ಎನ್ನ ಶಾಲೆ, ಎನ್ನ ಮಾಷ್ಟ್ರು

ಎನ್ನ ಶಾಲೆ, ಎನ್ನ ಮಾಷ್ಟ್ರು

ಮೊನ್ನೆ ಸೆಪ್ಟೆಂಬರ್ ೫ಕ್ಕೆ “ಮಾಷ್ಟ್ರಕ್ಕಳ ದಿನಾಚರಣೆ”. ಕಲಿಸಿದ ಗುರುಹಿರಿಯರ ನೆನೆಸಿ ಶುಭಾಶಯ ಹೇಳುವವು ಎಲ್ಲರೂ ಹೇಳಿದವು. ಎಷ್ಟೊಂದು ಅರ್ಥ ಪೂರ್ಣ ದಿನಾಚರಣೆ. ಒಂದು ಶಿಶುವಿನ ತಿದ್ದಿ, ಶಿಕ್ಷಣ ಕೊಟ್ಟು ಅವನ ಸತ್ಪ್ರಜೆ ಮಾಡುವಲ್ಲಿ ಮಾಷ್ಟ್ರಕ್ಕಳ ಜವಾಬ್ದಾರಿಗೆ ಎಷ್ಟೊಂದು ಮಹತ್ವ ಇದ್ದಲ್ಲದಾ.  ಶಿಲ್ಪಿಯ ಕೈಗೆ ಸಿಕ್ಕಿದ ಸಾಧಾರಣ ಶಿಲೆ ಕಲ್ಲು, ಹೇಂಗೆ ಚೆಂದದ ಮೂರ್ತಿ ಆಗಿ ಪೂಜೆಗೆ ಅರ್ಹ ಆವ್ತೋ ಹಾಂಗೇ, ಶಿಶುವೊಬ್ಬ ಗುರುವಿನ ಮಾರ್ಗದರ್ಶನಲ್ಲಿ, ಸಮಾಜಲ್ಲಿ ಹಿರಿಯ ವೆಗ್ತಿ ಆಗಿ ಎಲ್ಲರಿಂದಲೂ ಗೌರವಕ್ಕೆ ಅರ್ಹ ಆವ್ತ°   ಇದರ ಸರಿಯಾಗಿ ತಿಳ್ಕೊಂಡ, ಶ್ರೀ ಸರ್ವಪಳ್ಳಿ ರಾಧಾಕೃಷ್ಣ, ತನ್ನ ಜನ್ಮ ದಿನವ ಮಾಷ್ಟ್ರಕ್ಕಳ ದಿನವಾಗಿ ಆಚರಿಸೆಕ್ಕು ಹೇಳಿ, ತನಗೆ ಕಲುಶಿದ ಮಾಷ್ಟ್ರಕ್ಕೊಗೆ ಮಾತ್ರ ಅಲ್ಲದ್ದೆ, ಆ ವೃತ್ತಿಲಿ ಇಪ್ಪ ಎಲ್ಲರಿಂಗೂ ಗೌರವ ಅರ್ಪಿಸಿದ.
ಹೊತ್ತೋಪಗ ಕೂದೊಂಡು ಹೀಂಗೆಲ್ಲಾ ಆಲೋಚನೆ ಮಾಡುವಾಗ, ಸಣ್ಣಾಗಿಪ್ಪಗ ವಿದ್ಯೆ, ಬುದ್ದಿ ಕಲಿಸಿದ ಹಲವಾರು ಹಿರಿಯರು, ಮಾಷ್ಟ್ರಕ್ಕೊ ನೆಂಪಿಂಗೆ ಬಂದು ಹೋದವು.

ಮಕ್ಕೊಗೆ ಮನೆಯೇ ಮೊದಲ ಪಾಠ ಶಾಲೆ ಹೇಳಿ ಕೇಳಿದ್ದು ನಾವು. ಮಕ್ಕಳ ಭವಿಷ್ಯ ಒಳ್ಳೆದಾಯೆಕ್ಕು ಹೇಳಿ ಅಬ್ಬೆ ಅಪ್ಪ°, ಮಕ್ಕೊಗೆ ತಿಳುವಳಿಕೆ ಬಪ್ಪಲ್ಲಿಂದ ಆರಂಭಗೊಂಡು ಅವಕ್ಕೆ ಒಳ್ಳೆ ಒಳ್ಳೆ ವಿಚಾರಂಗಳ ತಿಳಿಶಿ ಕೊಡ್ತಾ ಇರ್ತವು. ಮಕ್ಕೊಗೆ ಮೌಲ್ಯಯುತ ಶಿಕ್ಷಣ ಕೊಡ್ತವು, ತಪ್ಪು ಮಾಡಿರೆ ಶಿಕ್ಷೆಯೂ ಕೊಡ್ತವು, ಅಲ್ಲಿ ಅವಕ್ಕೆ ಇಪ್ಪ ಒಂದೇ ಗುರಿ ಹೇಳಿರೆ, ಮಕ್ಕೊ ಮುಂದಂಗೆ ಒಳ್ಳೆ ಸಂಸ್ಕಾರವಂತರಾಯೆಕ್ಕು,  ನಾಕು ಜೆನರ ಬಾಯಿಲಿ ಒಳ್ಳೆಯವ ಹೇಳಿ ಹೇಳ್ಸೆಕ್ಕು. ಸಮಾಜಲ್ಲಿ ಗೌರವ ಸಿಕ್ಕೆಕ್ಕು.

