Oppanna.com

ಶ್ರೀಮದ್ಭಗವದ್ಗೀತಾ – ಅಷ್ಟಮೋsಧ್ಯಾಯಃ – ಅಕ್ಷರಬ್ರಹ್ಮಯೋಗಃ – ಶ್ಲೋಕಂಗೊ 11 – 20

ಬರದೋರು :   ಚೆನ್ನೈ ಬಾವ°    on   20/09/2012    1 ಒಪ್ಪಂಗೊ

ಚೆನ್ನೈ ಬಾವ°

ಶ್ಲೋಕ

ಯದಕ್ಷರಂ ವೇದವಿದೋ ವದಂತಿ ವಿಶಂತಿ ಯದ್ಯತಯೋ ವೀತರಾಗಾಃ ।
ಯದಿಚ್ಛಂತೋ ಬ್ರಹ್ಮಚರ್ಯಂ ಚರಂತಿ ತತ್ತೇ ಪದಂ ಸಂಗ್ರಹೇಣ ಪ್ರವಕ್ಷ್ಯೇ ॥೧೧॥

ಪದವಿಭಾಗ

ಯತ್ ಅಕ್ಷರಮ್ ವೇದ-ವಿದಃ ವದಂತಿ ವಿಶಂತಿ ಯತ್ ಯತಯಃ ವೀತ-ರಾಗಾಃ । ಯತ್ ಇಚ್ಛಂತಃ ಬ್ರಹ್ಮಚರ್ಯಮ್ ಚರಂತಿ ತತ್ ತೇ ಪದಮ್ ಸಂಗ್ರಹೇಣ ಪ್ರವಕ್ಷ್ಯೇ ॥

ಅನ್ವಯ

ವೇದ-ವಿದಃ ಯತ್ ಅಕ್ಷರಂ ವದಂತಿ, ವೀತ-ರಾಗಾಃ ಯತಯಃ ಯತ್ ವಿಶಂತಿ, (ಬ್ರಹ್ಮಚಾರಿಣಃ) ಯತ್ ಇಚ್ಛಂತಃ ಬ್ರಹ್ಮಚರ್ಯಂ ಚರಂತಿ, ತತ್ ಪದಂ ತೇ ಸಂಗ್ರಹೇಣ ಪ್ರವಕ್ಷ್ಯೇ ।

ಪ್ರತಿಪದಾರ್ಥ

ವೇದ-ವಿದಃ – ವೇದಂಗಳ ತಿಳುದವು, ಯತ್ ಅಕ್ಷರಮ್ – ಯಾವ ಅಕ್ಷರವ (ಓಂಕಾರವ), ವದಂತಿ – ಹೇಳುತ್ತವೋ, ವೀತ-ರಾಗಾಃ ಯತಯಃ – ಸನ್ಯಾಸಾಶ್ರಮಲ್ಲಿಪ್ಪ ಯತಿಗೊ (ಋಷಿಗೊ), ಯತ್ ವಿಶಂತಿ – ಯಾವುದರಲ್ಲಿ ಪ್ರವೇಶಿಸುತ್ತವೋ, (ಬ್ರಹ್ಮಚಾರಿಣಃ – ಬ್ರಹ್ಮಚಾರಿಗೊ), ಯತ್ ಇಚ್ಛಂತಃ – ಯಾವುದರ ಅಪೇಕ್ಷಿಸಿ, ಬ್ರಹ್ಮಚರ್ಯಮ್ – ಬ್ರಹ್ಮಚರ್ಯವ, ಚರಂತಿ – ಅಭ್ಯಾಸಮಾಡುತ್ತವೋ, ತತ್ ಪದಮ್ – ಆ ಸನ್ನಿವೇಶವ (ಆ ಪದವಿಯ/ಪರತತ್ವವ), ತೇ – ನಿನಗೆ, ಸಂಗ್ರಹೇಣ – ಸಂಗ್ರಹವಾಗಿ, ಪ್ರವಕ್ಷ್ಯೇ – ಹೇಳುತ್ತೆ (ವಿವರುಸುತ್ತೆ).

ಅನ್ವಯಾರ್ಥ

ವೇದಪಾರಂಗತರು ಯಾವ ಅಕ್ಷರವ (ಓಂಕಾರವ) ಕ್ಷರವಲ್ಲದ್ದು , ಅಕ್ಷರವಾದ್ದು ಹೇಳಿ ಹೇಳುತ್ತವೋ, ಸಂನ್ಯಾಸವ ಸ್ವೀಕರುಸಿ ವಿರಾಗಿಗಳಾಗಿ ಮಹಾಯತಿಗಳಾಗಿ ಮುಂದೆ  ಯಾವುದರ ಪಡೆತ್ತವೋ,  ಯಾವುದರ ಬಯಸಿ ಬ್ರಹ್ಮಚಾರಿಗೊ ಬ್ರಹ್ಮಚರ್ಯವ ಪಾಲುಸುತ್ತವೋ, ಆ ಮಹಾತತ್ವವ ( ಪದವಿಯ ಬಗ್ಗೆ) ನಿನಗೆ ವಿವರುಸುತ್ತೆ.

ತಾತ್ಪರ್ಯ / ವಿವರಣೆ

ಅರ್ಜುನಂಗೆ ಭಗವಂತ° ಈ ವರೇಂಗೆ ಷಟ್’ಚಕ್ರಯೋಗವ ಅಭ್ಯಾಸ ಮಾಡೆಕು ಸಲಹೆ ಮಾಡಿದ್ದ. ಈ ಯೋಗಲ್ಲಿ ಸಾಧಕ° ಪ್ರಾಣವಾಯುವ ಹುಬ್ಬುಗಳ ನೆಡುಗೆ ತಂದು ನಿಲ್ಲುಸುವದು ಮತ್ತು ಭಗವಂತನನ್ನೇ ಧ್ಯಾನಿಸುವದು ಮತ್ತು ಅಲ್ಲಿಂದ ಮೇಗಂತಾಗಿ ಸಹಸ್ರಾರದತ್ತೆ ಕೊಂಡೋಪದು ‘ಷಟ್ಚಕ್ರಯೋಗ’ ಪದ್ಧತಿ. ಭಗವಂತ° ಮುಂದೆ ಧ್ಯಾನಮಾಡೇಕ್ಕಪ್ಪ ರೂಪದ (ಸನ್ನಿವೇಶದ) ಬಗ್ಗೆ ಹೇಳುತ್ತ° – ವೇದವಿದ್ವಾನುಗೊ ಅದರ ಅಳಿವಿಲ್ಲದ ಅಕ್ಷರ ಹೇಳಿ ಹೇಳುತ್ತವು. ಮಹಾಪ್ರಯತ್ನಂದ ಭಗವಂತನ ಒಲಿಸಿಗೊಂಡವು ಪ್ರಾಪಂಚಿಕ ಸೆಳೆತಂದ ಪಾರಾದವು ಆ ಭಗವಂತನ ಹೋಗಿ ಸೇರುತ್ತವು. ಅವು ಅಂತಹ ಭಗವಂತನ ಅರ್ತುಗೊಂಬಲೆ ಬಯಸಿ ಬ್ರಹ್ಮಚರ್ಯ ಜೀವನ ಅಳವಡಿಸಿಗೊಳ್ಳುತ್ತವು. ಇಲ್ಲಿ ಬ್ರಹ್ಮಚರ್ಯ ಹೇಳಿ – ‘ಬ್ರಹ್ಮಣಿ ಚರಣಂ’ – ಭಗವಂತನಲ್ಲಿ ಮನಸ್ಸು ನೆಲೆಗೊಂಬದು. ಅದರ ಸೇರಬಯಸಿಯೇ ಆ ಬಗೆಲಿ ಆ ಹಿರಿತತ್ವವ ಚಿಂತುಸುತ್ತವು. ಈ ರೀತಿ ಮೋಕ್ಷವ ಪಡವ ಪ್ರಕೃಯೆಯ ಬಗ್ಗೆ ಸಂಗ್ರಹವಾಗಿ ನಿನಗೆ ಹೇಳುತ್ತೆ ಹೇಳಿ ಮುಂದುವರುಸುತ್ತ° ಭಗವಂತ°. 

