ಶ್ರೀಮದ್ಭಗವದ್ಗೀತಾ – ಅಧ್ಯಾಯ 10 – ಶ್ಲೋಕಂಗೊ 35 – 42

ಶ್ರೀಮದ್ಭಗವದ್ಗೀತಾ – ದಶಮೋಧ್ಯಾಯಃ – ವಿಭೂತಿಯೋಗಃ – ಶ್ಲೋಕಾಃ – 35 – 42

ಶ್ಲೋಕ

ಬೃಹತ್ಸಾಮ ತಥಾ ಸಾಮ್ನಾಂ ಗಾಯತ್ರೀ ಛಂದಸಾಮಹಮ್ ।
ಮಾಸಾನಾಂ ಮಾರ್ಗಶೀರ್ಷೋsಹಮ್ ಋತೂನಾಂ ಕುಸುಮಾಕರಃ ॥೩೫॥

ಪದವಿಭಾಗ

ಬೃಹತ್-ಸಾಮ ತಥಾ ಸಾಮ್ನಾಮ್ ಗಾಯತ್ರೀ ಛಂದಸಾಮ್ ಅಹಮ್ । ಮಾಸಾನಾಮ್ ಮಾರ್ಗಶೀರ್ಷಃ ಅಹಮ್ ಋತೂನಾಮ್ ಕುಸುಮಾಕರಃ ॥

ಅನ್ವಯ

ಸಾಮ್ನಾಂ ಬೃಹತ್-ಸಾಮ, ತಥಾ ಛಂದಸಾಂ ಗಾಯತ್ರೀ ಅಹಮ್, ಮಾಸಾನಾಂ ಮಾರ್ಗಶೀರ್ಷಃ, ಋತೂನಾಂ ಕುಸುಮಾಕರಃ ಅಹಮ್ ಅಸ್ಮಿ ।

ಪ್ರತಿಪದಾರ್ಥ

ಸಾಮ್ನಾಮ್ – ಸಾಮವೇದದ ಸ್ತೋತ್ರಂಗಳಲ್ಲಿ (ಸಾಮಗಾನಲ್ಲಿ), ಬೃಹತ್-ಸಾಮ – ಬೃಹತ್ಸಾಮವು, ತಥಾ – ಹಾಂಗೇ, ಛಂದಸಾಮ್ – ಎಲ್ಲ ಛಂದಸ್ಸುಗಳಲ್ಲಿ – ಗಾಯತ್ರೀ – ಗಾಯತ್ರೀ ಮಂತ್ರ, ಅಹಮ್ – ಆನು, ಮಾಸಾನಾಮ್ – ಮಾಸಂಗಳಲ್ಲಿ, ಮಾರ್ಗಶೀರ್ಷಃ – ಮಾರ್ಗಶಿರ (ನವಂಬ್ರ – ದಶಂಬ್ರ), ಋತೂನಾಮ್ – ಋತುಗಳಲ್ಲಿ, ಕುಸುಮಾಕರಃ – ವಸಂತ, ಅಹಮ್ ಅಸ್ಮಿ – ಆನು ಆಗಿದ್ದೆ.

ಅನ್ವಯಾರ್ಥ

ಸಾಮವೇದದಲ್ಲಿನ ಸ್ತೋತ್ರಂಗಳಲ್ಲಿ ಆನು ಬೃಹತ್ ಸಾಮ, ಛಂದಸ್ಸುಗಳಲ್ಲಿ ಗಾಯತ್ರೀ ಮಂತ್ರ, ಮಾಸಂಗಳಲ್ಲಿ ಮಾರ್ಗಶಿರ, ಋತುಗಳಲ್ಲಿ ವಸಂತ ಆನು ಆಗಿದ್ದೆ.

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° – “ಸಾಮದ ಗಾನಂಗಳಲ್ಲಿ ಬೃಹತ್ ಸಾಮ (ಬೃಹತ್ – ಹಿರಿದಾದ್ದು, ಸ – ಸಾರವಾದ್ದು, ಅಮ – ಅರಿವಿಂಗೆ ಎಟುಕದ್ದು = ಬೃಹತ್ಸಾಮ)ಎಂಬ ಗಾನ ಆನು. ಛಂದಸ್ಸುಗಳಲ್ಲಿ ಗಾಯತ್ರೀ (ಗಾಯ – ಗಾಯಕರ, ತ್ರಿ – ಸಲಹುವವ = ಗಾಯತ್ರೀ) ಆನು. ತಿಂಗಳುಗಳಲ್ಲಿ ಮಾರ್ಗಶಿರ (ದಾರಿಯ ಶಿರಲ್ಲಿ(ಕೊಡಿಲಿ) ಇಪ್ಪದರಿಂದ ಮಾರ್ಗಶೀರ್ಷ) ಆನು, ಋತುಗಳಲ್ಲಿ ಕುಸುಮಾಕರ (ಕು – ಕೆಟ್ಟ, ಸು – ಒಳ್ಳೆಯ, ಮಾ – ಅರಿವು, ಕರ – ನೀಡುವದು = ಕುಸುಮಾಕರ) ಎನ್ನುಸಿ ವಸಂತ ಋತುವಿಲಿ ಆನಿದ್ದೆ”.

ಪುನಃ ಬನ್ನಂಜೆ ವಿವರಣೆಯನ್ನೆ ಅವಲಂಬಿಸಿ ಅವರ ಸರಳ ಮತ್ತು ಸೊಗಸಾದ ಶೈಲಿಲಿಪ್ಪದರನ್ನೆ ನೋಡುವೊ.ಸಾಮಗಾನಲ್ಲಿ ಅನೇಕ ವಿಧ. ಸಪ್ತಸ್ವರವ ಬಳಸಿ ಹಾಡುವದು ಸಾಮವೇದ ಮಾತ್ರ. ಋಗ್ವೇದ, ಯಜುರ್ವೇದಲ್ಲಿ ಹೀಂಗೆ ಇಲ್ಲೆ. ಎಲ್ಲ ಸಾಮಂಗಳಲ್ಲಿ ಸಪ್ತಸ್ವರದ ಬಳಕೆ ಇಲ್ಲೆ. ಈ ರೀತಿ ಸಪ್ತಸ್ವರವಿಪ್ಪ ಸಾಮಲ್ಲಿ ‘ಬೃಹತ್ಸಾಮ’ ಹೇಳ್ವ ಬೃಹತ್ಸಾಮ ಗಾನ ಭಗವಂತ°. ಇಲ್ಲಿ ಬಂದಿಪ್ಪ ಭಗವಂತನ ವಿಭೂತಿನಾಮ ‘ಬೃಹತ್ಸಾಮಃ’ –  ಹಿರಿದಾದ್ದು, ಸಾರಭೂತವಾದ್ದು, ನಮ್ಮ ಅರಿವಿಂಗೆ ಎಟುಕದ್ದೆ ಅಮಿತವಾಗಿಪ್ಪ ಭಗವಂತ – “ಬೃಹತ್ಸಾಮಃ’.

ಪದ್ಯದ ರೂಪಲ್ಲಿ ಒಂದು ಅಪೂರ್ವವಾದ ಅರ್ಥವ, ಅಧ್ಯಾತ್ಮ ಸಂದೇಶವ ತುಂಬಿಮಡಿಕ್ಕೊಂಡಿಪ್ಪದು – ‘ಛಂದಸ್ಸು’. ಇದು ನಮ್ಮ ಅಭಿಪ್ರಾಯವ ಲಯಬದ್ಧವಾಗಿ ವ್ಯಕ್ತಪಡುಸುವ ವಿಧಾನ. ಛಂದಸ್ಸಿಲ್ಲಿ ಪ್ರಧಾನವಾಗಿ ಏಳು ಛಂದಸ್ಸುಗೊ ಇದ್ದು. 24 ಅಕ್ಷರದ ಗಾಯತ್ರಿ, 28 ಅಕ್ಷರದ ಉಷ್ಣಿಕ್, 32 ಅಕ್ಷರದ ಅನುಷ್ಟುಪ್, 36 ಅಕ್ಷರದ ಬೃಹತೀ, 40 ಅಕ್ಷರದ ಪಂಕ್ತಿ, 44 ಅಕ್ಷರದ ತ್ರಿಷ್ಟುಪ್ ಹಾಂಗೂ 48 ಅಕ್ಷರದ ಜಗತೀ.  ಈ ಛಂದಸ್ಸುಗಳಲ್ಲಿ ಭಗವಂತನ ವಿಶೇಷ ವಿಭೂತಿ ಇಪ್ಪ ಛಂದಸ್ಸು – ಗಾಯತ್ರಿ. ಇದು ಭಗವಂತನ ಹೆಸರೂ ಅಪ್ಪು. ‘ಗಾಯತಂ ತ್ರಾಯತೇ ಇತಿ ಗಾಯತ್ರಿಃ’.  ಆರು ಭಗವಂತನ ಈ ಮಂತ್ರಂದ ಸ್ತೋತ್ರ ಮಾಡುತ್ತವೋ ಅವರ ರಕ್ಷಣೆಯ ಅವ ಮಾಡುತ್ತ°. ಏಳು ಛಂದಸ್ಸುಗಳಲ್ಲಿ ಸುರುವಾಣದ್ದು ಗಾಯತ್ರೀ ಛಂದಸ್ಸು. ಎಂಟು ಅಕ್ಷರದ ಮೂರು ಪಾದಂಗೊ ಇಪ್ಪ ಗಾಯತ್ರೀ ಎಲ್ಲದರ ಪಂಚಾಂಗ. ಋಗ್ವೇದಲ್ಲಿಪ್ಪ ಹೆಚ್ಚಿನ ಮಂತ್ರಂಗೊ ಗಾಯತ್ರೀ ಛಂದಸ್ಸಿಲ್ಲಿದ್ದು. ಸಮಸ್ತ ವೇದಂಗಳ ‘ವೇದಮಾತ’ ಹೇಳುಸಿಗೊಂಡಿಪ್ಪ ಗಾಯತ್ರೀ ಮಂತ್ರ ಇಪ್ಪದು ಗಾಯತ್ರೀ ಛಂದಸ್ಸಿಲ್ಲಿ. ಹೀಂಗೆ ಗಾಯತ್ರಿ ಇತರ ಛಂದಸ್ಸುಗೊಕ್ಕೆ ಮಾತೃಸ್ಥಾನೀಯವಾಗಿದ್ದು. ಗಾಯತ್ರಿ ಅಧ್ಯಾತ್ಮದ ಮೂಲಭೂತವಾದ ಮುಖವ ಹೊಂದಿಗೊಂಡಿಪ್ಪ ಮಂತ್ರ. ಸೂರ್ಯನತ್ರೆ ಇಪ್ಪ ಸೌರಶಕ್ತಿಯ ನವಗೆ ಹರುಸಿ, ಸೌರಮಂಡಲಲ್ಲಿಪ್ಪ ನಮ್ಮ ಜೀವಪ್ರಧಾನವಾದ ಭಗವಂತನ ಸ್ತೋತ್ರ ಮಾಡುತ್ತದು ಗಾಯತ್ರಿ. ಇಡೀ ಬ್ರಹ್ಮಾಂಡದ ನಿಯಾಮಕನಾಗಿದ್ದು, ಸೌರಶಕ್ತಿಂದ ಬಂದು, ನಮ್ಮ ಆತ್ಮದ ಒಳ ನಮ್ಮ ಹೃದಯ ಕಮಲಲ್ಲಿ ‘ಧೀ’ ಶಕ್ತಿಯ ಪ್ರೇರಣೆ ಮಾಡುವ ಶಕ್ತಿ – ಭಗವಂತ° ಹೇಳಿ ಸಮಷ್ಟಿ ಚಿಂತನೆ ಇಪ್ಪ ಮಂತ್ರ ಗಾಯತ್ರಿ. ಗಾಯತ್ರೀ ವಿಶಿಷ್ಟವಾಗಿ ವೈದಿಕ ಛಂದಸ್ಸಾಗಿ ಬಳಕೆಯಾಗಿದ್ದು. ಲೌಕಿಕವಾಗಿ ಇದರ ಬಳಕೆ ಇಲ್ಲೆ. ಗಾಯತ್ರಿಗೆ ಈ ವಿಶಿಷ್ಟ ಸ್ಥಾನ ಭಗವಂತನ ವಿಶೇಷ ವಿಭೂತಿಂದ ಆತು.