ಹಸಿ ಮಣ್ಣಿನ ಗೋಡೆಗೆ ಇಡ್ಕಿದ ಕಲ್ಲು ಅಲ್ಲಿಯೇ ನಿಲ್ಲುತ್ತು. ಒಂದು ವೇಳೆ ಕಲ್ಲು ಬಿದ್ದು ಹೋದರೂ, ಆ ಕಲೆ ಅಲ್ಲಿಯೇ ಒಳಿತ್ತು. ನವಗೆ ಸಿಕ್ಕಿದ ಎಷ್ಟೋ ವಿಶಯಂಗಳೂ ಹೀಂಗೆ ಅಲ್ಲದಾ?.

ಕೆಲವೊಂದು ಸರಿಯಾಗಿ ನೆಂಪಿರ್ತು. ಇನ್ನಿ ಕೆಲವು ರೆಜ ಕೆದಕ್ಕಿದರೆ ನೆಂಪಿಂಗೆ ಬತ್ತು.

ಸೋದರ ಮಾವಂದಿರು ಇಬ್ರೂ ಮಾಷ್ಟ್ರಕ್ಕಳೇ. ಅಲ್ಲಿಯೇ ಬೆಳದೆ. ಅವರ ಮಕ್ಕಳೊಟ್ಟಿಂಗೆ ಎಂಗಳೂ, ಅವರ  ಮಕ್ಕಳಾಗಿಯೇ  ದೊಡ್ಡ ಆದೆಯೊ. ಅವಕ್ಕೆ ಸಿಕ್ಕಿದ ಸಂಸ್ಕಾರ ಎಂಗೊಗೂ ಸಿಕ್ಕಿತ್ತು.

ಎಲ್ಲಕ್ಕಿಂತ ಹೆಚ್ಚಾಗಿ ಅಜ್ಜನಿಂದ ಶಿಕ್ಷೆ, ಶಿಕ್ಷಣ, ವಾತ್ಸಲ್ಯ, ಪ್ರೀತಿ  ಎಲ್ಲವೂ ಸರಿಯಾಗಿಯೇ ಸಿಕ್ಕಿತ್ತು.

ಮೂರು ಸಂಧಿ ಅಪ್ಪಗ ಮನೆ ಮಕ್ಕೊ ಕೈ ಕಾಲು ತೊಳದು ಅಜ್ಜನ ಎದುರು ಕೂದು ಪಾಠ ಒಪ್ಪುಸುವ ಪರಿಪಾಠ ಇತ್ತಿದ್ದು. ಪ್ರಭವಾದಿ ಸಂವತ್ಸರ, ೨೭ ನಕ್ಷತ್ರ ನಾಮಂಗೊ, ಚೈತ್ರ ವೈಶಾಖಾದಿ ರಾಷ್ಟ್ರೀಯ ಮಾಸಂಗೊ, ಮೇಷ, ವೃಷಭಾದಿ ಸೌರ ಮಾಸಂಗೊ, ಋತುಗೊ, ಒಂದರಿಂದ ಇಪ್ಪತ್ತರ ವರೆಗಿನ ಮಗ್ಗಿಗೊ ಇದೆಲ್ಲಾ ಒಪ್ಪುಸುವ ಕಾರ್ಯಕ್ರಮ ನಿತ್ಯಾ ನಡಕ್ಕೊಂಡು ಇತ್ತಿದ್ದು.

ಶಾಲೆಗೆ ಹೋಗಿ ಕಲ್ತದು ಹೇಳಿ ಇಲ್ಲದ್ದರೂ, ಪುಳ್ಯಕ್ಕೊಗೆ ನೀತಿ ಕತೆ ಹೇಳ್ತಷ್ಟು ಅನುಭವ ಅಜ್ಜಿಗೆ ಇತ್ತಿದ್ದು, ಅದರಲ್ಲಿ ಅವಕ್ಕೂ ಕೊಶಿ ಇತ್ತಿದ್ದು, ಎಂಗೊಗೆ ಇತ್ತಿದ್ದು ಹೇಳಿ ಬೇರೆ ಹೇಳೆಕ್ಕೂಳಿ ಇಲ್ಲೆನ್ನೆ!!!