ಶ್ಲೋಕ

ಸರ್ವದ್ವಾರಾಣಿ ಸಂಯಮ್ಯ ಮನೋ ಹೃದಿ ನಿರುಧ್ಯ ಚ ।
ಮೂರ್ಧ್ನ್ಯಾಧಾಯಾತ್ಮನಃ ಪ್ರಾಣಮ್ ಆಸ್ಥಿತೋ ಯೋಗಧಾರಣಾಮ್ ॥೧೨॥

ಓಂಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ಮಾಮನುಸ್ಮರನ್ ।
ಯಃ ಪ್ರಯಾತಿ ತ್ಯಜಂದೇಹಂ ಸ ಯಾತಿ ಪರಮಾಂ ಗತಿಮ್ ॥೧೩॥

ಪದವಿಭಾಗ

ಸರ್ವ-ದ್ವಾರಾಣಿ ಸಂಯಮ್ಯ ಮನಃ ಹೃದಿ ನಿರುಧ್ಯ ಚ । ಮೂರ್ಧ್ನಿ ಆಧಾಯ ಆತ್ಮನಃ ಪ್ರಾಣಮ್ ಆಸ್ಥಿತಃ ಯೋಗ-ಧಾರಣಾಮ್ ॥

ಓಂ ಇತಿ ಏಕ-ಅಕ್ಷರಮ್ ಬ್ರಹ್ಮ ವ್ಯಾವಹರನ್ ಮಾಮ್ ಅನುಸ್ಮರನ್ । ಯಃ ಪ್ರಯಾತಿ ತ್ಯಜನ್ ದೇಹಂ ಸಃ ಯಾತಿ ಪರಮಾಮ್ ಗತಿಂ॥

ಅನ್ವಯ

ಸರ್ವ-ದ್ವಾರಾಣಿ ಸಂಯಮ್ಯ, ಮನಃ ಚ ಹೃದಿ ನಿರುಧ್ಯ, ಮೂರ್ಧ್ನಿ ಆತ್ಮನಃ ಪ್ರಾಣಮ್ ಆಧಾಯ, ಯೋಗ-ಧಾರಣಾಮ್ ಆಸ್ಥಿತಃ, ಓಮ್ ಇತಿ ಏಕ-ಅಕ್ಷರಂ ಬ್ರಹ್ಮ ವ್ಯಾವಹರನ್ ಮಾಮ್ ಅನುಸ್ಮರನ್, ಯಃ ದೇಹಂ ತ್ಯಜತಿ, ಸಃ ಪರಮಾಂ ಗತಿಂ ಯಾತಿ ।

ಪ್ರತಿಪದಾರ್ಥ

ಸರ್ವ-ದ್ವಾರಾಣಿ – ದೇಹದ ಎಲ್ಲ ದ್ವಾರಂಗಳ, ಸಂಯಮ್ಯ – ನಿಯಂತ್ರುಸಿ, ಮನಃ – ಮನಸ್ಸಿನ, ಚ – ಕೂಡ, ಹೃದಿ – ಹೃದಯಲ್ಲಿ, ನಿರುಧ್ಯ – ಬಂಧಿಸಿ, ಮೂರ್ಧ್ನಿ – ಶಿರಸ್ಸಿಲ್ಲಿ, ಆತ್ಮನಃ – ಆತ್ಮನ, ಪ್ರಾಣಮ್ ಆಧಾಯ – ಪ್ರಾಣವಾಯುವ ಸ್ಥಿರಗೊಳುಸಿ, ಯೋಗ-ಧಾರಣಾಮ್ ಆಸ್ಥಿತಃ – ಯೋಗಸ್ಥಿತಿಯ ನೆಲೆಸಿಗೊಂಡವನಾಗಿ, ಓಮ್ ಇತಿ  – ಅಕ್ಷರಂಗಳ ಸಂಯೋಜನೆಯಾದ ಓಂಕಾರ ಹೇಳ್ವ, ಏಕ-ಅಕ್ಷರಮ್ – ಒಂದು ಅಕ್ಷರವ, ಬ್ರಹ್ಮ – ಪರತತ್ವವ, ವ್ಯಾವಹರನ್ – ಉಚ್ಛರಿಸಿಗೊಂಡು, ಮಾಮ್ – ಎನ್ನ, ಅನುಸ್ಮರನ್ – ಸ್ಮರಿಸಿಗೊಂಡು, ಯಃ – ಆರು, ದೇಹಮ್ ತ್ಯಜತಿ – ದೇಹವ ಬಿಡುತ್ತವೋ, ಸಃ – ಅವ°, ಪರಮಾಮ್ ಗತಿಮ್  – ಪರಮೋನ್ನತವಾದ ಗತಿಯ, ಯಾತಿ – ಹೊಂದುತ್ತ°.

ಅನ್ವಯಾರ್ಥ

ಎಲ್ಲ ಇಂದ್ರಿಯದ್ವಾರಂಗಳ ಮುಚ್ಚಿ, ಮನಸ್ಸನ್ನೂ ಹೃದಯಲ್ಲಿ ಸ್ಥಿರಗೊಳುಸಿ, ಪ್ರಾಣವಾಯುವ ಶಿರಸ್ಸಿಲ್ಲಿ ನಿಲ್ಲುಸಿ ಯೋಗಧಾರಣೆ ಮಾಡಿಗೊಂಡು, ಸರ್ವವೇದಂಗಳ ಸಾರವಾದ ಓಂ ಹೇಳ್ವ ಏಕಾಕ್ಷರವ ಉಚ್ಛರಿಸಿಯೊಂದು ದೇವೋತ್ತಮ ಪರಮಪುರುಷನ ಧ್ಯಾನಿಸಿಗೊಂಡು ಯಾವಾತ° ದೇಹವ ಬಿಡುತ್ತನೋ, ಅವ° ನಿಶ್ಚಯವಾಗಿಯೂ ಭಗವಂತನ ಪರಮೋನ್ನತಿಯ ಪದವಿಯ (ಆಧ್ಯಾತ್ಮಿಕ ಲೋಕವ) ಹೊಂದುತ್ತ°. 

ತಾತ್ಪರ್ಯ  

ಶರೀರದ ಎಲ್ಲ ನಾಡೀದ್ವಾರಂಗಳ ಬಿಗಿಹಿಡುದು (ನಿಯಂತ್ರುಸಿ), ಮನಸ್ಸನ್ನೂ ಹೃದಯಲ್ಲಿ ಕೇಂದ್ರೀಕರುಸಿ, ಪ್ರಾಣವಾಯುವಿನ ಸಹಸ್ರಾರಚಕ್ರಲ್ಲಿ (ಶಿರೋಮಧ್ಯಲ್ಲಿ) ಸ್ಥಾಪಿಸಿ, ಚಿತ್ತಲ್ಲಿ ಭಗವಂತನನ್ನೇ ಗ್ರೇಶಿಗೊಂಡು, ಓಂಕಾರವ ಜಪಿಸಿಗೊಂಡು ಸಹಸ್ರಾರ ಬಾಗಿಲಿಂದ ಹೆರಬಂದು ದೇಹತ್ಯಾಗ ಮಾಡುತ್ತವ ಮುಂದೆ ಎಂದೂ ಮರಳಿ ಬಾರದ ತಾಣವಾದ ಮೋಕ್ಷ ಪದವಿಯ ಹೊಂದುತ್ತ° (ಭಗವಂತನ ಸೇರುತ್ತ°). ಇದು ಹಠಯೋಗ ಸಾಧನೆ, ಸುಲಭ ಸಾಧ್ಯವಲ್ಲ. ನಿರಂತರ ಅಭ್ಯಾಸ ಪರಿಶ್ರಮ ಅಗತ್ಯ. ಅದಕ್ಕೆ ಮನಸ್ಸು ಭಗವಂತನಲ್ಲಿ ಸ್ಥಿರವಾಗಿಪ್ಪಲೆ ಸಜ್ಜಾಗಿರಿರೆಕು. ಈ ರೀತಿ ಯೋಗಾಭ್ಯಾಸ ಮಾಡಿ ದೇಹತ್ಯಾಗ ಮಾಡುತ್ತವ° ಪರಮ ಸುಖವ  ಪಡೆತ್ತ°.

ಆದರೆ ಇದು ಎಲ್ಲೋರಿಂದ ಅಪ್ಪ ಪಂಚಾತಿಗೆ ಅಲ್ಲ. ಬಹು ಕಷ್ಟದ ಸಾಧನೆ. ಹಾಂಗಾರೆ ಇದಕ್ಕಿಂತ ಎಳ್ಪದ ದಾರಿ ಇಲ್ಯೋ?!