“ಮಾಸಾನಾಮ್ ಮಾರ್ಗಶೀರ್ಷಃ” – ಮಾಸಂಗಳಲ್ಲಿ ‘ಮಾರ್ಗಶೀರ್ಷ’ – ಭಗವಂತ°. ಮಾರ್ಗಶೀರ್ಷ / ಮಾರ್ಗಶಿರ ಮಾಸ ಹೇಳಿರೆ ನವಂಬರ-ದಶಂಬರ ತಿಂಗಳು – ಅತ್ಯಂತ ಶ್ರೇಷ್ಠವಾದ್ದು ಹೇಳಿ ತಿಳಿಯಲ್ಪಡುತ್ತು. ಕೃಷಿಫಲಾದಿಗೊ ಪ್ರಥಮ ಕಟಾವು ಮುಗುದು ಮನೆತುಂಬಿ ಜನಂಗೊ ತುಂಬಾ ಸಂತೋಷಂದ ಇರುತ್ತವು. ಭಾರತಲ್ಲಿ ಇದು ಸುಗ್ಗಿ ಕಾಲ. ಭಗವಂತನ ಲೀಲೆಗಳ ಸಾರುವ ಅನೇಕ ಹಬ್ಬಂಗಳೂ ಈ ಮಾಸಲ್ಲಿ ಬತ್ತು. ಗೀತಾಜಯಂತಿಯೂ ಇದೇ ಸಮಯಲ್ಲಿ ಬಪ್ಪದು (ಮಾರ್ಗಶಿರ ಮಾಸ ಶುಕ್ಲಪಕ್ಷ ಏಕಾದಶಿ ದಿನ). ಕೃಷ್ಣ° ಅರ್ಜುನಂಗೆ ಗೀತೋಪದೇಶ ಮಾಡಿದ ಮಾಸ ಎಂಬುದಾಗಿಯೂ ಮಾರ್ಗಶಿರ ಮಾಸಕ್ಕೆ ಒಂದು ವಿಶೇಷತೆ. ಮಹಾಭಾರತ ಮತ್ತೆ ವೈದಿಕ ಕಾಲಲ್ಲಿ ಮಾರ್ಗಶಿರ ಮಾಸ ಮಾಸಂಗಳಲ್ಲಿ ಪ್ರಥಮ ಮಾಸ. ಕಾರ್ತಿಕ ಮಾಸ ಅಕೇರಿಯಾಣದ್ದು (ಮಾರ್ಗಶಿರಂದ ಮದಲಾಣ ಮಾಸ – ಕಾರ್ತಿಕಮಾಸ. ಮಾರ್ಗಶಿರಕ್ಕೆ ಅಗ್ರ-ಹಾಯಣ ಹೇಳಿಯೂ ಹೇಳುತ್ತವು. ಅಗ್ರ ಹೇಳಿರೆ ಸುರುವಾಣದ್ದು, ಹಾಯಣ ಹೇಳಿರೆ ಮಾಸ). ಹಾಂಗಾಗಿ ಕಾರ್ತಿಕ ಮಾಸಲ್ಲಿ ಭಗವಂತಂಗೆ/ಪ್ರಕೃತಿಗೆ ಒಂದು ವರ್ಷದ ಕೃತಜ್ಞತೆಯ ಸಲ್ಲುಸುವ ಸಲುವಾಗಿ ದೀಪಾವಳಿ ಹಬ್ಬವ ಕಾರ್ತಿಕ ಮಾಸಲ್ಲಿ ಆಚರುಸುವದು. ಇನ್ನು ಹಲವು ವ್ರತಾನುಷ್ಠಾನ ಆಚರಣೆಗೊ ಸುರುವಪ್ಪದೂ ಮಾರ್ಗಶಿರ ಮಾಸಲ್ಲಿಯೇ. ಎದುರ್ಕಳ  ಈಶ್ವರ ಮಾವ° ನೆಂಪುಮಾಡಿಸಿದಂತೆ – “ಶುಕ್ಲೇಮಾರ್ಗಶಿರೇ ಪಕ್ಷೇ ಯೋಶಿರ್ಭರ್ತೃ  ಅನುಜ್ಞಯಾ, ಆರಭೇತ್ ವ್ರತಮಿದಂ ಸಾರ್ವಕಾಮಿಕಮಾದಿತಃ” (ಭಾಗವತ – ೬.೧೯.೨) – ಮಾರ್ಗಶಿರಮಾಸ ಶುಕ್ಲಪಕ್ಷಲ್ಲಿ ಯಾವ ಗೆಂಡಹೆಂಡತಿ ಕೂಡಿ ವ್ರತನುಷ್ಠಾನ (ವಿಶೇಷವಾಗಿ ಪುಂಸವನ) ಮಾಡುತ್ತವೋ ಅವರ ಸರ್ವಾಭೀಷ್ಟ ನೆರವೇರುತ್ತು. ಮದೆವೆ ಆಗದ್ದ ಕೂಸುಗೊ ಮಾರ್ಗಶಿರ ಮಾಸಲ್ಲಿ ವ್ರತಾನುಷ್ಠಾನ ಮಾಡಿರೆ ಶೀಘ್ರ ಪತಿಪ್ರಾಪ್ತಿ ಆವ್ತು, ಇದು ಮಾತ್ರ ಅಲ್ಲ ಯಾವುದೇ ವ್ಯಕ್ತಿ ಈ ಮಾಸಲ್ಲಿ ಅನನ್ಯ ಭಕ್ತಿಂದ ಭಗವಂತನ ಸೇವೆಯ ಈ ಮಾಸಲ್ಲಿ ಮಾಡಿರೆ ಅವರ ಅಭೀಷ್ಟ ಪೂರ್ತಿಯಾವ್ತು. ಮಾರ್ಗಶಿರ ಮಾಸಲ್ಲಿ ಅನ್ನಕ್ಕೋ ಜಲಕ್ಕೋ ಯಾವ ತೊಂದರೆಯೂ ಆವ್ತಿಲ್ಲೆ. ಹಾಂಗೇ ಅತಿವೃಷ್ಟಿಯೋ ಬರಗಾಲವೋ ಕಂಡುಬತ್ತಿಲ್ಲೆ. ಮಾರ್ಗಶಿರವು ವೃದ್ಧಿಯ ಸಂಕೇತ. ಇವೆಲ್ಲವೂ ಭಗವಂತನ ವಿಶೇಷ ವಿಭೂತಿ ಮಾರ್ಗಶಿರ ಮಾಸಲ್ಲಿ ಇಪ್ಪದರಿಂದ ಆವ್ತು. ಈ ಮಾರ್ಗಶಿರ ಮಾಸಲ್ಲಿ ವಿಭೂತಿಯಾಗಿ ಕೂದುಗೊಂಡಿಪ್ಪ ಭಗವಂತನ ವಿಭೂತಿನಾಮ – ‘ಮಾರ್ಗಶೀರ್ಷಃ’. ಸಾಧನಾ ಮಾರ್ಗಲ್ಲಿ ನಾವು ಸಾಗೇಕಾದ ಮಾರ್ಗದ ತುತ್ತತುದಿಯಾದ ಆ ಭಗವಂತ° – ‘ಮಾರ್ಗಶೀರ್ಷಃ’