ಆನು ಹೇಳ್ತಾ ಇಪ್ಪದು ಕಮ್ಮಿಲಿ ೪೫ ರಿಂದ ೫೦ ವರ್ಷದಷ್ಟು ಹಳೇ ಶುದ್ದಿಗೊ. ಈಗಾಣ ಹಾಂಗೆ ಪ್ರಿ.ಕೆ.ಜಿ., ಎಲ್.ಕೆ.ಜಿ., ಯು.ಕೆ.ಜಿ., ಹೇಳಿ ಮೂರು ವರ್ಷಕ್ಕೇ ಶಾಲೆಗೆ ಹೋಪಲೆ ಸುರುಮಾಡ್ತ ಕಾಲ ಅಲ್ಲ. ಆರು ವರ್ಷ ಆಗದ್ದೆ ಶಾಲೆಗೆ ಸೇರ್ಸಲೆ ಇಲ್ಲೆ. ಎಲ್ಲಾ ಪಾಠಂಗೊ ಮನೆಲಿಯೇ.  ಇಲ್ಲಿ ಯಾವದೇ ಸಿಲೆಬಸ್ ಇಲ್ಲೆ. ನಿಗದಿತ ಸಮಯ ಹೇಳಿ ಇಲ್ಲೆ. ಹೆರಿಯವರೊಟ್ಟಿಂಗೆ ತೋಟಕ್ಕೆ ಹೋದರೆ ಕೃಷಿ ಬಗ್ಗೆ ಕಲಿವಲೆ ಇದ್ದರೆ, ಗುಡ್ಡೆ ಹತ್ತಿರೆ ಮರ ಗಿಡಗಳ ಬಗ್ಗೆ ಕಲಿವಲೆ ಇದ್ದು. ಪೇಟೆಗೆ ಹೆರಟರೆ ವ್ಯವಹಾರ ಕಲಿವಲೆ ಇದ್ದು.

ಅಂಬಗ ಕಲ್ತ ದೊಡ್ಡ ಪಾಠಂಗೊ ಹೇಳಿರೆ, ಲೊಟ್ಟೆ ಹೇಳ್ಲಾಗ, ಇನ್ನೊಬ್ಬರ ಹತ್ರೆ ಇಪ್ಪದಕ್ಕೆ ಆಶೆ ಪಡ್ಲಾಗ, ಸಮಯ ಪರಿಪಾಲನೆಗೆ ಪ್ರಾಮುಖ್ಯತೆ ಕೊಡೆಕು, ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡ್ಲಾಗ, ಎಲ್ಲಾ ಖರ್ಚು ವೆಚ್ಚಕ್ಕೆ ಲೆಕ್ಕ ಮಡುಗೆಕ್ಕು, ಉಂಬ ಅಶನವ ಬಿಟ್ಟಿಕ್ಕಿ ಹೋಪಲಾಗ, ಪ್ರತಿಯೊಂದು ವಸ್ತುಗಳ ಅದದೇ ಜಾಗೆಲಿ ಮಡುಗೆಕ್ಕು, ಇತ್ಯಾದಿ. ಇದರಲ್ಲಿ ಎಲ್ಲಿ ಲೋಪ ಕಂಡರೂ, ಶಿಕ್ಷೆ ನಿಶ್ಚಿತವೇ !!!

ಆರು ವರ್ಷ ಅಪ್ಪಗ ಶಾಲೆಗೆ ಸೇರ್ಸಿದವು.  ಸರಕಾರೀ ಶಾಲೆ, ಒಂದರಿಂದ ಏಳರವಗೆ ಕ್ಲಾಸ್ ಗೊ.

ಒಂದು ಮೈಲ್ ನೆಡಕ್ಕೊಂಡು ಹೋಯೆಕ್ಕು. ಬಸ್ಸಿನ ವೆವಸ್ಥೆ, ಅಥವಾ ಇನ್ನಿತರ ವಾಹನದ ವೆವಸ್ಥೆ ಇಲ್ಲೆ. ಮಧ್ಯಾಹ್ನದ ಊಟಕ್ಕೆ ಇಪ್ಪದರ ಬುತ್ತಿ ಕಟ್ಟಿಂಡು ಹೋಯೆಕ್ಕಷ್ಟೆ. ಎಲ್ಲರೂ ಒಟ್ಟಿಂಗೆ ಮಾತಾಡಿಂಡು, ಆಟ ಆಡಿಂಡು ಹೋಪದು ಒಂದು ಕೊಶಿಯೇ !!!

ಶಾಲೆ ೧೦ ಗಂಟೆಗೆ ಸುರು ಆವ್ತರೆ ಎಂಗಳ ಪ್ರಯಾಣ ೯ ಕ್ಕೆ ಹೆರಟು, ೯:೩೦ ಒಳ ಅಲ್ಲಿಗೆ ಎತ್ತುತ್ತು. “ಬೇಗ ಹೋಗಿ ಬಾಗಿಲು ತೆಗೆತ್ತ ಕೆಲಸ ನಿಂಗೊಗೇ ಇಪ್ಪದಾ” ಕೇಳುಗು  ಮನೆಲಿ. ಅದಕ್ಕೆಲ್ಲಾ ಸರಿಗಟ್ಟಿನ ಉತ್ತರ ಸಿಕ್ಕೆಕ್ಕು ಹೇಳ್ತ ಉದ್ದೇಶಲ್ಲಿ ಅವು ಕೇಳುವದೂ ಅಲ್ಲ, ಉತ್ತರ ಹೇಳ್ತಷ್ಟು ವ್ಯವಧಾನ ಎಂಗೊಗೂ ಇತ್ತಿಲ್ಲೆ.  ಚೀಲ ಹಿಡ್ಕೊಂಡು ಓಡ್ಲೆ ಅಂಬೆರ್ಪು.