ಶ್ಲೋಕ 

ಅನನ್ಯಚೇತಾಃ ಸತತಂ ಯೋ ಮಾಂ ಸ್ಮರತಿ ನಿತ್ಯಶಃ ।
ತಸ್ಯಾಹಂ ಸುಲಭಃ ಪಾರ್ಥ ನಿತ್ಯಯುಕ್ತಸ್ಯ ಯೋಗಿನಃ ॥೧೪॥

ಪದವಿಭಾಗ

ಅನನ್ಯ-ಚೇತಾಃ ಸತತಮ್ ಯಃ ಮಾಮ್ ಸ್ಮರತಿ ನಿತ್ಯಶಃ । ತಸ್ಯ ಅಹಮ್ ಸುಲಭಃ ಪಾರ್ಥ ನಿತ್ಯ-ಯುಕ್ತಸ್ಯ ಯೋಗಿನಃ ॥

ಅನ್ವಯ

ಹೇ ಪಾರ್ಥ!, ಯಃ ನಿತ್ಯಶಃ ಅನನ್ಯ-ಚೇತಾಃ ಸನ್ ಮಾಂ ಸತತಂ ಸ್ಮರತಿ, ತಸ್ಯ ನಿತ್ಯ-ಯುಕ್ತಸ್ಯ ಯೋಗಿನಃ ಅಹಂ ಸುಲಭಃ ಅಸ್ಮಿ ।

ಪ್ರತಿಪದಾರ್ಥ

ಹೇ ಪಾರ್ಥ! – ಏ ಪೃಥೆಯ ಮಗನಾದ ಅರ್ಜುನ°, ಯಃ ನಿತ್ಯಶಃ  – ಆರು ನಿತ್ಯವೂ ತಪ್ಪದ್ದೆ, ಅನನ್ಯ-ಚೇತಾಃ ಸನ್- ಮನಸ್ಸಿನ ವಿಚಲತೆ ಇಲ್ಲದ್ದೆ ಇದ್ದುಗೊಂಡು, ಮಾಮ್ – ಎನ್ನ, ಸತತಮ್ – ಯೇವತ್ತೂ, ಸ್ಮರತಿ – ಸ್ಮರಿಸುತ್ತನೋ, ತಸ್ಯ ನಿತ್ಯ-ಯುಕ್ತಸ್ಯ ಯೋಗಿನಃ – ಆ ನಿತ್ಯನಿರತನಾಗಿಪ್ಪ ಯೋಗಿಗೆ (ಭಕ್ತಂಗೆ), ಅಹಮ್ – ಆನು, ಸುಲಭಃ ಅಸ್ಮಿ – ಸುಲಭವಾಗಿ ಲಭ್ಯನಾಗಿದ್ದೆ.

ಅನ್ವಯಾರ್ಥ

ಏ ಪೃಥೆಯ ಮಗನಾದ ಅರ್ಜುನನೇ!, ಅನನ್ಯಚಿತ್ತನಾಗಿ ಸದಾ ಎನ್ನನ್ನೇ ಸ್ಮರಿಸುತ್ತಾ ಇಪ್ಪವಂಗೆ ಅವನ ಭಕ್ತಿಸೇವಗೆ ಅನು ಸದಾ ಸುಲಭ ಸಾಧ್ಯನಾಗಿ ಇದ್ದೆ.

ತಾತ್ಪರ್ಯ / ವಿವರಣೆ

ಭಗವಂತ° ಸುರುವಿಂಗೆ ಹೇಳಿದ ಯೋಗಪದ್ಧತಿಯ ಸಾಧನೆ ಎಲ್ಲೋರಿಂದ ಸಾಧ್ಯ ಅಪ್ಪ ಮಾತಲ್ಲ. ಹಾಂಗಾರೆ ನಿತ್ಯಜೀವನಲ್ಲಿ ಇದ್ದುಗೊಂಡಿಪ್ಪವಂಗೆ ದಾರಿ ಏವುದು? ಅದಕ್ಕೆ ಭಗವಂತ ಇಲ್ಲಿ ಒಂದು ಮಾರ್ಗವ ಹೇಳುತ್ತ° – ‘ಬೇರೇನನ್ನೂ ಯೋಚಿಸದ್ದೆ ಅನುದಿನವೂ ನಿರಂತರ ಎನ್ನನ್ನೇ ಸ್ಮರಣೆ ಮಾಡುತ್ತವಂಗೆ ಆನು ಸುಲಭವಾಗಿ ಕೈಸೆರೆ ಆವುತ್ತೆ’. ಇಲ್ಲಿ ಬೇರೆನನ್ನೂ ಹೇಳಿರೆ, ಎಲ್ಲವನ್ನೂ ಬಿಟ್ಟು ಹೇಳಿ ಅರ್ಥ ಅಲ್ಲ. ಮದಲೇ ಹೇಳಿಪ್ಪಂತೆ ನಿತ್ಯಜೀವನಲ್ಲಿ ಇದ್ದುಗೊಂಡು ಏಕಭಕ್ತಿ ಉಪಾಸನೆ ಮತ್ತೆ ಸಂಪೂರ್ಣ ಕೃಷ್ಣಪ್ರಜ್ಞೆ ಅಳವಡಿಸಿಗೊಂಡು ಜೀವನ ನಡಶುವದು ಹೇಳಿ ತಾತ್ಪರ್ಯ. ಇಲ್ಲಿ ಐಹಿಕ ವಿಷಯಕ್ಕೆ ಮೌಲ್ಯ ಇಲ್ಲೆ. ಎಲ್ಲವೂ ಭಗವಂತನಿಂದ, ಭಗವಂತಗೋಸ್ಕರ, ಭಗವಂತನ ಸೇವೆಯ ಮಾಡುತ್ತ ಇಪ್ಪದು ಹೇಳ್ವ ನೆಲೆ ಆಗಿರೆಕು ಜೀವನ. ಅಹಂ ಹೇಳ್ವ ವಿಷಯವೇ ಇಪ್ಪಲಾಗ. ಭಗವಂತ°, ಭಗವಂತನ ಚಾಕರಿಯ ತನ್ನಿಂದ ಮಾಡುಸುವದು, ಅವನ ಕೆಲಸ ಮಾಡುವದಷ್ಟೇ ಎನ್ನ ಕರ್ಮ ಅಧಿಕಾರ ಹೇಳ್ವ ಮನಃಪೂರ್ವಕ ಅನುಸಂಧಾನ, ಅಂದರೆ ಅಷ್ಟೇ ನಿರಂತರ ಭಕ್ತಿಗೆ ಅರ್ಥ.  ಈ ರೀತಿ ಸಾಧನೆ ನಿತ್ಯ ತೊಡಗಿ, ಸಾಧನೆಯ ಕೊಡಿ ಎತ್ತಿಯಪ್ಪಗ ಬೇರೆ ಯಾವ ಪ್ರತ್ಯೇಕ ಪ್ರಯತ್ನ ಇಲ್ಲದ್ದೆ ಸಾಧಕ° ಭಗವಂತನ ಸೇರುತ್ತ°.

ಶ್ಲೋಕ

ಮಾಮುಪೇತ್ಯ ಪುನರ್ಜನ್ಮ ದುಃಖಾಲಯಮಶಾಶ್ವತಮ್ ।
ನಾಪ್ನುವಂತಿ ಮಹಾತ್ಮನಃ ಸಂಸಿದ್ಧಿಂ ಪರಮಾಂ ಗತಾಃ ॥೧೫॥

ಪದವಿಭಾಗ

ಮಾಮ್ ಉಪೇತ್ಯ ಪುನಃ-ಜನ್ಮ ದುಃಖ-ಆಲಯಮ್ ಅಶಾಶ್ವತಮ್ । ನ ಆಪ್ನುವಂತಿ ಮಹಾತ್ಮನಃ ಸಂಸಿದ್ಧಿಮ್ ಪರಮಾಮ್ ಗತಾಃ

ಅನ್ವಯ

ಪರಮಾಂ ಸಂಸಿದ್ಧಿಂ ಗತಾಃ ಮಹಾತ್ಮನಃ ಮಾಮ್ ಉಪೇತ್ಯ, ಪುನಃ ದುಃಖ-ಆಲಯಮ್ ಅಶಾಶ್ವತಂ ಜನ್ಮಂ ನ ಆಪ್ನುವಂತಿ ।

ಪ್ರತಿಪದಾರ್ಥ

ಪರಮಾಮ್ ಸಂಸಿದ್ಧಿಮ್ ಗತಾಃ – ಅಂತಿಮವಾದ ಪರಿಪೂರ್ಣತೆಯ ಹೊಂದಿದವಾಗಿ, ಮಹಾತ್ಮನಃ – ಮಹಾತ್ಮರು, ಮಾಮ್ ಉಪೇತ್ಯ – ಎನ್ನ ಹೊಂದಿ, ಪುನಃ – ಮತ್ತೆ, ದುಃಖ-ಆಲಯಮ್ – ಕ್ಲೇಶಂಗಳ ಸ್ಥಾನವಾದ, ಅಶಾಶ್ವತಮ್ – ಅಶಾಶ್ವತವಾದ (ತಾತ್ಕಾಲಿಕವಾದ), ಜನ್ಮಮ್ – ಜನ್ಮವ, ನ ಆಪ್ನುವಂತಿ – ಹೊಂದುತ್ತವಿಲ್ಲೆ.

ಅನ್ವಯಾರ್ಥ

ಭಕ್ತಿಪೂರ್ವಕ ಯೋಗಿಗೊ ಆದ ಮಹಾತ್ಮರು ಎನ್ನ ಸೇರಿದ ಮತ್ತೆ, ಮತ್ತೆ ದುಃಖಂಗಳ ಆಲಯವಾದ ಈ ಅಶಾಶ್ವತವಾದ ಪ್ರಪಂಚಕ್ಕೆ ಹಿಂದುರುಗುತ್ತವಿಲ್ಲೆ. (ಪುನಃ ಈ ಭೂಮಿಲಿ ಜನ್ಮವ ಪಡೆತ್ತವಿಲ್ಲೆ. ಅವು ಅತ್ಯುನ್ನತ ಪರಿಪೂರ್ಣತೆಯ ಸಾಧಿಸಿ ಮೋಕ್ಷವನ್ನೇ ಪಡೆತ್ತವು.)

ತಾತ್ಪರ್ಯ / ವಿವರಣೆ

ಸಾಧನೆಯ ಮೂಲಕ ಸಿದ್ಧಿಯ ಪಡದು ಭಗವಂತನ ಸೇರಿದ ಜೀವಾತ್ಮ ಮತ್ತೆ ಎಂದೂ ಈ ದುಃಖಮಯವಾದ ಹಾಂಗೂ ಅಶಾಶ್ವತವಾದ ಈ ಸಂಸಾರ ಚಕ್ರಲ್ಲಿ ಮರಳಿ ಹುಟ್ಟುತ್ತವಿಲ್ಲೆ. ಭಗವಂತನ ಹೋಗಿ ಸೇರುವವು ಪುಣ್ಯಾತ್ಮರುಗೊ. ಜಗತ್ತಿಲ್ಲಿ, ಜೀವನದ ಸಾಧನೆಲಿ ಅತ್ಯಂತ ಶ್ರೇಷ್ಠವಾದ ಸಿದ್ಧಿ ಹೇಳಿರೆ ಭಗವಂತನ ಸಾಕ್ಷಾತ್ಕಾರ. ಅದರ ಪಡದವಕ್ಕೆ ಮತ್ತೆ ಸಂಸಾರ ಬಂಧನಲ್ಲಿ ಸಿಲುಕಿಗೊಂಬ ಪ್ರಮೇಯ ಬತ್ತಿಲ್ಲೆ ಹೇಳಿ ಭಗವಂತ° ಇಲ್ಲಿ ಸ್ಪಷ್ಟಪಡುಸುತ್ತ°. ಯಾವ ಸಾಧನೆ ಜೀವಂದ ಆಯೇಕ್ಕಾಪ್ಪದೋ ಆ ಕಾರ್ಯ ಸಿದ್ಧಿ ಆದರೆ ಮತ್ತೆ ಭಗವಂತನ ಶಾಶ್ವತವಾದ, ಅವ್ಯಕ್ತವಾದ, ಅಕ್ಷರವಾದ ಪರಮಶ್ರೇಷ್ಠ ಲೋಕವ ಹೋಗಿ ಸೇರುವದು. ಅದು ನಿರಂತರವಾದ ಶಾಂತಿಧಾಮ. ಅದರಿಂದ ಮತ್ತೆ ಎಂತದೂ ಇಲ್ಲೆ, ಅದರಿಂದ ಈಚಿಗೆ ಬಪ್ಪಲೂ ಇಲ್ಲೆ.

ಶ್ಲೋಕ

ಆಬ್ರಹ್ಮಭುವನಾಲ್ಲೋಕಾಃ ಪುನರಾವರ್ತಿನೋsರ್ಜುನ ।
ಮಾಮುಪೇತ್ಯ ತು ಕೌಂತೇಯ ಪುನರ್ಜನ್ಮ ನ ವಿದ್ಯತೇ ॥೧೬॥

ಪದವಿಭಾಗ

ಆಬ್ರಹ್ಮ-ಭುವನಾತ್ ಲೋಕಾಃ ಪುನಃ ಆವರ್ತಿನಃ ಅರ್ಜುನ । ಮಾಮ್ ಉಪೇತ್ಯ ತು ಕೌಂತೇಯ ಪುನಃ ಜನ್ಮ ನ ವಿದ್ಯತೇ

ಅನ್ವಯ

ಹೇ ಅರ್ಜುನ!, ಆಬ್ರಹ್ಮ-ಭುವನಾತ್ (ಸರ್ವೇ) ಲೋಕಾಃ ಪುನಃ-ಆವರ್ತಿನಃ ಸಂತಿ; ಹೇ ಕೌಂತೇಯ!, ಮಾಮ್ ಉಪೇತ್ಯ ತು ಪುನಃ ಜನ್ಮಃ ನ ವಿದ್ಯತೇ ।

ಪ್ರತಿಪದಾರ್ಥ

ಹೇ ಅರ್ಜುನ! – ಏ ಅರ್ಜುನ!, ಆಬ್ರಹ್ಮ-ಭುವನಾತ್ –  ಆ ಬ್ರಹ್ಮಲೋಕಂದ ಹಿಡುದು (ತೊಡಾಗಿ) ಸರ್ವೇ ಲೋಕಾಃ – ಎಲ್ಲ ಲೋಕಂಗಳೂ, ಪುನಃ-ಆವರ್ತಿನಃ ಸಂತಿ – ಮತ್ತೆ ಹಿಂತುರುಗುವಂತಾದ್ಧು ಆಗಿದ್ದು, ಹೇ ಕೌಂತೇಯ! – ಏ ಕುಂತಿಯ ಮಗನೇ!, ಮಾಮ್ ಉಪೇತ್ಯ ತು – ಎನ್ನ ಹೊಂದಿದರೆ (ಎನ್ನ ಹೊಂದಿದ ಮತ್ತೆ), ಪುನಃ ಜನ್ಮಃ – ಪುನಃ ಜನ್ಮವು , ನ ವಿದ್ಯತೇ – ಎಂದಿಂಗೂ ಇರುತ್ತಿಲ್ಲೆ.

ಅನ್ವಯಾರ್ಥ

ಏ ಅರ್ಜುನ!, ಐಹಿಕ ಜಗತ್ತಿನ ಅತ್ಯುನ್ನತ ಲೋಕ ಬ್ರಹ್ಮಲೋಕಂದ ತೊಡಗಿ ಅತಿಕೇಳಾಣ ಎಲ್ಲ ಲೋಕಂಗಳೂ ಪುನರಾವರ್ತನೆ ಅಪ್ಪಂತದ್ದು. ಇವುಗಳಲ್ಲಿ ಜನನ ಮರಣ ಮತ್ತೆ ಮತ್ತೆ ಆವ್ತಾ ಇರುತ್ತು. ಆದರೆ, ಕುಂತಿಯ ಮಗನೇ!, ಎನ್ನ ನಿವಾಸವ ಸೇರಿದವಂಗೆ ಮತ್ತೆ ಜನ್ಮ ಇಲ್ಲೆ. 

ತಾತ್ಪರ್ಯ / ವಿವರಣೆ

ಬ್ರಹ್ಮಲೋಕಂದ ಹಿಡುದು ಇತರ ಎಲ್ಲ ಲೋಕಂಗೊಕ್ಕು ಒಂದು ದಿನ ನಾಶ ಇದ್ದು. ಚತುರ್ಮುಖ ಬ್ರಹ್ಮನ ಆಯಸ್ಸು ಮೂವತ್ತೊಂದು ಸಾವಿರದ ನೂರ ನಾಲ್ಕು ಸಾವಿರ ಕೋಟಿ ವರ್ಷ. ಇದು ಭಗವಂತಂಗೆ ಒಂದು ಹಗಲಿಂಗೆ ಸಮ. ಭಗವಂತ° ಕಾಲಾತೀತ°. ಹಾಂಗಾಗಿ ಭಗವಂತ° ಹೇಳುತ್ತ° – ಎನ್ನ ಸೇರಿದ ಮತ್ತೆ ಮರಳಿ ಹುಟ್ಟು ಇಲ್ಲೆ. ಪುನಃ ಪುನಃ ದುಃಖದ ಸ್ಥಾನವಾದ ಈ ಐಹಿಕ ಜಗತ್ತಿಲ್ಲಿ ಹುಟ್ಟಿ ಸಂಸಾರ ಸಂಕಷ್ಟಲ್ಲಿ ಒದ್ದಾಡೆಕ್ಕಾದ್ದಿಲ್ಲೆ. ಕರ್ಮಯೋಗಿಗೊ, ಜ್ಞಾನಯೋಗಿಗೊ, ಹಠಯೋಗಿಗೊ ಮುಂತಾದ ಎಲ್ಲ ಬಗೆಯ ಯೋಗಿಗೊ ಭಗವಂತನ ದಿವ್ಯ ಆವಸಕ್ಕೆ ಹೋಗಿ ಮತ್ತೆ ಇತ್ಲಾಗಿ ಬಾರದ್ದಾಂಗೆ ಆಯೇಕ್ಕಾರೆ ಅವು ಭಕ್ತಿಯೋಗಲ್ಲಿ ಅಥವಾ ಕೃಷ್ಣಪ್ರಜ್ಞೆಲಿ ಭಕ್ತಿಯ ಪರಿಪೂರ್ಣತೆಯ ಪಡೆಕು. ದೇವತೆಗಳ ಲೋಕಂಗೊ ಅತ್ಯುನ್ನತ ಐಹಿಕ ಲೋಕಂಗೊ. ಅಲ್ಲಿ ತಲುಪಿದರೂ ಅದು ಶಾಶ್ವತ ಅಲ್ಲ. ಐಹಿಕ ಲೋಕ ಎಲ್ಲವೂ ಒಂದು ದಿನ ನಾಶ ಅಪ್ಪಂತಾದ್ದು. ದೇವತೆಗಳ ಲೋಕ ಸೇರಿದ ಮಾತ್ರಕ್ಕೆ ಹುಟ್ಟು ಸಾವು ತಪ್ಪುತ್ತಿಲ್ಲೆ. ಅದು ಕೇವಲ ತಾತ್ಕಾಲಿಕ ಸುಖಧಾಮ. ಅವಧಿ ಮುಗುದಮತ್ತೆ ಪೂರ್ವಕರ್ಮಕ್ಕನುಗುಣವಾಗಿ ಪುನಃ ಜನ್ಮ ತಾಳೆಕು ಈ ಪ್ರಪಂಚಲ್ಲಿ.

ಶ್ಲೋಕ

ಸಹಸ್ರಯುಗಪರ್ಯಂತಮ್ ಅಹರ್ಯದ್ ಬ್ರಹ್ಮಣೋ ವಿದುಃ ।
ರಾತ್ರಿಂ ಯುಗಸಹಸ್ರಾಂತಾಂ ತೇsಹೋರಾತ್ರವಿದೋ ಜನಾಃ ॥೧೭॥

ಪದವಿಭಾಗ

ಸಹಸ್ರ-ಯುಗ-ಪರ್ಯಂತಮ್ ಅಹಃ ಯತ್ ಬ್ರಹ್ಮಣ ವಿದುಃ । ರಾತ್ರಿಮ್ ಯುಗ-ಸಹಸ್ರ-ಅಂತಾಮ್ ತೇ ಅಹೋರಾತ್ರ-ವಿದಃ ಜನಾಃ ॥

ಅನ್ವಯ

ಯತ್ ತೇ ಅಹೋರಾತ್ರ-ವಿದಃ ಜನಾಃ ಸಹಸ್ರ-ಯುಗ-ಪರ್ಯಂತಂ ಬ್ರಹ್ಮಣಃ ಅಹಃ ಯುಗ-ಸಹಸ್ರ-ಅಂತಾಂ ರಾತ್ರಿಂ ಚ ವಿದುಃ ।

ಪ್ರತಿಪದಾರ್ಥ 

ಯತ್ – ಏವುದು (ಯಾವುದರ ಹೇಳಿ ಇಲ್ಲಿ ಧ್ವನಿ), ತೇ – ಅವ್ವು, ಅಹೋರಾತ್ರ-ವಿದಃ ಜನಾಃ – ಹಗಲು ಮತ್ತು ಇರುಳುಗಳ ತಿಳ್ಕೊಂಡೋರು, ಸಹಸ್ರ-ಯುಗ-ಪರ್ಯಂತಂಮ್- ಒಂದುಸಾವಿರ ಯುಗಂಗಳ ವರೇಂಗೆ, ಬ್ರಹ್ಮಣಃ ಅಹಃ – ಚತುರ್ಮುಖ ಬ್ರಹ್ಮನ ಹಗಲು, ಯುಗ-ಸಹಸ್ರ-ಅಂತಾಮ್ ರಾತ್ರಿಮ್ – ಅದೇ ಒಂದು ಸಾವಿರಯುಗ ಇರುಳು ಮುಗಿತ್ತಲ್ಲಿವರೇಂಗೆ ಇದ್ದು, ಚ  – ಕೂಡ, ವಿದುಃ ತಿಳಿತ್ತವು.

ಅನ್ವಯಾರ್ಥ

ಬ್ರಹ್ಮನ ಒಂದು ಹಗಲು ಒಂದು ಸಾವಿರ ಯುಗಂಗಳ ಕಾಲ, ಇರುಳೂ ಕೂಡ ಹಾಂಗೇ ಒಂದು ಸಾವಿರ ಯುಗಂಗಳ ಅವಧಿ ಹೇಳಿ ಅಹೋರಾತ್ರ ತತ್ವಜ್ಞ ಜನರು ತಿಳಿತ್ತವು.  (ಹಾಂಗೆ ತಿಳ್ಕೊಂಡವು, ಹಗಲು ಇರುಳ ತಿಳ್ಕೊಂಡ ಜನರು).

ತಾತ್ಪರ್ಯ / ವಿವರಣೆ 

ಐಹಿಕ ವಿಶ್ವದ ಅವಧಿ ಮಿತವಾದ್ದು ಹೇಳ್ವದರ ಇಲ್ಲಿ ಭಗವಂತ ಸ್ಪಷ್ಟಪಡುಸುತ್ತ°. ಅದು ಕಲ್ಪಂಗಳ ಚಕ್ರಂಗಳಲ್ಲಿ ಅಭಿವ್ಯಕ್ತ ಆವ್ತು. ಒಂದು ಕಲ್ಪ ಹೇಳಿರೆ ಚತುರ್ಮುಖ ಬ್ರಹ್ಮನ ಒಂದು ಹಗಲು. ಬ್ರಹ್ಮನ ಒಂದು ಹಗಲು ಹೇಳಿರೆ ಸತ್ಯ, ತ್ರೇತಾ, ದ್ವಾಪರ, ಕಲಿ ಹೇಳ್ವ ನಾಲ್ಕು ಯುಗಂಗಳ ಒಂದು ಸಾವಿರ ಚಕ್ರಂಗೊ. (ಒಂದು ಸಾವಿರ ಯುಗಚಕ್ರದ ಆವೃತಿಗೆ ಬ್ರಹ್ಮನ ಒಂದು ಹಗಲು ಅವಧಿ) ಪುಣ್ಯ ಜ್ಞಾನ, ಮತ್ತೆ ಧರ್ಮ ಇದು ಸತ್ಯಯುಗದ ಲಕ್ಷಣಂಗೊ. ಈ ಯುಗದ ಅವಧಿ 17,28,000 ವರ್ಷಂಗೊ. ಅಜ್ಞಾನ ಮತ್ತೆ ಪಾಪಂಗೊ ಇಲ್ಲದ್ದಿಪ್ಪದು ಈ ಯುಗದ ವಿಶೇಷತೆ. ಮತ್ತೆ ತ್ರೇತಾಯುಗ – 12,96,000 ವರ್ಷಂಗೊ. ರಜರಜಾ ಪಾಪಂಗೊ ತಲೆದೋರುತ್ತು. ಮತ್ತಾಣದ್ದು ದ್ವಾಪರ ಯುಗ, ಪುಣ್ಯ ಮತ್ತೆ ಧರ್ಮಂಗೊ ಇನ್ನೂ ಕ್ಷೀಣಿಸುತ್ತು, 8,64,000 ಅವಧಿ. ಮುಂದೆ ಕಲಿಯುಗ, ಪುಣ್ಯ ಹೆಚ್ಚು ಕಮ್ಮಿ ಇಲ್ಲೇ ಹೇಳಿಯೇ ಹೇಳ್ಳಕ್ಕು, ಕಲಹ, ಅಜ್ಞಾನ, ಅಧರ್ಮ, ಪಾಪಂಗಳೇ ಸಮೃದ್ಧವಾಗಿರುತ್ತು. ಈ ಕಲಿಯುಗದ ಅವಧಿ 4,32,000  ವರ್ಷಂಗೊ (ಇದರಲ್ಲಿ 5000 ವರ್ಷಂಗೊ ಈಗಾಗಲೇ ಸಂದತ್ತು). ಹೀಂಗೆ ಒಟ್ಟಿಂಗೆ ಒಂದು ಯುಗಚಕ್ರ ಹೇಳಿರೆ 43,20,000  ವರ್ಷಂಗೊ. ಇಂತಹ ಒಂದು ಸಾವಿರ ಯುಗಚಕ್ರಂಗೊ ಬ್ರಹ್ಮನ ಒಂದು ಹಗಲು. ಹೇಳಿರೆ 432 ಕೋಟಿ ವರ್ಷಂಗೊ. ಹಾಂಗಾಗಿ ಬ್ರಹ್ಮನ ಒಂದು ದಿನ ಹೇಳಿರೆ 864 ಕೋಟಿ ವರ್ಷಂಗೊ. ಚತುರ್ಮುಖ ಬ್ರಹ್ಮನ ಆಯಸ್ಸು ಅಥವಾ ಸತ್ಯಲೋಕದ ಆಯಸ್ಸು 100 ವರ್ಷಂಗೊ. ಹೇಳಿರೆ 864 X 360 X 100 = 31,104 ಸಾವಿರ ಕೋಟಿ ವರ್ಷಂಗೊ. ಇದು ಭಗವಂತನ ಸೃಷ್ಟಿಕಾಲ – ಹಗಲು. ಇದಾದಿಕ್ಕಿ ಮಹಾಪ್ರಳಯ. ಈ ಮಹಾಪ್ರಳಯದ ಅವಧಿ ಮತ್ತೆ 31,104 ಸಾವಿರ ಕೋಟಿ ವರ್ಷಂಗೊ – ಇರುಳು. ಇದು ಭಗವಂತನ ಸೃಷ್ಟಿ ಮತ್ತೆ ಸಂಹಾರದ ಲೆಕ್ಕಾಚಾರ.

ಪ್ರಳಯಲ್ಲಿ ಮೂರು ವಿಧ – ೧. ಮನ್ವಂತರ ಪ್ರಳಯ, ೨. ದಿನಪ್ರಳಯ, ೩. ಮಹಾಪ್ರಳಯ. (ಇದಲ್ಲದ್ದೆ ಇನ್ನೂ ಸಣ್ಣ ಸಣ್ಣಕ್ಕೆ ಕೆಲವು ಪ್ರಳಯಂಗೊ ಅಪ್ಪದಿದ್ದು. ಆದರೆ ಇದರಿಂದಾಗಿ ಭೂಮಿಗೆ ಭಾಗಶಃ ನಷ್ಟ ಅಷ್ತೇ.). ಮನ್ವಂತರ ಪ್ರಳಯಲ್ಲಿ ಭೂಮಿ ಸಂಪೂರ್ಣ ನಾಶ ಆವ್ತಿಲ್ಲೆ. ಆದರೆ ನಾಗರೀಕತೆ ನಷ್ಟ ಆವ್ತು. ದಿನಪ್ರಳಯ – ಚತುರ್ಮುಖ ಬ್ರಹ್ಮನ ಇರುಳು. ಹೇಳಿರೆ ಪ್ರತೀ 432 ಕೋಟಿ ವರ್ಷಕ್ಕೊಂದರಿ ದಿನಪ್ರಳಯ. ಈ ಪ್ರಳಯಲ್ಲಿ ಭೂಮಿ ಪೂರ್ಣವಾಗಿ ನಾಶ ಅಪ್ಪದು. ಮಹಾಪ್ರಳಯ ಪ್ರತೀ 31,104 ಸಾವಿರ ಕೋಟಿ ವರ್ಷಕ್ಕೊಂದರಿ ಅಪ್ಪದು ಮತ್ತು ಈ ಪ್ರಳಯಲ್ಲಿ ಸತ್ಯಲೋಕಂದ ಹಿಡುದು ಸರ್ವಲೋಕಂಗಳೂ ಸೂಕ್ಷ್ಮಾತಿಸೂಕ್ಷ್ಮ ಪರಮಾಣುವಿನ ರೂಪಲ್ಲಿ ಭಗವಂತನಲ್ಲಿ ಲೀನ ಆವ್ತು ಹೇಳಿ ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದದು.

ಐಹಿಕ ವಿಶ್ವಲ್ಲಿ ಬ್ರಹ್ಮಂಗೂ ಸಾನ ಹುಟ್ಟು, ಮುಪ್ಪು , ರೋಗ ಮತ್ತು ಸಾವುಗಳ ಪ್ರಕ್ರಿಯೆಂದ ಬಿಡುಗಡೆ ಇಲ್ಲೆ. ಆದರೆ, ಈ ವಿಶ್ವದ ನಿರ್ವಹಣೆಲಿ ಅವ° ನೇರವಾಗಿ ಪರಮ ಪ್ರಭು ಭಗವಂತನ ಸೇವೆಲಿ ನಿರತನಾಗಿರುತ್ತ°. ಹಾಂಗಾಗಿ ಅವಂಗೆ ಕೂಡ್ಳೆ ಮುಕ್ತಿ ಸಿಕ್ಕುತ್ತು. ಉನ್ನತ ಸಂನ್ಯಾಸಿಗಳ ಬ್ರಹ್ಮನ ವಿಶಿಷ್ಟ ಲೋಕವಾದ ಬ್ರಹ್ಮಲೋಕಕ್ಕೆ ಏರುಸಲಾವ್ತು. ಐಹಿಕ ವಿಶ್ವಲ್ಲಿ ಬ್ರಹ್ಮಲೋಕವೇ ಅತ್ಯುತ್ತಮ ಲೋಕ ಮತ್ತೆ ಎಲ್ಲ ಸ್ವರ್ಗಲೋಕಂಗಳ ವ್ಯೂಹ ನಾಶವಾದಪ್ಪಗಳೂ ಬ್ರಹ್ಮಲೋಕ ಉಳಿತ್ತು. ಆದರೆ ಭೌತಿಕ ಪ್ರಕೃತಿಯ ನಿಯಮಕ್ಕನುಗುಣವಾಗಿ ಕಾಲಕ್ರಮಲ್ಲಿ ಬ್ರಹ್ಮನೂ, ಬ್ರಹ್ಮಲೋಕದ ಎಲ್ಲ ನಿವಾಸಿಗಳೂ ಸಾವಿನ ವಶ ಆವ್ತವು. 

ಶ್ಲೋಕ

ಅವ್ಯಕ್ತಾದ್ ವ್ಯಕ್ತಯಃ ಸರ್ವಾಃ ಪ್ರಭವಂತ್ಯಹರಾಗಮೇ ।
ರಾತ್ರ್ಯಾಗಮೇ ಪ್ರಲೀಯಂತೇ ತತ್ರೈವಾವ್ಯಕ್ತಸಂಜ್ಞಕೇ ॥ ೧೮॥

ಪದವಿಭಾಗ

ಅವ್ಯಕ್ತಾದ್ ವ್ಯಕ್ತಯಃ ಸರ್ವಾಃ ಪ್ರಭವಂತಿ ಅಹಃ ಆಗಮೇ । ರಾತ್ರಿ ಆಗಮೇ ಪ್ರಲೀಯಂತೇ ತತ್ರ ಏವ ಅವ್ಯಕ್ತ-ಸಂಜ್ಞಕೇ

ಅನ್ವಯ

ಅಹಃ ಆಗಮೇ ಸರ್ವಾಃ ವ್ಯಕ್ತಯಃ ಅವ್ಯಕ್ತಾತ್ ಪ್ರಭವಂತಿ, ಪುನಃ ರಾತ್ರಿ ಆಗಮೇ ತತ್ರ ಅವ್ಯಕ್ತ-ಸಂಜ್ಞಕೇ ಏವ ಪ್ರಲೀಯಂತೇ ।

ಪ್ರತಿಪದಾರ್ಥ

ಅಹಃ ಆಗಮೇ – ಹಗಲಿನ ಸುರುವಿಲ್ಲಿ , ಸರ್ವಾಃ – ಎಲ್ಲ, ವ್ಯಕ್ತಯಃ – ಜೀವಿಗೊ, ಅವ್ಯಕ್ತಾತ್ – ಅವ್ಯಕ್ತಂದ, ಪ್ರಭವಂತಿ – ವ್ಯಕ್ತರಾವುತ್ತವು, ಪುನಃ – ಮತ್ತೆ, ರಾತ್ರಿ ಆಗಮೇ – ಇರುಳಪ್ಪಗ, ತತ್ರ – ಅದರಲ್ಲಿ, ಅವ್ಯಕ್ತ-ಸಂಜ್ಞಕೇ – ಅವ್ಯಕ್ತರೂಪವಾಗಿ , ಏವ – ಹಾಂಗೆ (ಖಂಡಿತವಾಗಿಯೂ) (ಅವ್ಯಕ್ತರೂಪದ ಹಾಂಗೆ ಹೇಳ್ವ ಧ್ವನಿ), ಪ್ರಲೀಯಂತೇ – ನಾಶವಾವ್ತವು (ಲೀನ ಆವ್ತು).

ಅನ್ವಯಾರ್ಥ

ಬ್ರಹ್ಮನ ಹಗಲಿನ ಪ್ರಾರಂಭಲ್ಲಿ ಎಲ್ಲ ಜೀವಿಗೊ ಅವ್ಯಕ್ತಸ್ಥಿತಿಂದ ಅಭಿವ್ಯಕ್ತಿ ಪಡೆತ್ತವು. ಮತ್ತೆ ಇರುಳಾದಪ್ಪಗ ಅವು ಅವ್ಯಕ್ತಲ್ಲಿ ಲೀನರಾವ್ತವು.

ತಾತ್ಪರ್ಯ / ವಿವರಣೆ

ಇಲ್ಲಿ ‘ರಾತ್ರಿ’ ಹೇಳಿ ಹೇಳಿದ್ದದು ಮಹಾಪ್ರಳಯ ಕಾಲವ. ಮಹಾಪ್ರಳಯಕಾಲಲ್ಲಿ ಅವ್ಯಕ್ತನಾದ ಭಗವಂತನಲ್ಲಿ ವ್ಯಕ್ತವಾಗಿಪ್ಪ ಈ ಪ್ರಪಂಚ ಪರಮಾಣುವಿನ ರೂಪಲ್ಲಿ ಸೇರಿಗೊಳ್ತು. ಪುನಃ ಸೃಷ್ಟಿ ಕಾಲಲ್ಲಿ ಮತ್ತೆ ಸೂಕ್ಷ್ಮ ರೂಪಂದ ಸ್ಥೂಲರೂಪವ ಪಡದು ವ್ಯಕ್ತ ಆವುತ್ತು.

ಶ್ಲೋಕ

ಭೂತಗ್ರಾಮಃ ಸ ಏವಾಯಂ ಭೂತ್ವಾ ಭೂತ್ವಾ ಪ್ರಲೀಯತೇ ।
ರಾತ್ರ್ಯಾಗಮೇsವಶಃ ಪಾರ್ಥ ಪ್ರಭವತ್ಯಹರಾಗಮೇ ॥೧೯॥ 

ಪದವಿಭಾಗ

ಭೂತ-ಗ್ರಾಮಃ ಸಃ ಏವ ಅಯಮ್ ಭೂತ್ವಾ ಭೂತ್ವಾ ಪ್ರಲೀಯತೇ । ರಾತ್ರಿ ಆಗಮೇ ಅವಶಃ ಪಾರ್ಥ ಪ್ರಭವತಿ ಅಹಃ ಆಗಮೇ

ಅನ್ವಯ

ಹೇ ಪಾರ್ಥ!, ಸಃ ಏವ ಅಯಂ ಭೂತ-ಗ್ರಾಮಃ ಅವಶಃ ಸನ್, ಭೂತ್ವಾ ಭೂತ್ವಾ ರಾತ್ರಿ ಆಗಮೇ ಪ್ರಲೀಯತೇ, ಪುನಃ ಅಹಃ ಆಗಮೇ ಪ್ರಭವತಿ ।

ಪ್ರತಿಪದಾರ್ಥ

ಹೇ ಪಾರ್ಥ!, ಏ ಅರ್ಜುನ!, ಸಃ ಏವ ಅಯಮ್ – ಅದೇ ಈ, ಭೂತ-ಗ್ರಾಮಃ – ಎಲ್ಲ ಜೀವಸಮುದಾಯವು, ಅವಶಃ – ತನ್ನಿಂದತಾನೇ ಸನ್ – ಆಗಿದ್ದುಗೊಂಡು, ಭೂತ್ವಾ ಭೂತ್ವಾ – ಪುನಃ ಪುನಃ ಜನಿಸಿ, ರಾತ್ರಿ ಆಗಮೇ – ಇರುಳಪ್ಪಗ, ಪ್ರಲೀಯತೇ – ಲೀನ ಆವ್ತು, ಪುನಃ – ಮತ್ತೆ, ಅಹಃ ಆಗಮೇ – ಉದಿಯಪ್ಪಗ (ಹಗಲು ಆದಪ್ಪಗ), ಪ್ರಭವತಿ – ವ್ಯಕ್ತವಾವ್ತು.

ಅನ್ವಯಾರ್ಥ

ಬ್ರಹ್ಮಂಗೆ ಹಗಲಾದಪ್ಪಗ ಈ ಎಲ್ಲ ಜೀವಿಗೊ ಮತ್ತೆ ಹುಟ್ಟುತ್ತವು, ಬ್ರಹ್ಮಂಗೆ ಇರುಳಪ್ಪಗ ಅವೆಲ್ಲವೂ ನಿಸ್ನಹಾಯಕವಾಗಿ ನಾಶಹೊಂದುತ್ತವು.

ತಾತ್ಪರ್ಯ / ವಿವರಣೆ

ಪಂಚಭೂತಂಗಳ ಗುಂಪು (ಭೂತಗ್ರಾಮಃ, ಐಹಿಕ ಸೃಷ್ಟಿಲಿ ಇಪ್ಪ ಸಮಸ್ತವೂ), ಮತ್ತೆ ಮತ್ತೆ ಹುಟ್ಟಿ ಮತ್ತೆ ಇರುಳಾದಪ್ಪಗ ಭಗವಂತನ ವಶಲ್ಲಿ ಲಯಗೊಳ್ಳುತ್ತು. ಮತ್ತೆ ಹಗಲಾದಪ್ಪಗ ಹುಟ್ಟುತ್ತು. ಸೃಷ್ಟಿಯ ಮೂಲದ್ರವ್ಯ ಎಂದೂ ನಾಶ ಆವ್ತಿಲ್ಲೆ, ಬದಲಾವ್ತಿಲ್ಲೆ. ಅದೇ ಪಂಚಭೂತಂಗೊ ತಿರುಗಿತಿರುಗಿ ಸೃಷ್ಟಿ-ಸಂಹಾರ ಚಕ್ರಲ್ಲಿ ಸುತ್ತಿಗೊಂಡಿರುತ್ತು. ಈ ಚಕ್ರಲ್ಲಿ ಮೋಕ್ಷಯೋಗ್ಯವಲ್ಲದ ಅನಂತ ಜೀವಂಗೊ ಸುತ್ತಿಗೊಂಡಿರುತ್ತು. ಆದರೆ ಭಗವಂತನ ಸೇರಿದ ಜೀವ ಈ ಚಕ್ರಂದ ಆಚಿಗೆ ಇರುತ್ತು. ಅದು ಭಗವಂತನಲ್ಲಿ ಲೀನವಾವ್ತು.

ಶ್ಲೋಕ

ಪರಸ್ತಸ್ಮಾತ್ತು ಭಾವೋsನ್ಯೋsವ್ಯಕ್ತಾತ್ಸನಾತನಃ ।
ಯಃ ಸ ಸರ್ವೇಷು ಭೂತೇಷು ನಶ್ಯತ್ಸು ನ ವಿನಶ್ಯತಿ ॥೨೦॥

ಪದವಿಭಾಗ

ಪರಃ ತಸ್ಮಾತ್ ತು ಭಾವಃ ಅನ್ಯಃ ಅವ್ಯಕ್ತಃ ಅವ್ಯಕ್ತಾತ್ ಸನಾತನಃ । ಯಃ ಸಃ ಸರ್ವೇಷು ಭೂತೇಷು ನಶ್ಯತ್ಸು ನ ವಿನಶ್ಯತಿ ॥

ಅನ್ವಯ

ಯಃ ತು ಸರ್ವೇಷು ಭೂತೇಷು ನಶ್ಯತ್ಸು ನ ವಿನಶ್ಯತಿ, ಸಃ , ತಸ್ಮಾತ್ ಅವ್ಯಕ್ತಾತ್ ಅನ್ಯಃ ಅವ್ಯಕ್ತಃ ಸನಾತನಃ ಪರಃ ಭಾವಃ ಅಸ್ತಿ ॥

ಪ್ರತಿಪದಾರ್ಥ

ಯಃ  ತು ಸರ್ವೇಷು ಭೂತೇಷು ನಶ್ಯತ್ಸು – ಯಾವುದು ಆ ಎಲ್ಲ ಪ್ರಕಟವಾಗಿಪ್ಪದರಲ್ಲಿ ನಾಶವಾಗುವದರಲ್ಲಿ, ನ ವಿನಶ್ಯತಿ – ನಾಶ ಆವುತ್ತಿಲ್ಯೋ, ಸಃ – ಅದು, ತಸ್ಮಾತ್ ಅವ್ಯಕ್ತಾತ್ – ಆ ಅವ್ಯಕ್ತವಾದುದಕ್ಕಿಂತ, ಅನ್ಯಃ – ಬೇರೆಯೇ (ಇನ್ನೊಂದು) ಅವ್ಯಕ್ತಃ – ಅವ್ಯಕ್ತವಾದ, ಸನಾತನಃ – ಶಾಶ್ವತವು, ಪರಃ ಭಾವಃ ಅಸ್ತಿ – ಶ್ರೇಷ್ಠವಾದ ಪ್ರಕೃತಿಯು (ಗುಣವು) ಆಗಿದ್ದು.

ಅನ್ವಯಾರ್ಥ

ಈ ಕಾಂಬ (ವ್ಯಕ್ತವೂ ಅವ್ಯಕ್ತಕ್ಕೂ) ವಿಶ್ವಕ್ಕಿಂತ ಮಿಗಿಲಾಗಿ, ಬೇರೆಯೇ ಆಗಿ, ಇನ್ನೊಂದು ಅವ್ಯಕ್ತವಾದ ಪ್ರಕೃತಿ. ಅದು ನಿತ್ಯವಾದ್ದು ಮತ್ತು ಈ ವ್ಯಕ್ತ ಅವ್ಯಕ್ತ ಜಡವಸ್ತುಗಳಿಂದ ಮೀರಿದ್ದು. ಅದು ಪರಃ – ಪರಮೋನ್ನತವಾದ್ದು ಮತ್ತು ನಾಶವಾಗದ್ದು. ಈ ಜಗತ್ತಿಲ್ಲಿಪ್ಪದೆಲ್ಲವೂ ನಾಶವಾದರೂ ಈ ಭಾಗ ಇದ್ದಂತೆಯೇ ಇರುತ್ತು. ಅವಿನಾಶಿಯಾಗಿರುತ್ತು.   

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° –  ಭಗವಂತನ ಆಧ್ಯಾತ್ಮಿಕ ಶಕ್ತಿ ದಿವ್ಯವಾದ್ದು, ಶ್ರೇಷ್ಠವಾದ್ದು, ಶಾಶ್ವತವಾದ್ದು. ಐಹಿಕ ಪ್ರಕೃತಿಯು ವ್ಯಕ್ತವಾಗಿಪ್ಪದು. ಮತ್ತೆ ಬ್ರಹ್ಮನ ಹಗಲು ರಾತ್ರಿಗಳಲ್ಲಿ ವ್ಯಕ್ತಾವ್ಯಕ್ತ ಅಪ್ಪಾಂತಾದ್ದು. ಆದರೆ, ಭಗವಂತನ ಶ್ರೇಷ್ಠ ಶಕ್ತಿಯ ಗುಣಲ್ಲಿ ಐಹಿಕ ಪ್ರಕೃತಿಗೆ ಸಂಪೂರ್ಣವಾಗಿ ವಿರುದ್ಧವಾದ್ದು. ಎಲ್ಲವನ್ನೂ ಮೀರಿ ನಿಂದ ಭಗವಂತನ ಶಕ್ತಿ ಎಲ್ಲಕ್ಕಿಂತ ವಿಲಕ್ಷಣ ಮತ್ತು ಶ್ರೇಷ್ಠ. ಅವ° ಸನಾತನ°. ಎಲ್ಲಾ ಕಾಲಲ್ಲಿಯೂ ನಿರ್ವೀಕಾರ°, ಸರ್ವವೇದ ಪ್ರತಿಪಾದ್ಯ°, ಸಮಸ್ತ ಚರಾಚರಾತ್ಮಕ ಪ್ರಪಂಚ ನಾಶವಾದಪ್ಪಗಳೂ ನಾಶವಾಗದ್ದೆ ಎಲ್ಲವನ್ನೂ ತನ್ನಲ್ಲಿ ಲೀನಗೊಳಿಸಿಗೊಂಬ ಏಕಮಾತ್ರ ತತ್ವ – ಭಗವಂತ°.

ಮುಂದೆ ಎಂತರ..?       ಬಪ್ಪವಾರ ನೋಡ್ವೋ°.

   …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –

SRIMADBHAGAVADGEETHA – CHAPTER 08 – SHLOKAS 11 – 20 by CHENNAI BHAAVA
ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

 

One thought on “ಶ್ರೀಮದ್ಭಗವದ್ಗೀತಾ – ಅಷ್ಟಮೋsಧ್ಯಾಯಃ – ಅಕ್ಷರಬ್ರಹ್ಮಯೋಗಃ – ಶ್ಲೋಕಂಗೊ 11 – 20

  1. [ಯೋಗಪದ್ಧತಿಯ ಸಾಧನೆ ಎಲ್ಲೋರಿಂದ ಸಾಧ್ಯ ಅಪ್ಪ ಮಾತಲ್ಲ. ಹಾಂಗಾರೆ ನಿತ್ಯಜೀವನಲ್ಲಿ ಇದ್ದುಗೊಂಡಿಪ್ಪವಂಗೆ ದಾರಿ ಏವುದು?
    ನಿತ್ಯಜೀವನಲ್ಲಿ ಇದ್ದುಗೊಂಡು ಏಕಭಕ್ತಿ ಉಪಾಸನೆ ಮತ್ತೆ ಸಂಪೂರ್ಣ ಕೃಷ್ಣಪ್ರಜ್ಞೆ ಅಳವಡಿಸಿಗೊಂಡು ಜೀವನ ನಡಶುವದು
    ಭಗವಂತನ ಸೇರಿದ ಜೀವ ಸೃಷ್ಟಿ-ಸಂಹಾರ ಚಕ್ರಂದ ಆಚಿಗೆ ಇರುತ್ತು. ಅದು ಭಗವಂತನಲ್ಲಿ ಲೀನವಾವ್ತು.]
    ಸರ್ವಂ ಕೃಷ್ಣಾರ್ಪಣಂ ಅಸ್ತು।

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×