‘ಋತೂನಾಮ್ ಕುಸುಮಾಕರಃ’ – ಋತುಗಳಲ್ಲಿ ಕುಸುಮ ಆಕರಃ – ವಸಂತ° ಆ ಭಗವಂತ°.   ಎಲ್ಲ ತಿಂಗಳುಗಳಲ್ಲಿ ನವಂಬ್ರ-ದಶಂಬ್ರ ತಿಂಗಳು ಅತ್ಯಂತ ಶ್ರೇಷ್ಠ ಹೇಳಿ ಹೇಳುತ್ತವು. ಎಂತಕೆ ಹೇಳಿರೆ ಇದು ಸುಗ್ಗಿಯ ಕಾಲ. ಜನಂಗೊ ತುಂಬ ಸಂತೋಷಂದ ಇರುತ್ತವು. ಫಲ (ಕೊಯಿಲು) ಕೊಯಿದು ಮನೆ ತುಂಬಿ ಸಮೃದ್ಧಿ ಯಾಗಿಪ್ಪ ಕಾಲ. ಹವಾಮಾನವೂ ಅತ್ತೆ ವಿಪರೀತ ಚಳಿಯೂ ಇಲ್ಲದ್ದೆ, ಇತ್ತೆ ಸೆಕೆಯೂ ಇಲ್ಲದ್ದೆ, ಮಳೆಯೂ ಅಲ್ಲದ್ದೆ ಹಿತೋಷ್ಣವಾಗಿ ಸಂತೋಷಕರವಾಗಿಪ್ಪ ಕಾಲ. ವಸಂತ ಹೇಳಿರೆ ಎಲ್ಲೋರಿಂಗೂ ಪ್ರೀತಿ. ಹೂಗಳೂ ಅರಳುತ್ತು, ಗಿಡಮರಂಗಳೂ ಬೆಳೆತ್ತು. ಒಟ್ಟಿಲ್ಲಿ ಮನಸ್ಸಿಂಗೆ ಆನಂದ ತುಂಬಿಗೊಂಡಿಪ್ಪ ಕಾಲ ವಸಂತ ಕಾಲ. ಅದಕ್ಕೆ ಕಾರಣ ವಸಂತ ಋತುವಿಲ್ಲಿ ಕುಸುಮಾಕರನೆಂಬ ವಿಭೂತಿನಾಮವಾಚ್ಯನಾಗಿ ಭಗವಂತ° ವಸಂತ ಋತುವಿಲ್ಲಿ ಇಪ್ಪದು. ‘ಕುಸುಮಾಕರಃ’ –  (ಕು – ಕೆಟ್ಟ, ಸು – ಒಳ್ಳೆಯ, ಮಾ – ಅರಿವು, ಕರ – ನೀಡುವದು) ಕೆಟ್ಟವಕ್ಕೆ ಕುಸ್ಸಿತವಾದ ಮತ್ತೆ ಸಜ್ಜನರಿಂಗೆ ಉತ್ತಮ ಜ್ಞಾನವ ಕೊಡುವ ಭಗವಂತ° – ‘ಕುಸುಮಾಕರಃ’.

ಶ್ಲೋಕ

ದ್ಯೂತಂ ಛಲಯತಾಮಸ್ಮಿ ತೇಜಸ್ತೇಜಸ್ವಿನಾಮಹಮ್ ।
ಜಯೋsಸ್ಮಿ ವ್ಯಸಸಾಯೋsಸ್ಮಿ ಸತ್ತ್ವಂ ಸತ್ತ್ವವತಾಮಹಮ್ ॥೩೬॥

ಪದವಿಭಾಗ

ದ್ಯೂತಮ್ ಛಲಯತಾಮ್ ಅಸ್ಮಿ ತೇಜಃ ತೇಜಸ್ವಿನಾಮ್ ಅಹಮ್ । ಜಯಃ ಅಸ್ಮಿ ವ್ಯವಸಾಯಃ ಅಸ್ಮಿ ಸತ್ತ್ವಮ್ ಸತ್ತ್ವವತಾಮ್ ಅಹಮ್ ॥

ಅನ್ವಯ

ಛಲಯತಾಂ ದ್ಯೂತಮ್, ತೇಜಸ್ವಿನಾಂ ತೇಜಃ ಅಹಮ್ ಅಸ್ಮಿ, ಜಯಃ ಅಹಮ್ ಅಸ್ಮಿ, ವ್ಯವಸಾಯಃ ಅಹಮ್ ಅಸ್ಮಿ, ಸತ್ತ್ವವತಾಂ ಸತ್ತ್ವಮ್ ಅಹಮ್ ಅಸ್ಮಿ ।

ಪದವಿಭಾಗ

ಛಲಯತಾಮ್ – ವಂಚಕರಲ್ಲಿ/ಮೋಸಗಾರರಲ್ಲಿ, ದ್ಯೂತಮ್ – ಜೂಜಾಟ, ತೇಜಸ್ವಿನಾಮ್ – ತೇಜಸ್ವಿಗಳಲ್ಲಿ, ತೇಜಃ – ತೇಜಸ್ಸು, ಅಹಮ್ ಅಸ್ಮಿ – ಆನು ಆಗಿದ್ದೆ,  ಜಯಃ – ಗೆಲುವು, ಅಹಮ್ ಅಸ್ಮಿ – ಆನು ಆಗಿದ್ದೆ, ವ್ಯವಸಾಯಃ – ಉದ್ಯಮ/ಸಾಹಸ, ಅಹಮ್ ಅಸ್ಮಿ – ಆನು ಆಗಿದ್ದೆ, ಸತ್ತ್ವವತಾಮ್ – ಬಲಿಷ್ಠರಲ್ಲಿ, ಸತ್ತ್ವಮ್ – ಬಲವು, ಅಹಮ್ ಅಸ್ಮಿ – ಆನು ಆಗಿದ್ದೆ.

ಅನ್ವಯಾರ್ಥ

ಮೋಸಗಾರರ ಜೂಜಾಟ ಆನೇ ಆಗಿದ್ದೆ. ತೇಜಸ್ವಿಗಳ ತೇಜಸ್ಸು ಆನು. ಆನೇ ಜಯ, ಆನೇ ಸಾಹಸ, ಬಲಿಷ್ಠರಲ್ಲಿ ಬಲವೂ ಆನೇ ಆಗಿದ್ದೆ.

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° – “ಮೋಸಗಾರರ ಜೂಜು (ಕ್ರೀಡಾರೂಪನಾಗಿ ‘ದ್ಯೂತ’ ಎನ್ನುಸಿ ಜೂಜಿಲ್ಲಿದ್ದೆ) ಆನು. ವೀರರಲ್ಲಿ (ತೇಜಸ್ವಿನಾಂ) ಬೀರ° (ತೇಜಃ) [ಪ್ರಕಾಶರೂಪನಾದ್ದರಿಂದ ‘ತೇಜಸ್’ ಎನ್ನುಸಿ ತೇಜಸ್ವಿಗಳಲ್ಲಿ ತೇಜ(ಪ್ರಕಾಶ)] ಆನು. ಗೆಲುವು (ಎಲ್ಲವನ್ನೂ ಗೆದ್ದವನಾಗಿ ‘ಜಯಃ’) ಆನು, ದುಡಿಮೆ/ವ್ಯವಸಾಯ/ಉದ್ಯಮ (ನಿಶ್ಚಯ ಜ್ಞಾನರೂಪನಾದ್ದರಿಂದ ‘ವ್ಯವಸಾಯ’ ಎನ್ನುಸಿ ದುಡಿಮೆ) ಆನು. ಹಿರಿಯ ವ್ಯಕ್ತಿಗಳಲ್ಲಿ ಸತ್ತ್ವ ನಾಗಿ(ಘನತೆ) [ಸದ್ಗುಣಿಗಳ ಗಣಿಯಾಗಿ ‘ಸತ್ವ’ನೆನುಸಿ ದೊಡ್ಡೋರ ಘನೆತೆಲಿ) ಆನಿದ್ದೆ”.

ವಿಶ್ವಲ್ಲಿ ನಾನಾ ಬಗೆಯ ಮೋಸಗಾರರು ಇದ್ದವು. ಎಲ್ಲ ಮೋಸಂಗಳಲ್ಲಿ ಅತೀ ಮೋಸವಾಗಿಪ್ಪದು ಜೂಜು. ಭಗವಂತ ಇತರ ಮೋಸಗಾರರಿಂದಲೂ ಮೋಸಗಾರನಾಗಿ ಕಾಂಬವ. ಅದು ಅವನ ಪ್ರತಿನಿಧಿ. ಅರಿಂಗೂ ಅವನ ಮೋಸವ ಕಂಡುಹಿಡುದಿಕ್ಕಲೆ ಎಡಿಯ. ಅವಂಗೆ ಹಿರಿಮೆ ಒಂದೇ ಮುಖ ಅಲ್ಲ .ಅವಂಗೆ ಅನೇಕ ಮುಖಂಗೊ. ಕೌರವ ಪಾಂಡವರ ನಡುವೆ ಯುದ್ಧ ಅಪ್ಪಲೆ ಕಾರಣ ಕಾಂಬದು ದ್ಯೂತ. ಇದು ಮೋಸಗಾರಿಕೆಲಿ ಅತ್ಯಂತ ಶ್ರೇಷ್ಠ ಕಲೆ!. ಭಗವಂತ° ‘ದ್ಯೂತ’ ಎನ್ನುಸಿ ಜೂಜಿಲ್ಲಿದ್ದ°. ಇಲ್ಲಿ ಭಗವಂತನ ಶಬ್ದವಾಚ್ಯ ನಾಮ ‘ದ್ಯೂತ’. ದಿವು ಹೇಳಿರೆ ಆಟ(ಕ್ರೀಡೆ). ಸದಾ ಸೃಷ್ಟಿ-ಸ್ಥಿತಿ-ಸಂಹಾರ ಕ್ರೀಡೆಲಿ ನಿರತನಾದ ಭಗವಂತ° – ‘ದ್ಯೂತ’.

ಆತ್ಮಬಲವುಳ್ಳವರ ತೇಜಸ್ಸು ಭಗವಂತ°. ‘ಜಯಃ’ ನಾಮಕನಾಗಿ ಗೆಲುವಿಲ್ಲಿ ಭಗವಂತ° ಇದ್ದ°. ಜಗತ್ತಿನ ಎಲ್ಲ ವಿಜಯಂಗಳ ಪ್ರೇರಕ ಭಗವಂತ°. ಒಂದು ಕಾರ್ಯಲ್ಲಿ ಉತ್ಸಾಹಂದ ತೊಡಗುವಾಂಗೆ ಮಾಡುವವ° ‘ವ್ಯವಸಾಯ’ ನಾಮಕ° ಭಗವಂತ°. ಬಲನಿಯಾಮಕನಾಗಿ ಅವ° ಬಲಶಾಲಿಗಳಲ್ಲಿ ‘ಸತ್ವ’ನಾಮಕನಾಗಿ ಇದ್ದ°. ಹಾಂಗಾಗಿ ಭಗವಂತ°, ಜಯಶಾಲಿಗಳಲ್ಲಿ ಅವ° ‘ಜಯಃ’, ತೇಜಸ್ವಿಗಳಲ್ಲಿ ತೇಜಸ್ಸು, ಸಾಹಸಿಗಳಲ್ಲಿ (ಶ್ರಮಪಡುವವರಲ್ಲಿ) ಮಹಾಸಾಹಸಿ/ಪರಿಶ್ರಮಿ. ಭಗವಂತ(ಕೃಷ್ಣ)ನ ಬಲವ ಮೀರುಸಲೆ ಆರೂ ಇಲ್ಲೆ. ಕೃಷ್ಣಾವತಾರಲ್ಲಿ ಸಣ್ಣದಿಪ್ಪಗಳೇ ಕಂಸನ ಕೊಂದು, ಕಾಲೀಯಮರ್ದನ ಮಾಡಿ, ಗೋವರ್ಧನ ಗಿರಿಯ ಎತ್ತಿ … ಮುಂತಾದ ಅನೇಕ ಸಾಹಸಂಗಳ ಮಾಡಿ ತೋರಿಸಿದವ°. ಮೋಸಲ್ಲಿಯೂ ಆರೂ ಅವನ ಮೀರುಸಲೆ ಎಡಿಯ. ತೇಜಸ್ಸಿಲ್ಲಿಯೂ ಅವ° ಒಬ್ಬನೇ ಒಬ್ಬ°. ಜಯಲ್ಲಿಯೂ ಅವ°. ಶಕ್ತಿಲಿಯೂ ಅವಂಗೆ ಅವನೇ ಸರಿಸಾಟಿ. ಎಂತಕೆ ಹೇಳಿರೆ ಎಲ್ಲದರಲ್ಲಿಯೂ ಅವನದ್ದೇ ವಿಭೂತಿ. ಹಾಂಗಾಗಿ ಭಗವಂತನ ವಿಭೂತಿ ನಾಮಂಗೊ – ದ್ಯೂತಃ, ತೇಜಸ್, ಜಯಃ, ವ್ಯವಸಾಯಃ, ಸತ್ತ್ವಂ. 

ಶ್ಲೋಕ

ವೃಷ್ಣೀನಾಂ ವಾಸುದೇವೋsಸ್ಮಿ ಪಾಂಡವಾನಾಂ ಧನಂಜಯಃ ।
ಮುನೀನಾಮಪ್ಯಹಂ ವ್ಯಾಸಃ ಕವೀನಾಮುಶನಾ ಕವಿಃ ॥೩೭॥

ಪದವಿಭಾಗ

ವೃಷ್ಣೀನಾಮ್ ವಾಸುದೇವಃ ಅಸ್ಮಿ ಪಾಂಡವಾನಾಮ್ ಧನಂಜಯಃ । ಮುನೀನಾಮ್ ಅಪಿ ಅಹಮ್ ವ್ಯಾಸಃ ಕವೀನಾಮ್ ಉಶನಾ ಕವಿಃ ॥

ಅನ್ವಯ

ವೃಷ್ಣೀನಾಂ ವಾಸುದೇವಃ, ಪಾಂಡವಾನಾಂ ಧನಂಜಯಃ ಅಸ್ಮಿ । ಮುನೀನಾಮ್ ಅಪಿ ವ್ಯಾಸಃ ಅಹಮ್, ಕವೀನಾಮ್ ಉಶನಾ ಕವಿಃ ಅಹಮ್ ಅಸ್ಮಿ ।

ಪ್ರತಿಪದಾರ್ಥ

ವೃಷ್ಣೀನಾಮ್  ವೃಷ್ಣಿವಂಶಜರಲ್ಲಿ, ವಾಸುದೇವಃ – ವಾಸುದೇವ°(ಕೃಷ್ಣ°), ಪಾಂಡವಾನಾಮ್ – ಪಾಂಡವರಲ್ಲಿ, ಧನಂಜಯಃ – ಧನಂಜಯ°, ಅಸ್ಮಿ – ಆಗಿದ್ದೆ. ಮುನೀನಾಮ್ – ಮುನಿಗಳಲ್ಲಿ, ಅಪಿ – ಕೂಡ, ವ್ಯಾಸಃ – ವ್ಯಾಸಮುನಿ, ಅಹಮ್ – ಆನು, ಕವೀನಾಮ್ – ಕವಿಗಳಲ್ಲಿ (ಉನ್ನತ ಚಿಂತಕರಲ್ಲಿ), ಉಶನಾ ಕವಿಃ – ಉಶನ ಕವಿ, ಅಹಮ್ ಅಸ್ಮಿ – ಆನು ಆಗಿದ್ದೆ.

ಅನ್ವಯಾರ್ಥ

ವೃಷ್ಣಿವಂಶಜರಲ್ಲಿ ಆನು ವಾಸುದೇವ°, ಪಾಂಡವರಲ್ಲಿ ಅರ್ಜುನ°, ಮುನಿಗಳಲ್ಲಿ – ವ್ಯಾಸ°, ಕವಿಗಳಲ್ಲಿ ಉಶನ ಕವಿ ಆನು ಆಗಿದ್ದೆ.

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° – “ವೃಷ್ಣಿವಂಶದ ರಾಜನ್ಯರಲ್ಲಿ (ವಾಸು – ಎಲ್ಲವನ್ನೂ ಆವರಿಸಿ, ಎಲ್ಲದೊರಳವೂ ನೆಲೆಸಿದವನಾಗಿ, ದೇವ – ದಿವ್ಯರೂಪನಾಗಿ) ವಾಸುದೇವನಾಗಿ ಆನಿದ್ದೆ. ಪಾಂಡವರಲ್ಲಿ ಧನಂಜಯ° ( ಸಿರಿಯ (ಧನವ)ಗೆದ್ದವನಾಗಿ – ಧನಂಜಯ°) ಆನು, ಮುನಿಗಳಲ್ಲಿ ವ್ಯಾಸನಾಗಿ ( ವಿ – ಎಲ್ಲಕ್ಕಿಂತ ವಿಶಿಷ್ಟನಾಗಿ, ಆ – ಎಲ್ಲೆಡೆ, ಸಃ – ಅವ° = ವ್ಯಾಸಃ) ಆನಿದ್ದೆ, ಕವಿ( ಮಹಾವಿಜ್ಞಾನಿ/ಮಹಾಚಿಂತಕ°)ಗಳಲ್ಲಿ ಹಿರಿಯ ವಿದ್ವಾಂಸನಾದ ಉಶನಾ (ಶುಕ್ರ°) ಕವಿ (ಇಚ್ಛಾರೂಪನಾದ್ದರಿಂದ ‘ಉಶನಸ್’ ಎನ್ನುಸಿ ದೈತ್ಯಗುರು ಶುಕ್ರನಲ್ಲಿ) ಆನು ಆಗಿದ್ದೆ”.

ಭಗವಂತ° ತನ್ನ ಸಾಕ್ಷಾತ್ ವಿಭೂತಿಯ ವಿವರುಸುವದರ ಮುಂದುವರ್ಸಿ ಹೇಳುತ್ತ° – “ವೃಷ್ಣೀನಾಮ್ ವಾಸುದೇವ ಅಸ್ಮಿ”. ಇಲ್ಲಿ ಭಗವಂತನ ವಿಭೂತಿ ನಾಮ ‘ವಾಸುದೇವಃ’. ಎಲ್ಲೋದಿಕ್ಕೆ ಇದ್ದರೂ ಕಾಣುಸದ್ದೆ, ಅಪರೋಕ್ಷ ಜ್ಞಾನವ ಕರುಣಿಸಿ ಪ್ರತ್ಯಕ್ಷನಪ್ಪ ಭಗವಂತ° ‘ವಾಸುದೇವಃ’ – ಎಲ್ಲವನ್ನೂ ಆವರಿಸಿ, ಎಲ್ಲದರ ಒಳ ನೆಲೆಸಿ, ದಿವ್ಯರೂಪನಾಗಿಪ್ಪವ°. “ಪಾಂಡವಾನಾಮ್ ಧನಂಜಯಃ” ಅರ್ಜುನನಲ್ಲಿ ಭಗವಂತನ ವಿಶೇಷ ಆವೇಶ ಇದ್ದತ್ತು. ಅವನಲ್ಲಿ ‘ಧನಂಜಯಃ’ ನಾಮಕನಾಗಿ ಭಗವಂತ ಇದ್ದ°. ಇಲ್ಲಿ ಧನ ಹೇಳಿರೆ ‘ಜ್ಞಾನ’. ಜ್ಞಾನವ ಗೆದ್ದವ° ‘ಧನಂಜಯಃ’. ಭಗವಂತನ ಬಗ್ಗೆ ಜ್ಞಾನ, ಅದರಿಂದ ಪಡವ ಮೋಕ್ಷ ಶಾಶ್ವತ ಧನ. ಅದರ ಕೊಡುವ ಭಗವಂತ° – ‘ಧನಂಜಯಃ’.

ಇನ್ನು, “ಮುನೀನಾಮ್ ವ್ಯಾಸಃ” – ಮುನಿಗಳಲ್ಲಿ ವ್ಯಾಸ° – ಭಗವಂತ°. ಇದು ಭಗವಂತನ ಸಾಕ್ಷಾತ್ ವಿಭೂತಿ. ವ್ಯಾಸ° ವೇದವ 1137 ಸಂಹಿತೆಯಾಗಿ ವಿಭಾಗಮಾಡಿ ಜ್ಞಾನಿಗಳ ಮುಖೇನ ನವಗೆ ಕೊಟ್ಟಿದ°. ಪ್ರಧಾನವಾಗಿ ವೇದಂಗೊ ನಾಲ್ಕು. ಪದ್ಯ ಸಂಕಲನ ಋಗ್ವೇದ, ಗದ್ಯ ಸಂಕಲನ ಯಜುರ್ವೇದ, ಗಾನಕ್ಕೋಸ್ಕರ ಸಾಮವೇದ, ಅಥರ್ವ ಮುನಿ ಬ್ರಹ್ಮಂದ ಉಪದೇಶ ಪಡದು ಬರದ್ದದು ಅಥರ್ವಣ ವೇದ. ಮೂಲಭೂತವಾಗಿ ವೇದಂಗೊ ಮೂರು ಆದರೆ ಋಷಿ ಸಂಪ್ರದಾಯಂದ ನಾಲ್ಕು ವೇದಂಗಳ ಸೃಷ್ಟಿ ಆತು. ಇದನ್ನೇ ವ್ಯಾಸ° ನಾಲ್ಕು ಜನ ಮುನಿಗೊಕ್ಕೆ (ಬೈಲ, ವೈಶಂಪಾಯನ, ಸುಮಂತು, ಜೈಮಿನಿ) ಹೇಳಿದ್ದದು. ಈ ನಾಲ್ಕು ಮುನಿಗೊ ಮತ್ತೆ ವೇದವ ಅನೇಕ ಶಾಖೆಗೊ (ಸಂಹಿತೆ) ಆಗಿ ವಿಂಗಡಿಸಿದವು. ಋಗ್ವೇದಲ್ಲಿ 24 ಸಂಹಿತೆಗೊ., ಯಜುರ್ವೇದಲ್ಲಿ ಪ್ರಮುಖವಾಗಿ ಎರಡು ಶಾಖೆಗೊ – ಒಂದು ಶುಕ್ಲ ಯಜುರ್ವೇದ, ಇನ್ನೊಂದು ಕೃಷ್ಣ ಯಜುರ್ವೇದ. ಶುಕ್ಲ ಯಜುರ್ವೇದಲ್ಲಿ 15 ಸಂಹಿತೆಗೊ, ಕೃಷ್ಣ ಯಜುರ್ವೇದಲ್ಲಿ 86 ಸಂಹಿತೆಗೊ. ಹೀಂಗೆ ಒಟ್ಟು 101 ಸಂಹಿತೆ ಯಜುರ್ವೇದಲ್ಲಿ. ಸಾಮವೇದಲ್ಲಿ 1000 ಶಾಖೆಗೊ. ಒಂದು ಸಾವಿರ ಬಗೆಯ ಗಾನ ಪದ್ಧತಿ. ಅಂದರೆ, ಇಂದು ಕೇವಲ ಮೂರು (ಜೈಮಿನಿ, ರಣಾಯನಿಯ, ಕೌತುಮ) ಗಾನಪದ್ಧತಿ ಮಾಂತ್ರ ಪ್ರಚಲಿತಲ್ಲಿಪ್ಪದು. ಅಥರ್ವ ವೇದಲ್ಲಿ ಒಟ್ಟು 12 ಶಾಖೆಗೊ. ಹೀಂಗೆ ವೇದವ 24+101+12+1000 = 1137 ಸಂಹಿತೆಗಳಾಗಿ ವಿಂಗಡುಸಿ ವಿಸ್ತಾರ ಮಾಡಿದ ಮಹಾಮುನಿವರ್ಯ ವ್ಯಾಸ°. ಇಲ್ಲಿ ಭಗವಂತನ ವಿಭೂತಿ ನಾಮ – ‘ವ್ಯಾಸಃ’. ಮನುಷ್ಯ ಸ್ವಭಾವದ ಬುದ್ಧಿ ವೈಚಿತ್ರ್ಯದ ಜ್ಞಾನ ಸಾಗರವ ನಮ್ಮ ಮುಂದೆ ತೆಗದುಮಡುಗಿದ, ಎಲ್ಲೋದಿಕ್ಕೆ ತುಂಬಿಪ್ಪ ಭಗವಂತ – ‘ವ್ಯಾಸಃ’

“ಕವಿನಾಮ್ ಉಶನಾ” – ಕವಿಗಳಲ್ಲಿ ಉಶನಾ ಕವಿ ಭಗವಂತ°. ಕವಿ ಹೇಳಿರೆ ಜ್ಞಾನವಂತ°, ಬುದ್ಧಿವಂತ° ಇತ್ಯಾದಿ ಅರ್ಥಂಗೊ. ಹೇಳಿರೆ ಯಾವುದನ್ನೂ ಕುಲಂಕುಶವಾಗಿ ಚಿಂತನೆ ಮಾಡುವವ ಹೇಳಿ ಅರ್ಥ. ಅಂತಹ ವಿಶೇಷ ಚಿಂತಕರಲ್ಲಿ ದೈತ್ಯಗುರು ಶುಕ್ರ° ಅತೀ ಶ್ರೇಷ್ಠ°. ಅವ° ಬಹು ಬುದ್ಧಿವಂತ°, ದೂರದೃಷ್ಟಿಯ ರಾಜನೀತಜ್ಞ°. ಇಚ್ಛಾರೂಪನಾದ ಭಗವಂತ° ‘ಉಶನಸ್’ ನಾಮಕನಾಗಿ ಶುಕ್ರಾಚಾರ್ಯನಲ್ಲಿ ಇಪ್ಪದರಿಂದ ಗ್ರಹಂಗಳಲ್ಲಿ ಶುಕ್ರ ಒಬ್ಬನಾಗಿ ಸ್ಥಾನ ಪಡದ°. ತನ್ನ ಇಚ್ಛಾಮಾತ್ರಂದಲೇ ಎಲ್ಲ ಕಾರ್ಯವ ಮಾಡುವ ಭಗವಂತನ ವಿಭೂತಿ ನಾಮ – ‘ಉಶನಾ’.

ಶ್ಲೋಕ

ದಂಡೋ ದಮಯತಾಮಸ್ಮಿ ನೀತಿರಸ್ಮಿ ಜಿಗೀಷತಾಮ್ ।
ಮೌನಂ ಚೈವಾಸ್ಮಿ ಗುಹ್ಯಾನಾಂ ಜ್ಞಾನಂ ಜ್ಞಾನವತಾಮಹಮ್ ॥೨೮॥

ಪದವಿಭಾಗ

ದಂಡಃ ದಮಯತಾಮ್ ಅಸ್ಮಿ ನೀತಿಃ ಅಸ್ಮಿ ಜಿಗೀಷತಾಮ್ । ಮೌನಮ್ ಚ ಏವ ಅಸ್ಮಿ ಗುಹ್ಯಾನಾಮ್ ಜ್ಞಾನಮ್ ಜ್ಞಾನವತಾಮ್ ಅಹಮ್ ॥

ಅನ್ವಯ

ದಮಯತಾಂ ದಂಡಃ ಅಸ್ಮಿ, ಜಿಗೀಷತಾಂ ನೀತಿಃ ಅಸ್ಮಿ । ಗುಹ್ಯಾನಾಂ ಮೌನಮ್, ಜ್ಞಾನವತಾಂ ಜ್ಞಾನಂ ಚ ಏವ ಅಹಮ್ ಅಸ್ಮಿ ।

ಪ್ರತಿಪದಾರ್ಥ

ದಮಯತಾಮ್ – ನಿಯಂತ್ರುಸುವ (ದಂಡುಸುವ) ಎಲ್ಲ ಮಾರ್ಗಂಗಳಲ್ಲಿ (ವಿಧಂಗಳಲ್ಲಿ), ದಂಡಃ – ಶಿಕ್ಷೆ, ಅಸ್ಮಿ – ಆಗಿದ್ದೆ, ಜಿಗೀಷತಾಮ್ – ಗೆಲುವಿನ ಅಪೇಕ್ಷಿಸುವವರಲ್ಲಿ, ನೀತಿಃ – ನೀತಿಯು, ಅಸ್ಮಿ – ಆನಾಗಿದ್ದೆ. ಗುಹ್ಯಾನಾಮ್ – ರಹಸ್ಯಂಗಳಲ್ಲಿ, ಮೌನಮ್ – ಮೌನ, ಜ್ಞಾನವತಾಮ್ – ಜ್ಞಾನಿಗಳಲ್ಲಿ, ಜ್ಞಾನಮ್ – ಜ್ಞಾನವು, ಚ – ಕೂಡ, ಏವ – ಖಂಡಿತವಾಗಿಯು, ಅಹಮ್ ಅಸ್ಮಿ – ಆನು ಆಗಿದ್ದೆ. 

ಅನ್ವಯಾರ್ಥ

ಶಾಸನ ಅವಿಧೇಯತೆಯ ದಮನ ಮಾಡುವ ರೀತಿಗಳಲ್ಲಿ ಆನು ಶಿಕ್ಷೆ, ಜಯವ ಅರಸುವವರಲ್ಲಿ ಆನು ನೀತಿ, ಗುಹ್ಯ ವಿಷಯಂಗಳಲ್ಲಿ ಆನು ಮೌನ, ಜ್ಞಾನಿಗಳಲ್ಲಿ ಜ್ಞಾನವು ಕೂಡ ಅನೇ ಆಗಿದ್ದೆ.

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° – “ಬಗ್ಗು ಬಡಿವವವರ ದಂಡನೀತಿ (ದಂಡಿಸುವವನಾದ್ದರಿಂದ ‘ದಂಡಃ’) ಆನು. ಗೆಲ್ಲಲೆ ಬಯಸುವವರ ನಯಗಾರಿಕೆ (ಗೆಲುವಿನತ್ತೆ ಕರೆದೊಯ್ವದರಿಂದ ‘ನೀತಿ’ ಎನ್ನುಸಿ ನಯಗಾರಿಕೆಲಿ ಇಪ್ಪದರಿಂದ – ‘ನೀತಿಃ’) ಆನು. ಗುಟ್ಟುಗಳಲ್ಲಿ ಮೌನ (ಮುನಿಗಳಿಂದ ಸ್ತುತನಾಗಿ ‘ಮೌನ’) ಆನು. ಜ್ಞಾನಿಗಳ ಜ್ಞಾನ (ಜ್ಞಾನದ ಮೂರ್ತಿಯಾದ್ದರಿಂದ ‘ಜ್ಞಾನ’) ಆನು ಆಗಿದ್ದೆ”.

ಭಗವಂತ° ಹೇಳುತ್ತ°- ‘ದಂಡೋ ದಮಯತಾಮಸ್ಮಿ’ – ‘ದುಷ್ಟರ ದಮನ ಮಾಡುವ ದಮನಶಕ್ತಿ ಆನು’. ಈ ದಮನಶಕ್ತಿಯಾಗಿ ವೀರರಲ್ಲಿ ಭಗವಂತ ಅಡಗಿದ್ದ. ದಂಡ ಹೇಳಿರೆ ಶಿಕ್ಷೆ. ತಪ್ಪು ಮಾಡಿದವಕ್ಕೆ ದೇವರ ರಾಜ್ಯಲ್ಲಿ ಕ್ಷಮೆ ಇಲ್ಲೆ. ನಾವು ಮಾಡಿದ ಕರ್ಮವ ನಾವು ಅನುಭವುಸಲೇ ಬೇಕು. ತಪ್ಪು ಮಾಡಿದವಕ್ಕೆ ನಿರ್ದಾಕ್ಷಿಣ್ಯ ಹಾಂಗೂ ನಿಷ್ಠುರವಾದ ದಂಡನೆಯ ಕೊಡುವ ಭಗವಂತ° – ‘ದಂಡಃ’. ಗೆಲ್ಲುವ ಶಕ್ತಿಯಾಗಿ ಎಲ್ಲರನ್ನೂ ನಿಯಂತ್ರಣ ಮಾಡುವ ಭಗವಂತ ‘ನೀತಿಃ’. ಮನನಶಕ್ತಿಯಾಗಿ ನಿಂದ ಭಗವಂತ° ‘ಮೌನಃ’. ಬಲ್ಲವರ ತಿಳಿವು ಆಗಿಪ್ಪ ಭಗವಂತ° – ‘ಜ್ಞಾನಃ’.

ಶ್ಲೋಕ

ಯಚ್ಚಾಪಿ ಸರ್ವಭೂತಾನಾಂ ಬೀಜಂ ತದಹಮರ್ಜುನ ।
ನ ತದಸ್ತಿ ವಿನಾ ಯತ್ಸ್ಯಾಂ ಮಯಾ ಭೂತಂ ಚರಾಚರನ್ ॥೩೯॥

ಪದವಿಭಾಗ

ಯತ್ ಚ ಅಪಿ ಸರ್ವ-ಭೂತಾನಾಮ್ ಬೀಜಮ್ ತತ್ ಅಹಮ್ ಅರ್ಜುನ । ನ ತತ್ ಅಸ್ತಿ ವಿನಾ ಯತ್ ಸ್ಯಾತ್ ಮಯಾ ಭೂತಮ್ ಚರ-ಅಚರಮ್ ॥

ಅನ್ವಯ

ಹೇ ಅರ್ಜುನ!, ಚ ಸರ್ವ-ಭೂತಾನಾಂ ಯತ್ ಬೀಜಂ ತತ್ ಅಪಿ ಅಹಮ್ ಅಸ್ಮಿ । ಯತ್ ಚರ-ಅಚರಂ ಭೂತಂ ಸ್ಯಾತ್ ತತ್ ಮಯಾ ವಿನಾ ನ ಅಸ್ತಿ ।

ಪ್ರತಿಪದಾರ್ಥ

ಹೇ ಅರ್ಜುನ! – ಏ ಅರ್ಜುನ!, ಚ – ಕೂಡ, ಸರ್ವ-ಭೂತಾನಾಮ್ –  ಸೃಷ್ಟಿಗಳೆಲ್ಲವುದರ, ಯತ್ – ಏವ, ಬೀಜಮ್ – ಬೀಜವು, ತತ್  ಅಪಿ – ಅದು ಕೂಡ, ಅಹಮ್ ಅಸ್ಮಿ – ಆನು ಆಗಿದ್ದೆ. ಯತ್ – ಏವ, ಚರ-ಅಚರಮ್ – ಚಲುಸುವ ಮತ್ತು ಚಲುಸದ್ದ, ಭೂತಮ್ – ಸೃಷ್ಟಿಯಾದ್ದು (ಸೃಷ್ಟಿಯಾದ ಜೀವಿ ವಾ ವಸ್ತು), ಸ್ಯಾತ್ – ಇರುತ್ತೊ, ತತ್ – ಅದು, ಮಯಾ ವಿನಾ – ಎನ್ನಿಂದ ಹೊರತಾಗಿ, ನ ಅಸ್ತಿ – ಇರುತ್ತಿಲ್ಲೆ.

ಅನ್ವಯಾರ್ಥ

ಅರ್ಜುನ!, ಸಮಸ್ತ ಜೀವಿಗಳಲ್ಲಿ ಏನೆಲ್ಲ ವಿಶಿಷ್ಟ ಗುಣಂಗೊ ಇದ್ದೋ ಅವುಗಳೆಲ್ಲವುದರಲ್ಲಿ ಆನು ಇದ್ದೆ. ಏವುದೇ ಚರ ಅಚರ ವಸ್ತುಗೊ ಎನ್ನಂದ ಇಲ್ಲದ್ದೆ ಇರುತ್ತಿಲ್ಲೆ.

ತಾತ್ಪರ್ಯ / ವಿವರಣೆ

ಭಗವಂತ° ಈವರೇಂಗೆ ತನ್ನ ವಿಭೂತಿಗಳ ಸೂಕ್ಷ್ಮವಾಗಿ ಪ್ರಾಮುಖ್ಯ ವಿಚಾರಂಗಳ ಹೇಳಿಕ್ಕಿ ಇದೀಗ ಆ ವಿಷಯದ ಉಪಸಂಹಾರವ ಮಾಡುತ್ತ°. “ಈ ಜಗತ್ತಿಲ್ಲಿಪ್ಪ ಸಮಸ್ತ ಜಡ-ಚೇತನ ವಸ್ತುವಿಂಗೂ ಮೂಲಭೂತವಾಗಿಪ್ಪ ಅಭಿವ್ಯಂಜಕ ರೂಪ ಮತ್ತೆ ಶಕ್ತಿ ಕೊಡುವವ ಆನು”. ಹೀಂಗೆ ಭಗವಂತ° ಸಮಸ್ತ ಸೃಷ್ಟಿಗೂ ಬೀಜಪುರುಷನಾಗಿ ನಿಂದುಗೊಂಡಿದ್ದ°. ಪ್ರತಿಯೊಂದರ (ಸಮಸ್ತ ವಸ್ತು ವಿಷಯ ವ್ಯಕ್ತಿ-ಶಕ್ತಿಗಳ) ಮೂಲಬೀಜ° – ಭಗವಂತ°.  ಕಣ್ಣಿಂಗೆ ಕಾಣದ್ದ ಜೀವಕ್ಕೆ ಕಣ್ಣಿಂಗೆ ಕಾಂಬ ಶರೀರ ಕೊಡುವವ° – ಅವ°. ಗೆಂಡಿನ ರೇತಸ್ಸಿಲ್ಲಿದ್ದುಗೊಂಡು, ಜೀವವ ರೇತಸ್ಸಿನ ಮುಖೇನ ಹೆಣ್ಣಿನ ದೇಹದೊಳಂಗೆ ಸೇರುಸಿ, ಅಲ್ಲಿ ಜೀವಕ್ಕೆ ಒಂದು ರೂಪವ ಕೊಟ್ಟು ಬೆಳಗುಸುವವ° – ಭಗವಂತ°. ಹೀಂಗೆ ಈ ಪ್ರಪಂಚಲ್ಲಿಪ್ಪ ಚೇತನಾಚೇತನ ಅಥವಾ ಚರಾಚರಾತ್ಮಕ ಎಲ್ಲವನ್ನೂ ಹುಟ್ಟುಸುವವ° – ಭಗವಂತ°. ಈ ಪ್ರಪಂಚಲ್ಲಿ ಭಗವಂತನ ಹೊರತು/ಬಿಟ್ಟು ಸ್ವತತ್ರವಾಗಿ ಏವ ವಸ್ತುವೂ ಇಲ್ಲೆ. ಆದರೆ ಜೀವ ಮತ್ತೆ ಭಗವಂತ° ಒಂದೇ ಹೇಳಿ ಅರ್ಥ ಅಲ್ಲ. ಜೀವ ಭಗವಂತನ ಪ್ರತಿಬಿಂಬ. ಎಲ್ಲವೂ ಇದ್ದು ಆದ್ರೆ ಭಗವಂತನ ಬಿಟ್ಟು ಸ್ವತಂತ್ರ ಅಸ್ತಿತ್ವ ಆರಿಂಗೂ ಇಲ್ಲೆ.

ಶ್ಲೋಕ

ನಾಂತೋsಸ್ತಿ ಮಮ ದಿವ್ಯಾನಾಂ ವಿಭೂತೀನಾಂ ಪರಂತಪ ।
ಏಷ ತೂದ್ದೇಶತಃ ಪ್ರೋಕ್ತೋ ವಿಭೂತೇರ್ವಿಸ್ತರೋ ಮಯಾ ॥೪೦॥

ಪದವಿಭಾಗ

ನ ಅಂತಃ ಅಸ್ತಿ ಮಮ ದಿವ್ಯಾನಾಮ್ ವಿಭೂತೀನಾಮ್ ಪರಂತಪ । ಏಷಃ ತು ಉದ್ದೇಶತಃ ಪ್ರೋಕ್ತಃ ವಿಭೂತೇಃ ವಿಸ್ತರಃ ಮಯಾ ॥

ಅನ್ವಯ

ಹೇ ಪರಂತಪ!, ಮಮ ದಿವ್ಯಾನಾಂ ವಿಭೂತೀನಾಮ್ ಅಂತಃ ನ ಅಸ್ತಿ । ಏಷಃ ತು ವಿಭೂತೇಃ ವಿಸ್ತರಃ ಮಯಾ ಉದ್ದೇಶತಃ ಪ್ರೋಕ್ತಃ ।

ಪ್ರತಿಪದಾರ್ಥ

ಹೇ ಪರಂತಪ! – ಏ ಶತ್ರುವಿಜೇತನಾದ ಅರ್ಜುನ!, ಮಮ ದಿವ್ಯಾನಾಂ – ಎನ್ನ ದಿವ್ಯವಾದ, ವಿಭೂತೀನಾಂ – ಐಶ್ವರ್ಯಂಗಳ / ವೈಭವಂಗಳ (ಐಶ್ವರ್ಯಂಗೊಕ್ಕೆ/ವೈಭವಂಗೊಕ್ಕೆ), ಅಂತಃ ನ ಅಸ್ತಿ – ಕೊನೆ (ಅಕೇರಿ) ವಾ ಮಿತಿ ಇಲ್ಲೆ. ಏಷಃ ತು – ಇದಾದರೋ, ವಿಭೂತೇಃ – ವೈಭವಂಗಳ/ಐಶ್ವರ್ಯಂಗಳ, ವಿಸ್ತರಃ – ವಿಸ್ತಾರವು, ಮಯಾ – ಎನ್ನಂದ, ಉದ್ದೇಶತಃ ಪ್ರೋಕ್ತಃ – ಉದಾಹರಣೆಗಳ ಹಾಂಗೆ ಹೇಳಲ್ಪಟ್ಟದ್ದು.

ಅನ್ವಯಾರ್ಥ

ಏ ಶತ್ರುವಿಜೇತನಾದ ಅರ್ಜುನ!, ಎನ್ನ ದಿವ್ಯರೂಪಂಗಳ ಹಿರಿಮೆಗೆ ಕೊನೆ ಇಲ್ಲೆ. ಎನ್ನ ಹಿರಿಮೆಯ ಬಿತ್ತರವ ಕೆಲವನ್ನಷ್ಟೇ ಇಲ್ಲಿ ಹೆಸರಿಸಿ ಹೇಳಲ್ಪಟ್ಟದ್ದು.