ಒಂದು ಪಾಠ ಪುಸ್ತಕ, ಒಂದು ಸ್ಲೇಟ್, ಒಂದು ಕಡ್ಡಿ ಇಷ್ಟು ಇದ್ದರೆ ಒಂದನೇ ಕ್ಲಾಸಿಂಗೆ ಧಾರಾಳ ಆತು. ಈಗಾಣ ಬುದ್ಧಿ ಜೀವಿಗಳ ಹೆಗಲಿಲ್ಲಿ ನೇಲ್ತ ಹಾಂಗಿಪ್ಪ ಚೀಲ.

ಶಾಲೆಲಿಯೂ ಅಷ್ಟೆ, ಬೆಂಚು ಡೆಸ್ಕ್ ಲ್ಲಿ ಕೂರೆಕ್ಕಾರೆ ನಾಲ್ಕನೇ ಕ್ಲಾಸಿಂಗೆ ಎತ್ತೆಕ್ಕು. ಅಲ್ಲಿ ವರೆಗೆ ನೆಲಕ್ಕವೇ ಗತಿ. ಮಣೆ ವೆವಸ್ತೆ ಇತ್ತಿದ್ದು.

ಮಾಷ್ಟ್ರಕ್ಕಳೂ ಶಾಲೆಗೆ ಬೇಗ ಬಂದು ಕೂರುಗು. ಬೇಗ ಬಂದ ಪುಳ್ಳರುಗೊ ಎಂತಾರೂ ಲೂಟಿ ಮಾಡದ್ದ ಹಾಂಗೆ ನೋಡಿಗೊಂಗು. ಗಂಟೆ ಹೊಡವನ್ನ ಮೊದಲೇ ಕ್ಲಾಸಿಲ್ಲಿ ಬಂದು ಕೂದು ಎಂತಾರೂ ತಿದ್ದಲೆ ಇದ್ದರೆ ತಿದ್ದಿಗೊಂಡೋ, ಎಲೆ ತಿಂದೊಂಡೋ ಮಣ್ಣೋ ಕೂರುಗು.

ಶಾಲೆಗೆ ಸೇರುವ ವರೆಗೆ ನವಗೆ ಮನೆ ಭಾಷೆ ಮಾತ್ರ ಮಾತಾಡಿ ಗೊಂತಿಪ್ಪದು. ಈಗಾಣ ಮಕ್ಕೊಗೆ ಎಲ್. ಕೆ. ಜಿ ಅಪ್ಪಗಳೇ ರೆಜ ರೆಜ ಇಂಗ್ಲಿಶ್, ಹಿಂದಿ ಶಬ್ದಂಗಳ ಪರಿಚಯ ಆಗಿರ್ತು, ಮಾತ್ರ ಅಲ್ಲದ್ದೆ ಪೇಟೆಲಿ ಇಪ್ಪವಕ್ಕೆ, ಬೇರೆ ಮಕ್ಕಳೊಟಿಂಗೆ ಸೇರಿ ಆಟ ಆಡುವಾಗ ಬೇರೆ ಬೇರೆ ಭಾಷೆಯ ಪರಿಚಯ ಕೂಡಾ ಆಗಿರ್ತು. ಮನೆಲಿ ಬಂದು ಎಲ್ಲಾ ಭಾಷೆಯನ್ನೂ ಮಿಕ್ಸ್ ಮಾಡಿ ಮಾತಾಡುಗು, ಅದರ ಕೇಳಲೆ ಒಂದು ಕೊಶೀಯೂ ಇದ್ದು.

ಈಗಳೂ ನೆಂಪಿದ್ದು, ಒಂದನೇ ಕ್ಲಾಸಿಂಗೆ ಎಂಗೊಗೆ ವಾಸು ಮಾಷ್ಟ್ರು. ಎಂತದೋ ಕೇಳಿದವು. “ಅಪ್ಪು” ಹೇಳಿ ಎನ್ನ ಉತ್ತರ. ಮಾಷ್ಟ್ರಂಗೆ ಗೊಂತಾತು, ಇವ ಹವ್ಯಕ ಮಾಣಿ ಹೇಳಿ. “ಅಪ್ಪು” ಹೇಳುವುದು ಅಲ್ಲ, ಹೌದು ಹೇಳ ಬೇಕು ಹೇಳಿ ತಿಳಿಶಿ ಕೊಟ್ಟವು. ಹೀಂಗೆ ಪಠ್ಯ ಕನ್ನಡವ ರೆಜ ರೆಜವೇ ಕಲ್ತು ಆತು.

ಕ್ಲಾಸಿಂಗೆ ಒಬ್ಬ ಮಾಷ್ಟ್ರು. ಪೀರಿಯಡ್ ಮುಗುದಪ್ಪಗ ಇನ್ನೊಬ್ಬ ಬಪ್ಪಲೆ ಹೇಳಿ ಇಲ್ಲೆ. ಇಡೀ ದಿನ ಒಬ್ಬನೇ ಮಾಷ್ಟ್ರು ಎಲ್ಲಾ ವಿಶಯಂಗಳನ್ನೂ ಹೇಳಿ ಕೊಡುಗು.

ವಾಸು ಮಾಷ್ಟ್ರು ಹೇಳಿರೆ ಎಂಗೊಗೆಲ್ಲಾ ತುಂಬಾ ಮೆಚ್ಚಿನ ಮಾಷ್ಟ್ರು.

“ನಮ್ಮ ಊರಿನ ಜಾತ್ರೆ ಈದಿನ”, ಕಾಗೆಯೊಂದು ಹಾರಿ ಬಂದು ಮರದ ಮೇಲೆ ಕುಳಿತುಕೊಂಡು”, “ಅಳಿಲೆ ಅಳಿಲೆ ಚುಂ ಚುಂ ಅಳಿಲೆ” ನಾಗರ ಹಾವೇ ಹಾವೊಳು ಹೂವೇ”, ತಿರುಕನೋರ್ವನೂರ ಮುಂದೆ” ಪದ್ಯಂಗಳ ಎಲ್ಲಾ ಚೆಂದಕೆ ರಾಗಲ್ಲಿ ಅಭಿನಯ ಸಮೇತ ಹೇಳಿ ಕೊಡುಗು. ಅದೇ ರೀತಿ ನರಿಗೆ ದ್ರಾಕ್ಷೆ ಹುಳಿ ಆದ ಕತೆ, ಕಾಗೆಗೆ ಆಸರು ಆಗಿ ಹೂಜಿಲಿ ಕಮ್ಮಿ ನೀರು ಕಂಡ ಕತೆ ಎಲ್ಲವನ್ನೂ ಚೆಂದಕೆ ವಿವರುಸುಗು. ಕತೆಗೆ ಸರಿಯಾದ ಚಿತ್ರವ ಬೋರ್ಡಿಲ್ಲಿ ಬರದು ಹೇಳಿ ಕೊಡುಗು.

ಒಂದು ದಿನ ಹೀಂಗಾತು.

ಮಾಷ್ಟ್ರಿಂಗೆ ಎಂತದೋ ಬೇರೆ ಕೆಲಸ ಇತ್ತಿದ್ದು ಕಾಣುತ್ತು. ಕ್ಲಾಸ್ ಲೀಡರ್ ಆದವ° ಬಾಕಿ ಇಪ್ಪವು ಮೌನಲ್ಲಿ ಇಪ್ಪ ಹಾಂಗೆ ನೋಡಿಗೊಳೆಕ್ಕು. ಒಂದು ಕ್ಲಾಸಿಂಗೂ ಇನ್ನೊಂದು ಕ್ಲಾಸಿಂಗೂ ಮಧ್ಯಲ್ಲಿ ಗೋಡೆ ಇಲ್ಲೆ. ಅಡ್ಡಕ್ಕೆ ಒಂದು ಬೆದುರಿನ ತಟ್ಟಿಯ ಸ್ಕ್ರೀನ್.  ಅವ° ಕ್ಲಾಸಿನ ಎದುರು ನಿಂದು ಎಲ್ಲರನ್ನೂ ನಿಭಾಯಿಸೆಕ್ಕು. ಮಕ್ಕೊ ಹೇಳಿದ್ದು ಕೇಳದ್ದರೆ, ಅವರ ಹೆಸರು ಬೋರ್ಡಿಲ್ಲಿ ಬರೆಕು. ಅಂದ್ರಾಣ ಜವಾಬ್ದಾರಿ ಎನಗೆ ಇತ್ತಿದ್ದು.

ಅದಾ !! ಒಬ್ಬೊಬ್ಬನೇ ಸುರು ಮಾಡಿದವು, ಮಾತಾಡ್ಲೆ, ಹತ್ರೆ ಇಪ್ಪವನ ಹತ್ರೆ ಉರುಡ ಪತ್ತ ಮಾಡ್ಲೆ. ಸಣಕಲ ಆಗಿತ್ತಿದ್ದ ಎನಗೆ ಇವರ ಹದ್ದುಬಸ್ತಿಂಗೆ ತಪ್ಪಲೆ ಎಡಿಯದ್ದೆ, ಬೋರ್ಡಿಲ್ಲಿ ಹೆಸರು ಬರವಲೆ ಸುರು ಮಾಡಿದೆ. ಪಟ್ಟಿ ಸುಮಾರು ಉದ್ದ ಬೆಳದತ್ತು.

ಸುರುವಾತದ ಅಲ್ಲಿಂದ ಲಡಾಯಿ. ನನ್ನ ಹೆಸರು ಯಾಕೆ ಬರ್ದದ್ದು ಹೇಳಿ ಒಬ್ಬೊಬ್ಬನೇ ಗಲಾಟೆ ಸುರು ಮಾಡಿದವು. ಸಣಕಲು ಶರೀರ ಆದರೂ ಶಾರೀರ ಅಂಬಗಳೇ ಗಟ್ಟಿ ಇತ್ತಿದ್ದು !!. ಕ್ಲಾಸ್ ಲೀಡರ್ ಹೇಳ್ಸಿಗೊಂಡ ಎನಗೂ, ಬೋರ್ಡಿಲ್ಲಿ ಹೆಸರು ಇಪ್ಪ ಮಕ್ಕೊಗೂ ಗಲಾಟೆ ಸುರು ಆತು.

ಕ್ಲಾಸಿಲ್ಲಿ ಇಪ್ಪ ಎಲ್ಲರೂ ಒಂದು ಪಾರ್ಟಿ. ಅವರೊಳದಿಕಾಣ ಜಗಳ ಬಿಟ್ಟು, ಅದು ಎನ್ನಲ್ಲಿ ಕೇಂದ್ರೀಕೃತ ಆತು.

ಕಡೇಂಗೆ “ನೀನು ಗಲಾಟೆ ಮಾಡಿದ್ದಿ, ನಿನ್ನ ಹೆಸರೂ ಬೋರ್ಡಲ್ಲಿ ಬರೆ” ಹೇಳಿ ಗಲಾಟೆ ಜೋರು ಆತು. ಬಹುಮತದ ಅಭಿಪ್ರಾಯಕ್ಕೆ ಮನ್ನಣೆ ಕೊಡ್ಲೇ ಬೇಕನ್ನೆ.

ಇಲ್ಲದ್ರೆ ಮಾಷ್ಟ್ರು ಬಂದ ಮರುಕ್ಷಣ ಆನೂ ಅವರೊಟ್ಟಿಂಗೆ ಇರೆಕನ್ನೆ. ಸರಿ, ಬರದತ್ತು ಎನ್ನ ಹೆಸರನ್ನೂ ಅಕೇರಿಗೆ.

ಮಾಷ್ಟ್ರು ಬಂದವು. ಬೋರ್ಡಿಲ್ಲಿ ಇಪ್ಪ ಹೆಸರಿನ ಓದಿದವು. ಎಲ್ಲರಿಂಗೂ “ತರಗತಿಯಲ್ಲಿ ನಾನು ಗಲಾಟೆ ಮಾಡುವುದಿಲ್ಲ” ಹೇಳಿ ಹತ್ತು ಸರ್ತಿ ಬರೆತ್ತ ಶಿಕ್ಷೆ !!!.

ಇನ್ನೊಂದು ಘಟನೆ ಹೀಂಗಿತ್ತು:

ಬೌಷ ನಾಲ್ಕನೇ ಕ್ಲಾಸೋ ಐದನೇ ಕ್ಲಾಸೋ, ಸರಿ ನೆಂಪು ಬತ್ತಿಲ್ಲೆ. ಒಬ್ರು ಹೊಸ ಮಾಷ್ಟ್ರು ಬಂದವು. ಮಲಯಾಳ ಹಿನ್ನೆಲಿ ಇಪ್ಪ ಜೆನ ಆಗಿರೆಕು, ಕನ್ನಡ ಪಾಠ ಮಾಡ್ಲೆ.

ಬಡ್ಕುಳಿ ಮಾಷ್ಟ್ರು. ತಪ್ಪು ಮಾಡಿರೆ ಪೀಟ್ರೋಲಿಲ್ಲಿ ಕೈಗೆ ಪೆಟ್ಟು ಸಮಕ್ಕೆ ಬೀಳುಗು.

ಅದೊಂದು ದಿನ, ಕನ್ನಡ ಪಾಠಲ್ಲಿ ಅರ್ಥ ಹೇಳುವಾಗ ’ಸಡಗರ” ಹೇಳ್ತ ಶಬ್ದಕ್ಕೆ ’ಅವಸರ” ಹೇಳಿ ಹೇಳಿ ಕೊಟ್ಟವು. ಮನೆಲಿ ಬಂದು ಇದರ ಬಾಯಿಪಾಠ ಮಾಡುವಾಗ ಎಂಗಳ ಅಜ್ಜಂಗೆ ಕೇಳಿತ್ತು. ಇದೆಂತ ಹೀಂಗೆ ಹೇಳಿ ಕೊಡ್ತವು. ಇದು ಸರಿ ಅಲ್ಲ. ಸಂಭ್ರಮ ಹೇಳಿರೆ ಸರಿ ಅಕ್ಕಷ್ಟೆ ಹೇಳಿ ತಿದ್ದಿದವು.

ಮರುದಿನ ಮಾಷ್ಟ್ರು ಪ್ರಶ್ನೆ ಕೇಳಿದವು. ಸರಿ ಉತ್ತ್ರರ ಹೇಳಿರೆ ಪೆಟ್ಟು ಗ್ಯಾರಂಟಿ. ಅವು ಹೇಳಿ ಕೊಟ್ಟದರನ್ನೇ ಹೇಳೆಕ್ಕಲ್ಲದಾ. ಹತ್ರೆ ಬಂದ ಮಾಷ್ಟ್ರ ಹತ್ರೆ ಮೆಲ್ಲಂಗೆ ಹೇಳಿದೆ ನಮ್ಮ ಅಜ್ಜ ಹೇಳಿದ್ದಾರೆ ’ಅವಸರ’ ಸರಿ ಅಲ್ಲ, ಅದು ಸಂಭ್ರಮ ಆಗಬೇಕಂತೆ ಹೇಳಿ. ಮಾಷ್ಟ್ರಂಗೆ ಅಪ್ಪೋ ಹೇಳಿ ಒಂದು ಸಂಶಯ ಬಂತು ಮಾತ್ರ ಅಲ್ಲದ್ದೆ, ಎಂಗೊ ಮಾಷ್ಟ್ರಕ್ಕಳ ಮನೆಂದ ಬಪ್ಪವು ಹೇಳಿ ಗೊಂತಿತ್ತು. ಅಜ್ಜನೂ ಕೆಲವು ಸರ್ತಿ ಶಾಲೆಗೆ ಬಂದು ಹೆಡ್ ಮಾಷ್ಟ್ರ ಮಾತಾಡಿಸಿಂಡು ಹೋಪದೂ ಅವಕ್ಕೆ ಗೊಂತಿತ್ತು. ಅಲ್ಲಿಗೆ ಅಂದು ಪೆಟ್ಟು ತಿನ್ನದ್ದೆ ಬಚಾವ್ ಆತು. ಈ ಮಾಷ್ಟ್ರು ಸುಮ್ಮನೆ ಕೂಬಲೆ ಒಂದು ಕಾರಣವೂ ಇತ್ತು. ಅದಕ್ಕೆ ಸಂಬಂಧ ಪಟ್ಟ ಘಟನೆ ಹೀಂಗಿದ್ದು

ಅ ವರ್ಷ ಸುರುವಿಂಗೆ ಎಂಗೊಗೆ ಒಬ್ರು ಹೊಸಾ ಮಾಷ್ಟ್ರು ಬಂದವು. ಇಂಗ್ಲಿಷ್ ಪಾಠ ಹೇಳಿ ಕೊಡ್ಲೆ. ಅವಾದರೋ ಅಂಬಗ ಹೊಸತಾಗಿ ಸೇರಿದ್ದಷ್ಟೆ. ಈ ಮೊದಲು ಪಾಠ ಮಾಡಿ ಅನುಭವ ಇತ್ತಿದ್ದವಲ್ಲ.

ಕ್ಲಾಸಿಲ್ಲಿ ಮಾಷ್ಟ್ರು ಹೇಳಿದವು “ ನಾಳೆಯಿಂದ ಎಲ್ಲರೂ ಪುಸ್ತಕ ತರಲೇ ಬೇಕು, ಇಲ್ಲದ್ರೆ ಕ್ಲಾಸಿನಿಂದ ಹೊರಗೆ ಹಾಕುತ್ತೇನೆ” ಹೇಳಿ. ಪಠ್ಯಪುಸ್ತಕ, ಅಂಗಡಿಗೆ ಬಂದಿತ್ತಿದ್ದಿಲ್ಲೆ. ಕೆಲವು ಮಕ್ಕೊ ಅವರ ಅಣ್ಣಂದಿರದ್ದೋ ಅಕ್ಕಂದಿರದ್ದೋ ಹಿಡ್ಕೊಂಡು ಬಂದೊಂಡು ಇತ್ತಿದ್ದವು. ಎಂಗೊಗೆ ಆ ಅನುಕೂಲ ಇತ್ತಿದ್ದಿಲ್ಲೆ. ನಾಳೆಂದಲೇ ಪುಸ್ತಕ ತರೆಕು ಹೇಳಿರೆ ತಪ್ಪದೆಲ್ಲಿಂದ. ಮನೆಗೆ ಬಂದು ವರದಿ ಒಪ್ಪಿಸಿ ಆತು.

ಹೀಂಗಿಪ್ಪದೆಲ್ಲಾ ಕೇಳಿರೆ ಅಜ್ಜಂಗೆ ಪಿಸುರು ಎಳಗುವದು ಜಾಸ್ತಿ. “ನಾಳಂಗೆ ಅನೇ ಶಾಲೆಗೆ ಬತ್ತೆ” ಹೇಳಿದವು. ಎಂಗೊಗೆ ಒಳಾಂದೊಳ ಪಿಟಿ ಪಿಟಿ.

ಮರುದಿನ ಶಾಲೆಗೆ ಬಂದವೇ ಸೀದಾ ಹೆಡ್ ಮಾಷ್ಟ್ರಲ್ಲಿಗೆ ಹೋದವು. ಇಂಗ್ಲಿಷ್ ಕಲ್ಸುತ್ತ ಮಾಷ್ಟ್ರಂಗೆ ಅಲ್ಲಿಂದ ಬುಲಾವ್ ಬಂತು.

ಅಜ್ಜ° ಕೇಳಿದವಡ, ನೀನೋ ಹಾಂಗೆ ಹೇಳಿದ್ದು ಹೇಳಿ.

ಪುಸ್ತಕ ಇಲ್ಲದ್ರೆ ಪಾಠ ಮಾಡುವದು ಹೇಂಗೆ ಹೇಳಿ ಮಾಷ್ಟ್ರ ಉತ್ತರ.

ಹಾಂಗಾರೆ ಆನು ಪುಸ್ತಕಕ್ಕೆ ಇಪ್ಪ ಪೈಸೆ ಕೊಡ್ತೆ, ಪುಸ್ತಕ ನೀನೆ ಒದಗಿಸಿಕೊಡು ಹೇಳಿ ಅಜ್ಜನ ಪ್ರತಿ ಉತ್ತರ.

ಇದಕ್ಕೆ ಉತ್ತರ ಮಾಷ್ಟ್ರ ಹತ್ರೆ ಇತ್ತಿದ್ದಿಲ್ಲೆ ಅಡ.

ಈ ತೊಂದರೆಗೊಂದು ಪರಿಹಾರ ಬೇಕನ್ನೆ. ಅಜ್ಜ° ಹೇಳಿದವಡ “ ನೀನು ಪಾಠ ಯಾವದು ಮಾಡುತ್ತೆ ಹೇಳು, ಅದರ ಆನು ಮಕ್ಕೊಗೆ ಬರದು ಕೊಡ್ತೆ, ಅಂಗಡಿಗೆ ಪುಸ್ತಕ ಬಪ್ಪಲ್ಲಿಗೆ ವರೇಗೆ ಹೀಂಗೆ ಮುಂದುವರಿಯಲಿ ಹೇಳಿ”

ಸರ್ವ ಸಮ್ಮತವಾದ ಒಂದು ನಿರ್ಣಯಕ್ಕೆ ಬಂತು.

***

ಕಲಿವದು ಹೇಳಿರೆ ಮಾಷ್ಟ್ರಕ್ಕಳಿಂದ ಮಾತ್ರ ಅಲ್ಲ. ಸಹಪಾಠಿಗಳಿಂದಲೂ, ಹೆರಿಯರಿಂದಲೂ, ಪರಿಸರಂದಲೂ ಕಲಿವಲೆ ಬೇಕಾಷ್ಟು ಇದ್ದು.

ಸೋಮೇಶ್ವರ ಶತಕಲ್ಲಿ ಹೀಂಗೆ ಹೇಳ್ತವು:

ಕೆಲವಂ ಬಲ್ಲವರಿಂಕಲ್ತು ಕೆಲವಂ ಶಾಸ್ತ್ರ೦ಗಳಂ ಕೇಳುತಂ
ಕೆಲವಂ ಮಾಳ್ಪವರಿ೦ದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ
ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪ೦ ನರಂ
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀಚೆನ್ನಸೋಮೇಶ್ವರಾ ||

ಹಾಂಗೇ ಸಂಸ್ಕೃತಲ್ಲಿಯೂ ಒಂದು ಶ್ಲೋಕ ಈ ರೀತಿಯಾಗಿ ಇದ್ದು

ಆಚಾರ್ಯಾತ್ ಪಾದಮಾಧತ್ತೆ, ಪಾದಂ ಶಿಷ್ಯ ಸ್ವಮೇಧಯಾ |

ಪಾದಂ ಸ ಬ್ರಹ್ಮಚಾರಿಬ್ಯಃ, ಪಾದಂ ಕಾಲಕ್ರಮೇಣ ಚ ||

“ಗುರುಗಳಿಂದ ಕಾಲುಭಾಗ, ತನ್ನ ಸ್ವಂತಿಕೆಯಿಂದ ಕಾಲುಭಾಗ, ಸಹಪಾಠಿಗಳಿಂದ ಕಾಲುಭಾಗ, ಇನ್ನುಕಾಲುಭಾಗ ಕಾಲಕ್ರಮೇಣ ಅನುಭವಲ್ಲಿ ಕಲಿವದು” ಹೇಳಿ ಅರ್ಥ!!

ಕಲಿತ್ತ ಆಸಕ್ತಿ ಮತ್ತೆ ಶ್ರದ್ಧೆ ಇದ್ದರೆ, ಇಡೀ ವಿಶ್ವವೇ ಶಾಲೆ, ಪ್ರಕೃತಿಯೇ ಗುರು.

ಶರ್ಮಪ್ಪಚ್ಚಿ

   

You may also like...

22 Responses

 1. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ತುಂಬಾ ಲಾಯ್ಕ ಆಯಿದು.ಶರ್ಮಣ್ಣನ ಅಜ್ಜ ಬಹಳ ಸ್ಪಷ್ಟವಾಗಿ ಮಾತಾಡಿಕೊಂಡಿತ್ತಿದವು.ಅವರ ನೆಂಪಾತು,ಕುಷಿಯೂ ಆತು.ಅವು ಶಾಲೆಗೆ ಹೋಗಿ ಕೇಳಿದ್ದು ಸರಿಯಾದ ಕೆಲಸ.

 2. ಮರುವಳ ನಾರಾಯಣ ಭಟ್ಫ್ಟ says:

  ಹರೇ ರಾಮ

  . ಲೇಖನ ಲಾಯಕ ಆಯಿದು. ಎನ್ನ ಶಾಲಾ ದಿನಂಗಳ ನೆನಪು ಆತು.ಆನು ಹೋದದುದೆ ಅದೇ ಶಾಲಗೆಯಾ ಹೇಳಿ ಸಂಶಯ ಬಂತು

 3. ಕೃಷ್ಣ ಭಟ್ ಶೇಡಿಗುಮ್ಮೆ says:

  ಶರ್ಮ ಭಾವ, ನಿಂಗಳ ಲೇಖನ ತುಂಬ ಲಾಯ್ಕ ಕ್ಕೆ ಮೂಡಿ ಬೈಂದು.

  ನಮ್ಮ ಕುಂಬ್ಳೆ ಶಾಲ್ಲೆ ಈಗ ಹೇಂಗಿದ್ದು ಹೇಳಿ ನೋಡ್ಡುಕು ಹೇಳಿ ಅವುತ್ಹು…..ಬಾಲ್ಯ ಜೇವನ ದ ಸವಿ ನೆನಪು ತುಂಬ ಕುಶಿ ಕೊಟ್ಟತ್ತು ….ಧನ್ಯವಾದಂಗೋ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *