ಕಣ್ಯಾರಲ್ಲಿ ಒಂದು ಸುತ್ತು..

May 25, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 31 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ಶೇಡಿಗುಮ್ಮೆ ಭಾವ ಮನಗೆ ಬಂದಿತ್ತಿದ್ದ (ನಮ್ಮ ಬೈಲಿಂಗೆ ಗೊಂತಿಪ್ಪವ ಅಲ್ಲ).
ಎಂಗೊ ಇಬ್ರೂ, ಆನು ಹುಟ್ಟಿದಲ್ಲಿಂದ ಡಿಗ್ರಿ ಮುಗುಸುವವರೆಗೆ ಒಂದೇ ಮನೆಲಿ ಬೆಳದವು, ಒಟ್ಟಿಂಗೆ ಆಡಿದವು, ಓದಿದವು. ಒಂದೇ ಶಾಲೆ, ಒಂದೇ ಕ್ಲಾಸ್, ಒಂದೇ ಕಾಲೇಜ್, ಒಂದೇ ಹೋಸ್ಟೆಲ್, ಒಂದೇ ರೂಂ. ಸಣ್ಣ ಇಪ್ಪಗ ಸಣ್ಣ ಸಣ್ಣ ಜಗಳಂಗೊ ಮಾಡಿದ್ದಿಲ್ಲೆ ಹೇಳ್ಲೆ ಎಡಿಯ. ಎಲ್ಲಿಗೆ ಹೋವುತ್ತರೂ ಒಟ್ಟೊಟ್ಟಿಂಗೆ. ನಿಂಗೊ ಅಣ್ಣ ತಮ್ಮಂದಿರೋ? ಆರು ಅಣ್ಣ, ಆರು ತಮ್ಮ ಹೇಳಿ ಕೇಳಿದವು ಎಷ್ಟೋ ಜನಂಗೊ. ಅಷ್ಟೊಂದು ಅನ್ಯೋನ್ಯತೆ. ಪ್ರಾಯಲ್ಲಿ 5  ತಿಂಗಳಿಂಗೆ ಅವ ದೊಡ್ಡವ. ಎನ್ನ ಮಾವನ ಮಗನೇ ಅಲ್ಲದ. ರಜ ಸಾಮ್ಯತೆ ಇಲ್ಲದ್ದೆ ಇರ ಕಾಂಬವಕ್ಕೆ. ತಂಗೆಯ, ಸೊಸೆಯಕ್ಕಳ ಎಲ್ಲ ಮಾತಾಡ್ಸುವದರ ಒಟ್ಟಿಂಗೆ ಹಳೆ ನೆಂಪುಗಳ ಕೆದಕ್ಕಲೂ ಆವುತ್ತು ಹೇಳಿ ಅವಂಗೆ ಎಂಗಳಲ್ಲಿಗೆ ಬಪ್ಪದು ಹೇಳಿರೆ ಕೊಶಿಯೇ. ಎಂಗೊಗೂ ಹಾಂಗೆ, ಮಾತಾಡಿ ಹೊತ್ತು ಹೋದ್ದು ಗೊಂತಪ್ಪದು ಕಾಫಿಗೋ ಊಟಕ್ಕೊ ದೆನುಗೊಳುವಗ. ಮೊನ್ನೆ ಹಾಂಗೆ ಬಂದಿಪ್ಪಗ, “ಎಂತ ಭಾವ, ಒಂದು ಸರ್ತಿ ಕಣ್ಯಾರಕ್ಕೆ ಹೋಗಿ ಬಪ್ಪನೋ” ಕೇಳಿದೆ. ಸುಮ್ಮನೆ ಎಂತ ಇದ್ದು? ಒಂದಿಷ್ಟು ಬ್ಯಾರಿಗಳ ಅಂಗಡಿ, ನಿಮಿಷಕೊಂದು ಬಪ್ಪ ಹೋಪ ಬಸ್ಸಿನ ಗೌಜಿ, “ಬತ್ತಕ್ಕ ಬತ್ತಕ್ಕ“ ಹೇಳಿ ಬಚ್ಚಂಗಾಯಿ ತುಂಡಿಂಗೆ ಎಂಜಲು ರಟ್ಟಿಸಿಯೊಂಡು ಬಸ್ಸಿನ ಹತ್ರಂಗೆ ಮಾರಲೆ ಬಪ್ಪ ಬ್ಯಾರಿ ಚೆಕ್ಕಂಗೊ, ಹಸಿ ಮೀನು, ಒಣಕ್ಕು ಮೀನಿನ ವಾಸನೆ,  ಸರ್ಕಲ್ ತುಂಬಾ ಕೆಂಪು ಇಲ್ಲದ್ದರೆ ಪಚ್ಚೆ ಕೊಡಿಗೊ, ಇದರ ಎಲ್ಲ ನೋಡ್ಲೆ ಅಲ್ಲಿಗೆ ವರೆಗೆ ಎಂತಕೆ ಹೋಪದು ಹೇಳಿದ.

ನೀನು ಹೇಳುವದು ಈಗಾಣ “ಕುಂಬಳೆ” ಪೇಟೆಯ, ಆನು ಹೇಳುವದು ನಾವು ಸಣ್ಣ ಇಪ್ಪಗ ಹೋಗಿಯೊಂಡು ಇತ್ತಿದ್ದ “ಕಣ್ಯಾರ” ಪೇಟೆ ಹೇಳಿದೆ. ಅದು ಈಗ ಎಲ್ಲಿ ಇದ್ದು ಭಾವ ಹೇಳುವದು ಅವನ ಸರದಿ ಆತು. ನಾವು ಇಬ್ರೂ ಇದ್ದಲ್ಲದ, ನಮ್ಮ ನೆಂಪಿನ ಒಂದು 40-45 ವರ್ಷ ದಷ್ಟು ಹಿಂದೆ  ಹಾಕಿರೆ ಅದೇ ಪೇಟೆ ಕಾಂಬಲೆ ಎಡಿಗು ಹೇಳಿದೆ. ನವಗೆ TV ಶೋ ದವರ ಹಾಂಗೆ ಹಿಪ್ನೋಟಿಸಮ್ ಎಲ್ಲ ಬೇಡ. ರಜ ನೆನಪಿನ ಹಿಂದಂಗೆ ಓಡಿಸಿದರೆ ಆತು ಹೇಳಿಯಪ್ಪಗ ಒಪ್ಪಿದ.

ಕುಂಬಳೆ ಸೀಮೆಲಿ  ಇಪ್ಪ ಭಕ್ತರಿಂಗೆ ಮತ್ತೆ ಅವರ ದನ ಕಂಜಿಗೊಕ್ಕೆ ಅಭಯ ಕೊಡುವ ದೇವರು ಹೇಳಿರೆ ಕಣಿಪುರ ಶ್ರೀ ಗೋಪಾಲ ಕೃಷ್ಣ ನೇ ಸರಿ.  ಎರಡೂ ಕೈಲಿ ಬೆಣ್ಣೆ ಮುದ್ದೆ ಹಿಡ್ಕಂಡು ನಿಂದೊಂಡಿಪ್ಪ “ಬಾಲ ಗೋಪಾಲ ಕೃಷ್ಣನ”  ಕಣ್ವಋಷಿ ಪ್ರತಿಷ್ಠಾಪನೆ ಮಾಡಿದ ಕಾರಣ “ಕಣ್ವಪುರ” “ಕಣಿಪುರ” “ಕಣ್ಯಾರ” ಹೆಸರುಗೊ. ದೇವರ ಪ್ರತಿಷ್ಠಾಪಿಸಿ, “ಕುಂಭಂ”ದ ಅಭಿಷೇಕ ಮಾಡಿ ಅಪ್ಪಗ ಆ ನೀರು ಅಕ್ಷಯ ಆಗಿ ಹರುದತ್ತಡ. ಹಾಂಗೆ “ಕುಂಭ ಹೊಳೆ” ಮತ್ತೆ “ಕುಂಬಳೆ” ಆಗಿಯೂ ಪ್ರಸಿದ್ದಿ. ಸೀಮೆಲಿ ಎಲ್ಲಿಯೇ ದನಗೊ ಕಂಜಿ ಹಾಕಲಿ, ಶುದ್ದ ಆದ ದಿನದ ಮದಲಾಣ ಕರವಿನ ಹಾಲಿನ ಶ್ರೀ ದೇವರಿಂಗೆ ಅರ್ಪಿಸಿಯೇ ಉಪಯೋಗಿಸುವದು ಭಕ್ತರು ನಂಬಿಗೊಂಡು ಬಂದ ಒಂದು ನಂಬಿಕೆ. ಸುರುವಾಣ ತುಪ್ಪವನ್ನೂ ದೇವರಿಂಗೆ ಸಮರ್ಪಿಸದ್ದರೆ ಸಮಾಧಾನ ಆಗ ಅವಕ್ಕೆ. ಹೀಂಗಿಪ್ಪ ಪುಣ್ಯ ಕ್ಷೇತ್ರ “ಕಣ್ಯಾರ” . ದೇವರ ಅಲಂಕಾರ ಮಾಡಿ, ಮಧ್ಯಾಹ್ನದ ಪೂಜೆ ನೋಡುವದೇ ಒಂದು ಚೆಂದ. ಹೇಂಗಿಪ್ಪವಕ್ಕೂ ಭಕ್ತಿ ತನ್ನಿಂತಾನೇ ಬಕ್ಕು. ಪೂಜೆ ಕಳುದು ಅವಲಕ್ಕಿ ಪ್ರಸಾದ ಕೊಡುಗು. ಅದರ ತಿಂದೊಂಡು ಬಪ್ಪಗ ಬಾಯಿ ಚೀಪೆ ಅಕ್ಕು, ಮನಸ್ಸು ಹಗೂರ ಅಕ್ಕು.

ಕಣಿಪುರದ ಗೋಪಾಲಕೃಷ್ಣ

ಊರು ಹೇಳಿ ಅಪ್ಪಗ ಸುಭಗಂಗೊ ಮಾತ್ರ ಅಲ್ಲ, ಕಳ್ಳರೂ ಇರ್ತವಲ್ಲದ. ದೇವಸ್ಥಾನದ ಮೂಡ ಹೊಡೆಲಿ ಮೇಗಂಗೆ ಬಂದರೆ ಒಂದು ಹಳೇ ಮನೆಯ ಹಾಂಗೆ ಕಾಂಬದೇ, ಹಾಂಗಿಪ್ಪವರ ವಿಚಾರುಸುವ “ಪೋಲೀಸ್ ಸ್ಟೇಷನ್”. ದೂರಂದ ನೋಡಿ ಗೊಂತು. ಖಾಕಿ ಚೆಡ್ಡಿ ಹಾಕಿಂಡು, ಕೈಲಿ ಲಾಠಿ ಹಿಡ್ಕೊಂಡು, ಪೇಟೆಲಿ ತಿರುಗುವ ಪೋಲೀಸ್ ಗಳ ಕಂಡಿದೆ. ಹೆಚ್ಚು ವಿಷಯ ಗೊಂತಿಲ್ಲೆ. ನವಗೆ ಅಗತ್ಯವೂ ಇಲ್ಲೆ ಅಲ್ಲದಾ?. ಇದಕ್ಕೆ ತಾಗಿ ಇಪ್ಪದು ರೇಷನ್ ಅಂಗಡಿ. ಕೇರಳಲ್ಲಿ ವಾರಕ್ಕೊಂದರಿ ಅಕ್ಕಿ, ಸಕ್ಕರೆ, ಗೋಧಿ ಎಲ್ಲ ಕೊಡುಗು. ಚಿಮಿಣಿ ಎಣ್ಣೆ ಮತ್ತೆ ಸಕ್ಕರೆ ಮಾತ್ರ ತಿಂಗಳಿಂಗೊಂದು ಸರ್ತಿ. ಓಣಮ್, ಕ್ರಿಸ್ಮಸ್, ಬಕ್ರಿದ್ ಹಬ್ಬಂಗೊಕ್ಕೆ ಹೆಚ್ಚು ಸಕ್ಕರೆ ಕೊಡುಗು. ಶನಿವಾರ ಆದಿತ್ಯವಾರ ಎಂಗೊಗೆ ಶಾಲೆಗೆ ರಜೆ. ರೇಷನಿಂಗೆ ಹೋಪಗ ಅಜ್ಜ ಎಂಗಳನ್ನೂ ಕರಕ್ಕೊಂಡು ಹೋಕು. ಕ್ಯೂ ವಿಲ್ಲಿ ನಿಂಬಲೆ ಜನ ಬೇಕಲ್ಲದ. ಅಷ್ಟು ಹೊತ್ತಿಲ್ಲಿ ಅವಕ್ಕೆ ಬೇರೆ ಕೆಲಸಂಗಳ ಮುಗಿಸಿಯೊಂಡು ಬಪ್ಪಲೆ ಆವುತ್ತಲ್ಲದ. ಅಂಬಗ ಈಗಾಣ ಹಾಂಗೆ ರಿಕ್ಷಾ ಆಗಲೀ ಬಸ್ ಆಗಲೀ ಸೌಕರ್ಯ ಇತ್ತಿದ್ದಿಲ್ಲೆ. ಸಣ್ಣ ಸಣ್ಣ ಕಟ್ಟ ಮಾಡಿ ಎಲ್ಲರೂ ಹೆಗಲಿಲ್ಲಿ ಏರಿಸಿಯೊಂಡು ಬಪ್ಪದು. ಅಜ್ಜ  ಸುಮ್ಮನೆ ಕಟ್ಟ ಹೊರಿಸಿಯೊಂಡು ಬಾರವು. ಅಲ್ಲೇ ಹತ್ರೆ ಇಪ್ಪ “ಅಡಿಗಳ” ಹೋಟ್ಲಿಲ್ಲಿ ಕಾಫಿ ಕುಡುದು, ಬನ್ಸೋ, ಗೋಳಿ ಬಜೆಯೋ, ಬಿಸ್ಕುಟ್ ರೊಟ್ಟಿಯೋ ತಿಂದಿಕ್ಕಿಯೇ ಎಂಗಳ ಸವಾರಿ ಮನೆಗೆ ಬಪ್ಪದು. ಹಾಂಗೆ ಅಜ್ಜನ ಒಟ್ಟಿಂಗೆ ಹೋಪದು ಹೇಳಿರೆ ಎಂಗೊಗೂ ಖುಶಿ.

ಅದಾ ಒಂದು ಸರ್ತಿ ಬ್ಯಾರಿ ಚೆಕ್ಕನೊಟ್ಟಿಂಗೆ ನೀನು ಲಡಾಯ ಮಾಡಿ ಅದರ ದೂಡಿದ್ದು ಹೇಳಿ ಭಾವ ನೆಂಪು ಮಾಡಿದ. ಅಪ್ಪು ಮತ್ತೆ. ರೇಷನಿಂಗೆ ಕ್ಯೂ ವಿಲ್ಲಿ ಎಡೆಲಿ ಸೇರಿದರೆ ಆರಿಂಗಾರೂ ಪಿಸುರು ಬಾರದ್ದೆ ಇಕ್ಕ. ಅವರ ಹಣೆ ಬರಹವೇ ಅಷ್ಟು. ನೇರ್ಪಕೆ ಒಂದು ಸಾಲಿಲ್ಲಿ ನಿಂಬಲೆ, ಅವರ ಮಿಲಾದ್ ದಿನ ಚೆಂದಕೆ ಮೆರವಣಿಗೆ ಹೋಪಲೆ, ಅವಕ್ಕೆ ಅರಡಿಗೋ? ಕುರಿ ಹಿಂಡುಗೊ ಆದರೂ ಅದಕ್ಕಿಂತ ಲಾಯಿಕ್ಕಲ್ಲಿ ಹೋಕು.

ಅಡಿಗಳ ಹೋಟ್ಲಿನ ಹತ್ರ ಇಪ್ಪದು ಬೈಚ್ಚನ ಆಯುರ್ವೇದ ಅಂಗಡಿ”. ಎಂಗೊಗೆ ಎಲ್ಲವೂ ಅಂಗಡಿಗಳೇ. “ಕ್ಲಿನಿಕ್” ಹೇಳಿ ಬೋರ್ಡ್ ಎಂತ ಇತ್ತಿದ್ದಿಲ್ಲೆ. ಎದುರು ದೊಡ್ಡ ದೊಡ್ಡ ಕುಪ್ಪಿಗಳಲ್ಲಿ ಅರಿಷ್ಟಂಗೊ, ಅಗಲ ಬಾಯಿಯ ಸಣ್ಣ ಸಣ್ಣ ಕುಪ್ಪಿಗಳಲ್ಲಿ ಮಾತ್ರೆಗೊ, ನಾರು, ಬೇರುಗೊ ಎಲ್ಲಾ ಇಕ್ಕು. ಅಜ್ಜ ಮದ್ದಿಂಗೆ ಅಲ್ಲಿಗೆ ಹೋಪದು ಹೇಳಿರೆ ಎಂತಾರೂ ಬೇನೆ ಎಣ್ಣೆಯೋ ಮಣ್ಣೊ ಬೇಕಾರೆ ಮಾತ್ರ. ಇಲ್ಲದ್ದರೆ ಅಜ್ಜಂಗೆ ಅಳಿಯ ಬೆಜಪ್ಪೆ ಶ್ಯಾಮ ಡಾಕ್ಟ್ರ ಮದ್ದೇ ನಾಟುಗಷ್ಟೆ, ಮತ್ತೆ ಅದರಲ್ಲೇ ವಿಶ್ವಾಸ. ಈ ಅಂಗಡಿಗೆ ತಾಗಿ ಇಪ್ಪದು ಬೈಚ್ಚನ ಮಗ, ನಾರಾಯಣನ ಪುಸ್ತಕದ ಅಂಗಡಿ. ಶಾಲೆಗೆ ಬೇಕಾದ ಟೆಕ್ಸ್ಟ್ ಪುಸ್ತಕವೋ,ನೋಟ್ ಪುಸ್ತಕವೋ, ಪೆನ್ನೋ, ಪೆನ್ಸಿಲೋ, ರಬ್ಬರೋ, ಅಡಿಕೋಲೋ (scale) ಎಲ್ಲಾ ಅಲ್ಲಿಯೇ ಸಿಕ್ಕುಗಷ್ಟೆ. ರಜೆ ಮುಗುದು ಶಾಲೆ ಸುರು ಅಪ್ಪಗ ಎಲ್ಲಾ ಲೀಸ್ಟ್ ಮಾಡಿ ಕೊಟ್ಟರೆ ರೆಡಿ ಮಾಡಿ ಬಿಲ್ಲ್ ಮಾಡಿ ಮಡುಗ್ಗು. ಬಿಲ್ಲಿಲ್ಲಿ ಎಂತಾರೂ ತಪ್ಪು ಆದರೆ ಅಜ್ಜ ತಿದ್ದುಗು, ಒಂದು ಸರ್ತಿ ಬಿಲ್ ಮಾಡುವಾಗ ಅದರ ತಪ್ಪಿಂದಾಗಿ ಪೈಸೆ ಕೊಟ್ಟದು ಕಮ್ಮಿ ಆಯಿದು ಹೇಳಿ ಮನೆಗೆ ಎತ್ತಿ ಅಪ್ಪಗ ಗೊಂತಾಗಿ ಮತ್ತೆ ಮರುದಿನ ನಮ್ಮ ಹತ್ರ ಅಜ್ಜ ಕೊಟ್ಟು ಕಳಿಸಿದ್ದಲ್ಲದ. ಭಾವ ಹೇಳುವಾಗ ಎನಗೂ ನೆಂಪು ಆತು.  ಹಾಂಗಾಗಿ ಅದಕ್ಕೆ ಅಜ್ಜನ ಹತ್ರ ಭಾರೀ ವಿಶ್ವಾಸ. “ನಿಮ್ಮ ಅಜ್ಜ ಲೆಕ್ಕದಲ್ಲಿ ಪಕ್ಕಾ” ಹೇಳಿ ಸಿಕ್ಕಿಪ್ಪಗ ಎಲ್ಲ ಹೇಳುಗು.

ಈ ಅಂಗಡಿ ಮತ್ತೆ ಹೋಟ್ಲಿನ ಎಡೆಲಿ ಇಪ್ಪ ಒರುಂಕಿಲ್ಲಿ ಮೂಡಂತಾಗಿ ಹೋದರೆ, ಶಾಲೆಯ ಮೈದಾನ ಮತ್ತೆ ಗವರ್ಮೆಂಟ್ ಶಾಲೆ. ಗಾಂಧೀ ಅಜ್ಜ ಬಂದು ಭಾಷಣ ಮಾಡಿದ ಮೈದಾನ ಹೇಳಿ ಎಂಗಳ ಅಜ್ಜ ಹೇಳುಗು. ಗಾಂಧೀ ಮೈದಾನ– ಅದುವೇ ಎಂಗೊಗೆ ಆಡ್ಲೆ , ಡ್ರಿಲ್ಲ್ ಮಾಡ್ಳೆ, ಸ್ಪೋರ್ಟ್ಸ್ ಡೇ ದಿನ ಸುಣ್ಣಲ್ಲಿ ಲೈನ್ ಹಾಕಿ ಓಡ್ಲೆ  ಇಪ್ಪ ಜಾಗೆ. ಶಾಲೆಲಿ ಒಂದನೇ ಕ್ಲಾಸಿಂದ ಸುರು ಆಗಿ ಹತ್ತನೇ ವರೆಗೆ ಕಲಿವಲೆ ಅಕ್ಕು. ಮಲಯಾಳಿಗೊಕ್ಕೆ ಬೇರೆ ಡಿವಿಶನ್ ಇತ್ತಿದ್ದು.  ಎಂಗೊ ಹೋಪಗ, ಪ್ರತಿ ಕ್ಲಾಸಿಲ್ಲಿ ಅವಕ್ಕೆ ಒಂದೊಂದು ಡಿವಿಶನ್, ನವಗೆ ಎರಡು ಇಲ್ಲದ್ದರೆ ಮೂರು. ಈಗ ಅದು ಅತ್ತೆ ಇತ್ತೆ ಆಯಿದು ಹೇಳಿ ಮೊನ್ನೆ ರಮೇಶ ಭಾವ ಹೇಳಿದ. ಹೀಂಗೇ ಮುಂದೆ ಹೋದರೆ ಕನ್ನಡ ಡಿವಿಶನ್ ಗಳ ಮುಚ್ಚುವ ಪರಿಸ್ಥಿತಿ ಬಂದರೂ ಬಕ್ಕು.

ಎತ್ತಿನಗಾಡಿ, ಶೇಡಿಗುಮ್ಮೆ ಬಾವನೊಟ್ಟಿಂಗೆ ಹೋಪಗ ಮಾರ್ಗಲ್ಲಿ ಕಂಡುಗೊಂಡಿತ್ತು

ಬಸ್ ಸ್ಟೇಂಡ್ ಹೇಳಿ ಒಂದು ಸಣ್ಣ ಕಟ್ಟೋಣ. ಅದರಲ್ಲಿ ಟಿಕೆಟ್ ಕೊಡ್ಲೆ ಒಂದು ಕೌಂಟರ್. ಒಂದು ಮನುಷ್ಯ ಕೂದೊಂಡು ಇಕ್ಕು. ಬಸ್ ಗಳೂ ಅಷ್ಟೆ. ಕಾಸರಗೋಡಿಂಗೆ ಹೋಪ ಬಸ್ ಗೊ ಗಂಟೆಗೆ ಒಂದೊಂದು ಬಂದೊಂಡು ಇಕ್ಕು. ಅದೇ ಕಟ್ಟೋಣದ ಒಂದು ಭಾಗಲ್ಲಿ ಬೀಡಿ ಬ್ರಾಂಚ್. ಟಿಕೆಟ್ ಕೊಡುವ ಮನುಷ್ಯನೇ ಅಲ್ಲಿ ಬೀಡಿ ಎಲೆ, ಅದಕ್ಕೆ ಬೇಕಾದ ಹೊಗೆ ಸೊಪ್ಪು, ನೂಲು ಎಲ್ಲ ಕೊಡುವದರ ಒಟ್ಟಿಂಗೆ, ಕಟ್ಟಿ ತಂದ ಬೀಡಿಯ ಕಟ್ಟಂಗಳ ಲೆಕ್ಕ ಮಾಡುವದು,ಅವಕ್ಕೆ ಲೆಕ್ಕ ಮಾಡಿ ಪೈಸ ಕೊಡುವದು,  ಕಟ್ಟಂಗಳ ಓವೆನ್ ಲ್ಲಿ ಮಡುಗಿ ಹೊಗೆ ಹಾಕುವದು ಎಲ್ಲಾ ಮಾಡಿಯೊಂಡು ಇಕ್ಕು. ಅದಕ್ಕೆ ಇಡೀ ದಿನ ಟಿಕೆಟ್ ಕೊಡುವಷ್ಟು ಕೆಲಸ ಎಂತ ಇಲ್ಲೆ ಅಲ್ಲದ. “ಕೃಷ್ಣ” ಬೀಡಿಯನ್ನೇ ಸೇದಿರಿ ಹೇಳಿ “ಗೋಪಾಲ ಕೃಷ್ಣ” ಟಾಕೀಸಿಲ್ಲಿ ಸ್ಲೈಡ್ ಕೂಡಾ ಹಾಕಿಸಿಯೊಂಡು ಇತ್ತಿದ್ದು. (“ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕರ” ಹೇಳಿ ಇನ್ನೂ ಶಾಸನ ಬಾರದ್ದ ಸಮಯ. ಬೀಡಿ ಎಳದರೆ ಆರೋಗ್ಯಕ್ಕೆ ಹಾಳು ಹೇಳಿ ಎಲ್ಲಿಯೂ ಹೇಳಿದ್ದವಿಲ್ಲೆ ಹೇಳಿ ಎಂಗಳ ಅಪ್ಪಚ್ಚಿ ಬೀಡಿ ಎಳಕ್ಕೊಂಡು ಹೇಳುಗು). ಈ ಬೀಡಿ ವಿಷಯ ಬಪ್ಪಗ ಒಂದು  ನೆಂಪಾತು. ಒಂದು ದಿನ ಬೀಜ ಕೊಯಿದಿಕ್ಕಿ ಬಪ್ಪಗ, ದಾರಿಲಿ ಒಂದು ಇಡೀ ಬೀಡಿ ಕಟ್ಟ ಬಿದ್ದು ಸಿಕ್ಕಿತ್ತು. ಬೀಡಿ ಕಟ್ಟ ಸಿಕ್ಕಿ ಅಪ್ಪಗ ಒಂದರಿ ಹೊಗೆ ಎಳದರೆ ಎಂತ ಹೇಳಿ ಭಾವನೂ ಭಾವನೂ ಮಾತಾಡಿಯೊಂಡೆಯೊ. ಮನೆಲಿ ಅಜ್ಜ ಆಗಲೀ ಮಾವಂದಿರಾಗಲೀ ಬೀಡಿ ಎಳೆಯವು ಮಾತ್ರ ಅಲ್ಲದ್ದೆ ಮಕ್ಕೊ ಬೀಡಿ ಎಳದ್ದು ಗೊಂತಾದರೆ ಬೆನ್ನ ಚೋಲಿ ಎಳಗು. ಹೀಂಗಿಪ್ಪ ವಿಷಯಂಗಳಲ್ಲಿ ಅಷ್ಟು ಶಿಸ್ತು.  ಬೀಡಿ ಎಳವದು ಬಿಡಿ, ಅದು ಸಿಕ್ಕಿದ ವಿಷಯ ಹೇಳಲೂ ಎಂಗೊಗೆ ಧೈರ್ಯ ಇಲ್ಲೆ.

ಅಷ್ಟಪ್ಪಗ ನೀನಲ್ಲದ ಮೆಲ್ಲಂಗೆ ಅಜ್ಜಿಯ ಸೆರಗಿಲ್ಲಿ ಕೈ ಉದ್ದಿಯೊಂಡು ವಿಷಯ ಹೇಳಿ  ಮರುದಿನ ಕೆಲಸಕ್ಕೆ ಬಪ್ಪ ಮಮ್ಮದೆಗೆ ಅಜ್ಜ ಆ ಬೀಡಿ ಕಟ್ಟ ಕೊಟ್ಟದು ಹೇಳಿ ಭಾವ ನೆಂಪು ಮಾಡಿದ. (ಎನ್ನದೊಂದು ಅಭ್ಯಾಸ, ಕೈ ತೊಳದಿಕ್ಕಿ ಚೆಂಡಿ ಉದ್ದಲೆ ಅಜ್ಜಿ ಸೆರಗೇ ಆಯೆಕ್ಕು. ಅಜ್ಜಿ ಎಲ್ಲಿ ಇದ್ದರೂ ಹುಡ್ಕಿಂಡು ಹೋಗಿ ಕೈ, ಮೋರೆ ಎಲ್ಲ ಉದ್ದದ್ದೆ ಇರೆ. ಹೈಸ್ಕೂಲಿಂಗೆ ಹೋಪ ವರೆಗೆ ಈ ಒಂದು ದುರಭ್ಯಾಸ ಇತ್ತಿದ್ದು)

ಬಸ್ ಸೇಂಡಿನ ಹಿಂದೆಯೇ “ಮರ್ತು ಭಟ್ಟನ ಹೋಟೆಲ್” ಮತ್ತೆ ಒಂದು ದೊಡ್ಡ ಬಾವಿ. ಇದೇ ಬಾವಿಂದ ಎಲ್ಲರೂ ನೀರು ಕೊಂಡೋಕು. ಈಗ ಈ ಬಾವಿ ಇಲ್ಲೆ. ಒಂದು ಬಾಯಿ ಬಾರದ್ದ, ಪ್ರಾಯದ ಮನುಷ್ಯ ಇದರಿಂದಲೇ ಹೋಟೆಲಿಂಗೆ ನೀರು ತಂದು ತುಂಬುಸುಗು. ಮಾರ್ಗದ ಆಚ ಕರೆಲಿ ಪೆರ್ಣೆಯ ಹೆಬ್ಬಾರನ “ಕೃಷ್ಣ ಭವನ” ಹೋಟೆಲ್. ರಜ ಸಮಯ ಮಧ್ಯಾಹ್ನದ ಊಟಕ್ಕೆ ಎಂಗೊ ಅಲ್ಲಿಗೆ ಹೋದ್ದು ಇದ್ದು.

ಶಾಲೆಲಿ ಸ್ವಾತಂತ್ರ್ಯ ದಿನ “ಲಾಡು” ಸಿಕ್ಕದ್ದೆ ನೀನು ಕೂಗಿಂಡು ಮನೆಗೆ ಬಂದಿಪ್ಪಗ ಅದರ ಮರುದಿನ ಅಜ್ಜ ಇದೇ ಹೋಟೆಲಿಂದ ಅಲ್ಲದ ಲಾಡು ತಂದು ಕೊಟ್ಟದು ಹೇಳಿ ಭಾವ ನೆಂಪು ಮಾಡಿದ. ಅಪ್ಪಲ್ಲದ, ಅದಾ ಪ್ರತಿ ಸೋಮವಾರ ಪಾಯಸ ಕೊಟ್ಟೊಂಡು ಇತ್ತಿದ್ದವಲ್ಲದ, ಅಂಬಗ ಒಂದು ಸೋಮವಾರ ಅವು ಕೊಡದ್ದಿಪ್ಪಗ ನೀನು ನೆಂಪು ಮಾಡಿ, ಕೇಳು ಕೇಳು ಹೇಳಿ ಎನ್ನ ಪುಸಲಾಯಿಸಿದ್ದು, ಮತ್ತೆ ಆನು ಕೇಳಿ ಅಪ್ಪಗ ಕೈ ತುಂಬಾ ಕಡ್ಲೆ ಮಿಠಾಯಿ ಕೊಟ್ಟದು,ಅದರ ತಿಂದೋಂಡು ಶಾಲೆಗೆ ಹೋದ್ದು ನೆಂಪಾತೋ? ಕೇಳಿದೆ ಅವಂಗೆ.

ಬಸ್ ಸ್ಟೇಂಡಿನ ಹತ್ರವೇ ಒಂದು ಗೋಳಿ ಮರ. ಅದರ ಕೆಳ ಒಂದು ಚಮ್ಮಾರ. ಅಳತೆ ಕೊಟ್ರೆ ಚರ್ಮದ ಜೋಡು ಹೊಲುದು ಕೊಡುಗು. ಪಕ್ಕಕ್ಕೆಲ್ಲ ಹಾಳಾಗ. ಹಳತ್ತರ ರೆಪೇರಿಯೂ ಮಾಡಿ ಕೊಡುಗು. “ಜರ್ಕಂ ಬರ್ಕಂ” ಹೇಳಿ ಶಬ್ದ ಮಾಡುವ ಹಾಂಗಿಪ್ಪ ಮೆಟ್ಟಿನ ಜೋಡು ಹಾಕಿಂಡು ಬಂಬ್ರಾಣದ ಬಂಟ್ರುಗೊ ಪೇಟೆಲಿ ಅತ್ತಿಂದಿತ್ತ ನಡಕ್ಕೊಂಡು ಕಾರ್ಬಾರ್ ಮಾಡುಗು. ಈಗಾಣ ಹಾಂಗೆ ಮೆಟ್ಟಿನ ಅಂಗಡಿ ಬೇಕಾರೆ ಕಾಸ್ರೋಡಿಂಗೇ ಹೋಯೆಕ್ಕಷ್ಟೆ. ಮಕ್ಕೊ ಎಲ್ಲಾ ಶಾಲೆಗೆ ಹೋಪಗ ಬರೀ ಕಾಲಿಲ್ಲಿಯೇ ಹೋಯೆಕಷ್ಟೆ. ಮನೆಗೆ ನೆಡಕ್ಕೊಂಡು ಬಪ್ಪಗ ಕಲ್ಲು ಡಂಕಿಸಿಯೊಂಡು ರಜ ರಜ ನೆತ್ತರು ಹರಿಸಿಂಡು ಬಪ್ಪದು ಎಲ್ಲ ಮಾಮೂಲಿ (ಮಾರ್ಗಕ್ಕೆ ಡಾಮರು ಇತ್ತಿದ್ದಿಲ್ಲೆ. ಎಡೆಲಿ ಎಡೆಲಿ ಕೊಟ್ಟೆ ಕಲ್ಲು ಇಕ್ಕು.)

ಕೆಳಾಣ ಪೇಟೆಲಿ (ಕೆಳಾಣ ಪೇಟೆ ಹೆಳಿದ ಕೂಡ್ಲೇ ದೊಡ್ಡ ಪೇಟೆ ಹೇಳಿ ಜಾನ್ಸೆಡಿ. ಒಂದು ಕಾರ್ ಹೋವುತ್ತಷ್ಟು ಅಗಲದ ಮಾರ್ಗ, ಅದರ ಎರಡು ಹೊಡೆಲಿ ಅಂಗಡಿಗೊ ಅಷ್ಟೆ.) ನರಸಿಂಹನ ಜವುಳಿ ಅಂಗಡಿ, ಕುಙಿ ರಾಮನ ಜವುಳಿ ಅಂಗಡಿ, ಮಂಜು ಮಾಷ್ಟ್ರ ಚಾ ಹೊಡಿ, ಹೊಗೆಸೊಪ್ಪು ಮಾರುವ ಅಂಗಡಿ, ಹೊಡಿ ಭಟ್ಟನ ಅಂಗಡಿ, ಜೋಷಿಯ ಆಯುರ್ವೇದ ಶಾಪ್, ದಾಸ್ ನಾಯಕ ನ ದಿನಸಿ ಅಂಗಡಿ, ಶೆಟ್ಟಿ ಅಂಗಡಿ ಎಲ್ಲ ಇದೇ ಪೇಟೆಲಿ ಇಪ್ಪದು. ಹಾಂಗೆ ಮುಖ್ಯ ಪೇಟೆ ಹೇಳಿರೆ ಇದುವೇ. ಅಂಬಗಾಣ ಬಿಸಿನೆಸ್ ಸೆಂಟರ್. ಅಜ್ಜನೂ ಕುಙಿ ರಾಮನೂ ಒಟ್ಟಿಂಗೆ ಓದಿದವಡ. ಹಾಂಗೆ ಜವುಳಿ ಎಲ್ಲ ಅಲ್ಲಿಂದಲೇ. ದೊಡ್ಡ ಜೆಂಬಾರಂಗೊಕ್ಕೆ ಆದರೆ ಕಾಸ್ರೋಡಿನ “ಕಣ್ಣ” ನಲ್ಲಿಂದ. ದಾಸ್ ನಾಯಕ ಹೇಳಿರೆ ಅಜ್ಜಂಗೆ ಒಂದು ವಿಶ್ವಾಸದ ಜೆನ. ಎಂತ ದಿನಸಿ ಸಾಮಾನು ಬೇಕಾರೂ ಅಲ್ಲಿಂದಲೇ. ಅಲ್ಲಿ ಒಂದು ಲೆಕ್ಕ ಪುಸ್ತಕ. ಸೊಲುದ ಅಡಕ್ಕೆ ಕೂಡಾ ಅಜ್ಜ ಅವರ ಮೂಲಕವೇ ಮಂಗಳೂರಿಂಗೆ ಕಳುಸುಗು, ಅದುವೇ ಹೋಗಿ ಪೈಸ ಲೆಕ್ಕ ಮಾಡಿ ಪುಸ್ತಕಲ್ಲಿ ಬರಗು. ದಿನಸಿ ಸಾಮಾನಿನೊಟ್ಟಿಂಗೆ ಬಾರ್ ಸೋಪ್ ಕೂಡಾ ಅಲ್ಲಿ ಸಿಕ್ಕುಗು. ಮಾವಂಗೆ  “ಫೋರ್ಹಾನ್ಸ್ ಪೇಸ್ಟ್, “ಹಮಾಮ್” ಸಾಬೂನು, “ಎವರೆಡಿ” ಟೋರ್ಚ್, ಬ್ಯಾಟರಿ, ಬಿಳಿ ವಸ್ತ್ರಕ್ಕೆ ಹಾಕುವ “ಟಿನೋಪಾಲ್” ಬೇಕಾರೆ ಶೆಟ್ಟಿ ಅಂಗಡಿ. ಈಗಾಣ ಹಾಂಗೆ ನೂರಾರು ನಮೂನೆಯ ಸೋಪ್ ಪೇಸ್ಟ್ ಇಲ್ಲೆ. ಮೀತ್ತ ಸಾಬೂನ್ ಹೇಳಿರೆ “ಹಮಾಮ್” ಇಲ್ಲದ್ದರೆ “ಲೈಫ್ ಬೋಯ್”, ಪೇಸ್ಟ್ ಹೇಳಿರೆ “ಕೋಲ್ಗೇಟ್”, “ಫೋರ್ಹಾನ್ಸ್” ಇಲ್ಲದ್ದರೆ “ನೀಮ್” ಅಷ್ಟೆ.  ಜಾತ್ರೆ ಸಮಯಲ್ಲಿ ಖರ್ಜೂರ ಕೂಡಾ ಅಲ್ಲಿ ಸಿಕ್ಕುಗು.

ಲಾಟ್ಣು - ನಿತ್ಯವೂ ನಮ್ಮ ಬೆಣಚ್ಚಿನ ಸಂಗಾತಿ

ಬಸ್ ಸ್ಟೇಂಡಿನ ಎದುರು ಎಲ್ಲೆಸ್ ಪ್ರಭುವಿನ ದಿನಸಿ ಅಂಗಡಿ, ಅದರ ಎದುರು ಎರಡು ಬಾಡಿಗೆ ಕಾರು ನಿಂದೊಂಡು ಇಕ್ಕು, ಒಂದು ಶೆಟ್ಟಿಗೆದ್ದೆ ಐತ್ತಪ್ಪ ನದ್ದು, ಇನ್ನೊಂದು ಒಂದು ಬ್ಯಾರಿದು, ಹೆಸರು ನೆಂಪು ಬತ್ತಿಲ್ಲೆ. ಎರಡು ಜೋಡೆತ್ತಿನ ಗಾಡಿ, ಒಂದು ಗಾಡಿ ಕುಂಟಗರಡ್ಕ “ಗಾಡಿ ನಾರಾಯಣನದ್ದು, ಇನ್ನೊಂದು ಬ್ಯಾರಿದು. ಅಂಗಡಿಯ ಹಿಂದೆಯೇ ಗೋಪಾಲ ನಾಯಕನ “ಗೋಪಾಲ ಕೃಷ್ಣ” ಮಿಲ್ಲ್.  ಗೋಧಿ, ಅಕ್ಕಿ, ಮೆಣಸು ಎಲ್ಲಾ ಹೊಡಿ ಮಾಡ್ಲೆ, ತೆಂಗಿನ ಕೊಪ್ರಂದ ಎಣ್ಣೆ ತೆಗವಲೆ ಎಲ್ಲಾ ಅಲ್ಲಿಗೇ ಹೋಯೆಕ್ಕು. ರೇಷನ್ ಗೋಧಿಯ ಅಲ್ಲಿ ಕೇರಿ ಸಜ್ಜಿ ಮಾಡಿಸಿ ಹೊಡಿ ಮಾಡ್ಸಿ ಮನೆಗೆ ಕೊಂಡು ಹೋಪದು (ಸಜ್ಜಿ ಮಾಡಿ ಕೊಡ್ಲೆ ಹೆಣ್ಣುಗೊ ಇತ್ತಿದ್ದವು).  ಅದರ ಸೈಡಿಲ್ಲಿ ಒಂದು ಎಣ್ಣೆ ತೆಗೆತ್ತ ಗಾಣ ಇತ್ತಿದ್ದು. ಎತ್ತಿನ ಕಟ್ಟಿ ಗಾಣಲ್ಲಿ ಎಣ್ಣೆ ತೆಗಕೊಂಡು ಇತ್ತಿದ್ದಡ. ಮಿಲ್ಲ್ ಬಂದ ಮತ್ತೆ ಜೆನಂಗೊ ಗಾಣಕ್ಕೆ ಹೋಪದು ಬಿಟ್ಟು ಅದು ಬಾಗಿಲು ಹಾಕಿತ್ತು.

ಮಿಲ್ಲಿನ ಎದುರು, ಮಾರ್ಗದ ಇನ್ನೊಂದು ಹೊಡೆಲಿ ಕೊಗ್ಗ ಭಂಡಾರಿಯ ಸೆಲೂನ್.  ಎರಡು ಮರದ ಕುರ್ಚಿ, ರಜ ದೊಡ್ಡ ಕಾಲಿನದ್ದು, ಕುಚ್ಚಿ ತೆಗವಗ ಕೂಬಲೆ ಇಪ್ಪದು. ಈಗಾಣ ತಿರುಗುವ, ಬೇಕಾದ ಎತ್ತರಕ್ಕೆ ಸರಿ ಹೊಂದುಸುವ ಹಾಂಗೆಲ್ಲ ಇಪ್ಪದು ಅಲ್ಲ. ಹೆರ ಒಂದು ಬೆಂಚು, ಕಾಯಿತ್ತವಕ್ಕೆ ಕೂಬಲೆ ಮತ್ತೆ  “ನವಭಾರತ” ಪೇಪರ್ ಓದ್ಲೆ ಬೇಕಾಗಿಯೇ ಬಂದು ಓದುವವಕ್ಕೆ. ಪೇಪರ್ ಮನೆ ಮನೆಗೆ ಬಪ್ಪ ಕಾಲ ಅಲ್ಲ. ಪೇಪರ್ ಬೇಕಾರೆ ಕುಂಬಳೆಗೆ ನಿತ್ಯಾ ಹೋಗಿ ತರೆಕಷ್ಟೆ. ಅದೂದೆ ಮಧ್ಯಾಹ್ನಂದ ಮದಲೇ ಸಿಕ್ಕ. ಮಂಗಳೂರಿಂದ ರೈಲಿಲ್ಲಿ ಬಂದು ಬಟ್ವಾಡೆ ಆಯೆಕ್ಕು. ಕುಚ್ಚಿ ತೆಗೆಶೆಕ್ಕಾರೆ ಕೊಗ್ಗುವಿನಲ್ಲಿಗೇ ಹೋಯೆಕ್ಕಷ್ಟೆ. ಅಜ್ಜಂಗೆ ವಾರಕ್ಕೊಂದರಿ ಗಡ್ಡ ತೆಗವಲೆ ಅಲ್ಲಿಗೆ ಹೋದರೆ, ಊರವರ ಸುದ್ದಿ ಎಲ್ಲಾ ಸಿಕ್ಕುಗು. ಎಂಗಳೂ ತಿಂಗಳಿಂಗೆ ಒಂದರಿ ಆದರೂ ಅಜ್ಜನ ಒಟ್ಟಿಂಗೆ ಹೋಪೆಯೊ. ತಲೆಲಿ ಕತ್ತರಿ ಓಡುಸುವದರೊಟ್ಟಿಂಗೆ ಮಲಯಾಳಲ್ಲಿ  ಸುದ್ದಿ ಎಲ್ಲಾ ಹೇಳುಗು. ಎಂಗೊಗೆ ರೆಜ ರೆಜ ಅರ್ಥ ಅಕ್ಕಷ್ಟೆ. ಪೇಪರ್ ಓದ್ಲೆ ಬಂದವು ಕೂಡಾ ಸುದ್ದಿ ಕೇಳುಗು ಮತ್ತೆ ಅವಕ್ಕೆ ಗೊಂತಿಪ್ಪದರ ಹೇಳುಗು. ಹಾಂಗಾಗಿ ಅದು ಬರೇ ಸೆಲೂನ್ ಮಾತ್ರ ಅಲ್ಲ ಸುದ್ದಿಯ “ಭಂಡಾರ” ಕೂಡಾ. ಕೊಗ್ಗುವಿನ “ಅಂಗಡಿ” ಹೇಳಿ ಎಂಗ ಹೇಳಿರೆ, “ಭಂಡ ಸಾಲೆ” ಹೇಳಿ ಅಜ್ಜ ನೆಗೆ ಮಾಡುಗು. ಅದರ ಮನೆ ಎಂಗಳ ಶಾಲೆ ಹತ್ರ. ಅಲ್ಲಿಯೂ ಅಷ್ಟೆ, ಮಕ್ಕೊಗೆ ಬುತ್ತಿ ಪಾತ್ರೆ ಮಡುಗಲೆ ಒಂದು ಬೇರೆ ಕೋಣೆ, ಕೈ ತೊಳವಲೆ, ಬುತ್ತಿ ಪಾತ್ರೆ ತೊಳವಲೆ ನೀರಿನ ವ್ಯವಸ್ಥೆ ಎಲ್ಲಾ ಮಾಡಿ ಕೊಡುಗು. ಎಲ್ಲಾ ವ್ಯವಹಾರಂಗಳೂ ವಿಶ್ವಾಸಲ್ಲಿ ನಡಕ್ಕೊಂಡು ಇತ್ತಿದ್ದು.  ವಿಷು ಕಣಿಗೆ, ಕೊಗ್ಗು ಅಜ್ಜನ ಮನೆಗೆ ಬಕ್ಕು. ಅದಕ್ಕೆ ವಿಶೇಷ ಮರ್ಯಾದೆ ಆಗಿ 50 ಹಣ್ಣಡಕ್ಕೆಯೂ 5 ತೆಂಗಿನ ಕಾಯಿಯೂ ಕೊಡುಗು. ಸಣ್ಣ ಭಾವಂದಿರ  ಚೌಳಕ್ಕೆ ಮನೆಗೆ ಬಂದು ಅದರ ಕ್ರಮ ಮಾಡಿ  ವಸ್ತ್ರ, ಅಕ್ಕಿ,ಕಾಯಿ ಪೈಸ ಎಲ್ಲ ಕೊಂಡು ಹೋಕು. ಅಜ್ಜಂಗೆ ಸೌಖ್ಯ ಇಲ್ಲದಿಪ್ಪಗ ಮನೆಗೆ ಬಂದು ಕ್ಷೌರವೂ ಮಾಡುಗು. ಹಾಂಗಿಪ್ಪ ಒಂದು ಅವಿನಾವ ಭಾವ ಸಂಬಂಧ.

ಊಟಕ್ಕೆ ಬನ್ನಿ ಹೇಳಿ ಆಗಂದಳೇ ಹೇಳ್ತಾ ಇದ್ದೆ, ನಿಂಗೊಗೆ ಕೇಳ್ತೇ ಇಲ್ಲೆ ಹೇಳಿ ಹೆಂಡತಿ ಆಕ್ಷೇಪ ಎತ್ತಿತ್ತು. ನಿಂಗೊಗೆ ಮಾತಾಡಿ ಮುಗಿಯದ್ರೆ ಉಂಡಿಕ್ಕಿ ಮಾತಾಡಿ ಹೇಳಿ ಸಲಹೆಯೂ ಬಂತು.

ಎನಗೆ ಉಂಡ ಕೂಡ್ಲೇ ಹೋಯೆಕ್ಕು, ಮತ್ತೆ ಮಾತಡ್ಲೆ ಪುರುಸೊತ್ತು ಇಲ್ಲೆ. ಬಪ್ಪ ವಾರ ಕಣ್ಯಾರಲ್ಲಿ ರಂಗ ಪೂಜೆ ಇದ್ದಲ್ಲದ, ಅಂಬಗ ಕಾರಿಲ್ಲಿ ಮಾತಾಡಿಂಡು ಹೋಪಲೆ ಅಕ್ಕು ಹೇಳಿದ ಭಾವ. ನೀನು ಡ್ರೈವ್ ಮಾಡುವದಾರೆ ಎಲ್ಲಿ ಮಾತಾಡ್ಲೆ ಬಿಡ್ತೆ? ಆನು ಕಾರ್ ತೆಕ್ಕೊಂಡು ಬತ್ತೆ, ಒಟ್ಟಿಂಗೆ ಮಾತಾಡಿಂಡು ಹೋಪ ಹೇಳಿದೆ.  ಅವನೂ ಒಪ್ಪಿದ.

—————————————————————————-

ನಾರಾಯಣನ ಜೋಡೆತ್ತಿನ ಗಾಡಿಲಿ ಶಾಲೆಂದ ಮನೆಗೆ ಬಂದದು ನೆಂಪು ಬತ್ತೋ? ಕೇಳಿದೆ. ನಿನಗೆ ಎಂತ ಈಗ ನೆಂಪು ಆದ್ದು? ಕೇಳಿದ ಭಾವ. ಅಲ್ಲ ಈ ಮಾರ್ಗಲ್ಲಿ  ಕಾರಿಲ್ಲಿ ಹೋಪಗ ಗಾಡಿಯೂ ನೆಂಪು ಅಕ್ಕು, ದೋಣಿಯೂ ನೆಂಪು ಅಕ್ಕು, ಅಷ್ಟು ಎತ್ತಿ ಎತ್ತಿ ಹಾಕುತ್ತು, ದೋಣಿ ಒಚ್ಚಿದ ಹಾಂಗೆ ಒಚ್ಚುತ್ತೂದೆ.

ಅದು ಜೋಡೆತ್ತಿನ ಗಾಡಿ. ಎರಡು ಹೊಡೆಲಿ ಬೆಳೀ ಬಣ್ಣದ ,ಒಳ್ಳೆ ಎತ್ತರದ ಎತ್ತುಗೊ. ಕೊಂಬು ನೋಡಿರೇ ಹೆದರಿಕೆ ಅಕ್ಕು, ಅಷ್ಟು ದೊಡ್ಡ ಚೂಪಾದ ಕೊಂಬುಗೊ. ಲಾಯಿಕಲ್ಲಿ ಕೆರಸಿ ಪೋಲಿಶ್ ಮಾಡಿದ ಹಾಂಗೆ ಇಕ್ಕು. ಕೊರಳಿಲ್ಲಿ ಸಣ್ಣ ಮಣಿ ಗಂಟೆ. ಗಾಡಿ ಹೋಪಗ ಕಿಣಿ ಕಿಣಿ ಶಬ್ದ ಮಾಡುಗು. ಈಗಾಣ ವಾಹನಂಗೊಕ್ಕೆ ಇಪ್ಪ ಹಾಂಗೆ ಹಾರ್ನ್ ಇಲ್ಲೆ ಅದ. ನಾರಾಯಣನ ಕೈಲಿ ಒಂದು ಚಾಟಿ. ಕೆಲಾವು ಸರ್ತಿ ಅಂಬ್ರೆಪ್ಪು ಆದರೆ ಮೆಲ್ಲಂಗೆ ಎತ್ತುಗೊಕ್ಕೆ ಅದರ ಬೀಸುಗು.  ಬರೀ ಪಾಪದ ಎತ್ತುಗೊ. ಇಲ್ಲದ್ದರೆ ಸಾಮಾನುಗಳ ಎಳಕ್ಕೊಂಡು, ಪೆಟ್ಟು ತಿಂದೊಂಡು, ತಳೀಯದ್ದೆ ಹೋಕೋ?. ಗಾಡಿಯ ಕೆಳಾಂಗೆ ಒಂದು ಲಾಟಾನು ನೇಲಿಸಿಯೊಂಡು ಇಕ್ಕು. ಇರುಳು ಹೋಯೆಕ್ಕಾರೆ ಬೇಕಲ್ಲದ. ತಲೆ ಹೊರೆಲಿ ತಪ್ಪದರಿಂದ ಹೆಚ್ಚಿನ ಸಾಮಾನು ಇದ್ದರೆ ಗಾಡಿಯೇ ಆಯೆಕ್ಕಷ್ಟೆ. ದಾರಿಲಿ ಶಾಲೆ ಮಕ್ಕೊ ಸಿಕಿದರೆ ಅವರ ಹತ್ತಿಸಿಯೊಂಡು ಬಕ್ಕು (ಸಾಮಾನು ಹೆಚ್ಚು ಎಂತ ಇಲ್ಲದ್ದರೆ). ಗಾಡಿ ಹೋಪಗ ರಜ ಅತ್ತ ಇತ್ತ ಮಾಲದ್ದೆ ಇರ. ಮಾರ್ಗವೂ ಹಾಂಗೇ ಇತ್ತಿದ್ದು. ಮಕ್ಕೊಗೆ ಒಂದು ಕೊಶಿ ಅದರಲ್ಲಿ ಒಚ್ಚಿಂಡು ಹೋಪಲೆ.

ಇನ್ನೊಂದು ಜೋಡೆತ್ತಿನ ಗಾಡಿ ಹೆಚ್ಚು ಉಪಯೋಗ ಆಗಿಂಡು ಇತ್ತಿದ್ದು ಸಿನೆಮಾ ಟಾಕೀಸ್ ನವಕ್ಕೆ. ಅವಕ್ಕೆ ಹೊಸ ಸಿನೆಮಾ ಬಂದಪ್ಪಗ ಪ್ರಚಾರಕ್ಕೆ ಗಾಡಿ ಆಯೆಕ್ಕಷ್ಟೆ. ಗಾಡಿಯ ಎರಡೂ ಹೊಡೆಲಿ ಸಿನೆಮಾದ ಪೋಸ್ಟರ್ ಕಟ್ಟಿ, ನೋಟೀಸ್ ನ ದಾರಿಲಿ ಇಡೀ ಬಿಕ್ಕಿಂಡು, ಮೈಕಲ್ಲಿ  ಬೊಬ್ಬೆ ಹೊಡಕ್ಕೊಂಡು ಹೋಕು. ಶಾಲೆಂದ ಬಪ್ಪಗ ಆ ನೋಟೀಸಿನ ಇಡುಕ್ಕುತ್ತರ ಹಿಂದೆ ಓಡಿಂಡು ಹೆರ್ಕುತ್ತ ಗೌಜಿ. ಸಿನೆಮಾದ ಕತೆ, ನಾಯಕ, ನಾಯಕಿ ಆರು ಎಲ್ಲ ವಿವರ ಅದರಲ್ಲಿ ಇಕ್ಕು.   ದಿನ ನಿತ್ಯ ಎರಡು ಶೋ ಆದರೆ ಶನಿವಾರ ಮತ್ತೆ ಆದಿತ್ಯವಾರ ಮಧ್ಯಾನ್ಹ ಮೇಟಿನಿ ಶೋ ಮಡುಗ್ಗು. ಮುಳಿ ಮಾಡಿನ ಕಟ್ಟೋಣದ ಮಾಡಿನ ಮೇಗೆ ಊರಿಡೀ ಕೇಳಲೆ ಎರಡು ಮೈಕ.  ನಮೋ ವೆಂಕಟೇಶಾ.. ನಮೋ ತಿರುಮಲೇಶಾ..ಹೇಳಿ ಹೊತ್ತೋಪಗ ಪದ್ಯ ಹಾಕಿರೆ, ಟಿಕೆಟ್ ಕೊಡ್ಲೆ ಸುರು ಮಾಡಿದವು ಹೇಳಿ ಲೆಕ್ಕ. ಮತ್ತೆ ಸಾಲಾಗಿ ತಮಿಳು, ಮಲಯಾಳ ಪದ್ಯಂಗಳೋ ಹಾಕಿಂಡು ಇಕ್ಕು. ಒಳದಿಕೆ, ಪರದೆಯ ಹತ್ತರೆ ಕೂಡು ನೋಡಲೆ ಹೊಯಿಗೆ ಹಾಕಿದ ನೆಲ, ಅದರ ಹಿಂದೆ ಸಾಲಾಗಿ ಮರದ ಬೆಂಚುಗೊ, ಅದರ ಹಿಂದೆ ಕೆಲವು ಸಾಲು ಮರದ ಕುರ್ಚಿಗೊ. ಒಳದಿಕಿ ಬೀಡಿ ಎಳಕ್ಕೊಂಡು ಕೆಲವು ಜೆನಂಗೊ ಇಕ್ಕು. ಸಿನೆಮಾದ ರೀಲಿಂದ ಪರದೆಗೆ ಬಪ್ಪ ಬೆಣಚ್ಚಿ, ಬೀಡಿಯ ಹೊಗೆಲಿ ಸರಿಯಾಗಿ ಕಾಂಗು. ಒಂದು ಸಿನೆಮಾಕ್ಕೆ ಒಂದೇ ಇಂಟರ್ವಲ್ ಅಲ್ಲ. ಕೆಲವು ಸರ್ತಿ ಐದೋ, ಆರೋ ಅಕ್ಕು. ಅಷ್ಟಪ್ಪಗ ಕೆಲವು ಜನಂಗೊ ಹೆರ ಹೋಗಿ ಇನ್ನೊಂದು ಬೀಡಿ ಎಳದು, ಗೋಳಿ ಸೋಡಾ ಮಣ್ಣ ಕುಡುದಿಕ್ಕಿ ಬಕ್ಕು. ಎಂಗೊಗೆ ಎದುರು ಕೂದು ನೋಡ್ಲೆ ಇಷ್ಟ. ಹತ್ತರಂದ ಕಾಣುತ್ತು ಹೇಳಿ. ಕಣ್ಣು ಹಾಳಕ್ಕು ಹೇಳಿ ಅಜ್ಜನ ಉಪದೇಶ. ಹಾಂಗೆ ತಿಂಗಳಿಂಗೆ ಒಂದರಿ ಮಣ್ಣೊ, ಕನ್ನಡ ಸಿನೆಮಾ ಬಂದಿಪ್ಪಗ, ಬೆಂಚಿಲ್ಲಿ ಕೂದು ನೋಡಿಕ್ಕಿ ಬಪ್ಪೆಯೊ. ನೆಲಕ್ಕಲ್ಲಿ ಕೂರುತ್ತವಕ್ಕೆ 25 ಪೈಸ ಆದರೆ ಬೆಂಚಿನವಕ್ಕೆ 50, ಮತ್ತೆ ಕುರ್ಚಿಯವಕ್ಕೆ 1 ರೂಪಾಯಿ ಹೇಳಿ ಎನ್ನ ನೆಂಪು. ಮನೆಗೆ ಬಂದಿಕ್ಕಿ, ಸಿನೆಮಾದ ಕಥೆಯ ವಿವರುಸಲೆ ಇದ್ದು. ಆ ಕೆಲಸ ಎನಗೇ ಇಪ್ಪದು. ಟಾಕೀಸಿನ ಹೆರ ಬಿದ್ದೊಂಡು ಇಪ್ಪ ರೀಲಿನ ತುಂಡಿನ ಹೆರ್ಕಿ ತಪ್ಪದು, ಭೂತ ಕನ್ನಡಿ ಎದುರು ಅದರ ಹಿಡುದು, ಕನ್ನಾಟಿಲಿ ಸೂರ್ಯನ ಬೆಣಚ್ಚಿ ಹಾಕಿ, ಗೋಡೆಲಿ ಚಿತ್ರವ ದೊಡ್ಡಕೆ ಬಪ್ಪ ಹಾಂಗೆ ಮಾಡಿ ಮನೆಯವಕ್ಕೆ ತೋರುಸುವದು ಎಲ್ಲ ಕೊಶಿಯೋ ಕೊಶಿ. ಭೂತ ಕನ್ನಡಿ ಹಿಡಿವಲೆ ಒಬ್ಬ, ಬೆಣಚ್ಚಿಗೆ ಇಪ್ಪ ಕನ್ನಾಟಿಯ ಹಿಡಿವಲೆ ಇನ್ನೊಬ್ಬ, ಬಿಳಿ ವಸ್ತ್ರವ ಹಿಡಿವಲೆ ಇನ್ನಿಬ್ರು, ಕನ್ನಾಟಿ ಬೆಶಿಲಿಂಗೆ ಹಿಡುದು ಹಾಳು ಮಾಡೆಡಿ ಹೇಳಿ ಅತ್ತೆಯಕ್ಕಳ ಗೌಜಿ. ಎಲ್ಲಾ ಸೇರಿ ಗೌಜಿಯೋ ಗೌಜಿ.

ಗಾಡಿ ನಾರಾಯಣ ಮಾತ್ರ ಅಲ್ಲ. ಕಾರಿನ ಐತ್ತಪ್ಪನೂದೆ, ಕಾರು ಖಾಲಿ ಇದ್ದರೆ ಶಾಲೆ ಮಕ್ಕಳ ಕೂರಿಸಿಂಡು ಬಕ್ಕು. ಐತ್ತಪ್ಪನ ಅಂಬಾಸಡರ್ ಕಾರ್ ಕಂಡರೆ ಎಂಗೊಗೂ ಒಂದು ಆಶೆ. ಕೂರಿಸಿಂಡು ಹೋದರೆ ನೆಡೆವ ಕೆಲಸ  ಇಲ್ಲೆ ಅನ್ನೆ ಮತ್ತೆ ಬೇಗ ಮನೆಗೆ ಎತ್ತಲೆ ಆವುತ್ತನ್ನೆ ಹೇಳಿ. ಅದು, ಎಂಗಳ ಎಂತಾರೂ ಮಾತಾಡಿಸಿಂಡೇ ಬಕ್ಕು, ಸುಮ್ಮನೆ ಗುಮ್ಮನ ಹಾಂಗೆ ಕೂರ. ಅದು ಸ್ಟೇರಿಂಗಿನ ತಿರುಗುಸುವದು, ಗೇರ್ ಹಾಕುವದು ಎಲ್ಲವನ್ನೂ ಗಮನ ಕೊಟ್ಟು ನೋಡುವೆಯೊ. ಮನೆಲಿ ಹೋಗಿ ಹಾಂಗೇ ಕಾರ್ ಓಡುಸುಗೂದೆ. ಮಕ್ಕಳ ಕೊಶಿ ನೋಡಿಯೇ ಅವಕ್ಕೆ ಕೊಶೀ ಅಪ್ಪದು. ಈಗಾಣ ಮಕ್ಕಳ ಹಾಂಗೆ ಮುಟ್ಟಿದ್ದಕ್ಕೆ ಕಿಟ್ಟಿದ್ದಕ್ಕೆ ಎಲ್ಲ ಥಾಂಕ್ಸ್ ಹೇಳ್ಲೆ ಎಂಗೊಗೆ ಕಲಿಸಿದ್ದವಿಲ್ಲೆ ಅದ. ಅವೂದೆ ಅದರ ನಿರೀಕ್ಷೆಲಿ ಇತ್ತಿದ್ದವಿಲ್ಲೆ ಅಲ್ಲದ. ಇಳುದಿಕ್ಕಿ ಹೋಪಗ ಒಂದು ಆತ್ಮೀಯ ನೆಗೆ ಅಷ್ಟೆ.

ರಜಾ ದೂರದ ಊರಿಂಗೆ ಹೋಯೆಕ್ಕಾರೆ ಬಸ್ ಲ್ಲಿ ಹೋಪದು. ಉದೀಯಪ್ಪಗ 6 ಘಂಟೆಗೆ ಪುತೂರಿಂಗೆ ಹೋಪ CPC ಬಸ್ ಮತ್ತೆ ಕತ್ತಲಪ್ಪಗ 6 ಘಂಟೆಗೆ ವಾಪಸ್ ಬಕ್ಕು. ಬಹುಶಃ ಅದು ಮಂಗಳೂರಿಂಗೆ ವರೆಗೆ ಹೋಗಿ ಬಂದೊಂಡು ಇತ್ತಿದ್ದು.  ಇನ್ನೊಂದು ಅಡ್ಕಸ್ಥಳ KBT ಬಸ್, ದಿನಕ್ಕೆ ಎರಡು ಸರ್ವೀಸ್ ಮಾಡುಗು. ಈ ಎರಡು ಬಸ್ಸನ್ನೇ ನಂಬಿಂಡು ಪ್ರಯಾಣ ಮಾಡೆಕ್ಕಷ್ಟೆ. ಸಾಧಾರಣ 32 ಸೀಟಿನ ಸಣ್ಣ ಬಸ್. ಈ KBT ಬಸ್ ಲ್ಲಿ ಒಂದು ಡೈಬರ್ (ಊರವು ಹಾಂಗೇ ಹೇಳುವದು ಡ್ರೈವರ್ ನ) ಖಾಕಿ ಅಂಗಿಯೂ ಖಾಕಿ ಚೆಡ್ಡಿಯೂ ಹಾಕಿಂಡು ಎಲೆ ಜಗುಕ್ಕೊಂಡು ಇಕ್ಕು. ಸ್ಟೇರಿಂಗಿನ ಮಧ್ಯಲ್ಲಿ ಒಂದು ಸಣ್ಣ “ಗುಳಿ”. ಅದರಲ್ಲಿ ಎಲೆ, ಅಡಕ್ಕೆ ಹೋಳು,ಸುಣ್ಣ, ಹೊಗೆ ಸೊಪ್ಪು ಎಲ್ಲಾ ರಜ ರಜ ಮಡ್ಕೊಂಗು. ಜನಂಗಳ ಹತ್ತುಸಲೋ ಇಳುಸಲೋ ಮಣ್ಣೋ ಬಸ್ಸಿನ ನಿಲ್ಲಿಸಿ ಅಪ್ಪಗ ಅದರ ಎಲ್ಲ ಬೇಕಾದ ಹಾಂಗೆ ಸೇರಿಸಿ ಎಲೆ ಜಗಿವಲೆ ಸುರು ಮಾಡುಗು. ಎದುರಾಣ ಸೀಟಿನವರ ಹತ್ರ ಸುಖ ದುಃಖ ಎಲ್ಲಾ ಮಾತಾಡಿಂಡು ಡ್ರೈವ್ ಮಾಡುಗು. ಗೇರಿನ ಕುಟ್ಟಿಯ ಹಿಡಿವಲೆ ಒಂದು ಜನ. ಅದಕ್ಕೆ ಅಲ್ಲಿಂದ ಎದ್ದು ಹೋಪಲೆ ಎಡಿಯ. ಅದು ಒಂದು ಕ್ರಮ ಆದಿಕ್ಕು ಹೇಳಿ ಎಂಗೊ ಜಾನ್ಸಿಗೊಂಡು ಇತ್ತಿದ್ದೆಯೊ. (ಆ ಬಸ್ಸಿಂಗೆ ಗೇರ್ ಸರಿ ಬಿದ್ದೊಂಡು ಇತ್ತಿದ್ದಿಲ್ಲೆ ಹೇಳಿ ಕಾಣುತ್ತು ಹೇಳಿ ದೊಡ್ಡ ಅಪ್ಪಗ ಅರ್ಥ ಆತು.) ಎಂಗೊಗೆ ಡ್ರೈವರನ ಎದುರಾಣ ಸೀಟಿಲ್ಲಿ ಕೂದೊಂಡು ನೋಡುವದೇ ಕೊಶಿ. ಮತ್ತೆ ಮನೆಲಿ ಬಂದು ಕುಞಿ  ಭಾವಂದಿರ ಬಸ್ ಓಡುಸುವ ಪ್ರಯೋಗ ಇದ್ದನ್ನೆ.

ದೂರಕ್ಕೆ ಹೋಪದು ಹೇಳಿರೆ “ಕಾವೇರಿಕಾನ ದೊಡ್ಡಬ್ಬೆಯಲ್ಲಿಗೋ” ಇಲ್ಲ “ಹಳೆಮನೆಗೋ” ಅಷ್ಟೆ. ಬಸ್ ಸಿಕ್ಕದ್ದರೆ ಶಾಂತಿಪಳ್ಳಂದ “ನಟರಾಜ ಸರ್ವೀಸ್”. ಶಾಲೆಗೆ ನಿತ್ಯಾ ನೆಡದು ಅಭ್ಯಾಸ ಇದ್ದಲ್ಲದ, ನೆಡವಲೆ ಬಙ ಹೇಳಿ ಆಗಿಂಡು ಇತ್ತಿದ್ದಿಲ್ಲೆ.  ಬಸ್ಸಿಂಗೆ ಕೊಡುವ  ಪೈಸ ಒಳುದತ್ತಲ್ಲದ.  ಆ ಪೈಸೆಯ ಅಜ್ಜ ವಾಪಾಸ್ ಕೇಳವು, ನಿಂಗ ಒಳುಸಿದ್ದು ನಿಂಗೊಗೆ ಆತು ಹೇಳುಗು. ಬೇಡದ್ದಕ್ಕೆ ಖರ್ಚು ಮಾಡೆಡಿ ಹೇಳಿ ಜಾಗ್ರತೆ ಕೂಡಾ ಹೇಳುಗು. ಶಾಲೆ ಬಿಟ್ಟಪ್ಪಗ “ಐಸ್ ಕೇಂಡಿ” ತಿಂಬಲೆ ಅದು ಉಪಯೋಗ ಆಗಿಂಡು ಇತ್ತಿದ್ದು. ಶಾಲೆ ಬಿಡುವ ಸಮಯಕ್ಕೆ ಸರಿ ಆಗಿ ಐಸ್ ಕೇಂಡಿ ಮಾರುವವು ಅಲ್ಲಿಗೆ ಬಂದು “ಕಿಣಿ ಕಿಣಿ” ಮಣಿ ಆಡುಸುಗು. “ಪೂಜೆ ಆತು, ಇನ್ನು ದಕ್ಷಿಣೆ ಹಾಕಿ ಪ್ರಸಾದ (ಐಸ್ ಕೇಂಡಿ) ತೆಕ್ಕೊಂಬಲೆ ಅಕ್ಕು” ಹೇಳಿ ಎಂಗೊ ನೆಗೆ ಮಾಡಿಂಡು ಚೀಪುವೆಯೊ..

ಹೋಪದು ದೀವಸ್ಥಾನಕ್ಕೆ, ಊರವರ ಸುದ್ದಿ ಎಲ್ಲ ಎಂತಕೆ ಮಾತಾಡಿಂಡು ಹೋಪದು? ಹೆಂಡತಿ ಆಕ್ಷೇಪ ಎತ್ತಿತ್ತು. ಅದು ಅಪ್ಪು  ಕತ್ತಲೆ ಆವುತ್ತ ಇದ್ದು. ಎದುರಾಣವರ ಹೆಡ್ ಲೈಟಿಂಗೆ ಡ್ರೈವ್ ಮಾಡ್ಲೆ ರಜ ಕಷ್ಟವೂ ಆವುತ್ತು.  ದೇವಸ್ಥಾನಲ್ಲಿ  ಪೂಜೆ ಸುರು ಅಪ್ಪಲೆ ಆತೋ ಎಂತ. ಚೆಂದಕೆ ಅಲಂಕಾರ ಮಾಡಿದ, ದೇವರ ಪೂಜೆ ನೋಡಿ ಶೇಡಿಗುಮ್ಮೆಗೆ ಹೋಪ ಹೇಳಿ ಎಂಗಳ ಮಾತು ನಿಲ್ಲಿಸಿದೆಯೊ.

ಕಾಲ ಬದಲಾದ ಹಾಂಗೆ ಬದಲಾವಣೆಯೂ ತುಂಬಾ ಆವುತ್ತು. (ನೆಂಪುಗೊ ಮಾತ್ರ ಹಾಂಗೇ ಒಳಿತ್ತು).  ನಾರಾಯಣನ ಜೋಡೆತ್ತಿನ ಗಾಡಿ,  ಐತಪ್ಪನ ಕಾರು. ಕೊಗ್ಗಿನ ಸೆಲೂನ್, ಹಳೇ ಬಸ್ ಸ್ಟೇಂಡ್,ಅದರ ಹಿಂದಾಣ ಬಾವಿ, ಎಲ್ಲೆಸ್ ಪ್ರಭುವಿನ ಅಂಗಡಿ, ಮರ್ತು ಭಟ್ಟನ ಹೋಟೆಲ್, ಮುಳಿ ಮಾಡಿನ ಸಿನೆಮಾ ಕಟ್ಟೋಣ,ಎಣ್ಣೆ ತೆಗವ ಗಾಣ, ಎಲ್ಲಾ ಹುಡ್ಕಿರೆ ಈಗ ಅದರ ಕುರುಹು ಕೂಡ ಸಿಕ್ಕ. ನಾವು ಕಾಲಕ್ಕೆ ಸರಿಯಾಗಿ ಬದಲಾಗಿಂಡು ಹೊಂದಿಯೊಂಡು ಹೋಯೆಕ್ಕು ಅಲ್ಲದ.

ಹಾಂಗೆ ಹೇಳಿ, ನಮ್ಮತನದ ಮೇಲೆ ಬೇರೆಯವರ ಸವಾರಿ ಅಪ್ಪಲೆ ಬಿಡ್ಲೆ ಆಗ ಅಲ್ಲದ..
(ಚಿತ್ರಕೃಪೆ: ಇಂಟರ್‌ನೆಟ್ಟು)

ಕಣ್ಯಾರಲ್ಲಿ ಒಂದು ಸುತ್ತು.., 5.0 out of 10 based on 6 ratings
ಶುದ್ದಿಶಬ್ದಂಗೊ (tags): , , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 31 ಒಪ್ಪಂಗೊ

 1. ಕೃಷ್ಣ ಭಟ್, ಶೇಡಿಗುಮ್ಮೆ

  ಶರ್ಮ ಭಾವ,

  ಲೇಖನ ಓದಿ ತುಂಬಾ ಸಂತೋಷ ಆತು. ನಿಂಗಳ ಬರವಣಿಗೆಯ ಶೈಲಿಗೆ ಹಳೆ ಸವಿ ನೆನಪೆಲ್ಲ ಕಣ್ಣಿಂಗೆ ಕಟ್ಟಿದ ಹಾಂಗೆ ಅನುಭವ ಆತು. ಧನ್ಯವಾದಂಗೋ !

  [Reply]

  VA:F [1.9.22_1171]
  Rating: 0 (from 0 votes)
 2. ಕೃಷ್ಣ ಭಟ್, ಶೇಡಿಗುಮ್ಮೆ

  ಶರ್ಮಣ್ಣ,
  ನಿಂಗೋಗೆ ಫೋಟೋಗ್ರಫಿ, ಸಂಗೀತ, ಮತ್ತೆ ಅಡುಗೆ ಹವ್ಯಾಸ ಇದ್ದು ಹೇಳಿ ಗೊಂತಿತ್ತು. ಆದರೆ ಇಷ್ಟು ಒಳ್ಳೆ ಬರವಣಿಗೆಯ ಹವ್ಯಾಸದೇ ಇದ್ದು ಹೇಳಿ ‘oppanna.com’ ದ ಗೊಂತಾದ್ದು..! Great Anna…ಹೀಂಗೆ ಒಳ್ಳೆ ಒಳ್ಳೆ ಲೇಖನ ಕೊಡ್ತಾ ಇರಿ. ಓದುಲೆ ಖುಷಿ ಆವುತ್ತು.

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  gopalakrishna BHAT S.K.

  very good.

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  gopalakrishna BHAT S.K.

  aa talkiesna hesaru vijayalakshmi talkies.adu gajanana kkintha modale iddadu.enage kandu gonthille. 1960kke modalu iddikku. enna annange sariyagi nenapiddu.

  [Reply]

  ಶರ್ಮಪ್ಪಚ್ಚಿ

  ಶ್ರೀಕೃಷ್ಣ ಶರ್ಮ. ಹಳೆಮನೆ Reply:

  ಮಾಹಿತಿ ಕೊಟ್ಟದಕ್ಕೆ ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರಿನ ಪುಟ್ಟಕ್ಕಚೂರಿಬೈಲು ದೀಪಕ್ಕಶರ್ಮಪ್ಪಚ್ಚಿನೆಗೆಗಾರ°ಪಟಿಕಲ್ಲಪ್ಪಚ್ಚಿಕಜೆವಸಂತ°ಪುತ್ತೂರುಬಾವದೊಡ್ಡಭಾವಕೊಳಚ್ಚಿಪ್ಪು ಬಾವದೇವಸ್ಯ ಮಾಣಿದೀಪಿಕಾಅಡ್ಕತ್ತಿಮಾರುಮಾವ°ಗೋಪಾಲಣ್ಣಶಾ...ರೀಅಕ್ಷರ°ಸರ್ಪಮಲೆ ಮಾವ°ಕಾವಿನಮೂಲೆ ಮಾಣಿಮುಳಿಯ ಭಾವಬೋಸ ಬಾವಶುದ್ದಿಕ್ಕಾರ°ಬೊಳುಂಬು ಮಾವ°ಸಂಪಾದಕ°ಬಟ್ಟಮಾವ°ಪೆಂಗಣ್ಣ°ರಾಜಣ್ಣಸುವರ್ಣಿನೀ ಕೊಣಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