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° –  “ಎನ್ನ ವಿಭೂತಿ ಪ್ರಪಂಚದ ಪ್ರತಿಯೊಂದು ವಸ್ತುವಿಷಯಲ್ಲೂ ಇದ್ದು. ಅದರ ಹೇಳಿ ಅದಕ್ಕೆ ಅಕೇರಿ ಹೇಳಿ ಮಿತಿ ಇಲ್ಲೆ. ಸೂಚ್ಯವಾಗಿ ಕೆಲವು ಪ್ರಾಮುಖ್ಯವಾದ್ದರ ಮಾಂತ್ರ ನಿನಗಿಲ್ಲಿ ಹೆಸರಿಸಿ ಹೇಳಿದ್ದದು”. ಲೋಕವಿಲಕ್ಷಣವಾದ ಭಗವಂತನ ವಿಭೂತಿಗೆ ಕೊನೆ ಇಲ್ಲೆ. ಅದರ ಹೇಳಿ ಮುಗಿವಲೆ ಹೇಳಿ ಇಲ್ಲೆ. ಇಲ್ಲಿ ಭಗವಂತ° ಅತ್ಯಂತ ಮುಖ್ಯವಾದ, ನಾವು ನಿರಂತರ ಉಪಾಸನೆ ಮಾಡೇಕಾದ, ನಿತ್ಯ ಅನುಸಂಧಾನಲ್ಲಿ ನೆನಪಿಲ್ಲಿರೆಕ್ಕಾದ್ದರ ಮಾಂತ್ರ ಹೆಸರಿಸಿ ಸೂಚಿಸಿದ್ದದು.

ಶ್ಲೋಕ

ಯದ್ಯದ್ವಿಭೂತಿಮತ್ಸತ್ತ್ವಂ ಶ್ರೀಮದೂರ್ಜಿತಮೇವ ವಾ ।
ತತ್ತದೇವಾವಗಚ್ಛ ತ್ವಂ ಮಮ ತೇಜೋಂsಶಸಂಭವಮ್ ॥೪೧॥

ಪದವಿಭಾಗ

ಯತ್ ಯತ್ ವಿಭೂತಿಮತ್ ಸತ್ತ್ವಮ್  ಶ್ರೀಮತ್ ಊರ್ಜಿತಮ್ ಏವ ವಾ । ತತ್ ತತ್ ಅವಗಚ್ಛ ತ್ವಮ್ ತೇಜಃ ಅಂಶ-ಸಂಭವಮ್

ಅನ್ವಯ

ಯತ್ ಯತ್ ಸತ್ತ್ವಂ ವಿಭೂತಿಮತ್, ಶ್ರೀಮತ್ ಊರ್ಜಿತಮ್ ಏವ ವಾ ಅಸ್ತಿ, ತತ್ ತತ್ ಮಮ ತೇಜಃ ಅಂಶ-ಸಂಭವಮ್ ಅಸ್ತಿ ಇತಿ ತ್ವಮ್ ಅವಗಚ್ಛ ।

ಪ್ರತಿಪದಾರ್ಥ

ಯತ್ ಯತ್ – ಯಾವ್ಯಾವ, ಸತ್ವಮ್ – ಅಸ್ತಿತ್ವವ, ವಿಭೂತಿಮತ್ – ವೈಭವವುಳ್ಳ/ಐಶ್ವರ್ಯವುಳ್ಳ, ಶ್ರೀಮತ್ ಊರ್ಜಿತಮ್ ಏವ ವಾ ಅಸ್ತಿ – ಸೌಂದರ್ಯ/ಶ್ರೀಮಂತಿಕೆಂದ ಕೂಡಿ ಭವ್ಯವಾಗಿಪ್ಪದರಂತೆ ಇದ್ದೋ, ತತ್ ತತ್ – ಅವ್ವುವ್ವು (ಅವೆಲ್ಲವು), ಮಮ ತೇಜಃ – ಎನ್ನ ತೇಜಸ್ಸು, ಅಂಶ-ಸಂಭವಮ್ – ಒಂದು ಭಾಗಂದ(ಅಂಶಂದ) ಹುಟ್ಟಿದ್ದು, ಅಸ್ತಿ ಇತಿ – ಆಗಿದ್ದು ಹೇದು, ತ್ವಮ್ ಅವಗಚ್ಛ – ನೀನು ತಿಳುಕ್ಕೊ.

ಅನ್ವಯಾರ್ಥ

ಈ ಅಸ್ತಿತ್ವಲ್ಲಿ ಯಾವ್ಯಾವುದೆಲ್ಲ ಶ್ರೀಮಂತಿಕೆಂದ ಕೂಡಿದ್ದೋ (ಶ್ರೇಷ್ಠವಾಗಿದ್ದೋ) ಅವೆಲ್ಲವೂ ಎನ್ನ ಹಿರಿಮೆಯ ತೇಜಸ್ಸಿನ ಕಿಡಿಂದ ಮೂಡಿಬಂದದು ಹೇಳಿ ನೀನು ತಿಳುಕ್ಕೊ.

ತಾತ್ಪರ್ಯ / ವಿವರಣೆ

ಅಕೇರಿಗೆ ಭಗವಂತ ಹೇಳುತ್ತ° – ಈ ಅಸ್ತಿತ್ವಲ್ಲಿ ಒಂದು ತೇಜಸ್ವೀ ಅಥವಾ ಸುಂದರ ಅಥವಾ ಶ್ರೇಷ್ಠ ಎಂದು ಗುರುತಿಸಲ್ಪಡುವ ಯಾವ್ಯಾವ ವಸ್ತುಗೊ ಇದ್ದೋ ಅದೆಲ್ಲವೂ ಭಗವಂತನ ಒಂದು ತೇಜ ಅಂಶ ಹೇಳಿ ತಿಳುಕ್ಕೊಳ್ಳೆಕು. ಆ ಅಸ್ತಿತ್ವ ಭೌತಿಕ ಜಗತ್ತಿಲ್ಲಿ ಆಗಿಕ್ಕು ವಾ ಆಧ್ಯಾತ್ಮಿಕ ಜಗತ್ತಿಲ್ಲಿ ಆಗಿಕ್ಕು. ಅದು ಭಗವಂತನ ಸಂಪತ್ತಿನ ಒಂದು ಸಣ್ಣ ಅಭಿವ್ಯಕ್ತಿ ಹೇದು ತಿಳುಕ್ಕೊಳ್ಳೆಕು. ಅಸಾಧಾರಣ ಶ್ರೀಮಂತಿಕೆಯ ಯಾವ ವಸ್ತುವನ್ನಾರು ಅದು ಭಗವಂತನ ಸಿರಿಯ ಪ್ರತಿನಿಧಿ ಹೇಳಿ ತಿಳಿಯೆಕು. ಒಂದೊಂದು ವಸ್ತುವಿಲ್ಲಿಯೂ/ವಿಷಯಲ್ಲಿಯೂ ಇನ್ನೊಂದರಲ್ಲಿ ಇಲ್ಲದ್ದ ಯಾವ ವಿಶಿಷ್ಟ ಗುಣ ಇದ್ದೋ ಅದು ಭಗವಂತನ ಹಿರಿಮೆಯ ಒಂದು ಕಣ. ಅದು ಭಗವಂತನ ಅನಂತ ತೇಜಸ್ಸಿನ ಒಂದು ತುಣುಕು ಹೇಳ್ವದು ನಾವು ನಿತ್ಯ ಉಪಾಸನೆಲಿ ನೆಂಪಿಲ್ಲಿ ಮಡಿಕ್ಕೊಳ್ಳೆಕ್ಕಾದ ಮತ್ತು ಅದರ ಜ್ಞಾನಪೂರ್ವಕವಾಗಿ ಶ್ರದ್ಧಾಭಕ್ತಿಂದ ಅನುಸಂಧಾನ ಮಾಡೇಕ್ಕಾಗಿದ್ದು.

ಶ್ಲೋಕ

ಅಥವಾ ಬಹುನೈತೇನ ಕಿಂ ಜ್ಞಾತೇನ ತವಾರ್ಜುನ ।
ವಿಷ್ಟಭ್ಯಾಹಮಿದಂ ಕೃತ್ಸ್ನಮ್ ಏಕಾಂಶೇನ ಸ್ಥಿತೋ ಜಗತ್ ॥೪೨॥

ಪದವಿಭಾಗ

ಅಥವಾ ಬಹುನಾ ಏತೇನ ಕಿಮ್ ಜ್ಞಾತೇನ ತವ ಅರ್ಜುನ । ವಿಷ್ಟಾಭ್ಯ ಅಹಮ್ ಇದಮ್ ಕೃತ್ಸ್ನಮ್ ಏಕ-ಅಂಶೇನ ಸ್ಥಿತಃ ಜಗತ್ ॥

ಅನ್ವಯ

ಹೇ ಅರ್ಜುನ!, ಅಥವಾ ಏತೇನ ಬಹುನಾ ಜ್ಞಾತೇನ ತವ ಕಿಮ್? ಅಹಮ್ ಇದಂ ಕೃತ್ಸ್ನಂ ಜಗತ್ ಏಕ-ಅಂಶೇನ ವಿಷ್ಟಭ್ಯ ಸ್ಥಿತಃ ಅಸ್ಮಿ ಇತಿ ತ್ವಂ ವಿದ್ಧಿ ।

ಪ್ರತಿಪದಾರ್ಥ

ಹೇ ಅರ್ಜುನ! – ಏ ಅರ್ಜುನ!, ಅಥವಾ – ಅಥವಾ, ಏತೇನ ಬಹುನಾ – ಈ ಅನೇಕ ಬಗೆಂದ, ಜ್ಞಾತೇನ – ತಿಳಿವದರಿಂದ, ತವ ಕಿಮ್ – ನಿನ್ನ ಎಂತರ?,  ಅಹಮ್ – ಆನು, ಇದಮ್ ಕೃತ್ಸ್ನಮ್ – ಈ ಸಮಗ್ರವಾದ, ಜಗತ್ ಏಕ-ಅಂಶೇನ – ವಿಶ್ವವ ಒಂದು ಅಂಶಂದ, ವಿಷ್ಟಭ್ಯ ಸ್ಥಿತಃ ಅಸ್ಮಿ – ವ್ಯಾಪಿಸಿ ನೆಲೆಸಿದವನಾಗಿದ್ದೆ,  ಇತಿ ತ್ವಮ್ ವಿದ್ಧಿ – ಹೇದು ನೀನು ತಿಳುಕ್ಕೊ.

ಅನ್ವಯಾರ್ಥ

ಏ ಅರ್ಜುನ!, ಈ ಅನೇಕ ಬಗೆಯ ವಿವರಣೆಯ ತಿಳಿವದರಿಂದ ನಿನಗೆ ಎಂತ ಇದ್ದು (ಎಂತ ಅಗತ್ಯ ಇದ್ದು) ?. ಎನ್ನ ಒಂದು ಅಂಶಂದ ಆನು ಈ ಇಡೀ ವಿಶ್ವವ ವ್ಯಾಪಿಸಿ ಧರಿಸಿದ್ದೆ ಹೇಳ್ವದರ ನೀನು ತಿಳುಕ್ಕೊ.

ತಾತ್ಪರ್ಯ / ವಿವರಣೆ

ಭಗವಂತ° ಅಕೇರಿಗೆ ಹೇಳುತ್ತ° – “ಏ ಅರ್ಜುನ!, ಈ ಎಲ್ಲ ಬಗೆ ವಿವರಣೆಯ ತಿಳುದು ನಿನಗೆ ಎಂತ ಬಂತು. ಒಟ್ಟಿಲ್ಲಿ ಆನು ಎನ್ನ ಒಂದು ಅಂಶದ ಕಿಡಿಂದ ಈ ಇಡಿಯ ವಿಶ್ವವ ವ್ಯಾಪಿಸಿ ಆಧರಿಸಿ ಹಿಡ್ಕೊಂಡು ನಡೆಶುತ್ತ ಇದ್ದೆ”.

ಇದರ ಭಾವ ಭಗವಂತನ ವೈಭವವ ಒಂದೊಂದನ್ನೂ ಪ್ರತ್ಯೇಕ ಪ್ರತ್ಯೇಕ ತಿಳುದು ಹೇಳುವದು ಅಸಾಧ್ಯ. ಆ ರೀತಿ ಮಾಡೇಕ್ಕಾದ ಅಗತ್ಯವೂ ಇಲ್ಲೆ. ಎಲ್ಲವುದರ ಒಳವೂ ಒಂದು ವಿಶಿಷ್ಟ ಶಕ್ತಿಯಾಗಿ ಭಗವಂತ° ಇದ್ದ°. ಎಲ್ಲದರಲ್ಲಿಯೂ ಭಗವಂತನ ವಿಭೂತಿ ಅಡಗಿದ್ದು. ಸಮಸ್ತ ವೇದಂಗಳ ಸಾರ ಸೂಕ್ತವಾದ ಪುರುಷಸೂಕ್ತಲ್ಲಿ ಹೇಳಿದ ಪ್ರಕಾರ “ಪಾದೋಸ್ಯ ವಿಶ್ವಾ ಭೂತಾನಿ । ತ್ರಿಪಾದಸ್ಯಾಮೃತಂ ದಿವಿ ….॥ ಈ ಪ್ರಪಂಚಲ್ಲಿ ವ್ಯಾಪಿಸಿಪ್ಪದು ಭಗವಂತನ ಕೇವಲ ಕಾಲು ಭಾಗ (ಪಾದೋಸ್ಯ ವಿಶ್ವಾ ಭೂತಾನಿ)ಅಷ್ಟೇ. ಅಮೃತಮಯವಾದ ಮುಕ್ಕಾಲು ಭಾಗ (ತ್ರಿಪಾದಸ್ಯಾಮೃತಂ ದಿವಿ) ದಿವ್ಯಲೋಕಲ್ಲಿ ನೆಲೆಸಿದ್ದು. ಜಗತ್ತಿನ ಸಮಸ್ತ ವಸ್ತುವಿನ ಒಳವೂ ಹೆರವೂ ತುಂಬಿ ವಿಶ್ವರೂಪನಾಗಿದ್ದ (ವಿಷ್ವಂವ್ಯಕ್ರಾಮತ್) ಭಗವಂತ°.

ಈ ರೀತಿಯಾಗಿ ದೇವದೇವೋತ್ತಮ ಪರಮ ಪುರುಷ° ಆ ಭಗವಂತ° ಅರ್ಜುನಂಗೆ ವಿವರಿಸಿ ಹೇಳಿದ್ದರೊಂದಿಂಗೆ –

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ವಿಭೂತಿಯೋಗೋ ನಾಮ ದಶಮೋsಧ್ಯಾಯಃ ॥

ಇಲ್ಲಿಗೆ ಉಪನಿಷತ್ತೂ ಬ್ರಹ್ಮವಿದ್ಯೆಯೂ ಮತ್ತು ಯೋಗಶಾಸ್ತ್ರವೂ ಶ್ರೀಕೃಷ್ಣ-ಅರ್ಜುನರೊಳಾಣ ಸಂವಾದವೂ ಆದ ಶ್ರೀಮದ್ಭಗವದ್ಗೀತೇಲಿ ವಿಭೂತಿಯೋಗಃ ಹೇಳ್ವ ಹತ್ತನೇ ಅಧ್ಯಾಯ ಮುಗುದತ್ತು.

॥ ಗೀತಾಚಾರ್ಯ ಶ್ರೀಕೃಷ್ಣ ಭಗವಾನ್ ಕೀ…. ಜೈ ॥ ಗೀತಾ ಮಾತಾ ಕೀ …. ಜೈ ॥ ಗೋಪಾಲಕೃಷ್ಣ ಭಗವಾನ್ ಕೀ .. ಜೈ ॥

 

॥ ಶ್ರೀಕೃಷ್ಣಾರ್ಪಣಮಸ್ತು ॥

….ಮುಂದುವರಿತ್ತು.

 ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 10 – SHLOKAS 35 – 42

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

 

ಚೆನ್ನೈ ಬಾವ°

   

You may also like...

5 Responses

 1. ಉಡುಪುಮೂಲೆ ಅಪ್ಪಚ್ಚಿ says:

  ಚೆನ್ನೈ ಬಾವ,
  ಹರೇ ರಾಮ; [ ‘ವ್ಯಾಸ;’- ಮನುಷ್ಯ ಸ್ವಭಾವದ ಬುದ್ಧಿ ವೈಚಿತ್ರ್ಯದ ಜ್ಞಾನ ಸಾಗರವ ನಮ್ಮ ಮು೦ದೆ ತೆಗದು ಮಡಗಿದ, ಎಲ್ಲೋಡಿಕ್ಕೆ ತು೦ಬಿಪ್ಪ ಭಗವ೦ತ -” ವ್ಯಾಸಃ.” ] ಅಪ್ಪಪ್ಪು; ಲಾಯಕಕ್ಕೆ ಬತ್ತಾಯಿದ್ದು.ಭಗವ೦ತನ ವಿಭೂತಿಯ ಅನಾವರಣ ಬಾರೀ ಒಪ್ಪಕೆ ಮಾಡ್ತಾ ಇದ್ದಿ. ವ್ಯಾಸ ಮಹರ್ಷಿಗೂ ಹೇಳದ್ದ ವಿಚಾರವ ಇಲ್ಲೆ! ಅದಕ್ಕೆ ಅಲ್ಲದೋ ” ವ್ಯಾಸೋಚ್ಛಿಷ್ಟ೦ ಜಗತ್ಸರ್ವ೦” ಹೇಳುವ ಮಾತು ಬ೦ದದು! ನಿ೦ಗಳ ಸರಳ ವ್ಯಾಖ್ಯಾನ ಹಾ೦ಗೂ ವಿವರಣಗಳ ಓದಲೆ ತು೦ಬಾ ಕೊಶಿಯಾವುತ್ತು.ಧನ್ಯವಾದದೊಟ್ಟಿ೦ಗೆ ನಮೋನ್ನಮಃ

 2. ಪಟಿಕಲ್ಲಪ್ಪಚ್ಚಿ says:

  ಎಷ್ಟು ಸರ್ತಿ ಓದಿದರೂ ಮತ್ತೆ ಮತ್ತೆ ಓದೆಕ್ಕು ಹೇಳಿ ಕಾಂಬ ಈ ವಿವರಣೆಗಳ ಕೊಟ್ಟ ಚೆನ್ನೈ ಭಾವಂಗೆ ನಮೋ ನಮ:

 3. ಗೋಪಾಲ ಬೊಳುಂಬು says:

  ಚೆನ್ನೈ ಭಾವಂಗೆ ಮತ್ತೊಂದರಿ ಇಲ್ಲಿಂದ ಅಡ್ಡ ಬಿದ್ದೆ. ಗೀತೆಯ ಸೂಕ್ಶ್ಮಾತಿಸೂಕ್ಷ್ಮ ವಿವರಣೆಗಳನ್ನೂ ಅಚ್ಚುಕಟ್ಟಾಗಿ ಹವ್ಯಕ ಭಾಷೆಲಿ ಸರಳವಾಗಿ ಕೊಡ್ತಾ ಇಪ್ಪ ಭಾವಯ್ಯಂಗೆ ಧನ್ಯವಾದಂಗೊ.

 4. ಹಿರಿಯರಾಗಿಯೂ ಆತ್ಮೀಯರಾಗಿಯೂ ನಿಂಗೊ ಎಲ್ಲೋರು ನೀಡುವ ಪ್ರೋತ್ಸಾಹ ಹಾಂಗೂ ಎಲ್ಲೋರ ಒಪ್ಪಕ್ಕೆ ಚಿರಋಣಿ. ನಿಂಗಳ ಮೆಚ್ಚುಗೆ ಭಗವಂತನ ಪಾದಾರವಿಂದಕ್ಕೆ ಅರ್ಪಣೆ. ಕುಶಾಲಿಂಗೂ ಕಾರ್ಯಕ್ಕೂ ಹೇಳ್ತಾಂಗೆ “ಅವ° ಮಾಡಿಸಿದ° – ಇವ° ಮಾಡಿದ°”. ಹರೇ ರಾಮ. ನಮೋ ನಮಃ.

 5. ಶರ್ಮಪಚ್ಚಿ says:

  ಬರೇ ಮೇಲಂದ ಮೇಲಂಗೆ ತಾತ್ಪರ್ಯ ಹೇಳದ್ದೆ, ತುಂಬಾ ವಿವರವಾಗಿ ಅದಕ್ಕೆ ಪೂರಕಮಾಹಿತಿಗಳನ್ನೂ ಕೊಡ್ತಾ ಇಪ್ಪ ಚೆನ್ನೈ ಭಾವಯ್ಯಂಗೆ ಧನ್ಯವಾದಂಗೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *