Oppanna.com

ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 61 – 72

ಬರದೋರು :   ಚೆನ್ನೈ ಬಾವ°    on   19/04/2012    9 ಒಪ್ಪಂಗೊ

ಚೆನ್ನೈ ಬಾವ°

ಶ್ಲೋಕ

ತಾನಿ ಸರ್ವಾಣಿ ಸಂಯಮ್ಯ ಯುಕ್ತ ಆಸೀತ ಮತ್ಪರಃ ।
ವಶೇ ಹಿ ಯಸ್ಯೇಂದ್ರಿಯಾಣಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥೬೧॥

ಪದವಿಭಾಗ

ತಾನಿ ಸರ್ವಾಣಿ ಸಂಯಮ್ಯ ಯುಕ್ತಃ ಆಸೀತ ಮತ್-ಪರಃ । ವಶೇ ಹಿ ಯಸ್ಯ ಇಂದ್ರಿಯಾಣಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥

ಅನ್ವಯ

ತಾನಿ ಸರ್ವಾಣಿ ಸಂಯಮ್ಯ ಯುಕ್ತಃ ಮತ್-ಪರಃ ಆಸೀತ । ಹಿ ಯಸ್ಯ ವಶೇ ಇಂದ್ರಿಯಾಣಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ।

ಪ್ರತಿಪದಾರ್ಥ

ತಾನಿ – ಆ ಇಂದ್ರಿಯಂಗಳ, ಸರ್ವಾಣಿ – ಎಲ್ಲ, ಸಂಯಮ್ಯ – ನಿಯಂತ್ರಣಲ್ಲಿ ಮಡಿಕ್ಕೊಂಡು, ಯುಕ್ತಃ – ತೊಡಗಿದವ°, ಮತ್ ಪರಃ – ಎನ್ನೊಡನೆ ಇಪ್ಪ ಸಂಬಂಧಲ್ಲಿ, ಆಸೀತ – ಇದ್ದವ°,  ಹಿ – ಖಂಡಿತವಾಗಿಯೂ, ಯಸ್ಯ – ಆರ, ವಶೇ – ಸಂಪೂರ್ಣ ಅಧೀನಲ್ಲಿ,  ಇಂದ್ರಿಯಾಣಿ – ಇಂದ್ರಿಯಂಗೊ, ತಸ್ಯ – ಅವನ, ಪ್ರಜ್ಞಾ – ಪ್ರಜ್ಞೆಯು, ಪ್ತತಿಷ್ಠಿತಾ – ಸ್ಥಿರವಾಗಿರುತ್ತು.

ಅನ್ವಯಾರ್ಥ

ಆರು ತನ್ನ ಇಂದ್ರಿಯಂಗಳ ಸಂಪೂರ್ಣವಾಗಿ ನಿಯಂತ್ರಿಸಿ ಅಂಕೆಲಿಡುತ್ತನೋ ಮತ್ತು ತನ್ನ ಪ್ರಜ್ಞೆಯ ಎನ್ನಲ್ಲಿ ಕೇಂದ್ರೀಕರುಸುತ್ತನೋ ಅವನ  ಸ್ಥಿರಬುದ್ಧಿಯವ ಹೇಳಿ ಹೇಳುತ್ತವು.

ತಾತ್ಪರ್ಯ / ವಿವರಣೆ

ಯೋಗದ ಪರಿಪೂರ್ಣತೆಯ ಅತ್ಯುನ್ನತ ಪರಿಕಲ್ಪನೆಯು ಕೃಷ್ಣಪ್ರಜ್ಞೆ ಹೇಳ್ವದು ಈ ಶ್ಲೋಕಂದ ಸ್ಪಷ್ಟವಾವ್ತು. ಮನುಷ್ಯಂಗೆ ಕೃಷ್ಣಪ್ರಜ್ಞೆ ಇಲ್ಲದ್ದೆ ಇಂದ್ರಿಯ ನಿಗ್ರಹ ಸಾಧ್ಯ ಇಲ್ಲೆ. ದೂರ್ವಾಸಮುನಿ  ಅಂಬರೀಷ ಮಹಾರಾಜನತ್ರೆ  ಜಗಳ ಸುರುಮಾಡಿದ°. ದೂರ್ವಾಸಮುನಿ ಅಹಂಕಾರಂದ ಅನಗತ್ಯವಾಗಿ ಕೋಪಮಾಡಿಗೊಂಡ. ಹಾಂಗಾಗಿ ತನ್ನ ಇಂದ್ರಿಯಂಗಳ ಅಂಕೆಲಿ ಮಡಿಕ್ಕೊಂಬಲೆ ಎಡಿಗಾಯ್ದಿಲ್ಲೆ. ರಾಜನಾದರೋ ಋಷಿಯಾಂಗಿಪ್ಪ ಶಕ್ತಿವಂತ° ಯೋಗಿ ಅಲ್ಲ. ಆದರೂ ಭಗವಂತನ ಪರಮ ಭಕ್ತ° ಆದ್ದರಿಂದ ಋಷಿಯು ಮಾಡಿದ ಅನ್ಯಾಯವ ಎಲ್ಲ ಮೌನವಾಗಿ ಸಹಿಸಿಗೊಂಡ° ಹಾಂಗೂ ಇದರಿಂದ ವಿಜಯವ ಸಾಧುಸಿದ°.

ಬನ್ನಂಜೆ ತಮ್ಮ ವಿವರಣೆಲಿ ಹೇಳುತ್ತವು – ಭಗವಂತನನ್ನೇ ಪರತತ್ವ ಹೇದು ನಂಬಿ ಅವನಲ್ಲಿಯೇ ಮನಸ್ಸ ಕೇಂದ್ರೀಕರುಸೆಕ್ಕು. ಹೀಂಗೆ ಮಾಡುವದರಿಂದ ಇಂದ್ರಿಯಂಗಳ ಗೆದ್ದು ಅರಿವು ಗಟ್ಟಿಯಾವ್ತು. ಇಂದ್ರಿಯಂಗಳಿಂದ ಮನಸ್ಸು ಕದಲುವದು, ಅಥವಾ, ಮನಸ್ಸಿಂದ ಇಂದ್ರಿಯ ಬೇಡದ ಕಾರ್ಯಲ್ಲಿ ತೊಡಗುತ್ತದು ಎಲ್ಲೋರನ್ನೂ ಕಾಡುವ ಸಮಸ್ಯೆ. ಈ ಸಮಸ್ಯೆಂದ ಈಚಿಗೆ ಬರೇಕಾರೆ ನಾವು ಇಂದ್ರಿಯಂಗಳೆಂಬ ಕುದುರೆಗಳ ಪಳಗಿಸಿ, ಮನಸ್ಸು ಹೇಳ್ವ ಕಡಿವಾಣಲ್ಲಿ ಅದರ ಬಿಗುದು, ಅದು ಸಡಿಲವಾಗದ್ದಾಂಗೆ ಹಿಡುದುಮಡುಗೆಕ್ಕು. ಈ ಕಾರ್ಯಲ್ಲಿ ಯಶಸ್ವಿ ಆಯೇಕ್ಕಾರೆ ಮದಾಲು ನಾವು ಭಗವಂತನಲ್ಲಿ ಶರಣಾಯೇಕು. “ಈ ಜವಾಬ್ದಾರಿಯ ಎನಗೊಪ್ಪುಸು” ಹೇಳಿ ಹೇಳುತ್ತ° ಕೃಷ್ಣ°. “ಎನ್ನ ಇಂದ್ರಿಯಂಗಳ ದಾರಿತಪ್ಪದಂತೆ ಎನ್ನೊಳ ಇದ್ದು ಭಗವಂತ°!, ನಿನ್ನ ಚಿಂತನೆಯ ಶಕ್ತಿ ನಿರಂತರ ಎನ್ನ ಮನಸ್ಸಿಲ್ಲಿ ಉಳಿತ್ತಾಂಗೆ ಮಾಡು” ಹೇಳಿ ಭಗವಂತನ ಪ್ರಾರ್ಥನೆ ಮಾಡೆಕ್ಕು. ಭಗವಂತನಲ್ಲಿ ಶರಣಾಗತಿ ಆಗದ್ದೆ ಎಲ್ಲವನ್ನೂ ಸ್ವಪ್ರಯತ್ನಂದ ಮಾಡುತ್ತೆ ಹೇಳಿ ಹೆರಡುವುದು ಅಸಾಧ್ಯ. ಪ್ರಯತ್ನ ಮಾಡೇಕು, ಪ್ರಯತ್ನಲ್ಲಿ ಸಫಲನಾಯೇಕು ಹೇಳಿ ಬಗವಂತನಲ್ಲಿ ಬೇಡಿಗೊಂಬದು. ಅವನಲ್ಲಿ ಶರಣಾದಪ್ಪಗ ಒಂದಲ್ಲ ಒಂದು ದಿನ ಅನುಭೂತಿಯ ಅನುಗ್ರಹ ಆವುತ್ತು. ಆವಾಗ ಸಂಪೂರ್ಣ ಇಂದ್ರಿಯ ನಿಗ್ರಹ ಸಾಧ್ಯ. ಈ ಸಾಧನೆ ಅನೇಅ ಜನ್ಮದ್ದು. ಹತ್ತು ದಿನ ಸಾಧನೆ ಮಾಡಿ ನಿರಾಶೆಯಾಗಿ ನಾಸ್ತಿಕನಾಗದೆ, ನಿರಂತರ ಸಾಧನೆ ಮಾಡಿದರೆ ಯಶಸ್ಸು  ನಮ್ಮದಾವುತ್ತು. ಆರ  ಇಂದ್ರಿಯಂಗೊ ಅವನ ವಶಕ್ಕೆ ಬಂತೋ, ಅವರ ಅರಿವು ಗಟ್ಟಿಯಾವುತ್ತು. ಆತ° ಜೀವನಲ್ಲಿ, ಸಾಧನೆಯ ಹಾದಿಲಿ ಗೆಲ್ಲುತ್ತ°.

ಶ್ಲೋಕ

ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ ।
ಸಂಗಾತ್ಸಂಜಾಯತೇ ಕಾಮಃ ಕಾಮಾತ್ಕ್ರೋಧೋsಭಿಜಾಯತೇ ॥೬೨॥

ಪದವಿಭಾಗ

ಧ್ಯಾಯತಃ ವಿಷಯಾನ್ ಪುಂಸಃ ಸಂಗಃ ತೇಷು ಉಪಜಾಯತೇ । ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧಃ ಅಭಿಜಾಯತೇ ॥

ಅನ್ವಯ

ವಿಷಯಾನ್ ಧ್ಯಾಯತಃ ಪುಂಸಃ ತೇಷು ಸಂಗಃ ಉಪಜಾಯತೇ । ಸಂಗಾತ್ ಕಾಮಃ ಸಂಜಾಯತೇ । ಕಾಮಾತ್ ಕ್ರೋಧಃ ಅಭಿಜಾಯತೇ ॥

ಪ್ರತಿಪದಾರ್ಥ

ವಿಷಯಾನ್ – ಇಂದ್ರಿಯವಿಷಯಂಗಳ, ಧ್ಯಾಯತಃ – ಚಿಂತಿಸಿಗೊಂಡಿಪ್ಪ, ಪುಂಸಃ – ವ್ಯಕ್ತಿಯು, ತೇಷು – ಅವುಗಳಲ್ಲಿ (ಇಂದ್ರಿಯ ವಿಷಯಂಗಳಲ್ಲಿ ),   ಸಂಗಃ – ಆಸಕ್ತಿ, ಉಪಜಾಯತೇ – ಬೆಳೆತ್ತು,  ಸಂಗಾತ್ – ಆಸಕ್ತಿಯಿಂದ, ಕಾಮಃ – ಆಸೆ, ಸಂಜಾಯತೇ – ವರ್ಧಿಸುತ್ತು, ಕಾಮಾತ್ – ಆಸೆಯಿಂದ, ಕ್ರೋಧಃ – ಕೋಪವು, ಅಭಿಜಾಯತೇ – ವ್ಯಕ್ತವಾವ್ತು.

ಅನ್ವಯಾರ್ಥ

ಇಂದ್ರಿಯವಿಷಯಂಗಳ ಕುರಿತು ಚಿಂತಿಸುವ ಮನುಷ್ಯಂಗೆ ಅವುಗಳಲ್ಲಿ ಆಸಕ್ತಿ ಹುಟ್ಟುತ್ತು. ಇಂತಹ ಆಸಕ್ತಿಂದ ಕಾಮವು ಹುಟ್ಟುತ್ತು. ಕಾಮಂದಲಾಗಿ ಕ್ರೋಧವು ಉದ್ಭವವಾವ್ತು.

ತಾತ್ಪರ್ಯ / ವಿವರಣೆ

ಕೃಷ್ಣಪ್ರಜ್ಞೆಯಿಲ್ಲದವ° ಇಂದ್ರಿಯಂಗಳ ಸುಖದ ವಸ್ತುಗಳ ಕುರಿತು ಯೋಚನೆ ಮಾಡುವಾಗ ಐಹಿಕ ಬಯಕೆಗೊ ಉಂಟಾವುತ್ತು. ಇಂದ್ರಿಯಂಗೊ ವಾಸ್ತವಿಕ ಕಾರ್ಯಲ್ಲಿ ತೊಡಗಲೆ ಬಯಸುತ್ತು. ಅದೆಲ್ಲವ ಭಗವಂತನ ಅಲೌಕಿಕ ಪ್ರೀತಿಯ ಸೇವೆಲಿ ತೊಡಗುಸದಿದ್ದರೆ ನಿಶ್ಚಯವಾಗಿಯೂ ಅವು ಪ್ರಾಪಂಚಿಕತೆಯ ಸೇವೆಲಿ ತೊಡಗಲೆ ಬಯಸುತ್ತು. ಐಹಿಕ ಜಗತ್ತಿಲ್ಲಿ ದೇವಾದಿ ದೇವತೆಗಳೂ ಇಂದ್ರಿಯ ವಸ್ತುಗಳ ಪ್ರಭಾವಕ್ಕೆ ಒಳಗಾವುತ್ತವು. ಇಹಜೀವನದ ಅಸ್ತಿತ್ವದ ಸಮಸ್ಯೆಂದ ಪಾರಪ್ಪಲೆ ಒಂದೇ ಮಾರ್ಗ ಹೇದರೆ ಕೃಷ್ಣಪ್ರಜ್ಞೆಯ ಬೆಳೆಶಿಗೊಂಬದು. ಕೃಷ್ಣಪ್ರಜ್ಞೆಯಿಲ್ಲದ್ದವ° ಕೃತಕವಾದ ತುಳಿತಂದಲಾಗಿ ಇಂದ್ರಿಯಂಗಳ ನಿಯಂತ್ರಿಸುವುದರಲ್ಲಿ ಶಕ್ತನಪ್ಪಲೆ ಪ್ರಯತ್ನಿಸಿದರೂ ಅಂತಿಮವಾಗಿ ಸೋಲನ್ನೇ ಕಾಂಬದು. ಎಂತಕೇದರೆ, ಇಂದ್ರಿಯಸುಖದ ಬಹು ಅಲ್ಪ ಯೋಚನೆಯೂ ಅವಂಗೆ ತನ್ನ ಬಯಕೆಗಳ ತೃಪ್ತಿಗೊಳಿಸಿಕೊಂಬಂತೆ ಕಲಕಿಬಿಡುತ್ತು. ವಿಷಯಂಗಳನ್ನೇ ಚಿಂತಿಸುತ್ತಿಪ್ಪ ಮನುಷ್ಯಂಗೆ ಅವುಗಳ ನಂಟು ಬೆಳೆತ್ತು. ನಂಟಿಂದ ಆಸೆ, ಆಸೆಂದ ಕ್ರೋಧಕ್ಕೆ ದಾರಿಯಾವುತ್ತು.

ಶ್ಲೋಕ

ಕ್ರೋಧಾತ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ ।
ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾತ್ಪ್ರಣಶ್ಯತಿ ॥೬೩॥

ಪದವಿಭಾಗ

ಕ್ರೋಧಾತ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿ-ವಿಭ್ರಮಃ । ಸ್ಮೃತಿ-ಭ್ರಂಶಾತ್ ಬುದ್ಧಿ-ನಾಶಃ ಬುದ್ಧಿ-ನಾಶಾತ್ ಪ್ರಣಶ್ಯತಿ ॥

ಅನ್ವಯ

ಕ್ರೋಧಾತ್ ಸಮ್ಮೋಹಃ ಭವತಿ । ಸಮ್ಮೋಹಾತ್ ಸ್ಮೃತಿ-ವಿಭ್ರಮಃ , ಸ್ಮೃತಿ-ಭ್ರಂಶಾತ್ ಬುದ್ಧಿ-ನಾಶಃ, ಬುದ್ಧಿ-ನಾಶಾತ್ ಪ್ರಣಶ್ಯತಿ ॥

ಪ್ರತಿಪದಾರ್ಥ

ಕ್ರೋಧಾತ್  – ಕೋಪಂದ, ಸಮ್ಮೋಹಃ – ಪರಿಪೂರ್ಣ ಭ್ರಾಂತಿ, ಭವತಿ – ಉಂಟಾವ್ತು, ಸಮ್ಮೋಹಾತ್ – ಭ್ರಾಂತಿಂದ, ಸ್ಮೃತಿ-ವಿಭ್ರಮಃ – ನೆಂಪಿನ ಭ್ರಮೆ, ಸ್ಮೃತಿ-ಭ್ರಂಶಾತ್ – ನೆಂಪಿನ ಭ್ರಮೆಂದ, ಬುದ್ಧಿ-ನಾಶಃ – ಬುದ್ಧಿಯ ನಾಶ, ಬುದ್ಧಿ-ನಾಶಾತ್ – ಬುದ್ಧಿಯವಿನಾಶಂದ, ಪ್ರಣಶ್ಯತಿ – ಪತನ ಹೊಂದುತ್ತ°.

ಅನ್ವಯಾರ್ಥ

ಕ್ರೋಧಂದ ಸಂಮೋಹವು ಉಂಟಾವುತ್ತು, ಸಂಮೋಹಂದ ಸ್ಮೃತಿಭ್ರಮೆ, ಸ್ಮೃತಿಭ್ರಮೆಂದ ಬುದ್ಧಿನಾಶ, ಬುದ್ಧಿನಾಶಂದ ಮನುಷ್ಯ° ಮತ್ತೆ ಐಹಿಕ ಪ್ರಪಂಚಲ್ಲಿ ಮುಳುಗಿಹೋವುತ್ತ° (ಆತ್ಮೋನ್ನತಿಂದ ಪತನ ಹೊಂದುತ್ತ°).

ತಾತ್ಪರ್ಯ / ವಿವರಣೆ

ಕೃಷ್ಣಪ್ರಜ್ಞೆಯ ಬೆಳೆಶಿಗೊಂಡರೆ ಪ್ರತಿಯೊಂದು ವಸ್ತುವೂ ಭಗವಂತನ ಸೇವಗೆ ಒದಗುತ್ತು. ಕೃಷ್ಣಪ್ರಜ್ಞೆಯ ಅರಿವೇ ಇಲ್ಲದ್ದವು ಕೃತಕವಾಗಿ ಪ್ರಾಪಂಚಿಕ ವಸ್ತುಗಳ ದೂರಮಾಡ್ಳೆ ಪ್ರಯತ್ನಿಸುಗು. ಪರಿಣಾಮವಾಗಿ ಅವ್ವು ಐಹಿಕ ಬಂಧನಂದ ಬಿಡುಗಡೆ ಬಯಸಿದರೂ ವೈರಾಗ್ಯದ ಪರಿಪೂರ್ಣ ಹಂತವ ಮುಟ್ಟುತ್ತವಿಲ್ಲೆ. ಇದಕ್ಕೆ ಪ್ರತಿಯಾಗಿ ಕೃಷ್ಣಪ್ರಜ್ಞೆ ಇಪ್ಪವ° ಪ್ರತಿಯೊಂದು ವಸ್ತುವನ್ನೂ ಭಗವಂತನ ಸೇವಗೆ ಹೇಂಗೆ ಬಳಸಿಕೊಳ್ಳೆಕು ಹೇಳ್ವದರ ತಿಳಿದಿರುತ್ತ°. ಆದ್ದರಿಂದ ಅವ° ಐಹಿಕ ಪ್ರಜ್ಞಗೆ ಬಲಿಯಾವುತ್ತನಿಲ್ಲೆ. ನಿಜಭಕ್ತನಾದವ° ಕೃಷ್ಣಪ್ರಜ್ಞೆಂದ ದೇವರ ಪ್ರಸಾದವ ಪ್ರಸಾದರೂಪವಾಗಿ ಸ್ವೀಕರುಸುತ್ತ. ಆದರೆ ಕೃತಕ ಭಕ್ತನಾದವ ಅದು ಪ್ರಾಪಂಚಿಕವಾದದ್ದು ಹೇಳಿ ತಿರಸ್ಕರುಸುತ್ತ°. ಆದ್ದರಿಂದ ನಿರಾಕಾರವಾದಿಯಾದವ° ತನ್ನ ಕೃತಕ ವೈರಾಗ್ಯದ ಫಲವಾಗಿ ಬದುಕಿನ ಸವಿಯಲೆ ಅರಡಿಯದ್ದವ ಆಗಿ ಹೋವ್ತ°. ಇಂತಹ ಆತ್ಮ ಮುಕ್ತಿಯವರೇಗೆ ಏರಿದರೂ ಕೂಡಾ ಅವಂಗೆ ಭಕ್ತಿಪೂರ್ವಕ ಸೇವೆ ನೆರವಿಲ್ಲದ್ದರಿಂದ ಮತ್ತೆ ಕೆಳಂಗೆ ಬೀಳುತ್ತ°.

ಬನ್ನಂಜೆಯವು ಇದರ ಈ ರೀತಿಯಾಗಿ ವ್ಯಾಖ್ಯಾನಿಸುತ್ತವು- ಒಂದು ವಸ್ತುವಿನ ನಿರಂತರ ಸಂಪರ್ಕಂದಲಾಗಿ ನವಗೆ ಅದರ ಮೇಲೆ ಮೋಹ ಬೆಳೆತ್ತು. ಮೊದಲು ಪರಿಚಯ, ಪರಿಚಯಂದ ಸ್ನೇಹ, ನಂತರ ಆ ಸ್ನೇಹ ಅಂಟಿಕೊಂಡ (ಮೋಹ) ಸ್ನೇಹವಾಗಿ (ಅಟಾಚ್ ಮೆಂಟ್), ಮತ್ತೆ ಅದು ತನ್ನದ್ದಾಯೇಕು ಎಂಬ ಆಸೆ. ಆಸೆ ಪಟ್ಟದ್ದು ನೆರವೇರದ್ದಪ್ಪಗ ಕ್ರೋಧ. ಈ ಕ್ರೋಧದ ಮೂಲ ಪ್ರೀತಿ. ಕೋಪಕ್ಕೆ ಮೂಲ ಕಾರಣ ಕಾಮನೆ. ನವಗೆ ಕೋಪ ಬಾರದ್ದ ಹಾಂಗೆ ತಡೆಕ್ಕಾದರೆ , ಮದಾಲು ಕಾಮನೆಯ ಬಿಟ್ಟುಬಿಡೇಕು. ಆಸೆ ಕಮ್ಮಿ ಆದಾಂತೆ ಕೋಪವೂ ಕಮ್ಮಿ ಆವ್ತು. ಅಂಟಿಗೊಂಬದರಿಂದ ಆಸೆ ಆಕಾಕ್ಷೆಗೊ ಬೆಳೆತ್ತು. ಅದು ಈಡೇರದ್ದಪ್ಪಗ ಕೋಪ. ಕೋಪಂದ ಸಂಮೋಹ. ಹೇಳಿರೆ, ಅಸಂಗತ ವಿಚಾರಂಗೊ ತಲೆಲಿ ಮೂಡಿ ಮಾಡ್ಳಾಗದ್ದರ ಮಾಡುವ ಬಯಕೆ. ಇದರಿಂದ ಯುಕ್ತಾಯುಕ್ತಂಗಳ ವಿಶ್ಲೇಷಣೆ ಮಾಡುವ ವಿವೇಚನಾ ಶಕ್ತಿ ಹೊರಟುಹೋಗಿ, ತಪ್ಪನ್ನೇ ಸರಿ ಹೇಳಿ ಸಮರ್ಥನೆ ಮಾಡುವ ಮಟ್ಟಕ್ಕೆ ಇಳಿಯೆಕ್ಕಾವ್ತು. ಪಲಿತಾಂಶ – ಪ್ರತೀಕಾರ ಮಾಡೇಕು ಹೇಳ್ವ ಹಠ. ಅದರಿಂದ ಪೂರ್ತಿ ತಿಳಿಗೇಡಿತನ ಮತ್ತು ಅಕೇರಿಗೆ ಆತ್ಮದ ಅಧಃಪತನ, ವಿನಾಶ -ಸರ್ವನಾಶ!.

ಬುದ್ಧಿ ನಾಶವಾದಪ್ಪಗ ಮನಸ್ಸು ಸತ್ತಹಾಂಗೆ. ಅದರಿಂದ ಜೀವನ ನರಕ್ದ ದಾರಿಯತ್ತ ಹೋಪಂತಾವ್ತು. ಇದು ಅಧಃಪತನಕ್ಕೆ ದಾರಿ. ನಾವು ಎತ್ತರಕ್ಕೇರೆಕ್ಕಾರೆ ಪರಮಾತ್ಮನ ಮಹತ್ವವ ಅರ್ತು ಅವಂಗೆ ಶರಣಾಯೇಕ್ಕು. ಒಳ್ಳೆಯ ದಾರಿಲಿ ಮನಸ್ಸು ಚಿಂತನೆ ಮಾಡಿಯಪ್ಪಗ ಆತ್ಮ ಉನ್ನತಿಗೇರ್ಲೆ ಸಾಧ್ಯ. ಇದಕ್ಕೆ ಮದಾಲು ನಾವು ಅಂಟಿಗೊಂಬದರ (ಓವರ್ ಅಟಾಚ್ ಮೆಂಟ್) ಬಿಟ್ಟುಬಿದೇಕು. ಇದರ ಅರ್ಥ ಆರನ್ನೂ ಪ್ರೀತಿಸುಲಾಗ ಹೇಳಿ ಅಲ್ಲ. ಪ್ರೀತಿಯಿರಲಿ, ಸ್ನೇಹವಿರಲಿ ಆದರೆ ಮೋಹ ಮಾತ್ರ ಆಗದ್ದಿರಲಿ. ಬಂದದ್ದು ಬರಲಿ ಎಂಬ ದೃಢ ನಿರ್ಧಾರ ನಮ್ಮದ್ದಾಗಿರೇಕು. ಹೀಂಗೇ ಆಯೆಕ್ಕು, ಹಾಂಗೇ ಆಯೆಕ್ಕು ಹೇಳ್ವ ಅತಿಮೋಹ ದುಃಖಕ್ಕೆ ಕಾರಣ ಆವ್ತು. ಎಲ್ಲವುದರ ಒಟ್ಟಿಂಗೆ ಇದ್ದು, ಎಲ್ಲವನ್ನೂ ಪ್ರೀತಿಸುವದು., ಆದರೆ, ಅಂಟಿಗೊಳ್ಳದ್ದೇ ಇಪ್ಪದು. ಇದೇ ಸಾಧನೆಯ ಮೂಲ ಮಂತ್ರ. ಮನಸ್ಸು ಯಾವಾಗಲೂ ಪ್ರಸನ್ನವಾಗಿರೆಕ್ಕು. ಪ್ರಸನ್ನತೆ ಇಲ್ಲದ್ದಪ್ಪಗ ಮಾನಸಿಕವಾಗಿ, ದೈಹಿಕವಾಗಿ ನಾವು ಆರೋಗ್ಯವ ಕಳಕ್ಕೊಳ್ಳುತ್ತು. ಎಂತಹ ಪ್ರಸಂಗಲ್ಲಿಯೂ ತಲೆಕೆಡುಸದ್ದೆ ಹಾಯಾಗಿಪ್ಪದು ಪ್ರಸನ್ನತೆ.

ಈ ರೀತಿಯ ಪ್ರಸನ್ನತೆಯ ಗಳುಸುವದು ಹೇಂಗೆ ? –

ಶ್ಲೋಕ

ರಾಗದ್ವೇಷವಿಮುಕ್ತೈಸ್ತು ವಿಷಯಾನಿಂದ್ರಿಯೈಶ್ಚರನ್ ।
ಆತ್ಮವಶ್ಯೈರ್ವಿಧೇಯಾತ್ಮಾ ಪ್ರಸಾದಮಧಿಗಚ್ಛತಿ ॥೬೪॥

ಪದವಿಭಾಗ

ರಾಗ-ದ್ವೇಷ-ವಿಮುಕ್ತೈಃ ತು ವಿಷಯಾನ್ ಇಂದ್ರಿಯೈಃ ಚರನ್ । ಆತ್ಮ-ವಶ್ಯೈಃ ವಿಧೇಯ-ಆತ್ಮಾ ಪ್ರಸಾದಂ ಅಧಿಗಚ್ಛತಿ ॥

ಅನ್ವಯ

ವಿಧೇಯ-ಆತ್ಮಾ ತು ರಾಗ-ದ್ವೇಶ-ವಿಮುಕ್ತೈಃ ಆತ್ಮ-ವಶ್ಯೈಃ ಇಂದ್ರಿಯೈಃ ವಿಷಯಾನ್ ಚರನ್ ಪ್ರಸಾದಂ ಅಧಿಗಚ್ಛತಿ ।

ಪ್ರತಿಪದಾರ್ಥ

ವಿಧೇಯ-ಆತ್ಮಾ – ನಿಯಂತ್ರಿತ ಸ್ವಾತಂತ್ರ್ಯವ ಅನುಸರುಸುವವ°, ತು – ಆದರೋ, ರಾಗ-ದ್ವೇಶ-ವಿಮುಕ್ತೈಃ – ಆಸಕ್ತಿ, ಅನಾಸಕ್ತಿ(ದ್ವೇಷ), ಮುಕ್ತನಾದವನಿಂದ, ಆತ್ಮವಶ್ಶ್ಯೈಃ – ನಿಯಂತ್ರಣಂಗಳ ಮೂಲಕ, ಇಂದ್ರಿಯೈಃ – ಇಂದ್ರಿಯಂಗಳಿಂದ, ವಿಷಯಾನ್ – ಇಂದ್ರಿಯ ವಿಷಯಂಗಳ, ಚರನ್ – ವರ್ತಿಸಿ, ಪ್ರಸಾದಮ್ – ಭಗವಂತನ ಅನುಗ್ರಹವ, ಅಧಿಗಚ್ಛತಿ – ಹೊಂದುತ್ತ°.

ಅನ್ವಯಾರ್ಥ

ರಾಗದ್ವೇಷಂಗಳಿಂದ ಬಿಡುಗಡೆಯಾಗಿ ಸ್ವಾತಂತ್ರ್ಯವ ಕ್ರಮಗೊಳುಸುವ ತತ್ವಂಗಳ ಮೂಲ ತನ್ನ ಇಂದ್ರಿಯಂಗಳ ನಿಯಂತ್ರಿಸಿಗೊಳ್ಳಬಲ್ಲವ° ಭಗವಂತನ ಪೂರ್ಣ ದಯೆಯ ಪಡೆಯಬಲ್ಲ°.

ತಾತ್ಪರ್ಯ / ವಿವರಣೆ

ಒಬ್ಬ° ಮನುಷ್ಯ° ಏವುದಾದರೂ ಕೃತಕ ರೀತಿಗಳಲ್ಲಿ ಹೆರಂದ ಇಂದ್ರಿಯಂಗಳ ನಿಯಂತ್ರಿಸುಗು. ಆದರೆ, ಇಂದ್ರಿಯಂಗೊ ಭಗವಂತನ ದಿವ್ಯ ಸೇವೆಲಿ ತೊಡಗಿಲ್ಲೆ ಹೇಳಿ ಆದರೆ ಅವ° ಪತನ ಅಪ್ಪ ಸಾಧ್ಯತೆ ಇದ್ದು. ಸಂಪೂರ್ಣ ಕೃಷ್ಣಪ್ರಜ್ಞೆಲಿಪ್ಪವಂಗೆ ಭೋಗಾಸಕ್ತಿ ಏನೇನೂ ಇರುತ್ತಿಲ್ಲೆ. ಕೃಷ್ಣಪ್ರಜ್ಞೆಲಿ ಇಪ್ಪ ಮನುಷ್ಯಂಗೆ ಕೃಷ್ಣನ ತೃಪ್ತಿಯೇ ಮುಖ್ಯ ಹೊರತು ಬೇರೆಂತದೂ ಅಲ್ಲ. ಹಾಂಗಾಗಿ ಅವ° ಎಲ್ಲಾ ರೀತಿಯ ಮೋಹ ತಾಪ ನಿರ್ಮೋಹಂಗಳ ಮೀರಿದವ° ಆಗಿರುತ್ತ°.

ಇಂದ್ರಿಯ ನಿಗ್ರಹ ಅಥವಾ ಹಚ್ಚಿಕೊಳ್ಳದ್ದೆ ಇಪ್ಪದು ಹೇಳಿರೆ ಎಲ್ಲಾ ವಿಷಯ ಭೋಗಂಗಳ ತೊರದು, ಪ್ರಾಪಂಚಿಕ ವ್ಯವಹಾರಂದ ದೂರ ಸರುದು ಕಣ್ಮುಚ್ಚಿ ಕೂಬದಲ್ಲ. ಇಂದ್ರಿಯಂಗಳಿಂದ ವಿಷಯವ ಗ್ರಹಿಸು, ಅದು ನಿರಂತರ. ಆದರೆ, ಅದ್ರಿಂದ ಪ್ರಭಾವಿತನಾಗಿ ಅದರ ದಾಸನಾಗಿಬಿಡೆಡ. ವಿಷಯಂಗಳ ಇಂದ್ರಿಯಂಗಳಿಂದ ಅನುಭವಿಸು, ಆದರೆ, ವಿಷಯಂಗೊಕ್ಕೆ ರಾಗ-ದ್ವೇಷಂಗಳ ಹವ್ಯಾಸವ ಅಂಟಿಸಿಬಿಟ್ಟಿಕ್ಕೇಡ. ಏನು ಬಂತೋ ಅದರ ಹಾಂಗೇ ಅನುಭವಿಸು. ಇಂತಹ ಮನೋವೃತ್ತಿಯ ಬೆಳೆಸಿಗೊಂಡಪ್ಪಗ ಇಂದ್ರಿಯ ಯಾವ ವಿಷಯವನ್ನು ಗ್ರಹಿಸಿದರೂ ಅಪಾಯ ಆವ್ತಿಲ್ಲೆ. ತಟಸ್ಥ ಮನಸ್ಸಿಂದ ಯಾವ ವಿಷಯವನ್ನೂ ಕೇಳುವದರಿಂದ ನೋಡುವದರಿಂದ ಯಾವ ಅಪಾಯವೂ ಇಲ್ಲೆ. ತಟಸ್ಥ ಮನಸ್ಸು ಹೇಳ್ವದಕ್ಕೆ ಒಂದು ಉದಾಹರಣೆ – ಕೆಲವೊಂದರಿ, ನಾವು ನಮ್ಮ ಸ್ನೇಹಿತರ ದಾರಿ ಮಧ್ಯಲ್ಲಿ ಭೇಟಿಯಾವುತ್ತು. ನಾವು ಅವರತ್ರೆ ಕೂದು / ನಿಂದು ರಜಾ ಹೊತ್ತು ಮಾತಾಡಿಕ್ಕಿ ನಮ್ಮ ದಾರಿ ಹಿಡಿತ್ತು. ಆ ಮತ್ತೆ, ಆರಾರು ಬಂದು ನಮ್ಮತ್ರೆ ಆ ಸ್ನೇಹಿತ ಏವ ಬಣ್ಣದ ಅಂಗಿ ಹಾಕಿದ್ದಿತ್ತ° ಹೇಳಿ ಕೇಳಿರೆ ನವಗೆ ಗೊಂತಿರುತ್ತಿಲ್ಲೆ/ನೆಂಪಿರುತ್ತಿಲ್ಲೆ. ಇಲ್ಲಿ ನಾವು ನೋಡಿರುತ್ತು, ಆದರೆ ಆ ಬಗ್ಗೆ ಗಮನಿಸಿರುತ್ತಿತ್ತಿಲ್ಲೆ. ಎಂತಕೆ ಕೇಳಿರೆ ನವಗದು ಅಗತ್ಯ ಇರ್ತಿಲ್ಲೆ. ಇದೇ ರೀತಿ ಮನಸ್ಸು ತಟಸ್ಥವಾಗಿರಿಸಿಗೊಂಡು ಏವ ವಿಷಯ ಗ್ರಹಿಸಿದರೂ ಅಪಾಯ ಇಲ್ಲೆ. ಇದರಿಂದ ಇಂದ್ರಿಯಂಗೊ ಅಧೀನವಾಗಿರುತ್ತು. ಮನಸ್ಸು ವಿಧೇಯವಾಗಿರುತ್ತು. ನಮ್ಮ ಅಂತರ್ಯಲ್ಲಿ ನಿರ್ಲಿಪ್ತತೆಯ  ಬೆಳೆಸಿಗೊಂಡಪ್ಪಗ ಎಲ್ಲೋರ ಜೊತಗಿದ್ದು ಏಕಾಂತತೆಯ ಅನುಭವಿಸಲೆಡಿಗು. ಎಲ್ಲೋರ ಜೊತೆಲೇ ಇದ್ದು ಬೇರೇಯೇಯಾಗಿಪ್ಪಲೆಡಿಗು. ಅಂತರಂಗದ ಪ್ರಪಂಚಲ್ಲಿ ಬೇರೆಯಾಗಿಪ್ಪ ಸ್ಥಿತಿ ಇದು. ಈ ರೀತಿ ಬದುಕ್ಕಲೆ ಕಲ್ತಪ್ಪಗ ಮನಸ್ಸು ತಿಳಿಗೊಳ್ಳುತ್ತು. ಯಾವಾಗಲೂ ಆತ್ಮ ಸಂತೋಷ ಹೊರಹೊಮ್ಮುತ್ತಿರ್ತು. ಸಾಧನೆ ಸುಗಮ ಆವ್ತು.

ಶ್ಲೋಕ

ಪ್ರಸಾದೇ ಸರ್ವದುಃಖಾನಾಂ ಹಾನಿರಸ್ಯೋಪಜಾಯತೇ ।
ಪ್ರಸನ್ನಚೇತಸೋ ಹ್ಯಾಶು ಬುದ್ಧಿಃ ಪರ್ಯವತಿಷ್ಠತೇ ॥೬೫॥

ಪದವಿಭಾಗ

ಪ್ರಸಾದೇ ಸರ್ವ-ದುಃಖಾನಾಮ್ ಹಾನಿಃ ಅಸ್ಯ ಉಪಜಾಯತೇ । ಪ್ರಸನ್ನ-ಚೇತಸಃ ಹಿ ಆಶು ಬುದ್ಧಿಃ ಪರಿ-ಅವತಿಷ್ಠತೇ ॥

ಅನ್ವಯ

ಪ್ರಸಾದೇ ಅಸ್ಯ ಸರ್ವ-ದುಃಖಾನಾಂ ಹಾನಿಃ ಉಪಜಾಯತೇ । ಪ್ರಸನ್ನ-ಚೇತಸಃ ಹಿ ಬುದ್ಧಿಃ ಆಶು ಪರ್ಯವತಿಷ್ಠತೇ ॥

ಪ್ರತಿಪದಾರ್ಥ

ಪ್ರಸಾದೇ – ಭಗವಂತನ ಅವ್ಯಾಜ ಅನುಗ್ರಹವ ಸಾಧಿಸಿಯಪ್ಪಗ, ಅಸ್ಯ – ಅವನ, ಸರ್ವ-ದುಃಖಾನಾಮ್ – ಎಲ್ಲಾ ಭೌತಿಕ ಕ್ಲೇಶಂಗಳ, ಹಾನಿಃ ನಾಶವು,  ಉಪಜಾಯತೇ – ಉಂಟಾವುತ್ತು. ಪ್ರಸನ್ನ-ಚೇತಸಃ – ಸಂತೋಷಚಿತ್ತನಾದ, ಹಿ – ಖಂಡಿತವಾಗಿಯೂ, ಬುದ್ಧಿಃ – ಬುದ್ಧಿಯು, ಆಶು – ಪಕ್ಕನೆ, ಪರಿ-ಅವತಿಷ್ಠತೇ  – ಸಾಕಷ್ಟು ಸ್ಥಾಪಿತವಾವ್ತು (ಸ್ಥಿರವಾಗಿರ್ತು).

ಅನ್ವಯಾರ್ಥ

ಕೃಷ್ಣಪ್ರಜ್ಞೆಲಿ ಹೀಂಗೆ ತೃಪ್ತಿಹೊಂದಿದವಂಗೆ ಐಹಿಕ ಬದುಕಿನ ಯಾವ ಕ್ಲೇಶಂಗಳೂ ಇರುತ್ತಿಲ್ಲೆ. ಇಂತಹ ತೃಪ್ತಿಯ ಕಂಡ ಪ್ರಜ್ಞೆಲಿ ಮನುಷ್ಯನ ಬುದ್ಧಿಯು ಸ್ಥಿರವಾವ್ತು.

ತಾತ್ಪರ್ಯ / ವಿವರಣೆ

ಮನುಷ್ಯನ ಮನಸ್ಸು ತಿಳಿಗೊಂಡಪ್ಪಗ ಸಾಧಕನ ಎಲ್ಲಾ ದುಗುಡಂಗೊ ಇಲ್ಲದ್ದಾವ್ತು. ಎಂತಕೆ ಹೇಳಿರೆ ತಿಳಿಗೊಂಡವನ ಬುದ್ಧಿ ಭಗವಂತನಲ್ಲಿ ನೆಲೆಗೊಂಡಿರುತ್ತು. ಮನಸ್ಸು ಕೊಳೆಯಾದರೆ ಎಲ್ಲವೂ ಕೊಳೆ. ಮನಸ್ಸು ತಿಳಿಯಾದರೆ ಎಲ್ಲವೂ ತಿಳಿ. ಎಲ್ಲಾ ಸಮಸ್ಯ್ಗೊ ಬಪ್ಪದು ಮನಸ್ಸು ಕೊಳೆಯಾಗಿಪ್ಪದ್ದರಿಂದ. ನವಗೆ ನಮ್ಮ ಮನಸ್ಸಿನ ಸ್ವಚ್ಛತೆ ಬಗ್ಗೆ ಗಮನ ಇಲ್ಲದಿದ್ದರೆ ಇತರ ಎಲ್ಲವೂ ಕಾರ್ಯ ವ್ಯರ್ಥ. ಮನಸ್ಸು ಸ್ವಚ್ಛವಾದರೆ ಎಲ್ಲವೂ ಮಡಿ. ಅದೇ ಪ್ರಸನ್ನವಾದ ಸ್ಥಿತಿ. ಮನಸ್ಸು ತಿಳಿಯಾದಪ್ಪಗ ಸರ್ವ ದುಃಖವೂ ತನ್ನಷ್ಟಕ್ಕೇ ಕಣ್ಮರೆಯಾವ್ತು. ಇದುವೇ ದುಃಖಾತೀತ ಆನಂದ ಸ್ಥಿತಿ ಹೇಳ್ವದು ಬನ್ನಂಜಯವರ ವ್ಯಾಖ್ಯಾನ. ಮನಸ್ಸು ತಿಳಿಯಾಗಿದ್ದು ಹೇಳಿ ಆದರೆ ಅದು ಭಗವಂತನ ತಿಳಿವಲೆ ಸಹಾಯ ಮಾಡುತ್ತು. ಕೊಳೆಯಾದ ಮನಸ್ಸಿಂದ ಭಗವಂತನ ಚಿಂತನೆ ಸಾಧ್ಯ ಇಲ್ಲೆ. ಭಗವಂತನ ತಿಳಿದಮತ್ತೆ ದುಃಖವೇ ಇಲ್ಲೆ. ಬುದ್ಧಿ ಗಟ್ಟಿಗೊಂಡು ಭಗವಂತನ ಅಪರೋಕ್ಷ ಜ್ಞಾನಲ್ಲಿ ನಿಂದುಬಿಡ್ತು. ಈ ಸ್ಥಿತಿಲಿ, ಯಾವ ದೆಸೆಲಿ ಯೋಚನೆ ಹೋದರೂ, ಅದು ಭಗವಂತನಲ್ಲೇ ಹೋಗಿ ನಿಲ್ಲುತ್ತು. ಯಾವುದನ್ನು ಕೇಳಿರೂ, ಯಾವುದನ್ನು ನೋಡಿರೂ ಅದರ ಹಿಂದೆ ಇಪ್ಪ ಜಗತ್ತಿನ ಮೂಲ ಶಕ್ತಿಯ ಚಿಂತನೆ ಮನಸ್ಸಿಂಗೆ ಬಂದು ಬಿಡುತ್ತು. ಆ ಸನ್ನಿವೇಶಲ್ಲಿ ಯಾವುದೋ ಸಣ್ಣ ಸಂಗತಿಗಾಗಿ ಕೊರಗುವ ಪ್ರಶ್ನೆಯೇ ಉಳಿತ್ತಿಲ್ಲೆ. ತಿಳಿಯಾದ ಮನಸ್ಸು ಭಗವನ್ಮಯವಾವ್ತು. ಒಂದರಿ ಭಗವಂತ ಮನಸ್ಸಿಲ್ಲಿ ತುಂಬಿದ ಹೇಳಿ ಆದರೆ ಮತ್ತೆ ಎಲ್ಲವೂ ಆನಂದಮಯ. ಮತ್ತೆ ದುಃಖವೆಂಬುದೇ ಇಲ್ಲೆ. ಈ ಆನಂದವು ಅಪರಿಮಿತ.

ಶ್ಲೋಕ

ನಾಸ್ತಿ ಬುದ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ।
ನ ಚಾಭಾವಯತಃ ಶಾಂತಿಃ ಅಶಾಂತಸ್ಯ ಕುತಃ ಸುಖಮ್ ॥೬೬॥

ಪದವಿಭಾಗ

ನ ಅಸ್ತಿ ಬುದ್ಧಿಃ ಅಯುಕ್ತಸ್ಯ ನ ಚ ಅಯುಕ್ತಸ್ಯ ಭಾವನಾ । ನ ಚ ಅಭಾವಯತಃ ಶಾಂತಿಃ ಅಶಾಂತಸ್ಯ ಕುತಃ ಸುಖಮ್ ॥

ಅನ್ವಯ

ಅಯುಕ್ತಸ್ಯ ಬುದ್ಧಿಃ ನ ಅಸ್ತಿ, ಅಯುಕ್ತಸ್ಯ ಚ ಭಾವನಾ ನ ಅಸ್ತಿ ; ಅಭಾವಯತಃ ಚ ಶಾಂತಿಃ ನ ಅಸ್ತಿ; ಅಶಾಂತಸ್ಯ ಸುಖಂ ಕುತಃ?

ಪ್ರತಿಪದಾರ್ಥ

ಅಯುಕ್ತಸ್ಯ – ಕೃಷ್ಣಪ್ರಜ್ಞೆಯೊಟ್ಟಿಂಗೆ ಸಂಬಂಧ ಇಲ್ಲದ್ದವಂಗೆ , ಬುದ್ಧಿಃ – ದಿವ್ಯ ಬುದ್ಧಿ, ನ ಅಸ್ತಿ – ಇರುತ್ತಿಲ್ಲೆ. ಅಯುಕ್ತಸ್ಯ – ಕೃಷ್ನಪ್ರಜ್ಞಾರಹಿತನಾದವಂಗೆ, ಚ – ಕೂಡ, ಭಾವನಾ – ಸಂತೋಷಲ್ಲಿ ಸ್ಥಿರಮನಸ್ಸು, ನ ಅಸ್ತಿ – ಇರುತ್ತಿಲ್ಲೆ,  ಅಭಾವಯತಃ – ಸ್ಥಿರನಲ್ಲದವಂಗೆ, ಚ – ಸಾನ,  ಶಾಂತಿಃ – ಶಾಂತಿ, ನ ಅಸ್ತಿ – ಇರ್ತಿಲ್ಲೆ,  ಅಶಾಂತಸ್ಯ – ಶಾಂತಿಯಿಲ್ಲದ್ದವಂಗೆ, ಸುಖಮ್ – ಸುಖ, ಕುತಃ – ಎಲ್ಲಿಂದ ಇಪ್ಪದು?!

ಅನ್ವಯಾರ್ಥ

ಕೃಷ್ಣಪ್ರಜ್ಞೆಲಿ ಪರಾತ್ಪರದೊಟ್ಟಿಂಗೆ ಸಂಬಂಧವ ಪಡೆಯದ್ದವಂಗೆ ಅಲೌಕಿಕ ಬುದ್ಧಿಶಕ್ತಿಯಾಗಲಿ, ಸ್ಥಿರವಾದ ಮನಸ್ಸಾಗಲಿ ಇರುತ್ತಿಲ್ಲೆ. ಇವ್ವು ಇಲ್ಲದ್ದೆ ಶಾಂತಿ ಇಲ್ಲೆ. ಶಾಂತಿ ಇಲ್ಲದ್ದವಂಗೆ ಸುಖ ಎಲ್ಲಿಂದ ಇಕ್ಕು ?

ತಾತ್ಪರ್ಯ / ವಿವರಣೆ

ಕೃಷ್ಣಪ್ರಜ್ಞೆಲಿ ನೆಲೆಸದ್ದಿಪ್ಪವಂಗೆ ಶಾಂತಿಯ ಸಾಧ್ಯವೇ ಇಲ್ಲೆ. ಎಲ್ಲದಕೂ ಕಾರಣನು ಆ ಪರಮಾತ್ಮನು. ಕೃಷ್ಣನೇ ಜಗತ್ತಿನ ಎಲ್ಲ ಅಭಿವ್ಯಕ್ತಿಗಳ ಒಡೆಯ ಮತ್ತು ಕೃಷ್ಣನೇ ಎಲ್ಲ ಜೀವಿಗಳ ಸೂತ್ರಧಾರಿ ಎಂಬುದರ ಅರ್ಥಮಾಡಿರೆ ಮಾತ್ರ ಮನುಷ್ಯಂಗೆ ನಿಜವಾದ ಶಾಂತಿ. ಆದ್ದರಿಂದ ಕೃಷ್ಣಪ್ರಜ್ಞೆಯಿಲ್ಲದಿದ್ದರೆ ಮನಸ್ಸಿಂಗೆ ಒಂದು ಅಂತಿಮ ಗುರಿ ಇಪ್ಪಲೆ ಸಾಧ್ಯ ಇಲ್ಲೆ. ಅಂತಿಮ ಗುರಿ ಇಲ್ಲದ್ದಿಪ್ಪದ್ದೇ ಮನಸ್ಸಿನ ತಳಮಳಕ್ಕೆ ಕಾರಣ. ಎಲ್ಲವೂ ಆ ಪರಮಾತ್ಮ ಎಂಬುದು ಮನಸ್ಸಿಂಗೆ ಖಚಿತವಾದಪ್ಪಗ ಮನುಷ್ಯನು ದೃಢಮನಸ್ಸಿನ ಶಾಂತಿಯ ಸಾಧಿಸಬಲ್ಲ°. ಆದ್ದರಿಂದ ಕೃಷ್ಣನೊಡನೆ ಸಂಬಂಧ ಇಲ್ಲದ್ದೆ ಕಾರ್ಯಪ್ರವೃತ್ತನಾದವ ತನ್ನ ಬದುಕ್ಕಿಲ್ಲಿ ಶಾಂತಿ ಮತ್ತು ಆಧ್ಯಾತ್ಮಿಕ ಪ್ರಗತಿ ಸಾಧಿಸಿದ್ದೆ ಹೇಳಿ ಎಷ್ಟೇ ಹೆರ ಹೇಳಿಗೊಳ್ಳುತ್ತನಾದರೂ ಮನಸ್ಸಿನೊಳ ಯಾವಗಲೂ ಅನಿಶ್ಚಿತತೆಯ ದುಃಖಲ್ಲಿಯೇ ಇರುತ್ತ°. ಕೃಷ್ಣಪ್ರಜ್ಞೆಯು ಸ್ವಯಂ ಅಭಿವ್ಯಕ್ತಿಯುಳ್ಳ ಶಾಂತಸ್ಥಿತಿ. ಇದರ ಕೃಷ್ಣನೊಡನೆ ಸಂಬಂಧ ಸಾಧಿಸಿಯೇ ಪಡವಲೆ ಸಾಧ್ಯ.

ಬನ್ನಂಜೆ ಹೇಳುತ್ತವು – ಮನುಷ್ಯಂಗೆ ಸುಖ ಬೇಕಿದ್ದರೆ ಶಾಂತಿ ಬೇಕು. ಮನಸ್ಸು ಪ್ರಸನ್ನವಾಗದೇ ವಿಕ್ಷಿಪ್ತವಾಗಿದ್ದರೆ ಅದು ಭಗವಂತನ ಹೋಗಿ ಸೇರುತ್ತಿಲ್ಲೆ. ಆರ ಮನಸ್ಸು ಭಗವಂತನಲ್ಲಿ ಸಂಯೋಗ ಹೊಂದುತ್ತಿಲ್ಲೆಯೋ ಅವಂಗೆ ಶಾಂತಿಯೂ ಇಲ್ಲೆ. ಅಂಥವನ ಮನಸ್ಸು ತಿಳಿಯಾಗಲೂ ಆಗ. ಇಂಥವು ಏಕಾಗ್ರವಾಗಿ ಚಿಂತುಸಲೆ ಸಾಧ್ಯವಿಲ್ಲೆ. ಏಕಾಗ್ರವಾಗಿ ಚಿಂತುಸದ ಹೊರತು ಯಥಾರ್ಥ ಜ್ಞಾನ ಅಸಾಧ್ಯ. ಇಂಥವಕ್ಕೆ ಧ್ಯಾನ ಅಸಾಧ್ಯ. ಇಲ್ಲಿ ಧ್ಯಾನ ಹೇಳಿರೆ ಏಕಾಗ್ರವಾಗಿ ಒಂದು ವಸ್ತುವಿನ ಬಗ್ಗೆ ಚಿಂತುಸುವುದು. ಯಾವುದೇ ಒಂದು ವಸ್ತುವಿನ ಬಗ್ಗೆ ನವಗೆ ಖಚಿತವಾದ ಅರಿವು ಬರೇಕ್ಕಾರೆ ನವಗೆ ಏಕಾಗ್ರತೆ ಬೇಕು. ಇದನ್ನೇ ಇಲ್ಲಿ ‘ಭಾವನಾ’ ಹೇಳಿ ಹೇಳಿದ್ದು. ಮನಸ್ಸು ಏಕಾಗ್ರವಾದರೆ ಮಾತ್ರ ಆಳವಾದ ಚಿಂತನೆ ಸಾಧ್ಯ. ಯಾವುದನ್ನೂ ಆಳವಾಗಿ ಚಿಂತುಸದ್ದೇ ಹೊರತು ಅದರ ಬಗ್ಗೆ ಅದರ ವೈಶಾಲ್ಯತೆ ಬಗ್ಗೆ ಅರಿವು ಮೂಡ. ಹೀಂಗೆ ಆಳಕ್ಕಿಳುದು ಚಿಂತನೆ ಮಾಡದ್ದವಂಗೆ ಶಾಂತಿ ಇಲ್ಲೆ. ಇಲ್ಲಿ ಶಾಂತಿ ಹೇಳಿರೆ ಎರಡು ಅರ್ಥ ಇದ್ದು. ಮೇಲ್ನೋಟಕ್ಕೆ ಶಾಂತಿ ಹೇಳಿರೆ ಆನಂದಮಯವಾದ ಸ್ಥಿತಿ. ಶಾಸ್ತ್ರಕಾರರ ಪ್ರಕಾರ ಆತ್ಮಕ್ಕೆ ಪೂರ್ಣ ಆನಂದದ ಸ್ಥಿತಿ ಹೇಳಿರೆ – ಮೋಕ್ಷ. ಮೋಕ್ಷದ ದಾರಿಲಿ ಹೋಗದ್ದವಂಗೆ ಸುಖ ಇಲ್ಲೆ. ಇನ್ನು ಶಾಂತಿ ಹೇಳಿರೆ, ಆನಂದದ ತುತ್ತತುದಿ ಅಥವಾ ಪರಾಕಾಷ್ಠತೆ. ಮನಸ್ಸು ಭಗವಂತನಲ್ಲಿ ನೆಲೆಗೊಂಡಪ್ಪಗ ನವಗೆ ಪೂರ್ಣ ಶಾಂತಿ.

ಹೀಂಗೆ, ಇಂದ್ರಿಯಂಗಳ ಸಂಯಮ ಮಾಡಿಗೊಂಡು, ಮನಸ್ಸಿನ ಏಕಾಗ್ರಗೊಳುಸಿ, ಅದರಲ್ಲಿ ಆಳವಾಗಿ ಚಿಂತನೆ ಮಾಡಿ, ಸತ್ಯವ ಕಂಡುಕೊಳ್ಳೆಕು. ನಾವು ಹೊರ ಪ್ರಪಂಚವ ಬಿಟ್ಟು ಒಳ ಪ್ರಪಂಚಲ್ಲಿ ಆಳವಾಗಿ ಮುಳುಗದ ಹೊರತು ಸತ್ಯದ ಸಾಕ್ಷಾತ್ಕಾರವಾಗ. ಸತ್ಯದ ಸಾಕ್ಷಾತ್ಕಾರವಾಗದ್ದ ಹೊರತು ಸುಖವಿಲ್ಲೆ.

ಶ್ಲೋಕ

ಇಂದ್ರಿಯಾಣಾಂ ಹಿ ಚರತಾಂ ಯನ್ಮನೋsನುವಿಧೀಯತೇ ।
ತದಸ್ಯ ಹರತಿ ಪ್ರಜ್ಞಾಂ ವಾಯುರ್ನಾವಮಿವಾಂಭಸಿ ॥೬೭॥

ಪದವಿಭಾಗ

ಇಂದ್ರಿಯಾಣಾಮ್ ಹಿ ಚರತಾಮ್ ಯತ್ ಮನಃ ಅನುವಿಧೀಯತೇ । ತತ್ ಅಸ್ಯ ಹರತಿ ಪ್ರಜ್ಞಾಮ್ ವಾಯುಃ ನಾವಮ್ ಇವ ಅಂಭಸಿ ॥

ಅನ್ವಯ

ಚರತಾಮ್ ಇಂದ್ರಿಯಾಣಾಂ ಹಿ ಯತ್ ಮನಃ ಅನುವಿಧೀಯತೇ, ತತ್ ಅಸ್ಯ ಪ್ರಜ್ಞಾಮ್ ವಾಯುಃ ನಾವಮ್ ಅಂಭಸಿ ಹರತಿ ಇವ ಹರತಿ ।

ಪ್ರತಿಪದಾರ್ಥ

ಚರತಾಮ್ – ಅಲೆದಾಡುವ, ಇಂದ್ರಿಯಾಣಾಮ್ – ಇಂದ್ರಿಯಂಗಳ,  ಹಿ – ಖಂಡಿತವಾಗಿಯೂ,  ಯತ್ – ಏವ, ಮನಃ – ಮನಸ್ಸು, ಅನುವಿಧೀಯತೇ – ನಿರಂತರವಾಗಿ ತೊಡಗುತ್ತೋ, ತತ್ – ಅದು, ಅಸ್ಯ – ಅವನ, ಪ್ರಜ್ಞಾಮ್ – ಬುದ್ಧ್ಹಿಯ, ವಾಯುಃ – ಗಾಳಿಯು, ನಾವಮ್ – ದೋಣಿಯ, ಅಂಭಸಿ – ನೀರಿನಮೇಗೆ, ಹರತಿ ಇವ – ಎಳೆತ್ತ ಹಾಂಗೆ, ಹರತಿ – ಎಳೆದೊಯ್ಯುತ್ತು.

ಅನ್ವಯಾರ್ಥ

ಯಾವ ರೀತಿಯಾಗಿ ಚಂಡಮಾರುತವು ನೀರಿಲ್ಲಿಪ್ಪ ದೋಣಿಯ ಹೊಡಕ್ಕೊಂಡು ಹೋವ್ತೋ, ಅದೇ ರೀತಿಯಾಗಿ ಅಲೆದಾಡುವ ಇಂದ್ರಿಯಂಗಳಲ್ಲಿ ಒಂದರಲ್ಲಿ ಮನಸ್ಸು ನೆಟ್ಟರೂ ಅದು ಮನುಷ್ಯನ ಬುದ್ಧಿಶಕ್ತಿಯ ಕೊಚ್ಚಿಗೊಂಡು ಹೋವ್ತು.

ತಾತ್ಪರ್ಯ / ವಿವರಣೆ

ಎಲ್ಲ ಇಂದ್ರಿಯಂಗಳನ್ನೂ ಭಗವಂತನ ಸೇವೆಲಿ ತೊಡಗಿಸಿರೆಕ್ಕು. ಅವುಗಳಲ್ಲಿ ಒಂದೇ ಒಂದು ಇಂದ್ರಿಯ ಭೋಗಲ್ಲಿ ತೊಡಗಿರೂ ಅದು ಭಕ್ತನ ಅಲೌಕಿಕ ಪ್ರಗತಿಯ ಹಾದಿಂದ ಬೇರೆ ದಿಕ್ಕಂಗೆ ಎಳಕ್ಕೊಂಡು ಹೋಕು. ಮನಸ್ಸಿನ ನಿಯಂತ್ರಣಕ್ಕೆ ಇದೇ ಸರಿಯಾದ ತಂತ್ರ.

ಬನ್ನಂಜೆಯವು ಹೇಳುತ್ತವು – ಇಷ್ಟೆಲ್ಲಾ ಗಹನವಾದ ವಿಚಾರ ಇದ್ದರೂ ಕೂಡ, ಮನಸ್ಸು ಎಂತಕೆ ಅಂತರಂಗದ ಆಳಕ್ಕೆ ಇಳಿತ್ತಿಲ್ಲೆ. ಅದು ಸಹಜ ಹೇಳುತ್ತ ಶ್ರೀಕೃಷ್ಣ್ತ. ಎಂತಕೆ ಹೇಳಿರೆ ಮನಸ್ಸಿಂಗೆ ಒಂದು ಸ್ವಭಾವ ಇದ್ದು. ಯಾವುದರ ನಾವು ಅದಕ್ಕೆ ಅಭ್ಯಾಸ ಮಾಡಿದ್ದೋ ಅದನ್ನೇ ಮೆಚ್ಚಿಗೊಂಬದು ಮತ್ತು, ಮತ್ತೆ ಮತ್ತೆ ಅದನ್ನೇ ಬಯಸುವದು. ಹೊಸತ್ತರ ಅದು ಸುಲಭಕ್ಕೆ ಒಪ್ಪುತ್ತಿಲ್ಲೆ ಮತ್ತು ಪರಿಚಿತವಾದ್ದದ್ದರ ಬಿಡ್ಳೂ ಒಪ್ಪುತ್ತಿಲ್ಲೆ. ಮನಸ್ಸಿಂಗೆ ಒಳಪ್ರಪಂಚ ಅಪರಿಚಿತ. ಆದ್ದರಿಂದ ಅದು ಒಳಪ್ರಪಂಚದತ್ತ ಚಿಂತುಸುಲೆ ಹೆರಡುತ್ತಿಲ್ಲೆ. ಮನಸ್ಸಿಂಗೆ ಗಟ್ಟಿಯಾಗಿ ಹೇಳಿರೆ ಅದು ಅಂತರ್ಮುಖ ಆವ್ತು. ಆದರೆ, ಆ ಪ್ರಯತ್ನ ನಾವು ಮಾಡುತ್ತೂ ಇಲ್ಲೆ. ಮನಸ್ಸಿಂಗೆ ನಾವು ಬಾಲ್ಯಂದ ಎಂತದರ ಅಭ್ಯಾಸ ಮಾಡಿಸಿದ್ದೋ ಅದರ ಹಿಂದೆಯೇ ಅದು ಹೋವುತ್ತು. ಉದಾಹರಣೆಗೆ ಬಾಲ್ಯದಿಂದಲೂ ಶಾಖಾಹಾರಿ ಆಗಿದ್ದವಂಗೆ ಮಾಂಸವ ಕಾಂಬಗ ಅಸಹ್ಯ ಅನಿಸುತ್ತು. ಆದರೆ, ಅದೇ ಮಾಂಸ ಬಳಸುವವನ ಮನಸ್ಸಿಂಗೆ ಹೇಸಿಕೆ ಅನಿಸುತ್ತಿಲ್ಲೆ. ಇದೆಲ್ಲವೂ ಮನಸ್ಸಿಂಗೆ ನಾವು ಕೊಡುವ ತರಭೇತಿ. ಮನಸ್ಸು ನಿರಂತರ ಯಾವುದರ ನೋಡುತ್ತೋ ಅದನ್ನೇ ರೂಢಿ ಮಾಡಿಗೊಳ್ಳುತ್ತು. ಆ ರೀತಿ ಮನಸ್ಸ್ಸು ಭಗವಂತನಿಂದ ನಿರ್ಮಿಸಲ್ಪಟ್ಟಿದು. ಇದು ಮನುಸ್ಸು ಒಂದು ವಿಷ್ಯದ ಬಗ್ಗೆ ಸ್ಥಿರವಾಗಿ ನಿಂಬಲೆ ಬೇಕಾಗಿ. ಆದರೆ, ನಾವು ಅದರ ಬೇರೆ ರೀತಿಯಾಗಿ ಅಭ್ಯಾಸ ಮಾಡಿಬಿಟ್ಟಿರುತ್ತು. ಇಂದ್ರಿಯಂಗೊ ನಿತ್ಯ ಯಾವುದರ ನೋಡುತ್ತೋ ಅದರ ಮೆಚ್ಚುವಂತಹ ಸ್ವಭಾವ ಭಗವಂತ ಮನಸ್ಸಿಂಗೆ ಕೊಟ್ಟಿದ. ಇಂತಹ ಮನಸ್ಸಿನ ಸ್ವಭಾವವ ಅರಿಯದ್ದರೆ ಅಪಾಯಕಾರಿ. ಅದು ನಮ್ಮ ಪ್ರಜ್ಞೆಯ ಅಪಹಾರ ಮಾಡಿಬಿಡ್ತು. ನಾವು ದೋಣಿಲಿ ಪ್ರಯಾಣಿಸುವ ನಾವಿಕನ ಹಾಂಗೆ. ನಮ್ಮ ಮನಸ್ಸು ಆ ದೋಣಿಗೆ ಕಟ್ಟಿದ ಒಂದು ಬಟ್ಟೆ. ಒಂದು ವೇಳೆ ನವಗೆ ಈ ವಸ್ತ್ರವ ತಿರುಗಿಸಿ ನವಗೆ ಬೇಕಾದಾಂಗೆ ದೋಣಿಯ ನಿಯಂತ್ರಿಸವ ಕಲೆ ಗೊಂತಿಲ್ಲದ್ರೆ, ಗಾಳಿ ಬೀಸಿದ ಹೊಡೆಂಗೆ ನಾವು ಹೋಯೇಕ್ಕಾವ್ತು ಹೊರತು ನವಗೆ ಎತ್ತೇಕ್ಕಾದಲ್ಯಂಗೆ ಅಲ್ಲ . ನಾವು ನಮ್ಮ ಮನಸ್ಸ ನಿಯಂತ್ರುಸುವ ಕಲೆಯ ಕಲಿಯದ್ರೆ ಬದುಕು ಛಿದ್ರ-ಛಿದ್ರವಾಗಿ ಬಿಡುಗು. ಬಿರುಗಾಳಿಗೆ ಸಿಕ್ಕ ತರಗೆಲೆ ಹಾಂಗೆ ಆಗಿ ಹೋಕು ಹೇಳಿ ಶ್ರೀಕೃಷ್ಣನ ಎಚ್ಚರ.

ಶ್ಲೋಕ

ತಸ್ಮಾದ್ ಯಸ್ಯ ಮಹಾಬಾಹೋ ನಿಗೃಹೀತಾನಿ ಸರ್ವಶಃ ।
ಇಂದ್ರಿಯಾಣೀಂದ್ರಿಯಾರ್ಥೇಭ್ಯಃ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥೬೮॥

ಪದವಿಭಾಗ

ತಸ್ಮಾತ್ ಯಸ್ಯ ಮಹಾ-ಬಾಹೋ ನಿಗೃಹೀತಾನಿ ಸರ್ವಶಃ । ಇಂದ್ರಿಯಾಣಿ ಇಂದ್ರಿಯ-ಅರ್ಥೇಭ್ಯಃ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥

ಅನ್ವಯ

ತಸ್ಮಾತ್ ಹೇ ಮಹಾ-ಬಾಹೋ!, ಯಸ್ಯ ಇಂದ್ರಿಯಾಣಿ ಇಂದ್ರಿಯ-ಅರ್ಥೇಭ್ಯಃ ಸರ್ವಶಃ ನಿಗೃಹೀತಾನಿ ತಸ್ಯ ಪ್ರಜ್ಞಾ ಪ್ರತಿಷ್ಥಿತಾ।

ಪ್ರತಿಪದಾರ್ಥ

ತಸ್ಮಾತ್ – ಹಾಂಗಾಗಿ, ಹೇ ಮಹಾ-ಬಾಹೋ! – ಏ ಮಹಾಬಾಹುವೇ! (ಅರ್ಜುನನೇ!), ಯಸ್ಯ – ಆರ,  ಇಂದ್ರಿಯಾಣಿ – ಇಂದ್ರಿಯಂಗೊ, ಇಂದ್ರಿಯ-ಅರ್ಥೇಭ್ಯಃ – ಇಂದ್ರಿಯ ವಿಷಯಂಗಳಿಂದ, ಸರ್ವಶಃ – ಸರ್ವತ್ರ, ನಿಗೃಹೀತಾನಿ – ಹಾಂಗೆ ನಿಗ್ರಹಿಸಲ್ಪಡುತ್ತೋ, ತಸ್ಯ – ಅವನ,  ಪ್ರಜ್ಞಾ – ಪ್ರಜ್ಞೆ(ಬುದ್ದಿ)ಯು, ಪ್ರತಿಷ್ಠಿತಾ – ಸ್ಥಿರವಾಗಿರುತ್ತು.

ಅನ್ವಯಾರ್ಥ

ಏ ಮಹಾಬಾಹುವಾದ ಅರ್ಜುನ!, ಈ ಕಾರಣಂದ ಆರು ತನ್ನ ಇಂದ್ರಿಯಂಗಳ ಅವುಗಳ ವಸ್ತುಗಳಿಂದ ತಡೆದುಮಡಿಕ್ಕೊಳ್ಳುತ್ತನೋ,  ಅವ° ನಿಶ್ಚಯವಾಗಿಯೂ ಸ್ಥಿರಬುದ್ಧಿಯಿಪ್ಪವ° ಆಗಿರುತ್ತ°.

ತಾತ್ಪರ್ಯ / ವಿವರಣೆ

ಇಂದ್ರಿಯ ಭೋಗಾಸಕ್ತಿಯ ಶಕ್ತಿಗಳ ಕೃಷ್ಣಪ್ರಜ್ಞೆಂದ ಮಾತ್ರವೇ ಅಥವಾ ಎಲ್ಲಾ ಇಂದ್ರಿಯಂಗಳ ಭಗವಂತನ ದಿವ್ಯ ಪ್ರೇಮದ ಸೇವೆಲಿ ತೊಡಗಿಸಿಗೊಂಬದರಿಂದ ಮಾತ್ರವೇ ಅಂಕೆಲಿಮಡಿಕ್ಕೊಂಬಲೆಡಿಗು. ಶತ್ರುಗಳ ಅವಕ್ಕಿಂತ ಹೆಚ್ಚಿನ ಶಕ್ತಿಯಿಂದ ನಿಗ್ರಹಿಸುವಂತೆ ಇಂದ್ರಿಯಂಗಳ ನಿಗ್ರಹಿಸಲಕ್ಕು. ಇದು ಮನುಷ್ಯ ಪ್ರಯತ್ನಂದ ಸಾಧ್ಯವಪ್ಪ ಮಾತಲ್ಲ. ಆದರೆ, ಇಂದ್ರಿಯಂಗಳ ಭಗವಂತನ ಸೇವೆಲಿ ತೊಡಗಿಸಿಗೊಂಬದರಿಂದ ಮಾತ್ರ ಸಾಧ್ಯ. ಕೃಷ್ಣಪ್ರಜ್ಞೆಂದ ಮಾತ್ರವೇ ಮನುಷ್ಯ ಸ್ಥಿತಪ್ರಜ್ಞ ಆವುತ್ತ. ಈ ಕಲೆಯ ಒಬ್ಬ ನಿಜಗುರುವಿನ ಮಾರ್ಗದರ್ಶನಂದ ಮಾತ್ರ ಅಭ್ಯಾಸ ಮಾಡಲೆಡಿಗು. ಇದರ ಅರ್ತುಗೊಂಡವಂಗೆ ಸಾಧಕ ಅಥವಾ ಮುಕ್ತಿಗೆ ಯೋಗ್ಯನಾದವ ಹೇಳಿ ಹೇಳುವದು.

ಮನಸ್ಸು ಯಾವಾಗಲೂ ಹೆರಾಣ ಇಂದ್ರಿಯಂಗೊ ಏನ ಅಭ್ಯಾಸ ಮಾಡುತ್ತೋ ಅದರ ಹಿಂದೆಯೇ ಹೋವುತ್ತು. ಇಂದ್ರಿಯಂಗಳ ನಿಯಂತ್ರಸದ್ರೆ ಮನಸ್ಸ ನಿಯಂತ್ರಿಸಲೆ ಕಷ್ಟ. ಆದ್ದರಿಂದ ಮದಾಲು ನಾವು ಇಂದ್ರಿಯಂಗೊಕ್ಕೆ ತರಭೇತಿ ಕೊಡೆಕ್ಕು. ಇದಕ್ಕಾಗಿ ಮಕ್ಕೊಗೆ ಚಿಕ್ಕಂದಿನಿಂದಲೇ ಉತ್ತಮ ಸಂಸ್ಕಾರ ಕಲಿಶೆಕ್ಕು. ಸಣ್ಣಾಗಿಪ್ಪಂದಲೇ ಪಾಲಿಸಿಗೊಂಡು ಬಂದ ಅಭ್ಯಾಸವ ಹಾಂಗೇ ಮುಂದುವರ್ಸಿಗೊಂಡೇ ಬಂದರೆ ಮತ್ತೆ ಸುಲಭಕ್ಕೆ ಅದರ ಮುರುವಲೆ ಕಠಿಣ. ಹಾಂಗಾಗಿಯೇ ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ಪಾಠದೊಟ್ಟಿಂಗೆ ಸಂಸ್ಕಾರ ಪಾಠವೂ ಬೇಕು ಹೇದು ಹೇಳುವದು. ಸಣ್ಣಾಗಿಪ್ಪಂದಲೇ ರೂಢಿಗೆ ತಾರದ್ರೆ ಮತ್ತೆ ಯುವಪೀಳಿಗಗೆ ಅಪ್ಪಗ ಬಿರುಗಾಳಿಗೆ ಸಿಕ್ಕಿದ ದೋಣಿಯ ಹಾಂಗೆ ಕಂಗಾಲಾಯೇಕ್ಕಾವ್ತು. ಹಾಂಗಾಗಿ ಜೀವನಲ್ಲಿ ಮನಸ್ಸು ಗಟ್ಟಿಮಾಡಿಕ್ಕೊಂಬ ಸಂಸ್ಕಾರ, ಏಕಾಗ್ರತೆ ಮುಂತಾದ್ದರ ನಿರಂತರ ಪಾಲಿಸಿಗೊಂಡು ಬಂದಲ್ಲಿ ಮಾತ್ರ ಅರಿವು ಗಟ್ಟಿಗೊಳ್ಳುತ್ತು, ಇಂದ್ರಿಯ ನಿಗ್ರಹಕ್ಕೆ ಸಹಕಾರಿ ಆವ್ತು. ಮನಸ್ಸು ಸಂಪೂರ್ಣ ಕೃಷ್ಣಪ್ರಜ್ಞೆಲಿ ತೊಡಗಿಯಪ್ಪಗ ಇಂದ್ರಿಯ ನಿಗ್ರಹ ಸಫಲ ಸಾಧ್ಯ.

ಶ್ಲೋಕ

ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ ।
ಯಸ್ಯಾಂ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇಃ ॥೬೯॥

ಪದವಿಭಾಗ

ಯಾ ನಿಶಾ ಸರ್ವ-ಭೂತಾನಾಮ್ ತಸ್ಯಾಮ್ ಜಾಗರ್ತಿ ಸಂಯಮೀ । ಯಸ್ಯಾಮ್ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತಃ ಮುನೇಃ ॥

ಅನ್ವಯ

ಯಾ ಸರ್ವ-ಭೂತಾನಾಂ ನಿಶಾ, ತಸ್ಯಾಂ ಸಂಯಮೀ ಜಾಗರ್ತಿ । ಯಸ್ಯಾಂ ಭೂತಾನಿ ಜಾಗ್ರತಿ, ಸಾ ಪಶ್ಯತಃ ಮುನೇಃ ನಿಶಾ ॥

ಪ್ರತಿಪದಾರ್ಥ

ಯಾ – ಏವುದು, ಸರ್ವ-ಭೂತಾನಾಮ್ – ಸಕಲ ಜೀವಿಗಳ, ನಿಶಾ – ಇರುಳು ಆಗಿದ್ದೋ,  ತಸ್ಯಾಮ್ – ಅದರ್ಲಿ, ಸಂಯಮೀ – ಆತ್ಮನಿಗ್ರಹವುಳ್ಳವ°, ಜಾಗರ್ತಿ – ಎಚ್ಚರವಾಗಿರುತ್ತ°, ಯಸ್ಯಾಮ್ – ಏವುದರಲ್ಲಿ, ಭೂತಾನಿ ಎಲ್ಲ ಜೀವಿಗೊ, ಜಾಗ್ರತಿ – ಎಚ್ಚರವಾಗಿರುತ್ತೋ, ಸಾ – ಅದು, ಪಶ್ಯತಃ – ಆತ್ಮಪರೀಕ್ಷಕನಾದ, ಮುನೇಃ – ಋಷಿಗೆ, ನಿಶಾ – ಇರುಳು ಆಗಿರುತ್ತು.

ಅನ್ವಯಾರ್ಥ

ಎಲ್ಲ ಜೀವರಾಶಿಗೊಕ್ಕೆ  ಇರುಳು ಆದಪ್ಪಗ ಜಿತೇಂದ್ರಿಯಂಗೆ ಎಚ್ಚರವಾಗಿಪ್ಪ ಕಾಲ, ಎಲ್ಲಾ ಜೀವಿಗೊಕ್ಕೆ ಎಚ್ಚೆತ್ತಿಪ್ಪ ಕಾಲ ಅಪ್ಪಗ ಆತ್ಮ  (ಆಂತರ್ಯ) ಪರೀಕ್ಷೆ ಮಾಡಿಕೊಂಬ ಋಷಿಗೆ ಅದು ಇರುಳು ಆಗಿರುತ್ತು.

ತಾತ್ಪರ್ಯ / ವಿವರಣೆ

ಬುದ್ಧಿವಂತರಲ್ಲಿ ಎರಡು ವರ್ಗಂಗೊ. ಒಂದು ವರ್ಗದವು ಇಂದ್ರಿಯ ತೃಪ್ತಿಗಾಗಿ ಮಾಡುವ ಐಹಿಕ ಚಟುವಟಿಕೆಗಳಲ್ಲಿ ಬುದ್ಧಿವಂತರು. ಇನ್ನೊಂದು ವರ್ಗದವು ಆಂತರ್ಯ ಪರೀಕ್ಷೆ ಮಾಡಿಕ್ಕೊಳ್ಳುವವು ಮತ್ತು ಆತ್ಮಸಾಕ್ಷಾತ್ಕಾರದ ಕೃಷಿಗೆ ಅಗತ್ಯವ ತಿಳುದವು. ಆಂತರ್ಯಪರೀಕ್ಷೆ ಮಾಡಿಕೊಂಬ ಅಥವಾ ಚಿಂತನಶೀಲ ಮನುಷ್ಯನ ಚಟುವಟಿಕೆಗಳಲ್ಲಿ ಐಹಿಕ ವಿಷ್ಯಂಗಳಲ್ಲಿ ಮುಳುಗಿಪ್ಪವಕ್ಕೆ ಇರುಳು ಇದ್ದಾಂಗೆ. ಆತ್ಮ ಸಾಕ್ಷಾತ್ಕಾರದ ತಮ್ಮ ಅಜ್ಞಾನಂದ ಇಂತಹ ಇರುಳಿನ ಪ್ರಾಪಂಚಿಕ ಮನೋಧರ್ಮದವು ಒರಗಿಯೊಂಡಿರುತ್ತವು. ಪ್ರಾಪಂಚಿಕ ಮನೋಧರ್ಮದವರ ಇರುಳಿಲ್ಲಿ ಆತ್ಮಪರೀಕ್ಷೆ ಮಾಡಿಗೊಂಬ ಋಷಿಯು ಜಾಗ್ರತನಾಗಿರುತ್ತ°. ಆಧ್ಯಾತ್ಮಿಕ ಸಂಸ್ಕೃತಿಯ ಕ್ರಮ ಕ್ರಮವಾದ ಪ್ರಗತಿಲಿ ಋಷಿಗೆ ದಿವ್ಯಾನಂದವಾವ್ತು. ಆದರೆ ಪ್ರಾಪಂಚಿಕ ಚಟುವಟಿಕೆಗಳ ಮನುಷ್ಯ° ಆತ್ಮಸಾಕ್ಷಾತ್ಕಾರದ ವಿಷಯಲ್ಲಿ ನಿದ್ರಾವಶವಾಗಿದ್ದು ಬಗೆ ಬಗೆಯ ಇಂದ್ರಿಯ ಸುಖಗಳ ಕನಸು ಕಾಣುತ್ತ°. ತನ್ನ ನಿದ್ರಾವಸ್ಥೆಲಿ ಒಂದೊಂದರಿ ಸುಖಪಡುತ್ತ° ಒಂದೊಂದರಿ ದುಃಖಕ್ಕೂ ಈಡಾವ್ತ°. ಆತ್ಮಪರೀಕ್ಷೆ ಮಾಡಿಗೊಂಬ ಮನುಷ್ಯ° ಪ್ರಾಪಂಚಿಕ ಸುಖದುಃಖಂಗಳ ವಿಷಯಲ್ಲಿ ಸದಾ ಅಸಡ್ಡೆಯಿಂದ ಇರುತ್ತ°. ಪ್ರಾಪಂಚಿಕ ಪ್ರತಿಕ್ರಿಯೆಗಳಿಂದ ವಿಚಲಿತನಾಗದ್ದೆ ತನ್ನ ಆತ್ಮಸಾಕ್ಷಾತ್ಕಾರದ ಚಟುವಟಿಕೆಗಳಲ್ಲಿ ಮಗ್ನನಾಗಿರುತ್ತ°.

ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿ ಹೇಳುತ್ತದಾದರೆ,- ಸಾಮಾನ್ಯ ಮನುಷ್ಯಂಗೆ ಯಾವುದು ಹಗಲೋ, ಅದು, ಸತ್ಯದ ಸಾಕ್ಷಾತ್ಕಾರ ಆದವಂಗೆ ಇರುಳು. ಜಗತ್ತಿನ ಎಲ್ಲಾ ಜೀವಿಗೊಕ್ಕೆ ಯಾವುದು ಕತ್ತಲೋ ಅದು ಸಾಧಕಂಗೆ ಹಗಲು. ಹೇಳಿರೆ, ನಿಜವಾದ ಸಾಧಕ ನಮ್ಮ ಇರುಳಿಲ್ಲಿ ಎಚ್ಚರವಾಗಿರುತ್ತ°, ಮತ್ತೆ, ಲೌಕಿಕ ವ್ಯವಹಾರದ ನಮ್ಮ ಹಗಲು ಅವಂಗೆ ಇರುಳು. ಲೌಕಿಕ ಪ್ರಪಂಚಲ್ಲಿ ಅವಂಗೆ ಪ್ರವೃತ್ತಿಯೇ ಇಲ್ಲೆ. ಅವ° ನವಗೆ ಒಬ್ಬ ಮುಗ್ಧ ಮಗುವಿನಾಂಗೆ., ಅಲ್ಲ, ಜ್ಞಾನದ ಅರಿವಿಲ್ಲದವಂಗೆ ಮರ್ಳನ ಹಾಂಗೆ ಕಂಡರೂ ಅಚ್ಚರಿ ಇಲ್ಲೆ. ಎಂತಕೆ ಹೇದರೆ ಸಾಧಕ° ಲೌಕಿಕ ಪ್ರಪಂಚಲ್ಲಿದ್ದುಗೊಂಡು, ಅದರೊಟ್ಟಿಂಗೆ ಬೆರೆಯದ್ದೆ ತನ್ನ ಅಂತರಂಗದ ಆನಂದವ ಸದಾ ಸವಿಯುತ್ತ°. ಒಬ್ಬ ಜ್ಞಾನಿಗೆ ಭಗವಂತನ ಕಂಡಪ್ಪಾಗ ಅವಂಗೆ ಉಳುದ್ದೆಲ್ಲಾ ಕತ್ತಲು. ಅದ್ಭುತವಾದ ಆ ಸಂಗತಿಯ ಕಂಡ ವಿಸ್ಮಯಲ್ಲಿ ತದೇಕಚಿತ್ತನಾಗಿ ಅದನ್ನೇ ಭಾವಪರವಶವಾಗಿ ನೋಡುತ್ತ°.

ಸತ್ಯಶೋಧನೆ ಮಾಡಿದವಂಗೆ ನಮ್ಮ  ಜ್ಞಾನ ಅಥವಾ ನಮ್ಮ ಹಗಲು ಇರುಳು  (ಅಜ್ಞಾನ) ಆಗಿಕ್ಕು. ನಮ್ಮ ಇರುಳು ಅವಂಗೆ ಹಗಲು (ಜ್ಞಾನ) ಆಗಿಕ್ಕು. ಎಂತಕೇಳಿರೆ ಅವಂಗೆ ಸತ್ಯ ಏವುದು, ಮಿಥ್ಯಾ ಏವುದು ಹೇಳಿ ಸ್ಪಷ್ಟ ಜ್ಞಾನ ಇರ್ತು. ಅವ° ಆ ಸತ್ಯದ ಬೆಳಕ ಅನುಭವಿಸಿಗೊಂಡು ಆನಂದಭರಿತನಾಗಿರುತ್ತ. ನವಗೆ ಅದು ಮಿಥ್ಯೆ ಆಗಿ ಕಾಂಬದು ನಮ್ಮ ಇರುಳು ಹೇಳ್ವ ಅಜ್ಞಾನ ಅಂಧಕಾರ ಕಾರಣ.

ಶ್ಲೋಕ

ಆಪೂರ್ಯಮಾಣಮಚಲಪ್ರತಿಷ್ಠಂ ಸಮುದ್ರಮಾಪಃ ಪ್ರವಿಶಂತಿ ಯದ್ವತ್ ।
ತದ್ವತ್ ಕಾಮಾ ಯಂ ಪ್ರವಿಶಂತಿ ಸರ್ವೇ ಸ ಶಾಂತಿಮಾಪ್ನೋತಿ ನ ಕಾಮಕಾಮೀ ॥೭೦॥

ಪದವಿಭಾಗ

ಆಪೂರ್ಯಮಾಣಮ್ ಅಚಲ-ಪ್ರತಿಷ್ಠಮ್ ಸಮುದ್ರಮ್ ಆಪಃ ಪ್ರವಿಶಂತಿ ಯದ್ವತ್ । ತದ್ವತ್ ಕಾಮಾಃ ಯಮ್ ಪ್ರವಿಶಂತಿ ಸರ್ವೇ ಸಃ ಶಾಂತಿಮ್ ಆಪ್ನೋತಿ ನ ಕಾಮ-ಕಾಮೀ॥

ಅನ್ವಯ

ಆಪೂರ್ಯಮಾಣಮ್ ಅಚಲ-ಪ್ರತಿಷ್ಠಂ ಸಮುದ್ರಂ ಯದ್ವತ್ ಆಪಃ ಪ್ರವಿಶಂತಿ, ತದ್ವತ್ ಯಮ್ ಸರ್ವೇ ಕಾಮಾಃ ಪ್ರವಿಶಂತಿ, ಸಃ ಶಾಂತಿಮ್ ಆಪ್ನೋತಿ, ಕಾಮ-ಕಾಮೀ ನ ।

ಪ್ರತಿಪದಾರ್ಥ

ಅಪ್ಪೂರ್ಯಮಾಣಮ್ – ಸದಾ ತುಂಬುತ್ತಿಪ್ಪ, ಅಚಲ-ಪ್ರತಿಷ್ಠಮ್ – ಸ್ಥಿರವಾಗಿ ನೆಲೆಸಿಪ್ಪ, ಸಮುದ್ರಮ್ – ಸಮುದ್ರವ, ಯದ್ವತ್ – ಹೇಂಗೆ (ಏವ ರೀತಿಲಿ), ಆಪಃ – ನೀರು, ಪ್ರವಿಶಂತಿ – ಪ್ರವೇಶಿಸುತ್ತು,  ತದ್ವತ್ – ಹಾಂಗೆ (ಆ ರೀತಿಲಿ) ಯಮ್ – ಆರಲ್ಲಿ, ಸರ್ವೇ – ಎಲ್ಲವೂ, ಕಾಮಾಃ – ಆಸೆಗೊ,  ಪ್ರವಿಶಂತಿ – ಪ್ರವೇಶಿಸುತ್ತೋ,  ಸಃ – ಆ ವ್ಯಕ್ತಿಯು, ಶಾಂತಿಮ್ – ಶಾಂತಿಯ, ಆಪ್ನೋತಿ – ಹೊಂದುತ್ತ°, ಕಾಮ-ಕಾಮೀ – ಆಸೆಗಳ ಪೂರೈಸಿಕೊಂಬಲೆ ಆಶಿಸುವವ°, ನ – ಅಲ್ಲ.

ಅನ್ವಯಾರ್ಥ

ಸದಾ ತುಂಬುತ್ತಿಪ್ಪ ಸ್ಥಿರವಾಗಿ ನೆಲೆಸಿಪ್ಪ ಸಮುದ್ರವ ಏವ ರೀತಿಲಿ ನೀರು ಹರುದು ಬಂದು ಪ್ರವೇಶಿಸುತ್ತೋ, ಅದೇ ರೀತಿಲಿ ಆರಲ್ಲಿ ಎಲ್ಲ ಕಾಮನೆಗೊ ಪ್ರವೇಶಿಸುತ್ತೋ ಆ ವ್ಯಕ್ತಿ ಶಾಂತಿಯ ಹೊಂದುತ್ತ° ಹೊರತು ಆಸೆಗಳ ಪೂರೈಸಿಗೊಂಬಲೆ ಹೊಣೆತ್ತವ ಅಲ್ಲ.

 

ತಾತ್ಪರ್ಯ / ವಿವರಣೆ

ಸದಾ ನದಿಗೊ ಪ್ರವೇಶಿಸಿ ನೀರು ತುಂಬುತ್ತಿದ್ದರೂ ಶಾಂತವಾಗಿಪ್ಪ ಸಾಗರದ ಹಾಂಗೆ, ನಿರಂತರವಾಗಿ ಹರುದು ಬಪ್ಪ ಕಾಮನೆಗಳಿಂದ ಮನಸ್ಸು ಕಲಂಕದಂತಿಪ್ಪ ಮನುಷ್ಯ ಮಾತ್ರವೇ ಶಾಂತಿಯ ಸಾಧಿಸಬಲ್ಲ°. ಇಂತಹ ಕಾಮಂಗಳ ತೃಪ್ತಿಗೊಳುಸಲೆ ಶ್ರಮಿಸುವವಂಗೆ ಶಾಂತಿ ದೊರಕಲೆ ಇಲ್ಲೆ.

ಸಾಗರ ಏವಾಗಳೂ ನೀರಿಂದ ತುಂಬಿರುತ್ತು. ಅದರ್ಲ್ಲಿಯೂ ಮಳೆಗಾಲಲ್ಲಿ ಹೆಚ್ಚು ನೀರು ಅದರ ಸೇರುತ್ತು. ಆದರೂ ಸಾಗರ ಒಂದೇ ರೀತಿ ಶಾಂತವಾಗಿ ಇರುತ್ತು. ಅದು ಪ್ರಕ್ಷುಬ್ಧಗೊಳ್ಳುತ್ತಿಲ್ಲೆ ಮತ್ತು ತನ್ನ ದಡದ ಮಿತಿಯ ಮೀರುತ್ತಿಲ್ಲೆ. ಕೃಷ್ಣಪ್ರಜ್ಞೆಲಿ ಮನಸ್ಸು ನೆಲ್ಸಿಪ್ಪವನ ವಿಷಯಲ್ಲಿಯೂ ಇದು ಸತ್ಯ. ಐಹಿಕ ಶರೀರ ಇಪ್ಪಷ್ಟು ಕಾಲವೂ ಇಂದ್ರಿಯತೃಪ್ತಿಗಾಗಿ ಶರೀರದ ಬೇಡಿಕೆಗೊ ಇದ್ದೇ ಇರುತ್ತು. ಆದರೆ, ಭಕ್ತನು ಪೂರ್ಣತೆಯ ಪಡೆದಿರುತ್ತನಾದ್ದರಿಂದ ಅವನ ಮನಸ್ಸು ಇಂತಹ ಆಸೆ ಕದಡುತ್ತಿಲ್ಲೆ. ಕೃಷ್ಣಪ್ರಜ್ಞೆಯುಳ್ಳ ಮನುಷ್ಯಂಗೆ ಯಾವುದರ ಅಗತ್ಯವೂ ಇಲ್ಲೆ. ಏಕೆಂದರೆ, ಭಗವಂತನೇ ಅವನ ಎಲ್ಲ ಐಹಿಕ ಅಗತ್ಯಂಗಳ ಪೂರೈಸುತ್ತ. ಹಾಂಗಾಗಿ ಅವ° ಸಮುದ್ರದ ಹಾಂಗೆ ಯಾವಾಗಲೂ ತನ್ನಲ್ಲೇ ಪೂರ್ಣತೆ ಇಪ್ಪವ°. ಸಮುದ್ರಕ್ಕೆ ಹರುದು ಬಪ್ಪ ನದಿಯ ನೀರಿನ ಹಾಂಗೆ ಬಯಕೆಗೊ ಅವಂಗೆ ಬಕ್ಕು, ಆದರೆ, ತನ್ನ ಚಟುವಟಿಕೆಯಲ್ಲೇ ಸ್ಥಿರವಾಗಿ ಇರುತ್ತ ಸಾಧಕ. ಇಂದ್ರಿಯತೃಪ್ತಿಯ ಬಯಕೆಂದ ಅವಂಗೆ ಇಂದಿಷ್ಟೂ ಕ್ಷೋಭೆ ಆವುತ್ತಿಲ್ಲೆ. ಸಮುದ್ರದ ಹಾಂಗೆ ಸ್ಥಿರವಾಗಿರುತ್ತ° . ಹಾಂಗಾಗಿ ಸಂಪೂರ್ಣ ಶಾಂತಿಯ ಅನುಭವಿಸುತ್ತ°. ಐಹಿಕ ಯಶಸ್ಸಿನ ಬಯಕೆಯಾಗಿರಲಿ, ಮುಕ್ತಿಯ ಬಯಕೆಯೇ ಆಗಿರಲಿ, ಬಯಕೆಗಳ ತೃಪ್ತಿಪಡುಸಲೆ ಅಪೇಕ್ಷಿಸುವವಂಗೆ ಶಾಂತಿ ಹೇಳ್ವದೇ ಇಲ್ಲೆ. ಕಾಮ್ಯಕರ್ಮಗೊ, ಮೋಕ್ಷಾರ್ಥಿಗೊ ಮತ್ತು ಯೋಗಸಿದ್ಧಿಯ ಬಯಸುವವು ಪೂರೈಕೆಗೊಳ್ಳದ ಬಯಕೆಂದಲಾಗಿ ಅಸುಖಿಗಳಾಗಿರುತ್ತವು. ಆದರೆ, ಕೃಷ್ಣಪ್ರಜ್ಞೆಲಿಪ್ಪ ಮನುಷ್ಯ° ಭಗವಂತನ ಸೇವೆಲಿಯೇ ಸುಖ ಹೊಂದುತ್ತ°. ಅವಂಗೆ ತೃಪ್ತಿಗೊಳುಸೇಕಾದ ಬಯಕೆಗೊ ಯಾವುದೂ ಇರುತ್ತಿಲ್ಲೆ. ಕೃಷ್ಣಪ್ರಜ್ಞೆಲಿಪ್ಪವಂಗೆ ಐಹಿಕ ಬಂಧನ, ಪ್ರಾಪಂಚಿಕ ಬಯಕೆ ಯಾವುದೂ ಇರುತ್ತಿಲ್ಲೆ. ಹಾಂಗಾಗಿ ಪರಮಾತ್ಮನಲ್ಲೇ ಪರಿಪೂರ್ಣ ಶಾಂತಿಯ ಕಾಣುತ್ತ°.

ಶ್ಲೋಕ

ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾಂಶ್ಚರತಿ ನಿಃಸ್ಪೃಹಃ ।
ನಿರ್ಮಮೋ ನಿರಹಂಕಾರಃ ಸ ಶಾಂತಿಮಧಿಗಚ್ಛತಿ ॥೭೧॥

ಪದವಿಭಾಗ

ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾನ್ ಚರತಿ ನಿಃಸ್ಪೃಹಃ । ನಿರ್ಮಮಃ ನಿರಹಂಕಾರಃ ಸಃ ಶಾಂತಿಮ್ ಅಧಿಗಚ್ಛತಿ ॥

ಅನ್ವಯ

ಯಃ ಪುಮಾನ್ ಸರ್ವಾನ್ ಕಾಮಾನ್ ವಿಹಾಯ, ನಿಃಸ್ಪೃಹಃ, ನಿರ್ಮಮಃ, ನಿರಹಂಕಾರಃ ಭೂತ್ವಾ ಚರತಿ, ಸಃ ಶಾಂತಿಮ್ ಅಧಿಗಚ್ಛತಿ।

ಪ್ರತಿಪದಾರ್ಥ

ಯಃ – ಏವ, ಪುಮಾನ್ – ವ್ಯಕ್ತಿ, ಸರ್ವಾನ್ ಕಾಮಾನ್ – ಎಲ್ಲ ಇಂದ್ರಿಯ ತೃಪ್ತಿಗಾಗಿ ಭೌತಿಕ ಅಪೇಕ್ಷೆಗಳ, ವಿಹಾಯ – ತ್ಯಜಿಸಿ, ನಿಃಸ್ಪೃಹಃ – ಆಶಾರಹಿತನಾಗಿ, ನಿರ್ಮಮಃ – ಒಡೆತನದ ಭಾವನೆಯಿಲ್ಲದ್ದೆ, ನಿರಹಂಕಾರ – ಅಹಂಕಾರವಿಲ್ಲದ್ದೆ, ಭೂತ್ವಾ – ಆಗಿದ್ದುಗೊಂಡು,  ಚರತಿ – ನಡೆತ್ತನೋ (ಜೀವಿಸುತ್ತನೋ), ಸಃ – ಅವ°, ಶಾಂತಿಮ್ – ಪರಿಪೂರ್ಣ ಶಾಂತಿಯ, ಅಧಿಗಚ್ಛತಿ – ಹೊಂದುತ್ತ°.

ಅನ್ವಯಾರ್ಥ

ಯಾವ ಮನುಷ್ಯ° ಇಂದ್ರಿಯ ತೃಪ್ತಿಯ ಎಲ್ಲ ಬಯಕೆಗಳ ತ್ಯಜಿಸಿದ್ದನೋ, ಬಯಕೆಗಳಿಂದ ಮುಕ್ತನಾಗಿ ಬದುಕ್ಕುತ್ತನೋ, ಒಡೆತನದ ಭಾವವ ಸಂಪೂರ್ಣವಾಗಿ ಬಿಟ್ಟಿದ್ದನೋ ಮತ್ತು ಅಹಂಕಾರ ರಹಿತನಾಗಿದ್ದನೋ ಅವ° ಮಾತ್ರ ನಿಜವಾದ ಶಾಂತಿಯ ಪಡವಲೆಡಿಗು.

ತಾತ್ಪರ್ಯ / ವಿವರಣೆ

ಕಾಮರಹಿತನಾಗಿಪ್ಪದು ಹೇದರೆ ಇಂದ್ರಿಯ ತೃಪ್ತಿಗಾಗಿ ಏನನ್ನೂ ಬಯಸದ್ದೇ ಇಪ್ಪದು. ಕೃಷ್ಣಪ್ರಜ್ಞೆಯ ಬಯಸುವುದು ಹೇದರೆ ವಾಸ್ತವವಾಗಿ ಸಕಲ ಕಾಮಂಗಳ ತ್ಯಜಿಸಿ ಕಾಮರಹಿತನಾಗಿಪ್ಪದು. ಈ ಜಡದೇಹವೇ ತಾನು ಎಂಬ ಕಲ್ಪನೆಗೊಳಗಾಗದ್ದೆ, ಜಗತ್ತಿಲ್ಲಿ ಯಾವುದಕ್ಕಾದರೂ ತಾನು ಒಡೆಯ ಹೇದು ತಪ್ಪಾಗಿ ಭಾವಿಸದ್ದೆ, ತಾನು ಎಂದೆಂದೂ ಕೃಷ್ಣನ ಸೇವಕ° ಹೇಳ್ವ ತನ್ನ ನಿಜವಾದ ಸ್ಥಾನವ ಅರ್ಥಮಾಡಿಗೊಂಬದೇ ಕೃಷ್ಣಪ್ರಜ್ಞೆಯ ಪರಿಪೂರ್ಣ ಸ್ಥಿತಿ. ಈ ಪರಿಪೂರ್ಣ ಸ್ಥಿತಿಲಿಪ್ಪವ° ಕೃಷ್ಣನೇ ಎಲ್ಲದರ ಒಡೆಯ°, ಎಲ್ಲವೂ ಕೃಷ್ಣನ ಸಂತೃಪ್ತಿಗಾಗಿ ಬಳಸೇಕು ಹೇಳ್ವದರ ತಿಳಿದಿರುತ್ತ°.

ಬನ್ನಂಜೆ ಹೇಳುತ್ತವು – ಆರು ಭೋಗದ ಬಯಕೆಯ ಬಿಟ್ಟು, ಬಂದದ್ದರ ಸಂತೋಷವಾಗಿ ಅನುಭವಿಸುತ್ತವೋ, ಅವ° ನಿಜವಾದ ಸಾಧಕ ಎಂದೆನಿಸಿಗೊಳ್ಳುತ್ತ°. ಸೀಮಿತವಾದ ಆಹಾರ, ನಿದ್ರೆ, ಮತ್ತು ಮೈಥುನವ ಅಭ್ಯಾಸ ಮಾಡಿಗೊಂಡು, ನಿರ್ಭಯವಾಗಿ ಸಂಪೂರ್ಣ ಭಗವಂತ° ಮತ್ತು ಭಗವಂತನ ರಕ್ಷಾ ಕವಚದ ಜ್ಞಾನದಲ್ಲಿದ್ದು, ಆಸೆ ಆಕಾಂಕ್ಷೆಗೊಕ್ಕೆ ಬಲಿ ಬೀಳದ್ದೆ, ಯಾವುದೇ ಯೇರು-ಪೇರುಗೊಕ್ಕೆ ವಿಚಲಿತನಾಗದ್ದೇ ಬದುಕ್ಕುತ್ತನೋ, ಅವ° ನಿಜವಾದ ‘ಮನುಷ್ಯ’ ಎಂದೆಣಿಸಿಗೊಳ್ಳುತ್ತ°. ಇಂತವಂಗೆ ಆನು-ಎನ್ನದು ಎಂಬ ಅಹಂ ಎಂದೂ ಇರುತ್ತಿಲ್ಲೆ ಮತ್ತು ಅಂತವ ಮುಕ್ತಿಮಾರ್ಗಕ್ಕೆ ಅರ್ಹನಾಗಿರುತ್ತ°.

ಶ್ಲೋಕ

ಏಷಾ ಬ್ರಾಹ್ಮೀ ಸ್ಥಿತಿಃ ಪಾರ್ಥ ನೈನಾಂ ಪ್ರಾಪ್ಯ ವಿಮುಹ್ಯತಿ ।
ಸ್ಥಿತ್ವಾಸ್ಯಾಮಂತ ಕಾಲೇsಪಿ ಬ್ರಹ್ಮನಿರ್ವಾಣಮೃಚ್ಛತಿ ॥೭೨॥

ಪದವಿಭಾಗ

ಏಷಾ ಬ್ರಾಹ್ಮೀ ಸ್ಥಿತಿಃ ಪಾರ್ಥ ನ ಏನಾಮ್ ಪ್ರಾಪ್ಯ ವಿಮುಹ್ಯತಿ । ಸ್ಥಿತ್ವಾ ಅಸ್ಯಾಮ್ ಅಂತಕಾಲೇ ಅಪಿ ಬ್ರಹ್ಮನಿರ್ವಾಣಮ್ ಋಚ್ಛತಿ॥

ಅನ್ವಯ

ಹೇ ಪಾರ್ಥ! ಏಷಾ ಬ್ರಾಹ್ಮೀ ಸ್ಥಿತಿಃ, ಏನಾಂ ಪ್ರಾಪ್ಯ ನ ವಿಮುಹ್ಯತಿ, ಅಂತಕಾಲೇ ಅಪಿ ಅಸ್ಯಾಂ ಸ್ಥಿತ್ವಾ ಬ್ರಹ-ನಿರ್ವಾಣಮ್ ಋಚ್ಛತಿ॥

ಪ್ರತಿಪದಾರ್ಥ

ಹೇ ಪಾರ್ಥ! – ಏ ಪೃಥೆಯ ಪುತ್ರನೇ!, ಏಷಾ – ಇದು, ಬ್ರಾಹ್ಮೀ – ಆಧ್ಯಾತ್ಮಿಕ, ಸ್ಥಿತಿಃ – ಸನ್ನಿವೇಶವು,  ಏನಾಮ್ – ಇದರ, ಪ್ರಾಪ್ಯ – ಪಡದು,  ನ ವಿಮುಹ್ಯತಿ – ಎಂದಿಂಗೂ ದಿಗ್ಭ್ರಮೆಗೊಳ್ಳುತ್ತನಿಲ್ಲೆ°, ಅಂತಕಾಲೇ – ಜೀವಿತದ ಅಂತ್ಯಲ್ಲಿ, ಅಪಿ – ಕೂಡ, ಅಸ್ಯಾಮ್ – ಇದರಲ್ಲಿ, ಸ್ಥಿತ್ವಾ – ಸ್ಥಿತನಾಗಿದ್ದು,   ಬ್ರಹ್ಮ-ನಿರ್ವಾಣಮ್ – ಭಗವದ್ಧಾಮವ (ಮೋಕ್ಷವ), ಋಚ್ಛತಿ – ಹೊಂದುತ್ತ°.

ಅನ್ವಯಾರ್ಥ

ಏ ಪೃಥೆಯ ಮಗನಾಗಿ ಪಾರ್ಥ ಹೇಳುಸಿಗೊಂಡ ಅರ್ಜುನ!, ಇದು ಆಧ್ಯಾತ್ಮಿಕ ಮತ್ತು ದೇವಸಮ್ಮತ ಬದುಕಿನ ರೀತಿ. ಇದರ ಸಾಧಿಸಿದ ಮತ್ತೆ ಮನುಷ್ಯ° ಭ್ರಮಗೆ ಒಳಗಾವ್ತನಿಲ್ಲೆ. ಸಾವಿನ ಗಳಿಗೆಲಿಯೂ ಮನುಷ್ಯ° ಈ ಸ್ಥಿತಿಲಿ ಇದ್ದರೆ ಭಗವದ್ಧಾಮವ (ಮೋಕ್ಷವ) ಹೊಂದುತ್ತ°.

ತಾತ್ಪರ್ಯ / ವಿವರಣೆ

ಮನುಷ್ಯ° ಕೃಷ್ಣಪ್ರಜ್ಞೆಯನ್ನೋ ಅಥವಾ ದೈವೀ ಬದುಕನ್ನೋ ಒಂದೇ ಕ್ಷಣಲ್ಲಿ ಪಡವಲೆ ಎಡಿಗು. ಅಥವಾ ಲಕ್ಷಾಂತರ ಜನ್ಮಂಗಳ ಮತ್ತೆಯೂ ಇಂತಹ ಜೀವಾವಸ್ಥೆಯ ಮುಟ್ಟದ್ದೆ ಹೋಪಲೂ ಸಾಕು. ಇದು ವಸ್ಥು ಸ್ಥಿತಿ. ಇದರ ಅರ್ಥಮಾಡಿಗೊಂಡು ಒಪ್ಪಿಕೊಳ್ಳುವದರ ಅವಲಂಬಿಸಿದ್ದು. ಖಟ್ವಾಂಗ ಮಹಾರಾಜ ಸಾಯುವದಕ್ಕೆ ಕೆಲವೇ ನಿಮಿಷಂಗಳ ಮದಲು ಕೃಷ್ಣಂಗೆ ಸಂಪೂರ್ಣ ಶರಣಾಗತನಾಗಿ ಈ ಸ್ಥಿತಿಯ ಸಾಧಿಸಿದ್ದ. ನಿರ್ವಾಣ ಹೇಳಿರೆ ಐಹಿಕ ಬದುಕಿನ ಪ್ರಕ್ರಿಯೆಯ ಕೊನೆಗಾಣುಸುವದು. ಐಹಿಕ ಬದುಕು ಕೊನೆಗೊಂಡ ಮೇಲೆ ವಾಸ್ತವ ಬದುಕು ಪ್ರಾರಂಭ ಆವ್ತು. ಜಡ ಐಹಿಕವಾದಿಗೆ ಈ ಬದುಕಿನ ಐಹಿಕ ರೀತಿಯ ಕೊನೆಗಾಣಿಸೇಕು ಹೇಳಿ ತಿಳುದರೆ ಸಾಕು. ಆದರೆ, ಆಧ್ಯಾತ್ಮಿಕವಾಗಿ ಮುಂದುವರುದವಕ್ಕೆ ಈ ಐಹಿಕ ಬದುಕಿನಾಚಿಗೆ ಇನ್ನೊಂದು ಬದುಕು ಇದ್ದು. ಈ ಬದುಕಿನ ಕೊನೆಗಾಣುಸುವ ಮದಲು ಮನುಷ್ಯ° ಕೃಷ್ಣಪ್ರಜ್ಞೆಯ ಪಡೆಯುವಷ್ಟು ಭಾಗ್ಯಶಾಲಿಯಾದರೆ ಆತ° ಕೂಡಲೇ ಬ್ರಹ್ಮ ನಿರ್ವಾಣದ ಹಂತವ ಪಡೆತ್ತ. ಭಗವಂತನ ರಾಜ್ಯಕ್ಕೂ, ಭಗವಂತನ ಭಕ್ತಿಪೂರ್ವಕ ಸೇವಗೂ ವ್ಯತ್ಯಾಸವಿಲ್ಲೆ. ಅವೆರಡೂ ಪರಾತ್ಪರ ನೆಲೆಯಲ್ಲಿಪ್ಪದ್ದರಿಂದ ಭಗವಂತನ ಪ್ರೇಮಪೂರ್ವಕ ಆಧ್ಯಾತ್ಮಿಕ ಸೇವೆಲಿ ನಿರತನಾಗಿಪ್ಪದು ಹೇಳಿರೆ ಆಧ್ಯಾತ್ಮಿಕ ರಾಜ್ಯವ ಸಾಧಿಸಿದಂತೆ. ಐಹಿಕ ಜಗತ್ತಿಲ್ಲಿ ಇಂದ್ರಿಯ ತೃಪ್ತಿಯ ಚಟುವಟಿಕೆಗೊ ಇರುತ್ತು. ಆಧ್ಯಾತ್ಮಿಕ ಜಗತ್ತಿಲ್ಲಿ ಕೃಷ್ಣಪ್ರಜ್ಞೆಯ ಚಟುವಟಿಕೆಗೊ ಅಗಿರುತ್ತು. ಈ ಬದುಕ್ಕಿಲ್ಲಿಯೇ ಕೃಷ್ಣಪ್ರಜ್ಞೆಯ ಸಾಧಿಸುವುದು ಹೇಳಿರೆ ಬ್ರಹ್ಮನ್ ನ ಕೂಡಲೇ ಸಾಧಿಸಿದ ಹಾಂಗೆ, ಕೃಷ್ಣಪ್ರಜ್ಞೆಲಿ ಸ್ಥಿರವಾಗಿಪ್ಪವ° ಆಗಲೇ ಭಗವಂತನ ರಾಜ್ಯವ ಪ್ರವೇಶಿಸಿರುತ್ತ°.

ಭಗವಂತನಲ್ಲಿ ನೆಲೆಗೊಳ್ಳತಕ್ಕಂತವನ ಲಕ್ಷಣ ಬ್ರಾಹ್ಮೀ ಸ್ಥಿತಿ. ಈ ವರೇಂಗೆ ಹೇಳಿಪ್ಪದು ಒಬ್ಬ ಬ್ರಹ್ಮ ಜ್ಞಾನಿಯ ಲಕ್ಷಣ. ಬ್ರಹ್ಮನಲ್ಲಿ ಸ್ಥಿತನಾದ ಬ್ರಹ್ಮಪ್ರಜ್ಞೆ ಜಾಗೃತನಾದವನ ಲಕ್ಷಣ. ಇಂತಹ ಬ್ರಹ್ಮಜ್ಞಾನಿಯ ಆತನ ಬಾಹ್ಯ ಕ್ರಿಯೆಯಿಂದಲಾಗಲಿ, ವೇಷ ಭೂಷನದಿಂದಲಾಗಲಿ ಗುರುತುಸಲೆ ಸಾಧ್ಯ ಇಲ್ಲೆ. ಆತನ ಮಾನಸಿಕ ಸ್ಥಿತಿ ಆತನ ಸ್ಥಾನವ ತಿಳಿಸುತ್ತು. ತನ್ನ ಸಾವಿನ ಕೊನೆ ಕ್ಷಣದಲ್ಲಿ ಕೂಡ ಭಗವಂತನ ಪ್ರಜ್ಞೆ ಜಾಗೃತವಾದರೆ ಆತ° ನೇರ  ಮರುಹುಟ್ಟಿಲ್ಲದ್ದೆ ಮೋಕ್ಷವ ಪಡೆಯುತ್ತ°.

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಸಾಂಖ್ಯಯೋಗೋನಾಮ ದ್ವಿತೋಯೋsಧ್ಯಾಯಃ ॥

ಇಲ್ಲಿಗೆ ಉಪನಿಷತ್ತೂ ಬ್ರಹ್ಮವಿದ್ಯೆಯೂ ಮತ್ತು ಯೋಗಶಾಸ್ತ್ರವೂ ಶ್ರೀಕೃಷ್ಣ-ಅರ್ಜುನರೊಳಾಣ ಸಂವಾದವೂ ಆದ ಶ್ರೀಮದ್ಭಗವದ್ಗೀತೇಲಿ ಸಾಂಖ್ಯಯೋಗ (ಶುದ್ಧವಾದ ಆತ್ಮ ತತ್ವವಿಜ್ಞಾನ, ಆತ್ಮ ಮತ್ತು ಮನಸ್ಸು ತತ್ವ) ಹೇಳ್ವ ದ್ವಿತೀಯ ಅಧ್ಯಾಯ ಮುಗುದತ್ತು.

|| ಗೀತಾಚಾರ್ಯ ಶ್ರೀಕೃಷ್ಣ ಭಗವಾನ್ ಕೀ…. ಜೈ || ಗೀತಾ ಮಾತಾ ಕೀ …. ಜೈ || ಗೋಪಾಲಕೃಷ್ಣ ಭಗವಾನ್ ಕೀ .. ಜೈ ||

॥ ಶ್ರೀಕೃಷ್ಣಾರ್ಪಣಮಸ್ತು ॥

….. ಮುಂದುವರಿತ್ತು.

ಕೆಮಿಲಿ ಕೇಳ್ಳೆ –

BHAGAVADGEETHA – CHAPTER 02 SHLOKAS 61 – 72 by CHENNAI BHAAVA

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

9 thoughts on “ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 61 – 72

  1. ಮನಸ್ಸಿನ ನಿಯ೦ತ್ರಿಸುವ ಕಲೆಯ ವಿವರಣೆ ಭಾರೀ ಚೆ೦ದ ಆಯಿದು ಭಾವ.ಮನಸ್ಸಿನ ಸರಿದಾರಿಲಿ ಎಬ್ಬೆಕ್ಕು.ಎಬ್ಬುವಲ್ಲಿಗೆ ಹೋದರೆ ನಿಯ೦ತ್ರಣ,ಹೋಪಲ್ಲಿಗೆ ಎಬ್ಬಿರೆ ಬಿರುಗಾಳಿಗೆ ಸಿಕ್ಕಿದ ತರಗೆಲೆಯೇ.
    ಹಗಲು -ಇರುಳುಗಳ ದೃಷ್ಟಿಕೋನ ಭಾರೀ ಅರ್ಥಪೂರ್ಣ.

  2. ವಿವರಣೆ ಲಾಯ್ಕ ಆಯಿದು ಭಾವಾ 🙂

    ಪ್ರೀತಿ ಸರಿಯಾದ್ದು ಹೇಳಿಆದರೆ ಅದರ ಪರ್ಯವಸಾನ ಅದ್ವೈತಲ್ಲಿಯೇ ಅಪ್ಪದು.
    ನಾವು ಎರಡಲ್ಲ – ಹೇಳಿ ಕಂಡರೆ ಅದೇ ಪ್ರೀತಿ 🙂
    ಅಲ್ಲಿ ಯಾವುದೇ ತಡೆಯೋ ಅಥವಾ ಗುಟ್ಟೋ ಇರ್ತಿಲ್ಲೆ..
    ಅದೇ ಪ್ರೀತಿ ಸರಿಯಾದ ದಾರಿಲಿ ಇಲ್ಲದ್ದರೆ ಶ್ರೀ ಕೃಷ್ಣ ಹೇಳಿದಾಂಗೆ ಬುದ್ಧಿನಾಶವೇ ಅಪ್ಪದು..

    ಪ್ರೀತಿ ಸರಿ ಇಪ್ಪದು ಹೇಳಿರೆ ಎಂತ ಕೇಳಿರೆ, ನಮ್ಮ ಗುರುಗೊ ಹೇಳ್ತವು,
    “ಬದುಕು ನಿಜವಾದ ಲಕ್ಷ್ಯದೆಡೆಗೆ ಚಲಿಸಲು ಬೇಕು “ನೀತಿ” ಎಂಬ ಚಾಲಕ.. ನೀತಿಗೆ ಸಲ್ಲದ ಪ್ರೀತಿಯು ಪ್ರೀತಿಯೇ ಅಲ್ಲ.
    ನಿಜವಾದ ಪ್ರೀತಿಯ ಕುರುಹು ಅದರ ಅಚಲತೆ.” ಹೇಳಿ.

    ಮನಸ್ಸಿಂಗೆ ನಾವು ಹೇಂಗೆ ಅಭ್ಯಾಸ ಮಾಡುಸಿದ್ದೋ ಅದು ಹಾಂಗೆಯೇ.
    ಹಾಂಗಾಗಿಯೇ ನಾವು ಮನಸ್ಸಿಂಗೆ “ನೀತಿ”ಯ ಅಭ್ಯಾಸ ಮಾಡುಸೆಕ್ಕು – ಅದರೊಟ್ಟಿಂಗೆ ಪ್ರೀತಿ ಮತ್ತು ಭಕ್ತಿಯ ಅಭ್ಯಾಸ ಮಾಡುಸೆಕ್ಕು. ಅಲ್ಲದರೆ ದೋಣಿ ಸೇರೆಕಾದಲ್ಲಿಗೆ ಸೇರ.
    ಹಾಂಗೆ ಒಂದರಿ ಆ ನೀತಿಯ ಅಭ್ಯಾಸ ಆತೋ, ಮತ್ತೆ ಒಳುದೋರಿಂಗೆ ಭಯಂಕರ ಚಪಲತೆ ಹುಟ್ಟುಸುವ ವಿಷಯಂಗೊ ಅವಂಗೆ ನೀರಸವಾಗಿ ಕಾಣ್ತು. ಉಳುದೋರಿಂಗೆ ನೀರಸವಾಗಿ ಇಪ್ಪದು ಇವಂಗೆ ಉಪಕಾರಕ್ಕೆ ಬಪ್ಪ ವಿಷಯದ ಹಾಂಗೆ ತೋರುತ್ತು.

    ಆ ನೀತಿಯೇ ಸಾಕ್ಷೀಭಾವ, ಅದೇ ಎಲ್ಲವೂ ಕೃಷ್ಣನೇ ಹೇಳುವ ಕೃಷ್ಣ ಪ್ರಜ್ನೆ, ಅದೇ ಭರತನ ಅನುಪಾಲನೆಯ ಭಾವ..
    ಅದಿದ್ದರೆ, ಯಾವುದೇ ಪ್ರೀತಿಯೂ ದಾರಿ ತಪ್ಪ 🙂
    ಮನಸ್ಸು ಕೃಷ್ಣ ಹೇಳಿದಾಂಗೆ ಯಾವತ್ತೂ ಅವನಲ್ಲಿಯೇ ಇರುತ್ತು. 🙂

    ಒಂದೊಪ್ಪ 🙂

  3. ದ್ವಿತೀಯ ಅಧ್ಯಾಯ,ಆತ್ಮವಿದ್ಯೆಯ ವಿವರಂಗೊ ಚೆಂದವಾಗಿ ಬರೆದ್ದಿ.ಅಭಿನಂದನೆಗೊ ಭಾವಯ್ಯ.

  4. ದ್ವಿತೀಯ ಅಧ್ಯಾಯ ತುಂಬ ಚೆಂದಕ್ಕೆ ಬರದ್ದಿ ಭಾವ. ಬನ್ನಂಜೆಯವವರ ವಿವರನೆಗಲ ಸಿಂಚನದೊಟ್ಟಿಂಗೆ ಸುಲಭವಾಗಿ ಅರ್ಥ ಅಪ್ಪ ಹಾಂಗೆ ಬರದ್ದಿ. ಅಭಿನಂದನೆಗೊ.

  5. ಈ ಶ್ಲೋಕಕ್ಕೆ — ಆಚಾರ್ಯ ಶಂಕರರು — “ಏವಂ ಆತ್ಮ ವಿಷಯಾಂ ಪ್ರಜ್ಞಾಂ ಹೃತ್ವಾ ಮನಃ ವಿಷಯವಿಷಯಾಂ ಕರೋತಿ” = ಆತ್ಮ ವಿಷಯವಾದ “ಪ್ರಜ್ಞೆ ” ಯನ್ನು ಅಪಹರಿಸಿ – ವಿಷಯಗಳ ವಿಷಯವಾಗಿಯೇ ಚಿಂತಿಸುತ್ತಿರುವಂತೆ ಮಾಡುತ್ತದೆ. ||
    ಆಚಾರ್ಯ ಮಧ್ವರು ಹೇಳುತ್ತಾರೆ — ಪ್ರಜ್ಞಾಂ ಜ್ಞಾನಂ ಉತ್ಪತ್ಸ್ಯದಪಿ ನಿವಾರಯತೀತ್ಯರ್ಥಃ | ಉತ್ಪನ್ನಸ್ಯಾಪಿ ಅಭಿಭವೋ ಭವತಿ | = ಪ್ರಜ್ಞಾಂ ಎಂದರೆ ಪರೋಕ್ಷ ಜ್ಞಾನವು ಹುಟ್ಟದಂತೆ ತಡೆಯುತ್ತದೆ. ಮತ್ತು ಹುಟ್ಟಿದ ಜ್ಞಾನವನ್ನು ಕಳೆಗುಂದಿಸಿ ಧ್ಯಾನಕ್ಕೆ ಅನುಪಯುಕ್ತ ವಾಗುವಂತೆ ಮಾಡುತ್ತದೆ ||
    ಒಟ್ಟರ್ಥ — ಈ ಮೇಲಿನ ಎರಡು ವಾಕ್ಯಗಳು ಸಾಧನೆಯ ಮೆಟ್ಟಲೇರುತ್ತಿರುವ ಯತಿಗಳಿಗೆ ಹೆಚ್ಚು ಅನ್ವೈಸುತ್ತದೆ ಕಷ್ಟ ಪಟ್ಟು ಜ್ಞಾನ ಸಂಪಾದಿಸಿದವನೂ ಎಡವಿದಲ್ಲಿ ಅವನ ಸಂಪಾದನೆ ಎಲ್ಲವೂ ಈ ಜನ್ಮಕ್ಕೆ “ನೀರ ಮೇಲಿನ ಹೊಮದಂತಾಗುತ್ತದೆ” | ಆದರು, ಸಂಪಾದಿಸಿದ ಜ್ಞಾನವು ವ್ಯರ್ಥ ವಲ್ಲ — ಅದು ಮುಂದಿನ ಜನ್ಮದಲ್ಲಿ ಅಥವಾ ಇದೇ ಜನ್ಮದಲ್ಲಿ ಸುಧಾರಿಸಿಕೊಂಡಲ್ಲಿ ಪುನಃ ಉಪಯೋಗಕ್ಕೆ ಬರಬಹುದು — ಉದಾ — ವಿಶ್ವಾಮಿತ್ರ ಋಷಿ || ಈ ವಿಷಯವು ಅದ್ಯಾಯ ಆರರಲ್ಲಿ (೬) ಬರುತ್ತದೆ.||

    1. ಒಳ್ಳೆ ವಿವರಣೆ ಮಾವ°. ಅಂತರಾತ್ಮ ದ “ಎಚ್ಚರಿಕೆ ”, “ಪರಿಣಾಮೇ ವಿಷೋಪಮಂ” “ವಿಷಯವಿಷಯಾಂ ಕರೋತಿ” ವಿವರಣೆಗೊ ಮತ್ತೂ ಲಾಯಕ ಆಯ್ದು ಮನಮುಟ್ಟುವಂತೆ ಆಯ್ದು. ಹರೇ ರಾಮ ॥

  6. ಇದರ ಸರಿಯಾಗಿ ಓದಿ — ಹೇಂಗೆ ಮನಸಿನ ಹಿಂದೆಗವಲೆ ಎಡಿಗು ಹೇಳಿ —
    ನಮ್ಮ ಮನಸು ಒಂದು ರೀತಿಲಿ ಸಣ್ಣ “ಮಗು” ವಿನ ಹಾಂಗೆ | ಆ ಮಗು ” ಬೆಲ್ಲ ” ಕೇಳುತ್ತು — ಅಮ್ಮ ಕೊಡುತ್ತು – ಆದರು ಹೆಚ್ಚು ಬೇಕು ಹೇಳಿ ಹಠ ಮಾಡಿದರೆ — ಮೊದಲು ಅಮ್ಮ ಒಳ್ಳೆ ರೀತಿಲಿ ಹೇಳಿ ಸಮಾಧಾನ ಮಾಡುಲೆ ನೋಡುತ್ತು — ಮತ್ತು ಅಗದ್ದರೆ ಅಮ್ಮ ಪೆಟ್ಟು ಕೊಡುಲು ತಯಾರಾವುತ್ತು | ಒಂದುವೇಳೆ ಆ ಮಗುವಿನ ಬೇಡಿಕೆಗೆ ಬಗ್ಗಿ ಕೇಳಿದಷ್ಟು ಬೆಲ್ಲ ಕೊಟ್ಟರೆ ಮಗುವಿನ ಆರೋಗ್ಯ ಅಮ್ಮನ ಕೈಲಿ ಉಳಿಯ — ಮತ್ತು ಆ ಅಭ್ಯಾಸವ ನಿಲುಸುದು ಕಷ್ಟಕರ | ಮನಸು ಹಾತೊರೆವ ಪ್ರತಿಯೊಂದು ಪ್ರಾಪಂಚಿಕ ವಿಷಯಂಗಳಲ್ಲಿಯೂ “ತಾತ್ಕಾಲಿಕ ವಾದ” ಹಾಗು “ಅಮೃತೊಪಮವಾದ” ಒಂದು ರಾಜಸ “ಸುಖ” ಇರುತ್ತು — ಅದರ ಪರಿಣಾಮ “ವಿಷೋಪಮಾ” — ಉದಾ – ಭ. ಗೀ. ಶ್ಲೋಕ 18 -38 – ವಿಷಯೇಂದ್ರಿಯ ಸಂಯೋಗಾದ್ಯತ್ತದಗ್ರೇ ಅಮೃತೋಪಮಂ | ಪರಿಣಾಮೇ ವಿಷಮಿವ ತತ್ಸುಖಂ ರಾಜಸಂ ಸ್ಮೃತಂ ||ಭ.ಗೀ ೧೮-೩೮ || — ಕಾಳಜಿಂದ ಎಲ್ಲೊರು ನೋಡಿ – ವಿಷಯೇಂದ್ರಿಯ = ವಿಷಯ ಮತ್ತು ಇಂದ್ರಿಯಂಗಳ — ಸಂಯೋಗಾತ್ = ಸಮಾಗಮಂದಾಗಿ ಯತ್ ತತ್ ಅಗ್ರೇ “ಅಮೃತೋಪಮಂ” ಯಾವದು ಮೊದಲು ಅಮೃತ ಸದೃಶವಾದ ಸುಖವ ತಂದು ಒದಗಿಸುತ್ತೋ —- ಪರಿಣಾಮೇ = ಪರಿಣಾಮಲ್ಲಿ ವಿಷಂ ಇವ = ವಿಷದ ಹಾಂಗೆ (ನಮ್ಮ ನಾಶ ಮಾಡುತ್ತೋ) — ಅದು ರಾಜಸ ಸುಖ || ಅಂಬಗ ಇಷ್ಟು ಬರದ್ದು ಎಂತಗೆ ? — ಮನಸು ಬಲವಾಗಿ ನಮ್ಮ “ಪ್ರಜ್ಞೆ”ಯ ಎಳವಾಗ (ಹರತಿ ಪ್ರಜ್ಞಾಂ) — ನಮ್ಮ ಎದುರು ಎರಡು “ಆಯ್ಕೆ ” ಇರುತ್ತು == ೧. ಅಮೃತೋಪಮವಾದ ಆ ಇಂದ್ರಿಯ ಸುಖದಾಯಕ ಕರ್ಮಲ್ಲಿ ನಮ್ಮ ತೊಡಗಿಸಿಗೊಂಬದು ( ಪ್ರವರ್ತಿಸುದು ) ೨. ಪರಿಣಾಮವ ” ಪುನಃ ಪುನಃ …. ಪುನಃ ” ನೆನೆಸಿ ಆ ಕಾರ್ಯಂದ ಹಿಂದೆ ಸರಿವದು — ಅಂಬಗ ಎರಡನೆಯದು ಬರೆಕ್ಕಾದರೆ — “ಪರಿಣಾಮೇ ವಿಷೋಪಮಂ” ಎಂಬುದರನ್ನೇ ಮೆಲುಕು ಹಾಕೆಕ್ಕು “ಕ್ಷಣಿಕ ಮತ್ತು ತಾತ್ಕಾಲಿಕ “ವಾದ ಸುಖದ ಚಿಂತನೆ ಅಥವಾ “ಮೆಲುಕು” ಹಾಕುಲಾಗ — ಇಷ್ಟು ಮಾಡುಲೆ ನಾವು ಸನ್ಯಾಸ ತೆಕ್ಕೊಲ್ಳೆಕ್ಕು ಹೇಳಿ ಇಲ್ಲೇ — ಗ್ರಹಸ್ತರಾಗಿಯೇ ಮಾಡಿಗೊಂಬಲೆ ಎಡಿಗು || ಒಟ್ಟಾರೆ ಕೈ ಹಾಕುಲೆ ಮನಸು ಹೋಪ ವಿಷಯದ “ಅಂತಿಮ ಪರಿಣಾಮ” ಎಂತ ಅಕ್ಕು ಹೇಳಿ ಗ್ರಹಿಸೆಕ್ಕು||

  7. ಚೆನ್ನೈ ಭಾವಾ ಎರಡನೇ ಅಧ್ಯಾಯ ಬಹಳ ಚೆನ್ನಾಗಿ ವಿವರಣೆ ಬಯಿಂದು | ಬನ್ನಂಜೆ ಯವರ ವಿವರಣೆ ಬಹಳ ಸರಳ ರೂಪಲ್ಲಿ ಸಮಾನ್ಯರಿಂಗೆ ಅರ್ಥ ಅಪ್ಪ ಹಾಂಗೆ ಇದ್ದು |
    ಇಂದ್ರಿಯಾಣಾಂ ಹಿ ಚರತಾಂ ——- (ಶ್ಲೋ -67 ) ಇದು ಎಲ್ಲರು ಪುನಃ ಪುನಃ ನೆನಪಿಸಿಗೊಂದು ಆಚರಣೆ ಗೆ ತಪ್ಪ ವಿಷಯ | ಎಲ್ಲ ಮನುಷ್ಯ ರಿಂಗು — ಮನಸು ಬೇಡದ್ದ ವಿಷಯಂಗಳಲ್ಲಿ “ಒಲಾಡಿಗೊಂಡು” ಹೊಪಾಗ ಒಂದು ಅಂತರಾತ್ಮ ದ “ಎಚ್ಚರಿಕೆ ” ಬತ್ತು – ಆದರೆ ಅದರ ಹೆಚ್ಚಿನವರು ಕೇಳದ್ದೆ ಮತ್ತೆ — ಗಾಳಿ ಯ ಒಂದಿಗೆ ತೇಲಿ ಬಿರುಗಾಳಿಗೆ ಸಿಕ್ಕಿ ಒದ್ದಾಡು ವ ನಾವೆ ಯ ಹಾಂಗೆ ಕೊನೆಯಿಸಿರಿನ ತನಕವೂ ಒದ್ದಾದುತ್ತವು ||

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×