಣ್ಯಭಾವೇನ ರಕ್ಷ ಮಾಂ ಜಗದೀಶ್ವರ (ಪರಮೇಶ್ವರ) ॥

ಇಲ್ಲಿ ನಾವು ಆ ಭಗವಂತನಲ್ಲಿ “ಆನು ತಿಳಿದೋ ತಿಳಿಯದ್ದೆಯೋ ಮಾಡಿದ ತಪ್ಪಿನ ಕ್ಷಮಿಸೆಕು” ಹೇಳಿ ಬೇಡುತ್ತು. ” ಆನು ಹುಟ್ಟಿಂದ ಪಾಪವ ಹೊತ್ತು ಬೈಂದೆ, ಆದ್ದರಿಂದ ತಪ್ಪು ಮಾಡುತ್ತಿದ್ದೆ. ಹಾಂಗಾಗಿ ಎನ್ನ ನೀನು ಕ್ಷಮಿಸಿ ಈ ಪಾಪಂದ ಎನ್ನ ಉದ್ಧಾರ ಮಾಡು” “ನೀನಲ್ಲದ್ದೆ ಆನು ಶರಣಾಗತನಪ್ಪಲೆ ಬೇರೆ ಆರೂ ಇಲ್ಲೆ, ಹಾಂಗಾಗಿ ನಿನಗೇ ಆನು ಶರಣಗತನಾಯ್ದೆ. ಕಾರುಣ್ಯಮೂರ್ತಿಯಾದ ನೀನು ನಿನ್ನ ಕರುಣಾಭಾವಂದ ಎನ್ನ ರಕ್ಷಿಸು ಪರಮ ಈಶನೇ (ಪರಮೇಶ್ವರ, ಶ್ರೇಷ್ಥನಾದ ನೀನು ಜಗತ್ತಿನ ಈಶನೇ) ಹೇಳಿ ಬೇಡುವದು. ಈ ರೀತಿಯಾಗಿ ಈ ಶ್ಲೋಕದ ಮೂಲಕ ನಾವು ದೇವರಲ್ಲಿ ಮಾಡುವ ಪ್ರಾರ್ಥನೆ. ಎಷ್ಟು ಅರ್ಥಗರ್ಭಿತವಾಗಿದ್ದು. ಇದು ನಮ್ಮ ಹೃದಯಾಂತರಾಳಂದ ಅನನ್ಯ ಶ್ರದ್ಧಾಭಕ್ತಿಲಿ ಬರೆಕು. ಇದು ಎಂತಕೆ ಹೇಳಿದ್ದು ಹೇಳಿದರೆ ನಾವು ಪೂಜೆ-ಅರ್ಚನೆಲಿ ಹೇಳ್ವ ಮಂತ್ರಂಗೊ ಅಷ್ಟು ಅರ್ಥಗರ್ಭಿತವಾಗಿದ್ದು. ಮಂತ್ರ/ಶ್ಲೋಕದ ಮೂಲಕ ನಾವು ಭಗವಂತನಲ್ಲಿ ಭಕ್ತಿಪೂರ್ವಕವಾಗಿ ವಿಜ್ಞಾಪಿಸಿಗೊಂಬದು. ಆ ಹೊತ್ತಿಲ್ಲಿ ನಮ್ಮ ಮನಸ್ಸು ಸಂಪೂರ್ಣವಾಗಿ ಅವನಲ್ಲಿ ನೆಲೆಗೊಳ್ಳೆಕು. ಎಂತದೋ ಭಟ್ರು ಹೇಳುತ್ತವು ಹೇಳಿ ಗ್ರೇಶಿಗೊಂಡು ನಾವು ಹರಟೆಮಾತಾಡಿಗೊಂಡೋ, ನಮ್ಮ ಮನಸ್ಸಿನ ಬೇರೆ ವಿಷಯಲ್ಲಿಯೋ ಮಗ್ನವಾಗಿರಿಸಿಗೊಂಡರೆ ಮಾಡಿದ ಕಾರ್ಯಕ್ಕೆ ಎಂತ ಪ್ರಯೋಜನವೂ ಇಲ್ಲೆ. ದೇವರ ಪೂಜೆ /ಧ್ಯಾನಲ್ಲಿ ನಮ್ಮ ಮನಸ್ಸು ಸಂಪೂರ್ಣವಾಗಿ ಅವನಲ್ಲಿ ಇರೆಕು. ಇಲ್ಲಿ ಭಗವಂತ° ಹೇಳುತ್ತ° – “ತೇ ದ್ವಂದ್ವಮೋಹನಿರ್ಮುಕ್ತಾ ಭಜಂತೇ ಮಾಂ ದೃಢವ್ರತಾಃ”. ಹೇಳಿರೆ, ಒಂದರಿ ಇಂತಹ ಪಾಪಕರ್ಮಂದ ಆಚಿಗೆ ಬಂದರೆ, ಎಲ್ಲಾ ದ್ವಂದ್ವಮೋಹಂಗೊ ಪರಿಹಾರವಾಗಿ ಭಗವಂತನಲ್ಲಿ ಗಾಢವಾದ ಭಕ್ತಿ ನೆಲೆನಿಲ್ಲುತ್ತು. ಈ ರೀತಿ ಪಾಪದ ಅರಿವಾಗಿ ಪಶ್ಚಾತ್ತಾಪಂದ ಭಗವಂತನೆಡೆಂಗೆ ತಿರುಗಿದವು ಬಹು ಬೇಗ ಭಗವಂತನ ಹಾದಿಲಿ ಮುಂದೆ ಸಾಗುತ್ತವು.

ಶ್ಲೋಕ

ಜರಾಮರಣಮೋಕ್ಷಾಯ ಮಾಮಾಶ್ರಿತ್ಯ ಯತಂತಿ ಯೇ ।
ತೇ ಬ್ರಹ್ಮ ತದ್ವಿದುಃ ಕೃತ್ಸ್ನಂ ಅಧ್ಯಾತ್ಮಂ ಕರ್ಮ ಚಾಖಿಲಂ ॥೨೯॥ 

ಪದವಿಭಾಗ

ಜರಾ-ಮರಣ-ಕೋಕ್ಷಾಯ ಮಾಂ ಆಶ್ರಿತ್ಯ ಯತಂತಿ ಯೇ । ತೇ ಬ್ರಹ್ಮ ತತ್ ವಿದುಃ ಕೃತ್ಸ್ನಂ ಅಧ್ಯಾತ್ಮಂ ಕರ್ಮ ಚ ಅಖಿಲಂ ॥

ಅನ್ವಯ

ಯೇ ಮಾಂ ಆಶ್ರಿತ್ಯ ಜರಾ-ಮರಣ-ಮೋಕ್ಷಾಯ ಯತಂತಿ, ತೇ ತತ್ ಬ್ರಹ್ಮ, ಕೃತ್ಸ್ನಂ ಅಧ್ಯಾತ್ಮಂ, ಅಖಿಲಂ ಕರ್ಮ ಚ ವಿದುಃ ॥

ಪ್ರತಿಪದಾರ್ಥ

ಯೇ – ಆರು, ಮಾಂ – ಎನ್ನ, ಆಶ್ರಿತ್ಯ – ಆಶ್ರಯಿಸಿ, ಜರಾ-ಮರಣ-ಮೋಕ್ಷಾಯ – ಮುಪ್ಪು ಸಾವು ಮೋಕ್ಷಕ್ಕಾಗಿ , ಯತಂತಿ – ಯತ್ನಿಸುತ್ತವೋ, ತೇ – ಅವ್ವು , ತತ್ – ಅದರ, ಬ್ರಹ್ಮ – ಬ್ರಹ್ಮನ್, ಕೃತ್ಸ್ನಂ – ಪ್ರತಿಯೊಂದನ್ನೂ, ಅಧ್ಯಾತ್ಮಂ – ದಿವ್ಯವಾದ್ದರ, ಅಖಿಲಂ ಕರ್ಮ ಚ – ಸಂಪೂರ್ಣವಾಗಿ ಕಾರ್ಯಂಗಳನ್ನೂ ಕೂಡ,  ವಿದುಃ – ತಿಳಿತ್ತವು.

ಅನ್ವಯಾರ್ಥ

ಮುಪ್ಪು ಸಾವುಗಳಿಂದ ಮುಕ್ತಿ ಪಡದು ಮೋಕ್ಷವ ಪಡವಲೆ ಆರು ಎನ್ನ ಆಶ್ರಯಿಸಿ ಸಾಧನೆಯ ಮೂಲಕ ಯತ್ನಿಸುತ್ತವೋ, ಅವ್ವು ಬ್ರಹ್ಮವ, ಅಧ್ಯಾತ್ಮವ ಮತ್ತೆ ಸಮಸ್ತ ಕಾರ್ಯಂಗಳನ್ನೂ ತಿಳ್ಕೊಳ್ಳುತ್ತವು.

ತಾತ್ಪರ್ಯ / ವಿವರಣೆ

ಹುಟ್ಟು ಮುಪ್ಪು ಸಾವು ಮತ್ತು ರೋಗಂಗೊ ಈ ಜಡ ದೇಹವ ಕಾಡುತ್ತಾ ಇರುತ್ತು. ಆಧ್ಯಾತ್ಮಿಕ ದೇಹವ ಅಲ್ಲ. ಆಧ್ಯಾತ್ಮಿಕ ಶರೀರಕ್ಕೆ ಜನನ ಮರಣ ರೋಗ ರುಜಿನ ಹೇಳಿ ಎಂತದೂ ಇಲ್ಲೆ. ಹಾಂಗಾಗಿ ಆಧಾತ್ಮಿಕ ಶರೀರವ ಪಡದು ದೇವೋತ್ತಮ ಪರಮ ಪುರುಷನ ಕೂಟಲ್ಲಿ ಒಬ್ಬನಾಗಿ ನಿತ್ಯವಾದ ಭಕ್ತಿಸೇವೆಲಿ ನಿರತನಪ್ಪವ° ಜೀವನಂದ ಮುಕ್ತ°ನಾವುತ್ತ. ‘ಅಹಂ ಬ್ರಹ್ಮಾಸ್ಮಿ’  – ಆನು ಚೇತನಾತ್ಮ°. ತಾನು ಬ್ರಹ್ಮನ್ ಅಥವಾ ಚೇತನಾತ್ಮ ಹೇಳ್ವದರ ಮನುಷ್ಯರು ಅರ್ಥಮಾಡಿಗೊಳ್ಳೆಕ್ಕಾಗಿದ್ದು. ಬದುಕಿನ ಈ ಬ್ರಹ್ಮನ್ ಪರಿಕಲ್ಪನೆ ಭಕ್ತಿಸೇವೆಲಿ ಇಪ್ಪದು. ಪರಿಶುದ್ಧ ಭಕ್ತರು ಆಧ್ಯಾತ್ಮಿಕವಾಗಿ ಬ್ರಹ್ಮನ್ ನೆಲೆಲಿ ಇರುತ್ತವು. ಅವಕ್ಕೆ ಆಧ್ಯಾತ್ಮಿಕ ಕರ್ಮಂಗಳ ವಿಷಯವಾಗಿ ಎಲ್ಲವೂ ತಿಳಿದಿರುತ್ತು. ಭಗವಂತನ ದಿವ್ಯಸೇವೆಲಿ ನಿರತರಪ್ಪ ಭಕ್ತರು ತಮ್ಮ ಗುರಿಯ ತಲಪುತ್ತವು, ಹಾಂಗೇ, ಭಗವಂತನ ಕೃಪೆಂದ ಸಂಪೂರ್ಣ ಕೃಷ್ಣಪ್ರಜ್ಞೆಯ ಪಡದಪ್ಪಗ ಆ ಭಗವಂತನತ್ರೆ ಆಧ್ಯಾತ್ಮಿಕ ಸಹವಾಸ ಸವಿಯ ಉಣ್ಣುತ್ತವು. ಈ ಮದಲೇ ಹೇಳಿಪ್ಪಂತೆ ವಿವಿಧ ದೇವತಾರ್ಚನೆ ಮಾಡಿ ಐಹಿಕ ಫಲಾಪೇಕ್ಷೆಯ ಪಡಕ್ಕೊಂಬ ಭಕ್ತರು ಭಗವಂತನ ಸೇರುತ್ತವಿಲ್ಲೆ. ಇಲ್ಲಿ ಭಗವಂತ° ಹೇಳುತ್ತ° – ‘ಮಾಂ ಆಶ್ರಿತ್ಯ’ . ಆರು ಭಗವಂತನನ್ನೇ ಸಂಪೂರ್ಣವಾಗಿ ನಂಬಿ ನಿಜಶ್ರದ್ಧಾಭಕ್ತಿಂದ ಶರಣಾಗತರಾಗಿ ಭಜಿಸುತ್ತವೋ ಅವು ಕೃಷ್ಣಪ್ರಜ್ಞೆಲಿ ಕರ್ಮಮಾಡುವವ್ವು, ಅವಕ್ಕೆ ಬ್ರಹ್ಮನ್ ಅರ್ಥ ಆವ್ತು, ಆಧ್ಯಾತ್ಮಿಕ ಕರ್ಮವೂ ತಿಳಿತ್ತು. ಹಾಂಗಾಗಿ ಅವು ವಾಸ್ತವವಾಗಿ ‘ಬ್ರಹ್ಮನ್’.

ಬನ್ನಂಜೆ ವಿವರುಸುತ್ತವು – ಮುಪ್ಪು-ಸಾವುಗಳಿಂದ ಪಾರಪ್ಪಲೆ ಭಗವಂತನ ಮೊರೆಹೊಕ್ಕು ಸಾಧನೆಗಳುಸುವವು ಆ ಬ್ರಹ್ಮತತ್ವವ ತಿಳಿಕ್ಕೊಳ್ಳುತ್ತವು, ಸಮಗ್ರವಾದ ‘ಅಧ್ಯಾತ್ಮವ’ ಮತ್ತು ‘ಅಧ್ಯಾತ್ಮಕರ್ಮವ’ ಅರ್ಥವತ್ತಾಗಿ ತಿಳ್ಕೊಳ್ಳುತ್ತವು. ಪ್ರಪಂಚಲ್ಲಿ ಜನನ-ಮರಣಂದ ಪಾರಪ್ಪಲೆ, ಈ ಸಂಸಾರ ಬಂಧಂದ ಬಿಡುಗಡೆ ಬಯಸಿ ಭಗವಂತನ ಮೊರೆಹೋಗಿ ಜನಂಗೊ ಸಾಧನೆ ಮಾಡುತ್ತವು. ಸಾಮಾನ್ಯವಾಗಿ ಏನನ್ನೂ ಬಯಸದ್ದೇ ಇಪ್ಪದು ಶ್ರೇಷ್ಠ. ಆದರೇ ಬಯಸುವದು ಜೀವನ ಧರ್ಮವಾಗಿಪ್ಪಗ ಇನ್ನೇನ್ನನ್ನೋ ಬಯಸದ್ದೆ ಮೋಕ್ಷವ ಬಯಸುವದೇ ಅತೀ ಉತ್ತಮ. ಭಗವಂತ ಈ ಶ್ಲೋಕಲ್ಲಿ ಮೋಕ್ಷಕ್ಕೆ ಹೋಪ ಸಾಧಕನ ಪ್ರಯತ್ನ ಎಂತರ, ಜ್ಞಾನದ ದಾರಿಲಿ ಹೇಂಗೆ ಹೋಯೇಕು ಹೇಳ್ವ ಅದ್ಭುತ ವಿಚಾರವ ಹೇಳಿದ್ದ° –

ಅಧ್ಯಾತ್ಮಲ್ಲಿ ತಿಳ್ಕೊಳ್ಳೆಕ್ಕಾದ ಸಂಗತಿ ‘ಬ್ರಹ್ಮನ್’ ಹೇಳಿ ಭಗವಂತ ಇಲ್ಲಿ ಹೇಳಿದ್ದ°. ಬ್ರಹ್ಮ ಹೇಳ್ವ ಪದ ‘ಅವವೃದ್ಧೋ’ ಹೇಳ್ವ ದಾತುವಿಂದ ಬಂದದು. ಅವತಿ ಹೇಳಿರೆ ಎಲ್ಲಕ್ಕಿಂತ ದೊಡ್ಡ. ಅದು ಓಂ . ಹೇಳಿರೆ, ಅನಾದಿನಿತ್ಯ°, ಸರ್ವಗುಣಪೂರ್ಣ°, ಸರ್ವಗತ°, ಸರ್ವಸಮರ್ಥ° ಭಗವಂತ° – ಬ್ರಹ್ಮನ್. ಅವನೇ ಓಂ. ಈ ಶ್ಲೋಕಲ್ಲಿ “ತೇ ಬ್ರಹ್ಮ ತದ್ ವಿದುಃ” ಹೇಳಿರೆ, ‘ಎಲ್ಲಾ ಕಡೆ ಇಪ್ಪ ಭಗವಂತನ ತಿಳುಕ್ಕೊಳ್ಳುತ್ತವು ಹೇಳಿ ಅರ್ಥ. ಭಗವಂತನ ಸರ್ವಗತತ್ವದ ಸಾಕ್ಷಾತ್ಕಾರವೇ ಬ್ರಹ್ಮ ಸಾಕ್ಷಾತ್ಕಾರ. ಬಿಂಬಸಾಕ್ಷಾತ್ಕಾರ ಹೇಳಿರೆ ನಮ್ಮೊಳಿಪ್ಪಂತಹ ಅಣೋರಣೀಯವಾಗಿಪ್ಪ ಭಗವಂತನ ಸಾಕ್ಷಾತ್ಕಾರ. ಇಂತಹ ಬಿಂಬರೂಪಿ ಭಗವಂತನೇ ಇಡೀ ವಿಶ್ವಲ್ಲಿ ವ್ಯಾಪ್ತವಾಗಿ ತುಂಬಿಗೊಂಡಿದ್ದ° ಹೇಳುವ ಅನುಭವ ಜ್ಞಾನಪ್ರಾಪ್ತಿಯೇ ಬ್ರಹ್ಮಸಾಕ್ಷಾತ್ಕಾರ. ಭಗವಂತನ ವ್ಯಾಪ್ತ ರೂಪವ ನವಗೆ ಕಾಂಬಲೆ ಸಾಧ್ಯ ಇಲ್ಲೆ. ಆದರೆ, ಆ ವ್ಯಾಪ್ತಿಯ ಅರಿವು ಬಹುಮುಖ್ಯ. ಸೌರಶಕ್ತಿಲಿ ತುಂಬಿ ಇಡೀ ಪ್ರಪಂಚವ ಬೇಳಗುಸುವವನೂ ಅವನೇ, ನಮ್ಮೊಳ ಇದ್ದು ಬೆಳಗುಸುವವನೂ ಅವನೇ ಹೇಳ್ವದರ ಅನುಭವಪೂರ್ವಕ ತಿಳಿವದೇ ಆತ್ಮಸಾಕ್ಷಾತ್ಕಾರ.

ಬಲಿಚಕ್ರವರ್ತಿಯತ್ರೆ ವಾಮನನಾಗಿ ಮೂರು ಪಾದ ಮಡುಗುವಷ್ಟು ದಾನವ ಕೇಳಿ ಬಲಿಯ ಪಾತಾಳಕ್ಕೆ ತಳ್ಳಿದ ಕತೆಯ ರಜಾ ಆಳವಾಗಿ ವಿಶ್ಲೇಷಿಸಿರೆ ಕಥೆಲಿಪ್ಪ ಸಾರ ಅರ್ಥ ಆವ್ತು. ಸಂಸಾರ ಸಾಗರಲ್ಲಿ ಮುಳುಗಿಪ್ಪ ನಾವೆಲ್ಲರೂ ಒಂದು ರೀತಿಲಿ ಬಲಿಯೇ. ಭಗವಂತನ ಸಾಕ್ಷಾತ್ಕಾರ ಅಪ್ಪಲೆ ನಾವೆಲ್ಲರೂ ಮಾನಸಿಕವಾಗಿ ಬಲಿಷ್ಟರಾಯೇಕು. ಉಪಾಸನೆಲಿ ಪ್ರಮುಖವಾಗಿ ಮೂರು ಹೆಜ್ಜೆಗೊ. ಸುರುವಾಣದ್ದು – ಭಗವಂತನ್ ಪುಟ್ಟ (ವಾಮನ) ಮೂರ್ತಿಯ ದೇವರು ಹೇಳಿ ಆರಾಧಿಸುವದು. ಎರಡ್ನೇದು ಉಪಾಸನೆ ಮಾಡಿಗೊಂಡು, ಭಗವಂತ ಕೇವಲ ಆ ಮೂರ್ತಿಲ್ಲಿ ಮಾಂತ್ರ ಅಲ್ಲದ್ದೆ ಇಡೀ ಲೋಕಲ್ಲಿಯೂ ವ್ಯಾಪಿಸಿಗೊಂಡಿಪ್ಪ ಶಕ್ತಿ ಹೇಳಿ ತಿಳಿವದು. ಮೂರನೇ ಪ್ರಮುಖ ಹೆಜ್ಜೆ – ಭಗವಂತ° ಸರ್ವಾಂತರ್ಯಾಮಿ, ಅವ° ಎನ್ನೊಳವೂ ಇದ್ದ° ಹೇಳ್ವದರ ತಿಳುದು ಆ ಪರಶಕ್ತಿಗೆ ಶಿರಬಾಗುವದು. ಹಾಂಗಾದಪ್ಪಗ ನವಗೆ ನಿಜವಾಗಿ ಭಗವಂತನ ಸಾಕ್ಷಾತ್ಕಾರ ಅಪ್ಪಲೆಡಿಗು. ಹಾಂಗೆಯೇ, ಭಗವಂತ ನಮ್ಮ ಉದ್ಧರುಸುತ್ತ°, ಬಲಿ-ಭಗವಂತ ಎನ್ನೊಳ ಅಂತರ್ಯಾಮಿ (ಆತ್ಮನಿ ವೇದನಂ) ಹೇಳಿ ಅರ್ತು ಭಗವಂತಂಗೆ ತನ್ನ ಅರ್ಪಿಸಿಗೊಂಬದು ಆತ್ಮ ನಿವೇದನಂ ಅಥವಾ ತನ್ನ ತಲೆಯ ಕೊಡುವದು. ಇದು ಮೂರು ಹೆಜ್ಜೆಯ ಪರಿಕಲ್ಪನೆ ಹೇಳಿ ಬನ್ನಂಜೆಯವು ಸರಳ ರೀತಿಲಿ ಅರ್ಥ ಆವ್ತಾಂಗೆ ವಿವರಿಸಿದ್ದವು.

ಭಗವಂತ° ಸರ್ವಗತ°-ಸರ್ವಸಮರ್ಥ° , ಅವ° ಎಲ್ಲವುದರ ಒಳವೂ ಇದ್ದು ಎಲ್ಲವನ್ನೂ ಮಾಡುಸುತ್ತ°. ಅವನ ಅಧೀನವಾಗಿಪ್ಪ ಪ್ರತಿಬಿಂಬ ಈ ಜೀವ ಹೇಳ್ವ ಸತ್ಯವ ಅರ್ತಪ್ಪಗ ಎಲ್ಲ ಕರ್ಮದ ರಹಸ್ಯ ಗೊಂತಾವುತ್ತು. ಹಾಂಗಾಗಿ ಆಧ್ಯಾತ್ಮಲ್ಲಿ ತಿಳಿಯೇಕ್ಕಾದ ಸುರುವಾಣ ಮೂರು ವಿಚಾರಂಗೊ ಹೇಳಿರೆ, ಭಗವಂತನ ಪ್ರತಿಬಿಂಬವಾದ ಜೀವ°, ಪರಿಪೂರ್ಣ ಮತ್ತೆ ಸರ್ವಸಮರ್ಥನಾದ ಬ್ರಹ್ಮ°, ಆ ಅನಂತ ಸಾಮರ್ಥ್ಯಂದ ನಡವ ಕರ್ಮ. ಇದುವೇ ಬ್ರಹ್ಮ-ಕರ್ಮ-ಅಧಿಆತ್ಮ.

ಈ ಮೂರು ವಿಚಾರ ಅಲ್ಲದ್ದೆ ಇನ್ನೂ ಮೂರು ವಿಷಯಂಗಳ ಭಗವಂತ° ಮುಂದೆ ಹೇಳುತ್ತ° – 

ಶ್ಲೋಕ

ಸಾಧಿಭೂತಾಧಿದೈವಂ ಮಾಂ ಸಾಧಿಯಜ್ಞಂ ಚ ಯೇ ವಿದುಃ ।
ಪ್ರಯಾಣಕಾಲೇsಪಿ ಚ ಮಾಂ ತೇ ವಿದುರ್ಯುಕ್ತಚೇತಸಃ ॥೩೦॥

ಪದವಿಭಾಗ

ಸಾಧಿಭೂತ-ಅಧಿದೈವಂ ಮಾಂ ಸಾಧಿಯಜ್ಞಂ ಚ ಯೇ ವಿದುಃ । ಪ್ರಯಾಣಕಾಲೇ ಅಪಿ ಚ ಮಾಂ ತೇ ವಿದುಃ ಯುಕ್ತ-ಚೇತಸಃ ॥

ಅನ್ವಯ

ಯೇ ಸ ಅಧಿಭೂತ-ಅಧಿದೈವಂ ಸ ಅಧಿಯಜ್ಞಂ ಚ ಮಾಂ ವಿದುಃ, ತೇ ಯುಕ್ತ-ಚೇತಸಃ ಪ್ರಯಾಣ-ಕಾಲೇ ಅಪಿ ಚ ಮಾಂ ವಿದುಃ ॥

ಪ್ರತಿಪದಾರ್ಥ

ಯೇ – ಆರೆಲ್ಲ, ಸ ಅಧಿಭೂತ-ಅಧಿದೈವಂ – ಭೌತಿಕ ಅಭಿವ್ಯಕ್ತಿಯ ತತ್ವ ಮತ್ತು ಸಕಲ ದೇವತೆಗಳ ಆಳುವವ°,  ಸ ಅಧಿಯಜ್ಞಂ – ಮತ್ತು ಸಕಲ ಯಜ್ಞಂಗಳ ಅಧಿಪತಿ ಹೇದು, (ಇಲ್ಲಿ ಅಧಿಭೂತೇನ ಸಹಿತಂ ಸಾಧಿಭೂತಂ, ಅಧಿಭೂತೇನ ಸಹಿತಂ ಸಾಧಿಯಜ್ಞಂ ಹೇಳಿ ಅರ್ಥ ತೆಕ್ಕೊಳ್ಳೆಕು. ಸ = ಸಹಿತ ಹೇಳ್ವ ಅರ್ಥ), ಚ – ಕೂಡ, ಮಾಂ – ಎನ್ನ, ವಿದುಃ – ತಿಳಿಯುತ್ತವೊ, ತೇ – ಅವು, ಯುಕ್ತ-ಚೇತಸಃ – ಎನ್ನಲ್ಲಿ ಮನಸ್ಸು ತೊಡಗಿಸಿದವರಾಗಿ, ಪ್ರಯಾಣ-ಕಾಲೇ ಅಪಿ ಚ – ಮರಣದ ಕಾಲಲ್ಲಿಯೂ ಕೂಡ, ಮಾಂ – ಎನ್ನ, ತಿಳಿತ್ತವು.

ಅನ್ವಯಾರ್ಥ

ಆರೆಲ್ಲ ಎನ್ನ ಅಧಿಭೂತ, ಅಧಿದೈವ, ಅಧಿಯಜ್ಞ ಹೇಳಿ ತಿಳಿತ್ತವೋ ಅವು ಸಂಪೂರ್ಣ ಪ್ರಜ್ಞೆಯವರಾಗಿದ್ದು ಮರಣಕಾಲಲ್ಲಿಯೂ ಎನ್ನ ಅರ್ಥಮಾಡಿಗೊಂಡು ತಿಳಿದಿರುತ್ತವು.  

ತಾತ್ಪರ್ಯ / ವಿವರಣೆ

ಭಗವಂತನಲ್ಲಿ ಸಂಪೂರ್ಣ ಪ್ರಜ್ಞೆ ಇರಿಸಿಗೊಂಡವು, ಪರಮ ಪ್ರಭುವಾದ ಭಗವಂತನೇ ಎಲ್ಲ ಐಹಿಕ ಅಭಿವ್ಯಕ್ತಿಯ, ದೇವತೆಗಳ, ಯಜ್ಞಂಗಳ ಒಡೆಯ, ನಿಯಂತ್ರಕ ತತ್ವ ಹೇಳ್ವದರ ತಿಳ್ಕೊಳ್ಳುತ್ತವು, ಅಷ್ಟೇ ಅಲ್ಲದ್ದೆ ಅವ್ವು ಮರಣಕಾಲಲ್ಲಿಯೂ ಪರಮ ಪುರುಷನಾದ ಭಗವಂತನ ತಿಳಿದಿರುತ್ತವು ಮತ್ತು ಅಕೇರಿಗೆ ಅವನನ್ನೇ ಸೇರುತ್ತವು.

ಸಂಪೂರ್ಣ ಕೃಷ್ಣಪ್ರಜ್ಞೆಲಿ ಕರ್ಮ ಮಾಡುವವು ದೇವೋತ್ತಮ ಪರಮ ಪುರುಷನ ಸಂಪೂರ್ಣ ಅರಿವಿನ ಮಾರ್ಗವ ಎಂದೂ ಬಿಡುತ್ತವಿಲ್ಲೆ. ಕೃಷ್ಣಪ್ರಜ್ಞೆಯ ದಿವ್ಯ ಸಹಯೋಗಲ್ಲಿಪ್ಪ ಮನುಷ್ಯರು°, ಭಗವಂತ° ಹೇಂಗೆ ಐಹಿಕ ಅಭಿವ್ಯಕ್ತಿಯ ಮತ್ತೆ ದೇವತೆಗಳನ್ನೂ ಆಆಳುವವ° ಹೇಳ್ವ ತತ್ವವ ತಿಳಿತ್ತವು. ಇಂತಹ ದಿವ್ಯ ಸಹಯೋಗಂದ ಮನುಷ್ಯ° ಕ್ರಮೇಣ ದೇವೋತ್ತಮ ಪರಮ ಪುರುಷನ ವಿಷಯಂಗಳ ಅನುಭವಪೂರ್ವಕ ಮನಗಾಣುತ್ತವು. ಮರಣಕಾಲಲ್ಲಿ ಕೃಷ್ಣಪ್ರಜ್ಞೆ ಇಪ್ಪ ಮನುಷ್ಯ° ಭಗವಂತನ ಮರವಲೇ ಇಲ್ಲೆ. ಸಹಜವಾಗಿ ಅವ° ಭಗವಂತನ ಲೋಕವಾದ ಶಾಂತಿಧಾಮವ ಸೇರುತ್ತ°.

ಬನ್ನಂಜೆ ವಿವರುಸುತ್ತವು – ಭಗವಂತನ ಅರಿವು ಮೂಡೆಕ್ಕಾರೆ ಮದಾಲು ಭೌತವಿಜ್ಞಾನ (ಅಧಿಭೂತ) ತಿಳಿಯೆಕು. ಪಂಚಭೂತಂಗೊ, ಈ ದೇಹ, ಬ್ರಹ್ಮಾಂಡ, ಪಿಂಡಾಂಡ, ಇಲ್ಲಿಪ್ಪ ದ್ರವ್ಯಂಗಳ ಅರಿವು ಸಾಧನೆಯ ಮದಲಾಣ ಹೆಜ್ಜೆ. ಈ ಅಧಿಭೂತಂದ ಮತ್ತೆ ಅಧಿದೈವದ ಅರಿವು. ನಮ್ಮ ಪಂಚಭೂತಾತ್ಮಕವಾದ ಶರೀರಲ್ಲಿ ಕಾಂಬದು, ಕೇಳುವದು, ಅನುಭವುಸುವದು ಇತ್ಯಾದಿ ಕ್ರಿಯೆಗೊ ನಿಯಮಬದ್ಧವಾಗಿ ಹೇಂಗೆ ನಡೆತ್ತು ? ಜಡಲ್ಲಿ ಕ್ರಿಯೆ ಇಲ್ಲೆ, ಬದಲಿಂಗೆ ಅದರ ಹಿಂದಿಪ್ಪ ಅಭಿಮಾನಿ ದೇವತೆಗೊ ಒಂದೊಂದು ಇಂದ್ರಿಯಲ್ಲಿ ಇದ್ದುಗೊಂಡು ಒಂದೊಂದು ಕ್ರಿಯೆಯ ನಿಯಂತ್ರಿಸಿಗೊಂಡಿರುತ್ತವು. ಇದು ಅಧಿದೈವದ ತಿಳುವಳಿಕೆ. ಇಂತಹ ಸಹಸ್ರಾರು ದೇವತೆಗಲ ನಿಯಂತ್ರುಸುವ (ಅಧಿದೈವ) ಅಧ್ಯಕ್ಷ° ಆ ಭಗವಂತ°. ಈ ಪ್ರಪಂಚಲ್ಲಿ ಅಥವಾ ಪಿಂಡಾಂಡಲ್ಲಿ ನಡವ ಪ್ರತಿಯೊಂದು ಕ್ರಿಯೆಯೂ ಒಂದು ‘ಯಜ್ಞ’. ಆ ಯಜ್ಞವ ಅಧ್ಯಕ್ಷನಾಗಿ ನೆಡೆಶುವವ° ಅಧಿಯಜ್ಞ. ಅವ° ಸಮಸ್ತ ದೇವತೆಗಳ ನಿಯಾಮಕನಾದ ಭಗವಂತ°.

ಹೀಂಗೆ ಒಟ್ಟಿಲ್ಲಿ ನಾವು ಈ ಆರು ವಿಚಾರಂಗಳ ಸ್ಪಷ್ಟವಾಗಿ ತಿಳಿಯೆಕು. ೧.ಅಧಿಭೂತ – ಭೌತಿಕ ಪ್ರಪಂಚ, ೨.ಅಧ್ಯಾತ್ಮ  – ಜೀವಾತ್ಮ°, ೩. ಅಧಿದೈವ – ಸಮಸ್ತ ತತ್ವಾಭಿಮಾನಿ ದೇವತೆಗೊ, ೪. ಅಧಿಯಜ್ಞ – ಸರ್ವನಿಯಾಮಕ° ಭಗವಂತ°, ೫.ಬ್ರಹ್ಮಸಾಕ್ಷಾತ್ಕಾರ – ಅಂತರ್ಯಾಮಿಯಾಗಿ ಬಿಂಬರೂಪಿಯಾಗಿಪ್ಪ ಭಗವಂತ° ಎಲ್ಲಾ ಕಡೆ ಇದ್ದ° ಹೇಳ್ವ ಜ್ಞಾನ, ೬.ಎಲ್ಲ ಕರ್ಮಂಗಳೂ ಆ ಭಗವಂತನ ಅಧೀನವಾಗಿ ನಡೆತ್ತಾ ಇಪ್ಪದು ಹೇಳ್ವ ಸತ್ಯ.   ಈ ಆರು ವಿಚಾರಂಗಳೂ ನಮ್ಮ ಜೀವನದ ಅಕೇರಿಯಾಣ ಕ್ಷಣಲ್ಲಿ (ದೇಹತ್ಯಾಗ ಸಮಯಲ್ಲಿ) ಕೂಡ ನಮ್ಮ ಮನಸ್ಸಿಲ್ಲಿ ಗಾಢವಾಗಿ ನಿಲ್ಲೆಕು. ನಾವು ದೇಹ ತ್ಯಾಗ ಮಾಡುವಾಗ ನಮ್ಮ ಮನಸ್ಸಿಲ್ಲಿ ಯಾವುದು ಗಾಢವಾಗಿ ನಿಂದಿರುತ್ತೋ ಅದು ನಮ್ಮ ಮುಂದಾಣ ಜನ್ಮವ ನಿರ್ಧರಿಸುತ್ತು. ಹಾಂಗಾಗಿ ಇಡೀ ಜೀವಮಾನಲ್ಲಿ  ಭಗವಂತನ ಜ್ಞಾನ ಬಹು ಮುಖ್ಯ. ಹಾಂಗಾಗಿ ಭಗವಂತ° ಹೇಳಿದ್ದ° – “ಸಾಧನೆಲಿ ಎಂದೂ ಮೋಹಕ್ಕೆ ಒಳಗಾಗದ್ದೆ, ಅಂತ್ಯಕಾಲಲ್ಲಿಯೂ ಕೂಡ ಭಗವಂತನ ಚಿಂತುಸುವವ° ಭಗವಂತನ ಹೋಗಿ ಸೇರುತ್ತ°.

ಇಲ್ಲಿ ನಾವು ಇನ್ನೂ ಒಂದು ಅಂಶವ ಗಮನುಸಲಕ್ಕು. ಭಗವಂತನೇ ಹೇಳಿದ ಪ್ರಕಾರ ಸಾಮಾನ್ಯ ಮನುಷ್ಯರು ಭಗವಂತನ ಕಾಂಬಲೆ ಎಡಿಗಾವ್ತವಿಲ್ಲೆ. ಎಷ್ಟೋ ಲಕ್ಷ ಜನರಲ್ಲಿ ಎಷ್ಟೊ ಸಾವಿರ ಮಂದಿ ಭಗವಂತನ ಕಾಂಬಲೆ ಎಡಿಗಪ್ಪದು. ಅದರಲ್ಲಿ ಅರೋ ಒಬ್ಬ ಭಗವಂತನ ಕಂಡರೆ ಅದು ವಿಶೇಷ. ಅಧ್ಯಾತ್ಮ ಹೇಳಿರೆ ಆತ್ಮನಲ್ಲಿ ಭಗವಂತನ ಕಾಂಬದು. ಇದು ಆತ್ಮಸಾಕ್ಷಾತ್ಕಾರ. ಹಾಂಗಾರೆ ಆತ್ಮನ ಕಂಡುಗೊಂಬಲೆ ಸಾಧ್ಯ ಇಲ್ಲದ್ದವಂಗೆ ಭಗವಂತನ ಕಾಂಬದು ಅಸಾಧ್ಯ ಹೇಳ್ವದು ಸ್ಪಷ್ಟ. ಭಗವಂತನ ವಿಷಯಲ್ಲಿ ಭಕ್ತರು ಭಗವಂತನ ಹೇಂಗೆ ಹೇಂಗೆ ತಿಳಿತ್ತವೋ ಭಗವಂತ° ಆ ರೀತಿಲಿಯೇ ಅವರ ನಡೆಶುತ್ತ°. ಸಾಮಾನ್ಯ ಭಕ್ತರಿಂಗೇ ಕಾಂಬಲೆ ಎಡಿಗಾಗದ್ದ ಭಗವಂತ° ನಾಸ್ತಿಕರಿಂಗೆ ಹೇಂಗೆ ಕಾಣಿಸಿಗೊಂಬಲೆ ಎಡಿಗು. ಹಾಂಗಾಗಿ ನಾಸ್ತಿಕರಿಂಗೆ ಭಗವಂತ° ಅಲಭ್ಯ. ಭಗವಂತನಲ್ಲಿ ಶ್ರದ್ಧಾಭಕ್ತಿ ಮಡುಗಿ ಅವನಲ್ಲಿ ಸಂಪೂರ್ಣ ಶರಣಾಗತನಾದರೆ ಮಾಂತ್ರವೇ ಅವನ ದಾರಿ ಕಾಂಗಷ್ಟೆ. ಹಾಂಗಾಗಿ ನಾಸ್ತಿಕರತ್ರೆ ಆಸ್ತೀಕವಾದವ ವಾದುಸುವದು ವ್ಯರ್ಥ. ಹಾಂಗೇ ಇನ್ನೂ ಒಂದು ವಿಷಯವ ನಾವಿಲ್ಲಿ ಅರ್ತುಗೊಳ್ಳೆಕು –  ಆರಿಂಗೇ ಆದರು ಯಾವುದಾರು ವಿಷಯವ ಅರಡಿಯೇಕು ಹೇಳಿ ಆದರೆ ಆ ವಿಷಯಲ್ಲಿ ಅವಂಗೆ ನಿಜವಾದ ಆಸಕ್ತಿ ಇರೆಕು. ಬರೇ ಆಸಕ್ತಿ ಒಂದು ಇದ್ದರೆ ಸಾಲ, ಅದರಲ್ಲಿ ನಂಬಿಕೆ, ಶ್ರದ್ಧೆ ಬೇಕು. ನಾವು ಪಾಠ ಓದುತ್ತು ಅದರಲ್ಲಿಪ್ಪ ವಿಷಯ ತಲಗೆ ಹೊಕ್ಕುತ್ತು. ಹೇಂಗೆ? ಆ ಪಾಠಲ್ಲಿ ನವಗೆ ಅಭಿರುಚಿ, ಕಲಿಯೆಕು ಹೇಳ್ವ ಆಸಕ್ತಿ, ಅದರಿಂದ ಪ್ರಯೋಜನ ಇದ್ದು ಹೇಳ್ವ ವಿಶ್ವಾಸ ಇಪ್ಪದರಿಂದ ಅದು ನವಗೆ ಸುಲಭವಾಗಿ ತಲಗೆ ಹೊಕ್ಕುತ್ತು. ಡಾಕುಟ್ರೇಟು ಕಲಿತ್ತವು, ವಕಾಲ್ತು ಮಾಡ್ಳೆ ಕಲಿತ್ತವು. ವೈಜ್ಞಾನಿಕರಾವುತ್ತವು, ತಂತ್ರಜ್ಞರಾವುತ್ತವು… ಹೇಂಗೆ? ಅವಕ್ಕೆ ಅದರಲ್ಲಿ ಇಪ್ಪ ವಿಶ್ವಾಸ, ನಂಬಿಕೆ ಭಕ್ತಿಯೇ ಅದರ ಬುನಾದಿ. ಇಲ್ಲದ್ದವಂಗೆ ಅದು ಬರೇ ಕಬ್ಬಿಣದ ಕಡಲೆಯೇ ಸರಿ. ಹಾಂಗೆ ಭಗವಂತನ ಬಗ್ಗೆ, ಗುರುವಿನ ಬಗ್ಗೆ, ಅಧ್ಯಾತ್ಮದ ಬಗ್ಗೆ ತಿಳಿಯೆಕ್ಕಾರೆ ಅದರಲ್ಲಿ ಶ್ರದ್ಧಾಪೂರ್ವಕ ನಂಬಿಕೆ, ವಿಶ್ವಾಸ, ಭಕ್ತಿ ಇರೆಕು. ಇಲ್ಲದ್ದವಕ್ಕೆ ಅದು ಅರ್ಥವೇ ಆಗ. ಇಲ್ಲಿ ಇನ್ನೊಂದು ವಿಷಯ ಆಸಕ್ತಿ ಹೇಳಿರೆ ಬರೇ ಬಾಯಿಬಡಿಕೆಯ ಆಸಕ್ತಿ, ಕುಹಕ ಆಸಕ್ತಿ , ಎಂತ ಪ್ರಯೋಜನಕ್ಕೂ ಬಾರ. ಇನ್ನೊಬ್ಬ ಈ ವಿಷಯದ ಬಗ್ಗೆ ಎಂತ ಹೇಳುತ್ತ° ನೋಡ್ವೋ ಹೇಳಿ ವ್ಯಂಗ್ಯದ ಆಸಕ್ತಿಯೂ ಪ್ರಯೋಜನಕ್ಕೆ ಅಪ್ಪದಲ್ಲ. ಅವನ ಜಿಜ್ಞಾಸೆ ಬರೇ ಡಂಬಾಚಾರಕ್ಕೆ ಇಪ್ಪದು. ಭಗವಂತ° ಈ ಮದಲಾಣ ಅಧ್ಯಾಯಲ್ಲಿ ಹೇಳಿಪ್ಪಂತೆ ಅಂತವರ ಪ್ರಶ್ನೆಯ ತಲಗೆ ಹಾಕೆಕು ಹೇಳಿ ಇಲ್ಲೆ. ಅಂತವರ ಬಗ್ಗೆ ನಾವು ಅನಗತ್ಯ ತಲೆಕೆಡುಸೆಕ್ಕಾದ್ದೂ ಇಲ್ಲೆ. ಅಂತವರ ಜಿಜ್ಞಾಸೆ ಬರೇ ಬಾಯಿಚಪಲಕ್ಕೆ ಕಾರಣ ಆವ್ತು. ಅವರ ಬಗ್ಗೆ, ಅಂತ ವಿಷಯಂಗಳ ಬಗ್ಗೆ ನವಗೆ ನಿರ್ಲಿಪ್ತ ಧೋರಣೆಯೇ ಸರಿಯಾದ್ದು. ಅದು ಅವ° ಅವನ ಬುದ್ಧಿಗೆ, ಇಚ್ಛಗೆ ತಕ್ಕಂತೆ ಭಗವಂತ° ಅವನತ್ರೆ ಮಾಡುಸುವದು ಹೇಳಿ ನಾವು ತಿಳ್ಕೊಳ್ಳೆಕು. ಆರು ಆರು ಯಾವ ರೀತಿಲಿ ನಡಕ್ಕೊಂಬಲೆ ಇಷ್ಟಪಡುತ್ತವೋ, ಅವಕ್ಕೆ ಆಯಾ ರೀತಿಯ ದಾರಿಲಿಯೇ ನಡಶುವದು ಹೇಳಿ ಭಗವಂತ° ಹೇಳಿದ್ದರ ನಾವಿಲ್ಲಿ ನೆಂಪಿಸಿಗೊಂಬಲಕ್ಕು.

ಹೀಂಗೆ ಭಗವಂತ° ಈ ಅಧ್ಯಾಯಲ್ಲಿ ಮನುಷ್ಯ ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯ ಪಡೆಕು, ಅದರಲ್ಲಿ ಹೇಂಗೆ ಸ್ಥಿರವಾಗಿ ನಿಲ್ಲೆಕು ಹೇಳಿ ವಿಶೇಷವಾಗಿ ತಿಳಿಶಿದ್ದ°. ಕೃಷ್ಣಪ್ರಜ್ಞೆಯ ಪ್ರಾರಂಭ ಹೇಳಿರೆ ಕೃಷ್ಣಪ್ರಜ್ಞೆ ಇಪ್ಪವರೊಂದಿಂಗೆ ಸಹವಾಸ. ಇಂತಹ ಸಹವಾಸ ಆಧ್ಯಾತ್ಮಿಕವಾದ್ದು ಮತ್ತು ಭಗವಂತನತ್ರೆ ನೇರ ಸಂಪರ್ಕವ ಕಲ್ಪುಸುತ್ತು. ಅವನ ಪ್ರಜ್ಞೆಂದ ಮನುಷ್ಯಂಗೆ ದೇವೋತ್ತಮ ಪರಮ ಪುರುಷನ ಅರ್ಥಮಾಡಿಗೊಂಬ ದಾರಿ ಸುಗಮ ಆವ್ತು. ಭಗವಂತ° ಇಲ್ಲಿ ಈ ಪ್ರಪಂಚದ ಸೃಷ್ಟಿ, ಈ ಸೃಷ್ಟಿಲಿ ಭಗವಂತನ ನೆಲೆ, ಜೀವಿಯ ನೆಲೆ, ಜೀವಿ ಭಗವಂತನಲ್ಲಿ ಸಂಪರ್ಕ ಮತ್ತು ಸ್ಥಿರವಾಗಿ ನಿಂಬದರಿಂದ ಅಪ್ಪ ಪ್ರಯೋಜನಂಗಳ ಕ್ರೋಢೀಕರಿಸಿ ವಿವರಿಸಿದ್ದ,೨೪೮. ಭಗವಂತನ ವಿಭೂತಿಯ ಈ ಅಧ್ಯಾಯಲ್ಲಿ ನಾವು ಗಮನುಸಲಕ್ಕು. ತ್ರಿಗುಣಾತ್ಮಕವಾದ ಪ್ರಪಂಚಲ್ಲಿ ನಮ್ಮ ಬದುಕು, ಮಾಯಾ ಪ್ರಪಂಚ ಮತ್ತೆ ಅದರಿಂದ ಮುಕ್ತಿಯ ಪಡವದು ಹೇಂಗೆ ಹೇಳ್ವದರ ಭಗವಂತ ಇಲ್ಲಿ ಸ್ಪಷ್ಟಪಡಿಸಿದ್ದ°. ಹಾಂಗೆಯೇ ದುಷ್ಕೃತಿಗಳ ಮತ್ತು ಪುಣ್ಯವಂತ ಸಜ್ಜನರ ವಿಧ, ಅದರಲ್ಲಿ ಆರ ಭಕ್ತಿ ಶ್ರೇಷ್ಠವಾದ್ದು ಹೇಳ್ವದರನ್ನೂ ಭಗವಂತ ಇಲ್ಲಿ ತಿಳಿಶಿದ್ದ°. ಜ್ಞಾನ ಮತ್ತು ಭಕ್ತಿಂದ ಆರು ಹೇಂಗೆ ಮುಕ್ತಿಯ ಪಡವಲಕ್ಕು ಹೇಳ್ವದು ಇಲ್ಲಿ ಉಲ್ಲೇಖಿಸಲ್ಪಟ್ಟಿದು. ಹಾಂಗಾಗಿ ಇದು ಜ್ಞಾನದ ವಿಜ್ಞಾನ ಯೋಗವ ಈ ಅಧ್ಯಾಯಲ್ಲಿ ವಿವರಿಸಲ್ಪಟ್ಟಿದು ಹೇಳ್ವಲ್ಯಂಗೆ –  

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಜ್ಞಾನ-ವಿಜ್ಞಾನ-ಯೋಗೋ ನಾಮ ಸಪ್ತಮೋsಧ್ಯಾಯಃ ॥

ಇಲ್ಲಿಗೆ ಉಪನಿಷತ್ತೂ ಬ್ರಹ್ಮವಿದ್ಯೆಯೂ ಮತ್ತು ಯೋಗಶಾಸ್ತ್ರವೂ ಶ್ರೀಕೃಷ್ಣ-ಅರ್ಜುನ ಸಂವಾದವೂ ಆದ ಶ್ರೀಮದ್ಭಗವದ್ಗೀತೇಲಿ ಜ್ಞಾನವಿಜ್ಞಾನಯೋಗ ಹೇಳ್ವ ಏಳನೇಯ ಅಧ್ಯಾಯ ಮುಗುದತ್ತು.

॥ ಗೀತಾಚಾರ್ಯ ಶ್ರೀಕೃಷ್ಣ ಭಗವಾನ್ ಕೀ…. ಜೈ ॥ ಗೀತಾ ಮಾತಾ ಕೀ …. ಜೈ ॥ ಗೋಪಾಲಕೃಷ್ಣ ಭಗವಾನ್ ಕೀ .. ಜೈ ॥

॥ ಶ್ರೀಕೃಷ್ಣಾರ್ಪಣಮಸ್ತು ॥

….ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 07 – SHLOKAS 21 – 30 by CHENNAI BHAAVA

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

 

One thought on “ಶ್ರೀಮದ್ಭಗವದ್ಗೀತಾ – ಸಪ್ತಮೋsಧ್ಯಾಯಃ – ಜ್ಞಾನವಿಜ್ಞಾನಯೋಗಃ – ಶ್ಲೋಕಂಗೊ 21 – 30

  1. “ಶ್ರದ್ಧಾವಾನ್ ಲಭತೇ ಜ್ಞಾನಂ” – ಶ್ರದ್ಧೆ ಇದ್ದರೆ ಜ್ಞಾನ ಲಭಿಸುತ್ತು. !
    ಒಳ್ಳೆ ಸಂದೇಶದೊಟ್ಟಿಂಗೆ ಗೀತೆಯ ಏಳನೆ ಅಧ್ಯಾಯಕ್ಕೆ ಮಂಗಲ ಹೇಳಿದ್ದು ಲಾಯಕ ಆಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×